ನಾನು  ಸಣ್ಣವನಿದ್ದಾಗ
 ಬಹಳ  ವೀಕ್  ಆಗಿದ್ದೆ.. ಬಡಕಲು  ಕಾಲು, ಕೈಗಳು..
ದೊಡ್ಡದಾದ  ತಲೆ...
"ದೊಡ್ಡತಲೆ  ಪ್ರಕಾಶ" ಅನ್ನುವ  ಅಡ್ಡ ಹೆಸರು ಕೂಡ ನನಗಿತ್ತು...
ನಾನು  ಸಣ್ಣವನಿದ್ದಾಗ  ನನಗೆ  ರಿಕೆಟ್ಸ್ ರೋಗ  ಆಗಿತ್ತು...
ಬಹಳ  ವೀಕ್  ಆಗಿದ್ದರಿಂದ  ಉಳಿದ  ಮಕ್ಕಳ ಹಾಗೆ  ಆಡಲು  ಕಷ್ಟ ಆಗುತ್ತಿತ್ತು...
ನನ್ನ  ಪಾದಗಳು ಎಲ್ಲರಂತೆ  ಉದ್ದವಾಗಿರದೆ...
ಅಡ್ಡವಾಗಿ ತಿರುಗಿಕೊಂಡಿದ್ದವು...
ಒಂದು ಮಾರು ನಡೆಯುವಷ್ಟರಲ್ಲಿ ಎರಡುಸಾರಿ ಬೀಳುತ್ತಿದ್ದೆ...
ಓಡಾಡುವಾಗ ಕಾಲುಗಳು ಒಂದಕ್ಕೊಂದು ತಾಗಿ ಬಿದ್ದು ಬಿಡುತ್ತಿದ್ದೆ...
ಆಡಲು ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದೆ...
ಆ ನನ್ನ ಕಾಲುಗಳಿಗೊಂದು ಬೆಳ್ಳಿಯ  ಬಳೆ...
ನನ್ನಜ್ಜ  ಧರ್ಮಸ್ಥಳಕ್ಕೆ  ಹರಕೆ ಹೊತ್ತುಕೊಂಡಿದ್ದನಂತೆ..
ಆ ಬಳೆಗಾಗಿ ಉಳಿದ ಮಕ್ಕಳೆಲ್ಲ  ಹಾಸ್ಯ ಮಾಡುತ್ತಿದ್ದರು...
"ಇದು  ಸೇರುಗಾರನ  ಬಳೆ.." ಅಂತ..
ಬೇಸರವಾಗುತ್ತಿತ್ತು...ನೋವಾಗುತ್ತಿತ್ತು...
ದುಃಖವೂ ಆಗುತ್ತಿತ್ತು... 
ಯಾರಬಳಿಯಲ್ಲಾದರೂ ಹೇಳಿಕೊಳ್ಳಬೇಕು ಅನಿಸುತ್ತಿತ್ತು..
ನನ್ನನ್ನು ಚಾಳಿಸುವ  ಮಕ್ಕಳಿಗೆ ಬಯ್ಯಿಸ ಬೇಕು ಎಂದು ಅನಿಸುತ್ತಿತ್ತು...
ಯಾರ ಬಳಿ ಹೇಳಿಕೊಳ್ಳ ಬೇಕು...?
ಮನೆತುಂಬಾ ಮಕ್ಕಳು... ಅಮ್ಮನಿಗೋ ಮೈತುಂಬಾ ಕೆಲಸ...
ಒಂಟಿಯಾಗಿರುತ್ತಿದ್ದೆ... ಅದು ಅನಿವಾರ್ಯವೂ ಆಗಿತ್ತು...
 ಆಡಲು ಬರದ ಮಕ್ಕಳಿಗೆ 
ಯಾರೂ
 ಸ್ನೇಹಿತರು  ಬರುವದಿಲ್ಲ...
ನಾನಾಗ  ನಾಲ್ಕನೆ ತರಗತಿ..
ಒಂದುದಿನ  ನನ್ನ  ಚಿಕ್ಕಪ್ಪ ಒಂದು  ಮಕ್ಕಳ ಪತ್ರಿಕೆ ತಂದುಕೊಟ್ಟರು...
