Saturday, January 2, 2010

ದೃಷ್ಟಿ... ಭಾವ...

ನನಗೆ ಇನ್ನೂ ಚೆನ್ನಾಗಿ ನೆನಪಿದೆ.....

ಹೆಣ್ಣು ನೋಡುವ ಶಾಸ್ತ್ರಕ್ಕೆ ನಾನೂ ಹೋಗಲೇ ಬೇಕಿತ್ತು...
ಯಾಕೆಂದರೆ ಅದು ನನ್ನ ಮದುವೆಯಾಗಿತ್ತು...


ನಾನು ಮದುವೆಯಾಗುವ ಹುಡುಗಿಯನ್ನು ಅಪ್ಪ, ಅಮ್ಮ ನೋಡಿ  ಫಿಕ್ಸ್ ಮಾಡಿದ್ದರು.
 

"ನೋಡೋ..
ನಿಂಗೆ ಚಂದ, ಅಂದ ನೋಡೊ ವಯಸ್ಸು..
ಹುಡುಗಿಯ ಗುಣ, ಮನೆತನ ಎಲ್ಲ ನೋಡ ಬೇಕಾಗ್ತದೆ..
ನಾವು ಎಲ್ಲವನ್ನೂ ನೋಡಿ ನಿನ್ನ  ಸ್ವಭಾವಕ್ಕೆ ಯೋಗ್ಯವಾದ ಹುಡುಗಿಯನ್ನು ಹುಡುಕಿದ್ದೇವೆ..
ಹುಡುಗಿ ಲೋಕನಿತಿ ಇದ್ದಾಳೆ...
ಬದುಕಲಿಕ್ಕೆ.. ಸಂಸಾರಕ್ಕೆ..

ಬರಿ ಚಂದವೊಂದೆ ಏನೂ ಸಾಲೋದಿಲ್ಲ..
ಆದರೆ  ಉಳಿದ ಎಲ್ಲ ರೀತಿಯಿಂದಲೂ ನಿನಗೆ ಅತ್ಯುತ್ತಮ ಜೋಡಿ.."
 

ಅರ್ಥ ಇಷ್ಟೆ..

ನಿನಗೆ ಹೆಣ್ಣನ್ನು ನಾವು ನೋಡಿದ್ದೇವೆ..
" ನೀನ್ನು  ಬಂದು, ತಲೆಹಾಕಿ  ಒಪ್ಪಿಗೆ ಸೂಚಿಸು..
ನಿರ್ಧಾರ ಮಾಡಿಯಾಗಿದೆ" ಅನ್ನುವಂತಿತ್ತು.


"ಹೇಗಿರ ಬಹುದು... ಹುಡುಗಿ !! ??"
ಕುತೂಹಲದಿಂದ ಹೋಗಿದ್ದೆ...


ತಿಂಡಿ ತಂದು ಕೊಡುವಾಗ ಮುಖ ನೋಡಿದೆ...


ದೊಡ್ಡ ನಿರಾಸೆಯಾಗಿತ್ತು...
ಸ್ವಲ್ಪವೂ ಚಂದ ಇಲ್ಲವಾಗಿತ್ತು.. ಆ ಕಪ್ಪನೆಯ ಹುಡುಗಿ...!
ಯಾವ ರೀತಿಯಿಂದಲೂ..
ಹೇಗೆ ನೋಡಿದರೂ  .. ಸೌಂದರ್ಯ ಶಬ್ಧದ ಅರ್ಥವನ್ನು ಅಲ್ಲಿ ಹುಡುಕುವದು  ಕಷ್ಟವಾಗಿತ್ತು....

ಇವಳ ಜೊತೆ ಜೀವನ ಪೂರ್ತಿ ಬಾಳ ಬೇಕಾ...?


" ನಿಮ್ಮ ಮಗಳ ಹತ್ತಿರ ಒಂದು ಹಾಡು ಹೇಳಿಸಿ... ದಯವಿಟ್ಟು..."
ನನ್ನಪ್ಪ ತನ್ನ ಕೋರಿಕೆ ಇಟ್ಟಿದ್ದ...


ಬಹಳ ಸೌಜನ್ಯದಿಂದ ಆ ಹುಡುಗಿ ಹಾಡು ಹೇಳಿದ್ದಳು...


" ನನ್ನೊಳಗಿನ  ಪ್ರೇಮ ಭಾವದ ಮಳೆಯಿಂದ..
ನಮ್ಮ ಬಾಳ ಹೂ ಅರಳಿಸುವೆ ..
ಗೆಳೆಯಾ...
ಇನಿತು ಜಾಗವು ಸಾಕೆನಗೆ...
ಹೃದಯವ ನಗೆಯ ನಂದನ ಮಾಡುವೆ ..
ಇನಿಯಾ...."


ಅವಳು ಕಣ್ಮುಚ್ಚಿ ತನ್ಮಯಳಾಗಿ ಹಾಡುತ್ತಿರುವಾಗ ನಾನು ಮೈ ಮರೆತಿದ್ದೆ..!!


ಅವಳ ಭಾವದ ಅಲೆಯೊಳು ಮೈ ಮರೆತಿತ್ತು..!!
ನನಗೆ ರೋಮಾಂಚನವಾಗಿತ್ತು....!
 
ಅಂದ ಚಂದವೆಲ್ಲ ಯಾಕೆ  ಬೇಕು...??

ಹಾಡು ಕೇಳಿದ ಮೇಲೆ  ಆ ಹುಡುಗಿ ಬಹಳ ಇಷ್ಟವಾದಳು...!

ಆಗ ನನಗೆ ಅನಿಸಿತ್ತು...
" ಚಂದವೇನೂ ಬೇಕಿಲ್ಲ..
ಅವಳ ಮಧುರ ಕಂಠದ ಹಾಡೊಂದು ಸಾಕು..
ಅವಳನ್ನು ಬೆಟ್ಟದಷ್ಟು ಪ್ರೀತಿಸ ಬಲ್ಲೆ" ಎನಿಸಿತ್ತು....

ಹಾಗೆಯೇ.. ಆಯಿತು...

ಈಗಲೂ ದಿನಾಲು ನಾನು ಸಾಯಂಕಾಲ ಮನೆಗೆ ಹೋದಾಗ ಕಾಫಿ ಕೊಟ್ಟು
ಒಂದು ಚಂದದ ನನ್ನಿಷ್ಟದ ಹಾಡು ಹಾಡುತ್ತಾಳೆ...
ನನ್ನ ಆಯಾಸವೆಲ್ಲ ಮರೆಯಾಗುತ್ತದೆ...
ತಲೆಯಲ್ಲಿ ಕೊರೆಯುವ ಒತ್ತಡಗಳೆಲ್ಲ ಮರೆಯಾಗುತ್ತದೆ...

ನನ್ನ ಹೆಂಡತಿ ಬಲು ಜಾಣೆ...
ಮನೆಯನ್ನು.. ಅಂದವಾಗಿ.. ಚೊಕ್ಕಟವಾಗಿ ಇಟ್ಟುಕೊಳ್ಳುತ್ತಾಳೆ...
ಮಕ್ಕಳನ್ನು  ಚೆನ್ನಾಗಿ ನೋಡಿಕೊಳ್ಳುತ್ತಾಳೆ..

ಮನೆಗೆ ಬಂದ  ಅತಿಥಿಗಳನ್ನು ಚೆನ್ನಾಗಿ ಸತ್ಕಾರಮಾಡುತ್ತಾಳೆ...


ನಾನು ಪುಣ್ಯವಂತ...!

ಒಂದು ಒಳ್ಳೆಯ ಮಡದಿ.. ಚಂದದ ಎರಡು ಮಕ್ಕಳು..
ಯಾರಾದರೂ ಹೊಟ್ಟೆಕಿಚ್ಚು ಪಡುವಂಥಹ ಸಂಸಾರ ನನ್ನದು....


ಎಲ್ಲವೂ ಸರಿಯಾಗಿಯೇ ಇತ್ತು...
ಸ್ವಲ್ಪ ಎಡವಟ್ಟಾಗಿದ್ದು ತೀರಾ ಇತ್ತೀಚೆಗೆ.....


ನಮ್ಮ ಆಫೀಸಿಗೆ ಹೊಸದಾಗಿ ಒಬ್ಬಳು ಹುಡುಗಿ ಬಂದಿದ್ದಾಳೆ..
ಬಹಳ..
ಬಹಳ ಚಂದ ಇದ್ದಾಳೆ..

ಮದುವೆಯಾಗಿ ತುಂಬು ಸಂಸಾರ ನಡೆಸುತ್ತಿರುವ ನಾನು ಅವಳನ್ನು ನೋಡುವದು ತಪ್ಪು ಅಂತೀರಾ..?

ಚಂದವನ್ನು ಇಷ್ಟ ಪಡದ ಮನಸು ಯಾವುದಿಲ್ಲ ಹೇಳಿ..?

ಸಹಜವಾಗಿ ನೋಡಿದೆ... ಮಾತುಕತೆ ಆಯಿತು..

ಸ್ವಲ್ಪ ಸಲುಗೆಯೂ ಆಯಿತು... ಒಂದುದಿನ  ಟೀ ಕುಡಿಯಲೂ ಒಟ್ಟಿಗೆ ಹೋದೆವು...

ಇದಕ್ಕೆಲ್ಲ ಅಪಾರ್ಥ ಭಾವಿಸುವದು ಬೇಡ.. ಎಲ್ಲ ಸ್ನೇಹಿತರಂತೆ ಹೋಗಿ ಹರಟಿದೆವು...

ಅವಳೇ ಮಾತಿಗೆ ಶುರುಮಾಡಿದಳು..

"ನೋಡಿ.. ನಾನು ಒಬ್ಬ  ಡೈವೋರ್ಸಿ... ಸ್ವಲ್ಪ ಬಿಂದಾಸ್ ಸ್ವಭಾವ ನನ್ನದು..
 ನನಗೆ ಮದುವೆಯ ಬಂಧನ ಇಷ್ಟವಾಗಲಿಲ್ಲ...
ನನ್ನ  ಸ್ವಭಾವ ನನ್ನ ಗಂಡನಿಗೂ ಇಷ್ಟವಾಗಲಿಲ್ಲ..
ಇಬ್ಬರೂ ಮಾತಾಡಿಕೊಂಡು  ವಿಚ್ಛೇಧನ ಪಡೆದು ಕೊಂಡೆವು..."


"ಹೌದಾ..!!  ನನಗೆ ನಂಬಲಿಕ್ಕೆ  ಆಗ್ತಿಲ್ಲಾ..."


"ನಾನು ನೇರವಾಗಿ ಮಾತನಾಡುತ್ತೇನೆ.
ನೀವು ಬೇಸರ ಪಟ್ಟುಕೊಳ್ಳುವದಿಲ್ಲ ಅಂದರೆ ನಿಮ್ಮ  ಹತ್ತಿರ ಒಂದು ವಿಷಯ ಕೇಳಬೇಕಿತ್ತು.."


"ಕೇಳಿ... ನಾನು ಬೇಸರ ಪಟ್ಟು ಕೊಳ್ಳುವದಿಲ್ಲ"


" ನನಗೆ ನೀವು ಬಹಳ ಇಷ್ಟವಾಗಿದ್ದೀರಿ..
ಅದಕ್ಕೆ ಪ್ರೀತಿ, ಪ್ರೇಮ ಅಂತ ಬಣ್ಣ ಬಳಿಯುವದಿಲ್ಲ..
ನೀವು ನನ್ನನ್ನು ಎಂಜಾಯ್ ಮಾಡ ಬಹುದು..
ನನ್ನಿಂದ ನಿಮಗೆ ಯಾವುದೇ ಬಂಧನದ ತೊಡಕು ಆಗುವದಿಲ್ಲ...
ಎಲ್ಲಿಯೂ ಹೆಸರು ಹಾಳಾಗಂತೆ ನೋಡಿಕೊಂಡು ಮುದುವರೆಯುವ ..
ನಾನು ನಿಮ್ಮ  ಸಂಸಾರದಲ್ಲಿ  ತೊಂದರೆ ಮಾಡುವದಿಲ್ಲ...
ಆಗ ಬಹುದಾ...?"


ನಾನು ಅವಕ್ಕಾದೆ...!!!
ಇಷ್ಟು ಧೈರ್ಯವಾಗಿ.. ನೇರವಾಗಿ ಒಬ್ಬ ಚಂದದ ಹೆಣ್ಣು ಕೇಳುತ್ತಿದ್ದಾಳೆ ಅಂದರೆ..??


" ನೋಡಿ .. ನಾನು ಅಂಥವನಲ್ಲ...
ನಾನು ನನ್ನ ಹೆಂಡತಿಯಿಂದ ಎಲ್ಲರಿತಿಯಿಂದಲೂ ಸಂತೋಷವಾಗಿರುವೆ..
ಒಳ್ಳೆಯ ಹೆಂಡತಿ.. ಚಂದದ ಮಕ್ಕಳು..

ವಿ ಅರ್ ಹ್ಯಾಪಿ..."


" ನೀವು ಸಂತೋಷವಾಗಿ ನಿಮ್ಮ ಕುಟುಂಬದೊಂದಿಗೆ ಇರಿ..
ನನ್ನಿಂದ ನಿಮ್ಮ  ಸಂಸಾರದಿಂದ ಯಾವ ತೊಂದರೆಯೂ ಆಗುವದಿಲ್ಲ..
ಇಂಥಹದೊಂದು ಸಂಬಂಧ ಹೊಸ ಥ್ರಿಲ್ ಕೊಡುತ್ತದೆ..
ಹೊಸ ಉತ್ಸಾಹ ಕೊಡುತ್ತದೆ..
ನಾನು ಮಾನಗೆಟ್ಟವಳು... ಅಂದು ಕೊಳ್ಳ ಬೇಡಿ..

