ನಾನೇಕೆ ಹೀಗೆ..?
ಹೀಗಿರಬಾರದು ಅಂತ ಬಹಳ ಪ್ರಯತ್ನ ಪಟ್ಟೆ.. ಆಗಲಿಲ್ಲ..
ಸ್ವಭಾವ...
ನಮ್ಮೊಳಗಿನ ಬಣ್ಣ ಅದು.. ಬದಲಾಗುವದು ಅಸಾಧ್ಯ...
ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ.. ವಾಸ್ತವವಾದಿ..
ನನ್ನಮ್ಮ.. ಅಪ್ಪ.. ಅಣ್ಣ.. ತಂಗಿ ಎಲ್ಲರೂ ಭಾವಜೀವಿಗಳು..
ನಾನೊಬ್ಬ ಮಾತ್ರ ಹೀಗೆ..
ಹಾಗಂತ ನನಗೇನೂ ಬೇಸರವಿಲ್ಲ...
ಯಾರೋ ನೆಂಟರು ಮನೆಗೆ ಬಂದರು ಅಂತ ಸಂಭ್ರಮ ಪಡಲು ನನ್ನಿಂದ ಸಾಧ್ಯವಾಗುವದಿಲ್ಲ..
ಕಾರಣವಿಲ್ಲದೆ ಯಾರ ಬಳಿಯೂ ಯಾರೂ ನಗುವದಿಲ್ಲ..
ಏನೋ ಕೆಲಸ ಆಗಬೇಕಿರುತ್ತದೆ ಹಾಗಾಗಿ ಹತ್ತಿರ ಬರುತ್ತಾರೆ..ನಗುತ್ತಾರೆ...
ನಾನು ಸಣ್ಣವನಿರುವಾಗ ಗಣೇಶ ಹಬ್ಬ ಬಂದಿತೆಂದು ...
ನನ್ನಮ್ಮ ಒಂದು ತಿಂಗಳಿರುವಾಗಲೇ ಸಂಭ್ರಮ ಪಡುತ್ತಿದ್ದಳು..!
"ಅಮ್ಮಾ..
ದೇವರನ್ನು ತನ್ನ ಅವಶ್ಯಕತೆಗೆ ಅಂತ ಮನುಷ್ಯನೇ ಹುಟ್ಟಿಸಿದ್ದಾನೆ..
ಗಣಪತಿಯ ಮೂರ್ತಿಯನ್ನು ಮಾಡಿದ ಕಲಾವಿದನನ್ನು ಹೋಗಿ ಕೇಳಮ್ಮ..
ಅದರಲ್ಲಿ ದೇವರಿದ್ದಾನೇಯೇ ಅಂತ..
ಅದು ಕಲಾವಿದನ ಹೊಟ್ಟೆಪಾಡು.. ಮೂರ್ತಿ ಮಾಡಿರುತ್ತಾನೆ..
ಮಣ್ಣನ್ನು ಕಾಲಿನಿಂದ ತುಳಿದು.. ಹದ ಮಾಡಿ..
ತನಗೆ "ಹಣ" ಬರುತ್ತದೆಂದು ಮಾಡಿರುತ್ತಾನೆ..
ಅದರಲ್ಲಿ ದೇವರಿದೆ ಎಂದಿದ್ದರೆ.. ಆತ ಮಾರುತ್ತಿದ್ದನೆ?
ಅಮ್ಮಾ..
ಈ ಬದುಕಿನಲ್ಲಿ ಎಲ್ಲವೂ.. ಅಗತ್ಯ.. ಅವಶ್ಯಕತೆಗಳೊಡನೆಯ ನಂಟು..
ಮತ್ತೇನಿಲ್ಲ.."
ನನ್ನಮ್ಮ ಗಾಭರಿಯಾದಳು..
ಅಪ್ಪನನ್ನು ಕರೆದು "ಇವನ ವಿಚಾರ ಧಾರೆಗಳೇ ಅರ್ಥವಾಗುತ್ತಿಲ್ಲ..
ವಿಚಿತ್ರ ಮಾತುಗಳನ್ನು ಆಡುತ್ತಾನೆ" ಅಂದಿದ್ದಳು..
ನಾನು ವಿಚಿತ್ರವಾಗಿಯೇ ಬೆಳೆದೆ..
ಒಂದು ದಿನ ನನ್ನಮ್ಮ ತೀರಿಕೊಂಡಳು..
ಅಪ್ಪ.. ಅಣ್ಣ.. ತಂಗಿ.. ಎಲ್ಲರೂ ಗೋಳೋ ಅಂತ ಅತ್ತರು...
"ದುಃಖವನ್ನು ಹಿಡಿದಿಟ್ಟುಕೊಳ್ಳಬಾರದು.. ಅತ್ತುಬಿಡಬೇಕು..
ನೀನೂ ಅತ್ತು ಬಿಡು..
ಈ ಅಳು.. ಕಣ್ಣೀರು.. ಮನುಷ್ಯನಿಗೆ ದೇವರು ಕೊಟ್ಟ ವರ..
ಅತ್ತರೆ ನಮಗೆ ಗೊತ್ತಾಗದೆ ಸಮಾಧಾನವಾಗುತ್ತದೆ.."
ಅಂತ ಹಿರಿಯರು ನನಗೆ ಬುದ್ಧಿವಾದ ಹೇಳಿದರು..
"ಅಮ್ಮನ ಹಾರ್ಟಿನಲ್ಲಿ ಬ್ಲಾಕೇಜ್ ಇತ್ತು...
ರಕ್ತವನ್ನು ಪಂಪ್ ಮಾಡಲು ಅಮ್ಮನ ಹೃದಯಕ್ಕೆ ಆಗಲಿಲ್ಲ..
ಉಸಿರಾಟ ನಿಂತಿತು..
ಇದು ಪ್ರಕೃತಿಯ ಸಹಜ ಕ್ರಿಯೆ.. ಅಷ್ಟೇ... "
ನನ್ನ ಮಾತು ಕೇಳಿ ಅವರೆಲ್ಲ ದಂಗಾದರು..
ನನಗೆ ಅಳು ಬರಲಿಲ್ಲ... ಅಳಲಿಲ್ಲ..
ಕೆಲವು ದಿನಗಳ ನಂತರ ಅಪ್ಪನೂ ತೀರಿಕೊಂಡ...
ನನ್ನಣ್ಣನಿಗೆ ದುಃಖ ತಡೆಯಲಾಗಲಿಲ್ಲ..
"ನಮ್ಮನ್ನು ಹೆತ್ತು.. ಹೊತ್ತು..
ತುತ್ತು ಅನ್ನ ನೀಡಿ..
ಮಮತೆಯಿಂದ ಬೆಳೆಸಿದ ಅಪ್ಪ..ಅಮ್ಮ ಇಬ್ಬರೂ ಹೋಗಿಬಿಟ್ಟರಲ್ಲೋ..!
ನಾವು ಅನಾಥರಾಗಿಬಿಟ್ಟೆವು.."
ನಾನು ನನ್ನಣ್ಣನನ್ನು ದಿಟ್ಟಿಸಿದೆ...
"ಅಣ್ಣಾ...
ರಾತ್ರಿಯಲ್ಲಿ..
ಯೌವ್ವನದ ಹುಮ್ಮಸ್ಸಿನಲ್ಲಿ...
ದೇಹದ ತೆವಲಿಗೆ ನಡೆದ..
ಹೆಣ್ಣುಗಂಡಿನ ಸಹಜ ಕ್ರಿಯೆಗೆ ಸಾಕ್ಷಿಯಾಗಿ ನಾವು ಹುಟ್ಟಿದ್ದು..
ಇನ್ನು ...
ಮಮತೆ ವಾತ್ಸ್ಯಲ್ಲವೆಲ್ಲ ಬಣ್ಣದ ಮಾತುಗಳು...
ಹುಟ್ಟಿದ ಪುಟ್ಟ ಮರಿಗಳಿಗೆ...
ಏನೂ ತಿಳಿಯದ ಪ್ರಾಣಿ ಪಕ್ಷಿಗಳೇ ಆಹಾರ ತಂದು ನೀಡುತ್ತವೆ..
ಇದು ಸಹಜ ಪ್ರಕೃತಿಯಲ್ಲಿ ನಡೆಯುವಂಥದ್ದು..
ನಮ್ಮ ಅಪ್ಪ ಅಮ್ಮ..
ನಮ್ಮ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡರು.. ಹಾಗಾಗಿ ಪ್ರೀತಿ.. ಮಮತೆ.."
ನಾನು ಸತ್ಯ ಹೇಳುವ ಸಮಯ ಅದಾಗಿರಲಿಲ್ಲ..
ಅಣ್ಣ ನನ್ನನ್ನು ದೂಡಿದ...
"ನೀನೊಬ್ಬ ಮನುಷ್ಯನಾ..?
ಥೂ.. ಮನುಷತ್ವವೇ ಇಲ್ಲದ ಕ್ರೂರಿ ನೀನು..
ದೂರ ಹೋಗು.."
ನಾನು ನಮ್ಮವರೊಂದಿಗೆ ಬೆರೆಯಲೇ ಇಲ್ಲ...
ಒಂಟಿತನವೇ ನನಗೆ ಇಷ್ಟವಾಯಿತು...
ನಾನೂ ದೊಡ್ಡವನಾದೆ..
" ಮದುವೆಯಾಗು ..
ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದು ಆಗಬೇಕು..."
ನನ್ನಣ್ಣ ಒತ್ತಾಯ ಮಾಡಿದ..
ನನಗೂ ಯೌವ್ವನವಲ್ಲವೇ.. ದೈಹಿಕ ಆಸೆಗಳಿದ್ದವು..
ಹೊರಗಡೆ ಹೋಗಿ ರೋಗ ತಂದುಕೊಳ್ಳುವದು ಬುದ್ಧಿವಂತಿಕೆಯಲ್ಲ...
ಇನ್ನು ನನ್ನ ಊಟ.. ತಿಂಡಿ..
