Saturday, May 23, 2009

ನಾನು .. ಶಾರಿಯ ಗಂಡ " ಗಣಪ್ತಿ.." ಅಂತ..

ಮದುವೆ ಮನೆಯಲ್ಲಿ ಕ್ಯಾಮರಾ ಹಿಡುಕೊಂಡು ಕಿವಿ ನೋಡ್ತಾ ಕೂತಿದ್ದೆ.....

ಮತ್ತೇರಿಸುವ ಸೌಂದರ್ಯದಲ್ಲಿ ಮುಳುಗಿ ಹೋಗಿದ್ದೆ..

ಯಾರೋ ಸಲುಗೆಯಿಂದ ಬೆನ್ನು ತಟ್ಟಿದರು..

" ಹೊಯ್... ಪ್ರಕಾಶಾ... ?
ಏನೋ ಇಷ್ಟು ದಪ್ಪ ಆಗಿಬಿಟ್ಟಿದ್ದೀಯಾ...?

ಶ್ರವಣಬೆಳಗೊಳದ ಗೊಮಟೇಶ್ವರ ಪ್ಯಾಂಟು ಹಾಕ್ಕೊಂಡ ಹಾಗಿದೆ..."

ಯಾರಪ್ಪ....ಇದು..ಎಂದು ತಿರುಗಿ ನೋಡಿದೆ...!

" ಅರೇ...! ಶಾರೀ....!!
ನನ್ನ ಬಾಲ್ಯದ ಸಹಪಾಠಿ..!
ನನ್ನ ದೊಡ್ಡಪ್ಪನ ಮಗಳು...!
ಇಪ್ಪತ್ತು ವರ್ಷದ ನಂತರ ಸಿಕ್ಕಿದಾಳೆ.. ಈ ಶಾರೀ..

ಬಚ್ಚಿಟ್ಟ ಬಾಲ್ಯದ ಸಿಹಿ ಬುತ್ತಿಯ..
ಮುಗ್ಧ ಶಾರೀ.. ಅವಳ.. ಪ್ರೀತಿವಾತ್ಸಲ್ಯ...
ನೆನಪಾದವು...

ನನಗೆ ಬಹಳ ಖುಷಿಯಾಯಿತು...

"ಏನೇ ಶಾರೀ...ಬಹಳ ಅಪರೂಪ..
ಎಷ್ಟು ವರ್ಷ ಆಯ್ತೆ ನಿನ್ನ ನೋಡ್ದೆ...
ಗಂಡ, ಮಕ್ಕಳು ಅಂತ ಸಂಸಾರದಲ್ಲಿ ಮುಳುಗಿ ಹೋಗಿಬಿಟ್ಟಿದ್ದೀಯೇನೆ..?
ಹೇಗಿದ್ದಾನೆ ಗಂಡ ಮಹಾಶಯ...? ಎಲ್ಲಿ ನಿನ್ನ ಮಕ್ಕಳು..?"

" ಒಂದೇ ಸಾರಿ ಇಷ್ಟೆಲ್ಲ ಪ್ರಶ್ನೆ ಕೇಳಿದರೆ ಹೇಗೊ.. ಗಂಡ ಚೆನ್ನಾಗಿದ್ದಾನೆ..
ಇಲ್ಲೇ ಎಲ್ಲೊ ಇದ್ದಾನೆ...
ಮಕ್ಕಳ ಕಥೆ ಏನು ಕೇಳ್ತೀಯಾ...?
ನೋಡು.. ಇವೆಲ್ಲ ನನ್ನ ಮಕ್ಕಳು..."

ಅಂತ ಅಲ್ಲೇ ಇದ್ದ ಐದಾರು ಹೆಣ್ಣು ಮಕ್ಕಳನ್ನು ತೋರಿಸಿದಳು...

ಶಾರಿಯ ಮಾತಿನಲ್ಲಿ ಮುಗ್ಧತನವಿತ್ತು...
ವಯಸ್ಸಾಗಿದೆ ದೇಹಕ್ಕೆ..,
ಮನಸ್ಸಿಗಲ್ಲ..!

ಮನಸ್ಸು ಮೊದಲಿನಂತೆ ಇದೆ...
ಮಗುವಿನಂತೆ... ಹೂವಿನಂತೆ...


ಅಷ್ಟರಲ್ಲಿ ನನ್ನಾಕೆ ನನ್ನ ಬಳಿ ಬಂದಳು..
ಅವಳಿಗೂ... ಆಶ್ಚರ್ಯ ಆಗಿರಬೇಕು..
" ಯಾವಳಪ್ಪಾ ಇವಳು ತನ್ನ ಗಂಡನನ್ನು ಮೈಮುಟ್ಟಿ ಮಾತಾಡ್ತಾ ಇದ್ದಾಳೆ" ಅಂತ..

ಕಣ್ಣು ಹಾಗೇ ಹೇಳುತ್ತಿತ್ತು..

