Saturday, November 22, 2014

ತಾಳಿ

ನನ್ನ
ಮುಖದ ಮೇಲೆ
ಯಾರೊ ನೀರು ಚಿಮುಕಿಸಿದರು...

ಮೆಲ್ಲಗೆ ಕಣ್ಣು ಬಿಟ್ಟೆ...
ಎಚ್ಚರ ತಪ್ಪಿ ಬಿದ್ದಿದ್ದೆ ಅಂತ ಅನ್ನಿಸ್ತಿದೆ...

ಅಸಾಧ್ಯ ನೋವು..

"ಅಮ್ಮಾ..
ಅಯ್ಯೋ..."  .... ನರಳಿದೆ..

"ಸ್ವಲ್ಪ ಸಮಾಧಾನ ಮಾಡ್ಕೊ ತಾಯಿ...
ನಿಮ್ಮ ಹತ್ತಿರದವರ ಹೆಸರು ಹೇಳ್ತೀರಾ  ?"

ಮಾತನಾಡಲು ಬಾಯಿ ತೆರೆದೆ...

ತುಟಿ ನಡುಗುತ್ತಿತ್ತು...

ತುಟಿಯನ್ನು 
ರಕ್ತ ಬರುವಷ್ಟು ಹೀರಿದ್ದರು...

ಮತ್ತೆ ನೋವಿನಿಂದ ನರಳಿದೆ...

"ನನ್ನ ಮೊಬೈಲಿನಲ್ಲಿ  "ಅಪ್ಪ"  ಅಂತ ಇದೆ.. ನೋಡಿ.."

ಬಹಳ ಕಷ್ಟಪಟ್ಟು ಉಸುರಿದೆ..

ಸ್ವಲ್ಪ ನೀರು ಕುಡಿಸಿದರು..

ಕಣ್ಣಿಗೆ ಕತ್ತಲು ಕಟ್ಟಿತು..
ಮತ್ತೆ ಪ್ರಜ್ಞೆ ತಪ್ಪಿತು..

ಎಚ್ಚರವಾದಾಗ ಅಪ್ಪ ಕಣ್ಣೆದುರು ಇದ್ದರು..

"ಮಗಳೆ .."

ಅಂತ ತಬ್ಬಿಕೊಂಡರು...
ಅವರ ಕಣ್ಣಲ್ಲಿ ನೀರು ಇಳಿಯುತ್ತಿತ್ತು,...

ಆಮೇಲೆ ಗೊತ್ತಾಗಿದ್ದು ಇಷ್ಟು..

ಯಾರೊ ದಂಪತಿಗಳು 
ಸಾಯಂಕಾಲದ ಹೊತ್ತು 
ವಾಯುವಿಹಾರಕ್ಕೆ ಹೋಗುತ್ತಿದ್ದಾಗ
ರಸ್ತೆ ಬದಿಯ ಪೊದೆಯಲ್ಲಿ ನಾನು ನರಳುವ ಶಬ್ಧ ಕೇಳಿತಂತೆ..

ನನ್ನ ಮೇಲೆ ಅತ್ಯಾಚಾರವಾಗಿತ್ತು...!

ನನ್ನ 
ಮೊಬೈಲಿನಿಂದ ನನ್ನಪ್ಪನಿಗೆ ಫೋನ್ ಮಾಡಿ ಕರೆಸಿ..
ಡಾಕ್ಟರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು...

"ನೀವು ಪೋಲಿಸರಿಗೆ ದೂರು ನೀಡಿ..."

ಅಪ್ಪನ ಕಣ್ಣಲ್ಲಿ ನೀರು ಇಳಿಯುತ್ತಿತ್ತು..

"ಬೇಡಿ ಸಾರ್...
ನಾವು ಬಡವರು... 
ಮರ್ಯಾದೆ ಬೀದಿಗೆ ಬಂದರೆ ಬದುಕುವದು ಕಷ್ಟ..

ಬಡತನಕ್ಕೆ ಮರ್ಯಾದೆ ಬಲು ದೊಡ್ಡದು.. 

ಇಲ್ಲಿಯೇ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗುವೆ..."

"ಈ ಸ್ಥಿತಿಯಲ್ಲಿ 
ಮನೆಗೆ ಕರೆದುಕೊಂಡು ಹೋದರೆ .. 
ಅಕ್ಕಪಕ್ಕದವರು ಏನಂದಾರು  ?"

ನನ್ನಪ್ಪನ ಬಳಿ ಉತ್ತರ ಇರಲಿಲ್ಲ..

"ನೋಡಿ..
ಮಗಳಿಗೆ ತಂದೆಯಾಗಿ ನಿಮ್ಮ ಸ್ಥಿತಿ ಅರ್ಥವಾಗುತ್ತದೆ..

ಒಂದಷ್ಟು ದಿನ ಇವಳು ನಮ್ಮ ಮನೆಯಲ್ಲಿರಲಿ..

ನಮಗೇನೂ ತೊಂದರೆ ಇಲ್ಲ..."

ನಾನು ಧ್ವನಿ ಬಂದತ್ತ ತಿರುಗಿ ನೋಡಿದೆ..
ನನ್ನನ್ನು ಕಾಪಾಡಿದ ದಂಪತಿಗಳು 

ಅವರು ನಮಗೆ  ದೇವರಂತೆ ಕಂಡರು ...

ಅಪ್ಪ ಅವರ ಮಾತಿಗೆ ಒಪ್ಪಿದ 
ಅವರು ಅಪ್ಪನಿಗೂ ಪರಿಚಿತರಾಗಿದ್ದರು.. .

ನಾನು ಆ ಸಹೃದಯರ ಮನೆಗೆ ಬಂದೆ..

ಅವರಿಬ್ಬರೂ 
ನನಗೆ ಅಪರಿಚಿತರು ಅಂತ ಅನ್ನಿಸಲೇ ಇಲ್ಲ...
ಯಾವುದೋ ಜನ್ಮದ ನನ್ನ ಬಂಧುಗಳಂತೆ ಅನ್ನಿಸಿದರು...

ಸಿನೇಮಾದಲ್ಲಿ 
ವಿಲನ್ನುಗಳು ಅತ್ಯಾಚಾರ ಮಾಡುವದನ್ನು ನೋಡಿದ್ದೆ..
ನಾಯಕಿ ಕಿರಿಚಾಡುವದನ್ನು ಕೇಳಿದ್ದೆ..
ಪುಸ್ತಕಗಳಲ್ಲಿ ವರ್ಣನೆ ಓದಿದ್ದೆ..

