ನಾನೆಲ್ಲಿ ತಪ್ಪಿದೆ.. ಅಂತ ನನಗೇ ಗೊತ್ತಾಗುತ್ತಿಲ್ಲ...
ಇದು ನನ್ನಿಷ್ಟದ ಮದುವೆಯಾಗಿತ್ತು...
ಹುಡುಗ ನನ್ನನ್ನು ಕಾಡಿ.. ಬೇಡಿ ಮದುವೆಯಾಗಿದ್ದ..
ಅವನ್ನನ್ನು ನಾನೂ ಸಹ ಬೆಟ್ಟದಷ್ಟು ಪ್ರಿತಿಸಿಯೇ ಮದುವೆಯಾದದ್ದು...
ಸ್ವಂತ ಅಂದದ ಮನೆ..
ಕಾರು...
ಶ್ರೀಮಂತಿಕೆ...
ಸರಸ ದಾಂಪತ್ಯ... ಎಲ್ಲವೂ ಸರಿಯಾಗಿತ್ತು...
ಎಲ್ಲಿ ತಪ್ಪಿದ್ದು....?
ಮದುವೆಯಾದ ಒಂದು ವರುಷಕ್ಕೆ ಕೆಲಸ ಬಿಡಬೇಕಾಯಿತು...
ಪುಟ್ಟ.. ಮುದ್ದಾದ ಮಗು ನಮ್ಮಿಬ್ಬರ ಜೊತೆಯಾಯಿತು...
ಆ ಮಗುವಿನ ಪಾಲನೆ, ಪೋಷಣೆ ನಾನಂದುಕೊಂಡಂತೆ ಇರಲಿಲ್ಲ...
ತಾಯಿತನ ಹೆಮ್ಮೆ ಎನಿಸಿದರೂ...
ನಿದ್ದೆಯಿಲ್ಲದ ರಾತ್ರಿಗಳು...
ಮಗುವಿನ ಒದ್ದೆಯಾದ ಬಟ್ಟೆಗಳು...
ಹೆಸಿಗೆಯನ್ನು ಸ್ವಚ್ಛಗೊಳಿಸುವದು...
ಪಾಪುವಿನ ಬೇಕು ಬೇಡಗಳು...
ಎಲ್ಲಕ್ಕಿಂತ ಪಾಪುವನ್ನು ಸಮಾಧಾನಗೊಳಿಸುವದು...
ಇವೆಲ್ಲ ಕೇವಲ ನನ್ನೊಬ್ಬಳ ಜವಾಬ್ದಾರಿಯಾಗಿತ್ತು...
ರಾತ್ರಿಯೆಲ್ಲ ಜಾಗರಣೆ...
ಹಗಲಲ್ಲಿ ಮನೆಕೆಲಸ...
ಗಂಡ ಬೆಳಿಗ್ಗೆ ಎಂಟುಗಂಟೆಗೆ ಮನೆ ಬಿಟ್ಟವನು ಬರುವದು ರಾತ್ರಿ ಹತ್ತುಗಂಟೆಗೆ...
ಊಟ ಮಾಡಿದ ಶಾಸ್ತ್ರ ಮಾಡಿ ಬೆಡ್ ರೂಮಿಗೆ ಹೋಗಿ ಮಲಗಿ ಬಿಡುತ್ತಿದ್ದ..
ಒಂದು ಪ್ರೀತಿಯ ಮಾತು...
ನಿನ್ನ ಜೊತೆ ನಾನಿದ್ದೇನೆ ಎನ್ನುವಂಥಹ ಒಂದು ಸಣ್ಣ ಮಾತು..,
ಸಹಾಯ ನಾನು ನಿರೀಕ್ಷಿಸುವದು ತಪ್ಪೇ...?
ಸಹಾಯದ ಮಾತು ಪಕ್ಕಕ್ಕಿರಲಿ...
ಒಂದು ಪ್ರೀತಿಯ..
ಮೆಚ್ಚುಗೆಯ ನೋಟವೂ ಇರಲಿಲ್ಲ...
ಏನಾಯಿತು ನನ್ನ ಗೆಳೆಯನ ಪ್ರೀತಿಗೆ...?
ಒಂದು ದಿನ ಅವನನ್ನು ಬಲವಂತವಾಗಿ ಕುಳ್ಳಿರಿಸಿ ಕೇಳಿಯೇ ಬಿಟ್ಟೆ....
" ಡುಮ್ಮು ಪುಟ್ಟಾ..
ಬಹಳ ಚಂದದ ಕನಸುಗಳನ್ನು ಕಟ್ಟಿಕೊಂಡಿದ್ದೆ...
ನಮ್ಮ ಪುಟ್ಟ ಸಂಸಾರ.. ಮಗು.. ಮನೆ...
ಎಲ್ಲವೂ ಸಿಕ್ಕಿದೆ...
ಆದರೆ ನೀನು .. ನಿನ್ನ ಪ್ರೀತಿ..ಮಾತ್ರ ದೂರವಾಗಿಬಿಟ್ಟಿದೆ.....
ನನ್ನ ಕಡೆ ನೋಡುತ್ತಲೂ ಇಲ್ಲ...
ನನ್ನ ಮೇಲಿನ ಆಕರ್ಷಣೆ, ಪ್ರೀತಿ ಈಗ ನಿನಗಿಲ್ಲ...."
ನನ್ನವ ನನ್ನ ಮುಖವನ್ನೇ ನೋಡುತ್ತ ಹೇಳಿದ..
"ಡುಮ್ಮಕ್ಕಿ..
ಹಾಗಲ್ಲ ಅದು...
ಹಗಲು, ರಾತ್ರಿ ದುಡಿಯುತ್ತ ನಾನೊಬ್ಬನೇ ಖುಷಿಯಾಗಿದ್ದೇನೆ ಅಂದುಕೊಂಡಿದ್ದೀಯಾ...?
ಇಲ್ಲ ಕಣೆ ಡುಮ್ಮಕ್ಕಿ...
ನಾನು ಇಷ್ಟೆಲ್ಲ ದುಡಿಯುತ್ತಿರುವದು ಯಾಕೆ...?
ನಮ್ಮ ಪುಟ್ಟ ಮಗುವಿಗೆ... ನಮ್ಮ ಮುಂದಿನ ಬದುಕಿನ ಭದ್ರತೆಗಾಗಿ.."
ನನಗೆ ಕೋಪ ಬಂತು...
" ಡುಮ್ಮು ಪುಟ್ಟ..
ಬದುಕು ನನಗೆ ಬೋರಾಗಿದೆ...
ಇತ್ತೀಚೆಗೆ ಸುಂದರ ಕನಸುಗಳೇ ಬೀಳುತ್ತಿಲ್ಲ...
ಮಗುವಿನ ಗಲೀಜು ಸ್ವಚ್ಛಗೊಳಿಸಿದ ಕನಸು ಬೀಳುತ್ತವೆ ಆಗಾಗ..
ನಾನು ನಿನ್ನೊಟ್ಟಿಗೆ ಮಲಗಿದ್ದರೂ..
ರಾತ್ರಿಯೆಲ್ಲ ಒಂಟಿಯಾಗಿಬಿಡುತ್ತೇನೆ...
ನಿರೀಕ್ಷೆಗಳೇ ಇಲ್ಲದೆ ಬೆಳಗಾಗಿಬಿಡುತ್ತವೆ...
ಎಲ್ಲವೂ ಯಾಂತ್ರಿಕವಾಗಿಬಿಟ್ಟಿದೆ...
ಹೊಸತನ.. ಹೊಸ ಬೆಳಕು ಏನೂ ಇಲ್ಲ...
ನೀನು ಹೊರಗಡೆ ಹೋಗಿಬಿಡುತ್ತೀಯಾ... ನಾನೇನು ಮಾಡಲಿ...?"
ಡುಮ್ಮು ಪುಟ್ಟನ ಕಣ್ಣಲ್ಲಿ ನಗು ಕಂಡಿತು...
"ಡುಮ್ಮಕ್ಕಿ...
ಇಷ್ಟೇ ತಾನೆ...?
ನಮ್ಮ ಮನೆಯಲ್ಲಿ ಇಂಟರ್ ನೆಟ್ ಇದೆ..
ನಿನಗೊಂದು ಫೇಸ್ ಬುಕ್ ಅಕೌಂಟ್ ಓಪನ್ ಮಾಡಿಕೊಡುತ್ತೇನೆ...
ಅಲ್ಲಿ ಗೆಳೆಯರು ಸಿಗುತ್ತಾರೆ...
ನಿನ್ನ ಹಳೆಯ ಕಾಲೇಜ್ ಗೆಳತಿಯರೂ ಸಿಗುತ್ತಾರೆ...
ಅವರೊಡನೆ ಚಾಟ್ ಮಾಡು... ಹರಟು...
ಅವರ ಕಷ್ಟ, ಸುಖಗಳ ಬಗೆಗೆ ಮಾತಾಡು...
ಸುಖ, ಸಂತೋಷ ಎಲ್ಲವೂ.. ಹೋಲಿಕೆಯಲ್ಲಿರುತ್ತವೆ ಕಣೆ..
ಅವರನ್ನು ಕಂಡು ನೀನು ಸಂತೋಷ ಪಡು..."
ನನಗೂ ಕುತೂಹಲವಾಯಿತು...
ನನ್ನವ ಅದೇ ಕ್ಷಣ ನನಗೆ ಫೇಸ್ ಬುಕ್ ಮಾಡಿಕೊಟ್ಟ...
ಆದರ ಬಗೆಗೆ ಎಲ್ಲವಿವರಗಳನ್ನೂ ಹೇಳಿಕೊಟ್ಟ...
ನನಗೂ ಖುಷಿಯಾಯಿತು....
ಮರು ದಿನದಿಂದ ನನ್ನ ಬದುಕಿನಲ್ಲಿ ಹೊಸ ಗಾಳಿ ಬೀಸತೊಡಗಿತು...
ನನ್ನ ಅನೇಕ ಗೆಳೆಯ ಗೆಳತಿಯರು ಸಿಕ್ಕರು...
ಒಂದು ದಿನ ನಾನು ನನ್ನ ಮಗುವನ್ನು ಮುದ್ದಿಸುವ ಫೋಟೊ ಹಾಕಿದ್ದೆ...
" ಅದೇ..
ಮುದ್ದುಕಣ್ಣುಗಳು...
ಮುದ್ದು..
ಮಗುವಿನ ಮುಖದಲ್ಲಿ ಅದೇ.. ನಗು..!.."
ಯಾರಪ್ಪಾ ಇವರು ಅಂತ ನೋಡಿದೆ...
ನನ್ನ ಕಾಲೇಜು ಸ್ನೇಹಿತ...!
ಆತ ಚಾಟ್ ಮಾಡಲು ಬಂದ...
"ನನ್ನ ನೆನಪಿದೆಯಾ...?
ನಾನು ಹಿಂದಿನ ಬೇಂಚಿನ ಹುಡುಗ...
ನಿಮ್ಮ ಕಣ್ಣುಗಳನ್ನು ನೋಡುತ್ತ ಎಷ್ಟೋ ಕವಿತೆಗಳನ್ನು ಬರೆದಿದ್ದೆ...
ಕೊಡಲು ಧೈರ್ಯವಿಲ್ಲವಾಗಿತ್ತು..
ಹೆದರ ಬೇಡಿ...
ನನಗೀಗ ಮದುವೆಯಾಗಿ ಚಂದದ ಸಂಸಾರದ ಪತಿಯಾಗಿದ್ದೇನೆ..."
ನನಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ...
ಒಳಗೊಳಗೆ ಖುಷಿಯಾಗಿತ್ತು...
"ಧನ್ಯವಾದಗಳು..
ನಿಮ್ಮ ಪತ್ನಿ ಏನು ಮಾಡುತ್ತಾರೆ...? ಹೇಗಿದ್ದಾರೆ..?"
ಆತ ತನ್ನ ಆಲ್ಬಮ್ಮಿನ ಲಿಂಕ್ ಕೊಟ್ಟ...
ನೋಡಿದೆ...
ತುಂಬು ಪ್ರೀತಿಯ ಸಂಸಾರ....
ಹೆಂಡತಿ ಸುಂದರಿ ಅಲ್ಲದಿದ್ದರೂ ಮಗು ಮುದ್ದಾಗಿತ್ತು...
"ಚಂದದ ಸಂಸಾರ" ಅಂತ ಪ್ರತಿಕ್ರಿಯೆ ಹಾಕಿದೆ...
ಆ ದಿನವಿಡಿ ಆ ಹುಡುಗನ ಬಗೆಗೆ ಯೋಚಿಸಿದೆ...
ನನ್ನ ಬಗೆಗೆ..
ನನ್ನ ಕಣ್ಣಿನ ಬಗೆಗೆ ಕವಿತೆ ಬರೆಯುವ ಹುಡುಗ ನನಗೆ ಖುಷಿ ಕೊಟ್ಟ..
ಮರುದಿನ ಮತ್ತೆ ಚಾಟ್ ಗೆ ಬಂದ...
" ನಿಮ್ಮ ಸಂಸಾರ ಹೇಗಿದೆ...?"
ನಾನು ನನ್ನ ಬಗೆಗೆ ಹೇಳಬೇಕೋ ಬೇಡವೋ ಅಂತ ಗೊಂದಲದಲ್ಲಿದ್ದೆ...
"ನಿಮ್ಮ ಕುಟುಂಬದ ಹಾಗಿಲ್ಲ...
ನನ್ನ ಗಂಡ ದಿನಪೂರ್ತಿ ಕೆಲಸದಲ್ಲಿ ಮುಳುಗಿರುತ್ತಾನೆ..
ಚಂದದ ಮಾತು...
ನಗು ಎಲ್ಲವೂ ಅಪರೂಪ...
ಆತನಿಗೆ ನನ್ನ ಬಗೆಗೆ ಆಸಕ್ತಿಯೇ ಹೊರಟು ಹೋಗಿದೆ..."
"ನಿಮ್ಮ ಯಜಮಾನರಿಗೆ ಚಟಗಳಿವೆಯಾ...?"
"ಇಲ್ಲ..."
"ಚಟವಿಲ್ಲದ ಗಂಡ...ನೀವು ಪುಣ್ಯವಂತರು ಅಂದುಕೊಳ್ಳಿ...
ನಿಮಗೆ ಒಂದು ವಿಷಯ ಪ್ರಾಮಾಣಿಕವಾಗಿ ಹೇಳಿಬಿಡುತ್ತೇನೆ...
ನನ್ನ ಕವನಗಳ ಸ್ಪೂರ್ತಿ ನೀವು...
ನಿಮ್ಮ ಕಣ್ಣುಗಳು ಈಗಲೂ ನನ್ನನ್ನು ಕಾಡುತ್ತವೆ...
ಅಪಾರ್ಥ ಮಾಡಿಕೊಳ್ಳಬೇಡಿ...
