Monday, January 10, 2011

ಸಹಜ

ನಾನು ಬಹಳ ಲೆಕ್ಕಾಚಾರದ  ವ್ಯಕ್ತಿ...

ಇದು ನನ್ನಪ್ಪನಿಂದ ಬಂದ ಬಳುವಳಿ...
ಪ್ರತಿಯೊಂದನ್ನೂ...
ವಿಚಾರ ಮಾಡಿ.. ಪ್ರಮಾಣಿಸಿ... ನಿರ್ಧಾರ ತೆಗೆದುಕೊಳ್ಳುತ್ತೇನೆ...


ಅಪ್ಪನಿಗೂ ನನ್ನ ಮೇಲೆ ಭರವಸೆ...

ಈ ಸಾರಿ ಊರಿಗೆ ಹೋದಾಗ ಅಪ್ಪ  ಕೇಳಿದ್ದ..

"ಮಗಳೆ..
ನಿನಗೀಗ ಮದುವೆ  ವಯಸ್ಸು... 
ಒಳ್ಳೆಯ  ಸಂಬಂಧಗಳು  ಬರುತ್ತಿವೆ. ....
ಮದುವೆಯಾಗಿಬಿಡು..."

"ಇಲ್ಲಪ್ಪ... 
ಇದೀಗ ತಾನೆ ನೌಕರಿ ಸೇರಿದ್ದೇನೆ..
ಈಗ ಕಾಲ ಬದಲಾಗಿದೆಯಪ್ಪ.. ಇನ್ನೂ ಒಂದೆರಡು ವರ್ಷ ಬಿಟ್ಟು ಮದುವೆ.."

"ನೋಡಮ್ಮ..
ಯಾವ  ಯಾವ ವಯಸ್ಸಿಗೆ ಏನಾಗ ಬೇಕೋ.. ಅದು ಆಗಬೇಕು..
ನಮ್ಮ ಹಿರಿಯರು ಬಹಳ ಬುದ್ಧಿವಂತರು..
ಗ್ರಹಸ್ಥಾಶ್ರಮ ಅಂತ ಹೇಳಿದ್ದಾರೆ..

ದೇಹಕ್ಕೆ.. ಮನಸ್ಸಿಗೆ ಬೇಕಿದ್ದಾಗಲೇ ಮದುವೆ ಆಗಬೇಕು....
ದೇಹಕ್ಕೆ ಸ್ವಲ್ಪ ವಯಸ್ಸಾದ ಮೇಲೆ ಮನಸ್ಸಿಗೆ ಹೊಂದಾಣಿಕೆ ಮಾಡಿಕೊಳ್ಳುವದು  ಕಷ್ಟವಾಗ ಬಹುದು....
ಕಾಲ ಎಷ್ಟೇ ಬದಲಾದರೂ..
ದೇಹ.. ಮನಸ್ಸು ಅದೇ ಇರುತ್ತದೆಯಮ್ಮ...

ನಿನ್ನ  ಮನಸ್ಸಲ್ಲಿ ಯಾರದರೂ ಇದ್ದಾರೇನಮ್ಮ?"

"ಖಂಡಿತ ಇಲ್ಲಪ್ಪ.."

"ಮಗಳೇ...
ನನ್ನ ಸ್ನೇಹಿತರೊಬ್ಬರ ಮಗ ಪಟ್ಟಣದಲ್ಲಿ  ಬಿಸಿನೆಸ್ ಮಾಡ್ತಾ ಇದ್ದಾನೆ..
ಒಳ್ಳೆ ಹುಡುಗ... ಚಟ ಇಲ್ಲ.."

ಅಪ್ಪಾ..
ದಯವಿಟ್ಟು ಪರಿಚಯದವರಲ್ಲಿ ಸಂಬಂಧ  ಬೇಡ.."

"ಪುಟ್ಟಾ...
ನಿನಗಿಂತ ಹೆಚ್ಚು  ಬದುಕು ನೋಡಿದ್ದೇನೆ..
ವ್ಯವಹಾರವನ್ನು  ಅಪರಿಚಿತರಲ್ಲಿ ಮಾಡ ಬೇಕು...
ಸಂಬಂಧವನ್ನು  ಗೊತ್ತಿದ್ದವರಲ್ಲಿ ಮಾಡಬೇಕು..
ಹುಡುಗ ಚೆನ್ನಾಗಿದ್ದಾನೆ..
ಅವನ  .. ಮನೆತನ ಒಳ್ಳೆಯದು.. ನೋಡಮ್ಮ.."

"ಅಪ್ಪಾ... ದಯವಿಟ್ಟು ಬೇಡ..."

ನನ್ನಪ್ಪ  ನನಗೆ ಜಾಸ್ತಿ  ಒತ್ತಾಯ ಮಾಡುವದಿಲ್ಲ... 
ಅವರು... ನನ್ನ ವಿಚಾರಗಳಿಗೆ..
ಕಾರ್ಯಗಳಿಗೆ ಬಹಳ ಬೆಂಬಲ ಕೊಡುತ್ತಾರೆ.. 


ನಾನು  ಅವರ  ಹೆಮ್ಮೆ...

ಯಾಕೆ.... ಇಷ್ಟೆಲ್ಲ ಪೀಠಿಕೆ...?

ಇತ್ತೀಚೆಗೆ ನನಗೊಬ್ಬ  ಗೆಳೆಯ ಸಿಕ್ಕಿದ್ದಾನೆ....

ಆರ್ಕುಟ್ಟಿನಲ್ಲಿ  ಪರಿಚಯವಾಯಿತು...
ಫೇಸ್ ಬುಕ್ಕಿಗೂ ಬಂದ...

ಬಜ್ ನಲ್ಲಿ ವಿಚಾರ ವಿನಿಮಯವಾಯಿತು....

ಅಲ್ಲಿ ಅವನು  ವ್ಯಕ್ತ ಪಡಿಸುವ ವಿಚಾರಗಳು... ಅಭಿಪ್ರಾಯಗಳು  ಸೊಗಸಾಗಿರುತ್ತಿದ್ದವು..

ನನ್ನ  ಪ್ರತಿಕ್ರಿಯೆಗಳಿಗೂ  ಮಹತ್ವ ಕೊಡುತ್ತಿದ್ದ...

ಕೆಲವು  ಕಡೆ ಖಾರವಾಗಿ... ನಿಷ್ಠೂರವಾಗಿಯೂ ಇರುತ್ತಿದ್ದ...
ನನಗೆ  ಅವನ "ಮುಕ್ತ" ವಿಚಾರಗಳು ಇಷ್ಟವಾಗುತ್ತಿತ್ತು...

ಅವನಿಗೂ.. ನನಗೂ  ಮೇಲ್ ನಲ್ಲಿ ಪುಟಗಟ್ಟಲೆ ವಿಚಾರಗಳ ಚರ್ಚೆ.. ವಿನಿಮಯ  ನಡೆಯುತ್ತಿತ್ತು...

ಇಷ್ಟವಾಗತೊಡಗಿದ... 
ನೋಡಲು ಚಂದವಾಗಿಯೂ ಇದ್ದ....

ಅವನ ಬಗ್ಗೆಯೇ ವಿಚಾರ ಮಾಡತೊಡಗಿದೆ...

ನನ್ನ ಮೊಬೈಲ್ ನಂಬರ್ ಕೊಟ್ಟೆ... 
ಮೆಸೆಜುಗಳು...!

ಆಗಾಗ ಮಾತುಗಳು....!

ಇತ್ತೀಚೆಗೆ  ಪ್ರತಿ ಕ್ಷಣವೂ ನನ್ನ ಮನದಲ್ಲಿ ಬರತೊಡಗಿದ...

ಆಗಾಗ ಕಾಫೀ ಡೆ ನಲ್ಲಿ ಭೇಟಿಯೂ ಆದೆವು...

ನನಗೆ ಆತನಲ್ಲಿ ಇಷ್ಟವಾಗಿದ್ದು ಎರಡೇ  ಸಂಗತಿಗಳು...

ನಯ, ವಿನಯ... ನೇರ ನುಡಿಗಳು...ಬೇಲಿಯೇ ಇಲ್ಲದ ಮುಕ್ತ ಮಾತುಕತೆಗಳು..

ನನ್ನನ್ನೇ... ಆಸಕ್ತಿಯಿಂದ ನೋಡುವ ಆತನ ಕಣ್ಣುಗಳು....!

ಒಂದು ದಿನ ಆತನ  ಸಂಬಳದ ವಿವರದ ಸ್ಲಿಪ್ ಸಿಕ್ಕಿತು...

ಕೈತುಂಬ ಸಂಬಳ...!

ಅವನೊಡನೆ ಮಾತನಾಡುತ್ತ  ...
ಅವನ  ವಯಕ್ತಿಕ ವಿಷಯಗಳೂ ಗೊತ್ತಾಗ ತೊಡಗಿದವು..
ಒಬ್ಬನೇ  ಮಗ... ತಂದೆ, ತಾಯಿ ಇರುವದು  ಊರಲ್ಲಿ..

ಒಟ್ಟಿನಲ್ಲಿ ಆತ ಎಲ್ಲ ಹೆಣ್ಣುಮಕ್ಕಳು  ಬಯಸುವ ಹುಡುಗ...!

ನನ್ನ  ಮನದ ಆಸೆಯನ್ನು ಕೇಳಿ ಬಿಡಲಾ? 
ನನ್ನ  ಮನಸ್ಸು ಒಪ್ಪಲಿಲ್ಲ...

ನಮ್ಮೊಳಗಿನ ಕೆಲವು ನಮ್ಮ  ಬಣ್ಣಗಳನ್ನು ಬದಲಾಯಿಸುವದು  ಬಹಳ ಕಷ್ಟ...

ನಾನು ತುಂಬ ಲೆಕ್ಕಾಚಾರದ ವ್ಯಕ್ತಿ...
ನನ್ನ ಬುದ್ಧಿವಂತಿಕೆಯ ಬಗೆಗೆ ನನಗೆ  ಅತೀಯಾದ ಆತ್ಮ ವಿಶ್ವಾಸ.. ನನಗಿದೆ.. 


ನೋಡೋಣ...
ಅವನಿಗೂ ನನ್ನಲ್ಲಿ ಆಸಕ್ತಿಯಿದೆ... 
ಅವನಿಂದಲೇ  "ಪ್ರಸ್ತಾಪ" ಬರಲಿ ಎಂದು ಕಾಯ ತೊಡಗಿದೆ...

ಒಂದು ದಿನ ಆತ ನನ್ನನ್ನು "ಒಬೆರಾಯ್ ಪ್ಯಾಲೇಸ್" ಗೆ ಕರೆದ...

"ಯಾಕೋ ... ಮನಸ್ಸಿಗೆ ಬೇಸರವಾಗಿದೆ..
ನಿನ್ನೊಂದಿಗೆ ಇರಬೇಕು  ಅನ್ನಿಸ್ತ ಇದೆ... ಇಲ್ಲ ಎನ್ನಬೇಡ...
ದಯವಿಟ್ಟು  ಬಾ..."

ಒಬೆರಾಯ್ ಪ್ಯಾಲೇಸ್...  !!  ಪಂಚತಾರ ಹೊಟೆಲ್... !

ಎಲ್ಲೋ ಸಿನೇಮಾಗಳಲ್ಲಿ ನೋಡಿದ್ದೆ... 


ನಾನು ಒಪ್ಪಿಕೊಂಡೆ...

"ಒಬೆರಾಯ್ ಪ್ಯಾಲೇಸಿನ" ಒಳಗಡೆ.. ಹೋಗುವಾಗ ನನ್ನೆದೆ ಢವ  ಢವ.. ಹೊಡೆದುಕೊಳ್ಳುತ್ತಿತ್ತು...

ಅಲ್ಲಿ ರೆಸ್ಟಾರೆಂಟ್ ವಿಭಾಗದಲ್ಲಿ ಒಂದು ಮೂಲೆಯಲ್ಲಿ ಕುಳಿತೆವು...

ಅಲ್ಲಲ್ಲಿ  ಜನರು  ಮೆಲ್ಲಗೆ ಮೆಲುಧ್ವನಿಯಲ್ಲಿ ಮಾತನಾಡುತ್ತಿದ್ದರು...
ನಾವು ದಿನ ನಿತ್ಯ ಹೋಗುವಂಥಹ  ಹೊಟೆಲ್ಲುಗಳಿಲ್ಲಿರುವಂಥಹ  ..
ಗದ್ದಲ, ಗೌಜಿ ಇಲ್ಲವೇ ಇಲ್ಲ...!