ನನಗಾದ ಅನುಭವ ಇದೆಯಲ್ಲ...ಅದು  ಯಾರಿಗೂ ಬೇಡ..!

ಒಬ್ಬಾತ 
ನನ್ನನ್ನು ಮಲಗಿಸಿ ಕೈಯನ್ನು ತನ್ನ ಬೂಟುಕಾಲಲ್ಲಿ ಮೆಟ್ಟಿ ನಿಂತಿದ್ದ...

ಇನ್ನೊಬ್ಬ ಬಟ್ಟೆಯನ್ನು ಹರಿಯುತ್ತಿದ್ದ.. ...

ಅದೆಷ್ಟು ಆತುರ ಈ ದುರುಳರಿಗೆ..!

ಕೂಗೋಣವೆಂದರೆ 
ನನ್ನ ಬಾಯಿಗೆ ಬಟ್ಟೆ ತುರುಕಿದ್ದರು...!

ಸರಾಯಿ ವಾಸನೆ ಘಮ್ಮೆಂದು ಮೂಗಿಗೆ ಅಡರಿತು...

ಹರಿದಾಡಿದರು...
ಕೆನ್ನೆ.. ತುಟಿ..
ಮೂಗು
ಎದೆ.. ಎಲ್ಲೆಡೆ ಕಚ್ಚಿದರು..

ನನ್ನನ್ನು ಹೀರಿಬಿಟ್ಟರು...!

ನನಗೆ ನೋವು.. ಹಿಂಸೆ ಕೊಟ್ಟು 
ಈ ದೇಹದಿಂದ ಯಾವ ಸುಖ ಸಿಕ್ಕಿತೋ  ಆ ದುರಳರಿಗೆ ... ! .. 

ಕನಸಲ್ಲೂ 
ಊಹಿಸಲಾಗದ ಭಯಂಕರ ಅತ್ಯಾಚಾರ ನಡೆದೇ ಹೋಯಿತು....

ನೆನಪಾದಾಗಲೆಲ್ಲ ನೋವು ಜಾಸ್ತಿಯಾಗುತ್ತಿತ್ತು...

ನೋವು ದೇಹಕ್ಕಾಯಿತೊ... 
ಮನಸ್ಸಿಗೋ ... 

ನರಳಿದೆ..

ರೂಮಿನ ಬಾಗಿಲು ತೆಗೆದು
ನನ್ನನ್ನು ಕಾಪಾಡಿದವ  ನನ್ನ ಬಳಿ ಬಂದರು ...

ಮೆಲ್ಲಗೆ ನನ್ನ ಹಣೆ ಸ್ಪರ್ಷಿಸಿದರು ..

ಅವರ  ಮುಖದಲ್ಲಿ ಕರುಣೆಯಿತ್ತು... 
ಅನುಕಂಪವಿತ್ತು ..

ಸಾಂತ್ವನಕ್ಕೆ ಮಾತು ಬೇಕಿಲ್ಲ..
ನೋಟ..
ಸ್ಪರ್ಷ ಸಾಕು..

ನನ್ನನ್ನು ಎತ್ತಿ ಕುಳ್ಳಿರಿಸಿ ನೀರು ಕುಡಿಸಿದರು ...

ಈಗ
ಅವರ  ಮಡದಿಯೂ ರೂಮಿಗೆ ಬಂದಳು..

"ಆ ರಾಕ್ಷಸರನ್ನು 
ಸುಮ್ಮನೆ ಬಿಡಬಾರದು...!

ಕೊಚ್ಚಿ 
ಕೊಚ್ಚಿ ಕತ್ತರಿಸ ಬೇಕು..."

ಅತ್ತು ಬಿಡೋಣ ಎಂದುಕೊಂಡೆ...
ನನ್ನ ಕಣ್ಣಲ್ಲಿ ಈಗ ನೀರೂ ಸಹ ಬರುತ್ತಿಲ್ಲ...

ಆ ದಂಪತಿಗಳ ಮಮತೆಗೆ
ಸ್ನೇಹಕ್ಕೆ.. 
ಅವರ ಒಳ್ಳೆಯತನಕ್ಕೆ ನಾನು ಮನಸೋತೆ...

ಎಷ್ಟು ಅನ್ಯೋನ್ಯವಾಗಿದ್ದಾರೆ !

ನನ್ನ ಭಾಗ್ಯದಲ್ಲಿ  ಇಂಥಹ ಬಾಳುವೆ  ಇದೆಯಾ ?
ಜಗತ್ತಿನಲ್ಲಿ ಇಂಥವರೂ ಇರ್ತಾರಾ ?

ಅವರು ನನ್ನ ಸೇವೆ ಮಾಡುವಾಗ 
ಅವರಿಬ್ಬರನ್ನು ಕಣ್ ತುಂಬಾ ನೋಡುತ್ತಿದ್ದೆ.. 

ಅವರ 
ಮಮತೆಯ ಮಂದಿರವನ್ನು ನನ್ನ ಹೃದಯದಲ್ಲಿ ಕಟ್ಟಿಕೊಂಡೆ 

ಸುಮಾರು ಒಂದು ತಿಂಗಳಾಯಿತು..
ನಾನು ಅವರ ಮನೆಯವಳೇ ಆಗಿಬಿಟ್ಟೆ..

ಕ್ರಮೇಣ ನಾನು ಓಡಾಡುವಷ್ಟು ಆರೋಗ್ಯವಂತಳಾದೆ..

ನನ್ನನ್ನು 
ಇಬ್ಬರೂ ತುಂಬಾ ಮಮತೆಯಿಂದ..
ತಮ್ಮ ತಂಗಿಯಂತೆ ನೋಡಿಕೊಂಡರು..

"ಇವತ್ತು ಡಾಕ್ಟರ್ ಬಳಿ ಹೋಗಬೇಕು..
ರೆಡಿ ಆಗಮ್ಮ..."

ನನ್ನ ಅಣ್ಣನಂತಿದ್ದ
ಅವರ ಮುಖವನ್ನೇ ನೋಡಿದೆ..

"ನೋಡಮ್ಮ..
ನಿನ್ನ ದೇಹದ ಬಹಳಷ್ಟು ಗಾಯಗಳು ವಾಸಿಯಾದವು...

ಆ ದುರುಳರ ಕೆಟ್ಟ ಕೆಲಸದ ಪರಿಣಾಮ ನಿನ್ನ ಹೊಟ್ಟೆಯಲ್ಲಿ ಬೆಳೆಯಬಾರದು..

