Friday, October 22, 2010

ನೀವು ಏನು ತಿಂತ್ತೀರ್ರಿ..?.. ಮಾರಾಯ್ರೇ..? ..?..

  (part 1)



ಮೈ ಬಣ್ಣಗಳು  ಬದಲಾಗುತ್ತಿರುತ್ತವೆ...


ನನ್ನಂಥಹ ಕಾಂಟ್ರಾಕ್ಟರುಗಳ ಮೈ ಬಣ್ಣ ನೋಡಿ ಕೆಲಸದ ಬಗೆಗೆ ಹೇಳ
ಬಹುದು..


ಹೇಗೆ  ಅಂತೀರಾ?


ಬಣ್ಣ ಬಿಳಿದಾಗಿ, ಫ಼್ರೆಷ್ ಆಗಿದ್ದರೆ.. 
ಇನ್ನೂ ಹೊಸ ಕೆಲಸ ಶುರುವಾಗಿಲ್ಲ ಅಂತ ಅರ್ಥ...
ನಾವು ಕಟ್ಟುತ್ತಿರುವ ಮನೆಯ ಗೃಹಪ್ರವೇಶ ಹತ್ತಿರ ಬಂದಿದೆ ಅಂತಲೂ ಆಗಬಹುದು..


ಸ್ವಲ್ಪ ಕಪ್ಪಾಗಿ .. ಸುಟ್ಟ ಹಾಗೆ ಕಾಣಿಸಿದರೆ ಹೊಸ ಕೆಲಸ ಶುರುವಾಗಿದೆ ಅಂತ ..


ನಮ್ಮ ಮೈ ಬಣ್ಣಗಳಿಗೂ.....
ನಮಗೆ ಹೊಸ  ಕೆಲಸ.. 
ಹೊಸ ಪ್ರಾಜೆಕ್ಟ್ ಸಿಕ್ಕ ಸಂತೋಷಕ್ಕೂ  ಸಂಬಂಧವೇ ಇರುವದಿಲ್ಲ...!


ನಮಗೆ ಹೊಸ ಕೆಲಸ ಶುರುವಾದ ಸಂಭ್ರಮದಲ್ಲಿ  "ಕಪ್ಪಾಗಿ" ಬಿಡ್ತಿವಿ...


ನಮ್ಮ ಹೊಸ ಕೆಲಸಗಳು  ಶುರುವಾಗುವದು  ನೆರಳಿನ ಅಡಿಯಲ್ಲಿ ಅಲ್ಲವಲ್ಲ...
ಸುಡು ಬಿಸಿಲಿನಲ್ಲಿ....


ಹಿಂದಿನ ದಿನವಿಡಿ ಹೊಸ ಕೆಲಸದ ಮಾರ್ಕಿಂಗ್ ಮಾಡಿ ಸಿಕ್ಕಾಪಟ್ಟೆ  ದಣಿದಿದ್ದೆ..
ಕೆಟ್ಟ ರಣ ಬಿಸಿಲಿನ ಝಳ, ಸೆಖೆಯಿಂದ ಸುಟ್ಟು  ಕರಕಲಾಗಿದ್ದೆ..


ಬೆಳಿಗ್ಗೆ  ಆರು ಗಂಟೆಯಾಗಿದ್ದರೂ ಇನ್ನೂ ಎದ್ದಿರಲಿಲ್ಲ..
ಮೊಬೈಲ್ ರಿಂಗಾಯಿತು..


ಯಾರಪ್ಪ ಇದು ಅಂತ  ಕಣ್ಣೊರಿಸಿಕೊಳ್ಳುತ್ತ  ನೋಡಿದೆ...
ಹೊಸ ಮನೆ ಮಾಲಿಕರು !!
ಲಗುಬಗೆಯಿಂದ ಕಾಲ್ ತೆಗೆದು ಕೊಂಡೆ..


"ಸರ್.. ನಮಸ್ಕಾರ.."


"ನಿಮ್ಮ  ನಮಸ್ಕಾರಕ್ಕಿಷ್ಟು ಬೆಂಕಿ ಹಾಕ... !
ಏನ್ರಿ.. ನೀವು..?
ಏನು ತಿಂತೀರಾ?
ಅನ್ನ ತಿಂತಿರೋ..?
ಹೊಲಸು ತಿಂತಿರೋ?..."


ನಾನು ಗಡಬಡೆಯಿಂದ   ಕಂಗಾಲಾಗಿ ಹೋದೆ..


"ಏನ್ ಸಾರ್ ಏನಾಯ್ತು..!!..? "


ಕೇವಲ ಮಾರ್ಕಿಂಗ್ ಮಾಡಿ... 
ಮಣ್ಣು ಕೆಲಸದವರಿಗೆ ಕೆಲಸ ಮಾಡಲು ಹೇಳಿ ಬಂದಿದ್ದೆ...
ಫೌಂಡೇಷನ್  ಅಗೆಯುತ್ತಿದ್ದರು...
ಇದರಲ್ಲಿ ಏನು ತಪ್ಪಾಗಲಿಕ್ಕೆ ಸಾಧ್ಯ?


" ಏನಾ...ಯ್ತಾ...? ?
ನೀವು  ಸೈಟಿಗೆ ಬರ್ರಿ...
ಇದೇ  ಥರಹ ಮನೆ ಕಟ್ಟಿದ್ರೆ ದೇವ್ರೇ.. ಗತಿ...!
ಯಾರ್ರಿ ನಿಮಗೆ ಕೆಲಸ ಹೇಳಿ ಕೊಟ್ಟಿದ್ದು...?


ನೀವು.... ಏನು ತಿಂತ್ತೀರ್ರಿ..?.. ಮಾರಾಯ್ರೇ..? "


ನನಗೆ ಏನು ಹೇಳಬೇಕೆಂದು ತಿಳಿಯದೆ ಬಾಯಿ ಒಣಗಿತು...
ಮಾತನಾಡಲು ತಡವರಿಸಿದೆ..


"ಸರ್.. ನಾನು  ಸೈಟಿಗೆ  ಬರ್ತಾ ಇದಿನಿ  .. ಬಂದು ನೋಡ್ತೀನಿ.."


"ಆಯ್ತು.. ಜಲ್ದಿ ಬನ್ರೀ...
ಏನು  ಕಾಂಟ್ರಾಕ್ಟರ್ರೋ.. ಏನು ತಿಂತ್ತಾರ್ರೋ...?"


ಗೊಣಗುತ್ತ ಫೋನ್ ಇಟ್ಟರು...


ನನಗೆ ಕೈಕಾಲು ಆಡದಂತಾಯಿತು...


ಏನು ತಪ್ಪಾಗಿರ ಬಹುದು...?


ಲಗುಬಗೆಯಿಂದ ಸ್ನಾನ ಮಾಡಿ..
ತಿಂಡಿ ತಿನ್ನದೆ..  ಸೈಟಿಗೆ ಓಡಿದೆ...


ಅವರು ನನಗಾಗಿಯೇ ಕಾಯುತ್ತಾ ಇದ್ದರು..


ನನ್ನನ್ನು ಕಂಡವರೇ.. ದೊಡ್ಡ ಧ್ವನಿಯಿಂದ ಕೂಗಾಡಲು ಶುರು ಮಾಡಿದರು...


"ಏನ್ರೀ.. ನೀವು...?
ಇಂಥಾ ಕೆಲಸ ಮಾಡ್ತಿರೇನ್ರಿ...? 
ನೀವು ಕಟ್ಟೋ ಬಿಲ್ಡಿಂಗಿಗೆ  ಕ್ವಾಲಿಟಿ ಬೇಡ್ವಾ?"


ನನಗೆ ಅವರ ಧ್ವನಿಕೇಳಿ ಒಂಥರಾ ಆಯಿತು..


ನಾನು ಯಾರ ಬಳಿಯೂ ಕೂಗಾಡುವವನಲ್ಲ...
ನನ್ನ ಕೆಲಸಗಾರರ ಬಳಿಯೂ ಸಹ...
ಅವರ ಕೆಲಸ ಇಷ್ಟವಾಗದಿದ್ದರೆ..
ಅವರು ತಪ್ಪು ಮಾಡಿದ್ದರೆ... ಅವರ ಲೆಕ್ಕಾಚಾರ ಮಾಡಿ ಕಳಿಸಿ ಬಿಡುತ್ತೇನೆ...


"ಏನಾಗಿದೆ.. ಸರ್... ಏನಾಯ್ತು..?"


ಅವರು ನನ್ನನ್ನು  ಕರೆದು  ಮಾರ್ಕಿಂಗ್ ಪಿಲ್ಲರ್ ತೋರಿಸಿದರು...
ಅದನ್ನು ಮಣ್ಣಿನಿಂದ ಕಟ್ಟಿದ್ದೇವು...
ಅದರ ಟಾಪ್ ನಲ್ಲಿ ಸಿಮೆಂಟು ಹಾಕಿ ಮಾರ್ಕಿಂಗ್ ಮಾಡಿದ್ದೇವು...


"ಸರ್.. ಇದು ಮಾರ್ಕಿಂಗ್ ಪಿಲ್ಲರ್... ಇದರಲ್ಲಿ ಏನಾಗಿದೆ..?"


"ಹೆಗಡೆಯವರೆ.. 
ಏನಾಯ್ತು ಅಂತ ಕೇಳ್ತೀರಲ್ರಿ...!
ಮಣ್ಣಲ್ಲಿ ಕಟ್ಟಿದ್ದಲ್ದೆ.. ಅದರ ಮೇಲೆ ಸಿಮೆಂಟು  ಒರೆಸಿ  ಕಣ್ಣು ಕಡ್ತೀರಲ್ರಿ...
ಯಾಕ್ರೀ.. ಇಂಥಹ ಕೆಲಸ...?
ನೀವು  ಏನು ತಿಂತ್ತೀರ್ರಿ...?"


"ಸರ್..
ಇದು  ತಾತ್ಕಾಲಿಕವಾಗಿ ಬೇಕಾಗುತ್ತದೆ...
ಅದಕ್ಕಾಗಿ ಮಣ್ಣಲ್ಲೇ ಕಡ್ತೀವಿ..."


