Thursday, June 11, 2009

" ಪ್ರಾಮಾಣಿಕತೆ "... ಅಸಹಾಯಕ....! ( 2)

ಸಾವಕಾಶವಾಗಿ ಅಂಗಡಿ ಕಡೆ ಹೆಜ್ಜೆ ಹಾಕಿದೆ.....

ಒಂದು ದಿನ ನನ್ನದಲ್ಲದ "ಜಾಗದಲ್ಲಿ ನಾನಾಗಿರದೆ...
ಬೇರೆಯವನಾಗಿ ಇರುವದಕ್ಕೆ...

ಬಾಗಿಲಲ್ಲೇ ಒಬ್ಬ ಆಕರ್ಷಕ ಮೈಕಟ್ಟಿನವ ನಿಂತಿದ್ದ...
ಎತ್ತರವಾಗಿ.., ಕಟ್ಟುಮಸ್ತಿನ ಗರಡಿಯಲ್ಲಿ ಪಳಗಿದ ದೇಹ ಅದು...

"ನಮಸ್ಕಾರ... ಇಲ್ಲಿ ನರಸಿಂಹ " ಅಣ್ಣ" ಅಂದ್ರೆ ಯಾರು...?"

"ನಾನೇ... ಏಮ ಕಾವಲ್ಲ..?"

ಗಡಸು ಧ್ವನಿ.. ಹುರಿ ಮೀಸೆ ತಿರುವುತ್ತ ಕೇಳಿದ...

ಆ ಧ್ವನಿ ಹೆದರಿಕೆ ಹುಟ್ಟಿಸುವಂತಿತ್ತು...
"ಕೋಣನ ಕುಂಟೆ ರಾಜಣ್ಣ ಕಳ್ಸಿದ್ದಾರೆ... ಕೆಲಸಕ್ಕೆ"

ನನ್ನನ್ನು ಅಪಾದ ಮಸ್ತಕ ನೋಡಿದ....

ಕೆಂಪನೆಯ ಕಣ್ಣು ಎಕ್ಸ್ ರೇ ಥರಹ ಇತ್ತು...

" ನೀನು ಏಮ್ ಫಣಿ ಮಾಡ್ಲಿಕ್ಕೆ ಸಾಧ್ಯ..? ಹೇರ್ ಕಟಿಂಗ್ ಬರ್ತದಾ...?"

ನಾನು ಇಲ್ಲ ಎಂದು ತಲೆ ಅಲ್ಲಾಡಿಸಿದೆ...

"ಆ ರಾಜೂಗೂ ತಲೆ ಇಲ್ಲ ಇಂಥಹ ಧಡಿಯನನ್ನು ಕಳ್ಸಿದಾನೆ...
ನಿನ್ನ ಹತ್ರ ಕಸ ಗುಡ್ಸಿಲಿಕ್ಕೂ ಆಗಲ್ಲವಲ್ಲೊ..
ಮೊದ್ಲು ಏನು ಕೆಲ್ಸ ಮಾಡ್ತಿದ್ದೆ...?"

" ಶಿವಮೊಗ್ಗದ ಹತ್ರ ತೋಟದಲ್ಲಿ ವಾಚಮನ್ ಆಗಿದ್ದೆ.."

"ಹಯ್ಯ... ಏನಕ್ಕೂ ಬರೋದಿಲ್ಲ ನಿನ್ನ ಈ ದೇಹ...
ಹೋಗಪ್ಪಾ ..
ಬೆಳಿಗ್ಗೆ ಬೆಳಿಗ್ಗೆ ಮತ್ತೆ ಯಾರೂ ಸಿಗ್ಲಿಲ್ವಾ..?

ಎಲ್ಲಾದ್ರೂ ದೊಡ್ಡವರ ಮನೆ ವಾಚಮನ್ ಆಗು.. ಹೋಗು...
ಗೇಟು ತೆಗೆಯುವ ಕೆಲಸಕ್ಕೂ ನಾಲಾಯಕ್ಕು ... ಹೋಗಪ್ಪಾ..."

ಖಂಡಿತವಾಗಿ ಹೇಳಿಬಿಟ್ಟ...

ಮೊದಲ ಬಾರಿಗೆ ನನ್ನ ದೇಹದ ಮೇಲೆ ಎಲ್ಲಿಲ್ಲದ ಕೋಪ ಬಂತು....

ನನ್ನ ಈ ದೇಹಕ್ಕೆ ಒಂದು ಕಸ ಗುಡ್ಸೋ ಕೆಲ್ಸನೂ ಸಿಗೋದಿಲ್ವಾ...

ಸಿಕ್ಕಾಪಟ್ಟೆ ಬೇಸರವೂ ಆಯ್ತು...


ಆದ್ರೂ ವಾಪಸ್ಸು ಹೋಗ್ಲಿಕ್ಕೆ ಮನಸ್ಸು ಬರ್ಲಿಲ್ಲ....

"ಅಣ್ಣಾ... ರಾಜಣ್ಣಂಗೆ ಒಂದ್ಸಾರಿ ಫೋನ್ ಮಾಡಣ್ಣ.. ಅವ್ರು ಫೋನ್ ಮಾಡಕ್ಕೆ ಹೇಳಿದಾರೆ"

ಅಷ್ಟರಲ್ಲಿ ರಾಜೂನೇ ಫೋನ್ ಮಾಡಿದ.. ಅನ್ಸುತ್ತೆ....

ಅವನು ಫೋನ್ ತೆಗೆದು ಕೊಳ್ಳುವ ಸ್ಟೈಲೇ ಒಂಥರಾ ಇತ್ತು...

ಫೋನಲ್ಲಿ ಮಾತಾಡ್ತಾ ಇದ್ರೂ ಕಣ್ಣು ನನ್ನ ಮೇಲೇ ಇತ್ತು....

ನನಗೆ ಹೇಳಲಾಗದ ಹಿಂಸೆ ಆಗುತ್ತಿತ್ತು.... ಅವನ ಭಯಂಕರ ನೋಟದಿಂದ...

"ಹಲೋ... ರಾಜು... ನಿನಗೆ ಬೇರೆ ಕೆಲ್ಸ ಇಲ್ವೇನಯ್ಯಾ...
ಈ ಧಡಿಯನ್ನ ಕಳ್ಸಿದೀಯಾ...
ಈತ ಅಂಗಡಿ ಒಳಗೆ ನಿಂತರೆ ನಾನೂ ನನ್ನ ಗಿರಾಕಿಗಳೂ ಹೊರಗಡೆ ನಿಲ್ಬೇಕು...

ಎಲ್ಲಾದ್ರೂ ವಾಚಮನ್ ಕೆಲ್ಸಕ್ಕೆ ಕಳ್ಸು..
ನನ್ನತ್ರೆ ಆಗಲ್ಲಪ್ಪ.."

ನನಗೆ ನಾನು ನನ್ನ ಮೇಸ್ತ್ರಿ ಕೆಲಸಗಾರರನ್ನು ಸಂದರ್ಶನ ಮಾಡೋದು ನೆನಪಾಯಿತು....

ಬಹಳ ಗತ್ತಿನಿಂದ ಮಾತಾಡ್ತಿದ್ದೆ...


ಎಲ್ಲೋ ಒಂದು ಕಡೆ ಮುಳ್ಳಿನಿಂದ ಚುಚ್ಚಿದ ಅನುಭವ.....

ನನಗೆ ನಿಜಕ್ಕೂ ಈ ಕೆಲ್ಸ ಅನಿವಾರ್ಯ ಆಗಿದ್ದರೆ...?

ಅವನ ಫೋನ್ ಸಂಭಾಷಣೆ ಮುಗಿಯಿತು...

" ಏ ಧಡಿಯ ಇಲ್ಲಿ ಬಾ.... ನಿನ್ನ ಹೇಸರು ಏನಂದೆ...?"

ಹೌದಲ್ಲ ಇಷ್ಟೆಲ್ಲ ಪ್ಲಾನ್ ಮಾಡಿದವ ಹೆಸರು ಇಟ್ಗೊಂಡಿಲ್ಲವಾಗಿತ್ತು...

ಜಲ್ದಿ ಏನಾದ್ರೂ ಹೇಳಲೇ ಬೇಕಿತ್ತು...

ನನ್ನ ಮೇಸ್ತ್ರಿ ಹೆಸರು ನೆನಪಾಯಿತು....

"ರಾಜೇಂದ್ರ... ಅಂತ..."

"ನೋಡೋ .. ರಾಜೇಂದ್ರಾ.... ಇವತ್ತು ಬಂದುಬಿಟ್ಟಿದ್ದೀಯಾ ಕೆಲ್ಸ ಮಾಡು ನಾಳೆಯಿಂದ ಬರಬೇಡ...
ಅಲ್ಲಾ ನೀನು ಏನು ಕೆಲ್ಸ ಮಾಡ್ತೀಯಾ..?
ನಾನು ಏನು ಕೆಲ್ಸ ಕೊಡ್ಲಿ....?"

ಹೋಗು ಒಳಗಡೆ.. ಪೊರಕೆ ಇದೆ ಕಸ ಗುಡ್ಸು..."

ನಾನು ಒಳಗಡೆ ಹೋದೆ...

ಒಳಗಡೆ ಇನ್ನೂ ಎರಡು ಜನ ಇದ್ದರು ...ಅವರೆಲ್ಲ ಹೇರ್ ಕಟಿಂಗ್ ಮಾಡುವವರು...

ಒಟ್ಟೂ ಮೂರು ಖುರ್ಚಿ...

ಅವರು ನನ್ನನ್ನು ಒಂಥರಾ ನೋಡುತ್ತಿದ್ದರು....

ಅಲ್ಲೊಬ್ಬ ಸ್ವಲ್ಪ ದರ್ಪದಿಂದ... " ಪೊರಕೆ ಅಲ್ಲಿದೆ ನೋಡೊ..."
ಅಂತ ತೋರಿಸಿದ....

ಎಷ್ಟೆಂದರೂ ಸಿನಿಯರ್ ಅಲ್ಲವಾ...?

ನಾನು ತೆಗೆದು ಕೊಂಡೆ....

ಇಪ್ಪತ್ತು ವರ್ಷಗಳ ಹಿಂದೆ ಪೊರಕೆ ಹಿಡಿದಿದ್ದೆ....

ಕೆಲಸಕ್ಕೆ ಸೇರಿದ ಮೇಲೆ ಪೊರಕೆ ಹಿಡಿಲ್ಲವಾಗಿತ್ತು...


ಸಾವಕಾಶವಾಗಿ ಬಗ್ಗಿ ಮೂಲೆಯಿಂದ ಗುಡಿಸಲು ಶುರು ಮಾಡಿದೆ...

ಮನೆಯಲ್ಲಿ ನನ್ನಾಕೆ ಗುಡಿಸುವಾಗ "ಕಾಲು ತೆಗೆಯಿರಿ.."
ಅನ್ನುವದು ನೆನಪಾಯ್ತು...
ನಾನು ಎರಡೂ ಕಾಲು ಕಷ್ಟಪಟ್ಟು ಎತ್ತಿ ಹಿಡಿದು ಕೊಳ್ಳುತ್ತಿದ್ದೆ ...

ಸ್ವಲ್ಪ ಗುಡಿಸುವದರಲ್ಲಿ... ಸುಸ್ತಾಯಿತು ..ಸೊಂಟ ನಾನಿದ್ದೇನೆ ಎನ್ನುತ್ತಿತ್ತು....

ಆದರೂ ಗುಡಿಸಿದೆ....

ಮತ್ತೆ ನರಸಿಂಹನ ಗಡಸು ಧ್ವನಿ...
"ಏಯ್ .. ಧಡಿಯಾ.... ಬಾರೊ ಇಲ್ಲಿ...
ಅಲ್ಲಿ ಹೊಟೆಲ್ಲಿಗೆ ಹೋಗಿ ನಾಲ್ಕು ಟೀ ತೆಗೆದುಕೊಂಡು ಬಾ..."


ಅಲ್ಲೋಂದು ಪೆಟ್ಟಿಗೆ ಅಂಗಡಿ.....
ಅದು ಹೊಟೆಲ್ಲು....!

ನಾನು ಸ್ವಲ್ಪ ಹೊತ್ತು ನಿಂತೆ...

