Friday, March 26, 2010

ಹುಚ್ಚು .. ಬಿಟ್ಟಂತೂ.. ಮದುವೆ ಆಗೋದಿಲ್ಲ...!!

ಸುಡು ಬಿಸಿಲು...
ಕೆಟ್ಟ ಟ್ರಾಫಿಕ್ಕಿನಲ್ಲಿ ಕಾರು ಓಡಿಸಿಕೊಂಡು...
 ಸಹಕಾರ ನಗರ ತಲುಪಿದಾಗ ಹನ್ನೊಂದು ಗಂಟೆ...

ನನ್ನ ಸಂಗಡ ಸತ್ಯ ಮತ್ತು ನಾಗು ಕೂಡ ಇದ್ದರು...
ಅಲ್ಲಿ ಬಂದು ನೋಡಿದರೆ ಯಾರೂ ಕೆಲಸಗಾರರೇ ಇಲ್ಲ...
ನನಗೆ ಪಿತ್ತ ನೆತ್ತಿಗೇರಿತು...


ಅಲ್ಲಿಯೇ ಇದ್ದ ಮೇಸ್ತ್ರಿ ಶಿಖಾಮಣಿಗೆ ಕೇಳಿದೆ..
"ಏನಪ್ಪಾ ಇದು ??
ಸೋಮವಾರ ರೂಫ್ ಕಾಂಕ್ರೀಟು... ಇನ್ನೂ ಏನೂ ತಯಾರಾಗಿಲ್ಲ.
ಎಲ್ಲ ಎಲ್ಲಿ ಹೋಗಿದ್ದಾರೆ ?"


"ಸಾರ್ ...
ಇಲೆಕ್ಷನ್ ಅಲ್ವಾ ? ಅದಕ್ಕೆ ಯಾರೂ ಇಲ್ಲ..."


"ಏನ್ರೀ ಇದು ?
 ಬಿಬಿಎಂಪಿ ಚುನಾವಣೆಗೂ ನಮ್ಮ ಕೆಲಸಕ್ಕೂ ಏನ್ರೀ ಸಂಬಂಧ ?"


"ಸಾರ್..
ಎಲ್ಲಾ ಚುನಾವಣೆ ಪ್ರಚಾರಕ್ಕೆ..ಹೋಗಿದಾರೆ..

ಒಬ್ಬಬ್ಬರಿಗೆ .. ಒಂದು ದಿನಕ್ಕೆ
ಐದು ನೂರು ಕೊಡ್ತಾರೆ..
ಬೆಳಿಗ್ಗೆ ನಾಷ್ಟಾ... ಮಧ್ಯಾಹ್ನ ಬಿರ್ಯಾನಿ ಊಟ...
ಮಧ್ಯದಲ್ಲಿ ಕುಡಿಲಿಕ್ಕೆ ಪೆಪ್ಸಿ... ಕೋಲಾ...
ರಾತ್ರಿ ಮತ್ತೆ ಬಿರ್ಯಾನಿ ಊಟ...
ಮತ್ತೆ ಎಣ್ಣೆ...!!
 ಅದು ಬೇಕಾದಷ್ಟು...!!... !.."

"ಎಣ್ಣೆ..... ??.. !!.."

"ಅದೇ... ಸಾ...! ಸರಾಯಿ... ಹೆಂಡ...!
ನಾವು ಗಾರೆ ಮೇಸ್ತ್ರಿಗೆ ಕೊಡೋದು ಮುನ್ನುರೈವತ್ತು...
ಯಾರು ಬರ್ತಾರೆ ಈ ಕೆಲಸಕ್ಕೆ?
ಇನ್ನು ಕೆಲಸ ಏನೇ ಇದ್ರೂ ಒಂದುವಾರದ  ನಂತರ...
ಅದೂ ರಾಜಕೀಯದವರು ಕೊಟ್ಟ...
ಹಣ, ಹೆಂಡ ಖರ್ಚಾಗಿದ್ದರೆ ಮಾತ್ರ !! "
ನನಗೆ ಬೇಸರವಾಯಿತು...



"ನೀನು... ಒಬ್ಬ ಇಲ್ಲಿ ಯಾಕೆ ಇದ್ದೀಯಾ...?
ನೀನು ಯಾವುದಾದರೂ ಪಕ್ಷದ ಜೊತೆ ಹೋಗು ...!"


"ನನಗೆ ಎಲ್ಲಾ ರಾಜಕೀಯ ಪಕ್ಷನೂ ಒಂದೇ ಸಾರ್..!
ಒಂದೊಂದು ದಿನ ಒಂದೋಂದು ಪಕ್ಷದ  ಪ್ರಚಾರಕ್ಕೆ  ಹೋಗ್ತೀನಿ.....!"

"ಹೌದಾ... ?"
"ಹೌದು ಸಾ...!!. ಇಲ್ನೋಡಿ...
ಇದು ಎಲ್ಲಾ ಪಕ್ಷಕ್ಕೂ ಆಗುವಂಥಹ ಶಾಲು..!!.! "

ನಾನು ನೋಡಿದೆ...
ನಮ್ಮ ದೇಶದ ಧ್ವಜದ ಬಣ್ಣದ ಶಾಲು...!
ಕೇಸರಿ, ಬಿಳಿ, ಹಸಿರು ಬಣ್ಣದ್ದು...
ನನಗೆ ಅರ್ಥವಾಗಲಿಲ್ಲ...


"ಇದು ಎಲ್ಲ ಪಕ್ಷಕ್ಕೂ... ಹೇಗೆ ಸರಿ ಹೋಗ್ತದೆ ...?"


"ಇದು.. ತುಂಬಾ ಸಿಂಪಲ್ಲು ಸಾ...
ಸೋನಿಯಾಗಾಂಧಿಯವರದ್ದು... ಚರ್ಚು.. ಬಿಳಿ ಬಣ್ಣ...!
ಕಾಂಗ್ರೆಸ್ಸಿಗೆ... ಬಿಳಿ ಬಣ್ಣ...
ಇದಕ್ಕೆ ಸ್ವಲ್ಪ ಕೇಸರಿ, ಹಸಿರು..  ಕಂಡರೂ ಅಡ್ಡಿಯಿಲ್ಲ  ಸಾ...!"

"ಏನಪ್ಪಾ  ಇದು...?"


ಇಲ್ನೋಡಿ  ಸಾ...
ಬಿಜೇಪಿದು  ದೇವಸ್ಥಾನ... !
ಕೇಸರಿ ಬಣ್ಣ...
ಇವರಿಗೆ  ಉಳಿದ ಎರಡು ಬಣ್ಣ ಸ್ವಲ್ಪ, ಸ್ವಲ್ಪ ಕಂಡರೆ  ಪರವಾಗಿಲ್ಲ  ಸಾ..."
ಇನ್ನು..
ದಳಕ್ಕೆ  ...ಮಸೀದೆ..ಕಂಡರೆ  ಪ್ರೀತಿ...!
ಮತ್ತೆ... ರೈತರ ಬಣ್ಣ ಹಸಿರು...!
ಇವರಿಗೂ ಅಷ್ಟೇ... ಆ  ಕಡೆ.. ಈಕಡೆ....ಬಣ್ಣ..
 ಸ್ವಲ್ಪ  ಸ್ವಲ್ಪ ಕಂಡರೆ ಪರವಾಗಿಲ್ಲ  ಸಾ...
ನಾನು...
ಯಾವ ಪಕ್ಷಕ್ಕೆ ಹೋಗ್ತೀನೊ...
 ಅವತ್ತು ಶಾಲು ಮಡಚಿ ...
ಅವರ  ಬಣ್ಣ ಎದುರಿಗೆ ಕಾಣುವ ಹಾಗೆ ಹಾಕೋತೀನಿ..."
ತುಂಬಾ ಸಿಂಪಲ್ಲು ಸಾ..."

"ನೀನು ಬುದ್ಧಿವಂತ ಕಣಪ್ಪಾ,,,!"
 "ಇನ್ನೊಂದು  ವಿಷ್ಯ ಗೊತ್ತಾ  ಸಾ...?
ಇವರ ಎಲ್ಲಾರ ಬಣ್ಣಾನೂ  ಅಸಲಿಗೆ  ಒಂದೆ  ಸಾರ್...!! "

"ಇದೆಲ್ಲಾ ಸರಿ... ವೋಟ್  ಯಾರಿಗೆ  ಹಾಕ್ತಿಯಾ...?"
"ಸಾ...
ಎಣ್ಣೆ  ಮೇಲೆ ಆಣೆ ಮಾಡಿ ಹೇಳ್ತೀನಿ...

ಯಾರಿಗೂ  ಮೋಸ ಮಾಡೋದಿಲ್ಲ  ಸಾ...
ಎಲ್ಲರಿಗೂ ವೋಟ್  ಹಾಕ್ತೀನಿ...
ಇಲ್ಲಾ ಅಂದ್ರೆ ...
 ಅವತ್ತು  ವೋಟ್ ಹಾಕ್ಲಿಕ್ಕೇ... ಹೋಗೋದಿಲ್ಲ...
ನನ್ನ ಒಬ್ಬನ ವೋಟಿಂದ   ಏನೂ ಆಗೋದಿಲ್ಲ  ಸಾರ್..!!
ಗೆಲ್ಲವರು  ಗೆಲ್ತಾರೆ... ಸೋಲುವವರು..  ಸೋಲ್ತಾರೆ...!! "

ಅಲ್ಲಿಯೇ ಇದ್ದ ಸತ್ಯ ನನ್ನ ಭುಜದ ಮೇಲೆ ಕೈ ಹಾಕಿದ...


