Saturday, October 1, 2011

.............ಹೀಗೆ .


ನಿರ್ಧಾರಗಳು ಯಾಕೆ ಬದಲಾಗುತ್ತವೆ?


ಉತ್ತರ ಬಲು ಕಷ್ಟ...


ನನ್ನಪ್ಪ ಊರಿಂದ ಬರುವಾಗ ಹೇಳಿದ್ದರು...


"ಮಗಾ..
ಪಟ್ಟಣದಲ್ಲಿ ಇರ್ತೀಯಾ...
ಹದಿಹರೆಯದ ವಯಸ್ಸು... ಮನಸ್ಸು ಹಿಡಿತದಲ್ಲಿರೋದಿಲ್ಲ..


ಮೊದಲಬಾರಿಗೆ ಊರಿಂದ... ಅಪ್ಪ,ಅಮ್ಮರಿಂದ ದೂರ ಇರ್ತಿದ್ದೀಯಾ..
ಒಂಟೀತನ ಕಾಡಬಹುದು...


ಚಟಕ್ಕೆ ..
ಹೆಣ್ಣುಮಕ್ಕಳ ಕಡೆಗೆ  ಮನಸ್ಸು ಎಳೆಯ ಬಹುದು..


ನೀನು ಎಚ್ಚರಿಕೆಯಲ್ಲಿರಬೇಕು..."


ನಾನೂ ಗಟ್ಟಿಯಾಗಿ ನಿರ್ಧರಿಸಿದ್ದೆ... ಅಪ್ಪಹೇಳಿದಂತೆ ನಡೆಯಬೇಕು ಅಂತ...


ಆದರೆ...
ಆ ಹುಡುಗಿ....
ಸ್ವಲ್ಪ ಕುಳ್ಳಿ... 
ಕಣ್ಣಲ್ಲೇ ನಗುವ..ಚಂದದ ತುಟಿಗಳಿಗೆ ಮರುಳಾಗಿಬಿಟ್ಟೆ...


ಅರಳು ಹುರಿದಂತೆ ಅವಳು ಮಾತನಾಡುವಾಗ ನಾನೋ ಎಲ್ಲೋ ಕಳೆದು ಹೋಗುತ್ತಿದ್ದೆ...


ಅವಳ ಧ್ವನಿಯೂ ಇಂಪು...


ಅವಳು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಹಾಡಿದ್ದಳು...


"ನೀ...ನಿರಲು ಜೊತೆಯಲ್ಲಿ.. ಬಾಳೆಲ್ಲ ಹಸಿರಾದಂತೆ..."


ವಾಹ್ !!


ನಾನು ಏನು ಮಾಡಬಾರದಾಗಿತ್ತೋ... ಅದನ್ನು ಮಾಡಿದೆ...
ನನ್ನ ಹೃದಯ ಢವ ಢವ ಅನ್ನುತ್ತಿತ್ತು...
ಧೈರ್ಯಮಾಡಿ ಹುಡುಗಿ ಒಬ್ಬಳೆ ಇದ್ದಾಗ ಹೇಳಿದೆ..


"ಹುಡುಗಿ.. 
ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ..."


ಅವಳ ಜಿಂಕೆ ಕಣ್ಣುಗಳಲ್ಲಿ ಆಶ್ಚರ್ಯ.... !


"ಹೌದಾ...?
ನನ್ನ ಪ್ರೀತಿಸ್ತಿದ್ದೀಯಾ...?


ಯಾಕೆ?"


"ಗೊತ್ತಿಲ್ಲ... 
ನೀನು ನನಗೆ ತುಂಬಾ ತುಂಬಾ ಇಷ್ಟ..
ತುಂಬಾ ತುಂಬಾ ಪ್ರೀತಿಸ್ತಾ ಇದ್ದಿನಿ..."


"ಹುಡುಗಾ...
ಸಿನೇಮಾ ಥರಹ ನನ್ನನ್ನು ತಬ್ಬಿಕೊ ಬೇಕು...
ಹಾಡು ಹೇಳಬೇಕು ...
ಅಂತೆಲ್ಲ  ಅನ್ನಿಸ್ತಾ ಇದೆಯಾ...?"


ಅನಿರೀಕ್ಷಿತವಾದ ಅವಳ ಈ ನೇರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ...


ತಡಬಡಿಸಿದೆ... 
ಸಣ್ಣಗೆ ಹಣೆಯಲ್ಲಿ ಬೆವರು ಬಂತು...!


"ಹುಡುಗಾ...
ಪ್ರೀತಿ ಎಂದರೆ ಏನು?"


ನಾನು ತಲೆ ಕೆರೆದು ಕೊಂಡೆ...


ಅಸಲಿಗೆ ಪ್ರೀತಿ ಎಂದರೇನು ಅಂತ ನನಗೂ ಗೊತ್ತಿಲ್ಲ...!


"ಗೊತ್ತಿಲ್ಲ ...
ನಿನ್ನನ್ನು ನೋಡಬೇಕು ಅನ್ಸುತ್ತೆ...
ನೀನು ನನಗೆ ಚಂದ ಕಾಣ್ತಾ  ಇದ್ದೀಯ...


ನೋಡ್ತಾ ಇದ್ದೀನಿ...


ನೀನು ಖುಷಿಯಾಗಿರಬೇಕು...
ನಿನ್ನ ಸಂತೋಷ ನಾನು ನೋಡಬೇಕು...


ನಿನಗೆ ಒಳ್ಳೆಯದನ್ನು ಬಯಸುತ್ತೇನೆ... ಹೃದಯಪೂರ್ವಕವಾಗಿ..."


"  ಸರಿ...
ಹಾಗಾದರೆ..ನೀನು ನನ್ನನ್ನು ಪ್ರೀತಿ ಮಾಡಬಹುದು...
ಆದರೆ...
ಒಂದು ಕಂಡೀಷನ್......."


"ಏನು...?"


" ನೀನು ನನ್ನಿಂದ ದೂರ ಇರಬೇಕು...


ನನ್ನ ಕಡೆಗೆ ಪೆಂಗನಂತೆ ನೋಡುತ್ತ.. 
ಹುಚ್ಚುರೀತಿಯಲ್ಲಿ ವರ್ತಿಸಬಾರದು...


ಅವಶ್ಯಕತೆ ಇದ್ದಷ್ಟೇ ಮಾತನಾಡಬೇಕು...
ಕಾರಣವಿಲ್ಲದೆ ನನ್ನನ್ನು ಭೇಟಿ ಮಾಡಬಾರದು..."


ನಾನು ಮತ್ತೆ ತಲೆ ಕೆರೆದುಕೊಂಡೆ...


"ಆಯಿತು...
ಓಕೆ..
ಎಸ್ಸೆಮ್ಮೆಸ್  ಕಳಿಸ ಬಹುದಾ?"


ಹುಡುಗಿ ಈಗ ತುಂಬಾ ಕಠಿಣವಾದಳು...


" ಇಲ್ಲ...
ನಾವಿಬ್ಬರೂ ಇಲ್ಲಿ ಓದಲಿಕ್ಕೆ ಬಂದಿದ್ದೇವೆ... ಚೆನ್ನಾಗಿ ಓದಬೇಕು...
ಅದು ನಮ್ಮ ಮೊದಲ ಗುರಿ...


ನನ್ನ ಓದಿಗೆ ನೀನು ..
ನಿನ್ನ ಪ್ರೀತಿ ...
ನನಗೆ ತೊಂದರೆ ಕೊಡಬಾರದು..."


ನಾನು ಅವಳು ಹೇಳಿದುದಕ್ಕೆ "ಹೂಂ" ಅಂದೆ...


"ನೋಡು ಹುಡುಗಿ...


ನಾನೂ ಕೂಡ ಒಳ್ಳೆಯವನು... 
ಒಳ್ಳೆಯ ಮನೆತನದವನು...
ಕೆಟ್ಟ ಅಭ್ಯಾಸಗಳಿಲ್ಲ..
ದಯವಿಟ್ಟು ನನ್ನನ್ನೂ ಪ್ರೀತಿಸು.... ಪ್ಲೀಸ್...."


ಈ ಪ್ರೀತಿ ನಿವೇದನೆ ಬಲು ಕಷ್ಟ....


ಹುಡುಗಿ ಕಿರುಗಣ್ಣಿನಿಂದ ನೋಡಿದಳು...
ತಕ್ಷಣ ಉತ್ತರ ಕೊಡಲಿಲ್ಲ...


"ಪ್ರೀತಿಗೆ ಬಲವಂತ ಮಾಡಬಾರದು.. .. 
ಹುಡುಗಾ...
ಕಾದು ನೋಡೋಣ...


ನೀನು ನನ್ನನ್ನು ಪ್ರೀತಿಸಿಕೊ.. 


ಪರವಾಗಿಲ್ಲ...
ಆದರೆ ನನಗೆ ತೊಂದರೆ ಕೊಡಬೇಡ...."


ಅಂದಿನಿಂದ ....
ಅವಳನ್ನು ದೂರದಿಂದಲೇ ನೋಡುತ್ತಿದ್ದೆ...
ಕಣ್ಣತುಂಬಾ... ಹೃದಯದ ತುಂಬಾ....


ನೋಡುತ್ತಿದ್ದೆ.. 
ಅವಳಿಗೆ ಗೊತ್ತಾಗದ ಹಾಗೆ... 
ಕವನ ಗೀಚುತ್ತಿದ್ದೆ.... ಕನಸು ಕಾಣುತ್ತಿದ್ದೆ....


ಏನೋ ಒಂಥರಾ ಖುಷಿ..!
ಅವಳಿದ್ದಳು ನನ್ನ  ಮನಸ್ಸಲ್ಲಿ ..
ನಿದ್ದೆ  ಕನಸುಗಳಲ್ಲಿ..


ಪ್ರೀತಿ ಎಂದರೆ  ಇದೇನಾ?


ನೋಡು ನೋಡುತ್ತಿರುವಂತೆ... ನಮ್ಮ ಓದು ಮುಗಿಯಿತು...
ಇಬ್ಬರೂ ಪಾಸಾಗಿದ್ದೆವು...


ನೌಕರಿಯೂ ಸಿಕ್ಕಿತು....


ಇನ್ನೇನು?


ಈ ಆಸೆಗಳದ್ದೇ ಸಮಸ್ಯೆ....!


ಅಸೆಗಳು ಮತ್ತೆ ಗರಿಗೆದರಿತು....


ಆಸೆಗಳಿಗೇನು...?
ಯಾವಾಗಲೂ ಅವಕಾಶ ಹುಡುಕುತ್ತಿರುತ್ತವೆ....


"ಹುಡುಗಿ...
ನನ್ನ ಪ್ರೀತಿ ಮರೆತುಬಿಟ್ಟೆಯಾ...?


"ಇಲ್ಲ ಕಣೋ...
ಮರೆತಿಲ್ಲ... 
ನೀನು ತುಂಬಾ ಒಳ್ಳೆಯ ಹುಡುಗ...
ನಾನು ಹೇಳಿದಂತೆ ನಡೇದುಕೊಂಡಿದ್ದೀಯಾ..."


"ಸರಿ...
ಮುಂದೇನು...?


"ಹುಡುಗಾ...
ನನ್ನ ಅಪ್ಪ ತುಂಬಾ ಕಷ್ಟ ಪಟ್ಟು ನನಗೆ ಓದಿಸಿದ್ದಾನೆ..
ನನಗೂ ಒಂದಷ್ಟು ಕನಸಿದೆ..
ನನ್ನ ಅಪ್ಪನಿಗೆ ಏನಾದರೂ ಕೊಡಬೇಕು...
ಒಂದಷ್ಟು ದಿನ ಕೆಲಸ ಮಾಡಿ ....
ಅಪ್ಪನಿಗೆ ಏನಾದರೂ ನನ್ನಿಂದ ಸಹಾಯ ಆಗಬೇಕು....."


ನಿಜ ಹೇಳ್ತೀನಿ...
ಈಗ ಮಾತಾಡಿದ್ದು ನಾನಲ್ಲ...
ನನ್ನ ಆಸೆಗಳು...


ನನ್ನ ಆಸೆಗಳೇ ಮಾತಾಡಿದವು...


" ಖಂಡಿತವಾಗಿ ಕೊಡು ಮಾರಾಯ್ತಿ...
ನನ್ನ ಅಭ್ಯಂತರ ಏನೂ ಇಲ್ಲ...


ನಾನು ನಿನ್ನ ಕೈ ಹಿಡಿದುಕೊಂಡು ಪಾರ್ಕಿನಲ್ಲಿ ಓಡಾಡಬಹುದಾ?
ನಿನ್ನ ಜೊತೆ ಪಾನಿ ಪುರಿ ತಿನ್ನ ಬಹುದಾ?


ನನಗೆ ನಿನ್ನ ಮೇಲೆ ಪ್ರೀತಿ ಇನ್ನೂ ಜಾಸ್ತಿಯಾಗಿದೆ..."


"ಇಲ್ಲ ಕಣೊ...
ನೀನು ನನ್ನನ್ನು ಮುಟ್ಟಬಾರದು...
ದೂರದಿಂದಲೇ ಮಾತನಾಡಬೇಕು...


ಆದರೆ..."


"ಏನು..?"


"ಆದರೆ..
ನನ್ನೊಟ್ಟಿಗೆ ಓಡಾಡ ಬಹುದು...
ವಾರಕ್ಕೊಮ್ಮೆ ಪಾರ್ಕು.. ಸಿನೇಮಾ ನೋಡಬಹುದು...


ಆದರೆ ಎಲ್ಲವೂ ದೂರ...ದೂರದಲ್ಲೇ.. ಇರಬೇಕು...!


ನಿನ್ನ ಪ್ರೀತಿ ನನ್ನ ಮೈ ಮುಟ್ಟಬಾರದು..."


ನನಗೆ ಬಹಳ ಸಂತೋಷವಾಯಿತು...!
ಸ್ವರ್ಗ ಸಿಕ್ಕಿದಷ್ಟು ಖುಷಿಯಾಯಿತು....!


