Tuesday, March 20, 2012

ಸುರುಳಿ..................,


ನಾನೇನೂ ಪೋಲಿಯಲ್ಲ..
ಹಾಗಂತ ಸಭ್ಯಸ್ಥನೂ ಅಲ್ಲ...
ಹೊಸ ಹುಡುಗಿಯೊಬ್ಬಳು ನಮ್ಮ ಆಫೀಸಿಗೆ ಇವತ್ತು ಬಂದಿದ್ದಾಳೆ..
ಅವಳನ್ನು ನೋಡ್ತಾ ಇದ್ದೆ..


ಕೆನ್ನೆಯ ಮೇಲಿನಿಂದ ಕೂದಲು ..
ಜಾರಿ ಇಳಿದು ..
ಕುತ್ತಿಗೆಯ ಬಳಿ ಸುರುಳಿ ಸುತ್ತಿದ್ದು ನೋಡ್ತಾ ಇದ್ದೆ...!


ಬಹಳ ಚಂದ ಆ ಕೆನ್ನೆಯ ಉಬ್ಬು..!


ನೋಡ್ತಾನೇ ಇದ್ದೆ..


ತಟ್ಟನೆ ಅವಳೂ ನೋಡಿದಳು..!


ನಾನು ಗಲಿಬಿಲಿಗೊಂಡು ದೃಷ್ಟಿ ಬದಲಿಸಿದೆ..


ಹೆಣ್ಣು ಮಕ್ಕಳಿಗೆ ..
ಯಾರಾದರೂ ತಮ್ಮ ಬೆನ್ನಿನ ಹಿಂದೆ ನೋಡಿದರೂ ಗೊತ್ತಾಗಿ ಬಿಡುತ್ತದಂತೆ...!


ಚಂದ ನೋಡುವ ವಯಸ್ಸು.. 
ಮನಸ್ಸು ...
ಮತ್ತು ಮತ್ತೂ ನೋಡುವ ಆಸೆ...


ಆಗಾಗ ಕದ್ದು ಕದ್ದು ನೋಡುತ್ತಿದ್ದೆ...


ಆಕೆ ಜವಾನನ್ನು ಕರೆದು ಒಂದು ಚೀಟಿ ಕೊಟ್ಟಳು..
ಆತ ನನಗೆ ತಂದು ಕೊಟ್ಟ..


"ಕದ್ದು ನೋಡುವದೇಕೆ?
ಕ್ಯಾಂಟೀನಲ್ಲಿ ಕಾಫೀ ಕುಡಿಯೋಣ ಬನ್ನಿ..
ಖರ್ಚೆಲ್ಲ ನನ್ನದು..
ಹಣ ಮಾತ್ರ ನಿಮ್ಮದು...."


ನಾನು ಆಕೆಯನ್ನು ನೋಡಿದೆ.. 
ಆಕೆಯ ನಗುವೂ ಬಹಳ ಸುಂದರವಾಗಿತ್ತು...


ಕೆಲವೊಬ್ಬರು ಹಾಗೇನೆ...


ಬಲುಬೇಗ ನಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ...
ಹೇಗೆ?
ಏನು?
ಪೂರ್ವಾಪರ ವಿಚಾರ ಗೊತ್ತಿಲ್ಲದೆಯೇ ಆಕೆ ತುಂಬಾ ಹತ್ತಿರವಾಗಿಬಿಟ್ಟಳು...


ದಿನಾಲೂ ಅವಳ ಕೆನ್ನೆ, ಉಬ್ಬುಗಳ ಮೇಲಿನ ಮುಂಗುರುಳನ್ನು ನೋಡುವದು..
ಆಕೆಯೊಡನೆ ಕಾಫೀ... 
ಹರಟೆ ತುಂಬಾ ಸೊಗಸಾಗಿರುತ್ತಿತ್ತು...


"ನೀವು ನಿಮ್ಮ ಬಗೆಗೆ ಏನೂ ಹೇಳಲೇ ಇಲ್ಲ..."


"ನಾನು ಕನ್ನಡಿಗಳದಾರೂ ಹೊರದೇಶದಲ್ಲೇ ಹುಟ್ಟಿದ್ದು..
ಬೆಳೆದದ್ದು..
ಅಪ್ಪ, ಅಮ್ಮ ಇನ್ನೂ ಅಲ್ಲಿಯೇ ಇದ್ದಾರೆ..
ಒಬ್ಬಳೇ ಮಗಳು...
ಭಾರತ ನೋಡಬೇಕಿನಿಸಿತು...
ಕೆಲಸವೂ ಸಿಕ್ಕಿತು.. ಇಲ್ಲಿಗೆ ಬಂದೆ..."


ಹುಡುಗಿ ತನ್ನ ಬಗೆಗೆ ಹೇಳಿ ನನ್ನೆಡೇಗೆ ಪ್ರಶ್ನಾರ್ಥಕವಾಗಿ ನೋಡಿದಳು..


"ನಾನು ತುಂಬಾ ಖುಷಿ ಮನುಷ್ಯ...
ಅಪ್ಪ,ಅಮ್ಮ ಹಳ್ಳಿಯಲ್ಲಿರ್ತಾರೆ..
ಅಪ್ಪ, ಅಮ್ಮನ ಮುದ್ದಿನ ಮಗ..."


ದಿನಗಳು..
ದಿನ ನಿತ್ಯದ ಸಂಗತಿಗಳು ಹೀಗೆಯೇ ಇರುವದಿಲ್ಲವಲ್ಲ...
ಬದಲಾಗುತ್ತದೆ..
ಬದಲಾಗುತ್ತಲೇ ... ಇರುತ್ತದೆ...


ಆಫೀಸಿನಲ್ಲಿ ಒಂದು ಟ್ರಿಪ್ ಇಟ್ಟಿದ್ದರು...


ಜಂಗಲ್ ರಿಸಾರ್ಟ್...
ತುಂಬಾ ಸುಂದರ ತಾಣ...
ರಾತ್ರಿ ಪಾರ್ಟಿ ಕೂಡ ಇತ್ತು...


ಎಲ್ಲರೂ ತಮ್ಮ ತಮ್ಮ ಗೆಳೆಯರ ಸಂಗಡ ಹರಟುತ್ತಿದ್ದರು...


"ನಾನು ...
ಅಪರೂಪಕ್ಕೆ ಡ್ರಿಂಕ್ಸ್ ತೆಗೆದು ಕೊಳ್ಳುತ್ತೇನೆ...
ನಿಮ್ಮ ಅಭ್ಯಂತರವಿಲ್ಲದಿದ್ದರೆ ಇವತ್ತೂ ಕೂಡ...
ಪ್ಲೀಸ್..."


" ಪ್ಲೀಸ್ , ಗಿಸ್ ... ಏನೂ ಬೇಡ..
ನನಗೂ ಒಂದು ತನ್ನಿ..
ನನಗೂ ರೂಢಿ ಇದೆ..."


ಸನಿಹದಲ್ಲಿ...
ಚಂದದ ಹುಡುಗಿ... !
ಸ್ವಲ್ಪ ಸ್ವಲ್ಪವಾಗಿ ಏರುತ್ತಿರುವ ನಶೆ...!


ವಾಹ್ !!


ಸಮಯ ..
ಈ ಕ್ಷಣಗಳು..
ಇಲ್ಲೇ ಎಲ್ಲೋ ಒಮ್ಮೆ ನಿಂತು ಹೋಗಬೇಕಿತ್ತು ಅನಿಸಿತು..!


ಆದರೆ ... ನಿಲ್ಲಲಿಲ್ಲ...


" ಹುಡುಗಿ...
ನೀವು ಅಪಾರ್ಥ ಮಾಡಿಕೊಳ್ಳದಿದ್ದಲ್ಲಿ ..
ನನಗೆ ಒಂದು ಆಸೆ ಇದೆ...


ಒಪ್ಪಿಗೆ ಕೊಟ್ಟರೆ ಕೇಳುತ್ತೇನೆ..."


"ಕೇಳಿ.. 
ಅದಕ್ಕೇನಂತೆ..?"


"ಈ ರಾತ್ರಿ ನಿಮ್ಮೊಡನೆ ಕಳೆಯುವಾಸೆ...
ಇಬ್ಬರೂ ..
ಒಂದಾಗುವಾಸೆ... 
ಪ್ಲೀಸ್...
ಇಲ್ಲ ಅನ್ನಬೇಡಿ.."


"ನನ್ನನ್ನು ನೋಡಿ ಕಾಮಿಸುವ ಆಸೆ ಆಯ್ತಾ?
ಅಷ್ಟೇನಾ?
ನನ್ನಲ್ಲಿ ಪ್ರೀತಿ ಹುಟ್ಟಲಿಲ್ವಾ?"


"ಹುಡುಗಿ..
ನಿನ್ನ ಬಗೆಗೆ ತುಂಬಾ ತುಂಬಾ ಪ್ರೀತಿ ಇದೆ..


ಪ್ರೀತಿ ಇರದಿದ್ದಲ್ಲಿ "ಕಾಮ" ಸಾಧ್ಯನಾ?


ನನಗೆ ಈ ಸಮಯಕ್ಕೆ..
ಈ ಸಂದರ್ಭದಲ್ಲಿ ಈ "ಆಸೆ" ಹುಟ್ಟಿತು...


ಇಷ್ಟವಿಲ್ಲದಿದ್ದಲ್ಲಿ ಬೇಡ.. ಯಾವುದಕ್ಕೂ ಬಲವಂತ ಇಲ್ಲ..."


"ಹುಡುಗಾ...
ಕಾಮ ದೈಹಿಕ ಅಗತ್ಯ...
ಪ್ರೀತಿ ಮಾನಸಿಕ ಅಗತ್ಯ...


ಅಪ್ಪ, ಅಮ್ಮರಿಂದ.. ಗೆಳೆಯರಿಂದ ದೂರವಿರುವ ನನಗೆ ..
ನಿನ್ನ "ಪ್ರೀತಿ" ಬೇಕು...


ನನಗೂ ಆಸೆ ಇಲ್ಲ ಅಂತ ಏನಿಲ್ಲ..
ಇದೆ..
ಆದರೆ...."


"ಆದರೆ.... ಏನು?"


"ಗಂಡಿನ ಅನುಭವ ನನಗೂ ಇದೆ...
ಪರದೇಶದಲ್ಲಿ  ನನಗೂ ಗೆಳೆಯರಿದ್ದರು...


ರೂಮಿನ ಕತ್ತಲೆಯಲ್ಲಿ ನಡೆಯುವದು ಕಾಮದಾಟವಲ್ಲ..


ಅದು ಒಂದು ಹೊಡೆದಾಟ..


ಅಲ್ಲಿ ಯಾರೋ ಒಬ್ಬರು ಸೋಲುತ್ತಾರೆ..
ಯಾರೋ ಒಬ್ಬರು ಗೆಲ್ಲುತ್ತಾರೆ..


