ತುಂಬಾ ದಿನಗಳಾಗಿತ್ತು ಶಾರಿಗೆ ಫೋನ್ ಮಾಡದೆ...
ಬಹಳ ಖುಷಿಯಿಂದ ಮಾತನಾಡಿದಳು..
"ಏನೋ ಡುಮ್ಮಣ್ಣಾ...
ಹೇಗಿದ್ದೀಯೋ...?...
ನಿನ್ನ ಆಕಾರಕ್ಕೆ ಗೊಮಟೇಶ್ವರನನ್ನೂ ಹೋಲಿಸೋ ಹಾಗಿಲ್ಲವಲ್ಲೊ...
ನಿನ್ನ ಸೈಜಿನ ಬಟ್ಟೆ ಸಿಗುತ್ತದೋ...?
ಅಥವಾ ಫ್ಯಾಕ್ಟರಿಗೇ ಹೋಗಿ ತರ್ತೀಯೋ...?
ಅಲ್ಲಾ...
ಯಾವ ಅಂಗಡಿ ಸಾಮಾನು ತಿಂತೀಯಾ ಮಾರಾಯನೆ...?
ಊರಿಗೆ ಬರ್ತಾ ನಮ್ಮನೆಗೂ ಸ್ವಲ್ಪ ತಗೊಂಡು ಬಾ...ನಮ್ಮ ಯಜಮಾನ್ರೀಗೂ ಹಾಕ್ತಿನಿ....!
ನಾನು ಮಾಡಿದ ಅಡಿಗೆ ಊಟ ಮಾಡಿ ..
ನಮ್ಮನೆ ಆಳು ಡುಮ್ಮ ಆದ...!
ಕೊಟ್ಟಿಗೆಯಲ್ಲಿ ನಮ್ಮನೆ ಎಮ್ಮೆನೂ ದಪ್ಪಗಾಯ್ತು....!
ಮಾರಾಯನೆ...
ಇವರು ಮಾತ್ರ ಹೀಗೆ ಇದ್ದಾರೆ ನೋಡು...! "
ಈ ಶಾರಿ ಮಾತನಾಡಿದರೆ ಹೀಗೆನೇ...
"ಅಯ್ಯೋ ಬಿಡು ಮಾರಾಯ್ತಿ...!
ನನ್ನ ಸೈಜಿನ ಕಷ್ಟ ನಿನಗೆಲ್ಲಿ ಅರ್ಥ ಆಗಬೇಕು...?
ಈ ದಪ್ಪ ಆಗೋದು...
ತೆಳ್ಳಗಾಗೋದು ನಮ್ಮ ಕೈಯಲ್ಲಿ ಇಲ್ಲ ನೋಡು...
ನನ್ನ ಟೆನ್ಷನ್ ನನಗೆ ಮಾರಾಯ್ತಿ..."
"ನಿನಗೆಂಥಹ ಟೆನ್ಷನ್ನೋ...
ನಮ್ಮ ಯಡಿಯೂರಪ್ಪನಿಗೆ ಇಲ್ದೇ ಇರುವಂಥಾದ್ದು...?
ನಮ್ಮ ಯಡಿಯೂರಪ್ಪನ್ನ ನೋಡು...
ಪಾಪ ಅನ್ನಿಸ್ತದೆ...
ಹೆಂಗಿದ್ದವ ಹೆಂಗಾಗಿ ಹೋದ... !"
"ಹೌದು ಕಣೆ ಶಾರಿ...
ಯಡಿಯೂರಪ್ಪನವರ ವರ್ತನೆ ನನಗೂ ಅರ್ಥ ಆಗ್ಲಿಲ್ಲ...
ಬಿಜೇಪಿ ಇಷ್ಟ ಇಲ್ಲ ಅಂದ್ರೆ ..
ಬಿಟ್ಟು ಹೋಗಿಬಿಡ್ಬೇಕಿತ್ತು...
ಬೇರೆ ಪಕ್ಷ ಸೇರ ಬಹುದಿತ್ತು...
ಅಥವಾ ಹೊಸ ಪಕ್ಷ ಮಾಡ ಬಹುದಿತ್ತು...
ದಿನಾಲೂ ಈ ರಂಪಾಟ...
ಜಗಳ...
ಈ ಬ್ರೇಕಿಂಗ್ ನ್ಯೂಸು... ಬೇಜಾರಾಗಿದೆ ಕಣೆ..."
ಯಾವಾಗ್ಲೂ ರಾಜಕೀಯ ಅಂದ್ರೆ ಅಲರ್ಜಿ ಅಂತಿದ್ದವ ..
ನನಗೆ ತಡೇಯಲಾಗದೆ ಶಾರಿ ಹತ್ತಿರ ಹೇಳಿಕೊಂಡೆ...
"ಹೊಟ್ಟೆ ಇದ್ದವರೆಲ್ಲ ಬುದ್ಧಿವಂತರಾಗಿದ್ರೆ ...
ನೀನು ..
ಇಷ್ಟು ಹೊತ್ತಿಗೆ ನೊಬೆಲ್ ಬಹುಮಾನ ಗೆಲ್ತಿದ್ದೆ ಬಿಡು...!
ದಿನಾಲೂ ಪೇಪರ್ ಓದ್ತೀಯಾ...
ಒಂದು ಅರ್ಥ ಆಗೋದಿಲ್ಲ ಬಿಡು..."
"ಏನು ಅದು ನನಗೆ ಅರ್ಥ ಆಗ್ದೇ ಇರೋ ರಾಜಕೀಯ...?"
" ಅದೆಲ್ಲಾ... ರಾಜಕೀಯ ತಂತ್ರ ಕಣೊ...
ಸೋನಿಯಾ ಗಾಂಧಿ ಬಂದ್ರು....
ಎಲ್ಲೆಲ್ಲಿ ಹೋದ್ರು...
ಏನೇನೋ ಮಾತುಕಥೆ ನಡೀತು...
ಒಂದು ಡೀಲು ಆಗಿರ್ಲಿಕ್ಕೂ ಸಾಕು..."
"ಏನದು?...."
"ನಮ್ಮ ಸೋನಿಯಾ ಯಡ್ಯೂರಪ್ಪಂಗೆ ಹೇಳಿದ್ರು...
"ನೋಡಿ..
ಯಡಿಯೂರಪ್ಪನವರೆ...
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸು ಗೆಲ್ಲಬೇಕು...
ಬಿಜೇಪಿ ಸೋಲಬೇಕು...
ಹಾಗಾಗಿ ನೀವು ಬೀಜೇಪಿಯಲ್ಲೇ ಇದ್ದು ಬೀಜೇಪಿ ಹೆಸರು ಹಾಳು ಮಾಡ್ರಿ...
ಅದರಿಂದ ನಿಮಗೂ ಲಾಭ...
ನಮಗೂ ಲಾಭ...."
"ಹೋಗೆ...
ಏನಾದ್ರು ಕಥೆ ಕಟ್ಟ ಬೇಡ..."
"ಆಗ ನಮ್ಮ ಯಡಿಯೂರಪ್ಪ ..
"ನನಗೇನು ಲಾಭ?" ಅಂತ ನಿನ್ನ ಹಾಗೆ ಕೇಳಿದ್ರು...
ನಮ್ಮ ಸೋನಿಯಾರವರದ್ದು ಇಟಲಿ ತಲೆ ಕಣೋ....
"ನೋಡಿ ಯಡಿಯೂರಪ್ಪನವರೆ...
ನಿಮ್ಮ ಮೇಲೆ ಸಿಬಿಐ ಕೇಸು ಬೀಳ್ತಾ ಇದೆ...
ಆ ಕೇಸಿನಲ್ಲಿ ನಿಮಗೆ ತೊಂದ್ರೆ ಆಗ್ದೆ ಇರೊ ಹಾಗೆ ನಾನು ನೋಡ್ಕೋತೆನೆ...
ಒಂದೆರಡು ವರ್ಷದಲ್ಲಿ ..
ಕೇಸು ಬಿದ್ದು ಹೋಗೋ ಹಾಗೆ ಮಾಡಿಕೊಡ್ತೇನೆ..."
ನಾನು ತಲೆ ಕೆರೆದು ಕೊಂಡೆ...
"ಅಲ್ವೋ...
