Sunday, April 19, 2009

ಹೀಗೂ... ಆಗಿರಬಹುದಲ್ಲ...! (ಭಾಗ ೩)


ಊರಿಗೆ ಬಂದಿದ್ದೆ... ಮಲೆನಾಡಾದದರೂ ಸೆಖೆ ಇತ್ತು...
ಆಗಾಗ ಬೀಸುವ ಗಾಳಿಯಿಂದಾಗಿ ಸೆಖೆಯೂ ಸುಖವಾಗಿತ್ತು...

ನಾಗು ನಮ್ಮನೆಗೆ ಫೋನ್ ಮಾಡಿದ್ದ....
"ಪ್ರಕಾಶು ಕೆಲಸದ ಫಲಿತಾಂಶ "ಹಣ್ಣು"
ವಿಳಾಸ ಸಿಕ್ಕಿದೆ... ಸಿದ್ದಾಪುರದ ಹತ್ತಿರ "ಹಾರ್ಸಿಕಟ್ಟಾ..." ಹಳ್ಳಿ...
ನಾಳೆ ನಮ್ಮನೆಗೆ ಬಾ..
ಆಶಾಳನ್ನು ಕರೆದು ಕೊಂಡು ಬರುವ ವಿಚಾರ ನಿಂಗೆ ಬಿಟ್ಟಿದ್ದೇನೆ....."

ಎಲ್ಲ ಎಣಿಸಿದಂತೆ ಆಗುತ್ತಿದೆ...!

ನಾಳೆ ಏನಾಗ ಬಹುದು...?

ಹಳ್ಳಿಯಲ್ಲೇ ಇದ್ದಾಳಾ...?
ರೈತನೊಂದಿಗೆ ಮದುವೆಯಾಗಿದೆಯಾ...?

ನನ್ನಂತೆ ಭಾವುಕತೆ ಅವಳಿಗಿಲ್ಲದಿರಬಹುದು..

ಹಳ್ಳಿಯಲ್ಲಿ ಅಡಿಗೆ ಮನೆ, ತೋಟದಲ್ಲಿ ..
ಕೊಟ್ಟಿಗೆ ಮನೆಯಲ್ಲಿ ಹಸು, ಎಮ್ಮೆಗಳ ಜೊತೆಯಲ್ಲಿ...
ಅವಳ ಭಾವಗಳು.., ಓದಿದ ಸಾಹಿತ್ಯ..,
ಜೀವನದ ರೀತಿ..
ಬದುಕಿನ ನೋಟವನ್ನು ಬದಲಾಯಿಸಿರ ಬಹುದಲ್ಲ...!

ತೋಟ, ಗಂಡ, ಅಡಿಗೆ ಮನೆ.. ಮಕ್ಕಳು..ಹಸು.., ಎಮ್ಮೆ....
ಅವಳ ಬದುಕಿನ ಮುಖ್ಯ ವಿಷಯ ಆಗಿರ ಬಹುದು....

ಅವಳಿಗೆ ಖಂಡಿತ ನನ್ನ ಗುರುತು ಸಿಗುವದಿಲ್ಲ...
ಅಂಥಹ ಮುಜುಗರ ಸನ್ನಿವೇಶದಲ್ಲಿ ಆಶಾ ಇಲ್ಲದಿರುವದು ಉತ್ತಮ....
ಮತ್ತೊಮ್ಮೆ ತೋರಿಸಿದರಾಯಿತು... ಅಂದುಕೊಂಡೆ....

"ಏನ್ರೀ... ಏನೋ ಬದಲಾಗಿ ಬಿಟ್ಟಿದ್ದೀರಿ ಅನಿಸ್ತಾ ಇದೆ....
ಏನಾದ್ರೂ ಸಮಸ್ಯೆ ಇದೆಯಾ...? ಏನಾಗಿದೆ..?
ಕಳೆದು ಹೋಗುವವರ ಹಾಗೇ ಇದ್ದೀರಿ...?"

"ಏನಿಲ್ಲ... ನಾಳೆ ನಾಗು ಮನೆಗೆ ಹೋಗಿ ಬರ್ತಾ ಇದ್ದೇನೆ...
ಮಧ್ಯಾಹ್ನ ಊಟಕ್ಕೆ ವಾಪಸ್ಸು ಬರ್ತೀನಿ.."

ಆಶಾ ಮುಂದೆ ಮಾತಾಡದಿದ್ದರೂ... ಕಣ್ಣುಗಳು
"ಸಮಾಧಾನ ಆಗಲಿಲ್ಲ ಎಂದು ಹೇಳುತ್ತಿತ್ತು....

ಎಲ್ಲೋ ಒಂದು ರೀತಿಯ ಸಂಕೋಚ..ಅಳುಕು.. ಅಪರಾಧಿ ಮನೋಭಾವ ನನಗಿತ್ತು...
ಮಡದಿಗೆ ಮುಚ್ಚಿಡುತ್ತಿದ್ದೆನಲ್ಲ... ಅನ್ನುವ ಭಾವ....

ಬೆಳಿಗ್ಗೆ ಸೀದಾ ನಾಗು ಮನೆಗೆ ಬಂದೆ...
ನಾಗು ರೆಡಿಯಾಗಿದ್ದ....
"ಚಲೊ.... ನಿನ್ನ ಕಾರಲ್ಲೇ ಹೋಗೋಣ..."

"ಸರಿಯಪ್ಪ... ದಾರಿ ನಿನಗೆ ಗೊತ್ತಲ್ಲ...."

ನಾಗು ದಾರಿ ಹೇಳುತ್ತ ಹೋದ... ನಾನು ಡ್ರೈವ್ ಮಾಡಿದೆ...

ಅರ್ಧ ತಾಸು ದಾರಿ ಸಾಗಿದ ಮೇಲೆ ಒಂದು ಹಳ್ಳಿ ಕಾಣಿಸಿತು...
ಇಲ್ಲೇ ಅಶ್ವತ್ಥ ಮರದ ಪಕ್ಕದ ಮನೆ... ಅಲ್ಲಿ ಕಾರು ನಿಲ್ಲಿಸು...."

ಎದೆಯಲ್ಲಿ ಢವ... ಢವ....!

ಅದೇ ಆತಂಕ...ಮತ್ತದೇ ತಳಮಳ....

ನನಗೆ ವಯಸ್ಸಾಗುತ್ತಿದ್ದರೂ....
ಮನವನ್ನು ಕಾಡುವ ಭಾವಗಳಿಗೆ ವಯಸ್ಸಾಗುವದಿಲ್ಲವಲ್ಲ...!

"ಧೀರ್ಘವಾಗಿ ಶ್ವಾಸೋಚ್ಛ್ವಾಸ ಮಾಡಿಕೊ...
ಅವಳೆದುರು ನರ್ವಸ್ ಮುಖ ಮಾಡ್ಕೋ ಬೇಡ.."

ನಾಗು ನನ್ನ ಮನಸ್ಥಿತಿ ನೋಡಿ ಹೇಳಿದನೇನೊ...

ನನಗೆ ಗಡಿಬಿಡಿ...ಆತಂಕ... !
ಹ್ರದಯದಲ್ಲಿ ಅಲೆಗಳ ಭೋರ್ಗರೆತ....!!


ಮನೆಯ ಎದುರಿಗೆ ಬಂದೆವು...

ಮನೆಯ ಹೆಸರು "ಬೆಳಕು"...!!

ನನ್ನ ಹೆಸರಿನ ಅರ್ಥವಾ...?

"ಪ್ರಕಾಶು... ಕಾಕತಾಳೀಯ ಕಣೊ...
ಏನೇನೋ ಅಂದ್ಕೊ ಬಿಡಬೇಡ.... ಸಹಜವಾಗಿ ಬೆಳಕು: ಅಂತ ಇಟ್ಟಿರಬಹುದು.."
ಸುಮ್ನೆ ಬಾ..."

ನಾಗು ನನ್ನ ಭಾವೋದ್ವೇಗ ಸಮಾಧಾನಿಸಿದ....

ಗೇಟನ್ನು ದಾಟಿ ಅಂಗಳಕ್ಕೆ ಬಂದೆವು....

ಯಾರೂ ಇರಲಿಲ್ಲ....
ಹೊರಗಿನ ಜಗುಲಿಗೆ ಬಂದೆವು...ಕುಳಿತು ಕೊಳ್ಳಲಿಕ್ಕೆ ಖುರ್ಚಿಗಳಿದ್ದವು...

"ನಾಗು ವಿಳಾಸ ಸರಿ ಇದೆಯೇನೋ... ಖಾತ್ರಿ ಇದೇ ಮನೆಯೇನೋ..?"
ನನ್ನ ಅನುಮಾನ ಹೊರ ಹಾಕಿದೆ....

"ನೂರಕ್ಕೆ ನೂರು... ಸರಿ ಇದೆ.. ಅನುಮಾನ ಬೇಡ... ನೀನು ಸುಮ್ನೆ ಇರು.."

ನಾಗು ಒಳಗೆ ಯಾರೆಂದು ನೋಡಿದ...

"ಹಲೋ ಯಾರಿದ್ದೀರಿ...?"

ಎಂಟು ವರ್ಷದ ಹುಡುಗ ಬಂದ....

ಕಪ್ಪನೆಯ ದಟ್ಟವಾದ ಕಣ್ಣುಗಳು...ನನ್ನನ್ನು ಕಾಡಿದ ಕಪ್ಪನೆಯ ಕಣ್ಣುಗಳು...!

ಇವನು ವಿಜಯಾ ಮಗ...!

"ಯಾರು ಬೇಕಿತ್ತು...?"
" ಪುಟ್ಟಾ.. ಮನೆಯಲ್ಲಿ ಯಾರೂ ಇಲ್ಲವೇನೋ... ನಾವು ಬೆಂಗಳೂರಿನಿಂದ ಬಂದಿದ್ದೇವೆ.."

" ಅಮ್ಮ ತೋಟಕ್ಕೆ ಹೋಗಿದ್ದಾಳೆ... ಅಣ್ಣ ಇಲ್ಲೇ ಎಲ್ಲೊ ಇದ್ದಾನೆ... ಕರೀಲಾ...?"

ನಾನು ಅವನನ್ನು ಹತ್ತಿರ ಕರೆದೆ...

" ಇಲ್ಲಿ ಬಾ... ನಿನ್ನ ಹೆಸರೆನು...? ಯಾವಕ್ಲಾಸಿನಲ್ಲಿ ಓದ್ತಾ ಇದ್ದೀಯಾ...?"

"ನನ್ನ ಹೆಸರು ಸೂರ್ಯ.. ... ಏಳನೇ ಕ್ಲಾಸು...
ನೀವು ಇರಿ...ಅಣ್ಣನನ್ನು ಕರೆದು ಬರ್ತೀನಿ..."

ಹುಡುಗ ಓಡಿ ಹೋದ....

ನಾನು ನಾಗುವಿನ ಮುಖ ನೋಡಿದೆ...

"ಇದೂ ಕಾಕತಾಳೀಯ ಇರಬಹುದೊ... ಪುಣ್ಯಾತ್ಮಾ...!
ನೀನೊಬ್ಬ ದೇವದಾಸ..,!

ಅವಳು ಭಗ್ನ ಪ್ರೇಮಿ... ಇಬ್ಬರ ಅಮರ ಪ್ರೇಮ....!
ಸಾಕು... ಸುಮ್ನಿರೋ...

ಕೆಲಸಕ್ಕೆ ಬಾರದ ವಿಚಾರ ಮಾಡ ಬೇಡ..."

ಕೆಲವು ಕಡೆ ಅಪ್ಪನಿಗೆ ಅಣ್ಣ ಅಂತಾರೆ....

ಅಣ್ಣ ಅಂದರೆ .. ಅಪ್ಪನಾ...? ಅಣ್ಣನಾ...?

ಅಷ್ಟರಲ್ಲಿ ಆ ಹುಡುಗ....ಸುಮಾರು ಹದಿನಾರರ ವಯಸ್ಸಿನ ಹುಡುಗನನ್ನು ಕರೆದುಕೊಂಡು ಬಂದ....

""ನೀವು ಯಾರೆಂದು ಗೊತ್ತಾಗಲಿಲ್ಲ...."

" ನಾವು ಬೆಂಗಳೂರಿನಲ್ಲಿರ್ತೇವೆ...
ಇವನು ಪ್ರಕಾಶ ಅಂತ..

ನಿಮ್ಮಮ್ಮನ ಕ್ಲಾಸ್ ಮೇಟ್...ಇಲ್ಲೇ ಪಕ್ಕದ ಊರಿಗೆ ಬಂದಿದ್ದೆವು...
ನೋಡಿ.. ಮಾತಾಡಿಕೊಂಡು ಹೋಗೋಣ ಅಂತ.. ಬಂದಿದ್ದೇವೆ.."

"ಹೌದಾ.... ಸರ್... !!
ನನ್ನ ಹೆಸರೂ... ಪ್ರಕಾಶ ..ಅಂತ ...!

ನಿಮಗೆ ತಂಪಾಗಿ ಮಜ್ಜಿಗೆ ತರ್ತೇನೆ...
ಹೊರಗಡೆ ಉರಿ ಬಿಸಿಲು... ಸ್ವಲ್ಪ ಇರಿ.."


ಆತ ಒಳಗೆ ಮಜ್ಜಿಗೆ ತರಲು ಹೋದ .. ಹಿಂದೆ.. ಪುಟ್ಟ ಹುಡುಗನೂ ಹೋದ....

ನಾಗು ಬೇರೆ ಮುಖ ಮಾಡಿದ....

ನನ್ನ ಮುಖ ಬೇಕೆಂದೇ ನೋಡುತ್ತಿಲ್ಲವಾಗಿತ್ತು...

ನನಗೆ ಹೇಳಲಾಗದ ಭಾವ...
ಮನಸ್ಸೆಲ್ಲ ಭಾರ..
ಎದೆಯಲ್ಲಿ ಒಂಥರಾ ಕಂಪನ...