ಎಲ್ಲರೂ ತಮ್ಮ ಪಾಡಿಗೆ ತಾವಿದ್ದರು...

ಮಂದವಾದ ಬೆಳಕು...
ಅಲ್ಲಲ್ಲಿ  ಒಬ್ಬರೊನೊಬ್ಬರು ಅಪ್ಪಿಕೊಂಡು ಕುಳಿತ ಪ್ರೇಮಿಗಳು....

ಹಿತವಾಗಿ ಕೇಳಿ ಬರುತ್ತಿರುವ ಪ್ರೇಮ ಗೀತೆಗಳು...

ವಾತಾವರಣ ಹಿತವಾಗಿತ್ತು... ... ಮೂಡು ಬದಲಾಗುವಂತಿತ್ತು..

ಆತ ನನ್ನ ಕಣ್ಣುಗಳನ್ನು ಪ್ರೀತಿಯಿಂದ ತುಂಬಿಕೊಳ್ಳುತ್ತ ...ಕೇಳಿದ...

"ನಿನ್ನನ್ನು ಇಲ್ಲಿಗೆ ಬಾ ಅಂತ ಕರೆದದ್ದು ಯಾಕೆ ಗೊತ್ತಾ?"

ನನಗೆ ಸಣ್ಣಗೆ ಹೆದರಿಕೆ... !
ಅಂಜಿಕೆ...!


ಕರ್ಚೀಫ್  ತೆಗೆದು  ಅಂಗೈ ಒರೆಸಿಕೊಂಡೆ...

"ಯಾಕೆ..?"

"  ನನ್ನಮ್ಮನಿಗೂ...
ನಿನಗೂ ಮಾತನಾಡಿಸ ಬೇಕಿತ್ತು"

"ಹೌದಾ?.. !!"

ನಾನು ಅವನ ಕಣ್ಣುಗಳನ್ನು ನೋಡುವ ಪ್ರಯತ್ನ ಮಾಡಿದೆ...
ಈತನನ್ನು ನಂಬ ಬಹುದು... 
ಹಿರಿಯೊರಡನೆ ಪ್ರಸ್ತಾಪಿಸಿ...
ಅವರ ಒಪ್ಪಿಗೆ ಪಡೆದು  ನಂತರ ನನ್ನ ಬಳಿ ಮಾತಾಡುತ್ತಿದ್ದಾನೆ...!

ಚಂದದೊಡನೆ ಒಳ್ಳೆಯತನವೂ ಸೇರಿದೆ ಅನಿಸ್ತು ನನ್ನ ಲೆಕ್ಕಾಚಾರದ ಮನಸು...

ಆತ ತನ್ನ ಅಮ್ಮನೊಡನೆ ಮಾತನಾಡಿದ..
ನಂತರ ಅವನ ಅಮ್ಮನೊಡನೆ ನಾನೂ ಮಾತನಾಡಿದೆ..

"ನೋಡಮ್ಮ... 
ನಿನ್ನ  ಬಗೆಗೆ ಎಲ್ಲವನ್ನೂ ಹೇಳಿದ್ದಾನೆ...
ನಿನ್ನ ಫೋಟೊವನ್ನೂ ತೋರಿಸಿದ್ದಾನೆ..
ನೀನು ಮುದ್ದಾಗಿ ಮಹಾಲಕ್ಷ್ಮಿಯಂತೆ ಇದ್ದಿಯಮ್ಮ...
ನನಗೆ ನಿನ್ನಂಥಹ ಸೊಸೆ ಬೇಕಿತ್ತು...
ಆದರೆ  ನಮ್ಮ  ಭಾಷೆ... ಆಹಾರ ಊಟಗಳು ಬೇರೆ ಬೇರೆ...

ನಿನ್ನ ಮದುವೆ  ಆದರೆ ನಮ್ಮ ಹುಡುಗ ತುಂಬಾ ಅದೃಷ್ಟವಂತ ಕಣಮ್ಮಾ..."

ನನಗೆ  ನಾಚಿಕೆಯಾಯಿತು... 
ಮುಜುಗರವೂ ಆಯಿತು...
ಹುಡುಗನ ಬಗೆಗೆ  ಅಭಿಮಾನ ಜಾಸ್ತಿಯಾಯಿತು...

ಹುಡುಗ ನನ್ನ ಕಣ್ಣುಗಳನ್ನು  ಬಹಳ ಪ್ರೀತಿಯಿಂದ ನೋಡುತ್ತಿದ್ದ....


ಹೆಣ್ಣು  ಬಯಸುವಂಥಹ ನೋಟ ಅದು... !

ಆತನ  ಕೈಗಳು ನನ್ನ  ಕೈ ಮುಟ್ಟಿದವು....!


ಮೈ ರೋಮಾಂಚನವಾಯಿತು...!
ಆತ ಇನ್ನೂ  ಹತ್ತಿರ ಬಂದ... !
ಸಾವಕಾಶವಾಗಿ ನನ್ನ  ಭುಜ ಬಳಸಿದ...!

ನಾನು  ಪ್ರತಿರೋಧ ಮಾಡಬೇಕಾ ?

ಆಗಲಿಲ್ಲ...  
ಆತ ಸಾವಕಾಶವಾಗಿ  ಮೈಯೆಲ್ಲ ಸವರಿದ...!
ಮೈ ಜುಮ್ ಎಂದಿತು....! 


ಮತ್ತೆ  ನನ್ನ  ಅಂಗೈ  ಬೆವರತೊಡಗಿತು...

ಆತ ಸಾವಕಾಶವಾಗಿ  ತನ್ನ ಕೆನ್ನೆಯನ್ನು ನನ್ನ ಕೆನ್ನೆಯ ಬಳಿ ತಂದ...!


ಬಿಸಿಯುಸಿರು...!
ಒಂಥರಾ  ಉನ್ಮಾದ ಹೆಚ್ಚಿಸಿತು...


ಇದು ಪ್ರೀತಿನಾ ?

ನಾನು ಕಣ್ಮುಚ್ಚಿದೆ...!

ಆ ಕ್ಷಣದಲ್ಲಿ ನಾನು ಎಲ್ಲೋ ತೇಲಿ ಹೋದ ಅನುಭವ....!

ಸಣ್ಣ ಧ್ವನಿಯಲ್ಲಿ  ಬರುತ್ತಿರುವ ಹಾಡು ಬದಲಾಯಿತು...

ನನಗೆ ಎಚ್ಚರವಾದಂತಾಯಿತು.. 
ಆತ ನನ್ನನ್ನು ಬಿಟ್ಟು ಸ್ವಲ್ಪ ದೂರ ಕುಳಿತುಕೊಂಡ.....

"ಸ್ಸಾರಿ..." 
ಅಂದ...

ಇದರಲ್ಲಿ  ಅವನ ತಪ್ಪು ಇರಲಿಲ್ಲ..


ಆ  ವಾತಾವರಣ...
ಸಂದರ್ಭ ಹಾಗಿತ್ತು.. !
ನಾನು  ತಲೆ ತಗ್ಗಿಸಿ ಕುಳಿತೆ... 


ಮೈ ಕಂಪನ ಇನ್ನೂ ಇಳಿದಿರಲಿಲ್ಲ..

"ಒಂದು ನಿಮಿಷ... 
ಇಲ್ಲೇ ವಾಷ್ ರೂಮಿಗೆ ಹೋಗಿ ಬರ್ತೇನೆ.. " 

ಆತ ಎದ್ದು ಹೋದ...

ನನಗೀಗ ಪೂರ್ತಿ ಎಚ್ಚರವಾಯಿತು...

ನಾನು ತಪ್ಪು ಮಾಡಿಬಿಟ್ಟೆನಾ?

ಹೇಗಿದ್ದರೂ ಈತನನ್ನೇ ಮದುವೆಯಾಗುವದು... 
ನನ್ನ ಅಪ್ಪ.. ಅಮ್ಮ ನನ್ನ ಅಭಿಪ್ರಾಯಕ್ಕೆ ಇಲ್ಲ ಅಂತ ಹೇಳೋದಿಲ್ಲ..

ಅವರನ್ನು ಒಪ್ಪಿಸಲು  ತೊಂದರೆಯಾಗುವದಿಲ್ಲ ಅನಿಸಿತು...

ಅಷ್ಟರಲ್ಲಿ ಫೋನ್ ಶಬ್ಧಮಾಡಿತು...
ಅದು  ನನ್ನ  ಹುಡುಗನ ಮೊಬೈಲ್....


ಆತ ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಮರೆತು ಹೋಗಿದ್ದ...!
ಹೇಗಿದ್ದರೂ ನನ್ನ ಹುಡುಗ... !
ನನ್ನ ಬಾಳ ಸಂಗಾತಿ..!

ನಾನು ಸಹಜವಾಗಿ  ಕಾಲ್ ತೆಗೆದು ಕೊಂಡೆ...

ಅಲ್ಲಿಂದ ಬೇರೆ ಯಾರೋ  ಹುಡುಗನೊಬ್ಬ ಮಾತನಾಡುತ್ತಿದ್ದ...

"ಹೇ..ಯ್... !
ನೀನು ಎದ್ದು ಬಂದಿದ್ದು ನೋಡಿದೆ... 
ನಾನೂ ಹೊಟೆಲ್ ಹೊರಗಿನಿಂದ ಮಾತಾಡ್ತ  ಇದ್ದೇನೆ.....

ನಿಮ್ಮಿಬ್ಬರ ವಿಡಿಯೋ..ಶೂಟಿಂಗ್ ಮಾಡಿದ್ದು ಚೆನ್ನಾಗಿ ಬಂದಿದೆ...!


ನಿನೊಬ್ಬ  ಅದ್ಭುತ  ನಟ ಕಣೋ...!


ನೀನು  ಕಿಸ್ ಮಾಡಿದ ಸನ್ನೀವೇಶ ...!!
ತುಂಬಾ ಸೊಗಸಾಗಿದೆ ಬಂದಿದೆ ಕಣೊ..... !! ~.. .
ಆ ಹುಡುಗಿ ದೊಡ್ಡ  ಪೆದ್ದು ...
ಅವಳಿಗೆ ಏನೂ  ಗೊತ್ತೇ ಆಗಿಲ್ಲ... ಹ  ಹ್ಹಾ.. !!"








( ಉತ್ತಮ ಪ್ರತಿಕ್ರಿಯೆಗಳಿವೆ.. ದಯವಿಟ್ಟು ನೋಡಿ....)

91 comments:

PARAANJAPE K.N. said...

ಹೌದು, ಯಾವ್ಯಾವ ಕಾಲಕ್ಕೆ ಏನೇನು ಆಗಬೇಕೋ ಅದಾದ್ರೇನೆ ಚಂದ. ಇಲ್ಲಾಂದ್ರೆ ಬದುಕು ಹಳಿ ತಪ್ಪುತ್ತೆ. ಇವತ್ತಿನ ಜಗದಲ್ಲಿ ಹಾದಿ ತಪ್ಪುವುದು ಸುಲಭ, ಮತ್ತೆ ಸರಿದಾರಿಗೆ ಬರುವುದು ಬಲು ಕಠಿಣ

ಅಡಪೋಟ್ರು said...
This comment has been removed by the author.
Dr.D.T.Krishna Murthy. said...

ಈ ಹಾದಿಯಲ್ಲಿ ಹೋಗುತ್ತಿರುವವರಿಗೆ ಕಣ್ಣು ತೆರೆಸುವ ಕಥೆ.ಇಷ್ಟವಾಯಿತು ಪ್ರಕಾಶಣ್ಣ.

ಅಡಪೋಟ್ರು said...

Hi..Prakashanna...
After long time..Sensible story..Yes this is what happening infront of us.
"Pollu aadambharakke mosa hogodu sahaja" ide badukina vaichitrya. Manushynige tanna tanada arivu maretaga/kaledukondaga aaguva anubhava anta helabahudu alva..!!!

ಓ ಮನಸೇ, ನೀನೇಕೆ ಹೀಗೆ...? said...