ಬಳ್ಳಾರಿ ರೆಡ್ಡಿಗಳ ಜೊತೆನೂ ಇಂಥಹುದೇ ಒಪ್ಪಂದ ಆಗಿದೆ ಕಣೊ...
"ರೆಡ್ಡಿಗಳೆ...
ನೀವು ಬೇರೆ ಪಕ್ಷ ಕಟ್ಟಿ..
ಪಾದಯಾತ್ರೆ ಮಾಡಿ ಬಿಜೇಪಿಗೆ ಮಂಗಳಾರತಿ ಎತ್ತತಾ ಇರಿ...
ಬಿಜೇಪಿ ಓಟು ಕಸಿಯಿರಿ...
ಮುಂದಿನ ಲೋಕಸಭೆ ಚುನಾವಣೆ ಮುಗಿಯೋ ಹೊತ್ತಿಗೆ ..
ನಿಮ್ಮ ಕೇಸು ಬಿದ್ದು ಹೋಗುವ ಹಾಗೆ ಮಾಡಿ ಕೊಡ್ತಿನಿ..."
"ಶಾರೀ...
ಸುಮ್ಮ ಸುಮ್ನೆ ಏನೇನೋ ಮಾತನಾಡಬೇಡ...
ನಮ್ಮ ದೇಶದಲ್ಲಿ ಸಿಬಿಐ...
ಸುಪ್ರೀಂ ಕೋರ್ಟ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದೆ...
ಈ ಮಧ್ಯೆ "ಅಣ್ಣಾ ಹಜಾರೆ...
ಆರ್.ಸಿ. ಹಿರೇಮಠ್" ಇಂಥವರೂ ಇದ್ದಾರೆ...
ಟಿವಿಗಳು..
ಪೇಪರುಗಳು ಸದಾ ಜಾಗ್ರತವಾಗಿ ಪ್ರಜಾಪ್ರಭುತ್ವ ಕಾಯ್ತಾ ಇವೆ....
ಹಾಗಾಗಿ ಸುಖರಾಮ್ ... ರಾಜಾ... ಕನಿಮೋಳಿ ಅಂಥವರು ಜೈಲು ಕಾಣುತ್ತಿದ್ದಾರೆ..."
"ಪ್ರಕಾಶು...
ನಿನ್ನ ದಪ್ಪ ಚರ್ಮಕ್ಕೆ ಸೂಕ್ಷ್ಮ ವಿಚಾರಗಳು ಹೋಗಲ್ಲ ಕಣೊ..."
"ಶಾರೀ...
ನೀನು ಹೇಗೆ ಮಾತಾಡ್ತಿದ್ದೀಯಾ ಅಂದ್ರೆ..
ಅವರಿಬ್ಬರ ನಡುವೆ ನೀನು ಮಧ್ಯಸ್ತಿಕೆ ವಹಿಸಿದ್ದೀಯಾ ಅಂತ ಕಾಣಿಸ್ತಿದೆ"
ಅಷ್ಟರಲ್ಲಿ ಶಾರೀ ಗಂಡ "ಗಣಪ್ತಿ ಭಾವ" ಫೋನ್ ಕಸಿದು ಕೊಂಡರು...
"ಪ್ರಕಾಶು...
ಇವಳ ತರ್ಕಕ್ಕೂ...
ತುಘಲಕ್ಕನ ತರ್ಕಕ್ಕೂ ಜಾಸ್ತಿ ವ್ಯತ್ಯಾಸ ಇಲ್ಲ ಕಣೊ...
ಇತ್ತೀಚೆಗೆ ಪೇಪರ್ ಓದೋದು ಜಾಸ್ತಿ ಆಗಿದೆ...
ಸಂಗಡ ಟಿವಿ ನ್ಯೂಸು ನೋಡೋದು...
ದಿನಾಲೂ ಆ ಹಾಳು ರಾಜಕೀಯ ನನಗೆ ಕೊರೆಯೋದು....
ಒಂದು ದಿನ ಬಿಜೇಪಿ...
ಇನ್ನೊಂದಿನ ಕಾಂಗ್ರೆಸ್ಸು...
ಇನ್ನೊಂದು ದಿನ ಕುಮಾರಸ್ವಾಮಿ ಪಕ್ಷ...
ಇವಳದ್ದು ಒಂದು ಪಕ್ಷ ಅಂತ ಇಲ್ಲ ಕಣೊ...
ಆದರೆ ಒಂದು ವಿಚಾರ ಮಾರಾಯಾ...
ಪ್ರತಿ ಬಾರಿಯೂ ಇವಳು ಹೇಳೊದು ಸರಿ ಅಂತಾನೆ ಅನ್ನಿಸ್ತದೆ...!!
ಒಟ್ಟಿನಲ್ಲಿ ನಾನೂ ಸಹ ರಾಜಕೀಯಾದ ಬಗೆಗೆ ತಲೆ ಕೆಡಿಸ್ಕೊಂಡು ..
ತಲೆ ಕೂದಲು ಉದರಿ ಹೋಗ್ತಾ ಇದೆ ಕಣೊ..."
"ಗಣಪ್ತಿ ಭಾವಯ್ಯಾ...
ನಮ್ಮ ಶಾರಿನ ಈ ಸಾರಿ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಿಬಿಡು...
ಎಲ್ಲ ಪಕ್ಷದವರೂ ಓಟು ಹಾಕ್ತಾರೆ..."
"ಆಯ್ಯೋ ಮಾರಾಯನೆ..
ಒಳಗಿನ ಕೆಲಸ..
ಹೊರಗಿನ ಕೆಲ್ಸ ..
ನನ್ನ ಕೆಲ್ಸಕ್ಕೆಲ್ಲ "ಲಲಿತಕ್ಕ"ನ್ನೇ ನಂಬಿಕೊಳ್ಳಬೇಕು ಅಷ್ಟೆ..."
"ಈ ಲಲಿತಕ್ಕ ಯಾರು?"
"ಲಲಿತಕ್ಕ ಗೊತ್ತಿಲ್ವೇನೋ...
ನಮ್ಮನೆ ಆಳು ಲಕ್ಕುನ ಹೆಂಡತಿ...
ಪಾಪ ಅವಳಾದರೂ ಎಷ್ಟು ಅಂತ ಮಾಡ್ತಾಳೆ...
ಅತ್ತ ಲಕ್ಕು...
ಇತ್ತ ನಾನು...."..
ಲೊಚಗುಟ್ಟಿದ..
ನನಗೆ ಗಣಪ್ತಿ ಭಾವನ ಪರಿಸ್ಥಿತಿ ನೆನೆದು ನಗು ಬಂತು...
ಸಂಜೆ ನಾಗು ಬಂದಿದ್ದ..
ಶಾರಿಯ ತರ್ಕ ನಾಗೂಗೆ ಹೇಳಿದೆ...
ಆತನೂ ನಗೆಯಾಡಿದ....
"ಪ್ರಕಾಶೂ...
ನಮ್ಮ ಯಡಿಯೂರಪ್ಪ ಅನ್ನೋದು ಒಂದು ಸಂಕೇತ ಕಣೊ....
ಒಂದು ಸೂಕ್ಷ್ಮ ಹೇಳ್ತಿನಿ..
ನಾಳೆ "ಸದಾನಂದ ಗೌಡರ" ನೇತ್ರತ್ವದಲ್ಲಿ ಚುನಾವಣೆ ಗೆದ್ರು ಅಂತಿಟ್ಟುಕೊ...
ಅಥವಾ...
ಸಿದ್ಧರಾಮಯ್ಯ.. ಕುಮಾರಸ್ವಾಮಿ.. ಯಾರೇ ಇರಲಿ...
ಅವರೂ ಸಹ ಮುಂದಿನ ಯಡಿಯೂರಪ್ಪ ಆಗ್ತಾರೆ..."
ನನಗೆ ಅರ್ಥ ಆಗ್ಲಿಲ್ಲ....
"ನೋಡೊ...
ಒಂದು ರಾಜ್ಯದ ಮುಖ್ಯ ಮಂತ್ರಿ ಅಂದರೆ ಸುಮ್ಮನೆ ಆಗೋದಿಲ್ಲ...
ಅವನು ಕೇಂದ್ರದ ಹೈ ಕಮಾಂಡಿಗೆ...
ರಾಜ್ಯದ ಪಕ್ಷಕ್ಕೆ "ಹಣದ" ವ್ಯವಸ್ಥೆ ಮಾಡಬೇಕು...