" ನಮ್ಮ ದೇಶದಲ್ಲೇ ಅಲ್ಲವಾ...
 ಲಾಲ್ ಬಹಾದೂರ್ ಶಾಸ್ತ್ರಿ..
ಗಾಂಧಿ ತಾತ,
ಗುರ್ಜಾರಿಲಾಲ್ ನಂದ ಹುಟ್ಟಿರೋದು...?"


ನನಗೆ ಮುಂದೆ ಮಾತನಾಡುವ ಉತ್ಸಾಹ ಇರಲಿಲ್ಲ...
ಸತ್ಯ ನಮಗೆಲ್ಲ ಉತ್ಸಾಹ ತುಂಬಲು ಮತ್ತೆ ಅವನೇ ಹೇಳಿದ...


"ನೋಡ್ರೋ...
ಯಾವುದು ಯಾವಾಗ ಆಗಬೇಕೋ...
 ಅದು ಆವಾಗಲೇ ಆಗುತ್ತದೆ..!
ಈಗ ಬೇಸರ ಯಾಕೆ ?
ಇನ್ನು ಒಂದು ವಾರ ರಜೆ..
ನಾಳೆ ಐಪಿಎಲ್ ಪಂದ್ಯ ಇದೆ..
ನಾನು ಟಿಕೆಟ್ ಬುಕ್ ಮಾಡ್ತೀನಿ ...
ಎಲ್ಲರೂ ಹೋಗಿ ಬರೋಣ...!! "


ಅಲ್ಲಿಯೇ ಇದ್ದ ನಾಗು ಸುಮ್ಮನಿರಲಾಗಲಿಲ್ಲ...


"ಈ ...ಐಪಿಎಲ್ ಒಂಥರಾ...
 ರಾಮ ರಾವಣರ ಯುಧ್ಧದ ಹಾಗೆ ಕಣ್ರೋ..!!..."

"ರಾಮಾಯಣದ ಯುದ್ಧದ ಹಾಗಾ.!!.?"


"ನೋಡ್ರೋ...
 ರಾಮ, ರಾವಣರ ಯುದ್ಧದಲ್ಲಿ... ಸತ್ತವರು  ಯಾರು  ?
 ಚಂದವಾಗಿ ಬೆಟ್ಟದಲ್ಲಿ.. ಹಾಯಾಗಿದ್ದ ಕಪಿಗಳು ..!
ವಿನಾಕಾರಣ ಸತ್ರು...!
ಈ.. ರಾವಣ...
 ರಾಮನ ಹೆಂಡತಿ ಎತ್ತುಕೊಂಡು ಹೋಗಿದ್ರೆ...
 ಈ ಮರದಿಂದ ಮರಕ್ಕೆ ಹಾರೋ ಕಪಿಗಳಿಗೆ ಏನಾಗ ಬೇಕಿತ್ತೊ.  !!  ??...."


"ಏನೂ ಇಲ್ಲ..!!.."


"ಇದೂ ಕೂಡ ಹಾಗೆ...!
ಬೆಂಗಳೂರು ಟೀಮು ಅಂತಾರೆ..!
 ಇಲ್ಲಿಯವರು ಮೂರು ಜನ ಇರ್ತಾರೆ..!
 ಉಳಿದವರು ಯಾರೋ...? ಏನೋ..!
ನಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲ...
ಹುಚ್ಚರ ಹಾಗೆ...
 ಟೈಮ್ ವೇಸ್ಟ್ ಮಾಡಿಕೊಂಡು ಟಿವಿ ಮುಂದೆ ಕುಳಿತಿರ್ತೀವಿ.....
ನಾವೆಲ್ಲಾ ರಾಮಾಯಣದ  ಕಪಿಗಳು  ಕಣ್ರೋ...! "


"ಅದಕ್ಕೆನಿಗ..?.."

ನಾವು ಹುಚ್ಚರು ಕಣ್ರೋ...
ನಮ್ಮ ಬೆಂಗಳೂರು ಟೀಮು ಅಂತ ಕುಣಿತಿವಿ...
ಅರಚ್ತಿವಿ...
ಎಷ್ಟು ಜನ ಕರ್ನಾಟಕದ ಆಟಗಾರರು ಇದ್ದಾರೆ ಅಲ್ಲಿ?
ಹುಚ್ಚರ ಮದುವೆಯಲ್ಲಿ ಉಂಡವನೇ..ನೇ ಜಾಣನಂತೆ...



"ಲೋ...
ನಾಗು ಹಾಗಲ್ವೋ..!
ಇಂಥಹ ಈವಂಟ್ ಗಳಿಂದ ಹಣ ಮಾರ್ಕೆಟ್ಟಿನಲ್ಲಿ ಓಡಾಡ್ತದೆ.. "


"ನೋಡ್ರೋ...
ಈ ಐಪಿಎಲ್ ನಿಂದ...
ಮಲ್ಯನ ಹೆಂಡ ಖರ್ಚಾಗ್ತದೆ...!
ಪೆಪ್ಸಿ, ಕೋಕಾಕೋಲದಂಥಹ ಪಾನೀಯ ಮಾರಾಟ ಆಗ್ತದೆ...!.
ಅಲ್ಲಿ ಬರುವ ಜಾಹಿರಾತುಗಳು...
ಆ ಆಟದ ಪ್ರಾಯೋಜಕರು  ಎಲ್ಲವು  "ವಿದೇಶಿ" ಕಂಪನಿಗಳು...!
ಒಂದಷ್ಟು ಮಕ್ಕಳು ಪರೀಕ್ಷೆಯಲ್ಲಿ ಸರಿಯಾಗಿ ಓದದೆ ಕಡಿಮೆ ಮಾರ್ಕ್ಸ್ ತಗೋತಾರೆ....
ಒಂದಷ್ಟು ಅಪ್ಪಂದಿರು  ಮಕ್ಕಳಿಗೆ  ಕ್ರಿಕೆಟ್ ಬ್ಯಾಟು ಕೊಡಸ್ತಾರೆ...
ಕ್ರಿಕೆಟ್ ಕೊಚಿಂಗಿಗೆ   ಕಳಸ್ತಾರೆ...
ಬಿಸಿಸಿಐ ನವರು,
ಟಿವಿಯವರು ಕೊಳೆಯುವಷ್ಟು ಹಣ ಮಾಡ್ಕೋತಾರೆ.."


"ಇದಕ್ಕೆ ಪರಿಹಾರ ??"

"ನಾವು ಬದಲಾಗ ಬೇಕು...
ಇದು ಸಧ್ಯಕ್ಕೆ..ಸಾಧ್ಯವಾಗದ ಮಾತು...
ಒಂದು ಮಜಾ  ವಿಷಯ ಹೇಳ್ತೀನಿ  ಕೇಳಿ...

ಒಬ್ಬನಿಗೆ ಹುಚ್ಚು ಇತ್ತು..
ಹಾಗಾಗಿ ಮದುವೆ ಆಗಲಿಲ್ಲ...
 ಆ ಊರಿನ ಡಾಕ್ಟರ್ ಹೇಳಿದ್ರು
"ಇವನಿಗೆ ಮದುವೆ ಹುಚ್ಚು ಇದೆ..
ಹುಚ್ಚು ಬಿಡಲಿಕ್ಕೆ ಮದುವೆ  ಆಗಬೇಕು..."
ಆದರೆ ಆ ಹುಚ್ಚನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರ್ಲಿಲ್ಲ..."


"ಅಂದ್ರೆ...??"


"ಹುಚ್ಚು ಬಿಟ್ಟಂತೂ ಮದುವೆ ಆಗೋದಿಲ್ಲ...
ಮದುವೆ ಆದಂತೂ ಹುಚ್ಚು ಬಿಡೋದಿಲ್ಲ...
ನಮ್ಮ  ಕಥೇನೂ.. ಅದೇ... ಕಣ್ರೋ...!
ನಾವೂ ಬದಲಾಗೋದಿಲ್ಲ..
ನಮ್ಮ ರಾಜಕಿಯದವರೂ ಬದಲಾಗೋದಿಲ್ಲ..!



ಅಷ್ಟರಲ್ಲಿ ಒಂದಷ್ಟು ನೂರು ಜನರ ಗುಂಪು ಬಂದಿತು...
" .... ..  ಪಕ್ಷಕ್ಕೇ ಜಯವಾಗಲಿ...
ನಮ್ಮ ಪಕ್ಷ ಬಡವರ ಪಕ್ಷ...
ನಮ್ಮದು..ರೈತರ ಪಕ್ಷ...
ಅಭಿವೃದ್ಧಿಯ ಪಕ್ಷ..
ಬೆಂಗಳೂರಿನ ಅಭಿವೃಧ್ಧಿಗೆ ನಮಗೆ ಮತ ನೀಡಿ..."


ಮೈಕಿನಲ್ಲಿ ಒಬ್ಬ ಜೋರಾಗಿ  ಕೂಗುತ್ತಿದ್ದ...


