ನನ್ನ ಮೌನ ನನಗಿಷ್ಟ...
ಮೌನ ನನಗೆ ಅನಿವಾರ್ಯ ಕೂಡ...
ನನ್ನ ಅಪ್ಪ.. ಅಮ್ಮ ..
ಹಿರಿಯರೂ ಇದನ್ನೇ ಹೇಳಿದರು....
"ನೋಡಮ್ಮ...
ನೀನು ಪ್ರಕೃತಿ .. ಹೆಣ್ಣು...
ಮೌನ ...ನಿನಗೆ ಭೂಷಣ..
ಮೌನ .... ನಿನಗೆ ಚಂದ..."
ನನಗೆ ಗೊತ್ತು...
ನಾನು ನೋಡಲಿಕ್ಕೂ ಸುಂದರಿ....
ಈ ಚಂದ ..
ಸೌಂದರ್ಯ ಎನ್ನುವದು ಸಂತೋಷ ಕೊಡುತ್ತದೆ..
ನಿಜ..
ಚಂದದ ಆತಂಕಗಳೇನು ಎನ್ನುವದನ್ನು ಚಂದವಿದ್ದವರನ್ನು ಕೇಳಬೇಕು...
ಬೇರೆಯವರೆಲ್ಲ ಯಾಕೆ...?
ನಾನೇ ಹೇಳುತ್ತೇನೆ ಕೇಳಿ..
ಒಹ್.. !!
ನಾನು ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲ... !
ನಾನು ತುಳಸಿ...
ಧರ್ಮಧ್ವಜ... ಮಹಾರಾಜನ ಮಗಳು....
ಮಹಾವಿಷ್ಣುವಿನ ಪರಮ ಭಕ್ತೆ...
ನನ್ನ..
ಮೌನಕ್ಕೆ ಭಾವನೆಗಳಿವೆ.... ಮಾತುಗಳಿವೆ...
ನನ್ನ..
ಮೌನದೊಡನೆ ಮಾತನಾಡುವಷ್ಟು ವ್ಯವಧಾನ ಯಾರಿಗಿದೆ ಹೇಳಿ....?
ನನ್ನ ಅಪ್ಪ ಬಾಡಿದ ಮುಖ ಮಾಡಿಕೊಂಡು ನನ್ನ ಬಳಿ ಬಂದಿದ್ದ..
ದುಗುಡ... ಆತಂಕ ಎದ್ದು ಕಾಣುತ್ತಿತ್ತು...
"ಮಗಳೆ..
ಇದೊಂದು ಇಕ್ಕಟ್ಟಿನ ಪರಿಸ್ಥಿತಿ..
ರಾಕ್ಷಸ ದೊರೆ..
" ಶಂಖಚೂಡ " ನಿನ್ನನ್ನು ಮದುವೆಯಾಗ ಬಯಸಿದ್ದಾನೆ...
ನಾನು ಒಪ್ಪಿಗೆ ಕೊಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ..."
ನಾನು ಸುಮ್ಮನಿದ್ದೆ..
"ಮಗಳೆ...
ನಿನಗೆ ಗೊತ್ತಲ್ಲ...
ನಾನು ನಿನ್ನನ್ನು ಕೊಡುವದಿಲ್ಲ ಅಂತ ಹೇಳಿದರೆ ..
ನಮ್ಮ ರಾಜ್ಯವನ್ನು ಆತ ಸರ್ವ ನಾಶ ಮಾಡಿಬಿಡುತ್ತಾನೆ..
ಈ ರಾಜ್ಯದ ರಾಜನಾಗಿ ..
ನಾನು ಆತಂಕದಲ್ಲಿದ್ದೇನೆ ಮಗಳೆ.."
ರಾಜ್ಯದ ಹಿತಾಸಕ್ತಿಯೋ ..
ಅಧಿಕಾರದ ಆಸೆಯೋ ನಾನು ರಾಕ್ಷಸನನ್ನು ಮದುವೆಯಾಗಬೇಕಿತ್ತು..
ನನ್ನಾಸೆಗಳನ್ನು ಬದಿಗಿಟ್ಟು...
"ಅಪ್ಪಾ...
ಆತ ರಾಕ್ಷಸ.. ಕೆಟ್ಟವ ಅಂತ ಹೇಳಿದವರ್ಯಾರು...?"
"ಇನ್ಯಾರಮ್ಮ...
ನಮ್ಮಂಥ ಮಾನವರು.. ದೇವತೆಗಳು.... "
"ಅಪ್ಪಯ್ಯ..
ಹುಲಿ.. ಸಿಂಹಗಳು ಕ್ರೂರಿಗಳೆಂದು ಹೇಳುವರ್ಯಾರು..?
ನಮ್ಮಂಥವರು ತಾನೆ..?
ಹುಲಿ ಜಿಂಕೆಯನ್ನು ಕೊಲ್ಲುತ್ತದೆ .. ..
ನಮ್ಮನ್ನೂ ತಿಂದುಬಿಡುತ್ತದೆ ಅಂತ..?.. "
"ಅಂದರೆ...?...... "
" ನಮ್ಮ ಹಿತಾಸಕ್ತಿಗಳಿಗೆ ಯಾರಾದರೂ ವಿರೋಧ ಮಾಡಿದರೆ ..
ಅವರು ಕೆಟ್ಟವರಾಗುತ್ತಾರೆ...
ರಾಕ್ಷಸರಾಗುತ್ತಾರೆ.. !..."
ದೇವತೆಗಳಿಗೂ... ರಾಕ್ಷಸರಿಗೂ ಎಷ್ಟೆಲ್ಲ ವರ್ಷಗಳಿಂದ ಯುದ್ಧ ನಡೆಯುತ್ತಿದೆಯಲ್ಲ...
ರಾಕ್ಷಸರೂ ಕಡಿಮೆಯೇನಿಲ್ಲ.."
"ಸ್ವಲ್ಪ ಬಿಡಿಸಿ ಹೇಳಮ್ಮ..."
"ಅಪ್ಪಯ್ಯಾ..
ಈ ದೇವತೆಗಳಿಗೆ ರಾಕ್ಷಸರು ಕೆಟ್ಟವರು !...
ಮನುಷ್ಯರು..
ಮಾನವೀಯತೆ...
ಈ ದೇವತೆಗಳು ..
ಎಲ್ಲರೂ ಸೇರಿಕೊಂಡು ಈ ಜಗತ್ತಿಗೆ ಇಷ್ಟೆಲ್ಲ ವರ್ಷಗಳಿಂದ ಏನು ಮಾಡಿದ್ದಾರೆ...?
ಈ ಒಳ್ಳೆಯವರೆಲ್ಲ ಸೇರಿ ...
ಇಲ್ಲಿತನಕ ಮಾಡಿದ್ದು ಜಗತ್ತಿನ..
ಈ ಭೂಮಿಯ ವಿನಾಶ ತಾನೆ?
ಒಂದು ವ್ಯವಸ್ಥಿತ ಅತ್ಯಾಚಾರ ತಾನೆ?...?.."
ಅಪ್ಪ ಸುಮ್ಮನಿದ್ದ...
"ಪಾಪ..
ಪುಣ್ಯಗಳು .. ತಪ್ಪು.. ಒಪ್ಪುಗಳು ..
ಎಲ್ಲವೂ ..
ಅವರವರ ಮೂಗಿನ ನೇರಕ್ಕೆ ಅಪ್ಪಯ್ಯಾ..."
ನನಗೆ ..
ವೈಯಕ್ತಿವಾಗಿ ನೋವಾದರೆ ಅದು ಅತ್ಯಾಚಾರ...
ಸಂತೋಷವಾದರೆ ಅದು ಸದಾಚಾರ..."
"ಮಗಳೆ..
ಈ ಮದುವೆಗೆ ನಿನ್ನ ಒಪ್ಪಿಗೆ ಇದೆಯಾ ? ... "
" ಅಪ್ಪಯ್ಯಾ..
ನನಗೆ ..
ನನ್ನ ಮೌನಕ್ಕೆ ಆಯ್ಕೆಯ ಸ್ವಾತಂತ್ರ್ಯವೆಲ್ಲಿದೆ...?
ರಾಕ್ಷಸರೋ... ಅಥವಾ ದೇವತೆಗಳೋ..
ಒಳ್ಳೆಯವರೋ... ಕೆಟ್ಟವರೋ...
ಎಲ್ಲರಿಗೂ ಬೇಕಾಗಿದ್ದು ನನ್ನ ಸೌಂದರ್ಯ ತಾನೆ...?
ನನ್ನ ಈ ಚಂದ ..
ಭೋಗಿಸಲ್ಪಡುವದಕ್ಕಾಗಿಯೇ.. ಇದ್ದದ್ದು...
ಉಪಯೋಗಿಸುವದಕ್ಕಾಗಿಯೇ .. ಇದ್ದದ್ದು..
ನನ್ನನ್ನು ಮದುವೆಯಾಗುವವ ..
ನನ್ನ ..
ಅಂದವನ್ನು ಆರಾಧಿಸುತ್ತಾನೋ...
ಭೋಗಿಸುತ್ತಾನೋ... ಗೊತ್ತಿಲ್ಲ...
ಪರಿಣಾಮ ನನ್ನ ದೇಹದ ಮೇಲೆ ತಾನೆ ?..
ಅಪ್ಪ ನನಗೂ ಈ ಭೂಮಿಗೂ ವ್ಯತ್ಯಾಸವೇನಿದೆ...?..
ಭಾಷೆ..
ಶಬ್ಧಗಳು ಏನೇ ಇದ್ದರೂ...
ಯಾವಾಗಲೂ "ಸೌಂದರ್ಯದ" ಮೇಲೆ ನಡೆಯುವದು ..
ಅತ್ಯಾಚಾರವೇ ಅಲ್ಲವೇ ..?
ಅಪ್ಪಾ...
ಮೌನವೆಂದರೆ "ಹೊಂದಾಣಿಕೆ" ಅಲ್ವೇನಪ್ಪಾ.?
ನಾನು ಎಷ್ಟೆಂದರೂ ಪ್ರಕೃತಿ... ಹೆಣ್ಣು...
ಪರಿಸ್ಥಿತಿಗೆ ಹೊಂದಿಕೊಂಡು ಹೋಗುವದೊಂದೆ ಉಳಿದಿರುವ ದಾರಿ...."
ಅಪ್ಪ ತಲೆ ತಗ್ಗಿಸಿದ...
ಅಪ್ಪನ ಅಸಹಾಯಕತೆಗೆ ಇನ್ನಷ್ಟು ಉಪದೇಶ ಕೊಡುವ ಮನಸ್ಸಾಗಲಿಲ್ಲ...
ನಮ್ಮ ಮದುವೆ ಬಲು ವಿಜ್ರಂಭಣೆಯಿಂದ ನಡೆಯಿತು...
ನನ್ನ ಗಂಡ..
ಮೊದಲ ರಾತ್ರಿಯಲ್ಲಿಯೇ.. ನನ್ನ ಮನ ಗೆದ್ದ...
"ನೋಡು...
ಲೋಕದ ಕಣ್ಣಿಗೆ ನಾನು ರಾಕ್ಷಸ...
ನನಗೆ ಬೇಕಾಗಿದ್ದನ್ನು "ಬೇಡಿ "ಅಭ್ಯಾಸವಿಲ್ಲ...
ಬೇಕಿದ್ದನ್ನು ..
ಯಾವ ಮುಲಾಜಿಲ್ಲದೆ ಪಡೆದು ..
ಅನುಭವಿಸುವದು ನನ್ನ ಸ್ವಭಾವ.."
ನನ್ನ ಬದುಕಿನಲ್ಲಿ..
ಮೊದಲ ಬಾರಿಗೆ ..
ನನ್ನ ಬಳಿ ಒಬ್ಬರು ಮುಖವಾಡವಿಲ್ಲದೆ ಮಾತನಾಡಿದ್ದರು... !
ನನಗೆ ಹೆದರಿಕೆ ಆಗಲೇ ಇಲ್ಲ...
ಬಲು ರಸಿಕ ಈ ಶಂಖಚೂಡ ...!
ಮಲಗುವ ಕೋಣೆಯ ಸೊಗಸಾದ ವಿನ್ಯಾಸ..
ಮೃದು ಹಾಸಿಗೆ...
ಉಣ್ಣೆಯ ಹೊದಿಕೆಗಳು...!
ಮೊದಲ ರಾತ್ರಿಯಲ್ಲಿ ಪ್ರೀತಿಯ ಮಳೆಗರೆದ...