ಸೋಲು, ಗೆಲುವಿನ ಮನಸ್ಥಿತಿಯನ್ನು..
ಗಂಡು, ಹೆಣ್ಣು ಹೇಗೆ ನಿಭಾಯಿಸುತ್ತಾರೆ ಎನ್ನುವದರ ಮೇಲೆ ..
ಮುಂದಿನ ಸಂಬಂಧದ ...
ಅಳಿವು..
ಉಳಿವು... ಆಲ್ವಾ?


ಹುಡುಗಾ..
ಯಶಸ್ವಿ  ದಾಂಪತ್ಯವೆಂದರೆ ಇದೇ ತಾನೆ?


ದೌರ್ಬಲ್ಯದೊಡನೆಯ..ಅಡ್ಜಸ್ಟಮೆಂಟ್...!
ಬೇಕು ಬೇಡಗಳೊಡನೆಯ ಹೊಂದಾಣಿಕೆ.. !.."


ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ...


"ಹುಡುಗಾ..
ನಮ್ಮಿಬ್ಬರ ಇಷ್ಟು ಚಂದದ ಗೆಳೆತನ..
ಸೋಲು ..
ಗೆಲುವಿನಲ್ಲಿ ಹಳಸುವದು ಬೇಡ..


ಈ ಗೆಳೆತನಕ್ಕೆ ಇನ್ನಷ್ಟು ಸಮಯ ಕೊಡೋಣ...


ಅದೃಷ್ಟವಿದ್ದಲ್ಲಿ...
ಅವಕಾಶವಿದ್ದಲ್ಲಿ ಅನುಕೂಲವಾದ ಸಮಯ ಸಿಕ್ಕೇ ಸಿಗುತ್ತದೆ..."


ನನಗೆ ಬಹಳ ನಿರಾಸೆಯಾಯಿತು...
ಅವಳ ಮಾತಿಗೆ ಒಪ್ಪಿಕೊಂಡೆ..


ಮರುದಿನದಿಂದ ಮತ್ತೆ ಅದೇ ಆಫೀಸ್...
ಕಾಫಿ ಹರಟೆ..


ಟ್ರಿಪ್ಪಿನ ನಂತರ ನನ್ನ ಆಸೆಗಳ..
ಕನಸುಗಳ ಬಣ್ಣ ಬದಲಾಗಿತ್ತು...


ಮಾತಿನ ಮಧ್ಯದಲ್ಲಿ ನಾನು ಮತ್ತೆ ..ಮತ್ತೆ ..
ನನ್ನ ಬೇಡಿಕೆ ಇಡುತ್ತಿದ್ದೆ...
ಆಕೆ ನಗುತ್ತ ಸಲುಗೆಯಿಂದ  ಬೇಡವೆನ್ನುತ್ತಿದ್ದಳು...


ನಾನು ಆಕೆಯ ಕೆನ್ನೆಯ ಉಬ್ಬು... ಮುಂಗುರುಳಗಳ ನೋಡುತ್ತಲೇ ಇರುತ್ತಿದ್ದೆ...


ಇಷ್ಟು ಮುಕ್ತವಾಗಿ ಮಾತನಾಡಿದ ಮೇಲೂ ...
ಸಂಬಂಧ ಮುಂದುವರೆಯುತ್ತಿರುವಾಗ..
ಕಂಡ ಕನಸುಗಳು ನನಸಾಗಲು ಹಾತೊರೆಯುತ್ತಿದ್ದವು...


ಆಸೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಿದ್ದೆ...


ಒಂದು ದಿನ ಆಕೆ ಬರಲಿಲ್ಲ...
ಫೋನ್ ಮಾಡಿದೆ ಫೋನ್ ತೆಗೆದುಕೊಳ್ಳಲಿಲ್ಲ..


ಆ ದಿನ ನನಗೆ ಬಹಳ ಬೇಸರದ ದಿನ...


ಮರುದಿನವೂ ಹಾಗೇ ಆಯ್ತು...


ಒಂದು ವಾರ ಕಳೆಯಿತು...


ಒಂದು ಅವಳಿಂದ ಎರಡಕ್ಷರದ ಮೇಲ್ ಬಂತು 


"ಹುಡುಗಾ .. ಹೇಗಿದ್ದೀಯಾ ?...."


ನನಗೆ ಖುಷಿ ಆಯ್ತು...


"ನನ್ನ ಪ್ರೀತಿಯ ಮುಂಗುರುಳೆ...


ನಿನ್ನನ್ನು ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಿದೆಯಾ?
ನೀನಿಲ್ಲದ...
ನೀನು ಕಣ್ಣಿಗೆ ಕಾಣದ.. 
ನಿನ್ನೊಡನೆ ಮಾತನಾಡದ ದಿನಗಳನ್ನು ಕಳೆಯುವದು ಕಷ್ಟ...


ಪ್ರೀತಿಯ ..ಸುರುಳಿ  ಮುಂಗುರುಳೆ..!


ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ...
ನೀನಿಲ್ಲದ ಕ್ಷಣಗಳಲ್ಲಿ  ನನಗೆ ಮತ್ತಷ್ಟು ಅರಿವಾಯ್ತು...


ದಯವಿಟ್ಟು ಇಲ್ಲವೆನ್ನಬೇಡ...


ನಮ್ಮಿಬ್ಬರ ಸಂಬಂಧಕ್ಕೆ "ಸಮಯ" ಕೊಟ್ಟಿದ್ದು ಸಾಕು...
ನಾವಿಬ್ಬರೂ ಮದುವೆಯಾಗೋಣ..."


ನನ್ನ ಮೇಲ್ ಗೆ ಉತ್ತರ ಬರಲಿಲ್ಲ...


ಮತ್ತೆ ನಾಲ್ಕಾರು ದಿನಗಳ ಮೌನ...!


ಯಾವ ಸುದ್ಧಿಯೂ ಇಲ್ಲ..


ಮತ್ತೊಂದು ದಿನ ಒಂದು ಎಸ್ಸೆಮ್ಮೆಸ್ಸ್ ಬಂದಿತು...


"ಹುಡುಗಾ...
ಅಂದು ನೀನು ನನ್ನನ್ನು..
ನನ್ನ ದೇಹವನ್ನು  ಬಯಸಿದ್ದೆ...


ನೆನಪಿದೆಯಾ ?...


ಇವತ್ತು ನಮ್ಮ ಮನೆಗೆ ಬರ್ತೀಯಾ?


ಕಾಯ್ತಾ ಇರ್ತೀನಿ...
ನಿನಗಾಗಿ ..... ನಾನೊಬ್ಬಳೆ..."


ವಾಹ್.. !!
ನನಗೆ ಹಾರಿ ಕುಣಿಯಬೇಕೆನಿಸಿತು...!


ಸ್ವಲ್ಪವೂ ತಡಮಾಡದೆ ಅವಳ ಮನೆಗೆ ಓಡಿದೆ...!!


ಬಾಗಿಲು ಸಣ್ಣದಾಗಿ ತೆರೆದಿತ್ತು...


ಎದೆಯಲ್ಲಿ ಢವ ಢವ....!


ಒಂದು ಎಸ್ಸೆಮ್ಮೆಸ್ ಬಂದಿತು..


" ಹುಡುಗಾ...
ಒಳಗೆ ಬಾ..
ಅಲ್ಲಿ ಟಿಪಾಯಿಮೇಲೆ ಒಂದು ಪತ್ರವಿದೆ ದಯವಿಟ್ಟು ಓದು..."


ನಾನು ಲಗುಬಗೆಯಿಂದ ಕೈಗೆತ್ತಿಕೊಂಡೆ...


"ಹುಡುಗಾ...
ಅಂದು ನೀನು ನನ್ನನ್ನು ಬಯಸಿದ್ದೆ..
 ಆ  ಆಸೆ ಇಂದು ನನ್ನ ಆಸೆ...


ನನಗೂ ನಿನ್ನೊಡನೆ ಸೇರಬೇಕು...


ಯಾಕೆಂದರೆ ನನ್ನೊಡನೆ ಸಮಯ ಜಾಸ್ತಿ ಇಲ್ಲ...
ಹೋಗುವದೊರಳಗೆ ದಯವಿಟ್ಟು ನನ್ನ ..
ಅಂತಿಮ..
ಕೊನೆಯ ಆಸೆಯನ್ನು ನೆರವೇರಿಸು...


ಅರ್ಥ ಆಗಲಿಲ್ಲವಾ?


ನಾನು ಕ್ಯಾನ್ಸರ್ ರೋಗಿ...


ಅತ್ತು.. ಕರೆಯುವದು ಬೇಡ...
ನನ್ನ ಪಾಲಿಗೆ ಬಂದಿದ್ದು ಇಷ್ಟು... 
ಸ್ವೀಕರಿಸಿದ್ದೇನೆ...


"ಕಿಮೋಥೆರೆಪಿ" ಮಾಡಿದ್ದಾರೆ... ಅದರಿಂದ ಪ್ರಯೋಜನವಿಲ್ಲ...


ನಿನ್ನ ಅನುಕಂಪವೋ..
ಪ್ರೀತಿಯೋ.., 
ಪ್ರೇಮವೋ ನನಗೆ ಗೊತ್ತಿಲ್ಲ...!


ಹೇಗಾದರೂ ದಯವಿಟ್ಟು ಬಾ...
ಇಂದು ನನಗೆ ನೀನು ನನ್ನಾಸೆಯಾಗಿ ಬಾ...


ನನ್ನ ಸಾವು ನೆನಪಾಗಿ ..
ಇದು ನಿನ್ನಿಂದ ಅಸಾಧ್ಯ ಅಂತ ಅನ್ನಿಸಿದರೆ ಬೇಡ ಬಿಡು..


ನನಗೆ ನಿನ್ನ ನಿರಾಕರಣದಲ್ಲೂ ದೂರು ಇಲ್ಲ...


ಅಂದು ನಾನು ನಿರಾಕರಿಸಿದೆ..
ಇವತ್ತು ನೀನು...


ಇಷ್ಟವಿಲ್ಲದಿದ್ದರೆ ಹಾಗೇಯೇ ಹೊರಟು ಹೋಗು... 
ಒಳಗೆ ಬರಬೇಡ...


ನಿನ್ನನ್ನು ಬಯಸುವ ಈಗಿನ ನನ್ನ ಮನಸ್ಥಿತಿಯಲ್ಲಿ ...
ನನಗೆ ಬೇರೆ ಏನೂ ಬೇಕಿಲ್ಲ..
ನಿನ್ನ ಅನುಕಂಪದ ಮಾತೂ ಕೂಡ ಬೇಡ..


ನಿನ್ನ ಯಾವುದೇ ನಿರ್ಣಯ ನನಗೆ ಸಮ್ಮತ....


ನಿನ್ನ ಪ್ರೀತಿಯ..
ಸುರುಳಿ ಮುಂಗುರುಳು..."


ನನಗೆ ದಿಕ್ಕು ತೋಚಂದಂತಾಯಿತು...


ಏನು ಮಾಡಲಿ........?
ಏನು ಮಾಡಲಿ............?


ಅವಳನ್ನು ಮನಸಾರೆ ಪ್ರೀತಿಸುತ್ತಿರುವದಂತೂ ನಿಜ...


ಆಕೆಯ ಬದುಕಿನ ಕೊನೆಯ ಆಸೆ...!