ನನ್ನ ಹುಡುಗಿ ನನಗೆ ಮಾತನಾಡಲು ಸಿಗುತ್ತಾಳಲ್ಲ...!


ವಾಹ್..!


"ಹುಡುಗಿ...
ನಾನು ಫೋನ್ ಮಾಡಬಹುದಾ?"


"ಮಾಡು..
ಸಾಯಂಕಾಲ ಮಾತ್ರ... 
ನಾನು ಆಫೀಸಿನಿಂದ  ಬಂದಮೇಲೆ..."


ನಿಜ ಹೇಳ್ತಾ ಇದ್ದೀನಿ..
ಆಡುವ ಮಾತುಗಳು ಇಷ್ಟು ಅಪ್ಯಾಯಮಾನವಾಗಿರುತ್ತವೆ ...
ಅಂತ ನನಗೆ ಗೊತ್ತಾಗಿದ್ದು ಆವಾಗಲೇ...


ನಾವಿಬ್ಬರೂ ಹರಟಿದೆವು.... ಓಡಾಡಿದೆವು...
ಸಿನೇಮಾ ನೋಡಿದೆವು...


ಪಾರ್ಕಿನ ಮೂಲೆಯಲ್ಲಿ ಕುಳಿತು ನನ್ನ ಹುಡುಗಿ ನನಗಾಗಿ ಹಾಡು ಹಾಡುತ್ತಿದ್ದಳು...
ನನ್ನಿಷ್ಟದ ಹಾಡುಗಳು... !!


"ತುಮ್ ಸೆ.. ನಾರಾಜ್ ನಹೀ...ಜಿಂದಗೀ...
ಹೈರಾನು ಹೂಂ... ಮೈ ಪರೇಶಾನು ಹೂಂ...


ತೆರೆ ಮಾಸೂಮ್ ಸವಾಲೋ ಸೆ  ಪರೆಶಾನೂ ಹೂಂ..."


ಅವಳ ಧ್ವನಿ ಬಲು ಇಂಪು....


ಅವಳು ನನ್ನ ಪ್ರತಿಮಾತಿಗೂ ನಗುತ್ತಿದ್ದಳು...
ನಗುವಾಗ ಅವಳ ಕಣ್ಣುಗಳು ಮುಚ್ಚುತ್ತಿದ್ದವು...


ಅವಳ ಜೊತೆಯಲ್ಲಿ ಏನೇನೋ ಕನಸು ಕಂಡೆ...!
ಅವಳನ್ನು ದೂರದಿಂದ ಕಣ್ಣು ತುಂಬಿಸಿಕೊಳ್ಳುತ್ತಿದ್ದೆ...

ಅವಳು ನನಗೆ ಮತ್ತಷ್ಟು ಇಷ್ಟವಾದಳು... 
ಹತ್ತಿರವಾದಳು...


ವರುಷ ಕಳೆದು ಹೋಯಿತು....


"ಹುಡುಗಾ...
ನಿನ್ನೆ ನನ್ನ ಅಪ್ಪ ....
ನನ್ನ ಮದುವೆಯ ಬಗೆಗೆ ಮಾತನಾಡಿದ..
ನನಗೆ ಗಂಡು ಹುಡುಕುತ್ತಾನಂತೆ...
ನಾನು ನಿನ್ನ ಬಗೆಗೆ ಹೇಳಿಲ್ಲ...


ದಯವಿಟ್ಟು ನೀನು ನಿನ್ನ ಅಪ್ಪನೊಡನೆ ಮಾತನಾಡು...


ನಮ್ಮ ಮದುವೆಯ ಬಗೆಗೆ ಮಾತಾಡು..
ನಮ್ಮ ಸಂಭಂಧಕ್ಕೊಂದು  ಹೆಸರು ಕೊಡು..
ಭದ್ರತೆ  ಕೊಡು.."


"ಹುಡುಗಿ..
ನಿನಗೆ ನಾನು ಇಷ್ಟನಾ?


ನಾನು ಪ್ರೀತಿಸಿದ ಹಾಗೆ ...
ನೀನೂ ನನ್ನನ್ನು  ಪ್ರೀತಿಸುತ್ತೀಯಾ?"


"ಹೌದು ಕಣೋ...


ನನ್ನ ಪ್ರೀತಿ ನನ್ನ ಕಣ್ಣಲ್ಲಿದೆ.. ಗೊತ್ತಾಗಲಿಲ್ಲವಾ?


ಹುಚ್ಚು ಹುಡುಗ ನೀನು...!


ನಿನ್ನ ಸಭ್ಯತೆ... ವಿನಯ...
ಸಂಯಮ...
ನೀನು ದೂರದಿಂದ ನನ್ನನ್ನು ಪ್ರೀತಿಸುವ ರೀತಿ..
ನಿನ್ನ ಪ್ರೀತಿತುಂಬಿದ ಕಣ್ಣುಗಳು ನನಗಿಷ್ಟ ಕಣೊ...


ನಿನ್ನೊಂದಿಗೆ ನನ್ನ ಬದುಕು ಸಂತಸವಾಗಿರುತ್ತದೆ...
ನನ್ನ ಬದುಕಿನ ಭರವಸೆ ನೀನು...


ದಯವಿಟ್ಟು ನಮ್ಮ ಮದುವೆಯ ಪ್ರಸ್ತಾಪ ನಿನ್ನಪ್ಪನೊಡನೆ ಮಾಡು..."


"ಹುಡುಗಿ...
ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅಂತ ನನಗೇ ಗೊತ್ತಿಲ್ಲ...


ನಿನ್ನ ನೋಟ,,.. ಧ್ವನಿ... ಪ್ರೀತಿ... ಎಲ್ಲವನ್ನೂ..
ಇಷ್ಟು ವರ್ಷ ನನ್ನ ಹೃದಯದಲ್ಲಿ ತುಂಬಿಟ್ಟುಕೊಂಡಿದ್ದೇನೆ...


ನಿನ್ನ ಪ್ರೀತಿಯನ್ನು ನಿನ್ನೊಡನೆ ಮಾತನಾಡದೇ ಅನುಭವಿಸಿದ್ದೇನೆ...


ಮಾತಾನಾಡಿಯೂ ಅನುಭವಿಸಿದ್ದೇನೆ...
ನಿನ್ನ ಪ್ರೀತಿಯನ್ನು ನನ್ನೆದೆಯೊಳಗೆ ಪೂಜಿಸಿದ್ದೇನೆ..


ನಿನ್ನಂಥಹ ಹುಡುಗಿ ನನ್ನ ಸಂಗಾತಿಯಾಗುವದು ಎಷ್ಟೋ ಜನ್ಮದ ಪುಣ್ಯ..."


ನನಗೆ ಮುಂದೆ ಮಾತನಾಡಲಾಗಲಿಲ್ಲ...
ಗಂಟಲು ಉಬ್ಬಿ ಬಂತು...


"ಹುಡುಗಾ ..
ಏನಾಯ್ತೋ.....?
ನಾನು ನಿನ್ನವಳು... 
ಇಬ್ಬರೂ ಮದುವೆಯಾಗೋಣ.. ಚಿಂತೆ ಮಾಡಬೇಡ..."


ಹುಡುಗಿ ನನ್ನ ತಲೆ ಸವರಿದಳು...


"ಹುಡುಗಿ...
ಮದುವೆಯಾಗಿ  ವಾಸ್ತವದ ಬದುಕಿನಲ್ಲಿ ನನ್ನ ಪ್ರೀತಿಯನ್ನು ಸಾಯಿಸುವದು ನನ್ನಿಂದ ಆಗದು...
ಸಂಸಾರದ ಜಂಜಾಟದಲ್ಲಿ ನಾವು ಜಗಳಕಾದು...
ಕೂಗಾಡುವದು.. ರೇಗಾಡುವದು ನನ್ನಿಂದಾಗದು...


ನಮ್ಮ ಪ್ರೀತಿ ಹೀಗೆಯೇ ಇರಲಿ...


ನಿನ್ನಪ್ಪ ನಿನಗೊಂದು ವರ ಹುಡುಕುತ್ತಾನೆ ಅವನನ್ನು ಮದುವೆಯಾಗು...
ನನಗೂ ಒಬ್ಬಳು ಮಡದಿಯಾಗಿ ಬರುತ್ತಾಳೆ...


ನಮ್ಮ ಪ್ರೀತಿಯನ್ನು ಬಚ್ಚಿಟ್ಟುಕೊಂಡು...
ಆಗಾಗ ತೆರೆದು ಅನುಭವಿಸೋಣ...


ಎಲ್ಲ ಸಂಬಂಧಗಳು... ಬಾಂಧವ್ಯಗಳು...
ಪ್ರೀತಿ..
ಪ್ರೇಮ ದೂರದಿಂದಲೇ ಚಂದ ...
ಸುಂದರ...ಕಣೆ...


ಇಷ್ಟೆಲ್ಲಾ ಕನಸು ಕೊಟ್ಟ 
ನೀನು...
ನಿನ್ನ ಪ್ರೀತಿ ನನ್ನೊಡನೆ ಯಾವಾಗಲೂ ಹೀಗೆಯೇ ಇರಲಿ...

ನಾವು ಮದುವೆಯಾಗುವದು ಬೇಡ.. ಕಣೆ...
ಬೇಡ..."


ಹುಡುಗಿ ಮಾತನಾಡಲಿಲ್ಲ...


ನನಗೆ ...... 
ನನ್ನ ಹುಡುಗಿಯ ಹುಡುಗಿಯ ಮುಖ ನೋಡಬೇಕಿತ್ತು...


ಹುಡುಗಿ ಸರಿಯಾಗಿ ಕಾಣಿಸುತ್ತಿರಲಿಲ್ಲ...
ಮಂಜು ಮಂಜಾಗಿತ್ತು.....

ನನ್ನ ಕಣ್ಣಂಚಲ್ಲಿ  ನೀರಿತ್ತು....




( ಚಂದದ ಪ್ರತಿಕ್ರಿಯೆಗಳು... 
ಪ್ರೀತಿ ಬಗೆಗಿನ ಸಂವಾದ ಚೆನ್ನಾಗಿದೆ...
ದಯವಿಟ್ಟು ನೋಡಿ....)

67 comments:

Anitha Naresh Manchi said...

yaako ishta aaglilla :)

Mahesh Gowda said...

Anna Preetiya indodu muka idu

Mahesh Gowda said...

Anna peeti sigovaregu iruva atura katura .... amele irodila alwa anna?

Ittigecement said...

ಅನಿತಾರವರೆ....

ಪ್ರೀತಿ ಸಂಬಂಧಗಳು...
ಬಾಂಧವ್ಯಗಳು...
ವಾಸ್ತವದ ಬದುಕಿನಲ್ಲಿ ಹಳಸುತ್ತವೆ...

ಹುಡುಗನ ನಿರ್ಧಾರ ಸರಿ ಎನ್ನುವದು ನನ್ನ ಅಭಿಪ್ರಾಯ...

ಅಷ್ಟು ದಿನ ದೂರ ಇದ್ದು...
ದೂರದಿಂದಲೇ ಹುಡುಗಿಯನ್ನು ನೋಡುತ್ತ ಇಷ್ಟ ಪಡುತ್ತ...
ಕನಸು ಕಾಣುತ್ತ ಕಳೆದವ ಆತ...

ವಾಸ್ತವ ಬದುಕಿನಲ್ಲಿ ಜಗಳ, ಬಿರುಸು ಮಾತು ಸಹಜ...

ತನ್ನ ಪ್ರೀತಿ ಹೀಗೆ ಇರಲಿ ಎನ್ನುವ ಅವನ ಸ್ವಾರ್ಥ ...

ವಾಸ್ತವಕ್ಕಿಂತ ಕನಸು ಚಂದ... ಸುಂದರ... ಅಲ್ಲವಾ?

ಪ್ರತಿಕ್ರಿಯೆಗೆ ಧನ್ಯವಾದಗಳು ಬರುತಾ ಇರಿ...

ಸೌರಭಾ said...
This comment has been removed by the author.
ಚುಕ್ಕಿಚಿತ್ತಾರ said...

ಪ್ರಕಾಶಣ್ಣ..
ವಾಸ್ತವ ಬದುಕಿನಲ್ಲಿ ಪ್ರೀತಿ ಹೀಗೆ ಇರೋದು ಸಾಧ್ಯವೇ..? ಇದ್ರೂ ನೋಡುವ ಸಮಾಜ ಹಾಗೇ ಇರಲ೦ತೂ ಬಿಡುವುದಿಲ್ಲ.
ಕೊನೆಯಲ್ಲಿ ಕೊಳೆತು ನಾರುವುದಕ್ಕಿ೦ತಲೂ ಇಬ್ಬರಿಗೂ ಮದುವೆ ಮಾಡಿ ಪ್ರೀತಿಗೆ ಪಾವಿತ್ರ್ಯವನ್ನು ಕೊಡುವುದು ಲೇಸಲ್ಲವೇ..? ಪ್ರೀತಿಯಿದ್ದಲ್ಲಿ ಜಗಳ ಇರಲೇಬೇಕು.. ಜಗಳ ಮಾಡ್ತಾ ಮಾಡ್ತಾ ಪ್ರೀತಿ ಹೆಚ್ಚಾಗಬೇಕು. ಆಗ ಬದುಕು ನೈಜವಾಗಿರುತ್ತೆ....!! ಸ೦ಗಾತಿಯ ಜೊತೆಗೆ ಜೀವನವನ್ನೂ ಪ್ರೀತಿಸಬೇಕು.. ಅಲ್ಲಿ ಗೆಲ್ಲಬೇಕು !

ಈ ಹುಡುಗನದು ಪಲಾಯನ ವಾದವಲ್ಲವೇ..? ಅಥವಾ ನನಗೇ ಹಾಗನಿಸುತ್ತಿದೆಯಾ..?

Ittigecement said...

ಮಹೇಶು....

ಪ್ರೀತಿ, ಪ್ರೇಮ ...
ಬಾಂಧವ್ಯಗಳು ಕಾಲಕ್ರಮೇಣ ಹಳಸುತ್ತವೆ... ಯಾಕೆ?

