ಆಗ ತಾನೇ ಹೊಸ ಮನೆ ಕಟ್ಟುವ ಕೆಲಸ ಶುರುಮಾಡಿದ್ದೆ....
ಬಿಸಿಲು ಜೋರಾಗಿತ್ತು...
ಸ್ವಲ್ಪ ದೂರದಲ್ಲಿ ಒಂದು ಬೇಕರಿ ಇತ್ತು... ಏನಾದರೂ ಕುಡಿದು ಬರೋಣ ಅಂತ ಹೊರಟೆ...
ಅಲ್ಲಿ ಒಂದು ತಿರುವು...
ಒಬ್ಬಳು ಭಿಕ್ಷೆ ಬೇಡುವ ಮುದುಕಿ ಕುಳಿತಿದ್ದಳು...
ನಾನು ಫೋನಿನಲ್ಲಿ ಮಾತನಾಡುತ್ತ ಮುಂದೆ ಹೋಗುತ್ತಿದ್ದೆ...
"ಲೇ... ಬಾರೋ ಇಲ್ಲಿ....."
ಆಶ್ಚರ್ಯವಾಯಿತು...
ಆ ಮುದುಕಿ ನನಗೆ ಜೋರಾಗಿ ಆವಾಜು ಹಾಕಿದ್ದಳು..
ಹತ್ತಿರ ಹೋದೆ..
"ಬೆಳಗಿನಿಂದ ಏನೂ ತಿಂದಿಲ್ಲ... ಕಾಸು ಕೊಡು...."
ಧ್ವನಿಯಲ್ಲಿ ಅಧಿಕಾರದ ದರ್ಪು ಇತ್ತು...
ಹಣ್ಣು ಹಣ್ಣು ಮುದುಕಿ...
ಹರಿದ ಸೀರೆ... ಮಣ್ಣು ಮಣ್ಣಾದ ಕುಪ್ಪುಸ...
ಹಸಿವೆಯ ನಿಸ್ತೇಜ ಕಣ್ಣುಗಳು..
ಕಿಸೆಗೆ ಕೈ ಹಾಕಿ ಐದು ರೂಪಾಯಿ ಕೊಟ್ಟೆ...
"ಐದು ರೂಪಾಯಿಗೆ ಏನೂ ಬರೋದಿಲ್ಲ ...
ಇನ್ನೂ ಐದು ಕೊಡು..."
ನಾನು ಹತ್ತು ರೂಪಾಯಿ ಕೊಟ್ಟೆ...
"ನೀನು ಮುದುಕನಾದಾಗ ...
ನಿನ್ನನ್ನು ...
ನೋಡಿಕೊಳ್ಳುವವರು ಪ್ರೀತಿಯಿಂದ ನೋಡಿಕೊಳ್ಳಲಪ್ಪಾ..."
ನಾನು ಮಾತನಾಡದೆ ಸುಮ್ಮನೆ ಬಂದೆ....
ಮರುದಿನವೂ ಆ ಮುದುಕಿ ನನ್ನನ್ನು ಕರೆದು ಕಾಸು ಹಾಕಿಸಿಕೊಂಡಳು...
ಮೇಸ್ತ್ರಿ ಕೇಳಿದ...
"ಅಣ್ಣಾ...
ಆ ಮುದುಕಿಗೆ ತುಂಬಾ ಸೊಕ್ಕು ಆಲ್ವಾ?
ಧಿಮಾಕಿನ ಮಾತನಾಡುತ್ತಾಳೆ .."
"ನಿನ್ನ ಬಳಿಯೂ ಹಣ ತೆಗೆದು ಕೊಂಡ್ಳಾ?...?"
"ಇಲ್ಲ ಅಣ್ಣಾ...
ತುಂಬಾ ವಿಚಿತ್ರ
ಅವಳಿಗೆ ಅವಶ್ಯಕತೆ ಇದ್ದಾಗ ಮಾತ್ರ ಕೇಳುತ್ತಾಳೆ...
ಭಿಕ್ಷೆಯನ್ನು ...
ಇಷ್ಟು ಧಿಮಾಕಿನಿಂದ ಬೇಡುವದನ್ನು ಮೊದಲಬಾರಿಗೆ ನೋಡ್ತಾ ಇದ್ದೇನೆ ಅಣ್ಣಾ..."
ನಾನೂ ತಲೆ ಹಾಕಿದೆ...
ಮರುದಿನ ಮೇಸ್ತ್ರಿ ಇನ್ನೊಂದು ವಿಷಯ ತಂದ...
"ಅಣ್ಣಾ..
ಆ ಮುದುಕಿಗೆ ಇಬ್ಬರು ಗಂಡು ಮಕ್ಕಳಂತೆ...
ಸೊಸೆಯರೊಡನೆ ಹೊಂದಿಕೊಳ್ಳಲು ಆಗಲಿಲ್ಲವಂತೆ...
ನಿತ್ಯ ಜಗಳ...
ಮಕ್ಕಳು ಮುದುಕಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರಂತೆ..."
"ಈ ವಿಷಯ ಯಾರು ಹೇಳಿದ್ದು...?"
"ಬೇಕರಿಯವನು...
ಆ ಮಕ್ಕಳು ಇಲ್ಲೇ ಹತ್ತಿರದಲ್ಲಿ ಇರ್ತಾರಂತೆ...."
"ರಾತ್ರಿ ಎಲ್ಲಿ ಮಲಗುತ್ತಾಳೆ...?"
"ಅಲ್ಲೇ ರಸ್ತೆ ಬದಿಯಲ್ಲಿ ಮಲಗುತ್ತಾಳೆ...
ಮನೆಯಲ್ಲಿ ಹಳೆ ಹಾಸಿಗೆ ಇತ್ತು... ಕೊಟ್ಟು ಬಂದಿದ್ದೇನೆ..."
ಮನಸ್ಸು ಭಾರವಾಯಿತು...
ಯಾರು ಸರಿ...?
ಯಾರು ತಪ್ಪು ..?
ನಮ್ಮ ಮನೆಯ ಹತ್ತಿರ ಒಂದು ವೃದ್ಧಾಶ್ರಮವಿದೆ...
ಅಲ್ಲಿ ಸೇರಿಸಿದರೆ ಹೇಗೆ....?
ನಮ್ಮ ವಾಚಮೆನ್ ಷೆಡ್ಡಿನಲ್ಲೇ ಇರಬಹುದಲ್ಲಾ..
ಮೇಸ್ತ್ರಿಯ ಬಳಿ ಹೇಳಿದೆ...
ಮೇಸ್ತ್ರಿ ಹೋಗಿ ಮುದುಕಿಯ ಬಳಿ ಮಾತನಾಡಿ ಬಂದ...
"ಅಣ್ಣಾ...
ಆ ಮುದುಕಿಗೆ ತುಂಬಾ ಸೊಕ್ಕು...
ಅವಳು ಎಲ್ಲಿಯೂ ಹೋಗಲ್ಲಂತೆ..."
"ಹೋಗಲಿ ಬಿಡು ...
ಇದಕ್ಕಿಂತ ಜಾಸ್ತಿ ನಾವೂ ಸಹ ಏನೂ ಮಾಡುವಂತಿಲ್ಲ..."
