Sunday, September 18, 2011

ರೀತಿ...


ನನ್ನ ಅಪ್ಪನ ಬಗೆಗೆ ನಿಮಗೆ ಗೊತ್ತಿಲ್ಲ..


ತುಂಬಾ ಹಠದ ಸ್ವಭಾವದವನು..
ಅವನ ಮಗಳಾದ ನಾನೂ ಕೂಡ ಹಾಗೇನೆ..
ಅಪ್ಪ , ಅಮ್ಮರ ಮುದ್ದಿನ ಮಗಳು ನಾನು.. 
ನನ್ನ ಎಲ್ಲ ಬೇಕು ಬೇಡಗಳನ್ನು ನನ್ನ ಅಪ್ಪ, ಅಮ್ಮ ಗೌರವಿಸಿದರು..
ಎಲ್ಲವನ್ನೂ... ನನ್ನ ಇಚ್ಛೆಯಂತೆ ಬೆಳೆಸಿದ್ದಾರೆ..


ಮತ್ತೇನು ಸಮಸ್ಯೆ ಅಂತೀರಾ?


ನನ್ನಪ್ಪ ನನಗೆ ಮದುವೆ ಗಂಡು ಹುಡುಕುತ್ತಿದ್ದಾರೆ...


"ಅಪ್ಪಾ..
ನನ್ನಿಷ್ಟದ ಗಂಡು ನನಗೆ ಬೇಕು..
ನನ್ನ ಸ್ವಭಾವ, ರುಚಿಗಳಿಗೆ ಹೊಂದಿಕೊಳ್ಳುವಂಥಹ ಗಂಡು ನನಗೆ ಬೇಕು..
ನನ್ನ ಗಂಡ ಹೇಗಿರ ಬೇಕು ಅಂತ ನನ್ನದೇ.. ಆದ ಕನಸುಗಳಿವೆ..


ಇದು ನನ್ನ ಮದುವೆ..
ಗಂಡನನ್ನೂ ನಾನೇ ಹುಡುಕಿಕೊಳ್ಳುತ್ತೇನೆ..."


ಅಪ್ಪ ಒಪ್ಪಲಿಲ್ಲ..


"ಮಗಳೆ..
ಪ್ರೇಮ ವಿವಾಹ ಯಶಸ್ಸು ಕಾಣುವದು ಕಷ್ಟ.."


" ಯಾಕೆ ಹಾಗೆ..? 
ಅರೇಂಜ್ ಮದುವೆ ಹೇಗೆ ಯಶಸ್ಸಾಗುತ್ತದೆ..?
ಇದೆಲ್ಲ ನಾನು ಒಪ್ಪೋದಿಲ್ಲ ಅಪ್ಪಾ..."


"ಮಗಳೆ..
ಅರೇಂಜ್ ಮದುವೆಗಳಲ್ಲಿ ಗಂಡು, ಹೆಣ್ಣು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆರೆಂಟು ತಿಂಗಳಾಗಿರುತ್ತದೆ..
ಯೌವ್ವನದ ಬಿಸಿ....
ಅಷ್ಟರಲ್ಲಿ ಮಕ್ಕಳಾಗಿ ಬಿಡುತ್ತದೆ..
ಮಗುವನ್ನು ದೊಡ್ಡ ಮಾಡುತ್ತಿದ್ದಹಾಗೆ ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗುತ್ತದೆ..


ಇಂಥಹ ಅನಿವಾರ್ಯತೆಗಳು ಪ್ರೀತಿಯನ್ನು ಬೆಳೆಸಿ ....
ದಾಂಪತ್ಯ ಯಶಸ್ವಿಯಾಗುತ್ತದೆ....."


ಅಪ್ಪ ಹೇಳಿದ್ದು ಹೌದಾಗಿರಬಹುದು...


"ಅಪ್ಪಾ...
ಸರಿ... 
ನೀನೇ ಗಂಡು ಹುಡುಕು...
ಮದುವೆಗೆ ಮೊದಲು ನೀನು ಹುಡುಕಿದ ಗಂಡಿನೊಡನೆ ನನಗೆ ಮುಕ್ತವಾಗಿ ಮಾತನಾಡಲು ಬಿಡು..
ಮದುವೆ  ನಂತರ ಬದುಕುವವರು ನಾವು...
ಹಾಗಾಗಿ..
ಮದುವೆಗೆ ಮುನ್ನ  ಹುಡುಗನನ್ನು ಅರ್ಥ ಮಾಡಿಕೊಳ್ಳುವದು ಅತ್ಯವಶ್ಯ...."


ಅಪ್ಪ ಗಂಡು ಹುಡುಕತೊಡಗಿದ..
ಹುಡುಕಿಯೂ ಬಿಟ್ಟ..
ಹುಡುಗ ನನ್ನನ್ನು ಒಪ್ಪಿಯೂ ಬಿಟ್ಟ..


ನಮ್ಮಿಬ್ಬರ ಭೇಟಿಯೂ ನಿಶ್ಚಯವಾಯಿತು..


"ನೋಡಿ..
ನಾನು ಪುರುಷ ಸಮಾಜ ಬಯಸುವಂಥಹ ಹೆಣ್ಣು ನಾನಲ್ಲ..
ನಾನೂ ಕೆಲಸ ಮಾಡುತ್ತೇನೆ.. ಗಳಿಸುತ್ತೇನೆ..
ಮನೆಗೆ ಬಂದ ಮೇಲೆ ಒಬ್ಬಳೇ ...
ಅಡಿಗೆ ಕೆಲಸ ಮಾಡ ಬೇಕೆಂದರೆ ನನ್ನಿಂದ ಆಗುವದಿಲ್ಲ..


ಬಚ್ಚಲು ಮನೆಯಲ್ಲಿ ...
ನಿಮ್ಮ ಒಳ ಚಡ್ಡಿಯನ್ನು ತೊಳೆಯುವಂಥಹ ಹೆಂಡತಿ ನಾನಾಗಲಾರೆ.."


" ಇದನ್ನು ನಾನೂ ಒಪ್ಪುತ್ತೇನೆ..
ನನ್ನ ಅಪ್ಪ, ಅಮ್ಮ ..ನನ್ನನ್ನೂ.. ಮುದ್ದಿನಿಂದ ಬೆಳೆಸಿದ್ದಾರೆ...
ಆದರೆ..
ಅಡಿಗೆ ಕೆಲಸ ನನಗೂ ಗೊತ್ತು.. ನನ್ನಮ್ಮನಿಗೆ ನಾನು ಸಹಾಯ ಮಾಡುತ್ತೇನೆ..
ಗಂಡ ಹೆಂಡತಿಯೆಂದರೆ ಮೇಲು ಕೀಳುಗಳಿಲ್ಲ..
ಇಬ್ಬರೂ ಸಮಾನರು..
ಇಬ್ಬರೂ ಸ್ನೇಹಿತರಂತೆ ಇರಬೇಕು..."


ಹುಡುಗ ನನಗೆ ಇಷ್ಟವಾಗತೊಡಗಿದ..
ಚಿಗುರು ಮೀಸೆಯ ಹುಡುಗ ಬೆಳ್ಳಗೂ ಇದ್ದ...


ಹುಡುಗನ ಬಗೆಗೆ ನನಗೆ ಇನ್ನೂ ತಿಳಿದುಕೊಳ್ಳಬೇಕಿತ್ತು...
ಅವನ ನೀಲಿ ಕಣ್ಣುಗಳನ್ನೇ ನೋಡುತ್ತ ಕೇಳಿದೆ..


" ನಿಮ್ಮ ಸ್ವಭಾವದ ಬಗೆಗೆ ಹೇಳಿ.."


"ನನ್ನ ಸ್ವಭಾವ ತುಂಬಾ ಒಳ್ಳೆಯದು..


ಪ್ರತಿಯೊಬ್ಬರೂ ಹೀಗೇಯೇ ಹೇಳುತ್ತಾರೆ..
ಮಾತನಾಡುವಾಗ ನಾವು ಏನು ಅಲ್ಲವೋ ಅದನ್ನು ನಾವು ಹೇಳುತ್ತೇವೆ..
ಹಾಗಾಗಿ ಮಾತು ಕೇಳುವಾಗ..
"ಏನು ಹೇಳುತ್ತಾರೋ ಅದನ್ನು ಕೇಳಬಾರದು..
ಅವರು ಏನು ಹೇಳುತ್ತಿಲ್ಲವೋ ಅದನ್ನು ಕೇಳಬೇಕು"
ಇದು ನನ್ನ ಅನುಭವ.."


"ಅಂದರೆ ಏನು ಅರ್ಥ..?"


"ನೋಡಿ..


ಮದುವೆಗೆ ಮುನ್ನ ಎಲ್ಲವು ಬಣ್ಣ ಬಣ್ಣದ ಮಾತುಗಳು...
ಅವುಗಳ ಸತ್ಯದ ಬಣ್ಣ ಮದುವೆಯ ನಂತರ ಗೊತ್ತಾಗುತ್ತದೆ..


ಮದುವೆಗೆ ಮುನ್ನ ಏನೆಲ್ಲ ಮಾತನಾಡಿದರೂ..
ಮದುವೆಯಾದ ಮೇಲೆ ಪರಸ್ಪರ ಹೊಂದಾಣಿಕೆ..
ವಿಶ್ವಾಸ ಬಹಳ ಮುಖ್ಯ..
ನಿಮಗಾಗಿ ನಾನು ..
ನನಗಾಗಿ ನೀವು  ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು...