"ನೀವು ಬಿಲ್ಡಿಂಗೂ.. ಹೀಗೆ  ಕಡ್ತೀರೇನ್ರಿ...?
ನಮಗೆ ಮೋಸ ಆಗೋಯ್ತು... 
ಎಂಥಾ  ಜನ ನೀವು...?
ತಪ್ಪು ಮಾಡೋದಲ್ದೆ... ಸಮರ್ಥನೆ ಮಾಡಿಕೊಳ್ತೀರಲ್ರಿ...
ಲಜ್ಜೆಗೆಟ್ಟ ರಾಜಕೀಯದವರ ಥರ.."


ಅವರ ಕೂಗಾಟ ಕೇಳಿ ...
ಅಕ್ಕ ಪಕ್ಕದ ಮನೆಯವರು   ಹೊರಗೆ ಬಂದು ಕೈಕಟ್ಟಿಕೊಂಡು ಆನಂದಿಸುತ್ತಿದ್ದರು.....
ಕೆಲವು ಜನ ಕಿಡಕಿಯಿಂದ ಮಜಾ ತೆಗೆದು ಕೊಳ್ಳುತ್ತಿದ್ದರು..


ನನಗೆ ಅವಮಾನವಾದಂತಾಯಿತು..


ಇವರಿಗೆ  ಹೇಗೆ ತಿಳಿಸಿ ಹೇಳುವದು...?


ಕೆಲಸ ಈಗ ತಾನೆ ಶುರುವಾಗಿದೆ... ಇನ್ನು ಮುಂದೆ ಹೇಗೆ...?
ಹಣಕಾಸಿನ ವಿಚಾರ ಹೇಗೆ...?


ನನಗೆ ತಲೆ ಕೆಟ್ಟು ಹೋದಂತಾಯಿತು...


ಅವರು ಒಂದೇ ಸವನೆ  ಕೂಗಾಡುತ್ತಿದ್ದರು...


ನನಗೂ... ರೇಗಿ ಹೋಯಿತು...
ಏನಾಗ್ತದೊ ಅದು ಇವತ್ತೇ  ಆಗಲಿ.... 
ಹೆಚ್ಚೆಂದರೆ.. ಈ  ಕೆಲಸ   ಕೈ ತಪ್ಪಿ ಹೋಗ ಬಹುದು...


ಆದರೆ  ಈ ಅವಮಾನ ಹೇಗೆ ಸಹಿಸುವದು..?  


ನಾನೂ.. ಕೂಗಾಡಿದೆ....


"ಏನ್ರೀ ನೀವು.. ?
ಅರ್ಥಾನೆ ಮಾಡಿಕೊಳ್ಳೋದಿಲ್ಲವಲ್ರೀ...
ಹಿರಿಯರು... ವಯಸ್ಸಲ್ಲಿ ದೊಡ್ಡವರು  ಅಂತ ಸುಮ್ನೆ ಇದ್ರೆ... 
ಒಂದೇ ಸವನೆ ಕೂಗ್ತೀರಲ್ರಿ...?
ನೋಡ್ರಿ....
ಆ ಪಿಲ್ಲರ್  ಮತ್ತೆ ಬೇಕಾಗೋದಿಲ್ಲ...
ಎರಡು ದಿನ ಬಿಟ್ಟು ನಾವೇ ಅದನ್ನ  ಒಡೆದು ಹಾಕ್ತೇವೆ...
ಅದಕ್ಕೆ ಯಾಕೆ  ಕ್ವಾಲಿಟಿ...? 
ಅರ್ಥಾನೆ ಮಾಡ್ಕೋತಾ ಇಲ್ಲವಲ್ಲ..."


 ಏರಿದ ಧ್ವನಿ ಕೇಳಿ.. ಅವರು ಸ್ವಲ್ಪ  ತಣ್ಣಗಾದರು..


"ಓಹೋ... 
ಹೀಗೋ  .. ವಿಷಯ...!
ಈ ವಿಷಯ ಹೀಗೆ ಹೇಳಲೇ ಇಲ್ಲ ನೀವು...
ನೀವು ಹೀಗೆ ಹೇಳಿದ್ರೆ ನನಗೂ ಅರ್ಥ ಆಗಿರೋದು....
 ಓಕೆ.. ಓಕೆ..
ನಾನು  ಈ ಥರಹ ಹೇಳ್ದೆ ಅಂತ ಬೇಸರ ಮಾಡ್ಕೊ ಬೇಡಿ..
ಬನ್ನಿ ಇಲ್ಲೇ  ಟೀ.. ಕುಡಿದು ಬರುವ..."


ಅಂತ ನನ್ನ ಕೈ ಹಿಡಿದು ಕರೆದು ಕೊಂಡು ಹೊರಟರು..


ಅಕ್ಕಪಕ್ಕದ ಮನೆಯವರೂ ಒಳಕ್ಕೆ ಹೋದರು...


ನನಗೆ ಸೋಜಿಗವಾಯಿತು...
ಇಲ್ಲಿಯವರೆಗೆ  ಕೂಗಾಡಿದ  ಮನುಷ್ಯ ಇವರೇನಾ...?
ಎಂಥಹ ಜನ ಇವರು...?


ಇವರೊಡನೆ ವ್ಯವಹಾರ ಮಾಡ ಬಹುದಾ..?
ಕೊನೆಯಲ್ಲಿ  ಸರಿಯಾಗಿ ಲೆಕ್ಕಾಚಾರ ಮಾಡಿ ಹಣ ಕೊಡ ಬಹುದಾ...?
ಇವರ ಕೆಲಸ ಈಗಲೇ....   ನಿಲ್ಲಿಸಿ ಬಿಡಲಾ...?


ಇವರೊಡನೆ  ವ್ಯವಹಾರ ಮಾಡ ಬಹುದಾ..? 
ಬೇಡವಾ ?.... 


ಮನುಷ್ಯರನ್ನು  ಹೇಗೆ  ಅರ್ಥ ಮಾಡಿಕೊಳ್ಳ ಬೇಕು...?


ತಲೆ ಕೆರೆದುಕೊಳ್ಳುತ್ತ... ಅವರ ಸಂಗಡ ಹೆಜ್ಜೆ ಹಾಕಿದೆ...


ಮನುಷ್ಯರನ್ನು... 
ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ  ಯಂತ್ರಗಳು  ಅವಶ್ಯವಾಗಿ ಬೇಕಿದೆ....




( ಸತ್ಯ ಘಟನೆ....)





70 comments:

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ

ಎಷ್ಟೋ ಸಾರಿ ಹೀಗೆ ಅಲ್ವ ನಮ್ಮ ದನಿಯೇರುವವರೆಗೂ ಎದುರಿನವರಿಗೆ ನಮ್ಮ ಮಾತಿನ ಮೌಲ್ಯ ಅವಗಾಹನೆಗೆ ಬರುವುದಿಲ್ಲ. ಎಷ್ಟೊಂದು ವಿಪರ್ಯಾಸ ಅಲ್ವ!!!

sunaath said...

ಕಂಟ್ರ್ಯಾಕ್ಟರರ ಮೈಬಣ್ಣದ ಮೇಲೆ ಅವರ ಕೆಲಸದ ಬಗೆಗೆ ತಿಳಿದುಕೊಳ್ಳುವ ಲಕ್ಷಣಶಾಸ್ತ್ರ ತುಂಬ ಚೆನ್ನಾಗಿದೆ!

Unknown said...

ನೀವು ಬರೆದಿರೋದು ನೋಡಿ ಬೇಸರವಾಯಿತು. ಕೆಲವು ಆ ಥರ ಜನಗಳು ಇರುತ್ತಾರೆ. ಅವರಿಗೆ ಒಳ್ಳೆಯಮಾತಿನಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ. ನಾವು ಮೆತ್ತಗಿದ್ದಷ್ಟೂ ಅವರು ಮೇಲೇರಿದ ಧ್ವನಿಯಲ್ಲಿ ಮಾತಾಡುತ್ತಿರುತ್ತಾರೆ. ನಾವು ಅದೇ ವೇಳೆಗೆ ಮೇಲೇರಿದ ದನಿಯಲ್ಲಿ ಮಾತನಾಡಿದರೆ ಅವರು ತಣ್ಣಗಾಗುತ್ತಾರೆ. ಇದೇ ಪ್ರಪಂಚ. ನಾವು ಮೆತ್ತಗಿದ್ದಷ್ಟೂ ನಮ್ಮನ್ನು ತುಳಿಯಲು ಪ್ರಯತ್ನ ಮಾಡುತ್ತಾರೆ. ಎಲ್ಲರ ಹತ್ತಿರವೂ ತಾಳ್ಮೆ ನಡೆಯೋಲ್ಲ.

Ittigecement said...

ರಾಜು...

ಬಹಳ ದಿನಗಳ ನಂತರ ಭೇಟಿಯಾಗ್ತ ಇದ್ದೀರಿ...
ಖುಷಿಯಾಯಿತು...

ದಯವಿಟ್ಟು ನಿಮ್ಮ ಬ್ಲಾಗ್ ನಿಲ್ಲಿಸ ಬೇಡಿ ಬರೆಯಿರಿ..

ನಾವು ಒಂದು ವ್ಯವಹಾರ ಮಾಡಬೇಕಾದರೆ ಎಷ್ಟೆಲ್ಲ ವಿಚಾರ ಮಾಡಬೇಕಾಗುತ್ತದೆ... ಅಲ್ಲವಾ?
ಒಂದು ಗಂಡು ಹೆಣ್ಣಿನ ಸಂಬಂಧ ಹುಡುಕಿದಂತೆ..
ಅದಕ್ಕಿಂತಲೂ ಕಷ್ಟ...

ಮೊದಮೊದಲೇ ಈ ರೀತಿಯ ಅನುಭವ ಆಗಿ ಬಿಟ್ಟರೆ...
ವ್ಯವಹಾರ ಮುಂದುವರೆಸುವ ಧೈರ್ಯ ಹೇಗೆ ಬರುತ್ತದೆ..?

ನಾವು ಕೆಲಸ ಮುಗಿದ ಮೇಲೆ ಲೆಕ್ಕಾಚಾರ ಸರಿಯಾಗಿ ಮಾಡಿ ಕೊಡುತ್ತಾರೆಂದು ಹೇಗೆ ನಂಬುವದು?

ಇಶ್ಃಟೆಲ್ಲ ಕೂಗಾಡಿದ ಮನುಷ್ಯ "ಬನ್ನಿ ಟೀ ಕುಡಿದು ಬರೋಣ" ಅಂದಾಗ ನನಗೆ ನಿಜವಾಗಲೂ ಅಶ್ಚರ್ಯ.. !