ಆದರೆ ..
ದಿನಾಲು ನಾನು ಆ ಕಡೆ ಹೋದಾಗ ನನ್ನ ಕರೆದು ಕಾಸು ಹಾಕಿಸಿಕೊಳ್ಳುತ್ತಿದ್ದಳು...
ನಾನು ಬರದ ದಿವಸ ಮೇಸ್ತ್ರಿಯ ಬಳಿ ಕಾಸು ಹಾಕಿಸಿಕೊಳ್ಳುತ್ತಿದ್ದಳಂತೆ...
"ನಾಳೆ ನಿನ್ನ ಇಂಜನಿಯರ್ ಬರ್ತಾನಲ್ಲ...
ಅವನ ಬಳಿ ಈ ಹಣ ತೆಗೆದುಕೋ"
ಅಂತ ಆಜ್ಞೆ ಮಾಡುತ್ತಿದ್ದಳಂತೆ....
ದಿನ ಕಳೆದಂತೆ ...
ಮುದುಕಿಯೊಡನೆ ಸಲುಗೆ ಜಾಸ್ತಿಯಾಯಿತು....
ಕಾಸು ಕೊಟ್ಟು ಏನಾದರೂ ಮಾತನಾಡಿಸಿ ಬರ್ತಿದ್ದೆ....
ಕೆಲವೊಮ್ಮೆ ಕಾಸು ತೆಗೆದುಕೊಳ್ಳುತ್ತಿದ್ದಳು...
ಕೆಲವೊಮ್ಮೆ ಬೇಡ ಎನ್ನುತ್ತಿದ್ದಳು....
ಅವಳು ಅಧಿಕಾರಯುತವಾಗಿ ಮಾತನಾಡುವ ರೀತಿ... ನನಗೆ ಇಷ್ಟವಾಗುತ್ತಿತ್ತು....
ದಿನಾಲೂ ...
ಏನಾದರೂ ತನ್ನ ಬದುಕಿನ ಅನುಭವ ...
ಏನಾದರೂ ಘಟನೆ ಹೇಳಿಕೊಳ್ಳುತ್ತಿದ್ದಳು..
ಅವಳದ್ದೊಂದು ಸಣ್ಣ ತರಕಾರಿ ಅಂಗಡಿ ಇತ್ತಂತೆ....
ಅದರಲ್ಲಿ ಸಂಸಾರ ತೂಗಿಸಿ...
ಮಕ್ಕಳನ್ನು ಓದಿಸಿದ್ದಳಂತೆ.....
ಆದರೆ ಎಂದೂ ತನ್ನ ಕಷ್ಟಗಳನ್ನು ಹೇಳುತ್ತಿರಲಿಲ್ಲ....
ಮಕ್ಕಳನ್ನು..
ಸೊಸೆಯಿಂದಿರನ್ನು ಬಯ್ಯುತ್ತಿರಲಿಲ್ಲ...
ಒಂದು ದಿನ ಕುತೂಹಲದಿಂದ ಕೇಳಿದೆ...
"ನೋಡಜ್ಜಿ...
ನಿನ್ನ
ಮನೆ .... ಮಕ್ಕಳು... ಮೊಮ್ಮಕ್ಕಳು...
ಕುಟುಂಬ..
ಯಾರೂ ನಿನ್ನ ಹತ್ತಿರ ಇಲ್ಲ... !
ನಿನಗೆ ಒಂದು ತುತ್ತು ಅನ್ನ ಹಾಕುವವರು ಇಲ್ಲ...!
ಸಾಯ್ತಾ ಇದ್ದೀನಿ ಅಂದರೆ ..
ಬಾಯಿಗೆ ನೀರೂ ಹಾಕುವವರಿಲ್ಲ...
ಯಾವ ಪ್ರೀತಿಯೂ ಸಿಗದ ..
ಈ ವಯಸ್ಸಿನಲ್ಲಿ ..
ಸಾಯಬೇಕು ಅಂತ ಅನ್ನಿಸೋದಿಲ್ವಾ ?..
ಆತ್ಮ ಹತ್ಯೆಯ ವಿಚಾರ ಬರ್ತಾ ಇಲ್ವಾ ?."
ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟಿದ್ದೆ...
ಮುದುಕಿ ಸ್ವಲ್ಪ ಹೊತ್ತು ಸುಮ್ಮನಾದಳು....
"ಈ ಹುಟ್ಟು ನಂದಾ?..."
"ಅಲ್ಲ..."
"ನನಗೆ ಬೇಕು ಅಂತ ಹುಟ್ಟಿ ಬಂದ್ನಾ? "
"ಇಲ್ಲ"
"ಈ ಬದುಕು ನಾನು ಬಯಸಿದ್ದಾ?..."
"ಅಲ್ಲ ... "
" ನಾನು ಬೆಳೆಸಿದ ಮಕ್ಕಳಿಂದ ..
"ಛೀ... ಥೂ..." ಅನ್ನಿಸಿಕೊಂಡು ...
ಮನೆಯಿಂದ ಹೊರಗೆ ಹಾಕಿಸಿಕೊಂಡೆನಲ್ಲಾ...
ಇದು ನಾನು ಬಯಸಿದ್ದಾ?..."
"ಇಲ್ಲಮ್ಮ..."
'ಈ ....
ಹುಟ್ಟು ನಂದಲ್ಲ ..
ಈ ಬದುಕೂ ನಂದಲ್ಲ....
ಸಾವು ಕೂಡ ನನ್ನದಾಗಿರಲಿಕ್ಕೆ ಸಾಧ್ಯವಿಲ್ಲ....
ಆ ಸಾವು ಕೂಡ "ಅವನೇ" ಕೊಡಲಿ....
ನನ್ನ ಹತ್ಯೆಯನ್ನು ನಾನು ಮಾಡಿಕೊಳ್ಳೋದಿಲ್ಲ....!
ಎಷ್ಟು ನರಳುತ್ತಾ ಸಾಯ್ತೆನೋ ಸಾಯಲಿ..... !
ಹಾಗೇ ಸಾಯ್ತೇನೆ...
ಎಷ್ಟು ನೋವು ಬೇಕಾದರೂ ಬರಲಿ....
ನನ್ನ ಮಕ್ಕಳು ಕೊಟ್ಟ ನೋವಿನಷ್ಟು ..
ಆ ನೋವು ..
ಇರೋದಿಲ್ಲ ಬಿಡು...."
ನನಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ...
ಮುದುಕಿಯ ಮುಖ ನೋಡಬೇಕು ಅಂತ ಅಂದುಕೊಂಡೆ....
ಧೈರ್ಯ ಸಾಲಲಿಲ್ಲ...
ಮನಸ್ಸು ಭಾರವಾಯಿತು.....
ಕೆಲವು ವರ್ಷಗಳ ಹಿಂದೆ....
ಒಬ್ಬ ಮಹನಿಯ....
ನನ್ನ ಬಳಿ ಮನೆ ಕಟ್ಟಿಸಿಕೊಂಡು ಕಾಸುಕೊಡದೆ ...
ಮೋಸ ಮಾಡಿದಾಗ ..
ಸಾಯುವ ಮನಸ್ಸು ಮಾಡಿದ್ದೆ....
