Wednesday, June 8, 2011

ಎಲ್ಲವೂ.. ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....




ಎಲ್ಲವೂ ಸರಿ ಇದ್ದು... 
ಸಂತೋಷ.. ನಗು ಜಾಸ್ತಿಯಾದಾಗ ...
ನನಗೆ ಒಳಗೊಳಗೆ ಸಣ್ಣ ಆತಂಕ ಶುರುವಾಗುತ್ತದೆ..


ಅದು ನನ್ನ  ಪುಸ್ತಕ  ಬಿಡುಗಡೆಯ ದಿನಗಳು..


ಸಂತೋಷ.. ಸಡಗರ.. ಸಂಭ್ರಮ...!


ರಾತ್ರಿ ಸರಿಯಾಗಿ ನಿದ್ದೆ ಕೂಡ ಬರುವದಿಲ್ಲವಾಗಿತ್ತು..
ಕಾರ್ಯಕ್ರಮವೆಲ್ಲ ಹೇಗಾಗಬಹುದು ಎನ್ನುವ ಆತಂಕ..!


ರಾತ್ರಿ ಸುಮಾರು ಒಂದು ಗಂಟೆ...


ಫೋನ್.. !! 
ನೋಡಿದೆ.. ನಾಗು ಮನೆಯಿಂದ.. !!


ಲಗುಬಗೆಯಿಂದ. .. ಕಾಲ್ ತೆಗೆದು ಕೊಂಡೆ..


ನಾಗು ಹೆಂಡತಿ... ಅಳುತ್ತಿದ್ದಳು..!


"ಪ್ರಕಾಶು ಭಾವ.. 
ಇವರಿಗೆ ಹಾರ್ಟ್ ಎಟಾಕ್ ಆಗಿದೆ..ಜಲ್ದಿ ಬಾ..!!.."


ನನಗೆ ಗಾಭರಿಯಾಯಿತು..!!


"ಬರ್ತೀನಿ.. 
ಹೆದರ ಬೇಡ.. ಅಂಬ್ಯುಲೆನ್ಸ್ ಕಳಿಸ್ತೀನಿ.. 
ನಾನು ಬರುವತನಕ ಕಾಯಬೇಡಿ.. "


ಎಂದು ಲಗುಬಗೆಯಿಂದ ಫೋನ್ ಡೈರಕ್ಟರಿ ತಡಕಾಡಿ ...
ಅಂಬ್ಯುಲೆನ್ಸ್ ಗೊತ್ತು ಮಾಡಿದೆ...!


ನನಗೆ ದಿಕ್ಕು ತೋಚದಂತಾಯಿತು.. ದಿಗ್ಮೂಢನಾಗಿ ಕುಳಿತೆ...


"ನೀವು ಒಬ್ಬರೆ ಹೋಗುವದು ಬೇಡ.. ನಾನು ಬರ್ತೀನಿ.." 


ನನ್ನಾಕೆ ಅಂದಳು.. 
ಬಹುಶಃ  ನಾನು ಅಧೀರನಾಗಬಹುದು ಅಂತ..


"ಬೇಡ.. 
ಈ ಅಪರಾತ್ರಿಯಲ್ಲಿ ನೀನು ಬರುವದು ಬೇಡ..
ನಾನು ಹೋಗ್ತೀನಿ.. ಚಿಂತೆ ಬೇಡ..
ಅಲ್ಲಿ ಹೋದ ಮೇಲೆ ಫೋನ್ ಮಾಡ್ತೇನೆ.."


ಹಾಗೆ ಎದ್ದು ಹೊರಟೆ..


"ಕ್ಯಾಷ್.. ಲೈಸನ್ಸ್, ಮೊಬೈಲ್.. ತಗೊಳ್ಳಿ..."


ನನ್ನಾಕೆ ಬ್ಯಾಗ್ ಕೊಟ್ಟಳು.. ನಾನು ಹೊರಟೆ..


"ಕಾರ್ ಸ್ಪೀಡ್ ಬಿಡಬೇಡಿ... ನಾಗೂಗೆ ಏನೂ ಆಗುವದಿಲ್ಲ.."


ಅವಳು ನನ್ನ ಧೈರ್ಯಕ್ಕೆ ಹೇಳಿದ ಮಾತುಗಳು.. 
ನನಗೆ ಗೊತ್ತಾಗುತ್ತಿತ್ತು...


ನಾಗುವಿಗೆ ಹಾರ್ಟ್ ಎಟಾಕ್.. !!
ನಾನು.. !
ನನ್ನ ಗೆಳೆಯರು...!
ನಾವೆಲ್ಲ ಸಾಯುವ ದಿನಗಳು ಹತ್ತಿರ ಬಂದುಬಿಟ್ಟೀತಾ..?

ಇಷ್ಟು ಬೇಗ....?

ನನ್ನ ನಾಗು ಸಾಯ್ತಾನಾ?? !! 
ಅವನ ಸಾವು ನಾನು ನೋಡಬೇಕಾ..?


ಕಣ್ಣೆಲ್ಲ ಮಂಜಾದವು.. ಕಾರನ್ನು ಪಕ್ಕಕ್ಕೆ ಹಾಕಿಕೊಂಡೆ..


ಸ್ವಲ್ಪ ಹೊತ್ತಿನ ನಂತರ ಧೈರ್ಯ ತಂದುಕೊಂಡೆ..


ನನಗೆ  ನಾನೇ ಸಮಾಧಾನ ಮಾಡಿಕೊಂಡೆ...
ಸಾವರಿಸಿಕೊಂಡೆ...
ನನ್ನ ನಾಗು ಇನ್ನೂ ಇದ್ದಾನೆ.. !
ಅವನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು...!


ಜಾಗ್ರತವಾದೆ...


ಹೆಚ್ಚಿಗೆ ತೊಂದರೆ ತೆಗೆದುಕೊಳ್ಳದೆ.. ನಾರಾಯಣ ಹೃದಯಾಲಯಕ್ಕೆ ಬಂದೆ...


ನನ್ನನ್ನು ನೋಡಿ ನಾಗುವಿನ ಮಡದಿ ಓಡೋಡಿ ಬಂದಳು...


