Friday, February 26, 2010

ತಾಯಿ ಮಗು ಸೆಂಟಿಮೆಂಟು..! ಮರಳು .. ಸಿಮೆಂಟು.. ಕಾಂಕ್ರೀಟು...!

ಪ್ರತಿ ಮನೆ ಕಟ್ಟುವಾಗ..
ಇಂತಹದೊಂದು ಬದುಕು ಕಣ್ಣಿಗೆ  ಕಾಣುತ್ತದೆ...
ಕಾಡುತ್ತದೆ..

ಇಲ್ಲಿ ಕಷ್ಟವಿದೆ.. ಬವಣೆಯಿದೆ..
ಮೋಸವಿದೆ..
ಮಮತೆಯಿದೆ..

ಎಲ್ಲ ಇಲ್ಲದುದರಗಳ ನಡುವೆ...
ವಿಷಾದವಿದೆ..
ನಗುವೂ ಇದೆ...

ಈ ತಾಯಿಗೆ ...
ಎಲ್ಲಿರುತ್ತದೆ..ಈ ತಾಳ್ಮೆ...!!  ??
ಇಷ್ಟೊಂದು   ಮಮತೆ.. ವಾತ್ಸ್ಯಲ್ಲ...!!..??



ಸುಡು ಬಿಸಿಲು.. ಕಾಂಕ್ರಿಟ್  ಕೆಲಸದ ಭರಾಟೆ.. ನಮ್ಮ ಬಗ್ಗೆ ಗಮನವೆಲ್ಲಿ...? 

ಅಮ್ಮಾ... ಹಸಿವಾಗಿದೆ...! ಬೇಗ ಬಾರಮ್ಮಾ... !!


ಆಡೋಣಾ...ನಾನು... ನೀನು...!!
 ಈ ಮರಳಲ್ಲಿ..
ಈ ಬಿಸಿಲಲ್ಲಿ...!!

ಅಮ್ಮಾ... ಯಾವಾಗ ಕೆಲಸ ಮುಗಿಯುತ್ತದಮ್ಮಾ...?

ಇದು ನನ್ನ  ಆಟ... ನನ್ನ ಪಾಠ.. !


ಈ ಭೂಮಿಯೇ ಹಾಸಿಗೆ..!
ಆಗಸವೇ ಹೊದಿಕೆ...!!
ಇದೆಂಥಹ  ಕೆಟ್ಟದಾದ...   ಕಹಿ ಜಗತ್ತು...!!  ??


ನಿನ್ನ ಜೊತೆ ನಾನೂ  ಬರ್ಲೇನೋ...??

ಮಗುವೆ...
ನಿನ್ನ ಹೂ ನಗೆ...
ಭರವಸೆ  ಎನ್ನ ಬಾಳಿಗೆ....



ನನ್ನ ರಾಜ..! ನನ್ನ ಮುದ್ದು ಕಂದ...!

ಹಸಿವೆ ಯಾಗಿದೆಯಾ..? ಸ್ವಲ್ಪ  ಇರು  ..! ಈಗ ಉಟ ಕೊಡುತ್ತೇನೆ...!

ಮರಳು...
ಮರುಳು..
 ಈ ಬದುಕು..!
ಈ ಬಾಲ್ಯ... !

ಬುತ್ತಿ ಕೊಡುವೆನೆಂದ  ಅಮ್ಮ ಬರಲಿಲ್ಲ...!
ಕೆಲಸವಿನ್ನೂ ಮುಗಿದಿಲ್ಲ... !


ಮುದ್ದು ಕಂದನಿಗೆ ಮೊಲೆಯುಣಿಸಿ  ಬರುವೆ...
 ಸ್ವಲ್ಪ ಕಾಯುತ್ತಿರಾ...?

ಏನೂ ಹೇಳಿದ್ರೂ ಸುಮ್ಮನಿರ್ತಾ  ಇಲ್ಲ..
ಈ ತಂಗಿ..!!.
ಅಮ್ಮಾ  ಬೇಗ.. ಬಾರಮ್ಮಾ...!!

ಇದೇ.. ನಿನ್ನ  ಸುಪ್ಪತ್ತಿಗೆ...
ಮೆತ್ತನೆಯ ಹಾಸಿಗೆ... ಮಗುವೆ...!!


ಅಳ ಬೇಡಾ...
ಕಂದಾ  ಅಳ ಬೇಡಾ... !
ನಿನ್ನ ಅಳುವ ಗಮನಿಸುವವರು
ಯಾರೂ... ಇಲ್ಲಿಲ್ಲಾ...!

 ಅತ್ತೂ.. ಅತ್ತೂ..
ಬತ್ತಿ..
ಬರಿದಾಗದಿರಿ...
ಭಾವಗಳೇ....!

ಹಸಿವೆ.. 
ದುಃಖ... ಒತ್ತರಿಸಿದರೂ..
 ಬತ್ತುತ್ತಿದೆ .. ಕಣ್ಣಿರು......!

ಕಮರಿ...
ಕರಗಿ
 ಹೋಗದಿರಿ...
ಕಂದಮ್ಮಗಳೇ..
ನಿಮ್ಮ...
ಕನಸುಗಳ ಜೊತೆ......
ಕಣ್ಣಿರ ಧಾರೆಯಾಗಿ...!

ಅಮ್ಮಾ... ಯಾವಾಗ ಮುಗಿಯುತ್ತದಮ್ಮಾ  ಈ ಕೆಲಸ...?

ಬತ್ತಿದಾ... ಕಣ್ಣಿರಲು ಆಸೆಯಿದೆ.. ಇನ್ನೆಕೋ...?
ದೇಹಕೆ.. ಉಸಿರೇ.. ಸದಾ ಭಾರಾ...
ನೀನೆ..... ಭರವಸೆಯ ಆಧಾರಾ...!

 
ಉಪ್ಪರಿಗೆಯ ಸುಪ್ಪತ್ತಿಗೆ.... ಕಟ್ಟುತ್ತಿರುವೆ ಕಂದಾ...!


ಇದೂ.. ಒಂದು  ಬದುಕು...
ನನ್ನ ಕಂದನಿಗೂ
ಒಂದು ಬದುಕು ಕೊಡ ಬೇಕಿದೆ...
ಕನಸು... ಕಟ್ಟ ಬೇಕಿದೆ...

ತಾಯಿ ಎಂಬ ದೈವಕೆ..
ಬೇರಾರೂ ಸಾಟಿಯೇ...??...!!


ಹಾದಿ.. ಬೀದಿಯ ಬದುಕು...



ಅಳ ಬೇಡ.. ಮಗುವೆ...!
ಎತ್ತಿ..
ಎದೆಗಾನಿಸಿ..
ಅಪ್ಪಿಕೊಳ್ಳಲು..  ಸಮಯವಿಲ್ಲ ...!!




ನಮಗೂ..
ಒಂದು..
ಬದುಕಿದೆ...
ಆಸೆಯಿದೆ...
ಕನಸಿದೆ...
ಅರಳುವ  ಭರವಸೆ  ಎಲ್ಲಿದೆ...?





ಇಷ್ಟೆಲ್ಲಾ...
ಕಷ್ಟಗಳ.. ನಡುವೆ..
ಮಗುವನ್ನೂ ಸಮಾಧಾನ ಪಡಿಸುತ್ತಾ..
ನಗುತ್ತ..
ಕನಸು ಕಟ್ಟು ವಿಯೆಲ್ಲ...!!

ಮ್ಹಾ... ತುಜ್ಹೆ  ಸಲಾಂ...!!!!

Sunday, February 7, 2010

ಒಮ್ಮೆ ಬೆಂಗಳೂರಿಗೆ ಬಂದ್ರೆ .. ಸ್ವರ್ಗ ಗ್ಯಾರೆಂಟಿ....!!

ಪಾಟೀಲ್ ನಮ್ಮ  ಕಾಲೇಜು ದಿನಗಳ ಸ್ನೇಹಿತ..

ಹುಬ್ಬಳ್ಳಿಯಲ್ಲಿಯಿಂದ ಬೆಂಗಳೂರಿಗೆ ಬಂದಿದ್ದ...

" ನೋಡೋ  ಪ್ರಕಾಶು...
ಒಂದು ದಿನ  ಬೆಂಗಳೂರೆಲ್ಲ ಸುತ್ತ ಬೇಕು..
ಮತ್ತೆ ಕಾಲೇಜು ದಿನಗಳ ನೆನಪು ಬರ ಬೇಕು ನೋಡು...

ಆ .. ಅಡ ಪೋಟ್ರು...ನಾಗೂವನ್ನೂ ಕರೆದು ಕೊಂಡು  ಬಾ "

ನಮಗೂ ಖುಷಿಯಾಗಿತ್ತು...

ಈ ಕೆಲಸದ ಒತ್ತಡಗಳು...
ಬೆಂಗಳೂರಿನ  ಟ್ರಾಫಿಕ್..
ಈ ಪಾಟೀಲ್ , ನಾಗು  ಜೊತೆ ಚೆನ್ನಾಗಿ ಹರಟಿ.. ನಕ್ಕು ಒಮ್ಮೆ  ಫ್ರೆಷ್ ಆಗ ಬಹುದಲ್ಲಾ....!

ನಾಗುವನ್ನೂ ಅವನ ಮನೆಯಿಂದ  ಕರೆದುಕೊಂಡು  ಬನ್ನೇರು ಘಟ್ಟ ರೋಡಿನ  ಹುಳಿಮಾವು ಕ್ರಾಸಿನ ಬಳಿ ಬಂದಿದ್ದೆ... 

