Tuesday, July 31, 2012

ಹಣಕ್ಕೆ... ರಕ್ತ ಮಾಂಸಗಳಿಲ್ಲ... ...

ನನ್ನ ಗೆಳೆಯನಿಗೆ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದ...


ಆಕೆ ಗಾಭರಿಯಿಂದ ತನ್ನ ತವರು ಮನೆಯವರಿಗೆ...
ಗಂಡನ ಅಣ್ಣ ತಮ್ಮಂದಿರಿಗೆ ವಿಷಯ ತಿಳಿಸಿದಳು...


ಆ ರಾತ್ರಿಯಲ್ಲಿ ತಾನು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಳು...


ಗಂಡ ಪ್ರಜ್ಞಾಹೀನನಾಗಿ ಮಲಗಿದ್ದಾನೆ...


ಅಲ್ಲಿನ ಡಾಕ್ಟರುಗಳು ಇವಳನ್ನು ನೋಡಿ...


"ಅಪರೇಷನ್ ಮಾಡಬೇಕು...
ಖರ್ಚಾಗುತ್ತದೆ..."


ದೇವರ ದಯೆಯಿಂದ ಅವರಿಗೆ ಹಣದ ತೊಂದರೆ ಇರಲಿಲ್ಲ...


ನನ್ನ ಗೆಳೆಯ ಸಾಕಷ್ಟು ಸ್ಥಿತಿವಂತ..


ಏನೇನೋ ಟೆಸ್ಟುಗಳು...ಸ್ಕ್ಯಾನಿಂಗುಗಳು...


ಆ ಹೆಣ್ಣುಮಗಳು ಅಧೀರಳಾದಳು..


ಅವರ ಹತ್ತಿರದ ಬಂಧುಗಳು ಯಾರೂ ಬರಲೇ ಇಲ್ಲ... !


ಬೆಳಗಿನ ಜಾವ ಅವಳಿಗೆ ಗಂಡನ ಸ್ನೇಹಿತರು ನೆನಪಾದರು...


ನನ್ನಗೆಳೆಯ "ಗಣಪತಿಗೆ" ಫೋನ್ ಮಾಡಿದಳು...


ಆತ ನಮಗೆಲ್ಲರಿಗೂ ಹೇಳಿದ..


ನಾವೆಲ್ಲ ಅಲ್ಲಿಗೆ ಹೋಗಿ ನೋಡಿದಾಗ ನಮಗೂ ಆತಂಕವಾಯಿತು...
ತತಕ್ಷಣ ಎಲ್ಲ ಏರ್ಪಾಡುಗಳನ್ನು ಮಾಡಿದೆವು..


ರಕ್ತ.. ಬೇಕಾಗಿತ್ತು...


ದೇವರ ದಯೆಯಿಂದ ಅದೂ ವ್ಯವಸ್ಥೆ ಆಯಿತು...


ಅಪರೇಶನ್ ಮುಗಿಸಿ ಬಂದ ಡಾಕ್ಟರ್ ಮುಖದಲ್ಲಿ ನಗುವಿತ್ತು...


"ಅಪರೇಶನ್ ಚೆನ್ನಾಗಿ ಆಗಿದೆ..
ಇನ್ನೊಂದು ವಾರದಲ್ಲಿ ಗುಣಮುಖನಾಗುತ್ತಾನೆ..."


ನಮಗೆಲ್ಲ ಹೋದ ಜೀವ ಬಂದಂತಾಯಿತು...!


ಆ ಹೆಣ್ಣುಮಗಳಿಗೂ  ಖುಷಿಯಾಗಿತ್ತು...


ಆಕೆಯ ಬಂಧುಗಳ ಸುಳಿವೇ ಇಲ್ಲ...
ತನ್ನ ತವರಿನವರು... 
ಗಂಡನ ರಕ್ತ ಸಂಬಂಧಿಗಳು ಯಾರೂ ಬರಲೇ ಇಲ್ಲ...!


ಆಮೇಲೆ ಗೊತ್ತಾಗಿದ್ದು ಇಷ್ಟು...


ನನ್ನ ಗೆಳೆಯ ಅವರೆಲ್ಲರಿಗೂ  ಸಹಾಯ ಮಾಡಿದ್ದ...
ಅವರ ಮಕ್ಕಳ ಓದಿಗೆ...
ಕೆಲವರಿಗೆ ಮನೆ ಕಟ್ಟುವಾಗ ಹಣಕಾಸಿನ ನೆರವನ್ನು ಕೊಟ್ಟಿದ್ದ...


ತಾನು ಕೊಟ್ಟ ಹಣವನ್ನು ಯಾವತ್ತೂ ವಾಪಸ್ ಕೇಳಿರಲಿಲ್ಲ...


ಆದರೂ..
ಆ ಬಂಧುಗಳು ಇತ್ತ ಕಡೆ ತಲೆಹಾಕಿಯೂ ನೋಡಲಿಲ್ಲ...


ಇಲ್ಲಿ ಬಂದರೆ ಹಣವನ್ನು ಕೊಡಬೇಕಾಗುತ್ತದೆ ಅಂತ ಬರಲಿಲ್ಲವಾ?..


ಬೇರೆ ಏನೇ ಮನಸ್ತಾಪ ಆಗಿದ್ದರೂ ..
ಇಂಥಹ ಸಮಯದಲ್ಲಿ ಹಗೆತನ ಸಾಧಿಸುವದು ಸರಿ ಅಲ್ಲ.. ಅಲ್ಲವೇ?


ಆ ಹೆಣ್ಣುಮಗಳಿಗೆ ಅಂಥಹ ಸಮಯದಲ್ಲಿ  ಧೈರ್ಯ ಬೇಕಾಗಿತ್ತು...
ಸಲಹೆ.. ಮಾರ್ಗದರ್ಶನ ಬೇಕಾಗಿತ್ತು...


