Sunday, March 22, 2009

ಪೆಟ್ಟಿಗೆ... "ಗಪ್ಪತಿ " .. ಅನ್ನುವ....."ಅಡಪೊಟ್ರು "...!!

ಪೆಟ್ಟಿಗೆ ಗಪ್ಪತಿ....

ತುಂಬಾ ಸಾಧು ಮನುಷ್ಯ... ನಿಧಾನ ಗತಿಯ ಸ್ವಭಾವ......
ಬರೆಯುವದು.. ಓದುವದು...

ನಡೆಯುವದು...

ವಿಚಾರ ಮಾಡುವದು... ... ಮಾತನಾಡುವದು...

ಎಲ್ಲದರಲ್ಲೂ...ನಿಧಾನ....

ತುಂಬಾ... ತುಂಬಾ ಸಮಾಧಾನ...!


ಅವನ ತೋರು ಬೆರಳಿಗೆ ಉಂಗುರವೊಂದಿತ್ತು....!

ಉಂಗುರ ಒಳಗೆ ಹೋದಮೇಲೆ ....

ಬೆರಳಿನ ಗಂಟು ಒಂದುಥರ ದಪ್ಪವಾಗಿ ..

ಹೊರಗೆ ತೆಗೆಯಲು ಬಾರದ ಸ್ಥಿತಿಯಲ್ಲಿತ್ತು...


" ಇದು ಹೇಗಾಯಿತು.... ಗಪ್ಪತಿ...? "

" ಇದಾ.....ಅಂದು ಭಾನುವಾರ ..ನಾನು ಆರು ಗಂಟೆಗೆ ಎದ್ದು ತೋಟಕ್ಕೆ ..

ಅಡಿಕೆ ಆರಿಸಿಕೊಂಡು ಬರಲು ಹೋಗಿದ್ದೆ...


ಅಲ್ಲಿ ತುದಿ ಮನೆಯ ಮನೆಯ ವೆಂಕಪ್ಪಣ್ಣ ಸಿಕ್ಕಿದ..


ಅವನು ಯಾವಾಗಲೂ ನಮ್ಮನೆ ತೋಟದಿಂದ ಬಾಳೆ ಎಲೆ ಕೊಯ್ಯುವದು..

ಅಂದು ನಾನು ಎದುರಿಗೆ ಸಿಕ್ಕಿ ಬಿಟ್ಟೇನಲ್ಲ ಹಾಗಾಗಿ.. ಸಪ್ಪೆ ಮುಖದಿಂದ ಬಾರದ ನಗು ನಕ್ಕ...

ಅವನ ಸಂಗಡ ಪಕ್ಕದ ಮನೆ ಮಂಜಪ್ಪಣ್ಣನೂ ಇದ್ದ...

ನಾನು ಮನೆಗೆ ಬಂದು.. ಮುಖತೊಳೆದು..ಹಲ್ಲು ತಿಕ್ಕಿ ...

ತಿಂಡಿ ತಯ್ಯಾರಾಗಿದೆಯಾ..? .. ಎಂದು ಅಡಿಗೆ ಮನೆ ಇಣುಕಿದೆ...

ಅಮ್ಮ ದೋಸೆಗೆ ರೆಡಿ ಮಾಡುತ್ತಿದ್ದಳು...

ನಮ್ಮ ಮನೆಯಲ್ಲಿ ಯಾವಾಗಲೂ "ಮೊಗೆಕಾಯಿ ದೋಸೆ ತೆಳ್ಳೇವು " ಮಾಡ್ತಾರೆ.."


" ಹೊಯ್... ಗಪ್ಪತಿ.... ನಿಂಗೆ ಬೆರಳು ಹೀಗೇಕೇಕಾಯಿತು..? ಅದು ಹೇಳು ...

ನಿಮ್ಮನೆ.. ಮೊಗೆಕಾಯಿ ದೋಸೆ ಕಟ್ಟಿಕೊಂಡು ನಂಗೇನು..?

ಎಲ್ಲೆಲ್ಲೋ ಹೋಗ್ಬೇಡಾ...."


" ಅದನ್ನೇ ಹೇಳ್ತಾ ಇದ್ದಿನಪ್ಪಾ..ಸ್ವಲ್ಪ ಇರು...

ಹಾಗೆ... ದೋಸೆ ತಿಂದು ಹೊರಗೆ ಬಂದೆ...

ಹೊರಗೆ ಬಂದರೆ ನಮ್ಮನೆ ನಾಯಿ ಒಂದೇ ಸಮನೇ ಕೂಗುತ್ತಿತ್ತು...

ನೋಡ್ತೀನಿ.. ಪಕ್ಕದ ಮನೆ ಮಂಜಪ್ಪಣ್ಣ.. ಹೋಗ್ತಾ ಇದ್ದ...

ನಾನು ಅದಕ್ಕೆ ಗದರಿಸಿದೆ...

ಆ ನಾಯಿ ನನ್ನ ಅಜ್ಜನ ಮನೆಯದು...

ನಾವು ಎರಡು ವರ್ಷದ ಹಿಂದೆ.. ಅಜ್ಜನ ಮನೆಗೆ ಹೋದಾಗ...


" ಹೋಯ್... ಪುಣ್ಯಾತ್ಮಾ... ! ನಿಂಗೆ ಈ ಬೆರಳು ಯಾಕೆ ಹೀಗಾಯ್ತು ಅದನ್ನ ಹೇಳು ...?

ಏನೇನೋ ಹೇಳ್ತೀಯಲ್ಲ.. ಮಾರಾಯಾ..!."


" ಅದನ್ನೇ ಹೇಳ್ತಾ ಇದ್ದೀನಪ್ಪ... ಇರು ..

ನನ್ನ ಅಜ್ಜನ ಮನೆಯಲ್ಲಿ ಒಂದು ಹೆಣ್ಣು ನಾಯಿ....

ಅದಕ್ಕೆ ಎರಡು ಮರಿಗಳು.....

ಅದು ಯಾವಾಗಲೂ ಹೆಣ್ಣು ಮರಿ ಹಾಕುವದು ...

ಆದರೆ ಆ ಬಾರಿ ಎರಡೂ ಗಂಡು ಮರಿ ಹಾಕಿತ್ತು....!

ನನ್ನ ಮಾವ "ಒಂದು ಮರಿ ನೀನು ಬೇಕಾದರೆ ತಗೊ ಮಾರಾಯ" ಅಂದ..

ನಾನು ಬಹಳ ವಿಚಾರ ಮಾಡಿ..ಒಂದು ಮರಿ ತೆಗೆದು ಕೊಂಡೆ...."


" ಲೇ... ಮಾರಾಯಾ...! ...! ನಿನ್ನ ಬೆರಳಿಗೆ ಉಂಗುರ...

ಸಿಕ್ಕಿ ಹಾಕಿ ಕೊಂಡಿದ್ದು ಹೇಗೆ ಮಾರಾಯಾ..?


ನಾಯಿಯಂತೆ... ಹೆಣ್ಮರಿಯಂತೆ.. ಅದನ್ನೆಲ್ಲ ಯಾಕೆ ಕೊರಿತೀಯಾ..? .."" ಅದನ್ನೇ ಹೇಳ್ತಾ ಇದೀನಪ್ಪಾ... ಸ್ವಲ್ಪ ಇರು...