ಪ್ರಸಕ್ತ ಸಮಾಜದ ಬಹುದೊಡ್ಡ ಸಮಸ್ಯೆಯನ್ನು ಆಧಾರಾಗಿಟ್ಟುಕೊಂಡು ಹೆಣೆದಿರುವ ಕಥೆ. ಎಷ್ಟೋ ಹೆಣ್ಣುಮಕ್ಕಳು ಈ ರೀತಿಯ ಮೊಸಕ್ಕೆ ಬಲಿಯಾಗಿ ಭಾವನೆಗಳನ್ನು, ಬದುಕನ್ನು ಹಾಳುಮಾಡಿಕೊಳ್ತಾರಲ್ಲ ಅಂತ ಒಮ್ಮೊಮ್ಮೆ ತುಂಬಾ ಬೇಸರವಾಗುತ್ತೆ. ತುಂಬಾ ನೈಜವಾದ ಕಥೆ. ಕಥೆಯ ಅಂತ್ಯದಲ್ಲಿ ಸ್ವಲ್ಪ ಅಸ್ಪಷ್ಟತೆ ಇದೆ ಅನ್ಸುತ್ತೆ ಪ್ರಕಾಶಣ್ಣ.

sunaath said...

ಕತೆಯು ಕ್ಷಿಪ್ರವಾಗಿ ಬೆಳೆದು, ಅನೂಹ್ಯ ತಿರುವನ್ನು ಪಡೆದಿದೆ. ಸೊಗಸಾದ ಕತೆ, ಕಟುವಾದ ವಾಸ್ತವ!

ಅನಿಲ್ ಬೇಡಗೆ said...

ಪ್ರಕಾಶ್ ಮಾಮ,
ಇದು ಈಗಿನ ಸದ್ಯದ ಪರಿಸ್ತಿತಿ..
'ಸಿ.ಡಿ.' ಹಗರಣ ಇದ್ದಂಗೆ..!
ಟೀವಿ ಯಲ್ಲಿ ದಿನಬೆಳಗಾದರೆ, ಮೂರೂ ಹೊತ್ತು ಇಂತದ್ದನ್ ಹಾಕ್ತಾರೆ, ಹಾಗು ಜನ ಅದನ್ನ ನೋಡ್ತಾರೆ..!
ಆದರೇ, ಅದರಿಂದ ಯಾಕೆ ಕಲಿಯಲ್ಲ..? ಜಾಣರಾಗಲ್ಲ..?
ಒಂದು ಜಾಗ್ರತೆ ನಮ್ಮಲ್ಲಿ ಸದಾ ಇರಬೇಕು, ಒಂದು ಪುಟ್ಟ ಮೈ ಮರೆವು ಜೀವನವಿಡಿ ನೋವು ಕೊದಬಹುದಲ್ವಾ..?
ನಿಮ್ಮ ಲೇಖನ ಒಂದು ಎಚ್ಚರಿಕೆ..!
ಅದ್ಭುತ ಲೇಖನ..

Santosh Hegde Ajjibal said...

ಪ್ರಕಾಶಣ್ಣ
'ಸಹಜ ' ಒಂದು ನೈಜ ವರಧಿಯಂತಿದೆ ನಮ್ಮ ಸುತ್ತಮುತ್ತೆಲ್ಲ ಇಂತಹ ಏಸ್ಟೋ ಗಟನೆಗಳು ಪ್ರತಿನಿತ್ಯ ನಡೆಯುತ್ತಿದೆ ವಾಸ್ತವತೆಗೆ ಕನ್ನಡಿಯಾದ ಇ ಕತೆ ತುಂಬಾ ಚನ್ನಾಗಿ ಮೂಡಿ ಬಂದಿದೆ

Ittigecement said...

ಪರಾಂಜಪೆಯವರೆ....

ಮದುವೆ ವಯಸ್ಸಿನಲ್ಲಿ ಮದುವೆ ಆಗಬೇಕು...

ಆ ವಯಸ್ಸಿನಲ್ಲಿ ಮದುವೆ ಆಗದೆ ಒಂಟಿಯಾಗಿ ಇದ್ದು ಅಭ್ಯಾಸ ಆಗಿಬಿಟ್ಟರೆ ಮುಂದೆ ಜೋಡಿಯಾಗಿ ಹೊಂದಾಣಿಕೆ ಬಲು ಕಷ್ಟ..

ಬದುಕಿನಲ್ಲಿ ಜವಾಬ್ದಾರಿ ಬೆಳೆಯಲು ಹಿರಿಯರು ಮೊದಲು ಮದುವೆ ಮಾಡಿಬಿಡುತ್ತಿದ್ದರು..
ವ್ಯವಹಾರದಲ್ಲಿ ಬುದ್ಧಿವಂತ ಜನಾಂಗದವರಾದ..
ಶೆಟ್ಟರು.. ಮಾರ್ವಾಡಿಗಳು, ಚಿನ್ನದ ಕೆಲಸ ಮಾಡುವವ್ವರು...
ಜಲ್ದಿ ಮದುವೆ ಮಾಡಿ ...
ತಮ್ಮ ಮಕ್ಕಳನ್ನು ಅಂಗಡಿಯಲ್ಲಿ ಕೂರಿಸುತ್ತಾರೆ..

ಅಂಥವರು ದಾರಿ ತಪ್ಪುವದು ಕಡಿಮೆ..

ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು...

Ittigecement said...

ಕೃಷ್ಣಮೂರ್ತಿಯವರೆ...

ಹಳ್ಳಿಯ ಕಡೆ...
ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಗೆ ಹತ್ತು ಸಾವಿರದ ಮೊಬೈಲು ಕೊಟ್ಟು..
ಆ ಹೆಣ್ಣುಮಕ್ಕಳನ್ನು ಬುಟ್ಟಿಗೆ ಹಾಕಿಕೊಂಡು.. ದಾರಿ ತಪ್ಪಿಸುವ ಕಾರ್ಯಗಳು ಬಹಳ ನಡೆಯುತ್ತ ಇದೆ..

ಈ ಕಥೆಯಂಥಹ ಒಂದು ಅನುಭವ ನಮ್ಮ ಮಿತ್ರರ ಮನೆಯಲ್ಲಿ ನಡೆದಿದೆ...

ಕಥೆಯನ್ನು ಇಷ್ಟ ಪಟ್ಟು ಪ್ರೋತ್ಸಾಹ ಕೊಟ್ಟಿದ್ದಕ್ಕೆ ಧನ್ಯವಾದಗಳು

ಜೈ ಹೋ.. !

Ittigecement said...

ಸ್ನೇಹಾ ಪುಟ್ಟಿ...

ಅಪ್ಪ ಅಮ್ಮ ತನ್ನ ಬದುಕಿಗೆ ಒಳ್ಳೆಯದನ್ನು ಮಾಡುತ್ತಾರೆ..
ತನ್ನ ಅಭಿರುಚಿಗೆ ತಕ್ಕಂಥಹ ಗಂಡನ್ನು ನೋಡುತ್ತಾರೆ..
ಅವರಲ್ಲಿ ನಂಬಿಕೆ ಇಡದೇ..

ನೀವು ಹೇಳಿದ ಹಾಗೆ ಆಡಂಬರದ ಟೊಳ್ಳುತನಕ್ಕೆ ಮೋಸ ಹೋಗಿ..

ಜಾರಿ ಬಿದ್ದಾಗ "ಸಮಯ" ಮಿಂಚಿಹೋಗಿರುತ್ತದೆ... !

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಈ " ಅಡಪೋಟ್ರು " ಶಬ್ಧದ ಪೇಟೆಂಟ್ ನನ್ನ ಬಳಿ ಇದೆ...

ಇದನ್ನು ಹಣ ಕೊಟ್ಟು ಖರಿದಿಸ ಬೇಕಿತ್ತು...

ಇನ್ನೇನು?

"ಅಡಪೋಟ್ರು" ಬ್ಲಾಗಿನಲ್ಲಿ ಲೇಖನಗಳು ಬರಲಿ...

ಜೈ ಹೋ...!

Ittigecement said...

ಓ ಮನಸೇ.. ನೀನೇಕೆ ಹೀಗೆ..?

ಬಣ್ಣದ ಮಾತುಗಳನ್ನು ಆಡಿ..
ಮೋಸ ಮಾಡುವ ಜನ ನಮ್ಮ ಅಕ್ಕಪಕ್ಕದಲ್ಲಿ ಇದ್ದೇ ಇರುತ್ತಾರೆ...

ನಾವು ಮೋಸ ಹೋಗಾಆದಂತೆ ಬಹಳ ಎಚ್ಚರಿಕೆಯಲ್ಲಿರ ಬೇಕು ಅಷ್ಟೆ...

ನಮ್ಮ ಈ ಜಗತ್ತಿನಲ್ಲಿ ಮೋಸ ಮಾಡುವದು ತೀರಾ ಸಹಜ..!

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ದಿನಕರ ಮೊಗೇರ said...

prakashaNNa,

kathe tumbaa chennaagide... idu elleDe naDeyuva, naDeyuttiruva kathe.... oLLeya antya koTTiddiri.... sariyaagide..... dhanyavaada oLLeya kathe koTTiddakke...

ಸುಧೇಶ್ ಶೆಟ್ಟಿ said...

Thumba nija prakashaNNa idu... i internet yugadalli yenu bekaadaru aagabahudu... namma jaagratheyalli naavirabeku ashte :)

Thumba ishta aayithu...

umesh desai said...

ಹೆಗಡೇಜಿ ನಿಮ್ಮ ಎಂದಿನ ವಿಶಿಷ್ಟ ಶೈಲಿ ಮುದನೀಡಿತು.
ಕತೆ ಚೆನ್ನಾಗಿದೆ ಈಗಿನ ದಿನಗಳಲ್ಲಿ ಈ ವರ್ಜಿನಿಟಿ ಇತ್ಯಾದಿ ಸ್ವಲ್ಪ ಹಳಸಲು ವಿಚಾರಧಾರೆ ಅನಿಸುತ್ತವೇನೋ...ಅದು ಪಟ್ಟಣ ಹಳ್ಳಿ ಅಂತ ಭೇದಭಾವ ಇರದೆ ಈ ಥರದ ಯೋಚನೆ ಇದೆ. ರಿಯಾಲಿಟಿ ಶೋ (ಯುಟಿವಿದು) ನೋಡಿದ್ರೆ ನಾವು
ಅಂದ್ರೆ ಹಳೆವಿಚಾರಧಾರೆಯವರು ಮೂಲೆಯ ಕಸಬರಿಗೆಗಳೋ ಹೇಗೆ ಎಂಬ ಅನುಮಾನ ಬರುತ್ತದೆ. ಇನ್ನು ಮುಂದಿನ
ದಿನ ಹೇಗಿವೆಯೋ ಯಾರು ಬಲ್ಲ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ತಮ್ಮ ಮಿತಿಯ ಅರಿವು ಮತಿಯಲ್ಲಿಲ್ಲದಿದ್ದರೆ ನಿಮ್ಮ ಕಥೆಯ೦ತೆಯೇ.(ಕಥೆಯಲ್ಲ ಬಿಡಿ ವಾಸ್ತವವನ್ನೇ ಕಥೆಯಾಗಿಸಿದ್ದೀರಿ).ವ್ಯಥೆಯಾಗುತ್ತದೆ.

ಪ್ರವೀಣ್ ಭಟ್ said...

Sahaja satya... bareyo shaili supr.. katu satyadondige kathe muktaya aydu... ondu echcharikeya gantenu kooda houdu...

ista atu..

Pravi

balasubramanya said...

ಇದಿನ ಹುಚ್ಚು ಆಧುನಿಕತೆಯ ಅಮಲಿನಲ್ಲಿ ಕಂಡುಬರುವ ಘಟನೆ !! ಕೆಲವರಿಗೆ ಕಾಮನ್ನು ,ಕೆಲವರಿಗೆ ಹೀಗೂ ಆಗುತ್ತಾ ಅನ್ನುವ ಅನುಭವ. ಯಾರನ್ನು ಬೈಯ್ಯೋಣ ??ಜೀವನವನ್ನೇ,?? ಆಧುನಿಕತೆಯ ಸೋಗಿನ ಅನೈತಿಕತೆಯನ್ನೇ ? ?ಎಲ್ಲಾ ಗೊತ್ತೆಂದು ಬೀಗುವ ಯುವಜನತೆಯನ್ನೇ???, ದಿಕ್ಕು ತಪ್ಪಿಸುವ ಸಮಾಜವನ್ನೇ ??? ಜೀವನದ ಅರ್ಥ ತಿಳಿಸಲು ವಿಫಲವಾಗಿರುವ ಶಿಕ್ಷಣವನ್ನೇ?? ಯಾರದೋ ಜೀವನವನ್ನು ತಮ್ಮದೇ ಜೀವನವೆಂದು ಭಾವಿಸಿ ಬದುಕುವ ಕನಸಿನ ಯುವಜನತೆಯನ್ನೇ ??? ಒಟ್ಟಿನಲ್ಲಿ ಅವರವರ ಜೀವನಕ್ಕೆ ಅವರೇ ಹೊಣೆ .ಲೇಖನ ಚೆನ್ನಾಗಿದೆ.

