Wednesday, July 4, 2012

.................. ಸಿದ್ಧತೆ ....



ನನ್ನ ಅಪ್ಪ ಅಮ್ಮ ನನ್ನನ್ನು ತುಂಬಾ ಪ್ರೀತಿಸುತ್ತಾರೆ...


ನನ್ನನ್ನು  ಬಹಳ ಕಷ್ಟಪಟ್ಟು ಓದಿಸಿದ್ದಾರೆ...
ನನ್ನ ಏಳಿಗೆಗಾಗಿ ತಮ್ಮ ಸಂತೋಷವನ್ನು ತ್ಯಾಗ ಮಾಡಿದ್ದಾರೆ....
ಈಗ ನಾನು ..
ನಾನು ಇಷ್ಟಪಟ್ಟ ಹುಡುಗಿಯನ್ನೂ ಮದುವೆಯಾಗಿದ್ದೇನೆ...


ಇನ್ನೇನು ಎಲ್ಲವೂ  ಸ್ವರ್ಗ... 
ಎಲ್ಲವೂ ಸುಖ..!
ಸಂತೋಷ ಅಂದುಕೊಂಡು ಬಿಟ್ಟೀರೇನು...?


ಹಾಗಲ್ಲ ಮಾರಾಯರೆ...


ಮದುವೆಯಾದಮೇಲೆ ಪಟ್ಟಣದಲ್ಲಿ  ಎರಡು ವರ್ಷ ನಾನು ಮತ್ತು ಹೆಂಡತಿ ಇಬ್ಬರೇ ಇದ್ದೆವು..
ಅಪ್ಪನಿಗೆ ಇದ್ದಕ್ಕಿದ್ದಂತೆ "ಪಾರ್ಶ್ವವಾಯು" ಆಯಿತು...
ಎದ್ದು ನಿಲ್ಲಲಿಕ್ಕೂ ಆಗದ ಸ್ಥಿತಿ...


ನಾವು ಅಪ್ಪ  ಅಮ್ಮ ಇದ್ದ ಊರಿಗೆ ಬಂದೆವು....


ಇಲ್ಲಿಂದ ಶುರುವಾದದ್ದು...


ಅಪ್ಪ ಅಮ್ಮ ನನ್ನನ್ನು ಜೀವದಷ್ಟು ಪ್ರೀತಿಸುತ್ತಾರೆ..
ನನ್ನ ಮಡದಿಯೂ ಕೂಡ..ನನ್ನನ್ನು ಪ್ರೀತಿಸುತ್ತಾಳೆ....


ಎಲ್ಲರೂ ಬದುಕುವದು ಪ್ರೀತಿಗಾಗಿಯೇ...


ಈ ಪ್ರೀತಿಗಳ ನಡುವೆ ಯಾಕೆ ಹೊಂದಾಣಿಕೆ  ಆಗುವದಿಲ್ಲ......?


ಅಪ್ಪ ಅಮ್ಮ ..
ನನಗೆ ಬದುಕಿನ ಎಲ್ಲ ಬಗೆಯ ಮಜಲುಗಳನ್ನು ತಿಳಿಸಿದ್ದಾರೆ...
ಇದು ಸರಿ....ಅದು ತಪ್ಪು...
ಮಾರ್ಗದರ್ಶನ ಯಾವಾಗಲೂ ಮಾಡಿದ್ದಾರೆ...


ಆದರೆ ಅವರಿಗೆ ..
ತಮ್ಮ ಸೊಸೆಯ ಸಂಗಡ ಸಾಮರಸ್ಯ ಸಾಧ್ಯವಾಗಲೇ ಇಲ್ಲ...


ನನ್ನಾಕೆಯೂ ಬಹಳ ಓದಿದ್ದಾಳೆ...
ನಮ್ಮ ಓದು ....
ಬದುಕಿನ ಪಾಠಗಳನ್ನು ಹೇಳಿಕೊಡುವದಿಲ್ಲವಲ್ಲ..........


ನಿತ್ಯವೂ ಜಗಳ.....!
ಕೂತಿದ್ದಕ್ಕೆ... ನಿಂತಿದ್ದಕ್ಕೆ...
ನೋಡಿದ್ದಕ್ಕೆ ಜಗಳ.. !


ಮನೆಗೆ ಬಂದಾಗ ಯಾರ ಮಾತು ಕೇಳಬೇಕು ಅಂತ ಗೊತ್ತಾಗುತ್ತಲೇ ಇರಲಿಲ್ಲ....


"ನಿಮ್ಮ ಅಮ್ಮ .......
ನಿಮ್ಮನ್ನು ಮಾತ್ರ ಪ್ರೀತಿಸುತ್ತಾಳೆ...
ಅಪ್ಪ ಅಮ್ಮರನ್ನು ಬಿಟ್ಟು ಬಂದ ನಾನೂ ಒಂದು ಹೆಣ್ಣು...
ನಾನು ಒಬ್ಬ ಮಗಳು ಎನ್ನುವದನ್ನು ಮರೆತು ಬಿಡುತ್ತಾರೆ...


ನನ್ನೊಂದಿಗೆ ಅವರ ಸ್ಪರ್ಧೆ... !
ಅಡಿಗೆ... 
ಮನೆಯ ಕೆಲಸ ಎಲ್ಲದರಲ್ಲೂ ನನ್ನೊಂದಿಗೆ ಸ್ಪರ್ಧೆ ಮಾಡುತ್ತಾರೆ...
ನನ್ನನ್ನು ಹಂಗಿಸುತ್ತಾರೆ...!"


ನಾನು ಏನು ಹೇಳಲಿ...?


"ನೋಡು ಪುಟ್ಟಣ್ಣಿ.....
ನೀನು ಸುಮ್ಮನಿದ್ದು ಬಿಡು... ಅವರಿಗೂ ವಯಸ್ಸಾಯಿತು..
ಅವರೆಲ್ಲ ಇನ್ನು ಎಷ್ಟು ವರ್ಷ ಇರ್ತಾರೆ...?


ತಾಳ್ಮೆ ಇಟ್ಟುಕೊ.. ಎಲ್ಲವೂ ಸರಿಯಾಗುತ್ತದೆ..."


"ನೋಡಿ....
ಅವರಿಗೆ ವಯಸ್ಸಾಗಿದೆ ಅಂತ ನನಗೂ ಗೊತ್ತು...
ಇತ್ತೀಚೆಗೆ ಅಷ್ಟೆ ಅವರು ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ..


ಎಲ್ಲರಿಗೂ ತಮ್ಮ ವೃತ್ತಿ ಬದುಕಿನ ನಿವೃತ್ತಿಯ ಬಗೆಗೆ ಯೋಚಿಸುತ್ತಾರೆ...
ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಾರೆ...


ಆದರೆ ಬದುಕಿನ ನಿವೃತ್ತಿಯ ಬಗೆಗೆ ... 
ಸಾವು ಬರುವದರ ಬಗೆಗೆ ಯೋಚಿಸುವದೇ ಇಲ್ಲ....
ಅದಕ್ಕೊಂದು ಸಿದ್ಧತೆಯನ್ನೂ ಮಾಡಿಕೊಳ್ಳುವದಿಲ್ಲ....


ಸಾಯುವ ವಯಸ್ಸಿನ ನಿಮ್ಮಮ್ಮನಿಗೆ ನನ್ನನ್ನು ಮಗಳಂತೆ ನೋಡಿಕೊಂಡರೆ ಏನು ಕಷ್ಟ?
ನಾನು ಬೆಟ್ಟದಷ್ಟು ಪ್ರೀತಿಕೊಡಬಲ್ಲೆ...


ಎಷ್ಟೇ ಪ್ರಯತ್ನ ಪಟ್ಟರೂ ..
ಪ್ರೀತಿಸಿದರೂ ನಿಮ್ಮಮ್ಮನಿಗೆ ನಾನು ಸೊಸೆಯಾಗಿಯೇ ಉಳಿದು ಬಿಟ್ಟಿದ್ದೇನೆ...
ಮಗಳಾಗಲಿಲ್ಲ..."


ನನಗೆ ನಿದ್ದೆ ಬರಲಿಲ್ಲ...
ಟಿವಿ ನೋಡೋಣ ಅಂತ ಹಾಲಿಗೆ ಬಂದೆ..


ಅಮ್ಮ ಬಂದು ತಲೆ ಸವರಿದಳು...
ನಾನು ಅಮ್ಮನ ಕೈ ಹಿಡಿದುಕೊಂಡೆ....


"ಅಮ್ಮಾ...
ಬೆಳಿಗ್ಗೆ ಕೆಲಸಕ್ಕೆ ಹೋದವನು ನಾನು ಬರುವದು ರಾತ್ರಿ...
ಶಾಂತಿಯಿಂದ ಮಲಗಲೂ ಸಾಧ್ಯವಿಲ್ಲಮ್ಮ...


ನೀವಿಬ್ಬರೂ ಯಾವಾಗ ಪ್ರೀತಿಯಿಂದ ಇರುತ್ತೀರಮ್ಮ...?"


ಅಮ್ಮ ಕೈ ಬಿಡಿಸಿಕೊಂಡಳು...


"ಓಹೋ...
ನನ್ನ ಬಗೆಗೆ ಚುಚ್ಚಿ ಕಳಿಸಿದ್ದಾಳೋ... ಅವಳು...?"


"ಇಲ್ಲಮ್ಮ... ಹಾಗೇನೂ  ಇಲ್ಲ....
ನೀವಿಬ್ಬರೂ ಪ್ರೀತಿಯಿಂದ ಇರುವದು ನನಗೆ ಮುಖ್ಯ..."


"ಮಗನೆ ..
ಮುದುಕುತನ ..
ವೃದ್ಯಾಪ್ಯ ಅಂದರೆ ಏನು ಗೊತ್ತೇನೋ...?


ಬದುಕಿನ ಎಲ್ಲ ...ವ್ಯವಹಾರ ಮುಗಿಸಿ  
" ಕಾಣದ ಸಾವಿಗಾಗಿ ಕಾಯುವ ಸಮಯ ..."


ನಿಮಗಾದರೆ ...
ರಾತ್ರಿ ಮಲಗಿದರೆ ಕನಸುಗಳಿರುತ್ತವೆ....
ಬೆಳಿಗ್ಗೆ ಏಳಲು ಹೊಸ ಆಸೆ ಗಳಿರುತ್ತವೆ ..


ದಿನವೆಲ್ಲ ಹೊಸ ...ಹಸಿವು ಇರುತ್ತದೆ ..


ಊಟದಲ್ಲಿ  ಬಗೆ ಬಗೆಯ ರುಚಿಗಳಿರುತ್ತವೆ .. 
ಆ ರುಚಿಯನ್ನು ಸವಿಯುವಂಥಹ  ನಾಲಿಗೆ ಇದ್ದಿರುತ್ತದೆ...
ಜೀರ್ಣ ಶಕ್ತಿಯೂ ಇದ್ದಿರುತ್ತದೆ...
ನಮಗೆ ಹಾಗಲ್ಲ .ಮಗನೆ...."


".ಅಮ್ಮಾ...
ಇಷ್ಟೆಲ್ಲಾ  ಗೊತ್ತಿರೋ ನೀನು  ..
ಅವಳನ್ನು  ಮಗಳಂತೆ  ಪ್ರೀತಿ ಮಾಡಮ್ಮಾ...."


"ಪ್ರೀತಿ ಅನ್ನೋದು ತಂತಾನೆ ಹುಟ್ಟಬೇಕು ಕಣೊ...
ಬಲವಂತವಾಗಿ ಹುಟ್ಟಿಸಲು ಸಾಧ್ಯವಿಲ್ಲ..


ಮದುವೆಯಾಗಿ ಎರಡು ವರ್ಷವಾದರೂ...
ಅವಳು ಇನ್ನೂ ತವರಿನ ಮಗಳಾಗಿಯೇ ಇದ್ದಾಳೆ.. 


ಅಪ್ಪ... ಅಮ್ಮನ ..
ಮುದ್ದಿನಲ್ಲಿ ಬೆಳೆದ ಅವಳು ಯಾವಾಗಲೂ .. 
ಗಂಡನ  ಮನೆಯ ಜವಾಬ್ದಾರಿಯನ್ನು .. ತನ್ನ ಅಪ್ಪ ಅಮ್ಮನ ಪ್ರೀತಿಗೆ ಹೊಲಿಸುತ್ತಾಳೆ....


ನನ್ನೊಂದಿಗೆ ಸಿಡಿ ಮಿಡಿಗುಡುತ್ತಲೇ  ಇರುತ್ತಾಳೆ.....


ನೆನಪಿಟ್ಟುಕೋ...
ನಾನು  ಎಷ್ಟೇ  ಪ್ರೀತಿ ಕೊಟ್ಟರೂ  ..


ಅಮ್ಮ ಅಮ್ಮನೇ....
ನಾನು ಯಾವಾಗಲೂ ಅತ್ತೆ  ನೇ ...


ತನ್ನ ಅಪ್ಪನ ಮನೆಯೇ ಇಂದಿಗೂ ಅವಳಿಗೆ ತನ್ನ ಮನೆ...


ನಾವೆಲ್ಲ ಪರಕಿಯರು ಕಣಪ್ಪಾ...
ಯಾವಾಗಲೂ..
ಮೂರೂ ಹೊತ್ತು ಅಪ್ಪನ ಮನೆಗೆ ಫೋನ್ .ಮಾಡ್ತಾಳೆ...


