Friday, June 13, 2014

ಮಥನ

ಬಹಳಷ್ಟು ಬಾರಿ ...
ನನ್ನನ್ನೇ ನಾನು ಕೇಳಿಕೊಂಡಿದ್ದಿದೆ.... 

"ನನ್ನ
ಬದುಕಿನಲ್ಲೇ ಯಾಕೆ ಹೀಗಾಗುತ್ತದೆ ?.."

ಇದೀಗ
ಅವನಿಂದ ಸಂದೇಶ ಬಂದಿದೆ....

"ಇಂದು ರಾತ್ರಿ ನನ್ನ ಬಳಿ ಬಾ...."

ಮೊದಲ ಬಾರಿ 
ನಾನಾಗಿಯೇ ಅವನ ಬಳಿ ಅನಿವಾರ್ಯವಾಗಿ ಹೋಗಿದ್ದೆ...

ಆದರೆ ಈಗ ಹಾಗಲ್ಲವಲ್ಲ...

ಅವನಿಗಾಗಿ
ಬಯಸಿ...
ಎದೆಯಲ್ಲಿ ಪ್ರೀತಿಯ ಹೂ ಹೊತ್ತು ಹೋಗುತ್ತಿರುವೆ....

ನಾನು "ತಾರೆ..."
ಕಿಷ್ಕೆಂದೆಯ ವಾಲಿಯ ಮಡದಿಯಾಗಿದ್ದವಳು...

ವಾಲಿ 
ನಿಮಗೆಲ್ಲ ಗೊತ್ತಲ್ಲ...
ಮಹಾ ಶಕ್ತಿಶಾಲಿ....

ಹಿಂದೆ
ಸಮುದ್ರ ಮಥನವಾಗುತ್ತಿದ್ದಾಗ ಅಲ್ಲಿ ಬಂದಿದ್ದ...

ರಾಕ್ಷಸರೂ..
ದೇವತೆಗಳು ಸಮುದ್ರ ಮಥನ ಮಾಡುತ್ತಿದ್ದಾಗ ಅವರಿಗೆ ದಣಿವಾಗಿದ್ದಾಗ
ವಾಲಿ ಅಲ್ಲಿದ್ದನಂತೆ..

ತಾನೊಬ್ಬನೇ 
ವಾಸುಕಿಯನ್ನು ಎರಡೂ ಕಡೆ ಎಳೆದು...
ಕಡೆದು 
ಮಥನ ಮಾಡಿದ್ದನಂತೆ..

ಅಂಥಹ " ಮಥನದ "  ಸಂದರ್ಭದಲ್ಲಿ ನಾನು ಹುಟ್ಟಿದ್ದು....

ಆಗ... 
ಅಲ್ಲಿರುವ ರಾಕ್ಷಸರು... 
ದೇವತೆಗಳು 
ನನ್ನನ್ನು ಆಸೆಯಿಂದ ನೋಡುವಂಥಹ ಸಂದರ್ಭದಲ್ಲಿ... 

ವಾಲಿ  ನನ್ನನ್ನು ಕಂಡು ...
ಮೋಹಿತನಾಗಿ...
ಎಲ್ಲ ದೇವತೆಗಳ ಸಮ್ಮುಖದಲ್ಲಿ ಬಹಳ ಸೊಕ್ಕಿನಿಂದ ಹೇಳಿದ್ದ...

"ಇವಳು ನನ್ನವಳು....
ಇವಳನ್ನು ನಾನು ಮದುವೆಯಾಗುತ್ತೇನೆ..."

ಅಲ್ಲಿದ್ದ 
ಯಾವ ರಾಕ್ಷರೂ..
ದೇವತೆಗಳೂ ತುಟಿ ಬಿಚ್ಚಲಿಲ್ಲವಾಗಿತ್ತು...

ಜವಬ್ದಾರಿ...
ಪರಿಶ್ರಮದ.. ಕೆಲಸ ..
ತಾಕತ್ತು...
ಅಧಿಕಾರವನ್ನು ಸಹಜವಾಗಿ ಕೊಡುತ್ತವೆ....

ನಾನು ಹೆಣ್ಣಲ್ಲವೆ... ?
ನನ್ನ
ಇಷ್ಟ.. ಕಷ್ಟಗಳನ್ನು ಯಾರೂ ಅಲ್ಲಿ ಕೇಳಲೇ ಇಲ್ಲ..... !

ಶಕ್ತಿಯ ಮೇಲೆ ... 
ಸೊಕ್ಕಿರುವ  ಗಂಡಸು 
ಹೆಣ್ಣನ್ನು... 
ಪ್ರಕೃತಿಯನ್ನು ಪ್ರೀತಿಸಲಾರ... 

ಅಧಿಕಾರದ ದರ್ಪವನ್ನು ಮಾತ್ರ ತೋರಿಸಬಲ್ಲ... 

ನಾನು ವಾಲಿಯ ಮಡದಿಯಾದೆ....
ಕಿಷ್ಕಿಂದೆಯ
ಪಟ್ಟದ ರಾಣಿಯಾದೆ...

ಮುಂದಿನ ವಿಷಯ ನಿಮಗೆ ಗೊತ್ತಲ್ಲ...

ವಾಲಿ
ಸುಗ್ರೀವರಿಬ್ಬರೂ ಮಾಯಾವಿ ರಾಕ್ಷನನ್ನು ಕೊಲ್ಲಲು ಹೋಗಿದ್ದು...

ವಾಲಿ ಮಾಯಾವಿ ರಾಕ್ಷಸನಿಂದ ಸತ್ತು ಹೋದ ಅಂತ ಸುಗ್ರೀವ ವಾಪಸ್ಸು ಬಂದಿದ್ದು...


ಸುಗ್ರೀವ ರಾಜಾನಾದದ್ದು..


ನಾನು 
ಅವನ ಸಿಂಹಾಸನದ ಪಕ್ಕದಲ್ಲಿ ಹೋಗಿ ಕುಳಿತದ್ದು...

ಕೆಲವು ದಿನಗಳ ನಂತರ ವಾಲಿ ಬಂದು 
ಸುಗ್ರೀವನಿಗೆ ಚೆನ್ನಾಗಿ ಹೊಡೆದು..
ಬಡಿದು ಕಾಡಿಗೆ ಅಟ್ಟಿದ್ದು...

ಸುಗ್ರೀವನ ಹೆಂಡತಿ "ರುಮೆಯನ್ನು" ತಾನು ಇಟ್ಟುಕೊಂಡಿದ್ದು...


ಶ್ರೀರಾಮ ಬಂದು..

ಮರೆಯಿಂದ ಬಾಣ ಹೊಡೆದು ವಾಲಿಯನ್ನು ಸಾಯಿಸಿದ್ದು....

ಇದು
ನಿನ್ನೆಯವರೆಗಿನ ಕಥೆ....

ಇಂದು
ಮತ್ತೆ ಸುಗ್ರೀವನಿಗೆ ಪಟ್ಟಾಭಿಷೇಕ..!

ವಾಲಿ
ಸತ್ತಿದ್ದಾನೆಂದು ದುಃಖಪಡಬೇಕೊ..?

ಸುಗ್ರೀವ ಮತ್ತೆ ಬಂದಿದ್ದಾನೆಂದು ಖುಷಿಪಡಬೇಕೊ ...!


ನನ್ನ
ಅಂತರಂಗವನ್ನು..
ನನ್ನ ಭಾವನೆಯನ್ನು ಕೇಳುವರ್ಯಾರು ?

ಈ ಗಂಡಸರಿಗೆ ನಾಚಿಕೆ ಇಲ್ಲ....

ಶಾಸ್ತ್ರ ಸಮ್ಮತವಾಗಿ..
ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದ ರುಮೆಯನ್ನು ಬಿಟ್ಟು...
ನನಗೆ ಬಾ ಎಂದಿದ್ದಾನೆ...

ನನ್ನ
ಮೊದಲ ಮದುವೆಯಲ್ಲೂ ಇಷ್ಟು ಸಂಭ್ರಮ ನನಗಾಗಿರಲಿಲ್ಲ...

ಸುಗ್ರೀವನ 
ಅಂತಃಪುರದ ಬಾಗಿಲು ತೆರೆದು ಒಳಗೆ ಪ್ರವೇಶಿಸುವಾಗ
ನನ್ನ ಕೈಯೆಲ್ಲ ಬೆವರಿತ್ತು....

ಈ ಸುಗ್ರೀವ ನನಗೆ ಹೊಸಬನೇನಲ್ಲ....

ಆದರೆ

ಇಂಥಹ ... 
ಪ್ರತಿಬಾರಿಯ ಸಂದರ್ಭ ಹಾಗಾಗಿಬಿಡುತ್ತದೆ... .... 

ಅಗಲಿಕೆ ಇದೆಯಲ್ಲ...
ಬಾಂಧವ್ಯವನ್ನು..
ಸಂಬಂಧದ ಬೆಸುಗೆಯನ್ನು ಬಲವಾಗಿ ಹೊಸೆದುಬಿಡುತ್ತದೆ...

ಇಷ್ಟು ದಿನ
ವಾಲಿಯಬಳಿ ನರಳುವಾಗ ಸುಗ್ರೀವ ನೆನಪಾಗುತ್ತಿದ್ದ...

ಈಗ ಮತ್ತೆ ಸುಗ್ರೀವ ಸಿಕ್ಕಿದಾನೆ..

ವಾಲಿಯ ಯಾವುದೇ ಆತಂಕವಿಲ್ಲದೆ....

ಸುಗ್ರೀವ ನನ್ನ ಕೈ ಹಿಡಿದು ಪಕ್ಕಕ್ಕೆ ಕುಳ್ಳಿರಿಸಿಕೊಂಡಾಗ ಮೈ ಜುಮ್ಮೆನ್ನುತ್ತಿತ್ತು....

ಸುಗ್ರೀವ ಯಾವಗಲೂ ಹಾಗೆ....

ಹೂವಿನಂಥವನು...

"ತಾರೆ...
ನನ್ನದು ಒಂದಷ್ಟು ಪ್ರಶ್ನೆಗಳಿವೆ...."

"ಇದೆನು ?
ಕೂಡುವಾಗ.. ಪ್ರಶ್ನೆಗಳೆ ?

ಸುಗ್ರೀವ ನನ್ನನ್ನೇ ದಿಟ್ಟಿಸುತ್ತಿದ್ದ...

"ಪ್ರಶ್ನೆಗಳು ... 
ಇರುವದಕ್ಕಾಗಿಯೆ 
ಕೂಡುವದು..
ಕಳೆಯುವದು ಹುಟ್ಟಿಕೊಂಡಿದೆ..."

ಇವ ಸೊಗಸಾದ ಮಾತುಗಾರ...
ನಾನು ನಕ್ಕುಬಿಟ್ಟೆ.... 

" ಇರು ಮಾರಾಯಾ...
ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು..."

ಸುಗ್ರೀವ
ತನ್ನ ಬೆರಳುಗಳುಗಳಿಂದ ನನ್ನ ಕಿವಿ ಬಳಿ ಕಚಗುಳಿ ಇಡುತ್ತಿದ್ದ...
ನನ್ನನ್ನು ಬಳಸಿ ಕೇಳಿದ.... 

"ಏನು ...?"

"ಅಣ್ಣನ ಮಡದಿಯಾಗಿದ್ದಾಗ ... 
ನೀನು 
ನನ್ನ ಕಾಲುಂಗುರ ನೋಡುತ್ತಿದ್ದೆ.....

ಈಗ 
ನನ್ನೆದೆಯ  ಬಂಗಾರದ ಸರಗಳನ್ನು ಕಣ್ಣ್ಮುಚ್ಚದೆ ನೋಡುತ್ತೀಯಾ... 
ಸೊಂಟದ ಪಟ್ಟಿಗೆ ಕೈ ಹಾಕುತ್ತೀಯಾ.. ?

ಏನಿದು

ಸಂಬಂಧ... ಬಾಂಧವ್ಯಗಳ ಅರ್ಥ ?

ದೇಹ.. ಮನಸ್ಸು.. 
ಬಯಕೆ ... 
ಆಸೆಗಳು ... 
ಸಂಬಂಧ...   ಇವುಗಳ ನಡುವಿನ ಪರಿಧಿ  ಏನು   ?  "

ಸುಗ್ರೀವ ತನ್ನ ಕೈ ಸಡಿಲಿಸಿದ... 
ದೂರ ಕುಳಿತ...