ವಾಸ್ತವವನ್ನು ಎದುರಿಸುವದು ಪ್ರೀತಿಗೆ, ಸಂಬಂಧಗಳಿಗೆ ಗೊತ್ತಿಲ್ಲವೆ?

ಅಮಿತಾಭ್ ಬಚ್ಚನ್ ಕೂಲಿ ಸಿನೇಮಾದ ಶೂಟಿಂಗಿನಲ್ಲಿ ಪೆಟ್ಟಾಗಿ ಸಾವು ಬದುಕಿನೊಡನೆ ಹೋರಾಡುತ್ತಿದ್ದ...
ಅಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಮಾಡಿದವಳು ಜಯಾ ಬಚ್ಚನ್...

ಆತ ಎಚ್ಚರವಾದಾಗ ತನ್ನ ಗೆಳತಿ "ರೇಖಾಳನ್ನು" ನೋಡ ಬಯಸಿದ್ದ...

"ಮಡದಿಯರೆಲ್ಲ ಪ್ರೇಯಸಿಯರಲ್ಲ.." ಅಂದಿದ್ದ...

ನಿಮಗಿದು ಗೊತ್ತಿರಲಿ..
ಜಯಾ ಬಚ್ಚನ್ ಮತ್ತು ಅಮಿತ್ ಅವರದ್ದು ಪ್ರೇಮ ವಿವಾಹ...

ಪ್ರೀತಿ ನಿತ್ಯ ನೂತನವಾಗಿರಲಿಕ್ಕೆ ಏನು ಮಾಡಬೇಕು?

ಪ್ರತಿಕ್ರಿಯೆಗೆ ಧನ್ಯವಾದಗಳು....

ಸೌರಭಾ said...

ಪ್ರೀತಿ ಪ್ರೀತಿಯಾಗಿಯೇ ಇರಲಿ..ಕರ್ತವ್ಯವಾಗದಿರಲಿ...
ಎಲ್ಲಿ ಅ ಪ್ರೀತಿಯೇ miss ಆಗುತ್ತೋ ಅನ್ನೋ ಭಯ ಆ ಹುಡುಗನಿಗೆ ಕಾಡ್ತಾ??
nice 1 ಪ್ರಕಾಶಣ್ಣ :)

Badarinath Palavalli said...

"ನನಗಂತೂ ಮನಗೆದ್ದ ಕಥೆ."

ನಿಜ ಸುಧೀರ್ಘ ಪ್ರೀತಿ ಮದುವೆ ನಂತರವೂ ಹಾಗೇ ಉಳಿದೀತು ಎಂಬ ನಂಬಿಕೆಯಿಲ್ಲ! ಹುಡುಗನ ನಿರ್ಧಾರ ತುಂಬಾ ದೂರಾಲೋಚನೆಯಿಂದ ಕೂಡಿದೆ.

ಕಾವ್ಯದಲ್ಲೂ ಕಥನದಲ್ಲೂ ಪ್ರಕಾಶಣ್ಣ ಸರ್ವಾಂತರ್ಯಾಮಿ.

Shruthi B S said...

ವಾಸ್ತವಕ್ಕಿ೦ತ ಕನಸು ಚಂದ ನಿಜ....ಆದರೆ ಕನಸು ಯಾಕೆ ವಾಸ್ತವ ಆಗಬಾರದು...?? ಬಹುಶಃ ಕನಸು ವಾಸ್ತವವಾಗುವುದು ಬಹಳ ವಿರಳ ಇರಬಹುದು. ನಾವು ಮನಸ್ಸು ಮಾಡಿದರೆ ಯಾಕೆ ಸಾಧ್ಯವಿಲ್ಲ.? ಬಹುಶಃ ಮು೦ದೆ ಬರುವ ಕಹಿಗಳಿಗಾಗಿ ಈ ನಿರ್ಧಾರ ತೆಗೆದುಕೊ೦ಡಿರಬಹುದು ಆತ, ಆದರೆ ಕಹಿ ಎಲ್ಲಿರುವುದಿಲ್ಲ........?

Srikanth Manjunath said...

ಆಸೆ ಪಟ್ಟ ಚಂದ್ರ ಅಂಗೈಗೆ ಬಂದಾಗ ಮುದವಿರೋಲ್ಲ..
ಚಂದ್ರ ದೂರದಲ್ಲೇ ಚೆನ್ನ...
ಹಾಗೇನೆ ಪ್ರೀತಿಸಿ , ಆಸೆ ಪಟ್ಟು ಕಷ್ಟ ಪಟ್ಟು ದೊರಕಿಸಿಕೊಂಡ ವಸ್ತು, ಸಂಬಂಧ,
ಕೈಗೆ ಸಿಕ್ಕನಂತರ ಹೊಸತನಕ್ಕೆ, ಹೊಸತಾಣಕ್ಕೆ ಕಾತರಿಸುತ್ತೆ ಮನಸು...
ಅದೇ ಮನುಜನ ಜೀವನ...
ಹೊಂದಿಸಿ ಆಗುವ ಮದುವೆಯಲ್ಲಿ ಕುತೂಹಲ ಇರುತ್ತೆ...
ಪ್ರೀತಿಸಿ ಮದುವೆ ಆಗುವಷ್ಟರಲ್ಲಿ ಕುತೊಹಲವೆ ಮಾಯವಾದರೆ ಜೀವನ ಚಂದ ಅಲ್ಲ..
ಇಸ್ತ್ರಿ ಪೆಟ್ಟಿಗೆ ಬಿಸಿ ಇದ್ದಾಗ ಮಾತ್ರ ಬಳಕೆಗೆ ಯೋಗ್ಯ...ಆರಿದ ನಂತರ ಅಲ್ಲ..
ಆ ಯೋಚನೆ, ಆಲೋಚನೆಗಳನ್ನ , ದೂರದೃಷ್ಟಿಯನ್ನ ಚೆನ್ನಾಗಿ ಚಿತ್ರಿಸಿದ್ದಿರ ಪ್ರಕಾಶ...

ದಿನಕರ ಮೊಗೇರ said...

ಪ್ರಕಾಶಣ್ಣ,
ವಾವ್... ಎಂಥಹ ಸುಂದರ ಅಂತ್ಯ ಈ ಕಥೆಗೆ....... ಇದಕ್ಕಿಂತ ಅಂತ್ಯ ಮತ್ತೊಂದು ಇಲ್ಲ ಅನಿಸತ್ತೆ..... ಅವರಿಬ್ಬರೂ ತಮ್ಮ ತಮ್ಮ ಪ್ರೀತಿಯನ್ನು ಕೊನೆಯವರೆಗೂ ನೆನೆಯುತ್ತಾರೆ...... ಗೌರವಿಸುತ್ತಾರೆ...... ನನಗೆ ತುಂಬಾ ಇಷ್ಟ ಆಯ್ತು...... thank you ...thank you very much......

Dr.D.T.Krishna Murthy. said...

ಪ್ರಕಾಶಣ್ಣ;ಹುಡುಗನ ನಿರ್ಧಾರ ನನಗೆ ಸರಿ ಅನಿಸಲಿಲ್ಲ.ಮದುವೆ ಆದಮೇಲೂ ಅದೇ ರೀತಿ ಪ್ರೀತಿಸಿದ್ದರೆ ಅವನ ಪ್ರೀತಿ ಸೈ ಅನಿಸಿಕೊಳ್ಳುತಿತ್ತು.ಮದುವೆ ಆದ ಮೇಲೆ ಪ್ರೀತಿ ಕಮ್ಮಿ ಆಗುತ್ತೆ ಅನ್ನುವುದು ತಪ್ಪು ತಿಳುವಳಿಕೆ ಅನ್ನುವುದು ನನ್ನ ಅಭಿಪ್ರಾಯ.

Gubbachchi Sathish said...

ವಾಸ್ತವಕ್ಕಿ೦ತ ಕನಸು ಚಂದ ನಿಜ....ಆದರೆ ಕನಸು ಯಾಕೆ ವಾಸ್ತವ ಆಗಬಾರದು...?? ಬಹುಶಃ ಕನಸು ವಾಸ್ತವವಾಗುವುದು ಬಹಳ ವಿರಳ ಇರಬಹುದು. ನಾವು ಮನಸ್ಸು ಮಾಡಿದರೆ ಯಾಕೆ ಸಾಧ್ಯವಿಲ್ಲ.? ಬಹುಶಃ ಮು೦ದೆ ಬರುವ ಕಹಿಗಳಿಗಾಗಿ ಈ ನಿರ್ಧಾರ ತೆಗೆದುಕೊ೦ಡಿರಬಹುದು ಆತ, ಆದರೆ ಕಹಿ ಎಲ್ಲಿರುವುದಿಲ್ಲ........?

ನನ್ನ ವೋಟು ಈ ಶ್ರುತಿ ರಾವ್ ಕಾಮೆಂಟಿಗೆ. ನನ್ನ ಅಭಿಪ್ರಯಾವು ಅದೇ.

ಇನ್ನು ಅಂತ್ಯದ ಬಗ್ಗೆ ಹೇಳಬೇಕೆಂದರೆ, ಒಬ್ಬರನ್ನು ಪ್ರೀತಿಸಿ, ಇನ್ನೊಬ್ಬರನ್ನು ಮದುವೆಯಾಗುವುದು ಕಥೆಯ ಮಟ್ಟಿಗೆ ಚೆನ್ನಾಗಿದ್ದರು, ವಾಸ್ತವದಲ್ಲಿ ನನಗೇನೋ ಸರಿ ಕಾಣುವುದಿಲ್ಲ. ಅಷ್ಟಕ್ಕೂ ಯಾರನ್ನೋ ಮದುವೆಯಾಗಿ, ಮನದಲ್ಲಿ ಮತ್ತ್ಯಾರನ್ನೋ ಧ್ಯಾನಿಸುತ್ತ ಹೆಣಗುವ ಬದಲು ಮದುವೆ ಆಗದೆಯೇ ಒಳಿದರಾಯಿತು. ಅಲ್ಲವಾ? ಇಲ್ಲಂದಾರೆ ಮನಸ್ಸಿಗೂ ಮೋಸ, ದೇಹಕ್ಕೂ!?

Ittigecement said...

ವಿಜಯಾ...(ಚುಕ್ಕಿಚಿತ್ತಾರ)....

ನಿಮ್ಮ ಅಭಿಪ್ರಾಯವೂ ಸರಿ...

ಭಾವುಕ ಮನಸ್ಸು ವಾಸ್ತವಕ್ಕೆ ಹೆದರುತ್ತದೆ...
ಈ ಹುಡುಗ ಹುಡುಗಿಯನ್ನು ದೂರದಿಂದಲೇ ಪ್ರೀತಿಸಿದ್ದಾನೆ...
ಆರಾಧಿಸಿದ್ದಾನೆ...

ಆ ಪ್ರೀತಿಯಲ್ಲಿ ಪವಿತ್ರತೆ ಇತ್ತು...

ದಾಂಪತ್ಯ ಬದುಕಿನಲ್ಲಿ ಕಷ್ಟಗಳು..
ಮಕ್ಕಳು ಮರಿ ಸಂಸಾರದ ಜಂಜಾಟದಲ್ಲಿ ..
ಈ ಪ್ರೀತಿಯನ್ನು.....
ಈ ಹುಡುಗಿಯನ್ನು ಎಲ್ಲಿ ಕಳೆದು ಕೊಂಡು ಬಿಡುವೆನೋ... ಎನ್ನುವಂಥಹ ಭಯ ಅವನನ್ನು ಕಾಡಿದೆ...

ಹಾಗಾಗಿ
ಇಲ್ಲಿಯವರೆಗಿನ ಪ್ರೀತಿ.. ಕನಸಾಗಿ...ಇರಲ್ಲಿ...

ನನಸಾದರೆ ಎಲ್ಲಿ ಪ್ರೀತಿ ಚಿಗುರು ಮುದುಡಿತೋ ಅಂತ ಈ ನಿರ್ಧಾರ ಮಾಡಿರಬಹುದು...

ಮದುವೆಯಾಗಿ..
ವಾಸ್ತವದಲ್ಲಿ ಇಂಥಹ ಮುಗ್ಧ ಪ್ರೀತಿ ಅಸಾಧ್ಯ...
ಹದಿಹರೆಯದ ಕುತೂಹಲದ ಪ್ರೀತಿಗೂ...
ಮದುವೆಯಾಗಿ ಒಂದು ಸ್ವಭಾವದ ದೌರ್ಬಲ್ಯದ ಜೊತೆಗಿನ ಬದುಕು ಅಜಗಜಾಂತರ...

ಅಲ್ಲವೆ?

ತುಂಬಾ ತುಂಬಾ ವಾಸ್ತವದ ಅಭಿಪ್ರಾಯ ನಿಮ್ಮದು...

ನಾನು ಕಥೆ ಬರೆದು ಹೇಳಿದುದಕ್ಕಿಂತ ನೀವು ಬರೆದ ಸಣ್ಣ ಪ್ರತಿಕ್ರಿಯೆ ತುಂಬಾ ಇಷ್ಟವಾಯಿತು...

ಧನ್ಯವಾದಗಳು .. ಜೈ ಹೋ !!

Ittigecement said...

ಸೌರಭಾ...

"ಪ್ರೀತಿ..
ಪ್ರೀತಿಯಾಗಿಯೇ ಇರಲಿ...
ಕರ್ತವ್ಯವಾಗದಿರಲಿ...." ನಿಮ್ಮ ಸಾಲುಗಳು ಬಲು ಸುಂದರ ಹಾಗು ವಾಸ್ತವ.... !!

ಹೆಣ್ಣುಗಂಡಿನ ನಡುವೆ ಕನಸು ಹುಟ್ಟಿಸಿದ ಪ್ರೀತಿ...
ಮದುವೆಯಾದಮೇಲೆ... ಕರ್ತವ್ಯವಾಗಲಿಕ್ಕೆ ಹೆಚ್ಚುದಿನ ಬೇಕಾಗುವದಿಲ್ಲ...

ಯಾರು ಏನೇ ಹೇಳಿದರೂ ಇದು ಕಹಿ ಸತ್ಯ, ಕಟುಸತ್ಯ !!