ಈ ಅಣ್ಣ .. ಅತ್ತಿಗೆ ಎಷ್ಟು ದಿನ ಅಂತ ನನ್ನನ್ನು ನೋಡಿಕೊಂಡಾರು?
" ಸರಿ.. ಆಯ್ತಣ್ಣ.."
"ಹುಡುಗಿ ಹೇಗಿರಬೇಕು...?
ನಿನ್ನಿಂದ ಏನಾದರೂ ಬೇಡಿಕೆಗಳಿವೆಯಾ?"
"ಅಣ್ಣಾ..
ಹುಡುಗಿ.. ಹುಡುಗಿಯಂತಿದ್ದರೆ ಸಾಕು..
ಅಡಿಗೆ ಮಾಡಿಕೊಂಡು...
ನನ್ನ ಬಟ್ಟೆ..ಬರೆ .. ಮನೆಯನ್ನು ನೋಡಿಕೊಂಡರೆ ಸಾಕು..
ಅಂಥಹ ಹುಡುಗಿ ಬಯಸುತ್ತೇನೆ.."
ಅಣ್ಣನ ಮುಖದಲ್ಲಿ ಹುಸಿನಗು ಇತ್ತು...
ಅಣ್ಣ ಬಹಳ ಹುಡುಕಿ.. ಒಂದು ಹುಡುಗಿಯನ್ನು ನಿಶ್ಚಯಿಸಿದ..
ಹುಡುಗಿ ನೋಡಲಿಕ್ಕೆ ಚಂದವಾಗಿದ್ದಳು..
ಬೆಡ್ ರೂಮಿನ ಏಕಾಂತದಲ್ಲಿ ...
ಸಿನೇಮಾ ನಟಿಯರನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ ಎನಿಸಿತು....
ಮದುವೆಯೂ ಆಯಿತು..
ಮೊದಲ ರಾತ್ರಿಯ ಮೊದಲು ನಾನೇ ಮಾತನಾಡಿದೆ..
"ನೋಡು..
ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ...
ಈಗ ನಾನು ನೀನು ಒಂದಾಗೋದು.. ಸಹಜವಾಗಿ ಗಂಡು ಹೆಣ್ಣಿನ ನಡುವೆ ನಡೆಯುವಂಥಾದ್ದು..
ಯಾವುದೇ ಗಂಡು ಅನ್ನುವ ಪ್ರಾಣಿ ನಿನ್ನನ್ನು ಸ್ವಲ್ಪ ಹೊತ್ತು ಆಲಂಗಿಸಿಕೊಂಡರೆ ನೀನು ಕ್ರಿಯೆಗೆ ಸಹಜವಾಗಿ ರೆಡಿ ಆಗಿರುತ್ತೀಯಾ..
ನನ್ನ.. ನಿನ್ನ ಸಂಬಂಧ...
ದಾಂಪತ್ಯವೆಂದರೆ ಜನ್ಮ ಜನ್ಮಾಂತರದ್ದು.. ಅದೆಲ್ಲ ನಾನು ನಂಬೋದಿಲ್ಲ.."
ನಾನು ಇನ್ನೂ ಮಾತನಾಡಬೇಕೆಂದಿದ್ದೆ..
ಆದರೆ ಅವಳೇ ಮೌನ ಮುರಿದಳು..
"ನನಗೆ ನೀವೆನ್ನುವದು ಯಾವುದೂ ಅರ್ಥವಾಗುವದಿಲ್ಲ..
ನಿಮ್ಮಣ್ಣ ಹೇಳಿದ್ದಾರೆ.. ನೀವು ಬಹಳ ಬುದ್ಧಿವಂತರು..
ನೀವು ಹೇಳಿದ್ದಕ್ಕೆಲ್ಲ ಹೂಂ ಅಂತ ಸುಮ್ಮನಿದ್ದುಬಿಡಬೇಕೆಂದು..
ನಾನೆಂದೂ ನಿಮ್ಮ ಮಾತಿಗೆ ಎದುರಾಡೋದಿಲ್ಲ..
ಗಂಡನಿಗೆ ಎದುರಾಗಿ ಮಾತಾಡಬಾರದೆಂದು ನನ್ನಮ್ಮನೂ ಹೇಳಿದ್ದಾರೆ...
ನಿಮಗೆ ಹೇಗೆ ಬೇಕೋ ಹಾಗಿರಬೇಕೇಂದು ಅಪ್ಪನೂ ನನಗೆ ಹೇಳಿದ್ದಾನೆ..."
ನನ್ನಣ್ಣ ನನಗೆ ಯೋಗ್ಯವಾದ ಹುಡುಗಿಯನ್ನೇ ಹುಡುಕಿದ್ದ...!
ಈ ಭಾವುಕರೊಡನೆ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಿಲ್ಲ..
ಅವರ ಅನಗತ್ಯವಾದ ಕಣ್ಣೀರು..
ಉದ್ವೇಗದ ಮಾತುಗಳನ್ನು ಸಹಿಸಿಕೊಳ್ಳಬೇಕು ಅಷ್ಟೆ...
ನಮಗೆ ಸಭ್ಯವಾಗಿ ಹೊಂದಿಕೊಂಡಿರುತ್ತಾರೆ..
ನನ್ನನ್ನು ನನ್ನ ಮಡದಿಗೆ ಅರ್ಥ ಮಾಡಿಸುವ ಪ್ರಮೆಯವೇ ನನಗೆ ಬರಲಿಲ್ಲ...
ನನಗೆಂದೂ ಎದುರು ಮಾತನಾಡಲೇ ಇಲ್ಲ..
ನನ್ನ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ಸೇವೆ ಮಾಡುತ್ತಿದ್ದಳು..
ನನ್ನ ಬಟ್ಟೆಯನ್ನು ಒಗೆಯುವದು..
ನನಗೆ ಬೇಕಾದ ಊಟ ತಿಂಡಿಯನ್ನು ಮಾಡುವದು...
ಹಣವನ್ನು ಕೊಡದೆ ಕೆಲಸ ಮಾಡಿಸಿಕೊಳ್ಳುವದು ಅಂದರೆ ...
ಮದುವೆ.. ದಾಂಪತ್ಯ ...
ಅಂತ ನನಗೆ ಗೊತ್ತಿರಲಿಲ್ಲ..
ಸಮಯ ಕಳೆಯ ತೊಡಗಿತು..
ಸಮಯಕ್ಕೇನು...?
ಕ್ಷಣ ಕ್ಷಣಕ್ಕೂ ನಡೆಯುತ್ತಲೇ ಇರುತ್ತದೆ..!
ನಾವು ಮಾತ್ರ ಪ್ರತಿಕ್ಷಣಕ್ಕೂ ಹಿಂದಕ್ಕೆ ಹೋಗುತ್ತಿರುತ್ತೇವೆ....!
ವಯಸ್ಸಾಗುತ್ತಿರುತ್ತದೆ...!
ನನ್ನ ಕಪ್ಪು ಕೂದಲು ಅಲ್ಲಲ್ಲಿ ಬಿಳಿಯಾಗತೊಡಗಿತು...
ನನ್ನ ಮಡದಿ ಒಂದು ಆಸೆ ನನ್ನೆದುರಿಗೆ ಇಟ್ಟಳು...
"ನೋಡಿ..
ನಿಮಗೆ ಎದುರಾಡುತ್ತಿಲ್ಲ..
ನಾನು ತಾಯಿಯಾಗಬೇಕು..
ಇಲ್ಲಿಯವರೆಗೆ ನಿಮ್ಮ ಬಳಿ ನಾನು ಏನೊಂದನ್ನೂ ಕೇಳಿಲ್ಲ..
ನಮಗೆ ವಯಸ್ಸಾಯಿತು ಎಂದೆಲ್ಲ ನೆಪಗಳು ಬೇಡ...
ನನಗೊಂದು ಮಗು ಬೇಕು..."
ನಾನು ಬಹಳ ವಿಚಾರ ಮಾಡಿದೆ..
ಮಕ್ಕಳು.. ಮರಿಗಳ ಜಂಜಾಟ ಬೇಡ ಅಂತಲೇ... ನಾನಿದ್ದೆ..
ಇಷ್ಟು ದಿನದ ದಾಂಪತ್ಯದಲ್ಲಿ ನನ್ನ ಬೇಕು ಬೇಡಗಳೇ ಆದವು..
ಅವಳದೊಂದು ಆಸೆ ಈಡೇರಿಸಿ ಬೀಡೋಣ..
ಮಗುವಿನ ಜವಾಬ್ದಾರಿ ನನಗೇನೂ ಇಲ್ಲವಲ್ಲ.. ಅವಳೇ ನೋಡಿಕೊಳ್ಳುತ್ತಾಳೆ..
ಸರಿ..
ಒಂದು ಮಗು ಮಾಡಿಕೊಂಡರಾಯಿತು.. ಅಂದುಕೊಂಡೆ...
ಕೆಲವು ತಿಂಗಳು ಕಳೆಯಿತು..
ನನ್ನಾಕೆ ಬಸುರಿಯಾದಳು..
ಅವಳ ನಡತೆಯೇ ಸ್ವಲ್ಪ ಬದಲಾಗತೊಡಗಿತು..
ನನಗೂ ಸ್ವಲ್ಪ ಕೆಲಸ ಹೇಳಲು ಶುರು ಮಾಡಿದಳು..
ತಾಯ್ತನವೆಂದರೆ ಹಿರಿತನವೆ..? ಯಜಮಾನಿಕೆಯೆ..?
ಆತ್ಮವಿಶ್ವಾಸ ಕೊಟ್ಟುಬಿಡುತ್ತದೆಯಾ..?
ನಾನು ದೊಡ್ಡ ತಪ್ಪು ಮಾಡಿದೆ ಅನ್ನಿಸತೊಡಗಿತು...
ಕಾಲ ಮಿಂಚಿ ಹೋಗಿತ್ತು..