ಹಿಂದೆ ಇರುವ ಜನರೆಲ್ಲ ಜೈಕಾರ ಹಾಕುತ್ತಿದ್ದರು.....

ನಾನು ಸತ್ಯ...
ನಾಗು... ನಿಂತು ಸುಮ್ಮನೇ ನೋಡುತ್ತಿದ್ದೆವು...





( ಇಲ್ಲಿ ಬರೆದದ್ದು  ಶಿಖಾಮಣಿಯ ಮುಗ್ಧ ಮಾತುಗಳು...
ದಯವಿಟ್ಟು ಎಲ್ಲರೂ..
 ಇದ್ದಿದ್ದುದರಲ್ಲೇ ಯೋಗ್ಯರಾದವರಿಗೆ  ಮತ ಹಾಕಿ...)

50 comments:

Ashok Uchangi said...

ಕಂಪ್ಯೂಟರ್ ಆನ್ ಮಾಡಿದ ಕೂಡಲೆ ಗಬ್ಬು ವಾಸನೆ ಬಂದಿತು....ಅದೇನೆಂದು ತಲೆಕೆಡೆಸಿಕೊಳ್ಳುತ್ತಿದ್ದಾಗ ನಿಮ್ಮ ಬರಹ ನೋಡಿದೆ.ಓ!ಇಲ್ಲೇ ಆ ರಾಜಕೀಯದ ರಾಡಿ,ಹಣ ಮಾಡುವ ಆಟದ ಮೋಡಿಯ ಕೊಳಕು ನಿಮ್ಮ ಬ್ಲಾಗಿನಲ್ಲಿ ಹೊರಹಾಕಿರುವುದರಿಂದ ಈ ವಾಸನೆ ಎಂದು ಗೊತ್ತಾಯಿತು....ಥೂ...ಇಷ್ಟೊಂದು ಕೊಳಕನ್ನು ಹೀಗೆ ಹೊರಹಾಕೋದೇ ನೀವು,,,!

Ittigecement said...

ಅಶೋಕ್...

ನಮ್ಮ ಕೆಲಸಗಾರರೆಲ್ಲ ಕಳೆದ ಒಂದುವಾರದಿಂದ ಕೆಲಸಕ್ಕೇ ಬರುತ್ತಿಲ್ಲ...
ಈ ಬಿಬಿಎಂಪಿ ಚುನಾವಣೆಯಿಂದಾಗಿ...

ನಿಜಕ್ಕೂ ಬೇಸರವಾಗುತ್ತದೆ...

ನಮ್ಮ ಲೇ ಔಟಿಗೆ ಎಲ್ಲ ಪಕ್ಷದವರು ಮತ ಕೇಳಲಿಕ್ಕೆ ಬಂದಿದ್ದರು..
ಅವರ ಸಂಗಡ ನೂರಾರು ಜನ ಬಂದಿದ್ದರು "ಜೈಕಾರ ಹಾಕಿ ಕೂಗಲಿಕ್ಕೆ"

ಇದರಲ್ಲಿ ನಮ್ಮ ಕೆಲಸಗಾರರು ಇರಬಹುದಾ ಎಂದು ನನ್ನ ಕಣ್ಣು ಹುಡುಕುತ್ತಿದ್ದು ಸುಳ್ಳಲ್ಲ..!

ಏನು ಮಾಡೋಣ..?
ಹುಚ್ಚುಬಿಟ್ಟಂತೂ ಮದುವೆ ಆಗೋದಿಲ್ಲ..
ಮದುವೆ ಆದಂತೂ.. ಹುಚ್ಚು ಬಿಡೋದಿಲ್ಲ..!

ಪ್ರತಿಕ್ರಿಯೆಗೆ ಧನ್ಯವಾದಗಳು

ಚುಕ್ಕಿಚಿತ್ತಾರ said...

ಹ್ಹ... ಹ್ಹ....ಹ್ಹಾ...

ಚನ್ನಾಗಿದೆ... ಹುಚ್ಚು....

Raveendra Hegde said...

ಪ್ರಕಾಶಣ್ಣ,

ಜಾತ್ಯಾತೀತ ರಾಷ್ಟ್ರದಲ್ಲಿ ನಿನ್ನ ಮೆಸ್ತ್ರೀದು "ಪಕ್ಷಾತೀತ ಶಾಲು" !! 2 ದಿನ ಬಿಟ್ಟು ಬೆಂಗಳೂರಿಗೆ ಹೊರಡ್ತಾ ಇದ್ದಿ. ಚುನಾವಣೆ ಮುಗ್ದು ಹೋಗ್ತು. IPL ಸಿಗ್ತು.
"ಹುಚ್ಚರ ಹಾಗೆ... ಟೈಮ್ ವೇಸ್ಟ್ ಮಾಡಿಕೊಂಡು ಟಿವಿ ಮುಂದೆ ಕುಳಿತಿರ್ತೀವಿ.....
ನಾವೆಲ್ಲಾ ರಾಮಾಯಣದ ಕಪಿಗಳು ಕಣ್ರೋ...! "

-ರವಿ

Manasaare said...
This comment has been removed by the author.
Ittigecement said...

ಚುಕ್ಕಿ ಚಿತ್ತಾರಾ...

ಏನು ಮಾಡೋಣ.. ಹೇಳೀ...?

ಇಂಥಹ ಕೆಲಸಗಾರರನ್ನು ನಂಬಿ ನಾವು ಬಿಲ್ಡಿಂಗ್ ಕೆಲಸ ಮುಗಿಸುವ ದಿನವನ್ನು ಹೇಳಿರುತ್ತೇವೆ..
ಬಿಬಿಎಂಪಿ ಚುನಾವಣೆ ಕೂಡ ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆಯೆಂದು ಗೊತ್ತಿರಲಿಲ್ಲ..

ರಾಜಕೀಯದವರು ಎಲ್ಲರೂ ಮಾತನಾಡಿಕೊಂಡು..
ಇಂಥಹ ಖರ್ಚು ..
ದುಂದುವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳ ಬಹುದಲ್ಲವೆ ?

ರಾಜಕೀಯದವರ ಹಿಂದೆ ಬರುವವರನ್ನು ನೋಡಿದಾಗ
"ಎಲ್ಲಿ ಕೆಲಸ ಬಿಟ್ಟು ಬಂದಿದ್ದಾರೋ.." ಎನಿಸುತ್ತದೆ...

ಯಾಕೋ..
ಶೇಷನ್ ಸಾಹೇಬರು ನೆನಪಾಗುತ್ತಾರೆ... ಅಲ್ಲವಾ ?

ಧನ್ಯವಾದಗಳು...

Manasaare said...

ಪ್ರಕಾಶ್ ಸರ್ ,
ಕರೆಕ್ಟ್ ಆಗಿ ಹೇಳಿದ್ದಿರ ಮದುವೆ ಹುಚ್ಚು ಹಿಡಿದವನಿಗೆ ಮದುವೇನೂ ಆಗೋಲ್ಲ , ಇತ್ತ ಹುಚ್ಚು ಬಿಡೋಲ್ಲ ಹಾಗದಿದೆ ನಮ್ಮ ಈಗಿನ ಪರಿಸ್ಥಿತಿ . ಒಂದೇ ಲೇಖನದಲ್ಲಿ ಎಲೆಕ್ಷನ್ , IPL ನಾ ಅಸಲಿ ಮುಖಗಳನ್ನ ತೋರಿದ್ದಿರ . ನಂಗು ಅಸ್ಟೆ ಈ IPL ದಿಂದ ಸಾಕಾಗಿ ಹೋಗಿದೆ , IPL ನನ್ನ ಸವತಿ ಆಗಿದೆ ಯಾಕೆಂದರೆ ನಮ್ಮ ಪತಿ ದೇವರು ನಾನು ಅಸೂಯೆ ಪಡುವಸ್ಟು IPL ಗೆ ಅಂಟುಗೊಂಡ ಬಿಟ್ಟಿದಾರೆ . ಈ IPL ಕಾನ್ಸೆಪ್ಟ್ ಅರ್ಥನೇ ಆಗ್ತಾ ಇಲ್ಲ , ಯಾವ್ ಟೀಂ ನಮ್ಮ ಟೀಂ ಅನ್ನಿಸ್ತಾನೆ ಇಲ್ಲ .
ಇನ್ನು ಎಲೆಕ್ಷನ್ ಬಿಡಿ , ೫ ವರ್ಷಕೊಮ್ಮೆ ಬರುವ ಈ ಶ್ರೀಮಂತ್ ಭಿಕ್ಷುಕರು ದಿನ ನಮ್ಮ ಮನೆ ಬಾಗಿಲಿಗೆ ಬಂದು ವೋಟು ಕೊಡಿ ವೋಟು ಕೊಡಿ ಅಂತ ಬೇಡೋದು ಸರ್ವೇ ಸಾಮಾನ್ಯವಾಗಿದೆ . ಧೈರ್ಯ ಮಾಡಿ ನಿಮಗೆ ಯಾಕೆ ವೋಟು ಕೊಡಬೇಕು ಅಂತ ಕಾರಣ ಕೊಟ್ಟು convince ಮಾಡಿ ಅಂತ ಕೇಳಬೇಕು ಅಂತ ಬಾಗಿಲ ತೆಗಿತೀನಿ ಆದ್ರೆ ಯಾಕೋ ಕೇಳೋಕಾಗದೆ ಸುಮ್ನೆ ಆವರ ಕೊಟ್ಟ pamphlet ತೊಗೊಂಡು ಆಯಿತು ಅಂತ ಹೇಳಿ ಬಾಗಿಲು ಮುಚ್ಚಿ ವಳಗೆ ಬರ್ತೀನಿ .

