Sunday, December 19, 2010

ನನ್ನ ಹೆಸರನ್ನು ಕನ್ನಡದಲ್ಲಿ ಇಟ್ಟಿದ್ದಾರೆ... !!


ಒಂದು ದಿನ ಕುಷ್ಟ ಶಾಲೆಗೆ ಬರುವಾಗ ಒಂದು ಹಾವು ಹಿಡಿದುಕೊಂಡು ಬಂದ...


ನಮಗೆಲ್ಲ ಹೆದರಿಕೆ ಆಯಿತು..


"ಪಕ್ಕೇಶ್ ಹೆಗ್ಡೆರೆ ... 
ಹೆದರ್ ಬೇಡ್ರಾ... 
ಇದು "ಹಸಿರುಳ್ಳೆ" ಹಾವು..
ಇದು  ಎಂತಾ ಮಾಡಿದ್ರೂ.. ಕಚ್ಚೂದಿಲ್ಲ... ನೋಡಿ.."


ಎಂದು  ಅದರ ಬಾಯೊಳಗೆ  ಬೆರಳು ಹಾಕಿ ತೂರಿಸಿದ..!


ನಮಗೂ ಸ್ವಲ್ಪ ಧೈರ್ಯ ಬಂತು...!


ನಾವು ಮುಟ್ಟಿ... ಕೊರಳಿಗೆ ಎಲ್ಲ ಸುತ್ತಿಕೊಂಡು ಆಟ ಆಡಿದೆವು..


ಯಾಕೋ ಆ  ಹಾವಿನ ಮೇಲೆ ಪ್ರೀತಿಯೂ ಬೆಳೆಯಿತು..


ನಾಗುವಿಗೆ  ಒಂದು ಉಪಾಯ ಬಂತು...


"ಕುಷ್ಟಾ.. 
ಈ ಹಾವನ್ನು ನಾವು ಸಾಕಿದರೆ ಹೇಗೆ?..
ಈ ಹಾವು ನಮಗೆ ಸಹಾಯ ಮಾಡಬಹುದಾ?
ಮೊನ್ನೆ ಒಂದು ಸಿನೇಮಾದಲ್ಲಿ  ..
ಹಾವು ಒಬ್ಬ ಹುಡುಗನಿಗೆ ಸಹಾಯ ಮಾಡುತ್ತಿತ್ತಲ್ಲ  ಹಾಗೆ.."


"ನಾಗಣ್ಣ.. ಇದೆಲ್ಲ  ನಮಗೆ ಯಾಕ್ರ ಉಸಾಬರಿ..? "


"ಇಲ್ಲಾ  ಕುಷ್ಟ ..
ನಾವು ಇದನ್ನು ಸಾಕೋಣ.."


ನಾಗು ಹೇಳಿದ ಮೇಲೆ ಅದಕ್ಕೆ ಯಾರೂ ಏನೂ ಹೇಳುವದಿಲ್ಲವಾಗಿತ್ತು...


ಸರಿ...


ಮನೆಗೆ ಬಂದು  ಅಟ್ಟದ ಮೇಲಿಂದ "ಕಸ್ತೂರಿ ನೀಲಮ್ ಬಾರ್ ಸೋಪ್" ರಟ್ಟಿನ ಬಾಕ್ಸನ್ನು ತೆಗೆದೆವು...


ಅದರ ಮೇಲಿನ ಕವರನ್ನು ಕತ್ತರಿಸಿ ಅದಕ್ಕೆ ಪ್ಲಾಸ್ಟಿಕ್ ಅಂಟಿಸಿದೆವು..
ನಮಗೆ ಹೊರಗಿನಿಂದ ನೋಡಲು ಅನುಕೂಲವಾಗಲಿ ಅಂತ..


ಆ ಪ್ಲಾಸ್ಟಿಕ್ಕಿಗೆ ಮಧ್ಯದಲ್ಲಿ ನಾಲ್ಕೈದು ತೂತುಗಳನ್ನು ಮಾಡಿದೆವು..


ಹಾವಿಗೆ ಉಸಿರಾಡಲು ಆಗಲಿ ಅಂತ..!


ರಟ್ಟಿನ ಬಾಕ್ಸಿನ ಒಳಗೆ  ಒಂದು  ತೆಂಗಿನ ಕಾಯಿ  "ಗರಟೆ" ಇಟ್ಟು ಅದರಲ್ಲಿ ನೀರು ತುಂಬಿದೆವು..


ಹಾಗೆ  ಅಕ್ಕಿ ಕಾಳುಗಳನ್ನು  ಹಾಕಿದೆವು...


ಹಾವು ಅಕ್ಕಿ ತಿನ್ನ ಬಹುದು ಅಂತ...!


ದಿನಾಲೂ ಸ್ಕೂಲ್ ಬಿಟ್ಟು ಬಂದು  ರಟ್ಟಿನ ಬಾಕ್ಸಿನ ಮುಂದೆ ನಮ್ಮ  ಮೀಟಿಂಗು...


ದಿನ ಕಳೆಯುತ್ತಿದ್ದ ಹಾಗೆ  ಆ  ಹಾವು ಯಾಕೋ ಡಲ್ ಆಗತೊಡಗಿತು...


ಆಗ...
ನಮ್ಮೂರ ಶಾಲೆಯಲ್ಲಿ ನಾವು ಕಲಿಯುವಾಗ ಏಳನೆ ತರಗತಿಯವರೆಗೆ  ಎರಡೆ  ಮಾಸ್ತರು..


ಮಾಸ್ತರರಿಗೆ ಬಹಳ ಕಷ್ಟವಾಗುತ್ತಿತ್ತು..


ಹಾಗಾಗಿ  ಊರವರೆಲ್ಲ ಒಂದು ಸಭೆ ಮಾಡಿ ಪಕ್ಕದ ಊರಿಂದ ಒಬ್ಬ "ಅಕ್ಕೋರನ್ನು" ನೇಮಕ ಮಾಡಿಕೊಂಡರು..


"ಲೇಡಿ ಟೀಚರನ್ನು "ಅಕ್ಕೋರು" ಅಂತ ಕರೆಯುತ್ತಿದ್ದೇವು..


ಅವರು ಬಹಳ ಕಟ್ಟುನಿಟ್ಟಿನ, ಶಿಸ್ತಿನ "ಅಕ್ಕೋರ್ರಾಗಿದ್ರು..


ಆಗತಾನೆ ಇಂಗ್ಲೀಷ್ ಶುರುವಾಗಿತ್ತು.. 


ನಮಗೂ ಉತ್ಸಾಹ.. 
ನಮ್ಮ ಅಕ್ಕೋರ್ರು  ಕನ್ನಡದ "ಅ.. ಆ.. ಇ  ಈ.." ಗಳನ್ನು ಇಂಗ್ಲೀಷಿನಲ್ಲಿ ಬರೆಸುತ್ತಿದ್ದರು..
ಅದನ್ನು ಕಲಿತ ಮೇಲೆ ನಮ್ಮ ಹೆಸರುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಹೇಳಿದರು..


" ನಾಗೇಶಾ..... ನಿನ್ನ ಹೆಸರಿನ ಸ್ಪೆಲ್ಲಿಂಗ್ ಹೇಳೊ.." 


"ಅಕ್ಕೋರ್ರೆ.... N.. A . G.. E.. S..H..A.."


" ನಾಗೂ..ನಿನ್ನ ಹೆಸರಲ್ಲಿ  ಕೊನೆಯಲ್ಲಿ "A " ಬರೋದಿಲ್ಲ.. !."


"ಯಾಕೆ  ಅಕ್ಕೊರೆ..? "


"ನಿನ್ನ ಹೆಸರು ಇಂಗ್ಲೀಷಿನಲ್ಲಿ  "ನಾಗೇಶ್ " ಅಂತಾಗುತ್ತದೆ.. ಅದಕ್ಕೆ"


" ಅಕ್ಕೋರ್ರೆ..... 
ನನ್ನ ಹೆಸರನ್ನ ಕನ್ನಡದಲ್ಲಿ "ನಾಗೇಶಾ" ಅಂತ ಇಟ್ಟಿದ್ದಾರೆ..
ಇಂಗ್ಲಿಷಿನಲ್ಲಿ  ಅಲ್ಲಾ..
ನನ್ನ ಅಪ್ಪನಿಗೆ ಇಂಗ್ಲೀಷ್ ಬರೋದಿಲ್ಲಾ..!
ಹಾಗಾಗಿ..
ನನ್ನ ಹೆಸರು "ನಾಗೇಶ" ಅಂತ...."


ಅಕ್ಕೊರ್ರಿಗೆ  ಸಿಕ್ಕಾಪಟ್ಟೆ ಕೋಪ ಬಂತು...!


"ಎದುರು ಉತ್ತರ ಕೊಡ್ತಿಯೇನೊ.. ಎಲ್ಲಿ ಕೈ ಹಿಡಿ.."


ನಾಗೂ ಕೈ ಹಿಡಿದ..


ಕೈ ಕೆಂಪಗೆ ಆಗುವ ಹಾಗೆ  ಬೆಚ್ಚಗೆ ಎರಡು ಏಟು ಕೊಟ್ಟರು..
ಹುಡುಗರೆಲ್ಲ ನಕ್ಕರು.. ನಾಗುವಿಗೆ ಅಳು ಬಂತು..


ಪಕ್ಕದಲ್ಲಿದ್ದ ಕುಷ್ಟ ಸಮಾಧಾನ  ಮಾಡಿದ..


"ನಾಗಣ್ಣ..  
ಅಳ ಬೇಡ್ರಾ... 
ಈ ಅಕ್ಕೋರ್ರಿಗೆ   ಒಂದು ಉಪಾಯ ಮಾಡುವ..
ಇನ್ನು ಮುಂದೆ ನಮ್ಮ ಸುದ್ದೀಗೆ ಬರಬಾರ್ದು....
 ಹಾಂಗ್ ಮಾಡುವ..
ನೀವು ಕಣ್ಣಿರು..ಸುಂಬಳ ಒರೆಸ್ಕಣಿ.."


ಕುಷ್ಟನಿಗೆ  ನಾಗು ಕಂಡರೆ  ಪ್ರೀತಿ..


ನಾಗುವೂ ಬೇಕಾದಷ್ಟು ಬಾರಿ " ಅಕ್ಕೊರ್ರಿಂದ "  ಪೆಟ್ಟು ತಿಂದಿದ್ದ..


ಕುಷ್ಟನಿಗೆ  ಒಂದು ಉಪಾಯ ಬಂತು..


"ನಾವು ಸಾಕಿದ ಹಾವನ್ನು  ..
ನಮ್ಮ ಪಾಟಿಚೀಲದೊಳಗೆ ಹಾಕಿಕೊಂಡು ಹೋಗೋಣ..!!.."


ಎಂದು  ಒಳ್ಳೆಯ ಘನಂದಾರಿ ಉಪಾಯ ಕೊಟ್ಟ..


ನಮಗೆಲ್ಲ ಅವನ ಉಪಾಯ ಇಷ್ಟವಾಯಿತು..


