Monday, January 18, 2010

ನನ್ನಜ್ಜಿ ಅಂದ್ರೆ ... ನಂಗಿಷ್ಟ....

ನಾನೇನೂ ಸಣ್ಣವನಲ್ಲ...  
ಹೈಸ್ಕೂಲ್  ಎಂಟನೆಯ ಕ್ಲಾಸ್...
ಎಲ್ಲವು ಅರ್ಥವಾಗುತ್ತದೆ...
ಆದರೆ....
ನನ್ನಪ್ಪ ಮಾತ್ರ  ನನಗೆ ಅರ್ಥನೇ.. ಆಗುವದಿಲ್ಲ...
ಯಾವಾಗ ಬೈತಾನೆ... ಯಾವಾಗ ಹೊಗಳುತ್ತಾನೆ.. ಒಂದೂ ಅರ್ಥನೇ ಆಗುವದಿಲ್ಲ.
ನನಗೆ ಒಂದು ಹೊಸ  " ಹದಿನೆಂಟು ಗೇರಿನ"   ಸೈಕಲ್ ಬೇಕಿತ್ತು.. 
ನನ್ನ ಎಲ್ಲ ಗೆಳೆಯರ ಬಳಿ ಹೊಸದಾಗಿ ಬಂದಿದೆ... 
ನನಗೂ ಆಸೆ ಆಯಿತು..
ನನ್ನಪ್ಪ  ನನ್ನಾಸೆಗಳಿಗೆ ಎಂದು  ಅಡ್ಡಿ ಬಂದವನಲ್ಲ...
ಹೇಗಿದ್ದರೂ ತೆಗೆಸಿಕೊಡುತ್ತಾರೆ ಅಂತ  ನನ್ನ  ಗೆಳೆಯರ ಬಳಿ  ಬಹಳ ಬಡಾಯಿ ಕೊಚ್ಚಿಕೊಂಡಿದ್ದೆ...
ಸಮಯ ನೋಡಿ ನನ್ನಪ್ಪನನ್ನು  ಕೇಳಿದೆ..


" ಈಗ ಆಗೋದಿಲ್ಲ. 
ನಮ್ಮ  ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ. ಹಣ ಖರ್ಚು ಮಾಡೋ ಹಾಗಿಲ್ಲ.
ಮುಂದೆ ಪರಿಸ್ಥಿತಿ ಸುಧಾರಿಸದ ಮೇಲೆ ನೋಡೋಣ."


"ಇಲ್ಲ.. ಅಪ್ಪ ನನಗೆ ಈ ಸೈಕಲ್  ಬೇಕೇ ಬೇಕು..
ನನ್ನ  ಫ್ರೆಂಡ್ಸ್  ಬಳಿ ಹೊಸ ಸೈಕಲ್ ತರುತ್ತೇನೆ ಅಂತ ಹೇಳಿಬಿಟ್ಟಿದ್ದೇನೆ..
ಇಲ್ಲಾ.. ಅಂದ್ರೆ ನನಗೆ  ಬಹಳ ಅವಮಾನ ಆಗುತ್ತೆ...
 ನನ್ನ  ಫ್ರೆಂಡ್ಸ್ ಎಲ್ಲರ ಬಳಿ  ಇದು  ಇದೆ.. 
ಪ್ಲೀಸ್  ಅಪ್ಪಾ  ನಂಗೆ  ಬೇಕು.. ಪ್ಲೀಸ್ ..."


" ನಿನ್ನ  ಗೆಳೆಯರ ಹತ್ತಿರ ಇದೆ ಅಂತ ನೀನು ಖರಿದಿಸ ಬೇಕಾ..? 
ನಿನ್ನ  ಬಳಿ  ಒಂದು ಸೈಕಲ್ ಇದೆಯಲ್ಲ..
ಅದನ್ನೇ  ಉಪಯೋಗಿಸು.. 
ನಾನೂ ಕೂಡ ನಮ್ಮ ಹೊಸ ಕಾರು ಕೊಡ್ತಾ ಇದ್ದೀನಿ.
ನಮ್ಮ ಹಳೆ ಕಾರು ಉಪಯೋಗಿಸ್ತಿನಿ..
ನಮ್ಮ  ಪರಿಸ್ಥಿತಿ ಕಷ್ಟ ಇದೆ.. ಬಿಸಿನೆಸ್  ಡಲ್  ಆಗಿದೆ.."


ಅಪ್ಪ  ಮುಖ ಗಂಟಿಕ್ಕಿ  ಖಾರವಾಗಿ ಹೇಳಿದ..
ನಾನು ಮುಂದೆ ಮಾತನಾಡಲಿಲ್ಲ...


ನನ್ನ ಗೆಳೆಯರೆಲ್ಲರ  ಬಳಿ ಇದೇ ಸೈಕಲ್ ಇದೆ.
 ನನಗೂ ಬೇಕಿತ್ತು...
ನನಗೆ ಬಹಳ ಅವಮಾನ ಆಗುತ್ತಾದಲ್ಲಾ...
ಅದೂ  ನನ್ನ ಗೆಳೆಯರ ಮುಂದೆ....!
ನನ್ನ  ಮನಸ್ಸೆಲ್ಲ ಹಾಳಾಗಿ ಹೋಯಿತು... 
ಊಟವೂ ಸರಿಯಾಗಿ  ಮಾಡಲಿಲ್ಲ..


ರಾತ್ರಿಯಾಯಿತು... 


ನಾನು ಯಾವಾಗಲೂ ನನ್ನ ಅಜ್ಜಿಯ ಸಂಗಡ ಮಲಗುವದು...


ನನ್ನಜ್ಜಿ ಅಂದರೆ ನನಗೆ ಬಹಳ ಇಷ್ಟ. 


ಅವಳಿಗೆ ಕೋಪ ಬರುವದೇ.. ಇಲ್ಲ.
ನಮ್ಮ ಮನೆಯಲ್ಲಿ ನನ್ನ ಪರವಾಗಿ ಯಾರಾದರೂ  ಮಾತನಾಡುತ್ತಾರೆ ಅಂದರೆ ಅವರು ನನ್ನಜ್ಜಿ..
ಅಜ್ಜಿಗೆ ನನ್ನ ಕಂಡರೆ  ಬಹಳ ಅಕ್ಕರೆ...  
ಅಜ್ಜಿ ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ..
ನನಗೆ ಮಲಗುವಾಗ ಕಥೆ ಹೇಳುತ್ತಾರೆ...


ಇಂದು ಹಾಗೇ ಆಯಿತು...


"ಕಥೆ.. ಹೇಳ ಬೇಕೇನೋ.. ಪುಟ್ಟಾ.. "
ಅಂತ ಪ್ರೀತಿಯಿಂದ  ತಲೆ  ಸವರಿದರು...


ನನಗೆ ಅಳು ಬಂದಂತಾಯಿತು...


"ಅಜ್ಜಿ... ..
 ಕಷ್ಟ.. ಯಾಕೆ  ಕಷ್ಟ  ಆಗೇ  ಇರಬೇಕು... 
ಈ ಕಷ್ಟಗಳೆಲ್ಲ  ಸ್ವಲ್ಪ  ಖುಷಿಯಾಗಿ ಯಾಕೆ ಇರಬಾರದು...? "


"ಯಾಕೋ ಕಂದಾ..?
ನಿನಗೆ ಎಂಥಹ ಕಷ್ಟನೋ...?..! "


" ನೋಡು ಅಜ್ಜಿ.. 
ಅಪ್ಪನಿಗೆ  ಹಣಕಾಸಿನ ಕಷ್ಟ ಅಂತೆ..
ನನಗೆ ಮೊದಲಿನ ಹಾಗೆ  ಪಿಜ್ಜಾ.. ಪಾನಿ ಪುರಿ, 
ಅಯಿಸ್ ಕ್ರೀಮ್ ...
 ಏನೂ ಸಿಕ್ತಾ ಇಲ್ಲ..
ಪೆಪ್ಸಿ ಕುಡಿಯದೆ ಬಹಳ ದಿನ ಆಯ್ತು.. 
 ಇವತ್ತು ಹೊಸ ಸೈಕಲ್ಲು ಬೇಕು ಅಂತ ಕೇಳಿದೆ...
ಅದೂ ... ಆಗಲ್ಲ ಅಂತ ಹೇಳಿ ಬಿಟ್ಟರು..
ಈ... ಕಷ್ಟ   ಇಷ್ಟೆಲ್ಲ  ಕಷ್ಟ ಇರ ಬಾರದು ಅಲ್ಲವಾ...?"


" ಹೌದು  ಪುಟ್ಟಾ...
 ಕಷ್ಟ ಯಾವಾಗಲೂ ಹಾಗೇನೆ.. 
ಅವರವರ ಕಷ್ಟ ಅವರವರಿಗೆ ದೊಡ್ಡದು...
ಆನೆಗೆ  ಆನೆಯಂಥ  ಕಷ್ಟ...
ಇರುವೆಗೆ  ಇರುವೆಯಂಥ  ಕಷ್ಟ.. 
ಎಲ್ಲರಿಗೂ  ಅವರವರ  ಕಷ್ಟ  ದೊಡ್ಡದು..."


" ಈಗ ಹೊಸ ಸೈಕಲ್ಲು ಇಲ್ದೇ ಹೊದ್ರೆ...
 ನನ್ನ ಗೆಳೆಯರ ಮುಂದೆ ಎಷ್ಟು ಅವಮಾನ ಗೊತ್ತಾ ಅಜ್ಜಿ...? 
ಅವರಿಗೆ ನನ್ನ ಮುಖ ಹೇಗೆ ತೋರಿಸಲಿ..??
ತುಂಬಾ  ಅವಮಾನ ಆಗುತ್ತದೆ ಅಜ್ಜಿ...
ಅಪ್ಪನಿಗೆ ಇದೊಂದೂ ಅರ್ಥನೇ ಆಗೋದಿಲ್ಲ... ನನ್ನನ್ನು ಅವರು ಅರ್ಥನೇ ಮಾಡಿಕೊಳ್ಳುವದಿಲ್ಲ..."


" ನೋಡು ನಿನ್ನಪ್ಪನಿಗೆ  ಬಹಳ ಕಷ್ಟ ಇದೆ... 
ಅವರ ಬಿಸಿನೆಸ್ಸ್ ಚೆನ್ನಾಗಿದ್ದಾಗ ನಿನಗೆ  ಏನು ಬೇಕೋ ಅದನ್ನೆಲ್ಲ  ತೆಗೆಸಿ ಕೊಡಲಿಲ್ಲವಾ..?
ಈಗ ತೊಂದರೆ ಇದೆ...
ಸ್ವಲ್ಪ ಅಡ್ಜಸ್ಟ್ ಮಾಡ್ಕೊ.."


" ಅಜ್ಜಿ ...
ನೀನು ಅಪ್ಪನ ಪರವಾಗಿ ಮಾತಾಡ ಬೇಡ. 
ಅಪ್ಪ, ಅಮ್ಮ ಸೇರಿ ನಿಂಗೆ  ಅವಮಾನ ಮಾಡಿದ್ದು ನಂಗೆ ಗೊತ್ತಿದೆ ಅಜ್ಜಿ...
ನಾನು ಸಣ್ಣವನಲ್ಲ .. ನಂಗೆ ಎಲ್ಲವೂ ಅರ್ಥ ಆಗ್ತದೆ... 
ನಿನಗೆ ಸ್ವಲ್ಪನೂ ಬೆಲೆ ಕೊಡುವದಿಲ್ಲ...
 ನಿಂಗೆ ಯಾರೂ ಏನೂ ಕೇಳುವದಿಲ್ಲ..
ನಿನ್ನನ್ನ್ನು ಒಬ್ಬನೆ ಬಿಟ್ಟು ಸಿನೆಮಾಕ್ಕೆ ಹೋಗ್ತಾರಲ್ಲ...
ಪಾರ್ಟಿಗೆ ಹೋಗುವಾಗ ಮನೆಯಲ್ಲಿ ನಿನ್ನ ಒಬ್ಬನೇ  ಬಿಟ್ಟು ..
ಹೊರಗಿನಿಂದ ಬಾಗಿಲಿಗೆ ಬೀಗ  ಹಾಕಿ  ಹೋಗ್ತಾರೆ...
 ನಿನಗೆ  ಅವಮಾನ ಅಲ್ಲವಾ  ಅಜ್ಜಿ..?"


ಅಜ್ಜಿ ಸ್ವಲ್ಪ ಹೊತ್ತು ಮಾತನಾಡಲಿಲ್ಲ... 
ನನ್ನ ತಲೆ ಸವರುತ್ತಿದ್ದರು...
ನಾನೇ ಮಾತನಾಡಿದೆ..


" ಅಜ್ಜಿ.. ...
ನಿಂಗೆ ಇಷ್ಟೆಲ್ಲ ವಯಸ್ಸಾಗಿದೆ... ನೀನು ಕಷ್ಟ ಅನುಭವಿಸಲಿಲ್ಲವಾ..?"


" ಕಷ್ಟ.. ಅನ್ನೋದು  ತುಂಬಾ ವಿಚಿತ್ರ  ನೋಡು... 
ಎಷ್ಟೇ ಅನುಭವಿಸದರೂ....
 ಅದರ ನೆನಪು..
ಅದನ್ನು ದಾಟಿ ಬಂದ ನೆನಪುಗಳು..
ಬಹಳ  ಖುಷಿ ಪುಟ್ಟಾ...   ತುಂಬಾ  ಸುಖ ಕಣೊ..
ನಿಂಗೆ ಇದೆಲ್ಲ ಅರ್ಥ ಆಗೋದಿಲ್ಲ ಬಿಡು..."


" ಅಜ್ಜಿ... ..ಅಜ್ಜಿ....
ನೀನು ಅನುಭವಿಸಿದ  ಅತ್ಯಂತ ಕೆಟ್ಟದಾದ ಕಷ್ಟ ಯಾವುದು..?
ಅಪ್ಪ, ದೊಡ್ಡಪ್ಪನವರನ್ನು ಕಷ್ಟ ಪಟ್ಟು ಬೆಳೆಸಿದೆಯಂತೆ.. 
ಅದು ಕಷ್ಟ ಆಯ್ತಾ..?
ಹೊಲದಲ್ಲಿ ಕೆಲಸ ಮಾಡಿದೆಯಂತೆ..
 ಬೆಳೆ  ಬೆಳೆಯುತ್ತಿದ್ಯಂತೆ...  ಬಡತನ ಇತ್ತಂತೆ...
ಕೈಯಲ್ಲಿ ಹಣ ಇಲ್ಲವಾಗಿತ್ತಂತೆ..
ಇದೆಲ್ಲ  ಬಹಳ ಕಷ್ಟ ಅಲ್ಲವಾ..?"


" ಅದೆಲ್ಲ ಕಷ್ಟ ಅನಿಸಲಿಲ್ಲ ನೋಡು ಪುಟ್ಟ... 
ಆಗ ನನ್ನ ಕಣ್ಣೆದುರಿಗೆ  ನಿನ್ನಪ್ಪ, ದೊಡ್ಡಪ್ಪ ಇದ್ದರಲ್ಲ..
ಅವರಿಗೊಂದು  ಭವಿಷ್ಯ ಮಾಡಬೇಕಿತ್ತಲ್ಲ...
ಹಾಗಾಗಿ ಅದು ಕಷ್ಟ ಅಂತ ಅನಿಸಲೇ ಇಲ್ಲ.."


" ಮತ್ತೆ...  
ನಿನ್ನ  ದೊಡ್ಡ ಕಷ್ಟ  ಯಾವುದು ಅಜ್ಜಿ...?"


ಅಜ್ಜಿ  ಸ್ವಲ್ಪ ಹೊತ್ತು  ಸುಮ್ಮನಾದಳು...
 ಅವಳ ಕೈ  ನನ್ನ ತಲೆ ಸವರುತ್ತಿತ್ತು...


