Monday, February 2, 2009

ಇದು.... "ಶಿವಾರ್ಪಣ.."




ಸಿರ್ಸಿ ಸಮೀಪ... ಕಾನಸೂರು ಹೈಸ್ಕೂಲ್...


ಕಾನನದ ಮಧ್ಯೆ ಆಶ್ರಮದಂತಿರುವ ಶಾಲೆಗೆ ಮಾರು ಹೋಗದವರಾರು..?

ಹಕ್ಕಿಗಳ ಚಿಲಿ ಪಿಲಿ ಕಲರವ... !

ಆಗಾಗ ತಂಗಾಳಿಯೊಂದಿಗೆ ಬರುವ ತರಗೆಲೆಗಳ ಶಬ್ದ..!

ಸಮರ್ಪಣಾ ಮನೋಭಾವದ ಶಿಕ್ಷಕರು...

ಅಲ್ಲಿಯ ಇತರ ಗೆಳೆಯರು, ಸಹ ಪಾಠಿಗಳು...

ಓಹ್... !


ಅಲ್ಲಿನ ಶಾಲೇಗಳೇ ಹಾಗೆ.. ಬಲು ಚಂದ...!

ಅಲ್ಲಿನ ಸರಕಾರಿ ಶಾಲೆಗಳೂ ಸಹ ಅತ್ಯುತ್ತಮವಾಗಿರುತ್ತದೆ....

ಗೋವಿಂದ ಭಟ್ಟರು " ಕಾರ್ಯಾನುಭವ " ಶಿಕ್ಷಕರು...


ಅವರ .... ಹಾಸ್ಯ ಮನೋಭಾವ..

ನಗೆ ಚಟಾಕಿಗಳು...


ಮಾತಿನಲ್ಲಿರುತ್ತಿದ್ದ ಪಂಚ್... ವಾಹ್...!

ಅವರ ಬಳಿ ಒಡನಾಡಿದ , ನಾವೆಲ್ಲ... ..... ಧನ್ಯ....

ಅವರು ಕ್ಲಾಸಿಗೆ ಬಂದರೆಂದರೆ ನಗುವೇ.... ನಗು..!



" ಮನುಷ್ಯನಿಗೆ ಬದುಕಲಿಕ್ಕೆ ಆಹಾರದಲ್ಲಿ ಏನೇನಿರ.. ಬೇಕ್ರೋ...?..


" ಜಾಗನ ಹಳ್ಳಿ "..... ನೀನು ಹೇಳೊ..!"

ಅವರು ಯಾವಗಲೂ " ಊರಿನ " ಹೆಸರಿಂದಲೇ ವಿಧ್ಯಾರ್ಥಿಯನ್ನು ಕರೆಯುತ್ತಿದ್ದರು...

" ಸರ್.... ಮನುಷ್ಯನಿಗೆ ಆಹಾರದಲ್ಲಿ .


" ಅನ್ನ.. .ಹುಳಿ ಸಂಭಾರು, ಮಜ್ಜಿಗೆ, ಇರಬೇಕು... !

ಪಲ್ಯ, ಚಪಾತಿ ಇದ್ದರೂ ನಡೆಯುತ್ತದೆ..!


ಕೆಲವರು.... ಕೋಳಿಯನ್ನೂ...!..."

ಪಾಠ ಒಪ್ಪಿಸಿದ....

ಅವರಿಗೆ ತಲೆ ಬಿಸಿಯಾಯಿತು...

ನುಣ್ಣನೆಯ ತಲೆಯನ್ನೊಮ್ಮೆ ಸವರಿಕೊಂಡು....

" ಆಹಾಹಾ..! ..." ಜಾಗನಳ್ಳಿ... " ಏನು ಉತ್ತರನೋ.. ಇದು...
?

.... ಥರ... ತಿನ್ನೊದಕ್ಕೆ ನೀನು... ಹೀಗಿರುವದು...

" ಹುಕ್ಲಕೈ."... ನೀನು ಹೇಳೊ.."

" ಹುಕ್ಲಕೈ " ಸೀತಾಪತಿ...... ಪುಸ್ತಕದ ಬದನೇಕಾಯಿ...

"ಸರ್.. ಮನುಷ್ಯ ಬದುಕಲಿಕ್ಕೆ ವಿಟಾಮಿನ್ನುಗಳು ಬೇಕು,..


ಖನಿಜ ಲವಣಗಳು ಬೇಕು.."

"ಇದು... ಬೀಜದ... ಮಾತು...!


ಹಾಗಾದರೆ ಮನುಷ್ಯ ಹುಳಿ, ಪಲ್ಯ ಸಂಭಾರ್ ಏಕೆ ತಿನ್ನಬೇಕು?

ಔಷಧದ ಅಂಗಡಿಗೆ ಹೋಗಿ ವಿಟಾಮಿನ್ನು " ಮಾತ್ರೆ " ತಗೊಂಡು ಜೀವಿಸಬಹುದಲ್ಲ..."

ಹಾಸ್ಯವಾಗಿ ಹೋಗುತ್ತಿದ್ದ ಪಾಠ ಗಂಭೀರ ವಾಗುತ್ತಿತ್ತು....

ಮಕ್ಕಳನ್ನು ಸೆಳೆದುಕೊಳ್ಳುವ ರೀತಿ ...


ಅಲ್ಲಿನ ಶಿಕ್ಷಕರಿಗೆ ಸುಲಭವಾಗಿ ಗೊತ್ತಿದೆ....


ಆದರೆ....

ಅಲ್ಲಿನ ಶಿಕ್ಷಕರು ಹೆಚ್ಚಾಗಿ ಹೆಣ್ಣುಮಕ್ಕಳ ಪಕ್ಷಪಾತಿಯಾಗಿದ್ದರು...

ಹಳ್ಳಿ ಶಾಲೆ... ಬಸ್ಸಿರುವದಿಲ್ಲ...


ದೂರದಿಂದ... ನಡೆದು ಬರಬೇಕಿತ್ತು...

ಎಸ್.ಎಸ್.ಎಲ್.ಸಿ ಮುಗಿದಮೇಲೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಬಿಡುತ್ತಿದ್ದರು..

ಮನೆಯಲ್ಲಿ " ಕಸ,ಮುಸುರೆ " ಕೆಲಸ ಮಾಡಿ ಶಾಲೆಗೆ ಬರಬೇಕಿತ್ತು...


ಹಾಗಾಗಿ ಅವರ ಮೇಲೆ ಅನುಕಂಪ ಜಾಸ್ತಿ...

ಗಂಡುಮಕ್ಕಳಿಗೂ, ಹೆಣ್ಣುಮಕ್ಕಳಿಗೂ ಏನಾದರೂ ಜಗಳವಾದಲ್ಲಿ ...

ತೀರ್ಪು ಹೆಣ್ಣುಮಕ್ಕಳ ಪರವಾಗಿಯೇ ಇರುತ್ತಿತ್ತು...


ಅಂದು ವಿಜ್ಞಾನ ಶಿಕ್ಷಕರು ರಜೆ...


ಅದರ ಮುಂದಿನ ಕ್ಲಾಸು ಗೋವಿಂದ ಭಟ್ಟರದ್ದೇ ಆಗಿತ್ತು...

ಕ್ಲಾಸಿನಲ್ಲಿ ಹುಡುಗರು ಗಲಾಟೆ ಮಾಡಿಯಾರು ಎಂದು..


ಗೋವಿಂದ ಭಟ್ಟರು ಬಂದರು....

ಬಂದವರೇ.. ಅಂದಿನ ಪೇಪರ್ ಮುಖಕ್ಕೆ ಹಿಡಿದು.. ಪೇಪರಲ್ಲಿ ಮುಳುಗಿ ಹೋದರು...

ಮಕ್ಕಳು ಗಲಾಟೆ ಶುರು ಹಚ್ಚಿ ಕೋಂಡರು...

ಕೇಶವ .... ಸುಮಂಗಲಾಳನ್ನೇ ....ನೋಡುತ್ತಿದ್ದ....!!

ಅವಳೋ ಸ್ವಲ್ಪ ಗಂಡು ಬೀರಿ...


ಶಿಕ್ಷಕರು "ಹೆಣ್ಣುಮಕ್ಕಳೆಂದರೆ" ಅಚ್ಚುಮೆಚ್ಚಿನ'

ಭಾವನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಳು...

"ಸರ್.... ಕೇಶವಾ... ನನ್ನನ್ನೇ..... ನೋಡ್ತಾನೇ..."

ಅಂದಳು...

ಗೋವಿಂದ ಭಟ್ಟರ ಮುಖದಲ್ಲಿನ ಪೇಪರ ಪರದೆ ಪಕ್ಕಕ್ಕೆ ಸರಿಯಿತು...

ಚಷ್ಮದಲ್ಲೇ ನೋಡುತ್ತ....

"ಏನೇ.. ಏನಾಯ್ತು..? ..."


ಕೇಳಿದರು...

"ಸರ್... ಅದು... ಕೇಶವಾ... ನನ್ನನ್ನೇ .. ನೋಡ್ತಾನೆ..."

"ಹೌದಾ.. ಅಂವ ... ನೋಡೋದು... ನಿಂಗೆ ಹೇಗೆ ಗೊತ್ತಾಯ್ತೆ...?'