ಅಲ್ಲೇ ಇರುವ ಶೋಕೇಸಿನಲ್ಲಿ ಹಲವಾರು ಫೋಟೊಗಳಿದ್ದವು...
ನಾನು ಹತ್ತಿರ ಹೋಗಿ ಗಮನಿಸ ತೊಡಗಿದೆ....


ವಿಜಾಯಾಳ ಮದುವೆ ಜೋಡಿ ಫೋಟೊ....!

ಕಣ್ಣರಳಿಸಿ ನಗುತ್ತಿದ್ದಳು....

ನಾನು ಇಷ್ಟ ಪಡುವ ನಗು... !
ನನ್ನೆದೆಯಲ್ಲಿ ಉಳಿದುಬಿಟ್ಟ ನಗು....!


ಪಕ್ಕದಲ್ಲಿ ಬೆಳ್ಳನೆಯ ಯುವಕ... ಚಂದವಾಗಿದ್ದ....
ಇಬ್ಬರ ಕುತ್ತಿಗೆಯಲ್ಲೂ ಮಾಲೆಯಿತ್ತು...
ಹೊಸ ಕನಸು.... ಸಂತೋಷ.. ಸಂಭ್ರಮ ಕಾಣುತ್ತಿತ್ತು....

" ಪ್ರಕಾಶು... ಇಲ್ಲಿ ನೋಡು...!!!"

ನಾಗು ಸಣ್ಣದಾಗಿ ಚೀರಿದ !! .....ಆತಂಕದಿಂದ....!

"ಅಲ್ಲಿ ಮಧ್ಯ ವಯಸ್ಸಿನ ಒಬ್ಬರ ಫೋಟೊ...
ಗಂಡಸಿನದು...!


ಹಣೆಗೆ ಕುಂಕುಮ....! ಫೋಟೊಕ್ಕೆ ಗಂಧದ ಮಾಲೆ...!

ಅಯ್ಯೋ...! ಇದು... ವಿಜಯಾ ಗಂಡನ ಫೋಟೊವಾ...?

ಮತ್ತೊಮ್ಮೆ... ಮದುವೆ ಫೋಟೊ ನೋಡಿದೆ...!

ಹ್ಹಾಂ...!! ಅದೆ... ಫೋಟೊ....!

ಅದೇ ಮುಖದ ಹೋಲಿಕೆ....!


ನನ್ನ ವಿಜಯಾ ವಿಧವೆಯಾ....?

ನನ್ನ ಬದುಕೆಲ್ಲ ಕನಸಾಗಿ ..,ನೆನಪಾಗಿ ಕಾಡಿದ ಹುಡುಗಿ ವಿಧವೆಯಾ...?

ಅಯ್ಯೋ... ದೇವರೆ ! ...ಅವಳ ಮುಖ ಹೇಗೆ ನೋಡಲಿ...?

ಕಣ್ಣಿಗೆ ಕತ್ತಲೆ ಕವಿದಂತಾಯಿತು....

ಅಘಾತ ..! ತಡೆಯಲಾಗದ ಷಾಕ್ ....!

ಸಾವರಿಸಿ ಕೊಂಡೆ...

"ನಾಗು... ಏಳು... ಹೊರಡೋಣ.... ನನಗೆ ಇಲ್ಲಿ ಇರಲಾಗುವದಿಲ್ಲ....

ಪ್ಲೀಸ್ ಹೊರಡು...."

ಅವನಿಗೆ ಮಾತಾಡಲು ಕೊಡದಂತೆ ಅವನ ಕೈಹಿಡಿದು...
ಹೊರಗಡೆ ಎಳೆದು ಕೊಂಡು ಬಂದೆ....

ನಾಗು ಕಾರ ಡ್ರೈವ್ ಸ್ಟಾರ್ಟ್ ಮಾಡಿದ... ನಾನು ಪಕ್ಕದಲ್ಲಿ...

ನನಗೆ ದುಃಖ ತಡೆಯಲಾಗಲಿಲ್ಲ....
ಕಣ್ಣಲ್ಲಿ ದಳದಳನೆ ನೀರಿಳಿಯತೊಡಗಿತು...
ಬಿಕ್ಕಿ... ಬಿಕ್ಕಿ... ಅತ್ತುಬಿಟ್ಟೆ ..ವೇದನೆ... ತಡೆಯಲಾಗದೆ.....
ಅಳುತ್ತಲೇ ಇದ್ದೆ.... ಸುಮಾರು ದೂರ ಬಂದ ಮೇಲೆ....

ನಾಗು ಹೇಳಿದ...

" ನೋಡೊ.... ಪ್ರಕಾಶು... ಅದು ಅವಳ ಗಂಡನ ಅಣ್ಣನ ಫೋಟೊ ಇದ್ದಿರ ಬಹುದು...

ಅಣ್ಣ ತಮ್ಮಂದಿರ ಮುಖದಲ್ಲಿ ಹೋಲಿಕೆ ಇರುತ್ತದಲ್ಲವಾ...?

ನೀನು ಸುಮ್ಮನೆ ಆತುರ ಪಟ್ಟೆ...ನಾವು ಖಚಿತ ಪಡಿಸಿ ಕೊಂಡು ಬರಬೇಕಿತ್ತು"

ಹೌದಲ್ಲ... ಹೀಗೂ ಇರಬಹುದಲ್ಲಾ...?

ಆದರೆ ...

ವಿಧವೆಯೂ ಆಗಿರ ಬಹುದಲ್ಲ.....!

ಇಪ್ಪತ್ತು ವರ್ಷದ ಹಿಂದಿನ ಆ ಮುಖವೇ ನನಗೆ ಸಾಕು...

ಆ ನೆನಪುಗಳು...
ಮಧುರ.. ಭಾವಗಳು ...
ನನ್ನ ...

ಉಳಿದ ಬದುಕಿಗೆ ಸಾಕು....!
ಅವಳ ಕುಂಕುಮವಿರದ ಹಣೆ...

ಅನಾಥ... ದುಃಖ ತುಂಬಿದ ...
ಕಣ್ಣಿನ ಮುಖ ನನಗೆ ಬೇಡ....
ಆ.. ಕಣ್ಣುಗಳನ್ನು ನಾನು ನೋಡಲಾರೆ....!


ಅಷ್ಟರಲ್ಲಿ ಮೊಬೈಲು ರಿಂಗ್ ಆಯಿತು....

ಮಡದಿಯ ಫೋನ್....!

ನನ್ನ ವರ್ತಮಾನದ...ವಾಸ್ತವ ಬದುಕಿನ.. ಕರೆ...!

"ರ್ರೀ... ಊಟಕ್ಕೆ ಬರ್ತಾ ಇದ್ದೀರಾ...?
ನಿಮಗೆ ಇಷ್ಟ ಅಂತ..

ಮಾವಿನ ಕಾಯಿ ಭೂತಗೊಜ್ಜು .. ಮಾಡಿದ್ದೇನೆ...
ಬರ್ತೀರಿ ತಾನೆ..?"

"ನೀನಿದ್ದಲ್ಲೇ... ಬರ್ತಾ ಇದ್ದೀನಿ ಕಣೆ....
ಗೊಜ್ಜು ಸ್ವಲ್ಪ ಜಾಸ್ತಿ ಮಾಡಲಿಕ್ಕೆ ಹೇಳು...

ಸ್ವಲ್ಪ ಖಾರ ಜಾಸ್ತಿ ಹಾಕಲು ಹೇಳು... ನಾಗು ಸಹ ಬರ್ತಾನೆ...
ಇನ್ನು ಐದು ನಿಮಿಷದಲ್ಲಿ ಮನೆಗೆ ಬರ್ತೇವೆ...."

"ನಿಮಗೆ ಏನು ಇಷ್ಟ ಅಂತ ನನಗೆ ಗೊತ್ತು ಕಣ್ರೀ....
ಜಲ್ದಿ ಬನ್ನಿ... ಕಾಯ್ತಾ ಇರ್ತೀನಿ..."

ನಾಗು ಮುಂದಿನ ರಸ್ತೆಯ ತಿರುವಿನಲ್ಲಿ ಕಾರು ತಿರುಗಿಸಿದ...

ನಮ್ಮೂರ ಕಡೆ...

ನಮ್ಮನೆ ಕಡೆಗೆ.......

ಮನೆಯ ಬಾಗಿಲಲ್ಲಿ ನನ್ನಾಕೆ ...
ನನಗಾಗಿ ಕಾಯುತ್ತ... ನಿಂತಿದ್ದಳು......
.......






ಓದುಗ ಬಂಧುಗಳೇ...

) ನಿನ್ನನ್ನೂ... ಕಣ್ ತುಂಬಾ ... ನೋಡುವಾಸೆ.... ಎಲ್ಲಿರುವೆ...?
)ಆಕಾಶ... ದೀಪವೂ... ನೀನು...
) ಹೀಗೂ.... ಆಗಿರಬಹುದಲ್ಲಾ..!

ಮೂರನ್ನು ಓದಿದ್ದಿರಾ...
ನಿಮ್ಮೆಲ್ಲರ ಎಣಿಕೆಯ ಹಾಗೆ... ಇದು ಕಥೆ....!
ಅಪ್ಪಟ... ಕಲ್ಪನೆ....!

ನನಗೆ ವಿಜಯಾ ಮೇಲಿನ ಭಾವನೆಯೆ...( ಇದು ಮಾತ್ರ ಸತ್ಯ)
ಪ್ರೇಮದ ಎಳೆಯನ್ನು ಮಾತ್ರ ಇಟ್ಟುಕೊಂಡು ಬರೆದಿದ್ದೇನೆ....

ಇದರಲ್ಲಿ, ನಾನು, ನಾಗು , ವಿಜಯ...
ಇಲ್ಲದೆ ಬೇರೆಯ ಹೆಸರಿದ್ದರೆ ಇಷ್ಟವಾಗುತ್ತಿತ್ತಾ..?

ಬ್ಲಾಗಿನಲ್ಲಿ ನನ್ನ ಮೊದಲ ಕಥೆ ಹೇಗನ್ನಿಸಿತು...?

ನಿಮ್ಮ ಅಭಿಪ್ರಾಯಕ್ಕೆ ಕಾಯುತ್ತಿರುವೆ...

74 comments:

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,

ನಿಮ್ಮ ಪ್ರಯೋಗ ಅಂದರೆ!!!!

ವಿಜಯ ಕೂಡ ಪ್ರಕಾಶಣ್ಣನ್ನ ಪ್ರೀತಿಸ್ತಿದ್ರ? ಹೇಳಲು ಹಿಂಜರಿದ್ರ? ಅದೇ ನೆನಪಿನಲ್ಲಿ ಮನೆಗೆ ಮತ್ತು ಮಕ್ಕಳಿಗೆ ಆ ಹೆಸರು ಇಟ್ಟಿದ್ದ್ರ? ಅಯ್ಯೋ ಅವರ ಗಂಡ ಇಲ್ವಾ? ಈಗ ಪ್ರಕಾಶಣ್ಣ ಏನು ಮಾಡ್ತಾರೆ?
ನಮಸ್ಕಾರ ನಿಮಗೆ, ಒಂದು ಕ್ಷಣ ಹೃದಯ ಬಡಿತ ನಿಂತಂತಾಯ್ತು, ಮನಸ್ಸು ನಿರಾಳವಾಗಿದ್ದು ಕೆಳಗೆ ನೀವು ಅಪ್ಪಟ ಕಥೆ ಅಂತ ಬರೆದಿದ್ದು ಓದಿದ ಮೇಲೆ.
ಕಥೆ ಅಂತ ಓದಿ ಕೊಂಡ ಮೇಲೆ ನಿರೂಪಣೆ ನಂಬರ್ ಒನ್, ತುಂಬಾ ನೈಜವಾಗಿದೆ. ಪಾತ್ರಗಳು ನಮಗೆ ಗೊತ್ತಿರುವವೇ ಆಗಿದ್ದಿದ್ದರಿಂದ ಕಥೆ ಮನಸ್ಸಿಗೆ ಇನ್ನೂ ಹತ್ತಿರವಾಯ್ತು.

ಹೊಸ ಪ್ರಯೋಗಗಳು, ಮತ್ತು ಇನ್ನಷ್ಟು ಕಥೆಗಳು ಬರಲಿ...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಿಯ ಪ್ರಕಾಶಣ್ಣ...

ತುಂಬ ಚೆಂದದ ಕಥೆ. ಹೆಸರುಗಳು ಯಾವುವೇ ಇದ್ದರೂ ಕಥೆ ಇಷ್ಟವೇ ಆಗುತ್ತಿತ್ತು. ಪಾತ್ರಗಳು ಮತ್ತು ಅವಕ್ಕೆ ನೀವು ಕೊಟ್ಟ ಚಾಲನೆಯ ರೀತಿ ತುಂಬ ಸೊಗಸಾಗಿದೆ.
ಓದುತ್ತಲಿದ್ದೇನೆ. ಬರೆಯುತ್ತ ಸಾಗಿರಿ.

ಚೆಂದದ ಕಥೆಗೆ ಧನ್ಯವಾದ.
ಎಲ್ಲವೂ ಇನ್ನಷ್ಟು ಒಳಿತಾಗಲಿ.

ಬಿಸಿಲ ಹನಿ said...

ಪ್ರಕಾಶವರೆ ನಿಮ್ಮ ಭಗ್ನ ಪ್ರೇಮ ಕತೆ ಮನಮಿಡಿಯುವಂತಿದೆ. ಕೊನೆಯಲ್ಲಿ ಉಳಿಯುವ ವಿಷಾದ ಮಾತ್ರ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ.

Keshav.Kulkarni said...

ಥೇಟ್ "ಮೈ ಅಟೋಗ್ರಫ್" ಸಿನೆಮಾ ತರಹವೇ ಇದೆ, ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ.
- ಕೇಶವ

Ramya Hegde said...

