Sunday, February 7, 2010

ಒಮ್ಮೆ ಬೆಂಗಳೂರಿಗೆ ಬಂದ್ರೆ .. ಸ್ವರ್ಗ ಗ್ಯಾರೆಂಟಿ....!!

ಪಾಟೀಲ್ ನಮ್ಮ  ಕಾಲೇಜು ದಿನಗಳ ಸ್ನೇಹಿತ..

ಹುಬ್ಬಳ್ಳಿಯಲ್ಲಿಯಿಂದ ಬೆಂಗಳೂರಿಗೆ ಬಂದಿದ್ದ...

" ನೋಡೋ  ಪ್ರಕಾಶು...
ಒಂದು ದಿನ  ಬೆಂಗಳೂರೆಲ್ಲ ಸುತ್ತ ಬೇಕು..
ಮತ್ತೆ ಕಾಲೇಜು ದಿನಗಳ ನೆನಪು ಬರ ಬೇಕು ನೋಡು...

ಆ .. ಅಡ ಪೋಟ್ರು...ನಾಗೂವನ್ನೂ ಕರೆದು ಕೊಂಡು  ಬಾ "

ನಮಗೂ ಖುಷಿಯಾಗಿತ್ತು...

ಈ ಕೆಲಸದ ಒತ್ತಡಗಳು...
ಬೆಂಗಳೂರಿನ  ಟ್ರಾಫಿಕ್..
ಈ ಪಾಟೀಲ್ , ನಾಗು  ಜೊತೆ ಚೆನ್ನಾಗಿ ಹರಟಿ.. ನಕ್ಕು ಒಮ್ಮೆ  ಫ್ರೆಷ್ ಆಗ ಬಹುದಲ್ಲಾ....!

ನಾಗುವನ್ನೂ ಅವನ ಮನೆಯಿಂದ  ಕರೆದುಕೊಂಡು  ಬನ್ನೇರು ಘಟ್ಟ ರೋಡಿನ  ಹುಳಿಮಾವು ಕ್ರಾಸಿನ ಬಳಿ ಬಂದಿದ್ದೆ... 

" ಲೋ... ಪ್ರಕಾಶು...
ಎಲ್ಲಿದ್ದೀಯೋ  ಪುಣ್ಯಾತ್ಮಾ...?
ಈಗಲೇ  ಒಂಬತ್ತುವರೆ..
ಇನ್ನು ನೀನು ಬರೋದು ಯಾವಾಗ...?
ಬೆಂಗಳೂರು  ಸುತ್ತೋದು ಯಾವಾಗ...?
ನನಗಂತೂ  ಕಾದು.. ಕಾದು  ಬೋರಾಗ್ತಾ  ಇದೆ,,
ಯಾವಾಗ ಬರ್ತೀಯೋ...?"

ಈ  ಪಾಟಿಲನಿಗೆ ಸ್ವಲ್ಪ ಕಿಚಾಯಿಸಬೇಕು ಅನ್ನಿಸಿತು...

" ಅದು ಹೇಗೋ  ಹೇಳ್ಳಿಕ್ಕೆ ಸಾಧ್ಯ..??
ಅದೂ ಈ ಬೆಂಗಳೂರಲ್ಲಿ...??!!"

"ಯಾಕೋ ಹೀಗಂತೀಯಾ...?"

"ಬೆಂಗಳೂರಲ್ಲಿ ಬರೋ ಸಮಯ ಹಾಗೆಲ್ಲ ಹೇಳ್ಳಿಕ್ಕೆ ಆಗೋದಿಲ್ಲಪ್ಪಾ...!!
ನೀನು ಬೆಳಿಗ್ಗೆ ಎದ್ದು  ಯಾರ ಮುಖ ನೋಡಿದ್ದೀಯಾ..!!.?
ನಿನ್ನ  ಈ ಜನ್ಮದ ಪುಣ್ಯ..!!
ಹಿಂದಿನ  ಜನ್ಮ ಜನ್ಮಾಂತರದ ಪುಣ್ಯ..!!.
ನಿನ್ನ ಹಿರಿಯರು ಮಾಡಿದ ಪಾಪ  .. ಪುಣ್ಯ..!!
ನಿನ್ನ  ಗ್ರಹಗತಿಗಳು...!!
ನಿನ್ನ  ಮನೆ  ವಾಸ್ತು..!!
ಎಲ್ಲ  ಸೇರ್ಕೊಂಡಿರ್ತದೆ..!!
ಇದು  ಬೆಂಗಳೂರಿನ ಟ್ರಾಫಿಕ್ಕು  ಕಣೊ...!!
ಮಾಮೂಲಿ  ವಿಷಯ ಅಲ್ಲ...!!

ಪಾಟೀಲನಿಗೆ  ರೇಗಿ ಹೋಯ್ತು....

" ಅಲ್ಲಾ...
ನೀವು ಈ ಬೆಂಗಳೂರಲ್ಲಿ  ಹೇಗಪ್ಪಾ  ಬದುಕ್ತೀರೀ..??..!!
ಬೆಂಗಳೂರಲ್ಲಿ ಬದುಕೋರೆಲ್ಲ  ಪಾಪಿಗಳು...!!
ಅತಿ..ಕೆಟ್ಟ ಪಾಪ ಮಾಡಿದೋರು  ಬೆಂಗಳೂರಿಗೆ  ಬರ್ತಾರೆ...!!"

ಅಷ್ಟರಲ್ಲಿ  ಜೆಪಿನಗರದ ಕ್ರಾಸ್  ಬಂತು...
ಅಲ್ಲೇ ಪಕ್ಕದಲ್ಲಿದ್ದ ನಮಗಾಗಿ  ಕಾಯುತ್ತಿದ್ದ... ಪಾಟಿಲ್...!!

ಪಾಟೀಲ್ ಕಂಡು  ನನಗೂ, ನಾಗುಗೂ... ತುಂಬಾ  ಖುಷಿಯಾಯ್ತು...

ಬಹಳ ವರ್ಷಗಳ ನಂತರ ಭೇಟಿಯಾಗ್ತಾ ಇದ್ದಿದ್ದು ..
ನಮ್ಮ ಏರಿದ ಧ್ವನಿಯ ಮಾತುಕತೆಯಲ್ಲಿ ಗೊತ್ತಾಗ್ತಾ ಇತ್ತು...

"ಎಲ್ಲಿ ಹೋಗೋಣ್ರೋ..??"

ನಾಗು  ವಾಸ್ತವ ಪ್ರಪಂಚಕ್ಕೆ ಬಂದ...

"ಮೊದ್ಲು  ಮೆಜೆಸ್ಟಿಕ್ ತೋರಿಸ್ರಪಾ... ಅಲ್ಲಿಗೆ ಹೋಗೋಣು..."

ನಮ್ಮ ಕಾರು ಮೆಜೆಸ್ತೀಕ್ ಕಡೆ ತಿರುಗಿತು...

ಕನಕಪುರ ರಸ್ತೆಯಲ್ಲಿ ಬನಶಂಕರಿ ದೇವಸ್ಥಾನದ ಬಳಿ ಬಂದೆವು...

ಟ್ರಾಫಿಕ್  ಮುಂದೆ ಹೋಗ್ತಾನೇ ಇಲ್ಲ...

ಹಾರನ್...!!

 ಗದ್ದಲ... ಗಾಡಿಗಳ ಹೊಗೆ...ಧೂಳು...!!
ಸೆಖೆ....!!

"  ಏ.. ಏನ್ರಪಾ ...!!
ಈ ಬೆಂಗಳೂರಿನಲ್ಲಿ ಹೇಗೆ ಬದುಕ್ತೀರಪಾ...??
ಇಲ್ಲಿ ಬದುಕೊದಲ್ದೆ...... 


ನಗ್ತಾ ಇದ್ದಿರಲ್ರೋ... !!
ಈ ಬೆಂಗಳೂರಲ್ಲಿ..  ಹ್ಯಾಗೆ  ನಗ್ತಿರ್ರೋ ಇಲ್ಲಿ... !! ??..
ನನಗಂತೂ ಒಂದೇ ದಿನದಲ್ಲಿ  ಸಾಕು.. ಸಾಕಾಗಿ ಹೋಯ್ತು...!!
ಸಿರ್ಸಿಯಂಥಾ ಸ್ವರ್ಗ ಬಿಟ್ಟು  .. ಇಲ್ಲಿ ಈ ಹೊಗೆಯಲ್ಲಿ..
ಈ ಗಲೀಜು  ಪಟ್ಟಣದಲ್ಲಿ ಹೇಗಪ್ಪಾ  ಇರ್ತೀರ್ರೀ...?"

ಅಲ್ಲಿಯವರೆಗೆ ಸುಮ್ಮನಿದ್ದ  ನಾಗು  ಮಾತಿಗೆ ಶುರು ಹಚ್ಚಿಕೊಂಡ....

" ಬೆಂಗಳೂರಲ್ಲೇ..ಬದುಕು ಇದೆ ನೋಡು...
ನಮ್ಮ ಟಿವಿಯಲ್ಲಿ..,

ಸಿನೇಮಾದಲ್ಲಿ...ತೋರಿಸೊ ಕನಸು...
ಈ ಬೆಂಗಳೂರಲ್ಲಿದೆ ನೋಡು...
ಎರಡು ದಿನ ಇಲ್ಲಿ ಇರು...

ನಿಂಗೇ.. ಎಲ್ಲಾ  ಗೊತ್ತಾಗ್ತದೆ..."

"ಈ  ಹೊಲಸು ಬೆಂಗಳೂರಲ್ಲಿ  ಎರಡು ದಿನಾನಾ..?!...?
ನಾನು ಇವತ್ತೇ  ಹೊರಟೆ..! 

ಟಿಕೆಟ್ ಬುಕ್ ಮಾಡಿಬಿಟ್ಟಿದ್ದೇನೆ...
ಈ ಬೆಂಗಳೂರಲ್ಲಿ ಬದುಕೋರೆಲ್ಲ ಪಾಪಿಗಳು...!
ಪಾಪ ಮಾಡಿದೋರು  ಬೆಂಗಳೂರಲ್ಲಿರ್ತಾರೆ...

ಇಲ್ಲಿ ಸಾವು ಕೂಡ  ನೆಟ್ಟಗೆ ಬರೋದಿಲ್ಲ...!
ನೀವೆಲ್ಲ  ಬಹಳ ಕೆಟ್ಟ  ಪಾಪ ಮಾಡಿದ್ದಿರಿ..!!.."

