Thursday, April 7, 2011

ಈ.. ಬಂಧನಾ ಅಂದ ಚಂದದಾ.ಈ ಬಂಧನಾ..!!

ನಮ್ಮ  ನಾಗು ಬಹಳ ಘಾಟಿ ಮನುಷ್ಯ.. 
ಅವನ ತಲೆ ಯಾವ ಬ್ರಹ್ಮ ಮಾಡಿದ್ದಾನೋ ಗೊತ್ತಿಲ್ಲ..

ಹೆಣ್ಣುಮಕ್ಕಳ ಕಿವಿಗಳಿಗೆ ತೂತುಗಳನ್ನು  ಯಾಕೆ ಮಾಡ್ತಾರೆ?

ನಾಗುವಿಗೆ ಫೋನ್ ಮಾಡಿದೆ..

"ಬಾರಯ್ಯಾ.. ಗೊಮಟೇಶ್ವರಾ..
ನಿನ್ನ ಅನುಮಾನವನ್ನೆಲ್ಲ  ಪರಿಹರಿಸ್ತಿನಿ.." ಅಂತ ಕರೆದ..
ನಾನು ಲಗುಬಗೆಯಿಂದ  ಅವನ ಮನೆಗೆ ಓಡಿದೆ...

ಆತ ನನಗಾಗಿ ಕಾಯ್ತಾ ಇದ್ದ..

"ಪ್ರಕಾಶು..
ನಮ್ಮ ಹಿರಿಯರು  ಮಹಾ ಬುದ್ಧಿವಂತರು ಕಣೋ..
ಹೆಣ್ಣನ್ನು ಎಷ್ಟು ವ್ಯವಸ್ಥಿತವಾಗಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು ಅಂದ್ರೆ..
ಅವರಿಗೆ  ಉದ್ಧಂಡ  ನಮಸ್ಕಾರ ಮಾಡ್ಬೇಕು ಅನ್ನಿಸ್ತದೆ...! "

"ನಾಗು.. 
ನನಗೆ ಸ್ವಲ್ಪ ಬಿಡಿಸಿ ಹೇಳು.."

"ಮೊದಲಿಗೆ  ಗಂಡಿಗೆ ಗೊತ್ತಾಗಿ ಹೋಯ್ತು .. 
ಈ ಹೆಣ್ಣು ತನಗಿಂತ ಸಮರ್ಥಳು..
ಇವಳನ್ನು ಹೀಗೆ ಬಿಟ್ರೆ ತಲೆ ಮೇಲೆ ಕುತ್ಕೊತಾಳೆ.." ಅಂತ..
ಅದಕ್ಕೆ ತುಂಬಾ ಬುದ್ಧಿವಂತಿಕೆಯಿಂದ.. ಏನು ಮಾಡಿದ್ರು ಗೊತ್ತೇನೋ?"

"ಏನು ಮಾಡಿದ್ರು?"

" ಹೆಣ್ಣೇ... 
ನೀ.. ನಾಗವೇಣಿ...!
ನೀಲವೇಣಿ..!
ನೀನು ಉದ್ದವಾಗಿ ಕೂದಲು ಬಿಟ್ರೆ ತುಂಬಾ ಚಂದವಾಗಿ ಕಾಣಸ್ತಿಯಾ..!


ಮೊದಲು ಉದ್ದವಾದ ಕೂದಲು  ಬಿಡು" ಅಂದ್ರು...

"ಏಯ್ .. ನಾಗು...
ಹೆಣ್ಣಿಗೆ ಉದ್ದವಾದ ಕೂದಲು ಚಂದ ಅಲ್ಲವೇನೋ?"

"ನೀನು ಒಮ್ಮೆ ಉದ್ದವಾದ ಕೂದಲು ಬಿಟ್ಟು ನೋಡು ...
ಎಷ್ಟು ಕಷ್ಟ ಅಂತ... ಗೊತ್ತಾಗ್ತದೆ...!
ಉದ್ದವಾದ ಕೂದಲು ಬಿಡಿಸಿ ...
ಅವಳನ್ನು ಒಂದಷ್ಟು ಪರಾಧೀನ ಮಾಡಿದ್ರು..!

"ಅದನ್ನು ಚೆನ್ನಾಗಿ ತೊಳೆದುಕೋ..
ಒಣಗಿಸಿಕೋ..
ಒಪ್ಪವಾಗಿ ಬಾಚಿಕೋ.. 
ಹೂ ಮುಡಿದುಕೊ...!.. "  ಅಂದ್ರು..!

"ನಂತರ..?..?"

"ಪ್ರಕಾಶು...
ಎಲ್ಲಾ  ರಗಳೆ, ತಲೆಹರಟೆ ಕೆಲಸ ಹೆಣ್ಣಿಗೆ ಅಂತ ಇಟ್ರು ..!

ಹೆಣ್ಣಿನ ಪ್ರತಿಯೊಂದು ಅಲಂಕಾರವೂ ..
ಅವಳ ಪರಾವಲಂಬನೆ ಮಾಡುತ್ತವೆ ಕಣೋ...!
ಪರಾಧಿನತೆಯ ಸಂಕೇತ.. ! "

ನನಗೆ ತಲೆ ಕೆಡಲು ಶುರುವಾಯಿತು...


" ಉದ್ದವಾದ ಕೂದಲುಗಳನ್ನು  ಬಾಚಿಕೊಂಡು.. 
ಅಲಂಕಾರ ಮಾಡಿಕೊಳ್ಳುವದು..
ಹೂ ಮುಡಿದುಕೊಂಡು ...
ಅಲ್ಲಿಂದ ಕಿವಿಗೊಂದು ಕನೆಕ್ಟಿಂಗ್  ಆಭರಣಗಳು..!
ರಾಮಾ ..!
ರಾಮಾ.. ! 
ಆ ಅವಸ್ಥೆ, 
ಆ ಹಿಂಸೆ  ಯಾರಿಗೂ ಬೇಡ ಕಣೋ...!.."

"ನಾಗೂ.. 
ಸುಮ್ನೆ ಮಾತನಾಡಬೇಡ.. ಉದ್ದವಾದ ಕೂದಲು ಹೆಣ್ಣಿಗೆ ಎಷ್ಟು ಚಂದ ಗೊತ್ತೇನೋ?
ಆ ಆಕರ್ಷಣೆಯೇ ಬೇರೆ .. 
ನೀನು ಅರಸಿಕನಂತೆ ಮಾತನಾಡಬೇಡ ಮಾರಾಯಾ"


"ಪ್ರಕಾಶು.. 
ಒಂದು ಕೆಲಸ ಮಾಡು...
ನೀನು ದಕ್ಷಿಣ ಆಫ್ರಿಕಾಕ್ಕೆ ಹೋಗು.. 
ಅಲ್ಲಿನ ನಿಗ್ರೋ ಗಂಡನ್ನು ಮಾತನಾಡಿಸು..
 "ಹೆಣ್ಣು ಹೇಗಿದ್ದರೆ ಚಂದ"  ಅಂತ..


" ಚಂದದ ಹೆಣ್ಣು ಅಂದರೆ..
"ತಲೆ ನುಣ್ಣಗೆ ಇರಬೇಕು" ಅಂತಾನೆ ಆ ನಿಗ್ರೋ...!!"


"ಅಯ್ಯೋ ರಾಮಾ... 
ಎಂಥಾ ಮನುಷ್ಯನೋ ನೀನು.. 
ಹಾಗಾದರೆ  ಆಕರ್ಷಣೆ ಅಂತ  ಏನೂ ಇಲ್ವೇನೋ?"


"ಇದೆ ಕಣೋ ... 
ಎರಡು ವಿರುದ್ಧ ಲಿಂಗಿಗಳ ಆಕರ್ಷಣೆಗೆ ಏನೂ ಬೇಕಿಲ್ಲ...
ಒಂದು ಗಂಡು..!
ಒಂದು ಹೆಣ್ಣು..! 
ಆಕರ್ಷಣೆಗೆ ಇಷ್ಟು ಸಾಕು...!
ಅಲಂಕಾರದ ಆಕರ್ಷಣೆ  ಮನಸ್ಸಿಗೆ ಸಂಬಂದಿಸಿದ್ದು...


ಈ ಆಕರ್ಷಣೆ ಅನ್ನೋದು ಮುಗಿಯೋದೇ ಇಲ್ಲ...


ಅಭಿಷೇಕ್ ಬಚ್ಚನ್ ಬೇರೆ ಹೆಣ್ಣನ್ನು ನೋಡೋದೇ ಇಲ್ವೇನೋ?"

 ನೋಡೋ .. 
ಮೂಗಿನಿಂದ  ಕಿವಿಗೆ ...
ಕಿವಿಯಿಂದ ತಲೆಗೆ... ಅದೆಲ್ಲ ಚಂದ ಅಂತ  ಅನಿಸಿದರೂ...


ಅದೆಲ್ಲ ಎತ್ತಿಗೆ...
ಎಮ್ಮೆಗೆ.. ಕೊಣಕ್ಕೆ,... ಹಾಕುವ " ಮೂಗು ದಾರದಂತೆ "  ಕಣೋ...
ಒಂಥಾರಾ..."ಲಗಾಮು"  ಇದ್ದಂತೆ...
ಹೆಣ್ಣಿನ  ಸ್ವಾತಂತ್ರ್ಯ  ಕಸಿದುಕೊಳ್ಳುತ್ತವೆ  ಕಣೋ .. ಈ ಅಲಂಕಾರಗಳು..."

ಪ್ರಕಾಶು..  
ನೀನು  ...ಸ್ವಲ್ಪ  ಕಲ್ಪನೆ ಮಾಡಿಕೊ... 
ಕಿವಿಗೆ ಇಷ್ಟು ಉದ್ದದ .. 
ಭಾರದ ಅಲಂಕಾರ ಹಾಕ್ಕೊಂಡು ಕಂಫರ್ಟ್ ಫೀಲಿಂಗ್  ಮಾಡ್ಕೋಳ್ಳಿಕ್ಕೆ  ಸಾಧ್ಯವೇನೋ...? "

ಹೆಣ್ಣಿನ ಇಂಥಹ ಅಲಂಕಾರಗಳು ಪ್ರಾಣಿಗಳಿಗೆ ಹಾಕೋ ಮೂಗು ದಾರದಂತೆ...!


ಹೆಣ್ಣನ್ನು ಉಪಾಯವಾಗಿ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲಿಕ್ಕೆ  
ಗಂಡು ಮಾಡಿದ್ದು ಕಣೋ...! 


ಹೆಣ್ಣಿಗೆ ಹದಿನೆಂಟು ಮೊಳದ ಉದ್ದವಾದ ಸೀರೆ ಕೊಟ್ಟು...
"ಎಲೈ.. 
ನೀರೆ...
ನೀನು ಸೀರೆಯಲ್ಲಿ ಬಾರೆ..."  
ಅಂತ   ಜೋರಾಗಿ ಓಡಾಡದ ಹಾಗೆ ಮಾಡಿದ್ರು...


" ಇನ್ನು ಆ ಸೀರೆ...
ಎಲ್ಲೆಲ್ಲಿ ಏನೇನು ಕಾಣಬೇಕೋ...
 ಅದೆಲ್ಲವನ್ನು ಮುಚ್ಚಿಟ್ಟಂತೆ ..ಮಾಡಿ..  
ಮನಸ್ಸು ಕೆಣಕುವಂತೆ ಕದ್ದು ಕದ್ದು ತೋರಿಸ್ತದೆ..."

 ಒಟ್ಟಿನಲ್ಲಿ ಹೆಣ್ಣಿಗೆ  " ನೀನು ಅಲಂಕಾರ ಮಾಡಿಕೊ...

ಈ ಅಲಂಕಾರದಿಂದ ನೀನು ಚಂದ ಕಾಣ್ತಿಯಾ..! 
ಅಂತ ಕೈಗೆ ಹೂಕೊಟ್ಟು... 
ಕಿವಿಗೆ ಏರಿಸಿದ್ದಾರೆ ಕಣೋ..ಪ್ರಕಾಶೂ...!


ಹೆಣ್ಣನ್ನು ಹೊಗಳಿ... ಹೊಗಳಿ... ಮೇಲಕ್ಕೆ ಏರ್ಸಿದ್ರು...  
ಈಗ ಏನಾಗಿದೆ ಅಂದ್ರೆ  ....
ಮೇಲಿಂದ ಸುಲಭವಾಗಿ ಕೆಳಗೆ ಇಳಿಯುವಂತಿಲ್ಲ...  
ಅಂಥಾ ಸ್ಥಿತಿ ಈ ಹೆಣ್ಣು ಮಕ್ಕಳದ್ದು...!

" ನೋಡಮ್ಮಾ.. 
ನೀನು  ಮನೆಯಲ್ಲಿ ಇರು... ನಾನು ದುಡಿದು ಬರ್ತೀನಿ..."

"ನೀನು ಈ ಮಕ್ಕಳನ್ನೆಲ್ಲ ನೋಡ್ಕೊಂಡು.. 
ಆರಾಮಾಗಿರು...
ನಿನಗೆ ಹೊರಗಡೆ ದುಡಿಯಲಿಕ್ಕೆ ಕಷ್ಟ..! 
ಮನೆಯಲ್ಲೇ...ಮಕ್ಕಳನ್ನು ನೋಡ್ಕೊಂಡು..
ಅಡಿಗೆ ಮಾಡ್ಕೊಂಡು.. ಇರು...!
ನಾನು ಮನೆಗೆ ಬಂದಾಗ ನಗು ನಗ್ತಾ ಸ್ವಾಗತ ಮಾಡು...
ಅಂತ ...
ಮತ್ತೂ ಒಂದಷ್ಟು ಬುಟ್ಟಿ ಹೂ  ಹೆಣ್ಣಿನ ಕೈಗೆ ಕೊಟ್ರು...!! "

ಹೆಣ್ಣಿಗೆ... ಬಹಳ ವ್ಯವಸ್ಥಿತವಾಗಿ  
"ನೀನು ಅಬಲೆ"  
ಅಂತ  ಪ್ರತಿ ಕ್ಷಣ  ನೆನಪು ಮಾಡಿಕೊಡುತ್ತದೆ ಈ ಅಲಂಕಾರಗಳು..!
ಮೊದಲು ಹಣೆಗೆ ಕುಂಕುಮ..! 
"ಅದು ನಿನ್ನ  ಸೌಭಾಗ್ಯ.. 
ಗಂಡನ ಭಾಗ್ಯ ನಿನ್ನ ಹಣೆಯಲ್ಲಿರಲಿ ಅಂದ್ರು.."