ಅವರ ಬಳಿ ನನ್ನ ಬಗೆಗೆ ಇಲ್ಲ ಸಲ್ಲದ ಮಾತು ಆಡ್ತಾನೇ ಇರ್ತಾಳೆ"


"ಇರ್ಲಿ ಬಿಡಮ್ಮಾ..
ನೀನು ವಯಸ್ಸಲ್ಲಿ ದೊಡ್ಡವಳು ..
ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಮ್ಮ.."


"ಇದೊಂದು ಬಾಕಿ ಇತ್ತು ಕಣೊ..
ನಮ್ಮ ಬದುಕಿನ ಕನಸ್ಸೆಲ್ಲ ನಿನ್ನಲ್ಲಿ ಕಾಣಲು ಪ್ರಯತ್ನ ಪಟ್ಟೆವಲ್ಲಾ..


ನಾವು ಹೇಗಿದ್ದರೂ ..
ನನ್ನ ಮಗ ಚೆನ್ನಾಗಿರಬೇಕು ಅಂತ ಕಷ್ಟ ಪಟ್ಟಿದ್ದೆಲ್ಲ ಸಾರ್ಥಕ ಆಯ್ತು ಕಣೊ..


ಒಂದು ಹೆಣ್ಣನ್ನು ಹದ್ದುಬಸ್ತಿನಲ್ಲಿಡೊ ಆಗದವ ಇನ್ನೇನು ಹೇಳಲು ಸಾಧ್ಯ...?"


ನನಗೆ ತಲೆ ಕೆಟ್ಟು ಹೋಯ್ತು....


ಬದುಕಿನಲ್ಲಿ ಆರ್ಥಿಕವಾಗಿ ಹೇಗಿರಬೇಕು ಎಂದು ಎಲ್ಲರೂ ಕನಸು ಕಾಣುತ್ತೇವೆ...
ಅದಕ್ಕಾಗಿ ಒಂದು ಯೋಜನೆಯನ್ನು ಹಾಕಿಕೊಳ್ಳುತ್ತೇವೆ...


ಆದರೆ ಬದುಕಿನ ಸಂತೋಷದ ಮೂಲ...
ಪ್ರೀತಿ ...
ಸಂಬಂಧಗಳ ಬಗೆಗೆ ಏನನ್ನೂ ಮಾಡುವದಿಲ್ಲ...


ಇದಕ್ಕೊಂದು ಕೊನೆ ಹಾಡಬೇಕು... 
ಏನು ಮಾಡಲಿ?


ಮರುದಿನ ಅಮ್ಮ ಮತ್ತು ಮಡದಿಯನ್ನು ಕರೆದೆ....


"ನಾವೆಲ್ಲರೂ ಒಟ್ಟಿಗೆ ಪ್ರೀತಿಯಿಂದ ಬದುಕಬೇಕು...
ನಮಗ್ಯಾರಿಗೂ ಅಗಲಿ ಬೇರೆಯಾಗಿ ಬದುಕಲು ಸಾಧ್ಯವಿಲ್ಲ..
ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಇದ್ದರೆ ಇದು ಸಾಧ್ಯ...


ಏನು ಮಾಡಬೇಕು .... ನೀವೇ ನಿರ್ಣಯಿಸಿ..."


ಸ್ವಲ್ಪ ಹೊತ್ತು ಬಹಳ ಮೌನವಿತ್ತು....... ಇಬ್ಬರೂ ಬಾಯಿಬಿಡಲಿಲ್ಲ..


"ಏನಾದರೂ ಮಾತನಾಡಿ.." ಅಂತ ನಾನು ಹೇಳಿದೆ...


"ಮಗನೆ...
ನಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸು....
ನೀವಿಬ್ಬರೂ ಶಾಂತಿಯಿಂದ ಇರಿ..."


"ಇಲ್ಲ...
ನಾನು ತವರಿಗೆ ಹೋಗುತ್ತೇನೆ...


ನೀವು ಅಮ್ಮ.. ಮಗ ಸಂತೋಷದಿಂದ ಇರಿ..."..


ಇವರಿಬ್ಬರ ಬಳಿ ಹೊಂದಾಣಿಕೆ ಸಾಧ್ಯವೇ ಇಲ್ಲ ಅಂತಾಯ್ತು 


ಇದುವರೆಗೂ ಜಗತ್ತಿನ ಯಾವ ವಿಜ್ಞಾನವೂ ..
ಬದುಕಿಗೆ ಅತ್ಯಗತ್ಯವಾದ ಸಂಬಂಧಗಳ "ಹೊಂದಾಣಿಕೆಯ" ಬಗೆಗೆ ಯಾವ ಸಂಶೋಧನೆಯನ್ನೂ ಮಾಡಿಲ್ಲ....
ಔಷಧವನ್ನೂ ಕಂಡು ಹಿಡಿದಿಲ್ಲ.....


ರಾತ್ರಿ ನಾವಿಬ್ಬರು  ಮಲಗಿರುವಾಗ ಮಡದಿಯೇ ಮಾತನಾಡಿದಳು...
"ನೋಡಿ..
ನನಗೂ ಸಾಕಾಗಿಹೋಗಿದೆ..
ಬೆಳೆಯುತ್ತಿರುವ ನಮ್ಮ ಮಗನನ್ನು ನೋಡಿ..
ದಿನ ನಿತ್ಯ ಈ ಜಗಳದ ಮನೆಯಲ್ಲಿ ಅವನು ದೊಡ್ಡವನಾದರೆ ಅವನ ಮನಸ್ಥಿತಿ ಏನಾಗಬಹುದು?


ದೊಡ್ಡವನಾದ ಮೇಲೆ ಪ್ರೀತಿ ಪ್ರೇಮ..
ಬಾಂಧವ್ಯಗಳನ್ನು ಅರಿಯದ ಒಂಟಿ ಸ್ವಭಾವದವನಾಗುತ್ತಾನೆ...


ನನ್ನ ಮಗನ ಒಳ್ಳೆಯದಕ್ಕಾಗಿಯಾದರೂ ನೀವು ಏನನ್ನಾದರೂ ಮಾಡಿ..


ಇಲ್ಲವಾದಲ್ಲಿ ನಾನು ತವರಿಗೆ ಹೋಗುತ್ತೇನೆ..."


ನನ್ನಾಕೆ ಮುಖ ತಿರುವಿ ಕವಚಿ ಮಲಗಿಬಿಟ್ಟಳು....
ಇದು ಹೆಂಗಸರ  ಪ್ರಬಲ ಅಸ್ತ್ರ.........


ಏನು ಮಾಡಲಿ...?
ಒಂದು ವಾರ ಕಳೆಯಿತು...


ಒಂದು ದಿನ ಅಪ್ಪ ಅಮ್ಮ ಇಬ್ಬರೇ ಇದ್ದಾಗ ನಾನು ಮಾತನಾಡಿಸಿದೆ....


"ಅಮ್ಮಾ...
ಈ ಮನೆಯನ್ನು ಕೊಳ್ಳುವಾಗ ಸಾಲ ಮಾಡಿದ್ದೇನಲ್ಲ...
ಅದನ್ನು ತೀರಿಸುವದು ಕಷ್ಟವಾಗುತ್ತಿದೆ...
ಈಗ ನನಗೊಂದು ಒಳ್ಳೆಯ ಅವಕಾಶ ಬಂದಿದೆ..."


"ಏನು...?"


"ನನಗೆ ಅಮೇರಿಕಾದಲ್ಲಿ ಕೆಲಸ ಮಾಡಲು ಅವಕಾಶ ಬಂದಿದೆ..
ದುಪ್ಪಟ್ಟು ಹಣ..."


ಅಮ್ಮ...
ಮಲಗಿರುವ  ಅಪ್ಪನನ್ನು ನೋಡುತ್ತ ಕೇಳಿದಳು...


"ಒಬ್ಬನೇ  ಹೋಗುತ್ತೀಯೋ...?"


"ಇಲ್ಲಮ್ಮ..
ಅಲ್ಲಿ ಊಟಕ್ಕೆ ಸಮಸ್ಯೆ..
ಹಾಗಾಗಿ ನಾವು ಮೂವರೂ ಹೋಗುತ್ತೇವೆ...
ನೀವು ಒಪ್ಪಿಗೆ ಕೊಟ್ಟರೆ...... "


ಮತ್ತೆ ಸ್ವಲ್ಪ ಹೊತ್ತು ಮೌನ..........


ಈ ಮೌನಗಳು ಮಾತನಾಡುವಷ್ಟು "ಮಾತುಗಳನ್ನು"  ..........
"ಮಾತುಗಳು" ಮಾತನಾಡುವದಿಲ್ಲ....


"ಎಲ್ಲವೂ ನಿರ್ಧಾರವಾದಮೇಲೆ ನಮ್ಮ ಒಪ್ಪಿಗೆಯ ಮಾತು ಯಾಕೆ?...
ಇಲ್ಲಿ ನಮ್ಮ ಬದುಕು ಏನು ?
ನಮ್ಮ  ಬದುಕು ಹೇಗೆ.......?  "


ನನಗೆ ಸ್ವಲ್ಪ ಉತ್ಸಾಹ ಬಂದಿತು...


"ಅಮ್ಮಾ...
ಅದಕ್ಕೆಲ್ಲ ನಾನು ವ್ಯವಸ್ಥೆ ಮಾಡುತ್ತೀನಮ್ಮ...
ನನ್ನ ಮೇಲೆ ಭರವಸೆ ಇರಲಿ...."


ಅಮ್ಮ ಸುಮ್ಮನಾದಳು...


ಮಡದಿ ಖುಷಿಯಾದಳು...


 "ಈಗ  ..
ನಾವು ದೂರ ಇದ್ದೇವೆ ಅನ್ನದೊಂದೇ ದೂರು ಇರುತ್ತದೆ....
ದಿನಾಲೂ ಜಗಳವಾಡಿ...
ಬದುಕನ್ನು ಕೆಸರು ಮಾಡಿಕೊಳ್ಳುವದಕ್ಕಿಂತ  ..
ನಿಮ್ಮ ನಿರ್ಧಾರ ಸರಿಯಾಗಿದೆ  ....  ..."


ನಾನು ಅಮೇರಿಕಾ ಹೋಗುವ ವಿಚಾರ ಎಲ್ಲರಿಗೂ ಗೊತ್ತಾಯಿತು...
ನಮ್ಮ ಮನೆಗೆ ಎಂದಿಗೂ ಬಾರದ ನೆಂಟರೆಲ್ಲ ಬಂದರು...


ಅಮ್ಮನ ಬಳಿ ಗುಸು ಗುಸು ಮಾತನಾಡುತ್ತಿದ್ದರು...
ಒಂದಿಬ್ಬರು ಸಂಬಂಧಿಕರು ಅಧಿಕಾರಯುತವಾಗಿ....
"ಅಪ್ಪ.. ಅಮ್ಮರನ್ನು ಈ ವಯಸ್ಸಿನಲ್ಲಿ...
ಈ ಸ್ಥಿತಿಯಲ್ಲಿ ...
ಬಿಟ್ಟು ಹೋಗುವದು ಸರಿಯಲ್ಲ...


ಹಣವನ್ನು ಯಾವಾಗಲಾದರೂ ಗಳಿಸ ಬಹುದು...


ಅಪ್ಪ.. ಅಮ್ಮ ಯಾವಾಗಲೂ ಸಿಗುವದಿಲ್ಲ....
ಹೋದ ಮೇಲೆ ಬೇಕೆಂದರೆ ವಾಪಸ್ಸ್ ಬರುವದಿಲ್ಲ...."


ಯಾರಿಗೂ ನಾನು ಉತ್ತರ ಕೊಡಲಿಲ್ಲ.


ಬದುಕಿನಲ್ಲಿ ಕೆಲವೊಂದು ಪ್ರಶ್ನೆಗಳಿಗೆ   ...
ಉತ್ತರವಿದ್ದರೂ  ಉತ್ತರ  ಕೊಡಲು ಆಗುವದಿಲ್ಲ......


ನನ್ನ ಉತ್ತರ ಅವರಿಗೆ ಪ್ರಶ್ನೆಯಾಗಿಯೇ ಇದ್ದಿರುತ್ತದೆ....


ಹೊರಡುವ ದಿನ....
....... 
.... ಸಮಯವೂ ಹತ್ತಿರ ಬಂದಿತು....


ನಾನು ಯಾವಾಗಲೂ ಅಪ್ಪನ ಬಳಿ ಮಾತನಾಡುವದು ಕಡಿಮೆ...
ನನ್ನ ಬೇಕು ಬೇಡಗಳನ್ನು ಅಮ್ಮನಿಂದಲೇ ಮಾಡಿಸಿಕೊಳ್ಳುತ್ತಿದ್ದೆ...


ಅಪ್ಪ ಮಲಗಿದ್ದರು....
ಅಪ್ಪನ ತಲೆ ಮುಟ್ಟಿದೆ...


ಅಪ್ಪ ನನ್ನ ಕೈಯನ್ನು  ಬಿಗಿಯಾಗಿ ಹಿಡಿದುಕೊಂಡರು..


ಸ್ಪರ್ಶದ  ಮಾತುಗಳು ಯಾವಾಗಲೂ ಆಪ್ತವಾಗಿರುತ್ತದೆ.....


ನನಗೆ ಮಾತನಾಡಲು ಕಷ್ಟವಾಗುತ್ತಿತ್ತು...