ಆ ನಾಯಿ ಹಗಲು ಹೊತ್ತು ಪಕ್ಕದ ಮನೆಯವರನ್ನು ನೋಡಿದರೆ ಮಾತ್ರ ಕೂಗ್ತದೆ

ರಾತ್ರಿ ಹೊತ್ತು ಯಾರು ಬಂದರೂ ಕೂಗುತ್ತದೆ..

ಹಗಲು ಹೊತ್ತಿನಲ್ಲಿ ಬೇರೆ ಯಾರೇ ಬಂದರೂ ಬಾಲ ಅಲ್ಲಾಡಿಸಿ ನಗ್ತದೆ..."


ನನಗೆ ವಿಚಿತ್ರ ಎನಿಸಿತು..

"ಹೌದಾ...! ಯಾಕೆ ಹಾಗೆ..?


" ಅದು ದೊಡ್ಡ ಕಥೆ... ಆ ನಾಯಿ ಮರಿ ಸಣ್ಣ ಇದ್ದಾಗ... ಪಕ್ಕದ ಮನೆಯ ಮಂಜಪ್ಪಣ್ಣ...

ಈ ನಾಯಿ ಮರಿಗೆ ಹೊಡೆದು ಬಿಟ್ಟಿದ್ದ...

ಅಲ್ಲಿವರೆಗೂ ಪ್ರೀತಿಯಿಂದ ಇದ್ದ ಎರಡೂ ಮನೆಯವರು....

ದೊಡ್ಡ ಜಗಳ ಆಗಿ..... ವೈರತ್ವ, ಹಗೆ ಎಲ್ಲ ಶುರುವಾಗಿ..

ಬದ್ಧ ವೈರಿಗಳಾಗಿಬಿಟ್ಟೆವು...!

ಭಾರತ , ಪಾಕಿಸ್ತಾನ ಆಗಿಬಿಟ್ಟೇವು..

ಈಗ " ಕೇಸು" ಕೋರ್ಟಿನಲ್ಲಿದೆ... ಮಾರಾಯಾ...!!


" ಅಯ್ಯೊ.. ರಾಮಾ...! ನಾಯಿಗೆ ಹೊಡೆದದ್ದು..

ಕೋರ್ಟಿನಲ್ಲಿ ಕೇಸಾಯಿತಾ...?
ಏನಪ್ಪಾ ಇದು..??


" ಛೇ.. ಛೇ.. ಅಲ್ಲೋ ಮಾರಾಯಾ...!

ಅದು ಆಗಿದ್ದು ನಮ್ಮನೆ ತೆಂಗಿನ ಮರದಿಂದ..

ನಮ್ಮನೆ ಅವರ ಮನೆ ಮಧ್ಯ .. ನನ್ನಜ್ಜ ನೆಟ್ಟ ತೆಂಗಿನ ಮರ ಇದೆ...

ತೆಂಗಿನ ಕಾಯಿ ಮನೆ ಮೆಲೆ ಬಿದ್ದು ಹಂಚು ಒಡೆಯುತ್ತಿತ್ತು..

ಒಂದು ದಿವಸ ಪಕ್ಕದ ಮನೆ ಮಂಜಪ್ಪಣ್ಣನ..

ಭುಜದ ಮೇಲೆ
ತೆಂಗಿನ ಕಾಯಿ ... ಬಿತ್ತು...

ಅವನ ಮೇಲೆ ಬಿದ್ದಾಗ ಅಂವ ನೋವಿನಿಂದ ಕೂಗಿದ..

ಆಗ ... ಈ ನಾಯಿ..

ಅವನನ್ನು ನೋಡಿ ಕೂಗಿ ಬಿಟ್ಟಿತ್ತು...

ಮಂಜಪ್ಪಣ್ಣನಿಗೆ ಅಸಾಧ್ಯ ಕೋಪ ಬಂದು....

ನಾಯಿಗೆ ಹೊಡೆದಿದ್ದ....

ನಮ್ಮನೆ ನಾಯಿಗೆ ಹೊಡೆಯಲು ಇಂವ ಯಾರು...?

ಹಾಲು., ಅನ್ನ ಹಾಕಿ ಮುದ್ದಿನಿಂದ ನಾವು ಸಾಕಿದ್ದೇವೆ...!!...

ಅಲ್ಲ.. ನಾಯಿ ನೋವು ಬೇರೆ ನಮ್ಮ ನೋವು ಬೇರೇನಾ... ?..

ನೀನೇ ಹೇಳು.... ಇದು ನ್ಯಾಯಾ ನಾ...?... "


ತಥ್... ಇವನಾ...!

ಇದು ಎಲ್ಲಿಂದ ಎಲ್ಲೋ ಹೋಗ್ತಾ ಇದೆಯಲ್ಲ...!!

ನನಗೆ ತಲೆ ಬ್ಲಾಸ್ಟ್ ಆಗಿ ಒಡೆದು ಹೋಗುತ್ತೇನೋ ಅನಿಸಿತು...!


" ಅದೆಲ್ಲ ಬೇಡ... ಗಪ್ಪತಿ...!! ಪಾಯಂಟು ... ಪಾಯಂಟು... ಮಾತಾಡು..

ಕೆಲಸಕ್ಕೆ ಬಾರದ ವಿಷ್ಯ ಬೇಡ...

ಈ ಬೆರಳು ಹೇಗೆ...ಯಾಕೆ.. ಹೀಗಾಯ್ತು..?

ಏನಾಯ್ತು...? ಅದನ್ನು ಹೇಳು..."


" ಅದನ್ನೇ ಹೇಳ್ತಾ ಇದ್ದೀನಪ್ಪ ಸ್ವಲ್ಪ ಇರು..

ಈ.. ನಾಯಿ ಸಾಮಾನ್ಯ ನಾಯಿಯಲ್ಲ...!

ಸ್ವತಹ ಸೋನಿಯಾ ಗಾಂಧಿಯವರೆ ಅಪ್ಪಿ ಮುದ್ದಾಡಿದ್ದಾರೆ...!!


" ಲೋ.... ಬುರುಡೆ ಬಿಡಬೇಡಪ್ಪಾ... ಎಲ್ಲಿಯ ಸೋನಿಯಾ ಗಾಂಧಿ..??

ಎಲ್ಲಿ ನಿಮ್ಮನೆ ಹಡಬೆ.. ಬೀದಿ ನಾಯಿ ..?? ಸುಮ್ನಿರಪ್ಪ...!

ಸುಮ್ನೇ ಕುಯ್ಯಿಬೇಡಾ.. ! "


" ನೋಡು ತುದಿಮನೆ ವೆಂಕಪ್ಪಣ್ಣ ಗೊತ್ತಲ್ಲ.....

ಅವನ ಮಗ ಸೋನಿಯಾ ಗಾಂಧಿಯ ಸೆಕ್ರೇಟರಿ ಬಳಿ ಕೆಲಸ ಮಾಡುವದು..

ದೆಹಲಿಯಲ್ಲಿ...

ನಮ್ಮನೆ ನಾಯಿಗೂ ಅವರಮನೆ ನಾಯಿಗೂ ದೋಸ್ತಿಯಾಗಿ.. ಮರಿ ಹುಟ್ಟಿದ್ದವು ..

ಆಮರಿಗಳೆಲ್ಲ ನಮ್ಮನೆ ನಾಯಿಯ ಹಾಗೆ ಇದ್ದವು...