" ಆಮೇಲೆ..?.."


" ಆಮೇಲೆ ಇನ್ನೇನು..?
ಮೂಗಿಗೆ.. 
ಕಿವಿಗೆ ತೂತು ಹೊಡೆದರು..
ಅಲ್ಲಿ ಒಂದಷ್ಟು   ಆಭರಣ ಹಾಕಿದರು..!"


"ಲೇ.. 
ನಾಗು... ಅದೆಲ್ಲ ಚಂದ ... ಅಲಂಕಾರ ಕಣೋ..."


"ಪ್ರಕಾಶು... 
ಚಂದವೂ ಇಲ್ಲ  ...
ಯಾವ ಸುಡುಗಾಡೂ ಇಲ್ಲ..! 


ನೀನು ಜಸ್ಟ್ ಕಲ್ಪನೆ ಮಾಡ್ಕೋ...
ಅದೆಲ್ಲ ಎಷ್ಟು ರಗಳೆ... ತಲೆಹರಟೆ ಅಂತ...!


ಪ್ರತಿ ಕ್ಷಣಕ್ಕೂ  ನೀನು ಹೆಣ್ಣು...!
ಅಡಿಗೆ ಮನೆಯಲ್ಲಿರು...! 
ದೇವರ ಮನೆಯಲ್ಲಿ ಪೂಜೆ ಮಾಡು...!
ಯಾರಾದರೂ ಬಂದ್ರೆ ಹಾಲಿಗೆ ಟೀ.. ಕಾಫಿ ತಂದುಕೊಡು" 
ಅಂದ್ರು...


"ಹೆಣ್ಣಿನ... ಅಲಂಕಾರಗಲೆಲ್ಲವೂ.. .. ಒಂದು ರೀತಿಯ  ಬಂಧನ...!


ಅದು "ಅಂದ..ಚಂದದ ಬಂಧನ...!.."

"ಈ ಗಂಡು ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಿದ...
ಕಾಲಿಗೊಂದು ಉಂಗುರ ಹಾಕಿದ... 
ಕೈಗಳಿಗೆ ಬಳೆ ಹಾಕಿಸಿದ..


ಇದಕ್ಕೆಲ್ಲ ಒಂದೊಂದು   ಸೆಂಟಿಮೆಂಟಿನ ಕಾರಣ ಕೊಟ್ಟ.. .


ಪ್ರತಿಕ್ಷಣಕ್ಕೂ ಹೆಣ್ಣಿಗೆ ನೆನಪಾಗಬೇಕು... 
"ನಾನು ಈಗ ಹೆಂಡತಿ" ಅಂತ...


ಆದರೆ...
ಗಂಡು ತಾನು ಮಾತ್ರ  " ಬೀದಿಗೆ ಬಿಟ್ಟ ಬಸವನ " ಹಾಗೆ ಇದ್ದು ಬಿಟ್ಟ...


ಗಂಡು ಎಷ್ಟು ಬುದ್ಧಿವಂತ ಅಂದರೆ...
ಹೊರಗಡೆ ತಿರುಗಾಡುವಾಗ "ನಾನೊಬ್ಬ ಗಂಡ" ಅನ್ನುವಂಥಹ ಯಾವ ಕುರುಹೂ" ಇವನು ಇಟ್ಟುಕೊಂಡಿಲ್ಲ...
ಹೆಣ್ಣಿನ ಕಿವಿಯಲ್ಲಿ " ಹೂ " ಇಟ್ಟ..!

ಪಾಪ ಹೆಣ್ಣು ..!
ಈ ಅಲಂಕಾರ ಎಲ್ಲ ತನ್ನ ಚಂದ..ಅಂದ ಅಂದ್ಕೊಂಡು ಸಂಭ್ರಮ ಪಡ್ತಾಳೆ...!

ಅಲಂಕಾರ ಅನ್ನೋದು ಹೆಣ್ಣನ್ನು ಪಳಗಿಸಲಿಕ್ಕೆ...


ಮನೆಯಿಂದ ಹೊರಗಡೆ ಹೊರಟರೆ... 
ಬೇರೆಲ್ಲೂ ಹೋಗಬಾರದು...
ಮನೆಗೆ ತಿರುಗಿ ಬರಬೇಕು ಅಂತ...


"ಒಟ್ಟಿನಲ್ಲಿ  ವ್ಯವಸ್ಥಿತವಾಗಿ  ಹೆಣ್ಣನ್ನು ಹೊಗಳಿ ಅಟ್ಟಕ್ಕೆ ಏರಿಸಿ...
ಗಂಡು  ಸವಾರಿ ಮಾಡಿದ್ದಾರೆ ಕಣೋ... ಪ್ರಕಾಶು..."

"ನಾಗೂ ... 
ಹೆಣ್ಣು ಅಬಲೇ ಅಲ್ಲವೇನೋ...?
ಹಾಗಾಗಿ ಮನೆ ಕೆಲಸ ಕೊಟ್ಟಿದ್ದರು ಕಣೋ..."

"ಪ್ರಕಾಶು.. ಹೆಣ್ಣು ಖಂಡಿತ ಅಬಲೆಯಲ್ಲ...!

ಗಂಡಿಗಿಂತ ಹೆಚ್ಚು ಸಮರ್ಥಳು...
ಗಂಡಿಗೆ ಹೆಣ್ಣನ್ನು ಕಂಡರೆ ಒಳಗೊಳಗೇ ಅಸೂಯೆ.. ಹೊಟ್ಟೆಕಿಚ್ಚು ಇದೆ..


"ಗಂಡಿನಂತೆ ಎಲ್ಲ ಕೆಲಸವನ್ನು..
ಅವನಿಗೆ ಸರಿಸಮಾನವಾಗಿ ಮಾಡಬಲ್ಲಳು.."


ನನಗೆ ಈ ನಾಗುವಿನ  ತರ್ಕದಿಂದ ತಲೆ ಕೆಟ್ಟು ಹೋಯಿತು...

ನನ್ನ ಇನ್ನೊಬ್ಬ ಗೆಳೆಯ ದಿವಾಕರನಿಗೆ ಫೋನ್ ಮಾಡಿದೆ..

'ಪ್ರಕಾಶು...
ನಮ್ಮ ನಾಗು ಹೇಳಿದ್ದು ಹೌದೆನಿಸಿದರೂ... ಅದು ಪೂರ್ತಿ ಸತ್ಯವಲ್ಲ...

ಹೆಣ್ಣಿನ ಪ್ರತಿ ಅಲಂಕಾರದ ಹಿಂದೆ  ಆರೋಗ್ಯಕರವಾದ ಕಾರಣ ಇದೆ...

ಹೆಣ್ಣೆಂದರೆ.. ಪ್ರಕೃತಿ ಕಣೋ...
ಈ ಹಸಿರು... ಮೊಗ್ಗು ..
ಹೂವು..ಕಾಯಿ.. !
ಅಲಂಕಾರವಿಲ್ಲದಿದ್ದರೂ..  ಸಹಜ ಚಂದ  ಈ ಹೆಣ್ಣು...

ಈ "ಚಂದ"  ಅನ್ನೋ ಶಬ್ದ  ಹೆಣ್ಣಿಗಾಗಿ ಇದ್ದಿದ್ದು...

ಹೆಣ್ಣೇ ಇಲ್ಲದ ಈ ಜಗತ್ತಿನ... ಬದುಕನ್ನು ಕಲ್ಪನೆ ಮಾಡಬಲ್ಲೆಯಾ...?


ಹಾಗೆ ಅಲಂಕಾರ , ಆಕರ್ಷಣೆ ಇಲ್ಲದ ಬದುಕನ್ನು ಕೂಡ ಕಲ್ಪನೆ ಮಾಡಿಕೊಳ್ಳುವದು ಕಷ್ಟ...

ಬದುಕಿನ ಈ ಸೊಗಸು...
ಅದಕ್ಕೊಂದು ಅರ್ಥ ಈ ಹೆಣ್ಣಿನಿಂದ...


ನನಗೂ ನಿಜವೆನಿಸಿತು...
ಎಷ್ಟು ಚಂದ ಈ ಹೆಣ್ಣು...!!

ದಿವಾಕರ ಮತ್ತೆ ಹೇಳಿದ...

" ನಾಡಿದ್ದು  ನಾನು ಬೆಂಗಳೂರಿಗೆ ಬರ್ತಾ ಇದ್ದೇನೆ...
ಹೆಣ್ಣಿನ  ಪ್ರತಿ ಅಲಂಕಾರದ ಹಿಂದಿನ ವಿಚಾರ ಹೇಳುತ್ತೇನೆ..."

ಈ ದಿವಾಕರ ಏನು ಹೇಳ ಬಹುದು...??



( ನಮ್ಮ ನಾಗುವಿನ ಮಾತನ್ನು ದಯವಿಟ್ಟು  ಗಂಭಿರವಾಗಿ ಪರಿಗಣಿಸ ಬೇಡಿ...
ಯಾರಿಗೂ ನೋವು ಮಾಡಲಿಕ್ಕೆ ಅಲ್ಲ ಈ ಬರಹ...
ಇದೂ ಒಂದು ತರ್ಕ ಅಷ್ಟೇ...)


(ಚಂದದ ಪ್ರತಿಕ್ರಿಯೇಗಳಿವೆ.. ದಯವಿಟ್ಟು ಓದಿ..)

59 comments:

ಚುಕ್ಕಿಚಿತ್ತಾರ said...

ಪ್ರಕಾಶಣ್ಣ
ಎರಡೂ ಕಡಿಗೂ ಚೊಲೊ ವಕಾಲತ್ತೆ ಹಾಕಿದ್ದೀರಿ..!ಒ೦ದೆ ಮ೦ಗನ್ನ ಮೊದಲು ನೋಡಿ ಬೇಜಾರ‍ಾದರೂ ಜೊತಿಗೆ ಪೂರ ಸ೦ಸಾರವೂ ಮ೦ಗ ಮಯ ಆಗಿದ್ದು ಸಮಾಧಾನವಾಯ್ತು..!

ಆದ್ರೂ "" ಆದರೆ...
ಗಂಡು ತಾನು ಮಾತ್ರ "ಬೀದಿ ಬಿಟ್ಟ ಬಸವನ" ಹಾಗೆ ಇದ್ದು ಬಿಟ್ಟ...""
ಅನ್ನುವ ವಾಕ್ಯ ಮಾತ್ರದಿ೦ದ ಎಷ್ಟು ’ಬಲ’ ಬ೦ತೂ ಅ೦ದ್ರೆ ಹೇಳಲು ಸಾಧ್ಯವೇ ಇಲ್ಲ...:):)

Ittigecement said...

ವಿಜಯಾ...

ನಿಜ ಹೇಳಬೇಕೆಂದರೆ ಈ ಲೇಖನ ಬರೆಯಲಿಕ್ಕೆ ಧೈರ್ಯ ಸ್ವಲ್ಪ ಕಡಿಮೆ ಇತ್ತು...

ಮನೆಯಲ್ಲಿ " ಈ ಲೇಖನ ಹಾಕಿ ಬಯ್ಸ್ಕೊಬೇಡಿ" ಅಂತ ಹೆದರಿಸಿದ್ರು..

ಮೊದಲಿಗೆ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಧೈರ್ಯ ಬಂತು...

ನಮ್ಮ ನಾಗು ತರ್ಕ ಎಷ್ಟರ ಮಟ್ಟಿಗೆ ಸರಿ?
ಇದರಲ್ಲಿ ಎಷ್ಟು ನಿಜ?

ಒಂದು ಕಾಲಘಟ್ಟದ ವ್ಯವಸ್ಥೆ ಕಾಲದಿಂದ ಕಾಲಕ್ಕೆ ಬದಲಾಗದೆ ಇದ್ದಲ್ಲಿ ಅದು "ಶೋಷಣೆ" ಆಗುತ್ತದೆ ಅಂತ ಎಲ್ಲೊ ಓದಿದ ನೆನಪು..
ಆ ಕಾಲಕ್ಕೆ ಅದು ಸರಿ ಇತ್ತೇನೋ...

ಹೆಣ್ಣಿಗೆ ತಾಳಿ, ಕಾಲುಂಗುರ.. ಕುಂಕುಮ ಎಲ್ಲ ಭರಿಸಿದ ಗಂಡು...
ತಾನು ಫ್ರೀಯಾಗಿ ಇದ್ದಿದ್ದು ನಿಜ ಅಲ್ಲವಾ?

ಮದುವೆ ಆಗಿದ್ದರ ಬಗೆಗೆ ತಾನು ಏನೂ ಇಟ್ಟುಕೊಂಡಿಲ್ಲ...

ಮೊದಲ ಪ್ರತಿಕ್ರಿಯೆಗಾಗಿ...
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು... ಜೈ ಹೋ !!

Digwas Bellemane said...

ಹ ಹ ಹ...finally released..ಚೊಲೊಇದ್ದೋ

Ittigecement said...

