Monday, June 1, 2009

ಈ ಮಾತನ್ನು ಯಾರಾದರೂ.. ಮರ್ಯಾದಸ್ಥರ ಮುಂದೆ ಹೇಳಿದಿದ್ರೆ... ಏನು ಗತಿ..?

ಶಾರಿಯ ಮನೆ ಮುಂದೆ ಕಾರು ನಿಂತಾಗ ನಾಲ್ಕು ಗಂಟೆಯಯಾಗಿತ್ತು....
ಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಕಂಡಿದ್ದು ಮನೆ ತುಂಬಾ ಜನ....
ಎಲ್ಲರೂ ಮಾತನಾಡಿಸುವವರೆ...!

ವಯಸ್ಸಿನಲ್ಲಿ ಹಿರಿಯರಾದವರು..
"ಆರಾಮಾ...? ಚೆನ್ನಾಗಿದ್ದೀಯೇನಪ್ಪಾ..?

ವಯಸ್ಸಿನಲ್ಲಿ ಸಣ್ಣವರು...
"ಮಾಮಾ... ಚಿಕ್ಕಪಾ...ಅಣ್ಣಾ.!" ಅಂದರು...

ಎಲ್ಲರೂ ಬಾಯಿತುಂಬಾ ಮಾತನಾಡಿಸಿದರು...

ಅವರೆನ್ನಲ್ಲ ಮೊದಲ ಬಾರಿಗೆ ನೋಡುತ್ತಿದ್ದೆ...

ಅಷ್ಟರಲ್ಲಿ ಹೆಣ್ಣುಮಗಳೊಬ್ಬಳು ಎರಡು ಹಿತ್ತಾಳೆಯ ತಂಬಿಗೆಯಲ್ಲಿ ನೀರು ಇಟ್ಟು ನಮಗೆಲ್ಲ ನಮಸ್ಕರಿಸಿದಳು...

"ನಿಮಗೆಲ್ಲ ಬಾಯಾರಿಕೆಗೆ ಏನು ತರಲಿ...?
ಟೀ, ಕಾಫೀ, ಮಜ್ಜಿಗೆ...?.."

ಅಷ್ಟರಲ್ಲಿ ಶಾರಿ ಬಾಯಿ ಹಾಕಿದಳು.....
" ಪ್ರಕಾಶನಿಗೆ " ಮಜ್ಜಿಗೆ " ಎಂದರೆ ಪ್ರೀತಿ"

ನಾವೆಲ್ಲ ಕೈಕಾಲು ತೊಳೆದು ಕೊಳ್ಳುವಷ್ಟರಲ್ಲಿ ಮಜ್ಜಿಗೆ ಬಂತು...

ತೆಳ್ಳಗಿನ..ತಂಪಾದ .....ಶುಂಠಿ, ನಿಂಬೆ ಹಣ್ಣಿನ ...
ಸೊಗಸಾದ ಸುವಾಸನೆಯ ರುಚಿಯ ಮಜ್ಜಿಗೆ ಚೆನ್ನಾಗಿತ್ತು....

ಅಷ್ಟರಲ್ಲಿ ಮನೆಯ ಹಿರಿಯರೊಬ್ಬರು...

"ತಮ್ಮಾ... ನಾವೆಲ್ಲ ಹತ್ತಿರದ ಸಂಬಂಧಿಕರ ಮನೆಯವರ ಮದುವೆ ಕಾರ್ಯಕ್ರಮಕ್ಕೆ ಹೋಗ ಬೇಕಾಗಿದೆ...
ಶಾರೀ, ಗಣಪ್ತಿ ಮನೆಯಲ್ಲಿರುತ್ತಾರೆ... ಏನೂ ಸಂಕೋಚ ಮಾಡಿಕೊಳ್ಳ ಬೇಡಿ...
ನಿಮ್ಮಮ್ಮ, ಅಣ್ಣ ನಮಗೆ ತುಂಬಾ ಪರಿಚಯ...ರಾತ್ರಿ ಮದುವೆ ಮುಗಿಸಿಕೊಂಡು..
ನಾಳೆ ಬಂದು ಬಿಡುತ್ತೇವೆ..."

ಬಹಳ ವಿನಯಪೂರ್ವಕವಾಗಿ ಹೇಳಿದರು..

"ನಮಗೇನೂ ಸಂಕೋಚವಿಲ್ಲ ನೀವು ಹೋಗಿ ಬನ್ನಿ..." ಎಂದೆ....
ಅವರೆಲ್ಲ ಎರಡು ಎತ್ತಿನ ಗಾಡಿಯಲ್ಲಿ ಮದುವೆಗೆ ಹೊರಟರು....

ಶಾರಿಯ ಹೆಣ್ಣುಮಕ್ಕಳು ಆಶೀಷನಿಗೆ ಆಡಲು ಕರೆದು ಕೊಂಡು ಹೋದರು...

ಹೆಣ್ಣುಮಕ್ಕಳೆಲ್ಲರೂ ಸುಂದರವಾಗಿದ್ದರು...
ಸಂಸ್ಕಾರವಿದೆ....
ಮಗನಿಗೆ ಅಪ್ಪನೆಂಬ ಭಾವ ಜಾಗ್ರತವಾಯಿತು....

"ಶಾರಿ... ನಿನ್ನ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ನನ್ನ ಮಗನಿಗೆ ಕೊಡ್ತಿಯೇನೆ...?
ಬೀಗಿತ್ತಿ ಆಗ್ತಿಯೇನೆ...??
ಚೆನ್ನಾಗಿರುತ್ತದೆ..." ಎಂದೆ.

"ಪ್ರಕಾಶಾ... ಮದುವೆಗೆ...
ಫ್ರೆಂಡು.. ಗೆಳೆತನಕ್ಕೆ...
ಲವ್ ಮಾಡಲಿಕ್ಕೆ ಜೀವನದಲ್ಲಿ ಇರ್ತಾರೆ..
ಬೇಕದಷ್ಟು ಜನ ಸಿಕ್ತಾರೆ ಕಣೊ...
ಆ ಸಮಯದಲ್ಲಿ ಅವರೇ ಹುಡ್ಕೊತಾರೋ...
ನನ್ನ ಮಕ್ಕಳಿಗೆ ಅಣ್ಣನಾಗಿ.., ತಮ್ಮನಾಗಿ ನಿನ್ನ ಮಗ ಇರಲಿ...
ಆ ಭಾವ ಸಂಬಂಧ ಯಾವಾಗ್ಲೂ ಇರ್ತದೆ....
ಇಪ್ಪತ್ತು ವರ್ಷಗಳ ನಂತರ ನೀನು ನನಗೆ ಸಿಕ್ಕಿ ಮಾತಾಡಿದೆಯಲ್ಲಾ.....!!...!!
ಎಷ್ಟು ಸಂತೋಷ ಆಯಿತು ಗೊತ್ತಾ..?
ಈ ಖುಷಿ ನಮ್ಮ ಮಕ್ಕಳಿಗೂ ಆಗಲಿ..."

ನನಗೂ ಹೌದೆನಿಸಿತು....

ಗಣಪ್ತಿಯವರೂ ಮಾತು ಶುರು ಮಾಡಿದರು...
ಬೆಂಗಳೂರಿನ ಬಗೆಗೆ ಕುತೂಹಲದಿಂದ ಕೇಳಿದರು...

"ಪ್ರಕಾಶಾ... ನಾವೂ ಕೂಡ ಬೆಂಗಳೂರಿಗೆ ಬಂದಿದ್ದೆವು.....
ಇಪ್ಪತ್ತು ವರ್ಷಗಳ ಹಿಂದೆ..."

ನನಗೆ ಬಹಳ ಆಶ್ಚರ್ಯವಾಯಿತು...

"ಹೌದಾ... ಯಾವಾಗಾ...? ಯಾಕೆ..?"

"ಅದೊಂದು ದೊಡ್ಡ ಕಥೆ.... ಆಗ ನನ್ನ ದೊಡ್ಡಪ್ಪನ ಮಗ ಬೆಂಗಳೂರಲ್ಲಿ ನೌಕರಿ ಮಾಡ್ತಿದ್ದ...
ಒತ್ತಾಯ ಮಾಡಿ ನಮ್ಮನ್ನು "ಹನಿಮೂನಿಗೆ" ಅಂತ ಕರೆದಿದ್ದ..."

"ಹೌದನೇ .. ಶಾರಿ...? ಬೆಂಗ್ಳೂರಿಗೆ ಹನಿಮೂನಿಗೆ ಹೋಗಿದ್ಯೇನೆ...?"

"ಅಯ್ಯೋ.... ಹನಿಮೂನು ಅಂದರೆ ಏನೋ ಅಂದ್ಕೊಂಡು ಬಿಟ್ಟಿದ್ದೆ....!! ಮಾರಾಯಾ...!!
ಇವರು ಕರ್ಕೊಂಡು ಹೋಗ್ತಿನಿ ಅಂದಾಗ ನಂಗೆ ಸ್ವರ್ಗ ಸಿಕ್ಕಿದಷ್ಟು ಖುಶಿಯಾಗಿತ್ತು...
ಇಡೀ ಊರತುಂಬಾ ಹೇಳ್ಕೋಂಡು ಕುಣಿದಾಡಿ ಬಿಟ್ಟಿದ್ದೆ.."

"ಆದರೂ ಇಪ್ಪತ್ತು ವರ್ಷದ ಹಿಂದೆನೇ ನೀವು ಬೆಂಗಳೂರಿಗೆ ಹನಿಮೂನಿಗೆ ಹೋಗಿದ್ದು ಅಂದರೆ ಭಾರಿ ಜೋರ್ ಇದ್ದೀರಿ ಬಿಡಿ..."

"ಅಯ್ಯೋ .. ಆ .. ಹನಿಮೂನು ಅಂತ ಬೆಂಗಳೂರಿಗೆ ಹೋಗಿ..
ಯಾಕೆ ಸುಸ್ತಾಗ ಬೇಕಿತ್ತು..? ಮಾರಾಯಾ...!
ಇಲ್ಲೇ ಸಿರ್ಸಿ ಪೇಟೆ ಇರ್ಲಿಲ್ವಾ..?
ಹನಿಮೂನು ಅಂದ್ರೆ ನಾನು ಏನೋ ಅಂದ್ಕೊಂಡು ಬಿಟ್ಟಿದ್ದೆ.."

ಮತ್ತೆ ಅದೇ ರಾಗ ಎಳೆದಳು....

"ಹನಿಮೂನು ಅಂದ್ರೆ ಏನು ಅಂದ್ಕಂಡಿದ್ದಿ...?"

ಶಾರಿಗೆ ಅಷ್ಟು ಸಾಕಿತ್ತು....

"ಪ್ರಕಾಶಾ... ಈ ಹನಿಮೂನು ಅಂದ್ರೆ ಎಂಥದೋ ಅಂದಕಂಡು ಬಿಟ್ಟಿದ್ದೆ...
ಬೆಳಿಗ್ಗೆ ಐದು ಗಂಟೆಗೆ ಎಬ್ಬಿಸಿ...
ಲಾಲ್ ಬಾಗ್ ತೋರಿಸಿದ್ರು... ವಿಧಾನ ಸೌದಾ ತೋರಿಸಿದ್ರು...
ಕಬ್ಬನ್ ಪಾರ್ಕ್ ತೋರಿಸಿದ್ರು...
ಟೌನ್ ಹಾಲ್ ತೋರಿಸಿದರು.."

ಆಮೇಲೆ...?

"ಅದ್ಯಾವದೋ ಹೋಟ್ಲಲ್ಲಿ ಚಹ ಕುಡಿಸಿದ್ರು...
ಬಸ್ಸಿಗೆ ಆಟೋಕ್ಕೆ ಹೋದರೆ ಖರ್ಚಾಗ್ತದೆ..
ಅಂತ ನನ್ನನ್ನು ನಡೆಸಿಯೇ ಕರ್ಕೊಂಡು ಹೋದ್ರು...
ನಡೆದೂ... ನಡೆದೂ... ಕಾಲು ನೋವು ಬಂತು ಮಾರಾಯಾ...!"

"ಖುಷಿಯಾಗಲಿಲ್ವೇನೆ...?"

"ರಾಮಾ... ರಾಮಾ...!!
ಆ ಬಿಸಿಲು... ಸೆಖೆ... ಬೆವರು....!!
ಓಡಾಡೋ ಹಾಗಿದ್ರೆ ಸಿರ್ಸಿಯಲ್ಲೇ ಓಡಾಡ ಬಹುದಿತ್ತು...!!
ಬೇಗಳೂರಿಗೆ ಯಾಕೆ ಹೋಗಬೇಕಿತ್ತು..?
ಇನ್ನು ಆ ಲಾಲ್ ಬಾಗ್... ನಮ್ಮ ಮನೆಯ ಹಿಂದಿನ ಬೆಟ್ಟ ಇದ್ದಾಂಗೆ ಇದೆ..."

ಗಂಡನ ಮುಖ ನೋಡಿದಳು...

"ಅಂದರೆ ಹನಿಮೂನು ಮಜಾ ಆಗಲಿಲ್ಲ ಅನ್ನು..."

"ಅದೆಂಥಾ ಹನಿಮೂನು ಕಣೊ... ??
ನಾನು ಹನಿಮೂನು ಅಂದ್ರೆ ಎಂಥದೋ ಅಂದ್ಕಂಡು ಬಿಟ್ಟಿದ್ದೆ..."

ಮತ್ತೆ ಗಂಡನ ಮುಖ ನೋಡಿದಳು...

ಗಣಪ್ತಿಗೆ ಸ್ವಲ್ಪ ಕೋಪ ಹತ್ತಿತು...