ಇನ್ನು ನನ್ನ ಕಡೆಯ ಪೋಸ್ಟ್ ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಇದೆ ಸಾರ್ , ಪ್ಲೀಸ್ ಒಂದು ಸಲ ಬನ್ನಿ
http://manasaaree.blogspot.com/

ಮನಸಾರೆ

Ittigecement said...

ರಾಘವೇಂದ್ರ....

ನನಗೆ ಶಿಖಾಮಣಿಯ ಬುದ್ಧಿವಂತಿಕೆ ಇಷ್ಟವಾಯಿತು...

ಕೊನೆ ಕೊನೆಯಲ್ಲಿ ಒಂದೊಂದು ಪಕ್ಷದವರು ಪ್ರಚಾರಕ್ಕಾಗಿ ಒಂದು ಸಾವಿರವನ್ನೂ ಕೊಟ್ಟಿದ್ದಾರಂತೆ...

ಯಾಕೆ ಈ ನಾಟಕ..?
ಬೂಟಾಟಿಕೆ ?

ಈ ಅಬ್ಬರವೆಲ್ಲ ಶೇಷನ್ ಬಂದ್ ಮಾಡಿದ್ದರು...

ಅಂಥವರೊಬ್ಬರು ಇರಬೇಕಿತ್ತು...

ಇನ್ನು ಐಪಿಎಲ್ ...!!

ನಾವೆಲ್ಲ ರಾಮಾಯಣದ ಕಪಿಗಳು !!

ಹ್ಹಾ..ಹ್ಹಾ...!!

ಪ್ರತಿಕ್ರಿಯೆಗೆ ವಂದನೆಗಳು....

Me, Myself & I said...

ಎಂದಿನಂತೆ ಸ್ವಲ್ಪ ಹಾಸ್ಯ ಮತ್ತೆ ಸ್ವಲ್ಪ ಸಂದೇಶ ಎರಡೂ ಸೇರಿ ಬರಹ ಬಹಳ ಹದವಾಗಿದೆ.

ಸವಿಗನಸು said...

ಪ್ರಕಾಶಣ್ಣ,
ಮೊನ್ನೆ ಬೆಂಗಳೂರಿಗೆ ಯಾರಿಗೋ ಫೋನ್ ಮಾಡಿದ್ದೆ ಎಲೆಕ್ಷನ್ ಡ್ಯೂಟಿಗೆ ಹೋದ್ರೆ ೫೦೦ ರೂ ಒಂದು ಬಾಟ್ಲಿ ಕೊಡ್ತಾರೆ ಅಂತ ಹೇಳಿದ್ದ....ನಾನು ರಜೆ ಹಾಕಿ ಬರ್ಲ ಅಂದೆ...ನಗುತ್ತ ಇದ್ದ....

ಒಳ್ಳೆ ಲೇಖನ....

sunaath said...

ರಾಜಕೀಯ ಹಾಗು IPL ಗಳ ಕೊಳಕು ಮುಖದ ಅನಾವರಣ ಚೆನ್ನಾಗಿದೆ.

ವನಿತಾ / Vanitha said...

ಪ್ರಕಾಶಣ್ಣ..ಎಲ್ಲರನ್ನು ಒಂದೇ ಲೇಖನದಲ್ಲಿ ಚೆನ್ನಾಗಿ ಬರ್ದಿದ್ದೀರಿ..IPL ಬಗ್ಗೆ ನಾವು ಕೂಡ discussion ಮಾಡ್ತಾ ಇದ್ದೆವು..ನಮ್ಮೊಳಗೇ ಕಾದಾಟ, ಮತ್ತು ಅಲ್ಲಿ ಬರಿ ಮಿಲಿಯನ್ ಮಾತ್ರ ಲೆಕ್ಕ!!!

Ittigecement said...

ಮನಸಾರೆ....

ಆಸ್ಟ್ರೇಲಿಯಾದ ಷೇಣ್ ವಾರ್ನ್ ಬೋಲಿಂಗ್ ಮಾಡ್ತಾ ಇದ್ರೆ...!

ದಕ್ಷಿಣ ಆಫ್ರಿಕಾದ ಕಾಲಿಸ್ ರನ್ ಹೊಡಿತಾ ಇದ್ರೆ....

ನಮ್ಮವರ ಸಂಭ್ರಮ ನೋಡ ಬೇಕು...!!!!

ವಾಹ್...!! ವಾಹ್ !!

"ನೋಡ್ರೀ ಬೆಂಗಳೂರು ಟೀಮು ಈ ಸಾರಿ ಗೆಲ್ಲೋದು ಗ್ಯಾರೆಂಟೀ...!!"

ಸ್ಟೇಡಿಯಮ್ ನಲ್ಲಿ ಸಾವಿರಾರು ಜನ ಆರ್. ಸಿ. ಧ್ವಜ ಹಿಡಕೊಂಡು ಕುಣಿಯೋದು...
ಕುಪ್ಪಳಿಸೋದು ನೋಡಿದ್ರೆ....!!

ರಾಮ ರಾವಣರ ಯುದ್ಧದಲ್ಲಿ ವಿನಾಕಾರಣ ಸತ್ತ...

ರಾಮಾಯಣದ ಕಪಿಗಳ ನೆನಪಾಗ್ತದೆ ಕಣ್ರೀ...

ನಮಗೂ...
ಬೆಟ್ಟದಲ್ಲಿರೋ.. ಕೋತಿಗಳಿಗೂ ಯಾವ ವ್ಯತ್ಯಾಸನೂ ಇಲ್ಲ ಅನ್ನಿಸಿ ಬಿಡುತ್ತದೆ...

ಧನ್ಯವಾದಗಳು...

(ನಿಮ್ಮ ಬ್ಲಾಗಿನ... ಲೇಖನಕ್ಕೆ..
ನನಗೆ ತಿಳಿದ ಸಲಹೆ ಕೊಟ್ಟಿದ್ದೇನೆ...
ಸ್ವಲ್ಪ ಖಾರವಾಗಿದ್ದರೆ ಬೇಸರಿಸ ಬೇಡಿ...

ಪ್ರಕಾಶಣ್ಣ..)

Ittigecement said...

ಲೋದ್ಯಾಶಿಯವರೆ...

ಈಗಿನ ಚುನಾವಣೆಗೆ ಯಾರೇ ಆದರೂ...
ಖರ್ಚು ಮಾಡಿ ಗೆಲ್ಲ ಬೇಕಾದ ಸ್ಥಿತಿ ಇದೆ...
ಅದು ಕೋಟ್ಯಂತರ ರುಪಾಯಿಗಳು...!!
ಹಾಗಾಗಿ ಇಲ್ಲಿ ಪ್ರಾಮಾಣಿಕರು ಇರಲಿಕ್ಕೆ ಸಾಧ್ಯವೇ ಇಲ್ಲ..

ಇನ್ನು ನಾವು ಮತ ಹಾಕುವದು ಯಾರಿಗೆ ?

ನಾಗು ಹೇಳಿದ ಹಾಗೆ..

"ಹುಚ್ಚನ ಮದುವೆಯಲ್ಲಿ ಉಂಡವನೇ.. ಜಾಣ...!!"

ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

ಮುಗ್ಧಶಿಖಾಮಣಿಯ ಮಾತುಗಳೇ ಇರಬಹುದು. ಆದರೆ ಅದರಲ್ಲೂ ವಾಸ್ತಾವ ಸತ್ಯಗಳೇ ಇವೆ. ಮತಗಟ್ಟೆಯಲ್ಲೆ ನಮ್ಮ ಮತವನ್ನು ಯಾರಿಗೂ ಕೊಡದೆ ನಿರಾಕರಿಸುವ ಹಕ್ಕು ಸೂಕ್ತವಾಘಿ ಜಾರಿಯಾದಾಗ ಮಾತ್ರ ಅಥವಾ ಗೆಲ್ಲುವ ಅಭ್ಯರ್ಥಿ ಒಟ್ಟುಮತಗಳಳ್ಲಿ ಕನಿಷ್ಟ ಸೇಕಡಾ 50 ಮತಗಳನ್ನು ಪಡೆಯಬೇಕೆಂಬ ಕಡ್ಡಾಯ ಕಾನೂನು ಬಂದಾಗ ಸ್ವಲ್ಪ ಬದಲಾವಣೆ ಆಗಬಹುದೇನೋ!

umesh desai said...

ಹೆಗಡೇಜಿ ನಮಸ್ತೆ..ಲೇಖನ ಚೆನ್ನಾಗಿದೆ ನಾಳೆ ಓಟು ಹಾಕೋದಂತು ನಿಜ ಇಲ್ಲಿ ವ್ಯಕ್ತಿ ಯಾರು ಗೊತ್ತಿಲ್ಲ ಪಕ್ಷನೋಡಿ ಓಟು ಹಾಕಬೇಕಾಗಿದೆ...
ಇನ್ನು ಐಪಿಎಲ್ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇದೆ...