ನಾಗೂ  ಪಾಟೀಚೀಲದೊಳಗೆ ಆ ಹಾವನ್ನು ತುಂಬಿಕೊಂಡು ಶಾಲೆಗೆ ಬಂದ...


ಅಕ್ಕೋರು ಬಂದವರೆ...


"ಮಕ್ಕಳೆ  ...
ನಿನ್ನೆ ನಿಮಗೆ ಬರೆಯಲು ಕೊಟ್ಟ ಪಾಠವನ್ನು   ಬರೆದಿದ್ದೀರಾ?
ಒಬ್ಬೊಬ್ಬರಾಗಿ ತೋರಿಸಿ..
ನಾಗು.. 
ಎಲ್ಲಿ  ಪಾಠ ಬರೆದುದನ್ನು ತೋರಿಸು"


"ಅಕ್ಕೋರ್ರೆ... 
ನನ್ನ ಪಾಟೀಚೀಲ ತೆಗೆಯಲು ಆಗ್ತ ಇಲ್ಲ.."


"ಇಲ್ಲಿ ತಗೋ ಬಾ... ನಾನು ತೆಗೆದು ಕೊಡ್ತೇನೆ.."


ನಾಗು ಪಾಟೀಚೀಲ ತೆಗೆದುಕೊಂಡು ಅವರಿಗೆ ಕೊಟ್ಟ...


ಅಷ್ಟರಲ್ಲಿ ಪಕ್ಕದ ಕೋಣೆಯಿಂದ  ನಮ್ಮ ಹೆಡ್ ಮಾಸ್ತರ್ರೂ ಬಂದಿದ್ದರು....


ಅಕ್ಕೋರು ಪಾಟಿಚೀಲ  ತೆಗೆದರು.. !!


ಅದರೊಳಗಿದ್ದ ಹಾವು ನೋಡಿ ಕಂಗಾಲಾದರು... !!!.


"ಅಯ್ಯೊಯ್ಯೊ..!!
ಅಯ್ಯಯ್ಯೋ...!!!..." ಅಂತ ಹೊರಗೆ ಓಡಿದರು..!


ಹೆಡ್ ಮಾಸ್ತರ್ರಿಗೆ ಕಣ್ಣು ಕೆಂಪಗಾಯಿತು...!


" ಯಾರದ್ದು... ಈ  ಕಿತಾಪತಿ  ?..? "


ಎಂದು ವಿಚಾರಣೆ ಮಾಡಿ ...
ನಾಗುವಿಗೆ ..
ಕುಷ್ಟನಿಗೆ  ಮತ್ತು ನನಗೂ ಬೆತ್ತದ ರುಚಿ ತೋರಿಸಿದರು..


"ಹೋಗಿ ...
ಈ ಹಾವನ್ನು ಅದು ಎಲ್ಲಿತ್ತೋ ಅಲ್ಲಿ ಬಿಟ್ಟು ಬನ್ನಿ" 
ಅಂತ ಗದರಿಸಿದರು..


ಸ್ವಲ್ಪ ದಿನ ಕಳೆಯಿತು..


ಆಗೆಲ್ಲ ...
ಸರಕಾರಿ ಶಾಲೆಗಳನ್ನು ವರ್ಷಕ್ಕೊಮ್ಮೆ  ತಪಾಸಣೆ ಮಾಡಲು ತಾಲೂಕಿನಿಂದ "ಮೇಲಾಧಿಕಾರಿಗಳು" ಬರುತ್ತಿದ್ದರು..


ಅವರಿಗೆ ನಾವೆಲ್ಲ "ಇನ್ನಿಸ್ಪೆಟ್ಟರ್ರು" ಅಂತ್ತಿದ್ದೆವು..


ಆ ವರ್ಷವೂ  ಒಬ್ಬರು ಬಂದರು..


ಅವರು ಬಂದಾಗ ..
ನಮ್ಮನ್ನೆಲ್ಲ ಪ್ರಶ್ನೆ ಕೇಳಿ... 
ನಮಗೆ  ಶಿಕ್ಷಕರು ಹೇಗೆ ಕಲಿಸಿದ್ದಾರೆ ಎಂದು  ಚೆಕ್ ಮಾಡುತ್ತಿದ್ದರು...


ಅವರು ಬಂದು ನಮ್ಮನ್ನು ಉದ್ದೇಶಿಸಿ..


"ಮಕ್ಕಳೆ...
ನಾನು ಇವತ್ತು ನಿಮಗೆಲ್ಲ ಪುಸ್ತಕದ ಪ್ರಶ್ನೆ ಕೇಳುವದಿಲ್ಲ..
ಬದಲಿಗೆ ನೀವೇ.. ನನ್ನನ್ನು ಪ್ರಶ್ನೆ ಕೇಳಿ..
ನಿಮಗೆ  ಎಂತಹ  ಸಂಶಯ ಬಂದಿದ್ದರೂ ಕೇಳಿ  ನಿವೆಲ್ಲ  ಜನರಲ್ ನಾಲೇಜನ್ನು ಬೆಳೆಸಿಕೊಳ್ಳ ಬೇಕು..


ನನಗೆ ನಿಮ್ಮ  ಜನರಲ್ ನಾಲೇಜನ್ನು ಪರಿಕ್ಷಿಸ ಬೇಕಾಗಿದೆ"


ಯಾರೂ ಮಾತನಾಡಲಿಲ್ಲ..


"ಮಕ್ಕಳೆ ..
ಹೆದರ ಬೇಡಿ.. 
ನಿಮಗೆ ದಿನ ನಿತ್ಯದಲ್ಲಿ ಕಾಣುವ ಯಾವುದೆ ಸಂಶಯದ ಬಗೆಗೆ ಪ್ರಶ್ನೆ ಕೇಳಿ..
ಪ್ರಶ್ನೆ ಕೇಳಲಿಕ್ಕೆ  ಹೆದರ ಬಾರದು..
ಪ್ರಶ್ನೆ ಕೇಳುವದನ್ನು ನೀವು ಬೆಳೆಸಿಕೊಳ್ಳ ಬೇಕು "


ಈಗ ಅಲ್ಲಲ್ಲಿ ಸಣ್ಣಗೆ ಗುಸು ಗುಸು ಶುರುವಾಯಿತು...


ನಾಗು  ಸಟಕ್ಕನೆ ಎದ್ದು ನಿಂತ...!!


ಇನ್ನಿಸ್ಪೆಟ್ಟರ್ರೆ. ...
ಏನು ಬೇಕಾದರೂ  ..
ಪ್ರಶ್ನೆ ಕೇಳ ಬಹುದಾ ?. !! "


"ನೋಡಿ ಮಕ್ಕಳೆ ...
ಹೀಗೆ ದೈರ್ಯವಾಗಿ ಪ್ರಶ್ನೆ ಕೇಳ ಬೇಕು... 
ಕೇಳಪಾ  ಏನು ನಿನ್ನ ಪ್ರಶ್ನೆ..?  "


" ಇನ್ನಿಸ್ಪೆಟ್ಟರ್ರೆ..
ಹಾವು ಯಾಕೆ  "ಉಚ್ಚೆ"  ಹೊಯ್ಯುವದಿಲ್ಲ..? ? "


ಮೇಲಾಧಿಕಾರಿಗಳು ಕಂಗಾಲಾದರು..!!


"ಏನು ?...!!
ಹಾವು  ಉಚ್ಚೆ ಹೊಯ್ಯುವದಿಲ್ಲವಾ ?.. !!
ಎಂಥಾ  ಪ್ರಶ್ನೆ  ಇದು..!! "


ಬಹುಷಃ  ಅವರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ..


ನಾಗುವಿಗೆ ಈಗ ಮತ್ತೂ ಧೈರ್ಯ ಬಂತು...!


ಹೆಮ್ಮೆಯಿಂದ ಎದೆ ಸೆಟೆದು  ಮತ್ತೆ ಕೇಳಿದ..!


"ಇನ್ನಿಸ್ಪೆಟ್ಟರ್ರೆ... 
ನಾವು  ಒಂದು ಹಾವನ್ನು ಸಾಕಿದ್ದೆವು...
ಅದು ಒಂದು ವಾರ ಆದರೂ "ಉಚ್ಚೆ"  ಹೊಯ್ಯಲಿಲ್ಲ..
ಯಾಕೆ  ? !.."


ಮೇಲಾಧಿಕಾರಿಗಳಿಗೆ  ಅವಾಕ್ಕಾದರು... !!
ಉತ್ತರ ಕೊಡಲಾಗದೆ  ತಡವರಿಸಿದರು..!!
ಈಗ ಮಾಸ್ತರ್ರು  ನಾಗುವಿಗೆ  ಗದರಿದರು..


"ಕುತ್ಕೊಳ್ಳೋ...! 
ಭಾರಿ..  ಬುದ್ಧಿವಂತ...!
ಹಾವು  ಉಚ್ಚೆ  ಹೊಯ್ಯುವದಿಲ್ಲವಂತೆ..!
ಅದು ಉಚ್ಚೆ ಹೊಯ್ದರೆಷ್ಟು ..
ಬಿಟ್ಟರೆಷ್ಟು..?
ಮಹಾ  ಸಂಶಯ ಇವಂದು... 
ಕೂತ್ಕೋ.. ತಲೆಹರಟೆ.. !!"


ನಾಗು ಕುಳಿತು ಕೊಂಡ..


"ಎಂಥಾ ... ಮಕ್ಕಳ್ರೀ..  ಇವ್ರು..?
ಈಗ್ಲೇ ...ಹೀಗೆ.. !
ದೊಡ್ಡವರಾದ ಮೇಲೆ  ಇನ್ನು ಹೇಗೆ..?
ಅಬ್ಬಬ್ಬಾ...!!
ಹೇಗೆ ಸಂಭಾಳಿಸ್ತೀರ್ರಿ ನೀವು"
ಅಂತ ಮೇಲಾಧಿಕಾರಿಗಳು  ಮಾಸ್ತರ್ರನ್ನು ಕೇಳಿದರು..


ಮಾಸ್ತರ್ರಿಗೂ ಅವಮಾನ ಆದಂತಾಯಿತು..


ನಮ್ಮ ಮೂವರನ್ನು ದುರುಗುಟ್ಟಿ ನೋಡಿದರು...!!


ಕುಷ್ಟ ನನ್ನ ಕಿವಿಯಲ್ಲಿ ಪಿಸುಗುಟ್ಟಿದ..


"ಪಕ್ಕೇಶ್ ಹೆಗ್ಡೆರ್ರೆ....
ಯಾಕೆ ಬೇಕಿತ್ತು ಈ ಪ್ರಶ್ನೆ..?
ಇನ್ನಿಸ್ಪೆಟ್ರು ಹೋದಮೇಲೆ  ಮತ್ತೆ  ಪೆಟ್ಟು ತಿನ್ನ ಬೇಕಲ್ರಾ?


ಈ ಮಾಸ್ತರ್ರು ...
ನಮ್ಮ ಮೂರೂ ಜನಕ್ಕೆ  ಬೆತ್ತ ಪುಡಿ...  ಪುಡಿ ಮಾಡ್ತಾರೆ ನೋಡಿ.."


ನನಗೆ ಸಣ್ಣಗೆ ನಡುಕ ಶುರುವಾಯಿತು..


