ನಮ್ಮನೆಗೊಂದು ಎಮ್ಮೆ ಬೇಕಾಗಿತ್ತು. ಚಿಕ್ಕಪ್ಪ ನನ್ನನ್ನೂ ಕರೆದ.
"ಎಮ್ಮೆ" ಬಗೆಗೆ ನನಗೇನು ಗೊತ್ತು..? ಆದರೆ ಚಿಕ್ಕಪ್ಪ ಬಿಡಬೇಕಲ್ಲ.
" ಇಲ್ಲೆ ಪಕ್ಕದೂರು ...ಸುಬ್ಬಣ್ಣನ ಮನೆಯಲ್ಲಿ ಎಮ್ಮೆ ಇದೆಯಂತೆ ನೋಡಿ ಬರೋಣ ...ಬಾ." ಅಂದರು . ನನಗೆ ಇಲ್ಲ ಎನ್ನಲಾಗಲಿಲ್ಲ. ಹೊರಟೆ.
ನಾನು ಅದೇ ತಾನೆ ಭಾರತಕ್ಕೆ ಬಂದಿದ್ದೆ. ಅವರಿಗೆ ಕತಾರ ದೇಶದ ಬಗೆಗೆ ಕುತೂಹಲ..ನಾವು ಅದು ಇದು ಮಾತನಾಡುತ್ತ ಸುಬ್ಬಣ್ಣನ ಮನೆ ಬಳಿ ಬಂದಿದ್ದೇವು.
ಅಷ್ಟರಲ್ಲಿ.. ಓ..ಹೋಓ..ಹೋ.. ಕಮಲಾಕರ... ಬಾ..ಬಾ.." ಎಂದು ಒಬ್ಬರು ನಮ್ಮನ್ನು ಕರೆದರು.
"ಛೇ....ಇವತ್ತು ಕೆಲಸ ಆಗುವದಿಲ್ಲ..!! " ಎಂದು ಚಿಕ್ಕಪ್ಪ ಸಣ್ಣದಾಗಿ ಗೊಣಗಿದರು..
" ಇವರು ಗಂಗಣ್ಣ..ನಮ್ಮ ದೂರದ ಸಂಬಂಧ.. " ಎನ್ನುತ್ತ ಚಿಕ್ಕಪ್ಪ ಅವರ ಮನೆ ಪ್ರವೇಶಿಸಿದರು..ನಾನು ಹಿಂಬಾಲಿಸಿದೆ.
ಗಂಗಣ್ಣ ಎಲೆ ಅಡಿಕೆ ಜಗಿಯುತ್ತ........
" ಭಾರಿ..... ಅಪರೂಪ..ಮಾರಾಯಾ....!! ಇಂವ ಯಾರು..?"
ನನ್ನ ಬಗೆಗೆ ಕೇಳಿದರು.
" ಈತ ಪ್ರಕಾಶ..ಅಣ್ಣನ ಮಗ. ದುಬೈನಿಂದ ಬಂದಿದ್ದಾನೆ. ಇಲ್ಲೇ ಸುಬ್ಬಣ್ಣನ ಮನೆ ಎಮ್ಮೆ ನೋಡೋಣ ಅಂತ ಬಂದಿದ್ದೆವು....."
ಚಿಕ್ಕಪ್ಪ ಸಣ್ಣದಾಗಿ ಕಾರ್ಯಕ್ರಮದ ವಿವವರ ಕೊಟ್ಟರು..
""..ಭಾರಿ ಬಿಸಿಲು..ಏನು ಕುಡಿಯುತ್ತೀರಿ..?? ತಂಪಾಗಿರ್ಲೊ..ಬಿಸಿಯಾಗಿರ್ಲೋ..?" ಕೇಳಿದರು.
ನಾವು ಏನೂ ಬೇಡ ಅಂದರೂ ಕೇಳಲಿಲ್ಲ.ಹೆಂಡತಿಯನ್ನು ಕೂಗಿದರು..
" ಲೇ..ಎಲ್ಲಿ ಸತ್ತು ಹೋಗಿದ್ದೀಯೆ.....!!ಇಲ್ನೋಡೇ.. ದೇವಿಸರದ ಕಮಲು ಬಂದಿದ್ದಾನೆ..
ಎಲ್ಲಿ ಹಾಳಾಗಿ ಹೋದ್ಲೊ....!! "
ಅಷ್ಟರಲ್ಲಿ ತಡಬಡಾಯಿಸುತ್ತ ಅವರ ಹೆಂಡತಿ ಬಂದು ನಮ್ಮನ್ನು ಮಾತನಾಡಿಸಿದರು..ಹಾಗೆ ಒಳಗೆ ನಡೆದರು..
"ನೋಡು ಕಮಲಾಕರ.. ನಾನೇ ಬರಬೇಕು ಅಂದು ಕೋಡಿದ್ದೆ ...
ನೀನೇ ದೇವರಹಾಗೆ ಬಂದೆ.. ನಾಳಿದ್ದು ನಮ್ಮನೆಯಲ್ಲಿ ವಿಶೇಷವಿದೆ..
ನೀನು ಬರಲೇ ಬೇಕು...
ಏನು ನೆಪ ಹೇಳಕೂಡದು..ಹೇಳಿದರು ನಾನು ಕೇಳುವವನಲ್ಲ."
ಎಂದು ಆಜ್ನೆ ಹೊರಡಿಸಿದಹಾಗೆ ಹೇಳಿದರು..
" ನನಗೆ ಬರಲಿಕ್ಕೆ ಆಗುವದಿಲ್ಲ..ಸಿರ್ಸಿಗೆ ಹೋಗಬೇಕು..ಅಡಿಕೆ ವ್ಯಾಪಾರಕ್ಕೆ..
ನನ್ನ ಅಣ್ಣನ ಮಕ್ಕಳನ್ನು ಕಳಿಸಿ ಕೊಡ್ತೇನೆ..."
