ಆಗ ನಾನು ಸಣ್ಣವನಿದ್ದೆ.....
ಮನೆಯ ಮುಂದಿನ ಹೇಡಿಗೆಯ ಮೇಲೆ ಕುಳಿತು ...
ರಸ್ತೆಯಲ್ಲಿ ಹೋಗುವ ನಾಯಿಗಳಿಗೆ ಕಲ್ಲು ಬೀಸುವದೆಂದರೆ ನನಗೆ ಬಲು ಮೋಜು....
ನಾನು ತುಂಬಾ ವೀಕಾಗಿದ್ದೆ...
ರಿಕೆಟ್ಸ್ ರೋಗದಿಂದ ಬಳಲುತ್ತಿದ್ದೆ.....
ಆಡಲು ಹೋದರೆ ಬಿದ್ದುಹೋಗುತ್ತಿದ್ದೆ...
ಬಹುಷಃ ..
ನನ್ನ ಅಸಹಾಯಕತೆಯ ಪೌರುಷವನ್ನು ನಾಯಿಯ ಮೇಲೆ ತೋರಿಸುತ್ತಿದ್ದೆ ಅಂತ ಈಗ ಅನ್ನಿಸುತ್ತಿದೆ...
ಹಾಗೆ ಒಂದು ನಾಯಿಗೆ ಕಲ್ಲು ಹೊಡೆದೆ..
ಅದು "ಕುಂಯ್ಯೋ... ಮುರ್ರೋ..." ಅಂತ ಅರಚುತ್ತ ಓಡಿತು...
ಮನೆಯ ಒಳಗಿದ್ದ ನನ್ನ ಕೇಶವ ಚಿಕ್ಕಪ್ಪ ಹೊರಗೆ ಬಂದರು..
"ನಾಯಿಗೆ ಹೊಡೆದೆಯಾ?"
"ಹೌದು ಚಿಕ್ಕಪ್ಪ..."
ಚಿಕ್ಕಪ್ಪ ಸ್ವಲ್ಪ ಹೊತ್ತು ಸುಮ್ಮನಿದ್ದು..
"ಒಳಗೆ ಬಾ ...
ಒಂದು ಕಥೆ ಹೇಳುತ್ತೇನೆ..."
ನನಗೆ ನನ್ನ ಚಿಕ್ಕಪ್ಪನ ಕಥೆಗಳೆಂದರೆ ಬಲು ಇಷ್ಟ...
"ಒಮ್ಮೆ..
ನಿನ್ನಂಥವನೊಬ್ಬ ಮನೆಯ ಮುಂದೆ ಕುಳಿತಿದ್ದ...
ಹೀಗೆ ರಸ್ತೆಯ ಮೇಲೆ ಹೋಗುತ್ತಿದ್ದ ಒಂದು ನಾಯಿಗೆ ಕಲ್ಲು ಹೊಡೆದ...
ನಾಯಿಗೆ ಆ ಏಟು ಜೋರಾಗಿ ತಾಗಿತು...
"ಆಯ್ಯೋಯ್ಯೋ... ಕುಂಯ್ಯೋ..." ಅಂತ ಆ ನಾಯಿ ಊಳಿಟ್ಟಿತು...
ಜೋರಾಗಿ ರೋಧಿಸಿತು....
ಆ ಕೂಗು ಮೇಲೆ ಇದ್ದ ದೇವರಿಗೆ ಕೇಳಿಸಿತು...!
ಆಗೆಲ್ಲ ದೇವರು ಇಷ್ಟೆಲ್ಲಾ ದುಬಾರಿಯಾಗಿರಲಿಲ್ಲ....
ಈಗಿನ ಹಾಗೆ ಗುಡಿಯೊಳಗೆ ಕತ್ತಲಲ್ಲೇ ಇರುತ್ತಿರಲಿಲ್ಲ...
ಸ್ವಲ್ಪ ಹೊರಗಡೆ ಓಡಾಡಲು ಬರುತ್ತಿದ್ದ...
ಕಷ್ಟದಲ್ಲ್ಲಿದ್ದವರ ಸಹಾಯಕ್ಕೆ ಕೂಡಲೇ ಬರುತ್ತಿದ್ದ...
ದೇವರು ನಾಯಿಯ ಬಳಿ ಪ್ರತ್ಯಕ್ಷನಾಗಿ
"ಯಾಕೆ ಅಳುತ್ತಿದ್ದೀಯಾ...? "
ಅಂತ ಕೇಳಿದ...
