Monday, May 28, 2012

ಹೊತ್ತು ಹೋಗದ ಹೊತ್ತಿನ ಕಥೆಗಳು... " 1 "



ಆಗ ನಾನು ಸಣ್ಣವನಿದ್ದೆ.....


ಮನೆಯ ಮುಂದಿನ ಹೇಡಿಗೆಯ ಮೇಲೆ ಕುಳಿತು ...
ರಸ್ತೆಯಲ್ಲಿ ಹೋಗುವ ನಾಯಿಗಳಿಗೆ ಕಲ್ಲು ಬೀಸುವದೆಂದರೆ ನನಗೆ ಬಲು ಮೋಜು....


ನಾನು ತುಂಬಾ ವೀಕಾಗಿದ್ದೆ...
ರಿಕೆಟ್ಸ್ ರೋಗದಿಂದ ಬಳಲುತ್ತಿದ್ದೆ.....
ಆಡಲು ಹೋದರೆ ಬಿದ್ದುಹೋಗುತ್ತಿದ್ದೆ...


ಬಹುಷಃ ..
ನನ್ನ ಅಸಹಾಯಕತೆಯ ಪೌರುಷವನ್ನು  ನಾಯಿಯ ಮೇಲೆ ತೋರಿಸುತ್ತಿದ್ದೆ ಅಂತ ಈಗ ಅನ್ನಿಸುತ್ತಿದೆ...


ಹಾಗೆ ಒಂದು ನಾಯಿಗೆ ಕಲ್ಲು ಹೊಡೆದೆ..


ಅದು "ಕುಂಯ್ಯೋ... ಮುರ್ರೋ..." ಅಂತ ಅರಚುತ್ತ ಓಡಿತು...


ಮನೆಯ ಒಳಗಿದ್ದ ನನ್ನ ಕೇಶವ ಚಿಕ್ಕಪ್ಪ ಹೊರಗೆ ಬಂದರು..


"ನಾಯಿಗೆ ಹೊಡೆದೆಯಾ?"


"ಹೌದು ಚಿಕ್ಕಪ್ಪ..."


ಚಿಕ್ಕಪ್ಪ ಸ್ವಲ್ಪ ಹೊತ್ತು ಸುಮ್ಮನಿದ್ದು..


"ಒಳಗೆ ಬಾ ...
ಒಂದು ಕಥೆ ಹೇಳುತ್ತೇನೆ..."


ನನಗೆ ನನ್ನ ಚಿಕ್ಕಪ್ಪನ ಕಥೆಗಳೆಂದರೆ ಬಲು ಇಷ್ಟ...


"ಒಮ್ಮೆ..
ನಿನ್ನಂಥವನೊಬ್ಬ ಮನೆಯ ಮುಂದೆ ಕುಳಿತಿದ್ದ...
ಹೀಗೆ ರಸ್ತೆಯ ಮೇಲೆ ಹೋಗುತ್ತಿದ್ದ ಒಂದು ನಾಯಿಗೆ ಕಲ್ಲು ಹೊಡೆದ...
ನಾಯಿಗೆ ಆ ಏಟು ಜೋರಾಗಿ ತಾಗಿತು...


"ಆಯ್ಯೋಯ್ಯೋ... ಕುಂಯ್ಯೋ..." ಅಂತ  ಆ ನಾಯಿ ಊಳಿಟ್ಟಿತು...
ಜೋರಾಗಿ ರೋಧಿಸಿತು....


ಆ ಕೂಗು ಮೇಲೆ ಇದ್ದ ದೇವರಿಗೆ ಕೇಳಿಸಿತು...!


ಆಗೆಲ್ಲ ದೇವರು ಇಷ್ಟೆಲ್ಲಾ ದುಬಾರಿಯಾಗಿರಲಿಲ್ಲ....
ಈಗಿನ ಹಾಗೆ ಗುಡಿಯೊಳಗೆ ಕತ್ತಲಲ್ಲೇ ಇರುತ್ತಿರಲಿಲ್ಲ...
ಸ್ವಲ್ಪ ಹೊರಗಡೆ ಓಡಾಡಲು ಬರುತ್ತಿದ್ದ...

ಕಷ್ಟದಲ್ಲ್ಲಿದ್ದವರ ಸಹಾಯಕ್ಕೆ ಕೂಡಲೇ ಬರುತ್ತಿದ್ದ...


ದೇವರು ನಾಯಿಯ ಬಳಿ ಪ್ರತ್ಯಕ್ಷನಾಗಿ 
"ಯಾಕೆ ಅಳುತ್ತಿದ್ದೀಯಾ...? "
ಅಂತ ಕೇಳಿದ...


"ನನಗೆ ..
ಅಲ್ಲಿರುವ ಮನುಷ್ಯ... ಕಲ್ಲಿನಿಂದ ಹೊಡೆದ...! "


"ಸುಮ್ಮನೆ ..
ಯಾರಾದರೂ..
ಯಾಕೆ ಕಲ್ಲು ಹೊಡೆಯುತ್ತಾರೆ..?
ನೀನು ... ಏನೋ ಮಾಡಿರಬೇಕು..."


"ಇಲ್ಲ ದೇವರೆ...
ನಾನು ಅವನ ಕಡೆ ನೋಡಲೂ ಇಲ್ಲ...
ನನ್ನ ಪಾಡಿಗೆ ನಾನು ರಸ್ತೆಯಲ್ಲಿ ಬರುತ್ತಿದ್ದೆ..."


ಈಗ ದೇವರು ಮನುಷ್ಯನ ಬಳಿ ಬಂದ...


"ಯಾಕೆ ಆ ನಾಯಿಗೆ ಹೊಡೆದೆ...? "


"ನಿಜ ಹೇಳ್ತಿನಿ..
ಯಾಕೆ ಅಂತ ನನಗೂ ಗೊತ್ತಿಲ್ಲ...!
ಆ ನಾಯಿ ನೋಡಿದ ಕೂಡಲೆ ಹೊಡೆಯಬೇಕು ಅಂತ ಅನ್ನಿಸಿತು...
ಹೊಡೆದು ಬಿಟ್ಟೆ..."


"ಸುಮ್ಮನೆ ಹೋಗುತ್ತಿದ್ದ ನಾಯಿಗೆ ಹೊಡೆದಿದ್ದೀಯಾ..
ಇದು ತಪ್ಪು.. 
ನಿನಗೆ ಶಿಕ್ಷೆ ಆಗಲೇ ಬೇಕು..."


ದೇವರು ನಾಯಿಯ ಬಳಿ ಬಂದ...


"ಎಲೈ ... ನಾಯಿ...
ಆ ಮನುಷ್ಯ ತಾನು ಕಲ್ಲು ಹೊಡೆದದ್ದು ಹೌದೆಂದು ಒಪ್ಪಿಕೊಂಡಿದ್ದಾನೆ..
ಅವನಿಗೆ ಶಿಕ್ಷೆ ಕೊಡಬೇಕು..


ಯಾವ ಶಿಕ್ಷೆ ಅಂತ ನೀನು ಹೇಳು...
ನೋವು ಅನುಭವಿಸಿದವ  ನೀನು.. 
ನೀನು ಹೇಳಿದ ಶಿಕ್ಷೆ ಅವನಿಗೆ ಕೊಡುತ್ತೇನೆ..."


"ದೇವರೆ..
ಹೇಳಿಕೇಳಿ ಬೀದಿ ನಾಯಿ ನಾನು..
ನೀನು ದೇವರು... ಅವನು ಮನುಷ್ಯ...


ಮನುಷ್ಯನಿಗೆ ಶಿಕ್ಷೆ ಕೊಡುವಂಥಹ ..
ಯೋಗ್ಯತೆಯಾಗಲಿ..
ಅಧಿಕಾರವಾಗಲಿ ನನ್ನಂಥಹ "ಹಡಬೆ" ಬೀದಿ ನಾಯಿಗಳಿಗಿಲ್ಲ...


ಅದೆಲ್ಲ ನೀವೇ ನೋಡಿಕೊಳ್ಳಿ.."


ದೇವರು ಒಪ್ಪಲಿಲ್ಲ...
ಮನುಷ್ಯನನ್ನು ಕರೆಸಿದ..


"ಕಾರಣವಿಲ್ಲದೆ ..
ನಾಯಿಗೆ ನೋವನ್ನುಂಟು ಮಾಡಿದ ತಪ್ಪಿಗೆ..
ಈ ನಾಯಿಕೊಡುವ ಶಿಕ್ಷೆಗೆ ನೀನು ಒಪ್ಪಿಕೊಳ್ಳಬೇಕು..."


ಆಗ ..
ಮನುಷ್ಯ ಈಗಿನಷ್ಟು ಕೆಟ್ಟು ಹಾಳಾಗಿರಲಿಲ್ಲ ..


ತಪ್ಪಾಗಿದ್ದರೆ ...
ದೇವರ ಬಳಿಯಾದರೂ ಒಪ್ಪಿಕೊಳ್ಳುತ್ತಿದ್ದ..


ಮನುಷ್ಯ ಒಪ್ಪಿಗೆ ಸೂಚಿಸಿದ...


ನಾಯಿ ಬಹಳಷ್ಟು ವಿಚಾರ ಮಾಡಿತು...


ಶಿಕ್ಷೆಯನ್ನು ಪ್ರಕಟಿಸಿತು....


" ನನಗೆ ..
ಕಲ್ಲು ಎಸೆದ ಈ ಮನುಷ್ಯ ಮುಂದಿನ ಜನ್ಮದಲ್ಲಿ...
ಬ್ರಹ್ಮಚಾರಿಯಾಗಿ..
ಯಾವುದಾದರೂ...
ಜಾತಿ.. ಮತ.. ಧರ್ಮದ ಗುರುಗಳಾಗಿ ಹುಟ್ಟಲಿ...


ಆಂತರ್ಯದಲ್ಲಿ ಮನುಷ್ಯನಾಗಿ...
ಜೀವನ ಪೂರ್ತಿ ಒಣ  ಉಪದೇಶ ಮಾಡುತ್ತಿರಲಿ..."


ಚಿಕ್ಕಪ್ಪ ಕಥೆ ಮುಗಿಸಿದರು....


ನನಗೆ ಬಹಳ ಆಶ್ಚರ್ಯವಾಯಿತು...!


" ಅರೇ.. 
ಇದೇನಿದು..ಚಿಕ್ಕಪ್ಪಾ..!
ಇದು ಶಿಕ್ಷೆಯಾ?..."


"ಈ ಕಥೆಯ ಪ್ರಕಾರ ..
ಇದು ಬಲು ದೊಡ್ಡ ಶಿಕ್ಷೆ...


ನೀನು ದೊಡ್ದವನಾದ ಮೇಲೆ ಈ  "ಶಿಕ್ಷೆಯ ಪ್ರಮಾಣ" ಇನ್ನೂ ಅರ್ಥವಾಗಬಹುದು.."


ಅಂದಿನಿಂದ ..
ನಾನು ಯಾವ ನಾಯಿಗೂ ಕಲ್ಲು ಹೊಡೆದದ್ದು ನೆನಪಿಲ್ಲ....




(ಆಸ್ತಿಕರ ಕ್ಷಮೆ ಕೋರುವೆ...)



Thursday, May 17, 2012

ನಾನು ಮಾಡಿದ ಅಡಿಗೆ ಊಟ ಮಾಡಿ .. ನಮ್ಮನೆ ಎಮ್ಮೆ ಡುಮ್ಮ ಆಯ್ತು..!...!


ತುಂಬಾ ದಿನಗಳಾಗಿತ್ತು ಶಾರಿಗೆ ಫೋನ್ ಮಾಡದೆ...


ಬಹಳ ಖುಷಿಯಿಂದ ಮಾತನಾಡಿದಳು..


"ಏನೋ ಡುಮ್ಮಣ್ಣಾ... 
ಹೇಗಿದ್ದೀಯೋ...?...
ನಿನ್ನ ಆಕಾರಕ್ಕೆ ಗೊಮಟೇಶ್ವರನನ್ನೂ ಹೋಲಿಸೋ ಹಾಗಿಲ್ಲವಲ್ಲೊ...
ನಿನ್ನ ಸೈಜಿನ ಬಟ್ಟೆ ಸಿಗುತ್ತದೋ...?
ಅಥವಾ ಫ್ಯಾಕ್ಟರಿಗೇ ಹೋಗಿ ತರ್ತೀಯೋ...?