" ಅವತ್ತೊಂದು ದಿನ  ನಮ್ಮನೆಗೆ  ಡಾಕ್ಟರ್ ಬಂದು ..
" ನಿನ್ನ ಗಂಡ  ಹೆಚ್ಚಿಗೆ ದಿನ  ಬದುಕುವದಿಲ್ಲ...
ಈ ರೋಗಕ್ಕೆ  ಔಷಧವಿಲ್ಲ..  
ನಿಮ್ಮ ಸಮಾಧಾನಕ್ಕೆ ಬೇಕಾದರೆ  ಶಿವಮೊಗ್ಗದ ದೊಡ್ಡ ಆಸ್ಪತ್ರೆಗೆ ಹೋಗಿ ಬರಬಹುದು"
 ಅಂದು ಬಿಟ್ಟರು..."


ಹೇಳುತ್ತ ಅಜ್ಜಿ  ಸ್ವಲ್ಪ ಹೊತ್ತು   ಸುಮ್ಮನಾದರು... 
ಮತ್ತೆ ಅವರೆ ಹೇಳಿದರು...


" ಬದುಕಿನ  ಭರವಸೆಯ  ಗಂಡ.. ಸಾಯುತ್ತಾನೆಂದರೂ.. 
ನಂಬಲು ಕಷ್ಟ...
 "ಶಿವಮೊಗ್ಗದ ಡಾಕ್ಟರ್ ಬಳಿ  ಔಷಧ  ಇದ್ದು ಬಿಟ್ಟರೆ..!
ನನ್ನ  ಗಂಡ ಬದುಕಿ ಬಿಟ್ಟರೆ..!!!"  ಅಂತ ಆಸೆ ಆಯ್ತು..
ಆದರೆ... ಕೈಯಲ್ಲಿ ಹಣ ಇಲ್ಲ.."


"ಇದು ತುಂಬಾ ಕಷ್ಟ.. ಅಲ್ಲವಾ  ಅಜ್ಜಿ...? 
ಇದಾ  ನಿನ್ನ  ದೊಡ್ಡದಾದ ಕಷ್ಟ..?"


" ಅದೂ ಕೂಡ ಕಷ್ಟ ಅನಿಸಲಿಲ್ಲ... ಪುಟ್ಟಾ... 
ಕಣ್ಣೆದುರಿಗೆ ಗಂಡ ಇದ್ದನಲ್ಲ...
ಆಗ ನನ್ನ  ಸಹಾಯಕ್ಕೆ ಬಂದವರು ...
 ನನ್ನ ಗಂಡನ ತಮ್ಮ..
ನಿನ್ನ  ಸಣ್ಣಜ್ಜ...
ಆಗ ಅವ   ಇನ್ನೂ  ಹೈಸ್ಕೂಲ್ ಓದುವ  ಹುಡುಗ...
ವಯಸ್ಸಿಗೆ  ಮೀರಿದ  ತಿಳುವಳಿಕೆ...
ಜವಾಬ್ದಾರಿ  ಅವನಿಗೆ....
ಮನೆಯಲ್ಲಿದ್ದ  ಚೂರು ಪಾರು ಬಂಗಾರ  ಶೆಟ್ಟಿಯ ಹತ್ತಿರ  ಇಟ್ಟು ಹಣ ಹೊಂದಿಸಿದೆ..
ಮನೆಯಲ್ಲಿ  ಉಳಿದವರಾರೂ ಸಹಾಯಕ್ಕೆ ಬರಲಿಲ್ಲ...
ಒಟ್ಟು ಕುಟುಂಬ ಆದರೂ...
ಒಬ್ಬಂಟಿಯಾಗಿದ್ದೆ.."


" ಹೌದಜ್ಜಿ...
ಒಟ್ಟಿಗೆ ಇದ್ದಾರೆಂದ ಮೇಲೆ ಕಷ್ಟದಲ್ಲೂ ಇರಬೇಕಲ್ಲ ...ಅಜ್ಜಿ...? 
ಇದು  ತುಂಬಾ  ಕಷ್ಟ ಆಯ್ತಾ..??.."


" ಅದೂ ಕೂಡ ಕಷ್ಟ ಅನಿಸಲಿಲ್ಲ.
ನಿನ್ನ  ಸಣ್ಣಜ್ಜ  ಕಷ್ಟಪಟ್ಟು  ಒಂದು ಗಾಡಿ ವ್ಯವಸ್ಥೆ ಮಾಡಿದ...
ಶಿವಮೊಗ್ಗದ  ದೊಡ್ಡ ಆಸ್ಪತ್ರೆಗೆ ಬಂದೆ...
ದೊಡ್ಡ ಆಸ್ಪತ್ರೆ... ಪಟ್ಟಣ ಬೇರೆ... 
 ಅಲ್ಲಿ  ಸ್ವಲ್ಪ ತೊಂದರೆ ಆಯ್ತು.."


"ಇದಾ...??   ಅಜ್ಜಿ ನಿನ್ನ ದೊಡ್ಡ ತೊಂದರೆ..?..! "


"ಅಲ್ಲಪ್ಪ.....
ಅಲ್ಲಿ  ಡಾಕ್ಟರ್   ಎಲ್ಲ  ಪರಿಕ್ಷೆ ಮಾಡಿ 
 " ಈಗ ಏನೂ ಮಾಡಲಾಗುವದಿಲ್ಲ..ಮನೆಗೆ ಕರೆದು ಕೊಂಡು ಹೋಗಿ.." ಅಂದು ಬಿಟ್ಟರು..
ಹಾಗೆ ಸ್ವಲ್ಪ ಹೊತ್ತಿನಲ್ಲೆಯೆ.. ನನ್ನ  ಗಂಡ..
" ಇನ್ನೂ ಸಣ್ಣ  ಸಣ್ಣ ಮಕ್ಕಳು..
 ಇವರನ್ನೆಲ್ಲ ಹೇಗೆ ದೊಡ್ಡ ಮಾಡ್ತಿಯಾ..?.." 
ಅಂತ ನೋವು, ಸಂಕಟ ಪಡುತ್ತ... 
ಪ್ರಾಣ ಬಿಟ್ಟು ಬಿಟ್ಟರು...
 ಜೀವ ಹೋಗುವಾಗ  ಅವರು ನನ್ನ ಕೈ ಹಿಡಿದು ಕೊಂಡಿದ್ದರು...
ಭರವಸೆಯ  ಗಂಡನೂ  ಒಂಟಿಯಾಗಿ  ಬಿಟ್ಟು ಹೋಗಿದ್ದ...
ಆಗ ಕತ್ತಲಾಗುತ್ತಿತ್ತು.....    
ಒಂದೇ.. ಒಂದು ಆಸೆ ಇತ್ತು.. ಅದೂ ಕೂಡ  ಕರಗಿ ಹೋಯಿತು....."


ಅಜ್ಜಿ ಧ್ವನಿ  ಕಂಪಿಸುತ್ತಿತ್ತು... 
ಸ್ವಲ್ಪ ಹೊತ್ತು ಸುಮ್ಮನಾದರು... 
ಹಳೆಯ ದುಃಖ ಉಮ್ಮಳಿಸಿ ಬಂದಿತ್ತು...


"ಅಜ್ಜಿ... ..
 ಆ ದೇವರು ಬಹಳ ಕೆಟ್ಟವನು .. 
ಹೌದಜ್ಜಿ... ಇದು  ಬಹಳ ಕೆಟ್ಟದಾದ ಕಷ್ಟ.. ಅಲ್ಲವಾ..?"


" ಆಗ ನಂಗೆ  ಮುಂದೇನು ..?
ಅನ್ನುವಂಥಹ ಚಿಂತೆ.. 
ಕಷ್ಟದ ಬಗ್ಗೆ ವಿಚಾರ ಮಾಡುತ್ತ ಕುಳಿತುಕೊಳ್ಳುವಂತಿಲ್ಲ..
ತಿರುಗಿ ಊರಿಗೆ ಹೋಗ ಬೇಕಿತ್ತು..."


" ಆ ಕತ್ತಲೆಯಲ್ಲಿ.. ಪಟ್ಟಣದಲ್ಲಿ ..
 ಗಾಡಿ ಹುಡುಕುವದು  ಕಷ್ಟ ಆಯ್ತಾ  ಅಜ್ಜಿ..?"


"ಇಲ್ಲಪ್ಪ... 
ನಿನ್ನ  ಸಣ್ಣಜ್ಜ  ಇದ್ದಿದ್ದನಲ್ಲ.. 
ಸಣ್ಣ ಹುಡುಗನಾಗಿದ್ದರೂ... 
ವಯಸ್ಸಿಗೆ ಮೀರಿದ ಜವಾಬ್ದಾರಿ ಹೊತ್ತುಕೊಂಡ...
ಎಲ್ಲಿಂದಲೋ ಒಂದು ಗಾಡಿ  ವ್ಯವಸ್ಥೆ ಮಾಡಿದ...
ರಾತ್ರಿಯೇ  ಊರಿಗೆ ಬಂದೆವು... 
ಮನೆಯಲ್ಲಿ  ಎಲ್ಲರೂ ಮೌನ.. 
ಒಬ್ಬರೂ  ಮಾತನಾಡಲಿಲ್ಲ ನೋಡು.."


" ಎಂಥಹ ಜನ ಅಜ್ಜಿ..? 
ನೀನು ಬೇಜಾರದಲ್ಲಿದ್ದೀಯಾ... 
ದುಃಖದಲ್ಲಿದ್ದೀಯಾ.. 
ಯಾರೂ ಮಾತನಾಡಲಿಲ್ಲವಾ..? 
ಇದು ಬಹಳ ಕಷ್ಟ ಅಲ್ಲವಾ  ಅಜ್ಜಿ..?
ಬೇಜಾರದಲ್ಲಿದ್ದಾಗ..
ಯಾರದರೂ ಸಮಾಧಾನ ಮಾಡಲಿ ಅಂತ ಮನಸ್ಸು ಹೇಳುತ್ತದೆ.."


" ಆಗ ನನಗೆ  ಯಾರ ಸಂತ್ವನವೂ  ಬೇಕಿರಲಿಲ್ಲ..
  ಪುಟ್ಟಾ... 
ಕುಹಕ ಮಾತುಗಳಿಂದ ಸ್ವಾಗತ ಮಾಡ್ತಾರೆ ಅಂತ ಗೊತ್ತಿತ್ತು..
ದುಃಖ ಅನ್ನೋದು  ಒಂಟಿ...
ಅದನ್ನು  ಒಬ್ಬನೇ ಅನುಭವಿಸ ಬೇಕು  .. ಕಂದಾ..!
 ಹೆಣವನ್ನು ಬೆಳಿಗ್ಗೆ ಸುಡಬೇಕು ಅಂತ  ಊರವರೆಲ್ಲ ನಿರ್ಧಾರ ಮಾಡಿದರು..
ಮನೆ  ತುಂಬಾ  ಜನ....
ಆದರೆ  ರಾತ್ರಿ ಹೆಣದ ಬಳಿ  ಕುಳಿತು ಕೊಳ್ಳಲು ಯಾರೂ ಮುಂದೆ ಬರಲಿಲ್ಲ.."


" ಅಜ್ಜಿ...
 ಇದು  ಬಹಳ ಕಷ್ಟ ಅಲ್ಲವಾ..? ಹೆದರಿಕೆ ಬೇರೆ.. 
ಅಲ್ಲವಾ ಅಜ್ಜಿ..?"


"ಇಲ್ಲಪ್ಪ...
 ಆ ದೇಹದೊಂದಿಗೆ, ಆ  ಮನುಷ್ಯನೊಂದಿಗೆ..
ಬದುಕು ಕಳೆದಿದ್ದೆನಲ್ಲ... 
ಸುಖ ಸಂತೋಷ ಅಲ್ಲಿ ಇತ್ತಲ್ಲ... 
ಅವನ ನೆನಪು ನನ್ನೊಂದಿಗೆ ಇತ್ತು....
ಅದನ್ನು ಕಾಯುವದು ನನಗೆ  ಕಷ್ಟ ಆಗಲ್ಲಿಲ್ಲ..
ನಿನ್ನ ಅಪ್ಪ, ದೊಡ್ಡಪ್ಪ ಇನ್ನೂ ಚಿಕ್ಕವರು.. 
ನನ್ನ ದುಃಖ ಕಂಡು ಅವರೂ ಅಳುತ್ತಿದ್ದರು...
ಅವರನ್ನೂ  ಸಮಾಧನ ಪಡಿಸುತ್ತ...
ನಾನೂ ಸಮಾಧಾನ ಪಟ್ಟುಕೊಳ್ಳ ಬೇಕಿತ್ತು..."


"ಛೇ.. ಅಜ್ಜಿ...
 ಎಷ್ಟೆಲ್ಲ  ಕಷ್ಟ ನೋದಿದ್ದೀಯಾ...? !
 ಇದೆಲ್ಲ ಬಹಳ ಕಷ್ಟ ಅಲ್ಲವಾ..?"


" ಪುಟ್ಟಾ.... !
ಕಷ್ಟ ಬಂದಾಗ ಅಳುವದು ಅನ್ನುವದು ಇದೆಯಲ್ಲ.. !
ಅದು ನಮಗೆ ದೇವರು ಮಾಡಿದ ಉಪಕಾರ ಕಣಪ್ಪಾ..
ಅಳೋದು  ಗೊತ್ತಿಲ್ಲದೇ.. ಹೋಗಿದ್ರೆ   ಹುಚ್ಚಿಯಾಗಿ ಬಿಡ್ತಿದ್ದೆ...
ಕಣ್ಣಲ್ಲಿ ನೀರು ಬರುವಷ್ಟು ಅತ್ತೆ... 
ನನ್ನ ಗಂಡನ ದೇಹವಲ್ಲವಾ...?
ಯಾರೂ ಬರದಿದ್ದರೂ ... ಹೆಣವನ್ನು  ಕಾದೆ..."


" ಅಜ್ಜಿ....
 ಅಜ್ಜನ ಹೆಣದ ಸಂಗಡ  ರಾತ್ರಿಯೆಲ್ಲ ಇದ್ದೆಯಲ್ಲ.. 
ಅಜ್ಜಿ  ಅದು  ಬಹಳ ಕಷ್ಟ  ಅಲ್ಲವಾ..?"


"ಅದೂ... ಅಲ್ಲಪ್ಪ... 
ಅಲ್ಲಿ ಕುಳಿತಾಗ  ಅಜ್ಜನೊಡನೆ  ಕಳೆದ ನೆನಪು ಇತ್ತು... 
ಪಕ್ಕದಲ್ಲಿ ಮಕ್ಕಳಿದ್ದರು.. 
ಮುಂದೆ ಏನು ಅಂತ  ಕಾಡುವ  ಚಿಂತೆ ಇತ್ತು..
ರಾತ್ರಿ  ಮುಗಿದದ್ದೇ ಗೊತ್ತಾಗಲಿಲ್ಲ.. 
ಬೆಳಗಾಯಿತು.. "


" ಅಜ್ಜಿ... 
ಬೆಳಗಾದ ಮೇಲೆ  ಹೆಣ ಸುಡುತ್ತಾರಲ್ಲ.. 
ಅದು  ಕೆಟ್ಟದಾದ ಕಷ್ಟ ಅಲ್ಲವಾ..?"


 " ಅದು ಅಷ್ಟೆಲ್ಲ ಕಷ್ಟ ಅಲ್ಲಪ್ಪ... 
ಬೆಳಗಾಯಿತು... 
ಮನೆಯಲ್ಲಿ ಎಲ್ಲರೂ  ಬೆಳಗಿನ ತಿಂಡಿಗೆ ತೊಡಗಿದ್ದರು...
ದೋಸೆ  ಮಾಡುವ  ಶಬ್ದ.. ವಾಸನೆ  ಬರ್ತಿತ್ತು..."


ಎನ್ನುತ್ತ ಅಜ್ಜಿಗೆ ದುಃಖವಾಯಿತು... 
ಮಾತನಾಡಲಾಗಲಿಲ್ಲ... 
ಅವರೇ ಸಮಾಧಾನ ಮಾಡಿಕೊಂಡರು...