ಮುಂದಿನ ಚುನಾವಣೆಯ ಪ್ರತಿ ಕ್ಷೇತ್ರದ "ಹಣದ" ಜವಾಬ್ದಾರಿ ಅವನಿಗಿರ್ತದೆ....
ಪಾರ್ಟಿ ಜನರ ದೆಹಲಿ...
ವಿಮಾನದ ಓಡಾಟದ ಖರ್ಚು.. ಸಭೆ ಸಮಾರಂಭಗಳ ಖರ್ಚು...
ಎಲ್ಲವನ್ನೂ "ಆಡಳಿತ" ಪಕ್ಷ ನೋಡಿಕೊಳ್ಳಬೇಕು...
ಆಗ ಒಬ್ಬರು ಬಲಿ ಪಶುವಾಗಬೇಕು...
ಈ ರಾಜಗಳು ಸಿಕ್ಕಿ ಹಾಕಿಕೊಂಡರೆ "ಬಂಗಾರು ಲಕ್ಷ್ಮಣ" ಆಗ್ತಾರೆ...
ಅಥವಾ ಸುಖರಾಮ ಆಗ್ತಾರೆ..
ಹಗರಣದಲ್ಲಿ ಸಿಕ್ಕಿ ಹಾಕಿಕೊಳ್ಳಲಿಲ್ಲ ಅಂದ್ರೆ ಮುಂದಿನ ಮುಖ್ಯ ಮಂತ್ರಿ ಆಗ್ತಾರೆ...
"ನಮ್ಮ ರಾಜಕೀಯ ವ್ಯವಸ್ಥೆಯ ವಿಪರ್ಯಾಸಗಳು "ಜಯಾಲಲಿತರನ್ನು...
ಕರುಣಾನಿಧಿಗಳನ್ನು.. ಲಾಲು.. ರಾಜಾ..
ಕಲ್ಮಾಡಿಗಳನ್ನು ಹುಟ್ಟಿಸುತ್ತಿದೆ....
ಸಂವಿಧಾನ ಬರೆದವರಿಗೆ ಈ ವಿಪರ್ಯಾಸಗಳ ಕಲ್ಪನೆ ಕೂಡ ಇದ್ದಿತ್ತಿಲ್ಲ...
ಯಾಕೆಂದರೆ ಅವರೆಲ್ಲ ಶುದ್ಧ ಹೃದಯವಂತರಾಗಿದ್ರು...
ಅಂಬೇಡ್ಕರ್... ವಲ್ಲಭ ಭಾಯ್, ಶಾಸ್ತ್ರಿಗಳು ಇಂಥವರೆಲ್ಲ ಇದನ್ನು ನೋಡಿದ್ರೆ ಎದೆಯೊಡೆದು ಹೋಗ್ತಿದ್ರು....
ಒಂದೊಂದು ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲ್ಲಿಕ್ಕೆ ಕೋಟ್ಯಾಂತರ ರುಪಾಯಿ ಖರ್ಚು ಮಾಡ್ತಾರೆ...
ಆಮೇಲೆ ಆ ಹಣವನ್ನು ದುಡಿಯಬೇಕಲ್ಲ...."
"ಇದಕ್ಕೆಲ್ಲ ಏನು ಪರಿಹಾರ...?
"ವಿದೇಶಿ ಬ್ರಿಟಿಶರನ್ನು ಓಡಿಸಲು ಇನ್ನೂರು ವರ್ಷ ಬೇಕಾಯ್ತು...
ನಮ್ಮವರೇ ಆದ ಬ್ರಿಟಿಷರನ್ನು ಓಡಿಸಲು ಇನ್ನೂ ಒಂದಷ್ಟು "ಇನ್ನೂರು" ವರ್ಷ ಬೇಕಾಗ ಬಹುದು...."
ನಾನು ತಲೆಕೆರೆಯಲು ಹೋದೆ...
ತಲೆ ನುಣ್ಣಗೆ ಆದ ...
ತಣ್ಣಗಿನ ಅನುಭವ ಆಗ್ತಿತ್ತು..... !
(ಇಲ್ಲಿ ವ್ಯಕ್ತ ಪಡಿಸಿರಿವ ಅಭಿಪ್ರಾಯಗಳು "ಶಾರಿಯಮ್ಥಹ ಮುಗ್ಧ ಜನರ ಅಭಿಪ್ರಾಯ..
ಯಾರಿಗೂ ನೋವು ತರಿಸುವ ಉದ್ದೇಶ ಇಲ್ಲ..
ಹಾಸ್ಯ ಅಂತ ಓದಿ...ದಯವಿಟ್ಟು...)
35 comments:
ನನಗಂತೂ ಪಾಲಿಟಿಕ್ಸ್ ವಿಷಯದಲ್ಲಿ ಆಸಕ್ತಿ ಇಲ್ಲ, ಅದರೂ 2-3 ದಿನಗಳಿಂದ ನಾನು ಸಹ ಟಿವಿಯಲ್ಲಿ ಈ ವಿಷಯವನ್ನು ಕೂತುಹಲದಿಂದ ಗಮನಿಸ್ತಾ ಇದ್ದಿನಿ.
ಎನೇ ಆಗಲಿ ನೀವು ಡುಮ್ಮಣ್ಣ ಅಂತ ಬರೆದದ್ದು ಮಾತ್ರ ನನಗೆ ತುಂಬಾ ಕೋಪ ಬರಿಸಿತು.
ಪ್ರೀತಿಯ ಸಹೋದರಿ...
ನಾನು ಡುಮ್ಮ ಇದ್ದಿದ್ದು ಹೌದು...
ಶಾರಿ ಹಾಗೆ ಹೇಳಿದ್ದರಲ್ಲಿ ತಪ್ಪಿಲ್ಲ..
ಅವಳು ಇನ್ನೂ ಒಂದಷ್ಟು ಹೇಳಿದ್ದು ಹಾಕಲಿಲ್ಲ...
ನನ್ನಾಕೆ ಸೆನ್ಸಾರ್ ಮಾಡಿದ್ದಾಳೆ..
ಹ್ಹಾ.. ಹ್ಹಾ...!
ನಮ್ಮ ರಾಜಕೀಯ ಅಲರ್ಜಿ ಹುಟ್ಟಿಸುವ ಹಂತಕ್ಕೆ ಮುಟ್ಟಿದೆ...
ಎಲ್ಲವೂ ನಮಗೆ ಗೊತ್ತಾಗ್ತುತ್ತಿದ್ದು...
ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಮ್ಮದು... ಅಲ್ವಾ?
ನಿಮ್ಮ ಪ್ರೀತಿಗೆ ಶರಣು... ಶರಣು..
ಪ್ರೀತಿಯಿಂದ
ಡುಮ್ಮಣ್ಣ...
ಕಥೆ ಚೆನ್ನಾಗಿದೆ.. ಪಕ್ಷಗಳ ಒಳ ಒಪ್ಪಂದದ ಬಗ್ಗೆ ಮುಗ್ದವಾಗಿ ಮಾತನಾಡುವ ಶಾರಿ... ಅಕೆಯನ್ನ ಚುನಾವಣೆಗೆ ನಿಲ್ಲಿಸಿದರೆ ಎಲ್ಲದಕ್ಕೂ ಲಲಿತಕ್ಕನನ್ನೇ ಅವಲಂಬಿಸಬೇಕು ಎನ್ನುವ ಗಣಪ್ತಿಭಾವ... ನಗಿಸುತ್ತಿದ್ದರೆ.. ನಾಗುವಿನ ವಿಚಾರಧಾರೆಯಲ್ಲಿ ವಿಷಯ ಸೂಕ್ಷ್ಮತೆ ಮತ್ತು ಗಂಭೀರತೆ ಎರಡು ತಿಳಿಯುತ್ತದೆ.. ಯಾರು ಗೆದ್ದು ಬಂದರು ಮುಂದಿನ ಯಡಿಯೂರಪ್ಪ ಆಗುತ್ತಾರೆ ಎಂಬ ನಾಗುವಿನ ನಿಲುವು ನಿಜ.. ಈಗಿನ ರಾಜಕೀಯ ಪರಿಸ್ಥಿತಿ ಮತ್ತು ಕಚ್ಚಾಟಗಳಲ್ಲಿ ಆಡಳಿತ ವ್ಯವಸ್ಥೆಯ ಬಗೆಗೆ ಜಿಗುಪ್ಸೆ ಬರುತ್ತಿದೆ. ಈ ಎಲ್ಲ ಬ್ರಷ್ಟಾಚಾರ , ಹಗರಣಗಳಿಂದ ಮೋಸ ಹೋಗುವ ಜನಸಾಮಾನ್ಯರನ್ನು ರಕ್ಷಿಸಲು ಇನ್ನೆಷ್ಟು "ಇನ್ನೂರು " ವರ್ಷಗಳಿಗೆ ಕಾಯಬೇಕೋ ಗೊತ್ತಿಲ್ಲ..
