Sunday, October 14, 2012

........... ತೀವ್ರತೆ .............


ಮತ್ತೊಮ್ಮೆ ನೋಡಿದೆ...

"ಹೌದು... 

ಅದೇ ಹುಡುಗಿ... !!...
ನನ್ನ   ಮೌನದಲ್ಲಿ ಮಾತನಾಡುವ ಹುಡುಗಿ...!.."

ಅನಿರೀಕ್ಷಿತವಾಗಿ ಎದೆಯ ಬಡಿತ ಜಾಸ್ತಿಯಾಗತೊಡಗಿತು...


ಪಕ್ಕದಲ್ಲಿ ಇದ್ದವ ಬಹುಷಃ ಗಂಡನಿರಬೇಕು...

ಅವಳ ಕೈಯನ್ನು ಹಿಡಿದುಕೊಂಡು ಮಗು ಬರುತ್ತಿತ್ತು....!

ನೇರವಾಗಿ ರಿಸೆಪ್ಷನ್   ಕಡೆಗೇ ಬರುತ್ತಿದ್ದರು...


ಕೆಲವು ಸಂದರ್ಭಗಳನ್ನು ..

ನಾವೇ ತಪ್ಪಿಸಿಕೊಳ್ಳುತ್ತೇವೆ.. 

ಅದಕ್ಕೆಲ್ಲ ಉತ್ತರ ಇರುವದಿಲ್ಲ..


ನಾನು ತರಾತುರಿಯಲ್ಲಿ ರಿಸೆಪ್ಷನಿಷ್ಟಿಗೆ ಹೇಳಿದೆ...


"ನೋಡಿ..

ಅಲ್ಲಿ ಬರುತ್ತಿರುವ ದಂಪತಿಗಳಿಗೆ ಒಳ್ಳೆಯ ರೂಮನ್ನು ಕೊಡಿ...
ಅವರು ನನಗೆ ಬೇಕಾದವರು...

ನಮ್ಮ ಹೊಟೆಲ್ಲಿನ ಸ್ಪೆಷಲ್ ರಿಯಾಯತಿಯನ್ನು ಕೊಡಿ..."


ನಾನು ಮರೆಯಾದೆ..


ನೀವೀಗ ಅಂದುಕೊಂಡಿದ್ದು ಸರಿಯಾಗಿದೆ... 

"ನಾನು ಈ ಹೊಟೆಲ್ಲಿನ ಮಾಲಿಕ"..

ಈ ಹುಡುಗಿ ಯಾರು ಗೊತ್ತಾ?


ನಾನು ಕಾಲೇಜಿಗೆ ಹೋಗುವಾಗ ಪಕ್ಕದ ಮನೆಯಲ್ಲಿದ್ದವಳು...


ಮೊದಲ ಬಾರಿಗೆ ನೋಡಿದಾಗ ..

ಅವಳ ತುಂಬು ಕೆನ್ನೆಗಳ ಆರಾಧಕನಾಗಿ ಹೋದೆ... !

ಆ ಕೆನ್ನೆಯ ಉಬ್ಬುತಗ್ಗುಗಳು,...

ನುಣುಪು ಗಲ್ಲ... ! ವಾಹ್  ....

ಪ್ರೇಮ ಪತ್ರ ಅಲ್ಲೇ ..ಕೆನ್ನೆಯ ಮೇಲೆ ಬರೆಯಬಹುದು ನೋಡಿ....!

ನನ್ನನ್ನು ಹುಚ್ಚ ಅಂದು ಕೊಂಡು ಬಿಟ್ಟೀರಾ....!

ನಾನು ಸರಿಯಾಗಿಯೇ ಇದ್ದೆ...

ಆದರೆ.. ಈ  ಪ್ರೀತಿ ಹುಚ್ಚು.... ಕಣ್ರೀ..!!

ಒಂದು ದಿನ ಹುಡುಗಿಗೆ ಧೈರ್ಯ ಮಾಡಿ ಹೇಳಿದೆ...


ಹುಡುಗಿ ಬಾಯಲ್ಲಿ "ಇಷ್ಟವಿಲ್ಲ" ಅಂದರೂ...

ಕಣ್ಣುಗಳು ಓಕೆ ಅಂದಿದ್ದವು... 

ಕೊನೆಗೆ ಒಂದು ದಿನ ಒಪ್ಪಿದಳು ಅನ್ನಿ...!


ಈ ಬಯಕೆ..

ಆಸೆಗಳು   ..
ಯಾಕೆ ಇಷ್ಟು ರಭಸವಾಗಿರುತ್ತವೆ  ? ...

ಗೊತ್ತಿಲ್ಲ...


"ಹುಡುಗಿ...


ನನ್ನ ಕನಸಲ್ಲೆಲ್ಲ ನೀನೇ ಬರ್ತಿಯಾ....


ಒಮ್ಮೆ ತಬ್ಬಿಕೊಳ್ಳಬೇಕು ಅನ್ನಿಸುತ್ತಿದೆ...

ದಯವಿಟ್ಟು ಇಲ್ಲವೆನ್ನ ಬೇಡ ಕಣೆ..."

