Wednesday, June 8, 2011

ಎಲ್ಲವೂ.. ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....




ಎಲ್ಲವೂ ಸರಿ ಇದ್ದು... 
ಸಂತೋಷ.. ನಗು ಜಾಸ್ತಿಯಾದಾಗ ...
ನನಗೆ ಒಳಗೊಳಗೆ ಸಣ್ಣ ಆತಂಕ ಶುರುವಾಗುತ್ತದೆ..


ಅದು ನನ್ನ  ಪುಸ್ತಕ  ಬಿಡುಗಡೆಯ ದಿನಗಳು..


ಸಂತೋಷ.. ಸಡಗರ.. ಸಂಭ್ರಮ...!


ರಾತ್ರಿ ಸರಿಯಾಗಿ ನಿದ್ದೆ ಕೂಡ ಬರುವದಿಲ್ಲವಾಗಿತ್ತು..
ಕಾರ್ಯಕ್ರಮವೆಲ್ಲ ಹೇಗಾಗಬಹುದು ಎನ್ನುವ ಆತಂಕ..!


ರಾತ್ರಿ ಸುಮಾರು ಒಂದು ಗಂಟೆ...


ಫೋನ್.. !! 
ನೋಡಿದೆ.. ನಾಗು ಮನೆಯಿಂದ.. !!


ಲಗುಬಗೆಯಿಂದ. .. ಕಾಲ್ ತೆಗೆದು ಕೊಂಡೆ..


ನಾಗು ಹೆಂಡತಿ... ಅಳುತ್ತಿದ್ದಳು..!


"ಪ್ರಕಾಶು ಭಾವ.. 
ಇವರಿಗೆ ಹಾರ್ಟ್ ಎಟಾಕ್ ಆಗಿದೆ..ಜಲ್ದಿ ಬಾ..!!.."


ನನಗೆ ಗಾಭರಿಯಾಯಿತು..!!


"ಬರ್ತೀನಿ.. 
ಹೆದರ ಬೇಡ.. ಅಂಬ್ಯುಲೆನ್ಸ್ ಕಳಿಸ್ತೀನಿ.. 
ನಾನು ಬರುವತನಕ ಕಾಯಬೇಡಿ.. "


ಎಂದು ಲಗುಬಗೆಯಿಂದ ಫೋನ್ ಡೈರಕ್ಟರಿ ತಡಕಾಡಿ ...
ಅಂಬ್ಯುಲೆನ್ಸ್ ಗೊತ್ತು ಮಾಡಿದೆ...!


ನನಗೆ ದಿಕ್ಕು ತೋಚದಂತಾಯಿತು.. ದಿಗ್ಮೂಢನಾಗಿ ಕುಳಿತೆ...


"ನೀವು ಒಬ್ಬರೆ ಹೋಗುವದು ಬೇಡ.. ನಾನು ಬರ್ತೀನಿ.." 


ನನ್ನಾಕೆ ಅಂದಳು.. 
ಬಹುಶಃ  ನಾನು ಅಧೀರನಾಗಬಹುದು ಅಂತ..


"ಬೇಡ.. 
ಈ ಅಪರಾತ್ರಿಯಲ್ಲಿ ನೀನು ಬರುವದು ಬೇಡ..
ನಾನು ಹೋಗ್ತೀನಿ.. ಚಿಂತೆ ಬೇಡ..
ಅಲ್ಲಿ ಹೋದ ಮೇಲೆ ಫೋನ್ ಮಾಡ್ತೇನೆ.."


ಹಾಗೆ ಎದ್ದು ಹೊರಟೆ..


"ಕ್ಯಾಷ್.. ಲೈಸನ್ಸ್, ಮೊಬೈಲ್.. ತಗೊಳ್ಳಿ..."


ನನ್ನಾಕೆ ಬ್ಯಾಗ್ ಕೊಟ್ಟಳು.. ನಾನು ಹೊರಟೆ..


"ಕಾರ್ ಸ್ಪೀಡ್ ಬಿಡಬೇಡಿ... ನಾಗೂಗೆ ಏನೂ ಆಗುವದಿಲ್ಲ.."


ಅವಳು ನನ್ನ ಧೈರ್ಯಕ್ಕೆ ಹೇಳಿದ ಮಾತುಗಳು.. 
ನನಗೆ ಗೊತ್ತಾಗುತ್ತಿತ್ತು...


ನಾಗುವಿಗೆ ಹಾರ್ಟ್ ಎಟಾಕ್.. !!
ನಾನು.. !
ನನ್ನ ಗೆಳೆಯರು...!
ನಾವೆಲ್ಲ ಸಾಯುವ ದಿನಗಳು ಹತ್ತಿರ ಬಂದುಬಿಟ್ಟೀತಾ..?

ಇಷ್ಟು ಬೇಗ....?

ನನ್ನ ನಾಗು ಸಾಯ್ತಾನಾ?? !! 
ಅವನ ಸಾವು ನಾನು ನೋಡಬೇಕಾ..?


ಕಣ್ಣೆಲ್ಲ ಮಂಜಾದವು.. ಕಾರನ್ನು ಪಕ್ಕಕ್ಕೆ ಹಾಕಿಕೊಂಡೆ..


ಸ್ವಲ್ಪ ಹೊತ್ತಿನ ನಂತರ ಧೈರ್ಯ ತಂದುಕೊಂಡೆ..


ನನಗೆ  ನಾನೇ ಸಮಾಧಾನ ಮಾಡಿಕೊಂಡೆ...
ಸಾವರಿಸಿಕೊಂಡೆ...
ನನ್ನ ನಾಗು ಇನ್ನೂ ಇದ್ದಾನೆ.. !
ಅವನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು...!


ಜಾಗ್ರತವಾದೆ...


ಹೆಚ್ಚಿಗೆ ತೊಂದರೆ ತೆಗೆದುಕೊಳ್ಳದೆ.. ನಾರಾಯಣ ಹೃದಯಾಲಯಕ್ಕೆ ಬಂದೆ...


ನನ್ನನ್ನು ನೋಡಿ ನಾಗುವಿನ ಮಡದಿ ಓಡೋಡಿ ಬಂದಳು...


" ಈಗ ಐಸಿಯೂ ದಲ್ಲಿಟ್ಟಿದ್ದಾರೆ... !
ಡಾಕ್ಟರ್ ಇನ್ನೂ ಹೊರಗೆ ಬಂದಿಲ್ಲ..."


ಬಿಕ್ಕಿ.. ಬಿಕ್ಕಿ ಅಳುತ್ತಿದ್ದಳು..... 
ಅವಳಿಗೆ ಸಮಾಧಾನದ ಮಾತಾಡಿದೆ...


"ನಾಗುವಿಗೆ ಏನೂ ಆಗುವದಿಲ್ಲ... 
ಧೈರ್ಯವಾಗಿರು...ದೇವರಿದ್ದಾನೆ.."


ಇಷ್ಟು ಹೇಳುವಾಗ ಗಂಟಲು ಉಬ್ಬಿ ಬಂತು.. 
ಮುಂದೆ ಹೇಳಲಾಗಲಿಲ್ಲ...

ಅಸಹಾಯಕ...
ಅಸಹನೀಯ ಕ್ಷಣಗಳು...!

ಏನಂತ ಸಮಾಧಾನ ಪಡಿಸಲಿ?
ಹೇಗೆ?


ಏನು ಹೇಳಲಿ?


ಇವರಿಬ್ಬರ  ಎಷ್ಟೊಂದು ನಗುವಿನಲ್ಲಿ...
ಖುಷಿಯ ಕ್ಷಣಗಳಲ್ಲಿ ನಾನು ಸಾಕ್ಷಿಯಾಗಿದ್ದೆ...!


ಇಬ್ಬರೂ ಸುಮ್ಮನೆ ಕುಳಿತೆವು....
ಮತ್ತೆ ಅವಳೇ ಮಾತು ಶುರುಮಾಡಿದಳು..


ಅವಳಿಗೆ ನನ್ನ ಮೇಲೆ ಅಪಾರ ಭರವಸೆ...


"ಭಾವ.. 
ಸಾಯಂಕಾಲ ಸರಿಯಾಗಿಯೇ ಇದ್ದರು.. 
ಊಟ ಚೆನ್ನಾಗಿಯೇ ಮಾಡಿದ್ದರು...
ಟಿವಿ ನೋಡುತ್ತ ಕುಳಿತ್ತಿದ್ದವರಿಗೆ ..
ಇದ್ದಕ್ಕಿದ್ದಂತೆ..ಮೈ ಬೆವರತೊಡಗಿತು.. !
ಎದೆ ನೋವು ಅಂತ ಹೇಳಿದರು...
ನನಗೆ ಗಾಭರಿಯಾಯಿತು.. ತಕ್ಷಣ ನಿನಗೆ ಫೋನ್ ಮಾಡಿದೆ..


ಇಲ್ಲಿಗೆ ಬರುತ್ತಿರುವಾಗಲೂ.. " ಪ್ರಕಾಶು ಬಂದನಾ?.."  ಅಂತಿದ್ದರು..."


ನನಗೆ ನಾಗುವಿನ ಪ್ರೀತಿ ಕಣ್ಣಿಗೆ ಕಟ್ಟಿತು...


ನನಗೆ ಕಂಟ್ರೋಲ್ ಮಾಡಿಕೊಳ್ಳುವದು ಕಷ್ಟವಾಯಿತು....


ಇವಳ ಎದುರಿಗೆ ಅಳಬಾರದು... 
ಮತ್ತಷ್ಟು ಧೈರ್ಯಗುಂದುತ್ತಾಳೆ..


ಎದ್ದು ನಿಂತೆ... ಹೊರಗಡೆ ಬಂದೆ...


ಪೆಟ್ಟಿಗೆ ಗಪ್ಪತಿ ನೆನಪಾದ.. !
ತಕ್ಷಣ ಫೋನ್ ಮಾಡಿದೆ.. 


ಸಮಯ ನಡು ರಾತ್ರಿ ಎರಡೂವರೆ....!


"ಛೇ.. ಈಗ ಮಾಡಬಾರದಿತ್ತು"


ಅಷ್ಟರಲ್ಲಿ ಕಾಲ್ ಮಾಡಿಯಾಗಿತ್ತು..


"ಏನು ಪ್ರಕಾಶು..? ಏನಾಯ್ತು ಇಷ್ಟು ಹೊತ್ತಿನಲ್ಲಿ..?.."


"ನೋಡೊ... ಗಪ್ಪತಿ..
ನಾರಾಯಣ ಹೃದಯಾಲಯಕ್ಕೆ ಜಲ್ದಿ ಬಾ..."


"ಯಾಕೋ..? !!"


"ನಾಗುವಿಗೆ ಹಾರ್ಟ್ ಎಟಾಕ್ ಆಗಿದೆ.. 
ಬಾ ಮಾರಾಯಾ...
ನನಗೊಬ್ಬನಿಗೆ ಏನೂ ಮಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ.."


ಹೇಳುತ್ತಿರುವಂತೆ  ದುಃಖ ಉಮ್ಮಳಿಸಿತು... 
ಫೋನ್ ಕಾಲ್ ಕಟ್ ಮಾಡಿದೆ...


ನಾಗು...
ಅವನ ತುಂಟತನ... ಹುಚ್ಚು ಐಡಿಯಾಗಳು...
ಅವನ ಎಡವಟ್ಟುಗಳು...!
ನನಗೆ ಏನೇ ಆದರೂ  ನನ್ನ ನಾಗು ಇದ್ದಾನೆ ಎನ್ನುವ ಧೈರ್ಯ...!

