Sunday, January 1, 2012

"ವಾಸನೆಗಳೇ .. ಹೀಗೆ... .. ದೊಸ್ತಿಯಾದಮೇಲೆ ಏನೂ ಅನ್ನಿಸೋದಿಲ್ಲ... !!.."

PART :: 1
ಭಾಗ :: ಒಂದು...


ರಜೆಗಳೆಲ್ಲ ಮುಗಿದು ..
ಹೊಸತಾಗಿ ಕಾಲೇಜು ಶುರುವಾಗಿತ್ತು..
ನಮಗೆಲ್ಲ ಏನೋ ಒಂಥರಾ ಸಂಭ್ರಮ..


ಕೆಲವು ಹೊಸ ಮುಖಗಳೂ ಬಂದಿದ್ದವು...
ಚಂದದ ಬಣ್ಣಗಳೂ ಇದ್ದವು... 


ಆತನೊಬ್ಬ ವಿಚಿತ್ರ ಹುಡುಗ...


ಇನ್ನೇನು ಕ್ಲಾಸ್ ಶುರುವಾಗುತ್ತದೆ ಅನ್ನುವಾಗ ಬರ್ತಿದ್ದ..!


ಕ್ಲಾಸ್ ಮುಗಿಯುತ್ತಿದ್ದ ಹಾಗೆ ಜಲ್ದಿ ಜಲ್ದಿಯಲ್ಲಿ ಹೋಗಿಬಿಡುತ್ತಿದ್ದ..!


ಯಾವಾಗಲೂ ಎಲ್ಲರಿಗಿಂತ ಹಿಂದೆ ಕುಳಿತಿರುತ್ತಿದ್ದ...


ಆತ ಯಾರೆಂದು ನಮಗ್ಯಾರಿಗೂ ಗೊತ್ತಿರಲಿಲ್ಲ..!


"ಆತ  ಯಾಕೆ  ಹೀಗೆ?"


"ಅಯ್ಯೋ ...
ಅವನು   "ಗ್ಯಾಸ್ ಮಹಾದೇವ...".. !!
ಅವನೊಬ್ಬ  ಗ್ಯಾಸ್ ಏಜನ್ಸಿ...!!.


ಆಸಾಧ್ಯ ಗ್ಯಾಸ್.. ಬಿಡ್ತಾನೆ ಮಾರಾಯರಾ...!
ಅವನ ಗ್ಯಾಸ್ ವಾಸನೆ ತಗೊಂಡ್ರೆ ...
ಎರಡು ದಿನ ಮೂಡ್ ಎಲ್ಲ ಹಾಳಾಗಿ ಹೋಗ್ತದೆ...!


ಅಂಥಹ  ಧರಿದ್ರ.. 
ಕೆಟ್ಟವಾಸನೆ ಎಲ್ಲಿಂದ ಬರ್ತದೆ ಅನ್ನೋದೇ ಗೊತ್ತಾಗಲ್ಲ ..
ಮೂಗಿನೊಳಗಿನ ಕೂದಲುಗಳೆಲ್ಲ ಉದುರಿ ಹೋಗಿಬಿಡುತ್ತವೆ..!


ಅವನ ವಿಷಯ ನಮಗೆ ಬೇಡ್ರೋ...."


ಆತನ ಸ್ವಲ್ಪ ಪರಿಚಯ ಮಾಡಿಕೊಂಡ ಉಮಾಪತಿ ವರದಿ ಒಪ್ಪಿಸಿದ..


ನಾಗುವಿಗೆ ಅವನ ಬಗೆಗೆ ಆಸಕ್ತಿ ಹುಟ್ಟಿತು..


ನಮ್ಮ ನಾಗು ಯಾವಾಗಲೂ ಹಾಗೇನೆ..


ಆವನನ್ನು ಮಾತನಾಡಿಸಿದ..
ಆ ಹುಡುಗ  ಬಹಳ ಬೇಸರದಲ್ಲಿದ್ದ..


"ನಿಜ ಕಣ್ರೋ..
ನನಗೆ ಹುಟ್ಟಿನಿಂದ ಈ ಸಮಸ್ಯೆ ಇದೆ..
ನನ್ನ ಪರಿಚಯದವರು ಯಾರೂ ನನ್ನ ಹತ್ತಿರ ಬರೋದಿಲ್ಲ..
ಎಲ್ಲಿಯೂ ಹೋಗೊ ಹಾಗಿಲ್ಲ..
ನನಗೆ ಯಾರೂ ಫ್ರೇಂಡ್ಸ್ ಕೂಡ ಇಲ್ಲ..
ನನ್ನ ಅಪ್ಪ.. ಅಮ್ಮ.. ಅಣ್ಣ.. ತಂಗಿ ಕೂಡ ನನ್ನನ್ನು ಹತ್ತಿರ ಸೇರಿಸೋಲ್ಲ.."


"ಔಷಧಿ  ಮಾಡಿಸ ಬೇಕಿತ್ತು..."


"ಅದೂ ಆಯ್ತು.. ಕಣ್ರೋ..
ಎಷ್ಟೇ ಔಷಧ ಮಾಡಿಸಿದ್ದರೂ ವಾಸಿಯಾಗಲಿಲ್ಲ...
ಸಿರಸಿಯ  ಯಾವ ಡಾಕ್ಟರಿಗೂ ಇದನ್ನು ವಾಸಿ ಮಾಡಲು ಆಗಲಿಲ್ಲ..
ಇದು ನನ್ನ ಜನ್ಮಕ್ಕೆ ಅಂಟಿದ ಶಾಪ...


" ಛೇ.. 
ಬೇಜಾರು ಮಾಡ್ಕೋ ಬೇಡವೋ .. ."


ನಾನು ಎಲ್ಲೇ ಹೋದರು ಜನ ಓಡಿ ಹೋಗುತ್ತಾರೆ..
ನನ್ನನ್ನು ಅಪಹಾಸ್ಯ ಮಾಡ್ತಾರೆ..


ಎಲ್ಲರೂ ಇದ್ದು ನಾನು ಒಂಥರಾ ಒಂಟಿ..
ನನ್ನ ಊರಿನವರಿಗೆ...
ನನ್ನ ಸಂಬಂಧಿಕರಿಗೆ.. ಗೆಳೆಯರಿಗೆ..
ನಾನು ನಗಲಿಕ್ಕೆ ಒಂದು ವಿಷಯ ಆಗಿಬಿಟ್ಟಿದ್ದೇನೆ..


ವಯಸ್ಸಿನ ಆಸೆ..
ಹೆಣ್ಣುಮಕ್ಕಳನ್ನು ನೋಡಿದರೂ.. ಕಿಸಕ್ಕನೆ ನಗುತ್ತಾರೆ..
ನನಗೂ ಆಸೆ ಇದೆ..
ನನ್ನ ನೋವು ಯಾರಿಗೂ ಅರ್ಥನೇ ಆಗೋಲ್ಲ.."


ನಮಗೆಲ್ಲ ನಿಜಕ್ಕೂ ಪಾಪ ಅನಿಸಿತು..


ನಾಗು ಅವನಿಗೆ ಧೈರ್ಯ ತುಂಬಿದ..


"ಹೆದರಬೇಡ ಕಣೋ..
ನಾವೆಲ್ಲ ನಿನ್ನ ಜೊತೆ ಇದ್ದೇವೆ.."


ನಾಗು ನಮಗೆಲ್ಲ ಹೇಳಿದ..


"ನೋಡ್ರೋ..
ದಿನಾಲೂ ಒಂದು ಖರ್ಚೀಫ್ ಇಟ್ಕೋಳ್ಳೋಣ..
ಏನೇನೋ.. ಸಹಿಸ್ಕೋತೀವಿ..
ಇದು ದೊಡ್ಡ ವಿಷಯ ಆಗೋದಿಲ್ಲ ಕಣ್ರೋ..


ವಾಸನೆಗಳೇ ಹೀಗೆ...
ದೊಸ್ತಿಯಾದಮೇಲೆ ಸಹ್ಯವಾಗಿಬಿಡುತ್ತವೆ...
ಏನೂ ಅನ್ನಿಸೋದಿಲ್ಲ...  


ಯಾರನ್ನೇ ಆಗಲಿ..
"ನಮ್ಮವರು" ಅಂತ ಅಂದುಕೊಂಡರೆ  ಅವರ ಎಷ್ಟೋ ವಾಸನೆಗಳು ...
ನಮಗೆ ಗೊತ್ತೇ ..ಆಗುವದಿಲ್ಲ ಕಣ್ರೋ.."

ನಾವೆಲ್ಲ ಹೂಂ.. ಅಂದೆವು...


ಅಂದಿನಿಂದ ಆತ ನಮ್ಮೊಡನೆ ಕೂತ್ಕೋತ್ತಿದ್ದ..
ತನಗೆ ಗ್ಯಾಸ್ ಬರ್ತದೆ ಅಂದಕೂಡಲೆ ಒಂದು ಬಾರಿ ಸಣ್ಣಗೆ ಕೆಮ್ಮುತ್ತಿದ್ದ..
ನಾವೆಲ್ಲ ತಕ್ಷಣ ಖರ್ಚೀಪ್ ಮೂಗಿಗೆ ಇಟ್ಕೋತಿದ್ವಿ...


ಇಂಥಹ ಕೆಟ್ಟ  ವಾಸನೆ ಜಗತ್ತಿನಲ್ಲಿ ಇರಬಹುದೆಂಬ ಕಲ್ಪನೆ  ನಮಗೂ ಇರ್ಲಿಲ್ಲ..!
ಅತ್ಯಂತ  ಕೆಟ್ಟ ವಾಸನೆ ಅದು...!


ಕರ್ಚೀಪ್ಹ್ ಮಧ್ಯದಲ್ಲಿ  ಪೌಡರ್ ಹಾಕ್ಕೊಂಡು ಬರ್ತಿದ್ವಿ...