ಒಂದು ಸೂಕ್ಮ ಗಂಭೀರ ವಿಷಯವನ್ನು ಹಾಸ್ಯದೊಂದಿಗೆ ತುಂಬಾ ಚೆನ್ನಾಗಿ ಹೇಳಿದ್ದಿರಿ
ಸಂಧ್ಯಾ...
ಶಾರೀ.. ಮತ್ತು ಗಣಪ್ತಿ ಭಾವ ಹಾಗೇನೇ..
ಅವರ ಮಾತುಗಳೂ ಹಾಗೇನೆ..
ಜನ ಸಾಮಾನ್ಯರೂ ಸಹ ಪೇಪರ್ ಓದ್ತಾರೆ..
ನ್ಯೂಸ್ ನೋಡ್ತಾರೆ...
ಈಗಿನ ರಾಜಕೀಯ ಬೆಳವಣಿಗಳ ಬಗೆಗೆ ಅವರದ್ದೇ ಆದ ಅಭಿಪ್ರಾಯವೂ ಇದ್ದಿರುತ್ತದೆ...
ಅದು ಕಲ್ಪನೆಯೂ ಆಗಿರ ಬಹುದು...
ಆದರೆ ಓಟು ಹಾಕುವಾಗ ಇವೆಲ್ಲವನ್ನೂ ಮರೆತು ಬಿಡುತ್ತೇವೆ...
ಅಲ್ಲಿ ನಮ್ಮ ಜಾತಿ...
ಧರ್ಮ... ಹಣ ಹೆಂಡ..
ಇನ್ನೂ ಏನೇನು ತರಲಾಗುತ್ತೋ ಅವೆಲ್ಲವನ್ನೂ ರಾಜಕೀಯ ಜನ ತಂದಿಡುತ್ತಾರೆ...
ಚುನಾವಣೆಯಲ್ಲಿ ಅವರ ಲೆಕ್ಕಾಚಾರವೇ ಗೆಲ್ಲುತ್ತದೆ..
ಎಲ್ಲದಕ್ಕೂ ಒಂದು ಕೊನೆ ಇದೆ...
ಇವರ ದೊಂಬರಾಟಕ್ಕೂ ಒಂದು ಕೊನೆ ಇದ್ದಿರಬಹುದು... ಅಲ್ವಾ?
ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಶಾರಿ ಹೇಳಿದ್ದು ತಪ್ಪಿಲ್ಲ ಸೋನಿಯಾ ಬಂದದ್ದು ಯಡ್ಡಿ ಎತ್ತ ಬೆಂಕಿಯಲ್ಲಿ ...ತನ್ನ ಬೇಳೆ ಬೇಯಿಸಿ ಕೊಳ್ಳಲು ..
ಅನ್ನೋದು ನಿಜ ... ಪ್ರಕಾಶಣ್ಣ ನಿಮ್ಮನ್ನು ಡುಮ್ಮಣ್ಣ ಎಂದದ್ದು ಸಂತೋಷ ವಾಯಿತು ...
ಹಾಸ್ಯ ಲೇಪಿತ ದುರಂತ ಎದುರಿಟ್ಟಿದ್ದಿರಿ ....
ನಿಜ ಶಾರಿಯವರ ಮುಗ್ಧ ಉತ್ತರ ನಿಜವೇನೋ ಅಂತ ಅನ್ನಿಸುತ್ತೆ... ಹೀಗೂ ಆಗಿರಬಹುದಲ್ಲಾ..?? ನಾಗೂ ಅವರ ಮಾತಿಗೆ ಎರಡು ಮಾತಿಲ್ಲ.. ಜೈ
ನಕ್ಕು ಸಾಕಾಯ್ತು.. ಒಳ್ಳೆ ರಾಜಕೀಯ ನಗೆ ಬರಹ
ಪ್ರಕಾಶ ... ಡುಮ್ಮಣ್ನ ಅನ್ನೋ ಹಕ್ಕು ನನಗೂ ಕೋರ್ಟ್ ಮೂಲಕ ಸಿಕ್ಕಿದೆ...ಆದರೆ ಮಾರ್ಪಾಡಿನೊಂದಿಗೆ...ನಾನು ಡುಮ್ತಮ್ಮ ಅನ್ಬೇಕಂತೆ...ಹಹಹಹಾಹ..
ಶಾರಿ ಏನಂದ್ರೂ ಸರೀನೇ ಇರುತ್ತೆ.. ಅಂತೂ ಒಳ್ಳೆ ರಸದೌತಣ ಕೊಟ್ಟೆ ಬಿಡು...
ಒಂದು ಗುಟ್ಟು ರಟ್ಟಾಯ್ತು ಡುಮ್ತಮ್ಮಾ...ಈವೊತ್ತು..!!!
ನಿನ್ನ ಮನೆಲಿ ಹೈ-ಕಮಾಂಡ್ ಸೆನ್ಸಾರ್ ನಡೆಯುತ್ತೆ ನೀನು ಬರೆದಿದ್ರಲ್ಲೂ ಅನ್ನೋದು...ಹಹಹಹ....
You have beautifully explained the current political situation through a funny conversation between you and Shari family. Indeed we all disappointed with these hopeless,shameless, corrupt and notorious politicions political dramas.Here also u make a good fun and thanks for that..i have enjoy the article.
Very true PrakashaNNa.
The way you explained is also fantastic. Loved it.
ಪ್ರಕಾಶಣ್ಣ;ಶಾರಿಯ ರಾಜಕೀಯ ವಿಶ್ಲೇಷಣೆ ಅದ್ಭುತವಾಗಿದೆ!ನಾನು ಗಣಪತಿ ಭಾವನ ತರಹ.ರಾಜಕೀಯದಿಂದ ಸ್ವಲ್ಪ ದೂರವೇ!ಮೊದಲೇ ತಲೆ ನುಣ್ಣಗಾಗಿದೆ.......!ಅಂದ ಹಾಗೇ ನನ್ನ ಬ್ಲಾಗಿಗೂ ಭೇಟಿ ಕೊಡಿ ಮಾರಾಯ್ರೇ!
ವಂದನಾ...
ನಮ್ಮ ರಾಜಕೀಯದವರ ಸಿದ್ಧಾಂತ ಎಷ್ಟು ಹೊತ್ತಿಗೆ ಬದಲಾಗುತ್ತದೆ ಅಂತ ಊಹಿಸುವದಕ್ಕೇ ಆಗದು...
ನಿನ್ನೆಯವರೆಗೂ ಯಡೆಯೂರಪ್ಪನವರಿಗೆ ಬಯ್ತಾ ಇದ್ದ ಶ್ರೀರಾಮುಲು ನಿನ್ನೆ ಇದ್ದಕ್ಕಿದ್ದಂತೆ ಬದಲಾಗಿಬಿಟ್ಟಿದ್ದರು...
"ಯಡ್ಯೂರಪ್ಪನವರದ್ದು ಏನೂ ತಪ್ಪಿಲ್ಲ" ಅಂತ ಪ್ರಮಾಣ ಪತ್ರವನ್ನೂ ಕೊಟ್ಟುಬಿಟ್ಟರು...
ರಾಜಕೀಯದಲ್ಲಿ "ಅವರು.. ಇವರು" ಅಂತ ಏನಿಲ್ಲ...
ಎಲ್ಲರೂ...
ಎಲ್ಲ ಪಕ್ಷದವರೂ ಅಷ್ಟಕಷ್ಟೆ...
ತತ್ವ ಸಿದ್ಧಾಂತಗಳು "ಚುನಾವಣೆ ಪ್ರಣಾಳಿಕೆಯಲ್ಲಿ... ಪಕ್ಷದ ಸಿದ್ಧಾಂತದ ಪುಸ್ತಕದಲ್ಲಿರುತ್ತದೆ"...
