ನನ್ನ ಸ್ನೇಹಿತರ ಸ್ನೇಹಿತರೋಬ್ಬರು ಸೈಟ್ ಖರಿದಿಸಿದರು. ಮುಂದೇನು ಅಂದಾಗ ನನ್ನ ಸ್ನೇಹಿತರು ನನ್ನ ಹೆಸರು ಹೇಳಿದರಂತೆ. "ನೋಡಿ ಪ್ರಕಾಶ್, ನನ್ನ ಸೈಟ್ ವಿದ್ಯಾರಣ್ಯಪುರದ ಹತ್ತಿರ ಇದೆ. ಏನು ಮಾಡ ಬಹುದು ಅಂತ ನೀವು ಹೇಳಬೇಕು" ಅಂದರು. ನನಗೆ ಈ ಥರ ಅತೀ ಬುದ್ದಿವಂತಿಕೆಯಿಂದ ಮಾತನಾಡುವವರನ್ನು ಕಂಡರೆ ಇಷ್ಟವಾಗುವದಿಲ್ಲ. ಸೈಟ್ ಇದೆ ಅಂದಮೇಲೆ ಇನ್ನೇನು ಮಾಡ ಬಹುದು? ಅದೂ ನನ್ನ ಹತ್ತಿರ ಕೇಳಿದರೆ ನಾನು ಇನ್ನೇನು ಅನ್ನ ಬಹುದು? " ಮನೆ ಕಟ್ಟಿಸಿಬಿಡಿ ಸರ್" ಎಂದೆ. " ನಾಳೆ ಜಾಗ ತೋರಿಸುತ್ತೇನೆ" ಅಂದರು ನಾನು ಸಮ್ಮತಿಸಿದೆ. ಮರುದಿನ ನನಗೆ ಸೈಟ್ ಬಳಿ ಕರೆದು ಕೊಂಡು ಹೋದರು. "ನೋಡಿ ಇದೆ ಸೈಟು.." ಮೊದಲು ಕಂಪೌಂಡು ಹಾಕಬೇಕು" ಅಂದರು. " ಮನೆ ಕಟ್ಟಿಸುವ ವಿಚಾರ ಇದೆಯಾ?" ಎಂದು ಕೇಳಿದೆ. " ಹೌದು..ಆದರೆ ಮೊದಲು ನಾಲ್ಕೂ ಕಡೆ ಕಂಪೌಂಡು ಹಾಕಬೇಕು." "ಹಾಗಾದರೆ ಮನೆ ಕಟ್ಟಿ ಆದಮೇಲೆ ಕಂಪೌಂಡು ಹಾಕೋಣ. ಈಗಲೆ ಕಟ್ಟಿದರೆ ಮನೆಕೆಲಸಕ್ಕೆ, ಒಳಗಡೆ ಕೆಲಸಕ್ಕೆ ತೊದರೆ ಅಗುತ್ತದೆ.." ಅಂದೆ. "ಇಲ್ಲಾರಿ.. ನಾಲ್ಕೂಕಡೆ ಕಂಪೌಂಡ್ ಮೊದಲು ಹಾಕಬೇಕು ಆಮೇಲೆ ಮುಂದಿನ ಕೆಲಸ" ಅಂದರು " ಯಾಕೆ ಹಾಗೆ? ನಮ್ಮ ಅನುಕೂಲ ನೋಡಿಕೊಳ್ಳಬೇಕಲ್ಲವೆ?" ಎಂದೆ. " ನನ್ನ ಹೆಂಡ್ತಿ ತಮ್ಮ ಬಿ.ಇ. ಚಿನ್ನದ ಪದಕ ಹೋಲ್ಡರ್, ಅವರು ಹಾಗೆ ಮಾಡಲಿಕ್ಕೆ ಹೇಳಿದ್ದಾರೆ. ಹಾಗೆ ಮಾಡ ಬೇಕು."
ಇದೇನಪ್ಪ ಶುರುವಿನಲ್ಲೆ ಹೀಗೆ.. ಮುಂದೇನು..? ತಲೆ ಕೆರೆದು ಕೊಂಡೆ...