ಒಂದು ಮರಿಯನ್ನು ಕಷ್ಟಪಟ್ಟು ದೆಲ್ಲಿಗೆ ಒಯ್ದಿದ್ದ.....

ಅಲ್ಲಿ ಸೋನಿಯಾ ಗಾಂಧಿ ನೋಡಿದ್ದರಂತೆ...!!.."..


ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...


ಅಷ್ಟರಲ್ಲಿ ನಾಗು ಮತ್ತು ಗೆಳೆಯರು ಬಂದರು..

"ಏನ್ರಪಾ..? ಏನು ಮಾತು ಕಥೆ..?

ಲೇ ಪೆಟ್ಟಿಗೆ ಏನು ಕಥೆಯೋ..?.."

ಕೇಳಿದ ಎಂದಿನಂತೆ ಹಾಸ್ಯವಾಗಿ..


" ಅದೇ ಬೆರಳಿನ ಉಂಗುರದ ಕಥೆನೋ..!

ಈ ಪ್ರಕಾಶಾ ಹೇಳ್ಳಿಕ್ಕೇ ಬಿಡಲ್ಲಪ್ಪಾ ..!

ಕೆಲಸಕ್ಕೆ ಬಾರದ ಪ್ರಶ್ನೆ ಕೇಳ್ತಾನೆ..""" ಲೇ ಪ್ರಕಾಶು ನಿನ್ನ ಕಥೆ... ದೇವ್ರೇ ಕಾಪಾಡಬೇಕು..!

ಎಲ್ಲಿವರೆಗೆ ಬಂದಿದ್ದಾನೆ...?

ಒಬಾಮಾ...? ಅಮೇರಿಕಾದ ಚುನಾವಣೆ ಎಲ್ಲ ಆಯ್ತಾ..?

ಕೋಫಿ ಅಣ್ಣನ್ .., ವಿಶ್ವಸಂಸ್ಥೆ... ಎಲ್ಲಾ ಆಯ್ತಾ..? "


ಅದಕ್ಕೆ ಗಪ್ಪತಿನೇ ಹೇಳಿದ...


" ಇಲ್ಲೋ.. ಮಾರಾಯಾ ..!...

ಇನ್ನೂ "ಸೋನಿಯಾ ಗಾಂಧಿ" ಬಳಿ ಇದ್ದೀನಪ್ಪಾ..!

.. ಮಧ್ಯದಲ್ಲಿ ಕೆಲಸಕ್ಕೆ ಬಾರದ ಪ್ರಶ್ನೆ ಹಾಕ್ತಾನೆ..

ಹೇಗೆ ಹೇಳುವದು..? "


ನಾಗುಗೆ ಕೋಪ ಬಂತು ..ನನ್ನ ಸ್ಥಿತಿ ನೋಡಿ ಕನಕರನೂ ಬಂದಿರ ಬೇಕು..

" ಸೀತಾರಾಮ.. ಉಮಾಪತಿ ಹಿಡ್ಕೊಳ್ರೋ.. ಈ.. ಪೆಟ್ಟಿಗೇನಾ..

ನಾನು ಹೇಳ್ತೀನಿ ಇದು ಹೇಗಾಯ್ತು ..ಅಂತ...! "

ಉಮಾಪತಿ... ಸೀತಾರಾಮ...ಇಬ್ಬರೂ..

ಗಪ್ಪತಿಯನ್ನು ಬಾಯಿ ಮುಚ್ಚಿ ಬಲವಾಗಿ ಹಿಡಿದು ಕೊಂಡರು


ನಾಗು ಹೇಳಿದ.....


" ಇಂವ ... ಬಾಳೆ .. ಎಲೆ ಕೊಯ್ಯಲು ಹೋದಾಗ..

ಕತ್ತಿ ತಾಗಿ ಕೈ ಬೆರಳು.. ಪೆಟ್ಟಾಯ್ತು..

ಬ್ಯಾಂಡೇಜು ಹಾಕಿದ್ರು..

ಗಡಿಬಿಡಿಯಲ್ಲಿ ಉಂಗುರ ಅಲ್ಲೇ ಇದ್ದು ಹೋಗಿತ್ತು ..


ವಾಸಿಯಾದಮೇಲೆ ಉಂಗುರದ ಮುಂದೆ ಗಡ್ಡೆಯಾಗಿ ...

ತೆಗಿಯಲಿಕ್ಕೆ ಬಾರದ ಸ್ಥಿತಿಯಾಗಿತ್ತು... !!..".


ಗಪ್ಪತಿ ಕೊಸರಾಡೀಕೊಂಡು ಬಿಡಿಸಿಕೊಂಡು ಕೂಗಿದ.....


"ಸ್ವಲ್ಪ ಹೊತ್ತು ಸುಮ್ನೇ ಕೇಳಿದ್ದರೆ ನಾನೇ ಹೇಳ್ತಿದ್ದೆ ಚಂದವಾಗಿ ...

ರಸ ಭಂಗ ಮಾಡಿ ಬಿಟ್ಯಲ್ಲೋ..?... "" ಅಬ್ಬಬ್ಬ...! ಪುಣ್ಯಾತ್ಮಾ...!

ಸುಮ್ನೀರು ಮಾರಾಯಾ.. ಸಾಕೋ ಸಾಕು..!


... ಈ.. ಜನ್ಮಕ್ಕೆ ಸಾಕಾಗುವಷ್ಟು ಕೊರೆದು ಬಿಟ್ಯಲ್ಲೋ..!!"


ಅಯ್ಯೋ... ಶಿವನೇ...!!

ಎಂದು ನಾನು ಬೆವರು ಒರೆಸಿ ಕೊಂಡೆ...


ತಲೆ ಆಡಿಸಿ....

ಜೋರಾಗಿ.. ಕೊಡವಿ ಕೊಂಡೆ..!

ಅಬ್ಬಾ... !... ಅಬ್ಬಬ್ಬಾ...!!ಈ ಪೆಟ್ಟಿಗೆ ಗಪ್ಪತಿ...

" ನಯನಾ "... ಅನ್ನೋ ಹುಡುಗಿ ಲವ್ ಮಾಡಿ

ಅಡಪೋಟ್ರು ಆದದ್ದು ದೊಡ್ಡ ಕಥೆ....

50 comments:

Kishan said...

Soooperragide swami...!! made me to read again and again :) hilarious!!

ಸಿಮೆಂಟು ಮರಳಿನ ಮಧ್ಯೆ said...

ಕಿಶನ್....

ಈ ಲೇಖನ ಸ್ವಲ್ಪ ತಾಳ್ಮೆಯಿಂದ ಓದಿದ್ದಕ್ಕೆ...

ಧನ್ಯವಾದಗಳು...

ಈ ಥರ ಮಾತಾಡುವ ವ್ಯಕ್ತಿತ್ವವನ್ನು..

ಯಾವ ಹುಡುಗಿ ಇಷ್ಟಪಟ್ಟಾಳು..?..?

ಅದೆಂಥಹ ಪ್ರೇಮ ಹೇಗಿರಬಹುದು..?

ಮೂರು ವಾಕ್ಯದಲ್ಲಿ ಹೇಳುವಂಥಾದ್ದು ಮೂರುತಾಸು ತೆಗೆದುಕೊಳ್ಳುವ...

ಅಡಪೋಟ್ರು ಗಪ್ಪತಿಯ "ನಯನ... ಹೇಗಿದ್ದಳು..?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

Anonymous said...