ಎಷ್ಟೇ ಓದಿದ್ದರೂ...
ಬದುಕಿನ ಅನುಭವ ಇದ್ದರೂ..
"ಹಣದ ಜೊತೆಗಿನ ಸಂಬಂಧಗಳು ಬಹಳ ವಿಚಿತ್ರ.."


ಹಣಕ್ಕೆ ರಕ್ತ ಮಾಂಸ ಗಳಿಲ್ಲ...
ಭಾವಗಳಿಲ್ಲ ...
ಸಂಬಂಧಗಳನ್ನು ಹೀರಿ ಬಿಡುತ್ತದೆ...


ತುಂಬಾ ನಿರ್ದಯಿ...
ಹಣಕ್ಕೆ..
ಮಾನವೀಯತೆ.. .. ಸಂವೆದನೆಯಿಲ್ಲ.....


...................................................... .......................


ಇವತ್ತು ಬೆಳಿಗ್ಗೆ  ಗಣಪತಿ ಫೋನ್ ಮಾಡಿದ್ದ...


" ಆತ ಹೋಗಿಬಿಟ್ಟನಂತೆ ......... !! "


ಮನಸ್ಸೆಲ್ಲ ಕದಡಿ ಹೋಯಿತು....!


ಮೈತುಂಬಾ ಕೆಲಸವಿದ್ದರೂ ಮಾಡಲಿಕ್ಕೆ ಮನಸ್ಸಿಲ್ಲ....


ನನ್ನ ಗೆಳೆಯನ ಸಂಬಂಧಿಗಳು...
ಆ ...
ಡಾಕ್ಟರ್  ನೆನಪಾಗುತ್ತಾರೆ ....


" ಅಪರೇಶನ್ ತುಂಬಾ ಚೆನ್ನಾಗಿ ಆಯ್ತು....
ಇನ್ನೊಂದು ವಾರದಲ್ಲಿ ಮನೆಗೆ ಕರೆದುಕೊಂಡು ಹೋಗಿ...."


.............................................................


ವಿಶ್ವವನ್ನೇ ಗೆದ್ದ " ಅಲೆಕ್ಸಾಂಡರ್  " ..
ತನ್ನ ಅಂತಿಮ ಆಸೆಯನ್ನು ತನ್ನ ಆತ್ಮೀಯರಿಗೆ ಹೇಳುತ್ತಾನೆ..


"ನನ್ನ ಅಂತಿಮ ಯಾತ್ರೆಯಲ್ಲಿ..
ನನ್ನ ಹೆಣವನ್ನು ...
ನಾಲ್ಕು ಜನ ವೈದ್ಯರು ಹೊತ್ತುಕೊಂಡು ಹೋಗಬೇಕು..."


ಅವನ ಆತ್ಮೀಯರಿಗೆ ಆಶ್ಚರ್ಯವಾಯಿತಂತೆ..


"ಯಾಕೆ... ಹೀಗೆ..?... !.."


"ಅದರ ಉದ್ದೇಶ ಇಷ್ಟೆ...
ಈ ಜಗತ್ತಿನಲ್ಲಿ ..
ಯಾವ ವೈದ್ಯರ ಬಳಿಯೂ  ಸಾವಿಗೆ ಔಷಧವಿಲ್ಲ... !


ಸಾವನ್ನು  .. ...
ಗುಣಪಡಿಸಲು ಯಾರಿಂದಲೂ ಸಾಧ್ಯವಿಲ್ಲ... !!...... "


...........................................................................................



ಅವನ ಅಪಘಾತದ ಸುದ್ಧಿ ...
ಕೇಳಿದಾಗಲಿನಿಂದ ಮನಸ್ಸು ಗಲಿಬಿಲಿ ಗೊಂಡಿತ್ತು...


ನಾವು ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತೇವೆ...
ಪ್ರತಿಯೊಂದನ್ನೂ ವಿಚಾರ ಮಾಡಿಯೇ ನಿರ್ಧಾರ ತೆಗೆದು ಕೊಳ್ಳುತ್ತೇವೆ...


ಏನೇ ಮಾಡಿದರೂ ಸಾವು ಮಾತ್ರ ನಮಗೆ..
ನಮ್ಮ ನಿಯಂತ್ರಣಕ್ಕೆ ಮೀರಿದ್ದು...


ಸ್ಮಶಾನ ವೈರಾಗ್ಯವೆಂದರೆ ಇದೇ ಇರಬೇಕು...


ಅಲ್ಲಿ ಚಿತಾಗಾರಕ್ಕೆ ದೇಹವನ್ನು ಕಳಿಸಿ..
ಕಣ್ಣೆದುರಿಗೆ ಅವನ ದೇಹ ಬೂದಿಯಾಗಿದ್ದು ನೋಡಿದೆ...


ಮನಸ್ಸೆಲ್ಲ ಭಾರವಾಗಿ..
ಬೇಜಾರದಿಂದ ಮನೆಗೆ ಬಂದೆ...


ಹಸಿವಾಗಿತ್ತು..


ತಿನ್ನಲು ಮನಸ್ಸಿಲ್ಲವಾಗಿತ್ತು...


ನಮ್ಮ ಬದುಕು ..
ಓಡುತ್ತಲೇ ಇರುತ್ತದೆ...


ನಮಗಾಗಿ..
ನಮ್ಮ ದುಃಖಕ್ಕಾಗಿ ..
ನಿಲ್ಲುವದೇ ಇಲ್ಲ... ಅಲ್ಲವಾ?...


