ನಮ್ಮ ನಾಗು ಬಹಳ ಘಾಟಿ ಮನುಷ್ಯ..
ಅವನ ತಲೆ ಯಾವ ಬ್ರಹ್ಮ ಮಾಡಿದ್ದಾನೋ ಗೊತ್ತಿಲ್ಲ..
ಹೆಣ್ಣುಮಕ್ಕಳ ಕಿವಿಗಳಿಗೆ ತೂತುಗಳನ್ನು ಯಾಕೆ ಮಾಡ್ತಾರೆ?
ನಾಗುವಿಗೆ ಫೋನ್ ಮಾಡಿದೆ..
"ಬಾರಯ್ಯಾ.. ಗೊಮಟೇಶ್ವರಾ..
ನಿನ್ನ ಅನುಮಾನವನ್ನೆಲ್ಲ ಪರಿಹರಿಸ್ತಿನಿ.." ಅಂತ ಕರೆದ..
ನಾನು ಲಗುಬಗೆಯಿಂದ ಅವನ ಮನೆಗೆ ಓಡಿದೆ...
ಆತ ನನಗಾಗಿ ಕಾಯ್ತಾ ಇದ್ದ..
"ಪ್ರಕಾಶು..
ನಮ್ಮ ಹಿರಿಯರು ಮಹಾ ಬುದ್ಧಿವಂತರು ಕಣೋ..
ಹೆಣ್ಣನ್ನು ಎಷ್ಟು ವ್ಯವಸ್ಥಿತವಾಗಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು ಅಂದ್ರೆ..
ಅವರಿಗೆ ಉದ್ಧಂಡ ನಮಸ್ಕಾರ ಮಾಡ್ಬೇಕು ಅನ್ನಿಸ್ತದೆ...! "
"ನಾಗು..
ನನಗೆ ಸ್ವಲ್ಪ ಬಿಡಿಸಿ ಹೇಳು.."
"ಮೊದಲಿಗೆ ಗಂಡಿಗೆ ಗೊತ್ತಾಗಿ ಹೋಯ್ತು ..
ಈ ಹೆಣ್ಣು ತನಗಿಂತ ಸಮರ್ಥಳು..
ಇವಳನ್ನು ಹೀಗೆ ಬಿಟ್ರೆ ತಲೆ ಮೇಲೆ ಕುತ್ಕೊತಾಳೆ.." ಅಂತ..
ಅದಕ್ಕೆ ತುಂಬಾ ಬುದ್ಧಿವಂತಿಕೆಯಿಂದ.. ಏನು ಮಾಡಿದ್ರು ಗೊತ್ತೇನೋ?"
"ಏನು ಮಾಡಿದ್ರು?"
" ಹೆಣ್ಣೇ...
ನೀ.. ನಾಗವೇಣಿ...!
ನೀಲವೇಣಿ..!
ನೀನು ಉದ್ದವಾಗಿ ಕೂದಲು ಬಿಟ್ರೆ ತುಂಬಾ ಚಂದವಾಗಿ ಕಾಣಸ್ತಿಯಾ..!
ಮೊದಲು ಉದ್ದವಾದ ಕೂದಲು ಬಿಡು" ಅಂದ್ರು...
"ಏಯ್ .. ನಾಗು...
ಹೆಣ್ಣಿಗೆ ಉದ್ದವಾದ ಕೂದಲು ಚಂದ ಅಲ್ಲವೇನೋ?"
"ನೀನು ಒಮ್ಮೆ ಉದ್ದವಾದ ಕೂದಲು ಬಿಟ್ಟು ನೋಡು ...
ಎಷ್ಟು ಕಷ್ಟ ಅಂತ... ಗೊತ್ತಾಗ್ತದೆ...!
ಉದ್ದವಾದ ಕೂದಲು ಬಿಡಿಸಿ ...
ಅವಳನ್ನು ಒಂದಷ್ಟು ಪರಾಧೀನ ಮಾಡಿದ್ರು..!