"ನನಗೆ ..
ಅಲ್ಲಿರುವ ಮನುಷ್ಯ... ಕಲ್ಲಿನಿಂದ ಹೊಡೆದ...! "
"ಸುಮ್ಮನೆ ..
ಯಾರಾದರೂ..
ಯಾಕೆ ಕಲ್ಲು ಹೊಡೆಯುತ್ತಾರೆ..?
ನೀನು ... ಏನೋ ಮಾಡಿರಬೇಕು..."
"ಇಲ್ಲ ದೇವರೆ...
ನಾನು ಅವನ ಕಡೆ ನೋಡಲೂ ಇಲ್ಲ...
ನನ್ನ ಪಾಡಿಗೆ ನಾನು ರಸ್ತೆಯಲ್ಲಿ ಬರುತ್ತಿದ್ದೆ..."
ಈಗ ದೇವರು ಮನುಷ್ಯನ ಬಳಿ ಬಂದ...
"ಯಾಕೆ ಆ ನಾಯಿಗೆ ಹೊಡೆದೆ...? "
"ನಿಜ ಹೇಳ್ತಿನಿ..
ಯಾಕೆ ಅಂತ ನನಗೂ ಗೊತ್ತಿಲ್ಲ...!
ಆ ನಾಯಿ ನೋಡಿದ ಕೂಡಲೆ ಹೊಡೆಯಬೇಕು ಅಂತ ಅನ್ನಿಸಿತು...
ಹೊಡೆದು ಬಿಟ್ಟೆ..."
"ಸುಮ್ಮನೆ ಹೋಗುತ್ತಿದ್ದ ನಾಯಿಗೆ ಹೊಡೆದಿದ್ದೀಯಾ..
ಇದು ತಪ್ಪು..
ನಿನಗೆ ಶಿಕ್ಷೆ ಆಗಲೇ ಬೇಕು..."
ದೇವರು ನಾಯಿಯ ಬಳಿ ಬಂದ...
"ಎಲೈ ... ನಾಯಿ...
ಆ ಮನುಷ್ಯ ತಾನು ಕಲ್ಲು ಹೊಡೆದದ್ದು ಹೌದೆಂದು ಒಪ್ಪಿಕೊಂಡಿದ್ದಾನೆ..
ಅವನಿಗೆ ಶಿಕ್ಷೆ ಕೊಡಬೇಕು..
ಯಾವ ಶಿಕ್ಷೆ ಅಂತ ನೀನು ಹೇಳು...
ನೋವು ಅನುಭವಿಸಿದವ ನೀನು..
ನೀನು ಹೇಳಿದ ಶಿಕ್ಷೆ ಅವನಿಗೆ ಕೊಡುತ್ತೇನೆ..."
"ದೇವರೆ..
ಹೇಳಿಕೇಳಿ ಬೀದಿ ನಾಯಿ ನಾನು..
ನೀನು ದೇವರು... ಅವನು ಮನುಷ್ಯ...
ಮನುಷ್ಯನಿಗೆ ಶಿಕ್ಷೆ ಕೊಡುವಂಥಹ ..
ಯೋಗ್ಯತೆಯಾಗಲಿ..
ಅಧಿಕಾರವಾಗಲಿ ನನ್ನಂಥಹ "ಹಡಬೆ" ಬೀದಿ ನಾಯಿಗಳಿಗಿಲ್ಲ...
ಅದೆಲ್ಲ ನೀವೇ ನೋಡಿಕೊಳ್ಳಿ.."
ದೇವರು ಒಪ್ಪಲಿಲ್ಲ...
ಮನುಷ್ಯನನ್ನು ಕರೆಸಿದ..
"ಕಾರಣವಿಲ್ಲದೆ ..
ನಾಯಿಗೆ ನೋವನ್ನುಂಟು ಮಾಡಿದ ತಪ್ಪಿಗೆ..
ಈ ನಾಯಿಕೊಡುವ ಶಿಕ್ಷೆಗೆ ನೀನು ಒಪ್ಪಿಕೊಳ್ಳಬೇಕು..."
ಆಗ ..
ಮನುಷ್ಯ ಈಗಿನಷ್ಟು ಕೆಟ್ಟು ಹಾಳಾಗಿರಲಿಲ್ಲ ..
ತಪ್ಪಾಗಿದ್ದರೆ ...
