Sunday, December 14, 2008

ನಗುವವರ ಮುಂದೆ..ಎಡವಿ ಬೀಳ ಬೇಡ...!!

ಲಕ್ಕಣ್ಣನ ಚಹ ಅಂಗಡಿಯಲ್ಲಿ ಮಸಾಲೆ ಮಂಡಕ್ಕಿ ತಿಂದು ಗೆಳೆಯರೆಲ್ಲ ಕೆಕೆ ಹಾಕುತ್ತ ಕಾಲೇಜಿನ ಕಡೆ ಹೊರಟಿದ್ದೇವು.. ನಮ್ಮ ಮಾತಿಗೆ ಲಂಗುಲಗಾಮು ಇಲ್ಲವಾಗಿತ್ತು..
ಅಂದು ಪಿಯುಸಿ ಪರೀಕ್ಷೆಯ ಫಲಿತಾಂಶದ ದಿನ...
ಎಲ್ಲರಿಗೂ ಉತ್ಸಾಹ ಕಾತುರ..ರಿಸಲ್ಟ್ ನೋಡಿಕೊಂಡು ಸಿರ್ಸಿ ಲಕ್ಶ್ಮೀ ಟಾಕಿಸಿನಲ್ಲಿ ಸಿನೇಮಾ ನೋಡೋಣ ಅಂತೆಲ್ಲಾ ಮಾತಾಡಿಕೊಳ್ಳುತ್ತಿದ್ದೇವು..
ಬಹಳ ದಿನಗಳ ನಂತರ ಗೆಳೆಯರೆಲ್ಲ ಒಟ್ಟಿಗೆ ಸೇರಿದ್ದೇವು..ರಜೆಯ ದಿನಗಳ ವಿಶೇಷ ಹೇಳಿಕೊಳ್ಳುತ್ತಿದ್ದೇವು..ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಳ್ಳುತ್ತೀದ್ದೇವು....


"ಎಲ್ರಿಗೂ ಪಾಸಾಗುವ ಭರವಸೆ ಇದೆಯೇನ್ರೋ..ಇಲ್ಲಾ ಅಂದ್ರೆ.. ಪು.ಬ. ಕಳಿಸಿ ರಿಸಲ್ಟ್ ತರಿಸೋಣ" ವಿವೇಕ ಸ್ವಲ್ಪ ಮುಂದಾಲೋಚನೆ ತೋರಿಸಿದ..

ಪು.ಬ. ಅಂದ್ರೆ ಪುಸ್ತಕದ ಬದನೆಕಾಯಿ..ಉಮಾಪತಿಗೆ ನಾವೆಲ್ಲ ಹಾಗೆ ಕರೆಯುತ್ತಿದ್ದೇವು...

"ಈ ಪಬ್ಲಿಕ್ ಎಕ್ಸಾಮ್ ನಂಬಲಿಕ್ಕೆ ಆಗಲ್ಲಾ ಕಣ್ರೊ..ಪುಬ ಕಳಿಸೋಣ" ಎಂದು ನಾಗು ಉಸುರಿದ...
ಅವನಿಗೆ ಡೌಟ್ ಇತ್ತೇನೋ...

ಅವನ ಮತ್ತು ರಾಜಿಯ ಕಥೆ ಎಲ್ಲರಿಗೂ ಗೊತ್ತಿತ್ತು....

ಅಷ್ಟರಲ್ಲಿ ಸೀತಾರಾಮ ಆತಂಕದಿಂದ ಬಂದ...

"ಪ್ರಕಾಶು..ನಿನ್ನ ಹೆಸರು ಕಾಣ್ತಾ ಇಲ್ವಲ್ಲೊ..!!"'

ಸರಿಯಾಗಿ ನೋಡಿದ್ಯೇನೋ..ತೆಂಗಿನಕಾಯಿ ತಲೆಯವನೆ.." ವಿವೇಕ ಗದರಿದ...

ಸೀತಾರಾಮ ಎಂದಿಗೂ ತಮಾಷೆ ಮಾಡುವವನಲ್ಲ....

ನಾನು ಪಾತಾಳಕ್ಕೆ ಕುಸಿದಿದಿದ್ದೆ...

ಹೌದು ನಾನು ಫೇಲ್ ಆಗಿದ್ದೆ.....!! ಇಂಗ್ಲೀಷ್ ಗೆ ೧೬ ಮಾರ್ಕ್ಸ್ ಬಿದ್ದಿತ್ತು...!!

ಆಗಬಾರದಾಗಿತ್ತು..ಆಗಿ ಹೋಯಿತು...
ಮುಂದೇನು....??
ಅಂಧಾಕಾರ ಕವಿದಂತಾಗಿತ್ತು..

ಯಾವಾಗಲೂ ಮಾತಾಡಿ ನಗಿಸುತ್ತಿದ್ದ ನಾನಗೆ ಮಂಕು ಕವಿದಂತಾಯಿತು...

ಮನೆಗೆ ಬಂದು ವಿಷಯ ಹೇಳಿದೆ...

ಬೇಜಾರಾದರೂ..
ಆಯಿ, ಆಣ್ಣ ಇಬ್ಬರೂ ಸಮಾಧಾನ ಮಾಡಿದರು...


ಊರಿನವರಿಗೆ ಹೇಗೆ ಮುಖ ತೋರಿಸುವದು..?

ನಾಚಿಕೆ..ಸೋಲು.. , ಅವಮಾನಗಳಿಂದ ಕುಗ್ಗಿ ಹೋದೆ...

ಒಬ್ಬನೆ ಒಂಟಿಯಾಗಿ ರೋಧಿಸಿದೆ...ಹೀಗೇಕಾಯಿತು..?

ಒಂದುರೀತಿಯ ಶೂನ್ಯ ಆವರಿಸಿತು... ಮಾತಿಲ್ಲದೆ ಮಂಕಾಗಿಬಿಟ್ಟೆ....

ಅಣ್ಣ ನನ್ನ ರೂಪ ಕಂಡು ಹೆದರಿದ..ಚಿಂತಿತನಾದ..

"ನೋಡು ಇದ್ದ ಜಮೀನನಲ್ಲೇ ದುಡಿಯೋಣ... ನನ್ನ ಸಂಗಡ ಹೊಲಕ್ಕೆ ಬಾ..ಕೆಲಸ ಮಾಡುವದರಿಂದ ಸ್ವಲ್ಪ ಬದಲಾವಣೆಯಾಗುತ್ತದೆ..."

ನನಗೆ ಬೇರೆ ದಾರಿ ಇರಲಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ಏನು ಮಾಡುವದು..?

ನಮಗೆ ಆಸ್ತಿಯೂ ಕಡಿಮೆ..

ಅಣ್ಣನ ಸಂಗಡ ಕೆಲಸಕ್ಕೆ ಹೊರಟೆ..ಆಗ ಕೂಲಿ ಸಮಸ್ಯೆ.. ಊರಿನ ಗಂಡುಮಕ್ಕಳು ಪರಸ್ಪರ ಸಹಾಯ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರು.

ಅವರ ಮನೆಗೆ ಇವರು..ಇವರ ಮನೆಗೆ ಅವರು ಕೆಲಸಕ್ಕೆ ಹೋಗುತ್ತಿದ್ದರು...

ಮೈಮುರಿದು ಕೆಲಸ ಮಾಡಿದೆ..ಮೈ ಕೈ ನೋವು ಬರುತ್ತಿತ್ತು...
ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿತ್ತು..

ಬೆಳಿಗ್ಗೆ ತಿಂಡಿ ಆಗುವ ಮೊದಲು ಬೆಟ್ಟಕ್ಕೆ ಹೋಗಿ ಹುಲ್ಲು, ಸೊಪ್ಪು ತರುತ್ತಿದ್ದೆ.

ಆಮೇಲೆ ಅಣ್ಣನ ಸಂಗಡ..ಬೇರೆಯವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದೆ..

ಗೊಬ್ಬರ ತೆಗೆದೆ..ದನ ಕಾಯುವ ಕೆಲಸವನ್ನೂ ಮಾಡಿದೆ...
ಯಾಂತ್ರಿಕವಾಗಿ ದಿನಕಳೆಯುತ್ತಿತ್ತು....

ಇದೇ ನನ್ನ ಜೀವನ ..ಹೀಗೆಯೆ ನನ್ನ ಜೀವನ ಅಂದುಕೊಂಡು ಬಿಟ್ಟೆ...

ಒಂದು ದಿನ ದಿವಾಕರ ಬಂದ..