ಸುಮಂಗಲಾ ಬಳಿ ಉತ್ತರ ಇರಲಿಲ್ಲ...

ಸುಮಂಗಲಾ... ನಾಚಿಕೆಯಾಗಿ ಕುಳಿತು ಬಿಟ್ಟಳು...

ಅವರು ನಾಗುವನ್ನು ಕರೆದು...

"ಹೊರಗೆ ಹೋಗಿ " ಬೆತ್ತದ.... ಶಳಿಕೆ " (ಸಣ್ಣ ಗಿಡದ ಟಿಸಿಲು) ಮುರಿದುಕೊಂಡು ಬಾರೋ..."

ಅಂದರು....

ಇದೊಂದು ತರಹದ.."ಮಾನಸಿಕ " ಶಿಕ್ಷೆ...

ತಪ್ಪು ಮಾಡಿದವನನ್ನೇ ಗಿಡದ ಹೆಣೆಯನ್ನು ತರಲು ಕಳಿಸುತ್ತಿದ್ದರು...

ತಾನು.... ಪೆಟ್ಟುತಿನ್ನುವ ಕೋಲನ್ನು ತಾನೇ ನಿರ್ಧರಿಸಿ... ತರಬೇಕು...!

ದಪ್ಪ ಇದ್ದರೆ ನೋವು ಜಾಸ್ತಿ...!


ತೆಳ್ಳಗೆ ಇದ್ದಲ್ಲಿ "ಉರಿ" ಜಾಸ್ತಿ..!

ತೊಳಲಾಟದಲ್ಲಿ ಮತ್ತೆ " ಭಾರಿ" ತಪ್ಪು ಮಾಡುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ...

ಕೆಲವು ಸಲ "ಮಾತಿನ ಪೆಟ್ಟು" ಕೊಡುತ್ತಿದ್ದರು..

" ಗೋಪಾಲಾ...... ನಿನಗೆ ನಾನು "ಕತ್ತೆ. .. ನಾಯಿ.. ಕುನ್ನಿ.." ಎಂದು ಬಯ್ಯಬೇಕಿಂದಿದ್ದೆ...!

ಆದರೆ "ಕತ್ತೆ.., ನಾಯಿ..., ಕುನ್ನಿ " ಎಂದು ಬಯ್ಯುವದಿಲ್ಲ...!

ಇನ್ನೊಂದು ಸಾರಿ ಇದೇ ತಪ್ಪು ಮಾಡಿದರೆ ...


" ಕತ್ತೆ .., ನಾಯಿ.., ಕುನ್ನಿ.., " ಎಂದು ಬಯ್ಯಬೇಕಾಗುತ್ತದೆ....~! "

".." ಶಬ್ದಗಳನ್ನು.. ಹತ್ತು .., ಹನ್ನೆರಡು ಬಾರಿ...


ಎಲ್ಲ ಹುಡುಗರೆದುರಿಗೆ...

ಅಪ್ಯಾಯಮಾನವಾಗಿ .. ಹೇಳಿ...

ಮಂಗಳಾರತಿ ಎತ್ತಿಬಿಡುತ್ತಿದ್ದರು..


ಗಿಡದಿಂದ ಮುರಿದು ತಂದ " ಬೆತ್ತದ.. ಶಳಿಕೆ " ಬಂತು...

ಗೋವಿಂದ ಭಟ್ಟರು ಬೆತ್ತ ಹಿಡಿದು...

"ನೋಡಿ ಯಾರ್ಯಾರು ಗಲಾಟೆ ಮಾಡಿದ್ದೀರಿ...?


ಮುಂದೆ ಬನ್ನಿ.. ನಾನೇ ನಿಮ್ಮ ಬಳಿ ಬಂದರೆ..

ಇನ್ನೂ... ಐದು ಪೆಟ್ಟು ಜಾಸ್ತಿ....!"...

ಕೆಲವು ಪ್ರಾಮಾಣಿಕರು ಕೈ ಮುಂದೆ ಮಾಡಿ ಪೆಟ್ಟು ತಿಂದರು...

ನಾನು ನಾಗು ಸುಮ್ಮನೆ ಇಇದ್ದೆವು..

" ದೆವಿಸರಾ..., ನಾಗು..., ಗದ್ದೆಮನೆ...ಬರ್ರೋ ಇಲ್ಲಿ...

ಎಲಾ ಇವರಾ..?


ಕರೆಕ್ಟಾಗಿ ಯಾರ್ಯಾರು ಗಲಾಟೆ ಮಾಡಿದ್ದಾರೋ.....

ಅವರಿಗೆಲ್ಲ ಕೈ ಮೇಲೆ ಪೆಟ್ಟು ಕೊಟ್ಟರು...!

ನಮಗೆ ಪೆಟ್ಟು ತಿಂದ...." ಉರಿಗಿಂತ"

ಇವರಿಗೆ ಹೇಗೆ ಗೊತ್ತಾಯಿತು...? ಎಂಬ ಪ್ರಶ್ನೆ ದೊಡ್ಡದಾಯಿತು...!...

ಗೋವಿಂದ ಭಟ್ಟರು ಮತ್ತೆ ಪೇಪರ್ ಹಿಡಿದು ಕಳೆದು ಹೋದರು...

ನಾನು , ನಾಗು ಸಾವಕಾಶವಾಗಿ ಅವರ ಟೇಬಲ್ಲಿನ ಮುಂದೆ ಹೋದೆವು...

ಇವರಿಗೆ ಜಾದು ಬರುತ್ತಾ..?

ಏನೂ ಗೊತ್ತಾಗಲಿಲ್ಲ...


ಹುಡುಗರೆಲ್ಲ ಸ್ತಬ್ಧವಾಗಿ.. ಕುಳಿತಿದ್ದರು...!

ಮತ್ತೆ ಇಣುಕಿದೇವು...


ಪೇಪರಿನಲ್ಲಿ ಸಣ್ಣ.., ಸಣ್ಣ.., ತೂತುಗಳು..!

ಅದರಲ್ಲಿ ಅವರ .. ಚಷ್ಮದ..."ಕೆಂಗಣ್ಣು"...!


ಆ.. ತೂತಿನಿಂದ.... ನಮ್ಮನ್ನೆಲ್ಲ ಆಗಾಗ.. ನೋಡುತ್ತಿದ್ದರು......!

ನಾವು ಇಣುಕಿದ್ದು ಅವರಿಗೆ ಗೊತ್ತಾಯಿತು...


ಪೇಪರ್ ಪಕ್ಕಕ್ಕೆ ಸರಿಸಿ..

" ದೆವಿಸರಾ... ಬೆಲ್ ಆದಮೇಲೆ ಸ್ಟಾಫ್ ರೂಮಿಗೆ ಬಂದು ನನ್ನನ್ನು ನೋಡು"

ಎಂದು ಗಂಭೀರವಾಗಿ ಹೇಳಿದರು...

ನನಗೆ ಜಂಘಾಬಲವೇ ಉಡುಗಿ ಹೋಯಿತು...

ಬೆಲ್ಲಾಯಿತು......ಸಾವಕಾಶವಾಗಿ ಅವರನ್ನೇ ಹಿಂಬಾಲಿಸಿದೆ...


ಅಲ್ಲಿ ಹಲವಾರು ಶಿಕ್ಷಕರು, ವಿಧ್ಯಾರ್ಥಿಗಳೂ ಇದ್ದರು...

ಖುರ್ಚಿಯಲ್ಲಿ ಕುಳಿತು..

"ನೋಡು ಪ್ರಕಾಶ.. ನೀನು ಬುದ್ಧಿವಂತ..


ಏಕಾಗ್ರತೆಯಿಲ್ಲ..!

ನಾಗುವಿನ ಜೊತೆ ಸೇರಿ ಹಾಳಾಗ ಬೇಡ..

ನಾಗು ಶ್ರೀಮಂತ. ಮನೆಯಲ್ಲಿ ಆಸ್ತಿಪಾಸ್ತಿ ಇದೆ...


ಫೇಲಾದರೆ.. ಅವನಿಗೆ ಏನೂ ತೊಂದರೆ ಇಲ್ಲ...

ನಿನಗೇನಿದೆ..?

" ತಂದೆಯಿಲ್ಲದ " ಮಕ್ಕಳು ...ಜೀವನದಲ್ಲಿ ಜಾರುವದು ಜಾಸ್ತಿ...


ದಡ .. ಸೇರುವದು ಕಡಿಮೆ..

ನಿನಗೆ ಗೊತ್ತಿದೆಯಾ... ನಿನ್ನ ಚಿಕ್ಕಪ್ಪ, ಚಿಕ್ಕಮ್ಮ ...


ನಿಮ್ಮ ಬಗ್ಗೆ ಎಷ್ಟು ಕಷ್ಟ ಪಡುತ್ತಿದ್ದಾರೆ?

ಸುಮ್ಮನೆ ಹಾಳಾಗಬೇಡ.. ಹೋಗು ಓದಿಕೊ.."

ನನಗೆ ಮೈಯೆಲ್ಲ ಕುದಿಯುತ್ತಿತ್ತು... ಕ್ಲಾಸ್ ರೂಮಿಗೆ ಬಂದೆ...