" ನಿಮ್ಮ ಹೆಂಡ್ತಿ ತಮ್ಮ ಎಲ್ಲಿ ಇರ್ತಾರೆ?" ಎಂದು ಸಾವಕಾಶವಾಗಿ ಕೇಳಿದೆ. " ಇಲ್ಲೆ ಪಕ್ಕದಲ್ಲಿ.. ನಿಮ್ಮ ಕೆಲಸದ ಮೇಲ್ವಿಚಾರಣೆ ಅವರಿಗೆ ಹೇಳಿದ್ದೇನೆ. ಅವರು ಕೆಲಸ ಹುಡುಕುತ್ತಿದ್ದಾರೆ . ಅಲ್ಲಿವರೆಗೆ ಇಲ್ಲಿ ಬರ್ತಿತ್ತಾರೆ ..ಅವರು ಹೇಳಿದ ಹಾಗೆ ಮಾಡಿಬಿಡಿ..."
" ಸರ್.. ಕಾಂಟ್ರಕ್ಟು ಒಬ್ಬರಿಗೆ..ಮೇಲ್ವಿಚಾರಣೆ ಒಬ್ಬರಿಗೆ..ಬೇಡ. ನಿಮ್ಮ ಹಣಾನೂ ಉಳಿಯುತ್ತದೆ. ಅವರಿಗೆ ಕೆಲಸನೂ ವಹಿಸಿ ಬಿಡಿ. ಮನೆಯವರ ಥರ ಮಾಡಿ ಕೊಡ್ತಾರೆ. ಎಷ್ಟೆಂದರೂ ಹೆಂಡ್ತಿ ತಮ್ಮನಲ್ಲವೆ?" ಅಂದೆ.
ಮನೆ ಕಟ್ಟೊ ಮೊದಲೆ ಕಂಪೌಂಡ್ ಕಟ್ಟುವ ಸಲಹೆ ಕೊಡುವವನ ಮೇಲ್ವಿಚಾರಣೆ ಇನ್ನು ಹೇಗಿರುತ್ತದೆ...?
ನಾನು ಮೆಲ್ಲಗೆ ಜಾರಿಕೊಂಡೆ.. ಜೀವನ ಪೂರ್ತಿ..ಕಲಿಯುತ್ತ....ಇರಬೇಕು....... !!
ಅವಳು...ವಿಜಯಾ.... ನಾನು ಹೈಸ್ಕೂಲಲ್ಲಿ ಓದುತ್ತಿರುವಾಗ ಉದ್ದ ಲಂಗದ ಹುಡುಗಿ ಬಹಳವಾಗಿ ಕಾಡಿದ್ದಳು. ಅದು ಪ್ರೇಮವಾ..? ಹದಿಹರೆಯದ ಬಣ್ಣದ ಕನಸಾ..? ಗೊತ್ತಿಲ್ಲ. ಅವಳೂ ನನ್ನ ಕಡೆಗೆ ನೋಡುತ್ತಿದ್ದಳು. ನಾನೂ ಕೂಡ. ಮಲೆನಾಡಿನ ಹಳ್ಳಿ ಶಾಲೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಆಗ ನಡೆಯುತ್ತಿರಲಿಲ್ಲ. ಎಲ್ಲೊ ಅಪರೂಪಕ್ಕೆ ಒಂದು ಮಾತನಾಡಿದರೆ ಸ್ವರ್ಗದಷ್ಟು ಸಂತೋಷ.. ... ಅವಳು ಹೈಸ್ಕೂಲ್ ನಂತರ ನನಗೆ ಸಿಕ್ಕೇ ಇಲ್ಲ. ಈಗ ಎಲ್ಲಿದ್ದಾಳೊ.. ಏನೊ..
ಆದರೆ ಅವಳು ನನ್ನ ಹೃದಯದಲ್ಲಿ... ಮನಸ್ಸಲ್ಲಿ ಯಾವಾಗಲೂ ಉಳಿದು ಬಿಟ್ಟಿದ್ದಳು....