ಪ್ರೀತಿಯ ದಿಗ್ವಾಸು..

ಏನೇ ಹೇಳೀದರೂ.. ಹೆಣ್ಣಿನ ಈ ಅಲಂಕಾರಗಳು ಅವಳಿಗೆ ತೊಡಕು ಅಂತಲೇ ಅನ್ನಿಸ್ತದೆ...

ಆರಾಮಾಗಿ..
ಫ್ರೀಯಾಗಿ ಇರಲು ಬಿಡುವದಿಲ್ಲ..

ಕ್ಷಣ ಕ್ಷಣಕ್ಕೂ ಆ ಅಲಂಕಾರಗಳದ್ದೇ ಚಿಂತೆ...

ಆದರೆ ನೋಡುವ ಕಣ್ಣುಗಳಿಗೆ ಘಬ್ಬ ಆನ್ನುವದೂ ಅಷ್ಟೇ ನಿಜ...

ಇದರಲ್ಲಿ ನೀವು ಕೊಟ್ಟ ಚಿತ್ರವೂ ಇದೆ...
ಪ್ರೀತಿಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು... ಜೈ ಹೋ !

ಜಲನಯನ said...

ಡೌನ್ ಡೌನ್..ಪ್ರಕಾಶೂ...ಡೌನ್ ಡೌನ್ ಇಟ್ಟಿಗೆ ಸಿಮೆಂಟೂ...
ಹೀಗಂತ ನಾಳೆ ನಿನ್ನ ಮನೆಯ ಎದುರಿಗೆ ಘೋಷಣೆ ಕೇಳಿ ಬಂದ್ರೆ ಆಶತ್ತಿಗೇನೆ ನಿನ್ನ ರೆಸ್ಕ್ಯೂ ಗೆ ಬರ್ಬೇಕು...
ಇನ್ನು ನಮ್ಮ ಹನುಮಂತರಾಯನೇ ಕಾಯ್ಬೇಕು...
ಅಲ್ಲಯ್ಯಾ..ಸುಮ್ನೆ ಇದ್ದೋನು ಅದೇನೋ ಬಿಟ್ಕೊಂಡ ಅನ್ನೋಹಾಗೆ ಯಾಕೆ ಬೇಕಿತ್ತು ನಿನಗೆ ಉಸಾಬರಿ...ಒಡವೆ, ಸೀರೆ ಕೊಡ್ಸೋಕೆ ಏನೋ ಒಂದು ನೆಪ ಬೇಕಾಗಿತ್ತು ನಿಮಗೆ ಅಂತ ಅತ್ಗ್ಯಮ್ಮನ ಹತ್ರ ಆವಾಗಾವಾಗ್ ಹೇಳಿಸ್ಕೋಬೇಕಾ...?? ಇನ್ನು ಮದುವೆ ಮುಂಜಿಗೆ ಹೋದ್ರೆ ನಿನ್ನ ಪಾಡು ದೇವರಿಗೇ ಪ್ರೀತಿ..."ಅದ್ಯಾಕ್ರೀ ಹಂಗ್ ನೋಡ್ತೀರಾ..? ಓಲೆ ಜುಮ್ಕಿ ಭಾರ ಅದು ಇದೂ ಅಂತ ಬರೆದಿದ್ದೀರಾ..??’ ಹೀಗೆಲ್ಲಾ... ಬೇಗ ಇನ್ನೊಂದು ಮುಲಾಮು ಹಚ್ಚೋ ಪೋಸ್ಟ್ ಹಾಕಿಬಿಡು...ನನ್ನ ಮಾತು ಕೇಳೋದಾದ್ರೆ....ಇಲ್ಲಾಂದ್ರೆ ನಿನ್ನಿಷ್ಟ ಮತ್ತೆ ನಾರಾಯಣ ನಾರಾಯಣ...ಅನ್ಬೇಡ.

Indushree Gurukar said...

ಹೆಣ್ಣಿಗೆ ಅಲಂಕಾರ ಯಾರು ಮಾಡ್ಕೋ ಅಂತ ಹೇಳಿದ್ರು ಯಾಕ್ ಮಾಡ್ಕೋ ಅಂತ ಹೇಳಿದ್ರು ಅನ್ನೋದರ ಬಗ್ಗೆ ಯಾವತ್ತು ಯೋಚ್ನೆ ಮಾಡಿರಲಿಲ್ಲ. ನಾಗುವಿನ ವಿಚಾರ ಧಾಟಿ ನೋಡಿ ಈ ಎಲ್ಲಾ ಯೋಚ್ನೆ ಇತ್ತಾ ಅಂತ ಅನಿಸಿದ್ದಂತೂ‌ ನಿಜ.
ಅಂದ ನೋಡೋವ್ರ ಕಣ್ಣಲ್ಲಿರುತ್ತಂತೆ. ಅದೂ ಬೇರೆ ಹೆಣ್ಣ್ಣು ಹೊಗಳಿಕೆಗೆ ಮರುಳಾಗ್ತಾಳೆ ಅಂತ ಎಲ್ಲರೂ ಅವಳಿಗೆ ನೀನು ಇದನ್ನು ಮಾಡಿದ್ರೆ ಚೆಂದ ಅದು ಚೆಂದ ಅಂತ ಹೇಳಿ ಅವಳ ತಲೆ ಕೆಡಿಸಿದ್ದಾರಾ?? ಗೊತ್ತಿಲ್ಲ.
ಆದ್ರೆ ಅವಳಿಗೆ ಅಲಂಕಾರ , ಸೀರೆ , ಒಡವೆ ಇವುಗಳ ಗೀಳು ಹತ್ತಿಸಿದ್ದು ಗಂಡಸರೇ ಆಗಿದ್ದರೆ ಅದನ್ನು ಮಾಡೋಕೆ ಮುಂಚೆ ಸ್ವಲ್ಪ ಯೋಚ್ನೆ ಮಾಡಿದ್ರೆ ಅವರ ಜೇಬಿಗೆ ಭಾರ ಆಗ್ತಾ ಇರ್ಲಿಲ್ಲವೇನೋ ಅನಿಸುತ್ತೆ...
ದಿವಾಕರ ಏನು ಹೇಳಬಹುದು ಅನ್ನೋ ಕುತೂಹಲ ಇದೆ. ಆದಷ್ಟು ಬೇಗ ಮುಂದಿನ ಕಂತು ಬರಲಿ.

ಚಿತ್ರಾ said...

ಹ್ಮ್ಮ್.. ಮಸ್ತ್ ಬರದ್ದೆ ಯಾವಾಗಿನ ಹಾಗೆ.
ಮಜಾ ಏನಪಾ ಅಂದ್ರೆ , ನಿನ್ನ ನಾಗು ಹೇಳಿದ್ದೆಲ್ಲ ಈಗಿನ ಹೆಣ್ಣು ಮಕ್ಕಗೆ ಅರ್ಥ ಆಗೋಗಿದೆ ! ಹಾಗಾಗಿ ಸುಧಾರಿಸಿ ಬಿಟ್ಟಿದ್ದಾರೆ . ಎಷ್ಟು ಜನಕ್ಕೆ ಉದ್ದ ಕೂದಲು ಇಟ್ಟುಕೊಂಡಿದ್ದಾರೆ ಈಗ? ಬಳೆ, ಕಾಲುಂಗುರ , ಸರ ಅದು ಇದು ಇಂಥಾ ಅಲಂಕಾರ ಎಲ್ಲಾ ಪಕ್ಕಕ್ಕೆ ಇಟ್ಟಾಗಿದೆ .ಯಾವಾಗಲೋ ಒಂದು ಸಲ , ಮನೇಲಿ ಅಜ್ಜ-ಅಜ್ಜಿ ಅಥವಾ ವಯಸ್ಸಾದವರು ಬಂದಾಗ ಅಥವಾ ಹಬ್ಬ ಹುಣ್ಣಿಮೆಗೆ ಮಾತ್ರ ಅದೆಲ್ಲ. ಬಾಕಿ ದಿನ ಬಿಡಾ ಬೀಸು. ಹೆಚ್ಚಿನ ಹೆಣ್ಣು ಮಕ್ಕಳು ಈಗ ಕೆಲಸಕ್ಕೆ ಹೋಗೋರೆ ! ಹೀಗಾಗಿ ಸೀರೆ ಚೆಂದ ಆದರೂ ಈಗಿನ ಕಾಲಕ್ಕೆ ಸಿಟಿಬಸ್ ರಶ್ ನಲ್ಲಿ ಬೇಡ ಅನಿಸತ್ತೆ . ಅದಕ್ಕೆ ಸಲ್ವಾರ್ ಕಮೀಜ್ , ಜೀನ್ಸ್ ಅಥವಾ ಸ್ಕರ್ಟ್ ! ನಮ ನಮೂನೆ ಸೀರೆ ಎಲ್ಲಾ , ಕಾರ್ಯ ಕಟ್ಲೆಗೆ ಮಾತ್ರ . ಬಾಕಿಯ , ಕೈ ಕಾಲಿಗೆ ತೊಡರುವ ಅಲಂಕಾರಗಳೂ ಕೂಡ ವಿಶೇಷ ಕಾರ್ಯಕ್ರಮಗಳಿಗೆ ಮಾತ್ರ . ಹೀಗಾಗಿ , ನಿಮ್ಮ ನಾಗುವಿಗೆ ಹೇಳಿ , ಹೆಣ್ಣು ಮಕ್ಕಳು ಎಲ್ಲಾ ತಿಳ್ಕೊಂಡು ಬಿಟ್ಟಿದ್ದಾರೆ ಅಂತ . ಕೆಲಸ ಮಾಡಲು ಬಂಧನ ಅನಿಸೋ ಅಂಥ ಅಲಂಕಾರಗಳನ್ನು ಬದಿಗಿಟ್ಟಿದ್ದಾರೆ ಅಂತ .

"ಗಂಡು ಎಷ್ಟು ಬುದ್ಧಿವಂತ ಅಂದರೆ...ಹೊರಗಡೆ ತಿರುಗಾಡುವಾಗ "ನಾನೊಬ್ಬ ಗಂಡ" ಅನ್ನುವಂಥಹ ಯಾವ ಕುರುಹೂ" ಇವನು ಇಟ್ಟುಕೊಂಡಿಲ್ಲ..."

ಎಂಥಾ ಅನ್ಯಾಯ ಅಲ್ವೇ?

ಆದರೆ , ನಾಗು ಹೇಳಿದಂತೆ ಹೆಣ್ಣು ಹೆಚ್ಚು ಸಮರ್ಥಳು ಅನ್ನೋದು ಕೂಡ ಸತ್ಯ. ದೈಹಿಕವಾಗಿ ಶಕ್ತಿ ಕಮ್ಮಿ ಇರಬಹುದು ಆದರೆ ಮಾನಸಿಕ ಶಕ್ತಿ ಮಾತ್ರ ದೇವರು ಹೆಚ್ಚು ಕೊಟ್ಟಿದ್ದಾನೆ .

ಆದರೆ ಒಂದು ಹೇಳಲಾ? ಏನೇ ಆದರೂ ಹೆಣ್ಣು ಅಲಂಕಾರವನ್ನು ಪೂರ್ತಿಯಾಗಿ ಬಿಡೋದಿಲ್ಲ. ತನಗೆ ಬೇಕಾದ ಹಾಗೆ ಬದಲಾವಣೆ ಕೊಳ್ಳ ಬಹುದೇ ಹೊರತು ಸಂಪೂರ್ಣವಾಗಿ ಬಿಡಲು ಆಗದು .
ನನ್ನ ಕಾಮೆಂಟ್ ಒಂದು ಬ್ಲಾಗ್ ಆಗುವಷ್ಟು ಬೆಳೀತಾ ಇದೆ . ನಿಲ್ಲಿಸ್ತೇನೆ. ದಿವಾಕರ್ ಏನನ್ನುತ್ತಾರೆ ಬೇಗ ತಿಳಿಸಿ

Shankar Prasad ಶಂಕರ ಪ್ರಸಾದ said...

ಪ್ರಕಾಶಪ್ಪ, ನಿಮ್ಮ ಈ ಬರಹಕ್ಕೆ ನಾಗೂವಿನ ತರ್ಕ ಹಾಗು ವಾದ ಮಂಡನೆಗೆ ತಲೆಬಾಗಬೇಕೋ ಅಥವಾ ನಾಗೂವಿನ ಮಾತನ್ನು ಸಮರ್ಪಕವಾಗಿ ಬರೆದ ನಿಮಗೋ ಅರ್ಥವಾಗ್ತಾ ಇಲ್ಲ ನನಗೆ. ಹ್ಯಾಟ್ಸಾಫ್... ರೀ, ನಿಮ್ಮ ಅನುಭವ, ನನ್ನ ಅನುಭವ ಎಷ್ಟು ವಿಚಿತ್ರವಾಗಿದೆ ? ಜೀವನ ನಿಜಕ್ಕೂ ಸಿಕ್ಕಾಪಟ್ಟೆ ವಿಸ್ಮಯಕಾರಿ. ಇದರ ಬಗ್ಗೆ ಮುಖಾಮುಖಿ ಮಾತಾಡುವ. ಸಖತ್ ಬರಹ ಕಣ್ರೀ ಇದು.

----
ನಿಮ್ಮವನು
ಕಟ್ಟೆ ಶಂಕ್ರ

Ittigecement said...

ಆಜಾದು...

ನೀನು ಇನ್ನೊಬ್ಬ "ನಾಗು" ಕಣೊ...
ಗಾಯ ಇಲ್ದಿದ್ರೂ ಕೆರೆದು ಗಾಯ ಮಾಡಿ..
ಮುಲಾಮು ಹಚ್ಚಲಿಕ್ಕೆ ಬರ್ತೀಯಾ...