ಕ್ರಮೇಣ ಅವನೊಂದಿಗೆ ಅವನ ವಾಸನೆಯೊಂದಿಗೂ ಸ್ನೇಹವಾಯಿತು...


ಒಮ್ಮೆ ನಮ್ಮ ಕಾಲೇಜಿನವರು ..
ಒಂದು ಚಾಂಪಿಯನ್  ಕ್ರಿಕೆಟ್ ಟೀಮಿನೊಂದಿಗೆ ಜಯ ಸಾಧಿಸಿದ್ದೇವು..


ಏನಾಗುತ್ತಿದೆ ಅನ್ನುವಷ್ಟರಲ್ಲಿ ಎದುರು ಟೀಮಿನ ಆರು ಆಟಗಾರರು ಔಟಾಗಿದ್ದರು...!!


ನಾವು ಮಾಡಿದ್ದು ಏನೂ ಇಲ್ಲ..
ನಾಗುವಿನ ಸಲಹೆಯಂತೆ "ಇಂಡೇನ್ ಗ್ಯಾಸ್" ನನ್ನು ..
ಬ್ಯಾಟ್ಸಮನ್  ಹತ್ತಿರ  "ಸ್ಲಿಪ್ಪಿನಲ್ಲಿ "  ನಿಲ್ಲಿಸಿದ್ದೆವು..


ಟುಸ್ಸು..ಟುಸ್ಸು...ಟುಸ್ಸು....!!


ಜಯ ಸುಲಭವಾಗಿ ಸಿಕ್ಕಿತ್ತು...


ಆಗ ನಾನು ಮತ್ತು ಉಮಾಪತಿ ...
ಸಿದ್ದಾಪುರದ "ಪದ್ಮನಾಭ ಭಟ್ಟರ " ಮನೆಯಲ್ಲಿ ರೂಮ್ ಮಾಡಿದ್ದೇವು..


ಮಹಡಿಯ ಮೇಲೆ ಮರದ ಹಲಗೆಗಳನ್ನು ಜೋಡಿಸಿ..
ರೂಮುಗಳನ್ನಾಗಿ ವಿಭಾಗ ಮಾಡಿದ್ದರು..


ನಾವು ಊರಿಗೆ ಹೋಗಿ ಬರುವಾಗ ...
ಮನೆಯಿಂದ ಚಕ್ಕುಲಿ.. ಕೋಡುಬಳೆ..ರವೆ ಉಂಡೆ.. ಇತ್ಯಾದಿಗಳನ್ನು ತರುತ್ತಿದ್ದೆವು..


ಎಲ್ಲರಿಗೂ ಹಂಚಿ ತಿನ್ನಲು ಸಾಲುತ್ತಿರಲಿಲ್ಲ..
ಅದಕ್ಕಾಗಿ ರೂಮಿನಲ್ಲಿ ನಾನು ಉಮಾಪತಿ.. ನಾಗು ಮೂವರು ಮಾತ್ರ ತಿನ್ನುತ್ತಿದ್ದೆವು..


ಪಕ್ಕದ ರೂಮಿನ  "ನರಶಿಂವ"  ಮಹಾ ಪ್ರಚಂಡ...
ಅವನದು ಅಸಾಧ್ಯವಾದ ಮೂಗು...
ನಮ್ಮ ರೂಮಿನ ಎಂಥಹ ವಾಸನೆಯನ್ನಾದರೂ ಬಲು ಬೇಗ ಗ್ರಹಿಸಿ ಬಿಡುತ್ತಿದ್ದ...


"ಉಮಾಪತಿ...!
ನಿನ್ನೆ.. ರವೆ ಉಂಡೆ ಚೆನ್ನಾಗಿತ್ತೇನೋ..?"


ನರಶಿಂವನ ಮಾತುಕೇಳಿ ನಮಗೆ ಮುಜುಗರ ಆಗ್ತಿತ್ತು... 
ಸಿಟ್ಟೂ ಕೂಡ ಬರ್ತಿತ್ತು..
ಹಂಚಿಕೊಂಡು ತಿನ್ನಲಾಗದ ಅಸಹಾಯಾಕತೆ..


ಆತ ನಮಗೆಂದೂ ತನ್ನ ತಿಂಡಿ ಯಾವತ್ತೂ ಕೊಡುತ್ತಿರಲಿಲ್ಲ...


ನಾಗು ಒಂದು ಉಪಾಯ ಮಾಡಿದ..


"ಅವನ ಮೂಗು ಏನೂ ಇಲ್ರೋ...
ಆತ ಹಲಗೆಯ ಕಿಂಡಿಯಿಂದ  ಇಣುಕಿ ನೋಡುತ್ತಾನೆ..
ಹಲಗೆಗೆ.. ಪೇಪರ್ ಅಂಟಿಸ್ರೋ...."


ನಾನು ಉಮಾಪತಿ ಪೇಪರ್ ಅಂಟಿಸಿದೆವು...


ನರಶಿಂವ ಮತ್ತೆ ಮರುದಿನ ಕೇಳಿದ..
"ನಿನ್ನೆ ನೀವು ತಿಂದ  "ಕೋಡುಬಳೆ"  ಚೆನ್ನಾಗಿತ್ತೆನ್ರೋ...? " .. 


ನಾಗು ಈ ಬಾರಿ ಬೇರೆ ಉಪಾಯ ಮಾಡಿದ...


ರಾತ್ರಿ ಊಟವಾದ ಮೇಲೆ.. ಲೈಟ್ ಆಫ್ ಮಾಡಿದೆವು..
ಪ್ಲಾಸ್ಟಿಕ್  ಕೊಟ್ಟೆಯ  "ಸಡ ಪಡ"  ಶಬ್ಧ ಮಾಡಿದೆವು...


ಪಕ್ಕದ ರೂಮಿನಿಂದ ಒಂದು ಕಡ್ಡಿ ನಮ್ಮ ರೂಮಿನಲ್ಲಿ ಇಣುಕಿತು..


" ಓಹೋ.. 
ಈ..ನರಶಿಂವ .. 
ಕಡ್ಡಿಯಿಂದ ನಾವು ಅಂಟಿಸಿದ ಪೇಪರನ್ನು..
ತೂತು ಮಾಡಿ.. ಅಲ್ಲಿಂದ ಇಣುಕಿ ನೋಡುತ್ತಾನೆ.. "


ನಾಗು ಮೊದಲೆ "ಸಿಲಿಂಡರ್ ಗ್ಯಾಸ್"  ನನ್ನು ಕರೆದಿದ್ದ...


ನಮ್ಮ  ಗ್ಯಾಸು ಮಹಾದೇವ..
ತಕ್ಷಣ ಆ ಕಡ್ಡಿ ಬಂದ ಜಾಗದಲ್ಲಿ ತನ್ನ ಚಡ್ಡಿಯನ್ನು ಸರಿಯಾಗಿ ಒತ್ತಿ ಹಿಡಿದು..
ಯಥಾನು ಶಕ್ತಿ..
ಇನ್‍ಸ್ಟಾಲ್‍ಮೆಂಟಿನಲ್ಲಿ ... ಗ್ಯಾಸ್ ಬಿಡಲು ಶುರುಮಾಡಿದ..


ಟುಸ್ಸು... !
ಟುಸ್ಸು...! ಟುಸ್ಸು... ! ಟುಸ್ಸೂ...!!!


ಕಂತು.. ಕಂತಾಗಿ ಗ್ಯಾಸ್ ಆ ತೂತಿನಲ್ಲಿ ಹೋಗ ತೊಡಗಿತು...!


ಪಕ್ಕದ ರೂಮಿನಿಂದ ..


"ಅಯ್ಯಯ್ಯೋ.. !!!
ಅಯ್ಯಯ್ಯೋ....!
ಸತ್ತೇನ್ರಪ್ಪೋ.. ಸತ್ತೇ... !!..." 


ನರಶಿಂವ  ಕೂಗಿದ ಶಬ್ದ ಮಾತ್ರ  ಕೇಳಿತು...!.


ಮುಂದೆ ಯಾವತ್ತೂ ....
ನರಶಿಂವ ನಮ್ಮ ರೂಮಿನ ಕಡೆ ಇಣುಕಿಯೂ ನೋಡಲಿಲ್ಲ...!


ಒಂಥರಾ ಹುಳಿ ಮುಖ ಮಾಡಿಕೊಂಡು ಮುಖ ತಿರುಗಿಸಿ ತಪ್ಪಿಸಿಕೊಳ್ಳುತ್ತಿದ್ದ...


ನಮ್ಮ ಒಎನ್ ಜಿಸಿ ..
ಗ್ಯಾಸ್ ಮಹಾದೇವನಿಗೆ ಒಂದು ಕಲೆ ಸಿದ್ದಿಸಿತ್ತು...


ಆತ ತನಗೆ ಬೇಕಾದಾಗ ಶಬ್ದ ಮಾಡಿ ಬಿಡುತ್ತಿದ್ದ..


ಇಲ್ಲವಾದಲ್ಲಿ ಶಬ್ಧವಿಲ್ಲದೆ.. ಸಾವಕಾಶವಾಗಿ..ತಣ್ಣಗೆ ಗ್ಯಾಸ್  ..ಬಿಡುತ್ತಿದ್ದ...


ಆ ಇಚ್ಚಾಶಕ್ತಿ ಇತ್ತು ಅವನಿಗೆ...!


ನಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ..
ರಾಷ್ಟ್ರಮಟ್ಟದ ನಾಯಕರುಗಳು ಆಗಾಗ ನಿಧನರಾಗುತ್ತಿದ್ದರು..