ಅಲ್ಲಾ...
ಯಾವ ಅಂಗಡಿ ಸಾಮಾನು ತಿಂತೀಯಾ ಮಾರಾಯನೆ...?
ಊರಿಗೆ ಬರ್ತಾ ನಮ್ಮನೆಗೂ ಸ್ವಲ್ಪ ತಗೊಂಡು ಬಾ...
ನಮ್ಮ ಯಜಮಾನ್ರೀಗೂ ಹಾಕ್ತಿನಿ....!


ನಾನು ಮಾಡಿದ ಅಡಿಗೆ ಊಟ ಮಾಡಿ ..
ನಮ್ಮನೆ ಆಳು ಡುಮ್ಮ ಆದ...!


ಕೊಟ್ಟಿಗೆಯಲ್ಲಿ  ನಮ್ಮನೆ ಎಮ್ಮೆನೂ ದಪ್ಪಗಾಯ್ತು....!


ಮಾರಾಯನೆ...
ಇವರು ಮಾತ್ರ ಹೀಗೆ ಇದ್ದಾರೆ ನೋಡು...! "


ಈ ಶಾರಿ ಮಾತನಾಡಿದರೆ ಹೀಗೆನೇ...


"ಅಯ್ಯೋ ಬಿಡು ಮಾರಾಯ್ತಿ...!
ನನ್ನ ಸೈಜಿನ ಕಷ್ಟ ನಿನಗೆಲ್ಲಿ ಅರ್ಥ ಆಗಬೇಕು...?


ಈ ದಪ್ಪ ಆಗೋದು...
ತೆಳ್ಳಗಾಗೋದು ನಮ್ಮ ಕೈಯಲ್ಲಿ ಇಲ್ಲ ನೋಡು...
ನನ್ನ ಟೆನ್ಷನ್ ನನಗೆ ಮಾರಾಯ್ತಿ..."


"ನಿನಗೆಂಥಹ ಟೆನ್ಷನ್ನೋ... 
ನಮ್ಮ ಯಡಿಯೂರಪ್ಪನಿಗೆ ಇಲ್ದೇ ಇರುವಂಥಾದ್ದು...?
ನಮ್ಮ ಯಡಿಯೂರಪ್ಪನ್ನ ನೋಡು...
ಪಾಪ ಅನ್ನಿಸ್ತದೆ...


ಹೆಂಗಿದ್ದವ ಹೆಂಗಾಗಿ ಹೋದ... !"


"ಹೌದು ಕಣೆ ಶಾರಿ...
ಯಡಿಯೂರಪ್ಪನವರ ವರ್ತನೆ ನನಗೂ ಅರ್ಥ ಆಗ್ಲಿಲ್ಲ...


ಬಿಜೇಪಿ ಇಷ್ಟ ಇಲ್ಲ ಅಂದ್ರೆ ..
ಬಿಟ್ಟು ಹೋಗಿಬಿಡ್ಬೇಕಿತ್ತು...
ಬೇರೆ ಪಕ್ಷ ಸೇರ ಬಹುದಿತ್ತು...
ಅಥವಾ ಹೊಸ ಪಕ್ಷ ಮಾಡ ಬಹುದಿತ್ತು...


ದಿನಾಲೂ ಈ ರಂಪಾಟ... 
ಜಗಳ...
ಈ ಬ್ರೇಕಿಂಗ್ ನ್ಯೂಸು... ಬೇಜಾರಾಗಿದೆ ಕಣೆ..."


ಯಾವಾಗ್ಲೂ ರಾಜಕೀಯ ಅಂದ್ರೆ ಅಲರ್ಜಿ ಅಂತಿದ್ದವ ..
ನನಗೆ ತಡೇಯಲಾಗದೆ ಶಾರಿ ಹತ್ತಿರ ಹೇಳಿಕೊಂಡೆ...


"ಹೊಟ್ಟೆ ಇದ್ದವರೆಲ್ಲ ಬುದ್ಧಿವಂತರಾಗಿದ್ರೆ ...
ನೀನು ..
ಇಷ್ಟು ಹೊತ್ತಿಗೆ ನೊಬೆಲ್ ಬಹುಮಾನ ಗೆಲ್ತಿದ್ದೆ ಬಿಡು...!
ದಿನಾಲೂ ಪೇಪರ್ ಓದ್ತೀಯಾ...
ಒಂದು ಅರ್ಥ ಆಗೋದಿಲ್ಲ ಬಿಡು..."


"ಏನು ಅದು ನನಗೆ ಅರ್ಥ ಆಗ್ದೇ ಇರೋ ರಾಜಕೀಯ...?"


" ಅದೆಲ್ಲಾ... ರಾಜಕೀಯ ತಂತ್ರ ಕಣೊ...
ಸೋನಿಯಾ ಗಾಂಧಿ ಬಂದ್ರು....
ಎಲ್ಲೆಲ್ಲಿ ಹೋದ್ರು...
ಏನೇನೋ ಮಾತುಕಥೆ ನಡೀತು...
ಒಂದು ಡೀಲು ಆಗಿರ್ಲಿಕ್ಕೂ ಸಾಕು..."


"ಏನದು?...."


"ನಮ್ಮ ಸೋನಿಯಾ ಯಡ್ಯೂರಪ್ಪಂಗೆ ಹೇಳಿದ್ರು...
 "ನೋಡಿ..
ಯಡಿಯೂರಪ್ಪನವರೆ...
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸು ಗೆಲ್ಲಬೇಕು...
ಬಿಜೇಪಿ ಸೋಲಬೇಕು...
ಹಾಗಾಗಿ ನೀವು ಬೀಜೇಪಿಯಲ್ಲೇ ಇದ್ದು ಬೀಜೇಪಿ ಹೆಸರು ಹಾಳು ಮಾಡ್ರಿ...
ಅದರಿಂದ ನಿಮಗೂ ಲಾಭ...
ನಮಗೂ ಲಾಭ...." 


"ಹೋಗೆ... 
ಏನಾದ್ರು ಕಥೆ ಕಟ್ಟ ಬೇಡ..."


"ಆಗ ನಮ್ಮ ಯಡಿಯೂರಪ್ಪ ..


"ನನಗೇನು ಲಾಭ?" ಅಂತ ನಿನ್ನ ಹಾಗೆ ಕೇಳಿದ್ರು...


ನಮ್ಮ ಸೋನಿಯಾರವರದ್ದು ಇಟಲಿ ತಲೆ ಕಣೋ....


"ನೋಡಿ ಯಡಿಯೂರಪ್ಪನವರೆ...
ನಿಮ್ಮ ಮೇಲೆ ಸಿಬಿ‌ಐ ಕೇಸು ಬೀಳ್ತಾ ಇದೆ...
ಆ ಕೇಸಿನಲ್ಲಿ ನಿಮಗೆ ತೊಂದ್ರೆ  ಆಗ್ದೆ ಇರೊ ಹಾಗೆ ನಾನು ನೋಡ್ಕೋತೆನೆ...


ಒಂದೆರಡು ವರ್ಷದಲ್ಲಿ ..
ಕೇಸು ಬಿದ್ದು ಹೋಗೋ ಹಾಗೆ ಮಾಡಿಕೊಡ್ತೇನೆ..."


ನಾನು ತಲೆ ಕೆರೆದು ಕೊಂಡೆ...


"ಅಲ್ವೋ...
ಬಳ್ಳಾರಿ ರೆಡ್ಡಿಗಳ ಜೊತೆನೂ ಇಂಥಹುದೇ ಒಪ್ಪಂದ ಆಗಿದೆ ಕಣೊ...


"ರೆಡ್ಡಿಗಳೆ...
ನೀವು ಬೇರೆ ಪಕ್ಷ ಕಟ್ಟಿ..
ಪಾದಯಾತ್ರೆ ಮಾಡಿ ಬಿಜೇಪಿಗೆ ಮಂಗಳಾರತಿ ಎತ್ತತಾ ಇರಿ...
ಬಿಜೇಪಿ ಓಟು ಕಸಿಯಿರಿ...


ಮುಂದಿನ ಲೋಕಸಭೆ ಚುನಾವಣೆ ಮುಗಿಯೋ ಹೊತ್ತಿಗೆ ..
ನಿಮ್ಮ ಕೇಸು ಬಿದ್ದು ಹೋಗುವ ಹಾಗೆ ಮಾಡಿ ಕೊಡ್ತಿನಿ..."


"ಶಾರೀ...
ಸುಮ್ಮ ಸುಮ್ನೆ ಏನೇನೋ ಮಾತನಾಡಬೇಡ...


ನಮ್ಮ ದೇಶದಲ್ಲಿ ಸಿಬಿ‌ಐ...
ಸುಪ್ರೀಂ ಕೋರ್ಟ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದೆ...


ಈ ಮಧ್ಯೆ "ಅಣ್ಣಾ ಹಜಾರೆ...
ಆರ್.ಸಿ. ಹಿರೇಮಠ್"  ಇಂಥವರೂ ಇದ್ದಾರೆ...


ಟಿವಿಗಳು..
ಪೇಪರುಗಳು ಸದಾ ಜಾಗ್ರತವಾಗಿ ಪ್ರಜಾಪ್ರಭುತ್ವ ಕಾಯ್ತಾ ಇವೆ....


ಹಾಗಾಗಿ ಸುಖರಾಮ್ ... ರಾಜಾ... ಕನಿಮೋಳಿ ಅಂಥವರು ಜೈಲು ಕಾಣುತ್ತಿದ್ದಾರೆ..."


"ಪ್ರಕಾಶು...
ನಿನ್ನ ದಪ್ಪ ಚರ್ಮಕ್ಕೆ ಸೂಕ್ಷ್ಮ ವಿಚಾರಗಳು ಹೋಗಲ್ಲ ಕಣೊ..."


"ಶಾರೀ...
ನೀನು ಹೇಗೆ ಮಾತಾಡ್ತಿದ್ದೀಯಾ ಅಂದ್ರೆ..
ಅವರಿಬ್ಬರ ನಡುವೆ ನೀನು ಮಧ್ಯಸ್ತಿಕೆ ವಹಿಸಿದ್ದೀಯಾ ಅಂತ ಕಾಣಿಸ್ತಿದೆ"


ಅಷ್ಟರಲ್ಲಿ ಶಾರೀ ಗಂಡ "ಗಣಪ್ತಿ ಭಾವ" ಫೋನ್ ಕಸಿದು ಕೊಂಡರು...


"ಪ್ರಕಾಶು...
ಇವಳ ತರ್ಕಕ್ಕೂ...
ತುಘಲಕ್ಕನ ತರ್ಕಕ್ಕೂ ಜಾಸ್ತಿ ವ್ಯತ್ಯಾಸ ಇಲ್ಲ ಕಣೊ...
ಇತ್ತೀಚೆಗೆ ಪೇಪರ್ ಓದೋದು ಜಾಸ್ತಿ ಆಗಿದೆ...
ಸಂಗಡ ಟಿವಿ ನ್ಯೂಸು ನೋಡೋದು...


ದಿನಾಲೂ ಆ ಹಾಳು ರಾಜಕೀಯ ನನಗೆ ಕೊರೆಯೋದು....


ಒಂದು ದಿನ ಬಿಜೇಪಿ...
ಇನ್ನೊಂದಿನ ಕಾಂಗ್ರೆಸ್ಸು... 
ಇನ್ನೊಂದು ದಿನ ಕುಮಾರಸ್ವಾಮಿ ಪಕ್ಷ...


ಇವಳದ್ದು ಒಂದು ಪಕ್ಷ ಅಂತ ಇಲ್ಲ ಕಣೊ...


ಆದರೆ ಒಂದು ವಿಚಾರ ಮಾರಾಯಾ...


ಪ್ರತಿ ಬಾರಿಯೂ ಇವಳು ಹೇಳೊದು ಸರಿ ಅಂತಾನೆ ಅನ್ನಿಸ್ತದೆ...!!


ಒಟ್ಟಿನಲ್ಲಿ  ನಾನೂ ಸಹ ರಾಜಕೀಯಾದ ಬಗೆಗೆ ತಲೆ ಕೆಡಿಸ್ಕೊಂಡು ..
ತಲೆ ಕೂದಲು ಉದರಿ ಹೋಗ್ತಾ ಇದೆ ಕಣೊ..."


"ಗಣಪ್ತಿ ಭಾವಯ್ಯಾ...
ನಮ್ಮ ಶಾರಿನ ಈ ಸಾರಿ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಿಬಿಡು...
ಎಲ್ಲ ಪಕ್ಷದವರೂ ಓಟು ಹಾಕ್ತಾರೆ..."