ಆಗ ನನ್ನ ಹದಿಹರೆಯ ಪ್ರೀತಿಸಿದ ನೆನಪುಗಳನ್ನು ಬಿಟ್ಟು ಇರಲಾಗುತ್ತಿಲ್ಲ..."
ನನಗೆ ಅವನ ನೇರವಾದ ಮಾತುಗಳನ್ನು ಕೇಳಿ ಮಾತು ಬರದಂತಾಯಿತು...
ಸಂತೋಷದ ಜೊತೆಗೆ ಕಸಿವಿಸಿಯಾಯಿತು...
"ಬೇಜಾರು ಮಾಡ್ಕೋಬೇಡಿ...
ನಿಮ್ಮೊಡನೆ ಮಾತನಾಡಿದ ನೆನಪುಗಳು ನನಗಿವೆ..
ಆದರೆ ..
ನಿಮ್ಮ ಪ್ರೀತಿ, ಪ್ರೇಮಗಳ ನನಗೆ ನಿಜವಾಗಿಯೂ ಗೊತ್ತಾಗಲಿಲ್ಲ..."
"ಪರವಾಗಿಲ್ಲ ಬಿಡಿ..
ಅಂದು ನಿಮ್ಮ ಎದುರಿಗೆ ಹೇಳಲಾಗದ ಭಾವಗಳು ...
ಇಂದು ಕವನಗಳಾಗುತ್ತಿವೆ..
ಈ ಪ್ರೀತಿ ನನ್ನದು ಮಾತ್ರ...
ನೆನಪುಗಳ ಚಿಗುರುಗಳನ್ನು ಜತನವಾಗಿ ಬಚ್ಚಿಟ್ಟುಕೊಂಡಿದ್ದೇನೆ...
ಈಗಲೂ ನೀವು ನನ್ನ ಕವನಗಳ ಸ್ಪೂರ್ತಿ...
ಈಗ..
ಇಷ್ಟು ದಿನಗಳ ನಂತರ ನನಗೆ ಸಿಕ್ಕಿದ್ದೀರಲ್ಲ..
ನನ್ನನ್ನು ಸ್ನೇಹಿತ ಅಂತ ಒಪ್ಪಿಕೊಂಡಿದ್ದೀರಲ್ಲ.. ತುಂಬಾ ತುಂಬಾ ಖುಷಿ ಆಯ್ತು.."
ನನಗೆ ಗೊತ್ತಿಲ್ಲದಂತೆ..
ನನ್ನೆದೆಯ ಢವ ಢವ ಬಡಿತ ನನಗಷ್ಟೇ ಕೇಳುತ್ತಿತ್ತು...
ಮತ್ತೊಂದು ದಿನ ನನ್ನ ಮೊಬೈಲ್ ನಂಬರ್ ತೆಗೆದುಕೊಂಡ...
ಸಂದೇಶಗಳನ್ನು ಕಳಿಸುತ್ತಿದ್ದ...ನನ್ನ ಕಣ್ಣುಗಳ ಕುರಿತಾಗಿ..
ಅದರೊಳಗಿನ ಭಾವನೆಗಳು ನನ್ನನ್ನು ತಾಕಿದವು...
ನಾನು ಅವನ ಕವನಗಳ ಅಭಿಮಾನಿಯಾಗಿಬಿಟ್ಟೆ...
ಶಬ್ಧಗಳಲ್ಲಿ ಹೃದಯದ ಪ್ರೀತಿಯನ್ನೆಲ್ಲ ತುಂಬಿಡುತ್ತಿದ್ದ...
ನಾನು ಹಂಬಲಿಸುವ ಪ್ರೀತಿ ಇದಾಗಿತ್ತಾ...?
ಇತ್ತೀಚೆಗೆ ನನಗೆ ಕನಸುಗಳು ಬೀಳತೊಡಗಿದವು...
ಅವುಗಳಲ್ಲಿ ಬಣ್ಣಗಳೂ ಇರುತ್ತಿದ್ದವು..
ಹಳೆಯ ಹಿಂದಿ ಹಾಡುಗಳು..
ಅವುಗಳ ಅರ್ಥ ಇಷ್ಟವಾಗತೊಡಗಿತು...
ನನಗೆ ಗೊತ್ತಿಲ್ಲದಂತೆ ಆ ಹುಡುಗ ನನನ್ನು ಆವರಿಸಿಕೊಂಡು ಬಿಟ್ಟ..
ನನ್ನ ಸಂಸಾರವನ್ನು ಬಿಟ್ಟು ಇವನನ್ನು ಪ್ರೀತಿಸುವದು ತಪ್ಪೆಂದುಕೊಂಡರೂ..
ಮನಸ್ಸಿಗೆ ಕಡಿವಾಣವಿಲ್ಲವಲ್ಲ...
ಹಾರುತ್ತಿತ್ತು.... ಹಾರಾಡುತ್ತಿತ್ತು...
ಆತನ ಚಂದದ ಕವನಗಳಿಗೆ ಮನಸ್ಸು ಕಾಯುತ್ತಿತ್ತು...
ಆ ದಿನ ಭಾನುವಾರ..
ಆ ಹುಡುಗ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು ಬಿಟ್ಟಿದ್ದ...
ನನ್ನ ಯಜಮಾನ ಆತನನ್ನು ಆತ್ಮೀಯವಾಗಿ ಸ್ವಾಗತಿಸಿದ...
ಆ ಹುಡುಗ ಮನೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದ..
ನನಗೆ ಕಸಿವಿಸಿಯಾಯಿತು..
ಮನೆಯತುಂಬೆಲ್ಲ ಮಗುವಿನ ಆಟಿಕೆ ಸಾಮಾನುಗಳು...
ಬಟ್ಟೆಗಳು.. ಹರಡಿಕೊಂಡು ಬಿದ್ದಿದ್ದವು..
ಛೇ... !!
ಈತ ಬರುವದು ಮೊದಲೇ ಗೊತ್ತಿದ್ದರೆ....!
ತಕ್ಷಣ ಗಡಬಡಿಸಿ ಎಲ್ಲವನ್ನೂ ಓರಣವಾಗಿಡುವ ಪ್ರಯತ್ನ ಮಾಡಿದೆ..
ಐದು ನಿಮಿಷ ಬಿಟ್ಟು ಆತನನ್ನು ಮಾತಾನಾಡಿಸಿದೆ...
ಗಡಿಬಿಡಿಯಲ್ಲಿ ಓಡಾಡಿದ್ದರ ಪರಿಣಾಮವಾಗಿ ಏದುಸಿರುಬಿಡುತ್ತಿದ್ದೆ..
ಆತ ಮುಗುಳ್ನಕ್ಕ...
"ನಿಮ್ಮ ಯಜಮಾನರಿಂದ ನನಗೆ ಒಂದು ಸಹಾಯಬೇಕಿತ್ತು...
ನಾನು ಹೊಸ ಕಂಪ್ಯೂಟರ್ ಖರಿದಿಸುತ್ತಿರುವೆ.. ಅದರ ಬಗೆಗೆ ಮಾಹಿತಿ ಬೇಕಾಗಿತ್ತು."
" ನೀವು ನನಗೆ ಹೇಳಲೇ ಇಲ್ಲ..."
"ಸಣ್ಣ ಸರಪ್ರೈಜ್ ಇರಲಿ ಅಂತ ಹೇಳಲಿಲ್ಲ..."
ಆತ ನಾನು ಅಂದುಕೊಂಡಿದ್ದಕ್ಕಿಂತ ಚಂದವೇ ಇದ್ದ...
ನನ್ನನ್ನೇ ನೋಡುತ್ತಿದ್ದ..
ನಾನು ನನ್ನನ್ನು ಗಮನಿಸಿಕೊಂಡೆ...
ಛೇ... !!!!
ಹಳೆ ನೈಟಿ ಹಾಕಿಕೊಂಡಿದ್ದೆ...!!
ಲಗುಬಗೆಯಿಂದ ಒಳಗೋಡಿದೆ...
ಕೈಗೆ ಸಿಕ್ಕಿದ ಚೂಡಿದಾರ ಹಾಕಿಕೊಂಡು ..
ಟೀ.. ಬಿಸ್ಕತ್ತು ರೆಡಿ ಮಾಡಿ ... ಟಿಪಾಯಿಯ ಮೇಲಿಟ್ಟೆ...
ಆತ ಟೀ ಕುಡಿದು ಹೋದ...
ನನ್ನ ಯಜಮಾನರು ಖುಷಿಯಲ್ಲಿದ್ದರು..
"ನಿನ್ನ ಗೆಳೆಯ ನನಗೂ ಇಷ್ಟವಾದ ಕಣೆ...
ಕೆಮಿಕಲ್ ವಿಜ್ಞಾನಿಯಾದರೂ... ಕಂಪ್ಯೂಟರ್ ಬಗೆಗೆ ಆತನಿಗೆ ಬಹಳ ಗೊತ್ತಿದೆ...
ಅವನ ಸಾಹಿತ್ಯ ಆಸಕ್ತಿ ಖುಷಿಕೊಡುತ್ತದೆ...
ಇಂಥವನನ್ನು ಬಿಟ್ಟು ನನ್ನ ಮಾತಿಗೆ ಮರುಳಾಗಿ ನನ್ನ ಮದುವೆಯಾಯಲ್ಲೆ.."
ನನ್ನವ ಹೊಟ್ಟೆತುಂಬಾ ನಕ್ಕ...
ಅವರ ಹಾಸ್ಯಕ್ಕೆ ಅವರೊಬ್ಬರೇ ನಕ್ಕರು...
ಮರುದಿನ ನನ್ನವ ಆಫೀಸಿಗೆ ಹೋದಮೇಲೆ ಮಗುವನ್ನು ಮಲಗಿಸಿ ಕಂಪ್ಯೂಟರ್ ಹಚ್ಚಿಕೊಂಡೆ..
ಆತ ನೆಟ್ ನಲ್ಲಿ ಇರಲಿಲ್ಲ..
ನನಗೆ ಕಸಿವಿಸಿಯಾಯಿತು..
ಮೂರನೇ ದಿನವೂ ನೆಟ್ ಗೆ ಬರ್ಲಿಲ್ಲ..
ಎಸ್ಸೆಮ್ಮೆಸ್ ಮಾಡಿದೆ.. ಉತ್ತರ ಬರ್ಲಿಲ್ಲ...
ನಾನು ಕನ್ನಡಿಯ ಮುಂದೆ ಹಳೆಯ ನೈಟಿಹಾಕಿಕೊಂಡು ನೋಡಿಕೊಂಡೆ..
ಸುಳ್ಳು ಹೇಳುವ ಕನ್ನಡಿ ನಿಜ ನುಡಿಯುತ್ತಿಲ್ಲ ಅನ್ನಿಸಿತು...
ಆ ಹಳೆಯ ನೈಟಿಯಲ್ಲೂ ನಾನು ಚಂದವಿದ್ದೇನೆ ಅನ್ನಿಸಿತು...
ಈ ಹುಡುಗನಿಗೇನಾಯಿತು...?
ಅವನ ನಿರೀಕ್ಷೆಯಂತೆ ನಾನು ಇಲ್ಲವೆ...?
ನನ್ನ ಆಕರ್ಷಣೆ..
ಚಂದಗಳೆಲ್ಲವೂ ಕಡಿಮೆಯಾಗಿ ಹೋಯಿತಾ?
ಇದೇನಿದು...?
ನನ್ನ ಗಂಡ.. ಮಗುವನ್ನು ಬಿಟ್ಟು ಅವನ ಬಗೆಗೆ ಯೋಚಿಸುತ್ತಿದ್ದೇನಲ್ಲಾ...
ಆತ ಮಾತನಾಡಿದರೆಷ್ಟು...? ಮಾತನಾಡದಿದ್ದರೆಷ್ಟು...?
ನನ್ನ ಬದುಕಿನಲ್ಲಿ ಅವನ ಸ್ಥಾನವೇನು?
ಅವನನ್ನು ಪ್ರೀತಿಸುತ್ತಿರುವೇನಾ? ನನ್ನದು ಪ್ರೀತಿಸುವ ವಯಸ್ಸಾ?
ಪ್ರಶ್ನೆಗಳಿಗೆ ಉತ್ತರ ಇರ್ಲಿಲ್ಲ..
ಇನ್ನೂ ನಾಲ್ಕೈದು ದಿನಗಳ ನಂತರ ಒಂದು ಎಸ್ಸೆಮ್ಮೆಸ್ ಬಂತು ಆ ಹುಡುಗನಿಂದ...
"ನನ್ನ..
ಒಂಟಿ..
ಕತ್ತಲ ಏಕಾಂತದ..
ಮೌನದ ಕ್ಷಣಗಳು ನಗುತ್ತವೆ...
ಬೆಳಕು..
ಬೆಳದಿಂಗಳಾಗಿ..
ಹುಣ್ಣಿಮೆ ಚಂದ್ರಮನಾಗಿ..
ನಿನ್ನ..
ಪ್ರೀತಿ...
ಕಣ್ಣುಗಳ ನೆನಪಾಗಿ...."
ವಾಹ್ !!
ಎಂಥಹ ಸಾಲುಗಳು.. !
ನನ್ನನ್ನು ಮರೆತಿಲ್ಲ...
ನನ್ನ ಮೇಲಿನ ಆಕರ್ಷಣೆ ಕಡಿಮೆಯಾಗಲಿಲ್ಲ ಇವನಿಗೆ !
ಖುಷಿಯಾಯ್ತು...
ಅವನೇ ಫೋನ್ ಮಾಡಿ ಮಾತನಾಡಿದ...
"ಎಲ್ಲಿ ನಾಪತ್ತೆಯಾಗಿದ್ದೆ...? ಸುದ್ದಿನೇ ಇಲ್ಲವಲ್ಲ..."
"ಹುಡುಗಿ...
ನನ್ನಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲವಾಗಿತ್ತು...
ಈಗ ಉತ್ತರ ಸಿಕ್ಕಿದೆ.."
"ನನ್ನ ಬಳಿ ಮಾತನಾಡದಿರುವಷ್ಟು ಮೌನ ಯಾಕೆ?...
ಅಷ್ಟೆಲ್ಲ ಪ್ರೀತಿಯ ಎಸ್ಸೆಮ್ಮೆಸ್ ಕಳಿಸ್ತೀಯಾ...?
ನಾನು ನಿನ್ನ ಪ್ರೀತಿಯ ಎಸ್ಸೆಮ್ಮೆಸ್ಸುಗಳನ್ನು ಬಹಳ ಮಿಸ್ ಮಾಡ್ಕೊಂಡೆ..
ನಿನ್ನ ಪ್ರೀತಿ.. ಪ್ರೇಮ ಅದೆಲ್ಲ ಸುಳ್ಳಾ...?"
"ನಿನ್ನನ್ನು...
ನಿನ್ನ ಕಣ್ಣನ್ನು ಯಾವಾಗಲೂ ಪ್ರೀತಿಸುತ್ತೇನೆ ಇದು ನಿಜ...