"ಕಾಸು ಕೊಡ್ಬೇಕಿಲ್ಲ ... ತಿಂಗ್ಳು ಆದಮೇಲೆ ಕೊಡೋದು.."

ನಾನು ಅಲ್ಲಿ ಹೋದೆ...
ಅಂಗಡಿಯಲ್ಲಿ ಹೆಚ್ಚಿಗೆ ಜನರು ಇರ್ಲಿಲ್ಲ....
ನಾನು "ನರಸಿಂಹಣ್ಣ ಹೇಳಿದಾನೆ ನಾಲ್ಕು ಟೀ" ಅಂದೆ...

ಒಂದು ಸಣ್ಣ ಪ್ಲೇಟಿನಲ್ಲಿ.. ಸಣ್ಣ ಸಣ್ಣ ಸ್ಟೀಲ್ ಲೋಟ...
ಬಹಳ ಎಚ್ಚರಿಕೆಯಿಂದ ಅಲುಗಾಡಿಸದೆ... .. ಗಮನಕೊಟ್ಟು ತಂದೆ....

ಜನರು ಬರಲಿಕ್ಕೆ ಶುರುವಾದರು...

ಯಾರ್ಯಾರೋ...
ಬೀಡೀ ಸೇದುವವರು... ಎಲೆ ಅಡಿಕೆ ಜಗಿಯುವವರು...
ಕೆಮ್ಮುವವರು...ಅಲ್ಲಿಯೇ ಉಗುಳಿ ಕ್ಯಾಕರಿಸುವವರು....

ಏರಿಯಾದಲ್ಲಿ ಒಂಥರಾ ವಾಸನೆ ಹದವಾಗಿ ಬರತ್ತಾ ಇರ್ತಿತ್ತು ..
ಗಾಳಿ ಇರಲಿ... ಇಲ್ಲದಿರಲಿ...
ಮೂಗಿಗೆ ಘಮ್ಮೆಂದು ಅಡರುತ್ತಿತ್ತು...

ನನಗೆ ಬಹಳ ಕಷ್ಟವಾಗುತ್ತಿತ್ತು..... ಹೇಗೋ ಹೇಗೋ ಸಹಿಸಿಕೊಳ್ಳುತ್ತಿದ್ದೆ....

ಪ್ರತಿಯೊಬ್ಬರ ಬಳಿ ಅವರ ಸಂಸಾರದ ಕಥೆ ಕೇಳುತ್ತ ಮಾತಾಡುತ್ತಿದ್ದ... ನರಸಿಂಹಣ್ಣ...

ಬಂದವರೆಲ್ಲ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು...

"ಇವತ್ತು ಒಂದುದಿನ ಇಲ್ಲಿ ಇರ್ತಾನೆ... ಶಂಕ್ರಣ್ಣಾ...
ಏನಾದ್ರೂ ಕೆಲಸ ಇದ್ರೆ ಹೇಳು... ಎಲ್ಲಾದ್ರೂ ವಾಚಮನ್ ಕೆಲ್ಸ ಆದರು ಪರವಾಗಿಲ್ಲ......ಇವನಿಗೆ.."

ಅಂತ ನನ್ನ ತೋರ್ಸ್ತಿದ್ದ..

"ಹಯ್ಯಾ...!! ಇವನಿಗಾ...!! ??
.
ಇವನಿಗೆಂತಾ ಕೆಲಸ...?... "

ಒಬ್ಬರೂ ಕೆಲಸದ ಬಗೆಗೆ ಖಾತ್ರಿ ಕೊಡಲಿಲ್ಲ....

ಮಧ್ಯದಲ್ಲಿ ನರಸಿಂಹಣ್ಣ "ಇಲ್ಲೇ ಬರ್ತೀನಿ....
ಅಂತ ಹೊರಗಡೆ ಹೋದ....

ಆಗ ಇಲ್ಲಿ ಇದ್ದವರದೇ ದರ್ಬಾರು....ನಾನು ಆಗಾಗ ಕಸ ಗುಡಿಸೋದು... ಟೀ ತರೋದು ಮಾಡ್ತಿದ್ದೆ....

ಬಹಳ ಹೊತ್ತಿನ ನಂತರ ನರಸಿಂಹಣ್ಣ ಬಂದ...
ಗಿರಾಕಿಗಳು ಯಾರೂ ಇರ್ಲಿಲ್ಲ....

"ಹೋಗ್ರೋ ಊಟ ಮಾಡ್ಕೋಂಡು ಬನ್ನಿ..." ಅಂದ...

ಅವರಿಬ್ಬರೂ ಹೋದರು...
ನಾನು ನಿಂತೇ ಇದ್ದೆ...
ನಂಗೆ ಸಾಕು ಸಾಕಾಗಿತ್ತು ಅನುಮತಿ ಪಡೆದು ಹೊರಡೋಣ ಅನ್ನಿಸಿತು...

"ಊಟಕ್ಕೆ ಕಾಸಿದೆಯಾ... ತಗೋ ಇಪ್ಪತ್ತು ರುಪಾಯಿ ಊಟ ಮಾಡಿ ಬಾ ಹೋಗು.."

"ನರಸಿಂಹಣ್ಣ.... ನಾನು ಹೋಗ್ತೀನಿ...
ಎಲ್ಲಾದ್ರೂ ಬೇರೆ ಕಡೆ ಕೆಲ್ಸ ಹುಡ್ಕೋತಿನಿ..."

ನಿಧಾನವಾಗಿ ಹೇಳಿದೆ...

" ಮೊದ್ಲು ಊಟ ಮಾಡಿಬಾ... ಹೋಗುವಿಯಂತೆ.."

ಎಂದು ಇಪ್ಪತ್ತು ರುಪಾಯಿ ಕೊಟ್ಟ...

ಇಲ್ಲಿ ಊಟ ಮಾಡುವದಾ...?
ಇದು ಒಂದು ಅನುಭವ ..!
ನೋಡಿಯೇ ಬಿಡೋಣ ಅನಿಸಿತು...

ಪೆಟ್ಟಿಗೆ ಅಂಗಡಿಯಲ್ಲಿ ಎರಡೇ ಐಟಮ್ಮು...
ಮೊಸರನ್ನ... !!
ಸಾಂಬರನ್ನ....!!


ಮೊದಲು ಮೊಸರನ್ನ ತೆಗೆದು ಕೊಂಡೆ ...

ಅಂಗಡಿಯವ ವಿಚಿತ್ರವಾಗಿ ನೋಡಿದ...

" ಯಾವೂರು..?..!!.."

" ಶಿವಮೊಗ್ಗ.."

" ಅಂದುಕಂಡೆ ..!! ...
ಹಾಗಾಗಿ ಹೀಗಿದ್ದೀಯಾ... ಮೊಸರನ್ನ ತಿಂದು..."


ನಾನು ಮಾತಾಡಲಿಲ್ಲ...

ಅನ್ನದ ತಿಳಿ ಗಂಜಿಗೆ ...
ಹುಳಿ ವಾಸನೆ ಬರುವ ಮಜ್ಜಿಗೆ ನಿರು...!
ಉಪ್ಪು...
ಮೇಲಿಂದ ಎರಡು ಚಮಚ ಹುಳಿ ಹುಳಿ ಉಪ್ಪಿನಕಾಯಿ...!

ಇದನ್ನು ಹೇಗೆ ತಿನ್ನುವದು...?
ಹಸಿವೆಯಾಗಿದ್ದಕ್ಕೊ ಗೊತ್ತಿಲ್ಲ... ಮೊಸರನ್ನ ಗಬಗಬನೆ ತಿಂದೆ...

ಸಾಕಾಗಲಿಲ್ಲ...

ಸಂಬಾರನ್ನದ ಪರಿಮಳ ಬರ್ತಿತ್ತು...

ಪರಿಮಳಕೇಳಿಯೇ ಬಾಯಲ್ಲಿ ನೀರು ಬರುತ್ತಿತ್ತು...

ಅದನ್ನೂ ನೋಡಿಯೇ ಬಿಡೋಣ ಎಂದು ತೆಗೆದು ಕೊಂಡೆ...


ವಾಹ್....! ಅದ್ಭುತ ರುಚಿ....!
ಒಮ್ಮೆ ನನ್ನ ಮಡದಿಗೆ ಇದರ ರುಚಿ ತೋರಿಸಬೇಕು ಅಂದುಕೊಂಡೆ....


ಅಷ್ಟರಲ್ಲಿ ಅಂಗಡಿಯಿಂದ ಒಬ್ಬ ಓಡಿ ಬಂದು ಗಾಭರಿಯಿಂದ...

"ಗಲ್ಲಾಪೆಟ್ಟಿಗೆಯಿಂದ ಹಣ ತೆಗೆದಿದ್ದೀಯಾ..? ನರಸಿಂಹಣ್ಣ ಕರಿತಿದ್ದಾರೆ ಬಾ.." ಅಂದ...

ನನಗೆ ಇದೇನಾಯಿತಪ್ಪ...! ಅಂದು ಗಾಭರಿಯಾಯಿತು...!

ಹಣಕೊಟ್ಟು ಅಂಗಡಿಕಡೆ ಹೆಜ್ಜೆ ಹಾಕಿದೆ...
ಪೆಟ್ಟಿಗೆ ಅಂಗಡಿಯವ ಹೇಳುತ್ತಿದ್ದ...

" ಒಂದುದಿನ ಕೆಲಸಕ್ಕೆ ಬಂದಿದ್ದಾನೆ ...!
ಹಣ ಕದಿಯೋದ...?

ಜನರನ್ನು ನಂಬೋ ಕಾಲ ಹೊರಟು ಹೋಯ್ತು..."

ಅಂಗಡಿಗೆ ಬಂದೆ.....
ನರಸಿಂಹಣ್ಣ ನನ್ನನ್ನೇ ಕೆಕ್ಕರಿಸಿಕೊಂಡು ನೋಡುತ್ತಿದ್ದ....

ನನಗೆ ಸಿಕ್ಕಾಪಟ್ಟೆ ಹೆದರಿಕೆ ಶುರುವಾಯ್ತು...

ಹೊಡೆದು ಬಿಟ್ಟರೆ ಏನು ಗತಿ...?

"ಏಯ್ ಧಡಿಯ... ಒಳ್ಳೇ ಮಾತಲ್ಲಿ ಕೇಳ್ತಾ ಇದ್ದೀನಿ ...
ಹಣ ಕದ್ದಿದ್ದೀಯಾ...??

ಕದ್ದಿದ್ರೆ ಕೋಟ್ಟು ಬಿಡು ಬದ್ಕೋತಿಯಾ...
ಇಲ್ಲಾ ಕೈ ಕಾಲು ಮುರಿದು ಹಾಕಿ ಬಿಡ್ತೀನಿ...
ನಾನು ಯಾರು ಅಂತ ಗೊತ್ತಿಲ್ಲ ನಿನಗೆ...
ನಾಲ್ಕು ಮರ್ಡರ್ ಕೇಸ್ ಇದೆ ನನ್ನ ಮೇಲೆ..."


ನಾಲಿಗೆ ಒಣಗಿ ಮಾತನಾಡಲಾಗಲಿಲ್ಲ...
ಧ್ವನಿ ಕಂಪಿಸತೊಡಗಿತು....

" ಇಲ್ಲ ಅಣ್ಣ... ನಾನು ಅಂಥೋನಲ್ಲ..."

ಇಷ್ಟು ಹೇಳುವಾಗ ನನ್ನ ಕೈಕಾಲು ಥರಥರ ನಡುಗ ಹತ್ತಿತು...

ನಿಜವಾದ ಭಯ ಅಂದರೆ ಇದೇನಾ....?

ಕೈಯ್ಯೋ ಕಾಲು ಮುರಿಯುವಷ್ಟು ಹೊಡೆತ ಬಿದ್ದರೆ...?

ನೆನಪು ಮಡಿಕೊಂಡೇ ನನಗೆ ಮತ್ತಷ್ಟು ಆತಂಕವಾಯಿತು...

ನರಸಿಂಹಣ್ಣ ನಿಧಾನವಾಗಿ ಹತ್ತಿರ ಬಂದ..!!