ಎಲ್ಲರೆದುರಿಗೆ ನನ್ನ ಮರ್ಯಾದೆ... ತೆಗೆದು ಬಿಟ್ಟರಲ್ಲ...!

ನಾಗುವಿನ ಬಳಿ ಹೇಳಿ ಕೊಂಡೆ...

ಇವರಿಗೆ ಹೇಗಾದರೂ ಬುದ್ಧಿ ಕಲಿಸಬೇಕು...

ನಾವಿಬ್ಬರೂ ಒಂದು ಉಪಾಯ ಮಾಡಿದೆವು

ಕ್ಲಾಸಿನ ಬ್ಲ್ಯಾಕ್ ಬೋರ್ಡಿನಮೇಲೆ ....


ಇವರ "ಬಾಂಡ್ಲಿ " ತಲೆಯ ಚಿತ್ರ ಬಿಡಿಸಿ...

ಅದರೊಲ್ಲೊಂದು.. " ನಕಾಶೆ ".. ಬಿಡಿಸಿಟ್ಟೆ...

ಮುಂದಿನಕ್ಲಾಸು ಅವರದೇ ಇದ್ದಿತ್ತು...

ಬಂದು ಬೋರ್ಡ ನೋಡಿದರು...


ನನ್ನೊಮ್ಮೆ ನೋಡಿದರು..

ನನಗೆ ಹೊಡೆಯ ಬಹುದಾ..? ನಾನು ತಯಾರಾಗಿದ್ದೆ.....!

ಏನೂ ಆಗದವರ ಹಾಗೆ ಬೋರ್ಡ್ ಅಳಿಸಿ ಪಾಠ ಶುರು ಮಾಡಿದರು...

ಗುಡುಗು, ಸಿಡಿಲು.. ಮಳೆಯ ನಿರೀಕ್ಷೆಯಲ್ಲಿದ್ದ ನನಗೆ ಇದು ಆಘಾತ...!


ಬಯ್ಯಲೂ ಇಲ್ಲ..!

ಹೊಡೆಯಲೂ ಇಲ್ಲ...
!

ಚಿಕ್ಕಪ್ಪನಿಗೂ ಹೇಳಲಿಲ್ಲ...!

ಸುಮ್ಮನೆ ಎಂದಿನಂತೆ ಇದ್ದುಬಿಟ್ಟರು...
!

ನನಗೆ ನನ್ನ ತಪ್ಪಿನ ಅರಿವಾಯಿತು...

ಪಶ್ಚಾತ್ತಾಪವೂ ಆಯಿತು...


ಅವರು ಮಾತಾಡದೇ.. " ತಿಳಿ ಹೇಳಿದ ಪಾಠ.." ಇನ್ನೂ ನನ್ನಲ್ಲಿದೆ...

ಬಹಳ ಸಾರಿ ಅವರೊಬ್ಬರೆ ಇದ್ದಾಗ... " ಕ್ಷಮೆ " ಕೇಳ ಬೇಕೆಂದರೂ..

ಆಗಲಿಲ್ಲ...

ಇನ್ನು ಕೇಳುವ ಹಾಗೆಯೂ ಇಲ್ಲ......

ಅವರು ... ಹ್ರದಯ ಘಾತದಿಂದ ..ಕೆಲವು ವರ್ಷದ.... ಹಿಂದೆ ತೀರಿ ಕೊಂಡಿದ್ದಾರೆ...

ಹೇಳಲಾಗದೆ ಉಳಿದ ... ನೋವಿನ ....


ಭಾವ ನನ್ನನ್ನು ಕಾಡುತ್ತದೆ...













ಇದೋ.... "ದಕ್ಷಿಣ ಭಾರತ.."..!

.. ಬುರುಡೆಯ..ಮೇಲೆ ಸೂರ್ಯ ಸಿಕ್ಕಿದ್ದರೆ...!

ಅಥವಾ...

ಸೂರ್ಯಾಸ್ತದಲ್ಲೋ...ಸೂರ್ಯೋದಯದಲ್ಲೋ ಸಿಕ್ಕಿದ್ದರೆ... !

ಅದ್ಭತವಾಗಿರುತ್ತಿತ್ತು..

ಲೇಖನ... .. ಫೋಟೋ...

ನನ್ನ ಗೆಳೆಯ ಶಿವೂ ರವರಿಗೆ....

ಮೊನ್ನೆ ಶಿವರವರು ..ತಮ್ಮ ಬ್ಲಾಗಿನಲ್ಲಿ.."ಬುರುಡೆ ಪುರಾಣ " ಹಾಕಿದಾಗ....

ನನಗೆ ಇದೆಲ್ಲ ನೆನಪಾಯಿತು....

ಶಿವೂ ರವರಿಗೆ ನನ್ನ ಕ್ರತಜ್ನತೆಗಳು...

ಅವರು ಇನ್ನೂ ಯಶಸ್ಸು ಸಾಧಿಸಲಿ...!

ಅವರ ಪ್ರತಿಭೆ.. ಪ್ರಯತ್ನಕ್ಕೆ.. ಫಲ ಸಿಗಲಿ...!

.. ಲೇಖನ .., .. ಫೋಟೋ...

ಶಿವೂ ರವರಿಗೆ...

ಶಿವಾರ್ಪಣ...!

48 comments:

Ashok Uchangi said...

ನೀವು ಬೋಳುತಲೆಯಿಂದ ಭೂಗೋಳ ಕಲಿತದ್ದು ಹೀಗೋ?ನಿಮ್ಮ ಶಾಲೆಯ ನೆನಪುಗಳು ಅಚ್ಚಳಿಯದೇ ಉಳಿದಿರುವುದು ಆಶ್ಚರ್ಯ!
ಸೊಗಸಾದ ಅನುಭವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.ಬಹುಷಃ ನಿಮ್ಮ ಮೇಷ್ತ್ರು ನಿಮ್ಮ ‘ಕ್ರಿಯೇಟೀವಿಟಿ’ ಗುರುತಿಸಿ ಸುಮ್ಮನೆ ಎಂದಿನಂತೆ ಇದ್ದುಬಿಟ್ಟರು ಎಂದು ಅನಿಸುತ್ತೆ.‘ಬೋಳುತಲೆಯ ಬೆಕ್ಕಸ’ ನಿಮ್ಮದಾದರೂ ಅದನ್ನು ಗುರುತಿಸಿದ ನಿಮ್ಮ ಮೇಷ್ತ್ರು ಗೋವಿಂದ ಭಟ್ಟರಿಗೆ ಅರ್ಪಿಸಿದರೆ ಸೂಕ್ತ.
ಅಶೋಕ ಉಚ್ಚಂಗಿ
http://mysoremallige01.blogspot.com/

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಕೆಲವು ವ್ಯಕ್ತಿಗಳು ನಮ್ಮ ನೆನಪಿನ ಸರಪಳಿಯ ಕೊಂಡಿಗಳಾಗಿ, ಅದನ್ನು ಇನ್ನಷ್ಟು ಭದ್ರ ಪಡಿಸಿ ಬಿಡುತ್ತಾರಲ್ಲವೇ!!!, ಅವರು ಹೋದ ನಂತರವೂ ಅದಿನ್ನೆಷ್ಟೋ ಸಮಯದ ತನಕ, ಮತ್ತೆ ಕೆಲವೊಮ್ಮೆ ಕೊನೆ ತನಕ ಅವರ ನೆನಪು ನಮ್ಮನ್ನು ಕಾಡಿ ಬಿಡುತ್ತೆ.
ಶಿವಾರ್ಪಣೆ ಇಷ್ಟವಾಯಿತು, ದಕ್ಷಿಣ ಭಾರತ ಭೂಪಟದಲ್ಲಿ ಕರ್ನಾಟಕ ಗುರುತಿಸುವ ಪ್ರಯತ್ನದಲ್ಲಿದ್ದೇನೆ, ನಿಮ್ಮ ಸಹಾಯವೂ ಬೇಕು ಅನ್ಸುತ್ತೆ [:)].
-ರಾಜೇಶ್ ಮಂಜುನಾಥ್

Ittigecement said...

ಅಶೋಕ....

ಭೂಪಟದ "ಐಡಿಯಾ" ಹೊಳೆದದ್ದು ಆಗ...

ಅಲ್ಲಿಯ ಶಿಕ್ಷಕರು ಎಲ್ಲರೀತಿಯ ಉಪಾಯ ಮಾಡಿ ದಾರಿಗೆ ತರುತ್ತಿದ್ದರು...

ಗೋವಿಂದ ಭಟ್ಟರ ಈ ರೀತಿಯ ಪನಿಷಮೆಂಟ್ ನನಗೆ ಬಹಳ ಪರಿಣಾಮ ಬೀರಿತು...

ಅವರಬಳಿ ಎಷ್ಟೋ ಸಾರಿ ಹೋದಾಗಲೆಲ್ಲ "ಅಪರಾಧಿ" ಮನೋಭಾವ ಕಾಡಿ...

ಏನೂ ಹೇಳಲಾಗದೆ ವಾಪಸ್ಸು ಬರುತ್ತಿದ್ದೆ...



"ಶಿವು "ರವರು ನನ್ನ ಹೆಸರನ್ನು ಹೇಳಬೇಕಾಗಿರಲಿಲ್ಲ...

