Friday, October 22, 2010

ನೀವು ಏನು ತಿಂತ್ತೀರ್ರಿ..?.. ಮಾರಾಯ್ರೇ..? ..?..

  (part 1)



ಮೈ ಬಣ್ಣಗಳು  ಬದಲಾಗುತ್ತಿರುತ್ತವೆ...


ನನ್ನಂಥಹ ಕಾಂಟ್ರಾಕ್ಟರುಗಳ ಮೈ ಬಣ್ಣ ನೋಡಿ ಕೆಲಸದ ಬಗೆಗೆ ಹೇಳ
ಬಹುದು..


ಹೇಗೆ  ಅಂತೀರಾ?


ಬಣ್ಣ ಬಿಳಿದಾಗಿ, ಫ಼್ರೆಷ್ ಆಗಿದ್ದರೆ.. 
ಇನ್ನೂ ಹೊಸ ಕೆಲಸ ಶುರುವಾಗಿಲ್ಲ ಅಂತ ಅರ್ಥ...
ನಾವು ಕಟ್ಟುತ್ತಿರುವ ಮನೆಯ ಗೃಹಪ್ರವೇಶ ಹತ್ತಿರ ಬಂದಿದೆ ಅಂತಲೂ ಆಗಬಹುದು..


ಸ್ವಲ್ಪ ಕಪ್ಪಾಗಿ .. ಸುಟ್ಟ ಹಾಗೆ ಕಾಣಿಸಿದರೆ ಹೊಸ ಕೆಲಸ ಶುರುವಾಗಿದೆ ಅಂತ ..


ನಮ್ಮ ಮೈ ಬಣ್ಣಗಳಿಗೂ.....
ನಮಗೆ ಹೊಸ  ಕೆಲಸ.. 
ಹೊಸ ಪ್ರಾಜೆಕ್ಟ್ ಸಿಕ್ಕ ಸಂತೋಷಕ್ಕೂ  ಸಂಬಂಧವೇ ಇರುವದಿಲ್ಲ...!


ನಮಗೆ ಹೊಸ ಕೆಲಸ ಶುರುವಾದ ಸಂಭ್ರಮದಲ್ಲಿ  "ಕಪ್ಪಾಗಿ" ಬಿಡ್ತಿವಿ...


ನಮ್ಮ ಹೊಸ ಕೆಲಸಗಳು  ಶುರುವಾಗುವದು  ನೆರಳಿನ ಅಡಿಯಲ್ಲಿ ಅಲ್ಲವಲ್ಲ...
ಸುಡು ಬಿಸಿಲಿನಲ್ಲಿ....


ಹಿಂದಿನ ದಿನವಿಡಿ ಹೊಸ ಕೆಲಸದ ಮಾರ್ಕಿಂಗ್ ಮಾಡಿ ಸಿಕ್ಕಾಪಟ್ಟೆ  ದಣಿದಿದ್ದೆ..
ಕೆಟ್ಟ ರಣ ಬಿಸಿಲಿನ ಝಳ, ಸೆಖೆಯಿಂದ ಸುಟ್ಟು  ಕರಕಲಾಗಿದ್ದೆ..


ಬೆಳಿಗ್ಗೆ  ಆರು ಗಂಟೆಯಾಗಿದ್ದರೂ ಇನ್ನೂ ಎದ್ದಿರಲಿಲ್ಲ..
ಮೊಬೈಲ್ ರಿಂಗಾಯಿತು..


ಯಾರಪ್ಪ ಇದು ಅಂತ  ಕಣ್ಣೊರಿಸಿಕೊಳ್ಳುತ್ತ  ನೋಡಿದೆ...
ಹೊಸ ಮನೆ ಮಾಲಿಕರು !!
ಲಗುಬಗೆಯಿಂದ ಕಾಲ್ ತೆಗೆದು ಕೊಂಡೆ..


"ಸರ್.. ನಮಸ್ಕಾರ.."


"ನಿಮ್ಮ  ನಮಸ್ಕಾರಕ್ಕಿಷ್ಟು ಬೆಂಕಿ ಹಾಕ... !
ಏನ್ರಿ.. ನೀವು..?
ಏನು ತಿಂತೀರಾ?
ಅನ್ನ ತಿಂತಿರೋ..?
ಹೊಲಸು ತಿಂತಿರೋ?..."


ನಾನು ಗಡಬಡೆಯಿಂದ   ಕಂಗಾಲಾಗಿ ಹೋದೆ..


"ಏನ್ ಸಾರ್ ಏನಾಯ್ತು..!!..? "


ಕೇವಲ ಮಾರ್ಕಿಂಗ್ ಮಾಡಿ... 
ಮಣ್ಣು ಕೆಲಸದವರಿಗೆ ಕೆಲಸ ಮಾಡಲು ಹೇಳಿ ಬಂದಿದ್ದೆ...
ಫೌಂಡೇಷನ್  ಅಗೆಯುತ್ತಿದ್ದರು...
ಇದರಲ್ಲಿ ಏನು ತಪ್ಪಾಗಲಿಕ್ಕೆ ಸಾಧ್ಯ?