" ಈಗ ಐಸಿಯೂ ದಲ್ಲಿಟ್ಟಿದ್ದಾರೆ... !
ಡಾಕ್ಟರ್ ಇನ್ನೂ ಹೊರಗೆ ಬಂದಿಲ್ಲ..."


ಬಿಕ್ಕಿ.. ಬಿಕ್ಕಿ ಅಳುತ್ತಿದ್ದಳು..... 
ಅವಳಿಗೆ ಸಮಾಧಾನದ ಮಾತಾಡಿದೆ...


"ನಾಗುವಿಗೆ ಏನೂ ಆಗುವದಿಲ್ಲ... 
ಧೈರ್ಯವಾಗಿರು...ದೇವರಿದ್ದಾನೆ.."


ಇಷ್ಟು ಹೇಳುವಾಗ ಗಂಟಲು ಉಬ್ಬಿ ಬಂತು.. 
ಮುಂದೆ ಹೇಳಲಾಗಲಿಲ್ಲ...

ಅಸಹಾಯಕ...
ಅಸಹನೀಯ ಕ್ಷಣಗಳು...!

ಏನಂತ ಸಮಾಧಾನ ಪಡಿಸಲಿ?
ಹೇಗೆ?


ಏನು ಹೇಳಲಿ?


ಇವರಿಬ್ಬರ  ಎಷ್ಟೊಂದು ನಗುವಿನಲ್ಲಿ...
ಖುಷಿಯ ಕ್ಷಣಗಳಲ್ಲಿ ನಾನು ಸಾಕ್ಷಿಯಾಗಿದ್ದೆ...!


ಇಬ್ಬರೂ ಸುಮ್ಮನೆ ಕುಳಿತೆವು....
ಮತ್ತೆ ಅವಳೇ ಮಾತು ಶುರುಮಾಡಿದಳು..


ಅವಳಿಗೆ ನನ್ನ ಮೇಲೆ ಅಪಾರ ಭರವಸೆ...


"ಭಾವ.. 
ಸಾಯಂಕಾಲ ಸರಿಯಾಗಿಯೇ ಇದ್ದರು.. 
ಊಟ ಚೆನ್ನಾಗಿಯೇ ಮಾಡಿದ್ದರು...
ಟಿವಿ ನೋಡುತ್ತ ಕುಳಿತ್ತಿದ್ದವರಿಗೆ ..
ಇದ್ದಕ್ಕಿದ್ದಂತೆ..ಮೈ ಬೆವರತೊಡಗಿತು.. !
ಎದೆ ನೋವು ಅಂತ ಹೇಳಿದರು...
ನನಗೆ ಗಾಭರಿಯಾಯಿತು.. ತಕ್ಷಣ ನಿನಗೆ ಫೋನ್ ಮಾಡಿದೆ..


ಇಲ್ಲಿಗೆ ಬರುತ್ತಿರುವಾಗಲೂ.. " ಪ್ರಕಾಶು ಬಂದನಾ?.."  ಅಂತಿದ್ದರು..."


ನನಗೆ ನಾಗುವಿನ ಪ್ರೀತಿ ಕಣ್ಣಿಗೆ ಕಟ್ಟಿತು...


ನನಗೆ ಕಂಟ್ರೋಲ್ ಮಾಡಿಕೊಳ್ಳುವದು ಕಷ್ಟವಾಯಿತು....


ಇವಳ ಎದುರಿಗೆ ಅಳಬಾರದು... 
ಮತ್ತಷ್ಟು ಧೈರ್ಯಗುಂದುತ್ತಾಳೆ..


ಎದ್ದು ನಿಂತೆ... ಹೊರಗಡೆ ಬಂದೆ...


ಪೆಟ್ಟಿಗೆ ಗಪ್ಪತಿ ನೆನಪಾದ.. !
ತಕ್ಷಣ ಫೋನ್ ಮಾಡಿದೆ.. 


ಸಮಯ ನಡು ರಾತ್ರಿ ಎರಡೂವರೆ....!


"ಛೇ.. ಈಗ ಮಾಡಬಾರದಿತ್ತು"


ಅಷ್ಟರಲ್ಲಿ ಕಾಲ್ ಮಾಡಿಯಾಗಿತ್ತು..


"ಏನು ಪ್ರಕಾಶು..? ಏನಾಯ್ತು ಇಷ್ಟು ಹೊತ್ತಿನಲ್ಲಿ..?.."


"ನೋಡೊ... ಗಪ್ಪತಿ..
ನಾರಾಯಣ ಹೃದಯಾಲಯಕ್ಕೆ ಜಲ್ದಿ ಬಾ..."


"ಯಾಕೋ..? !!"


"ನಾಗುವಿಗೆ ಹಾರ್ಟ್ ಎಟಾಕ್ ಆಗಿದೆ.. 
ಬಾ ಮಾರಾಯಾ...
ನನಗೊಬ್ಬನಿಗೆ ಏನೂ ಮಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ.."


ಹೇಳುತ್ತಿರುವಂತೆ  ದುಃಖ ಉಮ್ಮಳಿಸಿತು... 
ಫೋನ್ ಕಾಲ್ ಕಟ್ ಮಾಡಿದೆ...


ನಾಗು...
ಅವನ ತುಂಟತನ... ಹುಚ್ಚು ಐಡಿಯಾಗಳು...
ಅವನ ಎಡವಟ್ಟುಗಳು...!
ನನಗೆ ಏನೇ ಆದರೂ  ನನ್ನ ನಾಗು ಇದ್ದಾನೆ ಎನ್ನುವ ಧೈರ್ಯ...!

ನನ್ನ ಬದುಕಿನ ಭರವಸೆ ಅವನು....!

ಈ  ನಾಗು ನನಗೆ ಏನು..? ಎಷ್ಟು...?


ಆಕಾಶ ನೋಡಿದೆ... 
ನಕ್ಷತ್ರಗಳು... ಅಲ್ಲಲ್ಲಿ ಚದುರಿದ ಮೋಡಗಳು...


ಇಷ್ಟು ದೊಡ್ಡ ಭೂಮಿ... 
ಕಣ್ಣಿಗೆ ಕಾಣುವಷ್ಟು ವಿಶಾಲವಾದ ಆಕಾಶ...
ಮರಗಳು..
ಎಷ್ಟೆಲ್ಲ ಜನರು...! 