"ಅಪ್ಪಾ...
ಇಲ್ಲಿ ಯಾವುದಕ್ಕೂ ತೊಂದರೆ ಇಲ್ಲ...
ಕಿರಾಣಿ ಅಂಗಡಿಯವರಿಗೆ ಹೇಳಿದ್ದೇನೆ...
ಹದಿನೈದು ದಿನಕ್ಕೊಮ್ಮೆ ಬಂದು ಕಿರಾಣಿ ಸಾಮಾನುಗಳನ್ನು ಅವರೇ ಬಂದು ಕೊಟ್ಟು ಹೋಗುತ್ತಾರೆ...


ಸಿಲೆಂಡರ್ ಗ್ಯಾಸನ್ನು ನಾನು ಅಲ್ಲಿಂದಲೇ ಬುಕ್ ಮಾಡಿಕೊಡುತ್ತೇನೆ...
ಮನೆ ಬಾಗಿಲಿಗೆ ಬರುತ್ತದೆ..


ಪರಿಚಯದ ಡಾಕ್ಟರ್ರಿಗೂ ಹೇಳಿದ್ದೇನೆ...
ಅವರು ಮನೆಗೆ ಬಂದು  ಚೆಕ್ಕಪ್ ಮಾಡಿ ಹೋಗುತ್ತಾರೆ..


ಎಲ್ಲರಿಗೂ ನಾನು ಇಂಟರನೆಟ್ಟಿನಿಂದ ಹಣವನ್ನು ಕೊಡುತ್ತೇನೆ...


ನಿಮಗೆ ಮೊಮ್ಮಗನನ್ನು ನೋಡಬೇಕೆನಿಸಿದಾಗಲ್ಲೆಲ್ಲ..
ಪಕ್ಕದ ಮನೆಯ ಹುಡುಗ ಬಂದು ಕಂಪ್ಯೂಟರ ಹಚ್ಚಿ..
ವಿಡಿಯೋ ಕಾಲ್ ಮಾಡಿಕೊಡುತ್ತಾನೆ...


ಈಗ ಪ್ರಪಂಚ ಬಹಳ ಹತ್ತಿರಾಗಿದೆ ಅಪ್ಪ...


ಎಲ್ಲ ವ್ಯವಸ್ಥೆಗಳನ್ನೂ ಅಮೇರಿಕಾದಿಂದಲೇ ಮಾಡಿಕೊಡುತ್ತೇನೆ............"


ಅಪ್ಪ ನನ್ನ ಕೈಯನ್ನು ಬಿಟ್ಟು ಬಿಟ್ಟರು...


"ಮಗಾ...
ಇನ್ನೂ ಒಂದು ವಿಷಯ ಮರೆತು ಬಿಟ್ಟಿದ್ದೀಯಾ...


ಹತ್ತಿರದಲ್ಲಿರೋ  ಸ್ಮಶಾನದವರಿಗೆ ಹೇಳಿ ಹೋಗು...


ಹಾಗೇನೆ..
ಅಂಬ್ಯುಲೆನ್ಸ್...,, ಕ್ರಿಯಾಕರ್ಮ ಮಾಡುವವರಿಗೂ ಹೇಳಿ ಹೋಗು....


ನಿನಗೆ ಅಮೇರಿಕಾದಿಂದ ಬರಲಿಕ್ಕೆ ತಡವಾಗಬಹುದಲ್ಲ...


ಇಲ್ಲಿ ತೊಂದರೆ ಆಗಬಾರದು ನೋಡು..."


ನಾನು ನಿಂತೇ ಇದ್ದೇ..........
ನನಗೆ ಏನು ಹೇಳಬೇಕೆಂದು ತೋಚಲಿಲ್ಲ........


ಆಗ..
ಮಡದಿ ರೂಮಿನಿಂದ ಸೂಟ್ ಕೇಸನ್ನು  ಬಹಳ ಕಷ್ಟಪಟ್ಟು  ಎಳೆದು ತರುತ್ತಿದ್ದಳು...


ಇನ್ನೊಂದು  ಕೈಯಲ್ಲಿ ಮಗುವಿತ್ತು...


ಹೊರಗಡೆ ಟ್ಯಾಕ್ಸಿ ಹಾರನ್ ಶಬ್ಧ ಕೇಳಿಸಿತು..................





(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ.............)

53 comments:

ಈಶ್ವರ said...

ಆಹ್ ಪ್ರಕಾಶಣ್ಣ. ಒಂದು ತಲೆಮಾರಿನ ಎಲ್ಲಾ ಗೋಳುಗಳನ್ನ ಚಿತ್ರಿಸಿದ್ದೀರಿ. ಯಾರ Ego ಯಾರ ಕೂಗೋ ಅರ್ಥವಾಗುವುದಿಲ್ಲ. ಒಟ್ಟಾರೆ ಯಾಂತ್ರಿಕವಾಗುತ್ತಾ ಸಾಗುವ ನಮ್ಮದೇ ಚಿತ್ರಣ,. ತುಂಬಾ ಚೆನ್ನಾಗಿದೆ ಬರಹ.,

Ittigecement said...

ಈಶ್ವರ್ ಜೀ....

ಬದುಕನ್ನು ಕಟ್ಟಿಕೊಳ್ಳುವ ಭರದಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು...?

ಯಾವುದಕ್ಕೆ ಅಂಟಿಕೊಳ್ಳಬೇಕು...?

ತಲೆಮಾರುಗಳಿಗೆ ಇದು ಬದಲಾಗಬೇಕಾ?

ಯಾವುದು ಸರಿ ? ಯಾವುದು ತಪ್ಪು?

ತನ್ನ ಮಗನ ಭವಿಷ್ಯ...
ತನ್ನ ಸಂಸಾರ.... ಮಡದಿ....

ಅಪ್ಪ, ಅಮ್ಮನ ಕೊನೆಗಾಲದಲ್ಲಿ ತಾನು ಇದ್ದು ಮಾಡಬೇಕಾದ ಕರ್ತವ್ಯ....

ಬದುಕಿನ ಕೆಲವು ಸಂದರ್ಭ.. ಸಮಸ್ಯೆಗಳಿಗೆ ಅವರವರೇ ಉತ್ತರ ಕಂಡುಕೊಳ್ಳಬೇಕು..... ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Mahesh Gowda said...

anna history repeat agutte anna ... evanigu a gati bande barutte....

armanikanth said...

ಪ್ರೀತಿಯ ಪ್ರಕಾಶಣ್ಣ..
ಮುಂದೆ ಏನಾಯ್ತು ಅನ್ನೋದನ್ನ ಓದುಗರ ಅಂದಾಜಿಗೆ ಬಿಟ್ಟಿದ್ದೀರ...
ನಿಮ್ಮ ಕಥೆಯ ಕಥಾನಾಯಕ ನಾನೇ ಆಗಿದ್ದರೆ...ಮೊದಲಿಗೆ ವಿದೇಶಕ್ಕೆ ಹೋಗುತ್ತಿರಲಿಲ್ಲ...ಹೆಂಡತಿಗೆ ಬುದ್ಧಿ ಹೇಳಿ ಅಮ್ಮನ ಜೊತೆ ಹೊಂದಿಕೊಂಡು ಹೋಗುವಂತೆ ಅವಳನ್ನು ಒಪ್ಪಿಸುತ್ತಿದ್ದೆ.ಯಾಕೆ ಅಂದರೆ..ಅಪ್ಪ ಅಮ್ಮ ಎಲ್ಲರಿಗಿಂತ ಮುಖ್ಯ.ಇವತ್ತು ನಾವು ಹೆಂಡತಿಯ ಮಾತು ಕೇಳಿಕೊಂಡು...ನಮ್ಮ ಸಂತೋಷಕ್ಕೆ ಯಾವುದೋ ನೆಪ ಹೇಳಿಕೊಂಡು ವಿದೇಶಕ್ಕೆ ಹೋಗಬಹುದು..ಮುಂದೆ ಕಾಲಚಕ್ರ ತಿರುಗಿದಾಗ ನಮ್ಮ ಮಕ್ಕಳು ನಮಗೂ ಅದೇ ಥರ ಮಾಡುತ್ತಾರೆ.ಅಂಥ ಸಂದರ್ಭ ಬಾರದೆ ಇರಲಿ ಅನ್ನುವವರು ಅಪ್ಪ ಅಮ್ಮನ ಜೊತೆಯಲ್ಲಿ ಬದುಕುವ ನಿರ್ಧಾರ ತೆಗೆದುಕೊಳ್ಳುವುದೇ ಸರಿ...ಇದು ನನ್ನ ಪ್ರಾಮಾಣಿಕ ಅನಿಸಿಕೆ...
ಮಣಿಕಾಂತ್.

Ittigecement said...

ಪ್ರೀತಿಯ ಮಹೇಶೂ...

ಹೆಚ್ಚಾಗಿ ಇದು ಪ್ರತಿ ಮನೆ ಮನೆಯ ಕಥೆ....

ನಾವೆಲ್ಲ ಪ್ರೀತಿಗಾಗಿ ಹಂಬಲಿಸುತ್ತೇವೆ... ಮನೆಯೊಳಗೆ ಹಂಚಿಕೊಳ್ಳುವದು ಗೊತ್ತಿಲ್ಲ...
ಇದಕ್ಕಾಗಿ ಒದ್ದಾಡುತ್ತೇವೆ...

ನಮ್ಮ ಮನೆಯ ಬಳಿ ಒಂದು ವೃದ್ಧಾಶ್ರಮವಿದೆ...
ನಾವು ಒಂದಷ್ಟು ಗೆಳೆಯರು ಆಗಾಗ ಅಲ್ಲಿಗೆ ಹೋಗುತ್ತಿರುತ್ತೇವೆ..

ಅಲ್ಲಿನ ವೃದ್ಧರೊಡನೆ ಮಾತನಾಡಿದರೆ... "ಬದುಕಿನ ದರ್ಶನ...ಜ್ಞಾನೋದಯ ತನ್ನಿಂದ ತಾನೆ ಆಗುತ್ತದೆ...

ಎಷ್ಟೋಂದು ವಿಚಿತ್ರ ಜೀವನ ಅನುಭವಗಳು...!

ಒಬ್ಬ ಮುದುಕರಿದ್ದಾರೆ..
ಅವರು ತನ್ನ ಮಗ ಸೊಸೆಯೊಡನೆ ಹೊಂದಿಕೊಳ್ಳಲು ಆಗುವದಿಲ್ಲ ಎಂದು ಅಲ್ಲಿ ಬಂದಿದ್ದಾರೆ..

ಮಗ ಸೊಸೆ..
ಪ್ರತಿವಾರ ಅಲ್ಲಿಗೆ ಬಂದು ಅಳುತ್ತಾರೆ..

ಆಅದರೆ ಮುದುಕರದ್ದು ಕಠೋರ ಹೃದಯ...

ಪ್ರತಿಕ್ರಿಯೆಗಾಗಿ ಧನ್ಯವಾದಗಳು...

Dr.D.T.Krishna Murthy. said...

ಪ್ರಕಾಶಣ್ಣ;ಸುಂದರ ನಿರೂಪಣೆ ನಿಮ್ಮ ಅಸ್ತ್ರ!!ಎಂತಹ ಜಟಿಲ ಕಥಾ ವಸ್ತುವನ್ನೂ ಎಳೆಎಳೆಯಾಗಿ ಬಿಡಿಸಿ ಇಡುವುದರಲ್ಲಿ ನಿಸ್ಸೀಮರು ನೀವು.ಎಲ್ಲವನ್ನೂ ಕಲಿತಿದ್ದೀವಿ.ಆದರೆ ಪ್ರೀತಿಯಿಂದ ಹೊಂದಿಕೊಂಡು ಬಾಳುವುದನ್ನು ಮಾತ್ರ ಕಲಿಯಲಿಲ್ಲ!!ನಿಜಕ್ಕೂ ಇದು ನಮ್ಮ ದೌರ್ಭಾಗ್ಯವೇ ಸರಿ.ನಮ್ಮಲ್ಲಿ ಪ್ರೀತಿ,ಕರುಣೆಗಳನ್ನು ತುಂಬಿಕೊಳ್ಳುವುದು ಒಂದೇ ದಾರಿ.ಅಲ್ಲವೇ?

ದಿನಕರ ಮೊಗೇರ said...

wonderful narration.....
idu mane mane kathe...... aadare ellarigu nimma haage kathe heLalu baralla....
again wonderful........

Ittigecement said...

ಮಣಿಕಾಂತ ಸರ್ ಜೀ....

ನಿಜ ನಾವೆಲ್ಲರೂ ನೀವು ಹೇಳಿದ ಹಾಗೆ ಮಾಡ್ತೀವಿ....

ಇಲ್ಲಿ ಇನ್ನೊಂದು ವಿಷಯವಿದೆ....

ಈ ಕಥೆಯನ್ನು ನನ್ನ ಚಿಕ್ಕಮ್ಮ (ಗಂಗಾ ಕೇಶವ ಹೆಗಡೆ ಕಾನಸೂರು) ಅವರ ಬಳಿಹೇಳಿದಾಗ ಅವರ ಅಭಿಪ್ರಾಯ ಈ ಕಥೆಯ ತಿರುವನ್ನು ಬದಲಿಸಿತು...

" ಸೊಸೆ ಮಾತ್ರ ತಪ್ಪು ಮಾಡಿರುವದಿಲ್ಲ...
ಅತ್ತೆಯೇ ಹೆಚ್ಚಿನ ತಪ್ಪು ಮಾಡಿರುತ್ತಾಳೆ...