ಆಗ..
ನನ್ನ ಓದು...
ತಿಳುವಳಿಕೆ ನನಗೆ ಧೈರ್ಯ ಕೊಡಲಿಲ್ಲ....
ಮಕ್ಕಳ ಮೇಲಿನ ಛಲವೋ...
ಹಠವೋ ...
ಕಷ್ಟ.. ನೋವು ಇದ್ದರೂ ...
ಸಾಯಲು ಬಯಸದ ಮುದುಕಿಯ ಮೇಲೆ ಗೌರವ ಮೂಡಿತು...
ಹುಟ್ಟು.... ಸಾವಿನ ನಡುವಿನ...
ಬದುಕಿನ..
ನೋವು... ನಲಿವು....
ಸುಖ.. ಸಂತೋಷ..
ಎಲ್ಲವನ್ನೂ ಅನುಭವಿಸುತ್ತೇವೆ....
ಸಾವನ್ನು ಕೂಡ ಅನುಭವಿಸಿಯೇ ಸಾಯಬೇಕು.......
ಆದರೂ...
ಆ ..
ಅಸಹಾಯಕ..ಅಸಹನೀಯ ...
ವೃದ್ಯಾಪ್ಯದ
ದೀನ ಬದುಕು ನಮ್ಮ ವೈರಿಗೂ ಬಾರದೆ ಇರಲಿ ಆಲ್ವಾ?....
28 comments:
ಎಂದಿನಂತೆ ಬರಹ ಸೂಪರ್...
ಮನಸ್ಸಿಗೆ ತಟ್ಟಿತು..
ಕೆಲವೊಮ್ಮೆ ಅನಿಸ್ತದೆ,
ಎಷ್ಟೆಲ್ಲಾ ಒದ್ತೇವೆ, ತಿಳ್ಕೊತೇವೆ... ಆದ್ರೆ ಸಮಸ್ಯೆ ಬಂದಾಗ, ಸ್ವಲ್ಪವೇ ನೊವಾದರೂ ಸಾಕು,
ಸತ್ತು ಬದುಕುತ್ತೇವೆ...
ಎನೂ ಓದಿರದ, ವ್ಯಕ್ತಿತ್ವ ವಿಕಸನ ಶಿಭಿರಗಳನ್ನು ಅಟ್ಟೆಂಡ್ ಮಾಡಿರದ ಅಶಿಕ್ಷಿತರೆನಿಸಿಕೊಳ್ಳುವವರೇ ಎಂತ ಸಂದರ್ಭ ಬಂದರೂ ಎದೆಗುಂದದೇ ಅರಾಮಾಗಿ ಬದ್ಕ್ತಾರೆ...
ಇದಕ್ಕೆಲ್ಲಾ ಜ್ನಾನದ ಅಹಂಕಾರವೇ ಕಾರಣವೇ?
ಯಾಕೆ ನಾವು ತುಂಬಾ ಸೂಕ್ಷ್ಮರಾಗಿಬಿಟ್ಟಿದ್ದೇವೆ....?
ಸುದರ್ಶನ್ ....
ನನ್ನ ಕಂಪ್ಯೂಟರ್ ರೆಪೇರಿಯಲ್ಲಿದೆ
ಬ್ಲಾಗ್ ಓದುವಾಗ ಕಲರ್ ಸ್ವಲ್ಪ ಕಿರಿ ಕಿರಿ ಅನ್ನಿಸಿರ ಬಹುದು... ಕ್ಷಮೆ ಇರಲಿ....
ಓದಿರದ ಮುಗ್ಧ ಮನಸ್ಸುಗಳ ಬದುಕಿನ ಆಸಕ್ತಿ...
ಬದುಕುವ ಛಲ ಆಶ್ಚರ್ಯ ತರುವಂಥಾದ್ದು....
ಅವರಿಗೆ ಬದುಕು ಪಾಠ ಕಲಿಸಿರುತ್ತದೆ...
ನಾವು ಓದಿದವರು ಸಣ್ಣ ಸಮಸ್ಯೆ ಬಂದರೂ ಆಕಾಶ ತಲೆಯ ಮೇಲೆ ಬಿದ್ದಂತೆ ಮಾಡಿಬಿಡುತ್ತೇವೆ....
ಈ ಮುದುಕಿಯ ಛಲ ನಿಜಕ್ಕೂ ಆಶ್ಚರ್ಯ ತರಿಸಿತು.....
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....
ನಿನ್ನ ಮೆಸೇಜ್ ನೋಡಿ ಒಮ್ಮೆ ಕಣ್ಣಾಡಿಸಿದ್ದೆ,
ಹೌದಲ್ವಾ ? ಎಷ್ಟು ಸ್ವಾಭಿಮಾನ ಹಿರಿಯರದ್ದು, ಹಂಗಿನ ಜೀವನ ಅಂದ್ರೆ, ಅದಕ್ಕಿಂತಾ, ಸಾವೇ ಉತ್ತಮ ಎನ್ನುವ ನಿಲುವು. ಸೂಪರ್.
ಅಜಾದೂ....
ಹುಟ್ಟು ನಮ್ಮದಲ್ಲ...
ಬದುಕುವ ಬದುಕೂ ನಮ್ಮದಲ್ಲ....
ಇಲ್ಲಿನ ಘಟನೆಗಳೂ ನಮ್ಮ ನಿಯಂತ್ರಣದಲ್ಲಿಲ್ಲ...
ಅಂದ ಮೇಲೆ ಸಾವು ಕೂಡ ನಮ್ಮದಾಗಿರಲಿಕ್ಕೆ ಸಾಧ್ಯವಿಲ್ಲ.... !
ಎಷ್ಟು ಸಿಂಪಲ್ ಥಾಟ್ !!
ಆ ಮುದುಕಿಗೆ ಮಕ್ಕಳ ಮೇಲಿನ ಹಠವಿರ ಬಹುದು... ಚಲವಿರ ಬಹುದು..
ಆದರೂ..
ಎಷ್ಟೇ ನೋವಾದರೂ...
ಕಷ್ಟವಾದರೂ... ಆತ್ಮ ಹತ್ಯೆ ಕೆಲಸಕ್ಕೆ ಕೈ ಹಾಕುವ ಮನಸ್ಸು ಮಾಡಲಿಲ್ಲವಲ್ಲ...
ಬದುಕಬೇಕು..
ಬದುಕಿ ಸಾಧಿಸಿ ತೋರಿಸ ಬೇಕು ಆಲ್ವಾ?
ಮನೆಗೆ ಬಂದವ ನನ್ನಾಕೆಗೆ ಈ ಘಟನೆ ಹೇಳಿದೆ..
"ಏನೇನೊ ಕೆಲಸಕ್ಕೆ ಬಾರದ ಹೊಟ್ಟು ಕಥೆ ಬರೆಯ ಬೇಡಿ..
ಇಂಥಾದ್ದು ಬರೀರಿ..
ನಿರಾಸೆಯಾದವರಿಗೆ ಸ್ವಲ್ಪ ಕ ಉತ್ಸಾಹ ಕೊಡಬಹುದು"
ಹಾಗಾಗುವಂತಿದ್ದರೆ ಖುಷಿ ಆಲ್ವಾ?
