Sunday, November 28, 2010

ಅಸಹಜ


ನಾನು  ತುಂಬಾ ಒಳ್ಳೆಯ  ಮನುಷ್ಯ..

ಹಾಗಂತ ಎಲ್ಲರೂ ಹೇಳುತ್ತಾರೆ.. 
ಅದನ್ನು ಕೇಳಲಿಕ್ಕೆ  ಬಹಳ ಖುಷಿಯಂತೂ ಹೌದು.....
ಹೆಮ್ಮೆಯೂ ಆಗುತ್ತದೆ...

ಆದರೆ ...
ಆತ್ಮಸಾಕ್ಷಿಯಾಗಿ ನಿಜ ಹೇಳುತ್ತೇನೆ...
ಒಳ್ಳೆಯವನಾಗಿರುವದು  ಒಂಥರಾ  ಹಿಂಸೆ ಕಣ್ರೀ...
ಕೆಲವು ಸಂದರ್ಭ  ಯಾಕಾದ್ರೂ ಒಳ್ಳೆಯವನಾದೆ ಅನ್ನಿಸಿ ಬಿಡುತ್ತದೆ..

ಕೆಲವರು ಹಾಗಿರುವದಿಲ್ಲ ನೋಡಿ...

ಬೇರೆಯವರೆಲ್ಲ ಯಾಕೆ ?
ನನ್ನ  ಪರಮಾಪ್ತ ಗೆಳೆಯನನ್ನೇ ತೆಗೆದು ಕೊಳ್ಳಿ..
ಜೀವನದ ಪ್ರತಿ ಕ್ಷಣವನ್ನೂ  ಸಂತೋಷದಿಂದ  ಕಳೆಯುತ್ತಿದ್ದಾನೆ..

ಬಹಳ ಹೆಣ್ಣುಮಕ್ಕಳ ಗೆಳೆತನ ಅವನಿಗಿದೆ...
ಅದು  ಕೇವಲ ಗೆಳೆತನ ಅಲ್ಲ ಅಂತ ಎಲ್ಲರಿಗೂ ಗೊತ್ತು...
ಕಾಲೇಜಿನಲ್ಲಿ ಪ್ರತಿವರ್ಷ ಒಂದೊಂದು ಹೆಣ್ಣುಮಕ್ಕಳ ಜೊತೆ ಓಡಾಡಿದ..
ಪ್ರೀತಿ, ಪ್ರೇಮ ಅಂತೆಲ್ಲ ಹೇಳಿಕೊಂಡ...

ತಾನು ಮದುವೆಯಾಗುವ ಹೆಣ್ಣನ್ನು ನನ್ನಿಂದ  ಸಿಲೆಕ್ಟ್ ಮಾಡಿಸಿದ..!

ಆತ ನನ್ನ ಬಳಿ ಹೇಳಿದ್ದು ಇಷ್ಟೆ...

"ನೋಡೊ... 
ಬದುಕಿನ ಬಗೆಗೆ  ಬಹಳ ತಲೆ ಕೆಡಿಸಿಕೊಂಡವನು ನೀನು...
ನನ್ನ ಬದುಕಿನ ಬಗೆಗೆ  ನನಗಿಂತ ನಿನಗೆ  ಹೆಚ್ಚಿನ ಕಾಳಜಿ ಇದೆ..
ನನ್ನ  ಸ್ವಭಾವ ಎಲ್ಲದೂ ನಿನಗೆ ಗೊತ್ತು...
ನಾನು ಮದುವೆಯಾಗುವ ಹುಡುಗಿಯನ್ನು ನೀನೇ  ನಿರ್ಧರಿಸು...


ನಾನು ಕಣ್ಮುಚ್ಚಿ  ತಾಳಿ ಕಟ್ಟುತ್ತೇನೆ..."

ನನ್ನ ಗೆಳೆಯನ ಹೆಂಡತಿಯನ್ನು ನಾನೇ  ಹುಡುಕಿ  ನಿಶ್ಚಯ ಮಾಡಿಕೊಟ್ಟೆ...
ಅವನ  ಮನೆಯವರು  ನೋಡಿ "ಸಂಬಂಧ " ಚೆನ್ನಾಗಿದೆ ಅಂತ ನಿರ್ಣಯಿಸಿದ್ದರು..
ನಾನು  ಹೋಗಿ..
ಹುಡುಗಿ ನೋಡಿ...  ನನ್ನ ಗೆಳೆಯನಿಗೆ  " ಯೋಗ್ಯವಾದ "  ಹುಡುಗಿ ಅಂತ  ಒಪ್ಪಿಗೆ  ಕೊಟ್ಟು ಬಂದಿದ್ದೆ...

ಆತ ಕಣ್ಮುಚ್ಚಿ ತಾಳಿಕಟ್ಟಲಿಲ್ಲ..!

ಮದುವೆಗೆ ಮೊದಲು  ಅವಳ ಸಂಗಡನೂ.. 
ಸಿನೇಮಾ....
ಪಾರ್ಕು.. ಲಾಜ್ ಅಂತೆಲ್ಲ ಓಡಾಡಿದ..!

ವಿಷಯ ಏನು ಗೊತ್ತಾ..?

ಮದುವೆಯಾಗಿ ನಾಲ್ಕೈದು ತಿಂಗಳಾಗಿದೆ...

ಇದೀಗ ತಾನೆ  ಅವನನ್ನು ಏರ್ ಪೋರ್ಟ್ ಗೆ ಬಿಟ್ಟು ಬರುತ್ತಿದ್ದೇನೆ...
ನನ್ನ ಜೊತೆ  ಅವನ ಮಡದಿಯೂ ಇದ್ದಾಳೆ..

ಅವನು  ತುರ್ತಾದ ಕೆಲಸದ ಮೇಲೆ ಜಪಾನ್ ದೇಶಕ್ಕೆ ಹೋಗುವ ಕೆಲಸ ಬಂತು..

"ನೋಡೊ... 
ನನಗೇನೂ ಚಿಂತೆಯಿಲ್ಲ...
ಒಂದುವಾರ ಅಷ್ಟೆ ವಾಪಸ್ಸು ಬಂದು ಬಿಡ್ತೇನೆ...
ನೀನಿರ್ತಿಯಲ್ಲ.. ಅವಳಿಗೆ  ದೈರ್ಯ ಹೇಳು..."

ನಾನು ಒಳ್ಳೆಯವನಲ್ಲವೇ..
ಇಂಥಹ  ಸಂದರ್ಭಗಳನ್ನು ನಿಭಾಯಿಸಲು  ಖುಷಿಯಾಗುತ್ತದೆ..
ಒಳ್ಳೇ ತನದ ಬದುಕು ಸಾರ್ಥಕ ಅನ್ನಿಸುವಂಥಹ ಸಂದರ್ಭಗಳು...

ನಾನು ಕಾರ್  ಡ್ರೈವ್ ಮಾಡುತ್ತಿದ್ದೇನೆ...

ಅವಳನ್ನೊಮ್ಮೆ ಗಮನಿಸಿದೆ...

ಮನದಲ್ಲಿ ಕೆಟ್ಟ ಯೋಚನೆ ಬರುತ್ತಿದೆಯಾ...?
ಒಂಟಿ ಹೆಣ್ಣು...! 
ಯಾರೂ ಇಲ್ಲದ ಸಂದರ್ಭ...!

ಇದು ಕೆಟ್ಟದ್ದು ಅನ್ನಿಸಿದರೂ... 
ಬೇಡ ಅನ್ನಿಸಿದ್ದರೂ...ಹಿತವಾಗಿತ್ತು....

ತುಂಬಾ ಚೆಲುವೆ...!
ಕಣ್ಣು...  ಮೂಗು..!.
ಕೆನ್ನೆಯ ಮೇಲೆ ಆಗಾಗ ಇಳಿದು ಬರುವ  ಕೂದಲು...!
ಹರವಾದ.... ಬಿಳುಪಾದ...
ನುಣುಪಾದ  ಗಲ್ಲ......!

ವಾಹ್  !!.....

ಛೇ..!! 
ಹೀಗೆಲ್ಲ ನೋಡ ಬಾರದು.. ವಿಚಾರವನ್ನೂ  ಮಾಡಬಾರದು...

"ನಿಮ್ಮ ಗೆಳೆಯ ಕಾಲೇಜುದಿನಗಳಲ್ಲಿ ಹೇಗಿದ್ದ...?’

ಆಕೆ ನನ್ನ  ನೋಟವನ್ನೇ ಗಮನಿಸುತ್ತ ಕೇಳಿದಳು...

" ನನ್ನ ಗೆಳೆಯ ತುಂಬಾ ತುಂಟನಾಗಿದ್ದ..
ಯಾವಾಗಲೂ ಗೆಳೆಯರ ಗುಂಪು  ಅವನ ಹಿಂದೆ ಇರ್ತಿತ್ತು...."

".. ಹೆಣ್ಣುಮಕ್ಕಳು...?..? "

ಬಹಳ ತೀಕ್ಷ್ಣವಾಗಿತ್ತು ಅವಳ ಪ್ರಶ್ನೆ...

ನಾನು ತಡವರಿಸಿದೆ...

"ನನಗೆ ಗೊತ್ತು... ನನ್ನವರು ಹೆಣ್ಣುಮಕ್ಕಳ ಸಂಗಡ ಓಡಾಡುತ್ತಿದ್ದರು...
ಅವರೇ..ನನ್ನ ಬಳಿ ಹೇಳಿಕೊಂಡಿದ್ದಾರೆ..."

"ಹೌದಾ...? !!..
ಅಪಾರ್ಥ ಮಾಡಿಕೊಳ್ಳ ಬೇಡಿ... ಆತನದು ಬರಿ.. ಸ್ನೇಹ ಅಷ್ಟೆ..
ಪ್ರೀತಿ.., ಪ್ರೇಮ  ಏನೂ ಇಲ್ಲವಾಗಿತ್ತು...."

"ಆ ವಯಸ್ಸಿನ  ಪ್ರಿತಿ, ಪ್ರೇಮಗಳ   ಅರ್ಥ  ನನಗೆ ಚೆನ್ನಾಗಿ ಗೊತ್ತು..."

ನಾನು  ತಲೆ ಕೆರೆದು ಕೊಂಡೆ...
ಈ ಮಾತನ್ನು ಎಲ್ಲಿಯವರೆಗೆ  ಅರ್ಥ ಮಾಡಿಕೊಳ್ಳ ಬಹುದು ಅಂತ ...

ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವದೇ.. ಕಷ್ಟ...

ಗೆಳೆಯನಿದ್ದಾಗ ಈ ಥರಹದ ಮಾತುಗಳನ್ನು ಯಾವತ್ತೂ ಆಡಿಯೇ ಇಲ್ಲ...
ಮಾತು ಬಹಳ ಕಡಿಮೆ...

ಒಂದು  ಮುಗಳ್ನಗು.. 
ಚಂದದ ನೋಟದಲ್ಲಿ ಮಾತು ಮುಗಿಸಿ ಬಿಡುತ್ತಿದ್ದಳು...

" ಹೋಗ್ಲಿ ಬಿಡಿ...
ಆಗ ಅಂಥಾದ್ದೇನೂ ನಡೇದಿಲ್ಲ.. 
ಈಗ  ಚೆನ್ನಾಗಿದ್ದನಲ್ಲ...
ನಿಮ್ಮಿಬ್ಬರ ಪ್ರೀತಿ, ಪ್ರೇಮನೋಡಿ ಖುಷಿಯಾಗುತ್ತದೆ..."

" ಥ್ಯಾಂಕ್ಯೂ......
ನೀವು ಯಾಕೆ ಮದುವೆಯಾಗಿಲ್ಲ...?"

" ನಾನು  ಬಯಸುವಂಥಹ  ಹುಡುಗಿ ಸಿಕ್ಕಿಲ್ಲ..."

"ಅಥವಾ... 
ನೀವು ಬಯಸಿದ ಹುಡುಗಿ  ನಿಮ್ಮನ್ನು ಬಯಸಲಿಲ್ಲ..... ಅಲ್ಲವಾ?"

"ಓಹ್...!
 ನನ್ನ ಗೆಳೆಯ  ಅದನ್ನೂ ನಿಮಗೆ ಹೇಳಿಬಿಟ್ಟಿದ್ದಾನೋ...
ಹೋಗ್ಲಿ ಬಿಡಿ..ಅದೆಲ್ಲ ಈಗ ಯಾಕೆ..?"

"ನೀವು ಗಂಡಸರು ....
ನಿಮ್ಮ  ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...?
ಪ್ರತಿ ಹೆಣ್ಣಿಗೂ ...
ಬೇಕು  ಬೇಡಗಳಿರುತ್ತವೆ.. 
ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?"

ನನಗೆ ಆಶ್ಚರ್ಯವಾಯಿತು...

"ಯಾಕೆ...? 
ನಿಮಗೆ  ಏನಾದರೂ... ಬೇರೆ   ಬೇಕು  ಬೇಡಗಳಿದ್ದವೆ..? "

" ಇದ್ದವೋ... ಇಲ್ಲವೋ...
ಈಗ ಹೇಳಿ  ಏನು ಪ್ರಯೋಜನ...?
 ಒಂದು  ನೆಲೆ...
ಒಂದು  ಬದುಕು ಸಿಕ್ಕಿದೆ... 
ಬಾಳ ಬೇಕಲ್ಲ... 
ಇಲ್ಲಿಯೇ.. ಖುಷಿ ಕಾಣ ಬೇಕಲ್ಲ..."

ಅಂದರೆ... ..
ಇವಳಿಗೆ  ಮನಸ್ಸಿಲ್ಲದ ಮದುವೆಯಾ?

ಅಷ್ಟರಲ್ಲಿ ಮನೆ ಬಂತು...

ನಾನು ಅವಳನ್ನು ಬಿಟ್ಟು ಕೊಡಲು ಹಾಲ್  ತನಕ ಬಂದೆ...

 "ನೋಡಿ... 
ಹೇಗಿದ್ದರೂ.. ಪಕ್ಕದ ಮನೆಯಲ್ಲೇ ಇರ್ತಿನಲ್ಲ...
ಏನಾದರೂ ಬೇಕಿದ್ದಲ್ಲಿ ಫೋನ್ ಮಾಡಿ... ತಕ್ಷಣ ಬಂದುಬಿಡುತ್ತೇನೆ..."

"ಊಟ ಮಾಡಿ ಹೋಗಿ... 
ಬೇಗನೇ.. ಊಟಕ್ಕೆ  ತಯಾರು ಮಾಡುತ್ತೇನೆ...
ಒಬ್ಬಳೆ ಊಟ ಮಾಡುವದು ಬಲು ಬೋರು..."

ನನಗೂ  ಸರಿಯೆನ್ನಿಸಿತು....

ಹಾಲಿನಲ್ಲಿ ಕುಳಿತೆ... 
ಆಕೆ ಟಿವಿ  ಆನ್ ಮಾಡಿ  ರಿಮೋಟ್  ಕೊಟ್ಟಳು...

ಕಣ್ಣು ಟಿವಿ ನೋಡುತ್ತಿದ್ದರೂ  ಮನ ಎಲ್ಲೋ  ಓಡಾಡುತ್ತಿತ್ತು...
ಮನದಲ್ಲಿ ಕೆಟ್ಟ ಆಲೋಚನೆಗಳು...
ಹೇಳಲಾಗದ ದ್ವಂದ್ವಗಳು...

ಈ ಕೆಟ್ಟ ಮನಸ್ಸು,, ಆಲೋಚನೆಗಳು..  ಖುಷಿ ಕೊಡುವದಂತೂ ನಿಜ...

ಆಕೆ ಲಗುಬಗೆಯಿಂದ ಅಡುಗೆ  ರೆಡಿ ಮಾಡಿ  ಊಟಕ್ಕೆ ಕರೆದಳು...

ಅವಳು...
ಅವಳು ಸೀರೆ ಉಟ್ಟ ರೀತಿ....
ಇಷ್ಟವಾಗ ತೊಡಗಿತು.....

ನಾನು  ಡೈನಿಂಗ್ ಟೇಬಲ್  ಮುಂದೆ ಕುಳಿತೆ...

ಇಂಥಹ ಸಂದರ್ಭ  ಮತ್ತೆ ಸಿಗಲಿಕ್ಕಿಲ್ಲ...
ಮನದಲ್ಲಿ ಏನೇನೋ  ಯೋಚನೆಗಳು...

ಹೊಸ ಅನುಭವಕ್ಕಾಗಿ  ಸಂದರ್ಭವೇ ನನ್ನನ್ನು ಹುಡುಕಿ ಬಂದಂತಿತ್ತು...

" ನಿಮ್ಮನ್ನು ಬಹಳ ದಿನಗಳಿಂದ ಒಂದು ಪ್ರಶ್ನೆ ಕೇಳಬೇಕಿತ್ತು..."

ನನ್ನ ಹೃದಯ ಬಡಿತ ಜೋರಾಯಿತು.. 

"  ಕೇಳಿ... "

"ನೀವು  ...
ನಿಮ್ಮ ಗೆಳೆಯನಿಗಾಗಿ ಹೆಣ್ಣು ನೋಡಲು ಯಾಕೆ  ಬಂದದ್ದು...?
ಗೆಳೆಯನಿಗೆ ಬರಲಿಕ್ಕೆ ಏನಾಗಿತ್ತು...?"

"ಸ್ನೇಹ... ಪ್ರೀತಿ...
ನಮ್ಮಿಬ್ಬರ ಗೆಳೆತನ.. 
ಇಬ್ಬರಿಗೂ   ಒಬ್ಬರಿಗೊಬ್ಬರ ಋಣದ ಬದುಕು..
ನಂಬಿಕೆ... ವಿಶ್ವಾಸ.. 
ನಮ್ಮ ಗೆಳೆತನವೇ  ಹಾಗಿದೆ.."

ಈ ಮಾತುಗಳನ್ನು  ಹೇಳಲು ಬಲು ಕಷ್ಟವಾಯಿತು...

ಈ ಸಂದರ್ಭಕ್ಕೆ  ಬೇಡ ಎನಿಸುತ್ತಿದ್ದರೂ  ನಾಲಿಗೆ  ಗೊತ್ತಿಲ್ಲದಂತೆ ಮಾತು  ಆಡುತ್ತಿತ್ತು...

"ಇದು  ಒಂದು ಥರಹದ ಮೋಸವಲ್ಲವೆ...?
"ತಂಗಿಯನ್ನು ತೋರಿಸಿ  ಅಕ್ಕನನ್ನು ಮದುವೆ ಮಾಡಿದರು" ಅನ್ನುವ ಗಾದೆಯ ಹಾಗಾಯ್ತು ಅಲ್ಲವೆ?"