ಬದುಕಿನಲ್ಲಿ ಹೆಚ್ಚಿನ ಅನುಭವ ಇರುವವರು ಇಂಥಹ ಸಂದರ್ಭವನ್ನು ನಿಭಾಯಿಸಿಕೊಂಡು ಹೋಗಬೇಕು...

ಮೂಲತಹ ಸೊಸೆಯನ್ನು ಪ್ರತಿಸ್ಪರ್ಧಿಯಂತೆ ಮೊದಲು ಅತ್ತೆಯೇ ಕಾಣುತ್ತಾಳೆ...
ಸೊಸೆ ತವರನ್ನು ಬಿಟ್ಟು ಬಂದು ಇಲ್ಲಿ ಹೊಂದಿಕೊಳ್ಳುವ ಪ್ರಯತ್ನ ಸಹಜವಾಗಿ ಮಾಡುತ್ತಾಳೆ..

ಅತ್ತೆ ತನ್ನ ಪ್ರೀತಿಯನ್ನು ಕೊಟ್ಟರೆ ಎಲ್ಲವೂ ಸಲಿಸಾಗುತ್ತದೆ..

ಒಂದೇ ರೀತಿಯಲ್ಲಿ ಕಥೆಯನ್ನು ನೋಡಬೇಡ.." ಅಂತ ನನ್ನ ಚಿಕ್ಕಮ್ಮ ಹೇಳಿದರು....

ಇದು ಹೌದು ಅಲ್ಲವಾ?

ವೃದ್ಧಾಶ್ರಮದಲ್ಲಿನ ಅನುಭವಗಳು ಈ ಕಥೆಯನ್ನು ಬರೆಯಲು ಪ್ರೇರಣೆ ಕೊಟ್ಟವು..

ಸರ್...
ನಿಮ್ಮ ಪ್ರತಿಕ್ರಿಯೆ ಒಂದು ಟಾನಿಕ್ ...

ನಿಮ್ಮ ಸ್ನೇಹಕ್ಕೆ ..
ಪ್ರೀತಿಗೆ ಜೈ ಹೋ !!

Ittigecement said...

ಡಾಕ್ಟ್ರೆ....

ಹೆಣ್ಣಿನ ಮೂಲ ಸ್ವಭಾವ ಪ್ರೀತಿ ಮಾಡುವದು...
ಪ್ರೀತಿ ಇಲ್ಲವಾದಲ್ಲಿ ದ್ವೇಷಿಸುವದು...

ಇವರೆಡರಿನ ಮಧ್ಯದ ಹೊಂದಾಣಿಕೆ ಅವರಲ್ಲಿ "ಪ್ರೀತಿಯನ್ನು ಹಂಚಿಕೊಳ್ಳುವಾಗ ಬಲು" ಕಷ್ಟ....

ಇಷ್ಟು ದಿನ ಹೆತ್ತು ಹೊತ್ತು ಬೆಳೆಸಿದ ಮಗ ಎಲ್ಲ ಹೆಂಡತಿಯ ಕೈಗೊಂಬೆಯಾಗಿಬಿಡುತ್ತಾನೋ ಎನ್ನುವ ಭಯ ..
ಎಷ್ಟೇ ಓದಿದ ಹೆಣ್ಣಾದರೂ ಒಳಗೊಳಗೇ ಇದ್ದಿರುತ್ತದೆ..

"ಗಂಡನ ಪ್ರೀತಿ ತಾನಗೊಬ್ಬಳಿಗೆ.. "ಎನ್ನುವ ಮಡದಿ...

ಇಬ್ಬರ ಪ್ರೀತಿಯೂ ಬೇರೆ ಬೇರೆ...
ಇದನ್ನು ಅವರಿಬ್ಬರಿಗೂ ಮನದಟ್ಟು ಮಾಡಿಸಲಾಗದೆ ಒದ್ದಾಡುವ ಗಂಡು...

ಎಷ್ಟೆಲ್ಲ ಶತಮಾನ ಕಳೆದರೂ...
ಕುಟುಂಬಗಳು ಒಡೆದು ಸಣ್ಣವಾದರೂ..
ಈ ಸಮಸ್ಯೆಗೆ ಮಾತ್ರ ಔಷಧವೇ ಇಲ್ಲ ಅಲ್ಲವಾ?

ಸರ್ ಜೀ ಚಂದದ ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Srikanth Manjunath said...

ಕಾಗುಣಿತಗಳು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ..ಕಣ್ಣಾಲಿಗಳು ತುಂಬಿದ್ದವು ಹಾಗೆಯೇ ಪ್ರತಿಕ್ರಿಯೆ ಮಾಡಲು ಪ್ರಯತ್ನ ಪಟ್ಟಿದ್ದೇನೆ..
ಶಾಲೆಯಲ್ಲಿ ಗಣಿತ ಶಾಸ್ತ್ರದಲ್ಲಿ ಓದಿದ್ದು..
if A=B, B=C..then A=C
ಅಂದ್ರೆ ಅಮ್ಮ ಮಗನನ್ನು ಪ್ರೀತಿ ಮಾಡ್ತಾಳೆ, ಮಗ ಹೆಂಡತಿಯನ್ನು ಪ್ರೀತಿ ಮಾಡ್ತಾನೆ..ಹಾಗಾಗಿ ಅಮ್ಮ ಸೊಸೆಯನ್ನು ಪ್ರೀತಿ ಮಾಡ್ತಾಳೆ..
ಈ ಸಮೀಕರಣ ಎಲ್ಲರ ಜೀವನದಲ್ಲೂ ಇದ್ದರೇ ಎಷ್ಟು ಸೊಗಸು..
ತಂದೆ ತಾಯಿಗೆ ಇಷ್ಟು ವರ್ಷ ಜೋಪಾನ ಮಾಡಿದ ಗಿಡ ಹೂವು ಬಿಟ್ಟು ನಿಂತದ್ದು ಹೆಮ್ಮೆ..
ಬೆಳೆದು ನಿಂತ ಗಿಡದಿಂದ ಹೂವನ್ನು ಮುಡಿಯಲು ಬಂದಾಕೆ ಮಡದಿ...
ಈ ತಾಕಲಾಟದಲ್ಲಿ ಪ್ರೀತಿ, ಪ್ರೇಮ ಹಾಗು ಗಿಡ ನನ್ನದು ಎನ್ನುವ ಭಾವ ತಂದೆ ತಾಯಿಯರದ್ದು, ಹೂವು ನಂದು ಅಂತ ಹೆಂಡತಿ...ಹೀಗೆ ಒಂದು "ಕಳೆ"ಯಾಗಿ ಜೀವನದ ತೋಟದಲ್ಲಿ ನಿಂತು ಬಿಡುತ್ತದೆ..ಅದನ್ನು ಕಿತ್ತು ಹಾಕಲು ಆಗೋಲ್ಲ..ಅಷ್ಟು ಬೆಳೆದಿರುತ್ತೆ..ಹಾಗೆ ಇದ್ದರೇ ಹೂವಿನ ಗಿಡಕ್ಕೆ ಗೊಬ್ಬರ ಎನ್ನುವ ಆಹಾರ ಸಿಗುವುದಿಲ್ಲ..
ಇದುವೇ ಜೀವನ..
ಸೊಗಸಾದ ಲೇಖನ...ಕಣ್ಣಲಿ ಹಾಗೆಯೇ.....
ಯಾರದು ತಪ್ಪಿಲ್ಲ..ಇಲ್ಲಿ ಬರಿ ಹೊಂದಾಣಿಕೆ ಮಾತ್ರ ಬೇಕು..ಸ್ವತ್ತು ನನದು ಎನ್ನುವ ಬದಲು ನಮ್ಮದು ಎನ್ನುವ ಭಾವ ಬಂದಾಗ ಜಗವೇ ಸುಂದರ...

Swarna said...

ಎಂದಿನಂತೆ ಬರೆದ ರೀತಿ ಚೆನ್ನಾಗಿದೆ ಸರ್.
ಬಹುಶಃ ಮಾಡುವೆ ಯಾಗಿ ಬಂದ ಹೆಣ್ಣಿನ ಸಾಮಾನ್ಯ ಕೊರಗು ಇದು.
ಅತ್ತೆ ತನ್ನನ್ನು ಪ್ರತಿಸ್ಪರ್ಧಿಯಾಗಿ ಕಾಣುವುದು.
ನಿಮ್ಮ ಚಿಕ್ಕಮ್ಮನ ಮಾತು ಸತ್ಯ ಮತ್ತು ಅನುಕರಣೀಯ.
ಸ್ವರ್ಣಾ

balasubramanya said...

ಹಲವಾರು ಕುಟುಂಬಗಳ ಇಂದಿನ ಜ್ವಲಂತ ಸಮಸ್ಯೆ ಇದು.ಸುಂದರ ನಿರೂಪಣೆ ಕಣ್ಣಲ್ಲಿ ನೀರು ತರುತ್ತವೆ.ಈ ಲೇಖನ ನನಗೆ ಪರಿಚಯ ಇರುವ ಕುಟುಂಬದ ಹಾಗು ಅವರು ಅನುಭವಿಸುತ್ತಿರುವ ಸತ್ಯ ಕಥೆಯ ಅನಾವರಣ ಎಂಬಂತೆ ಇದೆ.ವೈಜ್ಞಾನಿಕ ಯೋಚನೆ ಎಂಬ ಸೋಗಿನಲ್ಲಿ ನಮ್ಮ ಮೌಲ್ಯಗಳು ಕಳೆದು ಹೋಗುತ್ತಿದೆ ಅದರ ನಗ್ನ ಸತ್ಯವೇ ನಿಮ್ಮ ಲೇಖನ.ನಿಮಗೆ ಜೈ ಹೋ ಪ್ರಕಾಶಣ್ಣ.

Badarinath Palavalli said...

ಮನಸು ತೀರಾ ವಿಹ್ವಲವಾಗಿ ಹೋಯಿತು. ಉತ್ತರಿಸಲಾರದೆ ನಿಂತ ಆ ಮಗನಿಗೂ ನನಗೂ ವ್ಯತ್ಯಾಸ ಕಾಣಲಿಲ್ಲ!

ಅತ್ತೆ ಸೊಸೆಯರ ನಡುವೆ ಸಾಮರಸ್ಯ ತರುವ ಔಷಧ ಯಾವಾಗ ಕಂಡು ಹಿಡಿಯುತ್ತಾರೋ ಎನ್ನುವ ನಿಮ್ಮ ಕಳಕಳಿಗೆ ಅರ್ಥವಿದೆ.

ಇದು ಒಂದು ಮಗ್ಗಲು, ಎರಡನೇ ಮಗ್ಗಲಲ್ಲಿ ಮಕ್ಕಳೇ ಬೇಡ ಎಂದು ಬದುಕಿ ಬಿಡುವ ದಂಪತಿಗಳಿಗೆ ಕಡೆಗಾಲದಲ್ಲಿ ಆಸರೆ ಏನು? ದೇವರೇ ನೀನು ಯಾಕಿಷ್ಟು ಕಟೋರ ಹೃದಯೀ!

Ittigecement said...

ಪ್ರೀತಿಯ ದಿನಕರ....

ವಿದ್ಯಾವಂತ ಕುಟುಂಬದಲ್ಲಿಯೂ ಈ ಸಮಸ್ಯೆ ಇದೆ ಎಂದಾದರೆ...
ನಮ್ಮ ವಿದ್ಯೆ ..
ಬದುಕಿಗೆ ಬೇಕಾದುದನ್ನು ಕಲಿಸುವದಿಲ್ಲ ಎಂದಾಯ್ತು...

ಹಾಗಾದರೆ ಇದನ್ನು ಕಲಿಸಬೇಕಾದದ್ದು ಯಾರು?
ಮನೆಯಲ್ಲಿ ಪಾಲಕರೆ?

ನಿಜಕ್ಕೂ ಸೋಜಿಗದ ಸಂಗತಿ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

Digwas Bellemane said...

ಪ್ರಕಾಶಣ್ಣ....ಸುಂದರ ನಿರೂಪಣೆ

ಸಂಧ್ಯಾ ಶ್ರೀಧರ್ ಭಟ್ said...

ಓದೋಕೆ ಕಷ್ಟ ಆಯಿತು.. ಕಥೆಯ ನಿರೂಪಣೆ ಚೆನ್ನಾಗಿದೆ ಪ್ರಕಾಶಣ್ಣ.. ಮನೆಯಲ್ಲಿ ಒಂದಾಗಿದ್ದರೆ ಸಾಲದು. ಮನಸ್ಸುಗಳೂ ಒಂದಾಗಿದ್ದರೆ ಮಾತ್ರ ತುಂಬು ಸಂಸಾರ ಚೆಂದ. ಸಂಬಂಧಗಳು ಉಳಿಯಲು ಹೊಂದಾಣಿಕೆ ಅಗತ್ಯ. ಇಲ್ಲಿ ಅತ್ತೆ ಅಥವಾ ಸೊಸೆ ಇಬ್ಬರಲ್ಲಿ ಒಬ್ಬರು ego ಬಿಟ್ಟಿದ್ದರೆ ಹೊಂದಾಣಿಕೆ ಸಾಧ್ಯವಿತ್ತು. ಇಲ್ಲಿ ಮಗ ತನಗಿಂತ ಹಿರಿಯ ಜೀವಗಳಿಗೆ ಬುದ್ಧಿ ಹೇಳುವ ಬದಲು, ಅವರಿಂದ ದೂರವಾಗುವ ನಿರ್ಧಾರಕ್ಕೆ ಮೊದಲು, ತನ್ನದೇ ವಯಸ್ಸಿನ/ ಕಿರಿಯ , ತನ್ನನ್ನು ಅರ್ಥ ಮಾಡಿಕೊಳ್ಳುವ ಹೆಂಡತಿಗೆ ತಿಳಿ ಹೇಳಿ , ಇಂದು ಅವನ ಅಸ್ತಿತ್ವಕ್ಕೆ ಕಾರಣವಾದ ಆ ಜೀವಗಳಿಗೆ ಆಸರೆಯಾಗಿ ನಿಲ್ಲಬಹುದಿತ್ತೇನೋ..