ಆದರೆ...
ನಿನ್ನ ಮೇಲೆ ಬೇಸರವಾಯ್ತು..."
"ಯಾಕೆ?"
"ನಿನ್ನ ಗಂಡ ಸರಿ ಇಲ್ಲ ಅಂತ ನೀನು ಹೇಳಿದ್ದು.....
ನಿಜ ಹೇಳಬೇಕೆಂದರೆ ನೀನೇ ಸರಿ ಇಲ್ಲ..."
"ಅದು ಹೇಗೆ...?"
"ನಿಮ್ಮ ಮನೆಗೆ ಬಂದಾಗ ಗೊತ್ತಾಯ್ತು...
ನಿನ್ನ ಗಂಡ ನಿನ್ನ ಮೇಲೆ ದಬ್ಬಾಳಿಕೆ ಮಾಡ್ತಾ ಇಲ್ಲ..
ನಿನಗೆ ಒಂದೂ ಮಾತನ್ನು ಎದುರು ಹೇಳುವವನಲ್ಲ..
ತನ್ನ ಅಭಿಪ್ರಾಯವನ್ನು ನಿನ್ನ ಮೇಲೆ ಹೇರುತ್ತಿಲ್ಲ..."
"ನಿಜ...
ಆತ ಆ ವಿಷಯದಲ್ಲಿ ಬಹಳ ಒಳ್ಳೆಯವ..."
"ನಿನಗೆ ಸ್ವಾತಂತ್ರ್ಯ ಕೊಟ್ಟಿದ್ದಾನೆ...
ಹುಡುಗಿ...
ಪ್ರೀತಿ ಸಂಸಾರಕ್ಕೆ ಇನ್ನೇನು ಬೇಕು...?
ನಿನ್ನ ಮನೆಯಲ್ಲಿ ನಿನ್ನದೇ ದರ್ಬಾರು... ಕಾರುಬಾರು...
ನಿನ್ನಲ್ಲೇ... ಕೊರತೆಯಿದೆ...
ಇನ್ನೊಂದು ವಿಷಯ ಗೊತ್ತಾ...?"
"ಏನು...?"
"ನಿನ್ನ ಗಂಡ ಹೊರಗಡೆ ಕೆಲಸ ಮಾಡುವವನು..
ಅಲ್ಲಿ ಚಂದವಾಗಿ ರೆಡಿಯಾದ ಹೆಣ್ಣುಮಕ್ಕಳು ಕಣ್ಣಿಗೆ ನೋಡ ಸಿಗುತ್ತಾರೆ...
ನಿನಗೆ ಪ್ರತಿ ಹಂತದಲ್ಲಿ...
ಪ್ರತಿ ಕ್ಷಣದಲ್ಲಿ ಅಲ್ಲಿ ಪ್ರತಿಸ್ಪರ್ಧಿಗಳಿದ್ದಾರೆ.."
ನನಗೆ ಕೋಪ ಬಂತು..
"ಅದಕ್ಕೇನೀಗ...?.."
"ಹುಡುಗಿ...
ವಾರಕ್ಕೊಂದು ದಿನ ಗಂಡ ಮನೆಯಲ್ಲಿರುತ್ತಾನೆ..
ನೀನು ಸ್ವಲ್ಪ ಒಪ್ಪವಾಗಿ ರೆಡಿಯಾಗಿ...
ತೆಳುವಾಗಿ ಮೇಕಪ್ ಮಾಡಿಕೊಂಡು ನಗು ಸೂಸುತ್ತಿದ್ದರೆ ಎಷ್ಟು ಚಂದವಿರುತ್ತಿತ್ತು...
ಕೊಳೆ ಕೊಳೆಯಾದ ನೈಟಿ ಹಾಕಿಕೊಂಡು..
ತಲೆಯನ್ನೂ ಬಾಚಿಕೊಳ್ಳದೆ ...
ಅವನ ಭಾನುವಾರವನ್ನು ನೀರಸವಾಗಿ ಮಾಡುತ್ತೀಯಲ್ಲ..
ಹುಡುಗಿ ನಿನ್ನದೇ ತಪ್ಪುಗಳು...
ಎಲ್ಲವೂ ನಿನ್ನದೇ ತಪ್ಪುಗಳು..
ನಾನು ಬಂದೆನೆಂದು ಓಡಿ ಹೋಗಿ ನೈಟಿ ಬದಲಿಸಿ ಬಂದೆಯಲ್ಲ...
ನಿನ್ನ ಬದುಕಿನ ಪ್ರೀತಿ...
ನಿನ್ನ ಪತಿ ನಿನ್ನ ಬಳಿಯಲ್ಲಿದ್ದ...
ಅವನ ಇಷ್ಟದ ಬಗೆಗೆ..
ಆಕರ್ಷಣೆಯ ಬಗೆಗೆ ನೀನು ಯೋಚನೆಯೇ ಮಾಡಿಲ್ಲ...
ಪ್ರೀತಿ...
ಪ್ರೇಮ ಹೊರಗಡೆ ಸಿಗುವದಿಲ್ಲ...
ನಮ್ಮ ಬಳಿಯಲ್ಲಿದ್ದರೂ..
ನಾವು ಅದನ್ನು ಕಂಡುಕೊಳ್ಳಬೇಕು...
ನಾವು ಅದನ್ನು ಹುಡುಕಿ... ಕಾಯ್ದುಕೊಳ್ಳಬೇಕು...
ಅದು ನಮ್ಮ ಹಕ್ಕು...
ಜವಾಬ್ದಾರಿ..."
ನಾನು ಅಪ್ರತಿಭಳಾದೆ...!!
"ಹುಡುಗಾ...
ಇಷ್ಟೆಲ್ಲ ಬೊಗಳೆ ಬಿಡುವ ನೀನು ಮಾಡಿದ್ದೇನು..?..
ನನಗೆ ಪ್ರೇಮದ ಎಸ್ಸೆಮ್ಮೆಸ್ಸು...
ಕವನಗಳನ್ನು ..ಕಳಿಸ್ತೀಯಲ್ಲ..
ನಿನ್ನದೂ ಆಷಾಢಭೂತಿತನವಲ್ಲವೆ...?..
ನನ್ನಲ್ಲೂ ಒಂದಷ್ಟು ಹುಚ್ಚು ಕನಸು ಹುಟ್ಟಿಸಿ ಬಿಟ್ಟೆಯಲ್ಲ...
ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ಏನು ಹೇಳ್ತೀಯಾ...?"
"ಹುಡುಗಿ...
ನಾನು ಕೆಮಿಕಲ್ ವಿಜ್ಞಾನಿ..
ನೀನೂ ಕೂಡ ಅದನ್ನೇ ಓದಿದ್ದೀಯಾ...
ಒಂದು ರಾಸಾಯನಿಕ ಕ್ರಿಯೆ ನಡೆಯುವಾಗ "ವೇಗ ವರ್ಧಕ" ಬಳಸುತ್ತಾರೆ..
"ಕ್ಯಾಟಲಿಸ್ಟ" ಅನ್ನುತ್ತಾರಲ್ಲ ಅದು..
ಅದರಿಂದ ರಾಸಾಯನಿಕ ಕ್ರಿಯೆಯ ವೇಗ ಜಾಸ್ತಿಯಾಗುತ್ತದೆ..
ಆದರೆ ಅದು ಕ್ರಿಯೆಯಲ್ಲಿ ಯಾವ ಪರಿಣಾಮವನ್ನೂ ಬೀರುವದಿಲ್ಲ..."
"ಅದಕ್ಕೂ.. ಇದಕ್ಕೂ ಏನು ಸಂಬಂಧ...?"
"ನಿನ್ನ ಮಗು...
ಗಂಡ..
ನಿನ್ನ ಬಾಳು.. ಒಂದು ಕ್ರಿಯೆ..
ಅದರಲ್ಲಿ ನಾನು ಕ್ಯಾಟಲಿಸ್ಟ್ ಆಗಿರಬಲ್ಲೆ...
ನಿಮ್ಮ ಬಾಳಲ್ಲಿ ಪರಿಣಾಮ ಬೀರದ ಮೂರವನೆಯಾಗಿರಬಲ್ಲೆ ಅಷ್ಟೇ...
ನೀನೂ ಅಷ್ಟೆ..
ನನ್ನ ಮಕ್ಕಳು.. ಹೆಂಡತಿ ..
ಸಂಸಾರದಲ್ಲಿ..
ನನ್ನ ಕ್ಯಾಟಲಿಸ್ಟ್.. ವೇಗವರ್ಧಕ....
ಹಳತು... ಹಳಸದಂತೆ..
ಹೊಸತನ ಚಿಗುರಿಸುವದಷ್ಟೆ ಕ್ಯಾಟಲಿಸ್ಟ್.. ಕೆಲಸ...
ನಾನು ನಿನ್ನನ್ನು ಹಳೆ ನೈಟಿಯಲ್ಲಿ...
ಹಣೆಯ ಬೆವರುಗಳ ಸಾಲಿನ ...
ನಿನ್ನ ಆಯಾಸಗೊಂಡ ..
ಮಾದಕ ಕಣ್ಣಿನ ಬಗೆಗೆ ಇನ್ನೂ ಒಂದಷ್ಟು ಕವನ ಬರೆಯ ಬಲ್ಲೆ...
ಇಷ್ಟೇ..
ನನ್ನ.. ನಿನ್ನ ನಡುವಿನ ಸಂಬಂಧ...!.."
ನನ್ನ ಕಣ್ಣುಗಳು ಒದ್ದೆಯಾಗತೊಡಗಿತು...
ನಾನು ಮುಂದೆ ಮಾತನಾಡಲಿಲ್ಲ...ಕ್ಯಾಟಲಿಸ್ಟ್ ಹುಡುಗ ಇನ್ನೂ ಇಷ್ಟವಾದ...
( ಚಂದದ ಪ್ರತಿಕ್ರಿಯೆ.. ಸಂವಾದಗಳಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ...)
74 comments:
ಚಂದದ ಕಥೆ... :)
ಮದುವೆಯಾದ ಹೊಸತರಲ್ಲಿ ಇಬ್ಬರ ಕಣ್ಣುಗಳಲ್ಲೂ ಪ್ರೀತಿಯೊಂದೆ ಪ್ರತಿಫಲಿಸುತ್ತಿರುತ್ತದೆ. ಇಬ್ಬರ ಪ್ರೇಮದ ಕುಡಿಯಾಗಿ ಮಗುವೊಂದು ಬಂದಾಗಲೇ ದಂಪತಿಗಳಲ್ಲಿ ಜವಾಬ್ದಾರಿಯು ಉದಯಿಸುತ್ತದೆ. ತಂದೆಗೆ ಮಗುವಿನ ಭವಿಷ್ಯದ ಭದ್ರತೆಯದಾದರೆ ತಾಯಿಗೆ ಮಗುವಿನ ಪಾಲನೆ ಪೋಷಣೆಯದು. ಅದನ್ನು ನಿರ್ವಹಿಸುತ್ತಿರುವ ಹಂತದಲ್ಲಿ ಆಕೆಗೆ ಎಲ್ಲೋ ಒಂದು ಕಡೆ in secured ಭಾವನೆ ಬಂದಿರಬಹುದು. ಹೊರಗಡೆ ದುಡಿಯುವ ಗಂಡ ಇದನ್ನು ಗಮನಿಸದಿರಬಹುದು. ಆದರೆ ಸಿಕ್ಕ ಹಳೆ ಗೆಳೆಯನ ಸ್ನೇಹ ಹಾಗು ಆತನ sms ಗಳು ಈ ಭಾವನೆಯನ್ನು ಆಕೆಯಿಂದ ದೂರಗೊಳಿಸಿದ್ದವು. ಅದನ್ನೇ ಆಕೆ ಪ್ರೀತಿಯೆಂದುಕೊಂಡಳು,
ಆದರೆ ಆಕೆಯ ಸಂಸಾರದ ನೀರಸತೆಗೆ ಆಕೆಯೇ ಕಾರಣ, ಮನೆಯನ್ನು ಚಂದವಾಗಿ, ಒಪ್ಪವಾಗಿ ಇಟ್ಟುಕೊಂಡು ನಗುನಗುತ್ತ ಗಂಡನನ್ನು ಸಂತೋಷವಾಗಿಟ್ಟುಕೊಳ್ಳುವುದು ಆಕೆಯ ಕೈಲೆ ಇದೆ ಎಂದು ತಿಳಿಸಿ, ಬದುಕಲ್ಲಿ ಆಕೆ ಎಚ್ಚರ ತಪ್ಪುವ ಹಂತದಲ್ಲೇ ಆಕೆಯನ್ನು ಎಚ್ಚರಿಸಿ ನಿಜ ಸ್ನೇಹ ಮೆರೆದು , ಬದುಕಿನ ಪ್ರತಿ ಕ್ಷಣಗಳನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಕೈಲ್ಲೇ ಇದೆ ಎನ್ನುವ ಕ್ಯಾಟಲಿಸ್ಟ್ ಹುಡುಗ ತುಂಬಾ ಇಷ್ಟವಾದ..
ಚಂದ ಇದ್ದು ಕತೆ ಪ್ರಕಾಶಣ್ಣ,
ನಂಗೆ ನನ್ನ ಫ್ರೆಂಡ್ ನೆನಪಾತು .... ಸುಮಾ ಅಂತಿದ್ದ
ಕೊನೆಗೆ ಅವಳ ೧೩ ದಿನದ ಮಗಳು ಸತ್ತು ಹೋಗಿತ್ತು
ಮಗಳು ಅನ್ನುವ ಕಾರಣಕ್ಕೆ ಮಗು ಹುಟ್ಟಿದ ದಿನ ಸೋಡಾ ಚಿಟಿ ಸಿಕ್ಕಿತ್ತು ....
ಇಗಿನ ಕಾಲದಲ್ಲೂ ಇಂತವು ಇರ್ತವ..? ಅನ್ನಿಸಿ ಬಿಟ್ಟಿತ್ತು ಮಾರಾಯ ..
ಇವತ್ತು ಅವನಿಗೆ (ಅವಳ ಗಂಡ ) ಸಾಲಾಗಿ ೩ ಜನ ಹೆಣ್ಣು ಮಕ್ಕಳು ...!
ಸುಮಾ ೩.೫ ವರ್ಷ ದ ಹಿಂದೆ ನಕ್ಸಲ್ ಜೊತೆ ಸೇರಿ ಹೋದ .....ಕ್ಯಾಟಲಿಸ್ಟ್ ಇಷ್ಟವಾದ......
ಅವನು ವೇಗವರ್ಧಕನಾಗಿ ಅವಳ ಪೆದ್ದುತನವನ್ನು ತಿದ್ದುವ ಈ ಕಥೆ ತುಂಬಾ ಹಿಡಿಸಿತು.