ದೇವರ ಬಳಿಯಾದರೂ ಒಪ್ಪಿಕೊಳ್ಳುತ್ತಿದ್ದ..
ಮನುಷ್ಯ ಒಪ್ಪಿಗೆ ಸೂಚಿಸಿದ...
ನಾಯಿ ಬಹಳಷ್ಟು ವಿಚಾರ ಮಾಡಿತು...
ಶಿಕ್ಷೆಯನ್ನು ಪ್ರಕಟಿಸಿತು....
" ನನಗೆ ..
ಕಲ್ಲು ಎಸೆದ ಈ ಮನುಷ್ಯ ಮುಂದಿನ ಜನ್ಮದಲ್ಲಿ...
ಬ್ರಹ್ಮಚಾರಿಯಾಗಿ..
ಯಾವುದಾದರೂ...
ಜಾತಿ.. ಮತ.. ಧರ್ಮದ ಗುರುಗಳಾಗಿ ಹುಟ್ಟಲಿ...
ಆಂತರ್ಯದಲ್ಲಿ ಮನುಷ್ಯನಾಗಿ...
ಜೀವನ ಪೂರ್ತಿ ಒಣ ಉಪದೇಶ ಮಾಡುತ್ತಿರಲಿ..."
ಚಿಕ್ಕಪ್ಪ ಕಥೆ ಮುಗಿಸಿದರು....
ನನಗೆ ಬಹಳ ಆಶ್ಚರ್ಯವಾಯಿತು...!
" ಅರೇ..
ಇದೇನಿದು..ಚಿಕ್ಕಪ್ಪಾ..!
ಇದು ಶಿಕ್ಷೆಯಾ?..."
"ಈ ಕಥೆಯ ಪ್ರಕಾರ ..
ಇದು ಬಲು ದೊಡ್ಡ ಶಿಕ್ಷೆ...
ನೀನು ದೊಡ್ದವನಾದ ಮೇಲೆ ಈ "ಶಿಕ್ಷೆಯ ಪ್ರಮಾಣ" ಇನ್ನೂ ಅರ್ಥವಾಗಬಹುದು.."
ಅಂದಿನಿಂದ ..
ನಾನು ಯಾವ ನಾಯಿಗೂ ಕಲ್ಲು ಹೊಡೆದದ್ದು ನೆನಪಿಲ್ಲ....
(ಆಸ್ತಿಕರ ಕ್ಷಮೆ ಕೋರುವೆ...)
26 comments:
ಕಥೆ ಅದ್ಬುತವಾಗಿದೆ ಅಣ್ಣಯ್ಯ.
ತೀರಾ ಆಳವಾಗಿ ಯೋಚಿಸದರೆ ಆ ನಾಯಿಯು ಮನುಷ್ಯನಿಗೆ ನೀಡಿದ ಶಿಕ್ಷೆ ಸರಿಯಾಗಿದೆ.
ಯಾವುದೇ ತಪ್ಪಿಲ್ಲದ ನಾಯಿಗೆ ಅನ್ಯಾಯವಾಗಿ ಅವನು ಹೊಡೆದ್ದರಿಂದ ಮುಂದೆ ಅವನು ಎಲ್ಲರಿಗೂ ನ್ಯಾಯ-ನೀತಿ, ಧರ್ಮ-ಅಧರ್ಮಗಳ ಬೋದನೆ ಮಾಡಲಿ. ಆ ಮನುಷ್ಯನಂತೆ ಇತರರು ತಪ್ಪು ಮಾಡದಿರಲಿ ಎಂಬ ಮುಂದಾಲೋಚನೆ ಇರಬಹುದು.
ಒಟ್ಟಿನಲ್ಲಿ ಕಥೆಯ ಸಾರ ಚೆನ್ನಾಗಿದೆ.