"ಸರಿ...

ಎಷ್ಟು ಹೊತ್ತು ...?"

"ಅಯ್ಯೋ..

ಹಾಗೆ ಇದ್ದುಬಿಡೋಣ ಅನ್ನಿಸುತ್ತದೆ...
ಊಟ
ತಿಂಡಿ... 
ಈ ಪ್ರಪಂಚ ಏನೂ ಬೇಡ ಕಣೆ...

" ಮತ್ತೆ....  ! ...!!.."


ಅವಳ ಕಣ್ಣುಗಳಲ್ಲಿನ ಆಸೆ ಅರಳಿದಂತೆ ಅನ್ನಿಸಿತು...

ನನ್ನಲ್ಲಿನ 
ತೀವೃತೆಗೆ ಅವಳು ಹೂಂ ಅಂದಂತಿತ್ತು...

" ಅಷ್ಟು ಹತ್ತಿರವಿದ್ದಾಗ ..

ನಿನ್ನ ಕೆನ್ನೆ ಸಿಕ್ಕರೆ ಸಾಕು..
ಮತ್ತೇನೂ ಬೇಕಿಲ್ಲ...
ಇಷ್ಟೇ ಕಣೆ... 
ದಯವಿಟ್ಟು ಇಲ್ಲವೆನ್ನ ಬೇಡ..."

ಹುಡುಗಿ ಗಂಭೀರವಾದಳು...


"ಹುಡುಗಾ....


ಈಗ ನೀನು ಮಾತನಾಡುತ್ತಿಲ್ಲ...

ನಿನ್ನ ಬಣ್ಣದ ಹರೆಯ ಮಾತನಾಡುತ್ತಿದೆ...

ಕೆಲವು ಆಸೆಗಳನ್ನು  ಬೇಕಾಬಿಟ್ಟಿ ಹರಿಯಬಿಡಬಾರದು...


ಅದಕ್ಕಾಗಿ ಕಾಯಬೇಕು...


ತಡೆಗೊಡೆ ನಾವೇ ಹಾಕಿಕೊಳ್ಳಬೇಕು...

ಅದಕ್ಕೆಲ್ಲ ಈಗ ಸಂದರ್ಭ ಅಲ್ಲ...

ಚೆನ್ನಾಗಿ ಓದೋಣ...

ನನ್ನನ್ನು ಮದುವೆಯಾಗು...

ಆಗ ನೀನು ಹೇಳಿದ ಹಾಗೆ ಎಲ್ಲವೂ..."


ಹುಡುಗಿ ಕಣ್ಣಿನಲ್ಲಿ ಪ್ರೀತಿಯಿತ್ತು...


ಆ ಪ್ರೀತಿಯಲ್ಲಿ ..

ನಮ್ಮಿಬ್ಬರ ಮಧ್ಯದ  "ಬೇಲಿಯೂ" ಇತ್ತು..

ಬೆಟ್ಟದಷ್ಟು ಆಸೆ ಇದ್ದರೂ ಅದು ಹೇಗೆ ಸುಮ್ಮನಿರ್ತಾರಪ್ಪ...!


ಅವಳು ನನ್ನಾಸೆಗೆ ಬೇಡವೆಂದರೂ... 

ನಮ್ಮಿಬ್ಬರ ಪ್ರೀತಿಗೆ...
ಪತ್ರಗಳಿಗೆ... ಮಾತುಕತೆ..
ಭೇಟಿಗೆ ಏನೂ ತೊಂದರೆ ಆಗಲಿಲ್ಲ...

ಆ ದೂರದಲ್ಲೂ ಹಿತವಿತ್ತು... ಆಕರ್ಷಣೆ ಇತ್ತು...


ಆಗ ..

ಅಂತಿಮ ವರ್ಷದ ಪರೀಕ್ಷೆ ಓದು ನಡೆಯುತ್ತಿತ್ತು...
ಒಂದು ದಿನ ಸಾಯಂಕಾಲ ಹುಡುಗಿ ಓಡೋಡಿ ಬಂದಳು..

ನನ್ನನ್ನು ಗಟ್ಟಿಯಾಗಿ...

ಬಲವಾಗಿ ತಬ್ಬಿಕೊಂಡಳು....!

ಅವಳ ತೀವ್ರತೆ ತುಂಬಾ ಖುಷಿಕೊಟ್ಟಿತು...


ನಾನು ಅವಳ ಸುತ್ತ ನನ್ನ ಕೈಗಳನ್ನು ಬಳಸುವವನಿದ್ದೆ...


"ಹುಡುಗಾ...

ನನ್ನಪ್ಪ ನನಗೆ ಗಂಡು ನೋಡಿದ್ದಾರೆ..
"ಈ ಪರೀಕ್ಷೆ ಓದು ಎಲ್ಲ ಸಾಕು ಮದುವೆಯಾಗು" ಅಂತಿದ್ದಾರೆ...
ನಾಳೆ ನಿಶ್ಚಿತಾರ್ಥವಂತೆ...

ನನಗೆ ಈ ಮದುವೆ ಬೇಡ..

ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ...

ನನ್ನಪ್ಪ ನಮ್ಮ ಮದುವೆಗೆ ಖಂಡಿತ ಒಪ್ಪಿಗೆ ಕೊಡುವದಿಲ್ಲ...


ಎಲ್ಲಾದರೂ ಓಡಿ ಹೋಗೋಣ...

ನಮ್ಮದೇ ಸಂಸಾರ ಕಟ್ಟೋಣ..."

ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...


ಅಷ್ಟರಲ್ಲಿ ನನ್ನಪ್ಪ ನನ್ನ ರೂಮಿಗೆ ಬಂದ...


ಹುಡುಗಿ ತನ್ನ ಅಪ್ಪುಗೆ ಸಡಿಲಿಸಿದಳು...


ಅವನಿಗೆ ವಿಷಯ ಗೊತ್ತಾಯಿತು..

ನನ್ನಪ್ಪ ಬಹಳ ಸಮಧಾನಿ...

"ಈ ಪ್ರೀತಿ.. 

ಪ್ರೇಮ .... ಹೃದಯ..
ಏನೇ ಅಂದರೂ..

ಬದುಕಲಿಕ್ಕೆ ಎರಡು ಹೊತ್ತು ಊಟ ಬೇಕು...

ಧರಿಸಲಿಕ್ಕೆ ಬಟ್ಟೆ ಬೇಕು...

ಸಿನೇಮಾ...  ಹೊಟೆಲ್ಲು ..

ಕಾರು..
ದೊಡ್ಡ ಅಪಾರ್ಟಮೆಂಟು ಅಗತ್ಯವಾಗಿ ಬೇಕು..

ಈಗ..

ಈ  ಪ್ರೀತಿ.. 
ಪ್ರೇಮಬದುಕು ತುಂಬಾ ದುಬಾರಿಯಾಗಿಬಿಟ್ಟಿದೆ ..
ಕೋಟಿಗಟ್ಟಲೆ ಹಣ ಬೇಕು...

ನಿಮ್ಮ ಅರ್ಧ ಓದು ಅದನ್ನೆಲ್ಲ ಪೂರ್ತಿಗೊಳಿಸಲಾರದು...


ನಾನು ಶ್ರೀಮಂತನಲ್ಲ...

ನಿಮ್ಮಿಬ್ಬರ ಬದುಕನ್ನು ನೀವೇ ನೋಡಿಕೊಳ್ಳಬೇಕು...

ಜೊತೆಗೆ ನಮ್ಮ "ಮುಪ್ಪನ್ನೂ " ನೋಡಿಕೊಳ್ಳಬೇಕು...


ಓಡಿ ಹೋಗಿ ..

ಬದುಕು ಕಂಡುಕೊಳ್ಳುವದು ಮೂರ್ಖತನ....

ಈಗ ನಿಮ್ಮ ಮದುವೆಗೆ ನನ್ನ ಒಪ್ಪಿಗೆ ಖಂಡಿತ ಇಲ್ಲ...."


ಅಪ್ಪ ಅಷ್ಟು ಹೇಳಿ ಹೊರಟು ಹೋದ...


ಏನು ಮಾಡಲಿ...?


ಆ ಚಂದದ ಹುಡುಗಿಯ ಕೆನ್ನೆಯಲ್ಲಿ ಕಣ್ಣೀರಿತ್ತು...


ಕಣ್ಣುಗಳಲ್ಲಿ ದೈನ್ಯತೆ ಇತ್ತು...

ನನಗಾಗಿ ಎಲ್ಲವನ್ನೂ ಬಿಟ್ಟು ಬರುವ ಪ್ರೀತಿಯಿತ್ತು....

ಎದುರಿಗೆ ..

ಬದುಕಿನ ಸವಾಲುಗಳ ಪ್ರಶ್ನೆ ಇರುವಾಗ ..
ಹುಡುಗಿ...
ಆಕರ್ಷಣೆಗಳು ಕಡಿಮೆಯಾಗುತ್ತವಾ?

ನಾನು ಭವಿಷ್ಯಕ್ಕೆ ಹೆದರಿದೆನಾ  ?


ನನ್ನ ಅಸಹಾಯಕ ನಿರುತ್ತರ...

ಅಸಹನೀಯ ಕ್ಷಣಗಳು...

ಇಷ್ಟೆಲ್ಲ ಆರಾಧಿಸಿದ ನನ್ನ ಪ್ರೇಮ ಸುಳ್ಳಾ?

ಈ ಪ್ರೀತಿಗಾಗಿ ಏನನ್ನೂ ಮಾಡಲಾರದೆ ಹೋದೆ...

ಹುಡುಗಿ ನನ್ನ ರೂಮಿನಿಂದ ಅತ್ತೂ.. ಅತ್ತೂ ಹೋದಳು..


ಹೋಗುವಾಗ ..

ಅವಳ ದೈನ್ಯ ಕಣ್ಣಿನ ನೋಟ ನನ್ನೋಳಗೆ ಬಿಟ್ಟು ಹೋದಳು..