ನನ್ನ ಬದುಕಿನ ಭರವಸೆ ಅವನು....!

ಈ  ನಾಗು ನನಗೆ ಏನು..? ಎಷ್ಟು...?


ಆಕಾಶ ನೋಡಿದೆ... 
ನಕ್ಷತ್ರಗಳು... ಅಲ್ಲಲ್ಲಿ ಚದುರಿದ ಮೋಡಗಳು...


ಇಷ್ಟು ದೊಡ್ಡ ಭೂಮಿ... 
ಕಣ್ಣಿಗೆ ಕಾಣುವಷ್ಟು ವಿಶಾಲವಾದ ಆಕಾಶ...
ಮರಗಳು..
ಎಷ್ಟೆಲ್ಲ ಜನರು...! 


ಯಾರಿಗೆ.. ಯಾರೋ...!


ಎಲ್ಲರಿಗೂ ಅವರದ್ದೇ ಆದ ಪ್ರಪಂಚ...! 
ಅವರದ್ದೇ.. ಬಳಗ.. !!


ಇಲ್ಲಿ ಯಾರೂ ಶಾಶ್ವತ ಅಲ್ಲ...!


ಯಾಕೋ ಒಂಟಿಯಾದೆ ಅನ್ನಿಸಿತು...!


ನನ್ನ ನಾಗು ಬದುಕಬೇಕು... 
ಬದುಕಲ್ಲಿ ನೋಡುವಂಥಹ ಇನ್ನೂ ಖುಷಿಗಳಿವೆ...


ಆಸೆಗಳು ಈಡೇರಿದರೂ ಕೊನೆಯಾಗದ ಬಯಕೆಗಳು...!


ನಮಗೂ ಸಾವು ಹತ್ತಿರ ಬಂತು...!
ವಯಸ್ಸಾಯಿತು.. !


ನನ್ನ ಮಡದಿ.. ಮಗ.. 
ಅಣ್ಣ.. ಅಕ್ಕ.. ಎಲ್ಲರನ್ನೂ ಬಿಟ್ಟು ಹೋಗಲೇ ಬೇಕು...!


ಅಮ್ಮನನ್ನೂ....?...


ನಾನು ಹೋಗಿ ಬಿಟ್ಟರೆ ...
ಮಗನ.. ಮಡದಿಯ ಭವಿಷ್ಯವೇನು...?
ಅವರಿಗೆ ಮುಂದೆ ಸಾಕಾಗುವಷ್ಟು ಹಣವನ್ನೂ.. ಆಸ್ತಿಯನ್ನೂ ಮಾಡಿಡಲಿಲ್ಲ...!



ಸಾವು ಇಷ್ಟು ಬೇಗ ಬಂದು ಬಿಡುತ್ತಾ..??


ಏನಿದು.. ಸಾವು..?

ಛೇ...! 
ಎಷ್ಟೆಲ್ಲ ಅಸಹಾಯಕತೆ...!

ಆಕಾಶ ನೋಡಿದೆ... ಕಣ್ಣಲ್ಲಿ ನೀರಾಡಿತು...


ದೊಡ್ಡದಾಗಿ ಅಳಬೇಕು ಅನ್ನಿಸಿತು...!

ಎಲ್ಲವೂ...
ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....!


"ಭಾವ..  ಬಾವಾ..ಬಾ... ಬಾ..
ಡಾಕ್ಟರ್ ಬರ್ತಾ ಇದ್ದಾರೆ...!..
ಡಾಕ್ಟರ್ ಹತ್ತಿರ ಮಾತಾಡು.. 
ಬಾ ಭಾವಾ...!"


ನಾಗುವಿನ ಮಡದಿ ಗಾಭರಿಯಿಂದ ಕರೆದಳು...


ದೂರದಲ್ಲಿದ್ದ ಡಾಕ್ಟರ್ ಹತ್ತಿರ ಬರುತ್ತಿದ್ದರು.....








(ದಯವಿಟ್ಟು ಪ್ರತಿಕ್ರಿಯೆಗಳನ್ನೂ.. ಓದಿ..)

Saturday, June 4, 2011

ಸಾಯಿಸಿ ಬಿಟ್ರೆ ... ಖರ್ಚು ಕಡಿಮೆ ..!!




ಇತ್ತೀಚೆಗೆ ಕೆಲಸಗಾರರ ಸಮಸ್ಯೆ ಬಹಳವಾಗಿಬಿಟ್ಟಿದೆ...


ನಾನೂ ನನ್ನ ಮೇಸ್ತ್ರಿಯೂ ಪ್ರತಿ ಶನಿವಾರ ದೇವರಲ್ಲಿ ತಪ್ಪದೆ ಪ್ರಾರ್ಥನೆ ಮಾಡುತ್ತೇವೆ...


"ದೇವರೆ..
ನಾವು ಕೊಟ್ಟ ಹಣ ಭಾನುವಾರವೇ ಖರ್ಚಾಗಿಬಿಡಲಿ.....
ಅಪ್ಪಿತಪ್ಪಿಯೂ  ...
ಸೋಮವಾರದ ತನಕ ಉಳಿಯದಿರಲಿ.."


ನಾವು ಶನಿವಾರ ಕೊಟ್ಟ ಹಣ ಭಾನುವಾರ ಖರ್ಚಾಗಿಬಿಟ್ಟರೆ ...
ನಮ್ಮ ಕೆಲಸಗಾರರು ಸೋಮವಾರ ತಪ್ಪದೆ ಕೆಲಸಕ್ಕೆ ಬರ್ತಾರೆ...


ಹೆಚ್ಚಿನದಾಗಿ ನಮ್ಮ ಪ್ರಾರ್ಥನೆ ದೇವರಿಗೆ ಕೇಳಿಸಿರುತ್ತದೆ..


ಗಲ್ಲಿಗೊಂದು ಬಾರು...
ಹೆಂಡದಂಗಡಿಗಳು ನಮ್ಮ ಪ್ರಾರ್ಥನೆಯನ್ನು ಸಾರ್ಥಕ ಮಾಡಿಸಿರುತ್ತವೆ..

ದೇವರ ಮೇಲೆ ನಂಬಿಕೆಯೂ ಬಂದುಬಿಡುತ್ತದೆ...


ಅಂದು ಶನಿವಾರ ಮೇಸ್ತ್ರಿಯ ಸಂಗಡ ಲೆಕ್ಕಾಚಾರ ಮಾಡುತ್ತ ಕುಳಿತ್ತಿದ್ದೆ..


ಮೇಸ್ತ್ರಿ ರಾಜೇಂದ್ರ ಹೇಳಿದ..


"ಸರ್.. 
ಈ ಸಾರಿ ನಮ್ಮ ಕಾಳಿಯಪ್ಪನ್ ಗೆ ಕೂಲಿ ಹಣ ಪೂರ್ತಿಕೊಡಬೇಡಿ...
ನಮಗೆ ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡ್ತಾ ಇಲ್ಲ..."


ನನಗೆ ಬಹಳ ಆಶ್ಚರ್ಯವಾಯಿತು..
ಕಾಳಿಯಪ್ಪನ್ ಒಳ್ಳೆಯ ಕೆಲಸಗಾರ...
ಇಬ್ಬರ ಕೆಲಸವನ್ನು ಒಬ್ಬನೇ.. ಮಾಡಬಲ್ಲ..


"ಹೌದಾ?? !! " 


"ಹೌದು ಸಾರ್..
ಮೊನ್ನೆ ನಮಗೆ ಅರ್ಜೆಂಟ್ ಇದ್ದಾಗ ಬರ್ಲೇ ಇಲ್ಲ.. 
ಬೇರೆಯವರ ಹತ್ರ ಕೆಲ್ಸ ಮಾಡಿಸ್ದೆ.....
ನಮಗೆ ಅಗತ್ಯ ಇದ್ದಾಗಲೆ ಕೈ ಕೊಡ್ತಾನೆ.."


ಮೇಸ್ತ್ರಿ ಯಾರ ಬಗ್ಗೆಯೂ ಹಾಗೆಲ್ಲ ಚಾಡಿ ಹೇಳುವದಿಲ್ಲ...


"ಆಯ್ತು ಬಿಡಿ.. ಹಾಗೆ ಮಾಡೋಣ " ಅಂದೆ


ಅಷ್ಟರಲ್ಲಿ ಫೋನ್..
ನೋಡಿದೆ.. ಗೆಳೆಯ ನಾಗು..!


ನಾಗು ಅಂದರೆ ಮುಖದಲ್ಲಿ ನಗು ಬಂದೆ ಬರುತ್ತದೆ....


"ಪ್ರಕಾಶು.. 
ಗಿರಿನಗರದ ಹತ್ರ ಇದ್ದೇನೆ.. ನೀನು ಎಲ್ಲಿದ್ದೀಯಾ?"


"ನಾನೂ ಗಿರಿನಗರದಲ್ಲೇ ಇದ್ದೀನಿ...
ಜಲ್ದಿ ಬಾ.. ಇಬ್ರೂ ಊಟಕ್ಕೆ ಹೋಗೋಣ.. 
ಹಸಿವೆ ಆಗ್ತ ಇದೆ"


ನಾನು ವಿಳಾಸ ಕೊಟ್ಟೆ.. ಆತ ನಮ್ಮ ಬಿಲ್ಡಿಂಗ ಹತ್ರಾನೆ ಬಂದ...


ನಾಗು ಮುಖ ಸಪ್ಪೆಯಾಗಿತ್ತು..


"ಏನಾಯ್ತಪ್ಪಾ..? ಏನು ಸಮಸ್ಯೆ?"


"ಪ್ರಕಾಶು..
ಕೊಟ್ಟಂವ ಕೋಡಂಗಿ..
ತಗೊಂಡವನು ವೀರಭದ್ರ... !"


" ಏನಾಯ್ತು? 
ಎಮ್ಮೆಲ್ಲೆ , ಎಂಪಿಗಳಿಗೆ ವೋಟ್ ಕೊಟ್ಟಿದ್ದಕ್ಕೆ ಬೇಸರ ಆಯ್ತೇನೋ..?"


"ಇಲ್ಲಪಾ...
ಅವರಿಗಾದರೆ.. ಮನಸು ತೃಪ್ತಿಯಾಗುವಷ್ಟು ಬಯ್ದು ಸಮಾಧಾನ ತಗೋಬಹುದು...


ಅದಲ್ಲ.. ಇದು...


ನನ್ನ ಕಲೀಗ್ ಒಬ್ಬ.. ಸಭ್ಯಸ್ಥ ಅಂತ ತಿಳಿದು ಸಾಲ ಕೊಟ್ಟಿದ್ದೆ..
ಈಗ ಕಣ್ಣು ತಪ್ಪಿಸಿ ತಿರಗ್ತಾ ಇದ್ದಾನೆ..
ಸುಳ್ಳು ಹೇಳ್ತಾನೆ.."


"ಮಾರಾಯಾ ...
ಗಂಭೀರ ಸಮಸ್ಯೆ ಇದ್ದಿರ ಬಹುದು... 
ದುಡುಕಬೇಡಪ್ಪಾ...
ನಾನೂ ಕೂಡ ಅಂಥಹ ಸಮಸ್ಯೆ ದಾಟಿ ಬಂದಿದ್ದೀನಿ..."