ಎಲ್ಲೋ ಒಂದು ಕಡೆ ಕುಳಿತು ..
ಮನಸ್ಸು ಹಗುರ ಆಗುವವರೆಗೆ ಅತ್ತು ಬಿಡೋಣ ಆಂದರೆ ...
ಅಳುವದೂ  ಕಷ್ಟ...


ಗೆಳೆಯರೆಲ್ಲ ...
ಒಬ್ಬಬ್ಬರಾಗಿ  ಹೋಗುತ್ತಿದ್ದಾರೆ.....



ನಮ್ಮ ಸರದಿ... ಯಾವಾಗ ಇದೆಯೋ.... !





31 comments:

Badarinath Palavalli said...

ನಿಮ್ಮ ಗೆಳೆಯ ಬೇಗ ಗುಣ ಮುಖವಾಗುವರು ಎಂದು ಆಶಿಸಿದ್ದೆವು. ಆದರೆ ಅವರ ಅಕಾಲ ಮರಣ ನೋವು ತರಿಸಿತು.

ಅಸ್ವಸ್ಥರಾದಾಗ, ಅಪಘಾತವಾದಾಗ, ಕೆಲಸ ಕಳಕೊಂಡಾಗ ಮತ್ತು ಸಾವು ಸಂಭವಿಸಿದಾಗ ನೆಂಟರಿಷ್ಟರ ನಡೆದುಕೊಳ್ಳುವ ಅಮಾನವೀಯ ನಡೆ ನೋಡಿದ್ದೇವೆ. ಇಂತಹ ಕೆಟ್ಟ ದುನಿಯಾದಲ್ಲಿ ನಿಮ್ಮಂತಹ ಸಹೃದಯರು ಭಗವತ್ ಸ್ವರೂಪರು.

ವೈದ್ಯ ನಿಮಿತ್ತ ಮಾತ್ರ. ಕೀಲಿ ಕೈ ಪರಮಾತ್ಮನಲ್ಲಿದೆ.

ಅವರ ಕುಟುಂಬ ನೆಮ್ಮದಿ ನೆಲೆ ಕಾಣಲಿ.

ಚುಕ್ಕಿಚಿತ್ತಾರ said...

ಪ್ರಕಾಶಣ್ಣ..
ಏನು ಹೇಳಲೂ ತೋಚುತ್ತಿಲ್ಲ. ಅವರ ಮನೆಯವರಿಗೆ ದು:ಖ ಸಹಿಸುವ ಶಕ್ತಿ ಕೊಡಲಿ ದೇವರು..

Ittigecement said...

ಪ್ರೀತಿಯ ಬದರಿ ಸರ್...

ಡಾಕ್ಟರ್ ಹೇಳಿದ ಮಾತನ್ನು ನಾವೆಲ್ಲರೂ ನಂಬಿದೆವು...

"ಅವಶ್ಯಕತೆ ಇದ್ದಲ್ಲಿ ತಜ್ಞ ಡಾಕ್ಟರನ್ನೂ ಕರೆಸಿ...
ಎಷ್ಟೇ ಖರ್ಚಾದರೂ ಪರವಾಗಿಲ್ಲ" ಅಂತ ಅವರ ಬಳಿ ವಿನಂತಿಸಿದ್ದೆವು..

ಡಾಕ್ಟರ್ ಹೇಳಿದ್ದು ನಿಜ.. ಅವರು ಮಾಡಿದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು..
ಆದರೆ ಬೇರೆ ಸಮಸ್ಯೆ ತಲೆದೋರಿತು...

ಯಾರ ಆಯಸ್ಸು ಯಾರಿಗೆ ಗೊತ್ತು?

ಆದರೆ ಅವನ ಬಂಧುಗಳು ನಡೆದುಕೊಂಡ ರೀತಿ ಮಾತ್ರ ತುಂಬಾ ನೋವು ತರಿಸಿತು...
ಇಂದು ಚಿತಾಗಾರಕ್ಕೂ ಸಹ ಬರಲಿಲ್ಲ...

ಏನೇ ನಡೆದಿರ ಬಹುದು...
ಸತ್ತ ವ್ಯಕ್ತಿ ಇವರಿಗೆ ಹಣಕಾಸಿನ ಸಾಹಾಯವನ್ನು..
ಅವರ ಅವಶ್ಯಕತೆಯಲ್ಲಿ ಮಾಡಿದ್ದಾನೆ....

ಸತ್ತಾಗಲೂ ದ್ವೇಷವೆ? ಹಠ ಸಾಧಿಸುವದೆ ?

Srikanth Manjunath said...