ತನ್ನ
ಪೌರುಷ ಶಕ್ತಿಯಲಿ ನನ್ನನ್ನು ತೇಲಿಸಿದ...
ಭೋರ್ಗರೆದ....
ಭೋರ್ಗರೆವ ರಭಸದಲ್ಲೂ ಹಿತವಿತ್ತು....
ಪ್ರೇಮವೋ..
ಕಾಮವೋ....
ದೇಹಕ್ಕೂ ಅದು ಬೇಕಿತ್ತು....
ನನ್ನನ್ನು ಅರ್ಪಿಸಿಕೊಂಡ ಧನ್ಯತಾ ಭಾವನೆಯನ್ನು ಆತ ಮೂಡಿಸಿದ...
ಶಂಖಚೂಡ...ನನಗೆ ಇಷ್ಟವಾದ...
ಮನಸಾರೆ ಪ್ರೀತಿಸಿದೆ...
ಒಳಗಿನ ಹುಳುಕು..
ಕೆಟ್ಟತನವನ್ನು ಮುಚ್ಚಿ ...
ಹೊರಗೆ ಸಭ್ಯತೆಯ ಸೋಗಲಾಡಿತನ ಅವನಲ್ಲಿರಲಿಲ್ಲ....
ನನ್ನ ...
ಅಂತಃಪುರದಲ್ಲಿ ದೊಡ್ಡ ದೊಡ್ಡ ಕಿಡಕಿಗಳಿದ್ದವು...
ದೊಡ್ಡ ದೊಡ್ಡ ಪರದೆಗಳು ಇದ್ದವು..
ಶಂಖಚೂಡ ನನ್ನ ಗಂಡ...
ನನ್ನನ್ನು ಪ್ರೀತಿಸುತ್ತಾನೆ...
ಇಷ್ಟು ಸಾಕಿತ್ತು ನನ್ನ ಅಂತಃಪುರದ ರಾಣಿಯ ಪರದೆಯ ಬದುಕಿಗೆ....
ಹೊರಗಿನ ಪ್ರಪಂಚ ಏನು ಹೇಳುತ್ತದೆ..
ಅಲ್ಲಿ ಏನಾಯ್ತು...? ನನಗೆ ಅದೆಲ್ಲ ಬೇಕಿರಲಿಲ್ಲ..
ಒಂದು ದಿನ ನನ್ನ ಅಪ್ಪ ಬಂದ..
ಮತ್ತೆ ಅದೇ ಆತಂಕದ ಮುಖವಿತ್ತು...
"ಮಗಳೆ....
ನಿನಗೊಂದು ಕೆಟ್ಟ ಸುದ್ಧಿ..."
"ಏನು...?"
"ನಿನ್ನ ಗಂಡನನ್ನು ಸಾಯಿಸಲಿಕ್ಕೆ ...
ದೇವತೆಗಳಲ್ಲಿ ಸಭೆ ನಡೆಯಿತಂತೆ..."
ನನ್ನ ಗಂಡ ದಿನ ನಿತ್ಯ ಯುದ್ಧ ಮಾಡುತ್ತಿದ್ದ....
ಅದು ನನಗೆ ಗೊತ್ತಿತ್ತು...
ನಾನು ಏನ ಮಾತನಾಡಲಿ ಅಂತ ಗೊಂದಲದಲ್ಲಿದ್ದೆ...
ಮೌನವೆಂದರೆ ..
ದ್ವಂದ್ವ .... ಗೊಂದಲ... !
ನಾನು ಮಾತನಾಡಲೇಬೇಕಿತ್ತು...
"ಅಪ್ಪ...
ನನ್ನ ಗಂಡ ರಾಜ....
ಅದರಲ್ಲೂ ಆತ ಲೋಕದ ಕಣ್ಣಿಗೆ ರಾಕ್ಷಸ...
ಯುದ್ಧ ಅವನಿಗೆ ಅನಿವಾರ್ಯ...
ಯುದ್ಧವೆಂದಮೇಲೆ ನೋವಿನ ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಕು...."
"ಅದಲ್ಲ ಮಗಳೆ...
ಶಂಖಚೂಡ ಎಷ್ಟೇ ಯುದ್ಧ ಮಾಡಿದರೂ ಅವನಿಗೆ ಸಾವಿಲ್ಲ...!
ನಿನ್ನ ಪಾತಿವೃತ್ಯ ಅವನನ್ನು ಕಾಪಾಡುತ್ತದೆ...
ಕಾಪಾಡುತ್ತಿದೆ...!
ಆತ ಲೋಕ ಕಂಟಕನಾಗಿದ್ದಾನೆ...
ಮಾನವರ..
ಮಾನವೀಯತೆಯ ಹತ್ಯೆ ಮಾಡುತ್ತಿದ್ದಾನೆ...
ದೇವತೆಗಳನ್ನು ಯುದ್ಧದಲ್ಲಿ ಸೋಲಿಸುತ್ತಿದ್ದಾನೆ...."
ನನ್ನ ಅಪ್ಪ ...
ನನ್ನ ಬಳಿ ಯಾವಾಗಲೂ ನೇರವಾಗಿ ಮಾತನಾಡಿಮಾತನಾಡಿದ್ದೇ ಇಲ್ಲ...
ನಾನೇ ..
ಅವನ ಮಾತಿನ ಅರ್ಥವನ್ನು ಮಾಡಿಕೊಳ್ಳಬೇಕಿತ್ತು....
ನಾನು ನನ್ನ ಅಪ್ಪನ ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದೆ...
"ಅಪ್ಪಯ್ಯಾ...
ನಾನೀಗ ನಿಮ್ಮ ಮಗಳಿಗಿಂತ ..
ನಾನವನ ಧರ್ಮ ಪತ್ನಿ..
ನನ್ನ ಮದುವೆಯ..
ಬಾಳಿನ ಪ್ರಶ್ನೆ ಇರುವಾಗ
ನಿನ್ನ..
ರಾಜ್ಯದ ಹಿತಾಸಕ್ತಿಗಾಗಿ ಇವನೊಡನೆ ನನ್ನ ಮದುವೆ ಮಾಡಿದೆ...
ನಾನಿಲ್ಲಿ ಸುಖವಾಗಿರುವೆ...
ಲೋಕದಲ್ಲಿ ಏನೇ ನಡೆದರೂ ..
ನನಗೂ ಅದಕ್ಕೂ ಏನೂ ಸಂಬಂಧವಿಲ್ಲ...
ನನಗೆ ಅದರ ಅಗತ್ಯವೂ ಇಲ್ಲ..
ನನ್ನಗಂಡ...
ನನ್ನ ಸಂಸಾರ... ನನ್ನ ಗಂಡನ ಸುಖವಷ್ಟೇ ನನಗೆ ಮುಖ್ಯ...."
ಅಪ್ಪ ಹೆಚ್ಚಿಗೆ ಮಾತನಾಡದೆ ಹೊರಟು ಹೋದ...
ಕೊನೆಗೆ ಗೊತ್ತಾಗಿದ್ದು..
ನನ್ನಪ್ಪ ತಾನಾಗಿಯೇ ನನ್ನನ್ನು ನೋಡಲು ಬಂದಿಲ್ಲ...
ದೇವತೆಗಳು ನನ್ನನ್ನು ಮಾತನಾಡಿಸಲು ಕಳಿಸಿದ್ದರಂತೆ....
ನನ್ನ ಪಾತಿವೃತ್ಯದ ಬಗೆಗೆ ವಿಷಯದ ಬಗೆಗೆ ಮಾತನಾಡಲಿಕ್ಕೆ...
ನನ್ನ ಗಂಡ ..
ತನ್ನ ಯುದ್ಧ ಕವಚವನ್ನು ಎಲ್ಲಿಯವರೆಗೆ ಕಳಚುವದಿಲ್ಲವೋ....
ನಾನು ಎಲ್ಲಿಯವರೆಗೆ ಪತಿವೃತೆಯಾಗಿರುತ್ತೇನೆಯೋ..
ಅಲ್ಲಿಯತನಕ ನನ್ನ ಗಂಡನಿಗೆ ಸಾವಿಲ್ಲ....
ಇದು ಸತ್ಯ...
ನನ್ನ ಅಪ್ಪನಿಗೆ ನನ್ನ ಪಾತಿವೃತ್ಯ ಬೇಕಿಲ್ಲವಾಗಿತ್ತಾ... !
ದೇವತೆಗಳಲ್ಲಿ
ಈ ವಿಷ್ಣು ಮಹಾ ಬುದ್ಧಿವಂತ..
ಆತನೇ ಏನಾದರೂ ಉಪಾಯ ಮಾಡಬಹುದೆ?
ನಾನು ಎಷ್ಟೆಂದರೂ ವಿಷ್ಣುವಿನ ಪರಮ ಭಕ್ತೆ...
ನಾನು ಪೂಜಿಸುವ ದೇವರು ನನಗೆ ಅನ್ಯಾಯ ಮಾಡುವದಿಲ್ಲವೆಂಬದು ನನ್ನ ನಂಬಿಕೆ...
ಇಂದು...
ನನ್ನ ಗಂಡ ಯುದ್ಧಕ್ಕೆ ಹೊರಡುವ ಮುನ್ನ ನನ್ನ ಎಡಗಣ್ಣು ಅದುರಿತು...!
ನನಗೆ ಆತಂಕವಾಯಿತು..
ತಕ್ಷಣ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿದೆ....
ನನ್ನ ಪತಿದೇವ ಯುದ್ಧಕ್ಕೆ ಹೋಗಿ ಸ್ವಲ್ಪದರಲ್ಲೇ ತಿರುಗಿ ಬಂದ....
ನಾನು ಸ್ನಾನ ಮಾಡಿ...
ಪೂಜೆಗೆ ಅಣಿಯಾಗುತ್ತಿದ್ದೆ.... ತಲೆ ಕೂದಲು ಒದ್ದೆಯಿತ್ತು..
ಮುಡಿ ಕಟ್ಟಿಕೊಳ್ಳುತ್ತಿದ್ದೆ...
ಎಂದಿನಂತೆ
ಮೌನವಾಗಿ ನಗು ಮುಖದಿಂದ ಸ್ವಾಗತಿಸಿದೆ...
ಆತ ನನ್ನನ್ನು ತಬ್ಬಿಕೊಂಡ...
ನಮ್ಮ ಮಲಗುವ ಕೋಣೆಯವರೆಗೆ ತಬ್ಬಿಕೊಂಡೇ.. ಬಂದ....!
ಒಮ್ಮೆ "ಬೇಕು" ಅಂತಾದರೆ ...
ಈ ಗಂಡಸರಿಗೆ ತಾಳ್ಮೆಯೇ ಇರುವದಿಲ್ಲ....
ಪ್ರಕೃತಿಯಲ್ಲವೇ ...?
ನನ್ನ ಬೇಕು ಬೇಡಗಳನ್ನು ಕೇಳುವವರ್ಯಾರು..?
ಮೌನವೆಂದರೆ ಒಪ್ಪಿಗೆ......
ಸಮ್ಮತಿ.... !
ನನ್ನನ್ನು ರಮಿಸಿದ...
ಉನ್ಮಾದಿಸಿದ....ಉದ್ರೇಕಿಸಿದ...
ಮಧಿಸಿದ....
ನನ್ನೊಳಗಿನ ಉತ್ಕಟ ಬಯಕೆಗಳನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ...!
ಆತನ ಕ್ರೀಡೆಗಳಿಂದ ..
ನಾನು ಯಾವಾಗಲೂ ಮೈಮರೆತುಬಿಡುತ್ತಿದ್ದೆ...
ಜೊತೆಯಲ್ಲೇ ...
ಜೊತೆಯಾಗಿ ಕೊನೆಯ ಹಂತ ಸೇರಿಸುವ ಆತನ ಪರಿಗೆ ಆತನೇ ಸಾಟಿ... !
ಇಂದು ಯಾಕೋ ಹಾಗೆ ಆಗುತ್ತಿಲ್ಲ....!
ಮುಖ ನೋಡಿದೆ... !
ಹೌದು.. !
ನನ್ನ ಪತಿಯೇ ಹೌದು....
ಕಸಿವಿಸಿ ತಡೆಯಲಾಗಲಿಲ್ಲ....
"ನಿಜ ಹೇಳಿ... ಯಾರು ನೀವು...?"
ಆತ ನಸು ನಕ್ಕ.... ನಿಜ ರೂಪ ತೋರಿಸಿದ....!
ನನಗೆ ದಿಗ್ಭ್ರಮೆ ... !
ನಾನು ದಿನವೂ ಪೂಜಿಸುವ...