ನನಗೆ ಡುಮ್ಮಣ್ಣ ಅಂದಿದ್ದು ತುಂಬಾ ಖುಷಿ ಆಯ್ತಾ?
ನನಗೆ ಇನ್ನೂ ಅನೇಕ ತಂಗಿಯರಿದ್ದಾರೆ..
ಅವರಿಗೆಲ್ಲ "ಡುಮ್ಮಣ್ಣ" ಅಂದರೆ ಕೋಪ ಬರುತ್ತದೆ ಹುಷಾರ್... !
ನಿಮ್ಮೆಲ್ಲರ ಪ್ರೀತಿಗೆ...
ಪ್ರೋತ್ಸಾಹಕ್ಕೆ..
ಶಾರಿಯ ಮಾತುಗಳನ್ನು ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು....
ಪ್ರೀತಿಯಿಂದ
ಡುಮ್ಮಣ್ಣ....
ಮನಸು.....
ನಾಗು ಮಾತು ಎಷ್ಟು ನಿಜ ಅಲ್ವಾ?
ನಮ್ಮ ಇಂಥಹ ರಾಜಕೀಯ ಸಮಸ್ಯೆಗಳು ಯಾವಾಗ ರೆಪೇರಿ ಆಗಬಹುದು?
ಇದಕ್ಕೆ ನಾಗು ಉತ್ತರ ತುಂಬಾ ಸರಳ
"ಹುಚ್ಚು ಬಿಟ್ಟಂತೂ..
ಮದುವೆಯಾಗೊಲ್ಲ..
ಮದುವೆಯಾದಂತೂ ಹುಚ್ಚು ಬಿಡಲ್ಲ..."
ಯಡಿಯೂರಪ್ಪನವರ ಮಾತು ಕೇಳಿದಾಗ ನನಗಂತೂ ಅವರ "ಅಸಹಾಯಕತೆ" ಎದ್ದು ಕಾಣುತ್ತದೆ..
ಶಾರಿಯ ಮಾತುಗಳು ಇನ್ನೂ ಇದ್ದವು...
ಬರೆಯುತ್ತಾ ಹೋದರೆ "ಕೊರೆತ ಆಗಿಬಿಡ ಬಹುದು ಅಂತ" ಬರೆಯಲಿಲ್ಲ...
ಶಾರಿಯ ಮಾತುಗಳನ್ನು ಇಷ್ಟಪಟ್ಟಿದ್ದಕ್ಕೆ ನಿಮಗೊಂದು ಜೈ ಹೋ !
ಕೆಲವರು ಸುದ್ದಿ ಮಾಡಿ ಸಾಯ್ತಾರೆ..ಕೆಲವರು ಸಾಯ್ತಾ ಸುದ್ದಿ ಮಾಡ್ತಾರೆ..ಇವರೆಲ್ಲ ಅಧಿಕಾರದ ರುಚಿ ಕಂಡ ಬೆಕ್ಕು..."ಇಲಿ"ನಾ ಹುಡುಕ್ತಾ ಇರಬೇಕು..ಇಲ್ಲವಾದರೆ..ಇಲಿಯೇ ಹೆಗ್ಗಣವಾಗಿ ಬೆಕ್ಕನ್ನು ನುಂಗಿ ಬಿಡುತ್ತದೆ..ಚಿಕ್ಕ ಮಕ್ಕಳನ್ನು ಸುಮ್ಮನೆ ಕೂರಿ ಅಂತ ಹೇಳುವುದು..ಈ ಡಬ್ಬ ರುಚಿಕಂಡ ರಾಜಕಾರಣಿಗಳನ್ನ ಸುದ್ದಿ ಮಾಡದೆ ಕೂರಿ ಎಂದು ಹೇಳುವುದು ಎರಡು ಅಸಾಧ್ಯದ ಮಾತು...ಇವರು ಸುದ್ದಿಯಲ್ಲೇ ಇರಬೇಕು..ಮೂರು ಬಿಟ್ಟವರು ಲೋಕಕ್ಕೆ ದೊಡ್ಡವರು ಎನ್ನುವುದು ಹಳೆ ಮಾತು..ಎಲ್ಲ ಬಿಟ್ಟವರು ಸದಾ ಇರುವರು ಎನ್ನುವುದು ಹೊಸ ಮಾತು..ನಮ್ಮ ಹಣೆಬರಹ ಇವರ ಮಧ್ಯೆ ನಾವು ಸುದ್ದಿಯಾಗಬೇಕು...
ಒಳ್ಳೆಯ ಲೇಖನ...ಕೊಂಚ ನಿಮ್ಮ ಧಾಟಿಯಿಂದ ಹೊರಗೆ ಬಂದು ಪ್ರಸಕ್ತ ರಾಜಕಾರಣಕ್ಕೆ ಕನ್ನಡಿಯ ಕೆಸರು ಹಿಡಿದಿದ್ದೀರಿ...
"ಟಿವಿಗಳು ಪೇಪರುಗಳು ಸದಾ (!) ಜಾಗ್ರತವಾಗಿ ಪ್ರಜಾಪ್ರಭುತ್ವ ಕಾಯ್ತಾ ಇವೆ..."
ಒಳ್ಳೆ ತಮಾಷೆ ಮಾಡ್ತೀರಿ ಪ್ರಕಾಶಣ್ಣ. ಈವತ್ತಿನ ಯಾವ ಮಾಧ್ಯಮ ಕಲುಷಿತವಾಗಿಲ್ಲ ಅಥವಾ ಮಾರಿಕೊಂಡಿಲ್ಲ ಹೇಳಿ? ನಿಮ್ಮ ಮನಸ್ಸಲ್ಲೂ ಅದೇ ಇರೋದು ಅಂತ ನನಗೂ ಅನಿಸ್ತು ಬುಡಿ!!!
ಈ ಯಡ್ಡಿ, ರೆಡ್ಡಿ, ಸೋನಿಯಾ ಮತ್ತು ರಾಜಕಾರಣದ ಹಳಸಲಿಂದ ದಿನ ದಿನಾ ಮಾಧ್ಯಮವೇ ಹಳಸಲು ಹಿಡಿಯುತ್ತಿದ್ದೆ ಅಲ್ವಾ?
ನಾಗೂ ವಿವರಣೆ ಮತ್ತಷ್ಟು ಗೊಜಲು, ಮಠದ ಸ್ವಾಮಿಗಳ ಗೂಢಾರ್ಥ ಪ್ರವಚನದಂತೆ!!!!
ಒಟ್ಟಾರೆ ಪ್ರಸಕ್ತ ರಾಜಕಾರಣ ದೊಂಬರಾಟವನ್ನು ಅತ್ಯ್ತ್ತಮವಾಗಿ ದಾಖಲಿಸಿದ್ದೀರ....
ಹೀಗೊಂದು ಅರಾಜಕೀಯ ಪ್ರಕರಣ..
ಆಜಾದೂ...
ನೀನು ಇನ್ನೂ ಏನೇನ್ ಹೆಸರು ಇಡ್ತೀಯೋ ಆ ದೇವರಿಗೆ ಗೊತ್ತು...!
"ದೊಡ್ಡ್ತಮ್ಮಾ...!
ವಾಹ್ ! ತುಂಬಾ ಚಂದದ..
ಊಹೆಯನ್ನೂ ಮಾಡಿರದ ಹೆಸರು...!
ನಮ್ಮನೆಯಲ್ಲಿ ಒಂದು ಸೆನ್ಸಾರ್ ಬೋರ್ಡ್ ಇದೆ ಕಣೊ....!
ನನ್ನ ಮೊದಲ ಓದುಗರು...
ಸ್ಸಾರಿ ಕೇಳುಗರು.. !
(ನಾನು ಬರೆದಿದ್ದನ್ನು ಓದಿ ಹೇಳಬೇಕು..
ಯಾಕೆಂದರೆ ಅಷ್ಟು ಸಲಿಸಾಗಿ ಓದುವದು ಕಷ್ಟ..
ಆದರೆ ನಾನು ಓದಿದ್ದನ್ನು ಎಂಜಾಯ್ ಮಾಡ್ತಾಳೆ ನನ್ನ "ಆಗ್ರಾದ" ಹುಡುಗಿ)
ಕೆಲವೊಮ್ಮ ಮಗ... ಅಳಿಯ ಪ್ರಶಾಂತ..
