Monday, September 6, 2010

ಬೇಕು....ಕಪ್ಪು.. ಬಿಳುಪು..

ಎಲ್ಲಕ್ಕಿಂತ ಮೊದಲು  ನಿಮಗೆ ...
ಈ .. ಸಂದರ್ಭವನ್ನು ಹೇಳಿಬಿಡಬೇಕು...


ನಾನು ಈ ಪ್ರದೇಶದ ಜಿಲ್ಲಾಧಿಕಾರಿ..
ಡಿಸಿ.


ಕಳೆದ ನಾಲ್ಕಾರು ದಿನಗಳಿಂದ ಚುರುಕಾಗಿದ್ದ ಮಳೆ..
ನಿನ್ನೆಯಿಂದ "ಕುಂಭದ್ರೋಣ" ಮಳೆಯಾಗಿ ಸುರಿಯುತ್ತಿದೆ..


ಎಂದೂ ಕಂಡರಿಯದ ಮಳೆ..!


ಈ ಮಳೆಯಿಂದಾಗಿ ಡ್ಯಾಮಿನ ಗೇಟುಗಳನ್ನು ತೆಗಿಯಲೇ ಬೇಕಾಗಿತ್ತು...
ತೆಗೆದಿದ್ದೇವು..


ಅದಕ್ಕೂ ಮೊದಲು ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುವ ಕೆಲಸ ಮಾಡಲಾಯಿತು..


ಅವರಿಗೆ ತಾತ್ಕಾಲಿಕವಾಗಿ ಊಟ , ವಸತಿ ಸೌಕರ್ಯ ಮಾಡಲಾಯಿತು...


ನಮ್ಮ ಮನೆಯೂ ಮುಳುಗುವ ಸಾಧ್ಯತೆಯಲ್ಲಿತ್ತು...!


ನನ್ನಾಕೆ ಮತ್ತು ಮಕ್ಕಳನ್ನು ಮೊದಲೇ ತವರು ಮನೆಗೆ ಕಳುಹಿಸಿ ಬಿಟ್ಟಿದ್ದೆ...


"ಸರ್.. ನಿಮ್ಮ ಮನೆಯ ಕೆಳಗಿನ ರಸ್ತೆಯವರೆಗೆ ನೀರು ಏರಿದೆ..
ನಿಮಗಾಗಿ ಹೆಲಿಕಾಪ್ಟರ್ ಬರುತ್ತಿದೆ...
ನಿಮ್ಮ ಮನೆಯ ಟೆರ್ರೆಸಿಗೆ ಬನ್ನಿ.."


ಇದು ಬಹಳ ಸಂಕಟದ ಸಮಯ..


ಇದು ನನ್ನಾಕೆ ಸ್ವತಃ ನಿಂತು ಕಟ್ಟಿಸಿದ ಮನೆ..
ಪ್ರತಿಯೊಂದನ್ನೂ ತನಗೆ.. ತನ್ನಿಷ್ಟದಂತೆ . ಬಹಳ ಕಷ್ಟಪಟ್ಟು ಕಟ್ಟಿದ್ದಳು..


ನನ್ನ ಸಲಹೆಯನ್ನೂ ಕೇಳಿದ್ದಳು..


ನನ್ನಾಕೆ ನನಗೆ ಸಿಕ್ಕಿದ್ದೇ ನನ್ನ ಪುಣ್ಯ..!
ನಮ್ಮ ಬದುಕಿನಲ್ಲಿ ನಾವು ಇಷ್ಟ ಪಟ್ಟವರೆಲ್ಲ..  "ಹೆಂಡತಿಯಾಗಿ" ಸಿಕ್ಕುವದಿಲ್ಲ..
ಸಿಕ್ಕರೂ  ಪ್ರೀತಿಯಿಂದ ಬಾಳಲೂ ಸಾಧ್ಯವಿಲ್ಲ...
ಅವಳ ಪ್ರೀತಿಗೆ ನಾನು ಸಿಲುಕಿದ್ದೇ ನನ್ನ ಭಾಗ್ಯ..

ಅವಳ ತಂದೆ ಈ ಪ್ರದೇಶದ ಬಲುದೊಡ್ಡ ಕೈಗಾರಿಕೋದ್ಯಮಿ..
ಅವರಿಂದಾಗಿಯೇ ನಾನು ಡಿಸಿ ಆಗಿದ್ದು..


ತನ್ನಪ್ಪನಿಂದಾಗಿ ತನ್ನ ಗಂಡ ಡಿಸಿಯಾಗಿದ್ದಾನೆ ..
ಎನ್ನುವಂಥಹ ಸೊಕ್ಕು ನನ್ನಾಕೆ ಎಂದೂ ನನ್ನ ಬಳಿ ತೋರಿಸಿಲ್ಲ..


ನಮ್ಮ ಪ್ರೀತಿ ಶುರುವಾದಾಗಿಲಿನಿಂದ. ಇಲ್ಲಿಯ ವರೆಗೂ ಒಂದೇ ಥರಹದ ಪ್ರೀತಿ..ಕೊಡುತ್ತಿದ್ದಾಳೆ..


ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ನನ್ನಾಕೆ ಇದ್ದಾಳೆ...

ಪ್ರತ್ಯಕ್ಷವಾಗಿ.. ಇಲ್ಲವೇ.. ಪರೋಕ್ಷವಾಗಿ...ನನ್ನೊಡನೆಯೇ ಇರುತ್ತಾಳೆ..ಮಾನಸಿಕವಾಗಿಯೂ ಸಹ..


ನನ್ನ ಪ್ರತಿಯೊಂದೂ.. ಬೇಕು... ಬೇಡಗಳು....
ನನ್ನ ದೌರ್ಬಲ್ಯಗಳು ...
ನನಗಿಂತ ಹೆಚ್ಚಾಗಿ ಅವಳಿಗೇ ಗೊತ್ತು..


ನನ್ನ ಆಲೋಚನೆಗಳು, ನಾನು ಯೋಚಿಸುವ ರೀತಿ ಅವಳಿಗೆ ತಟ್ಟನೆ ಗೊತ್ತಾಗಿ ಬಿಡುತ್ತದೆ.....
ನನ್ನ ಭಾವನೆಗಳನ್ನು.... ಮುಖನೋಡಿಯೇ... ಓದಿ ಬಿಡುತ್ತಾಳೆ..

ಅಷ್ಟರಲ್ಲಿ ಅವಳ ಫೋನ್.. !


"ರೀ..
ನಮ್ಮ ಮನೆಯನ್ನು ಬಹಳ ಆಸೆ ಪಟ್ಟು ಕಟ್ಟಿದ್ದೇನೆ..
ಮನೆಯಂತೂ ಮುಳುಗುತ್ತಿದೆ...
ನೀವು ಬರುವಾಗ..
ಅದರಲ್ಲಿನ ಕೆಲವು ವಸ್ತುಗಳನ್ನಾದರೂ ತಂದು ಕೊಡಿ ..ಪ್ಲೀಸ್.."


ನನ್ನಾಕೆಯ... ಬೇಡಿಕೆಗಳೇ ಹೀಗೆ...
ಇಲ್ಲವೆನ್ನಲು ಸಾಧ್ಯವೇ ಇಲ್ಲ...


ನಾನು ಲಗುಬಗೆಯಿಂದ ಒಳಗೆ .. ಹಾಲಿಗೆ  ಓಡಿ..  ಬಂದೆ..


ನನ್ನ ಹಿಂದೆ ನನ್ನ ಸಹಾಯಕನೂ ಓಡಿ ಬಂದ..

ದೊಡ್ಡದಾದ ಕಿಡಕಿಗಳು..
ಅದಕ್ಕೆ ಸುಂದರ ಕಸೂತಿಯ ಪರದೆಗಳು..!


ಈ ಪರದೆಗಳನ್ನು ನಾವು ದೆಹಲಿಗೆ ಹೋದಾಗ ತಂದಿದ್ದು...
ಅಲ್ಲಿನ ಪಂಜಾಬಿ ಅಂಗಡಿಯಲ್ಲಿ ದುಬಾರಿಯಾಗಿದ್ದರೂ ಬಹಳ ಆಸೆ ಪಟ್ಟು ತಂದಿದ್ದಳು..


"ಇದನ್ನು ಅರ್ಜಂಟಾಗಿ ಪ್ಯಾಕ್ ಮಾಡಿ"


ನನ್ನ ಸಹಾಯಕನಿಗೆ ಹೇಳಿದೆ..


ಹಾಲಿನಲ್ಲಿ ಟಿಪಾಯಿಯ ಮೇಲೆ ಹಾಕಿದ ಹೊದಿಕೆ...
ಅವಳೇ ಸ್ವತಃ ಸುಂದರ ಚಿತ್ರಗಳನ್ನು ಹಾಕಿದ್ದಳು..


"ಇದನ್ನೂ ಪ್ಯಾಕ್ ಮಾಡಿ ಪ್ಲೀಸ್"


ಆತ ಪ್ಯಾಕ್ ಮಾಡಿದ..


"ಸರ್ ..
ನೀವು ಹೊರಡಿ.. ನೀರು ಏರುತ್ತಿದೆ.."


ನಾನು ಟಿವಿ ಷೋಕೇಸ್ ಬಳಿ ಬಂದೆ..

ನಮ್ಮ ಮದುವೆಯ ಫೋಟೊ... ಅದನ್ನು ತೆಗೆದು ಸಹಾಯಕನ ಬಳಿ ಕೊಟ್ಟೆ...


ಡೈನಿಂಗ್ ಹಾಲಿಗೆ ಬಂದೆ...


ಅಲ್ಲಿಯ ಷೋಕೇಸಿನಲ್ಲಿ ದುಬಾರಿಯಾದ ಪಿಂಗಾಣಿ ಪಾತ್ರೆಗಳು !!


ನಾವು ಮಕ್ಕಳೊಂದಿಗೆ ಯುರೋಪ್ ದೇಶಗಳಿಗೆ ಹೋದಾಗ ತಂದಿದ್ದು...
ಅವುಗಳನ್ನೂ ಪ್ಯಾಕ್ ಮಾಡಲು ಸೂಚಿಸಿದೆ...


ಸಹಾಯಕ ಅದನ್ನೂ ಪ್ಯಾಕ್ ಮಾಡಿದ..


ಕಿಡಕಿಯಿಂದ ಇಣುಕಿ ನೋಡಿದೆ...


ಹೊರಗೆ ಮಳೆ ಇನ್ನೂ ಜೋರಾಗಿ ಹೊಯ್ಯುತ್ತಿತ್ತು...
ನೀರಿನ ಮಟ್ಟ ಒಂದೇ ಸವನೇ ಏರುತ್ತಿತ್ತು...
ಮನೆಯ ಅಂಗಳದವರೆಗೆ ನೀರು ಬಂದಿತ್ತು...


ಪರಿಸ್ಥಿತಿ  ಭಯ ಹುಟ್ಟಿಸುವಂತಿತ್ತು.....!!


"ಜಲ್ದಿ ...
ಆದಷ್ಟು ಬೇಗ.. ಸುರಕ್ಷಿತ ಜಾಗಕ್ಕೆ ಹೋಗಿ  ಬಿಡಲೇ....?"

 ನನಗೂ..ಜೀವದ  ಭಯ ಕಾಡತೊಡಗಿತು..

ಇತ್ತ  ಮಡದಿಯ  ಪ್ರೀತಿಯ ಬೇಡಿಕೆ...!