ನನ್ನ ಮಡದಿಗೆ ದಿನ ತುಂಬಿತ್ತು..
ಒಂದು ದಿನ ಹೆರಿಗೆ ನೋವೂ ಕೂಡ ಶುರುವಾಯಿತು...
ಅವಳ ಅಪ್ಪ.. ಅಮ್ಮ ಇಬ್ಬರೂ ಬಂದಿದ್ದರು...
ಲಗು ಬಗೆಯಿಂದ.. ಆಸ್ಪತ್ರೆಗೆ ಸೇರಿಸಿದೆವು..
ನನ್ನಣ್ಣ.. ಅತ್ತಿಗೆಯರೂ ಬಂದರು..
" ಗಾಭರಿ ಆಗಬೇಡಯ್ಯಾ...
ಬಸುರಿ.. ಸಹಜ.. ಕ್ರಿಯೆ ಅಂತೆಲ್ಲ ಕೊರಿಬೇಡ..
ಪಾಪು ಬರಲಿ ನೋಡು.. !
ನೀನೂ ನಿನ್ನ ಸ್ವಭಾವವೂ ರಿಪೇರಿ ಆಗಿ ಹೋಗ್ತದೆ..!
ಸಂಸಾರದೊಳಗೆ ಬಿದ್ದವರು ಯಾರೂ ಎದ್ದಿಲ್ಲ ಕಣಯ್ಯಾ..!.."
ನನ್ನ ಮಡದಿಯನ್ನು ಜನರಲ್ ವಾರ್ಡಿನಿಂದ ಐ.ಸಿ.ಯೂ.ಗೆ ಬದಲಾಯಿಸಿದರು...
ಸ್ವಲ್ಪ ಹೊತ್ತು ಕಳೆಯಿತು...
ನಮಗೆಲ್ಲ ಆತಂಕ ಶುರುವಾಯಿತು...!
ಡಾಕ್ಟರ್ ಬೆವರು ಒರೆಸಿಕೊಳ್ಳುತ್ತ ಬಂದರು...
ಅಣ್ಣ.. ಅತ್ತಿಗೆ.. ಅತ್ತೆ ಮಾವ ಡಾಕ್ಟರ್ ಬಳಿ ಓಡಿದರು...
"ನೋಡಿ..
ತುಂಬಾ ಕಷ್ಟಕರವಾದ ಹೆರಿಗೆ...
ಬಸುರಿಯಾಗಿದ್ದಾಗ ಸರಿಯಾಗಿ ನೋಡಿಕೊಂಡಿಲ್ಲ ಅನ್ಸುತ್ತೆ...
ಹೆಣ್ಣು ಮಗು.. ತುಂಬಾ.. ತುಂಬಾ ಮುದ್ದಾಗಿದೆ..
ಆದರೆ ತಾಯಿಯನ್ನು ಉಳಿಸಲಾಗಲಿಲ್ಲ..."
ಮರುಕ್ಷಣ ಆಸ್ಪತ್ರೆಯಲ್ಲಿ ಬರಿ ರೋಧನವೇ ಶುರುವಾಯಿತು..
ಅತ್ತೆ ಮಾವ.. ಬಹಳ ದುಃಖಪಟ್ಟರು.. ಗೋಳೋ ಅಂತ ಅತ್ತರು...
ಸಂಕಟದಿಂದ ಹೊರಳಾಡ ತೊಡಗಿದರು...
ನರ್ಸ್ ಮಗುವನ್ನು ಕರೆ ತಂದಳು..
ನನ್ನತ್ತೆ ಮಗುವನ್ನು ಎತ್ತಿಕೊಂಡಳು...
"ಅಯ್ಯೋ .. ದುರ್ವಿಧಿಯೇ..!
ಚಿನ್ನ ದಂಥಹ ಅಮ್ಮ ಹೋಗಿಬಿಟ್ಟಳಮ್ಮಾ...!!
ಒಬ್ಬರಿಗೂ ಒಂದು ಕೆಟ್ಟ ಮಾತು ಹೇಳಿದವಳಲ್ಲ ನನ್ನ ಮಗಳು..!!
ಆ ದೇವರು ಬಹಳ ಕೆಟ್ಟವನು..!
ಈ ಮಗುವನ್ನು ಕೊಟ್ಟು ತಾನು ಹೊರಟು ಹೋದಳು..!
ಅಯೋ ದೇವರೆ ...
ಎಷ್ಟು ಕ್ರೂರಿಯಪ್ಪಾ ನೀನು..!!"
ನನ್ನತ್ತೆಯನ್ನು ಸಮಾಧಾನ ಪಡಿಸುವವರು ಯಾರೂ ಇರಲಿಲ್ಲ..
ಎಲ್ಲರೂ ಅಳುತ್ತಿದ್ದರು..
ನನ್ನತ್ತೆ ಮಗುವನ್ನು ನನ್ನ ಕೈಗೆ ಕೊಟ್ಟಳು..
ಮಗುವನ್ನು ಕೈಗೆ ತೆಗೆದು ಕೊಂಡೆ..
ದುಃಖ ತಡೆಯಲಾಗಲಿಲ್ಲ...
ಮಗುವಿನ ಮುಗ್ಧ ಮುಖ ನೋಡಿದೆ...
ಎಂದೂ ಅಳದ ನನಗೂ ಅಳು ಬಂದಿತು...!
ಧಾರಕಾರವಾಗಿ ಕಣ್ಣೀರಿಳಿಯತೊಡಗಿತು...!
ನನ್ನಣ್ಣ ನನ್ನನ್ನು ಸಮಾಧಾನ ಪಡಿಸಿದ..
"ಎಲ್ಲವೂ ದೇವರಾಟ ಕಣಪ್ಪಾ..
ನಮ್ಮ ಕೈಯಲ್ಲಿ ಏನೂ ಇಲ್ಲ..
ಅಪ್ಪ.. ಅಮ್ಮ ಸತ್ತಾಗಲೂ ನಿನ್ನ ಕಣ್ಣಲ್ಲಿ ನೀರುಬರಲಿಲ್ಲ...!
ಕರುಳಿನ ಪಾಶ ನೋಡು ಹೇಗಿರುತ್ತದೆ..!
ಮಗುವನ್ನು ನೋಡಿ ನಿನಗೂ ದುಃಖವಾಯಿತಲ್ಲ..!
ಸಮಾಧಾನ ಮಾಡ್ಕೋ.. "
ಅಣ್ಣ ಇನ್ನೂ ಏನೇನೋ ಹೇಳುತ್ತಿದ್ದ..
ಮಗು ಅಳತೊಡಗಿತು....
ಸಮಾಧಾನ ಪಡಿಸಲು ನನಗಾಗಲಿಲ್ಲ....
ಎದೆ ಹಾಲು ಬೇಕಿತ್ತೇನೋ...!
ಅಯ್ಯೋ.... !!
ನನಗೆ ಮತ್ತೂ ದುಃಖ ಉಕ್ಕಿತು..
ಏನು ಮಾಡಲಿ... ?
ದುಃಖ ತಡೆಯಲಾಗಲಿಲ್ಲ....
" ಅಯ್ಯೋ..
ಈ ಮಗುವನ್ನು ಹೇಗೆ ನೋಡಿಕೊಳ್ಳಲಿ...?
ಇದರ ಪಾಲನೆ.. ಪೋಷಣೆ..
ಇದರ ಸ್ನಾನ.. ಊಟ ತಿಂಡಿ.. ಹೇಗೆ ಮಾಡಲಿ...?
ಮಗುವೇ ಬೇಡವಾಗಿತ್ತು...
ಛೇ.. ಎಂಥಾ ಅನರ್ಥ ಆಗಿಹೋಯಿತು...!!!
ಈ ಮಗುವನ್ನು ಹೇಗೆ ನೋಡಿಕೊಳ್ಳುವದು..?
ಇನ್ನು ನನ್ನ ಊಟ.. ತಿಂಡಿ.. ಬಟ್ಟೆ ಬರೆ.. ನನ್ನ ಬೇಕು ಬೇಡಗಳು..
ಹೆಂಡತಿಯಂಥಹ ಹೆಣ್ಣನ್ನು ಎಲ್ಲಿಂದ ತರಲಿ...?.. "
ಅಣ್ಣ.. ಅತ್ತಿಗೆ..
ಅತ್ತೆ.. ಮಾವ...
ಅಳು ಮರೆತು ನನ್ನನ್ನೇ ನೋಡ ತೊಡಗಿದರು.....
(ಇದು ಕಥೆ)
( ಚಂದದ ಪ್ರತಿಕ್ರಿಯೇಗಳಿವೆ... ದಯವಿಟ್ಟು ಓದಿ...)
49 comments:
ವಾವ್... ಕಣ್ಣಮುಂದೆ ನೆಡೆದ ಘಟನೆಯಂತೆ ಭಾಸವಾಯಿತು... ಸೂಪರ್ ಇದೆ ಪ್ರಕಾಶ್.... :)
ಗುರುಪ್ರಸಾದ್ ಸರ್...
ಈ ಬದುಕಿನಲ್ಲಿ ಎಲ್ಲವೂ ಅಗತ್ಯ.. ಅವಶ್ಯಕತೆಗಳೊಡನೆಯ ನಂಟು..
ಪ್ರೀತಿಯ ಒಂದು ನಗು ಕೂಡ ಏನೋ ನಿರೀಕ್ಷೆಯನ್ನು ಬಯಸಿರುತ್ತದೆ...
ಎಲ್ಲರಿಗೂ ತಮ್ಮ ಅಗತ್ಯಗಳು.. ಅವಶ್ಯಕತೆಗಳು.. ಮುಖ್ಯವೆನಿಸಿಬಿಡುತ್ತದೆ...
ಇಲ್ಲಿಯ ನಾಯಕನಿಗೂ.. ಹೆಂಡತಿ.. ಅವಳ ಪ್ರೀತಿಗಿಂತ..