ಬಂಧು ಬಳಗ ನೆಂಟರೆಲ್ಲರು ಗಂಟು ಹೋಗಲು ಇನ್ನೆಲ್ಲಿ ನಿಲುವರು..ಲಾಭ ಯಾರಿಗೋ..ಸಂತಾಪ ಯಾರಿಗೋ...
ನಿಮ್ಮ ಲೇಖನ ಓದುತಿದ್ದ ಹಾಗೆ ಭೂತಯ್ಯನ ಮಗ ಅಯ್ಯು..ಚಿತ್ರದ ಗೀತೆ ನೆನಪಿಗೆ ಬಂತು...
ಹಣಕ್ಕೆ ಕೊಡುವ ಮಹತ್ವ ಬಹುಶಃ ಗುಣಕ್ಕೆ, ಮಾನವೀಯತೆಗೆ ಕೊಟ್ಟರೆ..ಎಷ್ಟು ಚೆನ್ನಾಗಿರುತ್ತೆ ಜಗ...
ಹೋದವಾರ ನನ್ನ ಅಪ್ಪನ ವೈಧಿಕ ಮಾಡುತಿದ್ದಾಗ ಮಾಡಿಸುತಿದ್ದ ಪುರೋಹಿತರು ಹೇಳಿದರು..
"ಆಸ್ಪತ್ರೆಯಲ್ಲಿದ್ದಾಗ, ಸತ್ತ ಮನೆಯಲ್ಲಿದ್ದಾಗ ಆಶ್ವಾಸನೆ ಕೊಡುವ ನೆಂಟರು,
ಬಂಧುಗಳು ಮತ್ತೆ ಕೈಗೆ ಸಿಗುವುದಿಲ್ಲ ಅಂತ.." ಎಷ್ಟು ನಿಜ..ಈ ಮಾತುಗಳು..
ಬರಿ ಸಿಹಿ ಸುಳ್ಳು ಆಶ್ವಾಸನೆ ಕೊಡುವ ಬದಲು ವಸ್ತು ನಿಷ್ಠ ಮಾಹಿತಿ ಕೊಟ್ಟರೆ ಪರಿಸ್ಥಿತಿ ಎದುರಿಸಲು ಧೈರ್ಯ, ಸ್ಥೈರ್ಯ ಬರುತ್ತದೆ..
ಮನಸಿಗೆ ನೋವಾಗುತ್ತದೆ ಈ ಬಂಧು ಬಳಗ, ಕೆಲ ಡಾಕ್ಟರುಗಳ ಮಾತುಗಳು..... :-(...

Anuradha said...

ತುಂಬಾ ಸಂಕಟವಾಯಿತು .ಕಷ್ಟದಲ್ಲಿ ಬಂಧುಗಳ ಬಣ್ಣ ಬಯಲಾಯಿತಲ್ಲ , ಗೆಳೆಯರಿರಬೇಕು .ನಿಮ್ಮಂಥ ಗೆಳೆಯರಿರಬೇಕು .ನಿಮ್ಮ ತೀರಿಹೋದ ಗೆಳೆಯನ ಪರಿಚಯ ನನಗಿದೆಯೇ ?
ಅವರ ಮನೆಯವರಿಗೆ ಈ ಕಷ್ಟ ಎದುರಿಸುವ ಧೈರ್ಯ ಭಗವಂತ ಕೊಡಬೇಕಷ್ಟೇ

Srikanth Manjunath said...

ಸಾವು ಪರಿಸ್ಥಿತಿಯನ್ನ, ಮನೋವಿಕಾರವನ್ನ ಬೆತ್ತಲೆ ಮಾಡುತ್ತದೆ....ಹಣ ಮುಖ್ಯ ಎನ್ನುವ ವರ್ಗ..ಎಂದಿಗೂ ನೆಮ್ಮದಿ ಪಡೆಯೋಲ್ಲ..ನನ್ನ ಅಪ್ಪ ಇಹಲೋಕ ತ್ಯಜಿಸಿದಾಗ..ಅವರ ಸ್ವಂತ ತಮ್ಮ ಹಾಗು ಕುಟುಂಬ ಸುಮಾರು ೨೨೫ ಕಿ.ಮಿ. ಪ್ರಯಾಣ ಮಾಡಿ ನೋಡಲು ಬಂದು..ಯಾರ ಹತ್ತಿರವೂ ಸರಿಯಾಗಿ ಮಾತಾಡದೆ...ಅಂತ್ಯ ಸಂಸ್ಕಾರಕ್ಕೂ ನಿಲ್ಲದೆ..ಹೋಗಿದ್ದು ಮನದಲ್ಲಿ ಕಪ್ಪು ಚುಕ್ಕಿ ಮಾಡಿದೆ...ದೇವರೇ ಕಾಪಾಡಬೇಕು ಇಂತಹ ಮನ"ಸುಳ್ಳ"ವರನ್ನು...ಬಹಳ ಕಹಿ ಸುದ್ಧಿ..ಮನಸು ತುಂಬಾ ಭಾರವಾಗುತ್ತದೆ..ನಿಮ್ಮ ಸ್ನೇಹಿತರು ನಮ್ಮ ಸ್ನೇಹಿತರು..ದೇವರು ಹಾಗು ನಿಮ್ಮ ಸ್ನೇಹಿತರು ಕುಟುಂಬಕ್ಕೆ ಧೈರ್ಯ ತುಂಬಲಿ ಎಂದು ಬೇಡುತ್ತೇನೆ...

Badarinath Palavalli said...

ಬಂಧುಗಳೇ ಹಾಗೇ ಪ್ರಕಾಶಣ್ಣ. ಅವರು ಬರೀ ಸಮಾರಂಭ, ಊಟ ಮತ್ತು ಉಡುಗೊರೆಗಳಿಗೆ ಮಾತ್ರ. ಕಷ್ಟಕ್ಕೆ ಅವರು ಒದಗುವುದೇ ಇಲ್ಲ.

ಸಹಾಯ ಅಂದರೆ ಮಾನಸಿಕ ಸ್ಥೈರ್ಯವೂ ಆಗಬಹುದು ಅಂತ ಅವರಿಗೆ ಅರ್ಥವೇ ಆಗುವುದಿಲ್ಲ. ಸಹಾಯ ಅಂದರೆ ಬರೀ ಹಣಕಾಸಿನ ಸಹಾಯ ಅಂದುಕೊಳ್ಳುತ್ತಾರೆ.

ಶಸ್ತ್ರ ಚಿಕಿತ್ಸೆಯಾದರೂ ಬೇರೆ ರೀತಿಯ ಸಮಸ್ಯೆಗಳು ತೋರಿದರೆ ವೈದ್ಯರಾದರೂ ಪಾಪ ಏನು ಮಾಡಬಲ್ಲರು ಹೇಳಿ.

Dr.D.T.Krishna Murthy. said...