ಸ್ವಲ್ಪ ಹೊತ್ತು ಸುಮ್ಮನಿದ್ದ...

"ದೇಹವಾಗಲಿ.. 
ಮನಸ್ಸಾಗಲಿ .... 
ಸಿಕ್ಕಿದ "ಸಂದರ್ಭವನ್ನು" ಬೇಡವೆನ್ನುವದಿಲ್ಲ..   

ದೇಹ... 
ಮನಸ್ಸು... ಆಸೆಗಳಿಗಾಗಿಯೇ ಹಂಬಲಿಸುತ್ತವೆ... 
ಬದುಕುತ್ತವೆ.... 

ಬೇಡವೆನ್ನುವದು ಶಿಷ್ಟಾಚಾರ... 

ಸರಿ... ತಪ್ಪುಗಳು  .. ಮನಃಸಾಕ್ಷಿಗೆ ಬಿಟ್ಟಿದ್ದು.... 

ನಮ್ಮ 
ಈ ವರ್ತಮಾನದಲ್ಲಿ "ವಿಧವೆ" ... 
ಅತ್ತಿಗೆಗೆ ಬಾಳು ಕೊಡುವದು ತಪ್ಪಲ್ಲ...

ಅದು ಶಾಸ್ತ್ರ ಸಮ್ಮತ...


ಈಗ.... 

ನಿನ್ನ ಅಂತರಂಗವನ್ನು ಕೇಳಿಕೊ...

ಅಂದು

ಸಿಂಹಾಸನದಲ್ಲಿ 
ನಾನು ನನ್ನ ಮಡದಿ 
ರುಮೆಯೊಡನೆ ಕುಳಿತಿರುವಾಗ
ಮೊದಲಿಗೆ ನೀನಾಗಿಯೆ ಬಂದು ಕುಳಿತುಕೊಂಡೆ...

ನಾನು ಕರೆದಿರಲಿಲ್ಲ...


ಆಗ ನಿನಗೇನು ಅನ್ನಿಸಲಿಲ್ಲವಾ?


ಮೈದುನ.. 

ಅತ್ತಿಗೆ .. ಸಂಬಂಧ ಅಂತ..?... "

ನಾನು ಸಣ್ಣದಾಗಿ ಬೆವರುತ್ತಿದ್ದೆ... 

ನನ್ನ 
ಧ್ವನಿ ಕಂಪಿಸುತ್ತಿತ್ತು.... 


"ಅಂದು ..... 
ನಾನು ಹೆಣ್ಣಾಗಿ ನಿನ್ನ ಬಳಿ ಬರಲಿಲ್ಲ..

ನನ್ನ ಮಗ "ಅಂಗದನ" ಭವಿಷ್ಯಕ್ಕಾಗಿ..

ಒಬ್ಬ ತಾಯಿಯಾಗಿ ಬಂದೆ...

ಒಂದು 

ಹೆಣ್ಣಿಗೆ ಹಿಂದೆ ಮುಂದೆ ಯೋಚಿಸಬೇಕಾಗುತ್ತದೆ ..

ಒಬ್ಬ  ತಾಯಿಗೆ... 
ಮಗ ಮತ್ತು ಅವನ ಭವಿಷ್ಯ ಮಾತ್ರ ಕಾಣುತ್ತದೆ.."

ಸುಗ್ರೀವ  ಪಕ ಪಕನೆ ನಗುತ್ತಿದ್ದ....
ಮತ್ತೆ ಹತ್ತಿರ ಬಂದ....

"ತಾರೆ...
"ಮೈದುನ" ಎನ್ನುವ ಶಬ್ಧ ..... 

"ಮೈಥುನ"ದಿಂದ ಹುಟ್ಟಿರಬಹುದಾ ?"

ನನಗೆ ನಾಚಿಕೆಯಾಯಿತು....
ಸುಗ್ರೀವನನ್ನು ತಬ್ಬಿಕೊಂಡೆ...

ತನ್ನದಲ್ಲದ್ದು..
ಇದೀಗ ತನ್ನದ್ದಾಗಿದೆ....

ಮೈ ಹಿತವಾಗಿ ಕಂಪಿಸುತ್ತಿತ್ತು... ಕಣ್ಮುಚ್ಚಿದೆ..


ಸುಗ್ರೀವ ಮೆಲ್ಲಗೆ ಕಣ್ಣು ಬಿಡಿಸಿದ...


"ಈಗ ಹೇಳು...
ನನ್ನಣ್ಣ ಜಗಜಟ್ಟಿ...
ಅವನನ್ನು ಸೋಲಿಸಲು ದೇವತೆಗಳಿಂದಲೂ ಸಾಧ್ಯವಿಲ್ಲವಾಗಿತ್ತು...

ನಾನು ತೀರಾ ಸಾಮಾನ್ಯದವ..


ನನಗೂ..

ವಾಲಿಗೂ ಹೇಗೆ ಹೋಲಿಕೆ ? 
ಏನನ್ನಿಸುತ್ತದೆ ?.."

ನನಗೆ ಕೋಪವುಕ್ಕಿತು.. ಸುಗ್ರೀವನನ್ನು ದೂಡಿದೆ...

"ರುಮೇಯನ್ನೂ..
ನನ್ನನ್ನೂ ನೋಡಿದ್ದೀಯಾ... ನಿನಗೇನನ್ನಿಸುತ್ತದೆ ?

ಇಂದು 

ರುಮೆಯನ್ನು ಬಿಟ್ಟು ನನ್ನನ್ನು ಕರೆದಿದ್ದೀಯಾ ? 

ಯಾಕೆ ? "

ಸುಗ್ರೀವ ಮತ್ತೂ ಬಿಗಿಯಾಗಿ ತಬ್ಬಿಕೊಂಡ...
ಕಿವಿಯಲ್ಲಿ ಉಸುರಿದ..

"ಅಕ್ರಮವಾಗಿ 
ಸಿಗುವದು ರೋಮಾಂಚಕಾರಿಯಾಗಿರುತ್ತದೆ..

ಈಗ ನೀನು ಹೇಳು ... 

ನನ್ನಣ್ಣನ ತಾಕತ್ತಿನ ನಿನ್ನ ಅನುಭವ..."

ಈಗ ನಾಚಿಕೆಯಾಗಲಿಲ್ಲ... 

ಆದರೆ 
ಸುಗ್ರೀವನ ಮುಖ ನೋಡಲಾಗಲಿಲ್ಲ... 

"ಸುಗ್ರೀವಾ... 
ನಿನ್ನ ಅಣ್ಣನಿಗೆ ಒಂದು ವರವಿತ್ತು ಗೊತ್ತಿದೆಯಲ್ಲ ?

ಆತ 

ಯಾರ ಸಂಗಡ ಕುಸ್ತಿಯನ್ನಾಗಲಿ..
ಯುದ್ಧವನ್ನಾಗಲಿ ಮಾಡುವಾಗ..
ಎದುರಾಳಿಯ ಅರ್ಧ ಬಲ ಅವನಿಗೆ ಸಿಗುತ್ತಿತ್ತು...

ಅವನನ್ನು ಸೋಲಿಸಲು 

ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ... ..."

ಸುಗ್ರೀವ ಹುಬ್ಬೇರಿಸಿದ

"ಏನು ಇದರ ಅರ್ಥ ?"

"ನಿನ್ನಣ್ಣ...
ಮಡದಿಯೊಡನೆಯ ದಾಂಪತ್ಯ ಪ್ರೀತಿಯನ್ನೂ ..
ಕುಸ್ತಿ.. 
ಹೊಡದಾಟ ಅಂತಲೇ ತಿಳಿದುಕೊಂಡಿದ್ದ...

ನನಗೆ  ಪ್ರತಿ ದಿನ ರಾತ್ರಿ ... 
ಕುಸ್ತಿಯಾಡಿ ಸೋತ ಅನುಭವ...
ಮೈಕೈ ನೋವು.... "

ಸುಗ್ರೀವ ನನ್ನ ಕಣ್ಣುಗಳನ್ನೇ ದಿಟ್ಟಿಸಿದ..

"ದಾಂಪತ್ಯಕ್ಕೆ ಶಕ್ತಿ ಬೇಕಿಲ್ಲವೆ ?..."

ನನಗೆ ನಗು ತಡೆಯಲಾಗಲಿಲ್ಲ...

ಕಣ್ಮುಚ್ಚಿ ನಕ್ಕು ಬಿಟ್ಟೆ...


"ಸುಗ್ರೀವಾ...

ಹೂ ಅರಳಲು... 

ಯಾವುದೇ ತಾಕತ್ತು ಬೇಕಿಲ್ಲ...

ಸೂರ್ಯನ

ಮೃದು ಕಿರಣ .... 
ಹಿತವಾಗಿ ಚುಂಬಿಸಿದರೆ ಸಾಕು...

ಹೂ ಅರಳಿ ನಕ್ಕು ಬಿಡುತ್ತದೆ...."


ಸುಗ್ರೀವ
ಕೆಲ ಹೊತ್ತು ಮೌನವಾದ....

ಕಿವಿಯಲ್ಲಿ ಪಿಸುಗುಟ್ಟಿದ...

"ಪಾಪ !
ನನ್ನ ರುಮೆ...

ಅವಳು ನಿನ್ನಷ್ಟು ಬಲಶಾಲಿಯಲ್ಲ...


ಹೂವಿನಂತವಳು... "

ನಾನು ತಡಮಾಡಲಿಲ್ಲ...

ನಮ್ಮಿಬ್ಬರ ಏಕಾಂತದಲ್ಲಿ ಮಾತಿನದೇನು ಗಲಾಟೆ ?


ಮೆಲ್ಲಗೆ  
ದೀಪವಾರಿಸಿದೆ...


(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ...)

Friday, April 11, 2014

..... ಬೇಲಿ .....

"ಪ್ರೀತಿಯನ್ನು  ... 
ಹೇಗೆ ಮಾಡಬೇಕು ಗೊತ್ತಾ ?

ನಮ್ಮವರ ದೌರ್ಬಲ್ಯಗಳನ್ನು..

ನಮ್ಮ 
ಪ್ರೀತಿಯನ್ನಾಗಿ ಮಾಡ್ಕೋಬೇಕು..

ಅಷ್ಟು ಪ್ರೀತಿಮಾಡಿದರೆ..

ಎಲ್ಲ 
ಸಂಬಂಧಗಳು ಮಧುರವಾಗಿರುತ್ತವೆ..."

ಹುಡುಗ 

ಗಂಭೀರವಾಗಿ ಸಭಿಕರತ್ತ ನೋಡಿದ,..

"ವಿಚ್ಛೇಧನಗಳು 

ಯಾಕೆ ಆಗುತ್ತವೆ ಗೊತ್ತಾ ?.... 

ನಮ್ಮ ಸಂಗಾತಿ ....

ನಮಗಾಗಿ ಹೀಗಿರಬೇಕು ಎನ್ನುವ ಸ್ವಭಾವ...

ಸಂಗಾತಿ ಬಗೆಗಿನ

ನಿರೀಕ್ಷೆಗಳು..

ನಿರೀಕ್ಷೆಗಳ ಬದಲಾಗಿ ....

ನಾವೇನು ಮಾಡಬೇಕು 
ಎನ್ನುವದನ್ನು ಮರೆತುಬಿಡುತ್ತೇವೆ...

ಸಂಗಾತಿ ಬಗೆಗಿನ 

ನಮ್ಮ ಕರ್ತವ್ಯಗಳನ್ನು ಮರೆತು....
ನಮ್ಮ ನಿರೀಕ್ಷೆಗಳೇ ನಮ್ಮ ಸಂಬಂಧಗಳನ್ನು ಕೊಲ್ಲುತ್ತವೆ..."

ಎಷ್ಟು ಚಂದ ಮಾತಾಡ್ತಾನೆ ಈ ಹುಡುಗ.. !


ಹುಡುಗ ಆಕರ್ಷಕವಾಗಿದ್ದ...

ಬುದ್ಧಿವಂತ...

ಯಾಕೋ ಮಾತನಾಡಿಸಬೇಕು ಅನ್ನಿಸ್ತು...


ನಿಜ ಹೇಳ್ತೀನಿ..

ಬಹಳ ನಾಚಿಕೆ.. ಆತಂಕ ಆಯ್ತು..

"ನೀವು ಬಹಳ ಚಂದ ಮಾತಾಡ್ತೀರಿ...!!.. "


ಹುಡುಗನ ಕಣ್ಣುಗಳು ಮಿನುಗುತ್ತಿದ್ದವು..