" ಲೋ... ಪ್ರಕಾಶು...
ಎಲ್ಲಿದ್ದೀಯೋ  ಪುಣ್ಯಾತ್ಮಾ...?
ಈಗಲೇ  ಒಂಬತ್ತುವರೆ..
ಇನ್ನು ನೀನು ಬರೋದು ಯಾವಾಗ...?
ಬೆಂಗಳೂರು  ಸುತ್ತೋದು ಯಾವಾಗ...?
ನನಗಂತೂ  ಕಾದು.. ಕಾದು  ಬೋರಾಗ್ತಾ  ಇದೆ,,
ಯಾವಾಗ ಬರ್ತೀಯೋ...?"

ಈ  ಪಾಟಿಲನಿಗೆ ಸ್ವಲ್ಪ ಕಿಚಾಯಿಸಬೇಕು ಅನ್ನಿಸಿತು...

" ಅದು ಹೇಗೋ  ಹೇಳ್ಳಿಕ್ಕೆ ಸಾಧ್ಯ..??
ಅದೂ ಈ ಬೆಂಗಳೂರಲ್ಲಿ...??!!"

"ಯಾಕೋ ಹೀಗಂತೀಯಾ...?"

"ಬೆಂಗಳೂರಲ್ಲಿ ಬರೋ ಸಮಯ ಹಾಗೆಲ್ಲ ಹೇಳ್ಳಿಕ್ಕೆ ಆಗೋದಿಲ್ಲಪ್ಪಾ...!!
ನೀನು ಬೆಳಿಗ್ಗೆ ಎದ್ದು  ಯಾರ ಮುಖ ನೋಡಿದ್ದೀಯಾ..!!.?
ನಿನ್ನ  ಈ ಜನ್ಮದ ಪುಣ್ಯ..!!
ಹಿಂದಿನ  ಜನ್ಮ ಜನ್ಮಾಂತರದ ಪುಣ್ಯ..!!.
ನಿನ್ನ ಹಿರಿಯರು ಮಾಡಿದ ಪಾಪ  .. ಪುಣ್ಯ..!!
ನಿನ್ನ  ಗ್ರಹಗತಿಗಳು...!!
ನಿನ್ನ  ಮನೆ  ವಾಸ್ತು..!!
ಎಲ್ಲ  ಸೇರ್ಕೊಂಡಿರ್ತದೆ..!!
ಇದು  ಬೆಂಗಳೂರಿನ ಟ್ರಾಫಿಕ್ಕು  ಕಣೊ...!!
ಮಾಮೂಲಿ  ವಿಷಯ ಅಲ್ಲ...!!

ಪಾಟೀಲನಿಗೆ  ರೇಗಿ ಹೋಯ್ತು....

" ಅಲ್ಲಾ...
ನೀವು ಈ ಬೆಂಗಳೂರಲ್ಲಿ  ಹೇಗಪ್ಪಾ  ಬದುಕ್ತೀರೀ..??..!!
ಬೆಂಗಳೂರಲ್ಲಿ ಬದುಕೋರೆಲ್ಲ  ಪಾಪಿಗಳು...!!
ಅತಿ..ಕೆಟ್ಟ ಪಾಪ ಮಾಡಿದೋರು  ಬೆಂಗಳೂರಿಗೆ  ಬರ್ತಾರೆ...!!"

ಅಷ್ಟರಲ್ಲಿ  ಜೆಪಿನಗರದ ಕ್ರಾಸ್  ಬಂತು...
ಅಲ್ಲೇ ಪಕ್ಕದಲ್ಲಿದ್ದ ನಮಗಾಗಿ  ಕಾಯುತ್ತಿದ್ದ... ಪಾಟಿಲ್...!!

ಪಾಟೀಲ್ ಕಂಡು  ನನಗೂ, ನಾಗುಗೂ... ತುಂಬಾ  ಖುಷಿಯಾಯ್ತು...

ಬಹಳ ವರ್ಷಗಳ ನಂತರ ಭೇಟಿಯಾಗ್ತಾ ಇದ್ದಿದ್ದು ..
ನಮ್ಮ ಏರಿದ ಧ್ವನಿಯ ಮಾತುಕತೆಯಲ್ಲಿ ಗೊತ್ತಾಗ್ತಾ ಇತ್ತು...

"ಎಲ್ಲಿ ಹೋಗೋಣ್ರೋ..??"

ನಾಗು  ವಾಸ್ತವ ಪ್ರಪಂಚಕ್ಕೆ ಬಂದ...

"ಮೊದ್ಲು  ಮೆಜೆಸ್ಟಿಕ್ ತೋರಿಸ್ರಪಾ... ಅಲ್ಲಿಗೆ ಹೋಗೋಣು..."

ನಮ್ಮ ಕಾರು ಮೆಜೆಸ್ತೀಕ್ ಕಡೆ ತಿರುಗಿತು...

ಕನಕಪುರ ರಸ್ತೆಯಲ್ಲಿ ಬನಶಂಕರಿ ದೇವಸ್ಥಾನದ ಬಳಿ ಬಂದೆವು...

ಟ್ರಾಫಿಕ್  ಮುಂದೆ ಹೋಗ್ತಾನೇ ಇಲ್ಲ...

ಹಾರನ್...!!

 ಗದ್ದಲ... ಗಾಡಿಗಳ ಹೊಗೆ...ಧೂಳು...!!
ಸೆಖೆ....!!

"  ಏ.. ಏನ್ರಪಾ ...!!
ಈ ಬೆಂಗಳೂರಿನಲ್ಲಿ ಹೇಗೆ ಬದುಕ್ತೀರಪಾ...??
ಇಲ್ಲಿ ಬದುಕೊದಲ್ದೆ...... 


ನಗ್ತಾ ಇದ್ದಿರಲ್ರೋ... !!
ಈ ಬೆಂಗಳೂರಲ್ಲಿ..  ಹ್ಯಾಗೆ  ನಗ್ತಿರ್ರೋ ಇಲ್ಲಿ... !! ??..
ನನಗಂತೂ ಒಂದೇ ದಿನದಲ್ಲಿ  ಸಾಕು.. ಸಾಕಾಗಿ ಹೋಯ್ತು...!!
ಸಿರ್ಸಿಯಂಥಾ ಸ್ವರ್ಗ ಬಿಟ್ಟು  .. ಇಲ್ಲಿ ಈ ಹೊಗೆಯಲ್ಲಿ..
ಈ ಗಲೀಜು  ಪಟ್ಟಣದಲ್ಲಿ ಹೇಗಪ್ಪಾ  ಇರ್ತೀರ್ರೀ...?"

ಅಲ್ಲಿಯವರೆಗೆ ಸುಮ್ಮನಿದ್ದ  ನಾಗು  ಮಾತಿಗೆ ಶುರು ಹಚ್ಚಿಕೊಂಡ....

" ಬೆಂಗಳೂರಲ್ಲೇ..ಬದುಕು ಇದೆ ನೋಡು...
ನಮ್ಮ ಟಿವಿಯಲ್ಲಿ..,

ಸಿನೇಮಾದಲ್ಲಿ...ತೋರಿಸೊ ಕನಸು...
ಈ ಬೆಂಗಳೂರಲ್ಲಿದೆ ನೋಡು...
ಎರಡು ದಿನ ಇಲ್ಲಿ ಇರು...

ನಿಂಗೇ.. ಎಲ್ಲಾ  ಗೊತ್ತಾಗ್ತದೆ..."

"ಈ  ಹೊಲಸು ಬೆಂಗಳೂರಲ್ಲಿ  ಎರಡು ದಿನಾನಾ..?!...?
ನಾನು ಇವತ್ತೇ  ಹೊರಟೆ..! 

ಟಿಕೆಟ್ ಬುಕ್ ಮಾಡಿಬಿಟ್ಟಿದ್ದೇನೆ...
ಈ ಬೆಂಗಳೂರಲ್ಲಿ ಬದುಕೋರೆಲ್ಲ ಪಾಪಿಗಳು...!
ಪಾಪ ಮಾಡಿದೋರು  ಬೆಂಗಳೂರಲ್ಲಿರ್ತಾರೆ...

ಇಲ್ಲಿ ಸಾವು ಕೂಡ  ನೆಟ್ಟಗೆ ಬರೋದಿಲ್ಲ...!
ನೀವೆಲ್ಲ  ಬಹಳ ಕೆಟ್ಟ  ಪಾಪ ಮಾಡಿದ್ದಿರಿ..!!.."

ಈಗ ನಾಗುವಿಗೆ  ಸ್ವಲ್ಪ ರೇಗಿತು...

" ಲೋ.. ಪಾಟೀಲು...
ಪುಣ್ಯ ಮಾಡ್ದೋರು ಬೆಂಗಳೂರಲ್ಲಿ ಹುಡ್ತಾರೆ...!!

ಪುಣ್ಯ  ಮಾಡಿದೋರು  ಇಲ್ಲಿ ಬದುಕ್ತಾರೆ..!!
ಬೆಂಕಿ .. ಓವನ್ ನಲ್ಲಿ ಬದುಕೋ..ನೀನು ...

ಬೆಂಗಳೂರಿನ ಬಗ್ಗೆ ಮಾತಾಡಬೇಡ......!
ನಿಂಗೆ ಏನು ಗೊತ್ತಿಲ್ವೋ...

