Sunday, September 27, 2009

ಹೇಳ ಬಾರದೆಂದರೂ.. ಬಾಯಲ್ಲಿ ಬರುತ್ತಿತ್ತು ಸುಳ್ಳು ..!

part 1


part ..1

ಮನಸ್ಸೆಲ್ಲ ಘಾಸಿಯಾಗಿತ್ತು... ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿತ್ತು...

ಮನೆ ಕಟ್ಟಿ ಮುಗಿದಿತ್ತು.. ಮನೆಯ ಮಾಲೀಕರು  ಈಗ ತಕರಾರು ತೆಗೆದಿದ್ದರು...

"ನೋಡಿ... ಸರ್...
ಯಾರ ಬಳಿಯಾದರೂ..ಬಿಲ್ ಚೆಕ್ ಮಾಡಿಸಿ..
ಅವರು ಹೇಳಿದ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ"

"ಯಾರಾದರೂ ಆರ್ಕಿಟೆಕ್ಟ್ ನಮ್ಮನೆಗೆ ಬಂದರೆ ಅವರ ಕಾಲು ಮುರಿಯುತ್ತೇನೆ"

ಹೀಗೆ ಹೇಳಿದವ ನನ್ನ ದೂರದ ಸಂಬಂಧಿ..!


ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿ.!


ಅವರ ಮನೆ ಕಟ್ಟಿ ಬಿಲ್ಲಿನ ಹಣ ಕೇಳಿದ್ದಕ್ಕೆ ಇಂಥಹ ಉತ್ತರ...

ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು...!

ಕೆಲಸಮಾಡುವಾಗ ಮಾತಾಡದ ಅವರ ಹೆಂಡತಿ ...

ಈಗ ತಮ್ಮ ಮಾತು ಶುರು ಮಾಡಿದ್ದರು..

"ಕಿಚನ್‍ನಲ್ಲಿ ಟೈಲ್ಸ್ ಹಾಕಿದ್ದು ಸರಿ ಇಲ್ಲ.. ನೀರು ನಿಲ್ಲುತ್ತದೆ..."

" ಅಮ್ಮಾ...ತಾಯಿ ....

ನೀವು ನನಗೆ ಬರಬೇಕಾದ ಹಣ ಕೊಡಿ..
ನನ್ನಿಂದ ಏನೇ ತಪ್ಪಾಗಿದ್ದರೂ ಸರಿ ಪಡಿಸುತ್ತೇನೆ..

ದಿನಾ ಬೆಳಗಾದರೆ ಸಾಲಗಾರರ ಕಾಟ...
ನನ್ನ ಮರ್ಯಾದೆ ಹೋಗುತ್ತಿದೆ... ಹಣ ಇಟ್ಟುಕೊಂಡು ಬಿಸಿನೆಸ್ ನಾನು ಶುರು ಮಾಡಿಲ್ಲ..
ಮಟೀರಿಯಲ್ ಸಪ್ಲೈದಾರರ ಬಳಿ ಸಾಲ ತಂದಿದ್ದೇನೆ..

 

ನಾನು ನಂಬಿ ಮನೆ ಕಟ್ಟಿ ಕೊಟ್ಟ ವ್ಯಕ್ತಿಯನ್ನು ನಾನು ಆರಾಧಿಸುತ್ತಿದ್ದೆ...
ನನ್ನ ದೃಷ್ಟಿಯಲ್ಲಿ ಅವರು ಬಹಳ ದೊಡ್ಡ ವ್ಯಕ್ತಿ..

ಅಂಥವರು ಇಷ್ಟು ಚೀಪ್ ಆಗಿ ವರ್ತಿಸಿ ಬಿಡ್ತಾರಾ...?


ಕೆಟ್ಟ ಮನಸ್ಸಿನ ಜನಕ್ಕೆ ದೇಶ, ಭಾಷೆ,ರಕ್ತ ಸಂಬಂಧಗಳ ಗಡಿ ಇರುವದಿಲ್ಲ...
ಹಾಗೆ ಒಳ್ಳೆಯ ಹೃದಯವಂತರಿಗೂ ಸಹ...
ಎಲ್ಲ ಕಡೆಯೂ ಇರುತ್ತಾರೆ...ನಾನು ಮತ್ತೊಮ್ಮೆ  ಮಾಲಿಕರ ಬಳಿ  ವಿನಂತಿಸಿದೆ...


" ಸಾಲ ಕೊಟ್ಟವರೆಲ್ಲ   ಫೋನ್ ಮಾಡ್ತಿದ್ದಾರೆ..
ನನಗೆ ಬಹಳ ಕಷ್ಟ ಆಗುತ್ತಿದೆ.. 
ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ..."


ಜನಕ್ಕೆ ಯಾಕಾದರೂ ಇಂಥಹ ಮನಸ್ಥಿತಿ ಬಂದು ಬಿಡುತ್ತದೋ...


ಕೆಲಸ ಮಾಡಿಸಿಕೊಂಡು ಹಣ ಕೊಡದೇ ಇರುವಂಥಹ ಕ್ರೂರ ಬುದ್ಧಿ...!


ಮುಂದೇನು...??


ಎಲ್ಲ ಕಡೆ ಮೈತುಂಬ ಸಾಲ...
ಸಿಕ್ಕಾಪಟ್ಟೆ ಫೋನ್ ಕಾಲ್ ..


ಏನು ಅಂತ ಉತ್ತರ ಕೊಡಲಿ...?
ನಾಳೆ...? ನಾಡಿದ್ದು...?ಒಂದು ವಾರದ ನಂತರ...?


ಯಾವಗಲಾದರೂ ಕೊಡಲೇ ಬೇಕಿತ್ತಲ್ಲ...!


ಸಾಲ ತಂದವರ ಬಳಿ ಸುಳ್ಳು ಹೇಳುತ್ತಿದ್ದೆ...
ಮನೆಯಲ್ಲಿದ್ದರೂ ಇಲ್ಲ ಅನ್ನುತ್ತಿದ್ದೆ...

ಹೇಳ ಬಾರದೆಂದರೂ.... ಬಾಯಲ್ಲಿ ಬರುತ್ತಿತ್ತು ಸುಳ್ಳು
...!

ನಾಳೆ ಕೊಡುತ್ತೇನೆ..
ಒಂದು ವಾರ ಬಿಟ್ಟು ಹಣ ಕೊಡುತ್ತೇನೆ ಎಂದೆಲ್ಲ ಸುಳ್ಳು ಹೇಳುತ್ತಿದ್ದೆ...


ಅವರ ಕಣ್ಣು ತಪ್ಪಿಸಿ ತಿರುಗುತ್ತಿದ್ದೆ...
ಮನೆಯಲ್ಲೇ.... ಇದ್ದರೂ ಇಲ್ಲ ಅನ್ನುತ್ತಿದ್ದೆ....ಇದರಿಂದ ಹೇಗೆ ಪಾರಾಗುವದು...?
ಹಣ ಹೇಗೆ ಕೊಡುವದು...?


ಮನೆಯಲ್ಲಿದ್ದ ಒಡವೆಗಳನ್ನು ಬ್ಯಾಂಕಿನಲ್ಲಿಟ್ಟು ಹಣ ತಂದಾಗಿತ್ತು...!
ದೈನಂದಿನ ಬದುಕೂ ದುಸ್ಥರವಾಗಿ ಹೋಯಿತು...
ಖರ್ಚು ಹೇಗೆ ನಿಭಾಯಿಸುವದು..?


" ಅಪ್ಪಾ... 
ಹೃತೀಕ್ ರೋಷನ್ ಸಿನೇಮಾ ಬಂದಿದೆ..
ಹೋಗೋಣ ಅಪ್ಪಾ..."


ಮುದ್ದಿನ ಮಗನ ಬೇಡಿಕೆ...


ಮಗನ ಆಸೆಯನ್ನೂ ಪೂರೈಸಲಾಗದಷ್ಟು ಕೆಟ್ಟ ಸ್ಥಿತಿ....!


ಕಿಸೆಯಲ್ಲಿದ್ದ ಹಣ ಎಣಿಸಿದೆ...


ಒಂದು ಸಾವಿರ ಇತ್ತು...


"ಆಯ್ತು ಮಗನೆ... ಹೋಗೋಣ ... ಅಮ್ಮನಿಗೆ ರೆಡಿಯಾಗಲಿಕ್ಕೆ ಹೇಳು.."


ನನ್ನ ಹಣಕಾಸಿನ ಸ್ಥಿತಿಯ ಅರಿವು ನನ್ನಾಕೆ ಚೆನ್ನಾಗಿ ಗೊತ್ತು...


"ಇಂಥಹ ಸ್ಥಿತಿಯಲ್ಲಿ ಸಿನೇಮಾ ಎಲ್ಲ ಯಾಕೆ..?
ಸಿನೇಮಾಕ್ಕೆ ಹೋದರೆ ಏನಿಲ್ಲ ಅಂದರೂ ನಾಲ್ಕು ನೂರು ಖರ್ಚಾಗುತ್ತದೆ...""ನೋಡು... ನನಗೆ ಬೇಕಾಗಿದ್ದು...ಮೂರು ಲಕ್ಷ..
ಮುನ್ನೂರು ರುಪಾಯಿ ಉಳಿಸುವದರಿಂದ ಏನೂ ಆಗುವದಿಲ...
ಇಲ್ಲಿ ಪ್ರತಿ ನಿಮಿಷವೂ ಹಿಂಸೆ ಆಗ್ತಾ ಇದೆ..
ನನ್ನ ಬುದ್ಧಿಗೆ ಏನೂ ಸೂಚಿಸ್ತಾ ಇಲ್ಲ...!
ಸ್ವಲ್ಪ ಮೂಡ್ ಚೇಂಜ್ ಆಗ ಬಹುದು ಬಾ.."ಮನಸ್ಸಿಲ್ಲದಿದ್ದರೂ ಹೊರಟಳು..ನನ್ನಾಕೆ..


ಸಿನೇಮಾ ಹಾಲಿನಲ್ಲಿಯೂ ಮನಸ್ಸು ಸರಿಯಾಗಲಿಲ್ಲ...
ಗೃಹಪ್ರವೇಶ ಅಗುವವರೆಗೆ ಚಂದವಾಗಿ ಮಾತಾಡಿ ....
ಕೆಲಸ ಮಾಡಿಸಿಕೊಂಡ ಅವರು ಹಣ ಕೊಡುವಾಗ ಹೀಗೇಕೆ..?


ಹೀಗೆ ಕೈ ಕೊಡ ಬಹುದೆಂಬ ಸಂಶಯ ಸ್ವಲ್ಪವೂ ಬರಲೇ ಇಲ್ಲ...


"ಬದುಕಿಗಿಂತ ಸಿನೇಮಾವೇ ಚಂದ...
ಇಲ್ಲಿ ವಜ್ರಮುನಿ, ಅಮರಿಷ್ ಪುರಿ... ಬಂದ ತಕ್ಷಣ ಇವರು ವಿಲನ್ ಅಂತ ಗೊತ್ತಾಗಿ ಬಿಡುತ್ತದೆ...


ಜೀವನದಲ್ಲಿ ಹಾಗಿಲ್ಲವಲ್ಲ...!


ಜನರ ಕ್ರೂರ.. ಕಹಿ ವರ್ತನೆ ಅರ್ಥವೇ ಅಗುವದಿಲ್ಲ...


ಸಿನೇಮಾ ನೋಡಿ ಗಾಂಧಿ ಬಜಾರ್‍ನಲ್ಲಿ ಬರುತ್ತಿದ್ದೆ...


"ಅಪ್ಪಾ... ದಾಳಿಂಬೆ ಕೊಡಿಸು... ಇಲ್ಲಿ ಚೆನ್ನಾಗಿರ್ತದೆ"


ಇಲ್ಲ ಅಂತ ಹೇಳಲಾಗಲಿಲ್ಲ...