"ನೋಡೊ ಪ್ರಕಾಶಾ.... ಹನಿಮೂನು ಅಂದ್ರೆ .. ಇನ್ನು.. ಎಂಥದೋ..?
ಅಲ್ಲಿಗೆ ಹೋಗಿ.. ಇನ್ನೂ.. ಎಂತಾ ಮಾಡ್ಬೇಕಿತ್ತೊ..?
ಬೆಂಗ್ಳೂರೆಲ್ಲ ಸುತ್ತಾಡಿಸಿದೆ... ಹೋಟಲ್ಲಿ ಟೀ ಕುಡಿಸ್ದೆ...
ಇನ್ನು ಎಂಥಾ ಮಾಡ್ಬೇಕಿತ್ತೊ..? ನೀನೇ ಹೇಳು..."

ನನಗೆ ಪಿಕಲಾಟಕ್ಕೆ ಶುರುವಾಯಿತು...
ಅಷ್ಟರಲ್ಲಿ ಶಾರೀಯೇ ಶುರು ಮಾಡಿದಳು..

"ಆ ಪ್ರಕಾಶನಿಗೆ ಎಂಥ ಗೊತ್ತಿದೆ...ಅಂತ ಅವನಿಗೆ ಕೇಳ್ತೀರಿ...?
ಅವನಿಗೆ.. ಸರಿಯಾಗಿ ಚಡ್ಡಿ ಹಾಕೊಳ್ಳಿಕ್ಕೆ ಬರೋದಿಲ್ಲವಾಗಿತ್ತು...

ಬೆಳಗಿಂದ ಸಾಯಂಕಾಲ.. ಆ.. ಬೆಂಗಳೂರಲ್ಲಿ..
ಆ ರಣ ಬಿಸಲಲ್ಲಿ..,
ಬಾಯಾರಿಕೆ... ಕಾಲು ಸುಡ್ತಿತ್ತು... ಆ ಸೆಖೆಯಲ್ಲಿ...
ಅದೆಂಥಾ ಹನಿಮೂನು...?
ಕೆಂಡದ ಒಲೆ ಬೆಂಕಿಯಲ್ಲಿ.. ಬದನೆಕಾಯಿ ಸುಟ್ಟ ಹಾಗೆ ಸುಟ್ಟು ಹೋಗಿದ್ದೆ ಮಾರಾಯಾ..!!"

"ಒಟ್ಟೂ ಎಷ್ಟು ದಿನ ಹನಿಮೂನು ಮಾಡಿದ್ರಿ... ಬೆಂಗಳೂರಲ್ಲಿ...?"

"ನಾಲ್ಕು ದಿವಸ ಕಣೋ...
ಇಲ್ಲಿ ಹೊಲದಲ್ಲಿ ಗದ್ದೆ ನೆಟ್ಟಿ ಮಾಡಿದ್ರೂ ಅಷ್ಟು ಸುಸ್ತಾಗ್ತಿರಲಿಲ್ಲ...
ಅಷ್ಟು ಸುಸ್ತು ಮಾಡಿಬಿಟ್ರು...
ಆ ಬಿಸಲಲ್ಲಿ ಒಡಾಡಿಸಿ..
ಹನಿಮೂನು ಅಂದ್ರೆ ಎಂಥದೋ ಅಂದ್ಕೊಂಡು ಬಿಟ್ಟಿದ್ದೆ..."

ಮತ್ತೆ ಅದೇ ರಾಗ ಎಳೆದಳು... ಗಂಡನ ಮುಖ ನೋಡುತ್ತಾ....

ನನಗೆ ಕುತೂಹಲ ತಡೇಯಲಾಗಲಿಲ್ಲ...

" ಎಲ್ಲ ಕಡೆ ಓಡಾಡಿ... ಈ ಹನಿಮೂನು ಮುಗಿಸಿ...
ಎಷ್ಟೊತ್ತಿಗೆ ಮನೆಗೆ ಬರ್ತಿದ್ರಿ...?
ರಾತ್ರಿ ಎಷ್ಟೊತ್ತಿಗೆ ಮಲಗ್ತಿದ್ರಿ...?"

"ದಿನವೆಲ್ಲ ಆ ಕೆಟ್ಟ ಬಿಸಲಲ್ಲಿ ನಡೆದಾಡಿಸಿ...
ಸಾಯಂಕಾಲ ಮನೆ ಬಂದು ಮಲಗಿದರೆ ಸಾಕಪ್ಪ ಅನಿಸ್ತಿತ್ತು...
ಎಷ್ಟೊತಿಗೆ ಹಾಸಿಗೆ ನೋಡ್ತೀನೋ..!
ಮಲಗ್ತೀನೋ ಅನ್ನಿಸಿ ಬಿಡ್ತಿತ್ತು.. ಮಾರಾಯಾ...!!

ಈ ಜನ.. ಮದುವೆ ಆದಮೇಲೆ ಹನಿಮೂನಿಗೆ ಯಾಕೆ ಹೋಗ್ತಾರೆ...?

ಅಲ್ಲ.. ಯಾಕೆ ಹೋಗ್ಬೇಕು ಮಾರಾಯಾ...?

ಆರಾಮಾಗಿ ಮನೆಯಲ್ಲಿ ತಣ್ಣಗೆ ಇರ್ಲಿಕ್ಕೆ ಆಗೋದಿಲ್ವಾ...?

ಯಾರಾದ್ರೂ ಮದುವೆಯಾದವ್ರು ...
ಹನಿಮೂನಿಗೆ ಹೋಗ್ತೇವೆ ಅಂದ್ರೆ ನನಗೆ ನಗು ಬರ್ತದೆ ನೋಡು...

ಅಲ್ವೂ.... ಪ್ರಕಾಶಾ .. !
ನೀನು ಹನಿಮೂನಿಗೆ ಹೋಗಿದ್ಯಾ?
ನೀವು ಎಲ್ಲಿಗೆ ಹನಿಮೂನಿಗೆ ಹೋಗಿದ್ರಿ...?"

"ನಾವು ಹನಿಮೂನಿಗೆ ಎಲ್ಲಿಗೂ ಹೋಗ್ಲಿಲ್ಲ ಮಾರಾಯ್ತಿ...
ಮನೆಯಲ್ಲೇ ಹನಿಮೂನು ಮಾಡಿದೆ"

ನನ್ನ ಹೆಂಡತಿ ಮುಖನೋಡಿದೆ...
ನಗುವನ್ನು ತಡೆಹಿಡಿದು ಕೊಳ್ಳಲಾಗದೆ ಬುಸಕ್ಕನೆ ನಕ್ಕು ಬಿಟ್ಲು....

"ಮನೆಯಲ್ಲಿ ಹನಿಮೂನಾ ಅದು ಹೇಗೆ ಸಾಧ್ಯ...?
ನೀವು "ಗೋಮಟೇಶ್ವರ " ಇದ್ದಲ್ಲಿ ಹೋಗಿದ್ರಂತೆ.... ಹನಿಮೂನಿಗೆ...!!
ನನಗೆ ಬೆಂಗಳೂರಿನ......
ಪೇಟೆ .. ಬೀದಿ... ಬೀದಿಯಲ್ಲಿ ಸುತ್ತಾಡಿಸಿ...
ಅಂಥಹ ಧರಿದ್ರ ಸೆಖೆಯಲ್ಲಿ...
ಹನಿಮೂನ್ ಮಾಡಿದ್ರು ಮಾರಾಯಾ....!!
ನೆನಪಾದರೆ ಸಾಕೋ... ಸಾಕು.. ಮಾರಾಯಾ..!!."

ನಾವೆಲ್ಲರೂ ನಕ್ಕು ನಕ್ಕು ಸುಸ್ತಾದೆವು...

ಶಾರೀ.... ಗಣಪ್ತಿನೂ ..ನಕ್ಕರು ...

ನಾವೂ ನಕ್ಕೇವು....

ಕಾರಣ .. ಬೇರೆ..ಬೇರೇಯೇ ಇತ್ತು...

ರಾತ್ರಿವರೆಗೆ ಅದು ಇದೂ ಮಾತಾಡುತ್ತ.. ಊಟ ಮಾಡಿ ಮಲಗಿದೆವು...

ಬೆಳಿಗ್ಗೆ ನಾಷ್ಟಾಕ್ಕೆ ಮಗೆಕಾಯಿ ತೆಳ್ಳೆವು" ಮಾಡಿದ್ದರು..
ಚೆನ್ನಾಗಿ ಪಟ್ಟಾಗಿ ತಿಂದು .."ಹೋಗಿ ಬರ್ತೇವೆ" ಎಂದು ಕಾರು ಹತ್ತಿದೆವು...

ನಮ್ಮನ್ನು ಕಳಿಸಲು ಬಂದ ಶಾರಿ..
ನನ್ನನ್ನೇ ನೋಡ್ತಿದ್ದಳು...
ನನ್ನನ್ನು ನೋಡ್ತಾಳೊ..??
ನನ್ನ ಹೊಟ್ಟೆಯನ್ನೋ... ಗೊತ್ತಾಗಲಿಲ್ಲ...!!

"ಅಲ್ವೋ ಪ್ರಕಾಶಾ...
ನೀನು ಬೆಂಗಳೂರಿಗೆ ಹೋದದ್ದು ಒಳ್ಳೆದಾಯ್ತು... !!
ಪುಣ್ಯಕ್ಕೆ ರೈತ ಆಗಲಿಲ್ಲ...!!."

"ಯಾಕೆ ಶಾರಿ..? ರೈತ ಆದ್ರೆ ಏನಾಗ್ತಿತ್ತು..?"

ಅಲ್ಲಪ್ಪಾ..! ಪುಣ್ಯಾತ್ಮಾ...!!
ಎತ್ತಿನ
ಗಾಡಿಯಲ್ಲಿ ಹೇಗೆ ಹೋಗ್ತಿದ್ದೆ ಮಾರಾಯಾ...?
ನೀನೇ ... ಒಂದು ಕ್ವಿಂಟಾಲ್ಲು ತೂಗ್ತೀಯಾ...!
ಅಡಿಕೆ, ಭತ್ತ... ಹಾಕ್ಕೊಂಡು...
ಸಿರ್ಸಿ ಮಾರ್ಕೆಟ್ಟಿಗೆ ಏನು ತಗೊಡು ಹೋಗ್ತಿದೀ..??
ಪಾಪ ಆಎತ್ತುಗಳ ಗತಿ ಏನು...?
ಪ್ರಾಣಿ ಹಿಂಸೆ ಆಗಿ ಬಿಡ್ತಿತ್ತು ಪುಣ್ಯಾತ್ಮಾ...!
ನೀನು ಬೆಂಗಳೂರಿಗೆ ಹೋಗಿದ್ದು ಒಳ್ಳೆದಾಯ್ತು ನೋಡು..."

ಅಲ್ಲಿಯೇ ಇದ್ದ ಗಣಪ್ತಿಗೆ ಕೋಪ ಬಂದಿತು...

"ಶಾರೀ ...ಎಂಥಹ ಮಾತು ಅಂತ ಆಡ್ತೀಯಾ ಮಾರಾಯ್ತಿ...?
ಈ ಮಾತನ್ನು ಪ್ರಕಾಶನ ಮುಂದೆ ಹೇಳಿದೆ ... ಸರಿಯಾಯ್ತು.....
ಇಂವ ಏನು ಹೇಳಿದ್ರೂ ಬೇಜಾರು ಮಾಡ್ಕೋಳೊಲ್ಲ..
ಯಾರಾದ್ರೂ ... ಮರ್ಯಾದಸ್ಥರ ಮುಂದೆ ಹೇಳಿ ಬಿಟ್ಟಿದ್ದರೆ.. ಏನು ಗತಿ..?
ಏನು ಕಥೆ..?
ನಿನು ಸುಮ್ನೆ ಇರು ಮಾರಾಯ್ತಿ...!!"

ನಾನು ನಗು ಬರದೇ ಇದ್ದರೂ ಹುಳಿ ನಗು ನಕ್ಕು...

ಟಾಟಾ ಮಾಡಿ ಮುಂದೆ ಹೊರಟೇವು...

ನನ್ನಾಕೆ ನನ್ನ ಬಳಿ ಮೆಲ್ಲನೇ ಹೇಳಿದಳು...

"ನಿಮ್ಮ ಶಾರಿ ನನಗೆ ಬಹಳ ಇಷ್ಟ ಆದ್ರು ಕಣ್ರೀ..
ಎಷ್ಟು ಒಳ್ಳೆಯವ್ರು..!!
ಹ್ರದಯವಂತರು.. ಚಿನ್ನದಂಥಹ ..ಮನಸ್ಸಿನವರು..!!
ಬಹಳ ಖುಷಿಯಾಗುತ್ತದೆ....!!


ನಾನಿನ್ನೂ ..... ಶಾರಿಯ... ಮನೆಯ...
ಗುಂಗಿನಿಂದ ಹೊರಗೆ ಬಂದಿರಲಿಲ್ಲ....

ರಸ್ತೆಯನ್ನೇ.. ನೋಡುತ್ತಿದ್ದೆ.....

ಬೆಂಗಳೂರಿನ ರಸ್ತೆಯ ನೆನಪಾಗುತ್ತಿತ್ತು...

ಹಳ್ಳಿಯ... ಮಣ್ಣಿನ ರಸ್ತೆಯ .....
ತಗ್ಗು.., ಗುಂಡಿಗಳನ್ನು ...
ಓರೆ ...ಕೋರೆಗಳನ್ನು...

ಅಕ್ಕಪಕ್ಕದ ಹಸಿರು.. ಗಿಡ ಮರಗಳನ್ನು....
ದಾಟಿ....

ಕಾರು ಮುಂದಕ್ಕೆ ಹೋಗುತ್ತಿತ್ತು....

ಹಿಂದೆ.. ಧೂಳೆಬ್ಬಿಸುತ್ತ......


( ಚಂದದ ಪ್ರತಿಕ್ರಿಯೆಗಳಿವೆ.... ..
ದಯವಿಟ್ಟು ಓದಿ...)


85 comments:

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಶಾರಿಯ ಮನೆಯ ಆತಿಥ್ಯ , ಪ್ರೀತಿ ತುಂಬಿದ ಮಾತುಗಳು, ಹಾಸ್ಯ ಚಟಾಕಿ, ಮಾತಿನ ವೈಖರಿ ಎಲ್ಲ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.
ತುಂಬಾ ಸುಂದರ ಬರಹ

ಮನಸು said...