"ತುಂಬಾ ಜನ 

ಅಭಿನಂದನೆ ಹೇಳಿದ್ರು...

ಆದರೆ ....

ಅತ್ಯಂತ ಖುಷಿಯಾಗಿದ್ದು ನಿಮ್ಮ ಪ್ರತಿಕ್ರಿಯೆಯಿಂದ..."

"ಯಾಕೆ...?"


"ಚಂದ 

ಅಂದರೆ ನನಗೆ ಬಲು ಇಷ್ಟ..

ಚಂದಿರನಂತೆ 

ಚಂದ ಇದ್ದವರು ಮತ್ತೂ ಇಷ್ಟ..!

ನೀವು ಚಂದ ಇದ್ದೀರಿ....".. 


ಈ ನಾಚಿಕೆಯಿಂದ ಆಗುವಷ್ಟು ಎಡವಟ್ಟುಗಳು ಅಷ್ಟಿಷ್ಟಲ್ಲ...!


ಏನೇನೊ ಮಾತನಾಡಬೇಕು ಅಂದುಕೊಂಡಿದ್ದೆ...


ಆಗಲಿಲ್ಲ..


ಅಲ್ಲಿ 

ನಿಲ್ಲಲಾಗದೆ ಓಡಿಹೋಗಿಬಿಟ್ಟೆ...!

ಹುಡುಗ ಓದಿನಲ್ಲೂ ಮುಂದು...

ಕ್ಲಾಸಿನಲ್ಲಿ ಆಗಾಗ ನನ್ನೆಡೆಗೆ ನೋಡುವದು ಗಮನಕ್ಕೆ ಬಂತು...

"ಯಾಕೆ ....

ನಾವಿಬ್ಬರೂ ಸ್ನೇಹಿತರಾಗಬಾರದು...?"

ನಾನು ತಲೆ ತಗ್ಗಿಸಿದೆ..


ಹಾಳಾದ್ದು ...

ಈ ಎದೆಯ ಢವ.. ಢವ...!
ಮಾತನಾಡಲು  ಕೊಡ್ತಾ ಇಲ್ಲ  ನೋಡಿ...!

"ಒತ್ತಾಯವಿಲ್ಲ..

ಬೇಸರವಾಗಿದ್ದಲ್ಲಿ ಕ್ಷಮಿಸಿಬಿಡಿ..."

"ಬೇಸರವೇನಿಲ್ಲ..

ಜನ ಅಪಾರ್ಥ ಮಾಡಿಕೊಂಡರೆ ಅಂತ..."

"ಅಯ್ಯೋ..

ಈ ಜನಕ್ಕೇನು...?

ಅವರಿರೋದೆ ಕೊಂಕು.. ಡೊಂಕು  ಹೇಳೋಕೆ...


ನಮ್ಮ ಮನಸ್ಸು..

ಹೃದಯ ಸ್ವಚ್ಛವಾಗಿದ್ದರೆ ಸಾಕು..

ಚಂದದ ಸ್ನೇಹ ನಮ್ಮದಿರಲಿ.."


ಎಷ್ಟು ಖುಷಿ ಆಯ್ತು ಗೊತ್ತಾ !


ಅವತ್ತು..

ದಿನವಿಡಿ ಹಾಡು ಗುನುಗುತ್ತಿದ್ದೆ...

ಹುಡುಗ ಬಹಳ ಸಹಾಯ ಮಾಡುತ್ತಿದ್ದ..


ಕ್ಲಾಸಿನಲ್ಲಿ ನೋಟ್ಸ್ ಕೊಡುವದು..

ಒಳ್ಳೊಳ್ಳೆ ಪುಸ್ತಕಗಳನ್ನು ಕೊಡುವದು...

ಅವನ ತುಂಟತನ ಬಹಳ ಇಷ್ಟವಾಗುತ್ತಿತ್ತು..


"ಹುಡುಗಿ..

ಒಂದು ಮಾತು ಕೇಳ್ತೀನಿ..."

"ಕೇಳು.."


"ನೀನು 

ಹೆಣ್ಣು ಅಂತ ... 
ಮೊದಲಬಾರಿಗೆ  ನಿನಗೆ ಅನ್ನಿಸಿದ್ದು  ಯಾವಾಗ...?"

ಆತನೇನೊ 

ನಿರಾಳವಾಗಿ ಪ್ರಶ್ನೆ ಕೇಳಿಬಿಡ್ತಿದ್ದ..

ನನಗೆ 

ನಾಚಿಕೆಯಾಗಿ..
ಮುದುಡಿ ಮುದ್ದೆಯಾಗಿ ಬಿಡ್ತಿದ್ದೆ..

"ಹೆಣ್ಣಿನ ಬಳಿ 

ಎಷ್ಟೆಲ್ಲ ಚಂದ ಇದೆ ಮಾರಾಯ್ತಿ...!!... "

"ಏನೇನು ಚಂದ..?... "


"ನಾಚಿಕೆ ..

ಕೋಪ..
ಕೊಂಕು ನೋಟ...
ನಗು.. 
ಕಿರು ನಗು..!

ಬೇಸರವಾದಾಗ.. 

ತುಟಿ 
ಕಚ್ಚುತ್ತ ಇರ್ತೀಯಲ್ಲ... 
ಅದೂ ಕೂಡ ಚಂದ ಕಣೆ...!!... "

ನನಗೆ ಹೇಗೊ.. ಹೇಗೊ ಆಗುತ್ತಿತ್ತು...


" ನನ್ನ 

ಹುಚ್ಚು ಹುಚ್ಚು ಪ್ರಶ್ನೆ 
ನಿನಗೆ ಕಷ್ಟವಾಗ್ತದೆ ಅಂತ ಗೊತ್ತು..

ದಿನಕ್ಕೊಮ್ಮೆಯಾದರೂ ನಿನ್ನ ನಾಚಿಕೆ ನೋಡಬೇಕು..

ಹಾಗಾಗಿ ಎಡವಟ್ಟು ಪ್ರಶ್ನೆ ಕೇಳ್ತೀನಿ..

ಹುಡುಗಿ...

ಈ ನಿನ್ನ ನಾಚಿಕೆ ಇದೆಯಲ್ಲ..!

ವಾಹ್..!!


ನಿನ್ನ ನಾಚಿಕೆಯ ಅಭಿಮಾನಿ ನಾನು ಕಣೆ..."


ನನಗೆ ಮತ್ತೂ ನಾಚಿಕೆ ಆಯ್ತು..


ನಮ್ಮ ಭೇಟಿ...

ನಮ್ಮಿಬ್ಬರ ಮಾತುಕತೆ ಕಾಲೇಜಿನಲ್ಲೆಲ್ಲ ಹರಡಿತು..

ಅದು..

ಕಾಲೇಜಿನ ಕೊನೆಯ ವರ್ಷದ ಕೊನೆಯ ದಿನಗಳು...

ಪ್ರಿನ್ಸಿಪಾಲರು ನಮ್ಮನ್ನು ಕರೆಸಿದರು..


ಹುಡುಗ ಎದೆಯುಬ್ಬಿಸಿ ಹೇಳಿದ..


"ನಾವಿಬ್ಬರೇ 

ಮಾತನಾಡುತ್ತೇವೆ ನಿಜ..
ನಮ್ಮಿಬ್ಬರದು ಪವಿತ್ರವಾದ ಸ್ನೇಹ..

ಆದರೆ ಎಂದೂ ಕೆಟ್ಟ ಯೋಚನೆ ಮಾಡಿದವರಲ್ಲ.."


ಅವನ ಮಾತಿಗೆ ನಾನೂ ಸಹ "ಹೂಂ" ಅಂದೆ... 


"ಒಬ್ಬ ಹುಡುಗಿ.. 

ಒಬ್ಬಹುಡುಗನ  
ಭೇಟಿ.. 
ಸ್ನೇಹವನ್ನು .. ಕೇವಲ ಸ್ನೇಹ ಅಂತ ಯಾರೂ ಒಪ್ಪುವುದಿಲ್ಲ..

ನಿಮ್ಮ ಸ್ನೇಹವನ್ನು ಕಾಲೇಜಿನ ಆವರಣದ ಹೊರಗಡೆ ಇಡಿ..


ನಿಮ್ಮಿಂದಾಗಿ 

ಕಾಲೇಜಿನ ವಾತಾವರಣ ಹಾಳಾಗುವದು ಇಷ್ಟವಿಲ್ಲ..."

ಹುಡುಗ 

ವಿದ್ಯಾರ್ಥಿ ಸಂಘದ ನಾಯಕನಾಗಿದ್ದ..

ಸಮಾಜವಾದ.. 

ಸಮಾನತೆ  
ನಮ್ಮ ದೇಶ... 
ಅಂತೆಲ್ಲ 
ನಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆ ಪಟ್ಟುಕೊಳ್ಳುವವನಾಗಿದ್ದ..

ಹುಡುಗ ಅಂದು ಯಾಕೋ ಮುಖ ಬಾಡಿಸಿಕೊಂಡು  ಕುಳಿತಿದ್ದ.. 


"ಹುಡುಗಿ..

ನಮ್ಮಿಬ್ಬರದು ಒಳ್ಳೆಯ ಸ್ನೇಹ ಅಲ್ಲವಾ ?"

"ನಿಜ"


"ನಮ್ಮ 

ಮನೆಯ ಹಿರಿಯರು ನಮಗೆ  ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ 

ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ.. 

ಅವರು ಕೊಟ್ಟ 

ಸ್ವಾಂತಂತ್ರ್ಯ... 
ಬೇಲಿಯನ್ನು  ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..


ಬಯಸುವ  ದೇಹಕ್ಕಿಂತ ... 


ನಮಗೆ ನಾವೆ ಹಾಕಿಕೊಂಡ .. 

ನೀತಿ..
ನಿಯತ್ತು .. ಬಲು ದೊಡ್ಡದು..

ನಿನ್ನ 

ಚಂದದ ಸ್ನೇಹವನ್ನು  ಯಾವಾಗಲೂ ಮರೆಯುವದಿಲ್ಲ.."

ಹುಡುಗ ಮತ್ತಷ್ಟು ಇಷ್ಟವಾದ..


ಬದುಕೇ ಹೀಗೆ..

ಓಡುವ ಅದರ ವೇಗ ಗೊತ್ತೇ ಆಗುವದಿಲ್ಲ..

ಹುಡುಗನ ಭೇಟಿ..

ಅವನ ತುಂಟಾಟದ ಮಾತುಗಳು..

ನಾನು ನಾಚಿಕೆ ಪಟ್ಟಿದ್ದು..

ಆತ ಕಣ್ ತುಂಬಾ ... 
ನನ್ನ ನಾಚಿಕೆಯನ್ನೇ ನೋಡುತ್ತಿದ್ದುದು..

ಅಪ್ಪ ನೋಡಿದ ಹುಡುಗನೊಂದಿಗೆ

ನನಗೆ ಮದುವೆಯಾಗಿದ್ದು..

ಮುದ್ದಾದ  ಪಾಪುವಾಗಿದ್ದು... 

ಇವೆಲ್ಲ ನಿನ್ನೆ ಮೊನ್ನೆಯ ಘಟನೆಯಂತಿದೆ..

ಮೊನ್ನೆ...

ನನ್ನ ಯಜಮಾನರಿಗೆ ಯಾವುದೋ ಸರಕಾರಿ ಕೆಲಸವಾಗಬೇಕಿತ್ತು...

ಲಂಚವಿಲ್ಲದೆ ಯಾವ ಕೆಲಸವೂ ಆಗುವದಿಲ್ಲವಲ್ಲ..


ಅಲ್ಲಿ 

ಈ ಹುಡುಗ ಸಿಕ್ಕಿದ್ದ..
ಬಹಳ ಸುಲಭವಾಗಿ ಕೆಲಸ ಮುಗಿಸಿಕೊಟ್ಟಿದ್ದ..
ನನ್ನ ಯಜಮಾನರಿಗಂತೂ ಅವನ ಬಗೆಗೆ ಬಹಳ ಗೌರವ ಹುಟ್ಟಿಬಿಟ್ಟಿತ್ತು..

ಅವನೀಗ ದೊಡ್ಡ ಅಧಿಕಾರಿ..


ಮತ್ತೆ ಅದೇ ಆಸಕ್ತಿಯಿಂದ ನನ್ನನ್ನು  ಮಾತನಾಡಿಸಿದ..


"ಸರ್...

ನಿಮ್ಮ ಮಡದಿ ಇದ್ದಾಳಲ್ಲ..