ಕೊನೆಗೆ ...
ನನ್ನ  ಮಡದಿಯ ಪ್ರೀತಿಯೇ ಗೆದ್ದಿತು..
ಅವಳು ಇಷ್ಟಪಟ್ಟ ಕೆಲವನ್ನಾದರೂ ತೆಗೆದು ಕೊಂಡು  ಹೋಗೋಣ ಅನ್ನಿಸಿತು..

ಅವಳು ಕೊಟ್ಟ ಪ್ರೀತಿಗೆ ಇಷ್ಟನ್ನಾದರೂ ಮಾಡಬೇಕು ಅಲ್ಲವೇ?

ನಾವು ಅಡುಗೆ ಮನೆಗೆ ಬಂದೆವು...


ನನಗೆ ಕಂಡಿದ್ದು... " ಓವನ್."..!!..

ನನಗಾಗಿಯೇ ...ಅಮೇರಿಕಾದಿಂದ ತಂದಿದ್ದಳು..
ಎಣ್ಣೆರಹಿತ ಅಡಿಗೆ ಮಾಡಲು...
ನನ್ನ ತೂಕ ಜಾಸ್ತಿಯಾಗುತ್ತಿದೆ..ಅದನ್ನು  ಕಡಿಮೆ ಮಾಡಲು..!

ಈ ಎಲ್ಲ  ಸಾಮಾನುಗಳು......ಎಲ್ಲಕಡೆಯೂ.. ಸಿಗುತ್ತವೆ..

ಆದರೆ  ಇದರ ಹಿಂದಿನ ಪ್ರೀತಿ...??..

ಇಂಥಹ ಒಂದು ಹಿಡಿ  ಪ್ರಿತಿಗಾಗಿಯೇ,, ಅಲ್ಲವೇ ನಾವೆಲ್ಲಾ ಬದುಕುವದು?


ಎಷ್ಟು ಪ್ರೀತಿ ಮಾಡುತ್ತಾಳೆ ನನ್ನವಳು..!
ಅವಳ ಬಗೆಗೆ ಮತ್ತಷ್ಟು ಪ್ರೀತಿ ಉಕ್ಕಿತು...!


ಅದನ್ನೂ ಪ್ಯಾಕ್ ಮಾಡಿಸಿದೆ..
ಆತ ನಾನು ಪ್ಯಾಕ್ ಮಾಡಿದ ವಸ್ತುಗಳನ್ನು ಹೆಲಿಕಾಪ್ಟರಿನಲ್ಲಿ ಇಟ್ಟು ಬಂದ...


ಈಗ ನಾನು ಬೆಡ್ ರೂಮಿಗೆ ಬಂದೆ...


ನನಗೆ ಮೊದಲು ಕಂಡಿದ್ದು ಮೃದುವಾದ ಉಣ್ಣೆಯ ಚಾದರ..!
ನಾವು ಸ್ವಿಟ್ಸರ್ ಲ್ಯಾಂಡಿಗೆ ಹನಿ ಮೂನ್ ಗೆ ಹೋದಾಗ ಆಸೆ ಪಟ್ಟು ತಂದಿದ್ದಳು..


ಅದನ್ನೂ ಪ್ಯಾಕ್ ಮಾಡಿಸಿದೆ..


"ಸರ್ .. ಹೆಲಿಕಾಪ್ಟರಿನಲ್ಲಿ ಜಾಗ ಸಾಕಾಗುವದಿಲ್ಲ..
ಬನ್ನಿ....
ಜಲ್ದಿ ಹೊರಡೋಣ.. ನೀರು ಏರುತ್ತಿದೆ... !!.."

ಅವನ ಧ್ವನಿಯಲ್ಲಿ ಆತಂಕ ಕಾಣುತ್ತಿತ್ತು...!


"ನೀನು...
 ಒಂದು ಕೆಲಸ ಮಾಡು...
ಇವುಗಳನ್ನು ಸುರಕ್ಷಿತ ಜಾಗದಲ್ಲಿ ಇಟ್ಟು ಬೇಗ ಬಾ...
ನಾನು ಮೇಲೆ ಮಹಡಿಗೆ  ಹೋಗಿ ನೋಡಿ ಬರುತ್ತೇನೆ...."


ನನ್ನ ಸಹಾಯಕ ಒಲ್ಲದ ಮನಸ್ಸಿನಿಂದ ಅವುಗಳನ್ನು ಎತ್ತಿಕೊಂಡು ಹೋದ..
ತನ್ನ ಜೀವದ ಭಯವೂ ಅವನಿಗೆ ಕಾಡಿರಬಹುದಲ್ಲವೇ?


ಅಷ್ಟರಲ್ಲಿ ನನ್ನಾಕೆಯ ಫೋನ್...


"ರೀ ....
ಎಲ್ಲಿದ್ದೀರಿ..? ಜಲ್ದಿ ಹೊರಡಿ....
ಬರುವಾಗ...
ಮೇಲೆ ಮಹಡಿಯಲ್ಲಿ ರಿಕ್ರಿಯೇಷನ್  ರೂಮಿನ.. 
ವಾರ್ಡ್ ರೋಬಿನಲ್ಲಿ ನಮ್ಮ ಫೋಟೊ ಅಲ್ಬಮ್ಮುಗಳಿವೆ ..


ನಮ್ಮ ಹಳೆಯ ನೆನಪುಗಳಿಗಾಗಿ ಅವುಗಳನ್ನು ಮರೆಯದೇ.. ತನ್ನಿ..."


ನಾನು ಮಹಡಿ ರೂಮಿಗೆ  ಲಗುಬಗೆಯಿಂದ  ಬಂದೆ..


ಅದು ನನ್ನ ಆಸೆಗಾಗಿ ಕಟ್ಟಿದ ರೂಮು..!


ಎಷ್ಟೋ ಮುಸ್ಸಂಜೆಗಳನ್ನು ....
ಸಣ್ಣ ದೀಪಗಳನ್ನು ಹಾಕಿಕೊಂಡು...
ಘಜಲ್ಲುಗಳನ್ನು...
ಭಾವಗೀತೆಗಳನ್ನು..
ಹಳೆಯ ಸಿನೇಮಾ ಹಾಡುಗಳನ್ನು ಕೇಳುತ್ತ ಕಳೆದ ಜಾಗ ಇದು.. !!

ಮತ್ತೆ  ಹಳೆಯ ನೆನಪುಗಳು...!


ಎಷ್ಟೊಂದು  ದಿನಗಳ ಸಂಜೆಯಲ್ಲಿ ಇಲ್ಲಿ ನಾವು ಮೈಮರೆತಿದ್ದೇವೆ !!
ಜಗತ್ತನ್ನೇ ಮರೆತು...
ಕಳೆದು ಹೋಗಿದ್ದೇವೆ...!


ಓಹ್...!!


ಎಷ್ಟೊಂದು...  ಮಧುರವಾದ ಕ್ಷಣಗಳನ್ನು ಇಲ್ಲಿ ನಾವಿಬ್ಬರೂ ಕಳೆದಿದ್ದೇವೆ...!!..


ಒಂದು ಹೆಣ್ಣಿನಿಂದ ...
ಎಷ್ಟು ಬಗೆಯ ಸುಖಗಳನ್ನು ಪಡೆಯಲು ಸಾಧ್ಯವೋ...
ಅವುಗಳನ್ನೆಲ್ಲವನ್ನೂ... ನನ್ನಾಕೆ ಕೊಟ್ಟಿದ್ದಾಳೆ..!

ನನ್ನ  ಈ  ಅಧಿಕಾರ..!
ಅಂತಸ್ತು..
ಈ..ವೈಭೋಗ.. !
ಎಲ್ಲವೂ  ನನ್ನಾಕೆಯಿಂದ ...!
ನನ್ನಾಕೆಯ ಪ್ರೀತಿಯಿಂದ ಸಿಕ್ಕಿದ್ದು.. !


ನಾನೇ ಪುಣ್ಯವಂತ...!


ನಾನು ಲಗುಬಗೆಯಿಂದ ಅಲ್ಲಿನ ಹಾಡಿನ ಸೀಡಿಗಳನ್ನು ತೆಗೆದೆ..  
ಆ ನೆನಪುಗಳು.. ಅವುಗಳ ಮೆಲುಕು..
ಎಲ್ಲವೂ ಒಂದಕ್ಕಿಂತ ಒಂದು  ಮಧುರ.. !!


ಆ ಸಿಡಿಗಳನ್ನು ಒಂದು ಬ್ಯಾಗಿನಲ್ಲಿ ತುಂಬಿದೆ...


ಹೆಲಿಕಾಪ್ಟರ್ ಶಬ್ಧ ಜೋರಾಗಿ ಕೇಳಿತು...!


ನನ್ನ ಸಹಾಯಕ ಲಗು ಬಗೆಯಿಂದ ಓಡೋಡಿ ಬಂದ...


"ಸರ್..
ಜಲ್ದಿ ಬನ್ನಿ...  ಬನ್ನಿ.. ಸರ್..
ಎಲ್ಲಕ್ಕಿಂತ ನಮ್ಮ ಜೀವ ದೊಡ್ಡದು..
ನಮ್ಮ ಬಳಿ ಹೆಚ್ಚು ಸಮಯವಿಲ್ಲ...
ಮನೆಯ ಹಾಲಿನ ವರೆಗೆ ನೀರು ಬಂದಿದೆ.. ಬನ್ನಿ... ಬನ್ನಿ"


"ನೋಡಿ..
ಇನ್ನು ಒಂದೆರಡು ಸಾಮಾನುಗಳಿವೆ..
ತೆಗೆದುಕೊಂಡು ಬರುತ್ತೇನೆ..
ಬಂದೆ ಇರಿ.."


"ಸರ್..
ಬರುವಾಗ ಅಸಹಾಯಕರಾಗಿ ನಿಂತಿದ್ದ.. ಕೆಲವು ಜನರನ್ನು ಕರೆದು ಕೊಂಡು ಬಂದಿದ್ದೇನೆ..
ಹೆಲಿಕಾಪ್ಟರಿನಲ್ಲಿ ಜಾಗ ಇಲ್ಲ..
ಹೆಚ್ಚೆಂದರೆ ನೀವು...
ನಿಮ್ಮ ಸಂಗಡ ಒಂದು ಬ್ಯಾಗ್..ತೆಗೆದುಕೊಂಡು ಹೋಗ ಬಹುದು..
ದಯವಿಟ್ಟು ... ಜಲ್ದಿ ಬನ್ನಿ"


ನಾನು ಲಗು ಬಗೆಯಿಂದ ವಾರ್ಡ್ ರೋಬ್ ಬಾಗಿಲು ತೆಗೆದೆ..


ಮೊದಲನೆಯ ಮಗನ ಅಲ್ಬಮ್.. ಬ್ಯಾಗ್ ಓಳಗೆ ತುರುಕಿದೆ...
ಮತ್ತೆ ನೋಡಿದೆ..
ಮತ್ತೆರಡು ಅಲ್ಬ್ಬಮ್.. ಅದೂ ಮಕ್ಕಳದು..
ಅವುಗಳನ್ನೂ..  ಬ್ಯಾಗಿನಲ್ಲಿ  ಕಷ್ಟಪಟ್ಟು ಹಾಕಿದೆ...!


ಇನ್ನೂ ಎರಡು ಅಲ್ಬಮ್ ಇದ್ದವು..


ಒಂದು ನಮ್ಮ ಮದುವೆಯ ಫೋಟೋಗಳು..... !!


ಕಷ್ಟಪಟ್ಟು ಅದನ್ನೂ ಬ್ಯಾಗ್  ಒಳಗೆ ಹಾಕಿದೆ..