ನನಗೆ ಹಣದ ತೊಂದರೆಯಿಲ್ಲ.. ನಿಮ್ಮಿಂದ ಹಣ ಕೇಳುವದಿಲ್ಲ.
ನನಗೆ ಈ ಮದುವೆಯ ಬಂಧನ ಇಷ್ಟವಿಲ್ಲ..

ನಾನು ನಿಮ್ಮ ಕಣ್ಣುಗಳಲ್ಲಿ ನನ್ನ ಬಗ್ಗೆ ಆಸಕ್ತಿಯನ್ನು ಕಂಡೆ..
ಅದಕ್ಕೇ ಕೇಳಿದೆ..

ದಯವಿಟ್ಟು ಬೇಸರ ಪಟ್ಟುಕೊಳ್ಳ ಬೇಡಿ..
ಮನೆ ಊಟ ಚೆನ್ನಾಗಿಯೇ ಇರುತ್ತದೆ... ಮಧ್ಯದಲ್ಲಿ ಹೊಟೆಲ್ಲಿನ ಊಟದ ಆಸೆಯಾಗುವದಿಲ್ಲವೆ.. ಹಾಗೆ.."


" ಕ್ಷಮಿಸಿ..

ನಾನು ನಿಮಗೆ ಗೆಳೆಯನಾಗಿ ಇರಬಲ್ಲೆ..
ದಿನದ ಇಪ್ಪತ್ತು ನಾಲ್ಕು ಗಂಟೆ ನನ್ನ ಬಗೆಗೆ ಚಿಂತೆ ಮಾಡುವ ನನ್ನ ಮಡದಿಗೆ ಮೋಸ ಮಾಡಲು ಮನ ಒಪ್ಪುವದಿಲ್ಲ..
ದಯವಿಟ್ಟು ಕ್ಷಮಿಸಿ"


" ನೋಡಿ  ಮಾನಸಿಕವಾಗಿ ಎಲ್ಲರೂ ವ್ಯಭಿಚಾರರೇ...
ಆಹಾರ.. ನಿದ್ರಾ .. ಮೈಥುನ... ತುಂಬಾ  ಸಹಜ..
ಇವೆಲ್ಲ  ದೈಹಿಕ ಅಗತ್ಯಗಳು...

ಇದಕ್ಕೆ ತೀರಾ ಮಹತ್ವ ಕೊಡುವ ಅಗತ್ಯವಿಲ್ಲ ಎನ್ನುವದು ನನ್ನ  ಭಾವನೆ..
ನಿಮಗೆ ತೊಂದರೆ ಆಗುವದ್ದಿದ್ದರೆ ನನ್ನಿಂದ.
ನಾನು ಏನೂ ತೊಂದರೆ ಕೊಡುವದಿಲ್ಲ.
ನಿಮ್ಮ  ಮಡದಿ ನೋಡಲಿಕ್ಕೆ  ಚಂದವಾಗಿದ್ದಾಳಾ...?"


" ನನ್ನ ಹೆಂಡತಿ  ಚಂದವಿಲ್ಲ...

ಅವಳು ಅಂದವಿಲ್ಲ ಅಂತ
ನನಗೆ ಇದುವರೆಗೆ ಅನ್ನಿಸಿಯೇ ಇಲ್ಲ...
ಚಂದದ ರೂಪವಿದ್ದು ... ಹೊಂದಿಕೊಲ್ಲಲಾಗದ ಸ್ವಭಾವಕ್ಕಿಂತ ..
ನನ್ನ ಸ್ಥಿತಿ  ಮೇಲೆಂದು ನನಗನ್ನಿಸುತ್ತದೆ...
ರುಚಿಯಾಗಿ ಅಡುಗೆ ಮಾಡುತ್ತಾಳೆ..
ನನ್ನ ಎಲ್ಲ ಬೇಕು, ಬೇಡಗಳು  ಚೆನ್ನಾಗಿ ಗೊತ್ತು..
ನನ್ನ ತಲೆಯೊಳಗಿನ ವಿಚಾರವನ್ನು ತನ್ನ ಬಾಯಲ್ಲಿ ಹೇಳಿಬಿಡುತ್ತಾಳೆ..
ಅವಳು ನನ್ನ ಮಡದಿ ಅನ್ನುವದಕ್ಕಿಂತ..
ಅವಳು ನನ್ನ ಆತ್ಮೀಯ ಗೆಳೆಯ..

ನನ್ನ  ಬೆಸ್ಟ್ ಫ್ರೆಂಡ್..
ಚಂದವೊಂದೆ ಅಲ್ಲವಲ್ಲ ಜೀವನದಲ್ಲಿ..
ಅವಳು ಚಂದವಿಲ್ಲ ಎಂದು ನನಗೆ ಅನ್ನಿಸಿಯೇ ಇಲ್ಲ..
ಅವಳೊಂದು  ಆದರ್ಶ ಮಡದಿ.. "

"ಹೌದಾ...? ಅವರನ್ನು ನಾನೊಮ್ಮೆ ಭೇಟಿಯಾಗಬೇಕಲ್ಲ...!"

" ಖಂಡಿತ  ಬನ್ನಿ... ನಾಳೆ ಭಾನುವಾರ .. ಊಟಕ್ಕೇ ಬನ್ನಿ.."

ಅವಳು ನನ್ನ ಆಮಂತ್ರಣಕ್ಕೆ ಒಪ್ಪಿದಳು..

ನಾನು ಮನೆಗೆ ಬಂದು ನನ್ನ ಮಡದಿಗೆ ಹೇಳಿದೆ..

" ನಾಳೆ ಭಾನುವಾರ ನಮ್ಮನೆಗೆ ನಮ್ಮ ಆಫೀಸಿನ ಮಹಿಳೆಯೊಬ್ಬರು ಬರುತ್ತಾರೆ..
ಊಟಕ್ಕೆ ಬರುತ್ತಾರೆ... ನಿನ್ನ  ಕೈ ಅಡುಗೆಯ ರುಚಿ ನೋಡಲು"

ನನ್ನಾಕೆಗೂ ಖುಷಿಯಾಯಿತು..ಮನೆಗೆ ಅಥಿತಿಗಳು ಬರುತ್ತಾರೆಂದರೆ ಅವಳಿಗೂ ಇಷ್ಟ...

ಮರುದಿನ ಹತ್ತು ಗಂಟೆಗೆ  ಬೆಡಗಿ ನಮ್ಮನೆಗೆ ಬಂದೇ ಬಿಟ್ಟಳು...
ನಾನು ಸ್ವಾಗತಿಸಿದೆ...

ನನ್ನಾಕೆಯನ್ನು ಕರೆದು ಪರಿಚಯಿಸಿದೆ...

ನಾನು  ಅವಳನ್ನೊಮ್ಮೆ..

ನನ್ನಾಕೆಯನ್ನೊಮ್ಮೆ ಅವಲೋಕಿಸಿದೆ...

ಇವತ್ತು ಬೆಡಗಿ ಬಹಳ ಚಂದವಾಗಿ ಶೃಂಗರಿಸಿಕೊಂಡು ಬಂದಿದ್ದಳು...

ಬಹಳ ಪುರುಸೊತ್ತಿನಿಂದ ದೇವರು ಅವಳನ್ನು ಮಾಡಿದ್ದ ಅನಿಸುತ್ತದೆ..
ಕಣ್ಣು.. ಗಲ್ಲ.. ಮೂಗು ಎಲ್ಲವೂ ಒಪ್ಪವಾಗಿದ್ದವು...

ಹೆಣ್ಣಿನ ಕೆನ್ನೆಯೂ ಇಷ್ಟೊಂದು  ಸುಂದರ ವಾಗಿರುತ್ತದೆ.. ಅಂತ ಗೊತ್ತಿರಲಿಲ್ಲ..

ನಾನು ಅವಳ ತುಟಿಯನ್ನೇ ಗಮನಿಸುತ್ತಿದ್ದೆ...

ಇಷ್ಟೆಲ್ಲ ಚಂದವನ್ನು ಗಮನಿಸುತ್ತಿರುವದು ನಾನು ಇದೇ  ಮೊದಲಾ...?

ಹೆಣ್ಣಿಗೆ ತನ್ನ ಚಂದವನ್ನು ಯಾರಾದರೂ ನೋಡುತ್ತಿದ್ದರೆ ಅದು ಮೊದಲು ಅವಳಿಗೆ ಗೊತ್ತಾಗಿ ಬಿಡುತ್ತದೆ...!
ಬೆಡಗಿ ಮಾತಿಗೆ ಶುರು ಮಾಡಿದಳು..

" ಸರ್ ನಿಮ್ಮನೆ ತುಂಬಾ  ಚೆನ್ನಾಗಿದೆ..
ಎಲ್ಲಕಡೆ  ನಿಮ್ಮಾಕೆಯ  ಕೈ ಕುಶಲತೆ ಎದ್ದು ಕಾಣುತ್ತದೆ..
ನಿಮ್ಮಾಕೆಯ  ಕಲೆಗೆ ನಾನು ಫ್ಯಾನ್ ಆಗಿಬಿಟ್ಟಿದ್ದೇನೆ"

ನನಗೆ ಅಷ್ಟಾಗಿ ಖುಷಿಯಾಗಲಿಲ್ಲ..

ನಮ್ಮನೆಗೆ ಬಂದ ಎಲ್ಲರೂ ಇದೇ ಮಾತು ಹೇಳುತ್ತಾರೆ..

ನಮ್ಮ ಮದುವೆಯ ಅಲ್ಬಮ್ ನೋಡಿದಳು..

"ನಿಮ್ಮನ್ನು ನೋಡಿದರೆ.. ಅಮಿರ್ ಖಾನ್ ನೆನಪಾಗುತ್ತಾನೆ ..
ಅವನ ಸಭ್ಯತೆ.. ಮೃದು ಮಾತು...

ಮಾತಾಡುವ ರೀತಿ  ಎಲ್ಲರಿಗೂ ಇಷ್ಟವಾಗಿಬಿಡುತ್ತದೆ..
ನೀವು ಅವನ ಥರಹವೇ.. ಇದ್ದಿರಿ..."

ಮೆಚ್ಚುಗೆ ಸೂಸಿದಳು... ನನಗೆ ಒಂಥರಾ  ಖುಷಿಯಾಯಿತು..

ಊಟವೂ ಆಯಿತು...
ನನ್ನಾಕೆ ಬಹಳ ಸೊಗಸಾಗಿ ಅಡುಗೆ ಮಾಡಿದ್ದಳು...
ಬಾಯಿ ಚಪ್ಪರಿಸುತ್ತ ತಿಂದಳು.. ಆ  ಬೆಡಗಿ...

ಊಟವಾದ ಮೇಲೆ  ಮಸಾಲೆ ಹಾಕಿದ ಅಡಿಕೆ ಪುಡಿಯನ್ನು ತಂದು ಕೊಟ್ಟಳು ನನ್ನಾಕೆ...

"ರಿ... ನೀವು ಸೊಗಸಾಗಿ ಹಾಡುತ್ತೀರಂತೆ.. ಒಂದು ಹಾಡು ಹೇಳಿ.. ಪ್ಲೀಸ್"

ನನ್ನಾಕೆಗೆ ಹಾಡುವದೆಂದರೆ ತುಂಬಾ  ಖುಷಿ...

"ಹಾಡು ..  ...

ಹಾಡು.. ಹಳೆಯದಾದರೇನು...?
ಭಾವ ನವನೀನ...!!..."

ಬೆಡಗಿಗೆ ಬಹಳ ಖುಷಿಯಾಯಿತು...
" ನಿಮ್ಮ  ಯಜಮಾನರು ನನ್ನ  ಬಳಿ ನಿಮ್ಮ ಬಗ್ಗೆ  ಹೊಗಳಿದ್ದರು..

ನಿಜ ಹೇಳ ಬೇಕೆಂದರೆ ಅವರು ನಿಮ್ಮ  ಬಗ್ಗೆ ಹೇಳಿದ್ದು ಕಡಿಮೆ..
ನಿಮ್ಮ  ಚಟುವಟಿಕೆ.. ಹಾಡು.. ಕಲೆ.. ಎಲ್ಲನೋಡಿ..
ನಾನು ನಿಮ್ಮ  ಫ್ಯಾನ್  ಆಗಿಬಿಟ್ಟಿದ್ದೇನೆ.."

ನನ್ನಾಕೆ  ಮುಗುಳು ನಕ್ಕಳು..

ನಾನು ನನ್ನಾಕೆಯನ್ನೊಮ್ಮೆ ನೋಡಿದೆ...

" ಸ್ವಲ್ಪವಾದರೂ  ಚಂದ  ಇರಬಹುದಾಗಿತ್ತು....
ನನ್ನಾಕೆ...!
ಹೌದು ... ಸ್ವಲ್ಪ  ಅಂದವಾಗಿರ ಬೇಕಿತ್ತು...!!"

ಬೆಡಗಿ  ಸ್ವಲ್ಪ ಹೊತ್ತಿನ  ನಂತರ ಹೊರಟುಬಿಟ್ಟಳು...