ಅವನ ಬಳಿ ಮುಖ ತೋರಿಸಿ ಮಾತಾಡಲೂ ನನಗೆ ಮುಜುಗರ....ಅವನಿಗೆ ನನ್ನ ಸ್ಥಿತಿ ಅರ್ಥವಾಯಿತು...
ನನ್ನನ್ನು ಊರಿನ ಗದ್ದೆ ಬಯಲಿನ ಹೊಳೆಯ ದಡಕ್ಕೆ ಕರೆದು ಕೊಂಡು ಹೋದ...

" ನೀನು ಫೇಲ್ ಆಗಿದ್ದು ಪರೀಕ್ಷೆಯಲ್ಲಿ..ಕಣೊ..ಜೀವನದಲ್ಲಿ ಅಲ್ಲ..ಇನ್ನೂ ಬೇಕಾದಷ್ಟು ಸಮಯ, ಅವಕಾಶ ನಮ್ಮ ಬಳಿ ಇವೆ..ಎಲ್ಲ ಕಳೆದು ಕೊಂಡವರ ಹಾಗೆ ಇದ್ದೀಯಲ್ಲ..ಏನಪ್ಪಾ ಇದು..ಮೈ ಕೊಡವಿ ಏಳು..
ಏನಾದರೂ ಮಾಡೋಣಾ..ಎಲ್ಲಾ ಹೊಸದಾಗಿ ಶುರು ಮಾಡೋಣಾ..." ಅಂದ

"ಏನು ಮಾಡಲಿ ಹೇಳು..?" ಮಂಕು ಕವಿದ ನನಗೆ ಏನೂ ತೋಚದ ಹಾಗೆ ಕೇಳಿದೆ.

"ನೀನು ಸಿವಿಲ್ ಇಂಜಿನಿಯರಿಂಗ್ ಓದು..

ಇದು ಸಾಧ್ಯವಾಗದ..ಕೆಲಸ.....

ಪಿಯುಸಿ "ಅರ್ಟ್ಸ್" ನಲ್ಲಿ ಫೇಲ್...!!.ಇಂಗ್ಲೀಷ ಗೆ ೧೬ ಮಾರ್ಕ್ಸ್..!!

ನಾನು ಸಿವಿಲ್ ಇಂಜನಿಯರಿಂಗ್ ಓದುವದೆ..? ಅದೂ ಇಂಗ್ಲೀಷ್ ಮಾಧ್ಯಮದಲ್ಲಿ..??

"ಮತ್ತೆ ಪರಿಕ್ಷೆಗೆ ಕಟ್ಟಿ ಪಾಸಾಗಿ..ಬಿ.ಎ. ಓದಿದರೆ ಹೇಗೆ..?' ನಾನು ಕೇಳಿದೆ...

'ಹೊಡೆದರೆ ಹುಲಿ ಹೊಡೆಯ ಬೇಕು.. ಮತ್ತೆ ಇಲಿ ಹೊಡೆಯಲು ಹೋಗಬಾರದು"

ಇದು ನನ್ನಿಂದ ಆದೀತೆ ದಿವಾಕರ..?"

"ಯಾಕೆ ಆಗಬಾರದು..?
ಅದೂ ಒಂದು ಸಬ್ಜೆಕ್ಟ್ ತಾನೆ..? ನೀನು ಸ್ವಲ್ಪ ಹೆಚ್ಚಿಗೆ ಓದಬೇಕಾಗಬಹುದು..
ಜಾಸ್ತಿ ಪ್ರಯತ್ನ ಪಡಬೇಕಾಗಬಹುದು ..ಖಂಡಿತ ಯಶಸ್ಸು ಇದೆ.."


ಖಚಿತವಾಗಿದ್ದ... ಅವನ ಧ್ವನಿಯಲ್ಲಿ ಆತ್ಮ ವಿಶ್ವಾಸ ತುಳುಕುತ್ತಿತ್ತು..ನನ್ನ ಮೇಲೆ ಅಪಾರ ಭರವಸೆ ಇತ್ತು..

ನಾನು ಮತ್ತೆ ಮಾತಾಡಲಿಲ್ಲ...
ಇಬ್ಬರೂ ಮನೆಗೆ ಬಂದಾಗ ಕತ್ತಲೆಯಾಗಿತ್ತು..

ಬೆಳಿಗ್ಗೆ ದಿವಾಕರ ಎದ್ದು ಊರಿಗೆ ಹೋದ...

ನಾನು ಅಣ್ಣನ ಸಂಗಡ ಕೆಲಸಕ್ಕೆ ಹೋದೆ..ಬೆಟ್ಟದಲ್ಲಿ ಹುಲ್ಲು ಕಟಾವ್ ಮಾಡುತ್ತಿದ್ದೇವು..

ನನಗೆ ದಿವಾಕರನ ಮಾತೇ ತಲೆಯಲ್ಲಿ ಕೊರೆಯುತ್ತಿತ್ತು..
ಮತ್ತೆ ಓದುವದು ನನ್ನಿಂದ ಆದೀತೆ..?

ಕತ್ತಿ ಬೀಸಿದೆ..ಅದು ಆಯ ತಪ್ಪಿ ನನ್ನ ಹೆಬ್ಬೆರಳ ಉಗುರಿನ ಬಳಿ ತಾಗಿತು...!!

ಚರ್ಮ, ಮಾಂಸ, ಕತ್ತರಿಸಿತು...ಚಿಳ್ಳನೇ ರಕ್ತ ಚಿಮ್ಮಿತು..

"ಜೀವ" ಹೋದಷ್ಟು ನೋವಾಯಿತು... !!
ಅಣ್ಣ ಓಡಿ ಬಂದ..ತಲೆಗೆ ಸುತ್ತಿದ್ದ ಬಟ್ಟೆ ಹರಿದು ಬ್ಯಾಂಡೇಜ್ ಕಟ್ಟಿದ..
ಒಂದು ಮಗ್ ನೀರು ಕುಡಿಸಿದ..ಬಹಳ ರಕ್ತ ಸ್ರಾವ ಆಯಿತು...


ರಾತ್ರಿ ಊಟ ಆದಮೇಲೆ ಅಣ್ಣ ನಿಧಾನವಾಗಿ ಮಾತಾಡಿದ....

"ನೋಡು..ನಿನ್ನ ಹೊಯ್ದಾಟ ಅರ್ಥವಾಗುತ್ತದೆ...
ನಮ್ಮ ಕೈ ಮೀರಿ ಆದ ಘಟನೆ ಬಗೆಗೆ ತಲೆ ಕೆಡಿಸಿ ಕೊಳ್ಳುವದರ ಬಗೆಗೆ ಅರ್ಥವಿಲ್ಲ..ಮುಂದೇನು ಮಾಡೋಣ..? ಅದರ ಬಗೆಗೆ ವಿಚಾರ ಮಾಡು...
ನೀನು ನಕ್ಕರೂ ಜೀವನ ಕಳೆಯುತ್ತದೆ..ನಗದಿದ್ದರೂ ಜೀವನ ಕಳೆದು ಹೋಗುತ್ತದೆ...
ನೀನು ನಗಬೇಕು ..ಮೊದಲಿನಂತಾಗಬೇಕು..
ಮುಂದೆ ಏನು ಮಾಡಬೇಕು ಅಂದು ಕೊಂಡಿದ್ದೀಯಾ..?"

ನನ್ನ ಬಳಿ ಯಾವುದೆ ಉತ್ತರ ಇರಲಿಲ್ಲ...ಯೋಚಿಸುವದನ್ನೇ ಬಿಟ್ಟುಬಿಟ್ಟಿದ್ದೆ...

"ನಂಗೇನೂ ಗೊತ್ತಾಗ್ತಾ ಇಲ್ಲ.. ಅಣ್ಣಯ್ಯಾ" ಹೇಳಿದೆ..

"ಸರಿ ನಮಗೆ ಇರುವ ಜಮೀನಿನಲ್ಲಿ ಒಂದು ಸಂಸಾರ ಜೀವನ ಮಾಡಬಹುದು.. ನೀನು ಮನೆ ಕಡೆ ಇದ್ದು ಆಯಿ...ಜಮೀನು ನೋಡಿಕೊ..ನಾನು ಪಟ್ಟಣಕ್ಕೆ ಹೋಗುತ್ತೇನೆ...
ಹೋಟೆಲಲ್ಲೊ ಎಲ್ಲೋ ಒಂದು ಕಡೆ ಕೆಲಸ ಮಾಡುತ್ತೇನೆ..ಜೀವನ ಮಾಡುತ್ತೇನೆ.. "

ಅವನ ಧ್ವನಿಯಲ್ಲಿ ಧ್ರಡತೆ ಇತ್ತು...