ಇನ್ನೊಂದು ಅಲ್ಬಮ್.. !
ಅದು ನನ್ನ ಕಾಲೇಜು ದಿನಗಳದ್ದು..!


ನಾನು ಲಗು ಬಗೆಯಿಂದ ತೆಗೆದೆ..


ನಮ್ಮ ಕೊನೆಯ ವರ್ಷದ ಗ್ರೂಪ್ ಫೋಟೊ...!


ಅದರ ಹಿಂಬದಿಗೆ ಬೆರಳು ಹಾಕಿ ತಡಕಾಡಿದೆ..!

ಏನೋ.. ಹುಡುಕುತ್ತಿದ್ದೆ..

ಸಿಗುತ್ತಿಲ್ಲ..!


ಹಾಂ..! ಸಿಕ್ಕಿತು..!!


"ಬ್ಲ್ಯಾಕ್.. ಎಂಡ್  ವೈಟ್.."..  ಫೋಟೊ..!..


ಗುಂಗುರು ಕೂದಲಿನ..
ಮುಂಗುರುಳು.. ..
ಆ.. ಹುಡುಗಿಯ... ಫೋಟೊ..!!. !


ಹರವಾದ ಕೆನ್ನೆಯ..
ಮುಂದು.. ಹಲ್ಲಿನ..
ದಟ್ಟ ಕಣ್ಣುಗಳ .... ಆ.. ಫೋಟೊ..!!


ನನ್ನ ಶರ್ಟಿನ ಕಿಸೆಯಲ್ಲಿ ಇಟ್ಟುಕೊಂಡೆ..


ನಾನು ಹೆಲಿಕಾಪ್ಟರ್ ಏರಲು ಬಂದೆ...


ನನ್ನ ಸಹಾಯಕ ಮಳೆಗೆ ಅಡ್ಡವಾಗಿ.. ಕೊಡೆಯನ್ನು ಹಿಡಿದ..
ಮಳೆ ಜೋರಾಗಿ ಹೊಯ್ಯುತ್ತಿತ್ತು..


ಮೈಯೆಲ್ಲ ಒದ್ದೆಯಾಗುತ್ತಿತ್ತು..!


ನಾನು ನನ್ನ ಕೈಯನ್ನು ಶರ್ಟಿನ ಕಿಸೆಗೆ.. ಅಡ್ಡವಾಗಿ ಹಿಡಿದು..
ಹೆಲಿಕಾಪ್ಟರ್ ಏರಿದೆ...


ಒಳಗಿನ ಫೋಟೊ ಒದ್ದೆಯಾಗಿರಲಿಲ್ಲ....!


ಅಷ್ಟರಲ್ಲಿ ನನ್ನಾಕೆಯ ಫೋನ್..!
ನಾನು ತೆಗೆದು ಕೊಳ್ಳಲಿಲ್ಲ..
ಫೋನ್ ರಿಂಗ್ ನಿಲ್ಲಿಸಲಿಲ್ಲ..


ಯಾಕೋ..
ಆ...
ಹಳೆಯ  ಕನಸುಗಳೊಡನೆ.. ...
ಆ ...
ಹುಡುಗಿಯ  ನೆನಪುಗಳೊಡನೆ..
ಒಮ್ಮೆ....
ಕಣ್ಣು ಮುಚ್ಚೋಣ ಅನಿಸಿತು...



(ಇದು ಕಥೆ )

77 comments:

V.R.BHAT said...

ಪ್ರಕಾಶಣ್ಣ,
ಬಹಳ ಆರ್ದ್ರತೆ ಉಂಟುಮಾಡಿದ ವಿವರಣೆ, ಮಾನವ ಸಂಬಂಧಗಳೇ ಹೀಗಲ್ಲವೇ ? ನಾವು ಬಳಸಿದ ವಸ್ತು, ಜಾಗ, ಚಿತ್ರ ಎಲ್ಲವೂ ನಮಗೆ ಯಾವಾಗಲೂ ಅವೇ ಆಗಿರಲಿ ಎಂದು ಮನಸು ಬಯಸುತ್ತದೆ, ವರ್ಗಾವಣೆ ನೌಕರಿಯವರಿಗೆ ಈ ಸೆಂಟಿಮೆಂಟ್ಸ್ ಬಹಳ ತೊದರೆ ಕೊಡುತ್ತದೆ, ಕಥೆ ಚೆನ್ನಾಗಿದೆ, ಆದರೆ ಯಾರದು ಎನ್ನುವುದು ಗೊತ್ತಾಗಿಲ್ಲ, ಧನ್ಯವಾದಗಳು

Ittigecement said...

ವಿ.ಆರ್. ಭಟ್ಟರೆ..

ಮನುಷ್ಯ ಸ್ವಭಾವವೇ ಹೀಗೆ...
ಎಲ್ಲ ಸಿಕ್ಕಿದ್ದರೂ..
ಎಲ್ಲವೂ ಬಳಿಯೇ ಇದ್ದರೂ... ಮತ್ತೊಂದನ್ನು ಬಯಸುತ್ತದೆ.. ಅಲ್ಲವೆ?

ಒಬ್ಬರಿಂದ ಪ್ರೀತಿ..
ಪ್ರೇಮ..
ಬಾಂಧವ್ಯಗಳು.. ಸಿಕ್ಕಿದಾಗ ಮತ್ತೆ ಈ "ಬೇಕು"ಗಳು ಯಾಕೆ?

ಇದು ಕಥೆ ಮಾರಾಯ್ರೆ.. !

ನಿಮ್ಮ ಪ್ರೋತ್ಸಾಹಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು..

Ashok.V.Shetty, Kodlady said...

ಪ್ರಕಾಶಣ್ಣ,

ತುಂಬಾ ಚೆನ್ನಾಗಿದೆ, ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಇಂತಹ Black & White ನೆನಪು ಇದ್ದೇ ಇರುತ್ತವೆ. ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು.

ದಿನಕರ ಮೊಗೇರ said...

ಪ್ರಕಾಶಣ್ಣ,
ಬೆಳಿಗ್ಗೆಯಿಂದ ಮೂಡು ಸ್ವಲ್ಪ ಕೈಕೊಟ್ಟಿತ್ತು.... ನಿಮ್ಮ ಕಥೆ ಓದಿ ದಾರಿಗೆ ಬಂದಿದೆ.... ಕಥೆ ಹೇಳುವ ಪರಿಗೆ ನಿಮಗೆ ನೀವೇ ಸಾಟಿ...... ಆಲ್ಬುಂ ಹಿಂದಿಟ್ಟ ಹಳೆ ಗೆಳತಿಯ ಫೋಟೋ ತೆಗೆದು ಕಿಸಿಯಲ್ಲಿಟ್ಟುಕೊಂಡಿದ್ದು ..... ಅದಕ್ಕೆ ಮಳೆ ತಾಗದೆ ಇರಲಿ ಎಂದು ಕೈ ಅಡ್ಡ ಇಟ್ಟುಕೊಂಡಿದ್ದು .. ಎಲ್ಲಾ ಸುಪರ್.... ಇದೆಲ್ಲಾ ಹೇಗೆ ಹೊಳೆಯತ್ತೆ ನಮಗೆ...... ಎರಡು ಸಾಲಿನ ಕಥೆಗೆ ಇಷ್ಟೇ ಇಷ್ಟು ಉಪ್ಪು, ಬೇಕಾದಷ್ಟು ಮಸಾಲೆ, ಒಂದು ಚಿಟಿಕೆ ಖಾರ ಎಲ್ಲಾ ಸೇರಿಸಿ ಅದ್ಬುತ ಕಥೆ ಕೊಟ್ಟಿದ್ದೀರಿ ಅಣ್ಣಾ....

Dr.D.T.Krishna Murthy. said...

ಪ್ರಕಾಶಣ್ಣ;ಎಂದಿನಂತೆ ಕಥೆಯನ್ನು ಕುತೂಹಲ ಘಟ್ಟದಲ್ಲಿ ನಿಲ್ಲಿಸಿದ್ದೀರಿ.ಮುಂದಿನ ಸಂಚಿಕೆಗಾಗಿ ಚಡಪಡಿಕೆಯಿಂದ ಕಾಯುವ ಪರಿಸ್ಥಿತಿ ನಮ್ಮದು.ಕಥೆ ಚೆನ್ನಾಗಿದೆ.ಮುಂದುವರೆಸಿ.

PARAANJAPE K.N. said...

ಮನುಷ್ಯನ ಆಸೆ-ಆಕಾ೦ಕ್ಷೆ ಗಳಿಗೆ ಕೊನೆಯಿಲ್ಲ. ನಿಮ್ಮ ಕಥೆ "ಬೇಕು" ಪರಿಣಾಮಕಾರಿಯಾಗಿ ಮೂಡಿ ಬ೦ದಿದೆ. ಬಹಳ ಚೆನ್ನಾಗಿದೆ. ಮುಂದುವರಿಯಲಿ ಕಥಾ ಜಾತ್ರೆ.

Ittigecement said...

ಅಶೋಕ್ ಭಾಯ್..

ಎಷ್ಟೇ ಇದ್ದರೂ..
ಎಷ್ಟೇ ಸಿಕ್ಕಿದ್ದರೂ..

ಮನಸು ಇಲ್ಲದುದನ್ನೇ ಬಯಸುತ್ತದೆ..

ಇಲ್ಲಿಯೂ ಹಾಗೆ..
ಹೆಂಡತಿಯಿಂದ.. ಪ್ರೀತಿ.. ಪ್ರೇಮ..
ಅಂತಸ್ತು. ಅಧಿಕಾರ ಎಲ್ಲ ಸಿಕ್ಕಿದ್ದರೂ...

"ಬ್ಲ್ಯಾಕ್ ಎಂಡ್ ವೈಟ್ " ನೆನಪುಗಳು ಬೇಕೆನಿಸಿ ಬಿಡುತ್ತದೆ..

ಅದನ್ನು ಬಿಡಲಾರದೆ.. ಭದ್ರವಾಗಿ ಕಿಸೆಯಲ್ಲಿಟ್ಟು ಕೊಂಡು ಬಿಡುತ್ತವೆ..

ಮನುಷ್ಯ ಸ್ವಭಾವವೇ ಹೇಗೆ ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ಬಾಲು said...

ಮನುಷ್ಯನ "ಬೇಕು" ಗಳಿಗೆ ಕೊನೆ ಇಲ್ಲ. ಆಸೆ ಗಳೆಂಬ ಗುರುತ್ವಾಕರ್ಷಣೆ ಇಂದ ಹೊರಗಿರಲು ಸಾದ್ಯವೇ ಇಲ್ಲವೇನೋ, ಹಾಗೇನಾದರು ಅದನ್ನು ಮೀರಿ ಹೋದರೆ, ಆಗಸದ ತಾರೆಗಳಾಗಿ ಬಿಡುವರು.

ನಮಗೆ ನಿಮ್ಮಿಂದ ಇನ್ನಷ್ಟು ಕಥೆಗಳು ಬೇಕು. :

ಸೀತಾರಾಮ. ಕೆ. / SITARAM.K said...

ಚೆಂದದ ಕತೆ. ಮನುಷ್ಯನ ವಸ್ತುಗಳ ಮೇಲಿನ ವ್ಯಾಮೋಹ ಅದಕ್ಕೊಂದು ಸೆಂಟಿಮೆಂಟ್ ಹೀಗೆ. ಪರಿಣಾಮಕಾರಿಯಾಗಿ ಹೇಳಿದ್ದಿರಾ

ಜಲನಯನ said...