"ನೋಡೋ....
ದೊಂಗ ನಾ ಕೊಡಕ್ಲು ....
ಒಳ್ಳೇ ಮಾತಲ್ಲಿ ಕೇಳ್ತಾ ಇದ್ದೀನಿ...

ನನ್ನ ಹತ್ರ ಹೊಡ್ಸ್ಕೊಂಡು ಸಾಯ್ಬೇಡಾ...!
ನಿನ್ನೇತನಕ ಇಲ್ಲಿ ಹತ್ತು ಪೈಸೇನೂ ಆಚೆ ಈಚೆ ಆಗಿಲ್ಲ...
ನೀನೇ ಕದ್ದಿದ್ದೀಯಾ...!"

ಅಯ್ಯೋ ದೇವರೆ ...!! ಏನು ಮಾಡ್ಲಿ...?

ನಾನು ಯಾರೆಂದು ಹೇಳಿ ಬಿಡ್ಲಾ...?

ನಂಬ್ತಾನಾ...? ರಾಜುನಿಗೆ ಫೋನ್ ಮಾಡ್ಲಾ....?

ಹೆದರಿಕೆಯ ಸಂಗಡ...
ಮೈಯೆಲ್ಲ ಕಂಪಿಸತೋಡಗಿತು...!
ಬೆವರತೊಡಗಿತು...!


ನರಸಿಂಹಣ್ಣ ನನ್ನ ಕಾಲರ್ ಪಟ್ಟಿ ಹಿಡಿದು ಕೊಂಡ....

ಬಲವಾಗಿ... ಹಿಡಿದು ಟೈಟ್ ಮಾಡತೋಡಗಿದ...


ಇನ್ನು ವರೆಗೆ ಒಂದೂ ಹೊಡೆತದ ರುಚಿ ನೋಡದ ಹೊಡೆತ ನನಗೆ ಬಿತ್ತು ಅಂದುಕೋಂಡೆ...

"ಇಲ್ಲ ನಾನು ತೆಗೆದಿಲ್ಲ...
ಶ್ರೀನಿವಾಸು ರಾಜುಗೆ ಫೋನ್ನ್ ಮಾಡಿ..ಕೇಳಿ..."

ಬಹಳ ಕಷ್ಟ ಪಟ್ಟು ಹೇಳಿದೆ....

ಮತ್ತೂ ಕೈ ಟೈ ಟ್ ಮಾಡಿದ...!
ಹಿಂದೆ ಮುಂದೆ ಜಗ್ಗಿ ಎಳೆದಾಡಿದ...!

""ಏಯ್ ಕಳ್ಳ ನನ್ನ ಮಗನೆ...
ರಾಜು ಏನು ಮಾಡ್ತಾನೆ..? ನೀನು ಕದ್ದಿದ್ದಕ್ಕೆ..?

ನೀನು ಸುಮ್ನೆ ಬಾಯಿ ಬಿಡಲ್ಲ..
ಎರಡು ಇಕ್ಕಿದರೆ ಹೇಳ್ತೀಯಾ...

ಏಯ್ .. ಬರ್ರೋ ಇಲ್ಲಿ..."

ಎಂದು ಉಳಿದಿಬ್ಬರನ್ನು ಕರೆದ...
ಅವರು ಬಂದರು...
"ಇವನ ತಲಾಶಿ ಮಾಡ್ರೋ...ಮೊದ್ಲು ಪೊಕೆಟ್ ಎಲ್ಲ ಹುಡುಕಿ"

ನರಸಿಂಹಣ್ಣ ಕೈ ಬಿಟ್ಟ...
ನನಗೆ ಅವಮಾನ , ಹೆದರಿಕೆ ....!

ಅವರು ನನ್ನ ಕಿಸೆಯೆಲ್ಲ ಹುಡುಕಿದರು...

ಅಷ್ಟರಲ್ಲಿ ನರಸಿಂಹಣ್ಣ ಮತ್ತೆ ಘರ್ಜಿಸಿದ....!!

" ಈ ಕಳ್ಳ ನನ್ನ ಮಗ ಊಟ ಮಾಡದೇ ಹೋರಟಿದ್ದ...
ಯಾಕೆ ಅಂತ ಗೊತ್ತಾಯ್ತು.. ಸರಿಯಾಗಿ ಹುಡುಕ್ರೊ..."


ದೇವರ ದಯ ನಾನು ಹಣ ಇಟ್ಟುಕೊಂಡಿರಲಿಲ್ಲ....

ಒಬ್ಬನಿಗೆ ನನ್ನ ಮೊಬೈಲ್ ಸಿಕ್ಕಿತು ..!
ನೋಕಿಯಾ.... ಎನ್ ೯೫...!!
ದುಬಾರಿ ಸೆಟ್ಟು...!!

"ಅಣ್ಣಾ... ದುಬಾರಿ ಮೊಬೈಲಿದೆ ಇವನ ಹತ್ರ..."

"ತಗೋಡು ಬಾರೊ.. ಕೊಡೋ ಇಲ್ಲಿ.."

ಆತ ಮೊಬೈಲ್ ಕೊಟ್ಟ...

ಶ್ರೀನಿವಾಸಣ್ಣನಿಗೆ ಫೋನ್ ಮಾಡಲಿಕ್ಕೂ ಆಗೋದಿಲ್ಲವಲ್ಲಾ.....?

ಅದೋಂದೇ ದಾರಿ ನನಗೆ ಉಳಿದಿತ್ತು...

ಮೊಬೈಲ್ ಹಿಡಿದು ನರಸಿಂಹಣ್ಣ ನನ್ನ ಬಳಿ ಬಂದ....

ಇನ್ನು ಪೆಟ್ಟು ತಿನ್ನುವದೊಂದೇ ಉಳಿದಿರೋದು....!!

ಅಯ್ಯೋ ದೇವರೆ....!!

"ನೋಡೋ ಕೊನೆಯ ಬಾರಿ ಕೇಳ್ತಾ ಇದ್ದೀನಿ...
ಎಲ್ಲಿಟ್ಟಿದ್ದೀಯಾ ಹಣ...???
ಲೋ..." ಈ ಧಡಿಯಾ.".. ನಾನು ಇಲ್ದೇ ಇರುವಾಗ ಹೊರಗಡೆ ಹೋಗಿದ್ನೇಂದ್ರೋ..?? "

ಅವರಲ್ಲಿ ಒಬ್ಬ.... "ಹೌದಣ್ಣಾ.... ಟೀ ತರ್ಲಿಕ್ಕೆ ಅಂತ ಹೋಗಿದ್ದ"

ನರಸಿಂಹಣ್ಣ ನನ್ನನ್ನೊಮ್ಮೆ ದೂಡಿದ.
.ಆರಭಸಕ್ಕೆ ಬೀಳುವವನಿದ್ದೆ...


"ನಾನು ಅಂಥಹವನಲ್ಲ...
ಶ್ರೀನಿವಾಸಣ್ನನಿಗೆ ಫೋನ್ ಮಾಡಿ...

ಅವರನ್ನೂ ಚೆಕ್ ಮಾಡಿ..."

ನನ್ನಲ್ಲಿರೋ ಕೊನೆಯ ಅಸ್ತ್ರ...!

ಹೇಗೊ... ಹೇಗೋ ಹೇಳಿದೆ....

ನರಸಿಂಹಣ್ಣ ಗಕ್ಕನೆ ನಿಂತ....!

"ಬರ್ರೋ ಇಲ್ಲಿ..."

ಅವರಿಬ್ಬರನ್ನೂ ಕರೆದ...

"ಲೇ ಧಡಿಯ... ಇವನನ್ನು ತಲಾಶಿ ಮಾಡು.. ನಿ ಹೇಳಿದ್ದು ಆಗಿ ಹೋಗ್ಲಿ.."

ನನಗೆ ಸ್ವಲ್ಪ ಧೈರ್ಯ ಬಂದಂತಾಗಿತ್ತು...

ಮೊದಲನೆಯವನನ್ನು ನೋಡಿದೆ...

ಕಿಸೆ ಪ್ಯಾಂಟು ಎಲ್ಲ ನೋಡಿದೆ ...!!

ಏನೂ ಇಲ್ಲ...!!

"ನೀ.. ರಾ..ಪ್ಪಾ...." ಇನ್ನೊಬ್ಬನನ್ನು ಕರೆದ....

ನನಗೆ ಹೇಗೋ ಹೇಗೋ ಆಗುತ್ತಿತು....

ಅವನನ್ನೂ ಹುಡುಕಿದೆ...!!
ಮೈಯೆಲ್ಲ ತಡಕಾಡಿದೆ...!!

ಏನೂ ಇಲ್ಲ....!!

ಅಯ್ಯೋ....!! ಇನ್ನೇನು...?

ತಕ್ಷಣ ಅವನ ಬೆಲ್ಟಿನ ಕಳ್ಳ ಕಿಸೆ ಕಡೆ ತಡಕಾಡಿದೆ...

ಒಂದು ಗಂಟಿನ ಥರ ಇದೆ...!!!!!

ಕಷ್ಟ ಪಟ್ಟು ಬೆರಳು ಹಾಕಿದೆ...!!
ನೋಟು ತಡಕಾಡಿದ ಹಾಗೇ ಇತ್ತು....!!

"ಅಣ್ಣ... ಇಲ್ಲಿ ನೋಟಿದೆ..!"
ಅಂತ ಚೀರಿದೆ....

ಅಷ್ಟರಲ್ಲಿ ನರಸಿಂಹಣ್ಣ ಬಂದ...
"ಎಯ್ ತೆಗಿಯೋ....
ಎಲ್ಲಿಂದ ಬಂತೋ ಹಣ...?? ಡಬ್ಬಲು?.."


ಆತ ಥಥರ ನಡುಗುತ್ತ,,, ತೆಗೆದು ಕೊಟ್ಟ..

"ಅಣ್ನ... ಮಣ್ಣು ತಿನ್ನೊ ಕೆಲ್ಸ ಮಾಡಿಬಿಟ್ಟೆ ಕ್ಷಮಿಸು ಬಿಡಣ್ಣ...
ಹೆಂಡ್ತಿ ಅಪರೇಷನ್ ಗೆ ಬೇಕಿತ್ತು.."

"ಧರಿದ್ರ ನನ್ನ ಮಗನೆ..? ಭೋ... ಮಗನೆ..?.."

ನರಸಿಂಹಣ್ಣನಿಗೆ ಕೋಪತಡೇಯಲಿಕ್ಕಾಗಲಿಲ್ಲ

ಅವನನ್ನು ಹಿಗ್ಗಾಮುಗ್ಗಾ ಥಳಿಸ ತೊಡಗಿದ...
ಅವನ ಮುಖ ಬಾಯಿ ಒಸಡುಗಳಿಂದ ರಕ್ತ ಬರತೊಡಗಿತು...
ಅವನ ಹೊಟ್ಟೆಗೆ ಬಲವಾಗಿ ಜಾಡಿಸಿ ಒದ್ದ....

ಆತ್ ದೊಪ್ಪೆಂದು ನೆಲಕ್ಕೆ ಬಿದ್ದ....
ಅವನನ್ನು ಬೂಟೂಗಾಲಿಂದ ತುಳಿಯ ತೊಡಗಿದ....

ನನಗೆ ಷಾಕ್ ಹೊಡೆದಂತಾಗಿತ್ತು....

ನರಸಿಂಹಣ್ಣನನ್ನು ತಡೆಯಲಾ...?

ಅಷ್ಟರಲ್ಲಿ ಮತ್ತೊಬ್ಬ ನನ್ನ ಬಳಿ ಮುಂದೆ ಬಂದು ನನ್ನ ಮೈಮುಟ್ಟಿ ತಡೆದ...

"ಅಣ್ಣನನ್ನು ಈಗ ಮುಟ್ಟ ಬೇಡ......!
ಈಗ ಅಂವ ರಾಕ್ಷಸ....!!
ಅವನ ಕೈನೋ ಕಾಲೋ ಮುರಿದಂತೂ ಅವನಿಗೆ ಸಮಾಧಾನ ಆಗೋದಿಲ್ಲ..."


ನನಗೆ ಮೈ ನಡುಕ ಇನ್ನೂ ನಿಂತಿರಲಿಲ್ಲ....

ಶ್ರೀನಿವಾಸನಿಗೆ ಫೋನ್ ಮಾಡಬೇಕು...