ನಾನು ಅವಕ್ಕಾದೆ...!!
ಏನಿದರ ಅರ್ಥ..!!.. ??...

"ನಾನು ಮೊದಲೇ  ಹೇಳಿ ಬಂದಿದ್ದೆನಲ್ಲ... 
ಮದುವೆ  ನನಗಲ್ಲ... ನನ್ನ ಗೆಳೆಯನಿಗೆ ಅಂತ..."

" ನೋಡಿ...
ನಾನು ಮೊದಲಿನಿಂದಲೂ ಸ್ವಲ್ಪ ಮಾತಲ್ಲಿ ಜೋರು..
ಮದುವೆಯಾದ ಮೇಲೆ  ಸ್ವಭಾವ ಬದಲಿಸಿಕೊಳ್ಳ ಬೇಕಲ್ಲ..
ಹಾಗಾಗಿ  ಸುಮ್ಮನಿರುವ ಅನಿವಾರ್ಯ.. 
ಸುಮ್ಮನಿರುತ್ತೇನೆ...
ಇವತ್ತು ಸಂದರ್ಭ ಕೂಡಿ ಬಂದಿದೆ..
ಕೇಳಿ ಬಿಡುತ್ತೇನೆ..

ನೀವು ನನ್ನ ಸ್ಥಿತಿಯಲ್ಲಿದ್ದು ವಿಚಾರ ಮಾಡಿ..

ನನ್ನ ಭವಿಷ್ಯದ ಪ್ರೀತಿ...
ನನ್ನ ಮುಂದಿನ ಬಾಳಿನ ಸಂಗಾತಿ ನನ್ನನ್ನು ನೋಡಲು ಬರುವದಿಲ್ಲ...
ನನ್ನ ಅಂದವನ್ನು..ಚಂದವನ್ನು...
ಬೇರೊಬ್ಬರು ಬಂದು  ನಿರ್ಣಯಿಸುತ್ತಾರೆ...
ನನ್ನ ಬದುಕಿನ  ಕನಸನ್ನು ಮದುವೆಗೆ ಮೊದಲು..
ಕೊನೆ ಪಕ್ಷ ನೋಡುವಂಥಹ ಸಂದರ್ಭ ಕೂಡ ನನಗಿರುವದಿಲ್ಲ..."

ನನಗೆ  ಪಿಚ್ಚೆನಿಸಿತು...
ಅವಳ ಮಾತುಗಳ ಸತ್ಯ ನನ್ನನ್ನು ಇರಿಯಿತು...

 ಅವಳೇ.. ಮತ್ತೆ ಮಾತನಾಡಿದಳು..

"ನೀವು ...
ನಿಮ್ಮ ಗೆಳೆಯನಿಗಾಗಿ ನನ್ನನ್ನು ನೋಡಿದರೂ...
ನನ್ನನ್ನು ನೋಡಿದ್ದು ...
ನಿಮ್ಮ ಕಣ್ಣು...
ನಿಮ್ಮ ಮನಸ್ಸು... 
ನಿಮಗೆ "ಇಷ್ಟವಾಗಿದ್ದಕ್ಕೆ"  ನನ್ನನ್ನು ಗೆಳೆಯನಿಗಾಗಿ  ಸಿಲೆಕ್ಟ್ ಮಾಡಿದ್ದೀರಿ ಅಲ್ಲವಾ?" 

ನಾನು  ತಡವರಿಸಿದೆ...

"ಸ್ಸಾರಿ... 
ಆ  ಸಂದರ್ಭದಲ್ಲಿ  ನಮ್ಮ ಗೆಳೆತನ ಬಿಟ್ಟು ಬೇರೆ ಯೋಚನೆ  ಬರಲಿಲ್ಲ..."

ಊಟ  ಸೊಗಸಾಗಿತ್ತು..
ದಿನಾ  ನನ್ನ  ಕೈ ಅಡುಗೆಯ ಸಪ್ಪೆ ಊಟ ನೆನಪಾಯಿತು..
ಆದರೆ.. 
ಆಸ್ವಾದಿಸುವಂಥಹ   ಸವಿಯುವಂಥಹ  ವಾತಾವರಣ ಅಲ್ಲಿರಲ್ಲಿಲ್ಲ...

ಇಬ್ಬರದೂ ಊಟವಾಯಿತು...

"ಸರಿ  ...
ನಾನಿನ್ನು ಹೊರಡುವೆ... ಬಾಗಿಲು ಹಾಕಿಕೊಳ್ಳಿ.."

"ಪ್ಲೀಸ್....
 ನೀವು ಈ ರಾತ್ರಿ ಇಲ್ಲಿಯೇ ಮಲಗಿ..."

"ಬೇಡಾ... ರಿ.." 
ನಾನು  ತೊದಲಿದೆ...
ಮತ್ತೆ ಹೇಳಲಾಗದ ಆಸೆ ಗರಿಗೆದರಿತು...!!

"ಪ್ಲೀಸ್.. ಪ್ಲೀಸ್...
ನನಗೆ  ಬಹಳ ಹೆದರಿಕೆ.."

ಅವಳ ಬೊಗಸೆ ಕಣ್ಣುಗಳಿಗೆ  ಇಲ್ಲವೆನ್ನಲಾಗಲಿಲ್ಲ....

ದೇವರೇ..
ಏನಾದರೂ  ಘಟಿಸಲಿ... !!
ಏನಾದರೂ.....ಆಗಿ ಹೋಗಲಿ....! 
ಅನ್ನುತ್ತಿತ್ತು  ಒಳ ಮನಸ್ಸು...!

ಮನಸ್ಸು  ಬಯಸಿದ್ದು ಅದನ್ನೇ ಆದರೂ... ಬೇಡವೆನ್ನುವ  ಮನಸ್ಸಲ್ಲಿ ಒಪ್ಪಿದೆ...

"ನನಗೆ  ಹಾಸಿಗೆ  ತರಲು ಸಹಾಯ ಮಾಡಿ... 
ದಯವಿಟ್ಟು ಬನ್ನಿ..."
ನಾನು  ಅವಳನ್ನು ಹಿಂಬಾಲಿಸಿದೆ...

ನಾವು ಇಬ್ಬರೇ.. !!
ಈ ರಾತ್ರಿ... ಈ ಮನೆಯಲ್ಲಿ...! 
ಒಂಥರಾ... ಪುಳಕ...! ಅಂಜಿಕೆ..  !!

ಮನದ ಹುಚ್ಚು ಆಲೋಚನೆಗಳಿಂದ  ಒಂಥರಾ ಥ್ರಿಲ್ಲಾಯಿತು....

ಹತ್ತಿ ಹಾಸಿಗೆ ಭಾರವಿತ್ತು...ನಾನು ಅದನ್ನು ಎತ್ತುವಾಗ  ಅವಳು  ಸನಿಹ ಬಂದಳು...

ಅವಳ ಮೈಯಿಂದ  ಒಂದು ಥರಹದ ಸುವಾಸನೆ...!
ಮತ್ತೇರಿಸುವಂತಿತ್ತು...

ಭಾವನೆಗಳು ಕೆರಳ ತೊಡಗಿತು... ಹಾಲಿಗೆ ಬಂದು  ಇಳಿಸಲು ನೋಡಿದೆ...

ಸಹಾಯಕ್ಕೆ  ಅವಳೂ ಬಂದಳು..
ಮತ್ತೆ  ಹತ್ತಿರ ಬಂದಳು... ಅವಳ ಸ್ಪರ್ಷದಲ್ಲಿ ರೋಮಾಂಚನೆಯಿತ್ತು..

ಅವಳು ಬೆಡ್ ಶೀಟ್ ಹಾಸ ತೊಡಗಿದಳು.....
ಬಗ್ಗುವಾಗ ನನ್ನನ್ನೇ ನೋಡುತ್ತಿದ್ದಳು...!

ಆ ಬೊಗಸೆ ಕಣ್ಣುಗಳಲ್ಲಿ  ಆಸೆ ಇದೆಯಾ?
ಏನಿದು ನೋಟ...?
ಏನಿದರ ಅರ್ಥ...? ನನ್ನನ್ನು  ಬಾ  ಎನ್ನುತ್ತಿದೆಯಾ...?

ಹೆಣ್ಣಿನ ಈ ಮೌನ ಭಾಷೆ ಅರ್ಥವಾಗುವಂತಿದ್ದರೆ...?

ನನ್ನ  ಕಲ್ಪನೆಯಾ  ಇದೆಲ್ಲಾ...?  ನಾನು ಸ್ವಲ್ಪ ಧೈರ್ಯ ಮಾಡಿ ಬಿಡಲಾ...?

" ನೀವು ಮಲಗಿ... ಟಿವಿ  ಆಫ್ ಮಾಡ್ತೀನಿ...
ಮತ್ತೆ ಏನಾದರೂ ಬೇಕಾ...?"

ನಾನು ಸ್ವಲ್ಪ ಮುಂದೆ ಹೋಗಿ ಅವಳ ಕೈ ಹಿಡಿದು ಕೊಳ್ಳ ಬೇಕು ಅಂದುಕೊಂಡೆ....

ಅಥವಾ  ತಬ್ಬಿಕೊಂಡು ಬಿಡಲಾ...?

ಅವಳು ಟಿವಿ  ಆಫ್ ಮಾಡಿದಳು...

ನನ್ನ ಗಮನ ಟಿವಿ ಕಡೆ ಸರಿಯಿತು...

ಟಿವಿ ಪಕ್ಕದಲ್ಲಿ ನನ್ನ ಗೆಳೆಯನ ಮದುವೆ  ಫೋಟೊ...!

ಅವರಿಬ್ಬರ ಹೆಗಲ ಮೇಲೆ ಕೈ  ಹಾಕಿ  ನಿಂತಿರುವ  ನನ್ನ ಫೋಟೊ...!!

ನನಗೆ ಏನನ್ನಿಸಿತೊ ... !

"ನೀವು  ...
ಬೆಡ್ ರೂಮ್ ಬಾಗಿಲು ಹಾಕಿಕೊಳ್ಳಿ... 
ಹೆದರಿಕೆ ಬೇಡ...
ನಾನಿದ್ದೇನೆ... ಧೈರ್ಯವಾಗಿರಿ..."

ಅವಳು ನನ್ನನ್ನೊಮ್ಮೆ ನೋಡಿ...
ಲೈಟ್ ಆಫ್ ಮಾಡಿ ...
ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು...

ಹೇಗೋ  ... ..  ಬೆಳಗಾಯಿತು.. .. ..

ನಾನು ಏಳುತ್ತಿರುವ ಹಾಗೆ ಅವಳು  ಘಮಘಮಿಸುವ ಕಾಫೀ ತಂದಿದ್ದಳು...

" ರಾತ್ರಿ  ನಿದ್ದೆ ಬಂತಾ...? "

ನಾನು ತಲೆಯಾಡಿಸಿದೆ...

" ನೀವು ...
ತುಂಬಾ  ಒಳ್ಳೆಯವರು ಕಣ್ರೀ...!
ನನ್ನ  ಯಜಮಾನ್ರು  ನಿಮ್ಮ ಬಗೆಗೆ   ಏನು  ಹೇಳಿದ್ರು  ಗೊತ್ತಾ  ?  "

" ನನ್ನ  ಬಗೆಗಾ ? 
ಏನು  ಹೇಳೀದ್ದ.. ? "

"ನೋಡು ..
ಕೆಲವೊಮ್ಮೆ ನನಗೆ .. ನನ್ನ ಮೇಲೇ ...ನಂಬಿಕೆ ಇರುವದಿಲ್ಲ...
ಆದರೆ ...
ನನ್ನ ಗೆಳೆಯ ಹಾಗಲ್ಲ...
ಸ್ಪಟಿಕದಂಥಹ  ಮನುಷ್ಯ...!!
ಶುದ್ಧ ಹೃದಯದ ಸ್ನೇಹ ಆತನದು...!!

ನಿಜ...
ನನ್ನವರು ಹೇಳಿದ ಹಾಗೆ .. " ನೀವು ತುಂಬಾ ಒಳ್ಳೆಯವರು ಕಣ್ರೀ..."

ನಾನು ತಲೆಯಾಡಿಸಿದೆ....



ಇದು   "  ಕಥೆ  "





(ಒಳ್ಳೆಯ ಪ್ರತಿಕ್ರಿಯೆಗಳಿವೆ...
ದಯವಿಟ್ಟು  ಪ್ರತಿಕ್ರಿಯೆಗಳನ್ನೂ ಓದಿ....)



115 comments:

Harisha - ಹರೀಶ said...

ನಿಜವಾಗೂ ಆಗಿದ್ದು ಅಂತ ನನ್ ಅನಿಸಿಕೆ.. ನಿಜ್ವಾಗ್ಲೂ ಕಥೇನೇನಾ?

Ittigecement said...

ಹರೀಶ್...

ತುಂಬಾ ದಿನಗಳ ನಂತರ ಮುಖ ದರ್ಶನ...

ಇದು ನಿಜವಾಗಿಯೂ ಕಥೆ...

ಬಹಳ ದಿನಗಳಿಂದ ತಲೆಯಲ್ಲಿ "ಒಳ್ಳೆಯದು.. ಕೆಟ್ಟದುದರ, ಸರಿ.. ತಪ್ಪುಗಳ " ಬಗೆಗೆ ಕೊರೆಯುತ್ತಿತ್ತು....

ಎಲ್ಲ ಒಳ್ಳೆಯವರಿಗೂ ಸಂದರ್ಭ ಸಿಕ್ಕರೆ "ಕೆಟ್ಟವರಾಗುವ" ಆಸೆ ಇರಬಹುದಲ್ಲವೆ?

ನನ್ನ ಗೆಳೆಯರೊಬ್ಬರಿಗೆ ಈ ಕಥೆ ಹೇಳಿದೆ..
ಅವರು ಏನು ಹೇಳಿದರು ಗೊತ್ತಾ??

" ಪ್ರಕಾಶ್ ನಾನು ಒಳ್ಳೆಯವನು ಯಾಕೆ ಗೊತ್ತಾ?
ನನಗೆ ಕೆಟ್ಟವನಾಗುವ ಸಂದರ್ಭ ..
ಛಾನ್ಸ್ ಸಿಗಲಿಲ್ಲ...
ಹಾಗಾಗಿ ಒಳ್ಳೆಯವನಾಗಿಯೇ ಇದ್ದೇನೆ" ಅಂದರು....

ಪ್ರತಿಕ್ರಿಯೆಗೆ ಧನ್ಯವಾದಗಳು...

ಜಲನಯನ said...

ಪ್ರಕಾಶನ ಪ್ರಕಾಶಿತ ಕಥೆ ಎಲ್ಲರನ್ನೂ ತಡಕಾಡಿಕೊಳ್ಳೋಹಾಗೆ ಮಾಡೋದಂತೂ ನಿಜ,... ಹಹಹ...ಬೋಲ್ಡ್ ಕಥೆ ಪ್ರಕಾಶು. ಹೌದು ಮನದ ಮೂಲೆಯ ಮಲಿನ ಎಲ್ಲರಲ್ಲೂ ಇರುತ್ತೆ..ಇದನ್ನು ಅಲ್ಲಗಳೆಯೋರು... ಒಂದು -ತಮ್ಮನ್ನು ತಾವೇ ಮೋಸಮಾಡ್ಕೊಳ್ಳೋರು, ಇಲ್ಲವೇ ಸುಳ್ಳರು ಆಗಿರ್ಬೇಕು. ಆದ್ರೆ ಸಮಾನ್ಯವಾಗಿ ಬಹುಪಾಲು ಇದನ್ನು ಮೆಟ್ಟಿನಿಲ್ಲುವ ಸದ್ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ, ಹಾಗೆ ಆಗದವರು ವ್ಯಸನಿಗಳೋ ಅಥವಾ ವಿಕೃತರೋ ಅಥವಾ ಹುಚ್ಚರೋ ಆಗ್ತಾರೆ...ಇದನ್ನ ಕ್ರೈಮ್ ಸೈನ್ಸ್ ಸಹಾ ಪ್ರತಿಪಾದಿಸಿದೆ...ಹೆಣ್ಣಿನ ವಿಷಯವೊಂದಕ್ಕೇ ಇದು ಸೀಮಿತವಲ್ಲ ..ಎಲ್ಲ ಸರಿಯಲ್ಲ ಎನ್ನಬಹುದಾದ ಚರ್ಯೆಗಳಿಗೆ ಅನ್ವಯಿಸುತ್ತೆ. ಕಥೆಯ ಪ್ರಸ್ತಾವನಾ ಶೈಲಿಯೂ ಇಷ್ಟ ಆಯ್ತು...

ಆಲಾಪಿನಿ said...

ಸರ್‌, ಇದು ಕಥೆ ಅಂತ ಕೊನೆಗೆ ನೀವು ಹೇಳಬೇಕಿರಲಿಲ್ಲವೇನೋ.. ನಮಗಾಗ್ಲೇ ಅರ್ಥವಾಗಿಬಿಟ್ಟಿತ್ತು.. ಕುತೂಹಲದೊಂದಿಗೆ ಓದಿಸಿಕೊಂಡು ಹೋಗುತ್ತದೆ.

Anonymous said...

excellent sir... how creative your brain is!!!

Anonymous said...

ಅಂತು ನೀವ್ ಒಳ್ಳೇವ್ರು ಅಂತ ಕಥೆ ಹೇಳ್ಬಿಟ್ರಿ ಪ್ರಕಾಶಣ್ಣ :)

Rajath said...

aaha identha really nijavada kattu kathe... idu asahaja hege idu sahaja antha bareyabeku.

Rajiv Ajjibal said...

curious till the end.keep it up.write more and gud luck.....R.G.H

viju said...

kathe odisgyandu hogtu.......cholo iddu....

Suvarnini Konale said...

ಒಳ್ಳೆಯವರಾಗಿ ಬದುಕೋದು ಕಷ್ಟ..ಹಲವು ಕಾರಣಗಳಿಂದ...ಆದರೆ ಎಲ್ಲಕ್ಕಿಂತ ಹೆಚ್ಚು ಬೆಲೆ ಇರೋ ನೆಮ್ಮದಿ, ಮನಃಶಾಂತಿ ಇದೇ ದಾರೀಲಿ ಸಿಗೋದು :) :) :)
ಕಥೆ ಚೆನ್ನಾಗಿದೆ... :)

Dr.D.T.Krishna Murthy. said...