ನನಗೆ ನಿಜಕ್ಕೂ ಹೆದರಿಕೆ ಇತ್ತು... ಈ ನಾಗು ಹೇಳೋರದ್ರಲ್ಲಿ ಸತ್ಯ ಇದೆ ಕಣೊ...

ಮದುವೆಯಾದ ಗಂಡು ತನಗೆ ಮದುವೆಯಾಗಿದೆ ಅನ್ನುವ ಯಾವ ಕುರುಹೂ ಇಟ್ಟುಕೊಂಡಿಲ್ಲ
ಆದರೆ ಹೆಣ್ಣಿಗೆ ಚಂದದ ಕುರು "ಹೂ" ಇಟ್ಟಿದ್ದಾನೆ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಆಹಾ... ತರ್ಕ ಚೆನ್ನಾಗಿದೆ.... ಬರಹವನ್ನು ಇಲ್ಲಿ ಹಾಕಿದ್ದಕ್ಕೆ ನಿಮ್ಮ ಧೈರ್ಯವನ್ನು ಸಹ ಮೆಚ್ಚಬೇಕು... :)

ಆದರೆ ಈ ಅಲ೦ಕಾರಗಳಿ೦ದ ಹೆಣ್ಣು ಕ೦ಫರ್ಟ್ ಫೀಲಿ೦ಗ್‍ನಿ೦ದ ಇರಲು ಸಾಧ್ಯವಿಲ್ಲ ಅನ್ನುವುದು ನನಗೆ ಅಷ್ಟು ಸರಿಯಾಗಿ ಅನಿಸ್ತಿಲ್ಲ :)

Ittigecement said...

ಇಂದುಶ್ರೀ ಪುಟ್ಟಿ...

ಹೆಣ್ಣುಮಕ್ಕಳಿಗೆ "ನೀನು ಬುದ್ಧಿವಂತೆ" ಅಂದರೆ ಅಷ್ಟೇನೂ ಖುಷಿಯಾಗೊದಿಲ್ಲ..

"ನೀನು ಅಂದವಾಗಿದ್ದೀಯಾ" ಅಂತ ಕೇಳಲು ಕಾಯ್ತಾ ಇರ್ತಾಳೆ..
ಅಂದ.. ಚಂದ ಶಬ್ಧಗಳು ಹೆಣ್ಣಿಗಾಗಿಯೇ ಇರುವ ಶಬ್ಧಗಳು .. ಅರ್ಥಗಳು...

ಗಂಡಿನ ಹೊಗಳಿಕೆಗಾಗಿಯೇ ಇವಳು ಅಲಂಕಾರ ಮಾಡಿಕೊಳ್ಳುವದು...
ನನ್ನ ಖುಷಿಗಾಗಿ ಅಂದರೂ ಅದು ಪೂರ್ತಿ ನಿಜವಲ್ಲ...

ಹೆಣ್ಣಿನ ಅಲಂಕಾರಕ್ಕಾಗಿ ಖರ್ಛುಮಾಡುವದರಲ್ಲಿ ಗಂಡಿನ ಸ್ವಾರ್ಥವೂ ಇದೆ..
ಬಂಗಾರದ ಆಭರಣಗಳು...!
ಅದು ಸಂಪತ್ತು ತಾನೆ...?

ಹೆಂಡತಿಯ, ಮಗಳ ಕುತ್ತಿಗೆಯಲ್ಲಿ ಆಭರಣ ಕಂಡಷ್ಟೂ...
ಗಂಡಿನ ಅಹಮ್ ಜಾಸ್ತಿ ಆಗುತ್ತದೆ...

ಇಂದೂ..

ಲೇಖನ ಬರೆದದ್ದು ಸಾರ್ತಕ ಅನಿಸುತ್ತಿದೆ..
ಬಹಳ ಚಂದದ ಪ್ರತಿಕ್ರಿಯೆ ತುಂಬ ತುಂಬಾ ಧನ್ಯವಾದಗಳು... ಜೈ ಹೋ !

Narayan Bhat said...

ಮೆಚ್ಚಿದೆ.

sunaath said...

ಹೆಣ್ಣಿನ ಎಲ್ಲ ಅಲಂಕಾರಗಳು ಆಕೆಯ ಬಂಧನಕ್ಕಾಗಿ ಎನ್ನೋದರಲ್ಲಿ ಎರಡನೆಯ ಮಾತಿಲ್ಲ. ಧೈರ್ಯದಿಂದ ಸತ್ಯ ಹೇಳುತಿರೋ ನಾಗೂನಿಗೆ ಅಭಿನಂದನೆಗಳು!

Ittigecement said...

ಚಿತ್ರಾ...

ಇದು ನಿಜ..
ಈ ಗಿನ ಹೆಣ್ಣುಮಕ್ಕಳು ಈ ಥರಹ ಅಲಂಕಾರ ಮಾಡಿಕೊಳ್ಳುತ್ತಿಲ್ಲ...
ಆದರೆ ಬೇರೆ ಥರಹದಲ್ಲಿ "ಅಲಂಕಾರ" ಮಾಡಿಕೊಳ್ಳುತ್ತಿದ್ದಾರೆ..

ಒಟ್ಟಿನಲ್ಲಿ ಅಲಂಕಾರ ಬಿಟ್ಟಿರಲು ಅವಳಿಗೆ ಸಾಧ್ಯವೇ ಇಲ್ಲ...

ಆ ಅಲಂಕಾರ ಮೆಚ್ಚಿಕೊಳ್ಳಲು ಗಂಡು ಬೇಕೇ ಬೇಕು...

ಹಣೆಗೆ ಕುಂಕುಮ..
(ಈಗಾದರೆ ಬಿಂದಿ ಬಂದಿದೆ)
ಆ ಕುಂಕುಮ ಅಳಿಸಬಾರದು ಅನ್ನುವ ಸೆಂಟಿಮೆಂಟು.. !
ಕೈಗೆ ಬಳೆ ...
ಮಣ್ಣಿನ ಬಳೆ ಒಡೆಯಬಾರದು...

ಕಾಲಿಗೆ ಉಂಗುರ... ಎಲ್ಲವೂ ಹೆಣ್ಣಿಗಾಗಿ.. ಒಂದೊಂದು ಸೆಂಟಿಮೆಂಟು..

ಗಂಡು "ಬೀದಿಗೆ ಬಿಟ್ಟ ಬಸವನಂತೆ ಆರಾಮಾಗಿದ್ದ...

ತಮಾಷೆಗೆ ಹೇಳಿದ್ದಾದರೂ ಸುಳ್ಳು ಅಂತ ಪೂರ್ತಿಯಾಗಿ ತಳ್ಳಿ ಹಾಕಲಾಗದು ಅಲ್ಲವೆ?

ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು..
ಬರೆದದ್ದು ಸಾರ್ಥಕ ಅನ್ನುವಂಥಹ ಪ್ರತಿಕ್ರಿಯೆ !!

ಜೈ ಹೋ.. ! ತುಂಬ ತುಂಬಾ ಥ್ಯಾಂಕ್ಸು... !

Gubbachchi Sathish said...

ಸಚಿತ್ರ ಲೇಖನ ಸಖತ್ತಾಗಿದೆ. ಆಗಾಗ ಮು ಮು ಮು ಎಂಬ ನಗು. ಮುಂದಿನ ಲೇಖನಕ್ಕೆ ಮತ್ತುಷ್ಟು ಮು ಮು ಗಳು ಕುತೂಹಲದಿಂದಿವೆ.

Ittigecement said...

ಸಂಕ್ರಪ್ಪಣೋ...

ಅಡ್ಡ ಬಿದ್ದೆ ಗುರುವೆ.. ತುಂಬಾ ದಿನ ಆಗೋಯ್ತು..

ನಮ್ಮ ನಾಗುವಿನ ತರ್ಕಗಳೇ.. ಹೀಗೆ..
ವಿಭಿನ್ನ ಹಾಗೂ ವಿಚಿತ್ರ.. !
ಆದರೆ ಅವನು ಹೇಳುವ ವಿಷಯಗಳಲ್ಲಿ ಸತ್ಯವೂ ಇದ್ದಿರುತ್ತದೆ..

ಮನಸ್ಸಿಗೆ ಆಘಾತಕಾರಿಯಂತೂ ಹೌದು !!

ಹಾಗಾದರೆ ಈ ಅಲಂಕಾರಗಳು ಹೆಣ್ಣಿಗೆ ಲಗಾಮು ಇದ್ದಂತೆನಾ?
ವಿಚಿತ್ರ ಅಲ್ಲವಾ?

ಸಂಕ್ರಪ್ಪಣ್ಣೋ ಭೇಟಿಯಾಗೋಣ.. ಪ್ರೋತ್ಸಾಹಕ್ಕೆ ಧನ್ಯವಾದಗಳು..
ಬರುತ್ತಾ ಇರಿ...

Ittigecement said...

ಪ್ರೋತಿಯ ಸುಧೇಶು..

ಅಲಂಕಾರಗಳು "ಕಂಫರ್ಟ್ ಫೀಲಿಂಗ್" ಕೊಡೋದಿಲ್ಲ ... ಅಂತ ನಮ್ಮ ನಾಗುವಿನ ತರ್ಕ !

ಸ್ವಲ್ಪ ಯೋಚಿಸಿ ನೋಡಿ...
ಮೂಗುದಾರ ಹಾಕಿಸಿಕೊಂಡ ಪ್ರಾಣಿಗೆ ...
"ಮೂಗುದಾರದೊಂದಿಗೆ "ಹೊಂದಾಣಿಕೆ" ಆಗಿಬಿಟ್ಟಿರುತ್ತದೆ...

ಅದೊಂದು "ರಗಳೆ" ಅಂತ ಗೊತ್ತೇ ಆಗದಷ್ಟು "ಅಡ್ಜಸ್ಟ್" ಆಗಿಬಿಟ್ಟಿರುತ್ತದೆ..

ಇದೂ ಕೂಡ ತರ್ಕ..
ಧರಿಸಿದವರೇ ಹೇಳಬೇಕು.. ಈ ತರ್ಕ ಸರಿಯೋ ತಪ್ಪೋ ಅಂತ...

ಆಶ್ಚರ್ಯವೆಂದರೆ ಇಂಥಹ ಒಂದೂ "ರಗಳೆಯನ್ನು" ಗಂಡು ಇಟ್ಟುಕೊಂಡಿಲ್ಲ.. ಅಲ್ಲವೆ?

ಸುಧೇಶ್..
ಎಲ್ಲಿಯವರೆಗೆ ಬಂತು ನಿಮ್ಮ ಕಾದಂಬರಿ...?
ಕನ್ನಡದ ಬ್ಲಾಗಿಗನೊಬ್ಬ " ಬ್ಲಾಗಿನಲ್ಲಿ ಕಾದಂಬರಿ ಬರೆಯುತ್ತಿರುವದು ಹೆಮ್ಮೆಯ ವಿಷಯ..
ನಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ನಿಮಗಿದೆ..

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ನಾರಾಯಣ ಭಟ್ಟರೇ..

ನಿಜ ಹೇಳಬೇಕೆಂದರೆ ಈ ತರ್ಕಗಳನ್ನು ಒಂದು ಲೇಖನದಲ್ಲಿ ಮುಗಿಸಲು ಬಹಳ ಕಷ್ಟವಾಯಿತು..
ಮೊದಲು ಹಾಕಿದ್ದ ಮೂರು ಫೋಟೊಗಳನ್ನು ತೆಗೆದು ಹಾಕಿದೆ..
ತುಂಬಾ ಉದ್ದವಾಯಿತು ಅಂತ ಅನಿಸಿತು..
ಇನ್ನೂ ಒಂದೆರಡು ಫೋಟೊಗಳಿದ್ದವು..

ಇನ್ನು ಗೆಳೆಯ ದಿವಾಕರ ಏನು ಹೇಳುತ್ತಾನೋ..

"ಅವನು ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮಕ್ಕಾಗಿ ಬರ್ತಾ ಇದ್ದಾನೆ..
ನಾಳೆ ಶನಿವಾರ "ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ"
ಪ್ರಸಂಗ "ಶ್ರೀಕೃಷ್ಣ ಸಂಧಾನ"
ಬಹಳ ಒಳ್ಳೆಯ ಕಾರ್ಯಕ್ರಮ ದಯವಿಟ್ಟು ಬನ್ನಿ...

ನಿಮ್ಮ ಪ್ರೋತ್ಸಾಹ ಇನ್ನಷ್ಟು ಬರೆಯಲು ಟಾನಿಕ್ಕಿನ ಥರಹ ಧನ್ಯವಾದಗಳು.. ಜೈ ಹೋ !

Ittigecement said...

ಸುನಾಥ ಸರ್...

ಈ ಲೇಖನಕ್ಕಾಗಿ ಫೋಟೊ ಹುಡುಕುವದು ಬಹಳ ಕಷ್ಟವಾಯಿತು..
ಗೆಳೆಯ ದಿಗ್ವಾಸು ಕೆಲವನ್ನು ಕಳುಹಿಸಿಕೊಟ್ಟಿದ್ದಾನೆ..
ನನ್ನಕ್ಕ ಕಾರವಾರದಿಂದ ಕಳುಹಿಸಿಕೊಟ್ಟಿದ್ದಾರೆ..
ಇನ್ನು ಕೆಲವು ನನ್ನ ಹಳೆಯ ಸಂಗ್ರಹದಿಂದ ಹುಡುಕಿತೆಗೆಯ ಬೇಕಾಯಿತು...

