Friday, January 6, 2012

ಬೆತ್ತಲೆಯಾಗುವದು ಅನಿವಾರ್ಯ ಎಂದಾಗ . .. ನಮ್ಮವರ ಬಳಿಯೇ.. ಬೆತ್ತಲಾಗಬೇಕು .. !!


ಭಾಗ:: ಎರಡು..PART :: 2 
(ಹಿಂದಿನ  ಭಾಗ ಓದಿ.. ದಯವಿಟ್ಟು  ಇದನ್ನು ಓದಿ..)


ನಾನು  ಕೆಲವು ದಿನಗಳ ಹಿಂದೆ ಕೇರಳದ ಕೊಚ್ಚಿ   ಹೋಗಿದ್ದೆ..


ರೂಮಿನಲ್ಲಿ ಹೆಂಡತಿ ಮಗನನ್ನು ಬಿಟ್ಟು..
ಕ್ಯಾಮರಾ ಹೆಗಲಿಗೆ ಹಾಕ್ಕೊಂಡು ತಿರುಗಾಡಲು ಹೋಗಿದ್ದೆ..
ಅಲ್ಲಿ  ..
ಬಸ್ ನಿಲ್ದಾಣದಲ್ಲಿ ಒಬ್ಬ ಕಾರಿನಿಂದ ಇಳಿದ...


ಹೌದು.. !!
ಆತ ನಮ್ಮ ಗ್ಯಾಸ್ ನಮ್ಮ ಮಹಾದೇವ.. !..!..!! "


ಮಹಾದೇವು ಕಾರನಲ್ಲಿ ತಿರುಗ್ತಿದ್ದಾನಾ...?.. !!"


ಹೆಚ್ಚಿಗೆ ಬದಲಾಗಿರಲಿಲ್ಲ.. 
ಅಲ್ಲಲ್ಲಿ ಕೂದಲು ಹಣ್ಣಾಗಿತ್ತು...
ನನ್ನನ್ನು ನೋಡಿದವನೆ ಓಡಿ ಬಂದು ತಬ್ಬಿಕೊಂಡು ಬಿಟ್ಟ...


ಅವನ ಸ್ವಭಾವವೂ ಬದಲಾಗಿರಲಿಲ್ಲ.. !! 


ಅವನ ಸ್ನೇಹದ ಆ ಅಪ್ಪುಗೆ ಹಾಗಿತ್ತು... !!


ಖುಷಿಆಯ್ತು.. !!


ನನಗೂ ಅವನನ್ನು ನೋಡಿದಾಗ ನೆನಪಾದದ್ದು ಅವನ "ಗ್ಯಾಸ್ ಸಮಸ್ಯೆ.." 


ಆತ ನನ್ನನ್ನು ಆತನ ಮನೆಗೆ ಕರೆದ..


ನಾನು ಹಿಂದೆ ಮುಂದೆ ನೋಡಿದೆ...ಅನುಮಾನಿಸಿದೆ..


" ಪ್ರಕಾಶು...
ಹೆದರ್ ಬೇಡ್ವೋ... 
ನನಗೆ ಈಗ ಗ್ಯಾಸಿನಿಂದ  ಸಮಸ್ಯೆ ಇಲ್ವೇ ಇಲ್ಲ... !!.."


ನನಗೆ ನಂಬಿಕೆ ಬರಲಿಲ್ಲ...


ಸರಿ ಎನ್ನುತ್ತ ಅವನ ಕಾರಿನಲ್ಲಿ ಕುಳಿತೆ... 


ಯಾವದಕ್ಕೂ ಇರಲಿ ಅಂತ ಕರ್ಚೀಫ್ ಕೈಯಲ್ಲಿ ಇಟ್ಟುಕೊಂಡೆ...



ನನಗೆ ಮಹಾದೇವನನ್ನು ಕಂಡು ತುಂಬಾ ಖುಷಿಯಾಗಿತ್ತು...
ಆತನ ದುಬಾರಿ ಕಾರು ನೋಡಿ ದಂಗಾಗಿ ಹೋಗಿದ್ದೆ...


ಆತ ದಾರಿಯಲ್ಲಿ ತನ್ನ ಸುದ್ಧಿ ಹೇಳುತ್ತ ಹೊರಟ..."


ನನಗೆ ಕುತೂಹಲ ಜಾಸ್ತಿ ಆಯ್ತು...


" ಪ್ರಕಾಶು..
ನನಗೆ ಈಗ ಗ್ಯಾಸಿನಿಂದ ಏನೂ ತೊಂದರೆ ಇಲ್ಲಪ್ಪಾ...
ಎಲ್ಲವೂ ನಮ್ಮ ನಾಗುವಿನ ಉಪಾಯ... !!
ಅವನ ಕೃಪೆ...!!..."


ನನಗೆ ಎಚ್ಚರ ತಪ್ಪಿ ಬೀಳುವದೊಂದು ಬಾಕಿ...!


ಈ ನಾಗು ಎಲ್ಲೆಲ್ಲಿ ಏನೇನು ಮಾಡಿದ್ದಾನೆ...?.. !!


"ಮುಂದೆ ಹೇಳೊ... " 


 ಮಹಾದೇವು ತುಂಬಾ ಸಮಾಧಾನದಲ್ಲಿದ್ದ...


"ನಿಜಕ್ಕೂ ನಮ್ಮ ನಾಗು ದೇವರ ಹಾಗೆ ಕಣೊ...
ನಿನಗೆ ನೆನಪಿದೆಯಾ...?


ನಾವು ಓದುವಾಗ ಒಬ್ಬ ವಿಜ್ಞಾನಿಯ ಪಾಠ ಬಂದಿತ್ತು..
ಲೂಯಿ ಪ್ಯಾಸ್ಚರ್ ಯಾರೋ ಒಬ್ಬ.. 
ಆತ ಒಂದು ರೋಗ ನಿರೋಧಕ ಕಂಡು ಹಿಡಿಯುತ್ತಾನೆ...


ಯಾವುದೋ ಒಂದು  ರೋಗಕ್ಕೆ ..
ಅದೇ ರೋಗದ ವೈರಸ್ ಇಂಜೆಕ್ಷನ್ ಚುಚ್ಚಿ ರೋಗ ನಿರೋಧಕ ಕಂಡುಹಿಡಿಯುತ್ತಾನೆ...!.."


ನಾನು ತಲೆ ಕೆರೆದು ಕೊಂಡೆ..
ಅರ್ಥ ಆಗಲಿಲ್ಲ..


"ಹೌದು.. 
ಅದಕ್ಕೂ ನಾಗುವಿಗೂ ಏನು ಸಂಬಂಧ...?"


"ನಮ್ಮ ನಾಗು ಪ್ರತಿಭಾವಂತ ಕಣೊ..
ನಮ್ಮ ನಾಗು ನನಗೆ ಹೇಳಿದ್ದು ಇಷ್ಟು...


"ಮಹಾದೇವು...
ಬೆಂಕಿಗೆ ಬೆಂಕಿಯೇ ಮದ್ದು...!
ನಿನ್ನ ಗ್ಯಾಸಿಗೆ... ಗ್ಯಾಸೇ ಮದ್ದು...!


ನೀನು ದಿನಾಲೂ ಬೆಳಿಗ್ಗೆ...
ಮಧ್ಯಾಹ್ನ .. ಸಾಯಂಕಾಲ  ...
ಖಾಲಿ ಹೊಟ್ಟೆಯಲ್ಲಿ...
ಹಸಿ  ಆಲೂಗಡ್ಡೆ.....!
ಹಿಂದಿನ ದಿನ ನೆನೆಸಿಟ್ಟ... ದೊಡ್ಡ ಕಡ್ಲೆ... !
ಸಣ್ಣ ಕಡ್ಲೆ..!
ಶೇಂಗಾ ಬೀಜ..!
ಮೂಲಂಗಿ... !
ಇವನ್ನೆಲ್ಲ... ಸಮನಾಗಿ ಸೇರಿಸಿ..ಸ್ವಲ್ಪ ಸೋಡಾ ಬೆರೆಸಿ... 


ಬರೊಬ್ಬರಿ ಎರಡು ಗ್ಲಾಸು ಜ್ಯೂಸ್ ಕುಡಿ... !!


ಬೇಕಿದ್ದಲ್ಲಿ ರಾತ್ರಿ ಮಲಗುವಾಗಲೂ ಕುಡಿ...!!..


ಹದಿನೈದು ದಿನ ತಗೋ... 
ನಿನ್ನ ಗ್ಯಾಸ್ ಸಮಸ್ಯೆ ಹೊರಟು ಹೋಗುತ್ತದೆ ನೋಡು".....
ಅಂತ ಅಂದಿದ್ದ.....!! "


ನನ್ನ ತಲೆ ಹಾಳಾಗಿ ಹೋಯ್ತು...!! 


ಚಚ್ಚಿ ಕೊಳ್ಳೋಣ ಅಂದರೆ ಪಕ್ಕದಲ್ಲಿ ಗೋಡೆಯೂ ಇರಲಿಲ್ಲ...!!


"ಏನ್ ಎಡಬಟ್ಟ್ ಇದ್ದಿಯೋ ನೀನು...?.. !..


ಆ ನಾಗು ಹೇಳಿದ್ನಂತೆ... !
ಇವನು ಹಸಿ ಆಲೂಗಡ್ಡೇ ಜ್ಯೂಸ್ ಕುಡಿದ್ನಂತೆ... !!.."


" ಪ್ರಕಾಶು..
ಇಲ್ಲಿ ಕೇಳೊ ಮಾರಾಯ್ನೆ...
ಕಳೆದು ಕೋಳ್ಳಲಿಕ್ಕೆ ಏನೂ ಇಲ್ದೇ ಇರುವಾಗ ರಿಸ್ಕ್ ತೆಗೆದು ಕೊಳ್ಳಬಹುದು ಕಣೊ...!
ನಾನು ರಿಸ್ಕ್ ತೆಗೆದು ಕೊಂಡೆ... 


ಈಗ ನೋಡು ನಾನೀಗ ಗ್ಯಾಸ್ ಫ್ರೀ ಮಹಾದೇವ..."


ನನ್ನ ಮೈಯಲ್ಲಿರುವ ಕೂದಲುಗಳೆಲ್ಲ ನಿಮಿರಿನಿಂತ ಅನುಭವ !!


ನಿಜವಾ... !!


ನಿಜವಾ...?


ಮಹಾದೇವನನ್ನು ಮುಟ್ಟಿ ... ಮುಟ್ಟಿ..
ಅಲುಗಾಡಿಸಿ ಕೇಳಿದೆ..


"ಲೇ... 
ಲೇ..ಗ್ಯಾಸು... !!
ತಮಾಶೆ ಮಾಡಬೇಡ್ವೋ... ನಿಜ ಹೇಳೊ...??.."