ನಾನು ಆ... ರೀತಿ ಹೇಳಿಯೂ ಇದ್ದೆ...

ಆದರೂ ತಮ್ಮ ಪ್ರತಿಭೆಯಲ್ಲಿ ನನ್ನ ಹೆಸರು ಸೇರಿಸಿಬಿಟ್ಟರು...

ಕಳೆದು ಹೋದವರು ಮತ್ತೆ ಬರುವದಿಲ್ಲ...

ಇದ್ದವರು.. , ಕೈಗೆ ಸಿಕ್ಕವರಿಗೆ " ಥ್ಯಾಂಕ್ಸ್" ಹೇಳ ಬಹುದಲ್ಲ..

ನಾನು ನನ್ನ ತಪ್ಪನ್ನು ತಿದ್ದಿ ಕೊಂಡುದದನ್ನು ಭಟ್ಟರು ನೋಡಿದ್ದಾರೆ..

ಅವರಿಗೆ ಖುಷಿಯೂ ಆಗಿತ್ತು...

ಬಹಳ ಒಳ್ಳೆಯ ಪ್ರತಿಕ್ರಿಯೆಗಾಗಿ ...

ಅನಂತ..ಅನಂತ ವಂದನೆಗಳು...!

Ittigecement said...

ರಾಜೇಶ್....

ಯಾವಗಲೂ ಹಾಗೇ...ಕೆಲವರ ನೆನಪು ಕಾಡುತ್ತದೆ..

ಕೆಲವರದ್ದು ಉಳಿಯುತ್ತದೆ..

ಕಾಡುವದು ನೋವು ತರುತ್ತದೆ...

ಗೋವಿಂದ ಭಟ್ಟರಿಗೆ ಒಮ್ಮೆ ನಾನು ಕ್ಷಮೆ ಕೇಳಿಬಿಟ್ಟಿದ್ದರೆ ಮನಸ್ಸು ಹಗುರಾಗಿಬಿಡುತ್ತಿತ್ತು...

ಅದು ಕಾಡುತ್ತದೆ...ಕಾಡುತ್ತಲೇ ಇರುತ್ತದೆ...

ಹಾಗಾಗಿ ಕೈಗೆ ಸಿಕ್ಕದ್ದಾರಲ್ಲ ಅವರಿಗೆ ಏನೇನು ಹೇಳ ಬೇಕು ಅದನ್ನು ಹೇಳಿಬಿಡಬೇಕು...

ಆಮೇಲಿನ ಭಾವದ "ನೋವು" ಇರುವದಿಲ್ಲವಲ್ಲ..

ನಿರಾಳವಾಗಿರಬಹುದು... ಅಲ್ಲವಾ..?



ದಕ್ಷಿಣ ಭಾರತದ ಭೂಪಟ ನನ್ನ ತಮ್ಮನ ಮನೆಯ "ಗ್ರಹ ಪ್ರವೇಶ" ದಲ್ಲಿ ಸಿಕ್ಕಿದೆ...

ಕೂದಲು ಎಲ್ಲರಿಗೂ ಉದುರತ್ತದೆ...

ಆದರೆ ಹೀಗಾ..?

ನೀವು ಸೂಕ್ಷ್ಮವಾಗಿ ನೋಡಿ... ಗೋವಾದ ಹತ್ತಿರ.., ತಮಿಳುನಾಡಿನಹತ್ತಿರದ

"ಕರ್ವ್" ಗಳು ಪಕ್ಕಾ ಪ್ರಮಾಣ ಬದ್ಧವಾಗಿದೆ...

"ಶ್ರೀಲಂಕಾ" ಅರಬ್ಬೀ ಸಮುದ್ರದಲ್ಲಿ ಮುಳುಗಿ ಹೋಗಿದೆ...!!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...!

sunaath said...

ಪ್ರಕಾಶ,
ಅಂತಹ ಮೇಷ್ಟ್ರು ಇದ್ದದ್ದರಿಂದಲೇ ಶಾಲೆ ಎನ್ನುವದು ಜೀವನದ
ಪಾಠ ಕಲಿಸುವ ಶಾಲೆಯಾಯಿತು ಎನ್ನಿಸುತ್ತದೆ. ನಿಮ್ಮ ಮೇಷ್ಟ್ರಿಗೆ ಹಾಗೂ ಅವರನ್ನು ನೆನಪಿಸಿಕೊಂಡ ನಿಮಗೆ ಪ್ರಣಾಮಗಳು.

Ittigecement said...

ಸುನಾಥ ಸರ್...

ಅವರಂತೆ ಅಲ್ಲಿ ಎಲ್ಲ ಮೇಷ್ಟ್ರುಗಳು ಹಾಗೇಯೆ ಇದ್ದಾರೆ...

ದಾರಿ ತಪ್ಪಿದವರನ್ನು "ಸರಿ" ದಾರಿಗೆ ಅವರದೇ ರೀತಿಯಲ್ಲಿ ತರುತ್ತಿದ್ದರು...

ಅಲ್ಲಿನ ಶಿಕ್ಷಕರನ್ನು ಕಂಡರೆ ನಾವು ಮುಖನೋಡುವದಿಲ್ಲ..

ಅವರ ಕಾಲು ನೋಡುತ್ತಿರುತ್ತೇವೆ...

ಅವರ ಆಶೀರ್ವಾದ ಪಡೆಯದೆ ಬರುವದಿಲ್ಲ..!

ನನ್ನ ಚಿಕ್ಕಪ್ಪನೂ ಅಲ್ಲಿ ಮೇಷ್ಟ್ರು..

ಈಗ ನಿವ್ರುತ್ತರಾದರೂ.. ಮತ್ತೆ ಸೇರಿದ್ದಾರೆ...

ಆ ಗ್ರಾಮೀಣ ಭಾಗದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ತೆರೆಯುತ್ತಿದ್ದಾರೆ..

ಗೌರವ ಸಂಬಳ..

ಇಳಿ ವಯಸ್ಸಿನಲ್ಲಿ ಆರಾಮಾಗಿ ಇರುವದು ಬಿಟ್ಟು..!

ಹಗಲೂ , ರಾತ್ರಿ ಶಾಲೆಯ ಬಗೆಗೇ ಯೋಚನೆ...

ಸಮಾಜ ಸೇವೆ ಅಂತ ಬಹಳ ತಿರುಗುತ್ತಿದ್ದರು..

ಅದಕ್ಕಿಂತ ಇದು ಬಹಳ ಒಳ್ಳೆಯದು ಎಂದು ನಾವಂದು ಕೊಂಡಿದ್ದೇವೆ...

ಇನ್ನು ಮುಂದೆ ಇಂಥವರನ್ನು ಬರಿ ಪೇಪರಲ್ಲಿ ಕಾಣ ಬಹುದೇನೊ...

ಸುನಾಥ ಸರ್...

ನಿಮಗೆ ವಂದನೆಗಳು...

Anonymous said...

ಪ್ರಕಾಶರೆ,

ಶಿವೂ ಅವರ ಬ್ಲಾಗ್ ಗೆ ಭೇಟಿ ಕೊಟ್ಟ ನ೦ತರ ಕುತೂಹಲಿಯಾಗಿ ನಿಮ್ಮ ಬ್ಲಾಗಿಗೆ ಬ೦ದೆ. ಬುರುಡೆ
ಪುರಾಣದ ಹಿ೦ದಿನ ಕಥೆ ಓದಿ ನಿಮ್ಮ creativity ಗೆ ಸಿಕ್ಕ inspiration ಬಗ್ಗೆ ತಿಳಿಯಿತು. ಚೆನ್ನಾಗಿದೆ. ಶಾಲಾ ಜೀವನದ ನೆನಪಿನ ಬುತ್ತಿಯನ್ನು ಬಿಚ್ಚಿದ್ದೀರಿ. ಬಹುಶಃ ಅ೦ತಹ ಶಿಕ್ಷಕರು ಈಗ ಇಲ್ಲವೆನಬಹುದೇನೋ ??

NiTiN Muttige said...

ನಿಮ್ಮ ಯಶಸ್ಸಿನ ಗುಟ್ಟು ಇದೋ??!! ಇಗ ಗೋತ್ತಾಗೋಯ್ತು!!
ಸಿದ್ದಾಪುರ-ಸಿರಸಿ ಮಧ್ಯೆ ಹೋಗುವಾಗ ದೂರದಿಂದಲೇ ಕಾನಸೂರಿನ ಹೈಸ್ಕೂಲ್ ನೋಡಿತ್ತಿದ್ದೆ.ಇಂದು ಅದರ ಸವಿ ಸವಿದೆ!!

Umesh Balikai said...