Ittigecement said...

ಸುನಾಥ ಸರ್...

ಕಥೆಯನ್ನು ಮೊದಲಿಗೆ ನನ್ನಕ್ಕನಿಗೆ ಹೇಳಿದೆ..
ಅದರಲ್ಲಿ ಮುಕ್ತಾಯ ಬೇರೆ ಥರಹ ಇತ್ತು..

ನನ್ನ ಗೆಳೆಯ ದಿವಾಕರ ಇಂದು ಫೋನ್ ಮಾಡಿ ಒಂದು ಘಟನೆ ಹೇಳಿದ..
ಆಗ ಮುಕ್ತಾಯ ಬದಲಿಸಿದೆ...
ದಿವಾಕರ ಹೇಳಿದ ಘಟನೆಯ ಮುಕ್ತಾಯ ಸ್ವಲ್ಪ ಇದೇ ಥರಹ ಇದೆ...

ಕಳೆದ ವಾರ ಚಿಕ್ಕಮಗಳೂರಿನಲ್ಲಿ ಸ್ವಲ್ಪ ಹೆಚ್ಚುಕಡಿಮೆ ಇಂಥಹುದೇ ಘಟನೆ ಘಟಿಸಿದೆ..

ಪೋಲಿಸರಿಂದಾಗಿ ಹುಡುಗಿ ಬಚಾವಾಗಿದ್ದಾಳೆ..

ಸರ್..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಅನಿಲ್...

ಹತ್ತು ಸಾವಿರದ ಒಂದು ಮೊಬೈಲ್ ಕೊಟ್ಟು ಸಿರ್ಸಿಯಲ್ಲಿ ಒಂದು ಹುಡುಗಿಯನ್ನು ..ಬುಟ್ಟಿಗೆ ಹಾಕಿಕೊಂಡು..
ಕೆಲವು ಪುಂಡು ಹುಡುಗರು..
ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನೆನಪಾಗುತ್ತಿದೆ..

ಮೋಸ ಮಾಡುವ ಜನ ಇದ್ದೇ ಇರುತ್ತಾರೆ...
ಅವರ ಚಂದದ ಗಿಫ್ಟ್...
ಅವರ ಮೋಹಕ ನಗುವಿನಲ್ಲಿ ಮೋಸ ಕಾಣುವದೇ ಇಲ್ಲ...

ನಿಜ.. ನೀವು ಹೇಳಿದ ಹಾಗೆ ಒಂದು ಕ್ಷಣದ ಮೈಮರೆವು ಜೀವನ ಪೂರ್ತಿ ನೋವು ತರುವ..
ವಾಸಿಯಾಗದ ಗಾಯವಾಗಿ ಯಾವಾಗಲೂ ಉಳಿದುಬಿಡ ಬಹುದು...

ಕಥೆ ಇಷ್ಟವಾಗಿದ್ದಕ್ಕೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

ಜೈ ಹೋ.. !

Gubbachchi Sathish said...

ಸಹಜ ಕಥೆ ಸಹಜವಾಗಿದೆ. ಪ್ರಕಾಶಣ್ಣನ ಪಂಚ್ ಕೊನೆಯಲ್ಲಿ ನಾಪತ್ತೆಯಾಯಿತೇನೋ ಅನ್ನಿಸಿತು.

Ittigecement said...

ಪ್ರೀತಿಯ ಸಂತೋಷ್...

ನಾವು ಎಲ್ಲಿಗೆ ಹೋಗುತ್ತಿದ್ದೇವೆ..?
ಆಧುನಿಕತೆಯ ಸೋಗಿನಲ್ಲಿ...
ಈ ಮಾಧ್ಯಮಗಳು ಸೃಷ್ಟಿಸುತ್ತಿರುವ ಭ್ರಮೆಯಿಂದಾಗಿ ನಾವು ದಾರಿ ತಪ್ಪುತ್ತಿದ್ದೇವೆಯೇ..?

ಈ ಬದಲಾಗುತ್ತಿರುವ ವಿಚಾರಗಳು...
ನಡತೆಗಳು ಸರಿಯಾಗಿದೆಯಾ?

ನಿಜಕ್ಕೂ ನಾವು ಒಂದೆಡೆ ನಿಂತು ವಿಚಾರ ಮಾಡುವಂಥಹ ಸ್ಥಿತಿ ಇದೆ...

ಆದರೆ ನಿಂತುಕೊಳ್ಳಲು ಪುರುಸೊತ್ತಿಲ್ಲ...

ಯಾಕೆಂದರೆ ಈ ಸಮಸ್ಯೆ ನಮ್ಮ ಕಾಲುಬುಡಕ್ಕೆ ಇನ್ನೂ ಬಂದಿಲ್ಲ...

ಇನ್ನೂ ಹೇಳಬೇಕೆಂದರೆ ನನ್ನ ಮಗ ಇನ್ನೂ ಸಣ್ಣವನು.. ಹಾಗಾಗಿ ನನಗೆ ಸಧ್ಯ ಅದರ ವಿಚಾರ ಬೇಡ..

ಎಲ್ಲವೂ ನಮ್ಮ ಅನುಕೂಲಕ್ಕೆ... ನಮ್ಮ ಕೆಟ್ಟ ಸ್ವಾರ್ಥಕ್ಕೆ.. ಅಷ್ಟೇ ಸಂಬಂಧಪಟ್ಟು ವಿಚಾರ.. ಕಾರ್ಯ ಮಾಡುತ್ತೇವೆ...

ನಿಮ್ಮ ಪ್ರೋತ್ಸಾಹಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು...

Saritsagara said...

Hai Prakashanna,

"sahaja" kathe tumba sahajavagide... Sathyakke tumba hattira anta annisutte... Aadhunika tantrajnanavannu hege balasikollbeku,adarinda yava reeti mosa hogabahudu anta tiliyadavaru ondusala odale bekadantaha kathe..
Idu kevala ondu udaharane aste.. innu esto taraha mosa hogabahudu jana idarinda..ondu vishaya gamanisalebeku.."idarallli kevala tantrajnandste tappilla..illi adannu balasuvavara tappe hecchu..Manushya nirmisida ella vastugalu avana manssinante nadeyuttave anta ello odida nenapu.."
Intaha sundara,'sahaja',tatparyavulla kathe odi bahala khushiyayitu....Thyanx..

Saritsagara said...
This comment has been removed by the author.
Ittigecement said...

ದಿನಕರ್...

ವಾಸ್ತವದ ಬದುಕಿನಲ್ಲಿ ಖಳನಾಯಕರು ಯಾವ ಮುಖದಲ್ಲಿ ಕಾಣಿಸುತ್ತಾರೆ...
ಗೊತ್ತೇ ಆಗುವದಿಲ್ಲ...

ಯಾವ ಹುತ್ತದಲ್ಲಿ ಯಾವ ಹಾವಿರುತ್ತೋ... ಗೊತ್ತಿಲ್ಲ...

ಆದರೆ...
ಯಾವುದೇ.. ಹಾವಿರಲಿ ಹುತ್ತದಲ್ಲೇ ಇರುತ್ತದೆ...
ಅದು ಅದರ ಮನೆ..

ನಮ್ಮ ...
ನಮ್ಮ ಸುತ್ತಲಿನ ಅನುಭವದಲ್ಲಿ.. ಎಷ್ಟೆಲ್ಲ ಮೋಸಗಳು ನಡೆದರೂ...
ನಾವು ಎಚ್ಚೆತ್ತುಕೊಳ್ಳುವದಿಲ್ಲ...

ಇದು ವಿಪರ್ಯಾಸ.. !

ಇದೊಂದು ನೈಜ ಘಟನೆ... ಉಪ್ಪು, ಹುಳಿ ಮಸಾಲೆ ಸೇರಿಸಿದ್ದೇನಷ್ಟೆ...

ಇದನ್ನು ಓದಿ ಒಬ್ಬರಾದರೂ ಎಚ್ಚೆತ್ತುಕೊಂಡರೆ ಬರೆದದ್ದು ಸಾರ್ಥಕ.. !

ದಿನಕರ್ ....
ನೀವೆಲ್ಲ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದು ನನಗೆ ಉತ್ಸಾಹ ಕೊಟ್ಟಿದೆ...
ನಿಮ್ಮ ಪ್ರೋತ್ಸಾಹಕ್ಕಾಗಿ ವಂದನೆಗಳು...

Ittigecement said...

ಸುಧೇಶ್.. ಭಾಯ್..

ಆಧುನಿಕತೆಯ.. ಸಮಾನತೆಯ ಅಬ್ಬರದಲ್ಲಿ ನಾವು ತಪ್ಪು ಹೆಜ್ಜೆ ಇಡುತ್ತಿರುವ ಅರಿವು ನಮಗೆ ತಿಳಿಯುತ್ತಿಲ್ಲ.....

ನಮ್ಮ ಮಿತ್ರ "ಉಮೇಶ್ ದೇಸಾಯಿಯವರ" ಪ್ರತಿಕ್ರಿಯೆ ತುಂಬಾ ಮಾರ್ಮಿಕವಾಗಿದೆ...

"ಗೆಳೆಯ" ಗೆಳೆತನದ ಶಬ್ಧಗಳ ದುರುಪಯೋಗ...
ಮಾಧ್ಯಮಗಳು ಸೃಷ್ಟಿಸುವ ಭ್ರಮೆಗಳು..
ನಾವು ಯಾವಕಡೆ ಹೋಗುತ್ತಿದ್ದೇವೆ ಎನ್ನುವ ವಿಚಾರ ಕೂಡ ಮಾಡುವಂಥಹ ಸ್ಥಿತಿಯಲ್ಲಿ ನಾವಿದ್ದೇವೆ...

ಕಾಲವೇ ಇದಕ್ಕೆ ಉತ್ತರ ಕೊಡಲಿದೆ...
ಕೊಡಬೇಕು... ಅಲ್ಲವೆ?

ಸುಧೇಶ್..
ನಿಮ್ಮ ಕಾದಂಬರಿ ಪುಸ್ತಕವಾಗುವ ಕನಸು ನನಸಾಗಲಿ...
ನಾವೆಲ್ಲ ನಿಮ್ಮ ಜೊತೆಯಲ್ಲಿದ್ದೇವೆ...

ಜೈ ಹೋ ಸುಧೇಶ್.. ಧನ್ಯವಾದಗಳು...

ಸುಬ್ರಮಣ್ಯ said...

ಉತ್ತಮ ಕಥೆ-ಸತ್ಯಕ್ಕೆ ಹತ್ತಿರ.

Sandeep K B said...

"ONLINE" ಮತ್ತೆ "OFFLINE" ನಡುವೆ ತಮ್ಮ "LIMIT LINE" ಮರೆತರೆ ಆಗುವ ಸಹಜತೆಯನ್ನು ಚೆನ್ನಾಗಿ ವರ್ಣಿಸಿದ್ದೀರ.

Narayan Bhat said...

ಮುಗ್ಧರು ಮೋಸ ಹೋಗುತ್ತಲೇ ಇರುತ್ತಾರೆ...ಒಳ್ಳೆಯಕಥೆ ಮತ್ತು ಸೊಗಸಾದ ನಿರೂಪಣಾ ಶೈಲಿ.

ragat paradise said...

ಮತ್ತೊಂದು amazing .ಪ್ರಕಾಶಣ್ಣ ಸತ್ಯವಾಗಿ ಹೇಳ್ತೀನಿ ನಾನು ಬೇರೆ ಯಾವ ಬ್ಲಾಗನ್ನು ಕೂಡ ಇಷ್ಟು ತಾಳ್ಮೆಯಿಂದ ಓದಲ್ಲ .ಕನ್ನಡ ದ ಸಾವಿರಾರು ಬ್ಲಾಗ್ನಲ್ಲಿ ನಿಮ್ಮ ಬ್ಲಾಗಿನ ಲೇಖನವನ್ನು ಮಾತ್ರ ನಾನು ಪೂರ್ತಿ ಓದೋದು...really u rocks boss....keep writing.....

Veena DhanuGowda said...

nambike anodhu thumbbba kasta
:(

Ittigecement said...

ಉಮೇಶ್ ದೇಸಾಯಿಯವರೆ...

ಎಷ್ಟು ಸತ್ಯವಾದ ಮಾತುಗಳನ್ನಾಡಿದ್ದೀರಿ..