"ನಿಜ ಕಣೊ..
ನಾನೀಗ ಸ್ವಂತ ಬಿಜಿನೆಸ್ ಮಾಡ್ತಿದಿನಿ...
ಮದುವೆಯಾಗಿದೆ... !
ಎರಡು ಮಕ್ಕಳಿದ್ದಾರೆ.. !!
ಬದುಕಿನಲ್ಲಿ ಸಂತೋಷ ಇದೆ ಕಣೊ..."


ನನಗೂ ಹೇಳಲಾರದಷ್ಟು ಖುಷಿಆಯಿತು...


ಸ್ವಲ್ಪ ದೂರ ಹೋದ ಮೇಲೆ ಮಹಾದೇವು ಕಾರ್ ನಿಲ್ಲಿಸಿದ...


"ಇರು ಬಂದೆ...
ಕಾರಿನ ಗ್ಲಾಸ್ ತೆಗೆಯ ಬೇಡ..."


ಮಹಾದೇವು ಕಾರಿನಿಂದ ಇಳಿದು  ಹೊರಗಡೆ ಸ್ವಲ್ಪ ಹೋಗಿ... 
ಕೈ ಕಾಲು ಅಲ್ಲಾಡಿಸಿದ...
ಮೈ ..
ಹೊಟ್ಟೆ ಕುಲುಕಾಡಿಸಿ... 
ಕಾಲು ಅಗಲಿಸಿಕೊಂಡು ಸಾವಕಾಶವಾಗಿ  ನಡೆಯುತ್ತ ಬಂದ...!!..


ಕಾರ್ ಸ್ಟಾರ್ಟ್ ಮಾಡಿದ...


"ಪ್ರಕಾಶು...
ನನಗೆ ಗ್ಯಾಸ್ ಪೂರ್ತಿಯಾಗಿ ವಾಸಿಯಾಗಲಿಲ್ಲ...


ಆದರೆ ನಾಗುವಿನ ಔಷಧಿಯಿಂದ ನನ್ನ ಗ್ಯಾಸನ್ನು 
ಒಂದು ತಾಸು....
ಮುಕ್ಕಾಲು ತಾಸು ಏನೂ ತೊಂದರೆ ಇಲ್ಲದೆಯೇ ತಡೆ ಹಿಡಿದುಕೊಳ್ಳ ಬಲ್ಲೆ...!.."


ನನಗೆ ನಗಬೇಕೋ ಅಳಬೇಕೊ ಗೊತ್ತಗಲಿಲ್ಲ...


"ಮತ್ತೆ ...
ನಿನ್ನ ಸಮಸ್ಯೆ ಹೇಗೆ ಪರಿಹಾರವಾಯ್ತೋ.....??..
ಮದುವೆಯಾಗಿದೆ... ಮಕ್ಕಳಿವೆ ಅಂತಿಯಲ್ಲೋ..!!"


"ನಾನೀಗ ತಾಸುಗಟ್ಟಲೆ ಗ್ಯಾಸ್ ಬಿಡದೆ ಇರ್ತಿನಲ್ಲೋ..


ಗುಂಪಿನಲ್ಲಿ ಇರುವಾಗ ..
ಒಂದು ತಾಸು ಬಿಟ್ಟು ಹೊರಗಡೆ ಹೋಗಿ ಗ್ಯಾಸ್ ಬಿಟ್ಟು ಬರ್ತಿನಿ...
ಯಾರಿಗೂ ಗೊತ್ತೇ ಆಗುವದಿಲ್ಲ....!


ನನ್ನ ಮನೆಯವರಿಗೆ...
ಊರಿನ ಜನರಿಗೆ.. ನೆಂಟರಿಗೆ ...
ಎಲ್ಲರಿಗೂ "ನನಗೆ ನಾಗುವಿನ ಔಷಧದಿಂದ ಗ್ಯಾಸ್ ವಾಸಿಯಾಯಿತು" ಎಂದೆ..
ಎಲ್ಲರೂ ನಂಬಿದರು.."


"ಒಟ್ಟಿನಲ್ಲಿ ನಿನಗೆ ಒಳ್ಳೆಯದಾಯ್ತಲ್ಲ.. ಬಿಡು...
ಅದು ಸರಿ..
ಮದುವೆ ಹೇಗಾಯ್ತೋ...??.."


"ನನಗೆ ಗ್ಯಾಸ್ ರೋಗ ವಾಸಿ ಆಯ್ತು ಅಂದ ಕೂಡಲೆ ಮನೆಯವರೆಲ್ಲ ಹೆಣ್ಣು ಹುಡುಕಿದರು...
ನಾನೂ ನೊಡಲು ಹೋಗಿದ್ದೆ... 
ಹುಡುಗಿ ಚೆನ್ನಾಗಿದ್ದಳು.."


"ಹುಡುಗಿಗೆ ಹೇಳಲಿಲ್ಲವೇನೋ.. ನಿನ್ನ ಗ್ಯಾಸ್ ಸಮಸ್ಯೆಯನ್ನು..??.."


" ನಾನು ಹೇಳೋದನ್ನು ಸ್ವಲ್ಪ ಕೇಳು...


ಹಿರಿಯರ ಬಳಿ "ನಾನು ಹುಡುಗಿಯೊಡನೆ ಪ್ರತ್ಯೇಕವಾಗಿ ಮಾತನಾಡಬೇಕು " ಅಂತ ಕೇಳಿದೆ..
ಅವರೆಲ್ಲ ಒಪ್ಪಿದರು..
ನಾವು ಟೆರ್ರೆಸಿಗೆ ಹೋದೆವು...


ಹುಡುಗಿ ತುಂಬಾ ನಾಚಿಕೊಂಡಿದ್ದಳು..


"ನೋಡಿ..
ನನಗೆ ನೀವು ತುಂಬಾ ಇಷ್ಟವಾಗಿದ್ದೀರಿ...
ಒಂದು ಸಮಸ್ಯೆ ಇದೆ...


ನಾನು ಗ್ಯಾಸ್ ಪ್ರಕೃತಿಯವ..
ನನಗೆ ಗ್ಯಾಸ್ ಸಮಸ್ಯೆ ಇದೆ...
ಅದನ್ನು ನೀವು ಸಹಿಸಿ ಕೊಳ್ತೀರಿ ಅಂದರೆ.. ಮದುವೆಯಾಗೋಣ..."


ನನಗೆ ಸಮಾಧಾನ ಆಯ್ತು...


"ಒಳ್ಳೆ ಕೆಲಸ ಮಾಡಿದೆ ಕಣೊ..
ಹುಡುಗಿ.. ಏನಂದಳೋ...?"


"ಹುಡುಗಿ ಮೊದಲೇ ನಾಚಿಕೊಂಡಿದ್ದಳು.. 
ಈಗ ಮತ್ತೂ ನಾಚಿಕೊಂಡಳು...!!


"ಇಷ್ಯೀ...
ಈಶ್ಯೀ.... ರಾಮಾ.. ರಾಮಾ.. !!..
ಇದನ್ನು ಹೇಳಲಿಕ್ಕೆ ಇಲ್ಲಿ ಕರೆದುಕೊಂಡು ಬಂದ್ರಾ ?..


ನನ್ನ ಅಪ್ಪನಿಗೂ ಗ್ಯಾಸ್ ತೊಂದರೆ ಇದೆ...!
ನನ್ನ ಅಮ್ಮನಿಗೆ ಆರು ಜನ ಮಕ್ಕಳು.... !!.."


"ಅಬ್ಭಾ... 
ಹುಡುಗಿ ಜೋರಿದ್ದಾಳೆ ಕಣೊ..."


"ತುಂಬಾ ಒಳ್ಳೆಯವಳು ಕಣೊ..!!.."


ನನಗೆ ಮತ್ತೊಂದು ಸಂಶಯ ಹುಟ್ಟಿತು...


"ಮಹಾದೇವು...!!
ಮೊದಲ ರಾತ್ರಿ ಏನು ಮಾಡಿದೆಯೋ...??.. !!.."


"ಪ್ರಕಾಶು...


ನಾಲ್ಕೈದು ಫ್ಲಾಸ್ಕಿನಲ್ಲಿ ಚಹ ಮಾಡಿ ಇಟ್ಕೊಂಡಿದ್ದೆ...


ಚಹ ಕುಡಿಯುತ್ತ... 
ಆಗಾಗ ಏಳುತ್ತ... ನಿದ್ರೆ ಮಾಡದೆ ಬೆಳಗು ಮಾಡಿದೆ...!


ಮಧ್ಯ ಮಧ್ಯದಲ್ಲಿ..
ಅವಳನ್ನು ಪ್ರೀತಿನೂ ಮಾಡಿದೆ ಕಣೊ...!
ಅವಳಿಗೆ ಏನೂ ಗೊತ್ತಾಗಲಿಲ್ಲ..."


ನಮ್ಮ ಮಹಾದೇವು ಬುದ್ಧಿವಂತ ಅನ್ನಿಸಿತು...


"ಮಹಾದೇವು...
ಅವಳೊಡನೆ ಬದುಕುತ್ತಾ ಇದ್ದೀಯಾ...
ಗೊತ್ತಗಲಿಲ್ಲವೆ...?


ಆತ ಉತ್ತರ ಕೊಡುವಷ್ಟರಲ್ಲಿ  ಅವನ ಮನೆ ಬಂತು...


ದೊಡ್ಡ ಮನೆ.. ಕಲ್ಲಿನಲ್ಲಿ ಕಟ್ಟಿಸಿದ್ದಾನೆ...
ಒಳಗೆ ಹೋದೆವು...
ದೊಡ್ಡ ಹಾಲ್...
ಮಹಾದೇವನ ಬಗೆಗೆ ಹೆಮ್ಮೆಯೂ ಮೂಡಿತು... ಪ್ರೀತಿಯೂ ಉಕ್ಕಿತು...


ಅವನ ಹೆಂಡತಿ ಪ್ರೀತಿಯಿಂದ ಮಾತನಾಡಿಸಿದಳು...


"ನೀವು ಪ್ರಕಾಶಣ್ಣ ಅಲ್ಲವಾ...
ನಿಮ್ಮ ಸುದ್ಧಿ ಎಲ್ಲ ಹೇಳ್ತಾ ಇರ್ತಾರೆ...


ನನಗೆ ಒಮ್ಮೆ ನಿಮ್ಮ ಗೆಳೆಯ ನಾಗುವನ್ನು ನೋಡಬೇಕು...


ಇವರು ಇನ್ನೂ ಕರೆದು ಕೊಂಡು ಹೋಗೇ ಇಲ್ಲ..."


ನಾನು ಮಹಾದೇವನ ಮುಖ ನೋಡಿದೆ...


ಆತ ನನ್ನ ಕಣ್ಣು ತಪ್ಪಿಸಿ ಬೇರೆ ಎಲ್ಲೋ ನೋಡುತ್ತಿದ್ದ...


ಅವಳು ಬಿಸಿ.. ಬಿಸಿ  ಚಹ ಕೊಟ್ಟು ಒಳಗೆ ಹೋದಳು...