"ಅದನ್ನು ಚೆನ್ನಾಗಿ ತೊಳೆದುಕೋ..
ಒಣಗಿಸಿಕೋ..
ಒಪ್ಪವಾಗಿ ಬಾಚಿಕೋ..
ಹೂ ಮುಡಿದುಕೊ...!.. " ಅಂದ್ರು..!
"ನಂತರ..?..?"
"ಪ್ರಕಾಶು...
ಎಲ್ಲಾ ರಗಳೆ, ತಲೆಹರಟೆ ಕೆಲಸ ಹೆಣ್ಣಿಗೆ ಅಂತ ಇಟ್ರು ..!
ಹೆಣ್ಣಿನ ಪ್ರತಿಯೊಂದು ಅಲಂಕಾರವೂ ..
ಅವಳ ಪರಾವಲಂಬನೆ ಮಾಡುತ್ತವೆ ಕಣೋ...!
ಪರಾಧಿನತೆಯ ಸಂಕೇತ.. ! "
ನನಗೆ ತಲೆ ಕೆಡಲು ಶುರುವಾಯಿತು...
" ಉದ್ದವಾದ ಕೂದಲುಗಳನ್ನು ಬಾಚಿಕೊಂಡು..
ಅಲಂಕಾರ ಮಾಡಿಕೊಳ್ಳುವದು..
ಹೂ ಮುಡಿದುಕೊಂಡು ...
ಅಲ್ಲಿಂದ ಕಿವಿಗೊಂದು ಕನೆಕ್ಟಿಂಗ್ ಆಭರಣಗಳು..!
ರಾಮಾ ..!
ರಾಮಾ.. !
ಆ ಅವಸ್ಥೆ,
ಆ ಹಿಂಸೆ ಯಾರಿಗೂ ಬೇಡ ಕಣೋ...!.."
"ನಾಗೂ..
ಸುಮ್ನೆ ಮಾತನಾಡಬೇಡ.. ಉದ್ದವಾದ ಕೂದಲು ಹೆಣ್ಣಿಗೆ ಎಷ್ಟು ಚಂದ ಗೊತ್ತೇನೋ?
ಆ ಆಕರ್ಷಣೆಯೇ ಬೇರೆ ..
ನೀನು ಅರಸಿಕನಂತೆ ಮಾತನಾಡಬೇಡ ಮಾರಾಯಾ"
"ಪ್ರಕಾಶು..
ಒಂದು ಕೆಲಸ ಮಾಡು...
ನೀನು ದಕ್ಷಿಣ ಆಫ್ರಿಕಾಕ್ಕೆ ಹೋಗು..
ಅಲ್ಲಿನ ನಿಗ್ರೋ ಗಂಡನ್ನು ಮಾತನಾಡಿಸು..
"ಹೆಣ್ಣು ಹೇಗಿದ್ದರೆ ಚಂದ" ಅಂತ..
" ಚಂದದ ಹೆಣ್ಣು ಅಂದರೆ..
"ತಲೆ ನುಣ್ಣಗೆ ಇರಬೇಕು" ಅಂತಾನೆ ಆ ನಿಗ್ರೋ...!!"
"ಅಯ್ಯೋ ರಾಮಾ...
ಎಂಥಾ ಮನುಷ್ಯನೋ ನೀನು..
ಹಾಗಾದರೆ ಆಕರ್ಷಣೆ ಅಂತ ಏನೂ ಇಲ್ವೇನೋ?"
"ಇದೆ ಕಣೋ ...
ಎರಡು ವಿರುದ್ಧ ಲಿಂಗಿಗಳ ಆಕರ್ಷಣೆಗೆ ಏನೂ ಬೇಕಿಲ್ಲ...
ಒಂದು ಗಂಡು..!
ಒಂದು ಹೆಣ್ಣು..!
ಆಕರ್ಷಣೆಗೆ ಇಷ್ಟು ಸಾಕು...!
ಅಲಂಕಾರದ ಆಕರ್ಷಣೆ ಮನಸ್ಸಿಗೆ ಸಂಬಂದಿಸಿದ್ದು...