ಅಲ್ಲಿ ಸಾಲಾಗಿ ಹಣ್ಣಿನ ಅಂಗಡಿಗಳು...


"ದಾಳಿಂಬೆ ರೇಟು ಏನು..?"


"ಸ್ವಾಮಿ ....
ನಲವತ್ತು ರುಪಾಯಿ..."


ನಾನು ಮರು ಮಾತಾಡದೆ ಒಂದು ಕೇಜಿ ತೆಗೆದು ಕೊಂಡೆ.."ರೇಟು ಕಡಿಮೆ ಮಾಡಿ ಅಂತ ಕೇಳ ಬೇಕಿತ್ತು.."
ನನ್ನಾಕೆ ಆಕ್ಷೇಪ ಮಾಡಿದಳು..


"ನೋಡು ...
ಇವರೂ ನಮ್ಮಂತೆಯೇ... ದಿನ ನಿತ್ಯ ಹೋರಟದ ಬದುಕು..
ದೊಡ್ಡ ಅಂಗಡಿಗೆ ಹೋದರೆ ರೇಟು ಕೇಳದೆ ಮಾತಾಡದೇ ತರ್ತೀವಲ್ಲ..
ನೋಡು ಇವರ ಅಂಗಡಿಗೆ ನೆರಳೂ ಇಲ್ಲ...
ಇಂಥವರ ಬಳಿ ಚೌಕಾಸಿ ಮಾಡಿದರೆ ಪಾಪ ಬರುತ್ತದೆ...
ನೀನು ಸುಮ್ನಿರು..."ಅಷ್ಟರಲ್ಲಿ ಫೋನ್ ಕಾಲ್... 
ಇಟ್ಟಿಗೆ ಕೊಡುತ್ತಿದ್ದ ಭೈರಪ್ಪನವರು...
ಭಾರಪ್ಪನವರಿಗೆ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ....


" ನೋಡಿ ಭೈರಪ್ಪನವರೆ... 
ನಿಮ್ಮ ಬಿಲ್ಲು ಮುಂದಿನವಾರ ಕೊಡ್ತೇನೆ...
ಇನ್ನೊಂದು  ಮನೆ ಕಟ್ಟೋ ಕೆಲ್ಸ ಸಿಕ್ಕಿದೆ...
ಮಟೀರಿಯಲ್ಸ್ ನೀವೆ ಸಪ್ಲೈ ಮಾಡ್ಕೋಡ ಬೇಕು..."ಸುಳ್ಳು ಹೇಳ ಬಾರದೆಂದರೂ ಬಾಯಲ್ಲಿ ಬಂದು ಬಿಡುತ್ತಿತ್ತು...


" ಸ್ವಾಮಿ.....
 ಹಣ ವಾಪಸ್ ಕೊಡ್ಲಿಕ್ಕೆ ಆಗಲ್ಲ ಅಂದ್ರೆ ಯಾಕೆ ಮಟೀರಿಯಲ್ ತೆಗೆದು ಕೊಳ್ತೀರಿ...?
ನನಗೂ ಹೆಂಡತಿ ಮಕ್ಕಳಿವೆ..
ಈ ದಂಧೆಯಿಂದಲೆ ಜೀವನ ಮಾಡ ಬೇಕು..

ಇಂದು ಕೊಡ್ತೀನಿ... ನಾಳೆ ಕೊಡ್ತೀನಿ.. ಅನ್ನೋ... 
ನಿಮ್ಮ ಮಾತು ಕೇಳಿ ಸಾಕಾಗಿ ಹೋಗಿದೆ..
ನಾಳೆ ಬೆಳಿಗ್ಗೆ ನಿಮ್ಮನೆಗೆ ಬರ್ತೇನೆ ...
ಮನೆಯಲ್ಲಿರೋ  ಟಿವಿ, ಸೋಫಾನಾದ್ರೂ ಎತ್ತಿಕೊಂಡು ಹೋಗ್ತೇನೆ..
ಏನು ಮಾಡ್ತೀರೋ  ಮಾಡ್ಕೊಳ್ಳಿ...."


ಅವರು ನನಗೆ ಮಾತಾಡಲು ಅವಕಾಶ ಕೊಡದೆ ಕಾಲ್ ಕಟ್ ಮಾಡಿದರು...


ನನ್ನ ಸಂಭಾಷಣೆ ಗಮನಿಸಿದ ಹಣ್ಣಿನ ಅಂಗಡಿಯವ


"ಸ್ವಾಮಿ ..
ನೀವು ಕಾಂಟ್ರಾಕ್ಟರ್ರಾ..?
ನಮ್ಮದೂ ಸಟಿದೆ ಮನೆ ಕಟ್ಟಿಸ ಬೇಕಿತ್ತು...ನಿಮ್ಮ ಫೋನ್ ನಂಬರ್ ಕೊಡಿ..

ನನ್ನ ಮಗ ಬಂದು ನಿಮ್ಮ ಬಳಿ ಮಾತಾಡ್ತಾನೆ.."


ನಾನು ಫೋನ್ ನಂಬರ್ ಕೊಟ್ಟೆ...


ಬೀದಿಯಲ್ಲಿ ಹಣ್ಣು ಮಾರಾಟ ಮಾಡುವವ ಮನೆಕಟ್ಟಿಸುತ್ತಾನಾ...?


ಮತ್ತೆ ದುತ್ತೆಂದು ಸಾಲದ ನೆನಪಾಯಿತು....


ಬೆಳಗಾದರೆ ಮನೆ ಮುಂದೆ ಬರುವ ಭೈರಪ್ಪ...
ಅಕ್ಕಪಕ್ಕದ ಮನೆಯವರು....
ಹೆಂಡತಿ... ಮಗನ ಎದುರಿಗೆ ಅವಮಾನ...!
ಸ್ನೇಹಿತರು... ಬಂಧುಗಳಿಗೂ ಗೊತ್ತಾಗುತ್ತದೆ....!ಕಣ್ಣೆಲ್ಲ ಮಂಜಾಗಿ ... ಕತ್ತಲಾಗಿ..
ಎಲ್ಲಕಡೆಯಿಂದಲೂ ದಾರಿ ಕಾಣದಾಗಿತ್ತು......


ಈ ರಾತ್ರಿ ಬಹಳ ಉದ್ದವಾದದ್ದು.....!


ನಾಳೆಯ ಬೆಳಗನ್ನು ಹೇಗೆ ಎದುರಿಸಲಿ...?


ನಾನೇ... ಇಲ್ಲವಾದರೆ ಹೇಗೆ...?


ಅತ್ಮಹತ್ಯೆ...!!..??
ಹೌದು....!
ಇದೊಂದೆ ದಾರಿ ಉಳಿದದ್ದು...!

( ಇದು ಯಾವುದೇ ವ್ಯಕ್ತಿ ದೂಷಣೆಗೆ ಬರೆದಿದ್ದಲ್ಲ...
ಅದು ನನ್ನ ಉದ್ದೇಶವೂ ಅಲ್ಲ...


ಎಲ್ಲರ ಜೀವನದಲ್ಲೂ ಇಂಥಹ ಘಟನೆ ಘಟಿಸುತ್ತದೆ...


ವ್ಯಕ್ತಿಗಳು.., ಸಂದರ್ಭಗಳು ಬೇರೆ ಬೇರೆಯಾಗಿರುತ್ತದೆ...


ಓದಿ ಎಚ್ಚೆತ್ತು ಕೊಂಡರೆ ಅನುಭವ ಹಂಚಿಕೊಂಡಿದ್ದಕ್ಕೆ ಸಾರ್ಥಕತೆ ಬರುತ್ತದೆ....)


(ನಾನು ಬರೆದ ..
ನಂಬಿಕೆ ವಿಶ್ವಾಸಗಳ ಬಗೆಗೆ ಬಹಳ ದುಬಾರಿ ಪಾಠ


ಇದನ್ನೂ ಓದಿ...)


( ಎಲ್ಲರಿಗೂ "ನಾಡಹಬ್ಬದ" ಶುಭಾಶಯಗಳು...)67 comments:

Dileep Hegde said...

ಅಬ್ಬಾ.. ತುಂಬಾ ಭಯಾನಕವಾಗಿದೆ... ಆತ್ಮಹತ್ಯೆ ಯೋಚನೆ ಬರೋವರೆಗೆ ಹೋಯ್ತಾ ಈ ಕಥೆ..??
ಅದು ಹೇಗಾದ್ರೂ ಮನಸು ಬರತ್ತೋ.. ಕೆಲಸ ಮಾಡಿಸಿಕೊಂಡು ದುಡ್ಡು ಕೊಡದೇ ನಿಯತ್ತಿನಿಂದ ಕೆಲಸ ಮಾಡಿದವನ ಮೇಲೆ ತಪ್ಪು ಹೊರಿಸೋಕೆ...
ಆ ರೀತಿ ಬೇರೆಯವರಿಗೆ ಮೋಸ ಮಾಡಿ ಕೂಡಿಟ್ಟ ದುಡ್ಡು ಎಷ್ಟು ದಿನಾನೂ ಜೊತೆಯಿರಲ್ಲ... ಅವರೂ ಕಷ್ಟ ಅನುಭವಿಸಿಯೇ ಇರುತ್ತಾರೆ ಅಲ್ವಾ ಪ್ರಕಾಶಣ್ಣ..??

Ittigecement said...

ದಿಲಿಪ್

ಆ ದಿನಗಳನ್ನು ನರಕದಂತಿತ್ತು...
ನಮ್ಮ ವೈರಿಗಳಿಗೂ ಬೇಡ...

ಈ ಘಟನೆಯಿಂದಾಗಿ "ಒಳ್ಳೆಯವರನ್ನೂ ಸಂಶಯಿಸ ಬೇಕಾಯಿತು"

ಯಾರು ಹೇಗಿರುತ್ತಾರೋ ..?
ನಿಜ ನೀಜವನದಲ್ಲಿ ಒಳ್ಳೆಯವರನ್ನು ಗುರುತಿಸುವದು ಬಲು ಕಷ್ಟ...
ಚೆನ್ನಾಗಿ ಮಾತಾಡಿ ವಿಶ್ವಾಸದಿಂದ ಇರುವವರೂ ಬದಲಾಗಿ ಬಿಡುತ್ತಾರೆ...

ನನ್ನ ಅನುಭವ ಬಹಳ ಕೆಟ್ಟದ್ದು...

ಪ್ರತಿಕ್ರಿಯೆಗೆ ಧನ್ಯವಾದಗಳು...

Me, Myself & I said...

ಪ್ರಕಾಶರೇ,
ನಿಮ್ಮ ಅನುಭವ ತುಂಬಾ ಭೀಕರವಾಗಿತ್ತು ಅನ್ಸುತ್ತೆ.

ಇಂತಹ ಅನುಭವನ ತೀರ ಇತ್ತೀಚೆಗೆ ನನ್ನ ಆತ್ಮೀಯರಲ್ಲೊಬ್ಬರು ಇದೆ ರೀತಿ ನನ್ನ ಹತ್ರ ಹಂಚಿಕೊಂಡಿದ್ರು. ಅವರ ಕಥೆಯ ಮುಂದೆ ನಿಮ್ಮದು ಏನೇನೂ ಅಲ್ಲ ಅನ್ನಿಸ್ತು. ಕ್ಷಮಿಸಿ ಇದು ನಿಮಗೆ ಅಗೌರವ ತೋರಿಸುವ ದ್ರುಷ್ಟೀಂದ ಹೇಳ್ತಿಲ್ಲಾ. ಅಥವ ನನಗೆ ನಿಮಿಗಿಂತ ಅನುಭವ ಇದೆ ಅಂತಾನೂ ವಾದಿಸ್ತಿಲ್ಲಾ. ಕಷ್ಟ ಅಂದ್ರೆನೇ ಹಾಗೆ. ಅದು ಶ್ರೀ ರಾಮನಿಗೂ ಬಿಡಲಿಲ್ಲ. ಆಲ್ವಾ?