ಅದು ಹೇಗೆ ಸ್ವಾಮಿ ನಿಮಗೆ ಬಾಲ್ಯದ ಪ್ರತಿಯೊಂದು ಅನುಭವವೂ ಇಷ್ಟು ಕರಾರುವಾಕ್ಕಾಗಿ ನೆನಪುಳಿಯುತ್ತೆ ಅಂತೀನಿ. ಪ್ರತಿಯೊಬ್ಬರ ಬಾಲ್ಯದಲ್ಲೂ ಇಂತಹ ಘಟನೆಗಳು ನಡೆದಿರುತ್ತವೆ. ಆದರೆ ಇಷ್ಟೊಂದು ನೆನಪಿನಿಂದ ಇಷ್ಟೊಂದು ಸುಂದರವಾಗಿ ಹೇಳಲು ಮಾತ್ರ ಎಲ್ಲರಿಗೂ ಬರುವುದಿಲ್ಲ. ಇದನ್ನು ಓದಿದ ಮೇಲೆ ನನಗೂ ನಮ್ಮ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕರೊಬ್ಬರ ನೆನಪಾಯಿತು. ಬೀ.ಎಲ್. ಮತ್ತಿಗಟ್ಟಿ ಅಂತ ಅವರ ಹೆಸರು. ನಿಮ್ಮ ಗೋವಿಂದ ಭಟ್ಟ ಮೇಷ್ಟ್ರ ಹಾಗೆಯೇ ತಮಾಷೆ ಮಾಡುತ್ತಾ, ಬುದ್ಧಿ ಹೇಳುತ್ತ, ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ನನ್ನ ಮೇಲೆ ವಿಶೇಷ ಪ್ರೀತಿ ಅವರಿಗೆ. ನಿಮ್ಮ ಬರಹ ಓದಿದ ನಂತರ ನನಗೂ ಅವರ ಬಗ್ಗೆ ಬರೆಯಬೇಕು ಅನ್ನಿಸುತ್ತಿದೆ. ಸಮಯ ಸಿಕ್ಕಾಗ ನನ್ನ ಬ್ಲಾಗಿನಲ್ಲೊಮ್ಮೆ ಅವರ ಬಗ್ಗೆ ವಿವರವಾಗಿ ಬರೆಯುವೆ.

ಶಿವಪ್ರಕಾಶ್ said...

ಹೌದು,
ಕ್ಷೆಮೆ ಕೇಳುವುದು ಕಷ್ಟ,
ಆದರೆ ಎಸ್ಟೆ ಕಷ್ಟವಾದರೂ ಕೇಳಿಬಿಡಬೇಕು.
ಇಲ್ಲದಿದ್ದರೆ ನೆನಸಿದಗಳೆಲ್ಲ ಪಾಪ ಪ್ರಜ್ಞೆ ಕಾಡುತ್ತಿರುತದೆ.

Ittigecement said...

ಪರಾಂಜಪೆಯವರೆ...

ನನ್ನ ಬ್ಲಾಗಿಗೆ ಸ್ವಾಗತ..

ಗೋವಿಂದ ಭಟ್ಟರು ಬಯ್ಯುವ ಹಾಗೆ ಮಾತಾಡಿದರೂ..

ಹ್ರದಯದಲ್ಲಿ "ನಂಜಿರಲಿಲ್ಲ"

ನನಗೆ ಆಶ್ಚರ್ಯವೇನೆಂದರೆ..

ಅವರ ಒಬ್ಬ ಶಿಷ್ಯರೂ ಬ್ಲಾಗ್ ಪ್ರಪಂಚದಲ್ಲಿ ಇಲ್ಲವಾ..?

ಅಲ್ಲಿನ ಶಿಕ್ಷಕರೆಲ್ಲ "ನೈತಿಕವಾಗಿ" ನಮಗೆಲ್ಲ ಆದರ್ಶವಾಗಿದ್ದರು..

ಇದ್ದಾರೆ..

ನಿಜ ಅಂಥವರು ಈಗ ಕಡಿಮೆ..

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ನಿತಿನ್....

ಬಹಳ ಸುಂದರ ಶಾಲೆಯದು..

ಅಲ್ಲಿಯ ವಾತಾವರಣ ಶಾಲಾ ಸಿಬ್ಬಂದಿ.. ತುಂಬಾ ಚೆನ್ನಾಗಿದೆ...

ನನ್ನ ಚಿಕ್ಕಪ್ಪನೂ ಅಲ್ಲಿ ಟೀಚರ್, ಹೆಡ್ ಮಾಸ್ತರ್..

ನನಗೆ ಅವರ ಹೆದರಿಕೆಯೂ ಇತ್ತು...

ಚಿಕ್ಕಪ್ಪನಾಗಿಯೂ, ಟೀಚರ್ ಆಗಿಯೂ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಉಮಿ....

ನಾಅ ಶಾಲೆಯಲ್ಲಿ ನನಗೆ ಎಲ್ಲರೂ ಇಷ್ಟವಾಗಿದ್ದರು..

ಈ ಘಟನೆಯ ನಂತರ..

ಅವರು ಹೊಡೆದು ಬಿಟ್ಟಿದ್ದರೆ...
ಮೈಕೊಡವಿ ಮತ್ತೆ ತುಂಟತನ ಶುರು ಮಾಡಿಬಿಡುತ್ತಿದ್ದನೇನೊ..

ಬೈದರೆ.. ಈ ಕಿವಿಯಿಂದ ಕೇಳಿ.. ಆ ಕಿವಿಯಲ್ಲಿ ಬಿಟ್ಟು ಬಿಡುತಿದ್ದೆ...!

ಅವರ ಮೌನ ನನಗೆ ಬಹಳ ಕಷ್ಟವಾಗಿತ್ತು...

ನಾನು ಬಿಡಿಸಿದ "ನಕಾಶೆ" ಬಹಳ ಕೆಟ್ಟದಾಗಿತ್ತು..

ಆದರೂ ಕೋಪಗೊಳ್ಳದೆ, ನನಗೆ ಕೊಟ್ಟ ಶಿಕ್ಷೆ..!

ಪರಿಣಾಮಕಾರಿಯಾಗಿತ್ತು..!

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಶಿವ ಪ್ರಕಾಶ್....

ಮಾಡಿದ ತಪ್ಪಿಗೆ ಮುಂದೆ ನಿಂತು ಕ್ಷಮೆ ಕೇಳುವದು ಬಹಳ ಕಷ್ಟ...

ನನಗೆ ಆಗಲೇ ಇಲ್ಲ...

ಶಾಲೆ ಬಿಟ್ಟ ಮೇಲೂ... ಆಗಲಿಲ್ಲ..

ಅವರು ಅಭಿಮಾನದಿಂದ ಕಾಣುತಿದ್ದರು..

ಕೇಳಿ ಬಿಡಬೇಕಿತ್ತು...

ಒಟ್ಟಿನಲ್ಲಿ "ಕ್ಷಮೆಯೋ"

ಧನ್ಯವಾದವೋ"

ಸಂದರ್ಭದಲ್ಲಿ , ಅವಕಾಶ ಸಿಕ್ಕಾಗ... ಕೇಳಿಯೇ ಬಿಡಬೇಕು...

ಪಶ್ಚಾತ್ತಾಪ ಪಡುವ ಸ್ಥಿತಿ ಯಾರಿಗೂ ಬೇಡ...

Harisha - ಹರೀಶ said...

ಶಿವಾರ್ಪಣ! ಹಹ್ಹಹ್ಹಾ !!!

Ittigecement said...

ಹರೀಷ್....

ಶಿವುರವರಿಗೆ..."ಶಿವಾರ್ಪಣ" ಪ್ರಾಸಬದ್ಧವಾಗಿದೆ ಅಲ್ಲವಾ?

ಸುಮ್ಮನೆ "ಇಟ್ಟಿಗೆ ಸಿಮೆಂಟು" ಅಂತಿದ್ದ ನನಗೆ..

ಬ್ಲಾಗ್ ಲೋಕಕ್ಕೆ ತಂದು ಬಿಟ್ಟು ಮಜಾ ನೋಡುತ್ತಿದ್ದಾರೆ...

ನೀವೆ ಬರೆಯಿರಿ ಎಂದು "ಸರಸತ್ತೆ ದೋಸೆ" ಕಥೆ ಹೇಳಿದರೆ..

ಬ್ಲಾಗ್ ಮಾಡಿ ಕೊಟ್ಟರು...

ನಂಗೂ ಗೊತ್ತಿಲ್ಲ ಎಲ್ಲಿಯವರೆಗೆ ಬರೆಯಬಲ್ಲೆ ಎಂದು...

ನೋಡೋಣ....

"ದೇವರ ಹಣೆಯಲ್ಲಿ ಭಗವಂತ ಬರೆದಹಾಗಾಗುತ್ತದೆ"

ಇದು ಕೆಂಪಜ್ಜಿ ಮಾತು..

ಹ್ಹಾ..ಹ್ಹಾ..

ಹೀಗೆ ಬರುತ್ತಾ ಇರಿ...

ಧನ್ಯವಾದಗಳು...

ಮನಸು said...

ಪ್ರಕಾಶ್ ಸರ್,

ಚೆನ್ನಾಗಿವೆ ನಿಮ್ಮ ಹಳೆಯನೆನಪುಗಳು... ಅವರು ಎಸ್ಟೇ ಆಗಲಿ ಗುರುಗಳು ಅಲ್ಲವೇ ಅಂದೆ ಕ್ಷಮಿಸಿದ್ದಾರೆ ಬಿಡಿ...ಇಲ್ಲವಾದರೆ ಹಾಗೆ ಬೋರ್ಡ್ ಅಳಿಸುತ್ತಿರಲಿಲ್ಲ ...

Ittigecement said...

ಮನಸು...