ಪ್ರಕಾಶಣ್ಣ
ಸೂಪರ್!!! ನನ್ನ್ಗೆ ನಗು ತಡೆಯೊಕೆ ಆಗ್ತನೇ ಇಲ್ಲ.... ಅಂತಹ ಮನೆ, ಮನಸಿಗೆ ಹೋಗಿಬರಬೇಕು ಅಲ್ಲವೆ..? ಪ್ರಕಾಶಣ್ಣ ಸೀಮೆಂಟು ಕಟ್ಟಡಗಳ ನಡುವಿನಲ್ಲಿ ದೊರೆಯದ ಪ್ರೀತಿ ನಿಮಗೆ ದೊರಕಿದೆ ಹೋಗಿ ಬರುತ್ತಲಿರಿ, ನಿಮ್ಮವರಿಗು ಶಾರಿ ಇಷ್ಟವಾಗಿದ್ದರೆ... ಅವರ ಮಾತು ಬಹಳ ಇಷ್ಟವಾಯಿತು
ತುಂಬಾ ಖುಷಿಯಾಯಿತು.
ವಂದನೆಗಳು

Ittigecement said...

ಡಾ. ಗುರುಮೂರ್ತಿಯವರೆ..

ಸಹೋದರ ಸಂಬಂಧದ ಬಗೆಗೆ ಅವಳ ಮಾತುಗಳು..
ನನಗೆ ಬಹಳ ಇಷ್ಟವಾಯಿತು...

ಆ ಹಳ್ಳಿ ಮನೆಯ ಆದರ , ಆತಿಥ್ಯಗಳು..
ಊಟ, ಉಪಚಾರಗಳು...
ಮುಗ್ಧತೆ ನನ್ನ ಮನದಲ್ಲಿ ಹಸಿರಾಗಿಯೇ ಇದೆ...

ಕಳೆದ ವಾರದ "ವಿಜಯ ಕರ್ನಾಟಕದ" ಸಾಪ್ತಾಹಿಕದಲ್ಲಿ
ಬೆಳಗೆರೆಯವರು ಇದರ ಬಗೆಗೆ ಅರ್ಥಪೂರ್ಣವಾದ ಲೇಖನ ಬರೆದಿದ್ದಾರೆ...

ಮನತುಂಬಾ ನಕ್ಕರೂ...
ಮನದಲ್ಲೇ ಉಳಿದು ಬಿಡುತ್ತಾಳೆ ಈ ಮುಗ್ಧ ಶಾರಿ........

ಪ್ರತಿಕ್ರಿಯೆಗೆ ಧನ್ಯವಾದಗಳು...

ಧರಿತ್ರಿ said...

ಪ್ರಕಾಶ್ ಸರ್..
ಸಂಬಂಧಗಳು ಅಂದ್ರೆ ಹಿಂಗೇ...ಶಾರಿ,..ಗಣಪ್ತಿ..ಮನೆ ತುಂಬಾ ನೆಂಟರು..ಒಳ್ಳೆಯ ಬರಹ.
"..ಅಷ್ಟರಲ್ಲಿ ಹೆಣ್ಣುಮಗಳೊಬ್ಬಳು ಎರಡು ಹಿತ್ತಾಳೆಯ ತಂಬಿಗೆಯಲ್ಲಿ ನೀರು ಇಟ್ಟು ನಮಗೆಲ್ಲ ನಮಸ್ಕರಿಸಿದಳು.."..ಇಂಥ 'ಬದುಕು' ಉಳಿದಿರುವುದು ಹಳ್ಳಿಯ ಮುಗ್ಧ ವಾತಾವರಣದಲ್ಲೇ ಅಲ್ವಾ? ನಂಗೆ ಈ ವಾಕ್ಯ ಓದುತ್ತಾಲೇ ಯಾಕೋ ಮನಸ್ಸು ಒಂದ್ಸಲ ಈ ಬೆಂಗಳೂರು ಮತ್ತು ನಮ್ಮನೆ ನೆನಪಾಗತೊಡಗಿತು ಸರ್. ಅಭಿನಂದನೆಗಳು..

-ಧರಿತ್ರಿ

ವಿನುತ said...

ಅದೆ೦ತ ಆಪ್ತತೆ, ಮುಗ್ಧತೆ! ಅದನ್ನು ಹಾಗೇ ಪದಗಳಲ್ಲಿ ಹಿಡಿದಿದ್ದೀರಿ. ಗೆಳೆಯ, ಸಖ ಸಿಗುತ್ತಾರೆ ಆದರೆ ಅಣ್ಣ ತಮ್ಮ ಸಿಗುವುದಿಲ್ಲ ಎನ್ನುವ ಮಾತು ಎಷ್ಟು ಅರ್ಥಪೂರ್ಣ! ಹಳ್ಳಿಯ ಸೊಗಡೇ ಅದು. ಚಂದದ ಬರಹಕ್ಕೆ ಅಭಿನ೦ದನೆಗಳು.

Santhosh Rao said...

saar.. tumba chennagide..

Ittigecement said...

ಮನಸು....

ನಿಜ ಹೇಳಬೇಕೆಂದರೆ...
ಇನ್ನೂ ಎರಡು ಪ್ರಸಂಗಗಳನ್ನು ಇಲ್ಲಿ ಕೈಬಿಟ್ಟಿದ್ದೇನೆ....

೧)ಶಾರಿಯ "ಮೊದಲ ರಾತ್ರಿಯ ಕಥೆ.."
೨)ನಾವು ಸಣ್ಣವರಿದ್ದಾಗಿ ಒಂದು ಭಾವ ಪೂರ್ಣವಾದ ಘಟನೆ...

ಇವೆರಡನ್ನೂ ಬರೆದರೆ ಇನ್ನೂ ಉದ್ದವಾದೀತೆಂದು ಬರೆಯಲಿಲ್ಲ....

ಆ ಮುಗ್ಧ ದಂಪತಿಗಳ "ಮೊದಲ ರಾತ್ರಿಯ" ಅನುಭವದ
ಜಗಳವೂ ಮಜವಾಗಿತ್ತು...
ಸೆನ್ಸಾರ್ ಮಾಡದೆ ವಿಧಿಯಿರಲಿಲ್ಲ....

ನೀವು ನಕ್ಕು ಪ್ರೋತ್ಸಾಹಿಸಿದ್ದಕ್ಕೆ ಹ್ರದಯ ಪೂರ್ವಕ ವಂದನೆಗಳು...

Ittigecement said...

ಧರಿತ್ರಿ....

ಆ ಮನೆಯಲ್ಲಿ ಎಲ್ಲರೂ ನಮ್ಮನ್ನು ಏಕವಚನದಲ್ಲಿ ಮಾತಾಡಿಸಿದರು..
ಕಿರಿಯ ಮಕ್ಕಳೂ ಸಹ....
ಮನೆಯಲ್ಲಿ ಪ್ರತಿಯೊಬ್ಬರು ಜಗುಲಿಗೆ ಬಂದು ಮಾತನಾಡಿಸಿದರು ನಗುಮೊಗದಿಂದ....

ನಮ್ಮ ಊರಿನಲ್ಲಿ ಏಕವಚನದಲ್ಲಿ ಮಾತಾಡುವದು ತೀರಾ ಸಹಜವಾದ ವಿಷಯ....
ದೇವರಲ್ಲಿ ಪ್ರಾರ್ಥಿಸುವಾಗ ಏಕವಚನದಲ್ಲಿಯೇ ಮಾತಾಡುತ್ತೇವೆ...
ಏಕವಚನದಲ್ಲಿ ನಮಗೆ ಅರಿವಿಲ್ಲದಂತೆ "ತಡೆ ಗೋಡೆ" ಇದ್ದುಬಿಡುತ್ತದೆ...

ಇನ್ನು ಆದರ ಆತಿಥ್ಯಕ್ಕೆ ನಾನಂತೂ ಮನಸೋತಿದ್ದೇನೆ...

ಇಮ್ಮ ಚಂದದ ಪ್ರತಿಕ್ರಿಗೆ ಹ್ರದಯ ಪೂರ್ವಕ ಧನ್ಯವಾದಗಳು...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ತುಂಬಾ ತಮಾಷೆಯಾಗಿದೆ.
ಅವರ ಮುಗ್ದತೆ ಇಷ್ಟ ಆಯ್ತು.

Ittigecement said...

ವಿನೂತಾ...

ಆ ಘಟನೆಗಳನ್ನು ಬ್ಲಾಗ್ ಓದುಗರಿಗೆ...
ಹೇಳುವದು ಕಷ್ಟ...
ಇಲ್ಲಿ ಲೇಖನಗಳು ಉದ್ದವಾದರೆ ಓದುವವರು ಕಡಿಮೆ..
ಹಾಗಾಗಿ ಎರಡು ಸಣ್ಣ ವಿಷಯಗಳನ್ನು ಕೈಬಿಟ್ಟಿದ್ದೇನೆ...

ಬರೆಯುವಾಗಲೂ ನನಗೆ ಸಿಕ್ಕಾಪಟ್ಟೆ ನಗು ಬರ್ತಿತ್ತು...

ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಟಾನಿಕ್ ಥರ...

ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಸಂತೋಷ್....

ಬಹಳ ದಿನಗಳ ನಂತರ ... ಬರುತ್ತಿರುವಿರಿ...
"ಮಿಲ್ತಿ ಹೈ ಜಿಂದಗೀ ಮೇ ಮೊಹಬ್ಬತ್ ಕಭಿ ಕಭಿ "
ಲೇಖನದ ನಂತರ ನೀವು ಬ್ಲಾಗಿಗೆ ಬರಲಿಲ್ಲ....

ಬರುತ್ತಾ ಇರಿ...

ಬೆಂಗಳೂರಿನ ಬೀದಿಗಳಲ್ಲಿ ಹನಿಮೂನು ಅಂದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆ...
ಅವರೂ ನಕ್ಕಿದ್ದರು....
ಆದರೆ ಅವರ ದ್ರಷ್ಟಿಯಲ್ಲಿ ಬೂಟಾಟಿಕೆ ಇಲ್ಲ....
ನಾಟಕದ ಕ್ರತ್ರಿಮತೆ ಇಲ್ಲ...

ಸಹಜ ಪ್ರೀತಿಗೆ ಬೇರೆ ಕಡೆಯೆಲ್ಲ ತೀರುಗುವದು ಏಕೆ...?
ಸಿರ್ಸಿ ಪೇಟೆಯೇ ಸಾಕೆನ್ನುವ ಭಾವ...

ಈ ಆರ್ಥಿಕ ಹಿಂಜರಿತದಲ್ಲಿ... ಟೂರಿಸಂ ಹೇಗಿದೆ...?
ನೀವು ಅದರಲ್ಲೇ ಇದ್ದೀರಲ್ಲವೆ..?

ಪ್ರತಿಕ್ರಿಯೆಗೆ ವಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಈ ಲೇಖನ ಓದಿ ನಗುತ್ತಲೇ ಆಲೋಚನೆಗಳೂ ಹುಟ್ಟುತ್ತಿವೆ. ಇಲ್ಲಿ ಮುಗ್ಧತೆಯಿದೆ, ಸೋದರ ಸಂಬಂಧದ ಆಪ್ತತೆ ಇದೆ, ಮುಖವಾಡವಿಲ್ಲದ ಬದುಕಿದೆ, ಕಲುಷಿತಗೊಳ್ಳದ ಪ್ರೀತಿಯುಳ್ಳ ಮನಸ್ಸಿದೆ. ಹನಿಮೂನೆಂದರೆ ಒಂಥರಾ ಜಾಮೂನು ಅಂದುಕೊಂಡಿದ್ದ ನಿಮ್ಮ ಶಾರಿಯವರಂತಹ ಯಾರಿಗೇ ಆದರೂ ಈ ಸಿಟಿ, ಬಿಸಿ, busy, ಟ್ರಾಫಿಕ್, ಎಲ್ಲಾ ಅವಾಂತರದಂತೆ ಭಾಸವಾಗುತ್ತೆ. ಯಾರಾದರೂ ಮರ್ಯಾದಸ್ತರಿಗೆ ಅಂದಿದ್ದರೆ?! ಎನ್ನುವುದು ಕೂಡ ಮುಗ್ಧತೆ ಮತ್ತು ತಮಾಷೆ ಅನ್ನಿಸುತ್ತೆ ವಿನಹ ಕೋಪ ತಾಪ ಬರದು. ನೀವು ನಿಮ್ಮ ಲೇಖನದಲ್ಲಿ ಹಾಸ್ಯದ ಮೂಲಕ ಬೇರೇನೋ ಕೊಡುತ್ತೀರಿ. ಅದನ್ನು ಗಮನಿಸುತ್ತಾ ಇಷ್ಟೆಲ್ಲಾ ಕೊರೆದೆನಷ್ಟೇ.

Ittigecement said...

ಶಿವಶಂಕರ್....

ಈ ಲೇಖನದಲ್ಲಿ "ಹನಿಮೂನ್" ಅರ್ಥವೇ ಬದಲಾಗಿದೆ....

ಅಪರೂಪಕ್ಕೆ ಬೆಂಗಳೂರಿಗೆ ಬಂದ ಹೊಸ ಜೋಡಿ...
ಹಣ ಉಳಿಸಲು ನಡೆದಾಡಿ ಸುತ್ತಾಡಿದ "ಹನಿಮೂನ್" ಕಥೆ...
ನಿಮಗೆ ಇಷ್ಟವಾಗಿದ್ದಕ್ಕೆ
ಧನ್ಯವಾದಗಳು...

Anonymous said...

Nimma post oodida mele onthara 'nostalgic' feeling!!...yaakendre,neevu helida aadara aathithya nodi yugave kaledideyeno annisutte!!

nimma gelathi 'shaari' nanagu balyada gelathi agidre yestu chennagitthu!!