ಪ್ರೀತಿಯ ಮುಖವೇ ಇರದ ಯಾರ್ಯಾರೋ ಸಂಗಡ ಮಲಗಿದ್ದಿದೆ...
ಹಣ ಕೊಟ್ಟು ಸುಖವನ್ನು ಅರೆಸಿದ್ದು ಇದೆ...


ಇಷ್ಟು ದಿನ ಈಕೆಯನ್ನು ಪ್ರೀತಿಸಿದ್ದೇನೆ...
ಬಯಸಿದ್ದೇನೆ..


ಅವಳ ಆಸೆಯನ್ನು ನೆರವೇರಿಸಿ ಬಿಡುವದೇ ಸೂಕ್ತ...


ಸರಿ...


ಹಾಲಿನಿಂದ ಬೆಡ್ ರೂಮಿನ ಹತ್ತಿರ ಬಂದೆ...!


ಬಾಗಿಲು ಅಲ್ಲಿಯೂ ಸಣ್ಣಗೆ ತೆರೆದಿತ್ತು...


ಒಳಗೆ ಪೂರ್ತಿಯಾಗಿ ಕತ್ತಲೆ ಇಲ್ಲದಿದ್ದರೂ..
ಯಾವುದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ...


ನಾನು ಅವಳಿದ್ದ ಹಾಸಿಗೆ ಕಡೆ ಹೋದೆ...


ಚಾದರ ಹೊದ್ದು ನನಗಾಗಿ ಕಾಯುತ್ತಿದ್ದಳು...


ಬಿಗಿದಪ್ಪಿದೆ...!!


ಮುತ್ತಿಟ್ಟೆ...!!


ಅಷ್ಟು ದಿನದಿಂದ ಕಾಯುತ್ತಿದ್ದ ..
ಆ ಕೆನ್ನೆ ..!
ಆ ಕುತ್ತಿಗೆ ಎಲ್ಲವನ್ನು ಮುತ್ತಿಡತೊಡಗಿದೆ...!


ಅವಳ ಮುಚ್ಚಿದ ಕಣ್ಣುಗಳನ್ನೊಮ್ಮೆ ನೋಡಬೇಕೆನಿಸಿತು...


ಕಿಡಕಿಯಿಂದ ಸಣ್ಣ ಬೆಳಕು ಬರುತ್ತಿತ್ತು...


ಬೊಗಸೆಯಲ್ಲಿ ಅವಳ ಮುಖ ಹಿಡಿದು ನೋಡಿದೆ...


ನನಗೆ ಆಘಾತವಾಯಿತು...!


ನಿಸ್ತೇಜ ಕಣ್ಣುಗಳು...! 
ಉದುರಿದ ತಲೆಯ ಕೂದಲು...!


ಸುಕ್ಕುಗಟ್ಟಿದ ಚರ್ಮ...!
ಕಳೆಗುಂದಿದ ಕೆನ್ನೆ...!


ನಾನು  ನನಗರಿವಿಲ್ಲದಂತೆ  ತಣ್ಣಗಾದೆ.........
ನಿಸ್ತೇಜನಾದೆ...


ಬಿಸಿಯೆಲ್ಲ ತಣ್ಣಗಾಯಿತು...


ಮಂಚದ ತುದಿಯಲ್ಲಿ ಕುಳಿತುಕೊಂಡೆ...


"ಹುಡುಗಾ ಏನಾಯ್ತು?...
ಬಾ.. ಬೇಗ..."


ಆಕೆ ಕೈ ಹಿಡಿದು ಎಳೆದಳು...


"ಹುಡುಗಿ...
ನಾನು ನಿನ್ನನ್ನು ಮನಸಾರೆ ಪ್ರೀತಿಸಿದ್ದು ನಿಜ...
ನಿನ್ನನ್ನು ...
ನಿನ್ನ ದೇಹವನ್ನೂ ಬಯಸಿದ್ದೂ ನಿಜ...


ಯಾರನ್ನಾದರೂ ...
ಯಾವ ಸ್ಥಿತಿಯಲ್ಲಾದರೂ ಪ್ರೀತಿಸಬಹುದು...


ಕಾಮ ಹಾಗಲ್ಲ ಕಣೆ...
ಇದಕ್ಕೆ ಇನ್ನೂ ಏನೇನೋ ಬೇಕು...!


ನಿನ್ನ ಆಸೆ ಈಡೇರಿಸಲು ನನ್ನಿಂದ ಆಗ್ತಾ ಇಲ್ಲ...


ದಯವಿಟ್ಟು ಕ್ಷಮಿಸು..."






( ಈ ಕಥೆಗೆ ಸುಂದರ ಪ್ರತಿಕ್ರಿಯೆಗಳಿವೆ..
ದಯವಿಟ್ಟು ಓದಿ...)

53 comments:

ಸಂಧ್ಯಾ ಶ್ರೀಧರ್ ಭಟ್ said...

ಮೊದಲ ಸಲಾಂ ಕಥೆಯ ಹೆಸರಿಗೆ. ಚಂದದ ಹೆಸರು.
ಕಥೆಯೂ ತುಂಬಾ ಚೆನ್ನಾಗಿದೆ. ಇಲ್ಲಿ ಆಸೆಯಿದೆ, ಪ್ರೀತಿಯಿದೆ, ದೈನ್ಯತೆಯ ಬೇಡಿಕೆ ಇದೆ, ಮಾನಸಿಕ ತೊಳಲಾಟವಿದೆ. ಹುಡುಗಿಯ ಮೇಲೆ ಆಸೆಯಿದ್ದರೂ ಹುಡುಗ ಸಭ್ಯತೆಯ ಎಲ್ಲೇ ಮೀರುವುದಿಲ್ಲ. ಆಕೆಯ ಒಪ್ಪಿಗೆಗಾಗಿ ಬೇಡುತ್ತಾನೆ, ಕಾಡುತ್ತಾನೆ, ಹುಡುಗಿಗೋ ಆಕೆ ಮನೆಯವರಿಂದ ದೂರವಿರುವುದರಿಂದ ಆಕೆಗೆ ದೈಹಿಕ ಸಾಂಗತ್ಯಕ್ಕಿಂತ ಮಾನಸಿಕ ಗೆಳೆತನ ಬೇಕಿರುತ್ತದೆ. ಅದನ್ನು ಅವಳು ಅವನ ಪ್ರೀತಿಯಲ್ಲಿ ಕಾಣ ಬಯಸುತ್ತಾಳೆ. ಅವಳ ಮೇಲಿರುವುದು ಆಸೆ ಎಂದುಕೊಂಡ ಹುಡುಗನಿಗೆ ಅದು ಪ್ರೀತಿ ಎಂದು ಅರ್ಥವಾಗುವುದು ಅವಳಿಲ್ಲದೆ ಕಾಡುವಾಗ.,

ಇಲ್ಲಿಯವರೆಗೂ ಒಂದೊಂದೇ ಸುರುಳಿ ಬಿಡಿಸುತ್ತ ಬರುವ ನಿಮ್ಮ ಕಥೆ ಮುಂದೆ ಮತ್ತೆ ಸುರುಳಿ ಸುತ್ತುತ್ತ ಹೋಗುತ್ತದೆ. ಅವಳು ಮತ್ತೊಮ್ಮೆ , ಅಂದು ನೀ ಬಯಸಿದ ದೇಹ ಸುಖವನ್ನು ಇಂದು ತೆಗೆದೊಕೋ ಎಂದಾಗ ಓಡಿ ಅವಳ ಮನೆಗೆ ಹೋಗುವ ಹುಡುಗ, ಕೊನೆಯಾಸೆ ಎಂಬಂತೆ ಅವನು ಬಯಸಿದ ದೇಹವನ್ನು ಅವನಿಗೆ ಅರ್ಪಿಸಲು ತಯಾರಾದ ಹುಡುಗಿ... ಅವಳ ನಿಸ್ತೇಜ ಕಣ್ಣುಗಳನ್ನು, ವಿರೂಪ ದೇಹವನ್ನು ನೋಡಿ ದೂರ ಸರಿಯುವ ಹುಡುಗ.. ಕೊನೆಗೂ ಆತ ಬಯಸಿದ್ದು ಅವಳ ಮನಸ್ಸನ್ನೋ, ದೆಹವನ್ನೋ ಅಥವಾ ಬರಿಯ ಕಾಮದಿಂದ ಸಿಗುವ ಸಂತೃಪ್ತಿಯನ್ನೋ ಎನ್ನುವುದು ಸುರುಳಿಯಾಗಿಯೇ ಉಳಿಯುತ್ತದೆ.
ಕಾಮ ದೈಹಿಕ ಅಗತ್ಯ...
ಪ್ರೀತಿ ಮಾನಸಿಕ ಅಗತ್ಯ...
ಎಂಬುದನ್ನು ಸಭ್ಯತೆಯ ಎಲ್ಲೇ ಮೀರದೆ ಸುಂದರ ಕಥೆಯಲ್ಲಿ ಚಿತ್ರಿಸಿದ್ದೀರಿ..

ಜಲನಯನ said...

ನಿಮ್ದೂಕೆ ಕಥೆದು ಇಸ್ಟೈಲ್ ನಮ್ದೂಕೆ ಮೊಹಬ್ಬತ್ ಆಗ್ಬುಟ್ಟೈತೆ...ಕ್ಯಾ ಕರ್ನಾ..ಉಡ್ಗೀದು ಕ್ಯಾನ್ಸರ್ ಕನ್ ಫರ್ಮ್ಡೂ..?? ಅರೆ ಭಾಇ...ಸ್ವಲ್ಪ ಕಂ ಸರ್ಸ್ ಆಗಿರ್ಬೇಕು...ದೇಖೋ...
ಹಹಹ ಚನ್ನಾಗಿದೆ ಪ್ರಕಾಶೂ...ಕಥೆ..ಬಿಡಿ ಬಿಡಿ ಬಿಡಿಸಿ ಬರೆಯೋ ನಿನ್ನ ಶೈಲಿ...ಸೂಪರ್...
ನಮ್ದೂಕೆ ಸಲಾಮ್...

ಮನಸು said...

ವಿಭಿನ್ನ ಶೈಲಿಯ ಕಥೆ.. ಓದಿಸಿಕೊಂಡೋಗುತ್ತದೆ

Roopa said...

ಪ್ರಕಾಶಣ್ಣ
ನಿಜಕ್ಕೂ ಓದಿಸಿಕೊಂಡು ಹೋಯ್ತು ಕಥೆ
ಕೊನೆಯಲ್ಲಿ ಕಥೆ ಹೇಳುವ ನೀತಿ ನೀತಿಯಂತಿರದೆ ವಾಸ್ತವದ ಚಿತ್ರಣವನ್ನ ಮನಕ್ಕೆ ನಾಟಿಸಿತು
ನಿಜ ಕಾಮಕ್ಕೆ ಏನೇನೋ ಬೇಕು ಆದರೆ ಪ್ರೀತಿಗೆ ಕೇವಲ ಅರಿವ ಮನಸು ಸಾಕು

ಗೆಳತಿ said...
This comment has been removed by the author.
Ittigecement said...