ಪ್ರಕಾಶಣ್ಣ;ಬರಹ ಓದಿ ಮನಸ್ಸು ಭಾರವಾಯಿತು!ಸಮಯಕ್ಕಾದವರೇ ನೆಂಟರು!ಅಲ್ಲವೇ?

Ittigecement said...

ಚುಕ್ಕಿ ಚಿತ್ತಾರ..
ವಿಜಯಾ..

ಅವನ ಅಪಘಾತದ ಸುದ್ಧಿ ಕೇಳಿದಾಗಲಿನಿಂದ ಮನಸ್ಸು ಗಲಿಬಿಲಿ ಗೊಂಡಿತ್ತು...
ನಾವು ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತೇವೆ...
ಪ್ರತಿಯೊಂದನ್ನೂ ವಿಚಾರ ಮಾಡಿಯೇ ನಿರ್ಧಾರ ತೆಗೆದು ಕೊಳ್ಳುತ್ತೇವೆ...

ಏನೇ ಮಾಡಿದರೂ ಸಾವು ಮಾತ್ರ ನಮಗೆ..
ನಮ್ಮ ನಿಯಂತ್ರಣಕ್ಕೆ ಮೀರಿದ್ದು...

ಸ್ಮಶಾನ ವೈರಾಗ್ಯವೆಂದರೆ ಇದೇ ಇರಬೇಕು...

ಅಲ್ಲಿ ಚಿತಾಗಾರಕ್ಕೆ ದೇಹವನ್ನು ಕಳಿಸಿ..
ಬೇಜಾರದಿಂದ ಮನೆಗೆ ಬಂದೆ...

ಹಸಿವಾಗಿತ್ತು..

ತಿನ್ನಲು ಮನಸ್ಸಿಲ್ಲವಾಗಿತ್ತು...

ಬದುಕು ಓಡುತ್ತಲೇ ಇರುತ್ತದೆ...
ನಮಗಾಗಿ..
ನಮ್ಮ ದುಃಖಕ್ಕಾಗಿ ನಿಲ್ಲುವದೇ ಇಲ್ಲ... ಅಲ್ಲವಾ?

Raghu.B.M said...

ಕಂಬನಿ ಬರೆಸುತ್ತಿದೆ.. ಆದರು ೧ ಕಡೆ ಹಣದ ಹಿರೆಮೆಯೇ ಜಾಸ್ತಿ.. ಪ್ರಕಾಶಣ್ಣ ಓದಿ ಮನಸ್ಸು ಭಾರವಾಯಿತು.. ಹಣ ಕೊಟ್ಟ ಗೆಳೆಯರು ಈಗಿನ ದಿನದಲ್ಲಿ ನಾಪತ್ತೆಯಗುತಿದ್ದಾರೆ .. ಹುಟ್ಟಿಸಿದ ದೇವರೇ ಹುಲ್ಲು ಮೆಯಿಸುವನೆ??

umesh desai said...

ಹೆಗಡೇಜಿ..ಇಂಥಾ ಸಂಧರ್ಬದಲ್ಲಿ ಯಾವುದೇ ಮಾತು ಕೃತಕ ಆಗುವ ಅಪಾಯವಿದೆ..
ಈ ನೆಂಟರು, ಬಂಧುಗಳು ಅವರ ಎಲ್ಲ ತರಹದ ಚೆಹರೆ ನೋಡಿಯಾಗಿದೆ..
ನಿಜ ಸಮಯಕ್ಕಾಗುವರೇ ನೆಂಟರು ನಿಜ

ದಿನಕರ ಮೊಗೇರ said...

ಪ್ರಕಾಶಣ್ಣ,
ಮನಸ್ಸು ತುಂಬಾ ಭಾರವಾಯ್ತು..... ಇದನ್ನೆಲ್ಲಾ ಎಲ್ಲೋ ಓದಿದ್ದೆವು..... ತುಂಬಾ ಹತ್ತಿರದಲ್ಲೇ ನಡೆದಾಗ, ಎಲ್ಲರ ಮೇಲೆ ನಂಬಿಕೆ ಹೋಗತ್ತೆ..... ಬದುಕು ಎನೆಲ್ಲಾ ಕಲಿಸತ್ತೆ...... ಅವರಿಗೂ ಇನ್ನು ಹೇಗೋ ಕಲಿಸತ್ತೆ ಬಿಡಿ......

take care...

ಸವಿಗನಸು said...

ಅವರ ಮನೆಯವರಿಗೆ ದು:ಖ ಸಹಿಸುವ ಶಕ್ತಿ ಕೊಡಲಿ...

ಈಶ್ವರ said...

ಮನಕ್ಕೆ ಬೇಸರವಾಯಿತು. ಅವರ ಮನೆಯವರಿಗೆ ಸಹನೆಯ ಶಕ್ತಿ ಸಿಗಲಿ. ಕಾಲವೇ ಹಾಗೆ ಪ್ರಕಾಶಣ್ಣ.

Vani Satish said...

Really sad :(

Kutumbadavarige,snehitarige dukha sahisuva shakti aa devaru kodali endu prarthane.

Ittigecement said...

ಶ್ರೀಕಾಂತ್...

ನಿಮ್ಮ ಮಾತು ನೂರಕ್ಕೆ ನೂರು ಸತ್ಯ....

ನನ್ನ ಸ್ನೇಹಿತ ಮತ್ತು ಅವರ ಬಂಧುಗಳ ನಡುವೆ ಏನೇ ನಡೆದಿರ ಬಹುದು...

ಹಣಕಾಸಿನ ವಿಚಾರ ಒಂದೇ ಇರಲಿಕ್ಕಿಲ್ಲ...