" ಮನೆಯ ಒಳಗೆ  ಸಿಹಿ ಬೆಲ್ಲದ ದೋಸೆ ಮಾಡಿದ್ದರು..."


" ಎಂಥಹ ಜನ ಅಜ್ಜಿ..!!? 
ನೀನು ದುಃಖ ಇದ್ದೀಯಾ... 
ಮನೆಯವರು  ಬೆಲ್ಲದ ದೋಸೆ  ತಿನ್ನುತ್ತಿದ್ದರಾ..? 
ಇಂಥಹ ಕಷ್ಟ ಯಾರಿಗೂ ಬೇಡ ಅಜ್ಜಿ...
ಇದಲ್ಲವಾ.. ಅಜ್ಜಿ  ಕೆಟ್ಟದಾದ ಕಷ್ಟ..?"


"ಅಲ್ಲಪ್ಪಾ.... 
ಅವರು ಬೆಲ್ಲದ ದೋಸೆ ತಿಂದರೆ  ನನಗೇನು..? 
ನನ್ನ ಗಂಡ ವಾಪಸ್ಸು ಬರ್ತಾನಾ...?
ಅದಲ್ಲಪ್ಪ.. ಪುಟ್ಟಾ...
ಇದ್ಯಾವದೂ.. ಕಷ್ಟವೇ.. ಅಲ್ಲ...!


" ಅಜ್ಜಿ...
ಮತ್ತೆ .. ಯಾವುದು    ಕಷ್ಟ...?"


ಅಜ್ಜಿಯ  ಧ್ವನಿ ಭಾರವಾಯಿತು...
ಅಳುತ್ತಲೇ ಹೇಳುತ್ತಿದ್ದರು...


"ನಮ್ಮ ಜೀವದ ಜೀವ.. 
ಪ್ರೀತಿಯವರ ಹೆಣ ಇಟ್ಟುಕೊಂಡು... 
ಹಸಿವೆಯಾಗುತ್ತದಲ್ಲ...!! 
ಅದು ಅತ್ಯಂತ ಕಷ್ಟ  ಪುಟ್ಟಾ...!!
ಪುಟ್ಟಾ....!
ಅಳಲು ಕಣ್ಣೀರೂ... ಇರುವದಿಲ್ಲ...
ಸತ್ತವರು ಬದುಕಿ ಬರುವದಿಲ್ಲ...


ಬದುಕಿದ್ದವರಿಗೆ  ಹಸಿವೆ ಎನ್ನುವದು ಇದೆಯಲ್ಲ ಪುಟ್ಟ...!


ಆ ಹೆಣದ ಮುಂದೆ ಹಸಿವೆಯಾಗುತ್ತದಲ್ಲ... !
ಅದು  ಬಹಳ ಕೆಟ್ಟದಾದ ಕಷ್ಟ...!
ಆಗ ತಿನ್ನುವದು.... ಇದೆಯಲ್ಲ ಅದು ಬಹಳ ಕಷ್ಟ..!
 ಪುಟ್ಟಾ.....!
ನಾವು ಯಾಕಾದರೂ  ಬದುಕ ಬೇಕು ಎನ್ನಿಸಿ ಬಿಡುತ್ತದೆ.. 
ನಮ್ಮ ಬಗೆಗೆ ನಮಗೆ ಅಸಹ್ಯವಾಗಿಬಿದುತ್ತದೆ...!
ಕಂದಾ..!!..
ನನ್ನ ಗಂಡನ ಹೆಣ ಇಟ್ಟುಕೊಂಡು ನಾನೂ...  ತಿಂದೆ...!"


ಎನ್ನುತ್ತಾ  ಅಜ್ಜಿ ಅಳಲು ಶುರು ಮಾಡಿದರು...


ನನಗೂ   ಅಳು ಬಂತು....
ಕತ್ತಲಲ್ಲಿ ಅಜ್ಜಿಯ ಕಣ್ಣಿರು ಒರೆಸಲು  ತಡಕಾಡಿದೆ...


ಆಗಲಿಲ್ಲ...


ಅಜ್ಜಿಯನ್ನು  ಗಟ್ಟಿಯಾಗಿ  ತಬ್ಬಿಕೊಂಡೆ...


(ಇದು  ಕಥೆ.... )

ಭಾವ ಪೂರ್ಣ ಪ್ರತಿಕ್ರಿಯೆಗಳಿವೆ...
ದಯವಿಟ್ಟು  "ಪ್ರತಿಕ್ರಿಯೆಗಳನ್ನೂ ಓದಿ...91 comments:

ಸವಿಗನಸು said...

ಪ್ರಕಾಶಣ್ಣ,

ಭಾವ ತುಂಬಿದ ಬರವಣಿಗೆ.....

ಓದಿ ಕಣ್ಣು ಒದ್ದೆಯಾಯಿತು.....

ಈ ಹಸಿವು ದೇವರು ಯಾಕೆ ಕೊಟ್ಟ ಅಂತ ಅನ್ನಿಸುತ್ತೆ ಕೆಲವು ಸಾರಿ....

ಗೇಣು ಹೊಟ್ಟೆಗಾಗಿ ಅಲ್ವ ಎಲ್ಲ....

ಚೆಂದದ ಬರಹ.....

Nisha said...

ತುಂಬ ಅಳಿಸಿ ಬಿಟ್ಟಿರಿ ಪ್ರಕಾಶಣ್ಣ.

"ಆ ಹೆಣದ ಮುಂದೆ ಹಸಿವೆಯಾಗುತ್ತದಲ್ಲ...
ಅದು ಬಹಳ ಕೆಟ್ಟದಾದ ಕಷ್ಟ...
ಆಗ ತಿನ್ನುವದು ಇದೆಯಲ್ಲ ಅದು ಬಹಳ ಕಷ್ಟ.."

ನಾನು ಹತ್ತನೇ ತರಗತಿಯಲ್ಲಿದ್ದಾಗ, ನೀನು ತಿನ್ನದಿದ್ದರೆ ನಾವು ತಿನ್ನುವುದಿಲ್ಲ ಎಂದು ಹಿಂದಿನ ದಿನದಿಂದ ಏನೂ ತಿನ್ನದೆ ಇದ್ದ ತಮ್ಮನ್ದಿರಿಗಾಗಿ ಅಪ್ಪನ ಹೆಣದ ಮುಂದೆ ಒಂದೆರಡು ತುತ್ತು ತಿಂದದ್ದು ಎಷ್ಟು ಕಷ್ಟವಾಯಿತು.

ಚುಕ್ಕಿಚಿತ್ತಾರ said...

ಮನಸ್ಸು ಭಾರವಾಗುತ್ತಿದೆ..ಪ್ರಕಾಶಣ್ಣ...
ಹಸಿವು ಕೆಟ್ಟದ್ದು...
ಮರ್ಯಾದೆ ಇಲ್ಲದ್ದು...ಬೇಡ ಎ೦ದರೂ ವಕ್ಕರಿಸಿಕೊಳ್ಳುತ್ತೆ............
.....................

PRAVEEN R GOWDA said...
This comment has been removed by the author.
sunaath said...

ಪ್ರಕಾಶ,
This is most heart touching narration.

PRAVEEN ಮನದಾಳದಿಂದ said...

ನಿಮ್ಮ ಕತೆಯ ಬಗ್ಗೆ ಏನಂತ ಹೇಳಲಿ? ಓದುಗನ ಮನಸ್ಸಿನಾಳಕ್ಕೆ ಇಳಿಸುವ ಸಾಮರ್ಥ್ಯ ನಿಮ್ಮ ಬರವಣಿಗೆಗೆ ಇದೆ. ಅದಕ್ಕಿಂತ ಇನ್ನೇನು ಬೇಕು ಹೇಳಿ?
ಪ್ರಕಾಶಣ್ಣ, ನನ್ನಿಂದ ಕಣ್ಣೀರು ತಡೆದುಕೋಳ್ಳಲು ಆಗ್ತಿಲ್ಲ. ಅಜ್ಜ ಅಜ್ಜಿಯ ಮಡಿಲಲ್ಲೇ ಬೆಳೆದ ನನಗೆ ಅವರ ಕೊನೆಗಳಿಗೆಯಲ್ಲಿ ಅವರನ್ನು ನೋಡಲು ಆಗಲಿಲ್ಲ ಎಂಬ ನೋವು ಸದಾ ಕಾಡುತಿತ್ತು. ಒಂದು ಕ್ಷಣ ಹೃದಯ ರೋದಿಸಿತು, ಕಣ್ಣು ತೆವಗೊಂಡಿತು ಪ್ರಕಾಶಣ್ಣ. ಹುಟ್ಟಿದಾಗಿನಿಂದ ನನ್ನನ್ನು ಸಾಕಿ ಬೆಳೆಸಿದ, ನನ್ನಜ್ಜಿಯ ನೆನಪಾಯಿತು ಕಳೆದ ಮಳೆಗಾಲದಲ್ಲಿ 15 ದಿನಗಳ ಅಂತರದಲ್ಲಿ ಅಜ್ಜ ಅಜ್ಜಿ ಇಬ್ಬರನ್ನು ಕಳೆದುಕೊಂಡೆ. ಕೊನೆಗಳಿಗೆಯಲ್ಲಿ ಅವರನ್ನು ನೋಡಲಾಗಲಿಲ್ಲ. ಈಗ ಅವರ ತುಂಬಾ ನೆನಪಾಗುತ್ತಿದೆ ನನ್ನಿಂದ ಕಣ್ಣೀರು ತಡೆದುಕೋಳ್ಳಲು ಆಗ್ತಿಲ್ಲ.

ಮನಮುಕ್ತಾ said...

ಪ್ರಕಾಶಣ್ಣ,

ಓದಿ, ಗ೦ಟಲು ಕಟ್ಟಿ ಕಣ್ಣಲ್ಲಿ ನೀರು ಬ೦ತು.
ಹಸಿವೆ..ತಡೆದುಕೊಳ್ಳುವುದು..ತು೦ಬ ಕಷ್ಟ..
ಆ ಹೊತ್ತಿನಲ್ಲಿ ಅನಿವಾರ್ಯವಾಗಿ ತಿನ್ನುವುದು ತೀರಾ ಕಷ್ಟ..
ಯಾರಿಗೂ ಬೇಡ..ಆ ಪರಿಸ್ತಿತಿ..

ಭಾವನೆಯ ಜೊತೆ ನೈಜತೆ ತು೦ಬಿದೆ.

ರವಿಕಾಂತ ಗೋರೆ said...

ಹುಹ್... ಏನು ಹೇಳಲೂ ಮನಸ್ಸಾಗುತ್ತಿಲ್ಲ....:-(

ದಿನಕರ ಮೊಗೇರ.. said...

ಪ್ರಕಾಶಣ್ಣ,
ತುಂಬಾ ನೋವಿನ ಕಥನ..... ಕೆಲವು ಸಾಲುಗಳಂತೂ ಕಣ್ಣೀರು ತರಿಸಿತು...... ಹಸಿವು, ನಮ್ಮೆಲ್ಲರ ನಾಟಕವನ್ನ ಬೆತ್ತಲು ಮಾಡತ್ತೆ.... ಮನಸ್ಸಿಗೆ ಬೇಸರವಾದರೂ ದೇಹ ಅನ್ನ ಬೇಡತ್ತೆ..... ತುಂಬಾ ಸುಂದರ ನಿರೂಪಣೆ..... ಮಾತೇನೂ ಬರೆಯಲು ತೋಚುತ್ತಿಲ್ಲ.... ಕಣ್ಣುಮಂಜಾಗಿದೆ.....

ಮನಸು said...

ha, enta kathe prakashanna tumba chennagide...geNu hottegaagi manushya kasta padlebeku..

nimma taayi nijakku tumba kasta pattu saakiddare nimmellarannu.

manasu bhaaravagide, kannu oddeyaagive.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ತುಂಬಾ ಭಾವುಕ ಬರಹ
ಮನಸ್ಸಿಗೆ ತುಂಬಾ ನಾಟಿತು

ಸಿಮೆಂಟು ಮರಳಿನ ಮಧ್ಯೆ said...

ಸವಿಗನಸು (ಮಹೇಶ್)

ಬದುಕಿನ ಕಟುವಾದ ಕಹಿಸತ್ಯ ಇದು...!

ಪ್ರತಿಯೊಬ್ಬರ ಆತ್ಮೀಯರು..
ಇಷ್ಟವಾದವರು..
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ಸಾಯಲೇ ಬೇಕು..
ಕಣ್ಣೆದುರಿಗೆ ಹೆಣವಾಗಿ ಮಲಗಿರುತ್ತಾರೆ.. ಸಾಯುತ್ತಾರೆ...

ಆಗಿನ ಹಸಿವೆ...
ಹೊಟ್ಟೆ ತುಂಬಿಸಿಕೊಳ್ಳುವದೋಸ್ಕರ ತಿನ್ನುವದಿದೆಯಲ್ಲ...
ಅದರಷ್ಟು ಕೆಟ್ಟದಾದ ಕಷ್ಟ...
ನಮ್ಮ ಬಗ್ಗೇ ಅಸಹ್ಯ ಪಡುವಂಥಹ ಸನ್ನಿವೇಶ ಅದು...

ಅದು ಯಾರಿಗೂ ಬೇಡ...
ಬೇಡವೇಂದರೂ... ಅನುಭವಿಸಲೇ ಬೇಕಾದ ಪರಮ ಸತ್ಯ...

ಪ್ರತಿಕ್ರಿಯೆಗೆ ಧನ್ಯವಾದಗಳು...

Karthik H.K said...

ಈ ಕಷ್ಟವನ್ನು ಅನುಭವಿಸಿದ್ದರಿಂದ ಎದೆಗೆ ನಾಟಿಕೊಂಡಿತು ನಿಮ್ಮ ಕತೆ.

ಸಿಮೆಂಟು ಮರಳಿನ ಮಧ್ಯೆ said...

ನಿಶಾರವರೆ....

ಪ್ರತಿಯೊಬ್ಬರೂ ಅನುಭವಿಸಲೇ ಬೇಕಾದ..
ಅನಿವಾರ್ಯ ಕಷ್ಟ ಇದು...

ಅಂದು ವಿಷ್ಣು ವರ್ಧನ್ ತೀರಿಕೊಂಡಾಗ ಭಾರತಿಯವರ "ಹಸಿವಿನ" ಬಗೆಗೆ ಯಾರೊಬ್ಬರೂ...
ವಿಚಾರ ಮಾಡಿರಲಿಕ್ಕಿಲ್ಲ...!

ಇಂದು ಮೇರು ನಟ "ಅಶ್ವತ್ಥ್" ತೀರಿಕೊಂಡಾಗ..
ಅವರ ಮಗ...
ಮಡದಿಯವರ ಅನಿವಾರ್ಯ "ಹಸಿವಿನ" ಬಗೆಗೆ ಯಾರೊಬ್ಬರ ಲಕ್ಷವೂ ಇರಲಿಕ್ಕಿಲ್ಲ...

ಪ್ರತಿಯೊಬ್ಬರ ಸಾವಿನಲ್ಲಿಯೂ ಹಸಿವೆ
ಮರ್ಯಾದೆ ಇಲ್ಲದೆ ತನ್ನ ಕ್ರೂರತೆಯನ್ನು ತೋರಿಸುತ್ತದೆ...

ಬಹುಷಃ...
ಇದೇ... ಜೀವನ...

ಹೀಗೆಯೇ..... ಜೀವನ...

ನಿಮ್ಮ ಬದುಕಿನ ಸಂಕಟ ನಮಗೂ ದುಃಖ ತರಿಸಿತು...

Subrahmanya Bhat said...