ಪ್ರಕಾಶು ನಿನ್ನ ಕಥೆ ನಿಜವಾಗಿಯೂ ನನ್ನ ಜೀವನದಲ್ಲಿ ನಾನು ಮಣಿಪುರದಲ್ಲಿದ್ದಾಗ ನಡೆದ ಘಟನೆಯನ್ನ ಥಟ್ ಅಂತ ನನ್ನ ಮನದ ಪರದೆಯ ಮೇಲೆ ಮೂಡಿಸಿತು.ನನಗೂ ಹೊರ ಹೋಗುವಾಗ ಇದೇ ಗೊಂದಲ....ಬಹಳ ಚನ್ನಾಗಿದೆ ನಮ್ಮ ಬಾಂಧವ್ಯ ನಿರ್ಜೀವ ವಸ್ತುಗಳೊಂದಿಗೆ ಹೇಗೆ ಬೆಸೆದಿರುತ್ತೆ ಅಲ್ಲವಾ?

ಅನಿಲ್ ಬೇಡಗೆ said...

ಪ್ರಕಾಶ್ ಮಾಮ..

ಪ್ರತಿಯೊಬ್ಬರ 'ಬದುಕಿನ ಆಲ್ಬಮ್' ನಲ್ಲಿ ಒಂದು "ಬ್ಲಾಕ್ & ವೈಟ್" ಇದ್ದೆ ಇರುತ್ತೆ.. !

ಸ್ವಲ್ಪ ಮಾಸಿದ ಬಣ್ಣ, ಅದರದೇ ಆದ ಒಂದು ಪರಿಮಳ.. ಮಡಿಚಿದ ತುದಿ..

ಆ ಫೋಟೋ ನೋಡಲಿಕ್ಕೆ ಎಷ್ಟು ಚೆಂದ.. ಆನಂದ...

ಅದು ಎಷ್ಟೇ ವರ್ಷ ಹಳೆದಾದರು, ಎಲ್ಲ 'ನಿನ್ನೆ ಮೊನ್ನೆಯ' ಹಾಗೆ..

ಅದರೊಳಗಿನ ನೆನಪು.. ಕಣ್ಣಂಚಿನಲಿ ಸಣ್ಣ ಹೊಳಪು..

ತುಟಿಯ ತುದಿಯಲ್ಲಿ ಸಣ್ಣ ನಗು.. ಅವಳ ಹಾಡಿನ ಗುನುಗು...

ಎಲ್ಲಾ.. ನೆನಪಿನ " ಚಿಲಿಪಿಲಿ "

ಚೆಂದದ ಕತೆ..
-ಅನಿಲ್..

Ittigecement said...

ದಿನಕರ್..

ಯಾವುದೇ ಬಾಂಧವ್ಯ ಇರಲಿ..
ಆ ಸಂಬಂಧದಿಂದ ಎಲ್ಲ ಬಗೆಯ "ನಿರೀಕ್ಷೆಗಳು" ಪೂರ್ತಿಯಾಗಿದ್ದರೂ..
ತೃಪ್ತಿ ಸಿಕ್ಕಿದ್ದರೂ..

"ಕಪ್ಪುಬಿಳುಪು" ನೆನಪುಗಳನ್ನು ಮನಸ್ಸು ಮರೆಯುವದಿಲ್ಲ..
ನಾವು ಮರೆಯಲು ಇಷ್ಟ ಪಡುವದೂ ಇಲ್ಲ...

ಆ ನೆನಪುಗಳನ್ನು..
ಒದ್ದೆಯಾಗಗದ ಹಾಗೆ..
ಕಿಸೆಯಲ್ಲಿ..
ಹೃದಯದ ಬಳಿ ಭದ್ರವಾಗಿ ಬಚ್ಚಿಟ್ಟುಕೊಂಡಿರುತ್ತೇವೆ.. ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

UMESH VASHIST H K. said...

ಪ್ರಕಾಶ್ ಅವ್ರಿಗೆ ನಮಸ್ಕಾರ, ಕಥೆ ಚೆನ್ನಾಗಿದೆ, ಮನ ಮೆಚ್ಚಿದ ಮಡದಿ ಯೊಂದಿಗಿನ ಒಡನಾಟ, ಬೆಚ್ಚಗಿನ ಅನುಭವ, ಅದನ್ನು ನೆನಪಿಸುವ ಫೋಟೋಗಳು, ಎಂಥ ಸಂದರ್ಭದಲ್ಲೂ ಬಿಡಲು ಮನಸ್ಸಾಗುವುದಿಲ್ಲ, ಮನುಷ್ಯನೊಂದಿಗಿನ ಸಂಬಂಧ ಹೇಗೋ, ಹಾಗೆ ಕೆಲವು ವಸ್ತು ಗಳೊಂದಿಗಿನ ಸಂಭಂದವು ಹಾಗೆ, ಕೆಲವು
ಸಂದರ್ಭಗಳನ್ನು ನೆನಪಿಸುತ್ತವೆ, ನೆನಪಿಸಿಕೊಂಡಾಗ ಬಿಡಲು ಮನಸ್ಸಾಗುವುದಿಲ್ಲ

Uday Hegde said...

Prakashanna,


Thanks for sharing such an wonderful article...even though i am not an emotional person, i felt something. (may be because i saw my dear friend-cum-wife in that lady character)

Thanks once again...

Ittigecement said...

ಡಾ. ಕೃಷ್ಣ ಮೂರ್ತಿಯವರೆ...

ಪ್ರತಿಯೊಬ್ಬರ ಬದುಕಿನಲ್ಲಿ "ಬ್ಲ್ಯಾಕ್ ಎಂಡ್ ವೈಟ್" ನೆನಪುಗಳ ಇದ್ದೇ.. ಇರುತ್ತವೆ...

ಈಗ ತಾನೆ ಗೆಳೆಯ ದಿನಕರ್ ಬಳಿ ಮಾತನಾಡುತ್ತಿದ್ದೆ..
ಅವರು ಹೇಳುತ್ತಿದ್ದರು..
" ಮನುಷ್ಯ ಕಲ್ಪನೆಯೊಡನೆ ಬದುಕಲು ಇಷ್ಟ ಪಡುತ್ತಾನೆ..
ವಾಸ್ತವದಲ್ಲಿ ಎಲ್ಲವೂ.. ಎಲ್ಲ ಪ್ರೀತಿ,ಪ್ರೇಮಗಳೂ ಸಿಕ್ಕರೂ..
ಸಿಗದೇ ಇರುವ "ಕಪ್ಪು,ಬಿಳುಪು" ನೆನಪುಗಳನ್ನು ನೆನಪಿಸಿಕೊಂಡು ಸಂತಸ ಪಡುತ್ತಾನೆ.."

ಬಹಳ ಸತ್ಯವಾದ ಮಾತು.. ಅಲ್ಲವೆ?

ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು..

ದಿನಕರ ಮೊಗೇರ said...

naanu ee kathe odidaaga "inno ide " endu barediralilla.. eega mattomme odidaata tiLiyitu kathe mugidilla innu ide endu..... nanagantu kutuhala ide... hege munduvarisutteeri endu.......

kaayuttiddene...

Ittigecement said...

ಪರಾಂಜಪೆಯವರೆ...

ಮೊನ್ನೆ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಎದ್ದೆ..
ನಿದ್ದೆ ಓಡಿ ಹೋಗಿತ್ತು..
ಕಂಪ್ಯೂಟರ್ ಹಚ್ಚೋಣ ಎಂದು ಕೊಂಡೆ..
ನನ್ನಾಕೆ ..
" ನನ್ನ ಮೇಲೆ ಪ್ರೀತಿ ಹೆಚ್ಚೊ..? ಕಂಪ್ಯೂಟರ್ ಮೇಲೋ..? ಅಂತ ಕೇಳೀದಳು..

"ನಿನ್ನ ಮೇಲೆ ಮಾರಾಯ್ತಿ.. ಮಾರಾಯ್ತಿ..!! "

ಅವಳು ನಂಬುವ ಸ್ಥಿತಿಯಲ್ಲಿರಲಿಲ್ಲ..

"ಯಾರಿಗ್ಗೊತ್ತು..?
ನಿಮ್ಮ ಕಂಪ್ಯೂಟರಿನಲ್ಲಿ ಯಾವ ಹಳೆಯ "ಬ್ಲಾಕ್ ಎಂಡ್ ವೈಟ್" ನೆನಪುಗಳಿವೆಯೋ?"
ಅಂತ ಬಾಣ ಬಿಟ್ಟಳು..

ಇದು ಈ ಕಥೆ ಬರೆಯಲು ಸ್ಪೂರ್ತಿ..

ಕಥೆ ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

shridhar said...

ಪ್ರಕಾಶಣ್ಣ,
ಒಳ್ಳೆಯ ಕಥೆ... ಸರಳ ನಿರೂಪಣೆ .. ಚೆನ್ನಾಗಿದೆ ..
ಕೆಲವೊಂದು ವಸ್ತುಗಳು ಜೀವನದಲ್ಲಿ ಬಹಳ ಮುಖ್ಯವಾಗಿ ಬಿಡುತ್ತದೆ ..
ಅಂತೆಯೆ ಕೆಲವು ವ್ಯಕ್ತಿಗಳು , ಸ್ಥಳಗಳು .. ಎಲ್ಲಕ್ಕಿಂತ ಮಿಗಿಲಾಗಿ ನೆನಪುಗಳು .
ನಿಮ್ಮ ಕಥೆಯಲ್ಲಿನ ಭಾವನೆಗಳು ಮನಮುಟ್ಟುವಂತಿದೆ ...

ನನ್ನ ಬ್ಲಾಗ ಕಡೆ ಇತ್ತೀಚೆಗೆ ಬಂದೆ ಇಲ್ಲ ... ಬನ್ನಿ ಒಮ್ಮೆ ..
ಊರಿನ ಕಡೆಯ ಫೋಟೊಸ್ ಹಾಕಿದ್ದೇನೆ ..

Ittigecement said...

ಬಾಲು ಜೀ..

ಮನೆ..
ಮಡದಿ ...
ಮಕ್ಕಳು..
ಸಂಸಾರದ..
ಜಂಗುಳಿಯಲ್ಲೊಮ್ಮೆ..
ಕಪ್ಪುಬಿಳುಪಿನ..
ನೆನಪುಗಳು..
ಮೂಡಿಸುವದು..
ರಂಗು ರಂಗಿನ..
ಚಿತ್ತಾರ..
ಮನದ..
ಭಾವಗಳಲ್ಲಿ..
ತುಟಿಗಳ..
ಸಣ್ಣ..
ಕಿರುನಗುವಿನಲ್ಲಿ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ವೆಂಕಟೇಶ್ ಹೆಗಡೆ said...

very nice article prakashanna.

ಮನಮುಕ್ತಾ said...

ಪ್ರಕಾಶಣ್ಣ,
ಭಾವನಾತ್ಮಕ ಎಳೆಗಳು ತು೦ಬಾ ಚೆನ್ನಾಗಿ ಮೂಡಿ ಬ೦ದಿವೆ..
ಕಥೆ.. ಕಥೆ ಎನ್ನಿಸದೇ, ಯಾರೋ ತಮ್ಮ ಭಾವನೆಗಳನ್ನು ಶಬ್ದಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎನಿಸುವ೦ತಿದೆ.
ತು೦ಬಾ ಚೆ೦ದದ ನಿರೂಪಣೆ.

ಕಡಲ ತೀರದ ಕಾಡು ಮಲ್ಲಿಗೆ!! said...