ನಡುಗುವ ಕೈಯಿಂದ ತಡಕಾಡಿದೆ....!

ಫೋನ್ ನರಸಿಂಹಣ್ಣನ ಬಳಿ ಇದೆ.........!

ಹೊಡೆತ, ಒದೆ ತಿಂದವನ.. ಚೀರಾಟ ..ಜಾಸ್ತಿಯಾಯಿತು....

ಅಕ್ಕಪಕದ ಜನ ಸೇರತೊಡಗಿದರು....

ನಾನು ಮೂಕನಾಗಿ... ಗರಬಡಿದವನಂತಾಗಿದ್ದೆ....

ನಮ್ಮ "ಪ್ರಾಮಾಣಿಕತೆ."... ಅಸಹಾಯಕ.....!!!

ನನಗೆ ಆಗ ಹಾಗೆ ಅನಿಸಿತು....

71 comments:

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಸ್ಟೋರಿ ತುಂಬಾ ಸಸ್ಪೆನ್ಸ್ ಆಗಿ ಇದೆ...
ನೀವು, ನರಸಿಂಹ ಅವರ ಹತ್ತಿರ ಬಂದಿರುವ ಕಾರಣವಾದರು ಏನು.... ?
ನನಗೆ Full Confuse ಆಗ್ತಾ ಇದೆ..

vinuta said...

kannige kattuvante barediddiri.adare summane nintukollabaradittu..,

ಉಮೇಶ ಬಾಳಿಕಾಯಿ said...

ಅಯ್ಯಪ್ಪ.!!.. ಭಯಾನಕ ಅನುಭವ..!!! ನೀವೆಲ್ಲೋ ನಿಮ್ಮ ಅಹಂ ಕೊಲ್ಲಲು ಎಂದು ಹೋಗಿ ಏನೋ ಒಂದು ದಿನ ಕೆಲ್ಸಾ ಮಾಡಿ, ನೀಟಾಗಿ ಮನೆ ಸೆರ್ಕೋತೀರ ಅಂದ್ಕೊಂಡಿದ್ರೆ, ಅಲ್ಲಿ ಇಷ್ಟೆಲ್ಲಾ ಭಯಾನಕ ಘಟನೆ ನಡೀತಾ.. ಪುಣ್ಯ, ನಿಮ್ಗೇನೂ ಆಗ್ಲಿಲ್ವಲ್ಲ.. ಸ್ವಾಮೀ, ನಿಮ್ಗೆ ಬೇರೆ ಏನೂ ಐಡಿಯಾ ಹೊಳೀಲಿಲ್ವ ಅಹಂ ತಿದ್ದಿಕೊಳ್ಳೋಕೆ ?

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್....

ನನ್ನದೊಂದು ಎಕ್ಸಪೆರಿಮೆಂಟ್ ಮಾಡಲಿಕ್ಕೆ ಹೋದದ್ದು...
ಒಂದು ದಿನ ನನ್ನದಲ್ಲದ ಜಾಗದಲ್ಲಿ ನಾನಾಗಿರದೆ....
ಬೇರೆಯವನಾಗಿ ಕೆಲಸ ಮಾಡಲಿಕ್ಕೆ ಹೋಗಿದ್ದೆ...

ಅದರಿಂದ ಏನು ಕಲಿತೆ...?
ಹೇಗೆ ಹೇಳಲಿ..?

ನನ್ನಲ್ಲಿ ವಾಕ್ಯಗಳಿಲ್ಲ....

ಆ ಅನುಭವಗಳು.. ಆವಾತಾವರಣ...
ನೆನಪು ಮಾಡಿಕೊಂಡರೂ ಒಂಥರಾ ಭಯ ಆಗುತ್ತದೆ...

ಒಟ್ಟಿನಲ್ಲಿ ಬಚಾವಾಗಿ ಬಂದೆ...

ನಾನು ಕದ್ದಿಲ್ಲವಾಗಿತ್ತು...
ಹೇಗೆ ಪ್ರೂವ್ ಮಾಡುವದು...?
ಇಲ್ಲಿ ಕುಳಿತು ಬರೆಯುವದು ಬಲು ಸುಲಭ.....

ಅಂಥಹ ಸನ್ನಿವೇಷಗಳು ನಮ್ಮ ಕೈ ಮೀರ್‍ಇದವುಗಳು.....

ಪ್ರಾಮಾಣಿಕತೆ ಅಸಾಹಯಕ....

ಇನ್ನೂ ಒಂದೆರಡು ಘಟನೆ ಬರೆಯಲಾಗಲಿಲ್ಲ....

pratkriyege dhanyavaadagaLu...

(plz read my previous article)

ಸಿಮೆಂಟು ಮರಳಿನ ಮಧ್ಯೆ said...

ವಿನುತಾ....

ಅಂಥಹ ಭಯಾನಕ ವ್ಯಕ್ತಿ ನಾನು ಸಿನೇಮಾದಲ್ಲಿ ಮಾತ್ರ ನೋಡಿದ್ದೆ....
ಸಹಾಯ ಮಾಡಲು ಮನಸಾಗಿತ್ತು...
ಹಾಗೆ ಹೋದಲ್ಲಿ ನನಗೂ ಏಟು ಗ್ಯಾರಂಟಿ...

ಸ್ವಲ್ಪವೇ ಹೆಚ್ಚುಕಡಿಮೆ ಆದರೂ ನಾನು ಆಸ್ಪತ್ರೆಯಲ್ಲಿರುತ್ತಿದ್ದೆ....

ಕೈಮೀರೀದ ಇಂಥಹ ಘಟನೆಗಳು...
ನಮ್ಮಯೋಚನೆಗಳಿಗೆ ಮೀರಿದ್ದು...
ಆಗ ಯಾಕೆ, ಹೇಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ..
ಅನ್ನೋದು ಕೂಡ ನಮ್ಮ ಕೈಮೀರಿರುತ್ತದೆ...

ಸಹಾಯ ಮಾಡಬೇಕಿತ್ತು...
ಧೈರ್ಯವಿರಲಿಲ್ಲವಾ..? ಇರಬಹುದು...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್....

ಗಣಪತಿ ಮಾಡಲಿಕ್ಕೆ ಹೋಗಿ ಅವನಪ್ಪ ಆಗಿತ್ತಂತೆ..
ಹಾಗಾಗಿತ್ತು ನನ್ನ ಕಥೆ....

ನಿಜಜೀವನದ ಭಯಂಕರ ಕ್ರೌರ್ಯ ಕಣ್ಣಾರೆ ನೋಡಿದ ಅನುಭವ ನನ್ನದಾಯಿತು....

ಆತ ನನಗೆ ನೌಕರಿಯ ಇಂಟರ್ವೂ ನಲ್ಲಿ ಕೇಳಿದ ಪ್ರಶ್ನೆಗಳು...
ಅಲ್ಲಿ ತಿಂಡಿ, ಊಟಮಾಡಿದ ಅನುಭವಗಳು...
ಉಳಿದ ಎರಡು ಜನರ ನನ್ನ ಬಗೆಗೆ ತಿರಸ್ಕಾರ...

ಪೆಟ್ಟಿಗೆ ಅಂಗಡಿಯಿಂದ ಟೀ ತರುವದೂ ಕೂಡ ಒಂದು ಕಲೆ....
ಅಷ್ಟು ಸಣ್ಣ ಲೋಟ, ಪ್ಲೇಟಿನಲ್ಲಿ ತರಲು ಬಹಳ ಕಷ್ಟ ಪಟ್ಟೆ...
ಕಸಗುಡಿಸುವದು....

ಸಣ್ಣ , ಸಣ್ಣ ವಿಷಯಗಳೂ ಮಹತ್ವದ್ದು...

ಒಟ್ಟಿನಲ್ಲಿ ಆ ಜಗತ್ತು ಬೇರೆನೇ...

ಆ ಅನುಭವ ಸ್ವಲ್ಪ ಮಟ್ಟಿಗೆ ನನ್ನದಾಯಿತು....

ಪ್ರತಿಕ್ರಿಯೆಗೆ ವಂದನೆಗಳು...

NiTiN Muttige said...

mundinadu barli illandre namage nidre baralla!!!

Amit Hegde said...

waiting for next post :-)

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಭಯಂಕರ ಅನುಭವ. ಏನೋ ಮಾಡಲು ಹೋಗಿ ಏನೋ ಆದಂತಿದೆ. ಬಗ್ಗಿ ಕಸಗುಡಿಸುವುದು, ಇತರ ಕೆಲಸಗಾರರಿಂದ ಕೀಳಾಗಿ ಕಾಣಲ್ಪಡುವುದು, ಟೀ ತರುವುದು, ಡಬ್ಬ ಹೋಟೆಲ್ ನ ಊಟ.... ಎಲ್ಲವೂ ಊಹಿಸುವಷ್ಟು ಸುಲಭವಲ್ಲ. ಕಳ್ಳತನದ ಘಟನೆಯಂತೂ ಕೈಮೀರಿದ್ದು. ನಿಮ್ಮ ಮೊಬೈಲಿನ ಬಗ್ಗೆ ಆತನೇನೂ ಕೇಳಲಿಲ್ವಾ? ನೀವ್ಯಾರೆಂದು ಆತನಿಗೆ ಗೊತ್ತಾಯ್ತಾ? ಹೇಗೆ ಮುಂದೆ ಎದುರಿಸಿದ್ರಿ? ನಿಮ್ಮ adventure ತುಂಬಾ sensational ಆಗಿದೆ.

ಸಿಮೆಂಟು ಮರಳಿನ ಮಧ್ಯೆ said...

ನಿತಿನ್.....

ಅಲ್ಲಿಂದ ಬಿಡಿಸಿಕೊಂಡು ಬಂದೆ.......
ಅಂದಿನ ಸಂಬಳ ನರಸಿಂಹ ನನಗೆ ಐವತ್ತು ರುಪಾಯಿ ಕೊಟ್ಟ ...
ಭದ್ರವಾಗಿ ಇಟ್ಟುಕೊಂಡಿದ್ದೇನೆ....

ಅಲ್ಲಿಂದ ಬಂದಮೇಲೆ ನನ್ನ ಮೇಸ್ತ್ರಿಗಾರೆಯವರನ್ನು,
ಕೆಲಸಗಾರರನ್ನು ನೋಡುವ ಮಾತಾಡಿಸುವ ರೀತಿ..
ಸ್ಪಷ್ಟವಾಗಿ ಬದಲಾಗಿದೆ....

ಆದರೆ ತೀರಾ ಸಲುಗೆ ಕೊಡುತ್ತಿಲ್ಲ...
ತಲೆಮೇಲೆ ಕುಳಿತುಕೊಂಡು ಬಿಡುತ್ತಾರೆ....
ಅವರ ಮಾತಿನಲ್ಲಿ ಪ್ರಾಮಾಣಿಕತೆ ಹುಡುಕುವ ಪ್ರಯತ್ನ...
ಮತ್ತು ಪ್ರಾಮಾಣಿಕತೆ ಕಾಣುವ ಬಗೆ ಕಂಡುಕೊಂಡಿದ್ದೇನೆ.....

ಅದೊಂದು ಕಟು ಸತ್ಯದ ಅನುಭವ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಾಅಗಳು...

ಸಿಮೆಂಟು ಮರಳಿನ ಮಧ್ಯೆ said...

ಅಮಿತ್....

ನಾವು ಮಾಡಿಲ್ಲದ.., ನಮ್ಮ ತಪ್ಪಿಲ್ಲದೆ
ಅಪವಾದ ಬರುತ್ತದಲ್ಲ....
ಅದನ್ನು ಪ್ರೂವ್ ಮಾಡುವಲ್ಲಿ ನಾವು ಸೋಲಬೇಕಾಗುತ್ತದೆ...

ನಮ್ಮ ಪ್ರಾಮಾಣಿಕತೆ ನಿಜಕ್ಕೂ ಅಸಹಾಯಕ....

ಇಂಥಹ ಘಟನೆ ನನ್ನ ಜೀವನದಲ್ಲಿ ಘಟಿಸಿವೆ....