Beautiful....,flawless.......,
ಮೊದಲಿನ 2 ಕಂತು ಅಪ್ಪಟ ನಿಸ್ವಾರ್ಥ ಪ್ರೇಮ...,ಕೊನೆ ಕಂತು ಓದ್ತಾ ಓದ್ತಾ ಮನ ಮಿಡಿಯುವಂತೆ ಆಯಿತು.Thank god.....,its a story..,ಆದ್ರೆ ಯಾರಿಗೂ ಹಿಂಗೆ ಆಗದೆ ಇರಲಿ..

Ittigecement said...

ರಾಜೇಶ್....

ಈ ಕಥೆ ಎರಡು ತಿಂಗಳ ಮೊದಲು ಹೊಳೆಯಿತು...
ಮಲ್ಲಿಕಾರ್ಜುನ್ ಗೆ ಹೇಳಿದೆ...
ಅವರು ಬಹಳ ದುಂಬಾಲು ಬಿದ್ದು ಬರೆಸಿದರು...
ಬ್ಲಾಗಿನಲ್ಲಿ ಹಾಕಲಿಕ್ಕೆ ಹೇಳಿದರು..
ನನಗೆ ಧೈರ್ಯ ಸಾಲಲಿಲ್ಲ....

ಈ ಮಧ್ಯೆ "ಕಲ್ಲಾರೆ ಮಹೆಶ್" (ಇವರು ಪ್ರತಿಭಾನ್ವಿತ ಬರಹಗಾರರು, ಕವಿಗಳು)
ಅವರನ್ನು ಇನ್ನೂ ನೋಡಿಲ್ಲ..
ಅವರು ನೀವ್ಯಾಕೆ ಕಥೆ ಬರೆಯ ಬಾರದು ಅಂತ ಶುರು ಮಾಡಿದರು....
ನನ್ನನ್ನು ಬೆಂಬಿಡದೆ ಬರೆಸಿದರು....

ನನೊಂದು ಕಥೆ ಬರೆಯಲು ಶುರು ಮಡಿದ್ದು ಹೀಗೆ......

ಕೊನೆಯಲ್ಲಿ ಫೋಟೊ ನೋಡುವ ಸನ್ನಿವೇಶ ಬರೆಯುವಾಗ...
ನನ್ನ ಮಡದಿಗೆ ಓದಿ ಹೇಳುವಾಗ ಭಾವುಕನಾಗಿ ಬಿಟ್ಟಿದ್ದೆ...

ಕಥೆ ಇಷ್ಟವಾಗಿದ್ದು ಬಹಳ ಖುಷಿಯಾಯಿತು....

ಧನ್ಯವಾದಗಳು....

Ittigecement said...

ಶಾಂತಲಾರವರೆ....

ನನ್ನ ಬಳಿ ಚಾಟ್ ಮಾಡುವಾಗ ಒಬ್ಬರು(ಯಾರೆಂದು ನೆನಪಿಲ್ಲ)
"ನೀವು ಈಗ ನಿಮ್ಮ ಜೀವನ ಅನುಭವ ಬರೆಯುತ್ತಿದ್ದೀರಿ...
ನಿಮ್ಮ ಸ್ವಂತ ಅನುಭವ ಎಂದು ಜನ ಇಷ್ಟ ಪಡುತ್ತಿದ್ದಾರೆ..
ನಿಮಗೆ ಈ ಇಮೇಜಿನಿಂದ ಹೊರ ಬರಲು ಕಷ್ಟ ಆಗಬಹುದು ಎಂದು ಹಿತವಚನ ಹೇಳಿದ್ದರು....

ನಿಮ್ಮ ಪ್ರತಿಕ್ರಿಯೆ ನನಗೆ ಸ್ಪೂರ್ತಿ...
ಚಂದವಾಗಿ ಬರೆದು ಬಹಳ ಅಭಿಮಾನಿ ಬಳಗವಿರುವ ನೀವು ಬಂದು , ಖುಷಿ ಪಟ್ಟಿದ್ದು...
ಬಹಳ ಸಂತೋಷ ತಂದಿದೆ...

ನೀವು ಈ ಹಿಂದೆ ಪ್ರತಿಕ್ರಿಯೆಯಲ್ಲಿ ಹೇಳಿದ ಹಾರೈಕೆ...
ಕಥೆ ಬರೆಯಲು ಧೈರ್ಯ ತಂದಿದೆ....

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಉದಯ್(ಬಿಸಿಲ ಹನಿ).....

ಈ ಕಥೆ ಕೇಳಿದ ನನ್ನ ಮಡದಿಯವರು ಸ್ವಲ್ಪ "ಮೈ ಆಟೊಗ್ರಾಫ್ ಹೋಲುತ್ತದೆ" ಎಂದರು...
ಹರೆಯದ ಪ್ರೇಮದ ವಿಷಯ ಅನ್ನೋದು ಬಿಟ್ಟರೆ ..
ಮತ್ತೆ ಯಾವುದೇ ಹೋಲಿಕೆ ಇಲ್ಲಿ ಇಲ್ಲ...

ನೀವೆಲ್ಲ ಮೆಚ್ಚಿದ್ದು ಇನ್ನಷ್ಟು ಬರೆಯಲು ಪ್ರೇರಣೆ....ಸಿಗ್ತಾ ಇದೆ.

ಇದರ ಮೊದಲ ಕಂತು ಓದಿದ ಅಮೇರಿಕಾದಲ್ಲಿರುವ ನನ್ನ ಅಕ್ಕನ ಮಗಳು..
ಫೋನ್ ಮಾಡಿ "ವಿಜಯಾ ಸಿಕ್ಕಿದ್ದಳಾ" ಅಂತ ವಿಚಾರಿಸಿದ್ದು ತಮಾಷೆಯಾಗಿತ್ತು ..

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಕೇಶವ ಕುಲ್ಕರ್ಣಿಯವರೆ..

ನನ್ನ ಬ್ಲಾಗಿಗೆ ಸ್ವಾಗತ....

ಮೈ ಆಟೋಗ್ರಾಫ್" ಬೇರೆ ಥರವೇ ಇದೆ.....

ಇಪ್ಪತ್ತು ವರ್ಷದ ಕನಸಲ್ಲಿ ಕಾಡಿದ ಹುಡುಗಿ ನೋಡಲು..
ಹೋದವಗೆ ಗೊತ್ತಿತ್ತು ಅವಳಿಗೆ ಮದುವೆ ಅಗಿದೆ ಎಂದು....

ತನ್ನ ಹಾಗೆ ಅವಳಿಗೂ ಆ ದಿನಗಳಲ್ಲಿ ಭಾವನೆ ಇತ್ತಾ...?
ಆ ದಿನಗಳಲ್ಲಿ ಮಾತಿಲ್ಲದೇ, ಕಣ್ಣಲ್ಲಿ ನಡೆದ ಪ್ರೇಮ....
ಮಧ್ಯದಲ್ಲಿ ತರಲೆ ನಾಗು....
ಆ ಹುಡುಗಿಯನ್ನು ಮಡದಿಗೆ ತೋರಿಸುವ ಬಯಕೆ...

ಒಳ ಭಾವನೆಗಳ ತುಡಿತ ಬೇರೆಯೇ ಎಂದು ನನಗನ್ನಿಸುತ್ತದೆ...

ಬರೆಯುವಾಗ ಖಂಡಿತ ಆ ವಿಚಾರ ಬರಲೇ ಇಲ್ಲ...

ಪ್ರತಿಕ್ರಿಯೆಗೆ ಧನ್ಯವಾದಗಳು...

PARAANJAPE K.N. said...

ಪ್ರಕಾಶರೇ,
ಈ ಕಥೆಯ ಎಳೆ ಚೆನ್ನಾಗಿದೆ, ನಿಮ್ಮ ನಿರೂಪಣೆಯ ಶೈಲಿ ಕೂಡ ಗಮನ ಸೆಳೆಯುವ೦ತಿದೆ. ಸ್ವಲ್ಪ "ಮೈ ಆಟೋಗ್ರಾಫ" ಸಿನಿಮಾ ಕಥೆಯ ಛಾಯೆ ಇದ್ದರೂ ಭಿನ್ನತೆ ಇಲ್ಲದಿಲ್ಲ. ನಿಮ್ಮೊಳಗೊಬ್ಬ ಕಥೆಗಾರ ಇದ್ದಾನೆ. ಇನ್ನಷ್ಟು ಬರೆಯಿರಿ, ಬೇಗ ಹೊರಬರಲಿ ನಿಮ್ಮ ಕಥಾಸ೦ಕಲನ.

ಮನಸು said...

ಪ್ರಕಾಶಣ್ಣ,
ಹ ಹ ಹ .... ಸೂಪರ್!!!!! ಕಥೆ ಚೆನ್ನಾಗಿ ಬರೆಯಬಲ್ಲಿರಿ ಎಂದು ತೋರಿಸಿಬಿಟ್ಟಿರಿ ಹ ಹ ಹ ಒಳ್ಳೆಯ ನಿರೂಪಣಾ ಶೈಲಿ ಇದೆ ಸಾಗಲಿ ಪಯಣ ಮತ್ತಷ್ಟು ಕಥೆಗಳೊಂದಿಗೆ.. ಕಥೆಯಾ ಕೊನೆ ತುಂಬಾ ಇಷ್ಟವಾಯಿತು
ಧನ್ಯವಾದಗಳು..

ಧರಿತ್ರಿ said...

ಪ್ರಕಾಶ್ ಸರ್...ಬೆಳಗ್ಗಿನ ವಂದನೆಗಳು.

ನಿಮ್ಮ ಕಥೆ ಓದಿದೆ...

ಅದೂ ನಿಮ್ಮದೇ ಅಂದುಕೊಂಡು ಓದಿದ್ದೆ ಈವರೆಗೆ..!

ಪ್ರತಿ ಸಲನೂ ಹುಳ ಬಿಟ್ಟು ಬಿಡುತ್ತಿದ್ದ ನಿಮ್ಮ ಬರಹ ಇದು ಕತೆ ಅಂತ ಗೊತ್ತಾಗಿದ್ದೇ ಈವಾಗ..!

ನಂಗೂ ಓದುತ್ತಾ ಹೋದಂತೆ..ಮೈ ಆಟೋಗ್ರಾಫ್ ಸಿನಿಮಾ ತಲೆಯೊಳಗೆ ಹೊಕ್ಕಿಬಿಡ್ತು..ಅದನ್ನಿಲ್ಲಿ ಬರೆಯದೆ ಇರಲಾಗಲಿಲ್ಲ.

ಈ ಕತೆಗಿಂತಲೂ ಈ ಕತೆಯನ್ನು ಮುಗಿಸಿದ ರೀತಿ, ನಿರೂಪಣೆ, ಹರಿವು ಇಷ್ಟವಾಯಿತು.

ನಿಮ್ಮ ಕತೆ ಬಹಳಷ್ಟು ಜನರ ಬದುಕಿನ ಕಥೆ-ವ್ಯಥೆಯಾಗಿರಬಹುದು!

ಮನುಷ್ಯನೇ ಹಾಗೇ..ಭಾವನೆ, ಮನಸ್ಸಿನ ತುಮುಲಗಳ ನಡುವೆ ವಾಸ್ತವವನ್ನೇ ಮರೆಯುವುದುಂಟು..ಅದೇ ನೀವು ಕೊನೆಗೆ ಆಶಾ ಊಟಕ್ಕೆ ಕರೆದು ವಾಸ್ತವವನ್ನು ನೆನಪಿಸಿಬಿಟ್ಟಿದ್ದು! ಚೆನ್ನಾಗಿದೆ..ಶುಭವಾಗಲೀ.

ಬದುಕಿಗೆ ಹತ್ತಿರವೆನಿಸುವ, ಸುತ್ತಮುತ್ತಲ ಸೂಕ್ಷ್ಮ ಸನ್ನಿವೇಶಗಳನ್ನು ನೆನಪಿಸುವ ಿನ್ನಷ್ಟು ಉತ್ತಮ ಕಥೆಗಳನ್ನು ನಿಮ್ಮಿಂದ ನಾವು ನಿರೀಕ್ಷಿಸುತ್ತೇವೆ. ಸಾಧ್ಯವಾದ್ರೆ ಯಂಡಮೂರಿ ಅವರ '25 ಶ್ರೇಷ್ಟ ಕತೆಗಳು' ಓದಿ! ಇದು ನಿಮ್ಮ ಕಥೆಯ ಕುರಿತು ನನ್ನ ಅಭಿಪ್ರಾಯ.

ಗೌರೀಶ ಕಾಯ್ಕಿಣಿ ತನ್ನ ವಿಚಾರ ಸಾಹಿತ್ಯ ಪುಸ್ತಕದಲ್ಲಿ 'ಯಾವ ಗಂಡನೂ ತನ್ನ ಹೆಂಡತಿಯ ಜೀವಮಾನದಲ್ಲಿ ಮದುವೆಯ ಕುರಿತು ಸತ್ಯವನ್ನು ಬರೆಯಲಾರ'ಎಂದು ಹೇಳುತ್ತಾರೆ. ಆದರೆ ಅದೇಕೋ ನಿಮ್ಮ ಬರವಣಿಗೆಯಲ್ಲಿ ಆ ಧೈರ್ಯ ಮಾಡೇ ಬಿಟ್ಟಿದ್ದೀರಿ ಅನಿಸುತ್ತೆ!??(:)

-ಶುಭಾಶಯಗಳೊಂದಿಗೆ,
ಧರಿತ್ರಿ

Unknown said...

ಪ್ರಕಾಶ್ ಅವರೇ..,
ಚೆನ್ನಾಗಿತ್ತು... ಇದು ಕಥೆ ಅಂತ ನೀವು ಹೇಳಿದ ಮೇಲೆ ಸ್ವಲ್ಪ ಸಮಾಧಾನವಾಯಿತು... ಹೀಗೆ ಬರೆಯುತ್ತಿರಿ.. ಇಟ್ಟಿಗೆ ಸಿಮೆಂಟಿನ ಈ ಕಾಂಕ್ರಿಟ್ ಕಾಡಿನಲ್ಲಿ ನಿಮ್ಮ ಬರಹ ಗಳು ತಂಪು ನೀಡುತ್ತವೆ...