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ....ಸುಮ್ಮನಿದ್ದೆ...

ಮತ್ತೆ ಅಣ್ಣನೇ ಹೇಳಿದ...."ನೀನು ವಿಚಾರ ಮಾಡಿ ತಿಳಿಸು..ನೀನು ಓದುವದಾದರೆ..ಓದು..ನಾನು ಓದಿಸುತ್ತೇನೆ..ಎಷ್ಟೇ ಕಷ್ಟವಾದರೂ ಚಿಂತೆಯಿಲ್ಲ.... ಒಟ್ಟಿನಲ್ಲಿ ನೀನು ಮೊದಲಿನ ಥರಹ ಆಗಬೇಕು..ನಗುತ್ತ ಕುಣಿಯುತ್ತ ಇರಬೇಕು.."

ನಾನು ವಿಚಾರಕ್ಕೆ ಬಿದ್ದೆ..ನಾನು ಜಮೀನಿನಲ್ಲಿ ಕೆಲಸ ಮಾಡಲೇ..?..

ಏನೂ ಓದಿರದ ಅಣ್ಣ ಪಟ್ಟಣದಲ್ಲಿ ಕೆಲಸ ಮಾಡುವದೆ..?
ಅವನಿಗೆ ಕ್ರಷಿ ಬಿಟ್ಟು ಮತ್ತೇನೂ ಗೊತ್ತಿಲ್ಲ...

ನನ್ನಿಂದ ಅಣ್ಣನಿಗೆ ತೊಂದರೆ ಆಗಬಾರದು...

ಬೆಳಿಗ್ಗೆ ಮನೆಯಲ್ಲೇ ಇದ್ದೆ..ಕೈ ನೋವು ಜಾಸ್ತಿ ಆಗಿತ್ತು..ಆಯಿ ಅರಿಷಿಣ..ಮತ್ತೇನೋ ಸೊಪ್ಪು ಹಾಕಿ ಕಟ್ಟಿದ್ದರು..

ಅಷ್ಟರಲ್ಲಿ ನಾಗು ಬಂದ್ದಿದ್ದ...!!

ನಿಜವಾಗೀಯೂ ಖುಷಿಯಾಯಿತು..

ಸ್ನೇಹ ಅಂದರೆ ಇದು....!!ನನ್ನ ಬೇಜಾರು ನೋಡಿ ಬಂದನಲ್ಲ..!!

ನಗಲು ಪ್ರಯತ್ನಿಸಿದೆ.. ಆಗಲಿಲ್ಲ .....

ಮಾತಾಡಿಸಿದೆ..ಚಹ, ಅವಲಕ್ಕಿ ತಿನ್ನುತ್ತಾ ಬಂದ ಕಾರಣ ಹೇಳಿದ....

"ಪ್ರಕಾಶು..ದೊಡ್ಡ ಸಮಸ್ಯೆ ಮಾರಾಯ.. ..
ನಾನು ರಾಜಿಗೆ ಬರೆದ ಬರೆದ ಪ್ರೇಮ ಪತ್ರ ರಾಜಿ ಅಪ್ಪನಿಗೆ ಸಿಕ್ಕಿ ಬಿಟ್ಟಿದೆ..!
ನಿನ್ನೆ ಸಿರ್ಸಿ ಸಂತೆಯಲ್ಲಿ ತೆಂಗಿನಕಾಯಿ ತಲೆ ಸೀತಾರಾಮನಿಗೆ ಸಿಕ್ಕಿದ್ರಂತೆ..
ಗರಮ್ ಆಗಿದ್ರಂತೆ.."ನೋಡು ನಾಗುನಿಗೆ ನಮ್ಮ ಮನೆಗೆ ಬರಲು ಹೇಳು..ಇಲ್ಲವಾದಲ್ಲಿ ನಾನೇ ಅವರ ಮನೆ ಹೋಗುತ್ತೇನೆ.. ಅವನ ಅಪ್ಪನ ಬಳಿ ಮಾತಾಡ್ತೇನೆ" ಅಂದರಂತೆ ಮಾರಾಯ..!!
ನನಗೆ ಏನೂ ಗೋತ್ತಾಗ್ತಾ ಇಲ್ಲ... ನೀನೆ ಪರಿಹಾರ ಹುಡುಕು....
ರಾಜಿ ಅಪ್ಪ ನಮ್ಮನೆಗೆ ಬರದ ಹಾಗೆ ಮಾಡಬೇಕು....! ಏನು ಮಾಡಲಿ..?.?'

"ಒಳ್ಳೆಯದಾಯತಲ್ಲ ..ನಿಂಗೆ ರಾಜಿ ಬೇಕು ತಾನೆ..ಅವರು ಬಂದು ನಿನ್ನ ಅಪ್ಪನ ಬಳಿ ಮಾತಾಡ್ಲಿ.. ಸಮಸ್ಯೆ ಪರಿಹಾರವಾಯಿತಲ್ಲ.." ಅಂದೆ...

"ನಿನ್ನ ತಲೆ.. ಎಂಥಾ ಮನುಷ್ಯ ಮಾರಾಯಾ ನೀನು....??
ನನ್ನ ಅಪ್ಪ ಸುಮ್ನಿರ್ತಾರೇನೊ..? ನನ್ನ ಸಾಯಿಸಿ ಬಿಡ್ತಾರೆ..
ಅದೆಲ್ಲ ಬೇಡ ..ನಾವೇ ರಾಜಿ ಅಪ್ಪನ ಬಳಿ ಹೋಗೋಣ..ನೀನು ಬಾ..ನೀನೆ ಮಾತಾಡು..
ಹೇಗಾದರೂ ಮಾಡಿ ಬೀಸೋ ದೊಣ್ಣೆ ತಪ್ಪಿಸು ಮಾರಾಯ.. ಈಗಲೇ ರೆಡಿ ಆಗು.."

ನಾಗು ಬಡಬಡಿಸಿದ..

ನಾಗುವಿನ ಸ್ಥಿತಿ ನೋಡಿ ನನಗೆ ನಗು ತಡೆಯಲಾಗಲಿಲ್ಲ..

ದೊಡ್ಡದಾಗಿ...ನಕ್ಕುಬಿಟ್ಟೆ......

ನಗು ಬರದಿದ್ದರೂ ನಾಗುವೂ ನಕ್ಕ..ಹುಳಿನಗು....
ಆಯಿ ಅಡುಗೆ ಮನೆಯಿಂದ ಇಣುಕಿದಳು...


"ಏನಾಯಿತ್ರೋ.....ಈ ಪ್ರಕಾಶನ ನಗು ನೋಡದೆ ಬಹಳ ದಿವಸ ಆಗಿತ್ತು..
ಅವನಿಗೆ ನಗು ಮರೆತೇ ಹೋಗಿತ್ತು..ನಾಗು ನೀನು ಇನ್ನೂ ನಾಲ್ಕುದಿವಸ ಇಲ್ಲೇ ಇರು..!!
ನೀನು ಅವನ ಮುಖದಲ್ಲಿ ನಗು ತರಿಸಿದೆ ನೋಡು.."

ನಾಗು ಹುಳಿ ನಗು ನಕ್ಕ ತಲೆ ಆಡಿಸಿದ ..ನನ್ನತ್ತ ನೋಡಿದ.....

ಅಷ್ಟರಲ್ಲಿ ಅಣ್ಣಯ್ಯ ಬಂದ..ನನ್ನ ನಗು ಮುಖ ನೋಡಿ ಅವನಿಗೆ ಆಶ್ಚರ್ಯ.!!..

"ನಾಗು..ನಾಲ್ಕು ದಿವಸ ನಮ್ಮಲ್ಲೇ.. ಇರಬೇಕು..ನಿವಿಬ್ರೂ ಗದ್ದೆ ತೋಟ ಸುತ್ತಾಡ್ಕೊಂಡು ಬನ್ನಿ." ಅಂದ..

ನಾಗುವಿಗೆ ಪಿಕಲಾಟವಿಕ್ಕಿತು..ಅಷ್ಟರಲ್ಲಿ ನಾನೇ ಹೇಳಿದೆ..

" ಅಣ್ಣಯ್ಯ ನಾನು ಸಿರ್ಸಿಗೆ ಹೋಗಬೇಕು..ಆರ್,ಎನ್. ಶೆಟ್ಟಿ ಕಾಲೇಜಿಗೆ....ನಾನು ಸಿವಿಲ್ ಇಂಜಿನಿಯರಿಂಗ್ ಓದುತ್ತೇನೆ..ಮಾಹಿತಿ ತಗೊಂಡು ಬರ್ತೇನೆ.."