ಈಗ ನಾಗುವಿಗೆ  ಸ್ವಲ್ಪ ರೇಗಿತು...

" ಲೋ.. ಪಾಟೀಲು...
ಪುಣ್ಯ ಮಾಡ್ದೋರು ಬೆಂಗಳೂರಲ್ಲಿ ಹುಡ್ತಾರೆ...!!

ಪುಣ್ಯ  ಮಾಡಿದೋರು  ಇಲ್ಲಿ ಬದುಕ್ತಾರೆ..!!
ಬೆಂಕಿ .. ಓವನ್ ನಲ್ಲಿ ಬದುಕೋ..ನೀನು ...

ಬೆಂಗಳೂರಿನ ಬಗ್ಗೆ ಮಾತಾಡಬೇಡ......!
ನಿಂಗೆ ಏನು ಗೊತ್ತಿಲ್ವೋ...

ನೋಡೋ...
ಇಲ್ಲಿ ಬದುಕಲಿಕ್ಕೂ ಪುಣ್ಯ ಮಾಡಿರ್ಬೇಕು...
ನಿನ್ನಂಥಾ...

 ಪಾಪಿಗಳೆಲ್ಲ ಇಲ್ಲಿ ಇರ್ಲಿಕ್ಕೆ ಸಾಧ್ಯ.... ಇಲ್ಲಾ..."

"ಅಯ್ಯೋ...

ಇಲ್ಲಿ ಎಂತಾ  ಪುಣ್ಯಾನೋ ಮಾರಾಯಾ...!!!..??
ಈ  ಟ್ರಾಫಿಕ್ಕು..!

ಈ ಜಾಮ್...!
ಹೊಲಸು.. ಗಲೀಜು  ...!!
ನೀವೂ... ನಿಮ್ಮ  ಬದುಕಿಗೂ ..

ದೊಡ್ಡ.. ಸಾಂಷ್ಟಾಂಗ ನಮಸ್ಕಾರ್ರಾ ಕಣ್ರಪಾ...!!!.."

"ಇಲ್ಲೇ... ನೀ ತಪ್ಪು ಮಾಡ್ತಿರೋದು...

ಪಾಟೀಲು...!!
ಈ ಟ್ರಾಫಿಕ್  ಅಂದ್ರೆ ಏನು ತಿಳ್ಖೊಂಡಿದೀಯಾ..?.?
ಬೆಂಗಳೂರಿನ  ರಸ್ತೆ ಅಂದ್ರೆ ಏನು ಗೊತ್ತಿದೆ ನಿಂಗೆ..??!!!?"

""ಏನು..?? !! "

"ಬೆಂಗಳೂರಿನ ಟ್ರಾಫಿಕ್ ಅಂದ್ರೆ...

 ಪುಣ್ಯ  ನದಿಗಳು..!!!!!.
ನಮ್ಮ ಪಾಪ ತೊಳೆಯೋ... ಗಂಗಾ ನದಿಗಳು...!!"

ಪಾಟೀಲನಿಗೆ  ಆಶ್ಚರ್ಯ...!!

" ಏನ್ ಹೇಳ್ತಾ ಇದ್ದೀಯಾ  ನಾಗು...??""

ಅಷ್ಟರಲ್ಲಿ ಜೇಸಿ ರೋಡ್  ಬಂತು....

" ನೋಡು ಪಾಟೀಲಾ...
ದಿನಾ.... ಇಲ್ಲಿ ...

ಈ ಟ್ರಾಫಿಕ್ಕಿನಲ್ಲಿ ನಿಂತು... ನಿಂತು...
ನಮ್ಮ  ಪಾಪಗಳೆಲ್ಲಾ  ತೊಳೆದು ಹೋಗ್ತದೆ...!!
ಅದರಲ್ಲೂ ಸುಡು ಬೇಸಿಗೆಯಲ್ಲಿ ..
ತಲೆಗೆ ಕಪ್ಪು ಹೆಲ್ಮೆಟ್ ಹಾಕ್ಕೊಂಡು..
ಟ್ರಾಫಿಕ್ಕಿನಲ್ಲಿ  ಕಾಯ್ತಾ ಇರು..
ಈ ಜನ್ಮದ್ದೊಂದೇ ಅಲ್ಲಾ...
ಹಿಂದಿನ  ಜನ್ಮ.. ಜನ್ಮಾಂತರದ ಪಾಪಗಳೆಲ್ಲ  ತೊಳೆದು ಹೋಗ್ತದೆ..!!
ಬೆಂಗಳೂರಿನ  ಸರ್ಕಲ್ಲುಗಳೆಂದರೆ...

ಪುಣ್ಯ ನದಿಗಳ  ಸಂಗಮಗಳು...!!..!! "

"ಏನೋ..?? ಏನು ಹೇಳ್ತಾ  ಇದ್ದೀಯಾ...??!!"

ಅಷ್ಟರಲ್ಲಿ  ಕಾರ್ಪೋರೇಷನ್  ಸರ್ಕಲ್ ಬಂತು...

" ನೋಡು ಪಾಟೀಲು..
ಇದು ಕಾರ್ಪೋರೇಷನ್  ಸರ್ಕಲ್ಲು..
ಇದು.. 

ಜಗತ್ತಿನ ನೂರಾ ಎಂಟು ಪುಣ್ಯ ನದಿಗಳ ಸಂಗಮ...!!
ಇಲ್ಲಿ ಯಾವ ನದಿ ಎಲ್ಲಿ ಸೇರ್ತದೆ...!
ಎಲ್ಲಿಗೆ ಹೋಗ್ತದೆ  ??
ಆ ದೇವ್ರಿಗೂ ಗೊತ್ತಾಗೋದಿಲ್ಲ...!!
ನೀನು ಇವತ್ತು ಇಲ್ಲಿ ಬಂದ್ಯಲ್ಲಾ...
ನಿನ್ನ  ಎಲ್ಲಾ ಪಾಪಗಳು  ತೊಳೆದು  ಪುಣ್ಯವಂತನಾಗಿದ್ದೀಯಾ...!!


ಒಮ್ಮೆ ಬೆಂಗಳೂರಿಗೆ  ಬಂದ್ರೆ  ಸ್ವರ್ಗ  ಗ್ಯಾರೆಂಟಿ....!! "

" ನಾಗು... ನೀನು ಅಸಾಧ್ಯ  ಕಣಪ್ಪಾ...""

"ಈ.. ಬೆಂಗಳೂರಲ್ಲಿ...
ದಿನನಿತ್ಯದ ಪಾಪಗಳನ್ನು ತೊಳೆಯೋದಲ್ದೆ..
ವಿಶೇಷದಿನಗಳೂ ಇರ್ತದೆ...
ಅವತ್ತು ಫುಲ್ ಹೋಲ್ ಸೇಲನಲ್ಲಿ ಪಾಪಗಳನ್ನು ತೊಳೆಯಲಾಗ್ತದೆ...
ಆ  ಹಬ್ಬ  ಬಂದಾಗ ನಿನಗೆ ತಿಳಿಸ್ತೇನೆ  ..
ನೀನು ನಿನ್ನ  ಮನೆಯವರೆನ್ನೆಲ್ಲ ಕರ್ಕೊಂಡು ಬಾ...!!"

"ಯಾವಾಗ್ಲೋ...?? !!!!"

" ಇಲ್ಲಿ  ಯಡ್ಯೂರಪ್ಪನಿಗೆ  ಕುಮಾರಸ್ವಾಮಿ  ಕೈಕೊಟ್ಟಾಗ...

ಧರಣಿಗಳು  ಆಗ್ತವೆ... ರಸ್ತೆ ತಡೆಗಳು ಆಗ್ತವೆ...!!!

ದೇವೆ ಗೌಡ್ರಿಗೆ  ರೈತರ ಮೇಲೆ ಪ್ರೀತಿ ಉಕ್ಕಿದಾಗ ...

ನೈಸ್ ರೋಡು  ಬಂದಾಗ್ತದೆ...
ಆಗ ಹೊಸೂರು ರೋಡಿನವರ ಪಾಪಗಳು  ತೊಳೆದು ಚೊಕ್ಕವಾಗ್ತದೆ...!!

ಯಡ್ಯೂರಪ್ಪ ಅಸಮರ್ಥ ಅಂತ ಕಾಂಗ್ರೆಸ್ಸಿನೋರಿಗೆ ಗೊತ್ತಾಗಿ...
ಅದನ್ನು  ವೋಟ್  ಹಾಕೋ ಜನರಿಗೆ.. 
ತಿಳಿಸ್ಲಿಕ್ಕೆ ಅಂತ.. ಹೊರಟಾಗ...
ಟ್ರಾಫಿಕ್ ಜಾಮ್ ಆಗ್ತದೆ..


ಇನ್ನು  ದೆಹಲಿಯಿಂದ ದೈವಾಂಶ ಸಂಭೂತ ಮಂತ್ರಿಗಳು ಆಗಾಗ ಬರ್ತಾರೆ...

 ಆಗ  ನಮಗೆ.....
ನಮ್ಮ ಬೆಂಗಳೂರಿನವ್ರೆಲ್ಲರಿಗೆ ಹಬ್ಬ...!!
ನಮ್ಮ ಪಾಪಗಳೆಲ್ಲ ಸರ್ವ ನಾಶವಾಗಿ ಹೊರಟೋಗ್ತದೆ ...!!

ಅದೊಂಥರ  ಕುಂಭ ಮೇಳ...!!"

ಅಷ್ಟರಲ್ಲಿ  ಸಿಗ್ನಲ್ ಜಂಪ್ ಆಗಿ ಹೋಗಿತ್ತು...
ಪೋಲಿಸ್ ನಮ್ಮ ಕಾರನ್ನು ನಿಲ್ಲಿಸಿದ...

"ನೋಡೊ..ಪಾಟಿಲು  ....!!
ಇವರು ವಿಶ್ವಾಮಿತ್ರನ  ಶಿಷ್ಯರು...!!!!!


ನಕ್ಷತ್ರಿಕರು.. .!!

ಹರಿಶ್ಚಂದ್ರನ ಸತ್ಯವನ್ನು ಜಗತ್ತಿಗೆ ತೋರಿಸಿದ ಹಾಗೆ.....
ನಮ್ಮ  ಪಾಪಗಳನ್ನು ತೊಳೆದು...