" ನಿನ್ನ ಅಣ್ಣನ ಮಕ್ಕಳು ಸಾಯಲಿ ಮಾರಾಯಾ..!! ನೀನು ಬರಲೇ ಬೇಕು ..!
ನೀನು ನಮ್ಮನೆ ಕಾರ್ಯಕ್ರಮಕ್ಕೆ ಬರುವದೇ ಇಲ್ಲ.."
" ಅದು.. ಅಡಿಕೆ ವ್ಯಾಪಾರಕ್ಕೆ ಹೋಗಬೇಕು...ಅಡಿಕೆ....ಹಾಳಾಗ್ತಾ ಇದೆ..
ನನ್ನ .. ಅಣ್ಣನ ಮಕ್ಕಳು..ಸಂಗಡ..... ನನ್ನ ಮಕ್ಕಳನ್ನೂ ಕಳಿಸಿ ಕೊಡ್ತೇನೆ.."
"ನಿನ್ನ ಅಣ್ಣನ ಮಕ್ಕಳು.. ..ನಿನ್ನ ಮಕ್ಕಳು ..ಎಲ್ಲ ..ಸಾಯಲಿ ....!!
ಮಾರಾಯಾ.. ನೀನು ಮಾತ್ರ ಬರಲೇ ಬೇಕು.."
" ಅದು ಬಹಳ ಕಷ್ಟ..ಗಂಗಣ್ಣ..ಬ್ಯಾಂಕ್ ಕೆಲಸ ಕೂಡ ಇದೆ....
ಅವರ ಎಲ್ಲರ ಸಂಗಡ...ನನ್ನ ಹೆಡ್ತಿನೂ ಕಳಿಸಿ ಕೊಡ್ತೇನೆ....ನನ್ನನ್ನು ಬಿಟ್ಟು ಬಿಡು.. ಮಾರಾಯಾ.."
" ನಿನ್ನ ಅಣ್ಣನ ಮಕ್ಕಳು.. ನಿನ್ನ ಮಕ್ಕಳು..ನಿನ್ನ ಹೆಂಡತಿ..ಎಲ್ಲ ಸಾಯಲಿ ..ಮಾರಾಯಾ..!!
ನೀನು ಮಾತ್ರ ತಪ್ಪಿಸಿ ಕೊಳ್ಳಬಾರದು....ಬರಲೇ ಬೇಕು"
ನನಗೆ ಪಿಕಲಾಟ ಶುರುವಾಯಿತು...ಇದೆಂಥಹ ಭಾಷೆ..?
ಅಷ್ಟರಲ್ಲಿ ಅವರ ಮಗ ಬಂದ... "ಎಲ್ಲಿ ಸತ್ತು ಹೋಗಿದ್ಯೊ.. ಹಾಳಾದವನೆ...!!
ಇಷ್ಟು ತಡ ಆಗಿ ಬರ್ತಿದ್ದೀಯಾ..?
ನೋಡು... ಈಗಲೇ ಶಾಸ್ತ್ರಿಗಳ ಮನೆಗೆ ಹೋಗು.. ನಾಳಿದ್ದು ನಮ್ಮನೆಗೆ ಬರ್ಲಿಕ್ಕೆ ಹೇಳು
ಬಂದು ಸಾಯ್ತಾರಾ ಕೇಳು..!!
ಅವರು ಬರದೇ ಇದ್ರೆ..ಅವರ ಮಗನಿಗಾದ್ರೂ ಬಂದು ಸಾಯಲಿಕ್ಕೆ ಹೇಳು....!!"
" ಅವರ ಮಗನೂ ಬರದೆ ಇದ್ರೇ..?
" ಬಂದೇ ಬರ್ತಾರೆ.. ಬರದೆ ಇದ್ರೆ.. ಪಕ್ಕದ ಮನೆ ಗೋವಿಂದ ಭಟ್ರಿಗೆ...ಹೇಳು....!
ಅವರಾದ್ರೂ ಬಂದು ಸಾಯಲಿ.. !!"
ಅವನು ತಲೆ ಅಲ್ಲಾಡಿಸಿ ಹೊರಟು ಹೋದ...
ಅಷ್ಟರಲ್ಲಿ ಚಹ..ಬಾಳೆಕಾಯಿ ಚಿಪ್ಸ್ ಬಂತು...
ಕೊಟ್ಟಿಗೆಯಿಂದ "ಅಂಬಾ" ಎಂದು ಆಕಳು ಕೂಗಿತು..
" ನೋಡೆ... ಆಕಳಿಗೆ ಹುಲ್ಲು.. ಹಾಕಿ ..ಸಾಯಿ..!
ಅದು ಎಷ್ಟು ಹಾಕಿದರೂ ತಿಂದು.. ಸಾಯ್ತದೆ..!!"
ನೀವು ತಗೊಳ್ಳಿ.. ಬಿಸಿ ಆರಿ ಹೋಗ್ತದೆ.."
ನಮಗೆ ಉಪಚರಿಸಿದರು..
ನಾವುಕುಡಿದು ಸುಬ್ಬಣ್ಣನ ಮನೆ ಕಡೆ.. ಹೊರಟೆವು..
" ಮರೆಯ ಬೇಡ..ಕಮಲಾಕರ..ಖಂಡಿತ.. ಬರಲೇ ಬೇಕು..
ಮತ್ತೆ ಪ್ರಕಾಶಾ...ನೆಂಟ್ರು ಎಲ್ಲ ಬರ್ತಾರೆ.. ಪರಿಚಯ ಆಗ್ತದೆ...
ನಿನ್ನ. ಅಪ್ಪಯ್ಯ ನಾನು ಬಹಳ ದೋಸ್ತರು..
ನಾಳಿದ್ದು ನೀನು... ಜಲ್ದಿ ...ಬಂದು ಸಾಯಿ ಮಾರಾಯಾ....!!
ತಡ ಮಾಡ್ಕೋ ಬೇಡ...!!
ಅಯ್ಯೋ ರಾಮಾ ನನ್ನ ನ್ನೂ ಸಾಯಿಸಿ ಬಿಟ್ರು..!!
