Wednesday, November 19, 2008

ಏನಪ್ಪಾ.. ಬಲಗಡೆ,,,ಎಡಗಡೆ,, ಗೊತ್ತಾಗಕಿಲ್ವಾ..!!??

ಒಮ್ಮೆ ನನಗೂ ನನ್ನ ಗೆಳೆಯ ಸತ್ಯನಾರಾಯಣನಿಗೂ ಕ್ರಷಿ ಜಮೀನು ಖರೀದಿ ಮಾಡಬೇಕು
ಎನ್ನುವ ವಿಚಾರ ತಲೆಗೆ ಹೊಕ್ಕಿತು.

ನಾವು ಇನ್ನು ಎಷ್ಟು ವರ್ಷ ಈ ಸಿಮೆಂಟು ಮರಳು ಅಂತ ಕೆಲಸ ಮಾಡಬಹುದು?
ಅದಕ್ಕೆ ಈಗಿಂದಲೆ ಜಮೀನು ಖರಿದಿ ಮಾಡಿ ತೆಂಗು, ಮಾವು ಎಲ್ಲ ಹಾಕಿದರೆ ಇನ್ನು ಹತ್ತು ವರ್ಷಕ್ಕೆ
ನಾವು ಅಲ್ಲಿ ಹೋಗಿ ಇರಬಹುದು ಎನ್ನುವ ಭಾರಿ ಮುಂದಾಲೋಚನೆ ಬಂತು..

ಒಂದು ಫಾರ್ಮ್ ಹೌಸ ತರಹ ಕಟ್ಟಿಸಿ... ಎಲ್ಲ ಸೌಲಭ್ಯ ಇಟ್ಟುಕೊಂಡು.... ಸ್ವಿಮಿಂಗ್ ಫೂಲ್....
ಇತ್ಯಾದಿ....ಇತ್ಯಾದಿ...
ಹೌದಲ್ಲ ..ಒಳ್ಳೆಯ ವಿಚಾರವೆ.. ಸರಿ,

ಬೆಂಗಳೂರಿನ ಆಸುಪಾಸು ಹುಡುಕಿದೆವು. ರಿಯಲ್ ಎಸ್ಟೇಟ್ ಏಜಂಟ್ ಗಳಿಗೆ ಹೇಳಿದೆವು.
ಅವರು ಎಲ್ಲೆಲ್ಲೊ ಜಮೀನು ತೋರಿಸಿದರು.. ಸಮಧಾನ ಆಗಲಿಲ್ಲ.

ರಿಯಲ್ ಎಸ್ಟೇಟ್ ಏಜಂಟರಗಳು ಗೊತ್ತಲ್ಲ..ಅವರೊ..ಅವರ ರೇಟುಗಳೊ..ಒಂದೊಕ್ಕೊಂದು ತತ್ಸಂಬಧವಿರೊದಿಲ್ಲ.

"ಈ ಏಜಂಟರ ಸಹವಾಸ ಬೇಡ ಮಾರಾಯ..ನಾವೇ ಹಳ್ಳಿಗೆ ಹೋಗಿ ಕೇಳಿ.. ಹುಡುಕೋಣ" ಎಂದೆ.

ಸತ್ಯ ಓಕೆ ಅಂದ. ಸತ್ಯನಾರಾಯಣ ನನ್ನ ಬಿಸಿನೆಸ್ ನಲ್ಲಿ ನನಗೆ ಹೆಂಡತಿ, ಗೆಳೆಯ ಎಲ್ಲಾ. ಅವನ ಸಲಹೆ
ಇಲ್ಲದೆ ನಾನು ಯಾವುದೆ ನಿರ್ಧಾರ ತೆಗೆದು ಕೊಳ್ಳುವದಿಲ್ಲ.

ಮಾಗಡಿ ರೋಡನಲ್ಲಿರುಅವ ತಾವರೆ ಕೆರೆ ಹಳ್ಳಿಗೆ ಹೋದೆವು.

ಒಂದು ಮನೆಯ ಎದುರಿನ ಕಟ್ಟೆಯ ಮೇಲೆ ವಯಸ್ಸಾದ ಹಿರಿಯರೊಬ್ಬರು ಎಲೆ ಅಡಿಕೆ ಜಗಿಯುತ್ತ
ಕುಳಿತಿದ್ದರು..