ಏನೂ ಹೇಳ ಬೇಕಾಗಿಲ್ಲ ವಾಗಿತ್ತು ..ಅಣ್ಣಯ್ಯನ ಮುಖದಲ್ಲಿ ಸಂತೋಷ ಕಾಣಬಹುದಿತ್ತು...

ಪ್ರೀತಿಯಿಂದ ನನ್ನ ತಲೆ ಸವರಿದ

" ನೀನು ಏನು ಬೇಕಾದರೂ ಓದು..ಆದ್ರೆ..ನಮ್ಮ ನೋಡಿ ನಗುವವರ ಮುಂದೆ ಎಡವಿ ಬೀಳ ಬಾರದು ನೋಡು.. ನಿನ್ನ ಬೆನ್ನ ಹಿಂದೆ ನಾನಿದ್ದೇನೆ..ಹೋಗಿ ಬಾ"

"ಇಲ್ಲ ಅಣ್ಣಯ್ಯ ನಾನು ಓದುತ್ತೇನೆ.. ಮತ್ತೆ ಅದೇ ತಪ್ಪು ಮಾಡುವದಿಲ್ಲ.. ಮನಸ್ಸು ಗೊಟ್ಟು ಓದುತ್ತೇನೆ..."

ನಾನು ಆತ್ಮವಿಶ್ವಾಸದಿಂದ ಹೇಳಿದೆ....

ನಾನು ರೆಡಿಯಾದೆ .
ನಾಗುವಿನ ಬೈಕ್ ಏರಿದೆ..ಹೋಗುತ್ತಾ ಇರುವಾಗ ನಾಗು ಹೇಳಿದ..

'ನೀನು ಏನು ಬೇಕಾದ್ರೂ ಓದು ಮಾರಾಯಾ..ಮೊದಲು ಮಿಲಿಟರಿ ಸುಬ್ಬು ರಾವ್ ಮನೆಗೆ ಹೋಗೋಣ"

" ಮಿಲಿಟರಿಸುಬ್ಬುರಾವ್ ಯಾರೋ..?"

" .....ರಾಜಿ ಅಪ್ಪ ..!! ರಿಟಾಯರ್ಡ್..ಮೇಜರ್..!!??...."

....... ಸಮಸ್ಯೆ ದೋಡ್ಡದೇ ಆಗಿತ್ತು....ನನಗೆ...... ದಪ್ಪ ಬಿಳಿಮೀಸೆ..... ಕೆಂಪು ಕಣ್ಣು.... ಸಂಗಡ ..ಕೋವಿ..(ಗನ್)..ನೆನಪಾಯಿತು........

38 comments:

shivu K said...

ಪ್ರಕಾಶ್ ಸಾರ್,
ನಿಮ್ಮ ಹಳೆ ಕತೆಗಳು ಬಲು ಮಜಾ ಇರುತ್ತೆ. ಇಲ್ಲೊಂದು ವಿಷಯ, ಮೊದಲಿಗೆ ಇವರೇನು ಹಾಸ್ಯ ಸನ್ನಿವೇಶಗಳನ್ನು ಬರೆಯುತ್ತಾ, ಮಾತಾಡುತ್ತ, ನಗುತ್ತಾ, ನಗಿಸುತ್ತಾ, ಆಷ್ಟಕ್ಕೆ ಸೀಮಿತರಾಗಿಬಿಡುತ್ತಾರೇನೊ ಅನ್ನಿಸಿತ್ತು. ಈಗ ನೋಡಿ ಬಂತು ನಿಮ್ಮ ನಿಜವಾದ ಜೀವನ್ಮುಖಿಯಾದ ಲೇಖನ. ಬರವಣಿಗೆಯ ಓಘ ತಿಳಿನೀರು ಹರಿದಂತೆ. ನಾನು ನಿರೀಕ್ಷಿಸಿದ್ದು ಇದನ್ನೆ. ಮುಂದುವರಿಯಲಿ....ಹೀಗೆ...ಜೀವನ....ಜೀವನದ ಕತೆಗಳು.......

ಸಂತೋಷ್ ಚಿದಂಬರ್ said...

ಹೃದಯಸ್ಪರ್ಶಿ ಲೇಖನ .. ಲಿಂಕನ್ ಹೇಳಿದ ಒಂದು ಮಾತು ನನ್ನ ಅಣ್ಣ ನಮಗೆ ಸಾದಾ ಹೇಳುತ್ತಿದ್ದರು .. " ಪರೀಕ್ಷೆಯಲ್ಲಿ ಫೇಲ್ ಆಗುವುದು ಮೋಸ ಮಾಡುವುದಕ್ಕಿಂತಲೂ ಹೆಚ್ಚು ಗೌರವವದುದ್ದು"

ಅಂತರ್ವಾಣಿ said...

ಪ್ರಕಾಶಣ್ಣ,
ನಿಮ್ಮ ಕಾಲೇಜಿನ ಜೀವನದಲ್ಲಿ ಮಿತ್ರರಿಗೆ ಇಟ್ಟ ಅಡ್ಡ ಹೆಸರುಗಳು ಚೆನ್ನಾಗಿತ್ತು. ಈ ಲೇಖನದಲ್ಲೂ ಹಾಸ್ಯ, ದುಃಖ ಎರಡೂ ಕೂಡಿದೆ. ಬದುಕು ಸಿಹಿ-ಕಹಿ ಅನ್ನುವುದಕ್ಕೆ ಒಂದು ಉದಾಹರಣೆ.

sunaath said...

ಪ್ರಕಾಶ,
ಸ್ವಾರಸ್ಯಕರವಾದ ಕತೆಯನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟಿರಲ್ಲಾ, ಮುಂದಿನ ಕಂತನ್ನು ಬೇಗನೇ ಕೊಡಿ.

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...
ನಿಮ್ಮ ನಿಶ್ಕಲ್ಮಶ ಪ್ರೀತಿಗೆ ಏನು ಹೇಳ ಬೇಕೋ ತಿಳಿಯದಾಗಿದೆ...
ನೀವು ಮತ್ತು ಮಲ್ಲಿಕಾರ್ಜುನ ಇಬ್ಬರೂ ಬೆನ್ನು ತಟ್ಟಿ ಪ್ರೋತ್ಸಾಹ ಕೊಡುತ್ತ.ಸಂತೋಷ ಪಡುವದಿದೆಯಲ್ಲ ಇದು ಈ ಜಗತ್ತಿನಲ್ಲಿ ತುಂಬ ಅಪರೂಪ...
ನಿಮ್ಮ ಸ್ನೇಹಕ್ಕೆ ,ಪ್ರೀತಿ ವಿಶ್ವಾಸಕ್ಕೆ ಚಿರ ಋಣಿ ನಾನು...
ಹ್ರತ್ಪೂರ್ವಕ ವಂದನೆಗಳು....
GOD BLESS YOU BOTH..

ಸಿಮೆಂಟು ಮರಳಿನ ಮಧ್ಯೆ said...

ಸಂತೋಷ್...
ಫೇಲಾಗಿ ಮನೆಗೆ ಬಂದು ಆಗಿದ ಅವಮಾನ ಇದೆಯಲ್ಲ...
ಅದು ನನ್ನ ಜೀವನವನ್ನೇ ಬದಲಿಸಿತು..
ಅಲ್ಲಿಯವರೆಗೆ ಚಿಕ್ಕಪ್ಪನ ಹಿತವಚನ ಕೇಳದೆ..
ನಾಟಕ, ಭಾಷಣ ಸ್ಪರ್ಧೆ..ಅದು ಇದು ಅಂತ ಓದಲೇ ಇಲ್ಲ..
ಫೇಲಾದೆ..
ಆದರೆ ಆಗಿದ್ದೆಲ್ಲ ಒಳ್ಳೆಯದೆ ಆಯಿತು...
"ಸೋಲೇ..ಗೆಲುವಿನ ಸೋಪಾನ" ಅಂತರಲ್ಲ ಅದು ನಿಜ ಅನಿಸುತ್ತದೆ...

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿಯವರೆ....

ಹೌದು..ನನ್ನ ಗೆಳೆಯರ ಬಳಗ ಬಹಳ ದೊಡ್ಡದು..
ಈ ಥರಹ ಹೆಸರುಗಳೂ ಬಹಳ ಇದೆ...
ಜೀವನವೆಂದರೆ ಬೇವು ಬೆಲ್ಲ..ಅಲ್ಲವಾ..?

ಸಿಮೆಂಟು ಮರಳಿನ ಮಧ್ಯೆ said...

ಸುನಾತ ಸರ್..