ನನ್ನ ಈ ಪರಿತಾಪ ನನ್ನ ಗೆಳೆಯ "ನಾಗು"ಗೆ ಗೊತ್ತು. ಅವನು ಬೆಂಗಳೂರಲ್ಲೆ ಇದ್ದಾನೆ. ಸಿರ್ಸಿ ಬಿಟ್ಟು ಬೆಂಗಳೂರಿಗೆಬಂದು.. ಕೆಲಸ ಹುಡುಕಿ.. ಬಾಡಿಗೆ ಮನೆ ಮಾಡಿದಾಗ ಮತ್ತೆ ಕಾಡಿದ್ದಳು..ಆ ..ಹುಡುಗಿ..
ದೇಶವೆಲ್ಲ ಸುತ್ತಿ.. ನೌಕರಿ ಮಾಡಿ.. ಬಳಲಿದಲಾಗಲೆಲ್ಲ ಅವಳ ನೆನಪಾಗುತ್ತಿತ್ತು.. ನಾನು ಮದ್ರಾಸಿನಲ್ಲಿ, ಬಾಂಬೆಯಲ್ಲಿ,, ಕಲ್ಕತ್ತಾದಲ್ಲಿ... ದೆಹಲಿಯ ಬೀದಿಯಲ್ಲಿ ಸುತ್ತುವಾಗ ..... ದೂರದ ಕತಾರ್ ದೇಶದ ದೋಹಾದಲ್ಲಿ.. ಎಲ್ಲ ಕಡೆ ಕಾಡಿದ್ದಳು ಆ ಹುಡುಗಿ.. ಅವಳ ದಟ್ಟನೆಯ ಕಣ್ಣು..... ಮರೆಯಲು ಆಗಲೇ ಇಲ್ಲ....
ದೋಹಾದಲ್ಲಿದ್ದಾಗ ಮನೆಯಿಂದ ಮದುವೆ ಪ್ರಸ್ತಾಪ ಬಂದಿತು. ಮತ್ತೆ ನೆನಪಾದಳು . ವಿಚಾರಿಸಿದೆ.... ನಾಗು ಹೇಳಿದ " ಹೈಸ್ಕೂಲ್ ಮುಗಿದ ನಂತರ ಅವಳಣ್ಣ ಮದುವೆ ಮಾಡಿಬಿಟ್ಟಿದ್ದ".. ಬೇಜಾರಾಯಿತು..
ಬಹುಶಃ ನನಗೆ ಅವಳ ನೆನಪಿನ ಭಾಗ್ಯವನ್ನು ಮಾತ್ರ.. ಆ ಭಗವಂತ ಬರೆದಿದ್ದಾನೋ.... ಇದ್ದಿರ ಬಹುದು....
ಅಕ್ಕ ಹುಡುಕಿದ ಹುಡುಗಿ ಮುದ್ದಾಗಿದ್ದಳು.... ಈಗಲೂ ಕೂಡ.... ಕನಸಿನಲ್ಲಿ ಬಯಸುವಂಥಹ ಹುಡುಗಿ... ಅವಳಾದಳು ನನ್ನ ಮಡದಿ..
ಮಡದಿಗೆ ಕಾಡಿದ ಹುಡುಗಿಯ ಬಗೆಗೆ ಹೇಳಿದೆ..
ಅವಳಿಂದ ಮೊದಲನೆ ಪ್ರಶ್ನೆ " ಹೇಗಿದ್ದಾಳೆ ನಿಮ್ಮ ಕಾಡಿದ ಹುಡುಗಿ..?"
" ನನ್ನ ಹದಿಹರೆಯ ಬಯಸಿದ ಹುಡುಗಿ... ಚೆನ್ನಾಗಿದ್ದಳು... ಆಗ... ನನಗೆ ಮಹದಾಸೆ ಒಂದಿದೆ.. ಕಾಡಿದ ಹುಡುಗಿಯನ್ನು ನಿನಗೊಮ್ಮೆ ತೋರಿಸಬೇಕು.." ..