Amit Hegde said...

Ultimate.... :-) I ve no other words to express..... Cool work.... :-) Waiting for more....

ವಿನುತ said...

ಭಾವನೆಗಳನ್ನು ಪದಗಳಲ್ಲಿ ಹಿಡಿದಿಡುವ ಕ್ಲಿಷ್ಟಕಾರ್ಯದಲ್ಲಿ ಯಶ ಕ೦ಡಿದ್ದೀರಿ. ಹಾಸ್ಯಕ್ಕೊ೦ದು ಹೊಸ ತಿರುವು ಕೊಡುವ. ಓದುಗರಲ್ಲಿ ಕುತೂಹಲವನ್ನು ಹಿಡಿದಿಡುವ ಈ ನಿಮ್ಮ ಶೈಲಿಗೆ ನಿಮ್ಮ ಶೈಲಿಯೇ ಸಾಟಿ. 'ಮೈ ಆಟೋಗ್ರಾಪ್', 'ನಾ ನಿನ್ನ ಮರೆಯಲಾರೆ' ಚಿತ್ರದ ಕೆಲವು ಛಾಯೆಗಳು ಕಥೆಯಲ್ಲಿದ್ದರೂ, ಅವುಗಳಿಗೆ ನಿಮ್ಮದೇ ಸೊಬಗನ್ನು ನೀಡಿದ್ದೀರಿ. ಅಭಿನ೦ದನೆಗಳು.
ಒ೦ದೇ ಕಥೆಯ ೩ ಭಾಗಗಳಿಗೆ ೩ ಭಿನ್ನ ಹೆಸರುಗಳ ಬದಲಿಗೆ, ಎಲ್ಲವನ್ನು ಒ೦ದೇ ಶೀರ್ಷಿಕೆಯಡಿಯಲ್ಲಿ ಹಾಕಿ ಪ್ರಕಟಿಸಬಹುದು (ನನ್ನ ಅನಿಸಿಕೆ)

ಸುಧೇಶ್ ಶೆಟ್ಟಿ said...

ಇದೂ ಕಥೆಯೇ...!

ನಾನು ನಿಜವೆ೦ದು ಅ೦ದುಕೊ೦ಡು ಪ್ರತಿಬಾರಿಯೂ ಬ೦ದು ಕುತೂಹಲದಿ೦ದ ನೋಡುತ್ತಿದ್ದೆ ಮು೦ದಿನ ಭಾಗ ಏನಿರಬಹುದು ಎ೦ದು....

ನಿಮ್ಮ ಕಥೆ ಬರೆಯುವ ಮೊದಲ ಪ್ರಯತ್ನವೇ ಸಫಲವಾಗಿದೆ ಪ್ರಕಾಶಣ್ಣ.... ಓದುಗರ ಮನಸ್ಸನ್ನು ಕಥೆಯೊ೦ದಿಗೆ ಬೆರೆಸಿ, ಪಾತ್ರಗಳ ನೋವು ನಲಿವುಗಳಿಗೆ ಓದುಗರ ಮನಸ್ಸು ಸ್ಪ೦ದಿಸುವ೦ತೆ ಮಾಡಿದ ನಿಮ್ಮ ಕಥೆ ಅದ್ಭುತ ಯಶಸ್ಸನ್ನು ಕ೦ಡಿದೆ....

ಓದುತ್ತಾ ನಿಮ್ಮ ಭಾವನೆಗಳು, ನಿಮ್ಮ ತುಡಿತಗಳು, ಭಾವ ತೀವ್ರತೆಗಳು ನಮ್ಮದೂ ಆಯಿತು...

Unknown said...

ಪ್ರಕಾಶ್ ಹೀಗೂ... ಆಗಿರಬಹುದಲ್ಲ....! ಎಂಬುದಕ್ಕೆ ಮೊದಲ ಪ್ರತಿಕ್ರಿಯೆ 'ಹೀಗೆ ಆಗಿಲ್ಲ, ಆಗಬಾರದು'! ಆದರೆ ವಾಸ್ತವದಲ್ಲಿ ಏನೂ ಬೇಕಾದರು ಆಗಬಹುದು ಅಲ್ಲವೆ? ಇದು ಕಥೆಯಿರಬಹುದಾ? ಎಂಬ ಸಂದೇಹ ೆರಡನೇ ಎಪಿಸೋಡ್ ಓದುವಾಗಲೇ ಅನ್ನಿಸಿತ್ತು. ಆದರೆ ನಿಮ್ಮೊಡನೆ ನೇರ ಒಡನಾಟ ಹೆಚ್ಚು ಇಲ್ಲದಿದ್ದರಿಂದ ಖಚಿತವಾಗಿ ತೀರ್ಮಾನಕ್ಕೆ ಬರಲಾಗಿರಲಿಲ್ಲ. (ಕಥೆಗಾರ ಅನಾಮಿಕನಾಗಿದ್ದರೆ, ಒಂದು ಕಥೆ ಹೊರಡಿಸುವ ಅರ್ಥಸಾಧ್ಯತೆಗಳು ಹೆಚ್ಚು, ಇದು ಸತ್ಯ!) ಒಂದು ಒಳ್ಳೆಯ, ಚೆನ್ನಾಗಿ ಓದಿಸಿಕೊಂಡು ಹೋಗುವ, ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕಥೆ ಕೊಟ್ಟಿದ್ದಕ್ಕಾಗಿ ಥ್ಯಾಂಕ್ಸ್. ಮತ್ತಷ್ಟು ಕಥೆ ಬರೆಯಿರಿ.

Umesh Balikai said...

ಪ್ರಕಾಶ್ ಸರ್,

ನನ್ ಕಣ್ಣಲ್ಲೂ ನೀರು ತರಿಸಿ ಬಿಟ್ರಲ್ಲಾ ಮಾರಾಯ್ರೆ..ಕೊನೆಯ ಟಿಪ್ಪಣಿ ಓದಿದ ಮೇಲೆಯೇ ಸ್ವಲ್ಪ ಸಮಾಧಾನವಾಗಿದ್ದು. ನಿಜವಾಗಿಯೂ ಇದೆಲ್ಲ ನಡೆದದ್ದು ಅಂದುಕೊಂಡುಬಿಟ್ಟಿದ್ದೆ. ನೀವು ಬೇರೆ ಹೆಸರುಗಳನ್ನು ಉಪಯೋಗಿಸಿದ್ದರೆ ಹಾಗಾಗುತ್ತಿರಲಿಲ್ಲ. ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ. ಕತೆ ಇಷ್ಟವಾಯಿತು. ಹೀಗೆ ಬರೆಯುತ್ತಿರಿ.

-ಉಮೀ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಮೊದಲ ಕಥೆಗೆ ಅಭಿನಂದನೆಗಳು, ತುಂಬಾ ಚೆನ್ನಾಗಿ ಬಂತು ಕಥೆ. ಓದುಗರನ್ನು ತುದಿಗಾಲಲ್ಲಿ ನಿಲ್ಲಿಸಿದ ಇಂಥಹ ಕಥೆಗಳು ಇನ್ನಷ್ಟು ಬರಲಿ,

Vani Satish said...

ಕಥೆಯನ್ನು ಅದ್ಭುತವಾಗಿ ನಿರೂಪಿಸಿದ್ದೀರಿ.ಇಷ್ಟು ಬೇಗನೆ ಈ ಕಥೆಗೆ ಪೂರ್ಣವಿರಾಮ ಕೊಡುತ್ತೀರಿ ಎಂದುಕೊಂಡಿರಲಿಲ್ಲ. ಈ ಕಥೆಯಲ್ಲಿ ಹಾಸ್ಯ ಅರಳಿಸಿ,ಓದುಗರಿಗೆ ಕುತೂಹಲ ಕೆರಳಿಸಿ ಬರೆದಿರುವಿರಿ.ತುಂಬಾ ಚೆನ್ನಾಗಿದೆ. ಆದರೆ,ನನ್ನ ಅಭಿಪ್ರಾಯದಂತೆ ನೀವು ವಿಜಯಾಳ ಜೀವನದಲ್ಲಿ ಸುಖಾಂತ್ಯದೊಂದಿಗೆ ಕಥೆ ಮುಗಿಸಲು ಪ್ರಯತ್ನಿಸಬಹುದಿತ್ತು.....
ನಿಮ್ಮ ಈ ಕಥೆಯಲ್ಲಿ ಮೂರೂ ಹೆಸರುಗಳೂ ಗೊತ್ತಿರುವವೇ ಆಗಿದ್ದಕ್ಕೆ ಮನಸ್ಸಿಗೆ ತುಂಬಾ ಹಿಡಿಸಿದೆ.
ನೀವು ಇನ್ನೂ 5-6 ಕಂತುಗಳವರೆಗೆ ಈ ಕಥೆಯನ್ನು ಮುಂದುವರಿಸಬೇಕಾಗಿತ್ತು. ಓದಲು ಇನ್ನೂ ಮಜವಾಗಿರುತ್ತಿತ್ತು.
ಇನ್ನೂ ಬಹಳ ಕಥಾ ಸರಣಿಗಳನ್ನು ಓದಲು ನಿರೀಕ್ಷಿಸುತ್ತಿದ್ದೇವೆ.ಹೀಗೆಯೇ ಬರೆಯುತ್ತಾ ಇರಿ

Veena DhanuGowda said...

Hello,

Fantastic imagination......
Its amazing :)
Creative wrk kanri ...
chandada kattege thanks :)

shivu.k said...

ಪ್ರಕಾಶ್ ಸರ್,

ಕತೆಗೆ ಇನ್ನೊಂದಿಷ್ಟು ವಿಸ್ತಾರ ಬೇಕಿತ್ತೇನೋ ಅನ್ನಿಸಿತು..

ಮದ್ಯದಲ್ಲಿ ಮೈ ಆಟೋಗ್ರಾಫ್ ಹಾಗೂ ಕೊನೆಕೊನೆಯಲ್ಲಿ ಬೆಳದಿಂಗಳ ಬಾಳೆ ಸಿನಿಮಾದ ಅಂತ್ಯದ ಛಾಯೆಯಿದೆ ಅನ್ನಿಸಿತು...

ಕತೆಯ ಅಂತ್ಯವನ್ನು ಹೆಚ್ಚು ಭಾವೋದ್ವೇಗಕ್ಕೊಳಗಾಗದಂತೆ ಇನ್ನಷ್ಟು ಸಂಯಮದಿಂದ ಸ್ವಲ್ಪ ಪ್ರಯತ್ನಿಸಿದ್ದರೆ...[ಆತುರಕ್ಕೋ...ಅಥವ ಬೇರೇನೋ ನಿರೀಕ್ಷೆಯಲ್ಲಿ ಬೇಗ ಮುಗಿಸಿದ್ದೀರಿ ಅನ್ನಿಸುತ್ತೆ...]
ಅದ್ಬುತ ಅಂತ್ಯವಾಗುತ್ತಿತ್ತೇನೋ....

ಅದರೂ ಎಂದಿನಂತೆ ನಿಮ್ಮದೇ ಶೈಲಿಯಲ್ಲಿ ಮುಗಿಸಿದ್ದೀರಿ..

ಸುಮ್ಮನೇ ಹೊಗಳುವುದಕ್ಕಿಂತ ಕತೆಯ ವಿಚಾರವಾಗಿ ನನಗೆ ಅನ್ನಿಸಿದ ಅನಿಸಿಕೆಗಳನ್ನು ಹೇಳಬೇಕೆನಿಸಿತ್ತು

ಆದರೂ ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ...

ಆದರೂ ಅದೇ ಲಘು ಹಾಸ್ಯದಾಟಿ, ಭಾಷೆ, ಕಟ್ಟಿಕೊಟ್ಟಿರುವ ಶೈಲಿ, ಓದಿಸಿಕೊಂಡು ಹೋಗುವ ಗುಣ.. ಎಲ್ಲಾ ನಿಮ್ಮದೇ ರೀತಿಯಲ್ಲಿ...

ಮುಂದಿನ ಪ್ರಯತ್ನಕ್ಕೆ ಶುಭವಾಗಲಿ....

ಧನ್ಯವಾದಗಳು...

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ತುಂಬಾ ಚನ್ನಾಗಿ ಬರೆದಿದ್ದೀರಿ..
ಆದರೆ, ಈ ಲೇಖನವನ್ನು ಓದುವಾಗ ನನಗೆ ಮೈ ಆಟೋಗ್ರಾಫ್ ಸಿನಿಮಾ ಜ್ಞಾಪಕವಾಯ್ತು,
ತಪ್ಪಾಗಿ ತಿಳಿಬೇಡಿ. ನನಗನಿಸಿದ್ದನ್ನು ಹೇಳಿದೆ.

ನೀವು ಕಥೆಯನ್ನು ಕೊಂಡೊಯ್ದ ರೀತಿ ತುಂಬಾ ಚನ್ನಾಗಿತ್ತು.
ಧನ್ಯವಾದಗಳು...

ಬಾಲು said...

katheya anthya sariyaagide, vidhave aagiruva vijayalannu nodade bandiddu sariyaada niluvu, haagu adu preethiyannu thoruttade. haagu vijaya ge hosa baalannu shrustisalu sahaya maduttene endu horadade maneya haaadi hididiruvudarinda kathe cinemia aagodu thappide.

nimma vijaya ge nija jeevanadalli thumba santhosa vagi iralendu haaraisuva - Balu

Unknown said...

Sir,
Super !!!! excelent .. any other words ... this moment i am not getting ... but these many days i am thinking that this incident is happened in u r life .. but now i came to know that this is story ... whole characters gave the impression of real life itself ..hats off sir ...

Ittigecement said...

ರಮ್ಯಾರವರೆ....

ಕಥೆಯೆಂದರೆ ಜೀವನದಲ್ಲಿ ನಡೆದ ಘಟನೆಯಂತಿರಬೇಕು...
ಇದು ನಮ್ಮದೇ.. ಅನುಭವ ಅಂತಿರಬೇಕು..
ಬದುಕಿಗೆ ಹತ್ತಿರವಾಗಿರ ಬೇಕು...