ಪ್ರತಿಕ್ರಿಯೆಗೆ ಜೈ ಹೋ..
ಕ್ರಿಸ್ಮಸ್ ಹಬ್ಬದ ಶುಭಾಶಯಗಳು....
ಆ ಮುದುಕಿಯ ಮಾತಿನಲ್ಲಿ ಮೊದಲು ಬಂದ ಏಕವಚನ ಆ ನಂತರ ಅಕ್ಕರೆಯ ಹಾರೈಕೆಯಾಯಿತು ನೋಡಿದಿರಾ? ಅದೇ ಮಾನವೀಯತೆಯ ಮೊದಲ ಪಾಠ!
ಮುದುಕಿ ಸಾವಿನ ಬಗ್ಗೆ ಎಷ್ಟು ಸರಳವಾಗಿ ಹೇಳಿದ್ದಾಳೆ ಅಲ್ಲವೇ?
ನಿಮಗೆ ಗೊತ್ತು ಕೆಲದಿನಗಳಿಅ ಹಿಂದೆ ನನ್ನ ಮನಸ್ಥಿತಿ ಹೇಗಿತ್ತು ಅಂತ. ಆಗ ನಾನೂ ಸಾಯಲು ಯೋಚನೆ ಮಾಡಿದ್ದೆ!
ನನಗಂತೂ ವೃದ್ಧಾಪ್ಯ ಶಾಪವಾಗುವ ಎಲ್ಲಾ ಲಕ್ಷಣಗಳಿವೆ. :(
ನಿಮ್ಮ ಬರಹವನ್ನು ಓದಿದಾಗ ತಟ್ಟನೆ ನೆನಪಿಗೆ ಬಂದದ್ದು "ಕಲಿಯುಗ" ಕನ್ನಡ ಚಿತ್ರದ ಸಂಭಾಷಣೆ.."ನಾನು ಸಾವು ತಾನಾಗೆ ಬರುವವರೆಗೂ" ಸಾಯಲು ಇಷ್ಟವಿಲ್ಲ....ಭಗವದ್ಗೀತೆಯ ಎಲ್ಲಾ ಅಧ್ಯಾಯಗಳ ಸಾರ ಆ ಮುದುಕಮ್ಮ ಹೇಳಿದ ಸಾಲುಗಳಲ್ಲೇ ತುಂಬಿದೆ ಎನ್ನಿಸಿತು. ಹುಟ್ಟು, ಸಾವು ನಮ್ಮ ಕೈನಲ್ಲಿ ಇಲ್ಲ..ಹುಟ್ಟಿ ಜೀವಿಸಲು ಶ್ರಮ ಪಡುವ ಎಷ್ಟೋ ಕಂದಮ್ಮಗಳು ಆಸ್ಪತ್ರೆಯಲ್ಲಿ ನರಳುತ್ತ ಇರುತ್ತವೆ...ಸಾವಿಗೆ ಹತ್ತಿರವಾಗೋಣ ಎಂದು ಆತ್ಮಹತ್ಯೆ ಮಾಡಿಕೊಳ್ಳುವರು ಬದುಕುಳಿದು ದಯನೀಯ ಬದುಕನ್ನು ಸವೆಸುತ್ತಾರೆ.ಹೀಗೆಲ್ಲ ಇರುವಾಗ ನಮ್ಮ ಜೀವವನ್ನು ನಾವೇ ಹತ್ಯೆ ಮಾಡಿಕೊಳ್ಳಲು ನಮಗೆ ಅನುಮತಿ ಇರೋಲ್ಲ. ಹುಲಿಯಾಗಿ ಬಾಳಿದವರು ಇಲಿಯಾಗಿ ಬದುಕಲು ಹೊರಟರೆ ಅದೇ ಸಾವು ಅನ್ನಿಸುತ್ತೆ..ನಂಬಿದ ಸತ್ಯ. ಸಿದ್ಧಾಂತಗಳನ್ನು ಬದಿಗೊತ್ತಿ ನಿಂತರೆ ಅದೇ ಆತ್ಮಹತ್ಯೆ...ಮುದುಕಮ್ಮ ಮಾತುಗಳು ನಿಧಾನವಾಗಿ ಆಳಕ್ಕೆ ಇಳಿಯುತ್ತ ಅರ್ಥವಾಗುತ್ತಾ ಇದೆ..ನಿಜ ಬದುಕಲು ಒಂದು ಧ್ಯೇಯ ಬೇಕು..ಆದ್ರೆ ಸಾಯಲು ಸಾಧನೆ ನಮ್ಮ ಬೆನ್ನಿಗೆ ಇರಬೇಕು. ಏನು ಸಾಧಿಸದೆ ಹೋಗುವ ಬದಲು ಸಾವಿಗೆ ಸವಾಲಾಗಿ ಬದುಕುವ ಹುಮ್ಮಸ್ಸು ಈ ಲೇಖನವನ್ನು ಕೊಡುತ್ತದೆ..ನನಗೆ ಬಹಳ ಕಾಡಿದ ನಿಮ್ಮ ಅನೇಕ ಲೇಖನಗಳಲ್ಲಿ ಇದು ಮುಕುಟಪ್ರಾಯ....!!!
ಹೆಗಡೇಜಿ ಆ ಅಜ್ಜಿ ಹೇಳಿದ ಮಾತು ಸಾಲಿಕಲಸುವ ಮಾಸ್ತರೂ ಹೇಳಿಕೊಡೂದಿಲ್ರಿ..
ಓದಿ ಖುಷಿ ಆತು..
ಪರ್ಕಾಸಣ್ಣಾ,
ಇಂದಿನದು ಎಂದಿಗಿಂತ ಸ್ವಲ್ಪ ಹೆಚ್ಚು ಭಾವನಾತ್ಮಕವಾದ ಬರಹ..ಆ ವಿಷಯದ ಬಗ್ಗೆ ಮಾತನಾಡಲು ಅನುಭವ ನನಗಂತೂ ಸಾಲದು..
ಪ್ರಕಾಶಣ್ಣನ ಕಥೆ ಅಂತಾ ಓದಿದ ನನಗೆ ಒಂದ್ಸಲ ಬೇಜಾರಾಯ್ತು..
ಪ್ರತಿಸಲ ನಿಮ್ಮ ಕಥೆಯಲ್ಲಿ ಸಿಗುತ್ತಿದ್ದ ತಿರುವು ಯಾಕೋ ಸಿಕ್ಕಿಲ್ಲ,ಜೊತೆಗೆ ಯಾಕೋ ಒಂಥರ ವೇಗ ಜಾಸ್ತಿ ಆಯ್ತೇನೋ ಅನಿಸಿತು..ಮತ್ತೆ ಅಲ್ಲಿ ಮುದುಕಿಯ ವಿಚಾರದಿಂದ ದಿಡೀರಾಗಿ ನಿಮ್ಮ ವಿಚಾರಕ್ಕೆ ಹೆಂಗೆ ಬಂದಿರಿ ಅದೂ ಹೊಳೆಯುತ್ತಿಲ್ಲ..ನಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದೆ ಅದು ಇದು ಅಂತಾ..ಅದು ಕೊನೆಯ ಸಾಲಾಗಿದ್ದರೆ ಒಳ್ಳೆಯದಿತ್ತೇನೋ..