"ನಮಸ್ಕಾರ ಯಜಮಾನ್ರೆ.....ಈ ..ಊರಲ್ಲಿ ಯವುದದರೂ ಕ್ರಶಿ ಜಮೀನು ಮಾರಾಟಕ್ಕೆ ಇದೆಯಾ?"
ಸ್ವಲ್ಪ.. ಜಾಸ್ತಿ ವಿನಯದಿಂದಲೆ ಕೇಳಿದೆ.

" ಎಲ್ಲಾ ಹಳ್ಳಿ ಬಿಟ್ಟು ಪಟ್ಣ ಅಂತಿರುವಾಗ ನಿಮಗ್ಯಾಕಪ್ಪ ಈ ಉಸಾಬರಿ..? ಅಂದರು ಆ ಅಜ್ಜ.

" ನಮಗೆ ಬೇಕು ತಾತ, ಮಾರಾಟಕ್ಕೆ ಅಲ್ಲ" ಅಂದೆ.

" ಇದೆ.. ನನ್ನ ಅಣ್ಣನ ಮಕ್ಳದ್ದು..ಈಗ ಕ್ರಷಿ ಮಾಡದೆ ಜಡ್ಡು ಬೆಳೆದಿದೆ" ಅಂದರು ತುಸು ಬೇಸರದಿಂದ..

" ದಯವಿಟ್ಟು ತೋರ್ಸಿ, ಕಾರಲ್ಲೇ ಬನ್ನಿ, ಆಮೇಲೆ ನಿಮಗೆ ಇಲ್ಲೇ ಬಿಟ್ಟು ಕೊಡ್ತೇವೆ" ಅಂದೆ.

ಸರಿ ಅಂದರು ಆ ಯಜಮಾನ್ರು. ದೊಡ್ಡ ದೊಗಲೆ ಚಡ್ಡಿ.. ಅದ್ನಾನ ಸಮಿ ಸೈಜಿನ ಬನಿಯನ್ನು.. ..
ಕಾರನಲ್ಲಿ ಬಹಳ ಗತ್ತಿನಲ್ಲೆ ಕುಳಿತರು.

" ನಂಗೆ ಈ ಕಾರೆಲ್ಲ ಹೊಸತಲ್ಲ, ನಮ್ಮ ಹೆಂಡಿರನ್ನು ನೋಡ್ಲಿಕ್ಕೆ ಹೋಗುವಾಗ.. ಕಾರ್ನಲ್ಲೆ ಹೋಗಿದ್ದೆ"
ಅಜ್ಜ ಶುರು ಹಚ್ಚಿಕೊಂಡರು...

ಕಾರು ಬಿಡುತ್ತಿದ್ದ ನನಗೆ ಮುಂದೆ ದಾರಿ ಗೊತ್ತಾಗಲಿಲ್ಲ.

" ಯಜಮಾನ್ರೆ ಮುಂದೆ ಎಡಕ್ಕೊ ಬಲಕ್ಕೊ..?" ಕೇಳಿದೆ

" ಬಲಕ್ಕೆ... ರೈಟು.. ತಿರಕ್ಕಳಪ್ಪಾ.." ಅಂದರು ಗತ್ತಿನ ಇಂಗ್ಲೀಷ್ನಲ್ಲಿ.

ನಾನು ಬಲಕ್ಕೆ ತಿರುಗಿಸಿದೆ...

" ಈ ಕಡೇ ಅಲ್ಲಪ್ಪ.. ಈ ಕಡೆ ಬಲಕ್ಕೆ" ಅಂತ ಎಡಗಡೆ ತೋರಿಸಿದರು..

ನಾನು ಎಡಗಡೆ ತಿರುಗಿಸಿದೆ.

ಸ್ವಲ್ಪ ಮುಂದೆ ಹೋದೆ... ಮತ್ತೆ ಮುಂದೆ ದಾರಿ ಗೊತ್ತಾಗಲಿಲ್ಲ.

" ಯಜಮಾನ್ರೆ.. ಈಗ ಹೇಗೆ?" ...ಕೇಳಿದೆ.