ನಮ್ಮ ಸುತ್ತಲಿನ ಜನ ನಮ್ಮನ್ನು ನಂಬುವದಿಲ್ಲ...
ನಮ್ಮನ್ನು ಸಂಶಯ ದ್ರಷ್ಟಿಯಲ್ಲಿ ನೋಡುತ್ತಾರಲ್ಲ...

ಆ ಅಸಹಾಯಕತೆಯಷ್ಟು ಹಿಂಸೆ ಬೇರೊಂದಿಲ್ಲ....

ಪ್ರಾಮಾಣಿಕತೆ ನಿಜಕ್ಕೂ ಅಸಹಾಯಕ......

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ಕೊನೆಯಲ್ಲಿ ನರಸಿಂಹ ಮೊಬೈಲನ್ನು ಕೊಟ್ಟ...
ಸಂಗಡ ಐವತ್ತು ರೂಪಾಯಿ ಸಂಬಳವನ್ನೂ ಕೊಟ್ಟ....

ಈ ಘಟನೆಯ ನಂತರ ನನ್ನ ಮೇಲೆ ಅನುಮಾನ ಏನೂ ಬರಲಿಲ್ಲ...
ಎಲ್ಲ ಆ ಘಟನೆಯ ಷಾಕ್ ನಲ್ಲಿದ್ದರು....

ಅಹಂಕಾರ ಸಾಯಿಸಲು ಹೊರಟವನಿಗೆ ಬೇರೆ ಬೇರೆ ಪಾಠಗಳು...

ಅಲ್ಲಿನ ನನ್ನ ಅನುಭವ ಬರೆಯಲು
ಇನ್ನೊಂದು ಪೋಸ್ಟ್ ಕೂಡ ಸಾಲದಿರಬಹುದು..

ನಮ್ಮ ಹತ್ತಿರನೇ ವಾಸಿಸುವ ಅವರ
ಪ್ರಪಂಚವೇ ಬೇರೆ... ಅದು ಬೇರೆ ಲೋಕ....

ಬಹಳ ಕಷ್ಟ ಪಟ್ಟು ಇವೆಲ್ಲ ಇದೇ ಲೇಖನದಲ್ಲಿ ಮುಗಿಸಿದ್ದೇನೆ...

ನನ್ನ ಭಾವನೆಗಳನ್ನು, ಅನುಭವಗಳನ್ನು ಇಲ್ಲಿ ವಿವರಿಸುವಲ್ಲಿ
ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆಂದು ಗೊತ್ತಾಗುತ್ತಿಲ್ಲ...

ತಪ್ಪಿದ್ದಲ್ಲಿ ಕ್ಷಮಿಸಿ....

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು....

Sumana said...
This comment has been removed by the author.
Sumana said...

ನಂಬಲು ಕಸ್ಟಾವೆನಿಸುವಂಥ ಘಟನೆ. ನಿಮ್ಮ ಆಗಿನ ಪರಿಸ್ತಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. Hats off ನಿಮ್ಮ ಯೋಚನೆಗೆ,ಪ್ರಯತ್ನಕ್ಕೆ....ಮುಂದೆ ಹುಶಾರಾಗಿರಿ...
'ಕಂತು' ಪೂರ್ತಿಯಾಗುವುದನ್ನು ಕಾಯ್ತಾ ಇದ್ದೀನಿ :)

ಸಿಮೆಂಟು ಮರಳಿನ ಮಧ್ಯೆ said...

ಸುಮನಾರವರೆ....

ಈ ಘಟನೆಯನ್ನು ಇಲ್ಲಿಗೆ ಮುಗಿಸೋಣ....
ಇಲ್ಲಿ ಪ್ರತಿಕ್ರಿಯೆಗಳಲ್ಲಿ ನನ್ನ ಅನುಭವ ಹೇಳಿಕೊಂಡಿರುವೆ...

ಇನ್ನೂ ಬಹಳಷ್ಟು ಬರೆಯುವ ವಿಷಯಗಳಿವೆ...

ದಿನ ನಿತ್ಯ ನನ್ನ ಕೆಲಸಾಗರ ಒಡನಾಡುವ ನನಗೆ..
ಅವರ ಈ ಪ್ರಪಂಚದ ಕಲ್ಪನೆ ಕೂಡ ಇರಲಿಲ್ಲ...
ಅಲ್ಲಿಯ "ಸಾಂಬಾರನ್ನ" ಮಾತ್ರ ಸೂಪರ್ ಆಗಿತ್ತು...
ಆ ಅಂಗಡಿಯವ "ಮೊಸರನ್ನ" ತಿಂದು ಹೀಗಾಗಿದ್ದೀಯಾ" ಅಂದದ್ದು...
ನರಸಿಂಹ ಬೆಳಿಗ್ಗೆ ಹತ್ತುರುಪಾಯಿಯ ನಾಷ್ಟಾ ಮಾಡಿಸಿದ್ದು,

ನರಸಿಂಹನ ಬಿಸಿನೆಸ್ಸ್ ಬುದ್ಧಿವಂತಿಕೆ...
ಕಟಿಂಗ್ ಮಾಡುವಾಗ ಕೌಟುಂಬಿಕ ವಿಚಾರ ಮಾತಾಡುವದು..

ಅಲ್ಲಿ ಬರುವ ಜನರ ಕಪಟವಿಲ್ಲದ, ಪ್ರಾಮಾಣಿಕ ಮಾತುಕತೆ..
ತುಂಬಾ ಇಷ್ಟವಾದವು...

ಅಲ್ಲಿ ಪ್ರತಿಯೊಂದು ಕ್ಷಣ ನನ್ನ ವರ್ತಮಾನದ ಸ್ಥಿತಿ,
ನನ್ನ ನಡುವಳಿಕೆಗಳಿಗೆ ಕನ್ನಡಿ ಹಿಡಿದ ಹಾಗೆ ಇತ್ತು...

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

umesh desai said...

ಹೆಗಡೆ ಸರ ನಿಮ್ಮ ಧೈರ್ಯಕ್ಕೆ ಜೈ ಹೋ
ನಿಜ ನಾವು ನಮಗೆ ಒಗ್ಗದ ಗೊತ್ತಿಲ್ಲದ ಕೆಲಸ ಮಾಡಿದಾಗಲೇ ನಿಜ ಜೀವನದ ಅನುಭವ ಆಗೋದು
ಇನ್ನೊಮ್ಮೆ ನಿಮಗೆ ಜೈ ಹೋ !

ಚಂದ್ರಕಾಂತ ಎಸ್ said...

ಪ್ರಕಾಶ್

ನಿಮ್ಮ ಬರವಣಿಗೆ ಸಾಕಷ್ಟು ಸುಧಾರಿಸಿದೆ. ನೀವು ಹಿಂದೆ ಬರೆದ ಅನೇಕ ಬರಹಗಳೂ ನಿಮ್ಮ ಅನುಭವದ ಲೇಖನಗಳೇ ಆದರೂ ಈ ಅನುಭವದ ಎರಡು ಕಂತುಗಳೂ ಅನೇಕ ಅಂಶಗಳಿಂದಾಗಿ ಚೆನ್ನಾಗಿವೆ. ಈಗಾಗಲೇ ಅನೇಕರು ನನಗನಿಸಿದ್ದನ್ನೇ ಬರೆದಿರುವುದರಿಂದ ಅದನ್ನು ಬಿಟ್ಟು ಉಳಿದ ಪ್ರತಿಕ್ರಿಯೆ ನೀಡುವೆ.

೧.ಮನುಷ್ಯನ ನೋವು, ಅಹಂಕಾರ ವಿಷಾದಗಳನ್ನು ಹೋಗಲಾಡಿಸುವುದಕ್ಕೆ ದೈಹಿಕ ಶ್ರಮ ಅತ್ಯಗತ್ಯ ಎಂದು ಕೇಳಿದ್ದೇವೆ. ಆದರೆ ನಿಮ್ಮಂತೆ identity ಕಳೆದುಕೊಂಡು ಇನ್ನೊಬ್ಬರ ಬಳಿ ಕೆಲಸ ಮಾಡಲು ಹೋದವರು ತೀರಾ ಕಡಿಮೆ.

೨. ಇಲ್ಲಿ ಅಂಗಡಿಯ ಒಡೆಯ ನರಸಿಂಹನದು ಗುರುತರವಾದ ತಪ್ಪೇನಿಲ್ಲ. ನೀವು ಹೇಳಿದಂತೆ ಕೈಕೆಳಗಿನವರಿಗೆ ಅತಿ ಸಲಿಗೆ ಕೊಟ್ಟರೆ ಕೆಲಸ ಕೇಡು.ಈ ಅನುಭವದಿಂದಲೇ ಆತ ಅಷ್ಟು ಕ್ರೂರವಾಗಿ ವರ್ತಿಸುತ್ತಿದ್ದ ಅನಿಸುತ್ತದೆ.

೩. ಸಾಮಾನ್ಯವಾಗಿ ಕೆಳಗಿನವರನ್ನು" ಮೈ ಬೆಳೆಸಿಕೊಂಡಿದ್ದೀಯಾ ಬುದ್ದಿ ಮಾತ್ರ ಇಲ್ಲ "ಅನ್ನುತ್ತೇವಲ್ಲಾ ಅದನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಪಾಠ ಸಿಕ್ಕಿತು

೪. ಹಣವಿಲ್ಲದೆ ಕಷ್ಟಪಟ್ಟ ಸಾವಿರಾರು ಜನರ ನಡುವೆ ಆ ಸಂದರ್ಭದಲ್ಲಿ ನಿಮ್ಮ ಜೇಬಲ್ಲಿ ಹಣವಿಲ್ಲದಿದ್ದುದೇ ನಿಮ್ಮನ್ನು ಕಾಪಾಡಿತು.

೫. ಟೀ ತರುವುದು, ಕಸಗುಡಿಸುವುದು ( ಅದೂ ಗಂಡಸರು) ಇವೆಲ್ಲಾ ನಿಮ್ಮ ಆತ್ಮದ ಮೇಲೆ ಉಂಟುಮಾಡಿದ ಆಘಾತ, ನಿಮ್ಮ ಮನಸ್ಸನ್ನು ಪಕ್ವಗೊಳಿಸಿದ ರೀತಿ ಇವು ಖಂಡಿತ ವರ್ಣನೆಗೆ ನಿಲುಕುವಂತದ್ದಲ್ಲ. (ನಿಮಗೆ ಗೊತ್ತೇ ಜೈನ ಮುನಿಗಳು ಅಹಂಕಾರ- ನಾನು ನನ್ನದು ಎಂಬ ಭಾವ ಕಳೆದುಕೊಳ್ಳಬೇಕೆಂದೇ ಕಡ್ಡಾಯವಾಗಿ ಭಿಕ್ಷಾಟನೆಗೆ ಹೋಗಬೇಕಿತ್ತು.)

ಅತಿ ಧೀರ್ಘವಾಗಿ ಪ್ರತಿಕ್ರಿಯಿಸಿರುವೆ. ಈ ಲೇಖನಗಳು ಮನಸ್ಸನ್ನು ಬಹಳ ತೀಕ್ಷ್ಣವಾಗಿ ತಟ್ಟಿದೆ.

PARAANJAPE K.N. said...

ಪ್ರಕಾಶರೇ,
ನಿಜವಾಗಿಯು ನೀವು ಇ೦ತಹ ಯತ್ನ ಮಾಡಿದ್ದಿರೋ ಇಲ್ಲ ಇದು ಕಾಲ್ಪನಿಕವೋ ?, ಅ೦ತೂ ಬಹಳ ರೋಚಕವಾಗಿ ಈ ಕಥಾನಕವನ್ನು ಕಟ್ಟಿ ಕೊಟ್ಟಿದ್ದೀರಿ. ಮು೦ದಿನ ಕ೦ತಿಗೆ ಕಾಯುವೆ.

ಬಾಲು said...

thumba chennagide nimma anubhava matte nirupane.

ಗೀತಾ ಗಣಪತಿ said...