ಮದುವೆಯೆಂದರೆ " ನಮ್ಮದಲ್ಲದ ಅಪರಿಚಿತ ಸ್ವಭಾವದೊಡನೆ ಹೊಂದಾಣಿಕೆ ಮಾಡಿಕೊಳ್ಳುವದು"
ನಾವು ಎಷ್ಟು ಅಡ್ಜಸ್ಟ್ ಆಗುತ್ತೇವೋ ಅಷ್ಟರ ಮಟ್ಟಿಗೆ ದಾಂಪತ್ಯ ಯಶಸ್ಸಾಗುತ್ತದೆ..
ಹಾಗೆಯೇ ಪರಸ್ಪರ ವಿಶ್ವಾಸ..
ಇಬ್ಬರೂ ದುಡಿಯುವದರಿಂದ ನಂಬಿಕೆ ಬಹಳ ಮುಖ್ಯ.."


ಹುಡುಗ ಚಂದವಷ್ಟೇ ಅಲ್ಲ.. ಬುದ್ಧಿವಂತ ಕೂಡ...


ಹುಡುಗನನ್ನು ಇನ್ನೂ ಮಾತನಾಡಿಸಬೇಕು ಅನ್ನಿಸಿತು...


"ನೀವು... ನನ್ನಲ್ಲಿ ಏನನ್ನು ಇಷ್ಟ ಪಟ್ಟಿದ್ದೀರಿ..?"


ಹುಡುಗ ಸ್ವಲ್ಪ ನಾಚಿ ಕೆಂಪಗಾದ..
ತಡವರಿಸಿದ..


"ನನಗೆ....
ನಿಮ್ಮ ತುಂಬು ಕೆನ್ನೆ.. ಕೆನ್ನೆಯ ಮೇಲಿನ ಮಚ್ಚೆ..
ನಿಮ್ಮ ಮುಗುಳು ನಗೆ...
ಕೆನ್ನೆಯ ಮೇಲಿನ ಮಚ್ಚೆಯ ಹುಡುಗಿಯನ್ನು ನಾನು ಹುಡುಕುತ್ತಿದ್ದೆ..


ನನ್ನ ಅದೃಷ್ಟ ನೀವು ಸಿಕ್ಕಿದ್ದೀರಿ..."


ನನಗೂ ನಾಚಿಕೆಯಾಯಿತು.. ಒಳಗೊಳಗೆ ಖುಷಿಯೂ ಆಯಿತು..


ಸರಿ .. ಇನ್ನೇನು..?


ಮದುವೆ ನಿಶ್ಚಯವಾಯಿತು.. 


ಎಷ್ಟೆಲ್ಲ ಸಡಗರ.. ಸಂಭ್ರಮದ ನಡುವೆ..
ಹೆದರಿಕೆಯ ಢವ ಢವದೊಡನೆ  ಮದುವೆಯೂ ಆಯಿತು...!!


ಮೊದಲ ರಾತ್ರಿಯ ಸನ್ನಿವೇಶಗಳನ್ನು ...
ಸಿನೇಮಾದಲ್ಲಿ ನೋಡಿದ್ದೆ...


ಇಂದು ಆ ಅನುಭವ ನನ್ನದಾಗಲಿದೆ !!


ಏನೋ ಒಂದು ರೀತಿಯ ಥ್ರಿಲ್ಲು...!
ಗಂಡು ಬೀರಿಯಾದ ನನಗೂ ಹೆದರಿಕೆ.. 
ನಾಚಿಕೆ.. ಆತಂಕ.. ಆಗತೊಡಗಿತು...


ಹುಡುಗ ನನ್ನ ಹತ್ತಿರ ಬಂದ..
ನನಗೆ ಹೇಗೋ ಹೇಗೋ ಆಯಿತು....
ಕೈ ಕಾಲು ಬೆವರ ತೊಡಗಿತು...


ಎಷ್ಟೆಂದರೂ ಗಂಡಿನ ಮೊದಲ ಸ್ಪರ್ಷ...! 
ರೋಮಾಂಚನ... !


ಹುಡುಗ ನನ್ನ ಕೆನ್ನೆ ಮುಟ್ಟಿದ...
ಕೆನ್ನೆಯ ಮೇಲಿನ ಮಚ್ಚೆಯನ್ನು ಮೃದುವಾಗಿ ಸವರಿದ..


ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...


" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."


ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು...


ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..


" ಒಂದು ವಿಷಯ ಕೇಳಲಾ...?"


"ಕೇಳು..ಪುಟ್ಟಣ್ಣಿ.."


ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು... 
ಅಪ್ಯಾಯಮಾನವಾಯಿತು...


"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"


"ಛೇ.. ಛೇ... ನಾನು ಅಂಥವನಲ್ಲ..."


"ನಿಮ್ಮ ಕಾಲೇಜಿನಲ್ಲಿ..."


"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..
ರಾಜ್ಯಕ್ಕೆ ನಾನು ಎರಡನೆ Rank   ಗೊತ್ತಾ...?"


ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು  ಇಷ್ಟ...


"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"


"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"


"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"


"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."


ನನಗೆ ಕುತೂಹಲ... !!


" ಹೇಗಿದ್ದಾಳೆ..??"


" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."


ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!


"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"


"ಬರುತ್ತಿದ್ದಳು..."


"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"


"ಛೇ.. ಛೇ.. ಹಾಗೇನಿಲ್ಲ"


"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"


"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ  ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."


"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"


" ಅವಳೂ ಕೆಲಸ ಮಾಡುತ್ತಾಳೆ.. 
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."


ನನಗೆ ಕೋಪ ಬರತೊಡಗಿತು...


ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?.. 


ಛೇ..!!


"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"


"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?


ಅವಳ ಚಂದ ಇಷ್ಟಪಟ್ಟೆ ಅಷ್ಟೆ... 
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."


" ಇದನ್ನು ನಾನು ಹೇಗೆ ನಂಬಲಿ...? "


ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು... 
ಬಹಳ ಕಠಿಣವಾಗಿ ಹೇಳಿದ...


"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."


ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..

ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇದು ಕಥೆ...

ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ... ಚೆನ್ನಾಗಿವೆ...)59 comments:

ಜಲನಯನ said...

ಹೂಂ...ಏನು ಮಾಡಿಸ್ತಿದ್ದೀಯಾ ಪಾಪ ಮದುಮಗಳ ಕೈಲಿ...ಪ್ರಕಾಶಾ.. ಹೂಂ..ಮಾಡ್ಸಪ್ಪಾ ನೋಡೋಣ ಅದೇನೇನು ಮಾಡ್ತಾರೋ...ಇಂಟರೆಸ್ಟಿಂಗು...

Ittigecement said...

ಆಜಾದು....

ಮದುವೆಯ ಹೊಸತರಲ್ಲಿ ಎಡವಿ ಬೀಳೋದು ಇಲ್ಲೇನೆ...

ಮದುವೆಗೆ ಮುನ್ನ ಎಷ್ಟೇ ಮಾತನಾಡಿದರೂ...
ಕಟು ವಾಸ್ತವದ ಬದುಕಿನ "ದಾಂಪತ್ಯದಲ್ಲಿ" ಹೊಂದಾಣಿಕೆ... ನಂಬಿಕೆ ಬೇಕೇ ಬೇಕು....

ದಾಂಪತ್ಯ ಅಂದರೆ ಮದುವೆಯ ಮೊದಲಿನ " ಮಾತು ಕತೆ" ಅಲ್ಲ...!!

ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು... ಜೈ ಹೋ !!

Harisha - ಹರೀಶ said...

ಮುಂದೆ?

Ittigecement said...

ಪ್ರೀತಿಯ ಹರೀಷು..

ಲೈಫು ಇಷ್ಟೇನೆ.... !

ಹೊಂದಾಣಿಕೆ..
ನಂಬಿಕೆ.. ವಿಶ್ವಾಸ ಮಾತಿನಲ್ಲಿ ಅಲ್ಲ...

"ರೀತಿ" ಯಲ್ಲಿರಬೇಕು..

ಹೀಗೊಂದು ಘಟನೆ ಆಗಿದೆ... ಮತ್ತೆ ಸರಿಪಡಿಸಬೇಕಾದರೆ ಮನೆಯ ಹಿರಿಯರಿಗೆ ಬಹಳ ಕಷ್ಟವಾಯಿತು...

ಬಹಳ ದಿನಗಳ ನಂತರ ಬ್ಲಾಗಿಗೆ ಬಂದಿದ್ದಕ್ಕೆ ಖುಷಿ ಆಯ್ತು... ಜೈ ಹೋ !!

ಶಶೀ ಬೆಳ್ಳಾಯರು said...

super sir... ista aythu... munde onderadu saalu bekitthu anisthu... matthe avru enagthare antha... dhanyavada guruve...!!

Ittigecement said...

ಪ್ರೀತಿಯ ಶಶಿ....

ಮಕ್ಕಳನ್ನು ಮುದ್ದಿನಿಂದ ಬೆಳೆಸಿ ಬದುಕಿನ ಮೂಲ ತಿಳಿಸಿಕೊಡದಿದ್ದರೆ ಇಂಥಹ ಅನಾಹುತ ತಪ್ಪಿದ್ದಲ್ಲ...

"ತನ್ನ ಬದುಕಿನ ಎಲ್ಲರೂ ತನಗೇ.. ಹೊಂದಿಕೊಂಡು ಹೋಗಬೇಕು..."

ತಾವು ಎಷ್ಟು ಹೊಂದಿಕೊಂಡು ಹೋಗುತ್ತೇವೆ ಅನ್ನುವದು ಮುಖ್ಯವಾಗುವದಿಲ್ಲ..

ಇದು ಇಂದಿನ ಹೆಚ್ಚಿನ ಯುವ ಜನಾಂಗ ಸಾಗುತ್ತಿರುವ ರೀತಿ...