" ಏನಾ...ಯ್ತಾ...? ?
ನೀವು  ಸೈಟಿಗೆ ಬರ್ರಿ...
ಇದೇ  ಥರಹ ಮನೆ ಕಟ್ಟಿದ್ರೆ ದೇವ್ರೇ.. ಗತಿ...!
ಯಾರ್ರಿ ನಿಮಗೆ ಕೆಲಸ ಹೇಳಿ ಕೊಟ್ಟಿದ್ದು...?


ನೀವು.... ಏನು ತಿಂತ್ತೀರ್ರಿ..?.. ಮಾರಾಯ್ರೇ..? "


ನನಗೆ ಏನು ಹೇಳಬೇಕೆಂದು ತಿಳಿಯದೆ ಬಾಯಿ ಒಣಗಿತು...
ಮಾತನಾಡಲು ತಡವರಿಸಿದೆ..


"ಸರ್.. ನಾನು  ಸೈಟಿಗೆ  ಬರ್ತಾ ಇದಿನಿ  .. ಬಂದು ನೋಡ್ತೀನಿ.."


"ಆಯ್ತು.. ಜಲ್ದಿ ಬನ್ರೀ...
ಏನು  ಕಾಂಟ್ರಾಕ್ಟರ್ರೋ.. ಏನು ತಿಂತ್ತಾರ್ರೋ...?"


ಗೊಣಗುತ್ತ ಫೋನ್ ಇಟ್ಟರು...


ನನಗೆ ಕೈಕಾಲು ಆಡದಂತಾಯಿತು...


ಏನು ತಪ್ಪಾಗಿರ ಬಹುದು...?


ಲಗುಬಗೆಯಿಂದ ಸ್ನಾನ ಮಾಡಿ..
ತಿಂಡಿ ತಿನ್ನದೆ..  ಸೈಟಿಗೆ ಓಡಿದೆ...


ಅವರು ನನಗಾಗಿಯೇ ಕಾಯುತ್ತಾ ಇದ್ದರು..


ನನ್ನನ್ನು ಕಂಡವರೇ.. ದೊಡ್ಡ ಧ್ವನಿಯಿಂದ ಕೂಗಾಡಲು ಶುರು ಮಾಡಿದರು...


"ಏನ್ರೀ.. ನೀವು...?
ಇಂಥಾ ಕೆಲಸ ಮಾಡ್ತಿರೇನ್ರಿ...? 
ನೀವು ಕಟ್ಟೋ ಬಿಲ್ಡಿಂಗಿಗೆ  ಕ್ವಾಲಿಟಿ ಬೇಡ್ವಾ?"


ನನಗೆ ಅವರ ಧ್ವನಿಕೇಳಿ ಒಂಥರಾ ಆಯಿತು..


ನಾನು ಯಾರ ಬಳಿಯೂ ಕೂಗಾಡುವವನಲ್ಲ...
ನನ್ನ ಕೆಲಸಗಾರರ ಬಳಿಯೂ ಸಹ...
ಅವರ ಕೆಲಸ ಇಷ್ಟವಾಗದಿದ್ದರೆ..
ಅವರು ತಪ್ಪು ಮಾಡಿದ್ದರೆ... ಅವರ ಲೆಕ್ಕಾಚಾರ ಮಾಡಿ ಕಳಿಸಿ ಬಿಡುತ್ತೇನೆ...


"ಏನಾಗಿದೆ.. ಸರ್... ಏನಾಯ್ತು..?"


ಅವರು ನನ್ನನ್ನು  ಕರೆದು  ಮಾರ್ಕಿಂಗ್ ಪಿಲ್ಲರ್ ತೋರಿಸಿದರು...
ಅದನ್ನು ಮಣ್ಣಿನಿಂದ ಕಟ್ಟಿದ್ದೇವು...
ಅದರ ಟಾಪ್ ನಲ್ಲಿ ಸಿಮೆಂಟು ಹಾಕಿ ಮಾರ್ಕಿಂಗ್ ಮಾಡಿದ್ದೇವು...


"ಸರ್.. ಇದು ಮಾರ್ಕಿಂಗ್ ಪಿಲ್ಲರ್... ಇದರಲ್ಲಿ ಏನಾಗಿದೆ..?"


"ಹೆಗಡೆಯವರೆ.. 
ಏನಾಯ್ತು ಅಂತ ಕೇಳ್ತೀರಲ್ರಿ...!
ಮಣ್ಣಲ್ಲಿ ಕಟ್ಟಿದ್ದಲ್ದೆ.. ಅದರ ಮೇಲೆ ಸಿಮೆಂಟು  ಒರೆಸಿ  ಕಣ್ಣು ಕಡ್ತೀರಲ್ರಿ...
ಯಾಕ್ರೀ.. ಇಂಥಹ ಕೆಲಸ...?
ನೀವು  ಏನು ತಿಂತ್ತೀರ್ರಿ...?"