ನಮ್ಮ ಪ್ರಿನ್ಸಿಪಾಲರು..
ಕಾಲೇಜಿನ ಎಲ್ಲ ಹುಡುಗರನ್ನು ಮೈದಾನದಲ್ಲಿ ಸೇರಿಸಿ....
ಬೋಳು ಕಾಯುವ ರಣ ಬಿಸಿಲಲ್ಲಿ  ..
ಐದು ನಿಮಿಷ ಮೌನಾಚರಣೆ ಮಾಡಿಸುತ್ತಿದ್ದರು..


ಯಾಕೆ ಅಂತ ಗೊತ್ತಿಲ್ಲ..
ಈ ಮೌನಾಚರಣೆ ಎಂದರೆ ಸಿಕ್ಕಾಪಟ್ಟೆ ನಗು ಬರ್ತಿತ್ತು..


ನಮ್ಮಲ್ಲಿ ಯಾರಾಬ್ಬರಾದರೂ "ಬುಸುಕ್" ಅಂತ ಶಬ್ದ ಮಾಡಿದರೆ ..
ತಡೆಯಲಾರದ  ನಗು ಬರ್ತಿತ್ತು..


ಆಗ ನಕ್ಕರೆ ಶಿಕ್ಷೆ ಗ್ಯಾರೆಂಟಿ...
ಎಲ್ಲ ಹುಡುಗರೆದುರಿಗೆ ನಿಲ್ಲಿಸಿ ..
ಸಿಕ್ಕಾಪಟ್ಟೆ ಬೈಯ್ದು ಅವಮಾನ ಮಾಡಿಸಲಾಗುತ್ತಿತ್ತು...


ಈ ಮೌನಾಚರಣೆಯನ್ನು ನಿಲ್ಲಿಸುವದು ಹೇಗೆ..??


ನಾಗು ಗ್ಯಾಸ್ ಮಹಾದೇವನನ್ನು  ಮುಂದಿನ ಸಾಲಿನಲ್ಲಿ ..
ಪ್ರಿನ್ಸಿಪಾಲರ ಹತ್ತಿರ ನಿಲ್ಲಿಸಿದ ...


ಆತ ಯಥಾನು ಶಕ್ತಿ ಗ್ಯಾಸ್ ಬೀಟ್ಟ.. 
ಸೌಂಡ್ ಇಲ್ಲದೆ...
ಕಂತು.. ಕಂತಾಗಿ.. ಸ್ವಲ್ಪ ಸ್ವಲ್ಪವಾಗಿ ಬಿಟ್ಟ...


ಟುಸ್ಸು... !!!
ಟುಸ್ಸು... ಟುಸ್ಸು...ಟುಸ್ಸೂ...!!!


ಬಹಳ ಅದ್ಭುತವಾದ ವಾಸನೆ ಅವನದು.. !!


ಮುಂದೆ ನಿಂತಿದ್ದ ಪ್ರಿನ್ಸಿಪಾಲರ ..
ಮೂಗು...
ಕನ್ನಡಕ ತಂತಾನೇ   ಎಗರಾಡಿತು..!


ಗಟ್ಟಿಯಾಗಿ ಮೂಗು ಹಿಡಿದುಕೊಂಡು ತಮ್ಮ ಛೇಂಬರಿಗೆ ಓಡಿ ಹೋದರು..!


ಹುಡುಗರಿಗೆಲ್ಲ ನಗು ತಡೆಯಲಾಗಲಿಲ್ಲ...!


ಇದೆ ಸಮಯಕ್ಕಾಗಿ ಕಾಯುತ್ತಿದ್ದ..
ಎಲ್ಲರೂ "ಹ್ಹೋ... ಹ್ಹೋ.." ಎಂದುಜೋರಾಗಿ  ನಕ್ಕರು...!


ಪ್ರಿನ್ಸಿಪಾಲರು  ಕೋಪದಿಂದ ಥೈ ಥೈ  ಕುಣಿದಾಡಿದರು...!


"ಯಾವನ್ರೀ.. ಅವನು..?..?..
ಏನು ತೀಂತ್ತಾನ್ರಿ..? .. !!..
ಅಬ್ಬಬ್ಬಾ... !!
ಹದಿನೈದು ದಿನ ಟಾಯ್ಲೆಟ್ಟಿಗೆ ಹೋಗ್ದೇ ಇದ್ರೆ ಈ ಥರ ವಾಸನೆ ಬರಬಹುದು...!


ನಾನು ಊಟ ಮಾಡೋದು ಹೇಗ್ರೀ..?


ನನ್ನ ಮೂಗಿನ ವಾಸನೆಯ ಸಂವೇದನೆಯೇ ಹೊರಟು ಹೋಯ್ತಲ್ರೀ.. !!
ರಾಮಾ... ರಾಮಾ... !
ಯಾರ್ರೀ... ಅವನು...?.. !!.."


ಅಂದಿನಿಂದ ..
ದೇಶದ  ಯಾವ  "ನಾಯಕರು"  ಸತ್ತರೂ ...
"ಮೌನಾಚರಣೆಯ ಕಷ್ಟ"   ಇರುತ್ತಿರಲಿಲ್ಲ...


(ಇನ್ನೂ ಇದೆ...
ನಾಗು ಅವನಿಗೆ ಗ್ಯಾಸ ಬಿಡಿಸಿದ ಕಥೆ... ಮುಂದಿನ ಭಾಗದಲ್ಲಿ...


ಪ್ರತಿಕ್ರಿಯೆಗಳಲ್ಲಿ ಇಲ್ಲಿ ಹೇಳಿರದ ಘಟನೆಗಳಿವೆ.. 
ದಯವಿಟ್ಟು ನೋಡಿ..)


ಎಲ್ಲರಿಗೂ..
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ಜೈ ಹೋ.. !!

53 comments:

ಜಲನಯನ said...

ಹಹಹಹ.... ನಾನೂ ಯೋಚಿಸ್ತಿದ್ದೆ.. ಈ ಗ್ಯಾಸ್ ಗಾಥೆ ನನಗೆ ಹೇಳಿದ್ನಲ್ಲಾ ಪ್ರಕಾಶಾ ಯಾಕೋ ಬಿಟ್ಟೇ ಇನ್ನೂ ಬ್ಲಾಗಲ್ಲಿ..!!! ಅಂತ!!!! ಹಹಹಹ ಇಟ್ಟಿಗೆ ಸಿಮೆಂಟ್ ಪೇಜ್ ಓಪನ್ ಮಾಡ್ತಿದ್ದ ಹಾಗೇ ’ಗಪ್’ ಅಂತ ಬಡೀತು.. ವಾಸನೆ ಅಲ್ಲ ನಗುವಿನ ಪಟಾಕಿ....ಹಹಹಹ ಸಕ್ಕತ್.. ನೀನು ಹೇಳಿದ್ದಕ್ಕಿಂತಾ ಕಿಕ್ ಜಾಸ್ತಿ ಇದೆ ನಿನ್ನ ಲೇಖನದಲ್ಲಿ ಪ್ರಕಾಶೂ...

Ittigecement said...

ಆಜಾದೂ...

ಹ್ಹಾ.. ಹ್ಹಾ...
ಒಮ್ಮೆ.. ಸಿದ್ದಾಪುರದ ಲಕ್ಷ್ಮಿ ಟಾಕಿಸಿನಲ್ಲಿ ಅನಂತಾನಾಗ್ ಮತ್ತು ಲಕ್ಷ್ಮಿ ಜೋಡಿಯ ಸಿನೇಮಾ ಬಂದಿತ್ತು...
ಅಂದು ಬುಧವಾರ ಬೇರೆ.. ಸಿದ್ದಾಪುರದಲ್ಲಿ ಸಂತೆ..

ಹಾಗೂ ಹೀಗೂ ಕಷ್ಟಪಟ್ಟು ಟಿಕೆಟ್ ಸಿಕ್ಕಿತು..
ಒಳಗೆ ಹೋಗಿ ನೊಡಿದರೆ ನಮ್ಮ ಖುರ್ಚಿ ಎದುರುಗಡೆ ಕಂಬ ಇದೆ !!
ಲಕ್ಷ್ಮಿ ಟಾಕೀಸಿನಲ್ಲಿ ಮಧ್ಯದಲ್ಲಿ ಕಂಬಗಳಿವೆ...

ಆಗ ನೆನಪಾದದ್ದು ಗ್ಯಾಸ್ ಮಹಾದೇವ..

ಆತ ಬಿಟ್ಟ ..ಟುಸ್ಸು... ಟುಸ್ಸು.. ಟುಸ್ಸೂ..!!

ಅಕ್ಕಪಕ್ಕದಲ್ಲಿದ್ದವರೆಲ್ಲ ಮುಗು ಮುಚ್ಚಿಕೊಂಡು ಜಾಗ ಖಾಲಿ ಮಾಡಿದರು...

ಒಬ್ಬ ಜುಬ್ಬಾ ಹಾಕಿದ ಮನುಷ್ಯ ಕೂಗಾಡ ತೊಡಗಿದ..

"ಮ್ಯಾನೆಜರ್ರ್ ಕರೀರ್ರೀ.." ಅಂತ ಅಬ್ಬರಿಸಿದ..
ಮ್ಯಾನೇಜರ್ರು ಬಂದ..

"ಅಲ್ರೀ...
ಇಲ್ಲಿ ಹೆಗ್ಗಣ ಸತ್ತು ಬಿದ್ದಿದೆ..
ತೆಗೆದು ಹಾಕೋದಿಲ್ಲ..
ನಾವು ಕೊಡುದು ಹಣ್ಣಾನೋ..?
ಕಲ್ಲು ಹರಳೂ...?"

ಮ್ಯಾನೇಜರ್ರು ತಬ್ಬಿಬ್ಬಾಗಿ ಹುಡುಕಾಡಿಸಿದ..
ಏನೂ ಸಿಗಲಿಲ್ಲ..

ಆದರೆ ವಾಸ್ನೆ ಮಾತ್ರ ಭರ್ಜರಿಯಾಗಿಯೇ ಇತ್ತು... !!