"ಇಲ್ಲಪ್ಪಾ... 
ಈತನಿಗೆ ಸಾಲ ಕೇಳೊ ಚಟ..
ಇವತ್ತು ನೋಡಿದರೆ ...
ಸುಮಾರು ಹದಿನೈದು ಜನರ ಹತ್ರ ಸಾಲ ಮಾಡಿದಾನೆ..
ನಂದು  "ತಿರುಪತಿ  ಯಂಕಟರಮಣಾ..... ಗೋವಿಂದಾ.. ಗೋ..ವಿಂದಾ.. !"
ಆಸೆ ಬಿಡ್ತಾ ಇದ್ದೀನಿ... ಕಣೋ.."


"ನೋಡಪಾ... ನಾಗು..
ಕೊಟ್ಟ ಹಣ ಕೇಳದೆ ಹೋಗಿತ್ತು ಅಂತಾರೆ..
ನೀನು ಕೇಳ್ತಾ ಇರಬೇಕು.. 
ಅವರ ಹತ್ರ ಕೂತ್ಕೊಂಡು ಮಾತಾಡು..
ಏನಾದ್ರೂ ಪರಿಹಾರ ಸಿಗ್ತದೆ.."


"ಅಯ್ಯೋ ಪ್ರಕಾಶು...
ಈತ ನನ್ನ ಕಲೀಗ್ ಎಲ್ಲರ ಹತ್ರ ಸಾಲ ಮಾಡಿದಾನೆ..
ಎಲ್ಲರ ಹತ್ರಾನೂ..
ಒಂದೊಂದು ನೆಪ.. ಒಂದೊಂದು ಕಟ್ಟು ಕಥೆ...
ಸುಳ್ಳು...!
ನಂಬಿ ಕೆಟ್ಟು ಹೋದೆ ಪ್ರಕಾಶು..."


"ಏನು ಹೇಳಿ ಸಾಲ ಕೇಳಿದ್ದಾನೆ?"


"ನನ್ನ ಹತ್ರ ಅವನ ಮಾವನಿಗೆ ಕಿಡ್ನಿ ಅಪರೇಷನ್ ಇದೆ... ಅರ್ಜಂಟ್ ಹಣ ಬೇಕು  ಅಂತ ತಗೊಂಡ..
ನನ್ನ ಗೆಳೆಯ ರಮೇಶ್ ಹತ್ರ ತನ್ನ ಅಣ್ಣನಿಗೆ ಅಪಘಾತ ಆಗಿದೆ..
ತುರ್ತಾಗಿ ಹಣ ಬೇಕು ಅಂತ ತಗೊಂಡಿದ್ದಾನೆ...


ಇವನಿಗೆ ಹಣ ಅಗತ್ಯ ಇರುವಾಗ ...
ಯಾರಿಗಾದರೂ ಏನಾದ್ರೂ ಮಾಡಿ..
ಆಸ್ಪತ್ರೆ ಸೇರ್ಸಿಬಿಡ್ತಾನೆ ಮಾರಾಯಾ..!
ಆಮೇಲೆ.. ಖರ್ಚು.. ಹಣಾ.. ಅಂತಾ ಸಾಲಾ ತಗೋತಾನೆ.."


ಅಲ್ಲೇ ಇದ್ದ ಮೇಸ್ತ್ರಿ ರಾಜೇಂದ್ರ..


"ನಾಗೂ ಸಾರ್..
ನೀವು..ಏನೇ ಹೇಳಿ ...
ನಿಮ್ಮ ಫ್ರೆಂಡು ಸಾವಿರ ಪಾಲು ಬೇಕು...!
ತುಂಬಾ ಒಳ್ಳೆಯವರು ಸಾರ್.."


ನಾಗುಗೆ ಆಶ್ಚರ್ಯವಾಯಿತು...


"ಅದು ಹೇಗೋ..?"


" ನಾಗು.. ಸಾರ್...
ನಮ್ಮ ಹತ್ರ ಒಬ್ಬ ಕಾಳಿಯಪ್ಪನ್ ಅಂತ ಇದ್ದಾನೆ..
ಅವನು ನಮಗೆ ಅಗತ್ಯ ಇರುವಾಗ ..
ಕೆಲಸಕ್ಕೆ ಬರೋದೆ ಇಲ್ಲ...


ಕಾರಣ ಕೇಳಿದ್ರೆ ಯಾರನ್ನಾದ್ರೂ ಸಾಯಿಸಿ ಬಿಡ್ತಾನೆ..!!"


ನಾಗು  ಹುಬ್ಬು ಮೇಲಕ್ಕೇರಿತು...!!
ಬಹಳ ಹೊತ್ತು ಕೆಳಗೆ ಇಳಿಯಲೇ ಇಲ್ಲ... !!


"ಏನು ಮೇಸ್ತ್ರಿ...? 
ಸಾಯಿಸಿ ಬಿಡ್ತಾನಾ?
ಕೊಲೆ ಮಾಡ್ತಾನೇನೋ..?.."


"ಹೌದು ಸಾರ್..!!
ಮೊನ್ನೆ ಯಾಕೋ ಬರ್ಲಿಲ್ಲ ಅಂದೆ..


" ನನ್ನ ಹೆಂಡ್ತಿ ಅಕ್ಕ ತೀರ್ಕೊಂಡು ಬಿಟ್ರು ಸಾರ್.. ಬರ್ಲಿಕ್ಕೆ ಆಗ್ಲಿಲ್ಲ" ಅಂದ.."


" ಹೌದಾ? !!"


"ಅಷ್ಟೇ.. ಅಲ್ಲಾ..ಸಾರ್.. 
ಅದಕ್ಕೂ ಮೊದಲು ಕೈ ಕೊಟ್ಟಾಗ... 
ಅವನ ಸ್ವಂತ ಮಾವನ್ನ ಸಾಯಿಸಿ  ಬಿಟ್ಟಿದ್ದ..!!


ಅವನು ರಜೆ ಹಾಕ್ದಾಗಲೆಲ್ಲ ಯಾರನ್ನಾದ್ರು ಸಾಯಿಸಿ ಬಿಡ್ತಾನೆ ಸಾರ್..!!..
ಬಲು ಡೇಂಜರ್ ನನ್ನಮಗ ಸಾರ್.. !!"


"ಆಯೋ ರಾಮಾ.....!! 
ಹೌದೇನೋ...??"


"ಸಾರ್..
ತಪ್ಪು ತಿಳ್ಕೋಬೇಡಿ.. 
ನಿಮ್ಮ ಸ್ನೇಹಿತರು ತುಂಬಾ ಒಳ್ಳೆಯವರು..!


ಅವರು ತಮ್ಮ ಜನರಿಗೆ ಏನಾದ್ರೂ ಮಾಡಿ...
ಹೇಗಾದ್ರೂ  ಮಾಡಿ...
ಆಸ್ಪತ್ರೆ ಸೇರ್ಸಿ...ಅಪರೇಷನ್ ಮಾಡ್ಸಿ..


ಐಸಿಯೂ ದಲ್ಲಿಡ್ತಾರೆ..


ನಮ್ಮ ಕಾಳಿಯಪ್ಪನ್ ಹಾಗೆ ಸಾಯ್ಸಲ್ಲ...


ನಿಮ್ಮ ಫ್ರೆಂಡು ತುಂಬಾ ಒಳ್ಳೆಯವರು.. ಸಾ...!!.."


ನಾಗು  ಹೊಟ್ಟೆ ತುಂಬಾ ನಕ್ಕುಬಿಟ್ಟ...!


"ಮೇಸ್ತ್ರಿ..


ಸಾಯಿಸಿ  ಬಿಟ್ರೆ ಖರ್ಚು ಕಡಿಮೆ ಕಣೋ...!


ಈ ಆಸ್ಪತ್ರೆ.. 
ಅಪರೇಷನ್ನು..
ಐಸಿಯೂ ...
ಡಾಕ್ಟರ್ ಬಿಲ್ಲುಗಳು....ಸಿಕ್ಕಾಪಟ್ಟೆ ಖರ್ಚು ಕಣಪಾ...!


ಹಾಗಾಗಿ ನನ್ನ ಸ್ನೇಹಿತನಿಗಿಂತ ನಿಮ್ಮ ಕಾಳಿಯಪ್ಪನ್  ತುಂಬಾ ಒಳ್ಳೆಯವನು...


ನಿಮಗೆಲ್ಲ ಖರ್ಚಿನ ಬಾಬ್ತು ಹಾಕೋಲ್ಲ...


ನಿಮ್ಮ ಕಾಳಿಯಪ್ಪನ್ ತುಂಬಾ.. ತುಂಬಾ..ಒಳ್ಳೆಯವನು..."


ಸರ್ಟಿಫಿಕೆಟ್ ಕೊಟ್ಟುಬಿಟ್ಟ...!!


ನನಗೂ ಮೇಸ್ತ್ರಿಗೂ ಗೊಂದಲ ಉಂಟಾಯಿತು...


ತಲೆಹಾಕಬೇಕೋ ಬೇಡವೊ ಅಂತ ವಿಚಾರ ಮಾಡುತ್ತ ಸುಮ್ಮನಿದ್ದು ಬಿಟ್ಟೇವು....



Sunday, May 15, 2011

...ತಿರುವು...


ಈ ಗಂಡಸರು... ಮಹಾ ಬುದ್ಧಿವಂತರು....

ಹೆಣ್ಣನ್ನು  ಯಾಕೆ ಅಷ್ಟೆಲ್ಲ ಹೊಗಳಿ ಅಟ್ಟಕ್ಕೆ ಏರಿಸಿದರು ಅಂತ ಗೊತ್ತಾಗಿದ್ದು ...


ನಾನು ತಾಯಿಯಾದ ಮೇಲೆ...


ಮುಟ್ಟಲೂ  ಆಗದ ಮಾಂಸದ ಮುದ್ದೆಯಂತಿರುವ..
ಯಾವಾಗಲೂ ಅಳುವ ಮಕ್ಕಳ ...
ಬೇಕು ಬೇಡಗಳನ್ನು ನೋಡಲು ಈ ಗಂಡಸರಿಂದ ಆದೀತೆ?


ಅದಕ್ಕಾಗಿ  ಬಹಳ ಚಂದವಾಗಿ  " ಮಾತೃದೇವೋ ಭವ" ಅಂತ ಹೇಳಿ...
ಒಂದೆರಡು ಚಂದದ ಶ್ಲೋಕದ ಅರ್ಥವಿವರಣೆ ಕೊಟ್ಟು..
ತಾವು ಹಾಯಾಗಿ ಆರಾಮಾಗಿ  ಕುಳಿತು ಬಿಟ್ಟರು..


ನನಗೆ ಈ ಗಂಡಸರನ್ನು..
ಅದರಲ್ಲೂ  ಆಲಸ್ಯದ  ಅವತಾರವಾಗಿರುವ ....
ನನ್ನ ಗಂಡನನ್ನು ನೋಡಿದರೆ  ಎಲ್ಲಿಲ್ಲದ ಕೋಪ..


ನನ್ನ ಗಂಡ ಅಲ್ಪತೃಪ್ತ...
"ಇಷ್ಟಿದೆಯಲ್ಲ  ಸಾಕು" ಅನ್ನುವಂಥಹ ಪ್ರಾಣಿ..


ನಾನು  ಬಹಳ ಬಹಳ ಮಹತ್ವಾಕಾಂಕ್ಷಿ...


ಇನ್ನೂ ಸಾಧನೆ ಮಾಡಬೇಕು.. ! ಇನ್ನೂ ಸಾಧಿಸಬೇಕು...!


ಏನು ಮಾಡಲಿ  ?  ಈ ಹಾಳು ಹೆಣ್ಣು ಜನ್ಮ..!