ಕಥೆ ಚೆನ್ನಾಗಿದೆ..ನಮಗೆ ಏನು ತೊಂದರೆ ಮಾಡದವರಿಗೆ ತೊಂದರೆ ಕೊಡುವುದು ತುಂಬಾ ದೊಡ್ಡ ತಪ್ಪು. ನಿಜಕ್ಕೂ ದೊಡ್ಡ ಶಿಕ್ಷೆಯೇ ಆ ಮನುಷ್ಯನಿಗೆ..ಎಲ್ಲ ಪ್ರಾಪಂಚಿಕ ಆಸೆ ಐಭೊಗಗಳನ್ನೂ ತ್ಯಜಿಸಿ ಸನ್ಯಾಸಿಯಾಗಿ ಬದುಕುವುದು ಕಷ್ಟ. ಮನುಷ್ಯ ಸನ್ಯಾಸಿಯಾಗಿ ದೇಹಕ್ಕೆ ಕಾವಿಯನ್ನು ಉಡಿಸಬಹುದು. ಆದರೆ ಮನಸ್ಸಿಗೆ ಸನ್ಯಾಸತ್ವವನ್ನು ಕಲಿಸುವುದು ಕಷ್ಟವೆಂದು ತೋರುತ್ತದೆ. ಧರ್ಮ ಬೋಧಿಸಬೇಕಾದರೆ ಅದನ್ನು ಪಾಲಿಸಲು ಬೇಕಾಗಿರುತ್ತದೆ ಅಲ್ಲವೇ.
ಹೊತ್ತು ಹೋಗದ ಹೊತ್ತಿನ ಮುತ್ತಿನಂತಹ ಕಥೆಗಳು ಮತ್ತಷ್ಟು ಬರಲಿ..
ಕತೆಯ ನೀತಿ ಚೆನ್ನಾಗಿದೆ ಪ್ರಕಾಶಣ್ಣ,
ಬಹುಷಃ ನಾಯಿಗೆ ಕಲ್ಲು ಹೊಡೆದವರು ....
ಇಂದು.......ಕಾವಿ ತೊಟ್ಟವರ ಸಂಖ್ಯೆ ಜಾಸ್ತಿಯಿದೆ ಅಂದರೆ ?
ಮುಂದೇನಾಗಬಹುದು .....
ರಾಜಕೀಯ ಪಕ್ಷ ಹುಟ್ಟಬಹುದು....
sorry ಇದು ನನ್ನ ಭಾವ ಮಾತ್ರ ....
ಗೆಳತಿಯವರೆ...
ಸಾಧಾರಣ ಮನುಷ್ಯನಾಗಿ ಹುಟ್ಟಿ ಉಪದೇಶ ಮಾಡುವ ಧರ್ಮ ಗುರುವಾಗುವದು ಬಹಳ ಕಷ್ಟ...
ಆಂತರ್ಯದಿಂದಲೂ ಒಳ್ಳೆಯವರಾಗಿ ಉಪದೇಶ ಮಾಡುವದು ಕಷ್ಟ...
ಆಗ ಸಣ್ಣವನಿದ್ದಾಗ ಈ ಶಿಕ್ಷೆಯ ಪ್ರಮಾಣ ಅಷ್ಟೊಂದು ಅರ್ಥವಾಗಿರಲಿಲ್ಲ...
ಈಗ ಅರ್ಥವಾಗುತ್ತಿದೆ...
ಪ್ರತಿಕ್ರಿಯೆಗೆ ಧನ್ಯವಾದಗಳು...
ಸಂಧ್ಯಾ...
ನಿಜ ಮನಸ್ಸಿಗೆ "ಕಾವಿ" ಬಟ್ಟೆಯಾಗಲಿ...
ಇನ್ಯಾವುದೆ ಬಣ್ಣದ "ಸಾತ್ವಿಕ" ರಂಗಿನ ಬಟ್ಟೆಯಿಂದ ಮುಚ್ಚಲು ಸಾಧ್ಯವಿಲ್ಲ...
ಜಾತಿ.. ಮತಗಳ ಉಪದೇಶದ ಗುರುವಾಗುವದು ಎಷ್ಟು ಕಷ್ಟ ಅಲ್ಲವಾ?
ಆಂತರ್ಯದಿಂದಲೂ ಸಾತ್ವಿಕರಾಗಿ ಉಪದೇಶ ಮಾಡಬೇಕಲ್ಲ...!
ಹುಳುಕುಗಳಿದ್ದರೆ ಒಳಗೊಳಗೆ ಚುಚ್ಚ ಬಹುದಲ್ಲವೆ?
ಚಂದದ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು...
ವಂದನಾಗೆ ವಂದನೆಗಳು...
ಎಲ್ಲ ಧರ್ಮಗುರುಗಳು ಹಾಗಿಲ್ಲ ಅಂತ ಅಂದುಕೊಳ್ಳೋಣ...
ಜಾತಿ.. ಮತಗಳು ...