Again an interesting Post .... Keep writing!!!

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಅದೆಂತಹ ಅಮಾಯಕತೆ ಮತ್ತು ಮುಗ್ಧತೆ ಅಲ್ವ...
ಇನ್ನೂ ಹಳ್ಳಿಗಳಲ್ಲಿ ಇಂತಹ ಆತ್ಮೀಯತೆಯ ಜನ ಸಿಕ್ತಾರೆ ಅಂದರೆ ಅದೆಷ್ಟು ಖುಷಿ ಆಗುತ್ತೆ ಅಲ್ವ.

umesh desai said...

ಹೆಗಡೆ ಅವರೆ ನಿಮ್ಮ ಶಾರಿಅಂತಹವರು ಮರುಭೂಮಿಯ ಓಯಸಿಸ್ ಇದ್ದಹಂಗೆ ಈ "ಬೆಂಗಾಡೆಂಬ ಬೆಂಗಳೂರಿನಲ್ಲಿ" ಇಂತಹ
ನಿರ್ಮಲ ವ್ಯಕ್ತಿ ಸಿಗೋದೇ ಇಲ್ಲ ಇದು ನನ್ನ ಚಾಲೆಂಜ್ ಏನಂತೀರಿ

Unknown said...

ಪ್ರಕಾಶ್
ಶಾರಿಯ ಬಗ್ಗೆ ನಿಮ್ಮ ಶ್ರೀಮತಿಯವರ ಉಪಸಂಹಾರದ ನುಡಿ ಉಚಿವಾಗಿಯೇ ಇದೆ. ಅದರ ಕೆಳಗೆ ನಮ್ಮ ಸಹಿಯೂ ಹಾಕಿಬಿಡುತ್ತೇವೆ. ಇಲ್ಲಿ ಒಂದು ಮಾತನ್ನು ಹೇಳಬೇಕೆನ್ನಿಸದೆ. ಅದು ನಿಮ್ಮ ಕಥನಶೈಲಿಯ ಬಗ್ಗೆ. ನನಗಂತೂ ಇಷ್ಟು ಖಡಕ್ಕಾದ ಗದ್ಯ ಓದುವುದೆಂದರೆ ಬಲೇ ಖುಷಿ. ದಿನದಿಂದ ದಿನಕ್ಕೆ ನಿಮ್ಮ ಕಥನಶೈಲಿ ಪಕ್ವವಾಗುತ್ತಿದೆ. ಉದಾಹರಣೆಗೆ ಒಂದು ಸಾಲು ನೋಡಿ. ವಯಸ್ಸಿನಲ್ಲಿ ಹಿರಿಯರಾದವರು..
"ಆರಾಮಾ...? ಚೆನ್ನಾಗಿದ್ದೀಯೇನಪ್ಪಾ..?


ವಯಸ್ಸಿನಲ್ಲಿ ಸಣ್ಣವರು...
"ಮಾಮಾ... ಚಿಕ್ಕಪಾ...ಅಣ್ಣಾ.!" ಅಂದರು...


ಎಲ್ಲರೂ ಬಾಯಿತುಂಬಾ ಮಾತನಾಡಿಸಿದರು...
ಇಷ್ಟೇ ಮಾತುಗಳನ್ನು ಇಷ್ಟೊಂದು ಸಂಕ್ಷಿಪ್ತವಾಗಿ ಬರೆದಿರುವುದನ್ನು ನಾನು ಹೇಗೆ ಬರೆಯುತ್ತಿದ್ದೆ ಎಂಬುದನ್ನು ಕಲ್ಪಿಸಿಕೊಂಡಾಗ, ನಿಮ್ಮ ಗದ್ಯಶೈಲಿಯ ಅನನ್ಯತೆ ನನಗೆ ಮನದಟ್ಟಾಯಿತು. ಹೀಗೇ ಬರೆಯುತ್ತಿರಿ. ನಿಮ್ಮ ಅನುಭವಕ್ಕೆ ಪೂರಕವಾಗಿ ನಿಮ್ಮ ಕಥನಶೈಲಿ ಕೆಲಸ ಮಾಡುತ್ತಿರಲಿ. ಒಳ್ಳೆಯದು

ಬಾಲು said...

ತಂಬ ಚಂದ ಇದೆ ಲೇಖನ, ಬರವಣಿಗೆಯ ಶೈಲಿ ಇನ್ನು ಸೂಪರ್.
ಹಳ್ಳಿಯ ಮುಗ್ದತೆ, ಅವರ ಪ್ರೀತಿಯ ಆತಿಥ್ಯ ತುಂಬ ಚೆನ್ನಾಗಿ ವರ್ಣಿಸಿದ್ದಿರಿ...

ಓದಿ ಕುಶಿ ಆಯಿತು.

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ... ನಿಮ್ಮ ಲೇಖನಗಳು ಮನಸಿಗೆ ಟಾನಿಕ್ ಇದ್ದ ಹಾಗೆ.... ಬೇಜಾರಾಗಿರುವಾಗ ಓದಿದರೆ ಬೇಸರವೆಲ್ಲಾ ಮಾಯ!

ಶಾರಿಯ ಮುಗ್ಧ ಮನಸು ತು೦ಬಾ ಇಷ್ಟವಾಯಿತು....

ಬಿಸಿಲ ಹನಿ said...

ತಮಾಷೆಯಾಗಿ ಸಾಗುವ ನಿಮ್ಮೀ ಬರಹ ಶಿರ್ಶಿ ಕಡೆಯವರ ಆದರ ಆತಿಥ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಒಳ್ಳೆ ಬರಹಕ್ಕೆ ಥ್ಯಾಂಕ್ಸ್.

Ranjana Shreedhar said...

ಪ್ರಕಾಶಣ್ಣ,
ನಿಮ್ಮ ಈ ಬರಹ ಯಾವಾಗ್ ಬರತ್ತೆ ಅಂತ ಕಾಯ್ತಾ ಇದ್ದೆ. ನಿನ್ನೆ ರಾತ್ರಿ 11.30 ಗೆ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ ಹೇಳಿದರು "ಈ ಮಾತನ್ನು ಯಾರಾದರೂ.. ಮರ್ಯಾದಸ್ಥರ ಮುಂದೆ ಹೇಳಿದಿದ್ರೆ... ಏನು ಗತಿ..?" ಅಂತ ಒಂದು ಪೋಸ್ಟ್ ಹಾಕಿದಾರೆ ಅಂತ. ಓದಲೇ ಬೇಕು ಅಂತ ಎಷ್ಟು ತುಡಿತ ಇತ್ತು ಅಂದರೆ, ಫೋನ್ ಮಾಡಿದ ಸ್ನೇಹಿತರಿಗೆ 'ನೀವೇ ಓದಿ ಹೇಳಿ ಪ್ಲೀಸ್' ಅಂತ ಒತ್ತಾಯಿಸಿದ್ದೆ. ನನ್ನ ಒತ್ತಾಯಕ್ಕೆ ಮಣಿದು ಓದಿ ಹೇಳಿದರು ಪಾಪ....!!
ನಾನ್ ಹೇಳೋದು ಇಷ್ಟೇ ಪ್ರಕಾಶಣ್ಣ... ನಿಮ್ಮ ಬರವನಿಗೆನ ಮತ್ತೆ ಮತ್ತೆ ಓದಬೇಕು ಅನ್ನೋ ಹಂಬಲ ಇರುತ್ತೆ...
ನೀವು ಶಾರಿ ಮನೆಗೆ ಹೋಗಿದ್ದು, ಅಲ್ಲಿನ ಮಾತುಕತೆ, ಆತಿಥ್ಯ ಎಲ್ಲ ಓದಿ ನನಗೂ ಸಿರ್ಸಿಯ ಸಂಬಂಧಿಗಳು ನೆನಪಾದರು.
ಇನ್ನು ಶಾರಿಯಾ ಮುಗ್ದತೆ ಇಷ್ಟ ಆಯ್ತು. ಅವಳ ಹನಿಮೂನಿನ ಕತೆ ನಗು ತರಿಸಿತು.
ತುಂಬಾ ಚೆನ್ನಾಗಿದೆ. ಹೀಗೆ ಬರೆಯುತ್ತಿರಿ. ನಿಮ್ಮ ಬರವನಿಗೆಗೊಸ್ಕರ ಕಾಯ್ತಾ ಇರ್ತೀನಿ.

Veena DhanuGowda said...

Hello sir,

Hasyada lepana chennagide :)
namelarigu shaariyavaranu nodo bhagyava omme kalpisikodi.. maguvinata manasu, intavara kuddi balode chanda....
jeevanada ragalegalinda sotu sunavagiro manasige nim haasyada barahagalu ontara majakodtave :)
Thanks :)

shivu.k said...

ಪ್ರಕಾಶ್ ಸರ್,

ಹಳ್ಳಿ ಸೊಗಡಿನ ಅತಿಥ್ಯ, ಪ್ರೀತಿಯ ಮಾತುಗಳು, ನಗು ಇತ್ಯಾದಿಗಳನ್ನು ಹಳ್ಳಿಯ ಜನರು ಕೊಡುವಷ್ಟು ಚೆನ್ನಾಗಿ ಬೇರೆಯವರು ಕೊಡಲಿಕ್ಕೆ ಸಾಧ್ಯವಾ...

ಶಾರಿಯ ಮುಗ್ಧತೆಯ ಜೊತೆಗೆ ಆಕೆಯ ತಿಳಿಹಾಲಿನಂತ ಪ್ರೀತಿ ಇಷ್ಟವಾಯಿತು.

ಧನ್ಯವಾದಗಳು.

sunaath said...

ಪ್ರಕಾಶ,
ಮನಸ್ಸಿಗೆ ತಟ್ಟುವ, ವಿನೋದದ ಲೇಪನವಿರುವ ಲೇಖನಗಳು ನಿಮ್ಮಿಂದ ಬರುತ್ತಲೇ ಇವೆ. ಪ್ರತಿ ಸಲದಂತೆ ಈ ಲೇಖನವನ್ನೂ ತುಂಬಾ enjoy ಮಾಡಿದೆ.
ಒದುಗರೆಲ್ಲರಿಗೂ ಥರಾ ಸಿಹಿ ಬಡಿಸ್ತಾ ಇರೋ ನಿಮಗೆ ಎಷ್ಟು
ಧನ್ಯವಾದ ಹೇಳಲಿ?

Umesh Balikai said...

"ಯಾರಾದ್ರೂ ... ಮರ್ಯಾದಸ್ಥರ ಮುಂದೆ ಹೇಳಿ ಬಿಟ್ಟಿದ್ದರೆ.."

ಹ್ಹ ಹ್ಹ ಹ್ಹಾ... ಅವರಿಗೆ ತಾವು ಏನಂದಿದ್ದು ಅಂತ ಕಡೆಗೂ ಗೊತ್ತಾಯ್ತೋ ಇಲ್ವೋ... ನೀವು ಮಾತ್ರ ಚೆನ್ನಾಗಿ ನೆನಪಿಟ್ಟೀದ್ದೀರ..ಒಳ್ಳೇ ಶಾರಿ, ಗಣಪ್ತಿ ...

"ಮದುವೆಗೆ...
ಫ್ರೆಂಡು.. ಗೆಳೆತನಕ್ಕೆ...
ಲವ್ ಮಾಡಲಿಕ್ಕೆ ಜೀವನದಲ್ಲಿ ಇರ್ತಾರೆ..
ಬೇಕದಷ್ಟು ಜನ ಸಿಕ್ತಾರೆ ಕಣೊ...
ನನ್ನ ಮಕ್ಕಳಿಗೆ ಅಣ್ಣನಾಗಿ.., ತಮ್ಮನಾಗಿ ನಿನ್ನ ಮಗ ಇರಲಿ...
ಆ ಭಾವ ಸಂಬಂಧ ಯಾವಾಗ್ಲೂ ಇರ್ತದೆ....
"

ಹೌದಲ್ವಾ.. ಮದ್ವೆ ಆಗಿ ಬಿಟ್ರೆ ಅನ್ಯಾಯವಾಗಿ ಸಹೋದರ ಸಂಬಂಧ ಕೊನೆಗೊಂಡಂತೆ ಅಲ್ವಾ..

Ittigecement said...

ಶಿವಪ್ರಕಾಶ್.....

ಶಾರಿಯ ಮುಗ್ಧ ಮಾತುಗಳಲ್ಲಿರುವ ...
ಆತ್ಮೀಯ ಭಾವ...
ಊಟ ಉಪಚಾರದಲ್ಲಿ ಆಪ್ತತೆ...
ಗಣಪ್ತಿಯ ಭಾವಪೂರ್ಣ ಮಾತುಗಳು...

ನನ್ನನ್ನು ಮಂತ್ರಮುಗ್ಧರನಾಗಿಸಿತ್ತು...

ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ತಗ್ಗು, ಗುಂಡಿಗಳಿವೆ....
ಓರೆಕೋರೆಗಳಿದ್ದರೂ..
ಹಸಿರು ಎಲೆಗಳ ಮೇಲೆ...
ಧೂಳೆಬ್ಬೆಸುವದು..
ಈ ಪೇಟೆಯ ಕಾರುಗಳು...
ಅಲ್ಲವಾ...?

ಪ್ರತಿಕ್ರಿಯೆಗೆ ವಂದನೆಗಳು....

Guruprasad said...