"ಪ್ರಕಾಶು ಮನೆ ತೋರಿಸ್ತಿನಿ ಬಾರೊ..."


ನಾನು ಅವನನ್ನು ಹೊಂಬಾಲಿಸಿದೆ...


"ನೋಡೋ... 
ಇದು ಮಾಸ್ಟರ್ ಬೆಡ್ ರೂಮ್..."


ತುಂಬಾ ಚೆನ್ನಾಗಿತ್ತು... ಅಲಂಕಾರಗಳು ಭರ್ಜರಿಯಾಗಿಯೇ ಇದ್ದವು...


ಗೋಡೆ ತುಂಬಾ ಕಿಡಕಿಗಳೇ ಇದ್ದವು..


ಇನ್ನೊಂದು ರೂಮಿಗೆ ಕರೆದುಕೊಂಡು ಬಂದ...


"ಪ್ರಕಾಶು ...
ಇದು ಮಾಸ್ಟರಣಿ ರೂಮ್...!!.."


ಏನಪಾ ... ಇದು..??... !!


ನಾನು ತಲೆ ಕೆರೆದು ಕೊಂಡೆ..!


"ನೋಡೊ...
ಇದು ತುಂಬಾ ಸಿಂಪಲ್ ಕಣೋ..


ನಾವು ರಾತ್ರಿ  ಊಟ ಮಾಡಿದ ನಂತರ ..
ಪ್ರೀತಿ ಮಾಡ್ಲಿಕ್ಕೆ ಆ  ರೂಮ್...!


ಪ್ರೀತಿ ಮುಗಿದ ಮೇಲೆ ಅವಳು ಈ ರೂಮಿಗೆ ಬರ್ತಾಳೆ....!!!..


ಜಾಸ್ತಿ ಪ್ರೀತಿ ಬೇಕು ಅಂದಾಗ ಮಧ್ಯದಲ್ಲಿ ಎದ್ದು ಬರ್ತಾಳೆ...!!.."


ನಾನು ಮತ್ತೆ ಎಚ್ಚರ ತಪ್ಪಿ ಬೀಳುವವನಿದ್ದೆ..!!..


ಹೇಗೋ..
ಹೇಗೊ ಸಂಭಾಳಿಸಿಕೊಂಡೆ...!


ಆತ ಹೆಚ್ಚು ಹೊತ್ತು ಮನೆಯಲ್ಲಿ ಇರಗೊಡಲಿಲ್ಲ...


ನನ್ನನ್ನು ಬಸ್ಟ್ಯಾಂಡಿಗೆ ಕರೆದುಕೊಂಡು ತಂದು ಬಿಟ್ಟ...


"ಪ್ರಕಾಶು..
ಎಲ್ಲರಿಂದ  ದೂರವಾಗಿ.. 
ಇಲ್ಲಿ ಭಾಷೆ ಬರದ ನಾಡಿನಲ್ಲಿ ಹಾಯಾಗಿದ್ದೇನೆ..!


ಬೆತ್ತಲಾಗ ಬೇಕು ..
ಬೆತ್ತಲೆಯಾಗುವದು ಅನಿವಾರ್ಯ ಎಂದಾಗ .  
ನಮ್ಮವರ ಬಳಿಯೇ.. ಬೆತ್ತಲಾಗಬೇಕು ಕಣೋ..!


ನನ್ನ ಹೆಂಡತಿ ಒಳ್ಳೆಯವಳು.."


ಎನ್ನುತ್ತಾ ನನ್ನನ್ನು ತಬ್ಬಿಕೊಂಡ...
ಆ ಅಪ್ಪುಗೆಯಲ್ಲಿ ಹೇಳಲಾಗದ ತುಂಬಾ ಮಾತುಗಳಿದ್ದವು...


ನಾನು ರೂಮಿಗೆ ಬಂದೆ..
ನಾನು ನನ್ನ ಮಡದಿಗೆ ಈ ಕಥೆಯನ್ನೆಲ್ಲ ಹೇಳಿದೆ...


ಬಿದ್ದೂ ಬಿದ್ದೂ ನಕ್ಕಳು...


"ಅಲ್ಲಾರಿ...
ಅವನಿಗೆ ಎರಡು ಮಕ್ಕಳು ಅಂದ್ರಲ್ಲ...
ಮಕ್ಕಳು ಹೇಗಿದ್ದಾರೆ...?
ಪಾಪ..!!..
ಮಕ್ಕಳಿಗೆ ಗ್ಯಾಸ್ ಸಮಸ್ಯೆ ಇದೆಯಂತಾ...?"


"ಮಕ್ಕಳಿಗೆ ಗ್ಯಾಸ್ ಸಮಸ್ಯೆ ಇಲ್ಲಂತೆ ಕಣೆ...!
ಅವರು ಚೆನ್ನಾಗಿದ್ದಾರೆ..


ಆದರೆ...


ಆ ಮಕ್ಕಳಿಗೆ ಮುಖದ ತುಂಬ ದೊಡ್ಡ ಮೂಗು ಇದೆ ಕಣೆ...!!


ದೊಡ್ಡ... ದೊಡ್ಡ... ಮೂಗು.. !!.."


ನನ್ನಾಕೆ... 
ನಗು ತಡೇಯಲಾರದೆ ಹೊರಕ್ಕೆ ಓಡಿದಳು...!!


ನನಗೂ  ನಗು ತಡೆಯಲಾಗಲಿಲ್ಲ...


ಜೋರಾಗಿ ನಕ್ಕು ಬಿಟ್ಟೆ...!!...








(ಈ "ಆಲುಗಡ್ಡೆ ಜ್ಯೂಸ್ " ಬಗೆಗೆ ನನಗೆ ವಿವರಗಳು ಗೊತ್ತಿಲ್ಲ..


ನನ್ನ ಗೆಳೆಯ ಇನ್ನೂ ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ..
ಅದರಿಂದಲೂ ವಾಸಿಯಾಗಿರ ಬಹುದು..")


Sunday, January 1, 2012

"ವಾಸನೆಗಳೇ .. ಹೀಗೆ... .. ದೊಸ್ತಿಯಾದಮೇಲೆ ಏನೂ ಅನ್ನಿಸೋದಿಲ್ಲ... !!.."

PART :: 1
ಭಾಗ :: ಒಂದು...


ರಜೆಗಳೆಲ್ಲ ಮುಗಿದು ..
ಹೊಸತಾಗಿ ಕಾಲೇಜು ಶುರುವಾಗಿತ್ತು..
ನಮಗೆಲ್ಲ ಏನೋ ಒಂಥರಾ ಸಂಭ್ರಮ..


ಕೆಲವು ಹೊಸ ಮುಖಗಳೂ ಬಂದಿದ್ದವು...
ಚಂದದ ಬಣ್ಣಗಳೂ ಇದ್ದವು... 


ಆತನೊಬ್ಬ ವಿಚಿತ್ರ ಹುಡುಗ...


ಇನ್ನೇನು ಕ್ಲಾಸ್ ಶುರುವಾಗುತ್ತದೆ ಅನ್ನುವಾಗ ಬರ್ತಿದ್ದ..!


ಕ್ಲಾಸ್ ಮುಗಿಯುತ್ತಿದ್ದ ಹಾಗೆ ಜಲ್ದಿ ಜಲ್ದಿಯಲ್ಲಿ ಹೋಗಿಬಿಡುತ್ತಿದ್ದ..!


ಯಾವಾಗಲೂ ಎಲ್ಲರಿಗಿಂತ ಹಿಂದೆ ಕುಳಿತಿರುತ್ತಿದ್ದ...


ಆತ ಯಾರೆಂದು ನಮಗ್ಯಾರಿಗೂ ಗೊತ್ತಿರಲಿಲ್ಲ..!


"ಆತ  ಯಾಕೆ  ಹೀಗೆ?"


"ಅಯ್ಯೋ ...
ಅವನು   "ಗ್ಯಾಸ್ ಮಹಾದೇವ...".. !!
ಅವನೊಬ್ಬ  ಗ್ಯಾಸ್ ಏಜನ್ಸಿ...!!.


ಆಸಾಧ್ಯ ಗ್ಯಾಸ್.. ಬಿಡ್ತಾನೆ ಮಾರಾಯರಾ...!
ಅವನ ಗ್ಯಾಸ್ ವಾಸನೆ ತಗೊಂಡ್ರೆ ...
ಎರಡು ದಿನ ಮೂಡ್ ಎಲ್ಲ ಹಾಳಾಗಿ ಹೋಗ್ತದೆ...!


ಅಂಥಹ  ಧರಿದ್ರ.. 
ಕೆಟ್ಟವಾಸನೆ ಎಲ್ಲಿಂದ ಬರ್ತದೆ ಅನ್ನೋದೇ ಗೊತ್ತಾಗಲ್ಲ ..
ಮೂಗಿನೊಳಗಿನ ಕೂದಲುಗಳೆಲ್ಲ ಉದುರಿ ಹೋಗಿಬಿಡುತ್ತವೆ..!


ಅವನ ವಿಷಯ ನಮಗೆ ಬೇಡ್ರೋ...."


ಆತನ ಸ್ವಲ್ಪ ಪರಿಚಯ ಮಾಡಿಕೊಂಡ ಉಮಾಪತಿ ವರದಿ ಒಪ್ಪಿಸಿದ..


ನಾಗುವಿಗೆ ಅವನ ಬಗೆಗೆ ಆಸಕ್ತಿ ಹುಟ್ಟಿತು..


ನಮ್ಮ ನಾಗು ಯಾವಾಗಲೂ ಹಾಗೇನೆ..


ಆವನನ್ನು ಮಾತನಾಡಿಸಿದ..
ಆ ಹುಡುಗ  ಬಹಳ ಬೇಸರದಲ್ಲಿದ್ದ..


"ನಿಜ ಕಣ್ರೋ..
ನನಗೆ ಹುಟ್ಟಿನಿಂದ ಈ ಸಮಸ್ಯೆ ಇದೆ..
ನನ್ನ ಪರಿಚಯದವರು ಯಾರೂ ನನ್ನ ಹತ್ತಿರ ಬರೋದಿಲ್ಲ..
ಎಲ್ಲಿಯೂ ಹೋಗೊ ಹಾಗಿಲ್ಲ..
ನನಗೆ ಯಾರೂ ಫ್ರೇಂಡ್ಸ್ ಕೂಡ ಇಲ್ಲ..
ನನ್ನ ಅಪ್ಪ.. ಅಮ್ಮ.. ಅಣ್ಣ.. ತಂಗಿ ಕೂಡ ನನ್ನನ್ನು ಹತ್ತಿರ ಸೇರಿಸೋಲ್ಲ.."


"ಔಷಧಿ  ಮಾಡಿಸ ಬೇಕಿತ್ತು..."