ನೀವು ಬಳಸಿರುವ ಪುಟ್ಟ ಕವನಗಳು ನಿಮ್ಮ ಕಾವ್ಯ ಶಕ್ತಿಯ ನಿದರ್ಶನಗಳು.
chintanege hacchuva kathe.. ishTa aaytu....
ನಿಮ್ಮ ಕಥೆಗೆ ಸೊಗಸಾದ ತಿರುವುಗಳಿವೆ ಎಲ್ಲ ತಿರುವುಗಳೂ ವಿಭಿನ್ನ.ವ್ಹಾ! ಪ್ರಕಾಶಣ್ಣ ಒಳ್ಳೆ ಕಥೆ.
Kathe chanaagiddu Prakashanna..
ನನಗೆ ಬಹಳ ಇಷ್ಟ ಆಯ್ತು ಪ್ರಕಾಶೂ...ನಿತ್ಯದ ಬದುಕಲ್ಲಿ ನಮ್ಮಲ್ಲಿ ಕೆಲವು ಶೂನ್ಯ ಮೂಲೆಗಳು (ವಾಯ್ಡ್ ಕಾರ್ನರ್ಸ್) ಉದ್ಭವಿಸುತ್ತವೆ..ಅವುಗಳ ಇರುವಿಕೆಯನ್ನು ನಾವು ಗಮನಿಸುವುದಿಲ್ಲ, ನಮ್ಮಲ್ಲಿ ಯಾಕೋ ಸ್ಥಳಾವಕಾಶ ಕಡಿಮೆಯಾಗಿದೆ ಎನಿಸಿ ಬೇಜಾರಾಗುತ್ತೇವೆ.. ಒಮ್ಮೆ ಈ ಶೂನ್ಯಗಳತ್ತ ಗಮನಿಸಿರುವವರೂ ಇಲ್ಲದಿಲ್ಲ .. ಆದರೆ ಯಾಕೋ ಏನೋ ಅದರ ಬಲಕ್ಕೆ ಅಂಕಿಯನ್ನು ಹಾಕಿ ಅಯ್ಯೋ ಇಷೇನಾ ಎಂದು ನಿರಾಶರಾಗುತ್ತಾರೆ... ಇಲ್ಲೇ ಕೆಟಲಿಸ್ಟ್ ಕೆಲ್ಸ ಮಾಡೋದು.. ಅದು ನಿಮ್ಮ ಗಮನವನ್ನ ಶೂನ್ಯದತ್ತ ಹರಿಸುತ್ತದೆ ಮಾತ್ರವಲ್ಲ..ನಿಮ್ಮ ಅದೇ ಪ್ರಯತ್ನ ಅಂದ್ರೆ ಅಂಕಿಯನ್ನು ಇಡುವ ಯತ್ನ ಸರಿಯಾದ ದಿಶೆಗೆ ಸಾಗುವಂತೆ ಮಾಡಿ ಶೂನ್ಯದ ಎಡಕ್ಕೆ ಕೊಂಡೊಯ್ಯುತ್ತದೆ... ಆಗ ನೋಡಿ..ಶೂನ್ಯದ ಬೆಲೆ ಹೇಗೆ ಹತ್ತು ಪಟ್ಟು ಇಪ್ಪತ್ತು ಪಟ್ಟು ಹೆಚ್ಚುತ್ತದೆ..??!! ಅಲ್ಲವೇ... ಬದುಕಿನ ಗಮನ ಹರಿಸದ ಎಷ್ಟೋ ಅಂಶಗಳು ...ನಿಜಕ್ಕೂ ಒಮ್ದು ಉತ್ತಮ ತಿರುವಿಗೆ ನಾಂದಿ ಹಾಡುತ್ತವೆ... ಈ ಅಂಶವನ್ನು ಅಚ್ಚುಕಟ್ಟಾಗಿ ಕಥನದಲ್ಲಿ ಬಂಧಿಸಿದ ಪರಿ ತುಂಬಾ ತುಂಬಾ ಇಷ್ಟ ಆಯ್ತು... ಅದರಲ್ಲೂ ಕೆಟಾಲಿಸ್ಟ್ ಪದ ಬಳಕೆ...ಸೂಪರ್...
ನೈಸ್ ಪ್ರಕಾಶಣ್ಣ .. ಯೋಚನೆ ವಿಭಿನ್ನವಾಗಿದೆ ... ನೀವು ಕೆಮಿಕಲ್ ವಿಜ್ಞಾನಿ ಎಂದು ಬರೆದಿದ್ದರೂ ನಾನು ನಮ್ಮ ಮತ್ಸ್ಯ ವಿಜ್ಞಾನಿ ಎಂದೆ ಓದುತ್ತಿದ್ದೆ ;) ಇಷ್ಟವಾಯ್ತು
ಸಂಧ್ಯಾ...
ಮೊದಲ ಪ್ರತಿಕ್ರಿಯೆಗಾಗಿ ಥ್ಯಾಂಕ್ಸು...
ಪ್ರೀತಿ, ಪ್ರೇಮ.. ಹೃದಯ ಅಂತ ಎಷ್ಟೇ ಹೇಳಿದರೂ...
ಹಳತು ಹಳಸುತ್ತದೆ...
ಹಳಸದಂತೆ ಪ್ರತಿಯೊಬ್ಬರೂ ಅವರದ್ದೇ ಆದ ಉಪಾಯ ಹುಡುಕಿಕೊಳ್ಳುತ್ತಾರೆ..
ಹುಡುಕಿ ಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದೆ...
ಹಿಂದೆಲ್ಲ ಪ್ರತಿ ದಂಪತಿಗಳಿಗೆ ಪ್ರತಿಸ್ಪರ್ಧಿಗಳು ಕಡಿಮೆ ಇರುತ್ತಿದ್ದರು...
ಈಗ ಜಾಸ್ತಿಯಾಗಿದೆ...
ಆದರೆ ಸ್ಪರ್ಧೆಯನ್ನು ಹೇಗೆ ಎದುರಿಸಬೇಕು...
ವಿವೇಕ ಎಲ್ಲಿ ಕೆಲಸ ಮಾಡಬೇಕು ಎನ್ನುವದು ಮಹತ್ವ....
ನಮ್ಮದೇ ಬದುಕು...
ಇದನ್ನು ನಾವೇ ಪ್ರೀತಿಸಿ ಬೆಳೆಸಿಕೊಳ್ಳಬೇಕು...
ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು..
ವಂದನಾ...
ವೇಗ ವರ್ಧಕ ಪ್ರತಿಯೊಂದೂ ಕ್ರಿಯೆಗೆ ಅನಿವಾರ್ಯವೇನೂ ಅಲ್ಲ...
ಅವರವರ ಮನಸ್ಥಿತಿಗೆ ಬಿಟ್ಟಿದ್ದು..
ವೇಗ ವರ್ಧಕವನ್ನು ರಾಸಾಯನಿಕ ಕ್ರಿಯೆಯಲ್ಲಿ ಎಷ್ಟು ಬೇಕೋ ಅಷ್ಟನ್ನೇ ಬಳಾಸಬೇಕು...
ಜಾಸ್ತಿಯಾದರೆ ಕ್ರಿಯೆ ಹಾಳಾಗುತ್ತದೆ...
ನಿಮ್ಮ ಸ್ನೇಹಿತೆಯ ಬಗೆಗೆ ಸಹಾನುಭೂತಿ ಮೂಡಿತು...
ನಮ್ಮ ಬದುಕು.... ಸಂಸಾರವನ್ನು ನಾವೇ ಪ್ರೀತಿಸಬೇಕು...
ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕು...
ಧನ್ಯವಾದಗಳು ವಂದನಾ...
dr sir ,
nivu bareda Rasayanika kateyaliy sarala sundar shabdagalondigina kata handara so nice
ದಾಂಪತ್ಯದ ರಾಸಾಯನಿಕ ಕ್ರಿಯೆಗೆ ವೇಗವರ್ಧಕವಾಗಿ ಬಂದ ಗೆಳೆಯನಿಗೆ ಜೈ ಎನ್ನಬೇಕು. ಹೌದು ನಿಮ್ಮ ಲೇಖನದ ಪ್ರತೀ ಮಾತೂ ನಿಜ. ಇದನ್ನು ಕೃಷ್ಣದೇವರಾಯ ಚಿತ್ರದ ಈ ಹಾಡು ಪ್ರತಿ ಫಲಿಸುತ್ತದೆ '' ಬಹು ಜನ್ಮದಾ ಪೂಜಾ ಫಲ , ಈ ಪ್ರೇಮ ಸಮ್ಮಿಲನಾ....ಈ ಪ್ರೇಮ ಸಮ್ಮಿಲನಾ .........'' ಎಂದು ಸಾಗುವ ಈ ಹಾಡಿನಲ್ಲಿ ಎಸ್ಟೊಂದು ಸುಂದರ ಕಲ್ಪನೆಗಳ ಹಂದರವಿದೆ ಆಲ್ವಾ,ನಿಮ್ಮ ಲೇಖನದಲ್ಲಿ ಸಾಮಾಜಿಕ ಕಳಕಳಿ ಇದ್ದು ಇದನ್ನು ಅರಿತು ನಡೆದರೆ ದಾಂಪತ್ಯದ ಯಾನ ಸುಗಮ. ಸಾರ್ವಜನಿಕವಾಗಿ ತನ್ನ ಪತಿಯಬಗ್ಗೆ , ಅಥವಾ ಪತ್ನಿಯಬಗ್ಗೆ ಕೇವಲವಾಗಿ ಮಾತಾಡುವಹಲವು ಜನರನ್ನು ಕಂಡಿದ್ದೇನೆ.ಅಂತಹವರಿಗೆ ಇದು ಒಳ್ಳೆಯ ಔಷಧಿ.ಒಳ್ಳೆಯ ಲೇಖನ ಪ್ರಕಾಶಣ್ಣ ಜೈ ಹೋ.
ಬದರಿ ಸರ್...
ಪ್ರತಿಯೊಂದೂ ದಾಂಪತ್ಯದ ಕೆಲವು ದಿನಗಳ ನಂತರ "ಹಳತನ"ದ ನೀರಸತೆ ಕಾಡುತ್ತದೆ..
ಹೇಗೆ ಹೊಚ್ಚ ಹೊಸತನ ಕಂಡುಕೊಳ್ಳಬೇಕು...?
ಕನ್ನಡದ ಖ್ಯಾತ ಕವಿ ಬಿ. ಆರ್. ಲಕ್ಷ್ಮಣರಾಯರು ಇದರ ಬಗೆಗೆ ಸೊಗಸಾದ ಕವಿತೆ ಬರೆದಿದ್ದಾರೆ..
"ಮನೆಯ ಬಾಗಿಲ ತೋರಣ ಒಣಗಿದ್ದರೆ..
ನಾನೊಬ್ಬನೆ ಅಲ್ಲ..
ನೀನೂ ಕಾರಣ" ಅಂತ ಮಡದಿಗೆ ಹೇಳುವ ಕವನ..
ತುಂಬಾ ಸೊಗಾಗಿದೆ...
ಮದುವೆಯಾದ ಹೊಸತರಲ್ಲಿ ಎಲ್ಲವೂ ಸೊಗಸು..
ವ್ಯಕ್ತಿ ದೌರ್ಬಲ್ಯಗಳ ಸಂಗಡ..
ಹೊಂದಾಣಿಕೆ ಮಾಡಿಕೊಳ್ಳುವಾಗ ಹೊಸತನದ ಬಿಸಿ ಕಡೆಮೆಯಾಗುತ್ತ ಹೋಗುತ್ತದೆ..
ಎರಡನೆ ವರ್ಷದಿಂದ ಆರೇಳು ವರ್ಷಗಳವರೆಗೆ ಸ್ವಲ್ಪ ನಾಜೂಕಿನಿಂದ ಸಂಬಂಧವನ್ನು ನಿಭಾಯಿಸಬೇಕು...
ಇಲ್ಲೇ...
ತಮ್ಮೊಳಗೇ ಹುಡುಕಿಕೊಳ್ಳಬೇಕಾದದ್ದನ್ನು ಹೊರಗಡೆ ಎಷ್ಟೇ ಹುಡುಕಿದರೂ ಸಿಗುವದಿಲ್ಲ ಅಂತ ಅನೇಕ ದಾರ್ಶನಿಕರು ಹೇಳಿದ್ದಾರೆ..
ಧನ್ಯವಾದಗಳು ಬದರಿ ಸರ್....
ದಿನಕರ್...
ಸಾಮಾಜಿಕ ಅಂತರ್ ಜಾಲ ಸ್ನೇಹಿತರನ್ನು ಹೇಗೆ ನಿಭಾಯಿಸಬೇಕು...?
ಒಳ್ಳೆಯವರ್ಯಾರು?
ಕೆಟ್ಟವರ್ಯಾರು?
ಕಣ್ಣಿಗೆ ಕಾಣುವವರನ್ನೇ ಗುರುತಿಸಲಾಗುವದಿಲ್ಲ...
ನೆಟ್ ಸ್ನೇಹಿತರನ್ನು ಹೇಗೆ ನಿರ್ಣಯಿಸಬೇಕು?
ಬಹಳ ಕಷ್ಟ..
ಅವರೊಡನೆ ಎಷ್ಟು ಮಾತನಾಡಬೇಕು..? ನಮಗೆ ನಾವೇ ಬೇಲಿ ಹಾಕಿಕೊಳ್ಳುವ ಅವಶ್ಯಕತೆ ಇದೆ ಅಲ್ಲವೆ?
ಗೆಳೆಯ ಬಾಲಣ್ಣ ಹೇಳುವ ಹಾಗೆ ನಮ್ಮ ಕುಟುಂಬದ ವಿಷಯಗಳನ್ನೆಲ್ಲ ಹೇಳಿಕೊಳ್ಳುವದು ಸರಿಯಲ್ಲ ಅಲ್ಲವೆ?
ಇಲ್ಲಿ ಕಥಾನಾಯಕಿ ಮಾಡುವ ಹಾಗೆ..
ಧನ್ಯವಾದಗಳು ದಿನಕರ್..
ಬಹಳ ಚೆನ್ನಾಗಿದೆ ಸಾರ್.
ಮನಸ್ಸು ಅನ್ನೋದು ಯಾವಗ ಚಂಚಲ ಆಗುತ್ತೋ ಗೊತ್ತಿಲ್ಲ.
ಆದರೆ ಅದನ್ನು ಸೂಕ್ತ ಸಮಯದಲ್ಲಿ ಅರಿತು ನಮ್ಮ ಕೊರತೆಗಳನ್ನು
ನಾವೇ ಸುಧಾರಿಸಿಕೊಳ್ಳಬೇಕು ಅಂತ ಎಷ್ಟು ಚೆನ್ನಾಗಿ ಹೇಳಿದ್ದೀರಿ ಈ
ಕಥೆಯ ಮೂಲಕ...
ಪ್ರೀತಿಯ ಜಗದೀಶ ಬಾಳೆಹದ್ದ...