ನಾವು ಮಾತ್ರ ಆರೋಗ್ಯದಿಂದ..
ಆರಾಮದಿಂದ ಸಿನೇಮಾ ನೋಡಿದೆವು...

ನಮ್ಮ ಕೈಯಲ್ಲಿ ಪೌಡರ್ ಹಾಕಿದ ಖರ್ಚೀಫ್ ಇತ್ತು...

ಗ್ಯಾಎ ಇಷ್ಟಪಟ್ಟಿದ್ದಕ್ಕೆ ಜೈ ಹೋ.. !!

ಹೊಸ ವರ್ಷದ ಶುಭಾಶಯಗಳು...

ದಿನಕರ ಮೊಗೇರ said...

tumbaa nagu bantu prakaashaNNa...

sakkattaagi barediddiri...

vaasane nenasikoLLale hedarike aagatte....

hha hhaa...

vandana shigehalli said...

ಮಸ್ತಾಗಿದೆ .......
ನಿವೊಂತರ ಇಂಗ್ಲಿಷ್ ಮೂವಿ ತರ
ಒಂದೇ ಎಳೆ ಸಿಕ್ಕರೂ ಸಹ .....
ಸುಂದರವಾದ ಕತೆ ಹಣೆದು ಬಿಡುತ್ತಿರ ....

Ittigecement said...

ದಿನಕರ್..
ಅದು ಎಂಥಹ ವಾಸನೆ ಅಂದ್ರೆ.. ಹೇಳಿಕ್ಕೇ ಆಗಲ್ಲ..
ನಾನು ಕಂಡ ಜಗತ್ತಿನ ಅತ್ಯಂತ ಕೆಟ್ಟ ವಾಸನೆಗಳಲ್ಲಿ ಅದು ಒಂದು.. !!

ನಮಗೆ ಆ ವಾಸನೆಗೆ ಹೊಂದಿಕೊಳ್ಳಿಕ್ಕೆ ಬಹಳ ಬಹಳ ಕಷ್ಟ ಆಗಿತ್ತು..
ಇದು ನಿಜ..
ಒಮ್ಮೆ ಹೊಂದಿಕೊಂಡರೆ ಅಷ್ಟೇನೂ ಕಷ್ಟವಲ್ಲ..

ನಮ್ಮವರದ್ದೇ ವಾಸನೆ ಅಲ್ವಾ ಇದು.. ಎನ್ನುವ ಭಾವನೆ..
ದಿನಾಲೂ ಆ ವಾಸನೆ ತೆಗೆದಕೊಂಡ ಮೂಗಿಗೆ ರೂಢಿ ಆಗಿಬಿಡುತ್ತದೆ ಅಂತ ಅನ್ಸುತ್ತೆ..

ನಮ್ಮವರು ಅಂತ ಅಂದುಕೊಂಡರೆ ಅವರ ಎಷ್ಟೋ ವಾಸನೆಗಳು ನಮಗೆ ಗೊತ್ತಾಗುವದಿಲ್ಲ... ಅಲ್ಲವೆ?

ನಿಮ್ಮ ಪ್ರೀತಿ ಪೂರ್ವಕ ಮಾತುಗಳಿಗೆ...
ವಾಸನೆಯನ್ನು ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು..

ಹೊಸ ವರ್ಷದ ಶುಭಾಶಯಗಳು..

balasubramanya said...

ಹ ಹ ಹ ಘಟಾನುಗಟಿಗಳ ಹೆಸರು ಕೇಳಿದ್ದೆ ಅವರದೇ ಆದ ರೀತಿಯಲ್ಲಿ ಪ್ರಸಿದ್ದಿಗೆ ಬಂದಿದ್ದಾರೆ. "ಗ್ಯಾಸ್ ಮಹಾದೇವ" ಅಂದ ಕೂಡ್ಲೇ ಭಯ ಆಯ್ತು ಯಾರೋ ರೌಡಿ ಬಗ್ಗೆ ಈ ಸರಿ ಬರೆದಿರಬೇಕೂ ಅಂತಾ ಆದ್ರೆ ಈ "ಗ್ಯಾಸ್ ಮಹಾದೇವ" "ಭಯೋತ್ಪಾದಕ" ಅಲ್ಲದಿದ್ದರೂ "ಗ್ಯಾಸೋತ್ಪಾದಕ" ಅಂತೂ ಹೌದು. ಲೇಖನ ಓದುತ್ತಿದ್ದರೆ ನಮಗೆ ಗ್ಯಾಸ್ ಕುಡಿದಂತೆ ಆಗುತ್ತಿದೆ, ಇನ್ನೂ ನಿಜವಾಗಿ ಅನುಭವಿಸಿದ ಹಾಗು ಅದನ್ನು ಮತ್ತೆ ಜ್ಞಾಪಿಸಿಕೊಂಡು ಬರೆದ ನಿಮ್ಮ ಕಥೆ ನೆನೆಸಿಕೊಂಡರೆ ಅಯ್ಯೋ ಅನ್ನಿಸುತ್ತೆ .ಹೊಸವರ್ಷದ ಮೊದಲ ಲೇಖನದಲ್ಲಿಈ ತರಹದ ವಾಸನೆ ಕುಡಿಸಿದ ನಿಮ್ಮನ್ನು ಹಾರ್ಧಿಕವಾಗಿ ನಕ್ಕು ಶಪಿಸುತ್ತಿದ್ದೇನೆ." ಈ ವಾಸನೆ ನೆನಪು ನಿಮ್ಮ ಮನದಲ್ಲಿ ಎಂದಿಗೂ ಮರೆತುಹೋಗದಿರಲಿ.'' ಹ ಹ ಹ

Dileep Hegde said...

"ವಾಯು" ಪುತ್ರ ನ ಸಾಹಸಗಾಥೆ.... ಮಜವಾಗಿದೆ..
ಇಂಥವರು ಒಂದಿಷ್ಟು ಮಂದಿ ಗಡಿಯಲ್ಲಿ ಸೈನಿಕರ ತುಖಡಿಯಲ್ಲೂ ಇದ್ರೆ ಗಡಿ ರಕ್ಷಣೆ ಇನ್ನೂ ಸುಲಭ..

Ittigecement said...

ವಂದನಾ...

ನಾವೇನೋ ನಗ್ತೀವಿ.. ಹಾಸ್ಯ ಮಾಡ್ತೀವಿ...
ಎಲ್ಲಾ ಸರಿ...

ಆದರೆ ಗ್ಯಾಸ್ ಮಹಾದೇವನ ವೈಯಕ್ತಿಕ ಬದುಕು ಹೇಗಿದ್ದಿರ ಬಹುದು?

ನಾಲ್ಕು ಜನ ಮಾತನಾಡುವಲ್ಲಿ ಆತ ಬಂದರೆ ಎಲ್ಲರೂ ಹೊರಟು ಹೋಗಿಬಿಡುತ್ತಿದ್ದರು..
ಅವನ ಸ್ವಂತ ಅಣ್ನ, ತಮ್ಮಂದಿರೂ ಸಹ... ದೂರ ಹೋಗುತ್ತಿದ್ದರು..

ಆತ ನಿಜಕ್ಕೂ ಒಂಟಿಯಾಗಿಬಿಟ್ಟಿದ್ದ...

ಆತನ ಕಷ್ಟ ಪರಿಹರಿಸಿದ್ದು ನಮ್ಮ "ನಾಗೂ"...

ಅದು ಮುಂದಿನ ಭಾಗದಲ್ಲಿ...

ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ..

ಹೊಸ ವರ್ಷದ ಶುಭಾಶಯಗಳು..

sunaath said...

ಏನು ಗ್ಯಾಸ್ ಬಿಡ್ತೀರಪ್ಪಾ! ನಕ್ಕು ನಕ್ಕು ಸಾಕಾಯ್ತು!

ಸಂಧ್ಯಾ ಶ್ರೀಧರ್ ಭಟ್ said...

ಗ್ಯಾಸ್ ಕತೆ ಮಸ್ತಿದ್ದು... ಇದು ಓದಲೇ ಖುಷಿ ಕೊಡ್ತು.. ಆದ್ರೆ ಅವನ ಜೀವನ ನೆನಿಸಿಕಯಂಡ್ರೆ ಪಾಪ ಅಂತಾನು ಅನಿಸ್ತು.. ನಮ್ಮವು, ಹತ್ರದವು ಎಲ್ಲರು ದೂರ ಇಡ್ತ ಅಂದ್ರೆ ಎಷ್ಟು ಕಷ್ಟ ಅಲ್ದಾ..? any way ಹೊಸ ಕ್ಯಾಲೆಂಡರ್ ನ ಮೊದಲ ದಿನಾನೆ ನಗ್ಸಿದ್ದೆ..:) ಇನ್ನಷ್ಟು ನಗುವಿಗೆ ಕಾಯ್ತಿದ್ದಿ....:) ವರ್ಷದ ತುಂಬಾ ಹಿಂಗೆ ನಗು ಕೊಡ್ತಾನೆ ಇರು... ನೀನು ನಗುನಗ್ತಾನೆ ಇರು.. :)

ಶುಭಾಶಯಗಳೊಂದಿಗೆ.....:)

ವೆಂಕಟೇಶ್ ಹೆಗಡೆ said...

ಹಾ ಹಾ ಪ್ರಕಾಶಣ್ಣ ನಕ್ಕೂ ನಕ್ಕೂ ಸುಸ್ತಾಗಿ ನಂಗೂ ಗ್ಯಾಸ್ ಮಹಾದೇವ ಬಂದ ,,... ಚೆನ್ನಾಗಿದೆ ... ಬರೆಯುತ್ತಿರಿ ...

Ittigecement said...

ಬಾಲಣ್ಣಾ..