" ನಾನು ನಿನಗೆ ಹೇಳ್ತಾ ಇರ್ತಿನಲ್ಲ... ನನ್ನ ದೊಡ್ಡಪ್ಪನ ಮಗಳು "ಶಾರೀ"

ಶಾರೀಗೂ ಖುಷಿ ಆಯಿತು.. ಅವಳೂ ನನ್ನಾಕೆಯನ್ನು ಇನ್ನೂ ನೋಡಿರಲಿಲ್ಲ...
ನನ್ನ ಮದುವೆಗೆ ಶಾರಿ ಬಂದಿರಲಿಲ್ಲ..

"ಇವರಿಗೆ ತಮ್ಮ.. ಬಾಲ್ಯದ ನೆನಪಾದಗಾಲಲೆಲ್ಲ...
" ಶಾರಿ" ಹೆಸರು ಬಂದೇ ಬರ್ತದೆ..

ನೀವು ಅಪ್ಪೆ ಕಾಯಿ ಮಾವಿನ ಮಿಡಿಯನ್ನು "ಲಂಗದಲ್ಲಿ ಗುಬ್ಬಿ ಎಂಜಲು" ..
ಮಾಡಿ ಕೊಡುತ್ತಿದ್ದಿರಂತೆ..

ನೀವು ಅಳು ಮುಂಜಿಯಾಗಿದ್ದೀರಂತೆ..
ಯಾವಾಗ್ಲೂ ಅಳ್ತಾನೇ ಇರ್ತಿದ್ರಂತೆ...

ಎಲ್ಲವನ್ನೂ.. ಹೇಳುತ್ತಾ ಇರ್ತಾರೆ.. ನಿಮ್ಮ ಬಗ್ಗೆ.."

"ಅಯ್ಯೊ.. ಈ ಪ್ರಕಾಶ್ ಏನೂ ಕಡಿಮೆ ಇರ್ಲಿಲ್ಲ..
ಎರಡೂ ಮೂಗಿನ ಹೊಳ್ಳೆಯಿಂದ..
ಯಾವಾಗ್ಲೂ " ತುಪ್ಪದ ಹೊಳೆ" ಹರಿತಾನೇ ಇರ್ತಿತ್ತು..

ಶರ್ಟಿನ ತೋಳಿಂದ ಮೂಗನ್ನು ಒರೆಸಿಕೊಳ್ತಿದ್ದ...
ಆ ಶರ್ಟಿನ ತೋಳುಗಳು ಗಟ್ಟಿಯಾಗಿ ಗಂಜಿ ಹಾಕಿದ ಹಾಗೇ ಇರ್ತಿತ್ತು..
ಧಪ್ಪ ಚಾದರದ ಹಾಗೆ..."

ಶಾರಿಯ ಮಾತಿಗೆ ನನ್ನಾಕೆ ತಲೆ ಹಾಕುವದೊಂದೆ ಕೆಲಸವಾಯಿತು..

" ಈ ಪ್ರಕಾಶಾ ಹೇಗಿದ್ದ ಗೊತ್ತಾ..?
ಬಡಕಲು ಕಾಲುಗಳು... ದೊಡ್ಡ ಚಡ್ಡಿ...
ಯಾವಾಗ್ಲೂ ಚಡ್ಡಿಯಲ್ಲಿ ಉಚ್ಚೆ ಹೊಯ್ಕೊತಿದ್ದ..
ಚಡ್ಡಿಯಲ್ಲೇ ತೊಟ್ಟಿಲು ಕಟ್ಕೋತಿದ್ದ..."

ಇನ್ನೂ ಹೇಳ್ತಾನೇ ಇದ್ದಳು..

ಹೀಗೇ ಬಿಟ್ಟರೆ ನನ್ನನ್ನು ಜಾಲಾಡಿ ಬಿಡ್ತಾಳೆ ...
ನಾಲ್ಕು ಕಾಸಿಗೆ ಹರಾಜು ಹಾಕಿ ಬಿಡ್ತಾಳೆ....ಅನಿಸ್ತು...

"ಅಲ್ಲ್ವೆ .. ಶಾರೀ...ಏನೇ ಇಷ್ಟೆಲ್ಲ ಮಕ್ಕಳು ನಿನಗೆ?
ಅದೂ ಈಗಿನ ಕಾಲದಲ್ಲಿ...
ಗಂಡ , ಹೆಂಡ್ತಿ ಏನೂ ಪ್ಲ್ಯಾನ್ ಮಾಡ್ಲಿಲ್ವಾ..?"

"ಅಯ್ಯೋ ಅದೊಂದು ದೊಡ್ಡ ಕಥೆ ಕಣೊ..
ಇಷ್ಟೆಲ್ಲ ಮಕ್ಳು ಆದ್ರಲ್ಲಾ... ಇದರಲ್ಲಿ ನನ್ನ ಗಂಡಂದೇನೂ ತಪ್ಪಿಲ್ಲ...
ಇದಕ್ಕೆಲ್ಲ ನನ್ನ ಮಾವ ಕಾರಣ..."

" ಏನೇ ಹೇಳ್ತಿಯಾ... ಶಾರೀ.."