ಅವರು ಬೋರ್ಡಿನಲ್ಲಿರೋದೇನೋ ಅಳಿಸಿ ಬಿಟ್ಟರು...

ಆದರೆ ನನ್ನ ಮನಸಿನಲ್ಲಿ ಹಾಗೇ ಬಿಟ್ಟರು..

ನಮ್ಮ ಮನಸು ಬ್ಲ್ಯಾಕ್ ಬೋರ್ಡ್ ಅಲ್ಲವಲ್ಲ..

ಬರೆದು ಅಳಿಸುವದಕ್ಕೆ...!

ನಮ್ಮ ಮನಸ್ಸಿನ ಬಗೆಗೆ ನಿಮಗೆ ಹೇಳುವದೇನಿದೆ..?

ನೀವೆ " ಮನಸು.." ಅಲ್ಲವೆ?

ನಿಮ್ಮ ಬ್ಲಾಗಿನ ಹೆಸರು ತುಂಬಾ ಚೆನ್ನಾಗಿದೆ...

ಅಭಿನಂದನೆಗಳು..

ಪ್ರತಿಕ್ರಿಯೆಗೆ ..

ಧನ್ಯವಾದಗಳು...

ಹಿತ್ತಲಮನೆ said...

ಹಾಸ್ಯವಾಗಿ ಪ್ರಾರಂಭವಾಗಿದ್ದು ಓದುತ್ತಾ ಓದುತ್ತಾ ಗಂಭೀರವಾಯಿತು...ಬರಹ ಚೆನ್ನಾಗಿ ಬಂದಿದೆ...ಮತ್ತೆ ಎಂದಿನ short and sweet ಶೈಲಿಗೆ ಮರಳಿದ್ದೀರಿ !

Ittigecement said...

ಹಿತ್ತಲಮನೆ ಬೀಗಣ್ಣನವರೆ...

ಅರ್ಥವಾಯಿತು.."ರಾಜಿಬಲು ಸುಂದರಿ" ಲೇಖನ ಉದ್ದವಾಗಿತ್ತು..

ಆದರೆ ಅದನ್ನು ಬಹಳ ಕಷ್ಟಪಟ್ಟು ಸಣ್ಣದಾಗಿ ಮಾಡಿದೆ..

ಆ ಭಟ್ಟರು ಮನೆಗೆ ಕಂಪ್ಲೇಂಟು ಕೊಟ್ಟು ಮನೆಯವರೆಲ್ಲ ಬಂದು..

ಒಳ್ಳೇ ಫಜೀತಿಯಾಗಿತ್ತು..

ಆಗಲೂ "ನಾಗು"ನೇ ಕಾಪಾಡಿದ್ದು..

ನಿಮ್ಮ ಸಲಹೆಯಂತೆ ಇನ್ನು ಸಣ್ಣ ಲೇಖನಗಳನ್ನೇ ಬರೆಯುವೆ...

ಲೇಖನ ಖುಷಿ ಪಟ್ಟಿದ್ದಕ್ಕೆ ವಂದನೆಗಳು..

ನಿಮ್ಮ ಪ್ರತಿಕ್ರಿಯೆ ನನಗೆ "ಟಾನಿಕ್"

ತಪ್ಪದೆ ಕೊಡಿ...

ಮನಸು said...
This comment has been removed by the author.
ಮನಸು said...

ಪ್ರಕಾಶ್ ಸರ್,
ತುಂಬ ಧನ್ಯವಾದಗಳು.. ಮನಸು ಎಂಬ ಹೆಸರು ಇಷ್ಟಪಟ್ಟಿದ್ದಕ್ಕೆ, ಮನಸು (ಮಹೇಶ್, ಮನುವಚನ್,ಸುಗುಣ) ಈ ಮೂವರ ಹೆಸರು ಸೇರಿ ಅವರ ಮನದ ತುಡಿತವೇ ಮನಸು..

ಇನ್ನು ನಿಮ್ಮ ಅನಿಸಿಕೆ ನಾನು ಒಪ್ಪುತ್ತೇನೆ.. ನನ್ನ ತಂದೆ ಕೂಡ ಒಬ್ಬರು ಮಾಸ್ಟರು ನನಗೆ ಗೊತ್ತು ಗುರುಗಳ ಮನಸು ಹೇಗೆಂದು.. ಇನ್ನು ನೀವು ಅಂದು ಮಾಡಿದ್ದು ಹುಡುಗಾಟಿಕೆಯಿಂದ ಅಲ್ಲವೇ? ಆ ವಯಸ್ಸೇ ಹಾಗೆ ಆದ್ದರಿಂದ ನೀವು ಮಾಡಿದ್ದು ತಪ್ಪೆಂದು ನಿಮ್ಮ ಮನಸಾಕ್ಷಿಗೆ ತಿಳಿದು ಮತ್ತೆ ಅದೇ ತಪ್ಪನ್ನ ಮರುಕಲಿಸಿಲ್ಲವಲ್ಲ, ತಪ್ಪು ಮಾಡುವುದು ಮನುಷ್ಯನ ಗುಣ ಅದನ್ನ ತಿದ್ದಿ ಆ ತಪ್ಪು ಮರುಕಳಿಸದೇ ನಡೆಯುವುದು ದೊಡ್ಡಗುಣ

ಹಾಗಾಗಿ ನೀವು ಮನಸಿಗೆ ಹೆಚ್ಚು ಘಾಸಿ ಕೊಡದೆ, ನಿಮ್ಮ ಮಗ ಆ ರೀತಿ ತಪ್ಪೇನಾದರೂ ಮಾಡಿಯಾನೆಂದು ತಿಳುವಳಿಕೆ ತಿಳಿಸಿದರೆ, ನಿಮ್ಮ ಮನಸಿಗೂ ಹಗುರ ನಿಮ್ಮನ್ನ ಅಗಲಿದ ಮಾಸ್ತರ ಆತ್ಮಕ್ಕೋ ಸಮಾದಾನ..

ನನ್ನ ಅಭಿಪ್ರಾಯ ನಿಮಗೆ ಸಮಾಧಾನ ತಂದಿರಬಹುದೆಂದು ಭಾವಿಸುತ್ತೇನೆ...

ವಂದನೆಗಳು...

ಚಿತ್ರಾ ಸಂತೋಷ್ said...

ಶಿವಣ್ಣನ ಬ್ಲಾಗ್ ನಲ್ಲಿ ಭೂಪಟ ನೋಡಿದಾಗಿನಿಂದ ಬಿದ್ದು ಬಿದ್ದು ನಗೋದೇ ಆಗಿದೆ. ನೋಡಿದ್ರೆ ನೀವೂನು ದಕ್ಷಿಣ ಭಾರತ ಹಾಕಿಬಿಟ್ರಾ? ಒಳ್ಳೆ ತರಲೆಗಳು ಸರ್ ನೀವುಗಳು. ಶಿವಣ್ಣ ಬ್ಲಾಗ್ ನೋಡಿ, ಮನೆಯಲ್ಲಿ ಹೋಗಿ ನಮ್ಮ ಪಕ್ಕದ್ಮನೆ ಅಂಕಲ್ ನ ನೋಡಿ ಅಣ್ಣನ ಬಳಿ 'ಜಗತ್ತಿನ ಭೂಪಟ'ಗಳು ನಡೆಯುತ್ತವೆ ಎಂದಿದ್ದಕ್ಕೆ ಸರಿ ಉಗಿದ..ಪಾಪ ಅವರು ವಯಸ್ಸಾದೋರು..ಹಾಗೆಲ್ಲಾ ಹೇಳಬಾರದು ಅಂದ. ಶಾಲೆ. ಮೇಷ್ಟ್ರು ಗಳ ಕುರಿತು ಓದಿ ಖುಷಿಯಾತು ಸರ್. ನನಗೂ ಯಾರನ್ನಾದ್ರೂ ತಿರುಗಿ ನೋಡಿ ಅವ ನೋಡಿದ ಅನ್ನೋ ಚಾಳಿ ಇತ್ತು. ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ ಸಾರ್್್್್...
-ಚಿತ್ರಾ

Umesh Balikai said...

ಸರ್, ನನ್ನ ಬ್ಲಾಗಿನಲ್ಲಿ ನಾನೇ ತೆಗೆದ ಕೆಲವು ಫೋಟೋಗಳನ್ನು ಹಾಕಿದ್ದೇನೆ. ಒಮ್ಮೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.
http://umeshbalikai.blogspot.com/

Ittigecement said...

ಮನಸು...

ಬಹಳ ಮಾರ್ಮಿಕವಾಗಿ ಹೇಳಿದ್ದೀರಿ...

ಮನಸಿಗೆ ಹ್ರದಯ ಸಂಬಂಧವಿದೆ..

ಮಾತಾಡದೆ ಮೌನವಾಗಿ ಕೊಟ್ಟ ಶಿಕ್ಷೆಯ ಪರಿಣಾಮವನ್ನೂ ಅವರೌ ನೋಡಿದ್ದಾರೆ..

ಆಮೇಲೂ ಅವರು ತುಂಬಾ ವಿಶ್ವಾಸದಿಂದ ಮಾತನಾಡಿಸುತ್ತಿದ್ದರು...

ಅದು ನನಗೆ ಸಮಾಧಾನದ ವಿಷಯ...