ಇವರ ಸ್ವಭಾವ ಹೇಗಿರ ಬಹುದು?

ರಾಜು ದಯವಿಟ್ಟು ಬ್ಲಾಗಿನಲ್ಲಿ ಬರೆಯಿರಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

AntharangadaMaathugalu said...

ಪ್ರಕಾಶ್ ಸಾರ್..
ಕೆಲವೊಮ್ಮೆ ಏರು ಧ್ವನಿಯಲ್ಲಿ ಕೂಗುತ್ತಿರುವವರನ್ನು ಸುಮ್ಮನಾಗಿಸಲು ನಾವು ಅವರಿಗಿಂತ ಹೆಚ್ಚು volumeನಲ್ಲಿ ಕೂಗಬೇಕಾಗತ್ತೆ. ಆ ಸಮಯದಲ್ಲಿ ಅವರಿಗೆ ಅದು ಬಿಟ್ಟು ಬೇರೇನೂ ಅರ್ಥವಾಗೊಲ್ಲ. ನಮಗೆ ಪರಿಣತಿ ಇಲ್ಲದ ವಿಷಯಗಳನ್ನು ಮಾತನಾಡಲು ಹೋಗಬಾರದು. ಕೆಲವರು ಹೀಗೆ ತಾಳ್ಮೆಯಿಲ್ಲದೇ ಏನೂ ತಿಳಿದುಕೊಳ್ಳುವ ಗೋಜಿಗೇ ಹೋಗದೆ ಸುಮ್ಮನೆ ಅರ್ಥಹೀನ ಮಾತುಗಳನ್ನಾಡೋದು.. ನೀವು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಶ್ಲಾಘನೀಯ. ಕೂಗಾಡಿ ಅವರೇನೋ ಏನೂ ಆಗೇ ಇಲ್ಲವೆನ್ನುವಂತೆ ಟೀ ಕುಡಿಯೋಣ ಬನ್ನಿ ಎಂದರು... ಆದರೆ ನಿಮಗೆ ಮನಸ್ಸಿನ ನಿಯಂತ್ರಣ ಅದೆಷ್ಟು ಹೆಚ್ಚಿನ ಮಟ್ಟದ್ದಿರಬೇಕು ಅವರನ್ನು ಸಹಿಸಿಕೊಳ್ಳಲು. ಇದಕ್ಕಾಗಿ ನಿಮಗೆ ನನ್ನದೊಂದು ನಮಸ್ಕಾರ....

ಶ್ಯಾಮಲ

Sandeep K B said...

ತುಂಬಾ ಚೆನ್ನಾಗಿದೆ ಸರ್ ,
ಜನಗಳು ತಿಳಿಯದೆ ತಲೆ ಕೆಡಿಸಿದರೆ ತಳೆಗೆರಡಿತ್ತು ತಿದ್ದಿ ಹೇಳು ಎಂದ ಸರ್ವಜ್ಞ

Ittigecement said...

ಸುನಾಥ ಸರ್...

ನೀವೂ ಒಬ್ಬ ಸಿವಿಲ್ ಇಂಜನೀಯರ್...

ನಮ್ಮ ಬಣ್ಣಗಳು ನಿಮಗೆ ಅರ್ಥವಾಗಿಬಿಡುತ್ತದೆ...

ಒಬ್ಬ ಇಂಜನೀಯರ್...
ಕಾಂಟ್ರಾಕ್ಟರ್ ಅಂದರೆ ಯಾಕೆ ಈರೀತಿಯ ಅನುಮಾನ?

ನಮ್ಮ ಕ್ಷೇತ್ರದಲ್ಲಿ ಯಾರು ಬೇಕಾದರೂ ಗುತ್ತಿಗೆದಾರರಾಗಬಹುದು...

ಒಂದೆರಡು ಕೆಲಸ ಮಾಡಿದ ಮೇಸ್ತ್ರಿ ಕೂಡ ಗುತ್ತಿಗೆದಾರನಾಗಿಬಿಡುತ್ತಾನೆ...

ಅವರಿಗೊಂದು ಬದ್ಧತೆ...
ಕಮಿಟ್ಮೆಂಟ್ ಇರಲಿಕ್ಕೆ ಸಾಧ್ಯವೇ ಇಲ್ಲ...

ಅವರೊಡನೆ ಆದ ಅನುಭವ ಉಳಿದವರೊಂದಿಗೆ ಹೋಲಿಸಿಕೊಳ್ಳುವದು ತಪ್ಪಲ್ಲವೆ?

ಸರ್ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಸತ್ಯಪ್ರಕಾಶ್ ಸರ್...

ನಿಮ್ಮಂಥಹ ಹಿರಿಯರು ಬಂದು ನನ್ನ ಬ್ಲಾಗಿನಲ್ಲಿ ಪ್ರತಿಕ್ರಿಯೆ ಕೊಡುತ್ತಿರುವದು ನಿಜಕ್ಕೂ ಸಂತೋಷದ ವಿಷಯ...

ಸರ್...
ನನಗೆ ಈ ವ್ಯಕ್ತಿಯ ಬಗೆಗೆ ಅನುಮಾನಗಳು ಶುರುವಾದವು..
ಆರಂಭದಲ್ಲೇ ಹೀಗೆ...
ಇನ್ನೂ ಲಕ್ಷಾಂತರ ರೂಪಾಯಿಗಳ ವ್ಯವಹಾರವಿದೆ...

ಕೊನೆಯಲ್ಲಿ ಲೆಕ್ಕಾಚಾರ ಮಾಡಿ ಹಣ ಕೊಡ ಬಹುದಾ?

ನನಗೆ ಕೂಗಾಡುವದರಲ್ಲಿ ನಂಬಿಕೆ ಇಲ್ಲ...
ಬೆಟ್ಟದಷ್ಟು ತಾಳ್ಮೆ ಇದೆ...
ಇವರೊಡನೆ ದಿನಾಲೂ ಭೇಟಿಯಾಗಬೇಕು...
ವ್ಯವಹಾರ ಮಾಡ ಬೇಕು...

ಈ ಮನುಷ್ಯ ದಿನಾಲೂ ಕೂಗತೊಡಗಿದರೆ ಹೇಗೆ ?

ಸರ್... ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು...

ಹಳ್ಳಿ ಹುಡುಗ ತರುಣ್ said...
This comment has been removed by the author.
ಹಳ್ಳಿ ಹುಡುಗ ತರುಣ್ said...

prakash sir nimma baravanige yella satya kate agirutte.. arambisuvede tada antya tiliyode illa...

nimma matu satya sir jana satya tiliyuva badalu.. mettagiddare saku avarannu avamanisuva or tuliyalu bega suru madkobidtare... adre tammaste gatti iddare summaniruttare.... ade sir indina prapancha agogide...
matte manusya talmeyanne keledukondidanne, vishaya tiliyuva badalu tave jnanigalagogtare... :)

matte sir inta are-bare tilidu, kshankondu banna badalayisuvavara jote hanakasina vyavara(mainly) andre swalpa kastane sir... swalpa husaragi vivaharisbeku sir.. idu ondu tara nimmantavarige mundina vyavaharada bagge ondu hechcharikene alva sir...

ಜಲನಯನ said...

ಏಯ್...ಪ್ರಕಾಶಾ ನಿಜ ಹೇಳು ನೀನು,,,ನೀನು ದನಿ ಏರ್ಸಿ ಮಾತನಾಡಿದ್ಯಾ...? ಕಥೇಲೇ ದನಿ ಏರ್ಸಿಲ್ಲ ಇನ್ನು ನಿಜವಾಗಿ...!??? ಹಹಹ ಬಹಳ ಚನ್ನಾಗಿತ್ತು..ಇದಂತೂ ಖಂಡಿತಾ...ಪಾಪದವರ ಮೇಲೆ ಜೋರಾಗೋಕೆ ಎದುರಿನವನಿಗೆ ಹೆಚ್ಚು ಶ್ರಮ ಬೇಕಿಲ್ಲ,,,ಹಹಹಹ್...

ನಾಗರಾಜ್ .ಕೆ (NRK) said...

ಕೆಲವೊಬ್ಬರು ಅನುಭವಸ್ತರೂ, ಹಿರಿಯರಾಗಿದ್ದರು ಕೆಲವೊಮ್ಮೆ ಹೀಗಾಡ್ತಾರೆ ಇದಕ್ಕೆ ಕಾರಣ ಹಿಂದೆ ಯಾವಾಗಲಾದರು ಅವರಿಗಾದ ಕಹಿ ಅನುಭವವ ಅಥವಾ ಅವರಿರುವುದು ಹಾಗೇನಾ ಎನ್ನೋದು ಅಸ್ಪಷ್ಟವಾಗಿ ಉಳಿದುಬಿಡುತ್ತದೆ.
In fact, ಇಂತಹ ವಿಷಯಗಳಲ್ಲಿ ಅವರ ಬಗ್ಗೆ ಗೌರವ ಕಡಿಮೆಯಾಗೋ ಸಾಧ್ಯತೆ ಹೆಚ್ಚು, ಅದಕ್ಕಾಗಿ ಅವರ ಈ ರೀತಿಯ ನಡವಳಿಕೆಗೆ ಕಾರಣ ತಿಳಿದುಕೊಳ್ಳುವ ಮನಸ್ಥಿತಿ ನಮ್ಮಲ್ಲಿರುವುದಿಲ್ಲ.

balasubramanya said...
This comment has been removed by the author.
Dr.D.T.Krishna Murthy. said...

'ಏನು ತಿನ್ತೀರ್ರೀ ಹೊಟ್ಟೆಗೆ?'ಅದ್ಭುತ ಕಥನ.ನನಗೆ ಪೂರ್ತಿಕಥೆ ಗೊತ್ತಿದ್ದರೂ ಮತ್ತೊಮ್ಮೆ,ಇನ್ನೊಮ್ಮೆಓದುವಷ್ಟು ಮಜವಾಗಿದೆ.ನಮ್ಮ ಸಮಾಜದಲ್ಲಿ ಎಂತೆಂತಹ ಜನ ಇರುತ್ತಾರೆ!ಬೆಳಗಾಗೆದ್ದು ಅಂತಹ ಮಾತುಗಳನ್ನು ಕೇಳಬೇಕೆಂದರೆ ಯಾರಿಗೆ ತಲೆ ಕೆಡೋಲ್ಲ?ನಿಮ್ಮ ಸಹನೆ ಅದ್ಭುತ!ನಾನಾಗಿದ್ದರೆ ಅಲ್ಲೇ ಕಾನ್ಟ್ರಾಕ್ಟ ಕ್ಯಾನ್ಸಲ್ ಮಾಡಿಬಿದುತ್ತಿದ್ದೇನೋ ಏನೋ!ನಿಮ್ಮ ಎಲ್ಲಾ ಬರಹಗಳಂತೆ ಓದಿಸಿಕೊಂಡು ಹೋಗುವ ಬರಹ.