  ಸ್ವರ್ಗಕ್ಕೆ ಕಳಿಸೋ ...
 ವಿಶ್ವಾಮಿತ್ರನ  ಶಿಷ್ಯರು...!!

ನಮ್ಮ ತಾಳ್ಮೆ.. ಸಹನೆಯನ್ನು  ಟೆಸ್ಟ್  ಮಾಡಿ...
ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ  ಮಾಡ್ತಾರೆ...!!.."
 
"ನಾಗು..

ಒಂದು ಹೆಲ್ಪು ಮಾಡು..  
ನಿನ್ನ  ಕಾಲು ತೋರಿಸೋ  .. ಪುಣ್ಯಾತ್ಮಾ...!!"
 


"ಯಾಕೋ... ಏನು ಮಾಡ್ತಿಯಾ..? .."

""  ನಾಗು...
ನಿನ್ನ  ಪಾದ ತೊಳೆದು ..
ಪಾದ ಪೂಜೆ  ಮಾಡ್ಲಿಕ್ಕೆ...!!
ಈಗ್ಲೇ ನಿಂಗೆ  ಸಾಷ್ಟಾಂಗ ನಮಸ್ಕಾರ ಮಾಡ್ಬೇಕು ಅನ್ನಿಸ್ತಾ ಇದೆ ಕಣಪ್ಪಾ...!!"




( ನಮ್ಮ  ಪಾಟಿಲ್ ಸಾಹೇಬ  ಹುಬ್ಬಳ್ಳಿಯ  ಸಮೀಪದ  ಹಳ್ಳಿಯಾಂವ ......
ಓದು ಮುಗಿಸಿ  ಹೊಲ, ಜಮೀನು ನೋಡಿಕೊಂಡು ಹಾಯಾಗಿದ್ದಾನೆ...
ಅವನು ತನ್ನ ಕಣ್ಣಿಂದ ಬೆಂಗಳೂರನ್ನು  ನೋಡಿದ ರೀತಿ ಅದ್ಭುತವಾಗಿತ್ತು.....! )

52 comments:

nenapina sanchy inda said...

hahaha Bangalore in a nutshell
Good one
:-)
malathi S

ಮನಮುಕ್ತಾ said...

ಲಘುಹಾಸ್ಯ ಮಿಶ್ರಿತ ಬೆ೦ಗಳೂರಿನ ಟ್ರಾಫಿಕ್ ಚಿತ್ರಣ..
ಚೆನ್ನಾಗಿದೆ..

V.R.BHAT said...

ಹಾಸ್ಯ ಹೇಗೆ ಎಲ್ಲೆಲ್ಲಾ ಹುಟ್ಟುತ್ತದೆ ಎಂಬುದು ಪ್ರತೀ ಲೇಖನದಿಂದ ತಿಳಿಯುತ್ತದೆ,ಚೆನ್ನಾಗಿದೆ!

Ittigecement said...

ನೆನಪಿನ ಸಂಚಿಯಿಂದ....

ಈ ಕೆಟ್ಟವಾತಾವರಣ..
ನಮ್ಮ ತಾಳ್ಮೆ ಪರಿಕ್ಷಿಸುವ ಟ್ರಾಫಿಕ್..
ಈ ಹೊಗೆ.. ಧೂಳು..
ಗೌಜಿ... ಗಲಾಟೆ..
ಆದರೂ ..
ಈ ಬೆಂಗಳೂರು ಅಂದರೆ ಏನೋ ಒಂಥರಾ ವ್ಯಾಮೋಹ...!
ಆಕರ್ಷಣೆ...!

ಯಾಕೆ...?

ಸಹಜತೆಯ..
ಸಮೃದ್ಧಿಯ
ತುಂಬು ಬದುಕು ಹಳ್ಳಿಯಲ್ಲಿದೆ..

ನಮಗೆ ಗೊತ್ತಿದ್ದರೂ ಪಟ್ಟಣವೇ ನಮಗೆ ಬೇಕು...

ಯಾಕೆ..?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮನಮುಕ್ತಾ...

ಅರಮನೆ ಮೈದಾನದಲ್ಲೊಮ್ಮೆ ರಾಜಕೀಯ ಪಕ್ಷವೊಂದರ ಸಮಾವೇಶ ನಡೆದಿತ್ತು...
ನನಗೆ ಹೆಬ್ಬಾಳದಿಂದ ೨೦ ಕಿಲೋಮೀಟರ್ ಬರಲಿಕ್ಕೆ ಆರು ತಾಸು ಬೇಕಾಗಿತ್ತು...

ಶಾಲೆಯಿಂದ ಮನೆಗೆ ಹೊರಟ ಸಣ್ಣ ಮಕ್ಕಳ ಅವಸ್ಥೆ ಹೇಳತೀರದಾಗಿತ್ತು...
ಅವರ ಬಗ್ಗೆ ಮನೆಯಲ್ಲಿ ಆತಂಕದಿಂದ ಕಾಯುವ ಹಿರಿಯರು...

ಇಂಥಹ ರ್‍ಯಾಲಿಗಳ ಬಗ್ಗೆ ಎಷ್ಟು ಬರೆದರೂ ಸಾಲದು..
ಇದು ಎಲ್ಲ ರಾಜಕೀಯ ಪಕ್ಷಗಳಿಗೆ ಅನ್ವಯಿಸುತ್ತದೆ..

ಪ್ರೋತ್ಸಾಹಕ್ಕಾಗಿ ವಂದನೆಗಳು...

ಮನಸು said...

hahaha chennagide nimma kathe... puNyavantare ondu reeti bangaloorinavaru

ಚಿತ್ರಾ said...

ಬೆಂಗಳೂರೆಂಬ ಪಾವನ ಕ್ಷೇತ್ರದ ಪುಣ್ಯನದಿಗಳಲ್ಲಿ ಪ್ರತಿದಿನವೂ ಪಾಪಗಳನ್ನು ತೊಳೆದುಕೊಂಡು ಪುನೀತರಾದವರೂ , ಪರಮ ಪಾವನರೂ , ಮಹಾ ಜ್ಞಾನಿಗಳೂ ಆದ ಪ್ರಕಾಶ್ ಹೆಗಡೆಯವರಿಗೆ ನಮೋ ನಮಃ ! ಹಿ ಹಿ ಹಿ ... ನಿಮಗೆ ಎಲ್ಲೆಲ್ಲಿಂದ ಒಂದೊಂದು ವಿಷಯ ಹೊಳೆಯತ್ತೋ !!!
ಏನಂದ್ರೆ, ಮುಂಬಯಿ ವಾಸಿಗಳೂ ಹೀಗೇ ಹೇಳುತ್ತಾರೆ ! ಇದೇ ಸ್ವರ್ಗ ಎಂದು .
ಸದ್ಯಕ್ಕಂತೂ ನಾನು " ಪುಣ್ಯ ನಗರಿ" ಯಲ್ಲಿದ್ದೂ ಪಾಪಿಷ್ಟಳಾಗಿಯೇ ಉಳಿದಿದ್ದೇನೆ. ಕಳೆದ ತಿಂಗಳಿನ ಬೆಂಗಳೂರು ಕ್ಷೇತ್ರ ದರ್ಶನದ ಸಮಯದಲ್ಲಿ ದೇವೇಗೌಡರ ಕೃಪೆಯಿಂದಾಗಿ NICE ರಸ್ತೆಯಲ್ಲಿ ಸ್ವಲ್ಪ ಮಟ್ಟಿಗೆ ಪಾಪಗಳನ್ನು ತೊಳೆದುಕೊಂಡಿದ್ದೇನೆ !
ಹಾ ಹಾ ಹಾ .. ಸಖತ್ ಖುಷಿ ಕೊಟ್ಟಿತು ಬರಹ !

ಸವಿಗನಸು said...

ಪ್ರಕಾಶಣ್ಣ,
ಚೆನ್ನಾಗಿದೆ ಬೆಂಗಳೂರ ಚಿತ್ರಣ......
ಕೆಂಪೆಗೌಡ್ರು ಕಟ್ಟಿದ ಬೆಂದಕಾಳೂರು ಇಂತಹ ಸ್ವರ್ಗವಾಗುತ್ತೆ ಅಂತ ಗೊತ್ತಿರಲಿಲ್ಲ.....

ರಾಜೀವ said...

ಹೌದು. ಬೆಂಗಳೂರಿಗರು ಪುಣ್ಯವಂತರೇ. ಆದರೆ ಯಾವುದೂ ಅತೀ ಆದರೆ ತೊಂದರೆಯೇ. ಹೆಚ್ಚು ಪುಣ್ಯ ಸಂಪಾದಿಸಿದರೆ ಮೋಕ್ಷ ಸಿಗುವುದಿಲ್ಲವಂತೆ. ಮೋಕ್ಷ ಸಿಗಬೇಕಾದರೆ, ಪುಣ್ಯ, ಪಾಪ ಎರಡೂ ಬಾಲನ್ಸ್ ಆಗಿರಬೇಕಂತೆ. ಅದಕ್ಕೇ ಪುಣ್ಯ ತುಂಬಾ ಜಾಸ್ತಿ ಅನ್ನಿಸಿದಾಗ ಬೇರೆ ಬೇರೆ ಸ್ಥಳಗಳಿಗೂ ಬೇಟಿಕೊಟ್ಟರೆ ಸೆರಿಹೋಗುತ್ತದೆ ;-)

ನಿಮಗೂ, ನಾಗುವಿಗೂ ಒಂದು ಸಲಾಮ್.

Guruprasad said...

ಪ್ರಕಾಶಣ್ಣ,
ನಿಮಗೂ ಹಾಗು ನಿಮ್ಮ ನಾಗುವಿಗು ಒಂದು ದೊಡ್ಡ ಸಲಾಂ..,.... ಏನ್ ಕತೆ ಕಟ್ಟಿ ಇದ್ದೀರಾ ಸರ್,,,ಬೆಂಗಳೂರು ಟ್ರಾಫಿಕ್ ಬಗ್ಗೆ.....ಅಹಹ ಹಾ,, ಸಕತ್ ಆಗಿ ಇದೆ ಬಿಡಿ... ನೆಕ್ಷ್ತ ಯಾರದು,,,, ಬೆಂಗಳೂರು ಟ್ರಾಫಿಕ್ ಬಗ್ಗೆ ಮಾತ್ ಎತ್ತಿದರೆ ಹೀಗೆ ಹೇಳ್ತೇನೆ,,,,,,
ಕಾರ್ಪೋರೇಶನ್ ಸರ್ಕಲ್...ನೂರಾರು ಪುಣ್ಯ ನದಿಗಳ ಸಂಗಮ.... ಅಬ್ಬ,, ಸೂಪರ್ !!೧ :-)
ಒಳ್ಳೆಯ ಲೇಖನಕ್ಕೆ ನನ್ನ ಹಾಸ್ಯದ ನಮನ......
ಗುರು

Ittigecement said...