ನನ್ನ ಒಳ್ಳೆಯ ಸ್ನೇಹಿತಳು..

ತುಂಬಾ ತುಂಬಾ ಒಳ್ಳೆಯ ಗುಣ... ನಿಮ್ಮಿಬ್ಬರ ಜೋಡಿ ಅಪರೂಪದ ಜೋಡಿ..."

ನನ್ನ ಯಜಮಾನರಿಗೆ ಮತ್ತೂ ಖುಷಿಯಾಯಿತು..


ಅಂದಿನಿಂದ ಆತನ ಸಂಪರ್ಕ ಮತ್ತೆ ಜಾಸ್ತಿ ಆಯಿತು..


ತನ್ನ ಮಡದಿ..

ಸಂಸಾರವನ್ನೂ ಪರಿಚಯಿಸಿದ...

ದಿನಾಲೂ ಫೋನ್...

ಹರಟೆ... ಮಾತುಕತೆ... ನಗು... !

ಆತ ಬದಲಾಗಿಯೇ ಇರಲಿಲ್ಲ...

ಥೇಟ್ ಅದೇ ಕಾಲೇಜಿನ ಹುಡುಗ...!

ನಮ್ಮಿಬ್ಬರ ಕುಟುಂಬಗಳ ಭೇಟಿ ಶುರುವಾಯಿತು..


ನನ್ನ ಯಜಮಾನರ ಅನೇಕ ಕೆಲಸಗಳನ್ನು..

ಬಹಳ ಸುಲಭವಾಗಿ ಮಾಡಿಕೊಡುತ್ತಿದ್ದ..

ಅಂದು 

ಆತನೊಬ್ಬನೆ ನಮ್ಮ ಮನೆಗೆ ಬಂದಿದ್ದ..
ಯಾವುದೋ ಕಾಗದ ಪತ್ರಗಳನ್ನು ನನ್ನವರಿಗೆ ಕೊಡಲು..

ನನ್ನವ ಆಗಲೇ ಹೊರಗಡೆ ಹೋಗಿಯಾಗಿತ್ತು..


ಎಂದಿನಂತೆ ನಗುಮುಖದಿಂದ ಸ್ವಾಗತಿಸಿದೆ...


ಆತ 

ಎಂದಿನಂತೆ ಹಾಸ್ಯ..
ನಗುವಿನ ಮೋಡಿಯಲ್ಲಿದ್ದ..

ನಮಗೆ ಇಷ್ಟವಾದವರ.. 

ಹಾಸ್ಯ.. ನಗು ... 
ಮಾತುಕತೆ ಯಾವಾಗಲೂ ಖುಷಿಕೊಡುತ್ತದೆ.. 

"ನಿನ್ನ ಯಜಮಾನರು ತುಂಬಾ ಸೆಕ್ಸಿ ಇದ್ದಾರೆ ಕಣೆ..".


ನನಗೆ ಮತ್ತೆ ನಾಚಿಕೆ ಆಯ್ತು..


"ನಿನ್ನ ಹೆಂಡ್ತಿ ಕೂಡ ಚಂದ ಇದ್ದಾರೆ ಕಣೊ..!


ಪಾಪು ತುಂಬಾ ಮುದ್ದು ಮುದ್ದಾಗಿದೆ..

ಕಣ್ಣು ನಿನ್ನ ಥರಹ... 

ನೂರಾರು ಪ್ರಶ್ನೆಗಳ ಕಣ್ಣು..!!... "


ಹುಡುಗ  ಕಣ್ ಮುಚ್ಚಿ ನಕ್ಕ..


" ನನ್ ಹೆಂಡ್ತಿ ತುಂಬಾ ಚೆನ್ನಾಗಿದ್ದಾಳೆ..


ನೋಡುವದಕ್ಕೊಂದೇ ಅಲ್ಲ..

ಮನಸ್ಸೂ ಕೂಡ..

ಮದುವೆಯಾಗಿ 

ಇಷ್ಟು ವರ್ಷ ಆದರೂ .. .... 
ಸಂಸಾರ ಬೇಸರ ಬರಲಿಲ್ಲ ನೋಡು..."

" ನನ್ನ ಯಜಮಾನರೂ ಅಷ್ಟೆ..

ನನ್ನನ್ನು ತುಂಬಾ ಪ್ರೀತಿ ಮಾಡ್ತಾರೆ..

ಆಫೀಸಿನಲ್ಲಿದ್ರೂ ದಿನಕ್ಕೆ ಹತ್ತು ಬಾರಿ ಫೋನ್ ಮಾಡ್ತಾರೆ..


ಪಾರ್ಕು..

ಪಾನಿಪುರಿ... 

ಸಿನೇಮಾ..


ಹಾಡು.. ಸಂಗೀತ...!


ಬದುಕು ತುಂಬಾ ಸುಂದರ ಕಣೊ..."


ಮಾತನಾಡುತ್ತ ಜ್ಯೂಸ್ ತಂದೆ...


ಜ್ಯೂಸ್ ಕೊಡುವಾಗ 

ಟಿಪಾಯಿ ಕಾಲಿಗೆ ತಾಗಿ  ... 
ಸ್ವಾಧೀನ  ತಪ್ಪಿ ಅವನ ಮೇಲೆ ಬಿದ್ದೆ...

ಆತ ತಕ್ಷಣ ನನ್ನನ್ನು ಹಿಡಿದುಕೊಂಡ...


ನಾನು ಸಂಪೂರ್ಣವಾಗಿ ಅವನ ತೆಕ್ಕೆಯಲ್ಲಿದ್ದೆ...


ಹಿಡಿತ ಬಲವಾಗಿತ್ತು...


ಅವನ

ಬಿಸಿಯುರು ಕಿವಿಗೆ ತಾಗುತ್ತಿತ್ತು..

ನಾನು ಮುಚ್ಚಿದ್ದ ಕಣ್ಣನ್ನು ಮೆಲ್ಲಗೆ ತೆರೆದೆ..


ಆತ 

ನನ್ನನ್ನೇ ನೋಡುತ್ತಿದ್ದ..

ಮತ್ತೆ ನಾಚಿಕೆಯಾಯ್ತು..


ಕಣ್ ಮುಚ್ಚಿಕೊಂಡೆ..... 


ಆತ 

ಮೆಲ್ಲಗೆ ನನ್ನ ಕಿವಿಯಲ್ಲಿ ಉಸುರಿದ... 

"ಎಷ್ಟು ಚಂದವೆ ಈ ನಿನ್ನ ನಾಚಿಕೆ... !


ವಾಹ್  !.. "


ಆತನ ಹಿಡಿತ ಹಿತವಾಗಿತ್ತು...


ದೇಹಲ್ಲೇನೋ ಕಂಪನ.... 

ಮೈ ಜುಮ್ ... ಎಂದಿತು.... !

ಅವನ 
ತುಟಿ .. 
ನನ್ನ ಕಣ್ಣ ರೆಪ್ಪೆಯನ್ನು ಚುಂಬಿಸಿತು...

ಬೇಡ..

ಬೇಡವೆಂದುಕೊಂಡೆ...

ಅವನನ್ನು 

ದೂಡಿ...
ದೂರವಾಗಬೇಕಿತ್ತು...   

ಮನಸ್ಸು ಕೇಳಲಿಲ್ಲ...


ನನ್ನ ಕೈಗಳು ಅವನನ್ನು ಬಳಸಿದವು....




{ಕಥೆ }
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ನೋಡಿ... 

(ಈ ಕಥೆ ಬರೆದು ಬ್ಲಾಗಿನಲ್ಲಿ ಹಾಕುವಾಗ ಈ ಕಥೆಯನ್ನು ಮುಂದುವರೆಸಬಹುದೆನ್ನುವ ಕಲ್ಪನೆ ಕೂಡ ಇರಲಿಲ್ಲ..
http://dinakarmoger.blogspot.in/2014/04/blog-post_14.html 
ನಮ್ಮ ಪ್ರೀತಿಯ ಪಡೆಯಪ್ಪನ್ "ದಿನಕರ" ಈ ಕಥೆಯನ್ನು ಮುಂದುವರೆಸಿದ್ದಾರೆ..

Saturday, January 11, 2014

.........ಅ ಸಕ್ರಮ .

ನನ್ನಾಕೆ ಪೇಪರ್ ಓದುತ್ತಿದ್ದಳು..

"ರ್ರೀ...
ಪ್ರತಿಷ್ಠಿತರು... ಸಿನೇಮಾದವರು..
ಪ್ರಖ್ಯಾತರು ಯಾಕೆ ಹೀಗೆ ?"

ನನ್ನಾಕೆಯೊಡನೆ ನಾನು ಮಾತನಾಡುವದು ಬಲು ಕಡಿಮೆ...

ನನ್ನ ಹುಬ್ಬು ಮೇಲೇರಿತು..

"ಇವರುಗಳಿಗೆ ....
ಒಂದು ದಾಂಪತ್ಯ ಸಂಬಂಧ ಯಾಕೆ ಸಾಕಾಗುವದಿಲ್ಲ...?

ಅಂಥಹದ್ದು ಏನಿರುತ್ತದೆ ಅಕ್ರಮ ಸಂಬಂಧಗಳಲ್ಲಿ ? "

ಮಡದಿಯಲ್ಲವೆ ? .... ಸಂಶಯ ಸಹಜ  !

ನನಗೆ ಅರ್ಥವಾಯಿತು.. 
ಹಾಗಂತ ನನ್ನನ್ನು ನೇರವಾಗಿ ಕೇಳಲಾಗುವದಿಲ್ಲವಲ್ಲ... 

ಸಂಶಯವನ್ನು 
ಚಿಗುರಿದ್ದಾಗಲೇ 
ಚಿವುಟಿಬಿಟ್ಟರೆ ಮತ್ತೆ ಚಿಗುರುವದಿಲ್ಲ... 

" ಸಾರ್ವಜನಿಕ ವ್ಯಕ್ತಿಗಳಿಗೆ ..
ಅಂಥಹ ಅವಕಾಶಗಳು ಸುಲಭವಾಗಿ ಸಿಗುತ್ತವೆ....

ಅದು ಮನುಷ್ಯ ಸಹಜ ಸ್ವಭಾವ..

ಒಂದೇ ರುಚಿ ನಾಲಿಗೆಗೆ ಸಾಕಾಗುವದಿಲ್ಲ..

ಅವಕಾಶ..
ಸಂದರ್ಭ ಸಿಕ್ಕಲ್ಲಿ ... 
" ಸಾಮಾನ್ಯರೂ " ಹೊಟೆಲ್ಲಿಗೆ ಹೋಗಲು ಇಚ್ಛಿಸುತ್ತಾರೆ..."

ನನ್ನಾಕೆಯ ದೃಷ್ಟಿ ತೀಕ್ಷ್ಣವಾಯಿತು..

ನಾನು ದೃಷ್ಟಿ ತಪ್ಪಿಸಿದೆ..

"ಟೀ ಬೇಕಿತ್ತು....ಕಣೆ ... . "

ನನ್ನಾಕೆ ಅಡಿಗೆ ಮನೆಗೆ ಹೋದಳು.
ನನ್ನಾಕೆಯನ್ನು ಸಂಭಾಳಿಸುವದು ಸುಲಭ... 

ನಿಮಗೆ ಗೊತ್ತಿರದೆ ಏನು...?

ನಾನೊಬ್ಬ 
ಯಶಸ್ವಿ ಟಿವಿ ಧಾರವಾಹಿ ನಿರ್ದೇಶಕ...
ನನ್ನ ಹೆಸರಲ್ಲಿ ಅನೇಕ ಧಾರವಾಹಿಗಳು ನಡೆಯುತ್ತವೆ.. 
ಜನ ನೋಡುತ್ತಾರೆ..

ಎಲ್ಲೋ ಒಂದು ಕಡೆ ಅಪರಾಧಿ ಮನೋಭಾವ ಕಾಡುತ್ತದೆ...

ಮತ್ತೇನಿಲ್ಲ...

ಅವಳು...

ಅವಳೆಂದರೆ ಅವಳು..!
ಸಾಮಾನ್ಯ ಗ್ರಹಿಣಿ...

ಅವಳ ಪರಿಚಯವಾದದ್ದು ನಾಲ್ಕಾರು ವರ್ಷಗಳ ಹಿಂದೆ..

ಆಗ 
ನಾನಿನ್ನೂ ನನ್ನ ವೃತ್ತಿ ಬದುಕಿನಲ್ಲಿ ಅಂಬೆಗಾಲಿಡುತ್ತಿದ್ದೆ...