ಆಧುನಿಕತೆಗೆ ಗಂಟು ಬಿದ್ದು ಮೌಲ್ಯಗಳನ್ನು ಮೂಲೆ ಗುಂಪು ಮಾಡುತ್ತಿದ್ದೇವೆ..
ಈ ಬದಲಾವಣೆಗೆ ಏನೂ ಪ್ರತಿಕ್ರಿಯೆ ಮಾಡಲಾಗದೆ..
ಸುಮ್ಮನೆ ಮೂಕ ಪ್ರೇಕ್ಷಕರಾಗಿದ್ದೇವೆ..

ಇದು ಎಲ್ಲಿಗೆ ಹೋಗಿ ನಿಲ್ಲ ಬಹುದು?

ನೀವು ಕೊಟ್ಟಿರುವ ಪ್ರತಿಕ್ರಿಯೆ ಓದಿ ನನಗೆ ಹೆಮ್ಮೆ ಅನಿಸಿತು..
ಬರೆದದ್ದು ಸಾರ್ಥಕ ಅನ್ನಿಸುವಂಥಹ ಪ್ರತಿಕ್ರಿಯೆ...

ತುಂಬಾ ತುಂಬಾ ಧನ್ಯವಾದಗಳು..

ನಿಮ್ಮೆಲ್ಲರ ಪ್ರತಿಕ್ರಿಯೆಗಳು ನನ ಇನ್ನಷ್ಟು ಬರೆಯಲು ಉತ್ಸಾಹ..
ಥ್ಯಾಂಕ್ಯೂ.. ಧನ್ಯವಾದಗಳು..

Kiran Hegde said...

Suuuper. Thumba esta aayitu.

Rajesh Manjunath - ರಾಜೇಶ್ ಮಂಜುನಾಥ್ said...

ayyayyappa :-(

ಚುಕ್ಕಿಚಿತ್ತಾರ said...

ಕಥೆ ಚೆನ್ನಾಗಿದೆ.
ಕಥೆ ಇನ್ನು ಮು೦ದಿನ ದಿನಗಳಲ್ಲಿ ಸ೦ಪೂರ್ಣ ಸಹಜವೇ ಆಗಿಬಿಡುವುದೇನೊ..
ಬದಲಾವಣೆಗಳಿಗೆ ನಾವು ಹೊ೦ದಿಕೊಳ್ಳುವ೦ತೆ ಈ ರೀತಿಯ ವಿಚಾರಗಳನ್ನೂ ”ಸಹಜವಾಗಿ” ತೆಗೆದುಕೊಳ್ಳುವ ಕಾಲ ದೂರವಿಲ್ಲ ಅನ್ನಿಸುತ್ತದೆ ಪ್ರಕಾಶಣ್ಣ...
ಒ೦ದು ಕಾಲದಲ್ಲಿ ಅನೀತಿ ಎ೦ದು ಅನಿಸಿದ್ದು ಅದೆ ಮು೦ದೊ೦ದು ದಿನ ನೀತಿಯಾಗಿಬಿಡುತ್ತದೆ... ”ಸಹಜ”..

ಸೈಡ್ ಎಫೆಕ್ಟ್ಸ್ ವಿಲ್ ಬಿ ನೆಗ್ಲೆಕ್ಟೆಡ್...!!!

Naveen Shekar said...

ಶಾಕ್ ತರಹ ಎಂಡಿಂಗ್ ಕೊಟ್ರಲ್ಲ ಪ್ರಕಾಶಣ್ಣ?? "ಅರ್ಕುಟ್ ಗೆಳೆಯ ಸ್ನೇಹಕಲ್ಲಾ, ಫೇಸ್-ಬುಕ್ ಗೆಳೆಯ ಮನಸ್ಸಲಿಲ್ಲ.."

Bhairav Kodi said...
This comment has been removed by the author.
Bhairav Kodi said...

ಯಾವದೇ ವಿಷ್ಯವಾದ್ರು ಸರಿ ನೀವ್ ಕಟ್ಟಿ ಕೊಡು style really fantastic ಪ್ರಕಾಶಣ್ಣ......ಎಲ್ಲಾದರು ಸಿಕ್ಕರೆ ತಬ್ಬಿ ನಿಮ್ಮ ತುಟಿಗಳಿಗೆ ಚುಂಬಿಸಿ ಬಿಡ್ತೇನೆ ಸತ್ಯ

Kishor said...

hi..
this s really good 1..
i liked it and this s what happening now a days...ppl should not attract for outlook express should think abt the inner soul

ಸಾಗರದಾಚೆಯ ಇಂಚರ said...

Ptrakashanna,
uttama kathe mattu sannivesha,
baduku padeyuva tiruvu helalu asaadya
kaalave ellakkoo uttara
Jai Ho

Prashant said...

ಈ "ಸಹಜ" ಕಥೆಯು ಎಷ್ಟು ಅಸಹಜವಗಿದ್ದರು ನಮ್ಮ so called "civilised society"ಯಲ್ಲಿ ಸಹಜವಗಿರುವುದು ಈಗ ತಿಳಿಯುತಿದೆ!!

ವಿದ್ಯಾ ರಮೇಶ್ said...

ಸೂಪರ್ ಕಥೆ ಪ್ರಕಾಶಣ್ಣ! ಮಸ್ತ್ ಬರದ್ದೆ!! ನಿಜವಾಗಿ ನಡೀತಾ ಇರೂದೆ ಹಿಂಗೆ ಈಗೆಲ್ಲ.

Unknown said...

Prakasha! supparu!!'SAHAJA'sahajavaagi nadeyuvantaddannu,achhukattagi,chandavaagimoodi banju.vastavakke hidida kannadi.kathe?tumba ista aatu.

Ittigecement said...

ಪ್ರೀತಿಯ ಸುಬ್ರಮಣ್ಯ..

"ಇತಿ ಮಿತಿಯ ಅರಿವು..
ಮತಿಯಲ್ಲಿದ್ದರೆ..." ಇಷ್ಟು ಸಾಕು ದಾರಿ ತಪ್ಪದಿರಲು.. !

ಯಾಕೆ ನಮ್ಮ ಇಷ್ಟು ಚಂದದ ಸಂಸ್ಕಾರವನ್ನು ಬಿಟ್ಟು ಅಡ್ಡದಾರಿಯೆಡೆಗೆ ಮನಸ್ಸು ಎಳೆಯುತ್ತದೆ?

ಚೌಕಟ್ಟಿನ ಹೊರಗೆ ಓಡಲು ಬಯಸುವ ಮನಸ್ಸಿನ ತುಡಿತ ಇದಕ್ಕೆ ಕಾರಣವಾ??

ಸಂಪ್ರದಾಯವನ್ನು ಮುರಿಯಲು ಸುಪ್ತ ಮನಸ್ಸು ಕಾಯುತ್ತಿರುತ್ತದೆ ಅನ್ನುತ್ತಾರೆ ಮನಶ್ಯಾಸ್ತ್ರಜ್ಞರು..

"ಬದಲಾವಣೆಯೇ.. ಜಗದ ನಿಯಮ.." ಅಂದುಕೊಳ್ಳಬೇಕೆ...?

ನಿಮ್ಮೆಲ್ಲರ ಪ್ರೋತ್ಸಾಹದ ಪ್ರತಿಕ್ರಿಯೆಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ..

ತುಂಬಾ ತುಂಬಾ ಧನ್ಯವಾದಗಳು ಸುಬ್ರಮಣ್ಯ...

ಬಾಲು ಸಾಯಿಮನೆ said...

ಚನ್ನಾಗಿದೆ. ಈಗಷ್ಟೇ ಭಾರತೀಯರ ಸಾಮಾಜಿಕ ಮೌಲ್ಯಗಳ ಬಗ್ಗೆ ಜರ್ಮನ್ ಪ್ರಜೆಯೊಬ್ಬ ಅಭಿಮಾನದಿಂದ ಹೊಗಳುತ್ತಿದ್ದ. ಈ ಕಟೆ ಓದಿ ಆತ ಹೇಳಿದ್ದು ಅಣಕವಾದಂತೆ ಕಂಡಿದ್ದು ವಾಸ್ತವ.

ಹಳ್ಳಿ ಹುಡುಗ ತರುಣ್ said...

prakashanna super agide... prastuta dinagalalli nadiyotiro ondu satya sangati annu sundarvagi barediddira.. tumba ista aytu...

indu jaanagalu vesh-bhushana, adhikara antastu, vayyarada maatugalige marulagodu sir..

main namma hudugi yarige kayalli i-phone, odadokke car/bike, kaitumba salary, nayanavaada maatu iroru adre saku sir avane ella agogirtare nelane kanodilla... mundi inde enu yochanene irodilla...

mosamaaduvaru hechutiruvadara jote alli mosu hoguvavaru hechchuttiruvudu ondu duraadrusta...

chenagi barediddira sir danyavadagalu...

jai prakashanna...

Ittigecement said...

ಪ್ರೀತಿಯ ಪ್ರವೀಣ್ ಭಟ್...

ಆಧುನಿಕತೆಯ ಥಳಕು ಅಷ್ಟು ಆಕರ್ಷಣೆಯೇ..?
ತನ್ನ ಹೆತ್ತವರಿಗೂ ಸುಳ್ಳು ಹೇಳುವಷ್ಟು ಮಾಡಿಸಿಬಿಡುತ್ತದೆಯೆ?
ಮದುವೆ ಅನ್ನೋದು ವಯಕ್ತಿಕ ಅಂತ ಆದರೂ..
ಸುಶಿಕ್ಷಿತರೇ.. ವಯಸ್ಸಿನ ಪ್ರಭಾವಕ್ಕೆ ಒಳಗಾಗಿ ದುಡುಕಿನ ನಿರ್ಧಾರಕ್ಕೆ (ಹೆಚ್ಚಾಗಿ) ಬೀಳುತ್ತಾರಲ್ಲ !
ಇದು ಆಶ್ಚರ್ಯ.. ಮತ್ತು ವಿಪರ್ಯಾಸ !

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

Ittigecement said...

ಬಾಲೂ ಸರ್...

ಈ ಥರಹ ದುಡುಕಿನ ನಿರ್ಧಾರ ತೆಗೆದುಕೊಂಡ ಒಂದೆರಡು ಹೆಣ್ಣುಮಕ್ಕಳನ್ನು ನಾನು ಗಮನಿಸಿದ್ದೇನೆ...
ತಮಗೆ ಎಲ್ಲಾ ಗೊತ್ತು...
ತಾವು ಬುದ್ಧಿವಂತರು.. ಸಮಾನತೆ... ಪುರುಷ ಸಮಾಜ.. ಇತ್ಯಾದಿಗಳ ಬಗೆಗೆ ಬಲು ಚೆನ್ನಾಗಿ ಮಾತನಾಡುತ್ತಾರೆ..
ವಿಷಯವೂ ಗೊತ್ತಿರುತ್ತದೆ ಅನ್ನಿ...

ಇಂಥಹ ಒಬ್ಬ ಹೆಣ್ಣು ಮಗಳು ನನಗೆ ಕೇಳಿದ್ದಳು..

"ಅಪ್ಪ ಹುಡುಕಿದ ಗಂಡುಗಳೆಲ್ಲವೂ ಚೆನ್ನಾಗಿರುತ್ತಾರಾ?..
ಹಾಗೆ ತಪ್ಪು ನನ್ನಿಂದಲೂ ಆಗಿದೆ...
ಅಪ್ಪನಿಂದ ತಪ್ಪಾದರೆ ಸಮಾಜ ಅವರ ಬೆಂಬಲಿಕ್ಕಿರುತ್ತದೆ...
ನನ್ನಿಂದಾದ ತಪ್ಪಿಗೆ ಸಮಾಜ ನನ್ನೆಡೆಗೆ ಬೆರಳು ತೋರಿಸಿ ನಗುತ್ತದೆ.."

ಆಗ ನನ್ನ ಬಳಿಯೂ ಉತ್ತರ ಇರಲಿಲ್ಲ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ..
ಅತ್ಯುತ್ತಮ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು..

ಮನಸು said...

ಅಣ್ಣ, ಕಥೆ ಚೆನ್ನಾಗಿದೆ... ನಿಜ ಜೀವನದ ಸಹಜತೆಯ ನೈಜ ಕಥೆ... ಯಾವ ಸಮಯದಲ್ಲಿ ಏನು ಆಗಬೇಕೋ ಅದು ಆಗಲೇ ಬೇಕೆಂಬುದು ಸತ್ಯ

ಕಾವ್ಯಾ ಕಾಶ್ಯಪ್ said...

ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ. ಕಥೆಯನ್ನು ಬಿಚ್ಚಿಟ್ಟ ರೀತಿ, ಕಥಾ ವಸ್ತು ಎರಡು ಸೊಗಸಾಗಿದೆ. ವಾಸ್ತವಕ್ಕೆ ಬಲು ಹತ್ತಿರವಾಗಿದೆ..

Ittigecement said...

ಪ್ರೀತಿಯ ಗುಬ್ಬಚ್ಚಿ ಸತೀಶ್...

ಇದು ಸತ್ಯ ಘಟನೆ ಆಧಾರಿತ..
ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿರುವೆ ನೋಡಿ..

ಕೊನೆಯಲ್ಲೂ ಸಹ..

ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸರಿತಾ..

ನಿಮ್ಮ ಪ್ರತಿಕ್ರಿಯೆ ಭಿನ್ನವಾಗಿದೆ ಮತ್ತು ಇಷ್ಟವೂ ಆಯಿತು..

ತಂತ್ರಜ್ಞಾನ ಬಳಸಿ ಮೋಸ ಮಾಡುವದು..
ಮೂಲತಹ ಮೋಸ ಮಾಡುವ ಬುದ್ಧಿಯೇ ಇದಕ್ಕೆ ಕಾರಣ..
ಇಲ್ಲಿ ಬರೆದ ಕಥೆ ಸತ್ಯ ಘಟನೆ ಆಧಾರಿತ..

ಹುಡುಗಿಗೆ ತಾನು ಮುತ್ತುಕೊಡುವದನ್ನು ಗೆಳೆಯನೊಬ್ಬನಿಂದ ಚಿತ್ರೀಕರಿಸಿ ಅವಳನ್ನು ಬ್ಲ್ಯಾಕ್ ಮೇಲ್ ಮಾಡುವ ತಂತ್ರ..
ಸತ್ಯ ಘಟನೆಯಲ್ಲಿ ಅವಳನ್ನು ಎಲ್ಲರೀತಿಯಿಂದ ಬಳಸಿ..
ತನ್ನ ಗೆಳೆಯರಿಗೂ ಹಂಚಿದ ವಿವರಗಳಿವೆ..

ಕೊನೆಯಲ್ಲಿ..
ಹುಡುಗಿ ಆತ್ಮಹತ್ಯೆಗೆ ಶರಣಾಗುವ ಸಂದರ್ಭದಲ್ಲಿ..
ಹುಡುಗಿಯ ಅಣ್ಣನಿಗೆ ಗೊತ್ತಾಗಿ..
ತನ್ನ ಗೆಳೆಯರೊಡನೆ ಹುಡುಗನನ್ನು ಹಿಡಿದು .. ಬಡಿದು..
ನಂತರ ಪೋಲಿಸರಿಗೆ ಒಪ್ಪಿಸಿಯಾಗಿದೆ..

ಸರಿತಾ...
ಮೋಸ ಮಾಡುವವರು.. ಈ ಜಗತ್ತಿನಲ್ಲಿ ತೀರಾ "ಸಹಜ"
ನಾವು ಎಚ್ಚರಿಕೆಯಿಂದಿರಬೇಕು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುಬ್ರಮಣ್ಯ ಸರ್..

ಇದು ಸತ್ಯ ಕಥೆ ಆಧಾರಿತ...

ಹುಡುಗಿಗೆ ಹತ್ತುಸಾವಿರ ರುಪಾಯಿಯ ಒಂದು ಚಂದದ ಮೊಬೈಲ್ ಕೊಟ್ಟು..
ಅವಳನ್ನು ಬುಟ್ಟಿಗೆ ಹಾಕಿಕೊಂಡು..
ಅವಳ ಬದುಕನ್ನು ಹಾಳು ಮಾಡಲು ಹೊರಟಿದ್ದು... ಸತ್ಯ ಕಥೆ...

ತನ್ನ ಬದುಕನ್ನು ಹತ್ತು ಸಾವಿರದ ಮೊಬೈಲಿಗೆ ಮಾರಾಟ ಮಾಡಲು ಹೊರಟ ಹೆಣ್ಣು ಮಗಳಿಗೆ ಏನನ್ನೋಣ?

ಇದನ್ನು ಓದಿ ಒಂದು ಹೆಣ್ಣುಮಗಳಾದರೂ ಎಚ್ಚೆತ್ತುಕೊಂಡರೆ ಬರೆದದ್ದು ಸಾರ್ಥಕ...!

ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಸಂದೀಪ್...

ನಾನು ಪುಟಗಟ್ಟಲೇ ಬರೆದುದದನ್ನು ನೀವು ಒಂದೇ ಸಾಲಿನಲ್ಲಿ ತಾತ್ಪರ್ಯ ಹೇಳೀದ್ದೀರಿ...

ಇಲ್ಲಿ ಬಂದ ಉತ್ತಮ ಪ್ರತಿಕ್ರಿಯೆಗಳಲ್ಲಿ ಇದೂ ಒಂದು.. !!

ಮಸ್ತ್ ಪಂಚ್ ಇದೆ... ವಾಹ್ !!

"ONLINE" ಮತ್ತೆ "OFFLINE" ನಡುವೆ ತಮ್ಮ "LIMIT LINE" ಮರೆತರೆ ಆಗುವ ಸಹಜತೆಯನ್ನು ಚೆನ್ನಾಗಿ ವರ್ಣಿಸಿದ್ದೀರ.."

ಧನ್ಯವಾದಗಳು.. Thank u for a beautiful coment.. !! ಬರುತ್ತಾ ಇರಿ...

Ittigecement said...

ನಾರಾಯಣ ಭಟ್ಟರೆ..

ಅದಕ್ಕೇ ಅಲ್ಲವೆ ಹಿರಿಯರು ಹೇಳುವದು..
" ವ್ಯವಹಾರವನ್ನು ಅಪರಿಚಿತರಲ್ಲಿ ಮಾಡ ಬೇಕು...

ಸಂಬಂಧವನ್ನು ಆದಷ್ಟು ಗೊತ್ತಿದ್ದವರಲ್ಲಿ ಮಾಡ ಬೇಕು ಅಂತ"

ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ರಘು ಸರ್..

ಬ್ಲಾಗಿನಲ್ಲಿ ಬರೆಯುವದು ಖುಷಿಗಾಗಿ...
ಅದು ನಿಮಗೂ ಖುಶಿಕೊಡುತ್ತದೆ ಅಂದರೆ ಇದಕ್ಕಿಂತ ಹೆಚ್ಚೇನು ಬೇಕು..?

ಸಾಹಿತ್ಯದ ಗಂಧಗಾಳಿಯೇ ಇಲ್ಲದೇ ನನ್ನನ್ನು ಇಲ್ಲಿಯವರೆಗೆ ತಂದಿದ್ದು ನಿಮ್ಮೆಲ್ಲರ ಸಂತಸದ ಪ್ರತಿಕ್ರಿಯೆಗಳು...!
ಪ್ರೋತ್ಸಾಹಗಳು...!!
ಈಗ ಎಷ್ಟೋ ಪತ್ರಿಕೆಗಳಿಂದ ಬರೆಯಲು ಆಹ್ವಾನ ಬರುತ್ತಿದೆ..
ಆದರೆ ನನ್ನ ಆದ್ಯತೆ ಬ್ಲಾಗ್.....

ರಘು ಸರ್..
ಕಥೆಯನ್ನು ಇಷ್ಟಪಟ್ಟು.. ಪ್ರೋತ್ಸಾಹಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು... ಬರುತ್ತಾ ಇರಿ...

VENU VINOD said...

practical story Prakaash..
many such incidents do happen in our society.

Ittigecement said...

ವೀಣಾರವರೆ...

ಬೆಣ್ಣೆಯಂಥಹ ಮಾತುಗಳನ್ನಾಡಿ..
ಬಣ್ಣದ ನಗುವನ್ನು ತೋರಿಸಿ ಬುಟ್ಟಿಗೆ ಹಾಕಿಕೊಳ್ಳುವವನ ಮೇಲೆ ಅದೆಂಥಹ ನಂಬಿಕೆ?

ಆತ ಪ್ರೀತಿಯ ಪ್ರಸ್ತಾಪ ಮಾಡಿದಾಗ "ಹೆತ್ತವರ ನೆನಪು" ಯಾಕೆ ಆಗುವದಿಲ್ಲ..?

"ನೋಡಪ್ಪಾ.. ಗೆಳೆಯಾ ಮದುವೆ ವಿಷಯವನ್ನು ಹೆತ್ತವರಲ್ಲಿ ಬಂದು ಮಾತನಾಡು"
ಎಂದು ಹೇಳುವಂಥಹ ವಿವೇಕ ಯಾವಾಗ ಬರುತ್ತದೆ?

ಈ ತಪ್ಪುಗಳಾಗುತ್ತಿರುವದು ಓದಿದ, ಸುಶಿಕ್ಷಿತ ಹೆಣ್ಣುಮಕ್ಕಳಿಂದ..

ಪ್ರೋತ್ಸಾಹಕ್ಕೆ ಧನ್ಯವಾದಗಳು..
ನೀವು "ಪ್ರೀತಿಯಿಂದ ವೀಣಾರವರು.. " ಅಂತ ಅಂದುಕೊಳ್ಳಲೇ..?

Ittigecement said...

ಪ್ರೀತಿಯ ಕಿರಣ್...

ಇದನ್ನು ಓದಿದ ನನ್ನ ಕಿರಿಯ ಸ್ನೇಹಿತರುಗಳು..

"ನೀವು ಇಲ್ಲಿ ಗಂಡುಮಕ್ಕಳ ಮೋಸದ ಬಗೆಗೆ ಬರೆದಿದ್ದೀರಿ..
ವಾಸ್ತವದಲ್ಲಿ ಹೆಣ್ಣು ಮಕ್ಕಳೇ ಪ್ರೀತಿಸುವ ನಾಟಕವಾಡಿ..
ನಮ್ಮಿಂದ ಖರ್ಚು ಮಾಡಿಸಿ.. ನಮಗೆ ನೋವು ಕೊಟ್ಟು ದೂರವಾಗುತ್ತಾರೆ.."

ಇದೂ ಸಹ ನಡೆಯುತ್ತದೆ.. ಅಲ್ಲವೆ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಬರುತ್ತಾ ಇರಿ.. ಕಿರಣ್..

Ittigecement said...

ಪ್ರೀತಿಯ ರಾಜೇಶ್..

ಎಡವಿದ ಬದುಕನ್ನು ತಿದ್ದಿ.. ಸರಿಪಡಿಸಿಕೊಳ್ಳುವದು ಬಲು ಕಷ್ಟ...

ತಪ್ಪನ್ನು ತಿದ್ದಿಕೊಂಡಿದ್ದೇನೆ ಎಂದರೂ ಸಮಾಜ "ಕಾಮಾಲೆ ಕಣ್ಣಿನಿಂದಲೇ ನೋಡುತ್ತದೆ"
ಹಾಗಾಗಿ ಜಾರುವ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವದೇ ವಾಸಿ...

ರಾಜೇಶ್ ನೀವು ಬ್ಲಾಗಿನಲ್ಲಿ ಬರೆಯಿರಿ...
ಯಾವಾಗ ಬರೆಯುತ್ತೀರಿ?
ನಾವೆಲ್ಲ ಕಾಯುತ್ತಿದ್ದೇವೆ...

ಪ್ರೀತಿಯಿಂದ...

Ittigecement said...

ವಿಜಯಾ (ಚುಕ್ಕಿಚಿತ್ತಾರ)..

ಒಂದು ಕಾಲದ ಅನೀತಿ.." ಇನ್ನೊಂದು ಕಾಲಘಟ್ಟಕ್ಕೆ "ನೀತಿಯಾಗಿ" ಬಿಡುತ್ತದೆ..

"ಸೈಡ್ ಇಫೆಕ್ಟ್ಸ್ ವಿಲ್ ಬಿ ನೆಗ್ಲೆಕ್ಟೆಡ್" ಸತ್ಯವಾದರೂ...
"ನೀತಿ" ನೀತಿಯಾಗಿರುವ ಕಾಲಘಟ್ಟದಲ್ಲಿ ನೋವಾಗುತ್ತದೆ ಅಲ್ಲವೆ?

ನಾವು ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹೆಣ್ಣುಮಕ್ಕೊಳಡನೆ ಮಾತನಾಡುವದು ದೂರ.. ನೋಡುವದು ಸಹ ಅನೀತಿಯಾಗಿತ್ತು...