ಮಾಸ್ತರರು ಎಲ್ಲರೆದುರಿಗೆ ನಾಗುವಿಗೆ ಗದರಿದ್ದರಿಂದ ನಾಗುವಿಗೆ ಅಳು ಬಂದಂತಾಗಿತ್ತು..

ಶಾಲೆಯಿಂದ  ಹೊರಗೆ ಬರುತ್ತಿದ್ದ ಹಾಗೆ  ಕುಷ್ಟ ನಾಗುವಿಗೆ  ಸಮಾಧಾನ ಮಾಡಿದ..


"ನಾಗಣ್ಣ .. 
ನೀವು ಬೇಜಾರು ಮಾಡ್ಕೋಬ್ಯಾಡ್ರಿ..
ಆ  ಇನ್ನಿಸ್ ಪೆಟ್ರಿಗೆ ಎಂತದೂ ಗೊತ್ತಿಲ್ರ...!


ನೀವೇ.. ಹೇಳಿ.. ನಮ್ಮ ದೇವರು  ಶಿವನ ಕೊರಳಲ್ಲಿ ಎನಿದೆರ್ರ..?.."


" ಹಾವು... !! "


"ಆ ಹಾವು  ..
ನಾವು ಮಾಸ್ತರರ  ಹತ್ರ ಕೇಳಿದ ಹಾಗೆ   ..
ಸ್ವಲ್ಪ "ಉಚ್ಚೆ ಹೊಯ್ದು ಬರ್ತೆ.." 
ಅಂತ ಆಗಾಗ ಹೋಗ್ತಾ ಇದ್ರೆ  ಶಿವನಿಗೆ ಕಿರಿಕಿರಿ ಅಲ್ವೇನ್ರ ?..?


"ಹೌದು.."


" ಇನ್ನು.. ದೇವ್ರು "ವಿಷ್ಣು " ಎಲ್ಲಿ ಮಲಗಿದೆನ್ರಾ..?"


"ಹಾವಿನ ಮೇಲೆ.."


ಈ ಹಾವು.. ಆಗಾಗ..  
"ನಾನು ಉಚ್ಚೆ ಹೊಯ್ದು ಬರ್ತೆ..
ನಾನು  ಸ್ವಲ್ಪ  ಉಚ್ಚೆ  ಹೊಯ್ದು ಬರ್ತೆ..
ಸ್ವಲ್ಪ ಆಚೆ ನಿಂತು ಕೊಳ್ರಿ.." 
ಅಂತ ಹೇಳಿದರೆ ಹ್ಯಾಂಗ್ರ .. ? ? 


ಹಂಗೆಯಾ  ನಮ್ಮ ಡೊಳ್ಳು ಹೊಟ್ಟೆ ಗಣಪ 
ಹಾವನ್ನು ಬೆಲ್ಟಿನ ತರಹ ಹೊಟ್ಟೆಗೆ ಹಾಕ್ಕೊಂಡಿದ್ದ ..


ಆ ಹಾವು  ಪದೆ.. ಪದೇ.... 
" ಸ್ವಲ್ಪ ಇರಪ್ಪಾ.. .. ಉಚ್ಚೆ ಹೊಯ್ದು ಬರ್ತೀನಿ..."
 ಅಂತಾ  ಇದ್ರೆ..
ನಮ್ಮ ಗಣಪನ ಹೊಟ್ಟೆ ಗತಿ ಏನಾಗ್ತಿತ್ತು...?


"ಅದಕ್ಕೆ ಏನೀಗ..?"


"ನೀವು ಬೇಜಾರು ಮಾಡ್ಕೋ ಬ್ಯಾಡ್ರಿ ..
ಆ...  ದೇವ್ರೇ ಹಾವಿಗೆ  ಉಚ್ಚೆ ಹೊಯ್ಯದ ಹಾಗೆ ಮಾಡಿದೆನ್ರ..
ಆ ಮಾಸ್ತರರಿಗೆ.. ಇನ್ನಿಸ್ ಪೆಟ್ರಿಗೆ  ಏನೂ ಗೊತ್ತಿಲ್ರ.."


ನಾನು.. ನಾಗೂ ಇಬ್ಬರೂ .. 
ಹೌದು ಅಂತ ತಲೆ  ಅಲ್ಲಾಡಿಸಿದೆವು...
( ದಯವಿಟ್ಟು ಪ್ರತಿಕ್ರಿಯೆ ಓದಿ...)

91 comments:

ಮನಸು said...

hahah Chennagide prakashaNNa.. haavu andre bhaya namage antadralli neevu saakiddeeralla great... kusta kate bejan ide annsutte....

Ittigecement said...

ಮನಸು...

ಆ ಬಾಲ್ಯದ ದಿನಗಳ ಬಗೆಗೆ ಏನು ಹೇಳಲಿ?
ಕುಷ್ಟ.. ನಾಗು..
ಆ "ಅಕ್ಕೋರ್ರು.."

ಪೇಚು ಬಿದ್ದ "ಇನ್ನಿಸ್ ಪೆಟ್ಟರ್ರು" ಹ್ಹ.. ಹ್ಹಾ...!

ಈಗ ನಗು ಬರುತ್ತದೆ..

ನಾವು ಸಾಕಿದ "ಹಸಿರುಳ್ಳೆ" ಹಾವು ಒಂದು ವಾರ ಆದರೂ.. ಮೂತ್ರ ಮಾಡಲಿಲ್ಲವಾಗಿತ್ತು..

ನಮಗೆಲ್ಲ ಬಹಳ ಸೋಜಿಗವಾಗಿತ್ತು !!

ನಮ್ಮ "ಇನ್ನಿಸ್ಪೆಟ್ರನ್ನು" ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

ಜೈ ಹೋ.. !!

Prakash Payaniga said...

nice one. balyada nenapu yavattooo mareyaagalla

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಸುಮಾರು ದಿನ ಆಗಿತ್ತು ನಾಗುನ್ನ ನೋಡ್ದೆ. ಮತ್ತೆ ಭೇಟಿ ಮಾಡ್ಸಿದೀರ. ರಾಶೀ ನೆಗ್ಯಾಡ್ದಿ.
ತುಂಬ ಇಷ್ಟವಾಯ್ತು ಬರಹ.

Unknown said...

hahahah.... kathe bhari maja iddu... sanniddagina tamashe... kitapati bhari mast...!! matte nenapisiddakke dhanyavaadagalu......

Mahesh Gowda said...

Prakashannna Nanna hesaru M A H E S H A ! ANTANE ;)

Keshav.Kulkarni said...

super, really went back to my school days :)

Ittigecement said...

ಪ್ರೀತಿಯ "ಪ್ರಕಾಶ್ ಪಯಣಿಗ"...

"ಹಾವು ಉಚ್ಚೆ ಹೊಯ್ತದಾ?"

ನಾಗುವಿನ ಈ ಪ್ರಶ್ನೆಗೆ ಕುಷ್ಟ ಏನು ಹೇಳಿದ ಗೊತ್ತಾ?

"ಆ ಇನ್ನಿಸ್ಪೆಟ್ಟರಿಗೆ ಏನೂ ಗೊತ್ತಿಲ್ರ...
ನಿವೇ ನೋಡಿ...
ಶಿವನ ಕೊರಳಿಗೆ ಏನಿದೆ?

" ಹಾವು..".. !

" ಅದು ನಮ್ಮಾಂಗೆ ಅರ್ಧ ಗಂಟೆಗೊಮ್ಮೆ "ಉಚ್ಚೆ" ಹೊಯ್ದು ಬಂದ್ರೆ ಶಿವಂಗೆ ಎಂತಾ ಆಗ್ತೆದ್ರಾ? ?

ಇನ್ನು ವಿಷ್ಣು ಎಲ್ಲಿ ಮಲಗಿದಾನೆ?

" ಹಾವಿನ ಮೇಲೆ..!! "

" ಸ್ವಲ್ಪ ಇರಪ "ಉಚ್ಚೆ ಹೊಯ್ದು ಬರ್ತಿನಿ ಅಂದ್ರೆ ವಿಷ್ಣುಗೆ ಏನಾಗ್ತೆರ್ರಾ? ?

ಹಂಗಾಗಿ ಈ.. ದೇವ್ರೇ ಹಾವಿಗೆ ನೀನು ಉಚ್ಚೆ ಹೊಯ್ಯೂದೂ ಬೇಡ ಅಂತ ಹೇಳಿಬಿಟ್ಟಿದೇರ್ರಾ..

ಆ ಮಾಸ್ತರ್ರೀಗೂ ಗೊತ್ತಿಲ್ರ.." !!

ಹ್ಹಾ.. ಹ್ಹಾ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ.. ಜೈ ಹೋ.. !!

ಚುಕ್ಕಿಚಿತ್ತಾರ said...

ಕುಷ್ಟನ ತರ್ಕ ಮಾತ್ರ ಮೆಚ್ಚುವ೦ತದ್ದು ಪ್ರಕಾಶಣ್ಣ..:)
ನಿಮ್ ಹಿ೦ಗಿದ್ ಕಥೆ ಅದೆಷ್ಟ್ ಇದ್ದು..ಅ೦ತ...:):):)

chand said...

ತುಂಬಾ ಚೆನ್ನಾಗೈತೆ... ಇಂತವು ಇನ್ನಷ್ಟು ಬರೀರಿ

Ravi Hegde said...

ಹೆಗ್ಡೆರ್ರೆ ಕುಷ್ಟ ellidane?

Narayan Bhat said...

ತುಂಬಾ ಚೆನ್ನಾಗಿದೆ.

ಸವಿಗನಸು said...

prakashaNNa,
kushtana tarkagalu yavagalu vichitravaagiruttave....
chennagide lekhana.....hahahhaha

ragat paradise said...

'ಪಕ್ಕೇಶ್ ಹೆಗ್ಡೆರೆ' sir ಒಳ್ಳೆ ಗಮ್ಮತ್ Story....

Shashi jois said...

ಪ್ರಕಾಶ್ ,
ಒಳ್ಳೆ ಗಮ್ಮತ್ತಿತ್ತು ನಿಮ್ ಕತೆ .ಕುಷ್ಟನ ತರ್ಕ ಇಷ್ಟ ಆಯ್ತು..ಓದಿ ನಕ್ಕು ನಕ್ಕು ಸಾಕಾಯ್ತು.

Sandeep K B said...

ಒಳ್ಳೆ ಕಥೆ ಪ್ರಕಾಶಣ್ಣ ,
ಹಾವು ಉಚ್ಚೆ ಮಾಡುತ್ತ ಅಂತ ನನ್ನ ತಲೆಯಲ್ಲೂ ಸ್ವಲ್ಪ ಹೊತ್ತು ಹುಳ ಓಡಾಡುತ್ತ ಇತ್ತು .
ಕುಷ್ತನ ಉತ್ತರ ನೋಡಿ ನಗು ತಡೆಯಲು ಆಗಲಿಲ್ಲ.

Sushrutha Dodderi said...