ಯಾರಿಗೆ.. ಯಾರೋ...!


ಎಲ್ಲರಿಗೂ ಅವರದ್ದೇ ಆದ ಪ್ರಪಂಚ...! 
ಅವರದ್ದೇ.. ಬಳಗ.. !!


ಇಲ್ಲಿ ಯಾರೂ ಶಾಶ್ವತ ಅಲ್ಲ...!


ಯಾಕೋ ಒಂಟಿಯಾದೆ ಅನ್ನಿಸಿತು...!


ನನ್ನ ನಾಗು ಬದುಕಬೇಕು... 
ಬದುಕಲ್ಲಿ ನೋಡುವಂಥಹ ಇನ್ನೂ ಖುಷಿಗಳಿವೆ...


ಆಸೆಗಳು ಈಡೇರಿದರೂ ಕೊನೆಯಾಗದ ಬಯಕೆಗಳು...!


ನಮಗೂ ಸಾವು ಹತ್ತಿರ ಬಂತು...!
ವಯಸ್ಸಾಯಿತು.. !


ನನ್ನ ಮಡದಿ.. ಮಗ.. 
ಅಣ್ಣ.. ಅಕ್ಕ.. ಎಲ್ಲರನ್ನೂ ಬಿಟ್ಟು ಹೋಗಲೇ ಬೇಕು...!


ಅಮ್ಮನನ್ನೂ....?...


ನಾನು ಹೋಗಿ ಬಿಟ್ಟರೆ ...
ಮಗನ.. ಮಡದಿಯ ಭವಿಷ್ಯವೇನು...?
ಅವರಿಗೆ ಮುಂದೆ ಸಾಕಾಗುವಷ್ಟು ಹಣವನ್ನೂ.. ಆಸ್ತಿಯನ್ನೂ ಮಾಡಿಡಲಿಲ್ಲ...!



ಸಾವು ಇಷ್ಟು ಬೇಗ ಬಂದು ಬಿಡುತ್ತಾ..??


ಏನಿದು.. ಸಾವು..?

ಛೇ...! 
ಎಷ್ಟೆಲ್ಲ ಅಸಹಾಯಕತೆ...!

ಆಕಾಶ ನೋಡಿದೆ... ಕಣ್ಣಲ್ಲಿ ನೀರಾಡಿತು...


ದೊಡ್ಡದಾಗಿ ಅಳಬೇಕು ಅನ್ನಿಸಿತು...!

ಎಲ್ಲವೂ...
ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....!


"ಭಾವ..  ಬಾವಾ..ಬಾ... ಬಾ..
ಡಾಕ್ಟರ್ ಬರ್ತಾ ಇದ್ದಾರೆ...!..
ಡಾಕ್ಟರ್ ಹತ್ತಿರ ಮಾತಾಡು.. 
ಬಾ ಭಾವಾ...!"


ನಾಗುವಿನ ಮಡದಿ ಗಾಭರಿಯಿಂದ ಕರೆದಳು...


ದೂರದಲ್ಲಿದ್ದ ಡಾಕ್ಟರ್ ಹತ್ತಿರ ಬರುತ್ತಿದ್ದರು.....








(ದಯವಿಟ್ಟು ಪ್ರತಿಕ್ರಿಯೆಗಳನ್ನೂ.. ಓದಿ..)

34 comments:

Mahesh Gowda said...

HMMM ... Houdu prakashanna .... e visva dalli namma astitva ...... yestu????

Ittigecement said...

ಮಹೇಶು...

ಈ ಸಾವು... ಆಸ್ಪತ್ರೆ.. ನಮ್ಮನ್ನು ಎಷ್ಟು ಅಧೀರ ಮಾಡಿಸುತ್ತದೆ ಅಂದರೆ ಅದನ್ನು ಅನುಭವಿಸಿದವನಿಗೇ ಗೊತ್ತು...

ಜೀವದ ಜೀವ ನಾಗು ಗೆ ಹಾರ್ಟ್ ಎಟಾಕ್ ಅಂದರೆ...

ನಮ್ಮ ಸಾವಿನದಿನಗಳು ಹತ್ತಿರ ಬಂತು ಅಲ್ಲವಾ?

ಮಹೇಶು ನಾವು ಒಂಟಿನೇ... ಯಾವಗಲೂ ಒಂಟಿ...

ಎಲ್ಲರೂ ಇದ್ದಾರೆ... ಎಲ್ಲವೂ ಇದೆ ಎನ್ನುವದು ಬರೀ ಭ್ರಮೆ...

ಅಂಥಹ ಕ್ಷಣದಲ್ಲಿ ಹಾಗೆ ಅನ್ನಿಸುತ್ತದೆ...



ಪ್ರತಿಕ್ರಿಯೆಗೆ ಧನ್ಯವಾದಗಳು...

Rajesh said...

"ಎಲ್ಲವೂ.. ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....ಇದು ಸಾರ್ವಕಾಲಿಕ ಸತ್ಯ.

Ittigecement said...

ರಾಜೇಶ...

ನಮ್ಮ ತುಂಬಾ ಹತ್ತಿರದವರ ಅನಾರೋಗ್ಯ ನಮ್ಮನ್ನು ಅಷ್ಟೇಕೆ ಅಧೀರರನ್ನಾಗಿ ಮಾಡಿಸಿಬಿಡುತ್ತದೆ...?

ಎಲ್ಲರೂ ಸಾಯುತ್ತಾರೆಂದು ಗೊತ್ತಿದ್ದೂ... ನಾವು ಇಷ್ಟೇಕೆ ಹಾರಾಡುತ್ತೇವೆ?

ಆತ್ಮೀಯರ ಇಂಥಹ ಆಘಾತದಲ್ಲಿ ಧೈರ್ಯವನ್ನೇಕೆ ಕಳೆದುಕೊಂಡುಬಿಡುತ್ತೇವೆ?

ನಮ್ಮ ಆತ್ಮೀಯರ ಇಂಥಹ ಆಘಾತದಲ್ಲಿ ನಾವು ಒಂಟಿಯಾಗಿ ಈ ಜಗತ್ತನ್ನು ನೋಡುವ ದೃಷ್ಟಿಯೇ ಬೇರೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

umesh desai said...