ನನ್ನ ೨೦ ನೇ ವಯಸ್ಸಿನಲ್ಲೇ ನನಗೆ ಈ ಅನುಭವವಾಗಿತ್ತು. ೧೦ ವರ್ಷಗಳ ಹಿಂದೆ ನನ್ನ ತಂದೆ ನನ್ನ ಬಿಟ್ಟು ಹೋದಾಗ...ಆ ನೋವನ್ನು ಅನುಭವಿಸಿದಂತೆಯೇ ಬರೆದಿದ್ದೀರಿ...ಅದೇನೋ ನನಗೀಗ ಯಾರು ನಿಧನರಾದರೂ ನೋವೇ ಆಗುವುದಿಲ್ಲ....ನಿಮ್ಮ ಬರಹ ಹೃದಯಸ್ಪರ್ಶಿಯಾಗಿದೆ.

ಜಲನಯನ said...

ಪ್ರಕಾಶ್...ಏನಪಾ ನೀವು...ನನ್ನ research report ಬರೀತಾ ಮಧ್ಯದಲ್ಲಿ ಬ್ಲಾಗು ನೋದಲು ಬಂದವನ ಕಣ್ಣಲ್ಲಿ ನೀರಾಡಿಸಿ ಮತ್ತೆ ರಿಪೋರ್ಟ್ ಮುಂದುವರೆಸಲಾಗದಂತೆ ಮಾಡಿದ್ರಿ....ನನಗೆ ನನ್ನ ಪ್ರೀತಿಯ ಅಜ್ಜನ (ತಾಯಿಯ ಅಪ್ಪನ) ನೆನಪಾಯಿತು...ಕಣ್ಣು ಹನಿಯಾಯಿತು...ನನ್ನಪ್ಪ ನನ್ನ ಎಸ್ಸೆಸೆಲ್ಸಿಯ ಪ್ರವಾಸಕ್ಕೆ ಕಳುಹಿಸೊಲ್ಲ ಅಂತ ಖಡಾಖಂಡಿತವಾಗಿ ಹೇಳಿ ತೋಟಕ್ಕೆ ಹೊರಟುಹೋಗಿದ್ದಾಗ...ಅಳುತ್ತಿದ್ದ ನನ್ನನ್ನು ಕರೆದುಕೊಂಡು ಹೋಗಿ, ಶಾಲೆಯ ಡ್ರಿಲ್ ಮಾಸ್ತರ್ ಕೈಗೆ 150/= ರೂಪಾಯಿಕೊಟ್ಟು ನಮ್ಹುಡ್ಗನ ಎಸ್ರು ಬರ್ಕಳಿ ಮೇಷ್ಟ್ರೆ ಅಂತ...ಹೇಳಿದ್ರು.... ಅವರ ಕೊನೆಗಾಲದಲ್ಲಿ ಮಂಗಳೂರಿನಲ್ಲಿ ಎಮ್ ಎಫ್ ಎಸ್ಸಿ ಮಾಡುತ್ತಿದ್ದೆ ಅವರನ್ನು ನೋಡಲಾಗಿರಲಿಲ್ಲ...ಅವರಿಗೆ ಬಹಳ ಪ್ರೀತಿಯಿಂದ ನಮ್ಮ ಕಾಲೇಜಿನಲ್ಲಿ ಸಂಸ್ಕರಿಸಿ ನಾವೇ ತಯಾರಿಸಿದ ಮೀನಿನ ಕ್ಯಾನ್ ತರುತ್ತಿದ್ದೆ ಅವರು ಅದನ್ನು ಅಷ್ಟೇ ಜೋಪಾನಮಾಡಿ ಅಜ್ಜಿ ಜೊತೆ ಎರಡು ಮೂರು ದಿನ ಇಟ್ಟು ತಿನ್ನುತ್ತಿದ್ದರು......ಇದು ಬಹಳ ಭಾವನಾತ್ಮಕ ಲೇಖನ.

ಆನಂದ said...

ಮನಮುಟ್ಟುವ ಲೇಖನ.
ನಾನು ಮರೆಯಬೇಕೆಂದುಕೊಂಡಿದ್ದ ಅನೇಕ ಘಟನೆಗಳನ್ನು ಮತ್ತೆ ನೆನಪಿಸಿತು.

ಶಿವಶಂಕರ ವಿಷ್ಣು ಯಳವತ್ತಿ said...

thumba chennagide prakashanna....

am loving it..

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಚುಕ್ಕಿ ಚಿತ್ತಾರ...

ಹಸಿವೆ ಈ ಜಗತ್ತಿನ ಕಟು ವಾಸ್ತವ...

ಹಸಿವೆ ಅನ್ನೋದೆ ನಮ್ಮ ಬದುಕಿನ ಸ್ವಾರಸ್ಯ..

ನಮ್ಮಿಂದ ಏನೆಲ್ಲಾ ಮಾಡಿಸುತ್ತದೆ ಈ ಹಸಿವೆ... ಅಲ್ಲವಾ...?

ಆದರೆ...

ಹಸಿವೆ ಇಲ್ಲದ ಜಗತ್ತಿನಲ್ಲಿ..
ಸ್ವಾರಸ್ಯವೇ ಇಲ್ಲ...!

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ಇಂಥಹ ಕಥೆ ಬರೆಯುವಾಗ ಅಳುಕಿತ್ತು...
ಉದ್ದವಾಗಿರುತ್ತದೆ...
ಸಂಭಾಷಣೆ ಜಾಸ್ತಿ...
ದುಃಖಭಾವ ಜಾಸ್ತಿ... ಅಂತೆಲ್ಲ...

ನಿಮ್ಮೆಲ್ಲರ ಪ್ರತಿಕ್ರಿಯೆ ಓದಿ ಸಮಾಧಾನವಾಯಿತು...

ಬದುಕಿನಲ್ಲಿ...
ತೀರಾ ಹತ್ತಿದವರು ಹೋದರೂ...
ಸಂಬಂಧಿಕರ ಸಾಂತ್ವನ ಇಲ್ಲದಿದ್ದರೂ...
ಹಣಕಾಸಿನ ತೊಂದರೆ ಇದ್ದರೂ...

ಭೌತಿಕ ಬದುಕಿನ ಎಲ್ಲಾ ಕೊರತೆಗಳು ಏನೂ ಅಲ್ಲ...

ಆಪ್ತರ ಹೆಣದ ಮುಂದೆ ಹಸಿವೆ ಆಗುವದಿದೆಯಲ್ಲ...!
ಅದಕ್ಕಿಂತ ಕಷ್ಟ ಇನ್ನಿಲ್ಲ..

ಮನಸ್ಸಿಗೆ..
ಹೃದಯಕ್ಕೆ ಹತ್ತಿರದವರ ಶವದ ಮುಂದಿನ ಹಸಿವು... ಬದುಕಿನ ಕಟು.. ಕಹಿ ವಾಸ್ತವ...!

ಅಲ್ಲವಾ...?

umesh desai said...

ಹೆಗಡೇಜಿ ಬದುಕಿನ ವಾಸ್ತವತೆಯ ದರ್ಶನ ಮಾಡಿಸಿರುವಿರಿ ಸ್ವತಃ ನನಗೆಅನುಭವ ವಿದೆ ಹಸಿವಿನ ಮಹಿಮೆಯೇ ಹಾಗೆ
ಒಂದು ಸಲಕೆ ಕತೆ ಚೆನ್ನಗಿ ಬರೀತಿರಿ ಈ ಕತೆಬರವಣಿಗೆ ಸೀರಿಯಸ್ಸಾಗಿ ತಗೊಳಿ ನಿಮ್ಮ ಶೈಲಿ ಅಪರೂಪದ್ದು....

ಗೌತಮ್ ಹೆಗಡೆ said...

prakashanna nice:)

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ,

ಕಥೆಯನ್ನು ಓದುತ್ತಾ ಹೋದಂತೆ ನಮ್ಮಜ್ಜಿಯ ನೆನಪನ್ನು ತಂದಿರಿ. ನಾನು 1 ವರ್ಷವಾಗಿದ್ದಾಗಿನಿಂದ ನಮ್ಮಜ್ಜಿ ಮನೆಯಲ್ಲೇ ಬೆಳೆದೆ. ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಮೇಲೂ ಬೆಳಗ್ಗೆ ಅಜ್ಜಿಮನೆ ಭೇಟಿ ಮತ್ತು ಸಂಜೆ ಮನೆಗೆ ಹೋಗದೇ ನಮ್ಮಜ್ಜಿ ಮನೆಗೆಹೋಗಿ ನಂತರ ಮನೆಗೆ ಹೋಗುತ್ತಿದ್ದೆ.

ನಮ್ಮಜ್ಜಿ ಹೋದಾಗ ನಾನು ಬೇರೆಲ್ಲೋ ಹೋಗಿದ್ದೆ. ವಿಷಯ ತಿಳಿದಾಗ ಸಂಜೆಯಾಗಿತ್ತು. ಇಡೀ ರಾತ್ರಿಯೆಲ್ಲ ನಿದ್ದೆಯಿಲ್ಲ. ಹೊರಗೆ ಹೋಗಿದ್ದರಿಂದ, ಹಸಿವೂ ಒಂದು ಕಡೆ, ಸಂಕಟ ಒಂದುಕಡೆ, ನಿಜಕ್ಕೂ ... ಹೇಳಲಾಗುವುದಿಲ್ಲ. ನಮ್ಮ ಸ್ನೇಹಿತರು ಕೊನೆಗೆ ರಾತ್ರಿ ೧೦.೦೦ ಗೆ ಏನಾದರೂ ತಿನ್ನು, ಏಕೆಂದರೆ, ಕೆಲಸಕಾರ್ಯ ಮುಗಿವವರೆಗೆ ಏನೂ ಇಲ್ಲ ಎಂದು ಹಠ ಮಾಡಿದರು. ನಿಮ್ಮ ಕಥೆಯಲ್ಲಿ ಕೊನೆಯಲ್ಲಿ ಅಜ್ಜಿ ಹೇಳುವ ಮಾತುಗಳು ಅಂದಿನ ನನ್ನ ಸ್ಥಿತಿಯೇ ಆಗಿತ್ತೆನ್ನಬಹುದು.
ಕಥೆಯನ್ನು ಓದುತ್ತಾ ನಮಗೆ ಬಂದಿರುವ/ಬರುವ ಕಷ್ಟಗಳಿಗೆಲ್ಲಕ್ಕಿಂತ `ಹಸಿವೆಯನ್ನು' ತಡೆಯುವುದೇ ಭಾರೀ ಕಷ್ಟ ಎನ್ನುವ ಅಜ್ಜಿಯ ಮಾತಂತೂ ಸತ್ಯ. ಇನ್ನೇನೂ ಬರೆಯಲಾಗುತ್ತಿಲ್ಲ...

ಚಿತ್ರಾ said...

ಪ್ರಕಾಶಣ್ಣ,
ಅಜ್ಜಿಯ ನೆನಪಿನೊಂದಿಗೆ ಅವಳ ನೋವುಗಳನ್ನೂ ಅನುಭವಿಸಿದೆವಲ್ಲ ಅದು ಕಷ್ಟ ಎನಿಸಲಿಲ್ಲ !
ನಗೆಯುಕ್ಕಿಸಿದಂತೆಯೇ ಕಣ್ಣೀರು ತರಿಸುವುದೂ ನಿಮಗೆ ಕಷ್ಟ ವಾಗಲಿಲ್ಲ !
ಇದು ಕಥೆ ಅಂತ ಗೊತ್ತಿದ್ದೂ ಓದುವಾಗ ಕಣ್ಣು ಒದ್ದೆಯಾಯಿತಲ್ಲ , ಗಂಟಲು ಉಬ್ಬಿತಲ್ಲ , ಅದನ್ನ ತಡೆದುಕೊಳ್ಳುವುದು ಜಾಸ್ತಿ ' ಕಷ್ಟ . ಎನಿಸಲಿಲ್ಲ '
ಆಫೀಸಿನಲ್ಲಿ ಅಕ್ಕ-ಪಕ್ಕದವರು ಇವಳ ಕಣ್ಣಲ್ಲೇಕೆ ವಿನಾ ಕಾರಣ ನೀರು ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದರಲ್ಲ ಅದಕ್ಕೆ ಉತ್ತರಿಸುವುದು ಹೆಚ್ಚು ' ಕಷ್ಟವಾಗಲಿಲ್ಲ'
ಆದರೆ , ಕೇವಲ ಕಥೆ ಓದಿ ಯಾರಾದರೂ ಅಳುತ್ತಾರಾ ಬೇರೇನೋ ಇದೆ ಎಂದು ಸಂಶಯ ಪಡುತ್ತಾರಲ್ಲ ಅದಕ್ಕೆ ಉತ್ತರಿಸುವುದೇ " ಕಷ್ಟ " ವಾಗಿದೆ ನೋಡಿ !

" ಕಷ್ಟ.. ಯಾಕೆ ಕಷ್ಟ ಆಗೇ ಇರಬೇಕು...
ಈ ಕಷ್ಟಗಳೆಲ್ಲ ಸ್ವಲ್ಪ ಖುಷಿಯಾಗಿ ಯಾಕೆ ಇರಬಾರದು...?" ತುಂಬಾ ಒಳ್ಳೆಯ ಪ್ರಶ್ನೆ !

Anonymous said...

ಪ್ರಕಾಶಣ್ಣ,,
ನಿಮ್ಮ ಬರಹ ತುಂಬಾ ಚೆನ್ನಾಗಿದೆ..ಓದುತ್ತಿದ್ದಂತೆ ನನಗೆ ೩ ವರ್ಷದ ಹಿಂದೆ ತೀರಿಕೊಂಡ ನನ್ನ ಅಜ್ಜಿಯ ನೆನಪಾಯಿತು..ಅವಳ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿದ್ದೇನೆ ಕೂಡ..ಆಕೆಯದು ಬದುಕಿನೆಡೆಗೆ ಅದಮ್ಯ ಉತ್ಸಾಹ, ಎಂತಹ ಕಷ್ಟಕ್ಕೂ ಎದೆಗುಂದದಂತಹ ಮೇರು ವ್ಯಕ್ತಿತ್ವ..

ಉತ್ತಮ ಬರಹವನ್ನು ಉಣ ಬಡಿಸಿದ ನಿಮಗೆ ಅನಂತಾನಂತ ಧನ್ಯವಾದಗಳು..

Deepasmitha said...

ಪ್ರಕಾಶಣ್ಣ, ಬರಹ ತುಂಬ ಹೃದಯಸ್ಪರ್ಶಿಯಾಗಿದೆ

ಸುಮ said...

ಪ್ರಕಾಶಣ್ಣ ಇದು ನಿಜಕ್ಕೂ ಕಥೆಯಲ್ಲ. ವಾಸ್ತವದ ಚಿತ್ರಣ . ನನಗೆ ನನ್ನ ಅಜ್ಜ ಹೋದಾಗ ಪಕ್ಕದ ಮನೆಯಲ್ಲಿ ಕುಳಿತು ತಿಂಡಿ ತಿಂದದ್ದು ನೆನಪಾಗಿ ಕಣ್ಣಲ್ಲಿ ನೀರು ಬಂತು . ಇದೇ ರೀತಿಯ ಯೋಚನೆಗಳು ಅಂದು ಕಾಡಿತ್ತು.

PaLa said...

sakkat..

ಮೂರ್ತಿ ಹೊಸಬಾಳೆ. said...

ಎಂತಹಾ ನಿರ್ಭಾವಿಯನ್ನೂ ಒಮ್ಮೆ ಕಣ್ಣೀರಾಗಿಸುವ ಬರಹ.
ನನಗೆ ಇದು ಕೇವಲ ಕಥೆ ಅನಿಸುವುದಿಲ್ಲ ಆದರೆ ಕಥೆ ಆಗಿದ್ದಿದ್ದರೆ ಒಳ್ಳೆಯದಿತ್ತು ಅನಿಸುತ್ತದೆ.

shravana said...