ನನ್ನಾಕೆ ನನ್ನ ಪಕ್ಕದಲ್ಲಿ ಕುಳಿತು ಕೊಂಡಳು..

"ರಿ... ಇವತ್ತು ಒಂದು ಹೊಸ ಹಾಡು ನೆನಪಾಯಿತು.. ಹಾಡಲಾ...?"

ನಾನು ನನ್ನಾಕೆ ಕಡೆ ನೋಡಲಿಲ್ಲ...


"ಬೇಡ ಕಣೆ.. ನಾಳೆ ಕೇಳ್ತೀನಿ.. ಈಗ ಸ್ವಲ್ಪ ಹೊತ್ತು ಮಲುಗುತ್ತೇನೆ.."

ದಾಂಪತ್ಯ ಜೀವನದಲ್ಲಿ ಮೊದಲ ಬಾರಿಗೆ  ನನ್ನಾಕೆಯ ಹಾಡು ಕೇಳುವದಿಲ್ಲವೆಂದು ಹೇಳಿದ್ದೆ....

ನನ್ನ ತಲೆಯ ತುಂಬಾ.. ಆ  ಬೆಡಗಿಯ ರೂಪ...
ಅವಳ ಬಿಂದಾಸ್ ಮಾತುಗಳು...

ಅವಳ ಚಂದದ ಮುಖ.. ಆವರಿಸಿಕೊಂಡುಬಿಟ್ಟಿತು..!!

ತಪ್ಪಲ್ಲವಾ ...ನಾನು ಮಾಡುತ್ತಿರುವದು...?

ಹೌದು... ಅಂತ ಎಲ್ಲೋ ಒಂದು ಮೂಲೆಯಲ್ಲಿ ಸಣ್ಣ ಧ್ವನಿಯಲ್ಲಿ ಅಂತರಾತ್ಮ ಹೇಳುತ್ತಿತ್ತು...
ಅದನ್ನು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ..

ಎರಡು ಮೂರು ದಿನ ಇದೇ  ಚಿಂತೆಯಲ್ಲಿ ಕಳೆದೆ...

ಆಫಿಸಿನಲ್ಲಿ ನನ್ನ ಎದುರಿನ ಟೇಬಲ್ಲಿನ ಮೇಲೆಯೇ ಕುಳಿತುಕೊಳ್ಳುತ್ತಾಳೆ..
ಅವಳನ್ನು ಕಣ್ಣುತುಂಬಾ ತುಂಬಿಸಿಕೊಳ್ಳುತ್ತಿದ್ದೆ...

ಸರಿ.. ನಿರ್ಧಾರ ಮಾಡಿಯೇಬಿಟ್ಟೆ..!!

ಒಮ್ಮೆ ...!!
ಒಮ್ಮೇ ...ಮಾತ್ರ "ಆ ಚಂದ ಏನಿರುತ್ತದೆ..?" ನೋಡಿಯೇ ಬಿಡೋಣ...  
ಅನುಭವಿಸಿಯೇ.. ಬಿಡೋಣ...!
ಮತ್ತೆ ಮತ್ತೆ  ಹೋಗದಿದ್ದರಾಯಿತು...!!

ಜೀವನದಲ್ಲಿ ಒಮ್ಮೆ ಮಾತ್ರ ಅನುಭವಿಸಿ..
ಆಮೇಲೆ  ಹೆಂಡತಿಗೆ ಗಂಡನಾಗಿ ಇದ್ದುಬಿಡೋಣ  ಅಂದುಕೊಂಡೆ...
ಇದು  ತಪ್ಪಲ್ಲ... ಯಾರಿಗೂ ಹೇಳದೆ  ಸುಮ್ಮನಿದ್ದರಾಯಿತು.. ಅಷ್ಟೇ...!

ಬೆಡಗಿ  ಹೇಳಿದ್ದಳು..

"ನಿಮಗೆ  ನಾನು ಬೇಕೆನಿಸಿದಾಗ ಯಾವ ಮುಜುಗರವಿಲ್ಲದೇ ನೇರವಾಗಿ ನನಗೆ ಫೋನ್ ಮಾಡಿ,,
ನಿಮಗೆ ನಾನು ಸ್ವಾಗತಿಸುವೆ..!!"

ನಾನು ಫೋನ್ ಮಾಡಿದೆ...
ಎದೆ ಹೊಡೆದು ಕೊಳ್ಳುತ್ತಿತ್ತು...
ಧ್ವನಿಕಂಪಿಸುತ್ತಿತ್ತು..

"ನೋಡಿ... ನಾನು.. ನಿಮ್ಮನೆಗೆ  ಬರ ಬೇಕೆಂದು ನಿರ್ಧಾರ ಮಾಡಿರುವೆ.. ಬರಲಾ...?"

"ಹೌದಾ...??!! 
ಓಕೆ... ನಾಳೆ ಬರ್ತೀರಾ...?"

ನಾನು ಆಯಿತೆಂದೆ..

ಈ ನಾಳೆ ಯಾವಗ ಇಂದು ಆಗುತ್ತದೆ...!? ಇಂದು ಯಾವಾಗ ಈಗ ಆಗುತ್ತದೆ...??
ಹೊತ್ತು ಹೋಗುವದಿಲ್ಲ.. ಕಾಯುವದು ಬಹಳ ಕಷ್ಟ..

ಮರುದಿನ ಸ್ವಲ್ಪ ಜಲ್ದಿಯೇ ಆಫಿಸಿಗೆ ಬಂದೆ...

ಅವಳು ಬಂದಿರಲಿಲ್ಲ.....!! 
ಮನೆಯಲ್ಲಿ ನನಗಾಗಿ ಕಾಯುತ್ತಿರ ಬಹುದಾ...??
ನನಗೆ ಆಸೆ ಮತ್ತೆ ಗರಿಗೆದರಿತು...!
ಅವಳು ಒಬ್ಬಳೇ ಇರುತ್ತಾಳಲ್ಲ...!!!

ಅವಳಿಗೆ ಫೋನ್ ಮಾಡಿದೆ...

" ನಾನು ಈಗಲೇ ...ಬರಲಾ...? "

"ಬೇಡ ಪ್ಲೀಸ್...
ನಾನು ಸ್ವಲ್ಪ  ತಯಾರಿ ಮಾಡಿಕೊಳ್ಳುತ್ತಿರುವೆ..
ಸಾಯಂಕಾಲ ಬನ್ನಿ.. ಆಫಿಸ್ ಬಿಟ್ಟ ಮೇಲೆ...
ಬೇಸರ ಪಟ್ಟುಕೊಳ್ಳ ಬೇಡಿ..ಪ್ಲೀಸ್.."

ನನ್ನ ಚಡ ಪಡಿಕೆ ಜಾಸ್ತಿಯಾಯಿತು...

ಮನೆಯಿಂದ  ಆಗಾಗ ನನ್ನಾಕೆಯ ಫೋನ್ ಬರುತ್ತಿತ್ತು...
ಇದಕ್ಕೂ ಮೊದಲು ಬಹಳ ಖುಷಿಯಾಗುತ್ತಿತ್ತು..
ಈಗ ಅದು ಹಿಂಸೆಯಾಗುತ್ತಿತ್ತು...

ಸಾಯಂಕಾಲ ಆಫೀಸ್ ಬಿಟ್ಟಿತು.. ಶರವೇಗದಲ್ಲಿ ಅವಳ ಮನೆಯ ಮುಂದೆ ಬಂದಿದ್ದೆ...

ಒಂಥರಾ... ನರ್ವಸ್  ಆಗಿದ್ದೆ...!
ಹೆಂಡತಿ ಬಿಟ್ಟು ಬೇರೆ ಕಡೆ ನೋಡಿಲ್ಲ...!
ಹೊಸ ಅನುಭವ...!
ಹೆದರಿಕೆ.. !
ಹಿಂಜರಿಕೆ...!
ಕಾತುರ....!! ನಡುಗುವ ಕೈಯಿಂದ ಬಾಗಿಲು ತಟ್ಟಿದೆ....

ಬಾಗಿಲು ತೆರೆದಳು...
ಎಷ್ಟು ಚಂದವಾಗಿದ್ದಾಳೆ ಈ ಬೆಡಗಿ...!!
ವಾಹ್...!!
ಮನದ ತುಂಬಾ  ಹೆದರಿಕೆ ಇದ್ದರೂ ಪೇಲವ ನಗೆ ನಕ್ಕೆ...

ನಾನು ಮಾಡುತ್ತಿರುವದು ತಪ್ಪಲ್ಲವಾ...?
ಇಂಥಹ ಸಮದಲ್ಲೇ ಅದೆಲ್ಲ ಯಾಕೆ..??

"ಬನ್ನಿ.. !!

ಬನ್ನಿ.. !!!
ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು..!!.."
ಒಳಗೆ ಕರೆದು ಕೊಂಡು ಹೋದಳು...

" ವಿಶ್ವನಾಥ... ಬನ್ನಿ... ಇಲ್ಲಿ.."
ಯರನ್ನೋ ಕರೆದಳು...!!

ಆ ಮನುಷ್ಯ ಬಂದ...

" ನೋಡಿ  ಇವರು.. ಮತ್ತು.. ಇವರ ಮಡದಿ ನನ್ನಲ್ಲಿ ಹೊಸ ಭರವಸೆ.. ಆಸೆ ಹುಟ್ಟಿಸಿದರು...
ಮದುವೆ ಬಾಂಧವ್ಯದಲ್ಲಿ ನನಗೆ ಭರವಸೆಯೇ ಇರಲಿಲ್ಲವಾಗಿತ್ತು..
ವಿಶ್ವ... ಇವರ ಫ್ಯಾಮಿಲಿಯನ್ನು ನಾವೊಮ್ಮೆ ನೋಡ ಬೇಕು...!
ಬಹಳ ಚಂದದ ಸಂಸಾರ..!!

ಎಷ್ಟು   ಆದರ್ಶ ಸಂಸಾರ...!!
ಒಳ್ಳೆಯ  ಸಂಸಾರಕ್ಕೆ ಚಂದದ ಅವಶ್ಯಕತೆ ಇಲ್ಲ...!!

 
ಎನ್ನುತ್ತಾ  ಆಕೆ ನನ್ನೆಡೆಗೆ ತಿರುಗಿದಳು...


"ನೋಡಿ...
ಇವರನ್ನು ಪರಿಚಯಿಸುವದನ್ನು ಮರೆತು ಬಿಟ್ಟೆ...
ಇವರು ವಿಶ್ವನಾಥ..!

ನನಗಾಗಿ ಹಲವಾರು ವರ್ಷಗಳಿಂದ ಮದುವೆಯಾಗಲು ಕಾಯುತ್ತಿದ್ದರು..
ನಿಮ್ಮನ್ನು.., ನಿಮ್ಮ..

 ಫ್ಯಾಮಿಲಿಯನ್ನು ನೋಡಿದ ಮೇಲೆ  ಮತ್ತೆ ಮದುವೆಯಾಗಲು ನಿರ್ಧರಿಸಿದೆ...!!

ನಿಮಗೆ ನನ್ನ ಕೃತಜ್ಞತೆಗಳು...!!
ನಿಮ್ಮ  ಚಂದದ ಸಂಸಾರಕ್ಕೆ ನನ್ನ  ಅಭಿನಂದನೆಗಳು...!!
ನಿಮ್ಮಿಬ್ಬರ ಹೊಂದಾಣಿಕೆ  ಎಲ್ಲರಿಗೂ ಆದರ್ಶ..!!
ನಿಮ್ಮ ಸಂಸಾರಕ್ಕೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ..."



" ಪ್ರೀತಿಯ ಓದುಗರೇ..
ಹೊಸ ವರ್ಷದ ಶುಭಾಶಯಗಳು..."

(ಇದು  ಕಥೆ...)

79 comments:

ಸುಪ್ತವರ್ಣ said...

ಅಂತೂ ಬೇಲಿ ಭದ್ರವಾಗಿದೆ ಅಂತಾಯ್ತು! ಕಥೆ ಚೆನ್ನಾಗಿದೆ!

Ittigecement said...

ಸುಪ್ತವರ್ಣ....

ಕಥೆಯಲ್ಲಿನ ಒಳತೋಟಿಯೇ ಹಾಗೆ...!
ಇದಕ್ಕೆ ಏನನ್ನಬೇಕು...?
ಗೊತ್ತಾಗುತ್ತಿಲ್ಲ....

ಆತ ಅವಳ ಮಾತಿನಿಂದ ಪ್ರಚೋದನೆಯಾಗಿ... ಕೆಟ್ಟ ಯೋಚನೆಗೆ ಬಿದ್ದಿದ್ದ...!

ಈಕೆ ಈತನ ಸಂಸಾರ ನೋಡಿ ಒಳ್ಳೆಯ ದಾರಿ ಹಿಡಿದಿದ್ದಳು...!

ಕೆಲವು ಸಂದರ್ಭಗಳೇ ಹಾಗಿರುತ್ತವೆ...
ಕೆಟ್ಟಯೋಚನೆಗಳು..
ಹೊಂದಿಕೆಯಾಗದೆ... ಸರಿ ದಾರಿ ಹಿಡಿದು ಬಿಡುತ್ತದೆ...!!

ಹೊಸ ಪ್ರಯೋಗ ಮಾಡಲು ನಿಮ್ಮ ಪ್ರತಿಕ್ರಿಯೆ ಉತ್ತೇಜನಕವಾಗಿದೆ...

ಧನ್ಯವಾದಗಳು ಸುಪ್ತವರ್ಣ...!!