ಬದುಕಿನ ಆ ಮಗ್ಗಲಿನ ಎಳೆ ಬಿಡಿಸಿ ಹೇಳಿರುವಿರಿ
ಎಲ್ಲ ಇದೆ ನಾ ಇರೋದಿಲ್ಲ ಈ ಸತ್ಯ ಅರಿವಾಗತೊಡಗಿದಾಗ
ಎಲ್ಲ ಎಷ್ಟು ಪೊಳ್ಳು ಅನಿಸುತ್ತದಲ್ಲ. ಬದುಕು ಕಲಿಸೋ ಪಾಠ ಇದು
ಅಂದಹಾಗೆ ಈಗ ನಾಗು ಹೇಗಿದ್ದಾರೆ

balasubramanya said...

ಹುಟ್ಟೂ ಸಾವು ಎರಡರ ಮಧ್ಯೆ ಮೂರು ದಿನದ ಬಾಳು !!!! ಎನ್ನುವ ವಾಕ್ಯಕ್ಕೆ ಅನುಗುಣವಾಗಿದೆ. ನಿಮ್ಮ ಲೇಖನ. ಒಬ್ಬ ಗೆಳೆಯನ ಬಗ್ಗೆ ನಿಮ್ಮ ಕಾಳಜಿ ಅನುಕರಣೀಯ , ಇದು ಗೆಳೆತನದ ಹೆಮ್ಮೆಯ ವಿಚಾರವೂ ಹೌದು.
" ಈಗ ಐಸಿಯೂ ದಲ್ಲಿಟ್ಟಿದ್ದಾರೆ... !
ಡಾಕ್ಟರ್ ಇನ್ನೂ ಹೊರಗೆ ಬಂದಿಲ್ಲ..."

ಈನುವ ನಾಗು ಅವರ ಪತ್ನಿಯ ಮಾತುಗಳಿಗೆ ಕರಗದ ಮನುಷ್ಯರ ಮನಸ್ಸು ಉಂಟೆ??? ಇಂತಹ ವಿಚಾರಗಳಲ್ಲೇ ಮಾನವ ಸಂಭಂದದ ನಿಜ ದರ್ಶನ ವಾಗುತ್ತದೆ. ಮುಂದಿನ ಸಂಚಿಕೆಯಲ್ಲಿ ಸುಖಾಂತ್ಯವಾಗಲಿ . ನಾಗುವಿನ ಆರೋಗ್ಯ ಉತ್ತಮವಾಗಲಿ..ಲೇಖನ ಮೆಚ್ಚುಗೆ ಆಯಿತು.

Ittigecement said...

ಉಮೇಶ ದೇಸಾಯಿಯವರೆ...

ಇದು ನಡೆದದ್ದು ನನ್ನ ಮೊದಲ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ..
ಈಗ ನಾಗು ಗುಣಮುಖನಾಗಿದ್ದರೂ.. ಮೊದಲಿನಹಾಗಿಲ್ಲ..

ಊಟ, ತಿಂಡಿ.. ತೀರ್ಥವಂತೂ ಇಲ್ಲವೇ ಇಲ್ಲ...

ಆತ್ಮೀಯರು ಸಾವಿನ ಅಂಚಿನಲ್ಲಿರುವಾಗ ಈ ಥರಹದ ಭಾವಗಳು ಏಕೆ?

ನಮ್ಮವರಿಗಾಗಿ ಏನೂ ಮಾಡಿಲ್ಲವೆಂಬ ಭಾವ..
ನಾವು ಒಂಟಿಯೆಂಬ ಭಾವ... ಯಾಕೆ?

ನಮ್ಮಸಾವಿನ ಬಗೆಗೆ ಅಂಜಿಕೆಯೆ..?

ಸಾವಿಗಾಗಿ ನಾವು..
ನಮ್ಮ ಮನಸ್ಸು ತಯಾರಿರುವದಿಲ್ಲವೆ?

ನಮ್ಮ ಸಾವಿಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

ಚುಕ್ಕಿಚಿತ್ತಾರ said...

ಆ ಪರಿಸ್ತಿತಿ ಅನುಭವಿಸಿದವರಿಗೆ ಗೊತ್ತು.. ಪ್ರಕಾಶಣ್ಣ..

ಕನಸು ಕಂಗಳ ಹುಡುಗ said...

ಬದುಕು ನಾವು ಬಯಸಿದಂತಲ್ಲಾ.... ಬಂದಂತೆ ಎದುರಿಸೋದಷ್ಟೇ ನಮ್ಮ ಕೆಲ್ಸಾ.... ಪ್ರಕಾಶಣ್ಣಾ ನಮ್ಮ ಕೊನೇ ದಿನಾ ಹತ್ತಿರ ಬಂತಲ್ಲಾ ಅಂತಾ ನೀನು ಅನ್ನೋದಾ...? ನಮ್ಮಲ್ಲೊಬ್ಬರು ತಾತಾ ಇದಾರೆ.. 67 ವರ್ಷ ಆದ್ರೂ ಹೆಂಗೆ ಪುಟೀತಾರೆ ಗೊತ್ತಾ... ಕೇಳಿದರೆ ಎಷ್ಟೋ ಸಾವಿರ ವರುಷಕ್ಕೊಮ್ಮೆ ಮಾನವ ಜನ್ಮ ಬರುತ್ತಂತೆ .. ಈಗಲೂ ಜೀವನಾನಾ ಅನುಭವಿಸ್ದೇ ಹೋದ್ರೆ ಮತ್ಯಾವಾಗ ಅಂತಾರೆ... ಇನ್ಯಾವಾಗ್ಲೋ ಬರೋ ಸಾವಿಗೆ ಇಂದ್ಯಾಕೆ ಚಿಂತೆ... ಅಂತ.
ಆಸ್ಪತ್ರೆ ಅಂದರೆ ಭಯ ಸಹಜ... ಭಯ ಅನ್ನೋದಕ್ಕಿಂತ ಅದೊಂದು ಯಾತನೆಯ ಅಡ್ಡ. ಕೈ ಕಾಲಿಲ್ಲದವರು... ಕುರುಡರು... ಅಪಘಾತದ ಅರೆ ಬರೆ ಜೀವಗಳು... ಸಾಯುವವರ ಸಂಕಟಗಳು... ಬದುಕಿಸಿಕೊಳ್ಳಲು ದುಡ್ಡಿಲ್ಲದವರ ದುಃಖಗಳು....
ಆದರೂ ಎಲ್ಲ ಹೋರಾಟಗಳು ಬದುಕಿಗಾಗಿಯೇ ಅಲ್ವಾ....
ನಾಗು ನಿಮ್ಮ ಇನ್ನೊಂದು ಜೀವ ಅಲ್ವಾ....? ಹೇಗಿದ್ದಾರೆ ಅವರೀಗ? ನಮ್ಮೆಲ್ಲರ ಹಾರೈಕೆ... ಬೇಗ ಗುಣವಾಗಲಿ....ablu

ಮನಸಿನ ಮಾತುಗಳು said...