ನಿಮ್ಮ ಅನುಭವ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಒಳ್ಳೆ ಕೆಲಸ ಮಾಡಿದ್ದೀರಿ. ಇಂತಹ ಘಟನೆಗಳನ್ನ ಆತ್ಮೀಯರಲ್ಲಿ ಹೇಳ್ಕೊಲ್ಲೊದರಿಂದ ಮನಸ್ಸಿಗೆ ಸ್ವಲ್ಪ ಮಟ್ಟಿನ ಸಮಾಧಾನವಾದರೂ ಸಿಗುತ್ತೆ.

Ittigecement said...

ಲೋದ್ಯಾಶಿಯವರೆ...

ಸಮಸ್ಯೆ ಎಲ್ಲರಿಗೂ ಬರುತ್ತದೆ..
ಅದನ್ನು ಹೇಗೆ ಎದುರಿಸುತ್ತೇವೆ ಅನ್ನೋದು ಮುಖ್ಯ...
"ಆತ್ಮಹತ್ಯೆ" ಕೂಡ ಒಂದು ಕ್ಷಣದ ನಿರ್ಧಾರವಾಗಿರುತ್ತದೆ...
ಯಾರೇ ಆದರೂ ಆ ಕ್ಷಣವನ್ನು ದಾಟಿ ಬಿಟ್ಟರೆ ಅದರ ಬಗೆಗೆ ಮತ್ತೆ ವಿಚಾರ ಮಾಡುವದಿಲ್ಲ...

ನನ್ನ ಜೀವನದಲ್ಲಿ ಆ ಸಮಯದಲ್ಲಿ ಮಾತ್ರ ಹಾಗೆ ಅನಿಸಿತ್ತು..
ಅಕ್ಕಪಕ್ಕದವರು ಪರಿಚಯಸ್ಥರ ಮಧ್ಯೆ ಹಣಕ್ಕಾಗಿ ದೊಡ್ಡದಾಗಿ ಮಾತಾಡಿ ಮರ್ಯಾದೆ ಹೋಗುತ್ತದಲ್ಲಾ..
ಅದು ಬಹಳ ಕೆಟ್ಟದ್ದು..

ಮರ್ಯಾದೆ ಹೋಗುವ ಕ್ಷಣಗಳು ಬಹಳ ದುಸ್ಥರವಾಗಿರುತ್ತದೆ...
ಅತ್ಯಂತ ಅಸಹನೀಯವಾಗಿರುತ್ತದೆ..
ಅದನ್ನು ಎದುರಿಸುವದು ಸುಲಭದ ಮಾತಲ್ಲ...

ಅಂಥಹ ಕೆಟ್ಟ ಸಮಯ ಯಾರಿಗೂ ಬರಬಾರದು...

ನಿಮ್ಮ ಪರಿಚಯದವರ ಸಮಸ್ಯೆ ಶೀಘ್ರವಾಗಿ ಪರಿಹಾರಗೊಳ್ಳಲಿ ಎಂದು ಹಾರೈಸುವೆ...

Ittigecement said...

ಶಾಂತಲಾ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ....

ಎಷ್ಟು ಬೀಕರ ಆ ಸ೦ದರ್ಭಗಳು... ಎ೦ತವನಿಗೂ ಬೇಡ ಅ೦ತಹ ಪರಿಸ್ಥಿತಿ ಅನಿಸಿಬಿಡುತ್ತದೆ... ನಮಗೂ ಅ೦ತಹ ಪರಿಸ್ಥಿತಿ ಬ೦ದಿತ್ತು ಒ೦ದು ಕಾಲದಲ್ಲಿ... ೫೦೦ ರೂ ಗಳಲ್ಲಿ ಒ೦ದು ತಿ೦ಗಳು ಜೀವನ ನೂಕಬೇಕಾದ ಪರಿಸ್ಥಿತಿ....ಈಗ ಪ್ರತಿಸಲ ಎ.ಟಿ.ಎಮ್ ನಲ್ಲಿ ೫೦೦ ರೂ. ತೆಗೆಯುವಾಗ ಅ೦ದಿನ ದಿನಗಳು ನೆನಪಾಗುತ್ತವೆ... ಆದರೆ ಅ೦ತಹ ಪರಿಸ್ಥಿತಿಗಳು ಕಲಿಸುವ ಜೀವನ ಪಾಠ ಮಾತ್ರ ಇನ್ಯಾವ ಶಾಲೆಯಲ್ಲೂ ಕಲಿಯದ೦ತದ್ದು.... Every cloud has a silver lining ಅನ್ನೋದು ಮಾತ್ರ ತು೦ಬಾ ಸತ್ಯ...

Me, Myself & I said...

ಹೌದು ಪ್ರಕಾಶರೇ,
ಇಂತಹ ಕಷ್ಟಗಳು ಬಂದೊದಗಿದಾಗ ಆ ಸನ್ನಿವೇಶದಲ್ಲಿ ನಾವು ಹೇಗೆ ವರ್ತಿಸ್ತೀವಿ ಅನ್ನೋದರ ಮೇಲೆಯೇ ನಮ್ಮ ವ್ಯಕ್ತಿತ್ವ ತೀರ್ಮಾನ ಹಾಗುತ್ತೆ.

ಈ ವರ್ಷದಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕ ಆರ್ತಿಕ ಕುಸಿತ ಎದುರಿಸಿದಾಗ ಅದು ಉಳಿದ ಅದೆಷ್ಟು ರಾಷ್ಟ್ರಗಳ ಜನ ಸಾಮಾನ್ಯನ ಮೇಲೆ ಪರಿಣಾಮ ಬೀರಲಿಲ್ಲಾ/ಬೀರುತ್ತಿಲ್ಲ್ಲಾ? ಆದ್ರೆ ಈಗಲೂ ನಾವು ಅಮೇರಿಕನ ದೊಡ್ಡಣ್ಣ ಅಂತಾನೆ ಭ್ರಮಿಸ್ತೀವಿ. ಎಂತಹ ವಿಪರ್ಯಾಸ ಅಲ್ಲವೇ?

ಇನ್ನು ನನ್ನ ಆತ್ಮೀಯರು ನನ್ನ ಬಳಿ ಹೇಳಿ ಕೊಂಡದ್ದು ಒಂದು ಭೂತಕಾಲದ ಘಟನೆ. ಆ ಘಟನೆಗಳು ಈಗ ಅಷ್ಟೇನೂ ಸೂಕ್ತ ಅನ್ನಿಸೋಲ್ಲ.. ಪರಿಸ್ತಿತಿ ಬದಲಾಗಿದೆ. ಅವ್ರು ನನ್ನತ್ರ ಹೇಳಿದ್ದು ಹೇಗೆ ಅಂತಹ ಸಂಧರ್ಬನ ಎದುರಿಸಿ, ಜಯಿಸಿದ್ರು ಅಂತ,

ನಿಮ್ಮ ಪರಿಸ್ತಿತಿನೂ ಇಷ್ಟೊತ್ತಿಗಾಗಲೇ ಸುಧಾರಿಸಿದೆ ಅಂತ ಆಶಿಸ್ತೀನಿ

Keshav.Kulkarni said...

ನೀವು ಬಳಸುವ ಸಣ್ಣ ಸನ್ನಾ ಪ್ಯಾರಾಗಳು, ಮಾತಿನ ಧಾಟಿಯಲ್ಲಿ ಸಾಗುವ ಕಥನಶೀಲತೆ, ಕನ್ನಡ ಸಾಹಿತ್ಯದಲ್ಲಿ ಒಂದು unique ಬರವಣಿಗೆ.

ತುಂಬ ಚೆನ್ನಾಗಿ ಬರೆಯುತ್ತೀರಿ.

- ಕೇಶವ

Keshav.Kulkarni said...

ನೀವು ಬಳಸುವ ಸಣ್ಣ ಸನ್ನಾ ಪ್ಯಾರಾಗಳು, ಮಾತಿನ ಧಾಟಿಯಲ್ಲಿ ಸಾಗುವ ಕಥನಶೀಲತೆ, ಕನ್ನಡ ಸಾಹಿತ್ಯದಲ್ಲಿ ಒಂದು unique ಬರವಣಿಗೆ.

ತುಂಬ ಚೆನ್ನಾಗಿ ಬರೆಯುತ್ತೀರಿ.

- ಕೇಶವ

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪ್ರಕಾಶಣ್ಣ, `ಮಂದಿ ತೊಡೆಮೇಲೆ ಕತ್ತ ಹೊಸ್ದು ಚಂದ ನೋಡವ್ವು‘ ಹೇಳಿ ಹೇಳ್ತ್ವಲಾ ನಮ್ ಬದಿಗೆ, ಅದೇ ಕ್ಯಾಟಗರಿಗೆ ಈ ಪಾರ್ಟಿನೂ ಸೇರ್ತ ಅನ್ನಿಸ್ತು! ಜೀವನ ಎಷ್ಟೆಲ್ಲಾ ಪಾಠ ಕಲಸ್ತು ಅಲ್ದ..?!

Ittigecement said...

ಸುಧೇಶ್...

ನಿಮ್ಮದಿನ್ನೂ ಸಣ್ಣ ವಯಸ್ಸು...
ಈಗಲೇ ಅಂಥಹ ಅನುಭವಗಳಾ...?
ಆ ಅನುಭವಗಳು ಕಲಿಸುವ ಪಾಠಗಳನ್ನು ಯಾವ ವಿಶ್ವ ವಿದ್ಯಾಲಯಗಳೂ ಕಲಿಸುವದಿಲ್ಲ...

ಒಬ್ಬ ವ್ಯಕ್ತಿಯನ್ನು ನಾವು ಆರಾಧಿಸುತ್ತೇವೆ.., ಪ್ರೀತಿಸುತ್ತೇವೆ...
ಅಪಾರ ನಂಬಿಕೆ, ಭರವಸೆ ಇಟ್ಟಿರುತ್ತೇವೆ...

ಅಂಥವರು ದಯೆ ಇಲ್ಲದೆ ಮೋಸ ಮಾಡಿಬಿಟ್ಟರೆ...?

ಆ ನೋವು ಯಾವಾಗಲೂ ಕಾಡುತ್ತದೆ...
ಆರದ ಗಾಯವಾಗಿ...

ಸುಧೇಶ್
ನಿಮ್ಮ ಬಾಳಲ್ಲಿ ಮತ್ತೆ ಅಂಥಹ ದಿನಗಳು ಬಾರದಿರಲಿ....

Ittigecement said...

ಲೋದ್ಯಾಶಿಯವರೆ....

ನಾನೂ ಕೂಡ ಆ ಪರಿಸ್ಥಿತಿಯನ್ನು ಅನುಭವಿಸಿ...
ಮೇಲೆದ್ದು ಬಂದ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ...

ಆ ಪ್ರತಿಕ್ಷಣದ ಹಿಂಸೆ...
ಫೋನ್‍ಗಳು...
ಬೆದರಿಕೆಯ ಕಾಲ್‍ಗಳು...

ಒಮ್ಮೆ ಜೀವ ತೆಗೆದುಕೊಂಡರೆ ಹೇಗೆ ಅನ್ನುವಂಥಹ ವಿಚಾರ ಬಂದು ಬಿಟ್ಟಿತ್ತು...
ಅದು ದೊಡ್ಡ ತಪ್ಪು...
ಬದುಕಿಗೆಲ್ಲಬೇಕು ಅನ್ನುವಂಥಹ ಮನೋಭಾವ ಬಂದಿದ್ದು ಹೇಗೆ...?