ದಾಂಪತ್ಯವೆಂದರೆ ವಿಭಿನ್ನ ಸ್ವಭಾವಗಳ ನಡುವಿನ ಹೊಂದಾಣಿಕೆ ಅನ್ನುತ್ತಾರೆ...
ಹೊಂದಾಣಿಕೆ... ಅನ್ನುವದು ಅನಿವಾರ್ಯತೆಯಲ್ಲಿ ಹುಟ್ಟುವ ಸ್ವಭಾವ...

ಅದಕ್ಕೆ ಪ್ರೀತಿಯ ಬಣ್ಣ ಬಳಿದರೂ...
ಪ್ರೀತಿಯಂತೆ ಕಂಡರೂ....ಪ್ರೀತಿ ಆಗಲಿಕ್ಕೆ ಸಾಧ್ಯವೇ?

ಅದು ಪ್ರೀತಿನಾ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

balasubramanya said...

ನಿಮ್ಮ ವಿಚಾರ ಧಾರೆ ಅರಗಿಸಿಕೊಳ್ಳುವುದು ಕಷ್ಟ ಸ್ವಾಮೀ, ನಿಮ್ಮದೇ ಶೈಲಿಯ ಕತಾ ರಚನೆ ತೊಡಗಿ, ನಾವು ಕತೆ ಓದುವ ರೀತಿಯನ್ನು ಬದಲಿಸುತ್ತಿದ್ದೀರಿ. ಸಂಭಂದಗಳ ಹಲವು ಮುಖಗಳ ಅನಾವರಣ ಕಾಣ ಸಿಗುತ್ತಿದೆ.ಎಲ್ಲರಿಗೂ ಎಲ್ಲವು ಇಷ್ಟವಾಗಲಾರದು. ಆದರೆ ಎಲ್ಲರ ಬಾಳಿನ ಪುಟಗಳಲ್ಲಿಯೂ ಇಂತಹ ಒಂದೆರಡು ಅಧ್ಯಾಯಗಳಾದರೂ ಇರುತ್ತವೆ. ಇಲ್ಲಿ ಹುಡುಗ ಸ್ವಾರ್ಥಿ ಎನ್ನಿಸಿದರೂ ಹುಡುಗಿ ಮೊದಲು ಸ್ವಾರ್ಥತೆ ಮೆರೆಯಲಿಲ್ಲವೇ ಅನ್ನುವ ಪ್ರಶ್ನೆ ಮೂಡುತ್ತದೆ. ಹುಡುಗಿಯ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಹುಡುಗ ಅಸಮರ್ಥನಾದನೆ ಎನ್ನುವ ಮತ್ತೊಂದು ಪ್ರಶ್ನೆ ಮೂಡುತ್ತದೆ. ಒಟ್ಟಿನಲ್ಲಿ ಹುಡುಗನ ಕಡೆ ಬೆಟ್ಟು ತೋರಿಸುವ ಹಾಗೆ ಆಗಿ ಇವ ಸರಿಯಾಗಿ ಜೀವನ ತಿಳಿಯಲಿಲ್ಲ ಎನ್ನಿಸುತ್ತದೆ. ಮತ್ತೊಂದು ಕೋನದಿಂದ ನೋಡಿದರೆ ಇವನು ಮಾಡುವೆ ದಾಂಪತ್ಯದ ಕಲ್ಪನೆಯ .ಅರಿಯದೆ ಎಡವಿದನಾ ಎನ್ನಿಸುತ್ತದೆ. ಒಟ್ಟಿನಲ್ಲಿ ನಿಮ್ಮ ಕತೆ ಓದಿ ನಮ್ಮ ತಲೆಗೆ ಯೋಚಿಸುವ ಕೆಲಸ ಕೊಟ್ಟು ನಗುತ್ತಾ ಪ್ರಕಾಶಿಸುತ್ತೀರಿ ಜೈ ಹೋ.

Ittigecement said...

ಬದರಿನಾಥ ಪಲವಳ್ಳಿ ಸರ್ ಜಿ....

ಕನಸುಗಳನ್ನು ಕಟ್ಟಿಕೊಡುವ ಪ್ರೀತಿ...
ವಾಸ್ತವ ಬದುಕಿನಲ್ಲಿ ಯಾಕೆ ಸೋಲುತ್ತದೆ?

ಸೋಲಬಾರದು...
ಅಲ್ಲಿ ಪ್ರೀತಿ ಗೆಲ್ಲಬೇಕು... ಪ್ರೀತಿಸಿ ಗೆಲ್ಲಬೇಕು...

ಯಾವ ಪ್ರೀತಿಯೇ ಆಗಲಿ ಹೊಂದಾಣಿಕೆ...
ಅನಿವಾರ್ಯತೆ ಎನ್ನುವ ಶಬ್ಧಗಳು ಅಲ್ಲಿ ಬಂದಾಗ.....

ಅದು ಪ್ರೀತಿಯಾಗಿರುವದಿಲ್ಲ...

ಅದು ಕರ್ತವ್ಯವಾಗಿರುತ್ತದೆ...! ಅಲ್ಲವೆ?

ಸಹೋದರಿ "ಸೌರಭಾ ಹೇಳಿದ ಹಾಗೆ... !

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶೃತಿ ಪುಟ್ಟಾ...

ಕಹಿಗೋಸ್ಕರ ಹೆದರಿ ಸಿಕ್ಕಿದ ಪ್ರೀತಿಯನ್ನು ಬಿಟ್ಟಿದ್ದು ತಪ್ಪು...

ಅದು ಹೌದಾದರೂ...ಆ ಹುಡುಗ ಮುಗ್ಧವಾಗಿ...
ಕನಸುಕಂಡ.. ಹೊಸ ಚಿಗುರು ಚಿಗುರಿಸಿದ ಪ್ರೀತಿಗೂ...

ದಾಂಪತ್ಯದ ವಾಸ್ತವದಲ್ಲಿ ಅಂಥಹ ಪ್ರೀತಿ ಸಾಧ್ಯವೇ?

ಖಂಡಿತ ಇಲ್ಲ ಅಲ್ಲವಾ?

ಪ್ರೀತಿಯನ್ನು ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಸಾರ್ಥಕಗೊಳಿಸ ಬಹುದು ಇದು ಹೆಚ್ಚಿನವರ ಅಭಿಪ್ರಾಯ...

ಹೊಂದಾಣಿಕೆ... ಎನ್ನುವದು ಅನಿವಾರ್ಯತೆಯಲ್ಲಿ ಹುಟ್ಟಿದ ಶಬ್ಧವಲ್ಲವೆ?

ಅನಿವಾರ್ಯತೆಯಲ್ಲಿ ಹುಟ್ಟಿದ ಪ್ರೀತಿ .. ಅದು ಪ್ರೀತಿಯೇ?

ಅದು ಈ ಹುಡುಗ ಕಂಡ ಕನಸಿನ ಪ್ರೀತಿಯಂತೂ ಅಲ್ಲವೇ ಅಲ್ಲ... ಅಲ್ಲವೆ?

ಹಾಗಾದರೆ "ದಾಂಪತ್ಯ"ವೆನ್ನುವದು ಟೊಳ್ಳುಪ್ರೀತಿಯೇ...?

ಮದುವೆಯಾದ ನಾನು ಇದನ್ನು ಒಪ್ಪಲು ಸಾಧ್ಯವೇ ಇಲ್ಲ...

ಚಂದದ ಪ್ರತಿಕ್ರಿಯೆಗೆ... ಅಭಿಪ್ರಾಯಕ್ಕೆ ಧನ್ಯವಾದಗಳು....

ಮನಸಿನಮನೆಯವನು said...

ನನಗನಿಸಿದಂತೆ ಹೇಳುತ್ತೇನೆ: ಅವಳ ದೂರವಿರಿಸುವಿಕೆ ಕೆಲಸಲ ಕೊಂಚ ಬೇಸರ ತಂದಿರುತ್ತದೆ,
ಅವರು ಸನಿಹದ ಪ್ರೇಮದಾಳದ ಅನುಭವ ಕಂಡೇ ಇಲ್ಲ,ಕಂಡಿದ್ದರೆ ಅಷ್ಟು ಸುಲಭದಲ್ಲಿ ಬೇರಾಗಲು ಸಾಧ್ಯವೇ ಇಲ್ಲ.
ಸನಿಹ ಬಯಸೊ ಹುಡುಗನ ಮನಸಿಗೆ ಆಕೆ ಸ್ಪಂದಿಸಲಾಗಲಿಲ್ಲ.
ನನಗನಿಸಿದಂತೆ ಇವರದು ಯಾವ ಪ್ರೀತಿ ಪ್ರೇಮದ ಗೆಳೆತನವೇ ಅಲ್ಲ ಭೇಟಿಯಷ್ಟೆ!

ಮನಸು said...

ಪ್ರೀತಿಸಿದವರೆಲ್ಲಾ ಮದುವೆಯಾಗಲೇ ಬೇಕೆಂದೇನಿಲ್ಲ ಹಾಗೆ ಪ್ರೀತಿ ಮಾದುವೆಯಲ್ಲೇ ಅಂತ್ಯವೆಂದೇನಿಲ್ಲ... ಸಮಯ, ಸಂದರ್ಭ ಎಲ್ಲವನ್ನೂ ಬದಲಿಸುತ್ತದೆ... ಅಂತ್ಯ ಇಷ್ಟವಾಯಿತು.. ಪ್ರಕಾಶಣ್ಣ

ಚಿತ್ರಾ said...

ಪ್ರಕಾಶಣ್ಣ ,

" ಪ್ರೀತಿಗೆ ಬಲವಂತ ಇರಬಾರದು , ನೀ ನನ್ನ ಪ್ರೀತಿಸಿಕೋ ಆದರೆ ನನಗೆ ತೊಂದರೆ ಕೊಡಬೇಡ " - ಇಷ್ಟವಾಯಿತು ಇದು . ಇನ್ನೊಬ್ಬರ ಭಾವನೆಗಳನ್ನು ಖಂಡಿಸುವ , ಮುರುಟಿಸುವ ಹಕ್ಕು ನಮಗಿಲ್ಲ . ಹಾಗೇ , ನನಗೋಸ್ಕರ ನಿನ್ನ ಭಾವನೆಗಳನ್ನು ಬದಲಾಯಿಸಿಕೊ ಎಂದು ಒತ್ತಾಯಿಸುವ ಹಕ್ಕು ಇನ್ನೊಬ್ಬರಿಗಿಲ್ಲ !
ಕಥೆ ನಿನ್ನ ಎಂದಿನ ಚುರುಕು ಶೈಲಿಯಿಂದ ಮನ ಸೆಳೆಯಿತಾದರೂ .. ಮುಕ್ತಾಯ ಇಷ್ಟವಾಗಲಿಲ್ಲ !

ಇಲ್ಲಿ ಸಲ್ಪ ಮಟ್ಟಿಗೆ ವಿಜಯಶ್ರೀ ಯ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ.
ದಾಂಪತ್ಯದಲ್ಲಿ ಗಂಡ ಹೆಂಡತಿ ನಡುವೆ ತಕರಾರು , ಸಿಟ್ಟು -ಸೆಡವು , ಎಲ್ಲವೂ ಇರುತ್ತದೆ .ಅದು ತಪ್ಪಲ್ಲ . ಬರೀ ಸಿಹಿ ತಿಂದರೆ ಕೊನೆಗೊಮ್ಮೆ ಬೋರ್ ಆಗುವಂತೆ ಇದೂ ಸಹ . ಊಟದ ಜೊತೆ ಉಪ್ಪಿನಕಾಯಿ ! ಆದರೆ ಇದರಿಂದ ಎಂದಿಗೂ ನಿಜವಾದ ಪ್ರೀತಿ ಕಮ್ಮಿ ಆಗುವುದಿಲ್ಲ . ಹೀಗಾಗಿ ಹುಡುಗನ ಕಾರಣವನ್ನು ನಾನೂ ಒಪ್ಪುವುದಿಲ್ಲ ! ಅಷ್ಟೆಲ್ಲ ಆಕೆಯ ಬಗ್ಗೆ ಪ್ರೀತಿ ತುಂಬಿಟ್ಟುಕೊಂಡ ಹುಡುಗ , ಮದುವೆಯಾದ ಮೇಲೆ ಹೆಂಡತಿಯನ್ನು ಅಷ್ಟೇ ಪ್ರೀತಿಯಿಂದ ನೋಡ ಬಹುದೇ? ಇಲ್ಲವಾದಲ್ಲಿ ಅದು ಆಕೆಗೆ ಅನ್ಯಾಯ ಮಾಡಿದಂತಲ್ಲವೇ?
ಪತ್ನಿಯ ಜೊತೆ ಜಗಳ ವಿರಸ ಪರವಾಗಿಲ್ಲ್ಲವೇ ? ಆಕೆಯನ್ನು ಪ್ರೀತಿಸದಿದ್ದರೂ ನಡೆಯುತ್ತದಾ ? ಅನಿವಾರ್ಯ ಕಾರಣಗಳಿಂದ ದೂರವಾಗುವುದು ಬೇರೆ ಪ್ರಶ್ನೆ . ಆದರೆ ಅವಕಾಶ ಇದ್ದಾಗಲೂ ಬೇರೆಯಾಗುವುದು ...ಸರಿಯೇ? ಆ ಪ್ರೀತಿಯನ್ನು ಇಬ್ಬರೂ ಬಚ್ಚಿಟ್ಟುಕೊಳ್ಳ ಬಹುದಾದರೂ ..ಅವರವರದೇ ಸಂಸಾರದಲ್ಲಿ ಕಳೆದು ಹೋದ ಮೇಲೆ ಮತ್ತೆ ತೆರೆಯುವ ಅವಕಾಶವೇ ಬರುವುದಿಲ್ಲವಲ್ಲ? .. ಬಹಳಷ್ಟು ಪ್ರಶ್ನೆಗಳು ನನ್ನ ತಲೆಯಲ್ಲಿ !

ಸಾಗರದಾಚೆಯ ಇಂಚರ said...