ನಾವು ತಲೆ ಹಾಕುತ್ತ ಹೊರಟೇ ಬಿಟ್ಟೆವು......
"ಇನ್ನು ಎಷ್ಟು ಜನರನ್ನು ಸಾಯಿಸಿ ಬಿಡ್ತಾರೊ!!"
ಅಂತ ಹೆದರಿದೆ..
"ಇವರು ಯಾವಾಗಲೂ ಹೀಗೆ..ಮಾತಾಡೋದು..!!
ಆದರೆ ..ತುಂಬಾ..ಒಳ್ಳೇ ಮನುಷ್ಯ..!!
ಹ್ರದಯದಲ್ಲಿ ತುಂಬಾ ಸ್ವಚ್ಚ...!! "
ಚಿಕ್ಕಪ್ಪ ಸರ್ಟಿಫಿಕೇಟ್ ಕೊಟ್ಟರು...
ಕೆಲವರು ...ಹಾಗೆ...ಇರುತ್ತಾರೆ.....
Thursday, December 18, 2008
Subscribe to:
Post Comments (Atom)
42 comments:
ಪ್ರಕಾಶ,
ವಿನೋದಪೂರ್ಣವಾದ ಲೇಖನ. ಸಾಯಲಿ, ಹೊಟ್ಟೆ ಹುಣ್ಣಾಗುವಂತೆ ನಕ್ಕೆ.
ಸಾಯಲಿ,ತುಂಬಾ ಚೆನ್ನಾಗಿದೆ.ಕೆಲವರು ಹೀಗೆ ಒಂದೊಂದು ಪದವನ್ನು ಸ್ಪೆಶಲೈಜ್ ಮಾಡಿಟ್ಟುಕೊಂಡಿರ್ತಾರೆ ಅನಿಸುತ್ತೆ.ಎಲ್ಲರನ್ನು ಸಾಯಿಸಿದ್ದಲ್ಲದೆ ಅವರ ಹೆಂಡ್ತಿ ಮಕ್ಕಳನ್ನು ಸಾಯಿಸಿಬಿಟ್ಟಿದ್ದಾರಲ್ಲಾ? ಹ ಹ ಹ !!!
ಸುನಾತ ಸರ್....
ಸಾವನ್ನೂ ENJOY.. ಮಾಡಿದ್ದಕ್ಕೆ ಧನ್ಯವಾದಗಳು...
ನಿಜವಾಗಿಯೂ ಅವರು ಹ್ರದಯದಲ್ಲಿ ...
"ನಂಜಿಲ್ಲದ" ವ್ಯಕ್ತಿಯಂತೆ..!
ಭಾರ್ಗವಿಯವರೆ.....
ಪ್ರತಿಕ್ರಿಯೆಗೆ...ಸ್ವಾಗತ....!!
ನಾನು ನಿಮ್ಮ ಬ್ಲೋಗ್ ಗೂ ಬಂದು ಸತ್ತಿದ್ದೆ...!!
ನಾಯಿಯ ಗಾಂಭಿರ್ಯ ಇಷ್ಟವಾಯಿತು...
ಧನ್ಯವಾದಗಳು...
ಪ್ರಕಾಶ್ ಸರ್,
ನಾನು ಓದಿ ಸತ್ತೆ ನಿಮ್ಮ ಲೇಖನವನ್ನ, ಚೆನ್ನಾಗಿದೆ.
-ರಾಜೇಶ್ ಮಂಜುನಾಥ್
ರಾಜೇಶ್ ಮಂಜುನಾಥ್....
ಹಹ್ಹಾ...ಹಾ...!!
ಅವರ ಬಗೆಗೆ ಯಾರೂ ಅಪಾರ್ಥ ಮಾಡಿಕೊಳ್ಳುವದಿಲ್ಲ..
ಕೆಲವರನ್ನು...ಹಾಗೇನೆ..ಒಪ್ಪಿಕೊಳ್ಳಬೇಕಾಗುತ್ತದೆ..
ಅಲ್ಲವಾ..?
ಪ್ರತಿಕ್ರಿಯೆಗೆ ವಂದನೆಗಳು...
hmmmmmmmmmmmm nice one....u got many killed by that...
ಪ್ರಶಾಂತ್....
ಹ್ಹಾ..ಹಹ..
ಆತ ಪಾಕಿಸ್ತಾನಿ ಆತಂಕವಾದಿಗಳಿಗಿಂತ ಹೆಚ್ಚಿಗೆ ಜನರನ್ನು ಸಾಯಿಸಿರ ಬಹುದು..!
ಪ್ರಕಾಶ್ ಸಾರ್,
ನಾನು ನಿಮ್ಮ ಲೇಖನ ಓದಿದೆ ನಗು ತಡೆಯಲಾಗಲಿಲ್ಲ.
ಇವರನ್ನು ನೀವು ಸಾದ್ಯವಾದಷ್ಟು ಬೇಗ ಪಾಕಿಸ್ಥಾನ ಕಳಿಸಿ ಅಲ್ಲಿರುವ ಟೆರರಿಷ್ಟುಗಳನ್ನು ಶಾಪ ಹಾಕಿ ಸಾಯಿಸಿ ಬರಲಿ!!
ಇನ್ನು ಎಂಥೆಂಥವರು ಸಿಗುತ್ತಾರೋ ನಿಮ್ಮ ಜೀವನದಲ್ಲಿ ?
ಪ್ರಕಾಶಂಕಲ್,
ಅದೆಷ್ಟು ಜನರನ್ನು ಸಾಯಿಸಿದ್ದಾರೋ....
ನಾನು ಓದಿ ಸತ್ತೆ!
wholesale ಆಗಿ ಎಲ್ಲರನ್ನೂ ಸಾಯಿಸಿಬಿಟ್ಟರಲ್ಲ!
ನಾನೂ ಬಂದು, ಓದಿ ಸತ್ತೆ!