ಮುಂದಿನ ಲೇಖನದಲ್ಲಿ ಬರೆಯುವೆ...

ಲೋದ್ಯಾಶಿಯವರೆ...
ನಿಮಗೆ ವಿಜಯದಶಮಿಯ ಶುಭಾಶಯಗಳು...

umesh desai said...

ಹೆಗಡೇಜಿ ಪಾಡು ಹಾಡಾದಾಗ ಮಾತ್ರ ಅದ್ಭುತ ರಚನೆ ಸಾಧ್ಯ. ಇದೊಂಥರಾ ಜಂಗಲ್ಕಾ ಕಾನೂನ್ ಒಬ್ಬರನೊಬ್ಬರು ಹೊಡೆಯಲೇ ಬೇಕು ಅಂದ್ರೆ ಬದುಕು ಎಂದು ಎಗರಾಡುವವರ ಮಧ್ಯೆ ಬದುಕೋದು ಒಂದು ಸವಾಲೆ ಸರಿ. ಆದರೆ ಇದು ನಿಮ್ಮ
ಅತೀತದ ವಿಷಯ ಅಂತ ಓದಿ ಸಮಾಧಾನವೂ ಆತು....

ಮನಸು said...

ಪ್ರಕಾಶಣ್ಣ
ಕಷ್ಟಗಳು ಬಂದರೆ ಒಂದಿದೊಂದು ಬರುತ್ತಂತೆ ಹಾಗೆ ಎಲ್ಲಾ... ಜನಗಳ ಪರಿಚಯ ಚೆನ್ನಾಗಿಯೇ ಆಗಿದೆ ಅಲ್ಲವೆ..? ಯಾರನ್ನ ನಂಬುವುದು ಬಿಡುವುದು ಎಂದು ತೋಚುವುದೇ ಇಲ್ಲ ಕೆಲವೊಮ್ಮೆ...
ಇಂತಹ ಸ್ಥಿತಿ ಯಾರಿಗೂ ಬರಾದಿರಲಿ
ದಸರೆಯ ದಿನ ನಿಮ್ಮ ಕಹಿನೆನಪುನಲ್ಲಿ ಕಳೆಯದೆ ಸಂತೋಷದಿಂದಿರಿ...
ನೆಡೆದುಬಂದ ಹಾದಿ ನೀವು ಮರೆತಿಲ್ಲ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರುತ್ತಾನೆ..
ದಸರಾ ಹಬ್ಬದ ಶುಭಾಶಯಗಳು

Ittigecement said...

ಕೇಶವ ಕುಲಕರ್ಣಿಯವರೆ...

ಇದು ಶೈಲಿಯೋ.. ಮತ್ತೆಂತದೋ ನನಗೆ ಗೊತ್ತಿಲ್ಲ...
ನೀವೆಲ್ಲ ಇಷ್ಟಪಟ್ಟು ಓದುತ್ತೀರಲ್ಲ ಅದು ಖುಷಿ ನನಗೆ....

ನಿಮ್ಮ ಮೆಚ್ಚುಗೆಯ ಮಾತುಗಳು ಮತ್ತಷ್ಟು ಬರೆಯಲು ಸ್ಪೂರ್ತಿ ಕೊಡುತ್ತದೆ...

ತುಂಬಾ... ತುಂಬಾ ಧನ್ಯವಾದಗಳು...

AntharangadaMaathugalu said...

ಪ್ರಕಾಶ್ ರವರೇ...
ನಿಮ್ಮ ಅನುಭವ ಕಥನ ಮನಮಿಡಿಯುವಂತಿದೆ. ಹೌದು ಎಲ್ಲರೂ ಜೀವನದಲ್ಲಿ ಇಂತಹವರನ್ನು ಒಂದಿಲ್ಲೊಂದು ಘಟ್ಟದಲ್ಲಿ ಭೇಟಿ ಮಾಡಿರುತ್ತೇವೆ. ಮತ್ತೆಂದೂ ಇಂಥವರು ನಿಮ್ಮ ದಾರಿಯಲ್ಲಿ ಬರದಿರಲೆಂದು ಹಾರೈಸುವೆ.
ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.

ಶ್ಯಾಮಲ

Ittigecement said...

ಪೂರ್ಣಿಮಾ....

ಕೆಲಸ ಮಾಡಿಸಿಕೊಂಡಾದ ಮೇಲೆ ಹಣ ಯಾಕೆ ಕೊಡುವದಿಲ್ಲ...?
ಇದು ನನಗೆ ಅರ್ಥವಾಗದ ವಿಚಾರ...

ಆ ಮನಸ್ಥಿತಿ ಎಂಥಹದ್ದು?
ಕೊಡುವ ಹಣದಲ್ಲಿ ಚೌಕಾಸಿ ಮಾಡಲಿ...

ಆದರೆ ಕೊಡುವದೇ ಇಲ್ಲ ಅಂದರೆ ಹೇಗೆ..?

ತನ್ನ ಮಕ್ಕಳಿಗೆ.., ಮೊಮ್ಮಕ್ಕಳಿಗೆ
"ಈ ಮನೆಯನ್ನು ಗುತ್ತಿಗೆದಾರನಿಗೆ ಹಣಕೊಡದೆ ಕಟ್ಟಿಸಿದ್ದೇನೆ" ಅಂತ ಹೆಮ್ಮೆಯಿಂದ ಹೇಳಿ ಕೊಳ್ಳ ಬಹುದಾ...?

ಹಣವೆಂದರೆ ನೈತಿಕತೆ ಆ ಮಟ್ಟಕ್ಕೆ ಇಳಿದು ಬಿಡುತ್ತದಾ...?

ಮನುಷ್ಯನ ಆ ಸ್ವಭಾವ ನಮಗೆ ಗೊತ್ತೇ ಆಗುವದಿಲ್ಲ...
ಗೊತ್ತಾದರೂ ಬಹಳ ತಡವಾಗಿಬಿಟ್ಟಿರುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇ?
ನಯ ಮಾತಿನ ವಂಚಕರೆ ಎಲ್ಲೆಡೆ ತುಂಬಿದ್ದಾರೆ. ನಿಮ್ಮ ಧೈರ್ಯ, ಆತ್ಮವಿಶ್ವಾಸವೇ ಶ್ರೀರಕ್ಷೆ. ನಿಮ್ಮ ಬರಹ ಓದಿ ಬಹಳ ಬೇಸರವಾಯಿತು.

Ittigecement said...

ಉಮೇಶ್ ದೇಸಾಯಿಯವರೆ...

ನನಗೆ ಮೋಸ ಮಾಡಿದ ಆವ್ಯಕ್ತಿ ಒಂದು ಸಾಂಕೇತಿಕ...
ಅಂಥವರು ಇದ್ದೇ ಇರುತ್ತಾರೆ...
ಆ ಸಂದರ್ಭದಲ್ಲಿ ನನ್ನ ಆತ್ಮೀಯ ಗೆಳೆಯ ಸತ್ಯ ಒಂದು ಮಾತು ಹೇಳಿದ್ದ...

"ಮೋಸ ಹೋದವನದ್ದೇ ತಪ್ಪು...
ಮೋಸ ಮಾಡಿದವನ ತಪ್ಪಿಲ್ಲ..
ಅದು ಅವನ ಸ್ವಭಾವ...
ಮೋಸ ಮಾಡುವವರು ಎಲ್ಲೆಡೆ ಇರುತ್ತಾರೆ..
ಅವರ ಬಗೆಗೆ ಎಚ್ಚರದಿಂದಿರುವದು ಬಹಳ ಮುಖ್ಯ"

ಎಲ್ಲವೂ ಜೀವನ ಕಲಿಸುವ ಪಾಠ...
ಬೇಡವೆಂದರೂ ಕಲಿಯಬೇಕಾಗುತ್ತದೆ...

ಪ್ರತಿಕ್ರಿಯೆಗಾಗಿ ಧನ್ಯವಾದಗಳು...

Guruprasad said...

ಹೌದು ಪ್ರಕಾಶ್,
ಕೆಲವೊಮ್ಮೆ ಹೀಗೆ,, ಕಷ್ಟಗಳು ಬಂದರೆ ಒಂದರ ಹಿಂದೆ ಒಂದು ಥರ ಬರುತ್ತೆ......ಅಲ್ವ..... ಇದೆ ಜೀವನ ಎದುರಿಸ ಬೇಕು ಅಸ್ಟೇ....

ಬಾಲು said...

ಇ ತರದ ಸ೦ಧರ್ಬ ಸಾಮಾನ್ಯವಾಗಿ ಎಲ್ಲರಿಗು ಬರುತ್ತದೆ. ಅ೦ತಹ ಕಷ್ಟಗಳನ್ನು ನೀವು ಮೆಟ್ಟಿ ಬ೦ದಿರುವುದರಿ೦ದ, ಮನುಷ್ಯನ ಮುಖ ನೋಡಿದ ಕೂಡಲೆ ಜಾತಕ ತಿಳಿಯುತ್ತದೆ ಅನ್ನಿಸುತ್ತದೆ.

ಅರ್ಕಿಡ್ ಹೋಟೆಲ್ ಗಳ ಸರದಾರ ವಿಟ್ಟಲ ವೆ೦ಕಟೇಶ ಕಾಮತರು ಹೆಚ್ಚು ಕಡಿಮೆ ನಿಮ್ಮದೆ ತರದ ಸ೦ದರ್ಭದಲ್ಲಿ ಆತ್ಮಹತ್ಯೆಯ ದಾರಿ ಹಿಡಿದಿದ್ದರು.

ಪ್ರಕಾಶ್ ಅವರೆ, ಇ ಜನಗಳೆ ಹೀಗೆ. ಮದುವೆ ಮನೇಲಿ ವಾಲಗದವರಿಗೆ ಕಾರ್ಯಕ್ರಮ ಮುಗಿದ ಕೊಡಲೆ ಹಣ ಕೊಟ್ಟು ಕಳುಹಿಸುತ್ತಾನೆ, ಆದರೆ ಪಾತ್ರೆ ತೊಳೆಯುವಾಕೆಯೊ೦ದಿಗೆ ಚೌಕಾಸಿಗೆ ನಿಲ್ಲುತ್ತಾನೆ. ಗೃಹಪ್ರವೇಶಕ್ಕೆ ನೂರಾರು ಜನರನ್ನು ಕರೆದು ಸ೦ಭ್ರಮ ಆಚರಿಸುತ್ತಾನೆ, ಆದರೆ ಕಾ೦ತ್ರಕ್ಟರಿಗೆ ದುಡ್ಡು ಕೊಡಲು ಹಿ೦ದೆ ಮು೦ದೆ ನೋಡುತ್ತಾನೆ.

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ಣ,
ಅಪ್ರಿಯವಾದ ಸತ್ಯವನ್ನ ಹೇಳಬಾರದಂತೆ ಆದ್ದರಿಂದ ನೀವು ಹೇಳಿದ್ದು ಸುಳ್ಳಲ್ಲ ಪ್ರಿಯವಾದ ಅಸತ್ಯ.
ಚತುರೋಪಾಯ ಪಲಿಸದಿದ್ದಾಗ ಪಂಚಮೋಪಾಯ(ಪಲಾಯನ) ಬಳಸಬೇಕಾಗುತ್ತದೆ.

ಒಬ್ಬ ಕಷ್ಟದ ನೆನಪು ಮಾಡಿಕೊಳ್ಳುತ್ತಾನೆ ಎಂದಾದರೆ ಅವನು ಆ ಕಷ್ಟದಿಂದ ದೂರವಾಗಿದ್ದಾನೆ ಎಂದರ್ಥ.