"ಬ್ಲ್ಯಾಕ್.. ಎಂಡ್ ವೈಟ್..".. ಫೋಟೊ..!..


ಗುಂಗುರು ಕೂದಲಿನ..
ಮುಂಗುರುಳು.. ..
ಆ.. ಹುಡುಗಿಯ... ಫೋಟೊ..!!. !


ಹರವಾದ ಕೆನ್ನೆಯ..
ಮುಂದು.. ಹಲ್ಲಿನ..
ದಟ್ಟ ಕಣ್ಣುಗಳ .... ಆ.. ಫೋಟೊ..!!

ಅಣ್ಣ ನಿಮ್ಮ ಆ ಕಾಡುವ ಹಳೆ ಗೆಳತಿ ಈ ಕತೆಗೂ ಸ್ಫೂರ್ತಿ ಅಲ್ಲವೇ?ನನಗೀಗ ಪಾಪ ಅನಿಸುತ್ತಿರುವುದು ಡಿ.ಸಿ ಬಗ್ಗೆ... ಅದೇನೇ ಇರಲಿ ಕಾಡುವ ಗೆಳತಿಯ ಆ ಅವ್ಯಕ್ತ ಭಾವನೆಯ ಅಮೂರ್ತ ಪ್ರೀತಿ ಮುಸ್ಸಂಜ್ಜೆ ಮಬ್ಬಿನ ಮುತ್ತಿನ ಹನಿ .....ಇಶ್ತವಾಇತು

Ittigecement said...

ಸೀತಾರಾಮ್ ಸರ್..

ನನಗೆ "ಡಿಸಿ"ಯ ಬಗೆಗೆ ಅನುಕಂಪವಿಲ್ಲ..
ಅದೊಂದು ಸ್ವಭಾವದ ಪ್ರತೀಕ..

ತನ್ನ "ಹೆಂಡತಿಯ" ಡ್ಯೂಟಿಯನ್ನು ನಿಭಾಯಿಸಿ...
ಬೆಚ್ಚಗೆ ತನ್ನ ನೆನಪುಗಳ ಕನಸಲ್ಲಿ" ಕಳೆದು ಹೋಗುವ ಹಲವಾರು ಗಂಡಂದಿರ ಥರಹ...

ಆದರೆ...
ಎಲ್ಲೆಲ್ಲೋ ಹುಡುಕುವ ಪ್ರೀತಿಯನ್ನು "ತಮ್ಮವರಲ್ಲೇ" ಕಂಡರೆ ಸುಖ ಅನುಭಾವ ಜಾಸ್ತಿಯಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು

Ittigecement said...

ಜಲನಯನ..
ಆಜಾದು...

ನೆನಪುಗಳೊಂದಿಗೆ ಬದುಕುವದು ಸಹಜ..
ಆದರೆ ಕೊರಗಬಾರದು..

ನೆನಪುಗಳು..
ಕನಸುಗಳನ್ನು ಚಿಗುರಿಸುವಂತಿರ ಬೇಕು..
ದುಗುಡಗಳನ್ನು ಮರೆಸುವಂತಿರ ಬೇಕು..

"ಕಥೆ" ಬದುಕಿನಲ್ಲಿ ನಡೆದ ಘಟನೆಯಂತಿರ ಬೇಕು..ಅಂತ ನನ್ನ ಭಾವನೆ..

ಈ ಕಥೆ ನಿನ್ನ ಬದುಕಿನ ಹಳೆಯ ನೆನಪುಗಳನ್ನು ನೆನಪಿಸಿದ್ದರೆ.. ನನಗೆ ಸಾರ್ಥಕ ಭಾವ.. ತಂದುಕೊಡುತ್ತದೆ..
ಬಹಳ ಸಂತಸದ ವಿಷಯ ಅಲ್ಲವಾ?

ದೂರದ ಆಂಧ್ರದಲ್ಲಿದ್ದರೂ..
ಪ್ರತಿಕ್ರಿಯೆ ಕೊಡುವ ನಿನ್ನ ಉತ್ಸಾಹ ..
ನನಗೂ ಮತ್ತೆ ಬರೆಯುವ ಉತ್ಸಾಹ ಕೊಟ್ಟಿದೆ...

ಜೈ ಹೋ.. !

ಈದ್ ಮುಬಾರಕ್..!!

Gubbachchi Sathish said...

ನಿಮ್ಮ ಕಪ್ಪು ಬಿಳುಪು ನೆನಪುಗಳಿಗೆ ಬಾಣಬಿಟ್ಟವರು ನಿಮ್ಮಾಕೆ. ಅವರಿಗೆ ನಿಮ್ಮ ಮುಂಗುರುಳಿನ ಗೆಳತಿಯೆಂಬ ಬಾಣ ಬಿಟ್ಟಿದ್ದೀರಾ. ಮುಂದೆ ನಿಮ್ಮಾಕೆ ಬಿಡುವ ರಾಮಬಾಣ! ಅದರಿಂದ ಆ ದೇವರೇ ನಿಮ್ಮನ್ನು ಕಾಪಾಡಬೇಕು.

ಒಳ್ಳೆಯ ಕಥೆಗೆ ಧನ್ಯವಾದಗಳು.

Ittigecement said...

ಅನಿಲ್...

ಬದುಕಿನ ಬ್ಲಾಅಕ್ ಎಂಡ್ ವೈಟ್ ಚಿತ್ರಗಳೇ.. ಹಾಗೆ...
ಬಲು ಸೊಗಸು..

ಬಿಳಿ..
ಕಪ್ಪಾಗಿದ್ದರೂ..
ಒಪ್ಪು..
ಮನಸಿಗೆ..
ಮಾಸಿದ್ದರೂ..
ಸೊಗಸು..
ಭಾವಕ್ಕೆ..

ವಾಸ್ತವ..
ಮರಳಿ ಬಾರದಿದ್ದರೂ..
ಕೊರಡು
ಕೊನರುವದು..
ಕನಸು..
ಚಿಗುರುವದು..
ನೆನಪುಗಳೇ.. ಹಾಗೆ..
ಸದಾ ಹಸಿರು..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ಅನಿಲ್..

balasubramanya said...

ಪ್ರಕಾಶಣ್ಣ ನಾವು ಫೋನ್ ನಲ್ಲಿ ಮಾತಾಡಿದಂತೆ ಆಗಿದೆ. ಕಥೆ ಎಳೆ ಮೊದಲೇ ಗೊತ್ತಿದ್ದರಿಂದ ನಾನು ಉತ್ತಮ ನಿರೂಪಣೆಗಾಗಿ ಕಾದಿದ್ದೆ. ನೀವು ಗೆದ್ದಿದ್ದೀರಿ . ವಾವ್ ಅನ್ನಿಸುವ ಸುಂದರ ಕಥಾ ಹಂದರ .ಭೇಷ್ ಪ್ರಕಾಶಣ್ಣ ಇಂತಹ ಇನ್ನಷ್ಟು ಕಥೆಗಳು ನಿಮ್ಮ ಮನದಲ್ಲಿರಬಹುದು ಅವುಗಳನ್ನು ಆಚೆಗೆ ತನ್ನಿ. ಬ್ಲಾಕ್ ಅಂಡ್ ವ್ಹೈಟ್ ಚಿತ್ರ ದ ಪ್ರಸ್ತಾಪ ಒಳ್ಳೆ ಫಲಿತಾಂಶ ನೀಡಿದೆ. ಜೈ ಹೋ ......!!!!!

Umesh Balikai said...

ಪ್ರಕಾಶಣ್ಣ,

ಜೀವನ ಎಷ್ಟೊಂದು ವಿಚಿತ್ರ ಅಲ್ಲವ,.. ಜೀವನ ಸಂತೃಪ್ತವಾಗಿದೆ ಅಂದುಕೊಂಡಾಗಲೂ ಮತ್ತೆ ಬೇರೇನನ್ನೋ ಯಾವಾಗಲೂ ಹುಡುಕುತ್ತಾ ಇರುತ್ತದೆ... ಕಂಡಿದ್ದು, ಮೊದಲು ಸಿಗದ್ದೆಲ್ಲ ಈಗ ಬೇಕು ಅನ್ನುತ್ತೆ.. ಹಾಳು ಜೀವಕ್ಕೆ ಏನು ಸಿಕ್ಕರೂ ನೆಮ್ಮದಿಯಿಲ್ಲ..

ಸುಂದರ ಕಥೆ.. ಅಭಿನಂದನೆಗಳು.

ಉಮೇಶ್

umesh desai said...

ಹೆಗಡೇಜಿ ಒಂದಂತೂ ನಿಜ ನೀವು ಕಥೆ ಹೇಳುವ ಶೈಲಿ ನಿಜಕ್ಕೂ ಚೆನ್ನ
ಬಹಳ ಹಿಂದೆ ನಾನು ಕಿವಾಡಿಯಲ್ಲಿ ಮರಾಠಿಯಲ್ಲಿ " ಕಥಾ ಕಥನ" ಅನ್ನುವ ಕಾರ್ಯಕ್ರಮ ನೋಡಿದ್ದೆ
ಕತೆಗಾರ ತನ್ನ ರಚನೆಯನ್ನು ನೆರೆದ ಪ್ರೇಕ್ಷಕರ ಎದಿರು ಓದುವುದು ನಿಮ್ಮ ಕತೆ ಹಾಗೂ ಅದರ ಶೈಲಿ ಎರಡೂ ಈ
ಬಗೆಯ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದ ಹಾಗಿದೆ...!

ಹಳ್ಳಿ ಹುಡುಗ ತರುಣ್ said...

chenagide sir .. indina manushyana sundara bhadukige ashe-akaankshegale mettilu.... omme badukisuttave mattomme keduguttave.. :)

sunaath said...

ನವಿರಾದ ವಿಡಂಬನೆಯೊಡನೆ ಪ್ರಾರಂಭವಾಗುವ ಕತೆಯು, ಆರ್ದ್ರವಾಗಿ ಮುಕ್ತಾಯವಾಗುತ್ತಿದೆ. Quite touching.

ವನಿತಾ / Vanitha said...

ಕಥೆ ಇಷ್ಟ ಆಯ್ತು :-)

Ittigecement said...

ಉಮೇಶ್ ವಸಿಷ್ಠ..

ನನ್ನ ಬ್ಲಾಗಿಗೆ ಸ್ವಾಗತ..

ಹಳೆಯ ಸವಿ ನೆನಪುಗಳೇ.. ಎಷ್ಟೋ ಬಾರಿ ನಿರಾಸೆಯಾದಾಗ ಕನಸು ಕಟ್ಟಲು ಸ್ಪೂರ್ತಿಯಾಗುತ್ತವೆ..
ಬದುಕಿನ ಜಂಜಾಟಗಳನ್ನು ಮರೆಯಲು..
ಕಲ್ಪನೆಯಲ್ಲಿ ಸ್ವಲ್ಪ ಹೊತ್ತು ಇರಲು ಮನಸ್ಸು ಬಯಸುತ್ತದೆ..

ವಾಸ್ತವದಲ್ಲಿ ಎಲ್ಲ ಸುಖ, ಸಂತೋಷ ಸಿಕ್ಕಿದ್ದರೂ.. ಸಹ.. ಕಲ್ಪನೆಯ ಅಗತ್ಯ ಇದೆ..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಉದಯ ಹೆಗಡೆ..

ನನ್ನ ಬ್ಲಾಗಿಗೆ ಸ್ವಾಗತ..

ಅಡಿಗರ ಸಾಲುಗಳ ಹಾಗೆ ನಮ್ಮ ಬದುಕು..