" ಎಡಗಡೆ.. ಲೆಫ್ಟ್ ತಕಳಪ್ಪ.." ಅಂದರು.

ನಾನು ಎಡಗಡೆ ತಿರುಗಿಸಿದೆ...

" ಏನಪ್ಪಾ .. ಎಡ ಬಲ ಗೊತ್ತಾಗಕಿಲ್ವಾ..? ಈ ಕಡೆ..ಎಡಕ್ಕೆ " ಎಂದು ಬಲಕ್ಕೆ ಕೈ ತೋರಿಸಿದರು..!!!??

ನಾನು ಕನ್ಫ್ಯೂಸ್ ಆದೆ.. ಅವರು ಹೇಳಿದ ಹಾಗೆ ಮಾಡಿದೆ.

ಸ್ವಲ್ಪ ಮುಂದೆ ಮತ್ತೆ ಗೊತ್ತಾಗಲಿಲ್ಲ..

..... ಸ್ವಲ್ಪ ಅಳುಕಿನಿಂದಲೆ... " ಈಗ ಯಾವಕಡೇ ..ಯಜಮಾನ್ರೆ..?" ಕೇಳಿದೆ..

"ಸೀದಾ ಮುಂದಕ್ಕೆ ಹೋಗಪ್ಪಾ.. " ಅಂದರು.

" ಯಜಮಾನ್ರೆ.. ಸೀದಾ ಮುಂದುಗಡೆ ಮುಂದಕ್ಕೊ.. ಹಿಂದಗಡೆ ಮುಂದಕ್ಕೊ...!!? ಕೇಳಿದೆ..

ನಗುವೆ ಬರದ ಸತ್ಯ ನಿಗೆ ನಗು ತಡೆಯಲಾಗಲಿಲ್ಲ...

ಆ ನಗು ಹೇಗಿತ್ತೆಂದರೆ ಮಾಲ್ಲಿಕಾರ್ಜುನ ಖರ್ಗೆ, ಯಡ್ಯೂರಪ್ಪ ಮತ್ತು ದೇವೇಗೌಡ್ರು
ಎಲ್ಲಾ ಸೇರಿ ನಕ್ಕಾಂಗೆ ಇತ್ತು...!!!

22 comments:

Shankar Prasad ಶಂಕರ ಪ್ರಸಾದ said...

ಇದೆ ಅನುಭವ ನಮಗೂ ಆಯ್ತದೆ ಸಾ.
ಬೆಂಗಳೂರಲ್ಲಿ ಯಾವ್ದೋ ಒಂದು ರೋಡ್ನಾಗೆ ಕಳೆದು ಹೋದ್ರೆ, ನಾನ್ ಜಾಸ್ತಿ ದಾರಿ ಕೇಳೋದು ಆಟೋದವರ ಹತ್ರ. ಕೆಲವರು ಸರಿಯಾಗಿ ಕನ್ನಡದಲ್ಲೇ ಎಡ, ಬಲ ಅಂತ ಹೇಳ್ತಾರೆ. ಇನ್ನು ಕೆಲವು ಎಳೆ ನಿಂಬೆಗಳು, ಷೋ ಆಫ್ ಪಾರ್ಟಿಗಳು ಹೇಳ್ತಾರೆ ನೋಡಿ...(ಕೈ ಉದ್ದ ಚಾಚಿ, ಹಸ್ತವನ್ನ ಬಲಗಡೆ ತಿರುಗಿಸಿ) "ಲೆಫ್ಟ್ ಗೆ ಹೋಗಿ ಸಾರ್, ಅಲ್ಲಿಂದ ಮುಂದಕ್ಕೆ ಹೋದ್ರೆ ಸಿಗತ್ತೆ".
ಜೈ ಕರ್ನಾಟಕ ಮಾತೆ, ವಂದೇ ಮಾತರಂ, ಟಿಪ್ಪು ಸುಲ್ತಾನ್...

ಕಟ್ಟೆ ಶಂಕ್ರ (http://somari-katte.blogspot.com)

Ittigecement said...