ಇಲ್ಲಿ ಕಥಾ ನಾಯಕಿಗೆ ಜೀವನ ಬೋರ್ ಆಗಿತ್ತು ನಿಜ...
ಮಗು ಬೇಕಿತ್ತು ನಿಜ...
ಮಗುವಿನ ಪಾಲನೆ, ಪೋಷಣೆಗಾಗಿ ಮಾಡುವ ತ್ಯಾಗದ ಬಗೆಗೆ ಕಲ್ಪನೇಯೇ ಇರಲಿಲ್ಲ...
ರಾತ್ರಿಯೆಲ್ಲ ಜಾಗರಣೆ..
ಹಗಲಲ್ಲಿ ಕೆಲಸ..
ಎರಡನ್ನೂ ನಿಭಾಯಿಸುವದು ಕಷ್ಟ...
ಇದರ ನಡುವೆ ಗಂಡ...
ಏನನ್ನಾದರೂ ಸಹಿಸ ಬಹುದು...
ಗಂಡನ ಅನಾದರಣೆಯನ್ನಲ್ಲ.... ಅವನ ಪ್ರೀತಿ ಅವಳ ಹಕ್ಕು...
ನನ್ನ ಸ್ನೇಹಿತೆಯೊಬ್ಬಳ ಇಂಥಹ ಗಂಡನ ಅನುಭವ ಈ ಕಥೆ ಬರೆಯಲು ಸ್ಪೂರ್ತಿ...
ಧನ್ಯವಾದಗಳು ಜಗದೀಶ....
ಕಾಂತಿ....
ಬದುಕಿನ ಪ್ರತಿ ಹಂತದಲ್ಲಿ "ತಾಳ್ಮೆ" ಅಗತ್ಯ...
ಮಗುವಿನ ಪಾಲನೆ, ಪೋಷಣೆ ಮಾಡುವ ಹಂತದಲ್ಲಿ ಹೆಣ್ಣಿಗೆ ಮಾನಸಿಕ ಬೆಂಬಲ ಬಹಳ ಬೇಕು...
ಅದು ಸಿಗಲಿಲ್ಲ ಎಂದು ದುಡುಕುವದು ಬಹಳ ಅಪಾಯಕಾರಿ...
ಹಾಳಾಗುವದು ನಮ್ಮ ಬದುಕು ತಾನೆ?
ಎಲ್ಲವನ್ನೂ ನಾವು ಹುಡುಕಿಕೊಳ್ಳಬೇಕು... ಕಂಡುಕೊಳ್ಳಬೇಕು...
ಸುಖ, ಸಂತೃಪ್ತಿ, ಸಂತೋಷವನ್ನೂ ಸಹ...
ಧನ್ಯವಾದಗಳು ಕಾಂತಿ....
ಕಥೆ ತುಂಬಾ ಚೆನ್ನಾಗಿದೆ ಅಣ್ಣ... ಎಷ್ಟೋ ಮನಸುಗಳು ಹತ್ತಿರದ್ದನ್ನು ಬಿಟ್ಟು ದೂರದಲ್ಲಿರುವುದನ್ನು ಬಯಸುತ್ತವೆ ಎಂಬುದಕ್ಕೆ ಈ ಕಥೆಯೇ ಸಾಕ್ಷಿ
ಆಜಾದೂ...
ಬಹಳ ಇಷ್ಟವಾಯ್ತು ನಿನ್ನ ಪ್ರತಿಕ್ರಿಯೆ...
ನಾನು ಕಥೆಯ ರೂಪದಲ್ಲಿ ಹೇಳಿದ್ದನ್ನು ಸಮರ್ಥವಾಗಿ ನಾಲ್ಕಾರು ವಾಕ್ಯಗಳಲ್ಲಿ ಹೇಳೀಬಿಟ್ಟಿದ್ದೀಯಾ...
ನಿಜ...
ಬದುಕಿನಲ್ಲಿ ದಿನ ಕಳೆದಂತೆ ಗೊತ್ತಿಲ್ಲದಂತೆ ಉದ್ಭವಿಸುವ "ಖಾಲಿ" ಜಾಗವನ್ನು ನಾವು ತುಂಬಿಕೊಳ್ಳಬೇಕಲ್ಲ...
ಅದೇ ಖಾಲಿ ಜಾಗ ದೊಡ್ಡದಾಗಿ ಬದುಕನ್ನು ಹಾಳು ಮಾಡಬಾರದಲ್ಲ..
ಇದು ಈ ಕಥೆಯ ಆಶಯ..
ಬಹಳ ಬಹಳ ಚಂದದ ಪ್ರತಿಕ್ರಿಯೆ ..
ಧಾನ್ಯವಾದಗಳು...ಆಜಾದೂ..
ನನ್ನೊಳಗಿನ ಕನಸಿನ "ವೆಂಕಟೇಶ್....
ನಮ್ಮ "ಮತ್ಸ್ಯ ವಿಜ್ಞಾನಿ" ಕಡಿಮೆಯೇನಿಲ್ಲ..
ಬದುಕನ್ನು... ತನ್ನ ಸುತ್ತಲಿನವರನ್ನು ಬಹಳ ಪ್ರೀತಿಸುತ್ತಾನೆ...
ನಿರೀಕ್ಷಿಸಿದ ಪ್ರೀತಿ ಸಿಗದಾಗ "ನಿರಾಸೆ" ಸಹಜ.
ಆದರೆ..
ನೀರಸದಲ್ಲೇ... "ರಸ"ವಿದೆ...
ಸ್ವಲ್ಪ ಪ್ರಯತ್ನಿಸಿದರೆ ಪ್ರೀತಿಯನ್ನು ಕಂಡುಕೊಳ್ಳುವದು ಸುಲಭ ಅಲ್ಲವೆ?
ಧನ್ಯವಾದಗಳು ವೆಂಕಟೇಶ....
ಅಬ್ಬಾ, ನಿಮ್ಮ ಕಥನ ಶೈಲಿ ತುಂಬಾ ಇಷ್ಟವಾಯಿತು ಸರ್. ನಿಜವಾದ ಕಥೆ.
Prakashanna....
Katheya Theme ista aatu... avaLa aa college Fr antha hudgaru tumba aparoopa...! :)
ಪ್ರಕಾಶ್, ನಿಮ್ಮ ಕತೆಯ ಮೊದಲನೇ ಸಾಲು ಓದಿಬಿಟ್ಟರೆ ಸಾಕು... ಕತೆ ಓದಿ ಮುಗಿಸುವ ವರೆಗೂ ಸಮಾಧಾನವಿರುವುದಿಲ್ಲ! ಅದು ನಿಮ್ಮ ದೊಡ್ಡ strength . ಕತೆ ತುಂಬಾ ಚೆನ್ನಾಗಿದೆ.
ಪ್ರಕಾಶಣ್ಣ ಬದುಕು ಜಾರು ಬಂಡಿ ತರ.. ಮನಸ್ಸು ಯಾವಾಗ ಜಾರುತ್ತೆ ಯಾರಿಗೂ ತಿಳಿಯೋದಿಲ್ಲ....
ಉತ್ತಮ ಬರಹ ಧನ್ಯವಾದಗಳು
ಸುಂದರ ಬದುಕನ್ನು ಹೇಗೆ ನಾವು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ ಎನ್ನುವ ಭಾವ ಚಂದಾವಾಗಿ ಮೂಡಿ ಬಂದಿದೆ.
ಗಂಡ ಹೆಂಡತಿ ನಡುವೆ ಪ್ರೀತಿಯ ಸೆಲೆ ಬತ್ತಿಲ್ಲ ಅನ್ನುವುದಕ್ಕೆ ಸಾಕ್ಷಿ ಅವರಿಬ್ಬರೂ ಒಬ್ಬರನ್ನು ಒಬ್ಬರು ಪ್ರೀತಿಯ ಅಡ್ಡಹೆಸರುಗಳಿಂದ ಗುರುತಿಸಿಕೊಂದದ್ದು..
ಅವರಿಬ್ಬರಲ್ಲಿ ಕೊಂಚ ಕಡಿಮೆಯಾಗಿದ್ದು ಎಂದರೆ ಒಬ್ಬರ ಕ್ರಿಯೆಯಲ್ಲಿ ಇನ್ನೊಬ್ಬರು ಕ್ಯಾಟಲಿಸ್ಟ್ ಆಗುವುದು..
ಜೀವನ ಎಂದಾರೆ ಜೀಯೋ (ಬದುಕುವ-hindi) ವನ..ನಾವು ಜೀವನ ಎನ್ನುವುದು ಸುಂದರವಾದ ಕಾಡು..ಅದರಲ್ಲಿ ಎಲ್ಲ ತರಹದ ಭಾವನೆಗಳು ಇರುತ್ತವೆ..
ನಮ್ಮ ಸಮಸ್ಯಾ ಪರಿಧಿಯಿಂದ ಹೊರಗೆ ಬಂದಾಗ ಮಾತ್ರ ಅದಕ್ಕೆ ಸಮಾಧಾನಕರ ಉತ್ತರ ಸಿಗುತ್ತದೆ..
ಕಥಾ ನಾಯಕಿಯ ಸ್ನೇಹಿತ ಹೇಳಿದ ಮಾತನ್ನ ತನ್ನ ಗಂಡ ಹೇಳಿದ್ದರೆ ಅದು ಮನಸಿಗೆ ನಾಟುತಿರಲಿಲ್ಲ..
ಹಾಗೆ ಕಥಾ ನಾಯಕ ಕೂಡ ಅನುಮಾನದ ಸೆಲೆ ಇಲ್ಲದೆ ತನ್ನ ಮನದನ್ನೆಗೆ ಸಮಯ ಉತ್ತಮವಾಗಿ ಉಪಯೋಗಿಸುವ ರೀತಿ, ಸ್ನೇಹಿತರ ಲೋಕವನ್ನು ಕಟ್ಟಿಕೊಳ್ಳುವ ರೀತಿ ತೋರುವ ಬಗೆ ಇಷ್ಟವಾಗುತ್ತದೆ..
ಸ್ನೇಹಿತ ಹೇಳುವ ಮಾತನ್ನ ಉಪೇಂದ್ರ ತನ್ನ ಸಿನಿಮಾ ಉಪೆಂದ್ರದಲ್ಲಿ ಉಪೇಂದ್ರನಾಗಿ ಹೇಳುತ್ತಾನೆ ಆದ್ರೆ ಅದನ್ನ ಹೇಳುವ ಧಾಟಿ ಸ್ವಲ್ಪ ಅತಿ-ರೇಕದಲ್ಲಿ ಹೇಳುತ್ತಾನೆ..
ನಿಮ್ಮ ಸುಲಲಿತ ಬರಹ ಬಹಳ ಮನಸಿಗೆ ಮುದ ಕೊಡುತ್ತದೆ...
ರಮ್ಯಾರವರೆ..
ಇಂದು ನನ್ನಾಕೆಯೊಡನೆ ಹರಟೆ ಹೊಡೆಯುತ್ತಿದ್ದೆ...
ಇದೇ ಕಥೆಯ ಬಗೆಗೆ ಚರ್ಚೆ ನಡೆಯುತ್ತಿತ್ತು...
ನನ್ನಾಕೆ ಒಂದು ಪ್ರಶ್ನೆ ಇಟ್ಟಳು..
"ನಿಮ್ಮ ಬದುಕಿನ "ಕೆಟಲಿಸ್ಟ್" ಲೇಡಿ ಯಾರು....?"
"ನೀನೇ ಕಣೆ..."
"ಇದನ್ನೆಲ್ಲ ನಿಮ್ಮ ಬ್ಲಾಗಿನಲ್ಲಿ ಬರೀರಿ...
ನನ್ನ ಹತ್ತಿರ ನಿಜ ಹೇಳಿ..ಯಾರು ಅಂತ ಹೇಳಿ ಪರವಾಗಿಲ್ಲ..."
ಅಂತ ದುಂಬಾಲು ಬಿದ್ದಳು...
ನನಗೆ ಪಿಕಲಾಟಕ್ಕಿಟ್ಟಿತು...
"ಕೆಟಲಿಸ್ಟ್ ಅಂದರೆ ಮನುಷ್ಯರೇ ಆಗಬೇಕೇನಿಲ್ಲ....
ಹವ್ಯಾಸಗಳೂ ಆಗುತ್ತವೆ...
ನಾನು ಕಟ್ಟುವ ಮನೆಗಳು...
ಫೋಟೊಗ್ರಫಿ... ಬರವಣಿಗೆ.. ಇವೆಲ್ಲ ನನ್ನ ಕೆಟಲಿಸ್ಟ್ ಗಳು.."
ಅಂತ ಹೇಳಿದಾಗಲೆ ನನ್ನಾಕೆ ಸಮಾಧಾನಗೊಂಡಳು...
ಕೆಲವೊಮ್ಮೆ ನಾವೇ ತೋಡಿದ ಹಳ್ಳಕ್ಕೆ ಬಿದ್ದು...
ಎಂಥಹ ಫಜೀತಿಗೆ ಒಳಗಾಗಿಬಿಡುತ್ತೇವೆ ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ಮನಸು...
ಹತ್ತಿರದ ಪ್ರೀತಿಗಳು ಕಾಣುವದಿಲ್ಲ ಅಂತಲ್ಲ...
ಅದರ ಮಹತ್ವವನ್ನು ಅರಿತಿರುವದಿಲ್ಲ...
ಆ ಜೀವ ನಮ್ಮೊಬ್ಬರನ್ನೇ ಪ್ರೀತಿಸುತ್ತದೆ ಎನ್ನುವದನ್ನು ಮರೆತುಬಿಡುತ್ತೇವೆ...
ಅಲಕ್ಷ್ಯ ಮಾಡಿಬಿಡುತ್ತೇವೆ...
ಯಾವಾಗಲೂ ಕಣ್ಣಿಗೆ ಕಾಣದ ದೂರದ ಕಲ್ಪನೆಯೇ ಸುಂದರವಾಗಿರುತ್ತದೆ...
ಬಲು ಬೇಗ ಇಷ್ಟವಾಗುತ್ತದೆ...
ಅಕ್ಕಪಕ್ಕದ .. ಹತ್ತಿರ ಇರುವ ವಾಸ್ತವ....
ದಿನ ನಿತ್ಯದ ಅನುಭವವಾಗಿರುವದರಿಂದ ಅದರಲ್ಲಿ ವಿಶೇಷತೆ ಕಣ್ಣಿಗೆ ಕಾಣುವದಿಲ್ಲ...
ತಪ್ಪು ನಮ್ಮದೇ ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.....
Chennagide! Very practical and meaningful.
Its tough to get such good friends in real life though! :)no
ಹೆಗಡೆಜಿ, ನಿಮ್ಮ ಎಂದಿನ ಸೊಗಸಾದ ಶೈಲಿ. ಗತಿನಿರೋಧಕದ ಬಗ್ಗೆ ಗೊತ್ತಿತ್ತು ಈಗ "ವೇಗ ವರ್ಧಕ" ದ ಬಗ್ಗೆ ಕೇಳಿದೆ.