ಹೌದು ಕಣೊ... ನನ್ನ ಗಂಡ ಪಾಪದವ... ಏನೂ ಗೊತ್ತಾಗಲ್ಲ..
ಇವೆಲ್ಲ ನನ್ನ ಮಾವ ಮಾಡಿದ್ದು..."

"ಲೇ ಶಾರಿ.. ಹಾಗಲ್ಲ ಅನ್ನಬಾರ್ದು.."

"ನಾನು ಬೇಡ ಬೇಡ ಅಂತ ಬಡ್ಕೊಂಡೆ..ಕಣೊ..
ಎಲ್ಲಾ ಅವರೇ ಮಾಡಿದ್ದು.. "

" ಶಾರೀ ಏನು ಹೇಳ್ತಾ ಇದ್ದಿಯಾ...?"

ನನಗೆ ಹೆದರಿಕೆ ಆಯಿತು...ನನ್ನಾಕೆ ಮುಖ ನೋಡೋಣ ಅಂದ್ಕೊಂಡೆ..

"ನನ್ನ... ಮಾವ ..ಬಹಳ ಹಠವಾದಿ..
ನನ್ನ ಗಂಡ ಬಹಳ ಮುಗ್ಧ..
ಏನೂ ಗೊತ್ತಾಗಲ್ಲ.... ಅವರಿಗೆ...!

ನಾನು ಬೇಡ ಅಂದ್ರೂ ನನ್ನ ಮಾವ ಕೇಳ್ಬೇಕಲ್ಲಾ..?
ನನ್ನ ಗಂಡನ ಮಾತನ್ನೂ ಕೇಳ್ಳಿಲ್ಲ..
ಎಲ್ಲಾ.. ನನ್ನ ಮಾವ ಮಾಡಿದ್ದು.."

" ಏನಾಯ್ತು.....?"

" ಮೊದಲನೆಯದು ಹೆಣ್ಣಾಯ್ತು..
ಗಂಡು ಬೇಕು ಅಂದ್ರು..
ಎರಡನೆಯದು ರೆಡಿ ಮಾಡಿದ್ವಿ...
ಎರಡನೆಯದೂ ಹೆಣ್ಣಾಯ್ತು...
ಮತ್ತೆ ಮೂರನೇಯದೂ ಕೂಡ ಹೆಣ್ಣು...
ನನ್ನ ಮಾವಂದು ಒಂದೇ ಹಠ.
ಕುಲಪುತ್ರ ಒಬ್ಬ ಬೇಕು.. ಅಂತ..

ಇದರಲ್ಲಿ ನನ್ನ ಗಂಡಂದೇನು ತಪ್ಪಿಲ್ಲ..
ಬಹಳ ಪಾಪದ ಮನುಷ್ಯ ಅವರು.."


ನನ್ನ ಹೆಂಡತಿ ಮುಖ ನೋಡಿದೆ....

ಕಷ್ಟಪಟ್ಟು ನಗು ತಡೆದು ಕೊಳ್ಳುತ್ತಿದ್ದಳು..

"ಹೀಗೆ ಆರು ಹೆಣ್ಣು ಮಕ್ಕಳಾಗಿ ಬಿಟ್ಟವು ಪ್ರಕಾಶ...."

"ಈಗಿನ ಕಾಲದಲ್ಲಿ ಗಂಡು, ಹೆಣ್ಣು ಸಮಾನರು... ಶಾರೀ.."

"ಇದೆಲ್ಲ ನನ್ನ ಮಾವನಿಗೆ ಅರ್ಥ ಆಗಬೇಕಲ್ಲ.... "
ಪ್ರಕಾಶ.....
ಈ ... "ಮಕ್ಕಳ " ವಿಷಯದಲ್ಲಿ ..
ನೀನೆ..ಸಹಾಯ ಮಾಡಬೇಕು ಮಾರಾಯಾ...!..!!.."


" ನಾನಾ...!! ..ಏನು ಮಾರಾಯ್ತಿ.....???.."

ನನಗೆ ಆತಂಕವಾಯ್ತು...
ನನಗೆ ಮಡದಿಯ ಕಡೆ ನೋಡುವ ಧೈರ್ಯವಿರಲಿಲ್ಲ.....

"ನಿಂಗೆ ಹೇಗೆ ...ಒಂದೇ ಗಂಡು ಮಗ....?
ಅದೂ ಮೊದಲನೆಯ ಪ್ರಯತ್ನದಲ್ಲೇ...? ಏನು ಇದರ ರಹಸ್ಯ...?"

"ಅಯ್ಯೋ ಮಾರಾಯ್ತಿ... ಅದೆಲ್ಲ ದೇವರು ಕೊಡ್ತಾನೆ..
ನಮ್ಮ ಕೈಲಿ ಏನಿಲ್ಲ ಮಾರಾಯ್ತಿ.. ಎಂಥಹ ರಹಸ್ಯನೂ ಇಲ್ಲ...
ಬೇರೇ ವಿಷಯ ಮಾತಾಡು ಶಾರೀ....
ಎಲ್ಲಿ ನಿನ್ನ ಗಂಡ..?
ಪರಿಚಯ ಮಾಡ್ಕೊಡೆ...."