"ಅದೂ ಆಯ್ತು.. ಕಣ್ರೋ..
ಎಷ್ಟೇ ಔಷಧ ಮಾಡಿಸಿದ್ದರೂ ವಾಸಿಯಾಗಲಿಲ್ಲ...
ಸಿರಸಿಯ  ಯಾವ ಡಾಕ್ಟರಿಗೂ ಇದನ್ನು ವಾಸಿ ಮಾಡಲು ಆಗಲಿಲ್ಲ..
ಇದು ನನ್ನ ಜನ್ಮಕ್ಕೆ ಅಂಟಿದ ಶಾಪ...


" ಛೇ.. 
ಬೇಜಾರು ಮಾಡ್ಕೋ ಬೇಡವೋ .. ."


ನಾನು ಎಲ್ಲೇ ಹೋದರು ಜನ ಓಡಿ ಹೋಗುತ್ತಾರೆ..
ನನ್ನನ್ನು ಅಪಹಾಸ್ಯ ಮಾಡ್ತಾರೆ..


ಎಲ್ಲರೂ ಇದ್ದು ನಾನು ಒಂಥರಾ ಒಂಟಿ..
ನನ್ನ ಊರಿನವರಿಗೆ...
ನನ್ನ ಸಂಬಂಧಿಕರಿಗೆ.. ಗೆಳೆಯರಿಗೆ..
ನಾನು ನಗಲಿಕ್ಕೆ ಒಂದು ವಿಷಯ ಆಗಿಬಿಟ್ಟಿದ್ದೇನೆ..


ವಯಸ್ಸಿನ ಆಸೆ..
ಹೆಣ್ಣುಮಕ್ಕಳನ್ನು ನೋಡಿದರೂ.. ಕಿಸಕ್ಕನೆ ನಗುತ್ತಾರೆ..
ನನಗೂ ಆಸೆ ಇದೆ..
ನನ್ನ ನೋವು ಯಾರಿಗೂ ಅರ್ಥನೇ ಆಗೋಲ್ಲ.."


ನಮಗೆಲ್ಲ ನಿಜಕ್ಕೂ ಪಾಪ ಅನಿಸಿತು..


ನಾಗು ಅವನಿಗೆ ಧೈರ್ಯ ತುಂಬಿದ..


"ಹೆದರಬೇಡ ಕಣೋ..
ನಾವೆಲ್ಲ ನಿನ್ನ ಜೊತೆ ಇದ್ದೇವೆ.."


ನಾಗು ನಮಗೆಲ್ಲ ಹೇಳಿದ..


"ನೋಡ್ರೋ..
ದಿನಾಲೂ ಒಂದು ಖರ್ಚೀಫ್ ಇಟ್ಕೋಳ್ಳೋಣ..
ಏನೇನೋ.. ಸಹಿಸ್ಕೋತೀವಿ..
ಇದು ದೊಡ್ಡ ವಿಷಯ ಆಗೋದಿಲ್ಲ ಕಣ್ರೋ..


ವಾಸನೆಗಳೇ ಹೀಗೆ...
ದೊಸ್ತಿಯಾದಮೇಲೆ ಸಹ್ಯವಾಗಿಬಿಡುತ್ತವೆ...
ಏನೂ ಅನ್ನಿಸೋದಿಲ್ಲ...  


ಯಾರನ್ನೇ ಆಗಲಿ..
"ನಮ್ಮವರು" ಅಂತ ಅಂದುಕೊಂಡರೆ  ಅವರ ಎಷ್ಟೋ ವಾಸನೆಗಳು ...
ನಮಗೆ ಗೊತ್ತೇ ..ಆಗುವದಿಲ್ಲ ಕಣ್ರೋ.."

ನಾವೆಲ್ಲ ಹೂಂ.. ಅಂದೆವು...


ಅಂದಿನಿಂದ ಆತ ನಮ್ಮೊಡನೆ ಕೂತ್ಕೋತ್ತಿದ್ದ..
ತನಗೆ ಗ್ಯಾಸ್ ಬರ್ತದೆ ಅಂದಕೂಡಲೆ ಒಂದು ಬಾರಿ ಸಣ್ಣಗೆ ಕೆಮ್ಮುತ್ತಿದ್ದ..
ನಾವೆಲ್ಲ ತಕ್ಷಣ ಖರ್ಚೀಪ್ ಮೂಗಿಗೆ ಇಟ್ಕೋತಿದ್ವಿ...


ಇಂಥಹ ಕೆಟ್ಟ  ವಾಸನೆ ಜಗತ್ತಿನಲ್ಲಿ ಇರಬಹುದೆಂಬ ಕಲ್ಪನೆ  ನಮಗೂ ಇರ್ಲಿಲ್ಲ..!
ಅತ್ಯಂತ  ಕೆಟ್ಟ ವಾಸನೆ ಅದು...!


ಕರ್ಚೀಪ್ಹ್ ಮಧ್ಯದಲ್ಲಿ  ಪೌಡರ್ ಹಾಕ್ಕೊಂಡು ಬರ್ತಿದ್ವಿ...


ಕ್ರಮೇಣ ಅವನೊಂದಿಗೆ ಅವನ ವಾಸನೆಯೊಂದಿಗೂ ಸ್ನೇಹವಾಯಿತು...


ಒಮ್ಮೆ ನಮ್ಮ ಕಾಲೇಜಿನವರು ..
ಒಂದು ಚಾಂಪಿಯನ್  ಕ್ರಿಕೆಟ್ ಟೀಮಿನೊಂದಿಗೆ ಜಯ ಸಾಧಿಸಿದ್ದೇವು..


ಏನಾಗುತ್ತಿದೆ ಅನ್ನುವಷ್ಟರಲ್ಲಿ ಎದುರು ಟೀಮಿನ ಆರು ಆಟಗಾರರು ಔಟಾಗಿದ್ದರು...!!


ನಾವು ಮಾಡಿದ್ದು ಏನೂ ಇಲ್ಲ..
ನಾಗುವಿನ ಸಲಹೆಯಂತೆ "ಇಂಡೇನ್ ಗ್ಯಾಸ್" ನನ್ನು ..
ಬ್ಯಾಟ್ಸಮನ್  ಹತ್ತಿರ  "ಸ್ಲಿಪ್ಪಿನಲ್ಲಿ "  ನಿಲ್ಲಿಸಿದ್ದೆವು..


ಟುಸ್ಸು..ಟುಸ್ಸು...ಟುಸ್ಸು....!!


ಜಯ ಸುಲಭವಾಗಿ ಸಿಕ್ಕಿತ್ತು...


ಆಗ ನಾನು ಮತ್ತು ಉಮಾಪತಿ ...
ಸಿದ್ದಾಪುರದ "ಪದ್ಮನಾಭ ಭಟ್ಟರ " ಮನೆಯಲ್ಲಿ ರೂಮ್ ಮಾಡಿದ್ದೇವು..


ಮಹಡಿಯ ಮೇಲೆ ಮರದ ಹಲಗೆಗಳನ್ನು ಜೋಡಿಸಿ..
ರೂಮುಗಳನ್ನಾಗಿ ವಿಭಾಗ ಮಾಡಿದ್ದರು..


ನಾವು ಊರಿಗೆ ಹೋಗಿ ಬರುವಾಗ ...
ಮನೆಯಿಂದ ಚಕ್ಕುಲಿ.. ಕೋಡುಬಳೆ..ರವೆ ಉಂಡೆ.. ಇತ್ಯಾದಿಗಳನ್ನು ತರುತ್ತಿದ್ದೆವು..


ಎಲ್ಲರಿಗೂ ಹಂಚಿ ತಿನ್ನಲು ಸಾಲುತ್ತಿರಲಿಲ್ಲ..
ಅದಕ್ಕಾಗಿ ರೂಮಿನಲ್ಲಿ ನಾನು ಉಮಾಪತಿ.. ನಾಗು ಮೂವರು ಮಾತ್ರ ತಿನ್ನುತ್ತಿದ್ದೆವು..


ಪಕ್ಕದ ರೂಮಿನ  "ನರಶಿಂವ"  ಮಹಾ ಪ್ರಚಂಡ...
ಅವನದು ಅಸಾಧ್ಯವಾದ ಮೂಗು...
ನಮ್ಮ ರೂಮಿನ ಎಂಥಹ ವಾಸನೆಯನ್ನಾದರೂ ಬಲು ಬೇಗ ಗ್ರಹಿಸಿ ಬಿಡುತ್ತಿದ್ದ...


"ಉಮಾಪತಿ...!
ನಿನ್ನೆ.. ರವೆ ಉಂಡೆ ಚೆನ್ನಾಗಿತ್ತೇನೋ..?"


ನರಶಿಂವನ ಮಾತುಕೇಳಿ ನಮಗೆ ಮುಜುಗರ ಆಗ್ತಿತ್ತು... 
ಸಿಟ್ಟೂ ಕೂಡ ಬರ್ತಿತ್ತು..
ಹಂಚಿಕೊಂಡು ತಿನ್ನಲಾಗದ ಅಸಹಾಯಾಕತೆ..


ಆತ ನಮಗೆಂದೂ ತನ್ನ ತಿಂಡಿ ಯಾವತ್ತೂ ಕೊಡುತ್ತಿರಲಿಲ್ಲ...


ನಾಗು ಒಂದು ಉಪಾಯ ಮಾಡಿದ..


"ಅವನ ಮೂಗು ಏನೂ ಇಲ್ರೋ...
ಆತ ಹಲಗೆಯ ಕಿಂಡಿಯಿಂದ  ಇಣುಕಿ ನೋಡುತ್ತಾನೆ..
ಹಲಗೆಗೆ.. ಪೇಪರ್ ಅಂಟಿಸ್ರೋ...."


ನಾನು ಉಮಾಪತಿ ಪೇಪರ್ ಅಂಟಿಸಿದೆವು...


ನರಶಿಂವ ಮತ್ತೆ ಮರುದಿನ ಕೇಳಿದ..
"ನಿನ್ನೆ ನೀವು ತಿಂದ  "ಕೋಡುಬಳೆ"  ಚೆನ್ನಾಗಿತ್ತೆನ್ರೋ...? " .. 


ನಾಗು ಈ ಬಾರಿ ಬೇರೆ ಉಪಾಯ ಮಾಡಿದ...


ರಾತ್ರಿ ಊಟವಾದ ಮೇಲೆ.. ಲೈಟ್ ಆಫ್ ಮಾಡಿದೆವು..
ಪ್ಲಾಸ್ಟಿಕ್  ಕೊಟ್ಟೆಯ  "ಸಡ ಪಡ"  ಶಬ್ಧ ಮಾಡಿದೆವು...


ಪಕ್ಕದ ರೂಮಿನಿಂದ ಒಂದು ಕಡ್ಡಿ ನಮ್ಮ ರೂಮಿನಲ್ಲಿ ಇಣುಕಿತು..


" ಓಹೋ.. 
ಈ..ನರಶಿಂವ .. 
ಕಡ್ಡಿಯಿಂದ ನಾವು ಅಂಟಿಸಿದ ಪೇಪರನ್ನು..
ತೂತು ಮಾಡಿ.. ಅಲ್ಲಿಂದ ಇಣುಕಿ ನೋಡುತ್ತಾನೆ.. "


ನಾಗು ಮೊದಲೆ "ಸಿಲಿಂಡರ್ ಗ್ಯಾಸ್"  ನನ್ನು ಕರೆದಿದ್ದ...