"ಆಯ್ಯೋ ಮಾರಾಯನೆ..
ಒಳಗಿನ ಕೆಲಸ..
ಹೊರಗಿನ ಕೆಲ್ಸ ..
ನನ್ನ ಕೆಲ್ಸಕ್ಕೆಲ್ಲ  "ಲಲಿತಕ್ಕ"ನ್ನೇ ನಂಬಿಕೊಳ್ಳಬೇಕು ಅಷ್ಟೆ..."


"ಈ ಲಲಿತಕ್ಕ ಯಾರು?"


"ಲಲಿತಕ್ಕ ಗೊತ್ತಿಲ್ವೇನೋ...
ನಮ್ಮನೆ ಆಳು ಲಕ್ಕುನ ಹೆಂಡತಿ...
ಪಾಪ ಅವಳಾದರೂ ಎಷ್ಟು ಅಂತ ಮಾಡ್ತಾಳೆ...
ಅತ್ತ ಲಕ್ಕು...
ಇತ್ತ ನಾನು...."..


ಲೊಚಗುಟ್ಟಿದ..


ನನಗೆ ಗಣಪ್ತಿ ಭಾವನ ಪರಿಸ್ಥಿತಿ ನೆನೆದು ನಗು ಬಂತು...


ಸಂಜೆ ನಾಗು ಬಂದಿದ್ದ..
ಶಾರಿಯ ತರ್ಕ ನಾಗೂಗೆ ಹೇಳಿದೆ...
ಆತನೂ ನಗೆಯಾಡಿದ....


"ಪ್ರಕಾಶೂ...


ನಮ್ಮ ಯಡಿಯೂರಪ್ಪ ಅನ್ನೋದು ಒಂದು ಸಂಕೇತ ಕಣೊ....


ಒಂದು ಸೂಕ್ಷ್ಮ ಹೇಳ್ತಿನಿ..


ನಾಳೆ "ಸದಾನಂದ ಗೌಡರ"  ನೇತ್ರತ್ವದಲ್ಲಿ ಚುನಾವಣೆ ಗೆದ್ರು ಅಂತಿಟ್ಟುಕೊ...
ಅಥವಾ...
ಸಿದ್ಧರಾಮಯ್ಯ.. ಕುಮಾರಸ್ವಾಮಿ.. ಯಾರೇ ಇರಲಿ...


ಅವರೂ ಸಹ ಮುಂದಿನ ಯಡಿಯೂರಪ್ಪ ಆಗ್ತಾರೆ..."


ನನಗೆ ಅರ್ಥ ಆಗ್ಲಿಲ್ಲ....


"ನೋಡೊ...
ಒಂದು ರಾಜ್ಯದ ಮುಖ್ಯ ಮಂತ್ರಿ ಅಂದರೆ ಸುಮ್ಮನೆ ಆಗೋದಿಲ್ಲ...
ಅವನು  ಕೇಂದ್ರದ ಹೈ ಕಮಾಂಡಿಗೆ...
ರಾಜ್ಯದ ಪಕ್ಷಕ್ಕೆ "ಹಣದ" ವ್ಯವಸ್ಥೆ ಮಾಡಬೇಕು...


ಮುಂದಿನ ಚುನಾವಣೆಯ ಪ್ರತಿ ಕ್ಷೇತ್ರದ "ಹಣದ" ಜವಾಬ್ದಾರಿ ಅವನಿಗಿರ್ತದೆ....


ಪಾರ್ಟಿ ಜನರ ದೆಹಲಿ...
ವಿಮಾನದ ಓಡಾಟದ ಖರ್ಚು.. ಸಭೆ ಸಮಾರಂಭಗಳ ಖರ್ಚು...
ಎಲ್ಲವನ್ನೂ "ಆಡಳಿತ" ಪಕ್ಷ ನೋಡಿಕೊಳ್ಳಬೇಕು...


ಆಗ ಒಬ್ಬರು ಬಲಿ ಪಶುವಾಗಬೇಕು...


ಈ ರಾಜಗಳು ಸಿಕ್ಕಿ ಹಾಕಿಕೊಂಡರೆ "ಬಂಗಾರು ಲಕ್ಷ್ಮಣ" ಆಗ್ತಾರೆ...
ಅಥವಾ ಸುಖರಾಮ ಆಗ್ತಾರೆ..


ಹಗರಣದಲ್ಲಿ ಸಿಕ್ಕಿ ಹಾಕಿಕೊಳ್ಳಲಿಲ್ಲ ಅಂದ್ರೆ ಮುಂದಿನ ಮುಖ್ಯ ಮಂತ್ರಿ ಆಗ್ತಾರೆ...


"ನಮ್ಮ ರಾಜಕೀಯ ವ್ಯವಸ್ಥೆಯ ವಿಪರ್ಯಾಸಗಳು "ಜಯಾಲಲಿತರನ್ನು...
ಕರುಣಾನಿಧಿಗಳನ್ನು.. ಲಾಲು.. ರಾಜಾ..
ಕಲ್ಮಾಡಿಗಳನ್ನು ಹುಟ್ಟಿಸುತ್ತಿದೆ....


ಸಂವಿಧಾನ ಬರೆದವರಿಗೆ ಈ ವಿಪರ್ಯಾಸಗಳ ಕಲ್ಪನೆ ಕೂಡ ಇದ್ದಿತ್ತಿಲ್ಲ...
ಯಾಕೆಂದರೆ ಅವರೆಲ್ಲ ಶುದ್ಧ ಹೃದಯವಂತರಾಗಿದ್ರು...
ಅಂಬೇಡ್ಕರ್... ವಲ್ಲಭ ಭಾಯ್, ಶಾಸ್ತ್ರಿಗಳು ಇಂಥವರೆಲ್ಲ ಇದನ್ನು ನೋಡಿದ್ರೆ ಎದೆಯೊಡೆದು ಹೋಗ್ತಿದ್ರು....


ಒಂದೊಂದು ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲ್ಲಿಕ್ಕೆ ಕೋಟ್ಯಾಂತರ ರುಪಾಯಿ ಖರ್ಚು ಮಾಡ್ತಾರೆ...


ಆಮೇಲೆ  ಆ ಹಣವನ್ನು ದುಡಿಯಬೇಕಲ್ಲ...."


"ಇದಕ್ಕೆಲ್ಲ ಏನು ಪರಿಹಾರ...?


"ವಿದೇಶಿ ಬ್ರಿಟಿಶರನ್ನು ಓಡಿಸಲು ಇನ್ನೂರು ವರ್ಷ ಬೇಕಾಯ್ತು...
ನಮ್ಮವರೇ ಆದ ಬ್ರಿಟಿಷರನ್ನು ಓಡಿಸಲು ಇನ್ನೂ ಒಂದಷ್ಟು "ಇನ್ನೂರು" ವರ್ಷ ಬೇಕಾಗ ಬಹುದು...."


ನಾನು ತಲೆಕೆರೆಯಲು ಹೋದೆ...


ತಲೆ ನುಣ್ಣಗೆ ಆದ ...
ತಣ್ಣಗಿನ ಅನುಭವ ಆಗ್ತಿತ್ತು..... !








(ಇಲ್ಲಿ ವ್ಯಕ್ತ ಪಡಿಸಿರಿವ ಅಭಿಪ್ರಾಯಗಳು "ಶಾರಿಯಮ್ಥಹ  ಮುಗ್ಧ ಜನರ ಅಭಿಪ್ರಾಯ..
ಯಾರಿಗೂ ನೋವು ತರಿಸುವ ಉದ್ದೇಶ ಇಲ್ಲ..
ಹಾಸ್ಯ ಅಂತ ಓದಿ...ದಯವಿಟ್ಟು...)



Tuesday, March 20, 2012

ಸುರುಳಿ..................,


ನಾನೇನೂ ಪೋಲಿಯಲ್ಲ..
ಹಾಗಂತ ಸಭ್ಯಸ್ಥನೂ ಅಲ್ಲ...
ಹೊಸ ಹುಡುಗಿಯೊಬ್ಬಳು ನಮ್ಮ ಆಫೀಸಿಗೆ ಇವತ್ತು ಬಂದಿದ್ದಾಳೆ..
ಅವಳನ್ನು ನೋಡ್ತಾ ಇದ್ದೆ..


ಕೆನ್ನೆಯ ಮೇಲಿನಿಂದ ಕೂದಲು ..
ಜಾರಿ ಇಳಿದು ..
ಕುತ್ತಿಗೆಯ ಬಳಿ ಸುರುಳಿ ಸುತ್ತಿದ್ದು ನೋಡ್ತಾ ಇದ್ದೆ...!


ಬಹಳ ಚಂದ ಆ ಕೆನ್ನೆಯ ಉಬ್ಬು..!


ನೋಡ್ತಾನೇ ಇದ್ದೆ..


ತಟ್ಟನೆ ಅವಳೂ ನೋಡಿದಳು..!


ನಾನು ಗಲಿಬಿಲಿಗೊಂಡು ದೃಷ್ಟಿ ಬದಲಿಸಿದೆ..


ಹೆಣ್ಣು ಮಕ್ಕಳಿಗೆ ..
ಯಾರಾದರೂ ತಮ್ಮ ಬೆನ್ನಿನ ಹಿಂದೆ ನೋಡಿದರೂ ಗೊತ್ತಾಗಿ ಬಿಡುತ್ತದಂತೆ...!


ಚಂದ ನೋಡುವ ವಯಸ್ಸು.. 
ಮನಸ್ಸು ...
ಮತ್ತು ಮತ್ತೂ ನೋಡುವ ಆಸೆ...


ಆಗಾಗ ಕದ್ದು ಕದ್ದು ನೋಡುತ್ತಿದ್ದೆ...


ಆಕೆ ಜವಾನನ್ನು ಕರೆದು ಒಂದು ಚೀಟಿ ಕೊಟ್ಟಳು..
ಆತ ನನಗೆ ತಂದು ಕೊಟ್ಟ..


"ಕದ್ದು ನೋಡುವದೇಕೆ?
ಕ್ಯಾಂಟೀನಲ್ಲಿ ಕಾಫೀ ಕುಡಿಯೋಣ ಬನ್ನಿ..
ಖರ್ಚೆಲ್ಲ ನನ್ನದು..
ಹಣ ಮಾತ್ರ ನಿಮ್ಮದು...."


ನಾನು ಆಕೆಯನ್ನು ನೋಡಿದೆ.. 
ಆಕೆಯ ನಗುವೂ ಬಹಳ ಸುಂದರವಾಗಿತ್ತು...


ಕೆಲವೊಬ್ಬರು ಹಾಗೇನೆ...


ಬಲುಬೇಗ ನಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ...
ಹೇಗೆ?
ಏನು?
ಪೂರ್ವಾಪರ ವಿಚಾರ ಗೊತ್ತಿಲ್ಲದೆಯೇ ಆಕೆ ತುಂಬಾ ಹತ್ತಿರವಾಗಿಬಿಟ್ಟಳು...


ದಿನಾಲೂ ಅವಳ ಕೆನ್ನೆ, ಉಬ್ಬುಗಳ ಮೇಲಿನ ಮುಂಗುರುಳನ್ನು ನೋಡುವದು..
ಆಕೆಯೊಡನೆ ಕಾಫೀ... 
ಹರಟೆ ತುಂಬಾ ಸೊಗಸಾಗಿರುತ್ತಿತ್ತು...


"ನೀವು ನಿಮ್ಮ ಬಗೆಗೆ ಏನೂ ಹೇಳಲೇ ಇಲ್ಲ..."


"ನಾನು ಕನ್ನಡಿಗಳದಾರೂ ಹೊರದೇಶದಲ್ಲೇ ಹುಟ್ಟಿದ್ದು..
ಬೆಳೆದದ್ದು..
ಅಪ್ಪ, ಅಮ್ಮ ಇನ್ನೂ ಅಲ್ಲಿಯೇ ಇದ್ದಾರೆ..
ಒಬ್ಬಳೇ ಮಗಳು...
ಭಾರತ ನೋಡಬೇಕಿನಿಸಿತು...
ಕೆಲಸವೂ ಸಿಕ್ಕಿತು.. ಇಲ್ಲಿಗೆ ಬಂದೆ..."


ಹುಡುಗಿ ತನ್ನ ಬಗೆಗೆ ಹೇಳಿ ನನ್ನೆಡೇಗೆ ಪ್ರಶ್ನಾರ್ಥಕವಾಗಿ ನೋಡಿದಳು..