ಅವಳ ಸೇವೆ.. ಸರ್ವಿಸ್ ಕಳೆದು ಕೊಂಡಿದ್ದರ ಚಿಂತೆ ದೊಡ್ಡದಾಗಿ ಬಿಟ್ಟಿರುತ್ತದೆ..
ನಿಮ್ಮ ಪ್ರೋತಿಯ ಪ್ರೋತ್ಸಾಹಕ್ಕೆ ವಂದನೆಗಳು..
ಪ್ರತಿಕ್ರಿಯೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...
ಧನ್ಯವಾದಗಳು..
ಮನಸಿನ ಭಾವನೆ ಪಕ್ವವಾಗಬೇಕಾದರೆ ಕೆಲ ಬೇಕುಗಳು ಪಕ್ವವಾಗಬೇಕು ಅನ್ನೋದು ಇದಕ್ಕೇ ಪ್ರಕಾಶೂ,,,ನಿನ್ನ ಕಥಾನಾಯಕನ ಕರುಳಕುಡಿ ಆ ಪಕ್ವತೆಗೆ ಕಾರಣವಾಯಿತು ಎನ್ನುವುದು ನಿಜ... ಅಮ್ಮ, ಅಪ್ಪ ಸತ್ತಾಗ ಇರಲಿಲ್ಲವೆಂದಲ್ಲ ಭಾವ-ನೋವು, ಆದ್ರೆ ಅವು ಹೊರಬೀಳುವಷ್ಟು ಪಕ್ವವಾಗಿರಲಿಲ್ಲ...ಏನೂ ಬಯಸದ ಹೆಂಡತಿ ಬಯಸಿದ್ದು ಒಂದೇ ಅದನ್ನು ಅನುಭವಿಸದೇ ಅದಕ್ಕೆ ಮಮತೆಯ ಧಾರೆಎರೆಯದೇ ಹೋದದ್ದು..ಮಗುವಿನ ಅಳು...ಅದಕ್ಕೆ ಹಾಲುಣಿಸಲಾಗದ ಅಸಹಾಯಕತೆ...ಅವಳು ಇದ್ದಾಗ ಹೇಗಿದ್ದಳು ಎನ್ನುವ ಎಲ್ಲಾ ಅಂಶಗಳೂ ಅವನಲ್ಲಿದ್ದ ಜಡತೆಯನ್ನು ಅಲುಗಾಡಿಸಿ ಅವನಲ್ಲಿ ಮಡುಗಟ್ಟಿದ್ದ ಭಾವನೆ ಭಾವುಕತೆ ಎಲ್ಲದರ ದ್ರವೀಕರಣಕ್ಕೆ ಕಾರಣವಾದವು ಎನ್ನುವುದು ಸೂಕ್ತ...
ಮಾನವ ಎಷ್ಟೇ ಗಡಸು ಹೃದಯಿಯಾದರೂ ಅದು ತೋರಿಕೆ ಆಗಿರಲಿಕ್ಕೂ ಸಾಕು...ಅಥವಾ ಅವನ ಮೃದುತ್ವದ ಅನಾವರಣಕ್ಕೆ ತಕ್ಕ ಪರಿಸರ ನಿರ್ಮಾಣವಾಗದೇ ಹಾಗಾಗಿರಬಹುದು...ಎಲ್ಲರಲ್ಲೂ ಎರಡೂ ಅಂಶಗಳು ಇರುತ್ತವೆ... ನನಗೆ ಇಲ್ಲಿ ರಾವಣ ಮತ್ತು ದುರ್ಯೋಧನರ ಅವಸಾನ ಕಾಲದ ಅವರ ನಡುವಳಿಕೆ ವಿಪರೀತ ಭಾವದ ಅನಾವರಣದ ಕಣ್ಣಿಗೆ ಕಟ್ಟುವಂಥ ವಿವರಣೆ ನೀಡಿದ ನನ್ನ ಕನ್ನಡ ಪಂಡಿತರಾಗಿದ್ದ ಡಾ.ಓಂಕಾರಪ್ಪನವರ ಮಾತುಗಳು ನೆನಪಾಗುತ್ತವೆ. ಇಬ್ಬರೂ ಬದಿಕಿದ್ದಷ್ಟು ಕಾಲ ಕ್ರೂರ ಮತ್ತು ಗಡಸು ವ್ಯಕ್ತಿತ್ವಕ್ಕೆ ಹೆಸರಾದವರು. ಆದರೆ ಸಾಯುವ ಕಾಲದಲ್ಲಿ ಇಬ್ಬರಲ್ಲೂ ಅಗಾಧ ಮೃದುತ್ವ ಮತ್ತು ವಿನಯಭಾವ ಇತ್ತಂತೆ....ಬಹುಶಃ ಅವರಿಗೆ ಆ ತಿರುವು ಸಿಕ್ಕಿದ್ದು ಅವಸಾನಕಾಲದಲ್ಲಿ ಎನ್ನಬಹುದೇ..?
ಚನ್ನಾಗಿದೆ ನಿನ್ನ ಕಥೆ....ನನ್ನ ಪುರಾಣ ತಲೆಹರಟೆ ಆಯ್ತೋ ಏನೋ...ದೋಸ್ತು ಅಂತ ..ಸ್ವಲ್ಪ ಸ್ವಾತಂತ್ರ್ಯ...
ಆಜಾದೂ..
ಸ್ವಭಾವ..
ನಮ್ಮೊಳಗಿನ ಬಣ್ಣ.. ಅದು ಬದಲಾಗೋದು ಬಲು ಕಷ್ಟ..
ಇಲ್ಲಿವರೆಗೆ ವಾಸ್ತವದ ಮಾತುಗಳನ್ನಾಡುತ್ತಿದ್ದ.. ಇಲ್ಲಿಯ ನಾಯಕ.. ಅಚಾನಕ್ ಆಗಿ ಮಡದಿ ಸತ್ತು..
ತನ್ನ ಮೇಲೆ ಜವಾಬ್ದಾರಿ ಬಿದ್ದಾಗ ಅಳುವ ಪ್ರಸಂಗ ಬಂದಿತು..
ಅತ್ತಿದ್ದಾರೂ ಯಾಕೆ?
"ಹೆಂಡತಿಯಂಥಹ ಹೆಣ್ಣನ್ನು ಎಲ್ಲಿಂದ ತರಲಿ?"
ಅವಶ್ಯಕಥೆ.. ಅಗತ್ಯಗಳು...
ಒಂದು ಪ್ರೀತಿಯ ನಗು ಕೂಡ ಯಾವುದೋ ನಿರಿಕ್ಷೆಯನ್ನು ಇಟ್ಟುಕೊಂಡಿರುತ್ತದೆ..
ನಾನು ಇಂಥಹ ಕಟು ವಾಸ್ತವವಾದಿಯನ್ನು ಇತ್ತೀಚೆಗೆ ನೋಡಿದೆ...
ಯಾವ ಜವಾಬ್ದಾರಿಯನ್ನೂ ಹೊರಲಾರದೆ.
ಬರಿ ಕಟು ಮಾತುಗಳನ್ನು ಆಡುತ್ತಿದ್ದ..
ಈ ಕಥೆ ಬರೆಯಲು ಆತನೇ ಸ್ಪೂರ್ತಿ...
ಚಂದದ ಪ್ರತಿಕ್ರಿಯೆಗಾಗಿ ಜೈ ಜೈ ಜೈ ಹೋ !!
ಕಥೆ ತು೦ಬಾ ಚನ್ನಾಗಿ ಮೂಡಿ ಬ೦ದಿದೆ ಪ್ರಕಾಶಣ್ಣ..
ಅವಶ್ಯಕತೆಗಳು, ನಿರೀಕ್ಷೆಗಳೆ.. ಭಾವನೆಯನ್ನು, ಜೀವನವನ್ನೂ ಆಳಿಬಿಡುತ್ತವೆಯೇನೋ..?ಕಥಾ ನಾಯಕನ ಮು೦ದಿನ ಬದುಕು ಹೇಗಿರಬಹುದು...?ಕಣ್ಣೀರು ಯಾವ್ಯಾವ ಭಾವನೆಗಳ ಮಿಶ್ರಣ.. ? ಯೋಚನೆಗೆ ನಿಲುಕದ್ದು!
Cholo iddu prakashanna.
ವಿಜಯಾ.. ಚುಕ್ಕಿಚಿತ್ತಾರಾ..
ಕಳೆದವಾರ ಒಬ್ಬ ವಿಚಿತ್ರ ವ್ಯಕ್ತಿಯನ್ನು ನೋಡಿದೆ.. ವಾಸ್ತವವಾದಿ..
ಬದುಕಿನಲ್ಲಿ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳದೆ..
"ನಾನು ತುಂಬಾ ಪ್ರಾಕ್ಟಿಕಲ್" ಅನ್ನುವ ಮನುಷ್ಯನನ್ನು ನೋಡಿದೆ...
ಈ ಕಥೆಗೆ ಅವನೇ ಸ್ಪೂರ್ತಿ...
ಮಗುವಿನ ಜವಾಬ್ದಾರಿ ಬಿದ್ದಾಗ ಈ ಪ್ರಾಕ್ಟಿಕಲ್ ವಿಚಾರಗಳು ಏನಾಗ ಬಹುದು?
ಮಗುವಿಗೆ ಹಸಿವೆ ಆಯ್ತು ಅಳುತ್ತಿದೆ... ಹೀಗೆಂದರೆ ಆಗುವದಿಲ್ಲವಲ್ಲ..
ಅಲ್ಲಿ ಮಗುವಿನ ಪಾಲನೆ ..ಪೋಷಣೆ ಮಾಡಬೇಕಲ್ಲ...
ಪ್ರೀತಿ.. ಮಮತೆಯಿಲ್ಲದೆ ಈತ ಮಾಡಬಲ್ಲೇನೆ?