ನಿನ್ನೆ ಬ್ಲಾಗಿನ ಸ್ನೇಹಿತರೊಬ್ಬರು ಮಾತನಾಡುತ್ತಾ" ಈಗಿನ ಹೆಣ್ಣುಮಕ್ಕಳು ಮೊದಲಿನ ಹಾಗೆ ಹದಿನೆಂಟು ಮೊಳದ ಸೀರೆ ಉಡುವದಿಲ್ಲ" ಅಂತೆಲ್ಲ ಹೇಳಿದರು..
ನಾನು ನಾಗುವಿನ ಕಿವಿಗೆ ಹಾಕಿದೆ..
ಆತನ ಪ್ರಕಾರ
"ಸೀರೆ ಉಡದೆ ಇರಬಹುದು.. ಮೊದಲಿನ ಅಲಂಕಾರ ಮಾಡಿಕೊಳ್ಳದೇ ಇರಬಹುದು..
ಆದರೆ ತಾವು ಬೀಳಲಿಕ್ಕೆ ಏನೇನು ಮಾಡಿಕೊಳ್ಳಬೇಕೋ ಅದೆಲ್ಲವನ್ನೂ ಅವರೆ ತಮ್ಮ ಕೈಯ್ಯಾರೆ ತಾವೆ ಮಾಡಿಕೊಳ್ಳುತ್ತಿದ್ದಾರೆ" ಅಂದ..

ಅರ್ಥ ಆಗುತ್ತಿಲ್ಲ ಅಲ್ಲವೆ?

ಇನ್ನೊಂದು ಲೇಖನದಲ್ಲಿ ಬರೆಯುತ್ತೇನೆ..

ಸರ್..
ನಿಮ್ಮ ಪ್ರೀತಿಗೆ , ಪ್ರೋತ್ಸಾಹಕ್ಕೆ ತುಂಬ ತುಂಬಾ ಧನ್ಯವಾದಗಳು...

ಕನಸು ಕಂಗಳ ಹುಡುಗ said...

ಪ್ರಕಾಶಣ್...... really supper....
ಬರಹದ ದೃಷ್ಟಿಯಿಂದ ಮಾತ್ರ ಅಲ್ಲಾ.... ತರ್ಕಕ್ಕೆ ಬಿದ್ದಾಗ್ಲೂ ಕೂಡಾ....
ಹೆಣ್ಣು ಅಬಲೆಯಲ್ಲಾ.... ಯಾವ ಹೆಣ್ಣೂ ಹಾಗಂತ ಒಪ್ಕೋಳೊಲ್ಲಾ... ಆದರೆ ದುಡಿಯುವ ವಿಷ್ಯ ಬಂದಾಗ ಗಂಡು ಸ್ವಲ್ಪ ಹೆಚ್ಚಿಗೆ ಅನ್ಸುತ್ತೆ..... ಈ softwere ರಂಗದಲ್ಲಿ ಹೆಣ್ಣು ಕೂಡಾ ಸಮನಾಗೇ ದುಡೀತಾಳೆ.... ಆದರೆ ಹಳ್ಳಿ ವಾತಾವರಣದಲ್ಲಿ ಹಾಗಿರೊಲ್ಲಾ..... ಎಲ್ಲಾ ಕೆಲಸಗಳೂ ಅವಳಿಗೆ comfort ಆಗಿರಲ್ಲಾ... ಮೊದಲು ಹೆಣ್ಣಿಗೆ "ನೀನು ಹೀಗಿರು" ಅಂತ ಹೇಳಿರೋ ಕಾಲ softwere ಕಾಲ ಅಲ್ಲವೇ ಅಲ್ಲಾ..
ಮತ್ತೊಂದೆಂದ್ರೆ ಆಗಿನ ಕಾಲಮಾನವೇ ಹಾಗೆ ಹೆಣ್ಣನ್ನು ತೀಡಿಬಿಟ್ಟಿತ್ತೋ ಏನೋ....
ಹಾಲಲ್ಲಾದರೂ ಹಾಕು... ನೀರಲ್ಲಾದರೂ ಹಾಕೂ.... ತೀರಾ ಸೈಡಲ್ಲೆಲ್ಲೂ ಹಾಕ್ಬೇಡಾ.... ಅಂತ ಅವಳೂ ಅಂದ್ಕೊಂಡ್ಬಿಡ್ತಿದ್ಲೇನೋ...
ಹೆಣ್ಣು ಅಬಲೆ ಅನ್ನೋದನ್ನ ನಾನೂ ಒಪ್ಪೋಲ್ಲಾ...

ಆದರೆ ಅಲಂಕಾರದ ವಿಷಯಕ್ಕೆ ಬಂದ್ರೆ ಮಾತ್ರ ಪ್ರಕಾಶಣ್ಣಾ ಹುಡ್ಗೀರದ್ದೇ ಮೊದಲ ಜೈ..... ನಾಗು ಹೇಳಿದ ಹಾಗೆ ಮೊದಲೆಲ್ಲಾ ಹೆಣ್ಣಿಗೆ ನೀನು ಹೀಗಿರು, ಇಂತಿಂಥ ಒಡವೆ ಹಾಕ್ಕೋ ಹಾಗೇ ಹೀಗೆ ಅಂತ ಹೇಳಿ ಒಡವೆಗಳ ಗೊಂಬೆ ಮಾಡಿದ್ರೇನೋ... ಆದರೆ ಈಗಲೂ ಕೂಡಾ ಹೆಣ್ಣಿಗೆ ಒಡವೆಗಳ ಮೋಜು ಮಾತ್ರ ಹೋಗಿಲ್ಲಾ... ನಾನೇ ಎಷ್ಟೋ ಬಾರಿ ಹೇಳಿ ನೋಡಿದ್ದೇನೆ... ಅಯ್ಯೋ ಅಷ್ಟೆಲ್ಲಾ ಕಷ್ಟ ಪಟ್ಟು ಆ ಕಿವಿಯಿಂದ ತಲೆಗೆ, ಮೂಗಿಂದ ಕಿವಿಗೆಲ್ಲಾ ಬಂಗಾರ ಯಾಕೆ ಅಂತಾ.... ಕಷ್ಟ ಅಂತಾ ಯಾರೇಳಿದ್ರು ಅಂತಾ ಜೋರಾಗ್ಬಿಟ್ರಪ್ಪಾ.....
ಒಡವೆ ವಿಷ್ಯದಲ್ಲಿ ಮಾತ್ರ ನನ್ ಡೌಟ್ 80:20 ಇನ್ನೂ....


ಅಯ್ಯೋ ನನ್ time ಸರಿ ಇಲ್ಲಾ... ಈವಾಗಿಷ್ಟೇ post ಮಾಡಿ ಹೋಗ್ತೀನಿ.... ವಿಷ್ಯ ಇನ್ನೂ ಉಳ್ಕೊಂಡಿದೆ....

ಲೇಖನ ಮಾತ್ರ suppper. ನಮ್ಮನೇಲಿ 2 ತಾಸು ಮಾತಾಯ್ತು.... ನಿನ್ನೆ ಸಂಜೆ...

ಮಹಾಬಲಗಿರಿ ಭಟ್ಟ said...

ಪ್ರಕಾಶಣ್ಣಯ್ಯಾ ಸೂಪರ್...... ಜೋಡಿಸಿದ ಫೋಟೊ ಗಳು, ......... ನಾಗುವಿನ ಮಾತುಗಳು......,ಮತ್ತೆ ನಿನ್ನ ತರ್ಕದ ಬರಹಗಳು ..........ಇವೆಲ್ಲವೂ ಸೇರಿ ಬ್ಲಾಗ್ ಓದುಗರಿಗೆ ಯುಗಾದಿಯ ಮರುದಿವಸ ಮತ್ತೆ ಹೋಳಿಗೆಯ ಊಟ ಬಡಿಸಿದಂತಾಗಿದೆ ...........

ಜೈ ಹೋ

Ittigecement said...

ಗುಬ್ಬಚ್ಚಿ ಸತೀಶ್...

ನಾಗು ಹೇಳುತ್ತಿರುವಾಗ ನನಗೂ ನಗು ತಡೆಯಲಿಕ್ಕಾಗಲಿಲ್ಲ..
ಹೆಣ್ಣಿನ ಅಲಂಕಾರ "ಪರಾವಲಂಬಿತನಕ್ಕೆ" ಒತ್ತುಕೊಡುತ್ತದೆ..
ನಿಜವೋ ಸುಳ್ಳೊ
ಆದರೆ ನಾಗುವಿನ ಈ ತರ್ಕ ತಲೆ ಕೆಡಿಸಿದ್ದು ನಿಜ...

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ.. ಜೈ ಹೊ !

Ittigecement said...

ರಾಘವ.. (ಕನಸು ಕಂಗಳ ಹುಡುಗ..)

ಒಂದು ಕಾಲಘಟ್ಟದ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದದಿದ್ದಲ್ಲಿ ಮುಂದೆ ಒಂದುದಿನ ಅದು"ಶೋಷಣೆ" ಅಂತ ಹಣೆಪಟ್ಟಿತೆಗೆದುಕೊಳ್ಳುತ್ತದೆ ಅಂತ ಎಲ್ಲೋ ಓದಿದ್ದೆ..

ಜಗತ್ತಿನ ಯಾವುದೇ ಧರ್ಮವಿರಲಿ ಹೆಣ್ಣನ್ನು ಯಥಾನುಶಕ್ತಿ ಶೋಷಿಸಿದ್ದಾರೆ..
ಹೆಣ್ಣಿನ ಮೇಲೆ ಅಧಿಕಾರ ಚಲಾಯಿಸುವದು ಒಂದುರೀತಿಯ ಪ್ರತಿಷ್ಠೆ ಹಾಗು ಪುರುಶತ್ವದ ಸಂಕೇತ ಅಂತ ಅನ್ನಿಸುತ್ತದೆ..

ಕೆಲವರು ಬುದ್ಧಿವಂತಿಕೆಯಿಂದ ಶೋಷಿಸಿದ್ದರೆ..
ಇನ್ನು ಕೆಲವರು ರಾಜಾರೋಷವಾಗಿ ಮಾಡಿದ್ದಾರೆ..

ಈಗ ಕಾಲ ಬದಲಾಗಿದೆ..
ಬದಲಾದ ಕಾಲಘಟ್ಟದಲ್ಲಿ ಗಂಡಿಗೆ ಸ್ವಲ್ಪ ತೊಂದರೆ ಆಗುತ್ತಿದೆ "ಹೊಂದಿಕೊಳ್ಳಲು"

ಒಟ್ಟಿನಲ್ಲಿ ನಾಗುವಿನ ತರ್ಕ ತಲೆಕೆಡಿಸಿದ್ದಂತೂ ನಿಜ..
ಇದಕ್ಕೆ ಇಂದು ನನಗೆ ಬಂದ ಫೋನ್ ಕರೆಗಳೇ ಸಾಕ್ಷಿ...

ಪ್ರೀತಿಯಿಂದ ಹಾಕಿದ ಪ್ರತಿಕ್ರಿಯೆಗೆ ನನ್ನ ಸಲಾಮ್ !!

ಧನ್ಯವಾದಗಳು..

chetana said...

Aru koTre atte kaDe,mooru koTre sose kaDe!!
konege enta conclusionnu?
nange enu anistu gotta?`heNNe,ee abharaNa panchayti ella ninna bandhanakke maaDiddu anta avaLige avugaLa bagge taatsaara bandu, nange avella bEDa'annO haage aagali annuva hidden agenda ee barahada hinde;)
hahha.... PrakshaNNa,u r caught!!
- CT

ಸೀತಾರಾಮ. ಕೆ. / SITARAM.K said...

naagu heliddu 100 kke 100 rashttu satyaaa

geeta bhat said...

Hennina bagge istu chanda bardiddu nodi tumba khushi aatu...bardidralli satya iradantu houdu, nimma NAAgu helidralli sullenu ille...aadre hennu astella maimele hakyandu gandina sarisamaana bandu nintiddu andre ...innu gandina tara 'beedi basavanna ' tara iddidre ... ivattu istottige pecsentage lekkadalli 'meesalaati' koda paristiti bartitille.....
.

ಕ್ಷಣ... ಚಿಂತನೆ... said...

..
ಬರಹ ಮತ್ತು ಚಿತ್ರಗಳು, ನಿರೂಪಣೆ, ಅದರಲ್ಲಿರುವ ಸೂಕ್ಷ್ಮತೆ ಒಂದಕ್ಕೊಂದು ಪೂರಕವಾಗಿವೆ. ಮುದ್ದಾದ ಮಗುವಿನ ಚಿತ್ರ ಇನ್ನೂ ಸೂಪರ್‌! ಆಗಿದೆ.

ಧನ್ಯವಾದಗಳು.

Subrahmanya Bhat said...

ಪ್ರಕಾಶಣ್ಣ
ತರ್ಕಕ್ಕೆ ತಕ್ಕ ಭಾವಚಿತ್ರ ಮನಸಿಗೆ ಹಿಡಿಸಿತ್ತು ಆದ್ರೆ, ಪ್ರಾಣಿಗಳನ್ನು ಪಳಗಿಸಲು ಬಳಸುವ ಸರಪಳಿಗೂ ಹೆಂಗಸರ ಸರಪಳಿಗೂ ದರದಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಅಂದುಕೊಂಡಾಗೆಲ್ಲ ನೋವಾಗುತ್ತೆ. ಆ ವಿಚಾರದಲ್ಲಿ ಏನಾದರು ಪರಿಹಾರ ಸಿಕ್ಕಲ್ಲಿ ತಕ್ಷಣ ತಿಳಿಸಬೇಕಾಗಿ ಕೋರುತ್ತೇನೆ.

Ittigecement said...

ಪ್ರೀತಿಯ ಮಹಾಬಲ...

ನಾಗುವಿನ ತರ್ಕ
ಅದರಲ್ಲಿನ ಸೂಕ್ಷ್ಮ ಎಲ್ಲೊ ಒಂದುಕಡೆ ಇದೆಲ್ಲವೂ ಸತ್ಯ ಅಂತ ಅನ್ನಿಸುತ್ತದೆ..