ಆರಾಧಿಸುವ ನನ್ನ ದೇವರು... ! ಮಹಾವಿಷ್ಣು... !!
ಛೇ.... !!
ಇವನೆದುರು ಬೆತ್ತಲಾದೇನೆ?
ಅಸಹ್ಯ... ಜಿಗುಪ್ಸೆ....
ಅಸಹಾಯಕತೆ...
ದುಃಖ... ಕೋಪ.... ನನಗೆ ಏನು ಮಾಡಬೇಕೆಂದು ತೋಚಲಿಲ್ಲ... !
ಮೌನ ..
ಅಸಹಾಯಕತೆ !!
ವಿಷ್ಣುವೇ ಮಾತನಾಡಿದ...
"ನಿನ್ನ ಗಂಡ ರಾಕ್ಷಸ...
ಲೋಕ ಕಂಟಕ....
ಅಲ್ಲಿ ಯುದ್ಧದಲ್ಲಿ ಶಿವ ನಿನ್ನ ಗಂಡನನ್ನು ವಧಿಸಿಯಾಗಿದೆ.....
ಬೇಸರಿಸದಿರು...
ಇದೆಲ್ಲವೂ ಲೋಕ ಕಲ್ಯಾಣಕ್ಕಾಗಿ..."
ನಾನು ಪೂಜಿಸುವ..
ಆರಾಧಿಸುವ ದೇವರ ಬಾಯಲ್ಲಿ ಇಂಥಹ ಮಾತು !!
"ವಿಷ್ಣು....
ನಿನಗೂ ನನ್ನ ಚಂದವೇ ಬೇಕಾಯಿತೆ...?
ನನ್ನ ಮನಸ್ಸು..
ನನ್ನ ಭಾವಗಳಿಗೆ ಬೆಲೆಯೇ ಇಲ್ಲವಾಯಿತೆ...?..
ಇದು ಯಾವ ನ್ಯಾಯ...? ಇದು ಅತ್ಯಾಚಾರವಲ್ಲವೆ?
ನನಗೇಕೆ ಈ ಶಿಕ್ಷೆ.. ?.. "
ವಿಷ್ಣು ಮುಗುಳ್ನಕ್ಕ...
" ತುಳಸಿ...
ನನ್ನಲ್ಲೂ ನಿನಗೆ ಪ್ರಶ್ನೆಯೆ...?... "
"ಪೂಜೆ ಮಾಡುತ್ತೇವೆ ಎಂದಾಕ್ಷಣ ಪ್ರಶ್ನಿಸ ಬಾರದೆ...?
ಲೋಕ ಕಲ್ಯಾಣಕ್ಕಾಗಿ ..
ಹತ್ತಾರು ಅವತಾರಗಳನ್ನು ಎತ್ತುವವನು ನೀನು...!
ನನ್ನಂಥಹ ಹುಲು ಮಾನವಳ ..
ಪಾತಿವೃತ್ಯ ಹರಣಕ್ಕೆ ನೀನೇ ಬರಬೇಕಾಯಿತೆ...?
ಮನ್ಮಥನನ್ನು ಕಳಿಸಿ ..
ನನ್ನ ಮನಸ್ಸನ್ನು ಚಂಚಲಗೊಳಿಸ ಬಹುದಿತ್ತಲ್ಲವೆ...?
ವಿಷ್ಣು...
ನಿನ್ನ ಪರಮ ಭಕ್ತೆಯಾದ ನನ್ನಲ್ಲೂ ಕೆಟ್ಟ ಕಾಮದಾಸೆಯೇ...?
ಛೀ...!"
ಕೋಪದಿಂದ ನನ್ನ ಮೈ ಅದುರುತ್ತಿತ್ತು....
ದೇವರಿಂದಲೇ ...
ಸೃಷ್ಟಿಯಿಂದಲೇ..... ಪ್ರಕೃತಿಯ ಮೇಲೆ ಅತ್ಯಾಚಾರವೇ...?...
ಆತ ಮುಗುಳ್ನಕ್ಕ....
"ಬೇಸರಿಸದಿರು ..
ತುಳಸಿ..
ಲೋಕಕಲ್ಯಾಣಕ್ಕಾಗಿ ಇದೆಲ್ಲ...!
ನಿನಗೊಂದು ವರವ ಕೊಡುವೆ....
ನನ್ನ ..
ನಿತ್ಯದ ಪೂಜೆ ತುಳಸಿ ದಳದ ಸಂಗಡ ಪೂಜಿಸಲಿ...
ಅದು ನನಗೆ ಶ್ರೇಷ್ಠ ಪೂಜೆಯಾಗಲಿ...""
ನನಗೆ ಮತ್ತೂ ಕೋಪ ಉಕ್ಕಿತು...
"ವಿಷ್ಣು...
ಇದು ಅತ್ಯಾಚಾರ...!
ನನ್ನ ಮನಸ್ಸಿನ ಮೇಲಿನ ಬಲಾತ್ಕಾರ.... !
ಅತ್ಯಾಚಾರಕ್ಕೆ ಯಾವ ಬಣ್ಣಕೊಟ್ಟರೇನು...?..
ಅಧಿಕಾರದವರು...
ದೊಡ್ಡವರು ಮಾಡಿದರೆ... ಅದು ಸದಾಚಾರವೆ..?
ವರಗಳ .. ಪರಿಹಾರಗಳ .... ಆಸೆ ತೋರಿಸುತ್ತೀಯಾ.. ?
ನಿನಗೆ ನನ್ನ ಧಿಕ್ಕಾರವಿದೆ ..... !! "
ನಾನು ಧಿಕ್ಕರಿಸಿದೆ....
ವಿಷ್ಣು ನನ್ನನ್ನು ರಮಿಸಿದ...
ತಿಳಿಸಿ ಹೇಳಿದ...
ಬುದ್ಧಿವಂತರ ನಡೆಯೇ ಹಾಗೆ....!
ಅವರ ಎಲ್ಲ ಕಾರ್ಯಗಳಿಗೂ...
ಅವರಲ್ಲಿ...
ಎಲ್ಲಕ್ಕೂ ಉತ್ತರ... ಪರಿಹಾರವಿರುತ್ತದೆ....
ಆತನ ವಾದ ಸರಣಿಗೆ ನಾನು ಮೌನವಾಗಬೇಕಾಯಿತು ..
ಲೋಕದ ಹಿತಕ್ಕಾಗಿ..
ನನ್ನ ಮೇಲಿನ ಅತ್ಯಾಚಾರವನ್ನೂ ಸಹಿಸಬೇಕಾಯಿತು....
"ವಿಷ್ಣು...
ನಿನ್ನ ವರವನ್ನು ಒಪ್ಪುವೆ...
ಉಳ್ಳವರ..
ಬುದ್ಧಿವಂತರ ಮುಂದೆ ನನ್ನದು ಯಾವ ಆಟ..?
ಸಮಸ್ತ ಜಗತ್ತಿನ ...
ಅಸಹಾಯಕ ..
"ಮೌನ ಪ್ರಕೃತಿಯ" ಮೇಲಿನ ಅತ್ಯಾಚಾರಕ್ಕೆ.. ಪ್ರತಿಭಟನೆಯಾಗಿ..
ಅನಿವಾರ್ಯವಾಗಿ..
ನಿನ್ನ ವರವನ್ನು ಒಪ್ಪುವೆ...."
ವಿಷ್ಣು ಮುಗುಳ್ನಕ್ಕ....
ನನ್ನ ಹಿಂದಿನ ಜನ್ಮಗಳ ಕಥೆ ಹೇಳಿದ.....
ನಾನು ಮತ್ತೆ ಮೌನವಾದೆ ಎಂದಿನಂತೆ......
ಈ ..
ಮೌನ ...
ಒಂದು ಪ್ರತಿಭಟನೆ....
ಅಂತರಂಗದಲಿ ನಡೆಯುವ ಯುದ್ಧ.. !
ಕುದಿಯುವ ಜ್ವಾಲಾಮುಖಿಯಂತೆ ....
ಭೂಕಂಪದಂತೆ....
ಪ್ರಳಯದಂತೆ....
( ಪುರಾಣದ ತುಳಸಿ ಕಥೆಯ ..
ಎಳೆ ಎಳೆಯ ಜೋತೆಗೆ..
ನನ್ನ ಒಂದಿಷ್ಟು ಕಲ್ಪನೆ... ಈ ಕಥೆ...
ಆಸ್ತಿಕ ಮನಗಳ ಕ್ಷಮೆ ಕೋರಿ....)
ಚಂದದ ಪ್ರತಿಕ್ರಿಯೆಗಳಿವೆ ದಯವಿಟ್ಟು ನೋಡಿ....
.
54 comments:
ಮೌನಕ್ಕೆ ಎಷ್ಟು ಆಯಾಮಗಳು ಪ್ರಕಾಶಣ್ಣ ? ಮೌನ ಉತ್ತರವೂ ಆಗಬಹುದು , ಪ್ರಶ್ನೆಯೂ ಆಗಬಹುದು , ನೀವಂದಂತೆ ಯುದ್ದವೂ ಆಗಬಹುದು. ನಿಜ ಪುರುಷನ ಮುಂದೆ ಪ್ರಕೃತಿಯದು ನಿರಂತರ ಮೌನ ಹೋರಾಟವೇ .. ಆಕೆಯ ಮೌನವನ್ನು ಇಂದಿಗೂ ಅರ್ಥ ಮಾಡಿಕೊಂಡವರು ಯಾರು ಇಲ್ಲ . ಏಕೆಂದರೆ ಎಲ್ಲರೂ ಮೌನವನ್ನು ಅವರಿಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ. ಇಲ್ಲಿ ತುಳಸಿ ಪ್ರಕೃತಿಯ ಪ್ರತಿರೂಪವಾಗಿ ಅಮೋಘವಾಗಿ ಚಿತ್ರಿಸಿದ್ದೀರಾ ... ತುಂಬಾ ಚೆನ್ನಾಗಿದೆ. ಶಿವನ ತಪಸ್ಸು ಕೆಡಿಸುವಾಗ ನೆನಪಾದ ಮನ್ಮಥ ತುಳಸಿಯ ಪಾತಿವ್ರತ್ಯ ಹಾಳು ಮಾಡುವಾಗ ಏಕೆ ನೆನಪಾಗಲಿಲ್ಲ ಎಂಬುದಕ್ಕೆ ಉತ್ತರವೆಂದರೆ ತುಳಸಿ "ಹೆಣ್ಣು " ...--
ಸಂಧ್ಯಾ.... ಪುಟ್ಟಕ್ಕ...
ಸೃಷ್ಟಿಯೇ ಪ್ರಕೃತಿಯಮೇಲೆ ಮೊದಲ ಅತ್ಯಾಚಾರ ಮಾಡಿದೆ ಎನ್ನುವದು ನನ್ನ ಅನಿಸಿಕೆ....
ಪ್ರಕೃತಿಯನ್ನು ಅಸಹಾಯಕಳನ್ನಾಗಿ ಮಾಡಿದ್ದು ಸೃಷ್ಟಿಯೇ ಅಲ್ಲವೆ?
"ಮೌನ." .. ಒಂದು ಉತ್ತರ ಕೂಡ....!
ಕಾಲವೇ ಈ ಅತ್ಯಾಚಾರಕ್ಕೆ ಮೌನವಾಗಿ ಉತ್ತರಿಸುತ್ತದೆ...
ಇದೊಂದು ಕಲ್ಪನೆ...
ಪುರಾಣ ಕಥೆ ಹೀಗೆ ಇಲ್ಲ...
ತುಳಸಿಕೂಡ ಲಕ್ಷ್ಮಿಯ ಮರು ಜನ್ಮ...
ಶಂಖಚೂಡ ಕೂಡ ವಿಷ್ಣುವಿನ ಅಂಶ
ತುಳಸಿ ಬದರಿನಾಥಕ್ಕೆ ಹೋಗಿ "ವಿಷ್ಣುವೇ ತನ್ನ ಪತಿಯಾಗಿ ಬೇಕು ಅಂತ ತಪಸ್ಸು ಮಾಡುತ್ತಾಳೆ...
ಇತ್ಯಾದಿ.. ಇತ್ಯಾದಿ ಕಥೆಗಳಿವೆ....
ಈ ಕಥೆ ಬರೆಯುವಾಗ ಅನೇಕರು ವಿಷಯಗಳನ್ನು ಹುಡುಕಿ ಕೊಟ್ಟಿದ್ದಾರೆ..
ಹಿರಿಯರಾದ ಶ್ರೀ ಗೋಪಾಲ ವಾಜಪೇಯಿಯವರು.. ನನ್ನ ಗೆಳೆಯ ದಿವಾಕರ...