ಆಹಾ, ಅದ್ಭುತ ಕಥೆಗಾರ!
ಏಕ್ತಾ ಕಪೂರ್ ಗೆ ಖಂಡಿತಾ ಇವನೇ ತಕ್ಕ ಪ್ರತಿಸ್ಪರ್ಧಿ. ;-)
ಬರಹ ಚೆನ್ನಾಗಿದೆ. ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಎಷ್ಟು ಕತೆಗಳಿವೆ ಪ್ರಕಾಶಣ್ಣ.
ಹೀಗೆ ಬರೆಯುತ್ತಾ ಇರಿ.

Annapoorna Daithota said...

Che ! neevu madhyadalle thadeebarditthu, `Gappathi' avara narration thumba chennaagittu, kathe ardhakke nillo haage maadidralla :-)

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

ಗಪ್ಪತಿಯ ಬಳಿ ಕಥೆ ಕೇಳಿ ನಿಮಗಾದ ಕಹಿ ಅನುಭವವನ್ನ ಚಂದವಾಗಿ ನಮಗೆ ಹಸ್ತಾಂತರಿಸಿದ್ದೀರಿ.
ಈ ಪೆಟ್ಟಿಗೆ ಗಪ್ಪತಿ...
" ನಯನಾ "... ಅನ್ನೋ ಹುಡುಗಿ ಲವ್ ಮಾಡಿ
ಅಡಪೋಟ್ರು ಆದದ್ದು ದೊಡ್ಡ ಕಥೆ....

ಅಷ್ಟು ಹೇಳಿ ನಿಲ್ಲಿಸಿ ಬಿಡ್ತೀರಿ ಯಂಡಮೂರಿ ಯವರ ಧಾರಾವಾಹಿಯ ತರಹ ಬೇಗ ಬರಿಯಿರಿ ಸ್ವಾಮಿ!!!

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ...

ಗಪ್ಪತಿ ಅಪರೂಪಕ್ಕೆ ಮಾತನಾಡಲು ಸಿಕ್ಕರೆ ಖುಷಿಯಾಗುತ್ತದೆ..
ಹೇಳುವ ಮಾತೆಲ್ಲ ಕೊರೆತವೆ ಆದರೆ...?
ಹೇಗೆ ಸಹಿಸಲು ಸಾಧ್ಯ...?

ಅವನ ಕ್ಲಾಸ್ ರೂಮಿನ ಘಟನೆಗಳು ಬಲು ಮಸ್ತಾಗಿದೆ...
ಬರೆಯುವೆ.. ಮುಂದೆ..

ಯಾವಾಗಲಾದರೂ.. ಒಮ್ಮೆ...

ಅಡಪೋಟ್ರು ಗಪ್ಪತಿ ಇಷ್ಟವಾಗಿದ್ದಕ್ಕೆ

ಅಭಿನಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಅನ್ನಪೂರ್ಣಾರವರೆ....

ಗಪ್ಪತಿ ಹೇಳುವ ಕಥೆ ಬಹಳ ಮಜವಾಗಿರುತ್ತಿತ್ತು..

ಯರನ್ನೂ ನೋಯಿಸುವ, ವ್ಯಂಗವಾಗಿ ಚುಚ್ಚುವ ಕಥೆ ಯಾವಾಗಲೂ ಇರುತ್ತಿರಲಿಲ್ಲ...

ಊಟ, ತಿಂಡಿಗಿಂತ, ಸಿನೇಮಾ, ಹುಡುಗಿಯರಿಗಿಂತ..,.
ಯಾರಾದರೂ ಕೇಳುಗರು ಸಿಕ್ಕರೆ...

ಅವನಿಗೆ ಸ್ವರ್ಗ ಸಿಕ್ಕಿದಷ್ಟು ಖುಷಿ...!

ನಿಮಗೆ ರಸ ಭಂಗ ಆಗಿದ್ದಕ್ಕೆ ಕ್ಷಮೆ ಇರಲಿ...
ಮುಂದೆ ಮತ್ತೆ ಬರುತ್ತಿರುತ್ತಾನೆ..

ಈ ಅಡಪೋಟ್ರು ಗಪ್ಪತಿ...

ಇಷ್ಟವಾಗಿದ್ದಕ್ಕೆ
ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಮೂರ್ತಿ....

ಅಡಪೋಟ್ರು ಗಪ್ಪತಿಯ...
ಮೊದಲ ಪ್ರೇಮದ ಕಥೆಯ ಬಗೆಗೆ ಈಗಲೇ ಹೆಚ್ಚಿಗೆ ಹೇಳಲಾರೆ..
ಬಹಳ ಮಜ ಇತ್ತು...

ಈಗಲೇ ಕಥೆ ಉದ್ದ ಆಯ್ತು ಎಂದು..,
ಎರಡು ಕಥೆ ಕಟ್ ಮಾಡಿದ್ದೇನೆ...

ಪೆಟ್ಟಿಗೆ ಗಪ್ಪತಿ ಇಷ್ಟ ಪಟ್ಟಿದ್ದಕ್ಕೆ..
ಧನ್ಯವಾದಗಳು...

vani said...

ಹಾ !ಹಾಹಾ!ಚೆನ್ನಾಗಿ ಬರೆದಿದ್ದೀರಿ, ಈ ಲೇಖನ ಓದಿ ನನ್ನ ತಲೆಯೂ ಗಲಿಬಿಲಿ ಆಗಿದೆ! ಇನ್ನೊಂದು ಸಲ ಗಮನವಿಟ್ಟು ಓದಬೇಕು.ಆ ಮಹಾಶಯನ ಕೊರೆತವನ್ನು ಚೆನ್ನಾಗಿ ಕೇಳಿ, ಬರೆದಿದ್ದೀರಲ್ಲ, ಅದು ದೊಡ್ಡ ಸಾಹಸವೇ ಸರಿ!!

ಸಿಮೆಂಟು ಮರಳಿನ ಮಧ್ಯೆ said...

ವಾಣಿಯವರೆ...

ಅಪರೂಪಕ್ಕೆ ಕೇಳಲು ಬಹಳ ಮಜವಾಗಿರುತ್ತಿತ್ತು..

ಅವನ ಬಳಿ ಯಾವ ಲೆಕ್ಚರ್ ಗಳೂ ಪ್ರಶ್ನೆ ಕೇಳುತ್ತಿರಲಿಲ್ಲ...

ಅವನ ಉತ್ತರಗಳೆಲ್ಲ.. ದೊಡ್ಡ ಕೊರೆತವೇ ಆಗಿರುತ್ತಿತ್ತು..

ಆಶ್ಚರ್ಯವೆಂದರೆ ಈತ ಪಾಸಾಗುತ್ತಿದ್ದ...

ಪೆಟ್ಟಿಗೆ ಗಪ್ಪತಿ ಖುಷಿ ಕೊಟ್ಟೀದ್ದಕ್ಕೆ

ವಂದನೆಗಳು...

ಹೀಗೆ ಬರುತ್ತಾ ಇರಿ..

guruve said...

ಹ ಹ, ಚೆನ್ನಾಗಿದೆ.

ನೀವು ಸಂಪೂರ್ಣ ಕಥೆ ಕೇಳಿದ್ರೆ, ಇನ್ನೊಂದೆರಡು ಬ್ಳಾಗ್ ಅಂಕಣಗಳಿಗೆ ಸರಕು/ವಿಷಯ ಸಿಕ್ತಿತ್ತು ಅನ್ಸುತ್ತೆ! :)
Mr.ಗರಗಸ ನೆನಪಿಗೆ ಬಂತು.

sunaath said...