ಆಸಕ್ತಿಕರ ವಿಷಯ ಇದು ಸಂಯಮದಿಂದ ನಿರೂಪಿಸಿದ್ದೀರಿ.
ಪ್ರಕಾಶಣ್ಣ ರಾಶಿ ಅಂದ್ರೆ ರಾಶಿನು ಇಷ್ಟ ಆತು ಕಥೆ...
ನಿಜ ಮದುವೆಯಾದ ಹೊಸದರಲ್ಲಿ ಎಲ್ಲವು ಸೊಗಸು... ಮುಂದಿನ ಜೀವನ ನೀರಸವಾಗದಂತೆ, ಇಬ್ಬರ ಜವಾಬ್ದಾರಿಗಳು ಸರಿಯಾಗಿ ತೂಗಿಕೊಂಡು ಹೋಗುವಂತೆ, ಪ್ರೀತಿ ಹಳಸದಂತೆ ಬದುಕನ್ನು ರಸಮಯವಾಗಿ ಇಟ್ಟುಕೊಳ್ಳುವಲ್ಲಿ ದಂಪತಿಗಳಿಬ್ಬರ ಪಾತ್ರವೂ ಮುಖ್ಯವಾದುದು... ಒಬ್ಬರಿಗೊಬ್ಬರು ವಾರಕ್ಕೊಮ್ಮೆಯಾದರೂ ಸಮಯವನ್ನು ಮೀಸಲಿಟ್ಟು, ಸಂಗಾತಿ - ಮಕ್ಕಳೊಡನೆ ಕಳೆಯಬೇಕು.... ವರುಷಗಳು ಉರುಳುತ್ತಾ ಹೆಂಗಸರು ನೀರಸವಾಗಿದ್ದು ಬಿಡುವುದು ನಿಜ... ಕ್ಯಾಟಲಿಸ್ಟ್ ಹುಡುಗ ಇಷ್ಟವಾದ... ಆ ಪಾತ್ರವನ್ನು ತುಂಬಾ ಚನ್ನಾಗಿ ಬಳಸಿಕೊಂಡಿದ್ದೀರ....
ತಿರುವುಗಳು, ವರ್ಣನೆ, ಓದುಗನನ್ನು ಮೈ ಮರೆಯಿಸಿ ಓದಿಸಿಕೊಳ್ಳುವ ಸಾಮರ್ಥ್ಯ ಪ್ರಕಾಶಣ್ಣನಿಂದ ಮಾತ್ರ ಸಾಧ್ಯ....
ಪ್ರಕಾಶ್
ಕಥೆ ಚೆನ್ನಾಗಿದೆ. ಈಗಿನ ಕಂಪ್ಯೂಟರ್ ಕಾಲಕ್ಕೆ ಅಗತ್ಯವಾಗಿರುವ ಆಹಾರ ಇದರಲ್ಲಿದೆ.
ನನಗೆ ಒಂದು ಅನುಮಾನವಿದೆ.
ಕೆಟಲಿಸ್ಟ್ ಕಲ್ಪನೆ "ಒಂದುರೀತಿಯ "ವ್ಯಭಿಚಾರ"ವಲ್ಲವೆ?
(ಒಂದು ವಿನಂತಿ ನಿಮ್ಮ ಫೇಸ್ ಬುಕ್ ಲಿಂಕ್ ಕೊಡಿ kamathjaya5@gmail.com)
ನಿನ್ನ ಮಗು...
ಗಂಡ..
ನಿನ್ನ ಬಾಳು.. ಒಂದು ಕ್ರಿಯೆ..
ಅದರಲ್ಲಿ ನಾನು ಕ್ಯಾಟಲಿಸ್ಟ್ ಆಗಿರಬಲ್ಲೆ...
ಹಳತು... ಹಳಸದಂತೆ..
ಹೊಸತನ ಚಿಗುರಿಸುವದಷ್ಟೆ ಕ್ಯಾಟಲಿಸ್ಟ್.. ಕೆಲಸ...
ಹುಡುಗನ ಮಾತಲ್ಲಿ ಹುರುಳಿದೆ !
ಮದುವೆ ಆಗಿ ಮಗುವಾದ ಕೂಡಲೇ ಜೀವನ ಮುಗಿದು ಹೋಯ್ತು ತಮ್ಮ ಬಗ್ಗೆ ಲಕ್ಷ್ಯ ಕೊಡುವ ಅಗತ್ಯವಿಲ್ಲ , ಚಂದದ ಬಟ್ಟೆ ತೊಟ್ಟು , ಮುಖದಲ್ಲಿ ತಾಜಾತನ ಕಾಯ್ದಿಟ್ಟುಕೊಂಡು ಮನದಲ್ಲಿ ಪ್ರೀತಿಯನ್ನು ತುಂಬಿಟ್ಟುಕೊಳ್ಳುವ ಅವಶ್ಯಕತೆ ಇನ್ನಿಲ್ಲ ಎಂಬಂತೆ ಇರುವ ಬಹಳಷ್ಟು ಹೆಂಗಸರು ಇದ್ದಾರೆ .ಮನೆಯಲ್ಲಿ ಹೆಂಡತಿಯ ಅನಾಸಕ್ತ ಮುಖ ನೋಡಿ ಬೇಜಾರಾಗಿ ಹೊರಗೆಲ್ಲೋ ತನಗೆ ಬೇಕಾದ ತಾಜಾತನವನ್ನು ಹುಡುಕುವ ಗಂಡಸರು ತಪ್ಪು ಮಾಡಿದರು ಎಂದು ಪೂರ್ತಿಯಾಗಿ ದೂಷಿಸಲು ಬಾರದು. ( ಅದು ಸರಿಯಲ್ಲದಿದ್ದರೂ)
ಹಾಗೆಯೇ ಪತಿ ಕೂಡ ಬರೀ ತನ್ನ ಕೆಲಸದಲ್ಲಿ ಮುಳುಗಿ ಪತ್ನಿಯನ್ನು ನಿರ್ಲಕ್ಷ್ಯಿಸಿದರೆ ಆಕೆಯೂ ಪ್ರೀತಿಗಾಗಿ ಹುಡುಕಾಟ ನಡೆಸುತ್ತಾಳೆನೋ ! ತನ್ನನ್ನು ಮೆಚ್ಚುವ , ಹೊಗಳುವ ,ಆರಾಧಿಸುವ ಗಂಡು ಬೇಗ ಮನಸಿಗೆ ಹತ್ತಿರವಾಗಬಹುದು !
ಇಂದಿನ ಅತಿ ಯಾಂತ್ರಿಕ ಜೀವನದಲ್ಲಿ ಎಷ್ಟೋ ಸಲ ಕ್ಯಾಟಲಿಸ್ಟ್ ನ ಅಗತ್ಯವಿದೆ ! ಗಂಡ - ಹೆಂಡತಿ ಜೊತೆಯಲ್ಲಿರುವಾಗ ತಮಗಿಷ್ಟವಾದ ಸಿನಿಮಾ ನಟ/ ನಟಿಯರ ಬಗ್ಗೆ ಅಥವಾ ಇನ್ಯಾರದೋ ಬಗ್ಗೆ ಕೇವಲ ಯೋಚಿಸುವುದು ತಪ್ಪಲ್ಲ ಅದು ಮಾನಸಿಕ ವ್ಯಭಿಚಾರ ಎಂದು ಅಪರಾಧಿ ಪ್ರಜ್ಞೆ ಕಾಡಬೇಕಿಲ್ಲ . ಇದು ಹೆಚ್ಚಿನ ಸಂದರ್ಭದಲ್ಲಿ ಇಬ್ಬರ ನಡುವಿನ ನೀರಸವಾಗುತ್ತಿರುವ ಸಂಬಂಧವನ್ನು ಆಸಕ್ತಿದಾಯಕವಾಗಿಸಬಲ್ಲದು , ಹೊಸ ಚೈತನ್ಯ ತುಂಬಬಲ್ಲದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ .
ಇಲ್ಲಿಲ್ಲವೆಂದು ಇನ್ನೆಲ್ಲೋ ಹೊಸದರ ಹುಡುಕಾಟ ಮಾಡುವುದಕ್ಕಿಂತ ಇರುವುದನ್ನು ನವೀಕರಿಸುತ್ತಾ ಇದ್ದರೆ , ಜೀವನ ನಿಜಕ್ಕೂ ಸುಖಮಯವಲ್ಲವೇ?
ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ ಕಥೆ ! ಇಷ್ಟವಾಯ್ತು !
ಪ್ರೀತಿಯ ಈಶ್ವರ ಭಟ್..
ಕೆಟಲಿಸ್ಟ್ ಎನ್ನುವ ಕಲ್ಪನೆ "ವ್ಯಭಿಚಾರವಲ್ಲವೆ?"...
ಕಥೆ ಬರೆಯುವಾಗ ಇದರ ಬಗೆಗೆ ಯೋಚಿಸಿಯೇ ಇಲ್ಲವಾಗಿತ್ತು...
ಗಂಡ ಹೆಂಡತಿಯರ ಮಧ್ಯ ಅವರ ಪ್ರೀತಿಗೆ " ವ್ಯತಿರಿಕ್ತ ಪರಿಣಾಮ" ಬೀರದ ಕೆಟಲಿಸ್ಟ್ ಆಗಿದ್ದರೆ ತಪ್ಪೇನು...?
ನಮ್ಮ ಧರ್ಮದ ಪ್ರಕಾರ ಮನದಲ್ಲಿ ವ್ಯಭಿಚಾರದ ಕಲ್ಪನೆ ಕೂಡ ಮಾಡಿದರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಂತೆ...
ಹಿಂದೊಮ್ಮೆ ಇದೇ ಬ್ಲಾಗಿನಲ್ಲಿ ಇದೇ ವಿಷಯದ ಚರ್ಚೆಯಾಗಿತ್ತು...
ಕಾಲ ಈಗ ಬದಲಾಗಿದೆ...
ಬದುಕು ಹಾಳಾಗದ ... ಏನೂ ತೊಂದರೆ ಇರದ ಒಳ್ಳೆಯ ಸ್ನೇಹಿತ/ ಸ್ನೇಹಿತೆ "ಕೆಟಲಿಸ್ಟ್" ಆಗಿದ್ದರೆ ತಪ್ಪಿಲ್ಲ ಎನ್ನುವದು ನನ್ನ ಅನಿಸಿಕೆ...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಕಥೆ ತುಂಬಾ ಚೆನ್ನಾಗಿದೆ.. ಆಸೆ ಕನಸು ಸ್ವಾತಂತ್ರ್ಯ, ಜೊತೆಗೆ ಜವಾಬ್ದಾರಿ.. ಇವುಗಳ ಮಧ್ಯೆ ಚಂಚಲ ಮನಸಿಗೆ ಒಂದು ಕಡಿವಾಣ ಬೇಕೇ ಬೇಕು.. ಆಗಲೇ ಒಂದು ಸುಂದರ ಸಂಸಾರದಲ್ಲಿ ಅಪಾರ್ಥಗಳಿಗೆ ಎಡೆಯಿರುವುದಿಲ್ಲ.. ಮಗುವಿಗಾಗಿ ತ್ಯಾಗಗಳು ತಾಯಿಯ ಕರ್ತವ್ಯ.. ಇದನ್ನ ಅರ್ಥ ಮಾಡಿಕೊಂಡರೆ, ಮಗುವಿನ ಪಾಲನೆಯನ್ನ ಎಂಜಾಯ್ ಮಾಡತೊಡಗಿದರೆ mostly ತಪ್ಪು ವಿಚಾರಗಳತ್ತ ಯೋಚಿಸುವಷ್ಟು ಟೈಮ್ ಕೂಡ ಇರುವುದಿಲ್ಲ ಅನಿಸುತ್ತದೆ,,:)
ಈ ಕಥೆ ಸರಳ ಸುಂದರವಾಗಿ ಸಹಜತೆಯನ್ನು ಪ್ರತಿಫಲಿಸುತ್ತದೆ ಪ್ರಕಾಶಣ್ಣ. ತುಂಬಾ ನೈಜವಾಗಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೀತಿಯಲ್ಲಿ ಅಗತ್ಯ, ಜವಾಬ್ದಾರಿ ಹಾಗೂ ಬೇಡಿಕೆ ಮೂಡದವರೆಗೆ ಎಲ್ಲವೂ ಚೆನ್ನಾಗಿರುತ್ತದೆ. ಮದುವೆಯಾಗಿ ಒಂದು ಮಗುವಾದ ನಂತರ ಪ್ರೀತಿಗೆ ಅಗ್ನಿ ಪ್ರರೀಕ್ಷೆ. ಗಂಡ ಅಥವಾ ಹೆಂಡತಿಯಲ್ಲಿ ಆ ಪರೀಕ್ಷೆಯನ್ನು ನಿಭಾಯಿಸಲು ಬೇಕಾದ ಪ್ರಭುದ್ದತೆಯಿಲ್ಲದಿದ್ದಲ್ಲಿ ಅವರನ್ನು ಸರಿದಾರಿಯೆಡೆ ನಡೆಸುವ ಆ ಸಹೃದಯ ಗೆಳೆಯನ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಕಥೆ ತುಂಬಾ ಇಷ್ಟವಾಯ್ತು.
catalyst ಎನ್ನುವ ಉಪಯುಕ್ತ ಉಪಮೆಯ ಈ ಕಥೆಗೆ ಥ್ಯಾಂಕ್ಸ್!
ತೇಜಸ್ವಿನಿ....
ಒಳ್ಳೆಯ ಕೆಟಲಿಸ್ಟ್ ಈಗಿನ ಕಾಲದಲ್ಲಿ ಸಿಗುವದು ಬಹಳ ಕಷ್ಟ...
ಇರಬಹುದು...
ಬದುಕು ನಿಂತ ನೀರಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಇಬ್ಬರ ಮೇಲೆ ಇದ್ದಾಗ..
ಯಾವುದೋ ಒಂದು "ಸ್ಪೂರ್ತಿ" ಕೆಟಲಿಸ್ಟ್ ಸಿಕ್ಕೇ ಸಿಗುತ್ತದೆ...
ಅದು ಹವ್ಯಾಸವೋ...
ಬೇರೆ ಯಾವುದೋ ದಂಪತಿಗಳ ಪ್ರೀತಿಯೋ... ಏನೋ ಒಂದು ಸಿಗುತ್ತದೆ...
ನಮ್ಮ ಬದುಕಿದು ನಮಗಾಗಿ...
ನಮ್ಮ ಪ್ರೀತಿಯ ಗೂಡಿಗಾಗಿ...
ನಮಗಾಗಿ.. ನಮ್ಮನ್ನು ಪ್ರೀತಿಸುವವರಿಗಾಗಿ ನಮ್ಮ ಬದುಕು ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಪ್ರೀತಿಯ ಬಾಲಣ್ಣ...