ನನ್ನ ಅವಸ್ಥೆ ಕಂಡು ನನ್ನಾಕೆ ನಗುತ್ತಿದ್ದಳು..

ಅಷ್ಟರಲ್ಲಿ ಬಾಯಿತುಂಬಾ ಎಲೆ ಅಡಿಕೆ ತುಂಬಿಕೊಂಡ ಒಬ್ಬರು ಬಂದರು...
ಶಾರಿ ಅವರಿಗೆ ನನ್ನ ಪರಿಚಯ ಮಾಡಿಸ ತೊಡಗಿದಳು..

"ರೀ ನಾನು ಹೇಳ್ತಾ ಇರ್ತಿನಲ್ಲ.. ಪ್ರಕಾಶ ಅಂತ..
ಇವನೇ ಪ್ರಕಾಶ..."

ಅವರು ತಲೆ ಕೆರೆದು ಕೊಂಡರು...
ಮತ್ತೆ ಶಾರೀನೇ ಹೇಳಿದಳು..

"ಅರ್ಥ ಆಗ್ಲಿಲ್ವಾ...ನಮ್ಮ ಮಕ್ಕಳು ಚಡ್ಡಿಯಲ್ಲಿ ಕಕ್ಕ ಮಾಡ್ಕೊಂಡಾಗ...
ಪ್ರಕಾಶಾ ಅಂತ ಒಬ್ಬ ಇದ್ದ ..
"ತೊಟ್ಟಿಲು ಕಟ್ಟುತ್ತಿದ್ದ ಚಡ್ಡಿಯಲ್ಲಿ" ಅಂತ ಹೇಳ್ತಾಇರ್ತಿನಲ್ವಾ...
ಅದೇ.. ಪ್ರಕಾಶ.. ಇವ್ನು..."

ಈಗ ಅವರಿಗೆ ಜ್ಞಾನೋದಯ ಆದಂತೆ ಬಾಯಿತುಂಬಾ ಕಷ್ಟಪಟ್ಟು ನಕ್ಕರು...

ನನ್ನ ಬಳಿ ಬಂದು.. ನನ್ನ ಕೈ ಹಿಡಿದು..

"ನೋಡಿ ನಂಗೇ ಗೊತ್ತೇ ಆಗ್ಲಿಲ್ಲ.... ನೀವು ಪ್ರಕಾಶಾ ಅಂತ...
ನಾನು ಗಣಪ್ತಿ... ಅಂತ... ಶಾರೀ ಗಂಡ..."

ನನಗೆ ನಗಬೇಕೊ.. ಅಳಬೇಕೊ ಅಂತ ಗೊತ್ತಾಗದೆ ನನ್ನಾಕೆಯ ಮುಖ ನೋಡಿದೆ...
ಮುಖದ ಬೆವರು ಒರಿಸಿಕೊಂಡೆ...

ಅಷ್ಟರಲ್ಲಿ ಶಾರೀ.. " ಪ್ರಕಾಶಾ... ಇವತ್ತು ರಾತ್ರಿ ನಮ್ಮನೆಗೆ ಬರಲೇಬೇಕು.. ..
ನಮ್ಮನೆಯಲ್ಲೇ ಇರಬೇಕು.."

ಅದಕ್ಕೆ ಅವಳ ಗಂಡನೂ ಧ್ವನಿ ಸೇರಿಸಿದ..

ಅವರ ಮುಗ್ಧ ಆತ್ಮೀಯತೆಗೆ ಏನೂ ಹೇಳಬೇಕೆಂದು ಗೊತ್ತಾಗಲಿಲ್ಲ...

ಈಗಲೇ... ನನ್ನನ್ನು ಹರಾಜು ಹಾಕಿಬಿಟ್ಟಿದ್ದಾರೆ..
ಇವರಮನೆಗೆ ಹೋಗಿಬಿಟ್ಟರೆ ಏನು ಕಥೆ...
ಇನ್ನು ಏನೇನು ಹಳೆಯ ಕಥೆಯೆಲ್ಲಾ ಹೇಳಿ...
ಎಲ್ಲಿ ಮಾನ ತೆಗಿತಾಳೋ..

ಅಷ್ಟರಲ್ಲಿ ನನ್ನಾಕೆ "ನಾವು ಬರ್ತೀವಿ.. ಅಡಿಗೆಗೆ ಏನೂ ತೊಂದರೆ ತೆಗೆದು ಕೊಳ್ಳಬಾರದು.."

ಶಾರಿಗೂ ಅವಳ ಗಂಡನಿಗೂ ಬಹಳ ಸಂತೋಷವಾಯಿತು...
ಶಾರೀ ಬಹಳ ಖುಷಿಯಿಂದ ಹೇಳಿದಳು..