ತುಂಬಾ ಭಾವುಕ ಬರಹ..ಕಥೆಯೆಂದು ಗೊತ್ತಿದ್ದರು ಮನಸು ಸ್ವಂತ ಅನುಭವಕ್ಕೆ ಹೊಲಿಸಿ ದುಖ್ಖಿಸುತ್ತಿದೆ..

ಓದುಗರ ಹ್ರುದಯಕ್ಕೆ ಇದು ನನ್ನಂತಹುದೆ ಒಂದು ಅನುಭವ ಎಂಬ ಭಾವ ಬರುವುದೆ ನಿಮ್ಮ ಲೆಖನಗಳ ವಿಷೇಶತೆ.
ಸದಾ ಹೀಗೆ ಬರೆಯುತ್ತಿರಿ.. ಬರೆಯುವಂತಾಗಲಿ..

PARAANJAPE K.N. said...

ನಿಮ್ಮ ಬರವಣಿಗೆಯ ಶಕ್ತಿ ಹರಳುಗಟ್ಟುತ್ತಿದೆ. ದಿನದಿ೦ದ ದಿನಕ್ಕೆ ನೀವು ಬರವಣಿಗೆ ಕ್ಷೇತ್ರದಲ್ಲಿ ಪಳಗುತ್ತಿದ್ದೀರಿ. ಈ ಅಜ್ಜಿಯ ಕಥೆಯ೦ತೂ ಮನೋಜ್ಞವಾಗಿದೆ. ಮುಂದಿನ ಲೇಖನಕ್ಕೆಕಾಯುವೆ.

ಸೀತಾರಾಮ. ಕೆ. said...

ಹಸಿವಿನ ಕಿಚ್ಚು ಬದುಕಿರುವವರನ್ನು
ಬದುಕಿಸಿಡಲು ಸುಡುವ ಪರಿ
ಅತ್ಯ೦ತ ಕಷ್ಟದ್ದು
ಕಥೆ ಮನವನ್ನು ಕಲುಕಿತು.

ಸಿಮೆಂಟು ಮರಳಿನ ಮಧ್ಯೆ said...

ಪ್ರವೀಣ್ (ಮನದಾಳದಿಂದ..)

ನಮ್ಮ ಆಪ್ತರ ಅಗಲಿಕೆ ಎಷ್ಟೊಂದು ಕಷ್ಟ ಅಲ್ಲವಾ?
ಈ ಅಜ್ಜಿ ತನ್ನ ಸರ್ವಸ್ವವಾದ ಗಂಡನನ್ನು ಕಳೆದು ಕೊಂಡರೂ...
ಅದು ಕಷ್ಟ ಅಲ್ಲ ಅಂತಾಳೆ..

ಅಜ್ಜಿ ಅನ್ನೋ ಹಾಗೆ ಕಷ್ಟ ಅನ್ನೋದು..
ಕಾಲ ಗತಿಸಿದ ಮೇಲೆ...

ಅದು ಒಂಥರಾ ಸುಖವೆನಿಸುವ ಭಾವ ಉಂಟು ಮಾಡುತ್ತದೆ...
ಕಷ್ಟದ ದಿನಗಳು ಕಹಿಯಿದ್ದರೂ...
ಅದರ ನೆನಪು ಸಿಹಿಯೆನಿಸುತ್ತದೆ...

ನಿಮ್ಮ ಅಜ್ಜ, ಅಜ್ಜಿಯರ ಆಶೀರ್ವಾದ ನಿಮಗೆ ಯಾವಾಗಲೂ ಇರಲಿ...
ಅವರ ಮರೆಯದ ನೆನಪು ನಿಮಗೆ ಚೇತನವಾಗಲಿ..
ಅವರ ಜೀವನ, ಮಾತುಗಳು ನಿಮಗೆ ಆದರ್ಶವಾಗಿರಲಿ

ಪ್ರೀತಿಯಿಂದ

ಪ್ರಕಾಶಣ್ಣ..

jayalaxmi said...

ಶುರುವುವಿನಲ್ಲಿ ಚ್ಯೂಯಿಂಗ್ ಗಮ್ ಅಂತ ಅನಿಸಿದರೂ ಕೊನೆ ಕೊನೆಗೆ ಕತೆ ಗಟ್ಟಿಗೊಳ್ಳುತ್ತಾ ಹೋಗಿ ನಮ್ಮನ್ನ ಸುಮ್ಮನೆ ನೋಡುತ್ತಾ ನಿಲ್ಲುವ ಹಾಗೆ ಮಾಡಿಬಿಡುತ್ತದೆ. ಕತೆ ಓದಿದ ನಂತರ ಸಾವುಗಳ ಸಾಲು ಮೆರವಣಿಗೆ ಮನದ ಕಣ್ಣಿದಿರು ಹಾಯ್ದು ಹೋಗುತ್ತಲೆ ಇತ್ತು...

ಸಿಮೆಂಟು ಮರಳಿನ ಮಧ್ಯೆ said...

ಮನಮುಕ್ತಾರವರೆ...

ಹಸಿವೆ ಅತ್ಯಗತ್ಯವಾದರೂ...
ಎಷ್ಟೊಂದು ಕ್ರೂರಿ ಅಲ್ಲವಾ...?

ನನ್ನ ಬ್ಲಾಗ್ ಮಿತ್ರ "ಉದಯ್ ಇಟಗಿಯವರು"
ಒಮ್ಮೆ
ಕೆಲವರು ಬದುಕಲಿಕ್ಕಾಗಿ ತಮ್ಮ ಗೆಳೆಯನ ಹೆಣವನ್ನು ತಿಂದ ಕಥೆ ಹೇಳಿದ ನೆನಪು...

ಈ ಹಸಿವೆಗೆ ಮರ್ಯಾದೆಯಿಲ್ಲ..
ನಾಚಿಕೆಯಿಲ್ಲ...
ಏನೆಲ್ಲ ಮಾಡಿಸಿಬಿಡುತ್ತದೆ... ಅಲ್ಲವಾ...?

Astro Chats said...

ಹೋಯ್,
ಬರೆಯುವಾಗ ಕಷ್ಟ ಆಗಲಿಲ್ಲವಾ?
ಅದು ಹೇಗೆ ಬರೆಯುತ್ತೀ?
ನಮ್ಮಲ್ಲಿ ಹೆಣ ಇಟ್ಕೊಂಡು ತಿನ್ನೋದಿಲ್ಲಾಪಗಪ್ಪ.
ಮನಮುಟ್ಟುವಂತಿದೆ

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತ್...

ನಮ್ಮವರೆನ್ನುವವರು ಸತ್ತಾಗ...

ಎನ್ನುವ ವಿಷಯವನ್ನೇ ನಾವು ಕಲ್ಪಿಸಿಕೊಳ್ಳುವದಿಲ್ಲ...

ಎಲ್ಲಿ.. ಯಾವಾಗ ಬೇಕಾದರೂ ಸಂಭವಿಸ ಬಹುದಾದ...
ಅನಿಶ್ಚಿತತೆ ಅದು...

ಅಂಥದೊಂದು ಸಾವಿಗೆ ನಾವು ತಯಾರಾಗಿರುವದಿಲ್ಲ... ಅಲ್ಲವೆ..?

ಇದು ವಿಚಿತ್ರ ಅಂತ ನನ್ನ ಭಾವನೆ..

ಸಿಮೆಂಟು ಮರಳಿನ ಮಧ್ಯೆ said...

ದಿನಕರ...

ನನ್ನ ನಾದಿನಿ (ಸಿಂಗಾಪುರದಲ್ಲಿದ್ದಾಳೆ) ಹೇಳುತ್ತಿರುತ್ತಾಳೆ..

ಸತ್ತವರು ...
ಆಗಾಗ ...
ಕೊನೆ ಪಕ್ಷ ವರ್ಷಕ್ಕೊಮ್ಮೆಯಾದರೂ..
ನಮ್ಮನ್ನು ಭೇಟಿಯಾಗ ಹೋಗ ಬೇಕಿತ್ತು... ಆಗ ಅಷ್ಟೆಲ್ಲ ದುಃಖವೆನಿಸುವದಿಲ್ಲ ಅಂತ...

ನನಗೆ ಈ ಕಲ್ಪನೆ ಬಹಳ ಇಷ್ಟವಾಯಿತು..

ಹಾಗೆ ಹೋಗಿ ಬರುತ್ತಾರೆಂದರೆ...

ಆ ಸಾವಿಗೂ ಜನ ಹೆದರುವದಿಲ್ಲ... ಅಲ್ಲವಾ..?

ರಹಸ್ಯ.. ಕುತೂಹಲವಿಲ್ಲದ ಬದುಕು.. ಸ್ವಾರಸ್ಯ ಇರುವದಿಲ್ಲ...

ಈ ಜಗತ್ತಿನಲ್ಲಿ ಅತ್ಯಂತ ಸ್ವಾರಸ್ಯಕರವಾದ ಸಂಗತಿ ಎಂದರೆ " ಸಾವು"

ಪ್ರತಿಕ್ರಿಯೆಗೆ ಧನ್ಯವಾದಗಳು...

Raghu said...

ಪ್ರಕಾಶಣ್ಣ...
ಚಂದದ ಬರಹ... ಮನಸ್ಸಿಗೆ ತಲುಪುವಂಥಹ ಬರಹ... ಬರೆದ ವಾಕ್ಯಗಳು ಮತ್ತು ಅದರ ಬಾವ, ಅರ್ಥ ಅಪಾರ....!!
ನಿಮ್ಮವ,
ರಾಘು.

ಸಿಮೆಂಟು ಮರಳಿನ ಮಧ್ಯೆ said...

ಮನಸು....

ನಾವು ಭಾರತೀಯರು ತುಂಬಾ ಭಾವುಕರು...
ನಮಗೆ ಬಾಂಧವ್ಯ , ಸಂಬಂಧಗಳ ಬಂಧ ಬಲು ದೊಡ್ಡದು..
ಅದಕ್ಕಾಗಿಯೇ ಬದುಕುತ್ತೇವೆ...
ಅದರಲ್ಲೇ ಸುಖ ಕಾಣುತ್ತೇವೆ..
ಅದರಲ್ಲೇ ಬದುಕಿನ ಸಾರ್ಥಕತೆ ಎಂದು ಭಾವಿಸುತ್ತೇವೆ...

ತುಂಬಾ ಆಪ್ತರೊಬ್ಬರ ಮರಣವನ್ನು ಒಪ್ಪಲು ಮನ ಒಪ್ಪಲು ಸಿದ್ದವಿರುವದಿಲ್ಲ...
ಆಗ ಹತ್ತಿರದವರ.. ಬೆಂಬಲ...
ಸಾಂತ್ವನ ..ಇಲ್ಲದಿದ್ದರೂ...
ಹಣಕಾಸಿನ ತೊಂದರೆ ಇದ್ದರೂ...

ಬಹಳ ಕಷ್ಟ ಅನ್ನುವದು "ಹಸಿವೆ"
ಅದೂ ಸತ್ತವ್ಯಕ್ತಿಯ ಮುಂದೆ ತಿನ್ನುವದು...!

ಮೊನ್ನೆ ಅಶ್ವತ್ಥರವರ ಮಗ ಮತ್ತು ಮಡದಿಯವರು ಅಳುವಾಗ..
ಮತ್ತೆ ನೆನಪಾಯಿತು... "ಹಸಿವಿನ " ಕಷ್ಟ...

ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು..

ಶಿವಪ್ರಕಾಶ್ said...

heart touching story prakashanna...

AntharangadaMaathugalu said...

ಪ್ರಕಾಶ್ ಅವರೇ...
ಈ ಅನುಭವ ಎಲ್ಲರಿಗೂ ಒಂದಲ್ಲ ಒಂದು ಸಲ ಆಗೇ ಇರತ್ತೆ. ಆದರೆ ಅದನ್ನು ಮಾತುಗಳಲ್ಲಿ, ಓದುವವರ ಮನ ಮುಟ್ಟುವಂತೆ ಹಿಡಿದಿಡುವುದು "ಕಷ್ಟ". ಓದಿದ ಎಲ್ಲರಿಗೂ ಅವರವರ ನೆನಪುಗಳು ಕೆದರಿ ಭಾವುಕರಾಗುವಂತೆ ಮಾಡಿದ್ದೀರಿ...

ಶ್ಯಾಮಲ

ಸಿಮೆಂಟು ಮರಳಿನ ಮಧ್ಯೆ said...

ಸಾಗರದಾಚೆಯ ಇಂಚರ..( ಗುರುಮೂರ್ತಿ)

ನಿಜವಾದ ಕಷ್ಟ ಯಾವುದು...
ಭಾವುಕ ಮುಗ್ಧ ಮನಸ್ಸಿಗೆ
ಹೃದಯಕ್ಕಾದ ನೋವುಗಳು...

ಭೌತಿಕ ನೋವುಗಳಾದ...
ಹಣಕಾಸಿನ ತೊಂದರೆ..
ಹತ್ತಿರದವರ ಪ್ರೀತಿ, ಸಾಂತ್ವನ ಇಲ್ಲದಿರುವಿಕೆ..
ದೈಹಕ ಕಷ್ಟ, ನೋವು ಇತ್ಯಾದಿಗಳು ನಗಣ್ಯ... ಅಲ್ಲವಾ...?

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಕಾರ್ತಿಕ್...

ತನ್ನಂತೆ ಪರರ ಬಗೆದೊಡೆ ಕೈಲಾಸ
ಅಂತ ಹಿರಿಯರು ಹೇಳಿದ್ದಾರೆ..

ಇಂಥಹ ಪರಿಸ್ಥಿತಿ ಅನುಭವಿಸಿ ಬಂದಾಗ
ಅದರ ಅರಿವು ಸಹಜ...

ನನ್ನ ಗೆಳೆಯ "ಮಲ್ಲಿಕಾರ್ಜುನ್" ಇಂದು ಫೋನ್ ಮಾಡಿ..
" ಇಂಥಹ ಕಥೆಗಳಿಗೆ ಏನಂತ ಪ್ರತಿಕ್ರಿಯೆ ಕೊಡಲಿ..?
ನಾನು ಅನುಭವಿಸಿದ ದುಃಖದ ಕ್ಷಣಗಳು ನೆನಪಾದವು..
ನನಗೆ ಏನಂತ ಬರೆಯಲು ತೋಚಲಿಲ್ಲ ಮಾರಾಯ " ಅಂದರು...

ಫೋನ್ ಮಾಡಿದ ಎಲ್ಲ ಸ್ನೇಹಿತರಿಗೆ ಧನ್ಯವಾದಗಳು..

ಕಾರ್ತೀಕ್ ನಿಮಗೂ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಬ್ರಮಣ್ಯರವರೆ...

ತುಂಬಾ ಹತ್ತಿರದವರ ಸಾವಿನ ಅನುಭವ ನನಗೆ ಇನ್ನೂ ಆಗಿಲ್ಲ..
ಆಗುವದು ಬೇಡ.... ಅಲ್ಲವಾ..?

ಇದು ನನ್ನ ಕಲ್ಪನೆ...

ಮೊನ್ನೆ ವಿಷ್ಣುವರ್ಧನ್, ಗಾಯಕ ಅಶ್ವತ್ಥ್ ತೀರಿದಾಗ
ಅವರ ಹತ್ತಿರದವರ ದುಃಖ ನನಗೆ ಬಹಳವಾಗಿ ಕಾಡಿತು...
ಅಂಬರೀಷ್ ಅಳುವದು ಮನಕಲಕಿತು...

ಮೇರುನಟ ಅಶ್ವತ್ಥ್ ತೀರಿದಾಗ ಅವರ ಮಗ "ಶಂಕರ್" ನೋಡಲಾಗಲಿಲ್ಲ..

ಆಗ ನನಗೆ ನೆನಪಾದದ್ದು ಅವರ "ಹಸಿವಿನ" ದುಃಖ...

ಇದೇರೀತಿ "ಸಿರಿವಂತ" ಅಂದ ಒಂದು ಸಿನೇಮಾದಲ್ಲಿ ಒಂದು ಸನ್ನಿವೇಶ ಬರುತ್ತದೆ..
ಅದೂ ಕೂಡ ಮನ ಕಲಕುವಂತಿತ್ತು...