ಪ್ರೀತಿಯ ವಿ. ಆರ್. ಭಟ್...

ಒಂದು ವಿಷಯವನ್ನು ಎಷ್ಟು ಬಗೆಯಲ್ಲಿ ನೋಡ ಬಹುದು...?
ಟ್ರಾಫಿಕ್ ಒಂದು ಕ್ರೂರವಾದ ಸಮಸ್ಯೆ...

ಯಾವಾಗಲೂ ಬಯ್ಯುವದನ್ನು ಕೇಳಿ ಬೋರಾಗಿಬಿಟ್ಟಿತ್ತು...

ಇದೊಂದು ವಿಭಿನ್ನ ರೀತಿಯಿಂದ ನೋಡುವ ಪ್ರಯತ್ನ...

ಇದನ್ನು ಓದಿ
ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿ ಕೊಂಡಾಗ..
ಲೇಖನ ನೆನಪಾಗಿ ನಿಮ್ಮಲ್ಲಿ ಒಂದು ಮುಗಳ್ನಗು ಬಂದರೆ ಸಾಕು....

ಧನ್ಯವಾದಗಳು...

Ittigecement said...
This comment has been removed by the author.
Ittigecement said...

ಆತ್ಮೀಯ ಶಿವು.. ಯಳವತ್ತಿ....

ಬೆಂಗಳೂರಲ್ಲಿ ಹತ್ತು ವರ್ಷ ಇದ್ರೆ ಸಾವು ಖಚಿತ...
ಅಥವಾ.. ಅಸ್ತಮಾ.. ಅಲರ್ಜಿ....
ಹಾರ್ಟ್ ಎಟಾಕ್... ಬರುವದಂತೂ ಪಕ್ಕಾ...

ಬೆಂಗಳೂರು ಅನ್ನುವದು ಚಿರ ಯೌವ್ವನೆಯಾ...?

ಈ ಹೊಗೆ.. ಧೂಳು..
ಟ್ರಾಫಿಕ್ ನೋಡಿದರೆ...
ಯಾವ ಹೆಣ್ಣೂ ಸಹ ಈ ಹೆಸರನ್ನು ಇಟ್ಟುಕೊಳ್ಳುವದಿಲ್ಲ...

ಈಗಿನ ಬೆಂಗಳೂರನ್ನು..
ನಾಡ ಪ್ರಭು "ಕೆಂಪೆಗೌಡರು" ನೋಡಿದರೆ ಎದೆಯೊಡೆದು ಸಾಯುತ್ತಿದ್ದರು..!!

ಹ್ಹಾ..ಹ್ಹಾ...!!

ಚುಟುಕು ಸಾಲಿನ ಕಥೆಗಳ ಸರದಾರರೆ.. ಧನ್ಯವಾದಗಳು

Anonymous said...

ತುಂಬಾ ಚೆನ್ನಾಗಿದೆ ನಿಮ್ಮ ಬರಹ..ಅದೆಷ್ಟೇ ಧೂಳು, ಕಲುಷಿತ ವಾತಾವರಣ, ಹೊಗೆ, ದಟ್ಟಣೆ ಇದ್ದರೂ ಬೆಂಗಳೂರು ಅಂದರೆ ಅದೆಂಥದೋ ಸೆಳೆತ..

ಹಿಂದಿನ ಸಲ ಭೇಟಿ ಕೊಟ್ಟಾಗ ಇಲ್ಲಿ drive ಮಾಡುವ ವ್ಯಕ್ತಿಯನ್ನು ಜಗತ್ತಿನ ಯಾವ ಮೂಲೆಯಲ್ಲಿ ಬಿಟ್ಟರೂ drive ಮಾಡಬಲ್ಲ ಅನಿಸಿತು..ಇಲ್ಲಿ ದಿನಾಲೂ ಸರಾಸರಿ ೪೦೦ ಕಿ ಮೀ drive ಮಾಡುವ ನನ್ನ ಯಜಮಾನ್ರು ಬೆಂಗಳೂರಲ್ಲಿ drive ಮಾಡಲು confidence ಸಾಲದು ಎನ್ನುತ್ತಾರೆ..


ನೀವೇನೇ ಅನ್ನಿ ಪ್ರಕಾಶಣ್ಣ, ಕಾಮತ್ ಯಾತ್ರಿ ನಿವಾಸದಲ್ಲಿ ಊಟ ಮಾಡಿ,tea ಕುಡಿಯುವ ಸುಖ ಬೇರೆಲ್ಲಿದೆ??

AntharangadaMaathugalu said...

ಬೆಂಗಳೂರಿನ ಟ್ರಾಫಿಕ್ ಕಥೆ ಚೆನ್ನಾಗಿದೆ.... ಏನೇ ಆದರೂ ಬೆಂಗಳೂರಿಗೆ ಸಮ ಬೆಂಗಳೂರೇ... ಕೊಲ್ಕತ್ತದಂತಹ ಟ್ರಾಫಿಕ್ ಮತ್ತು ರಸ್ತೆ ತಡೆಗಳ ಮುಂದೆ ಬೆಂಗಳೂರು ಯಾವತ್ತೂ ಅಂಬೆಗಾಲಿಡುವ ಮಗುವೇ.... ಅದಿಕ್ಕೇ ನನಗೂ ಸತ್ತರೂ ಇಲ್ಲೇ ಸಾಯಬೇಕೆಂಬಾಸೆ... :-)

ಶ್ಯಾಮಲ

ದಿನಕರ ಮೊಗೇರ said...

ಹೌದು ಪ್ರಕಾಶಣ್ಣ,
ಎರಡು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ನೋಡಿದ ಬೆಂಗಳೂರಿಗೂ, ಪಾಟಿಲ ಸಾಹೇಬರು ಹೇಳಿದ ಬೆಂಗಳೂರು ಒಂದೇ.... ತುಂಬಾ ತಮಾಷೆಯಾಗಿ ಬರೆದಿದ್ದೀರಾ..... ಆದರೆ ಬೆಂಗಳೂರು ತುಂಬಾ ಬಿಸಿಯಾಗುತ್ತಿದೆ...... ಇದ್ದ ಮರಗಳನ್ನೂ ಏನೇನೋ ಕಾರಣ ಹೇಳಿ ಕಡಿದರೆ...... ದೇವರೇಗತಿ.....

ಗೌತಮ್ ಹೆಗಡೆ said...

naavu oorkade idre namge 'HENNU' yaaru kodalle.manevku naavu ooralli iradu bekaagalle. "bengalooralli iddi" heli helkyalakaadru bengalooru namge beku:) idu anivaarya matte vaastava:)matte karma:)

ನಾಗರಾಜ್ .ಕೆ (NRK) said...

ಈ ಲೇಖನ ಓದಿದ್ರೆ, ಇದು " ಬ್ಲ್ಯಾಕ್ ಹ್ಯೂಮರ್ " ಅನ್ನೋದು ನನ್ನ ಅಭಿಪ್ರಾಯ.
ಪರಿಸ್ಥಿತಿಗೆ ಹೊಂದಿಕೊಂಡ ಮತ್ತು ವಾಸ್ತವಕ್ಕೆ ಹೊಂದಿಕೊಳ್ಳದ ನಮ್ಮೊಳಗಿನ ವ್ಯಕ್ತಿತ್ಯಗಳ ಮುಖಾಮುಖಿ, ಅಂದ್ರೆ ತಪ್ಪಾಗಲಾರದು.

Me, Myself & I said...

ಒಬಮಾಗೆ ನೋಬೆಲ್ ಪ್ರಶಸ್ತಿ ಸಿಕ್ಕ ರೀತಿ ಬೆಂಗಳೂರಿಗೆ "ಉದ್ಯಾನನಗರ" ಅಂತ ಕರೆದಿರೋದ್ರಲ್ಲಿ ತಪ್ಪಿಲ್ಲ ಅಲ್ವ?

ಹೆ ಹೆ ಹೆ...

ಉದ್ಯಾನನಗರಕ್ಕೊಂದು ಸಲಾಮ್!

pavana m hegde said...

mama this one very nice i got to know the recent status of b'lore

sunaath said...

ಹೌದಲ್ರೀ ಪ್ರಕಾಶ! ನನ್ನ ಪಾಪಗಳನ್ನು ತೊಳೆದುಕೊಳ್ಳೋಕೆ ನಾನೂ
ಒಮ್ಮೆ ಬೆಂಗಳೂರಿಗೆ ಬರ್ತೀನ್ರೆಪಾ!

Gopi said...

nice one...mumbai is no different than b'lore !
for that matter i was struck in bad trafic(for 1hr) once in Shanghai also !!!

Ittigecement said...

ಮನಸು...

ನನಗೆ "ನನ್ನಜ್ಜಿ ಅಂದ್ರೆ ನಂಗಿಷ್ಟ" ಗುಂಗಿನಿಂದ ಹೊರ ಬೇಕಾಗಿತ್ತು..
ಆ ಕಥೆ ಬಹಳವಾಗಿ ಆವರಿಸಿಕೊಂಡಿತ್ತು..
ಸಂಗಡ ಕೆಲಸದ ಒತ್ತಡ...

ಟ್ರಾಫಿಕ್ ಪುರಾಣದ ಘಟನೆ ನಡೆದು ಬಹಳ ದಿನಗಳಾಗಿತ್ತು..
ಪಾಟೀಲ್ ಮತ್ತು ನಾಗು.. ನಾನು ಎಲ್ಲ ಸೇರಿ ಪಿವಿಆರ್ ಗೆ ಹೋಗಿ ಸಿನೇಮಾ ನೋಡಿದ ಕಥೆ ಮಸ್ತ್ ಆಗಿದೆ..
ಬರೆಯುವೆ ಇನ್ನೊಮ್ಮೆ..