" ಈ ಪ್ರಕಾಶಾ ಬಹಳ ವರ್ಷಗಳ ನಂತರ ಸಿಕ್ಕಿದ್ದಾನೆ..
ಇವತ್ತು ಹಿರಿಯರು ಯಾರೂ ಇಲ್ಲ..
ರಾತ್ರಿ ತುಂಬಾ ಮಾತೋಡೋಣ.. ಅಡಿಗೆ ಸಿಂಪಲ್ ಮಾಡ್ತೇನೆ.. ಬನ್ನಿ.."

ಶಾರಿಯ ಸಂಭ್ರಮ ನೋಡಿ ನಮಗೆ ಬರಲು ಆಗುವದಿಲ್ಲವೆಂದು ಹೇಳಲು ಮನಸ್ಸಾಗಲಿಲ್ಲ...

ಅಲ್ಲಿಯವರೆಗೆ.. ಸುಮ್ಮನಿದ್ದ ನನ್ನ ಮಗ ನನ್ನನ್ನು ಕೇಳಿದ..

" ಅಪ್ಪಾ .. ಚಡ್ಡಿಯಲ್ಲಿ.. ತೊಟ್ಟಿಲು ಕಟ್ಟುವದು ಅಂದರೆ ಏನು...? "

"..ನೀನು ಸಿಟಿಯಲ್ಲಿ ಬೆಳ್ದಿದ್ದೀಯಾ...
ನಿಂಗೆ ಅದೆಲ್ಲ ಅರ್ಥ ಆಗಲ್ಲ ಬಿಡು
..
ಸುಮ್ನೆ.. ಇರು..."

ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ...


( ಸಿರ್ಸಿ ಕಡೆ "ಗಣಪತಿ" ಹೆಸರನ್ನು "
"ಗಣಪ್ತಿ.., ಗಪ್ಪತಿ" ಎಂದು ಕರೆಯುವ ರೂಢಿಯಿದೆ)
ಲೇಖನದ ಕೆಲವು ಶಬ್ಧದ ಅರ್ಥ ಆಗಿರದಿದ್ದರೆ...
ಶಂಕರ್ ಪ್ರಸಾದರ ಪ್ರತಿಕ್ರಿಯೆ ಓದಿ...
ಹೊಟ್ಟೆ ತುಂಬಾ ನಕ್ಕುಬಿಡಿ...

Thursday, May 14, 2009

ಚಂದಕ್ಕಿಂತ... ಚಂದ... ಕಿವಿಯು... ಸುಂದರಾ...!!





ಒಂದು ಜನಪ್ರಿಯ "ಲಾವಣಿ" ಇದೆ ಕೇಳಿ.....

ತನ್ನ ಹೆಂಡತಿ ಪತಿವ್ರತೆಯೆಂದು...
ತವರು ಮನೆಗೆ ಆರು ತಿಂಗಳು ಕಳಿಸ ಬಾರದ್ರಿ....
ಕಳಿಸಿದ್ರೆ ಕಳಿಸಿಕೊಳ್ಳಿ .. ಮತ್ತೆ ಒಂದು ಹೇಳುತ್ತೀನಿ....

"ಹೆಂಡತಿ ಕರ್ಕೊಂಡು ಲಗ್ನಕ್ಕ ಹೋಗ ಬಾರದ್ರಿ.."

ಮಡದಿ ಜೊತೆ "ಮದುವೆಗೆ" ಹೋಗ ಬಾರದಂತೆ....

ಊರಿಗೆ ಹೋದಾಗ ಒಂದು ಮದುವೆಗೂ ಹೋಗಿದ್ದೆ..
ಜೊತೆಗೇ ನನ್ನಾಕೆಯೂ ಇದ್ದರು.....
ಹೆಗಲಲ್ಲಿ ಕ್ಯಾಮರಾ.......

ಅಲ್ಲಿನ ಗಡಿಬಿಡಿ, ಸಂಭ್ರಮ,
ಸಡಗರ ಸಂತೋಷದ ವಾತಾವರಣ ಗಮನಿಸುತ್ತಿದ್ದೆ...
ರೇಷ್ಮೆ ಸೀರೆ, ಮೈ ತುಂಬಾ ಆಭರಣ, ಮುಡಿ ತುಂಬಾ ಹೂ...
ಆ ನಗು, ಆ ಸಂತೋಷ...

ದೊಡ್ಡ ಧ್ವನಿಯಲ್ಲಿ ಬಾಯಿತುಂಬಾ ಮಾತುಗಳು....
.... ಗದ್ದಲ.....
ಹಾಡುಗಳು...

ಕ್ಯಾಮರಾ ಲೆನ್ಸ್ ನಲ್ಲಿ ಇವೆಲ್ಲ ನೋಡುತ್ತಾ ಕುಳಿತಿದ್ದೆ...

ನನ್ನಾಕೆಗೆ ಹಾಗೆಲ್ಲ ಬಹಳ ಹೊತ್ತು ಸುಮ್ಮನಿರಲಾಗುವದಿಲ್ಲ...

ತಾನು ಮಾತಾಡಬೇಕು ...
ಇಲ್ಲವೇ ಬೇರೆಯವರು ತನ್ನ ಮಾತನ್ನು ಕೇಳಬೇಕು...