ಪ್ರಕಾಶ್ ...
ತುಂಬ ಚೆನ್ನಾಗಿ ಬರೆದಿದ್ದೀರ ನಿಮ್ಮ ಅನುಭವವನ್ನ.... ಹಿಂದಿನ ಮತ್ತೆ ಇ ಎರಡು ಕತೆ,,, ನೈಜತೆಯಲ್ಲೂ ಹಾಸ್ಯದಲ್ಲೂ ತುಂಬ ಚೆನ್ನಾಗಿ ಮೂಡಿ ಬಂದಿದೆ....
ಶಾರಿ ಮತ್ತು ಅವರ ಮನೆಯವರ ಮುಗ್ದತೆ ಆತ್ಮೀಯತೆ , ಪ್ರೀತಿ,, ಎಲ್ಲ ಇಷ್ಟ ಆಯಿತು... ಹಳ್ಳಿ ಕಡೆ ಹೀಗೆ ಅಲ್ವ.. ತುಂಬ ರೆಸ್ಪೆಕ್ಟ್ ಕೊಟ್ಟು ಮಾತಾಡಿಸ್ತಾರೆ...ಗೊತ್ತಿರಲಿ ಗೊತ್ತಿಲದೇ ಇರಲಿ,,,ಎಷ್ಟು ಚೆನ್ನಾಗಿ ವಿಚಾರಿಸಿಕೊಳ್ಳುತ್ತಾರೆ....(ಇವಾಗ ಅದು ಮಾಯವಾಗ್ತಾ ಇದಿಯೆನೊ ಅಂತ ಅನಿಸ್ತ ಇದೆ)
ತುಂಬ ಧನ್ಯವಾದಗಳು ......

ಗುರು

Unknown said...

lekhana tumba chennagide.Shari koneyalli horaduvaga helida matugalu tumba khushi tanditu.ettugala bagge iruva kalaji nodi..halli janara prani preeti.

PARAANJAPE K.N. said...

ಪ್ರಕಾಶರೇ,
ನಿಮ್ಮ ಈ ಬರಹದಲ್ಲಿ ನಾನು ಕ೦ಡ ವಿಶೇಷತೆ ಎ೦ದರೆ ಇಡೀ ಪ್ರಸ೦ಗವನ್ನು ಒ೦ದು ಕಥಾನಕದ ರೂಪದಲ್ಲಿ ನೀವು ಕಟ್ಟಿಕೊಟ್ಟ ರೀತಿ. ಬಹಳ ಚೆನ್ನಾಗಿದೆ. ಹಳ್ಳಿಮನೆಗಳಲ್ಲಿ ಸಿಗುವ ಆತಿಥ್ಯ, ನಿಷ್ಕಲ್ಮಶ ಪ್ರೀತಿ, ನಗರಗಳಲ್ಲಿ ಅಲಭ್ಯ. ಇಲ್ಲಿ ಎಲ್ಲವು ಕೃತಕ ಮತ್ತು ಯಾ೦ತ್ರಿಕ. ನಗರವಾಸಿಗಳ ದೇಶಾವರಿ ನಗುವಿಗೂ ಹಳ್ಳಿಯವರ ಮುಗ್ಧತೆ ಮತ್ತು ಪ್ರೀತಿ ತು೦ಬಿದ ನಗುವಿಗೂ ವ್ಯತ್ಯಾಸ ನಿಚ್ಚಳ. ನಿಮ್ಮ " ಶಾರಿಯ ಹನಿಮೂನಾಯಣ" ಚೆನ್ನಾಗಿದೆ.

Ittigecement said...

ಹುಡುಕಾಟದ ಮಲ್ಲಿಕಾರ್ಜುನ್....

ಇಂಥಹ ಪ್ರತಿಕ್ರಿಯೆಗಳು ಬಹಳ ಖುಷಿ ತರುತ್ತವೆ...
ಬರೆದದ್ದು ಸಾರ್ಥಕತೆಯ ಅನುಭವ...

ನಮ್ಮ ಶಾರಿಗೆ ಹನಿಮೂನ್ ಎಂದರೆ ಕೊನೆಯವರೆಗೂ ಗೊತ್ತಾಗಲಿಲ್ಲ...
ನಾವೂ ಸಹ ಹೇಳುವ ಪ್ರಯತ್ನ ಕೂಡ ಮಾಡಲಿಲ್ಲ...
ಹಾಗೆ ಹೇಳುವದು ತಪ್ಪಾದೀತೆಂಬ ಭಾವನೆ ಬಂದಿತು...

ಆ ಸಂದರ್ಭದಲ್ಲಿ ಅವರೂ ನಕ್ಕರು..
ನಾವೂ ನಕ್ಕೆವು... ಕಾರಣ ಬೇಬೇರೆನೇ ಇತ್ತು...

ಮಗುವಿನಂಥಹ ಹೂ ಮನಸ್ಸಿನ ಶಾರಿಯ ಮಾತುಗಳಿಗೆ ಹೇಗೆ ಕೋಪ ಮಾಡಿಕೊಳ್ಳಲಿ...?

ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...

ನೀವು, ಶಿವು ಬ್ಲೊಗ್ ಲೋಕಕ್ಕೆ ನನ್ನನ್ನು
ಕರೆ ತಂದಿದ್ದಕ್ಕೆ ಯಾವಾಗಲೂ ಕ್ರತಜ್ಞನಾಗಿರುವೆ....

Ittigecement said...

ಸುಮನಾರವರೆ...

ಆ ಆತಿಥ್ಯ, ಮುಗ್ಧ ಪ್ರೀತಿ ವಾತ್ಸಲ್ಯಗಳು..
ಇನ್ನೂ ಹಳ್ಳಿಗಳಲ್ಲಿ ಇವೆ...
ಎಲ್ಲಾ ಹಳ್ಳಿಗಳಲ್ಲೂ, ಹಳ್ಳಿಯ ಮನೆಗಳಲ್ಲೂ ಅಲ್ಲ...
ಆದರೆ ಇನ್ನೂ ಜೀವಂತವಾಗಿರಲು ಹೆಣಗುತ್ತಿವೆ....

ಈ ಆಧುನಿಕತೆಯ ಸೋಗಲಾಡಿತನದ ಮುಂದೆ...
ಕೀಳರಮೆಯಿಂದ ಹೊರಬರಲಾರದೆ ಒದ್ದಾಡುತ್ತಿವೆಯೆನೋ...

ಅಂಥಹ ಬೆಟ್ಟದಷ್ಟು ಪ್ರೀತಿಯ ಬೆಚ್ಚಗಿನ ಅನುಭವ...
ಸಿಗುವದು ದುರ್ಲಭ...
ಸಿಕ್ಕಾಗ ಮನದಣಿಯೇ...
ಮೌನವಾಗಿ ಅನುಭವಿಸಿದ್ದೇನೆ...
ಖುಷಿಪಟ್ಟಿದ್ದೇನೆ...

ನಿಮ್ಮ ಚಂದದ ಪ್ರತಿಕ್ರಿಯೆಗೆ ಹ್ರದಯ ಪೂರ್ವಕ ಧನ್ಯವಾದಗಳು...

Ittigecement said...

ರಾಜೇಶ್....

ಎಲ್ಲರಲ್ಲೂ ಅಂಥಹ ಮನಸ್ಸಿರುತ್ತದೆ...
ತುಂಬಾ "ಪ್ರ್ಯಾಕ್ಟಿಕಲ್" ಆಗಿರುವದು ಬದುಕಿನ ಅನಿವಾರ್ಯತೆಯೂ ಅಲ್ಲ..
ಅಂಥಹ ಜನರನ್ನು ಕಂಡಾಗ ಖುಷಿಪಡುವ ಮನಸ್ಸಿದೆ ಎಂದಾದರೆ...
ಅವರಲ್ಲಿಯೂ ಆ ಮನಸ್ಸು ಇನ್ನೂ ಇದೆಯೆಂತಲೇ ಅರ್ಥ.
(ಆತ್ಮ ಪ್ರಶಂಸೆಗೆ ಹೇಳುತ್ತಿಲ್ಲ)

ಬೆಂಗಳೂರಿನಲ್ಲಿ ಮೊನ್ನೆ ಒಂದು ಮಗುವಿನ
ಹುಟ್ಟಿದ ಹಬ್ಬಕ್ಕೆಂದು ಹೋಗಿದ್ದೆ...
ಆ ಅಪ್ಪ, ಅಮ್ಮರ ಮೆರೆದಾಟಕಂಡು ಮೂಕನಾಗಿದ್ದೆ...
ಬೇಸರದ ಸಂಗತಿಯೆಂದರೆ ಆ ಮಗು ಕೂಡ ಹಾಗೆಯೇ ಇತ್ತು...

ಹೊರದೇಶದಲ್ಲಿರುವ ಸಹೋದರಿಯೊಬ್ಬರು..
"ಮತ್ತೆ ಹಳ್ಳಿಗೆ ಹೋಗಿ ಇದ್ದು ಬಿಡೋಣ ಅನಿಸುತ್ತದೆ ಪ್ರಕಾಶಣ್ಣ"
ಅನ್ನುವಾಗ ಡಂಬಾಚಾರದ ಜೀವನ ಬೇಸರ ಬಂದಿದೆ ಎಂತಲೇ ಅರ್ಥ..
ಅಲ್ಲವಾ...?

ಮನದಲ್ಲಿ ದ್ವಂದ್ವವಿದ್ದರೂ...
ಆಧುನಿಕತೆ ಬಿಡಲಾಗದೆ ಒದ್ದಾಡುತ್ತದೆ...
ಪೇಟೆ ಪಟ್ಟಣದ ಮನಸ್ಸು...

ರಾಜೇಶ್...
ತುಂಬಾ.... ತುಂಬಾ ಧನ್ಯವಾದಗಳು....

Ittigecement said...

ಉಮೇಶ್ ದೇಸಾಯಿರವರೆ.....

ಇಲ್ಲಿನ ಶಿಷ್ಟಾಚಾರಗಳು ಅಂಥಹ ಮನಸ್ಸನ್ನು ಸಾಯಿಸಿ ಬಿಡುತ್ತವೆ..

ನಮ್ಮ ಮನೆಯಲ್ಲೇ ನಮ್ಮ ಮಗು "ಮುಗ್ಧತೆ" ಪ್ರಕಟಿಸಿದರೆ..
ನಾವು ಅದನ್ನು ತಿದ್ದಿ...
ಆಧುನಿಕತೆಯ ಬಣ್ಣ ಬಳಿಯುತ್ತೇವೆ....
"ಮಗನೆ ನೀನು ಹೀಗೆ ಇರಬೇಕು.. ಹೀಗೆ ಕುಳಿತುಕೊಳ್ಳಬೇಕು...
ಮನೆಗೆ ಬಂದ ಗೆಸ್ಟ್ ನ್ನು ಹೀಗೆಯೇ ಮಾತಾಡಿಸಬೇಕು....
ನೀನು ಇಂಥಹ ಗೆಳೆಯರನ್ನೇ ಮಾಡಿಕೊಳ್ಳ ಬೇಕು...ಇತ್ಯಾದಿ...

ಮುಗ್ಧತೆ ಬೇಕೆಂಬ ತುಡಿತವಿದ್ದರೂ...
ಪ್ರಬುದ್ಧತೆ ಎನ್ನುವ ಸೋಗಲಾಡಿತನ
ಆಧುನಿಕತೆಗೆ... ಅನಿವಾರ್ಯ....
ಅಂತ ಅನಿಸಿ ಬಿಟ್ಟಿದೆ....

ಲೇಖನ ಮೆಚ್ಚಿದ್ದಕ್ಕೆ ವಂದನೆಗಳು....

Godavari said...

ಪ್ರಕಾಶ ಅವರೇ,

ತುಂಬಾ ಚೆನ್ನಾಗಿದೆ ನಿಮ್ಮ ಸೆನ್ಸ್ ಆಫ್ ಹ್ಯೂಮರ್.. ನೀವು ಬರೆದ ಉಳಿದ ಚಿಕ್ಕ ಕಥೆಗಳನ್ನೂ ಓದಿದ್ದೇನೆ.. ಎಲ್ಲವೂ ಇಷ್ಟವಾದವು.. ನಿಮ್ಮ ಇಂತಹ ಹಾಸ್ಯಮಯ ಬರಹಗಳಿಗೆ ಕಾಯುತ್ತಿರುತ್ತೇವೆ..

-ಗೋದಾವರಿ

Unknown said...

Good one Prakashanna... Got to know the new definition for "honeymoon"

--> Sadashiv

ಕ್ಷಣ... ಚಿಂತನೆ... said...

ಸರ್‍, ಶಾರಿಯ ಮುಗ್ಧತೆ ಮನಸೆಳೆಯುತ್ತದೆ. ಅಲ್ಲದೆ ಹಳ್ಳಿಯ ಜನಜೀವನದಲ್ಲಿ ಈ ಮುಗ್ಧತೆ, ಪ್ರಾಮಾಣಿಕತೆ, ಕಕ್ಕುಲತೆ ಇವೆಲ್ಲವನ್ನೂ ಪಟ್ಟಣಿಗರಾದ ನಮಗೆ ಅಪರಿಚಿತವೆನಿಸಿದರೂ, ಅವರ ನಡೆನುಡಿಗಳಿಗೆ ಮಾರುಹೋಗದವರಾರು? ಎಂಬ ಪ್ರಶ್ನೆ ಮೂಡುವುದು ಸಹಜ ಎಂಬುದು ನನ್ನ ಅನಿಸಿಕೆ.

ಇಂತಹ ಒಂದು ಸುಂದರ ಬರಹ ನೀಡಿದ್ದಕ್ಕಾಗಿ ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

Unknown said...

ಹೂ ಮನಸ್ಸಿನ ಶಾರಿ , ಗಣಪ್ಪಿಯವರು ಬೆಂಗಳೂರಿನಲ್ಲೆಲ್ಲಿ?? ಲೇಖನ ಚೆನ್ನಾಗಿತ್ತು...

shridhar said...

Nanu Igashte blog mandalakke ambegalikuva shishu .. sadayadalle nannadu anta ondu blog madbeku .. iga bari ellara blog oduvude havyasa madokondiruve .. mukyavagi prakashanna, shivi , dharitri , chayakanndi, mounrag .. heege halvu ..

Prakashanna .. e lekhan odi enge namma oora janara mugdate nenpatu .. eshtu hoovinanta manassu .. e rrrthiya eshto jana sirsi suttamutta sigta .. dooradaralli iddu nimma barahagalu halli nenapannu achchaliyadante ittide .. uttam hasyalekhanagalige dhyanavdagalu .. heege bareytta iri ...