ಪ್ರೋತ್ಸಾಹಕ್ಕಾಗಿ ವಂದನೆಗಳು..

ನಿಮ್ಮೆಲ್ಲರ ಬ್ಲಾಗಿಗೆ ಸಧ್ಯದಲ್ಲಿಯೇ ಬರುವೆ...

Subrahmanya said...

:)..:)... ಬದುಕಿನ ಅನಿವಾರ‍್ಯತೆಗಳು ಮತ್ತು ಸಮಯದ ರಭಸ ಈ " ಸ್ವರ್ಗ " ಸೃಷ್ಟಿಸಿದೆ...:)

Unknown said...

ಧನಾತ್ಮಕ ದೃಷ್ಟಿಕೋನಕ್ಕೆ ಇದೊಂದು ಉತ್ತಮ ಉದಾಹರಣೆ! ನಾಗೂ ನೀನು ಅಸಾಧ್ಯ ಕಣಪ್ಪಾ!

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಬೆಂಗಳೂರಿನ ಟ್ರಾಫಿಕ್ಕು ವ್ಯವಸ್ಥೆಯನ್ನು ಶಾಲುವನ್ನು ಸುತ್ತಿ ಹೊಡೆದಂಗೆ ಬರೆದಿದ್ದೀರಿ. ಎಂಥಾ ಪುಣ್ಯವಂತರು ಸರ್ ನೀವು ಬೆಂಗಳೂರಿಗರು!!!

umesh desai said...

ಹೆಗಡೇಜಿ ನಾನೂ ಬೆಂಗಳೂರಿಗೆ ಬಂದು ಇಂದು ಸರಿಯಾಗಿ ಮೂರುವರ್ಷ ಮುಗೀತು ಇನ್ನೂ ಈಊರು ಅಪರಿಚಿತ ಅನಿಸ್ತದ
ನಾ ಯಾವಾಗಲೂ ನನ್ನ ಕಿಸೆದಾಗ ಒಂದು ಹಿಡಿ ಹುಬ್ಬಳ್ಳಿ ಇಟ್ಕೊಂಡು ತಿರಗತೇನಿ...

Shashi jois said...

ಹಾಸ್ಯ ಮಿಶ್ರಿತ ಹರಟೆ ಚೆನ್ನಾಗಿತ್ತು .ನಾಗು ಪಾಟೀಲ ರಿಗೆ ಟ್ರಾಫಿಕ್ ಬಗ್ಗೆ ಹೇಳಿದ ಸೊಗಸಾಗಿತ್ತು.ಏನೇ ಆದರೂ ನಮ್ಮ ಬೆಂಗಳೂರೇ ಚೆಂದ & ಸ್ವರ್ಗವೇ!!!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಉತ್ತಮವಾದ ಹಾಸ್ಯ ಲೇಖನ.ನಿಮ್ಮ ಲೇಖನಗಳು ಓದಲಾರಂಭಿಸಿದೊಡನೇ ತುಂಬಾ ಆಪ್ತವಾಗಿಬಿಡುತ್ತವೆ.ಎಲ್ಲ ಭಾವಗಳನ್ನೂ ಸಮರ್ಥವಾಗಿ ಹಿಡಿದು ಬಿಡುತ್ತೀರಿ.ಅಭಿನಂದನೆಗಳು.

Gubbachchi Sathish said...

That's why I am always afraid of Bangalore. But, I like Bangalore for its unlimited opportunities.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಮಹಾನದಿಯಲ್ಲಿ ಮಿಂದು ಪಾವನನಾಗಿ ಬದುಕುವುದು ಸುಯೋಗವೇ ಸರಿ
ಬೆಂಗಳೂರಿನಲ್ಲಿ ಬದುಕುವಾಗ ಇಂಥಹ ಆಲೋಚನೆಗಳಿರಬೇಕು, ಇಲ್ಲದಿದ್ದರೆ
ಸದಾ ಟ್ರಾಫಿಕ್ಕು , ಜನರು ಅಂತೆಲ್ಲ ಗೊಣಗುತ್ತಿರುತ್ತೇವೆ
ನಿಮ್ಮ ಉತ್ತಮ ಬರಹಕ್ಕೆ ಅಭಿನಂದನೆಗಳು

Ittigecement said...

ಚಿತ್ರಾ....

ದಿನಾಲೂ ಸುಮಾರು ೮೦ ರಿಂದ ೧೦೦ ಕಿಲೋಮೀಟರ್ ಓಡಾಡುವ ನಾನು..
ನನ್ನ ದಿನವೆಲ್ಲ ರಸ್ತೆಯಲ್ಲೇ ಕಳೆಯುತ್ತೇನೆ...
ಬೆಂಗಳೂರಿನ ಟ್ರಾಫಿಕ್ ನನ್ನ ಸಯಾಮಿ ಸಹೋದರ..
ಹಾಗಾಗಿ ದೋಸ್ತಿಯನ್ನೂ ಮಾಡಿಕೊಂಡಿದ್ದೇನೆ..

ಸ್ವಲ್ಪನೂ ಟ್ರಾಫಿಕ್ ಜಾಮ್ ಇರದಿದ್ದರೆ ಬೋರ್ ಆಗಿಬಿಡುವ ಸ್ಥಿತಿಯನ್ನು ತಲುಪಿಬಿಟ್ಟಿದ್ದೇನೆ...

ಬೆಂಗಳೂರಿನ ಜಾಮ್ ಸವಿದಿರೀಲ್ಲ..
ನಿಮ್ಮ ಪಾಪವೆಲ್ಲ ತೊಳೆದು...
ನಿಮಗೆ ಸ್ವರ್ಗದಲ್ಲೊಂದು ಸ್ಥಾನ ಗ್ಯಾರೆಂಟಿ...!!

ಆಗಾಗ ಬೆಂಗಳೂರಿಗೆ ಬರುತ್ತಾ ಇರಿ..
ನಿಮ್ಮ ಕುಟುಂಬದವರನ್ನೂ ಕರೆ ತನ್ನಿ..!!

ಹ್ಹ್ಹ..ಹ್ಹಾ..!!

ಜಲನಯನ said...

ಪ್ರಕಾಶ್, ಬೆಂಗಳೂರು ಎಲ್ಲಿಂದ ಎಲ್ಲಿವರೆಗೆ ಎನ್ನೋದು ಈಗಲೂ ನನ್ನ ಊಹೆಗೆ ನಿಲುಕಿಸಿಕೊಳ್ಲಲಾಗುತ್ತಿಲ್ಲ...!! ನಾನು ಮೊದಲು ಬೆಂಗಳೂರನ್ನು ನೋಡಿದ್ದು ನನ್ನ ಐದನೇ ತರಗತಿಯಲ್ಲಿ(1970). ಆಗ ಕಾರ್ಪೊರೇಶನ್ ಬಂತು ಅಂದ್ರೆ ಬೆಂಗಳೂರಿಗೆ ತಲುಪಿತು ಬಸ್ಸು ಅಂತ ಅನಿಸುತ್ತಿತ್ತು. 1974-75 ರಲ್ಲಿ ಲಾಲ್ ಬಾಗಿನಲ್ಲಿ ಚಂದ್ರನ ಮೊದಲ ಮಾನವ ಯಾನದ ಪರಿಚಯಿಸುವ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ನಮ್ಮ ಹೈಸ್ಕೂಲಿಂದ educational ಪ್ರವಾಸ ಹೋಗಿದ್ವಿ. ನನ್ನಪ್ಪ ಕಡೇವರೆಗೂ ಒಪ್ಪಿರಲಿಲ್ಲ, ಸರಿ, ನನ್ನ ಅಳುಮೋರೆ ನೋಡಿ ನನ್ನಜ್ಜ ನನ್ನಪ್ಪಂಗೆ ಹೋಗ್ಲಿಬಿಡೋ ಹುಡ್ಗ ಎಲ್ಲಾ ಹೋಗವ್ರೆ ಇವನು ಹೋಗ್ದೇ ಇದ್ರೆ ಚನ್ನಾಗಿರೊಲ್ಲ ಅಂತ ಶಿಫಾರಸು ಮಾಡಿ..ನನ್ನನ್ನ ಕ್ರಾಸಿಗೆ ಸೈಕಲ್ ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿ, ಕಾರ್ಪೊರೇಶನ್ ಹತ್ರ ಇಳ್ಕೊ ಅಲ್ಲಿಂದ ಹತ್ರ ಲಾಲ್ ಬಾಗ್, ಯಾರ್ನಾದ್ರೂ ಕೇಳು..ಕಾಸು ಖರ್ಚಾಗುತ್ತೆ ಅಂತ ನಡ್ಕೋಡ್ ಹೋಗ್ಬ್ಯಾಡ..ಬಿ.ಟಿಎಸ್ಸೋ, ಆಟೋನೋ ಹಿಡಿ ಅಂತ ತಾಕೀತು ಮಾಡಿದ್ರು...ಕಾರ್ಪೊರೇಶನ್ ಹತ್ರ ಬಸ್ಸಿಳಿದ ನನಗೆ ಕಾಸು ಉಳಿಸಿ ಏನಾದರೂ ಕೊಂಡುಕೊಳ್ಳುವ ಆಸೆ..ದಾರಿ ಕೇಳ್ಕೊಂಡು ನಡೆದೇ ಹೊರಟೆ...ಕಾರ್ಪೊರೇಶನ್ ಬಿಟ್ಟಮೇಲೆ..ಜನಾನೇ ಇರ್ಲಿಲ್ಲ ರೋಡಿನೈಕ್ಕೆಲಗಳಲ್ಲಿ.....ಯಾಕೆ ಹೇಳ್ತಿದ್ದೀನಿ ಅಂದ್ರೆ...ಪರಿಸ್ಥಿತಿ ಬದಲೇ ಆಗಿಲ್ಲ...!!! ಹಾಂ ಏನು ಇದು ಹೀಗೆ ಹೇಳ್ತಿದ್ದೀನಿ ಅಂದ್ಕೊಂಡ್ರಾ? ...ಈಗಲೂ ಕಾರ್ಪೊರೇಶನ್ನಿಂದ ಲಾಲ್ ಬಾಗ್ ಗೆ ನಡೆದೇ ಹೋಗಬೇಕು...ಯಾಕೆ ಗೊತ್ತೆ ಬೇರೆ ಯಾವುದೇ ಸಾಧನಕ್ಕಿಂತಲೂ ನಡೆದೇ ಬೇಗ ತಲುಪಬಹುದು...ವಾಹನಗಳ traffic jam ನಿಂದ ಅದೇ ಉತ್ತಮ....
ನಿಮ್ಮ ನವುರು ಹಾಸ್ಯ, ಸುಲಲಿತ ಲೇಖನ, ಬೆಂಗಳೂರಿನ ವರ್ಣನೆ..ಎಲ್ಲಾ ಸೂಪರ್...