ಎರಡರಲ್ಲಿ ಒಂದು ಆಗುತ್ತಿರ ಬೇಕು....

" ರ್ರೀ... ಏನು ನೋಡ್ತಾ ಇದ್ದೀರಿ..? "

"ಈ ಜನರನ್ನು ಗಮನಿಸುತ್ತಾ ಇದ್ದೇನೆ ಕಣೆ"

"ಈ ಹೆಂಗಳೆಯರನ್ನು ನೋಡಿದ್ರಾ...?"

" ಹೂಂ ಕಣೆ...."

"ನೀವು ಒಂದು ಹೆಣ್ಣನ್ನು ನೋಡಿದಾಗ ಏನೇನು ನೋಡ್ತೀರಿ..? "

ಇದೇನು.... ಇಷ್ಟು ವರ್ಷ ಆದಮೇಲೆ ಹೀಗೇಕೆ ಕೇಳ್ತಾ ಇದ್ದಾಳೆ...?
ನನಗೆ ಸೋಜಿಗವಾಯಿತು.....

" ಏನೆಲ್ಲ ನೋಡ ಬೇಕು ಅನ್ನಿಸಿದ್ರೂ......
ನನ್ನ ವಯಸ್ಸು,
ಸಿಕ್ಕಿದ ಸಂಸ್ಕಾರ,
ನಿನ್ನ ನೆನಪಾದರೆ ಹಾಗೆಲ್ಲ ಏನೂ ನೋಡಲಿಕ್ಕೆ ಹೋಗುವದಿಲ್ಲ ಕಣೆ...
ಸ್ವಲ್ಪ ಸಭ್ಯಸ್ಥ ನಾನು..."

"ಥೂ... ಎಲ್ಲಿಂದ ಎಲ್ಲಿಗೆ ಹೋಗಿ ಬಿಡ್ತೀರಪ್ಪಾ...
ಏನೇ ಮಾತಾಡಿದ್ರೂ ಅಲ್ಲಿಗೆ ತಂದು ನಿಲ್ಲಿಸಿ ಬಿಡ್ತಿರಪ್ಪಾ....
ನಾಚಿಕೆನು ಆಗೋಲ್ವಾ...?
ನಾನು ಹೇಳಿದ್ದು ಹೆಣ್ಣಿನ ಮುಖದಲ್ಲಿ ಏನೇನು ನೋಡ್ತೀರಿ... ? ಅಂತ..."

"ನಾನು ಮೊದಲು ನೋಡುವದು ಮೂಗು.."

" ಎಲ್ಲಾ ಬಿಟ್ಟು "ಮೂಗಾ" ...? ಏಕೆ...? "

" ಮುಖದ ಆಕಾರ,
ಕಣ್ಣು ಬಾಯಿ ಎಲ್ಲವೂ ಚೆನ್ನಾಗಿದ್ದರೂ..
ಆ ಮುಖಕ್ಕೆ ಹೊಂದುವಂಥ ಮೂಗು ಇಲ್ಲದಿದ್ದರೆ..
ಉಳಿದವಗಳ ಚಂದ ವೇಸ್ಟ್..
ಇದು ನನ್ನ ಅಭಿಪ್ರಾಯ "

"ಮತ್ತೆ ಏನೇನು ನೋಡ್ತೀರಿ...?"

"ನಂತರ ಕಣ್ಣು.."

"ಅದು ಗೊತ್ತು .. ವಿಜಯಾಕಣ್ಣು..,
ಹೈಸ್ಕೂಲಲ್ಲಿ ಕಾಡಿತ್ತು ಅಂತೆಲ್ಲಾ ಅಂತೆಲ್ಲ ಕೊರಿಬೇಡಿ..
ಮುಂದೆ ಹೋಗಿ ಮತ್ತೆ ...?"

"ತುಟಿ, ಕೆನ್ನೆ...
ಕೆನ್ನೆ ದೊಡ್ಡದಾಗಿದ್ದರೆ ಚಂದ..,
ಹಣೆಯಲ್ಲಿ ಕುಂಕುಮ...."

" ಸಾಕು... ಸಾಕು... ಇವತ್ತು ನಿಮಗೆ ಒಂದು ವಿಶೇಷ ತೋರಿಸ್ತೇನೆ...
ಅದೋ... ಅಲ್ಲಿ ನೀಲಿ ರೇಷ್ಮೆ ಸೀರೆಯವರ ಕಿವಿಗೆ ನಿಮ್ಮ ಕ್ಯಾಮರಾ ಝೂಮ್ ಮಾಡಿ..."

ನಾನು ಝೂಮ್ ಮಾಡಿ ನೋಡಿದೆ...

ಅಬ್ಭಾ...!
ಎಷ್ಟು ಚಂದದ ಕಿವಿ...?
ಅದರ ಅಲಂಕಾರ...!
ಮುಂಗುರುಳಿನ ಸಂಗಡ ಇಳಿಬಿಟ್ಟ ಆಭರಣಗಳು...
ಎಷ್ಟೊಂದು ವಿನ್ಯಾಸಗಳು......!!