ಗೆಳತಿ said...

ನಿಮ್ಮ ಬರವಣಿಗೆ, ನಿರೂಪಣೆ, ಕಥೆಗಳ ಬಗ್ಗೆ ಎಷ್ಟು ಹೊಗಳಿದರೂ ಸಾಲದು, ಇಟ್ಟಿಗೆ ಸಿಮೆಂಟು, ಜಡವಸ್ತು ಮನೆಯನ್ನು ಕಟ್ಟಿದರೆ..........ನಿಮ್ಮ ಈ ಇಟ್ಟಿಗೆ ಸಿಮೆಂಟು ಭಾವನಾತ್ಮಕ ಬಂಧಗಳ ಬೆಸುಗೆಯ ಸುಂದರ ಆಲಯ.......


ಮೌನಗಳು ಮಾತನಾಡುವಷ್ಟು "ಮಾತುಗಳನ್ನು" ...
"ಮಾತುಗಳು" ಮಾತನಾಡುವದಿಲ್ಲ....

(ಮೌನದ ಹಿಂದಿರುವ ಭಾವನೆಗಳು ಮೌನಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಅರ್ಥವಾಗುವುದಿಲ್ಲ....
.ಅರ್ಥವಾದರೆ ಆ ಮೌನಿ, ಮತ್ತೆ ಮೌನಿಯಾಗಲಾರ........ )



ಸ್ಪರ್ಶಗಳ ಮಾತುಗಳು ಯಾವಾಗಲೂ ಆಪ್ತವಾಗಿರುತ್ತದೆ.....
(ಈಗಿನ ತಂದೆ-ತಾಯಿಯರಲ್ಲಿ ಪ್ರೀತಿಯ ಸ್ವರ್ಶಗಳ ಮಾತುಗಳು ತುಂಬಾ ತುಂಬಾ ಕಡಿಮೆ.ಎಲ್ಲವೂ ಯಾಂತ್ರಿಕಮಯ.......ಪ್ರತಿಷ್ಟೆಯ ಪ್ರತೀಕ....



ಹೆಣ್ಣಿನ ಮೂಲ ಸ್ವಭಾವ ಪ್ರೀತಿ ಮಾಡುವದು...

(ಹೌದು, ಹೆಣ್ಣಿಗೆ ಪ್ರೀತಿಯೊಂದೆ ಜೀವನ....... ಸರ್ವಸ್ವ...... ಮೊದಲ ಪ್ರಪಂಚ....ಹೆಣ್ಣನ್ನು, ಹೆಣ್ಣಿನ ಮನಸ್ಸನ್ನು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ)


ಪ್ರೀತಿ ಇಲ್ಲವಾದಲ್ಲಿ ದ್ವೇಷಿಸುವದು...

(ಆ ಪ್ರೀತಿ ಸಿಗದಾದಾಗ ಅವಳಲ್ಲಿರುವ ಮಮತೆ...ಕರುಣೆ....ಕ್ಷಮಾಗುಣ.....ಆ ಪ್ರೀತಿಯನ್ನು ಪಡೆಯಲು, ಪಡೆಯುವವರೆಗೆ ತಾತ್ಕಲಿಕವಾಗಿ ದ್ವೇಷವಾಗಿ ಪರಿವರ್ತನೆಯಾಗುತ್ತದೆ.

Raghunandan K Hegde said...

ಮನುಷ್ಯರ ನಡುವೆ ಹೊಂದಾಣಿಕೆ ಕಷ್ಟ ಎನ್ನುವ ಕಾಲದತ್ತ ನಾವು ಸಾಗುತ್ತಿದ್ದೇವಾ..?
ಅತ್ತೆ - ಸೊಸೆ ಹೊಂದಾಣಿಕೆ-ಪ್ರೀತಿ ತುಂಬಾ ಹಳೆಯ ವಿಷಯ, ಆದರೆ ಓದಿನಿಂದ ತಿಳಿವಿನಿಂದ ಎಲ್ಲರೂ ತಮ್ಮ ಅಸ್ತಿತ್ವ ಸಾಧಿಸುತ್ತಿರುವ ಇಂದಿನ ದಿನಗಳಲ್ಲಿ ಮೊದಲಿಗಿಂತ ಜಟಿಲತೆ ಹೆಚ್ಚಾಗಿದೆಯಾ..? ನಿಮ್ಮ ನಿರೂಪಣಾ ಶೈಲಿಗೆ ಜೈ ಹೋ..

ಕೂಡು ಕುಟುಂಬಗಳಲ್ಲಿ ಜಗಳದಾಚೆಗೂ ಹೊಂದಾಣಿಕೆ, ಪ್ರೀತಿಗಳಿತ್ತಾ, ಮೊದಲು ಇಷ್ಟೊಂದು ವೃದ್ಧಾಶ್ರಮಗಳಿರಲಿಲ್ಲವಲ್ಲಾ, ಹಿರಿಯರಿಗೆ ಇಂದಿಗಿಂತ ಹೆಚ್ಚು ಗೌರವ ಉಳಿದಿತ್ತಲ್ಲಾ... ಮನುಷ್ಯ ತನ್ನ ಸಹನ ಶಕ್ತಿಯನ್ನ ಕಳೆದುಕೊಳ್ಳುತ್ತಿರುವುದು ಇದಕ್ಕೆಲ್ಲಾ ಕಾರಣವಾ..

ಇಲ್ಲಿ ಗಂಡ ತನ್ನ ಸಂತೋಷದ ಬಗ್ಗೆ ಮಾತ್ರ ಯೋಚಿಸಿದನಾ, ಹೆಂಡತಿಯನ್ನ ಬಿಡಲಾರದ್ದಕ್ಕೆ ಅಮ್ಮನನ್ನ ಬಿಡಲು ನಿರ್ಧರಿಸಿದನಾ..? ಅತ್ತೆ ಸೊಸೆಯ ಸ್ವಾರ್ಥ ನಿವಾರಣೆಯಲ್ಲಿ ಅವನ ಸ್ವಾರ್ಥ ಗೆದ್ದಿದ್ದಾ..??

ಕಥೆ ಕಾಡಿದೆ, ಏನೇನೋ ಹೊಳೆಸಿದೆ, ಸಧ್ಯಕ್ಕೆ ಇದಿಷ್ಟು ನಿಮ್ಮೆದುರು ಹರವಿದ್ದೇನೆ..

ಜೈ ಹೋ..

sunaath said...

ಈಗಿನ ಪರಿಸ್ಥಿತಿಯ ಸೂಕ್ಷ್ಮ ವಿಶ್ಲೇಷಣೆ ಮಾಡಿದ್ದಿರಿ.

ಶ್ರೀವತ್ಸ ಕಂಚೀಮನೆ. said...

ಮಾತುಗಳಿಲ್ಲ...

vidyarashmi Pelathadka said...

ನಿಜ, ಇದು ಮನೆ ಮನೆ ಕಥೆ..
-ವಿದ್ಯಾರಶ್ಮಿ

viju said...

ಕಥಾವಸ್ತು ರಾಶಿ ಚೊಲೊ ಇದ್ದು ಪ್ರಕಾಶಣ್ಣ...ಆದ್ರೆ ಈ ಸಮಸ್ಯೆಗೆ ಪರಿಹಾರ??...

shridhar said...

ತುತ್ತಾ ಮುತ್ತಾ .. ಎತ್ತಾ ???

Santooo said...

ಏನಿದ್ರೂ ಜೀವನದ ಕಹಿಗಳನ್ನು ರಸವತ್ತಾಗಿ ವಿವರಿಸಿದ್ದೀರಿ. ಆ ಭ್ರಮಾ ಲೋಕದಿಂದ ಹೊರಗೆ ಬರೋದೆ ಚಿಂತೆ ಆಗಿದೆ ...ಏನಿದ್ರೂ ನಮ್ಮ ಹಾಗೆ ಎಲ್ರೂ ಜೀವನ ಅಂದ್ರೆ ಏನೂ ಅಂತ ತಿಳ್ಕೊಂಡ್ರೆ ನಿಜವಾಗಿ ಸಂತೋಷ .

minchulli said...

ಪ್ರಕಾಶಣ್ಣ, ಅತ್ತೆ, ಸೊಸೆ ಇಬ್ಬರೂ ಒಳ್ಳೆಯವರೇ ಆಗಿರುತ್ತಾರೆ; ಆದರೆ ಒಳಗಿನ ego ಇದೆಯಲ್ಲ ಅದು ಯಾವತ್ತೂ ಒಳ್ಳೆಯದಾಗಿರಲು ಬಿಡುವುದಿಲ್ಲ. ಸರಿಪಡಿಸಬೇಕಾದ್ದು ಅದನ್ನ. ಅದು ಅರ್ಥವಾಗೋ ವೇಳೆಗೆ ಬದುಕು ಮುಗಿದಿರುತ್ತದೆ. ಇಬ್ಬರಲ್ಲೂ ಹೊಂದಾಣಿಕೆ ಇದ್ದಾಗ ಮಾತ್ರ ಸಮರಸದ ಬದುಕು ಸುಂದರ. ಇಂಥ ಎಲ್ಲಾ ಸಂದರ್ಭಗಳಲ್ಲೂ ಹಿಂಸೆ ಮಕ್ಕಳಿಗೇ ಅನ್ನೋದು ಮಾತ್ರ ದುರಂತ.

ಇನ್ನು ವಿದ್ಯೆ ಇವತ್ತು ವಿನಯ ತಂದು ಕೊಡುತ್ತಿಲ್ಲ ಅನ್ನೋದು ಸತ್ಯ... ಅಮ್ಮ ಹೆಂಡತಿ ಇಬ್ಬರನ್ನೂ ಒಪ್ಪಿಸೋದೂ ಕಷ್ಟ; ಬಿಡೋದೂ ಕಷ್ಟ....

ವೈಯಕ್ತಿಕ ಅಭಿಪ್ರಾಯ ಹೇಳೋದಾದರೆ ಅತ್ತೆಯಂದಿರಿಗೆ ಬಹಳಷ್ಟು ಸಲ ಹಿರಿತನದ ಹಮ್ಮು ಇದ್ದೇ ಇರುತ್ತದೆ. (ಎಷ್ಟು knowledge ಇದೆ ಅನ್ನೋದು ಬೇರೆ ವಿಷ್ಯ) ನನ್ನಷ್ಟು ಇವಳಿಗೆ ಗೊತ್ತಿಲ್ಲ, ಇದು ವರೆಗೂ ನಾನು ನೋಡ್ಕೊಂಡು ಹೋಗಿದ್ದೆ; ಇದ್ದಕ್ಕಿದ್ದಂತೆ ಬಂದು ಇವಳದೇನು ದರ್ಬಾರು ಅನ್ನೋ ಭಾವವೂ ಕೂಡ. ಬದಲಾಗಿ ಇಷ್ಟು ದಿನ ಮಾಡಿದೆ; ಈಗ ಅವಳಿಗೆ ವಹಿಸಿ ಖುಷಿಯಾಗಿರುವೆ ಅನ್ನೋದು ಬಂದರೆ ಮನೆ ತುಂಬಾ ನೆಮ್ಮದಿ. ಹಾಗೇ ಸೊಸೆಯೂ ಕೂಡ ಮೊದಲ ವರ್ಷಗಳಲ್ಲಿ ಅವರಿಗೆ ಹೊಂದಿಕೊಂಡು (ತನಗೆ ನೋವಾದರೂ) ಮನ ಗೆದ್ದುಬಿಟ್ಟರೆ ಆಮೇಲೆ ನಿಜಕ್ಕೂ ಅವರು ಅವಳನ್ನೇ ಅವಲಂಬಿಸುತ್ತಾರೆ. ಒಟ್ಟಿನಲ್ಲಿ ಇದು Two Way ಆಗಬೇಕಷ್ಟೆ...

Ittigecement said...

ಪ್ರೀತಿಯ ಶ್ರೀಕಾಂತ್..........

ನೀವು ಹೇಳಿದ್ದು ನಿಜ... "ಅಹಂ’ ಬಿಟ್ಟರೆ ಎಲ್ಲವೂ ಸರಿ ಹೋಗುತ್ತದೆ...

ಯಾಕೆ ಹೆಣ್ಣು "ಅತ್ತೆ" ಆಗಿ ಹೀಗೆ ಆಗುತ್ತಾಳೆ...?

ಒಂದು ಸಮಯದಲ್ಲಿ ತಾನು ಸೊಸೆಯಾಗಿ ಅನುಭವ ಇದ್ದರೂ ಮತ್ತೆ ತನ್ನ ಸೊಸೆಗೆ ಅತ್ತೆಯಾಗುತ್ತಾಳೆ.. ಯಾಕೆ?

ಹೆಣ್ಣು ಅತ್ತೆಯಾಗುವ ಸಮಯದಲ್ಲಿ ಅವಳ ದೇಹದಲ್ಲಿ ತುಂಬಾ ಮಾರ್ಪಾಡು ಆಗಿರುತ್ತದೆ...
ಋತುಚಕ್ರ...