ಅವುಗಳ ಉಪದೇಶಗಳು ಅಷ್ಟೆಲ್ಲ ಪರಿಣಾಮಕಾರಿಯಾಗಿದ್ದಲ್ಲಿ ಸಮಾಜದಲ್ಲಿ ಅಪರಾಧಗಳು ಕಡಿಮೆಯಾಗಬೇಕಿತ್ತಲ್ಲವೆ?
ಉಪದೇಶ ಮಾಡುವವರದ್ದೇ ಒಂದು ಪಕ್ಷ ! ಹ್ಹಾ.. ಹ್ಹಾ.. ಚೆನ್ನಾಗಿದೆ... !
ಚಂದದ ಪ್ರತಿಕ್ರಿಯೆಗೆ ಮತ್ತೊಮ್ಮೆ ವಂದನೆಗಳು..........
Tumba chennagide....... really toching......
ಅಣ್ಣಯ್ಯ, ಕಥೆ ತುಂಬಾ ಚೆನ್ನಾಗಿದೆ. ಮನಸಿನಂತೆ ಮಹದೇವ ಮನಸ್ಸು ಸ್ವಚ್ಚವಾಗಿದ್ದರೆ ಒಳಿತನ್ನೇ ಮಾಡುತ್ತೇವೆ ಅಲ್ಲವೇ...
ಮಾರ್ಮಿಕವಾದ ಕಥೆ ಪ್ರಕಾಶಣ್ಣ. ಬಹುಶಃ ನಾಯಿ ವಿಧಿಸಿದ ಶಿಕ್ಷೆಗಿಂತ ದೊಡ್ಡ ಶಿಕ್ಷೆಯಿಲ್ಲ . ನೈಸರ್ಗಿಕ ನಿಯಮಗಳನ್ನು ಮೀರಿ ಬದುಕುವುದು ಬಹಳ ಕಷ್ಟದ ಕೆಲಸ
ಸರಳ ಸುಂದರ ಅರ್ಥಪೂರ್ಣ ಕಥೆ,,,,
ವಿಡಂಬನೆ ಕತೆ! ತುಂಬಾ ಚೆನ್ನಾಗಿದೆ.
ಪ್ರಕಾಶಣ್ಣ;ಶಾಪವನ್ನೂ ವರವನ್ನಾಗಿಸಿಕೊಳ್ಳುವ ಕಾವಿ ತೊಟ್ಟ ಚಾಲಾಕಿ 'ನಿತ್ಯಾನಂದ'ರಿರುವ ಕಾಲ ಇದು.ಇನ್ನೂ ಯಾವುದಾದರೂ ಕಠಿಣ ಶಿಕ್ಷೆ ಕೊಡುವಂತೆ ದೇವರಿಗೆ PIL ಸಲ್ಲಿಸಬೇಕು.
ಈಗಿನ ಮನಸ್ಥಿತಿಯಲ್ಲಿ ಅಂತಹ ಕಲ್ಲನ್ನು ವಿನಾಕಾರಣ ಈಗಷ್ಟೇ ಹೊಡೆಸಿಕೊಂಡ ಬೀದಿ ನಾಯಿಯ ಪರೀಸ್ಥಿತಿ ನನ್ನದು!
ಅಸಲಿಗೆ ದೇವರಿದ್ದಾನ ಪ್ರಕಾಶಣ್ಣ? :-( ;-(
ಬರಹ ಬಹಳ ಯೋಚನಾ ಲಹರಿಯನ್ನೇ ಹರಿಯ ಬಿಡುತ್ತದೆ...ನಾಯಿಗೆ ಕಲ್ಲು ಹೊಡೆಯೋದು..ಇಷ್ಟವಿಲ್ಲದ, ಗೊತ್ತು ಗುರಿ ಇಲ್ಲದ ಕೆಲಸ ಮಾಡುತ್ತಾ ಕಾಲ ಹಾಕುವುದು...
ನನ್ನ ಬಾಳು ನಾಯಿ ಜನ್ಮ ಆಗೋಯ್ತು ಅಂತ ನಮ್ಮನ್ನೇ ನಾವು ಬಹಳ ಹಳಿದುಕೊಳ್ಳುತ್ತೇವೆ..ಅದಕ್ಕೆ ಕಾರಣ..ಅದರ ಗೊತ್ತು ಗುರಿ ಇಲ್ಲದ ಜೀವನ ಮಾರ್ಗ..