ವನಿತಾ / Vanitha said...

ಹ ಹ ..ಸಕತ್ತಾಗಿದೆ ..ಬೆಂಗಳೂರ ಸ್ವರ್ಗ!!!! ಓದಿದ ಮೇಲೆ ಇನ್ನೂ Bangaloreಗೆ ಬರ್ಬೇಕಾ / ಬೇಡ್ವಾ??.. ನೀವೇ ಹೇಳ್ರಿ..

manju said...

ಏನ್ರೀ ಪ್ರಕಾಶ್, ನಾನು ಬೆಂಗಳೂರಿಗೆ ವಾಪಸ್ ಬರೋಣ ಅಂತಿದ್ದೆ, ನಿಮ್ಮ ಈ ಹಾಸ್ಯವೋ,ಹರಟೆಯೋ,(ಗೊತ್ತಾಗ್ತಿಲ್ಲ), ಓದಿ ಇಲ್ಲೇ ಇರೋಣ ಅನ್ನಿಸ್ತಿದೆ. ಬೆಂಗಳೂರಿಗೆ ಹಿಂತಿರುಗುವ ನನ್ನ ಆಸೆಯ ಬಲೂನಿನ ಗಾಳಿ ತೆಗೆದುಬಿಟ್ರಲ್ರೀ !!

PARAANJAPE K.N. said...

ಬೆ೦ಗಳುರಿನ ಟ್ರಾಫಿಕ್ಕು, ಇಲ್ಲಿನ ರಸ್ತೆಗಳು, ಸರ್ಕಲ್ಲುಗಳು, ಇವೆಲ್ಲ ನದಿಗಳಾಗಿ, ತ್ರಿವೇಣಿ ಸ೦ಗಮಗಳಾಗಿ ನಿಮ್ಮ ಕಥಾರೂಪದ ಬರಹದಲ್ಲಿ ಹೊರಹೊಮ್ಮಿದ ಬಗೆ ಅನನ್ಯ. ಸಿಹಿ, ಹುಳಿ, ಒಗರು ಎಲ್ಲ ತು೦ಬಿದ ಹಾಗಲಕಾಯಿ ಪಲ್ಯದ೦ತಿದೆ ನಿಮ್ಮ ಲೇಖನ. ಇಷ್ಟವಾಯ್ತು.

Unknown said...

ಹಾಹಾಹಾ.. ನೀವು ಹೇಳಿದ್ದು ನಿಜ.. ನಮ್ಮಣ್ಣ ಒಮ್ಮೆ ಬೆಂಗಳೂರಿಗೆ ಬಂದಿದ್ದ.. ಇರು ಅಂತ ಒತ್ತಾಯಿಸಿ ೨ ದಿನ ನಿಲ್ಲಿಸ್ದೆ.. ಮೂರನೆ ದಿನ ಈಗ ಬರ್ತೀನಿ ಅಂತ ಹೊರಗೆ ಹೋದವನು ಅಲ್ಲಿಂದ ನೇರವಾಗಿ ಊರಿಗೆ ಪಲಾಯನ ಗೈದಿದ್ದ...!!!! :-)

Ittigecement said...

ಸವಿಗನಸು (ಮಹೇಶ್)

ಕೆಂಪೇಗೌಡರು ನೆಟ್ಟ ಈ ಗಿಡ ಹೀಗಾಗುತ್ತದೆಂದು ಅವರಿಗೆ ಕನಸು ಮನಸಲ್ಲೂ ತಿಳಿದಿರಲಿಲ್ಲ..

ಕೆಂಪೇ ಗೌಡರು ಈಗಿನ ಬೆಂಗಳೂರಿಗೆ ಬಂದಿದ್ದು...
ಮಲ್ಟಿಫ್ಲೆಕ್ಸುಗಳು..!
ಗಾಜಿನ ಶೋರೂಮುಗಳು..!!

ಈ ಐಟಿ ಪಟ್ಟಣ ನೋಡಿದ್ದು..
ಇಲ್ಲಿನ ಥಳುಕು...
ಬಳುಕು...!!

ಊರತುಂಬ ಇರುವ ಕೊಳಕು...!!

ಆಡಳಿತದ ಹುಳುಕು...!!

ಕನ್ನಡವೇ ಮಾಯವಾದದ್ದು..!

ಎಲ್ಲಿ ನೋಡಿದರೂ..
ಎನ್ನಡಾ..?
ಎಕ್ಕಡಾ..?
ವಾಟ್ ಅಡಾ..?

ಕನ್ನಡಿಗನ ಕಾಲಿಗೂ ಇಲ್ಲವೇ ಎಕ್ಕಡಾ..?

ಇದೆಲ್ಲ ಸೇರಿಸಿ ಒಂದು ಸಿನೇಮಾ ಮಾಡಿದರೆ ಸೂಪರ್ ಹಿಟ್ ಆಗುವದಂತೂ ಗ್ಯಾರೆಂಟಿ...

ಅಲ್ಲವಾ...?


ಧನ್ಯವಾದಗಳು ಮಹೇಶ್..!!!!!!!!!!!!!!!

ಮನದಾಳದಿಂದ............ said...

ಪ್ರಕಾಶಣ್ಣ, "ನನ್ನಜ್ಜಿ ಅಂದ್ರೆ ನಂಗಿಷ್ಟ"ದಲ್ಲಿ ದುಃಖದಲ್ಲಿ ನೆನಪುಗಳನ್ನು ಮರುಕಳಿಸುವಂತೆ ಮಾಡಿದಿರಿ, ಈಗ ಲಘು ಹಾಸ್ಯದಿಂದ ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ ಬರೆದು ದುಃಖದಿಂದ ಹೊರಬರುವಂತೆ ಮಾಡಿದ್ದೀರಿ.
ದೆಹಲಿಯಲ್ಲಿನ ಖಾಲಿ ರಸ್ತೆಗಳಲ್ಲಿ ಬೈಕ್ ಓಡಿಸುವಾಗ ಕುಶಿಪಡುವ ನಾನು ಬೆಂಗಳೂರಿಗೆ ಬಂದಾಗ ಬಾವನ ಕಾರಿನಲ್ಲಿ ಅವರ ಪಕ್ಕ ಕುಳಿತಿರುತ್ತೇನೆ. ಯಾಕೆಂದರೆ ಭಯ! ಎಲ್ಲಿ ಯಾವುದಾದರೂ ಗಾಡಿಗೆ ಕುತ್ತಿಬಿದುತ್ತೇನೋ ಅಂತ. ಆದರೂ ಅಲ್ಲೇನೋ ಸುಖ ಇದೆ. ನಮ್ಮದು, ನಮ್ಮವರು ಎಂಬ ಅಭಿಮಾನ ಬೆಂಗಳೂರನ್ನು ಪ್ರೀತಿಸುವಂತೆ ಮಾಡುತ್ತದೆ. ಬೆಂಗಳೂರಿನ ಟ್ರಾಫಿಕ್ ಜನಜೀವನದ ಅವಿಭಾಜ್ಯ ಅಂಗವೇ ಆಗಿದೆ.
ಏನೇ ಇರಲಿ, ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ ಹಾಸ್ಯ ರಸದಲ್ಲಿ ಚೆನ್ನಾಗಿ ವರ್ಣಿಸಿದ್ದೀರಾ. ದನ್ಯವಾದಗಳು.

Ittigecement said...

ರಾಜೀವ...

ಪುಣ್ಯ ಮೋಕ್ಷಕ್ಕೆ ದಾರಿ...
ಈ ಹೊಗೆ.. ಧೂಳು..
ಟ್ರಾಫಿಕ್..
ಗದ್ದಲು... ಗಲಾಟೆ..

ನಮಗೆ ಮೋಕ್ಷ ಗ್ಯಾರೆಂಟಿ.. ಅಲ್ಲವಾ...?

ನಾಗುವಿಗೆ ನಿಮ್ಮ ಶುಭ ಹಾರೈಕೆ ತಲುಪಿಸಿದ್ದೇನೆ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ಗುರು...

ಕಷ್ಟದೊಡನೆ
ಇಷ್ಟವಾಗಿ ಬದುಕ ಬೇಕಂತೆ...

ನಮಗೆ ಇದು ಅನಿವಾರ್ಯ ಕೂಡ...

ನನಗೆ ಟ್ರಾಫಿಕ್ ಪೋಲಿಸರ ಬಗ್ಗೆ ಬಹಳ ಬೇಸರವೆನಿಸುತ್ತದೆ...
ವಾಹನಗಳ ಮೇಲೆ ನಮ್ಮಗೆ ಹಿಡಿತವಿಲ್ಲ..

ಅವರೇನು ಮಾದಲು ಸಾಧ್ಯ...??

ಸಿಂಗಾಪುರದಲ್ಲಿ ಒಂದು ವಾಹನ ಖರಿದಿಸಲು ಖೊಟಾದಡಿಯಲ್ಲಿ ಅನುಮತಿ ಪಡೆಯ ಬೇಕು..
ಸುಮ್ಮ ಸುಮ್ಮನೆ ವಾಹನ ಖರಿದಿಸುವಂತಿಲ್ಲ..

ಅಂಥಹದೊಂದು ನಿಯಮ ನಮ್ಮಲಿರಬೇಕು ಅಲ್ಲವಾ...?

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಆಕಾಶ ಬುಟ್ಟಿ...

ಗಲ್ಫ್ ದೇಶಗಳಲ್ಲಿನ ರಸ್ತೆಗಳು ತುಂಬಾ ಚೆನ್ನಾಗಿರುತ್ತವೆ..
ಅಲ್ಲಿ ವಾಹನ ದಟ್ಟಣೆ ಇರುವದೇ ಇಲ್ಲ..