ಶಿವು ಸರ್...
ಅವರು ಸಹ್ರದಯವಂತರಂತೆ...
ಅವರು ಸಣ್ಣವರಿಂದಲೂ ಹಾಗೇಯಂತೆ..
ಬದಲಾಗಲಿಲ್ಲ...ಬದಲಾಗುವದೂ ಇಲ್ಲ...
ಮನೆಯವರು..ಊರವರು ಅಡ್ಜಸ್ಟಾಗಿಬಿಟ್ಟಿದ್ದಾರೆ..
ಇಂತಹವರು ಪ್ರತಿ ಊರಲ್ಲೂ ಇರುತ್ತಾರೆ..
ಧನ್ಯವಾದಗಳು...
ಅಂತರ್ವಾಣಿ.....
ಅವರ ಮಾತು ಕೇಳಿಯೂ..
ಅವರ ಮಗ..ಹೆಂಡತಿ.. ತಣ್ಣಗೆ ಆರಾಮಾವಾಗಿದ್ದರು..!
ಇಂಥಹ ವಿಶಿಷ್ಟವಾದ ಜನರು ಎಲ್ಲೆಡೆ ಇರುತ್ತಾರೆ..ಅಲ್ಲವೆ..?
ಹೀಗೆ ಬರುತ್ತಾ ಇರಿ..
ಧನ್ಯವಾದಗಳು
ಗಿರಿಜಾರವರೆ...
ಅಲ್ಲಿ ಇನ್ನೂ ಕೆಲವರನ್ನು ಸಾಯಿಸಿ ಬಿಟ್ಟಿದ್ದರು..
ಅದನ್ನು ಹೇಳಲಾಗಲಿಲ್ಲ...
ಅವರಬಳಿ ರಾಜಕೀಯ ಮಾತನಾಡಬೇಉ.. ತುಂಬಾ ಖುಷಿಯಾಗುತ್ತದೆ...
ನೀವು ಯಾರ್ಯಾರ ಹೆಸರು ಹೇಳುತ್ತೀರೊ ಅವರನ್ನೇಲ್ಲ..ಒಂದೇ ಸಾರಿ ಸಾಯಿಸಿ ಬಿಡುತ್ತಾರೆ..!!
"ಭಾರ ಇಳಿಸುವ" ಎರಡನೇ ಸಪ್ತಾಹ ಶುರುವಾಗಿದೆ....!!
ಅಲ್ಲಿಂದಲೇ..ಶುಭಾಶೀರ್ವಾದ ಮಾಡಿಬಿಡಿ...
ಸಾವಲ್ಲೂ ಮಜಾ ಮಾಡಿದ್ದಕ್ಕೆ ವಂದನೆಗಳು..!!
ತಮ್ಮ ನಂಜಿನ ಮಾತುಗಳಿಂದ ಕೊಂಕು ಮಾತುಗಳಿಮ್ದ ಮತ್ತೊಬ್ಬರನ್ನು ಸಾಯಿಸುವುದಕ್ಕಿಂತಾ ಸಾಯಲಿ, ಸಾಯಲಿ ಎಂದು ಹೇಳುವ ಇಂತಹವರು ತುಂಬಾ ನಿರುಪದ್ರವಿಗಳು.
ಎಮ್ಮೆ ವ್ಯಾಪಾರ ಏನಾಯಿತು ? :))
ಚಂದ್ರಕಾಂತರವರೆ...
ನೀವೆನ್ನುವದು ನಿಜ..
ಮನಸ್ಸಿನ್ನೊಲ್ಲೊಂದು..ಹೇಳುವದೊಂದು ಮಾಡುವ ..
ಈ ಬೂಟಾಟಿಕೆ ಜಗತ್ತಿನಲ್ಲಿ ಇಂಥವರು .. ಸಾವಿರ ಪಾಲು ಉತ್ತಮ..
ಖರೀದಿ ಆಗಲಿಲ್ಲ... !
ಅದಕ್ಕೂ ಗಂಗಣ್ಣನಿಗೂ ಸಂಬಂಧವಿಲ್ಲ..!
ಎಮ್ಮೆ "ಚಾಳಿ" ಮಾಡುತ್ತಿತ್ತಂತೆ..!
ಧನ್ಯವಾದಗಳು...
ಪ್ರಕಾಶಣ್ಣ...,
ಇವರ ಹಾಗೆಯೆ ನಮ್ಮೂರಲ್ಲಿ ಒಬ್ಬ ಹಿರಿಯರು 'ನಿನ್ನ' ಎಂದು ಸೇರಿಸುತ್ತಾರೆ.ಅವರ ಮಾತಿನ ಕೆಲವು ತುಣುಕುಗಳು....,
ನಿನ್ನ....,ಸುಟ್ಟ ಬೂದಿ ಗಿಡಗಳಿಗೆ ಹಾಕಿದರೆ ತುಂಬಾ ಒಳ್ಳೆಯದು ನೋಡು...,
ನಿನ್ನ ...ಶ್ರಾಧ್ದ್ದ ಯಾವಾಗ.. ನನಗೆ ಮರೆತು ಹೋಗಿದೆ ಮಾರಾಯ....,ಅಂಗಡಿಯಲ್ಲಿ ಸಾಮಾನು ತೆಗೆದುಕುಂಡು, ನಿನ್ನ.... ತುಂಬಲಿಕ್ಕೆ ಬೇಕು.. ಒಂದು ಚೀಲ ಕೊಡು....,
ನಮ್ಮೂರಲ್ಲೂ ಸಹ ಅವರ ಮಾತನ್ನು ಯಾರು ತಪ್ಪಾಗಿ ಭಾವಿಸುವುದಲ್ಲ.ನೀವು ಹೇಳಿದ್ದು ನಿಜ.ಇಂತವರು ಎಲ್ಲ ಊರಲ್ಲಿ ಇರುತ್ತಾರೆ..
ರಮ್ಯಾರವರೆ....