Kanndalli type madoke gottaglille so englishanalle anisuke barita idini ..kshame irali .. :)

Jayalaxmi said...

:-).... ಮಗೆಕಾಯಿ ತಳ್ಳೆವು ಅಂದ್ರೆ ಯಾವ ಥರದ ಪದಾರ್ಥ?

Annapoorna Daithota said...

ತುಂಬಾ ಚೆನ್ನಾಗಿದೆ :)

Ittigecement said...

ಸತ್ಯನಾರಾಯಣರೆ....

ನನಗೆ ನಿಮ್ಮ ಪ್ರತಿಕ್ರಿಯೆಯಿಂದ ಇನ್ನಷ್ಟು ಬರೆಯುವ ಉತ್ಸಾಹ ಕೊಟ್ಟಿದೆ....
ಇದರ ಬಗೆಗೆ ಏನೂ ಗೊತ್ತಿರದ ನನಗೆ ಪ್ರೋತ್ಸಾಹದ ನುಡಿಗಳು ಖುಷಿತರುತ್ತದೆ...
ಇನ್ನಷ್ಟು ಬರೆಯಬೇಕು...
ಹೊಸ ಪ್ರಯೋಗ ಮಾಡ ಬೇಕು ಅನಿಸುತ್ತದೆ...

ನನ್ನ ಪ್ರತಿ ಲೇಖನದಲ್ಲಿ ಹೊಸ ಪ್ರಯೋಗದ ಪ್ರಯತ್ನ..
(ನನಗೆ ತಿಳಿದ ಜ್ಞಾನದಲ್ಲಿ) ಮಾಡುವ ಪ್ರಯತ್ನ ಮಾಡಿರುತ್ತೇನೆ..

ನಿಮಗೆಲ್ಲ ಇಷ್ಟವಾಗಿದ್ದಲ್ಲಿ ಸಂತೋಷವಾಗುತ್ತದೆ...
ಬರೆಯುವದರಲ್ಲಿ ಇರೋ ಮಜಾ ಅನುಭವಿಸುತ್ತಿದ್ದೇನೆ...

ತುಂಬಾ ತುಂಬಾ ....
ಧನ್ಯ...
ಧನ್ಯವಾದಗಳು....

Ittigecement said...

ಬಾಲು ಸರ್....

ನಿಮ್ಮ ಥರಹ ಹೊಸ ಹೊಸ ಐಡಿಯಾಗಳು ನನಗೆ ಬರುವದಿಲ್ಲ....
ನಿಮ್ಮ ಚುನಾವಣೆಯ ವಿಶ್ಲೇಷಣೆ ಸಕತ್ ಆಗಿದೆ....

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ಸುಧೇಶ್....

ನನ್ನನ್ನು ಎತ್ತಿನಗಾಡಿಯಲ್ಲಿ ಕಲ್ಪಿಸಿಕೊಂಡು ಶಾರಿ ಹೇಳಿದ ಮಾತುಗಳು..
ನನ್ನ ಮಗನಿಗೆ ಬಹಳ ಇಷ್ಟವಾಗಿದೆ...

ಪುಣ್ಯ ನಾನು ಆಟೋ ಡ್ರೈವರ್ ಆಗಲಿಲ್ಲವಲ್ಲ....!
ಹಿಂದೆ ಕುಳಿತವರಿಗೆ ರೋಡ್ ಕಾಣುವದೇ ಇಲ್ಲವಾಗಿತ್ತು...

ನನ್ನ ಪರಿಚಯದವರೊಬ್ಬರು ನನಗಿಂತಲೂ ದಪ್ಪ ಇದ್ದಾರೆ...
ಒಮ್ಮೆ ಟೆಂಪೋ ಹತ್ತಿದಾಗ "ಡಬ್ಬಲ್ ಚಾರ್ಜ್" ಕೇಳಿದ್ದನಂತೆ....

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...

ಎರಡೂ ಭಾಗಗಳೂ ಬಹಳವೇ ಇಷ್ಟವಾದವು. ಪಾತ್ರಗಳಿಗೆ ಜೀವ ತುಂಬಿ ಬರೆವ ನೀವು ಜೀವವಿರುವ ಪಾತ್ರಗಳನ್ನೂ ಅಷ್ಟೇ ಚೆನ್ನಾಗಿ ವರ್ಣಿಸಬಲ್ಲಿರಿ.
ಚೆಂದದ ಬರಹಕ್ಕೆ ಧನ್ಯವಾದ.

geeta bhat said...

Namaskara,

Maryadastara munde helidre..........thumba cholo banju.odata hodre istu bega mugdu hota anastu!shareeya innocence thubha ista aagtu, aa character kanna munde idda hage anastu.Nanentu article oodta sakhath enjoy madiddi.matteradu incident iddidre(neevu bittiddi heliddu)innu maja irta ittu anastu?

Shankar Prasad ಶಂಕರ ಪ್ರಸಾದ said...

ಹನಿಮೂನು ಅಂದ್ರೆ ನಂಗೂ ನೆನಪಾಗುತ್ತೆ...
ಅದನ್ನ ಇಲ್ಲಿ ಬರೆಯಲು ಆಗೋದಿಲ್ಲ.. ಡೈರೆಕ್ಟಾಗಿ ಸಿಗಿ.. ಹೇಳ್ತೀನಿ.
ನಿಜವಾಗ್ಯೂ ಈ ಥರ ನಿಷ್ಕಲ್ಮಶ ಮನಸ್ಸಿರುವವರು ಸಿಗೋದು ಕಷ್ಟ ಕಣ್ರೀ ಈ ಜಗತ್ತಲ್ಲಿ.
ನಿಮ್ಮ ಶಾರಿ ಹಾಗು ಗಣಪ್ತಿ ಗೆ ನಮ್ಮ ನಮಸ್ಕಾರ ತಿಳಿಸಿ.

ಶಂಕ್ರ

ಗೀತಾ ಗಣಪತಿ said...

ಪ್ರಕಾಶಣ್ಣ,
ನಮ್ಮೂರ ಕಡೆ ಸಹ ಇಂಥ ಜನ ಇದ್ದ. ಇಂಥ ಸನ್ನಿವೇಶನು ಆಗ್ತು. ಆದ್ರೆ ಇಂಥದೆಲ್ಲ ಬರೆಯುಲೇ ನೀವೇ ಸೈ! ನಿರೂಪಿಸಿದ್ದು ತುಂಬಾ ಚೆನ್ನಾಗಿ ಬೈಂದು. ಹಂಗೆ ನಿಮ್ಮ ಪ್ರತಿಯೊಂದು post ನೂ ಓದುಲೇ ಕಾಯ್ತಾ ಇರ್ತೆ, ಬೇಗ ಬೇಗ ಬರೀರಿ :)

Ittigecement said...

ಜನಪ್ರೀಯ ನಿರ್ದೇಶಕರು, ಸಾಹಿತಿಗಳೂ ಅದ
ಪಿ. ಶೇಶಾದ್ರಿಯವರು...ಹೀಗೆ ಹೇಳುತ್ತಾರೆ...

P.Sheshadri

ನಮಸ್ಕಾರ ಪ್ರಕಾಶ್,

ನಿಮ್ಮ ಬ್ಲಾಗಿನ ಬರಹಗಳನ್ನು ಓದಿದೆ.
ತುಂಬ ಚನ್ನಾಗಿ ಬರೆದಿದ್ದೀರಿ.
ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹಿಡಿದಿಡುವ ಶೈಲಿ ನಿಮಗೆ ಸಿದ್ಧಿಸಿದೆ.
ನಮಸ್ಕಾರ ಪ್ರಕಾಶ್,
ನಿಮ್ಮ ಬ್ಲಾಗಿನ ಬರಹಗಳನ್ನು ಓದಿದೆ, ಫೋಟೋಗಳನ್ನ ನೋಡಿದೆ.
ಒಳ್ಳೇ ಮಜಬೂತಾದ ಜರ್ನೀ ಕಣ್ರೀ!
ಚಿಟ್ಟೆಗಳ ಚಿತ್ರವಂತೂ ಸುಪರ್ಬ್, ಬೈ ಲೈನ್ ಕೂಡ...

ಸಣ್ಣ ವಾಕ್ಯ ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹಿಡಿದಿಡುವ ಶೈಲಿ ನಿಮಗೆ ಸಿದ್ಧಿಸಿದೆ.
ಶಾರಿಯನ್ನು ಮೊದಲ ಬಾರಿ ಬೇಟಿಯಾಗುವ ಸನ್ನಿವೇಶ ನನ್ನ ಕಣ್ಣ ಮುಂದೆ ಸುಂದರ ದೃಶ್ಯರೂಪವನ್ನು ಕಟ್ಟಿಕೊಟ್ಟಿತು...
ಇಂಥ ಎಷ್ಟು ದೃಶ್ಯಗಳನ್ನು ನಿಮ್ಮೊಳಗೆ ಇಟ್ಟುಕೊಂಡಿದ್ದೀರಿ?

ನಾನೂ ಬಯಲು ಸೀಮೆಯ ಹಳ್ಳಿಯಿಂದ ಬಂದವನು.
ನನ್ನ ನೆನಪುಗಳನ್ನು ಕೆದಕಿದಿರಿ...

ಶುಭಾಶಯಗಳು..

ನಿಮ್ಮ,P.Sheshadri

Roopa said...

ಪ್ರಕಾಶ್ ಸಾರ್
ತುಂಬಾ ಹಿಡಿಸಿತು
ಶಾರಿ ಅವಳ ಗಂಡನಂತಹವರು ನನಗೂ ಒಮ್ಮೆ ಬೆಳ್ತಂಗಡಿಯಲ್ಲಿ ಸಿಕ್ಕಿದ್ದರು. ನಿಜಕ್ಕೂ ಹಳ್ಳಿಗಳಲ್ಲಿ ಕೆಲವೆಡೆ ಇಂತಹ ಮುಗ್ದರು ಇದ್ದಾರೆ ಎಂದರೆ ನಂಬಲಾಗುವುದಿಲ್ಲ
ಶಾರಿ ಹಾಗು ಗಣಪ್ತಿಯ ಮಾತುಗಳನ್ನು ನಾನೆ ಸ್ವತ್: ಕೇಳಿದ ಅನುಭವ ಆಗುತ್ತಾ ಇದೆ
ಒಳ್ಳೆಯ ಅನುಭವಕ್ಕಾಗಿ ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ಬಿಡುವಿಲ್ಲದ ಕೆಲಸಕಾರ್ಯಗಳಿಂದಾಗು ನಿಮ್ಮ ಪೋಸ್ಟ್‌ಗಳಿಗೆ ಕಮೆಂಟಿಸಲಾಗಲಿಲ್ಲ. ಶಾರಿಯ ಮುಗ್ಧತೆಯನ್ನು ಹಾಸ್ಯಮಯವಾಗಿ ಜೊತೆಗೆ ವಾಸ್ತವಿಕತೆಯನ್ನೂ ಬೆರೆಸಿ ಹೇಳಿದ ಪರಿ ಎರಡೂ ಭಾಗಗಳಲ್ಲೂ ಚೆನ್ನಾಗಿ ಮೂಡಿದೆ.

ಕೃಪಾ said...

ನಮಸ್ತೆ...

ನಕ್ಕು...ನಕ್ಕು ಸುಸ್ತಾಯ್ತು .....
ನನ್ನ ೩ ವರ್ಷದ ಮಗನ " ಯಾಕಮ್ಮ ....? ಪ್ರಶ್ನೆಗೆ
ಉತ್ತರಿಸಲು ಸಾಕು ಸಾಕಾಯ್ತು...
"ಅಲ್ಲೊಂದು ಆಂಟಿ" ಅಂದರೆ "ನನಗೆ ಕಾಣ್ತಿಲ್ಲ " ಎನ್ನುತ್ತಾನೆ.
ನಿಮ್ಮಿಂದಾಗಿ ಪದಕೋಶದಲ್ಲಿ ಪದಗಳಿಗೆ ಅರ್ಥ ನೀಡುವಲ್ಲಿ, ಅಪಾರ್ಥಗಳು ಎನ್ನುವುದನ್ನು ಹೊಸದಾಗಿ ಸೇರಿಸ ಬೇಕು.
ರವಿ ಬೆಳಗರೆಯವರು ಏನು ಬರೆದಿದ್ದಾರೆ..? ವಿಜಯಕರ್ನಾಟಕದಲ್ಲಿ....?
ಶಂಕರಪ್ರಸಾದರ ಪರಿಸ್ಥಿತಿ ಓದಿಯಂತು ಹೊಟ್ಟೆ ಹುಣ್ಣಾಯ್ತು....
ನಮ್ಮಲ್ಲಿ ಈಗಲೂ ಸ್ವಂತ ಸಂಭಂಧಿಗಳು ಬಂದರೆ ನೀರು ತಂದು ಸ್ವಾಗತಿಸಿ.,
ಕಾಲಿಗೆ ಬಾಗಿ ನಮಸ್ಕರಿಸ ಬೇಕು. . .
ಹೀಗೆ bareyuttiri .....

Ittigecement said...

ಉದಯ್( ಬಿಸಿಲ ಹನಿ)

ಗಣಪ್ತಿ ಮತ್ತು ಶಾರಿಯವರ ಸಾಂಗತ್ಯವನ್ನು..
ಮನಸಾರೆ ಅನುಭವಿಸಿದ್ದರಿಂದ..
ಈ ಘಟನೆಯನ್ನು...
ಈ ಥರಹ ಬರೆಯಲು ಸಾಧ್ಯವಾಯಿತೆಂದು ಅಂದುಕೊಂಡಿದ್ದೇನೆ....

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
ಧನ್ಯವಾದಗಳು...

Ittigecement said...

ರಂಜನಾ....

ಪ್ರೀತಿ ತುಂಬಿದ ನಿಮ್ಮ ಈ ಪ್ರತಿಕ್ರಿಯೆಗೆ...
ಹ್ರದಯ ಪೂರ್ವಕ ವಂದನೆಗಳು....