ಅಲ್ಲಿ ರಸ್ತೆಗಳಲ್ಲಿ ಡ್ರೈವರಿಗೆ ಬೇಸರ ಬರದಿರಲಿ ಅಂತ ಏರು ತಗ್ಗುಗಳನ್ನು ಕೃತಕವಾಗಿ ಮಾಡುತ್ತಾರೆ..!!!!

ಮುಂದಿನ ಸಾರಿ ಬಂದಾಗ ನಿಮ್ಮ ಯಜಮಾನರಿಗೆ ನಾನು ಡ್ರೈವಿಂಗ್ ತರಬೇತಿ ಕೊಡುತ್ತೇನೆ
(ಕಿರಣ್ ಗೆ ಹೇಳಿ)

ಕಾಮತ್ ಯಾತ್ರಿ ನಿವಾಸದಂಥಹ ಇನ್ನೂ ಹಲವು ಹೊಟೆಲ್ಲುಗಳಿವೆ..

ಉಳಿದ ಎಲ್ಲರೀತಿಯಿಂದಲೂ ಬೆಂಗಳೂರು
ಸ್ವರ್ಗ.. !!!

ಎಷ್ಟೆಂದರೂ ಇದು ನಮ್ಮದು...
ನಮ್ಮದು ಹೇಗಿದ್ದರೂ ಚಂದ..
ಅಲ್ಲವಾ..?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅಂತರಂಗದ ಮಾತುಗಳು...

ಬೆಂಗಳೂರಿನ ಸಮಸ್ಯೆ ಎಂದರೆ ಇಲ್ಲಿನ ಭಾಷೆಯದು..
ಕನ್ನಡಿಗರು ಎಲ್ಲರನ್ನೂ ತುಂಬ ಸುಲಭವಾಗಿ ಒಪ್ಪಿಕೊಂಡು ಬಿಡುತ್ತೇವೆ...
ಅವರ ಭಾಷೆಯನ್ನು ನಾವು ಕಲಿತು ಅವರೊಡನೆ ವ್ಯವಹರಿಸುತ್ತೇವೆ...
ಈ ಒಳ್ಳೆಯತನವೇ.. ನಮಗೆ ತೊಂದರೆ ಕೊಡುತ್ತದೆ...

ನಾವು ಎಲ್ಲಿಗೂ ಹೋದರೂ ಕನ್ನಡ ಮಾತನಾಡ ಬೇಕು..
ಅವರಿಗೆ "ತಮಗೆ ಕನ್ನಡ ಬಂದರೆ ಒಳ್ಳೆಯದಿತ್ತು" ಅನ್ನು ಭಾವನೆ ಹುಟ್ಟಿಸ ಬೇಕು..
ನಾವು ಅನಿವಾರ್ಯವಾಗಿ ಅವರೊಡನೆ ಇಂಗ್ಲೀಷ್ ಮಾತಾಡುತ್ತೇವೆ ಅನ್ನುವ ಭಾವನೆ ಅವರಲ್ಲಿ ಮೂಡಿಸ ಬೇಕು..

ಅಲ್ಲವಾ..?

ಅದು ನಿಜ ಕಲ್ಕತ್ತಾದಂಥಹ ಪಟ್ಟಣಕ್ಕೆ ಹೋಲಿಸಿದರೆ ನಮ್ಮದು ಸಮಸ್ಯೆಯೇ ಅಲ್ಲ..

ನಮ್ಮದು ನಮಗೆ ಚಂದ..
ಇಷ್ಟ... ಅದಕ್ಕೆ..
ಸಾವನ್ನೂ ಕೂಡ ಇಲ್ಲಿಯೇ ಬಯಸುವದು..!!

ಪ್ರತಿಕ್ರಿಯೆಗೆ ಧನ್ಯವಾದಗಳು...

shivu.k said...

ಸರ್,

ಹೊರಗಿನಿಂದ ಯಾರಿಗೆ ಆಗಲಿ ಬೆಂಗಳೂರನ್ನು, ಅದರ ಟ್ರಾಫಿಕನ್ನು ಕಂಡರೇ ಹೀಗೆ ಅನ್ನಿಸುವುದು.

ಒಂದು ತಿಂಗಳ ಹಿಂದೆ ಸಾಗರದಿಂದ ಬಂದ ಉಲ್ಲಾಸ್ ಶ್ಯಾನುಭಾಗ್, ಮತ್ತು ಹದಿನೈದು ದಿನಗಳ ಹಿಂದೆ ಬಂದ ವಿ.ಡಿ.ಭಟ್ ಇಬ್ಬರನ್ನು ಇಡೀ ದಿನ ನನ್ನ ಟೂವೀಲರುನಲ್ಲಿ ಕೂಡಿಸಿಕೊಂಡು ಸುತ್ತಾಡಿಸಿದಾಗ ಅವರಿಗೆ ಆಶ್ಚರ್ಯವಾಗಿತ್ತು.
"ಶಿವು ನೀನಿಲ್ಲ ಅಂದ್ರೆ ನಾನು ಬೆಂಗಳೂರಿಗೆ ಬರೋಮಟ್ಟ ಇಲ್ಲ ನೋಡು" ಅಂತ ಉಲ್ಲಾಸ್ ಹೇಳಿದರೆ,
"ನಿಮ್ಮ ಗಾಡಿಯಲ್ಲಿ ಕುಳಿತು ಇಲ್ಲಿನ ರಸ್ತೆಗಳಲ್ಲಿ ಸಾಗುತ್ತಿದ್ದರೆ ನನಗೆ ಕಂಫ್ಯೂಟರಿನ ವಿಡಿಯೋ ಗೇಮ್ಸ್‍ನಲ್ಲಿ ನುಗ್ಗುವ ಬೈಕ್ ಮೇಲೆ ಕುಳಿತಂತೆ ಆಗುತ್ತಿದೆ. ಒಂದು ಗೊತ್ತಾಗುತ್ತಿಲ್ಲ" ಅಂತ ವಿ.ಡಿ.ಭಟ್ ಹೇಳಿದ್ದು ನೆನಪಿಗೆ ಬಂತು.
ಟ್ರಾಫಿಕ್ ವಿಚಾರ ಚೆನ್ನಾಗಿ ಬರೆದಿದ್ದೀರಿ.

Ashok Uchangi said...

ಪ್ರಿಯ ಪ್ರಕಾಶ್
ಕಾರಣಾಂತರದಿಂದ ಇತ್ತೀಚೆಗೆ ಬ್ಲಾಗ್ ನಲ್ಲಿ ಬರೆಯುವುದನ್ನು ನಿಲ್ಲಿಸಿದ್ದೆ.ಅನೇಕರ ಬರಹಗಳನ್ನು ಓದುತ್ತಿದ್ದೆನಾದ್ರೂ ಕಾಮೆಂಟ್ ಮಾಡಲು ಸಾಧ್ಯವಾಗಿರಲಿಲ್ಲ.ಆದ್ರೆ ನಾನು ಬರೆಯುವುದನ್ನು ನಿಲ್ಲಿಸಿದಾಗ ನನ್ನ ಮನೆಮುಂದೆ ಧರಣಿ ಕೂರಲು ಹೊರಟವರು ನೀವು!ಬರೆಯಲು ಆಗಾಗ ಪ್ರೇರೇಪಿಸುತ್ತಿದ್ದವರು ನೀವು.ಅದಕ್ಕೆ ನಿಮಗೆ ನಾನು ಆಭಾರಿ.

ನಿಮ್ಮ ಭಯಾನಕ ಬೆಂಗಳೂರು ಕಥನದ ಶೈಲಿ ತುಂಬಾ ಚೆನ್ನಾಗಿದೆ.ನಿಮ್ಮ ಬರಹವನ್ನು ಒಂದು ಸೀರಿಯಸ್ ಹಾಸ್ಯ ನಾಟಕವೆಂದ್ರೂ ತಪ್ಪಾಗಲಾರದು!?ಮಾಸ್ಟರ್ ಹಿರಿಯಣ್ಣಯ್ಯನವರ ವಿಡಂಬನೆಯ ದಾಟಿಯಲ್ಲಿ ನಿಮ್ಮ ಬರಹ ಸಾಗುತ್ತಿದೆ ಎಂದು ನನ್ನ ಅಭಿಪ್ರಾಯ....ಕೆಲವು ಬರಹಗಳು ಲಘು ಮತ್ತೆ ಕೆಲವು ಬಿಗು....ನಾನು ತಪ್ಪದೇ ಓದುವ ಬ್ಲಾಗುಗಳಲ್ಲಿ ನಿಮ್ಮ ಬ್ಲಾಗಿಗೆ ಅಗ್ರಸ್ಥಾನ.ನನ್ನ ಬ್ಲಾಗಿಗೆ ತಪ್ಪದೇ ಬಂದು ಪ್ರತಿಕ್ರಿಯಿಸುತ್ತಿರುವುದಕ್ಕೆ ತುಂಬಾ ಧನ್ಯವಾದ....
ಧನ್ಯವಾದ
ಅಶೋಕ ಉಚ್ಚಂಗಿ

ಸೀತಾರಾಮ. ಕೆ. / SITARAM.K said...

Nice article on Bangalore traffic with humour

ದೀಪಸ್ಮಿತಾ said...

ಒಂದಾನೊಂದು ಕಾಲದಲ್ಲಿ ಹವಾ ಬದಲಾವಣೆಗೆ ಬೆಂಗಳೂರಿಗೆ ಹೋಗಿ ಎಂದು ವೈದ್ಯರು ಹೇಳುತ್ತಿದ್ದರಂತೆ. ಈಗ ಆರೋಗ್ಯ ಸುಧಾರಿಸಬೇಕಾದರೆ ಬೆಂಗಳೂರು ಬಿಟ್ಟು ಹೋಗಿ ಎನ್ನುತ್ತಾರೆ. ಚೆನ್ನಾಗಿದೆ ಬರಹ

Roopa said...