ಅವರಿಗೆಲ್ಲ ಯಾವ ರೋಗವಿತ್ತೊ.. ಏನೊ..

ಎಲ್ಲವನ್ನೂ ಒಮ್ಮೆ ಪರೀಕ್ಷಿಸಿಕೊಂಡು ಬರಬೇಕಮ್ಮ..."

ನಾನು ತಲೆಯಾಡಿಸಿದೆ...
ಅವರ ಮಡದಿ ನಮ್ಮನ್ನು ಬೀಳ್ಕೊಟ್ಟರು...

ಡಾಕ್ಟರ್ ಎಲ್ಲವನ್ನೂ ಪರೀಕ್ಷಿಸಿದರು...

"ಏನೂ ಸಮಸ್ಯೆ ಇಲ್ಲ... ಎಲ್ಲವೂ ವಾಸಿಯಾಗಿದೆ..."

ನನ್ನನ್ನು ಕರೆದುಕೊಂಡು ಬಂದವರಿಗೂ ಖುಷಿ ಆಯ್ತು.. 

ಒಂದಷ್ಟು ಮಾತ್ರೆ..
ಔಷಧಗಳನ್ನು ಬರೆದುಕೊಟ್ಟರು...

ಮೊದಲೆಲ್ಲ
ನನ್ನಮ್ಮ ನನ್ನ ಮೈ ಮುಟ್ಟಿದರೂ ನನಗೆ ನಾಚಿಕೆಯಾಗುತ್ತಿತ್ತು..
ಕಚಗುಳಿ ಇಟ್ಟಂತಾಗುತ್ತಿತ್ತು...

ಡಾಕ್ಟರ್ 
ನನ್ನ ದೇಹ ಪರೀಕ್ಷಿಸುತ್ತಿರುವಾಗ ನನಗೇನೂ ಅನ್ನಿಸಲೇ ಇಲ್ಲ...

ನಾನು 
ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬಿಟ್ಟೆನಾ ? 

ಇಬ್ಬರೂ ಮನೆಗೆ ಬಂದೆವು..
ಮನೆಯಲ್ಲಿ ಅವರ ಮಡದಿ ಕಾಣಲಿಲ್ಲ..

ಒಂದು ಚೀಟಿಯಿತ್ತು...

"ನಾನು 
ಅಣ್ಣನ ಮನೆಗೆ ಹೋಗುತ್ತಿದ್ದೇನೆ..
ನನಗಾಗಿ ಕಾಯಬೇಡಿ.. ನೀವಿಬ್ಬರೂ ಊಟ ಮಾಡಿ..."

ಅವರು ತುಂಬ ಪ್ರೀತಿಯಿಂದ 
ಮಮತೆಯಿಂದ ಬಡಿಸಿದರು..

"ಸರ್...

ನಿಮ್ಮಿಬ್ಬರಿಂದಾಗಿ  
ನಾನು ಈ ಆಘಾತದಿಂದ ಹೊರಗೆ ಬರ್ತಾ ಇದ್ದೀನಿ.. 

ನಿಮ್ಮಿಬ್ಬರ ಪ್ರೀತಿಗೆ..
ಮಮತೆಗೆ ನನಗೆ ಏನು ಹೇಳಬೇಕೆಂದೇ  ತಿಳಿಯುತ್ತಿಲ್ಲ...

ನಿಮಗೆ ಏನೆಂದು ನಾನು ಕರೆಯಲಿ  ? "

ಅವರು ನಸುನಕ್ಕರು..
ನಗುವಿನಲ್ಲಿ ಪ್ರೀತಿ ಇತ್ತು... 

"ಮನಸ್ಸಲ್ಲಿ ಪ್ರೀತಿ ಇದ್ದರೆ ಸಾಕಮ್ಮ...
ಏನು ಬೇಕಾದರೂ ಕರೆಯಬಹುದು.. ..

ನನ್ನದೇನೂ ಅಭ್ಯಂತರ ಇಲ್ಲ..."

"ನನ್ನ ಅಕ್ಕನ ಗಂಡ..
ನನ್ನ 
ಬಾವನನ್ನು  "ಜಿಜ್ಜು"  ಅಂತ ಕರೆಯುತ್ತಿದ್ದೆ.
ಅವರೀಗ ಇಲ್ಲ..

ನಿಮ್ಮಲ್ಲಿ ನನ್ನ ಬಾವನನ್ನು ಕಾಣುತ್ತಿದ್ದೇನೆ ಸರ್.."

ಅವರು ತಲೆ ಆಡಿಸುತ್ತ ಮತ್ತೆ ನಸು ನಕ್ಕರು...

ಊಟವಾಯಿತು..

ನಾನು ಡೈನಿಂಗ್ ಟೇಬಲ್ಲನ್ನು ಸ್ವಚ್ಛಗೊಳಿಸಲು ಹೋದೆ..

"ನೀನು ವಿಶ್ರಾಂತಿ ಮಾಡಮ್ಮ..
ಇದೆಲ್ಲ ನಾನು ಮಾಡ್ತಿನಿ..."

"ಜಿಜ್ಜು...
ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ..

ಈಗ ನೋವು ಕೂಡ ಇಲ್ಲ..

ಡಾಕ್ಟರ್ ಕೂಡ ಹೇಳಿದ್ದಾರಲ್ಲ ಸಂಪೂರ್ಣ ಗುಣಮುಖಳಾಗಿದ್ದೇನೆ..
ನನಗೆ ಯಾವ ಸಮಸ್ಯೆಯೂ ಇಲ್ಲ ಅಂತ..

ನಾನು ಇದೆಲ್ಲ ಮಾಡ್ತಿನಿ ಬಿಡಿ....."

ಅವರು ಬಂದು ನನ್ನ ಕೈಯಲ್ಲಿದ್ದ ಬಟ್ಟೆಯನ್ನು ಹಿಡಿದುಕೊಂಡರು...

"ಹಾಗಲ್ಲಮ್ಮ..
ನಿನ್ನ ಬಳಿ ಕೆಲಸ ಮಾಡಿಸಿದರೆ 
ನನ್ನವಳು ನನ್ನನ್ನು ಸುಮ್ಮನೆ ಬಿಡುವದಿಲ್ಲ.."

ನಾನು 
ಅವರ ಕೈಯಿಂದ ಬಿಡಿಸಿಕೊಳ್ಳಲು ಕೊಸರಾಡಿದೆ..

ಅವರು ಇನ್ನೂ ಜೋರಾಗಿ ಹಿಡಿದುಕೊಂಡರು...