ತಲೆಯಲ್ಲಿ ಹುಳ ಬಿಡುವದಕ್ಕೆ ಆತ ನಿಸ್ಸೀಮ..

ಕಾಲೇಜಿನಲ್ಲಿ ಹೋಗುವಾಗ ನಮ್ಮ ಶಿಕ್ಷಕರೊಬ್ಬರಿಗೆ ತಲೆಯಲ್ಲಿ ಹುಳ ಬಿಟ್ಟಿದ್ದ..
ಅವರು ತಲೆ ಕೆಡಿಸಿಕೊಂಡು..
ಲೈಬ್ರರಿಯಲ್ಲೆಲ್ಲ ತಡಕಾಡಿ..

ಆಮೇಲೆ ಯಾರೋ ಬೆಂಗಳೂರಿಗೆ ಹೋಗುವವರೊಬ್ಬರ ಬಳಿ ಆ ಪುಸ್ತಕ ತರಿಸಿಕೊಂಡು ಓದಿ...
ಕ್ಲಾಸಿಗೆ ಬಂದು..

ನಾಗುವಿಗೆ ಬಯ್ಯಲಿಲ್ಲ.. !! ಕೈ ಮುಗಿದಿದ್ದರು... !!

ಅದೊಂದು ದೊಡ್ಡ ಕಥೆಯಿದೆ...
ಇನ್ನೊಮ್ಮೆ ಹೇಳುವೆ..

ನಾಗುವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಚೇತನಾ ತಂಗ್ಯವ್ವಾ...

ಖರೆ ಹೇಳ್ದಿ ನೋಡು !!

" ಬಂಗಾರ ಮಾಡಿಸ್ರಿ..
ರೇಟು ಇನ್ನೂ ಜಾಸ್ತಿ ಆಗ್ತದ.."
ಅಂತ ನಮ್ಮ ಮನೆಯಾಕಿ ಒಂದೇ ಸವನೆ ತಲೆ ತಿಂತಿದ್ರು..

ಹಂಗಾಗಿ ಈ ಲೇಖನ ಬರದೆ ನೋಡ್ರಿ..

ಈಗ....
"ಬಂಗಾರನೂ ಬ್ಯಾಡಾ.. ಏನೂ ಬ್ಯಾಡ..
ಬಿಚ್ಚೋಲೆ ಗೌರಮ್ಮನಾಂಗೆ ಇರ್ತೀನಿ.. !! "
ಅಂತಿದ್ದಾರ್ರೀ ನಮ್ಮನೆಯಾಕೆ !!

ಒಂದು ಸಮಸ್ಯಾ ಬಂದೈತ್ರಿ..
ಸ್ವಲ್ಪ ಕಾಷ್ಟ್ಲೀ ಐತ್ರಿ...

"ಜೀನ್ಸ್ ಪ್ಯಾಂಟು.. ಟೀ ಷರ್ಟು ಕೇಳಾಕ್ ಹತ್ಯಾರ್ರೀ...!!"

ಲೇಖನಾ ಇಷ್ಟಪಟ್ಟಿದ್ದಕ್ಕ.. ಶರಣು ಶರಣ್ರೀ...

ಬರ್ತಾ ಇರ್ರೀ...!

Ittigecement said...

ಪ್ರೀತಿಯ ಸೀತಾರಾಮ್ ಸರ್..

ನಾಗುವಿನ ತರ್ಕ ಸರಿ ಅಂತ ಮೇಲ್ನೋಟಕ್ಕೆ ಅನ್ನಿಸಿದ್ರೂ...
ಪ್ರ್ಯಾಕ್ಟಿಕಲ್ ಆಗಿಲ್ಲ ಅಂತ "ಫೇಸಬುಕ್" ನಲ್ಲಿ ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ..

ನಾಗುವಿನ ತರ್ಕ ಕೇವಲ ಕಲ್ಪನೆ ಅಂತ ಹೇಳಿದ್ದಾರೆ..

ನನಗೂ ಹೌದೆನಿಸಿತು...

ಆದರೂ... ಆದರೂ..

ನಮ್ಮ ನಾಗು ಸುಮ್ನೆ ಹೇಳಿಲ್ಲ ಅಲ್ಲವಾ?

"ಗಂಡು ತನಗೆ ಯಾವ "ಬಂಧನವನ್ನೂ ಇಟ್ಟುಕೊಳ್ಳದೇ..
ಎಲ್ಲವನ್ನೂ ಹೆಣ್ಣಿಗೆ ಅಂತ ಮಾಡಿದ್ದೇಕೆ?"

ಇದು ಸತ್ಯ ಅಲ್ಲವಾ?

ಸರ್..
ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ashok.V.Shetty, Kodlady said...

ಪ್ರಕಾಶಣ್ಣ,

ಲೇಖನ ಚೆನ್ನಾಗಿದೆ, ನಾಗುವಿನ ತರ್ಕ ಚೆನ್ನಾಗಿತ್ತು, ಹೆಣ್ಣಿನ ಸೌಂದರ್ಯದ ಬಗ್ಗೆ ಮಾತಾಡುವುದಾದರೆ ನಂಗೆ ಯಾವಾಗಲೂ ಉದ್ದ ಕೂದಲು ಅದರಲ್ಲೂ ಜಡೆ ಹೆಣೆದುಕೊಂಡು ಇರುವ ಹುಡುಗಿಯರು ಇಷ್ಟ... ಮನೆಯಲ್ಲೂ ತಂಗಿ ಅಥವಾ ನನ್ನ ಹೆಂಡತಿ ತಲೆ ಕೂದಲು ಕಟ್ ಮಾಡ್ಕೊಳ್ತಿವಿ ಅಂದ್ರೆ ನಾನು ಯಾವತ್ತು ಬಿಡ್ತಾ ಇರ್ಲಿಲ್ಲ, ಮತ್ತೆ ಅವ್ರೆ ಅದು ಕೇವಲ್ ಸೆಟ್ ಮಾಡ್ಕೊಳ್ಳೋದು ಶಾರ್ಟ್ ಮಾಡ್ಕೊಲ್ಲೋದಲ್ಲ ಅಂತ ಹೇಳಿ ನನ್ನನ್ನು ಸುಮ್ಮನಾಗಿಸ್ತ ಇದ್ರು....ನಾಗುವಿನ ಕೆಲವು ಮಾತುಗಳು ಕೇವಲ ಕಾಲ್ಪನಿಕ ಅನ್ನೋದು ನನ್ನ ಅಭಿಪ್ರಾಯ...ಜೈ ಹೊ........

ವಾಣಿಶ್ರೀ ಭಟ್ said...

prkashanna neevu hennannu hogaliddiro,atva purusha pradhana samajada kattu padugalannu heliddiro arthavagalilla.. ottinalli sogasaagi barediddiri....

Niharika said...

Nanagu nimma naguvina tarka taleyalli bandittu aga boy cut madisidde matte amma ellaru udda kudalu chanda andu nanagista villadiddaru udda kudalu biduva haage hagide.................
Nice photos...
Matte pranigala jote hennu makkala abharanada comparison kooda chennagi bandide.

PARAANJAPE K.N. said...

ನೀವು ಮತ್ತು ನಿಮ್ಮ ಗೆಳೆಯ ನಾಗು ಸೇರಿ ಭಾರಿ ಸ೦ಶೊಧನೆ ಮಾಡಿದ೦ತಿದೆ. ಇದು ಸತ್ಯಶೋಧನೆಯೂ ಹೌದು. ಅನಾದಿಕಾಲದಿ೦ದ ಪುರುಷ ಮಹಿಳೆಯನ್ನು ತನ್ನ ದಾಸಿಯನ್ನಾಗಿಸಲು ಈ ರೀತಿ ಮೂಗುದಾರ ಹಾಕಿದ ಅಂತ ನಿಮ್ಮ ಮಿತ್ರ ವಾದಿಸಿದ್ದಾರೆ. ನೀವದನ್ನು ಪೂರ್ಣ ಅನುಮೋದಿಸದೆ ಮಿತ್ರನೊ೦ದಿಗೆ ನಡೆಸುವ ಸ೦ವಾದ ಜೊತೆ ಜೊತೆಗೆ ವರ್ಣರ೦ಜಿತ ಚಿತ್ರಗಳ ಜುಗಲ್ಬ೦ದಿ ಎಲ್ಲವೂ ಹೋಳಿಗೆಯೊಳಗಿನ ಹೋರಣದ೦ತೆ ಒ೦ದಕ್ಕೊ೦ದು ಹಾಸುಹೊಕ್ಕಾಗಿದೆ. ನಿಮ್ಮ ಮಿತ್ರ ಹೇಳಿದ್ದರಲ್ಲಿ ಸತ್ಯವಿದೆ. ಅದನ್ನು ತಮಾಷೆ ಯಾಗಿ ಬಳಸಿಕೊ೦ಡ ನಿಮ್ಮ ಶೈಲಿಯೂ ಚೆನ್ನಾಗಿದೆ. ಆದರೆ ಇ೦ದಿನ ಕಾಲದ ಮಹಿಳೆಯರು ಆ ಬ೦ಧನ ಗಳಿ೦ದ ಮುಕ್ತರಾಗಿದ್ದಾರೆ ಮತ್ತು ಸೇಡು ತೀರಿಸಿಕೊಳ್ಳಲೋಸುಗ ಗ೦ಡಸರಿಗೇ ಮೂಗುದಾರ ಹಾಕುವಷ್ಟು ಮುಂದುವರಿದಿದ್ದಾರೆ. ಈ ಬಗ್ಗೆಯೂ ನೀವು ಬರೆಯಬೇಕು. ತು೦ಬಾ ಚೆನ್ನಾಗಿದೆ. ನೀವಿಬ್ಬರು ಸೇರಿ ಇದೆ ವಿಷಯದಲ್ಲಿ PhD ಮಾಡಬಹುದು.

Ittigecement said...

ಗೀತಾ...

ಇಲ್ಲಿ ನಾಗುವಿನ ತರ್ಕ ಪೂರ್ತಿಯಾಗಿ ಸರಿ ಅಂತ ಹೇಳಲಾಗುವದಿಲ್ಲ...
ಆದರೆ ಒಂದಷ್ಟು ಸತ್ಯವಿದೆ..

ಗಂಡು ಹೆಣ್ಣಿನ ನಡುವೆ ಪ್ರೀತಿ ಇದ್ದಲ್ಲಿ ಇದೆಲ್ಲವೂ ಗೌಣ.. ಅಲ್ಲವಾ?
ಪರಸ್ಪರ ಹೊಂದಾಣಿಕೆ, ಗೌರವ ಇದ್ದರೆ ಬಾಳು ಸದಾ ಹಸಿರು..

ಹಿಂದಿನ ಕಾಲದಲ್ಲಿ ಕಟ್ಟುಪಾಡುಗಳು ಜಾಸ್ತಿಗಿದ್ದವು.. ಈಗಿಲ್ಲವಲ್ಲ.. !

ಆದರೂ ಶೋಷಣೆ ನಡೆದಿತ್ತು..


ಲೇಖನ ಇಷ್ಟಪಟ್ಟಿದ್ದಕ್ಕೆ..
ನಾಗುವಿನ ತರ್ಕ ಖುಷಿಯಾಗಿದ್ದಕ್ಕೆ..
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Dr manjunath P Matad said...

ಪ್ರಕಾಶಣ್ಣಾ...ಏನ್ ಬರ್ದಿದ್ದೀರಿ...ಸೂಪರ್....'ಹೆ೦ಡತೀ ಪ್ರಾಣ 'ಹೆ(ಹಿ)೦ಡುತೀ'..ದೊಡ್ಡ ಕೊ೦ಡ ಕೋತಿಯ೦ತೇ....ಅ೦ತ ಜಿ.ಪಿ.ರಾಜರತ್ನ೦ ರವರ ಹಾಡಿರುವ೦ತೆ ಆ ಕಡೆ ಬೈದ ಹಾಗೆ ಇರಕೂಡದು...ಇತ್ತ ಹೊಗಳಿಕೆಯೂ ಆಗಿರಬಾರದು..ಹಾಗೆ ಸರಿಯಾಗಿ ಸಿ೦ಮೆ೦ತು ಮರಳನ್ನು ಸರಿಯಾಗಿ ಸೇರಿಸಿ ಅ೦ದ-ಚ೦ದ ವಾಗಿ ಸೆ೦ಟಿಮೆ೦ಟಲ್ ಕಥೆ ಬರೆದಿದ್ದೀರ......

Ittigecement said...

ಚಂದ್ರು... (ಕ್ಷಣ ಚಿಂತನೆ)

ಅಲಂಕಾರಗಳು ಹೆಣ್ಣಿನ ಶೋಷಣೆಯಾ?
ಪರಾಧೀನತೆಯ ಸಂಕೇತವಾ?

ಈ ನಾಗುವಿನ ತರ್ಕ ಎಷ್ಟರ ಮಟ್ಟಿಗೆ ಸರಿ...?

ಇದಕ್ಕೆ ದಿವಾಕರ ಏನನ್ನುತ್ತಾನೆ?

ಕೆಲವೇ ದಿನ ಕಾಯಬೇಕು ಅಷ್ಟೆ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಸುಬ್ರಮಣ್ಯ....

ಮೊದಲ ಬಾರಿಗೆ ಓದಿದಾಗ ನಿಮ್ಮ ತರ್ಕದ ಮಾತು ಅರ್ಥವಾಗಲಿಲ್ಲ...
ಹ್ಹಾ.. ಹ್ಹಾ ! ಈಗ ಅರ್ಥವಾಯಿತು... !

ಈಗೆಲ್ಲ ಕಡಿಮೆ ಬೆಲೆ ಫ್ಯಾಷನ್ ಬಂದಿದೆ ಮಾರಾಯ್ರೆ..
ಬಂಗಾರದ ಸರಪಳಿ ಬೇಕೆಂದೇನೂ ಇಲ್ಲ...