ಇತ್ತೀಚೆಗೆ ನಮ್ಮ ಮನೆಗೆ ಗೆಳೆಯ, ರೂಮ್ ಮೇಟ್ ಉಮಾಪತಿ ಬಂದಿದ್ದ..
ಆಗ ಮಾತನಾಡುತ್ತ ಈತನ ವಿಷಯ ಬಂದಿತು..

ಗ್ಯಾಸ್ ಮಹಾದೇವನ ವಾಸನೆ ಅಸಾಧ್ಯ ಮಾರಾಯರೆ.. !!
ಆ ವಾಸನೆಗೆ ಏನು ಅಂತ ಹೇಳೋದು...?

ನನ್ನ ಕಲ್ಪನೆಗೆ ಬಂದ ಅತ್ಯಂತ ಕೆಟ್ಟ ವಾಸನೆಗಳಲ್ಲಿ ಇದು ಎರಡನೆಯ ವಾಸನೆ...

ನಮಗೆ ಅರಿವಿಲ್ಲದಂತೆ "ಉವ್ವೇ. ಉವ್ವೇ.." ಆಗಿಬಿಡೋದು...

ನಮ್ಮ ಗೆಳೆಯರ್ಯಾರಿಗೂ "ಹೇಸಿಗೆ" ಅನ್ನುವಂಥಹದ್ದು ಕಡಿಮೆ..
ಊಟಕ್ಕೆ ಕುಳಿತಾಗ "ಹೇಸಿಗೆ" ಮಾತನಾಡಿದರೂ ನಮಗ್ಯಾರಿಗೂ ಪ್ರಭಾವ ಆಗುವದಿಲ್ಲ..
ಅದಕ್ಕೆ ಕಾರಣ "ಗ್ಯಾಸ್ ಮಹಾದೇವ"..

ನೀವು ಗ್ಯಾಸ್ ಇಷ್ಟಪಟ್ಟು ಶಪಿಸಿದ್ದಕ್ಕೆ ಧನ್ಯವಾದಗಳು... ಜೈ ಹೋ !!..

Jagadeesh Balehadda said...

ಪಕ್ಕೂ ಮಾಮ್. ನಾನಂತೂ ಪಕಾ ಪಕಾ ಪಕಾ ನಕ್ಕುಬಿಟ್ಟೆ. ಹೊಸ ವರ್ಷದ ಮೊದಲದಿನ ಸಿಕ್ಕಾಪಟ್ಟೆ ನಗಿಸಿದ್ದಕ್ಕೆ. ಥ್ಯಾಂಕ್ಸೋ ಥ್ಯಾಂಕ್ಸು.

Mahesh Gowda said...

annanya super agide .....

Ittigecement said...

ಪ್ರೀತಿಯ ದಿಲೀಪು..

ಹ್ಹಾ.. ಹ್ಹಾ... !
ಸೈನ್ಯದಲ್ಲಿ ಹೆಚ್ಚಿನ ಪರಿಣಾಮ ಆಗೋದು ನಮ್ಮವರ ಮೇಲೇ ತಾನೆ?
ಯಾಕೆಂದರೆ ಈತ ನಮ್ಮವರ ಸಂಗಡ ಇರಬೇಕಲ್ಲ.. ಹ್ಹಾ ಹ್ಹಾ !!

ಛಳಿಗಾಲದಲ್ಲಿ ಒಮ್ಮೆ ಸಿರ್ಸಿಗೆ ಏಸಿ ಬಸ್ಸಿನಲ್ಲಿ ಹೋಗುತ್ತಿದ್ದೆ..
ಅಲ್ಲೊಬ್ಬ ಗ್ಯಾಸ್ ಮಹಾದೇವನಿದ್ದ ಅನ್ನಿಸುತ್ತೆ...

ಹೇಳಲಾರದ ಕಷ್ಟ ಆಯ್ತು...

ಗ್ಲಾಸ್ ತೆಗೆದರೆ ಛಳಿ..!
ಮುಚ್ಚಿದರೆ ಗ್ಯಾಸ್ ಭಯೋತ್ಪಾದನೆ !!

ಮಹಾದೇವನನ್ನು ಇಷ್ಟಪಟ್ಟಿದ್ದಕ್ಕೆ ...
ಪ್ರತಿಕ್ರಿಯೆಗೆ ಧನ್ಯವಾದಗಳು..

mshebbar said...

ಟುಸ್ಸು ಟುಸ್ಸು ಟುಸ್ಸೂಊಊಊಊಊ

Gubbachchi Sathish said...

ಗ್ಯಾಸೇಶ್ವರನ ಗ್ಯಾಸ್ ಕಥೆಗಳು ಚೆನ್ನಾಗಿವೆ ಬ್ಲಾಗೇಶ್ವರ.
ಗ್ಯಾಸ್ ಖಾಲಿಯಾದ ಕಥೆ ಬೇಗ ಹೇಳಿ ಸ್ನೇಹಿತರ ಈಶ್ವರ.

ಜೈ ಹೋ... ಹೊಸ ವರ್ಷದ ಶುಭಾಷಯಗಳೊಂದಿಗೆ,
ಚಿಂವ್ ಚಿಂವ್.

prtumbemane said...

principal kathe nenesi negi tadeyale aataa ille prakashanna... cricket nalli umpire paristhithi hyaang aayikku heli????????????

Ittigecement said...

ಸುನಾಥ ಸರ್...

ಹೆ.. ಹೆ.. ಹ್ಹೆ.. !!

ನನ್ನ ಗೆಳೆಯ ಉಮಾಪತಿ ನಮ್ಮ ಮನೆಗೆ ಬಂದಾಗ ನನಗೆ ಟೈಫೈಡ್ ಜ್ವರ..
ಆ ಉಮಾಪತಿ ಈ ಗ್ಯಾಸ್ ಮಹಾದೇವನ ಸುದ್ಧಿ ನೆನಪು ಮಾಡಿ ನಕ್ಕಿದ್ದೋ.. ನಕ್ಕಿದ್ದು..
ಹೊಟ್ಟೆ ಹುಣ್ಣಾಗುವಷ್ಟು..
ಪರಿಣಾಮ ಜ್ವರ ಜಾಸ್ತಿ ಆಯ್ತು...

ಗ್ಯಾಸ್ ಮಹಾದೇವ ಹೆಗಿದ್ದ ಅಂದರೆ..
"ತಾನು ಇದ್ದಿದ್ದೇ ಹೀಗೆ..
ಇದಕ್ಕೆ ಹೊಂದಿಕೊಳ್ಳದಿದ್ದರೆ ಬೇರೆ ವಿಧಿಯೇ ಇಲ್ಲ" ಎನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದ..

ಅವನ ಮನಸ್ಥಿತಿ ಯಾರಿಗೂ ಬೇಡ..
ಬಹಳ ಹಿಂಸೆ ಅದು..

ಸರ್ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

Ittigecement said...

ಪ್ರೀತಿಯ ಸಂಧ್ಯಾ...

ನಮ್ಮ ಪ್ರಿನ್ಸಿಪಾಲರು ತುಂಬಾ ಕಟ್ಟುನಿಟ್ಟು...ಸ್ಟ್ರಿಕ್ಟ್...
ಸಣ್ಣ ಸಪ್ಪಳವಾದರೂ ಸಹಿಸೋದಿಲ್ಲವಾಗಿತ್ತು..

ಯಾವಾಗಲೂ ಮುಖ ಗಂಟು ಹಾಕಿಕೊಂಡೇ ಇರುತ್ತಿದ್ದರು..

ಪಾಪ...
ಗ್ಯಾಸ್ ಮಹಾದೇವನ ವಾಸನೆ ತಡೇಯಲಾಗದೇ ಓಡಿ ಹೋದದ್ದು ಅವರು ತಮ್ಮ ಸೋಲು ಅಂದುಕೊಂಡು ಬಿಟ್ಟಿದ್ದರು..!

ವಿದ್ಯಾರ್ಥಿಗಳ ಎದುರಿಗೆ ಸ್ವಲ್ಪದಿನ ಬರುವದನ್ನು ಕಡಿಮೆ ಮಾಡಿದ್ದರು..

ನಮಗಂತೂ ಫುಲ್ ಮಜಾ... !!

ಆದರೂ...
ಮಹಾದೇವನ ವಾಸನೆ... ಅದ್ಭುತವಾಗಿತ್ತು ಬಿಡಿ...!!

ಮೆಚ್ಚಿ.... ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು.. ಜೈ ಹೋ !!

Ittigecement said...

ನನ್ನೊಳಗಿನ ಕನಸು...

ಗ್ಯಾಸ್ ಮಹಾದೇವನ ನಿಜವಾದ ಹೆಸರು ನಮಗೂ ಮರೆತು ಹೋಗಿತ್ತು...
ಇದು ಉಮಾಪತಿ ಅವನಿಗೆ ಇಟ್ಟ ಹೆಸರು..
ಅದೇ ಹೆಸರು ಅವನಿಗೆ ಖಾಯಮ್ ಆಯ್ತು..

ಅವನ ಇತರೆ ಹೆಸರುಗಳು ತುಂಬಾ ಇದ್ದವು...
ಗ್ಯಾಸ್ ಛೇಂಬರ್.., ಓ ಎನ್ ಗಿಸಿ.., ಭಾರ್ತ್ ಗ್ಯಾಸ್.., ಇತ್ಯಾದಿ..

ಅವನಿಗೆ ಬೆಜಾರು ಆಗುತ್ತಿತ್ತೇನೋ...
ನಮ್ಮ ಎದುರಿಗೆ ನಗ್ತಾನೆ ಇರ್ತಿದ್ದ..

ಅವನ ವಾಸನೆಯನ್ನು ಸಹಿಸಲು ಕಷ್ಟವಾಗಿದ್ದರೂ..
ಆತ ನಮ್ಮ ಗುಂಪಿನಲ್ಲಿ ಒಂದಾಗಿ ಇದ್ದ...