ನೋಡೋ...
ಇಲ್ಲಿ ಬದುಕಲಿಕ್ಕೂ ಪುಣ್ಯ ಮಾಡಿರ್ಬೇಕು...
ನಿನ್ನಂಥಾ...

 ಪಾಪಿಗಳೆಲ್ಲ ಇಲ್ಲಿ ಇರ್ಲಿಕ್ಕೆ ಸಾಧ್ಯ.... ಇಲ್ಲಾ..."

"ಅಯ್ಯೋ...

ಇಲ್ಲಿ ಎಂತಾ  ಪುಣ್ಯಾನೋ ಮಾರಾಯಾ...!!!..??
ಈ  ಟ್ರಾಫಿಕ್ಕು..!

ಈ ಜಾಮ್...!
ಹೊಲಸು.. ಗಲೀಜು  ...!!
ನೀವೂ... ನಿಮ್ಮ  ಬದುಕಿಗೂ ..

ದೊಡ್ಡ.. ಸಾಂಷ್ಟಾಂಗ ನಮಸ್ಕಾರ್ರಾ ಕಣ್ರಪಾ...!!!.."

"ಇಲ್ಲೇ... ನೀ ತಪ್ಪು ಮಾಡ್ತಿರೋದು...

ಪಾಟೀಲು...!!
ಈ ಟ್ರಾಫಿಕ್  ಅಂದ್ರೆ ಏನು ತಿಳ್ಖೊಂಡಿದೀಯಾ..?.?
ಬೆಂಗಳೂರಿನ  ರಸ್ತೆ ಅಂದ್ರೆ ಏನು ಗೊತ್ತಿದೆ ನಿಂಗೆ..??!!!?"

""ಏನು..?? !! "

"ಬೆಂಗಳೂರಿನ ಟ್ರಾಫಿಕ್ ಅಂದ್ರೆ...

 ಪುಣ್ಯ  ನದಿಗಳು..!!!!!.
ನಮ್ಮ ಪಾಪ ತೊಳೆಯೋ... ಗಂಗಾ ನದಿಗಳು...!!"

ಪಾಟೀಲನಿಗೆ  ಆಶ್ಚರ್ಯ...!!

" ಏನ್ ಹೇಳ್ತಾ ಇದ್ದೀಯಾ  ನಾಗು...??""

ಅಷ್ಟರಲ್ಲಿ ಜೇಸಿ ರೋಡ್  ಬಂತು....

" ನೋಡು ಪಾಟೀಲಾ...
ದಿನಾ.... ಇಲ್ಲಿ ...

ಈ ಟ್ರಾಫಿಕ್ಕಿನಲ್ಲಿ ನಿಂತು... ನಿಂತು...
ನಮ್ಮ  ಪಾಪಗಳೆಲ್ಲಾ  ತೊಳೆದು ಹೋಗ್ತದೆ...!!
ಅದರಲ್ಲೂ ಸುಡು ಬೇಸಿಗೆಯಲ್ಲಿ ..
ತಲೆಗೆ ಕಪ್ಪು ಹೆಲ್ಮೆಟ್ ಹಾಕ್ಕೊಂಡು..
ಟ್ರಾಫಿಕ್ಕಿನಲ್ಲಿ  ಕಾಯ್ತಾ ಇರು..
ಈ ಜನ್ಮದ್ದೊಂದೇ ಅಲ್ಲಾ...
ಹಿಂದಿನ  ಜನ್ಮ.. ಜನ್ಮಾಂತರದ ಪಾಪಗಳೆಲ್ಲ  ತೊಳೆದು ಹೋಗ್ತದೆ..!!
ಬೆಂಗಳೂರಿನ  ಸರ್ಕಲ್ಲುಗಳೆಂದರೆ...

ಪುಣ್ಯ ನದಿಗಳ  ಸಂಗಮಗಳು...!!..!! "

"ಏನೋ..?? ಏನು ಹೇಳ್ತಾ  ಇದ್ದೀಯಾ...??!!"

ಅಷ್ಟರಲ್ಲಿ  ಕಾರ್ಪೋರೇಷನ್  ಸರ್ಕಲ್ ಬಂತು...

" ನೋಡು ಪಾಟೀಲು..
ಇದು ಕಾರ್ಪೋರೇಷನ್  ಸರ್ಕಲ್ಲು..
ಇದು.. 

ಜಗತ್ತಿನ ನೂರಾ ಎಂಟು ಪುಣ್ಯ ನದಿಗಳ ಸಂಗಮ...!!
ಇಲ್ಲಿ ಯಾವ ನದಿ ಎಲ್ಲಿ ಸೇರ್ತದೆ...!
ಎಲ್ಲಿಗೆ ಹೋಗ್ತದೆ  ??
ಆ ದೇವ್ರಿಗೂ ಗೊತ್ತಾಗೋದಿಲ್ಲ...!!
ನೀನು ಇವತ್ತು ಇಲ್ಲಿ ಬಂದ್ಯಲ್ಲಾ...
ನಿನ್ನ  ಎಲ್ಲಾ ಪಾಪಗಳು  ತೊಳೆದು  ಪುಣ್ಯವಂತನಾಗಿದ್ದೀಯಾ...!!


ಒಮ್ಮೆ ಬೆಂಗಳೂರಿಗೆ  ಬಂದ್ರೆ  ಸ್ವರ್ಗ  ಗ್ಯಾರೆಂಟಿ....!! "

" ನಾಗು... ನೀನು ಅಸಾಧ್ಯ  ಕಣಪ್ಪಾ...""

"ಈ.. ಬೆಂಗಳೂರಲ್ಲಿ...
ದಿನನಿತ್ಯದ ಪಾಪಗಳನ್ನು ತೊಳೆಯೋದಲ್ದೆ..
ವಿಶೇಷದಿನಗಳೂ ಇರ್ತದೆ...
ಅವತ್ತು ಫುಲ್ ಹೋಲ್ ಸೇಲನಲ್ಲಿ ಪಾಪಗಳನ್ನು ತೊಳೆಯಲಾಗ್ತದೆ...
ಆ  ಹಬ್ಬ  ಬಂದಾಗ ನಿನಗೆ ತಿಳಿಸ್ತೇನೆ  ..
ನೀನು ನಿನ್ನ  ಮನೆಯವರೆನ್ನೆಲ್ಲ ಕರ್ಕೊಂಡು ಬಾ...!!"

"ಯಾವಾಗ್ಲೋ...?? !!!!"

" ಇಲ್ಲಿ  ಯಡ್ಯೂರಪ್ಪನಿಗೆ  ಕುಮಾರಸ್ವಾಮಿ  ಕೈಕೊಟ್ಟಾಗ...

ಧರಣಿಗಳು  ಆಗ್ತವೆ... ರಸ್ತೆ ತಡೆಗಳು ಆಗ್ತವೆ...!!!

ದೇವೆ ಗೌಡ್ರಿಗೆ  ರೈತರ ಮೇಲೆ ಪ್ರೀತಿ ಉಕ್ಕಿದಾಗ ...

ನೈಸ್ ರೋಡು  ಬಂದಾಗ್ತದೆ...
ಆಗ ಹೊಸೂರು ರೋಡಿನವರ ಪಾಪಗಳು  ತೊಳೆದು ಚೊಕ್ಕವಾಗ್ತದೆ...!!

ಯಡ್ಯೂರಪ್ಪ ಅಸಮರ್ಥ ಅಂತ ಕಾಂಗ್ರೆಸ್ಸಿನೋರಿಗೆ ಗೊತ್ತಾಗಿ...
ಅದನ್ನು  ವೋಟ್  ಹಾಕೋ ಜನರಿಗೆ.. 
ತಿಳಿಸ್ಲಿಕ್ಕೆ ಅಂತ.. ಹೊರಟಾಗ...
ಟ್ರಾಫಿಕ್ ಜಾಮ್ ಆಗ್ತದೆ..


ಇನ್ನು  ದೆಹಲಿಯಿಂದ ದೈವಾಂಶ ಸಂಭೂತ ಮಂತ್ರಿಗಳು ಆಗಾಗ ಬರ್ತಾರೆ...

 ಆಗ  ನಮಗೆ.....
ನಮ್ಮ ಬೆಂಗಳೂರಿನವ್ರೆಲ್ಲರಿಗೆ ಹಬ್ಬ...!!
ನಮ್ಮ ಪಾಪಗಳೆಲ್ಲ ಸರ್ವ ನಾಶವಾಗಿ ಹೊರಟೋಗ್ತದೆ ...!!

ಅದೊಂಥರ  ಕುಂಭ ಮೇಳ...!!"

ಅಷ್ಟರಲ್ಲಿ  ಸಿಗ್ನಲ್ ಜಂಪ್ ಆಗಿ ಹೋಗಿತ್ತು...
ಪೋಲಿಸ್ ನಮ್ಮ ಕಾರನ್ನು ನಿಲ್ಲಿಸಿದ...

"ನೋಡೊ..ಪಾಟಿಲು  ....!!
ಇವರು ವಿಶ್ವಾಮಿತ್ರನ  ಶಿಷ್ಯರು...!!!!!


ನಕ್ಷತ್ರಿಕರು.. .!!

ಹರಿಶ್ಚಂದ್ರನ ಸತ್ಯವನ್ನು ಜಗತ್ತಿಗೆ ತೋರಿಸಿದ ಹಾಗೆ.....
ನಮ್ಮ  ಪಾಪಗಳನ್ನು ತೊಳೆದು...