"ನಾನು ತುಂಬಾ ಖುಷಿ ಮನುಷ್ಯ...
ಅಪ್ಪ,ಅಮ್ಮ ಹಳ್ಳಿಯಲ್ಲಿರ್ತಾರೆ..
ಅಪ್ಪ, ಅಮ್ಮನ ಮುದ್ದಿನ ಮಗ..."


ದಿನಗಳು..
ದಿನ ನಿತ್ಯದ ಸಂಗತಿಗಳು ಹೀಗೆಯೇ ಇರುವದಿಲ್ಲವಲ್ಲ...
ಬದಲಾಗುತ್ತದೆ..
ಬದಲಾಗುತ್ತಲೇ ... ಇರುತ್ತದೆ...


ಆಫೀಸಿನಲ್ಲಿ ಒಂದು ಟ್ರಿಪ್ ಇಟ್ಟಿದ್ದರು...


ಜಂಗಲ್ ರಿಸಾರ್ಟ್...
ತುಂಬಾ ಸುಂದರ ತಾಣ...
ರಾತ್ರಿ ಪಾರ್ಟಿ ಕೂಡ ಇತ್ತು...


ಎಲ್ಲರೂ ತಮ್ಮ ತಮ್ಮ ಗೆಳೆಯರ ಸಂಗಡ ಹರಟುತ್ತಿದ್ದರು...


"ನಾನು ...
ಅಪರೂಪಕ್ಕೆ ಡ್ರಿಂಕ್ಸ್ ತೆಗೆದು ಕೊಳ್ಳುತ್ತೇನೆ...
ನಿಮ್ಮ ಅಭ್ಯಂತರವಿಲ್ಲದಿದ್ದರೆ ಇವತ್ತೂ ಕೂಡ...
ಪ್ಲೀಸ್..."


" ಪ್ಲೀಸ್ , ಗಿಸ್ ... ಏನೂ ಬೇಡ..
ನನಗೂ ಒಂದು ತನ್ನಿ..
ನನಗೂ ರೂಢಿ ಇದೆ..."


ಸನಿಹದಲ್ಲಿ...
ಚಂದದ ಹುಡುಗಿ... !
ಸ್ವಲ್ಪ ಸ್ವಲ್ಪವಾಗಿ ಏರುತ್ತಿರುವ ನಶೆ...!


ವಾಹ್ !!


ಸಮಯ ..
ಈ ಕ್ಷಣಗಳು..
ಇಲ್ಲೇ ಎಲ್ಲೋ ಒಮ್ಮೆ ನಿಂತು ಹೋಗಬೇಕಿತ್ತು ಅನಿಸಿತು..!


ಆದರೆ ... ನಿಲ್ಲಲಿಲ್ಲ...


" ಹುಡುಗಿ...
ನೀವು ಅಪಾರ್ಥ ಮಾಡಿಕೊಳ್ಳದಿದ್ದಲ್ಲಿ ..
ನನಗೆ ಒಂದು ಆಸೆ ಇದೆ...


ಒಪ್ಪಿಗೆ ಕೊಟ್ಟರೆ ಕೇಳುತ್ತೇನೆ..."


"ಕೇಳಿ.. 
ಅದಕ್ಕೇನಂತೆ..?"


"ಈ ರಾತ್ರಿ ನಿಮ್ಮೊಡನೆ ಕಳೆಯುವಾಸೆ...
ಇಬ್ಬರೂ ..
ಒಂದಾಗುವಾಸೆ... 
ಪ್ಲೀಸ್...
ಇಲ್ಲ ಅನ್ನಬೇಡಿ.."


"ನನ್ನನ್ನು ನೋಡಿ ಕಾಮಿಸುವ ಆಸೆ ಆಯ್ತಾ?
ಅಷ್ಟೇನಾ?
ನನ್ನಲ್ಲಿ ಪ್ರೀತಿ ಹುಟ್ಟಲಿಲ್ವಾ?"


"ಹುಡುಗಿ..
ನಿನ್ನ ಬಗೆಗೆ ತುಂಬಾ ತುಂಬಾ ಪ್ರೀತಿ ಇದೆ..


ಪ್ರೀತಿ ಇರದಿದ್ದಲ್ಲಿ "ಕಾಮ" ಸಾಧ್ಯನಾ?


ನನಗೆ ಈ ಸಮಯಕ್ಕೆ..
ಈ ಸಂದರ್ಭದಲ್ಲಿ ಈ "ಆಸೆ" ಹುಟ್ಟಿತು...


ಇಷ್ಟವಿಲ್ಲದಿದ್ದಲ್ಲಿ ಬೇಡ.. ಯಾವುದಕ್ಕೂ ಬಲವಂತ ಇಲ್ಲ..."


"ಹುಡುಗಾ...
ಕಾಮ ದೈಹಿಕ ಅಗತ್ಯ...
ಪ್ರೀತಿ ಮಾನಸಿಕ ಅಗತ್ಯ...


ಅಪ್ಪ, ಅಮ್ಮರಿಂದ.. ಗೆಳೆಯರಿಂದ ದೂರವಿರುವ ನನಗೆ ..
ನಿನ್ನ "ಪ್ರೀತಿ" ಬೇಕು...


ನನಗೂ ಆಸೆ ಇಲ್ಲ ಅಂತ ಏನಿಲ್ಲ..
ಇದೆ..
ಆದರೆ...."


"ಆದರೆ.... ಏನು?"


"ಗಂಡಿನ ಅನುಭವ ನನಗೂ ಇದೆ...
ಪರದೇಶದಲ್ಲಿ  ನನಗೂ ಗೆಳೆಯರಿದ್ದರು...


ರೂಮಿನ ಕತ್ತಲೆಯಲ್ಲಿ ನಡೆಯುವದು ಕಾಮದಾಟವಲ್ಲ..


ಅದು ಒಂದು ಹೊಡೆದಾಟ..


ಅಲ್ಲಿ ಯಾರೋ ಒಬ್ಬರು ಸೋಲುತ್ತಾರೆ..
ಯಾರೋ ಒಬ್ಬರು ಗೆಲ್ಲುತ್ತಾರೆ..


ಸೋಲು, ಗೆಲುವಿನ ಮನಸ್ಥಿತಿಯನ್ನು..
ಗಂಡು, ಹೆಣ್ಣು ಹೇಗೆ ನಿಭಾಯಿಸುತ್ತಾರೆ ಎನ್ನುವದರ ಮೇಲೆ ..
ಮುಂದಿನ ಸಂಬಂಧದ ...
ಅಳಿವು..
ಉಳಿವು... ಆಲ್ವಾ?


ಹುಡುಗಾ..
ಯಶಸ್ವಿ  ದಾಂಪತ್ಯವೆಂದರೆ ಇದೇ ತಾನೆ?


ದೌರ್ಬಲ್ಯದೊಡನೆಯ..ಅಡ್ಜಸ್ಟಮೆಂಟ್...!
ಬೇಕು ಬೇಡಗಳೊಡನೆಯ ಹೊಂದಾಣಿಕೆ.. !.."


ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ...


"ಹುಡುಗಾ..
ನಮ್ಮಿಬ್ಬರ ಇಷ್ಟು ಚಂದದ ಗೆಳೆತನ..
ಸೋಲು ..
ಗೆಲುವಿನಲ್ಲಿ ಹಳಸುವದು ಬೇಡ..


ಈ ಗೆಳೆತನಕ್ಕೆ ಇನ್ನಷ್ಟು ಸಮಯ ಕೊಡೋಣ...


ಅದೃಷ್ಟವಿದ್ದಲ್ಲಿ...
ಅವಕಾಶವಿದ್ದಲ್ಲಿ ಅನುಕೂಲವಾದ ಸಮಯ ಸಿಕ್ಕೇ ಸಿಗುತ್ತದೆ..."


ನನಗೆ ಬಹಳ ನಿರಾಸೆಯಾಯಿತು...
ಅವಳ ಮಾತಿಗೆ ಒಪ್ಪಿಕೊಂಡೆ..


ಮರುದಿನದಿಂದ ಮತ್ತೆ ಅದೇ ಆಫೀಸ್...
ಕಾಫಿ ಹರಟೆ..


ಟ್ರಿಪ್ಪಿನ ನಂತರ ನನ್ನ ಆಸೆಗಳ..
ಕನಸುಗಳ ಬಣ್ಣ ಬದಲಾಗಿತ್ತು...


ಮಾತಿನ ಮಧ್ಯದಲ್ಲಿ ನಾನು ಮತ್ತೆ ..ಮತ್ತೆ ..
ನನ್ನ ಬೇಡಿಕೆ ಇಡುತ್ತಿದ್ದೆ...
ಆಕೆ ನಗುತ್ತ ಸಲುಗೆಯಿಂದ  ಬೇಡವೆನ್ನುತ್ತಿದ್ದಳು...


ನಾನು ಆಕೆಯ ಕೆನ್ನೆಯ ಉಬ್ಬು... ಮುಂಗುರುಳಗಳ ನೋಡುತ್ತಲೇ ಇರುತ್ತಿದ್ದೆ...


ಇಷ್ಟು ಮುಕ್ತವಾಗಿ ಮಾತನಾಡಿದ ಮೇಲೂ ...
ಸಂಬಂಧ ಮುಂದುವರೆಯುತ್ತಿರುವಾಗ..
ಕಂಡ ಕನಸುಗಳು ನನಸಾಗಲು ಹಾತೊರೆಯುತ್ತಿದ್ದವು...


ಆಸೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಿದ್ದೆ...


ಒಂದು ದಿನ ಆಕೆ ಬರಲಿಲ್ಲ...
ಫೋನ್ ಮಾಡಿದೆ ಫೋನ್ ತೆಗೆದುಕೊಳ್ಳಲಿಲ್ಲ..


ಆ ದಿನ ನನಗೆ ಬಹಳ ಬೇಸರದ ದಿನ...


ಮರುದಿನವೂ ಹಾಗೇ ಆಯ್ತು...


ಒಂದು ವಾರ ಕಳೆಯಿತು...


ಒಂದು ಅವಳಿಂದ ಎರಡಕ್ಷರದ ಮೇಲ್ ಬಂತು 


"ಹುಡುಗಾ .. ಹೇಗಿದ್ದೀಯಾ ?...."


ನನಗೆ ಖುಷಿ ಆಯ್ತು...


"ನನ್ನ ಪ್ರೀತಿಯ ಮುಂಗುರುಳೆ...


ನಿನ್ನನ್ನು ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಿದೆಯಾ?
ನೀನಿಲ್ಲದ...
ನೀನು ಕಣ್ಣಿಗೆ ಕಾಣದ.. 
ನಿನ್ನೊಡನೆ ಮಾತನಾಡದ ದಿನಗಳನ್ನು ಕಳೆಯುವದು ಕಷ್ಟ...


ಪ್ರೀತಿಯ ..ಸುರುಳಿ  ಮುಂಗುರುಳೆ..!


ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ...
ನೀನಿಲ್ಲದ ಕ್ಷಣಗಳಲ್ಲಿ  ನನಗೆ ಮತ್ತಷ್ಟು ಅರಿವಾಯ್ತು...


ದಯವಿಟ್ಟು ಇಲ್ಲವೆನ್ನಬೇಡ...


ನಮ್ಮಿಬ್ಬರ ಸಂಬಂಧಕ್ಕೆ "ಸಮಯ" ಕೊಟ್ಟಿದ್ದು ಸಾಕು...
ನಾವಿಬ್ಬರೂ ಮದುವೆಯಾಗೋಣ..."


ನನ್ನ ಮೇಲ್ ಗೆ ಉತ್ತರ ಬರಲಿಲ್ಲ...


ಮತ್ತೆ ನಾಲ್ಕಾರು ದಿನಗಳ ಮೌನ...!


ಯಾವ ಸುದ್ಧಿಯೂ ಇಲ್ಲ..


ಮತ್ತೊಂದು ದಿನ ಒಂದು ಎಸ್ಸೆಮ್ಮೆಸ್ಸ್ ಬಂದಿತು...


"ಹುಡುಗಾ...
ಅಂದು ನೀನು ನನ್ನನ್ನು..
ನನ್ನ ದೇಹವನ್ನು  ಬಯಸಿದ್ದೆ...


ನೆನಪಿದೆಯಾ ?...


ಇವತ್ತು ನಮ್ಮ ಮನೆಗೆ ಬರ್ತೀಯಾ?