ನನ್ನಾಕೆಗೂ ಕುತೂಹಲ...! ಆ ನನ್ನ ಅಭಿರುಚಿ ಹೇಗಿತ್ತು ಅಂತಿರ ಬಹುದಾ...? ನಾನು ಆ ಬಗೆಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ....
ಆದರೆ ಹೇಗೆ.. ತೋರಿಸುವದು...??
ನಾಗು ನನ್ನ ಪರಿತಾಪ ಅರ್ಥ ಮಾಡಿಕೊಂಡಿದ್ದ. "ನಾನು ಪ್ರಯತ್ನ ಮಾಡುತ್ತೇನೆ.. ಕಣೊ.." ಎಂದಿದ್ದ. ಅವನೂ ನಾನೂ ಊರಿಗೆ ಹೋಗಿದ್ದಾಗ ಗೆಳೆಯರನ್ನ, ... ಅವರಿವರನ್ನು ಕೇಳಿದ್ದರೂ ಯಾರೂ ಸರಿಯಾಗಿ ಹೇಳಲಿಲ್ಲ..
ಹಾಗೆ ದಿನಕಳೆಯಿತು.. ಬಿಸಿನೆಸ್ ವ್ಯವಹಾರ..ಮಕ್ಕಳು ಮರಿ ಸಂಸಾರ.. ಏನೇ ಇದ್ದರೂ ಅಗಾಗ ನೆನಪಾಗುತಿದ್ದಳು....
ಒಂದು ದಿವಸ ನಾಗು ಫೋನ್ ... " ನೋಡಪ್ಪಾ.. ನಿನ್ನ ಪ್ರೀತಿ ಪ್ರೇಮದ ಹುಡುಗಿಯ ಮಗಳ ಮದುವೆ. ರಾಜಾಜಿನಗರದ ಕಲ್ಯಾಣ ಮಂಟಪದಲ್ಲಿ. ಭಾನುವಾರ. ನಿನ್ನ ಹೆಂಡತಿ ಮಗನನ್ನು ಕರೆದು ಕೊಂಡು ಬಾ. ನಿನ್ನ ಮಹದಾಸೆ ಈಡೇರುತ್ತದೆ..... "
ಹೌದಾ...? ನಿಜವಾ...? ನನಗೆ ಆಶ್ಚರ್ಯ.. ಸಂತೋಷ.. ಭಾವನೆ ಹೇಳಲಿಕ್ಕೆ ಶಬ್ಧಗಳೀಲ್ಲವಾಗಿತ್ತು....! ಮಡದಿಗೂ ಹೇಳಿದೆ.....!
ಹೇಗಿರಬಹುದು..?? ಹೇಗಾಗಿರ ಬಹುದು,,.? ಆ ಕಣ್ಣು ಹಾಗೆ ಇದ್ದಿರ ಬಹುದಾ...? ಹಾಗೆ ಒಂದು ತರಹದ ಹೆದರಿಕೆ ಕೂಡ ಆಗಿತ್ತು.. ಯಾವ ಡ್ರೆಸ್ಸ್ ಹಾಕಿ ಕೊಳ್ಳಲಿ..? ನನ್ನ ಸಂಭ್ರಮ ಸಡಗರ ನೋಡಿ ಮಡದಿಗೂ ಹೊಟ್ಟೆಕಿಚ್ಚಾಯಿತಾ? ಆಗಿದ್ದರೂ ಹೇಳಲಿಲ್ಲ. ಅವಳಿಗೂ " ಹೇಗಿದ್ದಿರ ಬಹುದು" ಎಂಬ ಕುತೂಹಲ.