ಪ್ರಕಾಶಣ್ಣ,
ನಿಜವಾಗಲೂ ಓದ್ತಾ ಓದ್ತಾ ಕಣ್ಣಲ್ಲಿ ನೀರು ಬಂತು. ಅದರಲ್ಲೂ ನಮ್ಮ ಆಪ್ತರು, ಇಷ್ಟ ಪಟ್ಟವರಿಗೆ ಏನಾದರೂ ಆದಾಗ, ಅದನ್ನು ಎದುರಿಸುವುದು, ನಮ್ಮನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಆ ಸಮಯ ನಮಗೆ ಎಲ್ಲದನ್ನೂ ಕಲಿಸಿ ಬಿಡುತ್ತೆ. ಎಲ್ಲರೂ ಇದ್ದು, ಒಮ್ಮೊಮ್ಮೆ ಒಂಟಿ ಅಂತ ಎಲ್ಲರಿಗೂ ಜೇವನದಲ್ಲಿ ಒಂದೊಂದು ಸರ್ತಿ ಅನಿಸಿರುತ್ತೆ. ಆದರೆ ಅದೇ ಸತ್ಯ ಅಲ್ಲ. ಸಮಯ, ಸಂದರ್ಭಗಳು ಅಷ್ಟೇ. ಇದು ನಿಜ ಕಥೆ ಆದಲ್ಲಿ ನಾಗು ಏನಾದರು? ಅವರಿಗೆ ಹುಶಾರಾಯಿತಾ? ಹೌದು, ನಿನ್ನ ಪುಸ್ತಕ ಬಿಡುಗಡೆಗೆ ಅವರು ಬಂದಿದ್ದರ? ತುಂಬಾ ಕುತೂಹಲವಿದೆ. ಮುಂದೇನಾಯ್ತು ಅಂತ. ಬೇಗ ತಿಳಿಸು ಪ್ರಕಾಶಣ್ಣ

sunaath said...

ಇಂತಹ ಪರಿಸ್ಥಿತಿ ತುಂಬ ಸಂಕಟದ್ದು. ಇಂತಹ ಸಮಯದಲ್ಲಿಯೇ
ಜೀವನದ ದರ್ಶನವು ಸಾಧ್ಯ.

Ittigecement said...

ಬಾಲೂ ಸರ್..

ನಾಗು ದಂಪತಿಗಳಿಗೆ ನಾವು (ಕುಟುಂಬ) ತುಂಬಾ ಹತ್ತಿರದವರು...

ಆಸ್ಪತ್ರೆಯಲ್ಲಿ ಅವರ ದುಃಖವನ್ನೆಲ್ಲ ನನ್ನ ಬಳಿ ಹೇಳಿಕೊಳ್ಳವ ಆತುರ ಅವಳಿಗಿತ್ತು...
ಅವಳಿಗಿಂತ ಹೆಚ್ಚು ಅಧೀರ ನಾನಾಗಿದ್ದೆ..

ನಾಗುವಿನ ಎಟಾಕ್ ನನಗೆ ಡೈಜೆಸ್ಟ್ ಆಗಿರಲಿಲ್ಲ..

ಬಹಳ ಕಷ್ಟದ ಕ್ಷಣಗಳು ಅವು....

ಪ್ರತಿಕ್ರಿಯೆಗೆ ಧನ್ಯವಾದಗಳು..

ಗಿರೀಶ್.ಎಸ್ said...

Life is a interval between birth and death,have to save this time to do something..anyhow one or the other day we wiil be in the path of death..but when it comes to our close and beloved ones, really it will be a sad thing...but no one can stop it na..
anyhow,now Nagu is fine na!

Deep said...

ಕಣ್ಣಾಲಿಗಳು ಒದ್ದೆಯಾದವು ಪ್ರಕಾಶ್...
ಒಂದು ವರ್ಷವಾಗಿರಬಹುದು..
ಕೆಲಸದಲ್ಲಿ ಸ್ಪೂರ್ತಿಯಾಗಿದ್ದ .. ಚೈತನ್ಯದ ಚಿಲುಮೆಯಾಗಿದ್ದ.. ಎಲ್ಲಕ್ಕಿಂತ ಮಿಗಿಲಾಗಿ ಆತ್ಮೀಯ ರಾಗಿದ್ದವರನ್ನು....... ಕಳೆದುಕೊಂಡೆ..
ನಿಮ್ಮ ಬರಹ ಓದಿ .. ನಂಗೆ ಅವರೇ ನೆನಪು ಬಂದ್ರು..
ಈ ಎಲ್ಲ ಭಾವನೆಗಳು ಅಂದು ಕಾಡಿದ್ದವು.. ... ಇನ್ನೂ ಕಾಡುತ್ತಿವೆ...
ಆ ದಿನ ತುಂಬಾ ಅತ್ತು ಬಿಟ್ಟಿದ್ದೆ ಮಾರಾಯ್ರೆ..ನಿಮ್ಮ ಬರಹ ಹೃದಯ ಮುಟ್ಟಿತು..

ನಾಗುವು ಚನ್ನಾಗಿರಲಿ.. ಅರೋಗ್ಯ ಉತ್ತಮವಾಗಲಿ ಎಂದು ಹಾರೈಸುತ್ತ...

Gubbachchi Sathish said...