ಇವೆಲ್ಲ ನನ್ನ ವಿಚಾರಗಳು ಕಥೆಯ ಬಗೆಗೆ..

ಹಾಗಾಗಿ ಇದನ್ನು ನನ್ನ ಮೇಲೆಯೇ ಪ್ರಯೋಗಿಸಿಕೊಂಡೆ....

ಇಂದು ಫೋನ್ ಮಾಡಿದ ಸ್ನೇಹಿತರೊಬ್ಬರು ಹೇಳಿದರು..
ನೀನು, ನಾಗು, ವಿಜಯಾ ಇದ್ದುದರಿಂದ ಓದುಗರಿಗೆ ಆಸಕ್ತಿಯಿತ್ತು...

ಕಾಲ್ಪನಿಕವಿದ್ದರೆ ಇಷ್ಟೆಲ್ಲ ಆಸಕ್ತಿ ಇರುವದಿಲ್ಲವಾಗಿತ್ತು....

ಇದು ಯಾಕೆ ಎಂದು ತಲೆ ಕೆಡಿಸಿಕೊಳ್ಳುತ್ತಿರುವೆ....

ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆಗೆ
ಧನ್ಯವಾದಗಳು....

Ittigecement said...

ಪರಾಂಜಪೆಯವರೆ....

ನನ್ನ ಕಾಲೇಜುದಿನಗಳಲ್ಲಿ ಮೂರು ಕಥೆಗಳನ್ನು ಬರೆದಿದ್ದೆ...
ಅವುಗಳಲ್ಲಿ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು....

ಆಗ ಬಂದ ಎಲ್ಲ ಪ್ರತಿಕ್ರಿಯೆಗಳು..ನನ್ನ ಧ್ರತಿಗೆಡಿಸಿತ್ತು...
"ಇಂಥಹ ಕಥೆಗಳು ಸಮಾಜಕ್ಕೆ ಒಳ್ಳೆಯದಲ್ಲ...
ಇದು ಒಂದು ಕೆಟ್ಟ ಮನಸ್ಸಿನ , ಕೆಟ್ಟ ಕಥೆ" ಅನ್ನುವ ಅಭಿಪ್ರಾಯ ಹೆಚ್ಚಿನವರದು ಬಂದಿತ್ತು...
ಅದೇ ನನ್ನ ಕೊನೆಯ ಕಥೆಯಾಗಿತ್ತು....
ಮತ್ತೆ ಬರೆಯಲು ಮನಸ್ಸಾಗಲಿಲ್ಲ...

ಈ ಕಥೆ ಬರೆದು ಹಾಕಿದಾಗ...
ಇಂದು ಬೆಳಿಗ್ಗೆ ಪ್ರತಿಕ್ರಿಯೆ ನೋಡುವವರೆಗೂ ಒಂದುರೀತಿಯ ಆತಂಕವಿತ್ತು....

ಈಗ ನಿರಾಳವಾಗಿದ್ದೇನೆ...
ಇನ್ನಷ್ಟು "ಎಡವಟ್ಟು" ಐಡಿಯಾಗಳಿವೆ...
ಬರೆದರೆ ಓದುವಿರೆಂಬ ಭರವಸೆ ಬಂದಿದೆ....

ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಟಾನಿಕ್...

ಧನ್ಯವಾದಗಳು...

Ittigecement said...

ಮನಸು...

ಊರಲ್ಲಿದ್ದಾಗ ನನ್ನ ತಮ್ಮನನ್ನು ಕರೆದು ಕೊಂಡು ಕಾನಸೂರಿನಿಂದ..
ದೇವಿಸರಕ್ಕೆ ಹೋಗಬೇಕಾಗಿ ಬರುತ್ತಿತ್ತು
ಆಗ ನಾನು ಹೈಸ್ಕೂಲ್.. ನನ್ನ ತಮ್ಮ ಕನ್ನಡ ಶಾಲೆಯಲ್ಲಿ ಓದುತ್ತಿದ್ದ.....
ಅವನಿಗೆ ದಾರಿಯಲ್ಲಿ( ನಾಲ್ಕು ಕಿಲೋಮೀಟರ್ ದೂರ) ಕಥೆ ಹೇಳಬೇಕಿತ್ತು...
ಕಥೆ ಹೇಳುತ್ತ ಜೋರಾಗಿ ನಡೆಸಬೇಕಿತ್ತು...
ಕಾನಸೂರಿನಿಂದ ಶುರುವಾದ ಕಥೆ.. ಕರಕ್ಟಾಗಿ...
ದೇವಿಸರದ ನಮ್ಮನೆ ಮೆಟ್ಟಿಲು ಹತ್ತುತ್ತಿರುವಾಗ ಮುಗಿಯುತ್ತಿತ್ತು...

ಬಹುಷಃ ಕಥೆ ಹೇಳುವ ಅಭ್ಯಾಸ ನನಗೆ ಆಗಿರಬಹುದು...

ನನ್ನ ತಮ್ಮನಿಗೆ ಇದೆಲ್ಲ ನೆನಪಿದೆಯಾ...?

ಮನಸು ನಿಮ್ಮೆಲ್ಲ ಪ್ರತಿಕ್ರಿಯೆ ನನಗೆ ಖುಷಿ ತಂದಿದೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು...

Unknown said...
This comment has been removed by the author.
ದಿವ್ಯಾ ಮಲ್ಯ ಕಾಮತ್ said...

ಕಳೆದ ಎರಡೂ ಭಾಗಗಳಲ್ಲಿ ಕುತೂಹಲ ಹೆಚ್ಚಿಸುತ್ತ , ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದ ಕಥೆ.... ಆದರೆ ಅಂತ್ಯದಲ್ಲಿ, ನೀವು "ಮುಗಿಯಿತು.. ಇದು ಬರಿಯ ಕಥೆ" ಅಂದಾಗ ಮನದ ತುಂಬಾ "???" ಮನೆ ಮಾಡಿದವು.. ಓದುಗರನ್ನು ಕೊನೆಯ ತನಕ ಹಿಡಿದಿಟ್ಟುಕೊಂಡು ಓದಿಸುವ, ಸೂಪರ್ ಕತೆಗಾಗಿ ಅಭಿನಂದನೆಗಳು.....

Ittigecement said...

ಧರಿತ್ರಿ...

ಯಂಡಮೂರಿಯವರ ಕಥೆಗಳನ್ನು, ಕಾದಂಬರಿಗಳನ್ನು ಓದುತ್ತ ಬಹಳ ಖುಷಿ ಪಟ್ಟಿರುವೆ...

ಅದರ ಛಾಯೆ ನನ್ನ ಮೇಲೆ ಆಗಿರಬಹುದು...

ನಾನು ನೇರ ಮನುಷ್ಯ..
ವಿಜಯಾ ವಿಷಯ ಮಡದಿಯವರಿಗೆ ಹೇಳಿದ್ದೆ..
ಅವರೇ ನೋಡುವ ಆಸೆ ವ್ಯಕ್ತ ಪಡಿಸಿದ್ದರಿಂದ ನನಗೂ ನೋಡುವ, ತೋರಿಸುವ ಬಯಕೆ ಗರಿಗೆದರಿತು...
ಇನ್ನೂ ಆಗಲಿಲ್ಲ...

ಜೀವನದಲ್ಲಿ ಆಸೆಯನ್ನು ಬಿಡಬಾರದು...
ಹಾಗಾಗಿ ನನ್ನಕೆಯ ಹೆಸರನ್ನೇ.... "ಆಶಾ" ಇಟ್ಟುಕೊಂಡಿರುವೆ...!
ಹ್ಹಾ.... ಹ್ಹಾ....!

ಗೌರೀಶ್ ಕಾಯ್ಕಿಣಿಯವರ ಸಾಹಿತ್ಯ ಅಷ್ಟಾಗಿ ಓದಿಲ್ಲ...
ನೀವು ಹೇಳಿದ ಪುಸ್ತಕ ಓದುವೆ....

ನಿಮ್ಮ ಪ್ರತಿಕ್ರಿಯೆ... ನನಗೆ ಟಾನಿಕ್....
ಧನ್ಯವಾದಗಳು...

Kishan said...

ಸಖತ್ತಾಗಿ, ಸುಂದರವಾಗಿ, ಚುಟುಕಾಗಿ ಮುಗಿಸಿದ್ದೀರಿ ! You came out of the pressure cooker situation pretty fast!

10/10

Ittigecement said...

ರವಿ.....

ನಾನು ಬರೆದ ಕಥೆಗೆ ಇಷ್ಟೆಲ್ಲ ಪ್ರೋತ್ಸಾಹ ಸಿಗುತ್ತದೆಂದು ನನಗೆ ಅನ್ನಿಸಿರಲಿಲ್ಲ..
ಇದೆಲ್ಲ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತಿದೆ....
ನನ್ನ ನೆಚ್ಚಿನ ಬರಹಗಾರ "ಜೋಗಿಯವರೂ ಪ್ರತಿಕ್ರಿಯೆ ಕೊಟ್ಟಿದ್ದಾರೆ...

ಖುಷಿಯಾಗುತ್ತದೆ...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

ಚಿತ್ರಾ said...

ಪ್ರಕಾಶ್,

ಮೂರನ್ನೂ ಓದಿದೆ.ಆದರೆ, ಹೇಗೆ ಪ್ರತಿಕ್ರಿಯೆ ಬರೆಯಬೇಕೆನ್ನುವುದು ಪ್ರಶ್ನೆಯಾಗಿದೆ. ನಿಮ್ಮ ಮನಸ್ಸಿನ ಭಾವನೆಗಳನ್ನು, ಮೂಕರಾಗಗಳನ್ನು, ಕಳವಳ , ತಳಮಳಗಳನ್ನು ತುಂಬಾ ಚೆನ್ನಾಗಿ ಮೂಡಿಸಿದ್ದೀರಿ.ಮೊದಲ ಭಾಗದಲ್ಲಿ ನಿಮ್ಮ ಕಾತುರ ಓದಿ ನಗುಬರುತ್ತಿದ್ದು, ಕೊನೆಯ ಭಾಗ ಓದಿ ಮುಗಿಸುವಾಗ ನನ್ನ ಹೃದಯದ ಬಡಿತ ನನಗೇ ಕೇಳುವಂತಗಿದ್ದು ನಿಜ . ಮುಗಿಸುವಾಗ ಯಾಕೋ ವಿಷಣ್ಣ ಭಾವ .....

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನನಗೆ ಫೋನಲ್ಲಿ ನೀವು ಕಥೆ ಬಗ್ಗೆ ಹೇಳಿದ್ದರಿಂದ ಎಲ್ಲರಂತೆ ಇದು ನಿಮ್ಮದೇ ಕಥೆ ಎಂದುಕೊಂಡು ಓದುತ್ತಾ ಹೋಗಿ ಇದು ಅವರ ಜೀವನದ ಘಟನೆಯಲ್ವಾ? ಕಲ್ಪನೆಯಾ? ಎಂದು ಅಚ್ಚರಿ ಪಡುವುದರಿಂದ miss ಆಗಿ ಕೊಂಚ ಲಾಸ್ ಆಯ್ತು. ಇರಲಿ. ನೀವು ಕಥೆ ಹೇಳುವಾಗಲೇ ನಿಮ್ಮ ಕಥೆಯ ಮುಂದುವರಿಕೆಯೋ ಎಂಬಂತೆ ನಿಮ್ಮ ವಿಜಯಾ ನನಗೆ ಜಯಪ್ರದಾರಂತೆ ಕಾಣತೊಡಗಿದರು! ಅದು ಕೆ.ವಿಶ್ವನಾಥ್ ರ ಸಾಗರಸಂಗಮಂ ಚಿತ್ರದ ಜಯಪ್ರದಾ! ತಾನು ವಿಧವೆಯೆಂಬುದು ಬಾಲು(ಕಮಲಾಹಾಸನ್)ಗೆ ತಿಳಿಯಬಾರದೆಂದಿದ್ದವಳು, ಯಾವಾಗ ಅವನು "ತಕಿಟತದಿಮಿ ತಂದಾನ..." ಎಂದು ಬಾವಿ ಮೇಲೆ ಕುಡಿದು ಹಾಡುತ್ತಾ ನೃತ್ಯಮಾಡುತ್ತಿದ್ದನೋ,ದೇವರ ಬಳಿ ಇದ್ದ ಕುಂಕುಮ ಇಟ್ಟುಕೊಂಡು ಮಳೆಯಲ್ಲಿ ಓಡಿ ಅವನ ಮುಂದೆ ಬರುತ್ತಾಳೆ.ರಕ್ಷಿಸುತ್ತಾಳೆ. ಮಗಳನ್ನು ನೋಡಿ ತಪ್ಪಿತಸ್ತಳಂತೆ ಒಳಕ್ಕೆ ಹೋಗುತ್ತಾಳೆ.
ನಿಮ್ಮ ಕಥೆಯನ್ನೂ ಚಿತ್ರಮಾಡಬಹುದಲ್ವಾ?
ಇದು ಮೊದಲು, ಹಾಗಾಗಿ ಇನ್ನೂ ಮತ್ತಷ್ಟು ಬರೆಯಿರಿ. ಊರಿನ ದಾರಿಯಲ್ಲಿ ಡ್ರೈವ್ ಮಾಡುವಾಗ ಮೆಲಕು ಹಾಕುತ್ತಿರಿ. ಬರುವಷ್ಟರಲ್ಲಿ ಅನೇಕ ಕಥೆಗಳು ಗರ್ಭ ಕಟ್ಟಿರುತ್ತವೆ.
ನೀವು ಹಾಸ್ಯಲೇಖಕರಲ್ಲ. ಆದರೂ ನಿಮ್ಮ ಬರಹದಲ್ಲಿ ಹಾಸ್ಯರಸಕ್ಕಾಗಿಯೇ ಓದುವವರಿಂದ ನೀವು ಒಂದೇ ತರಹದ ಬರವಣಿಗೆಗಳನ್ನು ಮಾಡುವ ಅಪಾಯದಿಂದ ಈಗ ಕಥೆ ಬರೆದು ದೂರವಾಗಿದ್ದೀರಿ. ಇನ್ನಷ್ಟು ಮತ್ತಷ್ಟು ಹೊಸ ಪ್ರಯೋಗಗಳು ನಿಮ್ಮಿಂದಾಗಲಿ. ಸವಿ ಹಾರೈಕೆಗಳು.