ಇನ್ನೂ ಅನೇಕರು..
ಅವರೆಲ್ಲರಿಗೂ ಧನ್ಯವಾದಗಳು...
ಕಥೆಯನ್ನು ಇಷ್ಟಪಟ್ಟು ಚಂದದ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು ....
ಎರಡು ಆಯಾಮದ ಕಥೆ ಇದು..ಪ್ರಕೃತಿಯೇ ಹೆಣ್ಣಾಗಿ ಹೆಣ್ಣೇ ಪ್ರತಿ ಕೃತಿಯಾಗಿ ನಿಂತಿರುವ ವರ್ಣನೆ ಸುಂದರವಾಗಿದೆ ಅನುಕೂಲ ಸಿಂಧು ಮಾರ್ಗ ಎಂದರೆ ಇದೇನೇ..ಸಮಯ ಬಂದಾಗ ನಮ್ಮ ಕಷ್ಟಗಳೇ ದೊಡ್ಡದಾಗುತ್ತವೆ, ಇನ್ನೊಬ್ಬರ ಸಂತಸದ ಗುಣಮಟ್ಟವನ್ನು ಮೆಟ್ಟಿಯಾದರು ಸುರಕ್ಷತಾ ಕವಚ ಧರಿಸಬೇಕು ಎನ್ನುವ ಅಪ್ಪನ ಕಾಳಜಿ, ತನಗೆ ಬೇಕು ಎಂದದ್ದನ್ನ ಬಾಚಿ ತೆಗೆದುಕೊಳ್ಳುವ ಗಂಡ, ಲೋಕ ಕಲ್ಯಾಣಕ್ಕಾಗಿ ತತ್ವಗಳನ್ನು ಬದಿಗಿಟ್ಟ ದೇವ, ಇವರ ಮಧ್ಯೆ ತಾನು, ತನ್ನದು, ತನ್ನ ಪ್ರಪಂಚ ಎನ್ನುವ ಗೂಡಿದ್ದರೂ ಇನ್ನೊಬ್ಬರಿಗಾಗಿ ಮೌನದ ಆಭರಣ ಧರಿಸುವ ನಾಯಕಿ..ಅವಳ ದ್ವಂಧ್ವ ಎಲ್ಲವು ಸೊಗಸು. ಹೌದು ಶಂಕರ್ ಗುರು ಸಿನಿಮಾದಲ್ಲಿ ಹೇಳಿರುವಂತೆ ಕಪ್ಪೆಯನ್ನು ಹಾವು ...ಹಾವನ್ನು ಗರುಡ..ಗರುಡನ ಮೇಲೆ ವಿಷ್ಣು ಹೀಗೆ ಒಬ್ಬರನ್ನು ಮೆಟ್ಟಿ ಇನ್ನೊಬ್ಬರು ಬದುಕು ಹುಡುಕಿಕೊಳ್ಳುತ್ತಾರೆ... ಈ ಸಂದೇಶವನ್ನು ಸುರುಳಿ ಸುರುಳಿಯಾಗಿ ಬಿಡಿಸುತ್ತಾ ಹೋಗಿರುವ ನಿಮ್ಮ ಬರಹದ ವೈಖರಿ ಅಮೋಘ..ಸುಂದರ ಕಥೆ ಇಷ್ಟವಾಯಿತು ಮೌನರಾಗ!
ಯಾವುದು ಸರಿ ? ಯಾವುದು ತಪ್ಪು?
ಜಗತ್ತಿಗಿನ್ನೂ ಸರಿಯಾಗಿ ಅರ್ಥವಾಗದ ಪ್ರಶ್ನೆ ಇದು...
ದೊಡ್ಡವರು ಮಾಡಿದ್ದು, ಹೇಳಿದ್ದು ಸರಿ...
ಶಂಖಚೂಡ ತನ್ನ ಮತ್ತು ತನ್ನ ರಾಜ್ಯದವರ ಹಿತಾಸಕ್ತಿಗಾಗಿ ಯುದ್ಧ ಮಾಡಿದ್ದ....
ಆದರೆ ಎಲ್ಲರ ಕಣ್ಣಿಗೆ ಅದು ತಪ್ಪು...
ದೇವತೆಗಳು ಮಾನವರು ಅವರವರ ಹಿತಾಸಕ್ತಿಗಾಗಿ ಯುದ್ದಮಾಡಿದರು..
ವಕ್ರ ಮಾರ್ಗ ಅನುಸರಿಸಿದರು, ತಾಯಿ ಸಮಾನ ಹೆಣ್ಣಿನ ಮೇಲೆ ಅತ್ಯಾಚರವೆಸಗಿದರು..
ಜನರ ಕಣ್ಣಿಗೆ ಲೋಕಕಲ್ಯಾಣಕ್ಕಾಗಿ ಹೀಗೆ ಮಾಡಿದರೂ ಅದು ಸರಿ..
ರಾಕ್ಷಸರ ಲೋಕ ಇವರಿಗೆ ಲೋಕವಲ್ಲವೇ?
ಎಲ್ಲವೂ ಸ್ವಾರ್ಥ...
ನಗರಗಳ ಹಿತಾಸಕ್ತಿಗಾಗಿ... ಆರಾಮಿನ ಜೀವನಕ್ಕಾಗಿ
ಸಸ್ಯ ವನ್ಯರಾಶಿಗಳ ಆಗರಗಳಾಗಿರುವ ಹಳ್ಳಿಗಳಲ್ಲಿ ಅಣೆಕಟ್ಟುಗಳ ಯೋಜನೆ..
ಪ್ರಕೃತಿಯ ನಾಶ ... (ಅತ್ಯಾಚಾರ)
ಅಲ್ಲಿರುವ ಜನರಿಗೆ ಪರಿಹಾರ (ವರ)
ಮೇಲಿನ ಕಥೆಯಿಂದ ಉಪಾಯ ಕಲಿತು ಅನುಸರಿಸುತ್ತಿದ್ದೇವೆ...
ಎಲ್ಲೋ ಆದ ಅತ್ಯಾಚಾರದ ಲಾಭದಿಂದ ನಾವೂ ಬೇಜಾರಿಲ್ಲದೆ ಸುಖ ಅನುಭವಿಸುತ್ತಿದ್ದೇವೆ...
(ವಿದ್ಯುತ್ ಇಲ್ಲದಿದ್ದರೆ ನನಗೂ ಈ ಪೋಸ್ಟ್ ಹಾಕಲು ಆಗುತ್ತಿರಲಿಲ್ಲ )
ಮೊನ್ನೆ ಅಂದಿದ್ರಿ ತುಳಸಿ ಮೇಲೆ ಕತೆ ಬರೆಯುತ್ತಿರುವೆ ಅಂತ ಅದು
ಇಷ್ಟು ಛಲೋದ್ ಅದ ಅಂತ ತಿಳಿದಿರಲಿಲ್ಲ. ನನಗೆ ನೀವು ಆರಿಸಿಕೊಂಡ ವಸ್ತು
ಕೇಳುವ ಪ್ರಶ್ನೆ ಎಲ್ಲ ಸೇರತು, ವಾಹ್ ಅಂತೇನಿ ಮನಸ್ಸಿನಿಂದ..
ನೀವು "ಆಸ್ತಿಕ" ಮನಸ್ಸುಗಳ ಕ್ಷಮೆ ಯಾಕೆ ಕೇಳಬೇಕು..ಇದು ಅಭಿವ್ಯಕ್ತಿ ಮಾಧ್ಯಮ...ಇಲ್ಲಿ
ನೀವು ಸ್ವತಂತ್ರರಿದ್ದೀರಿ..ನಿಮ್ಮ ಅನಿಸಿಕೆ ನೀವು ನಿರ್ಭಯರಾಗಿ ಹೇಳ್ರಿ..!
ಸಾಹಿರ್ ತನ್ನ ಗೀತೆಯ ಸಾಲಲ್ಲಿ ಹೇಳ್ತಾನೆ.."ಹರ ಯುಗ್ ಮೆ ಬದಲತೆ ಧರ್ಮೊಂಕಾ ಕೈಸೆ ಆದರ್ಶ ಬನಾವೋಗೆ"
ಸಮಾಜದ ಈಗಿನ ಪರಿಸ್ಥಿತಿ...ಪ್ರಕೃತಿ...ಜತೆಗೆ 'ಮಾಧವಿ'ಯೂ ನೆನಪಾದಳು...ಅಣ್ಣಾ ಮನಮುಟ್ಟುವ ಬರಹಕ್ಕಾಗಿ ನನ್ನಿ...
ಹೌದು..... ಪ್ರಕ್ರತಿಯ ಮೇಲೆ , ಹೆಣ್ಣಿನ ಮೇಲೆ ಅನಾದಿ ಕಾಲದಿಂದಲೂ ಅತ್ಯಾಚಾರ ನಡೆಯುತ್ತಲೇ ಇದೆ ಆದರೆ ಅದಕ್ಕೆ ಲೋಕ ಕಲ್ಯಾಣದ ಹೆಸರಿಟ್ಟಿದ್ದಾರೆ..... ಅದನ್ನೇ ತುಂಬಾ ಸೊಗಸಾಗಿ ಹೇಳಿದ್ದೀರಾ ಪ್ರಕಾಶಣ್ಣ... ಪ್ರತೀ ಮಾತಲ್ಲೂ ವಿಡಂಬನೆಯಿದೆ, ಲೋಕಕ್ಕೇ ತಿರುಗೇಟು ನೀಡುವ ಮಾತಿದೆ... ಸುಪರ್...
ಪ್ರೀತಿಯ ಶ್ರೀಕಾಂತು...
ಪ್ರಕೃತಿ.. ಸ್ತ್ರೀ ನಡುವೆ ಬಹಳಷ್ಟು ಸಾಮ್ಯಗಳಿವೆ....
ಮೌನ ಅಸಹಾಯಕತೆ ಎನ್ನಿಸಿದರೂ...
ಅದೊಂದು ಪ್ರಬಲ ಅಸ್ತ್ರ...
ಪ್ರಳಯದ ಮೊದಲಿನ ಮೌನ ಭಯಂಕರ...
ತುಳಸಿಯ ಸಂತತಿ ಈಗಲೂ ಇದೆ....
ಪ್ರಬಲರ ಪೌರುಷದ ಮುಂದೆ "ಮೌನವಾಗಿ" ಕರಗಿ ಹೋಗಿದ್ದಾಳೆ...
ಈ ಕಥೆ ನನ್ನ ಬಹು ದಿನಗಳ ಕನಸು..
ಚೆನ್ನಾಗಿ ಬರೆಯುವವರನ್ನು ಕಂಡಾಗಲೆಲ್ಲ ಅವರ ಬಳಿ "ತುಳಸಿಯ" ಬಗೆಗೆ ಬರೆಯಿರಿ ಅಂತ ವಿನಂತಿಸುತ್ತಿದ್ದೆ..
ಚೇತನಾ ತೀರ್ಥಹಳ್ಳಿ..
ಶಾಂತಲಾ ಭಂಡಿ... ಇನ್ನೂ ಹಲವರ ಬಳಿ ವಿನಂತಿಸಿದ್ದೆ...
ದೆಹಲಿಯ ಅತ್ಯಾಚಾರದ ಪ್ರಕರಣದ ನಂತರ ಮತ್ತೆ ಬರೆಯುವ ಆಸೆ ಜಾಸ್ತಿ ಆಯಿತು...
ಅಂತೂ ಬರೆದೆ...
ಬರೆದು ನಾಲ್ಕಾರು ಸ್ನೇಹಿತರಿಗೆ ಕಳುಹಿಸಿದೆ..
ಅವರು ಹೇಳಿದ ತಿದ್ದುಪಡಿಗಳೊಂದಿಗೆ ನಿಮ್ಮ ಮುಂದೆ ಇದೆ...
ಓದಿ..
ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಮೌನ ಮಾತೆಯ ಕಥೆಯ ಕಲ್ಪನೆಯೂ ತುಂಬ ಸೊಗಸಾಗಿದೆ ಅಣ್ಣ :)
ಪ್ರೀತಿಯ ಸುಧರ್ಶನ್....
ಸರಿ ತಪ್ಪುಗಳು..
ಒಳ್ಳೆಯದು.. ಕೆಟ್ಟದ್ದು..
ಎಲ್ಲವೂ ನಮ್ಮ ನಮ್ಮ ಮೂಗಿನ ನೇರಕ್ಕೆ.....
ನಿಮ್ಮ ಉದಾಹರಣೆ ಬಹಳ ಇಷ್ಟವಾಯ್ತು..