"ಇದ್ದುದೆಲ್ಲವ ಬಿಟ್ಟು..
ಇರದುದೆಡೆ ತುಡಿಯುವದೇ ಜೀವನಾ.."

ಇಲ್ಲಿ ಹೆಂಡತಿಯಿಂದ ..
ಎಲ್ಲ ಸಿರಿ, ಸಂಪತ್ತು , ಸಂತೋಷ ಸಿಕ್ಕರೂ...
ಹಾಳು ಮನಸ್ಸು..!!
ಕಾಲೇಜು ದಿನಗಳ "ಬ್ಲ್ಯಾಕ್ ಎಂಡ್ ವೈಟ್" ನೆನಪುಗಳಲ್ಲಿ..
ಸಂತೋಷ ಹುಡುಕುತ್ತಿದೆ.. !!

ಸತ್ಯವಾದರೂ...
ವಿಚಿತ್ರ ಅಲ್ಲವಾ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ದಿನಕರ್..

ಈ ಕಥೆಯನ್ನು ಮುಂದುವರೆಸಬೇಕಾ?

ಇದೊಂದು ಸವಾಲೇ.. ಸರಿ..

ನೀವು ಮತ್ತು ಡಾ. ಕೃಷ್ಣಮೂರ್ತಿಯವರು ಇದೇ ಮಾತು ಹೇಳುತ್ತಿರುವಿರಿ..

ನೋಡೋಣ ಏನಾದರೂ ಸುಳಿವು, ಸ್ಪೂರ್ತಿ ಸಿಕ್ಕಲ್ಲಿ ಬರೆಯುವ ಪ್ರಯತ್ನ ಮಾಡುವೆ..

ಮತ್ತೊಮ್ಮೆ ಪ್ರೋತ್ಸಾಹಕಾಗಿ ಧನ್ಯವಾದಗಳು..

ಜೈ ಹೋ...!

Ittigecement said...

ಶ್ರೀಧರ್..

ಒಂದು ಮಾತಂತೂ ನಿಜ..
ಬದುಕಿನಲ್ಲಿ ಕೆಲವು ಮುಖಗಳು...
ಮರೆಯಲು ಅಸಾಧ್ಯ..
ಅವರೊಡನೆ ನಮ್ಮ ಒಡನಾಟ ಇರದಿದ್ದರೂ..
ಮಾತು ಸಹ ಆಡದಿದ್ದರೂ...
ಮರೆಯದೆ ಉಳಿದು ಬಿಡುತ್ತಾರೆ ನೆನಪಾಗಿ..

ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು..

ನಿಮ್ಮ ಬ್ಲಾಗಿನ ಫೋಟೊಗಳು.., ಅಡಿ ಟಿಪ್ಪಣೆಗಳು ಸೊಗಸಾಗಿವೆ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ನನ್ನೊಳಗಿನ ಕನಸು (ವೆಂಕಟೇಶ್)

ಹೊರಗೆ...
ಕುಂಭದ್ರೋಣ ಮಳೆ..
ಊರು.. ಮನೆ ಮುಳುಗುತ್ತಿದೆ..
ತನ್ನ ಬದುಕಿನ ಸುಖ ಸಂತೋಷಕ್ಕೆ ಕಾರಣಳಾದ..
ತನ್ನ ಪ್ರೀತಿಯ ಮಡದಿಯ ಆಸೆ ಪೂರೈಸುವ ಹೊತ್ತು...
ಆಗ ಅಲ್ಲಿ ಜೀವದ ಭಯವಿದ್ದರೂ..

ಕಾಲೇಜು ದಿನಗಳ "ಕಪ್ಪುಬಿಳುಪು" ನೆನಪುಗಳಲ್ಲಿ ಕಳೆದು ಹೋಗುವಾಸೆ..!!

ಎಷ್ಟು ವಿಚಿತ್ರ ಈ ಮನುಷ್ಯ ಮನಸ್ಸು ಅಲ್ಲವಾ?

ಪ್ರತಿಕ್ರಿಯೆಗಳು ನನಗಂತೂ ಇನ್ನಷ್ಟು ಬರೆಯಲು ಟಾನಿಕ್ ಥರಹ..
ಪ್ರೋತ್ಸಾಹಕ್ಕೆ ಧನ್ಯವಾದಗಳು..
ಬರುತ್ತಾ ಇರಿ..

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...

ಪ್ರೀತಿಯಿಂದ ಬರೆದದ್ದು, ಪ್ರೀತಿಯ ಕಥೆ, ಪ್ರೀತಿಯಾಗದೇ ಇದ್ದೀತು ಹೇಗೆ!

ಸಾಗರಿ.. said...

ಒಮ್ಮೊಮ್ಮೆ ಆಸೆ ಎಷ್ಟಿರುತ್ತದೆ ಎಂದರೆ ಮುಂದಿನ ಕ್ಷಣದ ಅಪಾಯವನ್ನೂ ಮರೆಸಿಬಿಡುತ್ತದೆ. ಅದರಲ್ಲೂ ನಮ್ಮ ಹೆಂಗಸರು ಆಸೆಪಡುವುದಕ್ಕೆ ಮಿತಿ ಸ್ವಲ್ಪ ಕಡಿಮೆ :-)

ಪ್ರವೀಣ್ ಭಟ್ said...

Hi Prakashanna...

kathe .. chennagiddu.. kappu bilupu.. hale nenapige upayogsiddu sooper.. kutoohalavagiddu..

Pravi

Ranjana H said...

superb kathe prakashanna,
neevu kalisida ee katheyannu modala baari odidaaga dc ge munde enagutte? aata allinda tanna preetiya vastugalannu tegedukondu hoguttana illava? aata badukuttana illava emba kutoohala nanage..aata helicapter hattida mele nanage samadhana...:)

Manju M Doddamani said...

ನಿಮ್ಮ ಕತೆಯಲ್ಲಿ ಕೊನೆ ತನಕ ಓದುವ ಹಿಡಿತ ಇದೇ ತುಂಬಾ ಚನ್ನಾಗಿದೆ ಇಷ್ಟ ಆಯ್ತು ಅದರಲ್ಲೂ

ಗುಂಗುರು ಕೂದಲಿನ..
ಮುಂಗುರುಳು.. ..
ಆ.. ಹುಡುಗಿಯ... ಫೋಟೊ..!!.

ಸಾಲು ಗಳು ಹೃದಯದಲ್ಲಿ ಎಲ್ಲೋ ಚಿವುಟಿ ಮತ್ತೆ ನಗಿಸಿದಂತೆ ಭಾಸವಾಯಿತು

Ittigecement said...

ಪ್ರೀತಿಯ ಮನಮುಕ್ತಾ...

ಕಥೆ ಬರೆಯುವಾಗ ನನ್ನ ಗೆಳೆಯನೊಬ್ಬನ ಅನುಭವವನ್ನೂ ಸೇರಿಸಿರುವೆ..
ಆತ ಹೆಂಡತಿ, ಮಕ್ಕಳು, ನೌಕರಿ.. ಅಂತ ಅವನ ಪ್ರಪಂಚದಲ್ಲಿ ಮುಳುಗಿ ಹೋಗಿದ್ದರೂ..
ಎಷ್ಟೋ ವರ್ಷಗಳ ನಂತರ ನನ್ನ ಭೇಟಿಯಾದಾಗ ಆತ ಮೊದಲು ಕೇಳಿದ್ದು..
ಕಾಲೇಜಿನ "ಆತನ ಮೆಚ್ಚಿನ ಹುಡುಗಿಯ" ಬಗೆಗೆ..!!

ನನ್ನ ಗೆಳೆಯನದು ಸಂತೃಪ್ತಿ ಸಂಸಾರ..!

ಆದರೂ ಆ ಗೆಳತಿಯ ನೆನಪು ಬೇಕು..

ಪ್ರೋತ್ಸಾಹಕ್ಕೆ
ಪ್ರತಿಕ್ರಿಯೆಗೆ ಧನ್ಯವಾದಗಳು..

Kishan said...

Very nice narration! Thanks.

I also liked the comment from ದಿನಕರ ಮೊಗೇರ -
"ಎರಡು ಸಾಲಿನ ಕಥೆಗೆ ಇಷ್ಟೇ ಇಷ್ಟು ಉಪ್ಪು, ಬೇಕಾದಷ್ಟು ಮಸಾಲೆ, ಒಂದು ಚಿಟಿಕೆ ಖಾರ ಎಲ್ಲಾ ಸೇರಿಸಿ ಅದ್ಬುತ ಕಥೆ ಕೊಟ್ಟಿದ್ದೀರಿ"
I totally agree and this holds true for all your stories, incidents and humor writings.

Ittigecement said...

ಚೈತ್ರಾ...

ಇದು ನಿಜ...
"ಪ್ರತಿಯೊಬ್ಬರ ಜೀವನದಲ್ಲಿ ಕಪ್ಪು ಬಿಳುಪು ನೆನಪುಗಳಿರುತ್ತವೆ.."
ಎಂದು ಹೇಳಿದಾಗ ನನ್ನನ್ನೂ ಸೇರಿಸಿಯೇ ಹೇಳಿದ್ದು..
ನಿಮ್ಮ ಪ್ರಶ್ನೆಗೆ ಅನುಮಾನವಿಲ್ಲದ ಉತ್ತರ..ಸಿಕ್ಕಿದೆ ಅಂದುಕೊಳ್ಳುತ್ತೇನೆ..

ನಾವು ಏನೇ ಬರೆದರೂ ನಮ್ಮ ಅನುಭವದ ಇತಿಮಿತಿಗಳಲ್ಲೇ.. ಬರೆಯಬೇಕಲ್ಲವೆ?

ಇದನ್ನು ಮೊದಲು ಬರೆದಾಗ ಸ್ವಲ್ಪ ಉದ್ದವಾಗಿ ಬಿಟ್ಟಿತ್ತು..
ಟ್ರಿಮ್ ಮಾಡಿ ..ಮಾಡಿ ಇಷ್ಟಾಗಿದೆ..

ಈ ಕಥೆಗೆ ಹೆಣ್ಣುಮಕ್ಕಳ ಪ್ರತಿಕ್ರಿಯೆ ಜಾಸ್ತಿ ಬರಬಹುದು ಎನ್ನುವ ನಿರೀಕ್ಷೆ ಇತ್ತು...
ಯಾಕೋ.. ಹಾಗಾಗ್ತಾ ಇಲ್ಲ..ಎನ್ನುವ ಅನುಮಾನ ಬರ್ತಾ ಇದೆ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

ಬರುತ್ತಾ ಇರಿ...

Unknown said...

ತುಂಬಾ ಭಾವನಾತ್ಮಕವಾದ ಕಥೆ.. ವೆರಿ ನೈಸ್...

Subrahmanya said...

ಶುರುವಿನಲ್ಲಿ ಸಾಮಾನ್ಯದಂತೆ ಓದಿಸಿಕೊಂಡ ಕತೆ..ಬರು ಬರುತ್ತಾ ಮನಸಿಗೆ ನಾಟುವ ಸನ್ನಿವೇಶಗಳೊಂದಿಗೆ ತೆರೆದುಕೊಂಡಿತು. ಇಷ್ಟವಾಯಿತು.

Ittigecement said...

ಗುಬ್ಬಚ್ಚಿ ಸತೀಶ್..