ಈ ಆಕರ್ಷಣೆ ಅನ್ನೋದು ಮುಗಿಯೋದೇ ಇಲ್ಲ...
ಅಭಿಷೇಕ್ ಬಚ್ಚನ್ ಬೇರೆ ಹೆಣ್ಣನ್ನು ನೋಡೋದೇ ಇಲ್ವೇನೋ?"
ನೋಡೋ ..
ಮೂಗಿನಿಂದ ಕಿವಿಗೆ ...
ಕಿವಿಯಿಂದ ತಲೆಗೆ... ಅದೆಲ್ಲ ಚಂದ ಅಂತ ಅನಿಸಿದರೂ...
ಅದೆಲ್ಲ ಎತ್ತಿಗೆ...
ಎಮ್ಮೆಗೆ.. ಕೊಣಕ್ಕೆ,... ಹಾಕುವ " ಮೂಗು ದಾರದಂತೆ " ಕಣೋ...
ಒಂಥಾರಾ..."ಲಗಾಮು" ಇದ್ದಂತೆ...
ಹೆಣ್ಣಿನ ಸ್ವಾತಂತ್ರ್ಯ ಕಸಿದುಕೊಳ್ಳುತ್ತವೆ ಕಣೋ .. ಈ ಅಲಂಕಾರಗಳು..."
ಪ್ರಕಾಶು..
ನೀನು ...ಸ್ವಲ್ಪ ಕಲ್ಪನೆ ಮಾಡಿಕೊ...
ಕಿವಿಗೆ ಇಷ್ಟು ಉದ್ದದ ..
ಭಾರದ ಅಲಂಕಾರ ಹಾಕ್ಕೊಂಡು ಕಂಫರ್ಟ್ ಫೀಲಿಂಗ್ ಮಾಡ್ಕೋಳ್ಳಿಕ್ಕೆ ಸಾಧ್ಯವೇನೋ...? "
ಹೆಣ್ಣಿನ ಇಂಥಹ ಅಲಂಕಾರಗಳು ಪ್ರಾಣಿಗಳಿಗೆ ಹಾಕೋ ಮೂಗು ದಾರದಂತೆ...!
ಹೆಣ್ಣನ್ನು ಉಪಾಯವಾಗಿ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲಿಕ್ಕೆ
ಗಂಡು ಮಾಡಿದ್ದು ಕಣೋ...!
ಹೆಣ್ಣಿಗೆ ಹದಿನೆಂಟು ಮೊಳದ ಉದ್ದವಾದ ಸೀರೆ ಕೊಟ್ಟು...
"ಎಲೈ..
ನೀರೆ...
ನೀನು ಸೀರೆಯಲ್ಲಿ ಬಾರೆ..."
ಅಂತ ಜೋರಾಗಿ ಓಡಾಡದ ಹಾಗೆ ಮಾಡಿದ್ರು...
" ಇನ್ನು ಆ ಸೀರೆ...
ಎಲ್ಲೆಲ್ಲಿ ಏನೇನು ಕಾಣಬೇಕೋ...
ಅದೆಲ್ಲವನ್ನು ಮುಚ್ಚಿಟ್ಟಂತೆ ..ಮಾಡಿ..
ಮನಸ್ಸು ಕೆಣಕುವಂತೆ ಕದ್ದು ಕದ್ದು ತೋರಿಸ್ತದೆ..."
ಒಟ್ಟಿನಲ್ಲಿ ಹೆಣ್ಣಿಗೆ " ನೀನು ಅಲಂಕಾರ ಮಾಡಿಕೊ...
ಈ ಅಲಂಕಾರದಿಂದ ನೀನು ಚಂದ ಕಾಣ್ತಿಯಾ..!
ಅಂತ ಕೈಗೆ ಹೂಕೊಟ್ಟು...
ಕಿವಿಗೆ ಏರಿಸಿದ್ದಾರೆ ಕಣೋ..ಪ್ರಕಾಶೂ...!