ಹೆಹೆ.. ಒಳ್ಳೇ ಕುಷ್ಟ! ಸಮಜಾಯಿಷಿಯೂ ಸಖತ್! :D

ಆದ್ರೆ ಆ ಹಸುರು ಹಾವು ಅದೇನೋ ಉಬ್ಸಿದ್ರೆ ಕಣ್ಣು-ಕಿವಿ ಹೋಗ್ಬಿಡತ್ತೆ ಅಂತ ನಮ್ಗೆ ಯಾರೋ ಹೆದ್ರಿಸಿದ್ರು.. ಅದ್ಕಾಗಿ ನಾವು ಅದ್ರ ತಂಟೆಗೂ ಹೋಗ್ತಿರ್ಲಿಲ್ಲಪ್ಪ!

Srikanth Manjunath said...

Humor and story can be build on reptiles also...you showed this..

After brahma..i bet you are one of the best creator.

Sooper

ಸುಮ said...

ಹ..ಹ ಪ್ರಕಾಶಣ್ಣ ...ಬಹಳ ಮಜಾ ಇದ್ದು ನಾಗೂ ಪ್ರಶ್ನೆ ಮತ್ತು ಅದಕ್ಕೆ ಕುಷ್ಟನ ಉತ್ತರ.
ನಂಗೂ ಹಸಿರುಹಾವು ಅಂದ್ರೆ ತುಂಬ ಇಷ್ಟ ಆಗಿತ್ತು . ಯಾರಾದ್ರು ಹಿಡಿದು ಕೊಟ್ಟರೆ ಬಾಲ ಮುಟ್ಟಿ ಖುಷಿ ಪಡ್ತಿದ್ದಿ .

sunaath said...

ಹಾವನ್ನು ನೋಡಿದವರೇ ಉಚ್ಚೆ ಹೊಯ್ಕೋ ಬೇಕು;ಹಾವು ಯಾಕೆ ಹೊಯ್ಕೊಳ್ಳತ್ತೆ?

Ambika said...

ತು೦ಬಾ ಚೆನ್ನಾಗಿದೆ... ನಕ್ಕು ನಕ್ಕು ಇಟ್ಟೆ...ಕುಷ್ಟನ ಉತ್ತರ ತು೦ಬಾ ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ said...

:D :D last Q Odi tumba nagu bantu..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಚೆಂದದ ಬರಹ..ಇಷ್ಟ ಆಯಿತು.

ಸಾಗರದಾಚೆಯ ಇಂಚರ said...

Prakashanna

mattondu sundara kathe

nakku nakku sustu

ಜಲನಯನ said...

ಪಕ್ಕೇಶ್ ಮಾಮ..ಹಾವ್ ಬಿಡೋದು,,,?? ಲೇಡಿ ಟೀಚರ್ ಗೆ ಜಿರಳೆ ಅಂದ್ರೆ ಹೆದರ್ತಾರೆ ಅಂತ ನಮ್ ಸ್ಕೂಲಲ್ಲೂ ಕಿಲಾಡಿ ಹುಡುಗ್ರು ಹಿಂಟ್ ಕೊಡ್ತಾ ಇದ್ರು..ಆದ್ರೆ ನಿಮ್ಮ ಪಟಾಲಂ ಕಿಲಾಡಿರ್ಗೆ ಕಿಲಾಡಿ...ಇನ್ಸ್ ಪೆಟ್ರಿಗೇ ಉಚ್ಚೆ ಹೊಡ್ಸೋದು ಬಾಕಿ...ಹಹಹಹ ಚನ್ನಾಗಿದೆ..
ಹಾವುಗಳಲ್ಲಿ ಬ್ಲಾಡರ್ ಇರೊಲ್ಲ...ಅದು ದೇಹದ ದ್ರವರೂಪದ ವರ್ಜ್ಯಗಳನ್ನು ಘನದೊಡನೆ ವರ್ಜಿಸುತ್ತೆ. ಇನ್ನೊಂದು ವಿಷಯ ಹಾವು ದೇಹದ ನೀರಿನಂಶವನ್ನು ಬಹಳ ಸಮರ್ಪಕವಾಗಿ ಪುನಃಪ್ರಯೋಗಿಸುತ್ತದೆ ಹಾಗಾಗಿ ಪ್ರಮಾಣವೂ ಕಡಿಮೆಯಿದ್ದು ಉಚ್ಚೆ ಹುಯ್ದಿದ್ದು ಗೊತ್ತಾಗೋದೇ ಇಲ್ಲ.

Ittigecement said...

ಶಾಂತಲಾ...

ಆ ದಿನಗಳ ಹುಡುಗಾಟಿಕೆ...
ಮುಗ್ಧ ಮನಸ್ಸಿನ ಆಲೋಚನೆಗಳು.. ಈಗ ಸಿಕ್ಕಾಪಟ್ಟೆ ನಗು ತರಿಸುತ್ತವೆ..

ನಮ್ಮನ್ನು ತಿದ್ದಿ ಕಲಿಸಿದ ಆ.. ಮಾಸ್ತರುಗಳ ಋಣ ನಮ್ಮ ಮೇಲಿದೆ..
ಅವರು ನಮ್ಮನ್ನು ದಂಡಿಸದಿದ್ದರೆ ನಾವು ಏನಾಗುತ್ತಿದ್ದೆವೋ ಏನೊ..?

ನಾಗು.. ಕುಷ್ಟ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

Ittigecement said...

ಕೃಷ್ಣ ಭಟ್ ಜೀ..

ಬಾಲ್ಯದ ನೆನಪುಗಳು ಬಲು ಚಂದ..

ನಮ್ಮನ್ನು ತಿದ್ದಿದ ಆ ಮಾಸ್ತರುಗಳಿಗೆ ನಮ್ಮ ಬದುಕು ಚಿರ ಋಣಿ..
ಎಷ್ಟು ತಾಳ್ಮೆ ಇದ್ದಿರ ಬಹುದು ಅವರುಗಳಿಗೆ?

ಅವರು ಸಿಕ್ಕಿದಾಗಲೆಲ್ಲ ಅವರ ಪಾದ ಮುಟ್ಟಿ ನಮಸ್ಕರಿಬಿಡುತ್ತೇನೆ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಮಹೇಶ..

ನನಗೆ ಈಗಲೂ ಅನುಮಾನ ಪರಿಹಾರವಾಗಿಲ್ಲ..

ನಾವು ನಮ್ಮ ಹೆಸರನ್ನು ಇಂಗ್ಲೀಷಿನಲ್ಲಿ ಹಾಗಿದೆಯೆಂದು ಬದಲಿಸಿಕೊಳ್ಳ ಬೇಕು?
ನಮ್ಮ ಹೆಸರನ್ನು ಇಟ್ಟಿದ್ದು ಕನ್ನಡದಲ್ಲವೇನು?

ಅದು ಯಾವಾಗಲೂ..
ಯಾವ ಭಾಷೆಯಲ್ಲಾದರೂ "ಮಹೇಶ" ಅಂತಲೇ ಇರಬೇಕು.. ಅಲ್ಲವಾ?

ಮಹೇಶ್ ಅಂತ ಅಲ್ಲಾ..

ನಾಗು.. ಕುಷ್ಟ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

Ittigecement said...

ಕೇಶವ ಕುಲಕರ್ಣಿಯವರೆ...

ನಮ್ಮ ಅಕ್ಕೋರ್ರು ಅಂದಿನಿಂದ ನಮಗೆ ಹೊಡೆಯುವದನ್ನು ಬಿಟ್ಟಿದ್ದರು..
ತುಂಬಾ ಹೆದರಿ ಹೋಗಿದ್ದರು..

ಮೇಡಮ್ ಗೆ "ಅಕ್ಕ ಅವರು" ಅಂತ ಕರೆಯೋದು..
"ಅಕ್ಕೋರು" ಅಂತ ಆಗಿದೆಯೆಂದು ನನ್ನ ಅನಿಸಿಕೆ..

ನಮ್ಮ ಊರಿನ ಕಡೆ ಬಹಳವಾಗಿ ಈಗಲೂ ಹಾಗೇ ಕರೆಯುತ್ತಾರೆ..

ಸರ್.. ಲೇಖನ ಇಷ್ಟಪಟ್ಟಿದ್ದು ಖುಷಿಯಾಯಿತು...

ಧನ್ಯವಾದಗಳು...

Ittigecement said...

ವಸಂತ...

ಆ ಮೇಲಾಧಿಕಾರಿಗಳು ಬಹಳ ಓದಿದವರಾಗಿದ್ದರು..

ಹೊಸದಾಗಿ ನಮಗೆಲ್ಲ ಹಳ್ಳಿಯ ವಿದ್ಯಾರ್ಥಿಗಳಿಗೆ "ಜನರಲ್ ನಾಲೇಜಿನ ಬಗೆಗೆ" ಕಲಿಸಲು..
ಆಸಕ್ತಿ ಹುಟ್ಟಿಸಲು ಬಂದಿದ್ದರು...

ಆದರೆ ನಾಗುವಿನ ಸಂಶಯ ಎಲ್ಲ ತಲೆಕೆಳಗಾಗಿಸಿತು...
ಅವಮಾನವಾದಂತಾಗಿ..
ತಮ್ಮ ಕೆಲಸವನ್ನು ಬೇಗನೇ ಮುಗಿಸಿ ನಡೆದರು...

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ವಿಜಯಾ.. (ಚುಕ್ಕಿಚಿತ್ತಾರ)

ಎಲ್ಲರ ಜೀವನದಲ್ಲಿ ಇಂಥಾದ್ದು ಆಗಿರುತ್ತದೆ..
ಹೆಚ್ಚಾಗಿ ನಮಗೆ ಮರೆತು ಹೋಗಿರುತ್ತದೆ...

ಇತ್ತೀಚೆಗೆ ನಾಗು ನೆನಪಿಸಿದ್ದರಿಂದ ಮತ್ತೆ ನೆನಪಾಯಿತು...

ಕುಷ್ಟನ ತರ್ಕ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಚಂದ್ರ ಮುಖಿ...

ನಾವೆಲ್ಲ ಸೇರಿ ಬೀಡಿ ಸೇದಿದ ಕಥೆ...
ಯಕ್ಷಗಾನ ಕುಣಿದ ಕಥೆಗಳಿವೆ..

ಬರೆಯುವೆ ಮುಂದೆಯಾವಾಗಲಾದರೂ...

ಕುಷ್ಟ.. ನಾಗು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ರವಿಯವರೆ...

ಕುಷ್ಟ ನಮ್ಮೂರಲ್ಲಿದ್ದಾನೆ...

ಇನ್ನೊಂದು ವಿಷೇಷ ಘಟನೆ ಇತ್ತೀಚೆಗೆ ನಡೆದದ್ದು ನೆನಪಾಗುತ್ತಿದೆ..
ಅವನ ಮನೆಯಲ್ಲಿ ಮದುವೆಗೆ ಹೋದಾಗ ಆಗಿದ್ದು..
ಬರೆಯುವೆ ಇನ್ನೊಂದು ದಿನ...

ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ನಾರಾಯಣ ಭಟ್ಟರೆ...

ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಟಾನಿಕ್ ಥರಹ...
ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...