ನಾನು 
ಗೀಚುತ್ತಿದ್ದ ಕವನಗಳನ್ನು ಬಹಳ ಮೆಚ್ಚಿಕೊಳ್ಳುತ್ತಿದ್ದಳು..

ನನ್ನ ಯಶಸ್ಸಿನ ಬಗೆಗೆ ಹರಕೆ ಹೊತ್ತುಕೊಳ್ಳುತ್ತಿದ್ದಳು...

ಆರ್ಕುಟಿನಲ್ಲಿ ಪರಿಚಯವಾಯಿತು...
ಫೇಸ್ ಬುಕ್ಕಿಗೆ ಬರುವಷ್ಟರಲ್ಲಿ ಹೃದಯಕ್ಕೆ ಬಹಳ ಹತ್ತಿರವಾಗಿಬಿಟ್ಟಿದ್ದಳು...

ನನಗೆ ಮೊದಲ ಕೆಲಸ ಸಿಕ್ಕಾಗ 
ಎರಡು ದಿನ ಉಪವಾಸವಿದ್ದು ಹರಕೆ ತೀರಿಸಿದ್ದಳು...!
ನನಗಿಂತ ಖುಷಿ ಪಟ್ಟಿದ್ದಳು... 

ನಾವು ಎಂದಿಗೂ ಭೇಟಿಯಾಗಿಲ್ಲ..
ಆಗುವದೂ ಇಲ್ಲ ಬಿಡಿ...

ನಮ್ಮ ಇತಿಮಿತಿ...
ನಮ್ಮ ಸಂಸಾರದ ಚೌಕಟ್ಟು ಎಷ್ಟೆಂದು ಇಬ್ಬರಿಗೂ ಗೊತ್ತು..

ಈಮೇಲ್... ಎಸ್ಸೆಮ್ಮೆಸ್ಸು...
ಚಾಟ್...
ಫೋನಿನಲ್ಲಿ ಹರಟುವದು... ಇಷ್ಟೆ..!

ನಾನು ಅಥವಾ ಅವಳು..
ದಿನದಲ್ಲಿ ಯಾವಾಗ ಫ್ರೀ ಇದ್ದರೂ ಮೆಸ್ಸೇಜ್ ಕಳಿಸುತ್ತೇವೆ..... 

"ಶುಭೋದಯ..." ಶುಭೋದಯ.."

ಇಬ್ಬರಿಂದಲೂ ಸಂದೇಶ ವಿನಿಮಯವಾದ ಮೇಲೆ.. 
 ನಾನು ಫೋನ್ ಮಾಡುತ್ತಿದ್ದೆ..

"ಶುಭೋದಯ " ಸಂದೇಶ ನಮ್ಮಿಬ್ಬರ ಸಂಕೇತವಾಗಿತ್ತು... 

ನಮ್ಮ ದಿನ ನಿತ್ಯದ ದಿನಚರಿ... 
ಘಟನೆಗಳು..
ನನ್ನ ಹೊಸ ಐಡಿಯಾಗಳು.. 

ನನ್ನ ಹೊಸ ಕವನಗಳನ್ನು ಹಂಚಿಕೊಳ್ಳುವದು..

ನಾನು ಗೀಚುವ  ಕವನಗಳನ್ನು 
ಧಾರಾವಾಹಿಗಳಲ್ಲಿ 
ಬಳಸಿಕೊಳ್ಳುವಂತೆ ಸಲಹೆ  ಕೊಟ್ಟವಳೂ ಅವಳೇ.... 

ಈಗ  ಅದು ಬಹಳ ಜನಪ್ರಿಯವಾಗಿದೆ !

ನನ್ನ ಮಡದಿ ...
ಮನೆಯಲ್ಲಿ ಎಲ್ಲದಕ್ಕೂ ಸಿಗುತ್ತಾಳೆ..
ಅಂದ ಚಂದದಲ್ಲಿ ಯಾವ ಕೊರತೆಯೂ ಇಲ್ಲ..

ಹೆಣ್ಣು ..
ಮಡದಿಯಾದಮೇಲೆ 
ಯಾಕೆ ಅಷ್ಟು ನೀರಸವಾಗಿಬಿಡುತ್ತಾಳೆ  ? 

ಗೊತ್ತಿಲ್ಲ... !

ಆದರೂ..
ನಾನೆಂದೂ ನೋಡದ 
ಅವಳೊಡನೆ ಹರಟುವದರಲ್ಲಿ ಏನೋ ಸಂತೋಷ.. !
ಖುಷಿ...

ನನ್ನ ಸ್ವಭಾವದೊಡನೆ ಅವಳು ಬದುಕುತ್ತಿಲ್ಲವಲ್ಲ...

ನನ್ನ 
ದೌರ್ಬಲ್ಯಗಳು ಅವಳಿಗೆ ಗೊತ್ತಿಲ್ಲವಲ್ಲ...

ನಮ್ಮ ಮಾತುಕತೆಗಳಿಗೆ ಬೇಲಿ ಇರುವದಿಲ್ಲ...

ಒಮ್ಮೆ ನಾನು ಕೇಳಿದ್ದೆ..

"ನಿಮ್ಮಿಬ್ಬರ..
ರಾತ್ರಿ ದಾಂಪತ್ಯದ ಪ್ರೀತಿ ಎಷ್ಟು ಸಮಯ ನಡೆಯುತ್ತದೆ ?"

ಬಹುಷಃ 
ಅವಳಿಗೆ ಗಂಟಲು ಕಟ್ಟಿತ್ತು..

ಧ್ವನಿ ಸಣ್ಣಗೆ ಕಂಪಿಸುತ್ತಿತ್ತು..!

"ಹೆಚ್ಚೇನಿಲ್ಲ... ಐದು ನಿಮಿಷ..."

ಮಡದಿಯನ್ನು ಬಿಟ್ಟು 
ಬೇರೆ ಹೆಣ್ಣಿನೊಡನೆ..  
ಮಾತನಾಡುವ ರೋಮಾಂಚನೆಯ ಸೊಗಸೇ ಬೇರೆ...!

"ಗಂಡಿನಂತೆ..
ಹೆಣ್ಣಿಗೂ ಒಂದು..
ತೃಪ್ತಿಯ...
ಸಮಾಧಾನದ "ಕೊನೆಯ ಹಂತ " ಇರುತ್ತದೆ ಗೊತ್ತಾ ?.... "

ಕಂಪಿಸುವ ಧ್ವನಿಯಲ್ಲಿ ಮತ್ತೆ ಉತ್ತರ ಬಂತು.. 

"ಉಹುಂ ... ಇಲ್ಲ...!... "

ರೋಚಕತೆ... 
ಕ್ರಿಯೆಯಲ್ಲಿ ಒಂದೇ ಅಲ್ಲ... 

ಸಂಭಾಷಣೆಯಲ್ಲೂ  ಇದೆ  !

ಗೊತ್ತೇ ಇರಲಿಲ್ಲ.. !

ಎಲ್ಲೆ ಇಲ್ಲದ ಈ ಸಂಬಂಧದ..
ಮಾತುಕತೆಗಳ ರೋಮಾಂಚನೆ ನನಗೆ ಬಲು ಇಷ್ಟವಾಗುತ್ತಿತ್ತು...

ಯಾವ ವಿಷಯವನ್ನೇ ಆಗಲಿ... 
ಮುಕ್ತವಾಗಿ ಮಾತನಾಡುತ್ತಿದ್ದೆವು... 

ಮಡದಿಯೊಡನೆ ಏಕಾಂತದಲ್ಲಿರುವಾಗಲೂ ಅವಳ ನೆನಪು ಕಾಡುತ್ತಿತ್ತು...

ವಾಸ್ತವದಲ್ಲಿ..
ಅವಳ ಕಲ್ಪನೆಯ ರೂಪವಿಟ್ಟು ಸುಖಿಸುತ್ತಿದ್ದೆ...

ನಮ್ಮಿಬ್ಬರ 
ಈ ಮಾತುಕತೆಯ ಸಂಬಂಧ.. 
ನಮ್ಮಿಬ್ಬರ ಕೌಟುಂಬಿಕ ಬದುಕಿಗೆ ತೊಡಕಾಗಲಿಲ್ಲ... 

ನಾಲ್ಕಾರು ವರ್ಷಗಳು ನಮ್ಮ ಈ ಸಂಬಂಧಕ್ಕೆ...

ನಾನು ನನ್ನ ಸಂಸಾರದಲ್ಲಿ..
ಅವಳು ಅವಳ ಸಂಸಾರದಲ್ಲಿ...
ಖುಷಿಯಾಗಿದ್ದೆವು... 

ಅವಳ ಗಂಡ ಬೆಳಿಗ್ಗೆ ಮನೆ ಬಿಟ್ಟರೆ.. 
ಮಧ್ಯ ರಾತ್ರಿ ಬರುತ್ತಿದ್ದ... 

ಆತ ಅವಳೊಡನೆ ಮಾತನಾಡುವದು ಕಡಿಮೆ... 
ಆತ ತನ್ನ ಪ್ರಪಂಚದಲ್ಲಿರುತ್ತಿದ್ದ.. 

ನಾನು..
ನನ್ನ ಮಡದಿಗೆ ಗೊತ್ತಾಗದಂತೆ ...
ಅವಳು ಅವಳ ಪತಿಯೊಡನೆ ಬಚ್ಚಿಟ್ಟು..
ನಮ್ಮ ಮಾತುಕತೆ ನಡೆಯುತ್ತಿತ್ತು...

ಒಂದು ದಿನ...
ಅವಳ ಮೆಸ್ಸೇಜ್ ಬರಲಿಲ್ಲ..

ನನಗೆ ಚಡಪಡಿಕೆ...

ಮರುದಿನ  "ಶುಭೋದಯ" ಅಂತ ಮೆಸೇಜ್ ಕಳಿಸಿದೆ..
ಬಹಳ ತಡವಾಗಿ " ಶುಭೋದಯ " ಅಂತ ಉತ್ತರ ಬಂತು.. !

ಲಗುಬಗೆಯಿಂದ ಫೋನ್ ರಿಂಗಿಸಿದೆ..

"ಏನಾಯ್ತು ..!!..."

ಅವಳ ಧ್ವನಿ ತಣ್ಣಗಿತ್ತು...

"ಏನಿಲ್ಲ..
ನಿನ್ನೆ ನನ್ನ ಗಂಡ ನನ್ನ ಫೋನಿನ ಕರೆಗಳನ್ನು ನೋಡಿದ.."

ನನ್ನೆದೆ ಢವ ಢವ ಹೊಡೆದುಕೊಳ್ಳತೊಡಗಿತು..

ಕಳ್ಳನಿಗೆ ಅಳ್ಳೆದೆ !

"ಮುಂದೆ..  ?..... "

" ಅವರು...
ಒಂದೂ ಮಾತನಾಡಲಿಲ್ಲ...
ಸುಮ್ಮನೆ ಕೋಣೆಗೆ ಹೋಗಿ ಮಲಗಿಬಿಟ್ಟರು...

ಊಟನೂ ಸರಿ ಮಾಡಿಲ್ಲ...

ನನಗೆ ಆತಂಕವಾಗುತ್ತಿದೆ..."

ಛೇ.... !

ನಮ್ಮದು ಕೇವಲ ಮಾತುಕತೆ.. !
ಎಸ್ಸೆಮ್ಮೆಸ್ಸುಗಳು !

ಮಾಡಬಾರದ ತಪ್ಪುಗಳನ್ನೇನೂ ನಾವು ಮಾಡಿಲ್ಲ...
ಕೆಡುಕೆನಿಸಿತು... 

"ನೋಡು...
ನಿನ್ನ ಗಂಡನಿಗೆ..
ಬೇಸರ ಮಾಡುವ.. ದುಃಖ ಕೊಡುವ ಹಕ್ಕು
ನಮಗಿಬ್ಬರಿಗೂ ಇಲ್ಲ..

ಅವರ ದೃಷ್ಟಿಯಲ್ಲಿ ಇದು ತಪ್ಪು.."

"ಏನು ಮಾಡೋಣ.. ?"

"ನಮ್ಮ ಮಾತುಕತೆಗಳನ್ನು ನಿಲ್ಲಿಸಿಬಿಡೋಣ..
"ಶುಭೋದಯ" ಸಂದೇಶಗಳನ್ನು ಕಳಿಸುವದು ಬೇಡ..."