ಕಾಯ್ತಾ ಇರ್ತೀನಿ...
ನಿನಗಾಗಿ ..... ನಾನೊಬ್ಬಳೆ..."


ವಾಹ್.. !!
ನನಗೆ ಹಾರಿ ಕುಣಿಯಬೇಕೆನಿಸಿತು...!


ಸ್ವಲ್ಪವೂ ತಡಮಾಡದೆ ಅವಳ ಮನೆಗೆ ಓಡಿದೆ...!!


ಬಾಗಿಲು ಸಣ್ಣದಾಗಿ ತೆರೆದಿತ್ತು...


ಎದೆಯಲ್ಲಿ ಢವ ಢವ....!


ಒಂದು ಎಸ್ಸೆಮ್ಮೆಸ್ ಬಂದಿತು..


" ಹುಡುಗಾ...
ಒಳಗೆ ಬಾ..
ಅಲ್ಲಿ ಟಿಪಾಯಿಮೇಲೆ ಒಂದು ಪತ್ರವಿದೆ ದಯವಿಟ್ಟು ಓದು..."


ನಾನು ಲಗುಬಗೆಯಿಂದ ಕೈಗೆತ್ತಿಕೊಂಡೆ...


"ಹುಡುಗಾ...
ಅಂದು ನೀನು ನನ್ನನ್ನು ಬಯಸಿದ್ದೆ..
 ಆ  ಆಸೆ ಇಂದು ನನ್ನ ಆಸೆ...


ನನಗೂ ನಿನ್ನೊಡನೆ ಸೇರಬೇಕು...


ಯಾಕೆಂದರೆ ನನ್ನೊಡನೆ ಸಮಯ ಜಾಸ್ತಿ ಇಲ್ಲ...
ಹೋಗುವದೊರಳಗೆ ದಯವಿಟ್ಟು ನನ್ನ ..
ಅಂತಿಮ..
ಕೊನೆಯ ಆಸೆಯನ್ನು ನೆರವೇರಿಸು...


ಅರ್ಥ ಆಗಲಿಲ್ಲವಾ?


ನಾನು ಕ್ಯಾನ್ಸರ್ ರೋಗಿ...


ಅತ್ತು.. ಕರೆಯುವದು ಬೇಡ...
ನನ್ನ ಪಾಲಿಗೆ ಬಂದಿದ್ದು ಇಷ್ಟು... 
ಸ್ವೀಕರಿಸಿದ್ದೇನೆ...


"ಕಿಮೋಥೆರೆಪಿ" ಮಾಡಿದ್ದಾರೆ... ಅದರಿಂದ ಪ್ರಯೋಜನವಿಲ್ಲ...


ನಿನ್ನ ಅನುಕಂಪವೋ..
ಪ್ರೀತಿಯೋ.., 
ಪ್ರೇಮವೋ ನನಗೆ ಗೊತ್ತಿಲ್ಲ...!


ಹೇಗಾದರೂ ದಯವಿಟ್ಟು ಬಾ...
ಇಂದು ನನಗೆ ನೀನು ನನ್ನಾಸೆಯಾಗಿ ಬಾ...


ನನ್ನ ಸಾವು ನೆನಪಾಗಿ ..
ಇದು ನಿನ್ನಿಂದ ಅಸಾಧ್ಯ ಅಂತ ಅನ್ನಿಸಿದರೆ ಬೇಡ ಬಿಡು..


ನನಗೆ ನಿನ್ನ ನಿರಾಕರಣದಲ್ಲೂ ದೂರು ಇಲ್ಲ...


ಅಂದು ನಾನು ನಿರಾಕರಿಸಿದೆ..
ಇವತ್ತು ನೀನು...


ಇಷ್ಟವಿಲ್ಲದಿದ್ದರೆ ಹಾಗೇಯೇ ಹೊರಟು ಹೋಗು... 
ಒಳಗೆ ಬರಬೇಡ...


ನಿನ್ನನ್ನು ಬಯಸುವ ಈಗಿನ ನನ್ನ ಮನಸ್ಥಿತಿಯಲ್ಲಿ ...
ನನಗೆ ಬೇರೆ ಏನೂ ಬೇಕಿಲ್ಲ..
ನಿನ್ನ ಅನುಕಂಪದ ಮಾತೂ ಕೂಡ ಬೇಡ..


ನಿನ್ನ ಯಾವುದೇ ನಿರ್ಣಯ ನನಗೆ ಸಮ್ಮತ....


ನಿನ್ನ ಪ್ರೀತಿಯ..
ಸುರುಳಿ ಮುಂಗುರುಳು..."


ನನಗೆ ದಿಕ್ಕು ತೋಚಂದಂತಾಯಿತು...


ಏನು ಮಾಡಲಿ........?
ಏನು ಮಾಡಲಿ............?


ಅವಳನ್ನು ಮನಸಾರೆ ಪ್ರೀತಿಸುತ್ತಿರುವದಂತೂ ನಿಜ...


ಆಕೆಯ ಬದುಕಿನ ಕೊನೆಯ ಆಸೆ...!


ಪ್ರೀತಿಯ ಮುಖವೇ ಇರದ ಯಾರ್ಯಾರೋ ಸಂಗಡ ಮಲಗಿದ್ದಿದೆ...
ಹಣ ಕೊಟ್ಟು ಸುಖವನ್ನು ಅರೆಸಿದ್ದು ಇದೆ...


ಇಷ್ಟು ದಿನ ಈಕೆಯನ್ನು ಪ್ರೀತಿಸಿದ್ದೇನೆ...
ಬಯಸಿದ್ದೇನೆ..


ಅವಳ ಆಸೆಯನ್ನು ನೆರವೇರಿಸಿ ಬಿಡುವದೇ ಸೂಕ್ತ...


ಸರಿ...


ಹಾಲಿನಿಂದ ಬೆಡ್ ರೂಮಿನ ಹತ್ತಿರ ಬಂದೆ...!


ಬಾಗಿಲು ಅಲ್ಲಿಯೂ ಸಣ್ಣಗೆ ತೆರೆದಿತ್ತು...


ಒಳಗೆ ಪೂರ್ತಿಯಾಗಿ ಕತ್ತಲೆ ಇಲ್ಲದಿದ್ದರೂ..
ಯಾವುದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ...


ನಾನು ಅವಳಿದ್ದ ಹಾಸಿಗೆ ಕಡೆ ಹೋದೆ...


ಚಾದರ ಹೊದ್ದು ನನಗಾಗಿ ಕಾಯುತ್ತಿದ್ದಳು...


ಬಿಗಿದಪ್ಪಿದೆ...!!


ಮುತ್ತಿಟ್ಟೆ...!!


ಅಷ್ಟು ದಿನದಿಂದ ಕಾಯುತ್ತಿದ್ದ ..
ಆ ಕೆನ್ನೆ ..!
ಆ ಕುತ್ತಿಗೆ ಎಲ್ಲವನ್ನು ಮುತ್ತಿಡತೊಡಗಿದೆ...!


ಅವಳ ಮುಚ್ಚಿದ ಕಣ್ಣುಗಳನ್ನೊಮ್ಮೆ ನೋಡಬೇಕೆನಿಸಿತು...


ಕಿಡಕಿಯಿಂದ ಸಣ್ಣ ಬೆಳಕು ಬರುತ್ತಿತ್ತು...


ಬೊಗಸೆಯಲ್ಲಿ ಅವಳ ಮುಖ ಹಿಡಿದು ನೋಡಿದೆ...


ನನಗೆ ಆಘಾತವಾಯಿತು...!


ನಿಸ್ತೇಜ ಕಣ್ಣುಗಳು...! 
ಉದುರಿದ ತಲೆಯ ಕೂದಲು...!


ಸುಕ್ಕುಗಟ್ಟಿದ ಚರ್ಮ...!
ಕಳೆಗುಂದಿದ ಕೆನ್ನೆ...!


ನಾನು  ನನಗರಿವಿಲ್ಲದಂತೆ  ತಣ್ಣಗಾದೆ.........
ನಿಸ್ತೇಜನಾದೆ...


ಬಿಸಿಯೆಲ್ಲ ತಣ್ಣಗಾಯಿತು...


ಮಂಚದ ತುದಿಯಲ್ಲಿ ಕುಳಿತುಕೊಂಡೆ...


"ಹುಡುಗಾ ಏನಾಯ್ತು?...
ಬಾ.. ಬೇಗ..."


ಆಕೆ ಕೈ ಹಿಡಿದು ಎಳೆದಳು...


"ಹುಡುಗಿ...
ನಾನು ನಿನ್ನನ್ನು ಮನಸಾರೆ ಪ್ರೀತಿಸಿದ್ದು ನಿಜ...
ನಿನ್ನನ್ನು ...
ನಿನ್ನ ದೇಹವನ್ನೂ ಬಯಸಿದ್ದೂ ನಿಜ...


ಯಾರನ್ನಾದರೂ ...
ಯಾವ ಸ್ಥಿತಿಯಲ್ಲಾದರೂ ಪ್ರೀತಿಸಬಹುದು...


ಕಾಮ ಹಾಗಲ್ಲ ಕಣೆ...
ಇದಕ್ಕೆ ಇನ್ನೂ ಏನೇನೋ ಬೇಕು...!


ನಿನ್ನ ಆಸೆ ಈಡೇರಿಸಲು ನನ್ನಿಂದ ಆಗ್ತಾ ಇಲ್ಲ...


ದಯವಿಟ್ಟು ಕ್ಷಮಿಸು..."






( ಈ ಕಥೆಗೆ ಸುಂದರ ಪ್ರತಿಕ್ರಿಯೆಗಳಿವೆ..
ದಯವಿಟ್ಟು ಓದಿ...)

Saturday, January 28, 2012

ರಾಸಾಯನಿಕ...


ನಾನೆಲ್ಲಿ ತಪ್ಪಿದೆ.. ಅಂತ ನನಗೇ ಗೊತ್ತಾಗುತ್ತಿಲ್ಲ...


ಇದು ನನ್ನಿಷ್ಟದ ಮದುವೆಯಾಗಿತ್ತು...
ಹುಡುಗ ನನ್ನನ್ನು ಕಾಡಿ.. ಬೇಡಿ ಮದುವೆಯಾಗಿದ್ದ..
ಅವನ್ನನ್ನು ನಾನೂ ಸಹ ಬೆಟ್ಟದಷ್ಟು ಪ್ರಿತಿಸಿಯೇ ಮದುವೆಯಾದದ್ದು...


ಸ್ವಂತ ಅಂದದ ಮನೆ..
ಕಾರು...
ಶ್ರೀಮಂತಿಕೆ... 
ಸರಸ ದಾಂಪತ್ಯ... ಎಲ್ಲವೂ ಸರಿಯಾಗಿತ್ತು...


ಎಲ್ಲಿ ತಪ್ಪಿದ್ದು....?


ಮದುವೆಯಾದ ಒಂದು ವರುಷಕ್ಕೆ ಕೆಲಸ ಬಿಡಬೇಕಾಯಿತು...
ಪುಟ್ಟ.. ಮುದ್ದಾದ ಮಗು ನಮ್ಮಿಬ್ಬರ ಜೊತೆಯಾಯಿತು...


ಆ ಮಗುವಿನ ಪಾಲನೆ, ಪೋಷಣೆ ನಾನಂದುಕೊಂಡಂತೆ ಇರಲಿಲ್ಲ...


ತಾಯಿತನ ಹೆಮ್ಮೆ ಎನಿಸಿದರೂ...
ನಿದ್ದೆಯಿಲ್ಲದ ರಾತ್ರಿಗಳು...
ಮಗುವಿನ ಒದ್ದೆಯಾದ ಬಟ್ಟೆಗಳು...
ಹೆಸಿಗೆಯನ್ನು ಸ್ವಚ್ಛಗೊಳಿಸುವದು...


ಪಾಪುವಿನ ಬೇಕು ಬೇಡಗಳು...
ಎಲ್ಲಕ್ಕಿಂತ ಪಾಪುವನ್ನು ಸಮಾಧಾನಗೊಳಿಸುವದು... 
ಇವೆಲ್ಲ ಕೇವಲ ನನ್ನೊಬ್ಬಳ  ಜವಾಬ್ದಾರಿಯಾಗಿತ್ತು...


ರಾತ್ರಿಯೆಲ್ಲ ಜಾಗರಣೆ...
ಹಗಲಲ್ಲಿ ಮನೆಕೆಲಸ...