ನಾನು ಈಗ ಶ್ರೀಮಂತನಾದರೂ..

ಕೈಗೆ ಸಿಗದ ಅವಳ ಪ್ರೀತಿಗಾಗಿ ಇನ್ನೂ ಮನಸ್ಸು ಕಾತರಿಸುತ್ತಿತ್ತು...

ಅವಳು ಬೇಕು ಎನ್ನುವ ತೀವೃತೆ ಇನ್ನೂ ಜಾಸ್ತಿಯಾಗಿತ್ತು....


ಈಗ ...

ಅನಿರೀಕ್ಷಿತವಾಗಿ ಮತ್ತೆ ನನ್ನೆದುರಿಗೆ ಬಂದಿದ್ದಾಳೆ...

ನನ್ನ ಸಹಾಯಕರಿಗೆ ಹೇಳಿ ಅವರಿಗೆ ಸ್ಪೆಷಲ್ ಊಟ ಕಳುಹಿಸಿದೆ...


"ನಮ್ಮ ಹೊಟೆಲ್ಲಿನ ಇಂದಿನ ಅದೃಷ್ಟದ ಅತಿಥಿಗಳು ನೀವು" ಅಂತ


ನಮ್ಮ ಪ್ರೀತಿಯವರು ....

ಪ್ರೀತಿಯಿಂದ ಊಟ ಮಾಡಿದರೆ ಎಷ್ಟು ಖುಷಿ ಅಲ್ವಾ ..?

ಈ ಹುಡುಗಿಯನ್ನು ಭೇಟಿ ಆಗಬೇಕಲ್ಲಾ?

ಹೇಗೆ...?

ಗಂಡ ಇರಬಾರದು....


ಮಗು...  ?

ಮಗು ಓಕೆ.. ಅದು ಪುಟ್ಟ ಮಗು...

ಈ ಹುಡುಗಿಯೊಡನೆ ಮಾತನಾಡಬೇಕು..


"ಅವಳಿಗಾಗಿ ಇಷ್ಟು ವರ್ಷ ಹಂಬಲಿಸಿ..

ಹಂಬಲಿಸಿ ..
ಇನ್ನೂ ಮದುವೆಯಾಗದೆ ಉಳಿದ ನನ್ನ ಕಥೆಯನ್ನು ಹೇಳಬೇಕು....

ಅವಳ ಕ್ಷಮೆ ಕೇಳಬೇಕು...."


ಎಷ್ಟೆಲ್ಲ ಚಂದದ ಹುಡುಗಿಯರು  ನನ್ನ ಪ್ರೀತಿ ಹಂಬಲಿಸಿ ಬಂದಿದ್ದರೂ..


ಇವಳ "ದೈನ್ಯ ಕಣ್ಣಿನ  ನೋಟ..

ಅಪರಾಧಿ ಮನೋಭಾವನೆ" ನನ್ನನ್ನು ಸದಾ ಇರಿಯುತ್ತಿತ್ತು...

ನಾನು ಅವಳ ಪ್ರೀತಿಗೆ ಮೋಸ ಮಾಡಬಾರದಿತ್ತು....


"ಸಮಯ" ಅನ್ನೋದು ಇದೆಯಲ್ಲ...

ಎಲ್ಲ ಪ್ರಶ್ನೆಗಳಿಗೆ...ಉತ್ತರ ಕೊಡುತ್ತದೆ..

ನಾನು ಅವರ ಚಲನವಲನ  ಗಮನಿಸುತ್ತಿದ್ದೆ..


ಈ ದಿನ ಬೆಳಿಗ್ಗೆ ...

ಅವಳ ಗಂಡ ಹೊಟೆಲ್ಲಿನಿಂದ ಆಚೆಗೆ ಹೋದ...
ಸಾಯಂಕಾಲದವರೆಗೆ ಬಾಡಿಗೆ  ಕಾರು ಬೇಕು ಅಂತ ಹೇಳಿದ್ದ...!

ನನ್ನ ಅದೃಷ್ಟಕ್ಕೆ ಮನಸಾರೆ ವಂದಿಸಿದೆ...


ಅವರಿದ್ದ ರೂಮಿನ ಕರೆಗಂಟೆ ಒತ್ತಿದೆ...


ಎದೆಯಲ್ಲಿ ಏನೋ ನಡುಕ.... !


ಆಕೆ ಬಂದು ಬಾಗಿಲನ್ನು ತೆಗೆದಳು...

ಅಶ್ಚರ್ಯವಾಗಿದ್ದರೂ ...
ತೋರ್ಪಡಿಸದ ಮುಖಭಾವ ನನ್ನನ್ನು ಸ್ವಾಗತಿಸಿತು...

ಒಳಗೆ ಬಾ ಅನ್ನಲಿಲ್ಲ...


ನಾನು ಅವಳನ್ನು ಹಿಂಬಾಲಿಸಿದೆ...


ಆ ಮೌನದಲ್ಲಿ ..

ನನ್ನೆದೆಯ ಢವ ಢವದ ಶಬ್ಧ ಜಾಸ್ತಿಯಾಗತೊಡಗಿತು...