ಇದೆಲ್ಲ ನನ್ನ ತಪ್ಪು ತಿಳುವಳಿಕೆಯೋ ಅಥವಾ ಈ ಕಥೆಯ ಹುರುಳು ತಿಳಿಯಲು ಅನುಭವ ಸಾಲದೋ ಅಥವಾ ಪ್ರಕಾಶಣ್ಣನ ಕಥೆಯಿಂದ ಪ್ರತೀ ಸಲ ವಿಶೇಷತೆಯನ್ನೇ ಬಯಸುವುದು ನನ್ನ ತಪ್ಪೋ ... ಗೊತ್ತಿಲ್ಲ ...
ಹಮ್ ಕ್ಷಮಿಸುವಿರೆಂಬ ಭರವಸೆಯೊಂದಿಗೆ ಅನಿಸಿದ್ದನ್ನು ಹೇಳಿದೆ ಅಣ್ಣಾ..
ನಮಸ್ತೆ..
ಆತ್ಮಹತ್ಯೆ ಮಾಡಿಕೊಳ್ಳ ಬಯಸುವವರಿಗೆ ಇದೊಂದು ಒಳ್ಳೆಯ ಕಿವಿ ಮಾತು...ಹುಟ್ಟು ಎಷ್ಟು ಆಕಸ್ಮಿಕವೋ,ಸಾವು ಕೂಡ ಅಷ್ಟೇ ಆಕಸ್ಮಿಕ ಆಗಬೇಕು..ಸಾವನ್ನು ಪಡೆಯಲು ಹವಣಿಸುವುದು ನಿಜಕ್ಕೂ ಘೋರ ತಪ್ಪು... ಈ ಕಥೆಯಲ್ಲಿ ಆ ಮುದುಕಿಯ ಮಾತಿನಲ್ಲಿ ಇರುವುದು ಬದುಕಿನ ಬಗ್ಗೆ ಧೈರ್ಯವೋ ಅಥವಾ ಮಕ್ಕಳಿಗೆ ಅಂಜದೆ ಬದುಕ ಬೇಕೆಂಬ ಚಲವೋ ಇರಬೇಕು...ಇದನ್ನು ಓದಿದ ಮೇಲೆ ನನಗೆ ಅನಿಸ್ಸಿದು ಆತ್ಮಹತ್ಯೆ ಮಾಡಿಕೊಂಡವರು ನಿಜಕ್ಕೂ ಹೇಡಿಗಳೇ ಇರಬೇಕು ಎಂದು...ಈ ಪಟ್ಟಿಯಲ್ಲಿ ನನ್ನ ಕೆಲವು ಸ್ನೇಹಿತರು ಇದ್ದಾರೆ ಅನ್ನುವುದು ವಿಷಾದ..
ಅರೆ ನಿನ್ನೆ ತಾನೇ ನಾವಿಬ್ಬರು ಈ ವಿಷಯ ಮಾತಾಡಿದ್ದು, ಅಜ್ಜಿಯ ಬಗ್ಗೆ ಬಹಳ ಕುತೂಹಲ ಇತ್ತು. ಅವಳ ಮಾಗಿದ ಜೀವನದ ಘಟನೆಗಳು, ಬಹಳಷ್ಟು ವಿಷಾದದ ಸರಮಾಲೆ ಹೊಂದಿವೆ. ತನ್ನ ಮಕ್ಕಳು, ಸೊಸೆಯಂದಿರು, ನೆಂಟರು ಎಲ್ಲರೂ ಕೈಬಿಟ್ಟರೂ , ತನಗೆ ಅಗತ್ಯ ಬಿದ್ದಾಗ ಮಾತ್ರ ಕೈ ಚಾಚಿ ಬೇಡದಿದ್ದಾಗ ತಿರಸ್ಕಾರ ಮಾಡಿ ತನ್ನದೇ ಆದರ್ಶ ಮೆರೆದಿದ್ದಾಳೆ.ಆದರೆ ನಿಮ್ಮ ಪ್ರಶ್ನೆಗಳಿಗೆ ಅವಳು ಕೊಟ್ಟ ಉತ್ತರ ಬಹಳಷ್ಟು ಜನರಿಗೆ ನೀಡಿದ ಬುದ್ದಿ ಮಾತಾಗಿದೆ.ನಿಮ್ಮ ಬರಹ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದೆ.ಧನ್ಯವಾದಗಳು ಪ್ರಕಾಶ್ ಜಿ.
prakashanna...
oLLe sandesha ide kathe nalli...
ಈ ಮುದುಕಿ ನಿಜವಾಗಿಯೂ ಧೀರ ಮಹಿಳೆ. ಇವಳು ಕಲಿಸುವ ಜೀವನತತ್ವ ಯಾವ ತತ್ವಶಾಸ್ತ್ರದಲ್ಲಿಯೂ ಸಿಗಲಿಕ್ಕಿಲ್ಲ.
ಎಂದಿನಂತೆ ಸುಂದರ ಬರಹ.....ಆ ಮುದುಕಿಯ ದಿಟ್ಟತನಕ್ಕೆ ಮೆಚ್ಚಲೇಬೇಕು......ಏನಾದರೂ ಸಣ್ಣ ಸಣ್ಣ ವಿಷಯಕ್ಕೆ ಆತ್ಮಹತ್ಯೆಗೆ ಮೊರೆಹೋಗುವ ಈಗಿನ ಯುವಜನರು ಈಕೆಯನ್ನು ಕಂಡು ಕಲಿತುಕೊಳ್ಳಬೇಕು......ನಿಜವೇ ತಾನೇ....ಎಲ್ಲವೂ ಆ ಭಗವಂತನೆ ಕೊಟ್ಟಿದ್ದು.....ಕಸಿದುಕೊಳ್ಳುವವನೂ ಆತನೇ......ಹುಟ್ಟಿದವನು ಸಾಯಲೇ ಬೇಕು.....ಆ ಸಾವನ್ನು ನಾವೇ ಯಾಕೆ ತಂದುಕೊಳ್ಳಬೇಕು ?..............ಎಂದಿನಂತೆ ಸುಂದರ ನಿರೂಪಣೆ......
ಅಭಿನಂದನೆಗಳು ಪ್ರಕಾಶಣ್ಣ .....
ಇದು ಆಕೆಯೊಬ್ಬಳ ಕಥೆಯಲ್ಲ.. ಹುಡುಕುತ್ತಾ ಹೋದಂತೆ ಊರಿಗೊಂದರಂತೆ.. ಬೆಂಗಳೂರಂಥ ನಗರದಲ್ಲಿ ಬೀದಿಗೊಂದರಂತೆ ಸಿಗುವ ಅನೇಕಾನೇಕ ಉದಾಹರಣೆಗಳ ಪೈಕಿ ಈಕೆ ಅವರೆಲ್ಲರ ಪ್ರತಿನಿಧಿಯಂತೆ ತೋರುತ್ತಾಳೆ..