ಅತ್ತ ಮುದುಕಿಯೂ ಅಲ್ಲ..
ಇತ್ತ ಮಾಸುತ್ತಿರುವ ಯೌವ್ವನ...

ಇದುವರೆಗೆ ಮಗ.. ಗಂಡ ..
ಸಂಸಾರವನ್ನು ಸರಿತೂಗಿಸಿಕೊಂಡು ಬಂದ ಅನುಭವದ ಅಹಂ........

ಎಲ್ಲ ಸೇರಿಕೊಂಡು "ಅತ್ತೆ" ಆಗಿಬಿಡುತ್ತಾಳೆ.. ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾಗಳು.......................

ಸುಮ said...

ಇದು ಈಗ ಮನೆಮನೆಯಲ್ಲೂ ನಡೆಯುತ್ತಿರುವ ಸತ್ಯಘಟನೆ . " ಬದುಕಿನಲ್ಲಿ ಆರ್ಥಿಕವಾಗಿ ಹೇಗಿರಬೇಕು ಎಂದು ಎಲ್ಲರೂ ಕನಸು ಕಾಣುತ್ತೇವೆ...
ಅದಕ್ಕಾಗಿ ಒಂದು ಯೋಜನೆಯನ್ನು ಹಾಕಿಕೊಳ್ಳುತ್ತೇವೆ...


ಆದರೆ ಬದುಕಿನ ಸಂತೋಷದ ಮೂಲ...
ಪ್ರೀತಿ ...
ಸಂಬಂಧಗಳ ಬಗೆಗೆ ಏನನ್ನೂ ಮಾಡುವದಿಲ್ಲ..."
ಈ ಮಾತುಗಳು ಸತ್ಯ. ಸಂಬಂಧಗಳು ಸರಿಯಾಗಿರಬೇಕೆಂದರೆ ಒಂದಿಷ್ಟು ಹೊಂದಾಣಿಕೆಯ ಸ್ವಭಾವ ಇರಲೇಬೇಕಾಗುತ್ತದೆ. ಮನೆಗೆ ಬಂದ ಸೊಸೆಯನ್ನು ಮಗಳಂತೆ ಕಾಣುವ , ಅವಳಿಗೆ ಒಂದು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅವಕಾಶ ನೀಡೂವ ದೊಡ್ಡಮನಸ್ಸು ಅತ್ತೆಗೆ ಬೇಕಾಗುತ್ತದೆ. ಹಾಗೆಯೆ ಅತ್ತೆಯ ಹಿರಿತನ, ಅನುಭವಕ್ಕೆ ಬೆಲೆ ಕೊಟ್ಟು ಪ್ರೀತಿ ತುಂಬಿದ ಗೌರವದಿಂದಲೇ ಅವರ ಮನಸ್ಸನ್ನು ಗೆದ್ದರೆ ಸೊಸೆಯ ಬಾಳೂ ಸುಂದರವಾಗಿರುತ್ತದೆ.

ಜಲನಯನ said...

ಮನದ ಮಾತನ್ನು ಅಕ್ಷರಗಳಲ್ಲಿ ರೂಪಾಂತರಗೊಳಿಸುವುದನ್ನು ನಿನ್ನಿಂದ ಕಲಿಯಬೇಕು ಪ್ರಕಾಶಾ.... ಎಲ್ಲಾ ಪಾತ್ರಗಳಿಗೂ ಜೀವಕೊಟ್ಟು ಅವುಗಳಲ್ಲಿ ನಾವು ನೆಲಸಿ ಅವುಗಳ ಭಾವ ನಮ್ಮ ಭಾವವಾಗಿಸಿ ಪತಿಕ್ರಿಯಿಸುವಂತೆ ಮಾಡುವ ನಿನ್ನ ಶೈಲಿ...ಸಲಾಂ... ಮಾಶಾ ಅಲ್ಲಾಹ್...!!!!

ಸ್ಪರ್ಶದ ಮಾತುಗಳು ಯಾವಾಗಲೂ ಆಪ್ತವಾಗಿತ್ತವೆ

ನೂರುವಾಕ್ಯಗಳಿಗೆ ಒಂದು ವಾಕ್ಯವೆನಿಸಿತು ನನಗೆ ....ಪುಟಗಟ್ಟಲೆ ಬರೆಯಬೇಕಿಲ್ಲ ಮನದ ಭಾವ ಬರೆದದ್ದು ಹತ್ತಕ್ಷರ ಓದಿದರೂ ಬರೆಯದ ನೂರಕ್ಷರದ ಮಾತು ಹೊರತರುತ್ತದೆ....

ಬಹಳ ಸುಂದರ ನಿರೂಪಣೆ...ಪ್ರಕಾಶಾ....

Anitha Naresh Manchi said...

ಸುಂದರ ನಿರೂಪಣೆ.. ಆದ್ರೆ ಸಮಸ್ಯೆಗೆ ಹೆದರಿ ದೂರ ಹೋಗುವುದೊಂದೇ ದಾರಿಯಲ್ಲ.. ಈಗಿನ ಅತ್ತೆ ಸೊಸೆ ಹೀಗಿಲ್ಲ. ಕಾಲಚಕ್ರದಲ್ಲಿ ಅವರೂ ಬದಲಾಗಿದ್ದಾರೆ.

.ತನ್ನ ಮಗನ ಭವಿಷ್ಯ...
ತನ್ನ ಸಂಸಾರ.... ಮಡದಿ....ಆದರೆ ಅಪ್ಪ ಅಮ್ಮ.. ಅವರೂ ತನ್ನವರಲ್ಲವೇ.. ಸಮಸ್ಯೆಗಳನ್ನು ಬೆಳೆಯಲು ಬಿಡದೆ ಅಲ್ಲಲ್ಲೇ ಮುರಿದು ಚಿಗುರುವ ಹೊಸ ಚಿಗುರಿಗೆ ಸಂತಸದ ನೀಲಾಗಸ ಸಿಗುವಂತೆ ಮಾಡುವುದು ನಮ್ಮ ಕೈಯಲ್ಲೆ ಇದೆ ಅಂತ ನನ್ನ ಅಭಿಪ್ರಾಯ.

Anil Talikoti said...

ಕಥೆ ಚನ್ನಾಗಿದೆ - ಇವರನ್ನು 'few good (wo) men' ಎನ್ನಬಹುದೇನೋ? ಹೀಗೂ ಬಿಡಿಸಬಹುದೇ?
ಬದುಕಿನ ಮೂಲ 'ಪ್ರೀತಿ' ಆದರೆ 'ಪ್ರೀತಿ' ಗೆ ಮೂಲ 'ಭದ್ರತೆ'.
'ಭದ್ರತೆ' ಗೆ ಬೇಕು ಹಾಗು ಸಾಕು 'ದುಡ್ಡು'.
ತಂದೇನೋ /ಮಗನೋ ಆಗರ್ಭ ಶ್ರೀಮಂತ (ಇದು ಸಾಪೇಕ್ಷ) ನಾಗಿದ್ದರೆ, ರೇ ...
ಎಲ್ಲರೂ 'ಚಲೋ ಅಮೇರಿಕ' ಅಥವಾ 'ಇರುವಲ್ಲೇ, ಕರೋ ಅಮೇರಿಕಾ'.
ನೋವು , ರೋಗಕ್ಕೆ ಮದ್ದಿಲ್ಲಾ - ದುಡ್ಡಿಂದ ನಿಜಾ
ಮಾನವನಗಿದ್ದಕ್ಕೆ ಅದು ಅನಿವಾರ್ಯ ಸಜಾ.
ಸೊ, ಹೊಂದಾಣಿಕೆ, ಸ್ಥಾಯಿ ಕರುಣೆ ಅನಗತ್ಯ
ದುಡ್ಡೊಂದಿದ್ದರೆ ಎಲ್ಲವೂ, ಎಲ್ಲರೂ ಸಾಂಗತ್ಯ.
-ಅನಿಲ

Ashok.V.Shetty, Kodlady said...

ಪ್ರಕಾಶಣ್ಣ,

ಅತ್ತೆ- ಸೊಸೆಯರ ಸಂಬಂಧ ಈ ರೀತಿ ಯಾಕೆ ಇರುತ್ತೆ ಅಂತ ನಾನು ಒಬ್ರು ಹಿರಿಯರನ್ನು ಕೇಳಿದ್ದಾಗ ಅವರು ನಂಗೆ ಹೇಳಿದ್ದೇನು ಗೊತ್ತಾ?? "ಕ್ಯೋಂಕಿ ಸಾಸ್ ಭಿ ಕಭಿ ಬಹು ತಿ" ...ಅತ್ತೆ ಅನ್ನುವವಳು ತಾನು ಸೊಸೆ ಯಾಗಿರುವಾಗ ತನ್ನ ಅತ್ತೆಯಿಂದ ಯಾವ ರೀತಿಯಲ್ಲಿ ಕಷ್ಟವನ್ನು ಪಡೆದಿದ್ದಳೊ ಅದನ್ನು ಮುಂದೆ ತನ್ನ ಸೊಸೆಗೆ ಬಡ್ಡಿ ಸಹಿತ ಹಿಂದಿರುಗಿಸುತ್ತಾಳೆ. ಇದು ಎಷ್ಟು ಸತ್ಯಾನೋ ಎಷ್ಟು ಸುಳ್ಳೋ ಗೊತ್ತಿಲ್ಲಾ....ಆದರೆ ಯಾವಾಗಲೂ ಈ ಅತ್ತೆ ಸೊಸೆಯರ ಜಗಳದಲ್ಲಿ ಸಿಕ್ಕಿ ಹಾಕಿ ಕೊಳ್ಳುವವನು 'ಮಗ' ಅಥವ ಗಂಡ ಎನ್ನುವ ಬಡಪಾಯಿ. ಅತ್ತ ತಾಯಿಯನ್ನು ಇತ್ತ ಮಗನನ್ನು ಬಿಡಲಾಗದ ಪರಿಸ್ಥಿತಿ. ಹಾಗಂತ ಅತ್ತೆಯು ಸೊಸೆಯನ್ನು ಮಗಳಂತೆ, ಸೊಸೆಯೂ ಅತ್ತೆಯನ್ನು ತಾಯಿಯಂತೆ ಕಾಣುವ ಅನೇಕ ಕುಟುಂಬಗಳು ಇವೆ. 'ಅತ್ತೆ- ಸೊಸೆ' ಎಂದರೆ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳಲಾಗದ ಸಂಬಂಧ ಅನ್ನೊಅ ರೀತಿಯಲ್ಲಿಯೇ ಎಲ್ಲರೂ ಕಾಣುತ್ತಾರೆ. ಅತ್ತೆ ಮತ್ತೆ ಸೊಸೆಯರ ತರ್ಕಗಳನ್ನು ವಿಶ್ಲೇಷಿಸ ಹೊರಟರೆ ನಮಗೆ ಇಬ್ಬರೂ ಹೇಳುವುದು ಸರಿ ಅನ್ನಿಸುತ್ತೆ. ಆದರೆ ಅವರ ನಡುವಿನ 'ಇಗೋ' ಅವರು ಹೊಂದಿಕೊಂಡು ಬಾಳುವುದನ್ನು ತಡೆಯುತ್ತದೆ. ಕೆಟ್ಟ ಅತ್ತೆಯರೂ, ಕೆಟ್ಟ ಸೊಸೆಯರೂ ಇರಬಹುದು.

ಲೇಖನದ ನಿರೂಅಪನೆ ಸೂಪರ್......ಜೈ ಹೊ......

mshebbar said...

ಜ್ವಲಂತ ಸಮಸ್ಯೆಯ ಪ್ರಾತ್ಯಕ್ಶಿಕೆ.

Ittigecement said...

ಸ್ವರ್ಣಾರವರೆ....

ನನ್ನ ಚಿಕ್ಕಮ್ಮ ಯಾವಾಗಳೂ ಹಾಗೆ.. ತುಂಬಾ ನೇರ.. ಮತ್ತು ನಿಖರ..
ಕಹಿಯಾದರೂ ನಿರ್ಭಿಡೆಯಿಂದ ಹೇಳುತ್ತಾರೆ..

ಅತ್ತೆ ಸೊಸೆಯರ ನಡುವೆ
ಪರಸ್ಪರ ಗೌರವ... ಹೊಂದಾಣಿಕೆ ಇದ್ದಲ್ಲಿ ಈ ಸಂಬಂಧ ಸಹನೀಯ ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಪ್ರೀತಿಯ ಬಾಲಣ್ಣ....

ನಿಜ ಪ್ರತಿ ಮನೆ ಮನೆಯ ಕಥೆ....ನಿನ್ನೆ ಈ ವಿಷಯದ ಬಗೆಗೆ ನನಗೆ ಫೋನಾಯಿಸಿ ಒಬ್ಬರು ಮಾತನಾಡಿದರು..

ಆವರು ಒಂದು ಮನೆಯ ಸೊಸೆ...

"ಪ್ರಕಾಶಣ್ಣ...
ನನ್ನ ಅತ್ತೆಗೆ ತಮ್ಮ ಮಗಳು ತವರಿನಲ್ಲಿ ಉಳಿದುಕೊಂಡಿದ್ದು ಸಾಕಾಗುವದೇ ಇಲ್ಲ...
ಮಗಳು ತವರಿಗೆ ಹೋಗಿಬಿಟ್ಟಳೆಂದರೆ ಕಿವಿ ತೂತು ಮಾಡಿಬಿಡುತ್ತಾರೆ..
ದಿನವಿಡೀ ಒಂದೇ ರಾಗ "ಅಯ್ಯೋ ತಂಗೀ ಗಂಡನ ಮನೆಗೆ ಹೋಗಿಬಿಟ್ಟಳು " ಅಂತ..