ಸಂಧ್ಯಾ...

ಕಾರಂತಜ್ಜನ "ಮೈಮನಗಳ ಸುಳಿಯಲ್ಲಿ" ಎನ್ನುವ ಒಂದು ಅದ್ಭುತ ಕಾದಂಬರಿ ಇದೆ...
ದೈಹಿಕ ಆಸೆ..ಪ್ರೀತಿ, ಕಾಮಗಳ ಎಳೆಯನ್ನು ಬಲು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ...

ಅದು ಮೂರು ತಲೆಮಾರುಗಳ ವೈಶ್ಯೆಯರ ಕಥೆ..
ಅಜ್ಜಿ..
ತಾಯಿ..
ಮೊಮ್ಮಗಳ ಕಥೆ...
ದೇಹ, ಮನಸ್ಸು ಕಾಮ ಇದು ಪ್ರತಿ ಕಾಲ ಘಟ್ಟದಲ್ಲೂ ಸಮಾಜವನ್ನು..
ನಮ್ಮನ್ನು ಕಾಡುವ ವಿಷಯ..

ಇಲ್ಲಿ ಹುಡುಗನಿಗೂ ಅಷ್ಟೆ...
ಅವನಿಗೆ ಬೇಕಾಗಿದ್ದು... ಬಯಸಿದ್ದು ಆಕೆಯ ದೇಹವನ್ನೋ?
ಪ್ರೀತಿಯನ್ನೋ...?

ಸರಿ ..
ಪ್ರೀತಿಸುವ ಮನಸ್ಸಿಗೆ ದೇಹದಾಸೆಯನ್ನು ತೀರಿಸುವದಕ್ಕೆ ಆಗಲಿಲ್ಲವೇಕೆ?

ಅಂತಿಮ ಆಸೆಯನ್ನು ಈಡೇರಿಸುವಾಗಲೂ "ಚಂದ" ಅಂದ" ಬೇಕು ಅಂತಾಯಿತು....

ಇದು ವಿಪರ್ಯಾಸ ಅಲ್ಲವೆ?

ಕಡೆದಷ್ಟೂ ಆಳವಾಗುವಂಥಹ ವಿಷಯ ಇದು...

ಚಂದದ ಪ್ರತಿಕ್ರಿಯೆಗೆ...
ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸು............

ಗೆಳತಿ said...

ಅಣ್ಣಯ್ಯ, ನಿಮ್ಮ ಬರವಣಿಗೆಯ ಶೈಲಿ ನನಗೆ ತುಂಬಾ ಇಷ್ಟ. ಕತೆಯಲ್ಲಿ ಪ್ರಯೋಗಿಸಲ್ಪಡುವ ಭಾವನಾತ್ಮಕ ಪದಗಳು ಸಹ ಇಷ್ಟ.

ಕಾಮ-ಪ್ರೀತಿಯ ಬಗ್ಗೆ ನನಗೆ ಗೊಂದಲಗಳಿವೆ.ಕಾಮ ಇದ್ದ ಕಡೆ ಪ್ರೀತಿ ಹುಟ್ಟುವುದಿಲ್ಲ,ಕಾಮ ಹುಟ್ಟಿದರೆ ಅದು ನಿಜವಾದ ಪ್ರೀತಿಯಲ್ಲ ಎಂದು ಕೆಲವರು ಹೇಳಿದರೆ, ಕೆಲವರು ಪ್ರೀತಿ ಇದ್ದ ಕಡೆ ಕಾಮ ಸಹಜ ಎಂದು ಹೇಳುತ್ತಾರೆ

ಇನ್ನು ಕತೆಯ ಬಗ್ಗೆ ಹೇಳಬೇಕೆಂದರೆ ನನಗೆ ಏನೂ ತೋಚುತ್ತಿಲ್ಲ.ಅದರೆಯಾವುದೇ ಬ್ಲಾಗ್ ಓದಿದರೂ ಒಂದು ಸಣ್ಣ ಪ್ರತಿಕ್ರಿಯೆಯನ್ನು ಆದರೂ ನೀಡಿ ಬರಬೇಕು ಎಂಬ ನಿಮ್ಮ ಮಾತಿನಂತೆ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ.

Ittigecement said...

ಆಜಾದೂ....

ಪ್ರೀತಿ ಇರುವಲ್ಲಿ ಕಾಮ ಹುಟ್ಟಿದರೆ ಅದು ತಪ್ಪಾ?
ಕಾಮ ಹುಟ್ಟಿದಲ್ಲಿ ಪ್ರೀತಿ ಇದ್ದಿರುವದಿಲ್ಲವಾ?

ಯಾರನ್ನಾದರೂ ಪ್ರೀತಿಸ ಬಹುದು..
ಆದರೆ ಎಲ್ಲರನ್ನೂ ಕಾಮಿಸಲಾಗದು...

ಅಷ್ಟೆಲ್ಲ ಕಾಡಿ..
ಕಾಮಿಸಿದ ..
ಬಯಸಿದ... ಪ್ರೀತಿಸಿದ.... ಹುಡುಗಿಯ ಅಂತಿಮ ಆಸೆ ಈಡೇರಿಸಲಿಕ್ಕೆ ಆಗಲಿಲ್ಲವೇಕೆ?

ವಿಪರ್ಯಾಸ ಅನ್ನಿಸಿದರೂ...
ಇದು ನಾವಿರುವ ಜಗತ್ತಿನ ಅತಿ ದೊಡ್ಡ ಕಾಡುವ ವಿಷಯ.

ಕಥೆ ಇಷ್ಟವಾಗಿದ್ದಕ್ಕೆ...
ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಮನಸು....

ಕಾರಂತಜ್ಜನ "ಮೈಮನಗಳ ಸುಳಿಯಲ್ಲಿನ" ಕಾದಂಬರಿ ಬಹಳ ಸೊಗಸಾಗಿದೆ..
ಜ್ಞಾನ ಪೀಠ ಪ್ರಶಸ್ತಿ ಅದಕ್ಕೆ ಬರಬೇಕಿತ್ತು...

ಮೂರು ತಲೆಮಾರಿನ ವೈಶ್ಯೆಯರ ಕಥೆ ಅದು...

ವಿಷಯ ಅತ್ಯಂತ ಅಶ್ಲೀಲ ಇದ್ದರೂ...
ಎಲ್ಲೂ ಅಶ್ಲೀಲತೆಯನ್ನು ಕಾಣಿಸದೆ ಬರೆದ ಅದ್ಭುತ ಕಾದಂಬರಿ ಅದು...!

ಅವರ ಬಳಿ ಯಾರೋ ಓದುಗರು ಕೇಳಿದರಂತೆ...

"ವೈಶ್ಯೆಯರ ಮನಸ್ಥಿತಿಯ ಬಗೆಗೆ ಬರೆದಿದ್ದೀರಿ...
ಅಲ್ಲಿ ಹೋಗುವರ ಮನಸ್ಥಿತಿಯ ಬಗೆಗೆ ಏನೂ ಬರೆದೆ ಇಲ್ಲವಲ್ಲ..."

ಕಾರಂತಜ್ಜನಿಗೆ ಈ ಪ್ರಶ್ನೆ ಬಹಳ ಕಾಡಿತ್ತಂತೆ..

ವೈಶ್ಯೆಯರ ಬಳಿಗೆ ಹೋಗುವವರ ಮನಸ್ಥಿಯ ಬಗೆಗೆ ಇನ್ನೊಂದು ಕಾದಂಬರಿ ಬರೆದಿದ್ದಾರೆ..
ಅದು "ಕೇವಲ ಮನುಷ್ಯರು" ಅಂತ...

ಅದನ್ನು ಓದ್ತಾ ಇದ್ದೇನೆ...

ಕಾರಂತಜ್ಜ... ನಮ್ಮ ನಾಡಿನ ಹೆಮ್ಮೆಯ ಕಾದಂಬರಿಕಾರ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Mahesh Gowda said...

annaya.........adbutavagi bardidira..... tumba ista ayithu....

konele yellaru swarthi galu..... anta tirmanakke bande nanu :)

sunaath said...

ಪ್ರಕಾಶ,
ಕೊನೆಯ ಸಾಲಿನವರೆಗೂ ಕುತೂಹಲವನ್ನು ಕಾಯ್ದುಕೊಂಡು ಹೋಗುವ ಕತೆ. ಕತೆಯ ತಿರುಳು ತುಂಬ ಚೆನ್ನಾಗಿದೆ. ಅಭಿನಂದನೆಗಳು.

Kishan said...

Excellent narration, and I liked the way you kept within the boundary of character and slightly beyond. This would happen in the real life itself and is very close to many incidents probably. Nice story woven.

Badarinath Palavalli said...

ಮೊದಲೆಯನೆದಾಗಿ ನಿಮ್ಮೊಳಗಿನ ಕಥೆಗಾರನಿಗೆ ಶರಣು...

ಇದು ಈ ನಡುವೆ ನಾನು ಓದಿಕೊಂಡ ಅತ್ಯುತ್ತಮ ಕಥೆ ಪ್ರಕಾಶಣ್ಣ.

ನವಿರಾದ ನಿರೂಪಣೆ, ಸಂಯಮದ ನಡೆ, ಸರಾಗವಾಗಿ ಓದಿಸಿಕೊಳ್ಳು ಶೈಲಿ, ತೀರಾ ಸರ್ಕಸ್ ತಂತ್ರಗಾರಿಕೆಗೆ ಬಿದ್ದು ಸಿಕ್ಕು ಸಿಕ್ಕಾದ ನೂಲೆಣೆಯದ ಕಥಾ ಹಂದರ ಮತ್ತು ಮೊದಲ ತಾಕಿಗೆ ಇದು ಪ್ರಕಾಶರದೇ ಅಕ್ಷರಗಳು ಎಂದು ತಟ್ಟನೆ ಅರಿವಾಗುವ ಪ್ರಕಾರ ಇಲ್ಲೂ ಮುಂದುವರೆದಿದೆ.

ಅದೇ ನಿಮ್ಮ ಶಕ್ತಿ.

ಗಾಳಿ ಪಟದಂತಹ ಹುಡುಗನ ಪರಧಿಗೆ ಬರುವ ವಿಲಾಯ್ತಿ ಹುಡುಗಿಯ ಈ ಕಥೆಯನ್ನು, ಕಥೆಗಾರ ಶ್ಲೀಲದ ಹೊದಿಸನ್ನು ಕಿತ್ತೆಸೆದು ಅತೀ ಶೃಂಗಾರಮಯವಾಗಿ ಬರೆದು ರೋಚಕವಾಗಿಸಿ hot sale ಸರಕಾಗಿಸಬಹುದಿತ್ತು.

ಎಲ್ಲೂ ಸಭ್ಯತೆ ಚೌಕಟ್ಟು ಮೀರದೆ ಕಡೆಯವರೆಗೂ ಕಲ್ಪನೆಯ ಓಘ ಕಾಪಾಡಿಕೊಂಡಿದ್ದೀರಿ.