ಶಂಕರ್...
ಹೌದು..ಸರ್ ಒಂದು ಸಾರಿ ಹೀಗಾಯ್ತು..
" ಶಾಂತಿ ಸಾಗರ್ ಹೊಟೆಲ್ ಎಲ್ಲಿ ಬರ್ತದೆ ?" ಅಂತ ಕೇಳಿದ್ರೆ

" ಸಾರ್ ಅದು ಬರಲ್ಲಾ.. ನೀವೆ ಹೋಗ್ಬೇಕು " ಅಂದ ಒಬ್ಬ ತರ್ಲೆ.

ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸಿಮೆಂಟು ಎಡಕ್ಕೊ ರೈಟ್ ಗೊ, ಇಟ್ಟಿಗೆ ಬಲಕ್ಕೊ ಲೆಫ್ಟ್ ಗೊ ತುಂಬಾ ಕನ್ಫೂಸ್ ಆಗ್ತಿದೆ ಸಾರ್ !!!!!

shivu.k said...

ಪ್ರಕಾಶ್ ಸಾರ್,
ಬಲು ನಗೆ ಉಕ್ಕಿಸುವ ಜೋಕು ಇದು. ಈ ಮೊದಲು ನಿಮ್ಮ ಮನೆಯಲ್ಲಿ ಇದೇ ಜೋಕನ್ನು ಕೇಳಿ ನಾನು, ಹೇಮ, ಮಲ್ಲಿಕಾರ್ಜುನ್ ಬಿದ್ದು ಬಿದ್ದು ನಕ್ಕಿದ್ದೆವು.
ನಿಮ್ಮ ಕಾಮೆಂಟ್ ಬಾಕ್ಸಿನಲ್ಲಿ ಬಲಗಡೆಯ ಎಡಕ್ಕೆ, ಅಥವಾ ಬಲಗಡೆಯ ಬಲಕ್ಕೋ.... ಇಲ್ಲ ಇಲ್ಲಾ...ಎಡಗಡೆಯ ಬಲಕ್ಕೋ....ಹೂಹೂಂ...ಎಡದ ಬಲಕ್ಕೋ....ಪ್ರತಿಕ್ರಿಯಿಸಲು ಕನ್ ಪ್ಯೂಸ್ ಆಗ್ತಿದೆ.....

ಅಂತರ್ವಾಣಿ said...

ಪ್ರಕಾಶ್ ಅವರೆ,
ನನಗೂ ನಗು ತಡೆಯಲಾಗಲಿಲ್ಲ. :) :)

Ittigecement said...

ಆತ್ಮೀಯ ಶಿವು,,,ಮಲ್ಲಿಕಾರ್ಜುನ್..,,

ನನ್ನ ಪಾಡಿಗೆ ನಾನು ಸಿಮೆಂಟು, ಮರಳು ಅಂತಿದ್ದವನು. ನನ್ನನ್ನು ಬಲವಂತವಾಗಿ ಈ ಬ್ಲೊಗ್ ಪ್ರಪಂಚಕ್ಕೆ ತಂದವರು ನೀವಿಬ್ಬರು. ನನಗೆ ನಿಜವಾಗಿಯೂ ನಂಬಲಿಕ್ಕೆ ಆಗ್ತಾ ಇಲ್ಲ ಇದನ್ನೆಲ್ಲಾ. ಇದರ ಶ್ರೇಯಸ್ಸಿಗೆಲ್ಲ ನೀವಿಬ್ಬರು ಕಾರಣ. ನಿಮಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಲಿ..??
...ಹೇಗೆ ಧನ್ಯವಾದಗಳನ್ನು ಅರ್ಪಿಸಬೇಕು..??

ಗೊತ್ತಾಗ್ತಾ ಇಲ್ಲ.


ನಿಮಗೆ ಅನಂತಾನಂತ ಧನ್ಯವಾದಗಳು...

Ittigecement said...

ಅಂತರ್ವಾಣಿಯವರೆ...
ಧನ್ಯವಾದಗಳು....

Lakshmi Shashidhar Chaitanya said...