ಒಮ್ಮೆ ಮುಖಾ,ಮುಖಿಯಾಗಿ "ಕ್ಷಮೆ" ಕೇಳಬೇಕಿತ್ತು..

ಆ ಕೊರಗು ಇದ್ದೇ ಇರುತ್ತದೆ...

ಈ ಕಥೆಯನ್ನು ಮಗನಿಗೆ ಮಲಗುವಾಗ ಹೇಳಿದ್ದೇನೆ...

ನೀವು ಬರೆದ "ಪುಣ್ಯಕೋಟಿಯ" ಕಥೆಯನ್ನೂ ಸಹ..

ನಿಮ್ಮೊಡನೆಯ ಈ ಸಂವಾದ ನಮಗೆಲ್ಲ ಇಷ್ಟವಾಯಿತು..

ಧನ್ಯವಾದಗಳು...

ಚಂದದ ನುಡಿಗಾಗಿ...

Kishan said...

"ಕಾನನದ ಮಧ್ಯೆ ಆಶ್ರಮದಂತಿರುವ ಆ ಶಾಲೆಗೆ ಮಾರು ಹೋಗದವರಾರು..?" Nothing else can describe our school better than these words!
I am one of the blessed few who has studied in this school as well, and simply cannot forget the ever humorous ಗೋವಿಂದ ಭಟ್ಟರು. "ಮಗೆಕಾಯಿ ತಲೆಯವನೆ" ಎಂದು ಪ್ರೀತಿಯಿಂದ ವಿದ್ಯಾರ್ಥಿಗಳನ್ನು ಕರೆಯುವ ರೀತಿ ಮರೆಯಲಾಗದು!

ಅನಿಲ್ ರಮೇಶ್ said...

ಪ್ರಕಾಶ್,

ಎಲ್ಲಾ ಶಿವಮಯವು.

ಶಿವ ಶಿವ ಎಂದರೆ ಭಯವಿಲ್ಲ.
ನಾಮಕೆ ಸಾಟಿ ಬೇರಿಲ್ಲ
ಶಿವನಾಮಕೆ ಸಾಟಿ ಬೇರಿಲ್ಲ.

ಚೆನ್ನಾಗಿದೆ ಲೇಖನ.

-ಸ್ವಾಮಿ ಶರಣಂ.

ಭಾರ್ಗವಿ said...

ಶಿವಾರ್ಪಣ ತುಂಬಾ ಚೆನ್ನಾಗಿದೆ.ಗುರುಗಳ ಬಗ್ಗೆ ಕುರಿತು ಬರೆದದ್ದು ಇಷ್ಟವಾಯ್ತು.ಎಲ್ಲಾ ಗುರುಗಳನ್ನೊಮ್ಮೆ ನೆನಪಿಸಿಕೊಂಡೆ.ಎಲ್ಲಾ ಗುರುಗಳಿಗೆ ಮತ್ತು ನಿಮಗೆ ನನ್ನ ವಂದನೆಗಳು. ಭೂಗೋಳ ಹುಡುಕುವ ನಿಮ್ಮ ಸ್ಪೆಷಲ್ ಐಡಿಯಾ ತುಂಬಾ ತುಂಬಾ ಚೆನ್ನಾಗಿದೆ.

Ittigecement said...

ಚಿತ್ರಾ...

ನಿಮ್ಮ ಪಕ್ಕದ್ಮನೆ ಅಂಕಲ್ ಹೇಳಿದ್ದು ನಿಜ...

ವಯಸ್ಸಾದವರ ನೋದಿಕೊಂಡು ನಗಬಾರದು...

ಅವರಿಗೆ ಗೌರವ ಕೊಡಬೇಕು...

ಯಾಕೆ ಗೊತ್ತಾ..?

ನಿಮ್ಮ ಶಿವಣ್ಣ ನನ್ನ ತಲೆಯ ಫೋಟೊ ತೆಗೆದು

"ನಕಾಶೆ " ತೋರಸ್ತಾರಂತೆ...!

ನೋಡೋಣ... ಯಾವ ಭೂಪಟ ಹಾಕ್ತಾರೆ ಅಂತ ಅಲ್ಲವಾ?

ಆ.. ಶಾಲಾ ದಿನಗಳು ..

ನೆನಪುಗಳು...ಗೆಳೆಯರು.. ಗುರುಗಳು...

ಬಹಳ ಖುಷಿ ಕೊಡುತ್ತವೆ..

ಧನ್ಯವಾದಗಳು..

ಬರುತ್ತಾ ಇರಿ...

ಅಂತರ್ವಾಣಿ said...

ನಿಮ್ಮ ಶಾಲ ದಿನಗಳ ಪ್ರಸಂಗಗಳು ಓದುತ್ತಾಯಿದ್ದರೆ ಖುಷಿ ಕೊಡುತ್ತೆ. ಏನು ಮಾಡಲಿ ನಾನು ಈ ರೀತಿ ಕೆಲಸಗಳು ಮಾಡಿಲ್ಲ.

Ittigecement said...

ಉಮಿ...

ಸೊಗಸಾದ ಫೋಟೋಗಳು...

ಕೊಡಚಾದ್ರಿಯನ್ನು ಚೆನ್ನಾಗಿ ಸೆರೆ ಹಿಡಿದಿದ್ದೀರಿ...

ಅಭಿನಂದನೆಗಳು...

Ittigecement said...

ಕಿಶನ್...

ನಿಜವಾಗಿಯೂ ಅದೊಂದು ಗುರುಕುಲ, ಆಶ್ರಮ...

ಮಕ್ಕಳನ್ನು ಹುರಿದುಂಬಿಸುವ ಶಿಕ್ಷಕರು..

ಬಹಳ ಚೆನ್ನಗಿದೆ...

ಗೋವಿಂದ ಭಟ್ಟರ ಜೋಕುಗಳನ್ನು

ಇನ್ನೊಂದು ಲೇಖನದಲ್ಲಿ ಮತ್ತೆ ಪ್ರಸ್ತಾಪಿಸುವೆ...

ಅವರು ಪ್ರೀತಿಯಿಂದ...

"ಮೊಗೆಕಾಯಿ ತಲೆಯವನೆ...!"

ಅನ್ನುವದು ನೆನನಪಾಗಿತ್ತು...

ನನ್ನ ಬ್ಲೋಗಿನಲ್ಲಿ ನಾಗು ಅದನ್ನು ..

ಆ ಶಬ್ಧವನ್ನು ಬೇರೆ ಅರ್ಥದಲ್ಲಿ ಬಳಸಿದ್ದರಿಂದ...

ನಾನು ಕೈ ಬಿಟ್ಟಿದ್ದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅನಿಲ್....

ಶಿವುರವರ ಸ್ನೇಹಕ್ಕೆ ,ನನ್ನನ್ನು ಬ್ಲಾಗ್ ಲೋಕಕ್ಕೆ ತಂದಿದ್ದಕ್ಕೆ ..

ಇದು ಶಿವಾರ್ಪಣ...

ಧನ್ಯವಾದಗಳು...

Ittigecement said...

ಭಾರ್ಗವಿಯವರೆ...

ಬಹಳ ದಿನಗಳ ನಂತರ.. ಬಂದಿರಿ...

ನಾವೆಲ್ಲ ಎಷ್ಟು ಭಯ ಭಕ್ತಿಯಿಂದ ..

ನಮ್ಮ ಗುರುಗಳನ್ನು ನೆನಪಿಸಿಕೊಳ್ಳುತ್ತೇವೆ...

ನನ್ನ ಮಗನ ಕ್ಲಾಸಿನಲ್ಲಿ ಶಿಕ್ಷಕರೊಬ್ಬರು..

"ನನಗೆ ಸಂಬಳ ಬರುತ್ತದೆ.. ಕಲಿಸುತ್ತೇನೆ..

ಜಾಸ್ತಿ ಕಂಠ ಶೋಷಣೆ ಮಾಡಿಕೊಳ್ಳಲಾರೆ" ಅಂದಿದ್ದರು..

ನಾವೆಲ್ಲ ವಿರೋಧ ವ್ಯಕ್ತ ಪಡಿಸಿದ್ದೆವು..

ಕಾಲ , ಮೌಲ್ಯಗಳೂ.. ಬದಲಾಗುತ್ತಿದೆ...

ಆ ಗುರುಗಳ ತಲೆಯ ಚಿತ್ರ ಬಿಡಿಸಿ ಪಶ್ಚಾತ್ತಾಪ ನಗಾಗಿದೆ...

ಅವರ ಹಾಸ್ಯ ಮನೋಭಾವನೆ ನನಗೆಂದಿಗೂ ಸ್ಪೂರ್ತಿ..

ಧನ್ಯವಾದಗಳು..

Ittigecement said...

ಅಂತರ್ವಾಣಿ..

ಆ ತುಂಟತನಗಳು..ಮಜಾ ಕೊಡುತ್ತದೆ...

ಈಗಿನ ಶಿಸ್ತಿನ ಕಾನ್ವೆಂಟ್ ಶಾಲೆಗಳಲ್ಲಿ ಇದಕ್ಕೆಲ್ಲ ಅವಕಾಶವಿಲ್ಲವೇನೋ...