ಮದುವೆಯಾಗ ಬೇಕು... 
ತಾಳಿ ಕಟ್ಟಿಸಿಕೊಳ್ಳ ಬೇಕು...
ಮಕ್ಕಳನ್ನು ಹಡೆಯ ಬೇಕು...
ಹಾಲುಣಿಸಿ ದೊಡ್ಡ ಮಾಡಬೇಕು...


 ಎಲ್ಲ ತೊಡರುಗಳನ್ನು  ಹೆಣ್ಣಿನ  ಕಾಲಿಗೆ ಕಟ್ಟಲಾಗಿದೆ...


ಪ್ರಕೃತಿಯೂ  ಸಹ.. ಹೆಣ್ಣಿಗೆ  ಅನ್ಯಾಯ ಮಾಡಿದೆ..


ಹೊರಗೆ ದುಡಿಯ ಬೇಕು... ಅಡಿಗೆ ಮನೆಯಲ್ಲಿ ಅಡುಗೆ ಮಾಡಬೇಕು...
ಪಾತ್ರೆ ತೊಳೆಯ ಬೇಕು.. ನೆಲ ಒರೆಸಬೇಕು..


"ಸ್ವಲ್ಪ ಸಹಾಯ ಮಾಡಿ" ಅಂತ  ನನ್ನ ಗಂಡನನ್ನು ಕೇಳಿದರೆ...


"ಯಾಕೆ ನೀನು ದುಡಿಯ ಬೇಕು..?
ಮನೆಯಲ್ಲೇ ಹಾಯಾಗಿರು..
ನಾನು ದುಡಿದು ತರುತ್ತೇನಲ್ಲ ಸಾಕು ಬಿಡು"


ನನ್ನವರ  ಸಂಪಾದನೆ ನನಗೆ ಗೊತ್ತಿಲ್ಲವೆ..?


ವಾರಕ್ಕೊಂದು ಸಿನೇಮಾ ನೋಡಲೂ ಆಗದಂಥಹ ಸಂಪಾದನೆ..


ಪಾನಿಪುರಿ... 
ಕೊನೆ ಪಕ್ಷ ವಾರಕ್ಕೊಂದು ಹೋಟೆಲ್ ಊಟ....


ನನ್ನ ಅಲಂಕಾರಿಕ ಪ್ರಸಾಧನಗಳು...!
ಬ್ಯೂಟಿ ಪಾರ್ಲರ್...
ಓಲೆ ಕ್ರೀಮ್... ಎಲ್ಲವನ್ನೂ  ಮರೆತು ಬಿಡಬೇಕಷ್ಟೇ...


ಮನೆಯ ಕೆಲಸದಲ್ಲೂ  ಸಹಾಯ ಮಾಡುವದಿಲ್ಲ..


ಮನೆಗೆ ಬಂದವನೇ... 
ಟಿವಿ ಮುಂದೆ  ಪ್ರತಿಷ್ಥಾಪನೆಯಾದರೆ  
ಅಲ್ಲಿಯೇ ಊಟ..
ಏಳುವದು ರಾತ್ರಿ ಮಲಗುವೇಳೆ... ಬೆಡ್ ರೂಮಿಗೆ ಹೋಗುವಾಗ...


ಸರಿ....
ಇವೆಲ್ಲವನ್ನೂ ಸಹಿಸಿಕೊಳ್ಳೋಣ...


ಹೋಗಲಿ ಈತ ..ರಸಿಕನೋ...?


ಪಿಸು ಮಾತು.... 
ರಸಿಕ ನಗು...!
ಸಿನೆಮಾ ಹಾಡುಗಳು...!
ತುಂಟತನ...


ನನ್ನ ಅಲಂಕಾರವನ್ನು ಮೆಚ್ಚಿ ಸೂಸುವ  ಆಸೆ ಕಣ್ಣುಗಳು..!


ಯಾವುದೂ ಇಲ್ಲ... !
ಏನೂ... ಇಲ್ಲ....!!


ನನ್ನ ಕಷ್ಟ..ನಿಮಗೆ ಅರ್ಥ ಆಗೋ ವಿಷಯ ಅಲ್ಲ ಬಿಡಿ..


ಕೆಲವು ಸಾರಿ ನನ್ನ ಅಪ್ಪ, ಅಮ್ಮನ ಬಗೆಗೆ ಎಲ್ಲಿಲ್ಲದ  ಕೋಪ ಬರುತ್ತದೆ...


ನಾನು ಒಬ್ಬಳೇ ಮಗಳು ಅಂತ  ಮುದ್ದಿನಿಂದ ..
ಕೆಳಿದ್ದೆಲ್ಲವನ್ನೂ  ಕೊಟ್ಟು.. ಬೆಳೆಸಿದರು..


ನಾನು  ನನ್ನ  ಕೆಲಸವನ್ನು ಬಹಳ ಶೃದ್ಧೆಯಿಂದ ಮಾಡುತ್ತೇನೆ..
ನನ್ನ ಕೆಲಸದ ಬಗೆಗೆ  ಯಾರೂ  ಎದುರು ಮಾತನಾಡುವದಿಲ್ಲ...


ನನ್ನ ತಪ್ಪುಗಳನ್ನು ಬೇರೆಯವರು ಹೇಳಿದರೆ ನನಗೆ  ಆಗುವದೇ ಇಲ್ಲ..


ಹಾಗಾಗಿ ಬಹಳ ಮುತುವರ್ಜಿಯಿಂದ ಮಾಡುತ್ತೇನೆ...


ತಪ್ಪೇ ಇಲ್ಲದೆ ಕೆಲಸ ಮಾಡುವ ನನ್ನನ್ನು ಕಂಡರೆ.. 
ಬಹಳ ಜನರಿಗೆ ಅಸೂಯೆ..
ಇನ್ನು ಕೆಲವರು ನನಗೆ  ಸೊಕ್ಕು..
ಜಂಬ.. ಅನ್ನುತ್ತಾರೆ..ಹೇಳಲಿ ಬಿಡಿ... ನಾನು ತಲೆ ಕೊಳ್ಳುವದಿಲ್ಲ..


ನನಗೆ ಬೇಕಿತ್ತೋ ಬೇಡಿತ್ತೋ ....
ನನ್ನಪ್ಪ ನನಗೊಂದು ಮದುವೆ ಮಾಡಿದರು...


ಇದೆ.. ಈ...ಗಂಡನ ಸಂಗಡ..


ನನ್ನ ಮಹತ್ವಾಕಾಂಕ್ಷೆ ಬಗೆಗೆ ಹೇಳಿದ್ದೆ.....
ಮದುವೆಯ ಸಂದರ್ಭದಲ್ಲಿ  ಕೋಲೆ ಬಸವನ ಹಾಗೆ ತಲೆ ಆಡಿಸಿದ...
ಬಹುಷಃ ನನ್ನ ಚಂದಕ್ಕೆ ಮರುಳಾಗಿರಬೇಕು..


ಮದುವೆಯಾದ ಮೇಲೆ ಇವನ ಅಸಲಿ ಬಣ್ಣ ಗೊತ್ತಾಗಿದ್ದು...


ನನ್ನ ಬದುಕು ನಿಂತ ನೀರಾಗುವದು ನನಗೆ ಬೇಕಿರಲಿಲ್ಲ...


ಮಗುವನ್ನು ಎತ್ತಿಕೊಂಡು..
ಗಂಡನ ಮನೆಯನ್ನು ಬಿಟ್ಟು ಬಂದೆ...


ಎಲ್ಲ ಅಪ್ಪ ಅಮ್ಮಂದಿರು ಹೇಳುವ  ಹಾಗೆ  ನನಗೂ ಬಹಳ ಉಪದೇಶ ಸಿಕ್ಕಿತು..


"ಹೊಂದಿಕೊಂಡು ಹೋಗು ಮಗಳೇ... " ಅಂತ


ನನ್ನಿಂದ ಅದು ಸಾಧ್ಯವಾಗದ ಮಾತು...


ಇಲ್ಲಿ ಅಪ್ಪನ ಮನೆಯಲ್ಲಿ ಮಗುವಿನೊಂದಿಗೆ ಬದುಕುವದು ಕಷ್ಟವಾದರೂ..
ಬೇಸರವಿರಲಿಲ್ಲ....


ನನ್ನ ಗಂಡನೂ ಆಗಾಗ ಫೋನ್ ಮಾಡುತ್ತಿರುತ್ತಾನೆ..
ಅವನ ಫೋನ್ ಎಂದರೆ  ನನಗೆ ಮೈಯೆಲ್ಲ  ಉರಿದು ಹೋಗುತ್ತದೆ...
ಕೋಪದಿಂದ  ಪರಚಿಕೊಳ್ಳುವಂತಾಗುತ್ತದೆ..


ಅವನ  ಬಗೆಗೆ  ನನಗೆ  ತಿರಸ್ಕಾರ  , ಅಸಹ್ಯವಿದೆ...


ಈ ಗಂಡಸರ ಸಹವಾಸವೇ ಸಾಕು ಅನಿಸಿಬಿಟ್ಟಿದೆ...


ಅಭಿಪ್ರಾಯಗಳು ಬದಲಾಗುತ್ತಿರುತ್ತವೆ..


ಕೆಲವೊಮ್ಮೆ ನಮ್ಮನ್ನೇ ಅಣಕಿಸುವಂತಿರುತ್ತದೆ...


ಒಂದು ದಿನ  ನನ್ನ ಕಾರ್ ರಸ್ತೆಯಲ್ಲಿ ಹಾಳಾಗಿತ್ತು.. 
ಅಪ್ಪನಿಗೆ ಫೋನ್ ಮಾಡಿ ಹೇಳಿದೆ...
ಅವರು ಒಬ್ಬ  ಮೆಕ್ಯಾನಿಕ್ ಕಳುಹಿಸಿದರು..
ಅವನೇ ಗ್ಯಾರೇಜ್  ಮಾಲಿಕನಂತೆ... ನಮಗೆ ದೂರದ ಸಂಬಂಧಿಯಂತೆ..


ಬಹಳ ಡೀಸೆಂಟ್ ವ್ಯಕ್ತಿ...


ಮಧ್ಯ ವಯಸ್ಕ.. ಕೂದಲು ಅಲ್ಲಲ್ಲಿ ಹಣ್ಣಾಗಿದೆ..


ಪರಿಚಯ ಸ್ನೇಹವಾಯಿತು..
ಆಗಾಗ ಟೀ, ಕಾಫಿಗೆ ಅಂತ ಅವನ ಜೊತೆ ಹೋಗುತ್ತಿದ್ದೆ...


ಆತನ ಮಾತು, ಕತೆಯಲ್ಲಿ  ಹೊಸತನವಿರುತ್ತಿತ್ತು...
ನನ್ನ  ಸ್ವಭಾವಕ್ಕೆ ಹೊಂದಿಕೊಳ್ಳುವಂಥಹ ಮನುಷ್ಯ ಅನ್ನಿಸುತ್ತಿತ್ತು...


ಕೆಲವೊಬ್ಬರು ನಮಗೆ ಏನೂ ಆಗಿರುವದಿಲ್ಲ... 
ಆದರೂ  ನಮ್ಮ ಮನಸ್ಸು  ಅವರ ಸಾಂಗತ್ಯವನ್ನು ಬಯಸುತ್ತದೆ.. 
ಅವರೊಡನೆ  ನಮಗೆ ಗೊತ್ತಿಲ್ಲದಂತೆ ನಮ್ಮ  ಮನಸ್ಸು ಹಗುರವಾಗುತ್ತದೆ..
ಅವರೊಡನೆ ಮಾತನಾಡ ಬೇಕೆನ್ನಿಸುತ್ತದೆ...