Ittigecement said...

ಅಮಿತ್...

ಪದಗಳೂ ಸೋಲುತ್ತವೆ....

ಪದಗಳಿಗೆ ಸಿಗದ ಭಾವದ ಅರ್ಥ...

ಮೌನವೇ ಸಂಭಾಷಣೆಯಾಗಬಹುದಾದ ಸಂದರ್ಭ...

ನನ್ನ ಈ ಕಥೆಯಲ್ಲಿ ಇಡಬೇಕಿಂದಿದ್ದೆ...

ಕಥೆ ಮಾಮೂಲಿಯಗಬಿಡಬಹುದು .. ಎಂಬ ಸೂಚನೆ ..
ನನ್ನಾಕೆಯದಾಗಿತ್ತು...
ಹಾಗಾಗಿ ಆ ಕಸರತ್ತೆಲ್ಲ ನಿಲ್ಲಿಸಿದೆ...

ನಿಮ್ಮ ಮೆಚ್ಚುಗೆ.., ಪ್ರೋತ್ಸಾಹ ಖುಷಿತರುತ್ತದೆ...

ವಂದನೆಗಳು...

Ittigecement said...

ವಿನೂತಾ....

ನಿಜ ಹೇಳ ಬೇಕೆಂದರೆ ಇದು ಒಂದೇ ಕಥೆ...

ಬ್ಲಾಗಿನ ಇತಿಮಿತಿಯೊಳಗೆ..
ಇದನ್ನು ಮೂರು ಭಾಗ ಮಾಡಿದೆ...

ಮೈ ಆಟೋಗ್ರಾಫ್ ನೋಡಿದ್ದೇನೆ....
ನಾನಿನ್ನ ಮರೆಯಲಾರೆ ನೋಡಿಲ್ಲ...

ನನಗೆ ಈಗಲೂ ಅನಿಸುತ್ತದೆ...
ಈ ಕಥೆ ಆಟೋಗ್ರಾಫ್ ಥರಹ ಇಲ್ಲ....

ಈ ಬ್ಲಾಗ್ ಲೋಕ ನನ್ನ ಕಾಲೇಜು ದಿನಗಳಲ್ಲಿ ಇರಬೇಕಿತ್ತು...
ಅಂತ ನನಗೆ ಬಹಳ ಫೀಲ್ ಆಗ್ತಾ ಇರುತ್ತದೆ...

ನಿಮ್ಮ ಪ್ರತಿಕ್ರಿಯೆ..
ನನಗೆ ಇನ್ನಷ್ಟು ಬರೆಯಲು ಸ್ಪೂರ್ತಿ....

ಧನ್ಯವಾದಗಳು...

Ittigecement said...

ಸುಧೇಶ್....

ಟೀಕೇ ರಾಮರಾವ್ ಅನ್ನುವ ಲೇಖಕರ ಕ್ರತಿಗಳನ್ನು ನನ್ನ ಬಾಲ್ಯದಲ್ಲಿ ಬಹಳ ಮೆಚ್ಚಿಕೊಳ್ಳುತ್ತಿದ್ದೆ...

ಜಿಂದೆ ನಂಜುಂಡ ಸ್ವಾಮಿಯವರ "ಸಾಯುತ್ತೀಯೆ ಎಚ್ಚರಿಕೆ" ಬಹಳ ಸಾರಿ ಓದಿದ್ದೇನೆ..
ಹೈಸ್ಕೂಲ್ ದಿನಗಳಲ್ಲಿ....

ಹೈಸ್ಕೂಲ್, ಕಾಲೇಜುದಿನಗಳಲ್ಲಿ ಬರೆಯ ಬೇಕೆಂಬ ತುಡಿತ ಇತ್ತು..
ನನ್ನ ಚಿಕ್ಕಪ್ಪ ಬೆನ್ನು ತಟ್ಟುತ್ತಿದ್ದರು...

ಈ ಬಿಸಿನೆಸ್, ವ್ಯವಹಾರಕ್ಕೂ
ಈ ಸಾಹಿತ್ಯ ಅಭಿರುಚಿಗೂ ಸಂಬಂಧವೇ ಇಲ್ಲ ಅನಿಸುತ್ತದೆ..
ನನ್ನ ವ್ಯವಹಾರ ದಿನದ ೨೪ ಗಂಟೆ ಕೇಳುತ್ತದೆ..
ಮಧ್ಯದಲ್ಲಿ ಈ ಚಟ...
ಈಗ ಆರ್ಥಿಕ ಹಿಂಜರಿತ ಕೆಲಸ ಕಡಿಮೆ
ಹಾಗಾಗಿ ನಡೆಯುತ್ತಿದೆ ಬ್ಲಾಗ್ ....

ನಿಮ್ಮ ಮೆಚ್ಚುಗೆ ನನ್ನ ಉತ್ಸಾಹ ಹೆಚ್ಚಿಸಿದೆ...

ಧನ್ಯವಾದಗಳು...

Ittigecement said...

ಸತ್ಯನಾರಯಣರವರೆ...

ಹಿಂದಿನ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಗಮನಿಸಿ..
ನಿಮಗೆ ಅನುಮಾನ ಬಂದಿದೆ ಎನ್ನುವದು ನನಗೂ ಗೊತ್ತಾಗಿತ್ತು...

ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ...
ಕಥೆಗಾರ ಅನಾಮಿಕನಾಗಿದ್ದರೆ ಬಹಳಷ್ಟು ದುಡಿಸಿಕೊಳ್ಳ ಬಹುದು...

ನಿಮ್ಮ ಪ್ರತಿಕ್ರಿಯೆಗಳು ಇನ್ನಷ್ಟು ಪ್ರಯೋಗ ಮಾಡಲು ಉತ್ಸಾಹ ತಂದಿದೆ..

ನನ್ನ ಪ್ರಯತ್ನ ಇಷ್ಟವಾಗಿ..
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ನ,
ಅನುಭವಿಸಿ ಓದಲು ಹಚ್ಚುವ ಹಾಗೂ ಅನುಭವಿಸಿ ಬರೆದ ಕಥೆ ಅತ್ಯುತ್ತಮ ವಾಗಿ ಮೂಡಿಬಂದಿದೆ.
ಇಂತಹಾ ದುಃಖ್ಖಾಂತ್ಯದ ಕಥೆಗಳು ಯಾವಾಗಲೂ ಕಥೆಗಳಾಗೇ ಉಳಿಯಲಿ.ಅತ್ತಿಗೆಯ ಭೂತಗೊಜ್ಜಿನ ಸುದ್ದಿ ಹೇಳಿ ನನಗೆ ಬೆಳಿಗ್ಗೆ 11 ಗಂಟೆಗೇ ಹಸಿವಾಗುವ ಹಾಗೆ ಮಾಡಿದೆ ಮಾರಾಯ.
ನಾನು ಬೆಂಗಳೂರಿನಲ್ಲಿದ್ದಾಗ ನನ್ನ ಅತ್ತೆ ಮಾಡುತ್ತಿದ್ದ ಬೂತಗೊಜ್ಜು ಖಾಲಿ ಆಗುವ ವರೆಗೆ ಅವರ ಮನೆಯಲ್ಲೇ ಟೆಂಟ್ ಹಾಕುತ್ತಿದ್ದೆ.

ನಾಗೇಶ್ said...

ಭಲೇ ಅಣ್ಣ , ನಾನು ಇದು ನಿಮ್ಮದೇ ಕಥೆ ಅನ್ಕೊಂಡು ಓದಿದೆ , ಹೋಗ್ಲಿ ನಿಜ ವಿಜಯ ಅವರು ನಿನ್ನ ಕಾಡಿಸಿದ್ರ??? ಈಗ ಎಲ್ಲಿ ಇದ್ದಾರೆ ??ಒಳ್ಳೆ ಕಥೆ ಅಣ್ಣ,
ಹೀಗೆ ಬರಿತಾ ಇರಿ .........

ಕ್ಷಣ... ಚಿಂತನೆ... said...

ಸರ್‌, ಲೇಖನ ನಿಜಕ್ಕೂ ಕುತೂಹಲದೊಂದಿಗೆ ಹೊಸ ತಿರುವಿನಲ್ಲಿ ಸಾಗಿತ್ತು. ಇಂತಹ ಒಂದು ಕಥಾಲೇಖನವನ್ನು ಬ್ಲಾಗಿಗರಿಗೆ ಹಂಚಿದಕ್ಕೆ ಧನ್ಯವಾದಗಳು.

ಇಂತಹ ಹತ್ತಾರು ಕಥೆಗಳು ಮೂಡಿಬರಲಿ ಎಂದು ಆಶಿಸುತ್ತಾ...

Ittigecement said...

ಉಮೀ....

ಹೇಳಲಾಗದ ಭಾವನೆ...
ಹ್ರದಯದಲ್ಲಿ ಬಚ್ಚಿಟ್ಟು...

ಇಪ್ಪತ್ತು ವರ್ಷಗಳ ನಂತರ..
ಬದಲಾದ ಸನ್ನಿವೇಷದಲ್ಲಿ...

ಅವಳ ಮನದಲ್ಲಿ ಏನಿತ್ತೆಂಬ ತಿಳಿಯುವ ತವಕ...

ಒಮ್ಮೆ ಕಣ್ ತುಂಬ ನೋಡುವ ಬಯಕೆ...

ಆ ಮನಸ್ಸಿನ ಭಾವನೆ ಸ್ವತಃ ಅನುಭವಿಸಿ...
ಬರೆಯುವ ಪ್ರಯತ್ನ....

ನಿಜಕ್ಕೂ ಖುಷಿಯಾಗ್ತಿದೆ...
ನಿಮ್ಮೆಲ್ಲ ಪ್ರತಿಕ್ರಿಯೆ ಓದಿ...

ಅನಂತ.., ಅನಂತ ಧನ್ಯವಾದಗಳು...

Anonymous said...

ಪ್ರಕಾಶಣ್ಣಾ,

ಮಸ್ತ್. ಆದ್ರೆ ಇನ್ನೂ ಮಸ್ತ್ ಮತ್ತೂ ಮಸ್ತ್ ಆಗಬಹುದಿತ್ತಾ ಅಂತ? ಇದೇ ಕತೆಗೊಂದು ’ಗತಿ’ ಕಾಣ್ಸಿ... ನಿಮ್ಮಲ್ಲಿ ಕತೆಗೆ ಬೇಕಾಗುವ ಬಹಳಷ್ಟು ವಿಚಾರಗಳಿವೆ.
’U hv dat Instinctive quality’

ಮುಂದುವರೆಯಲಿ...

Best,

Mahesh

Geetha said...

ನಮಸ್ಕಾರ ಸರ್,
ಏಕೋ ಒಂಥರ 'ಏಪ್ರಿಲ್ ಫೂಲ್’ ಆದಂತಾಯಿತು. ನಮ್ಮ ಹತ್ತಿರದವರಿಗೆ, ಆಪ್ತರಿಗೆ ಸಂತೋಷವೋ / ಬೇಸರವೋ ಅದಾಗ ಸಹಜವಾಗಿಯೇ ನಮ್ಮ ಮನಸ್ಸು ಮಿಡಿಯುತ್ತದೆ. ಆದರೆ ಕಥೆಯನ್ನು effective ಆಗಿಸಲು ಇಂಥ ಪ್ರಯೋಗವೇ?!! ಕಥೆಯೆಂದು ತಿಳಿದೂ ಕಥೆಯ ಪಾತ್ರಗಳೇ ನಮಗೆ ಆಪ್ತವೆನಿಸಿದರೆ, ಮನ ಮಿಡಿದರೆ ಅದು ಕಥೆಯ ಹಿರಿಮೆ ಎಂದು ನನ್ನ ಅನಿಸಿಕೆ.

ಚೆಂದ, ಚೆಂದದ ಕಮೆಂಟ್ ಗಳ ಮಧ್ಯ ಇಂಥ ಕಮೆಂಟ್ ಬರೆದಿದ್ದಕ್ಕೆ SORRY ಸರ್,

ನಿಮ್ಮ ಮುಂದಿನ 'ಕಥೆ'ಯ ನಿರೀಕ್ಷೆಯಲ್ಲಿ.....

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

tavu dayamadi onde bannadalli baredare kannigaguva himseyannaadaru tappisabhahudu!

ಕೃಪಾ said...

ನಮಸ್ತೆ.. ಪ್ರಕಾಶ್ ಅವರೇ....
ನನಗೂ ಕೂಡ ನಿಮ್ಮ ಕತೆಯ ಮೂರನೇ ಕಂತು...ಓದಿ.....ಆಟೋಗ್ರಾಪ್ ಸಿನೆಮಾ ನೆನಪಾಯ್ತು.
ನಾನು ತಮಿಳಲ್ಲಿ ನೋಡಿದ್ದು.... ಇದೇನಪ್ಪ ಒಂದೇ ತರ ಇದೆ ಅನಿಸಿ ಗೊಂದಲವಾಯ್ತು......
ಗೊಂದಲ ಮಾಡಿದ್ದು.... ನಾಗು...ವಿಜಯ.....ಮತ್ತು ನೀವು..... ಅಂತ್ಯ ಓದಿ ಸಮಾಧಾನ ಆಯ್ತು.....
ಸಧ್ಯ ಕತೆಯಲ್ಲ ಎಂದು..... ಇಂತಹ ವೇದನೆಗಳು ನಿಜವಾಗಿ ನಡೆದರೆ ಅನುಭವಿಸುವುದು ಎಷ್ಟು ಕಷ್ಟವಾಗಬಹುದಲ್ಲ......
ನನಗೆ ಅತೀ ಬೇಸರವಾದಾಗ ನಿಮ್ಮ ಬ್ಲಾಗ್ಗೆ ಬರ್ತಾ ಇಡೀ ನಗಲಿಕ್ಕೆ.......!!!