ಗಂಡ ಬೆಳಿಗ್ಗೆ ಎಂಟುಗಂಟೆಗೆ ಮನೆ ಬಿಟ್ಟವನು ಬರುವದು ರಾತ್ರಿ ಹತ್ತುಗಂಟೆಗೆ...
ಊಟ ಮಾಡಿದ ಶಾಸ್ತ್ರ ಮಾಡಿ ಬೆಡ್ ರೂಮಿಗೆ ಹೋಗಿ ಮಲಗಿ ಬಿಡುತ್ತಿದ್ದ..


ಒಂದು ಪ್ರೀತಿಯ ಮಾತು...
ನಿನ್ನ ಜೊತೆ ನಾನಿದ್ದೇನೆ ಎನ್ನುವಂಥಹ ಒಂದು ಸಣ್ಣ ಮಾತು..,
ಸಹಾಯ  ನಾನು ನಿರೀಕ್ಷಿಸುವದು ತಪ್ಪೇ...?


ಸಹಾಯದ ಮಾತು ಪಕ್ಕಕ್ಕಿರಲಿ...
ಒಂದು ಪ್ರೀತಿಯ..
ಮೆಚ್ಚುಗೆಯ ನೋಟವೂ ಇರಲಿಲ್ಲ...


ಏನಾಯಿತು ನನ್ನ ಗೆಳೆಯನ ಪ್ರೀತಿಗೆ...?


ಒಂದು ದಿನ ಅವನನ್ನು ಬಲವಂತವಾಗಿ ಕುಳ್ಳಿರಿಸಿ ಕೇಳಿಯೇ ಬಿಟ್ಟೆ....


" ಡುಮ್ಮು ಪುಟ್ಟಾ..
ಬಹಳ ಚಂದದ ಕನಸುಗಳನ್ನು ಕಟ್ಟಿಕೊಂಡಿದ್ದೆ...
ನಮ್ಮ ಪುಟ್ಟ ಸಂಸಾರ.. ಮಗು.. ಮನೆ...


ಎಲ್ಲವೂ ಸಿಕ್ಕಿದೆ...
ಆದರೆ ನೀನು .. ನಿನ್ನ ಪ್ರೀತಿ..ಮಾತ್ರ ದೂರವಾಗಿಬಿಟ್ಟಿದೆ.....


ನನ್ನ ಕಡೆ ನೋಡುತ್ತಲೂ ಇಲ್ಲ...
ನನ್ನ ಮೇಲಿನ ಆಕರ್ಷಣೆ, ಪ್ರೀತಿ ಈಗ ನಿನಗಿಲ್ಲ...."


ನನ್ನವ ನನ್ನ ಮುಖವನ್ನೇ ನೋಡುತ್ತ ಹೇಳಿದ..


"ಡುಮ್ಮಕ್ಕಿ..
ಹಾಗಲ್ಲ ಅದು...
ಹಗಲು, ರಾತ್ರಿ ದುಡಿಯುತ್ತ ನಾನೊಬ್ಬನೇ ಖುಷಿಯಾಗಿದ್ದೇನೆ ಅಂದುಕೊಂಡಿದ್ದೀಯಾ...?
ಇಲ್ಲ ಕಣೆ ಡುಮ್ಮಕ್ಕಿ...
ನಾನು ಇಷ್ಟೆಲ್ಲ ದುಡಿಯುತ್ತಿರುವದು ಯಾಕೆ...?


ನಮ್ಮ ಪುಟ್ಟ ಮಗುವಿಗೆ... ನಮ್ಮ ಮುಂದಿನ ಬದುಕಿನ ಭದ್ರತೆಗಾಗಿ.."


ನನಗೆ ಕೋಪ ಬಂತು...


" ಡುಮ್ಮು ಪುಟ್ಟ..
ಬದುಕು ನನಗೆ ಬೋರಾಗಿದೆ...


ಇತ್ತೀಚೆಗೆ ಸುಂದರ ಕನಸುಗಳೇ ಬೀಳುತ್ತಿಲ್ಲ...
ಮಗುವಿನ ಗಲೀಜು ಸ್ವಚ್ಛಗೊಳಿಸಿದ ಕನಸು ಬೀಳುತ್ತವೆ ಆಗಾಗ..


ನಾನು  ನಿನ್ನೊಟ್ಟಿಗೆ ಮಲಗಿದ್ದರೂ..
ರಾತ್ರಿಯೆಲ್ಲ ಒಂಟಿಯಾಗಿಬಿಡುತ್ತೇನೆ...


ನಿರೀಕ್ಷೆಗಳೇ ಇಲ್ಲದೆ ಬೆಳಗಾಗಿಬಿಡುತ್ತವೆ...
ಎಲ್ಲವೂ ಯಾಂತ್ರಿಕವಾಗಿಬಿಟ್ಟಿದೆ...


ಹೊಸತನ.. ಹೊಸ ಬೆಳಕು ಏನೂ ಇಲ್ಲ...


ನೀನು ಹೊರಗಡೆ ಹೋಗಿಬಿಡುತ್ತೀಯಾ... ನಾನೇನು ಮಾಡಲಿ...?"


ಡುಮ್ಮು ಪುಟ್ಟನ ಕಣ್ಣಲ್ಲಿ  ನಗು ಕಂಡಿತು...


"ಡುಮ್ಮಕ್ಕಿ...
ಇಷ್ಟೇ ತಾನೆ...?
ನಮ್ಮ ಮನೆಯಲ್ಲಿ ಇಂಟರ್ ನೆಟ್ ಇದೆ..
ನಿನಗೊಂದು ಫೇಸ್ ಬುಕ್ ಅಕೌಂಟ್ ಓಪನ್ ಮಾಡಿಕೊಡುತ್ತೇನೆ...
ಅಲ್ಲಿ ಗೆಳೆಯರು ಸಿಗುತ್ತಾರೆ...


ನಿನ್ನ ಹಳೆಯ ಕಾಲೇಜ್  ಗೆಳತಿಯರೂ ಸಿಗುತ್ತಾರೆ...


ಅವರೊಡನೆ ಚಾಟ್ ಮಾಡು... ಹರಟು...
ಅವರ ಕಷ್ಟ, ಸುಖಗಳ ಬಗೆಗೆ ಮಾತಾಡು...


ಸುಖ, ಸಂತೋಷ ಎಲ್ಲವೂ.. ಹೋಲಿಕೆಯಲ್ಲಿರುತ್ತವೆ ಕಣೆ..
ಅವರನ್ನು ಕಂಡು ನೀನು ಸಂತೋಷ ಪಡು..."


ನನಗೂ ಕುತೂಹಲವಾಯಿತು...
ನನ್ನವ  ಅದೇ ಕ್ಷಣ ನನಗೆ ಫೇಸ್ ಬುಕ್ ಮಾಡಿಕೊಟ್ಟ...


ಆದರ ಬಗೆಗೆ ಎಲ್ಲವಿವರಗಳನ್ನೂ ಹೇಳಿಕೊಟ್ಟ...


ನನಗೂ ಖುಷಿಯಾಯಿತು....
ಮರು ದಿನದಿಂದ ನನ್ನ ಬದುಕಿನಲ್ಲಿ ಹೊಸ ಗಾಳಿ ಬೀಸತೊಡಗಿತು...
ನನ್ನ ಅನೇಕ ಗೆಳೆಯ ಗೆಳತಿಯರು ಸಿಕ್ಕರು...


ಒಂದು ದಿನ ನಾನು ನನ್ನ ಮಗುವನ್ನು ಮುದ್ದಿಸುವ ಫೋಟೊ ಹಾಕಿದ್ದೆ...


" ಅದೇ.. 
ಮುದ್ದುಕಣ್ಣುಗಳು...
ಮುದ್ದು..
ಮಗುವಿನ ಮುಖದಲ್ಲಿ ಅದೇ.. ನಗು..!.."


ಯಾರಪ್ಪಾ ಇವರು ಅಂತ ನೋಡಿದೆ...


ನನ್ನ ಕಾಲೇಜು ಸ್ನೇಹಿತ...!


ಆತ ಚಾಟ್ ಮಾಡಲು ಬಂದ...


"ನನ್ನ ನೆನಪಿದೆಯಾ...?


ನಾನು ಹಿಂದಿನ ಬೇಂಚಿನ ಹುಡುಗ...
ನಿಮ್ಮ ಕಣ್ಣುಗಳನ್ನು ನೋಡುತ್ತ ಎಷ್ಟೋ ಕವಿತೆಗಳನ್ನು ಬರೆದಿದ್ದೆ...
ಕೊಡಲು ಧೈರ್ಯವಿಲ್ಲವಾಗಿತ್ತು..
ಹೆದರ ಬೇಡಿ...
ನನಗೀಗ ಮದುವೆಯಾಗಿ ಚಂದದ ಸಂಸಾರದ ಪತಿಯಾಗಿದ್ದೇನೆ..."


ನನಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ...
ಒಳಗೊಳಗೆ ಖುಷಿಯಾಗಿತ್ತು...


"ಧನ್ಯವಾದಗಳು..
ನಿಮ್ಮ ಪತ್ನಿ ಏನು ಮಾಡುತ್ತಾರೆ...? ಹೇಗಿದ್ದಾರೆ..?"


ಆತ ತನ್ನ ಆಲ್ಬಮ್ಮಿನ ಲಿಂಕ್ ಕೊಟ್ಟ...
ನೋಡಿದೆ...
ತುಂಬು ಪ್ರೀತಿಯ ಸಂಸಾರ....
ಹೆಂಡತಿ ಸುಂದರಿ ಅಲ್ಲದಿದ್ದರೂ ಮಗು ಮುದ್ದಾಗಿತ್ತು...


"ಚಂದದ ಸಂಸಾರ" ಅಂತ ಪ್ರತಿಕ್ರಿಯೆ ಹಾಕಿದೆ...


ಆ ದಿನವಿಡಿ ಆ ಹುಡುಗನ ಬಗೆಗೆ ಯೋಚಿಸಿದೆ...
ನನ್ನ ಬಗೆಗೆ.. 
ನನ್ನ ಕಣ್ಣಿನ ಬಗೆಗೆ ಕವಿತೆ ಬರೆಯುವ ಹುಡುಗ ನನಗೆ ಖುಷಿ ಕೊಟ್ಟ..


ಮರುದಿನ ಮತ್ತೆ ಚಾಟ್ ಗೆ ಬಂದ...


" ನಿಮ್ಮ ಸಂಸಾರ ಹೇಗಿದೆ...?"


ನಾನು ನನ್ನ ಬಗೆಗೆ ಹೇಳಬೇಕೋ ಬೇಡವೋ ಅಂತ ಗೊಂದಲದಲ್ಲಿದ್ದೆ...


"ನಿಮ್ಮ ಕುಟುಂಬದ ಹಾಗಿಲ್ಲ...
ನನ್ನ ಗಂಡ  ದಿನಪೂರ್ತಿ ಕೆಲಸದಲ್ಲಿ ಮುಳುಗಿರುತ್ತಾನೆ..
ಚಂದದ ಮಾತು...
ನಗು ಎಲ್ಲವೂ ಅಪರೂಪ...
ಆತನಿಗೆ ನನ್ನ ಬಗೆಗೆ ಆಸಕ್ತಿಯೇ ಹೊರಟು ಹೋಗಿದೆ..."


"ನಿಮ್ಮ ಯಜಮಾನರಿಗೆ ಚಟಗಳಿವೆಯಾ...?"


"ಇಲ್ಲ..."


"ಚಟವಿಲ್ಲದ ಗಂಡ...ನೀವು ಪುಣ್ಯವಂತರು ಅಂದುಕೊಳ್ಳಿ...


ನಿಮಗೆ ಒಂದು ವಿಷಯ ಪ್ರಾಮಾಣಿಕವಾಗಿ ಹೇಳಿಬಿಡುತ್ತೇನೆ...
ನನ್ನ ಕವನಗಳ ಸ್ಪೂರ್ತಿ ನೀವು...


ನಿಮ್ಮ ಕಣ್ಣುಗಳು  ಈಗಲೂ ನನ್ನನ್ನು ಕಾಡುತ್ತವೆ...


ಅಪಾರ್ಥ ಮಾಡಿಕೊಳ್ಳಬೇಡಿ...


ಆಗ ನನ್ನ ಹದಿಹರೆಯ ಪ್ರೀತಿಸಿದ ನೆನಪುಗಳನ್ನು ಬಿಟ್ಟು ಇರಲಾಗುತ್ತಿಲ್ಲ..."