  ಸ್ವರ್ಗಕ್ಕೆ ಕಳಿಸೋ ...
 ವಿಶ್ವಾಮಿತ್ರನ  ಶಿಷ್ಯರು...!!

ನಮ್ಮ ತಾಳ್ಮೆ.. ಸಹನೆಯನ್ನು  ಟೆಸ್ಟ್  ಮಾಡಿ...
ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ  ಮಾಡ್ತಾರೆ...!!.."
 
"ನಾಗು..

ಒಂದು ಹೆಲ್ಪು ಮಾಡು..  
ನಿನ್ನ  ಕಾಲು ತೋರಿಸೋ  .. ಪುಣ್ಯಾತ್ಮಾ...!!"
 


"ಯಾಕೋ... ಏನು ಮಾಡ್ತಿಯಾ..? .."

""  ನಾಗು...
ನಿನ್ನ  ಪಾದ ತೊಳೆದು ..
ಪಾದ ಪೂಜೆ  ಮಾಡ್ಲಿಕ್ಕೆ...!!
ಈಗ್ಲೇ ನಿಂಗೆ  ಸಾಷ್ಟಾಂಗ ನಮಸ್ಕಾರ ಮಾಡ್ಬೇಕು ಅನ್ನಿಸ್ತಾ ಇದೆ ಕಣಪ್ಪಾ...!!"




( ನಮ್ಮ  ಪಾಟಿಲ್ ಸಾಹೇಬ  ಹುಬ್ಬಳ್ಳಿಯ  ಸಮೀಪದ  ಹಳ್ಳಿಯಾಂವ ......
ಓದು ಮುಗಿಸಿ  ಹೊಲ, ಜಮೀನು ನೋಡಿಕೊಂಡು ಹಾಯಾಗಿದ್ದಾನೆ...
ಅವನು ತನ್ನ ಕಣ್ಣಿಂದ ಬೆಂಗಳೂರನ್ನು  ನೋಡಿದ ರೀತಿ ಅದ್ಭುತವಾಗಿತ್ತು.....! )

Monday, January 18, 2010

ನನ್ನಜ್ಜಿ ಅಂದ್ರೆ ... ನಂಗಿಷ್ಟ....

ನಾನೇನೂ ಸಣ್ಣವನಲ್ಲ...  
ಹೈಸ್ಕೂಲ್  ಎಂಟನೆಯ ಕ್ಲಾಸ್...
ಎಲ್ಲವು ಅರ್ಥವಾಗುತ್ತದೆ...
ಆದರೆ....
ನನ್ನಪ್ಪ ಮಾತ್ರ  ನನಗೆ ಅರ್ಥನೇ.. ಆಗುವದಿಲ್ಲ...
ಯಾವಾಗ ಬೈತಾನೆ... ಯಾವಾಗ ಹೊಗಳುತ್ತಾನೆ.. ಒಂದೂ ಅರ್ಥನೇ ಆಗುವದಿಲ್ಲ.
ನನಗೆ ಒಂದು ಹೊಸ  " ಹದಿನೆಂಟು ಗೇರಿನ"   ಸೈಕಲ್ ಬೇಕಿತ್ತು.. 
ನನ್ನ ಎಲ್ಲ ಗೆಳೆಯರ ಬಳಿ ಹೊಸದಾಗಿ ಬಂದಿದೆ... 
ನನಗೂ ಆಸೆ ಆಯಿತು..
ನನ್ನಪ್ಪ  ನನ್ನಾಸೆಗಳಿಗೆ ಎಂದು  ಅಡ್ಡಿ ಬಂದವನಲ್ಲ...
ಹೇಗಿದ್ದರೂ ತೆಗೆಸಿಕೊಡುತ್ತಾರೆ ಅಂತ  ನನ್ನ  ಗೆಳೆಯರ ಬಳಿ  ಬಹಳ ಬಡಾಯಿ ಕೊಚ್ಚಿಕೊಂಡಿದ್ದೆ...
ಸಮಯ ನೋಡಿ ನನ್ನಪ್ಪನನ್ನು  ಕೇಳಿದೆ..


" ಈಗ ಆಗೋದಿಲ್ಲ. 
ನಮ್ಮ  ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ. ಹಣ ಖರ್ಚು ಮಾಡೋ ಹಾಗಿಲ್ಲ.
ಮುಂದೆ ಪರಿಸ್ಥಿತಿ ಸುಧಾರಿಸದ ಮೇಲೆ ನೋಡೋಣ."


"ಇಲ್ಲ.. ಅಪ್ಪ ನನಗೆ ಈ ಸೈಕಲ್  ಬೇಕೇ ಬೇಕು..
ನನ್ನ  ಫ್ರೆಂಡ್ಸ್  ಬಳಿ ಹೊಸ ಸೈಕಲ್ ತರುತ್ತೇನೆ ಅಂತ ಹೇಳಿಬಿಟ್ಟಿದ್ದೇನೆ..
ಇಲ್ಲಾ.. ಅಂದ್ರೆ ನನಗೆ  ಬಹಳ ಅವಮಾನ ಆಗುತ್ತೆ...
 ನನ್ನ  ಫ್ರೆಂಡ್ಸ್ ಎಲ್ಲರ ಬಳಿ  ಇದು  ಇದೆ.. 
ಪ್ಲೀಸ್  ಅಪ್ಪಾ  ನಂಗೆ  ಬೇಕು.. ಪ್ಲೀಸ್ ..."


" ನಿನ್ನ  ಗೆಳೆಯರ ಹತ್ತಿರ ಇದೆ ಅಂತ ನೀನು ಖರಿದಿಸ ಬೇಕಾ..? 
ನಿನ್ನ  ಬಳಿ  ಒಂದು ಸೈಕಲ್ ಇದೆಯಲ್ಲ..
ಅದನ್ನೇ  ಉಪಯೋಗಿಸು.. 
ನಾನೂ ಕೂಡ ನಮ್ಮ ಹೊಸ ಕಾರು ಕೊಡ್ತಾ ಇದ್ದೀನಿ.
ನಮ್ಮ ಹಳೆ ಕಾರು ಉಪಯೋಗಿಸ್ತಿನಿ..
ನಮ್ಮ  ಪರಿಸ್ಥಿತಿ ಕಷ್ಟ ಇದೆ.. ಬಿಸಿನೆಸ್  ಡಲ್  ಆಗಿದೆ.."


ಅಪ್ಪ  ಮುಖ ಗಂಟಿಕ್ಕಿ  ಖಾರವಾಗಿ ಹೇಳಿದ..
ನಾನು ಮುಂದೆ ಮಾತನಾಡಲಿಲ್ಲ...


ನನ್ನ ಗೆಳೆಯರೆಲ್ಲರ  ಬಳಿ ಇದೇ ಸೈಕಲ್ ಇದೆ.
 ನನಗೂ ಬೇಕಿತ್ತು...
ನನಗೆ ಬಹಳ ಅವಮಾನ ಆಗುತ್ತಾದಲ್ಲಾ...
ಅದೂ  ನನ್ನ ಗೆಳೆಯರ ಮುಂದೆ....!
ನನ್ನ  ಮನಸ್ಸೆಲ್ಲ ಹಾಳಾಗಿ ಹೋಯಿತು... 
ಊಟವೂ ಸರಿಯಾಗಿ  ಮಾಡಲಿಲ್ಲ..


ರಾತ್ರಿಯಾಯಿತು... 


ನಾನು ಯಾವಾಗಲೂ ನನ್ನ ಅಜ್ಜಿಯ ಸಂಗಡ ಮಲಗುವದು...


ನನ್ನಜ್ಜಿ ಅಂದರೆ ನನಗೆ ಬಹಳ ಇಷ್ಟ. 


ಅವಳಿಗೆ ಕೋಪ ಬರುವದೇ.. ಇಲ್ಲ.
ನಮ್ಮ ಮನೆಯಲ್ಲಿ ನನ್ನ ಪರವಾಗಿ ಯಾರಾದರೂ  ಮಾತನಾಡುತ್ತಾರೆ ಅಂದರೆ ಅವರು ನನ್ನಜ್ಜಿ..
ಅಜ್ಜಿಗೆ ನನ್ನ ಕಂಡರೆ  ಬಹಳ ಅಕ್ಕರೆ...  
ಅಜ್ಜಿ ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ..
ನನಗೆ ಮಲಗುವಾಗ ಕಥೆ ಹೇಳುತ್ತಾರೆ...


ಇಂದು ಹಾಗೇ ಆಯಿತು...


"ಕಥೆ.. ಹೇಳ ಬೇಕೇನೋ.. ಪುಟ್ಟಾ.. "
ಅಂತ ಪ್ರೀತಿಯಿಂದ  ತಲೆ  ಸವರಿದರು...


ನನಗೆ ಅಳು ಬಂದಂತಾಯಿತು...