Prakaashanna

lovely article

tumbaa chennagi baradde

preeti satyave, tolle? prashnegalige kaalave uttarisuttade alave?

ಜಲನಯನ said...

ಪ್ರಕಾಶೂ...ಎಲ್ಲಿಂದಾ ತರ್ತೀಯಲಾ ಬಡ್ಡ್ಯತ್ತದೂ...!!
ವೈನಾಗೈತೆ...ಆದ್ರೂವೆಯಾ.. ಒಂದ್ವಿಸ್ಯ...ಅವ್ನು ಫ್ರೆಂಡ್ಸ್ ಆಗಿರೋ ನಿರ್ಧಾರ ತಗೊಂಡ್ಮ್ಯಾಲೆ...ಕಣ್ಣಲ್ಲಿ ನೀರು ಬರೋ ಕಡೆಯ ಸಾಲು....ಅಂದರೆ...ಅವನ ಮನಸಲ್ಲಿ ಇನ್ನೂ ಅವಳನ್ನು ಮದುವೆ ಆಗ್ಬೇಕಿತ್ತು ಅನ್ನೋ ಕೊರಗಿತ್ತಾ...ಅನ್ನೋ ಅನುಮಾನ ಮೂಡುತ್ತೆ ಅಲ್ವಾ..??
ನಿನ್ನ ಸಂಭಾಷಣೆ ಇಸ್ಟೈಲೂ...ಅರೆ ..ಕ್ಯಾ ಬೋಲ್ತಾ ಬಾ ತೂ...ಡೈಲಾಗಾಂ....ಸಲೀಮ್ ಜಾವೀದ್ಕೂ ಬೀ ಬೈಠಾ ದಾಲೀಂಗಾನಾ ತೂ...ಕೋನೇಮೇ....!!!!

Anonymous said...
This comment has been removed by the author.
Sandeep K B said...

ಚೆನ್ನಾಗಿದೆ

ಭಾವ ಸಂಗಮ said...
This comment has been removed by the author.
ಭಾವ ಸಂಗಮ said...

hmmm ಓದಿದೆ ......... unexpected ending............ ನನಗೆ ಅನ್ಸಿದ್ದು ಹೇಳ್ತೀನಿ... ಪ್ರೀತಿಯ ನಿಜವಾದ ಅಗ್ನಿ ಪರೀಕ್ಷೆ ಮದುವೆ.. ಇಲ್ಲಿ ಹುಡುಗ ಹುಡುಗಿಯ ಪ್ರೀತಿಯ ಆಳ prove ಮಾಡೋ ಸಮಯ... ಅವಳ ಅಂದ ಚೆಂದ, ಇಂಪಾದ ಕಂಠಕ್ಕೆ ಮಾರುಹೋದ ಹುಡುಗ.. ಅವಳ ಜೊತೆ ಸಂಸಾರ ಎಂಬ ಸಮುದ್ರವನ್ನು ಈಜಲು ಹಿಂದೇಟು ಹಾಕುವುದು ನನಗೆ ಇಷ್ಟ ಆಗಲಿಲ್ಲ...

ಭಾವ ಸಂಗಮ said...

ಮದುವೆ ಆದರೆ ತಮ್ಮ ನಡುವೆ ಜಗಳ, ಮನಸ್ತಾಪ ಬರಬಹುದು ಎಂದು ಯೋಚಿಸುವ ಹುಡುಗ ತಾನು ಮತ್ತೊಬ್ಬಳನ್ನು, ಹುಡುಗಿ ಮತ್ತೊಬ್ಬನನ್ನು ಮದುವೆ ಆದರೆ ಇವರನ್ನು ಮದುವೆ ಆದ ಆ ಹುಡುಗ ಹುಡುಗಿಗೆ ಇವರು ಮೋಸ ಮಾಡಿದ ಹಾಗೆ ಅಲ್ಲವೇ??? ತಮ್ಮ ಪ್ರೀತಿ ಕಲುಷಿತ ಅಗಬರದೆಂದು ಯೋಚಿಸುವ ಹುಡುಗ ತನ್ನನ್ನು ಮದುವೆ ಆದ ಹುಡುಗಿಯ ಪ್ರೀತಿಯನ್ನು ಹಾಳು ಮಾಡಿದಂತೆ ಅಲ್ಲವೇ???

Subrahmanya said...

akaaraNavaagi nanna korala sere bigiyaayitE? adu kEvala nanna bhavuka manassina paaDu eMdare nimma barahakke drOha bagedaMtaaguttade. duHkhaaMtavannu iShTa paDada nannalloo EnO oMdu khuShi koTTa kathe. nice one! (kindly bear with kannada in english teext )if time permits, bandu hOgi. http://subrahmanyahegde.blogspot.com

Ittigecement said...

ಪ್ರೀತಿಯ ಶ್ರೀಕಾಂತ್ ಮಂಜುನಾಥ್....

ಬಹಳ ಚಂದದ ಪ್ರತಿಕ್ರಿಯೆ ನಿಮ್ಮದು...
ಇನ್ನಷ್ಟು ಬರೆಯಬೇಕೆಂಬ ಉತ್ಸಾಹ ಕೊಡುತ್ತದೆ...

ದೇವತೆಯಂತೆ ಪೂಜಿಸಿದ ಹುಡುಗಿಯೊಡನೆ ಸಂಸಾರ ಮಾದಲು ಹುಡುಗ ಆಸೆ ಪಡಲಿಲ್ಲ..
ಮುಂದೆ ಮದುವೆಯಾಗೊ ಹುಡುಗಿಗೆ ಹುಡುಗ ಮೋಸ ಮಾಡಿದಂತೆ ಅಲ್ಲವೆ?
ತನಗೂ ಮೋಸ ಮಾಡಿಕೊಂಡಂತೆ ಅಲ್ಲವೆ?

ಹುಡುಗಿಯನ್ನೂ ಸ್ಪರ್ಷಿಸದೇ..
ದೂರದಿಂದಲೇ ಅವಳನ್ನು ನಾಲ್ಕಾರು ವರ್ಷ ಇಷ್ಟಪಟ್ಟು...
ಪ್ರೀತಿಸಿ..
ಕನಸುಗಳನ್ನು ಕಟ್ಟಿಕೊಂಡ ಪ್ರೇಮಕ್ಕೂ....

ದಾಂಪತ್ಯದ ಹೊಂದಾಣಿಕೆ ಪ್ರೇಮಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ನನ್ನ ಅಭಿಪ್ರಾಯ...

ಹಾಗಂತ ಗಂಡ ಹೆಂಡತಿ ನಡುವೆ ಪ್ರೀತಿ ಇರುವದಿಲ್ಲ ಅಂತ ನಾನು ಹೇಳಲಾರೆ..
ಅದೊಂದು ಪವಿತ್ರ ಬಂಧನ..
ಅದು ಬದುಕಿಗೆ ಅಂತ ಹುಟ್ಟಿಸಿಕೊಂಡ ಪ್ರೀತಿ..
ಅಲ್ಲಿಯೂ ಸಹಜ ಪ್ರೀತಿ ಇರುತ್ತದೆ..

ಆದರೆ..

ಆ ಹುಡುಗ ಇಷ್ಟಪಟ್ಟಂಥಹ ಮುಗ್ಧ ಪ್ರೇಮ ದಾಂಪತ್ಯದಲ್ಲಿ ಇರಲಾರದು..

ಆ ಹುಡುಗನದ್ದು ಕನಸಿನಂಥಹ ಪ್ರೇಮ..

ಮುಂದೆ ಹುಡುಗನೂ ಮದುವೆಯಾಗುತ್ತಾನೆ..
ಹೊಂದಾಣಿಕೆಯ ಪ್ರೀತಿ ಹುಟ್ಟುತ್ತದೆ...
ಹೆಂಡತಿಯನ್ನೂ ಪ್ರೀತಿಸುತ್ತ ಬಾಳುತ್ತಾನೆ ಅಂತ ಅಂದುಕೊಳ್ಳೋಣ...

ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳು ತುಂಬಾ ಖುಷಿ ಕೊಡುವಂಥಾದ್ದು..

ನನ್ನ ಅಭಿಪ್ರಾಯಗಳು ತಪ್ಪಿರಬಹುದು...
ನೀವು ಒಪ್ಪದೇ ಇರಬಹುದು..

ಎಲ್ಲಕಡೆ ಅಪವಾದಗಳು ಇರುತ್ತವೆ..

ನಾನು.. ಹುಡುಗನ ನಿರ್ಧಾರವನ್ನು ಇಷ್ಟಪಟ್ಟಿದ್ದೇನೆ...

ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು...

ಮನಸ್ವಿ said...

ಮೊದಲ ಸಾಲೇ ಹೇಳುತ್ತೆ ನಿರ್ಧಾರಗಳು ಯಾಕೆ ಬದಲಾಗುತ್ತವೆ?
ಊಹೂಂ ಕೊನೆಗೂ ಉತ್ತರ ಸಿಗಲೇ ಇಲ್ಲ
ಕಥೆ ಇಷ್ಟವಾಗಲಿಲ್ಲ ಎಂದು ಹೇಳುವುದು ಸಹ ನಿಮ್ಮ ಕಥೆ ಅದ್ಬುತ ಎಂದು ಸೂಚಿಸುವ ಪದವೇ ಆಗಿದೆ, ವಾಸ್ತವ ಭ್ರಮೆ ಎರಡೂ ಇದೆ ಕಥೆಯಲ್ಲಿ.. ಕುತೂಹಲದಿಂದ ಓದುವಂತೆ ಮಾಡಿತು ಲೇಖನ.. ಕೊನೆ ಇಷ್ಟವಾಗಲಿಲ್ಲ.. ಹುಡುಗ ಪ್ರೀತಿಸಿ ಬೇರೆಯವನನ್ನು ಮದುವೆಯಾಗು ಅಂದಿದ್ದು ಸರಿಯಾ.. ಹುಡಗಿ ಸಿಟ್ಟಾಗದೆ ಮೌನವಾಗಿದ್ದು ಸರಿಯಾ..
ಅರ್ಥವಾಗದ ಅನೇಕ ಸಾಲುಗಳು ಹಾಗೇ ಉಳಿದಿವೆ, ಓದುಗರನ್ನು ಚಿಂತನೆಗೆ ಹಚ್ಚುವಂತಹ ಬರಹ

Ittigecement said...

ಪ್ರೀತಿಯ ದಿನಕರ...

ಈ ಇಬ್ಬರೂ ತಮ್ಮ ಪ್ರೀತಿಯನ್ನು ಕೊನೆತನಕ ನೆನೆಯುತ್ತಾರೆ..
ಸರಿ...

ಆದರೆ ತಾವು ಮದುವೆಯಾದವರಿಗೆ ಹೇಗೆ ನ್ಯಾಯ ಸಲ್ಲಿಸುತ್ತಾರೆ?
ಅವರಿಗೆ ತಾವು ಕೊಡುವ ಪ್ರೀತಿ ನಾಟಕವೆ?

ತಾವು ಮದುವೆಯಾಗಿ ತಮ್ಮ ಜೀವನ ಸಂಗಾತಿಗೆ ಅನ್ಯಾಯ ಮಾಡಿದಂತಾಗುವದಿಲ್ಲವೆ?

ಇಲ್ಲಿ ಅನೇಕ ಓದುಗರು ಇದೇ ಸಂಶಯ ವ್ಯಕ್ತ ಪಡಿಸಿದ್ದಾರೆ..

ಅದಕ್ಕೆಲ್ಲ ನಾನು ಉತ್ತರ ಕೊಟ್ಟಿದ್ದರೂ..
ಉತ್ತರಕ್ಕಾಗಿ ತಡಕಾಡಿದ್ದೇನೆ..

ಈ ಆಸೆ, ಬಯಕೆಗಳು ಒಂದರಿಂದ ತೃಪ್ತಿಯಾಗುವದಿಲ್ಲವಂತೆ...
ಅದು ಮನುಷ್ಯನ ಸಹಜ ಗುಣ..

ಒಬ್ಬರಿಗೆ ಹೊಂದಿಕೊಂಡು ಇದ್ದರೂ ಕಳ್ಳ ಮನಸ್ಸು ಇನ್ನೊಂದನ್ನು ಬಯಸುತ್ತದೆ..
ಆದರೆ..
ವಿವೇಕ... ಎಚ್ಚರಿಸಬೇಕಷ್ಟೆ..

ಮಾನಸಿಕವಾಗಿ ಎಲ್ಲರೂ ವ್ಯಭಿಚಾರರು..

ಇಂಥಹ ವಾದಗಳನ್ನು ಹೇಳ ಬಹುದೇನೊ...!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. ಜೈ ಹೋ !!

ಭಾಶೇ said...

Marriage is the next level to Love. Separation is not ideal when they can get together! :( Sad!

Ittigecement said...

ಪ್ರೀತಿಯ ಡಾಕ್ಟ್ರೆ...

ಮದುವೆಯಾದ ಮೇಲೆ ಪ್ರೀತಿ ಕಡಿಮೆಯಾಗುತ್ತದೆ ಅನ್ನುವದನ್ನು ಯಾರೂ ಒಪ್ಪುವದಿಲ್ಲ..

ಆದರೆ ...
ಮಡದಿ.. ದಾಂಪತ್ಯದ ಪ್ರೀತಿಯೇ ಬೇರೆ...

ನಾಲ್ಕಾರು ವರ್ಷ ದೂರದಿಂದ ನೋಡುತ್ತ ..
ಕನಸು ಕಟ್ಟಿಕೊಂಡ ಕಲ್ಪನೆಯ ಪ್ರೀತಿಯೇ ಬೇರೆ..

ಆ ಹುಡುಗನಿಗೆ ತನ್ನ ಕಲ್ಪನೆಯ ಪ್ರೀತಿ ..
ಕಟ್ಟಿಕೊಂಡ ಕನಸುಗಳು ಬೇರೆ ರೀತಿ ಆಗುವದು ಇಷ್ಟವಿರಲಿಲ್ಲ...