"ನಿನ್ನ ಬಗೆಗೆ 
ನನಗೆ ಬಹಳ ದುಃಖ  ಇದೆಯಮ್ಮ..

ನಿನ್ನ ಮೊದಲ ಅನುಭವವೇ  ಹೀಗಾಗಬಾರದಿತ್ತು..."

ನನಗೆ ಅರ್ಥವಾಗಲಿಲ್ಲ...

ಅವರು ತಡವರಿಸಿದರು..

"ಅದು..

ಅದ್ದೂ.. ... 

ನಿನ್ನ ಮೊದಲ ಸೆಕ್ಸ್ ಅನುಭವ ಹೀಗಾಗ ಬಾರದಿತ್ತು...!... "

ಅವರಿನ್ನೂ ನನ್ನ ಕೈಯನ್ನು ಬಿಟ್ಟಿರಲಿಲ್ಲ..

"ನೋಡಮ್ಮ...
ಸೆಕ್ಸ್..
ಕಾಮವೆಂದರೆ ಒಂದು ಸುಂದರ ಅನುಭೂತಿ...

ಶಬ್ಧಗಳಿಗೆ ವರ್ಣನೆಗೆ ಸಿಗುವಂಥದ್ದಲ್ಲ...

ಕಾಮವಿಲ್ಲದಿದ್ದರೆ 
ಈ ಜಗತ್ತು ಶುಷ್ಕ... ನೀರಸ ... "

ನನಗೆ ಏನು ಹೇಳಬೇಕೆಂದು ತೋಚಲಿಲ್ಲ...

"ನಿನ್ನನ್ನು ಕೇಡಿಸಿದ್ದಾರಲ್ಲ..
ಅವರು ಮಾನಸಿಕ ರೋಗಿಗಳು...

ಪ್ರೀತಿಯಿಂದ ಪಡೆಯಬೇಕಾದಂಥಹುದನ್ನು ಬಲಾತ್ಕಾರವಾಗಿ ಪಡೆಯಲು ಪ್ರಯತ್ನಿಸಿದ್ದಾರೆ..

ಕ್ರೂರಿಗಳು..."

"ಹೌದು ಸರ್..
ಅವರು ರಾಕ್ಷಸರು..!.. "........ 

ಅವರು ನನ್ನ ಕೈಯನ್ನು ಬಿಡದೆ 
ಹಾಗೆ ಹಿಡಿದುಕೊಂಡು ನನ್ನನ್ನು ಬಳಸಿ ತಬ್ಬಿಕೊಂಡರು...

ಈಗ ನಾನು ಅಪ್ರತಿಭಳಾದೆ..

"ಇದೇನು ಸಾರ್.. ನೀವು  ?
ನನಗೆ ಇದೆಲ್ಲ ಇಷ್ಟ ಆಗಲ್ಲ.. ಪ್ಲೀಸ್ ಬಿಟ್ ಬಿಡಿ..."

ಅವರು 
ನನ್ನನ್ನು ನೋವಾಗದ ಹಾಗೆ ಹಿಡಿದುಕೊಂಡಿದ್ದರು...

"ನಿನಗೊಂದು ಸ್ವರ್ಗ ತೋರಿಸುತ್ತೇನೆ..!

ನಿನಗಾದ ಕಹಿ ಅನುಭವ ನೀನು ಮರೆತುಬಿಡಬೇಕು..

ಒಂದು ಅರ್ಧ .. 
ಮುಕ್ಕಾಲು ಗಂಟೆ ಸುಮ್ಮನಿದ್ದುಬಿಡು.... 

ಸೆಕ್ಸ್ ಎಂದರೆ ಸುಂದರ..
ಸಿಹಿಯಾದ 
ಸುಖ ಅಂತ ನಿನಗೂ ಅದರ ಅನುಭವ ಕೊಡುತ್ತೇನೆ..."

ನಾನು ಕೊಸರಾಡಿದೆ...

"ನೋಡು..
ಗಡಿಬಿಡಿ.. ಆತಂಕ ಏನೂ ಬೇಡ... 

ಒಂದು ಹತ್ತು ನಿಮಿಷ ನೀನು ಸುಮ್ಮನಿರು..

ಒಪ್ಪಿಕೊ... 

ನಿನ್ನ ದೇಹ ...
ಈ ಕ್ರಿಯೆಗೆ ಸಹಕರಿಸದಿದ್ದರೆ 
ನಾನು ನಿನ್ನನ್ನು ಬಿಟ್ಟು ಬಿಡುವೆ..

ಖಂಡಿತಾ ಬಲವಂತ ಮಾಡುವದಿಲ್ಲ... "

"ಸಾರ್..
ಇದೇನು.. ?

ನಿಮ್ಮದು ಪ್ರೀತಿಯ ಸಂಸಾರ...

ನಿಮ್ಮ ಮಡದಿ ಏನಂದುಕೊಂಡಾಳು... ?

ನನ್ನನ್ನು ಬಿಟ್ ಬಿಡಿ.. ಪ್ಲೀಸ್..."

ಅವರ ಕೈ .. 
ನನ್ನ ಮೈಮೇಲೆಲ್ಲ ಹರಿದಾಡುತ್ತಿತ್ತು...

ನನ್ನ ಕಿವಿಯ ಬಳಿ ಬಂದು ಉಸುರಿದರು...

"ಅವಳು ನನ್ನ ಮಡದಿ ನಿಜ..

ನಾನು .... 
ನನ್ನ 
ಎಲ್ಲ ಸುಖವನ್ನೂ ಅವಳ ಕುತ್ತಿಗೆಗೆ ಕಟ್ಟಲಿಲ್ಲ..

ತಾಳಿಯನ್ನಷ್ಟೆ ಕಟ್ಟಿದ್ದೇನೆ..."... 

ಅವರು ಏದುಸಿರು ಬಿಡುತ್ತಿದ್ದರು...

ಅಪ್ಪುಗೆ ಬಿಗಿಯಾಗ ತೊಡಗಿತು...



(3K ಬಳಗಕ್ಕಾಗಿ ಬರೆದ ಕಥೆ ಇದು.... 
ಕೇವಲ ಕಥೆಯಲ್ಲ... 
ಸತ್ಯ ಅಂತನೂ  ಅಂದುಕೊಳ್ಳಬಹುದು...)

21 comments:

Suraj B Hegde said...

ಅಬ್ಬಬ್ಬಾ! ಗೋಮುಖವ್ಯಾಘ್ರ! ಭಯಂಕರ ಕಥೆ! :-/

Badarinath Palavalli said...