Me, Myself & I said...

ಪಕ್ಕಣ್ಣ (ತುಂಬಾ ಸಲಿಗೆ ತಗಂಡು ಹೆಸರು ಚಿಕ್ಕದು ಮಾಡಿದ್ದಕ್ಕೆ ಬೇಸರವಾದರೆ ಕ್ಷಮಿಸಿ.),

ಈ ಲೇಖನವನ್ನ ಒದ್ತಾ ನನಗೆ ಎಡಕಲ್ಲಿ ಗುಡ್ಡದ್ದ ಮೇಲೆ ಚಿತ್ರದ ತುಣುಕುಗಳು ಜ್ಞಾಪ್ಕಾ ಬಂತು ನೋಡ್ರಿ. ಅಂತೂ ನೀವು ಕಳ್ಳ ಸನ್ಯಾಸಿ ಆಗ್ಲಿಲ್ಲ..ಸತ್ಯ ಸನ್ಯಾಸಿ :)

ಸ್ವಲ್ಪ ಒತ್ತಡಗಳಿಂದ ನಿಮ್ಮ ಬ್ಲಾಗ್ನಲ್ಲಿ ಪ್ರತಿಕ್ರಿಯೆ ಕೊಟ್ಟಿಲ್ಲ, ಆದ್ರೆ ಎಂದಿನಂತೆ ಒದ್ತಾ ಇದ್ದೀನಿ.

Ittigecement said...

ಲೋದ್ಯಾಶಿಯವರೆ....

ಇದು ಕಥೆ ಮಾರಾಯ್ರೆ...!!

ಇದು ನಾನು ಬರೆದ ಎರಡನೆಯ ಕಥೆ....

ಇಲ್ಲಿ "ನಾನು" ಅನ್ನುವವ ಕಥೆಯ ಒಂದು ಪಾತ್ರ...!

ಕೆಲವು ಸಂದರ್ಭಗಳಲ್ಲಿ ಕೆಟ್ಟ ಆಲೋಚನೆಗಳು.....
ವಿಚಾರಗಳು ಪ್ರಕಟವಾಗದೆ..

ಒಳ್ಳೆಯದಾಗಿ ಇದ್ದು ಬಿಡುತ್ತವೆ... ಅಲ್ಲವಾ?

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ದಿನಕರ ಮೊಗೇರ said...

ಪ್ರಕಾಶಣ್ಣ,
ಸಕತ್ತಾಗಿದೆ.......... ಕಥೆ..... ಕಥೆಯಲ್ಲಿನ ಪಾತ್ರ............ ನಿಜ ಜೀವೆನದಲ್ಲೂ ಇಂಥವೇ ಪಾತ್ರ ಇರುತ್ತವೆ...... ಆದರೆ ಹೇಳೋ ಧೈರ್ಯ ಇರಲ್ಲ ಅಷ್ಟೇ........ ಸುಖ ಬಯಸೋರು, ಬೇರೊಂದು ಹೆಸರಲ್ಲಿ ಕೇಳ್ತಾರೆ.......... ಸುಖ ಪಡೆಯೋರೂ ಸಹ ಬೇರೊಂದು ಹೆಸರಲ್ಲಿ ಪಡೀತಾರೆ ಅಷ್ಟೇ........... ಅಂತೂ ಇಂತೂ ಕೊನೆಯಲ್ಲಿ ಇಬ್ಬರ ಮಾನ ಉಳಿಸಿದ್ದು ಖುಷಿ ತಂದಿತು.......... ನಿಮ್ಮ ಬರವಣಿಗೆಯ ಶೈಲಿ as usual superb ............

Ittigecement said...

ದಿನಕರ....

ಈ ಕಥೆಯನ್ನು ಮೊದಲು ಕೇಳಿದ ನನ್ನಾಕೆ
" ಇದು ಕಥೆ ಅಂತ ಬರೆಯಿರಿ.. ಓದುಗರಿಗೆ ಅಪಾರ್ಥವಾಗಿಬಿಡುತ್ತದೆ" ಅಂದಿದ್ದರು...!!

ಮಧ್ಯಮ ವರ್ಗದ ..
ದಿನಾ ಆಫಿಸು, ಮನೆ ಮಡದಿ ಮಕ್ಕಳು ಅತಿರುವಾಗ...
ಧುತ್ತೆಂದು ಚಂದದ ಬೆಡಗಿ ಹೀಗೆ ಕೇಳಿದಾಗ ಆಗುವ ಪರಿಣಾಮ..!!

ನನ್ನ ಕಲ್ಪನೆಯ ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಮುಂದಿನ ಬಾರಿ ಸಣ್ಣ ಪತ್ತೆದಾರಿ ಕಥೆ ಬರೆಯ ಬೇಕೆಂದಿರುವೆ...

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.. ದಿನಕರ....

ಮನಸು said...

ಪ್ರಕಾಶಣ್ಣ,
ತುಂಬಾ ಚೆನ್ನಾಗಿದೆ ಕಥೆ, ವಿಭಿನ್ನ ರೀತಿಯಲ್ಲಿ ಬರೆದರೆ ವಿಶಿಷ್ಟವಾಗಿ ಮೂಡಿಬರುತ್ತದೆ ಎಂಬುದಕ್ಕೆ ನಿಮ್ಮ ಕಥೆಯೇ ಸಾಕ್ಷಿ... ಕಥೆಯ ಮುಕ್ತಾಯ ಇಷ್ಟವಾಯಿತು.

sunaath said...

ನಿಮ್ಮ ಸ್ವಂತ ಅನುಭವವನ್ನೇ ಹೇಳುತ್ತಿದ್ದೀರೇನೊ ಎಂದು ಒಂದು ಗಳಿಗೆ ಅಂಜಿಕೆಯಾಗಿತ್ತು. ಆದರೆ ನಿಮ್ಮ ಮನೆಯವರು ತುಂಬಾ ಸುಂದರವಾಗಿದ್ದಾರೆ ಎಂದು ನೀವು ಮೊದಲೊಮ್ಮೆ ಬರೆದಿದ್ದಿರಿ. So ಇದು ಕತೆ ಮಾತ್ರ ಎಂದು ತಿಳಿದುಕೊಂಡೆ ಸಮಾಧಾನವಾಯಿತು.

ಸವಿಗನಸು said...

ಪ್ರಕಾಶಣ್ಣ,
ತುಂಬಾ ಚೆಂದದ ಕಥೆ ಹಾಗೂ ನಿರೂಪಣೆ....
ಕಥೆಯ ಮುಕ್ತಾಯ ಬಹಳ ಇಷ್ಟವಾಯಿತು.....
ವಿಭಿನ್ನವಾಗಿತ್ತು.......ಮತ್ತಷ್ಟು ಬರಲಿ....

Subrahmanya said...

ಕೊನೆಯಲ್ಲಿ "ಇದು ಕಥೆ" ಎನ್ನುವುದನ್ನು ನೋಡಿದ ಮೇಲೆ ನನ್ನ ಬಗ್ಗೆ ನನಗೆ ತಮಾಷೆ ಆನ್ನಿಸಿತು. ನಾನು ನಿಮ್ಮದೇ ಅನುಭವ ಅನ್ಕೊಂಡು ಒದ್ತಾ ಇದ್ದೆ. ಭಾವನೆಗಳ ಒಳತೋಟಿಯನ್ನ ಚೆನ್ನಾಗಿ ತೆರಿದಿಟ್ಟಿದ್ದೀರಿ. ..

Ittigecement said...

ಮನಸು..

ಮನವೆಂಬ ಮರ್ಕಟ ಅಂತ ಹೇಳಿದ್ದಾರೆ...

ಎಲ್ಲದಕ್ಕೂ ನಮ್ಮ ಮನಸ್ಸೇ ಕಾರಣ ಅಂದಾಯಿತಲ್ಲ...
ಚಂದವಿಲ್ಲದ ಹುಡುಗಿ ಚಂದ ಕಾಣಿಸುತ್ತಾಳೆ.. ಅವಳ ಹಾಡಿನಿಂದಾಗಿ..!

ಆಮೇಲೆ ಅವಳ ಕುರೂಪ ಕೊರತೆಯಾಗಿ ಕಾಣುತ್ತದೆ...!

ಎಂಥಹ ವಿಚಿತ್ರ ಅಲ್ಲವಾ...?

ಈ ಪ್ರೀತಿ, ಪ್ರೇಮ ಎಲ್ಲ ಸುಳ್ಳಾ...?

ಮನುಷ್ಯ ಸ್ವಭಾವದ ಬಣ್ಣಗಳನ್ನು ತೋರಿಸುವ ಪ್ರಯತ್ನ ಈ ಕಥೆಯಲ್ಲಿ ಮಾಡಿದ್ದೇನೆ...

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ವನಿತಾ / Vanitha said...

:-)

VENU VINOD said...

ಪ್ರಕಾಶಣ್ಣ ಕಥೆ ಸೂಪರ‍್...ಕಥೆ ಅನ್ನೋದು ಮೊದಲೇ ಗೊತ್ತಾಗಿತ್ತು...ಆದರೆ ಅಂತ್ಯ ಹೇಗಿರುತ್ತದೋ ಎನ್ನುವ ಕುತೂಹಲ ಇತ್ತು. ನಿರೀಕ್ಷೆ ಉಲ್ಟಾ ಹೊಡೆಯುವ ಅಂತ್ಯ ಖುಷಿಕೊಟ್ಟಿತು..

Ittigecement said...

ಸುನಾಥ ಸರ್...

ಈ ಕಥೆ ಯಾವ ರೀತಿ ಬರೆಯ ಬೇಕು ಎನ್ನುವ ಗೊಂದಲ ನನ್ನನ್ನು ಕಾಡಿತ್ತು..
"ಇವನು, ಇವಳು ಮತ್ತು "ಆಕೆ" " ಈ ರೀತಿ..
ಪ್ರತಿಯೊಬ್ಬರೂ ತಮ್ಮ ಆತ್ಮನಿವೇದನೆ ಹೇಳುವಂತೆ ಬರೆಯೋಣ ಅಂದುಕೊಂಡೆ...

ಸ್ವಲ್ಪ ಬರೆದೆ..
ಅದು ಟ್ವೆಂಟಿ..ಟ್ವೆಂಟಿ ಮ್ಯಾಚ್ ಥರ ಅನ್ನಿಸಿತು..
ಸಣ್ಣ ಕಥೆಗಳಲ್ಲಿ ಆ ಥರಹ ಬರೆದರೆ ಪಾತ್ರ ಪೋಷಣೆ ಮಾಡುವದು ಕಷ್ಟ ಅನಿಸಿತು...

ಮನಸು ಬಹಳ ವಿಚಿತ್ರ...
ಅದು ಎಲ್ಲಿ.. ಯಾವಗ.. ಹೇಗೆ ವರ್ತಿಸುತ್ತದೆ..?
ಅದಕ್ಕೆಲ್ಲ ಕಾರಣವೂ ಇರುವದಿಲ್ಲ..
ತಾನು ಮಾಡಿದುದಕ್ಕೆ ..
ಅದು ಸರಿ ಅನ್ನುವದಕ್ಕೆ ತನ್ನದೆ ಕಾರಣಗಳನ್ನು ಹುಡುಕಿಕೊಳ್ಳುತ್ತದೆ.. ಅಲ್ಲವಾ..?

ಸರ್.. ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ರಾಜೀವ said...

<< ನೋಡಿ ಮಾನಸಿಕವಾಗಿ ಎಲ್ಲರೂ ವ್ಯಭಿಚಾರರೇ >>
ಇದು ಸತ್ಯವಾದ ಮಾತು. ಕೆಲವರನ್ನು ಸಂಸ್ಕಾರ ಕಟ್ಟುಹಾಕುತ್ತದೆ. ಕೆಲವರಿಗೆ ಲಗಾಮು ಇರುವುದಿಲ್ಲ.
ಈ ಕಥೆಯಿಂದ ಒಂದು ಸಿನೆಮಾ ತೆಗಿಯಬಹುದು ಅಲ್ಲವೇ?

ಚಿತ್ರಾ said...

ಪ್ರಕಾಶಣ್ಣ,
ನಿಮ್ಮ ಎಂದಿನ ಬರಹಗಳಿಗಿಂತ ಭಿನ್ನವಾಗಿ ಮೂಡಿ ಬಂದಿದೆ ! ಚಂದದ ಕಥೆ.
ಇಲ್ಲಿ ಆತ ಬಾವಿಯ ಅಂಚಿನವರೆಗೆ ಬಂದು .... ಕೆಳಗೆ ಬೀಳದೆ ಇದ್ದುದು .. ನಿಯತ್ತು, ಸಂಯಮ , ನಿಗ್ರಹದಿಂದ ಅನ್ನೋದಕ್ಕಿಂತ ಅದೃಷ್ಟದಿಂದ ಮಾತ್ರ ಅನ್ನೋದು ಸರಿಯಾಗಬಹುದೇನೋ !
ಒಂದು ಕ್ಷಣದ ದೌರ್ಬಲ್ಯಕ್ಕೊಳಗಾಗಿ ಆಮೇಲೆ ಜೀವನ ಪೂರ್ತಿ ಅಪರಾಧಿ ಮನೋಭಾವದಿಂದ ನರಳುವುದನ್ನು ಕಾಲವೇ ತಪ್ಪಿಸಿತೆ?
ಸರಿ- ತಪ್ಪುಗಳ ತೊಳಲಾಟವನ್ನು, ಆಸೆ- ಸಂಯಮಗಳ ತಾಕಲಾಟವನ್ನು ಸಮರ್ಥವಾಗಿ ಚಿತ್ರಿಸಿದ್ದೀರಿ.