ಬ್ಲೋಗಿಗೆ ಸ್ವಾಗತ..!
ನೀವು ಹೇಳುವದು ನಿಜ..
ಅಂಥವರು ಮನಸ್ಸಿನಿಂದ ಸ್ವಚ್ಛವಾಗಿರುತ್ತಾರೆ..
ಹಾಗಾಗಿ ಯಾರೂ ತಪ್ಪಾಗಿ ಭಾವಿಸುವದಿಲ್ಲ..ಅಲ್ಲವಾ?
ನೀವೂ ಬರೆಯಿರಿ...
ಪ್ರತಿಕ್ರಿಯೆಗೆ ಧನ್ಯವಾದಗಳು...
ವಾ ವಾಹ್ ಪ್ರಕಾಶ್ ಅಂಕಲ್...ನೀಲಗಿರಿ ಅವರು ಹೇಳಿದ ಹಾಗೆ ಹೋಲ್ ಸೇಲ್ ನಲ್ಲಿ ಎಲ್ಲರನ್ನೂ ಸಾಯಿಸಿಬಿಟ್ಟಿರಲ್ಲ,ನಕ್ಕು ನಕ್ಕು ಸತ್ತೋದೆ ಲೇಖನ ಓದಿ.
ನಮ್ಮನೆ ಕಡೆ ಒಬ್ಬರು ಹಿರಿಯರಿದ್ದರು...ಅವರು ಎಲ್ಲಾದಕ್ಕೂ ಹಾಳಾಗೋಗ್ಲಿ ಅನ್ನೋರು..ಹುಟ್ಟುಹಬ್ಬಕ್ಕೆ ಮಗುವೊಂದು ಆಶೀರ್ವಾದ ಕೇಳ್ದಾಗ, ಅವರು "ಹಾಳಾಗೋಗ್ಲಿ, ಚೆನ್ನಾಗಿ ಬದುಕ್ಕೊಂಡ್ ಸಾಯಿ !" ಅನ್ನೋದಾ ? :) :)
ಲಕ್ಶ್ಮೀಯವರೆ...
ನಿಮ್ಮ ಪ್ರತಿಕ್ರಿಯೆ ಓದಿ ನಾನು ನಕ್ಕು ನಕ್ಕು ಸತ್ತೆ...!
ಸಾಯ್ಸಿದ್ದಕ್ಕೆ ಧನ್ಯವಾದಗಳು...!
ಪ್ರಕಾಶಣ್ಣ, ತು೦ಬಾ ಚೆನ್ನಾಗಿದ್ದು ಲೇಖನ :-)
ಹಾ೦, ನ೦ಗೂ ಮಾತು ಮಾತಿಗೆ ’ಸಾಯಲಿ’ ಹೇಳೊ ರೂಢಿ ಇದ್ದು!!
ಸಾರ್,
ಇದೇ ಕಾಮೆಂಟನ್ನು ನನ್ನಾಕೆ ಓದಿ ಹೇಳಿದ್ದೇನು ಗೊತ್ತೆ ! ಜೋರಾಗಿ ನಕ್ಕು, ಆಸಾಮಿ ಎಲ್ಲರನ್ನು ಸಾಯಲಿ ಸಾಯಲಿ ಅಂತ ಅಂದು ಎಲ್ಲರ ಆಯುಸ್ಸು ಜಾಸ್ತಿಮಾಡ್ತಾರೆ ಅಂತ ಹೇಳಿದಳಲ್ಲ !
ಪ್ರಕಾಶಣ್ಣ...
ಚೊಲೊ ಇದ್ದು ಲೇಖನ. ನಗು ಬಂತು ಓದಿ.
ಕೆಲವು ಹಾಗೇ ಇರುತ್ತಾರೆ, ನಿಜ.
ನಮ್ಮ ಅಜ್ಜಿಯೊಬ್ಬರು ಹೀಗೆ ಹೇಳುತ್ತಿದ್ದರು, ಮಾತು ಮಾತಿಗೆ ‘ಪಾ...ಪ’ ಅಂತ.
‘ಗಣುಪನ್ನ ಮದ್ವೆನಡಲೆ ಪಾ...ಪ.’
ಇದನ್ನ ಕೇಳಿ ನನ್ನ ಮಾವ ‘ಮದುವೆ ವಿಚಾರಕ್ಕೆ ‘ಪಾಪ’ ಅಂದರೆ ತಪ್ಪಿಲ್ಲ, ಮದುವೆಯಾಗುತ್ತಿದ್ದಾರೆ ಅಂದರೆ ಪಾಪವೇ’ ಅಂತ ನಕ್ಕಿದ್ದರು.
‘ಅದುಕ್ಕೆ ಮಾಣಿ ಹುಟ್ಟಿದ್ನಡಲೆ ಪಾ...ಪ’
ಯಾರಾದರೂ ಸತ್ತಿದ್ದಕ್ಕೂ ಪಾಪ, ಹುಟ್ಟಿದ್ದಕ್ಕೂ ಪಾಪ!!!
‘ಯಮ್ಮನೆ ಮಾಣಿ ಈಸಲ ಕ್ಲಾಸಿಗೇ ಒನ್ನೆ ನಂಬರ್ರು...ಪಾ...ಪ’
ಇನ್ನು ಕೆಲವರು ಪದೇ ಪದೇ ಬಳಸುವ ಮಾತುಗಳು ಬಲು ಡೇಂಜರ್!
‘ನೀ ಹೇಳಿದಂಗೆಯ’ ಅನ್ನುವಂಥಹ ಮಾತುಗಳು. ನಾವೇನೂ ಹೇಳಿರದಿದ್ದರೂ ಮಾತು ಮಾತಿಗೆ ನೀ ಹೇಳಿಗಂಗೆಯ ಅಂದು ಬಿಟ್ಟರೆ!!