ಪ್ರಕಾಶ್ ಸಾರ್
ಮೊನ್ನೆ ಒಂದು ಸಮಾರಂಭದಲ್ಲಿ ಶಶಿಧರ್ ಕೋಟೆಯವರನ್ನು(ಗಾಯಕರು) ಭೇಟಿ ಮಾಡುವ ಸಂದರ್ಭದಲ್ಲಿ ಅವರು ಹೇಳಿದ್ದು "ಬೆಂಗಳೂರಿನಲ್ಲಿ ಯಾರು ಬೇಕಾದರೂ ಏನೂ ಬೇಕಾದರೂ ಮಾಡಿ ದೊಡ್ಡಾವರಾಗಬಹುದು ಎಲ್ಲಕ್ಕೂ ಪ್ರೋತ್ಸಾಹ ಇದೆ ಇಲ್ಲಿ"
ಅದೇ ಗುಂಗಲ್ಲಿ ನಿಮ್ಮಲೇಖನ ಶೀರ್ಷಿಕೆ ಓದಿ ಬೆಂಗಳೂರನ್ನು ಹೊಗಳುತ್ತಿದ್ದಾರೇನೋ ಎಂದನಿಸಿ ಓದಲಾರಂಭಿಸಿದರೆ ಬೆಂಗಳೂರಿನ ಮಾನ ಮೂರು ಬಟ್ಟೆಯಾಗಿದೆಯಲ್ಲಾ ಇಲ್ಲಿ.
ಸಿಕ್ಕಾಪಟ್ಟೆ ನಗು ಬಂತು.
ಇನ್ನು ಮೇಲೆ ಟ್ರಾಫಿಕ್‌ನಲ್ಲಿ ಸಿಲುಕಿದರೆ ನಿಮ್ಮ ಲೇಖನ ನೆನೆಸಿಕೊಂಡು ಕೊಂಚ ನಗಬಹುದು

Anonymous said...

ಬೆಂಗಳೂರಿನ ಸ್ವರ್ಗದ ಬಗ್ಗೆ ಹೇಳಿದ ರೀತಿ ತುಂಬಾನೆ ಚನ್ನಾಗಿದೆ. ಇಲ್ಲಿನ ಟ್ರಾಫಿಕ್ ಜಾಮಿನ ಬಗ್ಗೆ ಚನ್ನಾಗಿ ವರ್ಣಿಸಿದ್ದೀರಿ. ನಂಗೆ ಅದರ ಅನುಭವ ಚನ್ನಾಗಿ ಆಗಿದೆ. ಮಿನೆರ್ವ ವೃತ್ತದಿಂದ ಎಂ.ಜಿ. ರಸ್ತೆಗೆ ನಾನು ದಿ ಟೈಮ್ಸ್ ಆಫ್ ಇಂಡಿಯಾ ಆಫೀಸಿಗೆ ಎಸ.ಏ.ಪಿ. ಕಲಿಯಲು ಒಂದು ತಿಂಗಳ ಮಟ್ಟಿಗೆ ಹೋದೆ ನಾನು ಹೋಗುವಾಗ ಬೆಳಗ್ಗೆ ೮.೦೦ ಗೆ ಮನೆ ಬಿಟ್ರೆ ಅಲ್ಲಿಗೆ ೨ ಬಸ್ಸು ಹಿಡಿದು ಹೊರಡುವ ಹೊತ್ತಿಗೆ ೯.೩೦ ಆಗ್ತಿತ್ತು. ನಂತರ ಸಂಜೆ ೬ ಗಂಟೆಗೆ ಟೈಮ್ಸ್ ನವರನ್ನ ಹೊರದ್ಬಹುದೇ ಅಂತ ಕೇಳಿದ್ರೆ ಅವ್ರು ನನ್ನ ಕಷ್ಟ ಅರ್ಥ ಮಾಡ್ಕೊಂಡು ಆಯಿತು ಇಂದು ನಿಮಗೆ ಟೈಮ್ ಆಯಿತು ಹೊರಡಿ ಅಂತಿದ್ರು ಬದುಕಿದೆಯ ಬಡ ಜೀವ ಅಂದ್ಕೊಂಡು ಬಸ್ ಸ್ಟಾಪ್ಗೆ ಬಂದ್ರೆ ಅಲ್ಲಿ ಒಂದು ಬಸ್ ಹಿಡಿದು ಬಿಟ್ರೆ, ಕಾರ್ಪೋರೆಸಿಒನ್ ಗೆ ಬಂದು ಅಲ್ಲಿಂದ ಇನ್ನೊಂದು ಬಸ್ ಹಿಡಿದು ನೂಕು ನುಗ್ಗಿಲಿನಲ್ಲಿ ಹೊರಡೋ ಹೊತ್ತಿಗೆ ನಂಗೆ ದೇವ್ರು ಕಾಣಿಸ್ತಿದ್ದ, ಯಾಕೆ ಈ ಹಾಲು ಯಾಂತ್ರಿಕ ಜೀವನ ಅದ್ರಲ್ಲಿ ಬೇರೆ ಸಮಯ ಅನ್ನೋದು ಕುದರೆ ಥರ ಹೊಡ್ತಿತ್ತು, ನನ್ನ ಮಗಳು ಬೇರೆ ಶಾಲೆ ಇಂದ ಬಂದು ಅಮ್ಮನಿಗೊಸ್ಕರ ಕಾಯ್ತಿದ್ದಳು ಆಗ ನಂಗೆ ಈ ಹಾಲು ಕೆಲಸ ಬೇಡ ಅನ್ಸಿತಿತ್ತು ಆದರೂ ನನ್ನ ತಂದೆ ನಂಗೆ ಆ ಸಮಯದಲ್ಲೂ ನನ್ನ ಜೊತೆಗೆ ಬಂದು ಟ್ರಾಫಿಕ್ ಇದ್ದಾರೆ ನೀನು ತಾನೇ ಏನು ಮಾಡಲು ಸಾಧ್ಯ, ಅಂತ ದೈರ್ಯ ಹೇಳೋರು. ಆದರೂ ಮನೇಲಿ ನನ್ನ ಮಗಳು, ಗಂಡ ಕಾಯ್ತಿರ್ತಾರೆ, ಅದರಲ್ಲೂ ನನ್ನ ಗಂಡ ಸಮಯನ ನೋಡೋದು ಜಾಸ್ತಿ. ನಂಗೆ ಟ್ರಾಫಿಕ್ ಎಂ.ಜಿ. ರಸ್ತೇಲಿ ಸಂಜೆ ಹೊತ್ತಿಗೆ ಜಾಸ್ತಿ ಒಂದು ಬಸ್ ಚಲಿಸ್ಬೇಕಂದ್ರೆ ಏನಿಲ್ಲ ಅಂದ್ರೂ ೨೦ ನಿಮಿಷ ಬೇಕು ನಂಗೆ ಅಳು ಬರ್ತಿತ್ತು ದೇವ್ರೇ ಯಾರ್ಗೂ ಬೇಡ ಈ ಕಷ್ಟ ನನ್ನ ಶತ್ರೂಗು ಬೇಡ ಅನ್ಸ್ತಿತ್ತು. ಕೊನೆಗೂ ನಾನು ಮನೆಗೆ ಮುಟ್ಟಿದ್ದು ರಾತ್ರಿ ೯ ಗಂಟೆಗೆ ನಮ್ಮನೆಯವ್ರು ದೂರ್ವಾಸ ಮುನಿಗಳು ನನ್ನ ತಂದೆ ಬರೋದಕ್ಕೆ ಅರ್ದ ದೈರ್ಯ ನಂಗೆ. ನಿಮ್ಮ ಈ ಟ್ರಾಫಿಕ್ ಜಾಮಿನ ಹಾಸ್ಯ ಲೇಖನ ಓದಿ ನಂಗೆ ನಂದೇ ಆದ ಅನುಭವ ಹೇಳ್ದೆ. ಪ್ರಕಾಶಣ್ಣ ಈ ಬೆಂಗಳೂರಿನ ಟ್ರಾಫಿಕ್ ಎಲ್ಲೂ ಕಾಣ ಸಿಗೋಲ್ಲ ನೀವು ಅದನ್ನ ನದಿಗಳಿಗೆ ಹೊಲ್ಸಿದ್ದೀರಿ ಚನ್ನಾಗಿದೆ. ಟ್ರಾಫಿಕ್ ಜಾಮ್ನಲ್ಲಿ ಸಿಕ್ಕೊರು ಅವ್ರ ಪಾಪ ಕಲ್ಕೊಂತಾರೆ ಅನ್ನೋದು ಚನ್ನಾಗಿದೆ.

Prabhuraj Moogi said...

ಸೂಪರ್, ಬೆಂಗಳೂರು ವಾಸ್ತವಾನಾ ಬಹಳ ಚೆನ್ನಾಗಿ ಗೇಲಿ ಮಾಡಿದೀರಾ... ಅದ್ರಲ್ಲೂ ಪಾಪ ತೊಳೆಯೋ ನದಿಗಳು ಬಗ್ಗೆ ಹ ಹ ಹ...
ಬೆಂಗಳೂರು ಉದ್ಯಾನ ನಗರಿ, ಪೆನ್ಷನರ್ಸ್ ಸ್ವರ್ಗ ಅಂತ ಚೆನ್ನಾಗೇ ಇತ್ತು, ನಾವೆಲ್ಲ ಬಂದು ಹಾಳು ಮಾಡಿದೆವೆನೊ ಅನಿಸ್ತದೆ... ನಂಗೂ ಈ ಬೆಂಗಳೂರು ಅಂದ್ರೆ ಏನೊ ವ್ಯಾಮೋಹ... ಸಿಗ್ನಲನಲ್ಲಿ ತಾಸು ನಿಂತು ತಲೆಕೆಟ್ಟಾಗ ಬಯ್ದುಕೊಂಡ್ರೂ ಮತ್ತೆ... ಇದೇ ಇಷ್ಟ...

SpoorthyMurali said...

Thats a very humorous and 'spontaneous' write up! bahaLa chennagide!! i wrte poems. and I cant think of writing beyond the 'Traffic' concept nowadays! Anyways was really refreshing reading your blog!!

Soumya. Bhagwat said...

ಋಣಾತ್ಮಕ ಅಂಶವನ್ನೂ ಧನಾತ್ಮಕವಾಗಿ ತೆರೆದು ಹಿಡಿದ್ದೀರಿ... ಮುಖದಲ್ಲೊಂದು ಮುಗುಳುನಗೆಯನ್ನು ಮೊದಲ ಸಾಲಿನಿಂದ ಹಿಡಿದು ಕೊನೆಯವರೆಗೂ ಇರಿಸಿಕೊಂಡು ಸಾಗುವ ಲೇಖನದ ಪರಿಗೆ ನಯು ಮೂಕ ವಿಸ್ಮಿತ ...:)