Manasaare said...

ಸರ್,
ನಿಮ್ಮ ಪ್ರತಿಕ್ರಿಯೆ ನಮ್ಮ ಬ್ಲಾಗ್ನಲ್ಲಿ ಇಲ್ಲವಲ್ಲ . ನಿಮ್ಮ ಪ್ರತಿಕ್ರಿಯೆ ಖಾರವಗಿರಲಿ , ಸ್ವೀಟ್ ಆಗಿರಲಿ ಅದನ್ನ ಆದರದಿಂದ ಸ್ವೀಕರಿಸುತ್ತೇವೆ . Your comment is valuable .

ಮನಸಾರೆ

ಸೀತಾರಾಮ. ಕೆ. / SITARAM.K said...

ಮೊದಲು ಬರೀ ಅಸೆ೦ಬ್ಲೀ ಮತ್ತು ಪಾರ್ಲಿಮೆ೦ಟ್ ಚುನಾವಣೆಗೆ ಮೀಸಲಿದ್ದ ಈ ಗಲಾಟೆಗಳು ಈಗ -ಪ೦ಚಯತ, ಮ೦ಡಲ, ಜಿಲ್ಲಾ, ಪುರಸಭೆ, ಸೊಸೈಟಿ ಚುನಾವಣೆಗಳಲ್ಲೂ ಶುರು ಆಗಿರೋದು ಆತ೦ಕಕಾರಿ. ಐದು ವರ್ಶಕ್ಕೆ ಒ೦ದೋ-ಎರಡೋ ಸ್ಸರಿ ಇರುತ್ತಿದ್ದ ರೋಗ ನಿತ್ಯದ್ದು ಆಗತಾ ಇದೆ. ಜೊತೆಗೆ ಟೆಸ್ಟ್ ಮ್ಯಾಚ್ ಗಳೊಡನೆ -ವ೦ಡೇ, ಔಗಳಿಗೆ ೨೦-೨೦, ಇದಕ್ಕೆ ಐಪಿಲ್-ಹೀಗೆ ಅತ್ತು ಹಲವಾರು ತ೦ಡಗಳು ಹೆಚ್ಚಾಗಿ ಕ್ರಿಕೆಟ್-ನ ಹುಚ್ಚು ತಲೆಕೆಟ್ಟು ಹೋಗುವಷ್ಟು ಹೆಚ್ಚಾಗಿದೆ ಜನರಲ್ಲಿ. ಇದರಲ್ಲಿ ದಿನನಿತ್ಯದ ಮೋಜನ್ನು ಅನಭವಿಸೋದು. ಒಟ್ಟಿನಲ್ಲಿ ವಸಿಯಾಗದ ರೋಗಗಳು ನಮ್ಮಲ್ಲಿ ವೃಣವಾಗಿ ನಾವೆಲ್ಲಾ ರಾಮಾಯಣದ ರಾಮ -ರಾವಣರ ಯುಧ್ಧದ ಕಪಿಗಳ೦ತೆ ನಾಶವಾಗೋದರಲ್ಲಿ ಸ೦ಶಯವಿಲ್ಲ. ಚೆ೦ದದ ಲೇಖನ.

PARAANJAPE K.N. said...

ಸರ್ವ ಪಕ್ಷ ಸಮನ್ವಯ ಕಲೆಯನ್ನು ಕರಗತ ಮಾಡಿಕೊ೦ಡಿರುವ ನಿಮ್ಮ ಮೇಸ್ತ್ರಿ ಶಿಖಾಮಣಿ ಮು೦ದೊ೦ದು ದಿನ ಕಾರ್ಪೊರೇಟರ್ ಆದರೂ ಅಚ್ಚರಿಯಿಲ್ಲ. ಪ್ರಸ್ತುತ ವಿದ್ಯಮಾನದ ಮೇಲೆ ಬೆಳಕು ಚೆಲ್ಲುವಲ್ಲಿ ನಿಮ್ಮ ಬರಹ ಸಶಕ್ತವಾಗಿದೆ.

ಸಾಗರಿ.. said...

ಪ್ರಕಾಶಣ್ಣ,
ತುಂಬಾ ಚೆನ್ನಾಗಿ ಹೇಳಿದ್ದೀರಿ, ನಾವ್ಯಾವಾಗ ಬದಲಾಗ್ತೀವೋ???

Subrahmanya said...

ನಿಮ್ಮ ಲೇಖನದ ಶೀರ್ಷಿಕೆಯೇ ಎಲ್ಲವನ್ನೂ ಹೇಳುತ್ತಿದೆ..ಸಕಾಲಿಕ ಲೇಖನ

ದಿನಕರ ಮೊಗೇರ said...

ಪ್ರಕಾಶಣ್ಣ,
ipl ಫ್ಯಾನ್ ನಲ್ಲಿ ನಾನೂ ಒಬ್ಬ.... ಸುಮ್ಮನೆ ಎಲ್ಲಾ ಕ್ರಿಕೆಟ್ ನನಗೆ ಇಷ್ಟ...... ನೀವು ಹೇಳಿದ್ದು ಸರಿನೆ..... ಪಾಪ ನಮ್ಮ ಯಡಿಯೂರಪ್ಪ ನಿಮಗೆಲ್ಲಾ ತೊಂದರೆ ಆಗತ್ತೆ ಅಂತಾನೆ ಎಲೆಕ್ಷನ್ ಮುಂದೆ ಹಾಕಲು ಟ್ರೈ ಮಾಡಿದ್ರು... ಆದ್ರೆ ಹೈಕೋರ್ಟ್ ಬಿಡಲಿಲ್ಲ....... ಸುಮ್ಮನೆ ಯಾಕೆ ಎಲ್ಲರಿಗೂ ಬೈತೀರಿ....... ಹ್ಹಾಹಹಹಾ......

Unknown said...

Va!Mestri Shikhamaniya sarva paksadashalu,kriket kapigalu!!!!vareva! Prakasha,ee tharada holikeya nudimuttugalu ninge hege hoLeyuttaveyo?!

Ittigecement said...

ಸವಿಗನಸು( ಮಹೇಶು )...

ಈ ಚುನಾವಣೆಯಿಂದಾಗಿ ನನ್ನ ಕೆಲಸದ ಕಾರ್ಯಕ್ರಮಗಳು ಒಂದುವಾರ ಸ್ಥಗಿತವಾದವು...

ಈ ಬೆಂಗಳೂರಲ್ಲಿ ಇನ್ನೆಷ್ಟು ಪರಿಣಾಮ ಆಗಿರ ಬಹುದು...?

ಈ ಥರಹ ಮೈಕಿನಲ್ಲಿ ಜೋರಾಗಿ ಅರಚುವದು...
ಹಣಕೊಟ್ಟು ಜನರನ್ನು ತಮ್ಮ ಸಂಗಡ ಕರೆದು ಕೊಂಡು ಹೋಗುವದು...
ಈ ಥರಹದ ಬೂಟಾಟಿಕೆ ನಾಟಕಗಳು ಅಗತ್ಯವೆ ?

ಇದೆಲ್ಲ ಮತದಾರನಿಗೆ ಅರ್ಥವಾಗುವದಿಲ್ಲವೆ ?

ಯಾವಾಗ ಇದಕ್ಕೆಲ್ಲ ಕೊನೆ ?

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಸುನಾಥ ಸರ್...

ನನೂ ಕೂಡ ಕ್ರಿಕೆಟ್ ಅಭಿಮಾನಿ (ಆಗಿದ್ದೆ)

ಯಾಕೊ...
ಈ ಮ್ಯಾಚ್ ಫಿಕ್ಸಿಂಗ್ ಎಲ್ಲ ಆದ ಮೇಲೆ ಕ್ರಿಕೆಟ್ "ಹುಚ್ಚು" ಬಿಟ್ಟು ಹೋಯಿತು...

ಈ ಐಪಿಎಲ್ ಮಾತ್ರ ಅರ್ಥವೇ ಆಗುವದಿಲ್ಲ..

ರಾಜಸ್ಥಾನ ಟೀಮಿಗೆ ಒಬ್ಬ ನಾಯಕ ಆಸ್ಟ್ರೇಲಿಯಾದಿಂದ ..
ನಿವ್ರತ್ತಿಯಾದ ಆಟಗಾರ ಬರಬೇಕಾಯಿತೆ ?
ಅಲ್ಲಿ ಪ್ರತಿಭೆಗಳಿಲ್ಲವೆ ?

ಈ ಐಪಿಲ್ ಆಡಿದ್ದರಿಂದ ರಾಜಸ್ಥಾನ ಕ್ರಿಕೆಟ್ಟಿನಲ್ಲಿ ಏನು ಪ್ರಯೋಜನ ಆಯಿತು ?

ಐಪಿಎಲ್ ನಲ್ಲಿ ರಾಜಸ್ಥಾನ ಟೀಮ್ ಗೆದ್ದಾಗ ಅಲ್ಲಿಯವರು
ಹಾರಿ ಕುಣಿದು..
ಧ್ವಜ ಹಿಡಿದು ಹಾರಾಡಿ...
ಸಂಭ್ರಮಿಸುವಾಗ....