ಹೆಣ್ಣಿನ ಕಿವಿ ಇಷ್ಟು ಸುಂದರವಾಗಿರುತ್ತದಾ..?...?

ವಾವ್....!

ನಾನು ಮಾತು ಬಾರದೇ ಮೂಕನಾಗಿದ್ದೆ...

ಮತ್ತಷ್ಟು ಹೆಂಗಳೆಯರ ಕಿವಿಗಳಿಗೆ ಫೋಕಸ್ ಮಾಡಿದೆ...

ಒಂದಕ್ಕಿಂತ ಒಂದು ಸುಂದರ....!




ಮಾನಿನಿ... ನೀನೆ ಚಂದ....
ನಿನ್ನ ಕಿವಿಗೆ... ... ಮತ್ತೇಕೆ ... " ಅಂದ." .....?




ಮುಖವೇ " ಚಂದ " ಅನ್ನುವವರಿಗೆ...
ಕಿವಿಯಲ್ಲೂ.... .. " ಅಂದ " ತೋರಿಸಿದೆಯಲ್ಲೇ....!!

ಮುಖದ ಪಕ್ಕದ ಕಿವಿ...
ಕೂದಲು ಮುಚ್ಚಿಕೊಂಡರೂ ಅದಕ್ಕೆ ಚಂದ ಬೇಕೆ...?






ಕಿವಿಯ ಅಲಂಕಾರದಲ್ಲೂ ಎಷ್ಟೊಂದು ಬಗೆ...?




.... ಹೆಣ್ಣೇ ..
ನಿನ್ನ ಸೊಂದರ್ಯ ಪ್ರಜ್ಞೆಗೊಂದು ನಮಸ್ಕಾರ...!!




ಸರಳತೆಯಲ್ಲೂ ಚಂದವೇನೆ.... ಓ.. ಭಾಮಿನಿ....??..




ಅಲಂಕಾರಕ್ಕೆ ಬಡವ, ಬಲ್ಲಿದ ಅಂತ ಭೇದ ಇಲ್ಲ ಸ್ವಾಮಿ....!!



ಮುತ್ತು ಮಳೆಗಾಗಿ ಹೊತ್ತು ಕಾದಿದೆ...
ಕಿವಿಗೂ
ಮುತ್ತೇ...?






ಇಳಿವಯಸ್ಸಿನಲ್ಲೂ ಚಂದದ ಬಗೆಗೆ ಅಭಿಮಾನ...
ಅಲಂಕಾರದ ಸಂಭ್ರಮ...!!





ಎಲ್ಲೆಲ್ಲೂ ಸೌಂದರ್ಯವೇ....!
ಕೇಳುವ ಕಿವಿ ಇರಲು....!
ನೋಡುವ ಕಣ್ಣಿರಲು....!



ಚಂದಕ್ಕಿಂತ ... ಚಂದ... ಕಿವಿಯು ಸುಂದರಾ...!!




ತಲೆ ಕೂದಲಿಗೆ ಬಗೆ ಬಗೆ ವಿನ್ಯಾಸ......
ಹೂ ಗಳ ಅಲಂಕಾರ....
ಮೂಗಿಗೂ ಬಗೆಬಗೆಯ ಶ್ರಂಗಾರ....
ಕಿವಿಯ ಆಭರಣಗಳ ಬೆಡಗು...
ಕೊರಳಿಗೆ ಹಾರಗಳ ಸೊಬಗು....

... ಹೆಣ್ಣೇ...
ನಿನ್ನ.....
ಸೌಂದರ್ಯದ ಪ್ರಜ್ಞೆಗೆ...!
ಅಂದ.., ಚಂದದ ಅಭಿಮಾನಕ್ಕೆ...!
ಮಗ್ನವಾಗಿ ಅಲಂಕರಿಸಿಕೊಳ್ಳುವ ಶ್ರದ್ಧೆಗೆ....!

ಸಾವಿರ.... ಕೋಟಿ... ಪ್ರಣಾಮಗಳು.....!!




(ಕಿವಿಯ ಅಲಂಕಾರದ ಬಗೆಗೆ ಇನ್ನೂ ಇವೆ....
ಹೆಣ್ಣಿನ ಕೇಶ ವಿನ್ಯಾಸ...
ಜಡೆಗಳ ಗಂಟು... ಮೊಗ್ಗಿನ ಜಡೆ ಅವುಗಳ ಬಗೆಗೆ ,
ಹಣೆಯ ಕುಂಕುಮ, ಬಿಂದಿಗಳ ಬಗೆಗೆ ,
ಕೈಗೆ ಮೆಹಂದಿ ಮತ್ತು ಬಳೆಗಳ ಅಲಂಕಾರ..,
ಕೊರಳಿನ ಹಾರಗಳು...