Ittigecement said...

ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)...

ನಾನು ಕಥೆಯನ್ನು ಯಾವುದೋ ಭಾವದಲ್ಲಿ..
ಯಾವುದೋ ವಿಚಾರವನ್ನು ಹೇಳುವದಕ್ಕೆ ಹೊರಟಿರುತ್ತೇನೆ...

ಓದುವವರಿಗೆ ಆ ಭಾವ , ವಿಚಾರ ಕಾಣಬೇಕಿಲ್ಲ...

ಬೇರೆ ವಿಚಾರ., ಭಾವ ನೋಡ ಬಹುದು...

ಈ ಥರಹದ ಅನುಭವ ನನಗೆ ಹೊಸದು...

ಫೋಟೊಗ್ರಫಿಯಲ್ಲೂ ಸಹ ಇಂಥಹುದೇ ಅನುಭವ ನನಗಾಗಿದೆ.......

ಓದುವಾಗ, ಬರೆಯುವಾಗ ನಮ್ಮ ಮೂಡು ಬಹಳ ಪ್ರಭಾವಶಾಲಿ ಅಂತಾಯಿತು ಅಲ್ಲವೇ...?

ಯತ್ ಭಾವ...,
ತತ್ ಭವತಿ....

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ....
ಧನ್ಯವಾದಾಅಗಳು...

Ittigecement said...

ವಾಣಿಯವರೆ...

ಮೊದಲ ಪ್ರಯತ್ನ.. ಹಾಗಾಗಿ ಸಣ್ಣದಿರಲಿ ಎಂದು ...

ಇಷ್ಟಪಟ್ಟು..
ಪ್ರೋತ್ಸಾಹಿಸಿದ್ದಕ್ಕೆ

ಧನ್ಯವಾದಗಳು...

Ittigecement said...

ವೀಣಾರವರೆ....

ಕಥೆಯನ್ನು ಇನ್ನೂ ಚೆನ್ನಾಗಿ ಬರೆಯ ಬಹುದಿತ್ತು...
ಮುಗಿಸ ಬಹುದಿತ್ತು...

ಇದರ ಮೂಲ ಕಥೆ ಸ್ವಲ್ಪ ಬೇರೇ ಥರಹ ಇದೆ...

ಬ್ಲಾಗಿಗಾಗಿ ಬದಲಾವಣೆ ಮಾಡಿದ್ದೇನೆ...
ನೀವು ಇಷ್ಟಪಟ್ಟಿದ್ದು ಸಂತೋಷವಾಯಿತು...

ಧನ್ಯವಾದಗಳು..
ಬರುತ್ತ ಇರಿ...

Ittigecement said...

ಶಿವು ಸರ್....

ನೀವೆನ್ನುವದು ನಿಜ....
ಇನ್ನೂ ಚೆನ್ನಾಗಿ ಬರೆಯ ಬಹುದಿತ್ತು...
ಎಷ್ಟೋ ವರ್ಷಗಳ ನಂತರ ಮೊದಲ ಪ್ರಯತ್ನ....ಇದು .
ಬಹಳ ಉದ್ದವಾದರೆ ಬೋರಾಗಿ ಬಿಡ ಬಹುದೆಂಬ ಆತಂಕ...ಇತ್ತು.
ಎರಡನೇ ಕಂತಿನ ಪ್ರತಿಕ್ರಿಯೆಗಳನ್ನು ಗಮನಿಸಿ...
ಬೇಗ ಮುಗಿಸಿ ಅನ್ನುವ ಅಭಿಪ್ರಾಯ ಕಂಡು ಬಂತು...
ಹಾಗಾಗಿ ಇದು ಅನಿವಾರ್ಯವಾಯಿತು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಶಿವಪ್ರಕಾಶ್....

ಮೈ ಆಟೋಗ್ರಾಫ್ ಕಥೆಯ ಛಾಯೆ ಇರಬಹುದು....

ಬರೆಯುವಾಗ ನನಗದರ ನೆನಪು ಸಹ ಆಗಲಿಲ್ಲ....

ಈಗಲೂ ಸಹ ನನಗನ್ನಿಸುತ್ತದೆ ಇದು ಬೇರೆ ಥರಹನೇ ಇದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಬಾಲು....

ನನ್ನನ್ನು ಕಾಡಿದ ವಿಜಯ ಬಾಳು
ನಿಜಜೀವನದಲ್ಲಿ ಚೆನ್ನಾಗಿರಲೆಂಬ ಆಶಯ ನನ್ನದೂಸಹ...

ಹಾಗಾಗಿ ಕೊನೆಯಲ್ಲಿ ನಾಗು ಬಾಯಿಂದ
"ಹೀಗೂ ಆಗಿರ ಬಹುದಲ್ಲ " ಎಂದು ಹೇಳಿಸಿದ್ದು...

ನಿಮ್ಮ ಹಿಂದನ ಭಾಗದ ಪ್ರತಿಕ್ರಿಯೆ ಈ ಭಾಗವನ್ನು ಬರೆಯುವಾಗ ಪ್ರಭಾವ ಬೀರಿತ್ತು...

ನಿಮ್ಮ ಪ್ರತಿಕ್ರಿಯೆಗಳು ಚೆನ್ನಾಗಿರುತ್ತದೆ...

ಪ್ರೋತ್ಸಾಹಕ್ಕೆ
ತುಂಬು ಹ್ರದಯದ ಧನ್ಯವಾದಗಳು...

Ittigecement said...

ರೂಪಾರವರೆ....

ನನ್ನ ಹೈಸ್ಕೂಲ್ ದಿನಗಳ ಪ್ರೇಮ ನಿಜ...
ಈ ಎಳೆಯನ್ನು ಇಟ್ಟುಕೊಂಡು ಈ ಕಥೆ ಬರೆದೆ...

ಬರೆದು ಎರಡು ತಿಂಗಳಾಗಿತ್ತು...

ಗೆಳೆಯ ಮಲ್ಲಿಕಾರ್ಜುನ್, ನನ್ನ ಪತ್ನಿ , ಕಲ್ಲಾರೆ ಮಹೇಶ್...
ಸ್ಪೂರ್ತಿ, ಬೆಂಬಲ ಕೊಟ್ಟವರು...

ಬ್ಲಾಗಿಗೋಸ್ಕರ ಅಲ್ಪ ಬದಲಾವಣೆ ಮಾಡ ಬೇಕಾಯಿತು...

ಕಾಲೇಜು ದಿನಗಳಲ್ಲಿ ಕಥೆಯೊಂದನ್ನು ಬರೆದು ಬಯ್ಯಿಸಿಕೊಂಡಿದ್ದೆ..
ಹಾಗಾಗಿ ಸಹಜ ಆತಂಕವಿತ್ತು...

ಮೆಚ್ಚುಗೆಗೆ ಧನ್ಯವಾದಗಳು...

Ittigecement said...

ದಿವ್ಯಾ ಮಲ್ಯರವರೆ....

ಇನ್ನೂ ಚೆನ್ನಾಗಿ ಬರೆಯ ಬಹುದಿತ್ತು ಎನ್ನವದು ನನ್ನ ಅನಿಸಿಕೆ...

ಬ್ಲಾಗಿನ ಉದ್ದೇಶದಿಂದ ಸ್ವಲ್ಪ ಕಟ್ ಮಾಡಬೇಕಾಯಿತು...

ನೀವೆಲ್ಲ ಇಷ್ಟ ಪಟ್ಟಿದ್ದು ಬಹಳ ಖುಷಿಯಾಗ್ತಿದೆ...

ಇನ್ನಷ್ಟು ಬರೆಯಲು ಪ್ರೇರಣೆ ಕೊಡುತ್ತಿದೆ...

ಧನ್ಯವಾದಗಳು...

Ittigecement said...

ಕಿಶನ್....

ಎರಡನೇ ಕಂತಿನಲ್ಲಿ ಬಂದ ಪ್ರತಿಕ್ರಿಯೆಗಳು ಬೇಗ ಮುಗಿಸುವಂತೆ ಮಾಡಿದವು...

ಬೋರಾಗಿ ಬಿಡಬಹುದಲ್ಲ...!

ನನಗೂ ಅನ್ನಿಸಿದೆ... ಜಲ್ದಿ.., ಜಲ್ದಿ ಮುಗಿಯಿತು ಅಂತ....

ನಿಮ್ಮ ಪ್ರತಿಕ್ರಿಯೆಗಳು ಚೆನ್ನಾಗಿರುತ್ತದೆ..
ನನಗೆ ಇಷ್ಟ....

ಧನ್ಯವಾದಗಳು...

Ittigecement said...

ಚಿತ್ರಾರವರೆ.....

ಯಯಾತಿ ನನಗೆ ಇಷ್ಟವಾದ ಕಾದಂಬರಿಗಳಲ್ಲಿ ಒಂದು....

ಆಥರಹ ಬರೆಯಬೇಕೆಂಬುದು ಹೆಬ್ಬಯಕೆ...

ಇಲ್ಲಿ ನಾನು ನಿಜವಾಗಿಯೂ ಅನುಭವಿಸಿದ ಭಾವಗಳೇ ಆಗಿದ್ದರಿಂದ ನನಗೆ..
ಸುಲಭವಾಯಿತೆನ್ನುವದು ನನ್ನ ಅನಿಸಿಕೆ...

ನಿಮ್ಮೆಲ್ಲರ ಪ್ರತಿಕ್ರಿಯೆ ಇನ್ನಷ್ಟು ಬರೆಯಲು ಪ್ರೇರಣೆ...
ತುಂಬು ಹ್ರದಯದ ವಂದನೆಗಳು...

Ittigecement said...

ಮಲ್ಲಿಕಾರ್ಜುನ್...

ನನಗೂ ಈಥರಹದ ಹೆದರಿಕೆ ಇತ್ತು...

ಹಾಸ್ಯ ಬರಹಗಳನ್ನು ಮಾತ್ರ ಬರೆಯುವ ಬಂಧನದಿಂದ ಹೊರಗೆ ಬರಬೇಕಿತ್ತು...

ಸಾಗರ್ ಸಂಗಮ್ ಚಿತ್ರದ ಸನ್ನಿವೇಶ ಬಹಳ ಚೆನ್ನಾಗಿದೆ...

ಅಷ್ಟು ಚಂದದ, ಹೊಳಪಿನ ಕಣ್ಣಿನ
ಹುಡುಗಿಯನ್ನು ವಿಧವೆಯಾಗಿ ಹೇಗೆ ನೋಡುವದು....?
ಇದನ್ನು ನಾನೂ ಅನುಭವಿಸಿದೆ...
ಬರೆಯುವಾಗ,...
ನಿಮಗೂ,, ನನ್ನಾಕೆಗೂ ಹೇಳುವಾಗ..
ಭಾವುಕನಾಗಿದ್ದೆ... ಕಣ್ಣಲ್ಲಿ ನೀರು ಬಂದಿತ್ತು...

ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಬರೆಯಲು ಸ್ಪೂರ್ತಿ....

ಕಥೆ ಹೇಳುವಾಗ ನೀವು ತಿದ್ದುತ್ತೀರಲ್ಲ ಅದು ನನಗೆ ಇಷ್ಟ...

ಮಲ್ಲಿಕಾರ್ಜುನ್..
ಇನ್ನು ಮುಂದೆ ನಿಮಗೆ ಇನ್ನಷ್ಟು ತೊದರೆ ಕೊಡುವವನಿದ್ದೇನೆ... ತಯಾರಾಗಿರಿ....

ಧನ್ಯವಾದಗಳು...

umesh desai said...

ಕಥೆ ಚೆನ್ನಾಗಿದೆ..ಆ ಹಳೆ ದಾಸರಿ ನಾರಾಯಣ್ ರಾವ್ ಜಿತೇಂದ್ರ ಹಾಗೂ ರೇಖಾ ಹಾಕಿಕೊಂಡು "ಮೆಹಂದಿ ರಂಗ ಲಾಯೇಗಿ" ಅನ್ನುವ ಸಿನೇಮಾ ತೆಗೆದಿದ್ದ ಸ್ವಲ್ಪ ಅದೇ ಧಾಟಿ...ಅಭಿನಂದನೆಗಳು...!

Ittigecement said...

ಮೂರ್ತಿ ಹೊಸಬಾಳೆ....

ವರ್ತಮಾನ ಬದುಕಿನ ಆಕರ್ಷಣೆ ಕುರಿತಾಗಿ ಸಾಂಕೇತಿಕವಾಗಿ ಮಾವಿನಕಾಯಿ ಗೊಜ್ಜಿನ್ನು ಹೇಳಿದ್ದೇನೆ...

ವಿಜಯಾ ಬದುಕಿನ ಕಲ್ಪನೆ.. ಕನಸು...
ವಾಸ್ತವ ಮಡದಿ, ಮಾವಿನ ಕಾಯಿ ಭೂತಗೊಜ್ಜು...

ಕಲ್ಪನೆ ನಮಗೆ ಬೇಕು..
ಆದರೆ ಬದುಕುವದು ವಾಸ್ತವದಲ್ಲಿ....
ವರ್ತಮಾನದಲ್ಲಿ.... ವರ್ತಮಾನದ ಸತ್ಯದಲ್ಲಿ....

ಅವೆರಡನ್ನೂ ಹೊಂದಿಸಿ , ತೂಗಿಸಿ ಬದುಕ ಬಹುದಾ...?

ಅದಕ್ಕೆ ಇನ್ನೊಂದು ಕಥೆ ಬರೆಯುವೆ....

ಕಥೆಯನ್ನು ಓದಿ , ಅನುಭವಿಸಿದ್ದಕ್ಕೆ
ಧನ್ಯವಾದಗಳು...