ಅವಳು ಅಳುತ್ತಿದ್ದಳು.... 
ಅವಳ ಅಳುವ ಸ್ವರ ನನ್ನ ಹೃದಯ ಕಲಕಿತು...

"ಹೇಗೆ ಮರೆಯಲೋ ನಿನ್ನ..   ?
ನಿನ್ನ ಪ್ರೀತಿಯಾ ?"

"ನೋಡು..
ಪ್ರೀತಿ..
ಪ್ರೇಮ.. ಬೇಸರ.. ದುಃಖಗಳೆಲ್ಲ ಭಾವನೆಗಳು...

ಮನಸ್ಸು ಗಟ್ಟಿ ಇದ್ದಲ್ಲಿ ಭಾವನೆಗಳನ್ನು ಹತ್ತಿಕ್ಕಬಹುದು... ..

ನಮ್ಮ ಪ್ರೀತಿ ಹೇಗೆ ಹುಟ್ಟಿತು ಗೊತ್ತಾ ?"

"ಪ್ರೀತಿ... ಹೇಗೆ ಹುಟ್ಟಿತೊ ಗೊತ್ತೇ ಆಗಲಿಲ್ಲ..

ಈ ಪ್ರೀತಿಗೆ ಕಾರಣವೇ ಇಲ್ಲ  ಕಣೊ..."

"ಕಾರಣವಿಲ್ಲದೆ ಹುಟ್ಟುತ್ತದೆ ಪ್ರೀತಿ..
ಹಾಗೆ ಕಾರಣವಿಲ್ಲದೆ ದ್ವೇಷವೂ ಹುಟ್ಟಿಕೊಳ್ಳುತ್ತದೆ..

ಮರೆಯ ಬಹುದು... ಕಾಲ ಮರೆಸುತ್ತದೆ...

ಮನಸ್ಸು ಗಟ್ಟಿ ಮಾಡಿಕೊ..."

"ಕಷ್ಟ ಕಣೊ...."

ಹುಡುಗಿ ಅಳುತ್ತಿದ್ದಳು...

" ಕಿಡಕಿ ಮುಚ್ಚಿದ ...
ನನ್ನ ಕಿಚನ್ನಿನ ದಿನಗಳಲ್ಲಿ ಬೆಳಕು ಹುಟ್ಟಿಸಿದವನು ನೀನು..

ನನ್ನ  ಒಂಟೀ ಬದುಕಿನಲ್ಲಿ ನಗು ತೋರಿಸಿದವ ನೀನು... 
ಹೇಗೆ ಮರೆಯಲೋ.. ?.... "

"ನೋಡು ಹುಡುಗಿ..

ನಮ್ಮಿಬ್ಬರ ಸಂಬಂಧದ ಅರ್ಥವೇನು ? 
ಗುರಿ ಏನು ?  

ಏನೂ ಇಲ್ಲ.... !

ನಾನು 
ನನ್ನ ಮಡದಿ ಮಕ್ಕಳನ್ನು ಬಿಟ್ಟು ಬರಲಾರೆ..

ನೀನು 
ನಿನ್ನ ಸಂಬಂಧಗಳನ್ನು ಕಡಿದುಕೊಂಡು ಇರಲಾರೆ..
ಹಾಗೆ ಮಾಡುವದು  ಸರಿಯೂ ಅಲ್ಲ... 

ಮಧ್ಯದಲ್ಲಿ 
ನಮ್ಮ ಶುಷ್ಕ ಮಾತುಗಳಿಗೆ ಅರ್ಥವೇ ಇಲ್ಲ...

ಇಷ್ಟು ದಿನ 
ನಮ್ಮಿಬ್ಬರನ್ನು ಸಂತಸಗೊಳಿಸಿದ .. 
ಮಾತನಾಡಿದ ಸಮಯಗಳನ್ನು ನೆನೆಯೋಣ... !

ಅದು ನಮ್ಮ ಭಾಗ್ಯ... 

ವಾಸ್ತವದ  ನಮ್ಮ ಬದುಕನ್ನು 
ನಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುವದು ಮೂರ್ಖತನ...

ಸಮಯ ಎಲ್ಲವನ್ನೂ ಮರೆಸುತ್ತದೆ.."

"ಸರಿ..."

ಅವಳು ಫೋನ್ ಕಟ್ ಮಾಡಿದಳು..

ನನಗೂ ಬೇಸರವಾಯ್ತು..

ಈ ವಿಷಯ ಹೇಗಾದರೂ ಪಬ್ಲಿಕ್ ಆಗಿಬಿಟ್ಟರೆ ?

ನನ್ನ ಖ್ಯಾತಿ..
ಹೆಸರಿನ ಚಿಂತೆ ನನ್ನನ್ನು ಕಾಡಿತು..

ಅವಳ ಮುಗ್ಧ ಪ್ರೀತಿ ನೆನಪಾಯಿತು...

ಒಮ್ಮೆ ಫೇಸ್ ಬುಕ್ಕಿನಲ್ಲಿ ಒಂದು ಫೋಟೊ ಹಾಕಿಕೊಂಡಿದ್ದೆ..

ನನ್ನ ಧಾರವಾಹಿಯ ನಾಯಕಿಯ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡಿದ್ದೆ...

ಅವಳು ಎರಡು ದಿನ ನನ್ನ ಬಳಿ ಮಾತು ಬಿಟ್ಟಿದ್ದಳು...
ನಾನು ವಿವರಣೆ ಕೊಟ್ಟು..
ಅವಳ ಕೋಪ ಶಮನ ಮಾಡುವಾಗ ಸಾಕು ಸಾಕಾಗಿತ್ತು..

ನನ್ನ ಮಡದಿಯೊಡನೆ 
ಪ್ರೀತಿಯಲ್ಲಿದ್ದರೆ ಅವಳಿಗೆ ಏನೂ ಅನ್ನಿಸುತ್ತಿರಲಿಲ್ಲ..
ಖುಷಿ ಪಡುತ್ತಿದ್ದಳು...

ಅಕ್ರಮದಲ್ಲೂ ಅಸೂಯೆ !
ಆಶ್ಚರ್ಯ ಈ ಸಂಬಂಧ !

"ಶುಭೋದಯ" ಸಂದೇಶವಿಲ್ಲದೆ ಒಂದು ದಿನ ಕಳೆಯಿತು...

ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಆವಳಿಲ್ಲ..

ಎರಡನೆಯ ದಿನ ಸಾಯಂಕಾಲದ ತನಕ ಹೇಗೋ ಹೇಗೊ ಸಹಿಸಿಕೊಂಡೆ...

ತವಕ..
ಚಡಪಡಿಕೆ ತಡೆಯಲಾಗಲಿಲ್ಲ...

"ಶುಭೋದಯ"  ಸಂದೇಶ ಕಳಿಸಿಯೇ ಬಿಟ್ಟೆ... !

ಉತ್ತರವಿಲ್ಲ...
ಸ್ವಲ್ಪ ಹೊತ್ತು ಕಳೆಯಿತು....

ಒಂದು ಖಾಲಿ ಮೆಸ್ಸೇಜ್ ಬಂತು...!

ಇದು ಅವಳು ಕಳುಹಿಸಿದ್ದು ಇರಲಿಕ್ಕಿಲ್ಲ...

ಮತ್ತೊಂದು "ಶುಭೋದಯ" ಸಂದೇಶ ಕಳಿಸಿದೆ...

ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಬ್ಲ್ಯಾಂಕ್ ಮೆಸ್ಸೇಜ್  !

ಇನ್ನೊಮ್ಮೆ ಶುಭೋದಯ ಕಳುಹಿಸಿದೆ 

ಈಗ ಒಂದು ಮಿಸ್ಸಡ್ ಕಾಲ್ ಬಂತು..

ಅವಳು ಎಷ್ಟೊ ಬಾರಿ ನನಗೆ ಹೀಗೆ ಮಾಡಿದ್ದಳು..!

ಆಸೆಗಳು ಗರಿಗೆದರಿದವು  !!

ಲಗುಬಗೆಯಿಂದ ಕಾಲ್ ಮಾಡಿದೆ...
ನನಗೆ ಚಡಪಡಿಕೆ... 
ನಾಲ್ಕು ವರ್ಷಗಳ ಮಾತುಕತೆಯ ಸಂಬಂಧ... !

ಫೋನ್ ರಿಂಗಾಯಿತು...


" ಹಲ್ಲೋ.."

ಅಲ್ಲಿಂದ ಗಡಸು... ಗೊಗ್ಗರು ....  ಕರ್ಕಶ ಧ್ವನಿ  !

ಢವ.. ಢವದ ಆತಂಕ...!

ಅವಳ ಗಂಡನಿರಬಹುದಾ ?

ಗಡಸು ಧನಿ ಮತ್ತಷ್ಟು ಕಠಿಣವಾಯಿತು...!

"ಹಲ್ಲೋ.. ಯಾರ್ರೀ  ನೀವು... ?"

ನಾನು ತೊದಲಿದೆ...

"ನಾನು.. ನಾನು..."

ಧ್ವನಿ ಹೊರ ಬರಲು ಕಷ್ಟವಾಯಿತು... ಕಂಪಿಸಿತು... 

"ನೋಡಿ..

ನಾನು ಪೋಲಿಸ್ ಇನ್ನಸ್ಪೆಕ್ಟರ್ ಮಾತಾಡ್ತಿರೋದು..!

ಇಲ್ಲೊಂದು ಹೆಣ್ಣು ಮಗಳ ಸಾವು ಆಗಿದೆ...

ಕೊಲೆಯೋ.. ಆತ್ಮಹತ್ಯೆಯೋ ಗೊತ್ತಾಗುತ್ತಿಲ್ಲ... !

ನೀವ್ಯಾರು ?

ಈ ಸಂಜೆ ಹೊತ್ತಿನಲ್ಲಿ 
ಯಾಕೆ "ಶುಭೋದಯ" ಅಂತ ಮೆಸ್ಸೇಜ್ ಕಳ್ಸಿರೋದು  !

ನಿಮಗೂ..
ಇವರಿಗೂ ಏನ್ರೀ  ಸಂಬಂಧ...  ?..."

ನನ್ನ ಜಂಘಾಬಲ ಉಡುಗಿಹೋಯಿತು.....  !

ಕೈ ಕಾಲು ಥರ ಥರ ನಡುಗ ತೊಡಗಿತು.... !



(ಕಥೆ)

(ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ.... )

Friday, December 6, 2013

..... ಆಯ್ಕೆ .....

ಕತ್ತಲೆಂದರೆ..
ನನಗೆ ಬಲು ಇಷ್ಟ...

ಕತ್ತಲಿಗೆ ಎಲ್ಲ ಬಣ್ಣಗಳೂ ಒಂದೇ...

ಭಾವಗಳೂ ಸಹ ಒಂದೆ...

ಕಣ್ ಮುಚ್ಚಿದರೂ..

ಕಣ್ಣು ಬಿಟ್ಟರೂ ಒಂದೆ...

ಕಪ್ಪು ಬಿಳುಪು ಕೂಡ ಬಣ್ಣಗಳಾಗಿಬಿಡುತ್ತವೆ...

ನೆನಪುಗಳೊಂದಿಗೆ ರಂಗು.. ರಂಗಾಗಿಬಿಡುತ್ತವೆ...

ನನ್ನ

ಎಷ್ಟೋ ಒಂಟಿತನದ ...
ಖಾಲಿ ಖಾಲಿ ಭಾವಗಳನ್ನು ಅದು ತುಂಬಾ ಖುಷಿಯಿಂದ ಮಾತನಾಡಿಸುತ್ತದೆ..

ನನ್ನ

ಏಕಾಂತಗಳಲ್ಲಿ "ಅವಳು" ಇರುತ್ತಾಳೆ..

ಓಹ್..

ಅವಳೆಂದರೆ ನಿಮಗೆ ಗೊತ್ತಿಲ್ಲ..!

ತುಂಬು ... 

ಬಟ್ಟಲ ಕಣ್ಣು..

ಮುತ್ತಿಡಲು ಹರವಾದ ಕೆನ್ನೆ..


ಮುದ್ದು.. ಚೂಪಿನ ಗದ್ದ.

ಕ್ಲಾಸಿನಲ್ಲಿದ್ದಾಗ ಅವಳನ್ನೇ ನೋಡುತ್ತ ಕುಳಿತುಬಿಡುತ್ತಿದ್ದೆ....