ತಪ್ಪಲ್ಲವಾ?

ಇನ್ನು ಈ ಕಥೆ ಕೊನೆ..
ಅದು ಅಗತ್ಯ ಇದೆಯಾ...?....

ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಮ said...

hmm... oLLEya story prakaashaNNa ...munduvaresu bega :)

ದಿನಕರ ಮೊಗೇರ said...

chennaagide...... madhyadalle nillisida anubhava aaytu.......

daampatyadalli anumaana bandare narakave....

Ittigecement said...

ಸುಮಾ...

ಈ ಕಥೆಗೊಂದು "ಕೊನೆ" ಬೇಕಾ?
ಇದು ಸಾಕಲ್ಲವೆ?

ಗಂಡಾಗಿರಬಹುದು... ಹೆಣ್ಣಾಗಿರ ಬಹುದು...
ವಿಶ್ವಾಸ.. ನಂಬಿಕೆ ಇರದಿದ್ದಲ್ಲಿ "ದಾಂಪತ್ಯ" ಕಷ್ಟ...

ಮದುವೆಗೆ ಮುನ್ನ ಎಷ್ಟೇ ಮಾತನಾಡಿದರೂ...
ವಾಸ್ತವ ಬದುಕಿನ ದಾಂಪತ್ಯ "ಮಾತುಕತೆ" ಅಲ್ಲವಲ್ಲ...

ಸಣ್ಣ ತ್ಯಾಗ.. ಹೊಂದಾಣಿಕೆ.. ವಿಶ್ವಾಸ ನದತೆಯ "ರೀತಿಯಲ್ಲಿರಬೇಕು...
ಮಾತಿನಲ್ಲೊಂದೇ ಅಲ್ಲ...

ಪ್ರೋತ್ಸಾಹಕ್ಕೆ.. ಪ್ರತಿಕ್ರಿಯೆಗೆ ಧನ್ಯವಾದಗಳು...

ಚುಕ್ಕಿಚಿತ್ತಾರ said...

ಪ್ರಕಾಶಣ್ಣ.
ಹೊ೦ದಾಣಿಕೆ ಮನೋಭಾವ ಇಲ್ಲದಿದ್ದಲ್ಲಿ ಮದುವೆ, ಲವ್ ಆಗಲಿ ಅರೇ೦ಜ್ಡ ಆಗಲಿ ಅಲ್ಲಿ ಅನಾಹುತವೇ ಆಗುವುದು. ಹೊ೦ದಾಣಿಕೆ ಕೇವಲ ಹೆಣ್ಣಿನಿ೦ದಷ್ಟೇ ಅಲ್ಲ ಗ೦ಡಿನಿ೦ದಲೂ ಇರಬೇಕಾದ್ದೆ.. ಹೆಣ್ಣೆ ಹೊ೦ದಿಕೊಳ್ಳಬೇಕು ಅನ್ನುವ ಕಾಲ ಹೋಯ್ತು.. ಆದರೆ ಹೊ೦ದಿಕೊಳ್ಳುವುದು ಹೆಣ್ಣಿನ ಸ್ವಭಾವ ಆದ್ದರಿ೦ದ ಎಲ್ಲರೂ ಹೆಣ್ಣಿನಲ್ಲಿಯೇ ಆ ಸ್ವಭಾವವನ್ನು ನಿರೀಕ್ಶಿಸುತ್ತಾರೆ. ಸ್ವಾಭಿಮಾನ, ಸ್ವಾವಲ೦ಬನೆ ಅನ್ನುವುದು ಹೆಣ್ಣಿನ ವಿವೇಕವನ್ನು ಕಸಿದುಕೊಳ್ಳದಿದ್ದರೆ ಸಾಕು.
ಕಥೆ ಸು೦ದರವಾಗಿ ಮೂಡಿದೆ.

ಮನಸು said...

ಹಾ..!!! ಹೀಗೂ ಆಗುತ್ತೆ ಎಂಬುದಕ್ಕೆ ನಿಮ್ಮ ಕಥೆಯೇ ಉದಾಹರಣೆ... ಚೆನ್ನಾಗಿದೆ ಕಥೆ

ಚಿತ್ರಾ said...

ಪ್ರಕಾಶಣ್ಣ ,
ದಾಂಪತ್ಯ ಅಂದರೆ ಮದುವೆಯ ಮುಂಚಿನ ಮಾತುಕತೆ ಅಲ್ಲ ಅನ್ನೋದು ಎಷ್ಟು ಸರಿ ಅಲ್ವಾ? ಮದುವೆಯ ಮುಂಚೆ ಒಬ್ಬರನ್ನೊಬ್ಬರು ಇಂಪ್ರೆಸ್ಸ್ ಮಾಡುವ ತುಡಿತ, ಅವನ /ಅವಳ ಕಣ್ಣಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತೋ ಇಲ್ವೋ, ಹೇಗೆ ಮಾತನಾಡಿದರೆ ಇಷ್ಟವಾಗಬಹುದು ಎಂಬ ಯೋಚನೆ , ಕಾತರಗಳೇ ಇರುವುದರಿಂದ ಪ್ರಾಮಾಣಿಕವಾಗಿ ಮಾತುಕತೆ ನಡೆಯದೆ ಇರುವ ಸಾಧ್ಯತೆಗಳೇ ಹೆಚ್ಚು ! ನನ್ನದು ನೇರವಾಗಿ ಮಾತನಾಡುವ ಸ್ವಭಾವ , ನನಗನಿಸಿದ್ದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ... ಎದುರಿನ ವ್ಯಕ್ತಿಯ ಭಾವನೆಗಳನ್ನು ಗೌರವಿಸುತ್ತೇನೆ ... ಇತ್ಯಾದಿ ಏನೆಲ್ಲಾ ಹೇಳಿದರೂ , ಅವು ಬರೀ ಮೇಲ್ನೋಟದ ಮಾತುಗಳಾಗಿರುವುದೇ ಹೆಚ್ಚು. ಮದುವೆಯಾದ ಮೇಲೆ ನಿಜವಾದ ಸ್ವಭಾವ ಹೊರ ತೋರುವುದು ಅಲ್ಲವೇ?
ಏನೇ ಇದ್ದರೂ , ಮದುವೆಯ ಮೊದಲ ರಾತ್ರಿಯೇ .. ಹೀಗಾಗಬಾರದಿತ್ತು! ಹಾ ಹಃ ಅ .. ಚೆನ್ನಾಗಿ ಬಂದಿದೆ ಕಥೆ !

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಸೂಪರ್ ಬರದ್ದೆ,

ದಾಂಪತ್ಯದ ರಥಕ್ಕೆ ಎರಡು ಚಕ್ರ
ಅದು ಹಿಡಿದರೆ ದಾರಿ ವಕ್ರ
ಆಡ್ತಾರೆ ಗಂಡ ಹೆಂಡತಿ ನಕ್ರ ನಕ್ರ
ಗಟ್ಟಿಯಾಗಿ ಹಿಡಕೊಳ್ಳಿ ರಥದ ಚಕ್ರ :)

ತುಂಬಾ ಸುಂದರ ನಿರೂಪಣೆ

Ittigecement said...

ದಿನಕರ್....

ಈ ಕಥೆಗೆ ಒಂದು ಟ್ವಿಸ್ಟ್ ಇಲ್ಲ ಅಲ್ಲವೆ>
ಟ್ವಿಸ್ಟ್ ಕೊಟ್ಟಿದ್ದರೆ ಮುಖ್ಯವಾಗಿ ಏನು ಹೇಳಬೇಕಿತ್ತೊ ಅದು ಗೌಣವಾಗಿಬಿಡುತ್ತಿತ್ತು..

"ತನಗೆ ಮಾತ್ರ ಜಗತ್ತು...
ಎಲ್ಲರೂ ತನಗೆ ಹೊಂದಿಕೊಂಡು ಹೋಗಬೇಕು..
ತನ್ನಿಷ್ಟದಂತೆ ಎಲ್ಲರೂ ಇರಬೇಕು"

ಇದು ಇಂದಿನ ಯುವ ಜನಾಂಗದ ಮುಖ..
ಗಂಡಿರಲಿ.. ಹೆಣ್ಣಿರಲಿ..

ಇಂದಿನ ದಿನಗಳಲ್ಲಿ ವಿಚ್ಛೇಧನಗಳು ಜಾಸ್ತಿಯಾಗಿವೆ...

ಪ್ರತಿಕ್ರಿಯೆ ಪ್ರೋತ್ಸಾಹಗಳಿಗೆ ಧನ್ಯವಾದಗಳು..

Ittigecement said...

ಚುಕ್ಕಿ ಚಿತ್ತಾರಾ.. (ವಿಜಯಾ)

ಸತ್ಯವಾದ ಮಾತು..
"ಸ್ವಾಭಿಮಾನ, ಸ್ವಾವಲಂಬನೆಗಳು ವಿವೇಕವನ್ನು ಕಸಿದುಕೊಂಡು ಬಿಟ್ಟರೆ..
ಹಾಳಾಗುವದು ತಮ್ಮದೇ ಬದುಕಲ್ಲವೆ?

ಎರಡು ಭಿನ್ನ ವ್ಯಕ್ತಿಗಳು ಸಂತೋಷಕ್ಕಾಗಿ ಬದುಕಿ,ಬಾಳಬೇಕೆಂದರೆ ಹೊಂದಾಣಿಕೆ ಅತ್ಯಗತ್ಯ..

ತೀರಾ ಮೂರ್ಖ ವಿಷಯಗಳಿಗಾಗಿ ವಿಚ್ಛೇಧನ ಆಗುವದನ್ನು ನೋಡಿದರೆ ಎಲ್ಲಿ ತಪ್ಪಿದ್ದೇವೆ ಅಂತ ಗೊತ್ತಾಗುತ್ತಿಲ್ಲ..