ಅಂತಹಾ ಕಷ್ಟಗಳು ಯಾರಿಗೂ ಬೇಡ.ಮನಮುಟ್ಟುವ ಬರಹಕ್ಕೆ ಧನ್ಯವಾದಗಳು.ಮುಂದೆ ಸಂತೋಷದ ಕ್ಷಣಗಳನ್ನ ಮಾತ್ರ ಹಂಚಿಕೊಳ್ಳುವಂತಾಗಲಿ.

sunaath said...

ಪ್ರಕಾಶ,
ಈಸಬೇಕು, ಇದ್ದು ಜೈಸಬೇಕು ಎನ್ನುವ ಪಾಠವನ್ನು ನಿಮ್ಮಿಂದ ಕಲಿಯಬೇಕು.

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ನನಗೆ ನಿಮ್ಮ ಬರಹಗಳಲ್ಲೇ ಹೆಚ್ಚು ಆಪ್ತ ಹಾಗೂ ವೇದನಾಭರಿತ ಅನುಭವವನ್ನಿತ್ತಿತು ಈ ಲೇಖನ. "ನಂಬಿಕೆಟ್ಟವರಿಲ್ಲವೋ.." ಎನ್ನುವ ದಾಸರ ಹಾಡು ಈಗಿನ ಕಾಲಕ್ಕಲ್ಲವೇ ಅಲ್ಲ.. ಅದನ್ನು ದೇವರಿಗೆ ಮಾತ್ರ ಹೇಳಬಹುದು. ಇಲ್ಲಿ ನಂಬಿಕೆಯ ಬುನಾದಿ ತುಂಬಾ ಅಭದ್ರವಾಗಿದೆ. ಈಗ ಒಬ್ಬರಿಂದಾದ ಅನ್ಯಾಯಕ್ಕೆ ಎಲ್ಲರೂ ಅನುಮಾನಕ್ಕೆ ಒಳಗಾಗುತ್ತಿರುತ್ತಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ತುಂಬಾ ಗಟ್ಟಿ ಮನಸ್ಸುಬೇಕೆನ್ನುತ್ತಾರೆ ಕೆಲವು ದುರ್ಬಲ ಜನರು. ಇದು ಖಂಡಿತ ಸರಿಯಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಬೇಕಾಗಿರುವುದು ತೀರಾ ಹತಾಶ ಹಾಗೂ ದುರ್ಬಲ ಮನಸ್ಸು. ಆದರೆ ಆ ಒಂದು ಯೋಚನೆ ಬಂದರೂ..ಅಂತಹ ಪರಿಸ್ಥಿತಿ ಎದುರಾದರೂ ಅದನ್ನು ಮೆಟ್ಟಿ, ಎದುರಿಸಿ ಪಾರಾಗುವ ಸಬಲ ಮನಸ್ಥಿತಿ ನಿಜಕ್ಕೂ ಶ್ಲಾಘನೀಯವೇ. ನಿಮ್ಮದು ನಿಜಕ್ಕೂ ಸಬಲ ಮನಸ್ಸೇ ಸರಿ. ಹೀಗೇ ಸದಾ ಇರಿ. :)

ಮುಂದಿನ ಭಾಗಕ್ಕಾಗಿ ಕಾಯುವೆ.

Prabhuraj Moogi said...

ಸರ್ ಆತ್ಮಹತ್ಯೆಯಂತೂ ಯಾವುದಕ್ಕೂ ಪರಿಹಾರ ಅಲ್ಲ... ನಿಮ್ಮ ಬಾಯಲ್ಲಿ ಆ ಮಾತು ಸರಿ ಹೋಗೊದಿಲ್ಲ... ನಗನಗಿಸುತ್ತ ಇದ್ದವರು ಹೀಗೆ ಒಮ್ಮೇಲೆ ಕಷ್ಟದಲ್ಲಿ ಸಿಕ್ಕಿಕೊಂಡಿದ್ದೀರಿ... ಹೇಗಿದ್ದರೂ ಪರಿಸ್ಥಿತಿ ನಿಭಾಯಿಸಿ...
ಇಂಥ ಜನ ಇದ್ದೇ ಇರುತ್ತಾರೆ, ನಿಮ್ಮ ವೃತ್ತಿ ಜೀವನದಲ್ಲಿ ಇನ್ನೂ ಹಲವರನ್ನೂ ನೀವು ನೋಡಬಹುದು...

ವನಿತಾ / Vanitha said...

:(..

Anonymous said...

ಪ್ರಕಾಶ್, ನಿಮ್ಮ ಅನುಭವ ಓದಿ ಒಂದ್ಸಲ ಘಾಬರಿ ಆಯಿತು.... ಮತ್ತೆ ನಿಮ್ಮ ಪ್ರತಿಕ್ರಿಯೆಯನ್ನ ಓದಿದಾಗ ಇದು ಹಳೆ ಅನುಭವ ಅಂತ ತಿಳಿದು 'ಅಬ್ಬಾ' ಅಂದುಕೊಂಡೆ. ಅದು ಅಲ್ಲಿಗೇ ಕೊನೆಯಾಗಲಿ!!!
ನಿಜವಾಗಿ ನಡೀತಾ ಇದೆಯೇನೋ ಎಂಬಂತಹ ಚಿತ್ರಣ ಕೊಡುವುದೇ ನಿಮ್ಮ ಬರಹದ ಶೈಲಿ. ಚೆನ್ನಾಗಿದೆ....

PARAANJAPE K.N. said...

"ಬದುಕಿಗಿಂತ ಸಿನೇಮಾವೇ ಚಂದ...ಇಲ್ಲಿ ವಜ್ರಮುನಿ, ಅಮರಿಷ್ ಪುರಿ... ಬಂದ ತಕ್ಷಣ ಇವರು ವಿಲನ್ ಅಂತ ಗೊತ್ತಾಗಿ ಬಿಡುತ್ತದೆ...ಜೀವನದಲ್ಲಿ ಹಾಗಿಲ್ಲವಲ್ಲ...!" - ಎಂಥಾ ಮಾತು, ಎಷ್ಟು ನಿಜ ಅಲ್ಲವೇ, ಜೀವನದ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಎಲ್ಲರನ್ನೂ ಕೆಟ್ಟವರ೦ತೆ, ಮೋಸಗಾರ ರ೦ತೆ ಕಾಣುತ್ತೇವೆ., ಆದರೆ ವಾಸ್ತವ ಬೇರೇನೆ ಇರುತ್ತೆ ಅಲ್ಲವೇ,? ಅನುಭವದ ಮೂಸೆಯಲ್ಲಿ ಹೊರಹೊಮ್ಮಿದ ಒ೦ದು ಉತ್ತಮ ಬರಹ.

Rajesh Manjunath - ರಾಜೇಶ್ ಮಂಜುನಾಥ್ said...

ಅಯ್ಯೋ ದೇವ್ರೇ... ಆ ಮನೆಯಲ್ಲಿ ಅವರು ನೆಮ್ಮದಿಯಾಗಿ ಇರ್ತಾರಾ?

ಸವಿಗನಸು said...

ಪ್ರಕಾಶಣ್ಣ,
ಹೀಗೂ ಇರ್ತಾರ ಜನ....
ನಿಮ್ಮ ಬರಹ ಚೆನ್ನಾಗಿದೆ....
ಮನಮುಟ್ಟುವಂತಿತ್ತು...

Ittigecement said...

ಮನಸು....

ಮೋಸಗಾರ ಮೋಸ ಮಾಡಿಬಿಡುತ್ತಾನೆ..
ಅದರನಂತರ ಸಮಸ್ಯೆಗಳನ್ನು ಎದುರಿಸುವದು ಸಾಮಾನ್ಯದ ಮಾತಲ್ಲ...
ನಮ್ಮ ತಪ್ಪುಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ...

ನಾನು ಆ ಮನುಷ್ಯನನ್ನು ನಂಬಿ ಅಗ್ರೀಮೆಂಟ್ ಮಾಡಿಕೊಳ್ಳಲಿಲ್ಲವಾಗಿತ್ತು...
ಪ್ರತಿಬಾರಿಯೂ ಗೋಡೆಯನ್ನು ಒಡೆಸಿದಾಗ ಅದು ಎಕ್ಸ್‍ಟ್ರಾ ಆಗುತ್ತದೆಂದು ಹೇಳಿದ್ದೆ..
ಆದರೆ ನೋಟ್ ಮಾಡಿ ಇಟ್ಟುಕೊಳ್ಳಲಿಲ್ಲ...
ಅವನು ಕೊಟ್ಟ ಹಣದಷ್ಟೇ ಕೆಲಸ ಮಾಡಿಸಿ ಸುಮ್ಮನಿರ ಬೇಕಿತ್ತು...

ನಂಬಿಕೆ, ಪ್ರಾಮಾಣಿಕತೆ ವ್ಯವಹರದಲ್ಲಿ ಇರಬೇಕು...
ಅದರ ಸಂಗಡ ವ್ಯವಹಾರ ಚತುರತೆ ಇರಲೇಬೇಕಾದ ಅವಶ್ಯಕತೆಯನ್ನು ಮನಗಂಡೆ...

ಆದರೆ ಈ ಪಾಠಗಳು ಬಹಳ ದುಬಾರಿಯಾಗಿಬಿಟ್ಟಿದ್ದವು...

ನಿಮ್ಮ ಪ್ರೀತಿಗೆ, ಕಳಕಳಿಗೆ ನನ್ನದೊಂದು ಸಲಾಮ್...
ಧನ್ಯವಾದಗಳು...

Me, Myself & I said...

ಪ್ರಕಾಶ್ ಸರ್,

ನಿಮ್ಮಗೂ ವಿಜಯದಶಮಿ ಶುಭಾಶಯಗಳು.
ನಿನ್ನೆ ಸ್ವಲ್ಪ ಎಲ್ಲೋ ಹೊರಗೆ ಹೋಗಿದ್ದೆ, ಹಾಗಾಗಿ ನಿಮ್ಮಗೆ ತಡವಾಗಿ ಶುಭಾಶಯಗಳನ್ನ ತಿಳಿಸ್ತಾ ಇದ್ದೆನೆ..

ನಿಮ್ಮ ಮನೆಯವರೆಲ್ಲರಿಗೂ ಹಾಗೂ ನಿಮ್ಮ ಬ್ಲಾಗ್ನ ಪ್ರೀತಿಯ ಓದುಗರೆಲ್ಲರಿಗೂ ಶುಭಾಶಯಗಳು.

ಗೋಪಾಲ್ ಮಾ ಕುಲಕರ್ಣಿ said...

ನಿಜವಾಗಿಯು ಇಂತಹ ಸನ್ನಿವೇಶ ಯಾರಿಗೂ ಬರಬಾರದು. ತುಂಬಾ ನೊಂದಿರಬೇಕು ನೀವು. ಇಂತಹ ಸನ್ನಿವೇಶಗಳು ಎಲ್ಲರ ಜೀವನದಲ್ಲೂ ಆಗಿರುತ್ತವೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಒಳ್ಳೆಯವರಿಗೆ ದೇವರು ಕೊಟ್ಟೆ ಕೊಟ್ಟಿರುತ್ತಾನೆ... ತುಂಬಾ ಚೆನ್ನಾಗಿದೆ ನಿಮ್ಮ ಬರಹ. ಇದು ||ನೋಡು... ನನಗೆ ಬೇಕಾಗಿದ್ದು...ಮೂರು ಲಕ್ಷ..
ಮುನ್ನೂರು ರುಪಾಯಿ ಉಳಿಸುವದರಿಂದ ಏನೂ ಆಗುವದಿಲ...|| ತುಂಬಾ ಚೆನ್ನಾಗಿದೆ.