ಸುಧೇಶ್ ಶೆಟ್ಟಿ said...

ತು೦ಬಾ ಚ೦ದದ ಕಥೆ ಪ್ರಕಾಶಣ್ಣ.... ಎರಡು ವಿರುದ್ದ ಭಾವಗಳನ್ನು ಸಮತೋಲನಗೊಳಿಸುತ್ತಾ ಕಥೆಯನ್ನು ಹೆಣೆದ ರೀತಿ ತು೦ಬಾ ಇಷ್ಟ ಆಯಿತು :)

ಪಾಚು-ಪ್ರಪಂಚ said...

ಪ್ರಕಾಶಣ್ಣ,

ಕಥೆ ತುಂಬಾ ಚನ್ನಾಗಿದೆ. ಒಂದೇ ಸಲಕ್ಕೆ ಓದಿಸಿಕೊಂಡು ಹೋಯಿತು.
ಅಷ್ಟು ಧೃಡ ಮನಸ್ಸಿನ ಆತ ಕೊನೆಗೂ ಮನಸ್ಸನ್ನು ಬದಲಾಯಿಸಲು ಆ ಮಹಿಳೆಯ ಅಂದವೇ ಕಾರಣವೇ..?

-ಪ್ರಶಾಂತ್

ಮನಮುಕ್ತಾ said...

ಕಥೆಯ ಸಾರಾ೦ಶ ಹಾಗೂ ಬರೆದ ಶೈಲಿ ತು೦ಬಾ ಚೆನ್ನಾಗಿದೆ.
ಕಥೆ ನಿಜವಲ್ಲದಿದ್ದರು, ಅದರಲ್ಲಿ ಸರಿಯಾದ ಭಾವ ತು೦ಬಿ ಬರೆದಾಗ ಅದಕ್ಕೆ ನೈಜತೆಯ ಹೊಳಪು ಬರುತ್ತದೆ. ಓದುಗರ ಮನವನ್ನು ತಟ್ಟುತ್ತದೆ. ಮೊದಲು ಬರೆದ ಕಥೆ ಓದಿ ಅತ್ತೆ ಬಿಟ್ಟೆ.
ಬರೆಯುತ್ತಿರಿ..

ಉಷಾ said...

ಕತೆ ಇಷ್ಟ ಆಯಿತು.ಉತ್ತಮ ಅಂತ್ಯ.

ಆನಂದ said...

ಕಥೆ ಚೆನ್ನಾಗಿದೆ.

Guruprasad said...

ಪ್ರಕಾಶಣ್ಣ,
ಕಥೆ ಹಾಗು ನಿಮ್ಮ ನಿರೂಪಣೆ, ತುಂಬ ಚೆನ್ನಾಗಿ ಇದೆ... ಮುಕ್ತಾಯ ತುಂಬ ಚೆನ್ನಾಗಿ ಇದೆ,,, ಹೌದು,, ಕೆಲವೊಮ್ಮೆ,, ಜೀವನದಲ್ಲಿ ಅನಿರಿಕ್ಷಿತವಾಗಿ, ಕೆಲವು turns ಬರುತ್ತವೆ,,, ಅದು ಕೆಟ್ಟದೋ ಒಳ್ಳೆಯದ್ದೋ, ಅದರಿಂದ ಕೆಡುಕು ಇದೆಯೋ ಇಲ್ಲವೋ, ಗೊತ್ತಾಗುವುದಿಲ್ಲ... ನಂಬಿಕೆ ಹಾಗು ವಿಶ್ವಾಸದಿಂದ ಎದುರಿಸಬೇಕಾಗುತ್ತದೆ.... ಹೊಸ ಪ್ರಯತ್ನ
ಚೆನ್ನಾಗಿ ಇದೆ ..
ಗುರು

Ittigecement said...

ಸವಿಗನಸು..(ಮಹೇಶ್)

ಮನಸ್ಸು ಕೆಟ್ಟ ದಾರಿ ಹಿಡಿದರೂ..
ಅದಕ್ಕೆ ಪೂರಕವಾದ ಸಮರ್ಥನೆ ಮಾಡಿಕೊಳ್ಳುತ್ತದೆ..
ಕೆಟ್ಟತನವನ್ನು ಸಮರ್ಥಿಸಿಕೊಳ್ಳುತ್ತದೆ..

ಅಂತರಾತ್ಮದ ಮಾತು ಕೇಳಲು ಇಷ್ಟ ಪಡುವದಿಲ್ಲ..

ಎಷ್ಟು ವಿಚಿತ್ರ ಅಲ್ಲವಾ..?

ದ್ವಂದ್ವಗಳ ನಡುವೆಯೇ ಬದುಕು...

ಕೆಲವೊಮ್ಮೆ ವಿವೇಕ..
ಕೆಲವೊಮ್ಮೆ ಸಂದರ್ಭ ಸರಿದಾರಿಗೆ ತರುತ್ತವೆ...

ಕಥೆ ಬರೆಯುವ ಕಷ್ಟ ಈ ಕಥೆ ಬರೆಯುವಾಗ ಗೊತ್ತಾಯಿತು...!

ಕೆಟ್ಟ ಭಾವಗಳನ್ನು..
ಸಹ್ಯವಾಗಿ ಹೇಳುವದು ಬಹಳ ಕಷ್ಟ...

ಕಥೆ ಇಷ್ಟಪಟ್ಟಿದ್ದಕ್ಕೆ
ತುಂಬಾ... ತುಂಬಾ.. ಧನ್ಯವಾದಗಳು.. ಮಹೇಶ್....

ಜಲನಯನ said...

ಪ್ರಕಾಶ್, ನಿಮ್ಮ ಕಥೆ ಓದಿ...ಹಾಡಿದ್ದು..ಸಿ. ಅಶ್ವಥ್ ರ...ಮುಕ್ತ ಮುಕ್ತ..ಮುಕ್ತ...
ನಿಮ ಮುಕ್ತ ಭಾವ ಪ್ರಕಟಣೆ...ಮಾನವ ಸಹಜಗಳ ಮುಚ್ಚುಮರೆಯಿಲ್ಲದ ವ್ಯಕ್ತಗೊಳಿಸಿ ಅನಾವರಣ ಮಾಡುವ ಲೇಕನಾ ವೈಖರಿ...!!!
ಅಂದಹಾಗೆ...ನಿಮ್ಮ ಕಥೆಯ ಪಾತ್ರಗಳಿಗೆ ಸ್ವಛ್ಛಂದತೆ ಶೋಭೆಯೆನಿಸುತ್ತೆ...ಮತ್ತೆ ನೈಜವೆನಿಸುತ್ತೆ..
ಮನಸಿನ ಓಟಕ್ಕೆ ಕಡಿವಾಣವಿರದು...ಎಷ್ಟು ಸತ್ಯವಲ್ಲ ಈ ಮಾತು??!! ಆಕರ್ಷಣೆ ಮತ್ತು ಮನಸುಗಳ ಸಂಬಂಧವನ್ನು ಎಳೆಗಳಂತೆ ಬಿಡಿಸಿದ್ದೀರಿ...
ಮತ್ತೆ ..ಆಕರ್ಷಣೆ ಸೆಳೆತಕ್ಕೆ ನಾಯಕ ಹೋದರೆ..ನಾಯಕಿ ಆಕರ್ಷಣೆ ತೊರೆದು ಮನಸಿನ ಸಂಬಂಧದತ್ತ ಹೋಗುವ ಘಟ್ಟ ಚನ್ನಾಗಿ ಮೂಡಿ ಬಂದಿದೆ.
ಚಿಕ್ಕ ಮತ್ತು ಚೊಕ್ಕ .....ನಗ್ನತೆಯ ಉಲ್ಲೇಖ...ಮನಸ್ಸಿಂದು...ಹಹಹ

Ittigecement said...

ಸುಬ್ರಮಣ್ಯರವರೆ..

ನನ್ನ ಬ್ಲಾಗಿಗೆ ಸ್ವಾಗತ...

ನನಗೆ ಹಲವಾರು ಈ ಮೇಲ್, ಫೋನ್ ಬಂದ ಮೇಲೆ "ಇದು ಕಥೆ" ಅಂತ ಬರೆದೆ...!!
ಬಹುಷಃ ಕಥೆಯನ್ನು "ನಾನು" ನಿರೂಪಕನೊಂದಿಗೆ ಬರೆದುದರಿಂದ ಗೊಂದಲ ಉಂಟಾಯಿತೇನೊ...

ಈ ಕಥೆ ಇಷ್ಟವಾಗಿದ್ದಕ್ಕೆ ತುಂಬಾ.. ತುಂಬಾ.. ಧನ್ಯವಾದಗಳು...

ಬರುತ್ತಾ ಇರಿ...

Ittigecement said...

ವನಿತಾರವರೆ...

ಈ ಕಥೆಗೆ ಹೆಣ್ಣುಮಕ್ಕಳ ಪ್ರತಿಕ್ರಿಯೆ ಕಡಿಮೆ ಇರುತ್ತದೆ ಅಂತ ನನ್ನ ಭಾವನೆಯಾಗಿತ್ತು..
ಅದನ್ನು ಹುಸಿಗೊಳಿಸಿದ್ದಕ್ಕೆ...
ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ವೇಣು....

ಮನಸ್ಸಿನ ಭಾವಗಳ..
ಅದರ ದ್ವಂದ್ವಗಳ.. ಕುರಿತ ನಿಮ್ಮ ಕವನ ತುಂಬಾ ಚೆನ್ನಾಗಿದೆ...

ನನ್ನ ಕಥೆಯಲ್ಲೂ ಅದನ್ನೇ ಹೇಳಲು ಹೊರಟಿದ್ದೆ...

ಕಥೆ ಓದಿ ಮುಗಿದ ಮೇಲೆ ಅದರ ಭಾವ ಮನಸ್ಸನ್ನು ಆವರಿಸಿಕೊಂಡರೆ ಬರೆದದ್ದು ಸಾರ್ಥಕ...

ನನ್ನ ಕಥೆಯನ್ನು ಸಮರ್ಥವಾಗಿ ಓದಿ..
ತಪ್ಪುಗಳನ್ನು ತಿದ್ದಿಕೊಟ್ಟ.."ಹಿತ್ತಲಮನೆ" ಸ್ನೇಹಿತರಿಗೆ ವಂದನೆ ಹೇಳಲೇ ಬೇಕು...

ಕೆಟ್ಟ ಭಾವಗಳನ್ನು.." ನಾನು" ನಿರೂಪಣೆ ಮಾಡುವದು ಬಹಳ ಕಷ್ಟ...

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ... ವೇಣು...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕಥೆಗಳಲ್ಲಿ ಅನಿರೀಕ್ಷಿತ ಅಂತ್ಯ ಇರಬೇಕೆ೦ಬ ರೂಲ್ ಇಲ್ವಲ್ಲಾ!
ಕಥೆಯ ನಿರೂಪಣೆ ಚೆನ್ನಾಗಿದೆ.

Ittigecement said...

ರಾಜೀವ...

"ಮಾನಸಿಕವಾಗಿ ಎಲ್ಲರೂ ವ್ಯಭಿಚಾರರು.."

ಹುಚ್ಚು ಕೋತಿಯ ಮನಸ್ಸು..
ತನ್ನ ಪ್ರೀತಿಯನ್ನು ಪಕ್ಕದಲ್ಲಿಟ್ಟುಕೊಂಡು..
ರಸ್ತೆಯಲ್ಲಿ ಹೋಗುವ ಚಂದವನ್ನು
ಬಯಸುತ್ತದೆ...

ಸಿಕ್ಕರೆ...
ತನ್ನ ಪ್ರೀತಿಯಲ್ಲೇ ಸಿಗಬೇಕು..
ಹೊರಗಡೆ
ಹುಡುಕಿದಲ್ಲಿ..
ಎಲ್ಲಿಯೂ ಸಿಗುವದಲ್ಲ..

ಎಲ್ಲವೂ ಮನಸ್ಸಿನ ಭ್ರಮೆಗಳು... ಅಲ್ಲವಾ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಚಿತ್ರಾ...

ಮರ್ಕಟ ಮನಸ್ಸು...
ಸರಿದಾರಿಗೆ ಬರುವದು
ವಿವೇಕದಿಂದ..
ತಿಳುವಳಿಕೆಯಿಂದ..
ಕೆಲವೊಮ್ಮೆ...
ತನ್ನ ಕೈ ಮೀರಿದ ಪರಿಸ್ಥಿತಿಯಿಂದ...!!

ಹೇಗೆ ಹೇಳಬೇಕೆನ್ನುವ..
ವಿಚಾರದಲ್ಲೇ..
ಸಮಯ ಕಳೆದು ಹೋಗಿ..
ಸಂಯಮ ಬಂದುಬಿಡುವ ಸಾಧ್ಯತೆಯೂ ಇದೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ಸೀತಾರಾಮ. ಕೆ. / SITARAM.K said...