ವಿದ್ಯುತ್ತಿಗಾಗಿ ಊರು... ಹಳ್ಳಿಗಳನ್ನು ಮುಳುಗಿಸಿ...
ಪ್ರಕೃತಿ.. ಸಂಸ್ಕೃತಿಗಳ ಮೇಲೆ ಅತ್ಯಾಚಾರ ಮಾಡಿ...
ಪಟ್ಟಣಗಳಿಗೆ..
ಕಾರ್ಖಾನೆಗಳಿಗೆ ವಿದ್ಯುತ್ ಕೊಡಲಾಯಿತು... ಗಲೀಜು ಪಟ್ಟಣಗಳು ತಲೆ ಎತ್ತಿದವು....
ಎಲ್ಲ ಗೊತ್ತಿದ್ದೂ....
ನಾವೆಲ್ಲರೂ ಮಾತು ಬರುವ ಮೂಕರಾಗಿದ್ದೇವೆ....
ಹಾಗೆಯೇ ಇರುತ್ತೇವೆ....
ಬಹಳ ಚಂದದ ಪ್ರತಿಕ್ರಿಯೆ...
ಟಾನಿಕ್ ಥರಹ ಇದೆ...
ಇನ್ನಷ್ಟು ಬರೆಯುವ ಉತ್ಸಾಹ ಕೊಟ್ಟಿದೆ.... ಜೈ ಹೋ !!
ದೇಸಾಯಿಯವರೆ....
ಕಥೆ ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ನೀವು ಹೇಳೋದನ್ನು ಒಪ್ಪುತ್ತೇನೆ..
"ಇದು ಅಭಿವ್ಯಕ್ತಿ ಮಾಧ್ಯಮ..."
ಆದರೂ ಬೇರೆಯವರಿಗೆ ನೋವಾಗಿರ ಬಹುದೆಂಬುದು ಖುಷಿ ಕೊಡಲಾರದು ಅಲ್ವಾ?
ನನ್ನ ಮನೆಯಲ್ಲಿ ತುಂಬಾ ಭಾವುಕ ಆಸ್ತಿಕರಿದ್ದಾರೆ...
ಇದೆಲ್ಲ ಅವರಿಗೆ ಊಹಿಸಲೂ ಸಾಧ್ಯವಿಲ್ಲ ವಿಚಾರ...
ಅವರನ್ನು (ನನ್ನಮ್ಮ) ...
ಅವರಂಥವರನ್ನು
ಗಮನದಲ್ಲಿಟ್ಟುಕೊಂಡು ಕ್ಷಮೆ ಕೋರಿರುವೆ.....
ನಿಜಕ್ಕೂ ನಾವೆಲ್ಲ ಪುಣ್ಯವಂತರು..
ನಮ್ಮ ದೇಶದಲ್ಲಿ ಇಂಥಹ ಸ್ವಾತಂತ್ರ್ಯ ಇದೆ...
ದಿನಕರ....
ನಮ್ಮ ಪುರಾಣ ಕಥೆಗಳ ಸೊಗಸೇ ಬೇರೆ....
ಅವೆಲ್ಲ ನಮ್ಮ ನಮ್ಮ ತಿಳುವಳಿಕೆಗೆ ಸಿಗುವಷ್ಟು ರುಚಿ ಸ್ವಾದ ಮಾಡಬಹುದು...
ತುಂಬಾ ಆಳವಾದ ವಿಚಾರಗಳೂ ಇವೆ..
ಮಹಾಭಾರತವನ್ನೆ ನೋಡೋಣ...
ಅದೊಂದು ಕಾದಂಬರಿ ಅಂತಲೇ ಓದೋಣ..
ನಿಜಕ್ಕೂ ಅದೊಂದು ಅದ್ಭುತ !!
ಅಲ್ಲಿ ಬರುವ ಪಾತ್ರಗಳು ಇಂದಿಗೂ ಷ್ಟು ಪ್ರಸ್ತುತ ಅಲ್ವಾ?
ಇಂದಿಗೂ ಅಲ್ಲಿನ ಪಾತ್ರಗಳು ನಮ್ಮ ಜೀವನಾಡಿಯಲ್ಲಿ ಹಾಸು ಹೊಕ್ಕಾಗಿವೆ...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಅನುರಾಗ....
ಸಹೋದರಿ ಅನಿತಾ ಬರೆದ ಕಥೆ "ಮಾಧವಿ" ತುಂಬಾ ಚೆನ್ನಾಗಿತ್ತು...
ನನಗೆ ಯಯಾತಿ ಕಾದಂಬರಿ ಬಹಳ ಇಷ್ಟ...
ಅದನ್ನು ಎಷ್ಟು ಬಾರಿ ಓದಿರುವೆ ಅಂತ ನನಗೆ ನೆನಪಿಲ್ಲ...
ಮಹಾಭಾರತದಲ್ಲಿ ನನಗೆ "ಕಂಸನ" ಬಗೆಗೆ ಬರೆಯುವ ಆಸೆ ಬಹಳ ಇದೆ...
ಜಗತ್ತಿನಲ್ಲಿ ತನ್ನ ಸಾವಿನ ಬಗೆಗೆ ಅಷ್ಟು ನಿಖರವಾಗಿ ಅವನಿಗೆ ಮಾತ್ರ ತಿಳಿದಿತ್ತು...
ಆತ ಮಹಾರಾಜ..
ಐಶ್ವರ್ಯದ ... ಅಧಿಕಾರದ ಅಮಲು ಹತ್ತಿದವ..
ನಮ್ಮ ರಾಜಕಾರಣಿಗಳ ಹಾಗೆ...
ಅಂಥವನೊಬ್ಬ ಸಾವನ್ನು ತನ್ನ ಕಣ್ಣೆದುರಿಗೆ ಇಟ್ಟುಕೊಂಡು ಪ್ರತಿಕ್ಷಣವನ್ನು ಕಳೆಯುವದು ಸುಲಭದ ಕೆಲಸವಲ್ಲ..
ಆ ಪಾತ್ರದ ತುಡಿತ ಬಹಳ ಕಾಡುತ್ತದೆ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ನಾಗರಾಜರೆ...
ಮೌನವನ್ನು ಎದುರಿಗೆ ಇಟ್ಟುಕೊಂಡು ಹೀಗೆ ಕಥೆಯೊಂದನ್ನು ಬರೆಯುವ ರೀತಿ ಪೂರ್ವ ಯೋಜಿತವಲ್ಲ...
ಅಸಹಾಯಕತೆ...
ಅತ್ಯಾಚಾರ...
ಅಭಿಪ್ರಾಯ...
ಅಸಹ್ಯ..
ಕೋಪ ತಾಪ..
ಎಲ್ಲವನ್ನೂ ಮೌನದಲ್ಲೇ ಹೇಳುತ್ತಾಳೆ ನಮ್ಮ ಪ್ರಕೃತಿ ಮಾತೆ...
ಇದು ನನಗೆ ನಿಜಕ್ಕೂ ಸೋಜಿಗವೆನಿಸಿತು....
ಇಲ್ಲಿ ಮೌನಕ್ಕೆ ಇನ್ನೂ ಒಂದೆರಡು ಆಯಾಮ ಬರೆದಿದ್ದೆ....
ಆದರೆ ಪರಿಣಾಮಕಾರಿಯಾಗಲಿಲ್ಲ ಅಂತ ತೆಗೆದು ಹಾಕಿದೆ...
ಮೌನ ಮಾತೆ ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..
ಹೊಸ ಆಯಾಮದ ಮೌನ ಇದು.ನಮ್ಮಲ್ಲಿ ಅನೇಕರಿಗೆ ತುಳಸಿ ಕಥೆ ಗೊತ್ತಿಲ್ಲ, ಅದರ ಹೂರಣವನ್ನು ಇಟ್ಟುಕೊಂಡು ಒಬ್ಬ ಹೆಣ್ಣಿನ ತುಮುಲಗಳನ್ನು ಪದರ ಪದರವಾಗಿ ಬಿಡಿಸಿ ಅನಾವರಣ ಗೊಳಿಸಿದ್ದೀರಿ , ಇಂತಹ ವಿಮರ್ಶೆ ಕೆಲವರಿಗೆ ಇಷ್ಟವಾಗದಿರಬಹುದು. ಆದರೆ ಬಹುಷಃ ತುಳಸಿ ಮನದಲ್ಲಿ ಇದ್ದಿರಬಹುದಾದ ಹಲವು ವಿಚಾರಗಳು ಇಲ್ಲಿ ಕಂಡು ಬಂದಿವೆ. ವಸ್ತು ನಿಷ್ಠ ವಿಚಾರಗಳನ್ನು ಹೇಗೋ ಕಾಣಬಹುದು ಎಂಬುದಕ್ಕೆ ಈ ಬರಹ ಉದಾಹರಣೆ ಯಾಗಿದೆ. ಅಭಿನಂದನೆಗಳು ಪ್ರಕಾಶಣ್ಣ.
ಮೌನವಾದೆ..ಅದ್ಭುತ ಪರಿಕಲ್ಪನೆ..
ಪ್ರೀತಿಯ ಬಾಲಣ್ಣ...
ಮೂಲ ಪುರಾಣದಲ್ಲಿ ಪಾತ್ರಗಳನ್ನು ಒಂದು ಚೌಕಟ್ಟಿನಲ್ಲಿಟ್ಟಿಲ್ಲ...
ತುಳಸಿಯ ಬಗೆಗೆ ಹೆಚ್ಚಿನ ವಿವರಗಳೂ ದೊರೆಯುತ್ತಿಲ್ಲ..
ವೃಂದಾ ಮತ್ತು ತುಳಸಿ ಒಬ್ಬರೇನಾ? ಹೀಗೆ ಹಲವು ಅನುಮಾನಗಳು...
ಮೊದಲಬಾರಿಗೆ ಪಾತ್ರಗಳ ಹೆಸರಿಟ್ಟು ಕಥೆ ಬರೆದಿರುವೆ...
ಪುರಾಣ ಕಥೆಗಳಲ್ಲಿ ಇದು ಮೊದಲನೆಯದು...
ಮೌನದ ಈ ಪರಿಕಲ್ಪನೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು ಬಾಲಣ್ಣ...
ಪ್ರೋತ್ಸಾಹಕ್ಕಾಗಿ ವಂದನೆಗಳು...
ಪ್ರಕಾಶಣ್ಣ;ಇಲ್ಲಿ ನಾನು ಗಮನಿಸಿದ್ದು ಒಂದಂಶ.ಕಥೆ ತುಂಬಾ ವಿದ್ವತ್ ಪೂರ್ಣವಾಗಿ ಹೊರ ಹೊಮ್ಮಿದೆ.ಭಾಷೆ,ಶೈಲಿ,ನಿರೂಪಣೆ ಎಲ್ಲವೂ ಅದ್ಭುತ!!ಕಥೆಯ ಎಲ್ಲ ಆಯಾಮಗಳಲ್ಲೂ ಪರಿಪಕ್ವತೆ ಇದೆ.ನಿಮ್ಮ ಬರಹಗಳ ಬೆಳವಣಿಗೆ ಸದಾ ಕಾಲ ಹೀಗೇ ಮುಂದುವರಿಯಲಿ ಎಂಬ ಹಾರೈಕೆ.ನಮಸ್ಕಾರ.
ನಿಜಕ್ಕೂ ತುಂಬಾ ಇಷ್ಟವಾಯಿತು...
ಪ್ರಕಾಶಣ್ಣ..ಎಂಥಹ ಚಂದದ ನಿರೂಪಣೆ. ತುಳಸಿಯ ಕಥೆಯೇ ನನಗೆ ಗೊತ್ತಿರಲಿಲ್ಲ. ಓದುತ್ತಾ ಹೋದಂತೆ ಮುಂದೇನಾಗುತ್ತೋ ಅನ್ನುವ ಕುತೂಹಲ ಕೊನೆವರೆಗೂ ಉಳಿಸಿಕೊಂಡು ಹೋಯ್ತು. "ಮೌನಕ್ಕೆ, ನಿಜಕ್ಕೂ ಇಷ್ಟೆಲ್ಲಾ ಅರ್ಥಗಳಿವೆ" ಅಂತ ಇವತ್ತೇ ಗೊತ್ತಾದದ್ದು...