ನನಗೂ ಹಾಗಾಗುತ್ತಿತ್ತು...


ಒಮ್ಮೆ  ಆತನನ್ನು ಕೇಳಿದ್ದೆ.. 


"ನೀವು ನಿಮ್ಮ  ಬಗೆಗೆ ಹೇಳಲೇ.. ಇಲ್ಲ.. ನಿಮ್ಮ ಹೆಂಡತಿ ಮಕ್ಕಳ ಬಗೆಗೆ"


"ನನ್ನ  ಕೌಟುಂಬಿಕ ಬದುಕಿನ ಬಗೆಗೆ ಹೇಳುವಂಥಾದ್ದು  ಏನೂ ಇಲ್ಲ..
ಹೆಂಡತಿ ಇದ್ದಳು..
ಈಗಲೂ ಇದ್ದಾಳೆ.. 
ಅವಳ ತವರು ಮನೆಯಲ್ಲಿ ನನ್ನ ಮಗನ ಸಂಗಡ...
ಇದಕ್ಕಿಂತ  ಇನ್ನೇನೂ  ಹೇಳಲು ಆಗುವದಿಲ್ಲ... ಕ್ಷಮಿಸಿ"


ನನಗೆ ಅರ್ಥವಾಗಿತ್ತು...


ಹಾಲಿನ ರುಚಿನೋಡಿದ ಬೆಕ್ಕು...


ಒಂಟಿ  ಬದುಕು ಸಂಗಾತಿ ಬಯಸುತ್ತದೆ...
ನನ್ನ ಮನಸ್ಸೂ ಮತ್ತೂ ಅವನನ್ನು ಬಯಸಿತು... 

ದಾರಿ ಸುಗಮವಾಗಿದೆಯಲ್ಲ...


ನನಗೆ  ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಲು ಆಗುವದಿಲ್ಲ....
ನನ್ನೊಳಗಿನ ಮಾತನ್ನು  ಇವನಿಗೆ ಹೇಳಬೇಕಿತ್ತು...

ಅದಕ್ಕೊಂದು  ಸಮಯ ಸಂದರ್ಭ ಬೇಕಿತ್ತು....


ಮೊನ್ನೆ ನನ್ನ  ಕಾರು  ಕೈಕೊಟ್ಟಿತ್ತು... ಆತ ನಮ್ಮನೆಗೆ ಬಂದು  ಕಾರು  ಗ್ಯಾರೇಜಿಗೆ  ಒಯ್ದಿದ್ದ...


ನಿನ್ನೆಯೂ ರಿಪೇರಿ ಆಗಿರಲಿಲ್ಲ...


"ಬೇಸರ ಮಾಡ್ಕೋಬೇಡಿ...
ನಿಮ್ಮ ಕಾರಿನ ಒಂದು  ನಟ್ಟು ಸಿಗುತ್ತಿಲ್ಲ...
ಹುಡುಕುತ್ತಾ ಇದ್ದೇನೆ.. 
ನಾಳೆ ಖಂಡಿತ  ರೆಡಿ ಮಾಡಿರುತ್ತೇನೆ.."


ನಾನು ಇದೇ ಸಮಯಕ್ಕೆ ಕಾಯುತ್ತಿದ್ದೆ...


" ನಾಳೆ ಹೇಗಿದ್ದರೂ  ಭಾನುವಾರ.. 
ಬರುತ್ತೇನೆ.. 
ನನಗೆ  ನಿಮ್ಮ  ಬಳಿ ಸ್ವಲ್ಪ ಮಾತನಾಡ ಬೇಕಿದೆ.."


ಮಧ್ಯ ವಯಸ್ಕನಿಗೆ ಆಶ್ಚರ್ಯ.. !


"ನನ್ನ ಬಳಿ ಮಾತನಾಡಬೇಕಾ?  
ಈಗಲೇ ಮಾತನಾಡಿ.. 
ಹೇಳಿ  ಏನು ವಿಷಯ ?.."


"ಹೀಗೆಲ್ಲ ಹೇಳಲು ಆಗುವದಿಲ್ಲ..
ನಾಳೆ ಬರುತ್ತೇನಲ್ಲ ಹೇಳುತ್ತೇನೆ"


"ಸುಂದರವಾಗಿದ್ದವರು  ಇಷ್ಟೆಲ್ಲ  ಕುತೂಹಲದ ಮಾತನಾಡ ಬಾರದು..
ಅಪಾರ್ಥವಾಗಿಬಿಡುತ್ತದೆ... 
ನನ್ನಂಥವರಿಗೆ  ಟೆನ್ಷನ್ ಶುರುವಾಗಿಬಿಡುತ್ತದೆ...
ದಯವಿಟ್ಟು ಹೇಳಿ..."


ನಾನು ಪೂರ್ವ ತಯಾರಿ  ಇಲ್ಲದೆ ಏನು ಮಾಡುವದಿಲ್ಲ...


"ನೀವು ಧಾರಾಳವಾಗಿ  ಟೆನ್ಷನ್ ಮಾಡಿಕೊಳ್ಳಿ... 
ನಾಳೆ ಸಿಗುತ್ತೇನೆ.."


ನನಗೆ ಒಳಗೊಳಗೇ  ಖುಷಿಯಾಗುತ್ತಿತ್ತು... 
ಆತನೂ  ನನ್ನಂತೇ  ಯೋಚಿಸುತ್ತಿರ ಬಹುದಾ...?


ಈತನೊಡನೆ ಫೋನ್ ಕಟ್ ಮಾಡುತ್ತಿದ್ದಂತೆಯೇ.. 
ನನ್ನ ಗಂಡನ   ಫೋನ್  ಬಂತು  !!


ಛೇ...


ಮುಖ ಗಂಟು ಹಾಕಿ ಕೇಳಿದೆ.. "ಏನು?"


"ನೋಡು ... 
ನಿನ್ನ  ಬದುಕಿನಲ್ಲಿ   ನಾನು ಬಹಳ ನಿಧಾನ ..
ಒಪ್ಪುತ್ತೇನೆ.. ಆದರೆ  ನಿನ್ನ ಸ್ಪೀಡಿಗೆ ನಾನೆಂದೂ ಅಡ್ಡಿ ಬರುವದಿಲ್ಲ..
ನಿನಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ..
ಈಗ ಅಡುಗೆಯನ್ನೂ ಕಲಿತುಕೊಂಡಿದ್ದೇನೆ..
ನೋಡು.. ನಮ್ಮಿಬ್ಬರ ಜಗಳದಿಂದನಮ್ಮ ಮಗುವಿಗೆ ಅನ್ಯಾಯವಾಗ ಬಾರದು...ಅಲ್ವಾ?
ಆ ಪಾಪು  ಏನು ತಪ್ಪು ಮಾಡಿದೆ?
ಅದಕ್ಕೆ ಅಪ್ಪ, ಅಮ್ಮನ ಪ್ರೀತಿ ಬೇಕು ಅಲ್ವಾ?"


ನನಗೆ ಮೈಯೆಲ್ಲ ಉರಿದು ಹೋಯಿತು...


ಒಂದು ಮಗುವಿನ ತಾಯಿಯಾದ ಮೇಲೆ ನನ್ನ ಆಕರ್ಷಣೆಗಳು ಕಡಿಮೆಯಾಗಿವೆ...
ಈತ ಇದ್ದ ಹಾಗೆಯೇ ಇದ್ದಾನೆ... ಹೊಸ ಮದುಮಗನ ತರಹ....!


ಈಗ ಹೊಂದಿಕೊಳ್ಳುತ್ತಾನಂತೆ...!!


'ಮಗುವಿನ  ಹೆಸರು ಹೇಳಿ.. 
ಇಮೋಷನಲ್ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ..
ಈ.. ಕೆಟ್ಟ.. ಆಳಸಿ ಗಂಡಸು"


"ನಿಮಗೆ  ಮಗು ಬೇಕಿದ್ದರೆ ತೆಗೆದು ಕೊಂಡು ಹೋಗಿ...
ಎಲ್ಲ ಮುಗಿದ ವಿಷಯದ  ಬಗೆಗೆ ಮತ್ತೆ ಮಾತನಾಡುವದು  ನನಗೆ ಇಷ್ಟವಿಲ್ಲ.."


"ನೋಡು ಚಿನ್ನಾ.. ಇನ್ನೊಮ್ಮೆ ವಿಚಾರ ಮಾಡು .. 
ನೀನು ದೂರವಾದ ಮೇಲೆ ನನ್ನ ತಪ್ಪುಗಳು ಗೊತ್ತಾಗ ತೊಡಗಿವೆ...
ನಾಳೆ ಫೋನ್ ಮಾಡುತ್ತೇನೆ.."


ನಾನು ಫೊನ್ ಕಟ್ ಮಾಡಿದೆ...


ನಾಳೆ ...ಇಂದಾಯಿತು...


ಚಂದವಾಗಿ  ತಯಾರಾಗಿ ..  ಆತನ ಗ್ಯಾರೇಜಿಗೆ ಬಂದಿದ್ದೆ..


ಮಧ್ಯ ವಯಸ್ಕನ ಕಣ್ಣಲ್ಲಿ ಹೊಳಪಿತ್ತು....


"ಬನ್ನಿ.. ಬನ್ನಿ... 
ಸರಿಯಾದ ಸಮಯಕ್ಕೇ.. ಬಂದಿದ್ದೀರಿ...
ಕೆಲಸಗಾರರೂ ಇಲ್ಲ..ನೀವು  ಒಂದು ಸಣ್ಣ ಸಹಾಯ ಮಾಡಿ.. ಪ್ಲೀಸ್"


"ಓಹೋ.. 
ಅದಕ್ಕೇನಂತೆ.. ಏನು ಸಹಾಯ..?"


"ನೋಡಿ.. 
ಈ ಸ್ಪ್ಯಾನರ್  ಹಿಡಿದುಕೊಳ್ಳಿ.. 
ನಾನು ಈಕಡೆಯಿಂದ ಈ ನಟ್ಟು  ಬಿಗಿ ಮಾಡುತ್ತೇನೆ."....


ನಾನು ಬಗ್ಗಿ  ನಟ್ಟಿಗೆ   ಸರಿಯಾಗಿ  ಸ್ಪ್ಯಾನರ್ ಹಿಡಿದುಕೊಂಡೆ..


ಆತನೂ ಬಗ್ಗಿದ... !


ಆತನ ಬಿಸಿಯುಸಿರು  ನನ್ನ ಕಿವಿಗೆ  ತಾಗುತ್ತಿತ್ತು...


ಮನದ ಭಾವಗಳೆಲ್ಲ ಗರಿಗೆದರತೊಡಗಿತು...


ಮೈಯೆಲ್ಲ ಬಿಸಿಯಾಗ ತೊಡಗಿತು...


ಎಷ್ಟು ಆಕರ್ಷಕ ಈ ಭಾವಗಳು.... ಆಕರ್ಷಣೆಗಳು....!


ಅತನ ಬೆವರಿನ ವಾಸನೆ ಒಂಥರಾ ಮಾದಕವಾಗಿತ್ತು...


ಮಾತು ಬೇಕಿರದ ಸಮದಲ್ಲಿ.. ಆತ ಮಾತು ಶುರು ಮಾಡಿದ....