ಧರ್ಮ ಗುರುಗಳು ಕೂಡ ಯಾವುದೋ "ಕಟ್ಟು" ಪಾಡಿಗೆ ಬಿದ್ದು..ಬಲವಂತದ ಮಾಘಸ್ನಾನ ಮಾಡಲು ಜೀವನ ಪೂರ್ತಿ ಒಂಟಿಯಾಗಿ ಸಾಗಿ ಹಾಕುತ್ತಾರೆ..
ಪುರಾಣ ಹೇಳೋದು..ಬದನೇಕಾಯಿ ತಿನ್ನೋದು ಎರಡು ಒಂದೇ ಅರ್ಥ ಕೊಟ್ಟರೂ ಕೂಡ..ಆಸೆಯ ಗುಪ್ಪೆಯನ್ನು ಒತ್ತಿ ಒತ್ತಿ ಹಿಡಿದು..ನಿರಾಳವಾಗಿ ಬದುಕುವ ಸೋಗಲಾಡಿತನ ಬಹಳ ಕಷ್ಟ..ಎಲ್ಲಾರೋ ಶಂಕರಾಚಾರ್ಯ, ವಿವೇಕಾನಂದ ಆಗಿದ್ದಿದ್ದರೆ..ಪ್ರಪಂಚ ಇನ್ನು ಸುಂದರವಾಗಿ ಕಾಣುತಿತ್ತು..
ಪ್ರಕಾಶಣ್ಣ,
ಎಂದಿನಂತೆ ತುಂಬಾ ಚೆನ್ನಾಗಿರುವ ಕಥೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು…
ಬ್ರಹ್ಮಚಾರಿಯಾಗಿ ಅಥವಾ ಧರ್ಮ ಗುರು ಆಗಿ ಹುಟ್ಟುವುದು ನಿಜವಾಗಿ ಕಷ್ಟದ ಕೆಲಸವೇ?
ಇವತ್ತಿನ ಪರಿಸ್ಥಿತಿ ಹಾಗೆಯೆ ಇದೆ.
ಕೇವಲ ಪುಸ್ತಕ ಓದಿ ನೀಡುವ ಒಣ ಉಪದೇಶ ನೀಡುವ ಜಾತಿ.. ಮತ.. ಧರ್ಮದ ಗುರುಗಳೇ ಬಹುತೇಕ ಎಲ್ಲ ಕಡೆ ತುಂಬಿದ್ದಾರೆ.
ಇವರಂತಾಗುವುದು ನಿಜವಾಗಿಯೂ ದೊಡ್ಡ ಶಿಕ್ಷೆಯೇ ಸರಿ.
ಆದರೆ ನಿಜವಾದ ಬ್ರಹ್ಮಚಾರಿಗೆ, ನಿಜವಾದ ಸದ್ಗುರುವಿಗೆ ಅವನು ನಡೆದುಕೊಳ್ಳುವ ಅವನ ಕಷ್ಟಕರ ಆಚರಣೆಗಳು ಅವನಿಗೆ ಯಾವತ್ತೂ ಸುಖಕರವೇ. ಅವನು ನೀಡುವ ಬೋಧನೆಗಳು ಅವನನ್ನೂ ಅನಂದಪಡಿಸಿ ಇತರರನ್ನೂ ಅನಂದ ಪಡಿಸುತ್ತದೆ. ಆ ಸದ್ಗುರುವು ಪ್ರತಿ ಕ್ಷಣದಲ್ಲೂ ಆನಂದದಿಂದ ಇರುತ್ತಾನೆ. ಈ ವಿಚಾರವನ್ನು ನಾನು ಕೇವಲ ತಿಳಿದಿದ್ದು, ಅರಿತಿದ್ದಲ್ಲ. ಆದರೂ ನಮ್ಮ ಪ್ರಾಚೀನ ಪರಂಪರೆಯನ್ನು ಸರಿಯಾಗಿ ಅವಲೋಕಿಸಿದಾಗ ಈ ವಿಚಾರ ಸರಿ ಎನಿಸುತ್ತದೆ. ಸರಿ ಹೌದಾದರೆ ನಾಯಿಕೊಟ್ಟ ಶಿಕ್ಷೆ ವರವಾಗಿ ಪರಿಣಮಿಸಬಹುದೇ?
ನಾಗಶ್ರೀ...
ನಮ್ಮ ದೇಶ ಗುರು ಪರಂಪರೆಯುಳ್ಳ ದೇಶ....