ಈಗಿನ  ಪ್ರಖ್ಯಾತ  ನಟಿ, ನಿರೂಪಕಿ  ಸುಂದರಿ  "ಅಪರ್ಣಾ"ರವರ  ಮುಖಪುಟದ  ಪತ್ರಿಕೆ....!
ಅದು  "ಪಾಪಚ್ಚಿ"...!  ಅದು ಮಕ್ಕಳ ಪತ್ರಿಕೆ...!
ಅದರಲ್ಲಿರೋ... ಕಥೆಗಳನ್ನು  ಓದಿದೆ... ತುಂಬಾ  ಚೆನ್ನಾಗಿತ್ತು...
ಯಾರೋ ಪಕ್ಕದಲ್ಲಿ ಕುಳಿತು ಕಥೆ ಹೇಳಿದಂತಿತ್ತು...
ಓದುತ್ತ... ಓದುತ್ತ  ಜಗತ್ತನ್ನೇ.. ಮರೆತು  ಬಿಟ್ಟೆ...
ಓದುವದು  ನನಗೆ  ಬಹಳ ಇಷ್ಟವಾಯಿತು... 
ಯಾರೂ ನನ್ನೊಂದಿಗೆ  ಆಡಲು ಬಾರದ  ಸಮಯದಲ್ಲಿ  ಪುಸ್ತಕಗಳು ನನಗೆ  ಗೆಳೆಯನಾಗಿಬಿಟ್ಟಿತು...
ನನ್ನ  ಜೀವನದ  ಒಂಟೀತನದಲ್ಲಲ್ಲೆಲ್ಲ  ಈ  ಗೆಳೆಯ ನನ್ನೊಂದಿಗಿದ್ದಾನೆ..
ಯಾರೂ ಕೊಡದ  ಸಮಾಧಾನ, ಸಾಂತ್ವನ.. ಈತ ಕೊಟ್ಟಿದ್ದಾನೆ...
ನನ್ನನ್ನು ನನ್ನಷ್ಟಕ್ಕೇ.. ನಗಿಸಿದ್ದಾನೆ..
ಅಳಿಸಿದ್ದಾನೆ..
ಭಾವದ ಅಲೆಯಲ್ಲಿ  ತೇಲಿಸಿದ್ದಾನೆ...!
ನನ್ನಲ್ಲಿದ  ಕನಸುಗಳನ್ನು ನನ್ನಲ್ಲಿಟ್ಟಿದ್ದಾನೆ...!
ಎಲ್ಲಿಲ್ಲದ  ಹುಚ್ಚು ಕಲ್ಪನೆಯನ್ನು ನನ್ನಲ್ಲಿ ತುಂಬಿದ್ದಾನೆ...!
ಇಂಥಹ  ಸ್ನೇಹಿತನನ್ನು ನನಗೆ  ಕೊಟ್ಟ ನನ್ನ  ಚಿಕ್ಕಪ್ಪನಿಗೆ ಹೇಗೆ  ಕೃತಜ್ಞತೆ  ಹೇಳಲಿ...?
ಶಬ್ಧಗಳಿಗೆ  ಶಕ್ತಿಯಿಲ್ಲ...
ನನಗೆ  ಓದುವ  ಚಟ  ಹಿಡಿಸಿದ ನನ್ನ  ಚಿಕ್ಕಪ್ಪನಿಗೆ  ನಮನಗಳು....
ನನ್ನ  ಪುಸ್ತಕ  ನನ್ನ  ಚಿಕ್ಕಪ್ಪನಿಗೆ ಅರ್ಪಣೆ....
ನನ್ನ...
ಇಂದಿನ ಸಂತಸ.. ಯಶಸ್ಸೆಲ್ಲ..
ನನ್ನದಲ್ಲ...
ಹಾಗಂತ...ನಿನ್ನದೂ ಅಲ್ಲ..!!
ದಾರಿಗೊತ್ತಿರದ ಬಾಳಲ್ಲಿ..
ಸರಿಯಾಗಿ ನಿಲ್ಲಲೂ ಬಾರದ
ನನ್ನ  ಬಾಲ್ಯದಲ್ಲಿ..
ದಿಕ್ಕನ್ನು ತೋರಿದ..
ನಿನ್ನ...ತೋರು ಬೆರಳಿನದು...!