ಕ್ಷಮಿಸಿಬಿಡಿ...
ನಿಮ್ಮ ಪ್ರತಿಕ್ರಿಯೆಗೆ ಉತ್ತರ ಕೊಡುವದು ಹೇಗೆ ತಪ್ಪಿ ಹೋಯಿತೋ ಗೊತ್ತಾಗಲಿಲ್ಲ...
ಅಪರಿಚಿತರ ಬಳಿ ತಮ್ಮ ಸಂಸಾರದ ಗುಟ್ಟನ್ನು ಹೇಳಿಕೊಳ್ಳುವದು ಜಾಣತನವಲ್ಲ..
ಅವರು ಎಷ್ಟೇ ಆತ್ಮೀಯರಿರಲಿ ವಿರುದ್ದ ಲಿಂಗಿಗಳ ಹತ್ತಿರ ದಾಂಪತ್ಯದ ಗುಟ್ಟುಗಳನ್ನು ಹೇಳಿಕೊಳ್ಳಬಾರದು...
ನೀವು ಈ ಕಥೆಯನ್ನು ಓದಿದ ರೀತಿ ಇಷ್ಟವಾಯಿತು...
ಮತ್ತೊಮ್ಮೆ ಕ್ಷಮೆಕೋರುವೆ ಬಾಲಣ್ಣ...
ಪ್ರೀತಿ , ಪ್ರೋತ್ಸಾಹ ಹೀಗೆಯೇ ಇರಲಿ...
ನಿಮ್ಮ ಪ್ರೀತಿಯ ಡುಮ್ಮಣ್ಣ..
"ಕನಸು" ರವರೆ...
ಕ್ಷಮೆ ಕೋರುವೆ...
ನಿಮ್ಮ ಪ್ರತಿಕ್ರಿಯೆಗೆ ಉತ್ತರಕೊಡಲು ತಪ್ಪಿದ್ದಕ್ಕೆ...
"ಎಲ್ಲಿ ಪ್ರೀತಿ ಇರುತ್ತೋ.. ಅಲ್ಲಿ ಸಂಶಯ ಇದ್ದೇ ಇರುತ್ತದೆ..
ಪೊಸ್ಸೆಸ್ಸಿವನೆಸ್ ಇದ್ದೇ ಇರುತ್ತದೆ..
ಆಗ ಈ ಕೆಟಲಿಸ್ಟ್ ತೊಡಕಾಗಬಹುದು.."
ಹೀಗೆಂದು ನನ್ನ ಸ್ನೇಹಿತರೊಬ್ಬರು ಮೇಲ್ ಕಳಿಸಿದ್ದಾರೆ..
ಸತ್ಯವಾದ ಮಾತು...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ... ಪ್ರೋತ್ಸಾಹಕ್ಕಾಗಿ ವಂದನೆಗಳು...
ಬರುತ್ತಾ ಇರಿ...
ನಮ್ಮ ಪ್ರೀತಿ ನಮ್ಮ ಬಳಿಯಲ್ಲಿದ್ದರೂ ಅದನ್ನು ಗುರುತಿಸದೆ ಒದ್ದಾಡಿ ಬಿಡುತ್ತಿವಲ್ಲಾ..?
ಒಳ್ಳೆಯ ಕತೆ.....
ಬಹಳ ಚೆನ್ನಾಗಿದೆ...
ನೀವು ಕತೆ ಕಟ್ಟುವ ಶೈಲಿಯೊಂದು ಸಲಾಂ...
ishta aaatu praakshanna... innomme oduva manassayitu :)
ವೊವ್.....ತುಂಬಾ ಸುಂದರ ಕಥೆ ಪ್ರಕಾಶಣ್ಣ.....ನಿಮ್ಮ ಸೊಗಸಾದ ನಿರೂಪಣೆಯಿಂದ ಕಥೆ ಇನ್ನಷ್ಟು ಸೊಗಸಾಗಿ ಮೂಡಿ ಬಂದಿದೆ.....ನಾವೆಲ್ಲರೂ ಯಾವಗಲೂ ಬೇರೆಯವರಲ್ಲೇ ಕೊರತೆಯನ್ನು ಕಾಣುತ್ತೇವೆ. ನಮ್ಮಲ್ಲಿರುವ ಹುಳುಕುಗಳು ನಮಗೆ ಕಾಣುವುದಿಲ್ಲ. ಕಾಣುವುದಿಲ್ಲ ಎನ್ನುವುದಕ್ಕಿಂತ ನಾವು ಕಾಣಲು ಬಯಸುವುದಿಲ್ಲ ಎಂದು ಹೇಳಬಹುದು. ಒಬ್ಬರಿಗೆ ಬೆರಳು ತೋರಿಸುವಾಗ ಉಳಿದ ೪ ಬೆರಳುಗಳನ್ನು ನಮ್ಮನ್ನು ತೋರಿಸುತ್ತವೆ ಎನ್ನುವುದು ನಾವು ಅರ್ಥಮಾಡಿಕೊಳ್ಳ ಬೇಕಲ್ಲವೇ ?? ಓದುತ್ತಾ ಹೋದವನಿಗೆ ಕಥೆಯ ಅಂತ್ಯ ಬೇರೆ ರೀತಿಯಲ್ಲಿರುತ್ತದೆ ಎಂದುಕೊಂಡಿದ್ದೆ.....ಆ ಹುಡುಗ 'ಖಳ ನಾಯಕ' ನಾಗುವನು ಎಂದುಕೊಂಡಿದ್ದೆ...ಆದರೆ ಆತನೇ ಈ ಕಥೆಯ ನಿಕವಾದ 'ನಾಯಕ' ನಾಗಿದ್ದು ಕಥೆಯ ಮೆರುಗನ್ನು ಹೆಚ್ಚಿಸಿದೆ. ತುಂಬಾ ನೇ ಇಷ್ಟ ಆಯಿತು....ಧನ್ಯವಾದಗಳು.....
ಕತೆಯ ತಿರುಳು ತುಂಬಾ ಇಷ್ಟವಾಯಿತು. ಎಲ್ಲ ಮಧ್ಯಮ ವರ್ಗದವರ ಗೃಹಿಣಿಯರ ಆಂತರ್ಯದ ಕಥೆಯಂತಿದೆ. ಈ ಕಥೆಯಿಂದ ಬಹಳಷ್ಟು ಹೆಣ್ಣುಮಕ್ಕಳು ಎಚ್ಚೆತ್ತುಕೊಳ್ಳಬಹುದು.
ಕಥೆಯ ಹೆಸರನ್ನು ಯಾವ ಅರ್ಥದಲ್ಲಿ ಇಟ್ಟಿದ್ದೀರಿ? ಬದುಕು, ದಾಂಪತ್ಯ ರಾಸಾಯನಿಕ ಕ್ರಿಯೆಯೆ?
ಗುರುಪ್ರಸದ್ ಕುರ್ತುಕೋಟಿ...
ಕಥೆಯನ್ನು ಓದಿ ಮೆಚ್ಚಿದ್ದಕ್ಕೆ ತುಂಬಾ ತುಂಬಾ ಖುಷಿ ಆಯ್ತು...
ಕಥೆಗೆ "ರಾಯಾಯನಿಕ..." ಅಂತ ಹೆಸರು ಸೂಕ್ತವೆ...?
ಇನ್ನೂ ಚೆನ್ನಾಗಿರುವ ಹೆಸರು ಇಡಬಹುದಿತ್ತೇನೋ... ಆ ಘಳಿಗೆಯಲ್ಲಿ ಈ ಹೆಸರೇ ಸೂಕ್ತ ಅಂತ ಅನಿಸಿತು...
ಅದನ್ನೇ ಇಟ್ಟುಬಿಟ್ಟೆ...
ರಾಸಾಯನಿಕ ಕ್ರಿಯೆ ಯಾವದೂ ತನ್ನಿಂದ ತಾನೆ ಆಗುವದಿಲ್ಲ...
ಆಮ್ಲಗಳಿಗೆ... ಲವಣಗಳನ್ನು ಸೇರಿಸಬೇಕಾಗುತ್ತದೆ.. ಆಗ "ಕ್ರಿಯೆ ನಡೆಯುತ್ತದೆ..
ಬದುಕಲ್ಲೂ ಹೀಗೆ ಅಲ್ಲವೆ?
ದಾಂಪತ್ಯದಲ್ಲೂ ಹೀಗೆಯೇ ಅಲ್ಲವೆ?
ಸೇರಿಸಬೇಕು... ಸೇರಿಸಿಕೊಳ್ಳಬೇಕು...ಕಾಣಬೇಕು... ಕಂಡುಕೊಳ್ಳಬೇಕು...
ಹಾಗಾಗಿ ಈ ಹೆಸರನ್ನಿಟ್ಟೆ...
ಕನ್ನಡ ಭಾಷೆಗೆ.. ನಾಡಿಗೆ "ಕುರ್ತುಕೋಟಿ" ಕುಟುಂಬ ಬಹಳ ಜನಪ್ರಿಯ...
ಧನ್ಯವಾದಗಳು .. ಬರುತ್ತಾ ಇರಿ...
tumba channagide..
ಕಳೆದು ಹೋಗಿದ್ದೆ 'Comment' ಎನ್ನುವ ಪದ ಬರುವತ್ತನಕ..
ಮಸ್ತ್ ಹಾ....
ಚೆನ್ನಾಗಿದೆ!
Very good Concept Prakashanna...
good Narration, Keep writing....
ಪಕ್ಕು ಮಾಮ,
ದಾಂಪತ್ಯ ಎನ್ನುವುದು ಒಂದು ತಪಸ್ಸು ಎಂದು ಎಲ್ಲೋ ಓದಿದ ನೆನಪು. ಆ ತಪಸ್ಸಿನಲ್ಲಿ ಒಮ್ಮೆ ಮನಸ್ಸು ಚಂಚಲಾವಾಯ್ತೆಂದರೆ ಮತ್ತೆ ಸರಿಪಡಿಸುವುದು ಕಷ್ಟ. ಅದರಲ್ಲೂ ವೇಗದಲ್ಲಿ ಮುಂದುವರೆಯುತ್ತಿರುವ ಇಂದಿನ ದಿನಗಳಲ್ಲಿ ಮನಸ್ಸು ಸದಾ ಹೊಸತನಕ್ಕೆ ಹಾತೊರೆಯುತ್ತಿರುತ್ತದೆ. ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ.
ಕಥೆಯಲ್ಲಿ ಚಂಚಲದ ತೆಳು ಗಾಳಿ ಬೀಸಿ ತೊಯ್ದಾಡುತ್ತಿದ್ದ ಹೆಣ್ಣೊಬ್ಬಳ ಮನಸ್ಥಿತಿ ಬಿಂಬಿತವಾಗಿದೆ. ಚಂಚಲತೆಗೊಳಗಾಗಿ ದಾರಿತಪ್ಪುವ ನಿರ್ಧಾರದ ಹಿಂದೆ ಎಷ್ಟು ಹೃದಯಗಳು ವಿಲವಿಲನೆ ಒದ್ದಾಡುತ್ತವೆ ಎಂಬ ಕಲ್ಪನೆ ಆ ಸಮಯದಲ್ಲಿ ಇರುವುದಿಲ್ಲ. ತಾನು, ತನ್ನ ಸಂಸಾರ, ಅದರ ಭದ್ರತೆ ಮುಂತಾದ ವಿಚಾರಗಳನ್ನು ತಲೆಯಲ್ಲಿ ತುಂಬಿಸಿಕೊಂಡ ಗಂಡನ ಅಸಾಹಯಕತೆ, ಹಳಸುತ್ತಿರುವ ಸಂಬಂಧದ ಕಡೆ ಗಮನ ಕೊಡದಂತೆ ಮಾಡಿಬಿಡುತ್ತವೆ.
ಹಳೆಯ ಸ್ನೇಹಿತನ ಪಾತ್ರದಲ್ಲಿ ದಾರಿ ತಪ್ಪುತ್ತಿರುವವರಿಗೆ ಬುದ್ಧಿ ಹೇಳಿದ ನಿಮ್ಮ ಪ್ರಯತ್ನ ಪ್ರಶಂಸನೀಯ. ಎಷ್ಟಾದರೂ ಪ್ರಕಾಶಣ್ಣನ ಕಥೆಗೆ ಪ್ರಕಾಶಣ್ಣನೆ ಸಾಟಿ!
ಅಬ್ಬಾ! ಭಾವನೆಗಳನ್ನು ಕೆರಳಿಸಿತು.. ನಮ್ಮಂಥ ಅಂತರ್ಜಾಲದಲ್ಲೇ ಮುಳುಗಿಹೋಗಿರುವ ಪೀಳಿಗೆಯವರಿಗೆ ಮನ ತಟ್ಟುವಂಥ ಕಥೆ! ದೈನಂದಿನ ಜೀವನದ ಜಂಜಾಟದಿಂದ ಮೌಲ್ಯ ಕಳೆದುಕೊಂಡ ಎಷ್ಟೋ ಸಂಬಂಧಗಳು ನಮ್ಮ ಕಣ್ಮುಂದೆಯೇ ಇಂದೋ ನಾಳೆಯೋ ಮುರಿದು ಬೀಳುವ ಪರಿಸ್ಥಿತಿಯಲ್ಲಿದ್ದರೂ ನಾವು ಅದರ ಬಗ್ಗೆ ಗಮನಹರಿಸುವುದಿಲ್ಲ... ಅಂಥ ಸನ್ನಿವೇಷದಲ್ಲಿರುವವರಿಗೆ ಇದು ಕಣ್ಣುತೆರಿಸುವ ಕಥೆಯಾಗಬೇಕು. ಪ್ರತೀ ಸಲದಂತೆ ಇದರಲ್ಲೂ ನಿಮ್ಮ ಅದ್ಭುತ ನಿರೂಪಣೆ ಮನಸೂರೆಗೊಳಿಸಿತು ಪ್ರಕಾಶಣ್ಣಾ.. ಸ್ಮರಣಾರ್ಹ ಕಥೆ! Jai ho!
ಕಥೆ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.. ತುಂಬಾ ಇಷ್ಟ ಆತು
ಕಥೆ ಚೆನ್ನಾಗಿದೆ. ರವಿ ಬೆಳಗೆರೆ ಹಿಂದೊಮ್ಮ ನನ್ನಲ್ಲಿ ಹೇಳಿದ ಮಾತು ನೆನಪಾಯ್ತು,’ನೋಡಮ್ಮಾ.ನೀನು ಜರ್ನಲಿಸ್ಟ್ ಪತ್ನಿ, ನೀವೆಲ್ಲಾ ನಿಜವಾದ ಅರ್ಥದಲ್ಲಿ ಸಿಂಗಲ್ ಪೆರೆಂಟ್ ಗಳೇ’!