ಆದರೆ ನಾನೂ ಸಹ ತವರನ್ನು ಬಿಟ್ಟು ಈ ಮನೆಗೆ ಬಂದಿದ್ದೀನಿ..
ನನಗೆ "ತವರಿಗೆ" ಹೋಗುವ ಅಧಿಕಾರ ಇಲ್ಲವೇ ಇಲ್ಲ...

ನಾನು ನನ್ನ ತವರಿಗೆ ಹೋಗುವೆನೆಂದರೆ ’ಮುಖ ಗಂಟು" ಹಾಕಿಕೊಂಡು ಬಿಡುತ್ತಾರೆ...
ಅತ್ತೆ ಮಾತನಾಡುವದಿಲ್ಲ..
ಬದಲಿಗೆ ಅಡಿಗೆ ಮನೆಯಲ್ಲಿ ಪಾತ್ರೆಗಳು ಶಬ್ಧ ಮಾಡುತ್ತವೆ..

ನನ್ನ ಅಪ್ಪ, ಅಮ್ಮ ಬಂದರೆ ಚೆನ್ನಾಗಿರೊ ಆಸೆ.. ಪದಾರ್ಥಗಳನ್ನೂ.. ಸಿಹಿಯನ್ನೂ ಮಾಡುವ ಅಧಿಕಾರ ನನಗಿಲ್ಲ..
ನನ್ನ ಅಪ್ಪ, ಅಮ್ಮರ ಹತ್ತಿರ ಪ್ರೀತಿಯಿಂದ ಮಾತನಾಡುವದೂ ಇಲ್ಲ..."

ಹೇಳುತ್ತ ಹೇಳುತ್ತ ಆ ಹೆಣ್ಣುಮಗಳಿ ಅಳು ತಡೆಯಲಾಗಲಿಲ್ಲ...

ನನಗೂ ಏನು ಹೇಳಬೇಕೆಂದು ತೋಚಲಿಲ್ಲ..

ತುಂಬಾ ಚಂದದ ವಿಶ್ಲೇಷಣೆ ಮಾದಿದ್ದೀರಿ ಬಾಲಣ್ಣ.. ಧನ್ಯವಾದಗಳು...

Sulatha Shetty said...

ತುತ್ತಾ ಮುತ್ತಾ ಸಿನಿಮಾ ನೆನಪಾಯ್ತು:)

ಆದೇಶ್ ಕುಮಾರ್ ಸಿ ಟಿ - Adesh Kumar C T said...

ಏನು ಹೇಳಲಿ ಪ್ರಕಾಶಣ್ಣ?? ಆ ಹುಡುಗನ ತಂದೆಯ ಮಾತುಗಳು ಎದೆಗೆ ನಾಟಿದವು. ಈ ಸಮಸ್ಯೆಗೆ ಹೊಂದಾಣಿಕೆ ಬಿಟ್ಟರೆ ಬೇರೆ ಯಾವುದೇ ಔಷದಿ ಇಲ್ಲ ಎಂದೆನಿಸುತ್ತದೆ.

ಚುಕ್ಕಿಚಿತ್ತಾರ said...

ಕಥೆ ವಾಸ್ತವದಲ್ಲೆಲ್ಲೋ ಇದೆ.
ಅತ್ತೆ ಸೊಸೆ ಸ೦ಬ೦ಧ ಸಮಸ್ಯೆ ಅ೦ತ ಅ೦ದುಕೊಳ್ಳುವುದೇ ಮೊದಲನೆ ಸಮಸ್ಯೆ.ಇದು ಎಲ್ಲರ ಮನೆಯಲ್ಲೂ ಇರುವುದೇ ಆಗಿದೆ.’ಇಗೋ’ ಅನ್ನುವುದು ಜಾಸ್ತಿ ಕೆಲಸ ಮಾಡುವಲ್ಲಿ ಸ೦ಬ೦ಧ ಹಳಿತಪ್ಪುವುದು ಸಹಜ.

ಚನ್ನಾಗಿದೆ.

Keshav.Kulkarni said...

ಇದು ಕತೆಯಲ್ಲ!

Rajaneesh Kashyap said...

ಪ್ರಕಾಶ್ ಅವರೆ,
ನಾನು ರಜನೀಶ ಅಂತ. ಶ್ರೀಕಾಂತನ ತಮ್ಮ.
ನಿಮ್ಮ ನಿರೂಪಣಾ ವಿಧಾನ ಬಹಳ ಚೆನ್ನಾಗಿದೆ. ನಿಮ್ಮ ಕಥಾನಾಯಕನಿಗೊಂದು ನನಗೆ ತಿಳಿದ ಕೆಲವು ಕಿವಿಮಾತು:

"ಜಪಾನಿನಲ್ಲಿ natural farming ಅನ್ನೋ ಒಂದು concept ಇದೆಯಂತೆ
(http://en.wikipedia.org/wiki/Natural_farming)
ಯಾಕೆ ಹೇಳಿದೆ ಅಂದ್ರೆ...
ಈ ವಿಧಾನದಲ್ಲಿ ಹೊಲದಲ್ಲಿ ಬೆಳೆಯ ಜೊತೆ ಕಳೆಯೂ ಇರುತ್ತದೆ. ಕಳೆಯ ಬಗೆಗೆ ಯಾವ ವಿರೋಧವೂ ಇಲ್ಲ ಪೋಷಣೆಯೂ ಇಲ್ಲ.
ರೈತನ ಗಮನವೆನಿದ್ದರೂ ಬೇಕಾದ ಬೆಳೆಯನ್ನು ಪಡೆಯುವುದರ ಕಡೆಗೆ ಅಷ್ಟೇ. (ಪಸಲಿನ ಗಳಿಕೆಯಲ್ಲಿ ಕಡಮೆಯೇನು ಇರುವುದಿಲ್ಲ)

***

ನಮಗೆ ಎಣ್ಣೆಯು ಬೇಕು ಸೀಗೆಯು ಬೇಕು. ಯಾವುದು ಒಂದೇ ಇದ್ದರೂ; ಯಾವೊಂದು ಇಲ್ಲದಿದ್ದರೂ ಸ್ನಾನ ಅಪೂರ್ಣವೆ!

***

Bicycle ಹಿಡಿತ ಸಿಗೋವರೆಗೂ ಏಳು ಬೀಳು ಇರುತ್ತೆ. ಯಾವುದೊ ಒಂದು ಕ್ಷಣದಲ್ಲಿ ಬ್ಯಾಲೆನ್ಸ್ ಸಿಕ್ಕಿಬಿಡುತ್ತೆ ಪದೇ ಪದೇ ತುಳಿದು "ಕೆರಗತ" ಮಾಡ್ಕೊಬೇಕಷ್ಟೇ.
ಇವೆಲ್ಲಕ್ಕೂ ಮುನ್ನ Bicycle ಕಲಿಯಬೇಕು ಅನ್ನೋ ಉತ್ಕಟತೆ ಇರಬೇಕಷ್ಟೇ.

ಧನ್ಯವಾದಗಳು,
-ರಜನೀಶ

ವನಿತಾ / Vanitha said...

Nanna atte nange 2nd amma :)
Shreya huttidaaga nanna atte ne nanna nodkondiddu..:)

Ittigecement said...

ಪ್ರೀತಿಯ ಬದರಿ ಸರ್ ಜೀ....

ನನ್ನ ಗೆಳೆಯನೊಬ್ಬ ತನ್ನಮ್ಮ, ಮಡದಿಯವರ ದಿನ ನಿತ್ಯದ ಜಗಳ ನೋಡಿ
ಆತ್ಮ ಹತ್ಯೆಗೆ ಪ್ರಯತ್ನಿಸಿದ್ದ...

ಇಲ್ಲಿ ಯಾರ ತಪ್ಪು? ಯಾರು ಸರಿ? ಎನ್ನುವದಕ್ಕಿಂತ...

ಇಂಥಹ ಜಗಳಗಳಿಂದ "ಮಾನಸಿಕವಾಗಿ ತಮ್ಮ ಕುಟುಂಬ..
ನಮಗೇ ತೊಂದರೆ ಆಗುತ್ತದೆ" ಎನ್ನುವದು ಯಾಕೆ ಮನವರಿಕೆ ಆಗುವದಿಲ್ಲ?

ನಮ್ಮದೇ ಬದುಕು...
ನಾವೇ ಕಟ್ಟಿಕೊಳ್ಳಬೇಕು... ಸ್ವಲ್ಪ ಸಹನೆ... ವಿವೇಕ ತೋರಿಸಿದರೆ ಚೆನ್ನಾಗಿರುವದು ನಮ್ಮ ಸಂಸಾರವೇ ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರೀತಿಯ ದಿಗ್ವಾಸು...

ಹೊಸದಾಗಿ ಬಂದ ಹೆಣ್ಣು ಮಗಳ ಮನಸ್ಥಿತಿ ಹೇಗಿರ ಬಹುದು....

ಗಂಡನಿಗೆ.. ಅತ್ತೆ .. ಮಾವರಿಗೆ ಪ್ರೀತಿ ಕೊಟ್ಟು..
ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡು.. ಅವರ ಮನಗೆದ್ದು... ಸಂಸಾರ ನಡೆಸಬೇಕು ಎನ್ನುವ ಮನಸ್ಥಿತಿ ಅವಳದ್ದಿರಬಹುದಲ್ಲವೆ?

ಇನ್ನು ಅತ್ತೆಯ ಮನಸ್ಥಿತಿಯೂ "ತನ್ನ ಮಗ, ಸೊಸೆಯರ ಸಂಸಾರ ಚೆನ್ನಾಗಿರಲಿ" ಎನ್ನುವ ಆಶಯವಿರುತ್ತದೆ ಅಂತ ಇರುತ್ತದೆ ಅಂತ ಅಂದುಕೊಳ್ಳೋಣ...

ಆಗ ಇಲ್ಲಿ ಪ್ರವೇಶವಾಗುವದು

"ಮುದ್ದು ಮಗಳ "ಅಪ್ಪ, ಅಮ್ಮಂದಿರು" !!

ನಿಜ ಎಷ್ಟೋ ಕಡೆ ಚೆನ್ನಾಗಿ ನಡೆಯಬೇಕಿದ್ದ ಕುಟುಂಬವನ್ನು ಒಡೆದ ಕೀರ್ತಿ "ಹುಡುಗಿಯ ಅಪ್ಪ,ಅಮ್ಮಂದಿರಿಗೆ" ಸಲ್ಲುತ್ತದೆ..

ಇಂಥಹ ಉದಾಹರಣೆಗಳು ಬಹಳಷ್ಟಿವೆ..

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸಂಧ್ಯಾ......

ನಿಜ ತಮ್ಮೊಳಗಿನ "ಅಹಮ್ " ಬಿಟ್ಟರೆ ಎಲ್ಲವೂ ಚೆನ್ನಾಗಿ ನಡೆಯುತ್ತದೆ...

ಒಂದು ಕುಟುಂಬ ಬೇರೆಯಾದರೆ.. ಅದರ ಪರಿಣಾಮ ಮುಂದಿನ ಪೀಳಿಗೆಯ ಮೇಲೂ ಆಗುವದು...

ಅಜ್ಜ, ಅಜ್ಜಿಯರ ಪ್ರೀತಿಯಿಲ್ಲದೆ ಬೆಳೆವ ಮಕ್ಕಳು...!

ಅಜ್ಜ, ಅಜ್ಜಿಯರು ಮಕ್ಕಳಿಗೆ ಅದೆಷ್ಟೋ ನೀತಿ ಪಾಠಗಳನ್ನು ಉಪದೇಶವಿಲ್ಲದೆಯೇ..
ಚೆನ್ನಾಗಿ ಮಕ್ಕಳಿಗೆ ಕಲಿಸಿರುತ್ತಾರೆ..

ತಮ್ಮ ಮಾತುಗಳಿಂದ.. ನಡೆ ನುಡಿಯಿಂದ...!

ಅಂಥಹ ಮಕ್ಕಳು ಮುಪ್ಪಿನ ಸಮಯದಲ್ಲಿ ತಮ್ಮ ತಮ್ದೆ, ತಾಯಿಯರನ್ನು ಚೆನ್ನಾಗಿ ನೋಡಿಕೊಂಡಾರು.. ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಗೆಳತಿ....

ನನಗೆ ಆಶ್ಚರ್ಯವೆನಿಸಿದ್ದು ಏನು ಗೊತ್ತಾ?
ಈ ಕಥೆಗೆ ಹೆಣ್ಣು ಮಕ್ಕಳ ಪ್ರತಿಕ್ರಿಯೆ ಕಡಿಮೆ ಇದ್ದಿರುವದು....

ಹೆಚ್ಚಾಗಿ ಕಥೆ ಬರೆದ ನಂತರ ನನ್ನ ಬಳಿ ....
ಚಾಟಿಂಗಿನಲ್ಲೋ.. ಮೇಲ್ ನಲ್ಲೋ... ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಸಹೋದರಿಯರು..

ಈ ಕಥೆಗೆ ಏನೂ ಹೇಳಲೇ ಇಲ್ಲ....!!!!!!

ಅದೇನಾದರೂ ಹೇಳಿದ್ದರೆ "ಮದುವೆಯಾಗದ ಸಹೋದರಿಯರು"........ !