ಪ್ರಕಾಶ,
ನಿಮ್ಮ ಗಪ್ಪತಿ ತುಂಬ ಚೆನ್ನಾಗಿ ಮಾತಾಡ್ತಾನೆ. ಅವನನ್ನು ಹಾಗೇ ಬಿಡಬೇಡಿ. ಇನ್ನೂ ಒಂದಿಷ್ಟು ಅವನಿಂದ ಹೇಳಿಸಿ!

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಕ್ಕು ನಕ್ಕು ಸಾಕಾಯ್ತು, ನಿಮ್ಮ ಗಪ್ಪತ್ತಿಯ ಪ್ರೇಮ ಕಥೆ ಕೇಳಲು ಕಾತುರನಾಗಿದ್ದೇನೆ. ತೀರ ಕಾಯಿಸದೇ ನೆನಪಿನಿಂದ ಶೀಘ್ರದಲ್ಲಿ ಬರೆದು ಓದಲು ಕೊಡಿ.

ಮಲ್ಲಿಕಾರ್ಜುನ.ಡಿ.ಜಿ. said...

ಬಲು ಮಜವಾಗಿದೆ ಸರ್. ನಿಮ್ಮ ಬತ್ತಳಿಕೆಯಲ್ಲಿ ಇಂತಹ ಅಡಪೋಟ್ರುಗಳು ಎಷ್ಟು ಜನ ಇದ್ದಾರೋ!!
ಒಬ್ಬೊಬ್ಬರದೂ ಒಂದೊಂದು ವಿನ್ಯಾಸ, ಶೈಲಿ!!
ವಿಷಯಾಂತರ ಮಾಡಿದರೂ ಗಪ್ಪತಿಯದು ಕುತೂಹಲ ಹುಟ್ಟಿಸುವ ಶೈಲಿಯೇ!
ಇಲ್ಲಿನ ನಾಯಿಮರಿಗೂ ಸೋನಿಯಾಗಾಂಧಿಗೂ ಲಿಂಕ್ ಓದಿ ಸಕತ್ ನಗು ಬಂತು.
ಕಡೆಯಲ್ಲಿ ಯಂಡಮೂರಿಯಂತೆ ಕಣ್ಣು ಕಣ್ಣು ಬಿಡುವಂತೆ (ನಯನ) ಮಾಡಿದ್ದೀರಿ.

shivu said...

ಪ್ರಕಾಶ್ ಸರ್,

ಈ ಗಪ್ಪತಿ ಎಷ್ಟೊಂದು ನಿದಾನ..ಇಂಥವರನ್ನು ನಾನು ದಿನಪತ್ರಿಕೆ ಹಂಚಲು ಸೇರಿಸಿಕೊಂಡರೇ..ನೆನೆಸಿಕೊಂಡರೇ ಭಯವಾಗುತ್ತದೆ...ಕೊನೆ ಮನೆಗೆ ಪೇಪರ್ ಯಾಕೋ ಪೇಪರ್ ಹೋಗಿಲ್ಲ ಅಂದ್ರೆ ಮೊದಲನೆ ಮನೆಯಿಂದ ಶುರುಮಾಡಿ ಎಂಬತ್ತನೇ ಮನೆ ಮುಟ್ಟುವ ಹೊತ್ತಿಗೆ...ನನ್ನ ತಲೆ ಸಿಡಿದು ಹೋಳಾಗೋದು ಗ್ಯಾರಂಟಿ....ಎಲ್ಲಿ ಸಿಕ್ತಾರೆ...ಇವರೆಲ್ಲಾ.....

ಇವನೊಂತರ ಸ್ಲೋ ಅನಾಸ್ತೇಷಿಯ....ಆಡಪೋಟ್ರು...

ಇವನ ನಯನ ಜೊತೆಗಿನ ಲವ್...ಕುತೂಹಲ ಕೆರಳಿದೆ..
ಅದ್ರೆ ಅವಳಿಗೆ ಐ ಲವ್ ಯೂ ಅನ್ನೋದಿಕ್ಕೆ...ಎಷ್ಟು ಎಳೆದಿರಬಹುದು....ನೀವು ಅವನಂತಾಗದೆ....ಬೇಗ ಬರೆಯಿರಿ...ಕಾಯುತ್ತಿರುತ್ತೇನೆ....

ಉಮಿ :) said...

ಅಯ್ಯೋ ಶಿವನೇ,
ಬರೀ ಓದಿದ್ದಕ್ಕೆ ನಂಗೆ ಬೆವರು ಬಂತು, ಇನ್ನು ಪಾಪ ಪೆಟ್ಟಿಗೆ ಗಪ್ಪತಿ ಮುಂದೆ ಕೂತು ಕೊರೆಸಿಕೊಂಡಿದೀರಲ್ಲ, ನಿಮ್ಮ ಸ್ಥಿತಿ ಹೇಗಾಗಿರಬೇಡ.

ಉಮಿ :) said...

ಒಂದು ತರಲೆ ಪ್ರಶ್ನೆ; ಆ ಟೈಮ್ ನಲ್ಲಿ ಓಬಾಮ, ಅಮೇರೀಕಾ ಚುನಾವಣೆ ಎಲ್ಲ ಇತ್ತಾ?

ಬಾಲು said...

ಎಂತ ಕುಯ್ತಾ ಮರಾಯರೆ??? ಗಪ್ಪತಿ ದೊಡ್ಡ ಗರಗಸ ನೇ ಸರಿ. ಆತನ ಕೊರೆತ ಕೇಳಿ ನಿಮ್ಮ ಕಿವಿ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಾ ಇದೆ ತಾನೇ?

Greeshma said...

ಹ್ಹಾ ಹ್ಹಾ! ಒಳ್ಳೆ ಅಸ್ಸಾಮಿ ನಿಮ್ ಗಪ್ಪತಿ!
ಹಿಂಗಿದ್ದವ್ರು ಒಂದ್ ಇಬ್ರು ಇರ್ಬೇಕು. ಪುರುಸೊತ್ತಿದ್ದಾಗ, ಒಳ್ಳೆ time pass :)

ಮನಸು said...

ಪ್ರಕಾಶ್ ಸರ್,
ಒಳ್ಳೆ ಜೋಡಿಗಳು, ಒಬ್ಬೊಬ್ಬರು ಒಂದೂಂದು ರೀತಿ ಹ ಹ ಹ ನೀವುಗಳೇನೋ ಸ್ವಲ್ಪ ಹೊತ್ತು ಗಪ್ಪತಿ ಜೊತೆ ಮಾತಾಡಿ ಬೇಜಾರಾದ್ರೆ ಹೊಡೆದು ಬಾಯಿ ಮುಚ್ಚಿಸಿದಿರಿ ಆದರೆ ಅವರ ಹೆಂಡತಿ ಆಗಿರುವರರ ಕಥೆ ಹೇಳಿ.
ನಗೆ ಬರಹ ಚೆನ್ನಾಗಿದೆ ಎಲ್ಲರಿಗು ಕುಶಿ ಕೊಡುತ್ತೆ .. ಮುಂದಿನ ಅವರ ಪ್ರೇಮಕಥೆ ಬರೀರಿ... ನಗೋಣ ಎಲ್ಲರು..
ವಂದನೆಗಳು

ಸಿಮೆಂಟು ಮರಳಿನ ಮಧ್ಯೆ said...