ಅಂತ್ಯದಲ್ಲಿ ಕಾಪಿಟ್ಟು ಸ್ಫೋಟಿಸಿದ ದುರಂತದಲ್ಲೂ ನಿಮ್ಮ ಕಲೆಗಾರಿಕೆ ಇದೆ!

ಇದೊಂದು ಅಪ್ಪಟ ನುರಿತ ಕಥನ.

Srikanth Manjunath said...

ಸುಳಿ ಸುಳಿಯಾಗಿ ಸುತ್ತುವ "ಸುರುಳಿ"...ಇಳಿ ಇಳಿಯಾಗಿ ಸುಳಿವ ಮುಂಗುರುಳು ಎರಡು ಕೂಡ ತನ್ನ ಇರುವನ್ನ ಕುರುವನ್ನ ತೋರಿಸುತ್ತೆ..
ಕತೆಯ ಹಂದರ, ಹಾಗು ಅದರ ವಿಸ್ತಾರ ಸೊಗಸು..ಕಂಮಕ್ಕೆ ಕಣ್ಣಿಲ್ಲ ಅಂತಾರೆ..ಕಾಮಕ್ಕೆ ಭಾವನೆ ಕೂಡ ಇಲ್ಲ ಎನ್ನೋದು ಮಾತು..ಆದ್ರೆ ಕಾಮಕ್ಕೆ ಭಾವನೆ ಕೂಡ ಒಂದು ಸಲಕರಣೆ ಎಂಬ ಸಂಗತಿ ನಿಮ್ಮ ಕಥಾ ವಸ್ತುವಿನಲ್ಲಿ ಸುರುಳಿ ಸುರುಳಿ ಅನಾವರಣಗೊಂಡಿದೆ..
ಎಲ್ಲಿಯ ತನಕ ಪ್ರಾಯದ ಹುಸಿ ಸೊಕ್ಕು ಇರುತ್ತದೆಯೋ ಅಲ್ಲೆಯ ತನ ಪ್ರಪಂಚವನ್ನ ಕಿರುಬೆರಳಿನಲ್ಲಿ ಆಡಿಸಬಹುದು ಅಂತ ಅಂದುಕೊಂಡ ಹುಡುಗಿ...ಪ್ರಪಂಚದಲ್ಲಿ ಇರುವ ಸುಂದರ ವಸ್ತುಗಳು ಇರುವುದೇ ಭೋಗಕ್ಕೆ ಅನ್ನುವ ಮನಸ್ಥಿತಿಯ ಹುಡುಗ ಕಡೆಗೆ ಒಬ್ಬರಿಗೊಬ್ಬರು ಕಲಿಯುವ ಪಾಠ ಕಣ್ಣು ತೆರೆಸುತ್ತದೆ..
ಬರಿ ಬೇರೆಯವರನ್ನ ಕುಣಿಸುವುದೇ ತಾರುಣ್ಯದ ಚಾಪಲ್ಯ ಮತ್ತು ಗಮ್ಮತ್ತು ಎಂದು ತಿಳಿಯುವ ಹುಡುಗಿ ಮನಸ್ಥಿತಿ "ಖರ್ಚೆಲ್ಲ ನನ್ನದು ಹಣ ಮಾತ್ರ ನಿನ್ನದು" ಎನ್ನುವ ಮಾರ್ಮಿಕ ನುಡಿಯಲ್ಲಿ ವ್ಯಕ್ತವಾಗುತ್ತದೆ..
ಸುಂದರ ಕಥೆ...ಸುಂದರ ಅಂತ್ಯ..ಕಾಮದಾಟದಲ್ಲಿ ಸೋಲು ಇಲ್ಲ ಗೆಲುವು ಇಲ್ಲ..ಅಲ್ಲಿ ಇರೋದು ಬರಿ ಒಬ್ಬರಿಗೊಬ್ಬರ ಭಾವನಾತ್ಮಕ ಅವಶ್ಯಕತೆ...ಅದು ಇಲ್ಲ ಅಂದ್ರೆ ಅದು ಬರಿ ಒಂದು ಕ್ರಿಯೆ-ಪ್ರಕ್ರಿಯೆಗಳ ತೊಳಲಾಟ...
ಒಳ್ಳೆಯ ಲೇಖನ ಅಭಿನಂದನೆಗಳು ಪ್ರಕಾಶ್ ಜಿ !!!!

Pradeep Rao said...

ಪ್ರಕಾಶಣ್ಣಾ....

ಕಥೆಯನ್ನೂ ಓದಿದೆ.. ಪ್ರತಿಕ್ರಿಯೆಗಳನ್ನೂ ಓದಿದೆ...

ಏನು ಹೇಳಬೇಕೆಂದೇ ತೋಚುತ್ತಿಲ್ಲ..

ನಿಮ್ಮ ನಿರೂಪಣೆಯ ಶೈಲಿ ನೋಡಿ ಮೂಕನಾಗಿದ್ದೇನೆ..

ದೇಹದ ಅಗತ್ಯ ಹಾಗು ಮನಸ್ಸಿನ ಹಂಬಲಗಳ ನಡುವೆ ಇರುವ ವ್ಯತ್ಯಾಸವನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ...

ತುಂಬಾ ಚೆನ್ನಾಗಿದೆ...!!

ದಿನಕರ ಮೊಗೇರ said...

ಪ್ರಕಾಶಣ್ಣ,
ಮೂಕನಾಗಿದ್ದೇನೆ..... ನಿಮ್ಮ ಕಥೆ ಓದಿ.......ಪ್ರೀತಿಗೆ ರೂಪ ಮುಖ್ಯವೋ..... ಪ್ರೀತಿ ಜೊತೆ ಕಾಮವೂ ಅನಿವಾರ್ಯವೋ.... ಎನೂ ತಿಳಿಯುತ್ತಿಲ್ಲ...... ಮತ್ತೆ ಮೂಕನಾದೆ...... ನಿಮ್ಮ ಶೈಲಿಗೆ.... ಕಥೆ ಹೇಳುವ ಬಗೆಗೆ.... ಅದಕ್ಕೆ ಕೊಡುವ ತಿರುವಿಗೆ......

Ittigecement said...

ರೂಪಾರವರೆ...

ಈ ಹುಡುಗ ಮೊದಲು ಅವಳನ್ನು ಕಾಮಿಸಿದ್ದ...
ದಿನ ಕಳೆದಂತೆ ಅದು ಪ್ರೇಮಕ್ಕೆ ತಿರುಗಿತು...

ಅವಳನ್ನು ಮನಸಾರೆ ಇಷ್ಟಪಡತೊಡಗಿದ..

ಆ ಹುಡುಗಿಯ ಕೊನೆಯ ಆಸೆ ನೆರವೇರಿಸಲು ಇವನಿಂದ ಆಗಲಿಲ್ಲ...

ಆಸೆ ನೆರವೇರಿಸಲು ಇಷ್ಟು ದಿನದ ಪ್ರೀತಿಗೂ ಸಾಧ್ಯವಾಗಲಿಲ್ಲ...

ಈ ಕಾಮ ಬಹಳ ಕೆಟ್ಟ ಕ್ರೂರಿ ಅಲ್ಲವಾ?

ಸುಂದರ ಪ್ರತಿಕ್ರಿಯೆಗೆ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು...

ವೆಂಕಟೇಶ್ ಹೆಗಡೆ said...

ಮನ ಮುಟ್ಟುವಂತಿದೆ ಪ್ರಕಾಶಣ್ಣ ... ಹಾಗೆ ಮನದಲ್ಲಿ ಒಂದು ಸಂದೇಹ ಹುಟ್ಟಿದ್ದಂತೂ ನಿಜ ..ತುಂಬಾ ಪ್ರೀತಿಸುವವರನ್ನ ಕಾಮಿಸಲು ಸಾದ್ಯವ ?? ...... ಇಲ್ಲ ಅಲ್ಲವ ? ಅಲ್ಲಿ ದೈಹಿಕ ಕಾಮನೆಗಿಂತ ಮಾನಸಿಕ ಕಾಮನೆ ಮುಖ್ಯವಾಗಿರುತ್ತದಲ್ಲವ ?

Sathisha said...

ಪ್ರಕಾಶ್ ಅವರೇ, ಬಹಳ ದಿನಗಳಿಂದ ನಿಮ್ಮ ಮುಂದಿನ ಕಥೆಗಾಗಿ ಕಾಯ್ತಾ ಕುಳಿತ್ತಿದ್ದೆ, ಸಾರ್ಥಕವಾಯಿತು ಆ ನಿರೀಕ್ಷಣೆ. ನಿಮ್ಮ ಪ್ರತಿಯೊಂದು ಕಥೆಯೂ ಕೂಡ ಒಮ್ಮೆ ಓದಿದರೆ ತುಂಬಾ ದಿನಗಳ ತನಕ ಹಾಗೆಯೇ ಕೊರೆಯುತ್ತ ಇರುತ್ತದೆ. ಮನುಷ್ಯರ ನಡುವಿನ ಭಾವನೆಗಳ ಸಂಘರ್ಷವನ್ನು ತುಂಬಾ ಚೆನ್ನಾಗಿ ಸರಳವಾಗಿ ನಿರೂಪಿಸುವ ನಿಮ್ಮ ಶೈಲಿ ತುಂಬಾ ಅಪರೂಪ. ಪ್ರೀತಿ ಕಾಮಗಳಿಗೆ ಒಬ್ಬೊಬ್ಬರದು ಒಂದೊಂದು ತರದ ವ್ಯಾಖ್ಯಾನ, ಅವರವರ ಅನುಕೂಲಕ್ಕೆ ತಕ್ಕ ಹಾಗೆ. ಕೆಲವರಿಗೆ ಪ್ರೀತಿ ಇದ್ದಲ್ಲಿ ಕಾಮ, ಕೆಲವರಿಗೆ ಕಾಮವಿದ್ದಲ್ಲಿ ಪ್ರೀತಿ, ಇನ್ನು ಕೆಲವರಿಗೆ ಎರಡರದ್ದು ಬೇರೆ ಬೇರೆ ಹಾದಿ. ಮೊದಲು ಕಾಮದಲ್ಲಿ ಪ್ರೀತಿ ಕಂಡವ, ಕೊನೆಗೆ ಪ್ರೀತಿಯಲ್ಲಿ ಕಾಮವನ್ನು ಕಾಣದಾದ. ಅವನು ನಿಜವಾಗಿ ಅವಳನ್ನು ಪ್ರೀತಿಸಿದ್ದನೋ, ಅಥವಾ ಕಾಮವೇ ಪ್ರೀತಿಯಾಗಿ ಬದಲಾಗಿ, ಕೊನೆಗವಳ ನಿಜ ಸ್ಥಿತಿ ನೋಡಿ ಪ್ರೀತಿ ಅನುಕಂಪವಾಗಿ, ಕಾಮಿಸಲು ವಿಫಲನಾದನೋ ತಿಳಿಯಲಿಲ್ಲ.

Ittigecement said...

ಗೆಳತಿಯವರೆ...