ಅವರವರ ಪ್ರೀತಿ ಎಷ್ಟು ಬೆಲೆ ಬಾಳುತ್ತದೆ ಅಂತ ನೋಡಿಕೊಂಡು..
ಅದಕ್ಕೆ ತಕ್ಕ ಆಭರಣ ಹಾಕಿದರಾಯಿತು...

ಹ್ಹಾ.. ಹ್ಹಾ.. !!

ನೀವು ಬಂಗಾರದ ಆಭರಣವನ್ನೇ ಮಾಡಿಸಿ...
ಹೇಗಿದ್ದರೂ ಶ್ರೀಲಕ್ಷ್ಮೀಗೆ ತಾನೆ?

ಹ್ಹಾ ಹ್ಹಾ...

ಇಷ್ಟಪಟ್ಟಿದ್ದಕೆ ಧನ್ಯವಾದಗಳು...

AntharangadaMaathugalu said...

ಪ್ರಕಾಶ್ ಸಾರ್...

ಪೂರ್ತಿಯಾಗಿ ಓದಿದ ಮೇಲೆ (ಮುಂದಿನ ಕಂತು ಕೂಡ ನೀವು ಹಾಕಿದಾಗ) ಏನಾದರೂ ಅಭಿಪ್ರಾಯ ಹೇಳಬಹುದು ಅನ್ನಿಸ್ತು... :-)...
Dr ಮಂಜುನಾಥ್ ಅವರೆ.. "ಹೆಂಡತಿ ಪ್ರಾಣ ಹಿಂಡುತಿ.. ದೊಡ್ಡ ಕೊಂಡ ಕೋತಿಯಂತೆ ಕುಣಿ ಕುಣಿಸುತ್ತೀ" ಎನ್ನುವುದು ಶ್ರೀ ಪುರಂದರ ದಾಸರು ಬರೆದ ಪದ..

ಶ್ಯಾಮಲ

HegdeG said...

Superb article Prakashanna, eradoo kade balance madiddu mastiddu :-)

Ittigecement said...

ಅಶೋಕ್ ಭಾಯ್...

ನಮಗೆಲ್ಲ ಒಂದು ಮನಸ್ಥಿತಿ ಇದೆ..
ನಾವು ಅಂಥಹ ವಾತಾವರಣದಲ್ಲಿ ಬೆಳೆದಿದ್ದೇವೆ..

ನಮ್ಮಮ್ಮನ ಹಣೆಯಲ್ಲಿ ಕುಂಕುಮ ಇಲ್ಲಾ ಅಂತ ಬಹಳ ಬೇಸರ ಪಟ್ಟುಕೊಳ್ಳುತ್ತಿದ್ದೆ..
ಎಲ್ಲ ಹೆಣ್ಣುಮಕ್ಕಳ ಹಾಗೆ ನನ್ನಮ್ಮನೂ ಹೂ ಮುಡಿದುಕೊಳ್ಳ ಬೇಕು ಅಂತ ಬಯಸುತ್ತಿದ್ದೆ..

ಹೂವು ಮತ್ತು ಕುಂಕುಮ ಹೆಣ್ಣು ಹುಟ್ಟಿದಾಗಲಿನಿಂದ ಇಟ್ಟುಕೊಳ್ಳುತ್ತಾಳೆ..

ಗಂಡ ಸತ್ತ ನಂತರ ಯಾಕೆ ತೆಗಿಯಬೇಕು..?

ನಾವು ಹಿಂದು ಕುಟುಂಬದಲ್ಲಿ ಹುಟ್ಟಿದ್ದಕ್ಕೆ ಇಂಥಹ ಭಾವನೆಗಳು..

ಬೇರೆ ಧರ್ಮದ ಕುಟುಂಬದಲ್ಲಿ ಹುಟ್ಟಿದ್ದರೆ ಬುರ್ಕಾವನ್ನು ಮನಸ್ಸು ಬಯಸುತ್ತಿತ್ತು ಅಲ್ಲವೆ?
ಅಥವಾ ಬಾಬ್ ಕಟ್ ಇದ್ದರೆ ಚೆನ್ನ ಎಂದು ಮನಸ್ಸು ಬಯಸುತ್ತಿತ್ತು ಅಲ್ಲವೆ?

ಯಾವುದೇ ಧರ್ಮವಿರಲಿ...
ಯಥಾನುಶಕ್ತಿ ಹೆಣ್ಣಿನ ಮೇಲೆ ಸವಾರಿ ಮಾಡಿದ್ದಾರೆ ಅಂತ ನನ್ನ ಭಾವನೆ.. ಅನಿಸಿಕೆ...

ಚಂದದ ಪ್ರತಿಕ್ರಿಯೆಗಾಗಿ ..
ಪ್ರೋತ್ಸಾಹಕ್ಕೆ..
ಪ್ರೀತಿಗೆ ತುಂಬಾ ತುಂಬಾ ಧನ್ಯವಾದಗಳು...

ಶಶೀ ಬೆಳ್ಳಾಯರು said...

ಪ್ರಕಾಶ್ ಸರ್.... ನಿಜಕ್ಕೂ ಒಪ್ಪಿಗೆ ನಿಮ್ಮ ಜಾಣತನವನ್ನು... ಹೆಣ್ಣನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಅವಳನ್ನು ಅಂದ-ಚಂದದ ಹೆಸರಿನಲ್ಲಿ ಸಂಪ್ರದಾಯಕ್ಕೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಿದ್ದೀರಿ ಗುರುವೇ...
ಹೆಣ್ಣು ತಲೆ ತುಂಬಾ ಹೂ ಮುಡ್ಕೊಳ್ಳೋದು. ಕಿವಿಗೆ ಕೆ.ಜಿ. ತೂಗೋ ಆಭರಣ ಹಾಕೋದು, ಕುತ್ತಿಗೆಯಲ್ಲಿ ಒಂದಷ್ಟು ಸರ(ಕು), ಮೈತುಂಬಾ ಸೀರೆ ಹೊದ್ದುಕೊಳ್ಳೋದು ಏನೋ ಚಂದ... ಆದು ಹೆಣ್ಣನ್ನು ಸುಂದರಿಯನ್ನಾಗಿ ಮಾಡುತ್ತೆ ಅನ್ನೋ ವಾದಕ್ಕಿಂತಲೂ ನಾಗು ಹೇಳಿರುವ ಮಾತುಗಳು ಅಕ್ಷರಶ: ಸತ್ಯ ಎನ್ನಬಹುದು. ಕಿವಿಗೆ ಓಲೆ, ಸೀರೆ, ಉದ್ದನೆಯ ಕೂದಲು. ಮುಡಿ ತುಂಬಾ ಮಲ್ಲಿಗೆ ಹೂವು ಇದೆಲ್ಲಾ ಹೆಣ್ಣನ್ನು ಸಂಪ್ರದಾಯದ ಹೆಸರಿನಲ್ಲಿ ಪುರುಷ ಸಮಾಜ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಮಾಡಿದ ಪ್ರಯತ್ನ ಎನ್ನುವ ಮಾತಿಗೆ ನನ್ನ ಒಪ್ಪಿಗೆ...
ಗುರೂ... ನೀವು ಯಾಕೋ ಮದುವೆಯಾದ ಗಂಡನ್ನು `ಬೀದಿ ಬಸವ' ಅಂಥ ವಣರ್ಿಸಿದ್ದು ನನ್ಗೆ ಸರಿ ಕಾಣಲಿಲ್ಲ ಕಣ್ರೀ... ಪರವಾಗಿಲ್ಲ ಬಿಡಿ... ಅದೇ ರೀತಿ ಹುಡ್ಗೀರ ಜಾಗದಲ್ಲಿ ಕೋತಿ ಹೂ ಮುಡ್ಕೋಳ್ಳೋದು, ಮಕ್ಕಳನ್ನು ನೋಡ್ಕೊಳ್ಳೋ ಫೊಟೋನೂ ಹಾಕಿದ್ದೀರಾ.., ಇದು ಮಾತ್ರ ಸರಿಯಲ್ಲ ಕಣ್ರೀ... ಪಾಪ ಹೆಣ್ಣುಮಕ್ಳು ಎಷ್ಟೊಂದು ಬೇಜಾರ್ ಪಡ್ತಾರೋ,,,,?
ಪ್ರಕಾಶ್ ಸರ್... ನೀವು ಬರೆದಿರೋ ಸಾಲು ಮತ್ತು ಅದಕ್ಕೆ ಒಪ್ಪುವ ಹೆಣ್ಣು....ಮಂಗ, ಕೋಣ ಎಲ್ಲಾ ಫೊಟೋಗಳೂ ವಂಡರ್ಫುಲ್.... ಧನ್ಯವಾದಗಳು... ಪ್ರೀತಿಯಿರಲಿ...

Sandeep K B said...

ನಿಮ್ಮ ತರ್ಕ ಬಹಳ ಚಂದವಾಗಿ ಮೂಡಿಬಂದಿದೆ..
ಇದು ನಿಮ್ಮ ಕಲ್ಪನೆಯ ಬರಹ ನಾ ಅತ್ವ ನಿಮ್ಮ ಸ್ನೇಹಿತ ನಗು ಇದ್ದಾರ.. ?
ಏನೆ ಅದ್ರು
ಈ ಕಥೆಯನ್ನು ಮನೆಯಲ್ಲಿ ತೋರಿಸಿದರೆ..
ನಾಳೆಯಿಂದ ನಾವು ಅಡುಗೆ ಮಾಡಬೇಕಾಗುತ್ತೆ..

ಮನಸು said...

ಏನೋ ಒಟ್ಟಲ್ಲಿ ಸ್ನೇಹಿತರ ಹೆಸರಲ್ಲಿ ನೀವು ಈ ರೀತಿಯ ಹೇಳಿಕೆ ಏನಾದ್ರು ಕೊಡ್ತಾ ಇದ್ದೀರ ಏನು ಕಥೆ... ಹಹಹ ಮುಂದಿನ ಭಾಗ ನೋಡಿ ಉತ್ತರಿಸೋಣ ಎಂದುಕೊಂಡಿದ್ದೀನಿ..

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ಹೆಣ್ಣಿನ ಅಲಂಕಾರದ ಬಗೆಗೆ ನಾಗುವಿನ ತರ್ಕ ಸೇರಿಸಿ,
ನಿಮ್ಮ ತರ್ಕ ಬೆರೆಸಿ,
ದಿವಾಕರನ ತರ್ಕವನ್ನು ಹೊಯ್ದು
ಒಂದು ಪಾಕ ಮಾಡಿದ್ದಿರಿ
ಸುಂದರ ಫೋಟೋಗಳು
ಜೈ ಹೋ

Roopa said...

ಪ್ರಕಾಶ್ ಸಾರ್:
ಅಲಂಕಾರದ ಬಗ್ಗೆ ನಾಗುವಿನ ತಿಳುವಳಿಕೆ ಎಷ್ಟು ಚೆನ್ನಾಗಿದೆಯೋ ಹಾಗೆ ತರ್ಕ ಬದ್ದವಾಗಿದೆ
ಜಗತ್ತಲ್ಲಿ ಹೆಣ್ಣು ಎಂದೊಡನೆ ಮನಸಿಗೆ ಬರುವ ಮುಂದಿನ ಚಿತ್ರಣವೇ "ಸೌಂದರ್ಯ" , ಸೌಂದರ್ಯಕ್ಕೂ ಹೆಣ್ಣಿಗೂ ಬಿಡಿಸಲಾಗದ ನಂಟು."
ಹೆಣ್ಣು ಅಲಂಕಾರ ಮಾಡಿಕೊಳ್ಳುವುದು ಇತರರ ಮೆಚ್ಚುಗೆಗಾಗಿ . ಅಂತಹ ಕಾಯುವಿಕೆಯನ್ನ ಕಾತುರತೆಯನ್ನ ಹೆಣ್ಣಿಗೆ ಕೊಟ್ಟಿದ್ದು ಪುರುಷರೇ.
ನಿಜಕ್ಕೂ ನಾಗುವಿನ ಗ್ರಹಿಕೆ ಸರಿಯಾಗಿದೆ
ಮುಂದಿನ ಲೇಖನಕ್ಕಾಗಿ ಕಾಯುತ್ತಿದ್ದೇನೆ

Jagadeesh Balehadda said...

ಪ್ರಕಾಶಣ್ಣಾ, ತುಂಬಾ ಬ್ಯಾಲೆನ್ಸ್ ಆಗಿ ಬಂದಿದೆ. ಸಕತ್ತಾಗಿದೆ.

Ittigecement said...

ವಾಣಿ...

ಇಲ್ಲಿ ನಾನು ವಿಷಯವನ್ನು ನಿಷ್ಪಕ್ಷಪಾತವಾಗಿ ಹೇಳಿದ್ದನಷ್ಟೆ...

ವಸ್ತು ಸ್ಥಿತಿಯನ್ನು ಯಥಾವತ್ತಾಗಿ ವಿವರಿಸಿದ್ದೇನೆ... ನಮ್ಮ ನಾಗು ಹೇಳಿದಂತೆ...

ಕಿವಿಗಳ ಬಗೆಗೆ ಇದು ನನ್ನ ನಾಲ್ಕನೆಯ ಚಿತ್ರ ಲೇಖನ..
ಬರೆಯುತ್ತ ಬರೆಯುತ್ತ ಹೋದಂತೆ ಇನ್ನಷ್ಟು ವಿಷಯಗಳು ಸಿಗುತ್ತಾ ಇವೆ...