ಪ್ರಕಾಶರವರೇ,
ಅಧ್ಬುತವಾದ ಕಥೆ. "ಇರುವದ ಬಿಟ್ಟು ಇರದುದರೆಡೆಗೆ ತುಡಿವದೇ ಜೀವನ"-ಅ೦ಥಾ ಅದಕ್ಕೆ ಕವಿಗಳು ಹೇಳಿರುವದು. ನೆರೆಮನೆಯ ತೋಟದ ಹೂವೇ ಸೊಗಸು ಅನ್ನುವ ಜನಕ್ಕೊ೦ದು ಒಳ್ಳೇ ನೀತಿಪಾಠ ಹೇಳಿದ್ದಿರಾ!

ಅನಂತ said...

ಚೆನ್ನಾಗಿದೆ ಸರ್ ಕಥೆ.. :)

umesh desai said...

ಹೆಗಡೇಜಿ ಹೊಸಾವರ್ಷದ ಮೊದಲ ಕತೆ ಚೆನ್ನಾಗಿದೆ.ಓದುತ್ತಿದ್ದಂತೆ ಅನೇಕ ಮಿಶ್ರಭಾವ ಮನದಲ್ಲಿ
ನಿಮ್ಮಲ್ಲಿ ಕತೆಹೇಳೋ ಅಪರೂಪದ ಶೈಲಿ ಇದೆ ಅಂತ್ಯ ತೀರ ಸಿನಿಮೀಯ ಅನಿಸ್ತು.

PARAANJAPE K.N. said...

ಪ್ರಕಾಶರೇ,
ನೀವು ಇದು "ಕಥೆ" ಎ೦ದು ಒತ್ತಿ ಹೇಳಿದ್ದೀರಿ, ಆದ್ದರಿ೦ದ ಇದು ನಿಮ್ಮ ಸ್ವಾನುಭವ ಅಲ್ಲ ಅ೦ದು ಕೊಳ್ಳುವೆ !!
ಬಹಳ ಚೆನ್ನಾದ ನಿರೂಪಣೆ ಮತ್ತು ಓದಿಸಿಕೊ೦ದು ಹೋಗುವ ಕಥನ ಶೈಲಿಯೊ೦ದಿಗೆ ಸಾದರಪದಿಸಿದ್ದೀರಿ. ಚೆನ್ನಾಗಿದೆ.

ಶಿವಪ್ರಕಾಶ್ said...

ಪ್ರಕಾಶಣ್ಣ,
Nice Twist...
ಕಥೆ ತುಂಬಾ ಚನ್ನಾಗಿ ಮೂಡಿಬಂದಿದೆ...

shravana said...

ಕಥೆ ಚೆನ್ನಾಗಿದೆ.. ಮೊದಲನೆಯ ಕಥೆ ಇನ್ನೂ ಚೆನ್ನಾಗಿ ಮೂಡಿದೆ.

Unknown said...

chennagide,tumba chennagi moodi banaide.manga manakke sayyamada kadivana hakadiddare hege vartisuttade ennuvudannu chennagi chitrisiddi.baravanige munduvariyali.shubhashayagalu.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಕಥೆ ಹೆಣೆದ ರೀತಿ,
ಓಡಿಸಿಕೊಂಡು ಹೋಗುವ ರೀತಿ ಇಷ್ಟವಾಯಿತು
ತುಂಬಾ ಚೆನ್ನಾಗಿ ಸಮಾಜದ ಸಂಭಂಧಗಳಿಗೆ ಕನ್ನಡಿ ಹಿಡಿದಂತಿದೆ ಕಥೆ
ಉತ್ತಮ ಬರಹ

Unknown said...

kathe kutoohalakariyagi gapagapane odisikondu hoguttade.muktaya marmikavagide.hats off!keshchikkayya.

Ittigecement said...
This comment has been removed by the author.
Ittigecement said...

ಸುಧೇಶ್...

ಎರಡು ಮನಸ್ಸುಗಳು..
ಸೇರುವದಕ್ಕೂ ಕಾಲ ಕೂಡಿ ಬರಬೇಕು ಅಲ್ಲವಾ...?

ಎರಡೂ ಸರಿಯಾದ ಸಮಯದಲ್ಲಿ ಪ್ರಕಟವಾಗ ಬೇಕು...

ಹಿಂದಿಯ ಒಂದು ಹಾಡು ನೆನಪಾಗುತ್ತದೆ..

"ಮಿಲ್ತಿ ಹೈ.. ಜಿಂದಗೀ ಮೆ.. ಮೊಹಬ್ಬತ್ ಕಭಿ.. ಕಭೀ..
ಹೋತಿ ಹೇ.. ದಿಲ್ ಬರೋಸೇಂ...
ಇನಾಯತ್... ಕಭೀ.. ಕಭೀ..."

ಈ ಹಾಡು ಕೇಳಿದ್ದೀರಾ...?

ಸುಧೇಶ್.. ಪ್ರತಿಕ್ರಿಯೆಗಾಗಿ ಧನ್ಯವಾದಗಳು...

Ittigecement said...

ಪಾಚು ಪ್ರಪಂಚ..(ಪ್ರಶಾಂತ್..)

ಇರುವದೆಲ್ಲವ ಬಿಟ್ಟು..
ಇರದುದೆಡೆಗೆ ತುಡಿಯುವದೇ ಜೀವನಾ...

ಸಿಕ್ಕಿದರೆ ನಮ್ಮ ಬಳಿ ಇರುವುದರಲ್ಲಿಯೇ ಸಿಗಬೇಕು...
ಅದರಲ್ಲಿ.. ಇದರಲ್ಲಿ ಅಂತ ಹುಡುಕುತ್ತ ಹೋದರೆ ಎಲ್ಲಿಯೂ ಸಿಗುವದಿಲ್ಲ...

ಇವನ ಬೇಕು.. ಬೇಡಗಳನ್ನು...
ಪ್ರೀತಿಯಿಂದ ಮಾಡುವ ಪತ್ನಿಗೆ..
ಈತನ ಈ ನಿರ್ಧಾರದ ಬಗೆಗೆ ಗೊತ್ತಾದರೆ...??

ಕಾರಣಗಳು ಏನೇ ಇದ್ದರೂ..
ತಪ್ಪು... ತಪ್ಪೇ..
ಅದು ಸರಿಯಾಗಲು ಸಾಧ್ಯವೇ ಇಲ್ಲ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಪ್ರಶಾಂತ್...

Unknown said...

nija, kathe chennaagide. olatotiynnu samarthavaagi hidittiddeera...............

Anonymous said...

ಹಲವು ವೈಯಕ್ತಿಕ ಕಾರಣಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿಬಿಟ್ಟಿದ್ದೇನೆ. ಇವತ್ತು ನಿಮ್ಮ ಬ್ಲೋಗ್ ಓದಿದೆ. ಸಖತ್ತಾಗಿದೆ!
ಮೊದಲು ಶುರು ಮಾಡಿದಾಗ..'ಇದೇನಪ್ಪ ಆಶಾ ಎಷ್ಟು ಚೆನ್ನಾಗಿದ್ದರೆ, ಪ್ರಕಾಶ್ ಹೀಗೆ ಹೇಳ್ತಾ ಇದ್ದರಲ್ಲ' ಅಂತ ಘಾಬರಿ ಆಯ್ತು. ಕೊನೆಯಲ್ಲಿ 'ಇದು ಕಥೆ' ಅಂತ ಬರೆದಿರೋದು ನನ್ನ ಸಂಶಯ ನಿವಾರಣೆ ಮಾಡ್ತು :)
'ಹುಚ್ಚು ಖೊಡಿ ಮನಸು' ಅಂತಾರಲ್ಲ ಹಾಗೆ..ಹಿಡಿತದಲ್ಲಿ ಇದ್ರೆ ಆಗುವ ಅನಾಹುತಗಳನ್ನ ತಪ್ಪಿಸಬಹುದು!
ನಿಮ್ಮ 'ಕಥಾ ಬರಹ' ಹೀಗೆ ಚೆನ್ನಾಗಿ ಮುಂದುವರೆಯಲಿ!

ವಿನುತ said...

ಸೊಗಸಾದ ನಿರೂಪಣೆ. ಅದರಲ್ಲಿ "ನಾನು" ಎಂಬ ನಿರೂಪಕನೇ ಒಂದು ಪಾತ್ರವಾಗಿರದಿದ್ದಲ್ಲಿ ಕಥೆ ಇಷ್ಟು ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ ಎನ್ನುವುದು ನನ್ನ ಅಭಿಮತ. ಅಂತ್ಯ ಸ್ವಲ್ಪ ಸಿನಿಮೀಯ ಎನ್ನಿಸಿದರೂ, ಮನಮುಟ್ಟುವಂತಿದೆ. ಭಾವನೆಗಳ ತೊಳಲಾಟವನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಸುಂದರ ಕಥೆಗೆ ಅಭಿನಂದನೆಗಳು.

Unknown said...

Nice story... :-)

Ittigecement said...

ಮನಮುಕ್ತಾರವರೆ...

ನನ್ನ ಬ್ಲಾಗಿಗೆ ಸ್ವಾಗತ...

ನಾನು ಪತ್ರಿಕೆಗಳಲ್ಲಿ ಬರುವ ಸಣ್ಣ ಕಥೆಗಳನ್ನು ಓದುವ ಗೀಳು ಬೆಳೆಸಿಕೊಂಡಿದ್ದೆ..
ನಾ. ಡಿಸೋಜ, ಜೋಗಿ, ರವಿ ಬೆಳಗೆರೆ, ವಸುಧೇಂದ್ರ ಇತ್ಯಾದಿಯವರ ಕಥೆಗಳ ಅಭಿಮಾನಿ.
ಯಂಡಮೂರಿಯವರ ಒಂದೂ ಕಥೆಯನ್ನು ಬಿಡದೇ ಓದಿರುವೆ.

ಅವರ ಥರಹ ಆಗದಿದ್ದರೂ ..
ಬರೆಯುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುವೆ..

ನಿಮ್ಮ ಪ್ರೋತ್ಸಾಹದ ಮಾತುಗಳು ಬರೆಯಲು ಇನ್ನಷ್ಟು ಉತ್ಸಾಹ ನೀಡಿದೆ...

ಪ್ರತಿಕ್ರಿಯೆಗೆ ತುಂಬಾ.. ತುಂಬಾ ಧನ್ಯವಾದಗಳು...

Ittigecement said...

ಉಷಾರವರೆ...

ನನ್ನ ಬ್ಲಾಗಿಗೆ ಸ್ವಾಗತ..

ಬ್ಲಾಗಿನಲ್ಲಿ ಅದರದ್ದೇ ಆದ ಚೌಕಟ್ಟು ಇದೆ..
ಅದರದ್ದೇ ಆದ ಮಿತಿಗಳಿವೆ
ಅಂತ ನಾನು ಅಂದುಕೊಂಡಿದ್ದೆ...

ಇಲ್ಲಿ ಲೇಖನಗಳು ತುಂಬಾ ಉದ್ದವಾಗಿರ ಬಾರದು...
ಕಥೆಗಳು ಬ್ಲಾಗಿಗೆ ಹೇಳಿದ್ದಲ್ಲ.. ಹೀಗೆಲ್ಲ ನನ್ನದೇ ಕಲ್ಪನೆಯಲ್ಲಿ ನಾನಿದ್ದೆ.

ಹಾಗಾಗಿ ಮೊದಲ ಕಥೆ ಬಹಳ "ಅಳುಕುತ್ತಲೇ" ಹಾಕಿದೆ.

ಅದಕ್ಕೆ ಬಂದ ಪ್ರತಿಕ್ರಿಯೆಗಳು..
ಈ ಮೇಲುಗಳು..
ಎಸ್ಸೆಮ್ಮೆಸ್ಸುಗಳು...
ನನ್ನ ಅಭಿಪ್ರಾಯವನ್ನು ಬದಲಿಸಿಬಿಟ್ಟವು...

ಎಲ್ಲ ಓದುಗರಿಗೆ ನನ್ನ ಹೃತ್ಪೂರಕ ಕೃತಜ್ಞತೆಗಳು...

ಉಷಾರವರೆ.. ದಯವಿಟ್ಟು ಬರುತ್ತಾ ಇರಿ..
ನಿಮ್ಮ ಪ್ರತಿಕ್ರಿಯೆಗಳು ನನ ಅತ್ಯಮೂಲ್ಯ...

ಧನ್ಯವಾದಗಳು..

Unknown said...

ಕಥೆ ಅದ್ಬುತವಾಗಿದೆ ಪ್ರಕಾಶಣ್ಣ. ಈ trend ಮುಂದುವರೆಯಲಿ.

AntharangadaMaathugalu said...

ಕಥೆ ತುಂಬಾ ಚೆನ್ನಾಗಿದೆ........

ಶ್ಯಾಮಲ

ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ಕಥೆ ಚೆನ್ನಾಗಿದೆ. ಸೌಂದರ್ಯ ನೋಡುವ ಕಣ್ಣಿನಲ್ಲಲ್ಲ ಹೃದಯದಲ್ಲಿದೆ ಎಂಬುದನ್ನು ಅರಿತ ಕಥೆಯ ನಾಯಕನೂ ಸಹ ಒಮ್ಮೆ ಬೇರೆಯದೇ ಯೋಚಿಸಿದ್ದು, ಮುಂದೇನು? ಎಂಬ ಕುತೂಹಲವು ಸುಖಾಂತ್ಯವಾಗಿದೆ.

ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ಈ ನಾಲ್ಕು ದಿನದ ಬದುಕಿನಲಿ...

ಇಲ್ಲದಿದ್ದರೆ, ಭಾರತೀಯ ಸಂಸ್ಕೃತಿಗೂ, ಪಾಶ್ಚಿಮಾತ್ಯ ಸಂಸ್ಕೃತಿಗೂ ವಿಶೇಷ ಏನಿರುತ್ತಿತ್ತು???