ನಮ್ಮ  ಗ್ಯಾಸು ಮಹಾದೇವ..
ತಕ್ಷಣ ಆ ಕಡ್ಡಿ ಬಂದ ಜಾಗದಲ್ಲಿ ತನ್ನ ಚಡ್ಡಿಯನ್ನು ಸರಿಯಾಗಿ ಒತ್ತಿ ಹಿಡಿದು..
ಯಥಾನು ಶಕ್ತಿ..
ಇನ್‍ಸ್ಟಾಲ್‍ಮೆಂಟಿನಲ್ಲಿ ... ಗ್ಯಾಸ್ ಬಿಡಲು ಶುರುಮಾಡಿದ..


ಟುಸ್ಸು... !
ಟುಸ್ಸು...! ಟುಸ್ಸು... ! ಟುಸ್ಸೂ...!!!


ಕಂತು.. ಕಂತಾಗಿ ಗ್ಯಾಸ್ ಆ ತೂತಿನಲ್ಲಿ ಹೋಗ ತೊಡಗಿತು...!


ಪಕ್ಕದ ರೂಮಿನಿಂದ ..


"ಅಯ್ಯಯ್ಯೋ.. !!!
ಅಯ್ಯಯ್ಯೋ....!
ಸತ್ತೇನ್ರಪ್ಪೋ.. ಸತ್ತೇ... !!..." 


ನರಶಿಂವ  ಕೂಗಿದ ಶಬ್ದ ಮಾತ್ರ  ಕೇಳಿತು...!.


ಮುಂದೆ ಯಾವತ್ತೂ ....
ನರಶಿಂವ ನಮ್ಮ ರೂಮಿನ ಕಡೆ ಇಣುಕಿಯೂ ನೋಡಲಿಲ್ಲ...!


ಒಂಥರಾ ಹುಳಿ ಮುಖ ಮಾಡಿಕೊಂಡು ಮುಖ ತಿರುಗಿಸಿ ತಪ್ಪಿಸಿಕೊಳ್ಳುತ್ತಿದ್ದ...


ನಮ್ಮ ಒಎನ್ ಜಿಸಿ ..
ಗ್ಯಾಸ್ ಮಹಾದೇವನಿಗೆ ಒಂದು ಕಲೆ ಸಿದ್ದಿಸಿತ್ತು...


ಆತ ತನಗೆ ಬೇಕಾದಾಗ ಶಬ್ದ ಮಾಡಿ ಬಿಡುತ್ತಿದ್ದ..


ಇಲ್ಲವಾದಲ್ಲಿ ಶಬ್ಧವಿಲ್ಲದೆ.. ಸಾವಕಾಶವಾಗಿ..ತಣ್ಣಗೆ ಗ್ಯಾಸ್  ..ಬಿಡುತ್ತಿದ್ದ...


ಆ ಇಚ್ಚಾಶಕ್ತಿ ಇತ್ತು ಅವನಿಗೆ...!


ನಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ..
ರಾಷ್ಟ್ರಮಟ್ಟದ ನಾಯಕರುಗಳು ಆಗಾಗ ನಿಧನರಾಗುತ್ತಿದ್ದರು..


ನಮ್ಮ ಪ್ರಿನ್ಸಿಪಾಲರು..
ಕಾಲೇಜಿನ ಎಲ್ಲ ಹುಡುಗರನ್ನು ಮೈದಾನದಲ್ಲಿ ಸೇರಿಸಿ....
ಬೋಳು ಕಾಯುವ ರಣ ಬಿಸಿಲಲ್ಲಿ  ..
ಐದು ನಿಮಿಷ ಮೌನಾಚರಣೆ ಮಾಡಿಸುತ್ತಿದ್ದರು..


ಯಾಕೆ ಅಂತ ಗೊತ್ತಿಲ್ಲ..
ಈ ಮೌನಾಚರಣೆ ಎಂದರೆ ಸಿಕ್ಕಾಪಟ್ಟೆ ನಗು ಬರ್ತಿತ್ತು..


ನಮ್ಮಲ್ಲಿ ಯಾರಾಬ್ಬರಾದರೂ "ಬುಸುಕ್" ಅಂತ ಶಬ್ದ ಮಾಡಿದರೆ ..
ತಡೆಯಲಾರದ  ನಗು ಬರ್ತಿತ್ತು..


ಆಗ ನಕ್ಕರೆ ಶಿಕ್ಷೆ ಗ್ಯಾರೆಂಟಿ...
ಎಲ್ಲ ಹುಡುಗರೆದುರಿಗೆ ನಿಲ್ಲಿಸಿ ..
ಸಿಕ್ಕಾಪಟ್ಟೆ ಬೈಯ್ದು ಅವಮಾನ ಮಾಡಿಸಲಾಗುತ್ತಿತ್ತು...


ಈ ಮೌನಾಚರಣೆಯನ್ನು ನಿಲ್ಲಿಸುವದು ಹೇಗೆ..??


ನಾಗು ಗ್ಯಾಸ್ ಮಹಾದೇವನನ್ನು  ಮುಂದಿನ ಸಾಲಿನಲ್ಲಿ ..
ಪ್ರಿನ್ಸಿಪಾಲರ ಹತ್ತಿರ ನಿಲ್ಲಿಸಿದ ...


ಆತ ಯಥಾನು ಶಕ್ತಿ ಗ್ಯಾಸ್ ಬೀಟ್ಟ.. 
ಸೌಂಡ್ ಇಲ್ಲದೆ...
ಕಂತು.. ಕಂತಾಗಿ.. ಸ್ವಲ್ಪ ಸ್ವಲ್ಪವಾಗಿ ಬಿಟ್ಟ...


ಟುಸ್ಸು... !!!
ಟುಸ್ಸು... ಟುಸ್ಸು...ಟುಸ್ಸೂ...!!!


ಬಹಳ ಅದ್ಭುತವಾದ ವಾಸನೆ ಅವನದು.. !!


ಮುಂದೆ ನಿಂತಿದ್ದ ಪ್ರಿನ್ಸಿಪಾಲರ ..
ಮೂಗು...
ಕನ್ನಡಕ ತಂತಾನೇ   ಎಗರಾಡಿತು..!


ಗಟ್ಟಿಯಾಗಿ ಮೂಗು ಹಿಡಿದುಕೊಂಡು ತಮ್ಮ ಛೇಂಬರಿಗೆ ಓಡಿ ಹೋದರು..!


ಹುಡುಗರಿಗೆಲ್ಲ ನಗು ತಡೆಯಲಾಗಲಿಲ್ಲ...!


ಇದೆ ಸಮಯಕ್ಕಾಗಿ ಕಾಯುತ್ತಿದ್ದ..
ಎಲ್ಲರೂ "ಹ್ಹೋ... ಹ್ಹೋ.." ಎಂದುಜೋರಾಗಿ  ನಕ್ಕರು...!


ಪ್ರಿನ್ಸಿಪಾಲರು  ಕೋಪದಿಂದ ಥೈ ಥೈ  ಕುಣಿದಾಡಿದರು...!


"ಯಾವನ್ರೀ.. ಅವನು..?..?..
ಏನು ತೀಂತ್ತಾನ್ರಿ..? .. !!..
ಅಬ್ಬಬ್ಬಾ... !!
ಹದಿನೈದು ದಿನ ಟಾಯ್ಲೆಟ್ಟಿಗೆ ಹೋಗ್ದೇ ಇದ್ರೆ ಈ ಥರ ವಾಸನೆ ಬರಬಹುದು...!


ನಾನು ಊಟ ಮಾಡೋದು ಹೇಗ್ರೀ..?


ನನ್ನ ಮೂಗಿನ ವಾಸನೆಯ ಸಂವೇದನೆಯೇ ಹೊರಟು ಹೋಯ್ತಲ್ರೀ.. !!
ರಾಮಾ... ರಾಮಾ... !
ಯಾರ್ರೀ... ಅವನು...?.. !!.."


ಅಂದಿನಿಂದ ..
ದೇಶದ  ಯಾವ  "ನಾಯಕರು"  ಸತ್ತರೂ ...
"ಮೌನಾಚರಣೆಯ ಕಷ್ಟ"   ಇರುತ್ತಿರಲಿಲ್ಲ...






(ಇನ್ನೂ ಇದೆ...
ನಾಗು ಅವನಿಗೆ ಗ್ಯಾಸ ಬಿಡಿಸಿದ ಕಥೆ... ಮುಂದಿನ ಭಾಗದಲ್ಲಿ...


ಪ್ರತಿಕ್ರಿಯೆಗಳಲ್ಲಿ ಇಲ್ಲಿ ಹೇಳಿರದ ಘಟನೆಗಳಿವೆ.. 
ದಯವಿಟ್ಟು ನೋಡಿ..)


ಎಲ್ಲರಿಗೂ..
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ಜೈ ಹೋ.. !!

Monday, November 21, 2011

...........ಬಣ್ಣ........

ಆ ಹುಡುಗ ಮೊದಲ ನೋಟದಲ್ಲೇ.. ನನಗಿಷ್ಟವಾಗಿದ್ದ...


ಆ ಹಸಿ.. ಹಸಿ ನೋಟ..
ಹಸಿದು ತಿನ್ನುವ ಭಾವ...


ನಾನೊಬ್ಬ ಹೆಣ್ಣು...
ನನ್ನಲ್ಲಿನ ಹೆಣ್ಣುತನವ ಜಾಗ್ರತ ಗೊಳಿಸುವ ಆ ಹುಡುಗನ ಕಣ್ಣಲ್ಲಿ ಬೆತ್ತಲಾಗುವದರಲ್ಲಿ ಖುಷಿಯಾಗುತ್ತಿತ್ತು..
ಆತನ ನೋಟವನ್ನು ನನ್ನ ಏಕಾಂತದಲ್ಲಿ ನೆನಪಿಸಿಕೊಳ್ಳುವದರಲ್ಲೂ.. ಸೊಗಸಿತ್ತು...


ಅವನ ಪೋಲಿತನದ ಮಾತುಗಳು...


ವಯಸ್ಸಿನ ಸಹಜ ಕುತೂಹಲದ..
ಹೆಣ್ಣಿನ ಬಗೆಗಿನ ಹುಚ್ಚು ಹುಚ್ಚಾದ ಪ್ರಶ್ನೆಗಳು..


ಹೆಣ್ಣಿನ ಬಗೆಗಿನ ಅವನ ಮುಗ್ಧತನ ನನಗೆ ಹುಚ್ಚು ಹಿಡಿಸಿದ್ದವು...


ಅವನೊಬ್ಬ ಚಿತ್ರಕಾರ...
ಮಧುರ ಕಂಠದ ಹಾಡುಗಾರ..