ನನಗೆ ಸಿಕ್ಕಾಪಟ್ಟೆ ನಗು ಬಂತು.ಜೊತೆಗೆ, directions are relative ಅನ್ನೋ ನನ್ನ relativity ಜೋಕು ನೆನ್ಪಾಯ್ತು ! [ ನಾನು ನನ್ನ ಸ್ನೇಹಿತರನ್ನ ಎಡ ಬಲ ಕನ್ಫೂಸ್ ಮಾಡ್ಸ್ತಾನೆ ಇರ್ತಿನಿ :-)]

Ittigecement said...

ಲಕ್ಷ್ಮಿಯವರೆ...
ಅ ಅಜ್ಜನನ್ನು " ಯಾಕೆ ಹೀಗೆ ಹೇಳ್ತೀರಾ" ಅಂತ ಕೇಳಿದ್ವಿ,

ಅದಕ್ಕೆ ಅವರು " ನೋಡಪ್ಪ ರಸ್ತೆ ಆ ಕಡೆಯಿಂದ ಬರೊವ್ರಿಗೆ ನಿನ್ನ ಎಡ ಅವ್ರಿಗೆ ಬಲ ಅಲ್ವೇನಪ್ಪ.." ಅಂದ್ರು

" ಆದ್ರೆ ನೀವೀಗ ನಮ್ಮ ಕಾರಲ್ಲಿ ಹೋಗ್ತ ಇದ್ದೀರಲ್ಲ ಯಜಮಾನ್ರೆ.." ಅಂತ ಹೇಳಿದ್ರೆ

" ನಾನು ಯಾವಾಗ್ಲು ರಸ್ತೇಲಿ ಹೋಗುವಾಗ ಈಥರ ಅಡ್ರೆಸ್ ಹೇಳಿ ರೂಢಿಯಾಗ್ಬುಟ್ಟಿದೆ ಕಣಪ್ಪ..!" ಅಂದರು.
ನಾವು ಮತ್ತೊಮ್ಮೆ ನಕ್ಕಿದ್ವಿ.

ಮತ್ತೆ, ಮತ್ತೆ ಬರ್ತಾ ಇರಿ.. ಧನ್ಯವಾದಗಳು..!

ಚಂದ್ರಕಾಂತ ಎಸ್ said...

ದಿಕ್ಕುಗಳ ಬಗ್ಗೆ ಅನೇಕರಿಗೆ ಬೇರೆ ಬೇರೆ ತರಹ confusions ಇರುತ್ತವೆ. ಬಸವನಗುಡಿಯ flyover ಬಳಿ ಇರುವ ನಮ್ಮ ಕಾಲೇಜಿನಲ್ಲಿ ಈ ದಿನ ನನ್ನ ಸಹೋದ್ಯ್ಫ್ಗಿ ಒಬ್ಬಳು ಎಡಗಡೆಗೆ ಕೈ ತೋರಿಸಿ Lalbagh ನಲ್ಲಿ ಈವತ್ತು ಬಸ್ ತುಂಬಾ ರಷ್ ಇತ್ತು ಎಂದಳು. ಆದರೆ ಲಾಲ್ಬಾಗ್ ನಮ್ಮ ಬಲಕ್ಕಿರುವುದು. ಹೀಗೆ ಅನೇಕ ಬಾರಿ ನಾವಿರುವ ಕಡೆಯಿಂದ direction ಹೇಳುವಾಗ ವಿರುದ್ಧ ದಿಕ್ಕು ತೋರಿಸುವವರನ್ನು ಅನೇಕ ಬಾರಿ ಕಂಡಿದ್ದೇನೆ. ಕಾರಣವೇನೋ ತಿಳಿಯದು. ಅದಿರಲಿ ,ಈ ದಿನ ನಿಮ್ಮ ಎಡ ಬಲ...ಹೇಳಿದಾಗ ಎಲ್ಲರೂ ಬಾಯ್ತುಂಬಾ ನಕ್ಕರು

Ittigecement said...