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
ತುಂಬಾ ತುಂಬಾ ಇಷ್ಟ ಆದ ಲೇಖನ
ಪ್ರಕಾಶಣ್ಣ . ಓದ್ತಾ ಓದ್ತಾ ಕಣ್ಣಲ್ಲಿ ನೀರು ಬಂತು!. ಈಗ ಎಲ್ಲರೂ ಎಲ್ಲರಿಗೆ ಕೇವಲ ಅವಶ್ಯಕತೆಗಳಿಗಾಗಿಯೇ ಜೊತೆಯಲ್ಲಿ ಇರುತ್ತಾರೆ ಎಂದರೆ ನಾವೂ ವಾಸ್ತವವಾದಿಗಳಾಗಿ ಬಿಡುತ್ತೆವೇನೋ ಅನ್ನಿಸಿಬಿಟ್ಟಿತು. ಆದರೆ ಇದು ಕಹಿ ಸತ್ಯ ಬಿಡು.
ವಿಚಾರಪೂರ್ಣವಾದ ಕತೆಯನ್ನು ಹೆಣೆಯುವದರಲ್ಲಿ ನೀವು ನಿಸ್ಸೀಮರು. ವಾಸ್ತವ ಘಟನೆಯೆನಿಸುವಂತೆಯೇ ನಿಮ್ಮ ನಿರೂಪಣೆ ಇರುತ್ತದೆ!
ಮಾಮ,,ಕಥೆ ಸಖತ್ ಆಗಿದೆ.... ತಮ್ಮ ತಂದೆ ಸತ್ತಾಗ ತಾವು ಅನಾಥರಾದೆವು ಎಂದು ತನ್ನ ಅಣ್ಣ ಹೇಳಿದಾಗ ಸ್ವಲ್ಪವು ಭಾವುಕನಾಗದ ಆ ಪ್ರಾಕ್ಟಿಕಲ್ ಮನುಷ್ಯನಿಗೆ ತನ್ನ ಕರುಳ ಕುಡಿ ಎದೆ ಹಾಲು ಇಲ್ಲದೆ ಅನಾಥ ಪರವಶವಾಗಿ ಅಳುವಾಗ ಅವನಿಗೆ ಜೀವನದಲ್ಲಿ ಸಂಭಂದ ಮತ್ತು ಅದರ ಅವಶ್ಯಕತೆಗಳ ಅರಿವಾಗುತ್ತದೆ.... ಆ ಮಗುವಿನ ಅಳುವಿನಲ್ಲಿ ಅವನು ಕೆಲವು ಮೌಲ್ಯಗಳನ್ನು ಕಂಡುಕೊಳ್ಳುತ್ತಾನೆ.... ಕಥೆ ಇಷ್ಟ ಆಯಿತು....
ವಾಣಿಶ್ರೀ...
ನನಗೊಂದು ಕಲ್ಪನೆಯಿತ್ತು..
ಭಾವುಕರು ಬದುಕಿನಲ್ಲಿ ಬಹಳ ಕಷ್ಟ ತಗೊತಾರೆ..
ಆ ಕಷ್ಟಗಳಲ್ಲಿ ಒದ್ದಾಡುವದರಲ್ಲೇ ಖುಷಿಯನ್ನು ಹುಡುಕುತ್ತಾರೆ.. ಅಂತೆಲ್ಲ..
ಆದರೆ ಇಲ್ಲೊಬ್ಬ "ವಾಸ್ತವವಾದಿಯನ್ನು" ಕಣ್ಣಾರೆ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿತು..
ವಾಸ್ತವವಾದಿಗಳೇ ಬಹಳ ಕಷ್ಟತಗೊಳ್ಳುತ್ತಾರೆ...
ಸಹಜವಲ್ಲದ ಬದುಕು ಅವರದ್ದು ಅಂತ ನನಗನ್ನಿಸಿತು..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ದಿವ್ಯಾ....
ನಮ್ಮ ಓದು... ವಿಜ್ಞಾನದಲ್ಲಿ ಆದ ಪ್ರಗತಿ..
ನಮ್ಮಯೋಚನೆಗಳನ್ನು.. ವಿಶಾಲಗೊಳಿಸಿಲ್ಲ...
ಒಟ್ಟುಕುಟುಂಬಗಳು ಒಡೆದಿವೆ..
"ತಾನು.. ತನ್ನದು.." ಅಷ್ಟೆ.. ಜಪ ಮಂತ್ರವಾಗಿದೆ ಅಲ್ಲವೆ?
ಅಗತ್ಯಗಳು.. ಅವಶ್ಯಕತೆಗಳು.. ನಮ್ಮ ಪ್ರತಿಯೊಂದು ಸಂಬಂಧಗಳನ್ನು.. ವ್ಯವಹಾರಗಳನ್ನು ನಿರ್ಧರಿಸುತ್ತವೆ..
ಇದರಲ್ಲಿ ಒಳ್ಳೆಯದಿರಬಹುದು.. ಆದರೆ ಮನಸ್ಸಿಗೆಲ್ಲೋ ಒಂದು ಕಡೆ ಚುಚ್ಚುತ್ತವೆ ಅನ್ನುವದೂ ಅಷ್ಟೇ ಸತ್ಯ...
ಕಥೆಯನ್ನು ಇಷ್ಟಪಟ್ಟು..
ಬಜ್ಜಿನಲ್ಲಿ ಹಂಚಿಕೊಂಡಿದ್ದಕ್ಕೆ.. ಧನ್ಯವಾದಗಳು.. ಜೈ ಹೋ.. !
ಪ್ರಕಾಶಣ್ಣ,
ಕಣ್ಣೆದುರಿಗೆ ಕಟ್ಟುವಂತೆ ಬರದ್ದೆ
ಬದುಕಿನ ಸಹಜ ಕ್ರಿಯೆಗಳಿಗೆ ಅಸಹಜ ವಾಗಿ ವರ್ತಿಸಲು ಸಾದ್ಯವಿಲ್ಲ
ಹಾಗೆಂದು ಬದುಕಿನ ಸಹಜ ಕ್ರಿಯೇಗಳನ್ನೇ ತಲೆಯ ಮೇಲೆ ಹೊತ್ತುಕೊಂಡು ಬದುಕಲೂ ಬಾರದು
ಜೀವನದಲ್ಲಿ ಹುಟ್ಟು ಎಷ್ಟು ಸತ್ಯವೋ, ಸಾವು ಅಷ್ಟೇ ಸತ್ಯ....
ನಮ್ಮದಲ್ಲದ ಬದುಕಿಗೆ ಪ್ರತಿದಿನ ಒದ್ದಾಡುತ್ತೇವೆ...
ನಮ್ಮದಲ್ಲದ ಹಣಕ್ಕೆ ಪರಿತಪಿಸುತ್ತೇವೆ...
ನಮ್ಮದಲ್ಲದ ದೇಹಕ್ಕೆ ಶೃಂಗಾರ ಮಾಡಿಕೊಳ್ಳುತ್ತೇವೆ,
ಕೊನೆಗೂ ನಮ್ಮದಲ್ಲದ ದೇಹದೊಂದಿಗಿನ ವ್ಯವಹಾರವನ್ನು ಮುಗಿಸಿ ಇಹಲೋಕ ಸೇರುತ್ತೇವೆ...
ಹಾಗಾದರೆ ನಮ್ಮದು ಯಾವುದು.... ಹಣ, ಹೆಣ್ಣು, ಮಣ್ಣು ಯಾವುದು ನಮ್ಮೊಂದಿಗೆ ಬರದು
ವಿಚಾರಿಸಿದಂತೆ ಪ್ರಶ್ನೆಗಳು ಏಳುತ್ತವೆ....
ಬದುಕು ''ಅಗತ್ಯ'' ದ ಮೇಲೆ ನಿಂತಿದೆ ಅಷ್ಟೇ ,
ಇಂದಿನ ಅಗತ್ಯ, ನಾಳೆಯ ಅನಗತ್ಯ, ಇಂದಿನ ಸಹಜತೆ ನಾಳೆಯ ವೈಚಿತ್ರ್ಯತೆ....
ಬದುಕು ಬದುಕಾಗಿಯೇ ಉಳಿದುಬಿಡುತ್ತದೆ.....................
Other side of thought . . . rarely, pen down aspect. some of these words are also connects to me - I had no tears, when my close relative died. but, i am not much practical. all are here to oneself still with others for necessity. your story is wonderful. often we say, short and sweet. now its short and true.
Very practical story indeed!! but the problem with the person was the emptiness of life after the departure of wife and the future of a just born baby! he cried for the problems, here he was thinking practically not emotionally :(
ಅವಶ್ಯಕತೆ ಎನ್ನುವುದು ಅನ್ವೇಷಣೆಯ ದಾರಿ ಎನ್ನುವ ಮಾತಿದೆ...ಅದನ್ನ ಸೊಗಸಾಗಿ ವರ್ಣಿಸಿದ್ದೀರ ಪ್ರಕಾಶ್....
ಕಥಾನಾಯಕ ಅವಶ್ಯಕತೆಗಳ ತವರಾಗಿರೋದು ಗೋಚರಿಸುತ್ತೆ......
ಪ್ರಾಕ್ಟಿಕಾಲ್ ಅನ್ನುವ ಮನುಷ್ಯರದು ಒಂದು ಸೋಗುತನ ಅಲ್ಲದೆ ಬೇರೆ ಏನು ಇಲ್ಲ...
ಅರಿವಿರುತ್ತೆ ಆದ್ರೆ ಅರಿವಿಗೆ ತಂದುಕೊಳ್ಳುವುದಿಲ್ಲ...
ತಾವೇ ಸೃಷ್ಟಿ ಮಾಡಿಕೊಂಡಿರುವ ಮರಿಚಿಕೆಯಂತಹ ಮರುಭೂಮಿಯಲ್ಲಿ ಬದುಕುತ್ತಾರೆ ಅಷ್ಟೇ...
ಮಾನವ ಸಂಘ ಜೀವಿ.......
ಸಾಂಗತ್ಯ ಇದ್ದಾರೆ ಬಾಳು ಇಲ್ಲವಾದರೆ ಗೋಳು...