ಶಾರಿ, ಗಣಪ್ತಿಯ... ಹಾಗೆ ಮುಗ್ಧವಾಗಿ ಪ್ರತಿಕ್ರಿಯೆ ಕೊಡಲು
ನಮಗೆ ಬರುವದಿಲ್ಲವಲ್ಲ....

ಅಂಥಹ... ಮುಗ್ಧತನದಿಂದ
ಬದುಕಲು ಸಾಧ್ಯವಾಗಿದ್ದರೆ...
ಆ.... ಜೀವನ ಎಷ್ಟೊಂದು ಸೊಗಸು ಅಲ್ಲವಾ...?

ವಂದನೆಗಳು...

Ittigecement said...

ವೀಣಾರವರೆ....

ಇದೀಗ ನಿಮ್ಮ ಬ್ಲಾಗಿನ ಹ್ರದಯ ಕವನ ಓದಿ ಬಂದೆ....
ತುಂಬಾ ಸೊಗಸಾಗಿ...
ಭಾವಪೂರ್ಣವಾಗಿ ಬರೆದಿದ್ದೀರಿ....
ನಿಮ್ಮ ಪ್ರತಿಕ್ರಿಯೆಗೆ...
ನಿಮ್ಮ ಕವನವನ್ನೇ ಇಲ್ಲಿ ಬರೆಯೋಣ ಅನಿಸಿತು....

ಶಾರಿಯನ್ನು ಭೇಟಿ ಮಾಡಿಸಬೇಕಾ...?
ಬಹುಷಃ ಅದು ಅಸಾಧ್ಯ...
ಅವರಿಗೆ ಈ ಲೇಖನ ಬರೆಯುತ್ತೇನೆಂದು ಹೇಳಿದ್ದೇನೆ...
ನನ್ನ ಈ ಲೇಖನವು ನಮ್ಮೂರ ಕಡೆ ಈಗ ಬಹಳ ಜನ ಓದಿರುತ್ತಾರೆ...
ಯರಿರ ಬಹುದೆಂದು ಊಹೆಗೂ ತೊಡಗಿದ್ದಾರೆ...
(ಇಲ್ಲಿ ಹೆಸರು ಬದಲಿಸಿದ್ದೇನೆ)

ಶಾರಿ, ಗಣಪ್ತಿಯವರಿಗೆ ಮುಜುಗರ ಆಗಬಾರದಲ್ಲವೇ...?

ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ತುಂಬಾ... ತುಂಬಾ ಧನ್ಯವಾದಗಳು....

ನಿಮ್ಮಲ್ಲೊಂದು ಪ್ರಾರ್ಥನೆ...

ದಯವಿಟ್ಟು ನೀವೂ ನಿಮ್ಮ ಬ್ಲಾಗಿನಲ್ಲಿ ಬರೆಯಿರಿ...
ಓದಲು ನನ್ನಂತೆ ಬಹಳ ಜನ ಕಾದಿದ್ದಾರೆ...

Ittigecement said...

ಶಿವು ಸರ್.....

ಈಗಲೂ ಆಕೆ ನನ್ನನ್ನು ಪುಟ್ಟ ತಮ್ಮ ಅಂತಲೇ ತಿಳಿದಿದ್ದಾರೆ...
"ಪ್ರಕಾಶನಿಗೇನು ಗೊತ್ತಾಗ್ತದೆ...?
ಅವನಿಗೆ ಚಡ್ಡಿ ಹಾಕಿಕೊಳ್ಳಲೂ ಬರುವದಿಲ್ಲವಾಗಿತ್ತು"
ಅನ್ನುವಲ್ಲಿ ಅವಳ ಪ್ರೀತಿ, ಮಮತೆ...
ಮುಗ್ಧತೆ ಎಲ್ಲವೂ ವ್ಯಕ್ತವಾಗುತ್ತದೆ...

ಸರ್...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಸುನಾಥ ಸರ್....

ನಿಮ್ಮ ಬ್ಲಾಗಿನಲ್ಲಿ ಬರುವಂಥ ವೈಚಾರಿಕ ಲೇಖನ ಬರೆಯಲು ನನಗೆ ಬರುವದಿಲ್ಲ...
ಬರೆಯುವ ಆಸೆಯಂತೂ ಇದೆ...

ನೀವು ಇಷ್ಟಪಟ್ಟಿದ್ದು ಖುಷಿಯಾಗುತ್ತಿದೆ..

ನನ್ನ ಬ್ಲಾಗಿನ ಮೊದಲ ಲೇಖನದಿಂದ
ಇಲ್ಲಿಯವರೆಗೂ ತಪ್ಪದೆ ಓದಿ ಪ್ರೋತ್ಸಾಹಿಸುತ್ತಿದ್ದೀರಿ...

ನಿಮಗೆ ಅನಂತ... ಅನಂತ ಧನ್ಯವಾದಗಳು...

Ittigecement said...

ಉಮೇಶ್....

ಈ ಪ್ರಕಾಶನಿಗೆ ಏನೂ ಗೊತ್ತಾಗೊದಿಲ್ಲ..
ಬೇಜಾರೂ ಮಾಡ್ಕೊಳ್ಳೋದಿಲ್ಲ...
ಬೇರೆ ಯಾರಾದ್ರೂ ಮರ್ಯಾದಸ್ಥರ ಮುಂದೇ ಇದೇ ಥರ ಮಾತಾಡ ಬೇಡ ..
ಅಂದಾಗ ನನ್ನ ಸ್ಥಿತಿ ಏನಾಗಿರ ಬೇಡ...?

"ಫಸ್ಟ್ ನೈಟ್ ಅಂದ್ರೆ ಏನೋ ಅಂದ್ಕೊಂಡು ಬಿಟ್ಟಿದ್ದೆ.."
ಅನ್ನುತ್ತ ಶಾರಿ ಮಾತು ಶುರು ಮಾಡಿದಾಗ..
ಮನೆಯ ಹಂಚು ಹಾರಿ ಹೋಗುವ ನಾವೆಲ್ಲ ನಕ್ಕಿದ್ದೆವು...

ಸಹೋದರ ಸಂಬಂಧ ಯಾವಾಗಲೂ ಇರುತ್ತದೆ...
ಅಲ್ಲಿ ಅಪಾರ್ಥಕ್ಕೆ ಅವಕಾಶ ಕಡಿಮೆ...

ಲೇಖನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಗುರು....

ನಮ್ಮ ಕಾಲದ ಆಧುನಿಕತೆಯಲ್ಲಿ...
ಥಳುಕಿನ ಪಟ್ಟಣದ ಜೀವನದಲ್ಲಿ...
ಗ್ರಾಮೀಣ ಭಾರತದ ಮುಗ್ಧತನದ ಸೊಗಡು ಮಾಯವಾಗುತ್ತಿದೆ...

ಹಳ್ಳಿಗಳಲ್ಲೂ ಕೂಡ ಮಾಯವಾಗುತ್ತಿದೆ...
ಸಹಜತೆ ಬಿಟ್ಟು...
ಸೋಗಲಾಡಿತನದ ನಡೆ, ನುಡಿ ಇಷ್ಟವಾಗುತ್ತಿದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ನಿತಿನ್....

ಲೇಖನ ಇಷ್ಟವಾಗಿದ್ದಕ್ಕೆ
ಧನ್ಯವಾದಗಳು....

Ittigecement said...

ಪರಾಂಜಪೆಯವರೆ....

ಪಟ್ಟಣದಲ್ಲಿ ಪ್ರತಿ ನಡೆ, ನುಡಿಯ ಹಿಂದೆ ಸ್ವಾರ್ಥವಿರುತ್ತದೆ...

"ನಾನು ಇವರೊಡನೆ ನಕ್ಕರೆ ಏನು ಲಾಭ..?"

ಸಹಜವಾಗಿರಲೂ ಲೆಕ್ಕಾಚಾರ..
ವ್ಯವಹಾರ...
ನಗುವಿಗೂ ಕೂಡ...

ಪ್ರತಿಕ್ರಿಯೆಗೆ ವಂದನೆಗಳು....

Ittigecement said...

ಗೋದಾವರಿಯವರೆ.....

ನಿಮ್ಮ ಬ್ಲಾಗಿನ ಲೇಖನಗಳೂ ನನಗೆ ಇಷ್ಟವಾದವು...
ಸುನಾಥ ಸರ್ ಬ್ಲಾಗಿನಲ್ಲಿ ಬರುವಂಥ ಲೇಖನ ಬರೆಯುತ್ತೀರಿ...

ಸಾಹಿತ್ಯ ಹೆಚ್ಚಾಗಿ ಓದಿರದ ನನಗೆ...
ನಿಮ್ಮ ಪ್ರತಿಕ್ರಿಯೆಗಳು.. ಮತ್ತಷ್ಟು ಉತ್ಸಾಹ ತರುತ್ತದೆ...

ಧನ್ಯವಾದಗಳು...

ಬರುತ್ತಾ ಇರಿ....

Ittigecement said...

ಸದಾಶಿವ....

ಶಾರಿಯ ಅರ್ಥದಲ್ಲಿ ಫಸ್ಟ್ ನೈಟ್ ಅರ್ಥನೂ ಹೇಳುವೆ ...

ಒಮ್ಮೆ ಭೇಟಿಯಾಗಿ....

ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

Ittigecement said...

ವಿನೂತಾ....

ನನ್ನ ತೂಕ ನೋಡಿ ಅಷ್ಟು ಮಜವಾಗಿ ಹಾಸ್ಯ ಮಾಡಿದ ಶಾರಿಗೆ
ನಾನು ಬಯ್ಯಲಿಲ್ಲ...

ನನ್ನ ಮಗನಿಗೆ ಹೊಸತೊಂದು ಅಸ್ತ್ರ ಸಿಕ್ಕಿಬಿಟ್ಟಿದೆ...

"ಅಪ್ಪಾ.... ಡೀಸೆಲ್ ಖರ್ಚು ಕೂಡಾ ಜಾಸ್ತಿ ಆಗ್ತದೆ"

ಅಂತಿದ್ದಾನೆ....

ಶಾರಿಯ ಮಾತಿನಲ್ಲಿ ಪ್ರಾಣಿ ಹಿಂಸೆ ಗಿಂತ...
ನನ್ನನ್ನು ಗೋಳು ಹೊಯ್ಯುವ ಖುಷಿ ಇತ್ತು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಕ್ಷಣ ಚಿಂತನೆ....

ಶ್ರೀಮಂತಿಕೆಗೂ...
ಮುಗ್ಧತೆಗೂ ಹೊಂದಾಣಿಕೆ ಇರುವದಿಲ್ಲ....

ಆದರೆ ಓದಿಗೂ..
ಮುಗ್ಧತನಕ್ಕೂ ಸಮರಸ್ಯ ಇರುತ್ತದೆ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ರವಿಕಾಂತ್.....

ಅಂಥಹ ಹೂ ಮನಸ್ಸಿನವರು..
ಇಲ್ಲಿ ಬಾಳಿ ಬದುಕಲು ಅನರ್ಹರು....

ಈಗಿನ ಹಳ್ಳಿಗಳಲ್ಲೂ ಆಧುನಿಕತೆ ಹೊಕ್ಕಿಬಿಟ್ಟಿದೆ...
ಕಾರು ಎಲ್ಲ ಹಳ್ಳಿಗಳಲ್ಲೂ ಬಂದಿದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಅಂತರ್ವಾಣಿ said...

ಒಳ್ಳೆ ಹನಿಮೂನ್ ಕಥೆ ಹೇಳಿದ್ದೀರ...

Ittigecement said...

ಶ್ರೀಧರ್....

ನಿಮ್ಮ ಬ್ಲಾಗ್ ಬರೆಯುವ ಪ್ರಯತ್ನ ಕಂಡು ಖುಷಿಯಾಯಿತು....
ಬರೆಯಿರಿ ಓದಲು ನಾವಿದ್ದೇವೆ....

ಇಂಗ್ಲಿಷಿನಲ್ಲಿ ಟೈಪ್ ಮಾಡಿದರೂ ಸರಿಯೆ...
ಪ್ರತಿಕ್ರಿಯೆ ಖುಷಿಯಾಗುತ್ತದೆ...

ನಿಮ್ಮಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹಾರೈಸುವೆ...
ಧನ್ಯವಾದಗಳು...

Prabhuraj Moogi said...

ಪ್ರಕಾಶ್ ಸರ್ ಬಹಳಾ ನಗಿಸ್ತೀರಿ ನೀವು... ಅದರಲ್ಲೂ ಆ ಎತ್ತಿನ ಗಾಡೀಲೀ ನೀವು ಕೂರೋದು ಅದಕ್ಕೆ ಪ್ರಾಣಿಹಿಂಸೆ ಅನ್ನೋದು ಹ ಹ ಹ.. ಅಲ್ಲ ನಿಮ್ಮನ್ನು ನೀವೆ ವ್ಯಂಗವಾಗಿ ಹೇಗೆ ಚಿತ್ರಿಸಿಕೊಳ್ತೀರಿ ಅದೇ ನಿಮ್ಮ ಗ್ರೇಟನೆಸ್ಸ...

Ittigecement said...

ಜಯಲಕ್ಷ್ಮೀಯವರೆ...

ಮಗೆಕಾಯಿ ಅಥವಾ ಮೊಗೆಕಾಯಿ ಅಂದರೆ

"ಮಂಗಳೂರು ಸೌತೆಕಾಯಿ" ಅಂತೀವಲ್ಲ ಅದು...
ದೋಸೆ ಹಿಟ್ಟು ಮಾಡುವಾಗ ...
ಅಕ್ಕಿಅಯ ಸಂಗಡ ಅದರ ಹೋಳುಗಳನ್ನೂ ಮಿಕ್ಸ್ ಮಾಡಿ.. ಹಿಟ್ಟು ಮಾಡುತ್ತಾರೆ...
ಆ ಹಿಟ್ಟನ್ನು ಬಂಡಿಯಲ್ಲಿ ಹಾಕಿ...
ಬಾಳೆ ಎಲೆಯ ಸಹಾಯ ದಿಂದ( ಅದನ್ನು ಮಡಚಿ ಇಸ್ಪೀಟ್ ಎಲೆಯ ಥರಹ ಮಾಡಿಕೊಳ್ಳುತ್ತಾರೆ)
ಬಂಡಿಯ ಮೇಲೆ "ತೆಳ್ಳಗೆ" ಎರೆಯುತ್ತಾರೆ ಅಥವಾ ಹರಡುತ್ತಾರೆ...