ಈ ನಾಗುವಿನ ಕಥೆ ಬಹಳ ದೊಡ್ಡದು..
ಅದು ಹೇಳಲು ಬಹಳ ಕಂತುಗಳೇ ಬೇಕು..
ಪ್ರತಿಕ್ರಿಯೆಗೆ ಧನ್ಯವಾದಗಳು...
ಹೀಗೆ ಬರುತ್ತಾ ಇರಿ...

Harish - ಹರೀಶ said...

ಒಂಥರಾ ಇದ್ದು! ನಗ್ಲೋ ಅಳ್ಲೋ ಗೊತ್ತಾಗ್ತಾ ಇಲ್ಲೆ!! ಪ್ರಕಾಶಣ್ಣ, ನಿನ್ ಕಥೆಯೇನೋ ಸುಖಾಂತ್ಯವಾತು.. ನಾಗುವಿನ ಕಥೆ!?

ಸಿಮೆಂಟು ಮರಳಿನ ಮಧ್ಯೆ said...

ಹರೀಷ್....

ನಾಗು ಕಥೆ ಈಗ ಬೇಡ..
ಇನ್ನೊಮ್ಮೆ...plz...

ಧನ್ಯವಾದಗಳು...

ಶಾಂತಲಾ ಭಂಡಿ said...

ಪ್ರಕಾಶಣ್ಣ...
ನನಗೂ ಇಂತಹದೇ ಅನುಭವವಾಗಿತ್ತು. ಬಿ.ಎ ಪ್ರಥಮ ವರ್ಷದ ಫಲಿತಾಂಶ ಬರುವುದರೊಳಗೇ 75% ರಿಸಲ್ಟ್ ಆಗುತ್ತದೆಯೆಂಬುದನ್ನು ಅಪ್ಪನಿಗೆ ಹೇಳಿದ್ದೆ. (ಪರೀಕ್ಷೆ ಮುಗಿದಾಗ ಪತ್ರಿಕೆಯನ್ನು ಮನೆಗೆ ಬಂದ ತಕ್ಷಣ ಮತ್ತೊಮ್ಮೆ ಪರೀಕ್ಷಿಸಿ ನಾನೆಷ್ಟು ಬರೆದಿದ್ದೇನೆ ಎಂಬುದರ ಮೇಲೆ ಮಾರ್ಕ್ಸ್ ಇಂತಿಷ್ಟು ಬರಬಹುದೆಂಬ ಅಂದಾಜು ಮಾಡಿದ್ದಲ್ಲದೆ ಅಷ್ಟು ವರ್ಷದತನಕ ಆ ವಿಷಯದಲ್ಲಿ ನಿರಾಸೆಯಾಗದ್ದು ನನ್ನ ಮೇಲೆ ನನಗೆ ಇನ್ನಷ್ಟು ಭರವಸೆ ಮೂಡಿಸಿತ್ತು. ಏಕೆಂದರೆ ಯಾವಾಗಲೂ ನಾನಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕ ಭರವಸೆ ಇದ್ದೇ ಇರುತ್ತಿತ್ತು)
ಫಲಿತಾಂಶ ಬಂದಾಗ ಜಿಯಾಗ್ರಫಿ ಫೇಲ್ ಆಗಿತ್ತು. ಜಿಯಾಗ್ರಫಿ ಡಿಪಾರ್ಟ್ ಮೆಂಟ್ HOD ಮೇಡಂ ತುಂಬ ಒಳ್ಳೆಯವರಿದ್ದರು. ಧಾರವಾಡ ವಿಶ್ವವಿದ್ಯಾಲಯಕ್ಕೆ ಹೋಗಿ ನನ್ನ ಪೇಪರ್ ತೆಗೆಸಿ ನೋಡಿ 71 ಇರಬೇಕಾದಲ್ಲಿ 21 ಆಗಿದೆ ಎಂದರು. ರಿಚೆಕ್ ಹಾಕಿದೆ. ರಿಸಲ್ಟ್ ಬಂದು ಮಾರ್ಕ್ಸ್ ಕಾರ್ಡ್ ತುಂಬ ದಿನದತನಕವೂ ಬಾರದೇ ಇದ್ದಾಗ ಅಪ್ಪ ಧಾರವಾಡ ವಿಶ್ವವಿದ್ಯಾಲಯಕ್ಕೆ ಹೋಗಿ ಮಾರ್ಕ್ಸ್ ಕಾರ್ಡ್ ತಂದರು. 48 ಮಾರ್ಕ್ಸ್ ಹಾಕಿ ಪಾಸ್ ಮಾಡಿ ಕಳಿಸಿದ್ದರು. ಆದರೂ ಜಿಯಾಗ್ರಫಿಯ ಮೇಲಿನ ನನ್ನ ಪ್ರೀತಿ ಕಡಿಮೆಯಾಗಲೇ ಇಲ್ಲ .

ಬಿ.ಎ ಎರಡನೆ ವರ್ಷದಲ್ಲಿ ಜಿಯಾಗ್ರಫಿಗೆ 78 marks ಬಂತು. ಬಿ.ಎ ಅಂತಿಮ ವರ್ಷದ ರಿಸಲ್ಟ್ ನೋಡಲು ಹೋದರೆ (ಅದಾಗಲೇ ಇಂಟರ್ ನೆಟ್ ಅಲ್ಲಿ ನೋಡಿ ನಾನು ಪಾಸ್ ಎಂಬುದನ್ನು ಖಚಿತಪಡಿಸಿಕೊಂಡು ಹೋಗಿದ್ದೆ) ನನ್ನ ನಂಬರ್ ಕಾಣಲೇ ಇಲ್ಲ. ಅಳು ಬಂತು. ಸರಿಯಾಗಿ ಮತ್ತೊಮ್ಮೆ ನೋಡಿದೆ. ನನ್ನ ನಂಬರ್ ಡಿಸ್ಟಿಂಕ್ಷನ್ ಆದ ವಿಧ್ಯಾರ್ಥಿಗಳ ನಂಬರ್ ಜೊತೆ ಮೇಲೆ ಇತ್ತು. ನಾನು ಕೆಳಗೆ ಹುಡುಕಾಡುತ್ತಿದ್ದೆ. ಕ್ಲಾಸಿನ 300 ವಿದ್ಯಾರ್ಥಿಗಳಲ್ಲಿ ನಾವು ಹನ್ನೊಂದು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಆಗಿದ್ದೆವು.
ಮಾರ್ಕ್ಸ್ ಕಾರ್ಡ್ ಬಂದಾಗ ಜಿಯಾಗ್ರಫಿ ಆ ವರ್ಷದ ಕ್ಲಾಸಿನಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಿ ಅಷ್ಟೆಲ್ಲ ಸಹಾಯ ಮಾಡಿದ ಮೇಡಂ(HOD) ಅವರನ್ನು ಹಾಗೂ ನಿರಾಸೆಯಾಗದಂತೆ ಭರವಸೆ ತುಂಬಿದ ನನ್ನ ಮೇಲೆ ಭರವಸೆಯಿಟ್ಟುಕೊಂಡ ಅಪ್ಪನನ್ನು ನಾನು ನಿರಾಸೆಗೊಳಿಸದೇ ಬಂದಿದ್ದೇನೆಂಬ ಖುಷಿ ನನ್ನೊಳಗಿತ್ತು. ಈಗಲೂ ಇದೆ.

ಇವತ್ತು ಯಾರಾದರೂ ‘ಏನು ಓದಿದ್ದೀರ’ ಅಂತ ಕೇಳಿದಾಗ ಜಿಯಾಗ್ರಫಿಯಲ್ಲಿ ಮಾಸ್ಟರ್ಸ್ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಾಗ ಈ ಘಟನೆಗಳೆಲ್ಲ ಕಣ್ಮುಂದೆ ಬಾರದೇ ಇರುವುದಿಲ್ಲ.

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ....

ಆದರೆ ಆ ನಿರಾಸೆಯ ಘಳಿಗೆ..ಇದೆಯಲ್ಲ...
ಅದು ಯಾರಿಗೂ ಬೇಡ..ಅಲ್ಲವಾ?

ಅಂಥಹ ಸೋಲಿನ ಸಮಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ನನ್ನಣ್ಣ, ನನ್ನ ಗೆಳೆಯ ದಿವಾಕರ....ಇನ್ನೂ ಹಲವಾರು ಗೆಳೆಯರು..ಇವರನ್ನು ಮರೆಯಲಿಕ್ಕುಂಟೆ..?
ಈಗ ನಮಗೆ ಎಲ್ಲ ಒಳ್ಳೆಯದಾಗಿದೆ..ಸರಿ....ಹೆಮ್ಮೆಯಿಂದ ಹೇಳಿ ಕೊಳ್ಳಬಹುದು...
ಆಗದವರಿಗೆ ..?