ಈಗ ಓದಬೇಕೆನ್ನುವ "ಒತ್ತಡ" ಜಾಸ್ತಿ..

ಮಕ್ಕಳು ತಮ್ಮ ಅಮೂಲ್ಯವಾದ "ಬಾಲ್ಯದ"

ಸವಿಯನ್ನು ಮಜಾ ಮಾಡುತ್ತಿಲ್ಲ...

ಅಥವಾ ನಾವೇ ಅದಕ್ಕೆ ಕಲ್ಲು ಹಾಕುತ್ತಿದ್ದೇವೇನೋ...

ಪ್ರತಿಕ್ರಿಯೆಗೆ ಧನ್ಯವಾದಗಳು...

ವಿನಾಯಕ ಕೆ.ಎಸ್ said...

ಇಟ್ಟಿಗೆ...
ಬರವಣಿಗೆ ತುಂಬಾ ಸೊಗಸಾಗಿದೆ. ಆದ್ರೆ ಬ್ಲಾಗ್‌ ಲುಕ್‌ ಅಷ್ಟೊಂದು ಚೆನ್ನಾಗಿಲ್ಲ ಅನ್ನಿಸಿತು ನನಗೆ. ಸಾಧ್ಯವಾದ್ರೆ ಟೆಂಪ್ಲೆಟ್ ಬದಲಾಯಿಸಿ. ಬ್ಲಾಗ್‌ಗೊಂದು ಉತ್ತಮ ಲುಕ್ ಕೊಡಿ. ಬರಹದ ಜತೆಗೆ ಬರಹದ ನೋಟವೂ ಅವಶ್ಯ. ಹಾಗಾಗಿಯೇ ಪುಸ್ತಕಗಳಲ್ಲ್ಲಿ ಲೇ ಔಟ್‌ಗೆ ಹೆಚ್ಚಿನ ಆದ್ಯತೆ ನೀಡುವುದು...

Ittigecement said...

ವಿನಾಯಕ...

ಬ್ಲಾಗ್ ಲೇ ಔಟ್ ಸಧ್ಯದಲ್ಲೇ ಬದಲಾಯಿಸಲಿದ್ದೇನೆ...

ನನಗೆ ಇದರ ಬಗೆಗೆ ಹೆಚ್ಚಿಗೆ ಗೊತ್ತಿಲ್ಲ..

ತಿಳಿದವರು "ನಮ್ಮನೆಗೆ " ಬಂದಾಗ ಸರಿಪಡಿಸುವೆ...

ಲೇಖನವನ್ನು ಮೆಚ್ಚಿಕೊಂಡಿದ್ದಕ್ಕೆ ..

ಧನ್ಯವಾದಗಳು...

ಹೀಗೆ ಬರುತ್ತಾ ಇರಿ..

ಪ್ರೋತ್ಸಾಹ ಹೀಗೆಯೆ ಇರಲಿ...

PARAANJAPE K.N. said...

Sir,

ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

Ittigecement said...

ಪರಾಂಜಪೆಯವರೆ..

ಬ್ಲಾಗ್ ಲೋಕಕ್ಕೆ ಸ್ವಾಗತ..

ನಿಮ್ಮ ಮೊದಲ ಲೇಖನ ಚೆನ್ನಾಗಿದೆ...

ಶುಭವಾಗಲಿ..

RAJENDRA HEGDE said...

dear Prakash, UR Govinda bhatji was our relative and he was a very humorous person. I felt very emotional to read about him and the nice words about him

Ittigecement said...

ರಾಜೇಂದ್ರರವರೆ....

ಅಂಥಹ ಶುದ್ಧ ಮನಸ್ಸಿನ ಗುರುಗಳನ್ನು ಪಡೆದ ನಾನೇ ಧನ್ಯ...
ಅವರ ಬಳಿ ಕ್ಷಮೆ ಕೇಳಬೇಕಾಗಿತ್ತು ಅನ್ನುವ ಕೊರಗು ಉಳಿದು ಬಿಟ್ಟಿದೆ...
ಅವರು ನಿಮ್ಮ ರಿಲೇಟಿವ್ ಅಂತ ತಿಳಿದು ತುಂಬಾ ಖುಷಿಯಾಯಿತು...
ಬರುತ್ತಾ ಇರಿ...
ಧನ್ಯವಾದಗಳು...

ಸತೀಶ್. ಕೆ. ಎಸ್. - Sathish. K.S said...

thumba chennagithu, nanna balyada nenapugallu kshanakala manassinalli bandavu. dhanyavadagalu

ಸೀತಾರಾಮ. ಕೆ. / SITARAM.K said...

ಪ್ರಕಾಶಣ್ಣ ನಮ್ಮ ಗುರುಗಳ ನೆನಪನೆಲ್ಲಾ ಕದಲಿಸಿತು...ತಮ್ಮ ಆತ್ಮೀಯ ಭಾವಪೂರ್ಣ ಲೇಖನ
ನಮ್ಮ ಗುರುಗಳೊಬ್ಬರು ಇದ್ದರು ಅವರು ಸಾಮಾಜಿಕ -ಭೂಗೋಳ ಹೇಳುತ್ತಿದ್ದರು... ಬಂದು ಕುರ್ಚಿಯಲ್ಲಿ ಕುಳಿತವರು ಹೋಗುವಾಗಲೇ ಏಳುತ್ತಿದ್ದರು.. ನಾವು ಗಲಾಟೆ ಮಾಡಿದರೆ ಹೇಳುತ್ತಾ ಇದ್ದುದು " ಗಲಾಟೆ ಮಾಡ್ಬೇಡ್ರೋ! ಗಲಾಟೆ ಮಾಡಿದ್ರೆ ನಾನು ಏಳಬೇಕಾಗುತ್ತೆ,,,ಎದ್ದು ಬಂದು ಎದೆಗೆ ಒದಿಬೇಕಾತದೆ ... ಒದ್ದು ಭುದ್ಧಿ ಕಲಿಸ್ಬೇಕಾಗ್ತದೆ..." ಆದರೆ ಒಂದು ದಿನಾನು ಎದ್ದು ಬರಲಿಲ್ಲ... ಅವರು ಜೀವನದಲ್ಲಿ ಯಾರಿಗಾದರು ತಪ್ಪಿಯೂ ಒದ್ದಿಲ್ಲ ಅನ್ಸುತ್ತೆ ಅಷ್ಟು ಸಾಧು ಮನುಷ್ಯರು...

Sudeepa ಸುದೀಪ said...

ಪ್ರಕಾಶ್ ಸರ್...ನೆನಪುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ... ಆ ದಿನಗಳೇ ಹಾಗಿರುತ್ತವೆ...ನಮ್ಮ ತಪ್ಪು ಅರಿವಾದಾಗ ಕೆಲವೊಮ್ಮೆ ಕಾಲ ಮಿಂಚಿರುತ್ತದೆ...ಆ ನೋವು ಮಾತ್ರ ಸದಾ ಕಾಲ ಕಾಡುತ್ತಿರುತ್ತದೆ..

Kishan said...

Thank you for the article. Always remember those golden years... ! when he was an invigilator in the exams, he used to say "ಕುತ್ತಿಗೆ ಉಳುಕಿಸಿಕೊಳಬೇಡ ತಮ್ಮಾ" to those who keep looking at others' papers.. still makes me laugh out loud!

Badarinath Palavalli said...

ನಿಮ್ಮ ಈ ಬರಹ ಈಗ ಓಡುತ್ತಿದ್ದಾರೆ ನಮ್ಮ ಹಳ್ಳಿ ಶಾಲೆಯ ಮಲ್ಲಪ್ಪ ರೆಡ್ಡಿ ಮಾಸ್ಟರ್ ನೆನಪಾದರು. ಅವರು ಬದುಕಿಡೀ ಒಂದನೇ ಕ್ಲಾಸಿಗೇ ಖಾಯಂ ಶಿಕ್ಷಕ. ನನಗೆ ಅತ್ಯಂತ ಪ್ರೀತಿ ಪಾತ್ರ. ನಶ್ಯ ಅವರ trade mark :)

ಎಂಕ್ಟ ಪದ್ದಿ ಪಾಸಾದ್ರಲ್ಲಾ ಎಸ್ಸೆಸ್ಸೆಲ್ಸೀ
ಮಲ್ಲಪ್ಪ ರೆಡ್ಡಿ ಮಾಸ್ಟರವ್ರೇ ಪಾಸಾಗ್ಲಿಲ್ಲ ಒಂದನೇ ಇಯತ್ತೇ!

ಗುರುಭ್ಯೋ ನಮಃ

ಮೌನವೀಣೆ said...
This comment has been removed by the author.
ಮೌನವೀಣೆ said...

ನಿಜ...ಇಂಥದ್ದೇ ಕಿತಾಪತಿಯ ಕ್ಲಾಸ್ ನಮ್ಮ ಬಾಲ್ಯದಲ್ಲೂ ಆಗಿತ್ತು... ನೆನಪಿನ ಕೊಂಡಿ ಓದುತ್ತ ಹೋದಂತೆ ಬಿಡಿಸಿಕೊಂಡು ನಗುವಾಗಿ ಬದಲಾಯಿತು.
ಚೆನ್ನಾಗಿದೆ ಶಿವಾರ್ಪಣ..