ರಾಮಾಯಣದ ಕಪಿಗಳು ನೆನಪಾಗಿ ಬಿಡುತ್ತವೆ...

ಸುನಾಥ ಸರ್ ವಂದನೆಗಳು....

Ittigecement said...

ವನಿತಾ....

ಐಪಿಎಲ್ ಹಣ ಮಾಡಲು ಹುಟ್ಟಿದ ಸಂಸ್ಥೆ...

ಎಲ್ಲದಕ್ಕೂ ಒಂದು "ಕೊನೆ" ಇದೆ...

ಈ ಕ್ರಿಕೆಟ್ ರೇಜಿಗೆಯಾಗುವಷ್ಟು ಈಗಾಗಲೇ ಆಗುತ್ತಿದೆ...
ಸ್ವಲ್ಪ ಕಾಯಬೇಕಷ್ಟೆ..

ಉಳಿದ ಆಟಗಳು ಆಟಗಳಲ್ಲವೆ ?

ಈ ಕ್ರಿಕೆಟ್ಟಿನಲ್ಲಿ ಹಣವಿದೆ...
ಯಶಸ್ಸಾದರೆ ಹಣದ ಬದುಕಿದೆ...

ಹಾಗಾಗಿ ಈ ಆಕರ್ಷಣೆ..

ಉಳಿದ ಆಟಗಳಲ್ಲಿ ಇವೆಲ್ಲ ಕಡಿಮೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಡಾ. ಸತ್ಯನಾರಾಯಣ ಸರ್...

ನೀವು ಹೇಳಿದ್ದು ನೂರಕ್ಕೆ ನೂರು ಸರಿ...

ನಿಂತಿರುವ ಅಭ್ಯರ್ಥಿಯನ್ನು ನಿರಾಕರಿಸುವ ಅಧಿಕಾರ ಕೂಡ ಮತದಾರನಿರಬೇಕು..

ಈ ಕಾಯಿದೆ ..ಕಾನೂನು...
ಅದರ ಜಾರಿಗೊಳಿಸುವ ಎಲ್ಲ ಜವಬ್ದಾರಿ...

ಈ ಕೆಟ್ಟ ರಾಜಕಾರಣಿಗಳ ಕೈಯಲ್ಲಿದೆಯಲ್ಲ...

ನ್ಯಾಯಾಂಗಕ್ಕೂ ಲಂಚಕೊಡುವ ಕಾರ್ಯ ಇದೆಯಂತಲ್ಲ...

ಇನ್ನೇನು ಆಗಬೇಕು ಇಲ್ಲಿ ?

ಸರ್ ...
ಕೊನೆಗೆ ಇಷ್ಟೆ...

"ಹುಚ್ಚು ಬಿಟ್ಟಂತೂ ಮದುವೆ ಯಾಗೊಲ್ಲ...
ಮದುವೆ ಆದಂತೂ ಹುಚ್ಚು ಬಿಡೊಲ್ಲ..."

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಉಮೇಶ್ ದೇಸಾಯಿಯವರೆ...

ನನ್ನ ಗೆಳೆಯ ಸತ್ಯ ಮೊದಲ ಬಾರಿಗೆ ಮಗನ ಹಟಕ್ಕೆ ಗಂಟು ಬಿದ್ದು..
ಮೊನ್ನೆ ಐಪಿಎಲ್ ಪಂದ್ಯಕ್ಕೆ ಹೋಗಿ ಬಂದ...

ಇಲ್ಲಿಯವರೆಗೆ ಚೆನ್ನಾಗಿ ಆಡಿದ ಬೆಂಗಳೂರಿನವರು (?)
ಅವತ್ತು ಹೀನಾಯವಾಗಿ ಸೋತರು...

ನಾನು ಆ ಪಂದ್ಯದ ಬಗೆಗೆ ಇನ್ನೂ ಮಾತನಾಡಿಸಿಲ್ಲ...
ಕೇಲುವ ಧೈರ್ಯ.. ನನ್ನಲ್ಲೂ ಇಲ್ಲ..

ಹೇಳುವ ಉತ್ಸಾಹ ಅವನಲ್ಲೂ ಇಲ್ಲ..!

ನಾಳೆ ಯಾರಿಗೆ ಮತ ಹಾಕಲಿ...?

ತಲೆ ಕೊರೆಯುತ್ತಿದೆ...

ಪ್ರತಿಕ್ರಿಯೆಗೆ...
ನಿಮ್ಮ ಸ್ನೇಹಕ್ಕೆ ವಂದನೆಗಳು....

Ittigecement said...

ಮನಸಾರೆ...

ನಿಮ್ಮ ಲೇಖನ ನನಗೆ ಬಹಳ ಕಾಡುತ್ತಿದೆ...
ನನ್ನ ಅಭಿಪ್ರಾಯ ಹಾಕಿದ್ದೇನೆ...

ನಿಮ್ಮ ಗೆಳತಿ ಸೂಕ್ತವಾದ ನಿರ್ಧಾರ ತೆಗೆದು ಕೊಳ್ಳಲಿ ಎಂದು ಹಾರೈಸುವೆ...

Ittigecement said...

ಸೀತಾರಾಮ್ ಸರ್...

ಕ್ರಿಕೆಟ್ ಮೈದಾನದಲ್ಲಿ ಉತ್ಸಾಹ ತರಲು "ಕುಣಿಯುವವರನ್ನು" ವಿದೇಶದಿಂದ ಕರೆಸುತ್ತಾರಂತೆ...!

ನಮ್ಮಲ್ಲಿ ಕುಣಿಯುವವರು ಇಲ್ಲವೆ ?

ಇಷ್ಟಕ್ಕೂ ಈ ಆಟಕ್ಕೆ ಅಂಥಹ "ಉತ್ಸಾಹ" ತುಂಬುವವರು ಅಗತ್ಯವೆ ?

ನಾಗು ಹೇಳಿದ ಇನ್ನೊಂದು ಮಾತು ಹೆಚ್ಚು ಸೂಕ್ತವಾಗಿದೆ...

"ಹುಚ್ಚನ ಮದುವೆಯಲ್ಲಿ ಉಣ್ಣುವವನೇ... ಜಾಣ...!"

ಸರ್ ...
ಇನ್ನು ಬಳ್ಳಾರಿಯವರಾದ ನಿಮ್ಮಲ್ಲಿ ಚುನಾವಣೆಯ ಬಗೆಗೆ ಮಾತನಾಡುವಷ್ಟು ಅನುಭವ ನನ್ನಲ್ಲಿಲ್ಲ...
ಆದರೆ ನಮ್ಮ ಅಸಹಾಯಕತೆಯ ಬಗೆಗೆ ಬೇಸರವಾಗುವದು ....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಮನದಾಳದಿಂದ............ said...

ಪ್ರಕಾಶಣ್ಣ,
ನಮ್ಮ ಇಂದಿನ ರಾಜಕೀಯ ವ್ಯವಸ್ಥೆ ಏನಾಗಿ ಹೋಗಿದೆ? ಮತದಾನದ ಮಹತ್ವಕ್ಕೆ ಬೆಲೆಯೇ ಇಲ್ಲವಾಗಿದೆಯಲ್ಲ. ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಜೆಗಳೇ ರಾಜರು ಎಂಬ ಅಹಂಕಾರದಿಂದ ನಾವು ನಮ್ಮ ಕರ್ತವ್ಯವನ್ನೇ ಮರೆಯುತ್ತಿದ್ದೇವೆ. ನಮ್ಮ ಸ್ವಾರ್ಥಕ್ಕಾಗಿ ಮತ ಚಲಾಯಿಸಬೇಕೆ? ಅಥವಾ ಸಾರ್ವತ್ರಿಕ ಅಭಿವೃದ್ಧಿಗಾಗಿಯೇ? ಈ ಪ್ರಶ್ನೆಗೆ ಉತ್ತರ ಖಂಡಿತಾ ಯಾರು ಯೋಚಿಸಲಾರರು. ಕೇವಲ ನಮ್ಮ ಹಕ್ಕು ಚಲಾಯಿಸಿದರೆ ಮುಗಿಯಿತು. ಅಷ್ಟೇ. ಅಷ್ಟಕ್ಕೂ ಒಳ್ಳೆಯವರಿಗೂ ಸಭ್ಯತೆಯ ಮುಖವಾಡದವರಿಗೂ ವ್ಯತ್ಯಾಸವೇ ತಿಳಿಯುವುದಿಲ್ಲ! ಅದರ ಮಧ್ಯೆ ದುಡ್ಡು ಗುಂಡು ಬಾಡು ಜೋರಾಗೆ ಸಿಗುವಾಗ ೨೦೦-೩೦೦ ರೂಪಾಯಿಗೆ ಕೂಲಿಯಾಳುಗಳೆಲ್ಲಿ ಸಿಗ್ತಾರೆ ಹೇಳಿ?
ipl ನಮ್ಮ ಬದುಕನ್ನೇ ಹಾಳುಗೆದವ್ತಾ ಇದೆಯೇ? ಅನ್ನೋದು ನನಗೆ ಇಂದಿಗೂ ಅರ್ಥವಾಗದ ಪ್ರಶ್ನೆ.
ನೀವು ಹೇಳಿದಂತೆ ಹುಚ್ಚು ಬಿಡುವವರೆಗೂ ಮಾಡುವೆ ಆಗೋಲ್ಲ
ಮಾಡುವೆ ಆಗೋವರೆಗೂ ಹುಚ್ಚು ಬಿಡುವುದಿಲ್ಲ
ಹ್ಹ ಹ್ಹ ಹ್ಹಾ!