ಅಷ್ಟೆಲ್ಲ ದಿನಗಳಿಂದ ಆ ಹುಡುಗಿಯನ್ನು ಮನಸ್ಸಿಗೆ ಹಚ್ಚಿಕೊಂಡು..
ಅವಳಂದವನ್ನು ಮನಸಾರೆ ಅನುಭವಿಸುತ್ತ...
ಆಕೆಯನ್ನು ಬಯಸುತ್ತ..
ಪ್ರೀತಿಸುತ್ತ...
ಕೊನೆಯಲ್ಲಿ ಆಕೆಯನ್ನು ಮದುವೆಯಾಗಿ.. ಬಾಳಸಂಗಾತಿಯನ್ನಾಗಿ ಪಡೆಯುವ ಆಸೆ ಇರುವ ಆ ಹುಡುಗನಿಗೆ

ಆ ಹುಡುಗಿಯ ಕೊನೆಯ ಆಸೆಯನ್ನು ನೆರವೇರಿಸಲು ಸಾಧ್ಯವಾಗಲಿಲ್ಲ..!

ಮನಸ್ಸು ಎಂಥಹ ವಿಚಿತ್ರ ಅಲ್ಲವಾ?

ಅಂಥಹ ಸಂದರ್ಭದಲ್ಲೂ ಅದಕ್ಕೆ "ಚಂದ" ಬೇಕು !!!!!!!

ಏನಿದು ಕಾಮ?

ಮನಸ್ಸಿನಲ್ಲಿ ಹುಡುಗಿಯ ಆಸೆಯನ್ನು ನೆರವೇರಿಸಬೇಕೆಂಬ ಆಸೆ ಬಹಳ ಇದ್ದರೂ ದೇಹ ಸಹಕರಿಸುತ್ತಿಲ್ಲವೆ?

ಏನಿದು ಕಾಮ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ..ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರೀತಿಯ ಮಹೇಶು....

ನಿಜ ಎಲ್ಲರೂ ಸ್ವಾರ್ಥಿಗಳು...

ಹುಡುಗ ಆಕೆಯ ಅಂತಿಮ ಆಸೆಯನ್ನು ನೆರವೇರಸಲಿಕ್ಕೆ ಹೊರಟಿದ್ದ...
ಆಗಲಿಲ್ಲ...

ಕಾಮವೋ...
ಪ್ರೇಮವೋ ಆ ಹುಡುಗಿಯ ಆಸೆ ಈಡೇರಿಸಲಾಗದಷ್ಟು ಕ್ರೂರಿಯೇ?

ಅಲ್ಲಿ ಮಾನವೀಯತೆಯೂ ಇಲ್ಲ ಅಂತ ಆಯ್ತಲ್ಲ...

ವಿಚಿತ್ರ.. ವಿಪರ್ಯಾಸ..
ಒಂದುರೀತಿಯಲ್ಲಿ ಸೋಜಿಗವೂ ಹೌದು ಅಲ್ಲವೆ?

ಕಥೆಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಜೈ ಹೋ !

umesh desai said...

ಹೆಗಡೇಜಿ ಕತೆಚೆನ್ನಾಗಿದೆ..ನಿಮ್ಮೊಳಗಿರುವ ಕತೆಗಾರಿಕೆಗೆ ಶರಣು..
ಅಂತ್ಯದ ವರೆಗೂ ಸುಳಿವು ಬಿಟ್ಟುಕೊಡದ ಕತೆ ಕೊನೆಯಲ್ಲಿ ನಾಯಕ ಹೇಳುವ ಮಾತು ಸತ್ಯ

Ittigecement said...

ಸುನಾಥ ಸರ್...

ಅಷ್ಟೆಲ್ಲ ದಿನ ಬಯಸಿ..
ಹಂಬಲಿಸಿ.. ಪ್ರೀತಿಸಿದ ಹುಡುಗಿಯ ಕೊನೆ ಆಸೆ ಈಡೇರಿಸಲಾಗಲಿಲ್ಲ..

ಅವನಿಗೆ ಮನಸ್ಸಿತ್ತು...

ಮನಸ್ಸಿನ ಮಾತು "ದೇಹ" ಕೇಳಲಿಲ್ಲವೆ?

ಮನಸ್ಸೇ ಬೇರೆ...
ದೇಹವೇ ಬೇರೆ....

ಸರ್....
ಕಥೆಯನ್ನು ಇಷ್ಟಪಟ್ಟು..
ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಪ್ರತಿಕ್ರಿಯೆಗಳು ಟಾನಿಕ್ ಥರಹ..
ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತವೆ...

ಕಾವ್ಯಾ ಕಾಶ್ಯಪ್ said...

ಕಾಮದಾಟದಲ್ಲಿ ಯಾರೋ ಒಬ್ಬರು ಸೋಲುತ್ತಾರೆ..
ಯಾರೋ ಒಬ್ಬರು ಗೆಲ್ಲುತ್ತಾರೆ..
ಇದನ್ನು ಹೇಳಲು ಭಾವನತ್ಮಕಾವಾಗಿ ಬೆಸೆದುಕೊಂಡ ಮನಸ್ಸಿನಿಂದ ಸಾಧ್ಯವೇ...!? ಇಬ್ಬರೂ ಮಾನಸಿಕವಾಗಿ, ದೈಹಿಕವಾಗಿ ತೃಪ್ತಿ ಪಡುವಲ್ಲಿ ಮಾತ್ರ ಪ್ರೀತಿ ಇರುತ್ತದೆ ಎನ್ನುವುದು ನನ್ನ ಅಭಿಮತ.... ಈ ಕಥಾ ಹಂದರದಲ್ಲಿ ಇಬ್ಬರದು ದೈಹಿಕ ತೃಷೆಯೇ ಕಾಣುತ್ತದೆಯೇ ವಿನಃ, ಇಬ್ಬರಿಂದಲೂ ಪ್ರೀತಿಯ ಹುಡುಕಾಟಕ್ಕೆ ನ್ಯಾಯ ಒದಗಿಸಲು ಆಗಿಲ್ಲ... ಹುಡುಗನ ಮನಸ್ಸು ಕಾಮದ ಸುತ್ತಲೇ ಸುತ್ತುತ್ತಿದೆ ಎನ್ನುವುದನ್ನು ಚೆನ್ನಾಗಿ ಬಿಡಿಸಿದ್ದೀರ... ಕೊನೆಗೂ ಅವನ ಪ್ರೀತಿ ಹುಸಿಯಾಗಿ ಕಾಮವೇ ಮೇಲುಗೈ ಸಾಧಿಸಿದ್ದರಿಂದ ಅವಳ ಕೊನೆಯ ಆಸೆಯನ್ನು ಈಡೇರಿಸುವಲ್ಲಿ ವಿಫಲಗುತ್ತಾನೆ.... ಇನ್ನು ಹುಡುಗಿಯ ಗೆಳೆತನ, ದೈಹಿಕ ವಾಂಛೆಗಳ ಮಧ್ಯೆ ಪ್ರೀತಿಯ ಹುಡುಕಾಟ, ಕೊನೆಗೂ ಪ್ರೀತಿಯನ್ನು ಹಿಮ್ಮೆಟ್ಟಿ ಕಾಮದ ಪ್ರೇರೇಪಣೆ ಮಾರ್ಮಿಕವಾಗಿ ಮೂಡಿ ಬಂದಿದೆ....
ಪ್ರಕಾಶಣ್ಣ ನಿಮ್ಮ ವಿಶಿಷ್ಟ ಶೈಲಿಯ ಬರಹಕ್ಕೆ ಮತ್ತೊಮ್ಮೆ ಜೈ ಹೋ....

ಬಿಸಿಲು ಬೆಳದಿಂಗಳ ಹುಡುಗಿ.. said...

ಮೂಕವಿಸ್ಮಿತನಾದೆ...!!!
ನೇರಾನೇರ ಮಾತುಗಳು ಮನಮುಟ್ಟಿತು...!!
ಅಂತ್ಯ ಮನ ಕಲಕಿತು....!!!
ಆಸೆ ಸ್ವಾರ್ಥ,, ಪ್ರೀತಿ ನಿಸ್ವಾರ್ಥ..!!
ಅವಳು ಬಯಸಿದ್ದು ನಿಜವಾದ ಪ್ರೀತಿಯೇ ಆಗಿದ್ದರೆ
ಅಂತ್ಯದಲ್ಲಿ ಅವಳು ಬಯಸುತ್ತಿದ್ದದ್ದು ಅತ್ಮೀಯ ಮಾತುಗಳನ್ನೇ ಹೊರತು... ತನ್ನಾಸೆಯ ವ್ಯಕ್ತಪಡಿಸುವಿಕೆಯಲ್ಲ...!
ಮೊದಲು ಹುಡುಗನಿಗೆ ಹುಟ್ಟಿದ್ದು ಕಾಮದಿಂದ ಪ್ರೇಮ..
ನಂತರ ಹುಡುಗಿಗೆ ಹುಟ್ಟಿದ್ದು ಪ್ರೇಮದಿಂದ ಕಾಮ..!
ಕೊನೆಗೆ ಕಾಮ ಸತ್ತಿತ್ತು,, ಪ್ರೀತಿ ಗೆದ್ದಿತು..!

ಬಿಸಿಲು ಬೆಳದಿಂಗಳ ಹುಡುಗಿ.. said...

ಮೂಕವಿಸ್ಮಿತನಾದೆ...!!!
ನೇರಾನೇರ ಮಾತುಗಳು ಮನಮುಟ್ಟಿತು...!!
ಅಂತ್ಯ ಮನ ಕಲಕಿತು....!!!
ಆಸೆ ಸ್ವಾರ್ಥ,, ಪ್ರೀತಿ ನಿಸ್ವಾರ್ಥ..!!
ಅವಳು ಬಯಸಿದ್ದು ನಿಜವಾದ ಪ್ರೀತಿಯೇ ಆಗಿದ್ದರೆ
ಅಂತ್ಯದಲ್ಲಿ ಅವಳು ಬಯಸುತ್ತಿದ್ದದ್ದು ಅತ್ಮೀಯ ಮಾತುಗಳನ್ನೇ ಹೊರತು... ತನ್ನಾಸೆಯ ವ್ಯಕ್ತಪಡಿಸುವಿಕೆಯಲ್ಲ...!
ಮೊದಲು ಹುಡುಗನಿಗೆ ಹುಟ್ಟಿದ್ದು ಕಾಮದಿಂದ ಪ್ರೇಮ..
ನಂತರ ಹುಡುಗಿಗೆ ಹುಟ್ಟಿದ್ದು ಪ್ರೇಮದಿಂದ ಕಾಮ..!
ಕೊನೆಗೆ ಕಾಮ ಸತ್ತಿತ್ತು,, ಪ್ರೀತಿ ಗೆದ್ದಿತು..!

ಶ್ರೀನಿಧಿ.ಡಿ.ಎಸ್ said...

ಒಳ್ಳೆ ಕಥೆ. ಇಷ್ಟ ಆತು.

ಸುಮ said...