ತುಳಸಿ, ಶಂಖಚೂಡ ಮತ್ತು ಮಹಾ ವಿಷ್ಣುರ ಸುತ್ತ ಸಾಗುವ ಕಥನವನ್ನು ಎರಡು ರೀತಿಯಲ್ಲಿ ಸಮೀಕರಿಸಬಹುದು:
ಸಂಪೂರ್ಣ ಅಂತರ್ಮುಖಿಯಾದ ಮೌನಿ ತುಳಸಿಯನ್ನು ಭೂಮಿಯ ಸಹನೆಗೆ ಸಮೀಕರಿಸಿದ ಕಥೆಗಾರ, ಕೊನೆಗೆ ಆರಾಧಿಸಿದ ದೈವವೇ ಅತ್ಯಾಚಾರಕ್ಕೆ ಈಡು ಮಾಡಿದ ನಂತರವೂ ಸಹಿಸಿಕೊಂಡು ಹೋಗುವ ಸ್ತ್ರೀ ಸಹಜ ಕ್ಷಮಾ ಗುಣ ಒಡ ಮೂಡಿದೆ.
ಎರಡನೆಯದಾಗಿ ದೇವತೆಗಳು ಮಾನವರು ಒಳ್ಳೆಯವರು. ರಕ್ಕಸರು ಕೆಟ್ಟವರೆನ್ನುವುದು ನೋಡಲ್ಪಡುವ ನೋಟದಲ್ಲಿದೆ ಎಂಬ ಹಸೀ ಸತ್ಯ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ.
ಪುರಾಣದ ಬೆಳಕಿನ ಮೂಲಕ ಇಂದಿನ ವಾಸ್ತವವನ್ನು ನೀವು ತೋರಿಸಿದ ಪರಿಯೂ ಪ್ರಶಂಸನಾರ್ಹ.
ಸುಂದರ ಬರಹ. ಬಿಂಬಿತವಾದ ರೀತಿ ಚೆನ್ನಾಗಿದೆ.
ಮೌನದೊಳಗೆ ಮನಸು ಎಷ್ಟು ಮರುಗಿದರೂ ಕೊನೆಗೆ ಅದಕ್ಕೆ ಉತ್ತರ ಕೆಲವೊಮ್ಮೆ ಮೌನವೇ ..
ನಿಜವಾಗಲೂ ಓದಿ ಮೌನಿಯಾದೆ.
ಪ್ರಕಾಶೂ ಎಂದಿನಂತೆ ನಿನ್ನ ನಿರೂಪಣಾ ಶೈಲಿಗೆ ನೀನೇ ಸಾಟಿ. ಈ ಬಗ್ಗೆ ನಾನು ಮಾತನಾಡುವ ಮಾತೇ ಇಲ್ಲ. ದೇವತೆಗಳಾಗಿಯೇ ಕೆಟ್ಟದ್ದನ್ನು ನಿಗ್ರಹಿಸಿರುವ ನಿದರ್ಶನಗಳು ತುಂಬಾ ಕಡಿಮೆ, ಇಲ್ಲೂ ಲೋಕ ಕಲ್ಯಾಣ ದೇವತೆಗಳ ಆಶಯ, ಸ್ವಾಭಾವಿಕ ಇಲ್ಲಿ ಲೀಡ್ ತೆಗೆದಿಕೊಳ್ಳೊದು.. ವಿಷ್ಣು...ಆದರೆ ಮಾನವ ಅಥವಾ ಇಹ ಲೋಕದ ರಾಕ್ಷಸನಾಗಿ.... ಸಾಂಕೇತಿಕ... !! ಧರ್ಮ ಅಧರ್ಮಗಳ ನಡುವಿನ ಅಂತರ ಅಥವ ಪರದೆ ಬಹಳ ತೆಳುವಾದದ್ದು ಇಂತಹ ವಿಷಯಗಳಲ್ಲಿ. ಇನ್ನೊಂದು ಸಮರ್ಥನೆ, ತುಳಸಿ ತನ್ನನ್ನು ಒಪ್ಪಿಸಿಕೊಂಡಿದ್ದು ಪತಿ ರೂಪದ ವಿಷ್ಣುವಿಗೆ... ದೇಹ ದೇಹರೂಪದ ಪತಿಗೆ ಮನಸು ಪತಿಯೇ ದೇವರು ಎನ್ನುವ ಆರಾಧ್ಯದೇವನಿಗೆ...ಆಕೆಯ ಮಟ್ಟಿಗೆ ಆಕೆ ಪವಿತ್ರಳೇ, ಲೋಕದ ಮಟ್ಟಿಗೆ ಸಹಾ..ಏಕೆಂದರೆ ಇಲ್ಲಿ ಅವಳ ಸಂಗಸುಖ ಪಡೆದ ದೇಹ ಅವಳ ಪತಿಯದ್ದೇ... ಒಳಿತು ಕೆಡಕುಗಳ ಮಧ್ಯೆಯ ಪದರದ ಅನುಭಾವ ಕೇವಲ ಪರಮಾತ್ಮಕ್ಕೆ ಸಾಧ್ಯ. ಹಿರಿಯ ಪಾತಕವನ್ನು ಹತ್ತಿಕ್ಕಲ್ಲು ಚಿಕ್ಕ ಪಾತಕ ತಪ್ಪಲ್ಲ ಎನ್ನುವುದು ವಿರಾಟ ಸ್ವರೂಪ ದರ್ಶನ ನೀಡಿ ಅರ್ಜುನನಿಗೆ ಭಗವತ್ ಗೀತ ಸಾರ ತಿಳಿಸಿದ ಕೃಷ್ಣನ ಮಾತು ಇಂತಹ ಹಲವಾರು ದೈವೀ ಅಕೃತ್ಯಗಳಿಗೆ ಸ್ಪಷ್ಟನೆ ನೀಡುತ್ತದೆ. ಇದು ಎಲ್ಲೆಡೆ ಎಲ್ಲಾ ಧರ್ಮಗಳಲ್ಲೂ ವಿವಿಧ ರೂಪದಲ್ಲಿ ವಿವಿಧ ಸ್ತರಗಳಲ್ಲಿ ವಿಷದವಾಗಿದೆ. ತುಂಬಾ ಚನ್ನಾಗಿದೆ ಲೇಖನ ಪ್ರಕಾಶ್...
ಕಥೆ ತುಂಬ ಇಷ್ಟವಾಯ್ತು ಪ್ರಕಾಶಣ್ಣ .
ಪ್ರಕಾಶಣ್ಣ...
ಚೆನ್ನಾಗಿದ್ದು ಕಥೆ/ಕಲ್ಪನೆ :) what a co-incidence!!! Believe me or not... ಸದ್ಯ ನಾನು ತುಳಸಿಯ ಜನನ/ಬೆಳವಣಿಗೆ ಹಾಗೂ ಅವಳಿಗೆ ತುಳಸಿ ಅನ್ನೋ ಹೆಸರು ಸಿಕ್ಕ ಹಿಂದಿನ ಹಿನ್ನಲೆಯನ್ನು ಆಳವಾಗಿ ಅಭ್ಯಾಸ ಮಾಡ ಹೊರಟಿದ್ದೆ!! ಕಲ್ಪನೆ ವಾಸ್ತವಿಕತೆಗಿಂತ ಸದಾ ಭಿನ್ನವಾಗಿರ್ತು... ಎಂದಷ್ಟೇ ಹೇಳಬಲ್ಲೆ:)
ಅಂದಹಾಗೆ ತುಳಸಿಯ ಮೂಲ ನಾಮ "ಕಾಮೋದೆ" ಕ್ಶೀರಸಾಗರದಿಂದ ಉದ್ಭವಿಸಿದ ನಾಲ್ವರು ಕನ್ಯೆಯರಲ್ಲಿ ಓರ್ವಳು! ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿರುವೆ... :) ಒಂದು ಮೂಲದ ಪ್ರಕಾರ ಆಕೆ ಭಕ್ತೆ ಮಾತ್ರವಲ್ಲ.. ಪತ್ನಿಯೂ ಹೌದು!
You have woven a significant story around a mythological event. The story raises many questions and provides answers too.
ಸಂತಸ ಜಾಯ್... (ಜಯಶ್ರೀ)....
ಮೌನದಲ್ಲಿ ಏನೆಲ್ಲ ಅಡಗಿದೆ ಅಲ್ವಾ?
ಎಷ್ಟೊಂದು ಭಾವಗಳಿವೆ....! ಹಾಗಾಗಿ ಅದು ನನಗಿಷ್ಟ....
ಮೌನ ಮಾತಾಡುವಷ್ಟು ಮಾತು ಮಾತನಾಡಲಾರದು..
ಭಾವಗಳನ್ನು ವ್ಯಕ್ತ ಪಡಿಸಲಾರದು...
ಯಾಕೆಂದರೆ ಅದು ನೊಮ್ಮೊಳಗಿನ ಸಂಗಾತಿ... ನಮ್ಮೊಳಗಿನ ಸಂಗತಿ....
ಅದು ನಮ್ಮೊಳಗಿನ ಸಂತತಿ....
ಅದು ನಮ್ಮದು...
ನಮ್ಮದು ಮಾತ್ರ....
ನಮ್ಮೊಡನೆ ಯಾರೂ ಇಲ್ಲದಿರುವಾಗ ಅದು ಮಾತ್ರ ನಮ್ಮನ್ನು ಬಿಡುವದಿಲ್ಲ...
ಮೌನ ಹಾಗಾಗಿ ಯಾವಾಗಲೂ ಆಪ್ತ...
ನಮ್ಮ ಅಂತರಾತ್ಮ....
ಕಥೆಯೊಳಗಿನ ಮೌನ ಇಷ್ಟವಾಗಿದ್ದಕ್ಕೆ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಬರುತ್ತಾ ಇರಿ..
ಇನ್ನು ತುಳಸಿ ದಳ ಕೊಯ್ಯುವಾಗ ನಿಮ್ಮ ತುಳಸಿ ಕಥೆ ನೆನಪಾಗುತ್ತದೆ.ತುಳಸಿ ಪೂಜೆ ಅತ್ಯಾಚಾರದ ವಿರುದ್ಧದ ಸಂಕೇತವೆ?
ನನ್ನ ಪರಿಚಯದವರಲ್ಲಿ ಒಬ್ಬಳು ಮೌನ ತುಳಸಿ ಇದ್ದಾಳೆ.
ಅವಳ ಬದುಕಿನಲ್ಲಿ ರಾಕ್ಷಸ ಶಂಖಚೂಡನಿದ್ದಾನೆ. ಆದರೆ ಮಹಾವಿಷ್ಣು ಮಾತ್ರ ಇನ್ನೂ ಬಂದೇ ಇಲ್ಲ. ಬರುವ ಸೂಚನೆ ಈ ಜನ್ಮದಲ್ಲಿ ಇಲ್ಲಬಿಡಿ. ಪುರಾಣ ಕಥೆಯಲ್ಲಿ ಪ್ರಸ್ತುತ ಹುಡುಕಿ ಒಳ್ಳೆಯ ಹೂರಣ ನಮಗೆ ಕೊಟ್ಟಿದ್ದೀರಿ. ಈ ಕಥೆ ಬಹಳ ದಿನಗಳವರೆಗೆ ಕಾಡುತ್ತದೆ. ನಮ್ಮ ಪ್ರತಿಕ್ರಿಯೆಗೆ ಕೊನೆಯಲ್ಲಿ ಧನ್ಯವಾದ ನೀವು ಹೇಳುತ್ತೀರಲ್ಲ. ನಾವು ನಿಮಗೆ ಧನ್ಯವಾದ ಹೇಳಬೇಕು. ಸುಂದರ ಕಥೆ.
nandu "...... ಮೌನ ......." vada comment
tumbaa chanaagiddu kalpane prakashanna
Excellent narration giving the story an altogether a new dimension!
I always had some pain while plucking the 'bud' of tuLasi; now it will increase even more :-(
ಡಾಕ್ಟ್ರೆ...
ತುಳಸಿ ಪೂಜೆ ಅತ್ಯಾಚಾರ ವಿರುದ್ಧದ ಸಂಕೇತವಾ?
ಇರಲಿಕ್ಕಿಲ್ಲ...
ಕಥೆಯಲ್ಲಿ ನಾನು ಹಾಗೆ ಬಳಸಿಕೊಂಡೇ ಅಷ್ಟೆ..
ನಾಯಕಿ ತುಳಸಿಯ ವ್ಯಕ್ತಿತ್ವಕ್ಕೊಂದು ಘನತೆ ಬರಲಿ ಅಂತ...
ಮಡಿಕೇರಿಯ ಹಿರಿಯರು. ತುಂಬಾ ಸಂಪ್ರದಾಯಸ್ತರು..
ಈ ಕಥೆಯನ್ನು ಓದಿ ಖುಷಿ ಪಟ್ಟರು..