ಚಂದ್ರಕಾಂತರವರೆ..
ನೀವು ಹೇಳಿದ್ದು ನಿಜ. ರಿಯಲ್ ಎಸ್ಟೇಟ್ ಅಂತ ಒಂದು ತರಹದ ಜನ ಇರುತ್ತಾರಲ್ಲ, ಅವರ ಬಳಿ ಪೂರ್ವ ದಿಕ್ಕಿನ ಮನೆ ಅಥವಾ ಸೈಟು ಬೇಕು ಅಂತ ಕೇಳಬೇಕು, ಅವರು ಯಾವ ದಿಕ್ಕಾನ್ನಾಗಲಿ ಪೂರ್ವ ಮಾಡಿ , ನಿಮ್ಮನ್ನು ನಂಬಿಸಿ ಮಾರಾಟ ಮಾಡುತ್ತಾರೆ..!! ಹೀಗಾಗಿ ಅವರನ್ನು ನಾವು ಬೇರೆಯೆ ಮತದವರು ಅಂತ ಪರಿಗಣಿಸುತ್ತೇವೆ. ಕ್ರಿಶ್ಚಿಯನ್, ಮುಸ್ಲಿಮ್ ತರಹ "ರಿಯಲ್ ಎಸ್ಟೇಟ್" ಜಾತಿಯವರು!! ಎಲ್ಲರೂ ಅಲ್ಲಾ!!

ಧನ್ಯವಾದಗಳು.. ಮತ್ತೆ, ಮತ್ತೆ ಬರುತ್ತಿರಿ, ಸಲಹೆ, ಸೂಚನೆ ಕೊಡುತ್ತಿರಿ..

shivu.k said...

ನಾವೇನೋ ಈ ಬ್ಲಾಗ್ ಲೋಕದ ಆಳ ನೋಡಿ ಅಂತ ನಿಮ್ಮನ್ನ ನೀರಿಗೆ ಬಿಟ್ವಿ. ನೀವು ನೋಡಿದ್ರೆ ಪೂರ್ತಿ ಆಳ ಮುಟ್ಟಿರುವಂತಿದೆ. ಒಳ್ಳೇಯದಾಗಲಿ...ಆಹಾಂ ನಮಗೆ ಧನ್ಯವಾದಗಳನ್ನು ಹೇಳಲಿಕ್ಕೆ ಬರುತ್ತಿರಲ್ಲ ಶನಿವಾರ ನಂದಿ ಬೆಟ್ಟಕ್ಕೆ. ಆ ಸಂಜೆಯ ಕುಳಿರ್ಗಾಳಿ, ರಾತ್ರಿಯ ಹಿತವೆನಿಸುವ ಶೀತ ಹಿಮ, ಬೆಳಗಿನ ಮಂಜು ಮುಸುಕಿದ ವಾತಾವರಣ ಅದರಲ್ಲಿ ನಿಮ್ಮ ಮಿಸೆಸ್, ಮತ್ತು ನಿಮ್ಮ ಮಗನನ್ನು ಗುರುತಿಸಲಾಗದಷ್ಟು ದಟ್ಟವಾದ ಮಂಜು, ಆ ಸಮಯದಲ್ಲಿ ನಿಮಗೆ ನೆನಪಾದರೆ ನಮಗೆ ಧನ್ಯವಾದ ಹೇಳಿ ಖಂಡಿತ ಸ್ವೀಕರಿಸುತ್ತೇವೆ.........ನಂದಿ ಬೆಟ್ಟದಲ್ಲಿ ಸಿಗುವ.....

Ittigecement said...

ಆತ್ಮೀಯ ಶಿವು...
ಖಂಡಿತ ಬರುತ್ತೇವೆ. ಇಲ್ಲದಿದ್ದರೆ ನೀವುಗಳು ಬಿಡುತ್ತೀರಾ?
ನಂದಿ ಬೆಟ್ಟದಲ್ಲಿ ಸಿಗೋಣ, ಮಲ್ಲಿಕಾರ್ಜುನ್ ಅದರ ಬಗ್ಗೆ ತಮ್ಮ ಬ್ಲೊಗ್ ನಲ್ಲಿ ಚಂದವಾಗಿ ಬರೆದಿದ್ದಾರೆ, ಅದನ್ನು ಓದಿದ ನನ್ನ ಮಡದಿ, ಮಗ ಇಬ್ಬರೂ ತುದಿಗಾಲಲ್ಲಿ ನಿಂತಿದ್ದಾರೆ..! ಧನ್ಯವಾದಗಳನ್ನು ಅಲ್ಲಿ ಹೇಳುವೆ..!