ಗುರುನಾನಕ್, ರಾಘವೇಂದ್ರ ಸ್ವಾಮಿಗಳು, ಶ್ರೀಧರಸ್ವಾಮಿಗಳು...ಸಮರ್ಥ ರಾಮದಾಸರು, ವಿದ್ಯಾರಣ್ಯರು ಇತ್ಯಾದಿ ಗುರುಪಂಪರೆಯೇ ನಮ್ಮಲ್ಲಿದೆ...
ಇತ್ತೀಚೆಗೆ ಕಳ್ಳ ಕಾವಿ ಸ್ವಾಮಿಗಳು...
ಆರನೂರು ಎಕರೆ ಜಾಗ ಹೊಂದಿರುವ " ನಿತ್ಯವೂ ಆನಂದ ಹೊಂದುವ" ಕಪಟ ಸ್ವಾಮಿಗಳು"
ನಮ್ಮ ಸಂಸ್ಕೃತಿಯ ಹೆಸರನ್ನು ಕೆಡಿಸುತ್ತಿದ್ದಾರೆ..
ಸಾಧಕರ್ಯಾರು? ಕಪಟಿಗಳ್ಯಾರು ಜನರಿಗೆ ಗೊಂದಲಿಕ್ಕೀಡಾಗಿದ್ದಾರೆ..
ಕಪಟ ಸ್ವಾಮಿಗಳಿಗೆ "ಉಪದೇಶ ಗುರುವಿನ" ಸ್ಥಾನ ಖುಷಿಯಾಗಬಹುದೇನೊ...
ಪ್ರತಿಕ್ರಿಯೆಗೆ ಧನ್ಯವಾದಗಳು...
ಕಥೆ ತುಂಬಾ ವಿಬಿನ್ನವಾಗಿದೆ. ಚನ್ನಾಗಿದೆ.
ಯಾಕಿದು ಸನ್ಯಾಸಿಯಾಗುವ ಶಿಕ್ಷೆ.? ಇಂತವರು ಸನ್ಯಾಸಿಯಾದರೆ ಸಮಾಜಕ್ಕೆ ಶಿಕ್ಷೆ ಅಲ್ಲವೆ..?
www.taxstory.blogspot.com
ಪ್ರಕಾಶಣ್ಣ ಒಳ್ಳೆಯ ಕಥೆ.... ನಿಜವಾಗಿಯೂ ನೈಸರ್ಗಿಕ ನಿಯಮವನ್ನು ಮೀರಿ, ಮನಸ್ಸಿನ ಹತೋಟಿ ಹಿಡಿದು ಬದುಕುವುದು ಕಷ್ಟಕರವೇ... ಅದರಲ್ಲೂ ನಾಯಿಗಳಿಗೆ 'ಅದು' ಕಷ್ಟದ ಕೆಲಸವಲ್ಲವೇ...!! ಅದಕ್ಕೇ ನಾಯಿ ತನ್ನ ಕಡೆಯಿಂದ ಯೋಚಿಸಿ ಅದರ ಮಟ್ಟದಲ್ಲೇ ಕಷ್ಟಕರ ಎನ್ನಿಸುವ ಶಿಕ್ಷೆ ಕೊಟ್ಟಿದೆ...! :P
ಈಗಿನ ಕಾಲದಲ್ಲಿ ಕಾವಿ ತೊಟ್ಟವರೆಲ್ಲ ಧರ್ಮ ಗುರುಗಳಲ್ಲ....
ಪ್ರಕಾಶಣ್ಣ,
ನೀವು ಕತೆ ಹೇಳುವ ರೀತಿ ಎಷ್ಟು ಚಂದವೋ ಅಂತೆಯೇ ಕತೆಯ ಸಾರಾಂಶ ಕೂಡಾ.
ಸಂಪಾದನೆಯ ಸುಲಭ ಮಾರ್ಗ ಅಂದರೆ ಸನ್ಯಾಸಿಯ ವೇಷ ಹಾಕುವುದು ಎಂದು ನಂಬಿಕೆ ಇರುವ ಈ ಕಾಲದಲ್ಲಿ ದೇವರೇನಾದರೂ ಸನ್ಯಾಸಿ ಆಗುವಂತೆ ವರ ಕೊಟ್ಟರೆ ಮುಗಿದೇ ಹೋಯಿತು!!!
ಏನೇ ಇರಲಿ, ಕತೆ ಇಷ್ಟವಾಯ್ತು.