ಭಾನುವಾರ ಬಂದೇಬಿಟ್ಟಿತು. ನಿಜ ಹೇಳ ಬೇಕೆಂದರೆ ರಾತ್ರಿ ನಿದ್ರೆ ಸರಿಯಾಗಿ ಆಗಿರಲಿಲ್ಲ. ೯ ಗಂಟೆಗೆ ಕಲ್ಯಾಣಮಂಟಪಕ್ಕೆ ಬರಲಿಕ್ಕೆ ಹೇಳಿದ್ದ ನಾಗು. ಟೆನ್ಶನ್ನಲ್ಲಿ ಡ್ರೈವ್ ಮಾಡಿ ಕಲ್ಯಾಣ ಮಂಟಪಕ್ಕೆ ಬಂದೇವು.
ನಾಗು ನಮಗಾಗಿ ಕಾಯುತ್ತಿದ್ದ. ನನಗೊ ಒಳಗೊಳಗೆ ಒಂದುರೀತಿಯ ಭಯ ಆತಂಕ.. ಹೊಸತಾಗಿ ಮದುವೆಯಾಗಲು ಹುಡುಗಿಯನ್ನು ನೋಡುವ ತರಹ ಭಯ... ಆತಂಕ....!!
ಛೇ... !! ಬೆಳೆಯುತ್ತಿರುವ ಮಗ... ಹೆಂಡತಿ... ಮುದ್ದಾದ ಸಂಸಾರ.....!! ಇಂಥಹ ಭಾವಗಳು ಯಾಕೆ....?
ನಾವು ಒಳಗೆ ಹೋದೆವು. ನನ್ನ ಕಣ್ಣುಗಳು ಹುಡುಕುತ್ತಿದ್ದವು. ಹೇಗಾಗಿದ್ದಾಳೆ..?? ತವಕ.. ಆತಂಕ..ಎದೆ ಢವ..ಢವ..!!
ನಾನೀಗ ಕಾಲೇಜಿಗೆ ಹೋಗುವ ಹುಡುಗ ಅಲ್ಲವಲ್ಲ. ... ಗಾಂಭಿರ್ಯತೆ ಅಗತ್ಯವಾಗಿತ್ತು.
ಒಬ್ಬ ದೊಡ್ಡ ಹೊಟ್ಟೆಯ.. ಬಕ್ಕುತಲೆಯ ಬಾಂಡ್ಲಿ ನಮ್ಮ ಬಳಿ ಬಂದ.
"ಪ್ರಕಾಶು.... ಇವರು ,,ವಿಜಯಾ.... ಯಜಮಾನರು.. ಸರ್.. ಇವರು ಪ್ರಕಾಶ ಹೆಗಡೆ.." ಎಂದು ನಾಗು ಪರಿಚಯ ಮಾಡಿಕೊಟ್ಟ. ನಾನು ನಮಸ್ಕಾರ ಮಾಡಿದೆ..
ಹೌದಾ..? ಕಾಡಿದ ಹುಡುಗಿಗೆ ಇಂಥಾ ಗಂಡನಾ..? ಇನ್ನೂ ಸ್ವಲ್ಪ ಚಂದ..... ಸ್ವಲ್ಪ ಬೆಳ್ಳಗಾದರೂ.. ಇರಬಹುದಿತ್ತು ..ಅಂದುಕೊಂಡೆ.. ಇವನೇ ಹಿಗಿದ್ದಾನೆ... !! ಅವಳು ಹೇಗಾಗಿರ ಬಹುದು....?
ನನ್ನ ಮಗ " ಅಪ್ಪಾ ಊಟ ಮಾಡೋಣ.. ಆಮೇಲೆ ನಿಮ್ಮ ಫ್ರೆಂಡ್ ಭೆಟಿಯಾಗು .. ಹಸಿವು..ಆಮೇಲೆ ಸೀಟು ಸಿಗೊದಿಲ್ಲ" ಅಂದ. ಅದಕ್ಕೆ ನಾಗು.. ನನ್ನ ಹೆಂಡತಿ ಎಲ್ಲರೂ ಓಕೆ ಅಂದರು...
ನಾನು ಒಳಗೊಳಗೆ ಕುದಿಯುತ್ತಿದ್ದೆ.