ಶಾಂತಲಾ...
ನಿನ್ನ ಸಾಧನೆ ಹೆಮ್ಮೆ ತರುವಂಥದ್ದು...
ಶುಭಾಶಯಗಳು...
ಹೀಗೆ ಬರುತ್ತಾ ಇರು....

ಶಾಂತಲಾ ಭಂಡಿ said...

ಪ್ರಕಾಶಣ್ಣ...
ನೀನು ಹೇಳಿದ್ದು ನಿಜ, ಆ ಹೊತ್ತಿನ ಬೇಸರ ಮಾತ್ರ ಮರೆಯಲೇ ಸಾಧ್ಯವಾಗದಂತದ್ದು.
ಇವತ್ತು ಆ ಸಮಸ್ಯೆಗಳನ್ನು ಪಾರಾಗಿ ನಿರಾಸೆಗಳನ್ನ ಬದಿಗೊತ್ತಿ ಬದುಕಿನಲ್ಲಿ ಆಶಾವಾದಿಗಳಾಗಿ ಭರವಸೆಯ ಹೆಜ್ಜೆಗಳಿಂದ ಸಮಸ್ಯೆಗಳನ್ನು ತುಳಿದು ಮುಂದೆ ಬಂದಿದ್ದೇವೆ. ಎಲ್ಲಿ ನಿಂತು ಬೇಕಾದರೂ ಗತಸಮಸ್ಯೆಗಳ ಬಗ್ಗೆ ಮಾತಾಡಿಕೊಳ್ಳುವಷ್ಟು ಶಕ್ತರಾಗಿದ್ದೇವೆ. ಅದು ನಮ್ಮ ಆತ್ಮವಿಶ್ವಾಸ, ಜೊತೆಗಿದ್ದವರ ಪ್ರೋತ್ಸಾಹ, ಸಹಕಾರ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ದೈವೇಚ್ಚೆ ಹಾಗೂ ಅದೃಷ್ಟಗಳಿಗೆ ಸಾಕ್ಷಿ.

ಇನ್ನೊಂದು ವಿಷಯ ಹೇಳಲು ಮರೆತೆ. ಒಬ್ಬಳು ಹುಡುಗಿಯಾಗಿ ನಾನು ಫೇಲ್ ಆದಾಗ ಕಾಲೇಜು ಬಿಟ್ಟು ಮನೆಯಲ್ಲಿದ್ದಿದ್ದರೆ ಯಾರಿಗೂ ನಷ್ಟವೇನೂ ಇರಲಿಲ್ಲ. ಆ ವರ್ಷವೇ ಮದುವೆ ಮಾಡಿಬಿಡುತ್ತಿದ್ದರು. ಇನ್ನೂ ಸ್ವಲ್ಪ ಹಿರಿಯ ಹೆಂಗಸರ ಸಾಲಿನಲ್ಲಿ ನಾನೂ ಸೇರಿಕೊಂಡು ನನ್ನ ಕ್ಲಾಸ್ ಮೇಟ್ ಹುಡುಗಿಯರ ಮದುವೆಗೆ ಹೋಗಿ ಹರಸಿಬರುವ ಅವಕಾಶಗಳು ಇನ್ನೂ ಮೊದಲೇ ಸಿಕ್ಕಿರುತ್ತಿತ್ತು, ಅಷ್ಟೆ :-)

ನನ್ನ ಅಪ್ಪ ಮತ್ತು ನನಗೆ ಜಿಯಾಗ್ರಫಿ ಕಲಿಸುತ್ತಿದ್ದ ಮೇಡಂ ಇಬ್ಬರ ಭರವಸೆಯ ಮಾತುಗಳು, ಪ್ರೋತ್ಸಾಹಗಳು ನನ್ನಲ್ಲಿ ಭರವಸೆ ತುಂಬಿದವೇ ಹೊರತಾಗಿ ಅಲ್ಲಿ ನಾನೇ ನಾನಾಗಿ ಮಾಡಿದ ಸಾಧನೆ ಓದಿದ್ದಕ್ಕಿಂತ ಹೆಚ್ಚಾಗಿ ಇನ್ನೇನೂ ಇಲ್ಲ. ಹಣಕಾಸಿನ ತೊಂದರೆ ಕಿಂಚಿತ್ ಬಾರದಂತೆ ಅಪ್ಪ ಜೊತೆಯಲ್ಲಿಯೇ ಇದ್ದರಲ್ಲ!

ನಿಮ್ಮ ಬರಹ ಯಾಕೋ ತುಂಬ ಆಪ್ತವೆನಿಸುತ್ತದೆ. (ನೀವು ಆಪ್ತರಾಗಿದ್ದಕ್ಕಿರಬೇಕು) ನನ್ನ ಬ್ಲಾಗಲ್ಲಿ ಬರಿಯ ಕಲ್ಪನೆಯ ಕಥೆಗಳನ್ನು ಬರೆವ ನಾನು ಇಲ್ಲಿ ನಿಮ್ಮ ಬ್ಲಾಗಲ್ಲಿ ನನ್ನ ಕತೆ ಹೇಳಿಕೊಳ್ಳುತ್ತಿರುವುದೇ ಈ ಆಪ್ತತೆಗೆ ಸಾಕ್ಷಿ.

ನೀವು ಮಾಡಿದ ಸಾಧನೆ ನಿಜವಾಗಿ ಹೆಮ್ಮೆ ಪಡುವಂಥದ್ದು. ನಿಜವಾಗಿ ಸಾಧನೆ ಮಾಡಿದ್ದೀರಿ. ಎಲ್ಲವೂ ಇನ್ನಷ್ಟು ಒಳಿತಾಗಲಿ.

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ.....

ಏನೆಂದು ಪ್ರತಿಕ್ರಿಯಿಸಲಿ..?
ನನ್ನ ಬಳಿ ಶಬ್ದಗಳಿಲ್ಲ....

ನೀನು "ಪ್ರತಿಭಾವಂತೆ" ಇದಕ್ಕೆ ಎರಡು ಮಾತಿಲ್ಲ....
ನಿನ್ನ ಬ್ಲೋಗ್ ಇದಕ್ಕೆ ಸಾಕ್ಷಿ...

ನಿನಗೆ ಶುಭಾಶೀರ್ವಾದಗಳು....

ಪ್ರಕಾಶಣ್ಣ...

ಚಂದ್ರಕಾಂತ ಎಸ್ said...

ನಿಮ್ಮ ಬರವಣಿಗೆ ನಿಮ್ಮ ನೆನಪಿನ ಲೋಕದೊಡನೆ ನಮ್ಮನ್ನೂ ಸೆಳೆದೊಯ್ದಿತು. ನಿಮ್ಮ ಬಾಲ್ಯದಲ್ಲಿಯೂ ಅಪಾರವಾದ ನೆನಪಿನ ಬುತ್ತಿ ಇದೆ.
ನಿಮ್ಮ ತಂದೆ ನಿಮ್ಮನ್ನು ಅಗಲಿದ ವಿಚಾರವನ್ನು ಇನ್ನೊಂದು ಬ್ಲಾಗ್ನಲ್ಲಿ ಬರೆದಿದ್ದಿರಿ. ಆಗಲೇ ಮನಸ್ಸಿಗೆ ನೋವಾಗಿತ್ತು. ನಿಮ್ಮ ಆಯಿಯ ಜೀವನ ನೆನಪಿಸಿಕೊಳ್ಳಲೇ ಭಯವಾಗುತ್ತದೆ.ಅಂತಹುದರಲ್ಲಿ ಪಿಯುಸಿಯಲ್ಲಿ ಅದು ಹೇಗೆ ನೀವು ಫೇಲ್ ಆದಿರಿ? ಆಗಿನ ನಿಮ್ಮ ಆಯಿಯ ಮನಸ್ಥಿತಿ ಎಷ್ಟು ಕಷ್ಟಕರವಾಗಿರಬೇಕಲ್ಲವೇ?
ಆದರೂ ಆರ್ಟ್ಸ್ ವಿದ್ಯಾರ್ಥಿಯಾದ ನೀವು ಸೈನ್ಸ್ ತೆಗೆದುಕೊಂಡು ಮತ್ತೆ ಪಿಯು ಪಾಸ್ ಮಾಡಿ ಇಟ್ಟಿಗೆ ಸೀಮೆಂಟ್ ಲೋಕಕ್ಕೆ ಬಂದು ಇಂತಹ ಬರವಣಿಗೆ ಮೂಡಿಸಬೇಕಾದರೆ ನೀವು ನಿಜಕ್ಕೂ ಛಲವಂತರೇ ಸರಿ!ಅದನ್ನು ಎಂದಾದರೊಂದು ದಿನ ಬರೆಯಿರಿ.