ಹೀಗೆಯೆ ಹೊಸ ಹೊಸ ಬರಹಗಳು ಬೆಳಕಿಗೆ ಬರಲಿ.

Anonymous said...

ಪ್ರಕಾಶಣ್ಣ,
ನಿಮ್ಮ ಎರಡೂ ಕಥೆಗಳು ಸೊಗಸಾಗಿವೆ..
ನಿರೂಪಣೆ, ಭಾಷೆ ಹಾಗೂ ವಿಷಯ ಮನ ಮುಟ್ಟುವಲ್ಲಿ ಸಫಲವಾಗಿವೆ..
ಕೆಲಸಗಳ ಒತ್ತಡಗಳ ನಡುವೆಯೂ ಇಷ್ಟೆಲ್ಲಾ ಯೋಚಿಸಿ, ಸುಂದರವಾಗಿ ಕಥಾ ಹಂದರವನ್ನು ಹೆಣೆದಿರುವ ನಿಮಗೆ
Hats off..!!!!

Ittigecement said...

ಆನಂದರವರೆ...

ನಿಮ್ಮ ಬ್ಲಾಗಿಗೆ ಈ ನಡುವೆ ಬರಲಾಗಲಿಲ್ಲ. ಬೇಸರಿಸ ಬೇಡಿ.

ಕಥೆ ಬರೆಯುವದಲ್ಲಿ ಇರುವ ಮಜಾ ಗೊತ್ತೇ ಇರಲಿಲ್ಲ..

ಮೊದಲು ಕಥೆಯ ಹಂದರದ ಚಿತ್ರಣ ಆದಕೂಡಲೆ
ನನ್ನಕ್ಕ, ನನ್ನ ಇಬ್ಬರು ಗೆಳೆಯರಿಗೆ (ಯಾರು ಫ್ರೀ ಇರುತ್ತಾರೊ ಅವರಿಗೆ)
ಫೋನ್ ಮಾಡಿ ಹೇಳುತ್ತೇನೆ.
ಅದನ್ನು ಹೇಳದಿದ್ದರೆ ನನಗೆ ಸಮಾಧಾನ ಇರುವದಿಲ್ಲ.

ಅವರ ವಸ್ತು ನಿಷ್ಠ ವಿಮರ್ಶೆ ನನಗೆ ಬಹಳ ಸಹಾಯಕಾರಿ..

ಕಥೆ ಬರೆದ ಮೇಲೆ "ಹಿತ್ತಲ ಮನೆ" ಯವರಿಗೆ ಕಳುಹಿಸುತ್ತೇನೆ.
ಅವರ ವಿಮರ್ಶೆ ತುಂಬಾ ಚೆನ್ನಾಗಿರುತ್ತದೆ. ಸೂಕ್ಷ್ಮಗಳನ್ನೂ ಗಮನಿಸಿ ತಿದ್ದಿಸುತ್ತಾರೆ.

ನಮ್ಮ ಮನೆಯವರಿಗೂ ಓದಿ ಹೇಳುತ್ತೇನೆ.

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

Ittigecement said...

ಗುರು....

ಬದುಕಿನಲ್ಲಿ ಕೆಟ್ಟಯೋಚನೆ ಎಲ್ಲರಿಗೂ ಬಂದೇ ಬರುತ್ತದೆ...
ಅದನ್ನು
ವಿವೇಕದಿಂದ.. ಸಂಸ್ಕಾರದಿಂದ..
ಹಿತವಚನದಿಂದ...

ಕೆಲವೊಮ್ಮೆ ಇಂಥಹ ಅನಿರಿಕ್ಷಿತ ಘಟನೆಗಳಿಂದಲೂ ಪಾರಾಗಬಹುದು...!

ಕಥೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಆಝಾದ್ ಭಾಯ್.... (ಜಲನಯನ)

ಮನವೆಂಬ ಮರ್ಕಟ ಅಂತ ನಮ್ಮ ಹಿರಿಯರು ಹೇಳಿದ್ದಾರೆ.
ಮನಸ್ಸು ತುಂಬಾ ವಿಚಿತ್ರ..
ಭಜನೆ ಮಾಡುವ ಸಂದರ್ಭದಲ್ಲಿ ಭಗಿನಿಯರ ವಿಚಾರ ಬರಬಹುದು..

ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡ ಬಹುದು...!
ಅದಕ್ಕೊಂದು ಕಡಿವಣವೇ ಇಲ್ಲ...

ನಿಮ್ಮ ಚಂದದ ಪ್ರತಿಕ್ರಿಯೆಗೆ ಮನತುಂಬಿ ಬಂದಿದೆ...

ತುಂಬಾ.. ತುಂಬಾ... ಧನ್ಯವಾದಗಳು...

Ittigecement said...

ವೆಂಕಟಕ್ರಷ್ಣರವರೆ...

ನನ್ನ ಬ್ಲಾಗಿಗೆ ಸ್ವಾಗತ...

ನಿವೆನ್ನುವದು ನಿಜ...
ಅನಿರೀಕ್ಷಿತ ತಿರುವು ಇರಬೇಕೆಂಬ ರೂಲ್ ಇಲ್ಲ..
ಇರಬಾರದೆಂಬ ರೂಲೂ ಇಲ್ಲ...

ಜೀವನದಲ್ಲಿ ಅನಿರಿಕ್ಷಿತ ಘಟನೆಗಳು ಯಾವಾಗಲೂ ಇರುತ್ತವೆ.
ನಾವು ವಿಚಾರ ಮಾಡುವದೇ ಒಂದು..
ಆಗುವದೇ ಒಂದು...

ಲೆಕ್ಕಾಚಾರದ ಹಾಗೆ ನಡೆದು ಬಿಟ್ಟರೆ ಸ್ವಾರಸ್ಯ ಇರಲಿಕ್ಕಿಲ್ಲ ಅಲ್ಲವಾ...?

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

ದಯವಿಟ್ಟು ಬರುತ್ತಾ ಇರಿ...

Ittigecement said...

ಸೀತಾರಾಮ್ ಸರ್...

ಎಷ್ಟು ಸುಂದರವಾದ ಸಾಲುಗಳನ್ನು ನೆನಪಿಸಿದ್ದೀರಿ...!
"ಇರುವದೆಲ್ಲವ ಬಿಟ್ಟು ಇರದುದೆಡೆಗೆ ತುಡಿವದೇ,, ಜೀವನಾ.." ವಾಹ್..!

ದಾರಿ ತಪ್ಪುವ ಯೋಚನೆ ಬಂದಾಗ ವಿವೇಕ ಕೆಲಸ ಮಡ ಬೇಕು ಅಲ್ಲವಾ..?

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ.
ದಯವಿಟ್ಟು ಬೇಸರಿಸದಿರಿ...

ಚಂದದ ಪ್ರತಿಕ್ರಿಯೆಗೆ ತುಂಬಾ.. ತುಂಬಾ ಧನ್ಯವಾದಗಳು.

Ittigecement said...

ಅನಂತರವರೆ...

ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಬ್ಲಾಗಿನ ಸುಂದರ ಫೋಟೊ, ಕವನ ಎರಡೂ ತುಂಬಾ ಚೆನ್ನಾಗಿದೆ...

ಕೆಟ್ಟ ಯೋಚನೆಗಳು ಬರುತ್ತದೆ..
ಕಾರ್ಯಗತಗೊಳಿಸುವಲ್ಲಿ ವಿವೇಕ ಕೆಲಸ ಮಾಡಬೇಕು.

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.

ಬರುತ್ತಾ ಇರಿ...

Ittigecement said...

ಪರಾಂಜಪೆಯವರೆ...

ನಾನು ನನ್ನಾಕೆಗೆ ಕಥೆಯನ್ನು ಓದಿ ಹೇಳಿದಾಗ "ಇದು ನಿಮ್ಮದೇ ಅನುಭವ ಎಂದು ಜನ ಅಪಾರ್ಥ ತಿಳಿಯುತ್ತಾರೆ" ಅಂದರು.

ಒಂದೆರಡು ಪ್ರತಿಕ್ರಿಯೆ ಅದೇ ಅರ್ಥದಲ್ಲಿ ಬಂತು...
ಈ ಮೇಲ್ ಗಳೂ ಬಂದವು...!!

ಹಾಗಾಗಿ "ಇದು ಕಥೆ" ಎಂದು ಬರೆಯ ಬೇಕಾಯಿತು...
ಇದು ಕಥೆ ಎನ್ನುವದರ ಬಗ್ಗೆ ಸಂಶಯವೇ ಬೇಕಿಲ್ಲ. ಹ್ಹಾ..ಹ್ಹಾ...!

ನಮ್ಮನ್ನು ನಾವೇ ಸ್ತುತಿಸಿಕೊಳ್ಳುವ ಸಮಾಜದಲ್ಲಿ ಬದುಕುತ್ತಿದ್ದೇವೆ.
ಇಂಥಹ ಘಟನೆ ನಡೆದಿದ್ದರೂ ಬರೆದುಕೊಳ್ಳುವ ಗೋಜಿಗೆ ಹೋಗುವದಿಲ್ಲ ಅಲ್ಲವಾ...?

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ.
ಬೇಸರಿಸ ಬೇಡಿ.. ಸಧ್ಯದಲ್ಲೇ ಬರುವೆ...

ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

Ittigecement said...

ಶಿವಪ್ರಕಾಶ್...

ಪ್ರತಿಯೊಂದಕ್ಕೂ ಕಾಲಕೂಡಿ ಬರಬೇಕು ಅಂತ ಹಿರಿಯರು ಹೇಳುತಾರಲ್ಲ...



ಪ್ರತಿಕ್ರಿಯೆಗೆ ಧನ್ಯವಾದಗಳು.

ಬಾಲು said...

ಒಂದು ತುಂಟ ರಾತ್ರೆ ಎನ್ನುವ ತೆಲುಗು ಕಥೆ ನೆನಪಾಯಿತು. ಅದರ ಕರ್ತರು ಯಾರು ಅಂತ ನೆನಪಿಲ್ಲ.

ಕಥೆ ಚೆನ್ನಾಗಿದೆ. ಓದಿಸಿಕೊಂಡು ಹೋಗುತ್ತದೆ.

ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಈ ವರ್ಷ ಮತ್ತಷ್ಟು ಬರೆಯಿರಿ.

Ittigecement said...

ಶ್ರವಣ...

ನನ್ನ ಬ್ಲಾಗಿಗೆ ಸ್ವಾಗತ...
ನೀವೂ ಸಹ ಬ್ಲಾಗ್ ಶುರುಮಾಡಿದ್ದು ಖುಷಿಯಾಯಿತು..
ನಿಮ್ಮಿಂದ ಇನ್ನಷ್ಟು ಬರಹಗಳ ನಿರೀಕ್ಷೆ ನಮ್ಮೆಲ್ಲರದು...

ಕಥೆ ಬರೆಯುವದು ನನಗೆ ಹೊಸತು..
ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳು ನನಗೆ ಉತ್ಸಾಹ ಕೊಟ್ಟಿದೆ..

ತುಂಬಾ ತುಂಬಾ ಥ್ಯಾಂಕ್ಸ್....

ಬರುತ್ತಾ ಇರಿ...

Ittigecement said...

ಗಂಗಾರವರೆ...

ನಿಮ್ಮ ಪ್ರೋತ್ಸಾಹ ಖುಷಿಯಾಗುತ್ತದೆ...

ಹಳ್ಳಿಯ ಮೂಲೆಯಲ್ಲಿದ್ದರೂ ..
ಇಂಟರ್ ನೆಟ್ ಸಮಸ್ಯೆ ಇದ್ದರೂ..
ಉತ್ಸಾಹದಿಂದ ಪ್ರತಿಕ್ರಿಯೆ ಕೊಡುತ್ತಿರುವದು ಸಂತಸವಾಗುತ್ತದೆ...

ನಿಮ್ಮ ಪ್ರೋತ್ಸಾಹ, ಆಶೀರ್ವಾದ ಹೀಗೆಯೇ ಇರಲಿ...
ಧನ್ಯತೆಯ ಭಾವ ಮೂಡುತ್ತದೆ...

Ittigecement said...

ಗುರುಮೂರ್ತಿಯವರೆ..(ಸಾಗರದಾಚೆಯ ಇಂಚರ)

ನನ್ನ ಮಿತ್ರ ನಾಗು ಹೇಳುತ್ತಿರುತ್ತಾನೆ...

ಕಥೆ ಓದಿದರೆ ಅದರ ಪಾತ್ರಗಳು ಮನದಲ್ಲಿ ಕಾಡ ಬೇಕು..
ಅಂಥಹ ಪ್ರಯತ್ನ ನನ್ನದು...

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಕೇಶ್ಚಿಕ್ಕಯ್ಯ...

ನಿಮ್ಮ ಪ್ರೋತ್ಸಾಹದ ನುಡಿಗಳೇ..
ನನಗೆ ಟಾನಿಕ್ಕು...
ಶ್ರೀರಕ್ಷೆ....

ಬರುತ್ತಾ ಇರಿ...

ಧನ್ಯ...
ಧನ್ಯವಾದಗಳು...

Ittigecement said...

ಕೃಷ್ಣ ಭಟ್...

ನನ್ನ ಬ್ಲಾಗಿಗೆ ಸ್ವಾಗತ.....