ಇನ್ನೇನು ..ನಾನೂ ಅವರನ್ನು ಹಿಂಬಾಲಿಸಿದೆ. ಊಟವಾಯಿತು.. ಉಡುಗೋರೆ ಕೊಡೊಣ ಎಂದು ಹೊರಟೆವು.. ತುಂಬಾ ರಷ್....! ವಧು ವರರ ಸಂಗಡ ಆ ಡುಮ್ಮ ..ಬಾಂಡ್ಲಿ ನಿಂತಿದ್ದ... ಪಕ್ಕದಲ್ಲಿ..?
ಉಹೂಂ....!. ಅವಳಲ್ಲ ನನ್ನ ಕಾಡಿದ ಹುಡುಗಿ.. ..! ಹಾಗದರೆ ಇನ್ನೆಲ್ಲಿ..?...??....
ನಾನು ನಾಗು ಹಿಂಬಾಲಿಸಿದೆ. ನಾಗು ವಧು ವರರಿಗೆ ನನ್ನ ಪರಿಚಯಿಸಿದ. " ಇವರು ಪ್ರಕಾಶ.. ಅಂತ. ದೊಡ್ಡ ಗುತ್ತಿಗೆ ದಾರ.. ನಿಮ್ಮಮ್ಮನ ಕ್ಲಾಸ್ ಮೇಟ್." ನಾನು ಉಡುಗೋರೆ.. ಕೊಟ್ಟೆ.. ನನ್ನ ಕಣ್ಣುಗಳು ಹುಡುಕುತ್ತಿದ್ದವು....
ಡುಮ್ಮ ಪರಿಚಯದ ನಗು ನಕ್ಕ.
ಎಲ್ಲಿ...? ಎಲ್ಲಿ.. ಆ ಹುಡುಗಿ..??
ಡುಮ್ಮನ ಪಕ್ಕದಲ್ಲಿದ್ದ ದಪ್ಪನೆಯ ಹೆಂಗಸು ಬಾಯಿತುಂಬಾ ನಗುತ್ತಿದ್ದಳು. ಸಂಭ್ರಮ ನೋಡಿದರೆ ಅವಳೆ ವಧುವಿನ ಅಮ್ಮನಂತಿದ್ದಳು. ಅವಳೆ ನಮ್ಮ ಬಳಿ ಬಂದಳು..
" ಹೋಯ್ ಪ್ರಕಾಶಾ.. !! ನಾನು ..ವಿಜಯಾ... ನನ್ನ ಗುರುತು ..ಸಿಗಲಿಲ್ಲವಾ?.. ನಾಗೂಗೆ ನಿನ್ನನ್ನೂ ಕರೆದು ಕೊಂಡು ಬರಲು ಹೇಳಿದ್ದೆ. ಬಂದ್ಯಲ್ಲ ಬಹಳ ಖುಷಿಯಯಿತು.. ಎಷ್ಟು ವರ್ಷ ಆಯಿತೋ ಮಾರಾಯಾ... ನಿನ್ನನ್ನೆಲ್ಲ ನೋಡಿ...!!"
ಓಹೋ.....!! ಈ ವಿಜಯಾನಾ.. ?..??...
ನಮ್ಮ ಕ್ಲಾಸಿನಲ್ಲಿ ಇಬ್ಬರು ವಿಜಯಾಗಳಿದ್ದರು....!!!!
ನಾನು ನಾಗು ಮುಖ ನೋಡಿದೆ.. ಅವನಲ್ಲಿ ತುಂಟ ನಗು ಇತ್ತು. " ಸಾರಿ ..ಕಣೊ ... ಪ್ರಕಾಶು...." ಅಂದ.
ನನ್ನ ಕೈಯಲ್ಲಿ ಚಾಕು ಇದ್ದರೆ ಅವನ ಹೊಟ್ಟೆಗೆ ಹಾಕಿ ಸಾಯಿಸಿ ಬಿಡುತ್ತಿದ್ದೆ...,,, ಬಡ್ಡಿಮಗ ನಾಗು....!!