ಪ್ರತಿಯೊಬ್ಬರೂ..
ಬೇಡವೆಂದರೂ...
ಅನುಭವಿಸಲೇ ಬೇಕಾದ ಅನಿವಾರ್ಯ ಸಂದರ್ಭ ಇದು...

ನಮ್ಮ ಹತ್ತಿರದವರು ಒಂದಲ್ಲ ಒಂದುದಿನ ನಮ್ಮನ್ನು ಅಗಲುತ್ತಾರೆ...

Avinash said...

ಕೇವಲ ಬರಹ ಮಾತ್ರವಲ್ಲ .... ಕಾಮೆಂಟ್ ಗಳಿಗೆ ನಿಮ್ಮ ಪ್ರತಿಕ್ರಿಯೆಗಳು ಇಷ್ಟವಾಯಿತು ... ಕನ್ನಡ ಬ್ಲಾಗ್ ರ ಗಳಿಗೆ ನೀವು ಮಾದರಿ .........

Umesh Balikai said...

ಪ್ರಕಾಶ್ ಸರ್,

ಹೌದು,.. ಹಸಿವೆ ಆಗಬಾರದ ಟೈಮ್ ನಲ್ಲಿ ಹಸಿವಾಗುವುದು, ತಿನ್ನಲಾಗದ ಸಮಯದಲ್ಲಿ ತಿನ್ನಬೇಕಾದ ಅನಿವಾರ್ಯತೆ ತುಂಬಾ ಕೆಟ್ಟದ್ದು. ಚಿಕ್ಕದೊಂದು ಬೇಜಾರಿಗೆ ಊಟ ಮಾಡದೇ ಇರುವುದು ದೊಡ್ಡದಲ್ಲ.. ಜೀವದ ಜೀವ ಸತ್ತಾಗ ದುಖಃ ದಲ್ಲೂ ಉಣಬೇಕಾದ ಅನಿವಾರ್ಯತೆ ಕೊಡುವ ಕಷ್ಟ ದೊಡ್ಡದು...

ಎಷ್ಟೊಂದು ಭಾವಪೂರ್ಣ, ಮನ ಕಲಕುವಂತಹ ಬರಹ.. ಅಭಿನಂದನೆಗಳು.

-ಉಮೇಶ್

ಸಿಮೆಂಟು ಮರಳಿನ ಮಧ್ಯೆ said...

ಜಲನಯನ (ಆಝಾದ್ ಭಾಯ್)

ನನಗೆ ನನ್ನಜ್ಜ ಬಹಳ ನೆನಪಾಗುತ್ತಾನೆ...
ಕನ್ನಡ ಶಾಲೆಗೆ ಹೋಗುವ ಮುನ್ನ ನನ್ನಜ್ಜ ನನಗೆ ಎರಡನೆಯ ಕ್ಲಾಸಿಗಾಗುವಷ್ಟು ಕಲಿಸಿಬಿಟ್ಟಿದ್ದ..
ಆಗ ನನಗೆ ಬಹಳ ಕೋಪಬರುತ್ತಿತ್ತು...

ಯಕ್ಷಗಾನದ ಪದ್ಯ ಹೇಳಿ ಸಮಾಧಾನ ಪಡಿಸುತ್ತಿದ್ದ...
ಯಕ್ಷಗಾನದ ಭಾಗವತಿಗೆ ಮಾಡುತ್ತಿದ್ದನಂತೆ ನನ್ನಜ್ಜ...

ರೀತಿ ನೀತಿಗಳ...
ಭಾಷಣ ಮಾಡದೆ..
ತಮ್ಮ ನಡತೆಯಿಂದ..
ನಮ್ಮಲ್ಲಿ
ನಮಗರಿವಿಲ್ಲದೆ..
ಒಳ್ಳೆಯತನಗಳ..
ಆದರ್ಶವಾಗಿಬಿಡುವ...
ಅಂಥಹ ಹಿರಿಯರಿಗೆ ನನ್ನ ನಮನಗಳು...

ಪ್ರತಿಕ್ರಿಯೆಗೆ ಧನ್ಯವಾದಗಳು ಆಝಾದ್ ಭಾಯ್...

ಲೋದ್ಯಾಶಿ said...

ಬರಹದ ನಿರೂಪಣಾ ಶೈಲಿ, ಪ್ರತೀ ಸಾಲಿನಲ್ಲಿ ಓದುಗನನ್ನ ಸೆಳೆದಿಟ್ಟು ಕೊಳ್ಳುವಂತಿದೆ.
ಕಣ್ಣು ಒದ್ದೆಯಾದ ಅನುಭವ ತಂದು ಬಿಟ್ಟಿತು ಈ ನಿಮ್ಮ ಬರಹ.

Machikoppa said...

ಈಗಲೂ ನಮ್ಮೊಟ್ಟಿಗಿರುವ ನಮ್ಮ ಅಜ್ಜಿ ಆಗಾಗ ಹೇಳುತ್ತಿದ್ದ 'ಆಗಿನ ಕಾಲದ ನಿಜ ಕಥೆಗಳು' ಜ್ಞಾಪಕಕ್ಕೆ ಬಂತು.ಅವರ ಕಷ್ಟಗಳಿಗೆ ಹೋಲಿಸಿದರೆ ಈಗಿನ ಹೆಂಗಸರು ಹೇಳಿಕೊಳ್ಳುವ ಕಷ್ಟಗಳು - :-)

ಹರೀಶ ಮಾಂಬಾಡಿ said...

ಜೀವನಾನುಭವವೇ ಕಥೆಯಲ್ಲಿದೆ

Venkatakrishna.K.K. said...

ಪ್ರಕಾಶ್..
ಹಸಿವು ಮಾತ್ರ ಅಲ್ಲ..
ಈ ದೇಹದ ಆವಶ್ಯಕತೆಗಳೂ ಹಾಗೆ,
ಅದನ್ನು ಪೂರೈಸಿಕೊಳ್ಳೊದಿಕ್ಕೆ ಮನಷ್ಯಪಡುವ ಕಷ್ಟ..
ಅದು ಕಷ್ಟಗಳಲ್ಲೇಕಷ್ಟ.
ಕಥೆಯಲ್ಲಿ ನಿಜದ ಪ್ರತಿಪಾದನೆ ಮಾಡಿದ್ದೀರ.
ಚೆನ್ನಾಗಿದೆ.ಒಳ್ಳೆಯ ಕಥೆ.

ಸಿಮೆಂಟು ಮರಳಿನ ಮಧ್ಯೆ said...

ಆನಂದ್ ...

ಇದು ನನ್ನ ಕಲ್ಪನೆ ...
ಹೀಗೆ ಆಗಿರ ಬಹುದಾ ಅಂತ.... !

ವಾಸ್ತವದ ನೆಲೆಗಟ್ಟಿನಲ್ಲಿ ಬದುಕಿನ ಬಣ್ಣಗಳನ್ನು..
ಹಂದರಗಳನ್ನು ಬಿಡಿಸಿಡುವ ಪ್ರಯತ್ನ ಈ ಕಥೆಗಳಲ್ಲಿ ಮಾಡಿದ್ದೇನೆ..

ನನ್ನ ಪ್ರಯತ್ನ ಇಷ್ಟವಾಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ...

ನಮ್ಮ ನೆನಪುಗಳು ಹಕ್ಕಿ ಮತ್ತು ಗೂಡು ಇದ್ದ ಹಾಗೆ...
ಬಚ್ಚಿಟ್ಟು ಕೊಳ್ಳೋಣವೆಂದರೆ ಹೊರಗೆ ಹಾರುವ ಪ್ರಯತ್ನ...
ಹೊರಗೆ ಬಿಟ್ಟರೆ ಒಳಗೆ ಬರುವ ತವಕ... !
ಹೊರಗೆ ..
ಮರೆಯಾಗಿ ಹೋಗಲಾರದು..

ಧನ್ಯವಾದಗಳು ಆನಂದ್

ಸಿಮೆಂಟು ಮರಳಿನ ಮಧ್ಯೆ said...

ಆತ್ಮೀಯ ಶಿವು ಯಳವತ್ತಿ....

ಕಷ್ಟಗಳನ್ನು ದಾಟಿದ ಮೇಲೆ ಅವುಗಳ ನೆನಪು ಹಿತವಾಗಿರುತ್ತವೆ...
ವಿಜಯ ಕರ್ನಾಟಕದಲ್ಲಿ ಮೊದಲ ಪೇಜಿನಲ್ಲಿ ಕೆಲವು ವಾಕ್ಯಗಳು ತುಂಬಾ ಚೆನ್ನಾಗಿರುತ್ತವೆ...
ಆ ವಾಕ್ಯಗಳು ನನಗೆ ಬಹಳ ಇಷ್ಟ....

ನಿಮ್ಮ ಚುಟುಕು ಕಥೆಗಳನ್ನು ವಿಜಯಕರ್ನಾಟಕದಲ್ಲಿ ಓದಿದೆ..
ಎಲ್ಲವೂ ಚೆನ್ನಾಗಿತ್ತು..
ಅಭಿನಂದನೆಗಳು ಶಿವು ...

ಪ್ರತಿಕ್ರಿಯೆಗೆ ಧನ್ಯವಾದಗಳು..

Shweta said...

ಪ್ರಕಾಶ ಅಣ್ಣ ,
ಎಸ್ಟು ಮನತಟ್ಟುತ್ತಿದೆ ಬರಹ..ಓದ್ತಾ ಓದ್ತಾ ಸಂಕಟವಾಗಿ ಹೋಯ್ತು .ನಿಜಕ್ಕೂ ಇದು ನಿಮ್ಮ ಕಲ್ಪನೆಯ? ,ಹಸಿವೊಂದು ಇಲ್ಲದಿದ್ದರೆ ಈ ಜಗತ್ತು ನಡೆಯುವ ದಾರಿಯೇ ಬೇರೆಯದಾಗಿತ್ತಲ್ಲ...?..ಬೆಸ್ಟ್ ವನ್ ಯೂ ಎವರ್ ರೋಟ್.

Venkatakrishna.K.K. said...

ಹಸಿವಿನ ಬಗ್ಗೆ ನನ್ನ ಒಂದು ಬರಹ ನೆನಪಾಗುತ್ತೆ..ಆಸಕ್ತರು ಓದಿ..http://sharadabooks.blogspot.com/2009/11/blog-post_26.html

ವಿದ್ಯಾ ದಧಾಥಿ 'ವಿನಯಂ' !! said...

ತುಂಬಾ ಚೆನ್ನಾಗಿ ಬರೆದಿದ್ದೆರಿ ಪ್ರಕಾಶ್. ಬರಹದಷ್ಟೇ, ಬರಹದ ಬಿಗಿತನ, ಅಜ್ಜಿ-ಮೊಮ್ಮಗನ ಸಿಹಿ ಸಂಬಂಧ ಇಷ್ಟ ವಾಯಿತು. ನಿಮ್ಮ ಲೇಖನಗಳು ನಿರಂತರವಾಗಲಿ.

-ವಿನಯ್

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ದೇಸಾಯಿಯವರೆ...

ಹೆಚ್ಚು ಸಾಹಿತ್ಯ ಓದಿಲ್ಲ..
ಹಾಗಾಗಿ....
ಈ ಬರವಣಿಗೆಯನ್ನು ಹೀಗೆಯೇ ಮುಂದುವರೆಸುವೆ..
ನೀವು ಇಷ್ಟ ಪಟ್ಟು ಕೊಡುವ ಪ್ರತಿಕ್ರಿಯೆ ಉತ್ಸಾಹ...
ಮತ್ತು ಒಂದು ಥರಹದ ಜವಾಬ್ದಾರಿಯನ್ನು ಕೊಡುತ್ತದೆ...

ಕಥೆಗಳಲ್ಲಿ ...
ಬದುಕಿನ ಸತ್ಯಗಳನ್ನು..
ಅವ್ಯಕ್ತ ಬಣ್ಣಗಳನ್ನು ಬಿಡಿಸಿಡುವ ಪ್ರಯತ್ನ ಮಾಡುವೆ...
ಇದೆಲ್ಲ ನನಗೆ ಹೊಸತು..
ನನ್ನ ಹುಚ್ಚು ಕಲ್ಪನೆಗಳು...

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ..
ತುಂಬಾ ತುಂಬಾ ಧನ್ಯವಾದಗಳು ದೇಸಾಯಿಯವರೆ...

Jagadeesh Balehadda said...

prakaashanna nijakku bhavanatmakavagi mudi bandide.

Gangadhar said...

ನಾನು ಹುಟ್ಟಿದಾಗಲೇ ಅಕ್ಕರೆಗಾಗಲಿ ಕರಕರೆ (ಕರಕರೆ ಅಂದರೆ ನಮ್ಮ ಕಡೆ ಕಿರಿ ಕಿರಿ ಮಾಡುವವರು ಅಂತ ಅರ್ಥ) ಗಾಗಲಿ ನನಗೊಬ್ಬ ಅಜ್ಜಿ ಅಂತ ಇರಲಿಲ್ಲ. ಆದರೆ ನಿಮ್ಮಂಥವರ ಕಥೆಗಳಲ್ಲಿ ಕಥೆ ನನ್ನ ಅಜ್ಜಿಯರು ಪ್ರತ್ಯಕ್ಷವಾಗಿ ನನ್ನ ಮುದ್ದಿಸುತ್ತಾರೆ. ಕಥೆ ಸ್ವಲ್ಪ ಅನಗತ್ಯವಾಗಿ ಉದ್ದವಾಗಿದೆಯಾದರು ಲಲಿತವಾಗಿದೆ. ನಿಮ್ಮ ದೈತ್ಯ ಪ್ರತಿಭೆ ಕಂಡು ಮೂಕವಾಗಿಹೆ.

ಶರಶ್ಚಂದ್ರ ಕಲ್ಮನೆ said...

ತುಂಬಾ ಭಾವನಾತ್ಮಕವಾಗಿ ಬರದ್ದೆ ಪ್ರಕಾಶಣ್ಣ. ಯಾವಾಗಲು ನಗಿಸ್ತ ಇರ ಬರಹ ಬರಿತಿದ್ದೆ, ಈ ಸಲ ಈ ಬರಹ ನಿನ್ನ ಮತ್ತೊಂದು ಬರವಣಿಗೆಯ ರೂಪವನ್ನು ತೋರಿಸಿತು... ನೀನು ಬರೆದ ನೋವು, ಅನುಭವಿಸಿದವರಿಗಷ್ಟೇ ಗೊತಾಗ್ತು.. ಹಾಗೆ ಇಂತ ನೋವನ್ನ ಅನುಭವಿಸಕ್ಕಾರೆ ನೀನು ಹಾಗು ಅತ್ಗೆ ಮಾಡಿದ್ದ ಸಹಾಯನ ನಾನು ಎಂದಿಗೂ ಮರ್ಯದಿಲ್ಲೇ. ನಿಂಗಳ ಸಹಾಯಕ್ಕೆ ಎಂದಿಗೂ ನಂಗ ಎಲ್ಲ ಚಿರ ಋಣಿಯಾಗಿ ಇರ್ತ್ಯ. ಬಹುಶ ಈ ವಿಷಯನ ನಿನ್ನ ಎದುರಿಗೆ ಮಾತಲ್ಲಿ ನಂಗೆ ಹೇಳಕ್ಕೆ ಆಗದಿಲ್ಲೆ ಅನ್ಸ್ತು....

ಶರಶ್ಚಂದ್ರ ಕಲ್ಮನೆ

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ... ನಿಮ್ಮ ಬರಹಗಳಲ್ಲೆಲ್ಲಾ ತು೦ಬಾ ಇಷ್ಟವಾದ ಕ್ಲಾಸಿಕ್ ಬರಹ ಇದು ನನಗೆ.... ಹೆಚ್ಚೇನೂ ಹೇಳಲು ಗೊತ್ತಾಗುತ್ತಿಲ್ಲ....ಮನಸ್ಸಿಗೆ ತು೦ಬಾ ಹತ್ತಿರವಾದ ಕಥೆ....