ಆದರೆ ಈಗ...?
ನಮ್ಮ ಮಕ್ಕಳೇ "ಇವಳು ನನ್ನ ಸ್ನೇಹಿತೆ" ಅಂತ ಮನೆಗೆ ಕರೆದು ಕೊಂಡು ಬರುತ್ತಾರೆ..
"ಇದ್ದಿರ ಬಹುದು" ಅಂತ ಸುಮ್ಮನಿರಬೇಕಾದ ಪರಿಸ್ಥಿತಿಯಿದೆ...

ನೀವು ಹೇಳಿದ್ದು ಸತ್ಯವಾದರೂ ಎಲ್ಲೋ ಒಂದು ಕಡೆ ಚುಚ್ಚಿದ ಅನುಭವ ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು..

Gubbachchi Sathish said...

ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ ನಿಮ್ಮ ರೀತಿ ಶ್ಲಾಘನೀಯ ಪ್ರಕಾಶಣ್ಣ. ಥ್ಯಾಂಕ್ಸ್.

shivu.k said...

ಸರ್,

ಸದ್ಯ ನಡೆಯುತ್ತಿರುವ ಅನೇಕ ಕಾಣದ ಘಟನೆಗಳಲ್ಲಿ ಇದು ಒಂದು ಎಂದು ನನ್ನ ಭಾವನೆ. ಅಡ್ಡ ದಾರಿಯಿಡಿಯುವವರಿಗೆ ಬೆಳಕು ಚೆಲ್ಲುತ್ತದೆ ಈ ಕತೆ.
ಚೆನ್ನಾಗಿದೆ ಇಷ್ಟವಾಯಿತು.

B.M.BASHEER said...

ಬ್ಲಾಗ್ ಮಿತ್ರ ಪ್ರಕಾಶ್,
ಹೃದಯಕ್ಕೆ ತಟ್ಟುವಂತೆ ಬರೆಯುತ್ತೀರಾ. ಸರಳ ಕನ್ನಡ. ಹೃದ್ಯ ಕನ್ನಡ. ಅಭಿನಂದನೆಗಳು. ನಿಮ್ಮ ಇಟ್ಟಿಗೆ, ಸಿಮೆಂಟು ಮನಸು ಕಟ್ಟುವ ಕೆಲಸ ಮಾಡುತ್ತಿದೆ.
ಸಾಧ್ಯವಾದಾಗ ಸುಮ್ಮನೆ ಈ ಮನೆಗೊಮ್ಮೆ ಭೇಟಿಕೊಡಿ. ನಿಮ್ಮ ಅನಿಸಿಕೆ ತಿಳಿಸಿ. ನಿಮ್ಮ ಗೆಳೆಯರಿಗೂ ಲಿಂಕ್ ಕೊಡಿ.
www.gujariangadi.blogspot.ಕಂ
ಬಷೀರ್ ಬಿ. ಎಂ.

Asha said...

prakashanna matte rocking... "sahaja".....est jana hen makkalu hinge mosa hoidavena.... orkut fb online friendship anta huchhu hidiskamba hudugeeru edanna odidre olledagtittu...heenge bareeta iru...

Veena DhanuGowda said...

Namaskara prakashanna :)

Comment odlike anthane bande...
adde veena.... :)
yava badalavane illa.

ಕನಸು said...

ಸರ್ ನೀವು ಹೇಳಿದ್ದು
;;ವ್ಯವಹಾರವನ್ನು ಅಪರಿಚಿತರಲ್ಲಿ ಮಾಡ ಬೇಕು...
ಸಂಬಂಧವನ್ನು ಗೊತ್ತಿದ್ದವರಲ್ಲಿ ಮಾಡಬೇಕು..;;ಅನ್ನುವ ಸಾಲುಗಳಿಗೆ ಕನ್ನಡಿ ಈ ನಿಮ್ಮ ಲೇಖನ.ಸರ್ ಸಂಕ್ರಾಂತಿಯ ಶುಭಾಶಯಗಳು

Unknown said...

''SAHAJA'' tumba chennagide.Idannu kate annuvadakkinta, eegina samajadalli nadeyuttiruva dainandina ghatane ennabahudu.High School mattu Collage makkalu saha idannu odidare,tamma niluvina bagge tiliyutittu.

Ittigecement said...

ಪ್ರೀತಿಯ ನವೀನ್ ಶೇಖರ್...

ನಾವೆಲ್ಲ ಕಲ್ಪನೆಯಲ್ಲಿ ಬದುಕುತ್ತೇವೆ...
ಕಲ್ಪನೆಯನ್ನು ಇಷ್ಟ ಪಡುತ್ತೇವೆ...
ಕನಸಲ್ಲೇ ಇರಲು ಬಯಸುತ್ತೇವೆ...

ಯಾಕೆಂದರೆ ವಾಸ್ತವ ಬಹಳ ಕಹಿ...

ಈ ಇಂಟರ್ ನೆಟ್ಟಿನಲ್ಲಿ ಆಗುವದು ಹೀಗೆಯೇ...
ಕಣ್ಣಿಗೆ ಕಾಣದ ವ್ಯಕ್ತಿಯೊಡನೆ ಚಾಟ್ ಮಾಡುತ್ತೇವೆ..
ಆತ ತಾನಲ್ಲದ ತನ್ನ ಒಳ್ಳೆಯ ಚಿತ್ರಣ ಕೊಟ್ಟಿರುತ್ತಾನೆ...
ನಮಗೂ ಇಷ್ಟವಾಗುತ್ತದೆ..

ನಾವೆಲ್ಲ ಹೆಚ್ಚಾಗಿ ದಾರಿ ತಪ್ಪೋದು ಇಲ್ಲೇನೆ.. ಅಲ್ಲವೆ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಕೋಲೆ ಬಸವ (ಭೈರವ ಕೋಡಿ..)

ಈ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ...
ನನ್ನ ವ್ಯವಹಾರಗಳ ಲೆಕ್ಕಾಚಾರದಲ್ಲಿ ಮಧ್ಯೆ ಎಲ್ಲೋ ಕಳೆದು ಹೋಗಿರುತ್ತಿದ್ದೆ...
ಈ ಬ್ಲಾಗ್ ಲೋಕಕ್ಕೆ ನಾನೆಷ್ಟೂ ಧನ್ಯವಾದ ಅರ್ಪಿಸಿದರೂ ಸಾಲದು...

ನನಗೆ ಬಹಳಷ್ಟು ಗೆಳೆಯರ, ಸಹೋದರಿಯರ ಪ್ರೀತಿ, ವಿಶ್ವಾಸ ಇಲ್ಲಿ ಸಿಕ್ಕಿದೆ....

ಅನೇಕ ಮನೆ ಕಟ್ಟುವ ಕೆಲಸಗಳು ಸಿಕ್ಕಿವೆ... ಈಗಲೂ ಮಾಡುತ್ತಿದ್ದೇನೆ...

ಕೃತಜ್ಞತೆ ಹೇಳಲು ಶಬ್ಧಗಳಿಲ್ಲ...

ನನಗೂ ನಿಮ್ಮನ್ನು ಭೇಟಿಯಾಗಬೇಕೆಂಬ ಆಸೆ ಇದೆ...
ಆದರೆ ...

ತಬ್ಬಿಕೊಳ್ಳುವದರ ತನಕ ಓಕೆ...

ಮುಂದಿನದು ಅಪಾರ್ಥ ಆಗಿಬಿಡ್ತದೆ ಮಾರಾಯ್ರೆ.. ಹ್ಹಾ ಹ್ಹಾ...!

ನಿಮ್ಮ ತಮಾಶೆಗೆ...
ಪ್ರೀತಿ, ಸ್ನೇಹಕ್ಕೆ ನನ್ನ ನಮನಗಳು...

ತುಂಬಾ ತುಂಬಾ ಧನ್ಯವಾದಗಳು...

ಕನ್ನಡಬ್ಲಾಗ್ ಲಿಸ್ಟ್ KannadaBlogList said...

ಇದಕ್ಕೆ ಇರಬೇಕು, ಯಾರೋ ಮೇಧಾವಿಗಳು ಹೇಳಿದ್ದರಂತೆ 'ನಿನ್ನ ನೆರಳನ್ನು ಕೂಡ ನಂಬಬೇಡ'...ಒಂದು ಉತ್ತಮವಾದ ಬುದ್ದಿಮಾತಿನ ಕಥೆಯನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು...

V.R.BHAT said...

ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಬೇಸಿಗೆಯಲ್ಲಿ ಸೆಕೆ ಇದ್ದರೇನೆ ಚೆನ್ನಾಗಿರುತ್ತದೆಯೇ ವಿನಃ ಅವುಗಳು ಸಮ್ಮಿಶ್ರವಾದಾಗ ಕಾಲವೇ ವಿಚಿತ್ರವಾಗಿ ತೋರ್ಪಡುತ್ತದೆ. ಅದರಂತೇ ಯಾವಾಗ ಯಾವ ಕೆಲಸ ನಡೆಯಬೇಕೋ ಅದು ನಡೆಯದೇ ಹೋದಾಗ ಆ ಕೆಲಸದಲ್ಲಿ ಮೊದಲಿನ ಹುರುಳಿರುವುದಿಲ್ಲ. ಲೇಖನ ಈ ವಿಷಯವನ್ನು ಹೇಳುತ್ತದೆ, ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಜಲನಯನ said...

ಪ್ರಕಾಶ..ನಿನ್ನದೇ ಸ್ಟಾಂಪಿನ ಕಥೆ ಹೆಣೆಯುವ ಶೈಲಿಯಲಿ ಸ್ವಾರಸ್ಯಕರವಾಗಿ ಸಾಗುತ್ತೆ.. ಇಲ್ಲಿ ಕಥೆಗೆ ಸಹಜತೆ ತರುವ ನಿನ್ನ ಹಿನ್ನೆಲೆಯ ಪ್ರಸ್ತಾಪ ಕಥೆಗೆ ಪೂರಕ..ಯಾಕಂದ್ರೆ..ಅಷ್ಟು ಕಡಿಮೆ ಸಮಯದಲ್ಲಿ ಬರೀ ಆರ್ಕುಟ್ ಪರಿಚಿತನೆಂದರೂ ಸಭ್ಯ ಹೆಣ್ಣುಮಗಳು ಹೋಟೆಲೊಂದಕ್ಕೆ ಹೋಗುವುದಿಲ್ಲ... ಇಲ್ಲಿ ನಿನ್ನ ಹಿನ್ನೆಲೆ ಕೆಲಸ ಮಾಡಿದೆ...ಎಲ್ಲಾ ಕೆಲಸ ಸಮಯ ಸಮಯಕ್ಕೆ ಆಗಬೇಕು ಮನಸು ವಯಸು ಜೊತೆಗೇ ನಡೆಯುತ್ತವೆ... ಇತ್ಯ್ಯಾದಿ ಎಲ್ಲೋ ಮನಸು ಲಯತಪ್ಪುವ ಸಾಧ್ಯತೆ ಇದೆ ಎಂದು ಎಚ್ಚರಿಸುತ್ತದೆ..ಹಾಗಾಗಿ ಅವಳ ಆ ನಡೆ ಅಸಹಜವೆನಿಸುವುದಿಲ್ಲ...ಅವಳು ಕ್ಷಣಕ್ಕೆ ಹುಡುಗನ ತಂದೆಯ ಮನಗೆದ್ದ ಕಲ್ಪನೆಯಲ್ಲಿ ತೇಲಾಡಿದ್ದು ... ಮೀರುವ ವಯಸ್ಸಿಗೆ ಹಾರುವ ವಯಸಿಗೆ ಇಂಬು ಕೊಡುತ್ತದೆ...ಸಮಯಸಾಧಕ ಗುಣದ ಹುಡುಗ ಎಚ್ಚರ ತಪ್ಪಿದ್ದು ಮೊಬೈಲ್ ಅಲ್ಲೇ ಬಿಟ್ಟು...ಹುಡುಗಿ ಸಾವರಿಸಿ ಎಚ್ಚೆತ್ತುಕೊಳ್ಳಲು..ಎಲ್ಲ ಅವಕಾಶವಿದ್ದು..ಕಥೆಯ ಮುಕ್ತಾಯಕ್ಕೆ ಮುಕ್ತ ಆರಂಭ ನೀಡಿದೆ.....ಇಷ್ಟ ಆಯ್ತು ಪಕ್ಕುಮಾಮ್ಸ್...

ಶಿವಪ್ರಕಾಶ್ said...

ಇತ್ತಿಚೀಗೆ ಹುಡುಗಿಯರೇ ಹುಡುಗರನ್ನ ಜಾಸ್ತಿ ಟ್ರಾಪ್ ಮಾಡ್ತಾ ಇದಾರೆ ಪ್ರಕಾಶಣ್ಣ... ಹ್ಹ ಹ್ಹ ಹ್ಹ....