ದಿನಕರ ಮೊಗೇರ said...

ಪ್ರಕಾಶಣ್ಣ,
ನಿಮ್ಮ ಮಾತು ಕೇಳಿ ನನ್ನ ಸುಮಾರು ಹಾಸ್ಯ ಘಟನೆಗಳು ನೆನಪಿಗೆ ಬಂದವು.... ಒಬ್ಬರಂತೂ ನಮ್ಮ ಬೆಂಚ್ ಮಾರ್ಕ್ ಪಿಲ್ಲರ್ ನ್ನ ಕಿತ್ತು ಎಲ್ಲಿ ಬೇಕಾದರು ಇಟ್ಟುಕೊ ಅಂತ ಜೆ. ಸಿ. ಬಿ. ಕಳಿಸಿದ್ದರು..... ಹ್ಹ ಹ್ಹ.... ನಿಮ್ಮ ಘಟನೆ ಓದಿ, ಮನುಷ್ಯನನ್ನು ಓದುವ ಯಂತ್ರ ಬಂದರೆ ಒಳ್ಳೆಯದು ಎನಿಸಿತು......

ದಿನಕರ ಮೊಗೇರ said...

ondu maatu.....

ellavannu nambide.....

nivu dani ERISI maatanaadide endiddanna namboke kashTa aagtaa ide..... hha hha hhha....

jithendra hindumane said...

ನಿಮ್ಮ ಸಹನೆ ಮೆಚ್ಚುವಂತದ್ದು... ನಾನೂ ಒಬ್ಬ ಮಾಜೀ ಕಂಟ್ರಾಕ್ಟರ್‍, ಹಾಗಾಗಿ ಇದೆಲ್ಲಾ ಅನುಭವಿಸಿದ್ದೇನೆ...!

Ittigecement said...

ಅಂತರಂಗದ ಮಾತುಗಳು...

ಬೆಳಿಗ್ಗೆ ಬೆಳಿಗ್ಗೆ ಯಾರಾದರೂ ಯದ್ವ ತದ್ವಾ ಬೈಯಲಿಕ್ಕೆ ಶುರು ಮಾಡಿದರೆ ಹೇಗೆ?
ಎಲ್ಲವನ್ನೂ ಸ್ಮೂತ್ ಆಗಿ ನಯವಾಗಿ ತೆಗೆದುಕೊಂಡು ಹೋಗವಲ್ಲಿ ನಾನು ನಂಬಿಕೆ ಇಡುತ್ತೇನೆ..
ಗಲಾಟೆ.. ಶಬ್ಧಗಳಲ್ಲಿ ನಂಬಿಕೆಯಿಲ್ಲ..

ಎಷ್ಟೋ ಮಾಲಿಕರು ನನ್ನನ್ನು ಪ್ರಶ್ನೆ ಮಾಡುವದಿದೆ..
"ಹೆಗಡೆಯವರೆ .. ನೀವು ಕೆಲಸಗಾರರ ಮೇಲೆ ಕೂಗುವದಿಲ್ಲವಲ್ಲ.. ! ಯಾಕೆ..? "

ಕೂಗಿದರೆ ಮಾತ್ರ ಅವ ಕಾಂಟ್ರಾಕ್ಟುದಾರ ಅಂತ ಭಾವನೆ ಇದೆ..

ಅಷ್ಟೆಲ್ಲ ಕೂಗಿ..
ನಂತರ ಧಾಟಿ ಬದಲಿಸಿ "ಬನ್ನಿ ಟೀ ಕುಡಿಯೋಣ" ಅಂದಾಗ ದಂಗಾಗಿ ಹೋಗಿದ್ದೆ..

ಬಹಳ ಕಷ್ಟವಾಗಿತ್ತು..
ಅದರೂ ಸುಮ್ಮನಿದ್ದೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಸಂದೀಪ್...

ನನ್ನ ಬ್ಲಾಗಿಗೆ ಸ್ವಾಗತ...

ಎಲ್ಲ ಸಂಬಂಧಗಳ..
ವ್ಯವಹಾರಗಳ ಆರಂಭಗಳು.. ಸಂಶಯದಲ್ಲೇ ಶುರುವಾಗುತ್ತವೆ...

ಕ್ರಮೇಣ ನಂಬಿಕೆ, ವಿಶ್ವಾಸಗಳು ಬೇರುರೂತ್ತವೆ...
ಬೇರೂರ ಬೇಕು...

ಇದು ನಮ್ಮ ವಾಸ್ತವದ, ವ್ಯವಹಾರಿಕ ಜಗತ್ತಿನ ಸತ್ಯ...

ಪ್ರತಿಕ್ರಿಯೆಗೆ ಧನ್ಯವಾದಗಳು...

PARAANJAPE K.N. said...

ಪ್ರಕಾಶರೇ,
ಕೆಲವು ವ್ಯಕ್ತಿಗಳೇ ಹಾಗೆ, ಬಾಯಲ್ಲಿ ಮಾತ್ರ ಬಡ ಬಡ, ಮನಸ್ಸು ಶುದ್ಧ ಇರ್ತದೆ. ಇನ್ನೂ ಕೆಲವರಿರ್ತಾರೆ, ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ನೈಸ್ ಮಾಡಿ ಮಾತಾಡ್ತಾರೆ, ಅವರು ಬೆನ್ನಿಗೆ ಚೂರಿ ಹಾಕೋದು ಗೊತ್ತೇ ಆಗುವುದಿಲ್ಲ, ಬಗೆ ಬಗೆಯ ಜನರಿರುವ ಈ ಲೋಕದಲ್ಲಿ ಕಲಿತಷ್ಟು ಮುಗಿಯುವುದಿಲ್ಲ. ನೀವು ಹೇಳಿದ ಈ ಸತ್ಯ ಘಟನೆಯನ್ನು ಆವತ್ತು ನಿಮ್ಮ ಮನೆಯಲ್ಲಿಯೇ ಕುಳಿತು ಕೇಳಿದ್ದೆನಾದರೂ, ಓದುವುದರಲ್ಲಿ ಮತ್ತೆ ಮಜಾ ಸಿಕ್ತು, ಮು೦ದುವರಿಸಿ.

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ಕೊನೆಗೆ ನೀನೂ ಕೇಳಕ್ಕಾಗಿತ್ತು, ಹೊಟ್ಟೆಗೆ ಏನ್ ತಿನ್ತೀರಿ ನೀವು ಅಂತ :)

ಮನಸು said...

ಹಾ!! ಈ ರೀತಿ ಎಷ್ಟೋ ಸರಿ ಆಗುತ್ತಲಿರುತ್ತೇ ಹೇಗೋ ನಿಭಾಯಿಸಿದಿರಲ್ಲಾ ಬಿಡಿ...

V.R.BHAT said...

ಏರು ಧ್ವನಿಯಲ್ಲಿ ಕೂಗುವವರಿಗೆ ಏನೂ ಉತ್ತರಕೊಡದೇ ಸುಮ್ಮನಿದ್ದು ನೋಡಿ! ಅವರು ಒಂದಷ್ಟು ಹೊತ್ತು ಕೂಗಾಡಿ ಸುಮ್ಮನಾಗಿಹೋಗುತ್ತಾರೆ! ನಮ್ಮದೇನೂ ತಪ್ಪಿಲ್ಲದಿದ್ದ ಪಕ್ಷದಲ್ಲಿ ಯಾವುದಕ್ಕೂ ತಲೆಬಾಗಬೇಕಾದ ಅವಶ್ಯಕತೆಯಿಲ್ಲ, ನ್ನಾನು ಈ ಥರದ ನೂರಾರು ಕೇಸ್ ನೋಡಿದ್ದೇನೆ, ತಾನು ಹ್ಯಾಂಡಲ್ ಮಾಡುವುದು ಮೌನಿಯಾಗಿ! ಆಮೇಲೆ ಪರಿಸ್ಥಿತಿ ಶಾಂತವಾದಮೇಲೆ ತಿಳಿಹೇಳಿದಾಗ ಥ್ಯಾಂಕ್ಸ್ ಹೇಳಿ ಹೋದವರೇ ಬಹುತೇಕರು, ಶಾರ್ಟ್ ಟೆಂಪರ್ ಗೆ ನಮ್ಮಲ್ಲಿ ಔಷಧವಿದೆ!ಧನ್ಯವಾದಗಳು

ಸವಿಗನಸು said...

ಪ್ರಕಾಶಣ್ಣ,
ನಿಮಗೆ ಕೂಗಾಡಲು ಬರುತ್ತಾ...ನಂಬೋಕೆ ಆಗ್ತಾ ಇಲ್ಲ.....ನಿಮ್ಮನ್ನು ನೋಡಿಯೆ ಅವರು ಜೋರು ಮಾಡಿರೋದು....
ಮುಂದುವರೆಸಿ...

ಚಿತ್ರಾ said...

ಪ್ರಕಾಶಣ್ಣ ,
ಈಗ ನಿನ್ನ ಬಣ್ಣ ಯಾವುದು ? ಕಪ್ಪೋ ಬಿಳಿಯೋ ?
ನಿನ್ನ ಅನುಭವದಲ್ಲಿ ಇಂಥಹ ಎಷ್ಟೋ ಜನರನ್ನು ಕಂಡಿರಬಹುದು ಅಲ್ಲವೇ? ಹಿಂದು ಮುಂದಿನದನ್ನು ತಿಳಿದುಕೊಳ್ಳದೆ ಎದುರಿಗಿನವರನ್ನು ಬಯ್ದು ಬಿಡುವುದು. ಕೆಲವರು ವಿಷಯ ತಿಳಿದ ಮೇಲೆ ಕ್ಷಮೆ ಕೇಳಿದರೆ ಇನ್ನೂ ಕೆಲವರು ತಾವೇ ಸರಿ ಎಂದು ವಾದ ಮಾಡುತ್ತಾರೆ ! ಪ್ರಪಂಚವೇ ಹೀಗೆ ! ಬರಲಿ ಮುಂದಿನ ಭಾಗ ..