"ಬಹುಷಃ ತುಳಸಿಯ ವ್ಯಕ್ತಿತ್ವ ಹೀಗೆ ಇದ್ದಿರಬಹುದು ನೋಡು" ಅಂತ ಮೆಚ್ಚುಗೆಯನ್ನು ತಿಳಿಸಿದರು..
ಇದನ್ನು ಬರೆಯುವ ಮೊದಲು ಸಣ್ಣ ಆತಂಕವಿತ್ತು...
ವಿರೋಧ ಬರಬಹುದಾ ಅಂತ...
ಗೆಳೆಯ ಉಮೇಶ ದೇಸಾಯಿ.. ಇನ್ನಿತರರು ಬೆನ್ನು ತಟ್ಟಿದರು..
ಯಾವ ಆಸ್ತಿಕ ಮನಸ್ಸೂ ಕೂಡ"ಅವಹೇಳನವಾಯಿತು" ಅಂತ ವಿಚಾರ ಮಾಡಲಿಲ್ಲವಲ್ಲ..
ಅದಕ್ಕಾಗಿ ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು..
ಡಾಕ್ಟ್ರೆ ...
ಕಥೆಯನ್ನು ಓದಿ ಖುಷಿ ಪಟ್ಟು ..
ಪ್ರತಿಕ್ರಿಯೆ ಕೊಟ್ಟಿದ್ದಲ್ಲದೆ..
ಫೋನ್ ಮಾಡಿ ಚರ್ಚಿಸುತ್ತೀರಲ್ಲ... ನಿಮ್ಮ ಪ್ರೀತಿಗೆ ನನ್ನ ನಮನಗಳು...
ಸ್ನೇಹ ಹೀಗೆಯೇ ಇರಲಿ...
chalo iddu kathe prakaashanna..enjoyd reading..katheyalli iruva kelavuu msg tumba ollediddu..yavdu sari?yavdu tappu?mostly on depends time & situation sometimes..:)
chalo iddu kathe prakaashanna..enjoyd reading..katheyalli iruva kelavuu msg tumba ollediddu..yavdu sari?yavdu tappu?mostly on depends time & situation sometimes..:)
ಪ್ರೀತಿಯ ಶ್ರೀವತ್ಸ... (ಭಾವಗೊಂಚಲು..)
ಈ ಕಥೆಯನ್ನು ನನ್ನ ಗೆಳೆಯ ದಿವಾಕರನಿಗೆ ಹೇಳುತ್ತಿದ್ದೆ..
ಆತ ಹೇಳಿದ್ದು ಇನ್ನೂ ಸೋಜಿಗವೆನಿಸಿತು..
ಮೊದಲ ಅತ್ಯಾಚಾರ ಸೃಷ್ಟಿಕರ್ತ ಬ್ರಹ್ಮನಿಂದ ಆಗಿದೆ.. !
ಸರಸ್ವತಿಯನ್ನು ಮದುವೆಯಾದಾಗ...!
ಸೃಷ್ಟಿಯಲ್ಲಿ ಮೊದಲು ಕಾಮ ಇರಲಿಲ್ಲವಾಗಿತ್ತಂತೆ..
ಅತನ ಮತ್ತು ರತಿಯ ಪ್ರವೇಶವಾದಮೇಲೆ ಜಗತ್ತು ಬಹಳ ಸುಂದರವಾಯಿತಂತೆ... !
ಆಗ ಬ್ರಹ್ಮನಿಗೂ ಸರಸ್ವತಿಯ ಮೇಲೆ ವ್ಯಾಮೋಹ ಉಂಟಾಯಿತಂತೆ... !
ಕಲ್ಪನೆ ಅಂದಕೊಂಡರೂ ...
ಕಾಮವಿಲ್ಲದ ಜಗತ್ತನ್ನು ಊಹಿಸಿಕೊಳ್ಳುವದಕ್ಕೂ ಕಷ್ಟ ಅಲ್ಲವಾ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ನಮ್ಮ ನಡುವಿನ ದ್ವಂದ್ವಗಳಿಗೆ ಪದಗಳ ರೂಪ ನೀಡಿದ್ದೀರಿ...
ನಿರೂಪಣೆ ಇಷ್ಟವಾಯಿತು.
ನಾನು ಏಳನೇ ಕ್ಲಾಸಿನಲ್ಲಿದ್ದಾಗ ’ತುಳಸಿ ಜಲಂದರ’ ಎಂಬ ನಾಟಕ ಮಾಡಿದ್ದೆವು. ಅದರಲ್ಲಿ ತುಳಸಿಯ ಗಂಡನಾದ ಜಲಂದರನ ಪಾತ್ರ ಮಾಡಿದ್ದೆ. ಇಲ್ಲಿ ಅವನನ್ನು ನೀವು ಚಂದ್ರಚೂಡ ಎಂದು ಕರೆದಿದ್ದೀರಿ..ಹಾಗೆ ಅವನಿಗೆ ಮತ್ತೊಂದು ಹೆಸರಿತ್ತು ಎಂಬುದು ನನಗೆ ತಿಳಿದಿರಲಿಲ್ಲ.
ಒಳ್ಳೆಯ ಕಥೆ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಮ್ಮ ಮುಂದೆ ಕೂತು ಕತೆ ಹೇಳುತ್ತಿದ್ದಿರೆನೋ ಎಂಬಂತಹ ಭಾವ ಪ್ರತಿ ಬಾರಿಯೂ ನಿಮ್ಮ ಕತೆ ಓದುವಾಗ ಅನಿಸುವುದು. ..
" ನಮ್ಮ ಹಿತಾಸಕ್ತಿಗಳಿಗೆ ಯಾರಾದರೂ ವಿರೋಧ ಮಾಡಿದರೆ ..
ಅವರು ಕೆಟ್ಟವರಾಗುತ್ತಾರೆ...
ರಾಕ್ಷಸರಾಗುತ್ತಾರೆ.. !."
ಸತ್ಯದ ಮಾತು..ಹೇಳುವುದನ್ನು ಅದೆಷ್ಟು ಸ್ಪಷ್ಟವಾಗಿ ಹೇಳಿಬಿಡುತ್ತಿರಿ ಅಣ್ಣಯ್ಯ...
ತುಳಸಿ ಕತೆಯನ್ನು ನಾನು ಪ್ರೈಮರಿ ಇದ್ದಾಗ ಅಮ್ಮ ಹೇಳಿದ ನೆನಪು... ಅಲ್ಪ ಸ್ವಲ್ಪ ನೆನಪಿನಲ್ಲಿ ಉಳಿದಿದ್ದ ಕತೆಯನ್ನು ಪೂರ್ತಿಯಾಗಿ ಹೇಳಿದಿರಿ.
ಜೊತೆಗೆ ಹೆಣ್ಣಿನ ಮೌನಕ್ಕೆ ಇರುಬಹುದಾದ ವಿವಿದ ಆಯಾಮಗಳನ್ನು ಕೂಡ ತೋರಿಸಿದಿರಿ...ಚಂದದ ಕತೆ ಪ್ರಕಾಶಣ್ಣ..
ಸುದೀಪ.....
ನಾವು ಸಣ್ಣವರಿದ್ದಾಗ ಹಳ್ಳಿಯಲ್ಲಿ ತುಳಸಿ ಮದುವೆ ಹಬ್ಬವನ್ನು ಜೋರಾಗಿ ಮಾಡುತ್ತಿದ್ದರು..
ಸಾಯಂಕಾಲ...
ತುಳಸಿ ಕಟ್ಟೆಗೆ ಮಂಟಪ ಕಟ್ಟಿ.. ಹಣತೆಗಳನ್ನು ಹಚ್ಚಿ..
ಉಳಿದ ಪಟಾಕಿಗಳನ್ನು ಹೊತ್ತಿಸಿ..
ಜಾಗಟೆ, ಶಂಖ ಊದಿಸಿ ಸಂಭ್ರಮ ಪಡುತ್ತಿದ್ದೆವು..
ತುಳಸಿ ಮದುವೆ ನಂತರ ಮನೆಯಲ್ಲಿದ್ದ ಮದುವೆಗೆ ಬಂದ ಹೆಣ್ಣುಮಕ್ಕಳಿಗೆ ಸಂಬಂಧವನ್ನು ಹುಡುಕಲಿಕ್ಕೆ ಶುರು ಮಾಡುತ್ತಿದ್ದರು..
ಕೃಷ್ಣನಿಗೆ ಎಷ್ಟೆಲ್ಲಾ ಸಂಬಂಧಗಳು !
ವಿಷ್ಣು - ಲಕ್ಷ್ಮೀ ಮದುವೆಗೆ ಈ ಔಪಚಾರಿಕತೆ ಯಾಕೆ ಇಟ್ಟಿಲ್ಲ...?
ಕೃಷ್ಣ- ರುಕ್ಮಿಣಿ, ರಾಧೆ ಕೃಷ್ಣರ ಸಂಬಂಧಕ್ಕೆ ಯಾವ ಆಚರಣೆಯೂ ಇಲ್ಲ..
ಪ್ರಶ್ನೆ ಇದೆಯೆಂದಮೇಲೆ ಉತ್ತರವೂ ಇದ್ದಿರಬಹುದು..
ತುಳಸಿ - ಕೃಷ್ಣರ ಸಂಬಂಧ ಪವಿತ್ರವಾದದ್ದು ಅಂತ ಹೇಳಲಿಕ್ಕೆ ಈ ಆಚರಣೆಯೆ,,..?
ಸುಮತಿ...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಪ್ರೀತಿಯಿಂದ
ಪ್ರಕಾಶಣ್ಣ...
ಬದರಿ ಭಾಯ್...
ಬಹಳ ಚಂದದ ವಿಮರ್ಶೆ...
ಮೌನವೆಂದರೆ ದೌರ್ಬಲ್ಯವಲ್ಲ.... ಅದೊಂದು ಸಾಧನೆ... ಅದೊಂದು ತಪಸ್ಸು..
ಎಲ್ಲರಿಂದಲೂ ಅದು ಸಾಧ್ಯವಿಲ್ಲ...
ಮೌನಕ್ಕೆ ವಿಶೇಷ ಶಕ್ತಿಬೇಕು...
ತುಳಸಿಯೆಂದರೆ "ತುಲನೆ ಇಲ್ಲದ ಸಸಿ..."
ಅದೊಂದು ಒಷಧಿಗಳ ಭಂಡಾರ.. ಅದರಲ್ಲಿ ಎಷ್ಟೆಲ್ಲ ಔಷಧಿಗಳಿವೆ !!
ಈ ಮೌನ ಶಕ್ತಿಗೂ..
ಆ ಸಸ್ಯದ ಔಷಧ ಗುಣಕ್ಕೂ ಎಷ್ಟೆಲ್ಲ ಸಾಮ್ಯತೆಯಿದೆ ಅಲ್ಲವಾ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು....
ಉತ್ತಮವಾದ ಬರಹ ಪ್ರಕಾಶ್ ಜಿ
ಮುಕ್ತವಾಗಿ ಬರೆದ ಮೇಲೆ .. ಆಸ್ತಿಕ ಮನಗಳ ಕ್ಷಮೆ ಕೇಳುವ ಪ್ರಮೇಯವಿರಲಿಲ್ಲ :D :D
Thumba chennagi bandide Anna.
Hudigiyaranna vastu tara nododu, "she is treated as she alive only to satisfy men needs". Even educateds anniskondoru hagene treat madtare :-(
ತುಂಬಾ ದಿನಗಳ ನಂತರ ಸ್ವಲ್ಪ ಸಮಯ ತೆಗೆದು ಬ್ಲಾಗ್ ಲೋಕಕ್ಕೆ ಬಂದೆ.
ಅದೆಷ್ಟೋ ತಿಂಗಳುಗಳಿಂದ ಓದದ ಬರಹಗಳು , ನೋಡದ ಬ್ಲಾಗುಗಳು ರಾಶಿಯಾಗಿವೆ.
ಕಥೆ ಇಷ್ಟವಾಯಿತು .. ಅನಾದಿ ಕಾಲದಿಂದಲೂ ಹೆಣ್ಣನ್ನು " ಬಳಕೆಯ ವಸ್ತು" ವಿನಂತೆಯೇ ನೋಡಲಾಗಿದೆಯಾ ಎಂಬ ಅನುಮಾನ ಅದೆಷ್ಟೋ ಸಲ ಮನದಲ್ಲಿ ಹರಿದಾಡಿದ್ದಿದೆ !