ಅಪಘಾತವಾಗಿ ಬಿದ್ದಾಗ ..
ವಿಷಯವನ್ನು ಆತನ ಮಡದಿ ಹೇಳಿದಾಗ ..
ಅವಳ "ಅಸಹಾಯಕತೆ" ಅವರಿಗೆ ಅರ್ಥವಾಗುವದಿಲ್ಲವೆ?

ಅಂಥಹ ವಿರಸವಿದ್ದಿದ್ದರೆ ಅವನ ಹೆಂಡತಿ ಫೋನ್ ಮಾಡುತ್ತಿದ್ದಳೆ?

ಬದುಕಿದ್ದಾಗ ದ್ವೇಷ... ಹಠ ಸಾಧನೆ ಮಾಡೋಣ..

ಆಸ್ಪತ್ರೆಯಲ್ಲಿದಾಗ... ಸಹಾಯಕ್ಕಾಗಿ ಬನ್ನಿ ಎಂದಾಗಲೂ "ಹಠ ಸಾಧನೆಯೆ..?"

ಇದು ಸರಿ ಅನ್ನಿಸಲಿಲ್ಲ... ಮತ್ತು ಜೀರ್ಣವಾಗುತ್ತಿಲ್ಲ...

Ittigecement said...

ಅನುರಾಧಕ್ಕಾ....

ಅವರು ಬಹುಷಃ ನಿಮಗೆ ಪರಿಚಯ ಇರಲಿಕ್ಕಿಲ್ಲ...
ನನ್ನ ಸ್ನೇಹಿತ ವೃತ್ತಿಯಲ್ಲಿ "ಬಂಗಾರದ ಕೆಲಸದವನು"
ಜ್ಯೂವೆಲ್ಲರಿ ಅಂಗಡಿ ಇದೆ...

ಅಂದು ರಾತ್ರಿ ಮಕ್ಕಳು "ಐಸ್ ಕ್ರೀಮ್" ಬೇಕು ಅಂದಾಗ...
ಹೆಂಡತಿಯ ಸ್ಕೂಟಿ ತೆಗೆದುಕೊಂಡು ಹೋಗಿದ್ದನಂತೆ...
ಮನೆಯಲ್ಲಿ ಎರಡು ಕಾರು ಇದೆ..

ಬಹುಷಃ ಕಾರು ತೆಗೆದು ಕೊಂಡು ಹೋಗಿದ್ದರೆ ಈ ಥರಹ ಆಗುತ್ತಿರಲಿಲ್ಲವೇನೊ...

ಆ ಮಕ್ಕಳಿಗೆ ಇನ್ನು "ಐಸ್ ಕ್ರೀಮ್" ತಿನ್ನುವಾಗಲೆಲ್ಲ "ಅಪ್ಪನ" ನೆನಪಾಗುತ್ತೇನೊ...

shubha hegde said...

sometimes money rules and dominates the relationship...this is the good example u have explained.. there is more to learn abt the life that is never ending till to death.

Anitha Naresh Manchi said...

ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರು ಇಲ್ಲ..

ಮನಸಿನಮನೆಯವನು said...

ಶತ್ರುವಾದರೂ ಇಂತಹ ವಿಷಯದಲ್ಲಿ ಜೊತೆಯಾಗುತ್ತಾರೆ, ಆದರೆ ಬಂಧುಗಳು ಬಾಳೆಎಲೆ ಊಟಕ್ಕೆ ಮಾತ್ರ ಸೀಮಿತ ಎನ್ನುವಂತಾಯಿತೇ..

ಸಂಧ್ಯಾ ಶ್ರೀಧರ್ ಭಟ್ said...

ಕಥೆ ಓದಿ ಮನಸ್ಸು ಅಳುತ್ತಿದೆ..
ಹಣದ ಮುಂದೆ ಎಲ್ಲವೂ ಗೌಣವಾ??
ಛೇ ಜಗತ್ತು ಯಾಕೆ ಈ ರೀತಿ ಬದಲಾಗುತ್ತಿದೆ..

Raghunandan K Hegde said...

ಹಣ ಯಾಕೆ ಬಾಂಧವ್ಯಗಳ ಕೊಲ್ಲುತ್ತಿದೆ, ಜೀವಂತಿಕೆಯಿಲ್ಲದ ಕಾಗದದ ತುಂಡಿಗೆ ಜೀವವಿರುವ ಜನರು ಯಾಕೆ ಹೀಗಾಗಿದ್ದಾರೆ...

ಮನಸ್ಸು ಮೂಕ..

ಸಾವು ನೋವುಂಟುಮಾಡಿತು - ಗೆಳೆಯನದ್ದೂ, ಬಂಧಗಳದ್ದೂ

ಆಕೆಗೆ, ಮಕ್ಕಳಿಗೆ ವಾಸ್ತವಗಳ ಎದುರಿಸುವ ಧೈರ್ಯ ನೀಡಲಿ ಭಗವಂತ..

Ittigecement said...

ಶ್ರೀಕಾಂತ್ ಜೀ...

ಸಾವು ...
ಮತ್ತು ಬದುಕು ಬಹಳ ಆತ್ಮೀಯ ಸ್ನೇಹಿತರಂತೆ...

" ಸಾವು " ಒಮ್ಮೆ " ಬದುಕನ್ನು" ಕೇಳಿತಂತೆ....

" ನಾನು ಜನರಿಗೆ ..
ಈ ಜಗತ್ತಿನ ಜಂಜಡಗಳಿಂದ ಮುಕ್ತಿ ಕೊಡುತ್ತೇನೆ..
ಆದರೂ..
ಯಾಕೆ ಜನರೆಲ್ಲ ನಿನ್ನನ್ನು ಇಷ್ಟ ಪಡುತ್ತಾರೆ...?
ಕಷ್ಟಗಳಿದ್ದರೂ ಬದುಕನ್ನು ಪ್ರೀತಿಸುತ್ತಾರೆ..?