ಬರಹಗಾರನಲ್ಲದ...
ಸಾಹಿತ್ಯ ಓದಿರದ ನನಗೆ
ನಿಮ್ಮೆಲ್ಲರ ಪ್ರತಿಕ್ರಿಯೆಗಳು ಬರೆಯಲು ಪ್ರೇರಣೆ ನೀಡಿವೆ..

ಧನ್ಯವಾದಗಳು...

Sudarshan said...

ಪ್ರಕಾಶಣ್ಣ,
ಬಾಲ್ಯದ ಹಲವಾರು "ಹೋಳಿ" ಹಂಬಲಾಯಿತು ಈ ಕಥೆ ಓದಿ.
ಅದರಲ್ಲೂ ಕಸ್ತೂರಿ ಬಾರ್ ಸಾಬೂನಿನ ಡಬ್ಬಿಯ ಬಗ್ಗೆ ಕೇಳಿ ತುಸು ನಗು ಬಂತು.
ಯಾಕೆಂದರೆ ನಾ ಇದರ ಬಗ್ಗೆ ಕೆಲವರಲ್ಲಿ ಹೇಳಿದಾಗ ಅವರೆಲ್ಲ ಹೊಟ್ಟೆ ಹುಣ್ ಆಗೋ
ರೀತಿ ನಕ್ಕಿಬಿಟ್ಟಿದ್ದರು, ಈ ರೀತಿ ಹೆಸರುಳ್ಳ ಸಾಬೂನು ವಾಸ್ತವಿಕವಾಗಿ ಇದೆಯೇ,
ಅಥವಾ ನಾ ಅವರನ್ನ ಬಸ್ ಹತ್ತಿಸ್ತಾ ಇದ್ದಾನೆಯೇ ಅಂತ ಹೇಳಿ!
ಮತ್ತಷ್ಟು ಬಾಲ್ಯದ ಸಂಗತಿಗಳನ್ನು ಪ್ರಕಟಿಸಿ ಪ್ಲೀಸ್. ನಮಗೆಲ್ಲ ಒಳ್ಳೆ ಮಜಾ
ಸಿಗುತ್ತದೆ ಇದರಿಂದ...

Ittigecement said...

ಸವಿಗನಸು ಮಹೇಶ...


ನಿನ್ನೆಯಿಂದ ನನಗೆ ಐದಾರು ಫೋನ್ಗಳು...

"ಪ್ರಕಾಶಣ್ಣಾ... ಹಾವು ನಿಜವಾಗಿಯೂ ಉಚ್ಚೆ ಹುಯ್ಯುವದಿಲ್ಲವಾ?"

ಏನು ಹೇಳಲಿ?

ಎಲ್ಲ ಪ್ರಾಣಿಗಳೂ ಅತ್ಯವಶಕವಾಗಿ ಮಾಡಲೇ ಬೇಕಾದ ಕಾರ್ಯ ಅದು..

ಅದರ ಬಗ್ಗೆ ನೆಟ್ ವಿವರ ಇದೆ
ಆಮೇಲೆ ಕೊಡುವೆ..

ಆಜಾದನ ಪ್ರತಿಕ್ರಿಯೆಯಲ್ಲೂ ಮಾಹಿತಿ ಇದೆ..

ಕುಷ್ಟ..
ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Kishan said...

Nice & humorous incident!
The title of the post drove me to think of a build up of the narration around Prakash-a and related complexities of the naming initially.
However the later part of the story took an unexpected turn and started the day in office with a loud laugh.. much to the amusement of my colleagues around :-)

shivu.k said...

ಸರ್,

ಬಾಲ್ಯದ ಹಾವಿನ ಹುಚ್ಚೆ ಪ್ರಸಂಗ ತುಂಬಾ ಮಜವಾಗಿದೆ. ಅದಕ್ಕೆ ತಕ್ಕಂತೆ ನಿಮ್ಮ ಬಾಲ್ಯದ ಮಾತಿನ ತರ್ಕವೂ ಖುಷಿಕೊಟ್ಟಿತು.

Ranjana H said...

haavu andre nanage tumba bhaya, idu nija kathe adre nimmellara dhairya mechchabeku prakashanna. olle kitapati hudugru..

PaLa said...

ಕುಷ್ಟನ ವಿಚಾರಧಾರೆ ಮೆಚ್ಚಬೇಕಾದ್ದೆ :)

Anonymous said...

ಬಹಳ ಚೆನ್ನಾಗಿದೆ.... ನನ್ನ ಬಾಲ್ಯದಲ್ಲಿ ಯಾವುದೇ ಈ ಥರ ತಂಟೆಗಳನ್ನು ಮಾಡಲಿಲ್ಲವಲ್ಲಾ ಎಂದು ಅನಿಸುತ್ತದೆ...
ಇಂಗ್ಲೀಷ್ ನಲ್ಲಿ ಕುಷ್ಟ್ ಆಗಿದ್ದನೇ ???

balasubramanya said...

ಬಾಲ್ಯದ ನೆನಪಿನ ಚೆಲುವಿನ ಚಿತ್ತಾರ.ಹಾವಿನ ಬಗ್ಗೆ ಹೊಸ ಮಾಹಿತಿ !!! ಪಾಪ ಅದರ ಮೂತ್ರ ವಿಸರ್ಜನೆ ಬಗ್ಗೆ ಶಿವ ,ವಿಷ್ಣು ಗಳನ್ನೂ ಬಿಟ್ಟಿಲ್ಲಾ ನೀವು ,ಬಹುಷಃ ಅವರು ಇದರಬಗ್ಗೆ ಯೋಚಿಸಿರಲಾರರು.ಇನ್ನೂ ಆ ಅಕ್ಕೋರು ಪಜೀತಿ ಪಟ್ಟದ್ದು ಓದಿ ಪಾಪ ಅಕ್ಕೋರು !!! ಅನಿಸ್ತು, ಆದ್ರೆ ಹಳ್ಳಿಯ ಮಕ್ಕಳ ತುಂಟತನದ ಬಗ್ಗೆ ಅಕ್ಕೋರು ಹುಶಾರಾಗಿರ್ಬೇಕಾಗಿತ್ತು. ಪಾಪ ಇನ್ಸ್ಪೆಟ್ರಿಗೆನ್ ಗೊತ್ತು ಇಂತಹ ಪಾಟಿಂಗ ಹಳ್ಳಿ ಹೈಕಳು ಇರ್ತಾವೆ ಅಂತಾ !! ಪಾಪ ಹಳ್ಳಿ ಹೈಕಳ ತುಂಟತನಕಿಂತ ಪ್ಯಾಟೆ ಹೈಕ್ಲೆ ವಾಸಿ ಅನ್ಕೊಂಡಿರ್ತಾರೆ.ಇನ್ನು ಶಿವನ ತಲೆ ಮೇಲೆ ಗಂಗೆ ಇರುವ ಕಾರಣ ಶಿವನಿಗೆ ಹಾವಿನ ಭಯ ಇಲ್ಲ,ಹಾಗು ವಿಷ್ಣು ಶೇಷ ಶಯನನಾಗಿ ಮಲಗಿರುವುದು ಕ್ಷೀರ ಸಾಗರದಲ್ಲಿ ಹಾಗಾಗಿ ಹಾವು ಏನ್ಮಾಡಿದ್ರೂ ವಿಷ್ಣುಗೆ ಭಯ ಇಲ್ಲಾ !!ಹಾವನ್ನು ಬಲ್ಲವರಿಗೆ ಹಾವಿನ ಮೂತ್ರದ ಬಗ್ಗೆ ಗೊತ್ತಿರೋದ್ರಿಂದ ಅವರಿಗೆ ಚಿಂತೆ ಇಲ್ಲ , ಇನ್ನು ಗೊತ್ತಿಲದವರು ಹಾವಿನ ಬಗ್ಗೆ ಅದರ ಮೂತ್ರ ವಿಸರ್ಜನೆಬಗ್ಗೆ ತಿಳಿಯಲು. ಬುದ್ದಿಜೀವಿಗಳನ್ನು ಸಂಪರ್ಕಿಸಲು ಪ್ರಯ್ತ್ನಿಸ್ತಾರೆ ಬಿಡಿ.ಆದರೂ ನಿಮ್ಮ ಹೊಸ ಹೆಸರು ಪಕ್ಕೇಶ್ ಹೆಗ್ಡೆ ಒಂತರ ಸರಿ ಅನೀಸುತ್ತೆ !!! ಯಾಕೆಂದ್ರೆ ನೀವು ತಮಾಷೆಯಾಗಿ ಬರೆದು ಎಲ್ಲರು ನಕ್ಕು ನಕ್ಕೂ ಸುಸ್ತಾಗಿ ಪಕ್ಕೆ ಹಿಡ್ಕೋತಾರೆ !! ಅದಕಾಗಿ ಆ ದಿನವೇ ಈ ಅನಾಹುತ ತಿಳಿದ ನಿಮ್ಮ ಕುಷ್ಟ ನಿಮ್ಮನ್ನು ಪಕ್ಕೇಶ್ ಅಂತಾ ಕರ್ದಿರೋದು , ಕುಷ್ಟ ಕಾಲ ಜ್ಞಾನಿಯೇ ಸರಿ !!!

ಚಿತ್ರಾ said...

ಪಕ್ಕೆಶಣ್ಣ ,
ಹಾವು ಉಚ್ಚೆ ಹೊಯ್ತ ಇಲ್ಯ ಹೇಳದು ಕಡೆಗೂ ಗೊತ್ತಾಜಿಲ್ಲೇ ಹೇಳಾತು .
ನಾನು ಕಲ್ಪನೆ ಮಾಡ್ಕ್ಯತಾ ಇದ್ದಿ . ಶಿವನ ಕುತ್ತಿಗೆಲಿರ ಹಾವು , ವಿಷ್ಣು ಮಲಗಿದ ಹಾವು ಎರಡು " excuse me " ಹೇಳಿ ಹೊರಗೆ ಹೋಗದು , ಅಷ್ಟೊತ್ತು ವರೆಗೆ ಪಾಪ ಶಿವ ವಿಷ್ಣು ಇಬ್ಬರೂ ನಿಂತು ಕೈ ಕಾಲು ಆಡಿಸಿ ಮೈ ಮುರಿದು .. ( ಹಾವಿದ್ದಾಗ ಇದೆಲ್ಲ ಮಾಡಲೇ ಹೆದರಿಕೆ ಆಗ್ತಿಕ್ಕಲ ? )
ಹಾ ಹಃ ಹಾ.. ಮಸ್ತ್ ಇದ್ದು ! ಮತ್ತೆ ನಿನ್ನ ಪೂರ್ತಿ ಹೆಸರು ಕನ್ನಡ ಮತ್ತೆ ಇಂಗ್ಲಿಷ್ ಎರಡರಲ್ಲೂ ಬರೆದು ತೋರ್ಸು ಮಾರಾಯ !