ಪ್ರಕಾಶಣ್ಣ, ನಿಮ್ಮ ತಳಮಳ ಚೆನ್ನಾಗಿ ಅರ್ಥವಾಗುತ್ತದೆ. ನಾನು ಇದಾಗಲೇ ಹಲವು ಬಾರಿ ಸಾವನ್ನು ಹತ್ತಿರದಿಂದ ನೋಡಿ ಬಂದಿದ್ದೇನೆ. ಆಗೆಲ್ಲಾ ಬದುಕನ್ನು ಇನ್ನೂ ನೋಡಬೇಕು, ಬಾಳಬೇಕು ಎಂದು ಯಮನಿಗೆ ವಾಪಸ್ ಕಳುಹಿಸಿದ್ದೇನೆ. ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಗೆಳೆಯರು, ನಲ್ಲೆ ಅನುಭವಿಸಿರಬಹುದಾದ ನೋವನ್ನು ನೀವು ವ್ಯಕ್ತಪಡಿಸಿದ್ದೀರಾ ಎಂದೆನಿಸುತ್ತಿದೆ. ಅದು ಸರಿ, ನಿಮ್ಮ ಪುಸ್ತಕ ಬಿಡುಗಡೆಯಂದು ನಾಗುವನ್ನು ತೋರಿಸುತ್ತೇನೆ ಎಂದು ಹೇಳಿದ್ದೀರಿ. ನೀವು ತೋರಿಸಲಿಲ್ಲ, ನಾವೂ ಕೇಳಲಿಲ್ಲ. ದಯಮಾಡಿ ಅವರದೊಂದು ಪೋಟೋ ಹಾಕಿ. ಅವರಿಗೆ ಒಳ್ಳೆಯದಾಗಲಿ. ಸಾಧ್ಯವಾದರೆ ಅವರನ್ನು ಮೀಟ್ ಮಾಡಿಸಿ. ಪ್ಲೀಸ್.

Ittigecement said...

ಚುಕ್ಕಿ ಚಿತ್ತಾರ .. ವಿಜಯಾ..

ನಿಜ ಆ ಸನ್ನಿವೇಶ ಅನುಭವಿಸಿದವರಿಗೆ ಗೊತ್ತು...

ಅಳಬೇಕೆಂದರೂ ಅಳಲಾಗುವದಿಲ್ಲ..
ನಮ್ಮ ಕರ್ತವ್ಯಗಳು ಕೂಗಿ ಕರೆಯುತ್ತಿರುತ್ತದೆ..

ನಮ್ಮದುಃಖದಲ್ಲಿ ಬೇರೆಯವರನ್ನು ಸಮಾಧಾನ ಪಡಿಸುವದೂ ಬಹಳ ಕಷ್ಟ..
ಆದರೆ ಸಮಾಧಾನ ಪಡಿಸಲೇ ಬೇಕು... ಅಂಥಹ ಸಂದರ್ಭ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಾಗರದಾಚೆಯ ಇಂಚರ said...

Prakashanna

baduke haagallave

kelavomme ella tilidoo enoo tiliyadante agibiduttade manasu

sundara lekhana

munenaayitu bega haaki

Ittigecement said...

ರಾಘವ...

ತುಂಬಾ ಚಂದದ ಪ್ರತಿಕ್ರಿಯೆ..

ನಿಜ ನಮಗೆ ಸಾಯುವ ವಯಸ್ಸಲ್ಲ ಅಂತಿಟ್ಟುಕೊಳ್ಳೋಣ..
ತುಂಬಾ ಆತ್ಮೀಯರ ಆಘಾತದ ಸಮಯದಲ್ಲಿ ಈ ರೀತಿಯ ಭಾವಗಳು ಯಾಕೆ ಬರುತ್ತವೋ ಗೊತ್ತಿಲ್ಲ..

ಸಿಕ್ಕಾಪಟ್ಟೆ ಮಾತನಾಡುವ ನಾವು ಆ ಸಮಯದಲ್ಲಿ ಧೈರ್ಯ ಕಳೆದುಕೊಂಡು ಬಿಡುತ್ತೇವೆ..
ಎಷ್ಟೇ ಓದಿದ್ದರೂ..
ವಿವೇಕವಿದ್ದರೂ.. ಅಂಥಹ ಸಂದರ್ಭ ಬಲು ಕಷ್ಟ..

ನಿಮ್ಮ ಹಿರಿಯರ ಮಾತು ಸ್ಪೂರ್ತಿದಾಯಕ..

ಉತ್ಸಾಹ ಕೊಡುವ ಪ್ರೋತ್ಸಾಹಕ್ಕೆ ನಮನಗಳು.. ಜೈ ಹೋ !

vt said...

ಬದುಕು ಜಟಕಾ ಬಂಡಿ,ವಿಧಿ ಅದರ ಸಾಹೇಬ ..

Ittigecement said...

ದಿವ್ಯಾ...

ನಿಜ ಬದುಕು.. ಮತ್ತು ಸಮಯ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸುವದಿಲ್ಲ...
ಯಾರಿಗೂ ಅಂಥಹ ಸಂದರ್ಭಗಳು ಬರದೆ ಇರಲಿ..

ಇದು ನಡೆದಿದ್ದು.. ಮೊದಲ ಪುಸ್ತಕ "ಹೆಸರೇ.. ಬೇಡ." ಬಿಡುಗಡೆಯ ಸಂದರ್ಭದಲ್ಲಿ..
ನಾಗು ಗುಣಮುಖನಾಗಿದ್ದಾನೆ...

ಅವನಿಗಾಗಿದ್ದು ನನ್ನನ್ನು ಅಧೀರನನ್ನಾಗಿಸಿದ್ದು ನಿಜ..

ಎಷ್ಟೇ ಓದಿರಲಿ.. ಬುದ್ಧಿವಂತನಾಗಿರಲಿ ಇಂಥಹ ಸಮಯದಲ್ಲಿ ಅಸಾಹಾಯಕನಾಗಿಬಿಡ್ತಾನೆ..

ಪ್ರೋತ್ಸಾಹಕ್ಕೆ ಧನ್ಯವಾದಗಳು..

Dr.D.T.Krishna Murthy. said...