ಜೇನು ಮೀಸೆಯ ಹುಡುಗ ನನಗಂತೂ ಸಿನೇಮಾ ಹೀರೋ ಥರಹವೇ ಕಾಣುತ್ತಿದ್ದ...


" ನನಗೆ ಒಂದು ಆಸೆ ಇದೆ...
ನನ್ನ 
ಭಾವಗಳನ್ನು ತುಂಬಿ..
ನಿನ್ನದೊಂದು   ಚಿತ್ರ ಬಿಡಿಸಲಾ ..?"


ಅವನ ಬೇಡಿಕೆ ಕೇಳಿ ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು...


"ನಿನ್ನ   ...
ಕೆನ್ನೆಯ ಉಬ್ಬು..
ತುದಿಗಲ್ಲದ ನುಣುಪು...
ಅರೆತೆರೆದ ಕಣ್ಣು.. 
ನಿನ್ನ... 
ಆ ಭಾವಗಳನ್ನು ನನ್ನ ಕುಂಚದಲ್ಲಿ ಸೆರೆ ಹಿಡಿದಿಡುವ ಆಸೆ ಕಣೆ......"


ನಾನು ಚಂದ ಇದ್ದೇನೆ ಅಂತ ನನಗೆ ಗೊತ್ತು...
ನನ್ನ ಅಂದವನ್ನು ಹುಡುಗನ ಬಾಯಲ್ಲಿ ಕೇಳುವದೂ ಸೊಗಸೆಂದು ಗೊತ್ತಿರಲಿಲ್ಲ...


"ನೀನು ..
 ಮೂಗಿಗೊಂದು ರಾಜಸ್ತಾನಿ ದೊಡ್ಡ ರಿಂಗು...
ಕೆನ್ನೆ ಸರಪಳಿ...ಕಿವಿಯ ತನಕ..
ಕಿವಿಗೆ ದೊಡ್ಡ ಪದಕದ ರಿಂಗು..


ತಲೆ ತುಂಬಾ ಹೂವು ಮುಡಿದು ಬಾ......."


ಹುಡುಗನ ಬೇಡಿಕೆಗೆ ಇಲ್ಲವೆನ್ನಲಾಗಲಿಲ್ಲ..


ಮನೆಯಲ್ಲಿ ಸುಳ್ಳು ಹೇಳಿ ಹುಡುಗ ಹೇಳಿದಂತೆ ತಯಾರಾಗಿ ಬಂದೆ...
ಅಮ್ಮನ ಸಂಶಯದ ಕಣ್ಣಿಗಳಿಗೆ ಉತ್ತರವನ್ನೂ ಕೊಟ್ಟು ಬಂದಿದ್ದೆ..


ಹುಡುಗ ನನಗೊಂದು ಭಂಗಿಯಲ್ಲಿ ಕುಳ್ಳಿರಿಸಿ ಚಿತ್ರ ಬಿಡಿಸಲು ಶುರುಮಾಡಿದ...


ಅವನು ನನ್ನನ್ನು ನೋಡುವ ರೀತಿ...
ನನ್ನಲ್ಲಿನ ಭಾವಗಳನ್ನು ಹುಚ್ಚೆಬ್ಬಿಸುತ್ತಿತ್ತು...


ಹುಡುಗ ಚಿತ್ರ ಬಿಡಿಸಿ ಮುಗಿಸಿದ...


"ಹುಡುಗಿ...
ನಿನ್ನ   ಅಲಂಕಾರಗಳನ್ನು ಬಿಚ್ಚಿಕೊಡಲಾ....?"


ನನಗೆ ಈಗಲೂ ಒಳಗಿಂದೊಳಗೇ ಸಂತೋಷ...!


ಹುಡುಗ ತುಂಬಾ ಚಾಲೂಕು ಇದ್ದ..


ಆತ ಒಂದೊಂದಾಗಿ ನನ್ನ ಆಭರಣಗಳನ್ನು ಕಳಚುತ್ತಿದ್ದ...
ತಲೆಗೆ ಮುಡಿದ ಹೂಗಳ ಸುವಾಸನೆ  ಹೀರುತ್ತಿದ್ದ...


"ನಿನ್ನ ..
ಆಭರಣಗಳನ್ನು ಬಿಚ್ಚಿಡುತ್ತಿರುವೆ... 
ನಿನಗೆ   ಬೇಸರವಾ...?"


ನನಗೆ ಮೌನವಾಗಿ ಈ ಸಮಯವನ್ನು ಅನುಭವಿಸುವ ಆಸೆ ಇತ್ತು...
ಆದರೂ ಮಾತನಾಡಿದೆ..


"ಬೇಸರ ಇಲ್ಲ...
ನಾನು ಚಂದವಾಗಿ ತಯಾರಾಗಿ ಬಂದಿದ್ದು...ಇದಕ್ಕಾಗಿಯೇ..


ನೀನು  ಅಲಂಕಾರವನ್ನು ಹಾಳು ಮಾಡಲೆಂದೆ ಅಲಂಕರಿಸಿಕೊಂಡಿದ್ದೇನೆ...


ಚಂದದ ತಯಾರಿಗಿಂತ .. 
ಅಲಂಕಾರ ಹಾಳು ಮಾಡಿಕೊಳ್ಳುವದರಲ್ಲೇ ಹೆಚ್ಚು ಸುಖ..


ಹೆಣ್ಣಿನ ಮನಸ್ಥಿತಿ ನಿನಗೆ ಅರ್ಥವಾಗುವದಿಲ್ಲ...ಬಿಡು ...


ನೀನು...
ಮಾಡುತ್ತಿರುವದು ತಪ್ಪಲ್ಲವಾ?"


"ತಪ್ಪಿಲ್ಲ ಕಣೆ......


ನೀನು  ಪ್ರಕೃತಿಯ ಹಾಗೆ...
ಹೆಣ್ಣು  ಭೋಗಿಸುವದಕ್ಕಾಗಿಯೇ ಇರುವದು...


ಅತ್ಯಾಚಾರಕ್ಕೂ ಒಂದು ಚಂದದ "ಬಂಧನದ, ಬಾಂಧವ್ಯದ"  ಹೆಸರುಕೊಟ್ಟು ಭೋಗಿಸುತ್ತಾರೆ..


ಹೆಂಡತಿಯಾದರೂ..
ಗೆಳತಿಯಾದರೂ ಹೆಣ್ಣು  ಇರುವದು ಭೋಗಿಸುವದಕ್ಕೇನೇ.."


ನನಗೆ ಕೋಪ ಬಂತು......


"ಎಷ್ಟು  ಹೊಲಸಾದ ಮಾತುಗಳನ್ನಾಡುತ್ತೀಯಾ.......?
ನಿನಗೆ  ನಾನು ಭೋಗದ ವಸ್ತುವಾಗಿ ಕಾಣಿಸುತ್ತೇನೆಯೇ..?


ನನ್ನೋಳಗಿನ ಹೃದಯ...
ಅದರಲ್ಲಿನ ಪವಿತ್ರವಾದ ಪ್ರೇಮ  ಕಾಣಿಸುವದಿಲ್ಲವಾ?
ಕೆಟ್ಟ ಮನಸ್ಸಿನವನು ನೀನು .....
ಛೇ..."


"ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡ..
ನಮ್ಮ 
ಪುರುಷ ಸಮಾಜ ಇರುವದೇ ಹೀಗೆ..


ನೀನು .
ನಿನ್ನ  ಪ್ರೀತಿ, ..
ಬಾಂಧವ್ಯಕೂಡ ಭೋಗಿಸುವದಕ್ಕಾಗಿಯೇ ಇದೆ..


ಮದುವೆಯೆಂಬ ಬಂಧನವೂ ಒಂದು ಅತ್ಯಾಚಾರ ಕಣೆ.....


ಅತ್ಯಾಚಾರಕ್ಕೆ ..
ಸುಸಂಕೃತ ಪುರುಷ ಸಮಾಜದ ..
ಪರವಾನಿಗೆ ಪತ್ರ "ಈ ಮದುವೆ" ...!


ಆದರೆ..
ನಾನು ಹಾಗಿಲ್ಲ..
ನಿನ್ನನ್ನು  ನನ್ನ ಬದುಕಿನಷ್ಟು ಪ್ರೀತಿಸುತ್ತೇನೆ..."


"ನೋಡು.....
ಬಣ್ಣದ ಮಾತುಗಳು ಬೇಡ...
ನೀನು  ನನ್ನನ್ನು ಮದುವೆಯಾಗುವದಿಲ್ಲವೇ...?


ನನಗೆ ನಮ್ಮ ಪ್ರೀತಿಗೊಂದು ಚೌಕಟ್ಟು ಹಾಕಿ..
ಬದುಕಿನುದ್ದಕ್ಕೂ ಪೂಜಿಸುವ ಆಸೆ..
ನಮ್ಮ ಪ್ರೀತಿಯನ್ನು ನನ್ನ ಪುಟ್ಟ ಸಂಸಾರದ ಬಂಧನದಲ್ಲಿ  ಕಟ್ಟಿಡುವಾಸೆ..


ಆದರೆ....
ನೀನು ಕೇವಲ ನನ್ನ ಅಂದವನ್ನು ಭೋಗಿಸುವದಕ್ಕಾಗಿ ..
ಇಷ್ಟೆಲ್ಲ ನಾಟಕ ಆಡಿದೆಯಾ   ...?
ಛೇ.."


ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..


"ನೋಡು ..
ಗಂಡು ಒಂದು ಸಂಬಂಧವನ್ನು ..
ಸಂದರ್ಭಕ್ಕಾಗಿ.. 
ಕೇವಲ ಒಂದು ಸಮಯಕ್ಕಷ್ಟೇ ಬಳಸುವದಕ್ಕೆ ಇಷ್ಟಪಡುತ್ತಾನೆ..


ಬದ್ಧತೆ ಇಲ್ಲದ ಬಂಧಗಳೆಂದರೆ ಗಂಡಿಗೆ ಇಷ್ಟ..


ನಾನು ಹಾಗಿಲ್ಲ ಕಣೆ....


ನಿನ್ನೊಡನೆ ನನ್ನ  ಬದುಕಿನ ಕನಸನ್ನು ಕಟ್ಟುತ್ತೇನೆ..
ನಿನ್ನ  ಬದುಕಿನ ಭರವಸೆ ನಾನಾಗುತ್ತೇನೆ..
ನಾವಿಬ್ಬರೂ ಮದುವೆಯಾಗೋಣ..
ನಾಳೆಯೇ... ನಿನ್ನ ಮ್ಮ  ಅಪ್ಪನ ಬಳಿ ಬಂದು ಮಾತನಾಡುತ್ತೇನೆ...
ನನ್ನ ಮೇಲೆ ಅನುಮಾನ ಬೇಡ..


ಹುಡುಗಿ..
ಈಗ ಇಷ್ಟು ಹತ್ತಿರ ಬಂದು ಹೇಗೆ ಸುಮ್ಮನಿರಲಿ...?