"ಸರ್..
ಇದು  ತಾತ್ಕಾಲಿಕವಾಗಿ ಬೇಕಾಗುತ್ತದೆ...
ಅದಕ್ಕಾಗಿ ಮಣ್ಣಲ್ಲೇ ಕಡ್ತೀವಿ..."


"ನೀವು ಬಿಲ್ಡಿಂಗೂ.. ಹೀಗೆ  ಕಡ್ತೀರೇನ್ರಿ...?
ನಮಗೆ ಮೋಸ ಆಗೋಯ್ತು... 
ಎಂಥಾ  ಜನ ನೀವು...?
ತಪ್ಪು ಮಾಡೋದಲ್ದೆ... ಸಮರ್ಥನೆ ಮಾಡಿಕೊಳ್ತೀರಲ್ರಿ...
ಲಜ್ಜೆಗೆಟ್ಟ ರಾಜಕೀಯದವರ ಥರ.."


ಅವರ ಕೂಗಾಟ ಕೇಳಿ ...
ಅಕ್ಕ ಪಕ್ಕದ ಮನೆಯವರು   ಹೊರಗೆ ಬಂದು ಕೈಕಟ್ಟಿಕೊಂಡು ಆನಂದಿಸುತ್ತಿದ್ದರು.....
ಕೆಲವು ಜನ ಕಿಡಕಿಯಿಂದ ಮಜಾ ತೆಗೆದು ಕೊಳ್ಳುತ್ತಿದ್ದರು..


ನನಗೆ ಅವಮಾನವಾದಂತಾಯಿತು..


ಇವರಿಗೆ  ಹೇಗೆ ತಿಳಿಸಿ ಹೇಳುವದು...?


ಕೆಲಸ ಈಗ ತಾನೆ ಶುರುವಾಗಿದೆ... ಇನ್ನು ಮುಂದೆ ಹೇಗೆ...?
ಹಣಕಾಸಿನ ವಿಚಾರ ಹೇಗೆ...?


ನನಗೆ ತಲೆ ಕೆಟ್ಟು ಹೋದಂತಾಯಿತು...


ಅವರು ಒಂದೇ ಸವನೆ  ಕೂಗಾಡುತ್ತಿದ್ದರು...


ನನಗೂ... ರೇಗಿ ಹೋಯಿತು...
ಏನಾಗ್ತದೊ ಅದು ಇವತ್ತೇ  ಆಗಲಿ.... 
ಹೆಚ್ಚೆಂದರೆ.. ಈ  ಕೆಲಸ   ಕೈ ತಪ್ಪಿ ಹೋಗ ಬಹುದು...


ಆದರೆ  ಈ ಅವಮಾನ ಹೇಗೆ ಸಹಿಸುವದು..?  


ನಾನೂ.. ಕೂಗಾಡಿದೆ....


"ಏನ್ರೀ ನೀವು.. ?
ಅರ್ಥಾನೆ ಮಾಡಿಕೊಳ್ಳೋದಿಲ್ಲವಲ್ರೀ...
ಹಿರಿಯರು... ವಯಸ್ಸಲ್ಲಿ ದೊಡ್ಡವರು  ಅಂತ ಸುಮ್ನೆ ಇದ್ರೆ... 
ಒಂದೇ ಸವನೆ ಕೂಗ್ತೀರಲ್ರಿ...?
ನೋಡ್ರಿ....
ಆ ಪಿಲ್ಲರ್  ಮತ್ತೆ ಬೇಕಾಗೋದಿಲ್ಲ...
ಎರಡು ದಿನ ಬಿಟ್ಟು ನಾವೇ ಅದನ್ನ  ಒಡೆದು ಹಾಕ್ತೇವೆ...
ಅದಕ್ಕೆ ಯಾಕೆ  ಕ್ವಾಲಿಟಿ...? 
ಅರ್ಥಾನೆ ಮಾಡ್ಕೋತಾ ಇಲ್ಲವಲ್ಲ..."


 ಏರಿದ ಧ್ವನಿ ಕೇಳಿ.. ಅವರು ಸ್ವಲ್ಪ  ತಣ್ಣಗಾದರು..


"ಓಹೋ... 
ಹೀಗೋ  .. ವಿಷಯ...!
ಈ ವಿಷಯ ಹೀಗೆ ಹೇಳಲೇ ಇಲ್ಲ ನೀವು...
ನೀವು ಹೀಗೆ ಹೇಳಿದ್ರೆ ನನಗೂ ಅರ್ಥ ಆಗಿರೋದು....
 ಓಕೆ.. ಓಕೆ..
ನಾನು  ಈ ಥರಹ ಹೇಳ್ದೆ ಅಂತ ಬೇಸರ ಮಾಡ್ಕೊ ಬೇಡಿ..
ಬನ್ನಿ ಇಲ್ಲೇ  ಟೀ.. ಕುಡಿದು ಬರುವ..."