"ಅಜ್ಜಿ... ..
 ಕಷ್ಟ.. ಯಾಕೆ  ಕಷ್ಟ  ಆಗೇ  ಇರಬೇಕು... 
ಈ ಕಷ್ಟಗಳೆಲ್ಲ  ಸ್ವಲ್ಪ  ಖುಷಿಯಾಗಿ ಯಾಕೆ ಇರಬಾರದು...? "


"ಯಾಕೋ ಕಂದಾ..?
ನಿನಗೆ ಎಂಥಹ ಕಷ್ಟನೋ...?..! "


" ನೋಡು ಅಜ್ಜಿ.. 
ಅಪ್ಪನಿಗೆ  ಹಣಕಾಸಿನ ಕಷ್ಟ ಅಂತೆ..
ನನಗೆ ಮೊದಲಿನ ಹಾಗೆ  ಪಿಜ್ಜಾ.. ಪಾನಿ ಪುರಿ, 
ಅಯಿಸ್ ಕ್ರೀಮ್ ...
 ಏನೂ ಸಿಕ್ತಾ ಇಲ್ಲ..
ಪೆಪ್ಸಿ ಕುಡಿಯದೆ ಬಹಳ ದಿನ ಆಯ್ತು.. 
 ಇವತ್ತು ಹೊಸ ಸೈಕಲ್ಲು ಬೇಕು ಅಂತ ಕೇಳಿದೆ...
ಅದೂ ... ಆಗಲ್ಲ ಅಂತ ಹೇಳಿ ಬಿಟ್ಟರು..
ಈ... ಕಷ್ಟ   ಇಷ್ಟೆಲ್ಲ  ಕಷ್ಟ ಇರ ಬಾರದು ಅಲ್ಲವಾ...?"


" ಹೌದು  ಪುಟ್ಟಾ...
 ಕಷ್ಟ ಯಾವಾಗಲೂ ಹಾಗೇನೆ.. 
ಅವರವರ ಕಷ್ಟ ಅವರವರಿಗೆ ದೊಡ್ಡದು...
ಆನೆಗೆ  ಆನೆಯಂಥ  ಕಷ್ಟ...
ಇರುವೆಗೆ  ಇರುವೆಯಂಥ  ಕಷ್ಟ.. 
ಎಲ್ಲರಿಗೂ  ಅವರವರ  ಕಷ್ಟ  ದೊಡ್ಡದು..."


" ಈಗ ಹೊಸ ಸೈಕಲ್ಲು ಇಲ್ದೇ ಹೊದ್ರೆ...
 ನನ್ನ ಗೆಳೆಯರ ಮುಂದೆ ಎಷ್ಟು ಅವಮಾನ ಗೊತ್ತಾ ಅಜ್ಜಿ...? 
ಅವರಿಗೆ ನನ್ನ ಮುಖ ಹೇಗೆ ತೋರಿಸಲಿ..??
ತುಂಬಾ  ಅವಮಾನ ಆಗುತ್ತದೆ ಅಜ್ಜಿ...
ಅಪ್ಪನಿಗೆ ಇದೊಂದೂ ಅರ್ಥನೇ ಆಗೋದಿಲ್ಲ... ನನ್ನನ್ನು ಅವರು ಅರ್ಥನೇ ಮಾಡಿಕೊಳ್ಳುವದಿಲ್ಲ..."


" ನೋಡು ನಿನ್ನಪ್ಪನಿಗೆ  ಬಹಳ ಕಷ್ಟ ಇದೆ... 
ಅವರ ಬಿಸಿನೆಸ್ಸ್ ಚೆನ್ನಾಗಿದ್ದಾಗ ನಿನಗೆ  ಏನು ಬೇಕೋ ಅದನ್ನೆಲ್ಲ  ತೆಗೆಸಿ ಕೊಡಲಿಲ್ಲವಾ..?
ಈಗ ತೊಂದರೆ ಇದೆ...
ಸ್ವಲ್ಪ ಅಡ್ಜಸ್ಟ್ ಮಾಡ್ಕೊ.."


" ಅಜ್ಜಿ ...
ನೀನು ಅಪ್ಪನ ಪರವಾಗಿ ಮಾತಾಡ ಬೇಡ. 
ಅಪ್ಪ, ಅಮ್ಮ ಸೇರಿ ನಿಂಗೆ  ಅವಮಾನ ಮಾಡಿದ್ದು ನಂಗೆ ಗೊತ್ತಿದೆ ಅಜ್ಜಿ...
ನಾನು ಸಣ್ಣವನಲ್ಲ .. ನಂಗೆ ಎಲ್ಲವೂ ಅರ್ಥ ಆಗ್ತದೆ... 
ನಿನಗೆ ಸ್ವಲ್ಪನೂ ಬೆಲೆ ಕೊಡುವದಿಲ್ಲ...
 ನಿಂಗೆ ಯಾರೂ ಏನೂ ಕೇಳುವದಿಲ್ಲ..
ನಿನ್ನನ್ನ್ನು ಒಬ್ಬನೆ ಬಿಟ್ಟು ಸಿನೆಮಾಕ್ಕೆ ಹೋಗ್ತಾರಲ್ಲ...
ಪಾರ್ಟಿಗೆ ಹೋಗುವಾಗ ಮನೆಯಲ್ಲಿ ನಿನ್ನ ಒಬ್ಬನೇ  ಬಿಟ್ಟು ..
ಹೊರಗಿನಿಂದ ಬಾಗಿಲಿಗೆ ಬೀಗ  ಹಾಕಿ  ಹೋಗ್ತಾರೆ...
 ನಿನಗೆ  ಅವಮಾನ ಅಲ್ಲವಾ  ಅಜ್ಜಿ..?"


ಅಜ್ಜಿ ಸ್ವಲ್ಪ ಹೊತ್ತು ಮಾತನಾಡಲಿಲ್ಲ... 
ನನ್ನ ತಲೆ ಸವರುತ್ತಿದ್ದರು...
ನಾನೇ ಮಾತನಾಡಿದೆ..


" ಅಜ್ಜಿ.. ...
ನಿಂಗೆ ಇಷ್ಟೆಲ್ಲ ವಯಸ್ಸಾಗಿದೆ... ನೀನು ಕಷ್ಟ ಅನುಭವಿಸಲಿಲ್ಲವಾ..?"


" ಕಷ್ಟ.. ಅನ್ನೋದು  ತುಂಬಾ ವಿಚಿತ್ರ  ನೋಡು... 
ಎಷ್ಟೇ ಅನುಭವಿಸದರೂ....
 ಅದರ ನೆನಪು..
ಅದನ್ನು ದಾಟಿ ಬಂದ ನೆನಪುಗಳು..
ಬಹಳ  ಖುಷಿ ಪುಟ್ಟಾ...   ತುಂಬಾ  ಸುಖ ಕಣೊ..
ನಿಂಗೆ ಇದೆಲ್ಲ ಅರ್ಥ ಆಗೋದಿಲ್ಲ ಬಿಡು..."


" ಅಜ್ಜಿ... ..ಅಜ್ಜಿ....
ನೀನು ಅನುಭವಿಸಿದ  ಅತ್ಯಂತ ಕೆಟ್ಟದಾದ ಕಷ್ಟ ಯಾವುದು..?
ಅಪ್ಪ, ದೊಡ್ಡಪ್ಪನವರನ್ನು ಕಷ್ಟ ಪಟ್ಟು ಬೆಳೆಸಿದೆಯಂತೆ.. 
ಅದು ಕಷ್ಟ ಆಯ್ತಾ..?
ಹೊಲದಲ್ಲಿ ಕೆಲಸ ಮಾಡಿದೆಯಂತೆ..
 ಬೆಳೆ  ಬೆಳೆಯುತ್ತಿದ್ಯಂತೆ...  ಬಡತನ ಇತ್ತಂತೆ...
ಕೈಯಲ್ಲಿ ಹಣ ಇಲ್ಲವಾಗಿತ್ತಂತೆ..
ಇದೆಲ್ಲ  ಬಹಳ ಕಷ್ಟ ಅಲ್ಲವಾ..?"


" ಅದೆಲ್ಲ ಕಷ್ಟ ಅನಿಸಲಿಲ್ಲ ನೋಡು ಪುಟ್ಟ... 
ಆಗ ನನ್ನ ಕಣ್ಣೆದುರಿಗೆ  ನಿನ್ನಪ್ಪ, ದೊಡ್ಡಪ್ಪ ಇದ್ದರಲ್ಲ..
ಅವರಿಗೊಂದು  ಭವಿಷ್ಯ ಮಾಡಬೇಕಿತ್ತಲ್ಲ...
ಹಾಗಾಗಿ ಅದು ಕಷ್ಟ ಅಂತ ಅನಿಸಲೇ ಇಲ್ಲ.."


" ಮತ್ತೆ...  
ನಿನ್ನ  ದೊಡ್ಡ ಕಷ್ಟ  ಯಾವುದು ಅಜ್ಜಿ...?"


ಅಜ್ಜಿ  ಸ್ವಲ್ಪ ಹೊತ್ತು  ಸುಮ್ಮನಾದಳು...
 ಅವಳ ಕೈ  ನನ್ನ ತಲೆ ಸವರುತ್ತಿತ್ತು...


" ಅವತ್ತೊಂದು ದಿನ  ನಮ್ಮನೆಗೆ  ಡಾಕ್ಟರ್ ಬಂದು ..
" ನಿನ್ನ ಗಂಡ  ಹೆಚ್ಚಿಗೆ ದಿನ  ಬದುಕುವದಿಲ್ಲ...
ಈ ರೋಗಕ್ಕೆ  ಔಷಧವಿಲ್ಲ..  
ನಿಮ್ಮ ಸಮಾಧಾನಕ್ಕೆ ಬೇಕಾದರೆ  ಶಿವಮೊಗ್ಗದ ದೊಡ್ಡ ಆಸ್ಪತ್ರೆಗೆ ಹೋಗಿ ಬರಬಹುದು"
 ಅಂದು ಬಿಟ್ಟರು..."