‘ಅಲ್ದೇ...ನೀ ಹೇಳ್ಜಂಗೆಯ ಅಚ್ಚೆಮಾನಿ ಮಾಣಿ ಸಂತಿಗೆ ಇಚ್ಚಮನೆ ಕೂಸು ಓಡ್ಯೋತಡಲೆ’ ಮೂಲತಃ ನಮಗೆ ಅವರ ಅಚ್ಚೆಮನೆಯಲ್ಲಿ ಒಬ್ಬ ಮಾಣಿ ಇರುವ ವಿಚಾರವೇ ಗೊತ್ತಿರುವುದಿಲ್ಲ. ‘ನೀ ಹೇಳಿದಂಗೆಯ’ ಅಂತ ಅಂದುಬಿಟ್ಟರೆ ಕಥೆ ಏನಾಗಬೇಕು.
ಕೆಲವರದ್ದು ಇನ್ನೊಂದು ಚಾಳಿ. ಪಕ್ಕದಲ್ಲಿ ಕೂತವರಿಗೆ ಪ್ರತಿಮಾತೊಗೊಮ್ಮೆ ಹೊಡೆಯುತ್ತಲೇ ಇರುವುದು. ಅವರ ಮಾತು ಮುಗಿಯುವಷ್ಟರಲ್ಲಿ ನಮಗೆ ಎಲ್ಲಾದರೂ ಓಡಿಹೋಗಿಬಿಡಬೇಕು ಅನ್ನಿಸುವಷ್ಟು ಮೈಕೈ ನೋವುತ್ತಿರುತ್ತದೆ :-)
ನಿಜ, ಕೆಲವರು ಹಾಗೇ ಇರುತ್ತಾರೆ.
ಚೆಂದದ ಲೇಖನ ಬರೆದು ನಗಿಸಿದ್ದಕ್ಕೆ ಧನ್ಯವಾದ ಪ್ರಕಾಶಣ್ಣಂಗೆ.
ಗೀತಾ ಗಣಪತಿಯವರೆ...
ಗಂಗಣ್ಣನ ರೂಢಿ ನಿಮಗೂ ಇದೆಯಾ..?
ಹಾಗಾದರೆ "ಸಾಯಲಿ..ಬಿಡೆ..!!" ಚೊಲೊ ಆತು...
ಹಹ್ಹಾ..ಹಾ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಆತ್ಮೀಯ ಶಿವು..ಸರ್..
ಅದು ನಿಜ ಇರಬಹುದೇನೋ..
ಸಾಯಲಿ ಬಿಡಿ..ನಮಗೇನಂತೆ..?
ಮಡದಿಯವರಿಗೆ ಹೇಳಿ..ಅವರು ಮಾತ್ರ ರೂಢಿ ಮಾಡ್ಕೋಬೇಡಿ ಅಂತ..!
ಆಗಾಗ ನಿಮ್ಮನೆಗೆ ಬರ್ತಾ ಇರ್ತಿನಲ್ಲ ...
ನನಗೇ ಕಷ್ಟವಾದೀತು...!!
ನಿಮಗೂ , ನಿಮ್ಮ ಪತ್ನಿಶ್ರೀ ಯವರಿಗೂ...
ಅಭಿಮಾನದ ವಂದನೆಗಳು...
ಶಾಂತಲಾ...
ನನ್ನ ಗೆಳೆಯ "ಸತ್ಯ" ಒಮ್ಮೆ ಚಂದದ ಹುಡುಗಿ ನೋಡಿದಿದ್ದ..!
ನಾನು "ಹೇಗಿದ್ದಾಳೋ.." ಕೇಳಿದ್ದಕ್ಕೆ..
"ಪಾಪ..ಐಶ್ವರ್ಯ ರೈ ಥರ ಇದ್ದಾಳೋ.."
ಹೊಟ್ಟೆ ಬಿರಿಯುವಷ್ಟು ನಕ್ಕಿದ್ದೆ..
ಅಲ್ಲಿ "ಪಾಪ" ಶಬ್ಧ ಯಾಕೆ ಅಂತ..?
ನಮ್ಮ ಪಕ್ಕದ ಮನೆ ಅಜ್ಜನಿಗೆ ಮೈ ಮುಟ್ಟಿ ಮಾತಾಡುವ ಅಭ್ಯಾಸ ಇತ್ತು..
ಹೆಣ್ಣುಮಕ್ಕಳಿರಲಿ..ಯಾರೇ ಇರಲಿ..!
ಅದರೆ ಯಾರೂ ಅಪರ್ಥ ಮಾಡಿ ಕೊಳ್ಳುತ್ತಿರಲಿಲ್ಲ..!
ತುಂಬಾ ..LUCKY..ಅಜ್ಜ .ಅಂತ ಮಾತಾಡಿಕೊಳ್ಳುತ್ತಿದ್ದೇವು..!(ಈಗಿಲ್ಲ..ಈಗಲ್ಲ.!)
ಪ್ರೀತಿಯ ಅಭಿಮಾನಕ್ಕೆ..ವಂದನೆಗಳು..
ಕಾಪಾಡಿ....ಕಾಪಾಡಿ....ಸಾರ್..
ನಾನು ನಕ್ಕೂ ನಕ್ಕೂ ಸಾಯುತ್ತಿದ್ದೇನೆ ..........
i am literally ROFL
:D :D :D :D :D :D :D :D.......
ಪ್ರಾಕಶ ಸರ್ ಎಂತ ಕೊಇನ್ಸಿಡೆಂಟ್ ಇಲ್ಲಿ ಮುಂಬಯಲ್ಲಿ ಒಬ್ಬ ಮಾತು ಮಾತಿಗೆ ಸಾಲ,(ಹಿಂದಿ)ಅಂತಾನೆ ಇದಾನೆ, ಬರಹ ಚೆನ್ನಾಗಿದೆ
ಗೀತಾರವರೆ...
ಬಿಡ್ತು ಅನ್ನಿ...!
ಹಾಗಾದರೆ ನಗುವಿನ..ಪರಮಾವಧಿ.. ಹಂತ..?
ಅಂದರೆ..ಸಾವಾ..?