ಮಹಾದೆವ ಇಷ್ಟವಾಗಿದ್ದಕ್ಕೆ ಜೈ ಹೋ... !!

Ittigecement said...

ಜಗದೀಶು...

ಇದನ್ನು ಬರೆಯುವಾಗ ನನಗೂ ಮಧ್ಯದಲ್ಲಿ ನಗು ತಡೆಯಲಾಗಲಿಲ್ಲ..
ನಗ್ತಾನೇ ಇದ್ದೆ..
ನನ್ನ ಸಂಗಡ ನಮ್ಮ ಮನೆಯವರೂ ಸಹ..

ಅವನ ಹುಡುಗಿ...
ಮದುವೆ.. ಮಕ್ಕಳು..ಇನ್ನೂ ಮಸ್ತಾಗಿದೆ..!

ಸುಮ್ಮನೆ ಇದ್ದಾಗ ಎಷ್ಟೋ ಬಾರಿ ನನ್ನಷ್ಟಕ್ಕೇ ನಾನು ಬಹಳ ಸಾರಿ ನಕ್ಕಿದ್ದಿದೆ...!

ನನ್ನ ಅಳಿಯಂದಿರ ಲೀಸ್ಟಿನಲ್ಲಿ ನೀವೂ ಸೇರಿಕೊಂಡಿದ್ದಕ್ಕೆ ಜೈ ಹೋ !!

ಹೊಸ ವರ್ಷದ ಶುಭಾಶಯಗಳು...

Ranjita said...

Chennagide Prakashanna.Thumba nagu bantu.

ಸವಿಗನಸು said...

ಹೊಸ ವರ್ಷಕ್ಕೆ ಒಳ್ಳೆ ಗ್ಯಾಸ್ ಉಡುಗೊರೆ...
ಚೆನ್ನಾಗಿದೆ...ಗ್ಯಾಸ್ವಾಂತರ

ಕಾವ್ಯಾ ಕಾಶ್ಯಪ್ said...

ಹಾ ಹಾ ಹಾ ಹಾ ಹಾ.... ನಕ್ಕು ನಕ್ಕು ಸಾಕಾಯ್ತು.... ಬರೋಬ್ಬರಿ ಗ್ಯಾಸ್ ಮನುಷ್ಯ... ಆ ಗ್ಯಾಸ್ ಅನ್ನು ಬಳಸಿ ನೀವೆಲ್ಲ ಬಹಳಷ್ಟು ಕಾರ್ಯ ಸಿದ್ಧಿ ಮಾಡಿಕೊಂಡಿದ್ದೀರಿ...!! ಹಾಗೆಯೆ ಅದನ್ನು ಏನಾದರೂ ಸಂಶೋಧನೆ ಮಾಡಿ usable gas ಆಗಿ ಪರಿವರ್ತಿಸಬಹುದಿತ್ತೇನೋ... ಹಾ ಹಾ ಹಾ... ಮುಂದಿನ ಭಾಗಕ್ಕೆ awaitingu... :)
ಹೊಸ calender ವರ್ಷದ ಶುಭಾಶಯಗಳು... :)

ಮನಸು said...

paapa nimma snehitaru hegirabahudu endu yochiside. endinate hasya baraha..

umesh desai said...

ಹೊಸ ವರ್ಷದ ಹೊಸಿಲಲ್ಲಿ ಈ ನಗೆಬಾಂಬು ಸಿಡಿಸಿ ನಮ್ಮನ್ನೆಲ್ಲ ಕೃತಾರ್ಥ ರನ್ನಾಗಿ ಮಾಡಿರುವಿರಿ..ಧನ್ಯೋಸ್ಮಿ.
ನಾಗು ವಿನ ಸಾಹಸಗಾಥೆಗೆ ಎದುರು ನೋಡುತ್ತಿರುವೆ..ಬೇಗ ಬರಲಿ.

Shruthi B S said...

ಪ್ರಕಾಶಣ್ಣ ಗ್ಯಾಸ್ ಕತೆ ಭಾಳ ಚನಾಗಿದ್ದು...ನಕ್ಕು ನಕ್ಕು ಸಾಕಾತು...ಮು೦ದಿನ ಭಾಗಕ್ಕೆ ಕಾಯ್ತಾ ಇದ್ದಿ.....

ಮನದಾಳದಿಂದ............ said...

ಪಕ್ಕುಮಾಮ,
ಈ ಕತೆ ಓದುತ್ತಿರುವಾಗ ನಕ್ಕು ನಕ್ಕು ಸಾಕಾಯ್ತು, ನಾನು ನಗುವುದನ್ನು ನೋಡಿ ಕನ್ನಡ ಬಾರದ ನಮ್ಮ ಹಿಂದಿ ಸಹೋಧ್ಯೋಗಿಗಳು ಕಕ್ಕಾಬಿಕ್ಕಿ! (ಏನಾಯ್ತೋ ಅಂತ!) ಆಮೇಲೆ ಅವರಿಗೆ ಹಿಂದಿಯಲ್ಲಿ ಆ ಕತೆ ಹೇಳಿದಾಗ ನಗುವ ಸರದಿ ಅವರದ್ದು!
ಒಮ್ಮೊಮ್ಮೆ ಗ್ಯಾಸ್ ಮಹಾದೇವನ ಪರಿಸ್ಥಿತಿ ಅಯ್ಯೋ ಎನಿಸಿತು.
ಇಂತ ಸಮಸ್ಯೆಯನ್ನು ಪರಿಹರಿಸಿದ ನಾಗು ಅವರ ಸಾಹಸಗಾಥೆಗಾಗಿ ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

ನಿಮಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು..........

Ashok.V.Shetty, Kodlady said...

ಪ್ರಕಾಶಣ್ಣ...
ಹಹಹ....ನಿಮ್ಮ ಗ್ಯಾಸ್ ಮಹಾದೇವ ನಮಗೆ ಇಷ್ಟ ಆದ ಮಾರಾಯ್ರೆ.....ನಕ್ಕು ನಕ್ಕು ಸಾಕೈತು.....ಓದ್ತಾ ಇರುವಾಗಲೇ ಮೂಗು ಮುಚ್ಕೊಳ್ಳೋ ತರ ಇರೋ ಇದೆ ನಿಮ್ ಮಹಾದೇವನ ಕಥೆ... ಹತ್ತಿರ ಇದ್ಕೊಂಡು ಹೇಗೆ ಸಹಿಸಿಕೊಂಡ್ರೋ ??????


ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

Ittigecement said...

ಮಹೇಶು...
ಪ್ರತಿಯೊಬ್ಬರೂ ಗ್ಯಾಸ್ ತೊಂದರೆಗೆ ಒಳಪಟ್ಟಿರುತ್ತೇವೆ ಮತ್ತು...
ತೊಂದರೆ ಕೊಟ್ಟಿರುತ್ತೇವೆ..ಹ್ಹಾ ಹ್ಹಾ...

ಯಾಕೊ ಗೊತ್ತಿಲ್ಲ...
ನಾಲ್ಕು ಜನ ಸೇರಿರುವಾಗ ಯಾರಾದರೂ ಗ್ಯಾಸ್ ಬಿಟ್ಟರೆ ಭುಸಕ್ಕನೆ ನಗು ಬರುತ್ತದೆ...

ಇಷ್ಟಪಟ್ಟಿದ್ದಕ್ಕಾಗಿ...
ಪ್ರತಿಕ್ರಿಯೆಗಾಗಿ ಧನ್ಯವಾದಗಳು ಜೈ ಹೋ !!

Manjunatha Kollegala said...

ಏನು ಮಾರಾಯರೇ, ಬೆಳಬೆಳಗ್ಗೆ ತಿಂಡಿ ತಿಂತಾ ಇರೋವಾಗ್ಲೇ ಕಣ್ಣಿಗೆ ಬೀಳಬೇಕೇ ಈ ಗ್ಯಾಸ್ ಪುರಾಣ! "ಊಟಮಾಡುವವರೇ ಎಚ್ಚರ" ಅಂತ ಒಂದು ಎಚ್ಚರಿಕೆಯಾದರೂ ಹಾಕಬಾರದೇ?

ಒಂದೆರಡು ಕ್ಷಣ ತಿಂಡಿ ತಿನ್ನೋದು ನಿಲ್ಲಿಸಲೋ ಓದೋದು ನಿಲ್ಲಿಸಲೋ ಅಂತ ತಾಕಲಾಟ ಆಯ್ತು. ಕೊನೆಗೂ ಓದೋದು ನಿಲ್ಲಿಸಲು ಆಗಲೇ ಇಲ್ಲ, ತಿಂಡಿ ತಿನ್ನೋದೇ ನಿಲ್ಲಿಸಿ ಓದಿದೆ.

ಎಂದಿನಂತೆ ಸೆರೆ ಹಿಡಿಯುವ ಶೈಲಿ; ನಿಮ್ಮ ಪ್ರಿನ್ಸಿಪಾಲನ್ನು ನೆನೆನೆನೆದು ನಕ್ಕು ನಕ್ಕೂ ಸುಸ್ತಾಯಿತು; ಹಾಗೇ ನಿಮ್ಮ ನರಶಿಂವನನ್ನು ನೆನೆದೂ ಕೂಡ; ಪಾಪ! :)

ಮುಂದಿನ ಕಂತಿಗೆ ಕಾಯುತ್ತಿದ್ದೇನೆ.

nenapina sanchy inda said...

khanDita nagu bantu...aadare neevu avannannu nimma friend maaDiddu atyaMta saMtasada sangati anisitu!!
:-)
malathi S

Suvarna said...

Tumba chennagide.
Nimma ella lekanagalu chennagiratte...

Hosa varshada Shubhashayagalu

PrashanthKannadaBlog said...

Nice one Prakashanna. It made me miss some great gas talents of my home town :-) Happy New Year.

Pradeep Rao said...