ಗೋಪಾಲ್ ಮಾ ಕುಲಕರ್ಣಿ said...

ದಸರಾ ಹಬ್ಬದ ಶುಭಾಶಯಗಳು ....

Sadashiva M.S Kalmadka said...

ಬದುಕಿಗಿಂತ ಸಿನೇಮಾವೇ ಚಂದ...
ಇಲ್ಲಿ ವಜ್ರಮುನಿ, ಅಮರಿಷ್ ಪುರಿ... ಬಂದ ತಕ್ಷಣ ಇವರು ವಿಲನ್ ಅಂತ ಗೊತ್ತಾಗಿ ಬಿಡುತ್ತದೆ...
ಜೀವನದಲ್ಲಿ ಹಾಗಿಲ್ಲವಲ್ಲ...!
ಜನರ ಕ್ರೂರ.. ಕಹಿ ವರ್ತನೆ ಅರ್ಥವೇ ಅಗುವದಿಲ್ಲ...

true.. but, showing an abruprt end to our beautiful life is not the solution for everything.. good writing..

ಚಿತ್ರಾ said...

ಪ್ರಕಾಶಣ್ಣ,

ಇದು ನಿಜಕ್ಕೂ ಭಯಾನಕ ಅನುಭವವೇ. ಅವರು ಆ ಮನೆಯಲ್ಲಿ ನೆಮ್ಮದಿಯಾಗಿ ಇರುತ್ತಾರೋ ಇಲ್ಲವೊ ಗೊತ್ತಿಲ್ಲ ಆದರೆ ನಿಮ್ಮ ನೆಮ್ಮದಿಯನ್ನಂತೂ ಹಾಳುಮಾಡಿದರು !
ಇಂಥಾ ಘಟನೆಗಳು ಬಹು ಸಾಮಾನ್ಯ ಎನಿಸುತ್ತದೆ. ನನಗೂ ಇಂಥಾ ಅನುಭವ ಆಗಿದೆ. ದುಡಿಯಲು ಆರಂಭಿಸಿದ ಹೊಸತರಲ್ಲಿ , ಕಷ್ಟ ಪಟ್ಟು ಕೂಡಿಟ್ಟ ಹಣದ ಜೊತೆ ಅಪ್ಪ ಉಡುಗೊರೆಯಾಗಿ ಕೊಟ್ಟ ಸ್ವಲ್ಪ ಹಣವನ್ನೂ ಸೇರಿಸಿ , ಬಹಳ ತೊಂದರೆಯಲ್ಲಿದ್ದ ಗೆಳತಿಯೊಬ್ಬಳಿಗೆ ಕೊಟ್ಟಿದ್ದೆ. ಅದನ್ನು ಆಕೆ ೨ ವರ್ಷವಾದರೂ ಮರಳಿಸುವ ಮಾತೇ ಆಡಲಿಲ್ಲ. ಉಪಕಾರ ಸ್ಮರಣೆ ಬೇಕಾಗಿಲ್ಲ , ಆದರೆ , ನನಗೆ ಅಗತ್ಯವಿದ್ದಾಗಲೂ ಆಕೆ ಹಣ ಮರಳಿಸುವ ಮಾತಾಡಲಿಲ್ಲ. ಆಮೇಲೆ ನಾನಾಗಿ ಕೇಳಿದಾಗ ನಾನು ದೊಡ್ಡ ತಪ್ಪು ಮಾಡಿದೆನೇನೋ ಎಂಬಂತೆ ಮುಖ ಮಾಡಿ ನನ್ನೊಡನೆ ಮಾತಾಡುವುದನ್ನೂ ಬಿಟ್ಟು ಬಿಟ್ಟಳು !
ಅದಕ್ಕೆ ಅಲ್ಲವೇ ಹೇಳುವುದು ? " ಕೊಟ್ಟವ ಕೋಡಂಗಿ , ಇಸಕೊಂಡವ ಈರಭದ್ರ " ಎಂದು ! ಇಂಥಾ ಜನರಿಗೆ , ತೆಗೆದುಕೊಳ್ಳುವುದು ಮಾತ್ರ ಗೊತ್ತೇ ಹೊರತು , ಕೊಡುವುದಲ್ಲ ! ಮತ್ತೊಬ್ಬರ ಬಗ್ಗೆ ಯೋಚನೆ ಮಾಡದಂಥಾ ಅತೀ ಸ್ವಾರ್ಥಿಗಳು. ಇಂಥವರಿಂದಾಗಿ , ವಿಶ್ವಾಸ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಂಡಿದೆ !

ಅಂದಹಾಗೆ, ಲೇಖನ ಮುಂದುವರೆಯುವುದೇ?

ಯಜ್ಞೇಶ್ (yajnesh) said...

ಪ್ರಕಾಶಣ್ಣ, ಓದಿ ಮನಸ್ಸಿಗೆ ಬೇಸರವಾಯ್ತು. ಭಗವದ್ಗೀತೆಯಲ್ಲಿ ಹೇಳಿದ ಹಾಗೆ ಆಗೊದೆಲ್ಲಾ ಒಳ್ಳೇದಕ್ಕೆ. ಒಂದು ಶಿಲ್ಪ ಸುಂದರವಾಗಬೇಕಾದರೆ ಅದಕ್ಕೆ ಅದೆಷ್ಟೋ ಉಳಿಯ ಏಟು ಬೀಳಬೇಕು ಅಂತ ತಿಳ್ಕೊಂಡ್ರಾಯ್ತು ಃ).. ಪ್ರಿತಿಯಿರಲಿ

ಬಿಸಿಲ ಹನಿ said...

ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತವೆ. ಆದರೆ ತೀರ ಹತ್ತಿರದವರಿಂದಲೇ ಗೊತ್ತಿದ್ದವರಿಂದಲೇ ಆದಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ.

ಕ್ಷಣ... ಚಿಂತನೆ... said...

ಪ್ರಕಾಶಣ್ಣ ಇಂತಹ ಅನುಭವಗಳು ಪ್ರತಿಯೊಬ್ಬನ ಬಾಳಿನಲ್ಲೂ ಆಗಿರುತ್ತದೆ. ಕೆಲವೊಮ್ಮೆ ಎಷ್ಟೇ ಕಷ್ಟವಾದರೂ ನಿಜವನ್ನೇ ಹೇಳಬೇಕೆಂದರೂ ಆಗುವುದಿಲ್ಲ. ಮತ್ತೂ ಕೆಲವೊಮ್ಮೆ ಪರಿಚಿತರಿಂದಲೇ ಆಗುವ ಅವಾಂತರಗಳು ಅಷ್ಟಿಷ್ಟಲ್ಲ. ಅದರಲ್ಲಿಯೂ ಬಿಜಿನೆಸ್‌ನವರ ಜೀವನದಲ್ಲಂತೂ ಇವೆಲ್ಲ ಪ್ರತಿಕ್ಷಣ, ಪ್ರತಿದಿನದ ಅನುಭವಗಳು. ಕೆಲವೊಮ್ಮೆ ಆತ್ಮಹತ್ಯೆಯವರೆವಿಗೂ ತಂದು ನಿಲ್ಲಿಸುತ್ತದೆ. ಆದರೆ ಹಾಗೆಂದು ಧೃತಿಗೆಟ್ಟರೆ, ಅಂತಹ ಅನಾಹುತಕ್ಕೆ ಕಾರಣ ನಾವೇ ಆದರೆ ಅದರಿಂದ ಯಾರಿಗೂ ಅನುಕೂಲವಿರುವುದಿಲ್ಲ. ಸಾವನ್ನಪ್ಪಿದವನಿಗಿಂತಲೂ ಅವನನ್ನೇ ನೆಚ್ಚಿಕೊಂಡವರ ಬಾಳು ಅಸಹನೀಯವಾಗುತ್ತದೆ. ಛಲದಿಂದ ಇವನ್ನೆಲ್ಲ (ಅವಮಾನ, ಅಪಮಾನ...) ಮೆಟ್ಟಿನಿಂತು ಬಂದದ್ಲೆಲ್ಲ ಬರಲಿ, ಗೋವಿಂದನ ದಯೆಇರಲಿ ಎಂದು ಮುನ್ನಡಿಯಿಟ್ಟರೆ ಗೆಲವು ನಿಶ್ಚಿತ.

ನಿಮ್ಮ ಬದುಕಿನಲ್ಲಾದ ಈ ಅನುಭವವನ್ನು ನಮ್ಮೊಡನೆ ಹಂಚಿಕೊಂಡಿದ್ದೀರಿ. ನಿಮ್ಮ ಮನಸ್ಸಿನ ನೋವು (ಆಗಿನ ದಿನಗಳದ್ದು) ಕಡಿಮೆಯಾಗಿದ್ದರೆ, ಸಮಾಧಾನವಾಗಿದ್ದರೆ ಅಷ್ಟೇ ಸಂತಸವಾಗುತ್ತದೆ.

ಇನ್ನು ಆ ಹಣ್ಣು ಮಾರುವವನ ಮಗನ ಮನೆ ಕಟ್ಟಿಕೊಟ್ಟಿರಾ? ಇದೊಂದು ಯೋಚನೆ ಬಂತು, ಪ್ರಕಾಶಣ್ಣ...

ಚಂದ್ರು

ಅನಿಸಿಕೆ said...

what to say
now have you come out of problem
.............
Life will teach the real lesson


mahesh

ರಾಜೀವ said...

ಪ್ರಕಾಶ್ ಅವರೆ,

ಮನ ಮುಟ್ಟುವ ಬರಹ. ನಿಜ, ಈ ತರಹ ಘಟನೆಗಳು ಜೀವನದಲ್ಲಿ ಅನುಭವಿಸಿರುತ್ತೇವೆ. ಅಂತಹ ಘಟನೆಗಳೇ ನಮಗೆ ಇನ್ನೂ ಶಕ್ತಿ ಕೊಡುತ್ತದೆ. ಇತಿಹಾಸದಲ್ಲಿ ಇವತ್ತು ನಾವು ಯಾರ ಬಗ್ಗೆ ಓದಿ ಹೊಗಳುತ್ತೇವೆಯೋ, ಅವರೆಲ್ಲಾ ಜೀವನದಲ್ಲಿ ನೋವು ಅನುಭವಿಸಿದವರೇ. ನಿಮ್ಮ ತಾಳ್ಮೆ, ಆತ್ಮ ಸ್ಥೈರ್ಯ ಸದಾ ಸ್ಥಿರವಾಗಿ ಉಳಿಯಲಿ.

ದಿನಕರ ಮೊಗೇರ said...