ನಂಗ ಸಣ್ಣಕಿರಕಾದ್ರೂ ಅಜ್ಜನ ಮನೆ ಬದಿಗೆ ದೊಡ್ಡವು , ಈ ಹಸಿರು ಹಾವನ್ನ ಜೇಬಲ್ಲಿ ಇಟ್ಗಂಡು ಇಸ್ಫೀಟ್ ಆಡಲೇ ಹೋಗ್ತಿದ್ದ ! ಎಂಥದೋ ಅದೃಷ್ಟ ಇರ್ತು ಹೇಳಿ , ಇನ್ನು ಗಂಡು ಹುಡುಗ್ರು , ಹಿಡ್ಕಂಡು ಬಂದು ಶಾಲೇಲಿ ಹೆಣ್ಣು ಮಕ್ಕಳ ಬೆಂಚ್ ಹತ್ರ ಬಿಟ್ಟು ಮಜಾ ನೋಡ್ತಿದ್ದ !!!

venkat.bhats said...

ಕಥೆ ಹೇಳುವ ರೀತಿ ಇಷ್ಟ ಆತು, ಅಕ್ಕೋರು,ನಾಗು,ಕುಷ್ಟ,ಹಾಸುಂಬಾವು ಎಲ್ಲವನ್ನೂ ಒಳಗೊಂಡ ಬಾಲ್ಯ ನೆನಪಾತು.ಹಾವು ಉಚ್ಚೆ ಹೊಯ್ಯದಿರಲು ಕಾರಣವಂತು ಮಸ್ತ್..

Ittigecement said...

ರಘು...

ಕಳೆದ ಬಾರಿ ಊರಿಗೆ ಹೋದಾಗ ಒಂದು ಹಸಿರುಳ್ಳೆ ಹಾವನ್ನು ಹಿಡಿದು ..
ಮಗನಿಗೆ ತೋರಿಸಿ ಈ ಕಥೆಯನ್ನು ಹೇಳಿದ್ದೆ..

ಎಲ್ಲರೂ ನೆಗಯಾಡಿದ್ದರು..

ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

Ittigecement said...

ಶಶಿಯವರೆ...

ಕುಷ್ಟ .. ಅವನ ಮಾತುಗಳು..
ನನಗೂ ಇಷ್ಟ...

ಕಳೆದ ಬಾರಿ ಅವನ ಮನೆಯ ಮದುವೆಗೆ ಹೋಗಿದ್ದೆ..

ಆ ಘಟನೆ ಮಸ್ತ್ ಇದೆ..
ಇನ್ನೊಮ್ಮೆ ಬರೆಯುವೆ..

ಕುಷ್ಟನ ತರ್ಕ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.. ಜೈ ಹೋ.. !

Ittigecement said...

ಸಂದೀಪ್...

ನನಗೆ ಫೋನಿನಲ್ಲಿ ಹಲವರು ಕೇಳಿದರು..

"ಪ್ರಕಾಶಣ್ಣ ಹಾವು ಉಚ್ಚೆ ಹುಯ್ಯುವದೇ ಇಲ್ಲವಾ?"

ನನಗೂ ಸ್ಪಷ್ಟವಾದ ಉತ್ತರ ಗೊತ್ತಿರಲಿಲ್ಲ..

ತಕ್ಷಣ ನನ್ನ ಅಕ್ಕನ ಮಗ "ಪ್ರಶಾಂತನಿಗೆ"

ನೆಟ್ಟಿನಲ್ಲಿ ನೋಡಲು ಹೇಳಿದೆ..

ಅಲ್ಲಿ ಸಿಕ್ಕ ವಿವರಗಳು ಮತ್ತಷ್ಟು ಕುತೂಹಲಕಾರಿಯಾಗಿದೆ..

ಸಧ್ಯದಲ್ಲಿ ನಿಮ್ಮ ಮುಂದಿಡುವೆ..

ಲೇಖನ ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಬರುತ್ತಾ ಇರಿ..

Ittigecement said...

ಸುಶ್ರುತ...

ನಾವು ಆ ಹಾವನ್ನು ರಟ್ಟಿನ ಬಾಕ್ಸಿನಲ್ಲಿಟ್ಟು ಸಮಯ ಸಿಕ್ಕಾಗೆಲ್ಲ ನೋಡುತ್ತ ಕುಳಿತಿರುತ್ತಿದ್ದೆವು..

ಕೆಟ್ಟ ಕುತೂಹಲ !!

"ಈ ಹಾವಿಗೆ ಮಾತು ಕಲಿಸ ಬಹುದಾ?"

ನಾವು ಆ ಹಾವಿಗೆ ಏನೇನೋ ಹೇಳುತ್ತಿದ್ದೇವು...
ಅದರೊಡನೆ ಮಾತನಾಡುತ್ತಿದ್ದೇವು... !

ಕೊನೆಗೆ ಒಮ್ಮೆ ಕುಷ್ಟನೇ.. ಹೇಳಿದ್ದ...

"ಪಕ್ಕೇಶ್ ಹೆಗ್ಡೇರೆ..
ನಾವು ಏನ್ ಹೇಳಿದ್ರೂ. ಹಾವಿಗೆ ಕೇಳೂದಿಲ್ರ.. !
ನೋಡಿ ಹಾವಿಗೆ ಕಿವಿನೇ ಇಲ್ರ.. !!

ಕನ್ನಡ ಸಿನೇಮಾದಲ್ಲಿ ಒಂದು ಹುಡುಗನಿಗೆ ಸಹಾಯ ಮಾಡುವ ದೃಶ್ಯ ಮನದಲ್ಲಿ ಅಚ್ಚೊತ್ತಿತ್ತು... !

ಈ ಸಿನೇಮಾದವರೂ ಯಾವ ಥರಹ ಹೂವಿಡ್ತಾರೆ ಮಾರಾಯ್ರೆ.. !!

ಹ್ಹಾ.. ಹ್ಹಾ.. !!

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ha ha ha.... prathi saalu oduttiddante nage bugge :) chennagide prakashanna.....

ದಿನಕರ ಮೊಗೇರ said...

hha..hha...

nakku nakku saakaaytu..... adenu ghaTane.... heLo riti....

ellaa suppar..
mundina saari blog meeT ge nimma geLeyaraada KUSHTA, NAAGU ibbarannu karedukonDu banni....

Ittigecement said...

ಪ್ರೀತಿಯ ಶ್ರೀಕಾಂತ ಮಂಜುನಾಥ..

ನಾವು ದಿನಾಲೂ ಬಹಳ ಆಸಕ್ತಿಯಿಂದ ಹಾವಿನ ಬಾಕ್ಸನ್ನು ನೋಡುತ್ತಿದ್ದೇವು..

ಒಂದು ವಾರವಾದರೂ ಅದು ಮೂತ್ರ ಮಾಡಲೇ ಇಲ್ಲ.. ಎರಡವನ್ನೂ ಕೂಡ..

ಒಂದು ದಿನ ನನ್ನ ಚಿಕ್ಕಪ್ಪ ನಮ್ಮ ಅವಾಂತರ ನೋಡಿ..
ಗದರಿಸಿ..
ಮತ್ತೆ ಅದನ್ನು ಅದರ ಸ್ವಸ್ಥಾನಕ್ಕೆ ಬಿಟ್ಟು ಬರುವಂತೆ ಮಾಡಿದ್ದ..

ನಮ್ಮ ತಲೆಯಲ್ಲಿ ಅದು ಉಚ್ಚೆ ಮಾಡದಿರುವ ಸಂಗತಿ ಅಚ್ಚೊತ್ತಿ ಉಳಿದು ಹೋಗಿತ್ತು. !

ಪಾಪ ಮೇಲಾಧಿಕಾರಿಗಳು !
ಹೊಸದೊಂದು ಪ್ರಯೋಗ ಮಾಡಬೇಕು ಅಂತ ಬಂದಿದ್ದರು ಅಂತ ಕಾಣುತ್ತದೆ !

ನಾಗುವಿನ ಪ್ರಶ್ನೆ ಎಲ್ಲಾ ಉಲ್ಟಾ ಹೊಡೆಯಿತು.. !!

ಹ್ಹಾ.. ಹ್ಹಾ.. !

ಹಾವಿನ ಅವಾಂತರ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ...

chinmay.N said...

ಪ್ರಕಾಶಣ್ಣ ಶಾಲೆಯ ದಿನಗಳಲ್ಲಿ ನೀವು ಚೆನ್ನಾಗೆ ಎಂಜಾಯ್ ಮಾಡಿದ್ದಿರ. ಹಾವಿನ ಬಗ್ಗೆ ಪ್ರತಿ ಸಲ ಓದಿದಾಗಲು ನಗು ಬರುತ್ತದೆ.

Anonymous said...

Funny and innocent story :)

ಸೀತಾರಾಮ. ಕೆ. / SITARAM.K said...

nijavaagiyu kushta nimage mestru aagbekittu!!!
chendada prasanga prakaashanna.

Ittigecement said...

ಸುಮಾ...

ಹಸಿರುಳ್ಳೆ ಹಾವನ್ನು ಮುಟ್ಟಲು ಮೊದಮೊದಲು ಹೆದರಿಕೆ ಇತ್ತು..
ಆದರೆ ಕುಷ್ಟ ಅದರ ಬಾಯೊಳಗೆಲ್ಲ ಬೆರಳು ತೂರಿಸಿ ಏನೂ ಮಾಡೋದಿಲ್ರ ಅಂತ ಧೈರ್ಯ ತುಂಬಿದ..

"ಹಸಿರುಳ್ಳೆ ಹಾವು ಒಂದು ಥರಹದ ರಸ ಸಿಡಿಸುತ್ತದೆ.. ಅದರಿಂದ ಕಣ್ಣು ಕುರುಡಾಗುತ್ತದೆ" ಅಂತೆಲ್ಲ ಹೆದರಿಸುತ್ತಿದ್ದರು..

ಆದರೆ ನಮ್ಮ ಕುಷ್ಟ "ಅದೆಲ್ಲ ಕಟ್ಟು ಕತೆ" ಅಂತ ಸಾಧಿಸಿ ತೋರಿಸಿದ್ದ..

ಇದ್ದರೆ ಇರಬೇಕು ಕುಷ್ಟನಂಥಹ ಸಖ ಅಲ್ಲವಾ?

ಹ್ಹಾ ಹ್ಹಾ.. !

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.. ಜೈ ಹೋ.. !

Ittigecement said...

ಸುನಾಥ ಸರ್...

ನಿಜ ಹಾವು ನೋಡಿದರೆ ಹೆದರಿಕೆ..
ಬಹುಷಃ ನಮ್ಮ ಪುರಾಣ ಕಥೆಗಳಲ್ಲಿರುವ ಪಾತ್ರಗಳಿಂದಲೋ..
ನಮ್ಮ ಕುರುಡು ನಂಬಿಕೆಯಿಂದಲೋ.. ಹೆದರಿಕೆ ಮನೆಮಾಡಿದೆ..

ನಾವು ಒಂದು ವಾರ ನೋಡಿದರೂ ಆ ಹಾವು "ಉಚ್ಚೆ ಹುಯ್ಯಲಿಲ್ಲ.."

ಯಾರನ್ನು ಕೇಳುವದು ಅಂತಿದ್ದಾಗ "ಇನ್ನಿಸ್ಪೆಟ್ರು " ಅನಾಯಾಸವಾಗಿ ಸಿಕ್ಕರು...!