ಚಿಕ್ಕಪ್ಪಾ...
ನನ್ನ  ಪುಟ್ಟ ಕೈಗೆ..
ನೀ.... ಕೊಟ್ಟ... ತೋರು ಬೆರಳಿನದು...!!
( ಪ್ರಿಯ  ಓದುಗರೆ...
ನನಗಂತೂ ಮೊದಲ  ಪ್ರೇಮದ  ಸಂಭ್ರಮ... ಸಡಗರ...!
ಹೆಸರೇ... ಬೇಕಿರದ ನನ್ನ ಕಥನಗಳು ಪುಸ್ತಕವಾಗುತ್ತಿವೆ.. ..
ಇದೇ ಬರುವ ನವೆಂಬರ್ ಹದಿನೈದಕ್ಕೆ..
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ....
ಬಿಡುಗಡೆಯಾಗಲಿದೆ...
ಇದಕ್ಕೆ ಮಾರ್ಗದರ್ಶನ... ಸಹಾಯ, ಸಲಹೆ ಸೂಚನೆ ಕೊಟ್ಟು...
ಸಹಾಯ  ಮಾಡಿ...
ಪ್ರೀತಿಯಿಂದ  ಮುನ್ನುಡಿ ಬರೆದು ಕೊಟ್ಟವರು  ನಮ್ಮ  ಮೆಚ್ಚಿನ  ಜಿ. ಎನ್. ಮೋಹನ್ ರವರು
ಬೆನ್ನುಡಿಯನ್ನು.. ಬ್ಲಾಗ್ ಲೋಕದ ಕಾಕಾ...
ನಮ್ಮೆಲ್ಲರ ಮೆಚ್ಚಿನ  ಸುನಾಥ  ಸರ್... 
ಅಕ್ಕರೆಯಿಂದ ಬರೆದು ಕೊಟ್ಟು ಬೆನ್ನುತಟ್ಟಿದ್ದಾರೆ...
ನನ್ನ  ವ್ಯವಹಾರದ ಕೆಲಸದ ಜೊತೆಗೆ...
ಪುಸ್ತಕ ಸಂಭ್ರಮದ ಖುಷಿ... ಒತ್ತಡ..
ಹೇಗೆ  ನಿಭಾಯಿಸುತ್ತೇನೋ.. ಗೊತ್ತಿಲ್ಲ...
ನಿಮಗೆಲ್ಲ  ಪ್ರತ್ಯೇಕವಾಗಿ ಕರೆಯುತ್ತೇನೆ...
ಬರುತ್ತೀರಲ್ಲ..!
ಖುಷಿಯಲ್ಲಿ.. ಸಂತೋಷದಲ್ಲಿ ಪಾಲ್ಗೊಳ್ಳುತ್ತೀರಲ್ಲ...?
ನೀವು ಅಲ್ಲಿ ಬಂದಾಗ  ನಗಿಸಲು ಸ್ಪೆಷಲ್  ಗೆಸ್ಟ್ ಬರಲಿದ್ದಾರೆ...!
ಸ್ನೇಹಿತ  ಶಿವುರವರ  "ವೆಂಡರ್ ಕಣ್ಣು"..
ಗೆಳೆಯ ದಿವಾಕರನ  ನಾಟಕಗಳು "ಉದ್ಧಾರ ಮತ್ತು ಸಂತೆ"
ನನ್ನ  ಪುಸ್ತಕದ  ಹೆಸರು...
" ಹೆಸರೇ.. ಬೇಡ..!!..."
ಈ ಹೆಸರು ಕೊಟ್ಟವರು  ಯಾರು...?
ಹೇಗೆ ಬಂತು  ಈ ಹೆಸರು..?
ನಿಮ್ಮನ್ನು  ನಗಿಸಲು ಬರುವ  ಸ್ಪೆಷಲ್  ಗೆಸ್ಟ್ ಯಾರು...?
ಇನ್ನು ನಾಲ್ಕಾರು ದಿನಗಳಲ್ಲಿ  ಹೇಳುವೆ....
ನಿಮ್ಮ  ಪ್ರೋತ್ಸಾಹಕ್ಕೆ ನನ್ನ  ನಮನಗಳು...)
 