ಮದುವೆಯಾಗಿ ಸಂಸಾರ ಮಾಡುತ್ತಿರುವವರು ಏನೂ ಹೇಳಲೇ ಇಲ್ಲ....

ಕ್ರಮೇಣ ಪ್ರತಿಕ್ರಿಯೆಗಳು ಬರತೊಡಗಿದವು... ಮೇಲ್ ಗಳೂ ಬಂದವು...

ಪ್ರತಿಕ್ರಿಯೆ ಕೊಡದ....
" ಅಂಥಹ ತಾಳ್ಮೆಗಳೇ ಎಷ್ಟೋ ಕುಟುಂಬಗಳನ್ನು ನಡೆಸುತ್ತಿವೆ...."

ನಿಮ್ಮ ಸ್ಪೂರ್ತಿದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು....

kavinagaraj said...

ಪ್ರಕಾಶರೇ, ಈ ಅನುಭವ ಒಂದು ಕುಟುಂಬದ್ದಲ್ಲ ಎಂದು ಮಾತ್ರ ಹೇಳಬಹುದು. 'ಹೇ, ಭಗವಾನ್, ಸನ್ಮತಿ ದೇ' ಎಂದು ಪ್ರಾರ್ಥಿಸಬಹುದು.

Seema S. Hegde said...

ಪ್ರಕಾಶಣ್ಣ,
ಎಲ್ಲರ ಮನೆಯ ದೋಸೆಯೂ ತೂತು. ಎಲ್ಲಿ ಹೋದರೂ ಈ ಸಮಸ್ಯೆ ಇದ್ದಿದ್ದೇ. ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು. ಈ ಸಮಸ್ಯೆಯಲ್ಲಿ ಗಂಡಸರ ಪರಿಸ್ಥಿತಿ ಎಲ್ಲಕ್ಕಿಂತ ಕಷ್ಟದ್ದು. ಇಲ್ಲಿ ego ಮಾತ್ರವಲ್ಲ, possessiveness ಕೂಡ ಹೆಚ್ಚಿನ ಕೆಲಸವನ್ನು ಮಾಡುತ್ತಿರುತ್ತದೆ. ಸೊಸೆ ಬಂದು ತನ್ನ ಮಗನನ್ನು ತನ್ನಿಂದ ಕಿತ್ತುಕೊಂಡಳು ಎನ್ನುವ ಭಾವನೆ ಅತ್ತೆಯರಿಗೆ ಬಂದಿರುತ್ತದೆ. ಇಷ್ಟು ದಿನ ಎಲ್ಲದನ್ನೂ ತನ್ನ ಬಳಿ ಕೇಳುತ್ತಿದ್ದ ಮಗ ಈಗ ಹೆಂಡತಿಯ ಹತ್ತಿರ ಹೋದರೆ ಅವರು ಸಹಿಸಲಾರರು. ಹೆಂಡತಿಯೂ ಅಷ್ಟೇ, ಗಂಡ ತಾಯಿಯ ಬಳಿ ಎನಾದರೂ ಕೇಳಿದನೆಂದರೆ ತನಗೆ ಸಿಗುವ ಪ್ರಾಮುಖ್ಯತೆ ಕಡಿಮೆಯಾಯಿತೆಂದುಕೊಳ್ಳುತಾಳೆ. ಗಂಡನಿಗೆ ಪಲಾಯನವೇ ಒಳ್ಳೆಯದು ಎಂದೆನಿಸುವುದರಲ್ಲಿ ಆಶ್ಚರ್ಯವಿಲ್ಲ. ಕಷ್ಟ :(
ಬರದಿದ್ದು ಅಗ್ದೀ ಚೊಲೋ ಆಜು!

ಸೀತಾರಾಮ. ಕೆ. / SITARAM.K said...

jai ho!

Shruthi B S said...

tumbaa chanaagiddu kate... idontara ellara mane kate... idaralli tappu yaradu anta kooda heLalaagtalle....

Sudeepa ಸುದೀಪ said...

ನಿಜವಾಗ್ಲು ನಿಮ್ಮದೆ ಕಥೆ ಹೇಳುತ್ತಿದ್ದೀರಾ...ಅನ್ನುವ ಹಾಗೆ..ಅಧ್ಭುತ ಪ್ರಾರಂಭ..ಮುಂದೆ ಹೇಗೆ..ಕಥೆತಿರುಗುತ್ತದೆ ..ಎನ್ನುವ ಕುತೂಹಲ ಅಂತ್ಯದವರೆಗೂ..ಓದುಗರನ್ನು ಹಿಡಿದಿಟ್ಟ..ಬರಹ..

Ittigecement said...

ರಘುನಂದನ...

ತುಂಬಾ ಚಂದದ ವಿಶ್ಲೇಷಣೆ ನಿಮ್ಮದು...

ಕಾಲ ಬದಲಾದಂತೆ... ವಿಜ್ಞಾನ ಜಾಸ್ತಿಯಾದಂತೆ ಮನುಷ್ಯ ಸಂಬಂಧಗಳು ..
ವಿಶ್ವಾಸ ಕಡಿಮೆಯಾಗುತ್ತಿವೆ.. ಅಲ್ಲವಾ?

ನಮ್ಮ ಭಾರತದ ಕುಟುಂಬ ಪದ್ಧತಿಯ ಬೇರುಗಳು ಸಡಿಲವಾಗುತ್ತಿವೆ..

ಇದರಿಂದ ಒಳ್ಳೆಯದಾಯ್ತೊ... ಕೆಟ್ಟದಾಯ್ತೊ ಸಮಯವೇ ಇದನ್ನು ನಿರ್ಧರಿಸಬೇಕು...

ನಮ್ಮ ಮನೆಯಲ್ಲೂ ಈ ಸಮಸ್ಯೆ ಇಲ್ಲ ಅನ್ನುವಂತಿಲ್ಲ..

ಆದರೆ ನನ್ನ ಬಳಿಗೆ ಬರುವದಿಲ್ಲ ಅಷ್ಟೆ..

ಏನಿದ್ದರೂ ಸಣ್ಣ ಪುಟ್ಟ ವಿಷಯಗಳು..
ಅಡಿಗೆ ಮನೆಯಿಂದ ಊಟದ ಮನೆಗೆ...
ಹಾಲಿಗೆ ಬರುವದಿಲ್ಲ ಅಷ್ಟೆ...

ಇದು ಸಹಜ... ಸರಿ ಎನ್ನುವದು ನನ್ನ ಅನಿಸಿಕೆ...

ರಘುನಂದನ.... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುನಾಥ ಸರ್....

ನಮ್ಮ ಮನೆ ಹತ್ತಿರ ಇರುವ "ವೃದ್ಧಾಶ್ರಮ"...
ಸ್ನೇಹಿತನ ಮನೆಯಲ್ಲಿ ನಡೆಯುತ್ತಿರುವ ಘಟನೆ... ಇದನ್ನು ಬರೆಯಲು ಪ್ರೇರೇಪಿಸಿತು....

ವೃದ್ಧಾಶ್ರಮಗಳಲ್ಲಿ ಸಾವಿರ ಸಾವಿರ ನಿಟ್ಟುಸಿರುಗಳಿವೆ...
ಬರಲಾರದ.....
ಒಳಗೊಳಗೆ ಇಂಗಿಹೋಗುತ್ತಿರುವ ಕಣ್ಣೀರು ಹನಿಗಳಿವೆ...


ಯಾರೂ ಬಯಸದ..
ನೋಡಲು ಇಷ್ಟ ಪಡದ...ಅದೊಂದು ಬೇರೆ ಜಗತ್ತು..

ಸರ್...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

umesh desai said...

ನಿನ್ನೆ ನಿಮ್ಮ ಈ ಬ್ಲಾಗು ಓದಿದೆ..ಹಾಗೆಯೇ ೮=೩೦ ಕ್ಕೆ ಮರಾಠಿ ಧಾರಾವಾಹಿ ನೋಡುತ್ತಿದ್ದೆ...
ಅಲ್ಲೂ ಇಂತಹುದೇ ಒಂದು ಸನ್ನಿವೇಶ--ಬದಲಲಾವಣೆ ಅಂದ್ರೆ ಅಲ್ಲಿ ಹೆಂಡತಿ-ಗಂಡ ದೂರ ದೂರ
ಗಂಡನಿಗೆ ಅಮೆರಿಕದ ಆಫರ್ ಬಂದಿದೆ ಮನೆಯಲ್ಲಿ ಅದಕ್ಕೆ ವಿರೋಧವಿದೆ..ಅಪ್ಪ ಅಮ್ಮ ಹೆಂಡತಿ
ತನ್ನ ಅಮೆರಿಕಾಕನಸಿಗೆ ಭಂಗ ತಂದಾರು ಇದು ಅವನ ಆತಂಕ ಅಂತೆಯೇ ಅವರಿಂದ ನಿಜ ಸಂಗತಿ
ಮುಚ್ಚಿಟ್ಟಿರುತ್ತಾನೆ..ನಿನ್ನೆಯ ಸರಣಿಯಲ್ಲಿ ಅವನ ಸಂಘರ್ಷ ಅವನ ಹಟ ದ ಉಲ್ಲೇಖವಿತ್ತು..
ನಿಮ್ಮ ಕತೆ ಓದಿ ಮಿಶ್ರಭಾವ..ಅವಕಾಶ ಬಂದಾಗ ಅದನ್ನು ಉಪಯೋಗಿಸದೆ..ಅತ್ತೆ-ಸೊಸೆ ಜಗಳ ನೋಡುತ್ತ
ಬೇಯುವುದು ಒಂದು ಅವಕಾಶ ಇನ್ನೊಂದು ಅವಕಾಶ ಉಪಯೋಗಿಸಿಕೊಂಡು ಜನರ ಕಣ್ಣಲ್ಲಿ ಸ್ವಾರ್ಥಿಯಗಿರುವುದು ಇದು ಅವನ ಆಯ್ಕೆ..
ಕತೆಯ ಮುಕ್ತಾಯ ಯೋಗ್ಯ ಅನ್ನುವುದಕ್ಕಿಂತ ಜಾಣ್ಮೆಯದಾಗಿದೆ..ಎಂದಿನ ನಿಮ್ಮ ಸೊಗಸಾದ ಶೈಲಿ..ವಸ್ತು ಎಲ್ಲ ಮೇಳೈಸಿ ಖುಷಿ ತಂತು.

vandana shigehalli said...

ನಿಜ ಪ್ರಕಾಶಣ್ಣ ......
ಓದಿ ಬೇಜಾರಾಯಿತು, ಅತ್ತೆ ಅಮ್ಮ ನಾಗುವ ಪ್ರಯತ್ನ ಮಾಡಬಹುದು ....
ಅಪ್ಪ- ಅಮ್ಮ , ಪರಿವಾರವನ್ನೇ ಬಿಟ್ಟು ಹೊಸ ಕನಸು ಗಳೊಂದಿಗೆ
ಬಂದ ಸೊಸೆಗೆ ಅತ್ತೆ ಅಮ್ಮ ನಾದರೆ ............... ?
ಸಾದ್ಯ.............!
ಒಂದು ವಿಚಾರ ವನ್ನ ಅತ್ತೆ-ಸೊಸೆ ಇಬ್ಬರು ಮಾಡಿದ್ದರೆ ...ಸರಿ ಹೋಗ ಬಹುದಿತ್ತು ....
ಬೆಳಗ್ಗಿಂದ ಸಂಜೆ ವರೆಗೆ ಕತ್ತೆ ಯಂತೆ ದುಡಿಯುವ ಮಗ-(ಗಂಡ) ಮನಸ್ತಿತಿ, ದುಡಿಯುವ ಅನಿವಾರ್ಯತೆ , ಅರಿತು ಕೊಂಡು....
ಹಿರಿಯರ ಬೆಂಬಲ ಪಡೆಯುವ ಮನಸ್ಸು ........ ಹೆಂಡತಿಗೆ , ಮಗನ ಏಳಿಗೆ ಕಂಡು ಖುಷಿ ಪಡುವ ಮನ ಅಮ್ಮ ನಿಗೆ ಇದ್ದರೆ,
ಒಟ್ಟಿಗೆ ಸಂತೋಷ ವಾಗಿ ಬಾಳ ಬಹುದು....
ನಿಮ್ಮ ಚಿಕ್ಕಮ್ಮ ಹೇಳಿದ್ದು ಸತ್ಯ ,
ಹಿರಿಯರ ಅನುಭವಗಳು ಬೇಕು..... ಆದರೆ ಒತ್ತಡವಲ್ಲ,
ಭಾವನೆ ಗಳು ಬೇಕು ..... ಭಯವಲ್ಲ
ಆಧರ ಬೇಕು ...... ಆಸರೆ ಮಾತ್ರವಲ್ಲ

ಆದರೆ ಪ್ರಕಾಶಣ್ಣ , ಮದುವೆಯಾದದ್ದೇ ..... ಮನೆ ಅಳಿಯ ನಾಗುವವರ ಪಾಡೇನು .....?
ಪಾಪ ಅಲ್ಲಿ ಅತಿಥಿ - " ಅವನೇನೋ ಮದುವೆ ಆಗಿದ್ದೆ ಆಗಿದ್ದು ಮನೆ ಅಳಿಯ ನಾಗಿ ಬಿಟ್ಟ "
ಇಲ್ಲಿ ಹೊರಗಿನವನಾಗಿ ..... ಎಲ್ಲಿಯೂ ಸಲ್ಲದವರ ಪಾಡು ...............!