Kallu said...

Bro,,

It was really heart touching......

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಗೌತಮ್....

ಈ ಕಥೆ ಬರೆದು ಮೊದಲು ನಿಮಗೆ ಕಳುಹಿಸಿದ್ದೆ..
ಓದಿ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ,
ತಪ್ಪುಗಳನ್ನು ತಿಳಿಸಿದ್ದಕ್ಕೆ..
ತುಂಬಾ ತುಂಬಾ ಥ್ಯಾಂಕ್ಸ್..

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ.... (ಚಂದ್ರು..)

ನಿಮ್ಮ ಅನುಭವ ನಿಜಕ್ಕೂ ಬೇಸರ ತರುತ್ತದೆ...

ನಮ್ಮ ಪರಮ ಆಪ್ತರು ಗತಿಸಿದಾಗ
ಈ ಹಸಿವೆಯೂ ಸತ್ತು ಹೋಗ ಬೇಕಿತ್ತು ಅಲ್ಲವಾ...?

ಬದುಕೇ... ಹೀಗೆ...
ಬದುಕಲ್ಲಿಯೂ ಹೀಗೆಯೇ...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ಕಷ್ಟಗಳು ಯಾಕೆ ಕಷ್ಟಗಳಾಗೇ ಇರಬೇಕು...?
ಸ್ವಲ್ಪ ಖುಷಿಯಾಗಿ ಯಾಕೆ ಇರ ಬಾರದು..?
ಇದು ಮುಗ್ಧ ಮನಸ್ಸಿನ ಪ್ರಶ್ನೆ...

ಕಷ್ಟಗಳನ್ನು ನಾವು,
ನಮ್ಮ ಮನಸ್ಸು ಯಾವ ರೀತಿ ತೆಗೆದುಕೊಳ್ಳುತ್ತದೆ
ಅನ್ನುವದರ ಮೇಲೆ ಇದು ಇರುತ್ತದೆ..

ನನ್ನ ಸಣ್ಣ ಮಾವನಿಗೆ ಎರಡು ಮಕ್ಕಳು..
ಇಬ್ಬರಿಗೂ ಬುದ್ಧಿ ಮಾಂದ್ಯ..
ಆದರೆ..
ಆ ಮನುಷ್ಯನನ್ನು ನೋಡಿದ ಯಾರಿಗೂ ಇದು ಗೊತ್ತೇ ಆಗುವದಿಲ್ಲ..
ತಾವೂ ನಗುತ್ತಾರೆ..
ತಮ್ಮ ಬಳಿ ಮಾತನಾಡುವವರನ್ನೂ ನಗಿಸುತ್ತಾರೆ...
ಅವರ ಬಳಿ ಐದು ನಿಮಿಷ ಮಾತನಾಡಿದರೆ ನಮ್ಮ ಹೊಟ್ಟೆ ಹುಣ್ಣಾಗುವಷ್ಟು ನಗಿಸಿ ಬಿಡುತ್ತಾರೆ..

ಇವರಿಗೆ ಮಕ್ಕಳ ಮಮತೆ, ಪ್ರೀತಿಯೇ ಸಿಕ್ಕಿಲ್ಲ...
ಪ್ರೀತಿಯಿಂದ ಇವರ ಮಕ್ಕಳು "ಅಪ್ಪಾ" ಎಂದು ಯಾವತ್ತೂ ಕರೆದಿಲ್ಲ..
ಕರೆಯುವದೂ ಇಲ್ಲ...

ಆದರೂ ನಗುತ್ತಾರೆ..
ನಮ್ಮನ್ನೂ ನಗಿಸುತ್ತಾರೆ..

ಇದೇ.. ಜೀವನ...
ಇದುವೇ ಜೀವನ...

ಸಿಮೆಂಟು ಮರಳಿನ ಮಧ್ಯೆ said...

ಆಕಾಶ ಬುಟ್ಟಿ...

ನಮ್ಮ ಹಿರಿಯರಿಂದ ನಾವು ಕಲಿಯ ಬೇಕಾದದ್ದು ಬಹಳಷ್ಟು ಇವೆ...
ಅದರಲ್ಲಿ "ಜೀವನೋತ್ಸಾಹ"ವೂ ಒಂದು..
ಎಷ್ಟೇ ಕಷ್ಟ ಬರಲಿ...
ಸಮಸ್ಯೆ ಬರಲಿ ಧೈರ್ಯದಿಂದ ಎದುರಿಸುತ್ತಿದ್ದರು.

ಇಲ್ಲಿ ಒಂದು ವಿಷಯವನ್ನು ನಾವು ಗಮನಿಸ ಬೇಕು..
ಅವರಿಗೆ ವಿದ್ಯೆ ಇರಲಿಲ್ಲ..
ನಮ್ಮಷ್ಟು "ನಾಗರಿಕ ಬುದ್ಧಿ" ಅವರಿಗಿರಲಿಲ್ಲ...
ಆದರೆ ಅವರು ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುತ್ತಿದ್ದರು...

ನಾವು ಇಷ್ಟೆಲ್ಲ ಓದಿದ್ದರೂ..
ತಿಳುವಳಿಕೆ ಇದ್ದರೂ..

ಕಷ್ಟಗಳು ಬಂದಕೂಡಲೆ ಎದುಗುಂದುತ್ತೇವೆ...
ದಾರಿಕಾಣದಂತಾಗುತ್ತೇವೆ...

ನಾವೆಲ್ಲ ಈ ಕಥೆಯಲ್ಲಿ ಬರುವ "ಅಜ್ಜಿಯಂತಿರಬೇಕು" ಅಲ್ಲವಾ...?

ಸಿಮೆಂಟು ಮರಳಿನ ಮಧ್ಯೆ said...

ದೀಪಸ್ಮಿತ...

ಈ ಕಥೆ ಬರೆಯುವಾಗ ನಾನೂ ಭಾವುಕನಾಗಿಬಿಟ್ಟಿದ್ದೆ...
ಕಣ್ಣಲ್ಲಿ ನೀರು ಬಂದಿತ್ತು...

ಇಂಥದ್ದೊಂದು ಕಥೆಯನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ?
ಎನ್ನುವ ಅಳುಕು ನನಗಿತ್ತು..

ನಿಮ್ಮೆಲ್ಲರ ಪ್ರತಿಕ್ರಿಯೆ ನನಗೆ ಉತ್ಸಾಹ ಕೊಟ್ಟಿದೆ...

ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಸುಮಾ...

ನಾವು ವಿಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದ್ದರೂ..

ಹುಟ್ಟು ಸಾವಿನ ಬಗೆಗೆ .
ಏನೂ ತಿಳಿದಿಲ್ಲ...

ಅದೊಂದು ಕೌತುಕ..
ರಹಸ್ಯ.. ವಿಸ್ಮಯ...!

ಹುಟ್ಟು ನಮ್ಮಿಚ್ಛೆಯಲ್ಲ...
ಸಾವೂ ಕೂಡ..
ನಮಗಿಷ್ಟವಿಲ್ಲ...

ಸಿಕ್ಕಿದ ಬದುಕನ್ನು...
ಹೇಗೆ ಕಟ್ಟುತ್ತೇವೆ..
ಅನ್ನುವದು ನಮ್ಮಕೈಲಿದೆ...

ವಿರಸವಿರದ..
ನಿರಾಸೆಯೂ ಎಡೆಯಿರದ ..
ಸರಸದ..
ಸಂತಸದ ಬದುಕು ನಮ್ಮದಾಗಲಿ...

ಸಿಮೆಂಟು ಮರಳಿನ ಮಧ್ಯೆ said...

ಪಾಲ...

ನಮ್ಮವರನ್ನು ಕಳೆದು ಕೊಂಡ ದುಃಖ ಇರುವಷ್ಟು ದಿನ ..
ನಮಗೆ ಹಸಿವೆಯೂ ಆಗ ಬಾರದಿತ್ತು..
ಇದು ನನ್ನ ಸ್ನೇಹಿತರೊಬ್ಬರ ಮಾತು...

ಬದುಕು ಎಷ್ಟು ನಿರ್ದಯಿ..
ಕ್ರೂರ ಅಂದರೆ..
ಹಸಿವೆಯ ಕೆಟ್ಟರೂಪ ಧರಿಸಿ
ಧುತ್ತೆಂದು ಎದುರು ನಿಲ್ಲುತ್ತದೆ...

armanikanth said...

Akkareya Prakashanna...
kathe odide...
aadare adannu kathe anta kareyoke manassu baralilla.
nimma katheyalli baro ajji namma ajjiyo,atteyo,chikkammano,doddammano,pakka da maneya hennu magalo aagirabahudu anta annistu...nantara naanu badukalli aakasmikavaagi kanda vidhave yara chitra galu kanna munde bandu nintavu.
aa hengasaru badukalli ondu tuttu tinnuva sandarbhadalli estellaaa sankata pattioarabahudu annisi tumbaa sankata aaytu...
naavu maatu maatige devaru anteve...aa punyatma nijakkkoooo irode aadare...intha kastagalige,sankatagalige yaake swalpa kastaddaadarooo sari...parihaarada daari torisalilla?
kshamisi..nannolage prashnegalive...utaaragale illa...
kathe odi vaara aaytu nija..aadare adu nannannu dinaaa dina kaadutte...sankata kodutte...yaavudo nenapina jote bandu hedarisutte...
Nimage tumbaaa olleyadaagali...adu prarthane...haaraike..

ಸಿಮೆಂಟು ಮರಳಿನ ಮಧ್ಯೆ said...

ಮೂರ್ತಿ....

ವಾಸ್ತವಕ್ಕೆ ತುಂಬ ಹತ್ತಿರವಾಗಿದೆ ಈ ಕಥೆ...

ಈಂಥಹ ವಿಧವೆಯರು ನಮ್ಮಲ್ಲಿ ಬಹಳಷ್ಟಿದ್ದಾರೆ..

ವಿದ್ಯೆ ಇಲ್ಲದಿದ್ದರೂ ...
ಬದುಕಿನ ಕಷ್ಟವನ್ನು ಅವರು ಎದುರಿಸುವ ಪರಿ...
ನಮಗೆಲ್ಲರಿಗೂ ಅದು "ಮಾದರಿ"

ಇದು..
ಭಾವುಕತೆ..
ವಾಸ್ತವತೆ..
ಎರಡರ ಕಥೆ ..

ಧನ್ಯವಾದಗಳು ಮೂರ್ತಿ...

ಸಿಮೆಂಟು ಮರಳಿನ ಮಧ್ಯೆ said...

ಶ್ರವಣ...

ನನ್ನ ಬ್ಲಾಗಿಗೆ ಸ್ವಾಗತ...

ಬರೆದ ಕಥೆ..
ಮನಸ್ಸಿಗೆ ತಟ್ಟಿದ್ದರೆ..
ಖುಷಿಯಾಗುತ್ತದೆ..
ಒಂದು ಥರಹದ ಸಾರ್ಥಕತೆಯ ಭಾವನೆ ಬರುತ್ತದೆ..

ನಮ್ಮವರು ಸತ್ತಾಗ ಹಸಿವೆಯ ಸಂಕಟ..
ಒಂದು ಥರಹದ
ಅಸಹ್ಯ" ಭಾವವನ್ನು ಉಂಟು ಮಾಡುತ್ತದೆ..

ನಮ್ಮ ಆಪ್ತರ ನೆನಪಿನ ದುಃಖದಲ್ಲಿ
ಉಪವಾಸವಿರುವದಕ್ಕೂ ಸಾಧ್ಯವಿರುವದಿಲ್ಲ...

ಎಲ್ಲರೂ ತಮ್ಮ ಬದುಕಿನ ಘಟ್ಟದಲ್ಲಿ ಅನುಭವಿಸಲೇ ಬೇಕಾದ..
ಕಹಿ, ಕಟು ಸಂದರ್ಭವಿದು...

ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ಬದುಕಿನ ಹಲವು ಮುಖಗಳು..
ವಾಸ್ತವಿಕತೆಗಳು..
ಸ್ವಭಾವದ ಬಣ್ಣಗಳು..

ಇವುಗಳನ್ನು ಕಥೆಯಲ್ಲಿ ತೋರಿಸುವ ಪ್ರಯತ್ನ ನನ್ನದು...

ಇಷ್ಟವಾಗಿದ್ದಕ್ಕೆ ತುಂಬಾ.. ತುಂಬಾ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ಭಾವುಕರಿಗೆ ..
ಮಾತ್ರ ಈ ಬವಣೆಗಳು..
ಈ ಸಂಕಟಗಳು..

"ಸಾಯುವವರು ಸಾಯುತ್ತಾರೆ..
ಪ್ರತಿಯೊಬ್ಬರೂ ಸಾಯುತ್ತಾರೆ..
ನೀವು ಸಾಯುತ್ತೀರಿ..
ನಾನೂ ಸಾಯುತ್ತೇನೆ..
ಇದು ಜಗತ್ತಿನ ನಿಯಮ.."
ಎಂದು ತೀರಾ ಸಹಜವಾಗಿ ವಿಚಾರ ಮಾಡುವವರು ಇರಬಹುದಲ್ಲವೆ..?

ಖಂಡಿತ ಇರುತ್ತಾರೆ...

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಮಂಗಳತ್ತೆ (ಜಯಲಕ್ಷ್ಮೀಯವರೆ)...

ಕಥೆಯ ಪಾತ್ರಗಳ ಬಗೆಗೆ ಹೇಳ ಬೇಕೆಂದರೆ...

ಮೊಮ್ಮಗನ ಕಷ್ಟದ ಬಗೆಗೆ ಹೇಳಲೇ ಬೇಕಿತ್ತು..
ಹುಡುಗನ ದೃಷ್ಟಿಯಲ್ಲಿ..
ಅವನ ಕಷ್ಟ, ಗೆಳೆಯರೆದುರು ಅವನ ಅವಮಾನ..
ಅಜ್ಜಿಯೆದುರು ವಿವರಿಸಲೇ ಬೇಕಿತ್ತು...

ಅಜ್ಜಿಯ ಪಾತ್ರದ ಬಗೆಗೆ ಅದರ ಮಾತಿನಿಂದಲೇ ಪೋಷಣೆಯಾಗುತ್ತಿತ್ತು...
ಅಲ್ಲಿ ಯಾವ ವಿವರಣೆಯೂ ಬೇಕಿರಲಿಲ್ಲ..

ಮೆಚ್ಚಿನ ಕಥೆಗಾರ ( ಪ್ರಜಾವಾಣಿ, ಸುಧಾ ಗ್ರೂಪ್) "ಸಂದೀಪ್ ನಾಯಕ್ " ನನಗೊಂದು ಕಿವಿ ಮಾತು ಹೇಳುತ್ತಿರುತ್ತಾರೆ....

"ಕಥೆಗಳಲ್ಲಿ ಜಾಸ್ತಿ ಮಾತು ಇರಬಾರದು..
ಮಧ್ಯದಲ್ಲಿ ಸ್ವಲ್ಪ , ಸ್ವಲ್ಪ ವಿವರಣೆ ಇರಬೇಕು " ಅಂತ..

ಆದರೆ ಇಲ್ಲಿ ಅವರ ಸಲಹೆ ಕಾರ್ಯರೂಪಕ್ಕೆ ತರಲಾಗಲಿಲ್ಲ...

ಅಜ್ಜಿಯ ಕಥೆ ಮೆಚ್ಚಿಕೊಂಡಿದ್ದಕ್ಕೆ ತುಂಬಾ..
ತುಂಬಾ ಧನ್ಯವಾದಗಳು...

sumangala said...

Nangu nannajii andre raashi ista...
Prakashanna, Kathe tumba artapoornavagiddu ista atu..
Howdu alda kastagalella swalpa kushi agi iddiddre yestu cholo irtittu.