ಓದಿ ಮುಗಿಸಿದ ಮೇಲೆ ತುಸು ಹೊತ್ತು ಮನಸ್ಸಿಗೆ ಶೂನ್ಯವು ಆವರಿಸಿತು.
ಕಾಮವೆಂಬುದು ಎರಡು ದೇಹಗಳಿಗೆ ಸಂಬಂಧಿಸಿದ್ದೇ ಅಥವ ಅದಕ್ಕೆ ಹಲವು ಆಯಾಮಗಳಿವೆಯೇ ಎಂಬ ತಾಕಲಾಟಕ್ಕೆ ಬಿದ್ದೆ.

ಅತ್ಯಾಚಾರವೆಂಬುದು ಮೈಗೂ ಮತ್ತು ಮನಸ್ಸಿಗೂ ಸಂಬಂಧಿಸಿದ ವಿಚಾರ.
ಮೊದಲಿನದ್ದು ಮೈಗೆ, ಕಡೆಯಲ್ಲಿ ಮನೋ ಅತ್ಯಾಚಾರ!

ಕಾಯುವವನೇ ಕೊಲ್ಲುವಂತಾಯಿತು!

Ittigecement said...

ಸೂರಜ್ ಪುಟ್ಟಾ...

ಇತ್ತೀಚೆಗೆ ಏನನ್ನೂ ಬರೆಯಲು ಮನಸ್ಸಿಲ್ಲವಾಗಿತ್ತು...

ಆದರೆ
ಇವತ್ತು ಬೆಳಿಗ್ಗೆ ಒಂದು ಈ ಮೇಲ್ ಬಂದಿತ್ತು... ಅದನ್ನು ಓದಿ
ಅದನ್ನು ಆಧರಿಸಿ ಈ ಕಥೆ ಬರೆದೆ...

ಏನು ಹೇಳಲಿ ?

ಭಾವನೆಗಳನ್ನು ಸಾಯಿಸಿಯೇ ಬದುಕಬೇಕಾ ?

ಇದು ಕ್ರೂರತೆ ಅಲ್ಲದೆ ಮತ್ತೇನು ?

ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ....

ನಮ್ಮ ಸಾಮಾಜಿಕ ತಾಣಗಳಲ್ಲಿ ಭರವಸೆ ಹುಟ್ಟಿಸುವ
ಮತ್ತು ಕನ್ನಡದ ಬಗೆಗೆ
ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಥ್ರೀಕೆ ಬಳಗದವರಿಗಾಗಿ ಈ ಕಥೆ ಅರ್ಪಣೆ...

ಥ್ಯಾಂಕ್ಯೂ "ಥ್ರೀ ಕೆ"...

ಸೂರಜ್ ಪುಟ್ಟಾ.. ಕಥೆ ಇಷ್ಟವಾಗಿದ್ದಕ್ಕೆ ಪ್ರೀತಿಯ ವಂದನೆಗಳು...

Srikanth Manjunath said...

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆಯೆಂದಿತು

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು,

ಪುಣ್ಯ ಕೋಟಿ ಕಥೆ ನೆನಪಿಗೆ ಬಂತು.. ಅಲ್ಲಿ ಹಸುವಿನ ಸತ್ಯ ನಿಷ್ಠೆಗೆ ಹುಲಿ ಮರುಳಾಗಿ ತನ್ನ ಪ್ರಾಣವ ಬಲಿ ಕೊಟ್ಟು ಹಸುವನ್ನು ಬಿಟ್ಟಿತು.
ಇಲ್ಲಿ ನಾಯಕಿಯ ಸತ್ಯ ನಿಷ್ಠೆಗೆ ಮರುಳಾಗಿ, ಅಂದ ಚಂದಕ್ಕೆ ಮರುಳಾಗಿ.. ತನ್ನ ನಿಷ್ಠೆಯನ್ನು ಬಲಿ ಕೊಟ್ಟು ಹಸುವನ್ನು ಜಯಿಸಲು ಹೊರಟಿತು.
ಕಾಮ ಕಾಮ ಕಾಮ ಇದಕ್ಕೆ ಫುಲ್ ಸ್ಟಾಪ್ ಇಲ್ಲವೇ ಇಲ್ಲ. ಅಡೆ ತಡೆಗಳು, ಕಾಯಿದೆ ಕಾನೂನು ಏನೇ ಬಂದರು ಅದು ಒಂದು ಹಂತಕ್ಕೆ ದೇಹಕ್ಕೆ ಕಡಿವಾಣ ಹಾಕಬಹುದೇ ವಿನಹ ಮನಸ್ಸಿಗಲ್ಲ.

ಮನಸ್ಸಲ್ಲಿ ಕಾಮವಿದ್ದಾಗ.. ಅದನ್ನು ತಡೆಯಲು ಹರಿ ಹರ ಬ್ರಹ್ಮರು ಕೂಡ ಸಹಾಯ ಮಾಡಲಾರರು. ಆ ಧುರಳರು ದೇಹದ ಕ್ಷಣಿಕ ಸುಖಕ್ಕೆ ಅನಾಚಾರ ಮಾಡಿದರೆ.. ಈ ಮಹನೀಯ ಒಳ್ಳೆಯ ಮನಸ್ಸಿನ ತೊಗಲನ್ನು ಹೊದ್ದುಕೊಂಡು ಅನಾಚಾರ ಮಾಡಲು ಹೊರಟನು.

ಇದಕ್ಕೆ ಪ್ರತಿಕ್ರಿಯೆ ಕೊಡಲು ಮನಸ್ಸು ಹಿಂಜರಿಯುತ್ತಿತ್ತು.. ಆದರು ನಡುಗುವ ಮನದಿಂದ ಕೊಟ್ಟಿದ್ದೇನೆ.

ತಾಳಿ ಅಲ್ಲ ತಾಳ ಬೇಕು.. ಬದುಕಿಗೆ ಒಳ್ಳೆಯ ಮನದ ತಾಳವಿದ್ದಾಗಲೇ ಒಂದು ರಾಗ.. ಇಲ್ಲ ಅಂದರೆ ಅದು ವಿರಾಗ.. ಅದರಿಂದ ಶುರು ಎಲ್ಲಾ ವಿರಹಗಳು.. (ಎಡಕಲ್ಲು ಗುಡ್ಡದ ಮೇಲೆ ಚಿತ್ರ ನೆನಪಿಗೆ ಬಂತು)

ಸೊಗಸಾಗಿದೆ ಅಂದರೆ ಕ್ರೌರ್ಯ.. . ಈ ಪರಿಸ್ಥತಿ ಯಾರಿಗೂ ಬಾರದಿರಲಿ ಎನ್ನುವದಷ್ಟೇ ನನ್ನ ಕೋರಿಕೆ..