ಹೆಣ್ಣನ್ನು ಹೊಗಳಿ... ಹೊಗಳಿ... ಮೇಲಕ್ಕೆ ಏರ್ಸಿದ್ರು...
ಈಗ ಏನಾಗಿದೆ ಅಂದ್ರೆ ....
ಮೇಲಿಂದ ಸುಲಭವಾಗಿ ಕೆಳಗೆ ಇಳಿಯುವಂತಿಲ್ಲ...
ಅಂಥಾ ಸ್ಥಿತಿ ಈ ಹೆಣ್ಣು ಮಕ್ಕಳದ್ದು...!
" ನೋಡಮ್ಮಾ..
ನೀನು ಮನೆಯಲ್ಲಿ ಇರು... ನಾನು ದುಡಿದು ಬರ್ತೀನಿ..."
"ನೀನು ಈ ಮಕ್ಕಳನ್ನೆಲ್ಲ ನೋಡ್ಕೊಂಡು..
ಆರಾಮಾಗಿರು...
ನಿನಗೆ ಹೊರಗಡೆ ದುಡಿಯಲಿಕ್ಕೆ ಕಷ್ಟ..!
ಮನೆಯಲ್ಲೇ...ಮಕ್ಕಳನ್ನು ನೋಡ್ಕೊಂಡು..
ಅಡಿಗೆ ಮಾಡ್ಕೊಂಡು.. ಇರು...!
ನಾನು ಮನೆಗೆ ಬಂದಾಗ ನಗು ನಗ್ತಾ ಸ್ವಾಗತ ಮಾಡು...
ಅಂತ ...
ಮತ್ತೂ ಒಂದಷ್ಟು ಬುಟ್ಟಿ ಹೂ ಹೆಣ್ಣಿನ ಕೈಗೆ ಕೊಟ್ರು...!! "
ಹೆಣ್ಣಿಗೆ... ಬಹಳ ವ್ಯವಸ್ಥಿತವಾಗಿ
"ನೀನು ಅಬಲೆ"
ಅಂತ ಪ್ರತಿ ಕ್ಷಣ ನೆನಪು ಮಾಡಿಕೊಡುತ್ತದೆ ಈ ಅಲಂಕಾರಗಳು..!
ಮೊದಲು ಹಣೆಗೆ ಕುಂಕುಮ..!
"ಅದು ನಿನ್ನ ಸೌಭಾಗ್ಯ..
ಗಂಡನ ಭಾಗ್ಯ ನಿನ್ನ ಹಣೆಯಲ್ಲಿರಲಿ ಅಂದ್ರು.."
" ಆಮೇಲೆ..?.."
" ಆಮೇಲೆ ಇನ್ನೇನು..?
ಮೂಗಿಗೆ..
ಕಿವಿಗೆ ತೂತು ಹೊಡೆದರು..
ಅಲ್ಲಿ ಒಂದಷ್ಟು ಆಭರಣ ಹಾಕಿದರು..!"
"ಲೇ..
ನಾಗು... ಅದೆಲ್ಲ ಚಂದ ... ಅಲಂಕಾರ ಕಣೋ..."
"ಪ್ರಕಾಶು...
ಚಂದವೂ ಇಲ್ಲ ...
ಯಾವ ಸುಡುಗಾಡೂ ಇಲ್ಲ..!
ನೀನು ಜಸ್ಟ್ ಕಲ್ಪನೆ ಮಾಡ್ಕೋ...
ಅದೆಲ್ಲ ಎಷ್ಟು ರಗಳೆ... ತಲೆಹರಟೆ ಅಂತ...!
ಪ್ರತಿ ಕ್ಷಣಕ್ಕೂ ನೀನು ಹೆಣ್ಣು...!
ಅಡಿಗೆ ಮನೆಯಲ್ಲಿರು...!
ದೇವರ ಮನೆಯಲ್ಲಿ ಪೂಜೆ ಮಾಡು...!