ನನ್ನೊಳಗಿನ ತೀವ್ರತೆಗೆ  ನನಗೆ ನಾಚಿಕೆ ಆಯಿತು...


"ಪುಟ್ಟಿ  ಸ್ನಾನಕ್ಕೆ ಹೋಗಿದ್ದಾಳೆ... ಏನು ವಿಷಯ...?"


ಅವಳ ಕಣ್ಣುಗಳನ್ನು ನೋಡಿದೆ..

ನಿರ್ವಿಕಾರ ಭಾವನೆ ಬಲವಂತವಾಗಿ ಮಾಡಿಕೊಂಡಂತಿತ್ತು ...

"ಹುಡುಗಿ...

ನಾನು ಈ ಹೊಟೆಲ್ ಮಾಲಿಕ ಈಗ....
ನನ್ನ ಬಳಿ ಸಾಕಷ್ಟು ಹಣವಿದೆ...."

ಅದಕ್ಕೇನು ? ..

ಎನ್ನುವಂತಿತ್ತು ಅವಳ ಕಣ್ಣು..........

" ಅಂದು..

ನಿನ್ನ ಪ್ರೀತಿಯನ್ನು ನಿರಾಕರಿಸಿದ್ದು ನನ್ನ ಬದುಕಿನ ಬಲು ದೊಡ್ಡ ತಪ್ಪು...

ಅಪರಾಧಿ ಮನೋಭಾವನೆಯಿಂದ ...

ದಿನಾಲೂ..
ಪ್ರತಿಕ್ಷಣ ಹಿಂಸೆಯಿಂದ ಸಾಯುತ್ತಿರುವೆ..."

ಹುಡುಗಿಯ ಕಣ್ಣು ನೋಡಿದೆ...

ಅಲ್ಲಿ ಪ್ರೀತಿ ಹುಡುಕುವ ಆಸೆ ಆಯ್ತು...

ಅವಳ ಭಾವರಹಿತ ನೋಟ ನೋಡಲಾರದೆ ತಲೆ ತಗ್ಗಿಸಿದೆ....


"ಹುಡುಗಿ...

ನಮ್ಮ ಪ್ರೀತಿಗೆ ಒಂದು ಅವಕಾಶ ಕೊಡೋಣ...
ನಿನ್ನನ್ನು ಈಗಲೂ ಸ್ವೀಕರಿಸುತ್ತೇನೆ...

ನಿನ್ನ ಮಗುವನ್ನೂ ಸಹ ಪ್ರೀತಿಸುತ್ತೇನೆ..

ನೀನಿಲ್ಲದ ಬದುಕು ನನ್ನಿಂದ ಆಗದು...

ದಯವಿಟ್ಟು... ದಯವಿಟ್ಟು.. ಬಾ...


ಈಗ ನನ್ನ ಬಣ್ಣದ ಹರೆಯ ಮಾತಾಡುತ್ತಿಲ್ಲ...

ಹಣಗಳಿಸುತ್ತಿರುವ .....
ಪ್ರಬುದ್ಧತೆಯಿಂದ ಮಾತನಾಡುತ್ತಿರುವೆ...

ನಿನ್ನನ್ನು ಹೂವಿನಂತೆ ನೋಡಿಕೊಳ್ಳಬಲ್ಲೆ....


ಪ್ರೀತಿಯ ಜೊತೆಗೆ ..

ಕಾರು..
ಬಂಗ್ಲೆ... ಹಣ ಸೌಕರ್ಯದ ಸುಖ ಕೊಡಬಲ್ಲೆ..."

ನಾನು ತಲೆ ತಗ್ಗಿಸಿಯೇ ಇದ್ದೆ...


ಹುಡುಗಿಯ ಗಡಸು ಧ್ವನಿ ನನ್ನನ್ನು ಎಚ್ಚರಿಸಿತು..


"ಏಳು...

ಗೆಟ್ ಔಟ್... !!
ಮೊದಲು ಇಲ್ಲಿಂದ ಹೊರಡು... 
ರೂಮಿನ ಬಾಗಿಲು ತೆರೆದಿದೆ...."

ನಾನು ಅವಕ್ಕಾದೆ....


"ನನ್ನ ಗಂಡನ ಪ್ರೀತಿಗೆ ಮೋಸದ ಕಲ್ಪನೆಯನ್ನೂ ಮಾಡಲಾರೆ...


ನೀನು ನನ್ನ ನೆನಪು ಅಷ್ಟೆ..


ನನ್ನ ಇಂದಿನ ಬದುಕು ನನ್ನ ಗಂಡ...


ನಮ್ಮಿಬ್ಬರ ಪ್ರೀತಿಯ ವಿಷಯ ಗೊತ್ತಿದ್ದರೂ..

ಒಂದು ದಿನವೂ ..
ಹಂಗಿಸಿ.. 
ಅಣಕಿಸದ ದೊಡ್ಡ ಮನುಷ್ಯ ಆತ..

ಅವನ ಪ್ರೀತಿ ಬಲು ದೊಡ್ಡದು...