ನನಗೆ ಅವನ ನೇರವಾದ ಮಾತುಗಳನ್ನು ಕೇಳಿ ಮಾತು ಬರದಂತಾಯಿತು...
ಸಂತೋಷದ ಜೊತೆಗೆ ಕಸಿವಿಸಿಯಾಯಿತು...


"ಬೇಜಾರು ಮಾಡ್ಕೋಬೇಡಿ...
ನಿಮ್ಮೊಡನೆ ಮಾತನಾಡಿದ ನೆನಪುಗಳು ನನಗಿವೆ..
ಆದರೆ ..
ನಿಮ್ಮ ಪ್ರೀತಿ, ಪ್ರೇಮಗಳ ನನಗೆ ನಿಜವಾಗಿಯೂ ಗೊತ್ತಾಗಲಿಲ್ಲ..."


"ಪರವಾಗಿಲ್ಲ ಬಿಡಿ..
ಅಂದು ನಿಮ್ಮ ಎದುರಿಗೆ ಹೇಳಲಾಗದ ಭಾವಗಳು ...
ಇಂದು ಕವನಗಳಾಗುತ್ತಿವೆ..


ಈ ಪ್ರೀತಿ ನನ್ನದು ಮಾತ್ರ...
ನೆನಪುಗಳ ಚಿಗುರುಗಳನ್ನು ಜತನವಾಗಿ ಬಚ್ಚಿಟ್ಟುಕೊಂಡಿದ್ದೇನೆ...


ಈಗಲೂ ನೀವು ನನ್ನ ಕವನಗಳ ಸ್ಪೂರ್ತಿ...
ಈಗ..
ಇಷ್ಟು ದಿನಗಳ ನಂತರ ನನಗೆ ಸಿಕ್ಕಿದ್ದೀರಲ್ಲ..
ನನ್ನನ್ನು ಸ್ನೇಹಿತ ಅಂತ ಒಪ್ಪಿಕೊಂಡಿದ್ದೀರಲ್ಲ.. ತುಂಬಾ ತುಂಬಾ ಖುಷಿ ಆಯ್ತು.."


ನನಗೆ ಗೊತ್ತಿಲ್ಲದಂತೆ..
ನನ್ನೆದೆಯ ಢವ ಢವ ಬಡಿತ ನನಗಷ್ಟೇ ಕೇಳುತ್ತಿತ್ತು...


ಮತ್ತೊಂದು ದಿನ ನನ್ನ ಮೊಬೈಲ್ ನಂಬರ್ ತೆಗೆದುಕೊಂಡ...


ಸಂದೇಶಗಳನ್ನು ಕಳಿಸುತ್ತಿದ್ದ...ನನ್ನ ಕಣ್ಣುಗಳ ಕುರಿತಾಗಿ..

ಬರಿ ಪ್ರೀತಿ, ಪ್ರೇಮದ ಸಾಲುಗಳು..
ಅದರೊಳಗಿನ ಭಾವನೆಗಳು ನನ್ನನ್ನು ತಾಕಿದವು...
ನಾನು ಅವನ ಕವನಗಳ ಅಭಿಮಾನಿಯಾಗಿಬಿಟ್ಟೆ...


ಶಬ್ಧಗಳಲ್ಲಿ ಹೃದಯದ ಪ್ರೀತಿಯನ್ನೆಲ್ಲ ತುಂಬಿಡುತ್ತಿದ್ದ...


ನಾನು ಹಂಬಲಿಸುವ ಪ್ರೀತಿ ಇದಾಗಿತ್ತಾ...?


ಇತ್ತೀಚೆಗೆ ನನಗೆ ಕನಸುಗಳು ಬೀಳತೊಡಗಿದವು...
ಅವುಗಳಲ್ಲಿ ಬಣ್ಣಗಳೂ ಇರುತ್ತಿದ್ದವು..


ಹಳೆಯ ಹಿಂದಿ ಹಾಡುಗಳು.. 
ಅವುಗಳ ಅರ್ಥ ಇಷ್ಟವಾಗತೊಡಗಿತು...
ನನಗೆ ಗೊತ್ತಿಲ್ಲದಂತೆ ಆ ಹುಡುಗ ನನನ್ನು ಆವರಿಸಿಕೊಂಡು ಬಿಟ್ಟ..


ನನ್ನ ಸಂಸಾರವನ್ನು ಬಿಟ್ಟು ಇವನನ್ನು ಪ್ರೀತಿಸುವದು ತಪ್ಪೆಂದುಕೊಂಡರೂ..
ಮನಸ್ಸಿಗೆ ಕಡಿವಾಣವಿಲ್ಲವಲ್ಲ...


ಹಾರುತ್ತಿತ್ತು.... ಹಾರಾಡುತ್ತಿತ್ತು...


ಆತನ ಚಂದದ ಕವನಗಳಿಗೆ ಮನಸ್ಸು ಕಾಯುತ್ತಿತ್ತು...


ಆ ದಿನ ಭಾನುವಾರ..


ಆ ಹುಡುಗ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು ಬಿಟ್ಟಿದ್ದ...
ನನ್ನ ಯಜಮಾನ ಆತನನ್ನು ಆತ್ಮೀಯವಾಗಿ ಸ್ವಾಗತಿಸಿದ...


ಆ ಹುಡುಗ ಮನೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದ..


ನನಗೆ ಕಸಿವಿಸಿಯಾಯಿತು..


ಮನೆಯತುಂಬೆಲ್ಲ ಮಗುವಿನ ಆಟಿಕೆ ಸಾಮಾನುಗಳು... 
ಬಟ್ಟೆಗಳು.. ಹರಡಿಕೊಂಡು ಬಿದ್ದಿದ್ದವು..


ಛೇ... !!


ಈತ ಬರುವದು ಮೊದಲೇ ಗೊತ್ತಿದ್ದರೆ....!


ತಕ್ಷಣ ಗಡಬಡಿಸಿ ಎಲ್ಲವನ್ನೂ ಓರಣವಾಗಿಡುವ ಪ್ರಯತ್ನ ಮಾಡಿದೆ..


ಐದು ನಿಮಿಷ ಬಿಟ್ಟು ಆತನನ್ನು ಮಾತಾನಾಡಿಸಿದೆ...
ಗಡಿಬಿಡಿಯಲ್ಲಿ ಓಡಾಡಿದ್ದರ ಪರಿಣಾಮವಾಗಿ ಏದುಸಿರುಬಿಡುತ್ತಿದ್ದೆ..


ಆತ ಮುಗುಳ್ನಕ್ಕ...


"ನಿಮ್ಮ ಯಜಮಾನರಿಂದ ನನಗೆ ಒಂದು ಸಹಾಯಬೇಕಿತ್ತು...
ನಾನು ಹೊಸ ಕಂಪ್ಯೂಟರ್ ಖರಿದಿಸುತ್ತಿರುವೆ.. ಅದರ ಬಗೆಗೆ ಮಾಹಿತಿ ಬೇಕಾಗಿತ್ತು."


" ನೀವು ನನಗೆ ಹೇಳಲೇ ಇಲ್ಲ..."


"ಸಣ್ಣ ಸರಪ್ರೈಜ್ ಇರಲಿ ಅಂತ ಹೇಳಲಿಲ್ಲ..."


ಆತ ನಾನು ಅಂದುಕೊಂಡಿದ್ದಕ್ಕಿಂತ ಚಂದವೇ ಇದ್ದ...
ನನ್ನನ್ನೇ ನೋಡುತ್ತಿದ್ದ..


ನಾನು ನನ್ನನ್ನು ಗಮನಿಸಿಕೊಂಡೆ...


ಛೇ... !!!!
ಹಳೆ ನೈಟಿ ಹಾಕಿಕೊಂಡಿದ್ದೆ...!!


ಲಗುಬಗೆಯಿಂದ ಒಳಗೋಡಿದೆ...


ಕೈಗೆ ಸಿಕ್ಕಿದ ಚೂಡಿದಾರ ಹಾಕಿಕೊಂಡು ..
ಟೀ.. ಬಿಸ್ಕತ್ತು ರೆಡಿ ಮಾಡಿ ... ಟಿಪಾಯಿಯ ಮೇಲಿಟ್ಟೆ...


ಆತ ಟೀ  ಕುಡಿದು ಹೋದ...


ನನ್ನ ಯಜಮಾನರು ಖುಷಿಯಲ್ಲಿದ್ದರು..


"ನಿನ್ನ ಗೆಳೆಯ ನನಗೂ ಇಷ್ಟವಾದ ಕಣೆ...
ಕೆಮಿಕಲ್ ವಿಜ್ಞಾನಿಯಾದರೂ... ಕಂಪ್ಯೂಟರ್ ಬಗೆಗೆ ಆತನಿಗೆ ಬಹಳ ಗೊತ್ತಿದೆ...
ಅವನ ಸಾಹಿತ್ಯ ಆಸಕ್ತಿ ಖುಷಿಕೊಡುತ್ತದೆ...
ಇಂಥವನನ್ನು ಬಿಟ್ಟು ನನ್ನ ಮಾತಿಗೆ ಮರುಳಾಗಿ ನನ್ನ ಮದುವೆಯಾಯಲ್ಲೆ.."


ನನ್ನವ ಹೊಟ್ಟೆತುಂಬಾ ನಕ್ಕ...
ಅವರ ಹಾಸ್ಯಕ್ಕೆ ಅವರೊಬ್ಬರೇ ನಕ್ಕರು...


ಮರುದಿನ ನನ್ನವ ಆಫೀಸಿಗೆ ಹೋದಮೇಲೆ ಮಗುವನ್ನು ಮಲಗಿಸಿ ಕಂಪ್ಯೂಟರ್ ಹಚ್ಚಿಕೊಂಡೆ..


ಆತ ನೆಟ್ ನಲ್ಲಿ ಇರಲಿಲ್ಲ..
ನನಗೆ ಕಸಿವಿಸಿಯಾಯಿತು..


ಮೂರನೇ ದಿನವೂ  ನೆಟ್ ಗೆ ಬರ್ಲಿಲ್ಲ.. 
ಎಸ್ಸೆಮ್ಮೆಸ್ ಮಾಡಿದೆ.. ಉತ್ತರ ಬರ್ಲಿಲ್ಲ...


ನಾನು ಕನ್ನಡಿಯ ಮುಂದೆ ಹಳೆಯ ನೈಟಿಹಾಕಿಕೊಂಡು ನೋಡಿಕೊಂಡೆ..


ಸುಳ್ಳು ಹೇಳುವ ಕನ್ನಡಿ ನಿಜ ನುಡಿಯುತ್ತಿಲ್ಲ ಅನ್ನಿಸಿತು...
ಆ ಹಳೆಯ ನೈಟಿಯಲ್ಲೂ ನಾನು ಚಂದವಿದ್ದೇನೆ ಅನ್ನಿಸಿತು...


ಈ ಹುಡುಗನಿಗೇನಾಯಿತು...?


ಅವನ ನಿರೀಕ್ಷೆಯಂತೆ ನಾನು ಇಲ್ಲವೆ...?
ನನ್ನ ಆಕರ್ಷಣೆ.. 
ಚಂದಗಳೆಲ್ಲವೂ ಕಡಿಮೆಯಾಗಿ ಹೋಯಿತಾ?


ಇದೇನಿದು...?
ನನ್ನ ಗಂಡ.. ಮಗುವನ್ನು ಬಿಟ್ಟು ಅವನ ಬಗೆಗೆ ಯೋಚಿಸುತ್ತಿದ್ದೇನಲ್ಲಾ...


ಆತ ಮಾತನಾಡಿದರೆಷ್ಟು...? ಮಾತನಾಡದಿದ್ದರೆಷ್ಟು...?
ನನ್ನ ಬದುಕಿನಲ್ಲಿ ಅವನ ಸ್ಥಾನವೇನು?


ಅವನನ್ನು ಪ್ರೀತಿಸುತ್ತಿರುವೇನಾ? ನನ್ನದು ಪ್ರೀತಿಸುವ ವಯಸ್ಸಾ?


ಪ್ರಶ್ನೆಗಳಿಗೆ ಉತ್ತರ ಇರ್ಲಿಲ್ಲ..


ಇನ್ನೂ ನಾಲ್ಕೈದು ದಿನಗಳ ನಂತರ ಒಂದು ಎಸ್ಸೆಮ್ಮೆಸ್ ಬಂತು ಆ ಹುಡುಗನಿಂದ...