ಮೊನ್ನೆ ನೀವು ಅತ್ತಿಗೆ ಕೂಡಾ ಯಾರೇ ಕೂಗಾಡಲಿ ಸಿನಿಮಾ ನೋಡಿದ ಪ್ರಸಂಗ ಹೇಳಿದಿರಲ್ಲಾ..?? ಅದರ ಮೂಲ ತಮಿಳು ಚಿತ್ರದಲ್ಲಿ ಒಂದು ಡೈಲಾಗ್ ಇದೆ.. ಪೆಟ್ರೋಲ್ ಬಂಕ್ ಬಳಿ ಹುಚ್ಚನಾಗಿ ಅಲೆಯುವ ಒಬ್ಬ ವ್ಯಕ್ತಿಯನ್ನ ಕಂಡು ನಾಯಕ ಹೇಳೋದು..
"ಪ್ರಪಂಚದಲ್ಲಿ ಹುಚ್ಚರಾಗಿ ಅಲೆಯುತ್ತಿರೋ ಅಷ್ಟೂ ಜನ ಏನು ಹುಚ್ಚರಾಗೆ ಹುಟ್ಟಿದ್ದಾ..?? ಇಲ್ಲ ಅವರು ಕೂಡ ನಮ್ಮ ಹಾಗೆ ಅಪ್ಪ ಅಮ್ಮ.. ಅಣ್ಣ ತಮ್ಮ.. ಅಕ್ಕ ತಂಗಿ.. ಬಂಧು ಬಳಗ ಹೀಗೆ ಎಲ್ಲರೂ ಉಳ್ಳವರೇ.. ಇಂಥಾ ಒಂದು ಮಾನಸಿಕ ಖಿನ್ನತೆಗೆ ಒಳಗಾದ ಕೂಡ್ಲೇ ಅವೆರೆಲ್ಲರಿಂದ ತಿರಸ್ಕಾರಗೊಂಡು ಬೀದಿಗೆ ಬಂದವರೇ.. ಹುಡುಕಿದರೆ ಈಗಲೂ ಅವರ ಸ್ವಂತಗಳು ಸಂಭಂಧಗಳು ನೆಮ್ಮದಿಯಿಂದ ಬದುಕುತ್ತಿವೆ.. ಆದ್ರೆ ಇವರು ಮಾತ್ರ ಹೀಗೆ.. ಆದರೂ ಯಾರಿಗೂ ಇವರ ಪರಿವಿಲ್ಲ ಮತ್ತು ಅದು ಅವರಿಗೆ ಬೇಕಾಗಿಲ್ಲ.. ಯಾರು ಹೇಗಾದರೇನು ತಮ್ಮ ಸಂತೋಷಕ್ಕಾಗಿ ಬದುಕೋದು ಮಾತ್ರ ಎಲ್ಲರಿಗೂ ಧ್ಯೇಯ"
ಅಂತ ನಾಯಕ ಸಹನಾಯಕನಿಗೆ ಹೇಳೋ ಮಾತು ಇದು..
ನಿಜ ಆಲ್ವಾ..?? ನಮ್ಮ ಕಣ್ಣ ಮುಂದೆಯೂ ಅದೆಷ್ಟು ಜನ ಇಂಥಾ ಉದಾಹರಣೆಗಳಿಲ್ಲ.?? ನಮ್ಮೂರಲ್ಲೇ ನನಗೆ ತಿಳಿದ ಹಾಗೆ ಬಾಲ್ಯದಿಂದಲೂ ಕಂಡಂತೆ ಎರಡು ಜನ.. ನರಸಿಂಹಣ್ಣ.. ಕುಮಾರಣ್ಣ..
ನನಗೆ ಕಂಡಂತೆ ಇವರಿಬ್ಬರದೂ ಭವ್ಯ ಕುಟುಂಬ.. ಸುಲಭಕ್ಕೆ ಕರಗದ ಸ್ತಿತಿವಂತರು.. ಸಿರಿ ವಂತರು.. ಆದರು ಅದ್ಯಾವುದ್ಯಾವುದೋ ಕಾರಣಕ್ಕೆ ಮಾನಸಿಕ್ಕ ಖಿನ್ನತೆಗೆ ಒಳಗಾದದ್ದಷ್ಟೇ ಅಂದಿನಿಂದ ಅವರಿಬ್ಬರೂ ಬೀದಿಗೆ ಬಿದ್ದರು.. ಊರೂರು ಸುತ್ತುವ.. ಬೀದಿ ಬೀದಿ ಅಲೆಯುವ.. ತಮ್ಮಷ್ಟಕ್ಕೆ ತಾವೇ ಏನೇನೋ ಬಡ ಬಡಿಸುವ ಇವರಿಗೆ ಯಾವ ಊರಲ್ಲಾದರೂ ತುತ್ತೂ ಸಿಕೀತು.. ಯಾಕೆಂದರೆ ಇವರ ಕತೆ ಸುತ್ತೂರಿಗೆಲ್ಲ ಗೊತ್ತು.
ಆದ್ರೆ ನಗರಗಳಲ್ಲಿ..?? ಒಂದೇ ಅಪಾರ್ಟ್ ಮೆಂಟಿನ.. ಒಂದೇ ಕಟ್ಟಡದ ಪಕ್ಕದ ಮನೆಯವನೇ ಆದವನು ಕೂಡ ನಮಗೆ ಪರಿಚಯವಿರೋದಿಲ್ಲ. ಇನ್ನು ಇಂಥವರ ಕಥೆ ಯಾರಿಗೆ ಗೊತ್ತು..?? ಪ್ರತೀ ಊರಿನ ಬಸ್ ಸ್ಟಾಪ್.. ಪೇಟೆ ಬೀದಿ & ಸಂತೆ ಮಾರ್ಕೆಟ್ಟು ಗಳ ಪರಿಧಿಯಲ್ಲಿ ಇವರುಗಳನ್ನು ಕಾಣದಿರಲು ಸಾಧ್ಯವೇ ಇಲ್ಲ.. ಇಂಥವರಿಗೆ ಕೆಲವೊಮ್ಮೆ ನನ್ನಂಥವನೂ ಸೇರಿ ಅನೇಕರಿಂದ ಸಿಕ್ಕೋದು ಒಂದೆರೆಡು ಕಾಸುಗಳ ಭಿಕ್ಷೆ ಬಿಟ್ರೆ.. ಒಂದು ತಾತ್ಸಾರ ಭಾವ ಮಾತ್ರ.. ಅಂಥವರಿಗೆಲ್ಲ ಇಂಥದ್ದೊಂದು ಕಥೆ ಇರ ಬಹುದಲ್ವಾ.??
ನಿಮ್ಮ ಈ ಬರಹ ಕೂಡ ಅಂತ ಜೀವಗಳಲ್ಲಿ ಒಂದು ಜೀವದ.. ಜೀವನ ಭಾವ & ಅನುಭವಗಳನ್ನ ತೆರೆದಿಟ್ಟಿದೆ.. ನಿಜಕ್ಕೂ ಕರುಳು ಕಿವುಚುವ ಕಥಾನಕ ಆ ಹಿಡಿ ಜೀವದ್ದು.. ನಿಮ್ಮ ಬರಹ ಭಾವಗಳಲ್ಲಿ ಅದು ಇನ್ನೂ ಒಂದಷ್ಟು ಕರುಣಾರಸವನ್ನ ತುಂಬಿಕೊಂಡು ಕಲ್ಪನೆಗೆ ನಿಲುಕುತ್ತದೆ..