ಈ ಅರ್ಥದಲ್ಲಿ ನೋಡಿದರೆ ಕಥೆಯನ್ನು ಈ ಥರಹ ಮುಗಿಸಿದ್ದು ಸರಿ ಅಂತ ಅನ್ನಿಸ ಬಹುದು ಅಲ್ಲವಾ?

ನಿಮ್ಮ ಪ್ರೀತಿಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು... ಜೈ ಹೋ !!

ಕಾವ್ಯಾ ಕಾಶ್ಯಪ್ said...

ಪ್ರಕಾಶಣ್ಣ ಒಂಥರಾ ಚೆನ್ನಾಗಿದೆ...
ಹುಡುಗ ಮಾತಾಡದೆ, ಅವಳಲ್ಲಿ ಪ್ರೇಮ ನಿವೇದನೆ ಮಾಡದೆ ಇದ್ದಿದ್ದರೆ ನಿಮ್ಮ ಕಥೆ ಸರಿಯಾಗಿತ್ತು... ನಿಷ್ಕಲ್ಮಷ ಪ್ರೇಮವನ್ನು ಹಾಗೆಯೇ ಉಳಿಸಿಕೊಳ್ಳೋಣ ಎಂದು ಭಾವನೆಯನ್ನು ಹೊರ ಹಾಕದೆ ಅವಳಿಂದ ದೂರಗುವುದರಲ್ಲಿ ಅರ್ಥವಿತ್ತು.... ಆದರೆ ಯಾವಾಗ ಪ್ರೇಮ ನಿವೆದನೆಯಾಗಿ ಅವಳೂ ಕೂಡ ಅವನನ್ನು ಅಷ್ಟು ಪ್ರೀತಿಸುತ್ತಿದ್ದಲೋ ಆವಾಗ ಅವನು ಮಾಡಿದ್ದು ಏಕೋ ಸರಿ ಕಾಣಲಿಲ್ಲ... ಮೇಲೆ ಯಾರೋ ಹೇಳಿದಂತೆ ಪಲಾಯನವಾದ ಎನಿಸಿತು....
ನಿರಂತರ ಪ್ರೇಮವನ್ನು ಮದುವೆಯಾದ ಮೇಲೆ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲಾ ಎನ್ನುತ್ತೀರಾ..??

Ittigecement said...

ಗುಬ್ಬಚ್ಚಿ ಸತೀಶು...

ನೀವೆನ್ನುವದು ಸರಿ...

ಆ ಹುಡುಗನ ಪ್ರೀತಿಯಲ್ಲಿ ಕೆಟ್ಟವಾಸನೆಗಳಿಲ್ಲ..
ಪವಿತ್ರವಾದದ್ದು...
ಯಾವುದೇ ದೈಹಿಕ ಆಕರ್ಷಣೆಗೆ ಒಳಗಾದ ಪ್ರೀತಿ ಅದಲ್ಲ..

ಮದುವೆಯಾದ ಮೇಲೆ ಮೊದಲ ಪ್ರೀತಿ ಅಡ್ಡಿ ಬರಲಿಕ್ಕಿಲ್ಲ...
ಅಡ್ಡಿಯಾಗಬಾರದು.....

ಮೊದಲ ಪ್ರೀತಿಯ ಧ್ಯಾನದಲ್ಲಿ ಮಡದಿಯನ್ನು ಮರೆತರೆ ಅದು ಅಕ್ಷಮ್ಯ ಅಪರಾಧ..
ಅದು ತಪ್ಪು...

ಇಷ್ಟಕ್ಕೂ ಮದುವೆಯೊಂದು ಲಾಟರಿಯಂತೆ...

ಮದುವೆಗೆ ಮುಂಚೆ "ಪ್ರೀತಿ" ಮಾಡದ ಮನುಸುಗಳು ಸಿಗುತ್ತವೆ ಅಂತ ಯಾವ ಭರವಸೆ...ಇದ್ದಿರುತ್ತದೆ ?

ಪ್ರತಿ ದಂಪತಿಗಳೂ ಇದಕ್ಕೆ ಮಾನಸಿಕವಾಗಿ ತಯಾರಾಗಿರುತ್ತಾರೆ ಅಲ್ಲವೆ?

ಮದುವೆಗೆ ಮುಂಚೆ ಹೇಗಿದ್ದರೂ ಪರವಾಗಿಲ್ಲ...
ಮದುವೆ ನಂತರ ಮನಸ್ಸಲ್ಲಿ ನಾನೊಬ್ಬನಿದ್ದರೆ ಸಾಕು ಅನ್ನುವ ಮನಸ್ಥಿತಿ ಹೆಚ್ಚಾಗಿರುತ್ತದೆ ಅಲ್ಲವೆ?

ಸತೀಶು..
ನಿಮ್ಮ ಸ್ನೇಹಕ್ಕೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು....

Ittigecement said...

ಪ್ರೀತಿಯ ಬಾಲಣ್ಣಾ...

ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಮತ್ತೂ ಖುಷಿಯಾಯಿತು...
ಬರೆದ ಕಥೆ ಒಂದಷ್ಟು ವಿಚಾರ ಮಾಡಿಸುತ್ತಿದೆ...

ಬಾಲಣ್ಣಾ...

ಈ ಹುಡುಗ ಮಾಡಿದ ನಿಷ್ಕಪಟ ಪ್ರೀತಿಯನ್ನು ಮದುವೆಯಾದ ಮೇಲೂ ಮಾಡಲು ಸಾಧ್ಯವಾ?
ವ್ಯಾವಹಾರಿಕ ಬದುಕಿನಲ್ಲಿ ಇದು ಸಾಧ್ಯವಾ?

ಅಂಥಹ ಪ್ರೀತಿ ಅಸಾಧ್ಯವಲ್ಲ..

ಆದರೆ..
ಆದರೆ.....

ಇದಕ್ಕೆ ಅವರವರ "ಆಂತರ್ಯವೇ" ಉತ್ತರ ಕೊಡಬೇಕಷ್ಟೆ..!

ಬಾಲಣ್ಣಾ..
ನಿಮ್ಮ ಸ್ನೇಹಕ್ಕೆ.. ವಿಶ್ವಾಸಕ್ಕೆ ..
ಪ್ರೋತ್ಸಾಹಕ್ಕೆ ಜೈ ಜೈ ಜೈ ಹೋ !!

Ittigecement said...

ಪ್ರೀತಿಯ "ವಿಚಲಿತ".....

ಹುಡುಗ ಹುಡುಗಿಯನ್ನು ಮನಸಾರೆ ಪ್ರೀತಿಸುತ್ತಿದ್ದ...
ಅವಳ ಸುಖ ಸಂತೋಷ ಬಯಸುತ್ತಿದ್ದ...

ಬಹುಷಃ
ತನ್ನಿಂದ ಅದು ಸಾಧ್ಯವಿಲ್ಲ ಅಂತ ಅನ್ನಿಸಿರಬಹುದಲ್ಲವೆ?

ಇಷ್ಟಕ್ಕೂ ಹುಡುಗಿ ಕೂಡ ಲೆಕ್ಕಾಚಾರಾ ಹಾಕಿದ್ದಳು ಅಲ್ಲವೆ?

ಓದುವಾಗ..
ನೌಕರಿ ಮಾಡುವಾಗ ಹುಡುಗನನ್ನು ಗಮನಿಸುತ್ತ...
ಅವನನ್ನು ಅಭ್ಯಾಸ ಮಾಡಿದ್ದಾಳೆ...

ಆತ ಎಲ್ಲದರಲ್ಲೂ ಸರಿ ಎನ್ನಿಸಿದ ಮೇಲೆಯೇ ಹುಡುಗಿ ಒಪ್ಪಿಗೆ ಕೊಟ್ಟಿದ್ದಾಳೆ..

ಹುಡುಗನ ನಿರ್ಧಾರ ತಪ್ಪಿಲ್ಲ ಅಂತ ನನ್ನ ಭಾವನೆ.. ಅನಿಸಿಕೆ...

ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಶಶೀ ಬೆಳ್ಳಾಯರು said...

ಎಲ್ಲ ಸಂಬಂಧಗಳು... ಬಾಂಧವ್ಯಗಳು...
ಪ್ರೀತಿ..
ಪ್ರೇಮ ದೂರದಿಂದಲೇ ಚಂದ ...
ಸುಂದರ...ಕಣೆ...
ee lines manasige hidisthu guru... adru avru ondagbekithu antha anisthu. adre avru joteyagle illa.. preethi, vasthavada bagegina utthama baraha.. Dhanyavada guruve...!! Jai ho...!!!

Prabhakar. H.R said...

ಈ ಕಥೆ ನನಗೆ ತುಂಬಾ ಹಿಡಿಸಿತು ಮಾರಾಯರೇ.

ಕಾರಣ ಎಷ್ಟೋ ಮಂದಿ ಪ್ರೀತಿ ಮಾಡುವ ಸಮಯದಲ್ಲಿ ಇದ್ದ ಆ romantic attitude, ಮದುವೆ ಆದ ನಂತರ ತೋರುವುದಿಲ್ಲ. ಅದಕ್ಕೆ ಕಾರಣಗಳು ಬೇರೆ ಬೇರೆ ಇರಬಹುದು. ಹಾಗೇನೆ ಈ ಕಥೆಯಲ್ಲಿ 'ಭ್ರಮೆ'ಗಿಂತ 'ವಾಸ್ತವ;ಕ್ಕೆ ಒತ್ತು ಕೊಡುವ ಪ್ರೇಮಿ ನನಗೆ ಇಷ್ಟವಾದ. ಒಂದು ಭಾವ ಲೋಕದಲ್ಲಿ ವಿಹರಿಸುವ ಹುಡುಗನಿಗೆ ವಾಸ್ತವ ಜಗತ್ತು ರುಚಿಸದು ಎಂಬ ಅಂಶ ಇಲ್ಲಿ ಗಣನೀಯ.

ನಿಮ್ಮ ಪ್ರಯತ್ನಕ್ಕೆ ಜೈ ಹೋ...

Keshav.Kulkarni said...

ಈ ಸಲ ನಿಮ್ಮ ಕತೆಗಿಂತ ಕತೆಯ ಕಮೆಂಟುಗಳ ಕತೆಯೇ ಜಾಸ್ತಿ ಇದೆಯಲ್ಲ! ನಿಮ್ಮ ಪ್ರತೀ ಕತೆಯಲ್ಲೂ ಒಂದು ಒಳ್ಳೆ ಚರ್ಚೆ ಶುರು ಮಾಡುತ್ತೀರಿ. ಥ್ಯಾಂಕ್ಸ್!

Anonymous said...

ಪ್ರಕಾಶ್...

ಗಂಡಸರು ಯಾವಾಗಲೂ ಹಾಗೇ, ಕಡಿಮೆ ಜವಾಬ್ದಾರಿಯೊಂದಿಗೆ ಹೆಚ್ಚಿನ ಸುಖ ಬಯಸುತ್ತಾರೆ.
ಆದರೆ ಹೆಣ್ಣು ಚಂದದ ಚೌಕಟ್ಟನ್ನು ತನ್ನ ಸುತ್ತ ತಾನೇ ಹಾಕಿಕೊಂಡು ಪರದಾಡುತ್ತಾಳೆ

ಏನಂತೀರಿ?

ಅಮಿತಾ ರವಿಕಿರಣ್ said...

ನಿಜ ಹೇಳಲಾ....ಅಂತ್ಯ ಓದುತ್ತಿದ್ದಂತೆ ..''how mean'' ಅನಿಸಿತು ಪ್ರೀತಿಸಿದವರು ಮದುವೆ ಅಗಲಿ ಎಂಬುದು..ಪ್ರತಿಯೊಂದು ಭಾವುಕ ಮನಸಿನ ಹಂಬಲ...ಆರಾಧನೆಗೆ...ಪ್ರೀತಿ ಯಾ ಈ ರೀತಿಯ ಅಂತ್ಯ ಬೇಕಿತ್ತೆ...????ಮುಂದೆ..ಹೆಂಡತಿ ಆದವಲೊಂದಿಗೆ ಪ್ರೇಮಿಸಿದ ಹುಡುಗಿಯನ್ನು ಹೋಲಿಸುವ..ಎಷ್ಟೋ ಅವಕಾಶಗಳು ಎದುರುಗೊಳ್ಳಬಹುದು...ನೀರಿಕ್ಷೆಗಲಿಲ್ಲದ ಪ್ರೇಮ..ನಿಜಕ್ಕೂ ಸಾಧ್ಯವೇ...ತಲೆಯಲ್ಲಿ ..ಸಾವಿರ ಪ್ರಶ್ನೆಗಳ ಸಂತೆ..ಇವನ್ನು ಹುಟ್ಟಿಸಿದ ನಿಮಗೇ ಮಾಫಿ ಇಲ್ಲ...ಮತ್ತೆ ಹೊಸ ಕತೆಯೊಂದಿಗೆ ಬೇಗ ಬನ್ನಿ...

ಕನಸು ಕಂಗಳ ಹುಡುಗ said...

ಸಿಮೆಂಟಣ್ಣಾ.......

ಕಥೆ ಎಂದಿನಂತೆ ಅದ್ಭುತವಾಗೇ ಇದೆ......
ಬರಹ ಎಂಥವರನ್ನೂ ಓದಿಸಿಕೊಂಡು ಹೋಗತ್ತೆ........
ಗೊತ್ತಿರೋ ವಿಷ್ಯಾನೇ..... ವಿಷ್ಯ ಅದಲ್ಲ.
ಹುಡುಗ ಮುಂದಾಲೋಚನೆ ಮಾಡಿ ಮದುವೆಯ ನಂತರ ಈ ಸಂಬಂಧ ಇರೋದಿಲ್ಲಾ ಮೊದಲಿನ ಪ್ರೀತಿ ಹಳಸುತ್ತೆ ಜಗಳಗಳಾಗುತ್ವೆ..... ಈಗಿನ ಸುಖ ಆವಾಗಿರಲ್ಲಾ ಅಂತಾ ತಾನೇ?....
ಆದರೆ ಪ್ರಕಾಶಣ್ಣಾ ಆ ಹುಡುಗನಿಗೆ ಇಷ್ಟೆಲ್ಲಾ ವಿಚಾರಾ ಮಾಡೋ ಬುದ್ದಿ ಇದೆ ಅಂತಾದ್ರೆ ಪ್ರೀತೀನಾ ಇದೇ ಥರಾ ಕಾಪಾಡೋ ಶಕ್ತಿ ಇಲ್ಲಾ ಅಂದ್ಕೋಬಹುದಾ....