Unknown said...

Prakashanna ...Ettige simentu ..horagina jagattige ..Taali manassige ...? Gud one ...Liked it soo much ...wonderful article ..Jai hind

balasubramanya said...

ಪ್ರಕಾಶಣ್ಣ ಈ ಕಥೆಗೆ ಅಥವಾ ಘಟನೆಯ ನಿರೂಪಣೆಗೆ , ಯಾವ ಅನಿಸಿಕೆ ಹಾಕಲು ಮನಸ್ಸು ಒಪ್ಪುತ್ತಿಲ್ಲ, ಆದರೆ ಕಥೆ ಓದಿದ ತಕ್ಷಣ ಕೆಟ್ಟ ಕೋಪ ಬಂತು ಪಾತ್ರಗಳ ಮೇಲೆ, ಇದು ಕಥೆಯೋ ನಿಜವಾದ ಘಟನೆಯೋ ನಾನು ತಿಳಿಯೆ, ಆದರೆ ನಿಮ್ಮ ಬರವಣಿಗೆಯಲ್ಲಿ ಮೂಡಿಬಂದ ಈ ಸಣ್ಣ ಕಥೆಯಲ್ಲಿ ನನಗೆ ಮೂರು ಜನ ಖಳನಾಯಕರು ಕಂಡುಬರುತ್ತಾರೆ . ಮೊದಲನೇ ಖಳನಾಯಕರು :- ಆ ಮಹಿಳೆಯನ್ನು ಮೃಗಗಳಂತೆ ಆವರಿಸಿಕೊಂಡ ಆ ಜನಗಳು,
ಎರಡನೆಯ ಖಳನಾಯಕರು :- ನಲುಗಿಹೋದ ಬದುಕಿಗೆ ಆಸರೆ ನೀಡಿ , ಮನಸಿನ ಗಾಯ ಮಾಗಲು ಬಿಟ್ಟು, ಸಭ್ಯತೆಯ ಸೋಗಿನಲ್ಲಿ ಆ ಹೆಣ್ಣಿನ ಉಪಯೋಗ ಪಡೆದುಕೊಂಡ ಆ ದೇವತಾ ಸ್ವರೂಪದ ರಕ್ಕಸ

ಮೂರನೆಯ ಖಳನಾಯರು :- ????????//// ಹೇಳಬೇಕೋ ಬೇಡವೋ ಗೊತ್ತಿಲ್ಲಾ , ಆದರೂ ಹೇಳಿಬಿಡುತ್ತೇನೆ, ಇಂತಹ ಕಥೆ ಬರೆದು ಓದುಗರ ಹೃದಯದಲ್ಲಿ ರೋಷದ ಕಿಚ್ಚು ಹತ್ತಿಸುವ ಈ ಕಥೆಗಾರ . ಅಂದರೆ ಈ ಕಥೆ ಬರೆದು ಇಲ್ಲಿ ಪೋಸ್ಟ್ ಮಾಡಿರುವ ನೀವು .

ಒಟ್ಟಾರೆ ಈಗಲೂ ನನ್ನ ಮನಸು ಕುದಿಯುತ್ತಿದೆ ಈ ಲೇಖನದ ಅಕ್ಷರಗಳ ಮೇಲೆ . ಹೆಚ್ಚು ಬರೆದು ಬೈಯ್ಯಲಾರೆ ಇಲ್ಲಿಗೆ ನಿಲ್ಲಿಸುವೆ .

bilimugilu said...

Prakash Ji,
Katheya niroopane endinanthe brilliant.
PratidrushyagaLu kanna munde bandanthive..
Idu naija ghatanegala ondu swaroopa! bloody opportunistic!

Ondu hennu athyachaarakke olagaagiddaale.... adu jeevana pariyantha kaadi kolluva - maasada gaaya!!! Ee-traumadinda horabaroke adeshtu counselling maadthaare, therapy adu idu antha enella prayathna padthaare. Aadaru, aneka hennumakkalu sampoornavaagi gunahondade, normallaagi jeevanavannoo nadisoke aagade baadi baLaluttaare.

huliya bonininda karaDiya boninoLage haakida katheyidu.
Aa hennumagala dhairya sthairya manasthiti saripadisalu neravaaguva badalu, "Gandasarendare, gOmukha-vyaagragaLu, ellaa gandasaroo inthavare" endu avala manasinolage beroorisida "SIR" avanu!!!

aa "SIR" bagge mattashtu kyaakarisi bayyabekaniside..... illige nillisthideeni....

a hennumagala paristhitiyabagge marukavide, ondu aagaatha - apaghatha, mattondu paapa pragneyinda jeevanapoorthi kaadisabahudaada paristhiti. eradoo paristhitiyalloo avalanna dooduthirodu gandase!!!!!!!!!!!!!!!!

sunaath said...

ಸಭ್ಯ ಮುಖವಾಡದ ಹಿಂದೆ ಅಡಗಿರುವ ರಾಕ್ಷಸ ಮುಖ. ಕತೆ ಓದಿ ಮುಗಿಸುವಾಗ ವ್ಯಥೆ ಅಡರುತ್ತದೆ.

ಕಾವ್ಯಾ ಕಾಶ್ಯಪ್ said...

ಅಬ್ಬಬ್ಬಾ... ಭಯಂಕರ ಕಥೆ...!! ಅದೇನೋ ಸಂಕಟವಾಗ್ತಿದೆ ಮನಸ್ಸಿಗೆ...!! ಯಾರು ದುರುಳರೋ... ಯಾರು ಧರ್ಮಾತ್ಮರೋ...
ಸತ್ಯ ಘಟನೆ ಆಧಾರಿತ ಅಂದ ಮೇಲೆ ಇನ್ನೂ ಕಸಿವಿಸಿಯಾಯ್ತು ಪ್ರಕಾಶಣ್ಣ.... :(

ಕಾವ್ಯಾ ಕಾಶ್ಯಪ್ said...
This comment has been removed by the author.
umesh desai said...