ಪಾಲಕರು ಬೆಳೆಸುವದರಲ್ಲಾ?
ಶಿಕ್ಷಣವಾ?
ಮಾಧ್ಯಮಗಳು ಬಿತ್ತುವ ಭ್ರಮೆಯ ಕನಸುಗಳಾ?

ತುಂಬಾ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಮನಸು...

ಇಂಥ ಘಟನೆಯೊಂದು ನಡೆದಿದೆ..
ಮದುವೆಗೆ ಮುಂಚೆ ದಿನಾಲೂ ಭೇಟಿಯಾಗಿ ಓಡಾಡಿ..

ಮೊದಲ ರಾತ್ರಿಯಂದು ಚೆನ್ನಾಗಿ ಜಗಳ ಮಾಡಿಕೊಂಡಿದ್ದಾರೆ..!!

ಮರುದಿನ ಎರಡೂ ಕಡೆಯ ಹಿರಿಯರು ಸರಿ ಮಾಡಿದರು.. ಅದುಬೇರೆ ವಿಷಯ,... !

ಹೀಗೂ ಉಂಟೂ.... !!

ಪ್ರತಿಕ್ರಿಯೆಗೆ ಧನ್ಯವಾದಗಳು.. ಜೈ ಹೋ !!

Roopa said...

chennaagide prakashanna aamele ?illige muktaaya madabedi

Shruthi B S said...

ಪ್ರಕಾಶಣ್ಣ ಕಥೆ ತುಂಬಾ ಚನ್ನಾಗಿದ್ದು....ಎಲ್ಲ ಸಂಬಂಧಗಳು ನಿರ್ಭರವಾಗೋದು ವಿಶ್ವಾಸದ ಮೇಲೆ. ಅದರಲ್ಲೂ ದಾಂಪತ್ಯ ಎ೦ಬ ಸ೦ಬ೦ಧದಲ್ಲಿ ಅತಿ ಅವಶ್ಯಕ.
ಹುಟ್ಟು ಮತ್ತು ಸಾವಿನ ಮಾಧ್ಯದ ಈ ಜೀವನದಲ್ಲಿ ನಾವು ಎಷ್ಟೋ ಸ೦ಬ೦ಧಗಳಲ್ಲಿ ಬೆಸೆದಿಕೊ೦ಡುಬಿಡುತ್ತೇವೆ. ಪ್ರತಿ ಸ೦ಬ೦ಧಗಳಿಗೂ ಅದರದೇ ಆದ ಪ್ರಾಮುಖ್ಯತೆ ಇರುತ್ತದೆ. ಆದ್ದರಿ೦ದ ನನ್ನ ಪ್ರಕಾರ ಯಾವುದೇ ಸ೦ಬ೦ಧವನ್ನು ಅಷ್ಟು ಸುಲಭವಾಗಿ ಕಡಿದು ಹೋಗಲು ಬಿಡಬಾರದು.

Dr.D.T.Krishna Murthy. said...

ಪ್ರಕಾಶಣ್ಣ;ಕಥೆ ಚೆನ್ನಾಗಿದೆ.ವಾಸ್ತವಿಕತೆಯನ್ನು ಬಿಂಬಿಸುವ ಕಥೆ.ಮೊದಲ ದಿನವೇ ಹೀಗಾದರೆ ಇನ್ನು ಜೀವನವಿಡೀ ಸಂಸಾರ ಮಾಡುವುದು ಹೇಗೆ!? ಇಲ್ಲಿ ಪರಸ್ಪರ ನಂಬಿಕೆ ಬಹಳ ಮುಖ್ಯ.ಅದಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಬರದ ಹಾಗೆ ನಡೆದುಕೊಳ್ಳುವುದು ಅಷ್ಟೇ ಮುಖ್ಯ.

Ittigecement said...

ಚಿತ್ರಾ...

ನಿಜ..
ಮದುವೆಯ ಮೊದಲು ಮಾತುಕತೆಗಳಲ್ಲಿ ಸುಳ್ಳುಗಳೇ ಜಾಸ್ತಿ..
ಇಂಪ್ರೆಸ್ ಮಾಡುವ ಭರದಲ್ಲಿ ಸತ್ಯ ಮರೆಯಲ್ಲಿರುತ್ತದೆ..

ಇಲ್ಲಿ ಈ ಕಥೆಯನ್ನು "ಮದುವೆಯಾಗದ ಹೆಣ್ಣುಮಕ್ಕಳು" ಯಾರೂ ಇಷ್ಟಪಡಲಿಲ್ಲ...
ಇದನ್ನು ಗಮನಿಸಿದ ಒಬ್ಬ ಗೆಳೆಯರು ನಿನ್ನೆ ಫೋನ್ ಮಾಡಿ ನಗುತ್ತಿದ್ದರು..

ಶೃತಿ ರಾವ್ ಒಬ್ಬರನ್ನು ಬಿಟ್ಟರೆ ಮತ್ಯಾರೂ ಇಷ್ಟ ಪಡಲೇ ಇಲ್ಲ...

ಮದುವೆಯ ಮೊದಲ ದಿನ ಹೀಗೆ ಮಾಡಬಾರದಾಗಿತ್ತು ಅಂತ (ನಿಮ್ಮ ಹಾಗೆ)ಬಹಳಷ್ಟು ಗೆಳೆಯರ ಅಂಬೋಣ....

ಹ್ಹಾ ಹ್ಹಾ...
ಅಕ್ಕರೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು... ಜೈ ಹೋ !!

Ittigecement said...

ಪ್ರೀತಿಯ ಗುರು...

ಮದುವೆಗೆ ಮುನ್ನ ಎಷ್ಟೇ ಅರ್ಥ ಮಾಡಿಕೊಳ್ಳುತ್ತೇವೆ ಅಂದರೂ ಅದು ಬೂಟಾಟಿಕೆಯಾಗುವ ಸಂಭವವೇ ಹೆಚ್ಚು...

ವಾಸ್ತವದಲ್ಲಿ ಅಲ್ಲಿ ಪ್ರೀತಿಗಿಂತ "ಆಕರ್ಷಣೇಯೇ " ಹೆಚ್ಚಾಗಿರುತ್ತದೆ..
ಹಾಗಾಗಿ ಅಲ್ಲಿ ಸತ್ಯ ಮಾತಾಡುವ ಸಾಧ್ಯತೆ ಕಡಿಮೆ..

ಈ ವಿಷಯದಲ್ಲಿ ಗಂಡಿರಲಿ ಹೆಣ್ಣಿರಲಿ ಇಬ್ಬರ ಮನಸ್ಥಿತಿ ಅದೇ ಥರಹದಲ್ಲಿರುತ್ತದೆ...

ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು...

Mahesh Gowda said...

Maduve aada modala denagalu haagene ... yavdyavdako munisikolodu.. bedada visyake jagala adodu.....Deena galu kaleda hage sambada gatti haguthe...

Badarinath Palavalli said...

"ಆಹಾ ಪುರುಷಾಹಂಕಾರಂ!"
ಎಂದುಕೊಳ್ಳದಿದ್ದರೆ ಒಂದು ಮಾತು, ಇಂಥ ಮನಸ್ಥಿತಿಯ ಹುಡುಗಿಯರು ಮದುವೆ ಆಗಲೇ ಬಾರದು. ನನ್ನ ಕ್ಲಾಸ್ ಮೇಟ್ ಒಬ್ಬಳು ನಿಮ್ಮ ಕಥಾನಾಯಕಿ ಹೋಲುವಾಕಿ! ಮದುವೆ ನಂತರ ಎರಡೇ ತಿಂಗಳಲ್ಲಿ ಗಂಡನ ಕೆನ್ನೆಗೆ ಬಡಿದು, ಸಂಸಾರ ಹರಿದುಕೊಂಡು ಬೇರೆಯಾಗಿ ಬದುಕುತ್ತಿದ್ದಾಳೆ. ಇದಾಗಿ 16 ವರ್ಷಗಳೇ ಆಯ್ತು.

ಹುಡುಗನಿಗೆ ವಿಚ್ಛೇದನವನ್ನೂ ಕೊಡದೆ , ಆತ ಬೇರೆ ಮದುವೆಯನ್ನೂ ಮಾಡಿಕೊಳ್ಳಲೂ ಬಿಡುತ್ತಿಲ್ಲ. ಹೆಂಗೆ ಗೋಳಾಡಿಸ್ತಿದ್ದೀನಿ ನೋಡೋ ಅಂತ ಗಹಗಹಿಸಿ ನಗ್ತಾಳೆ!

sunaath said...

ಪ್ರಕಾಶ,
ಆಧುನಿಕ ಮದುವೆಯೇ ಆಗಲಿ, ಸಾಂಪ್ರದಾಯಕವೇ ಆಗಿರಲಿ,
ಗಂಡ, ಹೆಂಡತಿಯರ ನಡುವೆ ತಿಳಿವಳಿಕೆ ಬೇಕು ಎನ್ನುವದನ್ನು ತುಂಬ ನವಿರಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.

Srikanth Manjunath said...

ಜೀವನ ಬೇರೆ...ಸಿನಿಮಾ ಬೇರೆ...ಮದುವೆ ಮುಂಚಿನ ಮಾತು...ಸಿನಿಮಾ ಪ್ರಚಾರದ ತರಹ..ಬರಿ ಗಿಮಿಕ್ ಇರುತ್ತೆ...ಮದುವೆದಿನ ಸಿನಿಮಾದ ವಾಲ್-ಪೋಸ್ಟರ್ ತರಹ ಇರುತ್ತೆ..
ಬರಿ ವಾಲ್ ಪೋಸ್ಟರ್ ನೋಡಿದ್ರೆ ಸಿನಿಮಾನೂ ಗೊತ್ತಾಗೊಲ್ಲ..ಹಾಗೆಯೇ ಜೀವನವೂ...