ಪ್ರಕಾಶಣ್ಣ,
ಮೈ ನವಿರೇಳಿಸುವ ಅನುಭವ ನಿಮ್ಮದು.
ನೀವು ಇದನ್ನು ಮಾಡಿದ ಉದ್ದೇಶವೇನೋ ತುಂಬಾ ಒಳ್ಳೆಯದೇ, ಆದ್ರೆ dangerous ಸಹ ಇತ್ತು ಅಲ್ಲವಾ?
ಎಲ್ಲರ ಹತ್ತಿರ ಸಾಧ್ಯವಾಗುವುದಲ್ಲ ಇದು. ಇನ್ನು ಮುಂದೆ ಇಂಥಹ ಅಪಾಯಕಾರಿ ಸನ್ನಿವೇಶಗಳಲ್ಲಿ ಸಿಕ್ಕಿ ಹಾಕಿಕೊಳ್ಳಬೇಡಿ.

sunaath said...

ಪ್ರಕಾಶ,
Self mockery ಅಂದರೆ ಇದು. ಕತೆ ರಸವತ್ತಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ದೇಸಾಯಿಯವರೆ....

ಏನೋ ಮಾಡಲಿಕ್ಕೆ ಹೋಗಿ ಏನೋ ಆದ ಘಟನೆ ಇದು...
ನಮ್ಮ ಕೈ ಮೀರಿದ ಸಂಗತಿಗಳು....

ಅಹಂಕಾರದ ಬಗೆಗೆ ಹೋಗಿದ್ದೆ...

ನಾನು ಕಷ್ಟಪಟ್ಟು ಮೇಲೆ ಬಂದವನು...
ನನ್ನಲ್ಲಿ ಅಹಂಕಾರ ಇಲ್ಲ ಅನ್ನುವ ಸ್ವಭಾವದಲ್ಲೂ "ಅಹಂಕಾರದ ಛಾಯೆ ಕಾಣುತ್ತದೆ"
ಒಟ್ಟಿನಲ್ಲಿ ನಮ್ಮ ಐಡೆಂಟಿಟಿ....
ನಮಗೆ ಹೆಚ್ಚಿನ ಸಮಯ ಶತ್ರುವಾಗಿರುತ್ತದೆ...

ಈ ಐಡೆಂಟಿಟಿಯಿಂದ ತುಂಬಾ ಹತ್ತಿರದವರು ...
ದೂರವಾದರೂ ಗೊತ್ತಾಗದ ಮನಸ್ಥಿತಿ ಅದು...
ಅರ್ಥವಾದರೂ ಒಪ್ಪಿಕೊಳ್ಳದ ಮನಸ್ಥಿತಿ ಅದು....

ಚಂದದ ಪ್ರತಿಕ್ರಿಯೆಗೆ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಕಾಂತರವರೆ....

ನಿಮ್ಮ ವಿಮರ್ಶೆ ತುಂಬಾ ಇಷ್ಟವಾಯಿತು....

ಆ ಸಮಯದಲ್ಲಿ ನನ್ನ ಬಳಿ ಹಣ ಇಟ್ಟುಕೊಳ್ಳಲು ಜಾಗವಿರಲಿಲ್ಲ...
ಉಟ್ಟಿದ್ದು ಲುಂಗಿ... ಹಳೆ ಟೀ ಶರ್ಟ್...
ಹಣದ ಅವಶ್ಯಕತೆ ಬಿದ್ದಲ್ಲಿ ಬಳಿಯಲ್ಲೇ ಕಾರು ಇತ್ತಲ್ಲ...

ಆ ಸಮಯದಲ್ಲಿ ಹಣವಿಲ್ಲದಿರುವದೇ ಬಚಾವ್ ಮಾಡಿದೆ...

ನಾವು ಎಷ್ಟೇ ಸಿನ್ಸೀಯರ್, ಪ್ರಾಮಾಣಿಕರಿರಲಿ...
ಪರಿಕ್ಷಾ ಸಮಯದಲ್ಲಿ ಅದು "ಅಸಹಾಯಕ"
ಅನಾಥ...
ದಿಕ್ಕಿಲ್ಲದೇ ನಿಂತಿರುತ್ತದೆ... ನಗ್ನವಾಗಿ....

ಆ ಅನುಮಾನದ ಕಣ್ಣುಗಳಿಗೆ ಉತ್ತರ ಕೊಡದಲಾಗದ
ಅಸಹಾಯಕತೆಗೆ ಮನಸ್ಸು ಕುಗ್ಗಿ ಹೋಗುತ್ತದೆ...

ನಮ್ಮ ಪ್ರಾಮಾಣಿಕತೆಯನ್ನು ಸಾಬೀತು ಪಡಿಸುವ ಸಂದರ್ಭ ಬಹಳ ಕೆಟ್ಟದ್ದು...

ಆಗ ನನಗೆ ಅನ್ನಿಸಿದ್ದು....

ನಮ್ಮ ಪ್ರಾಮಾಣಿಕತೆ "ಅಸಹಾಯಕ"

ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು...

Guru's world said...

ಪ್ರಕಾಶ್
ಡೈರೆಕ್ಟ್ ಆಗಿ ಶೂಟ್ ಮಾಡ್ತಾ ಇರೋ ಹಾಗೆ ಬರೆದಿದ್ದೀರ.....ಹೋಗಲಿ ಕೊನೆಗೂ ನೀವು ಕೊಲ್ಲಬೇಕು ಅಂತ ಇದ್ದ ಅಹಂಕಾರವನ್ನು ಕೊಂದಿರ? ಅಥವಾ ಇದೆಲ್ಲ ನೋಡಿದ ಮೇಲೆ ಅದೇ ಓದಿ ಹೋಯ್ತಾ....
ಗುರು ?

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನನಗೆ ಅನಿಸ್ತ ಇದೆ, ಕೊನೆಯಲ್ಲಿ ಕನಸು ಬಿದ್ದಿತ್ತು ಹೀಗೆ ಅಂತ ಅಂತಿರೆನೋ ಅಂತಾ. ಏನೇ ಆಗಲಿ ಕಥೆ ಮಜವಾಗಿದೆ

roopa said...

abbaa,!!! dEvaru nammannu a sthitiyalli iDalilla e0du KuShiyaayitu. Adare bEreyavara bagge kanikaravaayitu. aadare naavu asahaayakaru .. :-( . nimage Enu aagalillavalla .. sadya dEvaru doDDavanu.

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ....

ಇದು ೧೦೦% ಸತ್ಯ....
ಹೀಗೆ ಅಗಬಹುದೆಂಬ ಕಲ್ಪನೇ ಕೂಡ ಇರಲಿಲ್ಲ....

ಅಲ್ಲಿಂದ ಬಚಾವ್ ಆಗಿ ಬಂದಿದ್ದು ನನ್ನ ಪುಣ್ಯ...

ಇಲ್ಲಿಗೇ ಇದನ್ನು ಮುಗಿಸುತ್ತಿದ್ದೇನೆ...
ಅಲ್ಲಿನ ಇತರ ಅನುಭವ ಪ್ರತಿಕ್ರಿಯೆಯಲ್ಲಿ ಹಂಚಿಕೊಂಡಿದ್ದೇನೆ....

ಧನ್ಯವಾದಗಳು..

PaLa said...
This comment has been removed by the author.
PaLa said...

ತುಂಬಾ ವಿಭಿನ್ನ ಅನುಭವ, ಚೆನ್ನಾಗಿದೆ..
ಐಡೆಂಟಿಟಿ ಮರೆಸಿ ಈ ತರ ಕೆಲ್ಸ ಮಾಡೋದು ತುಂಬಾ ಕಷ್ಟಾನೆ (ಅಲ್ಲಿಯ ಅನುಭವ ಮನೇಲಿ ಇಂಪ್ಲಿಮೆಂಟ್ ಮಾಡಿದೀರ? ಉದಾ ಗುಡ್ಸೊಕೆ, ಪಾತ್ರೆ ತೊಳಿಯೋಕೆ ಚಿಕ್ಕ ಪುಟ್ಟ ಸಹಾಯ)

Kishan said...

Very serious, intriguing writing. Excellent weaving of the incidents and the narration.

Raveendra said...

Prakash,

nimma anubhavavannu ee baravanigeyinda hanchikonda bage chennagide.

nimma mundina plan enu? dodda risk tagolo hagidre 2-3 janakke heli hogi !!!

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ಇಲ್ಲಿ ನನಗೆ ಕನ್ನಡ ಮಾತಾಡುವ ಕುರಿತಾಗಿಯೂ ಸಮಸ್ಯೆ ಬಂದಿತ್ತು....
ನಾನು ಬೆಂಗಳೂರಿನವರ ಥರಹ ಮಾತಾಡಿದರೂ...
ಸಿರ್ಸಿ ಕಡೆ ಮಾತಾಡುವ..
ಶೈಲಿಯ ಛಾಯೆ ಇರುತ್ತದೆ....!

ಹೆಚ್ಚಿನ ಜನ ನನಗೆ ನೀವು "ತುಳು"ಭಾಷೆಯವರಾ..? ಅಂತ ಕೇಳಿದವರೂ ಇದ್ದಾರೆ..

ಹಾಗಾಗಿ ಶಿವಮೊಗ್ಗ ಅಂತ ...
ಮಲೆನಾಡಿನವನು ಎಂದು ಹೇಳಿ ಕೊಂಡೇ...

ಇಷ್ಟೆಲ್ಲ ತಯಾರಿ ಮಾಡಿಕೊಂಡವನಿಗೆ ಹೆಸರು ಇಟ್ಟುಕೊಳ್ಳಲಿಕ್ಕೆ ಮರೆತು ಹೋಗಿತ್ತು...!

ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಗೀತಾ ಗಣಪತಿಯವರೆ....

ಇದಕ್ಕೂ ಮೊದಲು ಸಣ್ಣ ಪುಟ್ಟ ಇಂಥಹ ಸಾಹಸ ಮಾಡಿದ್ದಿದೆ...

ಇದೊಂದು ಷಾಕ್..!

ನಾನು ನರಸಿಂಹನ ಬಳಿ ಮೊಬೈಲು ಕೇಳಿದೆ...
ಆತ ಅವನಿಗೆ ಹೊಡೆದು ಸಮಾಧಾನವಾಗಿತ್ತು...
ಆ ಅವತಾರದದಿಂದ ಇನ್ನೂ ಹೊರ ಬಂದಿರಲಿಲ್ಲ...
ನನ್ನ ದುಬಾರಿ ಮೊಬೈಲ್ ಬಗೆಗೆ ಹೆಚ್ಚಿಗೆ ಕೇಳಲಿಲ್ಲ....
"ಇದು ನಾನು ಉಳಿದು ಕೊಂಡ ನನ್ನ ಸಂಬಂಧಿಕರು ಕೊಟ್ಟಿದ್ದು" ಅಂತ ಹೇಳಿದೆ...
ಬಹುಷಃ ನಾನು ಕಳ್ಳನಲ್ಲ ಅಂತ ಸಮಾಧಾನ ಅವನಿಗೂ ಆಗಿತ್ತೇನೊ...

ಆ ಪ್ರಕರಣ ಒಂದು ಹಂತ ಮುಗಿಯುತ್ತಿದ್ದ ಹಾಗೆ..
ಲೆಕ್ಕಾಚಾರ ಮುಗಿಸಿಕೊಂಡು ಅಲ್ಲಿಂದ ಜಾರಿಕೊಂಡೆ....

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ಬರೆಯಲಿಕ್ಕೆ..
ಓದಲಿಕ್ಕೆನೋ ಮಜವಾಗಿದೆ...

ಅ ಸಂದರ್ಭ..,
ಅನುಭವ..,
ಭಯಾನಕವಾಗಿತ್ತು...!!

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗುರು....

ಈ ಘಟನೆ ನನ್ನ ಮೇಲೆ ಬಹಳ ಪರಿಣಾಮ ಬೀರಿದೆ...

ಅಹಂಕಾರದ ಬಗೆಗೆ ನನ್ನ ಹತ್ತಿರದವರು ಹೇಳ ಬೇಕು...

ನಾನು ನನ್ನ ಕೆಲಸಗಾರರನ್ನು ನೋಡುವ ರೀತಿ ಬದಲಾಗಿದೆ...
ಅವರಲ್ಲಿ ಪ್ರಾಮಾಣಿಕತೆ..,
ಹುಡುಕುವ..
ಕಾಣುವ..
ರೀತಿ ಗೊತ್ತಾಗಿದೆ...
ಅವರ ಕಷ್ಟ ಮೊದಲಿಗಿಂತ ಹೆಚ್ಚು ಬೇಗ ಅರ್ಥವಾಗುತ್ತಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಡಾ. ಗುರುಮೂರ್ತಿಯವರೆ....