Unknown said...

Very captivating story....more than a story its a warning to young generation.... good work...

KalavathiMadhusudan said...

prakaash sir nimma kateyalli sahaja satyavannu teredittiddira.pratiyobbaru ecchettukollabekadaddu avashyaka.dhanyavadagalu.

KalavathiMadhusudan said...

prakaash sir nimma kateyalli sahaja satyavannu teredittiddira.pratiyobbaru ecchettukollabekadaddu avashyaka.dhanyavadagalu.

Prashanth Arasikere said...

hi prakash..sir..

kate mugde hoytha anno tara ide...mundina kanthu enadru idya...serial nalli break kodo tara ide annusthu....kate tumba chennagide...

nivedita said...

prakashanna i think it won b correct if i tell this as a story coz this whts happenin arround.. loved the way u presented it.. keep writin

ಚಿತ್ರಾ said...

ಪ್ರಕಾಶಣ್ಣ ,

ಎಂಥದೇ ವಿಷಯವನ್ನೂ ಇಷ್ಟು ಚಂದವಾಗಿ ನಿರೂಪಿಸುವುದು ನಿನ್ನ "ಸಹಜ" ಶೈಲಿ ! ಈ ಸೋಶಿಯಲ್ ನೆಟ್ ವರ್ಕ್ ನ ಭೂತ ಬಹಳ ಜನರನ್ನು ಕಾಡಿದೆ .

ನಾಲ್ಕು ಒಳ್ಳೆಯ ಮಾತನಾಡಿದ ಕೂಡಲೇ ಮರುಳಾಗಿ ಬಿಡುವವರಿರುವಾಗ ಮೋಸ ಮಾಡುವವರೂ ಇರುತ್ತಾರೆ ಅಲ್ಲವೇ? ಪ್ರತಿ ದಿನ ಪೇಪರ್ ನಲ್ಲಿ ಇಂಥಾ ಎಷ್ಟೋ ಸುದ್ದಿಗಳನ್ನು ಓದುತ್ತಿದ್ದರೂ ಕೂಡ " ನಮ್ಮ ಜೊತೆ ಹೀಗಾಗುವುದಿಲ್ಲ " ಎಂಬ ಹುಚ್ಚು ನಂಬಿಕೆಯಲ್ಲಿ ಮತ್ತೆ ಹಳ್ಳಕ್ಕೆ ಬೀಳುತ್ತಾರೆ.

ಕಥೆ ಇಷ್ಟವಾಯ್ತು

Ittigecement said...

ಕಿಚಿ...
( ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂದು ಗೊತ್ತಾಗಲಿಲ್ಲ.. ಕ್ಷಮಿಸಿ)

ನನ್ನ ಬ್ಲಾಗಿಗೆ ಸ್ವಾಗತ...

ಇಂದು ನನಗೆ ಒಂದು ಹೆಣ್ಣುಮಗಳು ಫೋನ್ ಮಾಡಿದ್ದಳು..

"ಪ್ರಕಾಶಣ್ಣಾ..
ನನಗೊಬ್ಬ ಗೆಳೆಯ ಸಿಕ್ಕಿದ್ದಾನೆ..
ನೀವು ಕಥೆಯಲ್ಲಿ ಬರೆದ ಹಾಗೆ ಮೊಬೈಲ್ ಕೊಟ್ಟು ದೋಸ್ತಿ ಮಾಡಿದ...
ಹೊಟೆಲ್ಲಿಗೆ ಹೋಗಿ ತಿಂಡಿ ತಿನ್ನಲು ಹೋಗಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ...
ನಿಮ್ಮ ಕಥೆ ಓದಿದ ಮೇಲೆ ನನಗೆ ಆತನ ಮೇಲೆ ಅನುಮಾನ ಶುರುವಾಗಿದೆ..
ಆತ ಕೆಟ್ಟವನೊ.. ಒಳ್ಳೆಯವನೋ ನೀವು ನನಗೆ ಖಾತ್ರಿ ಪಡಿಸಿಕೊಡಿ.."

ನಾನು ಹೇಳಿದೆ.... " ನನಗೆ ಬರಲಾಗುವದಿಲ್ಲ.. ನಿಮಗೆ ಅಣ್ಣ ತಮ್ಮ ಅಪ್ಪ.. ಅಮ್ಮ ಇದ್ದಾರಲ್ಲವೆ?.."

"ಇದ್ದಾರೆ.."

"ಅವರು ಯಾವಾಗಲೂ ನಿಮ್ಮ ಒಳ್ಳೆಯದನ್ನೇ ಬಯಸುವವರು..
ಅವರ ಬಳಿ ಹೇಳಿಕೊಳ್ಳಿ.."

"ಅದು ಬಹಳ ನಾಚಿಕೆ ಮತ್ತು ಹೆದರಿಕೆ..
ಇನ್ನೊಂದು ವಿಷಯವಿದೆ ಪ್ರಕಾಶಣ್ಣ.."

"ಏನು..?’

" ನಾನು ಅವನನ್ನು ತಬ್ಬಿಕೊಂಡ ಫೋಟೊ ಆತನ ಮೊಬೈಲಿನಲ್ಲಿ ಸೇವ್ ಆಗಿ ಇದೆ...
ನಾನು ತಪ್ಪು ಮಾಡಿಬಿಟ್ಟೆ.. ಅನ್ನಿಸುತ್ತಿದೆ.."

ಎನ್ನುತ್ತ ಅಳತೊಡಗಿದಳು... ನನಗೆ ಒಂಥರ ಕಸಿವಿಸಿಯಾಯಿತು..

ಮತ್ತೆ ಅವಳಿಗೆ ಸಮಾಧಾನ ಮಾಡಿ.. ಅವಳ ಅಣ್ಣನ ಬಳಿ ಸಮಸ್ಯೆಯನ್ನು ಹೇಳಲು ಒಪ್ಪಿಸಿದೆ...

ನಾನು ಬರೆದ ಕಥೆ ಈ ರೀತಿ ಪರಿಣಾಮ ಬೀರಿದರೂ..
ಯಾಕೋ ಮನಸ್ಸಿಗೆ ಬಹಳ ಬೇಸರವೂ ಆಯಿತು...

ನಿಮ್ಮ ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ ವಂದನೆಗಳು....

viju said...

super kathe prakashanna.....e kathavastu ningobbange heng holitu maraya??adbhuta shaili.....

Ambika said...

Prakashanna,
Kathe neevu post maadida dinave odide..comment bareyalu aagalilla..
Kathe tumba chennagide.
Haage katheyannu oduvaaga enu twist kottirabahudu kathege endu tiliyalu gadibidiyinda odide..aamele mattomme odide :)

Unknown said...

prakash avare kathe thumba chennagide. mukha nodi mane haakuva kaala idalla. yaava hutthadalli yaava haavo.

Ittigecement said...

ಪ್ರೀತಿಯ ಗುರು..(ಸಾಗರದಾಚೆಯ ಇಂಚರ..)

ಈ ಕಥೆ ಬರೆಯಲು ಸ್ಪೂರ್ತಿ ನನ್ನ ಗೆಳೆಯನ ತಂಗಿಯ ಬದುಕಲ್ಲಿ ನಡೆದ ಘಟನೆ..

ಮೊನ್ನೆ ಪಿಯುಸಿ ಓದುವ ಹುಡುಗಿ ಫೋನ್ ಮಾಡಿ ತನ್ನ ಕಥೆ ಹೇಳಿ ಕೊಂಡಾಗ ನನಗೇ ಷಾಕ್. !
ಮತ್ತೆ ಮತ್ತೆ ಅದೆ ರೀತಿ ಮೋಸ ಮಾಡ್ತಾರಾ?

ಇಷ್ಟೆಲ್ಲ ಓದಿರುವ ಹೆಣ್ಣುಮಕ್ಕಳು ಈ ರೀತಿ ಬಲಿಯಾಗುತ್ತಿದ್ದಾರೆ...

ನಮ್ಮ ಶಿಕ್ಷಣ ಬದುಕಿಗೆ ಬೇಕಾಗುವ ಅಗತ್ಯಗಳನ್ನು ಕಲಿಸುವದಿಲ್ಲವಾ?

ಗುರು ಪ್ರೋತ್ಸಾಹಕ್ಕೆ, ಪ್ರೀತಿಗೆ ವಂದನೆಗಳು... ಜೈ ಹೋ !!

Ittigecement said...

ಪ್ರಶಾಂತ್...

ಒಂದು ತಲೆಮಾರಿನ ಮೌಲ್ಯಗಳು ನಶಿಸುವದು ...
ಕ್ರಮೇಣ "ಸಹಜ"ವಾಗುವದು.... ಇದೆಲ್ಲ ಸರಿಯೆನಿಸಿದರೂ.. ನಮ್ಮ ಕಾಲಘಟ್ಟದಲ್ಲಿ ನಮಗೆ ಕಷ್ಟವೆನಿಸುತ್ತದೆ ಅಲ್ಲವೆ?

ಅದರೂ...
ಸಹಜ ಕಟ್ಟುಪಾಡುಗಳನ್ನು ಬಿಡುವದು ಆಸಹಜ ಅಲ್ಲವೆ?

ಉತ್ತಮ ಪ್ರತಿಕ್ರಿಯೆಗೆ ಧನ್ಯವದಗಳು..

Ittigecement said...

ವಿದ್ಯಾ ರಮೇಶ್....

ನನ್ನ ಗೆಳೆಯರೊಬ್ಬರು ಕೇಳುತ್ತಿದ್ದರು..

"ಯಾಕೆ ಪ್ರತಿಯೊಂದು ಪ್ರತಿಕ್ರಿಯೆಗೆ ಉತ್ತರ ಕೊಡುತ್ತ ...ಕುಳಿತು ಕೊಳ್ಳುತ್ತೀರಿ...
ಪ್ರತಿಕ್ರಿಯೆಗಳ ಆಸೇನಾ? ಅಂತ..

ಅದಲ್ಲ..
ನಾನು ಏನಾದರೂ ಬರೆದಾಗ
ಕಥೆಯಲ್ಲೋ..
ಲೇಖನದಲ್ಲೋ ಇನ್ನೂ ಹೇಳುವದು ಉಳಿದಿರುತ್ತದೆ...

ಪ್ರತಿಕ್ರಿಯೆಗಳು ಬಂದಾಗ ಮೊದಲು ಅವನ್ನೆಲ್ಲ ಹೇಳುವ ಅಭ್ಯಾಸ..

ಹಾಗಂತ ಪ್ರತಿಕ್ರಿಯೆಗಳ ಆಸೇಯೂ ಇದೆ..
ಅದು ಬಂದಷ್ಟು ಖುಷಿ... ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ..

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು... ಬರುತ್ತಾ ಇರಿ...

Ittigecement said...

ಗಂಗಾ ಚಿಕ್ಕಮ್ಮ...

ನೀವು ಬಹುದಿನಗಳಿಂದ ಇಂಥಹ ಕಥೆ ಬರೆಯಲು ಹೇಳುತ್ತಿದ್ದಿರಿ..
ಮೊನ್ನೆ ಗೆಳೆಯನೊಬ್ಬನ ತಂಗಿಗೆ ಆದ ಅನುಭವವನ್ನು ಬದಲಿಸಿ ಬರೆದೆ...

ಪ್ರೋತ್ಸಾಹಕ್ಕೆ..ಪ್ರತಿಕ್ರಿಯೆಗೆ ಧನ್ಯವಾದಗಳು..

ಸೋಮಶೇಖರ ಹುಲ್ಮನಿ said...

ಪ್ರಕಾಶಣ್ಣ
ಕತೆ ತುಂಬಾ ಇಷ್ಟ ಆಯಿತು ... ಆದ್ರೆ ಆ ನೈಜ ಸನ್ನಿವೇಶ ಕಣ್ಣು ಮುಂದೆ ಬಂದಾಗ ,
ಆ ಹೆಣ್ಣು ಅನುಭವಿಸಿದ್ದನ್ನು ನೆನೆಸಿಕೊಂಡಾಗ ಮನಸ್ಸಿಗೆ ಕಸಿವಿಸಿ ಆಯಿತು

ullas said...

nice one...

Harisha - ಹರೀಶ said...

ಪ್ರಕಾಶಣ್ಣ, ಈಗ ಈ ಕಥೆ ಓದಿದಿ.. ಕೊನೆಯಲ್ಲಿರ ಟ್ವಿಸ್ಟ್ ಸೂಪರ್!