ಸಿನಿಮಾ ಮೂರು ಗಂಟೆಗಳಲ್ಲಿ ಗೊತ್ತಾಗುತ್ತೆ...
ಜೀವನ ಮೂರು ಗಂಟುಗಳಲ್ಲಿ ತಿಳಿಯುತ್ತೆ..
ಎರಡು ರೈಲಿನ ಕಂಬಿಯ ಹಾಗೆ ಅರ್ಥ ಮಾಡಿಕೊಳ್ಳುತ್ತ ನನಗಾಗಿ ನೀನು..ನಿನಗಾಗಿ ನಾನು ಅಂತ ಇರ್ಬೇಕು...
ನಾನೇ ಮೊದಲು ಅಂತ ಕೂತರೆ ..ನಾನೇ ಕೊನೆ ಅನ್ನುವ ಘಟ್ಟಕ್ಕೆ ಕರೆದೊಯ್ಯುತ್ತದೆ
ನಿಮ್ಮ ಕತೆಯ ಸಾರಾಂಶ ಸೊಗಸಾಗಿದೆ...ಒಳ್ಳೆಯ ಪ್ರಸಂಗ ಉಣ ಬಡಿಸಿದ್ದೀರ...ಧನ್ಯವಾದಗಳು..ಸೊಗಸಾಗಿ ಬಂದಿದೆ...

ಸಿರಿರಮಣ said...

ಅನುಮಾನಂ ಪೆದ್ದ ರೋಗಂ ಅಂತ ತೆಲುಗಿನಲ್ಲಿ ಗಾದೆ. ಪ್ರಕಾಶಣ್ಣ ಸಮಾಜದ ಕನ್ನಡಿ ನಿನ್ ಕಥೆ.

balasubramanya said...

ನಿನ್ನ ಕಥೆ ಓದಿದೆ ಬಹುಷಃ ಹುಡುಗಿಗೆ ವಾಸ್ತವ ಪ್ರಪಂಚದ ಅರಿವಿಲ್ಲ ಅನ್ನಿಸಿತು. ಹಾಗು ಮದುವೆಯ ಬಗ್ಗೆ ,ಜೀವನದ ಬಗ್ಗೆ ಅಷ್ಟಾಗಿ ಅರಿವಿಲ್ಲದಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಹೆಣ್ಣು ಇಲ್ಲಿ ಸ್ವಾರ್ಥಿ ಎನ್ನಿಸಿದರೂ , ಮತ್ತೊಮ್ಮೆ ಪ್ರತೀ ಹೆಣ್ಣು ತನ್ನ ಪತಿ ತನ್ನನ್ನು ಬಿಟ್ಟು ಬೇರೆ ಯಾರನ್ನೂ ಕನಸಿನಲ್ಲೂ ನೆನೆಸಿರಬಾರದು ಎಂಬ ಆಸೆ ಹೊಂದಿರುವುದು ಸಹಜ. ಮದುವುಯಾಗದ ಹೆಣ್ಣು ಮಕ್ಕಳಿಗೆ ನಿಮ್ಮ ಕಥೆ ರುಚಿಸುವುದು ಕಷ್ಟ. ಈ ಕಥೆಯಿಂದ ನೀವು ಅವರ ಪಾಲಿನ ವಿಲನ್ ಆಗುತ್ತೀರಿ ಅನ್ನಿಸುತ್ತದೆ. ಆದರೂ ರೀ ಮದುಮಕ್ಕಳ ಪ್ರಥಮ ರಾತ್ರಿಯನ್ನು ಕಥೆಯಲ್ಲಿ ಹೀಗೆ ಹಾಳುಗೆಡವಿದಘನ ಕಾರ್ಯ ಕಥೆಗಾರನದು ಅದು ನೀವೇ!!!! ಜೈ ಹೋ ಜೈ ಹೋ ಜೈ ಹೋ

ಶುಭಾ:-) said...

ಚೆನ್ನಾಗಿದೆ.. ಹೊಂದಾಣಿಕೆ ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ ಅಳವಡಿಸಿಕೊಳ್ಳುವುದು.. ಇನ್ನು ದಾಂಪತ್ಯದಲ್ಲಿ ಪ್ರತಿ ದಿನ ಪ್ರತಿ ಕ್ಷಣ ಜೀವನ ನಮ್ಮ ಹೊಂದಾಣಿಕೆಯನ್ನ ಒರೆಹಚ್ಚಿ ನೋಡುತ್ತದೆ.. ಪ್ರೀತಿ ವಿಶ್ವಾಸ ಹೊಂದಣಿಕೆಗಳಿಂದ ಪ್ರತಿ ಪರೀಕ್ಷೆಯನ್ನ ಗೆದ್ದರೆ ಮಾತ್ರ ಸುಖ ದಾಂಪತ್ಯ ಸಾದ್ಯ.. :)

Ittigecement said...

ರೂಪಾರವರೆ..

ಈ ಕಥೆಗೆ ಒಂದು ರೋಚಕ ತಿರುವು ಇಲ್ಲ ಅಂತ ಬಹಳ ಸ್ನೇಹಿತರ ಅಭಿಪ್ರಾಯ..
ಒಂದು ವೇಳೆ ಹಾಗೆ ತಿರುವು ಕೊಟ್ಟಿದ್ದರೆ..
ಕಥೆಯ ಮುಖ್ಯ ತಿರುಳು ಗೌಣವಾಗಿ ಬಿಡುತ್ತಿತ್ತು ಅಂತ ನನ್ನ ಭಾವನೆ..

ಇದನ್ನು ಮುಂದುವರೆಸಬಹುದು...

ಗೆಳೆಯ "ದಿನಕರ್ ಮೊಗೆರ" ಒಂದು ಅತ್ಯುತ್ತಮ ಕಥೆಯನ್ನು (ಇದರ ಮುಂದಿನ ಭಾಗ) ಹೆಣೆಯುವರಿದ್ದಾರೆ..
ಅದರ ರೂಪು ರೇಷೆಯನ್ನು ಹೇಳಿದ್ದಾರೆ.. ಅದು ಸೊಗಸಾಗಿದೆ..
ನೀವೂ ಕೂಡ ಪ್ರಯತ್ನಿಸಿ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಶೃತಿ ಪುಟ್ಟಾ..

ಈ ಸಂಬಂಧಗಳು ಯಾಕಾಗಿ?

ಸಂತೋಷದ ಬದುಕಿಗಾಗಿ..
ಒಂದು ಹಿಡಿ ಪ್ರೀತಿಗಾಗಿ. ಅಲ್ಲವೆ?

ನಾವೇ ಕಟ್ಟಿಕೊಳ್ಳುವ ....
ಕಂಡುಕೊಳ್ಳುವ ಬದುಕಿನ ಸುಂದರ ಕ್ಷಣಗಳನ್ನು ಯಾಕಾಗಿ ಹಾಳು ಮಾಡಿಕೊಳ್ಳಬೇಕು...?

ಪ್ರತಿಯೊಬ್ಬರಲ್ಲೂ ಪ್ರೀತಿ ಇದ್ದೇ ಇದ್ದಿರುತ್ತದೆ..
ಅದನ್ನು ನೋಡ ಬೇಕು... ಕಂಡುಕೊಳ್ಳಬೇಕು...

ಇನ್ನೊಂದು ಹಾಸ್ಯದ ವಿಷಯ ಏನು ಗೊತ್ತಾ?

ಸಂಬಂಧಗಳಲ್ಲಿನ ಜಗಳವನ್ನು ....
ಪ್ರೀತಿಗಾಗಿ..
ಪ್ರೀತಿಯನ್ನು ಬಯಸಿ .. ಹಂಬಲಿಸಿಯೇ... ಮಾಡುತ್ತಾರೆ... !!

ಧನ್ಯವಾದಗಳು ಚಂದದ ಪ್ರತಿಕ್ರಿಯೆಗಾಗಿ.. ಜೈ ಹೋ !!

ಕ್ಷಣ... ಚಿಂತನೆ... said...

ರೀತಿ....
ಕಥೆ... ಚೆನ್ನಾಗಿದೆ.

ಸ್ನೇಹದಿಂದ,

ಮೌನರಾಗ said...

ಕತೆ ಚೆನ್ನಾಗಿ ಮೂಡಿ ಬಂದಿದೆ... ಜೊತೆಗೆ ಕಾಮೆಂಟ್ಸ್ ಗಳು ಕೂಡ..
ಅಂತೂ ಅನುಮಾನದ ಹುಡುಗಿ....ಪಾಪದ ಹುಡುಗ ಅಂತಿದ್ದರಾ..?!!

ಗೆಳತಿ said...

ಕತೆ ತುಂಬಾ ಚೆನ್ನಾಗಿದೆ ಅಣ್ಣಯ್ಯ,

ನೀವು ಈ ಕಥೆಯ ಮೂಲಕ ನೀಡಿರುವ ಸಂದೇಶ (ಗಂಡು-ಹೆಣ್ಣಿನ ನಡುವೆ ನಂಬಿಕೆ/ಹೊಂದಾಣಿಕೆ ಅವಶ್ಯ) ಚೆನ್ನಾಗಿ ಮನನವಾಯಿತು.

ಈ ಸಂದೇಶವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸಂಸಾರವೆಂಬ ನೌಕೆ ಸುಗಮವಾಗಿ ಚಲಿಸುತ್ತೆ.