ಸುಮ said...

ಮೈಬಣ್ಣ ನೋಡಿ ಕೆಲಸದ ಬಗ್ಗೆ ಹೇಳುವುದು...ಹ..ಹ ..ಚೆನ್ನಾಗಿದೆ ಪ್ರಕಾಶಣ್ಣ.

shivu.k said...

ಸರ್,

ಮಾತಾಡುವ ಮೊದಲು ಕೂಗಾಡುವುದು ಮಾತ್ರ ಗೊತ್ತಿರುವ ಜನಗಳಿಗೆ ಹೇಳಿ ತಿಳಿಹೇಳುವುದು. ಎಲ್ಲವನ್ನು ತಾವೇ ತಿಳಿದವರು ಅಂದುಕೊಳ್ಳುವ ಇಂಥವರಿಗೆ ಬುದ್ಧಿ ಬರುವುದು ಯಾವಾಗ? ನನಗೂ ಇಂಥ ಅನುಭವಗಳು ಆಗುತ್ತಿರುತ್ತವೆ..ಚೆನ್ನಾಗಿದೆ...

Jagadeesh Balehadda said...

ಪ್ರಕಾಶಣ್ಣ. ನಿಮ್ಮ ಪ್ರತಿ ಬರವಣಿಗೆಯೂ ಬದುಕಿನ ಒಂದೊಂದು ಆಯಾಮವನ್ನು ನಮಗೆ ತಿಳಿಸುತ್ತಾ ಅದರೊಂದಿಗಿನ ಸೂಕ್ಷ್ಮ ಭಾವನೆಗಳನ್ನು ನಂಮ್ಮೊದಿಗೆ ಹಂಚಿಕೊಂಡಿದ್ದೀರ. ಧನ್ಯವಾದಗಳು.

umesh desai said...

ಹೆಗಡೇಜಿ ಎರಡನೇ ಭಾಗಕ್ಕೆ ಕಾದಿರುವೆ. ಬೇಗ ಬರಲಿ.

ಅನಂತ್ ರಾಜ್ said...

ನಿಮ್ಮ ಲಕ್ಷಣಶಾಸ್ತ್ರ ತು೦ಬಾ ಪರಿಣಾಮಕಾರಿ ಪ್ರಕಾಶ್ ಸರ್. ನಡೆಯುವವನೇ ಎಡುವೋದು ಅ೦ತ ಗಾದೆ ಇದೆಯಲ್ಲ.. ಸಾಮಾಜಿಕ ಸಮಸ್ಯೆಗಳಲ್ಲಿ ತೊಡಗಿಸಿಕೊ೦ಡವರಿಗೆ ಮಾತ್ರ ಇದರ ಅನುಭವ ಆಗೋದು. ನಿಮ್ಮ ಮನಸ್ಸಿನ ನಿಯ೦ತ್ರಣದ ಮಟ್ಟಕ್ಕೆ ಹ್ಯಾಟ್ಸ್ ಆಫ್..ಸರ್.

ಶುಭಾಶಯಗಳು
ಅನ೦ತ್

ಚುಕ್ಕಿಚಿತ್ತಾರ said...

ಕಡಿಗೆ ಅವ್ರೆ "ನೀವು ಏನು ತಿಂತ್ತೀರ್ರಿ..?.. ಮಾರಾಯ್ರೇ..? ..?.." ಹೇಳಿ ಕೇಳಿಸಿಕೊಳ್ಳುವ ಪರಿಸ್ಥಿತಿ ತ೦ದುಕೊ೦ಡ್ರಲ್ಲ....! ಕ್ಷಣಿಕ ಆವೇಶಕ್ಕೊಳಗಾಗಿ.....

Ittigecement said...

ಹಳ್ಳಿ ಹುಡುಗ ತರುಣ್...

ಬದುಕು ಕಲಿಸುವ ಪಾಠವನ್ನು ಯಾವ ಶಾಲೆಯಲ್ಲೂ/ ಕಾಲೇಜಿನಲ್ಲೂ ಕಲಿಸುವದಿಲ್ಲ...
ನಾನು ಕಟ್ಟಿದ ಪ್ರತಿಯೊಂದು ಮನೆಯಲ್ಲೂ ಕಲಿತಿದ್ದೇನೆ..
ಹೆಚ್ಚಿನವು ಸಿಹಿಯಾದ ಅನುಭವಗಳು...

ಕಹಿ ಅನುಭವಗಳು ಬಹಳ ಕಡಿಮೆ...

ಒಬ್ಬೊಬ್ಬ ಮಾಲಿಕರು...
ಅವರ ಸ್ವಭಾವಗಳು ಒಂದೊಂದು ಥರಹ..

ನನ್ನ ಈ ವೃತ್ತಿಗೆ ನನಗೆ ಬಹಳ ಖುಷಿ ಕೊಟ್ಟಿದೆ...

ನಿಮ್ಮ ಸೊಗಸಾದ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು...

balasubramanya said...

ಅನುಭವ ಲೇಖನ ಚೆನ್ನಾಗಿದೆ.ಲೋಕದ ಸಂತೆಯಲ್ಲಿ ಇಂತಹವರೂ ಇರುತ್ತಾರೆ. ಅದ್ಸರೀ ನೀವು ದ್ವನಿ ಏರಿಸಿ ಮಾತಾಡಿದ್ದು ಪ್ರಪಂಚದ ಎಷ್ಟನೇ ಅದ್ಭುತ ??? ಆದರೂ ಪ್ರಕಾಶಣ್ಣಾ...................?? ಎಷ್ಟು ಜೋರಾಗಿ ದ್ವನಿ ಎತ್ತಿರಬಹುದು? !!!!!!!!!!!!!!!!!!!!!!! :-) :-) :-) :-) :-) :-):-

Ittigecement said...

ಆಜಾದು....

ಒಂದು ವಿಷಯ ಹೇಳಲೇ ಬೇಕಾಗಿದೆ...

ನಾನು ೧೯೮೮ ರಲ್ಲಿ ಮೊದಲ ಬಾರಿಗೆ ನೌಕರಿ ಶುರು ಮಾಡಿದೆ..

ಮೊದಲ ದಿನ...
ನನ್ನ ಹಿರಿಯ ಇಂಜನೀಯರ್ ನನ್ನನ್ನು ಕರೆದು ಕೆಲಸ ಹೇಳಿ..
ನಾಲ್ಕು ಜನ ಕೂಲಿಗಳನ್ನು ಕೊಟ್ಟು ಕೆಲಸ ಮಾಡಿಸಲು ಹೇಳಿದರು...

"ಅವರಿಗೆ ಕೆಲಸವನ್ನು ಬಯ್ದು ಹೇಳ ಬೇಕು" ಅಂದರು

ನಾನು ಅವರನ್ನು ಕೆಲಸ ಮಾಡುವ ಜಾಗಕ್ಕೆ ಕರೆದು ಕೊಂಡು ಹೋಗಿ
ಜೋರಾಗಿ...

"ನೋಡ್ರೀ.. ಈ ಕೆಲಸ ಜಲ್ದಿ ಜಲ್ದಿ ಮಾಡಿ ಮುಗಿಸ ಬೇಕು.."
ಅಂತ ಜಬರ್ ದಸ್ತಾಗಿ ಹೇಳಿದೆ...

ಅವರೆಲ್ಲ ಬಿದ್ದು ಬಿದ್ದು ನಗಲು ಶುರು ಮಾಡಿದರು...!

ನನಗೆ ಆಶ್ಚರ್ಯ.. !

ಅಷ್ಟರಲ್ಲಿ ಬಂದ ನನ್ನ ಕಲೀಗ್ ಒಬ್ಬರು...
" ಬೋ.. ಮಕ್ಕಳ್ರಾ.. ಕೆಲಸ ಮಾಡೋದು ಬಿಟ್ಟು ನಗ್ತೀರಾ..?
ಆ ಮಕ್ಕಳ್ರಾ.. ಈ ಮಕ್ಕಳ್ರಾ.."
ಅಂತೆಲ್ಲ ದಬಾಯಿಸಿದರು...

ಆಗ ಆ ಕೂಲಿಯವರು...
"ಇಂಜನೀಯರ್ ಸಾಹೇಬ್ರೆ... ಬಯ್ಯದು ಅಂದ್ರೆ ಹೀಗಿರಬೇಕು...
ಹಾಂಗಂದ್ರೆ ಮನಸ್ಸಿಗೆ ನಾಟ್ತದೆ.. "
ಅಂತ ನನಗೆ ಉಪದೇಶ ಹೊಡೆದಿದ್ರು...

ಇತ್ತೀಚೆಗೆ ನಾನೂ ಬಯ್ಯೋದು ರೂಢಿ ಮಾಡ್ಕೋಂಡಿದ್ದೀನಿ ಕಣಪಾ...
ಆದರೆ..
ಆ ಥರಹ ಸಂಸ್ಕೃತ ಶಬ್ಧಗಳು ಬರೋದಿಲ್ಲ...

ಹ್ಹಾ..ಹ್ಹಾ..

Ittigecement said...

ನಾಗರಾಜು...

ನಾವು ನಮ್ಮ ಜೀವಮಾನವಿಡಿ..
ನಮ್ಮ ಪಕ್ಕದವರನ್ನು "ಅರ್ಥ" ಮಾಡಿಕೊಳ್ಳುವದರಲ್ಲೇ.. ಸಮಯ ಕಳೆಯುತ್ತೇವೆ...
ಆದರೂ ..
ಯಾರೊಬ್ಬರೂ ಅರ್ಥವೇ ಆಗಿರೋದಿಲ್ಲ..
ಹೆಚ್ಚಿನ ಬಾರಿ "ನಮಗೆ ನಾವೇ ಅರ್ಥವಾಗಿರೋದಿಲ್ಲ" ಅಲ್ಲವೆ?

ಈ ಹಿರಿಯರದು ಬೇರೆ ಕೇಸು...
ಮುಂದಿನ ಭಾಗದಲ್ಲಿ ಬರೆಯುವೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ಜೈ ಹೋ...

Ittigecement said...

ಕೃಷ್ಣಮೂರ್ತಿಯವರೆ...

ನಾವು ತಿನ್ನೋದಕ್ಕೂ...
ನಾವು ಮಾಡೋ ಕೆಲಸಕ್ಕೂ...
ನಮ್ಮ ಸ್ವಭಾವಕ್ಕೂ ನಂಟು ಇದೆ ಅಲ್ಲವೆ?