ಚಿಂತಿಸ ಬೇಕಾದ.. ಹಿರಿಯರೊಡನೆ ಚರ್ಚಿಸ ಬೇಕಾದ ವಿಷಯ.. ಅಲ್ಲವಾ?
ನಿಮ್ಮ ಪ್ರತಿಕ್ರಿಯೆಯಿಂದ ನನಗೊಂದು "ವಿಷಯ" ಕೊಟ್ಟಿದ್ದಾಕ್ಕಾಗಿ....
ವಂದನೆಗಳು..
ತುಂಬಾ ಖುಷಿಯಾಗುತ್ತದೆ..
ಇನ್ನೂ ಬರೆಯಬೇಕು ಅನ್ನಿಸುತ್ತದೆ...
ಜವಾಬ್ದಾರಿಹೆಚ್ಚಿಗೆ ಯಾದುದಕ್ಕೆ ಹೆದರಿಕೆಯೂ ಆಗುತ್ತದೆ...
ಇಂಥಹ ಪ್ರತಿಕ್ರಿಯೆ ನೋಡಿದಾಗ..!
ಮತ್ತೆ..ಮತ್ತೊಮ್ಮೆ
ಧನ್ಯವಾದಗಳು..
ಮೋಹನ್...
ಪ್ರತಿಕ್ರಿಯೆಗೆ ಧನ್ಯವಾದಗಳು.
"ಸಾಯಲಿ ಅಂತ ಹೆಂಡತಿಗೆ ಸೀರೆ ತೆಗೆಸಿ ಕೊಟ್ಟಿದ್ದೇನೆ" ಎಂದ ನಮ್ಮ ಗುರುಗಳೊಬ್ಬರ ನೆನಪಾಯಿತು !
ಪ್ರಕಾಶ್ ಅವರೆ,
ನಗಿಸುವ ಕಲೆ ನಿಮಗೆ ಕರತಲಾಮಲಕವಾಗಿದೆಯೆನ್ನಬಹುದು :) ನಮ್ಮಲ್ಲಿ ಒಬ್ಬರು ಎಲ್ಲದಕ್ಕೂ "ದರಿದ್ರ" ಎನ್ನುತ್ತಿದ್ದರು. ಅವರು ನಮ್ಮೊಂದಿಗಿದ್ದಷ್ಟು ದಿನ ಬಹಳ ಕಿರಿ ಕಿರಿಯಾಗಿತ್ತು. ಅವರು ಹೋದ ದಿನ ನಮ್ಮೆಲ್ಲರ ಬಾಯಲ್ಲೂ ಬಂದಿದ್ದು "ದರಿದ್ರ ಹೋಗಿಬಿಟ್ರು.." ಅಪ್ಪಿ ತಪ್ಪಿ ನಮಿಂದಲೂ (ಸಹವಾಸ ದೋಷದಿಂದ) ಇಂತಹ ಪದ ಬಂದಿದ್ದರಿಂದ ದೊಡ್ಡವರ ಬೈಗಳುಗಳನ್ನೂ ತಿನ್ನಬೇಕಾಯಿತು.
"ಸತ್ತೋಗ್ಲಿ.. ಬಿಟ್ಟಾಕು ಅದ್ನ" ಎಂದು ನಮ್ಮಲ್ಲಿ ಹೇಳುವುದು ಮಾಮೂಲು ತಾನೆ? :)
ಹೀಗೇ ನಗಿಸುತ್ತಿರಿ :)
ಕಿಶನ್.....
ನಾನು ದೋಹಾದಲ್ಲಿದ್ದಾಗ ನನ್ನ ಸೀನಿಯರ್ ಒಬ್ಬರು ಇಂಗ್ಲೀಷನ " DOWN " ಶಬ್ದ ಜಾಸ್ತಿ ಬಳಸುತ್ತಿದ್ದರು.. ಅವರು " DOWN " ಶಬ್ದ ಇಲ್ಲದೇ ವಾಕ್ಯವನ್ನು ಮುಗಿಸುತ್ತಲೇ ಇರುತ್ತಿರಲಿಲ್ಲ..
ಇದು ಒಂದು ಉದಾಹರಣೆ..
"Mr.HEGDE..YOU COME DOWN THERE,, I WILL ALSO COME DOWN THERE,, AND WE BOTH WILL GO DOWN THERE..!!
ಪ್ರತಿಕ್ರಿಯೆಗೆ ಧನ್ಯವಾದಗಳು...
ತೇಜಸ್ವಿನಿಯವರೆ...
ಅವರು ಒಮ್ಮೆ ಮೊಮ್ಮಗನ "ಅನ್ನ ಪ್ರಾಶನ" ಕಾರ್ಯಕ್ರಮಕ್ಕೆ ಕರೆದದ್ದು ಹೀಗೆ..
"ನನ್ನ ದೊಡ್ಡ ಮಗನ ಗಂಡು ಪಿಂಡದ ಗಂಟಲಿಗೆ ಅನ್ನ ಗಿಡಿಯಬೇಕು (ತುರುಕಬೇಕು)...
ಆ ಗೋವಿಂದ ಭಟ್ಟಂಗೆ ಹೇಳಿ ಸತ್ತಿದ್ದಿದ್ದೇನೆ...
ಬಂದು ಸಾಯ್ತಾನೋ ಇಲ್ಲ್ವೋ ಗೊತ್ತಿಲ್ಲ..! "
ಇಲ್ಲಿ ತಮ್ಮನ್ನೂ ಸಾಯಿಸಿ ಕೊಂಡು ಬಿಟ್ಟಿದ್ದರು...!!
ನಕ್ಕಿದ್ದಕ್ಕೆ ಧನ್ಯವಾದಗಳು..