ದೈನಿಕದ ಕ್ಷುದ್ರತೆಯನ್ನು ಮೀರಲು ಎಲ್ಲರ ಬದುಕಿಗೂ ’ಕೆಟಲಿಸ್ಟ್’ ಗಳ ಅಗತ್ಯವಿದೆ. ಭಾಗ್ಯವಂತರಿಗೆ ಅದು ಲಭಿಸುತ್ತದೆ.. !!
ಜಿತೇಂದ್ರ....
ಜಾರುವ ಮನಸ್ಸನ್ನು ತಹಬದಿಗೆ ತಂದುಕೊಳ್ಳಲೇ ಬೇಕಲ್ಲ...
ಒಳ್ಳೆಯ ಕೆಟಲಿಸ್ಟ್ ಗಳು ಸಿಕ್ಕರೆ ಎಂಥವರ ಬಾಳೂ ಸಹ ಸಂತೋಷದಿಂದ ತುಂಬಿರುತ್ತದೆ..
ಒಳ್ಳೆಯ ಕೆಟಲಿಸ್ಟನ್ನು ನೋಡುವ.. ಕಂಡುಕೊಳ್ಳುವ..
ಅನುಭವಿಸುವ ಮನಸ್ಸು ಇರಬೇಕಷ್ಟೆ...
ಉಷಾ ಕಟ್ಟೆಮನೆಯವರು ಹೇಳಿದ ಹಾಗೆ "ಅದೃಷ್ಟವೂ" ಇರಬೇಕು ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ತುಂಬಾ ಚೆನ್ನಾಗಿ ಮೂಡಿಬಂದ ಕಥೆ, ಬುಡದಿಂದ ಕೊನೆತನಕ
ಓದಿಸಿಕೊಂಡು ಹೋಗಿದೆ..
ವಾಸ್ತವಕ್ಕೆ ತುಂಬಾನೇ ಹತ್ತಿರ ಇದೆ ಪ್ರಕಾಶಣ್ಣ..
ಇನ್ನಷ್ಟು ಒಳ್ಳೊಳ್ಳೆ ಕಥೆಗಳು ಬರಲಿ.
super annaya :)
chendada kathe
ಪ್ರಕಾಶಣ್ಣ ಕ್ಯಾಟಲಿಸ್ಟ್ ಹುಡುಗ ಬಹಳ ಇಷ್ಟವಾದ.... ಸ೦ಬ೦ಧಗಳು ಹಳಸಿಹೋಗಲು ನಾವೇ ಕಾರಣರಾಗಿತ್ತೇವೆ. ಪ್ರೀತಿಯ ಆಳ ಎ೦ದೂ ಕಡಿಮೆಯಾಗಿರುವುದಿಲ್ಲ. ಸ್ವಲ್ಪ ಧೂಳು ಕೂತಿರುತ್ತದೆ ಅಷ್ಟೆ, ಆಗಾಗ ಅದನ್ನು ಒರೆಸುತ್ತಾ ನವೀಕರಿಸುತ್ತಾ ಇದ್ದರೆ, ಅದು ಕೊನೆಯ ತನಕ ಹಚ್ಚ ಹಸಿರಾಗಿ ಇರುವುದು....ಕತೆ ಬಹಳ ಇಷ್ಟವಾಯಿತು...
ತುಂಬಾ ಚೆಂದದ ಕಥೆ.
ಮೊದಲು ಯಾರೋ ಹೇಳಿದಂತೆ ಶುರು ಮಾಡಿದಮೇಲೆ
ಮುಗಿಸುವವರೆಗೂ, ಮುಗಿಸಿದಮೆಲೂ ನಿಮ್ಮ ಕಥೆಗಳು ನಮ್ಮನ್ನೇ ಮರೆಸುತ್ತವೆ.
Love also needs to be renewed :)
ಸ್ವರ್ಣಾ
ಪ್ರಕಾಶಣ್ಣ,
ಕಥೆ ತುಂಬಾ ಅರ್ಥವತ್ತಾಗಿದ್ದು.
ಪ್ರೀತಿಯ ಪ್ರಕಾಶಣ್ಣ, ಭಾಳ ಚಲೋ ಅದೆ. ಹೈಸ್ಕೂಲ್ ನಾಗೆ ನಂಗೆ ಕೆಟಲಿಸ್ಟ್ ಸರಿಯಾಗಿ ಅರ್ಥ ಆಗಿರಲಿಲ್ಲ. ಈಗ ಆಯಿತು. ಚೆಂದವಾಗಿ ಬುದ್ಡಿ ಹೇಳಿದ್ದೀರಾ...
ಪ್ರಕಾಶಣ್ಣ ಚಂದದ ಕಥೆ. ದಂಪತಿಗಳ ನಡುವಿನ ಪ್ರೇಮದ ರೂಪ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಹೊಸತನದ ಬಿಸಿ ಆರಿದ ನಂತರವಷ್ಟೇ ನಿಜವಾದ ಬದುಕು ಆರಂಭವಾಗುವುದು. ಪರಸ್ಪರ ಪ್ರೀತಿ ಗೌರವ ಹೆಚ್ಚಿಸಿಕೊಳ್ಳಲು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದದ್ದು ಇಬ್ಬರಿಗೂ ಅನಿವಾರ್ಯ. ಯಾವುದೇ ರಾಸಾಯನಿಕ ಕ್ರಿಯೆಗೆ ಕೆಟಲಿಸ್ಟ್ ಬೇಕೆಂಬುದು ನಿಜವಾದರೂ ಅದರ ಪ್ರಮಾಣ ಕೂಡ ಮುಖ್ಯ ಅಲ್ಲವೆ? ಇದನ್ನು ಅರಿತು ಇಬ್ಬರೂ ನಡೆದುಕೊಂಡಾಗ ದಾಂಪತ್ಯ ಸೊಗಸು.
ಈ ಕತೆ ಓದಿ ಒಮ್ಮೆ ಕಾಮೆಂಟ್ ಹಾಕಿ ಹೋದ ನಂತರ ಮತ್ತೆ ಮತ್ತೆ ಕಾಡುತ್ತಲೇ ಇದೆ ಕತೆ..
ನೀವು ಬರೆಯುವ ಕತೆಯ ವೈಶಿಷ್ಟ್ಯವೇ ಅದು ಪ್ರಕಾಶಣ್ಣ...
ಹೌದೂ..,, ಆಫೀಸ್ ನ ತಲೆ ಬಿಸಿನ ಆಫೀಸ್ ನಲ್ಲೆ ಬಿಟ್ಟು... ಮನೆಗೆ ಬಂದ ಮೇಲೆ ಹೆಂಡತಿಯ ಯೋಗಕ್ಷೇಮ, ಸ್ವಲ್ಪ ಪ್ರೀತಿಯ ಮಾತು ಆಡುವಂತೆ ಈ ಒಳ್ಳೆಯ ಗಂಡನಿಗೆ ನೀವ್ಯಾಕೆ ಹೇಳಬಾರದು..?!
ಆಗ ಮತ್ತೆ ಅಪಸ್ವರ ಏಳಲು ಸಾದ್ಯವೇ ಇಲ್ಲ ಅವರ ಸಂಸಾರದಲ್ಲಿ,,,
:)
ಎರೆಡೆರೆಡುಬಾರಿ ಓದಿದರೂ ಮತ್ತೆ ಓದಬೇಕೆನಿಸುತ್ತಿದೆ. ತುಂಬಾ ಇಷ್ಟವಾಯಿತು, ಹಾಗೆ ಪ್ರತಿಕ್ರಿಯೆಗಳು ಕೂಡ. ಎಲ್ಲರು ಅವರವರ ವಿಚಾರಧಾಟಿಯಲ್ಲಿಸರಿಯೇ. ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೂ ಕೂಡ ಸಂತೋಷ ಪಡದಾದಳು ಅಂದರೆ ಗಂಡನಿಗೆ ಅದು ಅವನ ತಪ್ಪನಿಸುವುದಿಲ್ಲ. ಸ್ವಾತಂತ್ರ್ಯಕಿಂತ ಗಂಡನ ಪ್ರೀತಿಯ ಬಂಧನವನ್ನೇ ಬಯಸುವ ಹೆಣ್ಣಿಗೆ ಅವನ ಪ್ರತಿ ಹೆಜ್ಜೆಯೂ ತಪ್ಪೆನಿಸುತ್ತದೆ. ಅವನ ಧಾಟಿಯಲ್ಲಿ ಯೋಚಿಸಿದರೆ 'ವೇಗವರ್ಧಕ' ಒಳ್ಳೆಯದೆನಿಸಿಕೊಳ್ಳುತ್ತೆ, ಅವಳ ಧಾಟಿಯಾದರೆ ಕೆಟ್ಟದಾಗುತ್ತದೆ.
ವ್ಯಭಿಚಾರ ಯಾವ ರೀತಿಯಲ್ಲಾದರೂ ವ್ಯಭಿಚಾರವೇ ತಾನೇ(ಬಯಲಾದ ಮೇಲೆ?), ಪರಿಣಾಮದ ಪ್ರಮಾಣ ಮಾತ್ರ ಬೇರೆ ಬೇರೆಯಾಗಬಹುದು.
Awaginda ondu Hatthu nimisha nimma Vega vardaka
Catalyst kathe Odutthidde ....
nijawaagiyoo odutthiddanthe Yenu helalu horatiddeeri yemba Bhavane aawarisikollutthiddanthe Kathe Naithikatheyattha Saagithu.....
Jeewanada Jawabdharigalannoo...
kramisale bekaada daarigalalli baruva maanawa sahaja ashe- akkankshegalannoo naithika neleyalli pareekshegittu bareda kathe adbhutha....
Nijawaagiyoo thumbaane hidisithu Matthomme Thanks annodakkinthaloo
Vandanegalu abhinandanegalu antha helalu Ishta padutthene....
ಸುಂದರ,, ಸುಮಧುರ.. ಮನದಾಳಕ್ಕಿಳಿದ ಕಥೆ..
ವಾಸ್ತವದ ಕಥಾಹಂದರ ತುಂಬಾ ಹಿಡಿಸಿತು...
ಓದಿ ತುಂಬಾ ಖುಷಿಯಾಯಿತು.. ಸ್ವಲ್ಪ ಚಿಂತನೆಗೂ ಒಳಪಡಿಸುತ್ತದೆ..
ಸೊಗಸಾಗಿದೆ...
ಪ್ರಕಾಶಣ್ಣ, ರಾಸಾಯನಿಕ ಚಂದಿದ್ದು. ಬಹಳ ಕಡೆ ಕಾಡುವ ಸತ್ಯ ಸಮಸ್ಯೆ.... ಕಥೆಯ ಸಾರ ಬಹಳ ಇಷ್ಟವಾಯ್ತು.... ನೈಟಿ ಅನ್ನುವ ಅದೊಂದು ಬಟ್ಟೆಯನ್ನು ಬ್ಯಾನ್ ಮಾಡಿದರೇನೆ ಎಷ್ಟೋ ಸಂಸಾರಗಳು ಸರಿಯಾದಾವು...
Prakashavre namasthe!
"ಇತ್ತೀಚೆಗೆ ನನಗೆ ಕನಸುಗಳು ಬೀಳತೊಡಗಿದವು - ಅವುಗಳಲ್ಲಿ ಬಣ್ಣಗಳೂ ಇರುತ್ತಿದ್ದವು"
ತುಂಬಾ ದಿನಗಳಿಂದ ನಿಮ್ಮ ಬರವಣಿಗೆಯನ್ನು ಓದುವ ಆಶಯದಲ್ಲಿ ಕಾಯುತಿದ್ದೆ...
ಇದೆ ಇದರ ಹೆಸರಿನ ನಂತರ ಓದುತಿರುವ ನಿಮ್ಮ ಬರವಣಿಗೆ ಇದೆಯಾ
ಚಿಂತನೆಗೆ ದೂಡುವಂತ ಕಥಾವಸ್ತು - ಕೊನೆಯತನಕ ಓದುಗರ ಕುತೊಹಲವನ್ನು ಹಿಡಿದಿಡುವ ನಿರೂಪಣೆ...
ನಿಮ್ಮ ಬರವಣಿಗೆಯಲ್ಲಿ ಕಲಿಯುವ ಅಂಶಗಳ ಪೂರವೇ ಇದೆ!... precisely simple yet effective.
ತುಂಬಾ ಇಷ್ಟವಾಯ್ತು....
- Roopa
super guru..onde usiralli odisikondu hoythu.
touching story
ತುಂಬಾ ಚೆನ್ನಾಗಿದೆ ಸರ್. . ಗಂಡ ಲೇಟಾಗಿ ಮನೆಗೆ ಬರುತ್ತಾನೆ ಅಂತ ಬೇಸರಿಸೋ ಹೆಂಡತಿ, ಹೆಂಡತಿಯದು ದಿನವೂ ಗೋಳು ಎಂದು ಬೇಸರಿಸೋ ಗಂಡ.. ಹೀಗೆ ಸಾಗಿ ಎಷ್ಟೊಂದು ಸಂಸಾರಗಳು ಮುರಿದು ಬೀಳುತ್ತಿವೆ. . ಫ಼ೇಸ್ಬುಕ್ ನಂತಹ ಸಾಮಾಜಿಕ ತಾಣಗಳನ್ನೂ ಬಳಸಿಕೊಂಡು ಎಷ್ಟು ಚೆಂದದ ಕತೆ ಹೆಣೆದಿದ್ದೀರ..
ಪ್ರಕಾಶಣ್ಣ,
ತುಂಬಾ ದಿನಗಳಾಗಿತ್ತು ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟು... ನಾನೇ ದೂರವಾಗಿದ್ದೆ ಬ್ಲಾಗ್ ಲೋಕದಿಂದ..
ತುಂಬಾ ಸುಂದರವಾದ ಕಥೆ... ನಮ್ಮೊಳಗಿನ ಪ್ರೀತಿಯ ಸೆಲೆಯನ್ನು ಗುರುತಿಸದೇ ಅದಕ್ಕಾಗಿ ಕೊರಗುತ್ತಾ ಇನ್ನೆಲ್ಲೋ ಹುಡುಕಲು ಪ್ರಯತ್ನಿಸುತ್ತೇವಲ್ಲ... ನಮ್ಮ ಮೂಢತನಕ್ಕೆ ಏನನ್ನಬೇಕೋ...
ಕಣ್ತೆರೆಸುವ ಕಥೆ.. ಅಭಿನಂದನೆಗಳು...
ಅಂದ ಹಾಗೆ, ಯಾವಾಗ ಮುಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮ?
ಪ್ರೀತಿಯಿಂದ,
-ಉಮೇಶ್
Manassige muttuvanta kate prakash....tumba chennagi barediddira....hale gelati sikka meloo avana manassu chanchalavagalilla adare haleya geleya sikka mele ivala manassu chanchalavayitu mattu avanu idannu advantage agi tagedukolluva badalu avala baalannu tidduva kelasa madida. Hats off to catalist man.
Post a Comment