ವಿಡಂಬನೆಯ ಕತೆ. ಈಗ ಕಾವಿ ತೊಡುವುದು ಶಿಕ್ಷೆಯಲ್ಲ. ಖಾದಿ, ಖಾಕಿಗಳನ್ನು ಅಡ್ಡಬೀಳಿಸುತ್ತ, ನಿತ್ಯವೂ 'ಆನಂದ' ಪಡುತ್ತ ಆರಾಮಾಗಿರೋದರಿಂದ ಅದು ವರವಾಗಿದೆ
ವಿಡಂಬನೆಯ ಕತೆ. ಈಗ ಕಾವಿ ತೊಡುವುದು ಶಿಕ್ಷೆಯಲ್ಲ. ಖಾದಿ, ಖಾಕಿಗಳನ್ನು ಅಡ್ಡಬೀಳಿಸುತ್ತ, ನಿತ್ಯವೂ 'ಆನಂದ' ಪಡುತ್ತ ಆರಾಮಾಗಿರೋದರಿಂದ ಅದು ವರವಾಗಿದೆ
ಕಥೆಯ ಮಧ್ಯವೊಂದು ನೀತಿ, ತಿಳಿಯದೆಯೇ ಒಳಹೊಕ್ಕೋ ಒಂದು ತಿಳುವಳಿಕೆ, ಎಲ್ಲೋ ಹೋಗಿ ಬಂದು ಮಾಡುವಂತೆ ಮಾಡುವ ಒಂದು ವಿಡಂಬನೆ.. ಚೆನ್ನಾಗಿದೆ ಪ್ರಕಾಶಣ್ಣ.
ಎಲ್ಲ ಸಂಬಂಧಗಳನ್ನೂ, ಎಲ್ಲ ಮೋಹವನ್ನೂ ಬಿಟ್ಟವನು ಸಂನ್ಯಾಸಿ. ಆದರೆ ಈಗ ಕೋಟಿಗಟ್ಟಲೇ ಮೌಲ್ಯದ ಕಾರುಗಳಲ್ಲಿ ಓಡಾಡುವ, ತಮ್ಮದೇ ಸಾಮ್ರಾಜ್ಯವನ್ನು ಕಟ್ಟುವ, ಬಡವರ ಪಾಲಿಗೆ ಎಂದೂ ಸಿಗದೇ ಸದಾ ಧನಿಕರ ಸಾವಿರ ಸಾವಿರದ ಪಾದಪೂಜೆ ಬಯಸುವ costly (ಕ್ಷಮೆಯಿರಲಿ) ಸ್ವಾಮಿಗಳಿಂದ ಸಚ್ಚಾರಿತ್ರದ ಸಂನ್ಯಾಸಿಗಳ , ಯತಿ ಪರಂಪರೆಯ ಮರ್ಯಾದೆ ಹರಾಜಾಗುತ್ತಿದೆ. ಸರ್ವತ್ಯಕ್ತರಾದವರಿಗೆ, ಮೋಹವನ್ನು ತ್ಯಜಿಸಿ ಎಂದು ಉಪದೇಶಗಯ್ಯುವವರಿಗೆ ಸಂಪತ್ತಿನ ಮೋಹವೇಕೆ ?
ಈ ಕಥೆಯನ್ನು ಓದಿದವರು ಖಂಡಿತ ವಾಗಿ ನಾಯಿಗೆ ಕಲ್ಲು ಹೊಡೆಯುತ್ತಾರೆ.ಯಾರಿಗುಂಟೂ ಯಾರಿಗಿಲ್ಲಾ ಕಲ್ಲು ಎಸೆದ ಈ ಮನುಷ್ಯ ಮುಂದಿನ ಜನ್ಮದಲ್ಲಿ...
ಬ್ರಹ್ಮಚಾರಿಯಾಗಿ..
ಯಾವುದಾದರೂ...
ಜಾತಿ.. ಮತ.. ಧರ್ಮದ ಗುರುಗಳಾಗಿ ಹುಟ್ಟಲಿ...ಆಹಾ ಎಂತಹ ಪುಣ್ಯಾ ಜೈ ನಿತ್ಯಾನಂದೆಶ್ವರ.
ಎಂದಿನ ನಿಮ್ಮ ಶೈಲಿ, ಆದರೆ ವಸ್ತು ಮಾರ್ಮಿಕ ಅಭಿನಂದನೆ..ಮತ್ತೆ ಗೆದ್ದಿರುವಿರಿ..
tumba klishta karavaada sankeerna kathe
Nice...
Post a Comment