ಗೆಳತಿ said...
This comment has been removed by the author.
ಗೆಳತಿ said...

ನನ್ನದೊಂದು ಪ್ರಶ್ನೆ.

ಈ ಕಥೆಯಲ್ಲಿ ಬರುವ ಹುಡುಗನ ಪ್ರಾತ್ರವನ್ನು ಹುಡುಗಿ ಮಾಡಿದ್ದರೆ?(ನನಗೆ ಸ್ನೇಹಿತ ಇದ್ದನೆಂದು ಹೇಳಿದ್ದರೆ)

Deep said...

ಸಾರ್, ವಾಸ್ತವಿಕತೆ ಗೆ ಕನ್ನಡಿ ಹಿಡಿದ ಹಾಗಿತ್ತು ...

ಕೆಲವು ಇಷ್ಟವಾದ ಸಾಲುಗಳು

" ಅನಿವಾರ್ಯತೆಗಳು ಪ್ರೀತಿಯನ್ನು ಬೆಳೆಸುತ್ತವೆ .. ...."

" ನಮ್ಮದಲ್ಲದ ಅಪರಿಚಿತ ಸ್ವಭಾವದೊಡನೆ ಹೊಂದಾಣಿಕೆ ಮಾಡಿಕೊಳ್ಳುವದು"


ಕಥೆಯಲ್ಲಿ ನೀವು ನಿಜ ಹೊರಗೆ ಬರಿಸಿದ ರೀತಿ ಭಾರಿ ಭಾರಿ ಇಷ್ಟ ಆಯಿತು..

ನಿಮ್ಮ ನಾಯಕಿ ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಒಂದೊದಾಗಿ ಸಂಗತಿ ಗಳನ್ನ ಬಯಲಿಗೆ ಎಳೆಯುತ್ತಾಳೆ..

ಮುಕ್ತಾಯ ನೋಡಿದರೆ ಭಾಗ -೨ ಬರಬಹುದೇನೋ ಅಂತ ಅನ್ನಿಸ್ತ ಇದೆ .. ಬರುತ್ತಾ ?

Raghunandan K Hegde said...

ಇನ್ನೂ ಏನೋ ಇದೆ ಎನ್ನಿಸುವಾಗಲೇ ಮುಗಿದುಹೋಗುವ ಕಥೆ ಓದುಗನ ಮನಸ್ಸಿನಲ್ಲಿ ಹೊಸ ರೂಪದೊಂದಿಗೆ ಬೆಳೆಯುತ್ತದೆ..
ಕಥೆಯ ಅಂತ್ಯವೇ ಇಲ್ಲಿ ಟ್ವಿಸ್ಟ್ ಎನ್ನಿಸದೇ...?

ಯಾವಾಗಲೂ ಹಾಗೇ, ಇನ್ನೂ ಎನೋ ಇದೆ ಎನ್ನುಸುವಾಗಲೇ ಮುಗಿದುಹೋಗುವ ಪ್ರತಿಯೊಂದು ಮನುಷ್ಯನನ್ನ ಕಾಡುತ್ತದೇನೋ.. ಅರ್ಧಕ್ಕೆ ನಿಲ್ಲುವ ಮಾತು.. ಒಪ್ಪಿಕೊಳ್ಳುವ ಮೊದಲೆ ಮುಗಿಯುವ ಬದುಕು.. ಪೂರ್ತಿಗೊಳ್ಳದ ಪ್ರೇಮ.. ಬೇಗನೆ ಮುಗಿಯುವ ರಜೆ..

ಸಂಬಂಧಗಳ ಹದ ಅರಿತು ಬದುಕಿದಾಗ ಸಂಭ್ರಮ...
ಸಂಶಯ ಸಂತೋಷಗಳನ್ನ ಕೊಲ್ಲುತ್ತದೆ.. ಮನುಷ್ಯನನ್ನೂ..

ಕಥೆ ಚೆನ್ನಾಗಿದೆ.. ಮುಂದುವರಿಕೆಯ ಅಗತ್ಯವಿಲ್ಲವೇನೋ.. ಹೊಸತು ಮೂಡಿ ಬರಲಿ...

geeta bhat said...

Kathe subject chennagide...!! Machhe 'adrastada' sanketa anta heltare. adre ee hudugige machhene mullagidya..?? nija helbeku andre mullagirodu avala EGO. ee ego jote samshayanu seridre life tumba kasta aagogutte..ibru seri life nadisabekadre understanding tumbane mukya,adanna ee kathenalli bahala chennagi torsidira..innondu vishaya, ee kathenalli avalu...(hudgi) higidale. adre hudugarallenu ee ego kadime iralla..but life is more important...than this ego ..anta eegina generationge gottagbekagide aste..

Ittigecement said...

ಕೃಷ್ಣಮೂರ್ತಿಯವರೆ.,..

ಯಾಕೇ ಇಂದಿನ ಯುವಜನಾಂಗ ಹೀಗಾಗುತ್ತಿದ್ದಾರೆ?
ಯಾಕೆ ಪರಸ್ಪರ ಹೊಂದಿಕೊಳ್ಳಲು ಕಷ್ಟಪಡುತ್ತಾರೆ?

ಮೊದಲು ನಮ್ಮ ಅಪ್ಪ, ಅಮ್ಮರ ಬದುಕೇ ಆದರ್ಶವಾಗಿರುತ್ತಿತ್ತು..
ಅವರು ಹೆಚ್ಚಿನ ಉಪದೇಶ ಹೇಳದಿದ್ದರೂ..
ಗಂಡ ಹೆಂಡತಿ ನಡುವಿನ ಸಾಮರಸ್ಯ ನಮ್ಮ ಕಣ್ಣೆದುರಿಗೆ ಇರುತ್ತಿತ್ತು..
ಅವರಿಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೂ..
ಮಕ್ಕಳೆದುರು ಜಗಳವಾಗುತ್ತಿರಲಿಲ್ಲ.. ಒಂದು ಆರೋಗ್ಯ ಪೂರ್ಣವಾದ ಚರ್ಚೆಯಾಗಿರುತ್ತಿತ್ತು..

ಇಂದು ನಾವು ಹಾಗೆ ಮಾಡುತ್ತಿಲ್ಲ..
ನಮ್ಮ ತಪ್ಪಿನ ಅರಿವು ನಮಗೆ ವಾಅಯಸಾದಮೇಲೆ ಗೊತ್ತಾಗ ಬಹುದು..

ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು... ಜೈ ಹೋ !!

Ittigecement said...

ಪ್ರೀತಿಯ ಮಹೇಶ ಗೌಡರೆ..

ನೀವು ಹೇಳುವದು ನಿಜ...
ಮದುವೆಯ ಮೊದಲ ದಿನಗಳಲ್ಲಿ ಅನುಮಾನ ಜಾಸ್ತಿ..
ಗಂಡು ಹೆಣ್ಣು ಇಬ್ಬರಿಗೂ..
ತಮ್ಮ ಪ್ರೀತಿ ತಮಗೊಬ್ಬರಿಗೇ ಇರಬೇಕು.. ಸಿಗಬೇಕು ಅಂತೆಲ್ಲ..
ಪೊಸ್ಸೆಸ್ಸಿವ್ ನೆಸ್ ಬಹಳ ಇರುತ್ತದೆ ಮದುವೆಯಾದ ದಿನಗಳಲ್ಲಿ..
ಅದೊಂಥರ ಪ್ರೀತಿ ಕೂಡ...

ದಿನ ಉರುಳಿದ ಹಾಗೆ ಸರಿಯಾದರೆ ಪರವಾಗಿಲ್ಲ.. ಜಾಸ್ತಿಯಾದರೆ ಕಷ್ಟ..

ಪ್ರೀತಿಯ ಪ್ರೋತ್ಸಾಹಕ್ಕೆ ವಂದನೆಗಳು .. ಜೈ ಹೋ !!

Ittigecement said...

ಬದರಿನಾಥ ಸರ್...

ನೀವು ಹೇಳುವಂಥಹ ವ್ಯಕ್ತಿತ್ವವನ್ನು ನಾನೂ ನೋಡಿದ್ದೇನೆ..
ಅದೊಂಥರ ಮನೊ ರೋಗ...
ಅಂಥವರು ಮದುವೆ ಆಗಲೇ ಬಾರದು..

ಬದುಕಿನ ಕೆಲವೊಂದು ಘಟ್ಟಗಳಿಗೆ ಬಹಳ ತಲೆಕೆಡಿಸಿಕೊಂಡು ..
ಲೆಕ್ಕಾಚಾರ ಹಾಕಿಕೊಂಡು ನಡೆಯುವದು ತಪ್ಪಾಗ ಬಹುದು..

ನಮ್ಮ ನಿರೀಕ್ಷೆಗಳಿಗಿಂತ....
ಬದುಕು ನಮ್ಮಿಂದ ಬಹಳ ನಿರೀಕ್ಷೆ ಬಯಸುತ್ತದೆ...

ಯಾಕೆಂದರೆ ಬದುಕು ಗಣಿತವಲ್ಲ... ಚದುರಂಗದ ಆಟವೂ ಅಲ್ಲ..

ಬದುಕಲ್ಲಿ ಹೇಗೆ ಬರುತ್ತದೋ ಹಾಗೇ ಸ್ವೀಕಾರ ಮಾಡಿಕೊಳ್ಳುವದು..
ಅದಕ್ಕೆ ಒಪ್ಪಿ ನಡೆಯುವದು ಕೆಲವೊಮ್ಮೆ ಬುದ್ಧಿವಂತಿಕೆ ಎನಿಸುತ್ತದೆ .. ಅಲ್ಲವೆ?