ಈ ಕೆನ್ನೆ... ಗಲ್ಲ... 
ನನ್ನ ಕೈಯೊಳಗಿನ ಈ ಮುದ್ದು ಮುಖವನ್ನು ಸುಮ್ಮನೆ ಹೇಗೆ ಬಿಡಲಿ...?"


ಹುಡುಗ ತನ್ನ ಅಪ್ಪುಗೆಯನ್ನು ಇನ್ನೂ ಬಿಗಿ ಮಾಡಿದ...


ಮಾತು ಬೇಕಿರದ ಸಂದರ್ಭದಲ್ಲಿ ಏದುಸಿರು ಮಾತನಾಡಿತು..


ಬಯಸಿದಾಗ ಸಿಗುವ..
ಸಾಮಿಪ್ಯದ ಸುಖ ಬಲು ರೋಮಾಂಚಕಾರಿ...


ನಾನು ಕಣ್ಮುಚ್ಚಿ ಅನುಭವಿಸುತ್ತಿದ್ದೆ... 
ಅನುಭವಿಸಿದೆ...
ಆತನ ಉನ್ಮತ್ತತೆಯಲ್ಲಿ ಬೆವರಾಗಿ ಸೋತು ಹೋದೆ....


ನಮ್ಮ ಸಂಬಂಧವನ್ನು ಎಷ್ಟು ದಿನ ಅಂತ ಮುಚ್ಚಿಡಲು ಸಾಧ್ಯ...?


ಹುಡುಗನ ಬಗೆಗೆ ಅಪ್ಪನ ಬಳಿ ಮಾತನಾಡಿದೆ...


"ನೋಡಮ್ಮ..
ಹುಡುಗನನ್ನು ಮನೆಗೆ ಕರೆದುಕೊಂಡು ಬಾ..
ಮಾತನಾಡುವೆ..."


ಮರುದಿನ ಹುಡುಗ ನಮ್ಮನೆಗೆ ಬಂದ...
ಅಪ್ಪ ಹುಡುಗನ ಬಳಿ ಮಾತನಾಡಿದ...


ಹುಡುಗ ಹೋದ ಮೇಲೆ ಅಪ್ಪ ನನ್ನ ಬಳಿ ಹೇಳಿದ...


"ಈ..ಹುಡುಗ ...
ದಾಂಪತ್ಯ ಬದುಕಿಗೆ ಸರಿ ಇಲ್ಲಮ್ಮ..
ಅವನ ಬಳಿ ಅರ್ಧ ಗಂಟೆ ಮಾತನಾಡಿದೆ..
ಆತ ಮಾತನಾಡಿದ್ದು ಸಲ್ಮಾನ್ ಖಾನ್, ಶಾರೂಖ್ ಖಾನ್ ಬಗೆಗೆ..


ಸಿನೆಮಾ ಕಥೆಗಳು..
ಹಾಡುಗಳು.. ಬದುಕಲು  ಬೇಕಾಗುವ ಅಗತ್ಯ ಅಲ್ಲಮ್ಮ..


ಮದುವೆಯಾಗುವ ಹುಡುಗನ ಜವಾಬ್ಧಾರಿ ಅವನ ಮಾತುಗಳಲ್ಲಿ ಇಲ್ಲಮ್ಮ.."


"ಅಪ್ಪಾ..
ಆ ಹುಡುಗ ಹುಟ್ಟು ಪ್ರತಿಭಾವಂತ..
ಹಾಡುಗಾರ... ಚಿತ್ರಕಾರ.."


"ನೋಡಮ್ಮಾ..
ಹಾಡು...
ಬಣ್ಣದ  ಬದುಕು   ತುಂಬಾ ಕಷ್ಟದ್ದು.....


ದೂರದಿಂದ ಚಂದ ಈ ಬಣ್ಣ  ಬಣ್ಣದ ಮಾತುಗಳ ಬದುಕು..


ಬಣ್ಣದ ಮಾತುಗಳು.. ಹಾಡುಗಳು.. ನಟನೆಗಳು ಬದುಕು ಕಟ್ಟುವದಿಲ್ಲವಮ್ಮ..


ನಿನಗೆ ಯೋಗ್ಯವಾದ ಗಂಡನನ್ನು ನಾನು ಹುಡುಕುವೆ..


ಈ ಹುಡುಗ ಮದುವೆ ಜೀವನಕ್ಕೆ ಯೋಗ್ಯ ಇಲ್ಲ..."


ಅಪ್ಪನ ಅಭಿಪ್ರಾಯಕ್ಕೆ ಎದುರಾಡುವ ಸಂದರ್ಭವೇ ಬರಲಿಲ್ಲ..


ಅಂದು ನಮ್ಮ ವಿದಾಯದ ದಿನ ಆತ ಅತ್ತು ಬಿಟ್ಟಿದ್ದ..
ನನಗಂತೂ ಹೃದಯ ದೃವಿಸಿಹೋಗಿತ್ತು..


ಅವನಿಗೆ ಮೋಸ ಮಾಡಿದ ಅಪರಾಧಿ ಭಾವನೆ ಕಾಡತೊಡಗಿತು..


ಅಪ್ಪ ಹುಡುಕಿದ ಹುಡುಗನೊಡನೆ ನನ್ನ ಮದುವೆಯಾಯಿತು..


ಮದುವೆಯಾದ ಗಂಡು ನನ್ನ ಅಂದ ಚಂದಗಳ ಆರಾಧಕ...
ನನ್ನ ಅಂದ, ಚಂದಗಳನ್ನು ಕೃತಜ್ಞತಾಭಾವದಿಂದ ಅನುಭವಿಸುತ್ತಿದ್ದ...


ನನ್ನ ಗಂಡನ ಆರಾಧನಾ ನೋಟಕ್ಕಿಂತ..
ಹುಡುಗನ ಬೆತ್ತಲೆಗೊಳಿಸುವ ನೋಟ ನನಗೆ ಇಷ್ಟವಾಗುತ್ತಿತ್ತು...


ಆತ ಬಹಳ ನೆನಪಾಗುತ್ತಿದ್ದ..


ನಾನು ಆತನಿಗೆ ಮೋಸ ಮಾಡಿದ ಭಾವದಿಂದ ನನಗೆ ಹೊರಗೆ ಬರಲಿಕ್ಕೆ ಆಗಲಿಲ್ಲ..


ಆ ಚಿತ್ರಕಾರನ ಚಿತ್ರಗಳನ್ನು ಮನೆಯ ಗೋಡೆಯ ತುಂಬಾ ಹಾಕಿದ್ದೆ..
ಅವನು ಬಿಡಿಸಿದ ಹೆಣ್ಣಿನ ಚಿತ್ರಗಳಲ್ಲಿ ನನ್ನನ್ನೇ ಕಾಣುತ್ತಿದ್ದೆ..


ಆತನೂ ಒಮ್ಮೆ ನನಗೆ ಹೇಳೀದ್ದ..


" ನಾನು ಬಿಡಿಸುವ ಚಿತ್ರಗಳಲ್ಲಿ..
ನೀನು..
ನಿನ್ನ ಕಣ್ಣು.. ಕೆನ್ನೆ.. ಗಲ್ಲಗಳೇ ಇರುತ್ತವೆ ಕಣೆ..."


ಆಗ ನಾನು ಅವನನ್ನು ಬಿಗಿಯಾಗಿ ತಬ್ಬಿಕೊಂಡಿದ್ದೆ..


ದಿನ ಕಳೆಯುತ್ತಿತ್ತು..
ನನಗೊಬ್ಬ ಮಗಳು.. ಹುಟ್ಟಿದಳು..


ನನ್ನಷ್ಟೇ ಸುಂದರಿ..
ನನ್ನ ಹಾಗೆ ಕಣ್ಣು.. ಕೆನ್ನೆ.. ಗಲ್ಲ.. ಮಾತು..!


ಪುಟ್ಟ ಹುಡುಗಿ ಕಾಲೇಜಿಗೆ ಹೋಗವಷ್ಟು ದೊಡ್ಡವಳಾಗಿದ್ದು..
ಸಮಯ ಸರಿದದ್ದು ಗೊತ್ತೇ ಆಗಲ್ಲಿಲ್ಲ..


ನಾನು ಯಾವಾಗಲೂ ಚಿತ್ರಕಾರನ ಧ್ಯಾನದಲ್ಲಿ ಇರುತ್ತಿದ್ದರಿಂದಲೋ..
ಗೊತ್ತಿಲ್ಲ..
ನನ್ನ ಮಗಳಿಗೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಬೆಳೆಯಿತು...


ಒಂದು ದಿನ ನನ್ನ ಗಂಡ ನನಗೆ ಒಂದು ಆಶ್ಚರ್ಯ ತಂದ..


"ನೋಡೆ...
ನಿನ್ನ ಮೆಚ್ಚಿನ ಚಿತ್ರಕಾರನನ್ನು ಮಾತನಾಡಿಸಿದ್ದೇನೆ...


ನಮ್ಮ ಮಗಳಿಗೆ ಚಿತ್ರ ತರಬೇತಿ ಕೊಡಲು ಆತ ಒಪ್ಪಿದ್ದಾನೆ..


ಆತ ಇದುವರೆಗೆ ಯಾರಿಗೂ ತನ್ನ ಕಲೆಯನ್ನು ಹೇಳಿಕೊಟ್ಟಿಲ್ಲ..
ಇದು ನಮ್ಮ ಮಗಳ ಭಾಗ್ಯ ಕಣೆ.."


ಬದುಕಿನ ತಿರುವಗಳಲ್ಲಿ ಅತೀತಗಳು ಧುತ್ತೆಂದು ಎದುರಿಗೆ ಬಂದು ಬಿಡುತ್ತವೆ..


ನನ್ನ ಪ್ರತಿಕ್ಷಣದ ಪ್ರೀತಿ..
ಆ ಹುಡುಗ ಮತ್ತೊಮ್ಮೆ ನನ್ನ ಬಾಳಲ್ಲಿ ಭೇಟಿಯಾದ..


ನನಗೂ ಒಮ್ಮೆ ಅವನನ್ನು ಭೇಟಿಯಾಗುವ ಸುಪ್ತ ಆಸೆ ಮನದೊಳಗೇ ಇತ್ತು..


ಇನ್ನೊಮ್ಮೆ ಆತನ ಕ್ಷಮೆ ಕೇಳಬೇಕು ಅನ್ನಿಸುತ್ತಿತ್ತು..


ಬಹು ದಿನಗಳ ನಂತರ..
ಬಹಳ ಆಸಕ್ತಿಯಿಂದ ಅಲಂಕರಿಸಿಕೊಂಡು ತಯಾರಾಗಿದ್ದೆ..


ಇದು ಯಾಕೆ?
ಮೋಸಮಾಡಿದ ಹುಡುಗನ ಎದುರಲ್ಲಿ ಮತ್ತೆ ನನ್ನ ಅಂದವನ್ನು ತೋರಿಸುವ ಬಯಕೆ...!!