"ನೋಡಿ  ..
ಈ ಒಂದು ನಟ್ಟಿಗಾಗಿ  ಎಷ್ಟೆಲ್ಲ  ಕಷ್ಟಪಟ್ಟೆ ಗೊತ್ತಾ?
ನಿನ್ನೆ ಪೂರ್ತಿ  ಮಾರ್ಕೆಟ್ಟ್ ಹುಡುಕಿದೆ..
ಅಲ್ಲಿ ಎಲ್ಲೂ ಸಿಗಲಿಲ್ಲ...
ನನ್ನ ಬಳಿ ಇರುವ  ಎಲ್ಲ ನಮೂನೆಯ  ನಟ್ಟುಗಳಲ್ಲಿ ಹುಡುಕಿದೆ..
ಇಲ್ಲಿ ನೋಡಿ.."


ಅಂತ ನಟ್ಟಿನ ರಾಶಿಯನ್ನೇ ತೋರಿಸಿದ..


ಇಷ್ಟೆಲ್ಲಾ ನಟ್ಟಿನಲ್ಲಿ ಒಂದೂ ಸರಿ ಹೊಂದಲಿಲ್ಲವಾ....? ...!!


ಅತ ಮತ್ತೆ ಶುರು ಮಾಡಿದ..


"ನೋಡಿ  ...


ಈ.. ಬೋಲ್ಟಿಗೆ  ಇದೇ ನಟ್ಟು ಬೇಕಿತ್ತು...!


ಬೇರೆ ಯಾವುದೂ ಸೆಟ್ಟ್ ಆಗುವದಿಲ್ಲ..


ಒಂದು ವೇಳೆ  ಪ್ರಯತ್ನಿಸಿದರೂ.. ಬೋಲ್ಟ್ ಹಾಳಾಗುತ್ತದೆ...


ಥ್ರೆಡ್ ಹಾಳಾಗಿ ಹೋಗುತ್ತದೆ ...


ಒಮ್ಮೆ ಹಾಳಾದರೆ ಮತ್ತೆ ರಿಪೇರಿಯಾಗುವದಿಲ್ಲ..!


ನಿಮ್ಮ  ಈ ಒಂದು ನಟ್ಟಿಗಾಗಿ  ಬಹಳ ಕಷ್ಟಪಟ್ಟೆ... .."


ನನಗೆ ಒಂಥರಾ ಅನಿಸಿತು....


ನನ್ನ ಮೈ ಬೆವರಿತ್ತು... 
ಪಾತಾಳಕ್ಕೆ ಇಳಿದು ಹೋಗಿದ್ದೆ...!!


ನಟ್ಟು ಟೈಟ್ ಆಯಿತು.. 


ಗಾಡಿಯೂ ರೆಡಿಯಾಯಿತು.. ನಾನು ಲಗುಬಗೆಯಿಂದ ಕಾರಿನಲ್ಲಿ ಕುಳಿತೆ..


ಆದಷ್ಟು ಬೇಗ  ಅಲ್ಲಿಂದ ಹೊರಡ ಬೇಕಿತ್ತು...


"ಇವತ್ತು ಏನೋ ಮಾತನಾಡ ಬೇಕೆಂದು  ಹೇಳಿದಿದ್ರಿ...
ನಾನು  ನಿನ್ನೆ ರಾತ್ರಿಯಿಂದ  ನಿದ್ದೆ ಮಾಡದೆ ಕಾಯುತ್ತಿದ್ದೆ.."


ನಾನು  ಆ ಮಾತು ಕೇಳದವಳಂತೆ  ಗಾಡಿ ಸ್ಟಾರ್ಟ್ ಮಾಡಿದೆ... 
ಗಾಡಿ ಮುಂದಕ್ಕೆ ಚಲಿಸಿತು...


ಆತ ಪೆಚ್ಚು ಮೋರೆ ಹಾಕಿಕೊಂಡಿದ್ದ...


ಅಷ್ಟರಲ್ಲಿ ಫೋನ್ ರಿಂಗಾಯಿತು... 
ನನ್ನ ಗಂಡನ ಫೋನ್..!
ನಾನು ಫೋನ್ ತೆಗೆದು ಕೊಳ್ಳಲಿಲ್ಲ...


ಸ್ವಾಭಿಮಾನ ಅಡ್ಡ ಬಂತು....


ಕಾಲ್ ಕಟ್ ಮಾಡಿ..
ಅಪ್ಪನಿಗೆ ಫೋನ್ ಮಾಡಿ ಹೇಳಿದೆ...


"ಅಪ್ಪಾ... 
ನನ್ನ ಗಂಡನಿಗೆ ಫೋನ್ ಮಾಡಿ ಬರಲಿಕ್ಕೆ ಹೇಳಿ..
ನಾನು ಅವರ ಜೊತೆ ಇರ್ತೇನೆ..."


ಅಪ್ಪ ಸ್ವಲ್ಪ ಹೊತ್ತು ಏನೂ ಮಾತನಾಡಲಿಲ್ಲ...





Friday, April 29, 2011

ಆಡದೆ... ಉಳಿದಿಹ .. ಮಾತೂ ... ನೂರಿದೆ...!!

ನಾನು ಹೇಳಿದೆ...

"ಬಂದ ಜನರನ್ನು ...
ಗೇಟಿನಲ್ಲಿ ನಾನೇ..ಕ್ಯಾಮರಾ ಹಿಡಿದು...
ಮೊದಲು ಅವರ ಫೋಟೋ ತೆಗೆದು ಸ್ವಾಗತಿಸುವೆ..."

ಎಲ್ಲರು ಝಾಡಿಸಿದರು...
ಮನೆಯಲ್ಲಿ... ಗೆಳೆಯರು... ಅಳಿಯಂದಿರುಗಳು. ..... 
ಸುತಾರಾಂ  ಒಪ್ಪಲಿಲ್ಲ...

"ನಿನ್ನ  ಪುಸ್ತಕ ಬಿಡುಗಡೆ ..
ನೀನು ಅಲ್ಲಲ್ಲಿ ಓಡಾಡುತ್ತ ಮಾತಾಡಿಸುತ್ತ ಇರು ಸಾಕು ..
ಉಳಿದುದನ್ನು ನಾವು ನೋಡಿಕೊಳ್ಳುತ್ತೇವೆ.." ಅಂದು ಬಿಟ್ಟರು...

ಆದರೆ ಗಡಿಬಿಡಿಯಲ್ಲಿ ನಿಮ್ಮನ್ನೆಲ್ಲ ಮಾತನಾಡಿಸಲು ಆಗಲಿಲ್ಲ..

ಎಷ್ಟೋ ಹೊಸ ಗೆಳೆಯರು.. ಸಹೋದರಿಯರು ಬಂದಿದ್ದರು...!

ಇನ್ನೂ ಏನೇನೋ ಮಾಡಬೇಕಿತ್ತು...!
ಕೆಲವು ತುಂಟತನದ ಉಪಾಯಗಳಿದ್ದವು... 
ಎಲ್ಲದಕ್ಕೂ ಮನೆಯಲ್ಲಿ ನಿಷೇಧ ಹೇರಿದ್ದರು...

ಮೆಚ್ಚಿನ ಜಿ.ಎನ್ ಮೋಹನ್... ಜೋಗಿ.. 
ಹಾಲ್ದೊಡ್ಡೇರಿ  ಸುಧೀಂದ್ರ  ಬಂದಿದ್ದರು...!

ದೆಹಲಿಯ "ಸೀತಣ್ಣ.., 
ಮುಂಬೈ ಅಶೋಕ್.. ಮತ್ತೆ ನಾಲ್ವರು.. 
ಮಂಗಳೂರಿನಿಂದ ವನಿತಾ... ದಿನಕರ...

ದೂರದ "ಗದಗಿನಿಂದ " ವೀರ ನಾರಾಯಣ  "ಶಿವೂ ಯಳವತ್ತಿ..."

ತನ್ನ ಕಾರ್ಯಕ್ರಮ ತಪ್ಪಿಸಿ ಬೆಳಗಿನ ಬಸ್ಸಿಗೆ ತುಮಕೂರಿನಿಂದ " ವಿಶ್ವಣ್ಣ ನೆಂಬ ತಮ್ಮ" ...

ಹಿರಿಯರಾದ  ಎವರ್ ಗ್ರೀನ್ .. !
ಎವರ್ ಯಂಗ್...!
 "ಹೆಬ್ಬಾರ್ ಸರ್' ಮತ್ತು  ಸತ್ಯ ಪ್ರಕಾಶ್ ಸರ್...!

ಪ್ರೀತಿಯಿಂದ .. ಆಶಿರ್ವಾದವಾಗಿ ಬೆನ್ನುಡಿ ಬರೆದು ಕೊಟ್ಟ  "ಮಂಗಳತ್ತೆ... ತಮ್ಮ ಪತಿಯನ್ನೂ ಕರೆದುಕೊಂಡು ಬಂದಿದ್ದರು... 

ಓಡಾಡುತ್ತಿದ್ದೆ...
ಮಾತನಾಡುತ್ತಿದ್ದೆ..... 
ಹೇಳಲಾಗದ ಸಂತೋಷ...! 
ಸಂಭ್ರಮ...!

ನಿಮ್ಮನ್ನೆಲ್ಲಾ ಹೇಗೆ ಮಾತನಾಡಿಸಿದೆನೋ ಗೊತ್ತಿಲ್ಲ...

ಪ್ರೀತಿ ಹೀಗೆಯೇ ಇರಲಿ....

ಒಂದು ಭಾನುವಾರ ನಮ್ಮ ಸಂಭ್ರಮದಲ್ಲಿ ...
ನಮ್ಮ ಕಾರ್ಯದಲ್ಲಿ ಪ್ರೋತ್ಸಾಹ ಪೂರ್ವಕವಾಗಿ ಭಾಗವಹಿಸಿದ್ದಕ್ಕೆ...


ಅನಿವಾರ್ಯ ಕಾರಣಗಳಿಂದ ಬರಲಾಗದೆ...
ಶುಭ ಕೋರಿದ.. 
ಯಶಸ್ಸನ್ನು ಪ್ರಾರ್ಥಿಸಿದ ಎಲ್ಲ ಗೆಳೆಯರಿಗೆ 
ಸಹೋದರಿಯರಿಗೆ...

ಕೃತಜ್ಞತೆಗಳು...
ವಂದನೆಗಳು... 

"ಇದೆ.. ಇದರ.. ಹೆಸರು..!" 
ಮುಖಪುಟದ ನಾಯಕಿ... ಬೆಡಗಿ...
ಚಂದದ ಕಣ್ಣಿನ.. ಮುದ್ದು..ಪುಟಾಣಿ... " ಅಬ್ಜಾ..."


ಹೂವಿನಂಥಹ ಮಾತಿನಿಂದ.. ಮಧುರ ಕಂಠದಿಂದ.. 
ಕಾರ್ಯಕ್ರಮದ ನಿರೂಪಣೆ...
ಸುಮತಿಯವರಿಂದ...

ಬಹು ಕಾತುರದ ಸಮಯ... ಪುಸ್ತಕ ಬಿಡುಗಡೆ...ಇದೆ... ಇದರ... ಸಂಭ್ರಮ....!!
ಮೆಚ್ಚಿನ "ದುಂಡಿರಾಜ್..."
ಖ್ಯಾತ ನಟ... "ಕೋಮಲ್"...
ಅಂದು... ಇಂದು.. ಎಂದೆಂದಿಗೂ ಹತ್ತಿರದ.. "ದಿವಾಕರ"...
ಸಂಗೀತಕ್ಕೆ  ಜೀವನವನ್ನು ಮುಡುಪಾಗಿಟ್ಟ... "ಉಪಾಸನ ಮೋಹನ್...."