ಅದನ್ನು ಚೆನ್ನಾಗಿ ವರ್ಣಿಸಿದ್ದೀರ
Tumbaa chennaagide prakashanna....
ಈ ಘಟನೆ ವಾಸ್ತವತೆಯೋ ಕಲ್ಪನೆಯೂ ಗೊತ್ತಿಲ್ಲಾ, ಆದ್ರೆ ನಾನಂತೂ ಇಂತಹ ಘಟನೆಗೆ ಹತ್ತಿರದ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ನಾವು ಮಾನವರು ನಮಗೆ ಚಿಂತನ ಶಕ್ತಿ ಇದೆ , ಮಾತಾಡೋಕೆ ಬರುತ್ತೆ , ಬುದ್ದಿವಂತರು ಅನ್ಕೊಂಡು ನಮ್ಮದೇ ಧಾಟಿಯಲ್ಲಿ ನಮ್ಮದೇ ಸ್ವಾರ್ಥ ಕ್ಕೆ ಬದುಕುತ್ತೇವೆ. ನನಗೆ ತಿಳಿದಂತೆ ನಾವೆಲ್ಲರೂ ಸ್ವಾರ್ಥಿಗಳೇ ಆದರೆ ಅದ್ರ ಪ್ರಮಾಣ ಹೆಚ್ಚು ಕಡಿಮೆ ಇರಬಹುದು ಅಷ್ಟೇ. ಜೀವನದಲ್ಲಿ ಒಮ್ಮೆಯಾದರೂ ಈ ರೀತಿಯ ಯೋಚನೆಗಳು ಬರುವುದು ಹಾಗು ಜೀವನದ ಯಾವುದಿ ಘಟನೆ ನಮಗೆ ಪಾಠ ಕಲಿಸುವುದು, ಇದ್ದೆ ಇರುತ್ತದೆ.ವಾಸ್ತವ ಅನ್ನುವುದೂ ಕೂಡ ನಮ್ಮ ಅನುಕೂಲಕ್ಕೆ ಇರುವ ಒಂದು ಕಲ್ಪನೆ ಅನ್ನಿಸಿಬಿಡುತ್ತದೆ. ಆದರೂ ಪ್ರಕಾಶಣ್ಣ ಇವೆಲ್ಲಾ ನಿಮ್ಮ ತಲೆಗೆ ಹೊಳೆಯೋದಾ ??? ಭಾವನೆಗಳ ವಿವಿಧ ಮಜಲುಗಳನ್ನು ನಿಮ್ಮ ಬರವಣಿಗೆಯಲ್ಲಿ ಕಾಣಬಹುದು. ಆದ್ರೆ ಇಂತಹ ಬರವಣಿಗೆ ನೋಡಿದಾಗ ನಿಮ್ಮ ಬಗ್ಗೆ ಕೋಪ ಬರೋದು ಸುಳ್ಳಲ್ಲಾ !!!! ಯಾಕೆ ಗೊತ್ತಾ ???ನಿಮ್ಮ ಇಂತಹ ಬರವಣಿಗೆಗಳನ್ನು ಓದಿದಾಗ ಕರುಳು ಮರುಗಿ ಮನಸ್ಸು ಬೇಸರ ಗೊಳ್ಳುತ್ತದೆ ಅದಕ್ಕೆ .
--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಬಹಳ ಚೆನ್ನಾಗಿದೆ ನಿಮ್ಮ ಕಥಾನಕ, ಇ೦ತಹ ಭಾವನಾರಹಿತ ವ್ಯಕ್ತಿಗಳನ್ನು ನನ್ನ ಬದುಕಿನಲ್ಲಿ ಅನೇಕರನ್ನು ಕ೦ಡಿದ್ದೇನೆ. ತಮ್ಮ ಕಾಲ್ಬುಡಕ್ಕೆ ನೀರು ಬರುವ ತನಕ ಎಲ್ಲವನ್ನು ಹಗುರಾಗಿ ತೆಗೆದು ಕೊಳ್ಳುವ ಈ ಜನ ಒಮ್ಮೆಲೇ ಭಾವುಕರಾಗಿ ಬಿಡ್ತಾರೆ, ದೇವರಿಲ್ಲ ಅಂತಿದ್ದವರು ಒಮ್ಮಿ೦ದೊಮ್ಮೆಲೆ ಸಿಕ್ಕಾಪಟ್ಟೆ ದೈವಭಕ್ತರಾಗಿ ಬಿಡ್ತಾರೆ, ಎಲ್ಲವೂ ಪರಾಕಾಷ್ಟೆ ತಲುಪಿ ಬಿಡ್ತದೆ. ನಿಮ್ಮ ಬರಹದ ಎಂದಿನ ಶೈಲಿಯಲ್ಲಿ ಈ ಕಥೆ ರೋಚಕವಾಗಿ ಮೂಡಿ ಬ೦ದಿದೆ.ನಿಮ್ಮ ಈ ಕಥೆಯನ್ನು ಓದಿ ನನಗೊ೦ದು ಸತ್ಯ ಕಥೆ ಹೊಳೆಯಿತು. ಮು೦ದೆ೦ದಾದರು ಬರೆಯುತ್ತೇನೆ.
ಕಥೆ ಚಾನಾಗಿದ್ದು ಪ್ರಕಾಶಾಣ್ಣ.
ಆ ಮನುಷ್ಯನಿಗೆ ಬದುಕಿನಲ್ಲಿ ತೀರಾ ವಾಸ್ತವವಾದಿಯಾಗಿರುವುದಕ್ಕೆ ಕಾರಣಗಳೂ ಇದ್ದಿರಬಹುದು.
ಎಲ್ಲರೂ ಬದುಕಿನ ಅವಶ್ಯಕತೆಗಳಿಗೆ, ಅನಿವಾರ್ಯಗಳಿಗೆ ಸಿಲುಕಿ ಬದಲಾವಣೆ ಹೊಂದುತ್ತಲೇ ಇರುತ್ತಾರೆ. ಕೆಲವರಿಗೆ ವಾಸ್ತವವಾದಿಯಾಗಿರುವುದು ಅನಿವಾರ್ಯವೂ ಆಗಿರಬಹುದು. ಆಜ಼ಾದ್ ಸರ್ ಹೇಳಿದಂತೆ ಅವರ ಭಾವನಾತ್ಮಕ ಅನಾವರಣಕ್ಕೆ ವೇದಿಕೆ ಇಲ್ಲದಿರಬಹುದು.
ಹುಟ್ಟಿನಿಂದ ಸಾಯುವವರೆಗೂ ಒಂದೇ ರೀತಿಯಾಗಿ ಬದುಕುವವರು ಕಡಿಮೆ. ಬಹುಶಹ ಇಲ್ಲದೆಯೂ ಇರಬಹುದು. ಬದುಕು ಬಹು ಬೇಗ ಎಲ್ಲವನ್ನು ಕಲಿಸಿಬಿಡುತ್ತದೆ.
ನಿಮ್ಮ ಕಥೆಯ ನಾಯಕ ನನಗನ್ನಿಸಿದ ಮಟ್ಟಿಗೆ Nihilist (http://en.wikipedia.org/wiki/Nihilism).
chennaagide kathe... prakashanna
ಪ್ರಕಾಶ್,
ನಿಮ್ಮ ಎಂದಿನ ಶೈಲಿಯಲ್ಲಿ ಕಥೆ ಸರಾಗವಾಗಿ ಸಾಗುತ್ತದೆ. ಒಬ್ಬ ಮನುಷ್ಯನ ಸುಪ್ತ ಮನಸ್ಸು ಎಲ್ಲ ಕಾಲದಲ್ಲಿಯೂ ಒಳಗೇ ಮುಚ್ಚಟೆಯಾಗಿ ಇರಲು ಸಾಧ್ಯವಿಲ್ಲ ಎಂಬುದನ್ನು ಹೇಳುವಲ್ಲಿ ನೀವು ಸಫಲರಾಗಿದ್ದೀರಿ ಅನಿಸುತ್ತದೆ.
"ಅದರಲ್ಲಿ ದೇವರಿದೆ ಎಂದಿದ್ದರೆ.. ಆತ ಮಾರುತ್ತಿದ್ದನೆ?"
ಇಂತಹ ಅನೇಕ ಸಾಲುಗಳು ಕಥೆಯಲ್ಲಿವೆ. ಇವು ಪ್ಲಸ್ ಪಾಯಿಂಟ್. ಅವೆಲ್ಲೆವೂ ಇಷ್ಟವಾದವು... ಜೈಹೋ ಜೀ...
-ಚಾಂದ್
ಸುನಾಥ ಸರ್...
ಬದುಕಿನ ಅನುಭವಗಳು ನಮಗೆ ಕಲಿಸುವಷ್ಟು
ಯಾವುದೇ ವಿಶ್ವವಿದ್ಯಾಲಯ .. ಪುಸ್ತಕಗಳು ಕಲಿಸಲಾರವು...
ನಾನು ಸಹ ಇಂಥಹ ವಾಸ್ತವಿಕವಾದಿಯೊಬ್ಬನನ್ನು ನಂಬಿ ಹೊಂಡಕ್ಕೆ ಬಿದ್ದಿದ್ದೆ..
ನಾವು ಎಷ್ಟೇ ಕಲ್ಪನೆಯ.. ಭಾವುಕ ಪ್ರಪಂಚದಲ್ಲಿದ್ದರೂ...
ಬದುಕು ಕಹಿಯಾದ.. ಕಟು ವಾಸ್ತವವಾಗಿರುತ್ತದೆ..!
ಸಂದರ್ಭಗಳಲ್ಲಿ ಸ್ವಲ್ಪವೂ ಕರುಣೆಯಿಲ್ಲದ ಕ್ರೂರಿಯಾಗಿರುತ್ತದೆ...
ಸರ್..
ನಿಮ್ಮ ಪ್ರೀತಿಗೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...