ನಾಗೇಂದ್ರ ಭಾರದ್ವಾಜ್ said...

huchara sante kathe tumbha sogasagidhe...

Ittigecement said...

ಪರಾಂಜಪೆಯವರೆ...

ನೀವೆನ್ನುವದು ನಿಜ..
ಶಿಖಾಮಣಿಯಂತ ಜನರೆ ಎಲ್ಲ ಕಡೆ ಸಲ್ಲುವರು..
ಯಾರ ವಿರೋಧವೂ ಇಲ್ಲ...
ಆದರೆ ಎಲ್ಲರ ಪರವಾಗಿ ಕಾಣುತ್ತಾರೆ...

ನಿನ್ನೆ ಚುನಾವಣೆ ಮುಗಿದಿದೆ,,,

ಇವತ್ತಾದರೂ ಕೆಲಸಾಗರರೂ ಬರಬಹುದೆಂಬ ಆಸೆ ಇದೆ...

"ರಾಜಕೀಯದವರು ಕೊಟ್ಟ ಹಣ ನಿನ್ನೆಗೇ ಖರ್ಚಾಗಿ ಹೋಗಲಿ "
ಎಂದು ಪ್ರಾರ್ಥಿಸ ಬೇಕಷ್ಟೆ...

ನಮ್ಮ ವ್ಯವಸ್ಥೆ ಹೀಗಾಗಿದೆ...
ನಾವದಕ್ಕೆ ಹೊಂದಿಕೊಂಡಿದ್ದೇವೆ...

ಒಟ್ಟಿನಲ್ಲಿ...

"ಹುಚ್ಚು ಬಿಟ್ಟಂತೂ ಮದುವೆ ಆಗೋದಿಲ್ಲ...

ಮದುವೆ ಆದಂತೂ ಹುಚ್ಚು ಬಿಡೋದಿಲ್ಲ..."

ಧನ್ಯವಾದಗಳು...

Ittigecement said...

ಸಾಗರಿ....

ನನ್ನ ಬಾವ (ಹೆಂಡತಿ ತಮ್ಮ) ಬಹಳ ಕ್ರಿಕೆಟ್ ಹುಚ್ಚು...
ಎಷ್ಟೇಂದರೆ ಕ್ರೆಕೆಟ್ ಪಂದ್ಯದ ಪ್ರತಿ ಕ್ಷಣವನ್ನೂ ನೋಡುತ್ತಾನೆ....
ಹಾಗೆಯೇ ಮರುದಿನ ಅದರ "ಹೈಲೈಟ್ಸ್" ಕೂಡ....!!

ಅದು ಸೋತು ಹೋದ ಪಂದ್ಯವಾದರೂ ಸರಿಯೇ...!!

ಪ್ರೀತಿ ಎಂದರೆ ಹೀಗಿರ ಬೇಕು ಅಲ್ಲವಾ ?

ಧನ್ಯವಾದಗಳು...

Ittigecement said...

ಸುಬ್ರಮಣ್ಯ...

ನಾನು ದೋಹಾ ದಲ್ಲಿದ್ದಾಗ...
ಅಲ್ಲಿನವರ "ಫುಟ್ಬಾಲ್" ಪ್ರೇಮವನ್ನು ಕಂಡು ಬೆರಗಾಗಿದ್ದೆ...

ಎಷ್ಟು ಹಳೆಯ ಪಂದ್ಯವನ್ನಾದರೂ ಅವರು ನೋಡುತ್ತಿದ್ದರು...
ಅದು ಯಾವದೇಶದ ಪಂದ್ಯವಾದರೂ ಸರಿ...
ತಮ್ಮ ದೇಶದ ಪಂದ್ಯವೇ ಆಗಬೇಕೆಂದಿಲ್ಲ...
ಒಟ್ಟಿನಲ್ಲಿ ಫುಟುಬಾಲ್" ಆಗಿದ್ದರೆ ಸಾಕು... !!

ಇಂಥಹ ಹುಚ್ಚಿಗೆ ಏನನ್ನ ಬೇಕು...

ನನ್ನ ಸ್ನೇಹಿತ ಕ್ರಿಕೆಟ್ ಹುಚ್ಚಿನಲ್ಲಿ ಇದೇ ಥರಹ ಇದ್ದಾರೆ..

ಜಗತ್ತಿನ ಯಾವಮೂಲೆಯ ಕ್ರಿಕೆಟ್ ಪಂದ್ಯವಾದರೂ ಆದೀತು...
ಅದು ಹಳೆಯ ಪಂದ್ಯವಾದರೂ ಆದೀತು..

ಒಟ್ಟಿನಲ್ಲಿ ನೋಡಲಿಕ್ಕೆ ಕ್ರಿಕೆಟ್ ಬೇಕು..!!

ಅದನ್ನು ಎಷ್ಟು ಆಸಕ್ತಿಯಿಂದ ನೋಡುತ್ತಾನೆ ಎಂದರೆ..
ಯಾರೂ ಸಹ ಮಧ್ಯದಲ್ಲಿ ಮಾತನಾಡಿಸ ಬಾರದು... !

ಧನ್ಯವಾದಗಳು...

Unknown said...

yendinante uttama lekhana...

ಕ್ಷಣ... ಚಿಂತನೆ... said...

prakashanna,
lekhana aasktikaravaagide. sheershikeyinda eno yochisidare, konege election, ella bandiddu. super aagide.

snehadinda,

Jagadeesh Balehadda said...

ಓದಲು ತಮಾಷೆಯಂತಿದ್ದರೂ ಮ್ಯಾಟ್ರು ಸಕತ್ತಾಗಿದೆ. ಪ್ರಕಾಶಣ್ಣಾ ಬರವಣಿಗೆ ತುಂಬಾ ಚಾಟಿನಾ ಚನ್ನಾಗೇ ಬೀಸಿದಿರಾ. ರಾಜಕೀಯ ದವರದ್ದು ದಪ್ಪ ಚರ್ಮಅವರಿಗೆ ಬರೆ ತಾಗೋದು ಡೌಟು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನೋಡಿ ನಿಮ್ಮ ಕೆಲಸದವರು ರಜೆ ಹಾಕಿದ್ದರಿಂದ ಬ್ಲಾಗಿಗೆ ಬಂದಿದ್ದೀರಿ ಅಲ್ವಾ?
ಆದ್ರೂ ಎಲೆಕ್ಷನ್ ರಾಡೀಯ ಬಗ್ಗೆ ಹುಚ್ಚಿನ ಬಗ್ಗೆ ಚೆನ್ನಾಗಿ ಬರೆದಿರುವಿರಿ. ಮದ್ವೆ ಆದ್ಮೇಲೆ ಹುಚ್ಚು ಬಿಡುತ್ತೆ ಅಂತೀರಾ?!!

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ತುಂಬಾ ಸುಂದರ ಬರಹ
ಚುನಾವಣೆಯ ಸಮಯದಲ್ಲಿ ಯಾರ್ಯಾರೋ ಹಣ ಮಾಡಿಕೊಳ್ಳುತ್ತಾರೆ
ಆದರೆ ಚುನಾವಣೆಯ ಮೂಲ ಉದ್ದೇಶ ಪೂರ್ತಿಯಾಗುವುದೇ ಇಲ್ಲ

NamrathaSharath said...

ಸರಳವಾದ ಬರಹದಿಂದ ಎರಡು ಒಳ್ಳೆಯ ಸಂದೇಶಗಳನ್ನು ಹೊರ ಹಾಕಿದ್ದೀರ. ತುಂಬ ಚೆನ್ನಾಗಿದೆ ನಿಮ್ಮ ಲೇಖನ.

ಚುನಾವಣೆ ಬಗ್ಗೆ ಯೋಚಿಸ್ತಾ ಕುಳಿತಿದ್ದಾಗ ಮನಸಿನಲ್ಲಿ ಒಂದಷ್ಟು ಪದಗಳು ಕೂಡಿ ಮೂಡಿ ಬಂದ ಒಂದು ಸಣ್ಣ ಕವನ ಇಲ್ಲಿದೆ. ನಿಮ್ಮ ಅನಿಸಿಕೆ ತಿಳಿಸಿ.

http://sharihs.blogspot.com/2010/03/blog-post_29.html

V.R.BHAT said...

ಚೆನ್ನಾಗಿದೆ ನಿಮ್ಮ ಲೇಖನ, ಎಂದಿನಂತೆ ನಿಮ್ಮ ಲಘು ಹಾಸ್ಯ ಮಿಶ್ರಿತ ನಿರೂಪಣೆ.

ಪ್ರವೀಣ್ ಭಟ್ said...

Hi Prakashanna,

pracharakke duddi kottiddu ondu kade otige kooda bejan duddu surdiddare..

olle baraha

Pravi
http://nenapinasalu.blogspot.com/

geeta bhat said...