ಪ್ರಕಾಶಣ್ಣ;'ನಾವು ಮಾತ್ರ ಒಂಟಿ'ತುಂಬಾ ಚೆಂದದ ಬರಹ.ಅದಕ್ಕೇ ಒಂಟಿತನವನ್ನು ಒಂಟಿಸಿಕೊಲ್ಲಿ ಎಂದು ಹಿರಿಯರು ಹೇಳುವುದು!

Ittigecement said...

mismsing
ಸುನಾಥ ಸರ್...

ನಿಜ ನೀವು ಹೇಳಿದ್ದು ನಿಜ...

ಅಂಥಹ ಸಂದರ್ಭಗಳು ಜೀವನ ದರ್ಶನ ಮಾಡಿಸಿಬಿಡುತ್ತವೆ..

ಸಾವು ಅನ್ನುವದು ಎದುರಿಗೆ ನಿಂತಾಗ ಒಂಟೀತನದ ಭಾವ ಯಾಕೆ?

ಪ್ರೋತ್ಸಾಹಕ್ಕೆ ಧನ್ಯವಾದಗಳು..

ಮನಸು said...

ಯಾರು ನಮ್ಮ ಜೊತೆ ಇರುವುದಿಲ್ಲ ಬರುವಾಗಲೂ ಒಂಟಿ ಹೋಗುವಾಗಲೂ ಒಂಟಿ........... ಮನಸಿನಲ್ಲಿನ ತಳಮಳ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ...

V.R.BHAT said...

ಜೀವನದ ಪಥದಲ್ಲಿ ಯಾರಿಗೆ ಎಲ್ಲಿ ಹೇಗೆ ಸಾವು ಎಂಬುದು ಯಾರಿಗೂ ತಿಳಿಯುವುದಿಲ್ಲ, ಆದರೆ ಹುಟ್ಟುವುದು ಕೊನೇಪಕ್ಷ ಸುಮಾರಾಗಿ ಇಂಥಾದಿನ ಎಂದು ತಿಳಿಯುತ್ತದೆ. ಹುಟ್ಟು-ಸಾವಿನ ನಡುವಿನ ದೈಹಿಕ ಅವಸ್ಥೆಗಳಾದ ಶೈಶವ, ಬಾಲ್ಯ, ಯೌವನ, ವಾರ್ಧಕ್ಯ, ಮುಪ್ಪು, ಕಾಯಿಲೆ-ಕಸಾಲೆ ಅದಲ್ಲದೇ ಭಾವನಾತ್ಮಕವಾಗಿ ಪ್ರೀತಿ, ಪ್ರೇಮ,ಪ್ರಣಯ, ವೈಷಮ್ಯ,ಸ್ನೇಹ, ತ್ಯಾಗ, ಭಯ, ಕ್ರೋಧ, ಮಾತ್ಸರ್ಯ, ಮೋಹ, ಮದ ಈ ರೀತಿ ನವರಸಗಳಲ್ಲೂ ನಾವು ತೊಳಲಾಡುತ್ತೇವೆ. ಪ್ರಸಕ್ತ ನೀವು ಬರೆದ ಘಟನೆಯೂ ಕೂಡ ದಿನನಿತ್ಯ ನಡೆಯುವ ಹಲವಾರು ಘಟನೆಗಳಲ್ಲಿ ಒಂದು! ಯಾರೋ ಆದರೆ ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಜಾಯಮಾನದವರಲ್ಲ, ಅದೇ ಗೊತ್ತಿರುವವರಾದರೆ ಘಟನೆಯ ಬಗ್ಗೆ ನಾವು ಬಹಳ ಆಸ್ತೆ ತಳೆಯುತ್ತೇವೆ. ಗೊತ್ತಿರಲಿ-ಗೊತ್ತಿರದಿರಲಿ ಮನುಷ್ಯ ಮನುಷ್ಯನೇ. ನೋವು ಯಾರೂ ಬಯಸುವ ವಿಷಯವಲ್ಲ; ಆದರೆ ಅಷ್ಟೇ ಸಹಜವಾಗಿ, ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ವಿಷಯ. ನಗುವಾಗ ಪಾಲಿಗೆ ಎಲ್ಲರೂ ಬರುವ ಮಾನವ ಗುಣಧರ್ಮ ಅಳುವಾಗ ಕೇವಲ ಕೆಲವರನ್ನು ಮಾತ್ರ ಕರೆತರುತ್ತದೆ. ಸಾವನ್ನು ನಿಯಂತ್ರಿಸಲು ಯಾವುದೇ ಪರಿಣತ ವೈದ್ಯನಿಗೂ ಸಾಧ್ಯವಿಲ್ಲ-ಅದು ಎಲ್ಲರ ಕೈಮೀರಿ ಘಟಿಸುವ ಘಟನೆ. ಓದಿ ಬೇಸರವಾದರೂ ಬದುಕಿರುವ ಸುದ್ದಿ ಖುಷಿ ತರಿಸಿತು.

ಸವಿಗನಸು said...

ಪ್ರಕಾಶಣ್ಣ,
ಆಪ್ತರಿಗೆ, ತುಂಬಾ ಹತ್ತಿರದವರಿಗೆ ಈ ರೀತಿ ಆದಾಗ, ಅದನ್ನು ಎದುರಿಸುವುದು, ಹೇಳಲಾಗದು....
ಮನಸಿನ ತಳಮಳ ಚೆನ್ನಾಗಿ ಸೆರೆ ಹಿಡಿದಿದ್ದೀರ....ಯಾರಿಗೂ ಈ ತರಹ ಆಗದಿರಲಿ......

Srikanth Manjunath said...

ನಮಗೆ ಹತ್ತಿರ ಸಂಬಂಧ ಇರುವ ಯಾವುದೇ ವಸ್ತು, ಪ್ರಾಣಿ, ಮನುಷ್ಯ ಯಾವುದಕ್ಕೆ ಆದರು, ಒಂದು ತರಹ ಸ್ಮಶಾನ ವೈರಾಗ್ಯ ಕಾಡುತ್ತೆ. ಚಿತೆ ದೇಹವನ್ನು ಸುಟ್ಟರೆ ಚಿಂತೆ ಮನಸ್ಸನ್ನು ಸುಡುತ್ತದೆ. ಆಪ್ತರಾದವರಿಗೆ ಆಘಾತ ನಮ್ಮನ್ನು ಅಧೀರನನ್ನಾಗಿ ಮಾಡುವುದು ಸಂಧರ್ಭ..