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಕಾಂತರವರೆ...

ನನ್ನ ಪಿಯುಸಿ ದಿನಗಳಲ್ಲಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ..
ನನ್ನ ಚಿಕ್ಕಪ್ಪನ ಹಿತ ನುಡಿಗಳನ್ನು ಅಲಕ್ಷಿಸಿದೆ...
ಅದಕ್ಕೆ ಶಿಕ್ಷೆಯನ್ನೂ ಪಡೆದೆ...

ಶಾಂತಲಾ ಹೇಳುವಂತೆ ಹಿರಿಯರ ಆಶೀರ್ವಾದ, ದೇವರ ಅನುಗ್ರಹ ಕೂಡ ನನ್ನ ಮೇಲೆ ಇತ್ತು ಅನಿಸುತ್ತೆ..
ಅದನ್ನು ಅದ್ರಷ್ಟ ಅಂತಲೂ ಅನ್ನ ಬಹುದು..

ಒಟ್ಟಿನಲ್ಲಿ ನಾವು ಸಾಧನೆ ಮಾಡಬೇಕು ಎಂದು ಮೂಲತಹ ನಮಗೇ ಅನಿಸಬೇಕು..
ನಮ್ಮ ಪ್ರಯತ್ನ ಕೂಡ ಬೇಕು.. ಅಲ್ಲವಾ?

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮೋಹನ್....

ಅಂದರೆ ಗೆಲ್ಲ ಬೇಕು ಅನ್ನುವವನು ಸೋಲಲೇ ಬೇಕೆ..?
ಸೋಲು ಯಾರಿಗೂ ಬೇಡ ಸರ್....
ಆದರೆ ಸೋತು ಗೆದ್ದರೆ..ರುಚಿ ಜಾಸ್ತಿ...

ಧನ್ಯವಾದಗಳು...

Mohan said...

ಸೋಲೆ , ಗೆಲುವಿನ ಮೊದಲ ಮೆಟ್ಟಿಲು, ನನಗಂತು ಅನಿಸುತ್ತೆ.

Mohan said...

ಸೋಲಿಲ್ಲದೆ, ಗೆಲುವಿಲ್ಲ, ಗೆಲುವಿಲ್ಲದೆ ಬದುಕಿಲ್ಲ, ಅದುವೆ ಸತ್ತ್ಯ ಮತ್ತು ಮಿತ್ಯ.

ತೇಜಸ್ವಿನಿ ಹೆಗಡೆ- said...

ಪ್ರಕಾಶ್ ಅವರೆ,

ಸ್ಫೂರ್ತಿ ತುಂಬುವ ಬರಹ. ಜೀವನವೆಂದರೆ ಬರಿಯ ಮಾರ್ಕ್ಸ್‌ಗಳು. ಅವಿಲ್ಲದೇ ಬದುಕೇ ಇಲ್ಲ ಎಂದು ಆತ್ಮಹತ್ಯೆಮಾಡಿಕೊಳ್ಳುವವರಿಗೆ, ಮಾನಸಿಕ ಸ್ಥಿಮಿತ ಕಳೆದುಕೊಳ್ಳುವವರಿಗೆ ಒಂದೊಳ್ಳೆಯ ಮಾರ್ಗದರ್ಶನದಂತಿದೆ ನಿಮ್ಮ ಅನುಭವ ಕಥನ.

ನಿಮ್ಮ ಈ ಬರಹ ನನ್ನ ನಾನು ಪಿ.ಯು.ಸಿ ಓದುತ್ತಿದ್ದ ದಿನಗಳೆಡೆ ಕರೆದೊಯ್ದಿತು. ಪ್ರಥಮ ಪಿ.ಯು.ಸಿಯ ಮೊದಲ ಇಂಟರ್ನಲ್ ಪರೀಕ್ಷೆಯಲ್ಲಿ ಸ್ವಲ್ಪ ನರ್ವಸ್ ಆಗಿ ನಾನು ಕೆಮಿಸ್ಟ್ರಿಯಲ್ಲಿ ಪಡೆದುಕೊಂಡು ಅಂಕ ಕೇವಲ ೧೬(೧೦೦ ಕ್ಕೆ). ತುಂಬಾ ನೋವಾಗಿತ್ತು. ಆದರೆ ಛಲ ಬಿಡದೇ ಕಷ್ಟಪಟ್ಟು ಓದಿ ಪ್ರಥಮ ವರ್ಷದ ಕೊನೆಯ ಪರೀಕ್ಷೆಯಲ್ಲಿ ಕೆಮಿಸ್ಟ್ರಿಗೆ ೭೦ ಅಂಕಗಳನ್ನೂ ಹಾಗೂ ದ್ವೀತೀಯ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಅದೇ ವಿಷಯಕ್ಕೆ ೯೦ ಅಂಕಗಳನ್ನೂ ಪಡೆದೆ. ಅಂದು ನಾನು ನನ್ನನ್ನೇ ಕುಗ್ಗಿಸಿಕೊಂಡು ಈ ವಿಷಯವೇ ಬೇಡವೆಂದು ಸುಮ್ಮನಾಗಿದ್ದಿದ್ದರೆ ನಾನೆಂದೂ ಮುಂದೆ ಬರುತ್ತಿರಲಿಲ್ಲ.

ಸೋಲೇ ಗೆಲುವಿನ ಮೆಟ್ಟಲು ಅಲ್ಲವೇ?
ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ಮೋಹನ್...

ನೀವು ಹೇಳುವದು ನಿಜ....

ಸೋತಾಗ ಕುಗ್ಗಬಾರದು..
ಅದು ಗೆಲುವಿನ ಮೊದಲ ಮೆಟ್ಟಿಲು..ಅಂದುಕೊಳ್ಳಬೇಕು...
ಅಲ್ಲಾವಾ?...

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ನಿಮ್ಮ ಸಂಘರ್ಷ...
ನಿಮ್ಮ ಪರಿಶ್ರಮ...
ನಿಮ್ಮ ಛಲದ...
ನಿಮ್ಮ ಬದುಕಿನ ಸವಾಲುಗಳ ಮುಂದೆ ..
ನನ್ನದು ತೀರಾ ಅಲ್ಪ....

ನೀವು ಒಂದು ಸ್ಪೂರ್ತಿ...
ನಿಮ್ಮ ಪ್ರತಿಕ್ರಿಯೆ ನನಗೊಂದು.. ಹೆಮ್ಮೆ..
ಧನ್ಯ...
ಧನ್ಯವಾದಗಳು...

ಮನಸು said...

ತುಂಬ ಚೆನ್ನಾಗಿದೆ ..ಆಗಾಗ ಹಳೆ ಘಟನೆಗಳನ್ನು ಮೆಲುಕು ಹಾಕುತ್ತಿರಬೇಕು .

Geetha said...

ಆಗುವುದೆಲ್ಲ ಒಳ್ಳೇದಕ್ಕೆ ಅನಿಸುತ್ತೆ...ನೀವು english fail ಅಗಿಲ್ಲ ಅನ್ದ್ರೆ engineering ಮಾಡೊ ಯೋಚನೆ ಮಾಡ್ತಿರಲಿಲ್ಲ ಅಲ್ವ sir :)

ಮತ್ತೆ puc ಓದಿ cet ಬರ್ದು engineering ಮಾಡಿದಿರಾ ನಿಮ್ಮ confidence ಮೆಚ್ಲೇಬೇಕು sir

ಸಿಮೆಂಟು ಮರಳಿನ ಮಧ್ಯೆ said...

ಮನಸು......

ನನ್ನ ಬ್ಲೋಗ್ ಗೆ ಸುಸ್ವಾಗತ....

ಸವಿ ನೆನನಪುಗಳು..ಬೇಕು..
ಸವಿಯಲೆ..ಬದುಕು....

ಪ್ರತಿಕ್ರಿಯೆಗೆ ಧನ್ಯವಾದಗಳು....

ಸಿಮೆಂಟು ಮರಳಿನ ಮಧ್ಯೆ said...

ಗೀತಾ....