ಪ್ರೀತಿಯ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು....

Ittigecement said...

ಸುನಾಥ ಸರ್...

ಹೆಣ್ಣಿರಲಿ.. ಗಂಡಿರಲಿ...
ಇಬ್ಬರೂ ಸೇರಿ ಕಟ್ಟಿಕೊಳ್ಳುವ ಬದುಕಿದು..
ಕನಸುಗಳನ್ನು ನನಸು ಮಾಡಿಕೊಳ್ಳಲು..
ಸಂತೋಷ.. ಸಂಭ್ರಮ ಕಂಡುಕೊಳ್ಳಲು ಜೊತೆಯಾಗುತ್ತಾರೆ..

ಎಲ್ಲವೂ ನನಗಾಗಿ.. ನನ್ನ ಆಸೆಗಳಿಗಾಗಿ..
ಮೊದಲು ನಾನು ಎನ್ನುವದನ್ನು ಬಿಟ್ಟು..
ನಾವು.. ನಮಗಾಗಿ ...
ನಮ್ಮ ಪ್ರೀತಿಗಾಗಿ ಎಂದರೆ ಕನಸು ನನಸಾಗಬಹುದಲ್ಲವೆ?

ಸರ್..
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶ್ರೀಕಾಂತ್ ಮಂಜುನಾಥ್...

ತುಂಬಾ ಸೊಗಸಾದ ಪ್ರತಿಕ್ರಿಯೆ ನಿಮ್ಮದು...
ಇನ್ನಷ್ಟು ಬರೆಯುವ ಪ್ರೇರಣೆ ಕೊಡುತ್ತದೆ.. ತುಂಬಾ ತುಂಬಾ ಧನ್ಯವಾದಗಳು...

ನಾನು ಅನ್ನುವದನ್ನು ಬಿಟ್ಟು ನಮ್ಮದು ಅಂದುಕೊಂಡರೆ ದಾಂಪತ್ಯ ಸೊಗಸು...

ಒಬ್ಬಳೆ ಮಗಳು/ ಮಗ ಅಂತ ಮುದ್ದಿನಿಂದ ಬೆಳೆಸಿ...
ಅಗತ್ಯಕ್ಕಿಂತ ಹೆಚ್ಚಿನ ಪ್ರೀತಿ ಕೊಟ್ಟು..
ಬೇಕು, ಬೇಡಗಳನ್ನು ಪೂರೈಸಿ...
ವಾಸ್ತವ ಪ್ರಪಂಚದಿಂದ ದೂರ ಇಟ್ಟರೆ ಈ ರೀತಿ ಅವಾಂತರ ಆಗುತ್ತದೆ...

ಮತ್ತೊಂದು ಸ್ವಭಾವದ ವ್ಯಕ್ತಿಯೊದನೆ ಹೊಂದಿಕೊಳ್ಳಲಾಗದೆ ಒಂಟಿಯಾಗಿಬಿಡುತ್ತಾರೆ...

ಪ್ರೀತಿಯ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

Ittigecement said...

ಪ್ರೀತಿಯ ಸಿರಿರಮಣ..

ತನ್ನ ಪ್ರೀತಿ ಎಲ್ಲಿ ಕಳೆದು ಹೋಗುತ್ತೋ ಅನ್ನುವ ಹೆದರಿಕೆಯಲ್ಲಿ "ಅನುಮಾನ" ಸಹಜ...
ಅನುಮಾನ ಜಾಸ್ತಿಯಾಗಬಾರದಷ್ಟೆ...

ಗಂಡ ಹೆಂಡತಿ ಇಬ್ಬರೂ ಹೊರಗಡೆ ದುಡಿಯುವ ಸಂದರ್ಭಗಳಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ ಅತ್ಯಗತ್ಯ...

ಪ್ರೀತಿಯ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು... ಜೈ ಹೋ !!

ಓ ಮನಸೇ, ನೀನೇಕೆ ಹೀಗೆ...? said...

ಸುಂದರ ಕಥೆ ಪ್ರಕಾಶಣ್ಣ...ದಾಂಪತ್ಯದಲ್ಲಿ ಹೊಂದಾಣಿಕೆ ಎರಡೂ ಕಡೆಯಿಂದ ನಡೆದಾಗ ಮಾತ್ರ ಸಂಸಾರ ಸಮರವಾಗದೆ ಸುಂದರ ಸಮ್ಮಿಲನ ವಾಗಲು ಸಾಧ್ಯ. ಸಂಗಾತಿಯ ಗುಣಾವಗುಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ...ಆಗಲೇ ಕಥೆ ಸುಖಾಂತ್ಯವಾಗಳು ಸಾಧ್ಯ ಅನ್ಸುತ್ತೆ ಅಲ್ವಾ.

Pradeep Rao said...

ಪ್ರಕಾಶಣ್ಣಾ...

ಕಥೆ ಇಷ್ಟವಾಯ್ತು.. ಕಥೆಯಲ್ಲಿ ಹಾಗು ಮಿತ್ರರು ಬರೆದಿರುವ ಕಾಮೆಂಟುಗಳಲ್ಲಿ ಸುಖ ಸಂಸಾರದ ಸೂತ್ರಗಳು ಹರಿದು ಬಂದಿವೆ!

ನಮ್ಮಂಥವರಿಗೆ ತುಂಬಾ ತಿಳಿದುಕೊಳ್ಳುವ ವಿಷಯಗಳಿವೆ...

ಪ್ರೇಮ ವಿವಾಹ ಒಳ್ಳೆಯದೋ ಅಥವ ಅರೇಂಜ್ ವಿವಾಹ ಒಳ್ಳೆಯದೋ ಎಂದು ಯಾರಾದರೋ ಕೇಳಿದರೆ ವಿವಾಹವೆಂಬುದೇ ಒಳ್ಳೆಯದಲ್ಲ ಎನ್ನುತ್ತಿದ್ದೆ ನಾನು! ಹ್ಹ ಹ್ಹ ಹ್ಹಾ...

ಧನ್ಯವಾದಗಳು!

Ittigecement said...

ಪ್ರೀತಿಯ ಬಾಲಣ್ಣ...

ಹೆಣ್ಣಿರಲಿ, ಗಂಡಿರಲಿ ತಾಳ್ಮೆ ಬೇಕು...
ಹೊಂದಿಕೊಂಡು ಹೋಗುವ ಸ್ವಭಾವ ಬೆಳೆಸಿಕೊಳ್ಳ ಬೇಕು...

ನಿಜ ....
ಈ ಕಥೆಗೆ "ಮದುವೆಯಾಗದ ಹೆಣ್ಣುಮಕ್ಕಳ" ಪ್ರತಿಕ್ರಿಯೆ ಬಹಳ ಬಹಳ ಕಡಿಮೆ..
ಆದರೆ ಫೇಸ್ ಬುಕ್ಕಿನಲ್ಲಿ, ಜೀಮೇಲಿನಲ್ಲಿ ಸಂದೇಶ ಇಟ್ಟಿದ್ದಾರೆ..
"ಪ್ರಕಾಶಣ್ಣ ಕಥೆ ಚೆನ್ನಾಗಿದೆ" ಅಂತ... !!
ಇಲ್ಲಿ ಹೇಳಿಲ್ಲ ಅಷ್ಟೆ...
ನನಗೂ ಯಾಕೆ ಅಂತ ಗೊತ್ತಾಗಿಲ್ಲ..!

ನೀವು ಪಟಾಕಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ...!

ಈ ಕಥೆ ಗಂಡು, ಹೆಣ್ಣು ಇಬ್ಬರಿಗೂ ಸಂಬಂಧಿಸಿದ್ದು...
ಹೀಗಾಗಾಬಾರದು ಎನ್ನುವ ಆಶಯ ಅಷ್ಟೆ..

ಪ್ರೀತಿಯ ಪ್ರೋತ್ಸಾಹಕ್ಕೆ..
ನಿಮ್ಮ ತುಂಟತನಕ್ಕೆ ಧನ್ಯವಾದಗಳು...

Ittigecement said...

ಶುಭಾ...

ತುಂಬಾ ಸತ್ಯವಾದ ಮಾತು ನಿಮ್ಮದು..
ದಾಂಪತ್ಯದಲ್ಲಿ ಪ್ರತಿಕ್ಷಣವೂ ಹೊದಾಣಿಕೆಯ ಪರೀಕ್ಷೆ ಮಾಡುತ್ತಿರುತ್ತದೆ..
ತಾಳ್ಮೆ ಅತ್ಯಗತ್ಯ..

ಗಂಡಿಗಿಂತ ಹೆಣ್ಣಿಗೇ ಕಷ್ಟ ಜಾಸ್ತಿ..
ಮನೆ.., ಜನ ಎಲ್ಲವೂ ಬೇರೆ..
ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ..

ಮೊದಲಿನ ಕಾಲದಲ್ಲಿ ಇವೆಲ್ಲ ಓಕೆ..

ಆದರೆ ಈಗ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ..
ಅಂಥಹ ಅನಿವಾರ್ಯತೆ ಇಲ್ಲ..

ಹಾಗಾಗಿ ವಿಚ್ಛೇಧನಗಳು ಜಾಸ್ತಿಯಾಗುತ್ತಿವೆಯಾ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

umesh desai said...

hegadeji, as ususal your story poses lot of questions. the ending is apt and ok with me.

ಮನದಾಳದಿಂದ............ said...