ಹಾಗಾಗಿ ಆ ಹಿರಿಯರು ಈ ಥರಹ ಬಯ್ದಿರ ಬಹುದು...

"ನೀವು ಏನ್ ತಿಂತ್ತೀರೀ ಮಾರಾಯ್ರೆ..?"

ಬೆಳ್ಳ್ಂಬೆಳಿಗ್ಗೆ..
ಈ ಥರಹ ಸುಪ್ರಭಾತ ಕೇಳಿಬಿಟ್ಟರೆ ಆ ದಿನದ ಬದುಕು ಸಾರ್ಥಕ ಅಲ್ಲವಾ?

ನಾನಂತೂ ಕಂಗಾಲಾಗಿ ಹೋಗಿದ್ದೆ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ದಿನಕರ್..

ನನಗೆ ನನ್ನ ವೃತ್ತಿಯ ಬಗೆಗೆ ಬಹಳ ಖುಷಿಯಿದೆ..
ಮನೆ ಕಟ್ಟುವದು ಪ್ರತಿಯೊಬ್ಬ ರ ಜೀವಮಾನದ ಕನಸು...

ಎಲ್ಲರ ಬದುಕಿನ ಸಾರ್ಥಕತೆಗಳಲ್ಲಿ ಇದೂ ಒಂದು...

ಹಾಗಾಗಿ ಪ್ರೀತಿಯಿಂದ, ಗೌರವದಿಂದ ಕಟ್ಟುತ್ತೇನೆ...

ಏನೇ ಇದ್ದರೂ...
ಇದೂ ಕೂಡ ಒಂದು ವ್ಯವಹಾರವಾದ್ದರಿಂದ...
ಕೆಲಸ ಸರಿಯಾಗಿ ಮಾಡಿಕೊಟ್ಟು...
ವ್ಯವಹಾರಸ್ಥನಾಗಿರಬೇಕಾದ ಅನಿವಾರ್ಯತೆಯೂ ಇದೆ...

ನಾನು ಧ್ವನಿ ಏರಿಸಿ ಮಾತನಾಡುತ್ತೇನೆ...
ನನಗೆ ಮನಸ್ಸಿಲ್ಲದಿದ್ದರೂ...
ನನ್ನ ವೃತ್ತಿಗೆ "ಧ್ವನಿ ಏರಿಸಿ ಮಾತನಾಡುವ ಅನಿವಾರ್ಯತೆ... ಇರಲೇ ಬೇಕಾಗಿದೆ"

ಹ್ಹಾ..ಹ್ಹಾ...

ಪ್ರತಿಕ್ರಿಯೆಗ್ಗಳಿಗೆ ಧನ್ಯವಾದಗಳು...

ಜೈ ಹೋ...

Ittigecement said...

ಜಿತೇಂದ್ರ...

ಈ ವೃತ್ತಿಯ ಹೆಚ್ಚಿನ ಕ್ಷಣಗಳಲ್ಲಿ..
"ಈ ಕೆಲಸಕ್ಕೆ ಇನ್ನಷ್ಟು ಮರ್ಯಾದೆ ಸಿಗಬೇಕಿತ್ತು" ಎಂದು ಅನ್ನಿಸುತ್ತಿರುತ್ತದೆ...

"ಕಾಂಟ್ರಾಕ್ಟರ್ ಅಂದರೆ ಯಾಕೆ ಅಸ್ಪರ್ಶರು..?
ಕೇವಲ ಹಣಕ್ಕಾಗಿ ಏನು ಬೇಕಾದರೂ ಮಾಡಿಬಿಡುತ್ತಾರೆ...
ಎನ್ನುವ ವಿಚಾರ ಯಾಕೆ ಮಾಲಿಕರ ಮನದಲ್ಲಿ ಕೂತುಬಿಟ್ಟಿದೆ?"
ಅಂತೆಲ್ಲ ಬಹಳ ಬೇಸರವಾಗುತ್ತದೆ...

ನೀವು ಯಾಕೆ ಮಾಜಿ..ಕಾಂಟ್ರಾಕ್ಟರ್..?
ಹಾಲಿ ಅಲ್ಲ? ತಿಳಿಸುವಿರಾ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪರಾಂಜಪೆಯವರೆ...

ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ...

ಕೆಲವರ ಮಾತು ನಡೆ, ನುಡಿಗಳಿಗೂ..
ಅವರ ಸ್ವಭಾವಕ್ಕೂ ಅಜಗಜಾಂತರ ಇರುತ್ತದೆ...

ಯಾಕೆ ಈ ರೀತಿಯ ಮುಖವಾಡ..?

ಹಾಗಾಗಿ ನಿಷ್ಠೂರವಾದಿಗಳು ಇಷ್ಟವಾಗಿಬಿಡುತ್ತಾರೆ...
ಆ ಕ್ಷಣದಲ್ಲಿ ಸ್ವಲ್ಪ ಬೇಸರವಾದರೂ....
ಅಂಥವರ ಮನದಲ್ಲಿ ಕಪಟತನವಿರುವದಿಲ್ಲ...
ಒಳಗೊಂದು..ಹೊರಗೊಂದು ಇದ್ದಿರುವದಿಲ್ಲ... ಅಲ್ಲವಾ?

ನಿಜ.. ಆದಿನ ನೀವೆಲ್ಲ ಮನೆಗೆ ಬಂದಾಗ ಈ ಘಟನೆ ಹೇಳಿದ...
ಆ ಸುಂದರ ಕ್ಷಣಗಳು ಇನ್ನೂ ಹಸಿರಾಗಿದೆ...

ಚಂದದ ಪ್ರತಿಕ್ರಿಯೆಗೆ ಧನ್ಯಾವದಗಳು...

Ittigecement said...

ಶರತ್...

ಹ್ಹಾ..ಹ್ಹಾ...!
"ನೀವು ಏನು ತಿಂತ್ತೀರ್ರೀ..?" ಅಂತ ಕೇಳಬಹುದಿತ್ತು...

ಅದರೆ ಅವರ ಹಿರಿತನ...
ಕೆಲಸದ ಬಗೆಗಿನ ಸಣ್ಣ ಹೆದರಿಕೆ ಆಥರಹ ಕೇಳಲು ಹಿಂದೇಟು ಹಾಕಿದೆ...

ಆದರೆ ಇದರ ಮುಂದಿನ ಘಟನೆ ನನಗಂತೂ ಮರೆಯಲಾಗದ ಅನುಭವ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮನಸು...

ನಿಜ ನಿಜ...
ನಮ್ಮ ಬದುಕುಕಿನಲ್ಲಿ ಬೇಡವೆನಿಸಿದರೂ...
ಬದುಕು ಕಲಿಸುತ್ತಲೆ ಇರುತ್ತದೆ... ಪ್ರತಿಕ್ಷಣದಲ್ಲೂ ಹೊಸದೊಂದು ಪಾಠ.. !

ಅಂಥವುಗಳನ್ನು ನಮಗೆ ಅರಿವಿಲ್ಲದಂತೆ ನಿಭಾಯಿಸುತ್ತಿರುತ್ತೇವೆ...
ಅಲ್ಲವೆ...?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ವಿ. ಆರ್. ಭಟ್ಟರೆ...

ನಿಜ ಸುಮ್ಮನಿರುವದು ಬಹಳ ಒಳ್ಳೆಯ ಔಷಧ...

ಹಾಗಾಗಿಯೆ ನಮ್ಮ ಹಿರಿಯರು ಹೇಳೀದ್ದು "ಮೌನ ಬಂಗಾರ" ಅಂತ...

ಆದರೆ ಎಷ್ಟೆಂದು ಸುಮ್ಮನಿರ ಬಹುದು...?
ಅವಮಾನವಲ್ಲವೆ?

ಹಾಗಾಗಿ ಆ ಒಂದುಕ್ಷಣ ನನ್ನ ಪ್ರತಿಕ್ರಿಯೆ ಅಂತ ಜೋರಾಗಿ ನಾನೂ ಸಹ ಕೂಗಾಡಿಬಿಟ್ಟೆ...

ಅದು ಬಹುಷಃ ಅವರಿಗೆ ನಾಟಿತು...

ಅಲ್ಲಿಯವರೆಗೆ ಅವರೊಬ್ಬರೇ..
"ಏನು ತಿಂತ್ತೀರ್ರೀ ಮಾರಾಯ್ರೆ..?" ಅಂತ ಹೇಳ್ತಾ ಇದ್ದರು...

ಇದರ ಮುಂದಿನ ಘಟನೆ ಒಂದು ಮರೆಯಲಾಗದ ಅನುಭವ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಸವಿಗನಸು.. ಮಹೇಶು...

ಹೆಚ್ಚಿನ ಸಂದರ್ಭಗಳಲ್ಲಿ ನಾನು ಕೂಗಾಡ ಬೇಕಾಗಿಯೇ ಇಲ್ಲ...

ನನ್ನ "ಆಕೃತಿ" ಮಾತನಾಡಿಬಿಟ್ಟಿರುತ್ತದೆ..
ಬಹುಷಃ ನನ್ನಂಥವರ ಆಕೃತಿ ನೋಡಿಯೇ ಹೇಳೀರ ಬಹುದು...

" SIZE... MATTERS..."
ಅಂತ....
ಹ್ಹಾ..ಹ್ಹಾ...!

ನಾನು ಕೂಗಾಡದಿದ್ದರೆ ಕೆಲಸವಾಗುವದಿಲ್ಲ...
ಕೂಗಾಡುವ ಅನಿವಾರ್ಯತೆ ನನ್ನ ವೃತ್ತಿಗೆ ಬೇಕಾಗಿದೆ...
ಹೆಚ್ಚಿನ ಸಂದರ್ಭಗಳಲ್ಲಿ ಕೂಗುವದನ್ನು "ಅವಾಯ್ಡ್" ಮಾಡುತ್ತೇನೆ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಚಿತ್ರಾ...

ಈಗ ನನ್ನ ಬಣ್ಣ ಕಪ್ಪಾಗಿದೆ...
ಹೊಸ ಪ್ರಾಜೆಕ್ಟ್ ಶುರುವಾಗಿದೆ... ಹ್ಹಾ..ಹ್ಹಾ...