ಬದುಕಿಗಿಂತ ಸಿನೇಮಾವೇ ಚಂದ...
ಇಲ್ಲಿ ವಜ್ರಮುನಿ, ಅಮರಿಷ್ ಪುರಿ... ಬಂದ ತಕ್ಷಣ ಇವರು ವಿಲನ್ ಅಂತ ಗೊತ್ತಾಗಿ ಬಿಡುತ್ತದೆ... '' ಇದೊಂದೆ ವಾಕ್ಯ ಸಾಕು ನಿಮ್ಮ ಶೈಲಿ ಕುರಿತು ಹೇಳಲು.... ನಾನು ಸಹ ಸಿವಿಲ್ ಇಂಜಿನಿಯರ್, ಆದ್ರೆ ನಂಗೆ ಮನೆ ಕಟ್ಟಿಸಿ ಗೊತ್ತಿಲ್ಲ...ಹಾಗಂತ ಮನೆ ಮುರಿದು ಅಭ್ಯಾಸ ಅಂತ ತಿಳ್ಕೊಬೇಡಿ.... ... ನಾನು private ಕಂಪನಿ ಕೆಲಸ ಮಾಡ್ತಾ ಇದ್ದೇನೆ... ನಿಮ್ಮ ಥರಾನೆ ಅನುಭವಗಳನ್ನು ಹೇಳುತ್ತಾರೆ.... ಆದರೆ ನಿಮ್ಮಸ್ಟು ಇಲ್ಲ ಸಾರ್... ಈಗ ತಿರುಗಿ ಅದನ್ನೆಲ್ಲಾ ನೋಡಿದರೆ, ಅದನ್ನೆಲ್ಲಾ ಹೇಗೆ ಅನುಭವಿಸಿದಿವಿ ಅಂತಾನೆ ಅರ್ಥ ಆಗಲ್ಲ ..... ಆ ಸಮಯದಲ್ಲಿ ದೇವರೇ ನಮ್ಮನ್ನು ಕೈಹಿಡಿದು ನಡೆಸಿರುತ್ತಾನೆ ಅಂತ ನನ್ನ ಅನಿಸಿಕೆ.... ಕೆಲಸ ಮಾಡಿಸಿಕೊಂಡು ಹಣ ಕೊಡದೆ ಇರುವವರನ್ನು ದೇವರು ನೋಡಿಕೊಳ್ಳುತ್ತಾನೆ ಬಿಡಿ ಸರ್.... i am waiting for the next part....

Ittigecement said...

ಶ್ಯಾಮಲಾರವರೆ...

ದಾರಿಯಲ್ಲಿ ಕಲ್ಲು, ಮುಳ್ಳುಗಳು ಇರುವ ಹಾಗೆ...
ಇಂಥವರು ನಮ್ಮ ಬಾಳಲ್ಲಿ ಸಿಕ್ಕೇ ಸಿಗುತ್ತಾರೆ...

ಅಂಥವರಿಂದ ಪಾರಾಗುವ ಚತುರತೆ ನಮ್ಮಲ್ಲಿ ಅವಶ್ಯವಾಗಿ ಇರಬೇಕು..
(ನಮ್ಮ ಒಳ್ಳೆಯತನವನ್ನು ಬಿಟ್ಟುಗೊಡದೆ..)

ನಿಮ್ಮ ಕಳಕಳಿಗೊಂದು ನನ್ನ ನಮನಗಳು...

Ittigecement said...

ಡಾ.ಗುರುಮೂರ್ತಿಯವರೆ... (ಸಾಗರದಾಚೆಯ ಇಂಚರ)

ಆ ದಿನಗಳನ್ನು ದಾಟಿ...
ಈ ದಿನಗಳನ್ನು ನೋಡುತ್ತಿರುವಾಗ...
ಸ್ವಲ್ಪ ಬೇಸರವೂ ಇದೆ...

ಅಂಥಹ ಒಳ್ಳೆಯ ಬಾಂಧವ್ಯವನ್ನು ಕೇವಲ ಹಣಕ್ಕಾಗಿ ಮುರಿದುಹೋಯಿತಲ್ಲ ಎಂದು...

ಹಣ ಈ ಜಗತ್ತಿನ ಅತಿ ದೊಡ್ಡ ಶಕ್ತಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

shridhar said...

ಪ್ರಕಾಶಣ್ಣ,
ಇದು ಹಲವು ಅರ್ಕಿಟೆಕ್ಟಗಳ ಕಥೆಯು ಹೌದು. ಕೆಲಸವಾಗುವವರೆಗೆ ನಮ್ಮವರು ಅಮೇಲೆ ನೀವ್ ಯಾರು . ಇದು ಎಲ್ಲ ಪೀಲ್ಡ್ ನಲ್ಲು ಇರೊ ಕಥೆನೆಯಾ. ಕೆಲವೊಮ್ಮೆ ಬೇರೆ ಯಾರಾದರು ಕೈ ಎತ್ತಿದರೆ ನಾವು ಬೇರೆ ರೀತಿ ನಡೆದು ಕೊಳ್ಳಬಹುದು, ಆದ್ರೆ ನಮ್ಮವರೆ ಕೈ ಕೊಟ್ಟಾಗ ಆಗುವ ನೋವು ಅಷ್ಟಿಷ್ಟಲ್ಲ. " ಈಸ ಬೇಕು , ಇದ್ದು ಜಯಿಸ ಬೇಕು" .
ಇದು ನಿಮ್ಮ ಅನುಭವ ಲೇಖನವಾದರು ಸಹ , ಸಮಾಜದ ನಗ್ನ ಸತ್ಯ ತಿಳಿಸುವಂತ ಮನ ಮುಟ್ಟುವ ಲೇಖನ.

ಇದಕ್ಕೆ ಸಮೀಪದ ಅನುಭವವನ್ನು ನಾನು ಸಹ ನನ್ನ ಬ್ಲೊಗ್ ನಲ್ಲಿ ಗೀಚಿದ್ದೇನೆ , ಸಮಯವಿದ್ದಾಗ ಒಮ್ಮೆ ನಮ್ಮ ಬ್ಲೊಗಗು ಬನ್ನಿ.

ಶ್ರೀಧರ ಭಟ್ಟ.

Ranjita said...

ನೀ ಹೇಳಿದ್ದು ಅದೆಸ್ಟು ಸತ್ಯ ಅಲ್ದಾ ಪ್ರಕಾಶಣ್ಣ . ಲೈಫ್ ನಲ್ಲಿ ಈ ತರ ಪಾಠಾ ಕಲಿಯೋದು ಸಂಬಂಧಿಗಳಿಂದನೆ ಜಾಸ್ತಿ . ...

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಏನು ಪ್ರತಿಕ್ರಿಯೆ ಬರೆಯಬೇಕೋ ಗೊತ್ತಾಗುತ್ತಿಲ್ಲ..
ಇಂತಹ ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ..

Ittigecement said...

ಗುರು...

ಈ ಥರಹದ ಒಂದು ಘಟನೆ ನಮ್ಮನ್ನು ಬಹಳ ಬದಲಿಸಿ ಬಿಡುತ್ತದೆ...
ಬಹಳಷ್ಟು ಸಾರಿ ಬೇಸರವೂ ಆಗುತ್ತದೆ...

ಒಳ್ಳೆಯವರ ಕೆಲಸ ಮಾಡುವಾಗಲೂ ಅನುಮಾನ ಇಟ್ಟುಕೊಳ್ಳಬೇಕಾಗುತ್ತದೆ..
ಮುಖ ನೋಡಿದರೆ ಗೊತ್ತೇ ಆಗುವದಿಲ್ಲವಲ್ಲ.. ಯಾರು ಎಂಥವರೆಂದು...!

ಕಿಶೋರ್ ಕುಮಾರ್ ಒಂದು ಹಾಡು ಹಾಡಿದ್ದಾರೆ..

"ದಿಲ್ ಕೊ ದೇಖೊ..
ಚೆಹೆರಾ ನ ದೇಖೊ..
ದಿಲ್ ಸಚ್ಛಾ... ಔರ್ ..
ಚೆಹೆರಾ ಝೂಟಾ..."

ಗುರು ..
ಪ್ರತಿಕ್ರಿಯೆಗೆ ವಂದನೆಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಜ. ನೀವು ಬರೆದಂತೆ ಫಿಲಂ ತರಹ ಇವರು ವಿಲನ್ ಎಂದು ಜೀವನದಲ್ಲಿ ತಿಳಿಯುವುದಿಲ್ಲ. ಮೋಸಹೋದಮೇಲೂ ನಂಬುವುದಕ್ಕೆ ಕಷ್ಟ ಎಂಬಷ್ಟು ಒಳ್ಳೆಯವನಂತಿರುತ್ತಾರೆ. ಆದರೆ ನೀವು ಆ ದಿನಗಳನ್ನು ಕಳೆದಿರಬಹುದಾದ ರೀತಿ ಭಯಾನಕ. ಸಾಲಗಾರರು ಮನೆಗೆ ಬರುವುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಹಣ ಎಂಥಹ ಪರಿಸ್ಥಿತಿಗೆ ತಂದು ನಿಲ್ಲಿಸಿಬಿಡುತ್ತದೆ ಅಲ್ಲವೆ?

Unknown said...

ಎಂತಹ ಜನರು... ಕೆಲಸ ಮಾಡಿಸಿ ದುಡ್ಡು ಕೊಡೋಲ್ಲ ಅಂದ್ರೆ... ನೀವೂ ಅಷ್ಟೆ ಅವ್ರ ಮನೆ ಸೋಫಾನೋ, ಏನೋ ಒಂದು ಎತ್ತಿಕೊಂಡು ಬರಬೇಕಾಗಿತ್ತು... ಇದು ಯಾವಾಗ ನಡೆದದ್ದು... ಮುಂದೇನಾಯಿತು???

shivu.k said...

ಪ್ರಕಾಶ್ ಸರ್,

ಜೀವನದಲ್ಲಿ ಇಂಥ ಸನ್ನಿವೇಶಗಳು ಬಂದಾಗ ಬದುಕು ಅದೆಷ್ಟು ಕೆಟ್ಟದು ಅನ್ನಿಸಿಬಿಡುತ್ತೆ ಅಲ್ವಾ....ನನಗೂ ಫೋಟೋಗ್ರಫಿಯಲ್ಲಿ ಇಂಥ ಅನುಭವ ಆಗಿದೆ. ಮದುವೆ ಫೋಟೊ ತೆಗೆಸಿಕೊಂಡ ಮೇಲೆ ಗಂಡು ಹೆಣ್ಣಿನ ಜೊತೆಗೆ ಮನೆಯವರು ಕೈಗೆ ಸಿಗೊಲ್ಲಾ ಹಣಕೊಡದೇ ಹೋಗಿಬಿಡುತ್ತಾರೆ...ನಮ್ಮದು ಸಣ್ಣ ಮೊತ್ತ ಆದ್ರೆ ನಿಮ್ಮದೂ ದೊಡ್ಡ ಮೊತ್ತ ಅಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಿದಿರಿ ?

ಮತ್ತೆ ಬದುಕಿನ ವಿಲನ್‍ಗಳು ಗೊತ್ತಾಗುವುದಿಲ್ಲ ಸಿನಿಮಾ ವಿಲನ್‍ಗಳು ಬೇಗ ತಿಳಿದುಬಿಡುತ್ತದೆ ಅನ್ನುವ ಸಾಲುಗಳು ಈ ಲೇಖನದ ಮದ್ಯೆ ಸಮಯೋಚಿತವಾಗಿ ಬಂದಿದೆ ಅದಕ್ಕೆ ಕವಿಸಮಯವೆನ್ನುತ್ತಾರೆ. ಹಾಗೆ ಕವಿಸಮಯದಲ್ಲಿ ಬರೆಯುವ ಬರಹಗಳು ತುಂಬಾ ಉತ್ತಮವಾಗಿ ಮೂಡಿಬರುತ್ತವೆ. ಇದು ಹಾಗೆ ಅಂತ ನನ್ನ ಅನಿಸಿಕೆ. ಮುಂದೇನಾಯಿತು.?

Ittigecement said...

ಬಾಲು ಸರ್...

ನಮ್ಮ ವ್ಯವಸಾಯವೇ ಹೀಗಿದೆ..

ಇಲ್ಲಿ ಎರಡು ಮನೆ ಕಟ್ಟಿದ ಮೇಸ್ತ್ರಿಯೂ ಕಾಂಟ್ರಾಕ್ಟರ್ ಆಗಿಬಿಡುತ್ತಾನೆ...
ಅವನಿಗೆ ಯಾವುದೇ ಕ್ವಾಲಿಫಿಕೇಷನ್ ಬೇಕಿಲ್ಲ..

ಎಲ್ಲ ಗುತ್ತಿಗೆದಾರರೂ ಮೋಸಗಾರರು ಅನ್ನುವಂಥ ವಾತಾವರಣವಿದೆ..