ಪ್ರಕಾಶಣ್ಣ ;ಅದ್ಭುತ ಕಥನ.ಕಥೆಯನ್ನು ಒಳ್ಳೇ ಜೇಡ ಬಲೆ ನೇಯುವ ಹಾಗೇ ತಾಳ್ಮೆಯಿಂದ ನೆಯ್ದಿದ್ದೀರಿ.ತುಂಬಾ ತುಂಬಾ ಇಷ್ಟವಾಯಿತು.ಕೊನೆಯಲ್ಲಿ ಎದೆ ಬಡಿತ ಹೆಚ್ಚಾಗಿದ್ದಂತೂ ನಿಜ.ಕಥೆಯ ಅಂತ್ಯ ಅಸಹಜವಾಗಿದ್ದರೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನೇ ಕೊಟ್ಟಿದ್ದೀರಿ.ಅಭಿನಂದನೆಗಳು.ನಮಸ್ಕಾರ.ಜೈ ಹೋ.

Ambika said...

ಪ್ರಕಾಶಣ್ಣ,
ನೀವು ಕಥೆ ಬರೆಯುವ ಶೈಲಿ ನನಗೆ ತು೦ಬಾ ಇಷ್ಟ.
ನಿಮ್ಮ ಬ್ಲಾಗ್ ಅಪ್ ಡೇಟ್ ಆಗಿದೆ ಅ೦ತಾ ಗೊತ್ತಾದ ಕೂಡಲೆ ಮೊದಲು ಓದಲೇ ಬೇಕು.
ಓದಿ ಮುಗಿಯುವವರೆಗೂ ಯಾರು ಕರೆದರೂ ಮಾತಡುವುದಿಲ್ಲ. ಕಥೆ ಎ೦ದಿನ೦ತೆ ಕೂತೂಹಲಕರವಾಗಿದೆ.
ಧನ್ಯವಾದಗಳು.

sunaath said...

ಪ್ರಕಾಶ,
ಸೊಗಸಾದ ಕತೆಯನ್ನು ಸ್ವಾರಸ್ಯಕರ ಶೈಲಿಯಲ್ಲಿ ಹೆಣೆದಿದ್ದೀರಿ. ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಹೋಗುತ್ತದೆ.

Ittigecement said...

ಆಜಾದು...

ಎಲ್ಲೋ ಓದಿದ ನೆನಪು..
ನಾವು ಯಾಕೆ ಒಳ್ಳೆಯವರು ಅನ್ನುತ್ತಾ ಇರ್ತೀವೆ ಗೊತ್ತಾ?
ನಾವು ಒಳ್ಳೆಯವರಾಗೆ ಇರಬೇಕು...
ಜನರು ನಮ್ಮನ್ನು ಹಾಗೆ ಗುರುತಿಸ ಬೇಕು...

ಜನರೆಲ್ಲ "ಇವ ಒಳ್ಳೆಯವ" ಅನ್ನುತ್ತಿದ್ದರೆ ಹಾಗೆ ಇರುವ ಅನಿವಾರ್ಯತೆ ಕೂಡ ಇರುತ್ತದೆ..

ಇಷ್ಟಕ್ಕೂ "ಒಳ್ಳೆಯದು.. ಕೆಟ್ಟದು" ಅಂದರೆ ಏನು...?

ನಮ್ಮ ಅವಶ್ಯಕತೆ, ಅವಲಂಬನೆ.. ಅಗತ್ಯ..
ಕೆಲವೊಮ್ಮೆ ಇವುಗಳಿಂದ ಉಂಟಾದ "ಅನಿವಾರ್ಯತೆ". ಇದೆಲ್ಲದರ ಮೇಲೆ ಒಳ್ಳೆಯದು ಕೆಟ್ಟದ್ದು ನಿರ್ಣಯವಾಗುತ್ತದೆ...

ಬಹಳ.. ಬಹಳ ಚಂದದ ಪ್ರತಿಕ್ರಿಯೆ...

ನಾನು ಬರೆದದ್ದು ಸಾರ್ಥಕ ಎಂದು ಅನ್ನಿಸುವಂಥಹ ಪ್ರತಿಕ್ರಿಯೆ..

ಜೈ ಹೋ....!!!

Ittigecement said...

ಆಲಾಪಿನಿ...

ಮೊದಲ ಪ್ರತಿಕ್ರಿಯೆ ಓದಿ "ಇದು ಕಥೆ" ಅಂತ ಬರೆದೆ...
ಇದು ಕಥೆಯಂತಿಲ್ಲ..
ನಡೆದ ಘಟನೆಯಂತಿದೆ... ಅಂತ "ಹರೀಶ" ಹೇಳಿದ್ದು ಧನಾತ್ಮಕ ಅಂತ ಅರ್ಥೈಸಿದೆ..

ಬಹುಷಃ ನನ್ನ ಕಥೆಗಳಲ್ಲಿ "ನಾನು" ಎನ್ನುವ ನಿರೂಪಕನಿರುತ್ತಾನಲ್ಲ ಅದಕ್ಕಾಗಿ ಗೊಂದಲ ಉಂಟಾಗಿರಬಹುದು ಅಂತ ಅಂದುಕೊಂಡಿದ್ದೇನೆ...

ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಭಾಸ್ಕರ...

ಒಳ್ಳೆಯದು... ಕೆಟ್ಟದ್ದು.. ಸರಿ.. ತಪ್ಪು ..
ಎಲ್ಲವೂ ನಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಲವೆ?

ಮನವೆಂಬ ಮರ್ಕಟ ಅಂತ ಹೇಳುತ್ತಾರೆ..
ತಾನೆ ನೋಡಿಮದುವೆ ಮಾಡಿಸಿದ ಗೆಳೆಯನ ಮಡದಿ...

ಕೆಟ್ಟ ಆಲೋಚನೆ ಬಂದಿತು..

ಅವಳ ನಡೆ, ನುಡಿ... ಹಾವ , ಭಾವ ಎಲ್ಲವೂ..
ಅವನ ಕೆಟ್ಟ ವಿಚಾರಕ್ಕೆ ತಕ್ಕಂತೆ ಪಾಸಿಟಿವ್ ಆಗಿ ಅನ್ನಿಸ ತೊಡಗುತ್ತದೆ...
( ಇಲ್ಲಿ ನಾನು ಅವಳಿಗೆ ಇವನ ಬಗೆಗೆ ಎಂಥಹ ಭಾವನೆ ಇತ್ತು ಅಂತ ಸ್ಪಷ್ಟವಾಗಿ ಹೇಳಲಿಲ್ಲ..
ಇದ್ದರೂ ಇದ್ದಿರ ಬಹುದು..
ಅಥವಾ.. ಇವನಂಥಹ ಮನಸ್ಥಿತಿಯಲ್ಲೇ ಅವಳೂ ಇದ್ದಿರ ಬಹುದು)

ಇಲ್ಲಿ ಅವನ ಕೆಟ್ಟ ಆಲೋಚನೆಗಳನ್ನು ಸರಿ ದಾರಿಗೆ ತಂದದ್ದು ..
ಅವನ "ಒಳ್ಳೆಯ" ಆಚಾರಗಳು.. ಅಲ್ಲವೆ?

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

V.R.BHAT said...

ಪ್ರಕಾಶ್ ಹೆಗಡೆಯವರೇ, ಕಥೆ ನೈಜವಾಗಿ ನಡೆದ ರೀತಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ನಿಮ್ಮದೇ ಶೈಲಿಯಲ್ಲಿ ಗೋಮುಖದೊಳಗೆ ಅವಿತು ಆಗಾಗ ಆಕ್ರಮಿಸುವ ವ್ಯಾಘ್ರನ ಅವತರಣಿಕೆಯನ್ನು ಬಿಂಬಿಸಿದ ರೀತಿ ಬಹಳ ಇಷ್ಟವಾಯಿತು. ಗಂಡು ಹೆಣ್ಣು ಮತ್ತು ಅವರೊಳಗಿನ ಸ್ಪಂದನ ಮತ್ತು ಕೂದಲೆಳೆಯ ಅಂತರದಲ್ಲಿ ಘಟಿಸಬೇಕಾದದ್ದು ’ಒಳ್ಳೆಯತನ’ ಉಳಿಸಿಕೊಳ್ಳುವ ಸಲುವಾಗಿ ಘಟಿಸದೇ ಇರುವುದು--ಇವೆಲ್ಲಾ ಕಥೆಗೆ ಪೂರಕ ಅಂಶಗಳು. ಚೆನ್ನಾಗಿದೆ ! ಜೈ ಹೋ

ಮನಮುಕ್ತಾ said...

ಪ್ರಕಾಶಣ್ಣ,
ಕಥೆ ಕುತೂಹಲಕಾರಿಯಾಗಿ ಓದಿಸಿಕೊ೦ಡು ಹೋಗುತ್ತದೆ.
ಮನುಷ್ಯರಿಗೆ ತಾವು ನಡೆದುಬ೦ದ ಸ೦ಸ್ಕಾರ,ಅ೦ತರಾಳದಲ್ಲಿನ ಆತ್ಮಶಕ್ತಿ ಕೆಟ್ಟ ನಡವಳಿಕೆಯಿ೦ದ ದೂರವಿಡುತ್ತದೆ.ಕೆಟ್ಟವರಿಗೆ ಒಳ್ಳೆಯವರಾಗುವುದು ಎಷ್ಟು ಕಷ್ಟವೊ ಒಳ್ಳೆಯವರಿಗೆ ಕೆಟ್ಟವರಾಗುವುದೂ ಕೆಟ್ಟ ತನವನ್ನು ಅರಗಿಸಿಕೊಳ್ಳುವುದು ಅಷ್ಟೆ ಕಷ್ಟ.ಯಾವುದೇ ಸ೦ಧರ್ಭದಲ್ಲೂ ಒಳ್ಳೆಯವರು ಕೆಟ್ಟವರಾಗಲಾರರು ಎ೦ದು ನನಗನ್ನಿಸುತ್ತದೆ.
ಕಥೆಯಲ್ಲಿರುವ ವ್ಯಕ್ತಿ ತಾನು ನಡೆಸಿಕೊ೦ಡು ಬ೦ದಿರುವ ಸ೦ಸ್ಕಾರ ಹಾಗೂ ಆತ್ಮ ಬಲದಿ೦ದ ಆಚಾರದಲ್ಲಿ ಒಳ್ಳೆಯವನಾಗಿಯೇ ಉಳಿದ.

balasubramanya said...

ಇದಪ್ಪ ಪ್ರಕಾಶಣ್ಣನ ವರಸೆ , ಅಲ್ರೀ ಎಂತಹ ತಿರುವುಗಳು ಏನ್ ಕಥೆ , ಬಹುಷಃ ಇಂತಹ ಸಂಧರ್ಭದಲ್ಲಿ ಪ್ರತೀ ಗಂಡಿನ ಮನದಲ್ಲಿ ಹುಟ್ಟುವ ಮನಸಿನ ತಾಕಲಾಟ , ಈ ತಾಕಲಾಟಗಳನ್ನು ಪರೀಕ್ಷಿಸುವ ಸ್ನೇಹಿತನ ಹೆಂಡತಿ. ಮನವೆಂಬ ಮರ್ಕಟವನ್ನು ಹದ್ದು ಬಸ್ತಿನಲ್ಲಿ ಇಟ್ಟು, ಸ್ನೇಹಿತನ ಹೆಂಡತಿ ಯಿಂದ ಶಭಾಸ್ ಗಿರಿ ಪಡೆದ ಆ ಹೀರೋ ವಾವ್ ಸೂಪರ್ . ಇದೆ ಪ್ರಕಾಶಣ್ಣನ ಇಷ್ಟೈಲ್!!!

ಅನಂತ್ ರಾಜ್ said...

ದೌರ್ಬಲ್ಯಗಳು ಮೌಲ್ಯಗಳ ಮೇಲೆ overlap ಆಗುವ ಸ೦ದರ್ಭ ಬ೦ದರೂ, ಮೌಲ್ಯಗಳಿಗೇ ಜಯ ಕೊಡಿಸಿದಿರಿ..ಜೈ ಹೋ..! ಕುತೂಹಲಕರವಾಗಿ ನಿರೂಪಿಸಿದ್ದೀರಿ..ಪ್ರಕಾಶ್ ಸರ್..

ಶುಭಾಶಯಗಳು
ಅನ೦ತ್

Narayan Bhat said...

ಕಥಾ ಹಂದರ ...ನಿರೂಪಣೆ ತುಂಬಾ ಚೆನ್ನಾಗಿದೆ.

ಬಿಸಿಲ ಹನಿ said...

ಪ್ರಕಾಶ ಸರ್,
ನಿಮ್ಮ ಕಥೆ ತುಂಬಾ ಚನ್ನಾಗಿ ಬಂದಿದೆ. ಮನದ ತಾಕಲಾಟಗಳನ್ನು ನಿಮ್ಮದೇ ನಿರೂಪಣೆಯ ವಿಧಾನದಲ್ಲಿ ತುಂಬಾ ಚನ್ನಾಗಿ ಚಿತ್ರಿಸಿದ್ದೀರಿ.

Bhavana Rao said...

ಕಥೆಯನ್ನು ಬಹಳ ಸೊಗಸಾಗಿ ಹೆಣೆದಿದ್ದಿರ..

Ittigecement said...

ಪ್ರಿಯ ರಾಕೇಶ್ (ಜನಗಣಮನಧೀನ)...

ನಾನು ಬರೆದದ್ದು ಕಥೆ..

ಪ್ರತಿಯೊಬ್ಬರ ಮನದಲ್ಲಿ ಒಳ್ಳೆಯ, ಕೆಟ್ಟದುಗಳ "ಸಂಘರ್ಷ" ನಡೇಯುತ್ತಲೇ ಇರುತ್ತವೆ..
ಆ ಯುದ್ಧದಲ್ಲಿ ಯಾವುದು ಗೆಲ್ಲುತ್ತದೆ ಅನ್ನುವದು,,..
ಅವರವರ ಸಂಸ್ಕಾರ, ವಿವೇಚನೆಗೆ ಬಿಟ್ಟ ವಿಚಾರ..

ದೌರ್ಬಲ್ಯಕ್ಕೆ ಒಳಗಾಗಿ ಕೆಟ್ಟದುದರ ಹಿಂದೆ ಬಿದ್ದರೆ ಕಷ್ಟ..

ಈ ಕಥೆಯಲ್ಲಿ ಮನದೊಳಗೆ ಅಷ್ಟೆಲ್ಲ "ತೊಳಲಾಟ" ಆದರೂ...
ಗೆದ್ದದ್ದು ಆತನ "ಒಳ್ಳೆಯತನ"

ನೈತಿಕತೆಯಿಂದ ಆತನ ಗೆಳೆಯನಿಗೆ "ಮುಖ" ತೋರಿಸುವ ದೈರ್ಯ ಇಟ್ಟುಕೊಂಡಿರುತ್ತಾನೆ ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

"ಅಸಹಜ"...ಯಾಕೋ..? ?

ಸಹಜ .. ಅಲ್ಲ, ಅನ್ನುವ ಒಳ ಅರ್ಥ ಎಲ್ಲೋ

ಧ್ವನಿಸುತ್ತಿದೆಯಾ ?

ಇರಲಿ ಬಿಡಿ.ಕಥೆಯಂತೂ ಸೂಪರ್.

Ittigecement said...

ರಜತ್....

ಇದು "ಅಸಹಜ"... ಯಾಕೆ ಗೊತ್ತಾ?

ಇಲ್ಲಿ ನಿರೂಪಕ ನಿಜಕ್ಕೂ ಒಳ್ಳೆಯವನಾ?

ಮನದಲ್ಲಿ ಗೆಳೆಯನ ಮಡದಿಯ ಬಗೆಗೆ ಅಷ್ಟೆಲ್ಲ ಮನದೊಳಗೆ ಸಂಘರ್ಷ ನಡೆಸಿ...

ಅಕಸ್ಮಾತ್ ....
ಗೆಳೆಯನ "ಮದುವೆಯ" ಫೋಟೊ ನೋಡಿ...
ಒಳ್ಳೆಯತನ ಜಾಗ್ರತವಾಗಿ...
ಒಳ್ಳೆಯವನಾಗುತ್ತಾನೆ...

ಈತ ಒಳ್ಳೆಯವನೆ..??

ನನಗಂತೂ "ಅಸಹಜ" ಅಂತ ಅನ್ನಿಸುತ್ತಿದೆ...

ಸಹಜವಾಗಿ ಒಳ್ಳೆಯವನಲ್ಲ... ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರೀತಿಯ ಆರ್. ಜಿ. ಸರ್...

(ಗೆಳೆಯರೆ...

ಇವರು ನನಗೆ ಕಲಿಸಿದ ಗುರುಗಳು...

ಇವರು ಸ್ವತಹ ತುಂಬಾ ಒಳ್ಳೆಯ ಕವಿಗಳು..
ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ..
ನಾನು ಹೈಸ್ಕೂಲ್ ಓದುತ್ತಿರುವಾಗ ನನ್ನ ತುಂಟತನ ಸಹಿಸಿ.. ದಂಡಿಸಿ..
ನಾನು ಒಳ್ಳೆಯ ಕಥೆಗಳನ್ನು.. ಓದುವಂತೆ ಪ್ರೇರೇಪಿಸಿದವರು ಇವರು..
ಆಗ ಕೆಲವೊಂದು ಕವನ, ಕಥೆಗಳನ್ನು ನನ್ನಿಂದ ಬರೆಸಿದ್ದರು..

ಅವರ ಅಂದಿನ ಆಶಯದ ಫಲ ನಾನು ಇಂದು ಬರೆಯುತ್ತಿರುವೆ..)

ಸರ್ ನೀವು ನನ್ನ ಬ್ಲಾಗಿಗೆ ಬಂದು ಪ್ರೋತ್ಸಾಹಿಸಿದ್ದು ತುಂಬಾ ಖುಷಿಯಾಗುತ್ತಿದೆ..

ಸರ್ ನಿಮ್ಮಂಥಹ ಗುರುಗಳು ಸಿಕ್ಕಿದ್ದು ನನ್ನ ಪುಣ್ಯ..

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬಾ ತುಂಬಾ ಧನ್ಯವಾದಗಳು..

ಇನ್ನೊಮ್ಮೆ ನಿಮ್ಮ ಬಳಿ ಕಿವಿ ಹಿಂಡಿಸಿಕೊಳ್ಳುವ ಆಸೆ ಆಗ್ತ ಇದೆ....

Ranjana H said...