Thumbha chenagidhe, gothilladhe kanindha neeru suritha idhe, nijavaglu yella paathragalu thumbi bandanthithu......
ಪ್ರೀತಿಯ ಗಿರೀಶು...
ಬದುಕೇ ಹಾಗಲ್ಲವೆ?
ತಮ್ಮದು.. ತನ್ನದು ಅಂದುಕೊಂಡಾಗ ಪ್ರೀತಿ ಜಾಸ್ತಿಯಾಗುವದು..
ಭಾವನೆಗಳು....
ಕೆಲವು ಭಾವ ಸಂಬಂಧಗಳು.. ಮಾತು.. ತರ್ಕಗಳನ್ನು ಮೀರಿರುತ್ತವೆ..
ಅದನ್ನು ಅನುಭವಿಸಬೇಕೇ ಹೊರತು..
ತರ್ಕದಲ್ಲಾಗಲಿ ಮಾತಿನ ಶಬ್ಧಗಳಲ್ಲಾಗಲಿ ವರ್ಣಿಸಲಾಗದು..
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಟಾನಿಕ್ ಥರಹ...
ಪ್ರೋತ್ಸಾಹಕ್ಕೆ ಧನ್ಯವಾದಗಳು...
irataare higiya jana...
anthavarige priti, prema enU beda...
kathe chennaagide ...bareda riti mattu chennaagide.....
ಅಗತ್ಯವಾದದ್ದು ಅಗತ್ಯವಾದಾಗ ಮಾತ್ರ ಅಗತ್ಯವಾಗಿ ಬೇಕು ಎಂದೆನಿಸುತ್ತದೆ. ನಿರೂಪಣೆ ಚೆನ್ನಾಗಿ ಮೂಡಿದೆ.
ಒಳ್ಳೆಯ ಕಥೆಗೆ ಅಭಿನಂದನೆಗಳು.
ಗುರುಮೂರ್ತಿ.. (ಸಾಗರದಾಚೆಯ ಇಂಚರ)..
ಸಹಜವಾಗಿರಬೇಕು.. ಬದುಕು ಹೇಗೆ ಬರುತ್ತದೊ ಅದನ್ನು ಸ್ವೀಕರಿಸುತ್ತ ಸಾಗಬೇಕು..
ಎಲ್ಲವೂ ಸರಿ...
ಆದರೆ "ವಾಸ್ತವ" ವಾದ.. "ಭಾವುಕ"ತನ ಎಷ್ಟಿರ ಬೇಕು?
ಅದಕ್ಕೊಂದು "ಮಾಪನ" ಖಂಡಿತ ಇಲ್ಲ..
ಆದರೆ ಎಲ್ಲರ..
ಹೆಚ್ಚಿನ ಜನರ ಹಾಗೆ ಬದುಕಿದರೆ ಒಳ್ಳೆಯದಲ್ಲವೆ?
ಅತೀಯಾದ ಭಾವುಕತೆ..
ಅತೀಯಾದ ವಾಸ್ತವಿಕತೆ ಎರದೂ ಅಸಹಜ ಅನ್ನಿಸಿಬಿಡುತ್ತದೆ..
ತುಂಬಾ ಚಂದದ ಪ್ರತಿಕ್ರಿಯೆ...
ಇಲ್ಲಿ ಕೆಲವು ಪ್ರತಿಕ್ರಿಯೆಗಳು ತುಂಬಾ ಸೊಗಸಾಗಿವೆ.. ಬರೆದದ್ದು ಸಾರ್ಥಕ ಎನಿಸುವಷ್ಟು.. ನಿಮ್ಮದೂ ಇಷ್ಟವಾಯಿತು..
ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ಮನೋಜ್ಞವಾಗಿತ್ತು ಸಾರ್.
ನಗರಜ್.. ನಾಗೂ...
ನಿಮ್ಮ ಹಾಗೆ...
ನನ್ನ ಜೀವದ ಗೆಳೆಯ "ನಾಗುವಿಗೂ" ಸಹ ಕಣ್ಣೀರು ಬರುವದಿಲ್ಲ..
ಆತ ಬಹಳ ಸೂಕ್ಷ್ಮ ಮತ್ತು ಭಾವುಕ ವ್ಯಕ್ತಿ...
ಕಣ್ಣೀರು ಬಂದರೆ ಮಾತ್ರ ಭಾವುಕರು ಎನ್ನುವದು ತಪ್ಪು..
ಕಥೆಯಲ್ಲಿ ವರ್ಣಿಸುವಾಗ ಕಣ್ಣೀರು.. ಬಾವುಕತೆಗೆ ಹತ್ತಿರ ಸಂಬಂಧ ಎಂದಿರುವೆ..
ಹೆಚ್ಚಿನ ಸಂದರ್ಭಗಳಲ್ಲಿ ಇದು ನಿಜ..
ನಿಮ್ಮ ಪ್ರತಿಕ್ರಿಯೆಯಲ್ಲೂ ಸಹ ನಿಮ್ಮ "ಓದು" ಗೊತ್ತಾಗುತ್ತದೆ..
ನಿಮ್ಮ ಬರಹಗಳ ಗಟ್ಟಿತನಕ್ಕೆ ನಿಮ್ಮ "ಓದು" ಕಾರಣ...
ನಿಮ್ಮ ಪ್ರತಿಭೆ ಇನ್ನಷ್ಟು ಬೆಳಕಿಗೆ ಬರಲಿ..
ಇದು ನಮ್ಮೆಲ್ಲರ ಹಾರೈಕೆ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..
ಅಶ್ವಿನಿ.. (ಆಶು)...
ಕಥೆಯನ್ನು ಬರೆಯುತ್ತೇವೆ.. ನಮ್ಮ ಓದು.. ಅನುಭವ.. ಕಲ್ಪನೆಯನ್ನು ಆಧಾರಿಸಿ..
ಓದುಗರೂ ಸಹ ನಾವು ಬರೆದ ಅರ್ಥದಲ್ಲಿಯೇ ಓದಬೇಕೆಂದೇನೂ ಇಲ್ಲವಲ್ಲ...
ಬರೆದ ಕಥೆಯನ್ನು ಓದುವಾಗ ಓದುಗನ ಮನಸ್ಥಿತಿ..
ಅವರ ಅನುಭವ.. ಎಲ್ಲವನ್ನೂ ಅದು ಒಳಗೊಂಡಿರುತ್ತದೆ..
ನೀವು ಹೇಳಿದ್ದು ನಿಜ..
ಕೆಲಸದಾಳಿನಂಥಹ ಮಡದಿ ಸತ್ತಿದ್ದಕ್ಕೆ ದುಃಖಿಸದೆ..
ಕೈಗೆ ಸಿಕ್ಕ ಮಗುವಿನ ಪಾಲನೆ.. ಪೋಷಣೆಯ..
ಹಾಗು ತನ್ನ ದೈನಂದಿನ ಸಮಸ್ಯೆಯ ಬಗೆಗೆ ಚಿಂತೆ ಜಾಸ್ತಿಯಾಗಿ ....
ಆತನಿಗೆ ಅಳು ಬಂದಿರುತ್ತದೆ..
ಸ್ವಭಾವ..
ಅದು ಒಳಗಿನ ಬಣ್ಣ.. ಅದು ಬದಲಾಗುವದು ಅಸಾಧ್ಯ.. ಅಲ್ಲವೆ?
ಚಂದದ... ಹಾಗೂ ಮನೋಜ್ಞವಾದ ಪ್ರತಿಕ್ರಿಯೆಗಾಗಿ ಧನ್ಯವಾದಗಳು..
ಪ್ರೀತಿಯ ಶ್ರೀಕಾಂತ ಮಂಜುನಾಥ....
ಇಲ್ಲಿಯ ಕಥಾನಾಯಕ ವಾಸ್ತವವಾದಿ...
ತನ್ನೊಡನೆ.. ತನ್ನ ಸಂಗಾತಿಯಾಗಿ ಬದುಕುವ ಹೆಣ್ಣಿನ ಮನಸ್ಥಿತಿ ಅವನಿಗೆ ಆವನಿಗೆ ಅನಗತ್ಯ..
ತನ್ನ ಅವಶ್ಯಕತೆ.. ಅಗತ್ಯಗಳಷ್ಟೆ ಆತನಿಗೆ ಮುಖ್ಯ..
"ತಾನು ಹೀಗಿದ್ದೇನೆ" ಎಂದು ತಿಳಿಸಿ ಹೇಳಿ...
"ನೀನು ನನಗಾಗಿ ಬದುಕಬೇಕು,," ಇದು ಅವನ ಉದ್ದೇಶ...
ವಿಚಿತ್ರ...
ಮಗುವಿನ ಜವಾಬ್ದಾರಿ ತನ್ನ ಹೆಗಲ ಮೇಲೆ ಬಿದ್ದಾಗ ಅವನ ಮನಸ್ಥಿತಿ ಏನು....?
ತುಂಬಾ ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು..
ಕಥೆ ಬರೆದಿದ್ದದ್ದು ಸಾರ್ಥಕ ಎನಿಸುವಷ್ಟು...
ಓದುಗರ ಒಂದೇ ಸಾಲಿನ ಪ್ರತಿಕ್ರಿಯೆಗಳಾದರೂ ಸರಿ.. ಖುಶಿಯಾಗುತ್ತದೆ..
ಧನ್ಯವಾದಗಳು...
ಆಶಾರವರೆ...
ಈ ಕಥೆಗೆ ಒಂದು ಧನಾತ್ಮಕ ಕೊನೆ ಕೊದಬೇಕಿತ್ತು ಎನ್ನುವದು ಹಲವಾರು ಓದುಗರು ವ್ಯಕ್ತ ಪಡಿಸಿದ್ದಾರೆ..
ಪ್ರತಿಯೊಂದೂ ಕಥೆಗಳಲ್ಲೂ ಹಾಗಾದರೆ ಏಕಾತನತೆ ಆಗಿಬಿಡುತ್ತದೆ ಅಲ್ಲವೆ?