ಗುರು ಪ್ರಸಾದ್..

ನಮ್ಮ ಮೂಡು ಸರಿ ಇದ್ದಾಗ ಕೊರೆತ ಎಂಜಾಯ್ ಮಾಡಬಹುದು...

ಮೂಡು ನೋಡಿಕೊಳ್ಳದೆ ಕೊರೆಯುವವರಿಗೆ ಏನನ್ನ ಬೇಕು..?

ಆದರೆ ಆ ಮನುಷ್ಯನಿಗೆ ನಾವೆಲ್ಲ ಚಾಳಿಸುತ್ತಿದ್ದೇವೆ ಅಂತ ಗೊತ್ತಿತ್ತು...

ಆದರೆ ಅಭ್ಯಾಸ ಬಲ..

ಬಿಡಲಿಕ್ಕೆ ಆಗಲಿಲ್ಲ...ಈಗಲೂ ಸಹ...

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ಅವನು ಇನ್ನೂ ಬರುತ್ತಾನೆ ಆಗಾಗ..

ಅವನ ಬಹಳ ಜೋಕು ಘಟನೆಗಳಿವೆ...

ಲೇಖನ ಮೆಚ್ಚಿದ್ದಕ್ಕೆ

ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್...

ಈಗಲೇ ಬರೆದರೆ ಏಕತಾನತೆಯಾಗಿಬಿಡುತ್ತದೆ..

ಸ್ವಲ್ಪ ದಿನ ಕಳೆಯಲಿ ಮತ್ತೆ ಕರೆಸುವೆ.. "ಗಪ್ಪತಿಗೆ"

ಲೇಖನ ಮೆಚ್ಚಿದ್ದಕ್ಕೆ

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ನಯನಾಳ ವರ್ಣನೆ ಗಪ್ಪತಿಯ ಬಾಯಲ್ಲೇ ಕೇಳಬೇಕು...

ಅವನ ಒಂದು ಪರಿಚಯಕ್ಕಾಗಿ ಈ ಲೇಖನ ಬರೆದೆ..

ಇದನ್ನು ಬರೆಯದೆ ಮುಂದಿನ ಘಟನೆ ಬರೆದರೆ..
ಮಜಾಮಾಡಲು ಆಗುವದಿಲ್ಲವಾಗಿತ್ತು...

ಗಪ್ಪತಿಯ ಪ್ರೇಮ ಪ್ರಸನ್ಗ ಮತ್ತೊಮ್ಮೆ ಬರೆಯುವೆ..

ಮೆಚ್ಚಿದ್ದಕ್ಕೆ

ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು...ಸರ್..

ಈತನ ಮೋಜಿನ ಕಥೆಗಳು ಬಹಳ ಇವೆ..

ಒಳ್ಳೆಯ ಮನುಷ್ಯ.. ಅಭ್ಯಾಸ ಬಲ ಬಿಡಲಾಗಲಿಲ್ಲ..

ನಾವು ಬಹಳ ಚೇಡಿಸಿ .. ಛೇಡಿಸಿ.. ಕಡಿಮೆ ಮಾಡಿದ್ದ...

ಈಗಲೂ ಅದೇ ಸ್ವಭಾವ..

ಮೆಚ್ಚಿದ್ದಕ್ಕೆ

ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಉಮೀ...

ಅವನು ಯಾವಾಗಲೂ ಹಾಗೆಯೇ ಇದ್ದ...

ಒಂದೊಂದು ಘಟನೆಯಲ್ಲಿ ..
ಒಂದೊಂದಕ್ಕೆ ಪ್ರಾಮುಖ್ಯತೆ...

ಮಜಾ ದಿನಗಳು.. ಆ ದಿನಗಳು...

ಮೆಚ್ಚಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೀ...

ಹ್ಹಾ... ಹ್ಹಾ....ಹ್ಹಾ...!

ಒಳ್ಳೆಯ ತರಲೇ ಪ್ರಶ್ನೆ... ನಿಮ್ಮದು...!!

ಆಗ.. "ರೋನಾಲ್ಡ್ ರೇಗನ್ " ಇದ್ದ ಅನಿಸುತ್ತೆ....

ಇರಾಕ್, ಇರಾನ್ ಯುದ್ಧ ನಡೆಯುತ್ತಿದ್ದ ಕಾಲ..

ಖೊಮೈನಿ.. ಎಲ್ಲ ಇದ್ದರು...

ಒಟ್ಟಿನಲ್ಲಿ ಜಗತ್ತಿನ ಎಲ್ಲ ವಿಷಯ..

ಅವನ ಕೊರೆತದಲ್ಲಿ ಬರುತ್ತಿತ್ತು...!

ತರಲೆ ಪ್ರಶ್ನೆಗೂ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗ್ರೀಷ್ಮಾ...

ನಮಗೆ ಪುರುಸೊತ್ತಿದ್ದಾಗ..

ಅಂಥವರನ್ನು ಮಾತಾಡಲು ಬಿಡಬೇಕು...

ಮಧ್ಯದಲ್ಲಿ ಪ್ರಶ್ನೆ ಹಾಕಿ "ದಿಕ್ಕು" ಬದಲಿಸ ಬೇಕು..

ಮಜಾ ಇರುತ್ತದೆ...

ರಾಜಕೀಯ ಮಾತಾಡ್ತಾ ಇದ್ದರೆ... ಕ್ರಿಕೆಟ್ ಬಗ್ಗೆ ಪ್ರಶ್ನೆ ಕೇಳಿ ಬಿಡಬೇಕು..

ನಂತರ ಇದ್ದಕಿದ್ದಂತೆ "ಆಧ್ಯಾತ್ಮ"..!!

ಮಜಾ ಇರುತ್ತದೆ..

ಮೆಚ್ಚಿದ್ದಕ್ಕೆ

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ಈ ಮನುಷ್ಯ ಪರೀಕ್ಷೆಯಲ್ಲಿ ಹೇಗೆ ಪಾಸಾಗುತ್ತಿದ್ದ..?
ಅನ್ನೋದು ಬಹಳ ಮೋಜಿನ ಸಂಗತಿಯಾಗಿತ್ತು..

ಉತ್ತರ ಪತ್ರಿಕೆಯಲ್ಲಿ ಬಹಳ ಬರೆಯುತ್ತಿದ್ದ..

ಲೆಕ್ಚರ್ ಗಳು ಕೊನೆಯಲ್ಲಿ ನೋಡುತ್ತಿದ್ದರಲ್ಲವೆ..?

ಇವನ ನಿಜವಾದ ವಿಷಯ ಬರುವದು ಕೊನೆಯಲ್ಲಾಗಿತ್ತು..!

ಹಾಗಾಗಿ ಪಾಸಾಗುತ್ತಿದ್ದ...!
ಇದು ನಮ್ಮ ಊಹೆಯಾಗಿತ್ತು...

ಕೊರೆತ ಇಷ್ಟವಾಗಿದ್ದಕ್ಕೆ

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು....

ಅವರಿಗೆ ಮದುವೆಯೂ ಆಗಿದೆ..

ಮಕ್ಕಳೂ ಇದ್ದಾರೆ...

ಹೆಂಡತಿಯ ಬಗೆಗೆ ಈಗೇನೂ ಹೇಳಲಾರೆ..