ನನ್ನ ಕನಸನ್ನು "ಸಾಕಾರಗೊಳಿಸಿದ...  ನನ್ನ ಮೆಚ್ಚಿನ... ಆತ್ಮೀಯ.."ಹೂವಿನಂಥಹ " ಮಣಿಕಾಂತ್...


ಒಳಪುಟವಿನ್ಯಾಸ... ಅಕ್ಷರಗಳ ಜೋಡಣೆ... ಒಟ್ಟಾರೆ ಪುಸ್ತಕ "ತಮ್ಮದು" ಎಂದು ಪ್ರೀತಿಯಿಂದ ಮಾಡಿಕೊಟ್ಟ...
 "ಪ್ರೇಂ ಕುಮಾರ್"
(ಹದಿನೈದು ವರ್ಷ ನಮ್ಮ ನಾಡಿನ ದೈತ್ಯ ಪ್ರತಿಭೆ "ಲಂಕೇಶರಲ್ಲಿ" ಇವರ ಒಡನಾಟವಿತ್ತು....)


"ನೀಲಿಮಾ ಪ್ರಕಾಶನ" ಅಮ್ಮನ.. ಮುದ್ದು ಕಂದನ ಪ್ರೀತಿ...



ತುಂಬಿದ ಕೊಡ ತುಳುಕುವದಿಲ್ಲ... 
ಸಜ್ಜನ... ಬರಹಗಾರ .. ವಿಜ್ಞಾನಿ.. "ಹಾಲ್ದೊಡ್ಡೇರಿ ಸುಧೀಂದ್ರ"ರವರು...


ನಗುಮುಖದ  ಮೋಹನ... ಜಿ.ಎನ್.....


ದೈತ್ಯ ಬರಹಗಾರ.. ಗಿರೀಶ್ ರಾವ್... 
ನಮ್ಮ ಮೆಚ್ಚಿನ " ಜೋಗಿ "...
ಕೊಟ್ಟ ಮಾತಿನಂತೆ  ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿದ್ದು... ಮತ್ತಷ್ಟು ಸಂಭ್ರಮ ತರಿಸಿತ್ತು....


ಮೆಚ್ಚಿನ ನಟಿ... ಆತ್ಮಿಯತೆಯಿಂದ ಬಂದಿದ್ದು ಹೀಗೆ...


ಮುಂಬೈನಿಂದ... ನಮ್ಮ ಸಭ್ರಮದಲ್ಲಿ  ಸಡಗರ ಪಟ್ಟಿದ್ದು ಹೀಗೆ...
ಇವರದ್ದು ಒಂದು ಗೆಳೆಯರ ಬಳಗ ಇದೆ... 
"ಸ್ನೇಹ ಲೋಕ" ಅಂತ... ಆರ್ಕುಟ್ಟಿನಲ್ಲಿ...
ಅವರೆಲ್ಲರೂ ಬಂದಿದ್ದರು...

ಡೆಲ್ಲಿ ಮಾಮ... 
ಸೀತಣ್ಣ..  ಬೆಳಗಿನ ವಿಮಾನದಲ್ಲಿ ಕಾರ್ಯಕ್ರಮಕ್ಕಾಗಿಯೇ ಬಂದಿದ್ದರು....


ಬ್ಲಾಗ್ ಲೋಕದ "ಪಡೆಯಪ್ಪ.. ರಜನೀಕಾಂತ್" 
ಮತ್ತು ವನಿತಾ ಪುಟ್ಟಮ್ಮ... ಮಂಗಳೂರಿನಿಂದ ಬಂದಿದ್ದರು...


ಗದುಗಿನ ಗಂಡು... 
ಚುಟುಕು ಕಥೆಗಳ ಸರದಾರ "ಶಿವೂ ಯಳವತ್ತಿ" ನಮ್ಮ ಸಂಭ್ರಮದಲ್ಲಿ ಬಂದಿದ್ದರು...
ಅವರ ಜೊತೆ ಪ್ರತಿಭಾವಂತ ಬರಹಗಾರ " ಗೌತಮ್  ಮದುಮಗ"....



"ಮೂರನೆಯ ಕಿವಿ" ಖ್ಯಾತಿಯ.. 
" ರವಿ  ಐನ್ ಕೈ.."ಮೈಸೂರಿನಿಂದ...
ಮತ್ತು..
ವಿಘ್ನೇಶ್ವರ  ಭಟ್ ಮತ್ತು ದಿವಾಕರ ಇವರ ಸಮಾಲೋಚನೆ....



ಗೆಳೆಯ ಗುಬ್ಬಚ್ಚಿ ಸತೀಶ್..
"ಚಿಂವ್.. ಚಿಂವ್"  ಅಂತ  ತುಮಕೂರಿನಿಂದ ಬಂದಿದ್ದರು...


ಇವರ್ಯಾರೋ ಸಿನೆಮ ನಟ ಅಂದುಕೊಳ್ಳ ಬೇಡಿ... 
ತಮ್ಮ ಪೂರ್ವ ನಿಗದಿತ ಕಾರ್ಯಕ್ರಮ ಬಿಟ್ಟು ..
ಬೆಳಗಿನ ಬಸ್ ಹಿಡಿದು ತುಮಕೂರಿನಿಂದ ಬಂದ... "ವಿಶ್ವಣ್ಣ..." 
ಅಳಿಯಂದಿರ ಗುಂಪಿನ ಸಜ್ಜನ...

ಅಳಿಯಂದಿರ ಗುಂಪಿನ  "ನಾಗು"... ಅಲಿಯಾಸ್ ಕೆ. ನಾಗರಾಜ್..
ಮುಖಪುಟದ ಕಲ್ಪನೆ ಕೊಟ್ಟವರು...
ಬೇಂದ್ರೆ ಸಾಹಿತ್ಯವನ್ನು  ಚೆನ್ನಾಗಿ ಓದಿಕೊಂಡಿದ್ದಾರೆ....

ಇವರ ವಿಚಾರಧಾರೆ ಭಿನ್ನವಾಗಿರುತ್ತದೆ... ನಮ್ಮ ನಾಗು  ಸೌಮ್ಯ ಪ್ರತಿಭಾವಂತ....


ಎಲ್ಲ ಸೇರ್ತಾ ಇದ್ದೇವೆ... ಕಾರ್ಯಕ್ರಮ ಶುರುವಾಗಲಿಲ್ಲವಲ್ಲ ಸ್ವಾಮಿ....


ಮನೆಯವರೆನ್ನೆಲ್ಲ... ಸಿದ್ದಗಂಗಾ  ಸ್ವಾಮಿಜಿಯವರ ಬಳಿ ಕಳಿಸಿ...
 ಡುಮ್ಮಣ್ಣನ ಮತ್ತು ಬ್ಲಾಗ್ ಸ್ನೇಹಿತರನ್ನು  ನೋಡಲು ಬಂದ  
"ಇಂದೂಶ್ರೀ..".

ವಿಳಾಸ ತಪ್ಪಿದ್ದರೂ ಕೊನೆಗೂ ಹುಡುಕಿ ಬಂದ ..
ತಂಗಿ... ಶ್ವೇತಾ... ಮತ್ತು ಅವರ ಸ್ನೇಹಿತೆ...


ಬಾವ ಪಡೆಯಪ್ಪನ ಖದರೇ ಬೇರೆ .. ಬಿಡಿ... 
ಜೊತೆಯಾಗಿ.. ಸಂಗಾತಿ.. ತಂಗಿ  "ವನಿತಾ.."

"ಬಿಸಿಲು ಹನಿ" ಖ್ಯಾತಿಯ ಮಿತ್ರ "ಉದಯ ಇಟಗಿ...."

ಪ್ರೀತಿಯಿಂದ ಬ್ಲಾಗ್ ಓದುವ ದಂಪತಿಗಳು... ಗೀತಾ... ಮತ್ತು ವಿಕ್ರಮ್....

ಹೊಸ ಜೋಡಿ.. ಹೊಸ ಸಿಹಿ ಸುದ್ಧಿಯ ನಿರೀಕ್ಷೆಯಲ್ಲಿ... 
ಗುರುಪ್ರಸಾದ್ ದಂಪತಿಗಳು...



ಸ್ವಲ್ಪ ಹೊತ್ತು ಕ್ಯಾಮರಕ್ಕೆ ರೆಸ್ಟ್ ಕೊಟ್ಟ ..
ಮುದ್ದಿನ ತಮ್ಮಯ್ಯಾ.. "ನವೀನ್ ಹಳ್ಳಿ ಮೇಷ್ಟ್ರು.."


ಸ್ವಲ್ಪ ತಡವಾದರೂ  ಓಡೋಡಿ ಬಂದ ನಟ ಕೋಮಲ್... 
ಮಾತಿನಲ್ಲಿ .. ನಡತೆಯಲ್ಲಿ ಸಜ್ಜನಿಕೆ ಮೆರೆದರು...

ಮಾತೆಯ ಮಮತೆಯೊಂದಿಗೆ .. ಮಡದಿಯ ಪ್ರೀತಿ... ಗೆಳೆಯ ವಸುಧೆಶ್...

 ನಮ್ಮ "ಬಾಲೂ ಸುಬ್ಬು ಸಜ್ಜನರೆಂದು ಗೊತ್ತಿತ್ತು... 
ತುಂಟರೆಂದು ಗೊತ್ತಾಗಿದ್ದು ಈಗ...


"ಪ್ರಕಾಶಣ್ಣಾ.. ನಾನೂ ಬಂದಿದ್ದೇನೆ" ...
ಎನ್ನುವ ಸಹೋದರಿ .. "ವೀಣಾ...' !

"ಮಾನಸ ರಂಗ"ದ ಚೆಲುವೆ.. ವಾಣಿಶ್ರೀ...


"ಪ್ರಕಾಶಣ್ಣ... ನಾನತೂ ಖಂಡಿತ ಬರುವೆ" 
ಎಂದು ಮಾತು ತಪ್ಪದ.....
ಕನಸು ಕಣ್ಣಿನ  ಹುಡುಗಿ.. " ದಿವ್ಯಾ..."

ಇವಳು ಯಾರು ಬಲ್ಲಿರೇನು... ಸಹಜ ಸುಂದರಿ "ಕಾಂತಿ'ಯನು....?


ಚುಕ್ಕಿ ಚಿತ್ತಾರದ  ಭೂರಮೆಯ... ನಾಗಂದಿಗೆ ಕುಟುಂಬ.... 
ನಮ್ಮ ಸಡಗರದಲ್ಲಿ....

ಆಗ್ರಾದ ಹುಡುಗಿಯ  ಅಪ್ಪ.. ಅಮ್ಮ... 
ಸಂಭ್ರಮದಿಂದ ಬಂದಿದ್ದರು....


ಪುಟ್ಟ ತಮ್ಮ "ರಾಜೇಶ್ ಮಂಜುನಾಥ"...

ಈ ಪುಟ್ಟ ಹುಡುಗ  " ದೊಡ್ಡಮನಿ ಮಂಜು.."  
ನನ್ನಂತೆ  ದೊಡ್ಡ ಆಕಾರದ ಆಕೃತಿ ಅಂತ  ಅಂದುಕೊಂಡಿದ್ದೆ...!...



ಸಿಕ್ಕ ಸ್ವಲ್ಪ ಸಮಯದಲ್ಲೇ  ನಮಗೆ ಹುರಿದುಂಬಿಸಿದ ಗೆಳೆಯ " ಶಿವೂ.... " ಗಿರೀಶ್ ಮತ್ತು ನವೀನ್ ಜೊತೆ...
ಇನ್ನೊಂದು ವಿಷಯಗೊತ್ತಾ?