"ನನ್ನ..
ಒಂಟಿ..
ಕತ್ತಲ ಏಕಾಂತದ..
ಮೌನದ ಕ್ಷಣಗಳು ನಗುತ್ತವೆ...
ಬೆಳಕು..
ಬೆಳದಿಂಗಳಾಗಿ..
ಹುಣ್ಣಿಮೆ ಚಂದ್ರಮನಾಗಿ..
ನಿನ್ನ..
ಪ್ರೀತಿ...
ಕಣ್ಣುಗಳ ನೆನಪಾಗಿ...."


ವಾಹ್ !! 
ಎಂಥಹ ಸಾಲುಗಳು.. !
ನನ್ನನ್ನು ಮರೆತಿಲ್ಲ... 
ನನ್ನ ಮೇಲಿನ ಆಕರ್ಷಣೆ ಕಡಿಮೆಯಾಗಲಿಲ್ಲ ಇವನಿಗೆ !
ಖುಷಿಯಾಯ್ತು...


ಅವನೇ ಫೋನ್ ಮಾಡಿ ಮಾತನಾಡಿದ...


"ಎಲ್ಲಿ ನಾಪತ್ತೆಯಾಗಿದ್ದೆ...? ಸುದ್ದಿನೇ ಇಲ್ಲವಲ್ಲ..."


"ಹುಡುಗಿ...
ನನ್ನಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲವಾಗಿತ್ತು...


ಈಗ ಉತ್ತರ ಸಿಕ್ಕಿದೆ.."


"ನನ್ನ ಬಳಿ ಮಾತನಾಡದಿರುವಷ್ಟು ಮೌನ ಯಾಕೆ?...


ಅಷ್ಟೆಲ್ಲ ಪ್ರೀತಿಯ ಎಸ್ಸೆಮ್ಮೆಸ್ ಕಳಿಸ್ತೀಯಾ...?
ನಾನು ನಿನ್ನ ಪ್ರೀತಿಯ ಎಸ್ಸೆಮ್ಮೆಸ್ಸುಗಳನ್ನು ಬಹಳ ಮಿಸ್ ಮಾಡ್ಕೊಂಡೆ.. 


ನಿನ್ನ ಪ್ರೀತಿ.. ಪ್ರೇಮ ಅದೆಲ್ಲ ಸುಳ್ಳಾ...?"


"ನಿನ್ನನ್ನು...
ನಿನ್ನ ಕಣ್ಣನ್ನು ಯಾವಾಗಲೂ ಪ್ರೀತಿಸುತ್ತೇನೆ ಇದು ನಿಜ...
ಆದರೆ...
ನಿನ್ನ ಮೇಲೆ ಬೇಸರವಾಯ್ತು..."


"ಯಾಕೆ?"


"ನಿನ್ನ ಗಂಡ ಸರಿ ಇಲ್ಲ ಅಂತ ನೀನು ಹೇಳಿದ್ದು.....
ನಿಜ ಹೇಳಬೇಕೆಂದರೆ ನೀನೇ ಸರಿ ಇಲ್ಲ..."


"ಅದು ಹೇಗೆ...?"


"ನಿಮ್ಮ ಮನೆಗೆ ಬಂದಾಗ ಗೊತ್ತಾಯ್ತು...
ನಿನ್ನ ಗಂಡ ನಿನ್ನ ಮೇಲೆ ದಬ್ಬಾಳಿಕೆ ಮಾಡ್ತಾ ಇಲ್ಲ..
ನಿನಗೆ ಒಂದೂ ಮಾತನ್ನು ಎದುರು ಹೇಳುವವನಲ್ಲ..
ತನ್ನ ಅಭಿಪ್ರಾಯವನ್ನು ನಿನ್ನ ಮೇಲೆ ಹೇರುತ್ತಿಲ್ಲ..."


"ನಿಜ... 
ಆತ ಆ ವಿಷಯದಲ್ಲಿ ಬಹಳ ಒಳ್ಳೆಯವ..."


"ನಿನಗೆ ಸ್ವಾತಂತ್ರ್ಯ ಕೊಟ್ಟಿದ್ದಾನೆ...


ಹುಡುಗಿ...
ಪ್ರೀತಿ ಸಂಸಾರಕ್ಕೆ ಇನ್ನೇನು ಬೇಕು...?
ನಿನ್ನ ಮನೆಯಲ್ಲಿ ನಿನ್ನದೇ ದರ್ಬಾರು... ಕಾರುಬಾರು...
ನಿನ್ನಲ್ಲೇ... ಕೊರತೆಯಿದೆ...


ಇನ್ನೊಂದು ವಿಷಯ ಗೊತ್ತಾ...?"


"ಏನು...?"


"ನಿನ್ನ ಗಂಡ ಹೊರಗಡೆ ಕೆಲಸ ಮಾಡುವವನು..
ಅಲ್ಲಿ ಚಂದವಾಗಿ ರೆಡಿಯಾದ ಹೆಣ್ಣುಮಕ್ಕಳು ಕಣ್ಣಿಗೆ ನೋಡ ಸಿಗುತ್ತಾರೆ...
ನಿನಗೆ ಪ್ರತಿ ಹಂತದಲ್ಲಿ...
ಪ್ರತಿ  ಕ್ಷಣದಲ್ಲಿ ಅಲ್ಲಿ ಪ್ರತಿಸ್ಪರ್ಧಿಗಳಿದ್ದಾರೆ.."


ನನಗೆ ಕೋಪ ಬಂತು..


"ಅದಕ್ಕೇನೀಗ...?.."


"ಹುಡುಗಿ...
ವಾರಕ್ಕೊಂದು ದಿನ  ಗಂಡ ಮನೆಯಲ್ಲಿರುತ್ತಾನೆ..


ನೀನು ಸ್ವಲ್ಪ ಒಪ್ಪವಾಗಿ ರೆಡಿಯಾಗಿ...
ತೆಳುವಾಗಿ ಮೇಕಪ್ ಮಾಡಿಕೊಂಡು ನಗು ಸೂಸುತ್ತಿದ್ದರೆ ಎಷ್ಟು ಚಂದವಿರುತ್ತಿತ್ತು...


ಕೊಳೆ ಕೊಳೆಯಾದ ನೈಟಿ ಹಾಕಿಕೊಂಡು..
ತಲೆಯನ್ನೂ ಬಾಚಿಕೊಳ್ಳದೆ ...
ಅವನ ಭಾನುವಾರವನ್ನು ನೀರಸವಾಗಿ ಮಾಡುತ್ತೀಯಲ್ಲ..


ಹುಡುಗಿ ನಿನ್ನದೇ ತಪ್ಪುಗಳು...
ಎಲ್ಲವೂ ನಿನ್ನದೇ ತಪ್ಪುಗಳು..


ನಾನು ಬಂದೆನೆಂದು ಓಡಿ ಹೋಗಿ ನೈಟಿ ಬದಲಿಸಿ ಬಂದೆಯಲ್ಲ...


ನಿನ್ನ ಬದುಕಿನ ಪ್ರೀತಿ...
ನಿನ್ನ ಪತಿ ನಿನ್ನ ಬಳಿಯಲ್ಲಿದ್ದ...


ಅವನ ಇಷ್ಟದ ಬಗೆಗೆ.. 
ಆಕರ್ಷಣೆಯ ಬಗೆಗೆ ನೀನು ಯೋಚನೆಯೇ ಮಾಡಿಲ್ಲ...


ಪ್ರೀತಿ... 
ಪ್ರೇಮ  ಹೊರಗಡೆ  ಸಿಗುವದಿಲ್ಲ...
ನಮ್ಮ ಬಳಿಯಲ್ಲಿದ್ದರೂ..
ನಾವು ಅದನ್ನು ಕಂಡುಕೊಳ್ಳಬೇಕು... 
ನಾವು ಅದನ್ನು ಹುಡುಕಿ... ಕಾಯ್ದುಕೊಳ್ಳಬೇಕು... 
ಅದು ನಮ್ಮ ಹಕ್ಕು...
ಜವಾಬ್ದಾರಿ..."


ನಾನು ಅಪ್ರತಿಭಳಾದೆ...!!


"ಹುಡುಗಾ...
ಇಷ್ಟೆಲ್ಲ ಬೊಗಳೆ ಬಿಡುವ ನೀನು ಮಾಡಿದ್ದೇನು..?..


ನನಗೆ ಪ್ರೇಮದ ಎಸ್ಸೆಮ್ಮೆಸ್ಸು... 
ಕವನಗಳನ್ನು ..ಕಳಿಸ್ತೀಯಲ್ಲ..
ನಿನ್ನದೂ ಆಷಾಢಭೂತಿತನವಲ್ಲವೆ...?..


ನನ್ನಲ್ಲೂ ಒಂದಷ್ಟು ಹುಚ್ಚು ಕನಸು ಹುಟ್ಟಿಸಿ ಬಿಟ್ಟೆಯಲ್ಲ...


ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ಏನು ಹೇಳ್ತೀಯಾ...?"


"ಹುಡುಗಿ...
ನಾನು ಕೆಮಿಕಲ್ ವಿಜ್ಞಾನಿ.. 
ನೀನೂ ಕೂಡ ಅದನ್ನೇ ಓದಿದ್ದೀಯಾ...


ಒಂದು ರಾಸಾಯನಿಕ ಕ್ರಿಯೆ ನಡೆಯುವಾಗ "ವೇಗ ವರ್ಧಕ"  ಬಳಸುತ್ತಾರೆ..
"ಕ್ಯಾಟಲಿಸ್ಟ" ಅನ್ನುತ್ತಾರಲ್ಲ ಅದು..
ಅದರಿಂದ ರಾಸಾಯನಿಕ ಕ್ರಿಯೆಯ ವೇಗ ಜಾಸ್ತಿಯಾಗುತ್ತದೆ.. 


ಆದರೆ ಅದು ಕ್ರಿಯೆಯಲ್ಲಿ ಯಾವ ಪರಿಣಾಮವನ್ನೂ ಬೀರುವದಿಲ್ಲ..."


"ಅದಕ್ಕೂ.. ಇದಕ್ಕೂ ಏನು ಸಂಬಂಧ...?"


"ನಿನ್ನ ಮಗು... 
ಗಂಡ..
ನಿನ್ನ ಬಾಳು.. ಒಂದು ಕ್ರಿಯೆ..
ಅದರಲ್ಲಿ ನಾನು ಕ್ಯಾಟಲಿಸ್ಟ್ ಆಗಿರಬಲ್ಲೆ...


ನಿಮ್ಮ ಬಾಳಲ್ಲಿ ಪರಿಣಾಮ ಬೀರದ ಮೂರವನೆಯಾಗಿರಬಲ್ಲೆ ಅಷ್ಟೇ...


ನೀನೂ ಅಷ್ಟೆ..


ನನ್ನ ಮಕ್ಕಳು.. ಹೆಂಡತಿ ..
ಸಂಸಾರದಲ್ಲಿ..
ನನ್ನ ಕ್ಯಾಟಲಿಸ್ಟ್.. ವೇಗವರ್ಧಕ....


ಹಳತು... ಹಳಸದಂತೆ..
ಹೊಸತನ ಚಿಗುರಿಸುವದಷ್ಟೆ ಕ್ಯಾಟಲಿಸ್ಟ್.. ಕೆಲಸ...


ನಾನು ನಿನ್ನನ್ನು ಹಳೆ ನೈಟಿಯಲ್ಲಿ...
ಹಣೆಯ ಬೆವರುಗಳ ಸಾಲಿನ ...
ನಿನ್ನ ಆಯಾಸಗೊಂಡ ..


ಮಾದಕ  ಕಣ್ಣಿನ ಬಗೆಗೆ ಇನ್ನೂ ಒಂದಷ್ಟು ಕವನ ಬರೆಯ ಬಲ್ಲೆ...


ಇಷ್ಟೇ..
ನನ್ನ.. ನಿನ್ನ ನಡುವಿನ ಸಂಬಂಧ...!.."


ನನ್ನ ಕಣ್ಣುಗಳು ಒದ್ದೆಯಾಗತೊಡಗಿತು...
ನಾನು ಮುಂದೆ ಮಾತನಾಡಲಿಲ್ಲ...


ಕ್ಯಾಟಲಿಸ್ಟ್ ಹುಡುಗ ಇನ್ನೂ ಇಷ್ಟವಾದ...




( ಚಂದದ ಪ್ರತಿಕ್ರಿಯೆ.. ಸಂವಾದಗಳಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ...)