ಯಾರಾದರೂ ಬಂದ್ರೆ ಹಾಲಿಗೆ ಟೀ.. ಕಾಫಿ ತಂದುಕೊಡು"
ಅಂದ್ರು...
"ಹೆಣ್ಣಿನ... ಅಲಂಕಾರಗಲೆಲ್ಲವೂ.. .. ಒಂದು ರೀತಿಯ ಬಂಧನ...!
ಅದು "ಅಂದ..ಚಂದದ ಬಂಧನ...!.."
"ಈ ಗಂಡು ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಿದ...
ಕಾಲಿಗೊಂದು ಉಂಗುರ ಹಾಕಿದ...
ಕೈಗಳಿಗೆ ಬಳೆ ಹಾಕಿಸಿದ..
ಇದಕ್ಕೆಲ್ಲ ಒಂದೊಂದು ಸೆಂಟಿಮೆಂಟಿನ ಕಾರಣ ಕೊಟ್ಟ.. .
ಪ್ರತಿಕ್ಷಣಕ್ಕೂ ಹೆಣ್ಣಿಗೆ ನೆನಪಾಗಬೇಕು...
"ನಾನು ಈಗ ಹೆಂಡತಿ" ಅಂತ...
ಆದರೆ...
ಗಂಡು ತಾನು ಮಾತ್ರ " ಬೀದಿಗೆ ಬಿಟ್ಟ ಬಸವನ " ಹಾಗೆ ಇದ್ದು ಬಿಟ್ಟ...
ಗಂಡು ಎಷ್ಟು ಬುದ್ಧಿವಂತ ಅಂದರೆ...
ಹೊರಗಡೆ ತಿರುಗಾಡುವಾಗ "ನಾನೊಬ್ಬ ಗಂಡ" ಅನ್ನುವಂಥಹ ಯಾವ ಕುರುಹೂ" ಇವನು ಇಟ್ಟುಕೊಂಡಿಲ್ಲ...
ಹೆಣ್ಣಿನ ಕಿವಿಯಲ್ಲಿ " ಹೂ " ಇಟ್ಟ..!
ಪಾಪ ಹೆಣ್ಣು ..!
ಈ ಅಲಂಕಾರ ಎಲ್ಲ ತನ್ನ ಚಂದ..ಅಂದ ಅಂದ್ಕೊಂಡು ಸಂಭ್ರಮ ಪಡ್ತಾಳೆ...!
ಅಲಂಕಾರ ಅನ್ನೋದು ಹೆಣ್ಣನ್ನು ಪಳಗಿಸಲಿಕ್ಕೆ...
ಮನೆಯಿಂದ ಹೊರಗಡೆ ಹೊರಟರೆ...
ಬೇರೆಲ್ಲೂ ಹೋಗಬಾರದು...
ಮನೆಗೆ ತಿರುಗಿ ಬರಬೇಕು ಅಂತ...
"ಒಟ್ಟಿನಲ್ಲಿ ವ್ಯವಸ್ಥಿತವಾಗಿ ಹೆಣ್ಣನ್ನು ಹೊಗಳಿ ಅಟ್ಟಕ್ಕೆ ಏರಿಸಿ...
ಗಂಡು ಸವಾರಿ ಮಾಡಿದ್ದಾರೆ ಕಣೋ... ಪ್ರಕಾಶು..."
"ನಾಗೂ ...
ಹೆಣ್ಣು ಅಬಲೇ ಅಲ್ಲವೇನೋ...?
ಹಾಗಾಗಿ ಮನೆ ಕೆಲಸ ಕೊಟ್ಟಿದ್ದರು ಕಣೋ..."
"ಪ್ರಕಾಶು.. ಹೆಣ್ಣು ಖಂಡಿತ ಅಬಲೆಯಲ್ಲ...!
ಗಂಡಿಗಿಂತ ಹೆಚ್ಚು ಸಮರ್ಥಳು...
ಗಂಡಿಗೆ ಹೆಣ್ಣನ್ನು ಕಂಡರೆ ಒಳಗೊಳಗೇ ಅಸೂಯೆ.. ಹೊಟ್ಟೆಕಿಚ್ಚು ಇದೆ..