ಹೇಳುತ್ತ ಅಜ್ಜಿ  ಸ್ವಲ್ಪ ಹೊತ್ತು   ಸುಮ್ಮನಾದರು... 
ಮತ್ತೆ ಅವರೆ ಹೇಳಿದರು...


" ಬದುಕಿನ  ಭರವಸೆಯ  ಗಂಡ.. ಸಾಯುತ್ತಾನೆಂದರೂ.. 
ನಂಬಲು ಕಷ್ಟ...
 "ಶಿವಮೊಗ್ಗದ ಡಾಕ್ಟರ್ ಬಳಿ  ಔಷಧ  ಇದ್ದು ಬಿಟ್ಟರೆ..!
ನನ್ನ  ಗಂಡ ಬದುಕಿ ಬಿಟ್ಟರೆ..!!!"  ಅಂತ ಆಸೆ ಆಯ್ತು..
ಆದರೆ... ಕೈಯಲ್ಲಿ ಹಣ ಇಲ್ಲ.."


"ಇದು ತುಂಬಾ ಕಷ್ಟ.. ಅಲ್ಲವಾ  ಅಜ್ಜಿ...? 
ಇದಾ  ನಿನ್ನ  ದೊಡ್ಡದಾದ ಕಷ್ಟ..?"


" ಅದೂ ಕೂಡ ಕಷ್ಟ ಅನಿಸಲಿಲ್ಲ... ಪುಟ್ಟಾ... 
ಕಣ್ಣೆದುರಿಗೆ ಗಂಡ ಇದ್ದನಲ್ಲ...
ಆಗ ನನ್ನ  ಸಹಾಯಕ್ಕೆ ಬಂದವರು ...
 ನನ್ನ ಗಂಡನ ತಮ್ಮ..
ನಿನ್ನ  ಸಣ್ಣಜ್ಜ...
ಆಗ ಅವ   ಇನ್ನೂ  ಹೈಸ್ಕೂಲ್ ಓದುವ  ಹುಡುಗ...
ವಯಸ್ಸಿಗೆ  ಮೀರಿದ  ತಿಳುವಳಿಕೆ...
ಜವಾಬ್ದಾರಿ  ಅವನಿಗೆ....
ಮನೆಯಲ್ಲಿದ್ದ  ಚೂರು ಪಾರು ಬಂಗಾರ  ಶೆಟ್ಟಿಯ ಹತ್ತಿರ  ಇಟ್ಟು ಹಣ ಹೊಂದಿಸಿದೆ..
ಮನೆಯಲ್ಲಿ  ಉಳಿದವರಾರೂ ಸಹಾಯಕ್ಕೆ ಬರಲಿಲ್ಲ...
ಒಟ್ಟು ಕುಟುಂಬ ಆದರೂ...
ಒಬ್ಬಂಟಿಯಾಗಿದ್ದೆ.."


" ಹೌದಜ್ಜಿ...
ಒಟ್ಟಿಗೆ ಇದ್ದಾರೆಂದ ಮೇಲೆ ಕಷ್ಟದಲ್ಲೂ ಇರಬೇಕಲ್ಲ ...ಅಜ್ಜಿ...? 
ಇದು  ತುಂಬಾ  ಕಷ್ಟ ಆಯ್ತಾ..??.."


" ಅದೂ ಕೂಡ ಕಷ್ಟ ಅನಿಸಲಿಲ್ಲ.
ನಿನ್ನ  ಸಣ್ಣಜ್ಜ  ಕಷ್ಟಪಟ್ಟು  ಒಂದು ಗಾಡಿ ವ್ಯವಸ್ಥೆ ಮಾಡಿದ...
ಶಿವಮೊಗ್ಗದ  ದೊಡ್ಡ ಆಸ್ಪತ್ರೆಗೆ ಬಂದೆ...
ದೊಡ್ಡ ಆಸ್ಪತ್ರೆ... ಪಟ್ಟಣ ಬೇರೆ... 
 ಅಲ್ಲಿ  ಸ್ವಲ್ಪ ತೊಂದರೆ ಆಯ್ತು.."


"ಇದಾ...??   ಅಜ್ಜಿ ನಿನ್ನ ದೊಡ್ಡ ತೊಂದರೆ..?..! "


"ಅಲ್ಲಪ್ಪ.....
ಅಲ್ಲಿ  ಡಾಕ್ಟರ್   ಎಲ್ಲ  ಪರಿಕ್ಷೆ ಮಾಡಿ 
 " ಈಗ ಏನೂ ಮಾಡಲಾಗುವದಿಲ್ಲ..ಮನೆಗೆ ಕರೆದು ಕೊಂಡು ಹೋಗಿ.." ಅಂದು ಬಿಟ್ಟರು..
ಹಾಗೆ ಸ್ವಲ್ಪ ಹೊತ್ತಿನಲ್ಲೆಯೆ.. ನನ್ನ  ಗಂಡ..
" ಇನ್ನೂ ಸಣ್ಣ  ಸಣ್ಣ ಮಕ್ಕಳು..
 ಇವರನ್ನೆಲ್ಲ ಹೇಗೆ ದೊಡ್ಡ ಮಾಡ್ತಿಯಾ..?.." 
ಅಂತ ನೋವು, ಸಂಕಟ ಪಡುತ್ತ... 
ಪ್ರಾಣ ಬಿಟ್ಟು ಬಿಟ್ಟರು...
 ಜೀವ ಹೋಗುವಾಗ  ಅವರು ನನ್ನ ಕೈ ಹಿಡಿದು ಕೊಂಡಿದ್ದರು...
ಭರವಸೆಯ  ಗಂಡನೂ  ಒಂಟಿಯಾಗಿ  ಬಿಟ್ಟು ಹೋಗಿದ್ದ...
ಆಗ ಕತ್ತಲಾಗುತ್ತಿತ್ತು.....    
ಒಂದೇ.. ಒಂದು ಆಸೆ ಇತ್ತು.. ಅದೂ ಕೂಡ  ಕರಗಿ ಹೋಯಿತು....."


ಅಜ್ಜಿ ಧ್ವನಿ  ಕಂಪಿಸುತ್ತಿತ್ತು... 
ಸ್ವಲ್ಪ ಹೊತ್ತು ಸುಮ್ಮನಾದರು... 
ಹಳೆಯ ದುಃಖ ಉಮ್ಮಳಿಸಿ ಬಂದಿತ್ತು...


"ಅಜ್ಜಿ... ..
 ಆ ದೇವರು ಬಹಳ ಕೆಟ್ಟವನು .. 
ಹೌದಜ್ಜಿ... ಇದು  ಬಹಳ ಕೆಟ್ಟದಾದ ಕಷ್ಟ.. ಅಲ್ಲವಾ..?"


" ಆಗ ನಂಗೆ  ಮುಂದೇನು ..?
ಅನ್ನುವಂಥಹ ಚಿಂತೆ.. 
ಕಷ್ಟದ ಬಗ್ಗೆ ವಿಚಾರ ಮಾಡುತ್ತ ಕುಳಿತುಕೊಳ್ಳುವಂತಿಲ್ಲ..
ತಿರುಗಿ ಊರಿಗೆ ಹೋಗ ಬೇಕಿತ್ತು..."


" ಆ ಕತ್ತಲೆಯಲ್ಲಿ.. ಪಟ್ಟಣದಲ್ಲಿ ..
 ಗಾಡಿ ಹುಡುಕುವದು  ಕಷ್ಟ ಆಯ್ತಾ  ಅಜ್ಜಿ..?"


"ಇಲ್ಲಪ್ಪ... 
ನಿನ್ನ  ಸಣ್ಣಜ್ಜ  ಇದ್ದಿದ್ದನಲ್ಲ.. 
ಸಣ್ಣ ಹುಡುಗನಾಗಿದ್ದರೂ... 
ವಯಸ್ಸಿಗೆ ಮೀರಿದ ಜವಾಬ್ದಾರಿ ಹೊತ್ತುಕೊಂಡ...
ಎಲ್ಲಿಂದಲೋ ಒಂದು ಗಾಡಿ  ವ್ಯವಸ್ಥೆ ಮಾಡಿದ...
ರಾತ್ರಿಯೇ  ಊರಿಗೆ ಬಂದೆವು... 
ಮನೆಯಲ್ಲಿ  ಎಲ್ಲರೂ ಮೌನ.. 
ಒಬ್ಬರೂ  ಮಾತನಾಡಲಿಲ್ಲ ನೋಡು.."


" ಎಂಥಹ ಜನ ಅಜ್ಜಿ..? 
ನೀನು ಬೇಜಾರದಲ್ಲಿದ್ದೀಯಾ... 
ದುಃಖದಲ್ಲಿದ್ದೀಯಾ.. 
ಯಾರೂ ಮಾತನಾಡಲಿಲ್ಲವಾ..? 
ಇದು ಬಹಳ ಕಷ್ಟ ಅಲ್ಲವಾ  ಅಜ್ಜಿ..?
ಬೇಜಾರದಲ್ಲಿದ್ದಾಗ..
ಯಾರದರೂ ಸಮಾಧಾನ ಮಾಡಲಿ ಅಂತ ಮನಸ್ಸು ಹೇಳುತ್ತದೆ.."