ಬ್ರಹ್ಮನು ಬೆಸದ ಅನುಬಂಧ ಅದು..

ಅವನ ಸಂಸಾರ ಚೆನ್ನಾಗಿದೆ....ಖುಷಿಯಾಗಿದ್ದಾನೆ..

ಮೊದಲಿನ ಥರಹವೇ ಇದ್ದಾನೆ...

ಅವನು ಕಾಲೇಜಿನಲ್ಲಿ ಉಪನ್ಯಾಸಕ...!!

ಇನ್ನು ಅವನ ವಿದ್ಯಾರ್ಥಿಗಳ ಕಥೆಯೋ..??

ಮುಂದೊಮ್ಮೆ ಹೇಳುವೆ...

ಸ್ವಲ್ಪ ಇರಿ... ಮಾರಾಯರೆ...!

ಲೇಖನ ಮೆಚ್ಚಿದ್ದಕ್ಕೆ

ವಂದನೆಗಳು..

PARAANJAPE K.N. said...

ಪ್ರಕಾಶರೇ,
ನಿಮ್ಮ ಲೇಖನ ತು೦ಬಾನೆ ಇಷ್ಟವಾಯಿತು. ಗಪ್ಪತಿ ಕಥೆ, ನಾಯಿ ಕಥೆ, ನವಿರು ಹಾಸ್ಯದ ಲೇಪನ ಚೆನ್ನಾಗಿದೆ. ಲವ್ ಮಾಡಿ ಅಡಪೋಟ್ರು ಆಗಿದ್ದು ಬೇಗ ಹೇಳಿ ಮಾರಾಯ್ರೆ... ಕಾಯಿಸಬೇಡಿ

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ....

ಅಭ್ಯಾಸ ಬಲ..

ನಮಗೂ ಇರುತ್ತದೆ..ನಮಗೆ ಗೊತ್ತೇ ಇರುವದಿಲ್ಲ...

ಅದನ್ನು ಬಿಡಲು ಬಹಳ ಕಷ್ಟ..

ಗಪ್ಪತಿಗೆ ಹುಡುಗಿಯರು, ಸಿನೇಮಾಕ್ಕಿಂತ..

ತನ್ನ ಕೊರೆತ ಕೇಳಲು ಯಾರಾದರೂ ಸಿಕ್ಕರೆ ಸ್ವರ್ಗದಷ್ಟು ಸಂತೋಷ ಆಗುತ್ತಿತ್ತು..

ಬಹಳ ವಿಚಿತ್ರ ಅಲ್ಲವಾ...?

ಸಧ್ಯದಲ್ಲೇ ಹೇಳುವೆ... ಸ್ವಲ್ಪ ಇರಿ ಮಾರಾಯರೆ..

ಕೊರೆತ ಮಸ್ತ್ ಮಜಾ ಮಾಡಿದ್ದಕ್ಕೆ ವಂದನೆಗಳು...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ನಿಮ್ಮನ್ನು ಬಹಳ ಚನ್ನಾಗಿ ಚುಡಾಯಿಸಿದ್ದಾನೆ (ರಾಮ ಶಾಮ ಬಾಮ ದಲ್ಲಿ, ರಮೇಶ್ ಊರ್ವಶಿವನ್ನು ಚುಡಾಯಿಸಿದ ಹಾಗೆ)
ನೀವು ಕೂಡ ನಮ್ಮನ್ನು ಹಾಗೆ ಚುಡಾಯಿಸಿದ್ದಿರಿ...
ಇರಲಿ ಇರಲಿ, ನಮಗೂ time ಬರುತ್ತೆ :D
ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್....

ಅವನ ಉಪಟಳ ಇಲ್ಲಿಗೆ ಮುಗಿಯಿತೆಂದು ಕೊಳ್ಳಬೇಡಿ..

ಇನ್ನೂ ಇದೆ... ನಿಮ್ಮ ಲೇಖನ , ಕವನ ಚೆನ್ನಾಗಿರುತ್ತದೆ...

ಗಪ್ಪತಿಯ ಪ್ರೇಮ ಪ್ರಸಂಗ ಮಸ್ತ್ ಇದೆ..

ಸ್ವಲ್ಪ ದಿನ ಕಾಯಿರಿ..

ಬರೆಯುವೆ..

ಧನ್ಯವಾದಗಳು..

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಥೋ ಥೋ ಥೋ.. ಈ ಗಪ್ಪತಿ ಕಾಲದಲ್ಲಿ ಆಗಿದ್ದಲ್ಲ ಹೋಗಿದ್ದಲ್ಲ ಮಾರಾಯ್ರೇ... :)

ಅಂತರ್ವಾಣಿ said...

ಪ್ರಕಾಶಣ್ಣ,
ಪಿಟೀಲು ವಿದ್ವಾಂಸರನ್ನೇ ಪರಿಚಯ ಮಾಡಿದ್ದೀರ.. :)

ಶಾಂತಲಾ ಭಂಡಿ said...

ಪ್ರಕಾಶಣ್ಣಾ...

ಗಪ್ಪತಿ ಭಾರೀ ಚೊಲೊ ಇದ್ದ. ನೀವು ವಿವರಿಸಿದ ಶೈಲಿಗೆ ನಕ್ಕೂ ನಕ್ಕೂ ಸಾಕಾಯಿತು :-)
ಅಂದಹಾಗೆ ಒಂದುಪ್ರಶ್ನೆ, ಈ ಗಪ್ಪತಿಗೆ ಪೆಟ್ಟಿಗೆ ಗಪ್ಪತಿ ಅನ್ನುವ ಹೆಸರು ಹೇಗೆ ಬಂತು ಅಂತ ಕೇಳಬಹುದೇ?

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ...

ಅವನ ಧಾಟಿಯಲ್ಲೇ ಹೇಳ್ತಾ ಇದ್ದೀರಲ್ಲಾ...!!

ಅವನಿಗೆ ಮೂರುಸಾರಿ..

ಥೋ..ಥೋ..ಥೋ.." ಅಂತ ಹೇಳಿದಂತೂ ಮಾತು ಮುಗೀತಿರಲಿಲ್ಲ...

ಖುಷಿ ಪಟ್ಟಿದ್ದಕ್ಕೆ

ಅಭಿನಂದನೆಗಳು..

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿ...

ಈ ಮನುಷ್ಯ ಒಮ್ಮೆ ಸಿರ್ಸಿಯಿಂದ ಬೆಂಗಳೂರಿಗೆ ಬರುವಾಗ ನನ್ನ ಕಾರಿನಲ್ಲಿ ಬಂದ..

ಅವನಿಗೆ ಮೊಳಕಾಲಿನ ಗಂಟಿನ ನೋವು..

ಅದರ ಔಷಧಕ್ಕಾಗಿ ಹಳ್ಳಿ ವೈದ್ಯರ ಬಳಿ ಹೋದ ಕಥೆಯಿದೆ..

ಬೊಂಬಾಟ್ ಇದೆ..

ನಾನು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಅರ್ಧ ತಾಸು ನಕ್ಕಿದ್ದೇನೆ..!

ನಿಮಗೆ ಪ್ರತಿಕ್ರಿಯೆ ಕೊಡುತ್ತ ಇದು ನೆನಪಾಯಿತು..

ಖಂಡಿತ ಬರೆಯುವೆ..