ನನಗೆ ಯಾಕೋ ಈ ರೀತಿಯ ಕೊನೆಯೇ ಇದಕ್ಕೆ ಯೋಗ್ಯ ಎಂದು ಅನಿಸಿತು...
ಮುಂದಿನ ಕಥೆ ಪಾಸಿಟಿವ್ ಆಗಿ ಬರೆವೆ...
ಕಥೆಯನ್ನು ಓದಿ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ...
ಪ್ರಕಾಶ್ ಮಾಮ ,
"ಇದು ಮತಲಬ್ ಕಿ ದುನಿಯಾ"
ಅನ್ನೋ ಮಾತು ನೆನಪಾಗುತ್ತೆ.
ಹೌದು ಈಗ ಭಾವನೆ ಭಾವುಕತೆ ಕಡಿಮೆ ಆಗಿದೆ..
ಆದ್ರೆ,
ಎಲ್ಲವು ಕೇವಲ ಭಾವುಕತೆ ಅಥವ ಕೇವಲ ಪ್ರ್ಯಾಕ್ಟಿಕಲ್
ಯೋಚನೆ ಮಾಡಿದರೆ ಕಷ್ಟ.. It should be Balanced.
ನಿಮ್ಮ ಕತೆಯ ಪಾತ್ರಧಾರಿಯ ಮಾತುಗಳು ಪ್ರ್ಯಾಕ್ಟಿಕಲ್ ಅಷ್ಟೇ ಅಲ್ಲದೆ ಬೇಜವಾಬ್ದಾರಿ ಮನುಷ್ಯನ ಮನಸ್ಸು ಸೂಚಿಸುತ್ತದೆ.. ಅಂತ ನನ್ನ ಅನಿಸಿಕೆ.
ಕತೆಯ ನಿರೂಪಣೆ ಸುಪರ್..
-ಅನಿಲ್
ಮನುಷ್ಯ ವಾಸ್ತವವಾದಿಯಾದರೆ ನಿರ್ಜನ ದ್ವೀಪವಾಗುತ್ತಾನೆ. ಅಂತರಂಗದಲ್ಲಿ ಕೊಳೆಯುತ್ತಾನೆ. ಈ ಕಥೆಯ ನಾಯಕ ನಿಜವಾಗಿಯೂ ಪ್ರಾಕ್ಟಿಕಲ್ ಮನುಷ್ಯನಾಗಿದ್ದರೆ ಸಂಬಂಧಗಳನ್ನ ಅವನ ಅವಶ್ಯಕತೆಗಳಿಗೆ ಬಳಸಿಕೊಳ್ಳುತ್ತಿರಲಿಲ್ಲವೇನೋ?
ಸುಖ ಬೇಕು, ಜವಾಬ್ದಾರಿ ಬೇಡ,
ತನ್ನ ಅನುಕೂಲಕ್ಕೆ ವಾಸ್ತವವಾದಿಯ ಮುಖವಾಡ
ಅವನಂತೆ ಅವನ ಜನ ಕೂಡ ಯೋಚಿಸಿದ್ದರೆ...
ಅಜ್ಞಾನಿ ಹಾಗೂ ವಾಸ್ತವವಾದಿ ಇಬ್ಬರೂ ಸುಖಿಗಳೆ. ವಾಸ್ತವವಾದ ವೈರಾಗ್ಯವನ್ನ ಬೆಳವಣಿಗೆಯನ್ನ ನೀಡುತ್ತದೆ, ಕೊಳೆಸುವುದಿಲ್ಲ...
ಕಥೆ ಚೆನ್ನಾಗಿದೆ. ನಿರೂಪಣೆಯ ಶೈಲಿಯೇ ಸುಂದರ..
ಬಂದ ಪ್ರತಿಕ್ರಿಯೆಗಳು ಕೂಡ ಚೆಂದ ಚೆಂದ..
katheyannu sookshmavagi odidare tumba artagalu olagondide ... arthapoorna baraha ..olleya neerupane ... kathe chennagide
Tumbaa chennaagide prakashanna
Nimma kathe hagu prathi kriye eradu esta aythu. Yesto dindinda yochistidda nanage nimma prathikriyeya nudiyalli uttara sikkide.
Thanks Anna
ಪ್ರಕಾಶಣ್ಣ,
ಈ ಕಥೆಯ ನಾಯಕ, ತೀವ್ರ ವಾಸ್ತವವಾದಿ ಅನ್ನಿಸಿದರೂ, ಅದು ಆತನ ಸ್ವಾರ್ಥದ ವಾಸ್ತವಿಕತೆಯ ನಿಜವಾದ ಅನಾವರಣವೇ ಸರಿ. ನಮ್ಮಸುತ್ತಮುತ್ತಲಿನ ಅನೇಕರು ಅದರಲ್ಲೂ ಸೋಮಾರಿಗಳು ವಾಸ್ತವಿಕತೆಯ ಮುಖವಾಡವನ್ನು ತೋರಿಸುತ್ತಾ, ’ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ’ ಎನ್ನುವುದನ್ನು ನೋಡಿದರೆ ಕೇಳಿದರೆ ಅವನು ಮನುಷ್ಯನೇ ಅಲ್ಲ ಎನಿಸುತ್ತದೆ. ಏಕೆಂದರೆ ನನ್ನ ಪ್ರಕಾರ ಮನುಷ್ಯನಿಗೆ ವಾಸ್ತವಕ್ಕಿಂತಲೂ ಮಿಗಿಲಾದದ್ದು ಮಾನವತೆ ಅದಿಲ್ಲದ ವಾಸ್ತವಿಕತೆ ಬರೀ ಢಂಭವೇ ಸರ್
ನಿಮ್ಮ
ಉಮಾಶಂಕರ
nanage kathe ishta aytu...
nammallu ello intha ondu patra adagiruttade...allave???
We can get many persons in this world who do not have love and affection and also responsibility.. its near to reality.. heart touching story... keep writing...
WONDERFUL THANK U VERY MUCH
wonderful
ಪ್ರಕಾಶಣ್ಣ,
ಕಥೆ ತುಂಬಾ ಮನೋಜ್ಞವಾಗಿತ್ತು. ಅಚ್ಚುಕಟ್ಟಾದ ನಿರೂಪಣೆ ಕಥೆಗೆ ಮತ್ತಷ್ಟು ಮೆರುಗು ನೀಡಿತು. ತಂದೆ-ತಾಯಿಗಳು ಸತ್ತಾಗಲೂ ಅಳದಿದ್ದ ಆತ ತನ್ನ ಹೆಂಡತಿ ಸತ್ತಾಗ ಅತ್ತಿದ್ದು ಕೇವಲ ಅವನ ಪ್ರತಿ ನಿತ್ಯದ ಕೆಲಸಗಳನ್ನು ಯಾರು ಮಾಡುತ್ತಾರೆ ಎಂಬ ದುಃಖದಿಂದ ಹೊರತು ಹೆಂಡತಿ ಸತ್ತಳೆಂದು ಅವನ ಮನ ಮರುಗಿ ಅಲ್ಲ ಎಂಬುದು ವಿಷಾದನೀಯ.
ಪ್ರಕಾಶಣ್ಣ,ಧನ್ಯವಾದ,,,,,,,,,,,,,,,,,ನಾನು ಇಂಥಹ ಕಟು ವಾಸ್ತವವಾದಿ,
ತುಂಬಾ ಚೆನ್ನಾಗಿದೆ ಪ್ರಕಾಶಣ್ಣಾ.. ಬಣ್ಣಗಳು ಮತ್ತೆ ಮನಸಿನ ಬಣ್ಣ ! ಖುಷಿ ಆಯ್ತು ಓದಿ .
ಕಣ್ಣೆದುರೇ ಘಟನೆ ನೋಡಿದಂತಾಯ್ತು ಪ್ರಕಾಶಣ್ಣ.... ಇಷ್ಟೊಂದು practicle ಮನುಷ್ಯ ನಿಜವಾಗಿಯೂ ಇರುತ್ತಾರಾ ಎಂದು ಯೋಚಿಸುವಂತಾಯ್ತು...! ಮನುಷ್ಯ ಖುಷಿ, ನೆಮ್ಮದಿಯಿಂದ ಬದುಕಲು ಪ್ರೀತಿ ಅತ್ಯವಶ್ಯಕ.. ಅದು ತಂದೆ, ತಾಯಿ, ಅಣ್ಣ, ತಂಗಿ, ಅಕ್ಕ, ತಮ್ಮ, ಸ್ನೇಹಿತರು, ಪ್ರೇಮಿ, ಹೆಂಡತಿ ಯಾರಿಂದಲೇ ಆಗಿರಬಹುದು.. ಅದನ್ನೆಲ್ಲ ಸವಿಯುತ್ತ ಜೀವನ ಸವೆಸುವ ಮನಸ್ಸಿಲ್ಲದ ಜೀವ ನಿಜಕ್ಕೂ ವ್ಯರ್ಥವಲ್ಲವೆ...!! ಕೊನೆಯಲ್ಲಿ ಹೆಂಡತಿ ಸತ್ತಾಗೂ ಸಹ ಮುಂದೆ ತಾನೆ ಜವಾಬ್ದಾರಿ ಬಿತ್ತಲ್ಲಾ ಎನ್ನುವ ಕಾರಣಕ್ಕೆ ಕಣ್ಣೀರು ಬರುವಷ್ಟು ನಿರ್ಭಾವುಕರ ಜೀವನ ನಿರರ್ಥಕ...!!
ನಿರೂಪಣೆ ಮಾತ್ರ ಸೂಪರ್...
ಪಕ್ಕ PRACTICAL , ಆಸ್ಪತ್ರೆಯ ಸನ್ನಿವೇಶ , ಕಣ್ಮುಂದೆ ಬಂದ ಹಾಗೆ ಆಯ್ತು .. ಕಥೆ ಚೆನ್ನಾಗಿ ಮೂಡಿದೆ
Post a Comment