ಅಂತ ನನ್ನ ಕೈ ಹಿಡಿದು ಕರೆದು ಕೊಂಡು ಹೊರಟರು..


ಅಕ್ಕಪಕ್ಕದ ಮನೆಯವರೂ ಒಳಕ್ಕೆ ಹೋದರು...


ನನಗೆ ಸೋಜಿಗವಾಯಿತು...
ಇಲ್ಲಿಯವರೆಗೆ  ಕೂಗಾಡಿದ  ಮನುಷ್ಯ ಇವರೇನಾ...?
ಎಂಥಹ ಜನ ಇವರು...?


ಇವರೊಡನೆ ವ್ಯವಹಾರ ಮಾಡ ಬಹುದಾ..?
ಕೊನೆಯಲ್ಲಿ  ಸರಿಯಾಗಿ ಲೆಕ್ಕಾಚಾರ ಮಾಡಿ ಹಣ ಕೊಡ ಬಹುದಾ...?
ಇವರ ಕೆಲಸ ಈಗಲೇ....   ನಿಲ್ಲಿಸಿ ಬಿಡಲಾ...?


ಇವರೊಡನೆ  ವ್ಯವಹಾರ ಮಾಡ ಬಹುದಾ..? 
ಬೇಡವಾ ?.... 


ಮನುಷ್ಯರನ್ನು  ಹೇಗೆ  ಅರ್ಥ ಮಾಡಿಕೊಳ್ಳ ಬೇಕು...?


ತಲೆ ಕೆರೆದುಕೊಳ್ಳುತ್ತ... ಅವರ ಸಂಗಡ ಹೆಜ್ಜೆ ಹಾಕಿದೆ...


ಮನುಷ್ಯರನ್ನು... 
ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ  ಯಂತ್ರಗಳು  ಅವಶ್ಯವಾಗಿ ಬೇಕಿದೆ....




( ಸತ್ಯ ಘಟನೆ....)





Monday, October 4, 2010

......ಬ ದು ಕು.......




ಇದ್ದಕ್ಕಿದ್ದಂತೆ... ಮೈಯೆಲ್ಲ ಬೆವರಿತು...

ಎದೆಯಲ್ಲಿ ಒಂದು ತರಹದ ನೋವಿನ ಛಳಕು...!
ಮೈ ಅದುರತೊಡಗಿತು...!
ಸಾವಿರಾರು  ಸೂಜಿಗಳಿಂದ  ನನ್ನ ಹೃದಯವನ್ನು  ಚುಚ್ಚಿದಂತಾಯಿತು..

ತಡೆಯಲಾರದ ನೋವು... !

ಜೋರಾಗಿ ಕೂಗಬೇಕೆಂದು ಕೊಂಡೆ...
ಧ್ವನಿ  ಹೊರಗೆ ಬರಲಿಲ್ಲ....

ಅಯ್ಯೋ..  !!

ಇದೇ.. ನನ್ನ ಸಾವಾ...? 
ನಾನು ಸಾಯುತ್ತಿದ್ದೇನಾ..?  ...

ಅಯ್ಯೋ.. !
ಅಸಾಧ್ಯ ನೋವು... ನೋವು...!

ನನ್ನ  ಹೃದಯ ಒಡೆದು ಹೋಗುತ್ತಿದೆಯಾ....?

ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡೆ...

ಬದುಕಿನ  ಕಟ್ಟಕಡೆಯ  ನೋವು  ಇದೇನಾ?  

ನಿಲ್ಲಲಾಗಲಿಲ್ಲ.... 
ಕಣ್ಣು ಕತ್ತಲೆ ಸುತ್ತಿ ಬಂತು...

ನಾನು ಬೀಳುತ್ತಿರುವೆ... ಅಯ್ಯೋ.. ಆಯ್ಯೋ....!!

.... ..........  ....... ....

ಎಚ್ಚರಾಗುತ್ತಿದೆ... 
ಕಣ್ಣುಬಿಡಲು ಪ್ರಯತ್ನಿಸಿದೆ.....
ಮೆಲ್ಲಗೇ... ಕಣ್ಣು ಬಿಟ್ಟೆ... 
ಮಂಜು.. ಮಂಜಾಗಿ.. ಅಸ್ಪಷ್ಟವಾಗಿ  ಕಾಣಿಸಿತು...

ಕಣ್ಣು  ಬಿಡಲಾಗಲಿಲ್ಲ...

"ನೋಡಿ  ಇವರ ಹತ್ತಿರದವರು ಯಾರು.. ?
 ಅವರನ್ನು ಸ್ವಲ್ಪ ಅರ್ಜಂಟಾಗಿ ಕರೆಸಿಬಿಡಿ...


ಇವರು ಹೆಚ್ಚೆಂದರೆ ಇನ್ನೆರಡು ದಿನ  ಬದುಕ ಬಹುದು...


ಮೊದಲೇ ಬಂದಿದ್ದರೆ ...ಏನಾದರೂ ಪ್ರಯತ್ನ ಮಾಡ ಬಹುದಿತ್ತು... 
ಈಗ ಪರಿಸ್ಥಿತಿ ಕೈ ಮೀರಿದೆ.."