ಹೊಸ ಪ್ರಾಜೆಕ್ಟು ಶುರುವಿನಲ್ಲಿ ಮಾರ್ಕಿಂಗ್, ಫೌಂಡೆಷನ್ ಕೆಲಸಗಳು... ನಡೆಯುತ್ತಿರುತ್ತವೆ..

ಅಗ ತಲೆಯ ಮೇಲೋಮ್ದು ಸೂರು...
ನೆರಳು ಇದ್ದಿರುವದಿಲ್ಲ... ಹಾಗಾಗಿ "ಗ್ಯಾರೆಂಟಿ" ಕಲರ್ ಬಂದುಬಿಡುತ್ತದೆ...

ನನಗೆ ಕೂಗಾಡಿ ಮಾತನಾಡುವವರು ಅಂದರೆ ಬಹಳ ಇಷ್ಟ...
ಅತ್ಯಂತ ಪ್ರೀತಿ...
ಅವರನ್ನು ಇಷ್ಟ ಪಡುತ್ತೇನೆ ಅನ್ನುವದಕ್ಕಿಂತ..
ಇಷ್ಟವಾಗಿಬಿಡುತ್ತಾರೆ...

ಯಾಕೆಂದರೆ ಅಂಥವರಲ್ಲಿ "ಕಪಟ" ಇದ್ದಿರುವದಿಲ್ಲ.. ಅಲ್ಲವೆ?

ಪ್ರೋತ್ಸಾಹಕ್ಕೆ ಧನ್ಯವಾದಗಳು..

ಮನಮುಕ್ತಾ said...

prakaashanna,
aa manuShyaru modalu tapputiluvalikeyinda sittumaadi kugaadidaru nantara shaantavadaralla..ade avarige nimma mele sittilla embudannu tOrisuttade.edurige kandaddakkinta nijavaada bhaavane enide embudu mukya.
anivaaryavaagi avarige nivu kotta pratikriyeyU kelavomme avashyakave.

ಪ್ರವೀಣ್ ಭಟ್ said...

Hi prakashanna...

navu mettagiddastu avara regata jasti agtha hogthu. navu joru ayakkagtu kelvondu sala. banna nodi kelsa yava hantadalli iddu helodu.. mast mast..

Pravi

ಸೀತಾರಾಮ. ಕೆ. / SITARAM.K said...

ಎಲ್ಲವನ್ನೂ ತೂಗಿಸುವ ತಮ್ಮ ಪ್ರಜ್ಞೆಗೇ ವಂದನೆಗಳು. ಮುಂದಿನ ಕುತೂಹಲ ಭಾಗಕ್ಕೆ ಕಾಯುತ್ತಿರುವೆ. ಓದಲು ತಡವಾಗಿದ್ದಕ್ಕೆ ಕ್ಷಮೆ ಇರಲಿ.

ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ಆ ದಿನ ನಿಮ್ಮ ಮನೆಯಲ್ಲಿನ ಭೇಟಿಯ ನೆನಪಾಯಿತು. ಆಗ ಈ ಪ್ರಹಸನ ತಿಳಿಸಿದ್ದಿರಿ. ಆದರೆ, ಅದಕ್ಕೆ ಬರವಣಿಗೆಯ ಚೌಕಟ್ಟು ಕೊಟ್ಟದ್ದು ಮತ್ತೂ ಚೆನ್ನಾಗಿದೆ.
ಹೀಗೆಯೆ ಸಾಗಲಿ ನಿಮ್ಮ ವೃತ್ತಿಯ ಅನುಭವಗಳ ಬರವಣಿಗೆ.

ಚಂದ್ರು

Gubbachchi Sathish said...

ಮನುಷ್ಯನ್ನನ್ನು ಮನುಷ್ಯನೇ ಅರ್ಥಮಾಡಿಕೊಳ್ಳದ ಮೇಲೆ, ಮನುಷ್ಯ ಸೃಷ್ಟಿಸುವ ಯಂತ್ರ ಅರ್ಥಮಾಡಿಕೊಳ್ಳಬಲ್ಲದೇ?
ಅವರಿಗೆ ನಿಮ್ಮ ಕೆಲಸದ ವಿಧಾನದ ಬಗ್ಗೆ ತಿಳಿದಿಲ್ಲವಲ್ಲಾ ಅದೇ ಸಮಸ್ಯೆ.

ಸುಧೇಶ್ ಶೆಟ್ಟಿ said...

Odhuttiruvanthe aa vyakthiya bagge nange irritate aayithu.. innu nimge hege aagirbeku antha imagine maadkobahudu!

aa manashyanige thanna thappina arivaagi sorry keLida thaane nimma baLi..

mundina bhaagakke kaayutta...

pavi said...

Namaskara..

Jeevanadalli nadeyuva aneka gatanegalu vichitravagiruvantahadu. inta anubhavagalu nanagu agive. navu mettagiddastu nammannu tuliyuvavara sanke hechhu. melettalu yaru kuda yatnisuva gojige hoguvadilla. Bekadare Mtteradu kallu hodedu hoguvavara sankr ati hechhu. alva Anna?

Ittigecement said...

ಸುಮಾ...

ನಮ್ಮ ಮೈ ಬಣ್ಣ ಹಾಗಿರಲಿ...
ನಮ್ಮ ಶೂಗಳ ಕುರಿತು ಮೆಗಾ ಸಿರಿಯಲ್ ಮಾಡ ಬಹುದು...

ರೂಫ್ ಕಾಂಕ್ರೀಟ್ ಇರುವ ದಿನ ನನ್ನಾಕೆ ನನಗೆ ಪ್ರತ್ಯೇಕ ಡ್ರೆಸ್ ಮತ್ತು ಶೂ ಇಟ್ಟುಬಿಟ್ಟಿದ್ದಾಳೆ..
ಅವುಗಳನ್ನು ಮತ್ತೆ ಬೇರೆ ದಿನಗಳಲ್ಲಿ ಹಾಕುವಂತಿಲ್ಲ...

ಕಾಂಕ್ರೀಟ್ ಮುಗಿದ ಕೂಡಲೆ ಮನೆಗೆ ಬಂದು ಸ್ನಾನವಾದ ಮೇಲೆಯೆ ಮಾತುಕತೆ...

ನಮ್ಮದು ಬಿಳಿ ಕಾಲರ್ ಕೆಲಸವಲ್ಲ...
ಕೆಲಸಕ್ಕೆಂದು ಹೋದ ಮೇಲೆ ಮೈ ಗಲೀಜಾಯಿತು..
ಸಿಮೆಂಟು ತಾಗಿತೆಂದು ನೋಡುತ್ತ ಕುಳಿತುಕೊಳ್ಳಲು ಆಗುವದಿಲ್ಲವಲ್ಲ..

ಇಟ್ಟಿಗೆ ಸಿಮೆಂಟಿನ ಬದುಕು ಇದು...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವು ಸರ್...

ಸರಿಯಾಗಿ ಹೇಳಿದ್ದೀರಿ...

ಹಾಗೆಲ್ಲ ಕೂಗುವದು, ಗಲಾಟೆ ಮಾಡುವದು ಅಷ್ಟಾಗಿ ಹಿಡಿಸುವದಿಲ್ಲ...

ಕೆಲವೊಮ್ಮೆ ನಮ್ಮ ವ್ಯವಹಾರದಲ್ಲಿ ಇವನ್ನೆಲ್ಲ ಸಹಿಸಿಕೊಳ್ಳಬೇಕಾಗುತ್ತದೆ.. ಅಲ್ಲವೆ?

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಜಗದೀಶ್...

ನನಗೆ ಸಿಕ್ಕ ಪ್ರತಿಯೊಬ್ಬ ಮನೆ ಮಾಲಿಕರು ಒಂದೊಂದು ಥರದವರು...
ಒಳ್ಳೆಯ ಮನೆಕಟ್ಟಲು ಹೇಣಗಾಡುತ್ತೇನೆ...
ಚಂದವಾಗಿ ಬರಲೆಂದು... ಅವರಿಗೆ ಖುಷಿಯಾಗಲೆಂದು...

ಇಲ್ಲಿ ವ್ಯವಹಾರದ ಜೊತೆಗೆ ಅವರ ಸ್ವಭಾವವನ್ನೂ ಅರಿತುಕೊಳ್ಳುವ ಅನಿವಾರ್ಯತೆ ಬಹಳ ಇದೆ..

ಹೆಚ್ಚಿನ ಸಂದರ್ಭಗಳಲ್ಲಿ ಅವರ ಮನ ಗೆದ್ದಿದ್ದೇನೆ...

ಅರಿತುಕೊಳ್ಳಲು ಫೇಲಾಗಿದ್ದೂ ಇದೆ...

ಸುಂದರವಾದ ಪ್ರತಿಕ್ರಿಯೆಗೆ ಧನ್ಯವಾದಗಳು...

ಜೈ ಹೋ...

* ನಮನ * said...

ಚೆನ್ನಾಗಿದೆ .ನನಗಂತೂ ಇಂಥದ್ದೆಲ್ಲ ಕೇಳಿ ಕೇಳಿ ಸಾಕಾಗಿಹೋಗಿದೆ ಸರ್.

Ittigecement said...

ಉಮೇಶ್ ಜೀ...

ಮನಸ್ಸನ್ನು ಅರ್ಥ ಮಾಡಿಕೊಳ್ಳುವದು ಕಷ್ಟ...
ಬೇರೆಯವರದ್ದು ಹಾಗಿರಲಿ...
ಕೆಲವೊಮ್ಮೆ ನಮ್ಮದೂ ನಮಗೆ ಅರ್ಥವಾಗಿರುವದಿಲ್ಲ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅನಂತ್ ರಾಜ್ ಸರ್...

ಬದುಕು ನಮ್ಮನ್ನು ಬೇಯಿಸಿ ಒಂದು ಹದಕ್ಕೆ ತರುತ್ತದೆ...
ಅಲ್ಲಿ ಹದವಾಗದೇ ಇದ್ದರೆ ನಮಗೇ ಕಷ್ಟ...

ನಾವು ಬದಲಾಗಲೇ ಬೇಕು...
ಎಷ್ಟೇ ಕೋಪವಿದ್ದರೂ... ತಾಳ್ಮೆ ತಂದುಕೊಳ್ಳಲೇ ಬೇಕು...
ಬದುಕು ಕಲಿಸುತ್ತದೆ... ಅಲ್ಲವೆ?

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಚುಕ್ಕಿ ಚಿತ್ತಾರ...