ಆ ಹುಡುಗನ ಮೆಚ್ಚಿನ ಬಣ್ಣದ ಸೀರೆ ಉಟ್ಟುಕೊಂಡಿದ್ದೆ..


ನಾನು ನನ್ನ ಗಂಡ ಇಬ್ಬರೆ ಆತನ ಮನೆಗೆ ಹೋಗಿದ್ದೆವು..


ಆತ ಸ್ವಾಗತಿಸಿದ..


ನನಗೆ ವಿಶ್ವಾಸವಾಗಲಿಲ್ಲ...


ಅವನ ಅದೇ.. ಹಸಿ ಹಸಿ ನೋಟ..
ನನ್ನನ್ನು ಬೆತ್ತಲೆ ಮಾಡಿ ನೋಡುವ ಹಸಿದ ಕಂಗಳ ನೋಟ... !!


ಇಷ್ಟು ವರ್ಷಗಳಾದರೂ ಹೆಣ್ಣಿನ ಮೇಲಿನ ಆಸಕ್ತಿ ಕಡಿಮೆ ಆಗಲಿಲ್ಲವೆ?


"ಬನ್ನಿ ಬನ್ನಿ..
ಇದು ಬ್ರಹ್ಮಚಾರಿ ಮನೆ..
ಅಡಿಗೆಯವರ ಕೈ ಊಟ..
ನಿಮಗೆ ಏನು ಮಾಡಿಸಲಿ...? ಚಹ.. ಕಾಫೀ...?"


ಅಯ್ಯೋ ದೇವರೆ... !
ಈತ ಮದುವೆ ಆಗಲೇ ಇಲ್ಲವೆ? 


ನನ್ನೊಳಗಿನ ಆಪರಾಧಿ ಮನೋಭಾವ ಮತ್ತೂ ಜಾಸ್ತಿಯಾಯಿತು... 


ನನಗೆ ಮಾತಾಡುವ ಆಸಕ್ತಿಯೇ ಹೊರಟು ಹೋಯಿತು..
ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗಲಿಲ್ಲ...


ನಾನು ಮೌನಕ್ಕೆ ಶರಣಾದೆ..


ಹುಡುಗ ಮತ್ತು ಗಂಡ ಇಬ್ಬರೆ ಮಾತನಾಡಿದರು..


ನನ್ನ ಮಗಳಿಗೆ ಚಿತ್ರ ಕಲೆಯನ್ನು ಧಾರೆ ಎರೆಯಲು ಆತ ಒಪ್ಪಿದ..


ನನ್ನ ಗಂಡ ಬಹಳ ಖುಷಿಯಲ್ಲಿದ್ದ...


ಮಗಳು ಬಹಳ ಖುಷಿಯಿಂದ ಚಿತ್ರ ಕಲೆ ಕಲಿಯಲು ಹೋಗುತ್ತಿದ್ದಳು..
ಯಾವಾಗಲೂ ತನ್ನ ಗುರುವನ್ನು ಹೊಗಳುತ್ತಿದ್ದಳು..


ಒಂದು ದಿನ ಅವಳನ್ನು ಮಾತನಾಡಿಸಿ.. ಅವಳ ಗುರುವಿನ ಫೋನ್ ನಂಬರ್ ತೆಗೆದುಕೊಂಡೆ..


"ಹುಡುಗಾ..
ನಿನ್ನನ್ನೊಮ್ಮೆ ಭೇಟಿ ಮಾಡಬೇಕು..
ಕ್ಷಮೆಗೆ ನಾನು ಅರ್ಹಳಲ್ಲದಿದ್ದರೂ.. ಇನ್ನೊಮ್ಮೆ ಭೇಟಿಗೆ ಅವಕಾಶ ಮಾಡಿಕೊಡು..."


ನಾನು ದುಃಖದಿಂದ ಅಳುತ್ತಿದ್ದೆ..


" ನನ್ನ ಬದುಕೇ.. ಹೀಗೆ..
ಹೀಗೆ ಇರುತ್ತದೆ..


ಬಯಸಿದ್ದೆಲ್ಲ ಸಿಕ್ಕಿದರೆ..ಬವಣೆಗಳಿಗೆ ಬೆಲೆ ಎಲ್ಲಿ?


ನಮ್ಮ ನಿರ್ಧಾರಗಳ ಸರಿ, ತಪ್ಪುಗಳ ಬೆಲೆಯನ್ನು ಸಮಯ ಕಟ್ಟುತ್ತದೆ..


ಸರಿದು ಹೋದ ಸಮಯ ಮತ್ತೆ ತರಲಾಗದು..
ಮತ್ತೆ ಸಿಕ್ಕಿದ್ದೀಯಲ್ಲ..
ನಿನ್ನ ಖುಷಿ ಸಂಸಾರ ನೋಡಿ ಖುಷಿಯಾಯಿತು ...


ನೀನು ಸುಖವಾಗಿದ್ದೀಯಾ... ಸಂತೋಷದಿಂದಿರು..."


"ನಿನ್ನನ್ನು  ಭೇಟಿಯಾಗಬೇಕು ಯಾವಾಗ ಬರಲಿ?"


ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..


"ಕೂದಲು ಹಣ್ಣಾದರೂ.. ಮತ್ತದೆ ನೆನಪುಗಳು...


ಬಯಕೆಗಳು ಗರಿಗೆದರುತ್ತವೆ..


ನಿನ್ನನ್ನು ನೋಡಿ..
ಮತ್ತೆ ನನ್ನ ನೀಯತ್ತು ಸಡಿಲಗೊಂಡರೆ ಕಷ್ಟವಲ್ಲವೆ...?..


ನೀನು ಈಗ ಸಂಸಾರಸ್ಥೆ..."


"ಹುಡುಗಾ..
ಹಾಗೇನೂ ಆಗುವದಿಲ್ಲ..
ನಾನು ಪ್ರಬುದ್ಧಳಾಗಿದ್ದೇನೆ..
ನನಗೂ ವಯಸ್ಸಾಯಿತು..ಯಾವಾಗ ಬರಲಿ..?"


ಹುಡುಗ ಸ್ವಲ್ಪ ವಿಚಾರ ಮಾಡಿದ..


"ಹುಂ..
 ನಾಳೆ ಬೇಡ.. ನಾನು ಬಿಡುವಾಗಿಲ್ಲ ..
ನಾಡಿದ್ದು ಬಾ..."


ನಾನು ಸಣ್ಣ ಹುಡುಗಿಯಂತೆ ನಲಿದೆ...
ಕುಣಿಯುವಾಸೆ ಆಯಿತು....


ಅಪ್ಪ ಮಗಳಿಗೆ ಆಶ್ಚರ್ಯವಾಯಿತು...


"ಏನು ಬಹಳ ಖುಷಿಯಲ್ಲಿದ್ದೀಯಾ...?"


"ಏನೂ ಇಲ್ಲ..
ನನ್ನ ಹಳೆಯ ಗೆಳತಿಯೊಬ್ಬಳು ..
ನಾಡಿದ್ದು ಭೇಟಿಯಾಗುತ್ತೇನೆ ಅಂದಿದ್ದಾಳೆ..
ಅವಳ ಮನೆಗೆ ಹೋಗಬೇಕು..."


"ಅಮ್ಮಾ..
ನಿನ್ನ ಬಳಿ ಮೂಗಿಗೆ ಹಾಕುವ ರಾಜಸ್ತಾನದ ದೊಡ್ಡ ರಿಂಗು..
ಕೆನ್ನೆ ಸರಪಳಿ.. ಇದೆಯೇನಮ್ಮಾ...?"


"ಯಾಕೆ ಮಗಳೇ..?"


"ಅಮ್ಮಾ..
ಚಿತ್ರಕಾರರ ಚಿತ್ರದ ಮಾಡೆಲ್ಲು ನಾನು ಆಗುತ್ತಿದ್ದೇನೆ..!


ಅಷ್ಟು ದೊಡ್ಡ ಕಲಾವಿದನ ಮಾಡೆಲ್ಲು ನಾನು.. !!
ನಂಬಲಿಕ್ಕೆ ಆಗ್ತ ಇಲ್ಲ..


ಚಿತ್ರಕಾರರು ನನ್ನ ಚಿತ್ರ ಬಿಡಿಸುತ್ತಾರಂತೆ..!


ನನ್ನ ಕೆನ್ನೆ.. 
ಗಲ್ಲ..ಕಣ್ಣು.. ಎಲ್ಲ ಅವರಿಗೆ ಸ್ಪೂರ್ತಿಕೊಟ್ಟಿದೆಯಂತೆ..!


ನನ್ನ ಚಂದವನ್ನು ಅವರು ಯಾವಾಗಲೂ ಹೊಗಳುತ್ತಾರೆ...!


ನನ್ನ ಅಲಂಕಾರಗಳನ್ನು ಅವರೇ ಬಿಚ್ಚಿಕೊಡುತ್ತಾರಂತೆ... !
ಅದು ಅವರಿಗೆ ತುಂಬಾ ಖುಷಿಯಂತೆ..


ನಾಳೆ ನಾನು ತಯಾರಾಗಿ ಬರಬೇಕಂತೆ.. "


ಮಗಳು ಇನ್ನೂ ಏನೇನೋ ಹೇಳುತ್ತಿದ್ದಳು...


ನಾನು ಅವಕ್ಕಾಳಾದೆ...!! 
ಅಪ್ರತಿಭಳಾದೆ... !!


ತಡೆಯಲಾಗದ ಕೋಪ ಬಂತು...
ಜೋರಾಗಿ ಕೂಗಿದೆ..


"ನೀನು ಚಿತ್ರ ಕಲೆ ಕಲಿಯುವದು ಸಾಕು...!


ಆ ಹಾಳು...
ಕೆಟ್ಟ  ಮನುಷ್ಯನ ಮಾಡೆಲ್ಲು ಆಗುವದೂ ಸಾಕು...!


ನಾಳೆಯಿಂದ ಮನೆಯಲ್ಲೇ ಇರು..


ಈ.. ಧರಿದ್ರ ಗಂಡಸರನ್ನು ನಂಬಲಿಕ್ಕೆ ಆಗುವದಿಲ್ಲ...!.."


ನಾನು ಇನ್ನೂ ಆವೇಶದಿಂದ ಕೂಗುತ್ತಲೇ ಇದ್ದೆ...


ಅಪ್ಪ..
ಮಗಳು ನನ್ನನ್ನೇ ಆಶ್ಚರ್ಯದಿಂದ  ನೋಡುತ್ತಿದ್ದರು...!


ಅಸಹಾಯಕತೆಯ ಭಾವ...!!


ನನ್ನ ಮೈಯೆಲ್ಲ ಕೋಪದಿಂದ ಕಂಪಿಸುತ್ತಿತ್ತು..








(ಉತ್ತಮ ಪ್ರತಿಕ್ರಿಯೆಗಳು ಬಂದಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....)