ಇಷ್ಟು ಮಾತನಾಡುವ ಅಗತ್ಯ ನನಗಿಲ್ಲ...


ಮತ್ತೆ  ಎಲ್ಲಿಯೂ ನಿನ್ನ ಹ್ಯಾಪು ಮೋರೆಯನ್ನು ನನ್ನ ಕಣ್ಣಿಗೆ ಕಾಣಿಸಬೇಡ... ಹೊರಡು... 

ಗೆಟ್ ಔಟ್.. !!..."

ಬಹಳ ತೀಕ್ಷ್ಣವಾಗಿತ್ತು ಧ್ವನಿ...


ಅತ್ಯಂತ ಅಪಮಾನಕರ ಕ್ಷಣಗಳು........ !


ನಾನು ಅಲ್ಲಿಂದ ಹೊರಟೆ..

ಮಗು ಸ್ನಾನದ ರೂಮಿಂದ ಹೊರಗೆ ಬಂತು...

"ಇವರು ಯಾರಮ್ಮಾ?"


"ಗೊತ್ತಿಲ್ಲ...

ಅವರಿಗೆ ಬೇರೆ ಕಡೆ ಹೋಗಬೇಕಿತ್ತಮ್ಮ..
ವಿಳಾಸ ತಪ್ಪಿ ಬಂದಿದ್ದಾರೆ..."

"ಅವರ ಬಳಿ ಅಡ್ರೆಸ್ ಇಲ್ಲವಾ?"


"
ಅವರ ಬಳಿ ...
ಬಹುಷಃ ಹಳೆ ವಿಳಾಸವಿದ್ದಿರಬಹುದು...
ವಿಳಾಸಗಳು ಬದಲಾಗುತ್ತ ಇರುತ್ತಮ್ಮಾ...

ವಿಳಾಸ..
ಸರಿ ಇದ್ದರೂ ...
ಸಮಯದಲ್ಲಿ ವ್ಯಕ್ತಿಗಳು ಬದಲಾಗುತ್ತಾರಮ್ಮ...

ಕೆಲವೊಮ್ಮೆ ..

ವಿಳಾಸ... ವ್ಯಕ್ತಿಗಳು ಎರಡೂ ಬದಲಾಗಿಬಿಡುತ್ತದಮ್ಮಾ..."..

ನಾನು ಹಿಂತಿರುಗಿ ನೋಡಲಿಲ್ಲ....






(ಚಂದದ ಪ್ರತಿಕ್ರಿಯೆಗಳಿವೆ .... ದಯವಿಟ್ಟು ಓದಿ....)


Saturday, October 6, 2012

ಹೊತ್ತು ಹೋಗದ ಹೊತ್ತಿನ ಕಥೆಗಳು ...... " 2 "



ಈಗ ನಡೆಯುತ್ತಿದೆಯಲ್ಲ...

ಇಂತಹುದೇ ಒಂದು  ಕಾಲದಲ್ಲಿ ಒಬ್ಬ ಕಳ್ಳನಿದ್ದ...

ಆತ ಒಂದು ಶಾಲೆಯನ್ನು ನಡೆಸುತ್ತಿದ್ದ...


"ಕಳ್ಳತನ ಹೇಗೆ ಮಾಡಬೇಕು...?

ಅದಕ್ಕೆ ಬೇಕಾದಂಥಹ ಪೂರ್ವ ತಯಾರಿಗಳು...
ಕಳ್ಳತನದ ಇತಿಹಾಸ...
ಇತಿಹಾಸ ಪ್ರಸಿದ್ಧ ಕಳ್ಳರು..
ಅವರೆಲ್ಲ ಹೇಗೆ ಪ್ರಸಿದ್ಧರಾದರು.." ಇತ್ಯಾದಿ ವಿಷಯಗಳನ್ನು ಹೇಳಿಕೊಡುತ್ತಿದ್ದ...

ಅವನ ಶಾಲೆ ಬಹಳ ಪ್ರಸಿದ್ಧಿ ಪಡೆದಿತ್ತು...


ಒಬ್ಬ ಮರಿ ಕಳ್ಳ ..

ಆತನ ಬಳಿ ಕಳ್ಳತನ ಓದುತ್ತಿದ್ದ...
ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದುಕೊಂಡು ತರಗತಿಗೆ ಮೊದಲಿಗನಾಗಿ ಬರುತ್ತಿದ್ದ...

ಅಂತಿಮ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಹೆಮ್ಮೆಯಿಂದ ಬೀಗಿದ..


ಆಗ 

ಗುರು ಕಳ್ಳ ಆತನಿಗೆ ತನ್ನ ಅನುಭವಾಮೃತವನ್ನು  ಹೇಳಿದ...

"ಎಲೈ ಮರಿ ಕಳ್ಳನೆ..

ಪರೀಕ್ಷೆಯಲ್ಲಿ ಅಂಕಗಳನ್ನು ಜಾಸ್ತಿ ತೆಗೆದುಕೊಂಡಿರುವೆಯೆಂದು ..
ಗರ್ವ ಪಡಬೇಡ..

ಮುಂದೆ...