ಎಲ್ಲಾ ಮಾನವರ ಮನದಲ್ಲು ಒಬ್ಬ ದೇವತೆ, ಇನ್ನೊಬ್ಬ ರಾಕ್ಶಸ ಅಡಗಿ ಕುಳಿತಿರುತ್ತಾರೆ. ಸಂದರ್ಭ ದೊರಕಿದಾಗ ಆತನ ಮನದಲ್ಲಿ ಯಾರು ಬಲವಂತರೊ ಅವರು ಹೊರಗೆ ಕಾಣಿಸಿಕೊಳ್ಳುತ್ತಾರೆ. ಒಳ್ಳೆಯವರು ಅನ್ನಿಸಿಕೊಂದವರಲ್ಲಿ ದೈವೀ ಗುಣಗಳು ಹೆಚ್ಚಾಗಿದ್ದರೆ ಕೆಟ್ಟವರು ಅನ್ನಿಸಿಕೊಂಡವರಲ್ಲಿ ರಾಕ್ಶಸೀ ಗುಣಗಳು ಹೆಚ್ಚಾಗಿ ತುಂಬಿರುತ್ತವೆ ಮತ್ತು ಸಂದರ್ಭ ಬಂದಾಗ ಅವುಗಳೇ ವಿಜಯ ಸಾಧಿಸುತ್ತವೆ.
ನಮ್ಮ ನಮ್ಮ ಮನದಲ್ಲಿ ಯಾರನ್ನು ಬಲಪಡಿಸಿಕೊಳ್ಳಬೇಕು ಅನ್ನುವುದನ್ನು ಚಿಂತನೆಗೆ ಹಚ್ಚಿದ ಸುಂದರ, ನೈಜ ಕಥೆ ಇದು ಪ್ರಕಾಶಣ್ಣ.
ತುಂಬಾ ಚೆನ್ನಗಿದೆ.

Ittigecement said...

ವಿಜಯೇಂದ್ರ..

ಕೆಲವೊಮ್ಮೆ...
ನಮ್ಮ ತಿಳುವಳಿಕೆ..
ಸಂಸ್ಕಾರ.. ಓದು ಇತ್ಯಾದಿಗಳ ಪ್ರಭಾವಕ್ಕೆ ಓಳಗಾಗಿಯೋ ಏನೋ...
ಅಕಸ್ಮಾತ್ ಒಳ್ಳೆಯವರಾಗಿ ಬಿಡುತ್ತೇವೆ...

ನಮ್ಮೊಳಿಗಿನ ಒಳ್ಳೆಯತನ ಯಾವಾಗಲೂ ಗೆಲ್ಲ ಬೇಕು ಅಲ್ಲವಾ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುವರ್ಣಿನಿ... ಡಾಕ್ಟ್ರೆ...

ನಿಜ..
ಒಳ್ಳೆಯವರಾಗಿ ಬದುಕೋದು ಬಹಳ ಕಷ್ಟ..
ಅದರಲ್ಲೂ ಈಗಿನ ಪ್ರಪಂಚದ ಆಕರ್ಷಣೆಗಳು... ಮಾಧ್ಯಮಗಳು..

ನಾವೆಲ್ಲ ಎಲ್ಲೋ ನೈತಿಕ ಅದಃಪತನದ ಕಡೆಗೆ ಹೋಗುತ್ತಿದ್ದೇವೆ ಅನ್ನಿಸುತ್ತಿದೆ..

ಇಷ್ಟೆಲ್ಲ ಇದ್ದರೂ...
ನಮ್ಮೊಳಗಿನ "ಒಳ್ಳೆಯವನನ್ನು" ಸಾಯಿಸಲು ಬಿಡಬಾರದು ಅಲ್ಲವೆ..?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ಶಶೀ ಬೆಳ್ಳಾಯರು said...

ನಿಜಕ್ಕೂ ಸರ್... ಬೆಳಗಿನ ಚಹಾ ಜೊತೆ ನಿಮ್ಮ ಕಥೆ ತುಂಬಾ ಇಷ್ಟಕೊಟ್ಟಿತು... ಕೆಲವೊಮ್ಮೆ ನಾವು ಎಷ್ಟು ಒಳ್ಳೆಯವರಗಿದ್ರೂ ಜನಾ ತಪ್ಪು ತಿಳೀತಾರೆ... ಆಗೆಲ್ಲಾ ನಾವು ನಮ್ಮ ಒಳ್ಳೇತನ ಬಿಡ್ಬಾರ್ದು ಅಲ್ವಾ....? ಒಂದು ವೇಳೆ ಆಕೆಯ ಸಾಂಗತ್ಯವನ್ನು ಒಪ್ಪಿಕೊಂಡಿದ್ದರೆ ಎಂಥಾ ಅನರ್ಥವಾಗ್ತಾ ಇತ್ತು ಅನ್ನೋದನ್ನು ನೆನೆಸ್ಕೊಂಡೇ ಭಯವಾಯ್ತು.... ಒಳ್ಳೇ ಕಥೆ... ನಿಮ್ಮ ಪ್ರೀತಿ ಹೀಗೇ ಇರಲಿ.

ಸುಮ said...

ಒಳ್ಳೆಯ ಕಥೆ ಪ್ರಕಾಶಣ್ಣ . ಸುಂದರ ನಿರೂಪಣೆ.

Ittigecement said...

ಕೃಷ್ಣಮೂರ್ತಿಯವರೆ...

ನನ್ನ ಸ್ನೇಹಿತರೊಬ್ಬರು ನಿನ್ನೆ ಒಂದು ಮಾತು ಕೇಳಿದರು..

"ಒಳ್ಳೆಯವರಾಗಿರುವದೆಂದರೆ...
ನಮಗೆ ನಾವೆ ಮಾಡಿಕೊಳ್ಳುವ ಮೋಸ.. ಅಲ್ಲವೆ..?" ಅಂತ.. !!

ತಾತ್ವಿಕವಾಗಿ ಹೌದು ಎಂದರೂ...

ಮನಸ್ಸಿಗೆ ಬಂದಿದ್ದೆಲ್ಲ ಮಾಡುವ ಹಾಗಿದ್ದರೆ...
ಬೀದಿ ನಾಯಿಗೂ ಮನುಷ್ಯರಿಗೂ ಏನು ವ್ಯತ್ಯಾಸ...? ಅಲ್ಲವೆ?

ಮನಸ್ಸಿಗೊಂದು ಹಿಡಿತ.. ಸಂಯಮ ಇದ್ದರೆ ಎಷ್ಟು ಸೊಗಸು.. !

ಆ ಬಾಂಧವ್ಯ ಎಷ್ಟು ಚೆನ್ನಾಗಿರುತ್ತದೆ..!

ಮನದಲ್ಲಿ ಕೆಟ್ಟ ಆಲೋಚನೆ ತುಂಬಿಕೊಂಡು ಬಾಂಧವ್ಯ ಚೆನ್ನಾಗಿ ಇಟ್ಟುಕೊಳ್ಳುವದಾ?

ಇದು ಆತ್ಮವಂಚನೆಯಾ?

ಹ್ಹಾ..ಹ್ಹಾ... ಮನುಷ್ಯನಿಗೆ ಸರಿ ತಪ್ಪುಗಳ ವಿವೇಚನೆ ಮಾಡುವ ಶಕ್ತಿ ಇದೆ ಅಲ್ಲವೆ..?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

PARAANJAPE K.N. said...

ಕಥೆಯನ್ನು ಹದಪಾಕದಲ್ಲಿ ಸಿದ್ಧಪಡಿಸಿ, ರುಚಿ ಕೆಡದ೦ತೆ ಎಚ್ಚರ ವಹಿಸಿದ್ದೀರಿ. ವ್ಯಕ್ತಿಗತ ಮನಸಿನಲ್ಲಿ ಆಗುವ ತಾಕಲಾಟಗಳು, ಅವನ್ನು ಜಯಿಸಿ, 'ಒಳ್ಳೆಯತನ' ಉಳಿಸಿಕೊಳ್ಳುವ ಪರಿ, ಜೊತೆಜೊತೆಗೆ ಮನಸಿನ ತುಮುಲಗಳಿಗೂ ಅಕ್ಷರ ರೂಪ ಕೊಟ್ಟು ಓದುಗನನ್ನು ಹಿಡಿದಿಡುವಲ್ಲಿ ಯಶಸ್ವಿ ಆಗಿದ್ದೀರಿ. ನಿಮಗೆ ಕಥನ ಶೈಲಿ ಒಲಿದಿದೆ.,

Gubbachchi Sathish said...

ಪ್ರಕಾಶಣ್ಣ, "ಅಸಹಜ" ಕಥೆ ಕಟ್ಟಿದ ರೀತಿ ಅದ್ಬುತವಾಗಿದೆ. ಗೆಳೆಯನ ಮಡದಿಯ ಅಗ್ನಿಪರೀಕ್ಷೆಯಲ್ಲಿ ಗೆಳೆಯನ ಗೆಳೆಯ ಮಾನಸಿಕವಾಗಿ ಸೋತಿದ್ದಾನೆ ಎಂದು ನನ್ನ ಅನಿಸಿಕೆ. ನಾಯಕಿಯ ಗೆಲುವಾಗಿದೆ.

ನೆನ್ನೆ ನಿಮ್ಮ "ಹೆಸರೇಬೇಡ" ಪುಸ್ತಕದ ಭಾರತೀ ಕಥೆಯನ್ನು ಜ್ನಾಪಿಸಿದ ನನ್ನ ಮಡದಿ ಭಾವುಕಳಾಗಿದ್ದಳು. ನಿಮ್ಮ ಪುಸ್ತಕವನ್ನು ಪ್ರೀತಿಯಿಂದ ಕೊಟ್ಟ ಅಜಿತ್‍ಗೆ ಮತ್ತೊಮ್ಮೆ ಮನದಲ್ಲೆ ಥ್ಯಾಂಕ್ಸ್ ಹೇಳಿಕೊಂಡೆ. ನಿಮಗೆ ಡಬಲ್ ಥ್ಯಾಂಕ್ಸ್.

ragat paradise said...

ಸೂಪರ್ ಕಥೆ ಪ್ರಕಾಶಣ್ಣ......ಮಸ್ತ್ ಮಜಾ ಇದೆ.....

Unknown said...

Realy Fantastic narration yar. olleyavaragi erodu, ondondu saari namma kaili eralla. manassu annodu huchu kudure reethi. yavaga yara benneruthe antha helakagalla alva. Adre manasu anno kadivana yava huchannu niyanthrisa balludu annodannu navu arithira beku ashte alve.ondondu sari niyantranakke sigadirabahudu. adre adanna niyantranadalli idodu namma kailide. Agale naavu olleyavaru antha annisikollalu Saadya...

ನಾಗರಾಜ್ .ಕೆ (NRK) said...

ಒಳ್ಳೆತನ ಮತ್ತು ಕೆಟ್ಟತನದ ಬಗ್ಗೆ ಪ್ರತಿಯೊಬ್ಬನ ಮನದ ದ್ವಂದವಿದು. ಒಬ್ಬ ಮನುಷ್ಯ ಗುಂಪಿನಲ್ಲಿ ವರ್ತಿಸುವ ರೀತಿಗೂ-ಏಕಾಂತದಲ್ಲಿ ವರ್ತಿಸುವ ರೀತಿಗೂ ವ್ಯತ್ಯಾಸಗಳಿರುತ್ತವೆ, ಅದು ಬಹಿರಂಗ ಮತ್ತು ಅಂತರಂಗದ ಗುದ್ದಾಟ.
ಚೆಂದದ ನಿರೂಪಣೆ.

ಮನಸು said...

chennagide prakashaNNa... dhanyavadagaLu oLLeya kathe neeDiddakke

Rajesh Manjunath - ರಾಜೇಶ್ ಮಂಜುನಾಥ್ said...

Prakashanna.................
Chee kalla :-)

- Raju

Shashi jois said...

ಕತೆ ಸೊಗಸಾಗಿದೆ..ಒಳ್ಳೆಯ ನಿರೂಪಣೆ.s

Ittigecement said...

ಕವಿತಾ...

ಈ ಕಥೆಯನ್ನು ಬ್ಲಾಗಿನಲ್ಲಿ ಹಾಕಲು ನನಗೆ ಅಳುಕು ಇತ್ತು..
ಒಂದೆರಡು ಗೆಳೆಯರನ್ನು ಕೇಳಿದೆ..
ಖಂಡಿತವಾಗಿಯೂ ಬ್ಲಾಗಿನಲ್ಲಿ ಹಾಕಿ..
ಅಪಾರ್ಥ ಮಾಡಿಕೊಳ್ಳುವಂಥಾದ್ದು ಏನೂ ಇಲ್ಲ ಅಂದರು..

ಮೊದಲು..
ಈ ಕಥೆಯ ಕೊನೆಯಲ್ಲಿ ಗೆಳೆಯನ ಮಡದಿ ಒಂದು ಪ್ರಶ್ನೆ ಕೇಳುವ ಹಾಗೆ ಕಥೆಯನ್ನು ಮುಗಿಸಿದ್ದೆ..

"ನೀವು ತುಂಬಾ ಒಳ್ಳೆಯವರು ಕಣ್ರೀ...
ನಾನು ನಿಮಗೆ ಏನಂತ ಕರೆಯಲಿ..? " ಅಂತ..

ಯಾಕೋ ಇಷ್ಟವಾಗಲಿಲ್ಲ.. ಸರಿ ಬರಲಿಲ್ಲ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಸುನಾಥ ಸರ್...

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು..
ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ ದಯವಿಟ್ಟು ಕ್ಷಮಿಸಿ...

ಕೆಟ್ಟ ವಿಚಾರ ಅನ್ನೋದು...
ಆಲೋಚನೆ ಹೆಣ್ಣಿನ ಕುರಿತೇ ಆಗಬೇಕೆನಿಲ್ಲ..
ಹಣ., ಆಸ್ತಿ ಮತ್ತೆ ಯಾವುದೇ "ಪ್ರಲೋಭನೆ" ಆದರೂ ಕೆಟ್ಟದ್ದೇ..

ದುರಾಲೋಚನೆಗಳ ಕೈಗೆ ನಮ್ಮ ನಿರ್ಣಯ ಕೊಡಬಾರದು ಅಲ್ಲವೆ..

ಸರ್..
ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

vidyarashmi Pelathadka said...

hi sir,

Kathe chennaagide. odiskondu hogutte.
olleyavanagirodu himse -olle statement.
-vidyarashmi

SNEHA HEGDE said...

ಸಂದರ್ಭ,ಸನ್ನಿವೇಶಗಳು ನಮ್ಮನ್ನು ಒಳ್ಳೆಯವ ಅಥವಾ ಕೆಟ್ಟವ ಅನ್ನುವುದನ್ನು ನಿರ್ಧರಿಸುತ್ತವೆ. ಯಾವುದೇ ಪರಿಸ್ಥಿತಿಯಲ್ಲೂ.. ಎಂತಹುದೇ ಸನ್ನಿವೇಷದಲ್ಲೂ 'ಬದುಕನ್ನು ಬದುಕಿಸು' ಎನ್ನುವ ತತ್ತ್ವ ಅರಿತು ವಹರಿಸುವವ ಮಾತ್ರ ಒಳ್ಳೆಯವನೆಂದು ಗುರುತಿಸಿಕೊಳ್ಳಬಲ್ಲ. ಇಲ್ಲಿ ಯಾರನ್ನು ಒಳ್ಳೆಯವ ಅಥವಾ ಕೆಟ್ಟವನೆಂದು ಕರೆಯಲು/ ಜರಿಯಲು ಯಾವುದೇ ಮಾಪನವಿಲ್ಲ. ಮನುಷ್ಯ ತನ್ನ ತನವನ್ನರಿತು ನಡೆದಾಗ ಮಾತ್ರ ಆ ಬದುಕು ಸಾರ್ಥಕ್ಯ ಎನ್ನಿಸುವುದಿಲ್ಲವೇ.....!!!!!!!!

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಮತ್ತೊಂದು ಸುಂದರ ಕಥೆ
ಓದುತ್ತ ಓದುತ್ತ ಮುಂದೇನಾಯಿತು ಎಂಬ ಕುತೂಹಲ ಹಾಗೆಯೇ ಹಿಡಿಯುತ್ತ
ಕಥೆ ಮುಂದುವರಿಸಿಕೊಂಡು ಹೋಗುವ ನಿಮ್ಮ ಜಾಣ್ಮೆ ಮೆಚ್ಚಲೇಬೇಕು
ಬದುಕಿನ ವಿವಿದ ಮಜಲುಗಳ ಬಗೆಗೆ ಬೆಳಕು ಚೆಲ್ಲುವ ಕಥಾವಸ್ತು ಇಷ್ಟವಾಯಿತು

Jagadeesh Balehadda said...
This comment has been removed by the author.
ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪ್ರಕಾಶಣ್ಣ, ಸನ್ನಿವೇಶ - ನಿರೂಪಣೆ ಚೆನ್ನಾಗಿದ್ದು!

Anonymous said...

ತುಂಬಾ, ತುಂಬಾ ಸೊಗಸಾಗಿದೆ ನೀವು ಬರೆದಿರೋ ಕಥೆ. ಇದು ನಿಮ್ಮ ಜೀವನದಲ್ಲಿ ನಡೆದಿದ್ದಾ ಅಥವಾ ಕಲ್ಪನೆಯ ಕಥೇನಾ?

Ittigecement said...

ವಿ.ಆರ್. ಭಟ್ಟರೆ...

ಹುಟ್ಟಿದಾಗ ಹೂವಿನಂತಿರುವ ಮನಸ್ಸು..
ದೊಡ್ಡವರಾಗುವ ಹೊತ್ತಿಗೆ ಯಾಕೆ ವ್ಯಾಘ್ರನ ಮನಸ್ಸು?

ನಮ್ಮ ಆಚಾರ, ವಿಚಾರಗಳು..
ನಮ್ಮ ಓದು, ನಡತೆಗಳು ನಮ್ಮ ಆಲೋಚನೆಗಳಲ್ಲಿ ಪ್ರಮುಖವಾಗಿರುತ್ತವೆ...

ನಮ್ಮ ಸಾಂಗತ್ಯಕೂಡ ಬಹಳ ಮಹತ್ವ ಅಲ್ಲವೆ?

ನಮ್ಮ ಒಳ್ಳೇ ತನವನ್ನು ನಿರ್ಣಯಿಸುವ "ಸಂದರ್ಭಗಳು" ಬಂದಾಗ..
ಸ್ವಲ್ಪವಾದರೂ ತಪ್ಪಿದಲ್ಲಿ ಮತ್ತೆ ಜೀವನ ಪೂರ್ತಿ ಮಾನಸಿಕ ಹಿಂಸೆ ಅನುಭವಿಸ ಬೇಕಾಗುತ್ತದೆ..

ಬಹಳ ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

Ittigecement said...