ಪಿಟಿಲು ಎಂದರೆ ನಮ್ಮ ಭಾಶೆಯಲ್ಲಿ ಬೇರೆನೇ ಅರ್ಥ ಮಾರಾಯರೆ..

ಅದನ್ನೂ ಹೇಳುವೆ..

ಖುಷಿ ಪಟ್ಟಿದ್ದಕ್ಕೆ

ವಂದನೆಗಳು

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ...

ಪೆಟ್ಟಿಗೆ ಗಪ್ಪತಿ ಅನ್ನೋದು ನಾಗು ಇಟ್ಟ ಹೆಸರು..

ಅದೂ ಕೂಡ ಮಜ ಇದೆ..

ಗಪ್ಪತಿ ಮತ್ತೊಮ್ಮೆ ಬರ್ತಾನಲ್ಲ..

ಆಗ ಹೇಳ್ತಾನೆ...!

ಪೆಟ್ಟಿಗೆ ಗಪ್ಪತಿ..

ಅಡಪೋಟ್ರು ಕಥೆ ಇಷ್ಟವಾಗಿದ್ದಕ್ಕೆ

ಧನ್ಯವಾದಗಳು..

Vinutha said...

ಅಯ್ಯೋ ಆ ನಾಗು ಅವರೆಲ್ಲ ಬ೦ದು ಒಬಾಮ ಅಮೆರಿಕದ ಬಗ್ಗೆ ಕೇಳುವ ಅವಕಾಶ ತಪ್ಪಿಸಿಬಿಟ್ಟರಲ್ಲ!!!
ಆದಾಗ್ಯೂ ಬರಹದ ನಡುವೆ ಬರುವ ಒಂದು ಕೋರ್ಟ್ ಕೇಸ್ ಪ್ರಮೇಯ ಮಾನವ ಸ೦ಬ೦ಧಗಲ ಸೂಕ್ಷ್ಮತೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಸುಂದರ ಹಾಸ್ಯ ಬರಹಕ್ಕೆ ಧನ್ಯವಾದಗಳು.

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ಅದಪೋಟ್ರು ಮಜಾ ಇತ್ತು... ಓದಿ ನಕ್ಕು ನಕ್ಕು ಸಾಕಾಗೋತು ಮಾರಾಯ :) ನಾಗು ಹಿಡ್ಕಲ್ದೆ ಇದ್ರೆ ನಿನ್ ತಲೆ ಗ್ಯಾರಂಟೀ ಬ್ಲಾಸ್ಟ್ ಆಗ್ತಿತ್ತು :)

ಸಿಮೆಂಟು ಮರಳಿನ ಮಧ್ಯೆ said...

ವಿನುತಾ...

ಬರಹ ಮೆಚ್ಚಿ ಕೊಂಡಿದ್ದಕ್ಕೆ ವಂದನೆಗಳು...

ನಾಗು ಬರದೇ ಇದ್ದಿದ್ದರೆ ನನ್ನ ಗತಿ ಅಧೋಗತಿ...!

ನಾಗುವಿಗೆ ಥ್ಯಾಂಕ್ಸ್ ಹೇಳಬೇಕು ಅಲ್ಲವಾ..?

ಆದರೆ ಅವನು ಕಟ್ಟುವ ಸಂಬಂಧಗಳ ಲಿಂಕ್ ಮಜಾ ಇರ್ತವೆ...

ಮತ್ತೆ ಬರ್ತಾನೆ.. ಸ್ವಲ್ಪ ಇರಿ...

ಧನ್ಯವದಗಳು

ಸಿಮೆಂಟು ಮರಳಿನ ಮಧ್ಯೆ said...

ಶರತ್...

ಆ ಅಡಪೋಟ್ರು ಗಪ್ಪತಿಗೆ ನಾವು ಚಾಳಿಸ್ತಾ ಇದ್ದರೂ ಬೇಜಾರಿಲ್ಲವಾಗಿತ್ತು..

ಆ ಚಟವನ್ನು ಬಿಡಬೇಕೆಂದು ಬಹಳ ಪ್ರಯತ್ನ ಪಟ್ಟ..

ಅಗಲಿಲ್ಲ..

ನಮ್ಮನೆಗೆ ಬಂದಾಗ ಅವನನ್ನು ನಿಮ್ಮನೆಗೆ ಕರೆದು ಕೊಂಡು ಬರುವೆ..
ಓಕೇ ನಾ..?

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು..

Geetha said...

ಹೋ.... ಯಾರು ಸರ್ ಇದು ಇಷ್ಟೊಂದು ಕೊರೆಯುವರು?ನಿಮ್ಮ ಬಗ್ಗೆ ಪಾಪ ಅನಿಸುತ್ತಿದೆ...ಹಹ...ಮತ್ತೆ ಅದೇನು ಅವರ ಹೆಸರೆ ’ಗಪ್ಪತಿ’ಯಾ? ಅಥವ ಅದೇನಾದ್ರು ಕೋಡ್ ವರ್ಡೋ ಹೇಗೆ?!!

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ...

ನಮ್ಮೂರ ಕಡೆ "ಗಣಪತಿ" ಹೆಸರನ್ನು
ಪ್ರೀತಿಯಿಂದ "ಗಪ್ಪತಿ" ಎಂದು ಕರೆಯುತ್ತಾರೆ...

ಅದರಲ್ಲೇನೂ ಕೋಡ್ ವರ್ಡ್ ಇಲ್ಲಮ್ಮ...

ಅವನು ಮತ್ತೆ ಬರುತ್ತಾನೆ..
ಇನ್ನೂ ಎರಡು ಲೇಖನದಲ್ಲಿ..

"ಗಪ್ಪತಿ" ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ರವಿಕಾಂತ ಗೋರೆ said...

ತಲಿ ಯಾಕೋ ಗುಯಿ ಅನ್ನಕತ್ತೈತಿ .... :-)

ಸಿಮೆಂಟು ಮರಳಿನ ಮಧ್ಯೆ said...

ರವಿಯವರೆ....

ಯಕ್ರೀ ಸರ....?

ಈಗಲೇ ಹೀಂಗ್ ಅಂದ್ರೆ ಹ್ಯಾಂಗ್ರೀ..?

ಇನ್ನೂ ಮುಗದಿಲ್ರೀ ಇವನ ಪುರಾಣ...!

ಮತ್ತೆ ಬರ್ತಾನ್ರೀ "ತನ್ನ ಲವ್ವು ಪುರಾಣ ತಗೊಂಡು...!"

ಮೆಚ್ಚಿದ್ದಕ್ಕೆ ಶರಣ್ರೀ ಸಾಹೆಬ್ರ...!"

ಬರ್ತಾ ಇರ್ರೀ..!

chethan c r said...

ಹ್ಹಾ ಹ್ಹಾ !ಸೂಪರ್ ಆಗಿದೆ ಸಾರ್ ಗಪ್ಪತಿ ಕತೆ :) ನಿಮ್ಮ ನಿರೂಪಣಾ ಶೈಲಿ ಸೊಗಸಾಗಿದೆ :)

ಸಿಮೆಂಟು ಮರಳಿನ ಮಧ್ಯೆ said...

ಚೇತನಾರವರೆ....

ಈ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ...

ನಿಮ್ಮ ಪ್ರೋತ್ಸಾಹ ನನಗೆ ಮತ್ತಷ್ಟು ಬರೆಯಲು ಪ್ರೇರಣೆ...

ಧನ್ಯವಾದಗಳು..