ಅಂದರೆ....! ?  
ನಾನು ಸಾಯ್ತಾ ಇದ್ದೀನಾ?
ಇದು ನನ್ನ ಕೊನೆ..  !

ಮತ್ತೆ  ಸೂಜಿ  ಚುಚ್ಚಿದ ನೋವು !

" ಡಾಕ್ಟ್ರೆ..
ಇವರಿಗೆ  ಹತ್ತಿರದವರು ಯಾರೂ ಇಲ್ಲ...
ಹೆಂಡತಿಯೊಡನೆ  ಪ್ರತ್ಯೇಕವಾಗಿದ್ದಾರೆ.."
ಜೀವನ ಪೂರ್ತಿ  ಹಣ.. ಹಣ ಅಂತ  ಹಣದ ಹಿಂದೆಯೇ.. ಬಿದ್ದಿದ್ದರು..

ತುಂಬಾ ಪ್ರ್ಯಾಕ್ಟಿಕಲ್ ಮನುಷ್ಯ..
ಪಕ್ಕಾ  ವ್ಯವಹಾರಸ್ಥ..


ಇವರ ಮಕ್ಕಳೂ.. ಸಹ ಇವರ ಹತ್ತಿರ ಇಲ್ಲ....
  
ತನ್ನ ಮಕ್ಕಳಿಗೆಲ್ಲ  ಪ್ರತ್ಯೇಕ ಮನೆ ಮಾಡಿಕೊಟ್ಟು ಇವರು 

" ಹೌದಾ ? ..
ಇವರ ಮಕ್ಕಳಿಗೆ ಕರೆಸಿ.. 
ಇವರ ಮಡದಿಗೂ ತಿಳಿಸಿ...
ಇವರನ್ನು ಮನೆಗೆ ಕರ್ಕೊಂಡು ಹೋಗ್ತಾರೋ.. 
ಅಥವಾ ಜೀವ ಹೋಗೋ ತನಕ ಇಲ್ಲೇ ಇಡ್ತಾರೋ ಅವರು ನಿರ್ಣಯಿಸಲಿ..
ನಮ್ಮ ಬಿಲ್ ಯಾರು ಕೊಡುತ್ತಾರೆ.. ನೋಡೋಣ..
ನಾನು ಆಮೇಲೆ ಬರ್ತೇನೆ.."

ಬಹುಷಃ ... ಡಾಕ್ಟರ್ ಹೋದರು ಅನಿಸುತ್ತದೆ..

ನನಗೆ  ಷಾಕ್.. !!

ಅಯ್ಯೋ... ದೇವರೇ.. !!!
ನಾನು ಸಾಯ್ತಾ ಇದ್ದೀನಾ?..

ಮೆಲ್ಲಗೇ  ಕಣ್ಣು ಬಿಟ್ಟೆ...
ನನ್ನ ಹತ್ತಿರದದಲ್ಲಿದ್ದವರು  ಹೆಂಡತಿಗೆ ಕೂಗಿ ಕರೆದರು...

ನನ್ನಾಕೆ ಓಡೋಡಿ ಬಂದಳು... !

"ಆಯಾಸ ಮಾಡ್ಕೋಬೇಡಿ...  ಆಸ್ಪತ್ರೆಯಲ್ಲಿದ್ದೀರಿ...
ಏನೋ  ಸಣ್ಣ ತೊಂದರೆಯಾಗಿದೆ.. 
ಎಲ್ಲವೂ ಸರಿಯಾಗುತ್ತದೆ ಅಂತ ಡಾಕ್ಟರ್ ಹೇಳಿದ್ದಾರೆ.."

ನನ್ನಾಕೆ  ಮುಖ ನೋಡಿದೆ...

ಎಂಥಹ ಮುಗ್ಧೆ  ನನ್ನಾಕೆ.. !

ಅಡಿಗೆ ಮನೆ.. 
ದೇವರ ಮನೆಯಲ್ಲೇ... ತನ್ನ ಜೀವನ ಪೂರ್ತಿ ಕಳೆದಳು..  !!


ಕೇವಲ ನನ್ನ ಬೇಕು ಬೇಡಗಳಿಗಾಗಿ  ಬದುಕಿದಳು....


ಏನೇನೋ.. ವ್ರತಗಳು...!
ವಾರಕ್ಕೆ ಮೂರು ದಿನ ಉಪವಾಸಗಳು... !

"ಯಾಕೆ ..  ಈ ಥರಹ ಉಪವಾಸ ಮಾಡ್ತಿಯಾ? 
ಅಪರಾಧಿ ಮನೋಭಾವನೆ ದೇವರ ಭಕ್ತಿಗೆ  ಕಾರಣವಂತೆ..
ನಿನ್ಯಾಕೆ ಇಷ್ಟೆಲ್ಲಾ ವ್ರತ ಮಾಡ್ತಿಯಾ..?" 
ಅಂತ ಒಮ್ಮೆ ಕೇಳಿದ್ದೆ...