ಬೇರೆ ಯಾರನ್ನೋ ಮದ್ವೆ ಆಗ್ತಾರೆ......
ಅವ್ರಲ್ಲೂ ಮನಸ್ಥಾಪಾ ಬರ್ಬಹುದು....
ಆದರೆ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳ್ಳೋ ಶಕ್ತಿ ಇವರಿಬ್ಬರಿಗೆ ತಾನೇ ಜಾಸ್ತಿ ಇರೋದು.....

ಪ್ರಕಾಶಣ್ಣಾ ಬೇರೆ ಯಾರನ್ನೋ ಮದ್ವೆ ಆಗಿ ಮೊದಲಿನ ಪ್ರೀತಿಯ ಅನುಭವವನ್ನು ನೆನೆದು ಖುಷಿಯನ್ನು ಅನುಭವಿಸ್ತಾನೆ ಅಂತಾದ್ರೆ... ಅದನ್ನೇ ಅವಳನ್ನೇ ಮದ್ವೆಯಾದ್ರೂ ಮಾಡ್ಬಹುದಲ್ಲವೇ?.....
ಮತ್ತೆ ಎಲ್ಲೋ ಒಂದು ಕಡೆ ಹೆಂಡತಿಗೆ ನ್ಯಾಯ ಒದಗಿಸೋವಲ್ಲಿ ಅವನು ವಿಫಲ ಅನ್ನಿಸೋದಿಲ್ವೇ?
ನಿಜವಾಗಿಯೂ ಅವನು ಅವನ ಹೆಂಡತಿಗೆ ಆ ಮಟ್ಟದಲ್ಲಿ ಪ್ರೀತಿ ಕೊಡ್ತಾನೆ ಅಂದ್ರೆ ಮೊದಲ ಪ್ರೇಮವನ್ನು ನೆನೆದು ಖುಷಿ ಪಡುವಂತಹ ಪ್ರಮೇಯವೇ ಬರೋದಿಲ್ಲಾ..... ಅದೆಲ್ಲಾ ಬಾಲಿಶ ಅನ್ನಿಸಬಹುದಲ್ಲವೇ......

ಪ್ರಶ್ನೆ ಮೂಡಿಸಿಕೊಂಡರೆ ತಲೆ ತುಂಬಾ ಮೂಡಿಸಿಕೊಳ್ಳಬಹುದು.......

ನನ್ ಪ್ರಕಾರ ಇದು 65 :35 ಆಗ್ಬಹುದು......
ಏನೇ ಆದ್ರೂ ವಿಷ್ಯ ಚನ್ನಾಗಿರೋದಂತೂ ಸತ್ಯ......

PrashanthKannadaBlog said...

ನನ್ನ ಅನುಭವದ ಪ್ರಕಾರ ಪ್ರೀತಿ ಮನಸ್ಸಿನ ಒಂದು ತಾತ್ಕಾಲಿಕ ಭಾವನೆ.
ನಾವೆಲ್ಲರೂ ಅವನು/ಅವಳು ಇಲ್ಲದಿದ್ದರೆ ಬದುಕೇ ಇಲ್ಲ ಎಂಬ ಘಟ್ಟ ದಾಟಿಯೇ ಮುಂದೆ ಬಂದು ಚೆನ್ನಾಗಿ ಬದುಕುತ್ತಿದ್ದೇವೆ.
ಕಥೆ ಚೆನ್ನಾಗಿದೆ ಪ್ರಕಾಶಣ್ಣ. ಒಪ್ಪಿ ಕೊಳ್ಳಲು ಪ್ರಥಮ ಬಾರಿ ಓದಿದಾಗ ಕಷ್ಟವಾಯಿತು. ಎರಡನೆ ಸಲ ಓದಿದಾಗ ತಪ್ಪಿಲ್ಲ ಎನಿಸಿತು :-)

Kanthi said...

Story is nice.. But hudugana decision sari illa antane nanna abhipraaya. Preeti iddalli jagala, sarasa ella maamoolu. Vaastavatege hedari preetisidavranna doora maadodu moorkhatana anta nanna abhipraaya.

Ittigecement said...

ಮನಸು...

ನಿಜ ಪ್ರೀತಿಸಿದವರೆಲ್ಲ ಮದುವೆಯಾಗ ಬೇಕೆಂದೆನಿಲ್ಲ...
ಮದುವೆಯಾದ ಮೇಲೆ ಹಳೆ ಪ್ರೀತಿ ದಾಂಪತ್ಯ ಬದುಕಿಗೆ ಅಡ್ಡಿ ಬರಬಾರದು..
ಸಂಗಾತಿಗೆ ಮೋಸ ಆಗಬಾರದು...

ನೀವು ಕಥೆಯನ್ನು ಇಷ್ಟಪಟ್ಟಿದ್ದು...
ಅದರಲ್ಲೂ ಕಥೆಯ ಅಂತ್ಯವನ್ನು ಖುಷಿ ಪಟ್ಟಿದ್ದು ಸಂತೋಷವಾಯಿತು..

ಹಾಡುಗಾರ ಪ್ರಶಾಂತ್ ಉಡುಪಿಯವರು ಹೇಳುವ ಹಾಗೆ

"ಪ್ರೀತಿ ಮನಸ್ಸಿನ ಒಂದು ತಾತ್ಕಾಲಿಕ ಭಾವನೆ.
ನಾವೆಲ್ಲರೂ ಅವನು/ಅವಳು ಇಲ್ಲದಿದ್ದರೆ ಬದುಕೇ ಇಲ್ಲ ಎಂಬ ಘಟ್ಟ ದಾಟಿಯೇ ಮುಂದೆ ಬಂದು ಚೆನ್ನಾಗಿ ಬದುಕುತ್ತಿದ್ದೇವೆ."
ನಿಜ ಅಲ್ಲವಾ?
Thank you very much !!

Ittigecement said...

ಚಿತ್ರಾ...(ಮನಸ್ಸೆಂಬ ಹುಚ್ಚು ಹೊಳೆ)..

ಇಬ್ಬರೂ ಪ್ರೀತಿಸುತ್ತಿದ್ದರು..
ಮದುವೆಯಾಗುವ ಅವಕಾಶವಿತ್ತು... ಮದುವೆಯಾಗ ಬಹುದಿತ್ತು..
ನಿಜ..

ಮದುವೆಗೂ ಮುಂಚಿನ ಮುಗ್ಧ ಪ್ರೀತಿ ಮುಂದೆಯೂ ಹಾಗೆ ಇರುತ್ತಾ?
ಹುಡುಗನಿಗೇ ತನ್ನ ಮೇಲೆ ವಿಶ್ವಾಸ ಇತ್ತಿಲ್ಲೇನೊ.. !

ಕೆಟ್ಟವಾಸನೆಯಿಲ್ಲದೆ.. ದೈಹಿಕ ಆಕರ್ಷಣೆ ಇದ್ದರೂ ದೂರದಿಂದ ನಾಲ್ಕಾರು ವರ್ಷ ಪ್ರೀತಿಸಿದ
ಆ ಶುದ್ಧ ಮನಸ್ಸಿನ ಪ್ರೀತಿ ಅದು ಬೇರೆ ಅಲ್ಲವಾ?

ದಾಂಪತ್ಯದ ಗಂಡ ಹೆಂಡತಿಯರ ಹೊಂದಾಣಿಕೆ...
ಬದುಕಿಗೆ "ಅಗತ್ಯ"ವಾದ ಪ್ರೀತಿಯೇ ಬೇರೆ ಅಲ್ಲವಾ?

ಒಂದು ಸ್ವಭಾವದೊಡನೆ.. ದೌರ್ಬಲ್ಯಗಳ ಜೊತೆಯ ಹೊಂದಾಣಿಕೆಯ ಪ್ರೀತಿಗೂ..
ಹುಡುಗನ ಮೊದಲ ಪ್ರೀತಿಗೂ ತುಂಬಾ ವ್ಯತ್ಯಾಸವಿದೆ..

ಅಂಥಹ ಮುಗ್ಧ ಪ್ರೀತಿ ಕೊನೆಯತನಕ ನಿಭಾಯಿಸುವ ಧೈರ್ಯ ಹುಡುಗನಲ್ಲಿತ್ತಿಲ್ಲ..
ನೀವು.. ವಿಜಯಶ್ರೀ ಹೇಳುವ ಹಾಗೆ ಹುಡುಗ ಪಲಾಯನವಾದಿಯಾದರೂ.....

ಅವನ ನಿರ್ಧಾರ ಸರಿ ಎನ್ನುವ ಅನಿಸಿಕೆ ಬಂದುಬಿಡುತ್ತದೆ..

ಇಷ್ಟಕ್ಕೂ..
ಹುಡುಗಿ ಕೂಡ ಲೆಕ್ಕಾಚಾರ ಹಾಕಿದ್ದಳಲ್ಲವೆ..
ನಾಲ್ಕಾರು ವರ್ಷ "ಹುಡುಗ ಹೇಗಿದ್ದಾನೆಂದು" ?

ಹ್ಹಾ..ಹ್ಹಾ...

ನನ್ನಿಂದ ಉದ್ದುದ್ದ ಪ್ರತಿಕ್ರಿಯೆ ಬರೆಸುವ ನಿಮ್ಮ ಪ್ರತಿಕ್ರಿಯೆ ತುಂಬಾ ತುಂಬಾ ಇಷ್ಟ...

ಜೈ ಜೈ ಜೈ ಹೋ !!

ragat paradise said...

Right decision by Huduga at the end.ಹುಡುಗ Living Together System ಆರಿಸಿಕೊಳ್ಳಬಹುದಿತ್ತು.
Nice1 ಪ್ರಕಾಶಣ್ಣ

Guruprasad said...

ಪ್ರಕಾಶಣ್ಣ,
ಪ್ರೀತಿನ ಆನಂದಿಸಬೇಕೋ ಅಥವಾ ಅನುಭವಿಸಬೇಕೋ ? ಈ ಕತೆಯಲ್ಲಿ,, ಪ್ರೀತಿನ ಆನಂದಿಸೋಕ್ಕೆ ಮಾತ್ರ ಪ್ರಾಮುಖ್ಯತೆ ಕೊಟ್ಟರು,,, ಅನುಭವಿಸೋದಕ್ಕಲ್ಲ ..... ಪ್ರೀತಿನ ಅನುಭವಿಸುವುದಕ್ಕೆ ಹೆದರಿಕೆನ...ಗೊತ್ತಿಲ್ಲ... ? ಆನಂದದಲ್ಲೇ ಇದ್ದರೆ ಎಷ್ಟು ದಿನ ಆನಂದಿಸಬಹುದು ... ಅದು ಗೊತ್ತಿಲ್ಲ..... ?

ಒಳ್ಳೆಯ ಬರಹ... ಓದುಗರನ್ನು ವಾಸ್ತವ ಬದುಕಿನ ಬಗ್ಗೆ ಯೋಚಿಸುವಂತ ಇಂಥ ಬರಹ... ಮತ್ತಷ್ಟು ಬರಲಿ... ತುಂಬಾ ಇಷ್ಟ ಆಯಿತು....

ಗುರು

Rajottara said...

ಆಲೋಚನೆಗಳು ಮತ್ತು ಅನುಭೂತಿಗಳನ್ನು ಒರೆಗಚ್ಚುವ ಕಥನ.. ಇಷ್ಟವಾಯ್ತು. ಹಾಗೆ ಎಲ್ಲ ಪ್ರತಿಕ್ರಿಯೆಗಳನ್ನು ಗಮನಿಸಿದ ಮೇಲೆ. "ಹುಡುಗರೆಲ್ಲ"- ಕಥೆಯ ಅಂತ್ಯವನ್ನು ಮೆಚ್ಚಿದ್ದಾರೆ, "ಹುಡುಗಿಯರು"- ಅವರಿಬ್ಬರೂ ಮದುವೆಯಾಗಿದ್ದರೆ ಚೆಂದವಿತ್ತು ಅಂತ ಬಯಸಿದ್ದಾರೆ. ಈ ತರದ ಅಭಿಪ್ರಾಯ ಸಹಜ. 'Men are from mars Women are from Venus' ಎಂಬ ಪುಸ್ತಕದಲ್ಲಿ ಇಂತಹ ಅಭಿಪ್ರಾಯ ಭೇದಗಳ ಬಗ್ಗೆ John Grey ಬಹಳ ಚೆನ್ನಾಗಿ ವಿವರಿಸಿದ್ದಾರೆ.
ಈ ಕತೆಯ ಅಂತ್ಯವು ಅಸ್ವಭಾವಿಕವಾದರೂ, ಅರ್ಥಪೂರ್ಣವಾದದ್ದು. ಮದುವೆ ಆದ ಮೇಲೆ ಪ್ರೀತಿಯ ಪ್ರಾಕಾರ ಬದಲಾಗುತ್ತೆ. ಮದುವೆಗೆ ಮುಂಚಿನ ಪ್ರೀತಿಯಲ್ಲಿದ್ದ ರಮ್ಯತೆ, ಉತ್ಕೃಷ್ಟತೆ ಮತ್ತು ಕಾಲ್ಪನಿಕತೆ, ಮದುವೆಯ ನಂತರ ಭದ್ರತೆ, ಜವಾಬ್ದಾರಿತನ ಮತ್ತು ವಾಸ್ತವಿಕತೆಯಾಗಿ ರೂಪ ಪಡೆದುಕೊಳ್ಳುತ್ತೆ. ಎರಡು ಸಹ ಪ್ರೀತಿಯ ಬೇರೆ ಬೇರೆ ರೂಪಗಳು.

Ittigecement said...

ಪ್ರೀತಿಯ ಗುರುಮೂರ್ತಿ...

ನಿನ್ನೆ ಒಬ್ಬರು ನನ್ನೊಂದಿಗೆ ಹೇಳಿದರು..