ಕನಸಿನಂತೆ ಅನಿಸುತ್ತಿದೆ ಈಗ....

ಪೆಟ್ಟು ತಿನ್ನದೆ ಬಚಾವ್ ಆಗಿ ಬಂದಿದ್ದಕ್ಕೆ ..!

ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ರೂಪಾ....

ನೀವೆನ್ನುವದು ನಿಜ...

ನಮ್ಮ ಹುಟ್ಟಿನ ಬಗೆಗೆ ದೇವರಿಗೆ ಕ್ರತಜ್ಞರಾಗಿರಬೇಕು....
ಈ "ಮೀಸಲಾತಿ" ಬಗೆಗೆ ನನ್ನ ಅಭಿಪ್ರಾಯವೂ ಅದೇ ಆಗಿದೆ...
ಅದು ಖಂಡಿತ ಇರಬೇಕು..
ಸಾವಿರಾರು ವರ್ಷಗಳಿಂದ ಅವರಿಗೆ ಅನ್ಯಾಯ, ಅವಮಾನ ಆಗಿದೆ...

ನನ್ನ ಗುರುಗಳೊಬ್ಬರು ನಮಗೆ ಹೇಳುತ್ತಿದ್ದರು..
"ಒಮ್ಮೆ ಅವರ ಸ್ಥಾನದಲ್ಲಿ , ಅವರಾಗಿ ವಿಚಾರ ಮಾಡಿ..
ಜನ್ಮ, ಜನ್ಮಾಂತರಗಳಿಂದ ಅವರಿಗಾದ ಅನ್ಯಾಯ ...
ಕೇವಲ "ಜಾತಿ" ಯಿಂದಾಗಿ..
ಅವರಿಗೆ ಶಿಕ್ಷಣದ ಅತ್ಯಗತ್ಯವಾಗಿ ಸರ್ಕಾರ ಕಡ್ಡಾಯವಾಗಿ ಕೊಡಬೇಕು...
ಅವರು ಬುದ್ಧಿವಂತರಾದರೆ ಹಣ, ಹೆಂಡಗಳಿಗೆ "ಓಟು" ಸಿಗುವದಿಲ್ಲವಲ್ಲ...

ಇದು ನಮ್ಮ ದೇಶದ ದೌರ್ಭಾಗ್ಯ...!

ವಿಷಯಾಂತರವಾದುದಕ್ಕೆ ಸ್ಸಾರಿ....

ಲೇಖನ ಮೆಚ್ಚಿದ್ದಕ್ಕೆ ಹ್ರದಯ ಪೂರ್ವಕ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಪಾಲಚಂದ್ರ....

ಐಡೆಂಟಿಟಿ ಮೋಹ ಕಡಿಮೆ ಖಂಡಿತ ಆಗಿದೆ....

ಇನ್ನು ಮನೆಯಲ್ಲಿ ಸಹಾಯ ಮಾಡುವ ವಿಚಾರ...
ನನ್ನ ಶ್ರೀಮತಿಯವರಿಗೆ ಆಶ್ಚರ್ಯ ಆಗುವಷ್ಟು ಬದಲಾಗಿದ್ದೇನೆ....

ಪೆಟ್ಟಿಗೆ ಅಂಗಡಿಯಿಂದ "ಟೀ" ತಂದೆನಲ್ಲ...
ಕಸ ಗುಡಿಸಿದೇನಲ್ಲ...
ಅದರ ಪರಿಣಾಮ ಬಹಳ ಆಗಿದೆ...

ಸಣ್ಣಪುಟ್ಟ ವಿಷಯಗಳ ಕಷ್ಟ ಬಲುಬೇಗ ಅರ್ಥ ಆಗ್ತಿದೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಾಗಳು...

ಧರಿತ್ರಿ said...

'ಪ್ರಾಮಾಣಿಕತೆ ಅಸಾಯಕ....'ಎಂದಿನಂತೆ ಚೆಂದದ ಬರಹ, ನಮ್ಮೊಳಗೆ ಕುತೂಹಲ..ಮುಂದಿನ ಬರಹಕ್ಕೆ ಆತುರ..!!
ವಂದನೆಗಳು ಸರ್...

-ಧರಿತ್ರಿ

Prabhuraj Moogi said...

ಸರ್ ಹೀಗೆ ಕುತೂಹಲಕ್ಕೆ ಏನೇನೊ ಮಾಡಲು ಹೋಗಿ ತೊಂದ್ರೆಯಲ್ಲಿ ಸಿಕ್ಕಿಹಾಕಿಕೊಂಡೀರಿ ಸ್ವಲ್ಪ್ ಹುಷಾರು(ಮಾಡಬೇಡಿ ಎಂದು ಹೇಳುವುದು ನನ್ನ ಉದ್ದೇಶವಲ್ಲ, ಏನಾಗದಿರಲಿ ಅಂತ ಜಾಗ್ರತೆವಹಿಸಿ ಅಂತ ಅಷ್ಟೆ). ಇಂಥ ಘಟನೆಗಳಲ್ಲಿ ಏನೇನು ಕಲಿಯಲಿರುತ್ತಲ್ವಾ, ಹೊಸ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಕಿಶನ್....

ನಿಮ್ಮಪ್ರತಿಕ್ರಿಯೆ ಓದಿದರೆ
ಆ ಘಟನೆ,
ಅನುಭವ ವಿವರಿಸುವಲ್ಲಿ..
ನನ್ನ ಶಬ್ಧಗಳು ಸಫಲವಾಗಿವೆ..
ಇದು ಬಹಳ ಖುಶಿಯಾಗುತ್ತದೆ....

ನರಸಿಂಹ ಬಂದ ಕೂಡಲೆ ನಾನು ಮನೆಗೆ ಹೋಗ್ತೇನೆ ಅಂದಿದ್ದು ಅವನಿಗೆ ನನ್ನ ಮೇಲಿನ ಅನುಮಾನ ಜಾಸ್ತಿಯಾಯಿತು...
ನಂತರ ಆ ಮನುಷ್ಯ ಹಣವನ್ನು ಕೊಟ್ಟು ಸತ್ಯ ಒಪ್ಪಿಕೊಂಡ ಮೇಲೆ
ನನ್ನ ಬಗೆಗೆ ಇದ್ದ ಅನುಮಾನ ಹೊರಟು ಹೋಯ್ತು...

ಬಹುಷಃ ಹಾಗಾಗಿಯೇ ಮೊಬೈಲ್ ಬಗೆಗೆ ಹೆಚ್ಚಿನ ಅನುಮಾನ ಬರಲಿಲ್ಲ...
ಅದು ಆ ಮನುಷ್ಯನಿಗೆ ಮನಃ ಪೂರ್ತಿ ಹೊಡೆದಾದಮ್ ಮೇಲೆ.. ಸಮಾಧಾನವಾಗಿರಲೂ ಸಾಕು...

ಒಟ್ಟಿನಲ್ಲಿ ಬಚಾವ್ ಆಗಿ ಬಂದದ್ದು ಪವಾಡ....

ತುಂಬಾ .., ತುಂಬಾ ಧನ್ಯವಾದಗಳು...

.

Geetha said...

"ನನ್ನಲ್ಲಿ ಅಹಂಕಾರ ಇಲ್ಲ ಅನ್ನುವ ಸ್ವಭಾವದಲ್ಲೂ "ಅಹಂಕಾರದ ಛಾಯೆ ಕಾಣುತ್ತದೆ"
ಒಟ್ಟಿನಲ್ಲಿ ನಮ್ಮ ಐಡೆಂಟಿಟಿ....
ನಮಗೆ ಹೆಚ್ಚಿನ ಸಮಯ ಶತ್ರುವಾಗಿರುತ್ತದೆ"

ಇದನ್ನ ಓದಿದ ತಕ್ಷಣ ಯಾರೊ ನನ್ನ ತಲೆಯ ಮೇಲೆ ಮೊಟಕಿದ ಹಾಗಾಯ್ತು !
ಆದ್ರೆ ನಿಮ್ಮ ಈ ಅನುಭವ ಕನಸಲ್ಲೂ ಬೇಡ ಸರ್...

ಸಿಮೆಂಟು ಮರಳಿನ ಮಧ್ಯೆ said...

ಹಿರಿಯ ಪತ್ರಕತ್ರ
ಲೇಖಕ ...

ಶ್ರೀ ನಾಗೇಶ ಹೆಗಡೆಯವರು ಹೀಗನ್ನುತ್ತಾರೆ...

ಪ್ರಿಯ ಪ್ರಕಾಶ್,
ಚೆನ್ನಾಗಿದೆ ನಿಮ್ಮ ಸಲೂನ್ ಅನುಭವ. ಪತ್ರಕರ್ತರು ಕೆಲವೊಮ್ಮೆ ಹೀಗೆ ಮಾರುವೇಷ ಧರಿಸಿ ಹೊಟೆಲ್ ಮಾಣಿಗಳಾಗಿಯೊ ಗರಾಜ್ ಹೆಲ್ಪರ್ ಆಗಿಯೊ ಸೇರಿಕೊಳ್ಳುವುದುಂಟು. ತಮ್ಮ ಅನುಭವವನ್ನು ಮುದ್ರಣದಲ್ಲಿ ಹೇಳಿ ಕೊಲ್ಲುವುದುಂಟು. ನೀವು ನಿಮ್ಮನ್ನೇ ಆಡಿಕೊಲ್ಲಲು ಹೊರಟ ಪರಿ, ಅದನ್ನು ವಿವರಿಸಿದ ಶೈಲಿ ಚೆನ್ನಾಗಿದೆ. ಇನ್ನೊಮ್ಮೆ ನೀವು ಮಾರುವೇಷದಲ್ಲಿ ಯಾವುದಾದರೂ ಪತ್ರಿಕಾಲಯಕ್ಕೆ ಹೋಗಿ ಜರ್ನಲಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಳ್ಳಲು ಸಖತ್ ಯೋಗ್ಯತೆ ನಿಮಗೆ ಇದೆ!

-ನಾಹೆ

ಸುಧೇಶ್ ಶೆಟ್ಟಿ said...

ಮು೦ದಿನ ಕ೦ತಿಗೆ ಕಾಯ್ತ ಇದೀನಿ ಪ್ರಕಾಶಣ್ಣ....

Annapoorna Daithota said...

Wow ! anubhava thrilling aagide, jotheghe
hindi cinema thara suspense, fighting, sentiment ellanoo ide :)

Odokkoo majavaagide :D

ಸಿಮೆಂಟು ಮರಳಿನ ಮಧ್ಯೆ said...

ರವೀಂದ್ರರವರೆ......

ನನ್ನ ಬ್ಲಾಗಿಗೆ ಸ್ವಾಗತ....

ನನ್ನ ಬ್ಲಾಗಿನ ಸ್ನೇಹಿತರು ಹೊಸ ಥರಹದ ಮೂರು, ನಾಲ್ಕು ಐಡಿಯಾ ಕೊಟ್ಟಿದ್ದಾರೆ...
ಅವರ ಸಂಗಡ ಆ ಸಾಹಸ ಮಾಡಿ..
ಮತ್ತೊಮ್ಮೆ ಆ ಅನುಭವ ಬ್ಲಾಗಿನಲ್ಲಿ ಬರೆವೆ....

ಆದರೆ ಅದರಲ್ಲಿ ಈಥರಹದ ರಿಸ್ಕ್ ಇಲ್ಲ....

ನಿಮ್ಮ ಕಾಳಜಿ, ಸ್ನೇಹಕ್ಕೆ ಧನ್ಯವಾದಗಳು...

ಬರುತ್ತಾ ಇರಿ....

ಸಿಮೆಂಟು ಮರಳಿನ ಮಧ್ಯೆ said...

ಧರಿತ್ರಿ....

ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ...
ನಮ್ಮ ಪ್ರಾಮಾಣಿಕತೆ ಅನಾಥ.., ಅಸಹಾಯಕ....!
ನಾನು ಅಂಥವನಲ್ಲ.., ನಾನು ಹೀಗೆ ಅಂದರೆ ಯಾರೂ ನಂಬುವದಿಲ್ಲ...