Ittigecement said...

ನಾಗೇಶ್....

ವಿಜಯಾ ನನ್ನನ್ನು ಕಾಡಿದ್ದು ಸತ್ಯ....!

ಅವರು ಈಗ ಎಲ್ಲಿದ್ದಾರೆಂದು ಗೊತ್ತಿಲ್ಲ....!

ನನ್ನ ಗೆಳೆಯ ನಾಗು ಈ ಬಾರಿಯೂ ಹುಡುಕುವೆ ಎಂದು ಹೇಳಿದ್ದಾನೆ...

ಸಿಗ ಬಹುದು ಒಮ್ಮೆಯಾದರೂ....

ಮೆಚ್ಚಿ ...
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಕ್ಷಣ ಚಿಂತನೆ....

ಹ್ರದಯದಲ್ಲಿ ಬೆಚ್ಚಗೆ ಮುಚ್ಚಿ......
ಆಗಾಗ ಏಕಾಂತದಲ್ಲಿ ಬಿಚ್ಚಿ..
ನೋಡುವ ಪ್ರೇಮ..
ಸುಖವಾ..?
ಹಿತವಾ...?
ಸಿಹಿಯಾದ ನೋವಾ...?

ಆ ಅನುಭವಗಳಿಗೆ..
ಪದಗಳಿಲ್ಲ...

ಧನ್ಯವಾದಗಳು...

Ittigecement said...

ಕಲ್ಲಾರೆ ಮಹೇಶ್...

ನೀವು ತಲೆಯಲ್ಲಿ ಹುಳ ಬಿಡದಿದ್ದರೆ...
ಇದು ಯಾವಾಗ ಬರುತ್ತಿತ್ತೋ ಗೊತ್ತಿಲ್ಲ....

ನಿಜ ಇದು ಇನ್ನೂ ಚೆನ್ನಾಗಿ ಬರಬಹುದು...
ಮೂಲ ಕಥೆ ನಿಮಗೆ ಕಳಿಸಿ ಕೊಡುವೆ....
ಅಭಿಪ್ರಾಯ ತಿಳಿಸಿ... ಯಾವುದೇ ಮುಲಾಜಿಲ್ಲದೆ..

ನನ್ನ ಕಷ್ಟ,ಸುಖದ..
ನೋವು.., ನಲಿವಿನಲ್ಲಿ..
ಮಾತಾಗಿ.., ಹಾಡಾಗಿ...
ಏಕಾಂತದಲ್ಲಿ ಜೋತೆಯಾಗಿ...
ಮೌನವಾಗಿ ನನ್ನೊಡನಿದ್ದು...
ಹ್ರದಯತುಂಬ ಗಾಢವಾಗಿ ಆವರಿಸಿದ
ಆ ಕಣ್ಣುಗಳು..
ಆ ಕಿರುನಗು...
ಹಾಗೆಯೇ ಇರಲೆಂಬುದು...
ನನ್ನ ಸ್ವಾರ್ಥವೇ...?
ಇಷ್ಟು ದಿನ ಏಕಾಂತದಲ್ಲಿ ಅನುಭವಿಸಿದ್ದು...
ಸಿಹಿಯಾದ ಸುಖವೇ...?
ಹಿತವಾದ ನೋವೇ..?

ನಿಮ್ಮ ಪ್ರೋತ್ಸಾಹಕ್ಕೆ

ಅನಂತ ಅನಂತ ವಂದನೆಗಳು...

Ittigecement said...

ಗೀತಾರವರೆ....

ನಿಮಗೆ ಇದು ಕಥೆಯೆಂದು ಹೇಳದಿದುದಕ್ಕೆ ಕ್ಷಮೆ ಇರಲಿ...
ಅದು ತಪ್ಪೆಂದು ನನಗೂ ಅನ್ನಿಸಿತ್ತು...
ಇಂಥಹ ಎಡವಟ್ಟು ಪ್ರಯೋಗ ಮಾಡಿ ನಿಮಗೆಲ್ಲ ಬೇಸರ ತರಿಸಿದ್ದು ನನ್ನ ತಪ್ಪು...

ಆದರೆ ಇದನ್ನು ಬರೆವಾಗ ನಾನು ನಾನಾಗಿಯೇ ಬರೆದಿದ್ದೇನೆ..
ಕೊನೆಯಲ್ಲಿ ಬರೆವಾಗ ಭಾವೋದ್ವೇಗಕ್ಕೆ ಒಳಗಾಗಿದ್ದೆ...

ನನ್ನ ಗೆಳತಿಗೆ ಹಾಗಾಗದಿರಲೆಂದು ಪ್ರಾರ್ಥಿಸಿದೆ..
ನಾಗುವಿನ ಬಾಯಲ್ಲಿ "ಹೀಗೂ ಆಗಿರ ಬಹುದೆಂದು" ಹೇಳಿಸಿದ್ದು ಅದಕ್ಕಾಗಿಯೇ...

ಕದ್ದು ಮುಚ್ಚಿ..
ಎದೆಯೊಳಗೆ ಬಚ್ಚಿಟ್ಟು..
ಪ್ರೆಮಿಸುವ ಹ್ರದಯಗಳು...

ಎದುರಿಗೆ ಸಿಕ್ಕರೂ..
ಹೇಳಲಾಗದ
ಭಾವನೆಗಳು..
ಬೀಜ ಮೊಳಕೆಯೊಡೆದು..
ಹೂ ಬಿಡುವಾಗ...
ಬಾಡಿಹೋಗುವ ಚಿಂತೆಯೆ...
ಮತ್ತೆ...
ಹೊಸ ಚಿಗುರೊಡೆವ ಕನಸೆ...?

ವರ್ತಮಾನದ ವಾಸ್ತವದಲ್ಲಿ ಬದುಕುವದೇ ಸತ್ಯ..
ಅದು ಅಗತ್ಯ... ಕೂಡ...

Ittigecement said...

ರಾಘವೇಂದ್ರರೆ....

ನೀವು ಹೇಳಿದ ಮೇಲೆ ನೋಡಿದಾಗ ನನಗೂ ಹಾಗೇ ಅನ್ನಿಸಿತು...
ಮುಂದಿನ ಲೇಖನಗಳಲ್ಲಿ
ಕಡಿಮೆ ಬಣ್ಣಗಳಲ್ಲಿ ಬರೆವೆ...

ಬರೆದದ್ದು ಬದುಕಿನ ಬರಹ,...
ಬದುಕಿನಲ್ಲಿ ಬಣ್ಣಗಳಿಲ್ಲದಿದ್ದರೆ ಹೇಗೆ...?

ಆದರೆ...
ಬಣ್ಣಗಳೆ ಬದುಕಾಗಬಾರದಲ್ಲ...

ಭಾವಗಳ ಅಭಿವ್ಯಕ್ತಿಗೆ ಬಣ್ಣಗಳು ಅಗತ್ಯ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಕ್ರಪಾರವರೆ...

ನಾನು ನಿಮ್ಮ ಪ್ರತಿಕ್ರಿಯೆಗಳ ಫ್ಯಾನ್...

ನನ್ನ ಬ್ಲಾಗಿನ ಘಟನೆಗಳನ್ನು ಸಿನೇಮಾ ಕಲ್ಪನೆ ಮಾಡಿ ಬರೆದ ನಿಮ್ಮ ಪ್ರತಿಕ್ರಿಯೆ
ನನಗೆ ಬಹಳ ಇಷ್ಟ...

ಬರೆಯುವದಲ್ಲೂ ಖುಷಿಯಿದೆ..
ಸುಖವಿದೆ
ಎಂದು ಗೊತ್ತಿರಲಿಲ್ಲ...

ಗೆಳೆಯ ಶಿವು, ಮಲ್ಲಿಕಾರ್ಜುನ್ ರವರಿಗೆ ಎಷ್ಟು
ಕ್ರತಜ್ಞತೆ ಹೇಳಿದರೂ ಕಡಿಮೆಯೇ...

ನಿಮ್ಮಪ್ರೋತ್ಸಾಹ..
ಅಭಿಮಾನಕ್ಕೆ
ಹ್ರದಯ ಪೂರ್ವಕ ವಂದನೆಗಳು...

Ittigecement said...

ಉಮೇಶ್ ದೇಸಾಯಿಯವರೆ...

ನೀವು ಹೇಳಿದ ಸಿನೇಮಾ ನಾನು ನೋಡಿಲ್ಲ....

ಆ ಹುಡುಗಿ ಎಲ್ಲಿದ್ದರೂ ಸುಖವಾಗಿರಲಿ...
ಇದು ಬರಿ ಕಲ್ಪನೆ...
ಕಥೆಯಲ್ಲೂ ಕೂಡ ಹಾಗಾಗದಿರಲಿ ಎಂದು..
ನಾಗುವಿನ ಬಾಯಲ್ಲಿ " ಒಂದು ಅನುಮಾನ" ಉಳಿಸಿದ್ದು...

ಹೇಗೂ ಆಗಿರ ಬಹುದು...

ಅಗಿರುವದು ಒಳೆಯದೇ ಆಗಿರಲೆಂಬುದು..
ಹಾರೈಕೆ...

ಲೇಖನ ಇಷ್ಟ ಪಟ್ಟಿದ್ದಕ್ಕೆ ವಂದನೆಗಳು...

PaLa said...

ಪ್ರಕಾಶ್,
ಕಥೆಯ ಮೂರೂ ಸಿರೀಸ್, ನಿಮ್ಮ ಶೈಲಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದೀರಿ, ಅಭಿನಂದನೆಗಳು.

Geetha said...

ಸಾರ್,
ನೀವು please.... "ಕ್ಷಮೆ ಇರಲಿ" ಎಂದೆಲ್ಲ ಬರೆಯಬೇಡಿ...ಕೊನೆಯ ಭಾಗ ಓದುತ್ತಾ ಬಹಳ ತಳಮಳವಾಗಿತ್ತು.ಇದು ಕಥೆಯೆಂದು ತಿಳಿದ ತಕ್ಷಣ ಸುಮ್ಮನೆ ಇಷ್ಟು ಸಂಕಟ ಪಟ್ಟೆನಲ್ಲ ಎನಿಸಿ ಹಾಗೆ ಕಮೆಂಟ್ ಬರೆದುಬಿಟ್ಟೆ :(

ನಿಮ್ಮ ಮುಂದಿನ ಕಥೆಗೆ ತುಂಬಾ ಯಶಸ್ಸು ಸಿಗಲೆಂದು ಹಾರೈಸುವೆ.

(ನನಗೆ replyನಲ್ಲಿ ನೀವು ಬರೆದಿರುವ ಮಾತುಗಳು ಒಳ್ಳೆ ಕವನದ ಹಾಗೆ ಇವೆ..ಅದನ್ನು ಸ್ವಲ್ಪ ವಿಸ್ತರಿಸಿ ಒಂದು post ಹಾಕಿರಿ ಸರ್, ಚೆನ್ನಾಗಿರುತ್ತದೆ :))

Guruprasad said...

ಪ್ರಕಾಶ್ ಸೂಪರ್ ಆಗಿ ಇದೆ ನಿಮ್ಮ ಕತೆ.....ನಿಮ್ಮಗಳ ಹೆಸರು ಬಳಸಿಕೊಂಡು,,, ತುಂಬ ಚೆನ್ನಾಗಿ ಕತೆಯನ್ನು ಬರೆದಿದ್ದೀರ....ವೆರಿ ನೈಸ್... ಕೀಪ್ ಇಟ್ ಅಪ್...
ಗುರು

NiTiN Muttige said...

ಅಯ್ಯೋ ಇದೇಲ್ಲಾ ಕಲ್ಪನೇನಾ??!!! :)
ನೀನು ಆ ಮೂರು ಹೆಸರನ್ನು ಬಿಟ್ಟು ಬೇರೆ ಹೆಸರು ಹಾಕಿದ್ದರೆ ಈಗಿದ್ದಷ್ಟು ಭಾವನೆ ಅದಕ್ಕೆ ಇರ್ತಿತಿಲ್ಲೆ. ಆ ಮೂರು ಪಾತ್ರಗಳಿಂದನೆ ಅದು ನಮ್ಮನ್ನು ಹಿಡಿದಿಟ್ಟಿದ್ದು... ಮತ್ತೊಂದಿಷ್ಟು ಇದೇ ರೀತಿ ಬರಲಿ...

guruve said...

ಕಥೆ ಬಹಳ ಚೆನ್ನಾಗಿದೆ.. ಹೀಗೆ ಮುಂದುವರೆಸಿ,

ಸವಿಗನಸು said...

ಪ್ರಕಾಶಣ್ಣಾ,
ತಡವಾಗಿ ಓದಿದೆ ನಿಮ್ಮ ಈ ಕಥೆ...೩ ಭಾಗ ಎನ್ದು ಮೊದಲೆ ನೋಡಿದ್ದರಿನ್ದ ಮೊದಲಿನ್ದ ಓದಿದೆ. ಕೊನೆ ಕೊನೆನಲ್ಲಿ ಹ್ರುದಯ ಇಡಿದು ಇಟ್ಟಿತ್ತು. ಈ ತರಹ ನಿಜ ಜೀವನದಲ್ಲಿ ಯಾರಿಗೂ ಆಗದಿರಲಿ. ಹೆಸರುಗಳು ತುಮ್ಬ ಚೆನ್ನಾಗಿ ಆರಿಸಿದ್ದೀರಾ ಅದು ನಮ್ಮನು ಇನ್ನು ಇಡಿದು ಇಟ್ಟಿತ್ತು. ಅದ್ಭುಥವಾಗಿತ್ತು...ಇನ್ನಷ್ಟು ಬರಲಿ ....

Supreet Katti ಸುಪ್ರೀತ್ ಕಟ್ಟಿ said...

ಓದುತ್ತಾ ಓದುತ್ತಾ ಮೈ ಆಟೋಗ್ರಾಫ಼್ ಸಿನೆಮಾ ನೊಡಿದ ಹಾಗಾಯ್ತು...