ಪ್ರಕಾಶಣ್ಣ ಆದಷ್ಟು ಬೇಗ ನಿನ್ನ ಕಥೆಗಳೆಲ್ಲವನ್ನೂ ಒಳಗೊಂಡ ಕತಾಸಂಕಲನ ಹೊರಬರಲಿ. ಮಾನವನ ಸಹಜ ಭಾವನೆಗಳನ್ನ ಅದ್ಭುತವಾಗಿ ಬಿಂಬಿಸುವ ನಿನ್ನ ಕತೆಗಳ ಫ್ಯಾನ್ ನಾನು :)

shubha hegde said...

U have excellent skill in writing,story or poem whatever it may be.Once a reader peek in to the page u carried them to core of the story with in a minute however they could not return easily. i mean 'very easy to taste than to digest' because your story ended with 'Question' without answer ur idea is good there is an invitation to discuss.Each and every story there is a good message....so... keep writing.. nice story..

vandana shigehalli said...

ಸುಂದರ ಕತೆ , ಸಂಬಂಧ ಗಳನ್ನ ಬಿಡಿಸಿ ಮತ್ತೆ ಮತ್ತೆ ನೆನಪಿಸುವ ಹಂದರಗಳು
ಎಲ್ಲೋ ಕತೆ ಬಿಚ್ಚಿ ಕೊಳ್ಳುತ್ತೆ ಅನ್ನುವಾಗ ಸುತ್ತಿಕೊಳ್ಳುವ ಮತ್ತೆಲ್ಲೋ ಅನಾವರನಾವರಣ
ಗೊಂಡಿತು , ಪ್ರೀತಿ ಯಾಕೆ ಬರೇ ಕಾಮ ದಲ್ಲಿ ಕೊನೆಯಾಗ ಬೇಕು ಅನ್ನುವದು ನಾವೇ ಮಾಡಿಕೊಂಡ ನಿಯಮವ
ಅನ್ನಿಸಿ ಬಿಟ್ಟಿತು , ಆದ್ರೆ ಎಲ್ಲೋ ಒಂದು ಕಡೆ ಇದು ಬದುಕಿನ ಸತ್ಯ ಕೂಡ ಅಲ್ಲವ ?
ವಿಚಾರ ಮಾಡುವಂತೆ ಮಾಡಿತು ಕತೆ ....
ಒಟ್ಟಿನಲ್ಲಿ ಸುಂಧರ ಕತೆ ಪ್ರಕಾಶಣ್ಣ ..........

Jayalaxmi said...

ಓದುಗರೊಂದಿಗೆ ಕತೆಗಾರನಿಗೂ ಅಂತ್ಯ ಒಗಟಾಗಿ ಕಾಡುತ್ತಿರುವುದು ಕಂಡು ಖುಷಿಯಾಯ್ತು. ನಿಜ ಪ್ರಕಾಶ್, ನಿಮ್ಮ ಕತೆಯ ಜೊತೆಗೆ ಕಮೆಂಟುಗಳೂ ಸಹ ಯಾವತ್ತಿನಂತೆ ಇವತ್ತೂ ಸ್ವಾರಸ್ಯಕರ. :)

Ittigecement said...

ಕಿಶನ್ ಜಿ....

ಪ್ರೀತಿಯ ಗೆಳತಿಯ ಕೊನೆಯ ಆಸೆ ನೆರವೇರಿಸುವ ಸಮಯದಲ್ಲೂ ಮನಸ್ಸು "ಅಂದ, ಚಂದ" ಬಯಸ್ತಾ ಇದೆಯಲ್ಲ.. !

ಎಷ್ಟು ಸ್ವಾರ್ಥಿ ಈ ಮನಸ್ಸು...
ಈ ಕೆಟ್ಟ ಮಿದುಳು !

ತಾನು... ತನ್ನದು... ತನ್ನ ಸಂತೋಷ...
ಇದೇ ತುಂಬ ಮಹತ್ವ ಅಂದಾಯ್ತಲ್ಲ.. !

ಕೆಲವೊಮ್ಮೆ ನಮ್ಮ ಮನಸ್ಸುಗಳ ನಿರ್ಧಾರಗಳ ಬಗೆಗೆ ನಮಗೇ ರೇಜಿಗೆ ಹುಟ್ಟಿಸುತ್ತದೆ ಅಲ್ವಾ?

ಕಥೆಯನ್ನು ಚಿಕ್ಕದಾಗಿ ಚೊಕ್ಕವಾಗಿ ವಿಮರ್ಶಿಸಿದ್ದಕ್ಕೆ...
ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ನಿಮ್ಮೆಲ್ಲರ ಪ್ರತಿಕ್ರಿಯೆ ಟಾನಿಕ್ ಥರಹ....
ಬರೆಯಲು ಉತ್ಸಾಹ ಕೊಡುತ್ತದೆ...

ಸಾಗರದಾಚೆಯ ಇಂಚರ said...

Anna,

sundar kathe, katheya shaili,

vishaya sangrahane,

manasika dvandva,

mansika tolalaata,

ellavoo jiddige biddu spardhegilidante ive

Great style

ಸೀತಾರಾಮ. ಕೆ. / SITARAM.K said...

ಬಹಳ ಹಿಂದೆ ಓದಿದ್ದ ಮಿತ್ರ ವಾಮನನ ಪದ್ಯದ ಸಾಲುಗಳು ಕಥೆ ಓದುತ್ತಿದ್ದಂತೆ ತಟ್ಟನೆ ನೆನಪಿಗೆ ಬಂದವು
"ನಿನ್ನ ನಾನು ಮೆಚ್ಚಲಿಲ್ಲ ಕಾಮಕಾಗಿ ಎಂದಿಗೂ....
ಕಾಮವೆಂದು ಪ್ರೇಮವಲ್ಲ....
ಪ್ರೇಮ ಕಾಮ ಮಿಳಿತವು......"
ಈ ಸಾಲು ನಿಮ್ಮ ಕಥೆಗೆ ತುಂಬಾ ಪ್ರಸ್ತುತವೆನಿಸಿತು...
ಕಾಮವೆಂದು ಪ್ರೇಮವಾಗದು...ಆದರೆ ಪ್ರೇಮದಿಂದ ಕಾಮ ಪ್ರಸ್ತುತ ಮತ್ತು ಉನ್ನತ"
ನಿಮ್ಮ ಕಥೆ ಇನ್ನು ಒಂದು ಹಂತದ ಮೇಲಿನ ಚರ್ಚೆಗೆ ಒಡ್ಡುತ್ತದೆ... ಅದೇ ಕಾಮಕ್ಕೆ ಅಂದ ಚೆಂದ ಅವಶ್ಯವೇ?
ಕಾಮಕ್ಕೆ ಕನ್ನಿಲ್ಲಾ ಅನ್ನುವದು ಏಕೆ ಹಾಗಾದರೆ?

ಸೀತಾರಾಮ. ಕೆ. / SITARAM.K said...

ಅದ್ಭುತ ಕಥೆ ಮತ್ತು ಕಥೆಗಾರಿಕೆ

Ittigecement said...

ಬದರಿ ಸರ್...

ಈ ಕಥಾವಸ್ತುವನ್ನು ನಮ್ಮನೆಯಲ್ಲಿ ಹೇಳಿದಾಗ ನನ್ನಾಕೆ "ಇಂಥಾದ್ದೆಲ್ಲ ಕಥೆ ಬರೆಯಬೇಡಿ" ಎಂದು ಆಗ್ರಹಿಸಿದ್ದರು..
ಏನು ಮಾಡಲಿ..? ಇದು ಚಟ.. !
ಊಟ ಬಿಟ್ಟರೂ ಚಟ ಬಿಡಲಾಗುವದಿಲ್ಲವಲ್ಲ... !

ಬರೆದ ಮೇಲೆ ಒಂದೆರಡು ಸ್ನೇಹಿತರಿಗೆ ಕಳುಹಿಸಿ ಕೊಟ್ಟೆ...
ಅವರು "ಚೆನ್ನಾಗಿದೆ... ಆದರೆ ಬ್ಲಾಗಿನಲ್ಲಿ ಹಾಕುವದಕ್ಕಿಂತ ಪತ್ರಿಕೆಗೆ ಕಳುಹಿಸಿ" ಅಂತ ಸಲಹೆ ಕೊಟ್ಟರು..

ಪತ್ರಿಕೆಗಳಲ್ಲಿ ಬರುವಷ್ಟು ಯೋಗ್ಯತೆ ನನ್ನ ಕಥೆಗಳಿವೆಯಾ?
ನನಗಂತೂ ಅನುಮಾನವಿದೆ...

ಕೊನೆಗೆ ಧೈರ್ಯ ಮಾಡಿ ಬ್ಲಾಗಿನಲ್ಲೇ ಹಾಕಿದೆ..

ಪ್ರತಿಕ್ರಿಯೆಗಳು ಅಷ್ಟಾಗಿ ಬರಲಿಲ್ಲ..
ಆದರೆ "ಲೈಕ್"ಗಳು ಯಥೇಚ್ಚವಾಗಿ ಬಂದವು...!
ಬ್ಲಾಗಿನಲ್ಲೂ ಮತ್ತು ಫೇಸ್ ಬುಕ್ಕಿನಲ್ಲೂ...

ಇಂಥಹ ವಿಷಯದ ಕಥೆಗೆ ಹೆಣ್ಣುಮಕ್ಕಳು ಹೆಚ್ಚಾಗಿ ಪ್ರತಿಕ್ರಿಯೆ ಕೊಟ್ಟಿದ್ದು ಇನ್ನಷ್ಟು ಖುಷಿ ಕೊಟ್ಟಿತು..

ಬದರಿ ಸರ್...
ಪ್ರೀತಿ.. ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...

ಜೈ ಹೋ !

ಆಸು ಹೆಗ್ಡೆ said...

ಮನ ಮುಟ್ಟುವ ಕತೆ, ಕವನ, ಬರಹಗಳನ್ನು ಓದಿದಾಗ ನನ್ನ ಮೊದಲ ಪ್ರತಿಕ್ರಿಯೆ ಗಂಭೀರ ಮೌನ. ನಿಜ. ಅದಷ್ಟು ಹೊತ್ತು ಮೌನವಾಗಿ ಅನುಭವಿಸಿದೆ, ಆನಂದಿಸಿದೆ.
ಸತ್ಯ ಅನ್ನುವುದು ಎಷ್ಟು ಕಠೋರ ಅಲ್ವೇ?
ಅದನ್ನು ಒಪ್ಪಿಕೊಳ್ಳುವುದು ಎಷ್ಟು ಕಷ್ಟವೋ ವಿವರಿಸುವುದೂ ಅಷ್ಟೇ ಕಷ್ಟ ಎಂದು ತಿಳಿದಿದ್ದೆ. ಆದರೆ ತಾವು ಸುಲಲಿತವಾಗಿ ಬಿಡಿಸಿಟ್ಟಿರುವ ಹಾಗಿದೆ.
ತಮಗೊಂದು ಸಲ್ಯೂಟ್... ನನ್ನ ವಾಯುಸೇನೆಯ ಸಲ್ಯೂಟ್!

Karnataka Best said...