ಪ್ರಕಾಶಣ್ಣ,
ಪ್ರೇಮ-ಪ್ರೀತಿ ಆಕರ್ಷಣೆ, ಮದುವೆ ಬದುಕು....................
ಪ್ರೀತಿಸಿ ಮದುವೆಯಾದ ೯೦ ಪ್ರತಿಶತ ಮದುವೆಗಳು ಮುರಿದು ಬಿದ್ದಿವೆ, ಕೆಲವು ಸಂತೋಷದ ಪರದೆಯ ಒಳಗೆ ಹಳಸಿದ ಸಂಬಂಧಗಳ ಗುಟ್ಟಿದೆ.
ಹುಡುಗ ಹುಡುಗಿ ಮದುವೆಗೂ ಮೊದಲು ಸತ್ಯವನ್ನೆಲ್ಲ ಹೇಳಿಕೊಂಡರೂ (ಒಂದು ವೇಳೆ ಹಳೆಯ ಪ್ರೇಮ ಅಥವಾ ಸಂಬಂಧಗಳು ಇದ್ದಿದ್ದರೆ) ನನ್ನಾಕೆ/ತ ಸತ್ಯವಂತ, ಹರಿಶ್ಚಂದ್ರನ ವಂಶದವರೆಂಬಂತೆ ಪೋಸು ಕೊಡುತ್ತಾರೆ. ಆದರೆ ಅದೇ ಸತ್ಯ ಗಳು ಮದುವೆಯ ನಂತರ ಭೂತಾಕಾರದ ಸಂಶಯಗಳಾಗಿ ದಾಂಪತ್ಯ ಜೀವನದ ಸುಖವನ್ನು ನುಂಗಿ ಹಾಕುತ್ತದೆ. ಅನುಮಾನ ಪಡದೆ ಪ್ರೀತಿ ವಿಶ್ವಾಸ ನಂಬಿಕೆಗಳು ಪರಸ್ಪರರಲ್ಲಿ ಇದ್ದರೆ ಇಂತಹ ಸಮಸ್ಯೆಗಳೇ ಬರಲಾರದು!
ಇಂದು ಟೀವಿಯಲ್ಲಿ, ಪತ್ರಿಕೆಯಲ್ಲಿ ಬರುವ ಹೆಂಡತಿಗೆ ಕೊಡುವ ಹಿಂಸೆ, ಕೊಲೆ ಇತ್ಯಾದಿ ವಿಷಯಗಳು ವರದಕ್ಷಿಣೆಯ ಕಾರಣ ಅಂತ ನಮಗೆ ಗೊತ್ತು. ಆದರೆ ಕಟು ಸತ್ಯವೇನೆಂದರೆ ಇಂತಹ ಕೇಸುಗಳಲ್ಲಿ ೫೦ ಶೇಕಡಾ ಪರಸ್ಪರ ಅಪನಂಬಿಕೆ, ಅವಿಶ್ವಾಸ ಅನುಮಾನದಿಂದ ಆಗುವ ಸಮಸ್ಯೆಗಳು. ಇಂತಹ 3-4 ಘಟನೆಗಳನ್ನು ನಾನು ನೋಡಿದ್ದೇನೆ!

ಏನೇ ಇರಲಿ, ಈ ಕತೆ ಅದೆಷ್ಟೋ ಮದುವೆ ಆಗುವವರಿಗೆ, ಅಥವಾ ಮದುವೆ ಆದವರಿಗೆ ಒಂದು ಪಾಠ ಎನ್ನುವುದರಲ್ಲಿ ಸಂಶಯವಿಲ್ಲ!!!!

ಮನದಾಳದಿಂದ............ said...

"ಮದುವುಯಾಗದ ಹೆಣ್ಣು ಮಕ್ಕಳಿಗೆ ನಿಮ್ಮ ಕಥೆ ರುಚಿಸುವುದು ಕಷ್ಟ. ಈ ಕಥೆಯಿಂದ ನೀವು ಅವರ ಪಾಲಿನ ವಿಲನ್ ಆಗುತ್ತೀರಿ ಅನ್ನಿಸುತ್ತದೆ. ಆದರೂ ರೀ ಮದುಮಕ್ಕಳ ಪ್ರಥಮ ರಾತ್ರಿಯನ್ನು ಕಥೆಯಲ್ಲಿ ಹೀಗೆ ಹಾಳುಗೆಡವಿದಘನ ಕಾರ್ಯ ಕಥೆಗಾರನದು ಅದು ನೀವೇ!!!!"-ಕ್ಯಾಪ್ಟನ್ ಬಾಲಣ್ಣ
ಹಾಗೆ ನಮ್ಮೊಳಗೊಬ್ಬ ಬಾಲು ಸರ್ (ಕ್ಯಾಪ್ಟನ್ ಬಾಲಣ್ಣ) ಹೇಳಿದ್ದು ನೂರಕ್ಕೆ ನೂರು ಸತ್ಯ!!!!!

Gubbachchi Sathish said...

ಬಚ್ಚಲು ಮನೆಯಲ್ಲಿ ...
ನಿಮ್ಮ ಒಳ ಚಡ್ಡಿಯನ್ನು ತೊಳೆಯುವಂಥಹ ಹೆಂಡತಿ ನಾನಾಗಲಾರೆ.."

ಚೆನ್ನಾಗಿದೆ. ನಿಮ್ಮ ಕಲ್ಪನೆಗಳು ಬಲು ಅಧ್ಭುತ.

ನಂಬಿಕೆಯೇ ಮೈನ್....

ದೀಪಸ್ಮಿತಾ said...

ಚೆನ್ನಾಗಿದೆ ಬರಹ ಪ್ರಕಾಶಣ್ಣ. ನೀವು ಕೊನೆಯಲ್ಲಿ ಬರೆದ ಹಾಗೆ ಪ್ರತಿಕ್ರಿಯೆಗಳೂ ಅಷ್ಟೇ ಸ್ವಾರಸ್ಯಕರವಾಗಿವೆ

ಕಾವ್ಯಾ ಕಾಶ್ಯಪ್ said...

ಪ್ರಕಾಶಣ್ಣ, ಈಗಿನ ಸಂಸಾರಗಳು ಹಾದಿ ತಪ್ಪುವುದು ಹೇಗೆಂಬುದರ ಒಂದು ಎಳೆಯನ್ನು ಕೊಟ್ಟಿದ್ದೀರ... ಕಥೆ ವಾಸ್ತವಕ್ಕೆ ಬಹು ಹತ್ತಿರವಾಗಿದೆ.. ನಂಬಿಕೆ, ಹೊಂದಾಣಿಕೆ, ಸಹಬಾಳ್ವೆ ದಾಂಪತ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.. ಸುಮ್ಮನೆ ಹಳೆಯದನ್ನು ಅದರಲ್ಲೂ ಬೇಡದೆ ಇರುವ ವಿಷಯವನ್ನು ಕೆದಕಿ ಕೇಳಿ ಅನುಮಾನ ಬೆಳೆಸಿಕೊಂಡರೆ ಹೀಗೆಯೇ ಆಗುವುದು..!

ಎಂದಿನಂತೆ ಮನಮುಟ್ಟುವ ವರ್ಣನೆ... ಸರಳ ಸಾಲುಗಳು...

Sandeep K B said...

ಕಥೆ ಚೆನ್ನಾಗಿ ಮೂಡಿ ಬಂದಿದೆ .....
"ಅನುಮಾನ ಇಲ್ಲದ ಹೆಣ್ಣಿಲ್ಲ, ರಹಸ್ಯ ಮುಚ್ಚಿಡುವ ಗಂಡಿಲ್ಲ"

ಸೀತಾರಾಮ. ಕೆ. / SITARAM.K said...

ಕಥೆ ಕಥೆಯ೦ತಿಲ್ಲ......

Supriya Navin said...

tumba lchennagide.... gottaytu nanna magalna hege belesabekendu :P

Guruprasad said...

ಪ್ರಕಾಶಣ್ಣ,
ಕಥೆಯನ್ನು ಅಂದೇ ಓದಿದ್ದೆ, ಆದರೆ ಪ್ರತಿಕ್ರಿಯೆ ಪಡಿಸಲಾಗಲಿಲ್ಲ....
ವಾಸ್ತವಕ್ಕೆ ತುಂಬಾ ಹತ್ತಿರವಾಗಿ ಇದೆ.... ಅನುಮಾನ ಬಂದಲ್ಲಿ ನಂಬಿಕೆ ಉಳಿಸುವುದು ಬಹಳ ಕಷ್ಟ.... ಈ ಹೆಣ್ಣಿನ ಮನಸು,,, ತುಂಬಾ ವಿಚಿತ್ರ... ಅಂತ ಕೇಳಿದ್ದೆ (ಇವಾಗ ಅನುಭವಕ್ಕೂ ಬಂದಿದೆ :-) ) , ನಂಬಿಕೆ ವಿಶ್ವಾಸ , ಪ್ರೀತಿ,, ಇದರಲ್ಲಿ ಬಿರುಕು ಕಾಣಿಸಿತು ಅಂದರೆ,, ಕಷ್ಟ.... ಮದುವೆಗೆ ಮುಂಚೆ ಎಷ್ಟೇ ಮಾತನಾಡಿದರು.... ವಾಸ್ತವದಲ್ಲಿ.... ಹೊಂದಾಣಿಕೆ ಸ್ವಲ್ಪ ಕಷ್ಟ ,,, ಅದರೂ,,, ಅದನ್ನು ಬಿಡಬಾರದು,,,, ಅಡ್ಜಸ್ಟ್ ಆಗೋಕೆ,,, ಅರ್ಥ ಮಾಡಿಕೊಳ್ಳೋಕೆ ಟೈಮ್ ಬೇಕು..... ದುಡುಕಿನ ನಿರ್ದಾರ ಎಡವಟ್ಟಿಗೆ ದಾರಿ ...

ಗುರು

G. K. Hegde said...

prakashanna,
sakkathagithu.. super ..

regards
gkhegde