" ಆಗ ನನಗೆ  ಯಾರ ಸಂತ್ವನವೂ  ಬೇಕಿರಲಿಲ್ಲ..
  ಪುಟ್ಟಾ... 
ಕುಹಕ ಮಾತುಗಳಿಂದ ಸ್ವಾಗತ ಮಾಡ್ತಾರೆ ಅಂತ ಗೊತ್ತಿತ್ತು..
ದುಃಖ ಅನ್ನೋದು  ಒಂಟಿ...
ಅದನ್ನು  ಒಬ್ಬನೇ ಅನುಭವಿಸ ಬೇಕು  .. ಕಂದಾ..!
 ಹೆಣವನ್ನು ಬೆಳಿಗ್ಗೆ ಸುಡಬೇಕು ಅಂತ  ಊರವರೆಲ್ಲ ನಿರ್ಧಾರ ಮಾಡಿದರು..
ಮನೆ  ತುಂಬಾ  ಜನ....
ಆದರೆ  ರಾತ್ರಿ ಹೆಣದ ಬಳಿ  ಕುಳಿತು ಕೊಳ್ಳಲು ಯಾರೂ ಮುಂದೆ ಬರಲಿಲ್ಲ.."


" ಅಜ್ಜಿ...
 ಇದು  ಬಹಳ ಕಷ್ಟ ಅಲ್ಲವಾ..? ಹೆದರಿಕೆ ಬೇರೆ.. 
ಅಲ್ಲವಾ ಅಜ್ಜಿ..?"


"ಇಲ್ಲಪ್ಪ...
 ಆ ದೇಹದೊಂದಿಗೆ, ಆ  ಮನುಷ್ಯನೊಂದಿಗೆ..
ಬದುಕು ಕಳೆದಿದ್ದೆನಲ್ಲ... 
ಸುಖ ಸಂತೋಷ ಅಲ್ಲಿ ಇತ್ತಲ್ಲ... 
ಅವನ ನೆನಪು ನನ್ನೊಂದಿಗೆ ಇತ್ತು....
ಅದನ್ನು ಕಾಯುವದು ನನಗೆ  ಕಷ್ಟ ಆಗಲ್ಲಿಲ್ಲ..
ನಿನ್ನ ಅಪ್ಪ, ದೊಡ್ಡಪ್ಪ ಇನ್ನೂ ಚಿಕ್ಕವರು.. 
ನನ್ನ ದುಃಖ ಕಂಡು ಅವರೂ ಅಳುತ್ತಿದ್ದರು...
ಅವರನ್ನೂ  ಸಮಾಧನ ಪಡಿಸುತ್ತ...
ನಾನೂ ಸಮಾಧಾನ ಪಟ್ಟುಕೊಳ್ಳ ಬೇಕಿತ್ತು..."


"ಛೇ.. ಅಜ್ಜಿ...
 ಎಷ್ಟೆಲ್ಲ  ಕಷ್ಟ ನೋದಿದ್ದೀಯಾ...? !
 ಇದೆಲ್ಲ ಬಹಳ ಕಷ್ಟ ಅಲ್ಲವಾ..?"


" ಪುಟ್ಟಾ.... !
ಕಷ್ಟ ಬಂದಾಗ ಅಳುವದು ಅನ್ನುವದು ಇದೆಯಲ್ಲ.. !
ಅದು ನಮಗೆ ದೇವರು ಮಾಡಿದ ಉಪಕಾರ ಕಣಪ್ಪಾ..
ಅಳೋದು  ಗೊತ್ತಿಲ್ಲದೇ.. ಹೋಗಿದ್ರೆ   ಹುಚ್ಚಿಯಾಗಿ ಬಿಡ್ತಿದ್ದೆ...
ಕಣ್ಣಲ್ಲಿ ನೀರು ಬರುವಷ್ಟು ಅತ್ತೆ... 
ನನ್ನ ಗಂಡನ ದೇಹವಲ್ಲವಾ...?
ಯಾರೂ ಬರದಿದ್ದರೂ ... ಹೆಣವನ್ನು  ಕಾದೆ..."


" ಅಜ್ಜಿ....
 ಅಜ್ಜನ ಹೆಣದ ಸಂಗಡ  ರಾತ್ರಿಯೆಲ್ಲ ಇದ್ದೆಯಲ್ಲ.. 
ಅಜ್ಜಿ  ಅದು  ಬಹಳ ಕಷ್ಟ  ಅಲ್ಲವಾ..?"


"ಅದೂ... ಅಲ್ಲಪ್ಪ... 
ಅಲ್ಲಿ ಕುಳಿತಾಗ  ಅಜ್ಜನೊಡನೆ  ಕಳೆದ ನೆನಪು ಇತ್ತು... 
ಪಕ್ಕದಲ್ಲಿ ಮಕ್ಕಳಿದ್ದರು.. 
ಮುಂದೆ ಏನು ಅಂತ  ಕಾಡುವ  ಚಿಂತೆ ಇತ್ತು..
ರಾತ್ರಿ  ಮುಗಿದದ್ದೇ ಗೊತ್ತಾಗಲಿಲ್ಲ.. 
ಬೆಳಗಾಯಿತು.. "


" ಅಜ್ಜಿ... 
ಬೆಳಗಾದ ಮೇಲೆ  ಹೆಣ ಸುಡುತ್ತಾರಲ್ಲ.. 
ಅದು  ಕೆಟ್ಟದಾದ ಕಷ್ಟ ಅಲ್ಲವಾ..?"


 " ಅದು ಅಷ್ಟೆಲ್ಲ ಕಷ್ಟ ಅಲ್ಲಪ್ಪ... 
ಬೆಳಗಾಯಿತು... 
ಮನೆಯಲ್ಲಿ ಎಲ್ಲರೂ  ಬೆಳಗಿನ ತಿಂಡಿಗೆ ತೊಡಗಿದ್ದರು...
ದೋಸೆ  ಮಾಡುವ  ಶಬ್ದ.. ವಾಸನೆ  ಬರ್ತಿತ್ತು..."


ಎನ್ನುತ್ತ ಅಜ್ಜಿಗೆ ದುಃಖವಾಯಿತು... 
ಮಾತನಾಡಲಾಗಲಿಲ್ಲ... 
ಅವರೇ ಸಮಾಧಾನ ಮಾಡಿಕೊಂಡರು...


" ಮನೆಯ ಒಳಗೆ  ಸಿಹಿ ಬೆಲ್ಲದ ದೋಸೆ ಮಾಡಿದ್ದರು..."


" ಎಂಥಹ ಜನ ಅಜ್ಜಿ..!!? 
ನೀನು ದುಃಖ ಇದ್ದೀಯಾ... 
ಮನೆಯವರು  ಬೆಲ್ಲದ ದೋಸೆ  ತಿನ್ನುತ್ತಿದ್ದರಾ..? 
ಇಂಥಹ ಕಷ್ಟ ಯಾರಿಗೂ ಬೇಡ ಅಜ್ಜಿ...
ಇದಲ್ಲವಾ.. ಅಜ್ಜಿ  ಕೆಟ್ಟದಾದ ಕಷ್ಟ..?"


"ಅಲ್ಲಪ್ಪಾ.... 
ಅವರು ಬೆಲ್ಲದ ದೋಸೆ ತಿಂದರೆ  ನನಗೇನು..? 
ನನ್ನ ಗಂಡ ವಾಪಸ್ಸು ಬರ್ತಾನಾ...?
ಅದಲ್ಲಪ್ಪ.. ಪುಟ್ಟಾ...
ಇದ್ಯಾವದೂ.. ಕಷ್ಟವೇ.. ಅಲ್ಲ...!


" ಅಜ್ಜಿ...
ಮತ್ತೆ .. ಯಾವುದು    ಕಷ್ಟ...?"


ಅಜ್ಜಿಯ  ಧ್ವನಿ ಭಾರವಾಯಿತು...
ಅಳುತ್ತಲೇ ಹೇಳುತ್ತಿದ್ದರು...


"ನಮ್ಮ ಜೀವದ ಜೀವ.. 
ಪ್ರೀತಿಯವರ ಹೆಣ ಇಟ್ಟುಕೊಂಡು... 
ಹಸಿವೆಯಾಗುತ್ತದಲ್ಲ...!! 
ಅದು ಅತ್ಯಂತ ಕಷ್ಟ  ಪುಟ್ಟಾ...!!
ಪುಟ್ಟಾ....!
ಅಳಲು ಕಣ್ಣೀರೂ... ಇರುವದಿಲ್ಲ...
ಸತ್ತವರು ಬದುಕಿ ಬರುವದಿಲ್ಲ...


ಬದುಕಿದ್ದವರಿಗೆ  ಹಸಿವೆ ಎನ್ನುವದು ಇದೆಯಲ್ಲ ಪುಟ್ಟ...!


ಆ ಹೆಣದ ಮುಂದೆ ಹಸಿವೆಯಾಗುತ್ತದಲ್ಲ... !
ಅದು  ಬಹಳ ಕೆಟ್ಟದಾದ ಕಷ್ಟ...!
ಆಗ ತಿನ್ನುವದು.... ಇದೆಯಲ್ಲ ಅದು ಬಹಳ ಕಷ್ಟ..!
 ಪುಟ್ಟಾ.....!
ನಾವು ಯಾಕಾದರೂ  ಬದುಕ ಬೇಕು ಎನ್ನಿಸಿ ಬಿಡುತ್ತದೆ.. 
ನಮ್ಮ ಬಗೆಗೆ ನಮಗೆ ಅಸಹ್ಯವಾಗಿಬಿದುತ್ತದೆ...!
ಕಂದಾ..!!..
ನನ್ನ ಗಂಡನ ಹೆಣ ಇಟ್ಟುಕೊಂಡು ನಾನೂ...  ತಿಂದೆ...!"