ಈ ಕಥೆ ಬರೆದು ...
ಸ್ವಲ್ಪ ಹೆದರಿಕೆಯಿಂದಲೆ ನನ್ನಾಕೆಗೆ ಕಥೆ ಓದಿ ಹೇಳೀದೆ..
ಮಧ್ಯದ ವರೆಗೆ ಬಂದಿದ್ದೆ..
ಆಗ..
"ಹೆಂಡತಿಯನ್ನು ಇಷ್ಟೇಲ್ಲ ಹಾಡಿ ಹೊಗಳಿ.. ಆಕಾಶ ಹತ್ತಿಸಿ..
ನಿಮ್ಮ ಕಥಾನಾಯಕ ಅವಳನ್ನು ಪಾತಾಳಕ್ಕೆ ಬೀಳಿಸಿ ಬಿಡುತ್ತಾನೋ ಹೇಗೆ?"
ಅಂತ ಪ್ರಶ್ನೆ ಕೇಳಿದ್ದಳು..!!

ಅವಳಿಗೂ ಗೊತ್ತು ಇದು ಕಥೆ ಅಂತ.. ಹಾ..ಹ್ಹಾ..!

ಪ್ರತಿಕ್ರಿಯೆಗೆ ಧನ್ಯವಾದಗಳು..
ಬರುತ್ತಾ ಇರಿ..

Rajath said...

idu tamma jeevanakkoo bahala hattirada kathe yanthide. nevoo saha nimma hendatiya bagge heege allave. . . alla naavoo heege bidi. . hendatiya bagge tumba bhavukaru. bayibittu heladehodaru manasinalli heegeye..

ಕನ್ನಡಬ್ಲಾಗ್ ಲಿಸ್ಟ್ KannadaBlogList said...

Sir, ಆ ಮೊದಲ ಪ್ರೀತಿಯ ಸವಿನೆನಪು, ನೀಡುವ kick ಇನ್ಯಾಪುದು ನೀಡಲಾಗದು... ಧನ್ಯವಾದಗಳು 4 ಉತ್ತಮ ಲೇಖನಕ್ಕಾಗಿ...

ಶಿವಪ್ರಕಾಶ್ said...

Prakashanna,
yaako story incomplete anno feeling bantu...

Shiv said...

ನಮಸ್ಕಾರ,

ಸುಮ್ಮನೆ ಬ್ಲಾಗ್ ಲೋಕ ಆಲೆಯುವಾಗ ನಿಮ್ಮ ಬ್ಲಾಗ್ ಸಿಗ್ತು.
ಕತೆ ತುಂಬಾ ಚೆನ್ನಾಗಿದೆ ಮತ್ತು ಕಪು-ಬಿಳುಪು ಸಹ !

ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ಓದುತ್ತ ಹೋದಂತೆ... ಅಬ್ಬಾ ಎನಿಸಿತು. ಏಕೆಂದರೆ, ಆ ಮಳೆನೀರಿನ ಚಿತ್ರಣ, ಅಧಿಕಾರಿಯ ತಳಮಳ.. ಕೆಲಸಗಾರನ ಕಾತರ/ಆತುರ, ಹೆಂಡತಿಯ ನೆನಪು.. ಕೊನೆಗೆ ಫೋಟೋ ಆಲ್ಬಂ...

ಚೆನ್ನಾಗಿದೆ...

ಚಿತ್ರಾ said...

ಪ್ರಕಾಶಣ್ಣ,
ಚೆಂದದ ಕಥೆ . ಕೆಲವೊಮ್ಮೆ , ಬಣ್ಣ ಬಣ್ಣದ ಫೋಟೋಗಳಿಗಿಂತ 'ಬ್ಲ್ಯಾಕ್ ಎಂಡ್ ವ್ಹೈಟ್ ' ಚಿತ್ರಗಳು ಅತೀ ಮುಖ್ಯ ಎನಿಸುತ್ತವೆ ! ಒದ್ದೆಯಾಗದ , ಹಾಳಾಗದ ನೆನಪುಗಳು ! ಅವು , ಆಕ್ಷಣಗಳು ಮತ್ತೆ ಸಿಗಲಾರವು ಎಂದೆ?? "ಇರುವುದೆಲ್ಲವ ಬಿಟ್ಟು ಇರದಿರುವೆಡೆಗೆ ತುಡಿವುದೇ ಜೀವನಾ..... " ತುಂಬಾ ಇಷ್ಟವಾಯ್ತು

Ittigecement said...

ಬಾಲೂ ಜೀ.. (ನಿಮ್ಮೊಳಗೊಬ್ಬ ಬಾಲು)

ನನಗೆ ಕಥೆಯ ಹಂದರ ಹೊಳೆದಾಗ ಯಾರಾದರೊಬ್ಬರಲ್ಲಿ ಹೇಳಿಕೊಳ್ಳುವ ಚಟವಿದೆ...
ನಿಮಗೆ ಏನನ್ನಿಸಿತೊ ಗೊತ್ತಿಲ್ಲ ..
ಕೊರೆದು ಬಿಟ್ಟೆ..

ಎಲ್ಲವೂ ಇದ್ದರೂ..
ತೃಪ್ತಿ ಸಿಕ್ಕಿದ್ದರೂ...
ಮತ್ತೊಂದನ್ನು ಬಯಸುವ ಮನುಷ್ಯ ಸ್ವಭಾವ ವಿಚಿತ್ರವಲ್ಲವೆ?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಉಮೇಶ್ ಬಾಳಿಕಾಯಿ....

ಯಾಕೆ ....
ಈ.. ಬದುಕು ಇದ್ದುದೆಲ್ಲವ ಬಿಟ್ಟು..
ಇಲ್ಲದುದೆಡೆ ಸೆಳೆವುದು?...

ವಾಸ್ತವದಲ್ಲಿ ಸಿಕ್ಕಿದ್ದರಲ್ಲಿ ಸಂತಸದಲ್ಲಿ ಇರಬಾರದು?
ಸುಮ್ಮನೆ ಏಕಾಂತದಲ್ಲಿ ಯಾಕೆ "ಕಪ್ಪುಬಿಳುಪಿನ" ನೆನಪು?

ಕಲ್ಪನೆಯಲ್ಲಿ...
ಹಳೆಯ ನೆನಪಲ್ಲಿ..
ಏನೋ..
ಸುಖ..
ಹೇಳಲಾಗದ ಅವ್ಯಕ್ತ ಆನಂದವಿದೆಯಾ ?

ಉಮೇಶ್ ಜೀ.. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ನೀವೂ ನಿಮ್ಮ ಬ್ಲಾಗಿನಲ್ಲಿ ಮತ್ತೆ ಬರೆಯಲು ಶುರು ಮಾಡಿ...

Ittigecement said...

ಉಮೇಶ್ ದೇಸಾಯಿ ಜೀ...

ನಾನು ಬರೆಯುವ ಈ ಶೈಲಿ ಏಕೆ ಹೀಗಿದೆ?
ಯಾಕೆ ಹೀಗಾಗಿದೆ?
ದೇವರಾಣೆ ಗೊತ್ತಿಲ..

ಬಹುಷಃ ಮೊದಲು ನನ್ನ ಬಳಿ ಬರೆಸಿದ ಗೆಳೆಯ "ನಾಗು"
ಮತ್ತು
ಖ್ಯಾತ ಛಾಯಾಗ್ರಾಹಕ "ಮಲ್ಲಿಕಾರ್ಜುನ್ ಡಿ.ಜಿ." ಇದಕ್ಕೆ ಕಾರಣ..

ಇವರಿಬ್ಬರೂ..
ನಾನು ಬರೆದುದನ್ನು ಮುಕ್ತ ಮನಸ್ಸಿನಿಂದ ತಿದ್ದಿ.. ಓದಿದ್ದಲ್ಲದೆ..
ನಾನು ಬರೆಯುವ ಶೈಲಿ ಸರಿ ಇದೆ ಎಂದು ಧೈರ್ಯ ಕೊಟ್ಟಿದ್ದಾರೆ..
ಪ್ರೀತಿಯಿಂದ ಓದುವ ನಿಮಗೆಲ್ಲ ನನ್ನ ಕೃತಜ್ಞತೆಗಳು...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ಹಳ್ಳಿ ಹುಡುಗ ತರುಣ್..

ನನ್ನ ಬ್ಲಾಗಿಗೆ ಸ್ವಾಗತ..

ಸುಖದ ಸುಪ್ಪತ್ತಿಗೆಯಲ್ಲಿದ್ದಾಗಲೂ..
ಹಳೆಯ ನೆನಪುಗಳು..
ಹೊಸ ಹುರುಪನ್ನು ಕೊಡುತ್ತವೆ..

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ಸುನಾಥ ಸರ್...

ಕೈಗೆ ಸಿಗದ..
ಸಂಗತಿಗಳು..
ಅಸಹಾಯಕವಾಗಿ..
ಮೂಕ
ಸಾಕ್ಷಿಯಾಗಿ..
ಕಳೆದ ಕ್ಷಣಗಳ
ನೆನಪಲ್ಲಿ ಸುಖವನ್ನು ಅರಸುವ..
ನೆನಪುಗಳು..
ಬೇಡವೆನಿಸುವದಿಲ್ಲ..

ಅದರಲ್ಲೇ..
ಏಕಾಂತವಾಗಿರಲು
ಮನ ಬಯಸಿದಲ್ಲಿ... ತಪ್ಪೇನಿದೆ?

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ವನಿತಾ...

ಬಣ್ಣ ಬಣ್ಣದ..
ರಂಗು...ರಂಗಿನ
ಬದುಕಿನಲ್ಲಿ
ಸುಖ ಭೋಗಗಳಿದ್ದರೂ..
ಜನ ಜಂಗುಳಿಯಲ್ಲೂ..
ಏಕಾಂತ
ಬಯಸುವ ಮನಕ್ಕೆ..
ತಂಪೆರೆಯುವದು..
ಕಪ್ಪುಬಿಳುಪಿನ ನೆನಪುಗಳು..

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Guruprasad . Sringeri said...

ಪ್ರಕಾಶ್ ಅವರೇ.... ಹೊರಗಡೆ ಭೋರ್ಗರೆವ ಸುರಿಮಳೆ.... ಮನದೊಳಗೆ ನೆನಪುಗಳ ಸುರಿಮಳೆ. ಸೂಪರ್ ಆಗಿದೆ ಕಥೆ. ಧನ್ಯವಾದಗಳು

Prashanth Arasikere said...

hi,

prakash sir

Nimma kate odutta iddaga nave alli idivieno annustha ittu,namma vasthu galalnnu hege kasta kaladallu bidadukke agodilla allva,navu preethisida esto vastgallu kanna munde bandu nillutte..kate tumba chennagide

viju said...

nice story...prakashanna....

Ittigecement said...

ಪ್ರೀತಿಯಿಂದ..
ಪ್ರೀತಿಯ ಕಥೆ..
ಪ್ರೀತಿಯಾಗದೇ ಇದ್ದೀತು ಹೇಗೆ..?

ಎಲ್ಲ ಬಗೆಯ ಪ್ರೀತಿ ಸಿಕ್ಕಿರುವಾಗ..
ಮತ್ತೆ..
ಹಳೆಯ
ಮಡಚಿ..
ಬಚ್ಚಿಟ್ಟ.....
ಕಪ್ಪುಬಿಳುಪಿನ
ನೆನಪಿನ
ವ್ಯಾಮೋಹವೇಕೆ?

ಶಾಂತಲಾ ಪ್ರೋತ್ಸಾಹಕ್ಕಾಗಿ ದನ್ಯವಾದಗಳು...

AntharangadaMaathugalu said...

ಪ್ರಕಾಶ್ ಸಾರ್...