ಅದು ದೋಸೆಯ ಥರಹ ದಪ್ಪ ಇರದೆ "ತೆಳ್ಳಗೆ, " ಇರುತ್ತದಲ್ಲ...
ಹಾಗಾಗಿ ಅದನ್ನು "ತೆಳ್ಳೆವು" ಅನ್ನುತ್ತಾರೆ...

ಅಷ್ಟೆಲ್ಲ ಯೋಚನೆ ಯಾಕೆ
"ನಮ್ಮನೆಗೆ ಬನ್ನಿ" ನಿಮಗೆ "ತೆಳ್ಳೆವು"
ಮಾಡಿ ತಿನ್ನಿಸುತ್ತೇನೆ ಎಂದಿದ್ದಾರೆ "ನಮ್ಮವರು"

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು....

"ನಮ್ಮನೆಗೆ ಬರುತ್ತೀರಲ್ಲ...?

(ಇಂತಿ ಮಂಗಳತ್ತೆ ಅಭಿಮಾನಿ...)

Ittigecement said...

ಅನ್ನಪೂರ್ಣಾರವರೆ....

ಲೇಖನ ಇಷ್ಟಪಟ್ಟಿದ್ದಕ್ಕೆ...
ಧನ್ಯವಾದಗಳು...
ದಯವಿಟ್ಟು ಬರ್ತಾ ಇರಿ...

Ittigecement said...

ಶಾಂತಲಾ...

ನೀವೊಮ್ಮೆ ಶಾರಿಯನ್ನು ಭೇಟಿಯಾದರೆ ಚೆನ್ನಾಗಿರ್ತಿತ್ತು....

ನೀವೂ ಕೂಡ ಒಂದು ಕಥೆನೊ.., ಕವಿತೆನೊ ಬರಿತಾ ಇದ್ರಿ....

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಗೀತಾರವರೆ...

ಅದರಲ್ಲಿ "ಶಾರಿಯ ಮೊದಲ ರಾತ್ರಿಯ ಅನುಭವ" ಬರೆಯೋದು ಬೇಡ ಅಂತಾಗಿದೆ...
ಇನ್ನೊಂದು ಘಟನೆ ಬರೆಯುತ್ತೇನೆ..
ಸ್ವಲ್ಪ ದಿನಗಳ ನಂತರ....

ಲೇಖನ ಇಷ್ಟಪಟ್ಟಿದ್ದಲ್ಲದೆ...
ನನ್ನ ಬ್ಲಾಗ್ ಅನುಸರಿಸುತ್ತಿದ್ದೀರಿ...

ತುಂಬಾ... ತುಂಬಾ ಥ್ಯಾಂಕ್ಸ್.....

ಬರ್ತಾ ಇರಿ....

Ittigecement said...

ಶಂಕರ್ ಪ್ರಸಾದ್...

ಖಂಡಿತ ನಿಮ್ಮ ಶುಭ ಹಾರೈಕೆಗಳನ್ನು ತಿಳಿಸ್ತೇನೆ...

ನಿಜ ನಮ್ಮ ಥಳುಕಿನ ಸಮಾಜದಲ್ಲಿ ಇಂಥಹ ಮುಗ್ಧರು ಸಿಗುವದು ಕಷ್ಟ...
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

Ittigecement said...

ರೂಪಾರವರೆ....

ಹಳ್ಳಿಕಡೆ ಈಗಲೂ ಇಂಥವರು ಸಿಗ್ತಾರೆ...
ಅವರ ಮಾತೂ ಕೂಡ ಅಷ್ಟೆ ಮುಗ್ಧವಾಗಿರುತ್ತದೆ...

ಅವರಾಡಿದ ಮಾತಿಗೆ ನನಗಂತೂ ಬೇಸರವಾಗಲಿಲ್ಲ...

ನಿಮ್ಮ ಅನುಭವವನ್ನೂ ಬರೆಯಿರಿ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ತೇಜಸ್ವಿನಿ....

ನಿಮ್ಮ ಬಿಡುವಿಲ್ಲ ಕೆಲಸ ಕಾರ್ಯದ ನಡುವೆಯೂ ಬಂದು...
ಪ್ರತಿಕ್ರ್ಯಿಸಿದ್ದಕ್ಕೆ ಧನ್ಯವಾದಗಳು...
ನಿಮ್ಮ ಬ್ಲಾಗನ್ನು ನಾವೆಲ್ಲ "ಮಿಸ್" ಮಾಡಿಕೊಳ್ಳುತ್ತಿದ್ದೇವೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

Ittigecement said...

ಗೀತಾ ಗಣಪತಿಯವರೆ....

ನೀವು ಇಟಲಿಯ ಬಗೆಗೆ ಬರೆದ ಕಥನಗಳು ತುಂಬಾ ಚೆನ್ನಾಗಿ ಬರ್ತಾ ಇದೆ....

ನಮ್ಮೂರಲ್ಲಿ ಕೆಲವೊಂದು ಕ್ಯಾರೆಕ್ಟರ್ ಗಳು ಇವೆ...
"ಕವಳದ ಗಪ್ಪಯ್ಯ"..."ಅವಲಕ್ಕಿ ಶೀನಾ"
ಅದನ್ನೂ ಬರೆಯುವೆ ಸಧ್ಯದಲ್ಲಿ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಬರ್ತಾ ಇರಿ....

Ittigecement said...

ಕ್ರಪಾ ರವರೆ.....

ಅಥಿತಿಗಳನ್ನು ನೀರು ಕೊಟ್ಟು ಸ್ವಾಗತಿಸುವ ಪದ್ಧತಿ ನಿಜಕ್ಕೂ ಖುಷಿಯಾಗುತ್ತದೆ...
ದಯವಿಟ್ಟು ಮುಂದುವರೆಸಿ....
ಅದು ನಮ್ಮ ಸಂಸ್ಕ್ರ್‍ಅತಿ...

ಶಾರಿಯ ಮಾತುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ನನ್ನನ್ನು ಎತ್ತಿನ ಗಾಡಿಯಲ್ಲಿ ಕಲ್ಪಿಸಿ ...
ಪ್ರಾಣಿಹಿಂಸೆ ಅಂದುಬಿಟ್ಟಳಲ್ಲಾ...
ನಾನೂ ಕೂಡ ನೆನಪಾದರೆ ನಕ್ಕು ಬಿಡುತ್ತೇನೆ....

ಇಷ್ಟಪಟ್ಟಿದ್ದಕ್ಕೆ ವಂದನೆಗಳು...

ಬರ್ತಾ ಇರಿ....

Ittigecement said...

ಅಂತರ್ವಾಣಿ.....

ಪ್ರತಿಕ್ರಿಯೆಗೆ..., ಇಷ್ಟಪಟ್ಟಿದ್ದಕ್ಕೆ..
ತುಂಬಾ..., ತುಂಬಾ ಥ್ಯಾಂಕ್ಸ್....

Ittigecement said...

ಪ್ರಭು.....

ನಿಮ್ಮ "ಸರಸ ದಾಂಪತ್ಯದ" ಲೇಖನಗಳ ಫ್ಯಾನ್ ನಾನು...
ತುಂಬಾ ಚೆನ್ನಾಗಿ ಬರಿತೀರಿ ನೀವು....

ಶಾರಿಯ ಮಾತುಗಳನ್ನು ನೆನಪಿಸಿಕೊಂಡು ನನ್ನ ಮಗ ಬಹಳ ಹಾಸ್ಯ ಮಾಡುತ್ತಾನೆ...

vaav...!!
ಎಂಥಹ ಕಲ್ಪನೆ ಅದು...??

ಆರಡಿ, ಅಗಲ, ಆರಡಿ ಉದ್ದದ ಮನುಷ್ಯ..
(ಸಿನೇಮಾದ ದೊಡ್ಡಣ್ಣನಂಥವ...!)
ಎತ್ತಿನ ಗಾಡಿ ಡ್ರೈವರ್ ಆದರೆ ಹೇಗೆ...?

ಹ್ಹಾ..!! ಹ್ಹಾ...!!

ಲೇಖನ ಓದಿ ಸಂತೋಷಪಟ್ಟಿದ್ದಕ್ಕೆ ಧನ್ಯವಾದಗಳು....

Ittigecement said...

ಪಿ. ಶೇಷಾದ್ರಿಯವರೆ....

ನೀವು ನನ್ನ ಬ್ಲಾಗ್ ಓದಿ ..
ಮೆಚ್ಚುಗೆ ವ್ಯಕ್ತ ಪಡಿಸಿದ್ದು ನನಗೊಂದು ಹೆಮ್ಮೆ....

ನಿಮ್ಮ ಓದು, ಕ್ರಿಯಾಶೀಲತೆಗಳನ್ನು..
ನಿಮ್ಮ ಧಾರವಾಹಿ, ಸಿನೇಮಾಗಳಲ್ಲಿ
ನಾನು ಬಹುವಾಗಿ ಮೆಚ್ಚಿಕೊಂಡವ...

ನಮ್ಮ ಹಳೆಯ ಆತ್ಮೀಯರು ಸ್ವಲ್ಪವೂ ಬದಲಾಗದೆ...
ಬಹುವರ್ಷಗಳನಂತರ ಮೊದಲಿನಹಾಗೆಯೇ ಮಾತಾಡಿಸಿದಾಗ...
ಸ್ವರ್ಗ ಸಿಕ್ಕಿದಷ್ಟು ಸಂತೋಷ ಆಗುತ್ತದೆ...

ಇಲ್ಲಿ ಆ ಆನಂದವನ್ನು ವರ್ಣಿಸಲು ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆ ....
ನನಗೆ ಗೊತ್ತಿಲ್ಲ....

ನನ್ನ ದೊಡ್ಡಪ್ಪನ ಮಗಳು "ಶಾರಿ"ಯ ಮುಗ್ಧತನ, ಅವಳ ಗಂಡನೂ..
ಅವಳಿಗೆ ತಕ್ಕ ಜೋಡಿ...
ಇವರ ನಡುವೆ ಸಮಯ ಕಳೆದ ನಾನು
ಮತ್ತೊಮ್ಮೆ ನನ್ನ ಬಾಲ್ಯಕ್ಕೆ ಹೋಗಿ ಬಂದೆ....

ನಿಮ್ಮ ಮೆಚ್ಚುಗೆಯ ನುಡಿಗಳು ನನಗೆ ಮತ್ತಷ್ಟು ಉತ್ಸಾಹ ಕೊಟ್ಟಿದೆ...

ಬರುತ್ತಾ ಇರಿ...

ನಿಮ್ಮ ಪ್ರೋತ್ಸಾಹಕ್ಕೆ ಹ್ರದಯ ಪೂರ್ವಕ ವಂದನೆಗಳು.....

Jayalaxmi said...

ನಿಮ್ಮ ಮನೆಯವರ ಔದಾರ್ಯ ದೊಡ್ಡದು. ನಿಮ್ಮಗಳ ಪ್ರೀತಿ ಸದಾ ಹೀಗೆ ನನ್ನ ಜೊತೆಗಿರಲಿ.ಮಗೆಕಾಯಿ ತಳ್ಳೇವು ತಿನ್ನೊ ನೆಪದಲ್ಲಿ ಮುದ್ದಣ್ಣ-ಮನೋರಮೆಯ ಜೋಡಿ ನೋಡಿ ಖುಷಿ ಪಡೋದಕ್ಕಂತಾದ್ರೂ ನಿಮ್ಮನೆಗೆ ಬರಬೇಕು ನಾನು. ಖಂಡಿತ ಬರ್ತೀನಿ. ನಿಮ್ಮ ಆಹ್ವಾನಕ್ಕೆ ಕೃತಜ್ಞತೆಗಳು.

ಸವಿಗನಸು said...

ಪ್ರಕಾಶಣ್ಣ,
ಶಾರಿಯ ಮುಗ್ಧ ಮನಸು ತು೦ಬಾ ಇಷ್ಟವಾಯಿತು...
ನಿಮ್ಮ ಶಾರಿ ಹಾಗು ಗಣಪ್ತಿಗೆ ನಮ್ಮ ನಮಸ್ಕಾರ ತಿಳಿಸಿ.
ತುಂಬಾ ಚೆನ್ನಾಗಿದೆ. ಹೀಗೆ ಬರೆಯುತ್ತಿರಿ.

Ittigecement said...

ಜಯಲಕ್ಷ್ಮೀಯವರೆ....

ನಿಮಗೆ ನಮ್ಮನೆಗೆ ಸ್ವಾಗತ..
ಬಿಡುವು ಮಾಡಿಕೊಂಡು ಬನ್ನಿ....

"ನೀವು ಬರೋದು ಹೆಚ್ಚೋ?
ನಾನು ಕರೆಯೋದು ಹೆಚ್ಚೊ...?

(ನನ್ನ ಈ ಲೇಖನ ಓದಿಲ್ಲವಾದರೆ ಓದಿ..)

ಮಂಗಳತ್ತೆ ಅಭಿಮಾನಿ....

Ittigecement said...

ಕನಸುಮನಸು.....

ಶಾರಿಯ, ಗಣಪ್ತಿಯ ಮುಗ್ಧ ಮನಸು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ನೀವು "ಸುಮಧುರ" ಮನಸಾ...?

ಬರುತ್ತಾ ಇರಿ...
ಪ್ರಕಾಶಣ್ಣ...

viju said...

prakashanna kathe cholo madi mugsidde....dailouge maja iddu.....