ನಿಮ್ಮ ಬ್ಲಾಗಿನ ಚುಟುಕುಗಳು ತುಂಬಾ ಸೊಗಸಾಗಿದೆ...
ಚಂದದ ಸಾಲುಗಳಿಗೆ ಅಭಿನಂದನೆಗಳು...

ನಾನು ಕಥಾಲೋಕಕ್ಕೆ ಹೊಸಬ...
ನೀವು ಇಷ್ಟಪಟ್ಟಿದ್ದು..
ಪ್ರೋತ್ಸಾಹದ ನುಡಿಗಳು..
ಖುಷಿಯಾಗುತ್ತದೆ.. ಉತ್ಸಾಹ ಕೊಡುತ್ತದೆ...

ಧನ್ಯವಾದಗಳು..

Ittigecement said...

ಸುಮನಾರವರೆ...

ನೀವು ನನ್ನ ಬ್ಲಾಗಿಗಷ್ಟೇ ಅಲ್ಲ..
ನಿಮ್ಮ ಬ್ಲಾಗಿಗೂ ಅಪರೂಪವಾಗಿಬಿಟ್ಟಿದ್ದೀರಿ... ದಯವಿಟ್ಟು ಬರವಣಿಗೆ ಮುಂದುವರೆಸಿರಿ...

ಹುಚ್ಚು ಮನಸ್ಸಿನ ಅವಾಂತರ ಕೂದಲಿನೆಳೆಯಲ್ಲಿ ತಪ್ಪುವದು..
ಒಂದುವೇಳೆ ಈತನೇ ತನ್ನ ಭಾವನೆಯನ್ನು ಅವಳಿಗೆ ಮೊದಲು ಹೇಳಿಬಿಟ್ಟಿದ್ದರೆ...?

ಹ್ಹಾ..ಹ್ಹಾ..!
ಹಾಗಾಲಿಲ್ಲವಲ್ಲ...!!

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ವಿನೂತಾರವರೆ...

ನೀವೆನ್ನುವದು ನಿಜ...

ನಾನು ಈ ಕಥೆಯನ್ನು "ಈತ, ಇವಳು ಮತ್ತು ಆಕೆ" ಎಂದು ಬರೆಯಬೇಕೆಂದು ಕೊಂಡೆ..
ಆದರೆ ಸಮಾಧಾನವಾಗಲಿಲ್ಲ...

ನನ್ನ ಸ್ನೇಹಿತ "ಹಿತ್ತಲ ಮನೆ" ಹೇಳುವ ಹಾಗೆ ಕಥೆಗಳಲ್ಲಿ ಮೂರೂ ಪಾತ್ರಗಳನ್ನು "ನಾನು" ಅಂತ ಚಿತ್ರಿಸುವದು ಬಹಳ ಕಷ್ಟ..
ಕಥೆಯ ಪರಿಮಿತಿ ಸಣ್ಣದು.. ಅಲ್ಲವಾ...?

ಸ್ವಲ್ಪ ಸಿನಿಮಯ.. ಅನಿರೀಕ್ಷಿತ ಅನಿಸಿದರೂ...
ಈ ರೀತಿಯ ಹುಚ್ಚು ಮನಸ್ಸು ತೀರಾ ಸಾಮನ್ಯ...
ಎನ್ನುವದು ನನ್ನ ಅನಿಸಿಕೆ..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ... ದಯವಿಟ್ಟು ಬೇಸರಿಸದಿರಿ...

Ittigecement said...

ರವಿಕಾಂತ ಗೋರೆಯವರೆ...

ನನಗೆ ಒಂದು ಪರಿಚಯ ಸ್ನೇಹಿತರಿದ್ದಾರೆ...
ಅವರು ಬಹಳ ಸುಂದರ... ಸಿನೇಮಾ ನಟನ ಥರಹ...

ಆದರೆ ಆಕೆ ಸ್ವಲ್ಪವೂ ಚಂದವಿಲ್ಲ...
ಅವರ ಸಂಸಾರ ತುಂಬಾ ಚೆನ್ನಾಗಿದೆ...
ತಮಾಶೆ.. ನಗು ಪ್ರೀತಿ..
ಅಲ್ಲಿ ಬೇಕಾದಷ್ಟು ಇದೆ...

ಚಂದದ ಬಾಳುವೆಗೆ ಅಂದದ ಅಗತ್ಯ ಬೇಕಿಲ್ಲ ಅಲ್ಲವಾ...?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...
This comment has been removed by the author.
Ittigecement said...

ಸುಧೀಂದ್ರ...

ನಮ್ಮ ಬ್ಲಾಗಿನಲ್ಲಿ ಕಥೆಗಳ ಪ್ರಯೋಗ ಮಾಡುವಾಗ ನನಗೆ ಬಹಳ ಅಳುಕಿತ್ತು...
ಇಲ್ಲಿನ ಪರಿಮಿತಿ... ಸಣ್ಣದು ಅನ್ನುವ ಕಲ್ಪನೆಯಲ್ಲಿದ್ದೆ...

ಆದರೆ ಈ ಎರಡೂ ಕಥೆಗಳಿಗೆ ಬಂದ ಪ್ರತಿಕ್ರಿಯೆಗಳಿಗೆ ಹೃದಯ ತುಂಬಿ ಬಂದಿದೆ...

ಕಥೆಯ ವಿಸ್ತಾರದಲ್ಲಿ ಎಲ್ಲಿಯೂ ನಾನು ಕಟ್ ಮಾಡಿಲ್ಲ..
ಫ್ರೀಯಾಗಿ ಬರೆದಿದ್ದೇನೆ...
ಕಥೆ ಉದ್ದವಾಗಿದ್ದರೂ ..
ತಾಳ್ಮೆಯಿಂದ ಓದಿದ ಎಲ್ಲ ಓದುಗರಿಗೂ ನನ್ನ ನಮನಗಳು...

ಇನ್ನಷ್ಟು ಕಥೆಗಳನ್ನು..
ಇನ್ನಷ್ಟು ಪ್ರಯೋಗಗಳನ್ನು ಮಾಡುವ ಪ್ರಯತ್ನ ಮಾಡುತ್ತೇನೆ..

ಪ್ರತಿಕ್ರಿಯೆಗೆ ಧನ್ಯವಾದಗಳು ಸುಧೀಂದ್ರ...

Ittigecement said...

ಶ್ಯಾಮಲಾರವರೆ..(ಅಂತರಂಗದ ಮಾತುಗಳು)

ನಿಮ್ಮ ಲೇಖನ ಅವಧಿಯಲ್ಲಿ ಬಂದಿದೆ .. ಅಭಿನಂದನೆಗಳು...!!!

ಕಥೆಯಲ್ಲಿ ನಿರೂಪಕ ಕೆಟ್ಟದಾಗಿ ಚಿತ್ರಿತನಾಗುವದು ನನ್ನಾಕೆಗೆ ಇಷ್ಟವಿಲ್ಲವಾಗಿತ್ತು...
ಯಾಕೆ ಯಾವಾಗಲೂ "ಹೀಗೆಯೇ ಇರಬೇಕು.".? ಎಂದು ಬರೆದೆ...

ಎಲ್ಲ ಭಾವಗಳೂ ಒಂದೇ ಮನದಲ್ಲಿ ಮೂಡುತ್ತವೆ ಅಲ್ಲವಾ..?
ಸಂದರ್ಭಕ್ಕೆ ಅನುಗುಣವಾಗಿ...

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಚಂದ್ರು (ಕ್ಷಣ ಚಿಂತನೆ..)

ಸುಖವೆನ್ನುವದು ಮನಸ್ಸು ಕಂಡುಕೊಳ್ಳುವಂಥಾದ್ದು.....
ಅಲ್ಲಿ ಇಲ್ಲಿ ಅಂತ ಹುಡುಕಿದರೆ ಸಿಗುವುದಿಲ್ಲ...
ನಮ್ಮಲ್ಲೇ ಕಂಡು ಕೊಳ್ಳಬೇಕು.. ಅಂತ ಹಿರಿಯರು ಹೇಳುತ್ತಾರೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮ್ಮ ಬ್ಲಾಗಿನ "ಚಾರಣಗಳ ಲೇಖನ" ತುಂಬಾ ಸೊಗಸಾಗಿ ಬರುತ್ತಿದೆ..
ಪ್ರತಿಕ್ರಿಯೆ ಕೊಡಲಾಗಲಿಲ್ಲ ದಯವಿಟ್ಟು ಬೇಸರಿಸದಿರಿ...

ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು...

Annapoorna Daithota said...

ಕಥೆ ಚೆನ್ನಾಗಿದೆ....

guruve said...

ಕಥೆ ಚೆನ್ನಾಗಿದೆ..

Ittigecement said...

ಆಕಾಶ ಬುಟ್ಟಿ....

ನನ್ನ ಬ್ಲಾಗಿಗೆ ಸ್ವಾಗತ....!

ಬರೆಯುವದು ಹವ್ಯಾಸ..
ಇದಕ್ಕಾಗಿ ಸ್ವಲ್ಪ ಸಮಯ ಇಟ್ಟುಕೊಂಡಿರುತ್ತೇನೆ...
ಈಗ ಮೊದಲಿನ ಹಾಗೆ ವಾರಕ್ಕೆರಡು ಲೇಖನ ಹಾಕಲಿಕ್ಕೆ ಆಗುತ್ತಿಲ್ಲ...

ಬರೆಯಲು ಬೇಕಾದಷ್ಟು ವಿಷಯವಿದ್ದರೂ
ಇದರಿಂದ ಹೊಟ್ಟೆ ತುಂಬುವದಿಲ್ಲವಲ್ಲ...!!

ಸ್ವಲ್ಪ ಉದ್ದವೆನಿಸಿದರೂ..
ತಾಳ್ಮೆಯಿಂದ ಓದಿ..
ಪ್ರೋತ್ಸಾಹಕೊಡುತ್ತಿರುವ ಎಲ್ಲ ಓದುಗರಿಗೆ ನನ್ನ ನಮನಗಳು...

ಚೇತನಾರವರೆ.. ಬರುತ್ತಾ ಇರಿ..

ಪ್ರತಿಕ್ರಿಯೆಗೆ ತುಂಬಾ.. ತುಂಬಾ ಧನ್ಯವಾದಗಳು..

Ittigecement said...

ಬಾಲು ಸರ್....!!

ನಿಮಗೂ ಸಹ ಹೊಸವರ್ಷದ ಶುಭಾಶಯಗಳು...!!

ಇಂಥಹ ಉದ್ದದ ಕಥೆ ಬ್ಲಾಗಿನಲ್ಲಿ ಜನಪ್ರಿಯ ಆಗುವದಿಲ್ಲ ಅಂದುಕೊಂಡಿದ್ದೆ...
ನನ್ನ ಅನಿಸಿಕೆ ಹುಸಿಯಾಗಿದೆ...

ಸಂತೋಷವೂ ಆಗುತ್ತಿದೆ...

ಈಗ ನನ್ನ ಕೆಲಸದ ಒತ್ತಡದ ನಡುವೆ "ನೆಟ್" ಸಮಸ್ಯೆ ಕೂಡ ಶುರುವಾಗಿದೆ...

ಕೆಲವೊಮ್ಮೆ ಪೆನ್ ಡ್ರೈವ್ ನಲ್ಲಿ ಹಾಕಿಕೊಂಡು ಸೈಬರ್ ಕೆಫೆಗೆ ತೆಗೆದು ಕೊಂಡು ಪೋಸ್ಟ್ ಹಾಕಿದ್ದೂ ಇದೆ..!

ನಿಮ್ಮೆಲ್ಲರ ಪ್ರೋತ್ಸಾಹ ಮತ್ತಷ್ಟು ಉತ್ಸಾಹ ಕೊಟ್ಟಿದೆ...

ತುಂಬಾ.. ತುಂಬಾ ಥ್ಯಾಂಕ್ಸ್... ಬಾಲೂಜಿ...!

Ittigecement said...

ಅನ್ನಪೂರ್ಣಾರವರೆ...

ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳು ಇನ್ನಷ್ಟು ಪ್ರಯೋಗ ಮಾಡಲು ಉತ್ಸಾಹ ಕೊಟ್ಟಿದೆ...

ಒಂದು ಪತ್ತೆದಾರಿ ಕಥೆ ಬರೆಯ ಬೇಕೆಂದಿರುವೆ...

ನೋಡೋಣ ಏನಾಗುತ್ತದೆಂದು...!

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತಾ ಇರಿ...

Ittigecement said...

ಗುರು ಪ್ರಸಾದ್...

ಬ್ಲಾಗಿನಲ್ಲಿ ಕಥೆ ಬರೆಯುವ ಹವ್ಯಾಸ ಇನ್ನಷ್ಟು ಬೆಳೆಯಲಿ...
ಸಾಹಿತ್ಯದ ಎಲ್ಲ ಪ್ರಕಾರಗಳು ಇಲ್ಲೂ ಬರಬೇಕು...
ಅದಕ್ಕೆ ಎಲ್ಲರೂ ಪ್ರೋತ್ಸಾಹ ಕೊಡ ಬೇಕು...

ಒಳ್ಳೊಳ್ಳೆ ಸಾಹಿತ್ಯದ ವಿಷಯಗಳು ಇಲ್ಲಿ ಬರಲಿ..

ಗುರು...
ನಿಮ್ಮ ಪ್ರೋತ್ಸಾಹಕ್ಕೆ ಹೃದಯ ಪೂರ್ವಕ ವಂದನೆಗಳು...