ಮನಮುಕ್ತಾ...

ನಿಜ ಒಳ್ಳೆಯವರಾಗುವದು ಬಹಳ ಕಷ್ಟ..

ಹಾಗೆಯೇ ಒಳ್ಳೆಯತನವನ್ನು ಬೆಳೆಸಿಕೊಂಡವರಿಗೆ
"ಕೆಟ್ಟತನವನ್ನು" ಬೆಳೆಸಿಕೊಳ್ಳುವದು ಇನ್ನೂ ಕಷ್ಟ...

ಅವರವರ ಸ್ವಭಾವ ಅವರವರಿಗೆ...
ಇಲ್ಲಿ ತನ್ನ ಗೆಳೆಯ "ಕೆಟ್ಟ ಅಭ್ಯಾಸದವ" ಅಂತ ಗೊತ್ತಿದ್ದೂ...
ಒಂದು ಕೆಡ ಬಹುದಾದ ಸನ್ನಿವೇಶ ಎದುರಾಗಿದ್ದರೂ...

ತನ್ನ ಮನಕ್ಕೆ ಒಗ್ಗದ ಕೆಲಸವನ್ನು... ಇಲ್ಲ ನಿರೂಪಕನಿಗೆ ಮಾಡಲಾಗಲಿಲ್ಲ...

ಆದರೂ ಇಂಥಹ ಒಳ್ಳೆಯತನ "ಅಸಹಜ" ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಬಾಲೂ ಸರ್.... ನಮಸ್ತೆ.... ಜೀ..

ಪರೀಕ್ಷೆಯ ಸಂದರ್ಭಗಳಲ್ಲಿ ನಮ್ಮ ಒಳ್ಳೆಯತನ ಎಷ್ಟು ಮಹತ್ವದ್ದು ಅಲ್ಲವೆ?

ಒಳ್ಳೆಯತನವೆಂದರೆ ಸ್ವಲ್ಪ ಮಟ್ಟಿಗೆ ಆತ್ಮವಂಚನೆ ಅಲ್ಲವೆ?

ಈ ಎಲ್ಲ ವಿಚಾರಗಳು ಬಹಳ ದಿನಗಳಿಂದ ತಲೆಯಲ್ಲಿ ಕೊರೆಯುತ್ತಿದ್ದವು..

ನನ್ನನ್ನು ಬ್ಲಾಗ್ ಲೋಕಕ್ಕೆ ಕರೆ ತಂದ..
ಸ್ನೇಹಿತ "ಮಲ್ಲಿಕಾರ್ಜುನ್" ಬಳಿ ಮಾತನಾಡುತ್ತಿದ್ದಾಗ ಈ ಕಥೆಯ ಹಂದರ ತಯಾರಾಯಿತು...
ಮಲ್ಲಿಕಾರ್ಜುನ್ ಮತ್ತು ಸ್ನೇಹಿತರು ಬರೆಯಲು ಉತ್ಸಾಹ ಕೊಟ್ಟಿದ್ದಕ್ಕೆ ಬರೆಯಲು ಸಾಧ್ಯವಾಯಿತು..

ಎಲ್ಲ "ಸ್ನೇಹಿ"ತರಿಗೆ ಧನ್ಯವಾದಗಳು...

ಬಾಲೂ ಸರ್ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು...

Ittigecement said...

ಅನಂತ್ ರಾಜ್ ಸರ್...

ದೌರ್ಬಲ್ಯಗಳನ್ನು ಮೌಲ್ಯಗಳು ಮೆಟ್ಟಿನಿಲ್ಲುವ ಹಾಗೆ ಮಾಡುವದು ನಮ್ಮ ಸಂಸ್ಕಾರಗಳು...
ನಮ್ಮ ಓದು.. ನಡತೆಗಳು...

ಸರಿ, ತಪ್ಪು, ಒಪ್ಪುಗಳನ್ನು ಅಂತರಂಗಕ್ಕೆ ಅರಿವಾದರೂ...
ನಡತೆಯಲ್ಲಿ ಎಡವಿದಾಗ ಜೀವನ ಪೂರ್ತಿ ಮಾನಸಿಕ ಹಿಂಸೆ.. ಅಲ್ಲವೆ?

ಸರ್..
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ನಾರಾಯಣ್ ಭಟ್ ಜಿ...

ಕೆಲವರು ಒಳ್ಳೆಯತನದ ಬಗೆಗೆ ತಲೆಕೆಡಿಸಿಕೊಳ್ಳುವದಿಲ್ಲ..
ತಮ್ಮ ಮನಸ್ಸಿಗೆ ಬಂದ ಹಾಗೆ ಬದುಕುತ್ತಾರೆ..
ನನ್ನ ಒಂದೆರಡು ಸ್ನೇಹಿತರುಗಳಿದ್ದಾರೆ..
ಕಾಲೇಜಿನ ದಿನಗಳಲ್ಲಿ ಹೇಗಿದ್ದರೋ...
ಇನ್ನೂ ಹಾಗೆಯೇ ಇದ್ದಾರೆ....

ಸ್ವಲ್ಪವೂ ಬದಲಾಗಲಿಲ್ಲ..
ಅವರವ ಸ್ವಭಾವ ಅವರವರಿಗೆ... ಅಲ್ಲವೆ?

ಪ್ರೋತ್ಸಾಹಕ್ಕಾಗಿ ವಂದನೆಗಳು...

Ittigecement said...

ಬಿಸಿಲ ಹನಿ (ಉದಯ್...)

ಯಾಕೆ ಮನದೊಳಗೆ ಎಲ್ಲವನ್ನೂ ಇಟ್ಟುಕೊಂಡು ಈ ಎಲ್ಲ ಒದ್ದಾಟ? ತೊಳಲಾಟ..?
ಮುಕ್ತವಾಗಿ ಹೇಳಿಕೊಂಡರೆ ಹೇಗೆ..?

ಆ ಹೆಣ್ಣಿಗೆ ತನ್ನ ಮೇಲಿನ ಗೌರವ ಕಡಿಮೆ ಆಗುತ್ತದೆ ಅಂತಾನಾ?

ಹಾಗಾದರೆ ಮನದೊಳಗೆ ಕೆಟ್ಟ ಭಾವನೆಗಳನ್ನು ಹೊತ್ತು..
ಎದುರಿಗೆ ಬಣ್ಣದ ಮಾತುಗಳನ್ನಾಡಿದರೆ..
ಇದು "ಒಳ್ಳೆಯ ತನವೆ?"

ಉದಯ್... ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಭಾವನಾ...

ಬಾವೆಲ್ಲ ಕೇಳಿದ್ದಕ್ಕೆ ಕನ್ನಡದಲ್ಲಿ ನೀವು ಬರೆಯುತ್ತಿರುವದು ನಮಗೆಲ್ಲ ಖುಷಿ ತಂದಿದೆ..
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ..

ಈ ಕಥೆಯಲ್ಲಿ...
ತನ್ನ ಗೆಳೆಯನ ಮಡದಿಗೆ ಈತ
"ನನಗೆ ನಿನ್ನ ಮೇಲೆ ಈ ಥರಹದ ಭಾವನೆಗಳಿವೆ" ಎಂದಿದ್ದರೆ..
ಆ ಹೆಣ್ಣು ಮಗಳು ಯಾವ ರೀತಿಯಾಗಿ ಸ್ವೀಕರಿಸ ಬೇಕು?

ಈತ ಸತ್ಯ ಹೇಳೀದ ಅಂತ ಖುಷಿ ಪಡ ಬೇಕಾ?
ಆದರೆ ಅವನ ಬೇಡಿಕೆ ಅಲ್ಲಗೆ ನಿಲ್ಲುವದಿಲ್ಲವಲ್ಲ..!

ಹೆಣ್ಣುಮಗಳ ದೃಷ್ಟಿಯಿಂದ ಈತ ಸತ್ಯ ಹೇಳದಿರುವದೇ ಒಳ್ಳೆಯದು...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ವೆಂಕಟಕೃಷ್ಣ....

ನೀವು ಮೂಲ ಪ್ರಶ್ನೆಯನ್ನೇ ಕೇಳಿ ಬಿಟ್ರಿ...

ಈ.. ಒಳ್ಳೆಯತನ ಅನ್ನುವದು "ಅಸಹಜ" ಅಲ್ವಾ?...
ಮನದೊಳಗೆ ಆ ಹೆಣ್ಣುಮಗಳ ಮೇಲೆ ಆ ಥರಹದ ಭಾವನೆಗಳನ್ನಿಟ್ಟುಕೊಂಡಿದ್ದರೂ...
ಆ ಹೆಣ್ಣುಮಗಳು..

"ನೀವು ತುಂಭಾ ಒಳ್ಳೆಯವರು ಕಣ್ರೀ..." ಅಂದದ್ದು..
"ಹೊಗಳಿಕೆಯಾ...?"

ಅಸಹಜ ಅಲ್ಲವಾ ಇದು..?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು...

umesh desai said...

ಹೆಗಡೇ ಜಿ ಕತೆ ಚೆನ್ನಾಗಿದೆ ಹಾಗೂ ಅದರ ವೇಗ ನಿರೂಪಣೆ ಎರಡೂ ಛಂದ. ನಮ್ಮೆಲ್ಲರಲ್ಲಿ ಇನ್ನೊಬ್ಬನಿದ್ದಾನೆ..ಆಗಾಗ
ಕನ್ನಡಿಮುಂದೆ ಕಾಣುತ್ತಾನೆ..ಹಾಗೂ ನಮಗೇ ಗೊತ್ತಿಲ್ಲದೆ ನಮ್ಮ ಹೆಗಲೇರಿರುತ್ತಾನೆ. ಅಲ್ಲವೇ..? ಒಳ್ಳೆಕತೆ ಕನ್ನಡಕೆ
ನಿಮ್ಮಂತಹ ಹೊಸ ನಿರೂಪಣೆಯ ಕತೆಗಾರರ ಅವಶ್ಯಕತೆ ಇದೆ.

Ittigecement said...

ರಂಜನಾ...

ಬಹಳ ಸುಂದರ ಪ್ರತಿಕ್ರಿಯೆ..

ಮನದೊಳಗಿರುವ ದೌರ್ಬಲ್ಯ "ದುರುಳ" ಆಗಬಾರದು...
ಅದನ್ನು ಮೆಟ್ಟಿನಿಲ್ಲಲು ಓದು, ಒಳ್ಳೆಯ ಆಚಾರ ಅತ್ಯಗತ್ಯ..

ನಮ್ಮ ಮೂಲ ಅಸ್ಥಿತ್ವವನ್ನು ಪ್ರಶ್ನಿಸುವ ಇಂಥಹ ಸಂದರ್ಭಗಳನ್ನು ಗೆಲ್ಲಬೇಕು ಅಲ್ಲವಾ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

Ittigecement said...

ಶಶಿ ಬೆಳ್ಳಾಯರು...

ಇಲ್ಲಿ ಆಕೆಯ ಸಂದರ್ಭವನ್ನು ಈತ ಒಪ್ಪಿಕೊಂಡಿದ್ದರೆ
ಸಂಬಂಧವೆಲ್ಲವೂ ಕೊಳೆತ ಗೊಬ್ಬರ ಗುಂಡಿಯಾಗುತ್ತಿತ್ತು...

ನೈತಿಕ ಅದಃಪತನ !

ನಂತರದ ಮಾತುಕತೆ, ನಡತೆ ಎಲ್ಲವೂ ಕೃತಕವಾಗಿರುತ್ತಿತ್ತು...

ಎರಡು ಸಹಜ ಪ್ರೀತಿ,ಪ್ರೇಮದ ಮಧ್ಯೆ ಮೂರನೆಯದರ ಪ್ರವೇಶ ಅಸಹ್ಯ ಮತ್ತು ನಿಶಿದ್ಧ... ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು... ಜೈ ಹೋ... !

Ittigecement said...

ಸುಮಾ...

ಈ ಥರಹದ "ಸಂದರ್ಭಗಳು" ಆತ್ಮಹತ್ಯೆಯ ನಿರ್ಣಯದ ಥರಹ...
ಆ ಸನ್ನಿವೇಷವನ್ನು ದಾಟಿಕೊಂಡು ಬಿಟ್ಟರೆ ಮತ್ತೆ ಆ ದೌರ್ಬಲ್ಯ ಅಷ್ಟಾಗಿ ಕಾಡಲಾರದು..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಪರಾಂಜಪೆಯವರೆ...

ಇಂಥಹ ಸಂದರ್ಭಗಳನ್ನು ವಿವರಿಸುವದು ಬಹಳ ಕಷ್ಟ

ವಿವರಿಸುವದು ಸ್ವಲ್ಪವಾದರೂ ಜಾಸ್ತಿಯಾದರೆ.. ಅಶ್ಲೀಲತೆ !

ಅನಗತ್ಯ, ಅಗತ್ಯ ನಡುವಿನ ಅಂತರಎಷ್ಟು ಅಂತ ನಿರ್ಣಯಿಸುವದು ಕಷ್ಟ...

ಕಥೆಯನ್ನು ಇಷ್ಟಪಟ್ಟಿದ್ದು ತುಂಬಾ ಖುಷಿಯಾಯಿತು..

ಧನ್ಯವಾದಗಳು...

Ittigecement said...

ಗುಬ್ಬಚ್ಚಿ ಸತೀಶ್...

ನಿಜ..
ಇಲ್ಲಿ ತನ್ನ ಗೆಳೆಯ ಹೆಂಡತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಗೆಳೆಯ ಸೋತಿದ್ದಾನೆ..

ಆದರೂ ಸಂದರ್ಭದ ಕೈಗೆ ತನ್ನನ್ನು ಶರಣಾಗತ ಮಾಡದೆ ಗೆದ್ದಿದ್ದಾನಲ್ಲವೆ?

"ನೀವು ಒಳ್ಳೆಯವರು ಕಣ್ರೀ"
ಅಂದಾಗ ಒಳ ಮನಸ್ಸಿಗೆ ಕಷ್ಟವಾದರೂ... ಈತ ಗೆದ್ದಿದ್ದಾನಲ್ಲವೆ ಆ ಕೆಟ್ಟ ಸಂದರ್ಭವನ್ನು?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

"ಹೆಸರೇ.. ಬೇಡ" ಪುಸ್ತಕವನ್ನು ಮೆಚ್ಚಿದ ನಿಮಗಿಬ್ಬರಿಗೂ ನನ್ನ ವಂದನೆಗಳು...

ಗೆಳೆಯ "ಅಜಿತ್ ಕೌಂಡಿನ್ಯ"ರಿಗೆ ನನ್ನ ಸಿಹಿ ನೆನಪುಗಳನ್ನು ತಿಳಿಸಿ..

ಜೈ ಹೋ...

Ittigecement said...

ಪ್ರೀತಿಯ ರಘು...

ಇಂಥಹ ಸಂದರ್ಭಗಳು ಪ್ರತಿಯೊಬ್ಬರ ಬದುಕಲ್ಲೂ ಎದುರಾಗುತ್ತದೆ..
ವಿವೇಚನೆಯಿಂದ ನಡೆದುಕೊಳ್ಳ ಬೇಕಷ್ಟೆ..

ಅಲ್ಲವೆ?

ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ
ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಚಿತ್ರಕಲಾ...

ನನ್ನ ಬ್ಲಾಗಿಗೆ ಸ್ವಾಗತ..

ನಿಜ ..
ಒಳ್ಳೆಯವರಾಗಿರೋದು ಕೆಲವೊಂದು ನಮ್ಮ ಕೈಯಲ್ಲಿ ಇರೋದಿಲ್ಲ..
ಪರಿಸ್ಥಿತಿ, ಸಂದರ್ಭಗಳ ಕಡೆ ಹೊರಟು ಹೋಗುತ್ತದೆ..

ಇಲ್ಲಿ ಅಂಥಹ ಸಂದರ್ಭದಲ್ಲಿ ಗೆಳೆಯನ ಮದುವೆಯ ಫೋಟೊ ಕಾಣಿಸದಿದ್ದರೆ..?

ಆದರೂ ಈತ ಎಲ್ಲೋ ಒಂದು ಕಡೆ "ಒಳ್ಳೆಯ ಮನುಷ್ಯನೇ" ಆಗಿದ್ದ..

ಹಾಗಾಗಿ ನಿಯಂತ್ರಣ ತಪ್ಪ ಬಹುದಾದ ಸಂದರ್ಭವನ್ನೂ ಗೆದ್ದಿದ್ದಾನೆ ಅಲ್ಲವೆ?

ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

ಬರುತ್ತಾ ಇರಿ....

ಚಿತ್ರಾ said...

ಪ್ರಕಾಶಣ್ಣ ,

ಪ್ರತಿ ಕಥೆಗೂ , ಕೊನೆಯಲ್ಲಿ " ಇದು ಕಥೆ" ಎಂಬ ಟಿಪ್ಪಣಿ ಎಂತಕೆ ? ಹಾಂ, ನೀ ಬರೆಯ ಕಥೆ ರಾಶಿ ನೈಜವಾಗಿ ಇರ್ತು. ಆದರೆ, ಈಗ ನಂಗಕ್ಕೂ ಗೊತಾಗೋಯ್ದು ಇದೆಲ್ಲ " ಕಥೆ" ಹೇಳಿ . ಹಾ ಹಾ ಹಾ ಹಾ ..

ಓಡುವ ಮನಸ್ಸನ್ನು ಕಷ್ಟದಿಂದ ಕಟ್ಟಿ ಹಾಕಿ ಒಳ್ಳೆಯವವನಾಗುವ ಕಷ್ಟ ಕಥಾ ನಾಯಕನಿಗೇ ಗೊತ್ತು ! ಚಂದ ಇದ್ದು ಬರಹ

Bhairav Kodi said...