ನಿಮ್ಮ ಬರಹ ಓದಿ ಸತ್ತು ಸುಣ್ಣಾದೆನು ....... ತುಂಬಾ
ಚೆನ್ನಾಗಿದೆ!!! ಹ ಹ ಹ
ಸ್ವಲ್ಪ ಹೊತ್ತಿನಲ್ಲೇ ತುಂಬ ಜನರ ಸಾವು ಕಂಡಿರಿ ಹ ಹ ಹ
ಕೆಲವರು ಅಭ್ಯಾಸಬಲ ಹಾಗೆ ಮಾತಾಡುತ್ತಾರೆ ....
ಮನಸು....
ಅಂಥವರು ಉಳಿದವರಿಗಿಂತ ಪ್ರತ್ಯೇಕವಾಗಿರುತ್ತಾರೆ..
ಜನರು ತಮ್ಮ ಬಗೆಗೆ ಏನು ಹೇಳುತ್ತಾರೆ....?
ಅದು ಅವರಿಗೆ ಬೇಕಿಲ್ಲ..
ಎಲ್ಲ ಸಮಯದಲ್ಲೂ ಅದನ್ನು ಒಪ್ಪಿಕೊಳ್ಳುವದು ಕಷ್ಟವಾಗಬಹುದೇನೋ..ಅಲ್ಲವಾ?
ನಿಮ್ಮ ಪ್ರತಿಕ್ರಿಯೆಗೆ..
ನಕ್ಕು ಸುಸ್ತಾಗಿದ್ದಕ್ಕೆ
ವಂದನೆಗಳು...
ಸರ್, ೩೬ ಕಮೆಂಟುಗಳು ಬಂದು ಸತ್ತ ಮೇಲೆ ನನ್ನ ಸತ್ತ ಕೆಮೆಂಟು ಹುಟ್ಟುತ್ತಿದೆ!!!
ಮಾತಲ್ಲೇ ಕೊಲ್ಲುವ ಯಜಮಾನರ ಬಗ್ಗೆ ಸೊಗಸಾಗಿ ಬರೆದಿದ್ದೀರ. ನೀವು ಹೇಳಿದಂತೆ ರಾಜಕೀಯ ನಾಯಕರ ಬಗ್ಗೆ ಅವರ ಬಳಿ ಮಾತಾಡಿದರೆ ಬ್ಲು ಮಜವಾಗಿರುತ್ತೆ.
ಪ್ರಕಾಷಣ್ನ,
ಸಾಯಿಲೋ ಮಾರಾಯ ನಿನ್ನ ಬರಹ ಓದ್ತಾ ಓದ್ತಾ ನೆಗ್ಯಾಡಿ ನೆಗ್ಯಾಡಿ ಸತ್ತು ಹೋದಿ. ಅದು ಸಾಯಲಿ ಆ ಎಮ್ಮೆ ತಂದ್ರ ಇಲ್ಯ ಅದನ್ನ ಹೇಳು.
ಮಲ್ಲಿ ಕಾರ್ಜುನ್...
ನೀವು ನಿಮ್ಮ ಬ್ಲೋಗ್ ನಲ್ಲಿ ಹಕಿರೊ ಫೋಟೊಗಳು...
ಸೂಪರ್...!ಅದ್ಭುತ ಛಾಯಾಗ್ರಹಣ..!
ಆ ಯಜಮಾನರ ಬಳಿ
" ಗಂಗಣ್ಣ ಉಪ ಚುನಾವಣೆ ಬಂತಲ್ಲಾ..." ಇಷ್ಟು ಕೇಳಿದರೆ ಸಾಕು...
" ಆ ಸತ್ತ ಯಡ್ಯೂರಪ್ಪಂಗೆ ತಲೆ ಇಲ್ಲ...
ಈ ಸತ್ತುಹೋದ ಜೇಡಿಎಸ್ ನವರಿಗೆ ಜೀವ ಇಲ್ಲ....
ನರಸತ್ತ ಕಾಂಗ್ರೆಸ್ಸ್ನವರು ದೆಹಲಿಗೆ ಹೋಗಿ ಸಾಯ್ತಾರೆ..
ಈ ಸತ್ತ ರಾಜಕೀಯದವರು...ಬೆಲೆ ಏರಿಸಿ ನಮ್ಮನ್ನು ಸಾಯಿಸಿ ಬಿಡ್ತಾರೆ..! "
ಹೀಗೆ ಹೇಳಬಹುದೇನೋ...!
ಪ್ರತಿಕ್ರಿಯೆಗೆ ಧನ್ಯವಾದಗಳು...
ಮೂರ್ತಿಯವರೆ...
ಆ ಸತ್ತುಹೋದ ಸುಬ್ಬಣ್ಣನ ಎಮ್ಮೆಗೆ "ಒದೆಯುವ ಚಾಳಿ" ಇದ್ದಿತ್ತಂತೆ..!
ಸಾವನ್ನೂ ಮಜ ಮಾಡಿದ್ದಕ್ಕೆ ಅಭಿನಂದನೆಗಳು...
ಪ್ರಕಾಶ್ ಅವರೆ,
ಮನುಷ್ಯ ಹೇಗೆ ಎಂದು ಗೊತ್ತಾದರೆ ಒಪ್ಪಿಕೊಳ್ಳುತ್ತೆವೇನೋ, ಅವರ ಬಗ್ಗೆ ತಿಳಿಯೋವರೆಗೂ ಕಷ್ಟ ಅಷ್ಟೆ ,ಅವರೊಂದಿಗೆ ಮಾತಾನಾಡುತ್ತಾ,ಓಹ್ ಇವರು ಇದೆ ರೀತಿ ಎಂದು ಸ್ವೀಕರಿಸುತ್ತೇವೆ ಅಲ್ಲವೇ..?
ನಿಮ್ಮ ಅನುಭವಗಳನ್ನು ಹೀಗೆ ಬರೆಯುತ್ತಲಿರಿ........
ಕನಸು...
ನೀವೆನ್ನುವದು ನಿಜ..
ಒಡನಾಟವಾದ ಮೇಲೆಯೆ ಸ್ವಭಾವ ಗೊತ್ತಾಗುವದು..
ಧನ್ಯವಾದಗಳು..
Post a Comment