ನನ್ನನ್ನು ದ್ವೇಷ ಮಾಡುತ್ತಾರೆ...?"

ಆಗ ಬದುಕು ನಗು ನಗುತ್ತ ಹೇಳಿತಂತೆ...

"ನಾನು ..
ಈ ಜಗತ್ತಿನ ಅತೀ ಸುಂದರವದ "ಸುಳ್ಳು"... !

ನೀನು ...
ಈ ಜಗತ್ತಿನ ಕಹಿ ನೋವಿನಾ "ಸತ್ಯ"....

ಸಂಬಂಧಗಳು ಕೆಲವು ನಿರೀಕ್ಷೆಗಳ ನೆರಳಿನಲ್ಲೇ ಬೆಳೆದು ದೊಡ್ಡಾಗುತ್ತವೆ...
ನಿರೀಕ್ಷೆಗಳು ಹುಸಿಯಾದಾಗ ತಮ್ಮ ದಾರಿ ತಾವು ಕಂಡುಕೊಳ್ಳುತ್ತವೆ... ಅಲ್ಲವೆ?

ಜಲನಯನ said...

ಛೇ ಛೇ... ಹೌದೇನೋ...??!! ಚಾಟಲ್ಲಿ ನೀನು ನಿನ್ನ ಸ್ನೇಹಿತ ಗಂಭೀರ ಸ್ಥಿತಿಯಲ್ಲಿದ್ದಾನೆ ಅಂದಾಗ ಬೇಸರ ಆಯ್ತು ರಾತ್ರಿ ವಿಶೇಷ ನಮಾಜಿಗೆ ಹೋಗ್ತಿದ್ದೆ, ನಮಾಜಿನ ದುವಾದಲ್ಲಿ ನಿನ್ನ ಸ್ನೇಹಿತನ ಚಿಕಿತ್ಸೆ ಫಲಕಾರಿಯಾಗಲಿ ಎಂದು ಬೇಡಿಕೆ ಪ್ರಾರ್ಥನೆ... ಅವರು ಗುಣಹೊಂದಿ ಮನೆಗೆ ಬರಲಿ ಎನ್ನಬೇಕಿತ್ತೇನೋ... ನಿಜಕ್ಕೂ ಆಗಾಗ್ಗೆ ಅವರ ಬಗ್ಗೆ ಚಾಟಲ್ಲಿ ನೀನು ಹೇಳ್ತಿದ್ದರಿಂದ ನೋಡದೆಯೇ ನನಗೂ ಆತ್ಮೀಯ ಆಗಿಬಿಟ್ಟಿದ್ದರು ಆತ... !!!!!! ಅವರ ಮನೆಯವರಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿ ಆ ದೇವರು ದಯಪಾಲಿಸಲಿ.

vandana shigehalli said...

ಹಣ ಕಂಡರೆ ಹೆಣಾ ನು ಬಯಿಬಿಡುತ್ತೆ ಅಂತಾರಲ್ಲ ... ಹಾಗೆ ,
ಹಣ ಇರುವವಾಗ ನೆಂಟರು ..... ಎಲ್ಲ !
ಮನಸ್ಸೆಲ್ಲ ಕಲಕಿ ಹೋಯಿತು .............. :(

jithendra hindumane said...

ಪ್ರಕಾಶಣ್ನ, ದು:ಖದ ಸಂಗತಿ:(

jithendra hindumane said...

ಪ್ರಕಾಶಣ್ನ, ದು:ಖದ ಸಂಗತಿ:(

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ನಿಮ್ಮ ಬ್ಲಾಗ್ ಅಲ್ಲಿ ಬಂದರೆ ಲೇಖನದ ಜೊತೆ ಓದಲು ಪ್ರತಿಕ್ರಿಯೆಯಲ್ಲೂ ತುಂಬಾ ತುಂಬಾ ವಿಚಾರ ವಿನಿಮಯಗಳು ಸಿಕ್ಕುತ್ತವೆ... ಇದಕ್ಕೆ ಕಾರಣ ಸ್ನೇಹ ಸಂಬಂಧಗಳು .. & ಹೌದು ನಿಮ್ಮ ಮಾತು ನಿಜ .. ಕೆಲವು ಬಾರಿ ಆಯ್ಕೆ ಗೊಂದಲಮಯ ಸ್ನೇಹಿತರೋ , ಸಂಬಂಧಿಕರೋ ಎನ್ನುವ ವಿಚಾರದಲ್ಲಿ ಮನಸ್ಸು ಮೆತ್ತಗಾಗಿ ಅರ್ಧ ಜೀವ ಹೋದಂತೆ ಆಗಿರುತ್ತದೆ .. ಇನ್ನೂ ಅವರೆಲ್ಲರೂ ಸಮಯಕ್ಕೆ ಆಗದೇ ಇದ್ದಲ್ಲಿ .. ನಾವು ಮತ್ತು ನಮ್ಮ ಧೈರ್ಯ .. ಆಗಲ್ಲಿ ನಮ್ಮ ಸ್ನೇಹವು ಹುಟ್ಟು ಸಾವಿನ ಅರ್ಥದ ನೆನಪುಗಳ ನಡುವೆ ... :)
ಕಾಲ ಚಕ್ರ ಸುತ್ತುತ್ತಾ ಇದೆ.. ಎಗ್ಜೀಬೀಶನ್ ಅಲ್ಲಿ ಆಡುವ ಜೈಂಟ್ ವೀಲ್ ನೆನಪಾಗುತ್ತದೆ.. ಹತ್ತಿದ ಮೇಲೆ ಇಳಿಯಲೇ ಬೇಕು .. ಮತ್ತು ಇಳಿಯುವ ಮನಸ್ಸಿಲ್ಲ ಎಂದರೂ ಸಹ ನಮ್ಮ ಇಳಿಸುತ್ತಾರೆ .. ಮತ್ತೊಬ್ಬರನ್ನು ಹತ್ತಿಸಲು .. ಸುತ್ತಿಸಲು ... ಈ ಬದುಕೇ ಹಾಗೆ .. ಭಗವಂತ ಆಡಿಸಿದಂತೆ ... :)