ಸರ್ ..
ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಕವಿತಾ...

ಆ ಕುಷ್ಟ ಇನ್ನೊಂದು ಉದಾಹರಣೆಯನ್ನೂ ಕೊಟ್ಟಿದ್ದ..

"ನಮ್ಮ ಗಣ್‍ಪತಿ.. ಹೊಟ್ಟೆಗೆ ಎಂತಾ ಸುತ್ತಿಕೊಂಡಿದ್ದೇನ್ರ..?"

"ಹಾವು"

" ಈ ಹಾವು ಆಗಾಗ "ಉಚ್ಚೆ ಹೊಯ್ದು ಬರ್ತೆ ತಡಿರ್ರ.." ಅಂದ್ರೆ ಗಣ್‍ಪತಿ ಹೊಟ್ಟೆ ಕತೆ ಏನಾಗ್ ಬೇಕ್ರ..?"

ಇಲ್ಲಿ ಮೊದಲೇ ಲೇಖನ ಉದ್ದವಾಗಿದೆ ಅಂತ ಸ್ವಲ್ಪ ಕಟ್ ಮಾಡಿದೆ...

ಲೇಖನ ಇಷ್ಟವಾಗಿದ್ದಕ್ಕೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು.. ಬರುತ್ತ ಇರಿ...

Ittigecement said...

ತೇಜಸ್ವಿನಿ...

ಸರ್ಕಾರಿ ಶಾಲೆಗಳಲ್ಲಿ ಮೇಲಾಧಿಕಾರಿಗಳನ್ನು "ಪ್ರಸನ್ನ"ಗೊಳಿಸಬೇಕೆಂದು..
ಮಾಸ್ತರ್ರು ಮೊದಲೇ ಮಕ್ಕಳಿಗೆ "ತರಬೇತಿ" ಕೊಟ್ಟಿರುತ್ತಾರೆ...
ಅವತ್ತೊಂದು ದಿನ ನೀಟಾಗಿರುವ ಬಟ್ಟೆ..
ಸ್ನಾನ ಮಾಡಿರಬೇಕು...

ಯಾವ ಯಾವ ಪ್ರಶ್ನೆಕೇಳ ಬಹುದು....

ಎಲ್ಲದಕ್ಕಿಂತ ಮುಖ್ಯವಾಗಿ "ಮಾತನಾಡದೆ.. ಶಾಂತವಾಗಿ ಕುಳಿತಿರಬೇಕು"
ಅಂತೆಲ್ಲ ಹೇಳಿಕೊಟ್ಟು..
ಒಂದು ಸಣ್ಣ ಎಚ್ಚರಿಕೆಯನ್ನೂ ಕೊಟ್ಟಿರುತ್ತಾರೆ.. !

"ಏನಾದರೂ ಕಿತಾಪತಿ ಮಾಡಿದರೆ...ಬೆತ್ತ ಪುಡಿ ಪುಡಿಯಾಗಿರುತ್ತದೆ"

ನಮಗೂ ನಮ್ಮ ಮಾಸ್ತರ್ರು ಹಾಗೆಯೇ ಮಾಡಿದ್ದರು...

ಆದರೆ ನಾಗುವಿನ ಪ್ರಶ್ನೆ ಎಲ್ಲವನ್ನೂ ಉಲ್ಟಾ ಮಾಡಿತು..

ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

viju said...

olle maja idda prakashanna.....kushta cholo madi samadhana madidda nagunna.....ha...ha.aaa!!!!!!!!

ಹಳ್ಳಿ ಹುಡುಗ ತರುಣ್ said...

prakashanan super ide.... nijavagiyu kusta olle smart manusya.. so en agiddare avaru....

makaklagiddagina atotagalu igalu neneskundre baari kushi agiruttave...

ಓ ಮನಸೇ, ನೀನೇಕೆ ಹೀಗೆ...? said...

ಪ್ರಕಾಶಣ್ಣ ನಿಮ್ಮ ಈ ತರದ ಲಘು ಹಾಸ್ಯದ ಕಥೆಗಳು ನಂಗೆ ತುಂಬಾ ಇಷ್ಟ. ನಿಮ್ಮ ಈ ಕತೆಯೂ ಕೂಡ ತುಂಬಾ ಚೆನ್ನಾಗಿದೆ. ತುಂಬಾ ನಗು ಬಂತು. ನಾನು ಶಾಲೆಗೆ ಹೋಗ್ತಾ ಇದ್ದ ದಿನಗಳು .. ನಮ್ಮ ಅಕ್ಕೊರು ಎಲ್ಲವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

Shantala Sayimane said...

ha.ha..tumbaa chennagide....nimma hale kate baride tumba dina agittu..

Ittigecement said...

ವೆಂಕಟರಮಣ ಕೆ.ಕೆ....

ಮಕ್ಕಳ ಕುತೂಹಲಗಳನ್ನು ತಣಿಸಬೇಕು..
ಅವರ ಸಂದೇಹಗಳನ್ನು ಗದರಿಸಿಬಾಯಿ ಮುಚ್ಚಿಸ ಬಾರದು..

ಆದರೆ ನಮ್ಮ ಆ ಕಾಲದಲ್ಲಿ ..
ಇಂಥಹ ಎಡವಟ್ಟು ಸಂಶಯಗಳಿಗೆ ಉತ್ತರ ಬಹುಷಃ ಯಾರಿಗೂ ಗೊತ್ತಿರಲಿಕ್ಕಿಲ್ಲ..

ನಮ್ಮ ತುಂಟಾಟ..ಗಳನ್ನು ಸಹಿಸಿ..
ನಮ್ಮಲ್ಲಿ ಕನಸುಗಳ... ಬೀಜ ಬಿತ್ತಿದ..
ಆ ಗುರುಗಳಿಗೆ ವಂದನೆಗಳು..

ಪ್ರೋತ್ಸಾಹಕ್ಕೆ ಧನ್ಯವಾದಗಳು .. ಬರುತ್ತಾ ಇರಿ..

ಶಿವಪ್ರಕಾಶ್ said...

ಚನ್ನಾಗಿದೆ ಪಕ್ಕೆಶ್ ಅಣ್ಣ...

Prashanth Arasikere said...

Hello sir,

Ha nimma lekana odutta namma hale dina galu ella nenepige banthu,adre nimma tara havu sahavasa madirlilla bidi..innondu vishya dodda padvi idda takshna avrige ella gottirutte anno namma kalpane estu sullu...allva..

Ittigecement said...

ಸಾಗರದಾಚೆಯ ಇಂಚರ.. (ಗುರು)..

ತುಂಟತನಕ್ಕೊಂದು "ದಿಶೆ" ಸಿಗಬೇಕು..
ಆ ಕೆಲಸವನ್ನು ನನ್ನ ಹಿರಿಯರು.. ಗುರುಗಳು ಮಾಡಿದ್ದಾರೆ..

ಕುತೂಹಲಗಳನ್ನು ಹುಟ್ಟಿಸಿ..
ನನ್ನಲ್ಲಿ ಕನಸುಗಳನ್ನು ಬಿತ್ತಿದ..
ನನ್ನ ಚಿಕ್ಕಪ್ಪ..
ನನಗೆ ಕಲಿಸಿದ ಗುರುವೂ ಹೌದು..

ಅವರು ಸ್ವತಹ ಗುರುವಾಗಿದ್ದರಿಂದ ನನ್ನನ್ನು ತಿದ್ದಲು ಸಹಾಯವಾಯಿತೇನೋ...

ಅವರಿಗೆ, ಎಲ್ಲಹಿರಿಯರಿಗೆ ಬದುಕು ಋಣಿಯಾಗಿರುತ್ತದೆ...

ಗುರು ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಆಜಾದು...

ನೀ ನನ್ನ ಬಾಲ್ಯದ ಗೆಳೆಯನಾಗಿರಬೇಕಿತ್ತು ಕಣೊ...
ಇನ್ನಷ್ಟು ತಲೆಹರಟೆ ಮಾಡ ಬಹುದಿತ್ತು.. ಅಲ್ಲವಾ?

ಹಾವಿನ ಬಗೆಗೆಗಿನ ನಿನ್ನ ಮಾಹಿತಿ ಅತ್ಯಮೂಲ್ಯ..

ನಮಗೆ ಕಲಿಸಿದ "ಅಕ್ಕೋರು" ಮತ್ತೆ ನಮಗೆ ತೊಂದರೆ ಕೊಡಲು ಬರಲಿಲ್ಲ..

ಸಮಸ್ಯೆ ಏನಿತ್ತು ಗೊತ್ತಾ?

ಮನೆಯವರದ್ದು..

" ಮಾಸ್ತರ್ರೇ..
ಇವ ತುಂಟತನ ಮನೆಯಲ್ಲೂ ಮಾಡ್ತಾನೆ..
ನಮ್ಮನೆ ಹುಡುಗ ತುಂಟತನ ಮಾಡಿದರೆ ಏಟು ಕೊಟ್ಟು ಬುದ್ಧಿ ಕಲಿಸಿ.."
ಅಂತ ಮನೆಯವರೇ ಹೇಳುತ್ತಿದ್ದರು..

ಇದು ಬಹಳ ಕಷ್ಟ...

Jai Ho.. !

Guruprasad . Sringeri said...

ನಕ್ಕೂ ನಕ್ಕೂ ಸುಸ್ತು ಮಾರಾಯ್ರೆ.... ನಿಮ್ ಕುಷ್ಟಂಗೆ ಇರೋ ಅಷ್ಟು ಬುದ್ಧಿ ಆ ಇನ್ನೆಸ್ಪೆಟ್ರಿಗೆ ಇರ್ಲಿಲ್ವಲ್ಲ :)

Ittigecement said...

ಸುದರ್ಶನ್...

ಆಗೆಲ್ಲ ಆರುತಿಂಗಳಿಗೆ ಆಗುವಷ್ಟು ದಿನಸಿಗಳನ್ನು ಒಂದೇ ಬಾರಿಗೆ ತಂದಿಡುತ್ತಿದ್ದರು...

ಮನೆಗೆ ಬೇಕಾಗುವಷ್ಟು ವಸ್ತ್ರದ "ಸಾಬೂನು" ಬಾಕ್ಸಿನಲ್ಲಿ ತರುತ್ತಿದ್ದರು..

ಜನಪ್ರಿಯ ಸಾಬೂನು "ಕಸ್ತೂರಿ" ಬಾರ್ ಸೋಪ್..

ನಾವು ಅದರ ರಟ್ಟಿನ ಬಾಕ್ಸಲ್ಲಿ ಹಾವನ್ನು ಇಟ್ಟಿದ್ದೆವು...
ನಿಮ್ಮ ತಂದೆಯವರನ್ನು ಕೇಳಿ ಹೇಳುತ್ತಾರೆ...

ಕುಷ್ಟನ, ನಾಗುವಿನ ಜೊತೆಯಲ್ಲಿನ ಇನ್ನೂ ಒಂದೆರಡು ಘಟನೆಗಳಿವೆ..

ಬರೆಯುವೆ ಮುಂದಿನ ದಿನಗಳಲ್ಲಿ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಕಿಶನ್...