"ನೋಡಿ.. 
ನಿಮಗೆ ದೇವರ ಮೇಲೆ ಭಕ್ತಿ ಇಲ್ಲ.. .
ನನಗೆ  ಇದೆ.. 
ಅದನ್ನಾದರೂ ಮಾಡಲು  ಬಿಡಿ.. 
ದಯವಿಟ್ಟು.."

ಇವಳಿಗೆ  ಜೀವನ ಪೂರ್ತಿ ಎಷ್ಟೆಲ್ಲ ತೊಂದರೆ ಕೊಟ್ಟೆ..!
ಛೇ.. ! 
ಹೊರಗಿನ ಪ್ರಪಂಚ ನೋಡಲೂ ಸಹ ಬಿಡಲಿಲ್ಲ... 
ಮನೆಯಲ್ಲೇ ಬಂಧಿಸಿ ಇಟ್ಟುಬಿಟ್ಟೆ.. !

ಜೀವನ ಪೂರ್ತಿ..ನನ್ನ ಸೇವೆ....
ಅಡುಗೆ  ಮನೆ.. ದೇವರ ಮನೆಯಲ್ಲೇ ಇಟ್ಟುಬಿಟ್ಟೆ..

ನಾನು  ಪೂರ್ತಿ  ನನ್ನ ವ್ಯವಹಾರ... ಹಣ.. ಅಂತ  ಮುಳುಗಿ ಹೋದೆ....
ನನ್ನವಳ ಬಗೆಗೆ ವಿಚಾರವನ್ನೇ ಮಾಡಿಲ್ಲ...

ನಾನು ಹೋದ ಮೇಲೆ ಇವಳ ಗತಿ..? ..? 
ಅಯ್ಯೋ ದೇವರೆ..!

ನನ್ನ ಕಣ್ಣೆದುರೇ.. ನನ್ನಾಕೆ  ಹೋಗಿಬಿಟ್ಟಿದ್ದಾರೆ ಒಳ್ಳೆಯದಿತ್ತು....
ಏನು ಮಾಡಲಿ...?


"ನೋಡು... 
ನಾನು ಮನೆಗೆ ಹೋಗ ಬೇಕು...
ಸ್ವಲ್ಪ ಅರ್ಜೆಂಟಾಗಿ  ಮಕ್ಕಳನ್ನೆಲ್ಲ ಕರೆಸು..."

ಮಕ್ಕಳೆಲ್ಲ ಬಂದರು...
ನಾನು ಹಠ ಹಿಡಿದು  ಮನೆಗೆ ಬಂದೆ...

ನಾನು ತುರ್ತಾಗಿ ನನ್ನ  ಮಡದಿಗೆ...
ಅವಳ  ಮುಂದಿನ ಬದುಕಿಗೆ... ಏನಾದರೂ  ಮಾಡಬೇಕಿತ್ತು..

ದೊಡ್ಡ ಮಗನನ್ನು ಕರೆಸಿದೆ...

ಆತ ತನ್ನ ಹೆಂಡತಿಯೊಡನೆ ಬಂದ...
ತನ್ನ ಮಗನನ್ನು ಎತ್ತಿಕೊಂಡಿದ್ದ.. 
ಅವನ ಹೆಂಡತಿ  ಅವನ ಕೈ ಹಿಡಿದುಕೊಂಡಿದ್ದಳು...

ನನಗೆ ನನ್ನ ಹೆಂಡತಿ ನೆನಪಾದಳು...

ನಾನು  ನನ್ನ ಮಡದಿಗೆ ಸ್ವಲ್ಪವಾದರೂ ಪ್ರೀತಿ ಕೊಡಬೇಕಿತ್ತು...

ಛೇ... !


ನಾನು  ನನ್ನ ಜೀವನದಲ್ಲಿ ಎಲ್ಲವನ್ನೂ ವ್ಯವಹಾರವಾಗಿ ಮಾಡಿದೆ....
ನನ್ನ ಮದುವೆಯನ್ನೂ ಕೂಡ...
ಮಾವನ ಬಳಿ ಹಣ, ಸೈಟು ತೆಗೆದು ಕೊಂಡಿದ್ದೆ....


ಜೀವನ ಪೂರ್ತಿ  ನಾನು ಓಡುತ್ತಲೇ.. ಕಳೆದು ಬಿಟ್ಟೆ....
ಒಮ್ಮೆಯಾದರೂ... ಸ್ವಲ್ಪ ನಿಂತು...
ನನ್ನ ಬದುಕಿನಲ್ಲಿ  ಸ್ವಲ್ಪ   ಹಿಂತಿರುಗಿ ನೋಡ ಬೇಕಿತ್ತು...

ಬಹಳ ದೊಡ್ಡ ತಪ್ಪು ಮಾಡಿದೆ...
ಬದುಕಿನ ಪೂರ್ತಿ ಹಣದ ಹಿಂದೆ ಬೀಳಬಾರದಿತ್ತು...