Kishan said...

The dialogues of the two generations and the pain behind their own experiences with narration are very nice!

ವಿ.ಆರ್.ಭಟ್ said...

ಕಥೆ ಚೆನ್ನಾಗಿದೆ, ನನ್ನ ಅಭಿಪ್ರಾಯದಲ್ಲಿ ಕಷ್ಟದಲ್ಲಿ ಅಳುಮಾತ್ರ ಸಮಾಧಾನ ಅಲ್ಲ, ಮನುಷ್ಯ ಹೆಣ್ಣೇ ಅಥವಾ ಗಂಡೇ ಆಗಿರಲಿ, ಧೈರ್ಯ ದಿಂದ ಅದಕ್ಕೊಂದು ಪರಿಹಾರ ಹುಡುಕಬೇಕು, ಮತ್ತು ಕಷ್ಟದಲ್ಲಿ ಸ್ಥಿತಪ್ರಜ್ಞರಾಗಿರಬೇಕು [ಈ ಶಬ್ಧ ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ ಆದರೆ ಅದಕ್ಕೆ ನೇರ ಪರ್ಯಾಯ ಶಬ್ಧ ಇಲ್ಲ ]

prashant said...

ನಿಮ್ಮ ಕಥೆಯನ್ನು ಇವತ್ತು ಬೆಲಿಗ್ಗೆ ಓದಿದೆ. ಸ೦ಜೆ ಆದ್ರೂ ನಿಮ್ಮ ಕಥೆ ಸುತ್ತನೆ ಸುತ್ತುತ್ತಾ ಇದ್ದೇನೆ.
ಎನೋ ಬರಿಬೇಕು ಅನ್ನಿಸ್ತಾ ಇದೆ, ಆದ್ರೆ ಹ್ರದಯ ಸಹಕರಿಸ್ತಾ ಇಲ್ಲ.
ಆದ್ರೆ ಇಶ್ಟೇ ಹೇಳಲೆ ಸಾದ್ಯ.ಒ೦ದ೦ದ್ ಸಲ ಮನುಶ್ಯನ ಅನಿವಾರ್ಯತೆಯೂ ಹೇಗೆ ಕಶ್ಟಾ ಆಗುತ್ತೆ ಅನ್ನವುದಕ್ಕೆ ನಿಮ್ಮ ಕಥೆಯೇ ಸಾಕ್ಶಿ.
ಮತ್ತೆ ಬರಿತೇನೆ. ಈಗಿಶ್ಟೇ ಸಾದ್ಯ.
hats off sir....

ಶಂಕರ ಪ್ರಸಾದ said...
This comment has been removed by the author.
ಶಂಕರ ಪ್ರಸಾದ said...

ಪ್ರಕಾಶಪ್ಪ,
ಅಜ್ಜಿಯ ನೆನಪು ತಂದು ತುಂಬಾ ಭಾವನೆಗಳನ್ನ ಕಲಕಿದ್ದೀರಿ.
ನನ್ನಜ್ಜಿ (ಅಮ್ಮನ ಅಮ್ಮ) ಈ ಜನವರಿ ಹದಿನಾರರಂದು ನಮ್ಮನ್ನು ಬಿಟ್ಟಗಲಿದರು.
ಅಂದಿನ ದಿನ, ನಾನು ಬೆಂಗಳೂರಿಂದ ಮೈಸೂರಿಗೆ ಹೊರಟಿದ್ದೆ. ಬೆಳಿಗ್ಗೆ 7 ಕ್ಕೆ ಬಸ್ಸು ಹೊರಟು, ಸುಮಾರು 9.45 ಗೆ ಮೈಸೂರು ಸೇರಿತು.
ಆಟೋ ಹತ್ತಿ ಮನೆ ಮುಂದೆ ಬಂದಿಲಿದಾಗೆ 10 ಘಂಟೆ. ಇಳಿಯುತ್ತಿದ್ದ ಹಾಗೆ ನಮ್ಮಮ್ಮ ಫೋನ್ ಹಿಡಿದು ಅಳುತ್ತಿದಳು.
ಸೋದರ ಮಾವನ ಕರೆ, "ನಾಗು, ಅಮ್ಮ ಇನ್ನಿಲ್ಲ ಕಣೆ" ಎಂದು. ಅಮ್ಮನನ್ನು ಸಮಾಧಾನ ಮಾಡುವಾಗ, ಹೊರಗೆ ಹೋಗಿದ್ದ ಅಪ್ಪ ಬಂದ್ರು.
ಮೂವರೂ ಹೊರಟೆವು. ನಾವು ಅಲ್ಲಿಗೆ ಹೋಗಿ ಅಜ್ಜಿಯನ್ನು ಮುಟ್ಟಿದಾಗ, ದೇಹ ಬೆಚ್ಚಗಿತ್ತು.
ತುಂಬು ಕುಟುಂಬ, ಎಂಟು ಹೆಣ್ಣು, ಮೂರು ಗಂಡು ಮಕ್ಕಳು. ಅಳಿಯಂದಿರು, ಸೊಸೆಯರು, ಮೊಮ್ಮಕ್ಕಳು ಎಲ್ಲಾ ಸೇರಿಸಿ ಒಟ್ಟು 33 ಜನ. ಇದಕ್ಕೆ ಲೇಟೆಸ್ಟಾಗಿ ಸೇರಿದ್ದು, ನನ್ನ ಅರ್ಧಾಂಗಿ.
ನಮ್ಮಜ್ಜಿ ಎಂಥಾ ಹೃದಯವಂತೆ ಎನ್ನೋದಕ್ಕೆ ಈ ಘಟನೆ ಸಾಕ್ಷಿ.
ನಮ್ಮಮ್ಮ ಅವರ ಅಪ್ಪನ ಮೊದಲ ಹೆಂಡತಿಯ ಮಗಳು. ಇನ್ನೂ ಒಂದು ವರ್ಷವೂ ತುಂಬದೆ ಇದ್ದಾಗ ಆಕೆಯ ತಾಯಿಯನ್ನು ಕಳೆದುಕೊಂಡಳು.
ನಮ್ಮಜ್ಜಿಯನ್ನು ನಂತರ ನಮ್ಮ ತಾತ ಮಾಡುವೆ ಆಗಿದ್ದು. ನಮ್ಮಮ್ಮನ ಮದುವೆಯ ಹಿಂದಿನ ದಿನ, ಒಬ್ಬ ಕಾಗೆ ಬುದ್ಧಿಯ ನೆಂಟರು ಈ ವಿಚಾರವನ್ನು ನಮ್ಮಮ್ಮನಿಗೆ
ತಿಳಿಸಿದ್ದಂತೆ.
ಅಜ್ಜಿಯ ದೇಹವನ್ನು ಮನೆಯಲ್ಲಿ ಇರಿಸಿದ್ದಾಗ, ಈ ದುಖ, ಹಸಿವು... ಇದರ ಸಂಕಟ ಏನು ಅಂತ ಗೊತ್ತಾಯ್ತು. ನಿಜಕ್ಕೂ ನಮ್ಮ ಮೇಲೆ ನಮಗೆ ಜಿಗುಪ್ಸೆ ಹುಟ್ಟುತ್ತದೆ.
ದುಖ ಹೆಚ್ಚುತ್ತಿದ್ದಂತೆ ಸಂಕಟ, ಸುಸ್ತು, ಹಸಿವು ಹೆಚ್ಚುತ್ತದೆ. ಆದ್ರೆ, ಆ ದುಖದಲ್ಲಿ ಹೊಟ್ಟೆಗೆ ಏನೂ ಸೇರೋದಿಲ್ಲ. ಏನೂ ಸೇರೋದಿಲ್ಲ ಎಂದು ಕೂತರೆ, ಪುನಃ ಸುಸ್ತು, ಸಂಕಟ.
ಈ ಕಷ್ಟ, ಯಾತನೆ.. ನಮ್ಮ ಶತ್ರುವಿಗೂ ಬೇಡ.

ಕಟ್ಟೆ ಶಂಕ್ರ

RJ Chaithra 93.5redfm said...

bahala chennagide, kevala ajji haage madidalu heege madidalu thimba olleyavlu emba olaike galinda,jeevanada vaasthavavannu bhava nathmka udaharane mulaka teredittiruvudu nanange bahala mechugeyada amsha, hasivina bagge matanadalikke nananage enu helali, swabhimana v/s hasivu, bhavane v/s hasivu, preethi v/s hasivu. ottinalli hasivigintha krura mathondu illa.

ಗುರುಪ್ರಸಾದ್, ಶೃಂಗೇರಿ., said...

"ಜಾತಸ್ಯ ಹಿ ಧೃವೋ ಮೃತ್ಯುಃ" ಎಂದು ಶಾಸ್ತ್ರವು ಹೇಳುವಂತೆ, ಹುಟ್ಟಿದವನು ಇಂದಲ್ಲ ನಾಳೆ ಸಾಯಲೇ ಬೇಕು. ಅಂತಹ ಒಂದು ಸಂದರ್ಭದ ಚಿತ್ರಣವನ್ನು ಕಥೆಯ ಮೂಲಕ ಹೃದಯ ಸ್ಪರ್ಷಿಯಾಗಿ ಹೇಳಿದ್ದೀರಿ. ಇಷ್ಟವಾಯಿತು.

ವಿನುತ said...

"ಹಸಿವು" ಎಂಬ ಅನುಭವವು ಜೀವನದಲ್ಲಿ ಸೃಷ್ಟಿಸುವ ವಿಚಿತ್ರ ಸಂದರ್ಭಗಳನ್ನು ಇದಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಥೆ ಭಾವುಕವಾಗಿ ಮೂಡಿಬಂದಿದೆ. ನಿಜಕ್ಕೂ ಇದನ್ನು ಓದಿರದಿದ್ದರೆ ಏನನ್ನೋ ಕಳೆದುಕೊಂಡಿರುತ್ತಿದ್ದೆ.

ನಾಗೇಂದ್ರ ಭಾರದ್ವಾಜ್ said...

anna sooper naration mathe hrudaya sparshi vastava kathe.... tumbha tumbha manasige hidisthu...

Ranjana H said...

ಪ್ರಕಾಶಣ್ಣ,

ಮನ ಕಲಕಿ ಹೋಯಿತು ನಿಮ್ಮ ಈ ಬರಹ ಒದಿ, ನಮ್ಮ ಸನಿಹದವರ ಸಾವು ನೆನೆಸಿಕೊಳ್ಳಲೂ ಕಷ್ಟ, ಅವರ ದೇಹದ ಎದುರು ಕುಳಿತು ನಮ್ಮ ಹಸಿವು ಇಂಗಿಸಿಕೊಳ್ಳುವ ಕಷ್ಟ ಯಾರಿಗೂ ಬೇಡ. ಆದರೆ ಸಾವಿಲ್ಲದ ಮನೆಯ ಸಾಸಿವೆ ಎಲ್ಲಿದೆ????

ಗೆಳತಿ said...

ಅಣ್ಣಯ್ಯ,

ಕಥೆ ತುಂಬಾನೇ ಚೆನ್ನಾಗಿದೆ.ಆಫೀಸ್ ಎಂಬುದನ್ನು ಮರೆತು ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಆ ಹುಡುಗನು ಅಜ್ಜಿಯ ಬಳಿ ಕೇಳುವ ಕಷ್ಟ ದ ಬಗೆಗಿನ ಪ್ರಶ್ನೆಗಳು, ಆತನ ಸೈಕಲ್ ಆಸೆ, ನನಗೆ ಮತ್ತೆ ನನ್ನ ಬಾಲ್ಯದ ದಿನಗಳನ್ನು ನೆನಪುಮಾಡಿತು.

ಕಷ್ಟ ಬಂದಾಗ ಅಳುವದು ಅನ್ನುವದು ಇದೆಯಲ್ಲ.. !
ಅದು ನಮಗೆ ದೇವರು ಮಾಡಿದ ಉಪಕಾರ ಕಣಪ್ಪಾ..

- ಈ ಸಾಲು ನನಗೆ ತುಂಬಾ ಇಷ್ಟವಾಯಿತು. ಅತ್ತಾಗ ನಮ್ಮ ಮನಸ್ಸಿನ ದುಗುಡಗಳೆಲ್ಲ ಎಷ್ಟೋ ಬಾರಿ ಕಡಿಮೆಯಾಗುತ್ತವೆ. ಈ ಕಣ್ಣೀರು ದೇವರು ಕೊಟ್ಟಿರುವ ವರ

Srikanth Manjunath said...

ಒಮ್ಮೆ ಯೋಚಿಸುತ್ತಿದ್ದೆ...ದೇವರು ನಮಗೆ ಕೊಟ್ಟ ವರ...ಮರೆವು, ಅಳು, ಮೌನ..ಯಾವುದು ಹೆಚ್ಚು...ಮರೆವಿಗೆ ಮೌನ ಬೇಕಿಲ್ಲ, ಅಳುವಿಗೆ ಮರೆವು ಬೇಕಿಲ್ಲ...ಮೌನಕ್ಕೆ ಯಾರ ಹಂಗೂ ಇಲ್ಲ..ಆದ್ರೆ ಮೌನ ಕೊಡುವ ಸಾಂತ್ವನದಲ್ಲಿ ಮರೆವು ಅಳುವು ಎರಡು ಭಾಗಿಯಾಗಲು ಹೋರಾಡುತ್ತವೆ.. ಜೀವನದ ಕಷ್ಟಗಳು ತುತ್ತ ತುದಿಯನ್ನು ತಲುಪುವಾಗ ಸಿಗುವ ಚಿಕ್ಕ ಚಿಕ್ಕ ಗುಡ್ಡಗಳ ಹಾಗೆ..ಪ್ರತಿ ಗುಡ್ದವು ನಾನೇ ದೊಡ್ಡದು ಎನ್ನುವ ಹಾಗೆ ಮುಂದೆ ನಿಂತರು..ಅದನ್ನೇ ದಾಟಿ ಇಲ್ಲವೇ ಮೆಟ್ಟಿ ನಿಂತಾಗ ಆ ಗುಡ್ಡವೇ ತಲೆ ಬಾಗಿಸಿ ನಮ್ಮ ಪಾದಗಳಿಗೆ ಆಶ್ರಯ ಕೊಡುತ್ತದೆ. ಓದುತ್ತ ಹೋದ ಹಾಗೆ ಕಣ್ಣುಗಳು ಮಂಜಾಗುತ್ತಿರುವಂತೆಯೇ ಹೃದಯದ ಕವಾಟಗಳೆಲ್ಲ ತೆರೆದುಕೊಂಡು ಒಳಗಿದ್ದ ಕಶ್ಮಲಗಲೆಲ್ಲ ಹೊರ ಹೋದಂತೆ ಭಾಸವಾಯಿತು..ಕಣ್ಣೆದುರಲ್ಲೇ ಕಷ್ಟಗಳನ್ನು ನುಂಗಿ ಮಕ್ಕಳ ಜೊತೆಯಲ್ಲೇ ಹೆಜ್ಜೆ ಹಾಕುವ ಮಹಾಭಾರತದಲ್ಲಿ ಕುಂತಿ ಮಹಾ ಮಾತೆಯಾಗುತ್ತಾಳೆ...ನಮ್ಮೊಳಗೇ ನಮ್ಮನ್ನೇ ಮರೆಸುವಂತೆ ಮಾಡಿ, ಅಳಲು ಹೊರಟು ಮೌನದ ಸಂಗ ಬಯಸಲು ಹಾತೊರೆಯುವಂತೆ ಮಾಡಿರುವ ನಿಮ್ಮ ಲೇಖನಕ್ಕೆ ನನ್ನ ಪುಟ್ಟ ನಮನಗಳು....ಒಂದೇ ಮಾತಲ್ಲಿ ಹೇಳುವುದಾದರೆ ಕಣ್ಣೀರಲ್ಲಿ ಅಮೃತವರ್ಷಿಣಿ ರಾಗಧಾರೆ!