ಒಳ್ಳೆತನ ಎಲ್ ಬಂತು ಸಾರ್ ...........
ಅದು ನಂಬಿಕೆ, ವಿಶ್ವಾಸ ಆಲ್ವಾ ............
ದೇಶ ಬಿಟ್ಟು ಹೋಗ್ತಾ ಇದ್ರೂ ಹೆಂಡ್ತಿನಾ ಸ್ನೇಹಿತನ ಸುಪರ್ದಿಗೆ ಬಿಟ್ಟು ಹೋಗೋದು ನಿಮ್ಮ (ಕಥಾ ನಾಯಕನ) ಮೇಲೆ ಇಟ್ಟಿರೋ ನಂಬಿಕೆ, ವಿಶ್ವಾಸದಿಂದ ನನ್ನ ಸ್ನೇಹಿತ ಯೋಗ್ಯ ಅನ್ನೋ ಕಾರಣದಿಂದ. ಅದ್ರೂ ಮನಸ್ನಲ್ಲಿ ಸಾಕಷ್ಟು ಚಂಚಲತೆಗಳು ಸಂಚಲನೆ ಮಾಡಿದ್ರು ಯೋಗ್ಯ ಅಂತ, ಸ್ನೇಹ ಅನ್ನೋ ಪದಕ್ಕೆ ಪಿಟ್ಟು ಅಂತ ತೋರಿಸಿಕೊಟ್ಟಿದ್ದಾನೆ ಅಷ್ಟೇ ಅದು ಅವನ ಜವಾಬ್ದಾರಿ ಆಲ್ವಾ ಸ್ನೇಹಿತನ absence ನಲ್ಲಿ ಅವ್ನ ಕೋರಿಕೆ ನಡೆಸಿದ್ ಅಷ್ಟೇ ಆಲ್ವಾ, ಅದ್ರಲ್ಲಿ ಒಳ್ಳೆತನ ಎಲ್ ಬಂತು ಸ್ನೇಹ ಅನ್ನೋ ಪದಕ್ಕೆ ಪಿಟ್ಟು ಅಂತ, ಸ್ನೇಹ ಅನ್ನೋದು ಬರಿ ಇಟ್ಟಿಗೆ ಸಿಮೆಂಟಿನ ಮಿಶ್ರಣವಲ್ಲ ಅದೊಂದು ಶಕ್ತಿ ಅಂತ ತೋರಿಸಿಕೊಟ್ಟಿದ್ದಾನೆ ಅಷ್ಟೇ.
ನನಗನ್ನಿಸಿದ್ದು................. ಜಪಾನ್ ದೇಶಕ್ಕೆ ಒರಟ (ನಿಮ್ಮ? ಕಥಾ ನಾಯಕನ) ಮಿತ್ರನೇ ಕಥಾನಾಯಕ.

ಹಳ್ಳಿ ಹುಡುಗ ತರುಣ್ said...

prakash sir katte adaru idu satya anno riti kutuhala kariyaagi, bold agi berediddira.. super agide...

entavaradaru avaralli eradu manasu idde iruttave annodu kandita nija sir yavagalu ondu innodara naduve avakasha sikkagella savari madalu havanisuttiruttave.... adaru manasina hidita mattu, samjadallina olleya abhiprayagalu.. olleay manasu geluvige sahaya vaagutte ansutte sir...

office alli 2 min samaya sikkaga nimma ee article ododakke start mad de sir adu hege end ayto gotte aglilla.. nimma baravanige ne astu sir start madode tada hage konevarigu eledu kondu hogibiduttade...

Ittigecement said...

ನಾಗರಾಜು...

ಇದು ನಿಜ..
ಗುಂಪಿನಲ್ಲಿರುವ ಮನುಷ್ಯನೇ ಬೇರೆ...
ಏಕಾಂತದಲ್ಲಿರುವವನೇ ಬೇರೆ..

ಏಕಾಂತದಲ್ಲಿ
ಅಂತರಂಗದಲ್ಲಿ ನಡೆವ..
ದ್ವಂದ್ವಗಳ ತಾಕಲಾಟದಲ್ಲಿ.. ಒಳ್ಳೆಯವನೇ ಗೆಲ್ಲಬೇಕು ಅಲ್ಲವಾ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಜೈ ಹೋ...

Ittigecement said...

ಮನಸು....

ಸಹಜವಾಗಿ ಒಳ್ಳೆಯವರಾಗಿದ್ದರೆ...
ಕಾಪಾಡಿಕೊಳ್ಳುವ ಸಂದರ್ಭ ಮತ್ತು ಅದರ ಕುರಿತಾಗಿ ಭಯ ಇರುವದಿಲ್ಲ ಅಲ್ಲವೆ?

ಕೆಲವೊಂದು ಸನ್ನಿವೇಶಗಳು ಬದುಕಿನಲ್ಲಿ ಎದುರಾಗುತ್ತವೆ "ನಾವು ಒಳ್ಳೆಯವರಾಗಿರಬೇಕೆ" ಎನ್ನುವ ಮೂಲಭೂತ ಪ್ರಶ್ನೆ ಕಾಡತೊಡಗುತ್ತದೆ..

ಅಂಥಹ ಪರೀಕ್ಷಾ ಸಂದರ್ಭದಲ್ಲೂ ಗೆಲ್ಲವುದು "ನಮ್ಮೊಳಗಿನ ಆಂತರ್ಯದಲ್ಲಿರುವ ಒಳ್ಳೆಯತನ"

ಪ್ರೋತ್ಸಾಹಕ್ಕಾಗಿ ವಂದನೆಗಳು.. ಜೈ ಹೋ..

Ittigecement said...

ರಾಜೇಶ್ ಮಂಜುನಾಥ್.. (ರಾಜು)

ಇದು "ಕಥೆ" ಮಾರಾಯರೆ...!

ಅದು ಏನಾಗಿದೆ ಅಂದರೆ ಈ ಹುಡುಗ ಇತ್ತೀಚೆಗೆ ಮದುವೆಯಾಗಿ ಹೊಸ ಪ್ರಪಂಚ ನೋಡುತ್ತಿದ್ದಾನೆ..

ಹ್ಹಾ ಹ್ಹಾ.!!

ನಿಮ್ಮ ದಾಂಪತ್ಯ ಜೀವನ ಯಾವಾಗಲೂ ಸಂತೋಷಮಯವಾಗಿರಲಿ..

ಪ್ರೀತಿಯಿಂದ

ಪ್ರಕಾಶಣ್ಣ...

Ittigecement said...

ಶಶಿಯವರೆ...

ಮಹಾಭಾರತದಲ್ಲಿ ಒಂದು ಉಪ ಕಥೆ ಬರುತ್ತದೆ..

ಶ್ರೀಕೃಷ್ಣ ಧರ್ಮರಾಜನನ್ನು ಕರೆದು
"ಈ ಜಗತ್ತಿನಲ್ಲಿ ಇರುವ ಕೆಟ್ಟವರನ್ನು ಹುಡುಕಿ ಬಾ" ಅಂದನಂತೆ...

ಧರ್ಮರಾಜ ಜಗತ್ತೆಲ್ಲ ಹುಡುಕಿದ..

ಯಾರೂ ಕೆಟ್ಟವರೇ ಕಾಣಲಿಲ್ಲ...

ಶ್ರೀಕೃಷ್ಣ ಧುರ್ಯೋಧನನ್ನು ಕರೆದು

"ಈ ಜಗತ್ತಿನಲ್ಲಿರುವ ಒಳ್ಳೆಯವರನ್ನು ಕರೆದು ತಾ" ಅಂದನಂತೆ..

ಧುರ್ಯೋಧನ ಎಷ್ಟು ಹುಡುಕಿದರೂ ಒಬ್ಬನೇ ಒಬ್ಬ ಒಳ್ಳೆಯವ ಸಿಗಲಿಲ್ಲವಂತೆ..
ಧರ್ಮರಾಜ ಮತ್ತು ಧುರ್ಯೋಧನ ಒಂದೇ ಕಾಲಘಟ್ಟದಲ್ಲಿ ಇದ್ದವರು..

ತಾತ್ಪರ್ಯ ಇಷ್ಟೆ "ಯತ್ ಭಾವ ತತ್ ಭವತಿ" ಅಲ್ಲವೆ?

ಪ್ರೋತ್ಸಾಹಕ್ಕಾಗಿ ವಂದನೆಗಳು...

Ittigecement said...

ವಿದ್ಯಾರಷ್ಮಿಯವರೆ..

ನನ್ನ ಬ್ಲಾಗಿಗೆ ಸ್ವಾಗತ...

ಒಳ್ಳೆಯವರಾಗೋದು ಹಿಂಸೆ ಅಂತ ಕಳ್ಳ ಮನಸ್ಸಿಗೆ ಅನ್ನಿಸ ಬಹುದು..
ನನ್ನ ಸ್ನೇಹಿತರು ಹೇಳಿದ ಹಾಗೆ

"ನಾನು ಒಳ್ಳೆಯವ ಯಾಕೆಂದರೆ..
ನನಗೆ ಕೆಟ್ಟದ್ದನ್ನು ಕದ್ದು ಮಾಡುವ ಅವಕಾಶ, ಸಂದರ್ಭ ಕೂಡಿ ಬರಲಿಲ್ಲ" ಅಂತ..

ನಾವು ಒಳ್ಳೆಯವರು ಅನ್ನಿಸಿಕೊಂಡ ಮೇಲೆ ಆ ಹಣೆಪಟ್ಟಿಗೋಸ್ಕರ ಮಾಡುವದು ಬಹುಷಃ ಹಿಂಸೆ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಸ್ನೇಹ ಪುಟಾಣಿ..

ಪುಟ್ಟ ವಯಸ್ಸಿನಲ್ಲಿ ಬಹಳಷ್ಟು ತಿಳಿದು ಕೊಂಡಿದ್ದೀಯಾ... ಖುಷಿಯಾಗುತ್ತದೆ..

ಸಹಜವಾಗಿ..
ಆಂತರ್ಯದಲ್ಲಿ ಒಳ್ಳೆಯವರಾಗಿದ್ದರೆ ಯಾವ ಸಮಸ್ಯೆ ಇದ್ದಿರುವದಿಲ್ಲ..

ಕಷ್ಟಪಟ್ಟು ಒಳ್ಳೆಯವರಾಗಿದ್ದರೆ ಇಂಥಹ ಸಂದರ್ಭಗಳು ಬಲು ಕಷ್ಟ..

ಬದುಕನ್ನು ಬದುಕಿಸ ಬೇಕಿಲ್ಲ
ಬದುಕೇ ಬದುಕುತ್ತದೆ..

ಆದರೆ ಹೇಗೆ? ಅನ್ನುವದು ಬಂದಾಗ ನಮ್ಮ ಮೌಲ್ಯಗಳಿಗೆ ಬೆಲೆ ಬರುತ್ತದೆ..

ಬಹಳ ಅರ್ಥಗರ್ಭಿತ ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಧನ್ಯವಾದಗಳು.. ಜೈ ಹೋ...

Niharika said...

Ellaru olleyavragirbeku anta bayasodu satya adare e sannivesagalu avarige taanu yenu annodanna tiliyoke olle parikse edda aage. Tumba danyavadagalu enta olle kathe heliddakke

Unknown said...

Thumba chennagi moodibandide Prakashanna.....

Kishan said...

Very nice subject and the narration is great. You have truly captured a men's and his thought process in normal circumstances, which can swing in any direction.

" ಪ್ರಕಾಶ್ ನಾನು ಒಳ್ಳೆಯವನು ಯಾಕೆ ಗೊತ್ತಾ?
ನನಗೆ ಕೆಟ್ಟವನಾಗುವ ಸಂದರ್ಭ ..
ಛಾನ್ಸ್ ಸಿಗಲಿಲ್ಲ...
ಹಾಗಾಗಿ ಒಳ್ಳೆಯವನಾಗಿಯೇ ಇದ್ದೇನೆ" ಅಂದರು...."

I do not completely agree with the above, we all get plenty of situations where one can go wrong easily. Only in an "ideal world" you will not get a chance to become a bad person.

Ittigecement said...

ಗುರುಮೂರ್ತಿ (ಸಾಗರದಾಚೆಯ ಇಂಚರ)

ತನ್ನ ಗೆಳೆಯ ಒಳ್ಳೆಯವನಲ್ಲ ಅಂತ ಗೊತ್ತಿತ್ತು..
ಹಾಗಿದ್ದೂ ಗೆಳೆತನಕ್ಕೆ ಅಂಟಿಕೊಂಡು ಹುಡುಗಿಯನ್ನು ಗೆಳೆಯನಿಗೋಸ್ಕರ ನೋಡಿ ಒಪ್ಪಿಗೆ ಸೂಸಿ ಬರುತ್ತಾನೆ..
ಇವನಿಗಿನ್ನೂ ಮದುವೆಯಾಗಿರುವದಿಲ್ಲ..
ಗೆಳೆಯನ ಹೆಂಡತಿ "ತನ್ನ ಗಂಡನ ಸ್ವಭಾವಗೊತ್ತು" ಅನ್ನುತ್ತಾಳೆ..
ಅವಳ ದ್ವಂದ್ವ ಮಾತುಗಳು...
ಆಹ್ವಾನಿಸುವ ಕಣ್ಣುಗಳು..

ಇಂಥಹ ಸಂದರ್ಭದಲ್ಲಿ ಇಬ್ಬರೇ ಇರುವ ಸನ್ನಿವೇಶ..!

ಅಲ್ಲಿ ಇವನು ಇನ್ನೇನು ಮುಂದುವರೆಯುವಂಥಹ ಸಮಯ !

ಅಲ್ಲಿ ಗೆಳೆಯನ ಮದುವೆಯ ಫೋಟೊ ಕಾಣುತ್ತದೆ...

ತನ್ನ ನಿರ್ಧಾರ ಬದಲಿಸುತ್ತಾನೆ...!

ಅದು.. ಆ ನಿರ್ಣಯ ತಕ್ಷಣ ತೆಗೆದುಕೊಂಡ ನಿರ್ಧಾರವಾಗಿದ್ದರೂ ಸಹ...

"ಅಂತರಂಗದಲ್ಲಿ ಒಳ್ಳೆಯವರಿದ್ದರೆ ತಾನೆ ಈ ರೀತಿಯ ನಿರ್ಧಾರ ಸಾಧ್ಯ ?"

ಕಥೆಯನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಈ ಕಥೆಗೆ ಇಷ್ಟೊಂದು ಪ್ರೋತ್ಸಾಹ ಕೊಟ್ಟಿದ್ದು ನನಗೆ ಇಂಥಹ ಇನ್ನಷ್ಟು ಪ್ರಯತ್ನ ಮಾಡುವ ಉತ್ಸಾಹ ಕೊಟ್ಟಿದೆ..

ಜೈ ಹೋ...!!

Ittigecement said...

ಪೂರ್ಣಿಮಾ...

ಗೆಳೆಯನ ಮಡದಿಯ...
ಆಹ್ವಾನಿಸುವ ಕಣ್ಣುಗಳ ಎದುರು..
ಇಬ್ಬರೆ ಇರುವ ಕೆರಳಿಸುವ ಸಮಯದಲ್ಲೂ...

"ನೀವು ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳಿ..
ಧರ್ಯವಾಗಿರಿ.. ನಾನಿದ್ದೇನೆ" ಅಂತ ಮಾತುಗಳನ್ನೂ ಆಡಿದ..!

ಮರುದಿನ ಬೆಳಿಗ್ಗೆ ಅದೇ ಗೆಳೆಯನ ಹೆಂಡತಿ..

"ನಮ್ಮ ಯಜಮಾನ್ರು ಹೇಳುವ ಹಾಗೆ.."
ನೀವು ತುಂಬಾ ಒಳ್ಳೆಯವರು ಕಣ್ರೀ..!"

ಅಂದಾಗ..

ಇವನಿಗೆ ಏನನ್ನಿಸಬೇಡ.. ! ?

ಮನದಲ್ಲಿ ಇಷ್ಟೆಲ್ಲಾ ಕೊಳೆಯನ್ನಿಟ್ಟುಕೊಂಡು..
ಕೆಟ್ಟ ಕೆಲಸ ಮಾಡದಿರುವ ಈತ ಒಳ್ಳೆಯವನೆ..?
ಕೆಟ್ಟವನೆ?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ಜೈ ಹೋ... !!

ಶಶೀ ಬೆಳ್ಳಾಯರು said...

ಧನ್ಯವಾದಗಳು ಪ್ರಕಾಶಣ್ಣ,,,,
ನಿಮ್ಮ ಬರಹವನ್ನು ಆಗಾಗ ಪರುಸೋತ್ತು ಮಾಡಿಕೊಂಡು ಓದುತ್ತೇನೆ... ಆಗೆಲ್ಲಾ ನನ್ನೊಳಗೆ ಏನೋ ಒಂಥರಾ ಖುಷಿ... ಸಹಜ ಬದುಕಿಗೆ ತೀರಾ ಹತ್ತಿರವಾದ ನಿಮ್ಮ ಕಥೆಯ ನಿರೂಪಣೆ ಶೈಲಿಯೇ ಇದಕ್ಕೆ ಕಾರಣ ಎಂದರೂ ತಪ್ಪಾಗದು. ನೀವೇನೇ ಬರೆದರೂ ಅದನ್ನು ಮೆಚ್ಚುವ ನನ್ನಂತಹ ನೂರಾರು ಓದುಗರು ಇರುತ್ತಾರೆ. ನಿಮ್ಮ ಬರವಣಿಗೆ ಮುಂದೆಯೂ ಹೀಗೆ ಹರಿವ ಜಲಧಿಯಂತೆ ನಿರಂತರವಾಗಿರಲಿ. ಬೀಸೋ ತಣ್ಣನೆಯ ಗಾಳಿಯಂತೆ ಮನಸ್ಸಿಗೆ ಮುದ ಕೊಡಲಿ... ಪ್ರೀತಿ ಇರಲಿ...

ಸುಧೇಶ್ ಶೆಟ್ಟಿ said...

ಎ೦ಥಾ ಕಥೆ ಪ್ರಕಾಶಣ್ಣ...

ಸರಳವಾಗಿ ಮನಸಿನ ದುರ್ಬಲ ಕ್ಷಣಗಳನ್ನು ವಿವರಿಸುವ ರೀತಿ ನನಗೆ ತು೦ಬಾ ಇಷ್ಟ ಆಗುತ್ತದೆ :)

ಆದಷ್ಟು ಬೇಗ ಒ೦ದು ಕಥಾ ಸ೦ಕಲನವನ್ನು ನಿರೀಕ್ಷಿಸೋಣವೇ :)

nenapinadoniyali said...

ಮನಸ್ಸಿನಲ್ಲಿ ಒಂದು ಕೆಟ್ಟ ಯೋಚನೆ ಬಂದಮೇಲೆ ಅದನ್ನ ಮಾಡಲಿ ಬಿಡಲಿ ನಮ್ಮಲ್ಲಿ ಕಲ್ಮಶ ಇರುವುದು ಸುಳ್ಳಾಗುವುದಿಲ್ಲವೆನ್ನುವುದು ಕೆಲವರ ಭಾವನೆ.

ಕೆಟ್ಟ ಯೋಚನೆ ಮನಸ್ಸಿದೆ ಬರುವುದೂ ಸಹ ಅದನ್ನು ಕಾರ್ಯಗತಕ್ಕೆ ತರುವುದಕ್ಕೆ ಸಮ ಎಂದು ಕೆಲವರು ಹೇಳುವವರಿದ್ದಾರೆ.