ನನ್ನ ಓದಿನ ದಿನಗಳಲ್ಲಿ ನನ್ನ ಮನವನ್ನು ತುಂಬಿದ್ದಳು..


ಮನದಣಿಯೇ ನೋಡುತ್ತಿದ್ದೆ..


ಹೇಗೆ ಮಾತನಾಡಿಸಲಿ ?

ಯಾವಾಗಲಾದರೂ ಎದುರಿಗೆ ಬಂದಾಗ ಧೈರ್ಯವಿರುತ್ತಿರಲಿಲ್ಲ..

ನನ್ನೆದೆಯ ಢವ ಢವಗಳೊಡನೆ

ಸುಮ್ಮನಿದ್ದುಬಿಡುತ್ತಿದ್ದೆ..

ನನ್ನ ಜೀವದ ಗೆಳೆಯ ಸುಮ್ಮನಿರಬೇಕಲ್ಲ..


"ನಾಡಿದ್ದು ಸಂಕ್ರಾಂತಿ ಹಬ್ಬ..

ಶುಭಾಶಯ ಪತ್ರ ಕಳಿಸೋಣ.."

ಅವನೇ ಹೋಗಿ ಗ್ರೀಟಿಂಗ್ ಕಾರ್ಡ್ ತಂದಿದ್ದ..

ಬಹಳ ಬುದ್ಧಿವಂತ ಆತ....

"ಇದರಲ್ಲಿ ಏನಾದರೂ ಬರಿ...

ನೀನು ಅಂತ ಗೊತ್ತಾಗಬೇಕು..
ಆದರೆ...
ಉಳಿದವರಿಗೆ ಗೊತ್ತಾಗಬಾರದು..."

ಅವಳ ಬಳಿ ಯಾವತ್ತೂ ಮಾತನಾಡಿದ್ದಿಲ್ಲ..


ಅವಳ ಜೊತೆಯಲ್ಲಿ ಇರುತ್ತಿದ್ದೆ.. 

ಅವಳ 
ಕೆನ್ನೆಗಳೊಡನೆ...
ಮುದ್ದು ಗಲ್ಲದೊಡನೆ..
ತೆಳುವಾದ ತುಟಿಗಳೊಡನೆ...

ಆಗಾಗ..

ಬೇಡವೆಂದರೂ ಸಂಧಿಸುವ
ಅವಳ ಕುಡಿ ನೋಟದೊಡನೆ.. ಜೊತೆಯಲ್ಲಿರುತ್ತಿದ್ದೆ.. 

ನನ್ನ ನೋಟದ ಇಂಗಿತ ಅವಳಿಗೆ ಗೊತ್ತಾಗಿರಬಹುದಾ ?


" ಗೊತ್ತಾಗದೆ  ಏನು ?

ಅವಳಿಗೂ ಹರೆಯ..."

ಇಬ್ಬರ ನೋಟ ಸಂಧಿಸಿದಾಗ ... 

ಅವಳ ತುಟಿಯಲ್ಲಿ ಸಣ್ಣ ಕಿರುನಗುವಿರುತ್ತಿತ್ತಾ ?

ಅದು ನನ್ನ ಭ್ರಮೆಯಾ ?


ಗೆಳೆಯ ತಂದುಕೊಟ್ಟ ಶುಭಾಶಯ ಪತ್ರದಲ್ಲಿ ಧೈರ್ಯ ಮಾಡಿ ಬರೆದೆ..


"ಆಕಳು..

ಕರುವನ್ನು ಮರೆಯ ಬಹುದು..

ತಾಯಿ..

ಮಗುವನ್ನು ಮರೆಯ ಬಹುದು...

ಆದರೆ..

ನನ್ನ ಕಣ್ಣುಗಳು ನಿನ್ನನೆಂದಿಗೂ ಮರೆಯಲಾರವು..."

ನನ್ನ ಗೆಳೆಯ ನಕ್ಕುಬಿಟ್ಟ..


ವಾಕ್ಯವನ್ನು ಬದಲಿಸಲು ಹೇಳಿದ.. ನಾನು ಬದಲಿಸಲಿಲ್ಲ..


ಮಾರನೆಯ ದಿನ ಕ್ಲಾಸಿಗೆ ಪೋಸ್ಟಮ್ಯಾನ್ ಪತ್ರಗಳನ್ನು ತಂದುಕೊಟ್ಟ..

ನಾನು ಕಳುಹಿಸಿದ್ದು ಅವಳಿಗೆ ತಲುಪಿತ್ತು..

ಅಸಕ್ತಿಯಿಂದ ನೋಡಿದಳು..

ಓದಿ ಆದಮೇಲೆ ... 
ಬೊಗಸೆ  ಕಣ್ಣಿನಿಂದ  ನನ್ನತ್ತ ನೋಡಿದಳು..

ನೋಟದಲ್ಲಿ ನಗುವಿತ್ತಾ ?

ನೋಟಗಳ ಭಾಷೆ ನನಗೆಂದೂ ಗೊತ್ತೇ ಆಗಲಿಲ್ಲ..
ಅರ್ಥವಾಗುವದೇ ಇಲ್ಲ...

ಅಷ್ಟೆ...


ನನಗೆ ಉತ್ತರ ಸಿಗಲಿಲ್ಲ..


ದಿನಗಳು ಕಳೆದವು..

ಬದುಕಿನಲ್ಲಿ ಏಳುತ್ತ ಬೀಳುತ್ತ..
ಈಗ ಒಂದು ಸ್ಥಿತಿಯನ್ನು ಮುಟ್ಟಿದ್ದೇನೆ...

ಕಾರುಗಳ ಮಾಲಿಕನಾಗಿ..

ಚಂದದ ಮಡದಿಗೆ ಪತಿಯಾಗಿ.... ಮಗುವಿಗೆ ಅಪ್ಪನಾಗಿರುವೆ...

ಎಷ್ಟಾದರೂ..

ಏನೇ ಆದರೂ..
ಉದ್ದ ಲಂಗದ..
ನಸುಗಪ್ಪಿನ ಆ ಹುಡುಗಿ ನನ್ನಿಂದ ಮರೆಯಾಗಲೇ ಇಲ್ಲ...

ಅವಳು..

ನನ್ನನ್ನು ಎಂದೂ ಒಂಟಿಯಾಗಿ ಇರಲು ಬಿಡಲೇ ಇಲ್ಲ..
ಮುದ್ದು..
ಮುದ್ದಾಗಿ ನಗುತ್ತಿದ್ದಳು..
ಮಾತನಾಡುತ್ತಿದ್ದಳು..

ನಾನು ಜನಜಂಗುಳಿಯಲ್ಲಿದ್ದರೂ..

ನನ್ನನ್ನು 
ತನ್ನ ಬಳಿ ಕರೆದೊಯ್ದುಬಿಡುತ್ತಿದ್ದಳು..

ನನ್ನ ಬದುಕಿನ  ಯಶಸ್ಸಿನ ಹಿಂದೆ ಇದ್ದವರು ನನ್ನ ಗುರುಗಳು..


ನನಗೆ

ಊಟ ಹಾಕಿ..
ನನ್ನ ಖರ್ಚು.. ವೆಚ್ಚಗಳನ್ನು ತಾವು ಭರಿಸಿಕೊಂಡು ನನ್ನನ್ನು ಓದಿಸಿದರು..

ಅವರ ಮಡದಿ...


ಆಗ 

ಅವರ ಬಗೆಗೆ ಕೆಟ್ಟ ಅನಿಸಿಕೆ ಇದ್ದರೂ..
ಈಗ ಖಂಡಿತ ಇಲ್ಲ..

ಆಗ 

ಅವರೆಲ್ಲರ ಊಟವಾದ ಮೇಲೆ ನನ್ನನ್ನು  ಊಟಕ್ಕೆ ಕರೆಯುತ್ತಿದ್ದರು..

ಸಂಭಾರು ತೆಳ್ಳಗಾಗಿ "ಸಾರು" ಆಗಿರುತ್ತಿತ್ತು.. 

ಉಪ್ಪು.. ಹುಳಿ ಕಡಿಮೆಯಾಗಿರುತ್ತಿತ್ತು..

ಕೆಲವೊಮ್ಮೆ ಬೆಳಗ್ಗೆ ಹೆಚ್ಚಾದ ತಿಂಡಿ ಮಧ್ಯಾಹ್ನ ಸಿಗುತ್ತಿತ್ತು..

ಮಜ್ಜಿಗೆ ನೀರಿನಂತಿರುತ್ತಿತ್ತು..

ಬಡತನಕ್ಕೆ..

ದುಃಖಗಳಿಗೆ ಆಯ್ಕೆಗಳು ಇರುವದಿಲ್ಲ..

ಸಿಕ್ಕಿದಷ್ಟು ಸ್ವೀಕರಿಸುವ ಅನಿವಾರ್ಯ...


ಅವರು ನನ್ನ ಬಡತನದ..

ಹಸಿವಿನ ದಿನಗಳಲ್ಲಿ ಹೊಟ್ಟೆತುಂಬಿಸಿದ್ದರಲ್ಲ..

ಕೃತಜ್ಞತೆ ಹೇಗೆ ಹೇಳಲಿ...?


ಊರಿಗೆ ಹೋಗಿ.. 

ಅವರನ್ನೊಮ್ಮೆ ಭೇಟಿಯಾಗಿ ನಮಸ್ಕರಿಸಬೇಕು ... 

ಸರಿ... 

ಹೊರಟೇ ಬಿಟ್ಟೆ... 

ಕತ್ತಲಾಗಿತ್ತು..

ಗುರುಗಳ ಮನೆ ಮುಂದೆ ಕಾರು ನಿಲ್ಲಿಸಿದಾಗ ಸಾಯಂಕಾಲ ಏಳು ಗಂಟೆ..

ಕರೆಂಟು ಇರಲಿಲ್ಲ..


ಗುರು ದಂಪತಿಗಳಿಗೆ ವಯಸ್ಸಾಗಿತ್ತು..

ಪ್ರೀತಿಯಿಂದ ಬರ ಮಾಡಿಕೊಂಡರು..

ಆದರ.. 

ಉಪಚಾರ ಮಾಡಿದರು..

"ಒಂದು ಲೋಟ ನೀರು ಕೊಡಿ.. ಸಾಕು" 


"ಹಾಗಾದರೆ ಊಟ ಮಾಡಿ ಹೋಗು.."


ನಾನು ತಲೆಯಾಡಿಸಿದೆ..


ಅವರ ಮಡದಿ ನೀರು ತಂದಿಟ್ಟರು..


" ನೋಡಪ್ಪಾ..

ಆಗ ನಮಗೂ ಬಡತನವಿತ್ತು..
ಸರಿಯಾಗಿ ಊಟ ಹಾಕಲಾಗಲಿಲ್ಲ... ಬೇಸರ ಮಾಡ್ಕೋಬೇಡ ..."

ಒಳ್ಳೆಯ ಮನಸಿದ್ದವರಿಗೆ 

ಅಪರಾಧಿ ಮನೋಭಾವ ಕಾಡುತ್ತದೆ..

ಕ್ಷಮೆ ಎನ್ನುವ ಶಬ್ಧವಿಲ್ಲದೆ..

ಕ್ಷಮೆ ಕೋರಿಬಿಡುತ್ತಾರೆ..

"ಇಲ್ಲಮ್ಮ.. 

ನನಗೆ ಚೆನ್ನಾಗಿಯೇ ಊಟ ಹಾಕಿದ್ದೀರಿ..
ಹಸಿದ ಹೊಟ್ಟೆಗೆ ಊಟ ಹಾಕಿ ಓದಿಸಿದ್ದೀರಲ್ಲ..

ನಮ್ಮವರೆನ್ನುವವರಿದ್ದೂ..ಅನಾಥನಾಗಿದ್ದೆ..

ಏನೂ ಅಲ್ಲದ 
ಏನೂ ಇಲ್ಲದ .. 
ನನ್ನ ಭವಿಷ್ಯ ರೂಪಿಸಿದ್ದೀರಿ...."

ಕೃತಜ್ಞತೆಯಿಂದ ಕೈ ಮುಗಿದೆ..


ಭಾವುಕರಿಗೆ..

ಭಾವುಕ ಕ್ಷಣಗಳಷ್ಟು ಖುಷಿ ಮತ್ತೆ ಯಾವುದೂ ಇಲ್ಲ..

ಅವರು ..

ಒತ್ತರಿಸಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತ ಅಡಿಗೆ ಮನೆಗೆ ಹೋದರು..