ನಿಜ ನಮ್ಮೊಳಗಿನ ಕೋಪವನ್ನು ಮಾತಲ್ಲಿ ಹರಿಯಬಿಡಬಾರದು...
ಸಿಟ್ಟು ತನ್ನ ವೈರಿ...
ಶಾಂತಿ ಪರರ ವೈರಿ...

ಇದು ಕನ್ನಡದ ಹಳೆಯ ಗಾದೆ...

ನನಗೆ ಅಸಾಧ್ಯ ಕೋಪ ಬಂದರೂ... ಆದಷ್ಟು ಕಷ್ಟಪಟ್ಟು ತಡೆದು ಕೊಂಡೆ...

ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಬಾಲು ಸರ್....

ಈ ಘಟನೆಯ ಪೂರ್ತಿ ಭಾಗ ನಿಮಗೆ ಗೊತ್ತಿದೆ...
ನಮ್ಮನೆಗೆ ಬಂದಾಗ ನಿಮಗಿದನ್ನು ಹೇಳಿದ್ದೆ...

ಏನೇ ಹೇಳೀದರೂ ಮನುಷ್ಯನ ಸ್ವಭಾವನ್ನು ಅರಿಯುವದು ಬಹಳ ಕಷ್ಟ.. ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ವಸಂತ್.....

ನೀವು ಕಳಿಸುವ ಸಂದೇಶಗಳು ತುಂಬಾ ಸೊಗಸಾಗಿರುತ್ತದೆ...
ಎಲ್ಲಿಂದ ತರುತ್ತೀರಿ ಅಂಥಹ ನುಡಿಗಳನ್ನು ?

ಸಿಕ್ಕಾಪಟ್ಟೆ ಕೂಗಾಡಿ...
ನಂತರ ಹೆಗಲ ಮೇಲೆ ಕೈ ಹಾಕಿ "ಬನ್ನಿ ಟೀ ಕುಡಿಯೋಣ"
ಅಂದಾಗ ನಾನು ದಂಗಾಗಿ ಹೋಗಿದ್ದೆ.... !

ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಮನಮುಕ್ತಾ...

ಆ ವ್ಯಕ್ತಿ ದುಡುಕಿದ...
ಕೋಪದಿಂದ ಎರಡು ಮಾತನಾಡಿದ ನಿಜ...

ಆದರೆ ಅವನ ಸ್ವಭಾವ ಗೊತ್ತಾಗುವದಿಲ್ಲವಲ್ಲ....

ಮಾತನಾಡುವದಕ್ಕೂ...
ಮನುಷ್ಯನ ಸ್ವಭಾವಕ್ಕೂ ಬಹಳ ವ್ಯತ್ಯಾಸವಿರುತ್ತದೆ ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರವೀಣ್...

ನೀವೆನ್ನುವದು ನಿಜ...
ರೇಗಾಡುವವರ ಎದುರಿಗೆ ಸುಮ್ಮನಿದ್ದರೆ...
ಅವರ ಕೂಗಾಟ ಇನ್ನೂ ಜಾಸ್ತಿಯಾಗಿಬಿಡುತ್ತದೆ.....
ಅದಕ್ಕೆ ಪ್ರತಿಯಾಗಿ ನಾವೂ ಸ್ವಲ್ಪ "ಆವಾಜ್" ಹಾಕಿದರೆ ಸ್ವಲ್ಪ ಮೆತ್ತಗಾಗುತ್ತಾರೆ...

ಪ್ರತಿಕ್ರಿಯೆಗೆ ಧನ್ಯವಾದಗಳು....
ದಯವಿಟ್ಟು ಬರುತ್ತಾ ಇರಿ....

ಪ್ರಕಾಶಣ್ಣ...

Ittigecement said...

ಸೀತಾರಾಮ್ ಸರ್...

ನೀವು ಬರಲು ತಡವಾದುದ್ದಕ್ಕೆ ಸ್ವಲ್ಪವೂ ಬೇಸರವಿಲ್ಲ...
ಬಂದು ಪ್ರೋತ್ಸಾಹಿಸಿದ್ದೀರಲ್ಲ ಅನಂತ ಅನಂತ ಧನ್ಯವಾದಗಳು...

ಜೈ ಹೋ....

Ittigecement said...

ಕ್ಷಣ ಚಿಂತನೆ... ಚಂದ್ರು...

ನೀಮ್ಮೆಲ್ಲರೊಡನೆ ಹರಟಿದ ಆದಿನದ ಸಮಯ ತುಂಬಾ ಮಜವಾಗಿತ್ತು...
ಇಂಥಹ ಒಳ್ಳೆಯ ಸ್ನೇಹಿತರನ್ನು ಕೊಟ್ಟ ಬ್ಲಾಗ್ ಲೋಕಕ್ಕೆ ಎಷ್ಟು ಕೃತಜ್ಜತೆ ಹೇಳಿದರೂ ಸಾಲದು ಅಲ್ಲವೆ?

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಜೈ ಹೋ....

Ittigecement said...

ಗುಬ್ಬಚ್ಚಿ ಸತೀಶ್...

ಇಲ್ಲಿ ಸಮಸ್ಯೆ ಎಂದರೆ ನಮ್ಮ ವೃತ್ತಿಯಲ್ಲಿನ ಗುತ್ತಿಗೆ ದಾರರ ಸ್ವಭಾವ...
ಮೋಸ ಜಾಸ್ತಿ...
ಯಾರು ಬೇಕಾದರೂ ಕಾಂಟ್ರಾಕ್ಟುದಾರರಾಗಿಬಿಡುತ್ತಾರೆ..

ಒಂಥರಾ "ರಾಜಕೀಯ ಕ್ಷೇತ್ರದ ಥರಹ ಇದು...

ಹಾಗಾಗಿ ಸಂಶಯ ಸಹಜವಾಗಿಬಿಟ್ಟಿದೆ...

ಅದು ಅವರ ತಪ್ಪಲ್ಲ...

ನನ್ನ ಮೇಲೆ ಸಂಶಯ ಪಡುವವರ ಮೇಲೆ ಬೇಸರವೂ ಇಲ್ಲ...

ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸಧ್ಯದಲ್ಲೇ ನಿಮ್ಮೆಲ್ಲರ ಬ್ಲಾಗುಗಳಿಗೆ ಬರುವೆ...

ಧನ್ಯವಾದಗಳು...

Ittigecement said...

ಸುಧೇಶ್...

ನನಗೂ ಇವರೊಡನೆ ಒಂಥರಾ ಕಿರಿಕಿರಿ ಅನಿಸಿದ್ದು ನಿಜ...

ಅದರೆ..
ಕೂಗಾಡುತ್ತಾರೆ ಅನ್ನುವದು ಅವರ ಸ್ವಭಾವದ "ಮಾನದಂಡವಲ್ಲ" ಅಲ್ಲವೆ?

ಇದರ ಮುಂದಿನ ಭಾಗವನ್ನು ದಯವಿಟ್ಟು ಓದಿ...

ಪ್ರೋತ್ಸಾಹಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ಪ್ರೀತಿಯ ಪವಿ...

ನಿಜ...
ಬದುಕು ನಮ್ಮನ್ನು ಬೇಯಿಸುತ್ತದೆ...

ಮೆತ್ತಗಿದ್ದಲ್ಲಿ ಇನ್ನೊಂದಷ್ಟು ಅಗೆಯುತ್ತಾರೆ...
ಗಟ್ಟಿಯಾದ ನೆಲದಲ್ಲಿ ಅಗೆಯುವದು ಕಷ್ಟ ಅಲ್ಲವೆ?

ನಾವೂ ಕೂಡ ಗಟ್ಟಿಯಾಗ ಬೇಕು...

ಬದುಕು ಬೇದವೆಂದರೂ ಒಂದಷ್ಟು ಪಾಠ ಕಲಿಸಿಬಿಡುತ್ತದೆ...

ನನ್ನ ಬ್ಲಾಗಿಗೆ ಸ್ವಾಗತ...

ಪ್ರತಿಕ್ರಿಯೆಗೆ ಧನ್ಯವಾದಗಳು...

ದಯವಿಟ್ಟು ಬರುತ್ತಾ ಇರಿ...

Ittigecement said...

ನಮನ ಗಣೇಶ್...

ಬದುಕಿನಲ್ಲಿ ಸಿಗುವ ಪ್ರತಿಯೊಬ್ಬ ವ್ಯಕ್ತಿಯೊಡನೆಯ ಅನುಭವ ವಿಚಿತ್ರ ...
ಮತ್ತು ವಿಶಿಷ್ಟ...

ಒಬ್ಬಬ್ಬರ ಅನುಭವ ಒಂದೊಂದು ಬಗೆ..

ಅನುಗಾಲವೂ ಕಲಿಯುತ್ತಲೇ ಇರಬೇಕಾಗುತ್ತದೆ...

ಏನೇ ಆದರೂ...
ಕೂಗುವದು.. ರೇಗಾಡುವದು... ಸಹಿಸಲು ಬಹಳ ಕಷ್ಟ...

ದಯವಿಟ್ಟು ಇದರ ಮುಂದಿನ ಭಾಗ ಓದಿರಿ...


ಪ್ರತಿಕ್ರಿಯೆಗೆ ಧನ್ಯವಾದಗಳು...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನಮ್ಮ ಕಡೆ ಹೇಳ್ತರಾಲ್ಲ
''ಬಗ್ಗಿದವನಿಗೆ ೪ ಗುದ್ದು ಜಾಸ್ತಿ ''ಅಂತ

ಹಾಗೆ ಇದು
ನಾವು ಸುಮ್ಮನಿದ್ದರೆ ಎಲ್ಲರೂ ನಮ್ಮನ್ನು ಆಳುವವರೇ

ಮನದಾಳದಿಂದ............ said...

ಪ್ರಕಾಶಣ್ಣ,
ಹಿಂದಿಯಲ್ಲೊಂದು ಮಾತಿದೆ,
ತುಮ್ ಜಿತ್ನಾ ದಬೋಗೆ ಲೋಗ್ ತುಮೆ ಉತ್ನಾಹೀ ದಬಾತೆ ಹೈ!
ಇದೂ ಹಾಗೆ, ನೀವು ಜೋರಾದ್ರಿಂದ ಪಾರ್ಟಿ ತಣ್ಣಗಾಯ್ತು. ಇಲ್ಲದಿದ್ರೆ ಇನ್ನೂ ಏನೇನು ಹೇಳ್ತಾ ಇದ್ರೋ?