ಬದುಕಿನ ಕಳ್ಳತನದಲ್ಲಿ ..
ಈ ಅಂಕಗಳು ಯಾವ ಕೆಲಸಕ್ಕೂ ಬರುವದಿಲ್ಲ...
ಅಲ್ಲಿ ..
ನಿನ್ನ ಪ್ರಯತ್ನ ಮತ್ತು ಸ್ವಂತಿಕೆ ಮಾತ್ರ ಉಪಯೋಗಕ್ಕೆ ಬರುತ್ತವೆ.."

ಗುರು ಕಳ್ಳನ ಮಾತು ಮರಿ ಕಳ್ಳನ ಕಿವಿ ಒಳಗೆ ಹೋಗಲಿಲ್ಲ...


ಮುಂದೆ....

ಮರಿಕಳ್ಳ ತನ್ನ ಸ್ವಂತ ಉದ್ಯೋಗವಾಗಿ "ಕಳ್ಳತನ" ಶುರು ಮಾಡಿದ...

ಮರಿ ಕಳ್ಳ ತಂತ್ರಿಕವಾಗಿ ಬಹಳ ಪರಿಣತಿ ಹೊಂದಿದ್ದ...

ಚೆನ್ನಾಗಿ ಉಪಾಯ ಮಾಡಿ..
ಗೋಡೆಗಳನ್ನು ಕೊರೆದು.. ಮನೆಯ ಒಳಗೆ ಹೋಗುತ್ತಿದ್ದ..

ಆದರೆ ....

ಮನೆಯ ಒಳಗಡೆ ಏನಾದರೂ ಎಡವಟ್ಟುಗಳನ್ನು ಮಾಡಿಕೊಂಡು ...
ಚೆನ್ನಾಗಿ ಒದೆ ತಿಂದು ಆಸ್ಪತ್ರೆಗೆ ಸೇರುತ್ತಿದ್ದ...

ಪ್ರತಿ ಬಾರಿಯೂ ಹೀಗೆ ಆಗತೊಡಗಿತು...


ಮರಿಕಳ್ಳನಿಗೆ ಬಹಳ ಬೇಸರವಾಯಿತು..


ಮತ್ತೆ ಗುರು ಕಳ್ಳನ ಬಳಿ ಹ್ಯಾಪು ಮೋರೆ ಹಾಕಿಕೊಂಡು ಬಂದ...


"ಎಲೈ ಮರಿಕಳ್ಳನೇ..


ನೀನು ಚಿಂತಿಸ ಬೇಡ..

ನನ್ನ "ವಿಶೇಷ ತರಬೇತಿ ಕಾರ್ಯಗಾರವನ್ನು ಸೇರಿಕೋ...
ಕೇವಲ ಎರಡು ವರ್ಷ..
ನಿನಗೆ ನನ್ನ ವೃತ್ತಿ ಕುಶಲತೆಯನ್ನೆಲ್ಲ ಧಾರೆ ಎರೆಯುತ್ತೇನೆ..."

ಮರಿ ಕಳ್ಳ ಮನದಲ್ಲೇ ಲೆಕ್ಕಾಚಾರ ಹಾಕಿದ..


"ಎರಡು ವರ್ಷ ಶಿಷ್ಯ ವೃತ್ತಿ ಅಂದರೆ ..

ಕಡಿಮೆ ವೇತನದಲ್ಲಿ ಆತನ ಲಾಭಕ್ಕಾಗಿ ಕೆಲಸ ಮಾಡುವದು..."

ಮರಿ ಕಳ್ಳನ ಬಳಿ ಬೇರೆ ದಾರಿ ಇರಲಿಲ್ಲ..

ಗುರು ಕಳ್ಳನ ಮಾತಿಗೆ ಒಪ್ಪಿದ..

ಅಂದು ರಾತ್ರಿ ..

ಗುರು ಕಳ್ಳ ಒಬ್ಬ ಶ್ರೀಮಂತನ ಮನೆಯನ್ನು ತನ್ನ ಶಿಷ್ಯರಿಗಾಗಿ ಆಯ್ದು ಕೊಂಡಿದ್ದ...

ರಾತ್ರಿ..

ಮನೆಯ ಗೋಡೆಯನ್ನು ಕೊರೆದು ಒಳಗೆ ಹೋಗಿ...
ತಿಜೋರಿಯ ಬೀಗವನ್ನು ಶಬ್ಧ ಮಾಡದೆ ಒಡೆದು...
ಅಲ್ಲಿರುವ "ನಗ.. ನಾಣ್ಯಗಳನ್ನು" ಒಂದು ಚೀಲದಲ್ಲಿ ತುಂಬಿ ಕೊಂಡರು...

ಶಿಷ್ಯರೆಲ್ಲ ಗುರುವಿನ ಚಾಕಚಕ್ಯತೆಯನ್ನು ಗಮನಿಸುತ್ತಿದ್ದರು..


ಹಾಗೆ ಕೋಣೆಯ ಹೊರಗೆ ಬರುವಾಗ ಅಜಾಗರುಕತೆಯಿಂದಾಗಿ..