ಪ್ರಕಾಶಣ್ಣಾ,

ನಿಜಕ್ಕೂ ಹದ್ದು ಮೀರಿ ಗ್ಯಾಸ್ ಎಪೆಕ್ಟ್ ಚಿತ್ರಣ ನೀಡಿದ್ದೀರಿ...

ಅಬ್ಬ ನಕ್ಕು ನಕ್ಕು ನಮ್ಮ ಹೊಟ್ಟೆಯಲ್ಲಿ ಹುಣ್ಣಾಯಿತು!

ಹುಣ್ಣಾದರೆ ಆಯಿತು... ನಗು ಅತಿಯಾಗಿ ನಮಗೂ ಹೊಟ್ಟೆಯಲ್ಲಿ ಗ್ಯಾಸ್ ಆಗಿಬಿಟ್ಟರೆ ಬಹಳ ಕಷ್ಟ ರೀ...

ಅಬ್ಬಾ ಇಂಥ ಕಾಮಿಡಿ ಬರೀಬೇಕಾದ್ರೆ ಅತಿಯಾದ ನಗುವಿನಿಂದ ನಮ್ಮ ಮೇಲೆ ಆಗುವ ಪರಿಣಾಮಗಳನ್ನು ಯೋಚಿಸಿ ಬರೀರಿ ಇನ್ಮುಂದೆ.... ಹ್ಹ ಹ್ಹ ಹ್ಹಾ!!!

ಅಡಪೋಟ್ರು said...
This comment has been removed by the author.
Manju M Doddamani said...

ಅಯ್ಯಯ್ಯಪ್ಪ.... ಏನ್ ಸರ್ ....

ಕರ್ಚೀಪ್ಹ್ ಮಧ್ಯದಲ್ಲಿ ಪೌಡರ್ ಹಾಕ್ಕೊಂಡು ಹೋಗ್ತಿದ್ರ...?

ನನಗೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು...

ಆಫೀಸ್ ನಲ್ಲಿ ಎಲ್ಲಾ ನನ್ನೇ ನೋಡ್ತಾ ಇದಾರೆ....

UMESH VASHIST H K. said...

ಪ್ರಿಯ ಪ್ರಕಾಶರೆ ; ನಿಮ್ಮ ಈ ಕಥೆ ಓದಿದ ಮೇಲೆ , ನಾನು ಚಿಕ್ಕಂದಿನಲ್ಲಿ ಕೇಳಿದ "ಮಂತ್ರ" ಜ್ಞಾಪಕಕ್ಕೆ ಬಂತು ನೋಡಿ

"ಡರ್ರಂ ಬುರ್ರಂ ಭಯಂ ನಾಸ್ತಿ , ಕುಯ್ಯಂ ಪೀಯ್ಯೇನ ಮಧ್ಯಚ , ನಿಷ್ಯಬ್ದಂ ಪ್ರಾಣ ಸಂಕಟಂ "

ಓ ಮನಸೇ, ನೀನೇಕೆ ಹೀಗೆ...? said...

ವಾಸನೆ ಪುರಾಣ ಹಾಸ್ಯಭರಿತವಾಗಿತ್ತು ಪ್ರಕಾಶಣ್ಣ. ಆದರೆ ನೀವಂದಂತೆ ಪಾಪ ಅದನ್ನು ಅನುಭವಿಸುವವರಿಗೆ ಇದು ಕಷ್ಟ. ಕೆಲವೊಬ್ಬರ ಬಾಯಿ ಅದೆಷ್ಟು ದುರ್ನಾತ ಬೀರುತ್ತದೆಯೆಂದರೆ ಕೆಲವೊಮ್ಮೆ ನಾವು ದೂರ ಹೋಗಿ ನಿಲ್ಲಬೇಕಾಗುತ್ತದೆ ಅವರ ಮಾತು ಕೇಳಲು. ಇನ್ನೂ ಕೆಲವರು ಎದುರಿಗಿರುವವರನ್ನು ಸ್ನಾನ ಮಾಡಿಸಿಬಿಡುತ್ತಾರೆ ಮಾತನಾಡುವಾಗ.ಹ ಹ ಹ .:)

smscollector said...

ಪ್ರಕಾಶಣ್ಣವರೆ ನಿಮ್ಮ ಗ್ಯಾಸ್ ಪುರಾಣ ಓದಿ ದಿನ ಪೂರ್ತಿ ನಗೆ ಆಡ್ತಾ ಇದ್ದೆ. ಒಂದು ಜೋಕು ನೆನಪಾಯಿತು. ಒಮ್ಮೆ ಅಮೇರಿಕಾದ ಒಂದು ಚರ್ಚ್ ನಲ್ಲಿ ಗ್ಯಾಸ್ ಬಿಡುವ ಸ್ಪರ್ಧೆ ಏರ್ಪಡಿಸಿದ್ದರಂತೆ. ಎಲ್ಲಾ ದೇಶದಿಂದಲೂ ಬಹಳಷ್ಟು ಸ್ಪರ್ಧಾಳುಗಳು ಬಂದಿದ್ದರಂತೆ. ನಮ್ಮ ದೇಶದಿಂದ ಗ್ಯಾಸ್ ಮಾದೇವು ಹೋಗಿದ್ದನಂತೆ. ಬೇರೆ ದೇಶದವರೆಲ್ಲಾ ಗ್ಯಾಸ್ ಉತ್ಪಾದಿಸಲು ಮತ್ತೂ ಗ್ಯಾಸ್ ನೊಂದಿಗೆ ಸುವಾಸನೆ ಸೇರಿಸುವಸಲುವಾಗಿ ಅಜೀರ್ಣವಾಗುವಂತ ತಿಂಡಿಗಳನ್ನು ತೆಗೆದುಕೊಂಡರಂತೆ. ನಮ್ಮ ಮಾದೇವು ಮಾತ್ರ ಮನಸಿನಲ್ಲೇ ಒಂದು ಗ್ಯಾಸ್ ಬಿಡುವ ಸಲುವಾಗಿ ಇಸ್ಟೆಲ್ಲಾ ಮಾಡಬೇಕಾ ಅಂದುಕೊಂಡು ನಕ್ಕನಂತೆ. ನಂತರ ಒಬ್ಬಬ್ಬರೇ ಸರದಿಯಲ್ಲಿ ಬಂದು ಟುಸ್ ಟುಸ್ ಟುಸ್ ಮಾಡಿ ಹೋಗುತ್ತಿದ್ದರು. ನಿರ್ಣಾಯಕರು ನೆಕ್ಸ್ಟು ಎಂದು ಮುಂದಿನ ಅಭ್ಯರ್ತಿಗಳನ್ನು ಕರೆಯುತ್ತಿದ್ದರು. ನಂತರ ನಮ್ಮ ಗ್ಯಾಸ್ ಮಾದೇವು ಸರದಿ ಬಂತು. ಟುಸ್ ಟುಸ್ ಟುಸ್ ಅಸ್ಟೆ. ಅಲ್ಲಿರುವರೆಲ್ಲ ಮೂಗನ್ನು ಕೈ ನಲ್ಲಿ ಹಿಡಿದುಕೊಂಡು ಹೊರ ಹೋಗಲು ನೋಡುತ್ತಿರುವಾಗಲೇ ಅಲ್ಲಿರುವ ಕ್ರಿಸ್ತನ ಮೂರ್ತಿಯ ಕೈಗಳು ಶಿಲುಭೆಯಿಂದ ಹೊರಬಂದು ಮೂಗಿನ ಮೇಲಿದ್ದವು. ಇಂಡಿಯಾ ಗೆದ್ದಿತ್ತು.

ಇ ಕಮೆಂಟನ್ನು ಓದಿ ಯಾರಿಗಾದರು ಮನಸ್ಸಿಗೆ ನೋವ್ವಾಗಿದ್ದರೆ ಕ್ಷಮೆ ಇರಲಿ. ಇದು ನೈಜ ಗಟನೆಯಲ್ಲಾ ಮಾದೇವು ಹೆಸರನ್ನು ಹಾಗೆ ಸುಮ್ಮನೆ ಸೇರಿಸಿದೆ.....

Badarinath Palavalli said...

ಪ್ರೀತಿಯ ಪ್ರಕಾಶಣ್ಣ.

ಮೊದಲು ನಿಮಗೂ, ನಿಮ್ಮ ಕುಟುಂಬಕ್ಕೂ ಮತ್ತು ಇಟ್ಟಿಗೆ ಸೀಮೆಂಟಿಗೂ ಹೊಸ ವರ್ಷದ ಶುಭಾಶಯಗಳು.

ಗ್ಯಾಸ್ ನಾಗುವಿನ ಬಗ್ಗೆ ಮನ ಒಪ್ಪುವಂತೆ ಚಿತ್ರಿಸಿದ್ದೀರಾ. ದೋಸ್ತಿಯಾದ ಮೇಲೆ ಎಂತಹ ಅಸಹ್ಯವಾದ ವಾಸನೆಗಳು ಸಹ್ಯವಾಗಿ ಬಿಡುತ್ತವೆ, ಎಷ್ಟು ನಿಜವಾದ ಮಾತು ಸಾರ್.

ಕ್ರಿಕೇಟ್ ಮ್ಯಾಚ್ ಬಲು ತಮಾಷೆ ಪ್ರಸಂಗ ಸಾರ್.

ನರಶಿಂವನಿಗೆ ಸರಿಯಾಗಿ ನಾಗು ಬುದ್ಧಿ ಕಲಿಸಿದ, ಅಹ್ಹ ಅಹ್ಹ ಅಹ್ಹಾ!

ಹೊಸ ವರ್ಷಕ್ಕೆ ಬೊಂಬಾಟ್ ಸಿಕ್ಸರ್.

ಮುಂದುವರೆಯಲಿ....

ಸೀತಾರಾಮ. ಕೆ. / SITARAM.K said...