ದುರಂತ ಅಂತ್ಯ ಬೇಜಾರು. ಶೈಲಿ ನಿರೂಪಣೆ ಸೂಪರ್. ಕಥೆ ಏನೋ ಹೇಳ್ತಾ ಇದೆ ಅನಿಸ್ತಾ ಇದೆ. ಏನಂತ ಯೋಚಿಸ್ತಾ ಇದ್ದೇನೆ :-)

jaiganesh said...

ಮಾರ್ಮಿಕವಾದ ಕಥೆ........ಅದ್ಭುತವಾದ ನಿರೂಪಣೆ...
"ಆಸೆಯ ಹುಡುಗ......ಚಂದದ ಹುಡುಗಿ"....ಸೂಪರ್....:-)

Soumya. Bhagwat said...

ಪ್ರೀತಿ-ಕಾಮ.ಮೈ-ಮನ ... ಭಾರತೀಯ ಪರಂಪರೆಯಲ್ಲಿ ಒಂದು ಬಿಡಿಸಲಾಗದ ಒಗಟೇ. ! ಮಾರ್ಮಿಕವಾದ ಕಥೆ ಪ್ರಕಾಶಣ್ಣ. ಶೈಲಿ ಚೆಂದ ಉಂಟು. ಕಾರಂತರ ಮೈಮನಗಳ ಸುಳಿಯಲ್ಲಿ ನೆನಪಿಸುವ ಕಥೆ. 'ಸುರುಳಿ ' ತಲೆಬರಹ ಕೂಡ ಇಷ್ಟವಾಯಿತು.

Nagaraja Somayaji said...

katheya dari thumba chanagide sir :)

Dr.D.T.Krishna Murthy. said...

ಚೆಂದದ ಕಥೆ.ಮನುಷ್ಯನ ಮನಸ್ಸಿನ,ಕಾಮನೆಗಳ ವಿರಾಟ್ ರೂಪ ಅನಾವರಣ ಗೊಂಡಿದೆ!ಅಭಿನಂದನೆಗಳು.ನಮಸ್ಕಾರ.

Sulatha Shetty said...

Chennagide Prakashanna:)

chetana said...

ಒಂದು ದೃಷ್ಟಾಂತ ಕಥೆಯ ನೆನಪಾಯ್ತು. ಇವತ್ತಿನ ಮನಸುಗಳಿಗೆ ಅರ್ಥವಾಗೋ ಹಾಗೆ ಚೆಂದ ಬರ್ದಿದೀರಿ. ಮೊದಲ ಪ್ಯಾರಾಗಳನ್ನ ಕವಿತೆ ಹಾಗೆ ಓದ್ಕೊಂಡೆ.
nimma baraha OdOdu yaavattiguu khushie :-)
~ CheT

ಚಿನ್ಮಯ ಭಟ್ said...

ಪ್ರಕಾಶಣ್ಣ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲಾ...ನಿರೂಪಣೆ ತುಂಬಾ ತುಂಬಾ ತುಂಬಾ ಚೆನಾಗಿದೆ..ಬಹುಷಃ ನನ್ನ ಕೈಲೇ ಈ ಕಥೆಯನ್ನು ಹೇಳು ಅಂದಿದ್ರೆ,"ಒಬ್ಬ ಹುಡುಗ ಎಂದು ಹುಡುಗಿಯನ್ನು ಬಯಸುತ್ತಾನೆ,ಅವಳು ಅವನನ್ನು ತಿರಸ್ಕರಿಸುತ್ತಾಳೆ..ಆದರೂ ಸ್ನೇಹ ಮುಂದುವರೆಯುತ್ತದೆ,ಕೊನೆಗೆ ಹುಡುಗಿಗೆ ಖಾಯಿಲೆ ಬರುತ್ತದೆ,ಆಗ ಆಕೆ ಆತನನ್ನು ಬಯಸಿದರೆ,ಆತ ಆಕೆಯನ್ನು ಒಪ್ಪಿ ಕೊಳ್ಳುವುದಿಲ್ಲ" ಇಷ್ಟೇ ಹೇಳುತ್ತಿದ್ದನೇನೋ...ಆದರೆ ಆ ಸಂದರ್ಭಗಳನ್ನು ಪೋಣಿಸಿರುವ ರೀತಿ ನನಗಂತೂ ಮಾದರಿಯಾಗಿದೆ..ಧನ್ಯವಾದಗಳು.

ಇಂತಹ ಒಂದು ಮೇಲುಸ್ತರದ ಬ್ಲಾಗಿನಲ್ಲಿ ನಾನು ಈ
ರೀತಿ ಹೇಳುವುದು ಸರಿಯೋ ತಪ್ಪೋ ಗೊತ್ತಿಲ್ಲ,ಆದರೂ ಕರೆಯುತ್ತಿದ್ದೇನೆ, ಬನ್ನಿ ನಮ್ಮನೆಗೆ,ನನ್ನ ತಪ್ಪುಗಳನ್ನು ದಯವಿಟ್ಟು ತಿಳಿಸಿ ..
http://chinmaysbhat.blogspot.com/

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್

bilimugilu said...

ಪ್ರಕಾಶ್ ಜಿ,
ಏನು ಹೇಳೋದು! ನಿಮ್ಮ ಬರವಣಿಗೆ ನಮಗಿಷ್ಟ.
ಸೂಕ್ಷ್ಮ ವಿಷಯಗಳು ನಿರಾಳವಾಗಿ ಹೇಳಿಕೊಂಡು ಹೋಗಿದೀರಿ. Close to reality.
ಯಾರನ್ನಾದರೂ ಪ್ರೀತಿಸ ಬಹುದು...ಆದರೆ ಎಲ್ಲರನ್ನೂ ಕಾಮಿಸಲಾಗದು...ಅನ್ನುವ ನಿಮ್ಮ ಮಾತು very intellectual.
ಪ್ರತಿಕ್ರಿಯೆಗಳು ಸಹ very interesting.
ಕಾರಂತರ ಕಥೆಗಳನ್ನು ಓದುವ ಹಂಬಲ ಹೆಚ್ಚಾಗಿದೆ..... !

RAMU said...

ಕಥೆ ಓದಿಸಿಕೊಂಡು ಹೋದರೆ ಸಾಕು... ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕಹಾಗೆ....
ಪ್ರೀತಿ ಮತ್ತು ಕಾಮದ ಮೌಲ್ಯದ ಜೊತೆಗೆ ಕಾಯುವಿಕೆಯನ್ನು ನವಿರಾಗಿ ಹೇಳಿದ್ದಿರಿ...
ಬಹಳ ಇಷ್ಟ ಪಟ್ಟಿದ್ದೇನೆ...

--
RAMU M
9480427376

prashasti said...

ಸೂಪರ್ರಾಗಿದೆ .. ಉಪೇಂದ್ರನ ಒಂದು ಸಿನಿಮಾದಲ್ಲಿ ಆತ ನಾಯಕಿಗೆ ಹೇಳುತ್ತಾನೆ. ನೀನು ಇಷ್ಟಪಡೋದು ನನ್ನನ್ನಲ್ಲ, ಈ ವೇಷ, ಆಸ್ತಿ, ದುಡ್ಡನ್ನ. ಈ ಭಿಕಾರಿಯನ್ನ ಪ್ರೀತಿಸು ನೋಡೋಣ ಅಂತ ಒಬ್ಬ ಕೊಳಕಾದ ಭಿಕ್ಷುಕನನ್ನ ತೋರಿಸುತ್ತಾನೆ. ಆ ಸನ್ನಿವೇಶ ನೆನಪಾಯಿತು ಇದನ್ನು ಓದುತ್ತೋದುತ್ತಾ. ಪ್ರೀತಿಯೆಂಬ ಭಾವ ನಂತರ ಕಾಮಕ್ಕೆ ತಿರುಗಿ ನಂತರ ಪಶ್ಚಾತ್ತಪದಲ್ಲೋ, ವಾಸ್ತವದ ಅರಿವಲ್ಲೋ ಕೊನೆಗೊಳ್ಳುವ ಪರಿ, ಅದನ್ನು ನೀವು ಬರೆದಿರುವ ರೀತಿ , ಎಲ್ಲಾ ಚೆನ್ನಾಗಿದೆ ಅಣ್ಣ :-)

Poorvi said...

ಕತೆ ಓದಿದ ಮೇಲೆ,ಚಿಂತನೆಗೆ ಹಚ್ಚಿಸುವುದು,ಹುಡುಗನ ಕಾಮಾನಾಟದ ಬಯಕೆ.
ಹೃದಯಕ್ಕೆ ಹತ್ತಿರವಾದ ಕತೆ,ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯ್ತು..!
ಓದುಗರನ್ನ ಹಿಡಿಡುವ ಕಲೆ ಚೆನ್ನಾಗಿ ಕರಗತವಾಗಿದೆ ನಿಮಗೆ...!ಹುಡುಗಿ,ಹುಡುಗ ನಡುವಿನ ಮಾತು ಕತೆ ನಾ ಚೆನ್ನಾಗಿ
ಬಿಡಿಸಿದ್ದೀರ..!

Rajottara said...

ಕಥೆಯ ಆರಂಭದಲ್ಲಿನ ಲವಲವಿಕೆ ಮನಸ್ಸಿಗೆ ಮುದ ನೀಡುತ್ತೆ ಹಾಗೆಯೇ ಕತೆಯ ಅಂತಿಮ ನಿಸ್ತೇಜ ಭಾವ ಮೂಡಿಸುತ್ತೆ, ಆದರೆ ಅದೇನೋ ಕತೆಯ ಮಧ್ಯ ಭಾಗದಲ್ಲೇ ಇದರ ಅಂತ್ಯ ಹೀಗೆ ಇರುತ್ತದೆಂದು ಅನಿಸಿ ಬಿಡುತ್ತದೆ - ಬಹುಷಃ ನೈತಿಕ ಮೌಲ್ಯವನ್ನು ಸೂಚಿಸಲು ಹೊರಡುವ ಎಲ್ಲ ಕತೆಗಳು ಹೀಗೆ ಏನೋ!! ಎಲ್ಲರಂತೆ ಮಾಮೂಲಿ ಕತೆ ಹೇಳದೆ ಮತ್ತೇನೋ ಚಿಂತನೆ ಹುಟ್ಟಿಸೋ ನಿಮ್ಮ ಕತೆಗಳಲ್ಲಿನ ಆ punch ಇಲ್ಲಿ ಕಾಣಲಿಲ್ಲ.

ಗುಡಸಿ ದುನಿಯಾ said...

ತುಂಬಾ ಚೆನ್ನಾಗಿದೆ. ಕರೆಂಟ್ ಹೋಗಿದೆ. ಸೊಳ್ಳೆ ಸಿಕ್ಕಾಪಟ್ಟೆ ಕಡಿತಾ ಇದ್ದರೂ ನಾನು ಗಮನ ಕೊಡಲಿಲ್ಲ. ಸ್ಟೋರಿ ಓದಿಸಿಕೊಂಡೇ ಹೋಯಿತು.

tullugara said...

sir thumba chanagide ee kate . kamave yela alla anta ondu vibinaritiyali helidiri thumba tqsssssss

Sandhya Rao said...

Very nice story and meaningful comments������