ಕೌಟುಂಬಿಕ.. ಇಂಥಹ ರಾಜಕೀಯ ಕಥೆಯಾದರೆ "ಆಯಿಯೂ"(ಅಮ್ಮ) ಕೇಳುತ್ತಾಳೆ...
ಇವರೆಲ್ಲ"ಸರಿ ಇಲ್ಲ" ಎಂದಿದ್ದನ್ನು ಕಟ್ ಮಾಡಬೇಕಾಗುತ್ತದೆ..!
ಎಷ್ಟೋ ಬಾರಿ ಸೆನ್ಸಾರ್ ಬೋರ್ಡ್ ಕಣ್ ತಪ್ಪಿಸಿದ್ದೂ ಇದೆ..
ಇದು ಗುಟ್ಟಾಗಿರಲಿ..
ಈ ಲೇಖನದಲ್ಲಿ ಶಾರಿ ನನಗೆ ಚಾಳಿಸಿದ ಕೆಲವು ವಾಕ್ಯಗಳನ್ನು ಕಟ್ ಮಾಡಲಾಯಿತು..."
ಲೇಖನ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...
ಶುಭಾ...
ಶಾರಿ ಆಡುವ ಮಾತುಗಳ ಸತ್ಯಾ ಸತ್ಯತೆ ಪಕ್ಕಕ್ಕಿಡೋಣ..
ಅವಳ ತರ್ಕ ಒಪ್ಪುವಂಥಾದು...
ಹೀಗೂ ಆಗಿರ ಬಹುದಾ ಅಂತ!
ಗಣಪ್ತಿ ಭಾವ ಹೇಳಿದ ಹಾಗೆ ಅವಳಿಗೊಂದು ಪಕ್ಷ ಅಂತ ಇಲ್ಲ..
ಒಂದೊಂದು ದಿನ ಒಂದೊಂದು ಪಕ್ಷ...
ಪ್ರತಿ ಪಕ್ಷದ ಕುರಿತು ಮಾತನಾಡುವಾಗಾವಳೆನ್ನುವದು ಸರಿ ಅಂತ ಅನ್ನಿಸಿಬಿಡುತ್ತದೆ..!
ಒಮ್ಮೆ "ರೇಣುಕಾಚಾರ್ಯ" ಮುಖ್ಯ ಮಂತ್ರಿ ಆಗಬೇಕು ಅಂತ ಮಾತಾಡಿದಳಂತೆ...
ಊರಕಡೆ ತುಂಬಾ ಪ್ರಸಿದ್ಧಿಯಾಗಿಬಿಟ್ಟಿತ್ತು... !
ಹ್ಹಾ..ಹ್ಹಾ...!
ನಮಗ್ಯಾಕೆ ಈ ರಾಜಕೀಯದ ಉಸಾಬರಿ... ಅಲ್ವಾ?
ಪ್ರೀತಿ ಪ್ರೋತ್ಸಾಹಕ್ಕೆ ಪ್ರೀತಿಯ ವಂದನೆಗಳು....
ಸುಜಾತಾ..
ರಾಜಕೀಯ ಜನ ಸಾಮಾನ್ಯರಿಗೆ ಅಸಹ್ಯ ಹುಟ್ಟಿಸಿದ್ದು ನಿಜ...
ಚುನಾವಣೆಯಲ್ಲಿ ಮತ ಹಾಕಿ ಸೇಡು ತೀರಿಕೊಳ್ಳುವದರಿಂದ ಲಾಭವಿಲ್ಲ ಅಂತ ಅನ್ನಿಸಿಬಿಟ್ಟಿದೆ..
ಹಾಗಾಗಿ ಮತ ಚಲಾಯಿಸಲೂ ಜನ ಹೋಗುವದು ಕಡಿಮೆ ಆಗಿದೆ.
ಜನಸಾಮಾನ್ಯರ ಕೈಗೆ ಇನ್ನಷ್ಟು ಅಧಿಕಾರ ಬರಬೇಕು..
ಅವರ ಕೂಗು... ಅಳಲಿಗೆ ಬೆಲೆ ಬರುವಂತಾಗ ಬೇಕು...
"ಲೋಕಪಾಲ" ಬಿಲ್ಲಿನ ಥರಹ ಏನಾದರೊಂದು ಕಾನೂನು ಬರಬೇಕು...
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಹೆಗಡೇಜಿ ಸದ್ಯದ ಸ್ಥಿತಿಯಲ್ಲಿ ಯಾವ ಲೋಕಪಾಲನೂ ಏನೂ ಮಾಡಲು ಆಗುವುದಿಲ್ಲ ಇದು ನಾವೇ ಮಾಡಿಕೊಂಡಿದ್ದು
ಇನ್ನು ನಿಮ್ಮ ಲೇಖನ ಅದಕ್ಕಾಗಿ ನೀವು ಆರಿಸಿಕೊಂಡ ಶಾರಿಯ ಮಾತಿನ ಓಘ ಚೆನ್ನಾಗಿತ್ತು. ಅಭಿನಂದನೆಗಳು ನಿಮಗೆ
"ಲಲಿತಕ್ಕ ಗೊತ್ತಿಲ್ವೇನೋ...
ನಮ್ಮನೆ ಆಳು ಲಕ್ಕುನ ಹೆಂಡತಿ...
ಪಾಪ ಅವಳಾದರೂ ಎಷ್ಟು ಅಂತ ಮಾಡ್ತಾಳೆ...
ಅತ್ತ ಲಕ್ಕು...
ಇತ್ತ ನಾನು...."..
ರಾಜಕೀಯದಿಂದ ನಾನು ದೂರ.... ಈ ಹಳ್ಳಿ ಜನರ ಮುಗ್ಧ ಭಾಷೆ ಇಷ್ಟ ಆತು ಪ್ರಕಾಶಣ್ಣ.... :) :)
ನಿಜ ಪ್ರಕಾಶಣ್ಣ ಈಚಿಚೆ ಎಲ್ಲರ ವರ್ತನೆಯೂ ಹೇಸಿಗೆ ತರುತ್ತಿದೆ ..ಕೆಲವೊಮ್ಮೆ ನಮ್ಮಂತವರೂ ರಾಜಕೀಯ ಸೇರಿ ಬದಲಾವಣೆ ತರಬೇಕು ಅನ್ನಿಸುತ್ತದೆ ..ಆದರೆ ನಾವೂ ಹಾಗೆ ಆಗಿಬಿಟ್ಟರೆ !!!!...ಊರ ಕಡೆ ಇದ್ದಾಗ ಮರಿ ರಾಜಕಾರಣಿ ಆದ ನೆನಪೂ ಬರುತ್ತದೆ ..ಈಗ ನಾವೆಲ್ಲಾ ಕೆಲಸಕ್ಕೆ ಸೇರಿ ಪ್ರಜ್ಞಾವಂತ ನಾಗರೀಕರ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ ,, ಯಾರು ಜಗಳವಾಡಿಕೊಂಡರೂ ಸಂಬಂದವಿಲ್ಲ ...ಬರುವ ಹೊಸ ತಲೆಗಳೂ ಇದೆ ತರಾ ಬ್ರಷ್ಟ ಆದರೆ .. ಪ್ರಜಾಪ್ರಭುತ್ವದ ಬದಲಾವಣೆ ಸಾದ್ಯವ ? ನಮ್ಮಂತ ವಕೀಲರಿಂದನ ? ಇಂಜಿನಿಯರು ಗಳಿಂದನ? ವಿದ್ಯಾರ್ಥಿ ,ಮಿಡಿಯಾದವರಿಂದ ಅಥವಾ ಉಳಿದ ಜನಸಾಮಾನ್ಯರಿಂದ ? ... ಎಲ್ಲರೂ ಕೂಡಿ ವ್ಯವಸ್ತೆಯನ್ನು ಸರಿ ಮಾಡಬೇಕಾದ ಅವಶ್ಯಕತೆ ಇದೆ ಅಲ್ಲವ ? ಎಲ್ಲ ಬ್ರಷ್ಟ ರಾಜಕಾರಣಿಗಳ ಹಿಂದೆ ಜೈ ಕಾರ ಹಾಕಿ ಓಡಾಡಬೇಕ?