ಸೊಂಟದ ಪಟ್ಟಿ....
ಇತ್ಯಾದಿಗಳ ಬಗೆಗೆ ಮುಂದೆ ಬರಲಿದೆ... ನಿರೀಕ್ಷಿಸಿ....
ಚಿತ್ರ ಲೇಖನಕ್ಕೆ ಕಿವಿಯ ಆಭರಣಗಳ ಅಂದ ತೋರಿಸಿದ
ಎಲ್ಲ ಮಾನಿನಿಯರಿಗೆ ಕ್ರತಜ್ನತೆಗಳು...)

Sunday, May 10, 2009

ಬೆಡಗಿನ .. ಬಣ್ಣದ ಚಿಟ್ಟೆಯೇ...



ಆಶೀಷ
ಸಾರಿ ಊರಿಗೆ ಹೋದಾಗ ಬಹಳ ಉತ್ಸಾಹದಿಂದ ಇದ್ದ...

ಅಮ್ಮನ ಕೈತೋಟದಲ್ಲಿ ಹಾರಾಡುವ ಬಣ್ಣದ ಚಿಟ್ಟೆಗಳನ್ನು...
ಕ್ಯಾಮರಾದಲ್ಲಿ ಸೆರೆ ಹಿಡಿಯುವ ತವಕ ಅವನಿಗೆ ...

ಸಂಗಡ ನನ್ನ ಅಣ್ಣನ ಬೆಂಬಲ ಅವನಿಗೆ ...

ದೊಡ್ಡಪ್ಪ, ಮಗ ಸೇರಿ ನನಗೂ ಉರಿ ಬಿಸಿಲಿನ ಝಳ ತೋರಿಸಿದರು....

ಅಡಿಕೆ ತೋಟ... , ಊರ ಹೊರಗಿನ ಗದ್ದೆ ಬಯಲು...,
ನಮ್ಮನೆ ಬೆಟ್ಟಗಳನ್ನ ಅಲೆಸಿದರು...
ಅಲ್ಲಿ ಕಂಡ ಕೆಲವು ಬಣ್ಣದ ಚಿಟ್ಟೆಗಳು ಇವು....

ಸಂಗಡ ಹಲವಾರು ಹಕ್ಕಿಗಳು...!
ಅವುಗಳ ಚಿಲಿಪಿಲಿ ಕಲರವ...!
ಹಸಿರು ಚಿಗುರಿದ ಗಿಡ ಮರಗಳು...!
ಹೂಗಳು.., ದುಂಬಿಗಳು...!


ಇವೆಲ್ಲ ನೋಡಿ ಆತ ದಂಗಾಗಿ ಹೋಗಿದ್ದ...

"ಅಪ್ಪಾ ... ನಮ್ಮೂರು ತುಂಬಾ ಸುಂದರವಾಗಿದೆ...
ಬೆಂಗಳೂರು ಬೋರು...
ನಾವು ಇಲ್ಲೇ ಯಾಕೆ ಇರಬಾರದು...?"

ಅವನ ಮುಗ್ಧ ಪ್ರಶ್ನೆಗೆ ಉತ್ತರ ಕೊಡುವದು ನನಗೆ ಕಷ್ಟವಾಯಿತು.
..

ಪಟ್ಟಣಗಳ... ಧೂಳು, ಹೊಗೆ..
ಯಾಂತ್ರಿಕ ಜೀವನ...
ನಮಗೆ ಅನಿವಾರ್ಯವೇ...?





ಎಷ್ಟು ಮೋಹಕ ಬಣ್ಣದ ಚಿಟ್ಟೆಗಳು...!!






ಕಪ್ಪು ಬಣ್ಣಕ್ಕೂ, ಕೆಂಪಿಗೂ ಎಂಥಹ ಹೊಂದಾಣಿಕೆ..??... !!
ಇದು ಯಾವ ಕುಂಚದ ಕಲ್ಪನೆ...??...







ಕಪ್ಪು.., ಕೇಸರಿ ..., ಬಿಳಿ ಬಣ್ಣದ ಹೊಂದಾಣಿಕೆ...
ಹಸಿರೆಲೆಯ ಮೇಲೆ...!







ಇದು ಯಾವ ಕಣ್ಣು...??
ಒಂದೊಂದು ಚಿಟ್ಟೆಗೂ... ಅದರದೇ ವೈಶಿಷ್ಟ್ಯ... !!







ಕಪ್ಪು ಸುಂದರಿ....!







ನನ್ನ ಬಣ್ಣಕ್ಕೆ ಏನು ಹೆಸರು..?





ಪಾತರಗಿತ್ತಿ ಪಕ್ಕ....!
ನೋಡಿದೇನೆ ಅಕ್ಕ....!




ಬಣ್ಣದ ಬೆಡಗಿನ .. ಚಿಟ್ಟೆಯೇ...
ನಿನಗೆ...
ಮಧುರ ಸಿಹಿ..
ಮಕರಂದದ ಆಸೆಯೇ..?

ಬಣ್ಣದ .. ಸುಂದರ ..
ಹೂವಿನ
ಸೊಬಗಿನ ಬಯಕೆಯೇ...?