ಆ ಮುದುಕಿ ನುಡಿಯುವ ಅನುಭವದ ಮಾತುಗಳು.. ಕೇವಲ ಒಂದು ಉತ್ತಮ ಬದುಕಿಗಾಗಿ ಏನೇನೋ ಅನುಸರಿಸಿಕೊಂಡು.. ತಾಳಿಕೊಂಡು.. ಸಹಿಸಿಕೊಂಡು .. ಬದುಕೋ ನಮಗೆಲ್ಲ ಅನೇಕ ಸತ್ಯಗಳನ್ನು ತೆರೆದಿಡುತ್ತಾ ಅನೇಕ ಸಾಧ್ಯತೆಗಳನ್ನು ಪರಿಚಯಿಸುತ್ತಾ ಹೋಗುತ್ತದೆ..
( "ಈ ಹುಟ್ಟು ನಂದಾ?..."
"ನನಗೆ ಬೇಕು ಅಂತ ಹುಟ್ಟಿ ಬಂದ್ನಾ? "
"ಈ ಬದುಕು ನಾನು ಬಯಸಿದ್ದಾ?..."
" ನಾನು ಬೆಳೆಸಿದ ಮಕ್ಕಳಿಂದ ..
"ಛೀ... ಥೂ..." ಅನ್ನಿಸಿಕೊಂಡು ...
ಮನೆಯಿಂದ ಹೊರಗೆ ಹಾಕಿಸಿಕೊಂಡೆನಲ್ಲಾ...
ಇದು ನಾನು ಬಯಸಿದ್ದಾ?..."
'ಈ ....
ಹುಟ್ಟು ನಂದಲ್ಲ ..
ಈ ಬದುಕೂ ನಂದಲ್ಲ....
ಸಾವು ಕೂಡ ನನ್ನದಾಗಿರಲಿಕ್ಕೆ ಸಾಧ್ಯವಿಲ್ಲ....
ಆ ಸಾವು ಕೂಡ "ಅವನೇ" ಕೊಡಲಿ....
ನನ್ನ ಹತ್ಯೆಯನ್ನು ನಾನು ಮಾಡಿಕೊಳ್ಳೋದಿಲ್ಲ....!
ಎಷ್ಟು ನರಳುತ್ತಾ ಸಾಯ್ತೆನೋ ಸಾಯಲಿ..... !
ಹಾಗೇ ಸಾಯ್ತೇನೆ...
ಎಷ್ಟು ನೋವು ಬೇಕಾದರೂ ಬರಲಿ....
ನನ್ನ ಮಕ್ಕಳು ಕೊಟ್ಟ ನೋವಿನಷ್ಟು ..
ಆ ನೋವು ..
ಇರೋದಿಲ್ಲ ಬಿಡು...." )
ಈ ಮಾತುಗಳಲ್ಲಿ ಅವರಿಗಿರೋ ಜೀವನಾನುಭವ ಮತ್ತು ಸತ್ಯಾನ್ವೇಷಣೆಗಳು ನಮಗೆ ನಿಲುಕೋಕೆ ನಾವಿನ್ನು ಅದೆಷ್ಟು ಕಾಲ ಬದುಕ ಬೇಕೋ..?? ಅದೆಷ್ಟು ಅನುಭವಿಸಬೇಕೋ..?? ಅಥವಾ ಅಷ್ಟು ಬದುಕಿ ಬಾಳಿಯೂ ನಿಲುಕದೆ ಇರಬಹುದು.. ಆದ್ರೆ ಅವರು ಹೇಳಿದ ಈ ಮಾತುಗಳು ಮಾತ್ರ ಸಾರ್ವಕಾಲಿಕ ಸತ್ಯ.
ಬದುಕಿಗೆ ಹೆದರಿ.. ಬದುಕೊಳಗಿನ ಭಾರಕ್ಕೆ ಹೆದರಿ ಓಡುವ ನಮ್ಮ ಪೀಳಿಗೆಯ ಅದೆಷ್ಟೋ ಜನರಿಗೆ ಆ ಜೀವದ ಜೀವನ ಒಂದು ದಕ್ಷ ಉದಾಹರಣೆ.. ನಾವು ಅವರನ್ನು ನೋಡಿ ಬದುಕೋದು ಹೇಗೆ.. ಸಮಯ ಸಂಧರ್ಭಗಳ ಎದೆಗುಂದದೆ ನಿಭಾಯಿಸೋದು ಹೇಗೆಂದು ಕಲಿಯೋದು ಬಹಳಷ್ಟಿದೆ..
ಒಂದೊಳ್ಳೆ ನೀತಿ.. ಒಂದೊಳ್ಳೆ ಅನುಭವಗಳು.. ಒಂದಿಷ್ಟು ಸತ್ಯಗಳನ್ನ ಬಹಳ ಶಕ್ತವಾಗಿ ಪರಿಚಯಿಸಿಕೊಟ್ಟ ನಿಮ್ಮ ಈ ಕಥಾ ಬರಹ ನಿಜಕ್ಕೂ ಸುಂದರ ಪ್ರಕಾಶಣ್ಣ.. ಬಹಳ ಇಷ್ಟವಾಯ್ತು.
ರಾಜಾಜಿನಗರದಲ್ಲಿ "ಶ್ರೀ " ಎಂಬ ವೃದ್ದಾಶ್ರಮ ಇದೆ. ಆ ಕಡೆಗೆ ಹೋದರೆ ನನ್ನೊಮ್ಮೆ ಅಲ್ಲಿಗೆ ಹೋಗಿ ಬರುತ್ತೇನೆ. ಒಮ್ಮೆ ಹಾಗೆ ಹೋದಾಗ ನನ್ನ ಗೆಳೆಯನೊಬ್ಬ ಕೇಳಿದ್ದ ಅಡ್ವಾನ್ಸ್ ಬುಕ್ಕಿಂಗ್ ಮಾಡೋಕೆ ಹೋಗಿದ್ಯಾ? ಅಂತ . ಈಗಿನ ಪರಿಸ್ಥಿತಿ ನೋಡಿದರೆ ಬುಕ್ ಮಾಡಬೇಕೇನೋ ಅಂತ ತಮಾಷೆಗಾಗಿ ಹೇಳಿದ್ದೆ. ಆದರೆ ಈ ತರಹದ ಕಥೆಗಳನ್ನ , ಇದೆ ತರಹದ ವಾಸ್ತವ ಘಟನೆಗಳನ್ನು ಕೇಳಿದಾಗ ನಿಜಕ್ಕೂ ಅಡ್ವಾನ್ಸ್ ಬುಕಿಂಗ್ ಮಾಡಬೇಕೇನೋ ಅನಿಸುತ್ತೆ... ತುಂಬಾ ಚಂದದ ಕಥೆ.. ಎಲ್ಲೋ ರೋಡ್ ಲ್ಲಿ ಹೋಗುವಾಗ ಫಕ್ಕನೇ ತಿರುವಲ್ಲಿ ಕಾಣುವ ಯಾವುದೋ ಮುದುಕಿಯ ಮ್ಲಾನ ಮುಖವನ್ನೂ , ಹೊಳೆಯುವ ಕಣ್ಣನ್ನೂ , ಆ ಕಣ್ಣ ಹೊಳಪಲ್ಲಿನ ಜೀವ ಸೆಲೆಯನ್ನು ನೆನಪಿಗೆ ಬರುವಂತೆ ಮಾಡುತ್ತದೆ.