ದಿವಾಕರ ಅಭಿಪ್ರಾಯ ಹಾಕಿ..
ಕಿವಿಗಳ ಲೇಖನ ಮಾಲಿಕೆ ಮುಗಿಸುವೆ...

ಬ್ಲಾಗಿನಲ್ಲಿ ಬರೆಯಲಿಕ್ಕೆ ಎಷ್ಟೆಲ್ಲ ವಿಷಯಗಳಿವೆ ಅಲ್ಲವೆ?

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ..
ತುಂಬಾ ತುಂಬಾ ಧನ್ಯವಾದಗಳು..

Ittigecement said...

ನಿಹಾರಿಕಾರವರೆ...

ಹೇಗಿದ್ದರೇನು..
ಒಳ್ಳೆಯ ಹೃದಯ ಮನುಸ್ಸುಗಳಿಲ್ಲದಿದ್ದರೆ? ನಿಜವಾದ ಸೌಂದರ್ಯ ಮನಸ್ಸಿನಲ್ಲವೆ?

ನಮ್ಮ ನಾಗುವಿನ ತರ್ಕಗಳು.. ವಿಚಾರಗಳೇ ಹೀಗೆ..
ಎಲ್ಲವೂ ಎಡವಟ್ಟುಗಳು..

ಇಲ್ಲ ಅಂತ ಖಂಡಿತವಾಗಿ ಹೇಳುವಂತೆಯೂ ಇಲ್ಲ..
ಹೌದು ಅಂತ ಧೈರ್ಯವಾಗಿ ಒಪ್ಪಿಕೊಳ್ಳುವ ಹಾಗೆಯೂ ಇಲ್ಲ..

" ಇದ್ದರೆ ಇರಬಹುದು " ಎನ್ನುವ ಎಡಬಿಡಂಗಿತನದ ಅಭಿಪ್ರಾಯಗಳು...

ಚಿತ್ರ ಲೇಖನ ಇಷ್ಟವಾಗಿದೆ ಅಂತ ಧೈರ್ಯವಾಗಿ ಹೇಳಿದ್ದಕ್ಕೆ ತುಂಬಾ ಖುಷಿಯಾಯಿತು...

ಮತ್ತೊಮ್ಮೆ ಧನ್ಯವಾದಗಳು.. ಬರುತ್ತಾ ಇರಿ...

ನೀವೂ ಕೂಡ ಬರೆಯಿರಿ...

Ittigecement said...

ಪರಾಂಜಪೆಯವರೆ...

ಈಗಿನ ಹೆಣ್ಣುಮಕ್ಕಳ ಬಗೆಗೆ ನಾಗುವಿನ ಅಭಿಪ್ರಾಯದ ಲೇಖನ ಬರೆಯುವಷ್ಟು ವಿಷಯ ಇದೆ...
ಫೋಟೊ ಸಿಕ್ಕಿಲ್ಲ.. ಫೋಟೊ ಸಿಕ್ಕಮೇಲೆ ಹಾಕುವೆ...

ಈ ಲೇಖನ ಬರೆದ ನಂತರ ಒಟ್ಟೂ ಎಂಟು ಫೋನ್ ಬಂದಿವೆ..
ಚೆನ್ನಾಗಿ ವಿಷಯ ಚರ್ಚೆಯಾಗಿದೆ...

ಹೆಂಡತೀಯರ ಪ್ರಶ್ನೆಗೆ ಗಂಡಸರ ಬಳಿ ಉತ್ತರವಿಲ್ಲವಾಗಿತ್ತು...
ನನ್ನ ಬಳಿಯೂ ಸಹ...

ಬಹುಷಃ ನಾಗು ಮಾತ್ರ ಇದಕ್ಕೆ ಉತ್ತರ ಕೊಡಬಲ್ಲ ಅಂತ ನನ್ನ ಭಾವನೆ... ಹ್ಹಾ ಹ್ಹಾ.. !

ಪಿ.ಎಚ್.ಡಿ ನಮಗಿಬ್ಬರಿಗೆ ಯಾಕೆ?
ನೀವೂ ಬನ್ನಿ ಇದು ಬಹಳ ದೊಡ್ಡದಾದ ವಿಷಯ ಮೂವರೂ ಪಿ.ಎಚ್.ಡಿ ಮಾಡೋಣ..
( ಸರ್ ತಮಾಷೆಗೆ ಹೇಳಿದ್ದು...)

ನಿಮ್ಮ ಪ್ರೋತ್ಸಾಹ.. ಪ್ರೀತಿಗೆ.. ಸ್ನೇಹಕ್ಕೆ..
ತುಂಬಾ ತುಂಬಾ ಧನ್ಯವಾದಗಳು..

Ittigecement said...

ಡಾಕ್ಟ್ರೆ... (ಡಾ. ಮಂಜುನಾಥ)...

ಏನು ಮಾಡೋಣ ಸರ್...?

ವಿಷಯ ಹಾಗಿದೆ...
ಇತ್ತ ಗಂಡು ತಪ್ಪು ಮಾಡಿರುವದು ನಿಜ...
ಅತ್ತ ಶೋಷಣೆ ನಡೆದಿರುವದೂ ನಿಜ...

ಹಾಗಾಗಿ ನಮ್ಮ ನಾಗುವಿನ ಮಾತನ್ನು ಚಾಚೂ ತಪ್ಪದೆ ಬರೆದು ಬಿಟ್ಟಿದ್ದೇನೆ..

ಹ್ಹಾ... ಹ್ಹಾ.. !

ಸರ್ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..
ಬರುತ್ತ ಇರಿ.. ಜೈ ಹೋ !!

Ittigecement said...

ಅಂತರಂಗದ ಮಾತುಗಳು...

ಇಷ್ಟು ಓದಿ ಏನನ್ನಿಸಿತು ಅಂತ ಹೇಳ ಬಹುದಿತ್ತು...
ಇದು ಗೆಳೆಯ "ನಾಗುವಿನ" ಅಭಿಪ್ರಾಯ..
ಇದರಲ್ಲಿ ಎಷ್ಟು ಸತ್ಯ? ಎಷ್ಟು ಮಿಥ್ಯ ಅಂತ?

ಅದರಲ್ಲೂ ನೀವೂ ಒಬ್ಬ ಹೆಣ್ಣು ಮಗಳಾಗಿ ನಿಮ್ಮ ಅಭಿಪ್ರಾಯ ಕುತೂಹಲವಿತ್ತು....

ನನ್ನ ಅಕ್ಕ ಮತ್ತು ಬಾವ ಈ ಲೇಖನ ಓದಿ ಮನೆಯಲ್ಲಿ ಬಹಳ ಜೋರಾಗಿ ಚರ್ಚೆ ಮಾಡಿಕೊಂಡರಂತೆ...!!

ತುಂಬಾ ಮನೆಯಲ್ಲಿ ಆಗಿರಬಹುದು...

ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
ಪ್ರಕಾಶಣ್ಣ..

Ittigecement said...

ಪ್ರೀತಿಯ ಗಣಪತಿ....

ಖರೆ ಹೇಳಬೇಕೇಂದರೆ ಒಂದಷ್ಟು ತುಂಬಾ ಚಂದದ ಕಿವಿಗಳ ಫೋಟೊವಿತ್ತು...
ಈ ಲೇಖನದಲ್ಲಿ ಹೇಗೆ ಪ್ರಕಟಿಸಲಿ?

ಎಲ್ಲರೂ ಪ್ರೀತಿಯಿಂದ ಕರೆದು ಫೋಟೊ ತೆಗೆಸಿಕೊಂಡ ಹೆಣ್ಣುಮಕ್ಕಳು..
ಈ ಲೇಖನಕ್ಕೆ ಅವರೆಲ್ಲರ ಫೋಟೊ ಹಾಕಲು ಮನಸ್ಸು ಒಪ್ಪಲಿಲ್ಲ...

ಅವೆಲ್ಲವನ್ನೂ ಮುಂದಿನ ಲೇಖನದಲ್ಲಿ ಹಾಕಿ ಈ " ಕಿವಿ" ಮಾಲಿಕೆಯನ್ನು ಮುಗಿಸುವ ವಿಚಾರವಿದೆ...

ಸ್ವಲ್ಪವೂ ಬ್ಯಾಲೆನ್ಸ್ ಮಾಡದಿದ್ದರೆ ಹೇಗೆ?

ನಾಗುವಿನ ಮಾತಿನಿಂದ ನನಗನ್ನಿಸಿದ್ದು ಹೆಚ್ಚಿನ ತಪ್ಪು "ಗಂಡಿನದ್ದು" ಪುರುಷ ಸಮಾಜದದ್ದು

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ಸವಿಗನಸು said...

ಪ್ರಕಾಶಣ್ಣ,
ಇಬ್ಬರೂ ಭಾರಿ ಸಂಶೋಧನೆಗೆ ಕೈ ಹಾಕಿದ್ದೀರ....
ಚೆನ್ನಾಗಿದೆ....ಬರಹ ಮತ್ತು ಚಿತ್ರಗಳು ಎರಡೂ ಸಹ ...

ಉಷಾ... said...

ರೀ ನಮ್ಮೆಜಮಾನ್ರು ನಿನ್ನೆ ಆಯುರ್ವೇದಿಕ್ ಎಣ್ಣೆ ಕೊಡ್ಸಿ ನಿಂಗೆ ಉದ್ದ ಕೂದಲು ಬಂದ್ರೆ ಚೆನಾಗಿರತ್ತೆ ಅಂದ್ರು.. ಇದ್ಕೇನ?? :(

ಗುಹೆ said...

ಈ ಪೋಸ್ಟ್ ನನ್ನ ಹೆಂಡತಿ ಓದಿದ್ರೆ, ಮುಂದಿನ ದಿನಗಳಲ್ಲಿ ಅವಳನ್ನು ಹೊಗಳಿದ್ರೂ, ನನ್ನ ಅನುಮಾನದಿಂದ ನೋಡೋದ್ರಲ್ಲಿ ಸಂಶಯವಿಲ್ಲ.

balasubramanya said...

ಅರೆ ಹೌದಲ್ಲಾ ಅಂತಾ ಅನ್ನಿಸಿದ್ದಂತೂ ಹೌದು, ಇದು ವಿಶ್ವವಿಧ್ಯಾಲಯಗಳಲ್ಲಿ ಸಂಶೋದನೆ ಮಾಡಲು ಹೊಸ ವಿಚಾರವಾಗಿ ಸೇರ್ಪಡೆ ಮಾಡಬಹುದಾದ ವಿಚಾರ . ಒಂದೆಡೆ ಪಾಪ ಹೆಣ್ಣುಮಕ್ಕಳನ್ನು ವ್ಯವಸ್ತಿತವಾಗಿ ಶೋಷಣೆ ಮಾದಲಾಯಿತೆ ಅನ್ನಿಸುತ್ತದೆ.ನಿಮ್ಮ ನಾಗುವಿನ ತರ್ಕ ಮೆಚ್ಚುವಂತದೆ, ಆದರೆ ಹೆಣ್ಣಿನ ಅಲಂಕಾರ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದಂತೂ ನಿಜ. ಸ್ವಾಮೀ ಅಲಂಕಾರವಿಲ್ಲದ ಹೆಣ್ಣು ಮಕ್ಕಳಿರುವ/ಹೆಂಗಸರಿಲ್ಲದ ಮದುವೆ, ನಾಮಕರಣ,ಅಥವಾ ಯಾವುದೇ ಶುಭ ಸಮಾರಂಭ ನೆನೆಸಿಕೊಳ್ಳಿ ಕಲ್ಪನೆಗೆ ಮೀರಿದ್ದು ಅನ್ನಿಸುತ್ತದೆ.ಮತ್ತೊಂದು ವಿಚಾರ ಇವತ್ತಿನ ಅಲಂಕಾರಿಕ /ಗೃಹ ಉಪಯೋಗಿ ಹಾಗು ಯಾವುದೇ ಸಾಮಗ್ರಿಯ ಮಾರುಕಟ್ಟೆ ನಿಂತಿರುವುದೇ ಹೆಂಗಸರಿಂದ , ಹೆಂಗಸರು ಯಾವುದೇ ಕೆಲಸ ಮಾಡಿದರೂ ಯಾವುದೇ ಸಮಾರಂಭದಲ್ಲಿ ಭಾಗವಹಿಸಿದರೂ ಅವರದೇ ಛಾಪು ಮೂಡಿಸಿ ಅದರ ಯಶಸ್ಸಿನಲ್ಲಿ ಪಾಲ್ಗೊಳ್ಳುತ್ತಾರೆ.ನಾವು ಗಂಡಸರು ಬಿಡಿ ಅವರನ್ನು ಅಟ್ಟಕ್ಕೆ ಏರಿಸಿದ್ದೆವೆಂಬ ಭ್ರಮೆಯಲ್ಲಿ ತೇಲಾಡುತ್ತಾ ಇದ್ದೇವೆ. ಸತ್ಯ ,ಹಾಗು ವಾಸ್ತವ,ಗಳನ್ನೂ ಹಾಸ್ಯವಾಗಿ ಹೇಳಿರುವ ಪ್ರಕಾಶಣ್ಣ.ಜೈ ಹೋ.

Dr.D.T.Krishna Murthy. said...

ಪ್ರಕಾಶ್;ನಾಗುವಿನ ತರ್ಕ ಎಂದಿನಂತೆ ವಿಶಿಷ್ಟ!ಹೆಣ್ಣು ಅಲಂಕಾರ ಪ್ರಿಯೆ ಆಗಿದ್ದರಲ್ಲೂ ಗಂಡಿನ ಸ್ವಾರ್ಥ ಇದೆ ಎಂದು ಕೇಳಿ ಅಚ್ಚರಿಯಾಯಿತು.ದಿವಾಕರ ಏನು ಹೇಳುತ್ತಾನೆ ಎನ್ನುವ ಕುತೂಹಲವಿದೆ.