Namaskar,

chandada article. Uneducated peoplegalanna holasu rajakarinigalu henge tamma kelasakke balaskyatta alda.really avranna nodidre hesige agtu. namma desha estella mundevarita iddu,jana bere elaa fieldnallu interest torsta.adre ee holsu rajakaranana change madale yaru yake interest torsta ille.........???? namma deshadalli adondu sari hogbittididre adestu chandada desha aagtithoo.....

Ramesh said...

ಪ್ರಕಾಶಣ್ಣ,

ಸ್ವಲ್ಪ ತಡವಾಗಿ ಬಂದೆ.. ಬೇಸರ ಬೇಡ :)

ನಿಮ್ಮ ಮಾತು ನಿಜ ಪ್ರಕಾಶಣ್ಣ.. ಇದೆಲ್ಲ mind games.. ನಮ್ಮ ಯೋಚನಾ ಶಕ್ತಿಯನ್ನು ಅವರಿಗೆ ಬೇಕಾದ ಹಾಗೆ ತಿರುಚುವಂಥಹ ಶಕ್ತಿ ಈ ಮಾಧ್ಯಮಗಳಿಗೆ ಇದೆ ಅನ್ಸತ್ತೆ.. Bagpiper ನ ಹಿಂದೆ ಬಿದ್ದು ಸತ್ತ ಇಲಿಗಳಂತೆ ನಾವು ಹಿಂಬಾಲಕರಾಗ್ತೀವಿ ಒಮ್ಮೊಮ್ಮೆ.. IPL ಅಥವ ರಾಜಕೀಯ, ಇವೆರಡೂ ನಮ್ಮನ್ನ ಸೋಲಿಸಿ ಅವರು ಹಣ ಮಾಡುವ ಮಾಧ್ಯಮಗಳು..

ಸೋತು ಸತ್ತರೂ ಕೆಲವರು ನಮ್ಮ ಪಕ್ಷ ಅಥವ ನಮ್ಮ team ಗೆದ್ದಿತು ಅನ್ನೊ ಸುಳ್ಳು ನಂಬಿಕೆಗೆ ಒಳಗಾಗ್ತಾರೆ... ಹೀಗೆ ಬರಿತಿರಿ ಹಾಗು ನನ್ನ ಬ್ಲೊಗ್ ಕಡೆ ಬರ್ತಾ ಇರಿ :)

mitra said...

ಪ್ರಕಾಶಣ್ಣ,
ತುಂಬಾ ದಿನಗಳಿಂದ ನಿಮ್ ಲೇಖನಗಳನ್ನು ಓದುತ್ತಿದ್ದೆ, ಅನಿಸಿಕೆ ನೀಡಲೆಂದೂ ಮುಂದಾಗಲಿಲ್ಲ, ಲೇಖನ ಬಹಳ ಚೆನ್ನಾಗಿದೆ, ಇಲ್ಲಿ ನಾವು ಕಪಿಗಳಾದದ್ದು ಮಾತ್ರವಲ್ಲ, ಕ್ರಿಕೆಟ್ ತನ್ನ ಆಟದ ಸ್ವಂತಿಕೆಯನ್ನೇ ಕಳೆದು ಕೊಂಡಿದೆ.

Ittigecement said...

ದಿನಕರ...

ಕ್ರಿಕೆಟ್ ಅಂದ್ರೆ ನಂಗೂ ಇಷ್ಟ ...
ಆದ್ರೆ ಈ ಐಪಿಎಲ್ ಅಲ್ಲ...

ಇಲ್ಲಿ ಯಾರು, ಎಲ್ಲಿ, ಯಾರಿಗಾಗಿ ಅಡ್ತಾರೆ ಅಂತ ಗೊತ್ತಾಗುವದೇ ಇಲ್ಲ..
ನಿಜ ಹೇಳ್ತೀನಿ..
ನಾವೆಲ್ಲ ರಾಮಾಯಣದ ಕಪಿಗಳು...

ಇನ್ನು ರಾಜಕೀಯದಲ್ಲಿ...
ಎಲ್ಲರೂ ಅಷ್ಟೆ...
ಹಾಗಾಗಿ ಎಲ್ಲರಿಗೂ ಬಯ್ದದ್ದು....

ಈ ಐಪಿಎಲ್ ಬೇಕಾದರೆ ಸಹಿಸಿ ಕೊಳ್ಳ ಬಹುದು...

ಆದರೆ ಈ ರಾಜಕೀಯ ದೊಂಬರಾಟ ಮಾತ್ರ ಸಾಧ್ಯವಾಗುವದಿಲ್ಲ...

ಇನ್ನು ಫಲಿತಾಂಶ ಬರಲಿ...

ಮುಂದೆ ಇದ್ದೆ.... "ಕೋತಿಗಳ ದೊಂಬರಾಟ... ಜಿಗಿದಾಟ..."

ಏನೇನೋ ಆಪರೇಷನ್.. ಇತ್ಯಾದಿ...

ಧನ್ಯವಾದಗಳು ದಿನಕರ್...

Ittigecement said...

ಗಂಗಾ...

ಯಾವುದೇ .. ಸಿದ್ಧಾಂತಕ್ಕೆ.. ಕಟ್ಟುಪಾಡು, ಮುಲಾಜಿಗೆ ಒಳಗಾಗದಿದ್ದರೆ...
ಈ ರೀತಿ ಎಲ್ಲರಿಗೂ ಬಯ್ಯಬಹುದು... ಟೀಕಿಸಬಹುದು...

ನಾನಂತೂ "ಹೊಟ್ಟೆ ಪಕ್ಷದವ..."
ನಮ್ಮ ಬದುಕಿನ ಪಕ್ಷದವ..

ಹಾಗಾಗಿ ಎಲ್ಲರಿಗೂ (ನನಗೂ ಸೇರಿಸಿ) ಬಯ್ಯುತ್ತೇನೆ...

ಆಡಿದ ಒಂದು ಪಂದ್ಯ ಬಿಟ್ಟು ಎಲ್ಲವನ್ನೂ ಸೋತಿರುವ..
ಪ್ರೀತಿ ಜಿಂಟಾ ತಂಡಕ್ಕೆ.. ಪ್ರೀತಿ ಜಿಂಟಾ ಪ್ರೋತ್ಸಾಹಿಸಿದರೆ ಅದಕ್ಕೊಂದು ಅರ್ಥವಿದೆ...

ಅವಳು ತನ್ನ ಹಣವನ್ನು ಅದರಲ್ಲಿ ತೊಡಗಿಸಿದ್ದಾಳೆ...

ಆದರೆ ಬ್ರೆಟ್‍ಲೀ ವಿಕೆಟ್ ಪಡೆದರೆ ಕುಣಿದು ಕುಪ್ಪಳಿಸುವವರನ್ನು ನೋಡಿದರೆ...
ಏನೇನೋ ಅನ್ನಿಸುತ್ತದೆ...
ರಾಮಾಯಣದ ಕಪಿಗಳ ನೆನಪಾದರೆ ಆಶ್ಚರ್ಯವಾಗುವದಿಲ್ಲ.. ಅಲ್ಲವಾ?

ಧನ್ಯವಾದಗಳು...

V.R.BHAT said...

ರಾಜಕೀಯವೇ ಗಬ್ಬೆದ್ದು ಹೋಗಿರುವುದು ತಮಗೇ ಗೊತ್ತಿದೆ, ಇಷ್ಟು ಚಿಕ್ಕ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮೆರವಣಿಗೆ-ಪಟಾಕಿ ಎಲ್ಲಿಂದ ಬಂತು ಈ ದುಡ್ಡು? ಎಲ್ಲಿಂದ ಬರಬೇಕು ನಾಳೆ ಜನರ ತಲೆಬೋಳಿಸುವುದೇ ರಾಜಕೀಯದವರ ಕೆಲಸ ಅಲ್ಲವೇ ? ಅದು ನಿಮಗೆ ಅಂತ ಅಲ್ಲ, ವೃತ್ತಿನಿರತ ಅನೇಕ ಕಂಪನಿಗಳಲ್ಲಿ ಇದೆ ಪ್ರಲಾಪ, ಗೋಳು ಆಗಿ ಹೋಯ್ತು, ಯಯು ಹೇಳಬೇಕು ಯಾರು ಕೇಳಬೇಕು ? ಅಲ್ಲವೇ ? ಅದಕ್ಕೇ ದೇಶಾದ್ಯಂತ ಎರಡೇ ಪಕ್ಷವಿದ್ದರೆ ಇಷ್ಟೆಲ್ಲಾ ರಾಡಿ ಇರಲಾರದು ಅಂತ ನನ್ನ ಅನಿಸಿಕೆ, ಬೆಕ್ಕಿಗೆ ಗಂಟೆ ಕಟ್ಟುವ ವಿಚಾರ, ಕಾಡು ನೋಡೋಣ! ನಿಮ್ಮ ಹಾಸ್ಯ ಮಿಶ್ರಿತ ಹೂರಣ ಚೆನ್ನಾಗಿದೆ, ಧನ್ಯವಾದಗಳು

Dr.D.T.Krishna Murthy. said...

ಹುಚ್ಚು ಬಿಡೊಲ್ಲಾ !ಮದುವೆ ಆಗೋಲ್ಲಾ!ಸಕತ್ತಾಗಿದೆ ಪ್ರಕಾಶಣ್ಣ.