ಮಾಸ್ತರು ಕನ್ನಡಕ ಸರಿ ಮಾಡಿಕೊಂಡರು..


"ತುಂಬಾ ಖುಷಿ ಆಗುತ್ತಪ್ಪ..


ನಿನ್ನ ಯಶಸ್ಸಿನಲ್ಲಿ ನಾವು ಮಾಡಿದ್ದು ಏನೂ ಇಲ್ಲ..


ನಿನ್ನನ್ನು ಮುಂದೆ ತಂದಿದ್ದು ನಿನ್ನ  

ಓದಿನ ಹಸಿವೆ...
ಶೃದ್ಧೆ.. ಪರಿಶ್ರಮ..

ಪ್ರಾಮಾಣಿಕನಾಗಿರು..

ಎಲ್ಲ ಕಾಲದಲ್ಲೂ ಬೆಲೆ ಬಾಳುವಂಥಾದ್ದು ಪ್ರಾಮಾಣಿಕತೆ.."

ನಾನು ತಲೆ ತಗ್ಗಿಸಿದೆ...

ಅವರ ಪಾದಗಳನ್ನು ನೋಡುತ್ತಿದ್ದೆ...

ಅವರು ನನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು...


"ನಮ್ಮ ಮಕ್ಕಳಿಗೆ ಕೊಡಿಸುವಂಥಹ ಬಟ್ಟೆಗಳನ್ನು ... ನಿನಗೆ ಕೊಡಿಸುವದಿಲ್ಲವಾಗಿತ್ತು..


ಕಡಿಮೆ ಬೆಲೆಯ ಬಟ್ಟೆ ನಿನಗೆ ಕೊಡುತ್ತಿದ್ದೆ.."


ಅವರಿಗೂ 

ಅಪರಾಧಿ ಮನೋಭಾವ !

" ಹಾಗೇನೂ ಇಲ್ಲ ಸಾರ್..

ನಿಮ್ಮ ಇತಿ ಮಿತಿಗಳಲ್ಲಿ ನನಗೆ ಓದಿಸಿದ್ದೀರಿ...

ನಿಮಗೂ ಮಕ್ಕಳಿದ್ದರು..

ಅವರ ಭವಿಷ್ಯ.. ಖರ್ಚು ನಿಮಗೂ ಇತ್ತಲ್ಲ...

ಎಲ್ಲವೂ 

ನಮ್ಮದಾಗಲು ಸಾಧ್ಯವಿಲ್ಲವಲ್ಲ..

ಹತ್ತಿರವಿದ್ದರೂ ನಮ್ಮದೆನಿಸುವದಿಲ್ಲ..


ಅದು ಸಹಜ..


ನನಗೆ ಖಂಡಿತ ಬೇಸರವಿಲ್ಲ.. 


ನನ್ನ 

ಸರಿ..ತಪ್ಪುಗಳನ್ನು ತಿಳಿಸಿ..
ಹತ್ತಿರದವರಾಗಿ ನನಗೆ ಒಂದು ದಾರಿ ತೋರಿಸಿದ್ದೀರಲ್ಲ..

ಅಷ್ಟು ಸಾಕು ನನ್ನ ಕೃತಜ್ಞತೆಯ ಬದುಕಿಗೆ..."


ಕಣ್ಣು ಒದ್ದೆಯಾಗಿತ್ತು.. ಒರೆಸಿಕೊಂಡೆ...


ಕರೆಂಟು ಇರಲಿಲ್ಲ.. 


ಬೆಳಕು ಮಂದವಾಗಿತ್ತು..

"ಒಂದು ವಿಷಯ ... 

ನಿನಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ..
ನನಗಂತೂ ನೆನಪಿದೆ..."

" ಯಾವುದು ಸಾರ್...?.."


ಮಾಸ್ತರು  ಕನ್ನಡಕ ಸರಿಮಾಡಿಕೊಂಡರು..


" ನಿನ್ನ ಕ್ಲಾಸಿನಲ್ಲಿ 

ಒಬ್ಬಳು ನಸುಗಪ್ಪಿನ ಹುಡುಗಿ ಇದ್ದಳು..
ಉದ್ದ ಲಂಗದ.. ಉದ್ದದ ಹುಡುಗಿ..

ಚೆನ್ನಾಗಿ ಹಾಡುತ್ತಿದ್ದಳಲ್ಲ.. ಅವಳು..."


ನನ್ನ ಹೃದಯ ಮತ್ತೆ ಖುಷಿಯಿಂದ ಕುಣಿಯತೊಡಗಿತು..


ಅವಳನೆನಪಲ್ಲೇ ಬದುಕು ..!


ಅವಳ ನೆನಪಿನಲ್ಲೆ ನನ್ನ ಮೌನ...!


"ಹೌದು ಸಾರ್.. ನೆನಪಿದೆ..."


"ನಾನು ಕ್ಲಾಸ್ ಟೀಚರ್ ಆಗಿದ್ದೆ..

ಅವಳು ಕ್ಲಾಸ್ ಮಾನಿಟರ್ ಆಗಿದ್ದಳು..

ನೀವು ಬರೆದ ನೋಟ್ ಬುಕ್ಕುಗಳನ್ನು ನನಗೆ ತಂದುಕೊಡುತ್ತಿದ್ದಳು..."


ನಾನು ತಲೆ ಆಡಿಸಿದೆ..

ಅವರಿಗದು ಕಾಣುತ್ತಿರಲಿಲ್ಲ..

"ಹೂಂ..." ಗುಟ್ಟಿದೆ..


"ಒಂದು ದಿನ ... 

ನಾನು ನೋಡಿ ಇಟ್ಟ ನೋಟ್ ಬುಕ್ಕುಗಳನ್ನು ತೆಗೆದು ಕೊಂಡು ಹೋಗುವಾಗ..
ಅವಳ ಕೈಯಲ್ಲಿ ಏನೋ ಚೀಟಿ ಇತ್ತು..."

ನನಗೆ ಮೈಯೆಲ್ಲ ಕಿವಿಯಾಯಿತು..


"ನಾನು ಗದರಿಸಿ ಅವಳಿಂದ ಕಸಿದುಕೊಂಡೆ..


ಅವಳು ಅಳುತ್ತಿದ್ದಳು.."


ನನಗೆ ದಿಗಿಲು ಶುರುವಾಯಿತು..


ನಾನು ಬರೆದ ಶುಭಾಶಯ ಪತ್ರವಾ ?


ಕತ್ತಲಲ್ಲಿ 

ಢವ.. ಢವ ಶಬ್ದಗಳು ಜೋರಾಗಿ ಕೇಳುತ್ತವೆ...

ಗುರುಗಳು ಸ್ವಲ್ಪ ಹೊತ್ತು ಸುಮ್ಮನಿದ್ದರು...


"ಬಹುಷಃ ಅಂದು ನಾನು ಗದರಿಸಿ ...

ಅದನ್ನು ನನ್ನ ಬಳಿ ಇಟ್ಟುಕೊಳ್ಳದೆ ಹೋಗಿದ್ದರೆ..
ಇಂದು..
ನೀನು ಹೀಗೆ ಆಗುತ್ತಿರಲಿಲ್ಲ...

ಪೋಲಿ ಹುಡುಗನಾಗಿಬಿಡುತ್ತಿದ್ದೆ..."


ಢವ ಢವ ಜೋರಾಯಿತು... 

ನನ್ನ ಹೃದಯ ಬಾಯಿಗೆ ಬಂದಿತ್ತು...!

"ಏನಿತ್ತು ಅದರಲ್ಲಿ...?"


"ಮತ್ತೇನಿಲ್ಲ...

ಆ ವಯಸ್ಸಿನ ಹದಿ ಹರೆಯದ ಭಾವನೆಗಳು..

ಆ ಹುಡುಗಿ ನಿನಗೆ ಮನಸೋತು..

ಪತ್ರ ಬರೆದಿದ್ದಳು...!

ಅವಳ ಭಾಷೆ.. ಪತ್ರ ಓದಿ ನನಗಂತೂ ನಗು ಬಂದಿತ್ತು..


ಈಗಲೂ ನಗು ಬರುತ್ತದೆ.."


ಮಾಸ್ತರು ನಗತೊಡಗಿದರು.... 


ಗಾಳಿ ಜೋರಾಯಿತು..


ಹಚ್ಚಿದ್ದ ಮೊಂಬತ್ತಿ ಗಾಳಿಗೆ ಕುಣಿಯುತ್ತಿತ್ತು..

ಮೊಂಬತ್ತಿ ಬೆಳಕು ಮತ್ತೂ ಸಣ್ಣದಾಯಿತು... .. 


ಹೃದಯ ಭಾರವಾಗಿತ್ತು.. 


ಅಷ್ಟರಲ್ಲಿ ಅವರ ಮಡದಿ ಊಟಕ್ಕೆ ಕರೆದಳು..
ಊಟಕ್ಕೆ ಕುಳಿತೆವು..

ಅವರ ಮಡದಿ 

ಬಹಳ ಪ್ರೀತಿಯಿಂದ ಸಡಗರದಿಂದ ಬಡಿಸುತ್ತಿದ್ದರು...

"ನಿನ್ನ  ಬದುಕು ಈಗ ಚೆನ್ನಾಗಿದೆ... 

ಕೃತಜ್ಞತೆಯಿಂದ ನಮ್ಮನ್ನು ನೆನಪಿಸಿಕೊಳ್ಳುತ್ತೀಯಲ್ಲ.. 

ಒಳ್ಳೆಯ ಮನಸ್ಸು ನಿನ್ನದು.. 

ಸಂಕೋಚ ಮಾಡ್ಕೋಬೇಡ.. 

ಎಲ್ಲವನ್ನೂ ಹಾಕಿಸ್ಕೊ... 

ನಿನ್ನ ಇಷ್ಟಗಳನ್ನೇ ಮಾಡಿದ್ದೇನೆ..."

ಬಾಳೆ ಎಲೆ  ನೋಡಿದೆ... 

ಎಲೆಯ ತುಂಬ ನನ್ನಿಷ್ಟದ ತಿಂಡಿಗಳು..
ಸಿಹಿ..
ಖಾರ... ಎಲ್ಲವೂ ಇತ್ತು...

ಹುಡುಗಿಯ ಬಗೆಗೆ ಇನ್ನೂ ಕೇಳಬೇಕೆನಿಸಿತು... 

" ಆ ಹುಡುಗಿ ಈಗ ಎಲ್ಲಿದ್ದಾಳೆ...?"


"ಅವಳದ್ದೊಂದು ದೊಡ್ಡ ಕಥೆ...."


" ಏನಾಯ್ತು..?... "


" ಗಂಡ ಕುಡುಕ... 

ವ್ಯಸನಿ...
ಪರ ಹೆಣ್ಣುಗಳ ಸಹವಾಸ...

ಪ್ರೀತಿ ಸಿಗದ  ಕಣ್ಣೀರಿನ ಜೊತೆ  ಬದುಕು.. .. !

ನಿನ್ನ ಜೊತೆಯಾಗಿದ್ದರೆ ಸುಖವಾಗಿರುತ್ತಿದ್ದಳೇನೋ...!.. "


ಸಾವಿರ ಸೂಜಿಗಳಿಂದ ಹೃದಯವನ್ನು ಚುಚ್ಚಿದಂತಾಯಿತು.... 

 ಅಯ್ಯೋ.... !!..

ಬೇಡ ಬೇಡವೆಂದರೂ
ಕಣ್ಣಲ್ಲಿ ದಳ ದಳ ನೀರು ಇಳಿಯುತ್ತಿತ್ತು..

ಹೃದಯ ಚೀರಿತು...

ಕಣ್ಣು ಒರೆಸಿಕೊಂಡೆ..

ಬಾಳೆ ಎಲೆ  ನೋಡಿದೆ... 

ಎಲ್ಲವೂ ಮಂಜು ಮಂಜಾಗಿತ್ತು.... 


ಕಿಡಕಿಯಿಂದ ಗಾಳಿ ಜೋರಾಗಿ ಬಂತು... 
ಮೊಂಬತ್ತಿ ಆರಿಹೋಯಿತು.. 

ಕತ್ತಲು.... 


ಕತ್ತಲಿಗೆ ಎಲ್ಲ  ಬಣ್ಣಗಳೂ... 

ಭಾವಗಳೂ   ಒಂದೆ... 


( ಕಥೆ )

(ದಯವಿಟ್ಟು ಪ್ರತಿಕ್ರಿಯೆಗಳನ್ನು ನೋಡಿ................ )