ಚಂದ್ರಕಾಂತ ಎಸ್ said...

ಅಂತೂ ನಿಮ್ಮ ವೃತ್ತಿಯಲ್ಲಿ ಲೀಲಾಜಾಲವಾಗಿ ಇಟ್ಟಿಗೆ, ಮರಳು ಸಿಮೆಂಟ್ ಬೆರೆಸುವಂತೆ ಯೆಡ್ಯೂರಪ್ಪ, ದೇವೇಗೌಡ, ಖರ್ಗೆಯವರ ನಗೆಯನ್ನೂ ಹದವಾಗಿ ಬೆರೆಸಿಬಿಟ್ಟಿದ್ದೀರಿ. ಹಾಗೇ ಒಂದು ಹೊಸಾ ಜಾತಿಯನ್ನೂ ಹುಟ್ತು ಹಾಕಿರುವಿರಿ!!( ರಿಯಲ್ ಎಸ್ಟೇಟ್ ಜಾತಿ )

Ittigecement said...

ಚಂದ್ರಕಾಂತರವರೆ,,

ರಿಯಲ್ ಎಸ್ಟೇಟ್ ನವರು ಹಸಿ ಹಸಿ ಸುಳ್ಳು ಹೇಳುತ್ತಾರೆ, ಅದಕ್ಕೆ,ಅವರಿಗೆ ಹಾಗೆ ಹೇಳುತ್ತೇವೆ.
ಧನ್ಯವಾದಗಳು..

Santhosh Rao said...

ಹೋಗ್ಲಿ ಬಿಡಿ .. ಕೊನೆಗೆ ತಲುಪಬೇಕಾದ ಜಾಕಕ್ಕೆ ತಲುಪಿದ್ರೊ ಇಲ್ವೋ ??

Mohan said...

ಅದು ಬಿಡಿ ಪ್ರಕಾಶಣ್ಣ , ಇಲ್ಲೊಂದು ಮಾರವಾಡಿ ಹೆಂಗಸೊಂದು ಆಕ್ಟಿವಾದಲ್ಲಿ ಲೆಫ್ಟ್ ಇಂಡಿಕೆಟರ್ ಹಾಕಿ ರೈಟ್ಗೆ ಟರ್ನ ಮಾಡ್ತಾಳೆ, ತಾತುಂದು ತಪ್ಪಿಲ್ಲ ಬಿಡಿ.

Ittigecement said...

ಸಂತೋಶ್...
ಅಂತೂ ತಲುಪ ಬೇಕಾದ ಜಾಗ ತಲುಪಿದೆವು.. ಅಮೇಲೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇವೆ, ಈಗಲೂ ನೆನಪಾದಾಗಲೆಲ್ಲ.
ಧನ್ಯವಾದಗಳು..

DEAR..Hyipscan..!!


ನಿಮ್ಮ ಹೆಸರು ಗೊತ್ತಾಗಲಿಲ್ಲ. ನನ್ನ ಬ್ಲೊಗ್ ಗೆ ಸುಸ್ವಾಗತ..ದಯವಿಟ್ಟು ಬರ್ತಾ ಇರಿ...

Kishan said...

"ನಗುವೆ ಬರದ ಸತ್ಯ ನಿಗೆ ನಗು ತಡೆಯಲಾಗಲಿಲ್ಲ..."
nagu ukki bantu swamy...You write like a "Pro" without a doubt. You match the stalwarts in the leading magazines. I suggest without wasting time, you can parallelly start weekly column in those periodicals...so that it can reach wider audience who can taste the "savi". .....am serious.

Ittigecement said...

kishan,
thank you.. very much...

Harisha - ಹರೀಶ said...

ಲೆಫ್ಟ್ ರೈಟ್ ಲೆಫ್ಟ್!!

ಸೈಟ್ ಸಿಕ್ಚಾ?

Ittigecement said...

ಹರೀಷ್..
ನೋಡಲೆ ಹೋಗಿದ್ದು ಜಮೀನು..
ಆಗಲಿಲ್ಲ..
ಆದರೆ ಆ ತಾತ ಮಜ ಇದ್ದ..!!