ಸೀತಾರಾಮ. ಕೆ. / SITARAM.K said...

sambhadhagalannu motakugolisabekaadare hanavannu saala kodabeku. idu nanna anubhav nanna aatmeeya bhandhugalu dura saridaddu heegeye....
tamma kathe odi nanna bhandhugalu nenapaadaru,....
adare tamma mitra hogiddu keli bejaaraayitu... tamma kathe chintanege ede maaduttade.
avara kutumbakke evaru sthairya kodali endu bedikolluttene.

saroja said...

ನಿಮ್ಮ ಲೇಖನ ಓದುತ್ತಿದ್ದ ಹಾಗೆ ನನ್ನ ೫ ವರ್ಷದ ಹಿಂದಿನ ಸ್ಥಿತಿ ನೆನಪಿಗೆ ಬಂದು ಆಫೀಸ್ ಅನ್ನುವುದು ಮರೆತು ಕಣ್ಣೀರು ಬಂತು. ನನ್ನವರು ಕಿಡ್ನಿ ಫಲ್ಯೂರ್ ಆಗಿ ಆಸ್ಪತ್ರೆಯಲ್ಲಿದ್ದಾಗ ನಿಮ್ಮ ಸ್ನೇಹಿತನ ಹೆಂಡತಿಯ ಸ್ಥಿತಿಯಲ್ಲೇ ನಾನಿದ್ದೆ. ದುಡ್ಡಿನ ಅವಶ್ಯಕತೆ ಇರಲಿಲ್ಲ, ಆದ್ರೆ ನಿನ್ನ ಹಿಂದೆ ನಾವಿದ್ದೇವೆ ಅನ್ನುವರು ಯಾರು ಇರಲಿಲ್ಲ. ನನ್ನ ಕಡೆಯವರು ಹಾಗೂ ನನ್ನವರ ಕಡೆಯವರು, ಬಂದರೆ ಎಲ್ಲಿ ತಲೆ ಮೇಲೆ ಬರುತ್ತೋ ಅನ್ನೋ ಹಾಗೆ ದೂರವೇ ಇದ್ದರು. ಎಲ್ಲರೂ ಅವರಿಂದ ಸಹಾಯ ಪಡೆದವರೇ. ಬಹುಶ: ಡಾಕ್ಟರವರಿಗೆ ಅರಿವಿತ್ತೇನೊ "ಮಗಳು ಚಿಕ್ಕವಳು ಅನ್ನುತ್ತೀಯಾ, ದೊಡ್ಡವರು ಯಾರಾದ್ರೂ ಇದ್ದರೆ ಕರೆದುಕೊಂಡು ಬಾರಮ್ಮ" ಅಂದಾಗ ಬರಲು ಯಾರೂ ಇರಲಿಲ್ಲ. "ದೊಡ್ಡವರು ಯಾರು ಇಲ್ಲ, ನೀವು ಏನೇ ಹೇಳಿದರು ನಾನು ತಡೆದುಕೊಳ್ಳಬಲ್ಲೆ, ನಿಜ ಹೇಳಿ ಅಂದ್ರೂ ಡಾಕ್ಟರ್ ಹೇಳಿರಲಿಲ್ಲ" ೩ ತಿಂಗಳಿಗೆ ಬಾರದ ಲೋಕಕ್ಕೆ ಹೋದರು ನನ್ನವರು. ನನ್ನವರಿಂದ ಸಹಾಯ ಪಡೆದವರು ಈಗ ಹೇಳುತ್ತಿರುತ್ತಾರೆ ಸಾಯುವವರೆಗೂ ನಾವು ಅವರ ಋಣ ತೀರಿಸಲು ಆಗುವುದಿಲ್ಲ ಅಂತ ಆದರೆ ಅವರು ಸಾಯುವಾಗ ಎಲ್ಲರು ಮಾತ್ರ ನಾಪತ್ತೆಯಾಗಿದ್ದರು. ಈಗ ಎಲ್ಲರೂ ಬರುತ್ತಾರೆ, ಸೇರಿಸಬಾರದು ಅಂದುಕೊಳ್ಳುತ್ತೇನೆ, ಆದ್ರೆ ನನಗಲ್ಲದಿದ್ದರೂ ಮಗಳಿಗಾದರು ಸಂಬಂಧಗಳು ಬೇಕಲ್ಲವ ? ಸುಮ್ಮನಾಗುತ್ತೇನೆ. ಜನರ ನಿಜವಾದ ಮುಖಗಳ ಪರಿಚಯವಾಗುವು ಇಂಥ ಸಮಯದಲ್ಲೆ.

Prashanth P Channammanavar said...

ಎಲ್ಲಾ ಸಂಬದಿಕರು ಈ ತರ ಯಾವ ಸಾದನೆಗೆ ಹಟ ಸಾದಿಸುತಾರೊ ..... ಆದರೆ ಸಾಹು ಅವರನ್ನು ಬಿಡೋದಿಲ್ಲ, ಆಗ ಅವರಿಗೆ ಅವರ ತಪ್ಪಿನ ಬಗ್ಗೆ ಅರಿವಾದರೆ ಅಧೆ ದೊಡ್ಡ ಉಪಕಾರ .... ಎನಂತಿರಿ ಪ್ರಕಾಶ್ ಅಣ್ಣ