"ಈ ಕಥೆಯನ್ನು ಮುಂದುವರೆಸಿ ಅಂತ"

ಹೇಗೆ?

""ಇವರಿಬ್ಬರೂ ಹತ್ತು ವರ್ಷ ಬಿಟ್ಟು ಭೇಟಿಯಾಗುವ ಹಾಗೆ ಮಾಡಿ" ಅಂತ ಸಲಹೆ ಕೊಟ್ಟರು..!!

ಅವರು ಬೇರೆ ಯಾರೂ ಅಲ್ಲ..
ಅಮೇರಿಕಾದಲ್ಲಿರುವ "ಅನಿತಾ ಸಿದ್ದು"

ಆ ಸಹೋದರಿಯವರಿಗೆ ಥ್ಯಾಂಕ್ಸ್ ಹೇಳಲೇ ಬೇಕು..

ಈ ಹುಡುಗ, ಹುಡುಗಿ ಹತ್ತು ವರ್ಷ ಬಿಟ್ಟು ಭೇಟಿಯಾದರೆ ಏನಾಗ ಬಹುದು...?

ತಲೆಯಲ್ಲಿ ಕೊರಿತಾ ಇದೆ...

ಹುಳ ಬಿಟ್ಟ ಸಹೋದರಿಗೂ..

ಪ್ರತಿಕ್ರಿಯೆ, ಪ್ರೋತ್ಸಾಹ ಕೊಟ್ಟ ನಿಮಗೂ ಧನ್ಯವಾದಗಳು...

Ittigecement said...

ಆಜಾದೂ...

ಈ ಪ್ರೀತಿಯನ್ನು ಕೊನೆ ತನಕ ಜೋಪಾನವಾಗಿ ಇದಲಿಕ್ಕೆ ಹುಡುಗಿಯನ್ನು ಮದುವೆ ಆಗೋದು ಬೇದ ಅಂತ ನಿರ್ಧಾರ ತಗೊಂಡ...

ಅಗಲಿಕೆಯ ಬೇಸರ, ದುಃಖ ಇದೆಯಲ್ಲ ..

ಅದಕ್ಕಾಗಿ ಹುಡುಗನ ಕಣ್ನಲ್ಲಿ ಕಣ್ಣೀರು..!

ಗೆಳೆಯಾ...
ನೀನೂ..
ನಿನ್ನ ಪ್ರತಿಕ್ರಿಯೆಯ ರೀತಿ ಎರಡೂ ಬೊಂಬಾಟು..

ಯಾವ ಯಾವ ಥರಹದ ಭಾಷೆ...
ಭಾಷೆಯ ರೀತಿ ನಿನಗೆ ಬರ್ತದೆ ಮಾರಾಯಾ?

ಜೈ ಹೊ !!

Sunanda hegde said...

elli preetiya vyakye enendu hudugaru aritante kanuvadilla.. kastano sukhano edurisuva chala ellade palayana madiddu.. tumba besarada vichara..maduve mattastu hattirakke maduttade embudu nanna abhimata..adaru taleyalli sari tappugala charche madisutteera.. danyavadagalu..

HegdeG said...

ಕಥೆ ಸೂಪರ್, ದೂರವಿದ್ದಸ್ಟು ಪ್ರೀತಿ ಜಾಸ್ತಿ ಅನ್ನೋದು ಹಿರಿಯರ ಹಾಗು ಅನುಭವಿಗಳ ಮಾತು, ಹುಡುಗ ಅದರಿಂದ ಪ್ರೆರಿತನಾಗಿರಬೇಕು :)
ಆದರೂ ಒಬ್ಬರನ್ನೊಬ್ಬರು ಇಷ್ಟ ಪಟ್ಟವರು ಮದುವೆಯಾಗಿ ಮೊದಲಿನಕಿಂತ ಹೆಚ್ಚು ಪ್ರೀತಿಸಬಹುದಗಿತ್ತು.
ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಜಗಳ ಮನಸ್ತಾಪ ಎಲ್ಲವು ಸಹಜ :-)

Pradeepcoorg said...

Confusing Story

ಸೀತಾರಾಮ. ಕೆ. / SITARAM.K said...

ತುಂಬಾ ನಾಟಕೀಯ ಕಥೆ....
ಒಟ್ಟಿನಲ್ಲಿ ಚರ್ಚೇ ಅದ್ಭುತವಾಗಿ ನಡೆಯುತ್ತಿದೆ....

ಪ್ರೀತಿಯಲ್ಲಿ ನಿಭಂದನೆಗಳು ಬಂದಾಗ ತಾಕಲಾಟ, ಜಂಜಡಗಳು ಪ್ರಾರಂಭವಾಗುತ್ತವೆ....
ಅವಳು ಅವನನ್ನು ಅಸ್ತ್ತೊಂದು ನಿಭಂದನೆಗೆದೆ ಮಾಡಿದಾಗಲೂ ಪಾಸಾದ ಅವನು ಮದುವೆಯಲ್ಲಿ ತನ್ನ ಪ್ರೀತಿಯನ್ನು ಸೋಲ ಬಿಡುವದಿಲ್ಲ ಎಂದು ನನ್ನ ಅಭಿಮತ. ಆದರೆ ಅಲ್ಲಿಯವರೆಗೆ ನಿಭಂದನೆಯಲ್ಲೂ ಪ್ರೀತಿ ಉಳಿಸಿಕೊಂಡ ಅವನು ಮದುವೆಯ ನಂತರ ಅದುನ್ನು ಉಳಿಸಲಾರೆ ಎಂಬ ಸ್ತಿತಿಗೆ ತಲುಪಿದ್ದು ಮಾತ್ರ ನಾಟಕೀಯ ಅಂತ್ಯ ಎನಿಸಿತು....
ಬದುಕು ಬೇವು ಬೆಲ್ಲದ ಸಮ್ಮಿಶ್ರ....
ಪ್ರೀತಿ ಅಧಿಕಾರ ಚಲಾಯಿಸುತ್ತೇ...
ಗುಲಾಮಗಿರಿ ಮಾಡುತ್ತೆ.. ಮತ್ತು ಮಾಡಿಸುತ್ತೆ...

Satish said...

Preethi Badukalli ella roopdallu iruthe. Yavudu Ekathanavagi irabaradu. avanu avaligagi Kaydiddu avalu siguvalemba nambikeya mele aadare avanu avalu siguvalemba nambikeya maresida mele hosa badukina janjadadali sahajavagiye avala nenape mareyuthane adhu pavithra prema hegadithu???
Prithi thanage huttodu nijave aadaru adara niranthara usiraduvikege eradu managala prayathna beke beku dooradindale niranthara prithi asadhya avanu avalanna bittddu niranthar prithige aadare maduve aadamele adhu asadhya alva...
Yavvanda Prithi, Naduvayasina prithi, vrudhapya prithi elladarallu sajivanada sangathiyodaniruva prithiye pavithra prithi antha nanna bhavane kopa, jagala prithige pooraka bari sukha endhu chendhavalla alva so adhakagge prithili ivella idhe adhanella dhikkarisida hudugana varthane sariyendhenisaliila...chinthanrha kathe...

umesh desai said...

hegadeji drammatic story but if we agree with hudugas theory it is highly improbable.no i will not accept the ending. it is forced one not natural.

ಸಂಧ್ಯಾ ಶ್ರೀಧರ್ ಭಟ್ said...

ನನ್ನ ಎಲ್ಲ ಕನಸುಗಳಲ್ಲಿ ನೀ
ವಾಸ್ತವದ ಬದುಕಾಗಿರುತ್ತಿದ್ದೆ..
ಆದರೆ ವಾಸ್ತವದಲ್ಲಿ ನೀ
ಬದುಕಿನ ಸುಂದರ ಕನಸಾಗಿಯೇ ಉಳಿದೆ....

Poorvi said...

chenagittu..odalikke..!danyavadagalu

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

odoke ishta aytu adre, preetsida mele joteyagi irbeku.. Hage doora hogiddu.. Hudugige mosa madida hage alwa ? Preetisabardu preetsidre bidabadru... Avala bagge eshtondu sundara kanasugalannu kattiddiri alwa ? A kanasige allade, nimage nivu mosamadikonda hage alwa ?

Pradeep Rao said...

ಪ್ರಕಾಶಣ್ಣಾ,

ಈ ಕಥೆ ಯಾಕೋ ನನಗಿಷ್ಟವಾಗಲಿಲ್ಲ ಅಂತ ಪ್ರತಿಕ್ರಿಯಿಸುವವನಿದ್ದೆ.. ಆದರೆ ಅಷ್ಟರಲ್ಲಿ ಮತ್ತೊಬ್ಬರು ಹಾಕಿದ್ದ ಪ್ರತಿಕ್ರಿಯೆಯೊಂದು ಓದಿ.. ಏನೋ ನೆನಪಾಯ್ತು...

ನಿಜ ಜೀವನದ ಸನ್ನಿವೇಶ.. ಹೀಗೆ ಮನದಲ್ಲಿ ಮೂಡಿದ್ದ ಪವಿತ್ರ ಪ್ರೀತಿಯೊಂದು ವಾಸ್ತವ ರೂಪ ಪಡೆಯುವ ಸಾಧ್ಯತೆಗಳಿಲ್ಲ ಎಂದು ಅರಿತು ಮೊಗ್ಗಿನಲ್ಲಿಯೇ ಹೊಸಕಿ ಹಾಕಿದ್ದೆ... ಆದರೆ ಆ ಪ್ರೀತಿಯನ್ನು ನೆನೆದಾಗಲೆಲ್ಲಾ ನನ್ನಲ್ಲಿ ಧನ್ಯತಾಭಾವ ಮೂಡುತ್ತದೆ... ಬೇರೆ ಯಾವುದೇ ರೀತಿಯ ಸಂಬಂಧದಲ್ಲಿ ಅಂಥ ಅನುಭವ ಮೂಡಲು ಸಾಧ್ಯವೇ ಇಲ್ಲಾ...

ತುಂಬಾ ಅಪರೂಪ ಇಂಥ ಕಥೆಗಳು... ಅಂದ ಹಾಗೇ ಇದೇ ವಿಚಾರ ಎಲ್ಲರೂ ಒಪ್ಪುವಂತೆ ಇದ್ದಿದ್ದರೆ ಎಷ್ಟೋ ಸಿನೆಮಾಗಳಲ್ಲಿ ಪೋಷಕ ನಟಿ ಸಾಯುವುದನ್ನು ತಪ್ಪಿಸಬಹುದಿತ್ತು ಅಲ್ಲವೆ??


Adarsha B S said...

ಪ್ರೀತಿ ಅನ್ನೋದು ಮದುವೆಯ ಬಂಧಕ್ಕೆ ಸಿಲುಕಿ ನಶಿಸಿ ಹೋಗೋದು ಬೇಡ ಅನ್ನೋ ಅವನ ನಿರ್ಧಾರ ಮೇಲ್ನೋಟಕ್ಕೆ ಸರಿ ಅನಿಸಿದರೂ , ಪಲಾಯನ ಪ್ರಕೃತಿ ಅನ್ನೋ ಸಂದೇಹ ಎಲ್ಲೋ ಮೂಡುತ್ತೆ !!!...ಕಥೆ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ :)

Ittigecement said...

ನನ್ನ ಅಳಿಯನಿಗೆ ಹೆಣ್ಣು ಹುಡುಕುತ್ತಿದ್ದೇವೆ...

ಸಹಜವಾಗಿ ಪ್ರೇಮ ವಿವಾಹ.. ಪ್ರೀತಿ ಇತ್ಯಾದಿಗಳ ಬಗೆಗೆ ಚಂದದ ಚರ್ಚೆ ನಡೆಯಿತು..
ಆಗ ನೆನಪಾದದ್ದು ಈ ಕಥೆ ಮತ್ತು ಇದಕ್ಕೆ ಬಂದ ಪ್ರತಿಕ್ರಿಯೆಗಳು...

ನಮ್ಮ ಹತ್ತಿರದಲ್ಲೇ ಇರುವ...
ಕೈಗೆ ಸುಲಭವಾಗಿ ಸಿಕ್ಕಿದ್ದರ ಬಗೆಗಿನ ಮಹತ್ವ ನಮಗೆ ಇರುವದಿಲ್ಲ...

ಹಾಗಾಗಿ ಕೆಲವೊಂದು ಸಂಗತಿಗಳನ್ನು ದೂರದಲ್ಲಿಟ್ಟು..
ಬಚ್ಚಿಟ್ಟ ನೆನಪುಗಳನ್ನಾಗಿ..
ಆಗಾಗ ತೆರೆದು ನೋಡುವದರಲ್ಲಿ ಖುಷಿ ಜಾಸ್ತಿ...

ವಾಸ್ತವದಲ್ಲಿ..
ನಿತ್ಯ ಒಡನಾಡುವ ಬಾಂಧವ್ಯದ..
ಪ್ರೀತಿ..
ಪ್ರೇಮದ ಬಗೆಗೆ ಅಸಡ್ಡೆಯೇ ಜಾಸ್ತಿ... ಅಲ್ವಾ ?

ಇದು ಬಹಳ ಹಿಂದೆ ಬರೆದ ಕಥೆ...

Unknown said...

ಚೆನ್ನಾಗಿದೆ ಪ್ರಕಾಶಣ್ಣ.
ಪ್ರೀತಿಯ ಅತೀ ಮಧುರ ಸ್ವಚ್ಚ ಪರಿಶುದ್ಧ ಭಾವ ಅದ್ಯಾಕೋ ಇಷ್ಟವಾಗಿ ಕಾಡಹತ್ತಿದೆ.
ಪರಿಶುದ್ಧ ನಿಶ್ಕಲ್ಮಶ ಪ್ರೀತಿ ಅಂದ್ರೆ ಇದೇನಾ ??

ಇಂತದ್ದೇ ಪ್ರೀತಿಯೊಂದು ಎಲ್ಲರಿಗೂ ದಕ್ಕಲಿ ..
ನವಿರು ಭಾವ ಎಲ್ಲರದೂ ಆಗಲಿ :)