ನಾನು ಮೂರು ವರ್ಷದ ಡಿಪ್ಲೋಮ ಸಿವಿಲ್ ಇಂಜನಿಯರಿಂಗ್ ಓದಿದೆ..
ನಂತರ ಎ.ಎಮ್.ಐ.ಇ. ಓದಿದ್ದೇನೆ..(ಇದು ಬಿ.ಇ.ಗೆ ಸರಿಸಮಾನ)

ನಾನು ಪಿಯುಸಿ ವರೆಗೆ ಕನ್ನಡಾ ಮಾಧ್ಯಮದಲ್ಲಿ ಓದಿದ್ದೆ..
ನಂತರ ಸಿವಿಲ್ ವಿಷಯಗಳನ್ನು ಇಂಗ್ಲೀಷಿನಲ್ಲಿ..
ಬಹಳ ಕಷ್ಟವಾಯಿತು.... ೭೮% ಮಾಡಿರುವೆ...

ನನಗೆ ಖುಷಿಯೆಂದರೆ....
ಇಂಗ್ಲೀಷಿನಲ್ಲಿ ೧೬ ಮಾರ್ಕ್ಸ್ ಪಡೆದು...
ಲಂಡನ್ ಹೋಗಿ ಕೆಲಸ..ಮಾಡಿ ಬಂದದ್ದು....

ಪ್ರತಿಕ್ರಿಯೆಗೆ ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಅವರೆ, ನಿಮ್ಮ ಮನತಟ್ಟುವಂತಹ ಲೇಖನ ತುಂಬಾ ಚೆನ್ನಾಗಿದೆ. ಮಾಲ್ಗುಡಿ ಡೇಸ್ ನಲ್ಲಿ ಪದೇ ಪದೇ ಫೇಲ್ ಆಗುವವನ ಕಥೆ ನೆನಪಿಗೆ ಬಂತು. ನಿಮ್ಮ ಫ್ರೆಂಡ್ ನಿಮ್ಮನ್ನು ಡಿಪ್ಲೋಮ ಕಾಲೇಜ್ ಗೆ ಕರೆದೊಯ್ಯುವುದು ಬಿಟ್ಟು ಹುಲಿಯ ಬೋನಿನೊಳಗೆ ಕರೆದೊಯ್ಯುವುದೇ?!! ಅದರ ಬಗ್ಗೆ ಬರೆಯಿರಿ ಸರ್.

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್....


ಆ ನಾಗುದು...... ದೊಡ್ಡ ಕಥೆ....
ಹೇಳಲೇ ಬೇಕು..
ಇನ್ನೊಮ್ಮೆ....

ನಿಮ್ಮ "ಹೈದರಬಾದಿನ ಮುತ್ತು" ಲೇಖನ ಚೆನ್ನಾಗಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು....

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಪ್ರಕಾಶ್ ಸರ್,...ನಿಮ್ಮ ಬರಹಗಳು ಇಷ್ಟವಾಗುವುದು..ನೀವು ಬರೆಯೋ ಶೈಲಿಗಿಂತಲೂ ವಸ್ತು, ಅದರಲ್ಲಿ ತುಂಬಿರುವ ಹಾಸ್ಯ..ಹೀಗೇ ಬರೆಯುತ್ತಿರಿ. ನನ್ನಂತೆ ಬರೇ ಬೇಜಾರು ಬರಹಗಳ ಬದಲು ಈ ರೀತಿ ನಗಿಸುವ ಬರಹಗಳನ್ನು ಬರೆಯಬೇಕು.
-ತುಂಬುಪ್ರೀತಿ,
ಚಿತ್ರಾ

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾರವರೆ....
ಎಲ್ಲರ ಜೀವನದಲ್ಲೂ ದುಃಖ..,,ಸುಖ..ನಗು ಇದ್ದೇ ಇರುತ್ತದೆ..
ಎಲ್ಲವನ್ನೂ ದೇವರು ನಮಗೆ ಕೊಟ್ಟಿರುತ್ತಾನೆ..
ಅದರಲ್ಲಿ ನಾವು ಯಾವುದನ್ನು ಹೆಚ್ಚಾಗಿ ಅನುಭವಿಸುತ್ತೇವೆ..??
ಅದು ಮಹತ್ವ...
ನೋವಿನಲ್ಲೂ ಸುಖ ಇರುತ್ತದೆ...
ಇದು "ಖಲೀಲ್ ಗಿಬ್ರಾನ್" ಹೆಳಿದ ಮಾತು...

ಹಾಸ್ಯವನ್ನು ,,ನಗುವನ್ನು ಕಾಣುವ,,
ಹುಡುಕುವದು "ಸ್ವಭಾವ" ನಮ್ಮದಾಗಬೇಕು...

ಪ್ರತಿಕ್ರಿಯೆಗೆ ಧನ್ಯವಾದಗಳು...

Geetha said...

ಸರ್,
ನಿಮ್ಮ ಲ೦ಡನ್ ಪ್ರವಾಸದ ಬಗ್ಗೆ ಒ೦ದು ಲೇಖನ ಬರೆಯಿರಿ...

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ...


ಲಂಡನ್ ಬಗೆಗೆ..? ಅನುಭವ..
ತುಂಬಾ ಬರೆಯಬಹುದು..
ಅಲ್ಲಿ ನನ್ನ ಪಾಸ್ ಪೋರ್ಟ್ ಕಳೆದು ಹೋದದ್ದು..ಇತ್ಯಾದಿ..

ಇನ್ನೊಮ್ಮೆ ಯಾವಗಾಗಲಾದರು ಬರೆಯುವೆ..

ನಿಮ್ಮ ಪ್ರೀತಿ, ಅಭಿಮಾನಗಳಿಗೆ ಹ್ರತ್ಪೂರ್ವಕ ವಂದನೆಗಳು...

ಬಾನಾಡಿ said...

ನಿಮ್ಮಲ್ಲಿ ಬರೆಯಲು ಸರಕು ಬಹಳಷ್ಟಿದೆ ಎಂದು ಗೊತ್ತಾಗುತ್ತದೆ. ನಿಮ್ಮ ಬರವಣಿಗೆ ಉತ್ತಮವಾಗಿದೆ. ಬ್ಲಾಗ್ ಜತೆಗೆ ನೀವು ಪುಸ್ತಕ ಬರೆದರು ಆಗಬಹುದು ಮಾರಾಯ್ರೆ.
ಒಲವಿನಿಂದ
ಬಾನಾಡಿ

ಸಿಮೆಂಟು ಮರಳಿನ ಮಧ್ಯೆ said...

ಬಾನಾಡಿಯವರೆ...

ಮೊದಲೇ ಹೇಳಿದಂತೆ...ನನ್ನ ಗೆಳೆಯರ ಒತ್ತಾಯಕ್ಕೆ ಬರೆಯುತ್ತಿದ್ದೇನೆ...

ನಿಮ್ಮ ಈ ಪ್ರತಿಕ್ರಿಯೆ ನಿಜವಾಗಿಯೂ ಟಾನಿಕ್ ಥರಹ ಇದೆ..

ಪ್ರೀತಿಗೆ.. ವಂದನೆಗಳು...

ಭಾರ್ಗವಿ said...

ಚೆನ್ನಾಗಿದೆ ನಿಮ್ಮ ಬರಹ. ಕೋವಿ ಬಗ್ಗೆ ಕುತೂಹಲವಿದೆ.
ಸೋಲೇ ಗೆಲುವಿನ ಸೋಪಾನ.
ದುಡುಕದೆ ನಡೆ ನೀ ಜೋಪಾನ. ಎಂಬ ಹಾಡಿನ ಸಾಲುಗಳು ನೆನಪಿಗೆ ಬಂದವು.

ಸಿಮೆಂಟು ಮರಳಿನ ಮಧ್ಯೆ said...

ಭಾರ್ಗವಿಯವರೆ....

ಕೋವಿಯ ಬಗೆಗೆ ಇನ್ನೊಮ್ಮೆ ಬರೆಯುವೆ...

ನೀವು ಹೆಸರಿಸಿದ ಹಾಡು ನನಗೆ ತುಂಬಾ ಇಷ್ಟ....

ಹ್ರತ್ಪೂರ್ವಕ ವಂದನೆಗಳು...

ವಿನಾಯಕ ಕೆ.ಎಸ್ said...

iittige...
cementginta gattiyaagide nimma baraha. mast majavaagide nimma nenpugalu. heege bareyuttiri...
vinayaka kodasra

ಸಿಮೆಂಟು ಮರಳಿನ ಮಧ್ಯೆ said...

ವಿನಾಯಕ.....

ನನ್ನ ಬ್ಲೋಗಿಗೆ ಸುಸ್ವಾಗತ....

ಹ್ರತ್ಪೂರ್ವಕ ವಂದನೆಗಳು....

ಹೀಗೆ ಬರುತ್ತಿರಿ...