ನಿಜವಾಗಿಯೂ ಈ ಕಷ್ಟ ನಮ್ಮ ವೈರಿಗೂ ಬಾರದಿರಲಿ... ಕಷ್ಟ ಪಟ್ಟು ಸಾಕಿ ಸಲುಹಿದ ಮಕ್ಕಳು ಛೀ, ಥೂ ಎಂದು ಹೊರಗೆ ಅತ್ತಿದಾಗಿನ ದುಸ್ಥರ ಮುಪ್ಪು ಯಾರಿಗೂ ಕಾಡದಿರಲಿ.. :( :(
ತುಂಬಾ ಚೆನ್ನಾಗಿದೆ ಪ್ರಕಾಶಣ್ಣ ...:) ಹುಟ್ಟು ನಮ್ಮದಲ್ಲ ಅಂದಮೇಲೆ ಸಾವು ನಮ್ಮದಲ್ಲ ... :) ತುಂಬಾ ಸಿಂಪಲ್ ಯೋಚನೆ .. ಆದ್ರೆ ಅಸ್ಟೆ ಅರ್ಥ ಇದೆ ...
sooper
ಸಖತ್ತಾಗಿದೆ ಪ್ರಕಾಶಣ್ಣ..
ಹುಟ್ಟು ಹೇಗೆ ನಮ್ಮದಲ್ಲವೋ ಹಾಗೆ ಸಾವೂ ನಮ್ಮದಲ್ಲ ಎನ್ನುವ ಆ ಮುದುಕಿಯ ಮಾತು ನಮಗೆಲ್ಲಾ ಪ್ರೇರಣೆ ಆಗಬೇಕು.. ಸಣ್ಣ ವಿಷಯಗಳನ್ನೇ ದೊಡ್ಡದಾಗಿಸಿ ಸಾವಿನ ಮೊರೆ ಹೋಗೋ ಈಗಿನ ತಲೆಮಾರಿನ ಯುವಕ/ಯುವಕಿಯರು ಇದನ್ನು ಓದಿ ಸ್ವಲ್ಪವಾದರೂ ಬುದ್ದಿ ಕಲಿಯುವಂತಾಗಲೆಂಬ ಹಾರೈಕೆ.. ನಿಮಗೆಲ್ಲಾ ಕ್ಯಾಲೆಂಡರ್ ಹೊಸವರ್ಷದ ಶುಭಾಶಯ :-)
ಬದರಿ ಭಾಯ್...
ಯಾರ ಹುಟ್ಟು.. ಬದುಕು ಹೇಗೆ ಅಂತ ಹೇಗೆ ಹೇಳಲು ಸಾಧ್ಯ?
ಹಾಗೆಯೇ ಸಾವೂ ಕೂಡ...
ಇದು ಅನಿವಾರ್ಯ.. ಅನುಭವಿಸಲೇ ಬೇಕು....
ನಮ್ಮ ಭಾರತೀಯರ ನರ ನಾಡಿಗಳಲ್ಲಿ "ಆಧ್ಯಾತ್ಮ" ಹರಿಯುತ್ತಿದೆ..
ಈ ಮುದುಕಿಯ ಮಾತುಗಳು ಆಧ್ಯಾತ್ಮ ಪಂಡಿತರ ಬಾಯಲ್ಲಿ ಬರುವಂಥಾದ್ದು..
ಬದುಕಿನ ಅನುಭವಗಳು.
ಅವುಗಳು ಕಲಿಸುವ ಪಾಠಗಳು ಯಾವ ಧರ್ಮಗೃಂಥಗಳಲ್ಲಿಯೂ ಸಿಗಲಿಕ್ಕಿಲ್ಲ ಅಲ್ವಾ?
ಮುದುಕಿಯ ಧನಾತ್ಮಕ ವಿಚಾರ ಎಲ್ಲರಿಗೂ ಇಷ್ಟವಾಗುವಂಥಾದ್ದು..
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ,
ಮನಸ್ಸು ಭಾರವಾಗುವ ಕಥೆ.... ನಿಜಕ್ಕೂ ಯೊಚಿಸುವಂತಾದ, ಹೆದರಬೇಕಾದ ಪರಿಸ್ತಿತಿ... ಇಂದು ನಾವು ಯೋಚಿಸಿ ಮುಂದಡಿಯಿಡುವ ಯೋಜನೆ ನಾಳೆ ನಮಗೆ ಕೈ ಕೊಡಬಹುದು ಅಲ್ವಾ..? ಅಜ್ಜಿಯ ಅನುಭವ ಎಲ್ಲರ ಕಥೆಯಾಗಬಹುದು.. ಅಜ್ಜಿಯ ಒಂದೊಂದು ಮಾತುಗಳೂ ಕಾಲನ ಸುಭಾಶಿತಗಳು.... ಧನ್ಯವಾದ ಆ ಮಾತುಗಳನ್ನು ಇಂಥಹ ಸುಂದರ ಕಥೆಯ ರೂಪದಲ್ಲಿ ಹೇಳಿದ್ದಕ್ಕೆ.....
ಮಾತುಗಳಿಲ್ಲ ನನ್ನಲ್ಲಿ...
"ಇಟ್ಹಾಂಗೆ ಇರುವೆನೋ ಹರಿಯೇ "
ಎಷ್ಟು ಚೆನ್ನಾಗಿ ಪಾಲಿಸಿದ್ದಾಳೆ ಅಜ್ಜಿ ,
ಅವಳನ್ನ ಗುರುತಿಸಿ ಅವಳ ಬಗ್ಗೆ ತಿಳಿಸಿದ ನಿಮಗೆ ವಂದನೆಗಳು
ಧೀರತನದ ಬದುಕು ಅಂದ್ರೆ ಇದು. ಗಟ್ಟಿ ಬದುಕಿನ ತುಣುಕೊಂದನ್ನ ಹೆಕ್ಕಿ ತೆಗೆದು ಸೊಗಸಾದ ಕಟ್ಟು ಹಾಕಿ ಕೊಟ್ಟಿದ್ದೀರಿ. Thanks
ಭಾವನಾತ್ಮಕವಾದ ಬರಹ..
ಅಜ್ಜಿಯ ಮಾತು ಸತ್ಯ. ನಮ್ಮ ಸುತ್ತಲಿನ ಬದುಕು , ಜೀವನ ಪಯಣ ಎಷ್ಟು ಗಮ್ಯವಾಗಿದೆ ಅಲ್ವಾ?
ನಿಜ ಸಾರ್ ನೀವು ಹೇಳಿದಂತೆ ಬದುಕಿನ ಅನುಭವಗಳು ಧರ್ಮ ಗ್ರಂಥಗಳಲೂ ಸಿಗಲಾರದು!
While reading could not control my tears...
Post a Comment