ಪ್ರಕಾಶ್ ರವರೆ ಇದರಲ್ಲಿ ನಿಮ್ಮ ಅನಿಸಿಕೆ ಏನು.

ಮೊದಲನೆ ಬಾರಿ ಅನಿಸಿಕೆಯನ್ನು ಬರೆಯುತ್ತಿದ್ದೇನೆ ಆದರೆ ನಿಮ್ಮ ಯೆಲ್ಲಾ ಬರಹಗಳನ್ನೂ ಓದಿದ್ದೇನೆ. ತುಂಬಾ ಇಷ್ಟವಾಗಿದೆ.

ಧನ್ಯವಾದಗಳು,
ಅಶ್ವಿನ್

Ittigecement said...

ಕೆಂಪಕ್ಕಿ.. ( ಪೂಜ್ಯ ಸತ್ಯ ಪ್ರಕಾಶ್ ಜೀ.. )

ಸರ್ ಇದು ಕಲ್ಪನೆಯ ಕಥೆ..
ನಾನು ಬರೆಯುವ ಕಥೆಗಳಲ್ಲಿ ’ನಾನು" ಎನ್ನುವ ನಿರೂಪಕ ಇರುತ್ತಾನೆ...
ಹಾಗಾಗಿ ಸ್ವಂತ ಅನುಭವ ಅಂತ ಅನ್ನಿಸಿರ ಬಹುದು...

ಕಥೆ ಬದುಕಿಗೆ ಹತ್ತಿರವಾಗಿರ ಬೇಕಲ್ಲವೆ?
ಕಲ್ಪನೆಯಾದರೂ ವಾಸ್ತವದ ತಳಹದಿ ಒಳ್ಳೆಯದು ಅಲ್ಲವೆ?

ಸರ್... ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಉಮೇಶ್ ಜೀ...

ನಿಜ ನಮ್ಮೊಳಗೆ ಇನ್ನೊಬ್ಬನಿರುತ್ತಾನೆ...
ಆಗಾಗ ನಮ್ಮಲ್ಲಿ ಗೊಂದಲ ಸೃಷ್ಟಿಸಿ..
ಹೊಸ ಆಸೆಗಳು .. ಕನಸುಗಳ ಕಟ್ಟುಗಳನ್ನು ಬಿಚ್ಚಿಡುತ್ತಾನೆ...
ನಮ್ಮ ಮೇಲೆ ಸವಾರಿ ಮಾಡುವ ಪ್ರಯತ್ನವನ್ನೂ ಮಾಡುತ್ತಾನೆ...

ಬಿಡಲಾಗದ ಸ್ನೇಹಿತನಂತೆ ಪೋಸ್ ಕೊಡುತ್ತಾನೆ..

ಅವನನ್ನು ಗೆಲ್ಲುವದೇ ಸಾಹಸ....

ಉಮೇಶ್ ಭಾಯ್ ಚಂದದ ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು...

ನಿಮ್ಮೆಲ್ಲರ ಪ್ರೋತ್ಸಾಹದ ಮಾತುಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ...

Ittigecement said...

ಶಿವ ಶಂಕರ್ ಯಳವತ್ತಿ...
ಪ್ರೀತಿಯ ಶಿವೂ...

ಸತ್ಯವಾದ ಮಾತು.. "ಒಳ್ಳೆಯವನೆಂದು ತೋರಿಸಿಕೊಳ್ಳುವದು ಸುಲಭ.. ಕಾಪಾಡಿಕೊಳ್ಳುವದು ಕಷ್ಟ"

ಒಳ್ಳೆಯತನವೇ... ನಮ್ಮ ಸಹಜ ಸ್ವಭಾವವಾಗಿಬಿಟ್ಟರೆ...?

ಸಮಸ್ಯೆಯೇ ಇರುವದಿಲ್ಲವಲ್ಲ !

ನೀವು ಬಹಳ ಛಂದದ ಪ್ರತಿಕ್ರಿಯೆ ಹಾಕಿದ್ದೀರೆಂದು ನನ್ನ ಗೆಳೆಯರೊಬ್ಬರು ನನಗೆ ಫೋನ್ ಮಾಡಿ ಹೇಳಿದ್ದರು...

ಪ್ರೋತ್ಸಾಹ/ ಪ್ರತಿಕ್ರಿಯೆಗೆ ಧನ್ಯವಾದಗಳು ಶಿವೂ..

Ittigecement said...

ಚಿತ್ರಾ...

ಮೊದಲ ಪ್ರತಿಕ್ರಿಯೆ ಗೆಳೆಯ ಹರೀಶ್
"ಇದು ನೈಜ ಘಟನೆಯಂತಿದೆ" ಅಂದಾಗ "ಇದು ಕಥೆ" ಅಂತ ಬೋರ್ಡ್ ಹಾಕಬೇಕಾಯಿತು..

ನಾ ಬರೆವ ಕಥೆಗಳಲ್ಲಿ "ನಾನು" ಎನ್ನುವ ನಿರೂಪಕನಿರುತ್ತಾನಲ್ಲ ಅದೇ ಈ ಗೊಂದಲಕ್ಕೆ ಕಾರಣ..

ಎಲ್ಲೆಲ್ಲೋ ಓಡುವ ಮನಸ್ಸಿನ ಹಿಂದೆ ಓಡುವ ಕಷ್ಟ ಅನುಭವಿಸಿದವರಿಗೇ ಗೊತ್ತು..

ಪ್ರತಿಯೊಬ್ಬರೂ ಕೆಲವೊಮ್ಮೆ ಅದರ ಹಿಂದೆ ಓಡಿ ಓಡಿ ದಣಿದಿರುತ್ತಾರೆ ...

ಗೊತ್ತಿದ್ದೂ ಓಡುತ್ತೀವಲ್ಲ ಅದು ಬಹಳ ಸ್ವಾರಸ್ಯಕರ.. ಅಲ್ಲವೆ ?

ಆತ್ಮೀಯ ಪ್ರೋತ್ಸಾಹ/ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರಿಯ ಕೋಲೆ ಬಸವರೆ...

ಫಟಿಂಗ ಗೆಳೆಯನಿಗೆ ತನ್ನ ಗೆಳೆಯ ಒಳ್ಳೆಯವ ಅಂತ ಗೊತ್ತಿತ್ತು..

ಒಳ್ಳೆಯ ಗೆಳೆಯನಿಗೆ ಎದುರಾದ ಸಂದರ್ಭ ಎಂತದ್ದು?

ಗೆಳೆಯನ ಮಡದಿಯ ಸಂಗಡ ಒಂಟಿಯಾಗಿ ಕಳೆಯುವ ಸಂದರ್ಭ..
ತನ್ನ ಗಂಡ ಮಾಡಿದ ಪುಂಡಾಟಿಗೆ ಅವಳಿಗೂ ಗೊತ್ತಿತ್ತು...

ಅವಳ ಆಹ್ವಾನಿಸುವ ಕಣ್ಣುಗಳು..

ಇವನೂ ದುಡುಕುವಂಥಹ ಸಂದರ್ಭದಲ್ಲಿ ಅಚಾನಕ್ಕಾಗಿ "ಗೆಳೆಯನ ಮದುವೆ ಫೋಟೊ ಕಾಣಿಸುತ್ತದೆ"

ಆಗ ಈತನ ಒಳ್ಳೆಯತನ ಮತ್ತೆ ಜಾಗ್ರತವಾಗುತ್ತದೆ...

ಎಷ್ಟೋ ಸಾರಿ ನಾವು "ಅಕಸ್ಮಾತ್" ಒಳ್ಳೆಯವಾರಾಗಿ ಬಿಡುತ್ತೇವೆ ಅಲ್ಲವೆ?

ನಿಮ್ಮ ತರ್ಕ ನನಗೆ ಇಷ್ಟವಾಯಿತು...

ಪ್ರೋತ್ಸಾಹಕ್ಕಾಗಿ ವಂದನೆಗಳು...

Ittigecement said...

ಹಳ್ಳಿ ಹುಡುಗ ತರುಣ್...

"ಸರಿತಪ್ಪು".... ಯಾವುದು ಅಂತ ಗೊತ್ತಿದ್ದರೂ ..

ಮನದೊಳಗೆ "ಆಂದೋಲನ" ನಡೆದಿರುತ್ತದೆ...
ಮನಸ್ಸು ಪ್ರಲೋಭನೆಗೆ ಒಳಗಾಗಿ ಹೊಯ್ದಾಡುತ್ತಿರುತ್ತದೆ...

ಎಲ್ಲರಲ್ಲೂ ಒಳ್ಳೆಯತನ ಇದ್ದೇ ಇದ್ದಿರುತ್ತದೆ.. ಅದೂ ಸಹ ಆಗ ನಮ್ಮೊಡನೆ ಅಂತರಂಗದಲ್ಲಿ ತನ್ನ ಅಭಿಪ್ರಾಯ ಹೇಳುತ್ತಿರುತ್ತದೆ...

ಕೇಳುವ ವ್ಯವಧಾನ ನಮ್ಮಲ್ಲಿರಬೇಕಷ್ಟೆ...

ಬಹಳ ಆತ್ಮೀಯವಾದ ಅಭಿಪ್ರಾಯಕ್ಕೆ ಧನ್ಯವಾದಗಳು...

ಜೈ ಹೋ ತರುಣ್.. !!

Ittigecement said...

ನಿಹಾರಿಕಾ.. (ಪೂರ್ಣಿಮಾ)

ಪ್ರತಿಯೊಬ್ಬರೂ ಒಳ್ಳೆಯವರಾಗಿರಬೇಕೆಂದು ಬಯಸುವದು ಸಹಜ...

ಸನ್ನಿವೇಶಗಳು ಸರಿಯಾದ ಪರೀಕ್ಷೆ ಮಾಡುತ್ತಿರುತ್ತದೆ...

ನಮ್ಮೊಳಗಿನ "ಆತ್ಮಸಾಕ್ಷಿಯ" ಮಾತನ್ನು ಕೇಳಿದರೆ ಪರೀಕ್ಷೆಯನ್ನು ಗೆಲ್ಲಲು ಸಾಧ್ಯ..

ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.. ಬರುತ್ತಾ ಇರಿ...

Unknown said...

ಕಥೆ, ನಿರೂಪಣೆ ಎಲ್ಲ ತುಂಬಾ ಚೆನ್ನಾಗಿದೆ.. ನಿಜ ಒಳ್ಳೆಯವರಾಗಿರುವುದು,, ಅದನ್ನ ಉಳಿಸಿಕೊಳ್ಳುವುದು ತುಂಬಾ ಕಷ್ಟ.. ಒಳ್ಳೆಯವನ ಒಂದು ತಪ್ಪು ಅವನ ಇಡೀ ಜೀವನದಲ್ಲಿ ಕಪ್ಪು ಚುಕ್ಕೆ ಆಗುತ್ತದೆ.. ಆ ಒಂದೇ ತಪ್ಪಿಂದ ಕೆಟ್ಟವನೆಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತದೆ.... ಕೆಟ್ಟವನ ಒಂದು ಒಳ್ಳೆತನ ಅವನ ಜೀವನ ಉಳಿಸುತ್ತದೆ.. ಅದೊಂದು ಒಳ್ಳೆಯ ಕೆಲಸ ಅವನ ಹಿಂದಿನ ಎಲ್ಲ ತಪ್ಪುಗಳನ್ನು ಮುಚ್ಚಿಹಾಕುತ್ತದೆ.. ಇದೆ ವಿಪರ್ಯಾಸ ಅಲ್ಲವೇ? ನಿಮ್ಮ ಕಥೆಯಲ್ಲಿ ಒಳ್ಳೆಯತನದ ಗೆಲುವಿಗೆ ತುಂಬಾ ಸಂತೋಷವಾಯಿತು.... ಧನ್ಯವಾದಗಳು ಪ್ರಕಾಶಣ್ಣ..

Sandeep K B said...

ಸರ್ , ನಿಮ್ಮ ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ , ಜೇಡ ತನ್ನ ಗೂಡು ಕಟ್ಟುವ ಹಾಗೆ ಕಥೆಯನ್ನು ಹೆಣೆದಿದ್ದೀರ .
ನಿಮ್ಮ ಸ್ನೇಹಿತನ ಮಾತು ಅಕ್ಷರ ಸಹ ಸತ್ಯ
" ನಾನು ಒಳ್ಳೆಯವನು ಯಾಕೆ ಗೊತ್ತಾ?
ನನಗೆ ಕೆಟ್ಟವನಾಗುವ ಸಂದರ್ಭ ..
ಛಾನ್ಸ್ ಸಿಗಲಿಲ್ಲ...
ಹಾಗಾಗಿ ಒಳ್ಳೆಯವನಾಗಿಯೇ ಇದ್ದೇನೆ"
ಅವರಿಗೆ ನನ್ನದೊಂದು ನಮಸ್ಕಾರ ಹೇಳಿ

PaLa said...

ಒಳ್ಳೇ ಕಥೆ ಪ್ರಕಾಶಣ್ಣ.. ಒಳ್ಳೇಯವನಾಗಿರುವುದು ಆ ಕ್ಷಣದಲ್ಲಿ ಕಷ್ಟವಾಗಿರಬಹುದು.. ಆದರೆ ಕಥೆ ಓದಿದ ನಮಗೆ ಆತನ ಒಳ್ಳೆಯತನ ನಿಜಕ್ಕೂ ಖುಷಿಕೊಟ್ಟಿತು..

Jyoti Hebbar said...

ಒಳ್ಳೆ ಸಂದೇಶ ಪ್ರಕಾಶಣ್ಣ.. ಆದರೆ ಆ ಮನುಷ್ಯನ so called ಒಳ್ಳೆತನ ಗೆದ್ದಿದ್ದು ನಂಗೆ ಖುಷಿ ಕೊಡಲಿಲ್ಲ
ಅದು ಅವನ ಮುಖವಾಡ ಅನ್ನಿಸಿತು. ಭಾವನೆಗಳನ್ನ ಅದುಮಿಟ್ಟವನು ಮದುವೆಯಾಗದಿದ್ದರೂ ಸನ್ಯಾಸಿಯಲ್ಲ ಅಲ್ವ?
ಅವನ ಮನಸ್ಸಿನಲ್ಲಿ ಆ ಭಾವನೆ ಬರದೆಯೇ ಇದ್ದಿದ್ದರೆ ಅವನು ಒಳ್ಳೆಯವ್ನಾಗ್ತಿದ್ದ.. ಮುಚ್ಚಿಡದೆ ಇದ್ದಿದ್ರು ಒಳ್ಳೆಯವನಾಗ್ತಿದ್ದ, now he is cheating others ಅನ್ನಿಸ್ತು..

Ittigecement said...

ಕೃಪಾ..

ಕಥೆ ಸ್ವಲ್ಪ ಉದ್ದವಾದರೂ...
ತಳ್ಮೆಯಿಂದ ಓದಿ ಪ್ರತಿಕ್ರಿಯಿಸಿದ ಎಲ್ಲರೀಗೂ..
ತುಂಬು ಹೃದಯದ ಕೃತಜ್ಞತೆಗಳು..

ನಿಮ್ಮ ಪ್ರತಿಕ್ರಿಯೆ ನನಗೆ ಇನ್ನಷ್ಟು ಬರೆಯಲು ಟಾನಿಕ್ ಇದ್ದ ಹಾಗೆ..

ಪ್ರೋತ್ಸಾಹಕ್ಕೆ ಧನ್ಯವಾದಗಳು... ಬರುತ್ತಾ ಇರಿ...

Ittigecement said...

ಕಿಶನ್ ಜೀ...

ಗಂಡಿರಲಿ.. ಹೆಣ್ಣಿರಲಿ...
ದೌರ್ಬಲ್ಯದ ಎದುರು ಸಣ್ಣವರಾಗಲೇ ಬೇಕಾದ ಪರಿಸ್ಥಿತಿ ಬರುತ್ತದೆ..
ಅದನ್ನು ಎದುರಿಸುವದು ನಮ್ಮ ಗೆಲ್ಲುವದು ನಮ್ಮ ಆಚಾರ, ವಿಚಾರ.. ಓದುಗಳು.. ಸಂಸ್ಕಾರ ಎನ್ನಬಹುದು..

ಇವೆಲ್ಲವೂ ಇದ್ದರೂ ಕೂಡ ಸೋತ ಉದಾಹರಣೆ ಎಷ್ಟಿಲ್ಲ..?
(ನಾವು ಓದುತ್ತೇವಲ್ಲ ಎಷ್ಟೋ ಸಾಹಿತಿಗಳು, ನಟರು, ರಾಜಕೀಯದವರು ಇತ್ಯಾದಿ)

ಎಲ್ಲ ಸಂಸ್ಕಾರ ಇದ್ದರೂ.. ಕೆಲವೊಮ್ಮೆ ಪರಿಸ್ಥಿತಿಯ ಕೈಗೊಂಬೆಯಾಗ ಬಹುದು..

ಇದು ಅಕಸ್ಮಾತ್ ಒಳ್ಳೆಯವನಾದ ಕಥೆ..

ಪ್ರತಿ ಒಳ್ಳೆಯ ಮನಸ್ಸಿಗೂ "ಕೆಟ್ಟದಾಗಿ ವರ್ತಿಸಬೇಕೆಂಬ ಹಂಬಲ" ಬಂದುಬಿಡುತ್ತದೆ..
ಇದು ಸಹಜ..

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಶಶಿಯವರೆ...

ನಿಮ್ಮ ಪ್ರೀತಿಯ ಸ್ನೇಹಕ್ಕೆ ನನ್ನ ಕೃತಜ್ಞತೆಗಳು...

ಬರೆಯುವದೇ ಗೊತ್ತಿಲ್ಲದ ನನ್ನನ್ನು ಇಲ್ಲಿ ...
ಬ್ಲಾಗ್ ಲೋಕಕ್ಕೆ ತಂದು ಬಿಟ್ಟ ನನ್ನ ಗೆಳೆಯರಿಗೆ ಧನ್ಯವಾದ ಹೇಳಬೇಕು..

ನನ್ನ ದೈನಂದಿನ ವ್ಯವಹಾರದ ಬದುಕಿನ ಲೆಕ್ಕಾಚಾರದಲ್ಲಿ ಎಲ್ಲೋ ಕಳೆದು ಹೋಗುತ್ತಿದ್ದವನಿಗೆ..
ಈ ಬರೆಯುವ ಹುಚ್ಚು ಹಿಡಿದದ್ದು ತುಂಬಾ ಆಶ್ಚರ್ಯ...