ಕತೆಯ ಅಂತ್ಯ ಹೀಗೆಯೇ ಇರಬಹುದು ಅನಿಸಿ ಅದು ನಿಜವೂ ಆದರೆ ಆಗುವ ನಿರಾಶಾ ಮನಸ್ಥಿತಿಯಲ್ಲಿರುವೆ. ಹೀಗಂತ ನೀವು
ಬರೆದ ವಿಷಯ, ಅದರ ಗಂಭೀರತೆಯ ಬಗ್ಗೆ ಎರಡು ಮಾತಿಲ್ಲ..

Unknown said...

ದುರಂತ ಕಥೆ.
ಕಥೆ ಚೆನ್ನಾಗಿಲ್ಲ ಅಂತ ಹೇಳಕ್ಕೂ ಆಗ್ತಾ ಇಲ್ಲ, ಚೆನ್ನಾಗಿದೆ ಅಂತ ಹೇಳಕ್ಕೂ ಆಗ್ತಾ ಇಲ್ಲ. ಓದಿದ ಮೇಲೆ ಮನಸ್ಸಿಗೆ ಒಂಥರಾ ಬೇಜಾರಾಗತ್ತೆ. ತುಂಬಾ effective ಆಗಿ ಬರೆದಿದ್ದೀರಾ ಪ್ರಕಾಶ್ ಅಣ್ಣ..

ಮನಸಿನಮನೆಯವನು said...
This comment has been removed by the author.
ಮನಸಿನಮನೆಯವನು said...

"ಸಾಂತ್ವನಕ್ಕೆ ಮಾತು ಬೇಕಿಲ್ಲ..
ನೋಟ..
ಸ್ಪರ್ಷ ಸಾಕು.."
"ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬಿಟ್ಟೆನಾ ?" ಭಾವತುಂಬಿದ ಸಾಲುಗಳು.
-- ಕಥೆಯ ಅಂತ್ಯ ಊಹಿಸಿದ್ದೆ, ಸೂಕ್ಷ್ಮಸಂವೇದನೆಯನ್ನು ಕಳೆದುಕೊಳ್ಳುವ ಮುನ್ನ ಹೀಗೆ ಬಳಸಿದ್ದರೆ?
ಅವರು ದೇಹವನ್ನು ಕಟ್ಟಿಹಾಕಿ, ಅನುಭವವಿಲ್ಲದ ದೇಹವನ್ನು ಅತ್ಯಾಚಾರ ಮಾಡಿದ್ದರು, ಇಲ್ಲಿ ನೋಡಿ! ಬಂಧ-ಸಂಬಂಧಗಳಿಂದ ಮನಸ್ಸನ್ನೇ ಕಟ್ಟಿಹಾಕಿ ನೋವಿಂದ ಕೂಡಿದ ನರಕ ಅನುಭವವಿರುವ ದೇಹವನ್ನೇ ಮತ್ತೆ ಬಳಸುತ್ತಿದ್ದಾನೆ.
ಮನುಷ್ಯನ ಮನಸ್ಸಿನಲ್ಲಿ ಯಾವಾಗ ಯಾವ ರೀತಿಯ ಭಾವಗಳು ಏಳುತ್ತವೆಯೋ, ಅರಿಯಲಾಗದು. ಕಾಮಕ್ಕೆ ಕಣ್ಣಿಲ್ಲ. ಕಾಮ ಸುಂದರವೆ, ಇರಬಹುದು. ಅದು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ವಯಸ್ಸು, ಜಾತಿ, ಮತ, ಸಂಬಂಧಗಳನ್ನು ನೋಡದಷ್ಟು ಕುರುಡಾಗುತ್ತಿದೆ.. ಕಲಿಯುಗದಲ್ಲಿ ಇನ್ನು ಏನೇನೂ ಕಾಣುವುದಿದೆಯೋ..?

ದೇವರೆನಿಸಿಕೊಂಡವರೆ ದೇಹಸುಖಕ್ಕೆ ಕುರುಡಾಗಿರುವುದನ್ನು ಪುರಾಣಗಳಲ್ಲಿದೆ ಎಂದಿದ್ದಾರೆ(ಹಿಂದೊಮ್ಮೆ ನೀವು ಬರೆದಿದ್ದೀರಿ ), ಇಲ್ಲಿಯೂ ಕಾಯುವವನೇ ಕಣ್ಣಾಕಿದ್ದಾನೆ.

jogesh said...

ಕ್ರೂರತೆ ದೇಹಕ್ಕೆ ನೋವು ಮಾಡಿದರೆ ಗೋಮುಖವ್ಯಘ್ರತನ ನಯವಾಗಿ ಮನಸ್ಸಿನ ಭಾವನೆಗಳ ಜೊತೆ ಚೆಲ್ಲಾಟವಾಡುತ್ತದೆ

shubha hegde said...

ಮನ ಕಲಕುವ ಕಥೆ ಇದು.. ಕಥೆಯಾಗಿಯೇ ಉಳಿಯಲಿ ಎನ್ನುವ ಭಾವನೆ ನಮ್ಮದು. ನಮ್ಮೆಲ್ಲರ ಮನಸ್ಸಲ್ಲಿ ಒಂದು ಗೊಂದಲವಿದೆ "ಹೆಣ್ಣಾದವಳು ಮನುಷ್ಯರನ್ನು ನಂಬದೆ ಇನ್ಯಾರನ್ನು ನಂಬಬೇಕು ?" ರೋಸಿಹೋಗುವಷ್ಟು ಅತ್ಯಾಚಾರದ ಪ್ರಕರಣಗಳು ಈ ಗೊಂದಲಕ್ಕೆ ಪುಷ್ಟಿಯಾಗಿವೆ. ವಯಸ್ಸಿನ ಮಿತಿ, ಸಂಬಂಧಗಳ ಲೆಕ್ಕಾಚಾರ ಕೂಡ ಇದಕ್ಕೆ ಹೊರತಾಗಿಲ್ಲ.
ಪೂಜಿಸುವ ಕಲ್ಲಿನ ದೇವರನ್ನು ಹೊರತು ಪಡಿಸಿದರೆ ದೇವರ ಸ್ವರೂಪಿ ಎನ್ನಿಸಿಕೊಂಡವರು ಇದಕ್ಕೆ ಹೊರತಾಗಿಲ್ಲ ಎನ್ನುವದು ಇದಕ್ಕೆ ವಿಷಾದನೀಯ. ಅತ್ಯಾಚಾರ ಎನ್ನುವದು ಮನುಕುಲದ ದುರಂತವೇ ಸರಿ. ಇಂಥಹ ಪ್ರಕರಣಗಳಲ್ಲಿ ನ್ಯಾಯ ಎನ್ನುವದು ಮರಿಚಿಕೆಯಾಗಿಯೇ ಉಳಿಯಬಹುದೆಂಬ ಸಂದೇಹ ಬಹುತೇಕ ವಿಚಾರಣೆಗಳಲ್ಲಿ ಸ್ಪಷ್ಟವಾಗುತ್ತಿವೆ.