ನಿಮ್ಮ ವರ್ಣನೆ, ತುಮುಲ, ಮಾನಸಿಕ ತೊಳಲಾಟ ಎಲ್ಲವು ಚೆಂದವಾಗಿ ಮೂಡಿ ಬಂದಿದೆ.

ಕನಕದಾಸರು ಹೇಳಿದಂತೆ "ನಾ" ಹೋದರೆ ಹೋಗಬಹುದು.

Sandeep K B said...

ಈ ವಿಷಯ ಕೇಳಿ ಬೇಜಾರಾಯ್ತು
ಇವಾಗ ಹೇಗಿದ್ದಾರೆ.... ಚಪಾತಿ ಬ್ರಮ್ಮನವರು ....
ನಮಗೊಮ್ಮೆ ಬೇಟಿ ಮಾಡಿಸಿ

ಅನುಶ್ರೀ ಹೆಗಡೆ ಕಾನಗೋಡು. said...

nanagu obba naagu iddale!nimma naguvinante tarle....
navella ottagi nimma pustakavannu oodi sambhramisiddeve...
iga besarisuttiddene prakashanna...
sada nageya niriksheyalli oduttidde!indu aaghatavadante anisuttide...araam tagamble heeli naagu annange...

ವನಿತಾ / Vanitha said...

ನಾಗುವ ಅರೋಗ್ಯ ಉತ್ತಮವಾಗಲಿ ಎಂದು ಹಾರೈಸುತ್ತ,

Umesh Balikai said...

ಪ್ರಕಾಶಣ್ಣಾ,

ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭ ಮುಗಿಸಿ ಬಂದ ಮೇಲೆ ನೆನಪಾಗಿತ್ತು... ನಾಗುವನ್ನು ಗುರುತಿಸಿದವರಿಗೆ ಬಹುಮಾನ ಕೊಡುತ್ತೇನೆ ಎಂದಿದ್ರು ಪ್ರಕಾಶಣ್ಣ, ಆದರೆ ನಾಗು ಬಂದೆ ಇರ್ಲಿಲ್ಲ ಅನ್ಸುತ್ತೆ , ಇಲ್ಲವಾದರೆ ಅವರನ್ನೂ ಸಹ ಸಮಾರಂಭದ ಕೊನೇ ಘಳಿಗೆಯಲ್ಲಾದರೂ ವೇದಿಕೆ ಮೇಲೆ ಕರೆತಂದು ಪ್ರಕಾಶಣ್ಣ ಪರಿಚಯ ಮಾಡಿಸ್ತಿದ್ರು ಅಂತ... ಈಗ ನಿಮ್ಮ ಈ ಲೇಖನ ನೋಡಿ ನಾಗು ಆದಿನ ಬರಲಾಗದ ಕಾರಣ ತಿಳಿದು ಮನಸ್ಸಿಗೆ ಬೇಸರವಾಗುತ್ತಿದೆ. ಏನೋ ವಿಷಾದ ಭಾವ. ನಾಗು ಬೇಗ ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Badarinath Palavalli said...

ದೊರೆ, ಈ ಮನುಷ್ಯ ಜನ್ಮ ಹಿಂಸೆಗಳ ಖಜಾನೆ! ಸವಿ ನೆನಪು ಅರೆ ಪಾವು, ನೋವು ಗಿರಿ ಶಿಖರಗೂ ಎತ್ತರ!...

ನಾಗೂರವರು ಬೇಗ ಸುಧಾರಿಸಲೀ ಸರ್! ಹೇಗಿದ್ದಾರೆ ಎಂದು ಒಂದು ಫೋನಾಯಿಸಿ.

ನಿಮ್ಮ ಮರಗುವ ತನಕ್ಕೆ ಜೋಹಾರು...

ನಾನೂ ಎರಡೆರಡು ಬಾರಿ ಆಸ್ಪತ್ರೆ ಮಾರ್ಚರಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಛಾಯಗ್ರಾಹಕರು ಅಪಘಾತದಲ್ಲಿ ತೀರಿಕೊಂಡಾಗ ಛಿಧ್ರ ದೇಹಗಳನ್ನು ಕಂಡು ಬಂದಿದ್ದೇನೆ!

ಇನ್ನೊಬ್ಬ ಸಹ ಛಾಯಾಗ್ರಾಹಕ ಆಗಷ್ಟೇ ಮದುವೆಯಾಗಿದ್ದವನು ಆಟೋ ಗುದ್ದಿ ಸತ್ತಾಗಲೂ ಬಾಡಿ ಹೋಗಿದ್ದೇನೆ. ಅದೇಕೋ ಗೊತ್ತಿಲ್ಲ ಈ ನಾಲ್ಕು ವರ್ಷಗಳಲ್ಲಿ ನಾನು ಕಂಡಷ್ಟು ಸಾವುಗಳು, ಇಡೀ ಬದುಕಲ್ಲೇ ಕಂಡಿಲ್ಲ,,,

ಬಲೇ ಕಲೆಗಾರ... ಸೂತ್ರದಾರ ಪರಮಾತ್ಮ!

sandesh said...

:-(
iste maatra comment madaballe sir,
anubhavisadavrige gottu aa novu.
kathe odidaga nim friend enadru anta gottaglilla, but kelagina comments ellaa odta hodanga ella gottatu...

ಸೀತಾರಾಮ. ಕೆ. / SITARAM.K said...

onde ushiralli odide....
intaa hattu halavu aatanka naanu anubhavisiddene...
madhya raatri call bandare saaaku anorogyadalliruvavarella nenapaagi avarigeno aagide ennisi bidutte...

geeta bhat said...

Hamm,estondu satya ee maatau..!!
ee sambandagalu hechhadastu...munde ondina avaranna kalakolla bhayanu aste hecchagtu.. ningala ibra friendship nodi tumba kushi aatu. nammadella estu dinada life gotille,but iro astu dina chennagi iddakandu hogodaste..but nigala ibra friend shipge HATS OFF..!!