ಎನ್ತೆಥಾ ಕಥೆ ಹುಡುಕಿ ನೀಡ್ತಿರಿ ....
ಇಂತಹದನ್ನು ನಿಮ್ಮ ಅನುಕೂಲಕ್ಕೆ ಬಳಿಸಿಕೊಳ್ಳುವ ತಮ್ಮ ಮತ್ತು ನಾಗುವಿನ ಚಿಕ್ಕಂದಿನಿಂದಲಿನ್ದನ ಕಳೆ ಅದ್ಭುತ... ಮುಂದಿನ ಕಂತಿಗೆ ಕಾಯುತ್ತಿದ್ದೇನೆ.

Srikanth Manjunath said...

ಪ್ರಕಾಶರವರೆ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು
ಒಳ್ಳೆ ಚಳಿಗೆ ತಣ್ಣಗಿನ ಸುವಾಸಿತ ಕಥೆ ಯಾವತ್ತು ಮುದ ಕೊಡುತ್ತೆ...
ಸ್ನೇಹ ಅಂದ್ರೆ ನಮ್ಮಲಿಲ್ಲದನ್ನು ಒಪ್ಪಿಕೊಳ್ಳುವ ನಂಟು...
ಯಾವಾಗ ನಮ್ಮ ಸ್ನೇಹ ಸುಮಧುರವೂ ಅಲ್ಲಿ ಏನೇ ನೂನ್ಯತೆಗಳಿದ್ದರೂ ಮನಸು ಸ್ನೇಹದ ಸಂಕೊಲೆಗೆ ತನ್ನನ್ನು ಅಪ್ಪಿ ಕೊಳ್ಳುತ್ತೆ..
ಇಲ್ಲಿ ಮಹಾದೇವ ಹಾಗು ನಾಗುವಿನ ವಿಷಯದಲ್ಲೋ ಅದೇ ಆಗಿದ್ದೂ..
ಸ್ನೇಹದ ಅನುಬಂಧ ನಮ್ಮ ಕೈನ ಐದು ಬೆರಳುಗಲಿದ್ದಗೆ ಒಂದೊಂದು ವಿಭಿನ್ನ ಆದ್ರೆ ಅದೇ ಅದರ ಶಕ್ತಿ
ನೂನ್ಯತೆಗಳನ್ನು ಕೂಡ ಪ್ರಬಲ ಅಸ್ತ್ರವಾಗಿ ಉಪಯೋಗಿಸಬಹುದು ಎನ್ನುವುದಕ್ಕೆ ನರಶಿಂವshiva, ಪ್ರಿನ್ಸಿಪಾಲರ ಕರ್ಚೀಫ್ ಪ್ರಕರಣ ಉತ್ತಮ ಉದಾಹರಣೆ..
ನೂನ್ಯತೆಗಲಿಲ್ಲದಿದ್ದರೆ..ಪ್ರಪಂಚದಲ್ಲಿ ಬೆಳಕಿಗೆ ಬೆಲೆ ಇರುತಿರಲಿಲ್ಲ..ನೂನ್ಯತೆಗಳೇ ನಮಗೆ ಒಂದು ವಿಧದಲ್ಲಿ ಶಕ್ತಿ ಕೊಡುವುದು..ಅದಕ್ಕೆ ಬೇಕಾಗಿರುವುದು ನಮ್ಮ ಯುಕ್ತಿ ಅಷ್ಟೇ
ಒಳ್ಳೆ ಕತೆ ಕ್ಯಾಲೆಂಡರ್ ವರ್ಷದ ಆರಂಭಕ್ಕೆ

shasana_samshodhane said...

ಉತ್ತಮ ಆರೋಗ್ಯಕ್ಕೆ ನಗು ಒಳ್ಳೆಯ ಔಷಧಿ. ಹೊಸ ವರುಷದಲ್ಲಿ ಎಲ್ಲರನ್ನೂ ನಗಿಸಿರುವಿರಿ. ನಿಮ್ಮ ಲೇಖನ ತುಂಬಾ ಅದ್ಭುತವಾಗಿದೆ. ಹೀಗೆಯೇ ತಮ್ಮಿಂದ ಲೇಖನಗಳು ಸರಾಗವಾಗಿ ಹರಿದುಬರಲಿ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ತುಂಬಾ ತಡವಾಗಿ ಓದ್ತಾ ಇದ್ದಿ, ಕ್ಷಮೆ ಇರಲಿ
ಎಂದಿನಂತೆ ಸುಂದರ ನಗೆಬರಹ
ವಿಷಯ ಎಲ್ಲಿ ಸಿಗ್ತು ನಿಂಗೆ ಹೇಳಿ ತಲೆ ಕೆಡಿಸ್ಕತ್ತಿ ನಾನು
ತುಂಬಾ ಸೂಪರ್ ಆಗಿ ಬರದ್ದೆ
ಜೈ ಹೋ

Sunanda hegde said...

Nagillaaakku nakku hotte novu bantu.. dandeli janara paristitinu edakkinta binnavagilla..busnalli hoguvaga pakkadavru gyass manushyaradare elli oododu.. bayi vasane anubava eddavara nenapu aayitu.. thank you 4 nice tonic..4 laughing...

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ನಿಜ್ವಾಗ್ಲೂ ಹೇಳ್ತಾ ಇದ್ದಿ.. ಈ ಪಾರ್ಟ್ ತುಂಬಾ ತುಂಬಾ ನಗಿ ತಂತು.. ನಕ್ಕೂ ನಕ್ಕೂ ಸುಸ್ತಾತು. ಹಾಂಗೇ ಅಂವನ ಪರಿಸ್ಥಿತಿ ಎಣಿಸ್ಕಂಡು ಸ್ವಲ್ಪ ಬೇಸರಾನೂ ಆತು.

ನಗಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ :)

Deepak bhat said...

wow sooper ha ha ha ha ah ah

Rajaneesh Kashyap said...

ಭೀಭತ್ಸರಸಕ್ಕೆ ಒಂದು ಉತ್ತಮ ಉದಾಹರಣೆ ನಿಮ್ಮ ‘ಗ್ಯಾಸ್ ಮಹಾದೇವ’ ಲೇಖನ.
“ಬೂಗ್ ಬುಚ್ಚಿಕೊಡ್ ಬರೀತಿದ್ದೀದಿ ಸಾದ್”.
ರಜನೀಶ

Rajaneesh Kashyap said...

ಸ್ವಾತಂತ್ರವೀರ ಸಾವರಕರರನ್ನು ಬಂಧಿಸಿ ಲಂಡನ್ನಿಂದ ತಿಹಾರ‍್(?) ಜೈಲಿಗೆ ಹಡಗಿನಲ್ಲಿ ತರುವಾಗ, ಎಲ್ಲ ಖೈದಿಗಳನ್ನು ಪ್ರಾಣಿಗಳಂತೆ ಒಂದೆಡೆ ತುಂಬಿರುತ್ತಾರೆ. ಅವರ ಸಕಲ (ಉ.ಮ.ಹೇ.) ಕಲಾಪಗಳೂ ಕುಳಿತಲ್ಲೇ ಆಗಬೇಕಿರುತ್ತದೆ. ಇದೆನ್ನಲ್ಲಾ ನೋಡಿ ಸಾವರಕರರಿಗೆ ಅಲ್ಲಿರಲು ಅಸಹ್ಯವೆನಿಸಿತು. ಆದರೆ, ‘ಅಸಹ್ಯಪಡಲು ಆಗಿರುವುದಾದರೂ ಏನು? ನಮ್ಮ ದೇಹದ ಒಳಗಿದ್ದ ಮಲ-ಮೂತ್ರ-ಕಫ-ಸ್ವೇದ-ವಾಯು ಇತ್ಯಾದಿ ಹೊಲಸು ಎನಿಸಿಕೊಂಡದ್ದು ಹೊರಗೆ ಕಾಣುತ್ತಿದೆಯಷ್ಟೆ.’ ಎಂದು ತಮ್ಮನ್ನು ತಾವು ಸಾವರಿಸಿಕೊಳ್ಳುತ್ತಾರೆ.

ನಮ್ಮ ಒಳಗೊಮ್ಮೆ ಇಣಿಕಿದರೆ ಕಾಣುವುದೂ ಹೀಗೇ ಅಲ್ಲವೇ?

prashasti said...

ತುಂಬಾ ಲೇಟಾಗಿ ಓದ್ತಿರದಕ್ಕೆ ಕ್ಷಮೆ ಇರ್ಲಿ ಪ್ರಕಾಶಣ್ಣ. . ಕ್ರಿಕೆಟ್ ಪ್ರಸಂಗ, ಮೌನಾಚರಣೆ ಪ್ರಸಂಗ, ನರಶಿಂಹನ ಪ್ರಸಂಗ, ಲಕ್ಷ್ಮಿ ಥಿಯೇಟರ್ ಪ್ರಸಂಗ.. ಎಲ್ಲಾ ಸೂಪರೋ :-)

ನೆನಪಿನಂಗಳದಲ್ಲಿ... said...

ಪ್ರಕಾಶಣ್ಣ... ಕಥೆ ಮಸ್ತ್ ಇದ್ದು:-) ಇದು ಖರೆನೋ ಅಥವಾ ಕಲ್ಪನೇನೋ ಗೊತ್ತಾಜಿಲ್ಲೆ ! ನಿನ್ನ ಹಾಸ್ಯದ ವಿಡಂಬನೆ, ಅದನ್ನು ಎಳೆ ಎಳೆಯಾಗಿ ಬಿಚ್ಚಿ ಓದುಗರಿಗೆ ಉಣಿಸೋ ರೀತಿ, ಕೊನೆ ತನಕ ಆಸಕ್ತಿ ಉಳಿಸಿಕೊಂಡು ಹೋಗೋ ಕಥೆಯ ಹರಿವು ಸೊಗಸಾಗಿದ್ದು...