ಎಷ್ಟೋ ಬಾರಿ ಈ ಅಸಹಾಯಕ "ಪ್ರಾಮಾಣಿಕತೆ" ಅವಮಾನವನ್ನಷ್ಟೆ ಕೊಡುತ್ತದೆ ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರಭುರವರೆ....

ಇದರಿಂದ ಹಲವಾರು ಪಾಠ ಕಲಿತೆ..
ಯಾವಾಗಲೂ ಕೆಲಸಗಾರರ ನಡುವೆ ಇರುವ ನಾನಗೆ
ಅವರ ಪ್ರಪಂಚದ ಇನ್ನೊಂದು ಮುಖ ಗೊತ್ತೇ ಇರಲಿಲ್ಲ...
ಕಲ್ಪನೆ ಇದ್ದರು ಪ್ರತ್ಯಕ್ಷ ಅನುಭವ ..!
ಅದೊಂದು ಷಾಕ್..!
ಇನ್ನುಮುಂದೆ ಇಂಥಹ ರಿಸ್ಕ್ ಸಾಹಸಗಳಿಗೆ ಹೋಗುವದಿಲ್ಲ...
ಒಂಟಿಯಾಗಿ...

ನಿಮ್ಮ ಸ್ನೇಹ, ಕಾಳಜಿಗೆ ನನ್ನ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ............

ಪ್ರಾಮಾಣಿಕ ಮನಸ್ಸಿಗೆ ..
ತನ್ನಮನದ "ಅಹಂಕಾರ" ಗೊತ್ತಾಗಿ ಬಿಡುತ್ತದೆ...

ಅಹಂಕಾರದ ಸಿಗುವ ಖುಷಿ ಇದೆಯಲ್ಲ..
ಅದಕ್ಕಾಗಿ ಸೋಲಲು ಇಚ್ಛಿಸುತ್ತದೆ ಮನ....

ತನ್ನ ಹತ್ತಿರದವರು ದೂರವಾಗುತ್ತಿದ್ದರೂ..
ಗೊತ್ತಾಗದ ಮನಸ್ಥಿತಿ ಅದು...
ಅರ್ಥವಾದರೂ ಒಪ್ಪಿಕೊಳ್ಳುದ ಮನಸ್ಥಿತಿ ಅದು...

ಐಡೆಂಟಿಟಿ, ಅಹಂಭಾವದ ಸುಖಕ್ಕೆ...
ಮನಸ್ಸು ಸೋಲುತ್ತದೆ..

"ಬಿಟ್ಟನೆಂದರೂ ಬಿಡುವದಿಲ್ಲ ಈ ಮಾಯೆ"

ಪ್ರತಿಕ್ರಿಯೆಗೆ ಧನ್ಯವಾದಗಳು...

ಮನಸು said...

story tumba chennagide... intaha kasta paduvavaru tumba janariddare...

Chandina said...

ಬಿಗುವಾದ, ಕುತೂಹಲ ಕೆರಳಿಸುವ, ಒಮ್ಮೆಗೇ ಓದಿಸಿಕೊಳ್ಳುವ ಬರಹ.

-ಚಂದಿನ

jayalaxmi said...

Nimma intha saahasakke HATSOFF Prakash.heegella nammannu prrrkshege oDDikoLLabEku anisuvudu hechchugaarikeyalla, adannu kaaryagata maaDuvudideyalla ellarindaaguvanthaddalla.
Mechchuge.

ರವಿಕಾಂತ ಗೋರೆ said...

ಹುಹ್.. ಅದೇನೇನು ಮಾಡ್ತಿರ್ರಿ ನೀವು...

ಶಾಂತಲಾ ಭಂಡಿ said...

ಪ್ರಕಾಶಣ್ಣ...
ನಮ್ಮನ್ನು ನಾವು ಒರೆಗೆ ಹಚ್ಚಿಕೊಳ್ಳುವುದಿದೆಯಲ್ಲ, ಕಷ್ಟದ ಕೆಲಸವೇ. ಒಂದು ಸಾಹಸವೇ ಸರಿ. ನಮ್ಮನ್ನು ನಾವು ಅರಿತುಕೊಳ್ಳುವ ಜೊತೆ ನಮ್ಮೊಳಗನ್ನು ಶುದ್ಧೀಕರಿಸುವ ಜೊತೆ ಹೊರಗಣ ಜಗತ್ತನ್ನು ಕಂಡುಕೊಳ್ಳುವ ಈ ಪರಿ ತೀರ, ತೀರ ಕಷ್ಟ. ಆ ದಿಕ್ಕಿನತ್ತ ನಿಮ್ಮ ಹೊಸಪರಿಯ ಯತ್ನ ಆಶ್ಚರ್ಯ ಮೂಡಿಸುವ ಜೊತೆ ಭಯಾನಕವಾಗಿಯೂ ಇತ್ತು.
ಒಂದು ಪ್ರಶ್ನೆ. ನೀವು ಸೆಲೂನಿನ ಕೆಲಸವನ್ನೇ ಯಾಕೆ ಆಯ್ದುಕೊಂಡಿರಿ ಅಂತ ಕೇಳಬಹುದ?

preethi said...

praamaaNikate eegeegantoo tumbaa asahaayaka. innu mele bhayaanakavaagabahudu. nice writing.

ಸುಧೇಶ್ ಶೆಟ್ಟಿ said...

ಈ ಲೇಖನ ಇಲ್ಲಿಗೆ ಮುಗಿದು ಬಿಟ್ಟಿತೇ?

ಯಾಕೋ ಅಪೂರ್ಣ ಎ೦ದೆನಿಸಿತು....

ವಿನುತ said...

ಅಪೂರ್ವ ಅನುಭವ ನಿಮ್ಮದು. ಸಿನಿಮಾ, ಧಾರವಾಹಿಗಳಲ್ಲಿ ಮಾತ್ರ ನೋಡಿದ್ದು.
ಅದನ್ನು ನೀವು ಹೇಳಿರುವ ರೀತಿ ಇನ್ನೂ ಚೆನ್ನಾಗಿದೆ. ಉತ್ತಮ ಸ೦ದೇಶಗಳನ್ನು ಹೊ೦ದಿರುವ ಬರಹಗಳು. "Treat others like the way you want to be treated" ಅನ್ನುವ ಮಾತುಗಳು ಕೇಳಲು ಎಷ್ಟು ಆದರ್ಶಮಯವಾಗಿವೆಯೋ, ಅನುಸರಿಸಲು ಅಷ್ಟೇ ಕಷ್ಟಸಾಧ್ಯ!

ಸಿಮೆಂಟು ಮರಳಿನ ಮಧ್ಯೆ said...

ನಾಗೇಶ್ ಹೆಗಡೆಯವರೆ....

ಪ್ರತಿಕ್ರಿಯೆಗೆ...
ಪ್ರೋತ್ಸಾಹಕ್ಕೆ ವಂದನೆಗಳು....

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ಮುಂದಿನ ಭಾಗದಲ್ಲಿ ಮುಗುಸುವ ವಿಚಾರವಿದೆ...
ಬಹಳ ಉದ್ದವಾಗಿಬಿಡಬಹುದು....
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅನ್ನಪೂರ್ಣಾರವರೆ.....

ನನ್ನ ಅನುಭವ ಕಥನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು.....
ಏನೋ ಮಾಡಲಿಕ್ಕೆ ಹೋಗಿ ಏನೋ ಆದಂತಾಯಿತು ನನ್ನ ಕಥೆ....

ಸಂಪೂರ್ಣವಾಗಿ ಕೆಟ್ಟ ಅನುಭವ ಅಂತ ಹೇಳಲಾರೆ...
ರಿಸ್ಕ್ ತುಂಬಾ ಇತ್ತು..
ಅದೂ ಕೊನೆಯಲ್ಲಿ..

ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚಂದಿನ....

ಲೇಖನ ಇಷ್ಟವಾಗಿದ್ದಕ್ಕೆ

ತುಂಬುಹ್ರದಯದ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಜಯಲಕ್ಷ್ಮೀಯವರೆ...

ಮೆಚ್ಚುಗೆಗೆ...
ತುಂಬಾ... ತುಂಬಾ

ವಂದನೆಗಳು....

ಪ್ರೋತ್ಸಾಹಕ್ಕೆ ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತ್.....

ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಈ ಥರಹ ಪರಿಕ್ಷೆಗಳಲ್ಲಿ ಥ್ರಿಲ್ ಜಾಸ್ತಿ..
ರಿಸ್ಕ್ ಕೂಡ...

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ.....

ನಮ್ಮ ಸ್ನೇಹಿತರೊಬ್ಬರ ಸಂಗಡ ಕೆಲಸಕ್ಕೆ
ಅವರ ಸಹಾಯಕನಾಗಿ ಹೋಗಬೇಕೆಂದುಕೊಂಡೆ..
ಆಗಲಿಲ್ಲ...
ಹೇರ್ ಕಟಿಂಗ್ ಮಾಡಿಸಿಕೊಳ್ಳುವಾಗ ಈ ಐಡಿಯಾ ಬಂತು...
ಹೇಗಿದ್ದರೂ ಇಲ್ಲಿ ಕೆಲಸ ಕಡಿಮೆ...
ಒಂದು ದಿನ ಸುಲಭವಾಗಿ ದೂಡ ಬಹುದು ಎನ್ನುವ ವಿಚಾರ ಬಂತು....
ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯವರೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ಕ್ಷಮಿಸಿಬಿಡಿ.....

ನನಗೆ ಹೇಳ ಬೇಕಾದ ಅನುಭವಗಳನ್ನು ನನ್ನ ಪ್ರತಿಕ್ರಿಯೆಯಲ್ಲಿ ಹೇಳಿ ಬಿಟ್ಟಿದ್ದೆ...
ಕೆಲವರ ಪ್ರತಿಕ್ರಿಯೆಯಲ್ಲಿ ಹೇಳಿದ್ದೇನೆ ಕೂಡ..
ದಯವಿಟ್ಟು ಓದಿ....
ನಿಮ್ಮ ಕಳಕಳಿಯ ಪ್ರೋತ್ಸಾಹಕ್ಕೆ ತುಂಬು ಹ್ರದಯದ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನುತಾ...

ನಿಮ್ಮ ಮಾತು ನೂರಕ್ಕೆ ನೂರು ಸತ್ಯ....
ನಾವು ಬಾಯಲ್ಲಿ ಬೇಕಾದಷ್ಟು ಹೇಳಿಬಿಡುತ್ತೇವೆ.....
ವಾಸ್ತವವಾಗಿ..
ಪ್ರಾಕ್ಟಿಕಲ್ ಆಗಿ ನೋಡುವಾಗ ಎದುರಾಗುವ ಅನುಭವಗಳೇ ಬೇರೆ...

ನನ್ನದಲ್ಲದ ಜಾಗದಲ್ಲಿ...
ನಾನಗಿರದೇ ಇರುವ ಕಲ್ಪನೇ ಮಾಡಿಕೊಳ್ಳುವದೂ ಬಹಳ ಕಷ್ಟ...
ಅಲ್ಲಿ ಪ್ರತಿಕ್ಷಣದಲ್ಲಿ "ನಾನು" ಎದುರಿಗೆ ಬಂದು ಬಹಳ ತೊಂದರೆ ಕೊಡುತ್ತದೆ...
ಬೇರೊಬ್ಬನ ಜಾಗ, ಪ್ರಪಂಚದಲ್ಲಿ....
ನಮ್ಮದಾಗುವ ಅನುಭವ..
ಅದು ವರ್ಣನೆಗೆ , ಹೇಳಿಕೊಳ್ಳಲು ನಿಲುಕದ್ದು...

ಒಂಥರಾ ಹೊಸಮನುಷ್ಯನಾಗಿ ಬಂದಂತೆ... ಅನಿಸುತ್ತಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ... ಏನೋ ಗೊ೦ದಲವಿತ್ತು... ಲೇಖನ ಮತ್ತು ಪ್ರತಿಕ್ರಿಯೆಗಳನ್ನು ಇನ್ನೊಮ್ಮೆ ಓದಿಕೊ೦ಡೆ... ಈಗ ಪರವಾಗಿಲ್ಲ:)