ಡಾಕ್ಟ್ರೆ...
ಒಂದು ಸಮಯದಲ್ಲಿ ರಾಜಕೀಯವೆಂದರೆ "ಜನಸೇವೆ" ಎನ್ನುವ ಪವಿತ್ರ ಭಾವನೆ ಇತ್ತು..
ಈಗಿನ ರಾಜಕೀಯ ಸ್ಥಿತಿ ಗತಿಗಳಿಗೆ...
ಕಾರಣಗಳು...
ಪರಿಹಾರವೂ ಗೊತ್ತಿದ್ದರೂ..
ಮಾಡಲಾಗದ ಅಸಹಾಯಕ ಸ್ಥಿತಿ...
ಬಹುಷಃ ಎಲ್ಲಿಂದ ಶುರುಮಾಡಬೇಕು ಎನ್ನುವ ಸ್ಥಿತಿ...
ನಾವು ಸಣ್ಣವರಿದ್ದಾಗಲಿಂದ ತಲೆ ಕೆರೆದು ಕೊಂಡು..
ಕೊಂಡೂ... ಕೂದಲೆಲ್ಲ ಉದುರಿ ನುಣ್ಣಗಾಗಿದೆ ಬಿಡಿ ಸಾರ್... !
ಹ್ಹಾ ಹ್ಹಾ.. !
ಪ್ರೀತಿಯ ಪ್ರೋತ್ಸಾಹಕ್ಕೆ ಪ್ರೀತಿಯ ವಂದನೆಗಳು...
yava rajabandarenu raagibeesodu tappalla. shyaamange yaake eega raajakiya. dwapara kaledide. eega kaligaala
ಪ್ರೀತಿಯ ಶ್ರೀಕಾಂತ್ ಮಂಜುನಾಥ್...
ನಾನು ಪುಟಗಟ್ಟಲೆ ಬರೆದ ಲೇಖನದ ತಾತ್ಪರ್ಯವನ್ನು ನಾಲ್ಕೈದು ವಾಕ್ಯಗಳಲ್ಲಿ..
ಸಮರ್ಥವಾಗಿ ವಿಮರ್ಶಿಸಿದ್ದೀರಿ...
ನಿಮ್ಮ ಪ್ರತಿಕ್ರಿಯೆಗಳು ಟಾನಿಕ್ ಮಾತ್ರೆಗಳ ಹಾಗೆ... ಉತ್ಸಾಹ ಹೆಚ್ಚಿಸಿ ಬಿಡುತ್ತವೆ...
ಇವರೆಲ್ಲ ಲೂಟಿ ಹೊಡೆದು ಉಳಿದ ಹಣದಲ್ಲಿ ನಮ್ಮ ದೇಶ ಇಷ್ಟು ಪ್ರಗತಿ ಸಾಧಿಸಿದೆ..
ನಿಜಕ್ಕೂ ನಮಗೆ ಪ್ರಾಮಾಣಿಕ ಪ್ರತಿನಿಧಿಗಳು ಸಿಕ್ಕಿದ್ದರೆ ನಮ್ಮ ದೇಶ ಹೆಗಿರುತ್ತಿತ್ತು ಅಲ್ಲವಾ?
ಸ್ವಾತಂತ್ರ್ಯ ಸಿಕ್ಕು ಅರವತ್ತು ವರ್ಷಗಳು ಕಳೆದರೂ..
ನಮ್ಮ ರೈತ ಬೆಳೆದ ಬೆಳ್ಗೆ "ವೈಜ್ನಾನಿಕ" ಬೆಲೆ ಕೊಡಲು ಯಾವ ಸರ್ಕಾರಂದಿದಲೂ ಸಾಧ್ಯವಾಗಲಿಲ್ಲ...
ರೈತ ತನ್ನ ಬೆಳೆ ಬೆಳೆಯಲು ಎಷ್ಟು ಖರ್ಚು ಮಾಡುತ್ತಾನೆ..
ಅದರ ಮೇಲೆ ಒಂದಷ್ಟು ಲಾಭಾಂಶ...
ಮರ್ಯಾದೆಯಿಂದ ಬಾಳಲು ಇಷ್ಟ ಪಡುವ ಜನಕ್ಕೆ ಇನ್ನೇನು ಬೇಕು...?
ನಿಜಕ್ಕೂ ಇದು ಶೋಚನೀಯ ಸಂಗತಿ..
ಮತ್ತು ..
ನಮ್ಮ ದೇಶದ ದೊಡ್ಡ ದುರಂತ...
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು...
ನಿಮ್ಮ ಬ್ಲಾಗುಗಳು ನಿಮ್ಮ ಪ್ರತಿಕ್ರಿಯೆಗಳ ಹಾಗೆ..
ಟಾನಿಕ್ ಥರಹ ಇವೆ....
ಬದರಿ ಸರ್ ಜಿ..
ವಿಷಯ ಏನು ಗೊತ್ತಾ?
ನಿಜವಾಗಿಯೂ ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಕಾಯುತ್ತಿವೆ..
ಹೆಚ್ಚಿನ ಮಾಧ್ಯಮಗಳು ಒಂದೊಂದು ಪಕ್ಷದ..
ಸಿದ್ಧಾಂತಗಳ ಮುಖವಾಣಿಗಳಾಗಿವೆ..
ಹಾಗಾಗಿ ಎಲ್ಲರ ಹುಳುಕುಗಳು ಅಲ್ಲಲ್ಲಿ ಬಯಲಾಗುತ್ತಿವೆ...
ಮಾಧ್ಯಮಗಳು ನಿಶ್ಪಕ್ಷಪಾತಿಗಳಾಗಿರಬೇಕು ನಿಜ...
ಹೀಗಿವೆ..
ಆದರೂ ಪರವಾಗಿಲ್ಲ.. ಏನಂತೀರಿ?..
ಬದರಿ ಸರ್ ಜಿ..
ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ಪ್ರೀತಿಯ ವಂದನೆಗಳು...
tumbaa chennaagi barediddiri PrakashaNNA....
indina raajakiyakke nimmade theory koTTiddiri....
Namgu idella gottagatte, aadre ishtu chennagi bareyoke baralla :)
Very good !!
-Ravi
ಯಪ್ಪಾ ದೇವ್ರೇ ಕಾಪಾಡಪ್ಪಾ , ಶಾರಿ ಮೇಡಂ ತರ್ಕ ಸರಿಯಾಗಿದೆ. ಪ್ರಸ್ತುತ ವಿಧ್ಯಾಮಾನದ ಸುಂದರ ವಿಡಂಬನೆ, ರುಚಿಕಟ್ಟಾಗಿ ಮೂಡಿಬಂದಿದೆ.ಜೈ ಹೋ ಪ್ರಕಾಶಣ್ಣ .
ಅನಿತಾ ನರೇಶರೆ...
ನಾಗು ಹೇಳಿದ ಹಾಗೆ ಯಡೆಯೂರಪ್ಪನವರು ನಮ್ಮ ರಾಜಕೀಯ ವಿಪರ್ಯಾಸದ ಒಂದು ಸಂಕೇತ ಅಷ್ಟೆ...
ಅಧಿಕಾರ ಪಡೆಯಲಿಕ್ಕೆ ಹಣ ಖರ್ಚು ಮಾಡಬೇಕು...
ಉದ್ಯಮಿಗಳಿಂದ ಬೇನಾಮಿ ಹಣ ಪಡೆಯಬೇಕು...
ಗೆದ್ದ ಮೇಲೆ ಅವರಿಗೆ "ಸಹಾಯ" ಮಾಡಬೇಕು...
ತಾವೂ ಹಣಗಳಿಸಬೇಕು...
ಹಾಗಾಗಿ ರಾಜಕೀಯದಲ್ಲಿ "ಅಣ್ಣಾ ಹಜಾರೆಗಳು" ಕಡಿಮೆ...
ಇದ್ದ ಕೆಲವು "ಅಣ್ಣಾ ಹಜಾರೆಗಳು" ಎಂದಿಗೂ ಮುಖ್ಯ ಮಂತ್ರಿಗಳಾಗಲಾರರು...
ಆದರೂ ಅವರು "ಮನಮೋಹನ್ ಸಿಂಗ್" ಆಗಿರ್ತಾರೆ...