" ನೋಡು... ಮಗನೆ.. 
ಡಾಕ್ಟ್ರು ಹೇಳೀದ್ದಾರೆ.. 
ನಾನು  ಇನ್ನೊಂದು ದಿನ ಬದುಕಿದರೆ ಹೆಚ್ಚು...


ನನ್ನ ಜೀವನ ಪೂರ್ತಿ.. 
ನಿಮ್ಮ ಬದುಕನ್ನು ಚೆನ್ನಾಗಿಡಲು ದುಡಿದೆ...


ನಿಮಗೆಲ್ಲ  ಪ್ರತ್ಯೇಕ ವ್ಯವಹಾರ ಮಾಡಿಕೊಟ್ಟು ನಿಮ್ಮ  
ಜೀವನಕ್ಕೊಂದು ನೆಲೆ ಮಾಡಿದೆ..


ನಾನು ಸಾಯ್ತಾ ಇದ್ದೀನಿ..
ನಾನು ಸತ್ತ ಮೇಲೆ.... 
ನಿನ್ನ ಅಮ್ಮ...  "

ನನಗೆ ದುಃಖವಾಯಿತು.. 
ಗಂಟಲು ಬಿಗಿದು ಕೊಡಿತು..

ಹೇಳಬೇಕಿದ್ದ ಮಾತೆಲ್ಲ  ಕಣ್ಣಲ್ಲಿ ನೀರಾಯಿತು..

ಎಂಥಹ ಅಸಹಾಯಕತೆ  ಇದು.. !

"ಅಪ್ಪಾ.. ಆಯಾಸ ಮಾಡ್ಕೋಬೇಡಿ.. 
ನಿಶ್ಚಿಂತೆಯಾಗಿರಿ..
ನಮ್ಮನೆಯ ಹತ್ತಿರ  ಒಂದು ವೃದ್ಧಾಶ್ರಮವಿದೆ.. 
ಬಹಳ ಚೆನ್ನಾಗಿದೆ..
ಅದನ್ನು ನಡೆಸುವವರು  ನನಗೆ ಬಹಳ ಬೇಕಾದವರು..
ಅಮ್ಮಾ ಅಲ್ಲಿರ್ತಾಳೆ.. 
ನಾನು ದಿನಾಲೂ ಹೋಗಿ ನೋಡ್ಕೊಂಡು ಬರ್ತೇನೆ.
ಅಪ್ಪಾ....  ನೀವು ಚಿಂತೆ ಮಾಡ್ಬೇಡಿ... "

ನಾನು ಕಣ್ಣ್ಮುಚ್ಚಿಕೊಂಡೆ...  ...

ನಾನು ಮಾಡಿದ ಕರ್ಮ  ನನ್ನನ್ನು ಬಿಡುತ್ತಿಲ್ಲ...

ನಾನು ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ...

ಅವರಿಗೊಂದು ಪ್ರತ್ಯೇಕ ಮನೆ ಮಾಡಿ..
ಆಳು ಕಾಳುಗಳನ್ನಿಟ್ಟಿದ್ದೆ.. 
ದಿನಾಲೂ ನಾನು ಹೋಗಿ ಮಾತನಾಡಿಸುತ್ತಿದ್ದೆ..

ಅಪ್ಪ ಹೋದ ಕೆಲವು ದಿನಗಳಲ್ಲಿ ಅಮ್ಮನೂ ಹೋಗಿಬಿಟ್ಟಳು...

ನನಗೆ ನಿರಾಸೆಯಾಯಿತು... ಏನು ಮಾಡಲಿ?

ಎರಡನೇ ಮಗನನ್ನು ಕರೆಸಿದೆ..

"ಅಪ್ಪಾ..
ನಮ್ಮ ಸಂಬಂಧಿಕರೊಬ್ಬರು ಬಹಳ ಬಡವರಿದ್ದಾರೆ..
ಅವರಿಗೊಂದು ಬಾಡಿಗೆ ಮನೆಕೊಡಿಸಿ.... 
ಅಮ್ಮನನ್ನು ನೋಡಿಕೊಳ್ಳಲು ಹೇಳುತ್ತೇನೆ..


ನೀವು ಚಿಂತೆ ಮಾಡಬೇಡಿ...


ನನ್ನ ಮನೆಯಲ್ಲೇ  ಇಟ್ಟುಕೊಳ್ಳಬಹುದಿತ್ತು...
ನಿಮಗೆ ಗೊತ್ತಲ್ಲ ಹೆಂಗಸರ ವಿಷಯ.. 
ಹಾಗಾಗಿ ಹೀಗೆ ಮಾಡುತ್ತೇನೆ..
ನಾನು ದಿನಾಲೂ ಹೋಗಿ ನೋಡ್ಕೊಂಡು ಬರ್ತೇನೆ..
ನೀವು ಚಿಂತೆ ಮಾಡ್ಬೇಡಿ.. ಅಪ್ಪಾ..."