"ಗಂಡಿನಂತೆ ಎಲ್ಲ ಕೆಲಸವನ್ನು..
ಅವನಿಗೆ ಸರಿಸಮಾನವಾಗಿ ಮಾಡಬಲ್ಲಳು.."
ನನಗೆ ಈ ನಾಗುವಿನ ತರ್ಕದಿಂದ ತಲೆ ಕೆಟ್ಟು ಹೋಯಿತು...
ನನ್ನ ಇನ್ನೊಬ್ಬ ಗೆಳೆಯ ದಿವಾಕರನಿಗೆ ಫೋನ್ ಮಾಡಿದೆ..
'ಪ್ರಕಾಶು...
ನಮ್ಮ ನಾಗು ಹೇಳಿದ್ದು ಹೌದೆನಿಸಿದರೂ... ಅದು ಪೂರ್ತಿ ಸತ್ಯವಲ್ಲ...
ಹೆಣ್ಣಿನ ಪ್ರತಿ ಅಲಂಕಾರದ ಹಿಂದೆ ಆರೋಗ್ಯಕರವಾದ ಕಾರಣ ಇದೆ...
ಹೆಣ್ಣೆಂದರೆ.. ಪ್ರಕೃತಿ ಕಣೋ...
ಈ ಹಸಿರು... ಮೊಗ್ಗು ..
ಹೂವು..ಕಾಯಿ.. !
ಅಲಂಕಾರವಿಲ್ಲದಿದ್ದರೂ.. ಸಹಜ ಚಂದ ಈ ಹೆಣ್ಣು...
ಈ "ಚಂದ" ಅನ್ನೋ ಶಬ್ದ ಹೆಣ್ಣಿಗಾಗಿ ಇದ್ದಿದ್ದು...
ಹೆಣ್ಣೇ ಇಲ್ಲದ ಈ ಜಗತ್ತಿನ... ಬದುಕನ್ನು ಕಲ್ಪನೆ ಮಾಡಬಲ್ಲೆಯಾ...?
ಹಾಗೆ ಅಲಂಕಾರ , ಆಕರ್ಷಣೆ ಇಲ್ಲದ ಬದುಕನ್ನು ಕೂಡ ಕಲ್ಪನೆ ಮಾಡಿಕೊಳ್ಳುವದು ಕಷ್ಟ...
ಬದುಕಿನ ಈ ಸೊಗಸು...
ಅದಕ್ಕೊಂದು ಅರ್ಥ ಈ ಹೆಣ್ಣಿನಿಂದ...
ನನಗೂ ನಿಜವೆನಿಸಿತು...
ಎಷ್ಟು ಚಂದ ಈ ಹೆಣ್ಣು...!!
ದಿವಾಕರ ಮತ್ತೆ ಹೇಳಿದ...
" ನಾಡಿದ್ದು ನಾನು ಬೆಂಗಳೂರಿಗೆ ಬರ್ತಾ ಇದ್ದೇನೆ...
ಹೆಣ್ಣಿನ ಪ್ರತಿ ಅಲಂಕಾರದ ಹಿಂದಿನ ವಿಚಾರ ಹೇಳುತ್ತೇನೆ..."
ಈ ದಿವಾಕರ ಏನು ಹೇಳ ಬಹುದು...??
( ನಮ್ಮ ನಾಗುವಿನ ಮಾತನ್ನು ದಯವಿಟ್ಟು ಗಂಭಿರವಾಗಿ ಪರಿಗಣಿಸ ಬೇಡಿ...
ಯಾರಿಗೂ ನೋವು ಮಾಡಲಿಕ್ಕೆ ಅಲ್ಲ ಈ ಬರಹ...
ಇದೂ ಒಂದು ತರ್ಕ ಅಷ್ಟೇ...)
(ಚಂದದ ಪ್ರತಿಕ್ರಿಯೇಗಳಿವೆ.. ದಯವಿಟ್ಟು ಓದಿ..)