ದಿನಾಲೂ ಸ್ವಲ್ಪ ಹೊತ್ತಾದರೂ ಬರೆದು ದಣಿವು ನಿವಾರಿಸಿಕೊಳ್ಳುತ್ತೇನೆ..

ಇದು ಬಹಳ ವಿಚಿತ್ರ ಅನ್ನಿಸ ಬಹುದು ... ಆದರೂ ಸತ್ಯ ..

ನನ್ನನ್ನು ಪ್ರತ್ಯಕ್ಷವಾಗಿ...
ಪರೋಕ್ಷವಾಗಿ ಪ್ರೋತ್ಸಾಹಿಸಿದ... ಪ್ರೋತ್ಸಾಹಿಸುತ್ತಿರುವ...

ಎಲ್ಲರಿಗೂ ಕೃತಜ್ಞತೆಗಳು... ಧನ್ಯವಾದಗಳು..

ನಿಮ್ಮೆಲ್ಲರ ಪ್ರೀತಿಗೆ ನನ್ನ ನಮನಗಳು...

ಶಶಿ .. ಜೈ ಹೋ...

Ittigecement said...

ಸುಧೇಶ್ ಭಯ್ಯಾ...

ಇದನ್ನು ಬರೆಯುವಾಗ ಇದು ನನ್ನ ವಯಕ್ತಿಕ ಅನುಭವ ಅಂತ ತಿಳಿದುಕೊಂಡು ಬಿಡುತ್ತಾರೆ ಎನ್ನುವ ಸಣ್ಣ ಅಳುಕು ಇತ್ತು...

ಈ ಕಥೆಯನ್ನು ಹಾಕಲೋ ಬೇಡವೋ ಎನ್ನುವ ಸಂದಿಗ್ಧದಲ್ಲಿದ್ದೆ...

ಗೆಳೆಯರು.. ಸಹೋದರಿಯರು ಹಾಕಲು ಹುರಿದುಂಬಿಸಿದರು.. ಹಾಕಿದೆ..

"ದೌರ್ಬಲ್ಯ ಕ್ಷಣಗಳನ್ನು ದಾಟಿ ಬಂದ ಮೇಲೆ ಗೊತ್ತಾಗುತ್ತದೆ..
ಅದು ಎಂಥಹ ಸಾಧನೆಯೆಂದು ! "

ಮುಂಬೈಗೆ ಹೋದರೂ ಕಾಡುವ ನಿಮ್ಮ ಕನ್ನಡ, ಬೆಂಗಳೂರಿನ ಪ್ರೀತಿಯ ಬಗೆಗೆ ನನಗೆ ಬಹಳ ಕುತೂಹಲವಿದೆ...

ತುಂಬಾ ತುಂಬಾ ಧನ್ಯವಾದಗಳು ಸುಧೀ... ಜೈ ಹೋ..

Ittigecement said...

ನೆನಪಿನ ದೋಣಿಯಲ್ಲಿ ..
ಪ್ರೀತಿಯ ಅಶ್ವಿನ್...

ನಿಮ್ಮ ಈ ಪ್ರಶ್ನೆ ನನ್ನನ್ನು ಬಹಳ ಕಾಡಿತು... ಹಾಗೆಯೆ ನನ್ನ ಮಿತ್ರರಿಗೂ ಈ ಪ್ರಶ್ನೆ ಕೇಳಿದೆ..

ನಮ್ಮ ಶಾಸ್ತ್ರಗಳು ಏನನ್ನುತ್ತವೆ? ಅಂತ ವಿ. ಆರ್ ಭಟ್ ಅವರನ್ನು ಕೇಳಿದೆ..
ಅದಕ್ಕಾಗಿ ಅವರು ತಮ್ಮ ಬ್ಲಾಗಿನಲ್ಲಿ ಒಂದು ಲೇಖನವನ್ನೇ ಬರೆದಿದ್ದಾರೆ ನೋಡಿ..

ಮತ್ತೊಬ್ಬ ಗೆಳೆಯ ಪರಾಂಜಪೆ "ಜೀವನ್ಮುಖಿ" ಬ್ಲಾಗ್ ಅವರನ್ನೂ ಕೇಳಿದೆ..

ಇದು ನನ್ನ ಬಜ್ ನಲ್ಲಿ ದೊಡ್ಡ ಚರ್ಚೆಯೇ ಆಯಿತು.. ಅದರ ಲಿಂಕ್ ಇಲ್ಲಿದೆ..(http://www.google.com/profiles/116785730712783012640#buzz)

ನನ್ನ ಅಭಿಪ್ರಾಯ ಇಷ್ಟೆ...

"ಕೆಟ್ಟ ವಿಚಾರಗಳು ಬಂದು ಮನದೊಳಗೇ ಉಳಿದರೆ.. ಅದು ಅವನಿಗಷ್ಟೇ ಸೀಮಿತ.. ತೀರಾ ವಯಕ್ತಿಕವಾಗುತ್ತದೆ..
ಅದರ ಬಾಧಕಗಳು ಅವನೊಳಗಷ್ಟೆ..ಇರುತ್ತದೆ .
ಆತ ಗೋಮುಖವ್ಯಾಘ್ರ ಎನಿಸ ಬಹುದು...

ಆದರೆ...
ಅಂಥಹ ಕೆಟ್ಟವಿಚಾರಗಳು ಅವನಮೇಲೆ ಸವಾರಿ ಮಾಡಿದಾಗ..
ಅದರ ಪರಿಣಾಮ ಉಳಿದವರೂ ಅನುಭವಿಸ ಬೇಕಾಗಿ ಬರುತ್ತದೆ..
ಇದು ಬಹಳ ದೊಡ್ಡ ತಪ್ಪು.. ಅಕ್ಷಮ್ಯ ಆಅಪರಾಧ...

ಮನುಷ್ಯನ ಮನಸ್ಸು ಬಹಳ ವಿಚಿತ್ರ... ಅದು ಹೇಗೆ ಎಲ್ಲಿ ಯಾಕೆ ಹೀಗಾಗುತ್ತದೆ ಅನ್ನುವದು ಬಹಳ ಕಷ್ಟ..
ಮತ್ತು ವಿಚಿತ್ರ...
ಅದನ್ನು ಹಿಡಿತದಲ್ಲಿಟ್ಟುಕೊಳ್ಳುವದೇ ಒಂದು ಕಲೆ...

ಅಶ್ವಿನ್.. ನಿಮ್ಮ ಪ್ರೀತಿಗೆ...
ಪ್ರೋತ್ಸಾಹಕ್ಕೆ ತುಂಬಾ ತುಂಭಾ ಧನ್ಯವಾದಗಳು...

ಬರುತ್ತಾ ಇರಿ...

Ittigecement said...

ವಸಂತ್...

ಈ ಕಥೆಯಲ್ಲಿ ಬರುವ ಹೆಣ್ಣುಮಗಳ ವ್ಯಕ್ತಿತ್ವವನ್ನು ಸ್ಪಷ್ಟಪಡಿಸಬೇಕಿತ್ತು ಅಂತ ಅಭಿಪ್ರಾಯಗಳು ಬರುತ್ತಿವೆ..
ತನ್ನ ಗಂಡ ಕೆಟ್ಟವ ಅಂತ ಅವಳಿಗೂ ಗೊತ್ತಿತ್ತು..
ಆ.. ಪರಿಸ್ಥಿತಿ ಸಂದರ್ಭ ಅವಳ ಮನಸ್ಸೂ ಸಹ ತಾತ್ಕಾಲಿಕವಾಗಿ ಚಂಚಲವಾಗಿರ ಬಹುದಲ್ಲವೆ?
ಆಗದಿರಲೂ ಬಹುದು..
ಹೆಚ್ಚಾಗಿ ಹೆಣ್ಣುಮಕ್ಕಳು ಜಾರುವದು ಕಡಿಮೆ ಇರಬಹುದಾ..?
ಹೆಣ್ಣುಮಕ್ಕಳು ಭಾವುಕಜೀವಿಗಳು.. ಅಪ್ಪ/ಅಮ್ಮ/ಗಂಡ/ಮಕ್ಕಳ ಸೆಳೆತ.. ಬಾಂಧವ್ಯ ಜಾಸ್ತಿ ಅಲ್ಲವೆ?

ಕಥೆಯನ್ನು ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು..

ವಸಂತ್ ಥ್ಯಾಂಕ್ಸ್...

ದಿನಕರ ಮೊಗೇರ said...

ಪ್ರಕಾಶಣ್ಣ,
ನಿಮ್ಮ ಕಥೆ ಬರೆವ ಶೈಲಿಗೆ ಎಂದೋ ಮನಸೋತಿದೆ.... ಅದರ ಬಗ್ಗೆ ಬರೆಯಬೇಕಿಲ್ಲ ಆಲ್ವಾ....?
ನನ್ನ ಹಿರಿಯ ಸ್ನೇಹಿತರಿಬ್ಬರು ಮಾತನಾಡಿಕೊಳ್ಳುತ್ತ ಇದ್ದಿದ್ದನ ಕೇಳಿಸಿಕೊಳ್ಳುತ್ತಿದ್ದೆ....
" ನೀನು ಎಂದಿಗೂ ಹೆಂಡತಿಗೆ ಮೋಸ ಮಾಡಿಯೇ ಇಲ್ಲವೇ ?" "
"ಇಲ್ಲ...."
" ಅಂದ್ರೆ ಹೆಂಡತಿಯ ಮೇಲಿನ ಪ್ರೀತಿಯೇ ಅಥವಾ ಮೋಸ ಮಾಡುವ ಅವಕಾಶ ಸಿಕ್ಕಿಲ್ಲವೆ ?"
" ಇಲ್ಲ, ಮೋಸ ಮಾಡುವ ಅವಕಾಶ ಸಿಗಲಿಲ್ಲ...... ಸಿಕ್ಕಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ...."

ಮನುಷ್ಯನಿಗೆ ಯಾವಾಗಲು ಎರಡು ಮುಖವಂತೆ..... ಯಾರು ನೋಡದೆ ಇದ್ದಾಗ ಮತ್ತು ಯಾರಾದರು ನಮ್ಮನ್ನು ಗಮನಿಸುತ್ತಾ ಇದ್ದಾರೆ ಎಂದಾಗ ನಮ್ಮ ನಡವಳಿಕೆ ಬೇರೆಯೇ ಆಗಿರುತ್ತದೆ...

ಒಳ್ಳೆಯವನಾಗಿ ಇರೋದು ಮತ್ತು ಒಳ್ಳೆಯವನಂತೆ ನಟನೆ ಮಾಡೋದು ಇವೆರಡರಲ್ಲೂ ತುಂಬಾ ವ್ಯತ್ಯಾಸ ಇದೆ..... ಎರಡನೇ ಪಂಗಡದವರು ಸಿಕ್ಕಿ ಬಿದ್ದೆ ಬಿಳ್ತಾರೆ......

ನಿಮ್ಮ ಕಥೆಯ ಸಾರ ನಿಜ.. ನಿಜ... " ಒಳ್ಳೆಯನಾಗಿರೋದು ತುಂಬಾ ಕಷ್ಟ..."

Asha said...

"ನೀವು ಗಂಡಸರು ....
ನಿಮ್ಮ ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...?
ಪ್ರತಿ ಹೆಣ್ಣಿಗೂ ...
ಬೇಕು ಬೇಡಗಳಿರುತ್ತವೆ..
ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?".... prakashanna e vakya nange esta atu...
matte comment madaanthaddenu kandiddille..eno onthara kathe esta atu..99% realityge hattira...

mamatha said...

ಇದು ಕಥೆಯಲ್ಲ..
ನಡೆದ ಘಟನೆ ಅಂತ ಅರ್ಥೈಸಿದೆ..

mamatha said...

ಇದು ಕಥೆಯ..
ನಡೆದ ಘಟನೆ ಅಂತ ಅರ್ಥೈಸಿದೆ..

mamatha said...

ಇದು ಕಥೆಯಂತಿಲ್ಲ..
ನಡೆದ ಘಟನೆ.ಅಂತ ಅರ್ಥೈಸಿದೆ..

ಸೀತಾರಾಮ. ಕೆ. / SITARAM.K said...

chennaagide kathe. helalu enu ulisilla.

Guruprasad . Sringeri said...

ತುಂಬಾ ಚೆನ್ನಾಗಿದೆ ಪ್ರಕಾಶ್ ಅವರೆ.... ಮನಮುಕ್ತಾ ಅವರು ಚೆನ್ನಾಗಿ ಹೇಳಿದ್ದಾರೆ...

AntharangadaMaathugalu said...

ಪ್ರಕಾಶ್ ಸಾರ್
ಕಥೆ ಚೆನ್ನಾಗಿದೆ. ಇಂತಹ ಸಂದರ್ಭಗಳಲ್ಲೇ ಮನುಷ್ಯನ ನಿಜವಾದ ವ್ಯಕ್ತಿತ್ವದ ಪರಿಚಯ ಆಗೋದು ಅಲ್ವಾ..? ಮೌಲ್ಯಗಳನ್ನು ನಂಬಿ ಬದುಕುವ ವ್ಯಕ್ತಿಗೆ ಇದು ಪರೀಕ್ಷೆ. ಇವರಿಗೆ ಜಯವೂ ಖಂಡಿತಾ... ಇಷ್ಟವಾಯಿತು

ಶ್ಯಾಮಲ

ಶಿವಪ್ರಕಾಶ್ said...

kathe chennagide prakashanna... :)

geeta bhat said...

Manassinolagina AASAHAJA tholalatada bagge cholo baradde. bardiro reethinu tumba ista aatu.very interesting STORY...

Sudarshan said...

ಪ್ರಕಾಶಣ್ಣ,

ನನ್ನ ಅನಿಸಿಕೆ ಕೂಡ ಜ್ಯೋತಿ ಶೀಗೆಪಾಲ್ ವ್ಯಕ್ತಪಡಿಸಿದ ನಿಟ್ಟಿನಲ್ಲೇ ಇರುತ್ತದೆ. ಮನಸ್ಸಿನೊಳಗಿನ ಆಸೆಯನ್ನು ಅದುಮಿಟ್ಟು "ಒಳ್ಳೆಯತನದ" ಮುಖವಾಡ ಧರಿಸಿದ್ದಕ್ಕೆ ಆತ ನಿಜವಾಗಿಯೂ ಒಳ್ಳೆಯವ ಅಂತ ಪರಿಗಣಿಸಲು ಸಾಧ್ಯ ಅನ್ನಿಸುವುದಿಲ್ಲ. ಆದರೆ ವಿಪರ್ಯಾಸ ಎಂದರೆ ನೀವು ತಿಳಿಸಿರುವ ಹಾಗೆ ಮಹಾಭಾರತದಲ್ಲಿ ಒಂದು ಉಪ ಕಥೆ ಬರುತ್ತದೆ ಅಂದಿರಲ್ಲ.. ಇದರಿಂದ ನಾವು ಅರಿತುಕೊಳ್ಳಬೇಕಾದ್ದು ಎಂದರೆ, ಮನುಷ್ಯನಿಗೆ "ಪ್ರಕೃತಿ ಸಹಜ" ಆಸೆಗಳು ಮನದಲ್ಲಿ ಉದ್ಭವಿಸುವುದು "ಸಹಜ".. ಆದರೆ ಸಂಧರ್ಬಕ್ಕೆ ತಕ್ಕಂತೆ ವಿವೇಚನೆಯುಳ್ಳ ನಿರ್ಧಾರ ತೆಗೆದುಕೊಳ್ಳುವುದೇ "ಒಳ್ಳೆಯತನ" ಎಂದು ತಿಳಿದು practical ಲೈಫ್ ನಲ್ಲಿ ಮುನ್ನಡಿಯಬೇಕಷ್ಟೇ..!!!

ಮತ್ತೊಂದು ರೋಮಾಂಚನಭರಿತ ಉತ್ತಮ ಸಂದೇಶಯುಳ್ಳ ಕಥೆ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಪ್ರಕಾಶಣ್ಣ..!

Rajottara said...

ಹಲೋ ಪ್ರಕಾಶ್,
ನಿಮ್ಮ ಕತೆಗಳು, ಮುಗ್ದತೆ ಮತ್ತು ವಾಸ್ತವದ ಕೊಂಡಿಯಾಗಿ ಮನ ತಾಕುತ್ತವೆ. ನಿಮ್ಮ ಬ್ಲಾಗ್ ನೋಡಿದ ಮೇಲೆ, ಅಂದೆಂದೋ ನಿಲ್ಲಿಸಿದ್ದ ಬರವಣಿಗೆ ಮತ್ತೆ ಶುರು ಮಾಡಿದ್ದೇನೆ. thanks for the inspiration.

Naveen Shekar said...

ಪ್ರಕಾಶಣ್ಣ ಈ ಸಾಲು ಅದ್ಭುತ... "ನೀವು ಗಂಡಸರು ....
ನಿಮ್ಮ ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...?
ಪ್ರತಿ ಹೆಣ್ಣಿಗೂ ...
ಬೇಕು ಬೇಡಗಳಿರುತ್ತವೆ..
ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?"
ಇದೆ ಮಾತುಗಳನ್ನು ನನ್ ಹುಡುಗಿ ನನಗೆ ಹೇಳಿದಳು ಮತೆ ನಿಮ್ಮ ಬ್ಲಾಗ್ನಲ್ಲಿ ಓದಿ ಮನಸ್ಸಿಗೆ ಒಂಥರಾ ಕಸಿವಿಸಿ ಜೊತೆಗೆ ಇವತು ಈ ಮಾತು ಅವಳು ಯಾಕೆ ಹೆಳಿದಳು ಅಂತ ಅರ್ಥ ಆಯ್ತು...

ಕಾವ್ಯಾ ಕಾಶ್ಯಪ್ said...

pratiyobbara manassina mooleya ondu bhavanege sariyaada baraha roopa kottiddi. aa bhavane obbobralli ondond reeti vyakta agtu, innu eshto janralli hange ulitu, bahalashtu "olleyavaru" adna stimitadalli itgandirta... rashi chanda abhivyakti aaju kateli... :)nimma katha handaradalli creativity irtu.. oohege nilukada muktaya.. :)

Unknown said...

ಪ್ರಕಾಶ್ ಅವರೇ ನಿಜವಾಗಿಯೂ ಇದು ನನ್ನ ಜೀವನದಲ್ಲಿ ನಡೆದದ್ದು.ಸಂಧರ್ಭ ಮಾತ್ರ ಬೇರೆ. ನೀವು ಕಥೆ ಬರೆಯುವ ಶೈಲಿ ತುಂಭಾ ಚೆನ್ನಾಗಿದೆ.

Unknown said...

Story is narrated very well..I can visualise it