ಎನ್ನುತ್ತಾ  ಅಜ್ಜಿ ಅಳಲು ಶುರು ಮಾಡಿದರು...


ನನಗೂ   ಅಳು ಬಂತು....
ಕತ್ತಲಲ್ಲಿ ಅಜ್ಜಿಯ ಕಣ್ಣಿರು ಒರೆಸಲು  ತಡಕಾಡಿದೆ...


ಆಗಲಿಲ್ಲ...


ಅಜ್ಜಿಯನ್ನು  ಗಟ್ಟಿಯಾಗಿ  ತಬ್ಬಿಕೊಂಡೆ...










(ಇದು  ಕಥೆ.... )

ಭಾವ ಪೂರ್ಣ ಪ್ರತಿಕ್ರಿಯೆಗಳಿವೆ...
ದಯವಿಟ್ಟು  "ಪ್ರತಿಕ್ರಿಯೆಗಳನ್ನೂ ಓದಿ...



Sunday, January 17, 2010

ನನ್ನದೊಂದು ಪುಟ್ಟ ಸಲಾಮ್....!

ನನ್ನ  ಮಿತ್ರ "ಗೌತಮ್" ಮೊಬೈಲ್ ನಿಂದ ಒಂದು ಮೆಸೆಜ್ ಕೊಟ್ಟಿದ್ದರು..

"ಪ್ರಕಾಶಣ್ಣ ನಿನ್ನ ಬಗ್ಗೆ ಬ್ಲಾಗಿನಲ್ಲಿ ಕವಿತೆ ಬಂದಿದೆ...!


ಮನೆಗೆ ಬಂದು ಲಗುಬಗೆಯಿಂದ ನೆಟ್ ಓಪನ್ ಮಾಡಿದೆ...!


ಅಮೇರಿಕಾದ ಟೆಕ್ಸಾಸ್‍ನಲ್ಲಿರುವ...
 ಸಹೋದರಿ "ವನಿತಾ"ರವರು ಆರ್ಕುಟ್‍ನಲ್ಲಿ ನನಗೊಂದು ಮೆಸೆಜ್ ಇಟ್ಟಿದ್ದರು..
ಹಾಗೆಯೇ ಒಂದು ಲಿಂಕ್ ಕೊಟ್ಟಿದ್ದರು..
ಅಲ್ಲಿ ಕ್ಲಿಕ್ ಮಾಡಿ ಹೋದರೆ..


ಅದು ಕುವೈತ್‍ನಲ್ಲಿರುವ ಗೆಳೆಯ "ಮಹೇಶ್""ಸವಿಗನಸು " ಬ್ಲಾಗ್..


ಅವರ ಬ್ಲಾಗಿನಲ್ಲಿ ನನ್ನ ಬಗೆಗೊಂದು ಕವನ...!


ಅದಕ್ಕೆ ಹಲವಾರು ಪ್ರತಿಕ್ರಿಯೆಗಳು....!




ಇಂದು ಬೆಳಿಗ್ಗೆ ಇನ್ನೊಂದು ಮೆಸ್ಸೆಜು...!


ಕತಾರ್ ದೇಶದಲ್ಲಿರುವ...


ಗೆಳೆಯ "ಮೂರ್ತಿ ಹೊಸಬಾಳೆ "

ನನ್ನ ಬಗೆಗೊಂದು ಲೇಖನ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ...!


ಈಗ್ಗೆ ಕೆಲವು ದಿನಗಳ ಹಿಂದೆ ನನ್ನ ಮತ್ತೊಬ್ಬ ಬ್ಲಾಗ್ ಮಿತ್ರ
( ಜಲಾನಯನ  ಬ್ಲಾಗ್,  ಇವರು  ಕುವೈತ್  ದೇಶದಲ್ಲಿರುತ್ತಾರೆ)
"ಆಝಾದ್ ಭಾಯ್" ನನ್ನ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು...


ಬೆಂಗಳೂರಿನಲ್ಲಿ ಕೆಲವೇ ಗಂಟೆಗಳಿದ್ದರೂ..
ನನ್ನನ್ನು ಭೇಟಿಯಾಗಲು ಬಂದಿದ್ದರು...!

ದೂರದ ಊರಿಂದ ಓದುಗ ಗೆಳೆಯರಾದ
ಅನಿಲ್ ಬೆಡ್ಗೆ...
ಶಿವ ಶಂಕರ್ ಯಳವತ್ತಿ...
ನಾಗರಾಜ...
ಕೊಡಗಿನ  ಹಿರಿಯರಾದ "ಪರಮೇಶ್ವರ" ರವರು....


ಇನ್ನೂ ಅನೇಕರ ಹೆಸರು ನೆನಪಾಗುತ್ತಿಲ್ಲ...


ಇವರೆಲ್ಲ ನನ್ನನ್ನು ಭೇಟಿಯಾಗಲು ಬರುತ್ತಾರೆ... !
ತುಂಬಾ ಆತ್ಮಿಯತೆಯಿಂದ  , ಸ್ನೇಹದಿಂದ  ಮಾತನಾಡುತ್ತಾರೆ....!


ನನ್ನ ಆರ್ಕುಟಿನಲ್ಲಿ,
ಫೇಸ್ ಬುಕ್ಕಿನಲ್ಲಿ..
ಈಮೇಲ್ ನಲ್ಲಿ..
ಮೊಬೈಲಿನಲ್ಲಿ...
ಪ್ರೀತಿಯ ಸಂದೇಶಗಳು ನೂರಾರಿವೆ...

ಪ್ರೀತಿಯ ಓದುಗ ಮಿತ್ರರೆ...


ತೀರಾ ಸಾಮಾನ್ಯನಾದ ನನಗೆ ಇದೆಲ್ಲ ಸಂಗತಿಗಳು ಖುಷಿಯಾದರೂ...
ಹೆದರಿಕೆಯನ್ನೂ ಕೊಟ್ಟಿದೆ...
ಇಲ್ಲಿಯವರೆಗೆನೋ... ಬರೆದೆ...
ಸರಿ....
ಇನ್ನೂ ಮುಂದೆಯೂ ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳ ಬಲ್ಲೇನೆಯೇ...?


ನನ್ನ ಜವಾಬ್ದಾರಿ ಹೆಚ್ಚಿಗೆಯಾಗಿಬಿಟ್ಟಿದೆ ... ಅನಿಸಿಬಿಟ್ಟಿದೆ...


ಮತ್ತೆ ಮತ್ತೆ ನನ್ನ ಬಗ್ಗೆ ಬ್ಲಾಗಿನಲ್ಲಿ ಬರೆದುಕೊಳ್ಳಲಿಕ್ಕೆ ಒಂದುರೀತಿಯ ಸಂಕೋಚವಾಗುತ್ತದೆ...
ನನ್ನ ಬ್ಲಾಗ್ ಗೆಳೆಯರ ಸ್ನೇಹಕ್ಕೆ...
ಅವರ ಪ್ರೀತಿಗೆ...
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ....
ಹೃದಯ ತುಂಬಿ ಬಂದಿದೆ...
ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ...


ನಿಮ್ಮ ಪ್ರೀತಿಗೆ...
ಆತ್ಮೀಯತೆಗೆ...
ಕೃತಜ್ಞತೆಗಳು...
ನನ್ನ ಹೃದಯ ಪೂರ್ವಕ ವಂದನೆಗಳು...


ನಿಜ ಹೇಳ ಬೇಕೆಂದರೆ ನಿನ್ನೆ ಒಂದು ಕಥೆಯನ್ನು ರೆಡಿ ಮಾಡಿ ಇಟ್ಟಿದ್ದೆ...
ಆದರೆ ನನ್ನ ಮಿತ್ರ ಮಹೇಶ್ ತಮ್ಮ ಬ್ಲಾಗಿನಲ್ಲಿ
"ಪ್ರಕಾಶಣ್ಣ ತಮ್ಮ  ಬ್ಲಾಗಿನಲ್ಲಿ "ನಗಿಸುತ್ತಾರೆ" ಅಂದಿದ್ದರು..


ನಾನು ಬರೆದ ಕಥೆಯ ಭಾವ ಸ್ವಲ್ಪ ದುಃಖದ್ದು...


ಹಾಗಾಗಿ ಹಾಕಲಿಲ್ಲ...ನಾಳೆ ಕಥೆಯನ್ನು ಹಾಕುವೆ...


ಮತ್ತೊಮ್ಮೆ.. ಮಗದೊಮ್ಮೆ..
ನಿಮಗೆಲ್ಲರಿಗೂ.. ನನ್ನ ನುಡಿ ನಮನಗಳು...

ನನ್ನದೊಂದು  ಪುಟ್ಟ  ಸಲಾಮ್....!

ಭಾವ..
ಅನುಭಾವ...
ಹೃದಯ..
ಅನುಭವಿಸಿದಾಗ..
ಮಾತು ಬೇಕಿರದ
ಶಬ್ಧಗಳು...
ಪ್ರೀತಿ..
ಸ್ನೇಹ.. ಬಾಂಧವ್ಯ...!!