ಗೆಳೆಯ ಕೆ. ನಾಗರಾಜ್  "ಫೋಟೋಕ್ಕೆ" ಸಿಗಲೇ ಇಲ್ಲ...

ಮತ್ತೊಬ್ಬ ಗೆಳೆಯ "ಮಲ್ಲಿಕಾರ್ಜುನ್" ...
ಕ್ಯಾಮರ ತಗೊಂಡು ಬಂದಿದ್ದರು..


ಎಷ್ಟು ಮಾತಾನಾಡಿದರೂ.. ಸಾಲದು...
ಯಳವತ್ತಿ ಇದ್ದಲ್ಲಿ ನಗು ಇರಲೇ ಬೇಕಲ್ಲಾ..!


ಮಗಳನಂತೂ ಕೊಡಲಿಲ್ಲ... ಇದನ್ನಾದರೂ....!!  ?? ...
ಮುದ್ದಿನ  ಅಳಿಮಯ್ಯ "ಅನಿಲು.."


ಇವರು ಬಿಗ್ ಬಾಸ್... ಅಲ್ಲ...ಅಲ್ಲ..!
 ದಿಗ್ ಬಾಸ್...ಅಲ್ಲ..!
ಇವರು.. ಗೆಳೆಯ " ದಿಗ್ವಾಸ್..."

"ನಿಲ್ಲಯ್ಯೋ ನಿಲ್ಲೋ ಓ.. ಕೆಂಚು ಮೀಸೆಯವನೆ...!"
ಕಿರುಮಿಸೆಯಾ... ನಾಚಿಕೆಯ ಅಳಿಮಯ್ಯ "ಶಿವ ಪ್ರಕಾಶ..."


ವಸ್ತಾರೆ ಸಾಹೇಬರ ಜೊತೆ  ಮುಗ್ಧ ನಗುವಿನ  "ಕ್ಯಾಪ್ಶನ್ ಬಾಲಣ್ಣ..." 


ಸ್ನೇಹದ ನಗುವಿನ ಡಾಕ್ಟರ್ ಸಂತೋಷ್... ತಮ್ಮ ಕ್ಯಾಮರಾದೊಂದಿಗೆ..


ಅರಸಿಕೆರೆಯ ಅರಸಿಗ ಮದುವೆಗೆ ಕರೆಯಲು ಬಂದಿದ್ದರು...
ಅಜ್ಜನ ಮನೆಯ 'ಗಣಪತಿ.."


ರವೆ ವಾಂಗಿ ಬಾತ್.. ಅನಾನಸ್ ಕೇಸರಿ ಬಾತ್.. 
ವಾಹ್... 
ಬನ್ರಿ... ಮಾರಾಯರೇ.... 
ಖರ್ಚಾಗಿ ಹೋದೀತು...! 
ಬನ್ರೀ... ಬೇಗ..!

ಬ್ಲಾಗಿಗರ... ಓದುಗರ ಸಡಗರ....


"ರಾಮೇಶ್ವರಕ್ಕೆ ಹೋದರು... ಶನೀಶ್ವರ ಬಿಡಲಾರ"
ಏನೂ ಮಾಡೋಣ ಹೇಳಿ...!

"ಮಾವಾ... 
ನಮ್ಮ ಹುಡುಗಿಯರನ್ನು ನಾವೇ ಹುಡುಕಿ ಕೊಳ್ಳುತ್ತೇವೆ... 
ನಮ್ಮ ಮಾತನ್ನು ವಾಪಸ್ಸು ತೆಗೆದು ಕೊಳ್ಳುತ್ತೇವೆ..." 
ಎಂದ ಅಳಿಯಂದಿರು... !!


"ಗಾದೆಗಳ ಸರದಾರಿಣಿ"  ಸದಾ ಹಸನ್ಮುಖಿ..  
ತಂಗ್ಯಮ್ಮ... "ಶಶಿ..." ಸಂಭ್ರಮ...!


"ಮುಂದೈತೆ ಮಾರಿಹಬ್ಬ" 
ನಮ್ಮನ್ನೆಲ್ಲ ನಗೆಯಲ್ಲಿ ಮುಳುಗಿಸಿದ  ಚುಟುಕು ಕವಿ ಸಾಮ್ರಾಟ್ "ದುಂಡಿರಾಜ್"


ಮುದ್ದಾದ ಜೋಡಿ.. "ಉಮೇಶ್ ಬಾಳಿಕಾಯಿ ದಂಪತಿಗಳು"


ಕವಿ ಮಹಾಬಲಗಿರಿಯೊಡನೆ ಗೆಳೆಯ....


ಎಲ್ಲರದೂ ಮೊದಲ ಭೇಟಿ... 
ಚಂದಾ.. ಚಂದಾ.. ಈ ಸಮಯಾ.... ಸಂಭ್ರಮಾ...!




ಊರಿನಿಂದ ಕಾರ್ಯಕ್ರಮಕ್ಕಾಗಿಯೇ ಬಂದ "ಪರಾಂಜಪೆಯವರು.. 
ಮತ್ತು " ಉಮೇಶ ದೇಸಾಯಿಯವರು"

ವಿ.ಆರ್. ಭಟ್ಟರೇ  ...
ಸಂಕೋಚ ಬೇಡಿ...ಇನ್ನಷ್ಟು ಹಾಕಿಸಿಕೊಳ್ಳಿ..." ... ಬಾಲೂ ಉವಾಚ.....!


"ನೋಡಿಸ್ವಾಮಿ ನಾವು ಫೋಟೋ ತೆಗೆಯೋದು ಹೀಗೆ...." ಗಣಪತಿ...


"ನೋಡಿ ಸ್ವಾಮಿ ನಾವು ಫೋಟೋ ತೆಗೆದಾದ ಮೇಲೆ ಹೀಗೆ..."   ನಂಜುಂಡರು...

ಮಣಿಕಾಂತರ ಕಾರ್ಯಕ್ರಮದಲ್ಲಿ ಹಾಡಿದ್ದರೆನೆ ಚಂದ...!
ಇದು ಹಾಡು ಕೇಳುವ ಸಮಯ....
ಸೋಗಸಾಆದ ಹಾಡುಗಳನ್ನು ಕೇಳಿಸಿದರು  "ಉಪಾಸನ ಮೋಹನ್ ಹಾಗು ಅವರ ಮಿತ್ರರು..."

ಅಂದದ ಫೋಟೋಕ್ಕಾಗಿ ನೆನಪಿನ ಕಾಣಿಕೆ..


"ಇದೆ.. ಇದರ.. ಹೆಸರು..!" ಲೋಕಾರ್ಪಣೆಯ ಸಡಗರ...

ಇದೆ.. ಇದರ ಸಂಭ್ರಮಾ.. !!

ಬರಿ ನಗು.. ಸಡಗರ.. ಸಭ್ರಮವೊಂದೆ... ಅಲ್ಲ...!

ಅಲ್ಲಿ ಭಾವುಕತೆಯೂ ಇತ್ತು...!

ನಮ್ಮ ಹೂವಿನಂಥಹ ಮನಸ್ಸಿನ...ಹೃದಯದ  .. 
ಮಣಿಕಾಂತ್ ನನ್ನಮ್ಮನಿಗೆ ವಂದಿಸಲು ಹೋದಾಗ...


ಸಹಜ ಭಾವುಕತೆ... ಅಲ್ಲಿತ್ತು....
ಅಮ್ಮ ಎನ್ನುವ... ಮಮತೆಯ ಭಾವುಕತೆ ಅಲ್ಲಿ ಕಾಡಿತ್ತು...


ಕಣ್ಣಲ್ಲಿ ಹನಿ ಉದುರಿತ್ತು....

ಅಮ್ಮ... ಎನ್ನಿ...
ಆಯಿ ಎನ್ನಿ.... 
ಆಶೀರ್ವಾದ ಮಮತೆ.. ವಾತ್ಸ್ಯಲ್ಲ ಯಾರಿಗೆ ಬೇಡ ಹೇಳಿ....?

ಇಷ್ಟೆಲ್ಲಾ ಆದರೂ...

ನಿಮ್ಮೆಲ್ಲ ಕೆಲಸ ಬಿಟ್ಟು.. 
ನಮ್ಮ ಕರೆಗೆ  ಬಂದು...
ಪ್ರೋತ್ಸಾಹಿಸಿದ ನಿಮಗೆ  ಹೇಗೆ ವಂದಿಸಲಿ...?...

ಇನ್ನೂ ಏನೇನೋ ಮಾಡಬೇಕಿತ್ತು...
ಮಾತನಾಡಿಸಬೇಕಿತ್ತು...
ನಿಮಗೆಲ್ಲ ಏನೇನೋ ಹೇಳಬೇಕಿತ್ತು....
ಇನ್ನೂ ಏನೇನೋ.. ಇತ್ತು.. !!


ಅಲ್ಲಿ ಸ್ಟೇಜಿನ ಮೇಲೆ ಮಾತನಾಡಲು ನಿಂತವನಿಗೆ..
ಗಂಟಲು ಕಟ್ಟಿತ್ತು.. ಮಾತು ಹೊರ ಬರಲಿಲ್ಲ...

ಹೇಳಲಾಗದೆ... 
ಭಾವ ತೋಡಿಕೊಳ್ಳಲಾಗದೆ.. 
ಒಳಗೊಳಗೇ ಉಳಿದ ಮಾತುಗಳು ನೂರಿತ್ತು..!

"ಕಂಗಳು ...
ವಂದನೆ.. ಹೇಳಿವೆ...!..
ಹೃದಯವು... ತುಂಬಿ.. ಹಾಡಿದೆ....!

ಆಡದೆ... 
ಉಳಿದಿಹ .. ಮಾತು.. ನೂರಿದೆ..... ' !!






(ಗೆಳೆಯರೇ...
ಇನ್ನೂ ಹಲವರ ಫೋಟೋಗಳು ಬಿಟ್ಟುಹೊಗಿವೆ...
ಅನ್ನುವದಕ್ಕಿಂತ... ನನಗೆ ಸಿಕ್ಕಿದ್ದು ಇಷ್ಟು... ಇನ್ನಷ್ಟು ಇದಕ್ಕೆ ಮತ್ತೆ ಸೇರಿಸುವೆ... 
ಒಂದೆರಡು ದಿನಗಳಲ್ಲಿ... ಕ್ಷಮೆ ಇರಲಿ...)


ಇದೆ.. ಇದರ.. ಹೆಸರು" ಪುಸ್ತಕ ನಾಡಿನ ಎಲ್ಲ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ದೊರೆಯುತ್ತದೆ...
ಬೆಂಗಳೂರಿನ 
ಸಪ್ನಾ ಬುಕ್ ಸ್ಟಾಲ್
ಜಯನಗರದ "ಟೋಟಲ್ ಕನ್ನಡ..."
ಗಾಂಧೀ ಬಜಾರಿನ "ಅಂಕಿತ  ಪ್ರಕಾಶನ"

ನವ ಕರ್ನಾಟಕದ ಎಲ್ಲ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ...

ದಯವಿಟ್ಟು ಪ್ರೋತ್ಸಾಹಿಸಿ...

ಪ್ರೋತಿಯಿಂದ...
ಇಟ್ಟಿಗೆ ಸಿಮೆಂಟು...

ಕಾರ್ಯಕ್ರಮದಲ್ಲಿ ಗೆಳೆಯ ದಿವಾಕರನ "ಭಾಷಣ" ಹೀಗಿತ್ತು...
ಭಾಗ ಒಂದು...

ಭಾಗ ಎರಡು...