ಬಿತ್ತಿದಂತೆ ಬೆಳೆ...! 
ಗಿಡದಂತೆ ಫಲ !

ಸಣ್ಣ ಮಗನನ್ನು ಕರೆಸಲಿಲ್ಲ...
ಇವರಿಗಿಂತ  ಬೇರೆಯಾಗಿ ಮತ್ತೆ ಆತ ಬೇರೆ ಏನೂ ಹೇಳಲಾರ... ಅನ್ನಿಸಿತು...

ಬೇರೆ ಏನಾದರೂ  ವ್ಯವಸ್ಥೆ ಮಾಡಲೇ.. ಬೇಕಿತ್ತು....
ಏನು ಮಾಡಲಿ?
ನನ್ನಾಕೆಗೆ  ಮಾರ್ಕೆಟ್ಟಿಗೆ ಹೋಗಿ ಒಂದು ಕೇಜಿ ತರಕಾರಿ ತರಲೂ ಗೊತ್ತಿಲ್ಲ...!

ಈ  ಕೆಟ್ಟ  ಜಗತ್ತಿನಲ್ಲಿ... 
ನನ್ನ ಮುಗ್ಧ ಹೆಂಡತಿ..
ಈ ವಯಸ್ಸಿನಲ್ಲಿ ಹೇಗೆ ಬದುಕುತ್ತಾಳೆ..?

ನನ್ನ ದಬ್ಬಾಳಿಕೆಗೆ ತಲೆಯಾಡಿಸಿ... 
ತುಟಿ ಎರಡು ಮಾಡದೇ.. ನನ್ನೊಂದಿಗೆ  ಬದುಕಿದ ....
ಇವಳಿಗೆ  ಏನಾದರೂ ವ್ಯವಸ್ಥೆ ಮಾಡಬೇಕಲ್ಲ..!!

ಏನು ಮಾಡಲಿ...?

ಮಡದಿಯನ್ನೇ ಕೂಗಿದೆ..

ಓಡೋಡಿ ಬಂದಳು...!

"ನೋಡು..
ನಿನಗೆ  ಬದುಕಿನಲ್ಲಿ ಒಂದು ಸಂಭ್ರಮ...
ಒಂದು ನಗು.. ಸಂತೋಷ ಏನೂ ಕೊಡಲಿಲ್ಲ...


ಯಾವದಕ್ಕೂ ನಿನ್ನ ಇಷ್ಟ ಏನೆಂದು ಕೇಳಲಿಲ್ಲ...

ಕೊನೆ ಪಕ್ಷ ಒಂದು  ಆತ್ಮೀಯ ಮಾತನ್ನೂ ಆಡಲಿಲ್ಲ...

ನಾನು  ಸಾಯ್ತಾ ಇದ್ದೀನಿ...
ಒಂದಷ್ಟು ಹಣ ಮಾಡಿದ್ದೇನೆ...... "

ನನ್ನಾಕೆ ಅಳುತ್ತಿದ್ದಳು..


ಆಕೆ ನನ್ನ ಬಾಯಮೇಲೆ ಕೈ ಇಟ್ಟು ಬಾಯಿ ಮುಚ್ಚಿದಳು..

ನನಗೂ ದುಃಖ ತಡೆದುಕೊಳ್ಳಲಾಗುತ್ತಿಲ್ಲ...


ಈ ತರಹದ ಅಸಹನೀಯ  ಅಸಹಾಯಕತೆ.. ಯಾರಿಗೂ ಬರಬಾರದು....

"ನೋಡಿ ನಿಮಗೆ ಏನೂ ಆಗುವದಿಲ್ಲ..
ನನಗೆ ದೇವರ ಮೇಲೆ ನಂಬಿಕೆ ಇದೆ... ಇರಿ.. ಬಂದೆ...!

ಯಾರನ್ನೋ.. ಕರೆದುಕೊಂಡು ಬಂದಳು....

"ನೋಡಿ  ನೀವು ಚಿಂತೆ ಮಾಡ ಬೇಡಿ..


 ನನ್ನ ತಮ್ಮನನ್ನು ಕೇಳಿ ..
ಒಂದು ಲಾಯರ್ ಹಿಡಿದು ನಿಮ್ಮ ವಿಲ್ ಬರೆಸಿದ್ದೇನೆ..


ಇದಕ್ಕೊಂದು ಸಹಿ ಹಾಕಿಬಿಡಿ..."

ಆ ಲಾಯರ್ ನನ್ನ ಮುಂದೆ ಪೇಪರ್  ಹಿಡಿದ...

ಮತ್ತೆ .....
ಎದೆಯಲ್ಲಿ ಸಾವಿರ ಸೂಜಿಗಳಿಂದ ಚುಚ್ಚಿದ ಅನುಭವ... !


ಹೃದಯ ಹಿಂಡುವ ನೋವು...ಗಂಟಲು ಉಬ್ಬಿ ಬಂತು....!


ಇದು ನನ್ನ ಸಾವಾ..?.. !!