ಹಾಗಾಗಿ ನಾನು ಈಗ ಅಗ್ರೀಮೆಂಟು ಮಾಡಿಕೊಳ್ಳುತ್ತೇನೆ...

ಅದರಲ್ಲಿ ಎಲ್ಲವೂ ಪಾರದರ್ಷಕವಾಗಿರುತ್ತದೆ..
ನಾನು ಎಷ್ಟು ಲಾಭವನ್ನು ತೆಗೆದುಕೊಳ್ಳುತ್ತೇನೆ ಅನ್ನುವದೂ ಗೊತ್ತಾಗುತ್ತದೆ...
ಅದರಲ್ಲಿ ಮುಚ್ಚುಮರೆ ಇಲ್ಲ...

ಎಲ್ಲ ಮಟೀರಿಯಲ್ಲುಗಳ ಬ್ರಾಂಡ್, ರೇಟ್ ಬರೆದು ಬಿಟ್ಟಿರುತ್ತೇನೆ...
ಇದರಿಂದ ಮನೆಕಟ್ಟಿಸುವವರಿಗೂ, ನನಗೂ ಇಬ್ಬರಿಗೂ ಅನುಕೂಲ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ... ಬಾಲು ಸರ್...

Amit Hegde said...

Could not read the whole bunch of comments, though they are an extension of the main post... I believe its all about the PRINCIPLE we follow... u r fictitious client follows a Principle wherein he puts others at risk for his benefit. And there are people who come from a different world and hesitate to lie...suicide seems to be much easier option than causing trouble to others or losing the dignity.
After all its another PRINCIPLE we never let down....!

Good work...:P

http://eyeclickedit.blogspot.com/

ಸೀತಾರಾಮ. ಕೆ. / SITARAM.K said...

ತು೦ಬಾ ತೀಕ್ಷ್ಣ ಅನುಭವ. ಮನಸಲ್ಲೇನೋ ತಳಮಳ. ಲೇಖನ ಒದಿದ ಮೇಲೆ. "ಈಸಬೇಕು ಇದ್ದು ಜೈಸಬೇಕು"- ಇದು ಹಾಗೂ ಅತ್ಮಹತ್ಯೆ ಪ್ರಯತ್ನಗಳು ಕೆಲವು ಕ್ಷಣ ಮನದಲ್ಲಿ ತಾಕಲಾಟ ಮಾಡಿ ಕೊನೆಗೆ ಒ೦ದು ಸ್ಥಿರವಾಗುವುದು ಮೊದಲೆನೆಯದಾದರೇ ಅವರು ಜೀವನದಲ್ಲಿ ಎ೦ತಾ ಗಳಿಗೆಯನ್ನು ಮು೦ದೆ ಎದುರಿಸಬಲ್ಲರು.
ಆಪ್ತತೆಯ ಅನುಭವಗಳ ಪಾಟ ಹ೦ಚಿಕೊಡ ತಮಗೆ ಧನ್ಯವಾದಗಳು. ಇದು ಕಷ್ಟಗಳ ಎದುರಿಸಲು ತಾಕತ್ತು ನೀಡುತ್ತೆ.

Ittigecement said...

ಮೂರ್ತಿ ಹೊಸಬಾಳೆ...

ನಿಜ ಇಂದು
ಹಳೆಯದನ್ನು ನೆನಪಿಸಿಕೊಂಡಾಗ..
ನನ್ನ ಬಗೆಗೆ ಬಹಳ ಬೇಸರ ಆಗುತ್ತದೆ...
ಆ ಸಮಸ್ಯೆ ಆ ಸಮಯದಲ್ಲಿ ದೊಡ್ಡದಾಗಿ ಅನಿಸಿತ್ತು..
ಈಗಲೂ ಹಾಗೇ ಅನಿಸಿತ್ತು

ಆದರೆ ನಾನು ತೆಗೆದು ಕೊಂಡ ಸ್ಟೆಪ್ ಅಕ್ಷಮ್ಯ...ಅಪರಾಧ.

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುನಾಥ ಸರ್...

ಆ ಸಮಯದಲ್ಲಿ ಪಲಾಯನ ಮಾಡುವ ನಿರ್ಧಾರ ನಿಜಕ್ಕೂ ತಪ್ಪಾಗಿತ್ತು...

ಸಕಾಲದಲ್ಲಿ ವಿವೇಕ ಬಂದಿದ್ದು ಈಗ ಇತಿಹಾಸ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ತೇಜಸ್ವಿನಿ....

ಈಗ ಏನೇ ಹೇಳಿದರೂ ಆ ಸಮಯದಲ್ಲಿ
ನನ್ನ ಮನಸ್ಸು ದುರ್ಬಲವಾಗಿತ್ತು...
ಪಲಾಯನವಾದಕ್ಕೆ ಶರಣಾಗಿತ್ತು...

ಅದು ದೊಡ್ಡ ತಪ್ಪು...

ಇದನ್ನು ಓದಿ... ಯಾರಾದರೂ ತಪ್ಪು ನಿರ್ಧಾರ ಮಾಡುವದನ್ನು ತಡೆದುಕೊಂಡರೆ ಅಷ್ಟೇ ಸಮಾಧಾನ....

ನಿಮ್ಮ ಕಳಕಳಿಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರಭು....

ಸಮಯ, ಸಂದರ್ಭಗಳು ಎಂಥವರನ್ನೂ ದುರ್ಬಲ ಗೊಳಿಸಿಬಿಡುತ್ತವೆ....

ಅದರಲ್ಲೂ ಹಣಕಾಸಿನ ಏರಿಳಿತವಿರುವ ವ್ಯವಹಾರಗಳಲ್ಲಿ
ಇಂಥಹ ಸಂದರ್ಭಗಳು ತೀರಾ ಸಾಮಾನ್ಯ....

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ವನಿತಾರವರೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುಮನಾರವರೆ...

ನಮ್ಮ "ಅತೀತ" ನಮ್ಮನ್ನು ಬಿಡುವದಿಲ್ಲವಲ್ಲ...
ಬೇಡವೆಂದರೂ ನೆನಪಾಗಿ ಉಳಿದುಬಿಡುತ್ತದೆ...

ಕೆಲವು ಘಟನೆಗಳೇ ಹಾಗೆ...
ಗಾಯ ಮಾಸಿದರೂ..
ನೋವು ನೆನಪಾಗಿ
ಉಳಿದುಬಿಡುತ್ತದೆ...
ಕಾಡುತ್ತದೆ...ಕಾಡುತ್ತಲೇ ಇರುತ್ತದೆ..

ಧನ್ಯವಾದಗಳು...

ವಿನುತ said...

ಇಡೀ ಬರಹದ ಆಶಯವನ್ನು ಈ ಸಾಲುಗಳು ಮು೦ದಿಡುತ್ತವೆ.. ""ಬದುಕಿಗಿಂತ ಸಿನೇಮಾವೇ ಚಂದ...ಇಲ್ಲಿ ವಜ್ರಮುನಿ, ಅಮರಿಷ್ ಪುರಿ... ಬಂದ ತಕ್ಷಣ ಇವರು ವಿಲನ್ ಅಂತ ಗೊತ್ತಾಗಿ ಬಿಡುತ್ತದೆ..." ನೋವನ್ನೂ ಇಷ್ಟು ಮನದಟ್ಟಾಗುವ೦ತೆ ಹೇಳೂವ ನಿಮ್ಮ ಶೈಲಿಗೆ ವ೦ದನೆಗಳು.

Ittigecement said...

ಪರಾಂಜಪೆಯವರೆ...

ಎಷ್ಟೋ ಸಾರಿ ಹಾಗೆ ಅನ್ನಿಸಿದ್ದುಂಟು...
ಬದುಕಿಗಿಂತ ಸಿನೆಮಾ ಉತ್ತಮ...
ಇಲ್ಲಿ ವಿಲನ್ ಮೊದಲೇ ಗೊತ್ತಾಗಿ ಬಿಡುತ್ತದೆ..

ನಿಜ ಜೀವನ ಹಾಗಲ್ಲವಲ್ಲ...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ರಾಜೇಶ್...

ಪಾಪ ಪುಣ್ಯ ಅಂತ ನಂಬಿದವರಿಗೆ ದೇವರು...

ನಾಸ್ತಿಕರಿಗೆ ದೇವರ ಭಯವೂ ಇರುವದಿಲ್ಲ...ಅಲ್ಲವಾ...?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸವಿಗನಸು...(ಮಹೇಶ್)

ಆಝಾದ್ ಸರ್ ಹೇಳಿದ ಹಾಗೆ...
ಎಲ್ಲ ಥರಹದವರೂ ಇರ್ತಾರೆ...

ಈ ಕೆಟ್ಟ ಸ್ವಭಾದವರನ್ನು ಒಂದು ಚೌಕಟ್ಟಿನಲ್ಲಿ ವಿಮರ್ಶೆ ಮಾಡಲು ಬಲು ಕಷ್ಟ...

ಧನ್ಯವಾದಗಳು ಮಹೇಶ್..

Ittigecement said...

ಲೋದ್ಯಾಶಿಯವರೆ...

ನಿಮಗೂಸಹ "ದಸರಾ ಹಬ್ಬದ ಶುಭಾಶಯಗಳು"

ನಿಮ್ಮ ಪ್ರೀತಿಗೆ
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಗೋಪಲ್ ಕುಲಕರ್ಣಿಯವರೆ...

ಆ ಸಮಯದಲ್ಲಿ ನನ್ನ ಮನಸ್ಥಿ ಏನಾಗಿತ್ತೆಂದರೆ..
ತಲೆಯಲ್ಲಿ ಏನೂ ಸೂಚಿಸದಂತಾಗಿ..
ಮಂಕುಕವಿದಂತಾಗಿತ್ತು..
ಮನ ಗೊಂದಲದ ಗೂಡಾಗಿತ್ತು..
ಒಂದೆಡೆ ಸ್ಥಿರವಾಗಿ , ತಾಳ್ಮೆಯಿಂದ ಕುಳಿತು ವಿಚಾರ ಮಾಡುವ ಮನಸ್ಥಿತಿಯನ್ನು ಕಳೆದು ಕೊಂಡು ಬಿಟ್ಟಿದ್ದೆ...

ಏನಾದರೂ ಬದಲಾವಣೆ ಇರಲೆಂದು ಸಿನೇಮಾ ಹೋದರೆ ಅಲ್ಲೂ ಅಸಹನೆ ಜಾಸ್ತಿಯಾಯಿತು...

ಆ ಪರಿಸ್ಥಿತಿ ಹಾಗಿತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಬಾಲು ಸರ್...

ನಾವು ಕೆಲಸ ಮಾಡಿದ ಹಣ ನಾವು ಪಡೆಯಬೇಕು.
ಅದು ನಮ್ಮ ಹಕ್ಕು.
ಅದಕ್ಕೆ ಮೋಸವಾಯಿತು ಎಂದು ದೂಷಿಸುವದು ತಪ್ಪು...
ಕೆಲಸವನ್ನು ಚೆನ್ನಾಗಿ ಮಾಡಿಕೊಟ್ಟು,
ನಮ್ಮ ಹಣವನ್ನು ಪಡೆಯಲು ಬೇಕಾದ ಒಪ್ಪಂದದ ಪತ್ರವನ್ನು ಮಾಡಿಕೊಳ್ಳ ಬೇಕು...

ನಮ್ಮಿಂದ ಅವರಿಗೂ ಅನ್ಯಾಯವಾಗಬಾರದು...
ನಾವು ಎಚ್ಚರಿಕೆಯಿಂದ ಇರಬೇಕು...

ಅಲ್ಲವಾ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...