ಸ್ನೇಹ, ಪ್ರೀತಿ, ಪ್ರೇಮ.. ಇಷ್ಟೇ ಅಲ್ಲ ಭಕ್ತಿಯೆಂಬ ಸೂಕ್ಷ್ಮ ಮನಸ್ಥಿತಿಯೊಂದಿಗೂ ಹೆಣ್ಣನ್ನು ಬಳಸಿಕೊಂಡು ಅತ್ಯಾಚಾರವಾಗುತ್ತಿದ್ದರೆ... ವಿಚಾರಣೆ, ತನಿಖೆ ಎಲ್ಲ ವಿಚಾರಗಳು ನಾಟಕೀಯ ಎನ್ನುವಂತೆ ಬಿಂಬಿಸುವ ನಿಯತಕಾಲಿಕೆಗಳು ಆತ್ಮ ಸಾಕ್ಷಿ, ಮಾಆನಸಾಕ್ಷಿ ಎನ್ನುವ ಪದಗಳು ಬರಿ ಉಪದೇಶಕ್ಕೆ ಸೀಮಿತ ಎಂಬಂತೆ ಕಂತು.. ಕಂತುಗಳಲ್ಲಿ , ತಮ್ಮನ್ನು ಅನ್ಯಕ್ಕೆ ಮಾರಿಕೊಂಡವರಂತೆ ಬರೆಯುವದನ್ನು ನೋಡಿದರೆ ಸಂಕಟವಾಗುತ್ತದೆ.
ಅನ್ಯಾಯಕ್ಕೊಳಕ್ಕಾದ ಮಹಿಳೆಗೆ ಅನುಕಂಪವೊಂದೆ ಆಧಾರ... ನ್ಯಾಯ ಬಹು ದೂರ !
ಆಧುನಿಕತೆ ಹೆಚ್ಚಿದಂತೆ ಹೆಣ್ಣಿಗೆ ಗೌರವ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗಾದರೆ ನಾವು ಎಡವಿದ್ದೆಲ್ಲಿ ?
ಕೊಡುವ ಸಂಸ್ಕಾರದಲ್ಲೆ ? ಶಿಕ್ಷಣದಲ್ಲೆ ? ಸ್ವಾತಂತ್ರ್ಯದಲ್ಲೆ ? ಆಧುನಿಕತೆಯಲ್ಲೆ ? ಒಹ್ ಒಂದಲ್ಲ ನೂರು ಕಾರಣಗಳು"
ಸ್ತ್ರೀಯನ್ನು ಗೌರವಿಸುವಲ್ಲಿ ದೇವರು ನೆಲೆಸಿರುತ್ತಾನೆ" ಎನ್ನುವದು ಬರಿ ಸಾಲುಗಳಾಗಿಯೇ ಉಳಿದಿವೆ.

ಕಥೆಯನ್ನು ಓದಿದ ಮೇಲೆ ಸಂಕಟವಾಗುತ್ತದೆ, ವಿಷಾದದ ಮೌನ ಆವರಿಕೊಳ್ಳುತ್ತದೆ.

ನಮ್ಮ ಭಾವನೆಗಳನ್ನು ಅಲುಗಾಡಿಸುವ ನಿಮ್ಮ ಕಥೆಗೆ ಅಭಿನಂದನೆಗಳು.

ಸಂಧ್ಯಾ ಶ್ರೀಧರ್ ಭಟ್ said...

........... ಮೌನಿ..... ಉಳಿದದ್ದು ಮೌನ ಮಾತ್ರ...

Unknown said...

Abba..Inthavaru irtaara!!! Mattomme Delhi li nadeda atyachara kanmunde bantu.. Mahileyannu hindeyoo vastuvage noduttiddarante..ivattigoo vastuvage noduttiddare anistide.. Avaloo manushyalu..avaligoo bhavanegalive annodu yavattu arthavagutto ee rakshasarige.. Kaayuvavane kollalu nintaga yarenu madalu sadhya? namma samajada naitikateya mattavannu nodidare kopisikollabeko, asahya padabeko, dukhkhisabeko tiliyuttilla..Olleya lekhana Prakashanna..

Poorvi said...

intially i had a doubt about that guy...good narration

Kushi said...

ಹೆಲೋ ಪ್ರಕಾಶಣ್ಣ,

ನಿಮ್ಮ ಇಡೀ 7-8 ವರ್ಷದ ಬ್ಲೋಗ್ ನಾ ನಾನು ಕೇವಲ 1 ವಾರದಲ್ಲಿ ಓದಿ ಮುಗಿಸಿದೆ. ಅಷ್ಟು ಇಂತೆರೆಸ್ಟೀಗ್ ಆಗಿ ಇತ್ತು. ಮತ್ತೆ ನಾನು ಬ್ಲೋಗ್ ಬರಿಯೋ ಸ್ಪೂರ್ತಿ ಕೂಡ ಕೊಡ್ತು.
ನಾನು ಕಥೆ, ಕವನ, ಬರವಣಿಗೆ ಶುರು ಮಾಡಿದ್ದು ನನ್ನ 12 ನೇ ವಯಸಿನಲ್ಲಿ, ಆದ್ರೆ ಓದು, ಕೆಲಸ , ಮದುವೆ ಇವುಗಳ ಮದ್ಯೆ ಮರೆತೇ ಹೋಗಿದ್ದೆ.
ಈಗ ಮತ್ತೆ ಬರೆಯೋಕೆ ಶುರು ಮಾಡಿದೆನೆ. ನಿಮ್ಮ ತುಂಬು ಸಲಹೆ, ಅನಿಸಿಕೆ, ಟೀಕೆ, ಟಿಪ್ಪಣಿಗಳ ಅವಶ್ಯಕತೆ ತುಂಬಾನೇ ಇದೆ. ದಯವಿಟ್ಟು, ನನ್ನ ಬ್ಲೋಗ್ ಓದಿ ಮತ್ತು ನನ್ನ ತಪ್ಪು ಗಳನ್ನು ತಿದ್ದಿಕೊಳ್ಳಲು ಸಹಾಯಮಾಡಿ.

Kushi said...

ನನ್ನ ಬ್ಲೋಗ್ ನಾ ಹೆಸರು http://aakshanagalu.blogspot.in/