ಗುರು ಕಳ್ಳ ಮಲಗಿದ್ದವರ ಕಾಲನ್ನು  ತಾಗಿಸಿಕೊಂಡು ಬಿಟ್ಟ... !

ಶಿಷ್ಯರೆಲ್ಲ ಉಸಿರು ಬಿಗಿ ಹಿಡಿದು ಗಮನಿಸುತ್ತಿದ್ದರು.... !


ಮಲಗಿದ್ದವ .. 

ಮುಸುಕು ತೆಗಿಯದೆ..

"ಯಾರದು...? ".. ಎಂದು ಕೇಳಿದ ...!


ಗುರು ಕಳ್ಳ  ಮೆಲ್ಲನೆ  ....


"ಮೀಯಾಂವ್... 

ಮೀಯಾಂವ್..."  ಅಂದ... !

"ಛೇ... 

ಧರಿದ್ರ.. ಬೆಕ್ಕು...
ಮಲಗಲಿಕ್ಕೂ ಬಿಡೋದಿಲ್ಲ." 
ಎಂದು ಮಲಗಿದ್ದವ ಮತ್ತೂ ಮುಸುಕು ಎಳೆದು ಮಲಗಿ ಬಿಟ್ಟ...!

ಹೊರಗೆ ಬಂದ ಶಿಷ್ಯ ಕಳ್ಳರೆಲ್ಲ ಗುರುವಿಗೆ ಅಭಿನಂದನೆ ಸಲ್ಲಿಸಿದರು...


ಮರಿಕಳ್ಳ ಮತ್ತೆ ಲೆಕ್ಕಾಚಾರ ಹಾಕಿದ...


"ಗುರು ಕಳ್ಳ ಮಾಡಿದ ಇಂಥಹ ಉಪಾಯಗಳು ತನ್ನ ಬಳಿಯೂ ಇದೆ..

ಮತ್ಯಾಕೆ ..
ಇವನ ಬಳಿ ಬಿಟ್ಟಿಯಾಗಿ ಕೆಲಸ ಮಾಡಬೇಕು...?..."

ಮರಿ ಕಳ್ಳ ...

ಗುರು ಕಳ್ಳನ ಬಳಿ ತರಬೇತಿ ಕಾರ್ಯಾಗಾರವನ್ನು ಬಿಟ್ಟು ..
ಮತ್ತೆ ಸ್ವತಂತ್ರವಾಗಿ ದಂಧೆ ಶುರು ಮಾಡಲು ನಿರ್ಧರಿಸಿದ...

ಅಂದು ರಾತ್ರಿ...


ಒಂದು ಮನೆಯ ಗೋಡೆ ಕೊರೆದು...

ನಿಧಾನವಾಗಿ ಒಳಗೆ ಹೋಗಿ...
ತಿಜೋರಿಯ ಬೀಗ ಒಡೆದು ಅಲ್ಲಿನ ಸಂಪತ್ತುಗಳನ್ನು ಮೂಟೆ ಕಟ್ಟಿಕೊಂಡ..

ಬಹಳ ಹೆಮ್ಮೆಯಾಯಿತು ತನ್ನ ಚಾಕಚಕ್ಯತೆ ಬಗೆಗೆ..


ಸಾವಾಕಾಶವಾಗಿ ಹೊರಗೆ ಬರುವಾಗ ಮಲಗಿದ್ದವರೊಬ್ಬರನ್ನು ತುಳಿದು ಬಿಟ್ಟ...


ಮಲಗಿದ್ದವ ..

ಮುಸುಕು ತೆಗಿಯದೆ "ಯಾರದು...?" ಅಂತ ಕೇಳಿದ...

ಮರಿ ಕಳ್ಳನಿಗೆ ಖುಷಿಯಾಯಿತು...

ಎಲ್ಲವೂ ನಿನ್ನೆಯ ತರಹವೇ ಆಗುತ್ತಿದೆ... !

ಸಂತೋಷದಿಂದ  ಜೋರಾಗಿ  ಹೇಳಿದ...


"  ಬೆಕ್ಕು.... .............. !! 

ಇದು ....ಬೆಕ್ಕು... !!

...       ....          ..........          ........  


ಮುಂದೆ ಏನಾಯ್ತು ಅಂತಿರಾ ...?


ಮತ್ತೆ ಏನಿಲ್ಲ ..


ಚೆನ್ನಾಗಿ ಒದೆ ತಿಂದು ..

ಹಿಗ್ಗಾ ಮುಗ್ಗ ಥಳಿಸಿಕೊಂಡು ಆಸ್ಪತ್ರೆ ಸೇರಿದ...

.............  ...............  .............  ..............................


ಪುಸ್ತಕದ  ಓದು ಎಷ್ಟೇ ಇದ್ದರೂ...


ನಮ್ಮ ಬಳಿ..

ನಮ್ಮದಾಗಿ ಕೊನೆಯತನಕ ಇರುವದು ....

"ನಮ್ಮ ..

ಪ್ರಯತ್ನ ... ಅನುಭವ..
ಸ್ವಂತಿಕೆ   ಮಾತ್ರ..."