ಇವತ್ತು ಈ ಕಥೆ ಓದಿದಾಗಲೂ ಅದೇ ಭಾವ ಮತ್ತೊಮ್ಮೆ ! ಹೊಗಳಿ, ಅಟ್ಟಕ್ಕೇರಿಸಿ, ರಮಿಸಿ,ಪ್ರೇಮಿಸಿ, ಬೆದರಿಸಿ .. ಒಟ್ಟಿನಲ್ಲಿ ಒಂದಲ್ಲಾ ಒಂದು ರೀತಿಯಿಂದ ಆಕೆಯನ್ನು ಬಳಕೆ ಮಾಡಿಕೊಂಡಿದ್ದೇ ಹೆಚ್ಚಾ? ಅವಳ ಭಾವನೆಗಳಿಗೆ, ಅನಿಸಿಕೆಗಳಿಗೆ ಬೆಲೆಯೇ ಇಲ್ಲವಾ?
ಮೊನ್ನೆ ವಿಷಕನ್ಯೆಯರ ಬಗ್ಗೆ ಮಗಳಿಗೆ ಹೇಳಿದಾಗ , ಅವಳು ನೇರವಾಗಿ ಕೇಳಿದ್ದೂ ಅದೇ ಪ್ರಶ್ನೆ " ಅಮ್ಮಾ, ಮೊದಲಿಂದಲೂ ಹೆಣ್ಣು ಎಂದರೆ ಒಂದು commodity ಆಗಿಯೇ ನೋಡ್ತಾ ಇದಾರಲ್ವೇನಮ್ಮ ? No one cares for what she wants " ಅಂತ !
kalpaneyallu vaasthavaikateyannu bimbisiruva shaili tumbaa ishtavaaitu prakaash sir.dhanyavaadagalu.
ಓಹ್ !!! ಅಧ್ಭುತವಾಗಿದೆ ...,!! ಎಂತಹ ಕಲ್ಪನೆ ..!!
ಮೌನದ ವಿವಿಧ ಅರ್ಥಗಳನ್ನು ಚಿತ್ರಿಸಿರುವುದು ತುಂಬಾ ಚೆನ್ನಾಗಿದೆ ಪ್ರಕಾಶಣ್ಣ...
ಹೆಣ್ಣು(ಪ್ರಕೃತಿ) ತನ್ನ ಮೇಲೆ ಅತ್ಯಾಚಾರವಾಗುತ್ತ್ತಿದ್ದರೂ ಮೌನವಾಗಿಯೇ ಸಹಿಸಬೇಕೆಂದೇ ಬಯಸುವುದು ಸಮಂಜಸವೇ? ಮೌನವಾಗಿದ್ದಷ್ಟೂ ಆ ಮೌನವನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥೈಸಿಕೊಳ್ಳುವವರೇ ಜಾಸ್ತಿ.. ಅದನ್ನು ಪ್ರತಿಭಟಿಸಿದರೆ ಗಂಡುಬೀರಿ, ವಾಚಾಳಿ, ಜಗಳಗಂಟಿ ಅನ್ನೋ ಬಿರುದು ಕೊನೆಗೆ ಅವಳ ಚಾರಿತ್ರ್ಯವಧೆ... ಹೆಣ್ಣು ಗಂಡಿಗೆ ಸಮಾನಳು ಅಂತ ಯಾವತ್ತೂ ಒಪ್ಪಿಕೊಳ್ಳೋಕೆ ಆಗೊಲ್ವ??
ಅನುಪಮಾ ನಿರಂಜನರವರ 'ಮಾಧವಿ' ಕಾದಂಬರಿ ಓದಿದ್ದಾಗ ಒಂದಷ್ಟು ದಿನ ಈ ಸಮಾಜದ ಬಗ್ಗೆ ಎಷ್ಟು ತಿರಸ್ಕಾರ ಮೂಡಿತ್ತು ಗೊತ್ತಾ... ಹೆಣ್ಣಾಗಿ ಹುಟ್ಟೋದೆ ತಪ್ಪಾ? ಈ ಸಮಾಜ ಹೀಗೆ ಇರೋದು ಅಂತ ಒಪ್ಪಿಕೊಂಡು ಬದುಕಬೇಕಾದ್ದು ಹೆಣ್ಣಿಗೆ ಅನಿವಾರ್ಯಾನಾ ಅಂತೆಲ್ಲ ತುಂಬಾ ಯೋಚಿಸಿದ್ದೆ... ಉತ್ತರ ಸಿಗದೆ ಕೊನೆಗೆ ಯೋಚ್ನೆ postpone ಮಾಡಿದ್ದವಳನ್ನು ನಿಮ್ಮ ಈ ಲೇಖನ ಮತ್ತೆ ಯೋಚ್ನೆ ಶುರು ಮಾಡೋ ಹಾಗೆ ಮಾಡಿದೆ...
ಮೌನದ ವಿವಿಧ ಅರ್ಥಗಳನ್ನು ಚಿತ್ರಿಸಿರುವುದು ತುಂಬಾ ಚೆನ್ನಾಗಿದೆ ಪ್ರಕಾಶಣ್ಣ...
ಹೆಣ್ಣು(ಪ್ರಕೃತಿ) ತನ್ನ ಮೇಲೆ ಅತ್ಯಾಚಾರವಾಗುತ್ತ್ತಿದ್ದರೂ ಮೌನವಾಗಿಯೇ ಸಹಿಸಬೇಕೆಂದೇ ಬಯಸುವುದು ಸಮಂಜಸವೇ? ಮೌನವಾಗಿದ್ದಷ್ಟೂ ಆ ಮೌನವನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥೈಸಿಕೊಳ್ಳುವವರೇ ಜಾಸ್ತಿ.. ಅದನ್ನು ಪ್ರತಿಭಟಿಸಿದರೆ ಗಂಡುಬೀರಿ, ವಾಚಾಳಿ, ಜಗಳಗಂಟಿ ಅನ್ನೋ ಬಿರುದು ಕೊನೆಗೆ ಅವಳ ಚಾರಿತ್ರ್ಯವಧೆ... ಹೆಣ್ಣು ಗಂಡಿಗೆ ಸಮಾನಳು ಅಂತ ಯಾವತ್ತೂ ಒಪ್ಪಿಕೊಳ್ಳೋಕೆ ಆಗೊಲ್ವ??
ಅನುಪಮಾ ನಿರಂಜನರವರ 'ಮಾಧವಿ' ಕಾದಂಬರಿ ಓದಿದ್ದಾಗ ಒಂದಷ್ಟು ದಿನ ಈ ಸಮಾಜದ ಬಗ್ಗೆ ಎಷ್ಟು ತಿರಸ್ಕಾರ ಮೂಡಿತ್ತು ಗೊತ್ತಾ... ಹೆಣ್ಣಾಗಿ ಹುಟ್ಟೋದೆ ತಪ್ಪಾ? ಈ ಸಮಾಜ ಹೀಗೆ ಇರೋದು ಅಂತ ಒಪ್ಪಿಕೊಂಡು ಬದುಕಬೇಕಾದ್ದು ಹೆಣ್ಣಿಗೆ ಅನಿವಾರ್ಯಾನಾ ಅಂತೆಲ್ಲ ತುಂಬಾ ಯೋಚಿಸಿದ್ದೆ... ಉತ್ತರ ಸಿಗದೆ ಕೊನೆಗೆ ಯೋಚ್ನೆ postpone ಮಾಡಿದ್ದವಳನ್ನು ನಿಮ್ಮ ಈ ಲೇಖನ ಮತ್ತೆ ಯೋಚ್ನೆ ಶುರು ಮಾಡೋ ಹಾಗೆ ಮಾಡಿದೆ...
mounakke jagathinalli yavudu sarisatiyilla prakashanna, jagathu ondukade odutttidare mouniya manassu ondukade oduttade adakke adaradde ada dariyide adu bereyavarige tiliyuvudilla sariye prakashanna.
Dukkavu hudayada antharaladinda horabarabekendare adakke mouna muriyabeku, mouna muriyade hodare novu alliye uliyuthade.
ಸುಂದರ ನಿರೂಪಣೆ..
ಅಲ್ಲೊಬ್ಬ ಮಾಧವಿ..ಅಲ್ಲೊಬ್ಬ ಅಂಬೆ-ಅಂಬಾಲಿಕೆ..ದ್ರೌಪದಿ..ಅಲ್ಲೊಬ್ಬ ಮಂಡೋದರಿ..ಸೀತೆ..ಇಲ್ಲೊಬ್ಬ ತುಳಸಿ..ಪುರಾಣಗಳು ಅರಿಯದಾಯಿತೆ ಹೆಣ್ಣೆಂದರೆ ಪ್ರಕೃತಿಯ ಗುರುತು..ಬುದ್ದಿಮಾತುಗಳು ಕೇವಲ ಹೆಣ್ಣು ಜನಾಂಗಕ್ಕಷ್ಟೇ ಸೀಮಿತವಾಯಿತೆ?/ಯಾವ ದೇಶದ ಮಹಾಪುರಾಣದಲ್ಲೂ ಹೀಗೇ..ಬಲಶಾಲಿ ಹೆಣ್ಣಿನ ಮಾನಸಲೋಕಕ್ಕೆ ಗಂಡಿನ ಅಹಂಕಾರ ಧಾಳಿ ಇಡು ತ್ತದೆ...ನೋವು ಕೊಡುತ್ತದೆ..ಇದು ನಿಲ್ಲದ ತನಕ..ಮಾನವನಲ್ಲಿರೋ ದಾನವತೆ ಉಕ್ಕುತ್ತ್ತಲೇ ಇರುತ್ತದೆ..ಹೆಣ್ಣು ಹಾಕಿದ ಕಣ್ಣೀರಲ್ಲಿ ಸಪ್ತಸಾಗರಗಳು ಉಪ್ಪಾಗುತ್ತಲೇ ಇರುತ್ತವೆ..
https://www.youtube.com/watch?v=QzSoXramlJo
ತುಳಸಿ
ಮೌನ ಸಾವಿರ ಅರ್ಥ ಕೊಡುತ್ತೆ,ಮಾತು ಒಂದೇ ಅರ್ಥ ಕೊಡುತ್ತೆ.
ಪ್ರಕೃತಿ,ಮಾನವನ ಎಷ್ಟೋ ಅತ್ಯಾಚಾರಗಳನ್ನ ಸಹಿಸಿಕೊಳ್ಳುತ್ತಾ ಬಂದಿದೆ.
ಅವಳು ರೌದ್ರವತಾರ ತಾಳುವ ದಿನಗಳು ಹತ್ತಿರ ಬರ್ತಿದೆ. ನಾವೆಲ್ಲರೂ ನಮ್ಮ ಸ್ವಾರ್ಥಕಾಗಿ ಬಲಿ ಕೊಡ್ತಾ ಬಂದಿದೀವಿ.
ಇನ್ಮೇಲಾದ್ರೂ ನಾವು ಅವಳ ಬಗ್ಗೆ ಕಾಳಿಜೀ ವಹಿಸಿದ್ರೆ,ನಮ್ಮ ಉಳಿವು ಸಾದ್ಯ.ಇಲ್ಲದಿದ್ರೆ ನಮ್ಮ ನಾಶ ಖಚಿತ.
ತುಂಬಾ ಸೊಗಸಾಗಿ ಬರೆದಿದ್ದಿರಿ.
ಮೌನ ಸಾವಿರ ಅರ್ಥ ಕೊಡುತ್ತೆ,ಮಾತು ಒಂದೇ ಅರ್ಥ ಕೊಡುತ್ತೆ.
ಪ್ರಕೃತಿ,ಮಾನವನ ಎಷ್ಟೋ ಅತ್ಯಾಚಾರಗಳನ್ನ ಸಹಿಸಿಕೊಳ್ಳುತ್ತಾ ಬಂದಿದೆ.
ಅವಳು ರೌದ್ರವತಾರ ತಾಳುವ ದಿನಗಳು ಹತ್ತಿರ ಬರ್ತಿದೆ. ನಾವೆಲ್ಲರೂ ನಮ್ಮ ಸ್ವಾರ್ಥಕಾಗಿ ಬಲಿ ಕೊಡ್ತಾ ಬಂದಿದೀವಿ.
ಇನ್ಮೇಲಾದ್ರೂ ನಾವು ಅವಳ ಬಗ್ಗೆ ಕಾಳಿಜೀ ವಹಿಸಿದ್ರೆ,ನಮ್ಮ ಉಳಿವು ಸಾದ್ಯ.ಇಲ್ಲದಿದ್ರೆ ನಮ್ಮ ನಾಶ ಖಚಿತ.
ತುಂಬಾ ಸೊಗಸಾಗಿ ಬರೆದಿದ್ದಿರಿ.
Post a Comment