ನಾನು ರಿಕೆಟ್ಸ್ ರೋಗದಿಂದಾಗಿ "ಅಬಲಿಷ್ಟನಾಗಿದ್ದರೂ" ....
ಸೊಕ್ಕು... ಹಠ... ಬಹಳ ಚೆನ್ನಾಗಿತ್ತು..
ನನ್ನ ಎರಡನೆ ಚಿಕ್ಕಪ್ಪನಿಂದ ಏಟು ಚೆನ್ನಾಗಿ ತಿನ್ನುತ್ತಿದ್ದೆ...

ಆಗ ಏಟುತಿನ್ನದ ಬಾಲ್ಯವಿರಲಿಲ್ಲ...

ಆಶ್ಚರ್ಯವೆಂದರೆ ನನ್ನ ಮಗ ಏಟು ತಿನ್ನಲೇ ಇಲ್ಲ...

"ಹೇಳೀದರೆ ತಿಳಿದುಕೊಂಡು ಬಿಡುತ್ತಾನೆ..

"ನೋಡೋ ಮಗನೆ ..
ನಾನು ನಿನ್ನ ಅಪ್ಪ..
ಸ್ವಲ್ಪ ಬಯ್ಯಲಿಕ್ಕೆ ಛಾನ್ಸ್ ಕೋಡೊ "
ಅಂತ ಕೇಳಬೇಕಾದ ಪರಿಸ್ಥಿತಿ.. ಇದೆ...

ಹಾವಿನ ಘಟನೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವೂ ಸರ್..

ಬಾಲ್ಯದ ದಿನಗಳೇ.. ಹಾಗೆ..
ನೆನಪಿಸಿಕೊಂಡಷ್ಟೂ ರುಚಿ... ಅಲ್ಲವೆ?

ಹಾವು ಯಾಕೆ ಉಚ್ಚೆ ಹುಯ್ಯುವದಿಲ್ಲ?

ಇದರ ತರ್ಕ ನನ್ನ "ಕುಷ್ಟ" ನದು...
ಬಹಳ ವಿಚಿತ್ರವಾದ ತರ್ಕ ಅವನದು..

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ರಂಜನಾ...

ನನಗೂ ಮೊದಲು "ಹಸಿರುಳ್ಳೆ" ಹಾವನ್ನು ಕಂಡರೆ ಭಯವಿತ್ತು...

ಕುಷ್ಟನಿಂದಾಗಿ ಆಮೇಲೆ ಪ್ರೀತಿ ಹುಟ್ಟಿತು..
ಅದು ಏನೂ ಮಾಡುವದಿಲ್ಲ.. ಪಾಪದ್ದು...

ನಿಜ ನಾವು ಬಹಳ ಕಿತಾಪತಿ ಹುಡುಗರಾಗಿದ್ದೆವು..

ಕುಷ್ಟನ ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Unknown said...

Super Prakashanna!!!!!Mast iddu kathe...nakku nakku sakatu....

PARAANJAPE K.N. said...

ಪಕ್ಕೇಶ್ ಹೆಗಡೆಯವರೇ, ನಿಮ್ಮ ನೆನಪಿನ ಕೋಶದಲ್ಲಿ ಜತನವಾಗಿದ್ದ ಬಾಲ್ಯದ ದಿನಗಳ ನೆನಪನ್ನು ಬಹಳ ಸೊಗಸಾಗಿ ನಮ್ಮೊ೦ದಿಗೆ ಹ೦ಚಿಕೊ೦ಡಿದ್ದೀರಿ. ತು೦ಬಾ ಚೆನ್ನಾಗಿದೆ. ಪಟ್ಟಣದ ಮಕ್ಕಳ ಕಥೆ ಬಿಡಿ,ಈಗಿನ ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಇ೦ತಹ ಸೃಜನಶೀಲತೆ, ವೈನೋದಿಕ ಪ್ರವೃತ್ತಿ ಮಾಯವಾಗುತ್ತಿದೆ ಎ೦ದು ನನ್ನ ಅನಿಸಿಕೆ.

SNEHA HEGDE said...

Prakashanna,
Naagu, Kushta, Diwkaranna, Petge Gappati.. You are so lucky man.

AntharangadaMaathugalu said...

ಪ್ರಕಾಶ್ ಸಾರ್

ನಿಮ್ಮ ಬಾಲ್ಯದ ನೆನಪುಗಳ ಭಂಡಾರವೇ ಇದೆ... ಆ ದಿನಗಳು ಮತ್ತೆ ಬರದಿದ್ದರೂ.. ನೆನಪುಗಳು ಮಾತ್ರ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ ಮತ್ತು ಮುದ ಕೊಡುತ್ತವೆ ಅಲ್ಲವೇ..?

ಶ್ಯಾಮಲ

Ittigecement said...

ಪಾಲ...

ಈ ಕುಷ್ಟನ ಪರಿಚಯ ನಿಮಗೆಲ್ಲ ಈಗಾಗಲೇ ಆಗಿದೆ..

ಕೆಲವೊಮ್ಮೆ ಅತಿ ಮುಗ್ಧ ಅನ್ನಿಸಿದರೂ..
ಅವನು ಹೇಳುವ ಸತ್ಯ ನಮ್ಮನ್ನು ಕಾಡುತ್ತದೆ..

ಅವನೊಡನೆಯ ಇನ್ನಷ್ಟು ಘಟನೆಗಳಿವೆ..

ಸಧ್ಯದಲ್ಲಿಯೇ ಹಂಚಿಕೊಳ್ಳುವೆ..

ಇಷ್ಟಪಟ್ಟಿದ್ದಕ್ಕೆ ಧನ್ಯಾವಾದಗಳು...

Manju M Doddamani said...

ಹ್ಹ ಹ್ಹ ಹ್ಹ ಸರ್ ಏನ್ ಸರ್ ಇದು ಹೋಗಿ ಹೋಗಿ ಪಾಪ ಆ ಟೀಚರಮ್ಮನಿಗೆ ೩ ದಿನ ನಿದ್ದೆ ಮಾಡಿರೋದಿಲ್ಲ ಅವರು ಅನಿಸುತ್ತೆ

ಚನ್ನಾಗಿದೆ ತುಂಬಾ ಇಷ್ಟ ಆಯ್ತು ಹಾವು ನೋಡೋಕೆ ಹೆದ್ರುಕೊಳ್ತಿವಿ ಅಂತದ್ರಲ್ಲಿ ನೀವು ಸಾಕಿದಿರ ಅಂದ್ರೆ ಅಬ್ಬಾ ನೆನಸಿಕೊಲ್ಲೋಕು ಆಗೋಲ್ಲ

Harsha Hegde said...

prakashanna tamma baravanageya shaiyli chennagide , munde enagatto anno kutuhalavanna ulsittu jotege mana bichhi naguvu bantu.....
thanks for sharing with me and keep the same excellent writting.........
matte tamage sadyavadre nanna hagu nimma communityge(Awake "change &save INDIA) desh premada bagge baredu haku its my reqest..........

ಅಹರ್ನಿಶಿ said...

Prakashanna haavige ucche hoyyo jaaga ellirutte anta nimgenadru gotta!

Dr.D.T.Krishna Murthy. said...

ಪಕ್ಕೆಶ್ ಹೆಗ್ಡೇರ;ನಿಮ್ಮ ನಾಗುವಿನ ಡೌಟು,ಕುಷ್ಟನ ಸಮಜಾಯಿಸಿ ಎಲ್ಲವೂ ಸೂಪರ್.ಈಗಿನ ಮಕ್ಕಳಿಗೆ ಇಂತಹ ಡೌಟುಗಳೂ ಬರೋಲ್ಲ,ಇಂತಹ ಸೂಪರ್ ಸಮಜಾಯಿಸಿಗಳೂ ಸಿಗೋಲ್ಲಾ !ಅಲ್ವಾ?ಇನ್ನಷ್ಟು ಬಾಲ್ಯದ ನೆನಪುಗಳು ಬರಲಿ.

ಧರಿತ್ರಿ said...

ಅದೇ ಕಿತಾಪತಿ ನಿಮ್ದು

ತುಂಬಾ ದಿನಗಳ ನಂತರ ನಿಮ್ಮ ಬರಹ ಓದಿದೆ
-ಚಿತ್ರಾ

Naveen Shekar said...

ಪ್ರಕಾಶಣ್ಣ ಏನ್ರೀ ಹಾವು ಅದು?? ವಾರ ಆದ್ರು ಹುಚ್ಚೆ ಹುಯ್ದೆ ಇತಾ?? ಹ ಹಹ.... :) ಅಬ್ಬಬ್ಬಾ ಹೊಟ್ಟೆ ಹುಣ್ಣು ಆಗುವಷ್ಟು ಮನಸಾರೆ ನಗ್ಸಿದಿರ ನಿಜಕ್ಕೂ ತುಂಬಾ ಛಲೋ ಇದೆ ರೀ...

ಮನದಾಳದಿಂದ............ said...

ಪಕ್ಕು ಮಾಮ,
ಪಾಪ,
ಏನೇನು ಕಿತಾಪತಿ ಮಾಡ್ತೀದ್ರಿ ಅಲ್ವಾ?
ಕುಷ್ಠ ಬಹಳ ಬುದ್ಧಿವಂತ! ಅವ್ರ ತಲೆ ತಲೆಯೇ ಸರಿ!
ಹ್ಹ ಹ್ಹ ಹ್ಹಾ.........

Anonymous said...

ಪ್ರಕಾಶಣ್ಣ,
ಚೆನ್ನಾಗಿ ಬರಿತೀರ.
ಕುಸ್ಟನ ತರ್ಕ ಚೆನ್ನಾಗಿದೆ.

Gubbacchi said...

Suuuuuuuuuuuper :)

Unknown said...

kathe tumba chennagiddu prakashanna

Me, Myself & I said...

ಹಾವಿಗೆ ಯಾರೂ ಚಡ್ಡಿ ಹಾಕಿರಲ್ಲ ಆದ್ದರಿಂದ ಅದು ಉಚ್ಚೆ ಹೊಯ್ಯುವುದಿಲ್ಲ. ಚಡ್ಡಿ ಹಾಕಿದ್ದರೆ, ಚಡ್ಡಿ ಬಿಚ್ಚಿ ಹೋಯ್ತಿತ್ತು ಅನ್ಸುತ್ತೆ.

ಕಾವ್ಯಾ ಕಾಶ್ಯಪ್ said...

ಬಾಲ್ಯದ ಕಿತಾಪತಿ ಕೆಲ್ಸನ ರಾಶಿ ಚಂದ ಬರ್ದೆ. ಒಂದು ಸಲಿ ಸುಂದರ ಬಾಲ್ಯದ ನೆನಪಾತು... ಜೊತೆಗೆ ಹೊಟ್ಟೆ ತುಂಬಾ ನಗುನು ಬಂತು...

Anonymous said...

Hello Praksh,

Tumba chennagide.konevargu suspense, shaily hidisitu.feel oroud of u.

Anonymous said...

Hello Mr. Prakash,

Ittige cementina kathe tumba chennagide, kone vargu odisikondu hogatte. end tumba hidisitu,

end nodi nimma fn aade

all the best.