ಆ ಮಳೆ, ನೀರು, ಆತಂಕದ ಕ್ಷಣಗಳು ಬಹಳ ಆಳವಾಗಿ ತಟ್ಟುವಂತಿದೆ. ಕೊನೆಗೂ ಅವರಿಗೆ ತಾನು ಹುಡುಕುತ್ತಿದ್ದ ಫೋಟೋ ಸಿಕ್ಕಿತಲ್ಲಾ... ಆಗ ಸಮಾಧಾನ ಅನ್ನಿಸ್ತು... ಹೌದು ಬೇರೆಲ್ಲಾ ಬಿಟ್ಟರೂ ಬಿಡಬಹುದು... ಆದರೆ ಮನಸ್ಸಿಗೆ ಹತ್ತಿರವಾದ, ಒಳಗಿನ ಮನೆಯಲ್ಲಿ ತಣ್ಣಗೆ ಕುಳಿತ ಕೆಲವು ನೆನಪುಗಳು ತುಂಬಾ ಆಪ್ತತೆ, ಜೀವನೋತ್ಸಾಹ ತರುತ್ತದೆ...

ಶ್ಯಾಮಲ

Unknown said...

ಪ್ರಿಯ ಪ್ರಕಾಶ್ ರವರೆ.. ಪ್ರೀತಿಯು..ನಿರ್ಜೀವ ವಸ್ತುಗಳಲ್ಲಿ ಇರುತ್ತವೆಯೆ? ಏನೂ ಇರದ.. ಯಾರೂ ಇರದ ಸಂಧರ್ಭದಲ್ಲಿ.. ಪ್ರೀತಿಯೇ ಅಲ್ಲವೇ ಗೆಲ್ಲುವದು?.. ಪ್ರೀತಿಯನ್ನು.. ವಸ್ತುಗಳಲ್ಲಿ ಹುಡುಕುವದು.. ದೇವರನ್ನು ಮೂರ್ತಿಯಲ್ಲಿ ಹುಡುಕಿದಂತೆಯೇ ಸೈ..

Ittigecement said...

ಸಾಗರಿ...

ಕಪ್ಪುಬಿಳುಪಿನ ನೆನಪಿನ ಬಗೆಗೆ ಹೆಣ್ಣು,ಗಂಡು ಅಂತ ಭೇದವಿಲ್ಲ ಅಂತ ನನ್ನ ಭಾವನೆ...
ಎಷ್ಟೋ ಹೆಣ್ಣುಜೀವ ತಮ್ಮ ಹಳೆಯ ನೆನಪನ್ನು "ಕಪ್ಪುಬಿಳುಪು" ಮಾಡಿಕೊಂಡು...
ಬದುಕುತ್ತಿರುವ ಉದಾಹರಣೆ ನನಗೆ ಗೊತ್ತಿದೆ...

Than QQ... for lovely coments !!

Ittigecement said...

ಪ್ರವೀಣ್ ಭಟ್...

"ಕಪ್ಪುಬಿಳುಪು"
ಇಂದಿನ...
ವಾಸ್ತವದ ಬದುಕಿನ ಬಣ್ಣದ ಸೊಬಗನ್ನು ಹಾಳು ಮಾಡದಿದ್ದರೆ ಸಾಕು..

ಅಂಥಹ ನೆನಪು ಇರಲಿ ಬಿಡಿ...

ಅದರ ಪಾಡಿಗೆ ಅದು ಬರುತ್ತದೆ...
ಹೋಗುತ್ತದೆ..
ಒಂದಷ್ಟು ಕನಸು.....
ಆಸೆಗಳ ಚಿಗುರು.. ತರುತ್ತದೆ..

ಹೂವಾಗೊದಿಲ್ಲ ಅಂತ ಗೊತ್ತಿದ್ದರೂ ಸಹ... !!

ಧನ್ಯವಾದಗಳು...

Ittigecement said...

ರಂಜನಾ...

ನಾನು ಬರೆದ ಮೊದಲರ್ಧದ ಕಥೆ ಓದಿ..
ತಪ್ಪುತಿದ್ದಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು...

ಈಗ ಮುಂದಿನ ಭಾಗ ಬರೆಯುವದರ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿರುವೆ..

ಹೇಗೆ...?

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಥ್ಯಾಂಕ್ಸು...
ಬರುತ್ತಾ ಇರಿ...

Ittigecement said...

ದೊಡ್ಡಮನಿ ಮಂಜುರವರೆ...

ನನ್ನ ಬ್ಲಾಗಿಗೆ ಸ್ವಾಗತ...

ಬದುಕೆಂಬ ಮನೆ ...
ಕಟ್ಟುವಾಗ...

ಜವಾಬ್ದಾರಿ ಬಂದು..
ಕಟ್ಟುವ ಕೆಲಸ ಶುರುವಾಗುವದೇ...
ನಮ್ಮಂಥಹ ಬಲುಮಂದಿಗೆ...
ಬಹಳ ತಡವಾಗಿಬಿಟ್ಟಿರುತ್ತದೆ...

ಕಟ್ಟುವ ಯೋಚನೆ ಬಂದಾಗ...
ಎಲ್ಲವೂ ಚೆನ್ನಾಗಿರುವದಿಲ್ಲ...
ಚೆನ್ನಾಗಿರುವದೆಲ್ಲ...
ಕಟ್ಟುತ್ತಿರುವಾಗ
ಸಿಕ್ಕಿರುವದಿಲ್ಲ..

ಸಿಕ್ಕಿದ್ದರಲ್ಲಿ
ಅಂದವಾಗಿ...
ಚಂದವಾಗಿದೆ ಅಂದುಕೊಂಡು ಕಟ್ಟ ಬೇಕಾಗಿರುತ್ತದೆ..

ಎಲ್ಲೆಲ್ಲೋ ಹೋಗಿಬಿಟ್ಟಿತಾ ?
ಸಾರಿ..

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ...

Ittigecement said...

ಕಿಶನ್ ಜೀ...

ನಾನು ಬರೆಯುತ್ತಿರುವದು ನನ್ನ ಅನುಭವದ ಮಿತಿಯಲ್ಲಿ...

ನಾನು ಒಬ್ಬ "ಲೇಖಕಿಯವರ" ಅಭಿಮಾನಿ...

ಅವರೊಡನೆ ಚಾಟ್ ನಲ್ಲಿ ಮಾತನಾಡುತ್ತಿದ್ದೆ..
ಅವರು ಹೇಳುತ್ತಿದ್ದರು..

"ನಮ್ಮ ಬದುಕಿನ...
ಅನುಭವದ ಹೊರತಾಗಿ...
ಹೊಸತೊಂದು.. ಬೇರೋಂದು ವಿಷಯ...
ಮನ ಮುಟ್ಟುವಂತೆ ಬರೆಯುವದು ಸೃಜನಶೀಲತೆ"

ಇದು ನನ್ನಿಂದ ಸಾಧ್ಯವಾಗಬಹುದಾ?

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

shivu.k said...

ಸರ್,

ನಿಮ್ಮ ಬ್ಲಾಕ್ ಅಂಡ್ ವೈಟ್ ನೆನಪು ತುಂಬಾ ಚೆನ್ನಾಗಿದೆ. ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ನನಗೂ ನನ್ನ ಹಳೆಯ ನೆನಪುಗಳು ಕಾಡತೊಡಗಿವೆ.
ಮತ್ತಷ್ಟು ಇಂಥವು ಬರಲಿ..

Ittigecement said...

ಶುಭಾ...

ಈ ನಡುವೆ ಕಥೆ ಬರೆಯುವ ಗೀಳು ಅಂಟಿಕೊಂಡಿದೆ...
ಆದರೆ..
ಏನೇನೋ ಹುಚ್ಚು ಐಡಿಯಾಗಳು..
ಏನಂದುಕೊಳ್ಳುತ್ತಾರೋ ಅನ್ನುವ ಅಳುಕು..
ಒಂದುವೇಳೆ ಓದುಗರಿಗೆ ಇಷ್ಟವಾಗದಿದ್ದಲ್ಲಿ.. ಎನ್ನುವ ಸಣ್ಣ ಅಂಜಿಕೆ..
ಹಾಗಾಗಿ ಯಾರಾದರೂ "ಆನ್‍ಲೈನ್" ಇದ್ದರೆ..
ಅವರಿಗೇ ಗಂಟುಬಿದ್ದು ಓದಿಸಿ ಅಭಿಪ್ರಾಯ ತೆಗೆದುಕೊಂಡು ಬ್ಲಾಗಿಗೆ ಹಾಕುವೆ..
ನೀವು ಓದಿ ಕೊಡುವ ಪ್ರತಿಕ್ರಿಯೆ ನನಗೆ ಟಾನಿಕ್ ಥರಹ...
ಬರೆಯಲು ಇನ್ನಷ್ಟು ಉತ್ಸಾಹ ಕೊಡುತ್ತದೆ...

ಧನ್ಯವಾದಗಳು...
ಬರುತ್ತಾ ಇರಿ...

Nisha said...

Kathe thumba chennagide prakashanna.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ

ಒಳ್ಳೆಯ ಬರಹ ಎಂದಿನಂತೆ

ಮಾನವೀಯ ಸಂಭಂಧಗಳು ನನ್ನ ಬಹಳಷ್ಟು ಕಾಡಿವೆ

ನಿಮ್ಮ ಶೈಲಿ ಅದ್ಭುತ

geeta bhat said...

Namaskara.......

Kathe chanda iddu. Nanage anso prakara ee Nenapu matte Marevu eradu manushyanige aa devaru kotta vara anastu.. kahi nenapinda badukinalli munde paatha kalibhahudu,sihi nenapininda manasige khushi aagbahudu..aadre aa nenapinakinta namma badukina 'Vaastava' doddadagirtu. adakke nanaganasadu, nenapu bandaga kushi padodralli tappenilla,aadre adranna bennatti hogi vaastavavanna mareyadu tappu. kelavu nenapanna mareyodu astu sulabha alla,aa nenapu nenapage idrene chanda.....kaledu hogiradanna matte bayasodu tappu aste.........

ಕೃಷಿಕನ ಕಣ್ಣು said...

ಪ್ರಕಾಶಾ,
ಬದುಕಿನಲ್ಲಿ ಪ್ರೀತಿ, ವಿಶ್ವಾಸ ಮುಂತಾದ ಗುಣಗಳನ್ನು ಹಾಗೂ ಅವುಗಳ ಅವಶ್ಯಕತೆಯನ್ನು
"ಸರಿಯಾಗಿ" ಅರ್ಥೈಸಿಕೊಂಡು ಸ್ವೀಕರಿಸುತ್ತ ಹೋದಾಗ ಹಳೆಯ ಮಧುರ ನೆನಪುಗಳು
ಈಗಿನ ವಾಸ್ತವದ ಸಂತಸಕ್ಕೆ ತೊಂದರೆಯೇನೂ ಆಗಲಾರವು.
ಆ ನೆನಪುಗಳು ಆ ಮಟ್ಟದಲ್ಲೇ ಇದ್ದು ವಾಸ್ತವಕ್ಕೆ ಅದು ತಪ್ಪೂ ಅಲ್ಲ,
ಜೀವನ್ಮುಖಿಯೂ ಆಗಬಲ್ಲದು.

ಇಂಥಹದೊಂದು ಕಲ್ಪನೆಯನ್ನು ಈ ಕಥೆಯಲ್ಲಿ ಪ್ರಸ್ತುತ ಪಡಿಸಿದ್ದಕ್ಕೆ ಅಭಿನಂದನೆಗಳು.