ಅಥವಾ " ಅಸಹಾಯಕರಾಗಿರ್ತಾರೆ"....
ಎಂದಾದರೊಮ್ಮೆ
ಬೆಳಕು ಮೂಡಬಹುದು...
ಕತ್ತಲ
ಕರಗಿಸಿ ..
ಹೊಸ ..
ಆಸೆಗಳ ಕಿರಣ...
ನಮ್ಮ
ಮನೆಯಲ್ಲೂ ಮೂಡಬಹುದು....!
ಆ ದಿನ ಬೇಗ ಬರಲೆಂದು ಹಾರೈಸುವಾ...
ನಿಮ್ಮ ಪ್ರತಿಕ್ರಿಯೆಗೆ ಪ್ರೀತಿ ಪೂರ್ವಕ ವಂದನೆಗಳು...
ಉಮೇಶ ದೇಸಾಯಿಯವರೆ...
ಆಗದು ..
ಅಂತ ಗೊತ್ತಿದ್ದರೂ ನಮ್ಮ ಬದುಕಿನುದ್ದಕ್ಕೂ ..
ಆಸೆಗಳ ..
ದೊಡ್ಡ ಮೂಟೆಗಳನ್ನು ಹೊತ್ತುಕೊಂಡೇ ತಿರುಗುತ್ತೇವೆ...
ಎಲ್ಲೂ ಬೇಸರಗೊಳ್ಳುವದಿಲ್ಲ...
ಅಂಥಹ ಹತ್ತು ಮೂಟೆಗಳ ಸಂಗಡ ಇದನ್ನೂ ಹೊತ್ತುಕೊಂಡು ತಿರುಗೋಣ... ಏನಂತೀರಿ?
ರಾಜಕೀಯ ಬದಲಾವಣೆ..
ಮನ ಪರಿವರ್ತನೆ ಆಗುತ್ತದೆ..
ಆದಷ್ಟು ಬೇಗ ಆಗಲಿದೆ..
ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ವಂದನೆಗಳು...
ಕಾವ್ಯಾ...
ನನಗೂ ರಾಜಕೀಯಕ್ಕೂ... ಎಣ್ಣೆ ಸಿಗೇಕಾಯಿ ಸಂಬಂಧ...
ಭ್ರಮ ನಿರಸನ ಅಂತಲ್ಲ...
ನಮ್ಮ ಮನೆಯಲ್ಲಿ "ಕೆಂಪಜ್ಜಿ" ಅಂತ ಒಬ್ಬ ಅಜ್ಜಿ ಇದ್ದರು...
ಕಾರಂತಜ್ಜನ "ಮೂಕಜ್ಜಿಯ" ಹಾಗೆ ಬಾಲ್ಯವಿಧವೆ..
ಆ ಅಜ್ಜಿ ನಾವು ಸಣ್ಣವರಿದ್ದಾಗ ತನ್ನ ಅನುಭವಗಳನ್ನು..
ಕಥೆಗಳನ್ನು ಹೇಳುತ್ತಿದ್ದಳು..
ಆ ಅಜ್ಜಿಯ ಕೆಲವು ಅನುಭವಗಳನ್ನು ಬರೆಯಲೇಬೇಕಾಗಿದೆ....
ಅದರಲ್ಲಿ "ಕೆಂಪಜ್ಜಿಯ" ರಾಜಕೀಯದ ವಿಚಾರಗಳು ಇಂದಿಗೂ "ಪ್ರಸ್ತುತ"...
ಸಧ್ಯದಲ್ಲಿಯೇ ಬರೆಯುವೆ...
ನಿಮ್ಮೆಲ್ಲರ ಬ್ಲಾಗುಗಳಿಗೆ ಬರಲಾಗಲಿಲ್ಲ..
ಫೇಸ್ ಬುಕ್ ಎನ್ನುವ ಬಾವಿಯಲ್ಲಿ ಇದ್ದಿದ್ದೆ..
ಇನ್ನು ಮುಂದೆ ನಿಮ್ಮೆಲ್ಲರ ಬ್ಲಾಗುಗಳಿಗೆ ಬರುವೆ..
ಪ್ರೀತಿಯ ಪ್ರೋತ್ಸಾಹಕ್ಕೆ ವಂದನೆಗಳು....
ಬರುತ್ತಾ ಇರಿ...
ಪ್ರಕಾಶಣ್ಣ...
ಪ್ರಕಾಶಣ್ಣ,
ಇಂದಿನ ರಾಜಕೀಯದ ಬಗ್ಗೆ ಆಲೋಚಿಸಿದರೆ ತಲೆ ಚಿಟ್ಟು ಹಿಡಿಯುತ್ತದೆ, ದಿನಪತ್ರಿಕೆ, ಟಿ. ವಿ., ಎಲ್ಲೆಲ್ಲೂ ಹೊಲಸು ರಾಜಕೀಯದ ಮಾತುಗಳೇ, ಒಬ್ಬರ ಮೇಲೆ ಒಬ್ಬರು ಕೆಸರು ಎರೆಚಿಕೊಳ್ಳುವುದೇ ಇಂದಿನ ರಾಜಕೀಯ ಪುಂಡರ ಕೆಲಸ. ಹಗಲು ದರೋಡೆ ಇವರ ಜನ್ಮ ಸಿದ್ಧ ಹಕ್ಕು. ಮತದಾರರಾಗಿ ನಾವು ಆರಿಸುವ ನಾಯಕರಲ್ಲಿ ಯಾರು ಎಷ್ಟು ಕಡಿಮೆ ಕಳ್ಳರು ಎಂದು ಯೋಚಿಸಿ ಮತ ಹಾಕಬೇಕು ಅಷ್ಟೇ :)
ಎಷ್ಟೇ ಗಂಭೀರವಾದ ವಿಷಯಗಳೇ ಆದರೂ ನೀವು ಅದನ್ನು ಹಾಸ್ಯವಾಗಿ ನಮ್ಮ ಮುಂದಿಟ್ಟು ಮೊಗದಲ್ಲಿ ನಗುವನ್ನು ಮೂಡಿಸಿ, ಒಂದು ಕ್ಷಣ ಎಲ್ಲಾ ನೋವನ್ನು ಮರೆಯುವಂತೆ ಮಾಡುತ್ತೀರಾ,
ಧನ್ಯವಾದಗಳು,
ಕಥೆ ಚೆನ್ನಾಗಿದೆ :-) ಮಧ್ಯ ಮಧ್ಯ ತಿಳಿಹಾಸ್ಯ ಇದ್ದರೂ ಇಂದಿನ ರಾಜಕೀಯ ದೊಂಬರಾಟಗಳನ್ನು ಚೆನಾಗಿ ಬಿಂಬಿಸಿದ್ದೀರ. ನಮಗೆ ಅರ್ಥವಾಗಿದ್ದಕ್ಕಿಂತ ಅರ್ಥವಾಗದ್ದು ಎಷ್ಟೋ ಇರುತ್ತದೆ.ಇಲ್ಲಿ, ಎಲ್ಲೋ ಸ್ವಲ್ಪ ಅರ್ಥವಾಯಿತು ಅನ್ನುವ ಹೊತ್ತಿಗೆ ಅರ್ಥವಾಗದ್ದು ಏನೋ ಆಗಿರುತ್ತದೆ. ಎಲ್ಲಾ ಅಯೋಮಯ
ಪ್ರಕಾಶ್ ಸರ್,
ಪ್ರಸ್ತುತ ಪರಿಸ್ಥಿತಿಯ ರಾಜಕೀಯವನ್ನು ಚೆನ್ನಾಗಿ ನಿಮ್ಮದೇ ಶೈಲಿಯಲ್ಲಿ ವಿಮರ್ಶಿಸಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ಇವರೆಲ್ಲರು ಪಾಳೆಯಗಾರರಾಗಿಬಿಟ್ಟಿದ್ದಾರೆ. ಸಾಮಾನ್ಯಜನರನ್ನು ಮರೆತೇ ಬಿಟ್ಟಿದ್ದಾರೆ. ಇಂಥ ಹೊಲಸು ರಾಜಕೀಯವನ್ನು ನನಗೆ ಬುದ್ದಿ ಬಂದಾಗಿನಿಂದ ಎಂದೂ ನೋಡಿದರಲಿಲ್ಲ...
uttama rajakeeya vidambane
Post a Comment